Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 13 – 24

ಬರದೋರು :   ಚೆನ್ನೈ ಬಾವ°    on   11/04/2013    3 ಒಪ್ಪಂಗೊ

ಚೆನ್ನೈ ಬಾವ°

ಹಿಂದಾಣ ಭಾಗಲ್ಲಿ ಭಗವಂತ° ದೈವೀಕ ಗುಣಲಕ್ಷಣ ಮತ್ತೆ ಅದರ ಪ್ರಭಾವ ಹೇಳಿಕ್ಕಿ ಮತ್ತೆ ಆಸುರೀ ಸ್ವಭಾವದ ಗುಣಲಕ್ಷಣಂಗಳ ವಿವರಿಸಿಗೊಂಡಿಪ್ಪದ್ದರ ನೋಡಿದ್ದು. ಆಸುರೀ ಸ್ವಭಾವದೋರು ದೈವೀಕ ಶಕ್ತಿಯ ನಂಬದ್ದೆ, ಒಪ್ಪದ್ದೆ ಶಾಸ್ತ್ರವಿಚಾರಂಗಳ ತನಗೆ ಬೇಕಾದಾಂಗೆ ತಿರುಚಿಹಾಕ್ಯೊಂಡು ವ್ಯಾಖ್ಯಾನಿಸಿ ತಮ್ಮ ಇಷ್ಟವ ತೀರಿಸಿಗೊಂಬಲೆ ಸ್ವೇಚ್ಛಾತನ್ಮಯರಾಗಿ ತಮ್ಮ ಅಧೋಗತಿಗೆ ತಾವೇ ಕಾರಣರಾವ್ತವು ಹೇಳಿ ಭಗವಂತ° ಹೇಳಿದ್ದ°. ಮುಂದೆ –

ಶ್ರೀಮದ್ಭಗವದ್ಗೀತಾ – ಷೋಡಶೋsಧ್ಯಾಯಃ – ದೈವಾಸುರಸಂಪದ್ವಿಭಾಗಯೋಗಃ  – ಶ್ಲೋಕಾಃ 13 – 24

 

ಶ್ಲೋಕ

ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥೧೩॥

ಅಸೌ ಮಯಾ ಹತಃ ಶತ್ರುಃ ಹನಿಷ್ಯೇಚಾಪರಾನಪಿ ।BHAGAVADGEETHA
ಈಶ್ವರೋsಹಮಹಂ ಭೋಗೀ ಸಿದ್ಧೋsಹಂ ಬಲವಾನ್ಸುಖೀ ॥೧೪॥

ಆಢ್ಯೋsಯೋsಭಿಜನವಾನಸ್ಮಿ ಕೋsನ್ಯೋsಸ್ತಿ ಸದೃಶೋ ಮಯಾ ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತ್ಯಜ್ಞಾನವಿಮೋಹಿತಾಃ ॥೧೫॥ 

ಪದವಿಭಾಗ

ಇದಮ್ ಅದ್ಯ ಮಯಾ ಲಬ್ಧಮ್ ಇಮಮ್ ಪ್ರಾಪ್ಸ್ಯೇ ಮನೋರಥಮ್ । ಇದಮ್ ಅಸ್ತಿ ಇದಮ್ ಅಪಿ ಮೇ ಭವಿಷ್ಯತಿ ಪುನಃ ಧನಮ್ ॥

ಅಸೌ ಮಯಾ ಹತಃ ಶತ್ರುಃ ಹನಿಷ್ಯೇ ಚ ಅಪರಾನ್ ಅಪಿ । ಈಶ್ವರಃ ಅಹಮ್ ಭೋಗೀ ಅಹಮ್ ಸಿದ್ಧಃ ಅಹಮ್ ಬಲವಾನ್ ಸುಖೀ ॥

ಆಢ್ಯಃ ಅಭಿಜನವಾನ್ ಅಸ್ಮಿ ಕಃ ಅನ್ಯಃ ಅಸ್ತಿ ಸದೃಶಃ ಮಯಾ । ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತಿ ಅಜ್ಞಾನ-ವಿಮೋಹಿತಾಃ ॥

ಅನ್ವಯ

ಅದ್ಯ ಇದಮ್ ಮಯಾ ಲಬ್ಧಮ್, ಇಮಮ್ ಮನೋರಥಮ್ (ಶ್ವಃ) ಪ್ರಾಪ್ಸ್ಯೇ, ಇದಮ್ ಧನಮ್ (ಅಧುನಾ) ಅಸ್ತಿ, ಇದಮ್ ಅಪಿ (ಧನಮ್ ಚ) ಮೇ ಪುನಃ ಭವಿಷ್ಯತಿ ।

ಅಸೌ ಶತ್ರುಃ ಮಯಾ ಹತಃ, ಅಪರಾನ್ ಚ ಅಪಿ ಹನಿಷ್ಯೇ, ಅಹಮ್ ಈಶ್ವರಃ, ಅಹಮ್ ಭೋಗೀ, ಅಹಮ್ ಸಿದ್ಧಃ, ಬಲವಾನ್ ಸುಖೀ ( ಚ ಅಹಮ್ ಅಸ್ಮಿ ) ।

ಆಢ್ಯಃ ಅಭಿಜನವಾನ್ ಅಸ್ಮಿ, ಮಯಾ ಸದೃಶಃ ಕಃ ಅನ್ಯಃ ಅಸ್ತಿ ? (ಅಹಮ್) ಯಕ್ಷ್ಯೇ, ದಾಸ್ಯಾಮಿ, ಮೋದಿಷ್ಯೇ ಇತಿ ಅಜ್ಞಾನ ವಿಮೋಹಿತಾಃ (ತೇ ಸಂತಿ) ।

ಪ್ರತಿಪದಾರ್ಥ

ಅದ್ಯ – ಇಂದು, ಇದಮ್ – ಇದರ, ಮಯಾ – ಎನ್ನಂದ, ಲಬ್ಧಮ್ – ಪಡೆಯಲಾಯ್ದು, ಇಮಂ ಮನೋರಥಮ್ – ಈ (ಎನ್ನ) ಇಚ್ಛೆಗನುಗುಣವಾಗಿಪ್ಪದರ, (ಶ್ವಃ) ಪ್ರಾಪ್ಸ್ಯೇ – ನಾಳಂಗೆ ಪಡೆತ್ತೆ., ಇದಮ್ ಧನಮ್ – ಈ ಸಂಪತ್ತು, (ಅಧುನಾ) ಅಸ್ತಿ – ಈಗ ಇದ್ದು, ಇದಮ್ ಅಪಿ (ಧನಮ್ ಚ) – ಇದು ಕೂಡ, ಮೇ ಪುನಃ ಭವಿಷ್ಯತಿ – ಎನ್ನ ಮುಂದೆ ಪುನಃ ವೃದ್ಧಿಸುತ್ತು.

ಅಸೌ ಶತ್ರುಃ – ಆ ವೈರಿಗೊ, ಮಯಾ ಹತಃ – ಎನ್ನಂದ ಕೊಲ್ಲಲ್ಪಟ್ಟಿದ°, ಅಪರಾನ್ ಚ – ಬಾಕಿದ್ದೋರ ಕೂಡ. ಅಪಿ – ಖಂಡಿತವಾಗಿಯೂ, ಹನಿಷ್ಯೇ – ಮುಂದೆ ಕೊಲ್ಲುತ್ತೆ, ಅಹಮ್ ಈಶ್ವರಃ – ಆನು ‘ಈಶ°’ (ಪ್ರಭು), ಅಹಮ್ ಭೋಗೀ – ಆನು ಭೋಗುಸುವವ°, ಅಹಮ್ ಬಲವಾನ್ – ಆನು ಬಲಶಾಲಿ, ಸುಖಿನ್ (ಚ ಅಪಿ ಅಸ್ಮಿ) – ಸುಖೀ ಕೂಡಾ ಆಗಿದ್ದೆ.

ಆಢ್ಯಃ – ಶ್ರೀಮಂತ°, ಅಭಿಜನವಾನ್ ಅಸ್ಮಿ – ಸಿರಿವಂತರಿಂದ ಸುತ್ತುವರಿಯಲ್ಪಟ್ಟವ° ಆಗಿದ್ದೆ, ಮಯಾ ಸದೃಶಃ – ಎನ್ನ ಸಮಾನರು, ಕಃ ಅನ್ಯಃ ಅಸ್ತಿ – ಆರು ಇದ್ದ°?  (ಅಹಮ್) ಯಕ್ಷ್ಯೇ – ಆನು ಯಜ್ಞಮಾಡುತ್ತೆ, ದಾಸ್ಯಾಮಿ – ದಾನನೀಡುತ್ತೆ, ಮೋದಿಷ್ಯೇ – ಸಂತೋಷಪಡುತ್ತೆ, ಇತಿ – ಹೇದು, ಅಜ್ಞಾನ-ವಿಮೋಹಿತಾಃ (ತೇ ಸಂತಿ) – ಅಜ್ಞಾನಂದ ಭ್ರಾಂತರಾದವು ಅವು ಇದ್ದವು.

ಅನ್ವಯಾರ್ಥ

ಆಸುರೀ ಸ್ವಭಾವದೋರು ತಮ್ಮ ಬಗ್ಗೆ  ಹೀಂಗೆ ಯೋಚಿಸುತ್ತವು – “ಇದರ ಇಂದು ಆನು ಪಡದ್ದೆ, ಎನ್ನ ಇಚ್ಛೆಗನುಗುಣವಾಗಿ ಬೇಕಾದ್ದರ ಆನು ಪಡೆತ್ತೆ (ಎನ್ನ ಬಯಕೆಯ ಮುಂದೆ ಆನು ಈಡೇರಿಸಿಗೊಳ್ಳುತ್ತೆ),  ಇದಂತು ಇದ್ದು, ಇದೆಲ್ಲವೂ ಎನ್ನದಪ್ಪಲಿದ್ದು, ಈ ಹಗೆಯ (ಶತ್ರುವಿನ) ಕೊಂದೆ, ಉಳುದವರನ್ನೂ ಮುಗುಶುತ್ತೆ, ಆನು ಸರ್ವಶಕ್ತ°, ಆನೇ ಭೋಗುಸುವವ°, ಆನೇ ‘ಈಶ°’, ಆನೇ ಬಯಸಿದ್ದರ ಎಲ್ಲವ ಪಡದವ°, ಶಕ್ತಿಶಾಲಿ, ಸುಖೀ, ಸಿರಿವಂತ°, ಕುಲವಂತ°, ಯಜ್ಞ ಮಾಡುತ್ತೆ, ದಾನಮಾಡುತ್ತೆ, ಸಂತೋಷಿಸುತ್ತೆ, ಎನ್ನ ಸಮ ಬೇರೆ ಆರಿದ್ದವು?”.. ಹೀಂಗೆ.

