- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಶ್ಲೋಕ
ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ ।
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ ॥೧೧॥
ಪದವಿಭಾಗ
ಕಾಯೇನ ಮನಸಾ ಬುದ್ಧ್ಯಾ ಕೇವಲೈಃ ಇಂದ್ರಿಯೈಃ ಅಪಿ । ಯೋಗಿನಃ ಕರ್ಮ ಕುರ್ವಂತಿ ಸಂಗಮ್ ತ್ಯಕ್ತ್ವಾ ಆತ್ಮ-ಶುದ್ಧಯೇ ॥
ಅನ್ವಯ
ಯೋಗಿನಃ ಆತ್ಮ-ಶುದ್ಧಯೇ ಕಾಯೇನ, ಮನಸಾ, ಬುದ್ಧ್ಯಾ, ಕೇವಲೈಃ ಇಂದ್ರಿಯೈಃ ಅಪಿ ಸಂಗಂ ತ್ಯಕ್ತ್ವಾ ಕರ್ಮ ಕುರ್ವಂತಿ ।
ಪ್ರತಿಪದಾರ್ಥ
ಯೋಗಿನಃ – ಕೃಷ್ಣಪ್ರಜ್ಞೆಯಿಪ್ಪ ವ್ಯಕ್ತಿಗೊ(ಯೋಗಿಗೊ), ಆತ್ಮ-ಶುದ್ಧಯೇ – ತನ್ನ ಶುದ್ಧಿಯ ಉದ್ದೇಶಕ್ಕಾಗಿ, ಕಾಯೇನ – ಶರೀರಂದ, ಮನಸಾ – ಮನಸ್ಸಿಂದ, ಬುದ್ಧ್ಯಾ- ಬುದ್ಧಿಂದ, ಕೇವಲೈಃ – ಶುದ್ಧವಾದ, ಇಂದ್ರಿಯೈಃ – ಇಂದ್ರಿಯಂಗಳಿಂದ, ಅಪಿ – ಕೂಡ, ಸಂಗಮ್ – ಆಸಕ್ತಿಯ, ತ್ಯಕ್ತ್ವಾ – ತ್ಯಜಿಸಿ, ಕರ್ಮ – ಕಾರ್ಯವ, ಕುರ್ವಂತಿ – ಮಾಡುತ್ತವು,
ಅನ್ವಯಾರ್ಥ
ಯೋಗಿಗೊ ಮೋಹವ ಬಿಟ್ಟು ಕೇವಲ ತನ್ನ ಚಿತ್ತ ಶುದ್ಧಿಗಾಗಿ ದೇಹ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಂಗಳಿಂದ ಕರ್ಮವ ಮಾಡುತ್ತವು.
ತಾತ್ಪರ್ಯ/ವಿವರಣೆ
ಕೃಷ್ಣನ ತೃಪ್ತಿಗಾಗಿಯೇ ಕೃಷ್ಣಪ್ರಜ್ಞೆಲಿ ಮನುಷ್ಯ° ಕರ್ಮವ ಮಾಡಿಯಪ್ಪಗ ದೇಹ, ಮನಸ್ಸು, ಬುದ್ಧಿ ಅಥವಾ ಇಂದ್ರಿಯಂಗಳಿಂದ ಮಾಡಿದ ಯಾವುದೇ ಕೆಲಸವಾಗಲಿ ಅದು ಐಹಿಕ ಕಶ್ಮಲ ಇಲ್ಲದ್ದೆ ಪರಿಶುದ್ಧವಾವ್ತು. ಕೃಷ್ಣಪ್ರಜ್ಞೆಲಿ ಮನುಷ್ಯ° ಮಾಡುವ ಕರ್ಮಂಗೆ ಅವಂಗೆ ಪ್ರತಿಕ್ರಿಯೆಗಳ ಉಂಟುಮಾಡುತ್ತಿಲ್ಲೆ. ಆದ್ದರಿಂದ ಕೃಷ್ಣಪ್ರಜ್ಞೆಲಿ ಕೆಲಸ ಮಾಡುವುದರ ಮೂಲಕ ಸದಾಚಾರ ಪ್ರವೃತ್ತಿ ಸುಲಭವಾಗಿ ಬೆಳೆತ್ತು. ಕೃಷ್ಣಪ್ರಜ್ಞೆಲಿ ತನ್ನ ಇಂದ್ರಿಯಂಗಳ ಉಪಯೋಗುಸಿ ಮಾಡುವ ಕರ್ಮ ತನಗೋಸ್ಕರವಲ್ಲ ಬದಲಾಗಿ ಪರಮಾತ್ಮನ ತೃಪ್ತಿಗಾಗಿ. ಇಲ್ಲಿ ತಾನು ತನಗೆ ತನ್ನಿಂದ ತನ್ನದು ಹೇಳ್ವ ವಿಚಾರಂಗಳೇ ಇಲ್ಲೆ.
ಬನ್ನಂಜೆ ಹೇಳ್ತವು – ಯೋಗಿಗೊ ದ್ವಂದ್ವಾತೀತವಾದ, ಫಲಕಾಮನೆ ಇಲ್ಲದೆ, “ತನ್ನೊಳ ಭಗವಂತ ತನ್ನ ಪೂಜಯ ಎನ್ನ ಮೂಲಕ ಎನ್ನ ಉದ್ಧಾರಕ್ಕೋಸ್ಕರವಾಗಿ ಮಾಡುಸುತ್ತ°” ಹೇಳಿ ತಿಳ್ಕೊಂಡು ಕರ್ತ್ವವ್ಯ ದೃಷ್ಟಿಂದ ಕರ್ಮವ ಮಾಡುತ್ತವು. ಅವಕ್ಕೆ ಅಹಂಕಾರ-ಮಮಕಾರ ಇಲ್ಲೆ. ಇದರಿಂದ ಚಿತ್ತ ಶುದ್ಧವಾಗಿರುತ್ತು. ಶುದ್ಧ ಮನಸ್ಸಿಂಗೆ ಶುದ್ಧ ವಿಷಯಗ್ರಹಣ ಮಾಡ್ಳೆ ಸಾಧ್ಯ. ಶುದ್ಧವಿಷಯಗ್ರಹಣ ಹೇಳಿರೆ ಶಾಸ್ತ್ರಕಾರಂಗೊ ಯಾವ ಅರ್ಥಲ್ಲಿ ಹೇಳಿದ್ದವೋ ಹಾಂಗೇ ಅದೇ ಅರ್ಥಲ್ಲಿ ಅರ್ಥಮಾಡಿಗೊಂಬದು. ಹೀಂಗೆ ಅರ್ಥ ಆಯೇಕ್ಕಾರೆ ನಮ್ಮ ಮನಸ್ಸು ಶಾಸ್ತ್ರಕಾರರ ಮನಸ್ಸಿಂಗೆ ಶ್ರುತಿಗೂಡೆಕು (tuning) ಅಥವಾ ನಾವು ಆ ಸ್ಥಾನಕ್ಕೆ ಏರೆಕು. ಇಲ್ಲಿ ಕೃಷ್ನ ಹೇಳುತ್ತ°- ಯೋಗಿಗೊ ಕೂಡ ಅಹಂಕಾರ-ಮಮಕಾರವ ಬಿಟ್ಟು (ಸಂಗಂ ತ್ಯಕ್ತ್ವಾ) ಭಗವದರ್ಪಣ ಬುದ್ಧಿಂದ ಮೈಂದ, ಮನಸ್ಸಿಂದ, ಬುದ್ಧಿಂದ ಮತ್ತು ಇಂದ್ರಿಯಂಗಳಿಂದ (ಕಾಯೇನ ಮನಸಾ…) ಕರ್ಮಾನುಷ್ಠಾನವ ಮಾಡುತ್ತವು.
ಶ್ಲೋಕ
ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್ ।
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ ॥೧೨॥
ಪದವಿಭಾಗ
ಯುಕ್ತಃ ಕರ್ಮ-ಫಲಮ್ ತ್ಯಕ್ತ್ವಾ ಶಾಂತಿಮ್ ಆಪ್ನೋತಿ ನೈಷ್ಠಿಕೀಮ್ । ಅಯುಕ್ತಃ ಕಾಮ-ಕಾರೇಣ ಫಲೇ ಸಕ್ತಃ ನಿಬಧ್ಯತೇ ॥
ಅನ್ವಯ
ಯುಕ್ತಃ ಕರ್ಮ-ಫಲಂ ತ್ಯಕ್ತ್ವಾ ನೈಷ್ಠಿಕೀಂ ಶಾಂತಿಮ್ ಆಪ್ನೋತಿ । ಅಯುಕ್ತಃ ಕಾಮ-ಕಾರೇಣ ಫಲೇ ಸಕ್ತಃ ನಿಬಧ್ಯತೇ ।
ಪ್ರತಿಪದಾರ್ಥ
ಯುಕ್ತಃ – ಭಕ್ತಿಸೇವೆಲಿ ನಿರತನಾದವ°, ಕರ್ಮ-ಫಲಮ್ – ಎಲ್ಲ ರೀತಿಯ ಕರ್ಮ ಫಲವ, ತ್ಯಕ್ತ್ವಾ – ತ್ಯಜಿಸಿ, ಶಾಂತಿಮ್ – ಪರಿಪೂರ್ಣ ಶಾಂತಿಯ, ಆಪ್ನೋತಿ – ಹೊಂದುತ್ತ°, ನೈಷ್ಠಿಕೀಮ್ – ದೃಢವಾದ, ಅಯುಕ್ತಃ – ಕೃಷ್ಣಪ್ರಜ್ಞೆಲಿ ಇಲ್ಲದ್ದವ°, ಕಾಮ-ಕಾರೇಣ – ಕರ್ಮಫಲವ ಬೋಗುಸುವ ಕಾರಣಂದ, ಫಲೇ – ಫಲಲ್ಲಿ, ಸಕ್ತಃ – ಆಸಕ್ತನಾದ, ನಿಬಧ್ಯತೇ – ಸಿಲುಕಿಗೊಳ್ಳುತ್ತ°.
ಅನ್ವಯಾರ್ಥ
ಭಕ್ತಿಸೇವೆಲಿ ನಿರತನಾಗಿಪ್ಪ ನಿಷ್ಠಾವಂತ ಆತ್ಮ° ಎಲ್ಲಾ ಫಲದ ಆಸೆಯ ತ್ಯಜಿಸಿ (ಎನಗೆ ಒಪ್ಪುಸಿ) ಪರಿಶುದ್ಧವಾದ ಶಾಂತಿಯ ಹೊಂದುತ್ತ°. ದೈವಯುಕ್ತನಲ್ಲದ್ದವ ಕರ್ಮಫಲಕ್ಕಾಗಿ ಆಸೆಪಡವದರಿಂದ ಸಂಕಷ್ಟಲ್ಲಿ ಸಿಲುಕಿಗೊಳ್ಳುತ್ತ°.
ತಾತ್ಪರ್ಯ/ವಿವರಣೆ
ಕೃಷ್ಣಪ್ರಜ್ಞೆಲಿಪ್ಪ ಮನುಷ್ಯಂಗೂ ದೇಹಪ್ರಜ್ಞೆಲಿಪ್ಪ ಮನುಷ್ಯಂಗೂ ವ್ಯತ್ಯಾಸ ಹೇಳಿರೆ, ಮದಲಾಣವಂಗೆ ಕೃಷ್ಣನಲ್ಲಿ (ಭಗವಂತನಲ್ಲಿ) ಆಸಕ್ತಿ, ಎರಡ್ನೇವಂಗೆ ತನ್ನ ಕರ್ಮದ ಫಲಲ್ಲಿ ಆಸಕ್ತಿ. ಕೃಷ್ಣನಲ್ಲೇ ಆಸಕ್ತಿಯ ಮಡುಗಿ ಅವಂಗೋಸ್ಕರವಾಗಿಯೇ ಕರ್ಮವ ಮಾಡುತ್ತವ° ನಿಶ್ಚಯವಾಗಿಯೂ ಮುಕ್ತನಾವುತ್ತ°, ಅವಂಗೆ ತನ್ನ ಕರ್ಮಫಲಲ್ಲಿ ಕಿಂಚಿತ್ತೂ ಆತಂಕ ಇಲ್ಲೆ. ಆದರೆ, ಇಂದ್ರಿಯತೃಪ್ತಿಗಾಗಿಯೇ ಲಾಭದ ಲೆಕ್ಕಾಚರಲ್ಲಿ ಕರ್ಮವ ಮಾಡುತ್ತವ ಸದಾ ಅದರಲ್ಲೇ ತೊಲಲಾಡಿಗೊಂಡಿರುತ್ತ, ಶಾಂತಿಯೂ ಇಲ್ಲೆ. ಇದುವೇ ಕೃಷ್ಣಪ್ರಜ್ಞೆಯ ಗುಟ್ಟು. ಕರ್ಮಯೋಗಕ್ಕೆ ತನ್ನ ತೊಡಗಿಸಿಗೊಂಡವ°, ಭಗವತ್ಪ್ರಜ್ಞೆಲಿ ಕರ್ಮಮಾಡುತ್ತವ° ಜ್ಞಾನಾನಂದದ ಮೋಕ್ಷವ ಪಡೆತ್ತ. ಫಲಕಾಮನೆ ಇಲ್ಲದ್ದೆ ಕರ್ಮ ಮಾಡಿರೆ ನವಗೆ ಅಗತ್ಯವಾದ್ದರ ಯೋಗ್ಯವಾದ್ದರ ಭಗವಂತ° ಕೊಡುತ್ತ°. ಅದರಿಂದ ಜ್ಞಾನವ ಪಡದು, ಅಂತಃಕರಣ ಶುದ್ಧಿಯಾಗಿ ಭಗವಂತನ ಅನುಗ್ರಹಕ್ಕೆ ಪಾತ್ರನಾಗಿ ಅಕೇರಿಗೆ ಮೋಕ್ಷವ ಪಡವಲಕ್ಕು. ಕರ್ಮಯೋಗ ಇಲ್ಲದ್ದೆ ಎನಗೆ ಬೇಕಾಗಿ ಮಾಡುತ್ತೆ, ಎನಗೆ ಅದು ಸಿಕ್ಕಲೆ ಇದು ಮಾಡುತ್ತೆ, ತನ್ನ ಸುಖಕ್ಕಾಗಿ ಖರ್ಚು ಮಾಡುತ್ತೆ ಇತ್ಯಾದಿ ಕೇಂದ್ರೀಕೃತ ಭಾವನೆಂದ ಕರ್ಮ ಮಾಡಿರೆ ಕರ್ಮಬಂಧಿ ಆವುತ್ತ. ಸಂಸಾರ ಚಕ್ರಲ್ಲಿ ಅಧೋಗತಿಗೆ ಹೋವುತ್ತ°.
ಶ್ಲೋಕ
ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾsಸ್ತೇ ಸುಖಂ ವಶೀ ।
ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್ ॥೧೩॥
ಪದವಿಭಾಗ
ಸರ್ವ-ಕರ್ಮಾಣಿ ಮನಸಾ ಸಂನ್ಯಸ್ಯ ಆಸ್ತೇ ಸುಖಮ್ ವಶೀ । ನವ-ದ್ವಾರೇ ಪುರೇ ದೇಹೀ ನ ಏವ ಕುರ್ವನ್ ನ ಕಾರಯನ್ ॥
ಅನ್ವಯ
ವಶೀ ದೇಹೀ ಸರ್ವ-ಕರ್ಮಾಣಿ ಮನಸಾ ಸಂನ್ಯಸ್ಯ, ನವ-ದ್ವಾರೇ ಪುರೇ, ನ ಏವಂ ಕುರ್ವನ್, ನ ಕಾರಯನ್, ಸುಖಮ್ ಆಸ್ತೇ ॥
ಪ್ರತಿಪದಾರ್ಥ
ವಶೀ ದೇಹೀ – ನಿಯಂತ್ರಿತನಾದ ದೇಹಧಾರಿ ಆತ್ಮ, ಸರ್ವ-ಕರ್ಮಾಣಿ – ಎಲ್ಲ ಕರ್ಮಂಗಳ, ಮನಸಾ – ಮನಸ್ಸಿಂದ, ಸಂನ್ಯಸ್ಯ – ತ್ಯಜಿಸಿ, ನವ-ದ್ವಾರೇ ಪುರೇ – ನವದ್ವಾರಂಗಳಿಪ್ಪ ಪಟ್ಟಣ್ಣಲ್ಲಿ (ದೇಹಲ್ಲಿ ಹೇದರ್ಥ), ಆಸ್ತೇ – ಇರುತ್ತು, ನ ಏವ ಕುರ್ವನ್ – ಖಂಡಿತವಾಗಿಯೂ ಏನನ್ನೂ ಮಾಡಿಗೊಂಡಿರದ್ದೆ, ನ ಕಾರಯನ್ – ಏನನ್ನೂ ಮಾಡಿಸಿಗೊಂಡಿಲ್ಲದ್ದೆಯೂ, ಸುಖಮ್ ಆಸ್ತೆ – ಆನಂದವ ಹೊಂದಿಗೊಂಡಿರುತ್ತ°.
