Oppanna.com

ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 21- 30

ಬರದೋರು :   ಚೆನ್ನೈ ಬಾವ°    on   10/05/2012    21 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಯದ್ ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ ।
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥೨೧॥

ಪದವಿಭಾಗ

ಯತ್ ಯತ್ ಆಚರತಿ ಶ್ರೇಷ್ಠಃ ತತ್ ತತ್ ಏವ ಇತರಃ ಜನಃ । ಸಃ ಯತ್ ಪ್ರಮಾಣಮ್ ಕುರುತೇ ಲೋಕಃ ತತ್ ಅನುವರ್ತತೇ ॥

ಅನ್ವಯ

ಯತ್ ಯತ್ ಶ್ರೇಷ್ಠಃ ಆಚರತಿ ತತ್ ತತ್ ಏವ ಇತರಃ ಜನಃ ಆಚರತಿ । ಸಃ ಯತ್ ಪ್ರಮಾಣಂ ಕುರುತೇ, ಲೋಕಃ ತತ್ ಅನುವರ್ತತೇ ॥

ಪ್ರತಿಪದಾರ್ಥ

ಯತ್ ಯತ್ – ಏವುದು ಏವುದೆಲ್ಲ, ಶ್ರೇಷ್ಠಃ – ಗೌರವಾರ್ಹ ಹಿರಿಯ ಜನ, ಆಚರತಿ – ಮಾಡುತ್ತನೋ (ಆಚರಿಸುತ್ತನೋ),  ತತ್ – ಅದರ, ತತ್ – ಅದನ್ನೇ, ಏವ – ಖಂಡಿತವಾಗಿಯೂ, ಇತರಃ – ಇತರ ಸಾಮಾನ್ಯ, ಜನಃ – ವ್ಯಕ್ತಿಯು, ಆಚರತಿ – ಮಾದುತ್ತ°,  ಸಃ – ಅವ°, ಯತ್ – ಯಾವುದರ, ಪ್ರಮಾಣಮ್ – ನಿದರ್ಶನ ಹೇದು, ಕುರುತೇ – ಮಾಡುತ್ತನೋ, ಲೋಕಃ – ಜಗತ್ತೆಲ್ಲವೂ, ತತ್ – ಅದರ, ಅನುವರ್ತತೇ – ಅನುಸರುಸುತ್ತವು.

ಅನ್ವಯಾರ್ಥ

ಲೋಕಲ್ಲಿ ಶ್ರೇಷ್ಠನಾದವ° ಹೇಂಗೆ ಹೇಂಗೆ (ಏವ ಏವುದು) ಆಚರುಸುತ್ತನೋ (ಮಾಡುತ್ತನೋ) ಅದನ್ನೇ ಹಾಂಗೆಯೇ ಇತರ ಸಾಮಾನ್ಯ ಜನರುಗೊ ಅನುಸರುಸುತ್ತವು. ಮೇಲ್ಪಂಕ್ತಿಯಾದವ° ಅವ ತನ್ನ ಕಾರ್ಯಂಗಳಿಂದ ಯಾವುದರ ಪ್ರಮಾಣ ಹೇದು ಮಾಡುತ್ತನೋ ಅದನ್ನೇ ಲೋಕವೂ ಅನುಸರುಸುತ್ತು.

ತಾತ್ಪರ್ಯ / ವಿವರಣೆ

ಸ್ವಂತ ಆಚರಣೆಂದ ಇತರರಿಂಗೆ ಶಿಕ್ಷಣ ಕೊಡುವ ಹಿರಿಯರು (ನಾಯಕರು) ಯಾವಾಗಲೂ ಜನಂಗೊಕ್ಕೆ ಬೇಕು. ತಾನೇ ಧೂಮಪಾನ ಮಾಡುವ ನಾಯಕ ಇತರರಿಂಗೆ ಧೂಮಪಾನ ಬಿಡುವುದಕ್ಕೆ ಕಲಿಸಲೆ ಎಡಿಯ. ಇತರರಿಂಗೆ ಹೇಳಿಕೊಡುವ ಸ್ಥಾನಲ್ಲಿಪ್ಪವ ತನ್ನ ಮಾತಿನಂತೆ ತಾನು ನಡಕ್ಕೊಳ್ಳೆಕ್ಕು. ಆ ರೀತಿಲಿ ಬೋಧುಸುವ ನಾಯಕ ಆಚಾರ್ಯ, ಉಪಾಧ್ಯಾಯ, ಗುರು ಹೇಳಿ ಆದರ್ಶಪ್ರಾಯ° ಹೇಳಿ ಎನಿಸಿಗೊಳ್ತ°. ಆದ್ದರಿಂದ ಸಾಮಾನ್ಯ ಮನುಷ್ಯಂಗೆ ಬುದ್ಧಿ ಹೇಳಿಕೊಡುವ ಗುರುವು ಶಾಸ್ತ್ರಂಗಳ ತತ್ವಂಗಳ ತಾನು ಆಚರುಸೆಕ್ಕು. ಅಪೌರುಷೇಯ ಶಾಸ್ತ್ರತತ್ವಂಗಳ ವಿರುದ್ಧ ಗುರುವು ನಿಯಮಂಗಳ ಸೃಷ್ಟಿ ಮಾಡ್ಳೆ ಎಡಿಯ. ಮನುಸಂಹಿತೆಗಳಂತಹ ಅಪೌರುಷೇಯ ಗಿಶಾಸ್ತ್ರಂಗಳ ಮಾನವ ಕುಲವು ಅನುಸರುಸೆಕ್ಕಾದ ಪ್ರಮಾಣಗ್ರಂಥಂಗೊ ಹೇಳಿ ಪರಿಗಣಿಸಿದ್ದು. ಆದ್ದರಿಂದ ನಾಯಕನ ಬೋಧನೆಗೊಕ್ಕೆ ಇಂತಹ ಪ್ರಮಾಣ ಶಾಸ್ತ್ರಂಗೊ ಆಧಾರವಾಗಿರೆಕ್ಕು. ತನ್ನ ಉತ್ತಮಗೊಳುಸಲೆ ಬಯಸುವವ° ಶ್ರೇಷ್ಠ ಗುರುಗೊ ಅನುಷ್ಠಾನಕ್ಕೆ ತಂದಿಪ್ಪ ಪ್ರಮಾಣ ನಿಯಮಂಗಳ ಅನುಸರುಸೆಕ್ಕು. ಆಧ್ಯಾತ್ಮಿಕ ಸಾಕ್ಷಾತ್ಕಾರದ ದಾರಿಲಿ ಮುನ್ನಡೆವಲೂ ಇದೇ ವಿಧಾನ ಹೇದು ಹೇಳಲಾಯ್ದು. ಅದಕ್ಕೇ ಶ್ರೇಷ್ಥ ಗುರುವಿನ ಮಾರ್ಗದರ್ಶನ ತೆಕ್ಕೊ ಹೇಳಿ ಹೇಳುವದು. ನಾಯಕ ಹೇಳಿ ಹೇಳಿಸಿಗೊಂಬವಂಗೆ ಆಶ್ರಿತರ ವಿಷಯಲ್ಲಿ ದೊಡ್ಡ ಹೊಣೆಯಿರುತ್ತು. ಆದ್ದರಿಂದ ಅವಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ಸಂಹಿತೆಗಳ ಪ್ರಮಾಣಗ್ರಂಥಂಗಳ ಪರಿಚಯವೂ ಲಾಯಕಕ್ಕೆ ತಿಳುದಿರೆಕ್ಕು.

ಸಮಾಜಲ್ಲಿ ಮುಂದಾಳು (ಶ್ರೇಷ್ಠ°) ಏನ ಮಾಡುತ್ತನೋ ಉಳುದವೂ ಅದೇ ದಾರಿ ಹಿಡಿತ್ತವು. ಅವ° ಯಾವುದರ ಆಧಾರವಾಗಿ ಬಳಸುತ್ತನೋ ಬಾಕಿದ್ದೋರೂ ಅದನ್ನೇ ಅನುಸರುಸುತ್ತವು. ಹಿರಿಯನಾದವ°, ಶ್ರೇಷ್ಠ° ಹೇಳಿ ಸಮಾಜಲ್ಲಿ ಗುರುತಿಸಿಗೊಂಡವ ಎಂತ ಮಾಡುತ್ತನೋ ಅದನ್ನೇ ಸಮಾಜವೂ ಅನುಸರುಸುತ್ತದು. ಒಂದು ವೇಳೆ ಅವ ತಪ್ಪು ಮತ್ತು ಅದನ್ನೇ ಪ್ರಮಾಣವಾಗಿ ಹೇಳಿರೆ ಲೋಕವೂ ಅದನ್ನೇ ಅನುಸರುಸುತ್ತವೂ. ಹಾಂಗಾಗಿ ಮುಂದಾಣ ಪೀಳಿಗೆ ಮೇಲೆ ಹಿರಿಯರ, ಶ್ರೇಷ್ಠರ ಮಾರ್ಗದರ್ಶನ ಆದರ್ಶಪ್ರಾಯವಾಗಿರೇಕು, ಅನುಸರಣೆಗೆ ಯೋಗ್ಯವಾದ್ದಾಗಿರೇಕು. ಸಮಾಜಲ್ಲಿ ಹಿರಿಯನೆನಿಸಿದವ(ಶ್ರೇಷ್ಠ°), ವಯಸ್ಸಿಲ್ಲಿ, ಆಚರಣೆಲಿ, ಜ್ಞಾನಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡ್ಳೆ ಸಮರ್ಥ°. ಉನ್ನತಲ್ಲಿಪ್ಪ ಆ ವ್ಯಕ್ತಿ ಯಾವ ದಾರಿಯ ಅನುಸರುಸುತ್ತನೋ, ಬಾಕಿ ಉಳುದೋರೂ ಅದೇ ಹಾದಿಲಿ ಸಾಗುತ್ತವು.

ಇಲ್ಲಿ ಅರ್ಜುನ° ಒಬ್ಬ ಸಮಾಜದ ಜವಾಬ್ದಾರಿ ಮುಖಂಡ. ಅವ° ಎಂತ ಮಾಡುತ್ತನೋ ಅದನ್ನೇ ಸಮಾಜವೂ ಹಿಂಬಾಲುಸುತ್ತು. ಎಂತಕೆ ಹೇಳಿರೆ ಸಾಮಾನ್ಯರಿಂಗೆ ಶಾಸ್ತ್ರ ಜ್ಞಾನ ಇರ್ತಿಲ್ಲೆ. ಅವ್ವು ಕೇವಲ ಆದರ್ಶ ವ್ಯಕ್ತಿಗೊ ಹೇದು ಗುರುತಿಸಿಗೊಂಡವರನ್ನೇ ಹಿಂಬಾಲುಸುತ್ತು. ನಾಯಕನಾದವ° ಯಾವುದರ ಪ್ರಮಾಣವಾಗಿರಿಸಿ ಪ್ರತಿಪಾದುಸುತ್ತನೋ ಅದನ್ನೇ ಸಾಮಾನ್ಯ ಜನರುಗೊ ಅನುಸರುಸುತ್ತವು.

ಬನಂಜೆ ಹೇಳುತ್ತವು – ಕೃಷ್ಣ° ಈ ಶ್ಲೋಕಲ್ಲಿ ಕೊಟ್ಟಿಪ್ಪ ಸಂದೇಶವ ನಾವು ನಮ್ಮ ದೈನಂದಿನ ಬದುಕಿಲ್ಲಿ ಕಾಂಬಲೆಡಿಗು. ಒಂದು ಸಂಸ್ಥೆಯ ನಡೆಸುವ ಮುಖ್ಯಸ್ತನ ನಡವಳಿಕೆ, ಆಚರಣೆ ಸರಿದಾರಿಲಿ ಇಲ್ಲದ್ರೆ, ಆ ಸಂಸ್ಥೆ ಅಧೋಗತಿಯ ಕಾಣುತ್ತು. ದುಷ್ಟ ಶಕ್ತಿಗೊ ಎದ್ದು ನಿಲ್ಲುತ್ತು. ಎಂತಕೆ ಹೇಳಿರೆ ಹಿರಿಯ ಸ್ಥಾನಲ್ಲಿ ಇಪ್ಪವ ಏನೇನ ಅನುಸರುಸುತ್ತನೋ ಅದನ್ನೇ ಪ್ರಮಾಣವಾಗಿ ಇತರರೂ ಅನುಸರುಸುತ್ತವು. ಒಂದು ದೇಶವ ಆಳುವ ಮುಖಂಡ ಬ್ರಷ್ಟಾಚಾರಿಯಾದಲ್ಲಿ ಇಡೀ ದೇಶ ಬ್ರಷ್ಟಾಚಾರದ ಹಾದಿಲಿ ತುಳಿವಲೆ ಸಾಧ್ಯತೆ ಇದ್ದು. ಸಾಮಾನ್ಯವಾಗಿ ಮನುಷ್ಯರು ಒಳ್ಳೆಯದರ ಅನುಸರುಸುವದಕ್ಕಿಂತ ಸುಲಭವಾಗಿ ಮತ್ತು ಶೀಘ್ರವಾಗಿ ಕೆಟ್ಟದ್ದರ ಅನುಸರುಸುವದೇ ಹೆಚ್ಚು. ಇದು ತುಂಬಾ ಅಪಾಯಕಾರಿ. ಈ ಅರಿವು ನವಗೆ ಇರೇಕು. ಆದ್ದರಿಂದ ಸಮಾಜಲ್ಲಿ ನಾಯಕನಾಗಿಪ್ಪವ° ಉತ್ತಮ ನಡವಳಿಕೆ ಆಚರಣೆಲಿ ಇಪ್ಪವ° ಆಗಿರೇಕು.

ಶ್ಲೋಕ

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ ।
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥೨೨॥

ಪದವಿಭಾಗ

ನ ಮೇ ಪಾರ್ಥ ಅಸ್ತಿ ಕರ್ತವ್ಯಮ್ ತ್ರಿಷು ಲೋಕೇಷು ಕಿಂಚನ । ನ ಅನವಾಪ್ತಮ್ ಅವಾಪ್ತವ್ಯಮ್ ವರ್ತೇ ಏವ ಚ ಕರ್ಮಣಿ ॥

ಅನ್ವಯ

ಹೇ ಪಾರ್ಥ!, ಯದ್ಯಪಿ ಮೇ ತ್ರಿಷು ಲೋಕೇಷು ಕಿಂಚನ ಕರ್ತವ್ಯಂ ನ ಅಸ್ತಿ, ಅನವಾಪ್ತಮ್ ಅವಾಪ್ತವ್ಯಂ ಚ ನ ಅಸ್ತಿ, ತಥಾ ಅಪಿ ಅಹಂ ಕರ್ಮಣಿ ವರ್ತೇ ಏವ ॥

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನೇ!, ಯದ್ಯಪಿ – ಒಂದುವೇಳೆ, ಮೇ – ಎನಗೆ, ತ್ರಿಷು ಲೋಕೇಷು – ಮೂರು ಲೋಕಂಗಳಲ್ಲಿ, ಕಿಂಚನ  ಕರ್ತವ್ಯಂ – ಯಾವುದೋ ವಿಧ್ಯುಕ್ತ ಕರ್ತವ್ಯವು, ನ ಅಸ್ತಿ – ಇಲ್ಲೆ, ಅನವಾಪ್ತಮ್ – ಅಪೇಕ್ಷಿತವಾದ, ಅವಾಪ್ತವ್ಯಮ್ – ಪಡೇಕ್ಕಾದ, ಚ – ಕೂಡ, ನ ಅಸ್ತಿ – ಇಲ್ಲೆ, ತಥಾ ಅಪಿ – ಹಾಂಗೆ ಇದ್ದರೂ, ಅಹಮ್ – ಆನು, ಕರ್ಮಣಿ – ವಿಧ್ಯುಕ್ತ ಕರ್ತವ್ಯಂಗಳಲ್ಲಿ, ವರ್ತೇ – ತೊಡಗಿದ್ದೆ, ಏವ – ಖಂಡಿತವಾಗಿಯೂ.

ಅನ್ವಯಾರ್ಥ

ಎಲೈ ಪಾರ್ಥನೇ!, ಮೂರು ಲೋಕಂಗಳಲ್ಲಿಯೂ ಎನಗೆ ನಿಯತವಾದ ಯಾವುದೇ ಕಾರ್ಯಂಗೊ (ಕರ್ತವ್ಯಂಗೊ) ಇಲ್ಲೆ. ಆನು ಬಯಸುವ ವಸ್ತುಗೊ , ವಿಷಯಂಗೊ ಯಾವುದೂ ಇಲ್ಲೆ. ಆನು ಪಡೇಕ್ಕಾದ್ದೂ ಏನೂ ಇಲ್ಲೆ. ಆದರೂ ಆನು ನಿಯಮಿತ ಕರ್ತವ್ಯಂಗಳಲ್ಲಿ ನಿರತನಾಗಿದ್ದೆ.

ತಾತ್ಪರ್ಯ / ವಿವರಣೆ

ವೈದಿಕ ಸಾಹಿತ್ಯಲ್ಲಿ ವರ್ಣಿಸಿದ ಪ್ರಕಾರ, ಪರಮ ಪ್ರಭುವು ಎಲ್ಲ ನಿಯಂತ್ರಕರ ನಿಯಂತ್ರಕ°, ಎಲ್ಲೋರಿಂದಲೂ ಗರಿಷ್ಥ°, ಎಲ್ಲೋರು ಅವಂಗೆ ವಿಧೇಯಂಗೊ. ಎಲ್ಲ ಜೀವಿಗೊಕ್ಕೆ ವಿಶಿಷ್ಟ ಶಕ್ತಿಯ ಒದಗುಸುತ್ತದು ಪರಮೇಶ್ವರನೇ. ಆದರೆ ದೇವತೆಗೊ ಸ್ವತಃ ಪರಾತ್ಪರ° ಅಲ್ಲ. ಅವ° (ಭಗವಂತ°) ಎಲ್ಲಾ ದೇವತೆಗಳಿಂದಲೂ ಪೂಜಾರ್ಹ°, ಎಲ್ಲೋರ ನಿಯಾಮಕ°, ನಿರ್ದೇಶಕ°. ಎಲ್ಲೋರಿಂದಲೂ ಶ್ರೇಷ್ಠನಾದವ°, ಎಲ್ಲ ಕಾರಣಂಗಳ ಪರಮಕಾರಣ° ಪರಮ ಪುರುಷ ದೇವೋತ್ತಮ ಆ ಭಗವಂತ°. ಅವಂಗೆ ಸಾಮಾನ್ಯ ಜೀವಿಯ ಹಾಂಗೆ ಶರೀರ ಇಲ್ಲೆ. ಅವನ ಶರೀರಕ್ಕೂ ಆತ್ಮಕ್ಕೂ ವ್ಯತ್ಯಾಸ ಇಲ್ಲೆ. ಅವ° ಪರಮೋನ್ನತ ಸ್ಥಾನಲ್ಲಿಪ್ಪವ°, ಅವನ ಎಲ್ಲ ಇಂದ್ರಿಯಂಗೊ ದಿವ್ಯವಾದ್ದು. ಅವನ ಯಾವುದೇ ಇಂದ್ರಿಯ ಬೇರೆ ಯಾವುದೇ ಇಂದ್ರಿಯಂಗಳ ಕೆಲಸ ಮಾಡುತ್ತು. ಆದ್ದರಿಂದ ಅವನಿಂದ ಶ್ರೇಷ್ಠ ಬೇರೆ ಆರೂ ಇಲ್ಲೆ. ಅವನ ಶಕ್ತಿಗೊ ವಿಧವಿಧವಾದ್ದು. ಆದ್ದರಿಂದ ಅವನ ಕ್ರಿಯೆಗೊ ತಂತಾನೆ ಸಹಜ ಕ್ರಮಲ್ಲಿ ಆಗಿಯೊಂಡಿರುತ್ತು.