ತಾತ್ಪರ್ಯ / ವಿವರಣೆ

ಆಸುರೀ ಸ್ವಭಾವದೋರು ತನ್ನ ತಾನೇ ಹೇಂಗೆ ಯೋಚಿಸುತ್ತವು. ಅವರ ಚಿಂತನೆ ಅವರ ಮನಸ್ಸಿಲ್ಲಿ ಹೇಂಗೆ ಇರುತ್ತು ಹೇಳ್ವದರ ಇಲ್ಲಿ ಹೇಳಲಾಯ್ದು. ಇವಕ್ಕೆ ಸದಾ ಪೈಸೆ ಮಾಡೇಕು ಹೇಳ್ವದು ಒಂದೇ ಯೋಚನೆ. ಆ ಮೂಲಕ ಎಲ್ಲವನ್ನೂ ತನ್ನ ಸ್ವಾಧೀನ ಪಡಿಸಿಗೊಂಬಲಕ್ಕು, ಎಲ್ಲವು ತನ್ನದಾಗಿಸಿಗೊಂಬಲಕ್ಕು, ಅದರಿಂದ ಎಲ್ಲ ವಿಧ ಸುಖಭೋಗ ತನ್ನದಕ್ಕು ಹೇಳ್ವ ಕಲ್ಪನೆಲಿ ಕಾರ್ಯಮಗ್ನರಾಗಿರುತ್ತವು. ಸಿಕ್ಕಿಯಪ್ಪಗ ಇಂದು ಇಷ್ಟು ಸಿಕ್ಕಿತ್ತು, ನಾಳೆ ಇನ್ನಷ್ಟು ಗಳುಸುವೆ ಹೇಳ್ವ ಚಪಲ ಸದಾ. ಇನ್ನು ಈ ಸಂಪಾದೆನಿಲಿ ಎನಗಾಗದ್ದರವರ ಆನು ಮುಗಿಶಿದ್ದೆ/ ಸೋಲಿಸಿದ್ದೆ, ಇನ್ನು ಮುಂದೆಯೂ ತನಗೆ ಆಗದ್ದೋರ (ಶತ್ರುಗಳ) ನಿಗ್ರಹಿಸುವೆ ಹೇಳ್ವ ದರ್ಪ. ತಾನೇ ‘ಈಶ್ವರ°’, ತಾನೇ ಸರ್ವ ಸಮರ್ಥ°,  ತಾನೇ ಧನಿಕ°, ಸಂಪತ್ತೆಲ್ಲವೂ ತನಗೇ ಇಪ್ಪದು, ಆನೇ ಇದರ ಅನುಭೋಗಿಸಿದ್ದದು, ಇನ್ನು ಆನೇ ಇದರ ಅನುಭೋಗುಸೇಕು/ಅನುಭೋಗುಸುತ್ತೆ, ತಾನೇ ಶ್ರೀಮಂತ°, ಶಕ್ತಿವಂತ° ಎನ್ನಂದಲೇ ಎಲ್ಲ ನಡವದು, ಆನೇ ಸದಾ ತೃಪ್ತಿ, ಸಂತೋಷಿ, ತನ್ನ ಸಮ ಬೇರೆ ಆರೂ ಇಲ್ಲೆ ಹೇದೆಲ್ಲ ಆ ಆಸುರೀ ಸ್ವಭಾವದ ಮನುಷ್ಯರು ಯೋಚನೆಲಿ ಇರುತ್ತವು.  ತೋರಿಕೆಗೆ ಇವು ಮಾಡುವ ಯಜ್ಞ ಯಾಗಾದಿಗೊ ದಾನ ಧರ್ಮಂಗೊ ಎಲ್ಲ ನಿರಂತರ ಚಟುವಟಿಕೆ. ಆದರೆ ಇದು ಅಜ್ಞಾನದ ನಾಟ್ಯ. ಇದು ಅವರ ಸರ್ವನಾಶದ ಹೆಬ್ಬಾಗಿಲು ಹೇಳ್ವ ಪ್ರಜ್ಞೆಯೇ ಇವಕ್ಕೆ ಇರ್ತಿಲ್ಲೆ. ಅದೇ ದೊಡ್ಡಸ್ತಿಕೆ, ಅದೇ ಸುಭಗತನ ಹೇಳ್ವ ಭ್ರಮೆಲಿ ಇವು ಬದುಕ್ಕುತ್ತವು.

ಶ್ಲೋಕ

ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇsಶುಚೌ ॥೧೬॥

ಪದವಿಭಾಗ

ಅನೇಕ-ಚಿತ್ತ-ವಿಭ್ರಾಂತಾಃ ಮೋಹ-ಜಾಲ-ಸಮಾವೃತಾಃ । ಪ್ರಸಕ್ತಾಃ ಕಾಮ-ಭೋಗೇಷು ಪತಂತಿ ನರಕೇ ಅಶುಚೌ ॥

ಅನ್ವಯ

ಅನೇಕ-ಚಿತ್ತ-ವಿಭ್ರಾಂತಾಃ ಮೋಹ-ಜಾಲ-ಸಮಾವೃತಾಃ ಕಾಮ-ಭೋಗೇಷು ಪ್ರಸಕ್ತಾಃ (ತೇ) ಅಶುಚೌ ನರಕೇ ಪತಂತಿ ।

ಪ್ರತಿಪದಾರ್ಥ

ಅನೇಕ-ಚಿತ್ತ-ವಿಭ್ರಾಂತಾಃ – ನಾನಾರೀತಿಯ ಚಿತ್ತಚಾಂಚಲ್ಯಂದಕೂಡಿದವು, ಮೋಹ-ಜಾಲ-ಸಮಾವೃತಾಃ – ಐಹಿಕ ಮೋಹ ಬಲೆಲಿ ಆವೃತರಾದವು, ಕಾಮ-ಭೋಗೇಷು ಪ್ರಸಕ್ತಾಃ (ತೇ) – ಇಂದ್ರಿಯಭೋಗಂಗಳಲ್ಲಿ ಆಸಕ್ತರಾದವು, ತೇ – ಅವು ಅಶುಚೌ ನರಕೇ – ಅಶುಚಿಯಾದ ನರಕಲ್ಲಿ (ನರಕಕ್ಕೆ), ಪತಂತಿ – ಬೀಳ್ತವು.

ಅನ್ವಯಾರ್ಥ

(ಹೀಂಗೆ) ಹಲವು ಚಿತ್ತಭ್ರಾಂತಿಂದ ಮಾಯೆಯ (ಮೋಹ) ಜಾಲಲ್ಲಿ ಸಿಲುಕಿಹಾಕಿ, ಇಂದ್ರಿಯಭೋಗವಿಷಯಂಗಳಲ್ಲಿ ಹೆಚ್ಚೆಚ್ಚು ಆಸಕ್ತರಾಗಿ ಅವು ಮತ್ತೆ ನರಕಕ್ಕೆ ಬೀಳ್ತವು.

ತಾತ್ಪರ್ಯ / ವಿವರಣೆ

ಆಸುರೀ ಪ್ರಭಾವದ ಪರಿಣಾಮ ಎಂತಕ್ಕು ಹೇಳ್ವದರ ಇಲ್ಲಿ ಭಗವಂತ° ಹೇಳಿದ್ದ°. ಅಜ್ಞಾನಂದಲಾಗಿ ಐಹಿಕ ವಿಷಯಂಗಳಲ್ಲೇ ಆಸಕ್ತರಾದ ಅವು ಚಿತ್ತಭ್ರಾಂತಿಗೆ ತುತ್ತಾಗಿ ಮೋಹಾಕರ್ಷಣೆಯ ಜಾಲಕ್ಕೆ ಸಿಲುಕಿ ಕಾಮಾಚಾರ ನಿರತರಾಗಿ ಅಕೇರಿಗೆ ನರಕವ ದಾರಿ ಸೇರಿ ಅಧೋಗತಿಯ ತಲಪುತ್ತವು. ಅವಕ್ಕೆ ಬಿಡುಗಡೆ ಸುಲಭ ಸಾಧ್ಯವೇ ಇಲ್ಲೆ. ಅವರ ಉದ್ಧಾರಕ್ಕೆ ಮತ್ತೆಷ್ಟೋ ಜನ್ಮಂಗೊ ಬೇಕಕ್ಕು.  ಅವು ತಮ್ಮ ಜೀವನಲ್ಲಿ ಹಿಂದೆ ಆಗಿಹೋದ ಘಟನೆಗಳ ಏವತ್ತೂ ನೆಂಪಿಲ್ಲಿ ಮಡಿಕ್ಕೊಂಡು ವಿಫಲವಾದ್ದರ ಮತ್ತೆ ಮತ್ತೆ ನೆನಪಿಸಿಗೊಂಡು ಅದರ ಬಗ್ಗೆ ಚಿಂತಿಸಿ ಗೊಂದಲಕ್ಕೆ ಈಡಾವ್ತವು. ಎಂದೂ ಅವರ ತಪ್ಪಿಂಗೆ ಪಶ್ಚಾತ್ತಾಪ ಪಡುತ್ತವಿಲ್ಲೆ. ಸಾತ್ವಿಕರಾದರೋ ಅಂತಃಕರಣ ಪೂರ್ವಕ ಪಶ್ಚಾತ್ತಾಪ ಪಟ್ಟು ತಮ್ಮ ದೋಷವ ಭಗವಂತನಲ್ಲಿ ನಿವೇದಿಸಿ ಪರಿಹರಿಸಿಗೊಳ್ಳುತ್ತವು. ಇದರೆ ಈ ಆಸುರೀ ಗುಣದೋರು ಹಾಂಗಲ್ಲ. ಮಾಡಿದ ತಪ್ಪಿನ ಸಮರ್ಥುಸಲೆ ಮತ್ತೆ ಮತ್ತೆ ತಪ್ಪುಗಳನ್ನೇ ಮಾಡುತ್ತವು. ಅಜ್ಞಾನದ ಮಮಕಾರಲ್ಲಿ ಮೋಹದ ಬಲೆಯ ಬಿಗಿಸಿಗೊಂಡು ಮತ್ತಷ್ಟು ಗೊಂದಲ ಸನ್ನಿವೇಶಕ್ಕೆ ತಳ್ಳಲ್ಪಡುತ್ತವು. ತಾನು ಬಯಸಿದ್ದರ ಅನುಭವಿಸಿ ತೃಪ್ತಿಪಡುವಲ್ಲಿಗೆ ನಿಲ್ಲುಸದ್ದೆ ಮತ್ತೆ ಮತ್ತೆ ಅದೇ, ಅದರಿಂದ ಉತ್ತಮದ್ದು ಬೇಕು ಹೇದು ಅದರ ಅನ್ವೇಷಣೆಲಿ ತತ್ಪರರಾವುತ್ತವು. ಹೀಂಗೆ ಬೇಡದ್ದ ಸ್ವೇಚ್ಛಾಚಾರದ ಕಾರ್ಯಲ್ಲಿ ತೊಡಗಿ ಜೀವನವ ಕೊಳಕು ಮಾಡಿ ಮುಂದೆ ಕೊಳಕು ನರಕಕ್ಕೆ ಬಿದ್ದು ಒದ್ದಾಡುತ್ತವು.

