- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಸ್ವಭಾವಗುಣಕ್ಕನುಗುಣವಾಗಿ ಪ್ರಜ್ಞಾಪೂರ್ವಕ ತನ್ನ ಕಾರ್ಯಂಗಳ ಭಗವದರ್ಪಣಾದೃಷ್ಟಿಲ್ಲಿ ಮಾಡಿಗೊಂಡು ಹೋಯೇಕು, ಒಂದುವೇಳೆ ಅಜ್ಞಾನಂದ, ಅಹಂಕಾರಂದ ಆನು ಮಾಡುತ್ತಿಲ್ಲೆ ಹೇಳಿ ನಿರ್ಧರಿಸಿ ಕರೇಂಗೆ ನಿಂದರೂ ಜೀವಮೂಲಪ್ರಕೃತಿ ಸ್ವಭಾವ ಅವನಿಂದ ಆ ಕಾರ್ಯವ ಮಾಡಿಸಿಯೇ ಮಾಡುಸುತ್ತು ಹೇಳಿ ಭಗವಂತ° ಹೇಳಿದಲ್ಯಂಗೆ ಕಳುದವಾರದ ಶುದ್ದಿ ನಿಲ್ಸಿದ್ದದು. ಮುಂದೆ-
ಶ್ರೀಮದ್ಭಗವದ್ಗೀತಾ – ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ – 61 – 67
ಈಶ್ವರಃ ಸರ್ವಭೂತಾನಾಂ ಹೃದ್ದೇಶೇsರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ॥೬೧॥
ಪದವಿಭಾಗ
ಈಶ್ವರಃ ಸರ್ವ-ಭೂತಾನಾಮ್ ಹೃತ್-ದೇಶೇ ಅರ್ಜುನ ತಿಷ್ಠತಿ । ಭ್ರಾಮಯನ್ ಸರ್ವ-ಭೂತಾನಿ ಯಂತ್ರ-ಆರೂಢಾನಿ ಮಾಯಯಾ॥
ಅನ್ವಯ
ಹೇ ಅರ್ಜುನ!, ಯಂತ್ರ-ಆರೂಢಾನಿ ಸರ್ವ-ಭೂತಾನಿ ಮಾಯಯಾ ಭ್ರಾಮಯನ್ ಈಶ್ವರಃ ಸರ್ವ-ಭೂತಾನಾಂ ಹೃತ್-ದೇಶೇ ತಿಷ್ಠತಿ ।
ಪ್ರತಿಪದಾರ್ಥ
ಹೇ ಅರ್ಜುನ! – ಏ ಅರ್ಜುನ!, ಯಂತ್ರ-ಆರೂಢಾನಿ – ಯಂತ್ರದ ಮೇಗೆ ಮಡುಗಿದ(ಏರಿಸಿದ), ಸರ್ವ-ಭೂತಾನಿ – ಸಕಲ ಜೀವಿಗಳ, ಮಾಯಯಾ – ಪ್ರಕೃತಿಯ ಮಾಯೆಂದ (ತನ್ನ ಇಚ್ಛೆಂದ), ಭ್ರಾಮಯನ್ – ತಿರಿಗಿಸಿಯೊಂಡು, ಈಶ್ವರಃ – ಭಗವಂತ°, ಸರ್ವ-ಭೂತಾನಾಮ್ – ಸಮಸ್ತ ಜೀವಿಗಳ, ಹೃತ್-ದೇಶೇ – ಹೃದಯಸ್ಥಾನಲ್ಲಿ, ತಿಷ್ಠತಿ – ವಾಸಿಸುತ್ತ°.
ಅನ್ವಯಾರ್ಥ
ಏ ಅರ್ಜುನ!, ಸುತ್ತುವ ಸಂಸಾರಯಂತ್ರಲ್ಲಿ ಕೂದ ಎಲ್ಲ ಜೀವಿಗಳ ತನ್ನ ಇಚ್ಚಾಶಕ್ತಿಯ ಪ್ರಭಾವಂದ (ಪ್ರಕೃತಿ ಮಾಯಾ ಶಕ್ತಿಂದ) ತಿರುಗಾಡಿಸಿಗೊಂಡು ಭಗವಂತ° ಸಮಸ್ತ ಜೀವಿಗಳ ಎದೆಲಿ (ಹೃದಯ ಜಾಗೆಲಿ) ನೆಲೆಸಿದ್ದ°.
ತಾತ್ಪರ್ಯ / ವಿವರಣೆ
ಭಗವಂತ° ಸರ್ವಶಕ್ತನಾಗಿದ್ದು, ಎಲ್ಲೋರ ಹೃದಯಲ್ಲಿ ನೆಲೆಸಿದ್ದ° ಹೇಳ್ವದರ ಇಲ್ಲಿ ಸ್ಪಷ್ಟಪಡಿಸಿದ್ದ. ಐಹಿಕ ಪ್ರಪಂಚಲ್ಲಿ ಸಂಸಾರ ಹೇಳ್ವದು ಒಂದು ಸುತ್ತುವ ಯಂತ್ರದ ಹಾಂಗೆ. ಈ ಸಂಸಾರ ಯಂತ್ರಲ್ಲಿ ಸಮಸ್ತ ಜೀವಿಗೊ ಸುತ್ತಿಗೊಂಡಿರುತ್ತವು. ಈ ಪಿಂಡಾಂಡ ಮತ್ತೆ ಬ್ರಹ್ಮಾಂಡ ಹೇಳ್ವ ಅದ್ಭುತ ