- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಶ್ರೀ ಕೃಷ್ಣಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ
ಅಥ ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ)
ಶ್ಲೋಕ
ಶ್ರೀ ಭಗವಾನುವಾಚ-
ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ ।
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ ॥೦೧॥
ಶ್ರೀ ಭಗವಾನ್ ಉವಾಚ-
ಅನಾಶ್ರಿತಃ ಕರ್ಮ-ಫಲಮ್ ಕಾರ್ಯಮ್ ಕರ್ಮ ಕರೋತಿ ಯಃ । ಸಃ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿಃ ನ ಚ ಅಕ್ರಿಯಃ॥
ಅನ್ವಯ
ಶ್ರೀ ಭಗವಾನ್ ಉವಾಚ
ಯಃ ಕರ್ಮ-ಫಲಮ್ ಅನಾಶ್ರಿತಃ ಕಾರ್ಯಂ ಕರ್ಮ ಕರೋತಿ, ಸಃ ಸಂನ್ಯಾಸೀ ಚ ಯೋಗೀ ಚ, ನಿರಗ್ನಿಃ ನ ಅಕ್ರಿಯಃ ಚ ನ ।
ಪ್ರತಿಪದಾರ್ಥ
ಯಃ – ಆರು, ಕರ್ಮ-ಫಲಮ್ – ಕರ್ಮಫಲವ, ಅನಾಶ್ರಿತಃ – ಆಶ್ರಯಿಸದ್ದೆ, ಕಾರ್ಯಮ್ – ಮಾಡ್ಳೇಬೇಕಾದ, ಕರ್ಮ – ಕಾರ್ಯವ, ಕರೋತಿ – ಮಾಡುತ್ತನೋ, ಸಃ – ಅವ°, ಸಂನ್ಯಾಸೀ – ಸಂನ್ಯಾಸಾಶ್ರಮಲ್ಲಿಪ್ಪವ°, ಚ – ಮತ್ತೆ (ಕೂಡ), ಯೋಗೀ – ಯೋಗೀ, ಚ – ಕೂಡ, ನಿರಗ್ನಿಃ – ಕಿಚ್ಚು(ಬೆಂಕಿ)ಯಿಲ್ಲದ್ದೆ, ನ – ಅಲ್ಲ, ಅಕ್ರಿಯಃ – ಕರ್ತವ್ಯ ಇಲ್ಲದ್ದವ°, ಚ – ಕೂಡ, ನ – ಅಲ್ಲ.
ಅನ್ವಯಾರ್ಥ
ದೇವೋತ್ತಮ ಪರಮ ಪುರುಷ (ಭಗವಂತ°) ಹೇಳಿದ° – ಕರ್ಮಫಲಕ್ಕೆ ಆಶ್ರಯಿಸದ್ದೆ (ಆಂಟಿಗೊಳ್ಳದ್ದೆ) ತಾನು ಮಾಡೇಕ್ಕಪ್ಪ ಕರ್ಮವ ಮಾಡುವವನೇ ಸಂನ್ಯಾಸೀ. ಅವನೇ ನಿಜವಾದ ಯೋಗೀ. (ಕರ್ಮಫಲವ ಆಶಿಸ್ಸದ್ದೆ ಕರ್ಮಮಾಡುವವ° ನಿಜವಾದ ಸಂನ್ಯಾಸೀ / ಯೋಗೀ). ಅಗ್ನಿಯ ಹೊತ್ತುಸದ್ದೆ (ಅಗ್ನಿಕಾರ್ಯವ ಬಿಟ್ಟವ°) ಕರ್ಮವ ಮಾಡದ್ದಿಪ್ಪವ° (ಕರ್ಮವ ಬಿಟ್ಟವ°) ಸಂನ್ಯಾಸಿಯೂ ಅಲ್ಲ, ಯೋಗಿಯೂ ಅಲ್ಲ.
ತಾತ್ಪರ್ಯ/ವಿವರಣೆ
ಹಿಂದಾಣ ಅಧ್ಯಾಯಲ್ಲಿ ಭಗವಂತ ಜ್ಞಾನಪೂರ್ವಕ ಕರ್ಮಸಾಧನೆ ಮುಖ್ಯವಾದ್ದು ಹೇಳಿ ವಿವರಿಸಿದ್ದ°. ಜ್ಞಾನಕ್ಕೆ ಕರ್ಮವು ಸಾಧನ ಹೇಳಿಯೂ ಹೇಳಿದ್ದ°. ಕರ್ಮಲ್ಲಿ ಮನಸ್ಸು ನೆಲೆಗೊಳ್ಳೆ ಧ್ಯಾನವು ಮಹತ್ವ ಸಾಧನ ಹೇಳಿಯೂ ಹೇಳಿದ್ದ°. ಮನಸ್ಸನ್ನೂ, ಇಂದ್ರಿಯಂಗಳನ್ನೂ ನಿಯಂತ್ರಿಸುಲೆ ಅಷ್ಟಾಂಗಯೋಗ ಪದ್ಧತಿ ಒಂದು ಸಾಧನ. ಇದರ ಅನುಷ್ಠಾನ ಮಾಡೇಕ್ಕಾರೆ ಕೃಷ್ಣಪ್ರಜ್ಞೆಯೂ ಅಗತ್ಯ. ಹಾಂಗಾಗಿ ಕೃಷ್ಣಪ್ರಜ್ಞೆಲಿ ಅಷ್ಟಾಂಗಯೋಗ ಪದ್ಧತಿಯ ಮೂಲಕ ಇಂದ್ರಿಯನಿಗ್ರಹ ಶಕ್ತಿಯ ಪಡಕ್ಕೊಂಡು ಜ್ಞಾನಪೂರ್ವಕವಾಗಿ ಕರ್ಮಯೋಗವ ಮಾಡೆಕು ಹೇಳಿ ಹೇಳಿದ್ದು. ಆದರೆ, ವಾಸ್ತವಜೀವನಲ್ಲಿ ಸಂಸಾರಲ್ಲಿ ಮೈಮರದು ತನ್ನ ಇಂದ್ರಿಯ ತೃಪ್ತಿಗಾಗಿ ಕರ್ಮಯೋಗವ ಮಾಡಿರೆ ಅದು ಸಂನ್ಯಾಸವೋ, ಮೋಕ್ಷಸಾಧನೆಯೋ ಆವ್ತಿಲ್ಲೆ. ಮತ್ತೆ ಮುಂದುವರುಸಿ ಭಗವಂತ ಹೇಳುತ್ತ° –
ಸಾಮಾನ್ಯವಾಗಿ ನಾವು ಕರ್ಮಯೋಗಿಗೊ ಬೇರೆ ಮತ್ತೆ ಸಂನ್ಯಾಸಿಗೊ ಬೇರೆ ಹೇಳಿ ಎರಡು ಗುಂಪು ಮಾಡುತ್ತು. ಇಲ್ಲಿ ಭಗವಂತ° ಆರು ಸಂನ್ಯಾಸೀ, ಆರು ಕರ್ಮಯೋಗಿ ಹೇಳ್ವ ಲೋಕದ ಕಲ್ಪನೆಗಿಂತ ಭಿನ್ನವಾದ ವಿವರವ ಈ ಶ್ಲೋಕಲ್ಲಿ ಹೇಳುತ್ತ°. “ಅನಾಶ್ರಿತಃ ಕರ್ಮಫಲಂ” – ಕರ್ಮಫಲವ ಆಶ್ರಯಿಸದ್ದವ°. ನಾವು ಸಾಧಾರಣವಾಗಿ ಕರ್ಮತ್ಯಾಗ ಮಾಡಿದವನ ಸಂನ್ಯಾಸೀ ಹೇಳಿಯೂ ಕರ್ಮಮಾಡಿಗೊಂಡಿಪ್ಪವನ ಗೃಹಸ್ಥ° ಹೇಳಿ ಗ್ರೇಶಿಗೊಂಡಿದ್ದು. ಆದರೆ ಭಗವಂತ° ಹೇಳುತ್ತ° – ಪ್ರತಿಯೊಬ್ಬನೂ ಕರ್ಮಯೋಗಿಗೊ ಆಗಿರೆಕು ಮತ್ತು ಪ್ರತಿಯೊಬ್ಬನೂ ಸಂನ್ಯಾಸಿಯಾಗಿರೆಕು. ಒಂದರ ಬಿಟ್ಟು ಇನ್ನೊಂದು ಅಲ್ಲ. ಎರಡೂ ಮಾಡಿಗೊಂಡಿರೆಕು. ಸಂನ್ಯಾಸೀ ಹೇಳಿರೆ ಎಲ್ಲವನ್ನೂ ಬಿಟ್ಟವ° ಆಧ್ಯಾತ್ಮಿಕ ಅರ್ಥ ಆವ್ತಿಲ್ಲೆ. ಸಂನ್ಯಾಸೀ ಹೇಳಿರೆ ತಾನು ಮಾಡಿದ್ದೆಲ್ಲಾ ಭಗವಂತಂಗೆ ಅರ್ಪಣೆ ಮಾಡುವವ° ಹೊರತು ಏನನ್ನೂ ಮಾಡದ್ದೇ ಇಪ್ಪವ° ಅಲ್ಲ. ಸಮಸ್ತ ಕರ್ಮವ ಭಗವಂತಂಗೆ ಅರ್ಪುಸುವದು ಸಂ-ನ್ಯಾಸ. ಇಲ್ಲಿ ಮುಖ್ಯವಾದ ವಿಷಯ ಹೇಳಿರೆ ಕರ್ಮದ ಫಲದ ಬಯಕೆಯ ಸಂಪೂರ್ಣನಾದ ಭಗವಂತನ ಹೃದಯಲ್ಲಿ ನೆಲೆಗೊಳುಸುವದು. ಸಂನ್ಯಾಸ ಹೇಳಿರೆ ತನ್ನ ಕುಟುಂಬವ ಬಿಟ್ಟು ಕಾಡಿಂಗೆ ಹೋಗಿ ಕೂಪದಲ್ಲ. ಕರ್ಮಯೋಗವ ಮಾಡ್ಳೇ ಬೇಕು. “ಕಾರ್ಯಂ ಕರ್ಮ ಕರ್ತೋತಿ ಯಃ” – ಆರಾರಿಂಗೆ ಯಾವ್ಯಾವ ಕಾರ್ಯ ಮಾಡೇಕ್ಕಾಗಿದ್ದೋ ಅದರ ಅವ್ವವ್ವು ಮಾಡ್ಳೇಬೇಕು. ಹಾಂಗಾಗಿ ಸಂನ್ಯಾಸ ಮತ್ತು ಕರ್ಮಯೋಗ ಒಟ್ಟಿಂಗೇ ಇಪ್ಪದು. ಇದಲ್ಲದ್ದೆ ಅಗ್ನಿಯ ತ್ಯಾಗ ಮಾಡಿದವನೋ (ಅಗ್ನಿಕಾರ್ಯವ ಮಾಡದ್ದವನೋ), ಕರ್ಮವ ತ್ಯಾಗ ಮಾಡಿದವನೋ ಸಂನ್ಯಾಸೀಯೋ ಯೋಗಿಯೋ ಅಲ್ಲ. ಸಂನ್ಯಾಸ ಹೇಳಿರೆ ಯೇವತ್ತೂ ನಿಷ್ಕ್ರಿಯನಾಗಿಪ್ಪದು ಹೇಳಿ ಅಲ್ಲ. ಪ್ರತಿಯೊಬ್ಬನೂ ಅವರವರದ್ದೇ ಆದ ಕ್ರಿಯೆಗಳ ಮಾಡ್ಳೇ ಬೇಕು. ಬ್ರಹ್ಮಚಾರಿಯಾದವ ಅಧ್ಯಯನ, ಗುರುಕುಲವಾಸ, ಗುರುಶುಶ್ರೂಷೆ ಇತ್ಯಾದಿ, ಗೃಹಸ್ಥನಾದವ ಅತಿಥಿಸತ್ಕಾರ, ಸಂಸಾರ ಪಾಲನೆ ಇತ್ಯಾದಿ ಕಾರ್ಯಂಗಳ ಮಾಡಿಗೊಂಡೇ ಇರೆಕು. ಹೀಂಗಾಗಿ ಪ್ರತಿಯೊಬ್ಬಂಗೂ ಅವರವರ ಕರ್ಮ ಇದ್ದು ಹೇಳಿ ತಿಳ್ಕೊಳ್ಳೆಕು.
ಶ್ಲೋಕ
ಯಂ ಸಂನ್ಯಾಸಮಿತಿ ಪ್ರಾಹುಃ ಯೋಗಂ ತಂ ವಿದ್ಧಿ ಪಾಂಡವ ।
ನಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ॥೦೨॥
ಪದವಿಭಾಗ
ಯಮ್ ಸಂನ್ಯಾಸಮ್ ಇತಿ ಪ್ರಾಹುಃ ಯೋಗಮ್ ತಮ್ ವಿದ್ಧಿ ಪಾಂಡವ । ನ ಹಿ ಅಸಂನ್ಯಸ್ತ-ಸಂಕಲ್ಪಃ ಯೋಗೀ ಭವತಿ ಕಶ್ಚನ ॥
ಅನ್ವಯ
ಹೇ ಪಾಂಡವ!, ಯಂ ಸಂನ್ಯಾಸಮ್ ಇತಿ ಪ್ರಾಹುಃ ತಂ ಯೋಗಂ ವಿದ್ಧಿ । ಕಶ್ಚನ ಅಸಂನ್ಯಸ್ತ-ಸಂಕಲ್ಪಃ ಯೋಗೀ ನ ಭವತಿ ಹಿ ॥
ಪ್ರತಿಪದಾರ್ಥ
ಹೇ ಪಾಂಡವ! – ಏ ಪಾಂಡುರಾಜನ ಮಗನೇ!(ಅರ್ಜುನ!), ಯಮ್ – ಯಾವುದರ, ಸಂನ್ಯಾಸಮ್ – ಸಂನ್ಯಾಸ, ಇತಿ – ಹೇಳಿ, ಪ್ರಾಹುಃ – ಹೇಳುತ್ತವೋ, ತಂ – ಅದರ, ಯೋಗಮ್ – ಪರಮೋನ್ನತ ಭಗವಂತನೊಂದಿಂಗೆ ಸಂಬಂಧಿಸಿದ ಯೋಗ ಹೇದು, ವಿದ್ಧಿ – ನೀನು ತಿಳಿಯೆಕು. ಕಶ್ಚನ – ಆರೊಬ್ಬನೂ, ಅಸಂನ್ಯಸ್ತ-ಸಂಕಲ್ಪಃ – ಬಿಟ್ಟುಬಿಡದ್ದ(ಅಸಂನ್ಯಸ್ತ) ಸ್ವತೃಪ್ತಿಯ ಆಸೆಮಡಿಕ್ಕೊಂಡ, ಯೋಗೀ – ಆಧ್ಯಾತ್ಮಿಕವಾದಿ ಯೋಗಿ, ನ ಭವತಿ – ಆವುತ್ತನಿಲ್ಲೆ, ಹಿ – ನಿಶ್ಚಯವಾಗಿಯೂ.
ಅನ್ವಯಾರ್ಥ
ಏ ಅರ್ಜುನ!, ಏವುದರ ಸಂನ್ಯಾಸ ಹೇಳಿ ಹೇಳುತ್ತವೋ, ಅದರ, ಯೋಗ ಅಥವಾ ಪರಮಪುರುಷನೊಡನೆ ಸಂಪರ್ಕ ಹೊಂದುವದು (ಯೋಗಮ್) ಹೇದು ನೀನು ತಿಳಿಯೆಕು. ಸ್ವತೃಪ್ತಿಯ ಆಸೆಯ ಬಿಟ್ಟುಬಿಡದ್ದೆ ಆಸೆಮಡಿಕ್ಕೊಂಡವ° ಆಧ್ಯಾತ್ಮವಾದಿಯೋಗೀ ಹೇದು ಎಂದೂ ಆವ್ತನಿಲ್ಲೆ.