ದೇವೋತ್ತಮ ಪರಮ ಪುರುಷನಲ್ಲಿ ಪ್ರತಿಯೊಂದೂ ಪೂರ್ಣ ಸಮೃದ್ಧಿಯಲ್ಲಿದ್ದು, ಪೂರ್ಣಸತ್ಯಲ್ಲಿ ಇಪ್ಪದರಿಂದ ದೇವೋತ್ತಮ ಪರಮ ಪುರುಷ ಮಾಡೇಕ್ಕಾದ ಕರ್ತವ್ಯಂಗೊ ಹೇದು ಏನೂ ಇರ್ತಿಲ್ಲೆ. ಕರ್ಮಫಲವ ಸ್ವೀಕರುಸುತ್ತವಂಗೆ ಯಾವುದಾರು ನಿಯತ ಕರ್ಮಂಗೊ ಇರುತ್ತು. ಮೂರು ಲೋಕಲ್ಲಿಯೂ ಸಾಧುಸೇಕ್ಕಾದ್ದು ಏನೂ ಇಲ್ಲದವಂಗೆ ಕರ್ತವ್ಯ ಏನೂ ಇಲ್ಲೆ. ಆದರೂ ಶ್ರೀಕೃಷ್ಣ ಕ್ಷತ್ರಿಯರಿಂಗೆ ನಾಯಕನಾಗಿ ಕುರುಕ್ಷೇತ್ರಲ್ಲಿ ಕ್ರಿಯೆಲಿ ನಿರತನಾಗಿದ್ದ°. ಎಂತಕೆ ಹೇಳಿರೆ ಸಂಕಟಲ್ಲಿಪ್ಪವಕ್ಕೆ ರಕ್ಷಣೆ ಕೊಡೆಕ್ಕಾದ್ದು ಕ್ಷತ್ರಿಯರ ಕರ್ತವ್ಯ. ಅಪೌರುಷೇಯ ಶಾಸ್ತ್ರಂಗಳ ಎಲ್ಲ ನಿಯಮಂಗಳ ಮೀರಿದವನಾದರೂ, ಅಪೌರುಷೇಯ ಶಾಸ್ತ್ರಂಗಳ ಉಲ್ಲಂಘುಸುವ ಯಾವ ಕಾರ್ಯವನ್ನೂ ಕೃಷ್ಣ ಮಾಡುತ್ತನಿಲ್ಲೆ.

ಆದ್ದರಿಂದಲೇ ಶ್ರೀಕೃಷ್ಣ° ಅರ್ಜುನಂಗೆ ಹೇಳುತ್ತ° – ಎಲೈ ಪಾರ್ಥನೇ!, ಮೂರು ಲೋಕಲ್ಲಿಯೂ ಆನು ಮಾಡೇಕ್ಕಾದ್ದು ಎಂತದೂ ಇಲ್ಲೆ, ಪಡೆಯೆಕ್ಕಾದ್ದೂ ಏನೂ ಇಲ್ಲೆ, ಆದರೂ ಆನು ಕರ್ಮಲ್ಲಿ ತೊಡಗಿದ್ದೆ.

ಎಂತಕೆ ? –

ಶ್ಲೋಕ

ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥೨೩॥

ಪದವಿಭಾಗ

ಯದಿ ಹಿ ಅಹಮ್ ವರ್ತೇಯಮ್ ಜಾತು ಕರ್ಮಣಿ ಅತಂದ್ರಿತಃ । ಮಮ ವರ್ತ್ಮ ಅನುವವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥

ಅನ್ವಯ

ಯದಿ ಹಿ ಅಹಮ್ ಅತಂದ್ರಿತಃ ಸನ್ ಕರ್ಮಣಿ ಜಾತು ನ ವರ್ತೇಯಮ್, ತರ್ಹಿ, ಹೇ ಪಾರ್ಥ!, ಮನುಷ್ಯಾಃ ಸರ್ವಶಃ ಮಮ ವರ್ತ್ಮ ಅನುವರ್ತಂತೇ ॥

ಪ್ರತಿಪದಾರ್ಥ

ಯದಿ – ಒಂದುವೇಳೆ, ಹಿ – ಖಂಡಿತವಾಗಿಯೂ, ಅಹಮ್ – ಆನು, ಅತಂದ್ರಿತಃ ಸನ್ – ಬಹು ಎಚ್ಚರಿಕೆಂದ ಇದ್ದುಗೊಂಡು, ಕರ್ಮಣಿ – ವಿಧ್ಯುಕ್ತಕರ್ಮಾಚರಣೆಲಿ,  ಜಾತು – ಎಂದಿಂಗೂ, ನ ವರ್ತೇಯಮ್ – ನಿರತನಾಗದ್ದರೆ,  ತರ್ಹಿ – ಅಂಬಗ, ಹೇ ಪಾರ್ಥ! – ಏ ಪೃಥೆಯ ಮಗನೇ (ಅರ್ಜುನನೇ), ಮಮ – ಎನ್ನ, ಮನುಷ್ಯಾಃ – ಮನುಷ್ಯರೆಲ್ಲರೂ, ಸರ್ವಶಃ – ಎಲ್ಲ ವಿಧಂಗಳಲ್ಲಿಯೂ, ಮಮ ವರ್ತ್ಮ – ಎನ್ನ ಮಾರ್ಗವ, ಅನುವರ್ತಂತೇ – ಅನುಸರುಸುತ್ತವು,  

ಅನ್ವಯಾರ್ಥ

ಹೇ ಪಾರ್ಥನೇ!, ಆನು ಯಾವುದೇ ಕಾಲಲ್ಲಿ ಆಗಲೀ ಕರ್ಮಲ್ಲಿ ನಿರತನಾಗದ್ದೇ ಹೋದರೆ ಇನ್ನು ಮುಂದೆ ಎಲ್ಲಾ ಮನುಷ್ಯರು ಎನ್ನ ಮಾರ್ಗವನ್ನೇ ಅನುಸರುಸುತ್ತವು.

ತಾತ್ಪರ್ಯ / ವಿವರಣೆ

ಅವ್ವವ್ವು ಮಾಡೇಕಾದ ಕರ್ಮವ ಅವ್ವವ್ವೇ ಮಾಡಿ ತೋರುಸಿ ಸಮಾಜಕ್ಕೆ ಆದರ್ಶಪ್ರಾಯದವರಾಯೇಕು. ಹಿರಿಯನಾದವ° ತನ್ನ ಹಿರಿಸ್ಥಾನಲ್ಲಿ ಇದ್ದುಗೊಂಡು ಮಾಡೇಕ್ಕಾದ್ದರ ಕರ್ತವ್ಯಪ್ರಜ್ಞೆಂದ ಮಾಡಿಗೊಂಡು ಹೋದರೆ ಕಿರಿಯರಾದವೂ ಅದೇ ಪ್ರಜ್ಞೆಂದ ಅವರವರ ಕೆಲಸ ಮಾಡಿಗೊಂಡು ಬತ್ತವು. ಹಿರಿಯನಾದವ° ಅಂತೇ ನಿಂದುಗೊಂಡು ಬಡಾಯಿಕೊಚ್ಚಿಗೊಂಡು ಇದ್ದರೆ ಕಿರಿಯರೂ ಅಂತೇ ಆ ಚಂದವ ನೋಡಿಗೊಂಡಿರುತ್ತವಷ್ತೇ. ತಾನು ಮಾಡುವ ಕಾರ್ಯ ಸಮಾಜಕ್ಕೆ ಆದರ್ಶಪ್ರಾಯವಾಗಿರೆಕು. ಅದನ್ನೇ ಎಲ್ಲೋರು ಅನುಸರುಸುತ್ತವು ಹೇಳ್ವ ಬೋಧ ಸದಾ ಇರೆಕು.

ಆಧ್ಯಾತ್ಮಿಕ ಬದುಕಿನ ಮುನ್ನಡೆಗಾಗಿ ಸಾಮಾಜಿಕ ಶಾಂತಿಯ ಸಮತೋಲನವ ಉಳಿಸಿಗೊಂಬಲೆ, ಪ್ರತಿಯೊಬ್ಬ ನಾಗರಿಕ ಮನುಷ್ಯನೂ ಅನುಸರುಸೆಕ್ಕಾದ ಸಾಂಪ್ರದಾಯಿಕವಾದ ಕೌಟುಂಬಿಕ ಪದ್ಧತಿಗೊ ಇದ್ದು. ಇಂತಹ ನಿಯಮಂಗೊ ಬದ್ಧಜೀವಿಗೊಕ್ಕೆ ಮಾತ್ರ, ಶ್ರೀಕೃಷ್ಣಂಗೆ ಅಲ್ಲ. ಆದರೂ, ಆತ° (ಶ್ರೀಕೃಷ್ಣ°) ಧಾರ್ಮಿಕ ತತ್ವಂಗಳ ನೆಲೆಗೊಳುಸಲೆ ಅವತರಿಸಿಗೊಂಡ ಮನುಷ್ಯರೂಪಿಯವನಾದ್ದರಿಂದ ಮನುಷ್ಯರಿಂಗೆ ವಿಧಿಸಿದ ನಿಯಮಂಗಳ ಅನುಸರುಸುತ್ತಾ ಇದ್ದ°. ಇಲ್ಲದ್ರೆ, ಅವನೇ ಅತ್ಯುನ್ನತ ಅಧಿಕಾರಿಯಾಗಿದ್ದುಗೊಂಡು ಇಪ್ಪದರಿಂದ ಜನಸಾಮಾನ್ಯರುಗೊ ಕೂಡ ಆತನ (ಶ್ರೀಕೃಷ್ಣನ) ಹೆಜ್ಜೆಲಿಯೇ ಮುನ್ನಡಗು.

ಆದ್ದರಿಂದಲೇ ಶ್ರೀಕೃಷ್ಣ° ಅರ್ಜುನಂಗೆ ಹೇಳುತ್ತ° – ಎಲೈ ಪಾರ್ಥನೇ!, ಆನು ಎಂದಾರು ಎಚ್ಚರಂದ ಕರ್ಮಲ್ಲಿ ತೊಡಗದೇ ಹೋದರೆ, (ಸರ್ವಶಃ ಮನುಷ್ಯಾಃ ಮಮ ವರ್ತ್ಮಾನುವರ್ತಂತೇ ) ಮನುಷ್ಯರು ಎಲ್ಲ ಬಗೆಲಿಯೂ ಎನ್ನ ದಾರಿ ಹಿಡುದು ಬಿಡುತ್ತವು.

ಶ್ಲೋಕ

ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್ ।
ಸಂಕರಸ್ಯ ಚ ಕರ್ತಾ ಸ್ಯಾಮ್ ಉಪಹನ್ಯಾಮಿಮಾಃ ಪ್ರಜಾಃ ॥೨೪॥

ಪದವಿಭಾಗ

ಉತ್ಸೀದೇಯುಃ ಇಮೇ ಲೋಕಾಃ ನ ಕುರ್ಯಾಮ್ ಕರ್ಮ ಚೇತ್ ಅಹಮ್ । ಸಂಕರಸ್ಯ ಚ ಕರ್ತಾ ಸ್ಯಾಮ್ ಉಪಹನ್ಯಾಮ್ ಇಮಾಃ ಪ್ರಜಾಃ ॥

ಅನ್ವಯ

ಅಹಂ ಕರ್ಮ ನ ಕುರ್ಯಾಂ ಚೇತ್ ಇಮೇ ಲೋಕಾಃ ಉತ್ಸೀದೇಯುಃ., ಸಂಕರಸ್ಯ ಕರ್ತಾ ಸ್ಯಾಮ್ ಇಮಾಃ ಪ್ರಜಾಃ ಚ ಉಪಹನ್ಯಾಮ್ ॥

ಪ್ರತಿಪದಾರ್ಥ

ಅಹಂ – ಆನು, ಕರ್ಮ – ವಿಧ್ಯುಕ್ತ ಕರ್ಮಂಗಳ, ನ ಕುರ್ಯಾಂ ಚೇತ್ – ಆಚರುಸದ್ದೆ ಇದ್ದರೆ, ಇಮೇ ಲೋಕಾಃ – ಈ ಎಲ್ಲಾ ಲೋಕಂಗೊ, ಉತ್ಸೀದೇಯುಃ – ನಾಶವಾವ್ತವು,  ಸಂಕರಸ್ಯ – ಅನಪೇಕ್ಷಿತ ಜನಸಂಖ್ಯೆಯ, ಸಂಕರಸ್ಯ – ವರ್ಣಸಂಕರದ, ಕರ್ತಾ – ಸೃಷ್ಟಿಕರ್ತ°, ಸ್ಯಾಮ್ – ಆಗಿಬಿಡುವೆ (ಅಪ್ಪೆ), ಇಮಾಃ – ಈ ಎಲ್ಲ, ಪ್ರಜಾಃ – ಜೀವಿಗಳ, ಚ – ಮತ್ತು, ಉಪಹನ್ಯಾಂ – ನಾಶಮಾಡುವೆ.

ಅನ್ವಯಾರ್ಥ

ಆನು ನಿಯಮಿತ ಕರ್ತವ್ಯಂಗಳ ಮಾಡದ್ರೆ ಈ ಲೋಕವೆಲ್ಲ ನಾಶ ಆವ್ತು. ಆನೇ ವರ್ಣಸಂಕರಕ್ಕೆ ಕಾರಣನಾವುತ್ತೆ. ಆದರಿಂದಾಗಿ ಆನೇ ಈ ಅಲ್ಲ ಜೀವಿಗಳ ಶಾಂತಿಯ ಮಾಡುತ್ತೆ.

ತಾತ್ಪರ್ಯ / ವಿವರಣೆ

ವರ್ಣಸಂಕರ ಹೇಳಿರೆ ಸಮಾಜದ ಶಾಂತಿಯ ಕಲಕುವ ಅನಪೇಕ್ಷಿತ ಜನಸಂಖ್ಯೆ (ಕಲಬೆರಕೆ). ಈ ಸಾಮಾಜಿಕ ಕ್ಷೋಭೆಯ ತಡವಲೆ ವಿಹಿತ ನಿಯಮಂಗೊ ಇದ್ದು. ಇದರಿಂದಲಾಗಿ ಜನಂಗೊ ತಾನಾಗಿಯೇ ಶಾಂತಿಯುತವಾಗಿ ಬದುಕಿಲ್ಲಿ ಆಧ್ಯಾತ್ಮಿಕ ಪ್ರಗತಿಗೆ ವ್ಯವಸ್ಥೆಗೊಳ್ಳುತ್ತು. ಶ್ರೀಕೃಷ್ಣ° ಅವತಾರ ಮಾಡಿಯಪ್ಪಗ ಅವ° ಇಂತಹ ನಿಯಮ ನಿಬಂಧನೆಯೊಂದಿಂಗೆ ವ್ಯವಹರುಸುತ್ತ°. ಇಂತಹ ಮುಖ್ಯವಾದ ಆಚರಣೆಗಳ ಘನತೆಯನ್ನೂ ಅಗತ್ಯವನ್ನೂ ಕಾಪಾಡಲೆ ಮಾರ್ಗದರ್ಶಕನಾಗಿ ಉಳಿತ್ತ°. ಭಗವಂತ ಸಕರ ಸೃಷ್ಟಿಗೆ ಕಾರಣ°. ಜೀವಿಗೊಕ್ಕೆ ತಪ್ಪು ಮಾರ್ಗದರ್ಶನ ಆದರೆ ಪರೋಕ್ಷವಾಗಿ ಅದರ ಹೊಣೆ ಭಗವಂತನದ್ದು. ಆದ್ದರಿಂದ ನಿಯಂತ್ರಕ ತತ್ವಂಗಳ ಸಾಮಾನ್ಯವಾಗಿ ಅಸಡ್ಡೆ ಮಾಡಿಯಪ್ಪಗೆಲ್ಲಾ ಭಗವಂತನೇ ಭೂಮಿಗಿಳುದು ಬಂದು ಸಮಾಜವ ತಿದ್ದುತ್ತ°. ಆದರೂ ನಾವು ಈ ಸಂಗತಿಯ ಎಚ್ಚರಂದ ಗಮನುಸೆಕು. ನಾವು ಭಗವಂತನ ಹೆಜ್ಜೆಲಿಯೇ ಮುನ್ನಡೆಕು. ಆದರೆ ನಾವು ಅವನ ಅನುಕರುಸುತ್ತಿಲ್ಲೆ ಹೇಳ್ವ ಪ್ರಜ್ಞೆ ಮಾತ್ರ ಇರೇಕು. ಅನುಸರುಸುವದು ಮತ್ತು ಅನುಕರುಸುವದು ಒಂದೇ ಮಟ್ಟದ ವಿಷಯ (ಸಂಗತಿ) ಅಲ್ಲ. ಭಗವಂತ° ಬಾಲ್ಯಲ್ಲಿ ಗೋವರ್ಧನಗಿರಿಯ ಎತ್ತಿದ°. ನಾವು ಅವನ ಈ ಕಾರ್ಯವ ಅನುಕರುಸಲೆ ಎಡಿಯ. ಯಾವ ಮನುಷ್ಯಂದಲೂ ಇದರ ಮಾಡ್ಳೆ ಸಾಧ್ಯ ಇಲ್ಲೆ. ನಾವು ಅವನ ತಾತ್ವಿಕ ವಿಷಯಂಗಳ ಅನುಸರುಸೇಕು ಹೊರತು ಕಾರ್ಯವ ಅನುಕರುಸಲೆ ಆಗ.

ಮನುಷ್ಯ° ಭಗವಂತನ ಮತ್ತು ಅವನಿಂದ ಅಧಿಕಾರ ಪಡಕ್ಕೊಂಡ ಸೇವಕರ (ಇತರ ದೇವತೆಗಳ) ಉಪದೇಶಂಗಳ ಅನುಸರುಸೇಕು. ಅಷ್ಟೆ. ಅವರ ಉಪದೇಶಂಗೊ ನವಗೆ ಕಲ್ಯಾಣಕರ. ಬುದ್ಧಿವಂತ ಮನುಷ್ಯ° ಅವ್ವು ಉಪದೇಶಿಸಿದ್ದರ ಅನುಸರುಸುತ್ತವೇ ವಿನಃ ಅವ್ವು ಮಾಡಿದ್ದನ್ನೇ ತಾನೂ ಮಾಡ್ಳೆ ಹೆರಡುವದಲ್ಲ. ಶಿವನ ಅನುಕರುಸಿ ವಿಷದ ಸಮುದ್ರವನ್ನೇ ಕುಡುದುಬಿಡುತ್ತೆ ಹೇಳಿ ಹೆರಟರೆ ನಡೆಯದ್ದ ಕಾರ್ಯ. ಶಿವ ವಿಷವ ಕುಡುದ್ದ° ಹೇಳಿ ನಾವು ವಿಷದ ಹನಿಯನ್ನೂ ಕುಡಿವಲೆ ಪ್ರಯತ್ನಿಸಲೆ ಹೆರಟ್ರೆ ಸತ್ತೇ ಹೋಕು. ಶಿವಭಕ್ತರು ಎಂಗೊ ಹೇದೊಂಡು ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಲಿ ತೊಡಗುವ ಭಕ್ತರುಗೊ ಅನೇಕರಿದ್ದವು. ಶಿವನ ಕಾರ್ಯ ಹೇಳಿ ಇದರ ಅನುಕರಣೆ ಮಾಡ್ಳೆ ಹೆರಟತ್ತು ಕಂಡ್ರೆ ಸಾವ ಹತ್ತರಂಗೆ ಎಳತ್ತಾ ಇದ್ದವು ಹೇಳಿ ಅಷ್ಟೇ ತಿಳ್ಕೊಳ್ಳೆಕ್ಕು. ಶ್ರೀಕೃಷ್ಣ ರಾಸಲೀಲೆ ಮಾಡಿದ್ದ ಹೇಳಿಗೊಂಡು ನಾವು ಹಾಂಗೇ ಮಾಡ್ಳೆ ಹೆರಟರೆ ಎಂತ ಅಕ್ಕು.! . ಹಾಂಗಾಗಿ ಅಂತಹ  ಶ್ರೇಷ್ಠರ ಆದರ್ಶ ತತ್ವಂಗಳ ಪಾಲುಸೇಕು, ಅನುಸರುಸೇಕು ಹೊರತು ಅನುಕರುಸಲೆ ಆಗ.