ಶ್ಲೋಕ

ಆತ್ಮಸಂಭಾವಿತಾಃ ಸ್ತಬ್ಧಾ ಧನಮಾನಮದಾನ್ವಿತಾಃ ।
ಯಜಂತೇ ನಾಮಯಜ್ಞೈಸ್ತೇ ದಂಬೇನಾವಿಧಿಪೂರ್ವಕಮ್ ॥೧೭॥

ಪದವಿಭಾಗ

ಆತ್ಮ-ಸಂಭಾವಿತಾಃ ಸ್ತಬ್ಧಾಃ ಧನ-ಮಾನ-ಮದ-ಅನ್ವಿತಾಃ । ಯಜಂತೇ ನಾಮ-ಯಜ್ಞೈಃ ತೇ ದಂಭೇನ ಅವಿಧಿ-ಪೂರ್ವಕಮ್ ॥

ಅನ್ವಯ

ಆತ್ಮ-ಸಂಭಾವಿತಾಃ ಸ್ತಬ್ಧಾಃ ಧನ-ಮಾನ-ಮದ-ಅನ್ವಿತಾಃ, ತೇ ದಂಭೇನ ಅವಿಧಿ-ಪೂರ್ವಕಂ ನಾಮ-ಯಜ್ಞೈಃ ಯಜಂತೇ ।

ಪ್ರತಿಪದಾರ್ಥ

ಆತ್ಮ-ಸಂಭಾವಿತಾಃ – ಸ್ವ-ಪ್ರತಿಷ್ಠೆಯನ್ನೇ ಕೊಚ್ಚಿಗೊಂಬೋರು, ಸ್ತಬ್ಧಾಃ – ಉದ್ಧಟರು, ಧನ-ಮಾನ-ಮದ-ಅನ್ವಿತಾಃ – ಪೈಸೆ ಮತ್ತೆ ಮಿಥ್ಯಾ ಗೌರವ ಮತ್ತು ಭ್ರಾಂತಿಲಿ ಮಗ್ನರಾದವು, ತೇ – ಅವ್ವು, ದಂಭೇನ – ಗರ್ವಂದ,  ಅವಿಧಿ-ಪೂರ್ವಕಮ್ – ಶಾಸ್ತ್ರೋಕ್ತ ವಿಧಿಯಲ್ಲದ ಕ್ರಮದ ಮೂಲಕ (ಶಾಸ್ತ್ರೋಕ್ತವಲ್ಲದ್ದ ರೀತಿಯ ಮೂಲಕ), ನಾಮ-ಯಜ್ಞೈಃ – ನಾಮ ಮಾತ್ರದ ಯಜ್ಞದ ಮೂಲಕ (ಹೆಸರಿಂಗೆ ಮಾಂತ್ರ ಯಜ್ಞಮೂಲಕ), ಯಜಂತೆ – ಯಜ್ಞವ ಆಚರುಸುತ್ತವು.

ಅನ್ವಯಾರ್ಥ

ತಮ್ಮ ವಿಷಯಲ್ಲಿ ಸಂಪೂರ್ಣ ತೃಪ್ತರಾದ, ಉದ್ಧಟರಾದ  ಸಂಪತ್ತು ಮತ್ತೆ ಮದ ಒಣಪ್ರತಿಷ್ಠೆಂದ ಭ್ರಾಂತಿಲಿ ಮಗ್ನರಾದ ಅವ್ವು ಶಾಸ್ತ್ರೋಕ್ತನಿಯಮಕ್ಕನುಗುಣವಲ್ಲದ ರೀತಿಯ (ಯಾವ ಶಾಸ್ತ್ರ ನಿಯಮ ನಿಬಂಧನೆಯ ಅನುಸರುಸದ್ದೆ) ಜಂಭಂದ ಹೆಸರಿಂಗೆ ಮಾತ್ರ ಯಜ್ಞವ ಮಾಡುತ್ತವು.

ತಾತ್ಪರ್ಯ / ವಿವರಣೆ

ಆಸುರೀ ಸ್ವಭಾವದೋರು ತಾವೇ ಸರ್ವಸ್ವ ಹೇದು ಗ್ರೇಶುತ್ತವು ಹಾಂಗೇ ಏವುದೇ ಧರ್ಮಶಾಸ್ತ್ರಗ್ರಂಥವಿಷಯಂಗಳ ಲಕ್ಷ್ಯ ಮಾಡುತ್ತವಿಲ್ಲೆ. ಅವಕ್ಕೆ ಅವ್ವು ಹೇಳಿದ್ದೇ ಸರಿ, ಅದುವೇ ಶಾಸ್ತ್ರ, ಅದುವೇ ನೀತಿ. ಅವು ಹೆಸರಿಂಗೆ ಮಾತ್ರ (ಬರೇ ತೋರ್ಪಡಿಕೆಗೆ) ಯಜ್ಞಾದಿ ಆಚರಣೆಯ ಮಾಡುತ್ತವು. ಅವರ ಲಕ್ಷ್ಯ ಆ ಯಜ್ಞದ ಮೂಲಕ ಇನ್ನೆಷ್ಟು ಪ್ರತಿಷ್ಠೆಯ ಗಳುಸೆಲೆಡಿಗು ಹೇದು ಮಾಂತ್ರ.  ಧನಬಲ, ಶರೀರ ಬಲ ಇಪ್ಪದರಿಂದ ಭ್ರಾಂತಿಂದ ಏನೇನೋ ಯಜ್ಞವ ಬರೇ ಢಂಭಾಚಾರ ಆಚರಣೆ ಮಾಡುತ್ತವು.  ಎಲ್ಲ ಬರೇ ಬೂಟಾಟಿಕೆ. ಶಾಸ್ತ್ರದ ಕಟ್ಟಳೆ ಏವುದೂ ಇವ್ವು ಗಣ್ಯ ಮಾಡುತ್ತವಿಲ್ಲೆ. ತನ್ನ ಬಗ್ಗೆ ತಾನೇ ಮಹತ್ವ ಜ್ಞಾನ ಬೆಳಶಿಗೊಂಡವರಾಗಿ ಬಿಗುಮಾನಿಯಾಗಿ ಬೀಗಿಯೊಂಡು ಇರುತ್ತವು. ಇವರ ಬಿಗುಮಾನಕ್ಕೆ ಕೈಲಿಪ್ಪ ಪೈಶೆ ಕಾರಣ ಹೊರತು ಜ್ಞಾನ ಅಲ್ಲ. ಪೈಸೆಯ ಮದ, ಈ ಪೈಸೆಯ ನೋಡಿ ಜನಂಗೊ ಮಾಡುವ ಸಮ್ಮಾನ ಇವರ ಮತ್ತೂ ಮದವೇರುಸುತ್ತು. ಇವರ ದೊಡ್ಡಸ್ತಿಕ ಪ್ರದರ್ಶನಕ್ಕೆ ಬೇಕಾಗಿ ಇವರದ್ದೇ ಆದ ರೀತಿಲಿ ಯಜ್ಞ-ಯಾಗಾದಿ ದಾನ ಕರ್ಮ ಆನೂ ಮಾಡುತ್ತೇನೆ ಹೇದು ಪ್ರದರ್ಶನಕ್ಕೆ ಇಳಿತ್ತವು. ಇವಕ್ಕೆ ಬೇಕಾದ್ದು ಈ ಮೂಲಕ ಮತ್ತೂ ಜೆನರ ಆಕರ್ಷಣೆ ಹೊರತು ಭಗವದ್ ಪ್ರೀತಿ ಅಲ್ಲ. ಅಂತರ್ಯಾಮಿ ಭಗವಂತನ ಮರದು ತನ್ನ ಮೈ ಮರದು ಮೆರವದು ಮಾಂತ್ರ ಇಲ್ಲಿ ಕಾಂಗಷ್ಟೆ.

ಶ್ಲೋಕ

ಅಹಂಕಾರಂ ಬಲಂ ದರ್ಪ ಕಾಮಂ ಕ್ರೋಧ ಚ ಸಂಶ್ರಿತಾಃ ।
ಮಾಮಾತ್ಪರದೇಹೇಷು ಪ್ರದ್ವಿಷಂತೋsಭ್ಯಸೂಯಕಾಃ ॥೧೮॥

ಪದವಿಭಾಗ

ಅಹಂಕಾರಮ್ ಬಲಮ್ ದರ್ಪಮ್ ಕಾಮಮ್ ಕ್ರೋಧಮ್ ಚ ಸಂಶ್ರಿತಾಃ । ಮಾಮ್ ಆತ್ಮ-ಪರ-ದೇಹೇಷು ಪ್ರದ್ವಿಷಂತಃ ಅಭ್ಯಸೂಯಕಾಃ ॥

ಅನ್ವಯ

ಅಹಂಕಾರಮ್ ಬಲಮ್ ದರ್ಪಮ್ ಕಾಮಮ್ ಕ್ರೋಧಮ್ ಚ ಸಂಶ್ರಿತಾಃ ಆತ್ಮ-ಪರ-ದೇಹೇಷು (ಸ್ಥಿತಂ) ಮಾಂ ಪ್ರದ್ವಿಷಂತಃ ಅಭ್ಯಸೂಯಕಾಃ (ತೇ ಭವಂತಿ) ।

ಪ್ರತಿಪದಾರ್ಥ

ಅಹಂಕಾರಮ್ – ಅಹಂಕಾರವ, ಬಲಮ್ – ಬಲವ, ದರ್ಪಮ್ – ದರ್ಪವ, ಕಾಮಮ್ – ಕಾಮವ, ಕ್ರೋಧಮ್ – ಕ್ರೋಧವ, ಚ – ಕೂಡ , ಸಂಶ್ರಿತಾಃ – ಆಶ್ರಯಿಸಿ,  ಆತ್ಮ-ಪರ-ದೇಹೇಷು – ತನ್ನ ಮತ್ತು ಪರರ ದೇಹಂಗಳಲ್ಲಿಪ್ಪ, ಮಾಮ್ – ಎನ್ನ, ಪ್ರದ್ವಿಷಂತಃ – ತೆಗಳಿಗೊಂಡು, ಅಭ್ಯಸೂಯಕಾಃ  (ತೇ ಭವಂತಿ) –  ಅಸೂಯಾಪರರಾದವು ಅವ್ವು ಆಗಿರ್ತವು.

