- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಶ್ಲೋಕ
ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್ ।
ನಾಯಂ ಲೋಕೋsಸ್ತ್ಯಯಜ್ಞಸ್ಯ ಕುತೋsನ್ಯಃ ಕುರುಸತ್ತಮ॥೩೧॥
ಪದವಿಭಾಗ
ಯಜ್ಞ-ಶಿಷ್ಟ-ಅಮೃತ-ಭುಜಃ ಯಾಂತಿ ಬ್ರಹ್ಮ ಸನಾತನಮ್ । ನ ಅಯಮ್ ಲೋಕಃ ಅಸ್ತಿ ಅಯಜ್ಞಸ್ಯ ಕುತಃ ಅನ್ಯಃ ಕುರುಸತ್ತಮ ॥
ಅನ್ವಯ
ಹೇ ಕುರುಸತ್ತಮ!, ಯಜ್ಞ-ಶಿಷ್ಟ-ಅಮೃತ-ಭುಜಃ ಸನಾತನಂ ಬ್ರಹ್ಮ ಯಾಂತಿ । ಅಯಜ್ಞಸ್ಯ ಅಯಂ ಲೋಕಃ ನ ಅಸ್ತಿ, ಕುತಃ ಅನ್ಯಃ?
ಪ್ರತಿಪದಾರ್ಥ
ಹೇ ಕುರುಸತ್ತಮ! – ಏ ಕುರುಕುಲ ಶ್ರೇಷ್ಠನೇ!, ಯಜ್ಞ-ಶಿಷ್ಟ-ಅಮೃತ-ಭುಜಃ – ಯಜ್ಞಾಚರಣೆಯ ಫಲವಾದ ಅಮೃತದ ರುಚಿನೋಡಿಗೊಂಡವಾಗಿ, ಸನಾತನಮ್ ಬ್ರಹ್ಮ – ಶಾಶ್ವತ ವಾತಾವರಣವ ಪರಮಶ್ರೇಷ್ಠವ, ಯಾಂತಿ – ಸೇರುತ್ತವು, ಅಯಜ್ಞಸ್ಯ – ಯಜ್ಞವ ಆಚರುಸದ್ದೆ ಇಪ್ಪವಂಗೆ, ಅಯಮ್ ಲೋಕಃ – ಈ ಲೋಕವು, ನ ಅಸ್ತಿ – ಎಂದಿಂಗೂ ಇಲ್ಲೆ, ಕುತಃ – ಎಲ್ಲಿಂದ, ಅನ್ಯಃ – ಇನ್ನೊಂದು?!
ಅನ್ವಯಾರ್ಥ
ಕುರುವಂಶ ಶ್ರೇಷ್ಠನೇ!, ಮನುಷ್ಯರು ಈ ರೀತಿಯ ವಿವಿಧ ಯಜ್ಞವ ಮಾಡಿ, ಯಜ್ಞಫಲದ ಅಮೃತವ ಸವಿದು, ಪರಮ ನಿತ್ಯ ಆವರಣವ ಸೇರುತ್ತವು. ಯಜ್ಞಂಗಳ ಮಾಡದ ಮನುಷ್ಯ° ಈ ಭೂಮಿಯ ಮೇಲಾಗಲಿ ಅಥವಾ ಈ ಜನ್ಮಲ್ಲಿಯಾಗಲಿ ಸುಖಿಯಾಗಿ ಬದುಕಲೆಡಿಯ. ಮತ್ತೆ ಮುಂದಾಣ ಜನ್ಮದ ಮಾತೆಲ್ಲಿಂದ ?!
ತಾತ್ಪರ್ಯ / ವಿವರಣೆ
ಮನುಷ್ಯನ ಐಹಿಕ ಅಸ್ತಿತ್ವದ ರೂಪ ಏನೇ ಆಗಿರಲಿ, ಅವಂಗೆ ತನ್ನ ನಿಜ ಸ್ಥಿತಿಯ ಅರಿವು ಇರ್ತಿಲ್ಲೆ. ಹೇಳಿರೆ, ಐಹಿಕ ಜಗತ್ತಿಲ್ಲಿ ಅಸ್ತಿತ್ವದಲ್ಲಿಪ್ಪದಕ್ಕೆ ಕಾರಣ ನಮ್ಮ ಪೂರ್ವ ಪಾಪಜೀವನಂಗಳ ಪ್ರತಿಕ್ರಿಯೆಗೊ. ಪಾಪಜೀವನಕ್ಕೆ ಕಾರಣ ಅಜ್ಞಾನ. ಹೀಂಗಾಗಿ ಮನುಷ್ಯನ ಐಹಿಕ ಅಸ್ತಿತ್ವ ಮುಂದುವರುದುಗೊಂಡುಹೋಪಲೆ ಪಾಪಜೀವನವೇ ಕಾರಣ. ಈ ಸಮಸ್ಯೆಂದ ಪಾರಪ್ಪಲೆ ಮನುಷ್ಯಜನ್ಮ ಒಂದೇ ಅವಕಾಶ. ಆದ್ದರಿಂದ ನಾವು ತಪ್ಪಿಸಿಗೊಂಬಲೆ ವೇದಂಗೊ ಒಂದು ಅವಕಾಶವ ಕಲ್ಪಿಸಿಕೊಡುತ್ತು. ಧರ್ಮ , ಅರ್ಥ, ಕಾಮ ಮತ್ತು ಅಕೇರಿಗೆ ದುಃಖ. ಇದರಿಂದ ಸಂಪೂರ್ಣವಾಗಿ ತಪ್ಪಿಸಿಗೊಂಬಲೆ ವೇದಂಗೊ ಅವಕಾಶ ಮಾಡಿಕೊಡುತ್ತು. ಧರ್ಮದ ಮಾರ್ಗಂದ ಈ ಮದಲು ಹೇಳಿಪ್ಪಂತಹ ಯಜ್ಞಾಚರಣೆಂದ ನಮ್ಮ ಆರ್ಥಿಕತೆ ಸುಧಾರಣೆ ಆವ್ತು. ನವಗೆ ಅಗತ್ಯ ಇಪ್ಪಷ್ಟು ಆಹಾರ ಲಭಿಸುತ್ತು. ಧರ್ಮ ಅರ್ಥ ಸಾಧಿಸಿದವಂಗೆ ಮುಂದೆ ಇಂದ್ರಿಯತೃಪ್ತಿ. ಇದಕ್ಕಾಗಿ ನಿಯಂತ್ರಿತ ಇಂದ್ರಿಯ ತೃಪ್ತಿ ಹೇಳಿ ಪವಿತ್ರ ವಿವಾಹ. ಇನ್ನಾಣದ್ದು ಮೋಕ್ಷ ಸಾಧನೆ. ಮನುಷ್ಯನ ಐಹಿಕ ಬಂಧನಂದ ಮುಕ್ತಿಯ ನೆಲೆಗೆ ಕ್ರಮೇಣ ಈ ರೀತಿ ಹೋಯೇಕ್ಕಪ್ಪದು ಕ್ರಮ. ಮುಕ್ತ ಜೀವನದ ಅತ್ಯುನ್ನತ ಪರಿಪೂರ್ಣತೆ ಹೇಳಿರೆ ಭಗವಂತನ ಸಹವಾಸ. ಈ ರೀತಿಯ ಜೀವನ ಯಜ್ಞಂದ ಜೀವನಲ್ಲಿ ಪರಿಪೂರ್ಣತೆಯ ಸಾಧುಸಲೆ ಅವಕಾಶ ಇದ್ದು. ಈ ರೀತಿಲಿ ವೇದಂಗೊ ವಿಧಿಸಿದ ಯಜ್ಞಾಚರಣೆಯ ಮಾಡ್ಳೆ ಈಗಾಣ ಜನ್ಮಲ್ಲಿ ಆದರೂ ಸುಖವ ನಿರೀಕ್ಷಿಸುವದು ಹೇಂಗೆ?! ಇನ್ನೊಂದು ಜನ್ಮಲ್ಲಿ ಅವನ ಪಾಡೆಂತರ?! ಬೇರೆ ಬೇರೆ ಯಜ್ಞದ ಮೂಲಕ ಸುಖವಾದ ಜೀವನವ ಸಾಧುಸಲೆ ಎಡಿಗು. ಮನುಷ್ಯನಾದವ° ಸಾಧುಸಲೆಡಿಗಪ್ಪ ಅತ್ಯಂತ ಉನ್ನತ ರೀತಿಯ ಸುಖ ಹೇಳಿರೆ ಕೃಷ್ಣಪ್ರಜ್ಞೆಯ ಅನುಸರಿಸಿ ದಿವ್ಯತೆಯ ಕಾಂಬದು. ಆದ್ದರಿಂದ ಐಹಿಕ ಅಸ್ತಿತ್ವದ ಎಲ್ಲ ಸಮಸ್ಯೆಗೊಕ್ಕೆ ಪರಿಹಾರ ಹೇಳಿರೆ ‘ಕೃಷ್ಣಪ್ರಜ್ಞೆ’ಯ ಬದುಕು.
ಯಜ್ಞಲ್ಲಿ ಭಗವಂತಂಗೆ ಅರ್ಪಿಸಿ ಉಳುದ್ದರ ‘ಅಮೃತ’ ಹೇಳಿ ಹೇಳುವದು. ಅದು ನಮ್ಮ ಸಾವಿಂದ ಅತ್ಲಾಗಿ ಕೊಂಡೋಕು. ಜೀವನದ ಪ್ರತಿಯೊಂದು ನಡೆಲಿ ಈ ರೀತಿಯ ಬದುಕಿನ ಅನುಸರಿಸಿದರೆ ಕ್ರಮೇಣ ಎಂದೆಂದೂ ಬದಲಾಗದ್ದ ಶಾಶ್ವತ ಮತ್ತು ಸನಾತನವಾದ ಭಗವಂತನ ಹೋಗಿ ಸೇರ್ಲೆಡಿಗು. ಇಲ್ಲಿ ಸನಾತನ ಹೇಳಿರೆ ವೇದವೇದ್ಯ ಭಗವಂತ°. ಇಂತಹ ಭಗವಂತನ ಶಾಸ್ತ್ರದ ಮೂಲಕ ತಿಳುದು ಮಾಡುವ ಯಜ್ಞಂದ ಮೋಕ್ಷ ಸಾಧ್ಯ. ವೇದಲ್ಲಿ ಹೇಳಿಪ್ಪ ಈ ಗುಣವ ಬಲ್ಲವರಿಂದ ತಿಳುದು ಉಪಾಸನೆ ಮಾಡುವವ, ವೇದವ ಓದಿ ತಿಳುದವ, ತಿಳುದು ಇನ್ನೊಬ್ಬಂಗೆ ಹೇಳುವವ.. ಹೀಂಗೆ ಎಲ್ಲೋರು ‘ಸಾಧಕ’ ಎನಿಸಿಗೊಳ್ಳುತ್ತವು. ಯಜ್ಞಲ್ಲಿ ಪ್ರಮುಖವಾಗಿ ಬೇಕಾಗಿಪ್ಪದು ‘ಜ್ಞಾನ’, ‘ಭಕ್ತಿ’, ಮತ್ತು ‘ಶರಣಾಗತಿ’. ಜೀವನಲ್ಲಿ ಈ ಅನುಸಂಧಾನ ಇಲ್ಲದ್ದವ° ಯಜ್ಞವ ಬದುಕಿಲ್ಲಿ ಅಳವಡಿಸಿಗೊಂಬಲಿಲ್ಲೆ. ಇಹಲ್ಲಿಯೂ ವ್ಯರ್ಥ, ಮತ್ತೆ ಪರದ ಮಾತೆಂತರ?!.
ಇಲ್ಲಿ ಅರ್ಜುನನ ಕೃಷ್ಣ° ಕುರುಸತ್ತಮ ಹೇಳಿ ಸಂಬೋಧಿಸುತ್ತ°. ಕುರುವಂಶಲ್ಲಿ ಹುಟ್ಟಿ ಶ್ರೇಷ್ಠನಾದ ನೀನು ನಿಷ್ಕ್ರೀಯನಾಗದ್ದೆ ಕಾರ್ಯ ಪ್ರವೃತ್ತನಾಗು, ಯಜ್ಞಲ್ಲಿ ತಮ್ಮ ತೊಡಗಿಸಿಯೊಂಡು ಬಂದ ಶ್ರೇಷ್ಠ ವ್ಯಕ್ತಿಗಳ ವಂಶಲ್ಲಿ ಹುಟ್ಟಿದ ಜ್ಞಾನಿ ನೀನು, ಸಾತ್ವಿಕನಾದ ನೀನು ‘ಯುದ್ಧವ ಯಜ್ಞವಾಗಿ ಮಾಡು’ ಹೇಳ್ವ ಧ್ವನಿ ಹೇದು ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು.
ಶ್ಲೋಕ
ಏವಂ ಬಹುವಿಧಾ ಯಜ್ಞಾಃ ವಿತತಾ ಬ್ರಹ್ಮಣೋ ಮುಖೇ ।
ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಂ ಜ್ಞಾತ್ವಾ ವಿಮೋಕ್ಷ್ಯಸೇ ॥೩೨॥
ಪದವಿಭಾಗ
ಏವಮ್ ಬುಹುವಿಧಾಃ ಯಜ್ಞಾಃ ವಿತತಾಃ ಬ್ರಹ್ಮಣಃ ಮುಖೇ । ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಮ್ ಜ್ಞಾತ್ವಾ ವಿಮೋಕ್ಷ್ಯಸೇ ॥
ಅನ್ವಯ
ಏವಂ ಬಹುವಿಧಾಃ ಯಜ್ಞಾಃ ಬ್ರಹ್ಮಣಃ ಮುಖೇ ವಿತತಾಃ ಸಂತಿ । ತ್ವಂ ತಾನ್ ಸರ್ವಾನ್ ಕರ್ಮಜಾನ್ ವಿದ್ಧಿ । ಏವಂ ಜ್ಞಾತ್ವಾ ತ್ವಂ ವಿಮೋಕ್ಷ್ಯಸೇ ।
ಪ್ರತಿಪದಾರ್ಥ
ಏವಂ – ಹೀಂಗೆ, ಬಹುವಿಧಾಃ – ವಿವಿಧ ಬಗೆಯ, ಯಜ್ಞಾಃ – ಯಜ್ಞಂಗೊ, ಬ್ರಹ್ಮಣಃ ಮುಖೇ – ವೇದಂಗಳ ಬಾಯಿಯ ಮೂಲಕ, ವಿತತಾಃ ಸಂತಿ- ಹರಡಿದ್ದು, [ಭಗವಂತನ ಬಾಯಿಂದ ಹೊರಹೊಮ್ಮಿದ್ದದು ವೇದಂಗೊ. ಹಾಂಗಾಗಿ ವೇದದ ಮೂಲಕ ಹೇಳಲ್ಪಟ್ಟ /ವೇದಲ್ಲಿ ಹೇಳಿದ ಹೇದು ಅರ್ಥ]. ತ್ವಮ್ – ನೀನು, ತಾನ್ ಸರ್ವಾನ್ – ಅವುಗಳ ಎಲ್ಲವನ್ನೂ, ಕರ್ಮಜಾನ್ – ಕರ್ಮಂದ ಹುಟ್ಟಿದವು ಹೇದು, ವಿದ್ಧಿ – ನೀನು ತಿಳ್ಕೊಳ್ಳೆಕು, ಏವಮ್ – ಹೀಂಗೆ, ಜ್ಞಾತ್ವಾ- ತಿಳುಕ್ಕೊಂಡು, ತ್ವಮ್ ವಿಮೋಕ್ಷ್ಯಸೇ – ನೀನು ಬಿಡುಗಡೆಯ ಪಡೆತ್ತೆ.
