- ಶಬ್ದ ಬ್ರಹ್ಮ - June 6, 2015
- ಅಜ್ಜನ ಮನೆ - August 7, 2014
- ಕಾಂಬಿ ಚಿಕ್ಕಮ್ಮನ ಮದ್ದು - July 21, 2014
ಕೋಣೆಯ ಒಳ ಅತ್ತೆ ಮಾವನತ್ತರೆ ಜೋರು ಜೋರಿಲಿ ಪರಂಚುದು ಕೇಳ್ತಾ ಇತ್ತು. ಮೊದಲೇ ಸೆಳ್ಕೊಂಡಿದ್ದ ತಲೆ ಈಗ ಹೊಟ್ಟುವ ಹಾಂಗೆ ಆತು. ರಜ್ಜ ಗಾಳಿಗೆ ಹೆರ ಹೋದರೆ ಸರಿ ಅಕ್ಕು ಹೇಳಿ ಮೆಲ್ಲಂಗೆ ಎದ್ದು ಹೆರ ಬಂದೆ.
ಕೊಟ್ಟಗೆ ಗೋಡೆ ಹಿಡ್ಕೊಂಡು ಗಂಗತ್ತೆ ನಿಂದಿತ್ತು. ಕೈಲಿಪ್ಪ ಹಾಳೆ ಚಿಳ್ಳಿಯ ದುರ್ನಾತ ಮೂಗಿಂಗೆ ಬಡುದತ್ತು.
ಆನೆ ಬೇಗ ಅದರ ಕೈಂದ ಚಿಳ್ಳಿ ತೆಕ್ಕೊಂಡು ದೂರ ಇಡ್ಕಿ ಬಂದೆ. ಸೋಪು ಹಾಕಿ ಕೈ ತೊಳದು ರಜ್ಜ ಮೋರೆಗೂ ನೀರು ಹಾಕಿಕೊಂಡಪ್ಪಗ ರಜ್ಜ ಸಮಾಧಾನ ಆತು.
ಒಳ ಬಪ್ಪಗ ಗಂಗತ್ತೆ ಇನ್ನೂ ಅಲ್ಲಿಯೇ ನಿಂದಿದು. ಮೆಲ್ಲೆ ಅದರ ಕೈ ಹಿಡುದು ಕೊಟ್ಟಗೆಯ ಕೋಣೆಯ ಒಳ ಬಿಟ್ಟಿಕ್ಕಿ ಬಾಗಿಲು ಎರೆಶಿ ಒಳ ಬಂದೆ.
ಅತ್ತೆಯ ಬೊಬ್ಬೆ ಈಗ ಜೋರಾಗಿತ್ತು. ” ನಿಂಗ ಎಂತದೇ ಹೇಳಿ, ಅದರ ಇನ್ನು ಮನೆಲಿ ಮಡಿಕೊಂಬಲೆ ಆನು ಒಪ್ಪುತ್ತಿಲ್ಲೆ. ಮನೆ ಬಿಟ್ಟು ಒಂದು ಗಳಿಗೆ ಎಲ್ಲಿಗೂ ಹೋಪಲೆ ಗೊಂತಿಲ್ಲೆ. ಎನ್ನಂದೆಡಿಯ ಅದರ ಚಾಕರಿ ಮಾಡ್ಲೆ.. ಇನ್ನು ಹದಿನೈದು ದಿನಲ್ಲಿ ತಮ್ಮನ ಮಗನ ಮದುವೆ ಇದ್ದು. ಇಷ್ಟು ಹತ್ತರೆ ಸಂಬಂಧ ಆನು ಒಂದು ವಾರ ಮೊದಲಾದರೂ ಹೋಗಡದ. ನಿಂಗ ಇನ್ನೂ ಎಂತರ ಮೀನ ಮೇಷ ಎಣಿಸಿಕೊಂಡು ಕೂದ್ದು.. ಈಶ್ವರಣ್ಣನ ಹತ್ತರೆ ಹೋಗಿ ಮಾತಾಡಿ ಅವನ ಆಶ್ರಮಕ್ಕಾದರೂ ಹಾಕಿ ಬನ್ನಿ. ಎಷ್ಟು ಸರ್ತಿ ಹೇಳೆಕ್ಕಾನು.. ಇನ್ನು ಎನ್ನಂದೆಡಿಯ ಹೇಳಿರೆ ಎಡಿಯ ..” ಹೇಳಿ ಕೋಪಲ್ಲಿ ಹೇಳುದು ಕೇಳಿತ್ತು.
ಮಾವ ಸಣ್ಣ ಸ್ವರಲ್ಲಿ ” ರಜ ಮೆಲ್ಲಂಗೆ ಮಾತಾಡು ಮಾರಾಯ್ತಿ . ಅದಕ್ಕೆ ನೀನು ಮಾಡಿದ ಸೇವೆಂದ ಅದು ನಿನಗೆ ಮಾಡಿದ್ದೇ ಹೆಚ್ಚು. ಅದರ ಆಶ್ರಮಕ್ಕೆ ಹಾಕುದು ಹೇಳಿರೆ ಊರಿನವು ಇಡೀ ಎನ್ನ ನೋಡಿ ನೆಗೆ ಮಾಡುಗು .. ಇಷ್ಟು ದಿನ ಗೈಶಿದ.. ಈಗ ಕೈಕಾಲು ಬಿದ್ದು ಹೋಪ ಕಾಲಕ್ಕೆ ಕೊಂಡೋಗಿ ಆಶ್ರಮಕ್ಕೆ ತಳ್ಳಿದ ಹೇಳಿ.. ನಿನಗೆಂತ .. ಅದರ ಕೆಲ್ಸ ಮಾಡ್ಲೆ ಸೀತು ಇದ್ದು.. ಹೇಳಿರಾತನ್ನೆ ಅದರತ್ತರೆ.. ನೀನೆಂತರ ಬಾರೀ ಕಡುದು ಅಟ್ಟಿ ವೈಶಿದ್ದು.. ನಿನ್ನ ರಾಮಾಯಣ ದಿನಾ ಕೇಳಿ ಕೇಳಿ ಕೆಮಿ ಹೊಟ್ಟಿತ್ತು ಎನ್ನದು. ಒಂದಾರಿ ಸುಮ್ಮನೆ ಹೋಗು.. ಎನಗೆ ಬೇರೆ ತಲೆಬೆಶಿಗ ಸಾವಿರ ಇದ್ದು.. ಅದು ಇರ್ತು ಪಾಪ ಕೊಟ್ಟಗೆ ಕೋಣೆಲಿ. ಮನೆ ಒಳ ಕೂಡಾ ಬತ್ತಿಲ್ಲೆ. ಎಂತಾ ಅಷ್ಟು ಉಪದ್ರ ಅಪ್ಪದು ನಿನಗೆ..” ಹೇಳಿ ಹೇಳಿದವು.