ಅನ್ವಯಾರ್ಥ

ಅಹಂಕಾರ, ಬಲ, ದರ್ಪ, ಕಾಮ, ಕ್ರೋಧಂಗಳಿಂದ (ಅವು ದಿಗ್ಭಾಂತರಾಗಿ) ತನ್ನ ಮತ್ತು ಪರರ ದೇಹಲ್ಲಿಪ್ಪವನಾದ ಎನ್ನ ಅಸೂಯಾಪರರಾಗಿ ತೆಗಳಿಗೊಂಡಿರುತ್ತವು.

ತಾತ್ಪರ್ಯ / ವಿವರಣೆ

ಆಸುರೀ ಸ್ವಭಾವದೋರು ಏವತ್ತೂ ದೇವರ ಪರಮಾಧಿಕಾರದ ವಿರುದ್ಧವಾಗಿ ಇರುತ್ತವು. ಧರ್ಮಗ್ರಂಥಂಗಳ ಅವ್ವು ನಂಬುತ್ತವಿಲ್ಲೆ,. ಶಾಸ್ತ್ರೋಕ್ತ ಆಚರಣೆ ಅವಕ್ಕೆ ಅಪಥ್ಯ. ಭಗವಂತನ ಇರುವಿಕೆಯ ವಿಷಯಲ್ಲಿ ಅವಕ್ಕೆ ಅಸೂಯೆಯೂ ಆಗಿರುತ್ತು. ಇದಕ್ಕೆ ಕಾರಣ ಅವರಲ್ಲಿ ನಾಮಪ್ರತಿಷ್ಠೆ, ಪೈಸೆ, ಬಲ ಇತ್ಯಾದಿಗಳ ಗಳಿಕೆಂದಾಲಾಗಿ ಅಜ್ಞಾನ ಆವೃತವಾಗಿಪ್ಪದು. ಈ ಜೀವನ ಮುಂದಾಣ ಜೀವನಕ್ಕೆ ಬುನಾದಿ ಹೇಳ್ವ ತತ್ವ ಅವ್ವು ತಿಳಿದಿರುತ್ತವಿಲ್ಲೆ. ಹಾಂಗಾಗಿ ಆತ್ಮ ಮತ್ತೆ ಪರಮಾತ್ಮ ವಿಷಯಲ್ಲಿ ಅವಕ್ಕೆ ಕಿಂಚಿತ್ತೂ ಚಿಂತನೆ ಇಲ್ಲೆ. ಇವರ ಮೂಲ ಆಸ್ತಿ – ಅಹಂಕಾರ, ದರ್ಪ, ಕಾಮ ಮತ್ತೆ ಕ್ರೋಧ. ಎನ್ನ ಮೀರುಸುವವು ಆರಿದ್ದವು ಹೇಳ್ವ ದರ್ಪ. ತಾನೇ ದೊಡ್ಡ ಮನುಷ್ಯ° ಹೇಳ್ವ ಅಹಂಕಾರ. ಇದರಿಂದಾಗಿ ಇತರರ ತಿರಸ್ಕಾರಂದ ಕಾಂಬ ಗುಣ. ತೀರದ್ದ ಬಯಕೆಕೊ, ಸಿಕ್ಕಿದ್ದಿಲ್ಲೇಳಿ ಕೋಪ – ಮತ್ತೆ ಅದರ ಹೇಂಗಾರು ಪಡದೇ ಸಿದ್ಧ ಹೇಳ್ವ ಸಾಧನೆ-  ಇದೇ ಇವರ ಅಸ್ತಿತ್ವ. ಅವನೊಳವೂ, ಸರ್ವರ ಒಳವೂ ಅಂತರ್ಗತನಾಗಿ ಇಪ್ಪ ಭಗವಂತನ ವಿಷಯಲ್ಲಿಯೂ ಲವಲೇಶವೂ ಅವಕ್ಕೆ ದೃಷ್ಟಿಯೇ ಇಲ್ಲೆ. ಎಲ್ಲೋದಕ್ಕೂ ಕಾರಣೀಭೂತನಾದ, ಎಲ್ಲದಕ್ಕೂ ಕಾರಣ ನಿಮಿತ್ತನಾದ ಭಗವಂತನ ಸತ್ವವ ಅವು ಅಂಗೀಕರಿಸುತ್ತವಿಲ್ಲೆ ಬದಲಾಗಿ ತಿರಸ್ಕಾರ, ಅಸೂಯೆ.

ಹೀಂಗೆ ಅಸೂರಿಸ್ವಭಾವದ ಮನುಷ್ಯರು ಅವರ ನಡೆ ನುಡಿ ಯೋಚನೆ ಕಾರ್ಯಲ್ಲಿ ಜೀವನಲ್ಲಿ ಸದಾ ಕ್ರೂರತೆಯನ್ನೇ ಉಸಿರಾಗಿರಿಸಿಗೊಂಡಿರುತ್ತವು ಹಾಂಗೆ ಅವು ಮಾಡುವ ಏವುದೇ ಕಾರ್ಯ ಆದರೂ ಸ್ವಯಂ ಲಾಭಕ್ಕಾಗಿ, ಸ್ವಯಂ ಪ್ರತಿಷ್ಥೆ ಗಳುಸಲೆ ಮಾಂತ್ರ. ಮುಂದೆ ಎಂತಕ್ಕು ಹೇಳ್ವ ಯೋಚನೆ ಅವಕ್ಕೆ ಇಲ್ಲೆ.

ಶ್ಲೋಕ

ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನ್ ಆಸುರೀಷ್ವೇವ ಯೋನಿಷು ॥೧೯॥

ಪದವಿಭಾಗ

ತಾನ್ ಅಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ । ಕ್ಷಿಪಾಮಿ ಅಜಸ್ರಮ್ ಅಶುಭಾನ್ ಆಸುರೀಷು ಏವ ಯೋನಿಷು ॥

ಅನ್ವಯ

ತಾನ್ ದ್ವಿಷತಃ ಕ್ರೂರಾನ್, ಅಶುಭಾನ್, ನರಾಧಮಾನ್ ಸಂಸಾರೇಷು ಆಸುರೀಷು ಏವ ಯೋನಿಷು ಅಜಸ್ರಮ್ ಅಹಂ ಕ್ಷಿಪಾಮಿ ।

ಪ್ರತಿಪದಾರ್ಥ

ತಾನ್ – ಅವರ, ದ್ವಿಷತಃ – ಅಸೂಯಾಪರರಾದ, ಕ್ರೂರಾನ್ – ಕ್ರೂರಿಗಳ (ದುಷ್ಟರ) , ಅಶುಭಾನ್ – ಅಮಂಗಲರಾದ, ನರಾಧಮಾನ್ – ನೀಚ ಮನುಷ್ಯರ (ನರಾಧಮರ), ಸಂಸಾರೇಷು – ಭೌತಿಕ ಅಸ್ತಿತ್ವಲ್ಲಿ, ಆಸುರೀಷು ಏವ  ಯೋನಿಷು – ಆಸುರೀ ಯೋನಿಲಿಯೇ, ಅಜಸ್ರಮ್ – ಎಂದೆಂದೂ, ಅಹಮ್ ಕ್ಷಿಪಾಮಿ – ಆನು ಹಾಕುತ್ತೆ (ಬೀಳುಸುತ್ತೆ).

ಅನ್ವಯಾರ್ಥ

ಅಸೂಯಾಪರರೂ, ಕ್ರೂರರೂ, ನರಾಧಮರೂ, ಅಸಭ್ಯರೂ ಆದ ಅವರ ನಿರಂತರವಾಗಿ ಐಹಿಕ ಅಸ್ತಿತ್ವಲ್ಲಿ ಆಸುರೀ ಜೀವ ವರ್ಗಲ್ಲೆ ತಳ್ಳುತ್ತೆ (ಹಾಕುತ್ತೆ).

ತಾತ್ಪರ್ಯ / ವಿವರಣೆ

ಒಂದು ನಿರ್ದಿಷ್ಟ ಆತ್ಮವ ಒಂದು ನಿರ್ದಿಷ್ಟ ದೇಹಲ್ಲಿ ಮಡುಗುವದು ಪರಮ ಸಂಕಲ್ಪದ ಪ್ರಶ್ನಾತೀತ ಹಕ್ಕು ಹೇಳ್ವದು ಈ ಶ್ಲೋಕಲ್ಲಿ ಸೂಚಿತವಾಗಿದ್ದು. ಆಸುರೀ ಸ್ವಭಾವದೋರು ಭಗವಂತನ ಸರ್ವಾಧಿಕಾರವ ಒಪ್ಪಿಗೊಳ್ಳದ್ದೇ ಇಪ್ಪಲೂ ಸಾಕು. ಅವ° ಮನಸೋ ಇಚ್ಛೆ ವರ್ತುಸುತ್ತ ಹೇಳ್ವದೂ ನಿಜವೆ. ಆದರೆ ಅವನ ಮುಂದಾಣ ಜನ್ಮ  ನಿರ್ಧರುಸುವದು ಭಗವಂತನೇ. ಭಗವಂತನ ತೀರ್ಪಿನ ಅವಲಂಬಿಸಿಗೊಂಡಿಪ್ಪದು. ವ್ಯಕ್ತಿಗತ ಆತ್ಮವ ಒಂದು ದೇಹದ ಮರಣದ ಬಳಿಕ ಇನ್ನೊಂದು ಗರ್ಭಕ್ಕೆ ಭಗವಂತ ಕೊಂಡೋವ್ತ (ರವಾನಿಸುತ್ತ°). ಭಗವಂತನ ಮೇಲ್ವಿಚಾರಣೆಲಿ ಜೀವಿಗೆ ಐಹಿಕ ದೇಹದ ರೂಪ ಸಿಕ್ಕುತ್ತು.