ಶ್ಲೋಕ

ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ ।
ಕುರ್ಯಾದ್ ವಿದ್ವಾಂಸ್ತಥಾಸಕ್ತಃ ಚಿಕೀರ್ಷುರ್ಲೋಕಸಂಗ್ರಹಮ್ ॥೨೫॥

ಪದವಿಭಾಗ

ಸಕ್ತಾಃ ಕರ್ಮಣಿ ಅವಿದ್ವಾಂಸಃ ಯಥಾ ಕುರ್ವಂತಿ ಭಾರತ । ಕುರ್ಯಾತ್ ವಿದ್ವಾನ್ ತಥಾ ಅಸಕ್ತಃ ಚಿಕೀರ್ಷುಃ ಲೋಕ-ಸಂಗ್ರಹಮ್ ॥

ಅನ್ವಯ

ಹೇ ಭಾರತ!, ಅವಿದ್ವಾಂಸಃ ಯಥಾ ಕರ್ಮಣಿ ಸಕ್ತಾಃ ಕರ್ಮ ಕುರ್ವಂತಿ, ತಥಾ ಲೋಕ-ಸಂಗ್ರಹಂ ಚಿಕೀರ್ಷುಃ ವಿದ್ವಾನ್ ಅಸಕ್ತಃ ಸನ್ ಕರ್ಮ ಕುರ್ಯಾತ್ ॥

ಪ್ರತಿಪದಾರ್ಥ

ಹೇ ಭಾರತ! – ಏ ಭರತ ಕುಲದವನೇ!, ಅವಿದ್ವಾಂಸಃ – ಅಜ್ಞಾನಿಗೊ, ಯಥಾ – ಹೇಂಗೆ, ಕರ್ಮಣಿ – ವಿಧ್ಯುಕ್ತಕರ್ಮಂಗಳಲ್ಲಿ, ಸಕ್ತಾಃ – ಆಸಕ್ತರಾಗಿ, ಕುರ್ವಂತಿ – ಮಾಡುತ್ತವೋ, ತಥಾ – ಹಾಂಗೇ, ಲೋಕ-ಸಂಗ್ರಹಮ್ – ಜನಸಾಮಾನ್ಯರ, ಚಿಕೀರ್ಷುಃ – ಮುನ್ನಡವಲೆ ಆಶಿಸಿ, ವಿದ್ವಾನ್ – ವಿದ್ವಾಂಸರುಗೊ, ಅಸಕ್ತಃ ಸನ್ – ಅನಾಸಕ್ತರಾಗಿ, ಕರ್ಮ – ಕರ್ಮವ, ಕುರ್ಯಾತ್ – ಮಾಡೆಕು

ಅನ್ವಯಾರ್ಥ

ಅಜ್ಞಾನಿಗಳಾದವು ಹೇಂಗೆ ಫಲಾಸಕ್ತರಾಗಿ ಕರ್ಮವ ಮಾಡುತ್ತವೋ, ಹಾಂಗೆಯೇ ವಿದ್ವಾಂಸರುಗೊ ಫಲಾಸಕ್ತಿಯಿಲ್ಲದ್ದೇ ಜನಸಾಮಾನ್ಯರುಗಳ ಯೋಗ್ಯಮಾರ್ಗಲ್ಲಿ ಕರೆದೊಯ್ಯಲೆ ಕರ್ಮವ ಮಾಡೆಕು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆ ಇಪ್ಪವಂಗೂ ಮತ್ತು ಕೃಷ್ಣಪ್ರಜ್ಞೆ ಇಲ್ಲದಿಪ್ಪವಂಗೂ ವೆತ್ಯಾಸ ಅವರ ಬೇರೆ ಬೇರೆ ಅಪೇಕ್ಷೆಂದಲಾಗಿ ಉಂಟಾವುತ್ತು. ಕೃಷ್ಣಪ್ರಜ್ಞೆಯ ಬೆಳವಣಿಗೆಗೆ ನೆರವಾಗದ್ದೆ ಇಪ್ಪದರ ಏನನ್ನೂ ಕೃಷ್ಣಪ್ರಜ್ಞೆ ಇಪ್ಪವ° ಮಾಡುತ್ತನಿಲ್ಲೆ. ಅವ° ಐಹಿಕ ಚಟುವಟಿಕೆಲಿ ಅತ್ಯಾಸಕ್ತಿ ಇಪ್ಪ ಅಜ್ಞಾನಿಯ ಹಾಂಗೇ ಕೆಲಸ (ಕರ್ಮವ) ಮಾಡುಗು. ಆದರೆ, ಅಜ್ಞಾನಿಯು ತನ್ನ ಇಂದ್ರಿಯ ತೃಪ್ತಿಯ ಉದ್ದೇಶಕ್ಕಾಗಿಯೇ ಕೆಲಸ (ಕರ್ಮ, ಕಾರ್ಯ) ಮಾಡುತ್ತ°. ಆದ್ದರಿಂದ ಹೇಂಗೆ ಕಾರ್ಯ ಮಾಡೇಕು ಮತ್ತು ಹೇಂಗೆ ಕಾರ್ಯಫಲವ ಕೃಷ್ಣಪ್ರಜ್ಞೆಯ ಉದ್ದೇಶಕ್ಕೆ ಬಳಸಿಗೊಳ್ಳೆಕು ಹೇಳ್ವದರ ಇತರ ಜನರಿಂಗೆ ತೋರಿಸಿಕೊಡೇಕ್ಕಾದ್ದು ಕೃಷ್ಣಪ್ರಜ್ಞೆ ಇಪ್ಪವನ ಕರ್ತವ್ಯ.

ಅರ್ಥಾತ್, ಹೇಂಗೆ ತಿಳಿಯದ್ದ ಮಂದಿ (ಅಜ್ಞಾನಿಗೊ) ಫಲದ ನಂಟಿಂಗಾಗಿ (ಅಪೇಕ್ಷೆಗಾಗಿ) ಕರ್ಮವ ಉತ್ಸಾಹಂದ ಮಾಡುತ್ತವೋ, ಹಾಂಗೆಯೇ, ಜ್ಞಾನಿಯೂ (ತಿಳುದೋನೂ) ಫಲದ ನಂಟು ಇಲ್ಲದ್ದೆ (ನಿಷ್ಕಾಮ ಕರ್ಮ) ಸಮಾಜಕ್ಕಾಗಿ (ಸಮಾಜವ ತಿದ್ದಿ ಸಮಾಜ ಕಲ್ಯಾಣಕ್ಕಾಗಿ) ಕರ್ಮವ ಮಾಡುತ್ತಾ ಇರೇಕು. “ಆನು ಎನ್ನ ಕಣ್ಮುಂದೆ ಬೆಳೆತ್ತ ಇಪ್ಪ ಜನಾಂಗಕ್ಕೆ ಮಾರ್ಗದರ್ಶನವಾಗಿ ಭಗವಂತನ ಸೇವೆ ಮಾಡುತ್ತ ಇದ್ದೆ, ಎನಗೆ ಇದರಿಂದ ಭಗವಂತ ಏನು ಕೊಟ್ಟರೂ ಸಂತೋಷ, ಅದು ಭಗವಂತಂಗೇ ಅರ್ಪಣೆ” ಹೇಳ್ವ ಮನಃಸಂಕಲ್ಪಂದ ಕರ್ಮ ಮಾಡೆಕು. ಇದು ನಿಜವಾದ ಕರ್ಮಯೋಗ.

ಶ್ಲೋಕ

ನ ಬುದ್ಧಿಭೇದಂ ಜನಯೇತ್ ಅಜ್ಞಾನಾಂ ಕರ್ಮಸಂಗಿನಾಂ ।
ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ॥೨೬॥

ಪದವಿಭಾಗ

ನ ಬುದ್ಧಿ-ಭೇದಮ್ ಜನಯೇತ್ ಅಜ್ಞಾನಾಮ್ ಕರ್ಮ-ಸಂಗಿನಾಮ್ । ಜೋಷಯೇತ್ ಸರ್ವ-ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ॥

ಅನ್ವಯ

ವಿದ್ವಾನ್ ಕರ್ಮ-ಸಂಗಿನಾಮ್ ಅಜ್ಞಾನಾಂ ಬುದ್ಧಿ-ಭೇದಂ ನ ಜನಯೇತ್ । ಕಿಂತು, ಯುಕ್ತಃ ಸಮಾಚರನ್ ಸರ್ವ-ಕರ್ಮಾಣಿ ಜೋಷಯೇತ್ ॥

ಪ್ರತಿಪದಾರ್ಥ

ವಿದ್ವಾನ್ – ವಿದ್ವಾಂಸ°, ಕರ್ಮ-ಸಂಗಿನಾಮ್  ಅಜ್ಞಾನಾಮ್ – ಕಾಮ್ಯಕರ್ಮಾಸಕ್ತರಾದ ಅಜ್ಞಾನಿಗಳ (ಮೂರ್ಖರ), ಬುದ್ಧಿ-ಭೇದಮ್ – ಬುದ್ಧಿಭಂಗವ,  ನ ಜನಯೇತ್- ಉಂಟುಮಾಡ್ಳಾಗ, ಕಿಂತು – ಆದರೆ, ಯುಕ್ತಃ – ನಿರತನಾಗಿ, ಸಮಾಚರನ್ – ಆಚರಿಸ್ಯೊಂಡು, ಸರ್ವ-ಕರ್ಮಾಣಿ – ಎಲ್ಲ ಕರ್ಮಂಗಳ,  ಜೋಷಯೇತ್ – ಹೊಂದಾಣಿಕೆ ಮಾಡೆಕು.

ಅನ್ವಯಾರ್ಥ

ಕರ್ಮಫಲಕ್ಕೆ ಅಂಟಿಕೊಂಡಿಪ್ಪವರ ನಿಯತ ಕರ್ತವ್ಯಂಗಳ (ಕೆಲಸವ) ನಿಲ್ಲುಸಿಬಿಟ್ರೆ ಅವರ ಬುದ್ಧಿ ಕಲಂಕುತ್ತು. ಹಾಂಗಾಗಿ ವಿದ್ವಾಂಸನಾದವ° ಅವರ ಕೆಲಸಂಗಳ ನಿಲ್ಲಿಸಿಬಿಡ್ಳಾಗ. ಭಕ್ತಿಭಾವಂದ ಕೆಲಸಮಾಡಿ ಅವ° ಅಜ್ಞಾನಿಗಳ ಕೃಷ್ಣಪ್ರಜ್ಞೆಯ ಕ್ರಮಕ್ರಮವಾದ ಬೆಳವಣಿಗೆಗಾಗಿ ಎಲ್ಲ ಬಗೆಯ ಚಟುವಟಿಕೆಗಳಲ್ಲಿ ತೊಡಗುಸೆಕು.

ತಾತ್ಪರ್ಯ / ವಿವರಣೆ

ಎಲ್ಲ ವೈದಿಕ ವಿಧಿಗಳ ಗುರಿಯು ಒಂದೇ. ಎಲ್ಲ ವಿಧಿಗಳ, ಎಲ್ಲ ಯಜ್ಞಾಚರಣೆಗಳ ಮತ್ತು ಐಹಿಕ ಚಟುವಟಿಕೆಗಳ ನಿರ್ದೇಶನವೂ ಸೇರಿ ಎಲ್ಲವುದರ ಕೊನೆಯ ಉದ್ದೇಶ ಕೃಷ್ಣನ ತಿಳ್ಕೊಂಬದು. ಆ ಶ್ರೀಕೃಷ್ಣ ಪರಮಾತ್ಮನೇ ಬದುಕಿನ ಕೊನೆಯ ಗುರಿ. ಆದರೆ ಕಾಮ್ಯಾಸಕ್ತರಿಂಗೆ ಇಂದ್ರಿಯ ತೃಪ್ತಿಯ ಆಚಿಗೆ ಎಂತರ ಹೇಳಿ ತಿಳಿಯ. ಅದಕ್ಕಾಗಿ ಅವು ವೇದಂಗಳ ಅಭ್ಯಾಸ ಮಾಡುತ್ತವು. ಅಲ್ಲಿ, ವೇದ ವಿಧಿಗಳಿಂದ ನಿಯಂತ್ರಿತವಾದ ಫಲಾಸಕ್ತ ಚಟುವಟಿಕೆಗೊ ಮತ್ತು ಇಂದ್ರಿಯ ತೃಪ್ತಿಯು ಕ್ರಮೇಣ ಮನುಷ್ಯನ ಕೃಷ್ಣಪ್ರಜ್ಞೆಗೆ ಏರುಸುತ್ತು. ಆದ್ದರಿಂದ ಕೃಷ್ಣಪ್ರಜ್ಞೆಲಿ ಆತ್ಮಸಾಕ್ಷಾತ್ಕಾರ ಆದವ° ಇತರರ ಚಟುವಟಿಕೆಗಳ ಆಗಲೀ, ಅವರ ತಿಳುವಳಿಕೆಗಳ ಆಗಲೀ ಕೆದಕಿ ಕಲಂಕುಸಲಾಗ. ಎಲ್ಲಾ ಕಾರ್ಯದ ಫಲಂಗಳ ಕೃಷ್ಣನ ಸೇವಗೆ ಹೇಂಗೆ ಸಮರ್ಪಿಸಿಗೊಂಬಲಕ್ಕು ಹೇಳ್ವದರ ತೋರಿಸಿಕೊಡುವದರ ಮೂಲಕ ಅವ° ಕೆಲಸ ಮಾಡೆಕು. ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡುವ ಅಜ್ಞಾನಿಯು ಹೇಂಗೆ ಕೆಲಸ ಮಾಡೆಕು ಮತ್ತು ಹೇಂಗೆ ನಡಕ್ಕೊಳ್ಳೆಕು ಎಂಬುದರ ಕಲ್ತುಗೊಂಬಲೆ ಕೃಷ್ಣಪ್ರಜ್ಞೆಯುಳ್ಳ ವಿದ್ವಾಂಸ ಕೆಲಸ ಮಾಡೆಕು. ಅಜ್ಞಾನಿಯಾದವನ  ಚಟುವಟಿಕೆಗಳ ಭಂಗ ಮಾಡ್ಳಾಗ. ಆದರೆ, ಸ್ವಲ್ಪಮಟ್ಟಿಂಗೆ ಬೆಳೆದ ಕೃಷ್ಣಪ್ರಜ್ಞೆಯುಳ್ಳ ಮನುಷ್ಯನು ಇತರ ವೈದಿಕ ನಿಯಮಂಗೊಕ್ಕೆ ಕಾಯದ್ದೆ ನೇರವಾಗಿ ಭಗವಂತನ ಸೇವೆಲಿ ತೊಡಗಲಕ್ಕು. ಈ ಭಾಗ್ಯಶಾಲಿಗೆ ವೈದಿಕ ವಿಧಿಗಳ ಅನುಸರುಸೇಕ್ಕಾದ ಅಗತ್ಯ ಇಲ್ಲೆ. ಎಂತಕೆ ಹೇಳಿರೆ ನಿಯತ ಕರ್ತವ್ಯಂಗಳ ಮಾಡುವದರಿಂದ ಪಡವ ಎಲ್ಲಾ ಪರಿಣಾಮಂಗಳ ನೇರವಾದ ಕೃಷ್ಣಪ್ರಜ್ಞೆಂದ ಪಡವಲಕ್ಕು.

ಬನ್ನಂಜೆ ವ್ಯಾಖ್ಯಾನಿಸುತ್ತವು – ತಿಳುವಳಿಕೆ ಇಲ್ಲದ್ದೆ ಫಲದ ನಂಟಿಂಗೇ ಕರ್ಮ ಮಾಡುವ ಮಂದಿಯ ನಂಬಿಕೆಯ ಕೆದಕಲಾಗ. ಉಪಾಯ ಬಲ್ಲ ತಿಳುದವ° ತಾನು ಎಲ್ಲಾ ಕರ್ಮಂಗಳ ಮಾಡುತ್ತ ಅವರ ಅವನತ್ತ ಒಲೈಸೇಕು

ಸಮಾಜಲ್ಲಿ ಅನೇಕ ತರದ ಜನಂಗೊ ಇರ್ತವು. ಎಲ್ಲೊರಿಂಗೂ ತಿಳುವಳಿಕೆ ಇರುತ್ತಿಲ್ಲೆ. ಅವ್ವು ಅವರವರ ನಂಬಿಕೆಗೊಕ್ಕೆ ತಕ್ಕಂತೆ ನಡೆತ್ತವು. ತಿಳುದೋನಿಂಗೆ ಅದು ಮೂಢನಂಬಿಕೆ ಆಗಿ ಕಾಂಗು ಅಲ್ಲ ತಿಳಿಯದೋನಿಂಗೆ ಆಚದು ಮೂಢನಂಬಿಕೆಯಾಗಿ ಕಾಂಗು. ಆದರೆ, ಏವತ್ತೂ ಒಂದರಿಯೇ ಹೋಗಿ ಅಂತವರ ಪರಿಹಾಸ್ಯ ಮಾಡ್ಳೆ ಹೋಪಲಾಗ. ಒಬ್ಬ ಒಂದು ಕಲ್ಲ ಮಡಿಕ್ಕೊಂಡು ಅದಕ್ಕೊಂದು ಹೆಸರ ಮಡುಗಿ ದೇವರು ಹೇಳಿ ಪೂಜಿಸುತ್ತಿಕ್ಕು. ಆತನ ಪಾಲಿಂಗೆ ಅವನ ಅಪಾರ ನಂಬಿಕೆ, ವಿಶ್ವಾಸ, ಶರಣಾಗತಿ ಅವನ ರಕ್ಷಿಸುಗು. ಇದರ ನೋಡಿ ಪರಿಹಾಸ್ಯ ಮಾಡುತ್ತದು ಮೂಢತನ. ಅವ್ವು ಇಂತಹ ನಂಬಿಕೆಯ ಅಡಿಪಾಯಲ್ಲಿ ಜೀವನಲ್ಲಿ ಭರವಸೆಯಿಂದ ಬದುಕುತ್ತಿರುತ್ತವು. ಅವಕ್ಕೊಂದು ಸನಾತನ ಪ್ರಜ್ಞೆ ಇರುತ್ತು. ಸರ್ವಗತ, ಸರ್ವಶಬ್ದವಾಚ್ಯ ಮತ್ತು ಸರ್ವಶಕ್ತ ಭಗವಂತ ಅವಕ್ಕೆ ಆ ಕಲ್ಲಿನ ಮುಖೇನ ರಕ್ಷಣೆ ಕೊಡ್ಳೂ ಸಾಧ್ಯವಿದ್ದಲ್ಲದ ? ಆದ್ದರಿಂದ ಅಂತವರ ನೋಡಿ ನೆಗೆಮಾಡ್ಳಾಗ. ಅದರ ಬಿಟ್ಟಿಕ್ಕಿ, ಅಂತವರ ಕ್ರಮೇನ ಜ್ಞಾನದತ್ತ ಕರಕ್ಕೊಂಡು ಬಪ್ಪ ಪ್ರಯತ್ನವ ಮಾಡೆಕು. ಎಲ್ಲವನ್ನೂ ಸಾಮಾಜಿಕ ಕಾಳಜಿಂದ ಮಾಡೇಕು. ಆದರೆ, ನಿರ್ಲಿಪ್ತನಾಗಿ ಎಲ್ಲಾ ಕರ್ಮಂಗಳ ಮಾಡುತ್ತಾ ಆಜ್ಞಾನಿಗೊಕ್ಕೆ ಜ್ಞಾನವ ತುಂಬೆಕು.

