Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   02/05/2013    2 ಒಪ್ಪಂಗೊ

ಚೆನ್ನೈ ಬಾವ°

ಯುದ್ಧರಂಗಲ್ಲಿ ತನ್ನ ಹಿರಿಯರ, ಗುರುಗಳ ಕಂಡು ಒಂದು ಕ್ಷಣಲ್ಲಿ ದಿಗ್ಭ್ರಮೆಗೊಂಡ ಅರ್ಜುನನ ಮನಸ್ಸು ಅಜ್ಞಾನ ಮಾಯೆಂದ ಆವೃತವಾದ್ದರ ನೀಗಲೆ ಭಗವಂತ° ಜ್ಞಾನೋಪದೇಶವ ಮಾಡುತ್ತಲಿದ್ದ°. ಭಗವದ್ಗೀತೆಯ ಎರಡನೇ ಅಧ್ಯಾಯದ ಹನ್ನೊಂದನೇ ಶ್ಲೋಕಂದ ಭಗವಂತನ ಉಪದೇಶ ಪ್ರಾರಂಭ ಆಯ್ದು. “ಅಶೋಚ್ಯಾನನ್ವಶೋಚತ್ವಮ್..” – ‘ದುಃಖಿಸೆಕ್ಕಾದ್ದಿಲ್ಲದ್ದಕ್ಕೆ ದುಃಖಿಸುತ್ತಿದ್ದೆ’,-  ಹೇಳಿ ಭಗವಂತ° ಸುರುಮಾಡಿ ಎಂತಕ್ಕಾಗಿ ಅರ್ಜುನ ದುಃಖಿಸೆಕ್ಕಾದ್ದಿಲ್ಲೆ ಹೇಳ್ವದರ ಆತ್ಮನ ಸ್ವರೂಪ ವಿಚಾರವಾಗಿ, ಸಾಂಖ್ಯಯೋಗ ಹೇಳ್ವ ಎರಡನೇ ಅಧ್ಯಾಯಲ್ಲಿ ಸಂಕ್ಷಿಪ್ತವಾಗಿ ಎಲ್ಲ ವಿಚಾರಂಗಳನ್ನೂ ವಿವರಿಸಿದ್ದ°. ಭಗವದ್ಗೀತೆಯ ಸಂಪೂರ್ಣ ವಿಚಾರ ಎರಡನೇ ಅಧ್ಯಾಯಲ್ಲೇ ಭಗವಂತ° ಹೇಳಿ ಆತು. ಇದೇ ವಿಷಯಂಗಳ ಮತ್ತಷ್ಟು ವಿವರವಾಗಿ ಬೇರೆ ಬೇರೆ ಕೋನಲ್ಲಿ / ಆಯಾಮಲ್ಲಿ ಮುಂದೆ ಮೂರನೇ ಅಧ್ಯಾಯಂದ ಭಗವಂತ° ಕರ್ಮ ಮತ್ತೆ ಜ್ಞಾನದ ವಿಷಯವಾಗಿ ವಿವರವಾಗಿ   ಕರ್ಮಯೋಗ, ಜ್ಞಾನಯೋಗ, ಕರ್ಮಸಂನ್ಯಾಸಯೋಗ, ಆತ್ಮಸಂಯೋಗಯೋಗ, ಜ್ಞಾನವಿಜ್ಞಾನಯೋಗ, ಅಕ್ಷರಪರಬ್ರಹ್ಮಯೋಗ, ರಾಜವಿದ್ಯಾರಾಜಗುಹ್ಯಯೋಗ, ವಿಭೂತಿಯೋಗ  ಹೇಳ್ವ ಅಧ್ಯಾಯಂಗಳಲ್ಲಿ   ಗುಹ್ಯ ವಿಚಾರಂಗಳ  ವಿಷದೀಕರಿಸಿ ಅರ್ಜುನನ ಸಂದೇಹಂಗಳ ಬಗೆಹರಿಸಿ ಮನಸ್ಸಿನ ಶುಭ್ರಗೊಳುಸುತ್ತ°. ಭಗವಂತನ ವಿಶ್ವರೂಪ ನೋಡಿದ ಮತ್ತೆ ಅರ್ಜುನನ ಸಂಶಯಂಗೊ ಎಲ್ಲವೂ ಪರಿಹಾರ ಆತು. ಭಗವಂತ° ಅರ್ಜುನನ ಮನಸ್ಸಿಂಗೆ ಇನ್ನಷ್ಟು ಧೈರ್ಯವ ತುಂಬಲೆ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ, ಗುಣತ್ರಯವಿಭಾಗಯೋಗ, ಪುರುಷೋತ್ತಮಯೋಗ, ದೈವಾಸುರುಸಂಪದ್ವಿಭಾಗಯೋಗ, ಶ್ರದ್ಧಾತ್ರಯವಿಭಾಗಯೋಗ ಎಂಬೀ ಭಾಗಲ್ಲಿ ಆತ್ಮ ಮತ್ತೆ ಪರಮಾತ್ಮ ಸ್ವರೂಪ, ತ್ರಿಗುಣಂಗಳ ವಿಷಯವಾಗಿಯೂ ವಿಷದೀಕರಿಸಿದ್ದ°. ಇಲ್ಲಿಗೆ ಭಗವದ್ಗೀತೆಯ ಹದಿನೇಳು ಅಧ್ಯಾಯಂಗೊ ಮುಗುದತ್ತು. ಇನ್ನೀಗ ಹದಿನೆಂಟನೇ ಅಧ್ಯಾಯಲ್ಲಿ ಈ ಮದಲೇ ಹೇಳಿದ ವಿಷಯಂಗಳ ಸಂಕ್ಷೇಪಗೊಳುಸಿ ಉಪದೇಶವ ಉಪಸಂಹಾರ ಮಾಡುತ್ತ°. ಉಪಸಂಹಾರಲ್ಲಿ ಅರ್ಜುನನ ಮೂಲಕವಾಗಿ ಭಗವಂತ° ನವಗೆ ಎಂತ ಹೇಳಿದ್ದ° ಹೇದು ಇಲ್ಲಿ ನೋಡುವೋ° –

 

ಶ್ರೀಕೃಷ್ಣಪರಮಾತ್ಮನೇ ನಮಃ ॥

ಶ್ರೀಮದ್ಭಗವದ್ಗೀತಾ ॥

ಅಥ ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ 01 – 10

(ಮೋಕ್ಷ-ಸಂನ್ಯಾಸ-ಯೋಗಃ)

 

ಶ್ಲೋಕ

ಅರ್ಜುನ ಉವಾಚ
ಸಂನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಮ್ ।

ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ ॥೦೧॥  BHAGAVADGEETHA

ಪದವಿಭಾಗ

ಅರ್ಜುನಃ ಉವಾಚ
ಸಂನ್ಯಾಸಸ್ಯ ಮಹಾ-ಬಾಹೋ ತತ್ತ್ವಮ್ ಇಚ್ಛಾಮಿ ವೇದಿತುಮ್ । ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿ-ನಿಷೂದನ ॥

ಅನ್ವಯ

ಅರ್ಜುನಃ ಉವಾಚ
ಹೇ ಮಹಾ-ಬಾಹೋ!, ಹೇ ಕೇಶಿ-ನಿಷೂದನ ಹೃಷೀಕೇಶ! (ಅಹಂ) ಸಂನ್ಯಾಸಸ್ಯ ತ್ಯಾಗಸ್ಯ ಚ ತತ್ತ್ವಂ ಪೃಥಕ್ ವೇದಿತುಮ್ ಇಚ್ಛಾಮಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಮಹಾ-ಬಾಹೋ! – ಏ ಮಹಾಬಾಹುವೇ!, ಹೇ ಕೇಶಿ-ನಿಷೂದನ ಹೃಷೀಕೇಶ – ಏ ಕೇಶಿದೈತ್ಯನ ಕೊಂದವನಾದ ಇಂದಿಯಂಗಳ ಒಡೆಯನೇ !,  (ಅಹಮ್ – ಆನು) , ಸಂನ್ಯಾಸಸ್ಯ – ಸಂನ್ಯಾಸದ, ತ್ಯಾಗಸ್ಯ – ತ್ಯಗದ, ಚ – ಕೂಡ, ತತ್ತ್ವಮ್ – ತತ್ವವ (ಸತ್ಯವ) ಪೃಥಕ್ ವೇದಿತುಮ್ – ಪ್ರತ್ಯೇಕವಾಗಿ ಕೇಳ್ಳೆ, ಇಚ್ಛಾಮಿ – ಬಯಸುತ್ತೆ.

ಅನ್ವಯಾರ್ಥ

ಅರ್ಜುನ ಹೇಳಿದ° – ಏ ಮಾಹಾಬಾಹುವೇ, ಏ ಕೇಶಿದೈತ್ಯನ ಕೊಂದವನಾದ ಇಂದ್ರಿಯಂಗಳ ಒಡೆಯನೇ, ಸಂನ್ಯಾಸದ ಮತ್ತೆ ತ್ಯಾಗದ ತತ್ವವ ಪ್ರತ್ಯೇಕವಾಗಿ ತಿಳಿವಲೆ ಬಯಸುತ್ತೆ.