ತಾತ್ಪರ್ಯ/ವಿವರಣೆ
ನಿಜವಾದ ಸಂನ್ಯಾಸಯೋಗ ಅಥವಾ ಭಕ್ತಿ ಹೇಳಿರೆ ಮನುಷ್ಯ ಜೀವಿಯಾಗಿ ತನ್ನ ಸಹಜಸ್ವರೂಪವ ತಿಳಿಕ್ಕೊಂಡು ಅದಕ್ಕನುಗುಣವಾಗಿ ಕರ್ಮವ ಮಾಡುವುದು ಹೇಳಿ ಅರ್ಥ. ಜೀವಿಗೆ ಪ್ರತ್ಯೇಕ ಸ್ವತಂತ್ರ ವ್ಯಕ್ತಿತ್ವ ಇಲ್ಲೆ. ಅವ° ಭಗವಂತನ ತಟಸ್ಥ ಶಕ್ತಿ. ಐಹಿಕ ಶಕ್ತಿಗೆ ಸಿಲುಕಿ ಅವ° ಬದ್ಧನಾವುತ್ತ°. ಕೃಷ್ಣಪ್ರಜ್ಞೆ ಇಪ್ಪಗ ಅಥವಾ ಆಧ್ಯಾತ್ಮಿಕ ಚೈತನ್ಯದ ಜ್ಞಾನ ಇಪ್ಪಗ ಅವ° ತನ್ನ ನಿಜವಾದ ಅಥವಾ ಸಹಜವಾದ ಬದುಕಿನ ಸ್ಥಿತಿಲಿ ಇರುತ್ತ°. ಹಾಂಗಾಗಿ ಮನುಷ್ಯಂಗೆ ಸಂಪೂರ್ಣಜ್ಞಾನ ಇಪ್ಪಗ ಎಲ್ಲ ಐಹಿಕ ಇಂದ್ರಿಯತೃಪ್ತಿಯ ಆಸೆಗೊ ನಿಂದುಹೋವ್ತು. ಅವ° ತನ್ನ ಇಂದ್ರಿಯತೃಪ್ತಿಯ ಕಾರ್ಯಂಗಳ ಬಿಟ್ಟುಬಿಡುತ್ತ°. ಇಂದ್ರಿಯಂಗಳ ಐಹಿಕಮೋಹಂದ ತಡವ ಕಾರ್ಯಲ್ಲಿ ಮಗ್ನನಾವುತ್ತ° (ಅನುಷ್ಠಾನ ಮಾಡುತ್ತ°). ಕೃಷ್ಣಪ್ರಜ್ಞೆಲಿಪ್ಪ ಮನುಷ್ಯಂಗೆ ಕೃಷ್ಣರಹಿತವಾದ್ದರಲ್ಲಿ ತನ್ನ ಇಂದ್ರಿಯಂಗಳ ತೊಡಗುಸೆಕು ಹೇಳ್ವ ಅವಕಾಶವೇ ಇರ್ತಿಲ್ಲೆ. ಆದ್ದರಿಂದ ಕೃಷ್ಣಪ್ರಜ್ಞೆಲಿಪ್ಪವ° ಏಕಕಾಲಲ್ಲಿ ಸಂನ್ಯಾಸೀಯೂ ಅಪ್ಪು ಯೋಗಿಯೂ ಅಪ್ಪು. ಮನುಷ್ಯ° ಸ್ವಾರ್ಥದ ಕ್ರಿಯೆಗಳ ಬಿಟ್ಟುಬಿಡ್ಳೆ ಶಕ್ತನಾಗದ್ರೆ ಜ್ಞಾನ ಮತ್ತು ಯೋಗಂಗೊ ನಿರರ್ಥಕ. ಎಲ್ಲಾ ಸ್ವಾರ್ಥತೃಪ್ತಿಯ ಬಿಟ್ಟು ಪರಮ ಪ್ರಭುವ ತೃಪ್ತಿಪಡುಸುವದೇ ಜೀವಿಯ ನಿಜವಾದ ಗುರಿ. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯಂಗೆ ಯಾವುದೇ ರೀತಿಯ ಸ್ವಂತಭೋಗದ ಆಸೆ ಇರ್ತಿಲ್ಲೆ. ಅವ° ಸದಾಕಾಲವೂ ಪರಮಪ್ರಭುವ ತೃಪ್ತಿಪಡುಸುವದರಲ್ಲೇ ನಿರತನಾಗಿರುತ್ತ°. ಕೃಷ್ಣಪ್ರಜ್ಞೆಯ ಅನುಷ್ಠಾನಂದ ಎಲ್ಲ ಉದ್ದೇಶಂಗಳೂ ಪರಿಪೂರ್ಣವಾಗಿ ಈಡೇರುತ್ತು.
ಬನ್ನಂಜೆ ವ್ಯಾಖ್ಯಾನಲ್ಲಿ ವಿವರುಸುತ್ತವು – ಸಂನ್ಯಾಸ ಕೂಡ ಒಂದು ಯೋಗ. ಕರ್ಮಫಲತ್ಯಾಗ ಕೂಡ ಕರ್ಮಮಾಡತಕ್ಕ ಕರ್ಮಯೋಗಿಯ ಯೋಗದ ಒಂದು ಮುಖ. ಎಲ್ಲವನ್ನೂ ಭಗವಂತಂಗೆ ಅರ್ಪಣೆ ಮಾಡಿ ಫಲಕಾಮನೆ ಇಲ್ಲದ್ದೆ ಭಗವದ್ ಪೂಜಾದೃಷ್ಟಿಂದ ಮಾಡುವಂತಹ ಕ್ರಿಯೆ ಸಾತ್ವಿಕರ ಸಾಧನೆ. ಸಂನ್ಯಾಸ ಹೇಳಿರೆ ಕಾಮ-ಸಂಕಲ್ಪವ ಭಗವಂತನಲ್ಲಿ ನ್ಯಾಸ ಮಾಡುವದು (ಅರ್ಪುಸುವದು). ಕಾಮ ಹೇಳಿರೆ ಮಾಡೆಕು ಹೇಳಿ ಬಯಸುವದು, ಸಂಕಲ್ಪ ಹೇಳಿರೆ ಮಾಡುತ್ತೆ ಹೇಳಿ ನಿರ್ಧರುಸುವದು. ಕಾಮಸಂಕಲ್ಪ ವರ್ಜಿತವಾದ್ದು – ಸಂನ್ಯಾಸ. ಇಲ್ಲಿ ಭಗವಂತ° ಹೇಳಿದ್ದು ಆಶ್ರಮಕ್ಕೆ (ಸಂನ್ಯಾಸಾಶ್ರಮಕ್ಕೆ) ಸಂಬಂಧಪಟ್ಟ ವಿಚಾರವ ಅಲ್ಲ. ಇದು ಸಾಧನೆಗೆ ಸಂಬಂಧಪಟ್ಟ ವಿಚಾರ. ಸಾಧನೆಯ ಮುಖಲ್ಲಿ ಯೋಗಿಗೊ ಸಂನ್ಯಾಸಿಗೊ ಆಯೇಕು ಮತ್ತು ಸಂನ್ಯಾಸಿಗೊ ಯೋಗಿಗೊ ಆಯೇಕು ಹೇಳಿ ಮುಖ್ಯವಾಗಿ ಭಗವಂತ° ಹೇಳಿದ್ದು.
ಶ್ಲೋಕ
ಆರುರುಕ್ಷೋರ್ಮುನೇರ್ಯೋಗಂ ಕರ್ಮ ಕಾರಣಮುಚ್ಯತೇ ।
ಯೋಗಾರೂಢಸ್ಯ ತಸೈವ ಶಮಃ ಕಾರಣಮುಚ್ಯತೇ ॥೦೩॥
ಪದವಿಭಾಗ
ಆರುರುಕ್ಷೋಃ ಮುನೇಃ ಯೋಗಮ್ ಕರ್ಮ ಕಾರಣಮ್ ಉಚ್ಯತೇ । ಯೋಗ-ಆರೂಢಸ್ಯ ತಸ್ಯ ಏವ ಶಮಃ ಕಾರಣಮ್ ಉಚ್ಯತೇ ।।
ಅನ್ವಯ
ಯೋಗಮ್ ಆರುರುಕ್ಷೋಃ ಮುನೇಃ ಕರ್ಮ ಕಾರಣಮ್ ಉಚ್ಯತೇ । ಯೋಗ-ಆರೂಢಸ್ಯ ತಸ್ಯ ಏವ ಶಮಃ ಕಾರಣಮ್ ಉಚ್ಯತೇ ॥
ಪ್ರತಿಪದಾರ್ಥ
ಯೋಗಮ್ – ಅಷ್ಟಾಂಗಯೋಗಪದ್ಧತಿಯ, ಆರುರುಕ್ಷೋಃ – ಈಗಷ್ಟೇ ಯೋಗವ ಸುರುಮಾಡಿದ, ಮುನೇಃ – ಮುನಿಗೆ, ಕರ್ಮ – ಕಾರ್ಯವು (ಕರ್ಮವು), ಕಾರಣಮ್ ಉಚ್ಯತೇ – ಸಾಧನೆ ಹೇದು ಹೇಳಲಾಯ್ದು. ಯೋಗ-ಆರೂಢಸ್ಯ – ಅಷ್ಟಾಂಗಯೋಗಲ್ಲಿ ಉನ್ನತಿಯ ಪಡದ (ಉನ್ನತಿಗೆ ಏರಿದ), ತಸ್ಯ – ಅವನ (ಇಲ್ಲಿ ಅವಂಗೆ ಹೇಳಿ ಅರ್ಥ), ಏವ – ನಿಶ್ಚಿತವಾಗಿಯೂ, ಶಮಃ – ಎಲ್ಲ ಭೌತಿಕ ಕಾರ್ಯಂಗಳ ನಿಲ್ಲುಸುವದು (ಶಮನಗೊಳುಸುವದು), ಕಾರಣಮ್ – ಸಾಧನ ಹೇದು, ಉಚ್ಯತೇ – ಹೇಳಲಾಯ್ದು.
ಅನ್ವಯಾರ್ಥ
ಅಷ್ಟಾಂಗಯೋಗ ಪದ್ಧತಿ ಹೊಸತ್ತಾಗಿ ದೀಕ್ಷೆ ಪಡದವಂಗೆ ಕರ್ಮ ಸಾಧನ ಹೇಳಿ ಹೇಳಿದ್ದು. ಯೋಗಲ್ಲಿ ಈಗಾಗಲೇ ಬಹುಮುಂದುವರುದವಂಗೆ (ಯೋಗಸಾಧನೆಮಾಡಿಗೊಂಡವಂಗೆ) ಎಲ್ಲ ಐಹಿಕ ಕಾರ್ಯಂಗಳ ನಿಲ್ಲುಸುವುದೇ ಸಾಧನ ಹೇಳಿ ಹೇಳಿದ್ದು.
ತಾತ್ಪರ್ಯ/ವಿವರಣೆ
ಮನುಷ್ಯ° ಪರಮೋನ್ನತದೊಂದಿಂಗೆ ಸಂಬಂಧ ಪಡವ ಪ್ರಕ್ರಿಯೆಯೇ ಯೋಗ. ಅತ್ಯುನ್ನತ ಆಧ್ಯಾತ್ಮಿಕ ಸಾಕ್ಷಾತ್ಕಾರವ ಸಾಧುಸುವ ಏಣಿಗೆ ಇದರ ಹೋಲುಸಲಕ್ಕು. ಏಣಿಯು ಜೀವಿಯ ಅತ್ಯಂತ ಕೆಳಾಣ ಐಹಿಕ ಸ್ಥಿತಿಂದ ಸುರುವಾಗಿ ಪರಿಶುದ್ಧ ಆಧ್ಯಾತ್ಮಿಕ ಜೀವನಲ್ಲಿ ಪರಿಪೂರ್ಣ ಆತ್ಮಸಾಕ್ಷಾತ್ಕಾರದ ವರೇಂಗೆ ಏರ್ಲೆ ಇಪ್ಪದು. ವಿವಿಧ ಎತ್ತರಕ್ಕೆ ಅನುಗುಣವಾಗಿ ಏಣಿಯ ಬೇರೆಬೇರೆ ಭಾಗಂಗೊಕ್ಕೆ ಬೇರೆ ಬೇರೆ ಹೆಸರುಗೊ ಇದ್ದು. ಆದರೆ ಒಟ್ಟಾಗಿ ಇಡೀ ಏಣಿಗೆ ಯೋಗ ಹೇಳಿ ಹೆಸರು. ಇದರ ಜ್ಞಾನಯೋಗ, ದ್ಯಾನಯೋಗ, ಭಕ್ತಿಯೋಗ ಹೇಳಿಯೂ ವಿಂಗಡುಸಲಕ್ಕು. ಏಣಿಯ ಸುರುವಾಣ ಹಂತ – ಯೋಗಾರುರುಕ್ಷು ಹೇಳಿಯೂ ಅತ್ಯಂತ ಮೇಗಾಣ ಮಟ್ಟವ ಯೋಗಾರೂಢ ಹೇಳಿಯೂ ಹೇಳುವದು. ಬದುಕಿನ ನಿಯಂತ್ರಕ ತತಂಗಳ ಮೂಲಕ ಮತ್ತು ವಿವಿಧ ಅಷ್ಟಾಂಗಯೋಗಾಸನ ಮೂಲಕ ಧ್ಯಾನಲ್ಲಿ ತೊಡಗಲೆ ಪ್ರಯತ್ನಿಸೆಕು. ಅಷ್ಟಾಂಗಯೋಗ ಪದ್ಧತಿಲಿ ಹೇಳ್ತದಾದರೆ ಇಂತಹ ಪ್ರಯತ್ನಂಗೊ ಫಲಾಪೇಕ್ಷೆಯ ಐಹಿಕ ಕರ್ಮವ ಹೇಳಿಯೇ ಪರಿಗಣಿಸೆಕ್ಕಾಗಿದ್ದು. ಇಲ್ಲಿ ಭಕ್ತಿಯಾಗಲೀ, ಫಲಾಪೇಕ್ಷೆ ವರ್ಜಿತ ಹೇಳ್ವದಾಗಲೀ ಇಲ್ಲೆ. ಬರೇ ಶಾರೀರಿಕ ನಿಯಂತ್ರಣ ಮಾತ್ರ ಸುರುವಿಲ್ಲಿ. ಇದರ ಮತ್ತೆ ಧ್ಯಾನಕ್ಕೆ ಸಂಬಂಧಪಡುಸೆಕು. ಇದು ಇಂದ್ರಿಯನಿಯಂತ್ರಣಮಾಡಿ ಮಾನಸಿಕ ಸಮತೋಲನವ ಸಾಧುಸಲೆ ಸಹಾಯಕ ಆವ್ತು. ಧ್ಯಾನಾಭ್ಯಾಸಲ್ಲಿ ಮನುಷ್ಯ ಸಿದ್ಧಿ ಪಡದಪ್ಪಗ, ಅವ° ಮನಸ್ಸಿನ ಕಲಕುವ ಎಲ್ಲ ಕಾರ್ಯಂಗಳ ಜಯಿಸುತ್ತ(ನಿಲ್ಲುಸುತ್ತ, ನಿಯಂತ್ರಣಮಾಡಿಗೊಂಬ ಶಕಿಯ ಪಡಕ್ಕೊಳ್ತ). ಆದರೆ ಕೃಷ್ಣಪ್ರಜ್ಞೆಲಿ ಮನುಷ್ಯ° ಸದಾ ಭಗವಂತನನ್ನೇ ಚಿಂತಿಸುತ್ತಿಪದರಿಂದ ಅವ° ಸುರುವಿಂದಲೇ ಧ್ಯಾನದ ನೆಲೆಲಿ ಇರುತ್ತ°. ಸದಾ ಕೃಷ್ಣಸೇವೆಲಿ (ಭಗವತ್ಪ್ರಜ್ಞೆಲಿ) ನಿರತನಾಗಿಪ್ಪವ ಎಲ್ಲ ಐಹಿಕ ಕಾರ್ಯಂಗಳ ನಿಲ್ಲಿಸಿದ್ದ° ಹೇಳಿ ತಿಳ್ಕೊಂಬಲಕ್ಕು.
ಬನ್ನಂಜೆಯವು ವಿವರುಸುತ್ತವು – ಸಾಧನೆಯ ಮೆಟ್ಟಲ ಏರುವವಂಗೆ ಗುರಿಮುಟ್ಟಲೆ ಕರ್ಮಯೋಗ ಕಾರಣವೆನಿಸುತ್ತು. (ಹಲವು ಬಗೆಯ ನಿಷ್ಠಾವಂತನಾಗಿ ಜನಸೇವೆಲಿ ತೊಡಗುವದು). ಅವ° ಅದರ ಗುರಿ ಸೇರಿಯಪ್ಪಗ (ಜನಸೇವೆಂದ ವಿರಾಮನಾಗಿ ಭಗವಂತನಲ್ಲಿ ಧ್ಯಾನನಿಷ್ಠೆ) ಭಗವತ್ ಸಮಾಧಿ ಸ್ಥಿತಿಲಿ ಸುಖದ ಹೆಚ್ಚಳವ ಅನುಭವಿಸುತ್ತ°.
ಬನ್ನಂಜೆ ಇನ್ನೂ ಚಂದಕೆ ಈ ಶ್ಲೋಕವ ವಿವರುಸುತ್ತವು – ಈ ಶ್ಲೋಕಕ್ಕೆ ಎರಡು ಆಯಾಮ ಇದ್ದು. ಒಬ್ಬ ಸಾಧಕ ನಿತ್ಯಕರ್ಮವ ಎಲ್ಲಿಯವರೇಂಗೆ ಮಾಡೆಕು ಮತ್ತು ಎಲ್ಲಿಂದ ಬಿಡ್ಳಕ್ಕು ಹೇಳ್ವದು ಒಂದು ಆಯಾಮ ಆದರೆ, ಇನ್ನೊಂದು ಸಾಮಾಜಿಕವಾಗಿ ಒಬ್ಬ ಸಾಧಕನ ಕರ್ತವ್ಯ ಎಂತರ ಹೇಳ್ವದರ ಈ ಶ್ಲೋಕ ವಿವರುಸುತ್ತು.
