Oppanna.com

ಶ್ರೀಮದ್ಭಗವದ್ಗೀತಾ – ಅಥ ಅಷ್ಟಮೋsಧ್ಯಾಯಃ – ಅಕ್ಷರಬ್ರಹ್ಮಯೋಗಃ – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   13/09/2012    3 ಒಪ್ಪಂಗೊ

ಚೆನ್ನೈ ಬಾವ°

ಶ್ರೀ ಕೃಷ್ಣಪರಮಾತ್ಮನೇ ನಮಃ 

ಶ್ರೀಮದ್ಭಗವದ್ಗೀತಾ 

ಅಥ ಅಷ್ಟಮೋsಧ್ಯಾಯಃ – ಅಕ್ಷರಬ್ರಹ್ಮಯೋಗಃ

ಶ್ಲೋಕ

ಅರ್ಜುನ ಉವಾಚ
ಕಿಂ ತದ್ ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।
ಅಧಿಭೂತಂ ಚ ಕಿಂ ಪ್ರೋಕ್ತಮ್ ಅಧಿದೈವಂ ಕಿಮುಚ್ಯತೇ ॥೦೧॥

ಪದವಿಭಾಗ

ಅರ್ಜುನಃ ಉವಾಚ
ಕಿಮ್ ತತ್ ಬ್ರಹ್ಮ ಕಿಮ್ ಅಧ್ಯಾತ್ಮಮ್ ಕಿಮ್ ಕರ್ಮ ಪುರುಷೋತ್ತಮ । ಅಧಿಭೂತಮ್ ಚ ಕಿಮ್ ಪ್ರೋಕ್ತಮ್ ಅಧಿದೈವಮ್ ಕಿಮ್ ಉಚ್ಯತೇ ॥

ಅನ್ವಯ

ಅರ್ಜುನಃ ಉವಾಚ – ಹೇ ಪುರುಷೋತ್ತಮ!, ತತ್ ಬ್ರಹ್ಮ ಕಿಮ್? ಅಧ್ಯಾತ್ಮಂ ಕಿಮ್? ಕರ್ಮ ಕಿಮ್? ಅಧಿಭೂತಂ ಕಿಂ ಪ್ರೋಕ್ತಮ್? ಅಧಿದೈವಂ ಚ ಕಿಮ್ ಉಚ್ಯತೇ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಪುರುಷೋತ್ತಮ – ಏ ಪುರುಷ ಉತ್ತಮನೇ!, ತತ್ ಬ್ರಹ್ಮ ಕಿಮ್? – ಆ ಬ್ರಹ್ಮ ಏವುದು? ಅಧ್ಯಾತ್ಮಮ್ ಕಿಮ್? – ಆತ್ಮವು ಏವುದು?, ಕರ್ಮ ಕಿಮ್? – ಕಾಮ್ಯಕರ್ಮ ಏವುದು? ಅಧಿಭೂತಮ್ ಕಿಮ್? – ಭೌತಿಕ ಅಭಿವ್ಯಕ್ತಿ ಹೇಳಿ ಹೇಳಲ್ಪಡುವದು ಏವುದರ?, ಅಧಿದೈವಮ್ ಚ ಕಿಮ್ ಉಚ್ಯತೇ? –  ಅಧಿದೇವತೆಗೊ ಹೇಳಿ ಏವುದರ ಹೇಳ್ತದು?

ಅನ್ವಯಾರ್ಥ

ಅರ್ಜುನ ಭಗವಂತನತ್ರೆ ಹೇಳಿದ° (ಕೇಳಿದ°), ಏ ಪುರುಷೋತ್ತಮ!, ಬ್ರಹ್ಮನ್ ಏವುದು?, ಆತ್ಮ ಏವುದು?, ಕರ್ಮ ಏವುದು? ಈ ಐಹಿಕ ಅಭಿವ್ಯಕ್ತಿ ಏವುದು? ದೇವತೆಗೊ ಹೇಳಿರೆ ಆರು?

ತಾತ್ಪರ್ಯ / ವಿವರಣೆ

ಏಳನೇ ಅಧ್ಯಾಯದ ಅಕೇರಿಗೆ ಭಗವಂತ° ಆರು ಮಹತ್ವದ ಸಂಗತಿಯ ಮನುಷ್ಯ° ತಿಳಿದಿರೆಕು ಹೇಳಿ ಹೇಳಿತ್ತಿದ್ದ°. ಅಧಿಭೂತ, ಅಧ್ಯಾತ್ಮ, ಅಧಿದೈವ, ಅಧಿಯಜ್ಞ, ಬ್ರಹ್ಮ, ಕರ್ಮ – ಈ ಆರು ಸಂಗತಿಗಳ ತಿಳುದರೆ ಅದರಿಂದ ಮೇಗೆ ಏರ್ಲೆ ಬೇರೆಂತ ಇಲ್ಲೆ. ಅಧಿಭೂತ ಹೇಳಿರೆ ಭೌತಿಕ ಪ್ರಪಂಚ, ಅಧ್ಯಾತ್ಮ ಹೇಳಿರೆ ಜಡದೊಳ ಇಪ್ಪ ಚೇತನ, ಅಧಿದೈವ ಹೇಳಿರೆ ಚೇತನವ ನಿಯಂತ್ರಿಸುವ ದೇವತೆಗೊ, ಅಧಿಯಜ್ಞ ಹೇಳಿರೆ ದೇವತೆಗಳ ನಿಯಂತ್ರುಸುವ ಭಗವಂತ, ಈ ಭಗವಂತ ಜಗತ್ತೆಲ್ಲ ತುಂಬಿದ್ದ° ಹೇಳುವದು ಬ್ರಹ್ಮಕಲ್ಪನೆ, ಅವಂದಲೇ ಎಲ್ಲ ಕ್ರಿಯೆಗೊ ನಡೆತ್ತದು ಹೇಳುವದು ಕರ್ಮ. ಈ ಪ್ರಜ್ಞೆ ಮರಣಸಮಯಲ್ಲೂ ಎಚ್ಚರವಾಗಿರೆಕು. ಹಾಂಗಾದಪ್ಪಗ ಆ ಸಾವು ಮಾಂಗಲಿಕ. ಇದಿಷ್ಟು ವಿಚಾರಂಗಳ ಕಳುದ ಅಧ್ಯಾಯದ ಕೊನೆ ಭಾಗಲ್ಲಿ ನೋಡಿದ್ದದು.

ಬನ್ನಂಜೆ ಹೇಳುತ್ತವು – ಏಳನೇ ಅಧ್ಯಾಯದ ಇಪ್ಪತ್ತೊಂಬತ್ತನೇ ಶ್ಲೋಕವ ಗಮನುಸಿದರೆ, ಅಲ್ಲಿ ‘ತತ್ ಬ್ರಹ್ಮ’  – ಆ ಬ್ರಹ್ಮತತ್ವ ಹೇಳಿ ಭಗವಂತ° ಹೇಳಿದ್ದ°. ಅಕೇರಿಗೆ ‘ಮಾಂ’ – ಎನ್ನ ಸೇರುತ್ತವು ಹೇಳಿಯೂ ಹೇಳಿದ್ದ°. ಇಲ್ಲಿ  ಭಗವಂತ° ಮತ್ತೆ  ಬ್ರಹ್ಮತತ್ವ ಬೇರೆ ಬೇರೆಯೋ ಹೇಳ್ವ ಸಂಶಯ ಮೂಡುತ್ತು. ಇಲ್ಲಿ ಕೃಷ್ಣ° ಉಪಯೋಗಿಸಿದ ಪದಂಗಳ ನೋಡಿರೆ ಅಲ್ಲಿ ಅನೇಕ ಅರ್ಥಂಗೆ ಇಪ್ಪದಾಗಿ ಕಾಣುತ್ತು. ಉದಾಹರಣಗೆ ಬ್ರಹ್ಮ ಹೇಳ್ವ ಪದಕ್ಕೆ ಸಂಸ್ಕೃತಲ್ಲಿ ಸುಮಾರು ಅರ್ಥಂಗೊ ಇದ್ದು. ಬ್ರಹ್ಮ ಹೇಳಿರೆ ಜೀವ, ಚತುರ್ಮುಖ ಬ್ರಹ್ಮ, ಶ್ರೀತತ್ವ, ಭಗವಂತ, ವೇದಂಗೊ, ಇತ್ಯಾದಿ ಇತ್ಯಾದಿ. ಅಧ್ಯಾತ್ಮ ಎಂಬಲ್ಲಿ ‘ಆತ್ಮ’ ಹೇಳ್ವ ಪದಕ್ಕೆ ಶರೀರ, ಮನಸ್ಸು, ಜೀವ, ಪರಮಾತ್ಮ ಹೇಳಿ ಅನೇಕ ಅರ್ಥಂಗೊ. ‘ಕರ್ಮ’ ಹೇಳ್ವಲ್ಲಿ ಪ್ರಾರಬ್ಧಕರ್ಮ, ಕರ್ತವ್ಯಕರ್ಮ ಹೇಳ್ವ ಅರ್ಥವೂ ಇದ್ದು. ಅಧಿಭೂತ ಎಂಬಲ್ಲಿ ‘ಭೂತ’ ಹೇಳ್ವ ಪದಕ್ಕೆ ಜಡ ಮತ್ತೆ ಚೇತನ ಹೇಳ್ವ ಎರಡೂ ಅರ್ತ ಇದ್ದು. ಅದೇ ರೀತಿ, ಅಧಿದೈವ ಹೇಳ್ತಲ್ಲಿ  ದೇವತೆಗಳಲ್ಲಿ ಅಧಿಕನಾದವ° ಅಧಿದೈವ, ದೇವತೆಗೊಕ್ಕೆ ಸಂಬಂಧಪಟ್ಟದ್ದೂ ಅಧಿದೈವ. ಹೀಂಗೆ ಈ ಆರೂ ಶಬ್ದಂಗೊ ಬೇರೆ ಬೇರೆ ಸಂದರ್ಭಲ್ಲಿ ಬೇರೆ ಬೇರೆ ಆಯಾಮಲ್ಲಿ ಅರ್ಥವನ್ನುಂಟುಮಾಡುತ್ತು. ಹೀಂಗಿಪ್ಪಗ ಭಗವಂತ° ಹೇಳಿದ ಈ ಆರು ಸಂಗತಿಗಳ ಸ್ಪಷ್ಟವಾಗಿ ಅರ್ಥ ಮಾಡಿಕ್ಕೊಳ್ಳೆಕ್ಕಾದ್ದು ಇದ್ದು.

ಅಕೇರಿಯಾಣ ಶ್ಲೋಕಲ್ಲಿ ಭಗವಂತ° ಹೇಳಿದ್ದ° – “ನಮ್ಮ ಜೀವನದ ಪಯಣದ ಅಕೇರಿಯಾಣ ಕ್ಷಣಲ್ಲಿಯೂ ಈ ಪ್ರಜ್ಞೆಯ ಉಳುಶಿಗೊಂಡಿರೆಕು”. ಅದು ಹೇಂಗೆ ಎಡಿಗು. ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಂಗಿರೆಕು, ದೇಹತ್ಯಾಗಂದ ಮತ್ತೆ ಜೀವ ಯಾವ ಮಾರ್ಗಲ್ಲಿ ಹೋವ್ತು? ಇತ್ಯಾದಿ ಪ್ರಶ್ನೆ ಮನಸ್ಸಿಲ್ಲಿ ಮೂಡುತ್ತು. ಅದಕ್ಕೆ ನಮ್ಮೆಲ್ಲರ ಪ್ರತಿನಿಧಿಯಾಗಿ ಅರ್ಜುನ° ಇಲ್ಲಿ ಭಗವಂತನತ್ರೆ ಕೇಳುತ್ತ° – “ಪುರುಷೋತ್ತಮ!, ಆ ಬ್ರಹ್ಮ, ಅಧ್ಯಾತ್ಮ , ಕರ್ಮ, ಅಧಿಭೂತ, ಅಧಿದೈವ  ಹೇಳಿರೆ ಎಂತರ?

ಇಲ್ಲಿ ಭಗವಂತನ ‘ಪುರುಷೋತ್ತಮ’ ಹೇಳಿ ವಿಶೇಷವಾಗಿ ದೆನಿಗೊಂಡಿದ° ಈ ಸಂದರ್ಭಲ್ಲಿ ಅರ್ಜುನ°. ಭಗವಂತ° ಪರಮ ಪುರುಷ°, ಅವನೇ ಪರಮ ಶ್ರೇಷ್ಠ, ಅವನಿಂದ ಮೀರಿ ಮತ್ತೆ ಆರೂ ಇಲ್ಲೆ. ಹಾಂಗಾಗಿ ಇನ್ನೂ ಸ್ಪಷ್ಟವಾಗಿ ಖಚಿತವಾಗಿ ನೀ ಹೇಳು ಹೇಳಿ ಭಗವಂತನತ್ರೆ ಕೇಳುತ್ತ° ಅರ್ಜುನ°. ಪುರುಷೋತ್ತಮ° ಹೇಳಿರೆ ಕ್ಷರ-ಅಕ್ಷರವ ಮೀರಿ ನಿಂದವ° ಹೇಳಿಯೂ ಅರ್ಥ. ಕ್ಷರ-ಅಕ್ಷರ ತತ್ವಂಗಳ ಮೀರಿ ನಿಂದವ° ನೀನಲ್ಲದ್ದೆ ನಿನ್ನಂದ ಹಿರಿಯ ತತ್ವ ಇನ್ನೊಂದಿಲ್ಲೆ ಹೇಳ್ವ ಧ್ವನಿ. ‘ಎನಗೆ ಗೊಂತಿಪ್ಪಾಂಗೆ ನೀನೇ ಬ್ರಹ್ಮ, ಇದರ ವಿವರಣೆಯ ನಿನ್ನಂದಲೇ ಎನಗೆ ಕೇಳೆಕ್ಕಾಯ್ದು’ ಹೇಳಿ ಅರ್ಜುನನ ಪ್ರಾರ್ಥನೆ. 

ಶ್ಲೋಕ

ಅಧಿಯಜ್ಞಃ ಕಥಂ ಕೋsತ್ರ ದೇಹೇsಸ್ಮಿನ್ ಮಧುಸೂದನ ।
ಪ್ರಯಾಣಕಾಲೇ ಚ ಕಥಂ ಜ್ಞೇಯೋsಸಿ ನಿಯತಾತ್ಮಭಿಃ ॥೦೨॥

ಪದವಿಭಾಗ

ಅಧಿಯಜ್ಞಃ ಕಥಮ್ ಕಃ ಅತ್ರ ದೇಹೇ ಅಸ್ಮಿನ್ ಮಧುಸೂದನ । ಪ್ರಯಾಣ-ಕಾಲೇ ಚ ಕಥಮ್ ಜ್ಞೇಯಃ ಅಸಿ ನಿಯತ-ಆತ್ಮಭಿಃ

ಅನ್ವಯ

ಹೇ ಮಧುಸೂದನ!, ಅತ್ರ ಅಸ್ಮಿನ್ ದೇಹೇ ಅಧಿಯಜ್ಞಃ ಕಃ ಕಥಂ ಚ ಅಸ್ತಿ? ಪ್ರಯಾಣ-ಕಾಲೇ ಚ ನಿಯತ-ಆತ್ಮಭಿಃ ಕಥಂ ಜ್ಞೇಯಃ ಅಸಿ?