ಅನ್ವಯಾರ್ಥ
ಈ ರೀತಿಯ ಎಲ್ಲ ಬಗೆಯ ಯಜ್ಞಂಗೊ ವೇದಲ್ಲಿ ಇದ್ದು. ಅವೆಲ್ಲ ಬೇರೆ ಬೇರೆ ಬಗೆಯ ಕರ್ಮಂದ ಹುಟ್ಟಿದ್ದು. ಹೀಂಗೆ ಹೇಳಿ ನೀನು ತಿಳುಕ್ಕೊಂಡರೆ ನೀನು ಮೋಕ್ಷವ (ಬಿಡುಗಡೆಯ) ಪಡೆತ್ತೆ.
ತಾತ್ಪರ್ಯ / ವಿವರಣೆ
ಈ ಮದಲೇ ಹೇಳಿಪ್ಪ ಬೇರೆ ಬೇರೆ ರೀತಿಯ ಯಜ್ಞಂಗೊ ಬೇರೆ ಬೇರೆ ರೀತಿ ಕರ್ಮಂಗಳ ಮಾಡುವವಕ್ಕೆ ಹೊಂದಿಕೆಯಾಗಿ ವೇದಲ್ಲಿ ಹೇಳಿದ್ದು. ಮನುಷ್ಯರು ದೇಹದ ಪರಿಕಲ್ಪನೆಲಿಯೇ ಗಾಢವಾಗಿ ಮಗ್ನರಾಗಿರುತ್ತವು. ಆದ್ದರಿಂದ ದೇಹಂದ, ಮನಸ್ಸಿಂದ ಅಥವಾ ಬುದ್ಧಿಶಕ್ತಿಂದ ಕೆಲಸ ಮಾಡ್ಳೆ ಸಾಧ್ಯ ಅಪ್ಪಂತೆ ಈ ಅಜ್ಞಂಗಳ ವ್ಯವಸ್ಥೆಗೊಳುಸಿದ್ದು. ಕಡೇಂಗೆ ದೇಹಂದ ಬಿಡುಗಡೆ ಸಾಧುಸಲೆ ಹೇಳಿಯೇ ಅವುಗಳ ಹೇಳಿದ್ದು. ಇದರ ಅರ್ಥಮಾಡಿಗೊಂಡು ನೀನೂ ಪ್ರವೃತ್ತನಾದರೆ ನೀನೂ ಬಿಡುಗಡೆಯ ಹೊಂದುತ್ತೆ ಹೇಳಿ ಅರ್ಜುನಂಗೆ ಕೃಷ್ಣನ ಉಪದೇಶ.
ಹಲವು ಬಗೆಯ ಯಜ್ಞಂಗೊ ಭಗವಂತನಿಂದ ವೇದದ ಮೂಲಕ ಸಾರಲ್ಪಟ್ಟಿದು. ಅವೆಲ್ಲವೂ ಕರ್ಮಂದಲೇ ಅಪ್ಪಂಥಾದ್ದು. ಹೀಂಗೆ ಇದರ ತಿಳುಕ್ಕೊಳ್ಳೆಕು. ಯಜ್ಞ ಹೇಳುವದಕ್ಕೆ ಹಲವು ಮುಖಂಗೊ. ಬದುಕಿನ ಯಾವುದೇ ನಡೆಯ ಭಗವಂತನ ಪ್ರಜ್ಞೆಂದ ಮಾಡಿಯಪ್ಪಗ ಬದುಕಿನ ನಡೆ ಭಗವಂತನ ಕಡೆ ಸಾಗುವ ನಡೆಯಾವ್ತು. ಅದು ಯಜ್ಞ ಆವ್ತು. ಯಾವ ರೀತಿ ಯಜ್ಞಮಾಡಿರೂ ಅದು ಭಗವಂತನಲ್ಲೇ ಬಂದು ಸೇರುತ್ತದು. ಸರ್ವಯಜ್ಞಂಗಳ ನಿಯಾಮಕ ಆ ಭಗವಂತನೊಬ್ಬನೆ. ವೈವಿಧ್ಯತೆ ಕೇವಲ ನಮ್ಮ ಅನುಸಂಧಾನ ಮತ್ತು ಕ್ರಿಯೆಲಿ. ನಾವು ನಮ್ಮ ಕರ್ಮದ ಮೂಲಕ ಯಜ್ಞ ಮಾಡೆಕು. ಕರ್ಮವ ಬಿಟ್ಟು ಭಗವಂತನ ಉಪಾಸನೆ ಮಾಡುತ್ತೇನೆ ಹೇಳಿ ಹೆರಟರೆ ಅದು ಸಾಧ್ಯ ಇಲ್ಲೆ. ನಾವು ನಮ್ಮ ನಮ್ಮ ಕರ್ತವ್ಯ ಕರ್ಮಲ್ಲಿ ಭಗವಂತನ ಕಾಂಬದು ಯಜ್ಞ. ಈ ಅನುಸಂಧಾನಂದ ಯಾವ ಕರ್ಮ ಮಾಡಿರೂ ಅದು ನಮ್ಮ ಬಿಡುಗಡೆಯ ಮಾರ್ಗದತ್ತ ಕೊಂಡೊಯ್ಯುತ್ತು.
ಈವರೇಗೆ ಕರ್ಮ ಯಜ್ಞ ಅಪ್ಪದು ಹೇಂಗೆ, ಅದರಲ್ಲಿನ ವಿಧಂಗೊ ಯಾವುದೆಲ್ಲ ಹೇಳಿ ನೋಡಿಯಾತು. ಮೂಲಭೂತವಾಗಿ ಯಜ್ಞಲ್ಲಿ ಬಾಹ್ಯ ಮತ್ತು ಅಂತರಂಗ ಹೇಳಿ ಎರಡು ವಿಚಾರಂಗೊ. ಇದರಲ್ಲಿ ಹೆಚ್ಚು ಮಹತ್ವ ಯಾವುದಕ್ಕೆ ಮತ್ತು ಎಂತಕೆ ಹೇಳಿ ಮುಂದೆ ಭಗವಂತ° ಹೇಳುತ್ತ° –
ಶ್ಲೋಕ
ಶ್ರೇಯಾನ್ ದ್ರವ್ಯಮಯಾದ್ ಯಜ್ಞಾಜ್ಞಾನಯಜ್ಞಃ ಪರಂತಪ ।
ಸರ್ವ ಕರ್ಮಾsಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ ॥೩೩॥
ಪದವಿಭಾಗ
ಶ್ರೇಯಾನ್ ದ್ರವ್ಯಮಯಾತ್ ಯಜ್ಞಾತ್ ಜ್ಞಾನ-ಯಜ್ಞಃ ಪರಂತಪ । ಸರ್ವಮ್ ಕರ್ಮ ಅಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ ॥
ಅನ್ವಯ
ಹೇ ಪರಂತಪ!, ದ್ರವ್ಯಮಯಾತ್ ಯಜ್ಞಾತ್ ಜ್ಞಾನ-ಯಜ್ಞಃ ಶ್ರೇಯಾನ್ । ಹೇ ಪಾರ್ಥ!, ಸರ್ವಂ ಅಖಿಲಂ ಕರ್ಮ ಜ್ಞಾನೇ ಪರಿಸಮಾಪ್ಯತೇ ।
ಪ್ರತಿಪದಾರ್ಥ
ಹೇ ಪರಂತಪ! – ಶತ್ರುಗಳ ದಂಡುಸುವವನೇ! (ಅರ್ಜುನನೇ!), ದ್ರವ್ಯಮಯಾತ್ – ಭೌತಿಕ ವಸ್ಥುಗಳ, ಯಜ್ಞಾತ್ – ಯಜ್ಞಂದಲೂ, ಜ್ಞಾನ-ಯಜ್ಞಃ – ಜ್ಞಾನಯಜ್ಞವು, ಶ್ರೇಯಾನ್ – ಅತ್ಯುತ್ತಮವಾದ್ದು. ಹೇ ಪಾರ್ಥ! – ಪೃಥೆಯ ಮಗನೇ!, ಸರ್ವಮ್ – ಎಲ್ಲವೂ, ಅಖಿಲಮ್ ಕರ್ಮ – ಸಮಗ್ರ ಚಟುವಟಿಕೆಗೊ, ಜ್ಞಾನೇ – ಜ್ಞಾನಲ್ಲಿ, ಪರಿಸಮಾಪ್ಯತೇ – ಕೊನೆಗೊಳ್ಳುತ್ತು.
ಅನ್ವಯಾರ್ಥ
ಶತ್ರುಗಳ ದಂಡುಸುವವನೇ!, ಅರ್ಜುನನೇ!, ದ್ರವ್ಯಮಯ ಯಜ್ಞ ಮಾಡುವದಕ್ಕಿಂತ ಜ್ಞಾನಯಜ್ಞವು ಉತ್ತಮವಾದ್ದು, ಪಾರ್ಥ!, ಎಲ್ಲ ಯಜ್ಞಕರ್ಮವೂ ದಿವ್ಯಜ್ಞಾನಲ್ಲಿ ಪರಿಸಮಾಪ್ತಿಯಾವುತ್ತು.
ತಾತ್ಪರ್ಯ / ವಿವರಣೆ
ಎಲ್ಲ ಯಜ್ಞಂಗಳ ಗುರಿ ಒಂದೇ – ಸಂಪೂರ್ಣ ಜ್ಞಾನ ಸ್ಥಿತಿಯ ಮುಟ್ಟಿ ಮತ್ತೆ ಐಹಿಕ ದುಃಖಂಗಳಿಂದ ಬಿಡುಗಡೆ ಹೊಂದಿ, ಅಂತಿಮವಾಗಿ ಕೃಷ್ಣಪ್ರಜ್ಞೆಲಿ ಭಗವಂತನ ಪ್ರೇಮಪೂರ್ವಕ ದಿವ್ಯಸೇವೆಲಿ ನಿರತವಾವ್ತದು. ಅಂದರೂ ಈ ವಿವಿಧ ಯಜ್ಞಕ್ರಿಯೆಲಿ ಒಂದು ರಹಸ್ಯ ಇದ್ದು. ಇದರ ರಹಸ್ಯವ ತಿಳುಕ್ಕೊಳ್ಳೆಕು. ಕೆಲವೊಂದರಿ ಯಜ್ಞಂಗೊ ಮಾಡುವವನ ವಿಶಿಷ್ಟ ಶ್ರದ್ದಗೆ ಅನುಗುಣವಾಗಿ ವಿವಿಧ ರೂಪಂಗಳ ಪಡೆತ್ತ್ತು ಯಜ್ಞಮಾಡುವವನ ಶ್ರದ್ಧೆ ಆಧ್ಯಾತ್ಮಿಕ ಜ್ಞಾನದ ಘಟ್ಟವ ಮುಟ್ಟಿಯಪ್ಪಗ, ಅವ° ಇಂತಹ ಜ್ಞಾನ ಇಲ್ಲದ್ದೆ ಐಹಿಕ ವಸ್ತುಗಳ ಯಜ್ಞಂಗಳ ಮಾಡುವವನಿಂದ ಮುನ್ನಡೆಲಿ ಇದ್ದ ಹೇಳಿ ತಿಳಿಯೆಕ್ಕು. ಎಂತಕೆ ಹೇಳಿರೆ, ಜ್ಞಾನ ಪಡೆಯದ್ದೆ ಮಾಡಿದ ಯಜ್ಞಂಗೊ ಐಹಿಕ ನೆಲೆಲಿಯೇ ಉಳಕ್ಕೊಳ್ಳುತ್ತು. ಇದರಿಂದ ಯಾವ ಆಧ್ಯಾತ್ಮಿಕ ಫಲಂಗೊ ಇಲ್ಲೆ. ನಿಜವಾದ ಜ್ಞಾನವು ಆಧ್ಯಾತ್ಮಿಕ ಜ್ಞಾನದ ಅತ್ಯುನ್ನತ ಹಂತವಾದ ಕೃಷ್ಣಪ್ರಜ್ಞೆಲಿ ಶ್ರೇಷ್ಠಕ್ಕೆ ಮುಟ್ಟುತ್ತು. ಯಜ್ಞಮಾಡುವವನ ಜ್ಞಾನವು ಉನ್ನತ ಮಟ್ಟಕ್ಕೇರಿದರೆ ಯಜ್ಞಂಗೊ ಐಹಿಕ ಕರ್ಮಂಗೊ ಅಷ್ಟೇ. ಆದರೆ, ಅವುಗಳ ಆಧ್ಯಾತ್ಮಿಕ ಜ್ಞಾನದ ಮಟ್ಟಕ್ಕೆ ಏರಿಸಿಯಪ್ಪಗ ಅಂತಹ ಎಲ್ಲ ಕರ್ಮಂಗೊ ಆಧ್ಯಾತ್ಮಿಕ ನೆಲಗೆ ಏರುತ್ತು. ಹೀಂಗೆ ಜ್ಞಾನದ ಗುರಿಂದ ಮಾಡಿದ ಯಜ್ಞಂಗೊ ಶ್ರೇಷ್ಠವಾದ್ದು.