ಅನ್ವಯಾರ್ಥ
ದೇಹಸ್ಥ ಜೀವಿಯು ಸ್ವಭಾವವ ನಿಯಂತ್ರಿಸಿ ಮಾನಸಿಕವಾಗಿ ಎಲ್ಲ ಕರ್ಮಂಗಳ ತ್ಯಜಿಸಿಯಪ್ಪಗ ಅವ° ನವದ್ವಾರ ನಗರಲ್ಲಿ ( ಐಹಿಕ ಶರೀರಲ್ಲಿ) ಸುಖವಾಗಿ ವಾಸಿಸುತ್ತ°. ಅವ° ಕಾರ್ಯ ಮಾಡುತ್ತನೂ ಇಲ್ಲೆ , ಮಾಡುಸುತ್ತನೂ ಇಲ್ಲೆ.
ತಾತ್ಪರ್ಯ/ವಿವರಣೆ
ದೇಹಸ್ಥ ಆತ್ಮ° ನವದ್ವಾರ ಪಟ್ಟಣಲ್ಲಿ (ಪೂರ್ಣತೆಯ ಶರೀರಲ್ಲಿ) ವಾಸಿಸುತ್ತ°. ಅರ್ಥಾತ್ ಭಗವಂತ° ಒಂಬತ್ತು ಬಾಗಿಲಿನ ಪುರಲ್ಲಿ (ಪರಿಪೂರ್ಣ ಶರೀರಲ್ಲಿ) ನಮ್ಮ ಕೂರುಸಿ ನಮ್ಮಿಂದ ಕರ್ಮ ಮಾಡುಸುತ್ತ°. ಎನ್ನ ಈ ಪುರಲ್ಲಿ ಕೂರ್ಸಿ, ಎನ್ನೊಟ್ಟಿಂಗೆ ಆತ್ಮೀಯನಾಗಿ ನಿಂದುಗೊಂಡು, ಎನ್ನ ಉದ್ದಾರಕ್ಕಾಗಿ ಆ ಭಗವಂತ ಎನ್ನಿಂದ ಕರಮವ ಮಾಡುಸುತ್ತ ಹೇಳ್ವ ಎಚ್ಚರ ಕರ್ಮಯೋಗ. ಹೀಂಗೆ ಕರ್ಮವ ಮಾಡುವದರಿಂದ ಅದು ಭಗವಂತನ ಆರಾಧನೆ ಆವ್ತು ಮತ್ತು ಜ್ಞಾನ ಮಾರ್ಗದ ಒಂದು ಅಂಗ. ಜ್ಞಾನಂದ ಕರ್ಮ ಮಾಡಿಯಪ್ಪಗ ಯಾವ ಕ್ಷುದ್ರ ಕೆಲಸವೂ ವ್ಯರ್ಥ ಆವ್ತಿಲ್ಲೆ. ಅದು ಯೋಗ ಆವ್ತು. ಇನ್ನು ಏನಾರು ಕೆಲಸ ಮಾಡಿರೆ ಅದು ಎನ್ನಿಂದ ಆತು, ಅದು ಆನು ಮಾಡಿದೆ, ಆನು ಹೇಳಿದ್ದರಿಂದ ಆ ಕೆಲಸ ಆತು ಹೇಳಿ ಹೇಳಿಗೊಂಬದು; ಆದರೆ ಜ್ಞಾನಿಗೊ ಹಾಂಗೆ ಮಾಡುತ್ತವಿಲ್ಲೆ. ಏನೋ ದೇವರು ಎನ್ನ ಕೈಲಿ ಮಾಡಿಸಿದ, ಎನ್ನೊಳ ಇದ್ದುಗೊಂಡು ಆ ಭಗವಂತ° ಮಾಡುಸಿದ, ಭಗವಂತನ ಪ್ರೇರಣೆಂದ ಈ ಕಾರ್ಯ ಆತು ಹೇಳಿ ತಿಳ್ಕೊಳ್ಳುತ್ತವು. ಇದು ಜ್ಞಾನಿಗೂ ಅಜ್ಞಾನಿಗೂ ಇಪ್ಪ ವ್ಯತ್ಯಾಸ.
ಅಷ್ಟಪ್ಪಗ ಇಲ್ಲಿ ಒಂದು ಸಹಜವಾಗಿ ಪ್ರಶ್ನೆ ಮೂಡುತ್ತು. ಎಲ್ಲವನ್ನೂ ದೇವರೇ (ಭಗವಂತನೇ) ಮಾಡುಸುವುದಾದರೆ ಅವ° ನಮ್ಮ ಕೈಲಿ ಒಳ್ಳೆಯ ಕೆಲಸವನ್ನೇ ಮಾಡುಸಲಕ್ಕನ್ನೆ. ಬೇಡಂಗಟ್ಟೆ ಕೆಲಸಂಗಳ ಎಂತಕೆ ಮಾಡುಸ್ತುತ್ತ°? ಕೆಟ್ಟ ಕೆಲಸವನ್ನೂ ಮಾಡುಸುವವ ಅವನೇ ಆದರೆ ಮತ್ತೆ ನವಗೆಂತಕೆ ಶಿಕ್ಷೆ ? ನವಗೆಂತಕೆ ದುಃಖ? ನಾವೇ ನಮ್ಮ ಬುದ್ಧಿಪೂರ್ವಕ ಮಾಡಿರೂ ನಾವು ಏಕೆ ಕರ್ತಾ ಅಪ್ಪಲೆ ಆವ್ತಿಲ್ಲೆ. ಅದರಿಂದ ನವಗೇಕೆ ಫಲ ಬತ್ತಿಲ್ಲೆ ? ಎಲ್ಲ ದೇವರೇ ಮಾಡುಸುವುದಾದರೆ ನವಗೆ ಎಂತಕೆ ಫಲ ಬಪ್ಪದು ? … ಇತ್ಯಾದಿ. ಅದಕ್ಕೆ ಮುಂದಾಣ ಭಾಗಲ್ಲಿ ಭಗವಂತ° ಹೇಳುತ್ತ° –
ಶ್ಲೋಕ
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ ।
ನ ಕರ್ಮಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ॥೧೪॥
ಪದವಿಭಾಗ
ನ ಕರ್ತೃತ್ವಮ್ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ । ನ ಕರ್ಮ-ಫಲ-ಸಂಯೋಗಂ ಸ್ವಭಾವಃ ತು ಪ್ರವರ್ತತೇ ॥
ಅನ್ವಯ
ಪ್ರಭುಃ ಲೋಕಸ್ಯ ನ ಕರ್ತೃತ್ವಂ, ನ ಕರ್ಮಾಣಿ, ನ ಕರ್ಮ-ಫಲ-ಸಂಯೋಗಂ ಸೃಜತಿ । ಸ್ವಭಾವಃ ತು ಪ್ರವರ್ತತೇ ।
ಪ್ರತಿಪದಾರ್ಥ
ಪ್ರಭುಃ – ದೇಹವೆಂಬ ನಗರದ ಒಡೆಯ°, ಲೋಕಸ್ಯ – ಜನಂಗಳ, ನ ಕರ್ತೃತ್ವಂ – ಒಡೆತನವ ಮಾಡುತ್ತನಿಲ್ಲೆ, ನ ಕರ್ಮಾಣಿ – ಕಾರ್ಯಂಗಳ ಮಾಡುತ್ತನಿಲ್ಲೆ, ನ ಕರ್ಮ-ಫಲ-ಸಂಯೋಗಂ ಸೃಜತಿ – ಕಾರ್ಯಂಗಳಫಲಂಗಳೊಂದಿಂಗೆ ಸಂಪರ್ಕವ ಸೃಷ್ಟಿಸುತ್ತನಿಲ್ಲೆ, ಸ್ವಭಾವಃ – ಪ್ರಕೃತಿಗುಣ, ತು – ಆದರೋ, ಪ್ರವರ್ತತೇ – ವರ್ತಿಸುತ್ತು.
ಅನ್ವಯಾರ್ಥ
ತನ್ನ ದೇಹವೆಂಬ ನಗರದ ಒಡೆಯನಾದ ದೇಹಸ್ಥ ಆತ್ಮ° ಕರ್ಮಂಗಳ ಸೃಷ್ಟಿಸುತ್ತನಿಲ್ಲೆ, ಜನರ ಕರ್ಮ ಮಾಡುವಂತೆ ಮನ ಒಲಿಸುತ್ತನಿಲ್ಲೆ, ಕರ್ಮಫಲಂಗಳನ್ನೂ ಸೃಷ್ಟಿಸುತ್ತನಿಲ್ಲೆ. ಇವೆಲ್ಲವೂ ಐಹಿಕ ಪ್ರಕೃತಿಯ ಗುಣಂಗಳೇ ಸೃಷ್ಟಿಮಾಡುತ್ತದು.
ತಾತ್ಪರ್ಯ/ವಿವರಣೆ
ಜೇವಿಯು ಭಗವಂತನ ಶಕ್ತಿಲಿ ಅಥವಾ ಪ್ರಕೃತಿಲಿ ಒಂದು. ಇದು ಜಡ ವಸ್ತುವಿಂದ ಭಿನ್ನವಾದ್ದು. ಜಡವಸ್ಥುವೂ ಭಗವಂತನ ಇನ್ನೊಂಡು ಪ್ರಕೃತಿ. ಇದರ ಕನಿಷ್ಠ ಹೇಳಿ ಹೇಳುತ್ತದು. ಉತ್ತಮ ಪ್ರಕೃತಿಯ ಜೀವಿಯು ಅನಾದಿ ಕಾಲಂದ ಹೇಂಗೊ ಐಹಿಕ ಪ್ರಕೃತಿಯೊಂದಿಂಗೆ ಸಂಬಂಧ ಇರಿಸಿಗೊಂಡಿದ್ದು. ಜೀವಿಗೆ ದೊರಕುವ ಅಲ್ಪಕಾಲದ ದೇಹವು ಅಥವಾ ಐಹಿಕ ವಾಸಸ್ಥಳವು ವಿವಿಧ ಕಾರ್ಯಂಗಳ ಮತ್ತು ಆ ಕರ್ಮಫಲಂಗಳ ಕಾರಣಂದ ಆವ್ತು. ಇಂತಹ ಬದ್ಧವಾತಾವರಣಲ್ಲಿ ವಾಸಿಸುತ್ತಿಪ್ಪದರಿಂದ ಮನುಷ್ಯ ಅಜ್ಞಾನಂದ ತನ್ನ ದೇಹದೊಂದಿಂಗೆ ಗುರುತಿಸಿಗೊಂಡು ದೇಹದ ಕರ್ಮಫಲಂಗಳಿಂದ ಕಷ್ಟಕ್ಕೊಳಗಾವ್ತ°. ಅನಾದಿ ಕಾಲಂದ ಬಂದ ಅಜ್ಞಾನವೇ ದೇಹದ ಕಷ್ಟ ಮತ್ತು ದುಃಖಕ್ಕೆ ಕಾರಣ. ಜೀವಿಯು ದೇಹದ ಕಾರ್ಯಂಗಳಿಂದ ದೂರ ಆವ್ತಾಂಗೆ ಅವ° ಪ್ರತಿಕ್ರಿಯೆಂಗಳಿಂದಲೂ ದೂರ ಆವ್ತ°. ಅವ° ದೇಹವೆಂಬ ನಗರಲ್ಲಿಪ್ಪನ್ನಾರ ಅದರ ಯಜಮಾನನ ಹಾಂಗೆ ಕಾಣುತ್ತ°. ಆದರೆ, ವಾಸ್ತವವಾಗಿ ಅವ° ಎಂದೂ ಅದರ ಒಡೆಯನೂ ಅಲ್ಲ ಮತ್ತು ಅದರ ಕರ್ಮಂಗಳನ್ನೂ, ಕರ್ಮಫಲಂಗಳನ್ನೂ ನಿಯಂತ್ರಿಸಲೆ ಸಾಧ್ಯ ಇಪ್ಪವನೂ ಅಲ್ಲ. ಅವ° ತನ್ನ ಅಸ್ತಿತ್ವದ ಉಳಿವಿಂಗಾಗಿ ಸೆಣೆಸಾಡುತ್ತ ಭವಸಾಗರಲ್ಲಿರುತ್ತ°. ಸಾಗರದ ಅಲೆಗೊ ಅವನ ಎತ್ತಿ ಹಾಕುತ್ತು. ಅವುಗಳ ಮೇಲೆ ಅವಂಗೆ ಯಾವುದೇ ಹತೋಟಿಯೂ ಇಲ್ಲೆ. ಅಲೌಕಿಕವಾದ ಕೃಷ್ಣಪ್ರಜ್ಞೆಂದ ಸಾಗರಂಅ ಹೆರಬಪ್ಪದೇ ಅವನ ಮಟ್ಟ್ಟಿಂಗೆ ಅತ್ತ್ಯುತ್ತಮವಾದ ಪರಿಹಾರ. ಇದೊಂದೇ ಅವನ ಎಲ್ಲ ಕ್ಷೋಭೆಂದ ರಕ್ಷಿಸುಗು.
ಮುಂದಾಣ ವಿವರಣೆಗೊ ಬನ್ನಂಜೆಯವರ ವ್ಯಾಖ್ಯಾನಂದ – ಜಡಲೋಕಕ್ಕೆ ಜೀವ-ಪ್ರಭು. ಅದರಲ್ಲಿ ಇಚ್ಛಾಪೂರ್ವಕ ಕ್ರಿಯೆ. ಆದರೆ ಅದು ಕರ್ತೃತ್ವ ಅಲ್ಲ. ಜೀವವ ಜಡಕ್ಕೆ ಹೋಲಿಸಿರೆ, ಜಡಕ್ಕೆ ಯೋಚನೆ ಮಾಡುವ ಶಕ್ತಿ ಇಲ್ಲೆ. ಆದರೆ ಜೀವಕ್ಕೆ ಯೋಚನೆ ಮಾಡುವ ಶಕ್ತಿ ಇದ್ದು. ಜಡಕ್ಕೆ ಬುದ್ಧಿ ಇಲ್ಲೆ, ಅದರೆ, ಜೀವಕ್ಕೆ ಬುದ್ಧಿ ಇದ್ದು. ಎರಡಕ್ಕೂ ಕರ್ತೃತ್ವ ಇಲ್ಲೆ. ಕ್ರಿಯೆಯ, ಪಾಪ ಪುಣ್ಯಂಗಳ ಮತ್ತು ಕರ್ಮಫಲ ಪಡೆವ ಒಡೆತನವ ಜೀವಲೋಕಕ್ಕೆ ಭಗವಂತ° ನೀಡಿದ್ದನಿಲ್ಲೆ. ಪ್ರಪಂಚಲ್ಲಿ ಮೂರು ತರದ ಕರ್ತೃತ್ವ. ಕೇವಲ ಕ್ರಿಯೆ ಇಪ್ಪದು ಒಂದು ವಿಧದ ಕರ್ತೃತ್ವ. ಇದು ಜಡಕ್ಕೂ ಇದ್ದು. ಎರಡ್ನೇದು ಬುದ್ಧಿ ಪೂರ್ವಕ ಕೃತಿ. ಸ್ವತಂತ್ರವಲ್ಲದ ಇಚ್ಛಾಪೂರ್ವಕ ಕ್ರಿಯ ಇದು, ನಿಜವಾದ ಕರ್ತೃತ್ವ. ಆದರೆ ನಿಜವಾದ ಕರ್ತೃತ್ವ ಇದಲ್ಲ. ಸ್ವತಂತ್ರವಾದ ಇಚ್ಛಾಪೂರ್ವಕ ಕ್ರಿಯೆ ನಿಜವಾದ ಕರ್ತೃತ್ವ. ಇದು ಇಪ್ಪದು ಕೇವಲ ಭಗವಂತನಲ್ಲಿ ಮಾತ್ರ. ಜೀವಿಗೆ ಕರ್ಮಲ್ಲಿ ದತ್ತಸ್ವಾತಂತ್ರ್ಯ ಕೂಡ ಇಲ್ಲೆ . ಜೀವ ಭಗವಂತನ ಪರಾಧೀನ. ಆದ್ದರಿಂದ ಅವ° ಕರ್ತಾ ಅಲ್ಲ. ಉದಾಹರಣೆಗೆ , ತೊಟ್ಟಿಲಿಲ್ಲಿಪ್ಪ ಮಗು. ಅದಕ್ಕೆ ಬುದ್ಧಿ ಇದ್ದು, ತಿನ್ನೆಕು ಹೇಳ್ವ ಇಚ್ಛೆ ಇದ್ದು ಆದರೆ ಸ್ವಾತಂತ್ರ್ಯ ಇಲ್ಲೆ. ಅಬ್ಬೆ ಬಾಯಿಗೆ ಮಡುಗಿದ್ದರ ತಿಂಬದು ಮಾತ್ರ. ಇದು ಇಚ್ಛಾಪೂರ್ಣ ಕ್ರಿಯೆ, ಆದರೆ, ಸ್ವತಂತ್ರ-ಇಚ್ಛಾಪೂರ್ಣ ಕ್ರಿಯೆ ಅಲ್ಲ. ಇನ್ನು ಫಲದ ಬಗ್ಗೆ ಇದೇ ದೃಷ್ಟಾಂತಂದ ನೋಡಿರೆ ಮಗುವಿಂಗೆ ಅಬ್ಬೆ-ಅಪ್ಪ° ದೇವರಿಂಗೆ ನಮಸ್ಕಾರ ಮಾಡು ಹೇಳಿ ಹೇಳುತ್ತವು. ಆದರೆ ಆ ಮಗು ಮಾಡುತ್ತಿಲ್ಲೆ. ಇಂತಹ ಸಂದರ್ಭಲ್ಲಿ ಅಬ್ಬೆ-ಅಪ್ಪ°, ಮಗುವ ತಿದ್ದಿ-ತೀಡಿ ಅಥವಾ ಅಗತ್ಯ ಬಿದ್ದರೆ ಶಿಕ್ಷಿಸಿ ದೇವರಿಂಗೆ / ಹಿರಿಯರಿಂಗೆ ನಮಸ್ಕರಿಸುವಂತೆ ಮಾಡುತ್ತವು. ಅಂಬಗ ಆ ಮಗು ಮಾಡುತ್ತು. ಇಲ್ಲಿ ನಮಸ್ಕಾರ ಮಾಡಿಸಿದ್ದು ಅಬ್ಬೆ-ಅಪ್ಪ° ಆಗಿದ್ದರೂ ಫಲ ಆ ಮಗುವಿಂಗೆ. ಇದೇ ರೀತಿ ಜೀವನೊಳ ಕೂದುಗೊಂಡಿಪ್ಪ ಕಣ್ಣಿಂಗೆ ಕಾಣದ ಭಗವಂತ° ‘ಜೀವನ’ ಕ್ರಿಯೆಯ ನಿಯಂತ್ರಿಸುತ್ತ°. ನಮ್ಮ ಮೂಲಕ ಕರ್ಮ ಮಾಡುಸುವವ ಭಗವಂತನಾದರೂ ಕರ್ಮದ ಫಲ ನವಗೇ ಹೊರತು ಭಗವಂತಂಗೆ ಅಲ್ಲ.