ತಾತ್ಪರ್ಯ / ವಿವರಣೆ

ಭಗವದ್ಗೀತೆಯ ಮುಖ್ಯ ಅಂಶಂಗೊ ಈ ಹದಿನೇಳು ಅಧ್ಯಾಯಂಗಳಲ್ಲಿ ಮುಗುದತ್ತು. ಹದಿನೆಂಟನೇ ಅಧ್ಯಾಯ ಈ ಮದಲಾಣ ಅಧ್ಯಾಯಂಗಳಲ್ಲಿ ಚರ್ಚೆ ಮಾಡಿದ ವಿಷಯಂಗಳ ಹೆಚ್ಚುವರಿ ಸಂಗ್ರಹ. ಗೀತೆಯ ಪ್ರತಿಯೊಂದು ಅಧ್ಯಾಯಲ್ಲಿಯೂ ಭಗವಂತ° ದೇವೋತ್ತಮ ಪರಮ ಪುರುಷನ ಭಕ್ತಿಸೇವೆಯೇ ಬದುಕಿನ ಪರಮ ಗುರಿ ಹೇಳ್ವದರ ಒತ್ತಿಹೇಳಿಗೊಂಡು ಬೈಂದ. ನಾವು ಮಾಡ್ತ ಸಾಧನೆ ಹೇಂಗಿರೆಕು ಹೇಳ್ವದರ ಹಂತಹಂತವಾಗಿ ವಿವರಿಸಿದ್ದ. ಇನ್ನೀಗ ಭಗವಂತ° ಮದಲೆ ಹೇಳಿದ್ದರ ಬಗ್ಗೆ ಸಿಂಹಾವಲೋಕನ ಮಾಡಿರೆ, ಮದಾಲಾಣ ಅಧ್ಯಾಯಂಗಳಲ್ಲಿ ಯಜ್ಞ, ದಾನ, ತಪಸ್ಸು ಹೇಳ್ವ ಕರ್ಮಂಗಳ ಬಗ್ಗೆ ಹೇಳಿತ್ತಿದ್ದ. ಇಲ್ಲಿ ರಜಾ ಗೊಂದಲಂಗೊ ಸಹಜವಾಗಿ ಹುಟ್ಟುತ್ತು. ಹಾಂಗಾಗಿ ಅರ್ಜುನ° ಭಗವಂತನತ್ರೆ ಪ್ರತ್ಯೇಕವಾಗಿ ಕೇಳ್ತ – ‘ಕರ್ಮತ್ಯಾಗ ಮತ್ತೆ ಕರ್ಮಸಂನ್ಯಾಸ ಇವೆರಡರ ನಡುವೆ ಎಂತರ ವ್ಯತ್ಯಾಸ’?. ತ್ಯಾಗ ಹೇಳಿರೂ ಸಂನ್ಯಾಸ ಹೇಳಿರೂ ಮೇಲ್ನೋಟಕ್ಕೆ ಬಿಟ್ಟುಬಿಡುವದು ಹೇಳ್ತ ಅರ್ಥವ ಕೊಡುತ್ತಷ್ಟೆ. ಆದರೆ ನಿಜಾರ್ಥಲ್ಲಿ ಅದು ಬೇರೆ ಬೇರೆ. ಹಾಂಗಾರೆ ಸಂನ್ಯಾಸ ಮತ್ತೆ ತ್ಯಾಗದ ಮೂಲಭೂತ ಅರ್ಥ ಎಂತರ?! ಅವ್ವೆರಡರ ಪ್ರತ್ಯೇಕವಾಗಿ ಅರ್ಥೈಸಿಗೊಂಬದು ಹೇಂಗೆ ಹೇದೀಗ ಇಲ್ಲಿ ಅರ್ಜುನನ ಪ್ರಶ್ನೆ. ತ್ಯಾಗ ಮತ್ತೆ ಸಂನ್ಯಾಸ ಹೇಳ್ವದರ ಬಗ್ಗೆ ಪ್ರತ್ಯೇಕವಾಗಿ ತಿಳಿವಲೆ ಬಯಸುತ್ತೆ ಹೇಳಿ ಭಗವಂತನತ್ರೆ ಬೇಡಿಗೊಳ್ತ° ಅರ್ಜುನ°.

ಇನ್ನೀಗ ಈ ಶ್ಲೋಕಲ್ಲಿ ಭಗವಂತನ ಮೂರು ವಿಶೇಷ ಪದಂಗಳ ಮೂಲಕ ದೆನಿಗೊಂಡಿದ° ಅರ್ಜುನ°.  ಇದು ಅರ್ಜುನನ ಭಗವಂತನತ್ರೆ ಇಪ್ಪ ವಿಶೇಷ ಗುರುಭಕ್ತಿಯ ಸೂಚಿಸುತ್ತು. ‘ಮಹಾಬಾಹೋ’, ‘ಕೇಶಿನಿಷೂದನ’, ‘ಹೃಷೀಕೇಶ’ ಈ ದೆನಿಗೊಂಡದರ ವಿಶೇಷಾರ್ಥ ಎಂತರ ಹೇಳ್ವದರ ಬನ್ನಂಜೆಯವರ ವ್ಯಾಖ್ಯಾನಂದ ನೋಡುವೋ° –

ಮಹಾಬಾಹೋ = ಮಹಾಬಾಹುಃ – ಹೇಳಿರೆ ಮಹಾಬಾಹು (ಗಟ್ಟಿಯಾದ, ನೀಳವಾದ ತೋಳು) ಇಪ್ಪವ°, ಶತ್ರುಗಳ ಎದುರುಸುವವ° ಹೇದು ಮೇಲ್ನೋಟಕ್ಕೆ ಅರ್ಥ. ದುಷ್ಟನಿಗ್ರಹ ಮಾಡಿ ಶಿಷ್ಟ ರಕ್ಷಣೆ ಮಾಡುವ, ಎಲ್ಲ ಅಜ್ಞಾನವ ನೀಗುಸುವ, ಲೋಕರಕ್ಷಕ ತೋಳುಗಳಿಪ್ಪ ಆ ಭಗವಂತ° – ಮಹಾಬಾಹು ಹೇಳ್ವದು ಇಲ್ಲಿ ಮೂಲ ಭಾವ.

ಕೇಶಿನಿಷೂದನ : ಕೇಶಿ ಹೇಳ್ವ ದೈತ್ಯನ ಕೊಂದವ° ಹೇದು ಮೇಲ್ಮೈ ಅರ್ಥ. ಇನ್ನೊಂದು ರೀತಿಲಿ ‘ಕೇಶಿ’ ಹೇದರೆ ಸೂರ್ಯಕಿರಣ, ವಾಯುದೇವರು ಇತ್ಯಾದಿ. ಸೌರಮಂಡಲಲ್ಲಿದ್ದು, ತನ್ನ ಅಂತರಂಗದ ಭಕ್ತನಾದ ಪ್ರಾಣದೇವರಿಲ್ಲಿದ್ದು, ನಮ್ಮ ಅಭೀಷ್ಟವ ಪೂರೈಸುವ, ನವಗೆ ಶಕ್ತಿತುಂಬುವ ಭಗವಂತ° – ‘ಕೇಶಿನಿಷೂದನ’. ಇನ್ನು ಮನಸ್ಸಿಲ್ಲಿಪ್ಪ ಸಂದೇಹ ಹೇಳಿರೆ ಅದು ಅಸುರಂಗೆ ಸಮಾನ. ಸಂದೇಹವ ಅಸುರರಿಂಗೆ ಹೋಲುಸುವದು. ಹಾಂಗೆ ಅಜ್ಞಾನ/ಸಂದೇಹವೆಂಬ ಅಸುರನ ಕೊಲ್ಲುವ / ನಿಗ್ರಹಿಸುವ ಭಗವಂತ° – ‘ಕೇಶಿನಿಷೂದನ’

ಹೃಷೀಕೇಶಃ – ಹೃಷೀಕ ಹೇಳಿರೆ ಇಂದ್ರಿಯಂಗೊ. ಪಿಂಡಾಂಡದೊಳ ಇದ್ದುಗೊಂಡು ಸರ್ವ ಇಂದ್ರಿಯಂಗಳನ್ನೂ ನಿಯಂತ್ರುಸುವ – ‘ಈಶ’ – ಒಡೆಯನಾದ ಆ ಭಗವಂತ° – ‘ಹೃಷೀಕೇಶಃ’.

ಶ್ಲೋಕ

ಶ್ರೀಭಗವಾನುವಾಚ
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥೦೨॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಕಾಮ್ಯಾನಾಮ್ ಕರ್ಮಣಾಮ್ ನ್ಯಾಸಮ್ ಸಂನ್ಯಾಸಮ್ ಕವಯಃ ವಿದುಃ । ಸರ್ವ-ಕರ್ಮ-ಫ್ಲ-ತ್ಯಾಗಮ್ ಪ್ರಾಹುಃ ತ್ಯಾಗಮ್ ವಿಚಕ್ಷಣಾಃ ॥

ಅನ್ವಯ

ಶ್ರೀ ಭಗವಾನ್ ಉವಾಚ
ಕವಯಃ ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ವಿದುಃ , ವಿಚಕ್ಷಣಾಃ (ಚ) ಸರ್ವ-ಕರ್ಮ-ಫಲ-ತ್ಯಾಗಂ ಪ್ರಾಹುಃ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಕವಯಃ – ವಿದ್ವಾಂಸರು, ಕಾಮ್ಯಾನಾಮ್ ಕರ್ಮಣಾಮ್ – ಆಸೆಂದ ಕೂಡಿಪ್ಪ ಕಾರ್ಯಂಗಳ (ಕರ್ಮಂಗಳ), ನ್ಯಾಸಮ್ – ತ್ಯಾಗವು, ಸಂನ್ಯಾಸಮ್ – ಸಂನ್ಯಾಸ (ಹೇದು), ವಿದುಃ – ತಿಳುದ್ದವು, ವಿಚಕ್ಷಣಾಃ (ಚ) – ಅನುಭವಿಗಳೂ (ಕೂಡ), ಸರ್ವ-ಕರ್ಮ-ಫಲ-ತ್ಯಾಗಮ್ – ಎಲ್ಲ ಬಗೆಯ ಕರ್ಮ ಫಲಂಗಳ ತ್ಯಾಗವ, ಪ್ರಾಹುಃ – ಹೇಳಿದ್ದವು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ° – ಐಹಿಕ ಬಯಕೆಯ ಆಧಾರವಿಪ್ಪ ಕರ್ಮಂಗಳ ತ್ಯಾಗ (ಬಿಡುವದು)ವ ಸಂನ್ಯಾಸ ಹೇದು ವಿದ್ವಾಂಸರು ತಿಳುದ್ದವು. ಎಲ್ಲ ಕರ್ಮಂಗಳ ಫಲಂಗಳ ಬಿಟ್ಟುವದದೇ ತ್ಯಾಗ ಹೇದು ಅನುಭವಿಗೊ (ವಿದ್ವಾಂಸರು) ಹೇಳಿದ್ದವು.