“ಅಪ್ಪಪ್ಪು .. ಅಷ್ಟು ನಿಂಗಳ ದೂರುವ ಊರಿನವಕ್ಕೆ ಎಂತ ಗೊಂತು ಎಂಗಳ ಕಷ್ಟ. ಹೇಳ್ಳೆ ಸುಲಭ ದೂರಂದ..” ಹೇಳಿ ಇನ್ನಷ್ಟು ಗಂಟಲು ಏರ್ಸಿದವು ಅತ್ತೆ.
“ಆತು ಮಾರಾಯ್ತಿ .. ನಿನ್ನ ಹಠವೇ ನಡೆಯಲಿ. ಆನದರ ಇಲ್ಲಿಂದ ಕರಕ್ಕೊಂಡು ಹೋವ್ತೆ ಆತನ್ನೆ..” ಹೇಳಿ ಮಾವ ಬೈರಾಸು ಕುಡುಗಿ ಎದ್ದಿಕ್ಕಿ ಹೆರ ಹೆರಟವು.ಬಾಗಿಲಿನ ಒಳಂಗೆ ಬತ್ತಾ ಇಪ್ಪ ಎನ್ನ ಕಂಡು, “ಇದಾ ಜಯಂತಿ .. ಆ ಗಂಗತ್ತೆಯ ವಸ್ತ್ರಂಗಳ ರಜ್ಜ ಡೆಟ್ಟಾಲಿಲಿ ಅದ್ದಿ ವಗವಲೆ ಆ ಸೀತು ಹತ್ತರೆ ಹೇಳಾತಾ.. ಆನು ರಜ್ಜ ಈಶ್ವರಣ್ಣನತ್ತರೆ ಮಾತಾಡಿ ಬತ್ತೆ. ಈಗ ಊಟಕ್ಕೆ ವಿಶ್ವ ಬಪ್ಪಗ ಅವನತ್ರೆ ಎಂತ ಹೇಳೆಕ್ಕು ಹೇಳಿ ಇಲ್ಲೆ. ಆನೇ ಮಾತಾಡ್ತೆ ಆತಾ.. ಅವ ಬಂದರೆ ನಿಂಗ ಊಟ ಮಾಡಿ ಎನ್ನ ಕಾಯಡಿ” ಹೇಳಿ ಹೆರ ಹೋದವು.
ಒಳ ಹೋಪಗ ಅತ್ತೆಯ ಮೋರೆಲಿ ಗೆದ್ದ ಖುಶಿ ಇತ್ತು. “ಅಬ್ಬ ಇಂದು ಸಮಾಧಾನ ಆತೆನಗೆ. ಆನು ನಾಳೆಯೇ ಶಂಭು ಮನೆಗೆ ಹೋವ್ತೆ. ನಿಂಗ ಎಲ್ಲ ಮದುವೆ ಮುನ್ನಾಣ ದಿನ ಬಂದರೆ ಸಾಕು..” ಹೇಳಿ ಕೋಣೆಯೊಳ ಹೋದವು ಪುನಾಃ ಬಂದವು. ಗುಟ್ಟಿಲಿ ಎನ್ನತ್ತರೆ, “ಇದಾ ಮೊನ್ನೆ ಮೇಗಾಣ ಮನೆಯೋರು ಗಂಗತ್ತೆಗೆ ಹೇಳಿ ಕೊಟ್ಟ ಸೀರೆಯ ತೆಗದು ಇತ್ಲಾಗಿ ಕೊಡು. ಒಳ್ಳೆ ಪಟ್ಟೆ ಅದು.. ಇನ್ನು ಅದು ಸುತ್ತುಲಿದ್ದಾ.. ಮರ್ಲು ಜೋರಾದರೆ ಆರಿಂಗಾರು ಕೊಟ್ಟು ಕಳೆಗು.. ಹಾಂಗೇ ನಿನ್ನ ದೊಡ್ಡ ಸೂಟ್ ಕೇಸ್ ಕೂಡಾ ಕೊಡು. ಎನ್ನ ಸೀರೆಗಳ ಎಲ್ಲ ಅದರಲ್ಲೇ ತುಂಬಿಸಿಕೊಳ್ತೆ. ಇದಾ.. ಮತ್ತೆ.. ಆ ಸೀತು ಎಲ್ಲಿ ಹೋತು ನೋಡು.. ರಜಾ ಕಣ್ಣು ತಪ್ಪಿರೆ ಸಾಕು ಕೆಲಸ ಬಿಟ್ಟು ಎಲೆ ಅಡಕೆ ಅಗುಕ್ಕೊಂಡು ಕೂರ್ತು. ಹಾಂಗೆ ಆ ಡೆಟ್ಟಾಲ್ ಕುಪ್ಪಿಂದ ರಜ್ಜ ಎರೆಶಿ ಕೊಡು ಅದರತ್ರೆ. ಇಲ್ಲದ್ರೆ ಎಲ್ಲಾ ಸೊರುಗುಗು..” ಹೇಳಿ ಹೇಳಿಕ್ಕಿ ಕೋಣೆಯೊಳ ಹೋದವು.
ಸುಮ್ಮನೆ ತಲೆ ಆಡ್ಸಿ, ಸೀತುಗೆ ಕೆಲಸ ಹೇಳಿ ತೆಂಗಿನ ಮರದ ಕಟ್ಟೆಲಿ ಕೂದೆ.
ಮಾವಂಗೆ ದೂರದ ಸಂಬಂಧ ಆಯೆಕ್ಕಡ ಈ ಗಂಗತ್ತೆ. ಸಣ್ಣ ಇಪ್ಪಗಳೇ ಗೆಂಡ ತೀರಿ ಹೋಗಿ ಅಪ್ಪನ ಮನೆಯವೂ ಎಂತದೋ ಕಾಲೆ ಬಂದು ಒಬ್ಬೊಬ್ಬನಾಗಿ ಸತ್ತ ಮೇಲೆ ಅಲ್ಲಿಲ್ಲಿ ಆರಾರ ಮನೆಲಿ ಕೆಲಸಕ್ಕೆ ಹೋಗಿ ಕೊಂಡಿದ್ದ ಗಂಗತ್ತೆಯ ಮಾವ ಮನೆಗೆ ಕರಕ್ಕೊಂಡು ಬಂದದಡ. ಅತ್ತೆಯ ಬಾಣಂತನ ಕೂಡಾ ಅದುವೇ ಮಾಡಿದ್ದಡ. ಒಂಬತ್ತು ಮಕ್ಕಳ ಹೆತ್ತರೂ ಒಳುದ್ದು ಎರಡೇ.. ಅದು ಗಂಗತ್ತೆಯ ಮದ್ದಿಂದ ಹೇಳಿ ಮಾವ ಹೊಗಳಿರೆ ಅತ್ತೆ ಅದರಿಂದಾಗಿಯೇ ಬಾಕಿ ಮಕ್ಕ ಹೋದ್ದು ಹೇಳಿ ದೂರುಗು.
ಸಪೂರಕ್ಕೆ ಮಡಿ ಕೋಲಿಂಗೆ ಸೀರೆ ಸುತ್ಸಿದ ಹಾಂಗಿಪ್ಪ ಶರೀರ ಆದರೂ ಕೆಲಸಲ್ಲಿ ಗಟ್ಟಿಗಿತ್ತಿ ಅದು..ಎಲ್ಲಾ ಕೆಲಸ ಅದುವೇ ಮಾಡುಗು. ಅತ್ತೆಯ ತೋರ ಶರೀರ, ಆಗಾಗ ಬಾಧೆ ಕೊಡುವ ನೇವಸ.. ಇದು ಅತ್ತೆಗೆ ಕೆಲ್ಸ ಮಾಡದ್ದಿಪ್ಪಲೆ ಸಕಾರಣವಾಗಿತ್ತು. ಆರಾರು ಈ ಸುದ್ಧಿ ಮಾತಾಡಿರೆ ಸಾಕು. “ಎಲ್ಲ ಕೆಲಸ ಆನೇ ಮಾಡಿರೆ ಅದಕ್ಕೆ ಅಶನ ಹಾಕುದೆಂತಕೆ” ಹೇಳಿ ಕೊಕ್ಕೆ ಹೇಳುಗು ಅವು..
ಆನು ಈ ಮನೆಯ ಸೊಸೆಯಾಗಿ ಬಂದವಳೇ ಮೆಲ್ಲಂಗೆ ಅಡುಗೆ ಮನೆ ಕೆಲಸ ವಹಿಸಿಕೊಂಡೆ. ಈಗಾಣ ಹೊಸ ರೀತಿಯ ಅಡುಗೆ ಎಲ್ಲೊರಿಂಗೂ ಇಷ್ಟ ಆಗಿಕೊಂಡಿತ್ತು. ಮಾವ ಒಂದೊಂದರಿ ತಮಾಷೆಗೆ “ಗಂಗತ್ತೆ ನಿನ್ನ ಅದೇ ಕೊದಿಲು, ಮೇಲಾರ ಉಂಡು ಉಂಡು ನಾಲಗೆ ರುಚಿ ಎಲ್ಲ ಸತ್ತಿತ್ತು. ಈಗ ಜಯಂತಿ ಅಡುಗೆ ಉಂಡ ಮೇಲೆ ರಜ್ಜ ರುಚಿ ಅಪ್ಪಲೆ ಸುರು ಆದು” ಹೇಳಿ ನೆಗೆ ಮಾಡಿಕೊಂಡಿತ್ತಿದ್ದವು. ಅತ್ತೆ ಎಂತಾರು ಹೆಚ್ಚು ಕಮ್ಮಿ ಆದರೆ ಬೊಬ್ಬೆ ಹಾಕುಗಲ್ಲದೇ ಒಂದು ದಿನವೂ ಸಹಾಯ ಮಾಡ. ಎನಗೆ ಇದರ ಕೇಳಿ ಬೇಜಾರಾದರೆ ಆಗೆಲ್ಲ ಗಂಗತ್ತೆಯೇ ” ಬೇಜಾರು ಮಾಡಡ ಕೂಸೇ.. ಅದರ ಸ್ವಭಾವ ಅದು.. ಸುಮ್ಮನೆ ಪರಂಚುದು ಅಷ್ಟೇ.. ಮನಸ್ಸಿಲಿರ ಅದಕ್ಕೆ ..” ಹೇಳಿ ಅತ್ತೆಯ ಬಗ್ಗೆ ಎನಗೆ ಕೆಟ್ಟ ಅಭಿಪ್ರಾಯ ಬಾರದ್ದ ಹಾಂಗೆ ಹೇಳುಗು.