ಅಂಬಗ ಭಗವಂತ° ನಮ್ಮ ಮುಖೇನ ಕೆಟ್ಟ ಕಾರ್ಯ ಎಂತಕೆ ಮಾಡುಸುತ್ತ°? ಅಬ್ಬೆ-ಅಪ್ಪ° ಮಗುವಿನತ್ರೆ ಎಂದೂ ಕೆಟ್ಟ ಕೆಲಸ ಮಾಡುಸುತ್ತವಿಲ್ಲೆ. ಅದೇ ರೀತಿ ಭಗವಂತ ನಮ್ಮಲ್ಲಿ ಒಳ್ಳೆಯ ಕೆಲಸ ಏಕೆ ಮಾಡುಸಲಾಗ? ಇದು ವಿಲಕ್ಷಣವಾಗಿ ಕಾಂಬ ಕ್ರಿಯೆ. ಉದಾಹರಣೆಗೆ ಒಬ್ಬ ಅಧ್ಯಾಪಕ°. ಅವ° ತನ್ನ ಪಾಠ ಪ್ರವಚನವ ಎಲ್ಲ ಮಕ್ಕೊಗೂ ಒಂದೇ ರೀತಿಲಿ ಭೇದ-ಭಾವ ಇಲ್ಲದ್ದೆ ಕಲುಶುತ್ತ°. ಆದರೆ ಒಬ್ಬ° ಪಾಠವ ಬಹು ಬೇಗ ಸುಲಭಲ್ಲೇ ಅರ್ಥ ಮಾಡಿಗೊಳ್ತ, ಇನ್ನೊಬ್ಬ ಅರ್ಥ ಆಗದ್ದೆ ಚಡಪಡುಸುಗು. ಮತ್ತೊಬ್ಬಂಗೆ ಅಪಾರ್ಥವಾಗಿ ಅರ್ಥ ಅಪ್ಪಲೂ ಸಾಕು. ಇದಕ್ಕೆ ಆ ಅಧ್ಯಾಪಕ° ಹೊಣೆ ಆವ್ತನಿಲ್ಲೆ. ಇದು ವಿದ್ಯಾರ್ಥಿಯ ಸ್ವಭಾವಕ್ಕೆ ಸಂಬಂಧಪಟ್ಟ ವಿಚಾರ. ಭಗವಂತ° ಹೇಳುತ್ತ° – “ಸ್ವಭಾವಸ್ತು ಪ್ರವರ್ತತೇ”. ಇದು ಅಪೂರ್ವವಾದ ಸಂಗತಿ. ಜೀವಿಯು ಅನಾಧಿನಿತ್ಯ. ಅದರ ಭಗವಂತ ಸೃಷ್ಟಿ ಮಾಡಿದ್ದನಿಲ್ಲೆ. ಈ ಅನಾದಿನಿತ್ಯವಾದ ಒಂದು ಅಸಾಧಾರಣ ಸ್ವಭಾವ ಇದ್ದು . ಆ ಸ್ವಭಾವದಂತೆ ಆ ಜೀವ ನಡಕ್ಕೊಳ್ಳುತ್ತ°. ಜೀವಸ್ವಭಾವಕ್ಕನುಗುಣವಾಗಿ ನಡಕ್ಕೊಂಬದು ಹೇಳಿರೆ – ಉದಾಹರಣೆಗೆ- ಮಾವಿನ ಬೀಜ. ಅದು ಮರವಾಗಿ ಮಾವಿನ ಹಣ್ಣನ್ನೇ ಕೊಡುವದು ಹೊರತು ಹಲಸಿನ ಹಣ್ಣಿನ ಅಲ್ಲ. ಅದು ಆ ಬೀಜದ ಸ್ವಭಾವ. ‘ಜೀವ’ ಹೇಳ್ವದು ಶರೀರ ಎಂಬ ವೃಕ್ಷದ ಬೀಜ. ಆ ಶರೀರದ ಮೂಲಕ ವ್ಯಕ್ತ ಅಪ್ಪದು ಆ ಬೀಜದ ಮೂಲ ಗುಣವೇ ಹೊರತು ಮತ್ತೆಂತದೋ ಅಲ್ಲ. ಜೀವ ಮೊದಲನೆದಾಗಿ ತನ್ನ ಸ್ವಭಾವಕ್ಕೆ ಅಧೀನ. ನವಗೆ ತೋಚಿದಾಂಗೆ ಮಾಡ್ಳೆ ಸಾಧ್ಯ ಇಲ್ಲೆ. ನಮ್ಮ ನಿಜ ಸ್ವಭಾವ ಎಂತದೋ, ಅಂತೆಯೇ ನಮ್ಮ ತೀರ್ಮಾನ. ಮೂಲತಃ ನಿಜವಾದ ಸ್ವಭಾವದ ಹಾಂಗೆ ನಮ್ಮ ಅನಿಸಿಕೆ, ಅದಕ್ಕೆ ವಿರುದ್ಧವಾಗಿ ನಾವು ಕೆಲಸ ಮಾಡುತ್ತಿಲ್ಲೆ. ಈ ಕಾರಣಂದ ಸ್ವಭಾವತಃ ಸಾತ್ವಿಕನಾದರೆ, ಆತನ ವಿಚಾರಧಾರೆಗೊ ಎಲ್ಲವೂ ಸಾತ್ವಿಕಗುಣಂದಲೇ ಇರುತ್ತು. ರಾಜಸನಾದವನ ವಿಚಾರಧಾರೆ ರಾಜಸ ಗುಣದ ಪ್ರಭಾವಲ್ಲಿರುತ್ತು. ಸ್ವಭಾವದ ಒಟ್ಟಿಂಗೆ ಹುಟ್ಟಿ ಬೆಳೆದ ಸಮಾಜದ ಪ್ರಭಾವ ಕೂಡ. ಅದರ ಅಭಿವ್ಯಕ್ತತೆ ಕ್ಷಣಿಕ. ಅದು ಹೆಚ್ಚು ಹೇಳಿರೆ ಒಂದು ಜನ್ಮಕ್ಕೆ ಸೀಮಿತ. ಆದರೆ ಅಕೇರಿಗೆ ಉಳಿವದು ಜೀವಸ್ವಭಾವ ಮಾತ್ರ. ಹೀಂಗೆ ಮೂಲಸ್ವಭಾವಕ್ಕೆ ಕಾರಣಂದಲಾಗಿ ಜೀವ ತನ್ನ ಸ್ವಭಾವಕ್ಕನುಗುಣವಾಗಿ ನಡಕ್ಕೊಳ್ಳುತ್ತನೇ ಹೊರತು ತಾನು ಹೇಂಗೆ ಮಾಡೆಕು ಹೇಳಿ ತನ್ನ ಬದಲಿಸಿಗೊಂಬ ರೂಪಿಸಿಗೊಂಬ ಸ್ವತಂತ್ರ ಕರ್ತೃತ್ವ ಜೀವಿಗೆ ಇಲ್ಲೆ.
ಸ್ವಭಾವ ನಮ್ಮ ಅಧೀನ ಅಲ್ಲ ಹೇಳಿ ಆದಮತ್ತೆ ಆ ಸ್ವಭಾವದ ಅಭಿವ್ಯಕ್ತಿ ನಮ್ಮ ಸ್ವಾತಂತ್ರ್ಯಲ್ಲಿ ಇಲ್ಲೆ ಹೇಳಿ ಅತು. ಮತ್ತೆ ಆ ಸ್ವಭಾವದ ಅಭಿವ್ಯಕ್ತಿ ಹೇಂಗೆ. ಸ್ವಭಾವಕ್ಕೆ ತಕ್ಕಂತೆ ಬೆಳವದು ಆರ ಅಧೀನನಾಗಿ ? ಸ್ವಭಾವಕ್ಕೆ ಆ ಶಕ್ತಿ ಎಲ್ಲಿಂದ ಬಂತು? – ಇದೇ ಶ್ಲೋಕಲ್ಲಿ ಭಗವಂತ ಹೇಳಿದ್ದ° – ನವಗೆ ಕರ್ತೃತ್ವ ಇಲ್ಲೆ ಮತ್ತು ಕರ್ಮಲ್ಲಿ ಇಂತದ್ದೇ ಫಲ ಬೇಕು ಹೇಳುವ ಅಧಿಕಾರ ಸ್ವಾತಂತ್ರ್ಯವೂ ಇಲ್ಲೆ. ತಾನೇ ತಾನಾಗಿ ತನ್ನ ಬಿತ್ತಿಗೊಂಡು ತಾನೇ ಮರವಾಗಿ ಬೇಳದು ಹಣ್ಣು ಕೊಡುವ ಶಕ್ತಿ ಜೀವಕ್ಕೆ ಇಲ್ಲೆ. ಸ್ವತಂತ್ರನಾದ ಭಗವಂತ° ಸೃಷ್ಟಿ ಎಂಬ ತೋಟವ ನಿರ್ಮಿಸಿ, ಅಲ್ಲಿ ಒಬ್ಬ° ತೋಟಗಾರನ ಹಾಂಗೆ, ಜೀವ ಎಂಬ ಬೀಜವ ಬಿತ್ತಿ ಬೆಳಶುತ್ತ°. ಆದ್ದರಿಂದ ನವಗೆ ದೇಹ ಎಂಬ ಮರ ಬೆಳೆತ್ತು ಮತ್ತು ಅದರಿಂದ ಕಹಿಯಾದ, ಹುಳಿಯಾದ, ರುಚಿಯಾದ ಹಣ್ಣು ಜೀವ ಸ್ವಭಾವದಮ್ತೆ ಅಭಿವ್ಯಕ್ತವಾವ್ತು. ಆದ್ದರಿಂದ ಕೆಟ್ಟಕೆಲಸ (ಕಹಿ) ಮತ್ತು ಒಳ್ಳೆಯ ಕೆಲಸ (ಸಿಹಿ) ಹೇಳಿ ಹೇಳ್ವದು ನಮ್ಮ ಸ್ವಭಾವವ ಅವಲಂಬಿಸಿಪ್ಪದೇ ಹೊರತು ಭಗವಂತನದ್ದಲ್ಲ. ತೋಟಗಾರ° ಎಂದೂ ಮೆಣಸಿನ ಸೆಸಿಗೆ ಖಾರದ ನೀರಿನ, ಪೌಷ್ಟಿಕತೆಯ ನೀರಿನ ಎರದು ಸಾಂಕುತ್ತನಿಲ್ಲೆ. ಎಲ್ಲಾ ಸೆಸಿಗಳ ಹಾಂಗೆ ಅದಕ್ಕೂ ಒಂದೇ ಬಗೆಯ ನೀರು ಎರವದು. ಆದರೆ ಅದು ಖಾರವಾದ ಮೆಣಸು ತನ್ನ ಸ್ವಭಾವದ ಹಾಂಗೇ ಕೊಡುವದು. ಹಾಂಗೆಯೇ, ಭಗವಂತ ಅನಾದಿನಿತ್ಯವಾದ ಜೀವದ ಸ್ವಭಾವಕ್ಕೆ ತಕ್ಕಂತೆ ಕ್ರಿಯೆ ಮಾಡಿಸಿದ ಹಾಂಗೆ ಕ್ರಿಯೆ ನಡೆತ್ತು.
ಕೆಲವೊಂದರಿ ನಾವು ಯೋಚಿಸಿದ್ದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತು. ಅದು ಎಂತಕೆ ಹೇಳಿರೆ, ನಮ್ಮ ಮನಸ್ಸು ಮತ್ತು ಬುದ್ಧಿಯ ವಿಚಾರ ಸರಣಿ ಬೇರೆ, ನಾವು ಮಾಡುವದು ಬೇರೆ. ಈ ಕಾರಣಕ್ಕಾಗಿ ಹಲವು ಸರ್ತಿ ಹೇಳ್ತದು ಒಂದು ಮಾಡುವದು ಮತ್ತೊಂದು ಅಪ್ಪದು. ದುರ್ಯೋಧನ ಕೂಡ “ನಾನು ಮಾಡುತ್ತಾ ಇಪ್ಪದು ತಪ್ಪು ಹೇಳ್ವದು ಎನಗೆ ಗೊಂತಿದ್ದು” ಹೇಳಿ ಮದಲೆ ಹೇಳಿದ್ದ°. ಯಾವುದು ಧರ್ಮ ಹೇಳ್ವದು ಅವಂಗೆ ಗೊಂತಿತ್ತು. ಅಂದರೂ, ಆತ° ತನ್ನ ಸ್ವಭಾವಕ್ಕೆ ತಕ್ಕಂತೆ ನಡಕ್ಕೊಂಡ°. ಆದ್ದರಿಂದ ನಮ್ಮ ತಿಳುವಳಿಕೆ ಬೇರೆ, ಸ್ವಭಾವ ಬೇರೆ. ಸ್ವಭಾವಕ್ಕನುಗುಣವಾಗಿ ಕಾರ್ಯ. ನಮ್ಮ ಸ್ವಭಾವ ನಮ್ಮೆಲ್ಲ ಅಧ್ಯಯನ, ಬುದ್ಧಿ, ವಿಚಾರವಾದಂಗಳ ಬದಿಗೊತ್ತಿ ನಮ್ಮಿಂದ ನಮ್ಮ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುಸುತ್ತದು. ಇದನ್ನೇ ಭಗವಂತ ಹೇಳಿದ್ದು – “ಸ್ವಭಾವಸ್ತು ಪ್ರವರ್ತತೇ” ಹೇಳಿ. ನಮ್ಮ ಸ್ವಭಾವ ಎಂತದೋ , ಅಂತದ್ದೇ ಪ್ರವೃತ್ತಿ. ಅದಕ್ಕನುಗುಣವಾಗಿ ಭಗವಂತ° ನಮ್ಮ ಬೆಳಶುತ್ತ°. ಆರಲ್ಲಿ ಯಾವ ಸ್ವಭಾವ ಇರ್ತೋ ಅದೇ ರೀತಿ ನಡಕ್ಕೊಳ್ಳುತ್ತನೇ ಹೊರತು ಇನ್ನೊಬ್ಬ ಹೇಳಿದಾಂಗೋ, ತಾನು ಗ್ರೇಶಿದಾಂಗೋ ಅಲ್ಲ. ಆರಾರ ಸಹಜ ಸ್ವಭಾವ ಎಂತದ್ದೋ ಅಂತೆಯೇ ಸಹಜ ಸ್ವಭಾವಲ್ಲಿ ಬೆಳಶುವ ಕ್ರಿಯೆಯ ಸ್ವತಂತ್ರನಾದ ಭಗವಂತ° ಮಾಡಿದ್ದ°. ಎಲ್ಲವುದರ ಫಲವ ಕೊಡುವದು ಅವನೇ . ಅವಂಗೆ ಎಂದೂ ಬಂಧ ಇಲ್ಲೆ.