ಪ್ರತಿಪದಾರ್ಥ

ಹೇ ಮಧುಸೂದನ! – ಏ ಮಧುಸೂದನ!, ಅತ್ರ – ಇಲ್ಲಿ, ಅಸ್ಮಿನ್ ದೇಹೇ – ನಮ್ಮ ಶರೀರಲ್ಲಿ, ಅಧಿಯಜ್ಞಃ – ಯಜ್ಞಪತಿ (ಯಜ್ಞಂಗಳ ಒಡೆಯ°), ಕಃ? – ಆರು?, ಕಥಮ್ ಚ ಅಸ್ತಿ? – ಹೇಂಗೆ ಇರುತ್ತ°?, ಪ್ರಯಾಣ-ಕಾಲೇ ಚ – ಅಂತ್ಯಕಾಲಲ್ಲಿಯೂ (ಮರಣ ಸಮಯಲ್ಲೂ), ನಿಯತ-ಆತ್ಮಭಿಃ – ಆತ್ಮಸಂಯಮಿಗೊಗಳಿಂದ, ಕಥಮ್ ಜ್ಞೇಯಃ ಅಸಿ? – ನೀನೇಂಗೆ ತಿಳಿಯಲ್ಪಡುತ್ತೆ?  

ಅನ್ವಯಾರ್ಥ

ಏ ಮಧುಸೂದನ!, ಯಜ್ಞದ ಒಡೆಯ ಆರು? ಅವ° ದೇಹಲ್ಲಿ ವಾಸಿಸುವದು ಹೇಂಗೆ? ಭಕ್ತಿಸೇವೆಲಿ ತೊಡಗಿಪ್ಪವು ಮರಣಕಾಲಲ್ಲಿ ನಿನ್ನ ತಿಳಿವದು ಹೇಂಗೆ?

ತಾತ್ಪರ್ಯ / ವಿವರಣೆ

ಅರ್ಜುನ° ಮುಂದುವರುದು ಕೇಳುತ್ತ° ಅಧಿಯಜ್ಞ ಹೇಳಿರೆ ಆರು? ನಮ್ಮ ದೇಹದೊಳ ಇಪ್ಪ ಅಧಿಯಜ್ಞ ಆರು ಮತ್ತೆ ಹೇಂಗೆ? ಅಧಿಯಜ್ಞದ ಅರ್ಥವ್ಯಾಪ್ತಿ ಎಂತರ? ಇಲ್ಲಿ ಭಗವಂತನ ಮಧುಸೂದನ° ಹೇಳಿ ಹೇಳಿದ್ದ° ಅರ್ಜುನ°. ಮಧು ಹೇಳ್ವ ರಾಕ್ಷಸನ ಕೊಂದವನೂ (ಸೂದ – ನಾಶ) ಅಪ್ಪು, ‘ಮಧು’ ಹೇಳಿರೆ  ಆನಂದ ಹೇಳಿಯೂ ಅಪ್ಪು. ಸೂದ ಹೇಳಿರೆ ಸತ್ಕರ್ಮವ ಮಾಡುವ ಸಾತ್ವಿಕರು. ಸಾಂದರ್ಭಿಕವಾಗಿ ‘ಮಧುಸೂದನ’ ಹೇಳಿರೆ ಸಾತ್ವಿಕರೊಳ ಇದ್ದು ಅವಕ್ಕೆ ಆನಂದವ ಕೊಡುವವ ಹೇಳಿ ಅರ್ಥವೂ ಅಪ್ಪು. ದುರ್ಜನರ ಆನಂದವ ಕೊಲ್ಲುವವ° ಹೇಳಿಯೂ ಅರ್ಥ ಆವ್ತು. ‘ನಮ್ಮೊಳ ಇದ್ದುಗೊಂಡು ನವಗೆ ಆನಂದವ ಕೊಡುವವನೂ ನೀನೇ, ದುಃಖವ ಕೊಡುವವನೂ ನೀನೇ’ ಹೇಳಿಯೂ ಅಪ್ಪು. ‘ನಮ್ಮೊಳ ಇದ್ದು ಎಲ್ಲ ಯಜ್ಞಂಗಳ ನಿಯಂತ್ರಿಸುವದು ನೀನೇ. ಹಾಂಗಾಗಿ ನೀನೇ ಅಧಿಯಜ್ಞ ಹೇಳ್ವದು’ ಎನ್ನ ತಿಳುವಳಿಕೆ. ಹಾಂಗಾಗಿ ನೀನೇ ವಿವರಿಸೆಕು ಹೇಳಿ ಅರ್ಜುನನ ಬೇಡಿಕೆ.

ಬನ್ನಂಜೆ ಹೇಳುತ್ತವು – ಈ ಮೇಗಾಣ ಎರಡು ಶ್ಲೋಕಲ್ಲಿ ಅರ್ಜುನ ಉಪಯೋಗಿಸಿದ ಪುರುಷೋತ್ತಮ°, ಮಧುಸೂದನ° ಹೇಳ್ವ ಎರಡು ವಿಶೇಷಣಂದ ಅರ್ಜುನಂಗೆ ಆ ಆರು ಸಂಗತಿಯ ನಿಜವಾದ ಅರ್ಥ ಗೊಂತಿತ್ತು. ಅಂದರೂ ಬಾಕಿದ್ದೋರಿಂಗೆ ಸ್ಪಷ್ಟವಾಗಿ ಭಗವಂತನಿಂದಲೇ ತಿಳಿಯಪಡುಸಲೆ ಬೇಕಾಗಿ ಈ ರೀತಿಯಾಗಿ ಅರ್ಜುನ ಭಗವಂತನತ್ರೆ ವಿವರಣೆ ಕೇಳಿದ್ದದು. ಸಾಮಾನ್ಯವಾಗಿ ನವಗೆ ಗೊಂತಿದ್ದರೂ ಇನ್ನೊಬ್ಬಂಗೆ ಸ್ವಷ್ಟಪಡುಸುವ ಉದ್ದೇಶಂದ ಈ ರೀತಿ ಹೆಚ್ಚಿಗೆ ಗೊಂತಿಪ್ಪೋರತ್ರೆ ವಿವರಿಸಿ ಹೇಳ್ಳೆ ಕೇಳ್ವ ಕ್ರಮ ಇದ್ದು. ಇಲ್ಲಿ ಅರ್ಜುನ ತನಗೆ ಗೊಂತಿಪ್ಪದರ ದೃಢಪಡುಸಲೂ, ಮತ್ತೆ ಇಡೀ ಮಾನವ ಜನಾಂಗಕ್ಕೆ ಭಗವಂತನ ವಿವರಣೆಯ ತಿಳಿಯಪಡುಶುಲೆ ಬೇಕಾಗಿ ಬಹಿರಂಗವಾಗಿ ಭಗವಂತನತ್ರೆ ಈ ರೀತಿಯಾಗಿ ಕೇಳುತ್ತ°.

ಬನ್ನಂಜೆ ಹೇಳ್ತವು – ಯುದ್ಧರಂಗಲ್ಲಿ ನಿಂದಿಪ್ಪ ಅರ್ಜುನ ಎಂತಕೆ ಹೀಂಗಿರ್ತ ಪ್ರಶ್ನೆಗಳ ಮಾಡಿಗೊಂಡು ಇದ್ದ°? ಇಲ್ಲಿ ಅದರ ಅಗತ್ಯ ಎಂತರ? ಹೀಂಗೆ ನವಗೆ ಕಾಂಗು. ಸಾಮಾನ್ಯವಾಗಿ ಯುದ್ಧರಂಗಲ್ಲಿ ನಿಂದವಂಗೆ ಸಾವಿನ ಭೀತಿ ಕಾಡುತ್ತಷ್ಟು ಮತ್ತಾರನ್ನೂ ಕಾಡುತ್ತಿಲ್ಲೆ ಅಷ್ಟು. ಪ್ರತಿಕ್ಷಣ ಸಾವು ನಿರೀಕ್ಷಿಸುತ್ತು. ಅವು ಸಾವು ಮತ್ತೆ ಸಾವಿಂದ ಆಚಿಗಾಣ ಸ್ಥಿತಿಯ ಬಗ್ಗೆ ಜಾಗೃತರಾಗಿರುತ್ತವು. ಸಾವಿಂದಾಚಿಗೆ ಎಂತರ ಹೇಳ್ವದು ಸೈನಿಕರಿಂಗೆ ಬಹಳ ಮಹತ್ವದ್ದಾಗಿರುತ್ತು. ಈವರೇಗಾಣ ಅರ್ಜುನ-ಶ್ರೀಕೃಷ್ಣರ ಸಂವಾದಲ್ಲಿ ಎಲ್ಲಿಯೂ ಕೃಷ್ಣ° ಅರ್ಜುನಂಗೆ ಗೆಲುವಿನ ಭರವಸೆಯ ಕೊಟ್ಟಿದನಿಲ್ಲೆ. ಧರ್ಮದ ಪರ ಹೋರಾಡು, ಅದು ನಿನ್ನ ಕರ್ತವ್ಯ, ಅದು ನಿನಗೆ ಶ್ರೇಯಸ್ಸು ಅಷ್ಟೇ ಹೇಳಿದ್ದು. ಹಾಂಗಾಗಿ ಯುದ್ಧರಂಗಲ್ಲಿಪ್ಪ ಅರ್ಜುನಂಗೆ ಸಾವು ಮತ್ತೆ ಸಾವಿಂದಾಚಿಗೆ ಎಂತರ ಹೇಳ್ವದು ಬಹಳ ಮುಖ್ಯ ವಿಚಾರ.

ಇನ್ನು ಇಲ್ಲಿ ‘ಪ್ರಯಾಣಕಾಲೇ’ ಹೇಳ್ವ ಮಾತು ಬಹು ಮಹತ್ವದ್ದು. ನಾವು ಬದುಕ್ಕಿಲ್ಲಿ ಮಾಡಿದ್ದೆಲ್ಲ ಸಾವಿನ ಸಮಯಲ್ಲಿ ಪರೀಕ್ಷಗೆ ಒಳಗಾವ್ತು. ಸದಾ ಕೃಷ್ಣಪ್ರಜ್ಞೆಲಿ ನಿರತರಾದವು ಆರು ಹೇಳ್ವದರ ತಿಳಿವಲೆ ಅರ್ಜುನ° ಕಾತುರನಾಗಿದ್ದ°. ಆ ಕಡೇ ಕ್ಷಣಲ್ಲಿ ಅವರ ಸ್ಥಿತಿ ಹೇಂಗಿರೆಕು. ಸಾವಿನ ಕ್ಷಣಲ್ಲಿ ದೇಹದ ಕ್ರಿಯೆಗೊ ಎಲ್ಲ ಅಸ್ತವ್ಯಸ್ತವಾಗಿರುತ್ತು. ಮನಸ್ಸು ಯೋಗ್ಯ ಸ್ಥಿತಿಲಿ ಇರ್ತಿಲ್ಲೆ. ದೇಹದ ಈ ಸ್ಥಿತಿಂದ ಅಲ್ಲೋಲ ಕಲ್ಲೋಲವಪ್ಪ ಮನಸ್ಸಿಂಗೆ ಭಗವಂತನ ನೆಂಪುಸುವದು ಎಡಿಗಾಗದ್ದೆ ಹೋಪಲೂ ಸಾಕು.  ಹಾಂಗಾಗಿ ಭಗವಂತನಿಂದಲೇ ತಿಳ್ಕೊಂಬಲೆ ಅರ್ಜುನ° ಭಗವಂತನತ್ರೆಯೇ ಈ ರೀತಿಯಾಗಿ ಕೇಳುತ್ತ°.

ಶ್ಲೋಕ

ಶ್ರೀಭಗವಾನುವಾಚ
ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋsಧ್ಯಾತ್ಮಮುಚ್ಯತೇ ।
ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ॥೦೩॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಅಕ್ಷರಮ್ ಬ್ರಹ್ಮ ಪರಮಮ್ ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ । ಭೂತ-ಭಾವ-ಉದ್ಭವ-ಕರಃ ವಿಸರ್ಗಃ ಕರ್ಮ-ಸಂಜ್ಞಿತಃ ॥

ಅನ್ವಯ

ಶ್ರೀ ಭಗವಾನ್ ಉವಾಚ – ಅಕ್ಷರಂ ಪರಮಂ ಬ್ರಹ್ಮ, ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ, ಭೂತ-ಭಾವ-ಉದ್ಭವ-ಕರಃ ವಿಸರ್ಗಃ ಕರ್ಮ-ಸಂಜ್ಞಿತಃ ॥

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಅಕ್ಷರಮ್ – ಅವಿನಾಶಿಯಾದ, ಪರಮಮ್ – ದಿವ್ಯ, ಬ್ರಹ್ಮ –  ಬ್ರಹ್ಮನ್,  ಸ್ವಭಾವಃ – ನಿತ್ಯಸ್ವಭಾವವು, ಅಧ್ಯಾತ್ಮಮ್ – ಆತ್ಮವು, ಉಚ್ಯತೇ – ಹೇಳಲ್ಪಡುತ್ತು, ಭೂತ-ಭಾವ-ಉದ್ಭವ-ಕರಃ – ಜೀವಿಗಳ ಭೌತಿಕ ಶರೀರವ ಉತ್ಪಾದುಸುವ, ವಿಸರ್ಗಃ – ಸೃಷ್ಟಿಯು, ಕರ್ಮ-ಸಂಜ್ಞಿತಃ – ಕಾಮ್ಯಕರ್ಮಂಗೊ ಹೇಳಿ ಸೂಚಿಲ್ಪಟ್ಟಿದು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೀಂಗೆ ಹೇಳಿದ° – ಅವಿನಾಶಿಯಾದ ದಿವ್ಯಜೀವಿಗೆ ಬ್ರಹ್ಮನ್ ಹೇಳಿ ಹೆಸರು. ಅವನ ನಿತ್ಯಸ್ವಭಾವವ ಅಧ್ಯಾತ್ಮ ಅಥವಾ ಆತ್ಮ ಹೇಳಿ ಹೇಳುವದು. ಜೀವಿಗಳ ಭೌತಿಕ ಶರೀರಂಗಳ ಬೆಳವಣಿಗೆಗೊಕ್ಕೆ ಸಂಬಂಧಿಸಿದ ಕ್ರಿಯೆಗೆ ಕರ್ಮ ಹೇಳಿ ಹೇಳುವದು.