ಇನ್ನೂ ಸಿದ್ಧಿ ಪಡೆಯದ್ದ (ಹೊಸತ್ತಾಗಿ ಸುರುಮಾಡಿದವ°) ಸಾಧನೆಯ ಹಾದಿಲಿಪ್ಪ ಒಬ್ಬ ಸಾಧಕ°, ಆ ಸ್ಥಿತಿಲಿ ಎಲ್ಲ ವಿಹಿತಕರ್ಮವ ಮಾಡಿಕೊಂಡಿರೆಕು, ಯಾವುದನ್ನೂ ಬಿಡ್ಳಾಗ. ‘ಸಿದ್ಧ’ನಾದನಂತರ, ಅವ° ಸಮಾಧಿ ಸ್ಥಿತಿಲಿ ಭಗವಂತನ ತನ್ನೊಳವೇ ಕಂಡುಗೊಂಡಿರುತ್ತ°. ಆ ಸ್ಥಿತಿಲಿ ಅವಂಗೆ ಉಳುದ ಕರ್ಮಂಗೊಕ್ಕಿಂತ, ತನ್ನ ಅಂತರಂಗಲ್ಲಿಯೇ ಭಗವಂತನ ಕಾಂಬ ಕರ್ಮ ಮುಖ್ಯವಾವ್ತು. ಒಬ್ಬ ಅಪರೋಕ್ಷ ಜ್ಞಾನ ಪಡದವ°, ಸದಾ ಸಮಾಧಿ ಸ್ಥಿತಿಲಿ ಇಪ್ಪಲೆ ಸಾಧ್ಯ ಇಲ್ಲೆ. ಅವ° ಹೆರಪ್ರಪಂಚಕ್ಕೂ ಬರೆಕ್ಕಾವ್ತು. ಅಷ್ಟಪ್ಪಗ ಅವನ ಮುಖ್ಯ ಕರ್ಮ ಹೇಳಿರೆ ಶಾಸ್ತ್ರ ಶ್ರವಣ, ಮಂತ್ರಜಪ, ಪ್ರವಚನ ಇತ್ಯಾದಿ. ಆದ್ದರಿಂದ ವಿಹಿತಕರ್ಮಂಗೊಕ್ಕೆ ವಿಧಿನಿಷೇಧ ಅಪರೋಕ್ಷಜ್ಞಾನ ಪಡದವಂಗೆ ಮಾತ್ರ. ಒಬ್ಬ ಅಪರೋಕ್ಷಜ್ಞಾನಿ ಧ್ಯಾನಕ್ಕೆ ಕೂಯ್ದ ಹೇಳಿ ಮಡಿಕ್ಕೊಂಬೊ°. ಅವ°, ಅಂತರಂಗಲ್ಲಿ ಭಗವಂತನ ಕಾಣುತ್ತಿರುತ್ತ°. ಅವ ಅದರ ಸುಖವ ಅನುಭವಿಸಿಗೊಂಡು ಎಷ್ಟು ಆನಂದಲ್ಲಿ ಮುಳುಗಿರುತ್ತ° ಹೇಳಿರೆ ಹೆರಪ್ರಪಂಚದ ಹಗಲು ಇರುಳು ಹೇಳ್ವ ಸಮಯ ಪ್ರಜ್ಞೆ ಕೂಡ ಇರ್ತಿಲ್ಲೆ. ಉದಿಯಪ್ಪಗ ಮಿಂದು ಸ್ನಾನ ಸಂಧ್ಯಾವಂದನೆ ಮಾಡೇಕ್ಕಪ್ಪ ಹೊತ್ತಿಲ್ಲಿ ಇನ್ನೂ ಕೂದಲ್ಲಿಂದ ಹಂದಿದ್ದನಿಲ್ಲೇದು ಅವನ ತಟ್ಟಿ ಏಳ್ಸೆಕ್ಕಾದ್ದು ಇಲ್ಲೆ. ಅವಂಗೆ ಇದೇವುದೂ ಅಗತ್ಯ ಇಲ್ಲೆ. ಅವಂಗೆ ಸಂಧ್ಯಾವಂದನೆ ಮಾಡದ್ರೆ ಯಾವ ಕರ್ಮಲೋಪವೂ ಆವ್ತಿಲ್ಲೆ. ಸಂಧ್ಯಾವಂದನೆ ಮಾಡುತ್ತದು ಭಗವಂದನೆಯ ಒಂದು ಭಾಗವೇ. ಅವ ವಂದನೆಲಿಯೇ ಕೂದುಗೊಂಡಿದ್ದ° ಮತ್ತು ಭಗವಂತನ ದರ್ಶನ ಪಡಕ್ಕೊಂಡಿದ್ದ. ಹೀಂಗಾಗಿ ಅಪರೋಕ್ಷಜ್ಞಾನಿಗೆ ಕರ್ಮಬದ್ಧತೆ ಇಲ್ಲೆ. ಸಮಾಧಿಸ್ಥಿತಿಂದ ಹೆರಬಂದ ಮತ್ತೆ ಇರೆಕ್ಕಾದ್ದು ಅವಂಗೆ ಕರ್ತವ್ಯ ಹೇಳಿರೆ ಭಗವಂತನ ಗುಣಗಾನ, ಪ್ರವಚನ, ಅಧ್ಯಯನ, ಜಪ ಇತ್ಯಾದಿ.
ಈ ಶ್ಲೋಕದ ಇನ್ನೊಂದು ಆಯಾಮ – ಇದು ಮುಖ್ಯವಾಗಿ, ಒಬ್ಬ ಸಾಧಕನ ಸಾಮಾಜಿಕ ನಡೆ ಹೇಂಗಿರೆಕು ಹೇಳ್ವದರ ವಿವರುಸುತ್ತು.
‘ಕರ್ಮ’ ಹೇಳಿರೆ ಕರ+ಮ = ಕಂದಾಯ(duty). ಯಾವುದರ ನಾವು ಕಂದಾಯ ಹೇಳಿ ತಿಳ್ಕೊಂಡು ಮಾಡೆಕೋ ಅದು ಕರ+ಮ. ನಾವೆಲ್ಲಾ ಭಗವಂತನ ರಾಜ್ಯಲ್ಲಿ ಇಪ್ಪ ಪ್ರಜೆಗೊ. ಅದಕ್ಕೋಸ್ಕರವಾಗಿ ಅವಂಗೆ ನಾವು ಕೊಡುವ ಕರ – ‘ಕರ್ಮ’. ಯಾವುದೇ ಅಭಿಲಾಷೆಂದ ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕುವದು ನಿಜವಾದ ಕಂದಾಯ ಆವ್ತಿಲ್ಲೆ. ಅದರ ಭಗವಂತ ಇಚ್ಛಿಸುತ್ತನೂ ಇಲ್ಲೆ. ಭಗವಂತ ನಮ್ಮಿಂದ ಬಯಸುವ ಕರ್ಮ ಹೇಳಿರೆ ಕಷ್ಟಲ್ಲಿಪ್ಪವರ ಶುಶ್ರೂಷೆ. ಇದನ್ನೇ ಜ’ನತಾ ಸೇವೆ ಜನಾರ್ಧನ ಸೇವೆ’ ಹೇಳಿ ಹೇಳಿದ್ದು. ಒಬ್ಬ ಸಾಧಕ ಅಪರೋಕ್ಷ ಸಾಧಕ ಅಪ್ಪನ್ನಾರ ಅವನ ಸಾಧನೆಲಿ ಇದು ಒಂದು ಮುಖ್ಯ ಸಾಧನೆ. ಸಮಸ್ತ ಜೀವಜಾತದ ಮೇಲೆ ಅನುಕಂಪ, ಸೇವಾ ಮನೋವೃತ್ತಿ. ಇದು ಬಹಳ ಮುಖ್ಯ. ಯೋಗಶಾಸ್ತ್ರಲ್ಲಿ ಕೂಡ ಇದನ್ನೇ ಹೇಳುತ್ತವು. ಮೈತ್ರಿ, ಕರುಣಾ, ಮುದಿತ ಮತ್ತು ಉಪೇಕ್ಷ ಹೇಳ್ವ ನಾಲ್ಕು ಮನೋವೃತ್ತಿಗೊ ಒಬ್ಬ° ಸಾಧಕನಲ್ಲಿ ಇರೆಕು. ಮೈತ್ರಿ ಹೇಳಿರೆ ಸಜ್ಜನರ ಸಹವಾಸ. ಎಲ್ಲಿ ಒಳ್ಳೆತನ ಇದ್ದೋ ಅವರತ್ರೆ ಸ್ನೇಹ. ದುಃಖವ ಕಂಡಪ್ಪಗ ಅಲ್ಲಿ ಕರುಣೆ ಮತ್ತು ಕರುಣಾನೆರವು. ಇನ್ನೊಬ್ಬರ ಉದ್ಧಾರ ಮಾಡಿ ಸಂತೋಷಪಡುವದು ಮುದಿತ. ದುಷ್ಟರಿಂದ ದೂರ ಇಪ್ಪದು ಉಪೇಕ್ಷ. ಕೆಟ್ಟವರತ್ರೆ ಜಗಳ ಬೇಡ, ಹೇಳಿರೆ., ಅವರ ಒಡನಾಟಾಂದ ಯಾವುದೇ ದ್ವೇಷ ಮಡಿಕ್ಕೊಳ್ಳದ್ದೆ ದೂರ ಇಪ್ಪದು ಉಪೇಕ್ಷೆ. ಹೀಂಗೆ ಸಾಧಕನ ಜೀವನಲ್ಲಿ ಇದು ಮಹತ್ತರ ಸಾಮಾಜಿಕ ಕರ್ತವ್ಯ. ಒಬ್ಬ° ‘ಸಿದ್ಧ’ನಾದವ (ಯೋಗಾರೂಢ) ಸದಾ ಅಂತರ್ಮುಖಿಯಾಗಿರುತ್ತ°. ಅವಂಗೆ ಈ ಸಾಮಾಜಿಕ ಬದ್ಧತೆ ಇಲ್ಲೆ ಅವರ ಆನಂದಾಭಿವೃದ್ಧಿಗೆ ಕಾರಣ ‘ಶಮಃ’. ಹೇಳಿರೆ., ಸದಾ ಭಗವಂತನಲ್ಲೇ ಮನಸ್ಸಿನ ನೆಟ್ಟುಮಡಿಕ್ಕೊಂಡಿಪ್ಪದು. ಹಾಂಗಾಗಿ ಅವಕ್ಕೆ ವ್ಯತಿರಿಕ್ತವಾದ ಇನ್ನೊಂದು ಕರ್ಮ ಇಲ್ಲೆ. ಹೀಂಗೆ ಲೋಕಸೇವೆ ಹೇಳ್ವದು ಒಬ್ಬ ಸಾಧಕನ ಅವಿಭಾಜ್ಯ ಅಂಗವಾಗಿರೆಕು ಹೇಳ್ವದು ಭಗವಂತನ ಅಭಿಮತ. ಯೋಗಾರೂಢನಾದವಂಗೆ ಯಾವ ಸಾಮಾಜಿಕ ಬದ್ಧತೆ ಇಲ್ಲೆ. ಅವ° ಅಂತರಂಗಲ್ಲಿ ಭಗವಂತನ ಕಂಡುಗೊಂಡಿರುತ್ತ°.
ಹಾಂಗಾರೆ, ಈ ಅಪರೋಕ್ಷ ಜ್ಞಾನಿಗಳ ಗುರುತುಸುವದು ಹೇಂಗೆ ? –
ಶ್ಲೋಕ
ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ ।
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ ॥೦೪॥
ಪದವಿಭಾಗ
ಯದಾ ಹಿ ನ ಇಂದ್ರಿಯ-ಅರ್ಥೇಷು ನ ಕರ್ಮಸು ಅನುಷಜ್ಜತೇ । ಸರ್ವ-ಸಂಕಲ್ಪ-ಸಂನ್ಯಾಸೀ ಯೋಗಾರೂಢಃ ತದಾ ಉಚ್ಯತೇ ॥
ಅನ್ವಯ
ಯದಾ ಹಿ ನ ಇಂದ್ರಿಯ-ಅರ್ಥೇಷು ನ ಕರ್ಮಸು ಅನುಷಜ್ಜತೇ , ತದಾ, ಸರ್ವ-ಸಂಕಲ್ಪ-ಸಂನ್ಯಾಸೀ ಯೋಗ-ಆರೂಢಃ ಉಚ್ಯತೇ ॥
ಪ್ರತಿಪದಾರ್ಥ
ಯದಾ – ಏವಾಗ, ಹಿ – ಖಂಡಿತವಾಗಿಯೂ, ನ ಇಂದ್ರಿಯ-ಅರ್ಥೇಷು – ಇಂದ್ರಿಯ ತೃಪ್ತಿಲಿ ತೊಡಗಿಯೊಂಡು ಇಲ್ಲೆಯೋ, ನ ಕರ್ಮಸು – ಕಾಮ್ಯಕರ್ಮಂಗಳಲ್ಲಿ ನಿರತನಾಗಿ ಇಲ್ಲೆಯೋ, ಅನುಷಜ್ಜತೇ – ತೊಡಿಗಿರುತ್ತ°, ತದಾ – ಅಂಬಗ, ಸರ್ವ-ಸಂಕಲ್ಪ-ಸಂನ್ಯಾಸೀ – ಸಕಲ ಭೌತಿಕಾಪೇಕ್ಷೆಗಳ ಪರಿತ್ಯಾಗಿ (ಸಂನ್ಯಾಸೀ), ಯೋಗಾರೂಢಃ (ಯೋಗ-ಆರೂಢಃ)- ಯೋಗಲ್ಲಿ ಉನ್ನತಿಹೊಂದಿದವ°, ಉಚ್ಯತೇ – ಹೇಳಲ್ಪಡುತ್ತ°.
ಅನ್ವಯಾರ್ಥ
ಏವಾಗ ಒಬ್ಬ° ಇಂದ್ರಿಯವಿಷಯಂಗಳಲ್ಲಿ ಅನಾಸಕ್ತಿಯಾಗಿದ್ದು, ಐಹಿಕ ಬಯಕೆ ಎಲ್ಲವ ತ್ಯಜಿಸಿ, ಇಂದ್ರಿಯ ತೃಪ್ತಿಗಾಗಿ ಕರ್ಮಮಾಡದ್ದೆ, ಫಲಾಪೇಕ್ಷೆಯ ಕರ್ಮಲ್ಲಿ ತೊಡಗದ್ದೆ ಇರುತ್ತನೋ (ಇಂದ್ರಿಯತೃಪ್ತಿಯ, ಭೌತಿಕ ಫಲಾಪೇಕ್ಷೆಯ ತ್ಯಜಿಸಿ ಕರ್ಮಮಾಡುತ್ತನೋ), ಆವಾಗ ಅವನ ‘ಯೋಗಾರೂಢ’ (ಯೋಗಲ್ಲಿ ಉನ್ನತ ಸ್ಥಿತಿಯ ಹೊಂದಿದವ°) ಹೇಳಿ ಹೇಳ್ಳಕ್ಕು.
ತಾತ್ಪರ್ಯ/ವಿವರಣೆ
ಮನುಷ್ಯ° ಭಗವಂತನ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಲಿ ಸಂಪೂರ್ಣವಾಗಿ ತೊಡಗಿಯಪ್ಪಗ, ಅವ° ತನ್ನಲ್ಲಿಯೇ ಸಂಟ್ರುಪ್ತನಾಗಿರುತ್ತ. ಹಾಂಗಾಗಿ ಅವ° ಇಂದ್ರಿಯತೃಪ್ಟಿಲಿಯಾಗಲೀ, ಕಾಮ್ಯಕರ್ಮಲ್ಲಿಯಾಗಲೀ ತೊಡಗುತ್ತನಿಲ್ಲೆ. ಅಲ್ಲದ್ರೆ, ಮನುಷ್ಯ° ಕೆಲಸ ಮಾಡದ್ದೆ ಬದುಕ್ಕಲೆ ಎಡಿಯದ್ದರಿಂದ ಅವ° ಇಂದ್ರಿಯತೃಪ್ತಿಯಕರ್ಮಲ್ಲಿ ತೊಡಗಿಯೊಂಡಿರೆಕ್ಕಾವ್ತು. ಕೃಷ್ಣಪ್ರಜ್ಞೆ ಇಲ್ಲದ್ರೆ, ಮನುಷ್ಯ°, ಸದಾ ಸ್ವಾರ್ಥಪರ ಚಿಂತನೆ ಮತ್ತು ಕಾರ್ಯಂಗಳಲ್ಲಿ ತೊಡಗಿಯೊಂಡಿರುತ್ತ. ಆದರೆ, ಕೃಷ್ಣಪ್ರಜ್ಞೆಲಿಪ್ಪವ° ಎಲ್ಲವನ್ನೂ ಕೃಷ್ಣನ ತೃಪ್ತಿಗಾಗಿ ಮಾಡುತ್ತ°. ಹೀಂಗೆ ಇಂದ್ರಿಯತೃಪ್ತಿಂದ ಸಂಪೂರ್ಣವಾಗಿ ನಿರ್ಲಿಪ್ತನಪ್ಪಲಕ್ಕು. ಇಂತಹ ಸಾಕ್ಷಾತ್ಕಾರ ಇಲ್ಲದ್ದವ ಯೊಗದ ಏಣಿಯ ಅತ್ಯುನ್ನತ ಮೆಟ್ಟಲಿಂಗೆ ಏರೆಕ್ಕಾರೆ ಮದಲೆ ತನ್ನ ಐಹಿಕ ಬಯಕೆಗಳಿಂದ ತಪ್ಪಿಸಿಕೊಂಬಲೆ ಯಾಂತ್ರಿಕವಾಗಿ ಪ್ರಯತ್ನಿಸೆಕ್ಕಾವುತ್ತು.