ಪರಂತಪ! (ಶತ್ರುಗಳ ದಂಡುಸುವವ, ಶತ್ರುಗಳ ಸದೆಬಡಿವ ವೀರ), ಇಲ್ಲಿ ಇದು ಅರ್ಜುನಂಗೆ ಸೂಚ್ಯವಾಗಿ ಹೇಳಿದ್ದು – ಇಲ್ಲಿ ಅರ್ಜುನ ಮಾಡುತ್ತಿಪ್ಪ ಯಜ್ಞ ಶತ್ರುನಿಗ್ರಹ. ಆ ಯಜ್ಞದ ಹಿಂದೆ ಜ್ಞಾನದ ಸಹಕಾರ ಇದ್ದು. ಆದ್ದರಿಂದ ಇದು ಜ್ಞಾನಯಜ್ಞ ಆವ್ತು (ದ್ರವ್ಯಯಜ್ಞ ಅಲ್ಲ) ಎಂತಕೆ ಹೇಳಿರೆ ಅರ್ಜುನ° ಸದಾ ಪರಮಾತ್ಮನ ಚಿಂತುಸುವವ°. ಇಲ್ಲಿ ಕೌರವರ (ಶತ್ರುಗಳ) ಕೊಂದು ಆನು ಅಧಿಕಾರ ಸಾಧುಸೆಕು ಹೇಳ್ವ ಅನುಸಂಧಾನ ಇಲ್ಲೆ. ಇದೊಂದು ಭಗವಂತನ ಆರಾಧನಾ ರೂಪವಾದ ಯಜ್ಞ. ಅನ್ಯಾಯದ ವಿರುದ್ಧ ಹೋರಾಟ ಅರ್ಜುನಂಗೆ ಕರ್ತವ್ಯ, ಜಯಾಪಜಯಂಗಳ ಅ ಭಗವಂತಂಗೆ ಬಿಟ್ಟದು. ಈ ಅನುಸಂಧಾನಲ್ಲಿ ಯುದ್ಧ ಮಾಡಿಯಪ್ಪಗ ಇದೊಂದು ಜ್ಞಾನಯಜ್ಞ ಆವುತ್ತು. ಇಲ್ಲಿ ಕರ್ಮವ ಜ್ಞಾನವಾಗಿ ಹೇಂಗೆ ಪರಿವರ್ತಿಸಲಕ್ಕು ಹೇಳ್ವದಕ್ಕೆ ಪರಂತಪ ಹೇಳಿ ಉಪಯೋಗ ಆದ್ದು. ಇನ್ನು “ಸರ್ವಕರ್ಮಾsಖಿಲಂ” = ಸರ್ಮ ಕರ್ಮ ಅಖಿಲಂ, ಸರ್ವ ಕರ್ಮ ಆಖಿಲಂ. ಯಾವುದೇ ಕರ್ಮವ ಜ್ಞಾನಪೂರ್ವಕವಾಗಿ ಮಾಡಿಯಪ್ಪಗ ಮಾತ್ರ ಅದು ಪೂರ್ಣ ಆವುತ್ತು. ಕರ್ಮದ ಒಟ್ಟಿಂಗೆ ಜ್ಞಾನವೂ ಬೇಕು. ಅದು ಜ್ಞಾನದ ಶ್ರೇಷ್ಠತೆ. ಜ್ಞಾನಂದ ಕರ್ಮ ಮಾಡು, ಕರ್ಮ ಮಾಡಿ ಜ್ಞಾನಗಳುಸು. ಅಂಬಗ ಅದು ಪರಿಪೂರ್ಣ. ಮಾಡಿದ ಕರ್ಮ ಸಫಲ ಅಪ್ಪದು ಅದರ ಹಿಂದೆ ಅರಿವು (ಜ್ಞಾನ) ಇಪ್ಪಗ ಮಾಂತ್ರ. ಇನ್ನು ಆಖಿಲಂ (ಆ ಖಿಲಂ), ಖಿಲಂ ಹೇಳಿರೆ ಒಂದು ಚೂರು. ಜ್ಞಾನ ಇಲ್ಲದ್ದ ಎಲ್ಲಾ ಕರ್ಮವ ಒಂದುಗೂಡುಸಿದರೂ ಅದು ಜ್ಞಾನದ ಮುಂದೆ ಒಂದು ಸಣ್ಣ ಚೂರು. ಜ್ಞಾನವಿಲ್ಲದ ಎಲ್ಲ ಕರ್ಮಂಗೊ ಸೇರಿದರೂ ಅದು ಜ್ಞಾನಪೂರ್ಣ ಕರ್ಮದ ಮುಂದೆ ಅತ್ಯಲ್ಪ. ನಮ್ಮ ಕರ್ಮ ಜ್ಞಾನಕ್ಕೋಸ್ಕರವಾಗಿರೆಕೇ ಹೊರತು ಕರ್ಮಕ್ಕೋಸ್ಕರ ಕರ್ಮ ಅಪ್ಪಲಾಗ. ಇನ್ನಿ ಇಲ್ಲಿ ‘ಪಾರ್ಥ’ ಹೇಳಿ ಹೇಳಿದ್ದು – ಪಾರವ ಕಂಡವ°. ಜ್ಞಾನದ ಕಡಲಿನ ಆಚಿಗಾಣ ದಡವ ಕಂಡವ°, ವೇದಾರ್ಥ ಪಾನವ ಮಾಡಿದವ° ಹೇಳಿ ಅರ್ಥ. ಮಹಾನ್ ಜ್ಞಾನಿಯಾದ ನೀನು ಅರ್ತು ಮಾಡುವ ಈ ಕರ್ಮ ಕೇವಲ ಕರ್ಮ ಅಲ್ಲ, ಅದು ಜ್ಞಾನಯಜ್ಞ ಹೇಳ್ವ ಧ್ವನಿಲಿ ಹೇಳಿದ್ದು ಹೇದು ಬನ್ನಂಜೆಯವರ ವ್ಯಾಖ್ಯಾನ.
ಜ್ಞಾನವಿಲ್ಲದ್ದ ಕರ್ಮಂದ ಯಾವ ಉಪಯೋಗವೂ ಇಲ್ಲೆ ಹೇಳಿ ಆತು. ಹಾಂಗಾರೆ ಈ ಜ್ಞಾನವ ಗಳುಸುವದು ಹೇಂಗೆ ? –
ಶ್ಲೋಕ
ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ॥೩೪॥
ಪದವಿಭಾಗ
ತತ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ । ಉಪದೇಕ್ಷ್ಯಂತಿ ತೇ ಜ್ಞಾನಮ್ ಜ್ಞಾನಿನಃ ತತ್ತ್ವ-ದರ್ಶಿನಃ ॥
ಅನ್ವಯ
ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ತತ್ತ್ವ-ದರ್ಶಿನಃ ಜ್ಞಾನಿನಃ , ಜ್ಞಾನಂ ತೇ ಉಪದೇಕ್ಷ್ಯಂತಿ । ತತ್ ತ್ವಂ ವಿದ್ಧಿ ।
ಪ್ರತಿಪದಾರ್ಥ
ಪ್ರಣಿಪಾತೇನ – ಗುರುಗಳ ಹತ್ರೆ ಹೋಗಿ, ಪರಿಪ್ರಶ್ನೇನ – ವಿನಯಪೂರ್ವಕ ವಿಚಾರಣೆಂಗಳಿಂದ, ಸೇವಯಾ – ಸೇವೆಯ ಸಲ್ಲುಸುವದರಿಂದ,ತತ್ತ್ವ-ದರ್ಶಿನಃ ಜ್ಞಾನಿನಃ – ಸತ್ಯದ ದ್ರಷ್ಟಾರರು ಆತ್ಮಸಾಕ್ಷಾತ್ಕಾರಿಗೊ, ಜ್ಞಾನಮ್ – ಜ್ಞಾನವ, ತೇ – ನಿನಗೆ, ಉಪದೇಕ್ಷ್ಯಂತಿ – ಅವ್ವು ಉಪದೇಶಿಸುತ್ತವು, ತತ್ – ವಿವಿಧ ಯಜ್ಞಂಗಳ ಆ ಜ್ಞಾನವ, ತ್ವಮ್ – ನೀನು, ವಿದ್ಧಿ – ತಿಳುಕ್ಕೊ.
ಅನ್ವಯಾರ್ಥ
ಗುರುವಿನ ಹತ್ರೆ ಹೋಗಿ ಸತ್ಯವ ತಿಳುಕ್ಕೊಂಬಲೆ ಪ್ರಯತ್ನುಸು. ನಮ್ರನಾಗಿ ಅವರತ್ರೆ ಚರ್ಚೆ ಮಾಡು ಮತ್ತು ಅವರ ಸೇವೆ ಮಾಡು. ಆತ್ಮಸಾಕ್ಷಾತ್ಕಾರ ಪಡದ ವ್ಯಕ್ತಿಗೊ ಸತ್ಯವ ಕಂಡಿದವು. ಆದ್ದರಿಂದ ಅವು ನಿನಗೆ ಜ್ಞಾನೋಪದೇಶವ ಮಾಡ್ಳೆ ಸಮರ್ಥರು.
ತಾತ್ಪರ್ಯ / ವಿವರಣೆ
ಆಧ್ಯಾತ್ಮಿಕ ಸಾಕ್ಷಾತ್ಕಾರದ ಮಾರ್ಗವು ನಿಶ್ಚಯವಾಗಿಯೂ ಕಠಿಣವಾದ್ದು. ಆದ್ದರಿಂದ, ಭಗವಂತನಿಂದಲೇ ಬಂದ ಗುರುಪರಂಪರೆಯಲ್ಲಿನ ಒಬ್ಬ ನಿಜವಾದ ಗುರುವಿನ ಹತ್ರಂಗೆ ಹೋಗು ಹೇಳಿ ಭಗವಂತನ ಬುದ್ಧಿವಾದ. ಈ ಗುರುಪರಂಪರೆಯ ತತ್ತ್ವಂಗಲ ಅನುಸರುಸದ್ದೆ ಆರೂ ನಿಜವಾದ ಗುರು ಅಪ್ಪಲೆ ಸಾಧ್ಯ ಇಲ್ಲೆ. ಭಗವಂತನೇ ಪ್ರಪ್ರಥಮ ಗುರು. ಈ ಪರಂಪರೆಲಿ ಬಂದವ° ಭಗವಂತನ ಸಂದೇಶವ ಯಥಾವತ್ತಾಗಿ ಹೇಳಿಕೊಡ್ಳೆ ಸಮರ್ಥನಾಗಿರುತ್ತ°. ತನ್ನ ಪ್ರಕ್ರಿಯೆಯ ತಾನೇ ಸೃಷ್ಟಿಸಿಗೊಂಡು ಆರೂ ಆಧ್ಯಾತ್ಮಿಕ ಸಾಕ್ಷಾತ್ಕಾರವ ಸಾಧುಸಲೆ ಸಾಧ್ಯ ಇಲ್ಲೆ. ‘ಧರ್ಮಂ ತು ಸಾಕ್ಷಾದ್ ಭಗವತ್ ಪ್ರಣೀತಂ’ – ಧರ್ಮಮಾರ್ಗವ ಭಗವಂತನೇ ನೇರವಾಗಿ ತೋರಿಸಿಕೊಟ್ಟಿದ ಹೇಳಿ ಹೇಳುತ್ತು. ಆದ್ದರಿಂದ ಊಹಾಪೋಹ ಚಿಂತನೆಂದಲಾಗಲೀ, ಒಣವಾದಂಗಳಿಂದಲಾಗಲಿ, ಮನುಷ್ಯನ, ಸರಿದಾರಿಗೆ ಕೊಂಡೋಗ. ವಿದ್ಯಾಗ್ರಂಥಂಗಳ ಸ್ವಯಂ ಸ್ವತಂತ್ರನಾಗಿ ಅಧ್ಯಯನ ಮಾಡಿರೂ ಆಧ್ಯಾತ್ಮಿಕ ಜೀವನಲ್ಲಿ ಪ್ರಗತಿಯ ಸಾಧುಸಲೆ ಸಾಧ್ಯ ಇಲ್ಲೆ. ಅದಕ್ಕೆ ಒಬ್ಬ ನಿಜವಾದ ಗುರುವಿನ ಹತ್ರೆ ಹೋಗಿ, ಅವನ ಸೇವೆಯ ಮಾಡಿಗೊಂಡು, ಅವನತ್ರೆ ಸಂಪೂರ್ಣ ಶರಣಾಗಿ ಅವನತ್ರೆ ಜಿಜ್ಞಾಸೆಗಳ ಚರ್ಚಿಸಿ ಅವನಿಂದ ಜ್ಞಾನದ ಅರಿವು ಪಡಕ್ಕೊಂಬಲಕ್ಕು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಹೇಳಿ ಪುರಂದರದಾಸರ ಹಾಡಿನ ಆಶಯ ಇದುವೇ. ಆತ್ಮಸಾಕ್ಷಾತ್ಕಾರ ಪಡದ ಗುರುವಿನ ತೃಪ್ತಿಯೇ ಆಧ್ಯಾತ್ಮಿಕ ಪ್ರಗತಿಯ ಗುಟ್ಟು. ಆಧ್ಯಾತ್ಮಿಕ ಅರಿವಿನ ಪ್ರಗತಿಗೆ ಪ್ರಶ್ನಿಸುವದು, ವಿಧೇಯನಾಗಿಪ್ಪದು ಎರಡೂ ಮುಖ್ಯ ಹೇಳ್ವದು ಭಗವಂತನ ಈ ಶ್ಲೋಕಂದ ಅರ್ಥ ಆವ್ತು. ವಿಧೇಯತೆ ಮತ್ತು ಸೇವೆ ಇಲ್ಲದ್ದೆ ವಿದ್ವಾಂಸರಾದ ಗುರುವಿನ ಪ್ರಶ್ನಿಸುವದರಿಂದ ಎಂತ ಪ್ರಯೋಜನವೂ ಇಲ್ಲೆ. ಗುರುವಿನ ಪರೀಕ್ಷೆಲಿ ಶಿಷ್ಯ ಉತ್ತೀರ್ಣನಾಯೇಕು. ಶಿಷ್ಯನ ಪ್ರಾಮಾಣಿಕ ಹಂಬಲ ಗುರುವಿಂಗೆ ಶಿಷ್ಯನಲ್ಲಿ ಕಾಣೆಕು. ಈ ಶ್ಲೋಕಲ್ಲಿ ಕುರುಡು ಅನುಕರಣೆ ಮತ್ತು ಅಸಂಬದ್ಧ ಪ್ರಶ್ನಿಸುವದು (ಚರ್ಚಿಸುವದು) ಎರಡೂ ದಂಡ ಹೇಳಿ ಉಲ್ಲೇಖ ಆಯ್ದು. ಶಿಷ್ಯನಾದವ° ಗುರುವಿನಲ್ಲಿ ವಿಧೇಯತೆಯ ತೋರ್ಸಿಗೊಂಡು, ಗುರುಶುಶ್ರೂಷೆಯಮಾಡಿ, ಗುರುವಿನ ಕರುಣೆಗೆ ಪಾತ್ರನಾಗಿ, ಅವನತ್ರೆ ವಿಚಾರ ಮಂಥನ ಮಾಡಿಯಪ್ಪಗ ಸ್ಪಷ್ಟವಾದ ಅರಿವು ಪಡವಲಾವ್ತು. ಹಾಂಗೆ ಮಾಡಿರೆ ಜ್ಞಾನ ಮತ್ತು ವಿಚಾರಂಗಳ ವಿನಿಮಯ ಪರಿಪೂರ್ಣ ಆವುತ್ತು.