ತಾತ್ಪರ್ಯ / ವಿವರಣೆ

ಬ್ರಹ್ಮನ್ ಅವಿನಾಶಿ. ನಾಶವಾವ್ತಿಲ್ಲೆ. ಅದು ನಿರಂತರವಾಗಿ ಅಸ್ತಿತ್ವಲ್ಲಿರುತ್ತು. ಅದರ ರಚನೆ ಯಾವ ಕಾಲಲ್ಲಿಯೂ ಬದಲಾವ್ತಿಲ್ಲೆ. ಆದರೆ ಬ್ರಹ್ಮನ್’ನಿಂದ ಆಚಿಕೆ ಪರಬ್ರಹ್ಮ ಇದ್ದು. ಬ್ರಹ್ಮನ್ ಹೇಳ್ವದು ಜೀವಿಯ ಸೂಚಿಸುವದು. ಪರಬ್ರಹ್ಮನ್ ಹೇಳ್ವದು ದೇವೋತ್ತಮ ಪರಮ ಪುರುಷನ ಸೂಚಿಸುವದು. ಜೀವಿಯ ಸಹಜ ಸ್ವರೂಪ ಅವ° ಐಹಿಕ ಜಗತ್ತಿಲ್ಲಿ ಸ್ವೀಕರುಸುವ ಸ್ಥಾನಕ್ಕಿಂತ ಬೇರೆಯೇ ಆದ್ದು. ಐಹಿಕ ಪ್ರಜ್ಞೆಲಿ ವಸ್ತುಗಳ ಒಡೆಯ°ನಪ್ಪಲೆ ಪ್ರಯತ್ನುಸುವದು ಅವನ ಸ್ವಭಾವ. ಆದರೆ ಆಧ್ಯಾತ್ಮಿಕ ಪ್ರಜ್ಞೆಲಿ, ಕೃಷ್ಣಪ್ರಜ್ಞೆಲಿ ಪರಮ ಪುರುಷನ ಸೇವಿಸುವದೇ , ಸೇರುವದೇ ಅವನ ಸ್ಥಾನ. ಜೀವಿಯು ಐಹಿಕ ಪ್ರಜ್ಞೆಲಿಪ್ಪಗ ಐಹಿಕ ಜಗತ್ತಿಲ್ಲಿ ಅವ° ಹಲವು ದೇಹಂಗಳ ಧರಿಸೆಕ್ಕಾವ್ತು. ಇದಕ್ಕೆ ಕರ್ಮ ಅಥವಾ ಐಹಿಕ ಪ್ರಜ್ಞೆಯ ಶಕ್ತಿಂದ ಉಂಟಪ್ಪ ವೈವಿಧ್ಯಮಯ ಸೃಷ್ಟಿ ಹೇಳಿ ಹೇಳುವದು. ವೈದಿಕ ಸಾಹಿತ್ಯಲ್ಲಿ ಜೀವಿಯ ಜೀವಾತ್ಮ ಮತ್ತೆ ಬ್ರಹ್ಮನ್ ಹೇಳಿ ಹೇಳಿದ್ದು. ಎಲ್ಲಿಯೂ ಅದರ ಪರಬ್ರಹ್ಮ ಹೇಳಿ ಹೇಳಿದ್ದಿಲ್ಲೆ. ಜೀವಾತ್ಮ ಬೇರೆ ಬೇರೆ ಸ್ಥಿತಿಗಳ ಸ್ವೀಕರುಸುತ್ತು. ಒಂದೊಂದರಿ ಅವ° ಅಜ್ಞಾನವು ತುಂಬಿದ ಭೌತಿಕ ಪ್ರಕೃತಿಲಿ ಒಂದಾಗಿ ತನ್ನ ಜಡವಸ್ತುವಿನೊಟ್ಟಿಂಗೆ ಗುರುತಿಸಿಗೊಳ್ಳುತ್ತ. ಒಂದೊಂದರಿ ತನ್ನ ಉತ್ತಮವಾದ ಆಧ್ಯಾತ್ಮಿಕ ಪ್ರಕೃತಿಲಿ ಗುರುತಿಸಿಗೊಳ್ಳುತ್ತ°. ಹಾಂಗಾಗಿ ಜೀವಾತ್ಮ ಪರಮ ಪ್ರಭುವಿನ ಅಲ್ಪಪ್ರಮಾಣದ ಶಕ್ತಿ ಹೇಳಿ ಹೇಳುವದು. ಭೌತಿಕ ಪ್ರಕೃತಿಲಿ ಅದಕ್ಕೆ ಮನುಷ್ಯನಾಗಿ, ದೇವತೆಯಾಗಿ, ಪ್ರಾಣಿಯಾಗಿ, ಪಶುವಾಗಿ, ಪಕ್ಷಿಯಾಗಿ, ಕ್ರಿಮಿಕೀಟ ಜಂತುವಾಗಿ ಯಾವುದಾರು ಒಂದು ಶರೀರವ ಪಡದಿಕ್ಕು. ಐಹಿಕ ಸ್ವರ್ಗಲೋಕವ ಸೇರಿ ಅಲ್ಲಿನ ಭೋಗವ ಪಡವಲೆ ಅವ° ಯಜ್ಞಂಗಳ ಮಾಡುತ್ತ. ಆದರೆ ಅವನ ಪುಣ್ಯ ಮುಗುದಪ್ಪಗ ಅವ° ಇನ್ನೊಂದು ದೇಹ ರೂಪಲ್ಲಿ ಮತ್ತೆ ಭೂಮಿಗೆ ಬತ್ತ°. ಈ ಪ್ರಕ್ರಿಯೆಗೆ ಕರ್ಮ ಹೇಳಿ ಹೆಸರು.

ಇದನ್ನೇ ಬನ್ನಂಜೆಯವು ಸರಳವಾಗಿ ವ್ಯಾಖ್ಯಾನಿಸಿದ್ದರ ನೋಡಿರೆ – ಪರಮಾಕ್ಷರ ಎನಿಸಿಪ್ಪ ಪರತತ್ವವೇ ‘ಬ್ರಹ್ಮ’. ಜೀವಸ್ವರೂಪ ಮತ್ತೆ ಜೀವಕ್ಕೆ ಸಂಬಂಧಿಸಿದ ಸಮಷ್ಟಿ ಪಿಂಡಾಂಡವ (ಭಗವಂತನ ಬಗ್ಗೆ ಇಪ್ಪ ನಿಲುವ) ‘ಅಧ್ಯಾತ್ಮ’ ಹೇಳುವದು. ಜೀವ-ಜಡಂಗಳ ಅಭಿವ್ಯಕ್ತಿಗೆ ಕಾರಣವಾದ ಭಗವಂತನ ಬಗೆಬಗೆಯ ಸೃಷ್ಟಿಕ್ರಿಯೆಗೆ ‘ಕರ್ಮ’ ಹೇಳಿ ಹೇಳುವದು. ಭಗವಂತ ಹೇಳುತ್ತ° – ‘ಬ್ರಹ್ಮ’ ಹೇಳಿರೆ ‘ಪರಮಮ್ ಬ್ರಹ್ಮ – ಪರಮಮ್ ಅಕ್ಷರ’. ‘ಎಲ್ಲೋಕ್ಕಿಂತ ಹಿರಿದಾಗಿಪ್ಪದು ಭಗವಂತ° ಪರಮಮ್ ಬ್ರಹ್ಮ, ಅವನೇ ಪರಮಮ್ ಅಕ್ಷರ’. ಅಂತಹ ಭಗವಂತನ ಬಗ್ಗೆ ತಿಳ್ಕೊಳ್ಳೆಕ್ಕಾಗಿದ್ದು ಹೇಳ್ವದು ‘ಬ್ರಹ್ಮ’ ಪದದ ಹಿಂದಿಪ್ಪ ಅರ್ಥ.

ವಿಷ್ಣು ಸಹಸ್ರನಾಮಲ್ಲಿ ಭಗವಂತನ ಈ ರೀತಿಯಾಗಿ ವರ್ಣಿಸಿದ್ದು –

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ ।
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ ॥

ಭಗವಂತ° ಬೆಣಚ್ಚಿಗೇ ಬೆಣಚ್ಚು ಕೊಡುವ ಸ್ವರೂಪ°, ಎಲ್ಲ ಚಿಂತನೆಯ ಗುರಿ, ಎಲ್ಲ ಜ್ಞಾನದ ಗಮ್ಯ – ಆ ಭಗವಂತ°. ಇಲ್ಲಿ ಭಗವಂತನ ‘ಪರಮಂ ಮಹಾ ಬ್ರಹ್ಮ’ ಹೇಳಿ ಹೇಳಿದ್ದು. ಬ್ರಹ್ಮ ಹೇಳಿರೆ ಜೀವರು, ಪರಬ್ರಹ್ಮ ಹೇಳಿರೆ ಮುಕ್ತರಾದ ಜೀವರು; ಪರಮಬ್ರಹ್ಮ ಹೇಳಿರೆ ಶ್ರೀತತ್ವ, ನಿತ್ಯ ಮುಕ್ತಳಾಗಿಪ್ಪ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಹೇಳಿರೆ ಭಗವಂತ° ನಾರಾಯಣ°. “ಪರಮಮ್ ಯಃ ಪರಾಯಣಮ್” (ಪರಮಮ್ ಪರಾಯಣಮ್) – ಪರಾಯಣರಿಂಗೂ ಕೂಡ ಪರಮ°- ಭಗವಂತ°. ಇಲ್ಲಿ ಪರಾಯಣರು ಹೇಳಿರೆ ತತ್ವಾಭಿಮಾನಿ ದೇವತೆಗೊ. ಭಗವಂತ° ಸರ್ವ ದೇವತೆಗೊಕ್ಕೆ ಒಡೆಯ°. ಇದು ಬ್ರಹ್ಮ.

ಇನ್ನು, “ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ” – ಇಲ್ಲಿ ಸ್ವಭಾವ ಹೇಳಿರೆ ತನ್ನತನ. ಜೀವದ ಇಪ್ಪ ಬಗ್ಗೆ ಮತ್ತೆ ಜೀವ ಸ್ವಭಾವ. ನಾವು ಭಗವಂತನ ತಿಳ್ಕೊಂಬ ಮದಲು ನಮ್ಮ ಜೀವಸ್ವಭಾವವ ತಿಳಿಯೆಕು. ‘ಆನು’ ಹೇಳಿ ಎಂತರ? ಎನ್ನಲ್ಲಿಪ್ಪ ಉತ್ತಮ ಅಂಶ ಯೇವುದು, ಕೆಟ್ಟ ಅಂಶ ಏವುದು ಹೇಳಿ ನಿರಂತರ ನಾವು ನಮ್ಮ ತಿಳಿವಲೆ ಪ್ರಯತ್ನಿಸುವದು. ನವಗೆ ಈ ದೇಹಲ್ಲಿ ಕಣ್ಣು, ಕೈ, ಕಾಲು , ಮತ್ತೆ ಇತರ ಅಂಗಾಂಗಂಗಳ ಬಿಟ್ಟು ಒಂದು ‘ಆನು’ ಹೇಳ್ವದು ಇದ್ದು. ಇದರ ಜ್ಞಾನವೇ ಇರ್ತಿಲ್ಲೆ. ಮದಾಲು ನಾವು ಜೀವದ ಇರುವಿಕೆಯ ತಿಳ್ಕೊಳ್ಳೆಕು. ಮತ್ತೆ ಅದರ ಸಹಜ ಸ್ವಭಾವವ ಅರಡಿಯೆಕು. ನಾವು ಪ್ರಕೃತಿಯ ಪ್ರಭಾವಲ್ಲೇ ಬದುಕ್ಕುತ್ತದಾದರೂ ಅದು ನಮ್ಮ ಸಹಜ ಸ್ವಭಾವ ಅಲ್ಲ. ಅದು ಪ್ರಕೃತಿಯ ಮಾಯೆಂದ ಮಸುಕಿದ್ದು. ಜೀವ ಹೇಳ್ವದು ಅತೀ ಸೂಕ್ಷ್ಮವಾದ ವಿಷಯ. ಅದು ಹೃತ್ಕಮಲ ಮಧ್ಯಲ್ಲಿ ಅನಾಹತ ಚಕ್ರ ಹೇಳ್ವ ಶಕ್ತಿಕೇಂದ್ರಲ್ಲಿದ್ದು. ಈ ಜೀವ ಹೇಳ್ವದು ಕೋಣೆಲಿ ಹೊತ್ತುಸಿ ಮಡುಗಿದ ಕುಂಞಿ ದೀಪದ ಹಾಂಗೆ. ದೀಪ ಇಡೀ ಕೋಣೆಯ ಬೆಣಚ್ಚಿಮಾಡುತ್ತಾಂಗೆ, ಜೀವ ಅತೀ ಸೂಕ್ಷ್ಮ ಆಗಿದ್ದರೂ ಕೂಡ ಅದರ ಬೆಣಚ್ಚಿ ಇಡೀ ದೇಹವ ವ್ಯಾಪಿಸುತ್ತು ಇಂತಹ ಜೀವ ಮತ್ತು ಜೀವ ಸ್ವಭಾವವೇ ‘ಅಧ್ಯಾತ್ಮ’.

ಭಗವಂತ° ಮತ್ತೆ ಹೇಳುತ್ತ° – “ಈ ಪ್ರಪಂಚ ಹೇಳಿರೆ ಭೂತ ಮತ್ತೆ ಭಾವ”. – ಹೇಳಿರೆ, ಇದು ಜೀವ ಮತ್ತೆ ಜಡದ ಸೃಷ್ಟಿ. ನಾವು ಈ ಜಗತ್ತಿಲ್ಲಿ ಇದ್ದು. ಹೀಂಗಿಪ್ಪ ಜಗತ್ತು ಹೇಂಗೆ ಸೃಷ್ಟಿ ಆತು? ಏವಾಗ ಸೃಷ್ಟಿ ಆತು. ಅದರ ಹಿಂದಿಪ್ಪ ಮೂಲದ್ರವ್ಯ ಎಂತರ, ಅದರ ನಿಮಿತ್ತ ಮತ್ತೆ ಉಪಾದಾನ ಕಾರಣ ಆರು? ಜೀವ ದೇಹದ ಮೂಲಕ ಹುಟ್ಟುವದು ಎಂತಕೆ? ಎಲ್ಲವನ್ನೂ ವ್ಯವಸ್ಥಿತವಾಗಿ ನಡಶುವ ಆ ಮಹಾಶಕ್ತಿ ಏವುದು? ಹೀಂಗೆ ಚಿಂತನೆ ಮಾಡಿರೆ ನವಗೆ ಒಂದು ವಿಷಯ ಅರ್ಥ ಆವ್ತು. ಅದುವೇ ‘ಕರ್ಮ’ ಸಿದ್ಧಾಂತ.  ಈ ಜೀವಜಾತವ ಮತ್ತು ಜಡಪ್ರಪಂಚವ ಸೃಷ್ಟಿಮಾಡುವ ಮೂಲ ಶಕ್ತಿ ಆ ಭಗವಂತ°. ಅವನ ಕ್ರಿಯೆಯೇ ನಿಜವಾದ ಕ್ರಿಯೆ. ಈ ಪ್ರಪಂಚದ ವೈವಿಧ್ಯಮಯವಾದ ಸೃಷ್ಟಿಯ ಮೂಲವ ಅರ್ತಪ್ಪಗ ನಿಜವಾದ ಕರ್ಮ ಗೊಂತಾವುತ್ತು. ನಾವೆಲ್ಲ ಭಗವಂತ° ಸೃಷ್ಟಿ ಮಾಡಿದ ಗೊಂಬಗೆ. ಅವ° ಸೂತ್ರಧಾರ°. ನಮ್ಮ ಕ್ರಿಯೆ ಆ ಸೂತ್ರಧಾರನ ನಿಯಮಕ್ಕೆ ಬದ್ಧ. ಇಡೀ ವಿಶ್ವಚಕ್ರ ಭಗವಂತನ ಅಧೀನವಾಗಿ ತಿರುಗುತ್ತದು. ಭಗವಂತನ ಆ ಕ್ರಿಯೆ ಮಹಾಕ್ರಿಯೆ. ನಮ್ಮ ಕ್ರಿಯೆ – ಸುತ್ತುತ್ತಿಪ್ಪ ಮಹಾಚಕ್ರದ ಮೇಗೆ ಚಲಿಸುವ ಎರುಗಿನ ಹಾಂಗೆ. ಎರುಗು ಏವ ಹೊಡೆಂಗೆ ಚಲಿಸಿರೂ ಅದು ಚಲುಸುವದು ಚಕ್ರತಿರುಗಿದ ಹಾಂಗೆಯೇ ಹೊರತು ಎರುಗು ತಿರುಗುವ ಹೊಡೆಂಗೆ ಚಕ್ರ ತಿರುಗುತ್ತಿಲ್ಲೆ. ಅದೇರೀತಿ, ಈ ಪ್ರಪಂಚದ ಗತಿ ನಮ್ಮ ಕ್ರಿಯೆಯ ಮೇಗೆ ನಿರ್ಧಾರ ಅಲ್ಲ. ಅದು ತನ್ನ ಗತಿಗನುಗುಣುವಾಗಿ  ನಿರಂತರ ನಡೆತ್ತು. ಹಾಂಗಾಗಿ ‘ಆನು ಮಾಡಿದೆ’, ‘ಎನ್ನಂದ ಆತು’ ಹೇಳಿ ನಾವು ಅಹಂಕಾರ ಪಡುತ್ತರಲ್ಲಿ ಏವ ಅರ್ಥವೂ ಇಲ್ಲೆ. ಹೀಂಗೆ ಜೀವ ಜಡ ಪ್ರಪಂಚ ಸೃಷ್ಟಿಗೆ ಕಾರಣವಾಗಿಪ್ಪಂತ ವಿಶಿಷ್ಟ ಸೃಷ್ಟಿ ಕ್ರಿಯೆಯೇ ನಿಜವಾದ ‘ಕರ್ಮ’.