ಬನ್ನಂಜೆ ವಿವರುಸುತ್ತವು – “ಯದಾ ಹಿ ನ ಇಂದ್ರಿಯ-ಅರ್ಥೇಷು ನ ಕರ್ಮಸು ಅನುಷಜ್ಜತೇ” – ಅಪರೋಕ್ಷಜ್ಞಾನಿಗೊ ಇಂದ್ರಿಯಂಗಳ ಸೆಳವ ಸಂಗತಿಗಳಲ್ಲಿ (ಶಬ್ದ, ರೂಪ, ರಸ, ಗಂಧ, ಸ್ಪರ್ಶ) ಅಥವಾ ಯಾವ ವಿಷಯಂಗಳಲ್ಲಿಯೂ ಆಂಟಿಕೊಂಡಿರುತ್ತವಿಲ್ಲೆ. ಅವು ಕ್ರಿಯೆ ಮಾಡುತ್ತವು ಆದರೆ ಅವು ಅದಕ್ಕೆ ಅಂಟಿಕೊಂಡಿರುತ್ತವಿಲ್ಲೆ, ಅಂಟಿಸಿಕೊಳ್ಳುತ್ತವಿಲ್ಲೆ. ಸಾಧನೆಯ ಹಾದಿಲಿ ಸಾಧಕ ಭಂಙಬಂದು ಇಂದ್ರಿಯನಿಗ್ರಹ ಮಾಡಿರೆ, ಅಪರೋಕ್ಷಜ್ಞಾನಿಗೊಕ್ಕೆ ಇದು ಸಹಜ ಧರ್ಮವಾಗಿರುತ್ತು. “ಜಗತ್ತಿನ ನಿಯಾಮಕ ಭಗವಂತ°. ಅವನ ಬಯಕೆಯೇ ಎನ್ನ ಬಯಕೆ ಆಗಿರಲಿ. ಅವನ ಹೃದಯಲ್ಲಿ ಯಾವುದು ಬಯಕೆ ಇದ್ದೋ ಅದು ಎನ್ನ ಭಾವನೆ ಆಗಲಿ. ಅದಕ್ಕೆ ವಿರುದ್ಧವಾದ ಸಂಕಲ್ಪ ಎನಗೆ ಬಾರದ್ದೇ ಇರಲಿ” – ಹೀಂಗೆ ಅಪರೋಕ್ಷಜ್ಞಾನಿ ಬಯಸುತ್ತ°. ಅವ° ಎಂತದ್ದನ್ನೂ ಇಂದ್ರಿಯಂಗಳ ಮೂಲಕ ಅನುಭವುಸೆಕು ಹೇಳಿ ಬಯಸುತ್ತನಿಲ್ಲೆ, ಪರಿತಪಿಸುತ್ತನಿಲ್ಲೆ. ಇಂದ್ರಿಯದ ಮೂಲಕ ಬಂದ ಅನುಭವಂದ ಪ್ರಭಾವಿತನಾಗಿ ಅದಕ್ಕೆ ಅಂಟಿಗೊಳ್ಳುತ್ತನೂ ಇಲ್ಲೆ. ಎಲ್ಲವನ್ನೂ ತಟಸ್ಥವಾಗಿ ಕಾಣುತ್ತ. ನಾವು ಸಮುದ್ರದಂಡೆಲಿ ಕೂದುಗೊಂಡು ಸಮುದ್ರವ ನೋಡಿರೆ ಅಲ್ಲಿ ಅನೇಕ ಅಲೆಗೆ ಇರುತ್ತು. ನಾವು ಅದರ ನೋಡಿ ಆನಂದಿಸುತ್ತು. ಅಲ್ಲಿ ಬಪ್ಪ ಅಲೆಗಳ ನಿಯಂತ್ರಣ ನಮ್ಮ ಕೈಲಿ ಇಲ್ಲೆ. ಯಾವ ಅಲೆ ಹೇಂಗೆ ಬತ್ತೋ ಅದರ ಹಾಂಗೇ ತಟಸ್ಥವಾಗಿ ಆಸ್ವಾದಿಸುತ್ತದರಲ್ಲಿ ಆನಂದಪಟ್ಟುಗೊಳ್ತು. ಜೀವನ ಸಾಗರಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಅಲೆಗಳ ಹಾಂಗೆ ಬಂದು ಹೋಗಿಯೊಂಡಿರುತ್ತು. ಅದರ ನಿಯಂತ್ರಣ ನಮ್ಮ ಕೈಲಿ ಇಲ್ಲೆ. ಸಮುದ್ರದ ಅಲೆಗಳ ನೋಡಿ ಸಂತೋಷಪಟ್ಟುಗೊಂಡಂತೆ ಈ ಜೀವನದ ಅಲೆಯ ಸಹಜವಾಗಿ ಕಂಡು ಸಂತೋಷಪಟ್ಟುಗೊಂಡು ಬಾಳುವದೇ ಅಪರೋಕ್ಷಜ್ಞಾನಿಯ ಲಕ್ಷಣ.
ಹಾಂಗಾರೆ ಈ ಪ್ರಕ್ರಿಯೆಗೆ ನಮ್ಮ ಮನಸ್ಸಿನ ನಾವು ಹೇಂಗೆ ಸಜ್ಜುಗೊಳುಸೆಕು?, ನಾವೂ ಯೋಗಾರೂಢರಾಯೆಕ್ಕಾರೆ ನಾವು ಎಂತ ಮಾಡೆಕು? –
ಶ್ಲೋಕ
ಉದ್ಧರೇದಾತ್ಮನಾತ್ಮಾನಂ ನಾತ್ಮಾನಂ ಅವಸಾದಯೇತ್ ।
ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ ॥೦೫॥
ಪದವಿಭಾಗ
ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್ । ಆತ್ಮಾ ಏವ ಹಿ ಆತ್ಮನಃ ಬಂಧುಃ ಆತ್ಮಾ ಏವ ರಿಪುಃ ಆತ್ಮನಃ ॥
ಅನ್ವಯ
ಆತ್ಮನಾ ಆತ್ಮನಾಮ್ ಉದ್ಧರೇತ್, ಆತ್ಮಾನಂ ನ ಅವಸಾದಯೇತ್ । ಆತ್ಮಾ ಏವ ಹಿ ಆತ್ಮನಃ ಬಂಧುಃ, ಆತ್ಮಾ ಏವ ಆತ್ಮನಃ ರಿಪುಃ ॥
ಪ್ರತಿಪದಾರ್ಥ
ಆತ್ಮನಾ – ಸ್ವಮನಸ್ಸಿಂದ, ಆತ್ಮಾನಂ – ಬದ್ಧಾತ್ಮನ, ಉದ್ಧರೇತ್ -ಉದ್ಧಾರಮಾಡೇಕು (ಉದ್ಧರುಸೆಕು), ಆತ್ಮಾನಂ ಬದ್ಧಾತ್ಮನ, ನ ಅವಸಾದಯೇತ್ – ಅವನತಿಗೊಳುಸಲಾಗ. ಆತ್ಮಾ – ಮನಸ್ಸು, ಏವ – ಖಂಡಿತವಾಗಿಯೂ, ಹಿ – ನಿಜವಾಗಿ, ಆತ್ಮನಃ – ಬದ್ಧಾತ್ಮನ, ಬಂಧುಃ – ಬಂಧು, ಆತ್ಮಾ – ಮನಸ್ಸು, ಏವ – ಖಂಡಿತವಾಗಿಯೂ, ಆತ್ಮನಃ – ಬದ್ಧಾತ್ಮನ, ರಿಪುಃ – ಶತ್ರುವು.
ಅನ್ವಯಾರ್ಥ
ಮನುಷ್ಯ° ತನ್ನ ಮನಸ್ಸಿನ ಸಹಾಯಂದಲೇ ತನ್ನ (ಬದ್ಧಾತ್ಮನ) ಉದ್ಧಾರ ಮಾಡಿಕೊಳ್ಳೆಕು. ತನ್ನ ತಾನೇ ಅಧೋಗತಿಗೆ ತಳ್ಳಲಾಗ. ಬುದ್ಧಿಜೀವಿಗೆ ಮನಸ್ಸೇ ಬಂಧು, ಮನಸ್ಸೇ ಶತ್ರುವೂ ಕೂಡ.
ತಾತ್ಪರ್ಯ/ವಿವರಣೆ
ಸನ್ನಿವೇಶಕ್ಕನುಗುಣವಾಗಿ ಆತ್ಮಾ ಹೇಳುವ ಪದಕ್ಕೆ ಹಲವು ಅರ್ಥಂಗೊ. ದೇಹ, ಮನಸ್ಸು, ಆತ್ಮ ಹೇಳಿ ಸಂದರ್ಭಕ್ಕನುಗುಣವಾಗಿ ಅರ್ಥೈಸೆಕ್ಕಾದ್ದು. ಯೋಗಪದ್ಧತಿಲಿ ಮನಸ್ಸು ಮತ್ತು ಬದ್ಧ ಆತ್ಮ – ಎರಡೂ ಮುಖ್ಯ. ಯೋಗಾಭ್ಯಾಸಲ್ಲಿ ಮನಸ್ಸೇ ಕೇಂದ್ರಬಿಂದುವಾದ್ದರಿಂದ ಇಲ್ಲಿ ಆತ್ಮಾ ಹೇಳಿರೆ ಮನಸ್ಸು. ಯೋಗಪದ್ಧತಿಯ ಗುರಿ ಮನಸ್ಸಿನ ಹತೋಟಿಲ್ಲಿರಿಸಿಗೊಂಡು ಅದರ ಇಂದ್ರಿಯ ವಸ್ತುಗಳ ಮೋಹಂದ ವಿಮುಖಗೊಳುಸುವದು. ಬದ್ಧ ಆತ್ಮವ ಅಜ್ಞಾನದ ಕೆಸರಿಂದ ಬಿಡುಗಡೆ ಮಾಡ್ಳೆ ಸಾಧ್ಯ ಅಪ್ಪಹಾಂಗೆ ಮನ್ನಸ್ಸಿಂಗೆ ಶಿಕ್ಷಣ ಕೊಡೆಕು. ಐಹಿಕ ಅಸ್ತಿತ್ವಲ್ಲಿ ಮನುಷ್ಯ ಮನಸ್ಸಿನ ಮತ್ತು ಇಂದ್ರಿಯಂಗಳ ಪ್ರಭಾವಕ್ಕೆ ತುತ್ತಾಗಿರುತ್ತ°. ವಾಸ್ತವವಾಗಿ, ಅಹಂಕಾರವು ಐಹಿಕ ಪ್ರಕೃತಿಯ ಮೇಲೆ ಯಜಮಾಂತಿಗೆ ಮಾಡ್ಳೆ ಬಯಸುತ್ತು. ಮನಸ್ಸು ಅಹಂಕಾರಂದ ಸಿಕ್ಕಿಹಾಕಿಗೊಂಡು ಇರ್ತು. ಹಾಂಗಾಗಿ ಪರಿಶುದ್ಧ ಆತ್ಮನೂ ಈ ಐಹಿಕ ಜಗತ್ತಿಲ್ಲಿ ಸಿಕ್ಕಿಬಿದ್ದುಗೊಂಡಿರುತ್ತ. ಆದ್ದರಿಂದ, ಐಹಿಕ ಥಳುಕಿಂಗೆ ಮೋಹಗೊಳ್ಳದ್ದ ಹಾಂಗೆ ಮನಸ್ಸಿಂಗೆ ಶಿಕ್ಷಣವ ಕೊಡೆಕು. ಹೀಂಗೆ ಬದ್ಧ ಆತ್ಮನ ತನ್ನ ಮನಸ್ಸಿನ ಮೂಲಕವಾಗಿ ಉದ್ಧಾರ ಮಾಡೆಕು (ಉದ್ಧರುಸೆಕು). ಇಂದ್ರಿಯಭೋಗದ ಸುಖಕ್ಕಾಗಿ ತನ್ನ ತಾನೇ ಕೀಳುಮಾಡಿಗೊಂಬಲಾಗ. ಮನುಷ್ಯ° ಇಂದ್ರಿಯ ವಸ್ತುಗಳಲ್ಲಿ ಆಕರ್ಶಿಸಿಪ್ಪನ್ನಾರವೂ ಐಹಿಕ ಅಸ್ತಿತ್ವಲ್ಲಿ ಸಿಲುಕಿಹಾಕಿಗೊಂಡಿರುತ್ತ. ಇದರಿಂದ ಬಿಡಿಸಿಗೊಂಬಲೆ ಕೃಷ್ಣಪ್ರಜ್ಞೆ ಒಂದೇ ಪರಿಹಾರ. ಹಾಂಗಾಗಿ ಮನುಷ್ಯನ ಬಂಧನಕ್ಕೆ ಮನಸ್ಸೇ ಕಾರಣ, ಮೋಕ್ಷಕ್ಕೂ ಮನಸ್ಸೇ ಕಾರಣ. ಇಂದ್ರಿಯ ವಸ್ತುಗಳಲ್ಲಿ ಮುಳುಗಿದ ಮನಸ್ಸು ಎಲ್ಲದಕ್ಕೂ ಕಾರಣ. ಇಂದ್ರಿಯ ವಸ್ತುಗಳಿಂದ ದೂರವಾದ ಮನಸ್ಸು ಮುಕ್ತಿಗೆ ಕಾರಣ ಆವ್ತು. ಹಾಂಗಾಗಿ ಯಾವ ಮನಸ್ಸಿನ ಮೂಲಕವಾಗಿ ಬದ್ಧ ಆತ್ಮನ ಮುಕ್ತಿಯತ್ತ ಕೊಂಡೋಪಲೆ ಎಡಿಗಾವ್ತೋ, ಅದೇ ಮನಸ್ಸು ಆತ್ಮನ ಬಂಧುವೂ (ಹಿತೈಷಿಯೂ) ಅಪ್ಪು, ಐಹಿಕ ಪ್ರಪಂಚಲ್ಲೆ ಹಿಡುದುಮಡುಗುವ° ವೈರಿಯೂ ಅಪ್ಪು.
ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳುತ್ತವು- “ಉದ್ಧರೇತ್ ಆತ್ಮನಾ ಆತ್ಮಾನಂ ನ ಆತ್ಮಾನಂ ಅವಸಾದಯೇತ್”. ಹಾಂಗಾಗಿ ನಮ್ಮ ಉದ್ಧಾರಕ್ಕೂ ಮನಸ್ಸೇ ಕಾರಣ, ನಮ್ಮ ಅಧಃಪತನಕ್ಕೂ ಮನಸ್ಸೇ ಕಾರಣ. ಆದ್ದರಿಂದ ಭಗವಂತ° ಹೇಳುತ್ತ° – ಉದ್ಧರೇತ್ ಆತ್ಮನಾ ಆತ್ಮಾನಂ’ – ಮನಸ್ಸಿಂದ(ಆತ್ಮಾನಾ) ಜೀವದ / ಜೀವಾತ್ಮದ (ಆತ್ಮಾನಂ) ಉದ್ಧಾರಮಾಡು. ‘ನ ಆತ್ಮಾನಮ್ ಅವಸಾದಯೇತ್’ ಆ ಮನಸ್ಸಿಂದ ಜೀವಾತ್ಮನ ಅಧಃಪತನಕ್ಕೆ ತಳ್ಳೆಡ. ಆತ್ಮನ (ಜೀವದ) ಅವಸಾನಕ್ಕೆ ಕಾರಣ ಆವ್ತ ಹಾಂಗೆ ಮನಸ್ಸಿನ ಸ್ವಚ್ಛಂದವಾಗಿ ಬಿಡೆಡ. ಮನಸ್ಸು ಕೆಳಂತಾಗಿ ಜಾರಿರೆ ಅದು ನಮ್ಮ ಪಾತಾಳಕ್ಕೆ ತಳ್ಳುತ್ತು. ಹಾಂಗಾಗಿ ಆ ಮನಸ್ಸ ಮೇಗಂತಾಗಿ ನೆಗ್ಗು. ಮನಸ್ಸು ಎತ್ತರಕ್ಕೆ ಹೋದಾಂಗೆ ಜೀವಾತ್ಮನೂ ಕೂಡ ಉನ್ನತಿಗೆ ಎತ್ತಲ್ಪಡುತ್ತ°. ಹಾಂಗಾಗಿ ಈ ಜೀವಕ್ಕೆ (ಜೀವಾತ್ಮಕ್ಕೆ) ಮನಸ್ಸೇ ಬಂಧು (ಸ್ನೇಹಿತ) ಮತ್ತು ಮನಸ್ಸೇ ಶತ್ರುವೂ. ಹಾಂಗಾಗಿ ಸಾಧನೆ ಮಾಡೆಕ್ಕಾರೆ ಮನುಷ್ಯ ಮನಸ್ಸಿನ ಬಂಧುವಾಗಿ ಪರಿವರ್ತನೆ ಮಾಡೆಕು. ಮನಸ್ಸು ಶತ್ರುವಾದರೆ ಜೀವಮಾನ ಪರ್ಯಂತ ಉದ್ಧಾರ ಅಪ್ಪಲೆ ಇಲ್ಲೆ. ಹಾಂಗಾಗಿ, ಮದಾಲು ಬುದ್ಧಿಬಲಂದ ಮನಸ್ಸಿಂಗೆ ತರಭೇತಿಯ ಕೊಟ್ಟು ಅದರ ಗೆಲ್ಲೆಕು. ಮನಸ್ಸು ಗೆದ್ದರೆ ಎಲ್ಲವೂ ಪ್ರಶಾಂತ. ಯಾವ ಗೊಂದಲವೂ ಇಲ್ಲೆ. ಇದು ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ. ಇದು ಅಷ್ಟಾಂಗಯೋಗದ ಮೂಲಕ ಸಾಧುಸಲೆ ಎಡಿಗು.