ತಾತ್ಪರ್ಯ / ವಿವರಣೆ

ಕಾಂಬ ಮಟ್ಟಿಗೆ ತ್ಯಾಗ ಮತ್ತೆ ಸಂನ್ಯಾಸ ಹೇಳಿರೆ ಒಂದೇ ನಮೂನೆ ಕಾಂಬ ಇವ್ವೆರಡರ ವ್ಯತ್ಯಾಸ ಎಂತರ ಹೇದು ಅರ್ಜುನ ಕೇಳಿದ್ದಕ್ಕೆ ಭಗವಂತ° ಹೇಳುತ್ತ° –  ಕಾಮ್ಯಕರ್ಮವ ಬಿಡುವದು ‘ಸಂನ್ಯಾಸ’, ಎಲ್ಲ ಕರ್ಮಂಗಲ ಫಲವ ಬಿಡುವದು ‘ತ್ಯಾಗ’. ಬನ್ನಂಜೆ ಹೇಳ್ತವು –  ಇಲ್ಲಿ ಹೇಳಿಪ್ಪ ‘ಸಂನ್ಯಾಸ’ ಗೃಹಸ್ಥರೂ ಒಳಗೊಂಡು ಎಲ್ಲ ಸಾಧಕರಿಂಗೂ ಅನ್ವಯ ಅಪ್ಪ ಸಂನ್ಯಾಸ. ಸಂನ್ಯಾಸಲ್ಲಿ ಎರಡು ನಮೂನೆ. ಒಂದು ಕರ್ಮದ ಫಲವ ಬಿಡುವದು, ಇನ್ನೊಂದು ಬಯಕೆಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವದು.  ಇಲ್ಲಿ ತ್ಯಾಗ ಹೇಳಿರೆ ಕರ್ಮವ ತ್ಯಾಗ ಮಾಡುವದಲ್ಲ, ಬದಲಿಂಗೆ ಯಾವ ಕರ್ಮವೇ ಇರಳಿ, ಅದರ ಮಾಡಿ ಅದರ ಫಲವ ಬಯಸದ್ದೆ ಇಪ್ಪದು. ಹಾಂಗಾಗಿ, ಕರ್ಮತ್ಯಾಗ ಹೇಳಿರೆ ವೇದಾಧ್ಯಯನ ಬಿಡುವದು, ಸಂಧ್ಯಾವಂದನೆ ಬಿಡುವದು, ವ್ರತಾನುಷ್ಠಾನ ಇತ್ಯಾದಿಗಳ ಬಿಡುವದು ಹೇದಲ್ಲ. ಬದಲಿಂಗೆ, ಸತ್ಕರ್ಮವ ಮಾಡಿ ಅದರ ಫಲವ ಬಯಸದ್ದೆ ಇಪ್ಪದು ಹೇಳಿ ಅರ್ಥ. ಯಾವ ಕರ್ಮವೇ ಇರಲಿ ಅದರ ಭಗವದ್ ಪ್ರೀತ್ಯರ್ಥ ಮಾಡೆಕು ಹೊರತು ಫಲ ಬಯಕೆಂದ ಅಲ್ಲ.

ಇನ್ನು ಇಲ್ಲಿ ಕವಯಃ ಮತ್ತೆ ವಿಚಕ್ಷಣಾಃ ಹೇಳಿ ಎರಡು ವಿಶೇಷ ಪದಬಳಕೆ ಆದ್ದು ಕಾಣುತ್ತು. ಶಬ್ದಾರ್ಥದ ಸಂಬಂಧವ ತಿಳುದೋರು ಕವಿಗೊ, ಶಬ್ದಾರ್ಥವ ತಿಳುದು ಅದರ ಅನುಭವಿಸಿ ಆಚರುಸುವವು ವಿಚಕ್ಷಣರು. ಕವಿಗೊ ಮತ್ತೆ ವಿಚಕ್ಷಣರು ಸಂನ್ಯಾಸ ಮತ್ತೆ ತ್ಯಾಗಕ್ಕೆ ಈ ವಿವರಣೆಯ ಕೊಡುತ್ತವು ಹೇದು ಹೇಳಿದ್ದ° ಇಲ್ಲಿ ಭಗವಂತ°.

ಶ್ಲೋಕ

ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥೦೩॥

ಪದವಿಭಾಗ

ತ್ಯಾಜ್ಯಮ್ ದೋಷವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ । ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ ॥

ಅನ್ವಯ

ಏಕೇ ಮನೀಷಿಣಃ ಕರ್ಮ ದೋಷವತ್ ತ್ಯಾಜ್ಯಮ್ ಇತಿ ಪ್ರಾಹುಃ , ಅಪರೇ ಚ ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮ್ ಇತಿ (ಆಹುಃ) ।

ಪ್ರತಿಪದಾರ್ಥ

ಏಕೇ ಮನೀಷಿಣಃ – ಒಂದು ಗುಂಪಿನ ಜನಂಗೊ (ಮನುಷ್ಯರು) [ಕೆಲವರು ಹೇದರ್ಥ], ಕರ್ಮ – ಕರ್ಮವ, ದೋಷವತ್ – ದೋಷದ ಕಾರಣಂದ, ತ್ಯಾಜ್ಯಮ್ – ತ್ಯಜಿಸೆಕ್ಕಾದ್ದು, ಇತಿ ಪ್ರಾಹುಃ – ಹೇದು ಹೇಳಿದ್ದವು, ಅಪರೇ – ಅನ್ಯರು, ಚ – ಕೂಡ, ಯಜ್ಞ-ದಾನ-ತಪಃ-ಕರ್ಮ – ಯಜ್ಞ, ದಾನ, ತಪಸ್ಸು ಕರ್ಮಂಗಳ, ನ ತ್ಯಾಜ್ಯಮ್ – ಬಿಡ್ಳಾಗ (ತ್ಯಜಿಸಲಾಗ), ಇತಿ ಆಹುಃ – ಹೇದು ಹೇಳಿದ್ದವು.

ಅನ್ವಯಾರ್ಥ

ಕರ್ಮವು (ಕಾಮ್ಯಕರ್ಮವು) ದೋಷಯುಕ್ತ ಕಾರಣಂದ ಅವುಗಳ ಬಿಟ್ಟುಬಿಡೆಕು ಹೇದು ಕೆಲವರು ಅಭಿಪ್ರಾಯ ಪಡುತ್ತವು, ಇನ್ನೂ ಕೆಲವು ಜೆನಂಗೊ ಯಜ್ಞ-ದಾನ-ತಪಸ್ಸು ಕರ್ಮಂಗಳ ಬಿಡ್ಳೇ ಆಗ ಹೇದು ಹೇಳುತ್ತವು.

ತಾತ್ಪರ್ಯ / ವಿವರಣೆ

ಇಲ್ಲಿ ಕರ್ಮ ಹೇಳ್ವದರ ಎರಡು ಆಯಾಮಲ್ಲಿ ತೆಕ್ಕೊಳ್ಳೆಕು. ಸುರುವಾಣ ಅರ್ಥಲ್ಲಿ ಕರ್ಮ ಹೇಳಿರೆ ಫಲಾಪೇಕ್ಷೆಯ ಕಾಮ್ಯ ಕರ್ಮ. ಇನ್ನೊಂದು ಫಲಾಪೇಕ್ಷೆ ತೊರೆದ ಕರ್ತವ್ಯ ಕರ್ಮ. ವಿದ್ವಾಂಸರ ಅಭಿಪ್ರಾಯದಂತೆ ಫಲಾಪೇಕ್ಷೆಯ ಕಾಮ್ಯಕರ್ಮ ದೋಷಯುಕ್ತ, ಅದರಿಂದ ಆಧ್ಯಾತ್ಮಿಕ ಸಾಧನೆಯ ಪಥಲ್ಲಿ ಉನ್ನತಿ ಪಡವಲೆ ಸಾಧ್ಯ ಇಲ್ಲೆ. ಅದು ಕೇವಲ ಐಹಿಕ ಲಾಭದ ಗಳಿಕೆ ಮಾಡ್ಳೆ ಮಾಂತ್ರ ಸಾಧನ ಅಕ್ಕಷ್ಟೆ. ಇನ್ನೊಂದು ಫಲಾಪೇಕ್ಷೆಯ ಬಿಟ್ಟ ಕರ್ಮ. ಅದು ನಿಷ್ಕಾಮ ಕರ್ಮ. ಅದು ಅಧ್ಯಾತ್ಮಿಕ ಪ್ರಗತಿಯ ಸಂಕೇತ. ಅದರಿಂದ ಸಾಧನೆಯ ಗುರಿಯತ್ತ ಮುನ್ನೇರ್ಲೆ ಎಡಿಗು. ಭಗವಂತ° ಬಯಸುವದು ನಿಷ್ಕಾಮ ಕರ್ಮವ. ಹಾಂಗಾಗಿ ಆಧ್ಯಾತ್ಮಿಕ ಪ್ರಗತಿಯ ಕಾರಣವಾದ ಯಜ್ಞ, ದಾನ, ತಪಸ್ಸು ಕರ್ಮಂಗಳ ಎಂದಿಂಗೂ ಬಿಡ್ಳಾಗ ಹೇಳ್ವದು ಕೆಲವು ವಿದ್ವಾಂಸರ ಅಭಿಪ್ರಾಯ.