ಬನ್ನಂಜೆ ಹೇಳುತ್ತವು – ಈ ಶ್ಲೋಕವ ಇನ್ನೊಂದು ಆಯಾಮಲ್ಲಿ ನೋಡಿರೆ, ಇದು ಹೊಸ ರೀತಿಯ ತೋರುಸುತ್ತು. ಇಲ್ಲಿ ಜೀವ ಬತ್ತೇ ಇಲ್ಲೆ. ಎಲ್ಲಾ ಮೂರು ಸಂಗತಿಗೊ ಭಗವಂತನನ್ನೇ ಹೇಳುತ್ತು. ಬ್ರಹ್ಮ ಹೇಳಿರೆ ಭಗವಂತ°, ಸ್ವಭಾವ ಹೇಳಿರೆ ಭಗವಂತನ ಸ್ವತಂತ್ರ ಭಾವ, ಹಾಂಗಾಗಿ ಭಗವಂತನ ಗುಣ-ಧರ್ಮ ಚಿಂತನೆಯೇ ಅಧ್ಯಾತ್ಮ. ಹಾಂಗಾರೆ ಭಗವಂತಂಗೆ ಎಂತಕೆ ಆ ಸ್ವಭಾವ. ಒಬ್ಬಂಗೆ ಸುಖ , ಇನ್ನೊಬ್ಬಂಗೆ ಕಷ್ಟ/ದುಃಖ, ಒಬ್ಬಂಗೆ ಬಡತನ, ಇನ್ನೊಬ್ಬಂಗೆ ಸಿರಿತನ, ಒಬ್ಬ ನರಕಕ್ಕೆ, ಇನ್ನೊಬ್ಬ ಸ್ವರ್ಗಕ್ಕೆ … ಎಂತಕೆ ಹೀಂಗಿಪ್ಪ ತಾರತಮ್ಯ? ಇದು ಒಂದು ರೀತಿಯ ನಾಸ್ತಿಕತೆ ಆವ್ತು. ಜೀವ ಅನಾದಿನಿತ್ಯ, ಅದರ ಭಗವಂತ ಸೃಷ್ಟಿ ಮಾಡುತ್ತನಿಲ್ಲೆ. ಪ್ರತಿಯೊಂದು ಜೀವಸ್ವರೂಪದ ಗುಣಧರ್ಮ ಸ್ವಭಾವಕ್ಕನುಗುಣವಾಗಿ, ಅರ್ಹತೆಗನುಗುಣವಾಗಿ, ಅವರವರ ಸೃಷ್ಟಿ ಮಾಡುವದು ಭಗವಂತನ ಸ್ವಭಾವ. ಹಾಂಗಾಗಿ ಇಲ್ಲಿ ತಾರತಮ್ಯ ಹೇಳ್ವ ಪ್ರಶ್ನೆಯೇ ಇಲ್ಲೆ. ಭಗವಂತನ ಸೃಷ್ಟಿಯ ಹಿಂದೆ ಅವನ ಸ್ವಾತಂತ್ರ್ಯ, ನಿಷ್ಪಕ್ಷಪಾತ, ಏವುದೇ ಪ್ರಭಾವಕ್ಕೆ ಒಳಗಾಗದ್ದಿಪ್ಪದು, ತ್ರಿಗುಣಾತೀತತತ್ವ. ಇದು ಭಗವಂತನ ಮೂಲಭೂತ ಸ್ವಭಾವ. ಇದರ ಅರ್ತುಗೊಂಬದೇ ಅಧ್ಯಾತ್ಮ. ಭಗವಂತನ ಗುಣಧರ್ಮವ ತಿಳುದಪ್ಪಗ ಅವನ ಸೃಷ್ಟಿ ಎಂತರ ಹೇಳಿ ಅರ್ಥ ಆವ್ತು. ಅದೇ ಕರ್ಮ. ಭಗವಂತನ ಕ್ರಿಯೆಲಿ ಜ್ಞಾನ-ಇಚ್ಛೆ-ಕೃತಿ ಹೇಳ್ವ ಮೂರು ಹಂತ ಇಲ್ಲೆ. ಅವ° ಏನನ್ನೂ ಇಚ್ಛಿಸುತ್ತನಿಲ್ಲೆ. ಇದರ ಅರ್ತುಗೊಂಬದೇ ಕರ್ಮದ ತಿಳುವಳಿಕೆ. ಹೀಂಗೆ ಭಗವಂತನ ಸ್ವರೂಪದ, ಗುಣಧರ್ಮದ ಮತ್ತೆ ಕ್ರಿಯೆಯೆ ತಿಳುವಳಿಕೆಯೇ – ಬ್ರಹ್ಮ, ಅಧ್ಯಾತ್ಮ ಮತ್ತೆ ಕರ್ಮ.

ಶ್ಲೋಕ

ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ ।
ಅಧಿಯಜ್ಞೋsಹಮೇವಾತ್ರ ದೇಹೇ ದೇಹಭೃತಾಂ ವರ ॥೦೪॥

ಪದವಿಭಾಗ

ಅಧಿಭೂತಮ್ ಕ್ಷರಃ ಭಾವಃ ಪುರುಷಃ ಚ ಅಧಿದೈವತಮ್ । ಅಧಿಯಜ್ಞಃ ಅಹಮ್ ಏವ ಅತ್ರ ದೇಹೇ ದೇಹ-ಭೃತಾಮ್ ವರ ॥

ಅನ್ವಯ

ಹೇ ದೇಹ-ಭೃತಾಂ ವರ!, ಕ್ಷರಃ ಭಾವಃ ಅಧಿಭೂತಮ್, ಪುರುಷಃ, ಅಧಿದೈವತಮ್, ಅತ್ರ ದೇಹೇ ಚ ಅಹಮ್ ಏವ ಅಧಿಯಜ್ಞಃ

ಪ್ರತಿಪದಾರ್ಥ

ಹೇ ದೇಹ-ಭೃತಾಮ್ ವರ! – ಏ ದೇಹಧಾರಿಗಳಲ್ಲಿ ಶ್ರೇಷ್ಠನಾದವನೇ!, ಕ್ಷರಃ ಭಾವಃ – ನಿರಂತರವಾಗಿ ಬದಲಾಯುಸುವ ಪ್ರಕೃತಿಯು, ಅಧಿಭೂತಮ್ – ಭೌತಿಕ ಅಭಿವ್ಯಕ್ತಿಯು, ಪುರುಷಃ – ವಿರಾಟ್’ರೂಪವು (ವಿಶ್ವರೂಪವು), ಚ – ಕೂಡ, ಅಧಿದೈವತಮ್ – ಅಧಿದೈವವು,  ಅತ್ರ ದೇಹೇ – ಇಲ್ಲಿ ಈ ದೇಹಲ್ಲಿ, ಚ – ಕೂಡ, ಅಹಮ್ ಏವ – ಆನೇ, ಅಧಿಯಜ್ಞಃ – ಪರಮಾತ್ಮ° (ಯಜ್ಞಂಗಳ ಒಡೆಯ°, ಅಧಿ ಹೇದರೆ ಶ್ರೇಷ್ಠ°, ಒಡೆಯ° ಹೇಳ್ವ ಅರ್ಥ)).

ಅನ್ವಯಾರ್ಥ

ಏ ಶರೀರಧಾರಿಗಳಲ್ಲಿ ಶ್ರೇಷ್ಠನಾದ ಅರ್ಜುನ!, ಸದಾ ಬದಲಾವುತ್ತಿಪ್ಪ ಭೌತಿಕ ಪ್ರಕೃತಿ – ‘ಅಧಿಭೂತ’, ಸೂರ್ಯಚಂದ್ರ ಮುಂತಾದ ಸಮಸ್ತ ದೇವತೆಗಳ ಒಳಗೊಂಬ ವಿರಾಟ್’ರೂಪ (ಪುರುಷ)- ‘ಅಧಿದೈವ’, ಎಲ್ಲ ಶರೀರಧಾರಿಗಳ ಹೃದಯಂಗಳಲ್ಲಿ ಅಂತರ್ಯಾಮಿಯಾಗಿಪ್ಪವ – ‘ಅಧಿಯಜ್ಞ’ ಆನೇ ಆಗಿದ್ದೆ. 

ತಾತ್ಪರ್ಯ / ವಿವರಣೆ

ಭೌತಿಕ ಪ್ರಕೃತಿ ಸದಾ ಬದಲಾವುತ್ತಾ ಇರುತ್ತು. ಭೌತಿಕ ಶರೀರ ಸಾಮಾನ್ಯವಾಗಿ ಆರು ಹಂತಂಗಳ ದಾಂಟುತ್ತು. ಅವು ಹುಟ್ಟುತ್ತು, ಬೆಳೆತ್ತು, ಒಂದಿಷ್ಟು ಕಾಲ ಉಳಿತ್ತು, ಕೆಲವು ಉಪ ಉತ್ಪನ್ನಂಗಳ ಸೃಷ್ಟಿಸುತ್ತು, ಕ್ಷಯಿಸುತ್ತು ಮತ್ತೆ ಅಕೇರಿಗೆ ಮಾಯ ಆವುತ್ತು. ಈ ಭೌತಿಕ ಪ್ರಕೃತಿಗೆ ‘ಅಧಿಭೂತ’ ಹೇಳಿ ಹೆಸರು. ಅದು ಒಂದು ನಿರ್ದಿಷ್ಟ ಸಮಯಲ್ಲಿ ಸೃಷ್ಟಿಯಾಯ್ದು, ಒಂದು ನಿರ್ದಿಷ್ಟ ಸಮಯಲ್ಲಿ ನಾಶ ಆವ್ತು. ಎಲ್ಲ ದೇವತೆಗಳನ್ನೂ ಅವರ ವಿಭಿನ್ನ ಲೋಕಂಗಳನ್ನೂ ಒಳಗೊಂಬ ಪರಮ ಪ್ರಭುವಿನ (ಭಗವಂತನ) ಈ ವಿರಾಟ್ ರೂಪಕ್ಕೆ ‘ಅಧಿದೈವತ’ ಹೇಳಿ ಹೆಸರು. ವ್ಯಕ್ತಿಗತ ಆತ್ಮನ ಜೊತೆಲಿ ದೇಹಲ್ಲಿ ಪರಮಾತ್ಮ° ಇದ್ದ°. ಹೃದಯಲ್ಲಿ ನೆಲೆಸಿಪ್ಪ ಪರಮಾತ್ಮನೇ ‘ಅಧಿಯಜ್ಞ°’. ಈ ಶ್ಲೋಕಲ್ಲಿ ‘ಏವ’ ಹೇಳಿ ವಿಶೇಷವಾಗಿ ಪ್ರಯೋಗ ಆಯ್ದು. ಇದು ಪರಮಾತ್ಮನು ಭಗವಂತನಿಂದ ಬೇರೆ ಅಲ್ಲ ಹೇಳ್ವದರ ಒತ್ತಿ ಹೇಳುತ್ತು. ವ್ಯಕ್ತಿಗತ ಆತ್ಮಲ್ಲಿ ಕೂದ ಪರಮಾತ್ಮ°, ದೇವೋತ್ತಮ ಪರಮ ಪುರುಷ°, ವ್ಯಕ್ತಿಗತ ಆತ್ಮದ ಕರ್ಮದ ಸಾಕ್ಷಿ ಮತ್ತೆ ಆತ್ಮದ ಪ್ರಜ್ಞೆಯ ವಿವಿಧ ಬಗೆಗೊಕ್ಕೆ ಅವನೇ ಮೂಲ°. ಪರಮಾತ್ಮ ವ್ಯಕ್ತಿಗತ ಆತ್ಮಕ್ಕೆ ಸ್ವತಂತ್ರವಾಗಿ ಕಾರ್ಯ ಮಾಡ್ಳೆ ಅವಕಾಶ ನೀಡಿ ವ್ಯಕ್ತಿಗತ ಆತ್ಮನ ಕರ್ಮವ ನೊಡಿಗೊಂಡಿರುತ್ತ°. ಸಂಪೂರ್ಣ ಕೃಷ್ಣಪ್ರಜ್ಞೆಯ ಪರಿಶುದ್ಧ ಭಕ್ತಂಗೆ ಭಗವಂತನ ಈ ವಿವಿಧ ಅಭಿವ್ಯಕ್ತಿಗೊ ಸ್ಪಷ್ಟವಾಗಿ ತಿಳಿತ್ತು. ಹೊಸತ್ತಾಗಿ ದೀಕ್ಷೆ ಸ್ವೀಕರುಸಿದವಂಗೆ ಭಗವಂತನ ಸ್ವರೂಪದ ಹತ್ರೆ ಸುಳಿವಲೆ ಸಾಧ್ಯ ಆವುತ್ತಿಲ್ಲೆ. ಅವ° ಭಗವಂತನ ವಿರಾಟ್ ಸ್ವರೂಪವ ಧ್ಯಾನಿಸುತ್ತ°.