ಬನ್ನಂಜೆ ಮತ್ತೂ ಆಳವಾಗಿ ವಿಶ್ಲೇಷಿಸುತ್ತವು – ಈ ಪ್ರಪಂಚಲ್ಲಿ ಯಾವುದೂ ನಮ್ಮ ಕೈಲಿ ಇಲ್ಲೆ, ಭಗವಂತನೇ ಹೀಂಗೆ ಹೇಳಿದ್ದ. ಹಾಂಗಿಪ್ಪಗ ನಾವು ನಮ್ಮ ಮನಸ್ಸಿನ ನಿಯಂತ್ರುಸುವದು ಹೇಂಗೆ ಸಾಧ್ಯ. ಅದಕ್ಕೂ ಭಗವಂತ° ಉತ್ತರ ಇದೇ ಶ್ಲೋಕಲ್ಲಿ ಹೇಳಿದ್ದ°. “ಉದ್ಧರೇತ್ ಆತ್ಮನಾ ಆತ್ಮಾನಂ”, ಹೇಳಿರೆ., ಆತ್ಮನಿಂದಲೇ (ಭಗವಂತನಿಂದಲೇ) ಆತ್ಮವ (ಜೀವಾತ್ಮವ) ಉದ್ಧರುಸೆಕು. ಸಾಮಾನ್ಯವಾಗಿ ನಮ್ಮ ಮನಸ್ಸು ನಮ್ಮ ಹಿಡಿತಲ್ಲಿ ಇರ್ತಿಲ್ಲೆ. ‘ಇದು ಎನ್ನಂದ ಎಡಿಯಾ’ ಹೇಳಿಯೇ ಪ್ರತಿಯೊಂದಕ್ಕೂ ಮನಸ್ಸು ಮದಾಲು ಹೇಳುತ್ತದು. ಆದರೆ, ಭಗವಂತ° ನವಗೆ ‘ಬುದ್ಧಿ’ಯ ಕೊಟ್ಟಿದ°. ಬುದ್ಧಿ ನಮ್ಮ ಸ್ವಾತಂತ್ರ್ಯಕ್ಕೆ ಕೊಟ್ಟದು. ಅದರ ನಾವು ಸದುಪಯೋಗಪಡಿಸಿಗೊಳ್ಳೆಕು. ಬುದ್ಧಿಯ ಉಪಯೋಗುಸಿ ಆ ಭಗವಂತನತ್ರೆ “ಎನಗೆ ಒಳ್ಳೆಯ ಮನಸ್ಸ ಕೊಡು, ಎನ್ನ ಉಧ್ಧಾರದ ದಾರಿಲಿ ನಡೆತ್ತಾಂಗೆ ಮಾಡು, ಸಾಧನೆ ಮಾಡುವಂತಹ ಸದ್ಬುದ್ಧಿ ಮಾರ್ಗವ ಕೊಡು” ಹೇಳಿ ಆ ಭಗವಂತನಲ್ಲಿ ನಿರಂತರ ಪ್ರಾರ್ಥಿಸೆಕ್ಕಾದ್ದು. ಅದು ಬಿಟ್ಟು ದೇವರ ನಡೆಲಿ ನಿಂದುಗೊಂಡು ಎನಗೆ ಅದು ಕೊಡು, ಇದು ಕೊಡು ಹೇಳಿ ಐಹಿಕ ವಸ್ತುಗಳ ಯಾಚಾನೆ ಮಾಡುವದು ಅಲ್ಲ. ಭಗವಂತ° ನಮ್ಮ ಅತ್ಯಂತ ಆತ್ಮೀಯ ಹಿತಚಿಂತಕ, ಬಂಧು. ನಮ್ಮ ಬುದ್ಧಿಪೂರ್ವಕ ನಾವು ಯಾವುದರ ಕೇಳಿದರೂ ನಮ್ಮ ಯೋಗ್ಯತೆಗೆ ಅನುಗುಣವಾಗಿ ಧಾರಳ ಕೊಡುತ್ತ. ಬುದ್ಧಿ ಮಡಿಕ್ಕೊಂಡು ಕೇಳೆಕ್ಕಾದ್ದರ ಕೇಳದ್ದೆ ದುರ್ಬುದ್ಧಿಂದ ಅಯೋಗ್ಯವಾದ್ದ್ದರ ಕೇಳಿರೆ ಅವ ಎಂತ ಮಾಡ್ಳೆ. ಎಷ್ಟಾದರೂ ಅವ° ನಮ್ಮ ಪರಮ ಸಖ, ಬಂಧು. ‘ಆತಪ್ಪ , ನಡೆ ಅನುಭವಿಸಿಗೊ ಹೇಳಿ ಕೊಟ್ಟುಬಿಡುತ್ತ°. ಇಲ್ಲಿ ನಾವು ನಮ್ಮ ಬುದ್ಧಿ ಸರಿಯಾಗಿ ಉಪಯೋಗುಸದ್ದೇ ಕಾರಣ ಹೊರತು ಭಗವಂತ° ಹೀಂಗೆ ಮಾಡಿದ ಹೇಳುವದು ಜ್ಞಾನಶೂನ್ಯ ಅಷ್ಟೆ. ಹಾಂಗಾಗಿ ಬುದ್ಧಿಪೂರ್ವಕವಾಗಿ ‘ಯೇವುದು ಅಗತ್ಯವೋ ಅದರ ನೀಡು ದೇವ’ ಹೇಳಿ ನಿತ್ಯ ಪ್ರಾರ್ಥಿಸೆಕು. ಅವ° ಒಬ್ಬನೇ ಯಾವುದೇ ಸ್ವಾರ್ಥ ಇಲ್ಲದ್ದ, ಶಾಶ್ವತ, ನಿರ್ವ್ಯಾಜ, ನಿರಂತರ ಬಂಧು. ಹಾಂಗೆ ಮಾಡಿರೆ ಖಂಡಿತ ನಮ್ಮ ಪ್ರಾರ್ಥನೆಯ ಮನ್ನಿಸಿ ನಮ್ಮ ಮನಸ್ಸಿಲ್ಲಿ ಬಂದು ಕೂರುತ್ತ°.
ಭಗವಂತನ ನಾವು ಹೇಂಗೆ ಕಾಣುತ್ತೋ ಅದೇ ಭಾವಲ್ಲಿ ನವಗೆ ವ್ಯಕ್ತನಾವುತ್ತ°. ದೇವತೆಗೊ ಅವನ° ಜ್ಞಾನಿಯಾಗಿ ಕಂಡುಗೊಂಡವು. ಅವಕ್ಕೆ ಅವ° ಜ್ಞಾನಿಯಾಗಿ ಕಾಣಿಸಿಗೊಂಡು ಉದ್ಧಾರ ಮಾಡಿದ°. ರಾಕ್ಷಸರುಗೊಕ್ಕೆ ಅವ ಕೊಲ್ಲುವವ° / ಶತ್ರು ಹೇಳಿ ತಿಳ್ಕೊಂಡು ಅವನ ದ್ವೇಷಿಸಿದವು. ಅವ° ಅವಕ್ಕೆ ಶತ್ರುವಾಗಿಯೇ ಕಾಣಿಸಿಗೊಂಡ!. ಹಾಂಗಾಗಿ ಭಗವಂತ° ಹೇಳುತ್ತ “ಆತ್ಮಾ ಏವ ರಿಪುಃ ಆತ್ಮನಃ”, ಹೇಳಿರೆ ನಾವು ಅಹಂಕಾರಂದ ದಾರಿ ತಪ್ಪಿರೆ ಅವ° ನವಗೆ ಶತ್ರುವಾಗಿಯೇ ತಿಳುವಳಿಕೆಗೆ ಕಾಣಿಸುತ್ತ°.
ಶ್ಲೋಕ
ಬಂಧುರಾತ್ಮಾತ್ಮನಸ್ತಸ್ಯ ಏನಾತ್ಮೈವಾತ್ಮನಾ ಜಿತಃ ।
ಅನಾತ್ಮನಸ್ತು ಶತ್ರುತ್ವೇ ವರ್ತೇತಾತ್ಮೈವ ಶತ್ರುವತ್ ॥೦೬॥
ಪದವಿಭಾಗ
ಬಂಧುಃ ಆತ್ಮಾ ಆತ್ಮನಃ ತಸ್ಯ ಯೇನ ಆತ್ಮಾ ಏವ ಆತ್ಮನಾ ಜಿತಃ । ಅನಾತ್ಮನಃ ತು ಶತ್ರುತ್ವೇ ವರ್ತೇತ ಆತ್ಮಾ ಏವ ಶತ್ರುವತ್ ॥
ಅನ್ವಯ
ಯೇನ ಆತ್ಮನಾ ಏವ ಆತ್ಮಾ ಜಿತಃ, ತಸ್ಯ ಆತ್ಮನಃ ಬಂಧುಃ ಆತ್ಮಾ, ಅನಾತ್ಮನಃ ತು ಶತ್ರುತ್ವೇ ಆತ್ಮಾ ಏವ ಶತ್ರುವತ್ ವರ್ತೇತೆ ।
ಪ್ರತಿಪದಾರ್ಥ
ಯೇನ ಆತ್ಮನಾ – ಏವ ಜೀವಿಯಿಂದ, ಏವ – ಖಂಡಿತವಾಗಿಯೂ, ಆತ್ಮಾ – ಮನಸ್ಸು, ಜಿತಃ – ಗೆಲ್ಲಲ್ಪಟ್ಟಿರುತ್ತೋ, ತಸ್ಯ ಆತ್ಮನಃ -ಆ ಜೀವಿಯ, ಬಂಧುಃ – ಬಂಧುವು, ಆತ್ಮಾ – ಮನಸ್ಸು, ಅನಾತ್ಮನಃ ತು – ಮನಸ್ಸಿನ ನಿಯಂತ್ರಿಸುಲೆ ಸಾಧ್ಯನಾಗದ್ದವಂಗೆ ಆದರೋ, ಶತ್ರುತ್ವೇ – ವೈರತ್ವದ ಕಾರಣಂದ, ಆತ್ಮಾ ಏವ- ಮನಸ್ಸೇ, ಶತ್ರುವತ್ – ವೈರಿಯ ಹಾಂಗೆ, ವರ್ತೇತ – ಇರುತ್ತು.
ಅನ್ವಯಾರ್ಥ
ಯಾವ ಜೀವಿಯಿಂದ ಮನಸ್ಸು ಗೆಲ್ಲಲ್ಪಟ್ಟಿದೋ ಅವಂಗೆ ಆ ಮಸಸ್ಸು ಬಂಧುವಾಗಿರುತ್ತು. ಆದರೆ, ಹಾಂಗೆ ನಿಯಂತ್ರಿಸುಲೆ ಸಾಧ್ಯವಾಗದ್ದವಂಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗಿ ಇರುತ್ತು.
ತಾತ್ಪರ್ಯ/ವಿವರಣೆ
ಮಾನವ ಜನ್ಮದ ಧ್ಯೇಯವ ನಿರ್ವಹಿಸುವ ಕಾರ್ಯಲ್ಲಿ ಮನಸ್ಸಿನ ಬಂಧುವಾಗಿ (ಸ್ನೇಹಿತನಾಗಿ) ಮಾಡ್ಳೆ ಅದರ ನಿಯಂತ್ರುಸುವದೇ ಅಷ್ಟಾಂಗ ಯೋಗದ ಉದ್ದೇಶ. ಮನಸ್ಸಿನ ನಿಯಂತ್ರುಸದ್ದೆ ಬರೇ ಕಾಂಬದಕ್ಕೆ ಮಾತ್ರ ಯೋಗಾಭ್ಯಾಸ ಮಾಡುವದು ವ್ಯರ್ಥ ಕಾಲಕ್ಷೇಪ. ಅದಂತೇ ಒಂದು ಭಂಙ ಬಪ್ಪ ಶಾರೀರಿಕ ವ್ಯಾಯಾಮ ಅಕ್ಕಷ್ಟೆ. ತನ್ನ ಮನಸ್ಸಿನ ನಿಯಂತ್ರುಸಲೆ ಸಾಧ್ಯವಾಗದ್ದವ° ಸದಾ ಅತ್ಯಂತ ದೊಡ್ಡ ಶತ್ರುವಿನೊಟ್ಟಿಂಗೆ ಬಾಳಿಗೊಂಡಿದ್ದ ಹೇಳಿ ಹೇಳ್ಳಕ್ಕು. ಹೀಂಗೆ ಅವನ ಬದುಕುದೇ, ಅದರ ಧ್ಯೇಯವುದೇ ಹಾಳಾವ್ತು. ಜೀವಿಯ ಸಹಜ ಸ್ವರೂಪ ತನ್ನ ಮೇಗಾಣವರ ಅಪ್ಪಣೆಯ ಪಾಲುಸುವದು. ಎಷ್ಟು ಕಾಲ ಮನಸ್ಸು ಇನ್ನೂ ಗೆಲ್ಲಲಾಗದ ಶ್ತ್ರುವಾಗಿಯೇ ಉಳಿದಿರುತ್ತೋ ಅಷ್ಟು ಕಾಲ ಮನುಷ್ಯ° ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಪ್ರೇರಣೆಂದ ನಡಕ್ಕೊಂಡಿರುತ್ತ°. ಆದರೆ, ಮನಸ್ಸಿನ ಗೆದ್ದಪ್ಪಗ ಎಲ್ಲೋರ ಹೃದಯಲ್ಲಿ ಪರಮಾತ್ಮನಾಗಿ ನೆಲೆಸಿಪ್ಪ ದೇವೋತ್ತಮ ಪರಮ ಪುರುಷನ ಅನುಜ್ಞೆ ಪ್ರಕಾರ ನಡಕ್ಕೊಂಬಲೆ ಮನುಷ್ಯ° ತಾನಾಗಿ ಒಪ್ಪಿಗೊಳ್ಳುತ್ತ°. ನಿಜವಾದ ಯೋಗಾಭ್ಯಾಸಕ್ಕೆ ಹೃದಯದೊಳ ಇಪ್ಪ ಪರಮಾತ್ಮನ ಕಂಡು ಅವನ ಅನುಜ್ಞೆ ಪ್ರಕಾರ ನಡಕ್ಕೊಂಬದು ಅಗತ್ಯ. ಕೃಷ್ಣಪ್ರಜ್ಞೆಯ ನೇರವಾಗಿ ಸ್ವೀಕರುಸಿದರೆ ಭಗವಂತನ ಪ್ರೇರಣೆಗೆ ಸಂಪೂರ್ಣ ಶರಣಾಗತಿಯ ಬಯಕೆ ತಂತಾನೇ ಬಂದುಬಿಡುತ್ತು.
ಬನ್ನಂಜೆ ಹೇಳ್ತವು – ಆರು ಭಗವಂತನ ಗೆದ್ದಿದ್ದವೋ (ಭಗವಂತನ ಪ್ರೀತಿಗೆ ಪಾತ್ರರಾಯ್ದವೋ) ಅವಕ್ಕೆ ಅವ° ಬಂಧು. ಭಗವಂತನ ಪ್ರೀತಿಗೆ ಪಾತ್ರನಾಯೇಕ್ಕಾರೆ ಅವನ ಅನುಗ್ರಹ ಬೇಕು. ಅವನ ಅನುಗ್ರಹ ಸರಿಯಾಗಿ ಸಿಕ್ಕೆಕ್ಕಾರೆ ನಮ್ಮ ಮನಸ್ಸು ಸರಿಯಾಗಿ ಇರೆಕು. ಮನಸ್ಸು ಸರಿಯಾಗಿ ಕೆಲಸಮಾಡೆಕ್ಕಾರೆ ನಮ್ಮ ಬುದ್ಧಿಶಕ್ತಿಯ ಸರಿಯಾಗಿ ಉಪಯೋಗುಸಿಕೊಳ್ಳೆಕ್ಕು. ಅವನ ಅನುಗ್ರಹಂದ ಅವನ ಒಲುಸಿ ಅವನ ಪ್ರೀತಿಗೆ ಪಾತ್ರನಾದವಕ್ಕೆ ಅವ° ಬಂಧು. ಆರು ಭಗವಂತಂಗೆ ಬೆನ್ನ ಹಾಕಿ ಮುಂದೆ ಹೋವ್ತವೋ ಅವು ಭಗವಂತನಿಂದ ಸದಾ ದೂರ ಹೋವ್ತವು. ಅವಂಗೆ ಬೆನ್ನ ಹಾಕಿ ಅವನ ದ್ವೇಷಿಸುವವಕ್ಕೆ ಅವ ಪರಮ ಶತ್ರುವಾಗಿ ಕಾಣಿಸಿಗೊಳ್ತ°. ಹಾಂಗಾಗಿ ನಿರಂತರ ನಾವು ಭಗವಂತನ ಪ್ರಾರ್ಥಿಸೆಕ್ಕಾದ್ದು – “ಬಂಧುವಾಗಿ ಎನ್ನೊಳ ಬಂದು ನೆಲೆಸು, ಎನ್ನ ಸರಿ ದಾರಿಲಿ ಮುನ್ನೆಡೆಸು, ಎನ್ನ ನಿನ್ನ ಕಡೆಂಗೆ ತಿರುಗಿಸಿ ಮುಂದೆ ಕರಕ್ಕೊಂಡು ಹೋಗು” ಹೇಳ್ವ ಶರಣಾಗತಿ ಮನಸ್ಸು ಅವನಲ್ಲಿ ನೆಲೆಗೊಳ್ಳೆಕು. ಇದು ಧ್ಯಾನದ ಮದಲಾಣ (ಸುರುವಾಣ) ಮೆಟ್ಳು.
ಹಾಂಗೆ ಮಾಡಿಯಪ್ಪಗ ಎಂತಾವ್ತು ? –
ಶ್ಲೋಕ
ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ ।
ಶೀತೋಷ್ಣ ಸುಖದುಃಖೇಷು ತಥಾ ಮಾನಾಪಮಾನಯೋಃ ॥೦೭॥
ಪದವಿಭಾಗ
ಜಿತ-ಆತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ । ಶೀತ-ಉಷ್ಣ-ಸುಖ-ದುಃಖೇಶು ತಥಾ ಮಾನ-ಅಪಮಾನಯೋಃ ॥
ಅನ್ವಯ
ಜಿತ-ಆತ್ಮನಃ ಪ್ರಶಾಂತಸ್ಯ ಪರಮ-ಆತ್ಮಾ ಶೀತ-ಉಷ್ಣ-ಸುಖ-ದುಃಖೇಷು ತಥಾ ಮಾನ-ಅಪಮಾನಯೋಃ ಸಮಾಹಿತಃ ಭವತಿ ॥
ಪ್ರತಿಪದಾರ್ಥ
ಜಿತ-ಆತ್ಮನಃ – ತನ್ನ ಮನಸ್ಸಿನ ಗೆದ್ದವನ, ಪ್ರಶಾಂತಸ್ಯ – ಮನಸ್ಸಿನ ಮೇಲಾಣ ಅಂತಹ ನಿಯಂತ್ರಣಂದ ಶಾಂತಿಯ ಹೊಂದಿಪ್ಪವ, ಪರಮ-ಆತ್ಮಾ (ಪರಮಾತ್ಮ) – ಪರಮಾತ್ಮ°, ಶೀತ-ಉಷ್ಣ-ಸುಖ-ದುಃಖೇಷು – ಶೀತ ಉಷ್ಣ ಸುಖ ದುಃಖಂಗಳಲ್ಲಿ, ತಥಾ – ಹಾಂಗೆಯೇ, ಮಾನ-ಅಪಮಾನಯೋಃ – ಗೌರವ ಅಗೌರವಂಗಳಲ್ಲಿಯೂ, ಸಮಾಹಿತಃ – ಸಂಪೂರ್ಣವಾಗಿ ಸೇರಿಗೊಂಡವ° (ಭವತಿ – ಇರುತ್ತ°/ ಆವ್ತ°).