ಶ್ಲೋಕ
ಯಜ್ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ ।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾsತ್ಮನ್ಯಥೋ ಮಯಿ ॥೩೫॥
ಪದವಿಭಾಗ
ಯತ್ ಜ್ಞಾತ್ವಾ ನ ಪುನಃ ಮೋಹಮ್ ಏವಮ್ ಯಾಸ್ಯಸಿ ಪಾಂಡವ । ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಯಾಸ್ಯಸಿ ಪಾಂಡವ ॥
ಅನ್ವಯ
ಹೇ ಪಾಂಡವ!, ಯತ್ ಜ್ಞಾತ್ವಾ ತ್ವಂ ಪುನಃ ಏವಂ ಮೋಹಂ ನ ಯಾಸ್ಯಸಿ, ಯೇನ ಭೂತಾನಿ ಅಶೇಷೇಣ ಆತ್ಮನಿ ಅಥೋ ಮಯಿ ದ್ರಕ್ಷ್ಯಸಿ ।
ಪ್ರತಿಪದಾರ್ಥ
ಹೇ ಪಾಂಡವ! – ಏ ಪಾಂಡುಪುತ್ರನೇ!, ಯತ್ – ಯಾವುದರ, ಜ್ಞಾತ್ವಾ – ತಿಳ್ಕೊಂಡು, ತ್ವಮ್ – ನೀನು, ಪುನಃ – ಮತ್ತೆ, ಏವಂ – ಹೀಂಗೆ (ಈ ರೀತಿ), ಮೋಹಂ – ಭ್ರಾಂತಿಯ, ನ ಯಾಸ್ಯಸಿ – ಹೊಂದುತ್ತಿಲ್ಲೆ , ಯೇನ – ಏವುದರಿಂದ, ಭೂತಾನಿ – ಜೀವಿಗಳ, ಅಶೇಷೇಣ – ಶೇಷರಹಿತವಾಗಿ ( ಅಶೇಷವಾಗಿ, ಎಲ್ಲಾ), ಆತ್ಮನಿ – ಪರಮಾತ್ಮನಲ್ಲಿ, ಉಥ ಉ – ಅಥವಾ ಬೇರೆ ಶಬ್ದಂಗಳಲ್ಲಿ, ಮಯಿ – ಎನ್ನಲ್ಲಿ, ದ್ರಕ್ಷ್ಯಸಿ – ನೋಡುವೆ(ಕಾಂಬೆ).
ಅನ್ವಯಾರ್ಥ
ಸಾಕ್ಷಾತ್ಕಾರ ಪಡದ ಆತ್ಮನಿಂದ ನಿಜವಾದ ಜ್ಞಾನವ ನೀನು ಪಡದರೆ ಮತ್ತೆ ಇಂತಹ ಮೋಹಕ್ಕೆ ಎಂದಿಂಗೂ ಸಿಲುಕುತ್ತಿಲ್ಲೆ. ಎಂತಕೆ ಹೇಳಿರೆ, ಈ ಜ್ಞಾನವು ಲಭ್ಯ ಅಪ್ಪಗ ಎಲ್ಲ ಜೀವಿಗೊ ಪರಮ ಪ್ರಭುವಿನ (ಪರಮಾತ್ಮನ) ಅಂಶಂಗಳೇ. ಅವೆಲ್ಲವೂ ಎನ್ನವು ಎಂಬುದರ ನೀನು ತಿಳುಕ್ಕೊಳ್ಳುತ್ತೆ.
ತಾತ್ಪರ್ಯ / ವಿವರಣೆ
ಆತ್ಮಸಾಕ್ಷಾತ್ಕಾರ ಪಡದ ವ್ಯಕ್ತಿಯು ವಸ್ತುಗಳ ನಿಜವಾದ ಸ್ವರೂಪವ ತಿಳುದಿರುತ್ತ°. ಅಂತಹ ವ್ಯಕ್ತಿಂದ ಜ್ಞಾನವ ಪಡವದರ ಫಲ ಹೇಳಿರೆ ಎಲ್ಲ ಜೀವಿಗಳೂ ದೇವೋತ್ತಮ ಪರಮ ಪುರುಷ ಭಗವಂತನ ವಿಭಿನ್ನಾಂಶ ಎಂಬ ಅರಿವು ದೊರಕ್ಕುತ್ತು. ಭಗವಂತನಿಂದ ಪ್ರತೇಕವಾಗಿಪ್ಪ ಅಸ್ತಿತ್ವದ ಕಲ್ಪನೆಗೆ ‘ಮಾಯಾ’ (ಮಾ = ಅಲ್ಲ, ಯಾ = ಇದು) ಹೇಳಿ ಹೆಸರು. ಒಂದು ವಸ್ತುವಿನ ಚೂರು ಚೂರುಮಾಡಿ ಹಂಚಿರೆ ಅದು ಸ್ವಂತದ ಮೂಲವ್ಯಕ್ತಿತ್ವವ ಕಳಕ್ಕೊಳ್ಳುತ್ತು ಎಂಬುದು ಐಹಿಕ ಜಗತ್ತಿಲ್ಲಿ ಕಾಂಬ ವಿಷಯ. ಆದರೆ ಪರಾತ್ಪರ (ಪರಾತ್ ಅಪರ) ಹೇಳಿರೆ ಒಂದಕ್ಕೆ ಒಂದು ಸೇರಿದರೂ ಒಂದೇ, ಮತ್ತು ಒಂದರಿಂದ ಒಂದು ಕಳದರೂ ಒಂದೇ . ಇದು ಮಾಯಾವಾದಿಗೊಕ್ಕೆ ಅರ್ಥ ಆಗ. ಆಧ್ಯಾತ್ಮಿಕ ವಿಜ್ಞಾನಲ್ಲಿ ಸಾಕಷ್ಟು ತಿಳುವಳಿಕೆ ಇಲ್ಲದಿಪ್ಪದರಿಂದ ಮಾಯಾ ಆವರಿಸಿದ್ದು ಹೇಳೆಕ್ಕಾವ್ತು. ಆದ್ದರಿಂದ ನಾವು ನಿಜ ಸ್ವರೂಪವ ಅರ್ತುಗೊಂಬಲೆ ಅಸಮರ್ಥರಾವ್ತು. ನಾವು ಕೃಷ್ನನಿಂದ ಬೇರೆ ಹೇಳಿ ಯೋಚಿಸುತ್ತು. ಪ್ರಪಂಚದ ಎಲ್ಲ ಜೀವಿಗೊ ಭಗವಂತನ ವಿಭಿನ್ನಾಂಶ ಹೇಳಿ ಆದಮತ್ತೆ ಆಧ್ಯಾತ್ಮಿಕವಾಗಿ ನಾವು ಅವನಿಂದ ಭಿನ್ನ ಅಲ್ಲ ಹೇಳಿ ಆತು. ಭಗವಂತನ ತೃಪ್ತಿಪಡುಸಲೇ ನಾವಿಪ್ಪದು. ಮಾಯೆಯ ದೆಸೆಂದಾಗಿ ಅರ್ಜುನಂಗೆ ತನ್ನ ಬಂಧುಗಳ ಹತ್ರೆ ದೈಹಿಕ ಬಾಂಧವ್ಯವೇ ಮುಖ್ಯ ಆಗಿಹೋತು. ಕೃಷ್ಣಪ್ರಜ್ಞೆಲ್ಲಿ ಆಧಾತ್ಮಿಕ ಸೇವೆಲಿ ತೊಡಗಿದವ ಈ ಮಾಯೆಂದ ಮುಕ್ತನಾವುತ್ತ°. ಭೌತಿಕದ ಕಲ್ಪನೆಂದ ತಮ್ಮ ಸ್ವಂತ ಅಸ್ತಿತ್ವದ ಕಲ್ಪನೆಯನ್ನೆ ಮರದು ಬಿಡುತ್ತವು. ಆದರೆ ಈ ರೀತಿ ಭ್ರಮೆಗೊಂಡ ಜೀವಿಗೊ ಕೃಷ್ಣಪ್ರಜ್ಞೆಲಿ ನೆಲೆಗೊಂಡಾರೆ ಅವು ಮತ್ತೆ ಎಂದೂ ಮುಖ್ಯಮಾರ್ಗ ತಪ್ಪಲೆ ಸಾಧ್ಯ ಇಲ್ಲೆ ಹೇಳ್ವದು ದೃಢ.
ಬನ್ನಂಜೆಯವು ವಿವರುಸುತ್ತವು – ಜ್ಞಾನವ ಗಳುಸೆಕ್ಕಾರೆ ಜ್ಞಾನಿಗಳ ಬೆನ್ನು ಹಿಡಿಯೆಕು. ಸತ್ವದ ಸಾಕ್ಷಾತ್ಕಾರ ಮಾಡಿಕೊಂಡ ತತ್ತ್ವದರ್ಶಿಗಳಿಂದ ಜ್ಞಾನವ ಪಡೆ ಹೇಳಿ ಭಗವಂತನ ಉಪದೇಶ. ಜ್ಞಾನ ಹೇಳ್ತದು ಕೇವಲ ಪುಸ್ತಕ ಓದುವದರಿಂದ ಬತ್ತಿಲ್ಲೆ. ಅದು ನವಗೆ ಸಾಕ್ಷಾತ್ಕಾರ ಆಯೇಕು. ಸತ್ಯ ಹೇಳುವದು ನವಗೆ ಸ್ಫುರಣ ಆಯೇಕು. ಎಲ್ಲಾ ವೇದ ಮಂತ್ರಂಗೊ ಋಷಿಗೊಕ್ಕೆ ಅಂತರಂಗಲ್ಲಿ ಸ್ಫುರಣ ಆಗಿತ್ತಿದ್ದು. ನ್ಯೂಟನ್ ಗೆ ಗುರುತ್ವಾಕರ್ಷಣ ಶಕ್ತಿಯ ವಿಚಾರ ಹೊಳದ ಹಾಂಗೆ. ಈ ಕಾರಣಕ್ಕೆ ಮದಾಲು ನಾವು ಸತ್ಯಕ್ಕೆ ಶರಣಾಯೆಕು. ಸತ್ಯವ ಕಂಡುಗೊಂಡ ತತ್ತ್ವಜ್ಞಾನಿಗಳ ಅನುಸರುಸೆಕು.
ಇಲ್ಲಿ ‘ಪ್ರಣಿಪಾತ’ ಹೇಳಿರೆ ಅಷ್ಟಾಂಗ ನಮನ- ಎಂಟು ಅಂಗಂಗಳ ನಮಸ್ಕಾರ. ತಲೆ, ಎದೆ, ಕೈ, ಕಾಲು ಎಲ್ಲವನ್ನೊ ನೆಲಕ್ಕೆ ತಾಗಿಸಿ ಭಕ್ತಿಭಾವಂದ, ಸ್ತೋತ್ರ-ವಚನ ಮುಖೇನ, ಮನಸ್ಸಿಲ್ಲಿ ಅಪಾರ ಶ್ರದ್ಧೆ ಗೌರವ ಇರುಸಿ ಮಾಡುವ ನಮಸ್ಕಾರ. ಹೀಂಗೆ ಶರಣಾಗಿ ಕೆದಕಿ ಕೆದಕಿ ಪರಿಪರಿಯಾಗಿ ಕೇಳಿ (ಚರ್ಚಿಸಿ) ತಿಳುಕ್ಕೊ ಹೇಳಿ ಹೇಳ್ತ ಭಗವಂತ°. ತತ್ತ್ವದರ್ಶಿಗಳ ಸೇವೆಮಾಡಿ ಅವರಿಂದ ಜ್ಞಾನಗಳುಸು, ಅದರಿಂದ ಕರ್ಮವ ಮಾಡು ಹೇಳಿ ಅರ್ಜುನನ ಮೂಲಕ ನವಗೆ ಭಗವಂತ ಕೊಟ್ಟ ಸಂದೇಶ.
ಒಂದರಿ ತತ್ತ್ವದರ್ಶಿಗಳಿಂದ ಜ್ಞಾನವ ಪಡಕ್ಕೊಂಡರೆ ಮುಂದೆ ಮೋಹಕ್ಕೆ ಅವಕಾಶ ಇಲ್ಲೆ. ಅದು ಸಂಪೂರ್ಣ ಜ್ಞಾನ. ಅದರಿಂದ ಮತ್ತೆ ವಿಚಲಿತನಪ್ಪಲೆ ಗೊಂದಲಕ್ಕೆ ಅವಕಾಶ ಇರ್ತಿಲ್ಲೆ. ಇಲ್ಲಿ ಈಗ ಅರ್ಜುನಂಗೆ ಕಾಡುತ್ತ ಇಪ್ಪದು ಜ್ಞಾನವ ಮುಚ್ಚಿಪ್ಪ ಮೋಹ (ಮಾಯಾ) ಪರದೆ. ಅದಕ್ಕಾಗಿ ಕೃಷ್ಣ° ಅರ್ಜುನನ ‘ಪಾಂಡವ’ ಹೇಳಿ ದೆನಿಗೊಂಡು ಎಚ್ಚರುಸುತ್ತ. ಇಲ್ಲಿ ‘ಪಂಡಾ’ ಹೇಳಿರೆ ಜ್ಞಾನ (ಪಂಡಾ ಉಳ್ಳವ°- ‘ಪಂಡಿತ’). ಪಾಂಡವ ಹೇಳಿರೆ ಜ್ಞಾನರಾಶಿಯ ಪಡದವ. ಇನ್ನು ಪಾಂಡು ಹೇಳಿರೆ ‘ಬೆಳಿ ಬಣ್ಣ’. ಅದು ಸಾತ್ವಿಕತೆಯ ಸಂಕೇತ. “ನೀನು ಸ್ವಯಂ ಜ್ಞಾನಿ ಮತ್ತು ಸಾತ್ವಿಕ°” ಹೇಳಿ ಇಲ್ಲಿ ಸೂಚಕ.