ಶ್ಲೋಕ

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ ।
ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ ॥೨೭॥

ಪದವಿಭಾಗ

ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ । ಅಹಂಕಾರ-ವಿಮೂಢ-ಆತ್ಮಾ ಕರ್ತಾ ಅಹಮ್ ಇತಿ ಮನ್ಯತೇ ॥

ಅನ್ವಯ

ಪ್ರಕೃತೇಃ ಗುಣೈಃ ಕರ್ಮಾಣಿ ಸರ್ವಶಃ ಕ್ರಿಯಮಾಣಾನಿ ಸಂತಿ । ಪರಂತು, ಅಹಂಕಾರ-ವಿಮೂಢ-ಆತ್ಮಾ ‘ಅಹಂ’ ಕರ್ತಾ ಇತಿ ಮನ್ಯತೇ॥

ಪ್ರತಿಪದಾರ್ಥ

ಪ್ರಕೃತೇಃ – ಭೌತಿಕ ಪ್ರಕೃತಿಯ, ಗುಣೈಃ – ಗುಣಂಗಳಿಂದ, ಕರ್ಮಾಣಿ – ಚಟುವಟಿಕೆಗೊ, ಸರ್ವಶಃ  ಕ್ರಿಯಮಾಣಾನಿ ಸಂತಿ – ಎಲ್ಲ ಕಡೆಲಿಯೂ ಮಾಡಲ್ಪಡಬೇಕಾಗಿಪ್ಪದಾಗಿದ್ದು,  ಪರಂತು – ಆದರೆ, ಅಹಂಕಾರ-ವಿಮೂಢ-ಆತ್ಮಾ  – ಅಹಂಕಾರಮ್ದ ದಿಗ್ಭ್ರಮೆಗೊಂಡ ಚೇತಾತ್ಮ°, ಅಹಮ್ – ಆನು, ಕರ್ತಾ – ಮಾಡುವವ°, ಇತಿ ಮನ್ಯತೇ – ಹೇದು ತಿಳಿತ್ತ°.

ಅನ್ವಯಾರ್ಥ

ಭೌತಿಕ ಪ್ರಪಂಚಲ್ಲಿ ವಾಸ್ತವವಾಗಿ ಕಾರ್ಯಂಗಳ ಪ್ರಕೃತಿಯ ತ್ರಿಗುಣಂಗಳೇ ಮಾಡುತ್ತದು. ಆದರೆ, ಅಹಂಕಾರಂದ ಮೂಢನಾದವ° ತಾನೇ ಕಾರ್ಯಂಗಳ ಮಾಡುತ್ತದು ಹೇಳಿ ತಿಳಿತ್ತ°.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆ ಇಪ್ಪ ಒಬ್ಬ° ಮತ್ತು ಐಹಿಕ ಪ್ರಜ್ಞೆಲಿ ಇಪ್ಪ ಮತ್ತೊಬ್ಬ° ಒಂದೇ ಮಟ್ಟಲ್ಲಿ ಕೆಲಸಮಾಡುತ್ತಿಪ್ಪಗ ಇಬ್ರೂ ಒಂದೇ ನೆಲೆಲಿ ಇಪ್ಪ ಹಾಂಗೆ ಕಾಂಗು. ಆದರೆ, ಅವರಿಬ್ಬರ ಸ್ಥಾನಲ್ಲಿ ತೀವ್ರ ವ್ಯತ್ಯಾಸ ಇದ್ದು. ಐಹಿಕ ಪ್ರಜ್ಞೆಲಿಪ್ಪ ಮನುಷ್ಯ° ಅಹಂಕಾರದ ದೆಸೆಂದಲಾಗಿ ತಾನೇ ಎಲ್ಲವನ್ನೂ ಮಾಡುವದು ಹೇಳಿ ದೃಢವಾಗಿ ನಂಬಿರುತ್ತ°. ದೇಹದ ಯಂತ್ರವ ಐಹಿಕ ಪ್ರಕೃತಿ ಸೃಷ್ಟಿಮಾಡಿದ್ದು ಮತ್ತು ಈ ಪ್ರಕೃತಿಯು ಭಗವಂತನ ಮೇಲ್ವಿಚಾರಣೆಲಿ ಕೆಲಸಮಾಡುತ್ತು ಹೇಳ್ವದು ಅವಕ್ಕೆ ಗೊಂತಾಗ. ಪ್ರಾಪಂಚಿಕವಾಗಿಪ್ಪೋನಿಂಗೆ ಕಟ್ಟಕಡೇಂಗೆ ತಾನು ಪರಮಾತ್ಮನ ನಿಯಂತ್ರಣಲ್ಲಿ ಇದ್ದೆ ಹೇಳ್ವದು ತಿಳಿಯ. ಅಹಂಕಾರಿಯಾದವ° ತಾನೇ ಸ್ವತಂತ್ರವಾಗಿ ಎಲ್ಲವನ್ನೂ ಮಾಡಿದೆ ಹೇಳಿ ಗ್ರೇಶಿಗೊಳ್ತ°. ಇದು ಅವನ ಅಜ್ಞಾನದ ಲಕ್ಷಣ. ಈ ಜಡವಾದ ಮತ್ತು ಸೂಕ್ಷ್ಮವಾದ ದೇಹವ ದೇವೋತ್ತಮ ಪರಮ ಪುರುಷನ ಆಜ್ಞೆಪ್ರಕಾರ ಐಹಿಕ ಪ್ರಕೃತಿಯು ಸೃಷ್ಟಿಸಿದ್ದು. ಆದ್ದರಿಂದ ಅವನ ದೇಹದ ಮತ್ತು ಮನಸ್ಸಿನ ಚಟುವಟಿಕೆಗೊ ಕೃಷ್ಣಪ್ರಜ್ಞೆಲಿ ಕೃಷ್ಣನ ಸೇವೆಲಿ ತೊಡಗೆಕು ಹೇಳ್ತದು ಅವ° ತಿಳಿದಿರುತ್ತನಿಲ್ಲೆ. ಇಂದ್ರಿಯಂಗಳ ಇಂದ್ರಿಯತೃಪ್ತಿಗೊಕ್ಕೆ ಬಹುಕಾಲ ದುರುಪಯೋಗ ಮಾಡಿಕೊಂಡದ್ದರಿಂದ ವಾಸ್ತವಿಕವಾಗಿ ಅಹಂಕಾರವು ಅವನ ಮೂಢನನ್ನಾಗಿ ಮಾಡುತ್ತು. ಇದರಿಂದ ಅವ° ಭಗವಂತನೊಡನೆ ತನ್ನ ನಿತ್ಯ ಸಂಬಂಧವ ಮರದು ಬಿಡ್ತ. ಆದ್ದರಿಂದ ಅಜ್ಞಾನಿಯು ದೇವೋತ್ತಮ ಪರಮ ಪುರುಷಂಗೆ ಹೃಷೀಕೇಶ°’ ಅಥವಾ ಶರೀರದ ಪ್ರಭು ಹೇಳ್ವ ಹೆಸರಿದ್ದು ಹೇಳ್ವದರ ಮರದಿರುತ್ತ°.

ಬನಂಜೆಯವ ವ್ಯಾಖ್ಯಾನಂದ ಆಯ್ದು ಹೇಳುವದಾದರೆ – ಪ್ರಕೃತಿಯ ವರಪ್ರಸಾದವಾದ ಇಂದ್ರಿಯಂಗಳಿಂದಲಾಗಿ ಎಲ್ಲ ಬಗೆಯ ಕರ್ಮಂಗೊ ನಡೆತ್ತು. ಆದರೆ, ಹಮ್ಮಿಂದ ಮೈಮರದು ಎಲ್ಲವನ್ನೂ ‘ಆನೇ ಮಾಡಿದೆ’ ಹೇಳಿ ಗ್ರೇಶಿಗೊಳ್ತ° ಮೂಢನಾದವ°.

ಇಲ್ಲಿ ಮುಖ್ಯವಾಗಿ ಕೃಷ್ಣ ‘ಆನು ಮಾಡಿದ್ದು’ ಹೇಳ್ವ ಅಹಂಕಾರ ಪಟ್ಟುಗೊಂಬದು ತಪ್ಪು ಮತ್ತು ಎಂತಕೆ ಹೇಳ್ವದರ ಚಂದಕ್ಕೆ ವಿವರಿಸಿದ್ದ°. ಆರೇ ಆದರೂ ಎಂತದನ್ನಾದರೂ ‘ಆನು ಮಾಡಿದೆ’ ಹೇಳಿ ತಿಳ್ಕೊಂಡರೆ ಅದು ಅವನ ತಿಳಿಗೇಡಿತನ. ಸೃಷ್ಟಿಯ ವಿಚಿತ್ರ ಸತ್ಯ ಹೇಳಿರೆ, ಆರೂ ಎಂತದೂ ಮಾಡುತ್ತವಿಲ್ಲೆ ಹೊಸತ್ತಾಗಿ ಏನನ್ನೂ ಆದರೂ ಎಲ್ಲವೂ ಎಲ್ಲರ ಕೈಂದ ಆವುತ್ತಾ ಇರುತ್ತು. ಈ ದೇಹ ಪ್ರಕೃತಿಯ ನಿರ್ಮಾಣ. ಪ್ರಕೃತಿಲಿ ಅದಕ್ಕೆ ಪೋಷಕವಾದ ಅಂಗಭೂತವಾದ ಇಂದ್ರಿಯಂಗೊ. ಪ್ರಕೃತಿ ಹೇಳಿರೆ ಈ ದೇಹ. ಅದರ ಗುಣಂಗೊ ಹೇಳಿರೆ ಇಂದ್ರಿಯಂಗೊ. ಶಬ್ದ-ಸ್ಪರ್ಶ-ರಸ-ರೂಪ-ಗಂಧ., ಕೆಮಿ, ಚರ್ಮ, ನಾಲಗೆ, ಕಣ್ಣು, ಮೂಗು., ಅದಕ್ಕೆ ಅನುಗುಣವಾಗಿ ಆಕಾಶ(ಶಬ್ದ), ಗಾಳಿ (ಸ್ಪರ್ಶ), ನೀರು (ರಸ), ಅಗ್ನಿ (ರೂಪ), ಮತ್ತು ಮಣ್ಣು (ಗಂಧ) . ಇವು ಪ್ರಕೃತಿಯ ಗುಣಂಗೊ. ಹೀಂಗಿಪ್ಪಗ, ನಾವು ಯಾವುದೋ ಒಂದು ವಿಷಯವ ಆನು ಮಾಡಿದೆ ಹೇಳುವದು ಅರ್ಥಶೂನ್ಯ. ಉದಾಹರಣೆಗೆ – ‘ಕಣ್ಣಿಂದ ನೋಡಿದೆ’ – ಈ ಕಣ್ಣು ನವಗೆ ಕೊಟ್ಟದು ಆರು? ಹುಟ್ಟು ಕುರುಡಂಗೆ ಕಣ್ಣು ಕೊಡ್ಳೆ ನವಗೆ ಸಾಧ್ಯವೇ!. ಹೇಳಿರೆ ಆ ಕಣ್ಣು ಪ್ರಕೃತಿಯ ಕೊಡುಗೆ. ಭಗವಂತ° ನವಗೆ ಕಣ್ಣು ಕೊಟ್ಟ°, ಕಣ್ಣ ಮುಂದೆ ನೋಡ್ಳೆ ವಸ್ತುವ ಇಟ್ಟ°, ಅದರ ನೋಡುವಂತೆ ನವಗೆ ಪ್ರೇರೇಪಿಸಿದ°., ನಾವು ನೋಡಿತ್ತು. ಒಂದು ವೇಳೆ ನವಗೆ ಒಳ್ಳೆಯ ಸ್ವರ ಇದ್ದರೆ ನಾವು ಅದಕ್ಕಾಗಿ ಅಹಂಕಾರ ಪಟ್ಟುಗೊಳ್ತು. ಆದರೆ, ಆ ಸ್ವರವ ನವಗೆ ಕೊಟ್ಟದು ಆರು ಹೇಳ್ವದರ ನಾವೆಂದಾದರೂ ಯೋಚಿಸಿದ್ದೋ?!!. ಒಂದು ಕಾರ್ಯ ಆಯೇಕ್ಕಾರೆ ಇಡೀ ವಿಶ್ವದ ಅನೇಕ ಘಟಕಂಗೊ ಸೇರಿ ಕಾರ್ಯ ನಿರ್ವಹಿಸೆಕು. ಪ್ರಕೃತಿ ಜಡ. ಅದಕ್ಕೆ ಇಚ್ಛೆ ಇಲ್ಲೆ. ನಾವು ಮಾಡುವದು ಹೇಳಿರೆ ನಾವು ಇಚ್ಛಿಸಿ ಮಾಡುವದು. ನವಗೆ ಆ ಇಚ್ಛೆ ಇದ್ದು., ಪ್ರತಿಯೊಬ್ಬ ಜೀವಂಗೂ ಅವನದ್ದೇ ಆದ ಜೀವ ಸ್ವಭಾವ ಇದ್ದು. ನಾವು ಮಾಡುವ ಪ್ರತಿಯೊಂದು ಕಾರ್ಯ ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿರುತ್ತು. ಇದು ಇಚ್ಛಾಪೂರ್ವಕ ಕ್ರಿಯೆ. ನವಗೆ ಇಚ್ಛೆ ಇದ್ದು ಆದರೆ ಇಚ್ಛಾಸ್ವಾತಂತ್ರ್ಯ ಇಲ್ಲೆ.

ಇಚ್ಛಾಸ್ವಾತಂತ್ರ್ಯ ಇಪ್ಪದು ಕೇವಲ ಭಗವಂತನಲ್ಲಿ. ಅದಕ್ಕನುಗುಣವಾಗಿ ಸರ್ವಕಾರ್ಯ ನಿರ್ವಹಣೆ ಆವುತ್ತು. ಆದ್ದರಿಂದ ನಮ್ಮ ಸ್ವಭಾವವ ನಿಯಂತ್ರುಸುವವ° ಇಡೀ ಜಗತ್ತಿನ ಮೂಲ ಕರ್ತೃ ಭಗವಂತ°. ಅವನ ಇಚ್ಛೆಗನುಗುಣವಾಗಿ ಪ್ರಪಂಚದ ವ್ಯವಹಾರಂಗೊ ನಡೆತ್ತು. ಇದು ವಿಶ್ವದ ವ್ಯವಸ್ಥೆ. ಇಡೀ ವಿಶ್ವದ ಚಕ್ರಲ್ಲಿ ನಾವು ಒಂದು ಘಟಕ ಅಷ್ಟೆ. ಆದ್ದರಿಂದ ‘ಆನೇ ಮಾಡಿದೆ’ ಹೇಳ್ವ ಮಾತಿಲ್ಲಿ ಅಹಂಕಾರ ಹೊರತು ಬೇರೆ ಯಾವ ಹುರುಳೂ ಇಲ್ಲೆ. ನಿಜವಾದ ಕರ್ತೃ ಭಗವಂತ°. ಜೀವಕ್ಕೊಂದು ಕರ್ತೃತ್ವ ಮತ್ತು ಜಡಕ್ಕೊಂದು ಕರ್ತೃತ್ವ ಇದ್ದು. ಇದರ ಅಂತರ ನವಗೆ ತಿಳುದಿರೆಕು. ಮಣ್ಣು ಜಡ. ಅದಕ್ಕೆ ಇಚ್ಛೆ ಇಲ್ಲೆ. ಬೀಜ ಚೇತನ. ಅದಕ್ಕೆ ಮರ ಅಪ್ಪ ಸ್ವಭಾವ ಇದ್ದು ಆದರೆ ಸ್ವಾತಂತ್ರ್ಯ ಇಲ್ಲೆ. ಬೀಜವ ಬಿತ್ತಿ ಬೆಳಸುವ ತೋಟಗಾರ° ಆ ಭಗವಂತ°. ಭಗವಂತನ ಇಚ್ಛೆಗನುಗುಣವಾಗಿ ‘ಜೀವ’ನಲ್ಲಿಪ್ಪ ಸ್ವಭಾವಕ್ಕನುಗುಣವಾಗಿ ಪ್ರಪಂಚಲ್ಲಿ ಕ್ರಿಯೆ ನಡೆತ್ತು. ಒಂದು ಕ್ರಿಯೆಯ ಹಿಂದೆ ಇಡೀ ವಿಶ್ವದ ಪಾಲುದಾರಿಕೆ ಇರ್ತು.

ಶ್ಲೋಕ

ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ ।
ಗುಣಾಗುಣೇಶು ವರ್ತಂತ ಇತಿ ಮತ್ವಾ ನ ಸಜ್ಜತೇ ॥೨೮॥

ಪದವಿಭಾಗ

ತತ್ತ್ವವಿತ್ ತು ಮಹಾಬಾಹೋ ಗುಣ-ಕರ್ಮ-ವಿಭಾಗಯೋಃ । ಗುಣಾಃ ಗುಣೇಷು ವರ್ತಂತೇ ಇತಿ ಮತ್ವಾ ನ ಸಜ್ಜತೇ ॥

ಅನ್ವಯ

ಹೇ ಮಹಾಬಾಹೋ!, ಗುಣ-ಕರ್ಮ-ವಿಭಾಗಯೋಃ ತತ್ತ್ವವಿತ್ ತು ‘ಗುಣಾಃ ಗುಣೇಷು ವರ್ತಂತೇ’ ಇತಿ ಮತ್ವಾ ನ ಸಜ್ಜತೇ ॥

ಪ್ರತಿಪದಾರ್ಥ

ಹೇ ಮಹಾಬಾಹೋ! – ಏ ಶಕ್ತವಾದ ತೋಳುಗಳುಳಿಪ್ಪವನೇ! (ಅರ್ಜುನನೇ!), ಗುಣ-ಕರ್ಮ-ವಿಭಾಗಯೋಃ   – ಭೌತಿಕ ಪ್ರಭಾವದಲ್ಲಿನ ಕರ್ಮಂಗಳ  ವಿಭಾಗಂಗಳೆರಡರಲ್ಲಿ, ತತ್ತ್ವವಿತ್  ತು – ಪರಮ ಸತ್ಯವ ತಿಳುದವನಾದರೋ, ಗುಣಾಃ – ಇಂದ್ರಿಯಂಗೊ, ಗುಣೇಷು- ಇಂದ್ರಿಯ ತೃಪ್ತಿಗಳಲ್ಲಿ, ವರ್ತಂತೇ – ತೊಡಗಿರುತ್ತು,  ಇತಿ ಮತ್ವಾ – ಹೇದು ತಿಳುದು,  ನ ಸಜ್ಜತೇ – ಅನುರಕ್ತನಾವುತ್ತಿಲ್ಲೆ.

ಅನ್ವಯಾರ್ಥ

ಹೇ ಮಹಾಬಾಹುವಾದ ಅರ್ಜುನನೇ!, ಪರಮ ಸತ್ಯವ ತಿಳುದವ° ಇಂದ್ರಿಯಂಗಳಲ್ಲಿ ಮತ್ತು ಇಂದ್ರಿಯ ತೃಪ್ತಿಯ ಕಾರ್ಯಲ್ಲಿ ತೊಡಗುತ್ತನಿಲ್ಲೆ. ಅವಂಗೆ ಭಕ್ತಿಸೇವೆ ಮತ್ತು ಫಲದಾಸೆ ಇಪ್ಪ ಕರ್ಮ ಇವುಗಳಲ್ಲಿನ ವ್ಯತ್ಯಾಸ ತಿಳಿದಿರುತ್ತು.