ಇವು ಇಲ್ಲೇ ಹತ್ತರಾಣ ಬ್ಯಾಂಕಿಲಿ ಕೆಲಸ ಮಾಡುದು. ತೋಟದ ಉಸ್ತುವಾರಿ ಮಾವಂದು ಹೇಳಿ ಲೆಕ್ಕ. ಆದರೆ ಒಂದು ದಿನವೂ ಪುರುಸೊತ್ತಿಲ್ಲದ ಮಾವನ ಹೆರಾಣ ಕೆಲಸಗಳಿಂದಾಗಿ ಆ ಎಲ್ಲಾ ಜವಾಬ್ಧಾರಿಯೂ ಗಂಗತ್ತೆದೇ ಆಗಿತ್ತು. ಮೈದುನ ಪೇಟೆಲಿ ಹಾಸ್ಟೆಲ್ಲಿಲಿ ಇದ್ದುಕೊಂಡು ಕಾಲೇಜಿಂಗೆ ಹೋವ್ತ.
ಗಂಗತ್ತೆ ಊರಿಲಿ ಎಲ್ಲೊರಿಂಗೂ ಬೇಕಾದ ಜನ. ಪಾಪದ್ದು ಹೇಳಿ ಅಲ್ಲ. ಅದಕ್ಕೆ ಹಳ್ಳಿ ಮದ್ದು ಎಲ್ಲಾ ಗೊಂತಿತ್ತು. ಊರಿಲಿ ಆರಿಂಗೇ ಉಷಾರಿಲ್ಲದ್ದರೂ ಮೊದಲು ಬಪ್ಪದು ಗಂಗತ್ತೆಯ ಹತ್ತರೆ. ಒಂದು ಕತ್ತಿ ಹಿಡುದು ತೋಟಕ್ಕೆ ಹೋತು ಹೇಳಿ ಆದರೆ ಎರಡಾಳು ಹೊರುವಷ್ಟು ದೊಡ್ಡ ಹುಲ್ಲಿನ ಕಟ್ಟ. ಒಟ್ಟಿಂಗೆ ಮದ್ದಿನ ಸೊಪ್ಪು ಬೇರು ನಾರು ಹೀಂಗೆ ಎಂತಾರು ಹೊತ್ತುಕೊಂಡು ಬಕ್ಕು.
ಕೆದೆಲಿಪ್ಪ ಜಾನುವಾರುಗೊಕ್ಕೆಲ್ಲಾ ಒಂದೊಂದು ಹೆಸರು. ಆ ಹೆಸರು ದಿನಿಗೇಳಿಯೇ ಅವಕ್ಕೆ ಹುಲ್ಲು ಹಾಕುಗು ಗಂಗತ್ತೆ. ಒಟ್ಟಿಂಗೊಂದು ಎಲ್ಲಿಂದಲೋ ಬಂದ ಕಾಟು ನಾಯಿ ಕಾಳು.ಅದಕ್ಕೆ ಗಂಗತ್ತೆ ಎರಡು ದಿನ ಅಶನ ಹಾಕಿದ್ದೇ ಹಾಕಿದ್ದು ಅದೀಗ ಗಂಗತ್ತೆಯ ಬೀಲದ ಹಾಂಗೆ ಅವು ಎಲ್ಲಿ ಹೆರಟರೂ ಒಟ್ಟಿಂಗೆ ಹೋಕ್ಕು. ಅತ್ತೆಗೆ ಮಾತ್ರ ಆ ನಾಯಿ ಕಂಡರಾಗ. ಕಣ್ಣಿಂಗೆ ವರಕ್ಕು ಹಿಡಿವಗ ಕೊರದು ಏಳ್ಸುತ್ತು ಮಾರಿ ಹೇಳಿ ಬೈಗದಕ್ಕೆ.
‘ಅತ್ತೆಗೆಂತಕೆ ಗಂಗತ್ತೆಯತ್ತರೆ ಅಷ್ಟು ಕೋಪ’ ಹೇಳಿ ಆನು ಇವರತ್ತರೆ ಕೇಳಿದ್ದಕ್ಕೆ, “ಗಂಗತ್ತೆಯ ಕೋಣೆಲಿ ದೊಡ್ಡ ಕಬ್ಬಿಣದ ಟ್ರಂಕು ಇದ್ದು ನೋಡಿದ್ದೆಯಾ.. ಎನ್ನಮ್ಮ ಮದುವೆಯಾದ ಸುರುವಿಲಿ ಒಂದು ದಿನ ಗಂಗತ್ತೆ ಹೆರ ಕೆಲಸಲ್ಲಿಪ್ಪಗ ಆ ಟ್ರಂಕಿನ ಬೀಗ ತೆಗದು ಒಳ ನಿಲ್ಕಿಕೊಂಡಿತ್ತಡ. ಎಂತಾರು ಚಿನ್ನ ಗಿನ್ನ ಇದ್ದಾ ಹೇಳಿ. ಅಷ್ಟಪ್ಪಗ ಒಳ ಬಂದ ಗಂಗತ್ತೆ, ‘ಸಾವಿತ್ರಿ ನೀನು ಎನ್ನ ಟ್ರಂಕಿನ ಸುದ್ಧಿಗೊಂದು ಬರಡ. ನಿನಗೆ ಬೇಕಪ್ಪದು ಅದರಲ್ಲಿ ಎಂತದೂ ಇಲ್ಲೆ’ ಹೇಳಿತ್ತಡ. ಅದಕ್ಕೆ ಅಮ್ಮಂಗೆ ಮರ್ಯಾದಿ ಹೋದ ಹಾಂಗೆ ಆಗಿ ಆ ಕೋಪ ಹಾಂಗೇ ಬೆಳಕ್ಕೊಂಡು ಬಂದದು” ಹೇಳಿ ಹೇಳಿತ್ತಿದ್ದವು.