ಪರತತ್ವವ ದ್ವೇಷಿಸುವ, ಕನಿಕರವಿಲ್ಲದ್ದ ಈ ಕೊಳಕ್ಕಂಗಳ, ನೀಚರ ನಿರಂತರವಾಗಿ ಬಾಳ ಬವಣೆಲಿ ನೀಚ ಯೋನಿಲಿ ಹುಟ್ಟುವಂತೆ ಭಗವಂತ ಮಾಡುತ್ತ°. ಭಗವಂತ ಜೀವಿಯ ಸೃಷ್ಟಿಸುತ್ತನಿಲ್ಲೆ. ಮೂಲವಾಗಿ ಜೀವ ಮತ್ತೆ ಜೀವ ಸ್ವಭಾವ ಅನಾಧಿನಿತ್ಯ ಹೇಳ್ವದು ಈಗಾಗಲೇ ಮದಲಾಣ ಅಧ್ಯಾಯಂಗಳಲ್ಲಿ ನೋಡಿದ್ದು. ಆಸುರೀ ಸ್ವಭಾವ ಹೇಳ್ವದೂ ಮೂಲತಃ ಜೀವ ಸ್ವಭಾವ. ಹೇಂಗೆ ಹಾಗಲಕಾಯಿ ಹೇದರೆ ಕಯಿಕ್ಕೆಯೋ ಹಾಂಗೇ ಈ ಆಸುರೀ ಜನರ ಜೀವಸ್ವಭಾವ ತಾಮಸಗುಣ. ಅದರ ಭಗವಂತ° ತಿದ್ದಲೆ ಹೋವುತ್ತನಿಲ್ಲೆ. ಬದಲಾಗಿ ಆ ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣ ಆವುತ್ತು. ಭಗವಂತನ ದ್ವೇಷಿಸುವ, ಮನುಕುಲವ ನಿರ್ಲಕ್ಷಿಸುವ, ಪ್ರಪಂಚವನ್ನೇ ನಾಶಕ್ಕೆ ತಳ್ಳುವ ಈ ಕ್ರೂರಿಗಳ ಭಗವಂತ ನಿರಂತರ ಸಂಸಾರ ಸಾಗರಲ್ಲಿ ಹಾಕುತ್ತ°.  ಅವು ಮತ್ತೆ ಮತ್ತೆ ಹೀನಜನ್ಮಲ್ಲಿಯೇ ಹುಟ್ಟಿ ಬತ್ತವು.

ಶ್ಲೋಕ

ಆಸುರೀ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ ।
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ॥೨೦॥

ಪದವಿಭಾಗ

ಆಸುರೀಮ್ ಯೋನಿಮ್ ಆಪನ್ನಾಃ ಮೂಢಾಃ ಜನ್ಮನಿ ಜನ್ಮನಿ । ಮಾಮ್ ಅಪ್ರಾಪ್ಯ ಏವ ಕೌಂತೇಯ ತತಃ ಯಾಂತಿ ಅಧಮಾಮ್ ಗತಿಮ್ ॥

ಅನ್ವಯ

ಹೇ ಕೌಂತೇಯ!, ಆಸುರೀಂ ಯೋನಿಮ್ ಆಪನ್ನಾಃ ಜನ್ಮನಿ ಜನ್ಮನಿ ಮೂಢಾಃ (ಸಂತಃ) ಮಾಮ್ ಅಪ್ರಾಪ್ಯ ಏವ, ತತಃ ಅಧಮಾಂ ಗತಿಂ ಯಾಂತಿ ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನಾದ ಅರ್ಜುನ!, ಆಸುರೀಮ್ ಯೋನಿಮ್ ಆಪನ್ನಾಃ – ರಾಕ್ಷಸೀ ಜೀವಜಾತಿಯ ಹೋಂದಿದವು, ಜನ್ಮನಿ ಜನ್ಮನಿ  ಮೂಢಾಃ (ಸಂತಃ) – ಜನ್ಮ ಜನ್ಮಲ್ಲಿ ಮೂಢರಾಗಿದ್ದು, ಮಾಮ್ ಅಪ್ರಾಪ್ಯ – ಎನ್ನ ಪಡೆಯದ್ದೆ (ಹೊಂದದ್ದೆ), ಏವ – ಖಂಡಿತವಾಗಿಯೂ, ತತಃ – ಮತ್ತೆ, ಅಧಮಾಮ್ ಗತಿಮ್ ಯಾಂತಿ – ನೀಚವಾದ ಗತಿಯ ಹೊಂದುತ್ತವು.

ಅನ್ವಯಾರ್ಥ

ಏ ಕುಂತೀಮಗನಾದ ಅರ್ಜುನ!, ಆಸುರೀ ಜೀವವರ್ಗಲ್ಲಿ ಹುಟ್ಟಿದ ಜೀವಿಗೊ ಮೂಢರಾಗಿ ಎನ್ನ ಪಡೆಯದ್ದೆ ಮತ್ತೆ ಮತ್ತೆ ಅಧೋಗತಿಗೆ ಇಳಿತ್ತವು.

ತಾತ್ಪರ್ಯ / ವಿವರಣೆ

ಗವಂತ ದಯಾಪರ° ಹೇಳ್ವದು ಗೊಂತಿದ್ದು. ಆದರೆ ಭಗವಂತನ ನಂಬದ್ದವಕ್ಕೆ ಅವ° ದಯಾಪರ° ಆಗಿರ್ತನಿಲ್ಲೆ. ಆಸುರೀ ಸ್ವಭಾವದೋರತ್ರೆ ಅವಂಗೆ ಅಂತಹ ದಯೆ ಏನೂ ಇಲ್ಲೆ. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದ° ಆಸುರೀಯೋನಿಲಿ ಹುಟ್ಟಿದ ಜೀವಿಗೊ ಮೂಢರಾಗಿ ಅಹಂಕಾರಿಯಾಗಿ ಮೆರಕ್ಕೊಂಡು ಭಗವಂತನ ಒಪ್ಪದ್ದೆ ಮತ್ತೆ ಮತ್ತೆ ನರಕ ಸದೃಶ ಐಹಿಕ ಲೋಕಲ್ಲಿ ಹುಟ್ಟಿಬತ್ತವು. ಭಗವಂತನ ದಯೆ ಇಲ್ಲದ್ದೆ ಆರಿಂಗೂ ಒಂದು ಹೆಜ್ಜೆ ಮುಂದೆ ಹೋತಿಕ್ಕಲೆ ಎಡಿಯ. ಭಗವಂತನ ದ್ವೇಷಿಸಿ ವಾ ತಿರಸ್ಕರಿಸಿ ಉದ್ಧಾರ ಅಪ್ಪೆ ಹೇಳ್ವ ಭಾವನೆ ತಪ್ಪು. ಹೀಂಗೆ ಮರಳಿ ಹುಟ್ಟಿ ಬಪ್ಪ ಈ ದುಷ್ಟರು ಪ್ರತೀ ಜನ್ಮಲ್ಲಿಯೂ ಮೂಢರಾಗಿಯೇ ಹುಟ್ಟಿ ಬತ್ತವು. ಪ್ರತೀ ಜನ್ಮಲ್ಲಿಯೂ ಇವಕ್ಕೆ ಭಗವಂತನಲ್ಲಿ ದ್ವೇಷ ಪರಾಕಾಷ್ಠಗೆ ಹೋಗಿ, ದುರಹಂಕಾರ, ಮದ, ದರ್ಪ, ಕಾಮ-ಕ್ರೋಧ ಮಿತಿಮೀರಿ ತಾವಾಗಿಯೇ ಅಧಃಪತನಗೊಳ್ಳುತ್ತವು. ಇವೆಂದೂ ಭಗವಂತನ ಸೇರುತ್ತವಿಲ್ಲೆ. ಇವು ತಮ್ಮ ಜೀವ ಸ್ವಭವದ ಗತಿಗನುಗುಣವಾಗಿ ತಾಮಸ ಲೋಕವ ಸೇರುತ್ತವು.

ಭಗವಂತ° ಆಸುರೀ ಜನರ ಜೀವ ಸ್ವಭವ, ಅವರ ನಡೆ-ನುಡಿ-ಯೋಚನೆ-ಕೃತಿಯ ಬಗ್ಗೆ ವಿವರಿಸಿದ್ದ. ಹಾಂಗಾಗಿ ಲೋಕಕಂಟಾಕರು ಎಂತಕೆ ಇದ್ದವು ಹೇಳ್ವದು ನವಗೆ ಅರ್ಥಮಾಡಿಗೊಂಬಲಾವ್ತು. ನವಗರಡಿಯದ್ದೇ ನಮ್ಮ ಆಸುರೀಗುಣ ಹಿಡುದಪ್ಪಗ ನಾವು ಜ್ಞಾನದ ತಿಳುವಳಿಕೆಂದ ಭಗವಂತನ ಮೊರೆಹೊಕ್ಕಿ ಅದರಿಂದ ಬಿಡುಗಡೆ ದೊರಕಿ ಭಗವಂತನ ಸೇವಾ ಭಾಗ್ಯವ ನೀಡು ಹೇಳಿ ಅನನ್ಯ ಭಕ್ತಿಂದ ಪ್ರಾರ್ಥಿಸಿರೆ ಭಗವಂತ° ನವಗೆ ಸನ್ಮಾರ್ಗವ ತೋರುತ್ತ°. ಜೀವದ ಸ್ವಭಾವ ಎಂದೂ ಬದಲವ್ತಿಲ್ಲೆ. ಜೀವಕ್ಕೆ ಸ್ವತಂತ್ರ ಕರ್ತೃತ್ವ ಇಲ್ಲೆ. ಆದರೆ ಜೀವಕ್ಕೆ ಇಚ್ಛಾಪೂರ್ವಕ ಕೃತಿ ಇದ್ದು. ಇದಕ್ಕನುಗುಣವಾಗಿ ನಿರಂತರ ದೈವೀ ಸ್ವಭಾವವ ಬೆಳೆಶಿಗೊಂಡು ಭಗವಂತನ ಸೇರುವ ಪ್ರಯತ್ನವ ನಾವು ಮಾಡೆಕು. ಅದಕ್ಕೆ ಫಲ ಸಿಕ್ಕುತ್ತದು ಭಗವಂತನ ಇಚ್ಛೆ. ನಮ್ಮದು ಅನ್ಯನ್ಯ ಭಕ್ತಿಯ ಸೇವೆ ಮಾಂತ್ರ. ಫಲ ಅವನ ಪ್ರಸಾದ. ಈ ಪ್ರಜ್ಞೆ ಸದಾ ನಮ್ಮಲ್ಲಿ ಇರೆಕು. ನಮ್ಮ ಬುದ್ಧಿಗೆ ಪ್ರಚೋದನೆ ನೀಡುವದು ಭಗವಂತ° ಆದರೆ ಬುದ್ಧಿಯ ಏವ ರೀತಿ ಬಳಸಿಗೊಳ್ಳೆಕು ಹೇಳ್ವ ಸ್ವಾತಂತ್ರ ಜೀವಿಗೆ. ಹಾಂಗಾಗಿ ಪ್ರಜ್ಞಾಪೂರ್ವಕವಾಗಿ ಮುಂದಡಿಯಿಡೆಕ್ಕಾದ್ದು ನಮ್ಮ ಕರ್ತವ್ಯ ಹೇಳ್ವದರ ನಾವಿಲ್ಲಿ ಸ್ಮರಿಸಿಗೊಂಬಲಕ್ಕು.