ತಾತ್ಪರ್ಯ / ವಿವರಣೆ

ಪರಮ ಸತ್ಯವ ತಿಳುದೋನಿಂಗೆ ಐಹಿಕ ಸಹವಾಸಲ್ಲಿ ತನ್ನ ತೊಡಕಿನ ಸ್ಥಿತಿಯ ವಿಷಯವಾಗಿ ದೃಢವಾದ ಅರಿವು ಇರ್ತು. ತಾನು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನ ವಿಭಿನ್ನ ಅಂಶ ಮತ್ತು ಐಹಿಕ ಸೃಷ್ಟಿಲಿ ತನ್ನ ಸ್ಥಾನ ಏನೂ ಇಲ್ಲೆ ಹೇಳ್ವದರ ಅವ° ತಿಳುದಿರುತ್ತ°. ಆದ್ದರಿಂದ ಅವಂಗೆ ಸಹಜವಾಗಿ ಭೌತಿಕ ಇಂದ್ರಿಯ ಚಟುವಟಿಕೆಗಳಲ್ಲಿ ಆಸಕ್ತಿ ಇರ್ತಿಲ್ಲೆ. ತನ್ನ ಬದುಕಿನ ಐಹಿಕ ಸ್ಥಿತಿಯು ಭಗವಂತನ ನಿಯಂತ್ರಣಲ್ಲಿದ್ದು ಹೇಳ್ವದು ಅವಂಗೆ ಗೊಂತಿರುತ್ತು. ಆದ್ದರಿಂದ ಪ್ರಾಪಂಚಿಕ ಯಾವುದೇ ಪ್ರಕ್ರಿಯೆ ಪ್ರತಿಕ್ರಿಯೆಗೊ ಅವನ ಕಲಕ್ಕುತ್ತಿಲ್ಲೆ. ಎಲ್ಲವೂ ಭಗವಂತನ ಕರುಣೆ ಹೇದು ಅವ° ಭಾವುಸುತ್ತ°. ಪರಮ ಸತ್ಯವ ನಿರಾಕಾರ ಬ್ರಹ್ಮ, ಪರಮಾತ್ಮ ಮತ್ತು ದೇವೋತ್ತಮ ಪರಮ ಪುರುಷ ಎಂಬ ಮೂರು ಸ್ವರೂಪವ ಅರ್ತವ ತತ್ತ್ವವಿತ್ ಹೇಳಿ ಹೇಳುವದು. ಅವಂಗೆ ಪರಮ ಪ್ರಭು ಭಗವಂತನೊಡನೆ ತನ್ನ ಸಂಬಂಧವ ವಾಸ್ತವ ಸ್ಥಿತಿ ಗೊಂತಿರುತ್ತು.

ಬನ್ನಂಜೆ ಇದರ ವ್ಯಾಖ್ಯಾನಿಸುವದು ಹೀಂಗೆ – ತತ್ವವ ಅರ್ತುಗೊಂಡವ° ಅಥವಾ ಯಥಾರ್ಥವ ತಿಳುದವ° ತತ್ವವಾದಿ. ಗುಣಕರ್ಮ, ಇಂದ್ರಿಯ ಮತ್ತು ಅದರಲ್ಲಿನ ಕ್ರಿಯಾಭೇದಂಗಳ ತಿಳುದಿರೆಕು. ಮೂಲಭೂತವಾಗಿ ಇಂದ್ರಿಯಂಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಎಂಬ ತ್ರೈಗುಣ್ಯಂಗಳಿಂದ ಕರ್ಮ ನಡಕ್ಕೊಂಡಿರುತ್ತದು. ಇದು ನಾವು ಹಿಂದೆ ಅಂಟುಸಿಗೊಂಡು ಬಂದುದರ ಪ್ರಭಾವ ಆಗಿಕ್ಕು. ಇದರಿಂದ ಅಪ್ಪ ಕರ್ಮವ ತಟಸ್ಥರಾಗಿ ನೋಡುತ್ತಿರೆಕು. ಈ ವಿಷಯ ಮನೋತತ್ವ ರೀತಿಗೆ ಸಂಬಂಧಪಟ್ಟದ್ದು. ನಾವೇ ಮಾಡುವ ಕ್ರಿಯೆಯ ನಾವೇ ತಟಸ್ಥರಾಗಿ ವಿಶ್ಲೇಷಿಸುವುದು! ನಮ್ಮ ಮೇಲೆ ತ್ರೈಗುಣ್ಯದ ಯಾವ ಗುಣ ಪ್ರಭಾವ ಬೀರುತ್ತು ಎಂಬುದರ ಸ್ವಯಂ ವಿಶ್ಲೇಷಣೆ ಮಾಡಿ, ಗುಣಕರ್ಮ ವಿಭಾಗ ತತ್ವವ ತಿಳ್ಕೊಂಡಪ್ಪಗ ತ್ರೈಗುಣ್ಯದ ಪ್ರಭಾವ ಅರ್ಥ ಆವ್ತು. ಅಂಬಗ ನವಗೆ ಅದರಲ್ಲಿ ಒಡೆತನ ಇಲ್ಲೆ ಹೇಳ್ವ ಸತ್ಯ ತಿಳಿತ್ತು. ಇಂದ್ರಿಯಂಗೊ ಮತ್ತು ಅದರ ಮೇಲೆ ತ್ರೈಗುಣ್ಯ, ಅದರ ಮೇಲೆ ಜೀವ ಸ್ವಭಾವ, ಅದರ ಮೇಲೆ ಭಗವಂತನ ಜ್ಞಾನಾನಂದ ., ಇವೆಲ್ಲವೂ ಕರ್ಮವಾಗಿ ಇಂದ್ರಿಯದ ಮೂಲಕ ಅಭಿವ್ಯಕ್ತ ಆವುತ್ತು. ಜಡಲ್ಲಿ ಬರಿಯ ಕೃತಿ, ಜೀವನಲ್ಲಿ ಇಚ್ಛೆ ಮತ್ತು ಕೃತಿ ಮತ್ತು ಭಗವಂತನಲ್ಲಿ ಸ್ವತ್ರಂತ್ರ ಇಚ್ಛಾಕೃತಿ – ಇದು ಕರ್ಮಭೇದ. ಹೀಂಗೆ ಗುಣಭೇದ ಮತ್ತು ಕರ್ಮಭೇದವ ಅರ್ತವ ‘ತತ್ವವಿತ್’. ಈ ತತ್ವ ಅರ್ಥವಾದರೆ ‘ಆನು ಮಾಡಿದೆ’ ಎಂಬ ಅಹಂಕಾರ ನಮ್ಮ ಕಾಡುತ್ತಿಲ್ಲೆ.

ಬನ್ನಂಜೆಯವು ಇದರ ಒಂದು ಉದಾಹರಣೆ ಮೂಲಕವೂ ವಿಶ್ಲೇಷಿಸುತ್ತವು – ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುವ ಒಬ್ಬ ಮಾತುಗಾರನ ಗಮನುಸುವೊ°. ಅವ°  ಹೀಂಗೆ ಮಾತನಾಡೆಕ್ಕಾರೆ ಕೇವಲ ಬಾಯಿ ಇದ್ದರೆ ಸಾಲ. ಬಾಯಿಂದ ಶಬ್ದ ಬರೇಕು. ಕೇವಲ ಶಬ್ದವಲ್ಲ. ಯಾವ ಮಾತನಾಡೇಕೋ ಅದಕ್ಕನುಗುಣವಾದ ಶಬ್ದ ಬರೇಕು. ಆ ಶಬ್ದ ಬರೇಕ್ಕಾರೆ ಒಂದು ಭಾವ ಬೇಕು. ಆ ಭಾವ ಮನಸ್ಸಿಲ್ಲಿ ಹೊಳೆಕು. ಹೊಳದ ಭಾವಕ್ಕೆ ತಕ್ಕಂತೆ ಶಬ್ದ ಬರೆಕು. ಆ ಶಬ್ದ ಬಾಯಿಲಿ ಸ್ಪುಟವಾಗಿ ಹೊರಹೊಮ್ಮೆಕು. ಭಾವನೆಂದ ಶಬ್ದ ಹೊರಬರೇಕ್ಕಾರೆ ಮಾಧ್ಯಮವಾಗಿ ಅಕಾಶ ಮತ್ತು ಗಾಳಿ ಅಗತ್ಯ. ಈ ಎಲ್ಲಾ ಕ್ರಿಯೆ ಸುಸೂತ್ರವಾಗಿ ನಡದರೆ ಮಾತ್ರ ಅವ° ಲಾಯಕಕ್ಕೆ ಮಾತ್ನಾಡಲೆ ಶಕ್ತ° ಅಪ್ಪದು. ಮನಸ್ಸಿಲ್ಲಿ ಭಾವ ಮತ್ತು ಶಬ್ದವ ಹೊಳಸುತ್ತದು ಆರು. ಒಂದುವೇಳೆ ಹೇಳೆಕು ಹೇಳ್ವ ವಿಷಯಕ್ಕೆ ಅನುಗುಣವಾಗಿ ಶಬ್ದ ಬಾರದ್ರೆ?. ನಮ್ಮ ಮೆದುಳಿನ ಯಾವುದೋ ಒಂದು ಗುಂಡಿ (ಸ್ವಿಚ್) ಆ ಕ್ಷಣಲ್ಲಿ ಕೆಲಸ ಮಾಡದ್ದೇ ಹೋದರೆ ? ಮೊಬೈಲಿನ ಕೀಬೋರ್ಡ್ ಸುಚ್ಚ್ ಕೆಲಸ ಮಾಡುತ್ತಿಲ್ಲೇಳಿ ರಿಪೇರಿಗೆ ಅಂಗಡಿಗೆ ಕೊಂಡೋಗಿ ನಾಕು ಐದು ದಿನ ಬಿಟ್ಟಿಕ್ಕಿ ಹೋಗಿ ಸರಿಮಾಡಿ ಸಿಕ್ಕುಗು. ಆದರೆ ಇದು ಹಾಂಗೆ ಅಲ್ಲನ್ನೇ!. ಇಲ್ಲಿ ನಮ್ಮ ಕೈವಾಡ ಎಂತ ನಡಗು ? ಇದರ ಚಿಂತನೆ ಮಾಡಿರೆ ಅಹಂಕಾರ ಬಾರ. ಇದರ ಜ್ಞಾನ ಇದ್ದರೆ ಎಲ್ಲರೊಡನೆ ಎಲ್ಲರಂತೆ ಇದ್ದು ಆಂಟಿಗೊಳ್ಳದ್ದೆ ಇಪ್ಪಲೆ ಸಾಧ್ಯ.

ಇಂದ್ರಿಯಂಗಳಲ್ಲಿ ಸತ್ವ ತಮ ರಜ ಗುಣಂಗೊ ಜೀವ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುತ್ತದು. ಭಗವಂತನ ಜ್ಞಾನಾನಂದ ಸ್ವರೂಪ  ಜೀವನ ಜ್ಞಾನೇಂದ್ರಿಯಂಗಳ ನಿಯಂತ್ರುಸುವದು. ಇದರ ಜ್ಞಾನ ನವಗೆ ಇದ್ದರೆ ‘ಆನು – ಎನ್ನದು’ ಹೇಳ್ವ ಭಾವನೆ ಇಲ್ಲದ್ದಾವ್ತು. ವಿಶ್ವದ ಈ ಮಹಾ ಸಾಗರಲ್ಲಿ ನಾವೊಂದು ಮರಳಿನ ಕಣ ಹೇಳ್ವ ನಿಜ ಗೊಂತಾವ್ತು.

ಈ ಶ್ಲೋಕಲ್ಲಿ ಕೃಷ್ಣ ಅರ್ಜುನನ ‘ಮಹಾಬಾಹೋ’ ಹೇಳಿ ದೆನಿಗೋಳ್ತ°. ಮೇಲ್ನೋಟಲ್ಲಿ ಮಹಾಬಾಹು ಹೇಳಿರೆ ವೀರ, ಹೋರಾಟಗಾರ, ಬಲಿಷ್ಠ ತೋಳಿನವ°.  ಬಲಿಷ್ಠ ತೋಳಿನವನಾದ ನೀನು ಹೇಡಿಯಾಗದ್ದೆ ಹೋರಾಡು ಹೇಳ್ವ ಭಾವ ಇಲ್ಲಿ ಕಾಂಬದು. ‘ಮಹತ್ ವಹತೀತಿ ಮಹಾಬಾಹು’. ಮಹತ್ – ದೊಡ್ಡದು. ದೊಡ್ಡದರ ಹೊತ್ತುಗೊಂಡವ°. ಜಗತ್ತಿನ ಮೂಲಭೂತವಾದ ಮಹತ್ ಸತ್ಯವ ಹೃದಯಲ್ಲಿ ಹೊತ್ತವ° ಹೇಳ್ವ ಅರ್ಥ. “ಜಗತ್ತಿನ ಮಹತ್ತಾದ ಸಂಗತಿಯ ಗ್ರಹಿಸಬಲ್ಲ ಅರಿವಿನ ಮಹಾತೋಳಿಂದ ದಿಗಂತಂದಾಚಿಗಾಣ ಸತ್ಯವ(ಭಗವಂತನ) ಹಿಡಿ” ಹೇಳ್ವದು ಈ ಸಂಬೋಧನೆಯ ಹಿಂದೆ ಇಪ್ಪ ಇನ್ನೊಂದು ಭಾವ.

ಶ್ಲೋಕ

ಪ್ರಕೃತೇರ್ಗುಣಸಮ್ಮೂಢಾಃ ಸಜ್ಜಂತೇ ಗುಣಕರ್ಮಸು ।
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ ॥೨೯॥

ಪದವಿಭಾಗ

ಪ್ರಕೃತೇಃ ಗುಣ-ಸಮೂಢಾಃ ಸಜ್ಜಂತೇ ಗುಣ-ಕರ್ಮಸು । ತಾನ್ ಅಕೃತ್ಸ್ನವಿದಃ ಮಂದಾನ್ ಕೃತ್ಸ್ನವಿತ್ ನ ವಿಚಾಲಯೇತ್ ॥

ಅನ್ವಯ

ಪ್ರಕೃತೇಃ ಗುಣ-ಸಮೂಢಾಃ ಗುಣ-ಕರ್ಮಸು ಸಜ್ಜಂತೇ । ತಾನ್ ಅಕೃತ್ಸ್ನವಿದಃ ಮಂದಾನ್ ಕೃತ್ಸ್ನವಿತ್ ನ ವಿಚಾಲಯೇತ್ ॥

ಪ್ರತಿಪದಾರ್ಥ

ಪ್ರಕೃತೇಃ  ಗುಣ-ಸಮ್ಮೂಢಾಃ   – ಭೌತಿಕ ಪ್ರಕೃತಿಯ ಗುಣಂಗಳಿಂದ ಭೌತಿಕ ಗುರುತುಸುವಿಕೆಂದ ಮೂರ್ಖರಾಗಿ, ಗುಣ-ಕರ್ಮಸು – ಭೌತಿಕ ಕಾರ್ಯಂಗಳಲ್ಲಿ, ಸಜ್ಜಂತೇ – ನಿರತರಾವುತ್ತವು.  ತಾನ್  ಅಕೃತ್ಸ್ನವಿದಃ  ಮಂದಾನ್ – ಆ ಅಲ್ಪಜ್ಞಾನಿಗಳಾದ ಸೋಮಾರಿಗಳ (ಆತ್ಮಸಾಕ್ಷಾತ್ಕಾರವ ಅರ್ತುಗೊಂಬಲೆ ಸೋಮಾರಿಗಳಾದ), ಕೃತ್ಸ್ನವಿತ್ – ನಿಜಜ್ಞಾನಲ್ಲಿಪ್ಪವ°, ನ ವಿಚಾಲಯೇತ್ – ವಿಚಲಗೊಳುಸಲಾಗ.

ಅನ್ವಯಾರ್ಥ

ಪ್ರಕೃತಿಯ ಗುಣಂಗಳಿಂದ ಮೂಢರಾದ ಅಜ್ಞಾನಿಗೊ ಸಂಪೂರ್ಣವಾಗಿ ಐಹಿಕ ಚಟುವಟಿಕೆಗಳಲ್ಲಿ ತನ್ಮಯರಾಗಿರುತ್ತವು. ಕೆಲಸ ಮಾಡುವವರ ಆಜ್ಞಾನಂದ ಈ ಕರ್ತವ್ಯಂಗೊ ಕೆಳಮಟ್ಟದ್ದದಾದರೂ ವಿವೇಕಿಗೊ ಅವರ ವಿಚಲಗೊಳುಸಲೆ ಪ್ರಯತ್ನಿಸಲಾಗ.

ತಾತ್ಪರ್ಯ / ವಿವರಣೆ

ತಿಳುವಳಿಕೆಯಿಲ್ಲದ್ದವು ಸ್ಥೂಲ ಐಹಿಕ ಪ್ರಜ್ಞೆಂದ ತಮ್ಮ ತಪ್ಪಾಗಿ ಗುರುತಿಸಿಗೊಳ್ಳುತ್ತವು ಮತ್ತು ಐಹಿಕ ಉಪಾಧಿಂದ ತುಂಬಿಗೊಂಡಿರುತ್ತವು. ಈ ಶರೀರವು ಐಹಿಕ ಪ್ರಕೃತಿಯ ಕೊಡುಗೆ. ದೈಹಿಕ ಪ್ರಜ್ಞೆಗೆ ಅತಿಯಾಗಿ ಅಂಟಿಕೊಂಡಿಪ್ಪದರಿಂದ ‘ಮಂದ’ ಅಥವಾ ಆತ್ಮದ ಅರಿವಿಲ್ಲದ್ದ ‘ಸೋಮಾರಿ’ ಹೇಳಿ ಕರೆಸಿಗೊಳ್ಳುತ್ತವು. ಅಜ್ಞಾನಿಗೊ ದೇಹವನ್ನೇ ಆತ್ಮ ಹೇಳಿ ತಿಳ್ಕೊಂಡಿರುತ್ತವು. ಇತರರೊಡನೆ ದೇಹ ಬಾಂಧವ್ಯವ ಬಂಧುತ್ವ ಹೇಳಿ ಸ್ವೀಕರುಸುತ್ತವು. ನವಗೆ ದೇಹವ ಕೊಟ್ಟ ಭೂಮಿಯ ಪೂಜಿಸುತ್ತವು ಮತ್ತು ಧಾರ್ಮಿಕ ವಿಧಿಗಳ ಔಪಚಾರಿಕಂಗಳೇ ಗುರಿ ಹೇಳಿ ಭಾವಿಸುತ್ತವು. ಸಾಮಾಜಿಕ ಕಾರ್ಯ, ರಾಷ್ಟ್ರೀಯತೆ ಮತ್ತು ಪರೋಪಕಾರಂಗೊ ಇವು ಐಹಿಕ ಉಪಾಧಿಗೆ ಒಳಗಾದ ಜನರ ಕೆಲವು ಚಟುವಟಿಕೆಗೊ. ಇಂತಹ ಉಪಾಧಿಗಳ ಮೋಡಿಲಿ ಸಿಕ್ಕಿ ಅವ್ವು ಯಾವಾಗಲೂ ಐಹಿಕ ಕ್ಷೇತ್ರಲ್ಲಿ ಕಾರ್ಯನಿರತರಾಗಿರುತ್ತವು. ಅವಕ್ಕೆ ಆತ್ಮ ಸಾಕ್ಷಾತ್ಕಾರ ಹೇಳ್ವದು ಒಂದು ಕಟ್ಟುಕತೆ. ಆದ್ದರಿಂದ ಅವಕ್ಕೆ ಅದರಲ್ಲಿ ಆಸಕ್ತಿ ಇಲ್ಲೆ. ಆದರೆ ಆಧ್ಯಾತ್ಮಿಕ ಬದುಕಿಲ್ಲಿ ತಿಳುವಳಿಕೆ ಇಪ್ಪವು ಹೀಂಗೆ ಐಹಿಕವಾಗಿ ತನ್ಮಯರಾಗಿಪ್ಪ ಜನರ ಮನಸ್ಸಿನ ಕ್ಷೋಭೆಗೊಳುಸಲೆ ಪ್ರಯತ್ನಿಸುಲಾಗ. ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳ ಸದ್ದಿಲ್ಲದೆ ಮುಂದುವರಿಸಿಗೊಂಡು ಹೋಪದು ಉತ್ತಮ. ಹೀಂಗೆ ಗಲಿವಿಲಿಗೊಂಡಾವು ಅಹಿಂಸೆಯಂತಹ ಬದುಕಿನ ಮೂಲ ನೈತಿಕ ತತ್ವಂಗಳಲ್ಲಿ ಮತ್ತು ಇಂತಹವೇ ಐಹಿಕ ಕಲ್ಯಾಣಕಾರ್ಯಲ್ಲಿ ತೊಡಗಿಕ್ಕು.