“ಅದು ಸರಿ ಎಂತ ಇದ್ದು ಆ ಟ್ರಂಕಿಲಿ” ಹೇಳಿ ಆನುದೇ ಕುತೂಹಲಲ್ಲಿ ಕೇಳಿದೆ. ಅದಕ್ಕಿವು “ಗೊಂತಿಲ್ಲೆ ಜಯಂತಿ.. ಎಂತದೇ ಇದ್ದರೂ ಅದು ಗಂಗತ್ತೆಯ ಸ್ವತ್ತು. ಅದರ ಬಗ್ಗೆ ಮಾತಾಡುದು ಬೇಡ..” ಹೇಳಿ ಖಡಾಖಂಡಿತವಾಗಿ ಹೇಳಿತ್ತಿದ್ದವು.
ಹೋ.. ಎನಗೆಂತಾದು ಇಂದು ಹಳೇ ಕಥೆ ನೆಂಪು ಮಾಡಿಕೊಂಡು ಹೊತ್ತು ಹೋದ್ದೇ ಗೊಂತಾದಿಲ್ಲೆ. ಮನೆ ಕಡೆಗೆ ಹೆಜ್ಜೆ ಹಾಕಿ ಗಡಿಯಾರ ನೋಡಿರೆ ಇವು ಉಂಬಲೆ ಬಪ್ಪಲೆ ಇನ್ನೂ ಹೊತ್ತಿತ್ತು. ಕೈಲೊಂದು ಕಥೆ ಪುಸ್ತಕ ಹಿಡ್ಕೊಂಡು ರೂಮಿಲಿ ಮಂಚದ ಮೇಲೆ ಬಿದ್ದುಕೊಂಡರೂ ಒಂದಕ್ಷರ ತಲೆಗೆ ಹೋದಿಲ್ಲೆ. ಮತ್ತೆ ಗಂಗತ್ತೆಯೇ ತಲೆ ಒಳ.. ಹಳೆಯ ಯಕ್ಷಗಾನದ ಪದ್ಯಂಗೆಲ್ಲ ಅದಕ್ಕೆ ಬಾಯಿ ಪಾಠ. ಇಡೀ ದಿನ ಕೀರಿಕುಟ್ಟಿಕೊಂಡು ಹೇಳಿಕೊಂಡೇ ಇಕ್ಕು. ಆರೋ ಒಬ್ಬ ಬಂದು ಒಂದಿಡೀ ಯಕ್ಷಗಾನದ ಪದ್ಯಂಗಳ ಗಂಗತ್ತೆಯತ್ತರೆ ಹೇಳ್ಸಿ ಬರಕ್ಕೊಂಡು ಹೋಗಿ ಪುಸ್ತಕ ಮಾಡಿತ್ತಿದ್ದವಡ. ಆಗಾಣ ಕಾಲಲ್ಲಿ ಅತ್ತೆಯ ಕೈಗೆ ಐವತ್ತು ರುಪಾಯಿ , ಒಂದು ಸೀರೆ ಕೊಟ್ಟಿತ್ತಿದ್ದವಡ.
ಅದೇ ಗಂಗತ್ತೆ ಈಗ ಹಾಸಿಗೆ ಹಿಡುದ್ದು. ಅದರ ಸ್ಥಿತಿ ಯಾವ ಶತ್ರುವಿಂಗೂ ಬೇಡಪ್ಪ. ನೆನಪಿನ ಶಕ್ತಿಯೇ ಇಲ್ಲೆ. ಅರುಳೋ ಮರುಳೋ ಹೇಳಿ ಆಗಾಗ ಎಂತಾರು ಮಾತಾಡುದು, ಕೂಗುದು, ಮಾತಾಡ್ಸಿರೆ ಎಲ್ಲಿಯೋ ನೋಡಿ ಆರಿಂಗೋ ಪರಂಚಿದ ಹಾಂಗೇ ಸಣ್ಣಕ್ಕೆ ಎಂತಾರು ಹೇಳುದು.. ಈ ಲೋಕದ ವ್ಯವಹಾರಂದ ತುಂಬಾ ದೂರ ಹೋಯಿದದು. ಉಂಡರೆ ಉಂಡತ್ತು ಇಲ್ಲದ್ದರೆ ಇಲ್ಲೆ.ಒತ್ತಾಯ ಮಾಡಿ ತಿನ್ಸುಲೆ ಹೆರಟರೆ ‘ಹೊಯಿಗೆ ಹಾಕುತ್ತೆಯಾ ಎನ್ನ ಬಾಯಿಗೆ’ ಹೇಳಿ ಬೈಗು. ಅದರ ಅವಸ್ಥೆ ಗ್ರೇಶಿರೆ ಕಣ್ಣಿಲಿ ನೀರು ಬತ್ತು.
ಹೆರಂದ ಮಾವನ ಸ್ವರ ಕೇಳಿತ್ತು. ಊಟಕ್ಕೆ ಬತ್ತಿಲ್ಲೆ ಹೇಳಿ ಹೋದವು ಇಷ್ಟು ಬೇಗ ಬಂದವಾ ಹೇಳಿ ಎದ್ದು ಬಂದೆ. ಒಟ್ಟಿಂಗೆ ಇವುದೇ ಇತ್ತಿದ್ದವು. ಎಲ್ಲೊರ ಗಂಭೀರ ಮೋರೆ ನೋಡಿ ಆನು ಮೆಲ್ಲ ಅಡುಗೆ ಮನೆಗೆ ಹೋದೆ ಬಾಳೆಲೆ ಮಡುಗುಲೆ. ಊಟ ಮುಗಿಯುವವರೆಗೆ ಆರೂ ಮಾತೇ ಆಡಿದ್ದವಿಲ್ಲೆ. ಎಲ್ಲಾ ಉಂಡಿಕ್ಕಿ ಹೆರ ಹೋದ ಮೇಲೆ ಇವು ಹೇಳಿದವು ಎನ್ನತ್ತರೆ ” ಜಯಂತಿ.. ಆರು ಹೇಳಿರೂ ಆನು ಗಂಗತ್ತೆಯ ಇಲ್ಲಿಂದ ಎಲ್ಲಿಗೂ ಕಳ್ಸುತ್ತಿಲ್ಲೆ.. ಪಾಪ ಗಂಗತ್ತೆ ತೀರಾ ಕಂಗಾಲಾದು.. ಇನ್ನೆಷ್ಟು ದಿನ ಇರ್ತೋ ಏನೋ..ಅಲ್ಲಿಯವರೆಗೆ ನೀನು ಅದರ ಚೆಂದಕ್ಕೆ ನೋಡಿಕೊಳ್ಳೆಕ್ಕಾತ..ನಿನಗೆ ಕಷ್ಟ ಆವ್ತರೆ ಹೇಳು.. ಇನ್ನಾರಾದರೂ ಕೆಲಸಕ್ಕೆ ಸಿಕ್ಕುತ್ತವೋ ನೋಡುವ..”