ಕರ್ಮತ್ಯಾಗದ ವಿಷಯವಾಗಿ ಒಂದೊಂದೊದ್ದಿಕ್ಕೆ  (ಒಂದೊಂದು ಶಾಸ್ತ್ರಲ್ಲಿ) ಒಂದೊಂದು ರೀತಿಲಿ ಹೇಳಲ್ಪಟ್ಟಿದು ಹೇಳ್ತದು ಈ ಮಾತಿಂದ ನವಗೆ ಅಂದಾಜು ಮಾಡ್ಳಾವ್ತು. ಆದರೆ ಎಲ್ಲಾ ಶಾಸ್ತ್ರದ ತಿರುಳು ಒಂದೇ. ಕೆಲವು ತಿಳುದೋರು ಹೇಳ್ತವು – ಕರ್ಮವ ಬಿಡೆಕು. ಇಲ್ಲಿ ಕರ್ಮ ಹೇಳ್ವದು ಫಲಾಪೇಕ್ಷೆಂದ ಮಾಡುವ ಕರ್ಮವ. ಇನ್ನು ಕೆಲವು ವೇದಾನುಯಾಯಿಗೊ ಹೇಳ್ತವು -ಯಜ್ಞ-ದಾನ-ತಪಸ್ಸು ಮಾಡ್ಳೇ ಬೇಕು, ಬಿಡ್ಳೇ ಆಗ. ಉಸಿರಿಪ್ಪನ್ನಾರ ಈ ಕರ್ಮವ ಮಾಡಿಗೋಂಡೇ ಇರೆಕು. ಹೇಳಿದ್ದದು ಎರಡೂ ತಿಳುದೋರೆ. ಹಾಂಗಿದ್ದರೆ ಈ ತ್ಯಾಗ ಹೇಳಿರೆ ಎಂತರ? ತ್ಯಾಗದ ಬಗ್ಗೆ ರಜಾ ಹೆಚ್ಚಿನ ಮಾಹಿತಿಯ ತಿಳಿಯೇಕ್ಕಾವ್ತು –

ಶ್ಲೋಕ

ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷ್ಯವ್ಯಾಘ್ರ ತ್ರಿವಿಧ ಸಂಪ್ರಕೀರ್ತಿತಃ ॥೦೪॥

ಪದವಿಭಾಗ

ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ । ತ್ಯಾಗಃ ಹಿ ಪುರುಷ-ವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥

ಅನ್ವಯ

ಹೇ ಭರತಸತ್ತಮ! ತತ್ರ ತ್ಯಾಗೇ ಮೇ ನಿಶ್ಚಯಂ ಶೃಣು । ಹೇ ಪುರುಷ-ವ್ಯಾಘ್ರ!, ತ್ಯಾಗಃ ಹಿ ತ್ರಿವಿಧಃ ಸಂಪ್ರಕೀರ್ತಿತಃ ಅಸ್ತಿ ।

ಪ್ರತಿಪದಾರ್ಥ

ಹೇ ಭರತಸತ್ತಮ! – ಏ ಭರತವಂಶಲ್ಲಿ ಶ್ರೇಷ್ಠನಾದವನೇ!, ತತ್ರ – ಅಲ್ಲಿ, ತ್ಯಾಗೇ – ತ್ಯಾಗದ ವಿಷಯಲ್ಲಿ,  ಮೇ – ಎನ್ನತ್ರಂದ, ನಿಶ್ಚಯಂ – ನಿರ್ಧಾರವ, ಶೃಣು – ಕೇಳು, ಹೇ ಪುರುಷ-ವ್ಯಾಘ್ರ – ಏ ಪುರುಷವ್ಯಾಘ್ರನೇ!, ತ್ಯಾಗಃ ಹಿ – ತ್ಯಾಗವು ಖಂಡಿತವಾಗಿಯೂ, ತ್ರಿವಿಧಃ – ಮೂರು ಬಗೆ ಹೇದು, ಸಂಪ್ರಕೀರ್ತಿತಃ – ಘೋಷಿಸಲಾಯ್ದು.

ಅನ್ವಯಾರ್ಥ

ಏ ಭರತವಂಶಲ್ಲಿ ಶ್ರೇಷ್ಥನಾದವನೇ!, ತ್ಯಾಗದ ವಿಷಯಲ್ಲಿ ನಿಶ್ಚಯ ಎಂತರ ಹೇಳ್ವದರ ಎನ್ನತ್ರಂದ  ನೀನು ಕೇಳು. ಏ ಮನುಷ್ಯರಲ್ಲಿ ವ್ಯಾಘ್ರ ಎನಿಸಿಗೊಂಡವನೇ!, ತ್ಯಾಗವು ಮೂರು ಬಗೆ ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ತ್ಯಾಗದ ವಿಷಯವಾಗಿ ಎನ್ನತ್ರಂದ ಇತ್ಯರ್ಥವಾಗಿ / ಖಂಡಿತವಾಗಿ / ನಿರ್ಧಾರವಾಗಿ/ ನಿಶ್ಚಯವಾಗಿ ಎನ್ನತ್ರಂದ ಕೇಳಿ ತಿಳುಕ್ಕೊ ಹೇಳಿ ಭಗವಂತ° ಅರ್ಜುನಂಗೆ ಹೇಳುತ್ತ°. ಯಜ್ಞ, ದಾನ , ತಪಸ್ಸು ಹೇದು ಹೇಂಗೆ ಮೂರು ವಿಧ ಇದ್ದೋ ಹಾಂಗೇ ತ್ಯಾಗಲ್ಲಿಯೂ ಮೂರು ವಿಧ ಇದ್ದು.

ಇಲ್ಲಿ ಭಗವಂತ° ಅರ್ಜುನನ ಭರತಸತ್ತಮ ಮತ್ತೆ ಪುರುಷವ್ಯಾಘ್ರ ಹೇಳ್ವ ಎರಡು ವಿಶೇಷ ಪದಂದ ದೆನಿಗೊಂಡಿದ°. ಭರತವಂಶದ ಅರಸರ ಮಾಲಿಕೆಲಿ ಗಣ್ಯನಾದವ° ಅರ್ಜುನ° ಹೇಳಿ ಮೇಲ್ನೋಟದ ಅರ್ಥ. ಇಲ್ಲಿ ಭಗವಂತನತ್ರೆ ಮತ್ತೆ ಜ್ಞಾನಲ್ಲಿ ರತನಾದವ°, ಭಕ್ತಿ ಇಪ್ಪವ° – ಅರ್ಜುನ° ಹೇಳ್ವ ಒಳಧ್ವನಿ. ‘ಪುರುಷವ್ಯಾಘ್ರ’ ಹೇಳಿರೆ ಪುರುಷರಲ್ಲಿ ಶ್ರೇಷ್ಠ ಹೇಳಿ ಮೇಲ್ನೋಟದರ್ಥ. ಭಗವಂತನ ಕಡೆಂಗೆ ತಮ್ಮ ಮನಸ್ಸಿನ ಹರುದು ಬಿಟ್ಟವು – ಪುರುಷರು. ಅವರಲ್ಲಿ ಶ್ರೇಷ್ಥ – ‘ಪುರುಷಶ್ರೇಷ್ಠ°’. ಹೇಳಿರೆ ಜ್ಞಾನಿಗಳಲ್ಲಿ ಶ್ರೇಷ್ಠನಾದವ° – ಅರ್ಜುನ° ಹೇದರ್ಥ. ನಾವೂ ಕೂಡ ನಮ್ಮ ಜೀವನಲ್ಲಿ ಭರತಸತ್ತಮ, ಪುರುಷವ್ಯಾಘ್ರ ಆಯೇಕು, ಅಂಬಗಷ್ಟೇ ಭಗವಂತನ ಸಂದೇಶ ನವಗೂ ಅರ್ಥ ಅಕ್ಕಷ್ತೇ ಹೇದರ್ಥ ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ ।
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥೦೫॥

ಪದವಿಭಾಗ

ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಮ್ ಕಾರ್ಯಮ್ ಏವ ತತ್ । ಯಜ್ಞಃ ದಾನಮ್ ತಪಃ ಚ ಏವ ಪಾವನಾನಿ ಮನೀಷಿಣಾಮ್ ॥

ಅನ್ವಯ

ಯಜ್ಞ-ದಾನ-ತಪಃ-ಕರ್ಮ ನ ತ್ಯಾಜ್ಯಂ, ತತ್ ಕಾರ್ಯಮ್ ಏವ । ಯಜ್ಞಃ ದಾನಂ ತಪಃ (ಏತಾನಿ)  ಚ ಮನೀಷೀಣಾಂ ಪಾವನಾನಿ ಏವ (ಸಂತಿ) ।

ಪ್ರತಿಪದಾರ್ಥ

ಯಜ್ಞ-ದಾನ-ತಪಃ-ಕರ್ಮ – ಯಜ್ಞ, ದಾನ, ತಪಸ್ಸು ಕರ್ಮಂಗೊ, ನ ತ್ಯಾಜ್ಯಮ್ – ಎಂದಿಂಗೂ ಬಿಡಲ್ಪಡ್ಳಾಗ, ತತ್ ಕಾರ್ಯಮ್ ಏವ – ಅದು ಮಾಡೇಕ್ಕಾದ ಕಾರ್ಯವೇ ಖಂಡಿತವಾಗಿಯೂ, ಯಜ್ಞಃ ದಾನಮ್ ತಪಃ – ಯಜ್ಞ ದಾನ ತಪಸ್ಸು, (ಏತಾನಿ – ಇವುಗೊ), ಚ  ಮನೀಷಿಣಾಮ್ – ಮಹಾತ್ಮರಿಂಗೂ ಕೂಡ, ಪಾವನಾನಿ – ಶುದ್ಧಿಕಾರಕಂಗೊ, ಏವ – ಖಂಡಿತವಾಗಿಯೂ, (ಸಂತಿ – ಆಗಿದ್ದು).

ಅನ್ವಯಾರ್ಥ

ಯಜ್ಞ ದಾನ ತಪಸ್ಸು ಕರ್ಮಂಗೊ ಎಂದೂ ಬಿಡಲ್ಪಡಬೇಕಾದ್ದಲ್ಲ. ಅದು ಮಾಡೇಕಾದ ಮಾಡಿಗೊಂಡಿರೆಕಾದ ಕಾರ್ಯವೇ ಆಗಿದ್ದು. ಮಹಾತ್ಮರಿಂಗೂ ಕೂಡ ಯಜ್ಞ ದಾನ ತಪಸ್ಸು ಕರ್ಮಂಗೊ ಪಾವನ ಕಾರ್ಯವೇ ಆಗಿದ್ದು.