ಅಜ್ಞಾನಿಗೊ ಆದವು ಕೃಷ್ಣಪ್ರಜ್ಞೆಲ್ಲಿನ ಚಟುವಟಿಕೆಗಳ ಮೆಚ್ಚವು. ಆದ್ದರಿಂದ ವೃಥಾ ಕ್ಷೋಭೆಗೊಳುಸಿ ಅಮೂಲ್ಯ ಸಮಯವ ವ್ಯರ್ಥಮಾಡ್ಳಾಗ ಹೇಳಿ ಕೃಷ್ಣನ ಉಪದೇಶ. ಭಗವಂತನ ನಿಜ ಭಕ್ತರುಗೊ ಭಗವಂತನಿಂದಲೂ ಹೆಚ್ಚು ಕೃಪಾಳು. ಏಕೇಳಿರೆ, ಅವಕ್ಕೆ ಭಗವಂತನ ಉದ್ದೇಶ ಗೊಂತಿರುತ್ತು. ಆದ್ದರಿಂದ ಅವ್ವು ಎಲ್ಲಾ ಅಪಾಯಂಗಳ ಸಮರ್ಥವಾಗಿ ಎದುರುಸುತ್ತವು.

ಬನ್ನಂಜೆ ಹೇಳ್ತವು – ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಂಗಳಲ್ಲೇ ಮೈಮರೆತಿಪ್ಪವು ಇಂದ್ರಿಯಾದಿ ಕ್ರಿಯೆಲಿಯೇ ಅಂಟಿಗೊಂಡಿರುತ್ತವು. ಪೂರ್ತಿ ನಿಜವ ಅರಿಯದ್ದ ಅಂತಹ ಮಂದಿಗಳ ಪೂರ್ತಿ ಅರ್ತವು (ವಿವೇಕಿಗೊ) ಗೊಂದಲಪಡುಸಲಾಗ.

ಪ್ರಕೃತಿಯ ಗುಣಭೂತವಾಗಿಪ್ಪ ಇಂದ್ರಿಯ ಸುಖಲ್ಲಿ ಮುಳುಗಿದವು ಮೂಲ ಪ್ರಕೃತಿಯ ತ್ರಿಗುಣದ ಮೋಹಕ್ಕೊಳಗಾಗಿ ಸತ್ಯವ ಅರಿಯದ್ದೆ ಮೋಹಲ್ಲಿಯೇ ಇರುತ್ತವು. ತಾನು ಭಗವಂತನ ಗುಣದ ಅಧೀನ ಎಂಬ ಎಚ್ಚರ ಇಲ್ಲದ್ದೆ ಇರುತ್ತವು. ಇವರ ಕೃಷ್ಣ° ‘ಪ್ರಕೃತೇರ್ಗುಣ ಸಮ್ಮೂಢಾ’ ಹೇಳಿ ಹೇಳಿದ್ದ°. ಇಂಥವು ಭಗವಂತನ ಗುಣಕರ್ಮವ ತಮ್ಮದೇ ಹೇಳಿ ಭ್ರಮಿಸಿಗೊಂಡು ‘ಆನೇ ಎಲ್ಲ , ಎನ್ನಂದಲೇ ಎಲ್ಲಾ’ ಹೇಳಿ ಜಂಭಕೊಚ್ಚಿಗೊಳ್ಳುತ್ತವು. ಇಂಥವಕ್ಕೆ ಸತ್ಯವ ಅಥವ ಪೂರ್ಣತೆ ಯ ತಿಳ್ಕೊಂಬ ಯೋಗ್ಯತೆ ಇರ್ತಿಲ್ಲೆ. ಅಂಥವರ ‘ಪೂರ್ಣ ಅರ್ತವು’ (ವಿವೇಕಿಗೊ) ಗೊಂದಲಗೊಳುಸಲೆ ಹೆರಡ್ಳಾಗ. ಅವರಲ್ಲಿ ಸತ್ಯವ ತಿಳ್ಕೊಂಬ ಯೋಗ್ಯತೆ ಇದ್ದರೆ ಅವ್ವು ಆ ಸ್ಥಿತಿಯಿಂದಾಚೆ ಬತ್ತವು. ಇಲ್ಲದ ಯೋಗ್ಯತೆಯ ಆರೂ ಅವರಲ್ಲಿ ತುಂಬುಸಲೆ ಸಾಧ್ಯ ಇಲ್ಲೆ. ಇಪ್ಪವರ ಯೋಗ್ಯತೆಯ ಆರೂ ದೋಚಲೂ ಎಡಿಯ. ಆರಿಂಗೆ ಸತ್ಯವ ತಿಳಿವ ಅಪೇಕ್ಷೆ ಇದ್ದೋ ಅವರೊಂದಿಂಗೆ ಸೇರಿ ಮುನ್ನಡೆಕು.

ಶ್ಲೋಕ

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ ಚೇತಸಾ ।
ನಿರಾಶೀರ್ನರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ ॥೩೦॥

ಪದವಿಭಾಗ

ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ಅಧ್ಯಾತ್ಮ-ಚೇತಸಾ । ನಿರಾಶೀಃ ನಿರ್ಮಮಃ ಭೂತ್ವಾ ಯುಧ್ಯಸ್ಯ ವಿಗತ-ಜ್ವರಃ ॥

ಅನ್ವಯ

ಮಯಿ ಅಧ್ಯಾತ್ಮ-ಚೇತಸಾ ಸರ್ವಾಣಿ ಕರ್ಮಾಣಿ ಸಂನ್ಯಸ್ಯ ನಿರಾಶೀಃ ನಿರ್ಮಮಃ ವಿಗತ-ಜ್ವರಃ ಭೂತ್ವಾ, ಯುಧ್ಯಸ್ವ ।

ಪ್ರತಿಪದಾರ್ಥ

ಮಯಿ – ಎನ್ನಲ್ಲಿ, ಅಧ್ಯಾತ್ಮ-ಚೇತಸಾ – ಪೂರ್ಣ ಆತ್ಮಜ್ಞಾನದ ಪ್ರಜ್ಞೆಂದ, ಸರ್ವಾಣಿ ಕರ್ಮಾಣಿ – ಎಲ್ಲ ಬಗೆಯ ಕಾರ್ಯಂಗಳ, ಸಂನ್ಯಸ್ಯ – ಸಂಪೂರ್ಣವಾಗಿ ಬಿಟ್ಟಿಕ್ಕಿ, ನಿರಾಶೀಃ – ಲಾಭಾದ ಆಸೆಯಿಲ್ಲದವನೂ, ನಿರ್ಮಮಃ – ಒಡೆತನದ ಭಾವವಿಲ್ಲದವನೂ, ವಿಗತ-ಜ್ವರಃ  ಭೂತ್ವಾ  – ನಿರುತ್ಸಾಹಿಯಾಗದ್ದವನಾಗಿ,  ಯುಧ್ಯಸ್ವ – ಯುದ್ಧಮಾಡು,

ಅನ್ವಯಾರ್ಥ

ನಿನ್ನ ಎಲ್ಲಾ ಕರ್ಮಂಗಳ ಎನಗೆ (ತ್ಯಜಿಸಿ) ಅರ್ಪಿಸಿ, ಎನ್ನ ಸಂಪೂರ್ಣವಾಗಿ ಅರ್ತುಗೊಂಡು, ಫಲಾಪೇಕ್ಷೆಯಿಲ್ಲದ್ದೆ, ಒಡೆತನದ ಭಾವವಿವಿಲ್ಲದ್ದೆ, ಜಡತ್ವವಿಲ್ಲದ್ದೆ (ನಿರುತ್ಸಾಹಿಯಾಗದ್ದೆ) ಯುದ್ಧಮಾಡು.

ತಾತ್ಪರ್ಯ / ವಿವರಣೆ

ಶಿಸ್ತಿಂದ ಕರ್ತವ್ಯಂಗಳ ನಿರ್ವಹಿಸಿ ಸಂಪೂರ್ಣ ಕೃಷ್ಣಪ್ರಜ್ಞೆಯ ಪಡೇಕು ಹೇದು ಭಗವಂತನ ಉಪದೇಶ. ಇಂತಹ ಅಪ್ಪಣೆಂದ ಕಷ್ಟಂಗೊ ಎದುರಕ್ಕು. ಆದರೂ ಕೃಷ್ಣನ ನೆಚ್ಚಿ ಕರ್ತವ್ಯಲ್ಲಿ ಮಗ್ನನಾಗಿರೆಕು. ಅದು ಜೀವಿಯ ಸಹಜ ಸ್ವರೂಪ. ಭಗವಂತನ ಸಹಾಯ ಇಲ್ಲದ್ದೆ ಯಾವ ಜೀವಿಯು ಸುಖಂದ ಇಪ್ಪಲೆ ಸಾಧ್ಯ ಇಲ್ಲೆ. ಜೀವಿಯ ಸಹಜ ಸ್ವರೂಪವು ಭಗವಂತನ ಅಪೇಕ್ಷಗೊಕ್ಕೆ ವಿಧೇಯನಾಗಿ ನಡಕ್ಕೊಂಬದು. ಆದ್ದರಿಂದ ಭಗವಂತ ತನ್ನ ಸೇನಾಧಿಪತಿ ಹೇಳಿ ಭಾವಿಸಿ ಯುದ್ಧಮಾಡು ಹೇಳಿ ಅರ್ಜುನಂಗೆ ಕೃಷ್ಣನ ಆದೇಶ. ಭಗವಂತನ ಸುಪ್ರೀತಿಗಾಗಿ ಎಲ್ಲವನ್ನೂ ತ್ಯಜಿಸಿ (ತ್ಯಾಗಮಾಡಿ), ಯಾವ ಫಲಾಪೇಕ್ಷೆಯನ್ನೂ ಬಯಸದ್ದೆ, ಒಡೆತನಕ್ಕೆ ಹಾತೊರೆಯದ್ದೆ, ಎಲ್ಲವೂ ಭಗವಂತನೆಂದು ತಿಳುದು ಯುದ್ಧಮಾಡು ಹೇಳಿ ಭಗವಂತ° ಅರ್ಜುನಂಗೆ ಹೇಳುತ್ತ°. ಅರ್ಜುನ ಭಗವಂತನ ಆಜ್ಞೆಯ ಪರಿಶೀಲಿಸೆಕ್ಕಾದ ಅಗತ್ಯ ಇಲ್ಲೆ. ಎಂತಿದ್ದರೂ ಯಥಾವತ್ ಅವನ ಆಜ್ಞೆಯ ಪಾಲಿಸಿರೆ ಆತು ಅಷ್ಟೆ. ಭಗವಂತನೇ ಎಲ್ಲ ಆತ್ಮಗಳ ಆತ್ಮ. ವೈಯಕ್ತಿಕ  ಅಂಶಂಗಳ ಪರಿಗಣುಸದ್ದೆ ಪರಮಾತ್ಮ ಒಬ್ಬನನ್ನೇ ಸಂಪೂರ್ಣವಾಗಿ ಅವಲಂಬುಸು. ಹೇಳಿರೆ ಸಂಪೂರ್ಣ ಕೃಷ್ಣಪ್ರಜ್ಞೆಂದ ಜಾಗೃತನಾಗು. ಸಂಪೂರ್ಣ ಕೃಷ್ಣಪ್ರಜ್ಞೆ ಇಪ್ಪವನ ‘ಅಧ್ಯಾತ್ಮ ಚೇತಸ’ ಹೇಳಿ ಹೇಳುವದು. ನಿರಾಶೀಃ ಹೇಳಿರೆ ತನ್ನ ಒಡೆಯನ ಆಜ್ಞೆಯ ನಡಸೆಕು ಆದರೆ, ಯಾವುದೇ ಫಲವ ನಿರೀಕ್ಷಿಸುಲಾಗ ಎಂಬರ್ಥ. ಹಣಕಾಸಿನ ಗುಮಾಸ್ತ ಅದೆಷ್ಟೋ ಪೈಸೆಯ ತನ್ನ ಕೈಂದ ಎಣುಸುಗು. ಆದರೆ ಅದರ ಬಿಡಿಕಾಸೂ ತನ್ನದೂ ಹೇಳಿ ಹೇಳಿಗೊಂಬಲಿಲ್ಲೆ. ಹಾಂಗೆಯೇ ಈ ಪ್ರಪಂಚಲ್ಲಿ ಎಲ್ಲವೂ ಇದ್ದರೂ ಯಾವುದೂ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ. ಎಲ್ಲವೂ ಭಗವಂತಂಗೆ ಸೇರಿದ್ದು ಹೇಳಿ ತಿಳ್ಕೊಳ್ಳೆಕು. ಇದುವೆ ಭಗವಂತ ಹೇಳಿದ ‘ಮಯಿ’ (ಎನ್ನಲ್ಲಿ) ಹೇಳ್ವದರ ತಾತ್ಪರ್ಯ.

ಇಂತಹ ಕೃಷ್ಣಪ್ರಜ್ಞೆಲಿ ಕರ್ಮವ ಮಾಡುವವ° ಖಂಡಿತವಾಗಿಯೂ ಯಾವುದೇ ವಸ್ತು ತನ್ನದು, ತನಗೆ ಸೇರಿದ್ದು ಹೇಳಿ ಭಾವಿಸುತ್ತನಿಲ್ಲೆ. ಈ ಪ್ರಜ್ಞಗೆ ‘ನಿರ್ಮಮ’ (ಯಾವುದೂ ಎನ್ನದಲ್ಲ) ಹೇಳಿ ಹೇಳ್ವದು. ದೇಹ ಸಂಬಂಧಿಗೊ ಎನಿಸಿಗೊಂಬವರ ಪರಿಗಣನಗೆ ತೆಕ್ಕೊಳ್ಳದ್ದೆ ಇಂತಹ ಕಠಿಣ ಅಪ್ಪಣೆಯ ಪರಿಪಾಲುಸಲೆ ಮನಸ್ಸಿಲ್ಲೆ ಹೇಳಿ ಆದರೆ ಇಂತಹ ಹಿಂಜರಿಕೆಯ ಮದಾಲು ಕಿತ್ತು ಹಾಕೆಕು. ಈ ಸ್ಥಿತಿಲಿ ಮನುಷ್ಯ° ವಿಗತಜ್ವರ° (ನಿರುತ್ಸಾಹಿಯಾಗದ್ದವ°) ಅಪ್ಪಲೆಡಿಗು. ಹೇಳಿರೆ., ಜ್ವರ ಬಂದಂತಹ ಮನಃಸ್ಥಿತಿ ಅಥವಾ ಜಡತ್ವ ಮನಸ್ಸು. ತನ್ನ ಗುಣ ಮತ್ತು ಸ್ಥಾನಕ್ಕನುಗುಣವಾಗಿ ಪ್ರತಿಯೊಬ್ಬನೂ ಮಡಬೇಕಾದ ನಿರ್ದಿಷ್ಟ ಬಗೆಯ ಕೆಲಸಂಗೊ ಇದ್ದು. ಮೇಗೆ ಹೇಳಿದ ರೀತಿಲಿ ಇಂತಹ ಕರ್ತವ್ಯಂಗಳ ಕೃಷ್ಣಪ್ರಜ್ಞೆಲಿ ನಿರ್ವಹಿಸೆಕು. ಇದು ಮುಕ್ತಿಮಾರ್ಗದತ್ತ ಕರೆದೊಯ್ಯುತ್ತು.

ಬನ್ನಂಜೆ ವ್ಯಾಖ್ಯಾನಿಸುತ್ತವು – ಕೃಷ್ಣ° ಅರ್ಜುನಂಗೆ ಹೇಳ್ವದು – “ಎಲ್ಲ ಕರ್ಮಂಗಳ ಎನ್ನಲ್ಲಿ ಅರ್ಪಿಸಿ, ಎನ್ನಲ್ಲೇ ಮನ ಇಟ್ಟು, ಎಲ್ಲಾ ಹಂಬಲ ತೊರದು, ಮಮಕಾರ ಬಿಟ್ಟು , ಚಳಿಬಿಟ್ಟಿಕ್ಕಿ ಹೋರಾಡು.”

ನೀನು ಮಾಡುವ ಸರ್ವಕರ್ಮವ ಎನಗರ್ಪಿಸಿ ಕರ್ಮ ಮಾಡು. ಇಲ್ಲಿ ‘ಸಂನ್ಯಸ್ಯ’- ಆನು ಮಾಡಿದ್ದೆಲ್ಲವೂ ಅನೇ ಮಾಡಿದ್ದಲ್ಲ. ಏನು ಎನ್ನಿಂದ ಆತೋ ಅದು ಎನ್ನ ಕೈಂದ ಭಗವಂತ° ಮಾಡಿಸಿದ್ದು, ಎನ್ನ ಮೂಲಕ ನಡದ್ದದು ಭಗವಂತನ ಪೂಜೆ ಎಂಬ ಸಮರ್ಪಣಾ ಭಾವ ಸಂನ್ಯಾಸ. ಭಗವಂತನಲ್ಲಿ ಮನವಿಟ್ಟು ಹಂಬಲ ಮಮಕಾರ ತೊರದು ನಿಶ್ಚಿಂತೆಂದ ಹೋರಾಡು ಹೇಳಿ ಭಗವಂತನ ಆದೇಶ. ಹೇಳಿರೆ ಈ ಯುದ್ಧ ವಿಧಿಲಿಖಿತ. ಅರ್ಜುನ ಕೇವಲ ಉಪಕರಣ ಹೇಳ್ವ ಸೂಚನೆ.

ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟಲ್ಲಿ ನಾವು ಮಾಡುವ ಕಾರ್ಯವ ನಾವು ಪ್ರಾಮಾಣಿಕವಾಗಿ ಮಾಡೆಕು. ಏನು ಆಯೇಕೊ ಅದು ಆಗಿಯೇ ಆವುತ್ತು. ಅದರ ತಡವಲೋ ನಿಯಂತ್ರಿಸುಲೋ ನಮ್ಮಿಂದ ಎಡಿಯ. ಭಗವಂತ ತಾನು ಎಣಿಸಿದ ಕಾರ್ಯವ ನಮ್ಮ ಕೈಂದ ಮಾಡಿಸಿದ್ದು. ಇದು ಅವಂಗೇ ಅರ್ಪಣೆ. ಇದು ಅವನ ಪೂಜೆ. ಏನು ಫಲ ಬತ್ತೋ ಅದು ಅವಂಗೇ ಅರ್ಪಣೆ. ಅವ° ಏನು ಕೊಡುತ್ತನೋ ಅದುವೇ ಎನಗೆ ಪ್ರಸಾದ. ಈ ಸಂಕಲ್ಪ ನಮ್ಮ ಮನಸ್ಸಿಲ್ಲಿ ದೃಢವಾಗಿರೇಕು. ಹಾಂಗೆ ಮಾಡಿಯಪ್ಪಗ ಏನೇ ಆದರೂ ಅದರ ಹೊಣೆ ಭಗವಂತ ನೋಡಿಗೊಳ್ತ°. ಇದಕ್ಕಿಂತ ದೊಡ್ಡಪೂಜೆ ಇನ್ಯಾವುದೂ ಇಲ್ಲೆ ಹೇದು ಭಗವಂತನ ಸಂದೇಶ .

ಮುಂದೆ ಎಂತಾತು ? ….        ಬಪ್ಪವಾರ ನೋಡುವೋ°.

….ಮುಂದುವರಿತ್ತು.