ಹಾಂಗಾದರೆ ಭಗವಂತ° ನವಗೆ ಎಂತಕೆ ಶಿಕ್ಷೆ ಕೊಡುತ್ತದು?. ಭಗವಂತ° ನವಗೆ ಶಿಕ್ಷೆ ಕೊಡುವದು ದ್ವೇಷಂದ ಅಲ್ಲ. ಅದರ ಹಿಂದೆ ಇಪ್ಪದು ಅಪಾರ-ಅನಂತವಾದ ಕಾರುಣ್ಯ. ಅಬ್ಬೆ ಮಗುವಿಂಗೆ ಶಿಕ್ಷೆ ಕೊಡುವ ಹಿಂದಿಪ್ಪ ಕಾರುಣ್ಯ ಹೇಂಗೋ ಹಾಂಗೆ. ಜೀವನಲ್ಲಿ ಬಪ್ಪ ದುಃಖ ಕಷ್ಟಂಗಳಿಂದ ಜೀವಪಾಕ ಆವ್ತು. ಜೀವನಲ್ಲಿ ನವಗೆ ಬಪ್ಪ ತಾಪತ್ರಯಂಗಳ ತಾಪಕ್ಕೆ ನಾವು ಬೇಯೆಕು. ಬೆಂದು ಪಕ್ವ ಆಯೇಕು. ಜೀವನಲ್ಲಿ ಕಷ್ಟವ ನೋಡದ್ದವ ಎಂದೂ ಬೆಳೆತ್ತನಿಲ್ಲೆ. ಅವಂಗೆ ಇನ್ನೊಬ್ಬನ ಸುಖ ದುಃಖ ಅರ್ಥ ಆವ್ತಿಲ್ಲೆ. ಜೀವ ಪಕ್ವ ಅಪ್ಪದೇ ಕಷ್ಟ ಬಂದಪ್ಪಗ. ಇದು ಭಗವಂತ° ನವಗೆ ಶಿಕ್ಷೆಯ ಕಾರುಣ್ಯ. ನಮ್ಮ ಪತನದ ಹಿಂದೆ ಒಂದು ಉದ್ಧಾರದ ಬೀಜ ಇರ್ತು. ದುಃಖದ ಹಿಂದೆ ಸುಖದ ಬೀಜ ಇರ್ತು. ಹೀಂಗೆ ಶಾಸ್ತ್ರೀಯವಾಗಿ ನೋಡಿಯಪ್ಪಗ ಇಡೀ ಪ್ರಪಂಚದ ಹಿಂದೆ ಇಪ್ಪ ವಿಶ್ವಶಕ್ತಿ, ಮಹಾ ಕಾರುಣ್ಯಮೂರ್ತಿಯಾಗಿ ನಮ್ಮ ರಕ್ಷಿಸುತ್ತು ಎಂಬ ವಿಚಾರ ಮೂಡುತ್ತು. ಏಳ್ಳೆ ಎಡಿಯದ್ದ ಮಗುವಿನ ಅಭ್ಹೆ ಹೇಂಗೆ ನೋಡಿಕೊಳ್ಳುತ್ತು ಹಾಂಗೆಯೇ ಭಗವಂತ° ನಮ್ಮ ಪ್ರತಿಕ್ಷಣ ರಕ್ಷಿಸುತ್ತಾ ಇರುತ್ತ°. ಇದು ಅಧ್ಯಾತ್ಮ ಮಾರ್ಗಲ್ಲಿ ನಿರಂತರ ಇರೆಕ್ಕಪ್ಪ ಅಂತಃಪ್ರಜ್ಞೆ.
ಶ್ಲೋಕ
ನಾsದತ್ತೇ ಕಸ್ಯಚಿತ್ ಪಾಪಂ ನ ಚೈವ ಸುಕೃತಂ ವಿಭುಃ ।
ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ ॥೧೫॥
ಪದವಿಭಾಗ
ನ ಆದತ್ತೇ ಕಸ್ಯಚಿತ್ ಪಾಪಮ್ ನ ಚ ಏವ ಸುಕೃತಮ್ ವಿಭುಃ । ಅಜ್ಞಾನೇನ ಆವೃತಮ್ ಜ್ಞಾನಮ್ ತೇನ ಮುಹ್ಯಂತಿ ಜಂತವಃ ॥
ಅನ್ವಯ
ವಿಭುಃ ನ ಕಸ್ಯಚಿತ್ ಪಾಪಮ್, ನ ಚ ಏವ ಸುಕೃತಮ್ ಆದತ್ತೇ । ಅಜ್ಞಾನೇನ ಜ್ಞಾನಮ್ ಆವೃತಮ್, ತೇನ ಜಂತವಃ ಮುಹ್ಯಂತಿ ।
ಪ್ರತಿಪದಾರ್ಥ
ವಿಭುಃ – ಪರಮ ಪ್ರಭು (ಪರಬ್ರಹ್ಮ°, ಭಗವಂತ°), ಕಸ್ಯಚಿತ್ ಪಾಪಮ್ – ಆರೊಬ್ಬನ ಪಾಪವ, ಚ- ಕೂಡ, ಏವ – ಖಂಡಿತವಾಗಿಯೂ, ಸು-ಕೃತಮ್ – ಪುಣ್ಯಕಾರ್ಯವ, ನ ಆದತ್ತೇ – ಸ್ವೀಕರಿಸುತ್ತಿಲ್ಲೆ, ಅಜ್ಞಾನೇನ – ಅಜ್ಞಾನಂದ, ಜ್ಞಾನಮ್ – ಜ್ಞಾನವು, ಆವೃತಮ್ – ಆವೃತವಾಯ್ದು, ತೇನ – ಅದರಿಂದ, ಜಂತವಃ – ಜೀವಿಗೊ,ಮುಹ್ಯಂತಿ – ದಿಗ್ಭ್ರಮೆಗೊಳ್ಳುತ್ತವು.
ಅನ್ವಯಾರ್ಥ
ಭಗವಂತ° ಆರ ಪಾಪವನ್ನಾಗಲೀ ಪುಣ್ಯವನ್ನಾಗಲೀ ಸ್ವೀಕರಿಸುತ್ತನಿಲ್ಲೆ. ದೇಹಸ್ಥ ಜೀವಿಗಳ ನಿಜವಾದ ಜ್ಞಾನವ ಅಜ್ಞಾನವು ಮುಚ್ಚುತ್ತದರಿಂದ ಅವು ದಿಗ್ಭ್ರಮೆಗೊಳಗಾವ್ತವು.
ತಾತ್ಪರ್ಯ/ವಿವರಣೆ
ವಿಭುಃ – ಭಗವಂತ°, ಅನಾದಿ ನಿತ್ಯ°, ಸತ್ಯ° , ನಿತ್ಯತೃಪ್ತ°. ಯಾವುದೇ ಪಾಪ ಪುಣ್ಯಂಗೊ ಅವಂಗೆ ಬೇಕಾದ್ದಿಲ್ಲೆ, ಅಂಟುತ್ತೂ ಇಲ್ಲೆ. ಅವನದ್ದು ಅಮಿತವಾದ ಜ್ಞಾನ, ಸಂಪತ್ತು, ಶಕ್ತಿ, ಕೀರ್ತಿ, ಸೌಂದರ್ಯ ಮತ್ತು ತ್ಯಾಗ. ಯಾವುದೇ ಪಾಪ ಪುಣ್ಯ ಅವನ ಹಂದುಸುತ್ತಿಲ್ಲೆ. ಅವ° ಯಾವ ಜೀವಿಗೂ ಒಂದು ವಿಶಿಷ್ಟ ಸನ್ನಿವೇಶವ ಸೃಷ್ಟಿಸುತ್ತನಿಲ್ಲೆ. ಆದರೆ, ಜೀವಿಯು ಅಜ್ಞಾನಂದ ದಿಗ್ಭ್ರಮೆಗೆ ಒಳಗಾವ್ತ°, ಬದುಕ್ಕಿಲ್ಲಿ ಯಾವುದೋ ಒಂದು ಸ್ಥಿತಿಲಿ ಇಪ್ಪಲೆ ಬಯಸುತ್ತ°. ಇದರಿಂದ ಅವನ ಕ್ರಿಯೆ-ಪ್ರತಿಕ್ರಿಯೆಂಗಳ ಸರಪಳಿ ಪ್ರಾರಂಭ ಆವ್ತು. ಜೀವಿಯು ಶ್ರೇಷ್ಥ ಸ್ವಭಾವದವನಾದ್ದರಿಂದ ಅವನಲ್ಲಿ ಜ್ಞಾನವು ತುಂಬಿರುತ್ತು. ಆದರೂ ತನ್ನ ಮಿತಿವಾದ ಶಕ್ತಿಯ ದೆಸೆಂದಲಾಗಿ ಅಜ್ಞಾನದ ಪ್ರಭಾವಕ್ಕೆ ಒಳಗಾವ್ತ°. ಭಗವಂತ° ಸರ್ವಶಕ್ತ°, ಜೀವಿಯು ಸರ್ವಶಕ್ತನಲ್ಲ. ಭಗವಂತ° ಸರ್ವಜ್ಞ°, ಜೀವಿಯು ಅವನ ಒಂದು ಸಣ್ಣ ಅಣು. ಅವ° ಜೀವಂತ ಆತ್ಮನಾದ್ದರಿಂದ ಸ್ವತಂತ್ರ ಸಂಕಲ್ಪಂದ ಏನನ್ನಾರು ಅಪೇಕ್ಷಿಸುವ ಶಕ್ತಿ ಇರ್ತು. ಇಂತಹ ಅಪೇಕ್ಷೆಯ ಸರ್ವಸ್ವತಂತ್ರನಾದ ಭಗವಂತ° ಮಾತ್ರ ಪೂರೈಸಲೆ ಸಾಧ್ಯ. ಆದ್ದರಿಂದ ಜೀವಿಯು ತನ್ನ ಬಯಕೆಗಳಿಂದ ದಿಗ್ಭ್ರಮೆಗೊಂಡಪ್ಪಗ ಭಗವಂತ° ಆ ಬಯಕೆಗಳ ಪೂರೈಸಿಗೊಂಬಲೆ ಅವಂಗೆ ಅವಕಾಶ ನೀಡುತ್ತ°. ಆದರೆ ಜೀವಿಯು ಬಯಸಿದ ಆ ನಿರ್ದಿಷ್ಟ ಸನ್ನಿವೇಶದ ಕ್ರಿಯೆ ಮತ್ತು ಪ್ರಕ್ರಿಯೆಗೊಕ್ಕೆ ಭಗವಂತ° ಹೊಣೆ ಅಲ್ಲ. ಆದ್ದರಿಂದ ದಿಗ್ಭ್ರಮೆಗೊಳಗಾದ ದೇಹಸ್ಥ ಆತ್ಮ° ತನ್ನ ಸಂದರ್ಭಾನುಸಾರವಾಗಿ ಒದಗಿದ ಐಹಿಕದೇಹದೊಂದಿಂಗೆ ಗುರುತಿಸಿಗೊಳ್ಳುತ್ತ°. ಇದರಿಂದ ಬದುಕಿನ ತಾತ್ಕಾಲಿಕ ಸುಖದುಃಖಂಗೊಕ್ಕೆ ಒಳಗಾವ್ತ°. ಪರಮಾತ್ಮನಾಗಿ ಭಗವಂತ° ಜೀವಿಯ ನಿರಂತರ ಸಖ. ಹೂವಿನ ಹತ್ತರೆ ಇಪ್ಪಗ ಹೂವಿನ ಪರಿಮಳವ ಗ್ರಹಿಸಿಗೊಂಬ ಹಾಂಗೆ ಭಗವಂತ ಆತ್ಮದ ಆಸೆಯ ಅರ್ಥಮಾಡಿಗೊಳ್ತ. ಆಸೆಯು ಜೀವಿಯ ಬದ್ಧತೆಯ ಒಂದು ಸೂಕ್ಷ್ಮ ರೂಪ. ಜೀವಿಯ ಯೋಗ್ಯತೆಗೆ ಅನುಸಾರವಾಗಿ ಭಗವಂತ° ಅವನ ಆಸೆಯ ನೆರವೇರಿಸಿ ಕೊಡುತ್ತ°. ಮನುಷ್ಯ ತಾನೊಂದು ಬಗದರೆ, ಭಗವಂತ° ಜೀವಿಯ ಯೋಗ್ಯತೆಗನುಗುಣವಾಗಿ ಇನ್ನೊಂದು ರೀತಿಲಿ ತೀರ್ಮಾನ ಕೈಗೊಳ್ಳುತ್ತ°. ಆದ್ದರಿಂದ ಯಾವನೇ ವ್ಯಕ್ತಿಯು ತನ್ನ ಬಯಕೆಂಗಳ ಪೂರೈಸಿಗೊಂಬಷ್ಟು ಶಕ್ತ° ಅಲ್ಲ. ಭಗವಂತ° ಎಲ್ಲೋರ ವಿಷಯಲ್ಲೂ ತಟಸ್ಥನಾಗಿಪ್ಪದರಿಂದ ಅತ್ಯಲ್ಪ ಸ್ವಾತಂತ್ರ್ಯ ಇಪ್ಪ ಜೀವಿಗಳ ಆಸೆಗಳಲ್ಲಿ ಕೈ ಹಾಕುತ್ತನಿಲ್ಲೆ. ಆದ್ದರಿಂದ ಮನುಷ್ಯನಾದವ ಮೂಲಸ್ವಭಾವಕ್ಕನುಗುಣವಾಗಿ ವರ್ತಿಸುತ್ತನಾದರೂ ಮನುಷ್ಯಜೀವನ ಎಂಬುದು ಬುದ್ಧಿ ಎಂಬ ಶಕ್ತಿಯ ಹೊತ್ತು ಹುಟ್ಟುವದರಿಂದ ಆ ಬುದ್ಧಿಶಕ್ತಿಯ ಮೂಲಸ್ವಭಾವಕ್ಕೆ ರೂಢಿಸಿ ಅಜ್ಞಾನವ ತೊಲಗಿಸಿ ಜ್ಞಾನವ ಸಂಪಾದಿಸಿ ಸತ್ಯವ ಕಂಡುಕೊಂಬ ದಾರಿಲಿ ನಡೆಕು ಹೇಳ್ವ ಧ್ವನಿ. ಇಲ್ಲಿ ವಿಭುಃ (ಭಗವಂತ°) ಹೇಳಿರೆ ಜೀವಾತ್ಮ. ಭಗವಂತ° ಹೇಳುತ್ತ° – ಭಗವಂತಂಗೂ ಇತರರ ಪಾಪಪುಣ್ಯದ ಅಂಟು ಇಲ್ಲೆ., ಜೀವಾತ್ಮನೂ ಯಾವ ಇನ್ನೊಬ್ಬನ ಪಾಪವನ್ನೋ ಪುಣ್ಯವನ್ನೋ ಪಡವಲೆ ಇಲ್ಲೆ. ಇನ್ನೊಬ್ಬ ಮಾಡಿದ ಪಾಪ ಪುಣ್ಯದ ಅಂಟು ತನ್ನ ಜೀವಾತ್ಮಂಗೆ ಇಲ್ಲೆ. ಅಜ್ಞಾನದ ಕಾರಣಂದ ಮಾತ್ರವೇ ಜನಂಗೊ ದಿಗ್ಭ್ರಮೆಗೆ ತುತ್ತಾವ್ತವು. ನವಗೆ ಸ್ವತಂತ್ರವಾದ ಕರ್ತೃತ್ವ ಇಲ್ಲೆ. ನಾವು ಅವನ ಅಧೀನ ಎಂಬ ವಿಚಾರಲ್ಲಿ ಜನಂಗೊ ಸದಾ ಗೊಂದಲಕ್ಕೆ ಒಳಗಾವ್ತವು. ಎಲ್ಲವನ್ನೂ ಭಗವಂತನೇ ಮಾಡುತ್ತದಾದರೆ ಪಾಪ ಕರ್ಮಂಗಳ ಅಂಟು ನವಗೆ ಎಂತಕೆ ಹೇಳ್ವ ಪ್ರಶ್ನೆ ಅಜ್ಞಾನಂದ ನವಗೆ ಉಂಟಾವ್ತು. ಎಷ್ಟು ಅಧ್ಯಯನ ಮಾಡಿರೂ ಈ ಕರ್ಮ ಸಿದ್ಧಾಂತ ನವಗೆ ಅರ್ಥವಾಗದ್ದೆ ಇಪ್ಪಲೆ ನಮ್ಮ ಅಜ್ಞಾನವೇ ಕಾರಣ.
ಶ್ಲೋಕ
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ ॥೧೬॥
ಪದವಿಭಾಗ
ಜ್ಞಾನೇನ ತು ತತ್ ಅಜ್ಞಾನಮ್ ಯೇಷಾಮ್ ನಾಶಿತಮ್ ಆತ್ಮನಃ । ತೇಷಾಮ್ ಆದಿತ್ಯ ವತ್ ಜ್ಞಾನಂ ಪ್ರಕಾಶಯತಿ ತತ್ ಪರಂ ॥
ಅನ್ವಯ
ಯೇಷಾಂ ತು ತತ್ ಅಜ್ಞಾನಮ್ ಆತ್ಮನಃ ಜ್ಞಾನೇನ ನಾಶಿತಮ್, ತೇಷಾಂ ಜ್ಞಾನಮ್ ಆದಿತ್ಯವತ್ ತತ್ ಪರಂ ಪ್ರಕಾಶಯತಿ ॥
ಪ್ರತಿಪದಾರ್ಥ
ಯೇಷಾಮ್ – ಆರ, ತು – ಆದರೆ(ಆದರೋ), ತತ್ ಅಜ್ಞಾನಮ್ – ಆ ಅಜ್ಞಾನವು, ಆತ್ಮನಃ – ಜೀವಿಗಳ, ಜ್ಞಾನೇನ – ಜ್ಞಾನಂದ, ನಾಶಿತಮ್ – ನಾಶಮಾಡಲ್ಪಟ್ಟತ್ತು, ತೇಷಾಮ್ – ಅವರ, ಜ್ಞಾನಮ್ – ಜ್ಞಾನವು, ಆದಿತ್ಯವತ್ – ಉದುಸುವ ಸೂರ್ಯನಾಂಗೆ, ತತ್ ಪರಮ್ – ಆ ಕೃಷ್ಣಪ್ರಜ್ಞೆಯು, ಪ್ರಕಾಶಯತಿ – ಪ್ರಕಟವಾವ್ತು/ ಪ್ರಕಾಶಿಸುತ್ತು.