ಒಂದರಿ ಸತ್ಯದ ಅರಿವು ಆತುಕಂಡರೆ ಅದರಿಂದ ಮೋಹದ ಪಾಶ ಕಳಚಿಗೊಳ್ಳುತ್ತು. ಅದು ಮತ್ತೆ ಪುನಃ ಬಪ್ಪ ಸಂಭವ ಇಲ್ಲೆ. ಜ್ಞಾನಂದ ಕರ್ಮ ಮಾಡೆಕು, ತತ್ತ್ವಜ್ಞಾನಿಂಗಳಿಂದ ಜ್ಞಾನ ಪಡೆಕು. ಅದರಿಂದ ಮೋಕ್ಷ ಸಾಧ್ಯ. ಆದರೆ ಈ ವಿಷಯ ಗೊಂತಪ್ಪ ಮದಲು ಮಾಡಿದ ಪಾಪಂಗಳ ಗತಿ ಎಂತರ ? –
ಶ್ಲೋಕ
ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ ।
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ ॥೩೬॥
ಪದವಿಭಾಗ
ಅಪಿ ಚೇತ್ ಅಸಿ ಪಾಪೇಭ್ಯಃ ಸರ್ವೇಭ್ಯಃ ಪಾಪ-ಕೃತ್ತಮಃ । ಸರ್ವಮ್ ಜ್ಞಾನ-ಪ್ಲವೇನ ಏವ ವೃಜಿನಮ್ ಸಂತರಿಷ್ಯಸಿ ॥
ಅನ್ವಯ
ತ್ವಂ ಸರ್ವೇಭ್ಯಃ ಪಾಪೇಭ್ಯಃ ಅಪಿ ಪಾಪ-ಕೃತ್ತಮಃ ಅಸಿ ಚೇತ್ ಸರ್ವಂ ವೃಜಿನಂ ಜ್ಞಾನ-ಪ್ಲವೇನ ಏವ ಸಂತರಿಷ್ಯಸಿ ॥
ಪ್ರತಿಪದಾರ್ಥ
ತ್ವಮ್ – ನೀನು, ಸರ್ವೇಭ್ಯಃ ಪಾಪೇಭ್ಯಃ ಅಪಿ – ಎಲ್ಲ ಪಾಪಿಗಳಿಂದಲೂ, ಪಾಪ-ಕೃತ್ತಮಃ ಅಸಿ – ಮಹಾಪಾಪಿ ಆಗಿದ್ದರೂ, ಚೇತ್ – ಆದರೆ, ಸರ್ವಂ ವೃಜಿನಂ – ಅಂತಹ ಎಲ್ಲ ಪಾಪಪೂರ್ಣ ಪ್ರತಿಕ್ರಿಯೆಂಗಳ ಕ್ಲೇಶಸಾಗರವ, ಜ್ಞಾನ-ಪ್ಲವೇನ – ದಿವ್ಯಜ್ಞಾನದ ನೌಕೆಂದ, ಏವ – ಖಂಡಿತವಾಗಿಯೂ, ಸಂತರಿಷ್ಯಸಿ – ಪೂರ್ತಿಯಾಗಿ ದಾಂಟುತ್ತೆ.
ಅನ್ವಯಾರ್ಥ
ಪಾಪಿಗಳಲ್ಲಿ ಪರಮಪಾಪಿ ಹೇಳಿ ಪರಿಗಣಿತನಾಗಿದ್ದರೂ ನೀನು ಆಧ್ಯಾತ್ಮಿಕ ಜ್ಞಾನದ ದೋಣಿಯ ಮೂಲಕ ದುಃಖ ಸಾಗರವ ದಾಂಟುವವನಾವುತ್ತೆ.
ತಾತ್ಪರ್ಯ / ವಿವರಣೆ
ಮನುಷ್ಯಂಗೆ ಕೃಷ್ಣ ಸಂಬಂಧಲ್ಲಿ ತನ್ನ ನಿಜಸ್ವರೂಪದ ಅರಿವು ಎಷ್ಟು ಒಳೆದು ಹೇಳಿರೆ ಅದು ಅವನ ಅಜ್ಞಾನಸಾಗರಲ್ಲಿ ನಡವ ಹೋರಾಟಂದ ಮೇಲಕ್ಕೆ ಎತ್ತುತ್ತು. ದೇವೋತ್ತಮ ಪರಮ ಪುರುಷನಿಂದ ಬಂದ ಪರಿಪೂರ್ಣಜ್ಞಾನವು ಮುಕ್ತಿಮಾರ್ಗ. ಕೃಷ್ಣಪ್ರಜ್ಞೆಯ ನಾವೆಯು ಬಹು ಸರಳವಾದ್ದು ಮತ್ತು ಭವ್ಯವಾದ್ದು. “ನೀನು ನಿನ್ನ ಕಾಲದ ಪರಮ ಪಾಪಿಯಾಗಿದ್ದರೂ ಕೂಡಾ, ಒಂದರಿ ನಿನಗೆ ಭಗವಂತನ ನಿಜ ಅರಿವು ಮೂಡಿದರೆ ನೀನು ಗೆದ್ದ ಹಾಂಗೆ” ಹೇಳಿ ಹೇಳುತ್ತ ಭಗವಂತ°. ಎಂತಕೆ ಹೇಳಿರೆ, ತಿಳುವಳಿಕೆ ಬಂದಮತ್ತೆ ಜ್ಞಾನದ ಮಾರ್ಗಲ್ಲಿ ಸಾಗಿದರೆ ಹಿಂದಾಣ ಯಾವ ಪಾಪವೂ ಅಂಟುತ್ತಿಲ್ಲೆ, ಕಳಚಿ ಹೋವುತ್ತು. ಜ್ಞಾನ ಹೇಳುವದು ಪಾಪದ ಕಡಲಿನ ದೋಣಿಯ ಹಾಂಗೆ. ಅದು ನಮ್ಮ ಪಾರುಮಾಡಿ ಆಚ ದಡವ ಸೇರುಸುತ್ತು. ಪಾಪದ ಕಡಲ ದಾಂಟಲೆ ಇಪ್ಪ ಒಂದೇ ಒಂದು ಸಾಧನ ಜ್ಞಾನ . ಇಂತಹ ದೊಡ್ಡ ಭರವಸೆಯ ಭಗವಂತ° ಇಲ್ಲಿ ನವಗೆ ಕೊಟ್ಟಿದ°. ಬರೇ ಜ್ಞಾನ ಸಂಪಾದನೆ ಮಾಡಿರೆ ಸಾಲ. ಅದರ ಯಥಾವತ್ ಜೀವನಲ್ಲಿ ಪಾಲುಸೆಕು. ಇಲ್ಲದ್ರೆ ಅದು ಅಜ್ಞಾನವೇ ಸರಿ. ಜೀವನಲ್ಲಿ ಅನುಸಂಧಾನ ಮಾಡಿಗೊಂಡು ಮೋಕ್ಷಮಾರ್ಗಲ್ಲಿ ನಡೆಕು ಹೇಳುವದು ತಾತ್ಪರ್ಯ.
ಶ್ಲೋಕ
ಯಥೈಧಾಂಸಿ ಸಮಿದ್ಧೋsಗ್ನಿಃ ಭಸ್ಮಸಾತ್ ಕುರುತೇsರ್ಜುನ ।
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ॥೩೭॥
ಪದವಿಭಾಗ
ಯಥಾ ಏಧಾಂಸಿ ಸಮಿದ್ಧಃ ಅಗ್ನಿಃ ಭಸ್ಮಸಾತ್ ಕುರುತೇ ಅರ್ಜುನ । ಜ್ಞಾನ-ಅಗ್ನಿಃ ಸರ್ವ-ಕರ್ಮಾಣಿ ಭಸ್ಮ ಸಾತ್ ಕುರುತೇ ತಥಾ ॥
ಅನ್ವಯ
ಹೇ ಅರ್ಜುನ!, ಯಥಾ ಸಮಿದ್ಧಃ ಅಗ್ನಿಃ ಏಧಾಂಸಿ ಭಸ್ಮಸಾತ್ ಕುರುತೇ, ತಥಾ ಜ್ಞಾನ-ಅಗ್ನಿಃ ಸರ್ವ-ಕರ್ಮಾಣಿ ಭಸ್ಮಸಾತ್ ಕುರುತೇ ।
ಪ್ರತಿಪದಾರ್ಥ
ಹೇ ಅರ್ಜುನ! – ಏ ಅರ್ಜುನ!,ಯಥಾ – ಹೇಂಗೆ, ಸಮಿದ್ಧಃ – ಉರಿಯುತ್ತಿಪ್ಪ, ಅಗ್ನಿಃ – ಅಗ್ನಿ, ಏಧಾಂಸಿ – ಕಟ್ಟಿಗೆಗಳ, ಭಸ್ಮಸಾತ್ – ಬೂದಿಯಾಗಿ, ಕುರುತೇ – ಮಾಡುತ್ತೋ, ತಥಾ – ಹಾಂಗೇ, ಜ್ಞಾನ-ಅಗ್ನಿಃ – ಜ್ಞಾನಾಗ್ನಿಯು, ಸರ್ವ-ಕರ್ಮಾಣಿ – ಐಹಿಕ ಕಾರ್ಯಂಗಳ ಎಲ್ಲ ಪ್ರತಿಕ್ರಿಯೆಂಗಳ, ಭಸ್ಮಸಾತ್ – ಬೂದಿಯಾಗಿ, ಕುರುತೇ – ಮಾಡುತ್ತು,
ಅನ್ವಯಾರ್ಥ
ಏ ಅರ್ಜುನ!, ಪ್ರಜ್ವಲಿಸುತ್ತಿಪ್ಪ ಕಿಚ್ಚು ಸೌದಿಯ ಹೇಂಗೆ ಬೂದಿ ಮಾಡುತ್ತೋ, ಹಾಂಗೆಯೇ, ಜ್ಞಾನಾಗ್ನಿಯೆಂಬ ಅಗ್ನಿಯು ಎಲ್ಲ ಐಹಿಕ ಕರ್ಮಂಗಳ ಪ್ರತಿಕ್ರಿಯೆಗಳ ಸುಟ್ಟು ಬೂದಿಮಾಡುತ್ತು.
ತಾತ್ಪರ್ಯ / ವಿವರಣೆ
ಆತ್ಮ ಮತ್ತು ಪರಮಾತ್ಮ ಇವುಗಳ ಸಂಬಂಧವಾದ ಪರಿಪೂರ್ಣವಾದ ಜ್ಞಾನವ ಇಲ್ಲಿ ಅಗ್ನಿಗೆ ಹೋಲಿಸಿದ್ದು. ಈ ಅಗ್ನಿಯು ಎಲ್ಲ ಪಾಪ ಕರ್ಮಂಗಳ ಪ್ರತಿಕ್ರಿಯೆಗಳ ಸುಟ್ಟುಹಾಕುತ್ತದಲ್ಲದೆ ಎಲ್ಲ ಪುಣ್ಯ ಕರ್ಮಂಗಳನ್ನೂ ಸುಟ್ಟು ಬೂದಿ ಮಾಡುತ್ತು. ಕರ್ಮದ ಪ್ರತಿಕ್ರಿಯೆಗಳ ಹಲವು ಹಂತಂಗೊ ಇದ್ದು. ರೂಪಗೊಳ್ಳುತ್ತಿಪ್ಪ ಕರ್ಮದ ಪ್ರತಿಕ್ರಿಯೆ, ಫಲಿಸುತ್ತಿಪ್ಪ ಕರ್ಮದ ಪ್ರತಿಕ್ರಿಯೆ, ಆಗಲೇ ಸಾಧಿಸಿದ ಕರ್ಮದ ಪ್ರತಿಕ್ರಿಯೆ ಮತ್ತು ಕಾರಣಪೂರ್ವಕ ಕರ್ಮದ ಪ್ರತಿಕ್ರಿಯೆ. ಆದರೆ, ಜೀವಿಯ ನಿಜಸ್ವರೂಪದ ಜ್ಞಾನವು ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತು. ಮನುಷ್ಯಂಗೆ ಸಂಪೂರ್ಣ ಜ್ಞಾನವು ಲಭ್ಯವಾದಪ್ಪಗ ಕರ್ಮಂಗಳ ಎಲ್ಲ ಪ್ರತಿಕ್ರಿಯೆಗಳೂ ಸುಟ್ಟುಹೋವುತ್ತು.
ಬನ್ನಂಜೆ ಹೇಳುತ್ತವು – ಇಲ್ಲಿ ಕೃಷ್ಣ° ‘ಅರ್ಜುನ’ ಹೇಳಿ ಹೇಳಿದ್ದ°. ಅರ್ಜುನ ಹೇಳಿರೆ ‘ಅರ್ಜನ’ ಮಾಡಿದವ°, ಜ್ಞಾನವೆಂಬ ಬೆಂಕಿ ಉಳ್ಳವ°. ಈ ರೀತಿಯ ಸಂಬೋಧನೆಂದ ಕೃಷ್ಣ° ಅರ್ಜುನನ ಜ್ಞಾನಕ್ಕೆ ಆವರಿಸಿಪ್ಪ ಮೋಹದ ಪರದೆಯ ಸರುಸುತ್ತಾ ಇದ್ದ°.
ಶ್ಲೋಕ
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ॥೩೮॥
ಪದವಿಭಾಗ
ನ ಹಿ ಜ್ಞಾನೇನ ಸದೃಶಮ್ ಪವಿತ್ರ ಇಹ ವಿದ್ಯತೇ । ತತ್ ಸ್ವಯಮ್ ಯೋಗ-ಸಂಸಿದ್ಧಃ ಕಾಲೇನ ಆತ್ಮನಿ ವಿಂದತಿ ॥
ಅನ್ವಯ
ಇಹ ಜ್ಞಾನೇನ ಸದೃಶಂ ಪವಿತ್ರಂ ನ ವಿದ್ಯತೇ ಹಿ । ತತ್ ಜ್ಞಾನಂ ಸ್ವಯಂ ಯೋಗ-ಸಂಸಿದ್ಧಃ ಕಾಲೇನ ಆತ್ಮನಿ ವಿಂದತಿ ।
ಪ್ರತಿಪದಾರ್ಥ
ಇಹ – ಈ ಜಗತ್ತಿಲ್ಲಿ, ಜ್ಞಾನೇನ ಸದೃಶಂ – ಜ್ಞಾನದೊಟ್ಟಿಂಗೆ ಸಮಾನವಾದ್ದು, ಪವಿತ್ರಂ – ಪವಿತ್ರವಾದ್ದು, ನ ವಿದ್ಯತೆ – ಇಪ್ಪಲೇ ಇಲ್ಲೆ, ಹಿ – ಖಂಡಿತವಾಗಿಯೂ, ತತ್ ಜ್ಞಾನಮ್ – ಆ ಜ್ಞಾನವ, ಸ್ವಯಮ್ – ಸ್ವತಃ, ಯೋಗ-ಸಂಸಿದ್ಧಃ – ಭಕ್ತಿಲಿ ಪರಿಪಕ್ವನಾದವ°, ಕಾಲೇನ – ಕಾಲಕ್ರಮಲ್ಲಿ, ಆತ್ಮನಿ – ತನ್ನಲ್ಲಿಯೇ, ವಿಂದತಿ – ಅನುಭವಿಸುತ್ತ°.