ಕೆಮಿಲಿ ಕೇಳ್ಳೆ –

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ

ಗೀತೆ ಇಳುಶಿಗೊಂಬಲೆ: www.addkiosk.in ; www.giri.in

SRIMADBHAGAVADGEETHA – CHAPTER 03 – SHLOKAS 21 – 30 by CHENNAI BHAAVA

Audio courtesy: T.S. Ranganathan, Giri Trading P. Ltd. ChennaiTo Download : www.addkiosk.in ; www.giri.in

21 thoughts on “ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 21- 30

  1. ಅಮ್ಮ ಸಹಜವಾಗಿಯೇ “ತ್ಯಾಗ ಮಯೀ” | ಬಹಳ ಅಪರೂಪಲ್ಲಿ ಎಲ್ಲಿಯೋ ಒಂದು ಅಪವಾದ ಇಕ್ಕಷ್ಟೇ | ಆದರೆ ” ಅಪ್ಪಂದ್ರು ” — ರಜಾ ಹಿಂದೆ — ಅವಕ್ಕೆ “ಯಜಮಾನತ್ವದ ” ಅಹಂಕಾರ ಮಂಸಿನ್ಗೆ ರಜಾ ಅಡರಿರುತ್ತು || ನಿಜವಾಗಿ “ಸಂಸಾರ” ವೇ ಒಂದು ಯಜ್ಞ ಶಾಲೆ ” ಮನೆಯೇ ” ಯಜ್ಞ ಕುಂಡ | ಯಜಮಾನ ಹೇಳಿದರೆ ಅರ್ಥ ವೇ ” ಯಜ್ಞ ಕರ್ತೃ ” | ಅದಲ್ಲಿ “ಯಜಮಾಂತಿ” ಹೇಳಿದರೆ ಸಹ ಧರ್ಮಿಣಿ = ಇವಕ್ಕಿಬ್ಬರಿಂಗು ಸಮ ಭಾಗದ ಯಜ್ಞ ಕರ್ತೃತ್ವ | ಅಮ್ಬಗ ಯಜ್ಞ ಭಾವಲ್ಲಿ ಕೆಲಸ ನಿರ್ವಹಿಸುದು ಹೆಂಗೆ ? | ೧. ಮನೆಯಲ್ಲಿ ಹಿರಿಯರಿದ್ದರೆ (ವೃದ್ಧರು ) ಮದಾಲು ಅವರ ಹಸಿವು ಬಾಯಾರಿಕೆ ಇತ್ಯಾದಿ ನೋಡಿಗೊಂಡು ಅವರ ಸೇವೆ — ಇಲ್ಲಿ ರಜ ತೊಂದರೆ ಯ ಹಾಂಗೆ ಕಾಂಬ ವಿಷಯ ಇರುತ್ತು — ಈ ಹಿರಿಯರು “ರಾಗ ದ್ವೇಷ ” ವ ರಜವು ಗೆಲ್ಲದ್ದವರಾದರೆ ಕಿರಿಯರು ಎಷ್ಟು ಸರಿಯಾದ ಮನೋಭಾವಲ್ಲಿ “ಸೇವೆ ” ಮಾಡಿದರು ಅವ್ರ ಮೇಲೆ ಹರಿ ಹಾರುತ್ತ ಇರುತ್ತವು — ಯಜ್ಞ ಭಾವಲ್ಲಿ ಮನೆ ವಾರ್ತೆ ನೋಡುವ ಯಜಮಾನ ಇದಕ್ಕೆ ರಜವು “ಪ್ರತಿ ಕ್ರಿಯೆ ” ಕೊಡದ್ದೆ ಇದ್ದು ತನ್ನ “ಆತ್ಮ ಸಾಕ್ಷಿ ” ಗೆ ಅನುಗುಣ ವಾಗಿ ಮುಕ್ತ ಮನೋ ಭಾವಲ್ಲಿ ಸೇವೆ ಮುಂದುವರಿಸೆಕ್ಕು | ಮತ್ತೆ ಮಕ್ಕಳು ಪ್ರಾಯಕ್ಕೆ ಬಪ್ಪ ವರೆಗೆ ಅವರ ಸರಿಯಾದ ರೀತಿಲಿ ಬೆಳೆಸುದು – ಇದು ಯಜ್ಞ ಭಾವಲ್ಲಿ ಆಯೆಕ್ಕಾದರೆ — ಕಿರಿಯರಿನ್ಗೆ ಯಾವ ಕೆಟ್ಟ ಕೆಲಸವ ಮಾಡಲೆ ಆಗ ಹೇಳಿ ಹೇಳುತ್ತೋ ಅದೇ ಕೆಟ್ಟ ಕೆಲಸವ ಯಜಮಾನ ಎಂದೂ ಮಾಡುಲಾಗ | — ಇಲ್ಲಿಯೂ ಇಷ್ಟೆಲ್ಲಾ ಮಾಡಿಯೂ ಮಕ್ಕೋ ಕೆಟ್ಟ ದಾರಿ ಹಿಡುದರೆ ಅದಕ್ಕಾಗಿ ಹೆಚ್ಚಿನ “ಕೊರಗುವಿಕೆ ” ಇಪ್ಪಲಾಗ — ಯಾಕೆಂದರೆ ಅದು ಮಾಡಿದ್ದು ಬರೇ “ಕರ್ತವ್ಯ” (ಕರ್ಮಣ್ಯೇವಾಧಿಕಾರಸ್ತೇ—) | — ಇನ್ನು ಸಾಮಾನ್ಯ ವಿಷಯಲ್ಲಿ ಒಂದು ಉದಾಹರಣೆ — ಮನೇಲಿ ಊಟ ಮಾಡುವಾಗ ಮೇಜಿ ನ ಮೇಲೆ ಒಂದು ರುಚಿಕರ ವಾದ ತಿನಸು “ಸೀಮಿತವಾಗಿ ” ಮಡಿಗಿಗೊಂಡು ಇದ್ದರೆ — ಯಜಮಾನ ಎಲ್ಲೋರಿಂಗು ಆದ ಮೇಲೆ ಉಳುದರೆ ಮಾತ್ರ ಕೈ ಹಾಕಿ ತಿನ್ನೆಕ್ಕು | — ಆದರು ಇಷ್ಟೆಲ್ಲಾ ಮಾಡುದು ಆದಷ್ಟು ಬೇರೆಯವರ ಗಮನಕ್ಕೆ ಬಾರದ್ದ ರೀತಿಲಿ ಮಾಡಿದರೆ ಉತ್ತಮ || ಮತ್ತು ಹೀಂಗೆ ಮಾಡುದು ” ರಾಗ- ದ್ವೇಷ ” ದ ಬಂಧನಂದ ಬಿಡಿಸಿಗೊಮ್ಬಲೆ ಮಾಡುವ ಸಾಧನೆ ಯ ಒಂದು ಭಾಗ |

    1. ಲಾಯಕ ಮನದಟ್ಟು ಆವ್ತಾಂಗೆ ಬರದ್ದು ಲಾಯಕ ಆಯ್ದು ಮಾವ. ನಿಂಗಳ ಕೊಡುಗೆ ಅಮೂಲ್ಯ. ಬರೆತ್ತಾ ಇರಿ.

  2. ಈ ಗೀತೆ ಯ “ಸ್ವಾನುಭಾವೀಕರಣ” ಅಭ್ಯಾಸಕ್ಕೆ ಮೊದಲ ಹೆಜ್ಜೆ “ತ್ಯಾಗ ಮನೋಭಾವ ” | ಆದರೆ ಇದರ ಅರ್ಥ ಮಾಡದ್ದರೆ ಇದು “ದೊಡ್ಡ ಶಬ್ದ” ಆಗಿ ಹೋಕು | ತ್ಯಾಗ ಮನೋ ಭಾವ ಅಷ್ಟು ಬೇಗ ಬತ್ತಿಲ್ಲೆ | ಅದಕ್ಕೇ ದೇವರು ಒಂದು ಸಂಸಾರ ಕೊಟ್ಟದು | ಮೊದಲು ತಮ್ಮ ತಮ್ಮ ಮಕ್ಕಳಿಗಾಗಿ ತ್ಯಾಗ ಕಲಿಯೇಕ್ಕು — ಇದು ಸುಲಭ — ಇದರ ಮೂಲಕ ಆ ” ತ್ಯಾಗಮನೋಭಾವ ” ತನ್ನಿಂದ ತಾನೇ ನಮಗೆ ಅರಿವಿಲ್ಲದ್ದೆ ಶಕ್ತಿ ಪಡೆತ್ತು | — munde barette — adu hEnge hEli

    1. ಅಪ್ಪು… ನೂರಕ್ಕೆ ನೂರಷ್ಟು ಸತ್ಯ… ಮಕ್ಕಳ ಜವಾಬ್ದಾರಿ ತೆಕ್ಕೊಂಡಪ್ಪಗ ಹಲವು ವಿಚಾರಂಗಳ ನಾವು ಕಲಿತ್ತು… ಆ ಪರಿಪೂರ್ಣ ಜ್ಹಾನವ ಪಡವಲೆ ತ್ಯಾಗ ಒಂದೇ ಮಾರ್ಗ… ಅದಕ್ಕೆ “ಅಮ್ಮನಾದಾಗಲೇ ಪರಿಪೂರ್ಣತೆ” ಹೇಳುದು.

  3. ಶರ್ಮಪ್ಪಚ್ಚಿ ದನ್ಯವಾದಂಗೋ | ಹೊಗಳಿಕೆಗಳೆಲ್ಲಾ “ಗೀತಾ ಮಾತೆ ” ಯ ಮಡಿಲ ಸೇರಲಿ — ಮತ್ತು ಆ ಮಾತೆಯೇ, ಇಲ್ಲಿ ನಿಜ ಜೀವನಲ್ಲಿ ಆ ಮಾತೆ ಯ “ಮಾತಿನ ಮುತ್ತುಗಳ ” ಪ್ರಯತ್ನ ಪೂರ್ವಕವಾಗಿ ಜೀವನಲ್ಲಿ ಅಳವಡಿಸುಲೆ ಹಾತೊರೆಯುವ “ಮುಗ್ಧರ ” ಮನೋಬಲ ಹೆಚ್ಚಿಸಿ — ಅವರವರ “ಹೃದಯಲ್ಲಿ” ಸದಾ ನೆಲಸಿ ಅನುಗ್ರಹಿಸಲಿ || — “ಅಹಂ ನಿಮಿತ್ತಂ ತ್ವಯಾ ಏವ ನಿಃ ಶ್ವಸಿತಂ ಇದಂ ವಾಕ್ಯಂ ಸಮಸ್ತಂ”||

  4. ಹವ್ಯಕ ಭಾಷೆಲಿ ಚೆನ್ನೈ ಭಾವನ ವಿವರಣೆ, ಅದಕ್ಕೆ ಪೂರಕವಾಗಿ ನಿಜ ಜೀವನಲ್ಲಿ ಹೇಂಗೆ ಅರ್ಥೈಸಿಗೊಳೆಕ್ಕು, ಹೇಂಗೆ ನೆಡೆಕು ಹೇಳುವ ಎದುರ್ಕಳ ಮಾವನ ವಿಶ್ಲೇಷಣೆ… ವಾಹ್!!!

  5. ಶ್ರೀಮದ್ಭಗವದ್ಗೀತೆ ಲಿ ಮನುಷ್ಯಂಗೆ ಆಚರಣೆ ಗೆ ತಪ್ಪಲೆ ಸಾಧ್ಯ ವೇ ಇಲ್ಲದ್ದ ವಿಚಾರ ವ ಪರಮಾತ್ಮ ಹೇರಿದ್ದಾಯಿಲ್ಲೇ ||

  6. ಶ್ರೀ ಕೃಷ್ಣ ಪರಮಾತ್ಮ , ಸಂಪೂರ್ಣ ವೇದೋಕ್ತ ಆಚರಣೆಗಳ ಮನುಷ್ಯರಿಂಗೆ ಅನುಭವಪೂರ್ವಕವಾಗಿ ಮತ್ತು ” ಭಕ್ತಿಪೂರ್ವಕವಾಗಿ ” ಜೀವನಲ್ಲಿ ಆಚರಣೆಗೆ ಸುಲಭಲ್ಲಿ ತಪ್ಪಲೆ ಎಡಿವ ಹಾಂಗೆ ಗೀತೆಲಿ ಹೇಳಿದ್ದ | ಇಲ್ಲಿ ಸಾಮಾನ್ಯ ಗೃಹಸ್ಥ — “ಸದ್ಗೃಹಸ್ಥ ” ಅಪ್ಪದು ಹೆಂಗೆ, ಮತ್ತು ಸನ್ಯಾಸ ಸ್ವೀಕರಿಸಿದವರು ಕೂಡಾ ಯಾವ ರೀತಿಲಿ ಅದರ “ಸಾರ್ಥಕತೆಯ” ಸುಲಭಲ್ಲಿ ಪಡವಲೆ ಎಡಿಗು ಹೇಳಿ ವಿವರವಾಗಿ ತಿಳಿಸಪಟ್ಟಿದು — ಇದರ ಲಾಭ ಪಡಕ್ಕೊಳ್ಳದ್ದವರು ಮಹತ್ತರವಾದ ” ಖಣಜ “ವ ಕಳಕೊಳ್ಳುತ್ತವು |

  7. ಇದರ ಒದುವವರೆಲ್ಲಾ ಅವಕ್ಕವಕ್ಕೆ ಅರ್ಥ ಆದ ಹಾಂಗೆ ಅವರವರ ತಲಗೆ ಹೊಳದ ರೀತಿಲಿ, ತಪ್ಪೋ ಸರಿಯೋ (ಹೆಚ್ಚಾಗಿ ಶ್ರದ್ಧಾ ಪೂರ್ವಕವಾಗಿ ಬರದ್ದು ಸರಿ ಯಾಗಿಯೇ ಇರ್ತು ) ಇಲ್ಲಿ ಬರದರೆ “ಹೊಸ ವಿಷಯಂಗೋ, ಮತ್ತು ಅರ್ಥಂಗೋ” ಹೊರ ಬಕ್ಕು| ಅದು ಎಲ್ಲರಿಂಗು ಸಹಾಯ ಅಕ್ಕು | ಆ ವಿಷಯಂಗಳ ಮಂಥನ ಮಾಡಿದರೆ ಉತ್ತಮ ವಿಶಂಗೋ ಎಲ್ಲರಿಂಗು ಲಭ್ಯ ಅಕ್ಕು || ಇಲ್ಲಿ ಓದುವವರಲ್ಲೂ ಬರವ ಸಾಮರ್ಥ್ಯ ಇಪ್ಪವರು ಸುಮಾರು ಜನ ಇದ್ದವು ಹೇಳಿ ಎಲ್ಲ “ಅನಿಸಿಕೆಗಳ” ಓದುವಾಗ ಎನಗೆ ಅನಿಸುತ್ತು ||

    1. ಎದುರ್ಕಳ ಮಾವನ ಹೃತ್ಪೂರ್ವಕ ಈ ಪ್ರೋತ್ಸಾಹ ತುಂಬಾ ಉತ್ಸಾಹ ಕೊಡುತ್ತು. ಇದು ಇಲ್ಲಿ ಬರವ ಪ್ರತಿಯೊಬ್ಬಂಗೂ ಪ್ರೋತ್ಸಾಹ. ಹಲವೊಂದು ಸಂದೇಹಕ್ಕೆ ನಿಂಗಳ ಒಪ್ಪ ಶುದ್ದಿ ಪೂರಕವಾಗಿ ಅತೀ ಮಹತ್ವಪೂರ್ಣವಾಗಿ ಮೂಡಿಬತ್ತು. ಧನ್ಯವಾದಂಗೊ ಮಾವ°.

  8. ಚೆನ್ನೈ ಭಾವ ನಿಂಗೋ ನಮ್ಮ ಭಾಷೆ ಲಿ ಬರದ ಬರಹದ “ರಮಣೀಯ” ವಾಗಿದ್ದು | ಎಲ್ಲರಿಂಗು ಅರ್ಥ ಅಪ್ಪ ಹಾಂಗೆ ಇದ್ದು ಅಲ್ಲದ್ದೆ ಬನ್ನಂಜೆಯವರ ಬರಹ ದ ಸಾರ ನಮ್ಮ ಭಾಷೆ ಲಿ ಬರದ್ದು — ಅದರಂದಾಗಿ ಅವರ ಪಾಂಡಿತ್ಯ ಪೂರ್ಣ ವೈಜ್ಞಾನಿಕ ವಿಶ್ಲೇಷಣೆ ನಮ್ಮ ಭಾಷೆ ಲಿ ಪ್ರಥ್ತಮ ಬಾರಿ ಗೆ ಲಭ್ಯ | ನನ್ನದರಲ್ಲು ಹಲವರು ಬರೆದುದನ್ನು ಓದಿ ನೆನಪಿನಲ್ಲಿ ನಿಂತ ವಿಷಯ ಗಳೊಡನೆ ಬೆರೆತ ಕೆಲವು ವಿಷಯಗಳು ಮೂಡುತ್ತಿವೆ ಅಷ್ಟೇ ||

  9. ನಿಮ್ಮ ಈ ಜ್ಞಾನ ಪ್ರಸಾರ ನಿರಂತರ ಮುಂದುವರಿಯಲಿ ಎಂದು ಹಾರೈಕೆ.
    ಹರಿಃ ಓಂ

    1. ಧನ್ಯವಾದಗಳು. ಇದರಲ್ಲಿ ನನ್ನದೇನೂ ಇಲ್ಲ. ಅನೇಕ ವಿದ್ವಾಂಸರು ಈಗಾಗಲೇ ಸಾಕಷ್ಟು ವ್ಯಾಖ್ಯಾನಿಸಿದ್ದಾರೆ. ಮೂರು ನಾಲ್ಕು ಅಂತಹ ವ್ಯಾಖ್ಯೆಯನ್ನೋದಿ ಅನುಭವಿಸಿ ಸಂಕಲಿಸಿ ಮನಸ್ಸಿಗೆ ಅರ್ಥೈಸಿದನ್ನು ಇಲ್ಲಿ ಬೈಲಿಂಗೆ ಹಂಚಿದ್ದು ಮಾತ್ರ. ಬರೆದದ್ದರ್ಲಿ ಏನಾದರೂ ಹೆಚ್ಚು ಕಮ್ಮಿ ಆದಲ್ಲಿ ತಿದ್ದಿಕೊಡುವಂತೆ ಎಲ್ಲರಲ್ಲೂ ಈ ಮೂಲಕ ವಿನಂತಿ.