ಅನ್ವಯಾರ್ಥ
ಮನಸ್ಸಿನ ಗೆದ್ದವ° ಆಗಳೇ ಪರಮಾತ್ಮನ ಸೇರಿದಾಂಗೆ ಆಗಿಬಿಡ್ತ°. ಎಂತಕೆ ಹೇಳಿರೆ ಅವ° ಶಾಂತಿಯ ಸಾಧಿಸಿದ್ದ°. ಅಂತವಂಗೆ ಸುಖದುಃಖಂಗೊ, ಶೀತೋಷ್ಣಂಗೊ, ಮಾನಾಪಮಾನಂಗೊ ಎಲ್ಲವೂ ಒಂದೇ.
ತಾತ್ಪರ್ಯ/ವಿವರಣೆ
ದೇವೋತ್ತಮ ಪರಮ ಪುರುಷ ಪರಮಾತ್ಮನಾಗಿ ಎಲ್ಲೋರ ಹೃದಯಂಗಳಲ್ಲಿ ನೆಲಸಿದ್ದ°. ಪ್ರತಿಯೊಂದು ಜೀವಿಯೂ ಅವನ ಪ್ರೇರಣೆ ಪ್ರಕಾರ ನಡಕ್ಕೊಳ್ಳೆಕು ಹೇಳ್ವದೇ ಉದ್ದೇಶ. ಹೆರಾಣ ಮಾಯಾಶಕ್ತಿ ಮನಸ್ಸಿನ ದಾರಿತಪ್ಪುಸುವಾಗ ಮನುಷ್ಯ° ಐಹಿಕ ಕಾರ್ಯಂಗಳಲ್ಲಿ ಸಿಕ್ಕಿಹಾಕಿಗೊಳ್ತ. ಹಾಂಗಾಗಿ ಯೋಗಪದ್ಧತಿಗಳ ಯಾವುದಾರು ಒಂದರ ಮೂಲಕ ಮನುಷ್ಯನ ಮನಸ್ಸಿನ ನಿಯಂತ್ರಿಸುಲೆ ಅವ° ಗುರಿ ಮುಟ್ಟಿದ್ದ ಹೇಳಿ ಭಾವುಸೆಕು. ಮನುಷ್ಯ° ತನ್ನಿಂದ ಮೇಗಾಣಲ್ಲಿಂದ ಬಂದ ಅನುಜ್ಞೆ ಪ್ರಕಾರ ನಡಕ್ಕೊಳ್ಳೆಕ್ಕು. ಮನುಷ್ಯನ ಮನಸ್ಸು ಪರಾಪ್ರಕೃತಿಲಿ ನೆಲೆಸಿಯಪ್ಪಗ ಪರಮ ಪ್ರಭುವಿನ ಅನುಜ್ಞೆಯ ಅನುಸರುಸುವದು ಬಿಟ್ಟು ಅವಮ್ಗೆ ಬೇರೆ ಮಾರ್ಗವೇ ಇಲ್ಲೆ. ಮನಸ್ಸು ತನ್ನಿಂದ ಶ್ರೇಷ್ಠವಾದ್ದದರಲ್ಲಿಂದ ಬಂದ ಅನುಜ್ಞೆಯ ಒಪ್ಪಿಗೊಂಡು ಅದರಂತೆ ನಡಕ್ಕೊಳ್ಳೆಕು. ಮನಸ್ಸಿನ ನಿಯಂತ್ರಿಸಿಗೊಂಬದರ ಪರಿಣಾಮವಾಗಿ ಮನುಷ್ಯ° ತಾನಾಗಿಯೇ ಪರಮಾತ್ಮನ ಪ್ರೇರಣೆಯಂತೆ ನಡಕ್ಕೊಳ್ಳುತ್ತ°. ಕೃಷ್ಣಪ್ರಜ್ಞೆಲಿಪ್ಪವ° ಈ ದಿವ್ಯಸ್ಥಿತಿಯ ಸಾಧಿಸಿಪ್ಪದರಿಂದ ಶೀತೋಷ್ಣಸುಖದುಃಖ ಮೊದಲಾದ ಐಹಿಕ ಅಸ್ತಿತ್ವದ ದ್ವಂದ್ವಂಗೊ ಭಗವಂತನ ಭಕ್ತಂಗೆ ಬಾಧುಸಲೆ ಇಲ್ಲೆ. ಈ ಸ್ಥಿತಿಯೇ ವಾಸ್ತವಿಕ ಸಮಾಧಿ ಅಥವ ಭಗವಂತನಲ್ಲಿ ತಲ್ಲೀನನಾಗಿಪ್ಪದು. ಅರ್ಥಾತ್., ಮನಸ್ಸಿನ ಗೆದ್ದವನ (ಭಕ್ತಿಂದ ಭಗವಂತನ ಗೆದ್ದವನ) ಹೃದಯಲ್ಲಿ ಭಕ್ತನ ಮನಸ್ಸು ವಿಚಲಿತ ಆಗದ್ದ ಹಾಂಗೆ ಭಗವಂತ° ಬಂದು ನೆಲೆಸುತ್ತ°. ಅಂತವಂಗೆ ಸೆಕೆ ಚಳಿ ಸುಖ ದುಃಖ ಎಲ್ಲಾ ಒಂದೇ. ಇಂತಹ ಸಾಧಕ° ಸಾಧನೆಯ ಗುರಿಯ ಸೇರಿದವ° ಆಗಿರುತ್ತ°.
ಶ್ಲೋಕ
ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯಃ ।
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ ॥೦೮॥
ಪದವಿಭಾಗ
ಜ್ಞಾನ-ವಿಜ್ಞಾನ-ತೃಪ್ತ-ಆತ್ಮಾ ಕೂಟಸ್ಥಃ ವಿಜಿತ-ಇಂದ್ರಿಯಃ । ಯುಕ್ತಃ ಇತಿ ಉಚ್ಯತೇ ಯೋಗಿ ಸಮ-ಲೋಷ್ಟ-ಅಶ್ಮ-ಕಾಂಚನಃ ॥
ಅನ್ವಯ
ಜ್ಞಾನ-ವಿಜ್ಞಾನ-ತೃಪ್ತ-ಆತ್ಮಾ ಕೂಟಸ್ಥಃ ವಿಜಿತ-ಇಂದ್ರಿಯಃ, ಸಮ-ಲೋಷ್ಟ-ಅಶ್ಮ-ಕಾಂಚನಃ ಯೋಗೀ ಯುಕ್ತಃ ಇತಿ ಉಚ್ಯತೇ ॥
ಪ್ರತಿಪದಾರ್ಥ
ಜ್ಞಾನ-ವಿಜ್ಞಾನ-ತೃಪ್ತ-ಆತ್ಮಾ – ಆರ್ಜಿತ ಜ್ಞಾನ, ಆತ್ಮಸಾಕ್ಷಾತ್ಕಾರದ ವಿಶೇಷಜ್ಞಾನಂದ, ತೃಪ್ತಾತ್ಮ (ತೃಪ್ತಿಹೊಂದಿದ ಜೀವಾತ್ಮ), ಕೂಟಸ್ಥಃ – ಆಧ್ಯಾತ್ಮಿಕವಾಗಿ ನೆಲೆಸಿದ, ವಿಜಿತ-ಇಂದ್ರಿಯಃ – ಇಂದ್ರಿಯಂಗಳ ಗೆದ್ದ ( ಇಂದ್ರಿಯಂಗಳ ನಿಯಂತ್ರಣ ಸಾಧಿಸಿದ), ಸಮ-ಲೋಷ್ಟ-ಅಶ್ಮ-ಕಾಂಚನಃ – ಮಣ್ಣಿನ ಹೆಂಟೆ, ಕಲ್ಲು, ಚಿನ್ನ ಎಲ್ಲವೂ ಸಮಾನ ಹೇಳಿ ಪರಿಗಣಿಸುವವ° (ಸಮಚಿತ್ತ°), ಯೋಗೀ – ಯೋಗಿಯು, ಯುಕ್ತಃ – ಆತ್ಮಸಾಕ್ಷಾತ್ಕಾರಕ್ಕೆ ಯೋಗ್ಯ°/ ಅರ್ಹ°, ಇತಿ – ಹೇದು, ಉಚ್ಯತೇ – ಹೇಳಲ್ಪಟ್ಟಿದು.
ಅನ್ವಯಾರ್ಥ
ಒಬ್ಬ ಮನುಷ್ಯ ತಾನು ಗಳಿಸಿದ ಜ್ಞಾನ (ಆರ್ಜಿತ ಜ್ಞಾನ) ಮತ್ತು ಆತ್ಮಸಾಕ್ಷಾತ್ಮಾರಂದ ಸಂಪೂರ್ಣ ತೃಪ್ತಿಯ ಪಡದ್ದಿದ್ದರೆ ಅವ° ಆತ್ಮ ಸಾಕ್ಷಾತ್ಕಾರಲ್ಲಿ ಸ್ಥಿರವಾಗಿ ನೆಲೆಸಿದ್ದ° ಮತ್ತು ಅವನ ನಿಜವಾದ ಯೋಗೀ (ಸಾಧಕ°) ಹೇಳಿಯೂ ಹೇಳುವದು. ಇಂತಹ ಮನುಷ್ಯ° ಸಮಾಧಿಸ್ಥಿತಿಲಿದ್ದುಗೊಂಡು ಇಂದ್ರಿಯಂಗಳ ಗೆದ್ದಿರುತ್ತ°. ಅಂತವಂಗೆ ಮಣ್ಣು, ಕಲ್ಲು, ಹೊನ್ನು ಎಲ್ಲವೂ ಒಂದೇ ರೀತಿಯಾಗಿ ಕಾಂಗು.
ತಾತ್ಪರ್ಯ/ವಿವರಣೆ
ಐಹಿಕ ಪಾಂಡಿತ್ಯ ಮಾತ್ರಂದಲೇ ಆರೂ ಕೃಷ್ಣಪ್ರಜ್ಞೆಯ ಪಡಕ್ಕೊಂಬಲೆ ಎಡಿಯ. ಪರಿಶುದ್ಧವಾದ ಪ್ರಜ್ಞೆಯಲ್ಲಿಪ್ಪವನ ಸಹವಾಸಭಾಗ್ಯ ದೊರಕೆಕು. ಕೃಷ್ಣಪ್ರಜ್ಞೆಲಿ ಇಪ್ಪ ಮನುಷ್ಯ° ಭಗವಂತನ ಕೃಪೆಂದ ವಿಶೇಷ ಜ್ಞಾನವ ಪಡೆದಿರುತ್ತ (ವಿಜ್ಞಾನ / ಆತ್ಮಸಾಕ್ಷಾತ್ಕಾರದ ಜ್ಞಾನ). ಪರಿಶುದ್ಧವಾದ ಭಕ್ತಿಸೇವೆಂದ ಅವಂಗೆ ಸಂಪೂರ್ಣ ತೃಪ್ತಿ. ಈ ಜ್ಞಾನವ ಸಾಕ್ಷಾತ್ಕರಿಸಿಗೊಂಡವ ಪರಿಪೂರ್ಣ ಮನುಷ್ಯನಾವುತ್ತ°. ಆಧ್ಯಾತ್ಮಿಕ ಜ್ಞಾನಂದ ಮನುಷ್ಯ° ತನ್ನ ದೃಢನಂಬಿಕೆಗಳಲ್ಲಿ ಅಚಲನಾಗಿರುತ್ತ°. ಬರೇ ಐಹಿಕ ಪಾಂಡಿತ್ಯಂದ ಭ್ರಮೆಯೆ ಇಪ್ಪದು. ದ್ವಂದ್ವಂಗಳ ಜಾಲಕ್ಕಿ ಸಿಕ್ಕಿಹಾಕಿಗೊಂಡಿರುತ್ತ°. ಸಾಕ್ಷಾತ್ಕಾರ ಪಡದ ಜೀವಾತ್ಮಂಗೆ ಸಂಯಮವು ಸಾಧ್ಯ. ಅವ ಸಂಪೂರ್ಣ ಭಗವಂತನನ್ನೇ ನಂಬಿಗೊಂಡಿದ್ದು ಅವನಲ್ಲೇ ಶರಣನಾಗಿರುತ್ತ°. ಅವಂಗೆ ಐಹಿಕ ಎಂತಹ ಮೌಲ್ಯಯುಕ್ತ ವಸ್ತುಗಳೂ ನಗಣ್ಯ. ಐಹಿಕ ಪಾಂಡಿತ್ಯಲ್ಲಿ ಯಾವ ಸಂಬಂಧವನ್ನೂ ಇರುಸಿಗೊಳ್ಳದ್ದ ಮತ್ತು ಊಹಾತ್ಮಕ ಚಿಂತನೆಗೆ ಬಲಿಯಾಗದ್ದೆ ಐಹಿಕವಾಗಿ ಕಾಂಬ ಬಂಗಾರವೂ ಕಲ್ಲು ಮಣ್ಣಿಂಗೆ ಸಮಾನವಾಗಿ ತಿಳ್ಕೊಳ್ಳುತ್ತ°. ಅಂತವ° ನಿಜವಾದ ಯೋಗೀ ಹೇಳಿ ಹೇಳ್ವದಕ್ಕೆ ಯೋಗ್ಯನಾಗಿರುತ್ತ°.
ಒಟ್ಟಿಲ್ಲಿ ಹೇಳ್ತದಾದರೆ, ಮನಸ್ಸಿನ ಗೆದ್ದು, ಇಂದ್ರಿಯ ಚಾಪಲ್ಯವ ಗೆದ್ದು, ಭಗವಂತನಲ್ಲಿ ಮನಸ್ಸು ಸ್ಥಿರಗೊಂಡಿಪ್ಪವರ ಹೃದಯಲ್ಲಿ ಭಗವಂತ ನೆಲೆಸುತ್ತ°. ಅಂತಹ ಸಾಧಕಂಗೆ ಪರಮಾತ್ಮ ಒಬ್ಬನ ಬಿಟ್ಟು ಬಾಕಿ ಎಲ್ಲವೂ ಒಂದೇ ಸಮಾನವಾದ ವಿಷಯಂಗೊ ಈ ಐಹಿಕ ಪ್ರಪಂಚಲ್ಲಿ. ಶೀತೋಷ್ಣಸುಖದುಃಖಂಗೊ, ಮಾನಾಪಮಾನ, ಸೋಲುಗೆಲುವು ಅಥವಾ ಐಹಿಕವಾಗಿ ಬೆಲೆಬಾಳುವ ಬಂಗಾರವೇ ಆಗಿರಲಿ ಎಲ್ಲವೂ ಅವನ ಮಟ್ಟಿಂಗೆ ಮಣ್ಣಿಂಗೆ ಸಮಾನ. ಎಲ್ಲವನ್ನೂ ಸಮಚಿತ್ತಲ್ಲಿ ಕಾಂಬ ಅವ° ನಿಜವಾದ ‘ಯೋಗೀ ‘ ಹೇಳುವದಕ್ಕೆ ಅರ್ಹನಾಗಿರುತ್ತ°.
ಶ್ಲೋಕ
ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು ।
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ ॥೦೯॥
ಪದವಿಭಾಗ
ಸುಹೃತ್ ಮಿತ್ರ-ಅರಿ-ಉದಾಸೀನ-ಮಧ್ಯಸ್ಥ-ದ್ವೇಷ್ಯ-ಬಂಧುಷು । ಸಾಧುಷು ಅಪಿ ಚ ಪಾಪೇಷು ಸಮ-ಬುದ್ಧಿಃ ವಿಶಿಷ್ಯತೇ ॥
ಅನ್ವಯ
ಸುಹೃತ್ ಮಿತ್ರ-ಅರಿ-ಉದಾಸೀನ-ಮಧ್ಯಸ್ಥ-ದ್ವೇಷ್ಯ-ಬಂಧುಷು ಸಾಧುಷು ಅಪಿ ಪಾಪೇಷು ಚ ಸಮ-ಬುದ್ಧಿಃ ವಿಶಿಷ್ಯತೇ ॥
ಪ್ರತಿಪದಾರ್ಥ
ಸುಹೃತ್ ಮಿತ್ರ-ಅರಿ-ಉದಾಸೀನ-ಮಧ್ಯಸ್ಥ-ದ್ವೇಷ್ಯ-ಬಂಧುಷು ಸಾಧುಷು – ಸ್ವಭಾವತಃ ಹಿತೈಷಿ, ಮಿತ್ರ- ವಾತ್ಸಲ್ಯದ ಉಪಕಾರಿ(ಸ್ನೇಹಿತ°), ಶತ್ರು, ವಿರೋಧಿಗಳ ನಡುವೆ ಅಲಿಪ್ತ°, ವಿರೋಧಿಗಳ ನಡುವೆ ಮಧ್ಯವರ್ತಿ, ಬಂಧುಗಳಲ್ಲಿ ಅಸೂಯಾಪರ°, ಸಾಧುಷು – ಧರ್ಮಶ್ರದ್ಧೆಯಿಪ್ಪವರಲ್ಲಿ, ಅಪಿ – ಹಾಂಗೇಯೇ, ಪಾಪೇಷು – ಪಾಪಿಗಳಲ್ಲಿ, ಚ – ಕೂಡ, ಸಮ-ಬುದ್ಧಿಃ – ಸಮಬುದ್ಧಿಯಿಪ್ಪವ°, ವಿಶಿಷ್ಯತೇ – ವಿಶಿಷ್ಟನಾಗಿರುತ್ತ°.