ಅನ್ವಯಾರ್ಥ
ಅಜ್ಞಾನವ ನಾಶಮಾಡುವ ಜ್ಞಾನದ ಬೆಣಚ್ಚಿಯ ಮನುಷ್ಯ° ಪಡಕ್ಕೊಂಡಪ್ಪಗ ಹಗಲು ಹೊತ್ತಿಲ್ಲಿ ಸೂರ್ಯ° ಎಲ್ಲದರ ಮೇಲೆಯೂ ಬೆಣಚ್ಚು ಹರುಸುವ ಹಾಂಗೆ ಅವನ ಜ್ಞಾನವು ಎಲ್ಲವನ್ನೂ ಪ್ರಕಾಶಿಸುತ್ತು.
ತಾತ್ಪರ್ಯ/ವಿವರಣೆ
ಭಗವಂತನ ಮರದವಂಗೆ ದಿಗ್ಭ್ರಮೆಯೇ ಇಪ್ಪದು. ಆದರೆ, ಕೃಷ್ಣಪ್ರಜ್ಞೆಲಿಪ್ಪವಂಗೆ ದಿಗ್ಭ್ರಮೆ ಹೇಳ್ವದೇ ಇಲ್ಲೆ. ಭಗವಂತಂಗೆ ಸಂಪೂರ್ಣ ಶರಣಾದಪ್ಪಗ ಪರಿಪೂರ್ಣ ಜ್ಞಾನ ಲಭಿಸುತ್ತು. ಸೂರ್ಯ° ಹಗಲಿಲ್ಲಿ ಎಲ್ಲದರ ಮೇಲೆ ಪ್ರಕಾಶ ಚೆಲ್ಲಿ ಕಾಂಬ ಹಾಂಗೆ ಮಾಡುತ್ತ ಹಾಂಗೆ ಕೃಷ್ಣಪ್ರಜ್ಞೆಲಿ ಜ್ಞಾನವ ಪಡದವಂಗೆ ಎಲ್ಲವೂ ಪ್ರಕಾಶವಾಗಿ ಕಾಣುತ್ತು.
ಬನ್ನಂಜೆ ವಿವರುಸುತ್ತವು – ನಾವು ನಮ್ಮ ಗೊಂದಲಂಗಳ ಪರಿಹರಿಸಿಗೊಂಬಲೆ ಇಪ್ಪ ಒಂದೇ ಮಾರ್ಗ ಹೇಳಿರೆ – ಜ್ಞಾನ ಮಾರ್ಗಲ್ಲಿ ಸಾಧನೆ, ಅರ್ಥಾತ್., ಕೃಷ್ಣಪ್ರಜ್ಞೆಲಿ ಸಾಧನೆ ಮಾಡಿ ಸತ್ಯವ ತಿಳ್ಕೊಂಬದು. ಆದರೆ, ನಮ್ಮ ಸಮಸ್ಯೆ ಎಂತ ಹೇಳಿರೆ ನಮ್ಮೊಳ ಇಪ್ಪ ಜೀವ ಸ್ವರೂಪಲ್ಲಿ ಜ್ಞಾನ ಇದ್ದು. ಆದರೆ, ಅದರ ಅಜ್ಞಾನ ಹೇಳ್ವ ಮುಸುಕು ಕವಿದಿರ್ತು. ನಾವು ನಮ್ಮ ಜೀವಸ್ವರೂಪವ ಅಜ್ಞಾನ ಹೇಳ್ವ ಪೆಟ್ಟಿಗೆಲಿ ಮುಚ್ಚಿಮಡಿಕ್ಕೊಂಡಿದು. ಜ್ಞಾನಕ್ಕೆ ಮುಸುಕು, ಮುಚ್ಚಳ ಅಜ್ಞಾನ. ನವಗೆ ಅದರ ಸುಲಬಕ್ಕೆ ತೆಗವಲೆ ಇಷ್ಟ ಇಲ್ಲೆ.
ನಾವು ಮದಾಲು ತಿಳಿಯೆಕ್ಕಪ್ಪದು “ಆನು” ಹೇಳಿರೆ ಎಂತರ ಹೇಳ್ವದರ. ಅದು ಗೊಂತಾದಪ್ಪಗ ನಮ್ಮ ಸೀಮಿತತೆ ಎಂತರ, ನಮ್ಮ ಶಕ್ತಿ ಎಂತರ, ಎಷ್ಟು; ನಮ್ಮ ಅಲ್ಪತ್ವ ಎಂತರ ಹೇಳ್ವದು ತಿಳಿಯಲೆಡಿತ್ತು. ನಮ್ಮ ಇಂದ್ರಿಯದ ಒಡೆತನ ನಮ್ಮತ್ರೆ ಇಲ್ಲೆ, ನಮ್ಮ ಮನಸ್ಸು ನಾವು ಹೇಳಿದಾಂಗೆ ಕೇಳುತ್ತಿಲ್ಲೆ. ಹಾಂಗಾಗಿ, ನಾವು ಅದೆಲ್ಲವುದರ ಒಟ್ಟಿಂಗೇ ಇದ್ದು, ಆರೋ ಇದೆಲ್ಲವ ಇಲ್ಲಿ ಮಡುಗಿಬಿಟ್ಟಿದ್ದವು, ಇಂದ್ರಿಯಂದ ಅನುಭವ ಬತ್ತು, ಅದರ ಆನು ಅನುಭವಿದುತ್ತೆ ಹೇಳ್ವ ಅರಿವು ಮೂಡುತ್ತು. ಈ ಇಂದ್ರಿಯಂಗಳ ಕೊಟ್ಟವ° ಆರು, ಅದರಿಂದ ಅನುಭವ ಕೊಡುವವ° ಆರು ಹೇಳ್ವದು ಅರ್ಥವಾದಪ್ಪಗ, ತಾನು ಕೇವಲ ಪ್ರತಿಬಿಂಬ, ಮತ್ತು ಮೂಲಬಿಂಬ ಭಗವಂತ ಹೇಳ್ವ ಪ್ರಜ್ಞೆ ಮೂಡುತ್ತು. ಇದೆಕ್ಕೆಲ್ಲ ನಮ್ಮ ಅಜ್ಞಾನ ಪರದೆಯೇ ಕಾರಣ ಆಗಿರ್ತು. ‘ಜ್ಞಾನ’ ಹೇಳ್ವದು ಕಿಚ್ಚಿನ ಹಾಂಗೆ. ನಮ್ಮೊಳ ಇಪ್ಪ ಜ್ಞಾನದ ಕಿಡಿಯ ಸತತ ಅಂತರಂಗದ ಮನನಂದ ಪ್ರಜ್ವಲಿಸೆಕು. ಅಂಬಗ ಅದು ಈ ‘ಅಜ್ಞಾನ’ ಹೇಳ್ವ ಪರದೆಯ ಸುಟ್ಟುಬಿಡುತ್ತು. ನಿರಂತರ ಅಂತರಂಗದ ಮನನ ಮಾತ್ರ ನಮ್ಮ ಅಂತರಂಗದ ಜ್ಞಾನವ ಪ್ರಜ್ವಲಿಸುತ್ತು. ಹೆರಾಣ ಶ್ರವಣ, ಅಧ್ಯಯನ ಇದಕ್ಕೆ ಪೂರಕ. ಒಂದರಿ, ಅಜ್ಞಾನ ಪರದೆ ಸಂಪೂರ್ನ ಸುಟ್ಟು ನಾಶ ಆದಪ್ಪಗ ನವಗೆ ಸತ್ಯದ ಸಾಕ್ಷಾತ್ಕಾರ ಆವ್ತು. ಈ ಜ್ಞಾನದ ಕಿಚ್ಚು ಸೂರ್ಯಪ್ರಕಾಶಂದ ದೊಡ್ಡದು. ಹೇಂಗೆ ಹೆರ ಪ್ರಪಂಚವ ಹಗಲು ಹೊತ್ತಿಲ್ಲಿ ಸೂರ್ಯ ಪ್ರಕಾಶಿಸುತ್ತನೋ, ಹಾಂಗೇ, ಈ ಜ್ಞಾನ ಅಂತರಂಗ ಪ್ರಪಂಚವ ಬೆಳಗಿಸುತ್ತು. ಇದು ಅಪರೋಕ್ಷ ಜ್ಞಾನ ಮತ್ತು ಈ ಜ್ಞಾನ ಭಗವಂತನ ಸಾಕ್ಷಾತ್ಕಾರ ಮಾಡುಸುತ್ತು.
ಹಾಂಗಾರೆ ನವಗೂ ಅಪರೋಕ್ಷಜ್ಞಾನವ ಪಡೆಕು. ಅದು ಹೇಂಗೆ? ಅಪರೋಕ್ಷ ಜ್ಞಾನ ಬರೆಕಾರೆ ನಾವು ಎಂತ ಮಾಡೆಕು? –
ಶ್ಲೋಕ
ತದ್ ಬುದ್ಧಯಸ್ತದಾತ್ಮಾನಃ ತನ್ನಿಷ್ಠಾಸ್ತತ್ಪರಾಯಣಾಃ ।
ಗಚ್ಛಂತ್ಯ ಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ ।।೧೭॥
ಪದವಿಭಾಗ
ತದ್ ಬುದ್ಧಯಃ ತತ್ ಆತ್ಮನಃ ತತ್ ನಿಷ್ಠಾಃ ತತ್ ಪರಾಯಣಾಃ । ಗಚ್ಛಂತಿ ಅಪುನಃ ಆವೃತ್ತಿಮ್ ಜ್ಞಾನ-ನಿರ್ಧೂತ-ಕಲ್ಮಷಾಃ ॥
ಅನ್ವಯ
ತತ್ ಬುದ್ಧಯಃ, ತತ್ ಆತ್ಮನಃ, ತತ್ ನಿಷ್ಠಾಃ, ತತ್ ಪರಾಯಣಾಃ, ಜ್ಞಾನ-ನಿರ್ಧೂತ-ಕಲ್ಮಷಾಃ ಅಪುನರಾವೃತ್ತಿಂ ಗಚ್ಛಂತಿ ।
ಪ್ರತಿಪದಾರ್ಥ
ತತ್ ಬುದ್ಧಯಃ – ಆ ಪರಮೋನ್ನತಲ್ಲಿಯೇ ಸದಾ ಬುದ್ಧಿ ಇಪ್ಪವು, ತತ್ ಆತ್ಮನಃ – ಆ ಪರಮೋನ್ನತಲ್ಲಿಯೇ ಸದಾ ಮನಸ್ಸುಮಡಿಕ್ಕೊಂಡವು, ತತ್ ನಿಷ್ಠಾಃ – ಆ ಪರಮೋನ್ನತಿಲ್ಲಿ ಮಾತ್ರ ಶ್ರದ್ಧೆಯಿಪ್ಪವು, ತತ್ ಪರಾಯಣಾಃ – ಆ ಪರಮೋನ್ನತಲ್ಲಿಯೇ ಪೂರ್ಣ ಆಶ್ರಯ ಹೊಂದಿದವು, ಜ್ಞಾನ-ನಿರ್ಧೂತ-ಕಲ್ಮಷಾಃ – ಜ್ಞಾನಂದ ಸಂಶಯಂಗೊಶುದ್ಧರಾಗಿ, ಅಪುನಃ ಆವೃತ್ತಿಮ್ – ಪುನಃ ಆವೃತ್ತಿ ಇಲ್ಲದ್ದಲ್ಯಂಗೆ (ಮೋಕ್ಷಕ್ಕೆ), ಗಚ್ಛಂತಿ – ಹೋವ್ತವು.
ಅನ್ವಯಾರ್ಥ
ಮನುಷ್ಯನ ಬುದ್ಧಿ, ಮನಸ್ಸು, ಶ್ರದ್ಧೆ ಮತ್ತು ಆಶ್ರಯ ಎಲ್ಲವೂ ಪರಮ ಪ್ರಭುವಿಲ್ಲಿ ನೆಲೆನಿಂದಪ್ಪಗ ಪೂರ್ಣಜ್ಞಾನವು ಅವನ ಎಲ್ಲ ಸಂಶಯಂಗಳ ತೊಳದು ಹಾಕಿ ಅವನ ಪರಿಶುದ್ಧನನ್ನಾಗಿ ಮಾಡುತ್ತು. ಹೀಂಗೆ ಅವ° ಮುಕ್ತಿಮಾರ್ಗಲ್ಲಿ ನೇರವಾಗಿ ಮುನ್ನೆಡೆತ್ತ°.
ತಾತ್ಪರ್ಯ/ವಿವರಣೆ
ದಿವ್ಯ ಸತ್ಯವು ಭಗವಂತನೇ. ಭಗವಂತ°, ದೇವೋತ್ತಮ ಪರಮಪುರುಷ° ಹೇಳ್ವ ದೃಢವಾದ ಹೇಳಿಕೆಯ ಸುತ್ತ ಕೇಂದ್ರೀಕೃತವಾಗಿದ್ದು. ಎಲ್ಲ ವೈದಿಕ ಸಾಹಿತ್ಯವೂ ಹೇಳ್ವದು ಇದನ್ನೇ. ಪರತತ್ತ್ವ ಹೇಳಿರೆ ಪರಮಸತ್ಯ. ಪರಮಸತ್ಯವ ತಿಳುದವ° ಅದರ ಬ್ರಹ್ಮನ್, ಪರಮಾತ್ಮ, ಭಗವಾನ್ ಹೇಳಿ ತಿಳಿತ್ತವು. ಇದರಿಂದ ಮಿಗಿಲಾಗಿ ಬೇರೆ ಎಂತದೂ ಇಲ್ಲೆ. ಹಾಂಗಾಗಿ, ಎಲ್ಲ ರೀತಿಲಿಯೂ ಭಗವಂತ° ಪರಮಸತ್ಯ. ಆರ ಮನಸ್ಸು, ಬುದ್ಧಿ, ಶ್ರದ್ದೆ ಮತ್ತು ಆಶ್ರಯ ಏವತ್ತೂ ಭಗವಂತನಲ್ಲಿ ಇರುತ್ತೋ, ಅಂದರೆ, ಕೃಷ್ಣಪ್ರಜ್ಞೆಲಿರುತ್ತೋ, ಅವನ ಎಲ್ಲ ಸಂದೇಹಂಗಳನ್ನೂ ಅವನ ಈ ಜ್ಞಾನ ತೊಳದು ಹಾಕುತ್ತು. ಅವಂಗೆ ಅಧ್ಯಾತ್ಮ ಕುರಿತು ಪ್ರತಿಯೊಂದು ಸಂಗತಿಯೂ ಪರಿಪೂರ್ಣವಾಗಿ ತಿಳಿತ್ತು. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ಭಗವಂತನಲ್ಲಿ ದ್ವಂದ್ವ (ಏಕಕಾಲಲ್ಲಿ ಏಕತೆ ಮತ್ತು ಪ್ರತ್ಯೇಕತೆ) ಇದ್ದು ಹೇಳ್ವದರ ಸರಿಯಾಗಿ ಅರ್ಥಮಾಡಿಗೊಳ್ಳುತ್ತ°. ಇಂತಹ ಆಧ್ಯಾತ್ಮಿಕ ಜ್ಞಾನದ ಬಲಂದ ಅವ° ಮುಕ್ತಿಮಾರ್ಗಲ್ಲಿ ದೃಢವಾಗಿ ಮುನ್ನೆಡೆತ್ತ°.
ಬನ್ನಂಜೆ ವಿವರುಸುತ್ತವು – ಅಜ್ಞಾನವ ಅಳುಶುವ ಮಾರ್ಗವ ಇಲ್ಲಿ ಭಗವಂತ° ಇಲ್ಲಿ ಲಾಯಕಕ್ಕೆ ವಿವರಿಸಿದ್ದ°. ಸುರುವಾಣದ್ದಾಗಿ ಭಗವಂತನಲ್ಲೇ ಬುದ್ಧಿಯ ಮಡಿಕ್ಕೊಂಬದು (ತತ್ ಬುದ್ಧಯಃ). ನಮ್ಮ ಮನಸ್ಸು ಎಲ್ಲ ವಿಷಯಂಗಳ ಗ್ರಹಿಸುತ್ತು, ಬುದ್ದಿ ತೀರ್ಮಾನ ಮಾಡುತ್ತು. ನಾವು ಭಗವಂತನಲ್ಲೇ ಸ್ಥಿರವಾಗಿ ನಮ್ಮ ಬುದ್ಧಿಯ ಮಡಿಕ್ಕೊಂಡರೆ ಅವ° ನಮ್ಮ ಬುದ್ಧಿಲಿ ಬಂದು ಕೂರುತ್ತ°. ಇದಕ್ಕಾಗಿ ನಾವು ಭಗವಂತನ ಕುರಿತಾಗಿ ನಮ್ಮ ಜ್ಞಾನವ ಬೆಳೆಶಿಗೊಳ್ಳೆಕು. ಭಗವಂತನ ವಿಷಯದ ನಿರಂತರ ಸಾಧನೆಂದ ನಾವು ಭಗವಂತನಲ್ಲಿ ನಮ್ಮ ಬುದ್ಧಿಯ ಸ್ಥಿರಗೊಳುಸಿರೆ, ಭಗವಂತ° ನಮ್ಮ ಬುದ್ಧಿಲಿ ಬಂದ ನೆಲೆಗೊಳ್ಳುತ್ತ°.