ಬನ್ನಂಜೆ ವ್ಯಾಖ್ಯಾನಲ್ಲಿ ವಿವರಿಸಿದ್ದರ ಗಮನಿಸಿರೆ –  ಭಗವಂತ° ಹೇಳುತ್ತ° – ಅಧ್ಯಾತ್ಮ ಹೇಳಿರೆ ಶರೀರಲ್ಲಿ ಬಂಧಿಯಾಗಿಪ್ಪ ಜೀವ. ಈ ಜೀವದ ಭೋಗಕ್ಕಾಗಿ ಸೃಷ್ಟಿಯಾಗಿಪ್ಪಂತಹ ಪಂಚಭೂತಾತ್ಮಕವಾದ ಈ ಪ್ರಪಂಚದ ಸಮಸ್ತ ವಿಚಾರಂಗಳೂ ಅಧಿಭೂತ. ಪಂಚಭೂತದ ಮೂಲದ್ರವ್ಯ ಮತ್ತೆ ಪಂಚಭೂತಂಗಳಿಂದ ನಿರ್ಮಾಣಗೊಂಡ ಪ್ರಪಂಚ ಅಧಿಭೂತ. ಜಡಪ್ರಕೃತಿಂದ ಹಿಡುದು ಸ್ಥೂಲ ವಿಶ್ವದ ವರೇಂಗೆ ತ್ರಿಗುಣಾತ್ಮಕವಾದ ಎಲ್ಲವೂ ಅಧಿಭೂತ. ಮುಂದುವರುಶಿ ಭಗವಂತ° ಹೇಳುತ್ತ° – “ಪುರುಷಶ್ಚಾಧಿದೈವತಂ”. ಈ ಶರೀರದೊಳ ಇಪ್ಪ ಜೀವಕ್ಕೆ ಸಕಾಯ ಅಪ್ಪಲೆ ದೇಹಲ್ಲಿ ಬೇರೆ ಬೇರೆ ಇಂದ್ರಿಯಂಗಳ ನಿಯಂತ್ರುಸುವ ದೇವತೆಗೊ ಇದ್ದವು. ಇದು ಅಧಿದೈವತಾ ವಿಜ್ಞಾನ. ಜೀವಿಯ ಯಜ್ಞವ ಅಧಿಕರಿಸಿ, ನಿಯಂತ್ರಿಸುವ ಯಜ್ಞಭೋಕ್ತಾರ°, ಯಜ್ಞಮಾಡುವವ°, ಮಾಡುಸುವವ° ಮತ್ತೆ ಫಲಪ್ರದಾನ ಮಾಡುವವ° ಭಗವಂತ°. ಅವ° ಈ ಶರೀರಲ್ಲಿದ್ದುಗೊಂಡು ಜೀವಿಯ ನಿಯಂತ್ರುಸುತ್ತ°. ಅಂತಹ ಯಜ್ಞದ ಭೋಕ್ತಾರ° – ಅಧಿಯಜ್ಞ°. ಭಗವಂತನ ಪೂಜಾರೂಪ ಹೇದು ಅರ್ತು ಮಾಡುವ ಎಲ್ಲ ಕರ್ಮವೂ ಯಜ್ಞವೇ. ‘ಯಜ ದೇವಾ ಪೂಜಾಯಾಂ’ – ನಮ್ಮ ಬದುಕ್ಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾಧನೆ. ನಮ್ಮ ದೇಹದೊಳ ಇದ್ದು, ಸಕಲ ತತ್ವಾಭಿಮಾನಿ ದೇವತೆಗಳ ಮುಖೇನ ಕ್ರಿಯೆ ಮಾಡುಸುವ ಭಗವಂತ° ‘ಅಧಿಯಜ್ಞ°’.  ಇನ್ನೊಂದು ಆಯಾಮಲ್ಲಿ ಹೇಳುತ್ತದಾದರೆ, ಅಧಿಭೂತ ಹೇಳಿರೆ ಬ್ರಹ್ಮಾದಿ ಸಮಸ್ತ ದೇವತೆಗೊ, ಚೇತನಾಚೇತನಾತ್ಮಕ ಪ್ರಪಂಚ, ಜೀವ, ಶರೀರ, ಬ್ರಹ್ಮ ಮತ್ತೆ ಬ್ರಹ್ಮಾಂಡ ಎಲ್ಲವೂ ಅಧಿಭೂತ. ಎಲ್ಲಾ ದೇವತೆಗೆಕ್ಕೂ ಮಿಗಿಲಾಗಿಪ್ಪವ° ಭಗವಂತನ ಮತ್ತೆ ಬ್ರಹ್ಮಾದಿ ದೇವತೆಗೊಕ್ಕೂ ಅಬ್ಬೆಯಾಗಿಪ್ಪ ‘ಶಕ್ತಿ’ ಶ್ರೀತತ್ವ ಅಧಿದೈವ. ಎಲ್ಲಾದಿಕ್ಕೆ ತುಂಬಿದ್ದು, ಎಲ್ಲ ಜೀವಂಗಳ ಒಳ ಅಂತರ್ಯಾಮಿಯಾಗಿದ್ದು ನಿಯಂತ್ರುಸುವ ಭಗವಂತ° – ಅಧಿಯಯಜ್ಞ.

ಶ್ಲೋಕ

ಅಂತಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಲೇವರಮ್ ।
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥೦೫॥

ಪದವಿಭಾಗ

ಅಂತ-ಕಾಲೇ ಚ ಮಾಮ್ ಏವ ಸ್ಮರನ್ ಮುಕ್ತ್ವಾ ಕಲೇವರಮ್ । ಯಃ ಪ್ರಯಾತಿ ಸಃ ಮತ್ ಭಾವಮ್ ಯಾತಿ ನ ಅಸ್ತಿ ಅತ್ರ ಸಂಶಯಃ॥

ಅನ್ವಯ

ಯಃ ಚ ಅಂತ-ಕಾಲೇ ಮಾಮ್ ಏವ ಸ್ಮರನ್ ಕಲೇವರಂ ಮುಕ್ತ್ವಾ ಪ್ರಯಾತಿ, ಸಃ ಮತ್ ಭಾವಂ ಯಾತಿ, ಅತ್ರ ಸಂಶಯಃಅಸ್ತಿ ।

ಪದವಿಭಾಗ

ಯಃ – ಆರು, ಚ – ಕೂಡ, ಅಂತ-ಕಾಲೇ – ಅಂತ್ಯಕಾಲಲ್ಲಿ, ಮಾಮ್ ಏವ – ಎನ್ನನ್ನೇ, ಸ್ಮರನ್ – ಸ್ಮರಿಸಿಗೊಂಡು, ಕಲೇವರಮ್ – ಶರೀರವ, ಮುಕ್ತ್ವಾ – ತ್ಯಜಿಸಿ, ಪ್ರಯಾತಿ – ಹೋವುತ್ತನೋ, ಸಃ – ಅವ°, ಮತ್ ಭಾವಮ್ – ಎನ್ನ ಭಾವವ, ಯಾತಿ – ಹೊಂದುತ್ತ°, ಅತ್ರ – ಇಲ್ಲಿ, ಸಂಶಯಃ – ಸಂಶಯ, ನ ಅಸ್ತಿ – ಇಲ್ಲೆ.

ಅನ್ವಯಾರ್ಥ

ಅಂತ್ಯಕಾಲಲ್ಲಿ ಆರು ಎನ್ನ ಸ್ಮರಿಸಿಗೊಂಡೇ ದೇಹತ್ಯಾಗ ಮಾಡುತ್ತನೊ ಅವ° ಎನ್ನ ಸ್ವಭಾವವ ಹೊಂದುತ್ತ°. ಇದರಲ್ಲಿ ಸಂಶಯವೇ ಇಲ್ಲೆ.

ತಾತ್ಪರ್ಯ / ವಿವರಣೆ

ಈ ಶ್ಲೋಕಲ್ಲಿ ಕೃಷ್ಣಪ್ರಜ್ಞೆಯ ಮಹತ್ವವ ಒತ್ತಿಹೇಳಿದ್ದು. ಕೃಷ್ಣಪ್ರಜ್ಞೆಲಿ ಯಾವಾತ° ದೇಹ ಬಿಡುತ್ತನೋ ಅವ° ಕೂಡ್ಳೆ ಭಗವಂತನ ದಿವ್ಯಭಾವಕ್ಕೆ ಸೇರುತ್ತ°. ಇಲ್ಲಿ ‘ಸ್ಮರನ್’ ಹೇಳ್ವ ಪದಕ್ಕೆ ಮಹತ್ವ ಇದ್ದು. ಸಾಮಾನ್ಯರಿಂಗೆ ಅಂತ್ಯಕಾಲಲ್ಲಿ ಮನಸ್ಸಿಲ್ಲಿ, ಶರೀರಲ್ಲಿ ಏನೋನೋ ಸಂಕಷ್ಟ ಗೊಂದಲಂಗೊ ಇಪ್ಪದು ಸಹಜ. ಆದರೆ ಸಂಪೂರ್ಣ ಕೃಷ್ಣಪ್ರಜ್ಞೆ ಇಪ್ಪವಂಗೆ ಮಾತ್ರ ಇದು ಸಾಧ್ಯ ಹೇಳ್ವದರ ಇಲ್ಲಿ ಎತ್ತಿ ತೋರುಸುತ್ತು. ಇಲ್ಲಿ ಮನುಷ್ಯಂಗೆ ಸಹನೆ ಅಗತ್ಯ ಹೇಳ್ತ ಧ್ವನಿಯೂ ಅಡಗಿದ್ದು. ಸಂಪೂರ್ಣ ಕೃಷ್ಣಪ್ರಜ್ಞೆಂದ ಬಾಳುತ್ತವಂಗೆ ಅಕೇರಿಲಿಯೂ ಕೃಷ್ಣಪ್ರಜ್ಞೆಯ ಸಂಪೂರ್ಣ ಫಲ ಇದ್ದು ಹೇಳ್ವದರ ಅರ್ಥಮಾಡಿಗೊಂಬಲಕ್ಕು. ದೇಹವ ಬಿಡುತ್ತಾ ಭಗವಂತನ ಸ್ಮರಿಸಿಗೊಂಡು ಹೋಪ ಚೇತನಕ್ಕೆ ಮುಂದೆ ಅಗಾಧವಾದ ಬೆಣಚ್ಚಿ (ಭಗವಂತನ ಬೆಣಚ್ಚಿ) ನಿಸ್ಸಂದೇಹವಾಗಿ (ನ ಅಸ್ತಿ ಅತ್ರ ಸಂಶಯಃ) ಲಭಿಸುತ್ತು, ಮೋಕ್ಷಪ್ರಾಪ್ತಿ ಆವ್ತು ಹೇಳಿ ಭಗವಂತನೇ ಹೇಳುತ್ತ°.

ಶ್ಲೋಕ

ಯಂ ಯಂ ವಾಪಿ ಸ್ಮರನ್ಭಾವಂ ತ್ಯಜಂತ್ಯಂತೇ ಕಲೇವರಮ್ ।
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ ॥೦೬॥

ಪದವಿಭಾಗ

ಯಮ್ ಯಮ್ ವಾ ಅಪಿ ಸ್ಮರನ್ ಭಾವಮ್ ತ್ಯಜತಿ ಅಂತೇ ಕಲೇವರಮ್ । ತಮ್ ತಮ್ ಏವ ಏತಿ ಕೌಂತೇಯ ಸದಾ ತತ್ ಭಾವ-ಭಾವಿತಃ॥

ಅನ್ವಯ

ಹೇ ಕೌಂತೇಯ!, ಯಂ ಯಂ ವಾ ಅಪಿ ಭಾವಂ ಸ್ಮರನ್ ಅಂತೇ ಕಲೇವರಂ ತ್ಯಜತಿ, ಸದಾ ತತ್ ಭಾವ-ಭಾವಿತಃ ಸಃ ತಂ ತಮ್ ಏವ ಏತಿ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತಿಯ ಮಗನೇ!, ಯಮ್ ಯಮ್- ಯಾವ ಯಾವ, ವಾ ಅಪಿ – ಒಂದು ವೇಳೆ,  ಭಾವಮ್ ಸ್ಮರನ್ – ಭಾವವ ಸ್ಮರಿಸಿಗೊಂಡು, ಅಂತೇ – ಅಕೇರಿಗೆ, ಕಲೇವರಮ್ – ಶರೀರವ, ತ್ಯಜತಿ – ಬಿಡುತ್ತನೋ, ಸದಾ – ಏವಾಗಲೂ, ತತ್ ಭಾವ ಭಾವಿತಃ – ಆ ಭಾವವ (ಇಪ್ಪ ಸ್ಥಿತಿಯ) ಭಾವುಸುವವ (ಸ್ಮರಿಸುವವ), ಏವ ಏತಿ – ಖಂಡಿತವಾಗಿಯೂ ಹೊಂದುತ್ತ°.

ಅನ್ವಯಾರ್ಥ

ಏ ಕುಂತಿಯ ಮಗನಾದ ಅರ್ಜುನ°!, ಯಾವಾತ ತನ್ನ ದೇಹವ ಬಿಡುವಾಗ ಯಾವ ಯಾವ ಭಾವವ ಸ್ಮರಿಸುತ್ತನೋ ಅದೇ ಭಾವವ ನಿಶ್ಚಯವಾಗಿಯೂ ಹೊಂದುತ್ತ°. [ಅಕೇರಿಲಿ ಯಾವ ಯಾವ ವಿಷಯವ (ಭಾವವ) ಗ್ರೇಶಿಗೊಂಡು ದೇಹವ ಬಿಡುತ್ತನೋ, ಅವ° ಅನುಗಾಲ ಬೇರೂರಿದ ಸಂಸ್ಕಾರಂದ ಅದನ್ನೇ ಪಡೆತ್ತ°.] 

ತಾತ್ಪರ್ಯ / ವಿವರಣೆ

ಸಾವಿನ ವಿಷಮ ಗಳಿಗೆಲಿ ಮನುಷ್ಯ° ತನ್ನ ಸ್ವಭಾವವ ಬದಲಾಯಿಸುತ್ತ ಪ್ರಕ್ರಿಯೆಯ ಇಲ್ಲಿ ವಿವರಿಸಿದ್ದ°. ತನ್ನ ಜೀವನದ ಅಂತ್ಯಲ್ಲಿ ಭಗವಂತನ ಕುರಿತು ಯೋಚನೆ ಮಾಡಿಗೊಂಡು ದೇಹವ ಬಿಡುವವ° ಭಗವಂತನ ದಿವ್ಯಭಾವವ ಪಡೆತ್ತ°. ಆದರೆ ಭಗವಂತನ ಬಿಟ್ಟು ಬೇರೆ ಏನನ್ನೋ ಯೋಚನೆಮಾಡುತ್ತ ಸಾಯ್ವ ಜೀವಿಗೆ ಆ ದಿವ್ಯಸ್ಥಿತಿ ಲಭಿಸುತ್ತಿಲ್ಲೆ ಹೇಳುವದು ಭಗವಂತನ ಸಂದೇಶ. ಈ ಮಾತು ಬಹು ಮುಖ್ಯ ಮತ್ತು ನೆಂಪಿಲ್ಲಿ ಇರೆಕ್ಕಾದ್ದು. ಅಂತ್ಯಕಾಲಲ್ಲಿ ನವಗಪ್ಪ ಚಿಂತೆ ಸಾಮಾನ್ಯವಾಗಿ ನಾವೀರಗೆ ಮಾಡಿದ್ದನೂ ಮತ್ತು ಯಾವುದೋ ಈಡೇರದ್ದ ಬಯಕೆಯನ್ನೂ. ಅವಕ್ಕೆ ಮತ್ತೂ ಜನ್ಮ ತಪ್ಪಿದ್ದಲ್ಲ. ಜೀವನ ಉದ್ದಕ್ಕೂ ಭಗವಂತನನ್ನೇ ಗುರಿಯಾಗಿರಿಸಿಗೊಂಡವಂಗೆ ಅಂತ್ಯಕಾಲಲ್ಲಿಯೂ ಭಗವದ್ ಸ್ಮರಣೆಯೇ ಒಳಿತ್ತು. ಅಂತ್ಯಲ್ಲಿ ಅದನ್ನೇ ಪಡೆತ್ತ°. ಭರತ ಮಹಾರಾಜ° ಒಬ್ಬ ಶ್ರೇಷ್ಠ ವ್ಯಕ್ತಿ. ಆದರೆ ತನ್ನ ಅಂತ್ಯಕಾಲಲ್ಲಿ ಅವ° ಒಂದು ಜಿಂಕೆಯ ಕುರಿತು ಯೋಚಿಸಿಗೊಂಡಿತ್ತಿದ್ದ. ಹಾಂಗಾಗಿ ಅವಂಗೆ ಮುಂದಾಣ ಜನ್ಮಲ್ಲಿ ಅವ° ಒಂದು ಜಿಂಕೆಯ ಶರೀರವ ಪ್ರವೇಶಿಸುವ ಹಾಂಗಾತು. ಹಾಂಗಾಗಿಯೇ ತಿಳುದೋರು ಹೇಳುತ್ತದು ನವಗೆ ಸದಾ ಭಗವಂತನ ಸ್ಮರಣೆ ಇರೆಕು. ಉದಿಯಪ್ಪಗ ಏಳುವಾಗಲೂ ನಾರಾಯಣ, ಇರುಳು ಒರಗುವಾಗಲೂ ನಾರಾಯಣ. ಜೀವನದುದ್ದಕ್ಕೂ ನಮ್ಮ ನಾಲಗೆಲಿ ನಾರಾಯಣ. ಇಲ್ಲದ್ರೆ ಮನುಷ್ಯಂಗೆ ತನ್ನ ಜೀವಿತಕಾಲಲ್ಲಿ ಬಂದ ಯೋಚನೆಗೊ ಎಲ್ಲ ಒಟ್ಟಿಂಗೆ ಕೂಡಿ ಸಾವಿನ ಕ್ಷಣಲ್ಲಿ ಅವನ ಯೋಚನೆಯ ಮೇಗೆ ಪ್ರಭಾವ ಬೀರುತ್ತು. ಈ ಸಂದರ್ಭಲ್ಲಿ ಭಗವಂತನ ಚಿಂತನೆಯ ಅವಕಾಶ ಕಳಕ್ಕೊಳ್ಳುತ್ತ°. ಹಾಂಗಾಗಿ ಜೀವನದ ಉದ್ದಕ್ಕೂ ಮನುಷ್ಯ° ಸತ್ವಗುಣಲ್ಲಿ ಬಾಳಿ, ಸದಾ ಭಗವದ್ ಚಿಂತನೆ ಮಾಡಿರೆ ತನ್ನ ಅಂತ್ಯಕಾಲಲ್ಲಿ ಭಗವಂತನನ್ನೇ ನೆಂಪುಮಾಡಿಗೊಂಡಿಪ್ಪಲೆ ಸಕಾಯ ಆವ್ತು. ಭಗವಂತನ ಸೇವೆಲಿ ಅಲೌಕಿಕವಾಗಿ ತನ್ಮಯನಾಗಿದ್ದರೆ ಅವನ ಮುಂದಾಣ ಜನ್ಮದ ಶರೀರ ಆಧ್ಯಾತ್ಮಿಕವಾವ್ತು, ಭೌತಿಕವಾಗಿರುತ್ತಿಲ್ಲೆ.