ಅನ್ವಯಾರ್ಥ
ಪ್ರಾಮಾಣಿಕ ಹಿತೈಷಿಗೊ, ಪ್ರೀತಿಯ ಮಿತ್ರಂಗೊ, ಉದಾಸನ ದಡ್ಡಂಗೊ, ಮಧ್ಯವರ್ತಿಗೊ, ಅಸೂಯಾಪರರುಗೊ, ಬಂಧುಗೊ, ಶತ್ರುಗೊ, ಸಾಧುಗೊ ..ಎಲ್ಲೋರನ್ನೂ ಸಮಭಾವನೆಯಿಂದ ಮನುಷ್ಯ ಕಾಂಬಲೆಡಿತ್ತವನಾದಪ್ಪಗ ಅವ° ವಿಶೇಷ ಉನ್ನತ° ಹೇಳಿ ಕಂಡುಗೊಳ್ಳುತ್ತ°.
ತಾತ್ಪರ್ಯ/ವಿವರಣೆ
ಬನ್ನಂಜೆ ವ್ಯಾಖ್ಯಾನಲ್ಲಿ ಹೇಳುತ್ತವು – ಮನಸ್ಸು ಸಮತೋಲನವಾಗದ್ದೆ ಧ್ಯಾನ ಮಾಡ್ಳೆ ಸಾಧ್ಯ ಇಲ್ಲೆ. ಆರಾರದ್ದೋ ಕುರಿತಾಗಿ ಯಾವ್ಯಾವುದೋ ವಿಷಯವಾಗಿ ವಿಚಾರಂಗೊ ಮನಸ್ಸಿನ ಸುಳಿಯೊಳ ಸಿಕ್ಕಿಗೊಂಡು ಮನಸ್ಸು ಕೇಂದ್ರೀಕರುಸಲೆ ಸಾಧ್ಯವಾಗದ್ದೆ ಧ್ಯಾನ ಅಸಾಧ್ಯ ಅಪ್ಪದು ಇದ್ದು. ಪ್ರಪಂಚಲ್ಲಿ ಅನೇಕ ವಿಧದ ಜನಂಗೊ ಇರ್ತವು. ‘ಸುಹೃತ್’ – ಒಳ್ಳೆಯ ಹೃದಯವಂತರು, ಯಾವ ಪ್ರತ್ಯುಪಕಾರವನ್ನೂ ಬಯಸದ್ದೆ ಎಲ್ಲೋರಿಂಗೂ ಸಹಾಯ ಮಾಡುವ ಜನಂಗೊ., ‘ಮಿತ್ರ’ – ತನ್ನ ಆತ್ಮೀಯಂಗೆ ಸದಾ ಸಕಾಯ ಮಾಡುವವ°, ನಾವು ತಪ್ಪಿಯಪ್ಪಗ ನಮ್ಮ ಎಚ್ಚರಿಸಿ ತಿದ್ದುವವ°., ‘ಅರಿ’ – ನಮ್ಮ ವಿನಾಶವನ್ನೇ ಬಯಸುವವು, ಶತ್ರುಗಳ ಹಾಂಗೆ ಕಾಣಿಸಿಗೊಂಬವು., ‘ಉದಾಸೀನ’ – ಒಳ್ಳೆದಕ್ಕೂ ಇಲ್ಲೆ ಕೆಟ್ಟದ್ದಕ್ಕೂ ಇಲ್ಲೆ, ಉಪಕಾರಕ್ಕಿಲ್ಲದ್ದ ದಡ್ಡಂಗೊ, ‘ಮಧ್ಯಸ್ಥ’ – ಒಳ್ಳೆದು ಮಾಡುವಾಗ ಒಳ್ಳೆದು, ಕೆಟ್ಟದಪ್ಪಗ ಕೆಟ್ಟವನಾಗಿ ವರ್ತುಸುವವು., ‘ದ್ವೇಷ್ಯ’ – ಅರ ಕಂಡ್ರೂ ಆಗದ್ದವು., ‘ಬಂಧು’ – ನಮ್ಮ ಬಂಧುವರ್ಗವೇ., ದೇವತಾಸ್ವಭಾವದ ಸಾಧುಗೊ., ಏನೇನಾರು ಮಾಡಿಗೊಂಡು ಬದುಕ್ಕುವ ಪಾಪಿಗೊ… . ಹೀಂಗೆ ಮಾನವ ಸಮಾಜಲ್ಲಿ ಒಳ್ಳೆಯವೂ ಇರ್ತವು ಕೆಟ್ಟವೂ ಇರ್ತವು. ಆದರೆ ಧ್ಯಾನವ ಬಯಸುವವ ಇದು ಯಾವುದನ್ನೂ ತಲಗೆ ಹಾಕಿಗೊಂಬಲಾಗ. ಧ್ಯಾನಲ್ಲಿ ನವಗೆ ಭಗವಂತನ ದರ್ಶನ ಆಯೇಕ್ಕಾರೆ ಮದಾಲು ನಾವು ನಮ್ಮ ಅಂತರಂಗಲ್ಲಿ ಈ ಎಲ್ಲಾ ರೀತಿಯ ಜನರ ಬಗ್ಗೆ ಸಮಬುದ್ಧಿಯ ಬೆಳೆಶಿಗೊಳ್ಳೆಕು. ಒಬ್ಬ ವ್ಯಕ್ತಿಯ ನಡವಳಿಕೆ, ಆವ° ಬೆಳದುಬಂದ ವಾತಾವರಣ, ಪರಿಸರದ ಮತ್ತು ತಿಳುವಳಿಕೆ ಇಲ್ಲದ್ದದು, ಈ ಒಟ್ಟುಮೊತ್ತ ಸ್ವರೂಪ. ಅದು ಯಾವುದರ ಬಗ್ಗೆಯೂ ಮನಸ್ಸಿಲ್ಲಿ ಕೆಟ್ಟಭಾವನೆಯ ಇರಿಸಿಗೊಂಬಲಾಗ. ಒಬ್ಬ ನಮ್ಮ ವೈರಿಯ ಹಾಂಗೆ ಕಾಂಗು. ಇದು ನಮ್ಮದು ಅವನದ್ದೂ ಪ್ರಾರಬ್ಧ ಕರ್ಮ ಆಗಿಕ್ಕು. ಭಗವಂತ° ಅವಂಗೆ ಈ ಜನ್ಮಲ್ಲಿ ಕೊಟ್ಟ ಪಾತ್ರವ ಅವ° ನಿಭಾಯಿಸುತ್ತ° ಹೇಳ್ವ ಮನೋಭಾವಲ್ಲಿ ಅವನ ನಮ್ಮ ಮನಸ್ಸಿಲ್ಲಿ ಕಂಡುಗೊಂಡರೆ ನಮ್ಮ ಮನಸ್ಸಿಲ್ಲಿ ದ್ವೇಷ ಹುಟ್ಟುತ್ತಿಲ್ಲೆ. ಒಬ್ಬ° ನಮ್ಮ ಬೈದಪ್ಪಗ ನಾವು ಉದ್ವೇಗಕ್ಕೊಳಗಾಯೇಕ್ಕಾದ್ದಿಲ್ಲೆ. ಅದು ಭಗವಂತ° ಅವಂಗೆ ಕೊಟ್ಟ ಪಾತ್ರ, ಅದರ ಚೆಂದಕ್ಕೆ ನಿಭಾಯಿಸುತ್ತ ಇದ್ದ° ಹೇಳ್ವ ಭಾವನೆಲಿ ನಾವದರ ತೆಕ್ಕೊಳ್ಳೆಕು. ಸಂಬಂಧಿಕರಾಗಲಿ, ಶತ್ರುಗಳಾಗಿರಲಿ, ಆರೇ ಆಗಿರಲಿ…, ಅದು ಭಗವಂತ° ಅವಕ್ಕೆ ಕೊಟ್ಟ ಪಾತ್ರವ ನಿಭಾಯಿಸುತ್ತ ಇದ್ದವು ಹೇಳಿ ನಾವು ಮನಸ್ಸಿಲ್ಲಿ ಸಂಪೂರ್ಣವಾಗಿ ನಂಬೆಕು. ಧ್ಯಾನ ಸಮಯಲ್ಲಿ ಮನಸ್ಸಿಲ್ಲಿ ಯಾವ ಕೊಳೆ ಇಲ್ಲದ್ದೆ ಶುದ್ಧವಾದ ಸಮಭಾವ ನೆಲೆಗೊಂಡಿರೆಕು. ನಮ್ಮ ಗುರಿ ಎಲ್ಲವೂ ಆ ಭಗವಂತ° ಒಂದೇ ಆಗಿರೆಕು. ಈ ಸ್ಥಿತಿಲಿ ಧ್ಯಾನಕ್ಕೆ ಕೂದಪ್ಪಗ ಇವ್ವಾರು ನಮ್ಮ ಮನಸ್ಸಿನೊಳ ಹೊಕ್ಕದ್ದೆ ಇದ್ದಪ್ಪಗ ಆ ಭಗವಂತನ ದರ್ಶನ ಆವ್ತು.
ಇಲ್ಲಿ ಒಂದು ಮುಖ್ಯ ಎಚ್ಚರದ ವಿಷಯ ಎಂತ ಹೇಳಿರೆ, ಅಂತರಂಗದ ಸಮಭಾವತ್ವ ವ್ಯವಹಾರಿಕವಾಗಿ ಹೆರಪ್ರಪಂಚಲ್ಲಿ ಅಳವಡುಸುವದು ಕಷ್ಟಸಾಧ್ಯವೇ. ವ್ಯವಹಾರಿಕವಾಗಿ ನಾವು ಈ ಮದಲೇ ಹೇಳಿದ ಹಾಂಗೆ, ಮೈತ್ರಿ, ಕರುಣಾ, ಮುದಿತ, ಮತ್ತೆ ಉಪೇಕ್ಷ ಹೇಳ್ವ ನಾಲ್ಕು ಮನೋವೃತ್ತಿಯ ಬೆಳೆಸಿಗೊಳ್ಳೆಕು. ಎಲ್ಲವನ್ನೂ ಸಮಾನವಾಗಿ ಕಾಂಬದು ಹೇಳಿರೆ ಅವರವರ ಆಯಾ ಸ್ಥಾನಲ್ಲಿ ಕಾಂಬದು ವ್ಯಾವಹಾರಿಕ ಪ್ರಪಂಚದ ಸಮದೃಷ್ಟಿ. ಅಪ್ಪನ ಅಪ್ಪನ ಹಾಂಗೆ, ಮಗನ ಮಗನ ಹಾಂಗೆ ನೋಡಿಗೊಂಬದು, ದುಷ್ಟರಿಂದ ದೂರ ಇಪ್ಪದು (ಉಪೇಕ್ಷ) ವ್ಯವಹಾರಿಕ ಪ್ರಪಂಚ. ಅಂತರಂಗ ಪ್ರಪಂಚಲ್ಲಿ ನಾವು ಎಲ್ಲರಲ್ಲೂ ಆತನ ಒಳ ಇಪ್ಪ ಭಗವಂತನ ಮಾತ್ರ ಕಾಣೆಕು. ಇದು ಧ್ಯಾನಕ್ಕೆ ನಮ್ಮಲ್ಲಿ ಇರೆಕ್ಕಪ್ಪ ಪೂರ್ವಸಿದ್ಧತೆ. ನಮ್ಮ ಮನೋದೃಷ್ಟಿ ಎಲ್ಲ ವಿಷಯಂಗಳಲ್ಲಿಯೂ ಸಮಭಾವ, ಸಮ ಚಿತ್ತ. ಮಾನಸಿಕವಾಗಿ ಎಲ್ಲಾ ಸಂಬಂಧಂಗಳ ಕಳಚಿ ಹಾಕಿ ಧ್ಯಾನಕ್ಕೆ ಕೂರೆಕು. ಧ್ಯಾನಲ್ಲಿ ಅಪ್ಪ°, ಅಬ್ಬೆ, ಗುರು, ಶಿಷ್ಯ, ಮಿತ್ರ, ವೈರಿ, ಸಜ್ಜನ, ದುರ್ಜನ ಇತ್ಯಾದಿ ಯಾವ ವರ್ಗವೂ ಇಲ್ಲೆ. ಎಲ್ಲವೂ ಒಂದೇ. ಅದು ಕೇವಲ ಜ್ಞಾನಸ್ವರೂಪವಾದ ಜೀವ, ಅದರೊಳ ಬಿಂಬರೂಪಿ ಭಗವಂತ°. ಇದು ಧ್ಯಾನಕ್ಕೆ ಬೇಕಾದ ನಮ್ಮ ಮಾನಸಿಕ ಸ್ಥಿತಿ.
ಹೀಂಗೆ ಧ್ಯಾನಕ್ಕೆ ಈ ರೀತಿಯ ಮನೋಸ್ಥಿತಿಯ ತಂದುಗೊಂಡು ಮತ್ತೆ ಮುಂದೆ ನೇರವಾಗಿ ಧ್ಯಾನಕ್ಕೆ ಕೂಬ ವಿಧಾನ ಹೇಂಗೆ? –
ಶ್ಲೋಕ
ಯೋಗೀ ಯುಂಜೀತ ಸತತಂ ಆತ್ಮಾನಂ ರಹಸಿ ಸ್ಥಿತಃ ।
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ॥೧೦॥
ಪದವಿಭಾಗ
ಯೋಗೀ ಯುಂಜೀತ ಸತತಮ್ ಆತ್ಮಾನಮ್ ರಹಸಿ ಸ್ಥಿತಃ । ಏಕಾಕೀ ಯತ-ಚಿತ್ತ-ಆತ್ಮಾ ನಿರಾಶೀಃ ಅಪರಿಗ್ರಹಃ ॥
ಅನ್ವಯ
ಯೋಗೀ ರಹಸಿ ಸ್ಥಿತಃ ಏಕಾಕೀ, ಯತ-ಚಿತ್ತ-ಆತ್ಮಾ, ನಿರಾಶೀಃ, ಅಪರಿಗ್ರಹಃ ಚ ಸನ್ ಸತತಮ್ ಆತ್ಮಾನಂ ಯುಂಜೀತ ॥
ಪ್ರತಿಪದಾರ್ಥ
ಯೋಗೀ – ಆಧ್ಯಾತ್ಮಿಕವಾದಿ (ಯೋಗೀ), ರಹಸಿ – ಏಕಾಂತಸ್ಥಳಲ್ಲಿ, ಸ್ಥಿತಃ – ನೆಲೆಸಿದವನಾಗಿ, ಏಕಾಕೀ – ಒಬ್ಬನೇ, ಯತ-ಚಿತ್ತ-ಆತ್ಮಾ – ಮನಸ್ಸಿಲ್ಲಿ ಸದಾ ಜಾಗೃತನಾಗಿದ್ದು, ನಿರಾಶೀಃ – ಬೇರೆಯಾವುದರಿಂದಲೂ ಆಕರ್ಷಿತನಾಗದ್ದೆ, ಅಪರಿಗ್ರಹಃ – ಸ್ವಾಧೀನತಾಭಾವಂದ ಮುಕ್ತನಾಗಿ, (ಚ, ಸನ್ – ಕೂಡ, ಇದ್ದುಗೊಂಡು) ಸತತಮ್ – ನಿರಂತರವಾಗಿ, ಆತ್ಮಾನಮ್ – ತನ್ನ (ದೇಹ,ಆತ್ಮ, ಮನಸ್ಸು), ಯುಂಜೀತ – ಕೃಷ್ಣಪ್ರಜ್ಞೆಲಿ ಏಕಾಗ್ರಗೊಳುಸೆಕು.
ಅನ್ವಯಾರ್ಥ
ಯೋಗಿಯು ಏಕಾಂತಸ್ಥಳಲ್ಲಿ ಇದ್ದುಗೊಂಡು, ಒಬ್ಬಂಟಿಗನಾಗಿ, ಜಾಗೃತನಾಗಿದ್ದು (ಒರಗದ್ದೆ, ಸುತ್ತಮುತ್ತಲಾಣ ಪ್ರಜ್ಞೆಯ ಕಳಕ್ಕೊಳ್ಳದ್ದೆ), ಯಾವುದರಿಂದಲೂ ಆಕರ್ಷಣೆಗೆ ಒಳಗಾಗದ್ದೆ, ಮುಕ್ತನಾಗಿ, ಮನಸ್ಸಿನ ನಿಯಂತ್ರಣಲ್ಲಿ ಮಡಿಕ್ಕೊಂಡು, ತನ್ನ ದೇಹ, ಮನಸ್ಸು ಮತ್ತು ಆತ್ಮವ ಭಗವಂತನ ಸಂಬಂಧಲ್ಲಿ ಸದಾ ತೊಡಗಿಸಿಗೊಳ್ಳೆಕು.