ತಾತ್ಪರ್ಯ / ವಿವರಣೆ

ಫಲಾಪೇಕ್ಷೆ ಇಲ್ಲದ್ದೆ ಸರ್ವದರಲ್ಲಿಯೂ ಭಗವಂತನ ಕಂಡುಗೊಂಡು ಭಗವಂತನ ಪೂಜಾಸ್ವರೂಪವಾಗಿ ಮಾಡುವ ಕರ್ಮವೇ ಯಜ್ಞ ದಾನ ತಪಸ್ಸುಗಳೆಂಬ ಕರ್ಮಂಗೊ. ಅದು ಎಂದೂ ಆರೂ ಬಿಡೇಕ್ಕಾದ ಕಾರ್ಯ ಅಲ್ಲ, ಬದಲಾಗಿ ಮಾಡೇಕ್ಕಾದ ಕಾರ್ಯವೆ. ಇನ್ನೂ ಹೇಳ್ತರೆ, ಮಹಾತ್ಮರಿಂಗೂ ಈ ಯಜ್ಞದಾನತಪಃ ಕ್ರಿಯೆಗೊ ಮತ್ತೂ ಪುಣ್ಯಪ್ರದ ಕಾರ್ಯವೇ ಆಗಿದ್ದು. ಈ ಕರ್ಮ / ಕಾರ್ಯ  ನಮ್ಮ ಜೀವನವ ಪಾವನಗೊಳುಸುತ್ತು. ಇದಕ್ಕಿಂತ ಉತ್ತಮವಾದ ಕಾರ್ಯ ಇನ್ನೊಂದಿಲ್ಲೆ. ಹಾಂಗಾಗಿ ನಮ್ಮ ಜೀವನದ ಪ್ರೈಯೊಂದು ಕ್ರಿಯೆಯೂ ಕೂಡ ಯಜ್ಞ-ದಾನ-ತಪಃ ಸ್ವರೂಪ ಉಳ್ಳದ್ದಾಯೇಕು.

ಶ್ಲೋಕ

ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥೦೬॥

ಪದವಿಭಾಗ

ಏತಾನಿ ಅಪಿ ತು ಕರ್ಮಾಣಿ ಸಂಗಮ್ ತ್ಯಕ್ತ್ವಾ ಫಲಾನಿ ಚ । ಕರ್ತವ್ಯಾನಿ ಇತಿ ಮೇ ಪಾರ್ಥ ನಿಶ್ಚಿತಮ್ ಮತಮ್ ಉತ್ತಮಂ ॥

ಅನ್ವಯ

ಅಪಿ ತು ಏತಾನಿ ಕರ್ಮಾಣಿ ಸಂಗಂ ಫಲಾನಿ ಚ ತ್ಯಕ್ತ್ವಾ ಕರ್ತವ್ಯಾನಿ  ಇತಿ,  ಹೇ ಪಾರ್ಥ!, ಮೇ ನಿಶ್ಚಿತಮ್ ಉತ್ತಮಂ ಮತಮ್ (ಅಸ್ತಿ) ।

ಪ್ರತಿಪದಾರ್ಥ

ಅಪಿ ತು ಏತಾನಿ ಕರ್ಮಾಣಿ – ಈ ಕರ್ಮಂಗಳಾದರೋ, ಸಂಗಂ – ಸಂಗವ (ಅಂಟು, ಆಸಕ್ತಿ, ಮಮತೆ ), ಫಲಾನಿ – ಕರ್ಮಫಲವ, ಚ – ಕೂಡ  ತ್ಯಕ್ತ್ವಾ – ಬಿಟ್ಟಿಕ್ಕಿ, ಕರ್ತವ್ಯಾನಿ – ಮಾಡೇಕ್ಕಪ್ಪದು. ಇತಿ – ಈ ರೀತಿಯಾಗಿ (ಹೇದು), ಹೇ ಪಾರ್ಥ! – ಏ ಅರ್ಜುನ!,  ಮೇ ನಿಶ್ಚಿತಮ್ – ಎನ್ನ ನಿಶ್ಚಿತವಾದ, ಉತ್ತಮಮ್ ಮತಮ್ (ಅಸ್ತಿ) – ಉತ್ತಮವಾದ ಅಭಿಪ್ರಾಯವು ಆಗಿದ್ದು.

ಅನ್ವಯಾರ್ಥ

ಏ ಅರ್ಜುನ!, ಎಲ್ಲ ಕರ್ಮಂಗಳ ಫಲದ ಆಸಕ್ತಿ, ಅಥವಾ ಅಪೇಕ್ಷೆಯ ಬಿಟ್ಟು ಮಾಡೇಕ್ಕಾದ ಕರ್ತವ್ಯವಾಗಿದ್ದು ಹೇದು ಎನ್ನ ಉತ್ತಮವಾದ ಅಂತಿಮ (ನಿಶ್ಚಿತ) ಅಭಿಪ್ರಾಯವಾಗಿದ್ದು.

ತಾತ್ಪರ್ಯ / ವಿವರಣೆ

ಕರ್ಮ ಮಾಡುವಾಗ ಅದರಲ್ಲಿ ಬಪ್ಪ ಮೂಲ ದೋಷ ‘ಆನು ಮಾಡಿದೆ, ಎನ್ನಂದಲಾಗಿ ಆತು’ ಹೇಳ್ವ ಅಹಂಕಾರ. ಇದರೊಟ್ಟಿಂಗೆ ನಮ್ಮ ಅಪೇಕ್ಷೆ/ಬಯಕೆಗಳ ಪಟ್ಟಿಯ ಕೊಟ್ಟು ಫಲಾಪೇಕ್ಷೆಂದ ಕರ್ಮ ಮಾಡುತ್ತದು. ಇದು ಮನುಷ್ಯ° ಕರ್ಮಲ್ಲಿ ನಿರತನಪ್ಪಗ ಮಾಡ್ವ ಅತೀ ದೊಡ್ಡ ದೋಷ. ಅಹಂಕಾರಂದ ಕರ್ಮ ಮಾಡಿರೆ ಭಗವಂತ° ಅದರ ತಿರುಗಿ ಸಾನ ನೋಡ°. ಅದು ವ್ಯರ್ಥ ಪ್ರಯತ್ನ / ಕರ್ಮ. ಎಂತಕೆ ಹೇಳಿರೆ ಅಹಂಕಾರ ಇಪ್ಪಲ್ಯಂಗೆ ಭಗವಂತ ಒಲಿತ್ತನಿಲ್ಲೆ. ಇನ್ನು ಫಲದ ಆಸೆಂದ ಕರ್ಮ ಮಾಡುತ್ತದು. ಫಲದಾಸೆಂದ ಕರ್ಮ ಮಾಡಿಕ್ಕಿ ಒಂದು ವೇಳೆ ಆ ಫಲ ಸಿಕ್ಕದ್ರೆ ಮತ್ತೆ ಕರ್ಮಲ್ಲಿ ಅನಾಸಕ್ತಿ ಅಥವಾ ಕೀಳರಿಮೆ, ದ್ವೇಷ , ಜಿಗುಪ್ಸೆ ಬಪ್ಪದು. ಇದು ಫಲಾಪೇಕ್ಷೆಂದ ಕರ್ಮ ಮಾಡಿಯಪ್ಪಗ ಅಪ್ಪ ಅನಾಹುತ. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದದು – ‘ನಿಶ್ಚಿತವಾಗಿ ಹೇಳ್ತರೆ ವ್ಯಾಮೋಹ ಮತ್ತೆ ಫಲಾಪೇಕ್ಷೆಯ ಬಿಟ್ಟಿಕ್ಕಿ ಮಾಡುವ ಯಜ್ಞ ದಾನ ತಪಃ ಕರ್ಮಂಗೊ ಉತ್ತಮವಾದ್ದು. ಇದು ನಿಶ್ಚಿತವಾದ ಎನ್ನ ಅಭಿಪ್ರಾಯ’.

ಹಾಂಗಾಗಿ ಮನುಷ್ಯ ಬಿಡೇಕ್ಕಾದ್ದು ಕರ್ಮವ ಅಲ್ಲ. ಕರ್ಮಲ್ಲಿಪ್ಪ ಆಸಕ್ತಿ ಅರ್ಥಾತ್ ವ್ಯಾಮೋಹ ಮತ್ತೆ ಅದರ ಫಲಾಪೇಕ್ಷೆ. ಇದು ಕರ್ಮ ಸಿದ್ಧಾಂತದ ಅತ್ಯಂತ ಶ್ರೇಷ್ಥ ತೀರ್ಮಾನ. ಕಾಮ್ಯಕರ್ಮವ ಬಿಡುವದು, ಫಲಾಪೇಕ್ಷೆಯ ಬಿಡುವದು ತ್ಯಾಗ ಹೊರತು ನಿಯತಕರ್ಮವ ಬಿಡುವದು ತ್ಯಾಗ ಅಲ್ಲ ಹೇಳ್ವ ನಿಶ್ಚಿತ ತೀರ್ಮಾನ/ಸಿದ್ಧಾಂತವ ಭಗವಂತ° ಇಲ್ಲಿ ಹೇಳಿದಾಂಗೆ ಆತು.

ಶ್ಲೋಕ

ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ ।
ಮೋಹಾತ್ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ ॥೦೭॥

ಪದವಿಭಾಗ

ನಿಯತಸ್ಯ ತು ಸಂನ್ಯಾಸಃ ಕರ್ಮಣಃ ನ ಉಪಪದ್ಯತೇ । ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ ॥

ಅನ್ವಯ

ನಿಯತಸ್ಯ ಕರ್ಮಣಃ ತು ಸಂನ್ಯಾಸಃ ನ ಉಪಪದ್ಯತೇ । ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ ॥

ಪ್ರತಿಪದಾರ್ಥ

ನಿಯತಸ್ಯ – ವಿಹಿತವಾದ, ಕರ್ಮಣಃ – ಕರ್ಮಂಗಳ, ತು – ಆದರೋ, ಸಂನ್ಯಾಸಃ – ತ್ಯಜಿಸುವದು (ವಿರಕ್ತಿ), ನ ಉಪಪದ್ಯತೇ – ಎಂದೂ ಅಪ್ಪಲಾಗದ್ದು (ಯೋಗ್ಯವಲ್ಲದ್ದು), ಮೋಹಾತ್ – ಮೋಹಂದ (ಭ್ರಾಂತಿಂದ) ತಸ್ಯ ಪರಿತ್ಯಾಗಃ – ಅದರ ಬಿಡುವಿಕೆ (ತ್ಯಾಗ), ತಾಮಸಃ ಪರಿಕೀರ್ತಿತಃ – ತಾಮಸ ಗುಣ ಹೇದು ಹೇಳಲ್ಪಟ್ಟಿದು.