ಭಗವಂತಂಗೆ ನಮ್ಮ ಆತ್ಮವ, ನಮ್ಮ ಮನಸ್ಸಿನ ಅರ್ಪಿಸೆಕು (ತತ್ ಆತ್ಮನಃ). ಅವ° ಭಗವಂತ° ನಮ್ಮ ಸ್ವಾಮಿಯಾಗಲಿ. ನಾವು ‘ಭಗವಂತನೇ ಸದಾ ನವಗೆ ಮಾರ್ಗದರ್ಶನ ಮಾಡುವ ಪ್ರಭು, ಅವನ ನಿಯಂತ್ರಣಲ್ಲಿ ನಮ್ಮ ಬದುಕು ಸುಗಮವಾಗಿ ನಡೆಯಲಿ’ – ಇದು ನಮ್ಮ ನಿರಂತರ ಪ್ರಾರ್ಥನೆ ಆಯೇಕು.
ಭಗವಂತನಲ್ಲಿ ನಿಷ್ಠೆ (ತತ್ ನಿಷ್ಠಾಃ). ಅದು ಇಲ್ಲದ್ದೆ ಇದ್ರೆ ಏನನ್ನೂ ಮಾಡ್ಳೆ ಸಾಧ್ಯ ಇಲ್ಲೆ. ನಿಷ್ಠಾ ಹೇಳಿರೆ ಭಕ್ತಿ. ಹಾಂಗಾಗಿ, ಭಗವಂತನಲ್ಲೇ ಸದಾ ಭಕ್ತಿ ಇರುಸಿಗೊಳ್ಳೆಕು. ಭಕ್ತಿ ಇಲ್ಲದ ಧ್ಯಾನ ಪೂಜೆ ಮಾಡುವದರಿಂದ ಯಾವ ಪ್ರಯೋಜನವೂ ಇಲ್ಲೆ. ಒಂದರಿ ನವಗೆ ಭಗವಂತನ ಬಗ್ಗೆ ಜ್ಞಾನ ಬಂದರೆ ಭಕ್ತಿ ತನ್ನಷ್ಟಕ್ಕೆ ತಾನೇ ಬತ್ತು. ಜ್ಞಾನ ಇಲ್ಲದ್ದ ಭಕ್ತಿ – ಮೂಢಭಕ್ತಿ. ಜ್ಞಾನ ಇದ್ದುಗೊಂಡು ಭಕ್ತಿ ಇಲ್ಲದ್ರೆ (ಅಹಂಕಾರಂದ) ಆ ಜ್ಞಾನಂದ ಯಾವ ಉಪಯೋಗವೂ ಇಲ್ಲೆ. ಅದು ಶುಷ್ಕ ಪಾಂಡಿತ್ಯ ಆವ್ತು.
ಹೀಂಗೆ ಮನಸ್ಸು-ಬುದ್ಧಿಯ ಭಗವಂತನಲ್ಲಿ ನೆಲೆಸಿ, ಜ್ಞಾನಪೂರ್ವಕ ಭಕ್ತಿಯ ರೂಢಿಸಿಯಪ್ಪಗ ಎಲ್ಲಕ್ಕಿಂತ ದೊಡ್ಡ ಆಶ್ರಯ ಭಗವಂತ (ತತ್ ಪರಾಯಣಾಃ) ಹೇಳ್ವ ತಿಳುವಳಿಕೆ ನವಗೆ ಬತ್ತು. ಇದರಿಂದ ಸಂಸಾರವೇ ಸರ್ವಸ್ವ ಹೇಳ್ವ ನಮ್ಮ ಭ್ರಮೆ ದೂರ ಆವ್ತು. ಇಲ್ಲಿ ಇನ್ನೊಂದು ಮುಖ್ಯ ವಿಷಯ ಗಮನುಸೆಕ್ಕಾದ್ದು ಎಂತರ ಹೇಳಿರೆ, ಈ ಭಕ್ತಿ, ನಿಷ್ಠೆ, ಜ್ಞಾನ, ಆಶ್ರಯ ಹೇಳ್ವದು ಸಂಸಾರವ ಬಿಟ್ಟು ಹೋಪದಲ್ಲ. ನಾವು ಯಾವುದನ್ನೂ ಬಿಡೆಕ್ಕಾದ್ದಿಲ್ಲೆ. ಭಗವಂತ ಅದರ ನವಗೆ ಕೊಟ್ಟಿದ°. ಕೊಟ್ಟಷ್ಟು ಕಾಲ, ಇಪ್ಪಷ್ಟು ಕಾಲ ಅದರೊಟ್ಟಿಂಗೇ ಇದ್ದು ಗೊಂಡು ಅಹಂ ಬಿಟ್ಟು ಭಗವಂತನ ಪ್ರೀತಿಗಾಗಿ ಸಂಸಾರ-ಕಾಮನೆಲಿಯೇ ಮನಸ್ಸಿಪ್ಪದರ ಬಿಟ್ಟು ಕೃಷ್ಣಪ್ರಜ್ಞೆಲಿ ವಿಹಿತ ಕರ್ತ್ವವ್ಯವ ಮಾಡುವದು ಧರ್ಮ. ಇದು ಭಗವಂತನ ಸೇರ್ಲೆ ಇಪ್ಪ ಮಾರ್ಗ, ಭಗವಂತ° ತೋರುಸುವ ಪರಿಹಾರ. ಎಲ್ಲಕ್ಕಿಂತ ಮೇಲೆ ಎಲ್ಲರಿಂಗೂ ಆಶ್ರಯವಾಗಿಪ್ಪ ಪರತತ್ತ್ವವ ಎಚ್ಚರಂದ ನಮ್ಮ ಪಾಲಿಂಗೆ ಬಂದ ಕರ್ತವ್ಯವ ಭಗವಂತನ ಪ್ರಸಾದ ಹೇಳ್ವ ಭಾವನೆಂದ ಮಾಡೆಕ್ಕಪ್ಪದು. ಓಡಿಹೋಗೆಡ., ಸಂಸಾರದ ಬದುಕು ಭಗವಂತ° ಕೊಟ್ಟದ್ದರ ಪ್ರಸಾದ ರೂಪವಾಗಿ ತೆಕ್ಕೊ. ನಮ್ಮ ಎಲ್ಲ ಸರ್ವಸ್ವವ ಭಗವಂತನದ್ದು ಹೇಳಿ ತಿಳ್ಕೊಳ್ಳೆಕು. ಅವನ ಆಶ್ರಯಲ್ಲಿ, ಅವನ ಪ್ರಸಾದಲ್ಲಿ ನಾವು ಬದುಕ್ಕುತ್ತಿಪ್ಪದು, ನಮ್ಮ ಕರ್ತವ್ಯ ಅವನ ಸೇವೆ ಹೇಳಿ ತಿಳ್ಕೊಂಡ್ರೆ, ನಮ್ಮ ಆತ್ಮಕ್ಕೆ ಅಂಟಿದ ಕೊಳೆ ತೊಳದು ಹೋವುತ್ತು, ಮನಸ್ಸು ಸ್ವಚ್ಛ ಆವುತ್ತು. ಆವಾಗ ಜ್ಞಾನ ಬೆಳಗುತ್ತು, ಭಗವಂತನ ಸಾಕ್ಷಾತ್ಕಾರ ಆವುತ್ತು. ಇದರಿಂದ ಮತ್ತೆ ತಿರುಗಿ ಬಾರದ್ದ ಶಾಶ್ವತ ಮೋಕ್ಷವ ನವಗೆ ಪಡವಲೆಡಿಗು.
ಶ್ಲೋಕ
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥೧೮॥
ಪದವಿಭಾಗ
ವಿದ್ಯಾ-ವಿನಯ-ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ । ಶುನಿ ಚ ಏವ ಶ್ವಪಾಕೇ ಚ ಪಂಡಿತಾಃ ಸಮ-ದರ್ಶಿನಃ ॥
ಅನ್ವಯ
ಪಂಡಿತಾಃ ವಿದ್ಯಾ-ವಿನಯ-ಸಂಪನ್ನೇ ಬ್ರಾಹ್ಮಣೇ, ಗವಿ, ಹಸ್ತಿನಿ, ಶುನಿ ಚ ಶ್ವಪಾಕೇ ಚ ಏವ ಸಮ-ದರ್ಶಿನಃ ಸಂತಿ ।
ಪ್ರತಿಪದಾರ್ಥ
ಪಂಡಿತಾಃ – ಬುದ್ಧಿವಂತರಾದವು, ವಿದ್ಯಾ-ವಿನಯ-ಸಂಪನ್ನೇ – ವಿದ್ಯೆ ವಿನಯ ಹೊಂದಿಪ್ಪವನಲ್ಲಿ, ಬ್ರಾಹ್ಮಣೇ – ಬ್ರಾಹ್ಮಣನಲ್ಲಿ, ಗವಿ – ಹಸುವಿಲ್ಲಿ, ಹಸ್ತಿನಿ – ಆನೆಲಿ, ಶುನಿ – ಶ್ವಾನಲ್ಲಿ, ಚ – ಮತ್ತೆ, ಶ್ವಪಾಕೇ – ನಾಯಿಯ ತಿಂಬವನಲ್ಲಿ (ನೀಚ ಶೂದ್ರ, ಅಂತ್ಯಜ), ಚ – ಕ್ರಮವಾಗಿ, ಏವ – ಖಂಡಿತವಾಗಿಯೂ, ಸಮದರ್ಶಿನಃ – ಸಮದರ್ಶಿಗಳಾಗಿರುತ್ತವು (ಸಮಾನ ಭಾವನೆ ಇಪ್ಪವು ಆಗಿರುತ್ತವು).
ಅನ್ವಯಾರ್ಥ
ನಮ್ರರಾದ ಜ್ಞಾನಿಗೊ, ನಿಜವಾದ ಜ್ಞಾನವ ಪಡಕ್ಕೊಂಡವರಾಪ್ಪದರಿಂದ, ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನನ್ನೂ, ದನಗಳನ್ನೂ, ಆನೆಯನ್ನೂ, ನಾಯಿಯನ್ನೂ, ನಾಯಿಯ ಮಾಂಸವ ತಿಂಬ ಕ್ಷುದ್ರ ಜಾತಿಯವನನ್ನೂ (ಶೂದ್ರ, ಹೊಲೆಯ, ಆದಿವಾಸಿ) ಒಂದೇ ರೀತಿ ಕಾಣುತ್ತವು.
ತಾತ್ಪರ್ಯ/ವಿವರಣೆ
ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ಯಾವುದೇ ವರ್ಗಂಗಳಲ್ಲಿ ಅಥವಾ ಜಾತಿಗಳಲ್ಲಿ ವ್ಯತ್ಯಾಸವ ಕಾಣುತ್ತನಿಲ್ಲೆ. ಸಾಮಾಜಿಕ ದೃಷ್ಟಿಲಿ ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣ°, ಮತ್ತು, ನಾಯಿಯತಿಂಬ ನೀಜಜಾತಿಯವೂ ಬೇರೆ ಬೇರೆ ಗುರುತಿಸಲ್ಪಟ್ಟಿಕ್ಕು. ನಾಯಿ, ದನ, ಆನೆ ಇತ್ಯಾದಿ ಪ್ರಾಣಿವರ್ಗದ ದೃಷ್ಟಿಂದ ಬೇರೆ ಬೇರೆ ಆದಿಕ್ಕು. ಆದರೆ ದೇಹದ ಈ ವ್ಯತ್ಯಾಸಂಗೊ ವಿದ್ವಾಂಸನಾದ ಆಧ್ಯಾತ್ಮವಾದಿಯ ದೃಷ್ಟಿಂದ ಅರ್ಥವಿಲ್ಲದ್ದವಾಗಿರ್ತು. ಇದಕ್ಕೆ ಪರಮಪ್ರಭುವಿನೊಟ್ಟಿಂಗೆ ಅವುಗೊಕ್ಕೆ ಇಪ್ಪ ಸಂಬಂಧವೇ ಕಾರಣ. ಭಗವಂತ° ಸ್ವಾಂಶವಾಗಿ ಪರಮಾತ್ಮನಾಗಿ ಎಲ್ಲೋರ ಹೃದಯಲ್ಲಿಯೂ ಇದ್ದ. ಈ ರೀತಿಯಾಗಿ ತಿಳ್ಕೊಂಬದೇ ವಿದ್ವತ್ತು. ಬೇರೆಬೇರೆ ಜಾತಿಗಳ ಅಥವಾ ಬೇರೆ ಬೇರೆ ಜೀವವರ್ಗಂಗಳ ದೇಹದ ಮಟ್ಟಿಂಗೆ ಹೇಳುತ್ತಾದರೆ ಭಗವಂತ° ಎಲ್ಲೋರ ವಿಷಯಲ್ಲಿಯೂ ಒಂದೇ ರೀತಿಯ ದಯೆಯ ತೋರುಸುತ್ತ°. ಜೀವಿಗಳ ಸನ್ನಿವೇಶ ಏನೇ ಆಗಿರಲಿ ಭಗವಂತ° ಮಾತ್ರ ಅಲ್ಲಿಯೂ ಪರಮಾತ್ಮನಾಗಿಯೇ ಇರುತ್ತ°. ಬ್ರಾಹ್ಮಣನಲ್ಲಿಯೂ, ಶೂದ್ರಹೊಲೆಯನಲ್ಲಿಯೂ, ಪಶುಪಕ್ಷಿ ಪ್ರಾಣಿಗಳಲ್ಲಿಯೂ, ಸಕಲ ಸ್ಥಿರಚರವಸ್ತುಗಳಲ್ಲಿಯೂ ಭಗವಂತ° ಇದ್ದ°. ಆತ್ಮನೂ ಪರಮಾತ್ಮನೂ ಗುಣಲ್ಲಿ ಒಂದೇ ಆಗಿದ್ದರೂ ಪ್ರಮಾಣಲ್ಲಿ ಒಂದೇ ಅಲ್ಲ. ಜೀವಾತ್ಮ° ನಿರ್ದಿಷ್ಟ ದೇಹಲ್ಲಿ ಮಾತ್ರ ಇರುತ್ತ°, ಪರಮಾತ್ಮ ಪ್ರತಿಯೊಂದು ದೇಹಲ್ಲಿಯೂ ಇರುತ್ತ°. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯರಿಂಗೆ ಇದರ ಸಂಪೂರ್ಣ ತಿಳುವಳಿಕೆ ಇರುತ್ತು. ಹಾಂಗಾಗಿ ಅವು ನಿಜವಾದ ಪಂಡಿತರು, ಸಮದರ್ಶಿಗೊ. ಜೀವಾತ್ಮ ಮತ್ತು ಪರಮಾತ್ಮಂಗೆ ಇಪ್ಪ ವ್ಯತ್ಯಾಸ ಎಂತರ ಹೇಳಿರೆ ಜೀವಾತ್ಮನ ಪ್ರಜ್ಞೆ ದೇಹದ ವ್ಯಾಪ್ತಿಗೆ ಸೀಮಿತವಾದ್ದು, ಆದರೆ ಪರಮಾತ್ಮಂಗೆ ಎಲ್ಲ ದೇಹಂಗಳ ಪ್ರಜ್ಞೆ ಇದ್ದು. ಪರಮಾತ್ಮ ಎಲ್ಲೋರ ಶರೀರಲ್ಲಿಯೂ ಇದ್ದ°. ಕೃಷ್ಣಪ್ರಜ್ಞೆಲಿಪ್ಪವಕ್ಕೆ ಇದು ಸರಿಯಾಗಿ ತಿಳಿದಿರುತ್ತು ಮತ್ತು ಎಲ್ಲೋರನ್ನೂ ಸಮಭಾವಂದ ಕಂಡುಗೊಳ್ಳುತ್ತವು. ಹಾಂಗಾಗಿ ಅವು ಸಮದರ್ಶಿಗೊ.