ಅನ್ವಯಾರ್ಥ
ಈ ಜಗತ್ತಿಲ್ಲಿ ಆಧ್ಯಾತ್ಮಿಕ ಜ್ಞಾನದಷ್ಟು ಭವ್ಯವಾದ್ದು ಮತ್ತು ಪರಿಶುದ್ಧವಾದ್ದು ಬೇರೆ ಯಾವುದೂ ಇಲ್ಲೆ. ಇಂತಹ ಜ್ಞಾನವು ಎಲ್ಲ ಅನುಭವದ ಪರಿಪಕ್ವ ಫಲ. ಭಕ್ತಿಪೂರ್ವಕ ಸೇವೆಯ ಆಚರಣೆಲಿ ನಿಪುಣನಾದವ° ಕಾಲಕ್ರಮಲ್ಲಿ ತನ್ನಲ್ಲಿಯೇ ಈ ಜ್ಞಾನವ ಸವಿಯುತ್ತ°.
ತಾತ್ಪರ್ಯ / ವಿವರಣೆ
ನಾವು ದಿವ್ಯಜ್ಞಾನದ ಕುರಿತು ಮಾತಾಡುವಾಗ ಆಧ್ಯಾತ್ಮ ಜ್ಞಾನಕ್ಕೆ ಸಂಬಂಧಿಸಿ ಆವ್ತು ಮಾತಾಡ್ತಾ ಇಪ್ಪದು. ಆದ್ದರಿಂದ ದಿವ್ಯಜ್ಞಾನದಷ್ಟು ಭವ್ಯವಾದ್ದು ಮತ್ತು ಪರಿಶುದ್ಧವಾದ್ದು ಬೇರೆಂತದೂ ಇಲ್ಲೆ. ಅಜ್ಞಾನವೇ ನಮ್ಮ ಬಂಧನಕ್ಕೆ ಕಾರಣ. ಜ್ಞಾನವೇ ನಮ್ಮ ಮುಕ್ತಿಗೆ ಕಾರಣ. ಈ ಅರಿವು ಭಕ್ತಿಪೂರ್ವಕ ಸೇವೆಯ ಪರಿಪಕ್ವ ಫಲ. ದಿವ್ಯಜ್ಞಾನಲ್ಲಿ ನೆಲೆಸಿದವ ಶಾಂತಿಗಾಗಿ ಬೇರೆಲ್ಲೂ ಹುಡುಕ್ಕೆಕ್ಕಾವ್ತಿಲ್ಲೆ. ಅವ° ತನ್ನಲ್ಲಿಯೇ ಶಾಂತಿಯ ಸವಿಯುತ್ತ°.
ಜ್ಞಾನಕ್ಕೆ ಸಾಟಿಯಾದ ಪಾವನವಾದ ವಿಷಯ ಇಲ್ಲಿ ಇನ್ನೊಂದಿಲ್ಲೆ. ಸಾಧನೆಂದ ಪಳಗಿದವು ತಕ್ಕ ಕಾಲಲ್ಲಿ ಅದರ ಅನುಭೂತಿಯ ಪಡೆತ್ತವು. ಜ್ಞಾನ ಹೇಳ್ವದು ಮಹಾಪವಿತ್ರ. ಅದಕ್ಕೆ ಸಮನಾದ್ದು ಬೇರೆ ಯಾವುದೂ ಇಲ್ಲೆ. ಎಂತಕೆ ಹೇಳಿರೆ, ಜ್ಞಾನ ಹೇಳಿರೆ ಭಗವಂತ°. ಆದ್ದರಿಂದ “ಜ್ಞಾನ ಮಾರ್ಗವ ಹಿಡಿ, ಕಾಲ ಪರಿಪಕ್ವ ಅಪ್ಪಗ ನೀನು ಸಿದ್ಧಿಯ ಪಡದೇ ಪಡೆತ್ತೆ” ಹೇಳಿ ಅರ್ಜುನಂಗೆ ಶ್ರೀಕೃಷ್ಣನ ಭರವಸೆ.
ಶ್ಲೋಕ
ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಂ ಅಚಿರೇಣಾಧಿಗಚ್ಛತಿ ॥೩೯॥
ಪದವಿಭಾಗ
ಶ್ರದ್ಧಾವಾನ್ ಲಭತೇ ಜ್ಞಾನಮ್ ತತ್ ಪರಃ ಸಂಯತ-ಇಂದ್ರಿಯಃ । ಜ್ಞಾನಮ್ ಲಬ್ಧ್ವಾ ಶಾಂತಿಮ್ ಅಚಿರೇಣ ಅಧಿಗಚ್ಛತಿ ॥
ಅನ್ವಯ
ಶ್ರದ್ಧಾವಾನ್, ತತ್ಪರಃ, ಸಂಯತ-ಇಂದ್ರಿಯಃ ಜ್ಞಾನಂ ಲಭತೇ । ಜ್ಞಾನಂ ಲಬ್ಧ್ವಾ ಅಚಿರೇಣ ಪರಾಂ ಶಾಂತಿಮ್ ಅಧಿಗಚ್ಛತಿ ।
ಪ್ರತಿಪದಾರ್ಥ
ಶ್ರದ್ಧಾವಾನ್ – ಶ್ರದ್ಧಾವಂತ°, ತತ್ ಪರಃ – ಅದಕ್ಕೆ ಬಹು ಆಸಕ್ತನಾಗಿ, ಸಂಯತ-ಇಂದ್ರಿಯಃ – ನಿಯಂತ್ರಿತವಾದ ಇಂದ್ರಿಯಂಗಳುಳ್ಳವನಾಗಿ, ಜ್ಞಾನಮ್ – ಜ್ಞಾನವ, ಲಭತೇ – ಹೊಂದುತ್ತ°, ಜ್ಞಾನಮ್ – ಜ್ಞಾನವ, ಲಬ್ಧ್ವಾ- ಪಡದು, ಅಚಿರೇಣ – ಅತಿಶೀಘ್ರವಾಗಿ, ಪರಾಮ್ – ದಿವ್ಯವಾದ, ಶಾಂತಿಮ್ – ಶಾಂತಿಯ, ಅಧಿಗಚ್ಛತಿ – ಪಡೆತ್ತ°.
ಅನ್ವಯಾರ್ಥ
ದಿವ್ಯಜ್ಞಾನಕ್ಕೆ ಮುಡಿಪಾದ ಮತ್ತು ಇಂದ್ರಿಯ ನಿಗ್ರಹ ಮಾಡಿದ ಶ್ರದ್ಧಾವಂತಂಗೆ ಇಂತಹ ಜ್ಞಾನವ ಪಡೆವ ಅರ್ಹತೆ ಇರುತ್ತು. ಅದರ ಪಡದು ಅವ° ಶೀಘ್ರವಾಗಿ ಪರಮ ಆಧ್ಯಾತ್ಮಿಕ ಶಾಂತಿಯ ಪಡೆತ್ತ°.
ತಾತ್ಪರ್ಯ / ವಿವರಣೆ
ಕೃಷ್ಣಪ್ರಜ್ಞೆಲಿ ಇಂತಹ ಜ್ಞಾನವ, ಕೃಷ್ಣನಲ್ಲಿ ದೃಢನಂಬಿಕೆಯಿಪ್ಪ ಶ್ರದ್ಧಾವಂತ° ಪಡಕ್ಕೊಂಬಲೆ ಸಮರ್ಥನಾವುತ್ತ°. ಕೃಷ್ಣಪ್ರಜ್ಞೆಲಿ ಕರ್ಮ ಮಾಡಿರೆ ಸಾಕು, ತಾನು ಉನ್ನತೋನ್ನತ ಪರಿಪೂರ್ಣತೆಯ ಪಡೆಯಬಲ್ಲೆ ಹೇಳಿ ಯೋಚಿಸುವವನೇ ಶ್ರದ್ಧಾವಂತ°. ಈ ಶ್ರದ್ಧೆಯ ಪಡಕ್ಕೊಂಬ ಮಾರ್ಗ ಭಕ್ತಿಪೂರ್ವಕ ಸೇವೆಯ ಮಾಡುವದು ಮತ್ತು ಭಗವತ್ ನಾಮ ಸಂಕೀರ್ತನೆ. ಇದು ಹೃದಯದ ಐಹಿಕ ಕೊಳೆಯ ತೊಳದು ಹಾಕುತ್ತು. ಇದಕ್ಕಿಂತ ಮದಲು ಮನುಷ್ಯ ಇಂದ್ರಿಯ ನಿಯಂತ್ರಿಸೆಕು. ಭಗವಂತನಲ್ಲಿ ನಿಷ್ಠೆ ಇರಿಸಿಗೊಂಡು, ಇಂದ್ರಿಯಂಗಳ ನಿಯಂತ್ರಣ ಮಾಡಿಗೊಂಡವ ಸುಲಭವಾಗಿ ಮತ್ತು ಶೀಘ್ರವಾಗಿ ಕೃಷ್ಣಪ್ರಜ್ಞೆಲಿ ಪರಿಪೂರ್ಣನಾವುತ್ತ°.
ನಮ್ಮಲ್ಲಿ ಅರಿವು (ಜ್ಞಾನ) ಮೂಡೆಕ್ಕಾರೆ ಬರೇ ಅಧ್ಯಯನ ಸಾಲ. ಒಂದು ವಿಷಯ ನವಗೆ ಮನವರಿಕೆ ಆಯೇಕು ಹೇಳಿ ಆದರೆ ಅದಕ್ಕೆ ಮದಾಲು ನವಗೆ ಅದರಲ್ಲಿ ಶ್ರದ್ಧೆ, ಆಸಕ್ತಿ, ನಂಬಿಕೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತೀ ಅಗತ್ಯ. ಆನು ತಿಳುಕ್ಕೊಂಡಿಪ್ಪದೇ ದೊಡ್ಡದು, ಅದಕ್ಕಿಂತ ದೊಡ್ಡದು ಇನ್ನು ಎಂತದೂ ಇಲ್ಲೆ ಹೇಳ್ವ ಅಹಂಕಾರವ ಮದಾಲು ಬಿಡೇಕು. ನವಗೆ ಎಂತದು ಗೊಂತಿಲ್ಲೆಯೋ ಅದು ಸತ್ಯವಾಗಿಪ್ಪಲೂ ಸಾಕು ಹೇಳ್ವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂದುಗೊಂಡಿಲ್ಲೆ. ಈ ಪ್ರಪಂಚಲ್ಲಿ ನವಗೆ ಗೊಂತಿಪ್ಪದು ಅತೀ ಚಿಕ್ಕ ಅಂಶ. ನವಗೆ ಗೊಂತಿಲ್ಲದ್ದೆ ಇಪ್ಪ ಸತ್ಯ ಇದ್ದು. ಅದರ ತಿಳಿವದೇ ಎನ್ನ ಲಕ್ಷ್ಯ ಹೇಳ್ವ ಶ್ರದ್ಧೆ ಬೇಕು. ನಮ್ಮ ಬದುಕಿನ ಗುರಿ ಜ್ಞಾನ ಮತ್ತು ಸತ್ಯದ ತಿಳುವಳಿಕೆ ಆಗಿರೆಕು. ಜ್ಞಾನದ ತೃಷೆಯ ಒಟ್ಟಿಂಗೆ ಇಂದ್ರಿಯ ಚಾಪಲ್ಯಕ್ಕೆ ಹಿಡಿತ ಇರಿಸಿಗೊಳ್ಳೆಕು. ಹೀಂಗೆ ಅಪ್ಪಗ ಅದರಿಂದ ಮಾನಸ ಸಾಕ್ಷಾತ್ಕಾರ, ಆತ್ಮ ಸಾಕ್ಷಾತ್ಕಾರ, ಅಕೇರಿಗೆ ಪರಮಾತ್ಮನ ಸಾಕ್ಷಾತ್ಕಾರ ಆವುತ್ತು. ಈ ನಡೆಂದ ಅಪರೋಕ್ಷ ಜ್ಞಾನ ಸಿದ್ಧಿಯಾವುತ್ತು. ಮತ್ತು ಇದರಿಂದ, ಸದಾ ಜ್ಞಾನಾನಂದಪೂರ್ಣನಾದ ಭಗವಂತನ ಪಡವಲೆ ಸಾಧ್ಯ ಹೇದು ಬನ್ನಂಜೆಯವರ ವ್ಯಾಖ್ಯಾನ.
ಶ್ಲೋಕ
ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ ।
ನಾಯಂ ಲೋಕೋsಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ ॥೪೦॥
ಪದವಿಭಾಗ
ಅಜ್ಞಃ ಚ ಅಶ್ರದ್ಧಧಾನಃ ಚ ಸಂಶಯ-ಆತ್ಮಾ ವಿನಶ್ಯತಿ । ನ ಅಯಮ್ ಲೋಕಃ ಅಸ್ತಿ ನ ಪರಃ ನ ಸುಖಮ್ ಸಂಶಯ-ಆತ್ಮನಃ ॥
ಅನ್ವಯ
ಅಜ್ಞಃ ಚ ಅಶ್ರದ್ಧಧಾನಃ ಚ ಸಂಶಯ-ಆತ್ಮಾ ವಿನಶ್ಯತಿ । ಸಂಶಯಾತ್ಮನಃ ಅಯಂ ಲೋಕಃ ನ ಅಸ್ತಿ, ನ ಪರಃ, ನ ಚ ಸುಖಂ ಅಸ್ತಿ ।
ಪ್ರತಿಪದಾರ್ಥ
ಅಜ್ಞಃ – ಪ್ರಮಾಣಿತ ಧರ್ಮಗ್ರಂಥಂಗಳ ಜ್ಞಾನ ಇಲ್ಲದ್ಧ ಮೂಢ°, ಚ – ಮತ್ತು, ಅಶ್ರದ್ಧಧಾನಃ – ಅಪೌರುಷೇಯ ಧರ್ಮಗ್ರಂಥಂಗಳಲ್ಲಿ ಶ್ರದ್ಧೆಯಿಲ್ಲದ್ದವ°, ಚ – ಕೂಡ, ಸಂಶಯ-ಆತ್ಮಾ – ಸಂಶಯಂಗಳ ಹೊಂದಿಪ್ಪ ವ್ಯಕ್ತಿಯು, ವಿನಶ್ಯತಿ – ಪತನಗೊಳ್ಳುತ್ತ° (ಅವನತಿಯ ಹೊಂದುತ್ತ°), ಸಂಶಯಾತ್ಮನಃ – ಸಂಶಯವೇ ಮೈಗೂಡಿಸಿಗೊಂಡಿಪ್ಪ ವ್ಯಕ್ತಿಗಳ (ಸಂಶಯವೇ ಆಗಿಪ್ಪ ವ್ಯಕ್ತಿಗೊಕ್ಕೆ ಹೇಳಿ ಅರ್ಥ ಇಲ್ಲಿ), ಅಯಮ್ ಲೋಕಃ – ಈ ಜಗತ್ತು, ನ ಅಸ್ತಿ – ಎಂದಿಂಗೂ ಇಲ್ಲೆ, ನ ಪರಃ – ಮುಂದಾಣ ಲೋಕವು ಇಲ್ಲೆ, ನ ಚ ಸುಖಂ – ಸುಖವು ಕೂಡ ಇಲ್ಲೆ.