ಬನ್ನಂಜೆ ಹೇಳುತ್ತವು – ಇಲ್ಲಿ ಹೇಳುವ ‘ಭರತ’, ದುಷ್ಯಂತ ಶಕುಂತಲೆಯ ಮಗ° ಭರತ° ಅಲ್ಲ. ಅವ° ಭರತವಂಶದ ಮೂಲ ಪುರುಷ°. ಇವ° ಈ ದೇಶಕ್ಕೆ ‘ಭಾರತ’ ಹೇಳ್ವ ಹೆಸರು ಬಪ್ಪಲೆ ಕಾರಣನಾದ ವೃಷಭದೇವನ ಮಗ° ಭರತ°. [ಕಾಳಿದಾಸನ ಮಹಾಭಾರತ ಕೃತಿಲಿ ಬಪ್ಪ ದುಷ್ಯಂತ – ಶಕುಂತಲೆಯರ ಮಗ° ಭರತನಿಂದಾಗಿ ಭಾರತ ಹೇಳ್ವ ಹೆಸರು ಬಂದದು ಹೇಳಿ ಇಪ್ಪದಾದರೂ ಪುರಾಣಂಗಳಲ್ಲಿ ಅದರ ಸಮರ್ಥನೆ ಇಲ್ಲೆ. ಇಲ್ಲಿ ಹೇಳಿಪ್ಪ ಭರತ°, ವಿಷ್ಣುಪುರಾಣಲ್ಲಿ ಬಪ್ಪವ°. ಸ್ವಾಯಂಭುವ ಮನು -> ಪ್ರಿಯಬ್ರತ -> ಅಗ್ನಿದೃಷ್ಟ -> ನಭಿ + ಇಂದ್ರನ ಮಗಳು ಮೇರುದೇವಿ -> ವೃಷಭದೇವ° + ಜಯಂತಿ -> ಭರತ°. ವೃಷಭದೇವನ ನೂರು ಮಕ್ಕಳಲ್ಲಿ ಹಿರಿಯವ° ಭರತ°, ಮತ್ತಾಣವ° ಬಾಹುಬಲಿ. ಮುಂದೆ ಇವಿಬ್ರು ಚಕ್ರವರ್ತಿ ಪದವಿಗೆ ಹೋರಾಡಿ ಯುದ್ಧಲ್ಲಿ ಗೆದ್ದ ಭರತನಿಂದಾಗಿ ಈ ದೇಶಕ್ಕೆ ಭಾರತ ಹೇಳಿ ಹೆಸರು ಬಂದದು, ಸೋತ ಬಾಹುಬಲಿ ಮುಂದೆ ಜೈನ ಮತ ಸುರುಮಾಡಿದ್ದು.] ಪರಮ ಧಾರ್ಮಿಕನಾದ ಈ ಭರತ°, ತನ್ನ ಮಗ° ಪ್ರಾಯಪ್ರಬುದ್ಧನಾದಪ್ಪಗ ತನ್ನೆಲ್ಲಾ ಅಧಿಕಾರವ ಅವಂಗೆ ಒಪ್ಪುಸಿಕ್ಕಿ, ವಾನಪ್ರಸ್ಥವ ಸ್ವೀಕರುಸಿ ಕಾಡಿಲ್ಲಿ ಋಷಿಗಳ ಒಟ್ಟಿಂಗೆ ಸದಾ ಭಗವದ್ ನಿಷ್ಠನಾಗಿ ಬದುಕಿಗೊಂಡಿತ್ತಿದ್ದ. ಒಂದಿನ ಅವಂಗೆ ಕಾಡಿಲ್ಲಿ ಅಬ್ಬೆಸತ್ತ ಒಂದು ಜಿಂಕೆಕುಂಞಿ ಸಿಕ್ಕಿತ್ತು. ಭರತ°, ಆ ಜಿಂಕೆಕುಂಞಿಯ ತಂದು ಪಾಲನೆ ಪೋಷಣೆ ಮಾಡ್ಳೆ ಸುರುಮಾಡಿದ°. ಸದಾ ಆ ಜಿಂಕೆಯನ್ನೇ ಪೋಷಣೆ ಮಾಡ್ತದರಲ್ಲಿ ಕಾಲ ಕಳವಲೆ ಸುರುವಾತು ಅವನ ಜೀವನ. ಇದರಿಂದ ಸಾಧನೆಗೆ ಚ್ಯುತಿ ಬಂತು. ಆ ಜಿಂಕೆಕುಂಞಿ ಬೆಳದು ದೊಡ್ಡದಾಯೇಕ್ಕಾರೆ ಮದಲೇ ಭರತಂಗೆ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂತು. ಆ ಕಾಲಲ್ಲಿ ಭರತಂಗೆ ಆ ಜಿಂಕೆಕುಂಞಿದೇ ಚಿಂತೆ. ಹಾಂಗಾಗಿ ಆ ಭರತ° ಮುಂದಾಣ ಜನ್ಮಲ್ಲಿ ಜಿಂಕೆಯಾಗಿಯೇ ಹುಟ್ಟಿದ°. ಹೇಳಿರೆ, ಎಂತಹ ಅಪರೋಕ್ಷ ಜ್ಞಾನಿಯೂ ಕೂಡ ಪ್ರಾರಬ್ಧ ಕರ್ಮಕ್ಕೆ ಬದ್ಧರು ಹೇಳ್ವದು ಇಲ್ಲಿ ಅರ್ಥಮಾಡಿಗೊಂಬಲಕ್ಕು. ನಾವು ಜೀವನ ಪರ್ಯಂತ ಸಾಧನೆ ಮಾಡಿದ್ದರೂ ಸಾಯ್ವ ಕಾಲಕ್ಕೆ ಯಾವುದೋ ಪ್ರಭಾವಕ್ಕೆ ಒಳಗಾಗಿ ಭಗವಂತನ ನೆಂಪು ಬಾರದ್ದೇ ಹೋಕು. ಹಾಂಗಾಗಿ ಅದಕ್ಕಾಗಿ ಜೀವನ ಪರ್ಯಂತ ವಾ ಅನೇಕ ಜನ್ಮಂಗಳ ಸಾಧನೆ ಬೇಕಕ್ಕು. “ಸದಾ ತತ್ ಭಾವಭಾವಿತಃ” – ಇಲ್ಲಿ ಭಾವ ಹೇಳಿರೆ ಭಾವನೆ – ತನ್ಮಯತೆ. ಯೇವತ್ತೂ ಭಗವಂತನಲ್ಲೇ ತನ್ಮಯವಾದ ಮನಸ್ಸಿಂದ ನಿರಂತರ ಭಗವಂತನ ಚಿಂತನೆ ಮಾಡೆಕು. ಅಂತ್ಯಕಾಲಲ್ಲಿ ಭಗವಂತನ ನೆಂಪು ಬರೇಕ್ಕಾರೆ, ನಿರಂತರ ಭಗವಂತನಲ್ಲೇ ಮನಸ್ಸು ನೆಲೆಗೊಂಬ ಸಂಸ್ಕಾರ ಬೇಕು. ಭಗವದ್ ಪ್ರೀತಿಯ ವಿಷಯವ ಬಿಟ್ಟು ಬೇರೆ ಎಂತರನ್ನೂ ನಮ್ಮ ಮನಸ್ಸಿಲ್ಲಿ ಮಡಿಕ್ಕೊಂಬಲಾಗ ಹೇಳ್ವ ಸಾರವ ಇಲ್ಲಿ ಅರ್ಥಮಾಡಿಗೊಂಬಲಕ್ಕು. ಯಾವುದೆ ಇತರ ವಿಷಯಂಗಳ ಮನಸ್ಸಿಂಗೆ ಹಚ್ಚಿಗೊಂಬಲಾಗ. ಹಚ್ಚಿಗೊಂಡರೆ ಅಂತ್ಯಕಾಲಲ್ಲಿ ಅದುವೇ ಹೆಡೆನೆಗ್ಗಿ ನಿಲ್ಲುತ್ತು. ಈ ಮದಲೇ ಹೇಳಿದಾಂಗೆ ಭಗವಂತನಲ್ಲಿ ಏಕಭಕ್ತಿ, ಇತರವಿಷಯಲ್ಲಿ ನಿರ್ಲಿಪ್ತತೆ ಮನಸ್ಸಿಲ್ಲಿ ಇರೆಕು. ಆರನ್ನೂ ಕೆಟ್ಟವು ಹೇದು ದ್ವೇಷಿಸಲಾಗ. ಒಬ್ಬರನ್ನೊಬ್ಬ° ದ್ವೇಷಿಸುವದು ತುಂಬಾ ಕೆಟ್ಟದ್ದು. ಅದು ನಮ್ಮ ಇಡೀ ಬದುಕ್ಕನ್ನೇ ಹಾಳುಮಾಡುತ್ತು. ದುಷ್ಟರಿಂದ ದೂರ ಇರು ಆದರೆ ದ್ವೇಷಿಸೇಡ ಹೇಳಿ ಭಗವಂತ ಈ ಮದಲೇ ಹೇಳಿದ್ದ°.   ಇನ್ನೊಬ್ಬರ ದ್ವೇಷಿಸುವದು, ನಿಂದಿಸುವದು ಅಥವಾ ಅದನ್ನೇ ಗಾಢವಾಗಿ ಮನಸ್ಸಿಂಗೆ ಮೆತ್ತಿಗೊಂಬದು ಎಂದೂ ಶ್ರೇಯಸ್ಕರ ಮಾತಲ್ಲ. ಅದು ನಮ್ಮ ಅಧಃಪತನಕ್ಕೆ ತಳ್ಳುತ್ತು. ಹಾಂಗಾಗಿ ಈ ವಿಚಾರಲ್ಲಿ ಎಚ್ಚರವಾಗಿರೆಕು. ಆರನ್ನೂ ಟೀಕೆ ಮಾಡ್ಳೆ ನಾವು ಅರ್ಹರಲ್ಲ. ಎಂತಕೆ ಹೇಳಿರೆ ನವಗೆ ಅಂತರಂಗ ದರ್ಶನ ಇಲ್ಲೆ. ನಾವು ಮಾಡುತ್ತದು ಬರೇ ಹೊರನೋಟಂದ. ಒಳ ಆರು ಎಂತರ ಹೇಳ್ವ ತಿಳ್ಮೊಂಬ ಶಕ್ತಿ ನವಗೆ ಇಲ್ಲೆ. ಹಾಂಗಾಗಿ ಇನ್ನೊಬ್ಬನ / ಇನ್ನೊಂದರ ಚಿಂತೆ ಬಿಟ್ಟು ಸದಾ ಭಗವಂತನ ಚಿಂತನೆ ಮಾಡಿಗೊಂಡಿರೆಕು ಹೇಳಿ ಭಗವಂತ° ಇಲ್ಲಿ ಒತ್ತಿ ಹೇಳಿದ್ದ°.

ಶ್ಲೋಕ

ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।
ಮಯ್ಯರ್ಪಿತಮನೋಬುದ್ಧಿಃ  ಮಾಮೇವೈಷ್ಯಸ್ಯಸಂಶಯಮ್ ॥೦೭॥

ಪದವಿಭಾಗ

ತಸ್ಮಾತ್ ಸರ್ವೇಷು ಕಾಲೇಷು ಮಾಮ್ ಅಸುಸ್ಮರ ಯುದ್ಧ್ಯ ಚ  । ಮಹಿ ಅರ್ಪಿತ-ಮನಃ-ಬುದ್ಧಿಃ ಮಾಮ್ ಏವ ಏಷ್ಯಸಿ ಅಸಂಶಯಮ್

ಅನ್ವಯ

ತಸ್ಮಾತ್ ಸರ್ವೇಷು ಕಾಲೇಷು ಮಯಿ ಅರ್ಪಿತ-ಮನಃ-ಬುದ್ಧಿಃ ಭವ । ಮಾಮ್ ಅನುಸ್ಮರ, ಯುಧ್ಯ ಚ । ಏವಮ್ ಅಸಂಶಯಂ ಮಾಮ್ ಏವ ಏಷ್ಯಸಿ ।

ಪ್ರತಿಪದಾರ್ಥ

ತಸ್ಮಾತ್ – ಹಾಂಗಾಗಿ (ಆದ್ಧರಿಂದ), ಸರ್ವೇಷು ಕಾಲೇಷು – ಎಲ್ಲ ಸಮಯಂಗಳಲ್ಲಿಯೂ, ಮಯಿ – ಎನ್ನಲ್ಲಿ, ಅರ್ಪಿತ-ಮನಃ-ಬುದ್ಧಿಃ – ಅರ್ಪಿಸಿಗೊಂಡ ಮನಸ್ಸು ಬುದ್ಧಿಯುಳ್ಳವನಾಗಿ, ಭವ – ಇದ್ದುಗೊ (ಆಗಿರು). ಮಾಮ್ – ಎನ್ನ, ಅನುಸ್ಮರ – ನೆಂಪುಮಾಡಿಗೊಂಡಿರು, ಯುಧ್ಯ ಚ – ಯುದ್ಧವನ್ನೂ ಮಾಡು. ಏವಮ್ – ಈ ರೀತಿಯಾಗಿ (ಇದರಿಂದ), ಅಸಂಶಯಮ್ – ನಿಸ್ಸಂದೇಹವಾಗಿ, ಮಾಮ್ ಏವ – ಎನ್ನನ್ನೇ ಏಷ್ಯಸಿ – ಹೊಂದುತ್ತೆ.

ಅನ್ವಯಾರ್ಥ

ಹಾಂಗಾಗಿ, ಅರ್ಜುನ!,  ನೀನು ಏವತ್ತೂ ನಿನ್ನ ಸಂಪೂರ್ಣ ಮನಸ್ಸು ಮತ್ತು ಬುದ್ಧಿರೀತಿಯಾಗಿ ಎನಗೆ ಅರ್ಪಿಸಿಗೊಂಡಿರೆಕು. ಅದೇ ಕಾಲಲ್ಲಿ ಯುದ್ಧಮಾಡುವ ನಿನ್ನ ವಿಧಿತ ಕರ್ತವ್ಯವ ಮಾಡೆಕು. ನಿನ್ನ ಸರ್ವ ಚಟುವಟಿಕೆಗಳ ಎನಗೆ ಅರ್ಪಿಸಿ ನಿನ್ನ ಮನಸ್ಸು ಮತ್ತು ಬುದ್ದಿಯ  ಎನ್ನಲ್ಲಿ ನೆಲೆಸಿಗೊಂಡರೆ ನಿಸ್ಸಂಶಯವಾಗಿಯೂ ನೀನು ಎನ್ನನ್ನೇ ಹೊಂದುತ್ತೆ.