ಬನ್ನಂಜೆಯವು ವ್ಯಾಖ್ಯಾನಲ್ಲಿ ಹೇಳುತ್ತವು – ಭಗವಂತ° ಒಬ್ಬ ಸಾಧಕನ ಉಪಾಸನೆಲಿ ಇರೆಕ್ಕಾದ ಇನ್ನೊಂದು ಅಂಶವ ಇಲ್ಲಿ ವಿವರಿಸಿದ್ದ°. ಇಲ್ಲಿ ಮೂರು ತರದ ಮನುಷ್ಯನ ಸ್ಥಿತಿಯ ಮತ್ತು ಮೂರು ತರದ ಪ್ರಾಣಿಗಳ ಸ್ಥಿತಿಯ ಭಗವಂತ° ಹೇಳಿದ್ದ°. ಮನುಷ್ಯರಲ್ಲಿ – ವಿದ್ಯಾವಿನಯಸಂಪನ್ನ, ಬ್ರಾಹ್ಮಣ° ಮತ್ತೆ ಶ್ವಪಾಕ° (ಮಾರಿಹೊಲೆಯ°). ಪ್ರಾಣಿಗಳಲ್ಲಿ – ಗೋವು, ಆನೆ, ಮತ್ತು ನಾಯಿ. ಮನುಷ್ಯರಲ್ಲಿ ಜ್ಞಾನದ ತುತ್ತತುದಿಯ ತಲುಪಿದವ ಮತ್ತು ಅತ್ಯಂತ ಶ್ರೇಷ್ಠ ‘ವಿದ್ಯಾವಿನಯಸಂಪನ್ನ°’, ವೇದದ ಕೆಲವು ಭಾಗವ ಪ್ರಾಮಾಣಿಕವಾಗಿ ಕಲ್ತು ಉಪಾಸನೆ ಮಾಡುವವ°- ‘ಬ್ರಾಹ್ಮಣ°’, ಕಲ್ತದರ ಜೀವನಲ್ಲಿ ಅಳವಡಿಗೊಂಡಿಪ್ಪ ವೇದಜ್ಞ, ವೇದದ ಅಂತರಂಗದ ಅರ್ಥವ ತಿಳುದವ°- ‘ವೇದ ಅರ್ಥಜ್ಞ°’, – ಇವನೇ ‘ವಿದ್ಯಾವಿನಯಸಂಪನ್ನ°’.
ಮನುಷ್ಯರಲ್ಲಿ ಅತೀಕೀಳು ಹೇಳಿರೆ – ‘ಶ್ವಪಾಕ°’. ಶ್ವಪಾಕ ಹೇಳಿರೆ ನಾಯಿಯ ಮಾಂಸವನ್ನೇ ತಿಂಬವ, ನಮ್ಮ ಭಾಷೆಲಿ ಹೇಳ್ತರೆ – ಮಾರಿಹೊಲೆಯ° (ಆದಿವಾಸಿ). ಅವಂಗೆ ಯಾವ ಸಂಸ್ಕಾರವೂ ಇಲ್ಲೆ. ಹೊಟ್ಟಗೆ ಬೇಕಾಗಿ ಎಂತನ್ನಾರು ತಿಂಬವ° ಹೇಳಿ ಅರ್ಥ. ಇದು ಮನುಷ್ಯನ ಅಧಃಪತನದ ಪರಾಕಾಷ್ಠತೆಯ ಹೇಳುವಂತಾದ್ದು. ಹೀಂಗೆ ಅತ್ಯಂತ ಎತ್ತರಕ್ಕೇರಿದ ವಿದ್ಯಾವಿನಯಸಂಪನ್ನ°, ಅದರಿಂದ ಕೆಳ ಮಧ್ಯಮವರ್ಗದ ಬ್ರಾಹ್ಮಣ ವರ್ಗ, ಅತ್ಯಂತ ಕೆಳ ಶ್ವಪಾಕ°.
ಪ್ರಾಣಿಗಳಲ್ಲಿ ಅತ್ಯಂತ ಶ್ರೇಷ್ಠ ಪ್ರಾಣಿ – ‘ಗೋವು’, ಮಧ್ಯಮ ಹಸ್ತಿನಿ (ಆನೆಗೊ), ಅಕೇರಿಗೆ ನಾಯಿ. ಪ್ರಾಚೀನರು ಮನಸ್ಸಿನ ಯಾವುದು ಶುದ್ಧಗೊಳುಸುತ್ತೋ ಅದರ ‘ಶುದ್ಧ’ ಹೇಳಿ ತೀರ್ಮಾನ ಮಾಡಿಗೊಂಡವು. ಉದಾಹರಣೆಗೆ ಜಿಂಕೆ ಮತ್ತು ಹುಲಿ ಚರ್ಮ ಮನಸ್ಸಿನ ಏಕಾಗ್ರ ಮಾಡ್ಳೆ ಸಹಕರಿಸುತ್ತು. ಭೂಮಿಲಿಪ್ಪ ಕೆಟ್ಟ ಕಂಪನವ ಧ್ಯಾನದ ಕಾಲಲ್ಲಿ ನಮ್ಮ ದೇಹವ ಪ್ರವೇಶಿಸದ ಹಾಂಗೆ ತಡವಲೆ ಈ ಚರ್ಮವ ಉಪಯೋಗಿಸುತ್ತವು. ಆದ್ದರಿಂದ ಅದು ಶುದ್ಧ, ಶ್ರೇಷ್ಠ. ಅದೇ ರೀತಿ ಗೋವು. ಈ ಪ್ರಾಣಿಲಿ ಯಾವತ್ತೂ ಸಾತ್ವಿಕವಾದ ಸ್ಪಂದನ ಇರುತ್ತು. ಪ್ರಪಂಚಲ್ಲಿ ಎಲ್ಲ ಪ್ರಾಣಿಗಳ ಮಲಮೂತ್ರ ವರ್ಜ್ಯ. ಆದರೆ, ದನದ ಮಲಮೂತ್ರ ಶ್ರೇಷ್ಠ. ಹೀಂಗೆ ದನವು ಪ್ರಪಂಚಲ್ಲಿ ಪ್ರಾಣಿಗಳಲ್ಲಿ ಶ್ರೇಷ್ಠ. ಆನೆ ಮಧ್ಯಮ, ನಾಯಿ ಕನಿಷ್ಠ.
ಇಲ್ಲಿ ಭಗವಂತ° ಹೇಳುತ್ತ° – “ಪಂಡಿತಾಃ ಸಮದರ್ಶಿನಃ”, ಹೇಳಿರೆ., ಪಂಡಿತರು ಸಮದೃಷ್ಠಿ ಇಪ್ಪವ್ವು. ಅವು ಪ್ರತಿಯೊಂದರಲ್ಲೂ ಅದರೊಳ ಭಗವಂತನ ವಿಶೇಷ ಅಭಿವ್ಯಕ್ತವ ಕಾಣುತ್ತವು. ಭಗವಂತ° ಸರ್ವಾಂತರ್ಯಾಮಿ. ಅವನ ಅಭಿವ್ಯಕ್ತಿ ಮಾತ್ರ ಬೇರೆ ಬೇರೆ. ಒಂದೊಂದು ಜೀವಿಲಿಯೂ ಒಂದೊಂದು ಅನನ್ಯ ಅಸಾಧಾರಣ ಗುಣಧರ್ಮಂದ ಅಭಿವ್ಯಕ್ತನಾವುತ್ತ°. ಉದಾಹರಣೆಗೆ ನಾಚಿಕೆಮುಳ್ಳು. ಆರಿಂಗೂ ಬೇಡವಾಗಿ ಕಂಡಲ್ಲಿ ಕಡುದು ಇಡ್ಕುತ್ತದು ನಾವು. ಆದರೆ, ಅದರಲ್ಲಿ ಅಮೋಘವಾದ ಔಷದೀಯ ಗುಣ ಇದ್ದು. ಆ ನಾಚಿಕೆಮುಳ್ಳಿನ ಗಿಡವ (ಹೂ ಬಿಟ್ಟು) ಜಜ್ಜಿ ವಸ್ತ್ರಲ್ಲಿ ಕಟ್ಟಿ ಗಂಜಿಯೊಟ್ಟಿಂಗೆ ಬೇಯ್ಸಿ, ಆ ಗಂಜಿಯ ಸೇವಿಸಿರೆ ಅಥವಾ ಆ ಗಿಡದ ಕಷಾಯಮಾಡಿ ಕುಡುದರೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದ್ದೆ ಮೂಲವ್ಯಾಧಿ ಗುಣ ಆವ್ತಡ. ಅದೇರೀತಿ ಜೇನುಹುಳ. ಹೂವಿಂದ ರಸವ ಹೀರಿ ಜೇನಿನ ತಯಾರುಸುವ ಅಸಾಧಾರಣ ಶಕ್ತಿ ಆ ಸಣ್ಣ ಹುಳುವಿಂಗೆ. ನಮ್ಮ ತಾಂತ್ರಿಕತೆಲಿ ಕೃತಕವಾಗಿ ಜೇನ ತಯಾರು ಮಾಡ್ಳೆ ಎಡಿಗೊ!!.
ಈ ಪ್ರಪಂಚಲ್ಲಿ ಎಂತೆಂತ ಹುಟ್ಟಿದ್ದೋ, ಅದರೊಳ ವಿಶಿಷ್ಟ ಶಕ್ತಿ ತಿಂಬಿಪ್ಪ, ಜಗನ್ನಿಯಾಮಕ°, ಸರ್ವಶಕ್ತ° ಭಗವಂತನ ಅಪರೋಕ್ಷ ಜ್ಞಾನಿಗೊ ಪ್ರತಿಯೊಂದರಲ್ಲೂ ಕಾಣುತ್ತವು. ನಾಯಿ ಆಗಿರ್ಲಿ, ಗೋವು ಆಗಿರ್ಲಿ, ಶ್ರೇಷ್ಠನಾಗಿರಲಿ, ಅಧಮನಾಗಿರಲಿ, ಎಲ್ಲೋರಲ್ಲಿಯೂ ಆ ಭಗವಂತನ ಮಹಿಮೆಯ ಜ್ಞಾನಿ ಕಾಣುತ್ತ°. ತಾನು ಎಲ್ಲವುದರಲ್ಲಿಯೂ ಅಂತರ್ಯಾಮಿಯಾಗಿ, ಅತ್ಯಂತ ಶುದ್ಧನಗಿ ತುಂಬಿದ್ದು, ನಿರ್ಲಿಪ್ತನಾಗಿ, ಒಂದೊಂದು ವಸ್ತುವಿಂಗೆ ಒಂದೊಂದು ರೀತಿಯ ವಿಶಿಷ್ಟ ಶಕ್ತಿಯ ಕೊಡುವ ಭಗವಂತ°, ಈ ಅನಂತ ಪ್ರಪಂಚವ ಸೃಷ್ಟಿಮಾಡಿ ನಮ್ಮ ಕಣ್ಣ ಮುಂದೆ ಮಡುಗಿದ್ದ°. ಇಂತಹ ಭಗವಂತನ ಮಹಿಮೆಯ ಪ್ರತಿಯೊಂದು ವಸ್ತುವಿಲ್ಲಿಯೂ ನೋಡಿ ಅರ್ಥೈಸಿ ಅನುಸಂಧಾನ ಮಾಡೆಕು. ಇದು ಅಪರೋಕ್ಷ ಜ್ಞಾನಕ್ಕೆ ಬೇಕಾದ ಸಮದರ್ಶನ.
ಶ್ಲೋಕ
ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ ।
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ॥೧೯॥
ಪದವಿಭಾಗ
ಇಹ ಏವ ತೈಃ ಜಿತಃ ಸರ್ಗಃ ಏಷಾಮ್ ಸಾಮ್ಯೇ ಸ್ಥಿತಮ್ ಮನಃ । ನಿರ್ದೋಷಮ್ ಹಿ ಸಮಮ್ ಬ್ರಹ್ಮ ತಸ್ಮಾತ್ ಬ್ರಹ್ಮಣಿ ತೇ ಸ್ಥಿತಾಃ ॥
ಅನ್ವಯ
ಏಷಾಂ ಮನಃ ಸಾಮ್ಯೇ ಸ್ಥಿತಮ್, ತೈಃ ಇಹ ಏವ ಸರ್ಗಃ ಜಿತಃ , ಬ್ರಹ್ಮ ಹಿ ಸಮಂ ನಿರ್ದೋಷಂ, ತಸ್ಮಾತ್ ತೇ ಬ್ರಹ್ಮಣಿ ಸ್ಥಿತಾಃ ।
ಪ್ರತಿಪದಾರ್ಥ
ಏಷಾಂ – ಆರ, ಮನಃ – ಮನಸ್ಸು, ಸಾಮ್ಯೇ – ಸಮಭಾವಲ್ಲಿ, ಸ್ಥಿತಮ್ – ನೆಲಸಿರಿರುತ್ತೋ, ತೈಃ – ಅವರಿಂದ, ಇಹ – ಈ ಜನ್ಮಲ್ಲಿ, ಏವ – ಖಂಡಿತವಾಗಿಯೂ, ಸರ್ಗಃ – ಜನನ ಮತ್ತು ಮರಣವು, ಜಿತಃ – ಗೆಲ್ಲಲ್ಪಡುತ್ತು, ಬ್ರಹ್ಮ ಹಿ – ಪರಮೋನ್ನತನ ಹಾಂಗೆ ನಿಶ್ಚಿತವಾಗಿಯೂ,, ಸಮಮ್- ಸಮಭಾವಲ್ಲಿ, ನಿರ್ದೋಷಮ್ – ದೋಷರಹಿತವಾಗಿರುತ್ತು, ತಸ್ಮಾತ್ – ಹಾಂಗಾಗಿ, ತೇ – ಅವು, ಬ್ರಹ್ಮಣಿ – ಪರಮೋನ್ನತಲ್ಲಿ, ಸ್ಥಿತಾಃ – ನೆಲೆಸಿರುತ್ತವು.
ಅನ್ವಯಾರ್ಥ
ಆರ ಮನಸ್ಸು ಸ್ಥಿರವಾಗಿದ್ದು, ಸಮಭಾವಲ್ಲಿ ನೆಲಸಿರುತ್ತೋ, ಅವು, ಆಗಲೇ ಹುಟ್ಟುಸಾವುಗಳ ಸ್ಥಿತಿಯ ಗೆದ್ದಿರುತ್ತವು. ಅವು ಬ್ರಹ್ಮನ್ ಹಾಂಗೆ ದೋಷರಹಿತರಾಗಿರುತ್ತವು. ಹಾಂಗಾಗಿ ಅವು ಆಗಲೇ ಬ್ರಹ್ಮನ್ ನಲ್ಲಿ ಇರುತ್ತವು.
ತಾತ್ಪರ್ಯ/ವಿವರಣೆ
ಇಲ್ಲಿ ಹೇಳಿಪ್ಪ ಸಮಚಿತ್ತವು ಆತ್ಮಸಾಕ್ಷಾರದ ಗುರುತು. ಇಂತಹ ಸ್ಥಿತಿಯ ತಲುಪಿಪ್ಪ ವ್ಯಕ್ತಿಗೊ ಲೌಕಿಕ ಸ್ಥಿತಿಗಳ, ಮುಖ್ಯವಾಗಿ ಜನನ ಮರಣವ ಗೆದ್ದಿದ್ದವು ಹೇಳಿ ತಿಳುಕ್ಕೊಳ್ಳೆಕು. ಮನುಷ್ಯ° ತನ್ನ ಈ ದೇಹದೊಟ್ಟಿಂಗೆ ಗುರುತಿಸಿಗೊಂಡಿಪ್ಪಷ್ಟು ಕಾಲವೂ ಅವ° ಬದ್ಧಾತ್ಮ ಹೇಳಿಯೇ ತಿಳ್ಕೊಳ್ಳೆಕು. ಆದರೆ ಆತ್ಮಸಾಕ್ಷಾತ್ಕಾರಂದ ಅವ° ಸಮಚಿತ್ತದ ನೆಲಗೆ ಏರಿಯಪ್ಪಗ ಅವ° ಬದ್ಧ ಬದುಕಿಂದ ಮುಕ್ತನಾವುತ್ತ°. ಹೇಳಿರೆ., ಅವ° ಮತ್ತೆ ಐಹಿಕ ಜಗತ್ತಿಲ್ಲೆ ಹುಟ್ಟೆಕ್ಕಾದ್ದಿಲ್ಲೆ. ಮರಣಾನಂತರ ಅವ° ಆಧ್ಯಾತ್ಮಿಕ ವ್ಯೋಮವ ಪ್ರವೇಶಿಸುತ್ತ°. ಭಗವಂತಂಗೆ ಆಕರ್ಷಣೆಯೂ, ದ್ವೇಷವೂ ಇಲ್ಲವಾದ್ದರಿಂದ ಅವ° ದೋಷರಹಿತನಾಗಿದ್ದ°. ಹಾಂಗೆಯೇ ಜೀವಿಗೆ ಆಕರ್ಷಣೆಯಾಗಲೀ, ದ್ವೇಷವಾಗಲಿ ಇಲ್ಲದಾದಪ್ಪಗ ಅವನೂ ದೋಷರಹಿತಿನಾವುತ್ತ°. ಆಧ್ಯಾತ್ಮಿಕ ವ್ಯೋಮವ ಪ್ರವೇಶಿಸುಲೆ ಅರ್ಹನಾವುತ್ತ°. ಇಂತವರ ಆಗಲೇ ಮುಕ್ತರು ಹೇಳಿ ಪರಿಗಣಿಸಲಕ್ಕು.