ಅಷ್ಟಪ್ಪಗ ಇವರ ಮಾತು ಕೇಳಿದ ಅತ್ತೆ.. ” ವಿಶ್ವಾ ನೀನು ಸುಮ್ಮನೆ ಅದರ ತಲೆ ಹಾಳು ಮಾಡಡ. ಅದಕ್ಕೀಗ ಆರು ತಿಂಗಳಾತು. ಇನ್ನು ಆ ಗಂಗತ್ತೆಯ ಚಾಕ್ರಿ ಮಾಡಿ ಎಂತಾರು ಅಪ್ಪದು ಬೇಡ. ಅಪ್ಪಂದೇ ಒಪ್ಪಿದ್ದವು. ಒಂದರಿ ಕರಕ್ಕೊಂಡು ಹೋಗಿ ಎಲ್ಲಿಯಾದರೂ ಬಿಡಿ ಅದರ.. ಎಂತ ಮಾಟ ಮಾಡಿದ್ದೋ ಅದು ಈ ಮನೆಯವಕ್ಕೆ ,, ಎನ್ನ ಮಾತು ಹೇಳಿರೆ ಎಲ್ಲೊರಿಂಗೂ ಸಸಾರ..” ಹೇಳಿ ಮುಸು ಮುಸು ಮಾಡಿದವು.
ಇವು ಮಾತಾಡದ್ದೆ ಗಂಗತ್ತೆಯ ರೂಮಿನ ಕಡೆಗೆ ನಡದವು. ಮಾವಂದೇ, ಈಶ್ವರ ಮಾವಂದೇ, ಪಡಸಾಲೆಲಿ ಎಲೆ ಅಡಕ್ಕೆ ಹಾಕಿಕೊಂಡಿತ್ತಿದ್ದವು. ” ಅಪ್ಪಾ, ಮಾವಾ, ಬನ್ನಿ ಇಲ್ಲಿ” ಹೇಳಿ ಇವರ ದೊಡ್ಡ ಬೊಬ್ಬೆ ಕೇಳಿತ್ತು. ಎಲ್ಲರೂ ಓಡಿದೆಯ ಅಲ್ಲಿಗೆ. ಗಂಗತ್ತೆ ಬಾಗಿಲಿನ ಬುಡಲ್ಲೇ ವರಗಿದ ಹಾಂಗೆ ಇತ್ತು. ಮೈ ಆಗಲೇ ತಣ್ಣಂಗಪ್ಪಲೆ ಸುರು ಆದು. ಈಶ್ವರ ಮಾವ ತಿರುಗಿ ” ಕಳುತ್ತು ಗಂಗತ್ತೆಯ ದಿನ, ಮುಂದಾಣ ವ್ಯವಸ್ಥೆ ಮಾಡುವ” ಹೇಳಿ ಹೇಳಿದವು.
ಅತ್ತೆ ಅಷ್ಟಪ್ಪಗ ಎನ್ನತ್ತರೆ ” ಇಲ್ಲಿಯೇ ಸಾಯೆಕ್ಕಾತ ಇದಕ್ಕೆ, ಆನಿನ್ನು ತಮ್ಮನಲ್ಲಿಗೆ ಹೋಪದು ಹೇಂಗೆ ಮದುವೆ ಗೌಜಿ ಹೇಳಿ ಆನು ಖುಶಿ ಪಡುದು ಕೂಡಾ ಇಷ್ಟ ಆದಿಲ್ಲೆ ನೋಡದಕ್ಕೆ, ಸಾವಗಳೂ ಉಪದ್ರ ಮಾಡಿಯೇ ಸತ್ತತ್ತು” ಹೇಳಿ ಸುರು ಮಾಡಿದವು.
ಅದರ ಕೇಳಿದ ಮಾವ ” ಒಂದಾರಿ ನಿನ್ನ ದೊಂಡೆ ನಿಲ್ಸುತ್ತೆಯಾ ಸಾವಿತ್ರಿ, ಸತ್ತದರ ಮೇಲೆ ನಿನಗೆಂತಕೆ ಇನ್ನೂ ಕೋಪ” ಹೇಳಿ ಬಯ್ದವು.