ಅನ್ವಯಾರ್ಥ
ಅಜ್ಞಾನಿಗಳೂ ಶ್ರದ್ಧೆಯಿಲ್ಲದ್ದವೂ ಅಪೌರುಷೇಯ ಧರ್ಮಗ್ರಂಥಂಗಳಲ್ಲಿ ಸಂಶಯ ಪಡುತ್ತವು. ಇಂತವರಿಂಗೆ ಭಗವಂತನ ಪ್ರಜ್ಞೆ ಲಭ್ಯ ಆವುತ್ತಿಲ್ಲೆ. ಅವು ಅವನತಿಯನ್ನೇ ಹೊಂದುತ್ತವು. ಸಂಶಯಾತ್ಮನಾದವಂಗೆ ಈ ಲೋಕಲ್ಲಿಯೂ ಸುಖ ಇಲ್ಲೆ, ಮುಂದಾಣ ಲೋಕಲ್ಲಿಯೂ ಸುಖ ಇಲ್ಲೆ.
ತಾತ್ಪರ್ಯ / ವಿವರಣೆ
ಕೆಲವರಿಂಗೆ ಧರ್ಮಗ್ರಂಥಂಗಳಲ್ಲಿ ಶ್ರದ್ಧೆಯೂ ಇಲ್ಲೆ ತಿಳುವಳಿಕೆಯೂ ಇಲ್ಲೆ. ಕೆಲವರಿಂಗೆ ಧರ್ಮಗ್ರಂಥಂಗಳಲ್ಲಿ ತಿಳುವಳಿಕೆ ಇದ್ದು ಆದರೆ ಶ್ರದ್ಧೆ ಇಲ್ಲೆ. ಅವು ಧರ್ಮಗ್ರಂಥಂಗಳಲ್ಲಿ ಇಪ್ಪ ವಿಷಯವ ಉದ್ಧರಿಸಿ ಹೇಳ್ಳೆ ಲಾಯಕ. ಆದರೆ ಅದರ್ಲ್ಲಿ ಶ್ರದ್ಧೆ, ನಂಬಿಕೆ, ವಿಶ್ವಾಸ ಇಲ್ಲೆ. ಇನ್ನು ಕೆಲವರಿಂಗೆ ಶ್ರದ್ಧೆ ಇಕ್ಕು ಆದರೆ ಭಗವಂತನಲ್ಲಿ ನಂಬಿಕೆ ಇಲ್ಲೆ. ಅಂತವಕ್ಕೆ ಕೃಷ್ಣಪ್ರಜ್ಞೆಲಿ ಯಾವ ಅರ್ಹತೆಯೂ ಇಲ್ಲೆ. ಅವು ನಾಶದತ್ತ ಸಾಗುತ್ತವು. ಹೀಂಗೆ ಆರು ಭಗವತ್ (ಸತ್ಯ) ವಿಷಯಲ್ಲಿ ಶ್ರದ್ಧೆ ಇಲ್ಲದ್ದೆ ಸಂಶಯಲ್ಲಿ ಇರ್ತವೋ ಅವು ಮುನ್ನಡವಲೆ ಇಲ್ಲೆ. ಭಗವಂತನ ಮಾತಿಲ್ಲಿ ನಂಬಿಕೆ ಮತ್ತು ಶ್ರದ್ಧೆ ಇಲ್ಲದ್ದಿಪ್ಪವಂಗೆ ಈ ಜೀವನಲ್ಲಿ ಆಗಲಿ ಮುಂದಾಣ ಜನ್ಮಲ್ಲಿ ಆಗಲಿ ಸುಖ ಹೇಳ್ವದೇ ಇಲ್ಲೆ. ಹಾಂಗಾಗಿ ಧರ್ಮಗ್ರಂಥಂಗಳಲ್ಲಿ ಶ್ರದ್ದೆ ಇರೆಕು, ನಂಬಿಕೆ ಇರೆಕು ಜೀವನಲ್ಲಿ ಅನುಸಂಧಾನ ಮಾಡಿಗೊಂಡಿರೆಕು. ಇದರಿಂದ ಜ್ಞಾನವೇದಿಕೆಗೆ ಏರ್ಲಕ್ಕಿ. ಆಧ್ಯಾತ್ಮಿಕ ತಿಳುವಳಿಕೆಯ ದಿವ್ಯವೇದಿಕೆಯ ಏರಲೆ ಜ್ಞಾನವು ಮಾತ್ರ ನೆರವಾವ್ತು. ಆಧ್ಯಾತ್ಮಿಕ ಮುಕ್ತಿಲಿ ಸಂಶಯಾತ್ಮರಿಂಗೆ ಸ್ಥಾನವೇ ಇಲ್ಲೆ. ಆದ್ದರಿಂದ ಗುರುಶಿಷ್ಯ ಪರಂಪರೆಲಿ ಬಂದ ಜ್ಞಾನದ ಹಿರಿಮೆಯ ಗುರುಗಳ ಆದೇಶಾನುಸಾರ ಅನುಸರಿಸಿ ಯಶಸ್ಸಿನ ಪಡೆಕು.
ಜ್ಞಾನ ಇಲ್ಲದ , ಶ್ರದ್ಧೆ ಇಲ್ಲದ ಅಜ್ಞಾನಿಗೊ ಸಂಶಯಲ್ಲೇ ಬದುಕ್ಕುತ್ತವು. ಜ್ಞಾನ ಮತ್ತು ಶ್ರದ್ಧೆ ಇಲ್ಲದಿಪ್ಪಗ ಅಲ್ಲಿ ಸಂಶಯವೇ ಬೆಳೆತ್ತು. ಈ ಸಂಶಯ ಮನಸ್ಸಿನ ಆಕ್ರಮಿಸಿ ಮತ್ತೆ ನಮ್ಮ ಚಿತ್ತವ ತಲಪುತ್ತು. ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರ ಇಲ್ಲೆ. ಅದು ನಮ್ಮ ಅಧಃಪತನಕ್ಕೆ ಕೊಂಡೊಯ್ಯುತ್ತು . ಇದರಿಂದ ಎಂದೆಂದೂ ನೆಮ್ಮದಿಯಾಗಿಲಿ ಉನ್ನತಿಯಾಗಲಿ ಅಪ್ಪಲೆ ಸಾಧ್ಯ ಇಲ್ಲೆ.
ಶ್ಲೋಕ
ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ ।
ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ ॥೪೧॥
ಪದವಿಭಾಗ
ಯೋಗ-ಸಂನ್ಯಸ್ತ-ಕರ್ಮಾಣಮ್ ಜ್ಞಾನ ಸಂಛಿನ್ನ ಸಂಶಯಮ್ । ಅತ್ಮವಂತಮ್ ನ ಕರ್ಮಾಣಿ ನಿಬಧ್ನಂತಿ ಧನಂಜಯ ॥
ಅನ್ವಯ
ಹೇ ಧನಂಜಯ!, ಯೋಗ-ಸಂನ್ಯಸ್ತ-ಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ । ಆತ್ಮವಂತಂ ಕರ್ಮಾಣಿ ನ ನಿಬಧ್ನಂತಿ ।
ಪ್ರತಿಪದಾರ್ಥ
ಹೇ ಧನಂಜಯ! – ಏ ಧನಂಜಯನೇ!, ಯೋಗ-ಸಂನ್ಯಸ್ತ-ಕರ್ಮಾಣಮ್ – ಕರ್ಮಯೋಗಲ್ಲಿ ಭಕ್ತಿಸೇವೆಂದ ವಿರಕ್ತವಾದ ಕರ್ಮಫಲಂಗಳುಳ್ಳ (ಕರ್ಮಫಲದ ಆಶೆಯ ಬಿಟ್ಟಿಕ್ಕಿ ಭಕ್ತಿಸೇವೆಲಿ ನಿರತನಾದ), ಜ್ಞಾನಸಂಛಿನ್ನಸಂಶಯಮ್ – ಜ್ಞಾನಂದ ಕತ್ತರುಸಿ ಸಂಶಯಂಗಳುಳ್ಳ (ಜ್ಞಾನದ ಮೂಲಕ ಸಂಶಯ ರಹಿತವಾದ), ಆತ್ಮವಂತಮ್ – ಆತ್ಮಸ್ಥಿತನಾದವನ, ಕರ್ಮಾಣಿ – ಕರ್ಮಂಗೊ, ನ ನಿಬಧ್ನಂತಿ – ಎಂದಿಂಗೂ ಬಂಧುಸುತ್ತಿಲ್ಲೆ.
ಅನ್ವಯಾರ್ಥ
ಹೇ ಧನಂಜಯ!, ಆರು ತನ್ನ ಕರ್ಮದ ಫಲಂಗಳ ತ್ಯಜಿಸಿ ಭಕ್ತಿಪೂರ್ವಕ ಸೇವೆಲಿ ಕರ್ಮ ಮಾಡುತ್ತನೋ ಮತ್ತು ಆಧ್ಯಾತ್ಮಿಕ ಜ್ಞಾನಂದ ಸಂಶಯಂಗಳ ನಾಶ ಮಾಡಿರುತ್ತನೋ ಅವ° ವಾಸ್ತವವಾಗಿ ಆತ್ಮಲ್ಲಿ ನೆಲೆಸಿರುತ್ತ°. ಇಂತಹ ಮನುಷ್ಯನ ಕರ್ಮಫಲಂಗೊ ಬಂಧಿಸುತ್ತಿಲ್ಲೆ.
ತಾತ್ಪರ್ಯ / ವಿವರಣೆ
ಕೃಷ್ಣಪ್ರಜ್ಞೆಲಿ ಸಾಧನೆಂದ ಕರ್ಮಫಲದ ನಂಟು ಬಿಟ್ಟ, ಜ್ಞಾನಂದ ಸಂಶಯಂಗಳ ಕಳಕ್ಕೊಂಡಾ ಭಗವದ್ಭಕ್ತರಿಂಗೆ ಕರ್ಮ ಬಂಧನ ಇಲ್ಲೆ. ಜೀವನಲ್ಲಿ ಕರ್ಮ ಮಾಡು, ಕರ್ಮ ಮಾಡಿಗೊಂಡು ಕರ್ಮ ಸನ್ಯಾಸ ಮಾಡು ಹೇಳಿ ಹೇಳುತ್ತ° ಭಗವಂತ°. ಇಲ್ಲಿ ಕರ್ಮ ಸಂನ್ಯಾಸ ಹೇಳಿರೆ ಕರ್ಮ ತ್ಯಾಗ ಅಲ್ಲ. ಈ ಕರ್ಮ ಭಗವಂತಂಗೆ ಸೇರಿದ್ದು. ಎನಗೆಂತ ಅಧಿಕಾರವೋ ಆಸೆಯೋ ಹಂಗೋ ಇಲ್ಲೆ ಹೇಳಿ ಭಗವಂಗಂಗೆ ಕರ್ಮವ ಅರ್ಪುಸುವದು. ಕರ್ಮಫಲದ ಬಗ್ಗೆ ಆಸೆ ಆಕಾಂಕ್ಷೆಗಳ ಬಿಟ್ಟು ಎಲ್ಲವನ್ನೂ ಸಮದೃಷ್ಟಿಂದ ಸ್ವೀಕರಿಸಿಗೊಂಡು, ನಿರ್ವೀಕಾರನಾಗಿ, ನಿರಂತರ ಕರ್ಮ ಮಾಡುತ್ತದು ಕರ್ಮ ಸಂನ್ಯಾಸ. ಕರ್ಮವ ಭಗವಂತಂಗೆ ಅರ್ಪಿಸಿ, ಜ್ಞಾನಂದ ಅಜ್ಞಾನವ (ಸಂಶಯವ) ತೊಳಕ್ಕೊಂಡು, ವಿವೇಕಿಯಾಗಿ ಚಿತ್ತವ ಜಾಗೃತಿಗೊಳುಸಿ, ಆತ್ಮವಂತನಾಗಿ ಬದುಕುವದರ ಕಲ್ತಪ್ಪಗ ಯಾವ ಕರ್ಮವೂ ಬಂಧಕ ಆವುತ್ತಿಲ್ಲೆ. “ಯುದ್ಧಲ್ಲಿ ಶತ್ರುಗಳ ಗೆದ್ದು ಧನವ ಗೆದ್ದ ನೀನು, ಜ್ಞಾನಧನವ ಗೆದ್ದ ನೀನು, ನಿನಗೆ ಕರ್ಮ ಬಂಧುಸಲೆ ಇಲ್ಲೆ ಧನಂಜಯ” ಹೇಳಿ ಹೇಳುತ್ತ ಇಲ್ಲಿ ಭಗವಂತ° ಅರ್ಜುನಂಗೆ ಹೇದು ಬನ್ನಂಜೆಯವರ ವ್ಯಾಖ್ಯಾನ.