ಹಾಂಗಾರೆ ಈ ಸಮದೃಷ್ಟಿಯ ಹೇಂಗೆ ಬೆಳೆಶಿಗೊಳ್ಳೆಕು? –
ಶ್ಲೋಕ
ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಂ ।
ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥೨೦॥
ಪದವಿಭಾಗ
ನ ಪ್ರಹೃಷ್ಯೇತ್ ಪ್ರಿಯಮ್ ಪ್ರಾಪ್ಯ ನ ಉದ್ವಿಜೇತ್ ಪ್ರಾಪ್ಯ ಚ ಅಪ್ರಿಯಮ್ । ಸ್ಥಿರ-ಬುದ್ಧಿಃ ಅಸಮೂಢಃ ಬ್ರಹ್ಮವಿತ್ ಬ್ರಹ್ಮಣಿ ಸ್ಥಿತಃ ॥
ಅನ್ವಯ
ಪ್ರಿಯಂ ಪ್ರಾಪ್ಯ ನ ಪ್ರಹೃಷ್ಯೇತ್, ಅಪ್ರಿಯಂ ಪ್ರಾಪ್ಯ ಚ ನ ಉದ್ವಿಜೇತ್ । ಏವಂ ಸ್ಥಿರ-ಬುದ್ಧಿಃ, ಅಸಮ್ಮೂಢಃ, ಬ್ರಹ್ಮವಿತ್ ಬ್ರಹ್ಮಣಿ ಸ್ಥಿತಃ ।
ಪ್ರತಿಪದಾರ್ಥ
ಪ್ರಿಯಮ್ ಪ್ರಾಪ್ಯ – ಪ್ರಿಯವಾದ್ದರ ಪಡದು, ನ ಪ್ರಹೃಷ್ಯೇತ್ – ಸಂತೋಷಪಡುತ್ತನಿಲ್ಲೆ, ಅಪ್ರಿಯಮ್ ಪ್ರಾಪ್ಯ – ಪ್ರಿಯವಲ್ಲದ್ದರ (ಅಪ್ರಿಯವಾದ್ದರ) ಹೊಂದಿ, ಚ – ಕೂಡ, ನ ಉದ್ವಿಜೇತ್ – ಉದ್ವಿಗ್ನನಾವುತ್ತನಿಲ್ಲೆ, ಏವಮ್ – ಹೀಂಗೆ, ಸ್ಥಿರ-ಬುದ್ಧಿಃ – ಸ್ವಯಂ ಬುದ್ಧಿವಂತ°, ಅಸಮ್ಮೂಢಃ – ದಿಗ್ಭ್ರಾಂತನಾಗದ್ದವ°, ಬ್ರಹ್ಮವಿತ್ – ಪರಮೋನ್ನತವ ಪೂರ್ಣವಾಗಿ ತಿಳುದವ°, ಬ್ರಹ್ಮಣಿ – ದಿವ್ಯಲ್ಲಿ, ಸ್ಥಿತಃ – ನೆಲೆಸಿರುತ್ತ°.
ಅನ್ವಯಾರ್ಥ
ಪ್ರಿಯವಾದ್ದರ ಸಾಧಿಸಿಯಪ್ಪಗ ಸಂತೋಷಪಡದ್ದವ°, ಅಪ್ರಿಯವಾದ್ದು ಘಟಿಸಿಯಪ್ಪಗ ಉದ್ವಿಗ್ನಕ್ಕೊಳಗಾಗದ್ದವ°, ಸ್ಥಿರಬುದ್ಧಿಯಿಪ್ಪವ°, ದಿಗ್ಭಮೆಗೊಳಗಾಗದ್ದವ°, ಭಗವದಿಜ್ಞಾನವ ತಿಳುದವ° ಆಗಲೇ ಆಧ್ಯಾತ್ಮಿಕ ನೆಲೆಯ ಹೊಂದಿರುತ್ತ°.
ತಾತ್ಪರ್ಯ/ವಿವರಣೆ
ಆತ್ಮಸಾಕ್ಷಾತ್ಕಾರವ ಸಾಧಿಸಿದ ಮನುಷ್ಯನ ಗುಣಲಕ್ಷಣಂಗಳ ಇಲ್ಲಿ ಹೇಳಿದ್ದು. ಆತ್ಮಸಾಕ್ಷಾತ್ಕಾರವ ಪಡದವ° ದೇಹವನ್ನೇ ಆತ್ಮ ಹೇಳಿ ತಪ್ಪಾಗಿ ಗುರುತುಸುವ ಮಾಯೆಗೆ ತುತ್ತಾವ್ತನಿಲ್ಲೆ. ದೇವೋತ್ತಮ ಪರಮಪುರುಷನ ಒಂದು ಪ್ರತ್ಯೇಕ ಅಂಶ ಹೇಳ್ವ ಸಂಪೂರ್ಣಜ್ಞಾನ ಅವನಲ್ಲಿ ಬೆಳೆದಿರುತ್ತು. ಹಾಂಗಾಗಿ ಅವ° ಏನಾನ್ನಾರು ಸಾಧಿಸಿರೆ/ಪಡದರೆ ಹಿಗ್ಗುತ್ತನಿಲ್ಲೆ, ಏನಾರು ಕಳಕ್ಕೊಂಡಪ್ಪಗ / ಸೋತಪ್ಪಗ ಕುಗ್ಗುತ್ತನಿಲ್ಲೆ. ಇದಕ್ಕೆ ‘ಸ್ಥಿರಬುದ್ಧಿಃ’ ಹೇಳಿ ಹೇಳ್ವದು. ಅವ° ಜಡದೇಹವ ಆತ್ಮ ಹೇಳಿ ತಪ್ಪಾಗಿ ಎಂದೂ ಭಾವಿಸುತ್ತನಿಲ್ಲೆ. ದೇಹವು ಶಾಶ್ವತ ಹೇಳಿ ತಿಳಿತ್ತನಿಲ್ಲೆ. ಆತ್ಮನ ಅಸ್ತಿತ್ವವ ಮರೆತ್ತನಿಲ್ಲೆ. ಇದರಿಂದ ಪರಮಸತ್ಯದ ಸಂಪೂರ್ಣ್ ವಿಜ್ಞಾನವ, ಹೇಳಿರೆ., ಬ್ರಹ್ಮನ್, ಪರಮಾತ್ಮ ಮತ್ತು ಭಗವಂತನ ತಿಳ್ಕೊಂಬ ಮಟ್ಟಕ್ಕೆ ಏರುತ್ತ°. ಪರಮಸತ್ಯದೊಟ್ಟಿಂಗೆ ಎಲ್ಲಾ ರೀತಿಲಿಯೂ ಒಂದಪ್ಪ ಹುಸಿ ಪ್ರಯತ್ನಕ್ಕೆ ಕೈ ಹಾಕದ್ದೆ ತನ್ನ ನಿಜಸ್ವರೂಪವ ತಿಳಿದಿರುತ್ತ°. ಇದಕ್ಕೆ ಬ್ರಹ್ಮನ್ ಸಾಕ್ಷಾತ್ಕಾರ ಅಥವಾ ಆತ್ಮಸಾಕ್ಷಾತ್ಕಾರ ಹೇಳಿ ಹೆಸರು. ಇಂತಹ ಸ್ಥಿರಪ್ರಜ್ಞೆಯ ಕೃಷ್ಣಪ್ರಜ್ಞೆ ಹೇಳಿ ಹೇಳ್ವದು.
ಬನ್ನಂಜೆ ವಿವರುಸುತ್ತವು – ಸುಖ ಬಂದಪ್ಪಗ ಉಬ್ಬಲಾಗ, ದುಃಖ ಬಂದಪ್ಪಗ ಕುಗ್ಗಲಾಗ. ಎಚ್ಚರತಪ್ಪದ್ದೆ ಗಟ್ಟಿಯಾಗಿ ಮನಸ್ಸು ಸ್ಥಿರವಾಗಿರೆಕು. ಭಗವಂತನ ತಿಳುದು ಭಗವಂತನಲ್ಲೆ ನೆಲೆ ನಿಂದುಗೊಂಡಿಪ್ಪ ಮನಸ್ಸು ಆಯೆಕು. ಸುಖ-ದುಃಖ ನಮ್ಮ ಜೀವನಲ್ಲಿ ಚಕ್ರಭ್ರಮಣ. ಅದು ಕ್ಷಣಿಕ. ನವಗೆ ಸುಖ-ದುಃಖ ಹೇಳ್ವ ದ್ವಂದ್ವಲ್ಲಿ ಸಮದೃಷ್ಠಿ ಇರೆಕು. ಮನಸ್ಸು ಸ್ಥಿಮಿತಲ್ಲಿ ಇರೆಕು. ಯಾವದು ಅನಿವಾರ್ಯವೋ ಅದರ ಸಹಜವಾಗಿ ಸ್ವೀಕರುಸೆಕು. ಹೀಂಗಪ್ಪಲಾವ್ತಿತ್ತಿಲ್ಲೆ , ಹಾಂಗಾಯೇಕ್ಕಾತು ಹೇಳಿಗೊಂಡು ಕೂದರೆ ಮನಸ್ಸು ಗೊಂದಲಕ್ಕೆ ತುತ್ತಪ್ಪದು ಮಾಂತ್ರ. ಇಲ್ಲಿ ಸುಖ ಬಂದಪ್ಪಗ ಅನುಭವಿಸಲಾಗ ಹೇಳಿ ಅರ್ಥ ಅಲ್ಲ. ಯಾವುದು ಬತ್ತೋ ಅದರ ಸಹಜವಾಗಿ ಸ್ವೀಕರಿಸಿ ಭಗವತ್ ಕೃಪೆ ಹೇಳಿ ತೆಕ್ಕೊಳ್ಳೆಕು. ಅತಿಯಾದ ಹಾರಾಟ ಅಥವಾ ಮನಃಸಂಕಷ್ಟ ಪಡ್ಳಾಗ. ಬದುಕಿಲ್ಲಿ ಯಾವುದೂ ಶಾಶ್ವತ ಅಲ್ಲ ಹೇಳ್ವ ಚಿತ್ತವೃತ್ತಿಯ ಬೆಳೆಶಿಗೊಳ್ಳೆಕು. ಯಾವುದೇ ಆದರೂ ನಮ್ಮ ಮನಸ್ಸಿಗೆ ಅತೀ ಹತ್ರೆ ಆದರೆ ಅದು ದೂರ ಅಪ್ಪಗ ಸಹಿಸಲೆಡಿಯದ್ದಷ್ಟು ದುಃಖ ಆವ್ತು. ಆತ್ಮಹತ್ಯೆಯಂತಹ ಹೀನಕೃತ್ಯಕ್ಕೆ ಮನಸ್ಸು ತಳ್ಳಲ್ಪಡುತ್ತು. ಹಾಂಗಾಗಿ ನಾವು ಬಯಸಿದಂತೆ ಪ್ರಪಂಚ ಇಲ್ಲೆ – ಪ್ರಪಂಚ ಇದ್ದ ಹಾಂಗೆ ನಾವು ಹೇಳಿ ಸ್ವಾಗತಿಸಿ, ಯಾವ ಉದ್ವೇಗಕ್ಕೂ ಒಳಗಾಗದ್ದೆ ಬದುಕಲೆ ಕಲ್ತಪ್ಪಗ ಮನಸ್ಸು ಗಟ್ಟಿಯಾವ್ತು. ಇಂಥವರ ಮನಸ್ಸು ಭಗವಂತನಲ್ಲಿ ನೆಲೆನಿಂದಿರುತ್ತು.
ಮುಂದೆ ಎಂತರ..? …. ಬಪ್ಪ ವಾರ ನೋಡುವೋ°
..ಮುಂದುವರಿತ್ತು.
ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 05 – SHLOKAS 11 – 20 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಆತ್ಮ ಸಾಕ್ಷಾತ್ಕಾರವ ಪಡವದರಿಂದ ಎಂತ ಲಾಭ?
ಸಕಲ ಚರಾಚರಗಳಲ್ಲಿ ಇಪ್ಪ ಭಗವಂತನ ನೋಡುಲೆ ಸಾಮರ್ಥ್ಯ ಇಪ್ಪವನ ದೃಷ್ಟಿ ಬಿದ್ದರೆ ಜಗತ್ತೇ ಅವಂಗೆ ಬೇಕಾದ ಹಾಂಗೆ(ಅವ ಭಗವಂತಂಗೆ ಬೇಕಾಗಿ ಕೆಲಸ ಮಾಡುವ ಕಾರಣ ಭಗವಂತಂಗೆ ಬೇಕಾದ ಹಾಂಗೆ) ಬದಲಾವುತ್ತಾ ಹೋವುತ್ತು.
ಕೆಲವು ಉದಾಹರಣೆಗಳ ಹೇಳುತ್ತೆ.
೧.ಒಂದು ಕಂಪ್ಯೂಟರ್ ಹಾಳು ಆಯಿದು.ಆಂತರ್ಯಂದ ಕಂಪ್ಯೂಟರ್ಲಿ ಎಂತೋ ಒಂದು ಕೆಲಸ ಮಾಡು ಹೇಳಿ ಅವಂಗೆ ಪ್ರೇರಣೆ ಆತು. ಕಂಪ್ಯೂಟರ್ ಆನ್ ಮಾಡಿರೆ ಅದು ಸುವ್ಯವಸ್ಥಿತವಾಗಿ ಕೆಲಸ ಮಾಡಿ ಅವನ ಆಂತರ್ಯ ಹೇಳಿದ ಕೆಲಸವ ಅವಂಗೆ ಪೂರೈಸುಲೇ ಎಡಿತ್ತು.
೨. ಒಬ್ಬ ಜ್ಹಾನಿ ಅವನೆದುರು ಬತ್ತ. ಆದರೆ ಅವ ಅಹಂಕಾರಿ ಮತ್ತು ಎಂತಾರು ಲಾಭ ಇದ್ದರೆ ಮಾಂತ್ರ ಜ್ಹಾನವ ದಾನ ಮಾಡುತ್ತ. ಅವನ ನೋಡಿ ಅಯ್ಯೋ ಹೇಳಿ ಮರುಕ ಉಂಟಾದರೆ ಆ ಕ್ಷಣ೦ದ ಅವ ಜ್ಹಾನ ದಾನ ಮಾಡುಲೆ ಶುರು ಮಾಡುತ್ತ.
೩. ಒಬ್ಬ ಸಿರಿವಂತ. ದುಡ್ದಿಂಗೆ ದುಡ್ಡು ಕೂಡಿ ಮಡಿಗಿ ಯಾವುದೇ ಸತ್ಕರ್ಮ ಮಾಡದ್ದೆ ಅಧೋಗತಿಗೆ ಹೋವುತ್ತಾ ಇದ್ದ. ಅವನ ಮೇಲೆ ಅಯ್ಯೋ ಹೇಳಿ ಕರುಣೆ ಬಂದರೆ ಅವ ಮರುಕ್ಶಣ೦ದ ದಾನ ಮಾಡುಲೆ,ಸತ್ಕರ್ಮಂಗಳ ಮಾಡುಲೆ ಶುರು ಮಾಡುತ್ತ.
ಹೀಂಗೆ ಆತ್ಮ ಸಾಕ್ಷ್ತಾತ್ಕಾರ ಪಡದವನ ದೃಷ್ಟಿ ಅಥವಾ ಇರುವಿಕೆ ಸಾಕಾವುತ್ತು ಜಗವ ಬದಲಿಸುಲೇ.
ಇಷ್ಟೊಂದು ಪ್ರಯೋಜನ ಇಪ್ಪ ವಿದ್ಯೆಯ ನಾವೇಕೆ ಅಭ್ಯಾಸ ಮಾಡುಲಾಗ? ನಿಜವಾಗಿಯೂ ಇಷ್ಟೊಂದು ಪ್ರಯೋಜನ ಇಪ್ಪ ವಿದ್ಯೆ ಹೇಳಿ ಇಂದು ಆರಿಂಗೂ ಗೊಂತಿಲ್ಲೇ ಅಷ್ಟೇ. ನಾವು ಎಷ್ಟೊಂದು ವರ್ಷಗಳ ವಿದ್ಯಾರ್ಜನೆಗೆ ಹೇಳಿ ಹಾಳು ಮಾಡುತ್ತು… ಆದರೆ ಅದರಿಂದ ಜೀವನಕ್ಕೆ ಎಷ್ಟು ಪ್ರಯೋಜನ ಆವುತ್ತು??? ಕೇವಲ ಹೊಟ್ಟೆ,ಬಟ್ಟೆಗೆ ಬೇಕಾದಷ್ಟು ಸಂಪಾದನೆ ಮಾಡುಲೋಸ್ಕರ ಎಷ್ಟೊಂದು ವರ್ಷಗಳ ನಾವು ಹಾಳು ಮಾಡುತ್ತು. ಎಂತಹ ಅದ್ಭುತವಾದ ವಿದ್ಯೆ ಇದ್ದುಗೊಂಡು ‘ಅಂಗೈಲ್ಲಿ ಬೆಣ್ಣೆ ಇಟ್ಟುಗೊಂಡು ತುಪ್ಪಕ್ಕಾಗಿ ಪರದಾಡುವ ಸ್ಥಿತಿ’ ಭಾರತೀಯರಿಂಗೆ ಎಂತಕೆ ಬಂತೋ??? ಇನ್ನಾದರೂ ಪ್ರಯೋಜನ ಪಡಕ್ಕೊಂಬ…
ಸಮಚಿತ್ತವ ಮತ್ತೆ ಮತ್ತೆ ಸ್ಪಷ್ಟ ಮಾಡಿದರೀತಿ ಲಾಯ್ಕ ಆಯಿದು.