ಅಷ್ಟಪ್ಪಗ ಇವು ” ಅಪ್ಪ ಈಗ ಕೂಡ್ಲೆ ಆಸ್ಪತ್ರೆಗೆ ಫೋನ್ ಮಾಡಿ ಡಾಕ್ಟರರ ಬಪ್ಪಲೆ ಹೇಳೆಕ್ಕು. ಗಂಗತ್ತೆ ಒಂದು ವರ್ಷದ ಮೊದಲೇ ಇಲ್ಲಿಗೆ ನಮ್ಮ ಸ್ವಾಮಿ ಗ ಬಂದಿಪ್ಪಗ ಕಣ್ಣು ದಾನ ಕೊಡ್ತೆ ಹೇಳಿ ಬರದು ಕೊಟ್ಟದು ನಿಂಗೊಗೂ ಗೊಂತಿದ್ದನ್ನೆ. ಹಾಂಗೇ ಈಗ ನಾಲ್ಕು ತಿಂಗಳ ಹಿಂದೆ ಅದು, ಆನು ಸತ್ತರೆ ಎನ್ನ ಸುಡುದು ಬೇಡ, ಆಸ್ಪತ್ರೆಗೆ ಶರೀರ ದಾನ ಮಾಡೆಕ್ಕು. ಸುಮ್ಮನೇ ಮಣ್ಣಿಂಗೆ ಹೋಪ ಈ ಶರೀರ ಆರಿಂಗಾರು ಉಪಯೋಗ ಅಕ್ಕನ್ನೇ.. ಮತ್ತೆ ಎನ್ನ ಬೊಜ್ಜ ಗಿಜ್ಜ ಎಲ್ಲಾ ಮಾಡುದು ಬೇಡ. ಎನ್ನದು ಹೇಳಿ ರಜ್ಜ ಪೈಸೆ ಇದ್ದು ಅದರ ಶಾಲೆಯ ಬಡ ಮಕ್ಕೊಗೆ ಉಪಯೋಗ ಅಪ್ಪಾಂಗೆ ಎಂತಾರು ಮಾಡೆಕ್ಕು ಮಗಾ, ಈಗ ಆರಿಂಗೂ ಇದರ ಹೇಳಡ. ಆನು ಸತ್ತ ಮೇಲೆ ಈ ಮಾತಿನ ನೀನು ನಡೆಶಿ ಕೊಡೆಕ್ಕು ಹೇಳಿ ಹೇಳಿದ್ದು” ಹೇಳಿದವು.
ಮಾವ ” ಅಯ್ಯೋ ಪರಮಾತ್ಮಾ ಎನ್ನ ಅಬ್ಬೆಯ ಹಾಂಗಿದ್ದ ಅದರ ಬೊಜ್ಜ ಮಾಡದ್ದೇ ಕೂಪ ಯೋಗವ ಎನಗೆ.. ಆತು..ದೊಡ್ಡ ಜೀವ ಅದು.. ಅದರ ಇಷ್ಟದ ಹಾಂಗೇ ಆಗಲಿ ವಿಶ್ವಾ.. ಅದರ ದೊಡ್ಡ ಮನಸ್ಸು ನಮಗೆ ಬಾರ..” ಹೇಳಿ ಕಣ್ಣೀರು ಹಾಕಿದವು.
ಇದೆಲ್ಲ ಕಳುದು ಈಗ ತಿಂಗಳುಗಳೇ ಉರುಳಿದ್ದು. ಎನ್ನ ಪುಟ್ಟ ಮಗಳು ಗಂಗೆ ಬೊಕ್ಕು ಬಾಯಿಲಿ ನೆಗೆ ಮಾಡುಲೆ ಸುರು ಮಾಡಿದ್ದು. ಗಂಗತ್ತೆಯ ಕೊಟ್ಟಗೆ ಕೋಣೆ ಎನ್ನ ಲೈಬ್ರೆರಿ ಆದು.ಈಗ ಅಲ್ಲಿಪ್ಪ ಅದರ ಫೊಟೋಕ್ಕೆ ಅತ್ತೆಯುದೇ ದೇವರಿಂಗೆ ಮಡುಗಿದ ಹಾಂಗೆ ಹೂಗು ತಂದು ಮಡುಗುತ್ತವು. ಗಂಗತ್ತೆಯ ಕಬ್ಬಿಣದ ಟ್ರಂಕು ಈಗ ತೆಗದ್ದು. ಮೋಡಿ ಅಕ್ಷರಲ್ಲಿ ಬರದ ಹಳ್ಳಿ ಮದ್ದಿನ ಬಗ್ಗೆ ತುಂಬಾ ವಿವರ ಇಪ್ಪ ಪುಸ್ತಕಂಗಳ ರಾಶಿ ಮಾತ್ರ ಇದ್ದದ್ದದರಲ್ಲಿ . ನಿನಗೆಡಿಗಾರೆ ಅದರ ಹೊಸತ್ತಾಗಿ ಚೆಂದಕ್ಕೆ ಬರೆ. ಅದರ ಪ್ರಿಂಟ್ ಹಾಕ್ಸಿರೆ ತುಂಬಾ ಜನಕ್ಕೆ ಉಪಕಾರ ಅಕ್ಕು. ಗಂಗತ್ತೆ ಹೆಸರಿಲಿ ಅಷ್ಟಾದರೂ ಇರಲಿ ಹೇಳಿ ಹೇಳಿದ್ದವು.
ಇನ್ನು ಮಗಳು ರಜ್ಜ ದೊಡ್ಡ ಆದ ಮೇಲೆ ಆ ಕೆಲಸ ಸುರು ಮಾಡೆಕ್ಕು.
~*~*~
ಕಥೆ ತುಂಬಾ ಇಷ್ಟ ಆತು. ಇಂತಾ ಅಜ್ಜಿಯಕ್ಕೊಗೆ ಅವು ಇಪ್ಪಗಳೇ ‘ಅಜ್ಜಿ ಮದ್ದುಗೋ’ ಪ್ರಿಂಟ್ ಆಗಿ ನಾಕು ಜೆನ ಉಪಕಾರ ಆತು ಹೇಳಿ ಹೇಳುವ ಹಾಂಗೆ ಆದರೆ ಅದೆಷ್ಟು ನೆಮ್ಮದಿಯ ಅನುಭವಿಸುಗು ಆ ಚೆತನಂಗೋ. ನಾವು ಪುಲ್ಳಿಯಕ್ಕ ಎಲ್ಲ ಸೇರಿ ನಮ್ಮ ಕೈಲಾದ ಪ್ರಯತ್ನ ಮಾಡುವ. ಅನಿತಕ್ಕನ ಕಥೆಗೆ ಅಭಿನಂದನೆಗೋ. ಹರೇ ರಾಮ…
ಕತೆ ಲಾಯಿಕ ಇದ್ದು.ಸಮಾಜಲ್ಲಿ ಇಂತಾ ಅಜ್ಜಿಯಕ್ಕೊ ತುಂಬಾ ಇದ್ದವು.ನೈಜ ನಿರೂಪಣೆ.