ಅನ್ವಯಾರ್ಥ

ವಿಹಿತ (ವಿಧಿತ) ಕರ್ಮಂಗಳನ್ನಾದರೋ ತ್ಯಜಿಸಲೇ ಆಗ. ಮೋಹಂದ ನಿಯತಕರ್ಮಂಗಳ ಬಿಟ್ಟುಬಿಡುತ್ತದು ತಾಮಸ ಗುಣ ಹೇದು ಹೇಳಲ್ಪಟ್ಟಿದು.

ತಾತ್ಪರ್ಯ / ವಿವರಣೆ

ಭಗವಂತ° ಅದನ್ನೇ ಒತ್ತಿ ಹೇಳಿ ಸ್ಪಷ್ಟಪಡುಸುತ್ತ. ಮನುಷ್ಯ° ನಿಯತ ಕರ್ಮವ ಬಿಡ್ಳಾಗ. ಮೋಹದ ಕಾರಣಂದ ಕರ್ಮವ ಬಿಟ್ಟು ಬಿಡುವದು ಅದು ತಾಮಸ ತ್ಯಾಗ ಆವ್ತು. ಅದು ತಪ್ಪು ತಿಳುವಳಿಕೆ. ಇಲ್ಲಿ ‘ನಿಯತ ಕರ್ಮ’ ಹೇಳಿರೆ ನಮ್ಮ ಜೀವ ಯೋಗ್ಯತೆಗೆ ಯಾವದು ಶಾಸ್ತ್ರೋಕ್ತವೋ (ನಿಯಮಿತವೋ) ಆ ಕರ್ಮ. ಎಂತಕೆ ಹೇಳಿರೆ ಕರ್ಮ ಎಲ್ಲೋರಿಂಗೂ ಒಂದೇ ನಮೂನೆ ಅಲ್ಲ. ವರ್ಣಾಶ್ರಮಧರ್ಮಕ್ಕನುಗುಣವಾಗಿ ಕರ್ಮ ಶಾಸ್ತ್ರಲ್ಲಿ ಹೇಳಲ್ಪಟ್ಟಿದು. ಅವ್ವವ್ವು ಮಾಡೇಕ್ಕಾದ ಕರ್ತವ್ಯವ ಅವ್ವವ್ವೇ ಮಾಡೇಕು. ಅವ್ವವ್ವಕ್ಕೆ ಹೇಳದ್ದ ಕರ್ಮವ ಮಾಡುವದು ಅತಿಕ್ರಮಣ ಆವ್ತು. ಹಾಂಗೇ ಪ್ರಪತ್ಯೇಕ ವರ್ಗಲ್ಲಿ ಜೀವ ಅಂತಸ್ತಿಂಗೆ ಅನುಗುಣವಾಗಿ ಕರ್ಮವ ವಿಧಿಸಲ್ಪಟ್ಟಿದು. ಉದಾಹರಣೆಗೆ – ಯತಿಗೊ ಅಗ್ನಿಮುಖಲ್ಲಿ ಆಹುತಿ ಕೊಡುವಾಂಗಿಲ್ಲೆ, ಬ್ರಹ್ಮಚಾರಿಗೋ ಪೂರ್ಣಪ್ರಮಾಣದ ಅಗ್ನಿಹೋತ್ರ ಮಾಡುವಾಂಗಿಲ್ಲೆ. ಆದರೆ ಯತಿಗೊ ಜ್ಞಾನಯಜ್ಞವ ಮಾಡ್ಳಕ್ಕು. ಅದು ಅವರ ನಿಯತಕರ್ಮ. ಎಲ್ಲ ಕಾಲಲ್ಲಿಯೂ ಎಲ್ಲೋರು ಮಾಡ್ಳಕ್ಕಾದ್ದು ‘ನಾಮಯಜ್ಞ’ – ಅರ್ಥಾತ್ ಭಗವಂತನ ನಾಮ ಜಪ. ಈ ಯಜ್ಞ ಎಲ್ಲೋರಿಂಗೂ ವಿಹಿತ. ಇನ್ನು ದಾನ – ಬ್ರಹ್ಮಚಾರಿಗೊ ಕನ್ಯಾದಾನ ಮಾಡುವಾಂಗಿಲ್ಲೆ, ಅದು ಗೃಹಸ್ಥ ಮಾಡೇಕ್ಕಾದ್ದು. ಎಲ್ಲೋರು ಮಾಡ್ಳಕ್ಕಾದ ದಾನ – ಅಭಯದಾನ ಮತ್ತೆ ಜ್ಞಾನದಾನ. ಮತ್ತೆ ತಪಸ್ಸು – ಕೆಲವು ತಪಸ್ಸುಗಳ ಎಲ್ಲೋರು ಮಾಡ್ಳಾಗ. ಅದಕ್ಕೆ ವೇದದೀಕ್ಷೆ ಬೇಕಾವ್ತು. ಆದರೆ ಉಪವಾಸಾದಿ ಅನುಷ್ಠಾನ ಎಲ್ಲೋರು ಮಾಡ್ಳೆ ಶಾಸ್ತ್ರ ಸಮ್ಮತ. ಹೀಂಗೆ ಆರಿಂಗೆ ಯಾವ ಕರ್ಮ ನಿಯತವೋ ಆ ಕರ್ಮವ ಮಾಡೇಕು. ನಿಯತ ಕರ್ಮಲ್ಲಿ ಫಲಾಪೇಕ್ಷೆಯ ಪ್ರಶ್ನೆಯೇ ಇಪ್ಪಲಿಲ್ಲೆ. ತಪ್ಪು ತಿಳುವಳಿಕೆಂದ ನಿಯತಕರ್ಮವ ಬಿಟ್ರೆ ಅದು ತಾಮಸ ತ್ಯಾಗ ಹೇದಾವ್ತು ಹೇದು ಬನ್ನಂಜೆಯವರ ವ್ಯಾಖ್ಯಾನಂದಲೂ ಹೆರ್ಕಿದ್ದದು.

ಶ್ಲೋಕ

ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್ ।
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಬೇತ್ ॥೦೮॥

ಪದವಿಭಾಗ

ದುಃಖಮ್ ಇತಿ ಏವ ಯತ್ ಕರ್ಮ ಕಾಯ-ಕ್ಲೇಶ-ಭಯಾತ್ ತ್ಯಜೇತ್ । ಸಃ ಕೃತ್ವಾ ರಾಜಸಮ್ ತ್ಯಾಗಮ್ ನ ಏವ ತ್ಯಾಗ-ಫಲಮ್ ಲಭೇತ್ ॥

ಅನ್ವಯ

(ಯಃ) ದುಃಖಮ್ ಇತಿ (ಮತ್ವಾ) ಏವ ಯತ್ ಕರ್ಮ ಕಾಯ-ಕ್ಲೇಶ-ಭಯಾತ್ ತ್ಯಜೇತ್, ಸಃ ರಾಜಸಂ ತ್ಯಾಗಂ ಕೃತ್ವಾ ತ್ಯಾಗ-ಫಲಂ ನ ಏವ ಲಭೇತ್ ।

ಪ್ರತಿಪದಾರ್ಥ

(ಯಃ – ಯಾವಾತ°), ದುಃಖಂ ಇತಿ (ಮತ್ವಾ) – ದುಃಖ ಹೇದು ತಿಳ್ಕೊಂಡು, ಏವ – ಖಂಡಿತವಾಗಿಯೂ, ಯತ್ ಕರ್ಮ – ಯಾವ ಕರ್ಮವ, ಕಾಯ-ಕ್ಲೇಶ-ಭಯಾತ್ – ಶಾರೀರಿಕ ತೊಂದರೆಯ ಹೆದರಿಕೆಂದ, ತ್ಯಜೇತ್ – ಬಿಡುತ್ತನೋ, ಸಃ – ಅವ°, ರಾಜಸಮ್ ತ್ಯಾಗಮ್ – ರಜೋಗುಣಲ್ಲಿ ತ್ಯಾಗವ, ಕೃತ್ವಾ – ಮಾಡಿ, ತ್ಯಾಗ-ಫಲಮ್ ನ ಏವ ಲಭೇತ್ – ತ್ಯಾಗಪಲವ ಖಂಡಿತವಾಗಿಯೂ ಪಡೆತ್ತನಿಲ್ಲೆ.