ಶ್ಲೋಕ

ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ ।
ಕಾಮಃ ಕ್ರೋಧಸ್ತಥಾ ಲೋಭಃ ತಸ್ಮಾದೇತತ್ರಯಂ ತ್ಯಜೇತ್ ॥೨೧॥

ಪದವಿಭಾಗ

ತ್ರಿವಿಧಮ್ ನರಕಸ್ಯ ಇದಮ್ ದ್ವಾರಮ್ ನಾಶನಮ್ ಆತ್ಮನಃ । ಕಾಮಃ ಕ್ರೋಧಃ ತಥಾ ಲೋಭಃ ತಸ್ಮಾತ್ ಏತತ್ ತ್ರಯಮ್ ತ್ಯಜೇತ್ ॥

ಅನ್ವಯ

ಕಾಮಃ ಕ್ರೋಧಃ ತಥಾ ಲೋಭಃ ಇದಂ ತ್ರಿವಿಧಮ್ ಆತ್ಮನಃ ನಾಶನಮ್, ನರಕಸ್ಯ ದ್ವಾರಮ್ (ಅಸ್ತಿ); ತಸ್ಮಾತ್ ಏತತ್ ತ್ರಯಂ ತ್ಯಜೇತ್ ।

ಪ್ರತಿಪದಾರ್ಥ

ಕಾಮಃ – ಕಾಮ, ಕ್ರೋಧಃ – ಕೋಪ, ತಥಾ – ಹಾಂಗೇ, ಲೋಭಃ – ಲೋಭ, ಇದಮ್ ತ್ರಿವಿಧಮ್ – ಈ ಮೂರುವಿಧಂಗೊ, ಆತ್ಮನಃ – ತನ್ನ (ಜೀವಿಯ), ನಾಶನಮ್ – ನಾಶಕಾರಕವಾದ, ನರಕಸ್ಯ ದ್ವಾರಮ್ (ಅಸ್ತಿ) – ನರಕದ ಬಾಗಿಲು ಆಗಿದ್ದು, ತಸ್ಮಾತ್ – ಹಾಂಗಾಗಿ ಏತತ್ ತ್ರಯಮ್ – ಈ ಮೂರರ, ತ್ಯಜೇತ್ – ತ್ಯಜಿಸೆಕು.

ಅನ್ವಯಾರ್ಥ

ಕಾಮ, ಕ್ರೋಧ, ಲೋಭ ಈ ಮೂರು ಆತ್ಮನಾಶಕವಾದವು ಮತ್ತೆ ನರಕದ ಬಾಗಿಲುಗೊ. ಹಾಂಗಾಗಿ ಈ ಮೂರರ ಬಿಡೆಕು.

ತಾತ್ಪರ್ಯ / ವಿವರಣೆ

ಆಸುರೀ ಬದುಕಿನ ಪ್ರಾರಂಭವ ಇಲ್ಲಿ ಹೇಳಿದ್ದು. ಮನುಷ್ಯ° ತನ್ನ ಕಾಮದ ತೃಪ್ತಿಗಾಗಿ ಪ್ರಯತ್ನಿಸುತ್ತ. ತೃಪ್ತಿ ಸಿಕ್ಕದ್ದಪ್ಪಗ ಕ್ರೋಧ ಮತ್ತೆ ಲೋಭ ಹುಟ್ಟಿಗೊಳ್ತು. ಆಸುರೀ ಜೀವಮಾರ್ಗಕ್ಕೆ ಜಾರಿಬೀಳ್ಳೆ ಇಷ್ಟ ಇಲ್ಲದ್ದ ವಿವೇಕಿಗೊ ಈ ಮೂರು ವೈರಿಗಳ ಮದಾಲು ಬಿಡೆಕು. ಇದರಿಂದ ಕ್ಷೇಮ ಇಲ್ಲೆ. ಇದು ನರಕದ ಬಾಗಿಲು. ಇದು ಮನುಷ್ಯನ ತನ್ನ ನಾಶದತ್ತ ಕೊಂಡೋವುತ್ತು. ಕಾಮ-ಕ್ರೋಧ-ಲೋಭ ಇವು ಮೂರು ಮಾನವನ ನರಕದ ಬಾಗಿಲು. ನಮ್ಮ ಅಧಃಪತನದತ್ತ ತಳ್ಳುವ ನಮ್ಮ ವೈರಿಗೊ. ಹಾಂಗಾಗಿ ಇವುಗಳ ಮದಾಲು ಗೆಲ್ಲೆಕು. ಇವುಗಳಿಂದ ದೂರ ಇರೆಕು ಹೇದು ಭಗವಂತ° ಇಲ್ಲಿ ಎಚ್ಚರಿಸಿದ್ದ°. ಇವುಗಳ ಮೂಲ ಬೀಜ – ಆಸೆ. ಎಲ್ಲ ದುರ್ಗುಣಂಗೊ ಇವುಗಳ ಕುಂಞಿಗೊ. ಹಾಂಗಾಗಿ ಅವುಗೊ ಹುಟ್ಟದ್ದಾಂಗೆ ಮಾಡೇಕಾರೆ ಇವುಗಳ ದೂರ ಮಾಡೆಕು. ಇಲ್ಲದ್ರೆ ಮನುಷ್ಯ° ತನ್ನ ನರಕವ ತಾನೇ ಸೃಷ್ಟಿಸಿಗೊಂಡಾಂಗೆ ಆವ್ತು. ಈ ಮೂರರ ಬಿಟ್ರೆ ‘ಇಹ’ಲ್ಲಿಯೂ ಸುಖ – ‘ಪರ’ಲ್ಲಿಯೂ ಸುಖ.

ಶ್ಲೋಕ

ಏತೈರ್ವಿಮುಕ್ತಃ ಕೌಂತೇಯ ತಮೋದ್ವಾರೈಸ್ತ್ರಿಭಿರ್ನರಃ ।
ಆಚರತ್ಯಾತ್ಮನಃ ಶ್ರೇಯಃ ತತೋ ಯಾತಿ ಪರಾಂ ಗತಿಮ್ ॥೨೨॥

ಪದವಿಭಾಗ

ಏತೈಃ ವಿಮುಕ್ತಃ ಕೌಂತೇಯ ತಮೋ-ದ್ವಾರೈಃ ತ್ರಿಭಿಃ ನರಃ । ಆಚರತಿ ಆತ್ಮನಃ ಶ್ರೇಯಃ ತತಃ ಯಾತಿ ಪರಾಮ್ ಗತಿಮ್ ॥

ಅನ್ವಯ

ಹೇ ಕೌಂತೇಯ!, ಏತೈಃ ತ್ರಿಭಿಃ ತಮೋ-ದ್ವಾರೈಃ ವಿಮುಕ್ತಃ ನರಃ ಆತ್ಮನಃ ಶ್ರೇಯಃ ಆಚರತಿ, ತತಃ ಪರಾಂ ಗತಿಂ ಯಾತಿ ।

ಪ್ರತಿಪದಾರ್ಥ

ಹೇ ಕೌಂತೇಯ – ಏ ಕುಂತಿಯಮಗನಾದ ಅರ್ಜುನ!, ಏತೈಃ ತ್ರಿಭಿಃ – ಈ ಮೂರುವಿಧದ, ತಮೋ-ದ್ವಾರೈಃ – ಅಜ್ಞಾನದ ಬಾಗಿಲಿಂದ, ವಿಮುಕ್ತಃ ನರಃ – ಬಿಡುಗಡೆಗೊಂಡ ಮನುಷ್ಯ°, ಆತ್ಮನಃ ಶ್ರೇಯಃ – ತನ್ನ ಶ್ರೇಯಸ್ಸ, ಆಚರತಿ – ಆಚರಿಸುತ್ತ°, ತತಃ – ಮತ್ತೆ, ಪರಾಮ್ ಗತಿ ಯಾತಿ – ಪರಮವಾದ (ಶ್ರೇಷ್ಠವಾದ) ಗತಿಗೆ ಹೋವುತ್ತ°.

ಅನ್ವಯಾರ್ಥ

ಏ ಕುಂತಿಯ ಮಗನಾದ ಅರ್ಜುನ!, ನರಕದ ಬಾಗಿಲುಗಳಾದ ಈ ಮೂರು ಅಜ್ಞಾನದ ಬಾಗಿಲಿಂದ ಮುಕ್ತನಾದ ಮನುಷ್ಯ° ಆತ್ಮನ ಶ್ರೇಯಸ್ಸಿನ ಕಾರ್ಯವ ತೊಡಗುತ್ತ., ಮತ್ತೆ ಶ್ರೇಷ್ಠವಾದ ಗತಿಯ ಹೋಗಿ ಸೇರುತ್ತ°.

ತಾತ್ಪರ್ಯ / ವಿವರಣೆ

ಮನುಷ್ಯ ಜೀವನದ ಮೂರು ಶತ್ರುಗಳೇ ಆದ ಕಾಮ, ಕ್ರೋಧ ಮತ್ತೆ ಲೋಭ ವಿಷಯಲ್ಲಿ ಬಹಳ ಎಚ್ಚರಿಕೆಂದ ಇರೆಕ್ಕಾವ್ತು. ವಿವೇಕಿಯಾಗಿ ಇದರ ಗೆಲ್ಲೆಕು. ಇದರಿಂದ ಮುಕ್ತನಾದಷ್ಟೂ ಬದುಕು ಶುದ್ಧ. ಮತ್ತೆ ಶಾಸ್ತ್ರೋಕ್ತ ನಿಯಮಕ್ಕೆ ಬದ್ಧನಾಯೇಕು. ಇದು ಮನುಷ್ಯನ ಉನ್ನತಿಯ ಮಾರ್ಗಕ್ಕೆ ಕೊಂಡೋವುತ್ತು. ನರಕದ ಈ ಮೂರು ಬಾಗಿಲುಗಳಿಂದ ಮುಕ್ತನಾದವ° ಪುಣ್ಯಾತ್ಮ°. ಅವಂಗೆ ಮತ್ತೆ ಮೋಕ್ಷದ ದಾರಿ ಸುಗಮ ಆವ್ತು. ಅವ ಉತ್ತಮ ಗತಿಯ ಸೇರುತ್ತ°. ನಮ್ಮ ಶ್ರೇಯಸ್ಸಿಂಗೆ ಏವುದು ಸಹಾಯಕ ಅಲ್ಲದೊ ಅವುಗಳಿಂದ ಮುಕ್ತನಾಗಿಪ್ಪದು ತನ್ನ ಯಶಸ್ಸಿನ ಮುಂದಾಣ ದಾರಿಯ ಶುದ್ಧಗೊಳಿಸಿದಾಂಗೆ ಆವ್ತು. ತನ್ನ ಬದುಕೂ ಶುದ್ಧ ಆವ್ತು. ಜೀವನ ಸುಂದರ.