ತಾತ್ಪರ್ಯ/ವಿವರಣೆ
ಕೃಷ್ಣಪ್ರಜ್ಞೆ ಹೇಳಿರೆ ಸದಾ ಭಗವಂತನ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಲಿ ನಿರತನಾಗಿಪ್ಪದು. ಭಗವಂತ° ಏಕಾಏಕಿಯಾಗಿ ಗೋಚರಿಸುತ್ತನಿಲ್ಲೆ. ಧ್ಯಾನದ ಆಳಕ್ಕೆ ಹೋದಾಂಗೆ ಭಗವಂತನ ದೇವೋತ್ತಮ ಪರಮ ಪುರುಷ°, ಪರಮಾತ್ಮ, ಬ್ರಹ್ಮನ್ ಹೇಳಿ ಹಂತಹಂತವಾಗಿ ಅನುಭವಕ್ಕೆ ಬಪ್ಪದು. ನಿರಾಕಾರ ಬ್ರಹ್ಮನಲ್ಲಿ ಅಥವಾ ಸರ್ವಾಂತರ್ಯಾಮಿ ಪರಮಾತ್ಮನಲ್ಲಿ ಆಸಕ್ತಿ ಇಪ್ಪವಕ್ಕೂ ಭಾಗಶಃ ಕೃಷ್ಣಪ್ರಜ್ಞೆ ಇರ್ತು. ಹಾಂಗಾಗಿ ನಿರಾಕಾರವಾದಿಯೂ, ಧ್ಯಾನಯೋಗಿಯೂ ಪರೋಕ್ಷವಾಗಿ ಕೃಷ್ಣಪ್ರಜ್ಞೆ ಇಪ್ಪವ್ವೆ. ಆದರೆ ನಿರಾಕಾರವಾದಿಗೆ ಭಾಗಶಃ ಕೃಷ್ಣಪ್ರಜ್ಞೆ, ಸಂಪೂರ್ಣ ಕೃಷ್ಣಪ್ರಜ್ಞೆ ಇಪ್ಪ ಯೋಗಿಗೆ ನೇರವಾದ ಕೃಷ್ಣಪ್ರಜ್ಞೆ. ನೇರವಾಗಿ ಕೃಷ್ಣಪ್ರಜ್ಞೆ ಇಪ್ಪವ° ಅತ್ಯುನ್ನತ ಆಧ್ಯಾತ್ಮಿಕವಾದಿ. ಎಂತಕೆ ಹೇಳಿರೆ, ಇವಂಗೆ ಬ್ರಹ್ಮನ್ ಹೇಳಿರೆ ಎಂತರ, ಪರಮಾತ್ಮ ಹೇಳಿರೆ ಎಂತರ ಹೇಳಿ ಗೊಂತಿರುತ್ತು. ಪರಮ ಸತ್ಯದ ಬಗ್ಗೆ ಅವನ ಜ್ಞಾನ ಪರಿಪೂರ್ಣವಾಗಿರುತ್ತು. ನಿರಾಕಾರವಾದಿಯ ಮತ್ತು ಧ್ಯಾನಯೋಗಿಯ ಕೃಷ್ಣಪ್ರಜ್ಞೆ ಅಪರಿಪೂರ್ಣವಾಗಿರುತ್ತು. ಅಂದರೂ ಇಲ್ಲಿ ಎಲ್ಲೋರಿಂಗೂ ತಮ್ಮ ವಿಶಿಷ್ಟ ಅನ್ವೇಷಣೆಲಿ ಸತತವಾಗಿ ತೊಡಗಿಪ್ಪಲೆ ಹೇಳಿದ್ದು. ಅವರವರ ಧ್ಯಾನದ ಆಳಕ್ಕನುಗುಣವಾಗಿ ಶೀಘ್ರವಾಗಿಯೋ, ವಿಳಂಬವಾಗಿಯೋ ಅತ್ಯುನ್ನತ ಪರಿಪೂರ್ಣತೆಯ ಮುಟ್ಟಲೆ ಸಾಧ್ಯ ಆವ್ತುತ್ತು. ಆಧ್ಯಾತ್ಮಿಕವಾದಿಯ ಸುರೂವಾಣ ಕೆಲಸ ಹೇಳಿರೆ ಮನಸ್ಸಿನ ಸದಾ ಭಗವಂತನಲ್ಲಿ ನೆಲೆಗೊಳುಸುವದು. ನಿರಂತರವಾಗಿ ಭಗವಂತನನ್ನೇ ಯೋಚುಸುವದು. ಒಂದು ಕ್ಷಣವೂ ಮರವಲೆ ಇಲ್ಲೆ. ಪರಮಪುರುಷನಲ್ಲಿ ಮನಸ್ಸಿನ ಕೇಂದ್ರೀಕರಿಸಿ ಸಮಾಧಿ ಸ್ಥಿತಿಗೆ ತಲಪುವದು. ಮನಸ್ಸಿನ ಕೇಂದ್ರೀಕರುಸೆಕ್ಕಾರೆ ಮನುಷ್ಯ° ಯಾವತ್ತೂ ಏಕಾಂತವಾಸಿಯಾಗಿರೆಕು. ಹೆರಾಣ ವಸ್ತುವಿಷಯಂಗಳಿಂದ ಆಕರ್ಷಣೆಗೆ ಒಳಪ್ಪಡಲಾಗ. ಅದಕ್ಕಾಗಿ ಏಕಾಂತಸ್ಥಳವ ಆಯ್ಕೆಮಾಡೆಕು. ಮತ್ತೆ, ತನ್ನ ಸಾಕ್ಷಾತ್ಕಾರಕ್ಕೆ ಸಹಕಾರಿಯಾಗಿಪ್ಪದರ ಸ್ವೀಕರುಸಲೆ ಮತ್ತು ಬೇಡವಾದ್ದರ ಸ್ವೀಕರುಸದ್ದೆ ಇಪ್ಪಲೆ ಸದಾ ಎಚ್ಚರಂದ ಇರೆಕು. ಅನಗತ್ಯ ಐಹಿಕ ವಸ್ತುಗಳತ್ತ ಮನಸ್ಸು ಓಡದ್ದ ಹಾಂಗೆ ದೃಢಮನಸ್ಸುಳ್ಳವನಾಯೆಕು. ಪರಿಪೂರ್ಣ ದೃಢಸಂಕಲ್ಪ ಮಾಡಿಗೊಂಡು ಐಹಿಕ ಎಲ್ಲ ಬಯಕೆಗಳಿಂದ ದೂರವಿರೆಕು. ಈ ಎಲ್ಲ ಪರಿಪೂರ್ಣತೆಗಳ ಮತ್ತು ಮುನ್ನೆಚ್ಚರಿಕೆಗಳ ನೆಂಪುಮಡಿಕ್ಕೊಂಡು ನೇರವಾದ ಕೃಷ್ಣಪ್ರಜ್ಞೆಲಿ ಧ್ಯಾನಕ್ಕೆ ಕೂದರೆ ಸಾಕ್ಷಾತ್ಕಾರ ಶೀಘ್ರವಾಗಿ ಮಾಡಿಗೊಂಬಲಕ್ಕು. ಕೃಷ್ಣಪ್ರಜ್ಞೆಲಿಪ್ಪ ಮನುಷ್ಯಂಗೆ ಎಲ್ಲವೂ ಕೃಷ್ಣಂಗೆ (ಭಗವಂತಂಗೆ) ಸೇರಿದ್ದು ಹೇಳ್ವ ಸರಿಯಾದ ಜ್ಞಾನ ಇರುತ್ತು. ಆದ್ದರಿಂದ ಯಾವುದೂ ತನಗೆ ಸಂಬಂಧಪಟ್ಟದ್ದಲ್ಲ ಹೇಳ್ವ ಜ್ಞಾನೆಂದ ಐಹಿಕ ಯಾವುದೇ ಬಯಕೆ ಕಾಮನೆಗಳಿಂದ ಮುಕ್ತನಾಗಿರುತ್ತ°. ಕೃಷ್ಣಪ್ರಜ್ಞೆಗೆ ಅನುಕೂಲವಾದ್ದರ ಹೇಂಗೆ ಸ್ವೀಕರುಸೆಕು ಮತ್ತು ಪ್ರತಿಕೂಲವಾದ್ದರ ಹೇಂಗೆ ತಿರಸ್ಕರುಸೆಕು ಹೇಳ್ವ ಜ್ಞಾನ ಅವನಲ್ಲಿ ಇರುತ್ತು. ಹಾಂಗಾಗಿ ಐಹಿಕ ವಿಷಯಂಗಳ ದೂರ ಇರಿಸಿಗೊಳ್ಳುತ್ತ°. ಅವ° ಸದಾ ಆಧ್ಯಾತ್ಮಿಕ ಸ್ಥಿತಿಲಿ ಇರುತ್ತ°. ಕೃಷ್ಣಪ್ರಜ್ಞೆ ಇಲ್ಲದ್ದಿಪ್ಪವರೊಂದಿಂಗೆ ಅವಂಗೆ ಯಾವುದೇ ಸಂಬಂಧ ಇಲ್ಲದ್ದೆ ಅವ° ಯಾವಾಗಲೂ ಏಕಾಕಿ. ಆದ್ದ್ದರಿಂದ ಅವ°, ಪರಿಪೂರ್ಣ ಕೃಷ್ಣಪ್ರಜ್ಞೆಲಿಪ್ಪವ° ಪರಿಪೂರ್ಣ ಯೋಗಿ.
ಬನ್ನಂಜೆಯವರ ವ್ಯಾಖ್ಯಾನಲ್ಲಿ ಈ ಭಾಗವ ಸುಂದರವಾಗಿ ವಿವರಿಸಿದ್ದವು – ಯೋಗ ಸಾಧಕ ಒಬ್ಬನೇ ಏಕಾಂತಲ್ಲಿ ಕೂದುಗೊಂಡು, ಮೈಮನಗಳ ಹದಗೊಳುಸಿ, ಆಸೆಪಡದ್ದೆ, ಯಾವುದಕ್ಕೂ ಕೈ ಒಡ್ಡದ್ದೆ, ತನ್ನ ಮನಸ್ಸು, ಚಿತ್ತ, ಬುದ್ದಿಯ ಸಮಾಧಿಗೆ ಅಣಿಗೊಳುಸೆಕು. ಧ್ಯಾನ ಮಾರ್ಗಲ್ಲಿ ಸಾಧನೆ ಮಾಡುವ ವ್ಯಕ್ತಿ ಮನಸ್ಸಿನ ಧ್ಯಾನಯೋಗಲ್ಲಿ ತೊಡಗಿಸಿಗೊಂಬಲೆ ಮನಸ್ಸಿನ ಏಕಾಗ್ರತೆಗೊಳುಸಲೆ ಅಣಿಯಾಯೆಕು. ಜನಜಂಗುಳಿ ಇಪ್ಪಲ್ಲಿ ಧ್ಯಾನ ಅಭ್ಯಾಸ ಮಾಡ್ಳೆ ಸಾಧ್ಯ ಇಲ್ಲೆ. ಹಾಂಗಾಗಿಯೇ ಮದಲಾಣವು ಉದಿಗಾಲಕ್ಕೆ ಅರುಣೋದಯ ಕಾಲವ ಧ್ಯಾನಕ್ಕೆ ಮೀಸಲಿರಿಸಿದ್ದು. ಆ ಹೊತ್ತಿಲ್ಲಿ ವಾತಾವಾರಣವೂ ಪ್ರಶಾಂತವಾಗಿರುತ್ತು, ಮನಸ್ಸೂ ನಿರ್ಮಲವಾಗಿರುತ್ತು. ಸೂರ್ಯೋದಯದ ತೊಂಬತ್ತಾರು ನಿಮಿಷ ಮದಲು ಧ್ಯಾನಕ್ಕೆ ಕೂದರೆ ಅಂಬ ಇಡೀ ಪ್ರಕೃತಿ ಪ್ರಶಾಂತವಾಗಿ ಇರುತ್ತು. ಈ ಕಾಲ ಮನಸ್ಸಿನ ಏಕಾಗ್ರತೆಗೆ ಕೊಂಡೋಪಲೆ ಅತ್ಯಂತ ಪೂರಕ ಕಾಲ. ಇದನ್ನೇ ‘ಬ್ರಹ್ಮಮುಹೂರ್ತ’ ಹೇಳುವದು. ಸೂರ್ಯೋದಯಕ್ಕಿಂತ ತೊಂಬತ್ತಾರು ನಿಮಿಷ (ನಾಲ್ಕು ಘಳಿಗೆ) ಮದಲು ಸುರುವಾಗಿ ನಲುವತ್ತೆಂಟು ನಿಮಿಷಗಳ ಕಾಲ (ಎರಡು ಘಳಿಗೆ) ಬ್ರಹ್ಮಮುಹೂರ್ತ. ಉದಾಹರಣೆಗೆ ಸೂರ್ಯೋದಯ 5:44ಕ್ಕೆ ಹೇಳಿ ಆದರೆ 4:08 ರಿಂದ 4:56 ರ ವರೇಂಗೆ ಬ್ರಹ್ಮಮುಹೂರ್ತ. ಆ ಮುಹೂರ್ತದ ದೇವತೆ ಚತುರ್ಮುಖ ಬ್ರಹ್ಮ. ಇವನೇ ನಮ್ಮ ಚಿತ್ತದ ದೇವತೆ. ಹಾಂಗಾಗಿ ಈ ಕಾಲ ಜಪ ತಪ ಧ್ಯಾನಕ್ಕೆ ಅತ್ಯಂತ ಶ್ರೇಷ್ಠವಾದ ಸಮಯ. ಶಾಲೆಮಕ್ಕೊ, ಅಧ್ಯಯನ ಮಾದುವವೂ ಉದಿಗಾಲಕ್ಕೆ ಎದ್ದು ಓದೆಕು ಹೇಳ್ವದಕ್ಕೆ ಇದೇ ಕಾರಣ. ವಾತಾವರಣ ಪ್ರಶಾಂತವಾಗಿರುತ್ತು, ಮನಸ್ಸೂ ನಿರ್ಮಲವಾಗಿರುತ್ತು, ಚಿತ್ತಕ್ಕೆ ಬೇಗನೆ ಅರ್ಥ ಅಪ್ಪಲೆ ಅನುಕೂಲವಾಗಿರುತ್ತು. ಧ್ಯಾನ ಹೇಳುವದು ಅತ್ಯಂತ ಅಂತರಂಗದ ಕ್ರಿಯೆ. ಇಲ್ಲಿ ಭಗವಂತ° ಮತ್ತು ಸಾಧಕ° ಮಾತ್ರ ಇರೆಕ್ಕಪ್ಪದು. ಮೂರನೇ ಯಾವುದಕ್ಕೂ ಅವಕಾಶ ಇಲ್ಲೆ (ತೊಂದರೆಯೇ). ಹಾಂಗಾಗಿ ಧ್ಯಾನ ಅಭ್ಯಾಸ ಮಾಡುವಾಗ ಯಾವಾಗಲೂ ಏಕಾಂತವಾಗಿ ಅಭ್ಯಾಸ ಮಾಡೆಕು ಹೇಳುವದು. ನಮ್ಮ ಚಿತ್ತ ಮತ್ತು ಮನಸ್ಸಿನ ಬುದ್ಧಿಪೂರ್ವಕ ನಿಯಂತ್ರಣಲ್ಲಿ ಮಡಿಕ್ಕೊಂಡು, ಯಾವುದೇ ಆಸೆ ಅಕಾಕ್ಷೆ ಮನಸ್ಸಿಂಗೆ ತಾಗುಸಿಗೊಳ್ಳದ್ದೆ, ತೃಪ್ತ ಮನಸ್ಸಿಂದ ಧ್ಯಾನಕ್ಕೆ ಅಣಿಯಾಯೇಕು.
ಮುಂದೆ ಎಂತರ..? ಬಪ್ಪ ವಾರ ನೋಡುವೋ°
ಮುಂದುವರಿತ್ತು.
ಶೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 06 – SHLOKAS 01 – 10 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಚೆನ್ನೈಬಾವ೦ಗೆ ದೊಡ್ಡ ನಮಸ್ಕಾರವೇ ಮಾಡೆಕ್ಕು.ಕಲಿಯುಗದ ಕೃಷ್ಣನೇ ಸರಿ.ನಿಂಗಳ ಕೈಂಕರ್ಯ ಮುಂದುವರಿಯಲಿ.ದನ್ಯವಾದಗಳು.
ಇಷ್ಟು ದೊಡ್ಡ ಮಾತಿಂಗೆಲ್ಲ ಆನಾಯ್ದಿಲ್ಲೆ ಶ್ಯಾಮಣ್ಣ. ಎನ್ನದೆಂತೂ ಇಲ್ಲೆ ಇದರಲ್ಲಿ. ಬರೇ ಸಂಗ್ರಹ ಶುದ್ದಿ ಮಾತ್ರ ಎನ್ನ ಈ ಕೆಲಸ. ಮತ್ತೆಲ್ಲಾ ಬನ್ನಂಜೆಯಂತಹ ಮೇಧಾವಿಗೊ ಹೇಳಿದ್ದರಲ್ಲಿಂದ ಸಂಗ್ರಹ ಮತ್ತು ಅದರಿಂದ ಹೆರ್ಕಿ ತೆಗದು ಇಲ್ಲಿ ಅಭಿರುಚಿ ಇಪ್ಪವರೊಟ್ಟಿಂಗೆ ಹಂಚಿಗೊಂಡದು, ಎಲ್ಲೋರು ಗೊಂತಿಪ್ಪದರ ಅತ್ತಿತ್ತೆ ಹಂಚಿಗೊಂಬದು, ವಿಷಯ ತಿಳ್ಕೊಂಬೋಳಿ.
ಚೆನ್ನೈಭಾವಾ,
ಹವಿಗನ್ನಡ ಸಾಹಿತ್ಯಕ್ಕೆ ಭಗವದ್ಗೀತೆಯ ಮೂಲಕ ವಿಶಿಷ್ಠ ಕಾಣಿಕೆ ಕೊಡ್ತಿಪ್ಪ ನಿ೦ಗಳಿಗೆ ಅಭಿನ೦ದನೆ. ಮು೦ದೊ೦ದು ದಿನ ಇದು ನಮ್ಮ ಬೆಲೆಕಟ್ಟಲಾಗದ ಆಸ್ತಿ, ಹಿ೦ಗೇ ಮು೦ದುವರೆಯಲಿ, ಧನ್ಯವಾದ.