ಅನ್ವಯಾರ್ಥ

ನಿಯಮಿತ ಕರ್ತವ್ಯಂಗಳ ದುಃಖದಾಯಕ ಹೇದಾಗಲೀ ಅಥವಾ ಕ್ಲೇಶದಾಯಕ ಹೇದಾಗಲೀ, ದೇಹಾಯಾಸದ ಭಯಂದಾಗಲೀ (ಶಾರೀರಿಕ ಹೆದರಿಕೆಂದ) ಬಿಟ್ಟುಬಿಡುವವ° ರಾಜಸಗುಣಂದ ತ್ಯಜಿಸಿದ ಹೇದು ಭಾವಿಸಲಾವ್ತು. ಅಂತಹ ಕರ್ಮಂದ ತ್ಯಾಗ ಮಾಡಿ  ತ್ಯಾಗದ ಫಲವ ಪಡೆತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಕರ್ಮ ಮಾಡ್ಳೆ ಮೈ ಬಗ್ಗದ್ದೆ, ಅಥವಾ ಒಗ್ಗದ್ದೆ, ಕಷ್ಟ ಆವ್ತು , ಶಾರೀರಿಕ ಬೇನೆ ಆವ್ತು ಇತ್ಯಾದಿ ಹೆದರಿಕೆಂದ ಕರ್ಮವ ತ್ಯಾಗ ಮಾಡುವದು ರಾಜಸ ಗುಣದ ತ್ಯಾಗ ಆವ್ತು. ಇಂತಹ ತ್ಯಾಗ ಮಾಡಿಯೂ ತ್ಯಾಗದ ಫಲ ದೊರಕುತ್ತಿಲ್ಲೆ. ನವಗೆ ನಿಯತ ಕರ್ಮ ಮಾಡ್ಳೇ ಬೇಕು ಹೇಳಿ ಗೊಂತಿದ್ದರೂ, ಅದರಿಂದ ದೇಹಕ್ಕೆ ಬೇನೆ ಆವ್ತು /ತ್ರಾಸ ಆವ್ತು, ಎಂಬಿತ್ಯಾದಿ ಕಾರಣಕ್ಕಾಗಿ ಕರ್ಮವ ಬಿಡುತ್ತದು ಸಮ ಅಲ್ಲ ಹೇಳಿ ಭಗವಂತ° ಇಲ್ಲಿ ಹೇಳಿದ್ದ°. ಅಂತಹ ತ್ಯಾಗ ರಾಜಸತ್ಯಾಗ ಹೇದಾವ್ತು. ಇದು ಏವತ್ತೂ ಉತ್ಕರ್ಷೆಗೆ ಸಾಧಕ ಆವ್ತಿಲ್ಲೆ. ಅದರಿಂದ ಯಾವ ತ್ಯಾಗದ ಫಲವೂ ಲಭಿಸುತ್ತಿಲ್ಲೆ. ಬನ್ನಂಜೆ ಹೇಳ್ತವು – ದೂರದರ್ಶನಲ್ಲಿ ಏವುದೋ ಒಂದು ಅಂಬೇರ್ಪಿನ, ಮುಖ್ಯವಾದ ಧಾರವಾಹಿಯೋ, ಕಾರ್ಯಕ್ರಮವೋ  ಇದ್ದು , ಅದರ ಅಗತ್ಯ ನೋಡೆಕು ಹೇಳಿ ಮನಸ್ಸಿಲ್ಲಿ ಮಡಿಕ್ಕೊಂಡು ಅದರ ಸಾಧುಸಲೆ ನೆವನ ಒಂದರ ಹುಟ್ಟುಹಾಕಿ ಆ ಮೂಲಕವಾಗಿ ಕರ್ಮಂದ ವಿಮುಖನಪ್ಪದು, ಕರ್ಮವ ಕೈ ಬಿಡುವದು, ಸಂಧ್ಯಾವಂದನೆ ಹೊತ್ತಿಂಗೆ ಬೇರೆಂತದೋ ಕಾರ್ಯಕ್ರಮ ಇದ್ದು ಹೇಳಿ ನೆಪ ಹಿಡ್ಕೊಂಡು ಸಂಧ್ಯಾವಂದನೆ ಮಾಡದ್ದೆ ಬೇರೆಂತದೋ ಕಾರ್ಯಲ್ಲಿ ಮಗ್ನನಪ್ಪದು ಅಥವಾ ಟಿವಿ ನೋಡಿಗೊಂಡು ಕೂಬದು ಇತ್ಯಾದಿಗೊ ಅಂತೇ ಹೊತ್ತು ಕಳವ ಪಂಚಾತಿಗೆ ಆವ್ತಷ್ಟೆ ಹೊರತು ಕರ್ಮ ತ್ಯಾಗ ಹೇದು ಹೇದೇನಾವ್ತಿಲ್ಲೆ.

ಶ್ಲೋಕ

ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇsರ್ಜುನ ।
ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥೦೯॥

ಪದವಿಭಾಗ

ಕಾರ್ಯಮ್ ಇತಿ ಏವ ಯತ್ ಕರ್ಮ ನಿಯತಮ್ ಕ್ರಿಯತೇ ಅರ್ಜುನ । ಸಂಗಮ್ ತ್ಯಕ್ತ್ವಾ ಫಲಮ್ ಚ ಏವ ಸಃ ತ್ಯಾಗಃ ಸಾತ್ತ್ವಿಕಃ ಮತಃ ॥

ಅನ್ವಯ

ಹೇ ಅರ್ಜುನ!, ಕಾರ್ಯಮ್ ಇತಿ (ಮತ್ವಾ) ಏವ ಯತ್ ನಿಯತಂ ಕರ್ಮ, ಸಂಗಂ ಫಲಂ ಚ ಏವ ತ್ಯಕ್ತ್ವಾ ಕ್ರಿಯತೇ, ಸಃ ತ್ಯಾಗಃ ಸಾತ್ತ್ವಿಕಃ ಮತಃ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಕಾರ್ಯಮ್ – ಮಾಡ್ಳೇಬೇಕಾದ ಕಾರ್ಯ, ಇತಿ (ಮತ್ವಾ) – ಹೇದು ತಿಳ್ಕೊಂಡು, ಏವ – ನಿಜವಾಗಿಯೂ, ಯತ್ ನಿಯತಮ್ ಕರ್ಮ – ಯಾವ ವಿಹಿತ ಕರ್ಮವ, ಸಂಗಮ್ – ಸಂಗವ (ಮೋಹ/ಆಸಕ್ತಿ), ಫಲಮ್ ಚ – ಫಲಾಪೇಕ್ಷೆಯನ್ನೂ ಕೂಡ, ಏವ – ಖಂಡಿತವಾಗಿಯೂ, ತ್ಯಕ್ತ್ವಾ – ಬಿಟ್ಟಿಕ್ಕಿ, ಕ್ರಿಯತೇ – ಮಾಡಲ್ಪಡುತ್ತೋ, ಸಃ ತ್ಯಾಗಃ – ಆ ತ್ಯಾಗವು, ಸಾತ್ತ್ವಿಕಃ ಮತಃ – ಸತ್ವಗುಣಲ್ಲಿ ಇಪ್ಪಂತಾದು ಹೇದು ಅಭಿಪ್ರಾಯ.

ಅನ್ವಯಾರ್ಥ

ಏ ಅರ್ಜುನ!, ಮಾಡ್ಳೇಬೇಕಾದ ಕಾರ್ಯ ಹೇದು ತಿಳ್ಕೊಂಡು ಏವ ವಿಹಿತಕರ್ಮ ಕರ್ಮ ಇದ್ದೋ ಅದರ ಮೋಹ ಮತ್ತೆ ಫಲಾಪೇಕ್ಷೆಯ ಬಿಟ್ಟಿಕ್ಕಿ ಮಾಡಲ್ಪಡುತ್ತೋ ಅದು ಸಾತ್ವಿಕ ತ್ಯಾಗ ಹೇದು ಅಭಿಪ್ರಾಯ.

ತಾತ್ಪರ್ಯ / ವಿವರಣೆ

ವಿಹಿತ (ವಿಧಿತ) ಕರ್ಮಂಗಳ ಕರ್ತವ್ಯ ಹೇಳ್ವ ಮನೋಧರ್ಮಲ್ಲಿ ಆಚರುಸೆಕು ಹೇಳಿ ಭಗವಂತ° ಇಲ್ಲಿ ಒತ್ತಿ ಹೇಳ್ತ°. ಆ ಶಾಸ್ತ್ರ ವಿಹಿತ ಕರ್ಮ ನಿಷ್ಕಾಮ ಕರ್ಮವಾಗಿ ಆಚರುಸೆಕು. ಅಲ್ಲಿ ಫಲಾಪೇಕ್ಷೆಯೋ, ವ್ಯಾಮೋಹವೋ ಇಪ್ಪಲಾಗ. ವ್ಯಾಮೋಹ ಮತ್ತೆ ಫಲಾಪೇಕ್ಷೆಯ ಬಿಟ್ಟಿಕ್ಕಿ ಮಾಡಲ್ಪಡುವ ಕರ್ಮವು ಸಾತ್ವಿಕ ತ್ಯಾಗ ಹೇದು ಅನುಸುತ್ತು ಹೇಳಿ ಭಗವಂತ° ಅಭಿಪ್ರಾಯಪಡ್ತ°. ಸಂಪೂರ್ಣ ಕೃಷ್ಣಪ್ರಜ್ಞೆಂದ ಮಾತ್ರ ಈ ರೀತಿಯ ಸಾಧನೆ ಸಾಧ್ಯ. ಹಾಂಗಾಗಿ ಕೃಷ್ಣಪ್ರಜ್ಞೆ ಒಂದೇ ಆಧ್ಯಾತ್ಮಿಕ ಉನ್ನತಿಗೆ ಮೂಲ ಸಾಧನ.  ಹಾಂಗಾಗಿ ನಿಯತಕರ್ಮವ ನವಗೆ ಮಾಡದ್ದೆ ಇಪ್ಪಲೇ ಎಡಿಯ ಹೇಳ್ವ ಮಟ್ಟಕ್ಕೆ ನಮ್ಮ ಮನಸ್ಸು ನೆಲೆಗೊಳ್ಳೆಕು. ಮತ್ತೆ ಅದು ಕರ್ಮಸಂಗ ಮತ್ತೆ ಫಲಾಪೇಕ್ಷೆ ರಹಿತವಾಗಿ ಸಂಪೂರ್ಣ ಭಗವದ್ ಅರ್ಪಣಾ ಮನೋಭಾವಂದ ಮಾಡುವಂತಾಯೇಕು. ಅಂಬಗ ಅದು ಸಾತ್ವಿಕ ಗುಣ, ಆ ಮನೋಧರ್ಮಲ್ಲಿ ಆಚರುಸುವ ಕರ್ಮಲ್ಲಿ ಸಾತ್ವಿಕ ತ್ಯಾಗ ಎದ್ದು ಕಾಣುತ್ತು. ಹಾಂಗಾಗಿ ತ್ಯಾಗ ಹೇಳಿರೆ ಹೇಳಿರೆ ಕರ್ಮದ ತ್ಯಾಗ ಅಲ್ಲ ಬದಲಿಂಗೆ ಕರ್ಮಲ್ಲಿ ಐಹಿಕ ಕಾಮನೆ ಮತ್ತೆ ಫಲಾಪೇಕ್ಷೆಯ ತ್ಯಾಗ. ಕಾಮನೆ ಮತ್ತೆ ಅಪೇಕ್ಷೆಂದ ಬಪ್ಪದು ಅಹಂಕಾರ. ಅಹಂಕಾರವು ಮನುಷ್ಯನ ಸರ್ವನಾಶಕ್ಕೆ ಹೇತು, ಅದು ಸಾತ್ವಿಕತೆಗೆ ವಿರುದ್ಧವಾದ್ದು.