ತಾತ್ಪರ್ಯ / ವಿವರಣೆ

ಪ್ರಾಪಂಚಿಕವಾಗಿ ಕೆಲಸಕಾರ್ಯಂಗಳಲ್ಲಿ ತೊಡಗಿಯೊಂಡಿಪ್ಪ ಪ್ರತಿಯೊಬ್ಬಂಗೂ ಭಗವಂತ° ಅರ್ಜುನಂಗೆ ಮಾಡಿದ ಈ ಉಪದೇಶ ಬಹುಮುಖ್ಯವಾದ್ದು. ಮನುಷ್ಯ° ತನ್ನ ವಿಧಿತ ಕರ್ತವ್ಯಂಗಳನ್ನಾಗಲೀ, ಕೆಲಸವನ್ನಾಗಲೀ ಬಿಡೆಕು ಹೇಳಿ ಹೇಳಿತ್ತನಿಲ್ಲೆ. ಅವರವರ ಕಾರ್ಯವ  ಕರ್ತವ್ಯವ ಅವ್ವವ್ವು ತಪ್ಪದೇ ಪಾಲುಸೆಕು ಅದರೆ ಅದು ಭಗವದ್ ಕೆಲಸ ಹೇಳಿ ಮನಸ್ಸು ಮತ್ತು ಬುದ್ಧಿಲಿ ಜಾಗೃತವಾಗಿರೆಕು. ಇದು ಮನಸ್ಸು ಮತ್ತು ಬುದ್ಧಿ ಭಗವಂತನಲ್ಲಿ ನೆಲೆಗೊಂಬಲೆ ಸಹಾಯಕ ಆವ್ತು. ಮುಂದೆ ಇದು ಜೀವನ ಪರ್ಯಂತ ಮತ್ತು ಅಂತ್ಯಕಾಲಲ್ಲಿ ಭಗವದ್ ಪ್ರಜ್ಞೆ, ಭಗವಂತನ ನೆಂಪುಮಾಡಿಗೊಂಡಿಪ್ಪಲೆ ದಾರಿಯಾವ್ತು. ಹಾಂಗಾಗಿ ಭಗವಂತ ಇಲ್ಲಿ ಹೇಳಿದ್ದ° – ತಸ್ಮಾತ್ – ಹಾಂಗಾಗಿ , “ಸರ್ವೇಷು ಕಾಲೇಷು ಮಾಮನುಸ್ಮರ”  – ಸದಾ (ಸರ್ವ ಕಾಲಲ್ಲಿಯೂ) ಭಗವಂತನ ಸ್ಮರಣೆ ಮಾಡು. ಪ್ರತಿಯೊಂದು ಕ್ರಿಯೆ ಮಾಡುವಾಗಲೂ ಭಗವಂತನ ಸ್ಮರಣೆ ಇರೆಕು. ಯುದ್ಧ ಮಾಡುವಾಗಲೂ ಕೂಡ ” ಆ ಭಗವಂತ ಎನ್ನೊಳ ಕೂದು ಈ ಕಾರ್ಯವ ಅವಂಗೆ ಬೇಕಾಗಿ ಮಾಡುಸುತ್ತ°, ಇದು ಅವನ ಸಂಕಲ್ಪ” ಹೇಳ್ವ ಭಾವನೆಂದ ಯುದ್ಧಮಾಡಿರೆ ಅದೂ ಭಗವಂತನ ಪೂಜೆಯೇ ಆವ್ತು. ಹಾಂಗೆ ಮಾಡಿಯಪ್ಪಗ ನಮ್ಮಿಂದ ತಿಳುದೋ ತಿಳಿಯದ್ದೆಯೋ ಅಪ್ಪ ತಪ್ಪಿಂದ ಪಾಪದ ಲೇಪ ಬಾರದ್ದಾಂಗೆ ಭಗವಂತ ನೋಡಿಗೊಳ್ತ°. ಭಗವಂತನ ಸ್ಮರಣೆ ಮಾಡ್ಳೆ ಕಾಲದೋಷ ಇಲ್ಲೆ. ಯಾವಾಗ ಭಗವಂತನ ಸ್ಮರಣೆ ಮಾಡುತ್ತೋ ಅದು ಪುಣ್ಯಕಾಲವೇ. ಅವನ ಸ್ಮರಣೆ ಮನಸ್ಸಿಲ್ಲಪ್ಪದೇ ಮಡಿ. ಹಾಂಗಾಗಿ ಭಗವಂತನ ಪೂಜಾರೂಪವಾಗಿ ಅಹಂಕಾರ ಇಲ್ಲದ್ದೆ ಅವನನ್ನೇ ಸ್ಮರಣೆ ಮಾಡಿಗೊಂಡು ಕರ್ತವ್ಯಲ್ಲಿ ಮಗ್ನನಾಗಿರೆಕು.

ಬನ್ನಂಜೆ ಹೇಳ್ತವು – ಕ್ರಿಯೆಲಿ ಇಪ್ಪ ಭಾವ ಧರ್ಮ-ಅಧರ್ಮವ ನಿರ್ಣಯ ಮಾಡುತ್ತು. ಉದಾಹರಣಗೆ ‘ಧರ್ಮವ್ಯಾಧ°’. ಅವ° ಮಾಂಸ ಮಾರಿಗೊಂಡೂ ಪರಮ ಧಾರ್ಮಿಕನಾಗಿ ಬದುಕಿದ°. ಎಂತಕೆ ಹೇಳಿರೆ ಅವನ ಅನುಸಂಧಾನ ಶುದ್ಧವಾಗಿತ್ತಿದ್ದು. “ದೇವರು ಎನ್ನ ಈ ಕೆಲಸಕ್ಕೆ ಹಂಚಿದ್ದ°, ಎನ್ನ ಈ ಜನ್ಮದ ಕರ್ತವ್ಯ ಮಾಂಸ ಮಾರಿ ಬದುಕ್ಕುವದು. ಅದರ ಪ್ರಾಮಾಣಿಕವಾಗಿ ಮಾಡಿ ಜೀವನ ಸಾಗುಸೇಕು” ಹೇಳ್ವ ಅನುಸಂಧಾನ ಅವನ ಜೀವನಲ್ಲಿ ಇತ್ತಿದ್ದು. ಅವ ತನ್ನ ವ್ಯಾಪಾರವ ಕೇವಲ ತನ್ನ ಹಾಂಗೂ ತನ್ನ ಕುಟುಂಬದ ಜೀವನ ನಿರ್ವಹಣೆಗೆ ಮಾಡಿಗೊಂಡಿತ್ತಿದ್ದ. ಹೀಂಗೆ ಪ್ರಾಮಾಣಿಕನಾಗಿ ಬದುಕು ಇತರ ಶ್ರೇಷ್ಠರನ್ನೂ ಮೀರುಸುವಷ್ಟು ಎತ್ತರಕ್ಕೇರಿದ°. ಹಾಂಗಾಗಿ ಭಾವಶುದ್ಧಿ ಅತ್ಯಂತ ಶ್ರೇಷ್ಠ.  ಆದ್ದರಿಂದ ನಾವು ನಮ್ಮ ಮನಸ್ಸು ಮತ್ತು ಬುದ್ಧಿಯ ಸಂಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳುಸಿಗೊಂಡು ಜೀವನ ಸಾಗುಸೆಕು. “ಹಾಂಗೆ ಮಾಡಿರೆ ನಿಸ್ಸಂಶಯವಾಗಿ ಎನ್ನನ್ನೇ ಸೇರುವೆ’ – ಹೇಳಿ ಇಲ್ಲಿ ಭಗವಂತ° ಹೇಳಿದ್ದ°.

ಶ್ಲೋಕ

ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ ।
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ॥೦೮॥

ಪದವಿಭಾಗ

ಅಭ್ಯಾಸ-ಯೋಗ-ಯುಕ್ತೇನ ಚೇತಸಾ ನ ಅನ್ಯ-ಗಾಮಿನಾ । ಪರಮಮ್ ಪುರುಷಮ್ ದಿವ್ಯಮ್ ಯಾತಿ ಪಾರ್ಥ ಅನುಚಿಂತಯನ್

ಅನ್ವಯ

ಹೇ ಪಾರ್ಥ!, ಅಭ್ಯಾಸ-ಯೋಗ-ಯುಕ್ತೇನ ನ ಅನ್ಯ-ಗಾಮಿನಾ ಚೇತಸಾ ಅನುಚಿಂತಯನ್, ದಿವ್ಯಂ ಪರಮಂ ಪುರುಷಂ ಯಾತಿ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನಾದ ಅರ್ಜುನನೇ!, ಅಭ್ಯಾಸ-ಯೋಗ-ಯುಕ್ತೇನ – ಅಭ್ಯಾಸಂದ ಧ್ಯಾನಲ್ಲಿ ತೊಡಗಿದ, ನ ಅನ್ಯ-ಗಾಮಿನಾ – ವಿಚಲಿತವಾಗದ್ದ, ಚೇತಸಾ – ಮನಸ್ಸು ಮತ್ತು ಬುದ್ಧಿಂದ, ಅನುಚಿಂತಯನ್ – ನಿರಂತರವಾಗಿ ಚಿಂತಿಸಿಗೊಂಡು, ದಿವ್ಯಮ್ ಪರಮಮ್ ಪುರುಷಮ್ – ದಿವ್ಯನಾದ ಪರಮೋನ್ನತನಾದ ದೇವೋತ್ತಮ ಪುರುಷನ, ಯಾತಿ – ಹೊಂದುತ್ತ°.

ಅನ್ವಯಾರ್ಥ

ಏ ಅರ್ಜುನ!, ನಿರಂತರ ಅಭ್ಯಾಸಯೋಗದ ಮೂಲಕ ಧ್ಯಾನಲ್ಲಿ ತೊಡಗಿಯೊಂಡು ಮನಸ್ಸು ಮತ್ತು ಬುದ್ಧಿಯು ಅನ್ಯ ವಿಷಯದತ್ತ ವಿಚಲಿತಕ್ಕೆ ಒಳಗಾಗದ್ದೆ ಆರು ಎನ್ನ ನಿರಂತರವಾಗಿ ಚಿಂತಿಸಿಗೊಂಡು (ಧ್ಯಾನಿಸಿಗೊಂಡು, ಪೂಜಿಸಿಗೊಂಡು, ಅನುಸಂಧಾನ ಮಾಡಿಗೊಂಡು) ಇರುತ್ತನೋ ಅವ° ಎನ್ನ ದಿವ್ಯವಾದ ಪರಮೋನ್ನತಿಯ ಹೊಂದುತ್ತ°.

ತಾತ್ಪರ್ಯ / ವಿವರಣೆ

ಭಗವಂತನ ಸದಾ ಸ್ಮರಣೆಯ ಮಹತ್ವವ ಈ ಶ್ಲೋಕಲ್ಲಿ ಒತ್ತಿ ಹೇಳಿದ್ದು. ಸೃಷ್ಟಿಯ ಮಾಯೆಗೆ ಸಿಕ್ಕಿಬಿಂದುಗೊಂಡಿರದೆ ನಿರಂತರವಾಗಿ ಭಗವದ್ ಸ್ಮರಣೆ ಮಾಡಿಗೊಂಡು ತನ್ನ ಕರ್ತವ್ಯವ ನಿಭಾಯಿಸುವವಂಗೆ ಅನನ್ಯ ಶ್ರೇಷ್ಠನಾದ ಭಗವಂತನ ದಿವ್ಯಪದವಿ (ಯಶಸ್ಸು) ಪ್ರಾಪ್ತಿಯಾವ್ತು. ಅರ್ಥಾತ್ ಅಂತ್ಯಲ್ಲಿ ಭಗವಂತನ ಪರಮದಿವ್ಯವಾದ  ಶಾಂತಿಧಾಮವ ಹೋಗಿ ಸೇರುತ್ತ°. ನಮ್ಮ  ಮನಸ್ಸಿನ ನಿರಂತರ ಭಗವಂತನಲ್ಲಿ ನೆಲೆಗೊಂಬಂತೆ ಮಾಡೆಕಾರೆ ನಮ್ಮ ಚಿತ್ತಲ್ಲಿ ನಿರಂತರ ಮನನ ಭಗವದ್ ಸ್ಮರಣೆ ಬೇಕು. ಸಾಮಾನ್ಯವಾಗಿ ಸೃಷ್ಟಿಯ ಆಕರ್ಷಣೆಯತ್ತೆಯೇ ನಮ್ಮ ಮನಸ್ಸು ಚಲಿಸಿಗೊಂಡಿರುತ್ತು. ಅದರಿಂದ ಸುಖ ಇದ್ದು ಹೇಳ್ವ ಭ್ರಾಂತಿಗೆ ಒಳಗಾಗಿ ಅದರ ಪಡವ ಒಲವು ಮೂಡಿಗೊಳ್ಳುತ್ತು. ಇತ್ತೆ ಅಧ್ಯಾತ್ಮ ಕೈಬಿಡುತ್ತು. ಇದರ ತಪ್ಪುಸಲೆ ಚಿತ್ತಕ್ಕೆ ಭಗವಂತನ ಅನನ್ಯಗಾಮಿಯಾಗಿ ಚಿಂತನೆ ಮಾಡುತ್ತಿಪ್ಪಂತೆ ನಿರಂತರ ಅಭ್ಯಾಸ ಮಾಡೆಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಗೊಂಡಂತೆ ಕೆಲಸ ಮಾಡುತ್ತು. ಹಾಂಗಾಗಿ ಅದಕ್ಕೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡುಸೇಕು. ಮನಸ್ಸು ಮತ್ತು ಚಿತ್ತವ ನಿಯಂತ್ರುಸುವ ಏಕಮಾತ್ರ ಸಾಧನ ಅಭ್ಯಾಸ. ಹೀಂಗೆ ಅಭ್ಯಾಸ ರೂಢಿಮಾಡಿಗೊಂಡಪ್ಪಗ ಮನಸ್ಸು ಚಿತ್ತ ಕ್ರಮೇಣ ಭಗವಂತನಲ್ಲಿ  ನೆಲೆನೆಲ್ಲುತ್ತು. ಭಗವಂತನಲ್ಲಿ ನೆಲೆನಿಂದ ಮನಸ್ಸು ಅಂತ್ಯಕಾಲಲ್ಲಿ ಕೂಡ ಭಗವಂತನನ್ನೇ ಕಾಣುತ್ತು. ಫಲವಾಗಿ ಭಗವಂತನ ದಿವ್ಯಸ್ವರೂಪವ ಸೇರಿಗೊಂಬಲಾವ್ತು.