ಭಗವಂತ° ಇಲ್ಯೆಲ್ಲ ಅಂಬಗಂಬಗ ‘ಕೌಂತೇಯ’ ಹೇಳಿ ವಿಶೇಷಣಂದ ಅರ್ಜುನನ ದೆನಿಗೊಂಡು ಎಚ್ಚರುಸುತ್ತ°.  ನಾವು ಜ್ಞಾನ ಮಾರ್ಗಲ್ಲಿ ಮುಂದುವರಿಯೇಕ್ಕಾರೆ ಕುಸ್ಸಿತವಾದ ಈ ಕಾಮ-ಕ್ರೋಧ-ಲೋಭವ ತಿರಸ್ಕಾರ ಮಾಡುವ ಕೌಂತೇಯರಾಯೇಕು ಹೇಳ್ವ ಧ್ವನಿ.

ಸರಿ, ಈ ಕಾಮ-ಕ್ರೋಧ-ಲೋಭವ ಗೆದ್ರೆ ಆತಿಲ್ಯೋ. ಮತ್ತಿನ್ನು ಶಾಸ್ತ್ರ ನಿಯಮಂಗಳ ಆಚರುಸೇಕು ಹೇದು ಎಂತಕೆ? –

ಶ್ಲೋಕ

ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಂ ॥೨೩॥

ಪದವಿಭಾಗ

ಯಃ ಶಾಸ್ತ್ರ-ವಿಧಿಮ್ ಉತ್ಸೃಜ್ಯ ವರ್ತತೇ ಕಾಮ-ಕಾರತಃ । ನ ಸಃ ಸಿದ್ಧಿಮ್ ಅವಾಪ್ನೋತಿ ನ ಸುಖಮ್ ನ ಪರಾಮ್ ಗತಿಮ್ ॥

ಅನ್ವಯ

ಯಃ ಶಾಸ್ತ್ರ-ವಿಧಿಮ್ ಉತ್ಸೃಜ್ಯ, ಕಾಮ-ಕಾರತಃ ವರ್ತತೇ, ಸಃ ನ ಸಿದ್ಧಿಮ್, ನ ಸುಖ, ನ (ಚ) ಪರಾಂ ಗತಿಮ್ ಅವಾಪ್ನೋತಿ ।

ಪ್ರತಿಪದಾರ್ಥ

ಯಃ – ಯಾವಾತ°, ಶಾಸ್ತ್ರ-ವಿಧಿಮ್ – ಶಾಸ್ತ್ರೋಕ್ತ ನಿಯಮಂಗಳ, ಉತ್ಸೃಜ್ಯ – ತ್ಯಜಿಸಿ, ಕಾಮ-ಕಾರತಃ – ಕಾಮಲ್ಲಿ ಸ್ವೇಚ್ಛೆಯಾಗಿ, ವರ್ತತೇ – ವರ್ತಿಸುತ್ತನೋ, ಸಃ – ಅವ°, ನ ಸಿದ್ಧಿಮ್ – ಪರಿಪೂರ್ಣತೆಯನ್ನಾಗಲೀ, ನ ಸುಖಮ್ – ಸುಖವನ್ನಾಗಲೀ, ನ (ಚ) ಪರಾಮ್ ಗತಿಮ್ – ಪರಮವಾದ ಹಂತವನ್ನೂ (ಶ್ರೇಷ್ಠ ಗತಿಯ)  ಕೂಡ , (ನ) ಅವಾಪ್ನೋತಿ – ಹೊಂದುತ್ತನಿಲ್ಲೆ.

ಅನ್ವಯಾರ್ಥ

ಯಾವಾತ° ಶಾಸ್ತ್ರವಿಧಿಗಳ ತ್ಯಜಿಸಿ, ತನ್ನ ಇಚ್ಛಾಪ್ರಕಾರ ಕರ್ಮಲ್ಲಿ ತೊಡಗುತ್ತನೋ, ಅವ° ಪರಿಪೂರ್ಣತೆಯನ್ನಾಗಲೀ, ಸುಖವನ್ನಾಗಲೀ, ಉತ್ತಮ ಹಂತವನ್ನಾಗಲೀ ತಲಪುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಬೇರೆ ಬೇರೆ ಜಾತಿಗೊಕ್ಕೆ, ಬೇರೆ ಬೇರೆ ವರ್ಣಾಶ್ರಮದೋರಿಂಗೆ ಬೇರೆ ಬೇರೆ ಶಾಸ್ತ್ರವಿಧಿಗಳ ಹೇಳಲ್ಪಟ್ಟಿದು. ಎಲ್ಲೋರು ಈ ನಿಯಮ ನಿಬಂಧನೆಗಳ ಪಾಲುಸಲೇ ಬೇಕು ಹೇಳ್ವ ನಿರೀಕ್ಷೆ ಇಲ್ಲಿ ಕಾಣುತ್ತು. ಅದರ ಅನುಸರುಸದ್ದೆ ಮನುಷ್ಯ° ತನ್ನ ಮನಸೋ ಇಷ್ಟ ನಡದರೆ ಅವ° ಎಂದೂ ತನ್ನ ಜೀವನಲ್ಲಿ ಏಳಿಗೆಯ ಸಾಧುಸಲೆ ಇಲ್ಲೆ. ಅರ್ಥಾತ್ ಪರಿಪೂರ್ಣನಪ್ಪಲಿಲ್ಲೆ. ಹೇದರೆ ತಾತ್ವಿಕವಾಗಿ ಮನುಷ್ಯಂಗೆ ಎಲ್ಲವೂ ಗೊಂತಿಕ್ಕು. ಆದರೆ, ಅವುಗಳ ತನ್ನ ಬದುಕ್ಕಿಲ್ಲಿ ಅನುಸರುಸದ್ದೆ ಇದ್ದರೆ ಅವ° ನರಾಧಮನೇ ಸರಿ. ಮನುಷ್ಯರೂಪಲ್ಲಿ ಜೀವಿ ‘ವಿವೇಚನಾ ಶಕ್ತಿ’ ಭಾಗ್ಯವ ಹೊಂದಿರುತ್ತ°. ಅದರ ಸದುಪಯೋಗ ಪಡುಸಿ ಬದುಕ್ಕುವದೇ ಶ್ರೇಯಸ್ಸಿನ ಗುಟ್ಟು. ಶಾಸ್ತ್ರದ ಕಟ್ಟಾಳೆಗಳ ಬಿಟ್ಟು ನಮ್ಮಷ್ಟಕ್ಕೆ ನಾವು ಪ್ರಾಮಾಣಿಕವಾಗಿ ಬದುಕ್ಕಲೆ ಎಡಿಗು ಹೇಳ್ವದರ ಭಗವಂತ° ಇಲ್ಲಿ ಒಪ್ಪುತ್ತನಿಲ್ಲೆ ಹೇಳ್ವದು ನಾವು ಅರ್ಥಮಾಡಿಗೊಳ್ಳೆಕ್ಕಾಗಿದ್ದು. ನವಗೆ ಯೇವುದು ಸರಿ, ಏವುದು ತಪ್ಪು ಹೇಳ್ವ ಪರಿಜ್ಞಾನ ಇರ್ತಿಲ್ಲೆ. ನವಗೆ ಇಷ್ಟವಾದ್ದು ಸರಿ, ಇಷ್ಟಾ ಅಲ್ಲದ್ದು ಸರಿಯಲ್ಲ ಹೇಳ್ವ ಚಿಂತನೆಲಿಯೇ ನಾವು ಕಳೆತ್ತು. ಯಾವುದು ಸರಿ, ಯಾವುದು ತಪ್ಪು ಹೇಳ್ವದು ಶಾಸ್ತ್ರಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿದು. ಅದರ ವಿವೇಚನಾಪೂರ್ವಕ ಅರ್ತು ಅದರ ನಿಜಾರ್ಥವ ಜೀವನಲ್ಲಿ ರೂಢಿಸಿಗೊಳ್ಳೆಕ್ಕಾದ್ದು ಮನುಷ್ಯನಾದವನ ಕರ್ತವ್ಯ. ಕೇವಲ ಆತ್ಮಶಕ್ತಿ ಮತ್ತೆ ಪ್ರಾಮಾಣಿಕ ಮಾತ್ರ ಜೀವನಕ್ಕೆ ಸಾಲ. ಸರಿ ಏವುದು ತಪ್ಪು ಏವುದು ಹೇಳಿ ನವಗೆ ಎತ್ತಿ ಹೇಳ್ಳೆ ಶಾಸ್ತ್ರಂಗೊ ಬೇಕೇ ಬೇಕು. ನಾವು ಬರೇ ನಮ್ಮ ಅನುಭವಂದ ಈ ಪ್ರಪಂಚವ ಗ್ರೇಶಿಗೊಂಡ್ರೆ ಸಾಲ. ನಮ್ಮ ಬುದ್ಧಿ ಸೀಮಿತ, ನಮ್ಮ ತರ್ಕ ಸೀಮಿತ, ನಮ್ಮ ಆತ್ಮಸಾಕ್ಷಿ ಸೀಮಿತ, ನಮ್ಮ ಪ್ರಾಮಾಣಿಕತೆ ಸೀಮಿತ. ಹಾಂಗಾಗಿ ನಮ್ಮ ಸೀಮಿತ ಜ್ಞಾನಂದ ಪ್ರಪಂಚವ ಅಳವಲೆ ಹೆರಡೋದು ವ್ಯರ್ಥ ಪ್ರಯತ್ನವೇ ಸರಿ. ಸತ್ಯದ ನಿಜ ಕಲ್ಪನೆ ನವಗೆ ಸಿಕ್ಕೆಕ್ಕಾರೆ ಶಾಸ್ತ್ರಂಗಳ ಭದ್ರ ಬುನಾದಿ ನವಗೆ ಬೇಕು. ಹಾಂಗಾಗಿಯೇ ಭಗವಂತ° ವೇದಾದಿ ಶಾಸ್ತ್ರಂಗಳ ಪ್ರಪಂಚಕ್ಕೆ ಕೊಟ್ಟ°. ಆ ಶಾಸ್ತ್ರವ ಅರ್ಥಮಾಡಿಗೊಂಡು ನವಗೆ ನೀಡಿದ ಆ ದೇವರ ಬಲ್ಲ ಜ್ಞಾನಿಗಳಿಂದ ನಾವು ನಿಜವ ತಿಳಿಯೇಕು. ಇಲ್ಲದ್ರೆ ಸಿದ್ಧಿ ಅಪೂರ್ಣವೇ ಆಗಿಬಿಡ್ತು.