ಒಟ್ಟಿಲ್ಲಿ ಹೇಳ್ತರೆ, ಫಲಾಪೇಕ್ಷೆ ಇಲ್ಲದ್ದೆ ಅಹಂಕಾರವ ಬಿಟ್ಟು ನಿಯತ ಕರ್ಮವ ಮಾಡುವದು ಸಾತ್ವಿಕ ತ್ಯಾಗ, ಸೋಮಾರಿತನಂದ ಕಷ್ಟವಾವ್ತು ಹೇದು ನಿಯತಕರ್ಮವ ಬಿಡುವದು ರಾಜಸ ತ್ಯಾಗ ಮತ್ತೆ ತಪ್ಪು ತಿಳುವಳಿಕೆಂದ ಮೂಢ ನಂಬಿಕೆ ಹೇಳ್ವ ಅಜ್ಞಾನಂದ ನಿಯತ ಕರ್ಮವ ಮಾಡದ್ದೆ ಬಿಡುವದು ತಾಮಸ ತ್ಯಾಗ.

ಶ್ಲೋಕ

ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ ॥೧೦॥

ಪದವಿಭಾಗ

ನ ದ್ವೇಷ್ಟಿ ಅಕುಶಲಮ್ ಕರ್ಮ ಕುಶಲೇ ಅನುಷಜ್ಜತೇ । ತ್ಯಾಗೀ ಸತ್ತ್ವ-ಸಮಾವಿಷ್ಟಃ ಮೇಧಾವೀ ಛಿನ್ನ-ಸಂಶಯಃ ॥

ಅನ್ವಯ

(ಸಃ) ತ್ಯಾಗೀ ಸತ್ತ್ವ-ಸಮಾವಿಷ್ಟಃ ಮೇಧಾವೀ ಛಿನ್ನ-ಸಂಶಯಃ (ಚ ಭವತಿ), (ಸಃ) ಅಕುಶಲಂ ಕರ್ಮ ನ ದ್ವೇಷ್ಟಿ, ಕುಶಲೇ (ಚ) ನ ಅನುಷಜ್ಜತೇ ।

ಪ್ರತಿಪದಾರ್ಥ

(ಸಃ)ತ್ಯಾಗೀ – (ಆ) ಸಾತ್ವಿಕ ತ್ಯಾಗಿಯು, ಸತ್ತ್ವ-ಸಮಾವಿಷ್ಟಃ – ಸತ್ವಲ್ಲಿ ಮಗ್ನನಾಗಿಪ್ಪವ°, ಮೇಧಾವೀ – ಬುದ್ಧಿವಂತ°, ಛಿನ್ನ-ಸಂಶಯಃ (ಚ ಭವತಿ) – ಸಂಶಯಂಗಳ ಕತ್ತರಿಸಿದವ° (ಸಂಶಯರಹಿತ°)ನಾಗಿಯೂ ಆಗಿರುತ್ತ°. (ಸಃ) ಅಕುಶಲಮ್ ಕರ್ಮ – ಅವ° ಅಶುಭವಾದ ಕರ್ಮವ, ನ ದ್ವೇಷ್ಟಿ – ದ್ವೇಷಿಸುತ್ತನಿಲ್ಲೆ, ಕುಶಲೇ (ಚ) ಶುಭಲ್ಲಿಯೂ ಕೂಡ, ನ ಅನುಷಜ್ಜತೇ – ಅನುರಕ್ತನಾವುತ್ತನಿಲ್ಲೆ.

ಅನ್ವಯಾರ್ಥ

ಆ ಸಾತ್ವಿಕ ತ್ಯಾಗಿ ಸತ್ವಕರ್ಮಲ್ಲಿ ಮಗ್ನನಾಗಿಪ್ಪವನಾಗಿದ್ದು (ಸಾತ್ವಿಕನೆಲೆಲಿ ಇಪ್ಪವನಾಗಿದ್ದು) ಸಂಶಯಂಗಳ ಕತ್ತರಿಸಿದವನಾಗಿ (ಸಂಶಯರಹಿತನಾಗಿಪ್ಪನಾಗಿಪ್ಪವನಾಗಿ)ರುತ್ತ°. ಅವ° ಅಶುಭ ಕರ್ಮವ ದ್ವೇಷಿಸುತ್ತನಿಲ್ಲೆ, ಶುಭಕರ್ಮಲ್ಲಿ ಮೋಹಗೊಳ್ಳುತ್ತನೂ ಇಲ್ಲೆ.

ತಾತ್ಪರ್ಯ / ವಿವರಣೆ

ಸಂಪೂರ್ಣ ಕೃಷ್ಣಪ್ರಜ್ಞೆಲಿಪ್ಪೋನು ಅಥವಾ ಸಾತ್ವಿಕ ತ್ಯಾಗಿ ತನ್ನ ಸ್ಥಿತಿಲಿ ದೃಢವಾಗಿರುತ್ತ°. ಅವಂಗೆ ವಿಹಿತ ಕರ್ಮಲ್ಲಿ ಏವುದೇ ಸಂಶಯಂಗೊ ಇರ್ತಿಲ್ಲೆ. ಅವಂಗೆ ಕುಶಲ ಮತ್ತೆ ಅಕುಶಲ (ಶುಭ ಅಶುಭ) ಸಮಾನ. ಶುಭಕರ್ಮಲ್ಲಿ ಅನುರಕ್ತಿ ಅಶುಭ ಕರ್ಮಲ್ಲಿ ದ್ವೇಷ ಹೇಳಿ ಅವಂಗೆ ಇಲ್ಲೆ. ಅವನ ಮನಸ್ಸು ಒಂದರ್ಲೇ ದೃಢವಾಗಿ ನೆಲೆಸಿರುತ್ತು. ಅದುವೇ ಸಾತ್ವಿಕ ತ್ಯಾಗ /ಕರ್ಮ.

ಒಬ್ಬ ಸಾತ್ವಿಕ ತ್ಯಾಗಿ ಕರ್ಮವ ಯಾವ ರೀತಿಲಿ ನೋಡುತ್ತ ಹೇಳ್ವದರ ಭಗವಂತ° ಇಲ್ಲಿ ಹೇಳಿದ್ದ°. ಸಾಮಾನ್ಯ ಮನುಷ್ಯ ಕರ್ಮ ಮಾಡಿರೆ ಎಂತಕ್ಕು ಅದರಿಂದ ಎಂತ ಪ್ರಯೋಜನ ಸಿಕ್ಕುಗು, ಅದು ತನ್ನಿಂದ ಎಡಿಗಕ್ಕೋ ಇತ್ಯಾದಿಗಳ ಯೋಚಿಸಿ ಮತ್ತೆ ನಿರ್ಧಾರಕ್ಕೆ ಬಪ್ಪಲೆ ಪ್ರಯತ್ನ ಪಡುವವನಾಗಿರುತ್ತ°. ಆದರೆ ಸಾತ್ವಿಕ ತ್ಯಾಗಿಗೆ ವಿಹಿತ ಕರ್ಮಲ್ಲಿ ಏವುದೇ ಸಂಶಯಂಗೋ ಇಲ್ಲೆ. ಅವನ ಮನಸ್ಸು ಸಂಶಯಾತೀತವಾಗಿ ದೃಢವಾಗಿ ಇರುತ್ತು. ಒಳ್ಳೆದಾವ್ತು, ಕೆಟ್ಟದಾವ್ತು ಹೇಳ್ವ ಗೊಡವೆ ಅವಂಗೆ ಇಲ್ಲೆ. ಎಲ್ಲವೂ ಭಗವಂತನ ಅನುಜ್ಞೆ ಹೇಳಿ ಅಂವ ಎಲ್ಲವನ್ನೂ ಸಮಾನವಾಗಿ ಸ್ವೀಕರುಸುತ್ತ°. ಅವನ ಮನಸ್ಸು ಸತ್ವಗುಣಲ್ಲಿ ತುಂಬಿರುತ್ತು.  ತಾಮಸ, ರಾಜಸದ ಬಗ್ಗೆ ಅಂವ ತಲೆಕೆಡುಸುತ್ತನಿಲ್ಲೆ. ಜ್ಞಾನವಂತನಾಗಿ ಎಲ್ಲವನ್ನೂ ಭಗವಂತಂಗೆ ಅರ್ಪಿಸಿ ನಿಯತಕರ್ಮಲ್ಲಿ ನಿರತನಾಗಿರುತ್ತ°. ಅವನ ಮನಸ್ಸು ಸಂಪೂರ್ಣವಾಗಿ ಭಗವಂತನಲ್ಲಿ ಸಮಾವಿಷ್ಟವಾಗಿರುತ್ತು. ಹಾಂಗಾಗಿ ಅವಂಗೆ ಏವುದೇ ಗೊಂದಲವಾಗಲೀ, ಕ್ಲೇಶವಾಗಲೀ, ಸಂಶಯವಾಗಲೀ ಇಲ್ಲೆ.

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 01 – 10

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

2 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 01 – 10

  1. ಕಡೆಯ ಅಧ್ಯಾಯ ಬಂತು.ಚೆನ್ನೈ ಭಾವನ ಸುಲಲಿತವಾದ ವಿವರಣೆ ಮತ್ತೆ ಮತ್ತೆ ಮನನ ಮಾಡುವ ಹಾಂಗಿದ್ದು.

    1. ಭಗವದ್ಗೀತೆಯ ಅಕೇರಿಯಾಣ ಅಧ್ಯಾಯಕ್ಕೆ ಬತ್ತಾ ಇದ್ದು ನಾವೀಗ.ವಾರ೦ದ ವಾರಕ್ಕೆ ಆಸಕ್ತಿಯ ಹೆಚ್ಚಿಸಿಯೊ೦ಡಿದ್ದ ಭಾವನ ಶೈಲಿ ಹಾ೦ಗೂ ವ್ಯಾಖ್ಯಾನ ಎನಗೆ ತು೦ಬಾ ಮೆಚ್ಚಿಕೆ ಕೊಟ್ಟಿದು.ಇ೦ಥ ಕಾರ್ಯ ಅವು ಬಿಡದ್ದೆ ಮು೦ದುವರಿಸಿಗೊ೦ಡಿರಕು ಹೇದು ಇತ್ಲಾ೦ಗಿ೦ದ ವಿನ೦ತಿ.ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×