ಅನಿತಾ ಅಕ್ಕಾ, ನಿಂಗಳ ‘ಮಹತಿ’ ಬ್ಲಾಗ್ ಯಾವಾಗಳೂ ಓದುತ್ತ ಇರ್ತೆ, ಎನಗೆ ತುಂಬಾ ಖುಶಿ ನಿಂಗೊ ಬರವ ಲೇಖನಂಗೊ.
ಈಗ ‘ಒಪ್ಪಣ್ಣ’ ಬೈಲಿಲ್ಲಿ ಬಂದ ನಿಂಗಳ ಕತೆದೆ ಲಾಯಿಕ ಇದ್ದು.
ಆದರೆ ‘ಮಹತಿ’ಲಿ ಇಪ್ಪ ಕತೆಗಳಿಂದ ಬೇರೆ ನಮುದೆ ಇದ್ದು ಇದು..
ಗಂಗತ್ತೆ ಬಗ್ಗೆ ಓದಿ ಬೇಜಾರ ಆತು.
ಇನ್ನೂ ಹೀಂಗೆ ಕತೆಗೊ ಬತ್ತ ಇರಳಿ.
ವ್ಯಥೆಯ ಕಥೆ ಆದರುದೇ ಅದರ ಹೆಣೆದ ರೀತಿಯೂ, ಭಾಷೆಯೂ ಭಾರೀ ಲಾಯ್ಕಾಯಿದು. ಎಂಗಳ ಭಾಷೆಲಿ ಬರ್ದದ್ದಕ್ಕೆ ಅಭಿನಂದನೆಗೊ.. ಸರಾಗ ಬರ್ಕೊಂಡಿರೆಕ್ಕಾತಾ..ನಿಲ್ಸುಲಾಗ..:)
Kathe Layaka iddu. Elloru yochisekkada vishaya vivarisidhi
ಗಂಗತ್ತೆಯ ಕೊನೆ ಕ್ಷಣಂಗಳ ನೆನೆಸಿ ತುಂಬಾ ಬೇಜಾರು ಆತು. ವಿಲನ್ ರೂಪದ ಜಯಂತಿಯ ಅತ್ತಗೆ, ತನಗೂ ಹಾಂಗೆ ಪ್ರಾಯ ಆಗಿ ಅಜ್ಜಿ ಅಪ್ಪಲೆ ಇದ್ದು ಹೇಳಿ ಮರದು ಹೋತೋ ಹೇಳಿ. ಗಂಗತ್ತೆಯ ಗತಿ ಅತ್ತೆಗೆ ಬಪ್ಪಲೆ ಜಯಂತಿ ಬಿಡ. ಅನಿತಕ್ಕ ಬರದ ಕಥೆ ಒಂದು ನೈಜ ಘಟನೆ ಹಾಂಗೆ ಇದ್ದು. ಲಾಯಕಿದ್ದು.
ಒಳ್ಳೆ ಆಶಯದ ಕತೆ. ನಿರೂಪಣೆ ಲಾಯಿಕ ಆಯಿದು.
ಕೈ ಕಾಲು ಗಟ್ಟಿಇಪ್ಪಗ ಬೇಕಾಷ್ಟು ಸೇವೆ ಮಾಡಿಸಿ, ಕೈ ಕಾಲು ಬಿದ್ದಪ್ಪಗ ವೃಧ್ಹಾಶ್ರಮಕ್ಕೆ ಸೇರುಸುವದು ಸಮಾಜದ ದೊಡ್ಡ ದುರಂತ.
ಓಳ್ಳೆ ನಿರೂಪಣೆ. ಅಭಿನಂದನೆಗೊ.
ನಿಂಗಳ ಲಘು ಬರಹಂಗಳ ಸಂಕಲನ “ಬಣ್ಣದ ಕಡ್ಡಿ” ಬಿಡುಗಡೆಗೊಳಿಸಿದ್ದು ಸಂತೋಷದ ವಿಷಯ. ಇನ್ನೂ, ಇನ್ನೂ ಪುಸ್ತಕಂಗ ಹೆರ ಬರಲಿ. ನಿಂಗಳ ಹವಿ ಕನ್ನಡದ ಪುಸ್ತಕವೂ ಶೀಘ್ರಲ್ಲಿ ಹೆರ ಬರಲಿ.
ಈ ಗಂಗತ್ತೆಯ ಸಾವಿತ್ರಿ ಅತ್ತೆಯ ಎಲ್ಯೋ ನೋಡಿದಾಂಗೆ ಆವ್ತನ್ನೇ..!! (ಉಮ್ಮ., ಎಲ್ಯೋ ಇರ್ಲಿ ಬಿಡಿ., ಸಮಾಜಲ್ಲಿ ಕಂಡ ಎರಡು ವ್ಯಕ್ತಿತ್ವಂಗೊ ಹೇದು ಮಡಿಕ್ಕೊಂಬ).
ಅಕ್ಷರದ ಮೂಲಕ ಕತೆಯ ಆಶಯ ದೃಶ್ಯಾವಳಿಯ ಹಾಂಗೆ ಪ್ರತಿಬಿಂಬಿತವಾಯ್ದು. ನಿರೂಪಣೆ ಲಾಯಕ ಆಯ್ದು. ಅಭಿನಂದನೆಗೊ. ಬೈಲಿಂಗೆ ಬಂದುಗೊಂಡಿರಿ, ಬರಕ್ಕೊಂಡಿರಿ.
ಇದರ ಓದಿ ನಮ್ಮ ಹಳೇ ಅಜ್ಜಿಯಕ್ಕಳ ನೆಂಪಾತು ….