ಶ್ಲೋಕ
ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನಃ ।
ಛಿತ್ವೈನಂ ಸಂಶಯಂ ಯೋಗಂ ಆತಿಷ್ಠೋತ್ತಿಷ್ಠ ಭಾರತ ॥೪೨॥
ಪದವಿಭಾಗ
ತಸ್ಮಾತ್ ಅಜ್ಞಾನ-ಸಂಭೂತಮ್ ಹೃತ್-ಸ್ಥಮ್ ಜ್ಞಾನ-ಅಸಿನಾ ಆತ್ಮನಃ । ಛಿತ್ವೈನಮ್ ಸಂಶಯಮ್ ಯೋಗಮ್ ಆತಿಷ್ಠ ಉತ್ಥಿಷ್ಠ ಭಾರತ ॥
ಅನ್ವಯ
ಹೇ ಭಾರತ!, ತಸ್ಮಾತ್ ಅಜ್ಞಾನ-ಸಂಭೂತಂ ಹೃತ್ಸ್ಥಮ್ (ಹೃತ್-ಸ್ಥಮ್) ಆತ್ಮನಃ ಏನಂ ಸಂಶಯಂ ಜ್ಞಾನ-ಅಸಿನಾ ಛಿತ್ತ್ವಾ ಯೋಗಮ್ ಆತಿಷ್ಠ, ಯುದ್ಧಾಯ ಉತ್ಠಿಷ್ಠ ।
ಪ್ರತಿಪದಾರ್ಥ
ಹೇ ಭಾರತ! – ಏ ಭರತ ಕುಲದವನೇ!, ತಸ್ಮಾತ್ – ಹಾಂಗಾಗಿ, ಅಜ್ಞಾನ-ಸಂಭೂತಮ್ – ಅಜ್ಞಾನಂದ ಹುಟ್ಟಿದ, ಹೃತ್ಸ್ಥಮ್ (ಹೃತ್-ಸ್ಥಮ್) – ಹೃದಯಸ್ಥಿತವಾದ, ಆತ್ಮನಃ – ತನ್ನ, ಏನಮ್ ಸಂಶಯಮ್ – ಈ ಸಂದೇಹವ, ಜ್ಞಾನ-ಅಸಿನಾ – ಜ್ಞಾನದ ಆಯುಧಂದ, ಛಿತ್ವಾ – ಕತ್ತರುಸಿ (ಛೇಧಿಸಿ/ತುಂಡರುಸಿ), ಯೋಗಮ್ ಆತಿಷ್ಠ – ಯೋಗಲ್ಲಿ ನೆಲಸು, ಯುದ್ಧಾಯ ಉತ್ಥಿಷ್ಠ – ಹೋರಾಡ್ಳೆ ಎದ್ದು ನಿಲ್ಲು.
ಅನ್ವಯಾರ್ಥ
ಹಾಂಗಾಗಿ ಅರ್ಜುನ!, ಅಜ್ಞಾನಂದ ನಿನ್ನ ಹೃದಯಲ್ಲಿ ಉದ್ಭವವಾದ ಸಂದೇಹಂಗಳ ಜ್ಞಾನವೆಂಬ ಆಯುಧಂದ ಕತ್ತರುಸಿ ಯೋಗಂದ ಯುದ್ಧ ಸನ್ನದ್ಧನಾಗಿ ಯುದ್ಧಕ್ಕೆ ಎದ್ದು ನಿಲ್ಲು.
ತಾತ್ಪರ್ಯ / ವಿವರಣೆ
ಈ ಅಧ್ಯಾಯಲ್ಲಿ ಉಪದೇಶಿಸಿಪ್ಪ ಯೋಗಪದ್ಧತಿಯ ಸನಾತನ ಯೋಗ ಅಥವಾ ಜೀವಿಯು ಮಾಡುವ ನಿರಂತರ ಕಾರ್ಯಂಗೊ ಹೇಳಿ ಹೇಳುತ್ತವು. ಈ ಯೋಗಲ್ಲಿ, ಯಜ್ಞಕಾರ್ಯದ ಎರಡು ಭಾಗಂಗೊ. ಮದಲಾಣದ್ದು ಮನುಷ್ಯನ ಪ್ರಾಪಂಚಿಕ ಯಜ್ಞ. ಇನ್ನೊಂದಕ್ಕೆ ಆತ್ಮಜ್ಞಾನ ಹೇಳಿ ಹೆಸರು. ಆತ್ಮಜ್ಞಾನಕ್ಕಾಗಿ ಮಾಡುವ ಯಜ್ಞವು ಸಂಪೂರ್ಣವಾಗಿ ಆಧ್ಯಾತ್ಮಿಕ ಪ್ರಕ್ರಿಯೆ. ಮನುಷ್ಯನ ಸಂಪತ್ತಿನ ಯಜ್ಞವ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಹೊಂದುಸದ್ರೆ ಅಂತಹ ಯಜ್ಞಂಗೊ ಪ್ರಾಪಂಚಿಕ ಯಜ್ಞವೇ ಆವುತ್ತು. ಆದರೆ, ಒಂದು ಆಧ್ಯಾತ್ಮಿಕ ಗುರಿಂದ ಅಥವಾ ಭಕ್ತಿಪೂರ್ವಕ ಸೇವೆಗಾಗಿ ತನ್ನ ಪ್ರಾಪಂಚಿಕ ಸೊತ್ತಿನ ಯಜ್ಞಮಾಡುವವ° ಪರಿಪೂರ್ಣ ಯಜ್ಞವ ಮಾಡುತ್ತ°.
ಆಧ್ಯಾತ್ಮಿಕ ಕಾರ್ಯದ ವಿಷಯಲ್ಲಿ ಹೇಳುತ್ತರೆ ಇದು ಎರಡು ಬಗೆ – ಮದಲಾಣದ್ದು ತನ್ನ ಆತ್ಮದ ಸಹಜ ಸ್ವರೂಪವ ಅರ್ಥಮಾಡಿಗೊಂಬದು. ಎರಡ್ನೇದು ದೇವೋತ್ತಮ ಪರಮ ಪುರುಷನ ಕುರಿತು ಸತ್ವವ ಅರ್ಥಮಾಡಿಗೊಂಬದು. ಕೃಷ್ಣಪ್ರಜ್ಞೆಯ ತತ್ವಂಗಳ ಕ್ರಮಕ್ರಮವಾಗಿ ಸ್ವೀಕರಿಸಿ ಅಜ್ಞಾನವ ಕಳಕ್ಕೊಳ್ಳೆಕು. ವಿವಿಧ ರೀತಿಯ ಯಜ್ಞಂಗೊ ಕೃಷ್ಣಪ್ರಜ್ಞೆಯ ಜಾಗೃತಗೊಳುಸುತ್ತು. ಎಲ್ಲದಕ್ಕೂ ನಿಯಂತ್ರಿತ ಕರ್ಮವೇ ಆಧಾರ. ಈ ಎಲ್ಲ ಕಾರ್ಯಂಗಳಲ್ಲಿ ಆತ್ಮಸಾಕ್ಷಾತ್ಕಾರವೇ ಮುಖ್ಯವಾದ ಅಂಶ. ಕೃಷ್ಣನ ಅಸ್ತಿತ್ವಲ್ಲಿ, ಅಧಿಕಾರಲ್ಲಿ ಸಂಶಯ ಪಡುತ್ತವಂಗೆ ಇಹ ಪರಲ್ಲಿ ಶ್ರೇಯಸ್ಸಿಲ್ಲೆ. ಯಾವುದೇ ಧರ್ಮಗ್ರಂಥವನ್ನಾಗಲೀ, ಜ್ಞಾನವನ್ನಾಗಲೀ ನಿಜವಾದ ಗುರುವಿನ ಸೇವೆ ಮತ್ತು ಶರಣಾಗತಿಯ ಮನೋಧರ್ಮಲ್ಲಿ ಕಲ್ತುಗೊಳ್ಳೆಕು ಹೇಳಿ ಸೂಚಿಸಲಾಯ್ದು. ನಿಜವಾದ ಗುರು ಹೇಳಿರೆ ಗುರುಶಿಷ್ಯ ಪರಂಪರೆಲಿ ಬಂದವ° ಹೇಳಿ ಉದ್ಧರಿಸಲಾಯ್ದು. ಭಗವಂತನೇ ಪರಮ ಪುರುಷ°, ಅವನ ಕಾರ್ಯಂಗಳೇ ಆಧ್ಯಾತ್ಮಿಕ. ಇದರ ಅರ್ತುಗೊಂಡು ಜೀವನಲ್ಲಿ ಅನುಸಂಧಾನ ಮಾಡಿ ಮುನ್ನೆಡವವ° ಮುಕ್ತಿಮಾರ್ಗದತ್ತ ಸಾಗುತ್ತ°.
ಈ ರೀತಿಯಾಗಿ ಸನಾತನ ಯೋಗವ ಅರ್ಜುನಂಗೆ ವಿವರಿಸಿದ ಭಗವಂತ° ಹೇಳುತ್ತ° – ” ಓ ಭಾರತ!, ಅಜ್ಞಾನಂದ ಹುಟ್ಟಿಬಂದು, ನಿನ್ನ ಮನಸ್ಸಿನ ಹೊಕ್ಕಿ ನಿಂದಿಪ್ಪ ಸಂಶಯವ ಜ್ಞಾನವೆಂಬ ಕತ್ತಿಂದ ಕತ್ತರಿಸಿ ಮುಕ್ತಿಯ ದಾರಿಲಿ ನಡೆ, ಯುದ್ಧಕ್ಕೆ ಎದ್ದು ನಿಲ್ಲು”
“.. ಉತ್ತಿಷ್ಠ ಭಾರತ” – ಭರತ ಚಕ್ರವರ್ತಿಯಂತಹ ಮಹಾಪುರುಷರು ಹುಟ್ಟಿ ಬಂದ ವಂಶದವನಾದ ನೀನು ಜ್ಞಾನ ಸ್ವರೂಪನಾದ ಭಗವಂತನ ಭಕ್ತಿಲಿ ನಿರತನಾದ ಜ್ಞಾನಿ; ನಿನ್ನ ಮನಸ್ಸಿಲ್ಲಿ ಹೊಕ್ಕಿ ಕೂದ ಸಂಶಯವ ‘ಭಗವಂತ’ನೆಂಬ ಜ್ಞಾನ ಕತ್ತಿಂದ ಕಡುದು ಹಾಕು, ‘ಅನ್ಯಾಯದ ವಿರುದ್ಧ ಹೋರಟ’, ಭಗವಂತನ ಪೂಜೆ ಹೇಳ್ವ ದೀಕ್ಷೆಯ ತೊಟ್ಟು, ನಿನ್ನ ಯೋಗಲ್ಲಿ ನೆಲೆಸಿ ಯುದ್ಧಕ್ಕೆ ಎದ್ದು ನಿಲ್ಲು ಹೇಳಿ ಭಗವಂತ° ಅರ್ಜುನನ ಎಚ್ಚರಿಸುತ್ತ° ಎಂಬಲ್ಯಂಗೆ –
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಜ್ಞಾನಯೋಗೋನಾಮ ಚತುರ್ಥೋsಧ್ಯಾಯಃ ॥
ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಜ್ಞಾನಯೋಗ ಹೇಳ್ವ ನಾಲ್ಕನೇ ಅಧ್ಯಾಯ ಮುಗುದತ್ತು.
|| ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ || ಗೀತಾ ಮಾತಾ ಕೀ …. ಜೈ || ಗೋಪಾಲಕೃಷ್ಣ ಭಗವಾನ್ ಕೀ .. ಜೈ ||
॥ ಶ್ರೀಕೃಷ್ಣಾರ್ಪಣಮಸ್ತು ॥
ರ್ ….ಮುಂದುವರಿತ್ತು.
ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 04 – SHLOKAS 31 – 42 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
[ಮಾದುವ ಕೆಲಸಲ್ಲಿ ಶ್ರದ್ಧೆ, ಆಸಕ್ತಿ, ನಂಬಿಕೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತೀ ಅಗತ್ಯ. ಆನು ತಿಳುಕ್ಕೊಂಡಿಪ್ಪದೇ ದೊಡ್ಡದು, ಅದಕ್ಕಿಂತ ದೊಡ್ಡದು ಇನ್ನು ಎಂತದೂ ಇಲ್ಲೆ ಹೇಳ್ವ ಅಹಂಕಾರವ ಮದಾಲು ಬಿಡೇಕು. ನವಗೆ ಎಂತದು ಗೊಂತಿಲ್ಲೆಯೋ ಅದು ಸತ್ಯವಾಗಿಪ್ಪಲೂ ಸಾಕು ಹೇಳ್ವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂದುಗೊಂಡಿಲ್ಲೆ. ಈ ಪ್ರಪಂಚಲ್ಲಿ ನವಗೆ ಗೊಂತಿಪ್ಪದು ಅತೀ ಚಿಕ್ಕ ಅಂಶ. ನವಗೆ ಗೊಂತಿಲ್ಲದ್ದೆ ಇಪ್ಪ ಸತ್ಯ ಇದ್ದು.]
ಇದರ ಸರಿಯಾಗಿ ಅರ್ಥ ಮಾಡಿಗೊಂಡು ಜೀವನ ನಡೆಶಿದರೆ ಎಷ್ಟು ಆತ್ಮ ತೃಪ್ತಿ ಸಿಕ್ಕುಗು ಅಲ್ಲದಾ?
ಮನಸ್ಸಿಂಗೆ ತಟ್ಟುವ ಒಳ್ಳೆ ವಿವರಣೆ.
ಧನ್ಯವಾದಂಗೊ
ಅತೀ ಅಗತ್ಯವಾಗಿ ಎಲ್ಲರೂ ನೆನಪಿಲ್ಲಿ ಮಡಿಕ್ಕೊಲ್ಲೆಕ್ಕಾದ ಅತ್ಯುತ್ತಮ ವಿವರಣೆಯ ಉದ್ದರಿಸಿ ಅಪ್ಪಚ್ಚಿ ತುಂಬಾ ಒಳ್ಳೆ ಕೆಲಸ ಮಾಡಿದಿ… ಹರೇ ರಾಮ…
“ಅಂಬತ್ವಾಮನುಸಂದಧಾಮಿ” ನಿತ್ಯ ಅನುಸಂಧಾನ ಮಾಡಲೆ ಅನುಕೂಲ ಅಪ್ಪ ಹಾಂಗೆ ಪದವಿಂಗಡನೆ ಮಾಡಿ ಚೆಂದಕೆ ಹವಿಗನ್ನಡಲ್ಲಿ ಸರಳ ಶಬ್ದಾರ್ಥ, ಭಾವಾರ್ಥ ಬೈಲಿಲ್ಲಿ ಕೊಡ್ತಾ ಇಪ್ಪ ಚೆನ್ನೈ ಭಾವಂಗೆ ನಮೋ ನಮಃ
ಜ್ಞಾನಯೋಗದ ಅರ್ಥ ವಿವರಣೆ ಚೆಂದಕ್ಕೆ ಬರದ್ದಿ.
ಸಂದೇಹವೇ ಬಾರದ್ದ ಹಾಂಗಿಪ್ಪ ಸುಗಮ ನಿರೂಪಣೆ.
ಸಂಶಯಾತ್ಮಾ ವಿನಶ್ಯತಿ, ಶ್ರದ್ಧಾವಾನ್ ಲಭತೇ ಜ್ಞಾನಂ, ನ ಹಿ ಜ್ಞಾನೇನ ಸದೃಶಂ ಮೊದಲಾದ ಅರ್ಥಪೂರ್ಣ ಮಾತುಗಳ ಪೂರ್ಣ ಅರ್ಥವ ತಿಳುಸಿ ಕೊಟ್ಟ ಚೆನ್ನೈಭಾವಂಗೆ ಧನ್ಯವಾದಂಗೊ.