  10. ಶ್ಲೋ ೩-೨೭ ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ | ಅಹಂಕಾರ ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ || ಅರ್ಥ — ಪ್ರಕೃತಿಯ ಗುಣಂಗಳ ಸ೦ಯೋಗ೦ದಾಗಿ ಈ ಪ್ರಪಂಚಲ್ಲಿ ಎಲ್ಲಾ ಕಾರ್ಯಂಗಳು ತನ್ನಿಂದ ತಾನೇ ನಡೆತ್ತು — ಆದರೆ “ಅಹಂಕಾರಂದ ” ವಿಮೂಢರಾದ ಜನರು ಎಲ್ಲವನ್ನೂ ತಾನೇ ಮಾಡುತ್ತೆ ಹೇಳಿ ಭ್ರಮಿಸುತ್ತವು ||
    ಇದಕ್ಕೆ ಒಂದು ಸಣ್ಣ ಕಥೆ ಉದಾಹರಣೆ — | ಒಂದು ಎತ್ತಿನ ಗಾಡಿ ಮಣ್ಣು ರಸ್ತೆಲಿ ” ತೆಂಗಿನ ಹಿಂಡಿ ” ತುಂಬಿಸಿಕೊಂಡು ಹೋಗುತ್ತಾ ಇತ್ತಡೋ | ಮಣ್ಣು ರಸ್ತೆ ಆದ್ದರಿಂದ ಅದು ರಜ ಅದುರುವಾಗ ಗಾಡಿಯ ಅಡಿಯಂಗೆ ರಜ ರಜ ಹಿಂಡಿ ಬೀಳುತ್ತಾ ಇತ್ತು | ಆವಾಗ ಒಂದು ನಾಯಿ ಆ ಹಿಂಡಿ ತಿಂದುಗೊಂಡು ಗಾಡಿಯ ಒಟ್ಟಿ೦ಗೆ ಅದರ ಅಡಿಲಿಯೇ ನಡಕ್ಕೊಂಡು ಹೊಯಿಕ್ಕೊಂಡು ಇತ್ತಡೋ | ಮದ್ಯ ಮದ್ಯಲ್ಲಿ ಗಾಡಿ ಅವಾಗವಾಗ ನಿಂದು ನಿಂದು ಹೋಗುತ್ತಿತ್ತು | ನಾಯಿಯೂ ಹಾಂಗೇ ನಿಂದುನಿಂದು ಹೊಯಿಕ್ಕೊಂಡಿತ್ತು | ತುಂಬಾ ದೂರ ಹೋದ ಮೇಲೆ ನಾಯಿಯ ಮನಸಿಲಿ ಆತಡೋ — ” ಹೋ ಈ ಗಾಡಿ ಆನು ಹೋದರೆ ಹೊವುತ್ತು — ಆನು ನಿಂದರೆ ನಿಲ್ಲುತ್ತು – ಎನ್ನೆಂದಾಗಿಯೇ ಈ ಗಾಡಿ ಹೋಪದು ನಿಂಬದು, ಈ ಗಾಡಿಯ ಪೂರ್ಣ ಅಸ್ತಿತ್ವ ಎನ್ನಂದಾಗಿಯೇ ಹೇಳಿ || ನಮ್ಮದು ಕೂಡಾ ಈ ಪ್ರಪಂಚಲ್ಲಿ ಈ ನಾಯಿಯ part — ಅದರ ಹಾಂಗೇ ನಾವು ಗ್ರಹಿಸುದು ಎಲ್ಲಾ ನಮ್ಮಿಂದಲೇ ಅಪ್ಪದು ಹೇಳಿ ಅಹಂಕಾರ ಪಡುದು | ಈ ಪ್ರಪಂಚದ ಗಾಡಿ ನಡೆಸುವವ ಬೇರೊಬ್ಬ ಹೇಳಿ ಅರ್ಥ ಆದರೆ “ಅಹಂಕಾರ ” ರಜ ಕಡಮೆ ಅಕ್ಕು || ಇನ್ನು ಅವನ ದಯೆಯಿಂದ ಬೀಳುವ ಹಿಂಡಿಯ ತಿಂದು ನಾವು ಬದುಕ್ಕುದು ಹೇಳಿ ಗೊಂತಾದರೆ ಒಳ್ಳೇದು ||
    ಅರ್ಜುನನು ಮೊದಲು ಸುರುವಾಣ ಅಧ್ಯಾಯಲ್ಲಿ — ವಿಶ್ವದ ರಥ ನಡೆಸುವ ಕೇಶವನೆ ಎನ್ನ ಹಿಂದೆ ಕೂತಿದ ಹೇಳ್ತದರ ಮರದು — ಅಹಂಕಾರಲ್ಲಿ ” ರಥಂ ಸ್ಥಾಪಯ ಮೇ ಅಚ್ಚುತಾ” – ಎಲೆ ಅಚ್ಚುತನೇ ” ನನ್ನ ” ರಥವನ್ನು ಸ್ಥಾಪಿಸು — ಹೇಳಿ ಹೇಳಿದಾ | ಆ ಅಹಂಕಾರವ ಮುರಿವಲೇ ಶ್ರೀ ಕೃಷ್ಣಾ ಗೀತೆ ಯ ಹೇಳಿದ್ದು | ಹಂಗಾಗಿ ಈ ಗೀತೆಂದಲೇ ನಾವು ನಮ್ಮ ” ಅಹಂಕಾರವ ” ಪರಿಹರಿಸಿಗೊಂಬಲೆ ಎಡಿಗು ||

    1. ನಿತ್ಯ ನೆನಪಿಲ್ಲಿರೆಕಾದ ಸಂಗತಿಯ ತುಂಬಾ ಲಾಯಕಲ್ಲಿ ವಿವರುಸಿದ್ದಿ…

  11. ಮೇಲೆ ಬರದ MD ಹೋಟೆಲಿಂಗೆ ಹೋದ ಉದಾಹರಣೆ — ಶ್ಲೋಕ ೩-೨೬ ಕ್ಕೆ ಅನ್ವಯ “ನ ಬುದ್ಧಿ ಬೇಧಂ ಜನಯೇತ್ ಅಜ್ಞಾನಾಂ ಕರ್ಮ ಸಂಗಿನಾಂ = ಈ MD ಅಲ್ಲಿ ಇಪ್ಪವರಿಂಗೆ ಉಪದೇಶ ಕೊಟ್ಟಿದಾಯಿಲ್ಲೆ — ಅವಂಗೆ ಅವರಲ್ಲಿ ಒಬ್ಬನ ಹತ್ತರೆ ಈ ಕಟ್ಟಿನ ಹಿಡುಕ್ಕೋ ಹೇಳುಲಾವುತಿತ್ತು — ಹೇಳಿದ್ದನಿಲ್ಲೇ — ಹಾಂಗಾಗಿ ಅವು ಅವರ ಬುದ್ಧಿ ಪ್ರಕಾರ ಈ MD “ಆಶೆ ಪೀಂಟ” ಹೇಳಿ ಗ್ರಹಿಸಿದವು — MD ಅವರಲ್ಲಿ ಬುದ್ಧಿ ಬೇಧ ಉಂಟು ಮಾಡಿದ್ದಾಯಿಲ್ಲೇ || ಎರಡನೇ ಸಾಲಿನ ಅನ್ವಯ — “ಜೋಷಯೇತ್ ಸರ್ವ ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ = ತಿಳಿದವ (ವಿದ್ವಾನ್ ) ಯುಕ್ತ ರೀತಿಲಿ ತಾನೇ ನಿಷ್ಕಾಮ ಕರ್ಮ ಮಾಡಿ ಇನ್ನೊಬ್ಬಂಗೆ ತೋರುಸಿಕೊಟ್ಟು — ಆ ಕ್ರಿಯೆಲಿ ಅವಕ್ಕೆ ಪ್ರೀತಿ (ಆಸಕ್ತಿ) ಹುಟ್ಟುಸೆಕ್ಕು — ಜೋಶಯೇತ್ = ಪ್ರೀತಿ ಹುಟ್ಟುಸುದು | ಈ MD ಹಾಂಗೆ ಮಾಡಿದ್ದರ ನೋಡಿ ಖಂಡಿತಾ ಅವನ ಒಟ್ಟಿ೦ಗಿತ್ತ ಬಾಕಿಯವರು ಅವು ಮಾಡಿದ ತಪ್ಪು ಗ್ರಹಿಕೆ ಯ ತಿದ್ದಿಗೊಂಡು ಈ ಕಾರ್ಯವ ಮುಂದೆ ಅವುದೆ ಮಾಡುಗು || ಇದು “ಯದ್ಯದಾ ಚರತಿ ಶ್ರೇಷ್ಠ”ಕ್ಕೂ ಅನ್ವಯ — ಇಲ್ಲಿ ಆ MD ಶ್ರೇಷ್ಠ ಹೇಳಿ ಪರಿಗಣಿಸಲ್ಪಟ್ಟವ ||
    ಮುಂದುವರಿತ್ತು —|

  12. ದಯವಿಟ್ಟು ಓದುತ್ತ ಇಪ್ಪವು, ಆಸ್ವಾದಿಸುತ್ತಾ ಇಪ್ಪವು ಪ್ರೋತ್ಸಾಹಕರ ಒಪ್ಪಂಗಳ ಕೊಡಿ… ಚೆನ್ನೈ ಭಾವ ಮತ್ತು ಈಶ್ವರ ಮಾವ ನಮಗೆ ಜೀವ ಮಾನಲ್ಲಿ ತೀರುಸುಲೇ ಸಾಧ್ಯ ಇಲ್ಲದ್ದಷ್ಟು ಸಹಾಯ ಮಾಡುತ್ತಾ ಇದ್ದವು… ಎಲ್ಲರುದೆ ಆಸ್ವಾದಿಸಿ,ಪ್ರಯೋಜನ ಪಡಕ್ಕೊಳ್ಳಿ…

  13. ಶ್ರೀಮದ್ಭಗವದ್ಗೀತೆ ಯ ಯಾರುದೆ ಬರೇ ಪೂಜಾ ಕೊಠಡಿ ಗೆ ಸೀಮಿತ ಮಾಡದಿ | ಅದರಲ್ಲಿ ಹೇಳಿದ್ದ ವಿಷಯ ವ ಅರ್ಥ ಮಾಡುಲೆ ಪ್ರಯತ್ನ ಮಾಡಿ ಕೈಲಾದಷ್ಟು ನಮ್ಮ ಜೀವನಲ್ಲಿ ಅದರ ಅನುಸರಿಸುಲೆ ಪ್ರಯತ್ನ ಮಾಡಿದರೆ ಒಳ್ಳೇದು | ಪರಮಾತ್ಮನೇ ಹೇಳುತ್ತಾ — ಶ್ಲೋಕ ೨-೪೦ — ನೆಹಾಭಿಕ್ರಮ ನಾಶೋ $ಸ್ತಿ —– ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ($ = ಅವಗ್ರಹ ಚಿಹ್ನೆ, ಅರ್ಥ ನಾಶಃ ಅಸ್ತಿ ಹೇಳಿ ) || ಹೇಳಿದರೆ ಈ ಶಾಸ್ತ್ರಲ್ಲಿ ಹೇಳಿದ್ದರ ರಜ ರಜ್ಜ ಅಭ್ಯಾಸ ಮಾಡಿ ಬಿಟ್ಟರು ದೋಷ ಇಲ್ಲೇ — ಇದರ ಜೀವನಲ್ಲಿ ಬರೇ “ಸ್ವಲ್ಪ ವೇ ” ಅಭ್ಯಾಸ ಮಾಡಿದರು ಅದು ಅವನ ಮಹತ್ತರ ವಾದ ಭಯಂದ (ಕಷ್ಟ ಕಾರ್ಪಣ್ಯ ಗಳಂದ ) ರಕ್ಷಿಸುತ್ತು — ಈ ಅಭಯವ ಶ್ರೀ ಕೃಷ್ಣ ಪರಮಾತ್ಮ ನೆ ಕೊಟ್ಟಿದ ||

  14. ಸಕ್ತಾಃ ಕರ್ಮಣಿ ಅವಿದ್ವಾಂಸೋ ———————– ೩-೨೫ — ಒಬ್ಬ ಕರ್ಮ ಫಲವ ತನ್ನ ಸ್ವಾರ್ಥಕ್ಕಾಗಿ ಅಪೇಕ್ಷೆ ಪಡದ್ದೋನು ಕರ್ಮ ಮಾಡುತ್ತಿಪ್ಪಗ ಮಾತ್ರ — ಸ್ವಾರ್ಥ ಪರ ಅಪೇಕ್ಷೆ ಪಡುವವನಷ್ಟೇ ಉತ್ಸಾಹಲ್ಲಿ ಮಾಡೆಕ್ಕು — || ಒಂದು ಸಣ್ಣ ಉದಾ : ಒಬ್ಬ ” ಗುಂಡ ” ಹೇಳುವವ ಕಾರಿಲಿ ಹೊಪಾಗ ದಾರೀಲಿ ಒಂದು Rs , ೧೦೦೦/- ದ ನೋಟು ನೋಡಿಡ — ಕೂಡಲೇ ಅವ ಕಾರು ನಿಲಿಸಿ ಆ ಪೈಸೆಯ ಕಿಸೇಲಿ ಹಾಕಿ ಹೋದ —- ಇನ್ನೊಬ್ಬ ರಾಮ ಹೇಳುವವ ಕಾರಿಲಿ ಹೊಪಾಗ ಹಾಂಗೆ Rs , ೧೦೦೦/- ನೋಟು ನೋಡಿದ., ಅವನುದೆ ಗುಂಡನ ಹಾಂಗೇ ಅದರ ಕಿಸೇಲಿ ಹಾಕಿ ಹೋದ | ಇಲ್ಲಿ ಮೇಲ್ನೋಟಕ್ಕೆ ಇಬ್ಬರಲ್ಲೂ ವ್ಯತ್ಯಾಸ ಇಲ್ಲೇ — ಆದರೆ ಸ್ವಾರ್ಥ ಪರ ಚಿಂತನೆಯ ” ಗುಂಡ ” ಆ ಪೈಸೆಯ ಅವನ ಬ್ಯಾಂಕ್ ಖಾತೆಲಿ ಜಮಾ ಮಾಡಿದ | ಮತ್ತೆ ನಿಸ್ವಾರ್ಥಿ “ರಾಮ” ಆ ಪೈಸೆಯ ಒಬ್ಬ ಬಡವಂಗೆ ದಾನ ಮಾಡಿದ | ಇಲ್ಲಿ ಗುಂಡಂದು “ಕಾಮ್ಯ ಕರ್ಮ” — ಹಾಂಗೇ ರಾಮನದು “ನಿಷ್ಕಾಮ ಕರ್ಮ” — ಮೇಲ್ನೋಟಕ್ಕೆ ಎರಡು ಒಂದೇ — ಹಾಂಗೇ “ನಿಷ್ಕಾಮ ಕರ್ಮ” ಮಾಡುವವ ಯಾವ ತೋರಿಕೆಯೂ ಉದ್ವೇಗವು ಇಲ್ಲದ್ದೆ ಸಾಮಾನ್ಯರ ಹಾಂಗೇ ಕರ್ಮ ಮಾಡೆಕ್ಕು ಹೇಳಿ ಉಪದೇಶ ಸಾರ ||
    ಇನ್ನೊಂದು ನಿಜ ಉದಾಹರಣೆ : ಒಬ್ಬ ಒಂದು factory ಯ MD ಒಂದು ದಿನ ಕೆಲವರೊಡನೆ ಗ್ರೂಪ್ ಆಗಿ ಒಂದು ಹೋಟೆಲೆಲಿ ಉಂಬಲೆ ಹೋದವು | ಉಟ ಆದ ಮೇಲೆ , ಕೊನೆಗೆ ಅಲ್ಲಿ ಸುಮಾರು ಖಾದ್ಯ ಉಳುದತ್ತು — ಬಿಲ್ಲು ಕೊಡುವಾಗ MD , waiter ಹತ್ತರೆ ಉಳುದ ತಿಂಡಿಯ ಕಟ್ಟಿ ಕೊಡುಲೆ ಹೇಳಿದ | ಅದರ ಕಂಡು ಗ್ರೂಪಿನವರೆಲ್ಲಾ ಗ್ರೇಶುತ್ತವು — ಈ ಇಷ್ಟು ಪೈಸೆ ಇಪ್ಪ MDಗೂ ಎಂತಾ ಆಸೆ — ಮನಗೆ ಕಟ್ಟಿಗೊಂದು ಹೊವುತ್ತಾ ಇದ್ದ “ಆಶೆ ಪೀಂಟ ” ಹೇಳಿ || ಆದರೆ ಈ MD ಆ ಇಡೀ ಕಟ್ಟಿನ ಹೋಟೆಲ್ ನಿಂದ ಹೆರವೇ ಕೂದುಗೊಂಡು ಇತ್ತ ಒಂದು “ಬೇಡುದಕ್ಕೆ” ಕೊಟ್ಟ — ಅವ ಅದರ ಸ್ವರ್ಗ ಸಿಕ್ಕಿದಷ್ಟು ಸಂತೋಷಲ್ಲಿ ತಿಂದ || — ಈಗ ಅವನೊಡನೆ ಇದ್ದವರೆಲ್ಲಾ ಅವು ಮಾಡಿದ ತಪ್ಪು ಗ್ರಹಿಕೆಗೆ ನಾಚಿಗೆ ಪಟ್ಟುಕೊಂಡವು || ಇದುವೇ — ಕುರ್ಯಾದ್ ವಿದ್ವಾನ್ ತಥಾ ಆಸಕ್ತಃ — ಚಿಕೀರ್ಷುರ್ಲೋಕಸಂಗ್ರಹಂ || ಭ.ಗೀ.೩-೨೫ ||
    ಮುಂದುವರಿತ್ತು ||

  15. ಇಲ್ಲಿ — ಯದ್ಯದಾಚರತಿ ಶ್ರೇಷ್ಥಃ ——— ೯೩-೨೧ — ಬಾರೀ ಪ್ರಾಮುಖ್ಯವಾದ ವಾಕ್ಯ — ಅಲ್ಲಿ ಅರ್ಜುನನೇ ಅತ್ಯಂತ ಶ್ರೇಷ್ಠ ಹೇಳಿ ಪಾಂಡವ ಸೈನ್ಯ ತಿಳುಕ್ಕೊಂಡಿದು — ಅವನೇ ತಪ್ಪು ಮಾಡಿದರೆ ಮುಂದೆ ಎಲ್ಲ ಹಾಳಕ್ಕು || ಹಾಂಗೆ ಇದರ ಪ್ರಾಪಂಚಿಕವಾಗಿ — ಒಂದು ಮನಗೆ ಅನ್ವಯಿಸಿದರೆ — ಮನೆಯವರು (ಮನೆಯ ಕಿರಿಯರು), ಹೆಚ್ಚಾಗಿ ಬೆಳವ ಮಕ್ಕೋ ಮನೆಯ ಯಜಮಾನನ ” ಅತ್ಯಂತ ಶ್ರೇಷ್ಠ ” ಹೇಳಿ ತಿಳಿದುಗೊಂಡಿರ್ತವು || ಈ ಹಿರಿಯವ ತಪ್ಪು ಮಾಡಿದರು– ಅದು ಸರಿ ಹೇಳಿ ಮಕ್ಕಳ ತಲೇಲಿ ಬೇರೂರುತ್ತು || ಮುಂದೆ ಅವು ದೊಡ್ಡಪ್ಪಗ ಆ ತಪ್ಪನೆ ಮಾಡಿ ಅದು ಸರಿ ಹೇಳಿ ಸಾಧುಸುವ ಪ್ರಯತ್ನ ಮಾಡುವ ಸಂಭವ ಇದ್ದು || ನಿಜವಾಗಿ ಪ್ರತಿಯೊಬ್ಬ ಮನೆಯ “ಯಜಮಾನಂಗು” ಗುರುತರ ಜವಾಬ್ದಾರಿ ಇದ್ದು | ” ಯಜಮಾನ ” ಹೇಳಿದರೆ ” ಯಜ್ಞ ಕರ್ತಾ” ಹೇಳಿ ಅರ್ಥ ಇದ್ದು | ಮನೆಯ ಯಜಮಾನ ಕಿರಿಯರ ಮೇಲೆ ದಬ್ಬಾಳಿಕೆ ಮಾಡುವವ ಅಪ್ಪಲಾಗ | ನಿಜ ಅರ್ಥಲ್ಲಿ ಅವ ಮನೆಯ ಪ್ರತಿ ಕಾರ್ಯ ಗಳನ್ನೂ “ಯಜ್ಞಭಾವಲ್ಲಿ ” ಮಾಡುವವ ಆಗಿರೆಕ್ಕು — ಮನೇಲಿ ಬೆಳವ ಮಕ್ಕೊಗೆ ಬೇಕಾಗಿ ಅವ ತನ್ನ ” ಇಂದ್ರಿಯ ಚಪಲಂಗಳ ” ಬದಿಗೊತ್ತಿ ತ್ಯಾಗ ಬುದ್ಧಿಲಿ ಮನೆಯ ವ್ಯವಹಾರವ “ಸತ್ಕರ್ಮಯುಕ್ತ “ನಾಗಿ ಯಜ್ಞಭಾವಲ್ಲಿ ಮಾಡೆಕ್ಕು | ಆವಾಗ ಶ್ರೀಮದ್ಭಗವದ್ಗೀತೆಯ — ಯದ್ಯದಾಚರತಿ ಶ್ರೇಷ್ಠಃ — ಎಂಬ ಉಪದೇಶ ಸಾರ್ಥಕ ||

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×