ಶ್ಲೋಕ

ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ ॥೨೪॥

ಪದವಿಭಾಗ

ತಸ್ಮಾತ್ ಶಾಸ್ತ್ರಮ್ ಪ್ರಮಾಣಮ್ ತೇ ಕಾರ್ಯ-ಅಕಾರ್ಯ-ವ್ಯವಸ್ಥಿತೌ । ಜ್ಞಾತ್ವಾ ಶಾಸ್ತ್ರ-ವಿಧಾನ-ಉಕ್ತಮ್ ಕರ್ಮ ಕರ್ತುಮ್ ಇಹ ಅರ್ಹಸಿ ॥

ಅನ್ವಯ

ತಸ್ಮಾತ್ ಕಾರ್ಯ-ಅಕಾರ್ಯ-ವ್ಯವಸ್ಥಿತೌ ತೇ ಶಾಸ್ತ್ರಂ ಪ್ರಮಾಣಂ (ಅಸ್ತಿ), ಶಾಸ್ತ್ರ-ವಿಧಾನ-ಉಕ್ತಂ ಕರ್ಮ ಜ್ಞಾತ್ವಾ (ತತ್ ತ್ವಮ್) ಇಹ ಕರ್ತುಮ್ ಅರ್ಹಸಿ ।

ಪ್ರತಿಪದಾರ್ಥ

ತಸ್ಮಾತ್ – ಹಾಂಗಾಗಿ,  ಕಾರ್ಯ-ಅಕಾರ್ಯ-ವ್ಯವಸ್ಥಿತೌ – ಕರ್ತವ್ಯ, ನಿಷಿದ್ಧ ಕಾರ್ಯಂಗಳ ನಿರ್ಧಾರಲ್ಲಿ (ವ್ವವಸ್ಥೆಲಿ), ತೇ ಶಾಸ್ತ್ರಮ್ – ನಿನಗೆ ಶಾಸ್ತ್ರವು, ಪ್ರಮಾಣಮ್ (ಅಸ್ತಿ) – ಪ್ರಮಾಣವಾಗಿ ಇದ್ದು., ಶಾಸ್ತ್ರ-ವಿಧಾನ-ಉಕ್ತಮ್ ಕರ್ಮ ಜ್ಞಾತ್ವಾ – ಶಾಸ್ತ್ರಲ್ಲಿ ಹೇಳಲ್ಪಟ್ಟ ನಿಯಂತ್ರಣಂಗಳ ಕೆಲಸವ ತಿಳುದು, (ತತ್ ತ್ವಮ್ – ಅದರ ನೀನು), ಇಹ – ಜಗತ್ತಿಲ್ಲಿ, ಕರ್ತುಮ್ ಅರ್ಹಸಿ – ಮಾಡ್ಳೆ ಅರ್ಹನಾಗಿದ್ದೆ.

ಅನ್ವಯಾರ್ಥ

ಹಾಂಗಾಗಿ ಮನುಷ್ಯ° ಶಾಸ್ತ್ರಕ್ಕೆ ಅನುಗುಣವಾದ ಏವುದು ಕರ್ತವ್ಯ, ಏವುದು ಕರ್ತವ್ಯ ಅಲ್ಲ (ನಿಷಿದ್ಧ) ಹೇಳ್ವದರ ತಿಳಿವಲೆ ನಿನಗೆ ಶಾಸ್ತ್ರವೇ ಪ್ರಮಾಣವಾಗಿ ಇದ್ದು. ಇಂತಹ ನಿಯಮ ನಿಬಂಧನೆಗಳ ತಿಳ್ಕೊಂಡು ಕರ್ಮಾಕರ್ಮದ ವಿವೇಚನೆ ಮಾಡಿಗೊಂಡು ಕರ್ಮವ ಮಾಡ್ಳೆ ನೀನು ಅರ್ಹನಾಗಿದ್ದೆ.

ತಾತ್ಪರ್ಯ / ವಿವರಣೆ

ಬೇಕು ಬೇಡಂಗಳ ತೀರ್ಮಾನಕ್ಕೆ ಶಾಸ್ತ್ರವೇ ಪ್ರಮಾಣ. ಶಾಸ್ತ್ರದ ಕಟ್ಟಳೆಗಳ ಅರ್ತು ಕರ್ಮ ಮಾಡ್ಳೆ ತೊಡಗು ಹೇದು ಭಗವಂತ° ಎಚ್ಚರಿಸಿದ್ದ°. ಹಾಂಗಾಗಿ ಶಾಸ್ತ್ರಲ್ಲಿ ಹೇಳಲ್ಪಟ್ಟದ್ದರ ಮದಾಲು ನಾವು ನಂಬೆಕು. ಅಷ್ಟಪ್ಪಗ ಅದರ ತಿಳಿವಲೆ ಸಾಧ್ಯ ಆವ್ತು. ನಂಬಿಕೆಯೇ ಇಲ್ಲದ್ದವಂಗೆ ಏವ ಶಾಸ್ತ್ರವೂ ಪ್ರಯೋಜನಕ್ಕೆ ಬಾರ. ಅದುವೇ ಅವಂಗೆ ಮಾರಕ ಆಗಿ ಹೋಪಲೂ ಸಾಕು. ಕಾನೂನು ಅರ್ತು ವ್ಯವಹರಿಸೆಕ್ಕಾದ್ದು ಕರ್ತವ್ಯ. ಕಾನೂನು ಸಾರ ಇಲ್ಲೆ ಹೇದು ತನ್ನಿಚ್ಚೆ ಹಾಂಗೆ ವರ್ತಿಸಿರೆ ಕಾನೂನು ರೀತ್ಯಾ ಶಿಕ್ಷೆಗೆ ತುತ್ತಪ್ಪದು ಖಂಡಿತ.  ಶಾಸ್ತ್ರಲ್ಲಿ ಹೀಂಗೆ ಮಾಡು, ಹೀಂಗೆ ಮಾಡೇಡ ಹೇಳಿ ವಿವರವಾಗಿ ಹೇಳಲ್ಪಟ್ಟಿದು. ಅದರ ಅರ್ತ ಜ್ಞಾನಿಗಳಿಂದ ಅರ್ತು ಪ್ರಜ್ಞೆಯ ಬೆಳೆಶಿಗೊಂಡು ಶಾಸ್ತ್ರೋಕ್ತ ರೀತಿಲಿ ವ್ಯವಹರಿಸೆಕ್ಕಾದ್ದು ಕರ್ತವ್ಯ ಹೇದು ಭಗವಂತ° ಇಲ್ಲಿ ತಿಳಿಹೇಳಿದ್ದ°.    ಇಲ್ಲಿ ಶಾಸ್ತ್ರ ಹೇಳಿರೆ ನಾಲ್ಕು ವೇದಂಗೊ ಮತ್ತೆ ಅದಕ್ಕೆ ಪೂರಕವಾದ ಪಂಚರಾತ್ರ, ಮಹಾಭಾರತ, ಮೂಲರಾಮಾಯಣ, ಹದಿನೆಂಟು ಪುರಾಣಂಗೊ. ಇವುಗಳ ಬಿಟ್ಟು ಇತರ ಏವುದೂ ಪೂರ್ಣವಾದ ಪ್ರಮಾಣವಾಗಿಪ್ಪಲೆ ಸಾಧ್ಯ ಇಲ್ಲೆ. ಅದೇವುದೂ ಪೂರ್ಣತೆಯತ್ತೆ ದಾರಿ ತೋರುಸ ಹೇದು ಭಗವಂತ° ಅರ್ಜುನಂಗೆ ಹೇಳಿದಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ದೈವಾಸುರಸಂಪದ್ವಿಭಾಗಯೋಗೋ ನಾಮ ಷೋಡಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ದೈವ-ಅಸುರ-ಸಂಪತ್-ವಿಭಾಗ-ಯೋಗಃ ಹೇಳ್ವ ಹದ್ನಾರನೇ ಅಧ್ಯಾಯ ಮುಗುದತ್ತು.

 

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

॥ ಶ್ರೀಕೃಷ್ಣಾರ್ಪಣಮಸ್ತು ॥

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 16 – SHLOKAS 13 – 24

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

3 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 16 – ಶ್ಲೋಕಂಗೊ 13 – 24

  1. ಅಪ್ಪಚ್ಚಿದ್ವಯರಿಂಗೆ ನಮೋ ನಮಃ. ಹಿರಿಯರ ಮೆಚ್ಚುಗೆಂದ ಧನ್ಯತೆಯ ಕಂಡೆ. ಹರೇ ರಾಮ.

  2. ಭಗವಂತ° ಆಸುರೀ ಜನರ ಜೀವ ಸ್ವಭಾವ, ಅವರ ನಡೆ-ನುಡಿ-ಯೋಚನೆ-ಕೃತಿಯ ಬಗ್ಗೆ ವಿವರಿಸಿಕ್ಕಿ,ಕಾಮ-ಕ್ರೋಧ-ಲೋಭ ಇವು ಮೂರು ಬಿಟ್ಟರೇ ಜ್ಞಾನ ಮಾರ್ಗಲ್ಲಿ ಮುಂದೆ ಹೋಪಲೆ ಎಡಿಗಷ್ಟೆ ಹೇಳ್ತನ್ನೂ ತಿಳಿಶಿ ಕೊಟ್ಟಿದ .
    ಅಸುರೀ ಮಾರ್ಗಲ್ಲಿ ಹೋಪಲೆ ಯಾವಾಗ ಮನಸ್ಸು ಅಡ್ಡ ದಾರಿ ಹಿಡಿತ್ತೋ, ಅಂಬಗ ಅದರ ತಿಳ್ಕೊಂಡು ಸರಿಯಾದ ದಾರಿಲಿ ಹೋಪ ವಿವೇಕ ತಂದುಗೊಂಡು ಹಾಂಗೇ ಮುನ್ನಡೆಕ್ಕಾದ್ದು ನಮ್ಮ ಧರ್ಮ.

  3. ಹರೇ ರಾಮ;ಕ೦ತಿ೦ದ ಕ೦ತಿ೦ಗೆ ಮು೦ದುವರಿತ್ತಾ ಇದ್ದಾ೦ಗೆ ಆಸಕ್ತಿಯ ಕೆರಳುಸಿ, ಓದಿಗೊ೦ಡಿದ್ದಾ೦ಗೆ ಅದರ ಆಕರ್ಷಣೆ ಹೆಚ್ಚಾವುತ್ತಾ ಇದ್ದು. ಇದಕ್ಕೆ ಮುಖ್ಯ ಕಾರಣ ನಿ೦ಗಳ ಶೈಲಿಯೇ ಕಾರಣ. ಅದಕ್ಕಾಗಿ ನಿ೦ಗಗೆ ಇತ್ಲಾ೦ಗಿದ್ದ ಕಯಿಮುಗುದು ಧನ್ಯವಾದ೦ಗ.ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×