ಶ್ಲೋಕ 

ಕವಿಂ ಪುರಾಣಮನುಶಾಸಿತಾರಮ್ ಅಣೋರಣೀಯಾಂಸಮನುಸ್ಮ್ರರೇದ್ಯ।
ಸರ್ವಸ್ಯ ಧಾತಾರಮಚಿಂತ್ಯರೂಪಮ್ ಆದಿತ್ಯವರ್ಣಂ ತಮಸಃ ಪರಸ್ತಾತ್ ॥೯॥

ಪ್ರಯಾಣ-ಕಾಲೇ ಮನಸಾsಚಲೇನ ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥೧೦॥

ಪದವಿಭಾಗ

ಕವಿಮ್ ಪುರಾಣಮ್ ಅನುಶಾಸಿತಾರಮ್ ಅಣೋಃ ಅಣೀಯಾಂಸಮ್ ಅನುಸ್ಮರೇತ್ ಯಃ । ಸರ್ವಸ್ಯ ಧಾತಾರಮ್ ಅಚಿಂತ್ಯ-ರೂಪಮ್  ಆದಿತ್ಯ-ವರ್ಣಮ್ ತಮಸಃ ಪರಸ್ತಾತ್ ॥

ಪ್ರಯಾಣ-ಕಾಲೇ ಮನಸಾ ಅಚಲೇನ ಭಕ್ತ್ಯಾ ಯುಕ್ತಃ ಯೋಗ-ಬಲೇನ ಚ ಏವ । ಭ್ರುವೋಃ ಮಧ್ಯೇ ಪ್ರಾಣಮ್ ಆವೇಶ್ಯ ಸಮ್ಯಕ್ ಸಃ ತಂ ಪರಮ್ ಪುರುಷಮ್ ಉಪೈತಿ ದಿವ್ಯಮ್ ॥

ಅನ್ವಯ

ಕವಿಮ್, ಪುರಾಣಮ್, ಅನುಶಾಸಿತಾರಮ್, ಅಣೋಃ ಅಣೀಯಾಂಸಮ್, ಸರ್ವಸ್ಯ ಧಾತಾರಮ್, ಅಚಿಂತ್ಯ-ರೂಪಮ್, ತಮಸಃ ಪರಸ್ತಾತ್,  ಆದಿತ್ಯವರ್ಣಮ್, ಪ್ರಯಾಣ ಕಾಲೇ, ಅಚಲೇನ ಮನಸಾ, ಭಕ್ತ್ಯಾ ಯುಕ್ತಃ ಯೋಗ-ಬಲೇನ ಚ ಏವ ಭ್ರುವೋಃ ಮಧ್ಯೇ ಸಮ್ಯಕ್ ಪ್ರಾಣಮ್ ಆವೇಶ್ಯ, ಯಃ ಅನುಸ್ಮರೇತ್ ಸಃ ತಂ ಪರಂ ದಿವ್ಯಂ ಪುರುಷಮ್ ಉಪೈತಿ ।

ಪ್ರತಿಪದಾರ್ಥ

ಕವಿಮ್ – ಪ್ರತಿಯೊಂದರನ್ನೂ ತಿಳುದವನಾದ, ಪುರಾಣಮ್ – ಅತಿ ಪುರಾತನನಾದ, ಅನುಶಾಸಿತಾರಮ್ – ನಿಯಂತ್ರಕನಾದ, ಅಣೋಃ  ಅಣೀಯಾಂಸಮ್ – ಪರಮಾಣುವಿನಿಂದಲೂ ಸಣ್ಣವನಾದ, ಸರ್ವಸ್ಯ ಧಾತಾರಮ್ – ಪ್ರತಿಯೊಂದರ ಪಾಲಕನಾದ, ಅಚಿಂತ್ಯ-ರೂಪಮ್ – ಗ್ರೇಶಲೆಡಿಯದ್ದ ರೂಪವುಳ್ಳವನಾದ, ತಮಸಃ ಪರಸ್ತಾತ್ – ಅಂಧಕಾರಕ್ಕೂ ಅತೀತನಾದ, ಆದಿತ್ಯ-ವರ್ಣಮ್ – ಸೂರ್ಯನಾಂಗೆ ಪ್ರಕಾಶಮಾನನಾದ, ಪ್ರಯಾಣ-ಕಾಲೇ – ಮರಣದ ಸಮಯಲ್ಲಿ, ಅಚಲೇನ ಮನಸಾ – ವಿಚಲಿತವಾಗದ್ದ ಮನಸ್ಸಿಂದ, ಭಕ್ತ್ಯಾ ಯುಕ್ತಃ – ಪೂರ್ಣಭಕ್ತಿಂದ ತೊಡಗಿದವನಾಗಿ, ಯೋಗ-ಬಲೇನ – ಯೋಗಶಕ್ತಿಂದ, ಚ – ಕೂಡ, ಏವ – ಖಂಡಿತವಾಗಿಯೂ, ಭ್ರುವೋಃ ಮಧ್ಯೇ – ಎರಡು ಹುಬ್ಬುಗಳ ನೆಡುಕೆ, ಸಮ್ಯಕ್ – ಸಂಪೂರ್ಣವಾಗಿ, ಪ್ರಾಣಮ್-ಆವೇಶ್ಯ – ಪ್ರಾಣವಾಯುವ ಸ್ಥಾಪಿಸಿ, ಯಃ – ಆರು, ಅನುಸ್ಮರೇತ್ – ಸ್ಮರಣೆಮಾಡುತ್ತನೋ, ಸಃ – ಅವ°, ತಮ್ ಪರಮ್ – ಆ ದಿವ್ಯವಾದ, ದಿವ್ಯಮ್ – ಆಧ್ಯಾತ್ಮಿಕ ಸಾಮ್ರಾಜ್ಯದಲ್ಲಿಪ್ಪ, ಪುರುಷಮ್ – ದೇವೋತ್ತಮ ಮರಮ ಪುರುಷನ, ಉಪೈತಿ – ಹೊಂದುತ್ತ°.

ಅನ್ವಯಾರ್ಥ

ಸರ್ವಜ್ಞನೂ (ಕವಿಮ್ – ಎಲ್ಲವನ್ನೂ/ಪ್ರತಿಯೊಂದರನ್ನೂ ತಿಳುದವ°), ಪುರಾಣಪುರುಷನೂ (ಪುರಾಣಮ್ – ಅತೀ ಪುರಾತನವಾದ), ಸರ್ವನಿಯಾಮಕನೂ (ಅನುಶಾಸಿತಾರಮ್) ಸೂಕ್ಷಾತಿಸೂಕ್ಷ್ಮನೂ ( ಅಣೋರಣೀಯಾಮ್) ಎಲ್ಲವನ್ನೂ ಆಧರಿಸಿದವನೂ ( ಸರ್ವಸ್ಯ ಧಾತಾರಮ್) ಅಚಿಂತ್ಯರೂಪನೂ, ಆದಿತ್ಯವರ್ಣನೂ (ಸೂರ್ಯನಂತೆ ಪ್ರಕಾಶಮಾನನೂ), ಆದ ದೇವೋತ್ತಮ ಪರಮ ಪುರುಷನ ಯಾವಾತ° ಅಂತ್ಯಕಾಲಲ್ಲಿ ನಿಶ್ಚಲ ಮನಸ್ಸಿಂದ ಭಕ್ತಿಪೂರ್ವಕವಾಗಿ ಯೋಗಬಲದ ಮೂಲಕ ಭ್ರೂಮಧ್ಯಲ್ಲಿ ಪ್ರಾಣವ ನಿಲ್ಲುಸಿದ ಸಾಧಕನಾಗಿ ಸ್ಮರಣೆ ಮಾಡುತ್ತನೋ (ಧ್ಯಾನಾಸಕ್ತನಾಗಿರುತ್ತನೋ) ಅವ° ಆ ದಿವ್ಯ ಪರಮ ಪರಮ ಪುರುಷನನ್ನೇ ಹೊಂದುತ್ತ°.

ತಾತ್ಪರ್ಯ / ವಿವರಣೆ

ಪರಮೋನ್ನತ ಭಗವಂತನ ಚಿಂತುಸುವ ಪ್ರಕ್ರಿಯೆಯ ಈ ಶ್ಲೋಕಂಗಳಲ್ಲಿ ಹೇಳಿದ್ದು. ಮುಖ್ಯವಾಗಿ ಅವ° ನಿರಾಕಾರನೂ ಅಲ್ಲ, ಶೂನ್ಯನೂ ಅಲ್ಲ. ನಿರಾಕಾರವಾದ್ದರ ಅಥವಾ ಶೂನ್ಯವ ಧ್ಯಾನಿಸುಲೆ ಸಾಧ್ಯ ಇಲ್ಲೆ. ಆದರೆ ಭಗವಂತನ ಧ್ಯಾನಿಸುವದು ಬಹು ಸುಲಭ. ಅದು ಹೇಂಗೆ ಹೇಳಿರೆ – ಸುರುವಿಂಗೆ ಭಗವಂತ° ಒಬ್ಬ ಮಹಾಪುರುಷ° / ಮಹಾನ್ ವ್ಯಕ್ತಿ / ಶಕ್ತಿ. ಮತ್ತೆ ಅವ° ಒಬ್ಬ ಕವಿ – ಅವಂಗೆ ಭೂತ, ವರ್ತಮಾನ, ಭವಿಷ್ಯತ್ ಎಲ್ಲವೂ ಸಮಗ್ರವಾಗಿ ತಿಳಿದ್ದು (ಸರ್ವಜ್ಞ°). ಅವ ಅತೀ ಪುರಾತನ°, ಅವನೇ ಎಲ್ಲವುದರ ಮೂಲ°. ಎಲ್ಲವೂ ಹುಟ್ಟುವದು ಅವಂದಲೇ, ಅವ° ವಿಶ್ವದ ಪರಮ ನಿಯಂತ್ರಕ°, ಪಾಲಕ° ಮತ್ತೆ ಮಾರ್ಗದರ್ಶಕ°. ಮತ್ತೆ, ಅವ° ಅತ್ಯಂತ ಸಣ್ಣವಸ್ತುವಿಂದಲೂ ಸಣ್ಣವ°, ಪರಮಾಣುವನ್ನೂ ಪ್ರವೇಶಿಸಲೆ ಎಡಿಗಪ್ಪವ°, ಅತ್ಯಂತ ಸಣ್ಣ ಜೀವದ ಹೃದಯವನ್ನೂ ಹೊಕ್ಕು ನಿಯಂತ್ರುಸಲೆ ಎಡಿಗಪ್ಪವ°. ಮತ್ತೆ, ಎಲ್ಲ ಗ್ರಹವ್ಯೂಹಂಗೊಕ್ಕೂ ಅವನೇ ಆಧಾರ°. ಬೃಹತ್ ಗಾತ್ರದ ಗ್ರಹಂಗೊ ಅಂತರಿಕ್ಷಲ್ಲಿ ತೇಲಾಡುತ್ತ ಇದ್ದು . ನಮ್ಮ ಕಲ್ಪನಗೆ ಮೀರಿದ (ಅಚಿಂತ್ಯ) ಆ ಭಗವಂತ° ಅದರ ಒಳವೂ ಇದ್ದ°. ಎಲ್ಲವನ್ನೂ ಅವ° ಪಾಲುಸುತ್ತ°.  ಅವ° ಈ ಜಗತ್ತಿನ ಎಲ್ಲ ದಿಕ್ಕೆಯೂ, ಎಲ್ಲ ವಸ್ತುವಿಲ್ಲಿಯೂ ಇದ್ದ°, ಅದರಿಂದಾಚಿಗೆಯೂ ಅವ ಇದ್ದ°. ನಮ್ಮ ವಾದ ತರ್ಕಂಗಳ ಚಿಂತನೆಗೂ ಅಚಿಂತ್ಯರೂಪ° ಅವ° ಹೇಳ್ವದರ ತಿಳ್ಕೊಳ್ಳೆಕು. ಹೀಂಗಿಪ್ಪ ಅಮಿತ ಮಹಿಮನಾದ ಪರಮ ಪುರುಷನಲ್ಲಿ ಭಕ್ತಿಪೂರ್ವಕವಾಗಿ ಮರಣ ಕಾಲಲ್ಲಿ ನಮ್ಮ ಮನಸ್ಸಿನ ನೆಲೆಗೊಳುಸೆಕು. ಯೋಗಸಾಧಕರು ಜೀವಶಕ್ತಿಯ ಎರಡು ಹುಬ್ಭುಗಳ ನೆಡುಕೆ (ಆಜ್ಞಾಚಕ್ರಲ್ಲಿ) ಏರಿಸಿ ನಿಲ್ಲುಸುತ್ತವು. ಸದಾ ಕೃಷ್ಣಪ್ರಜ್ಞೆಲಿಪ್ಪ ಸಾಧಕರು ಸದಾ ಭಗವದ್ ಚಿಂತನೆಲಿದ್ದುಗೊಂಡು ಈ ಸ್ಥಿತಿಯ ಮಾಡಿಗೊಂಡು ಭಗವಂತನ ಸ್ಮರಣೆಲಿ ತೊಡಗುತ್ತವು. ಸದಾ ಈ ರೀತಿ ಕೃಷ್ಣಪ್ರಜ್ಞೆಲಿ ನಿರತನಾಗಿಪ್ಪದರಿಂದ ಮರಣಕಾಲಲ್ಲಿ ದೇವೋತ್ತಮ ಪರಮ ಪುರುಷನ ಕೃಪೆಂದ ಅವನ ಸ್ಮರಣೆಲಿ ಇದ್ದು ಅಕೇರಿಗೆ ಅವನ ದಿವ್ಯ ಧಾಮವ ಸೇರುತ್ತವು.

ಮುಂದೆ ಎಂತರ..?      ಬಪ್ಪವಾರ ನೋಡುವೋ°.

 … ಮುಂದುವರಿತ್ತು

 ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 08 – SHLOKAS 01 – 10 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

3 thoughts on “ಶ್ರೀಮದ್ಭಗವದ್ಗೀತಾ – ಅಥ ಅಷ್ಟಮೋsಧ್ಯಾಯಃ – ಅಕ್ಷರಬ್ರಹ್ಮಯೋಗಃ – ಶ್ಲೋಕಂಗೊ 01 – 10

  1. [ಅವರವರ ಕಾರ್ಯವ ಕರ್ತವ್ಯವ ಅವ್ವವ್ವು ತಪ್ಪದೇ ಪಾಲುಸೆಕು ಅದರೆ ಅದು ಭಗವದ್ ಕೆಲಸ ಹೇಳಿ ಮನಸ್ಸು ಮತ್ತು ಬುದ್ಧಿಲಿ ಜಾಗೃತವಾಗಿರೆಕು.]
    ಆನು ಮಾಡುವ ಎಲ್ಲ ಕೆಲಸವೂ ಅವನೇ ಎನ್ನತ್ರೆ ಮಾಡುಸುತ್ತಾ ಇದ್ದ, ಮತ್ತೆ ಆನು ಮಾಡಿದ ಎಲ್ಲ ಕೆಲಸಂಗಳೂ ಅವಂಗೇ ಅರ್ಪಿತ ಹೇಳಿ ಯಾವದೇ ಕಾರ್ಯ ಮಾಡಿದರೆ ಸಫಲತೆ ಸಿಕ್ಕುಗು ಹೇಳುವ ಮಾತು ಎಲ್ಲರಿಂಗೂ ಎಲ್ಲಾ ಕಾಲಕ್ಕೂ ಅನ್ವಯ ಆವುತ್ತು.
    ಗೀತೆಯ ಸಾರ ಮತ್ತೆ ವ್ಯಾಖ್ಯಾನಂಗಳ ಕೊಡ್ತಾ ಇಪ್ಪ ಚೆನ್ನೈ ಭಾವಯ್ಯಂಗೆ ನಮೋ ನಮಃ

  2. {ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।
    ಮಯ್ಯರ್ಪಿತಮನೋಬುದ್ಧಿಃ ಮಾಮೇವೈಷ್ಯಸ್ಯಸಂಶಯಂ ॥೭॥}
    ಈ ಒಂದು ಶ್ಲೋಕದ ತಾತ್ಪರ್ಯವ ತಿಳ್ಕೊಂಡು ಪಾಲಿಸಿದರೆ ಸಾಕು, ನಮ್ಮ ಪ್ರಸ್ತುತ ಪರಿಸ್ಥಿತಿ ಬದಲಕ್ಕು ಕಾಣುತ್ತು. ‘ಧರ್ಮವ್ಯಾಧನ’ ಕತೆಯ ಉದಾಹರಣೆ ಕೊಟ್ಟು ವಿವರಿಸಿದ್ದು ಈ ಶ್ಲೋಕದ ಅರ್ಥವ ತಿಳ್ಕೊಂಬಲೆ ಸುಲಾಭ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×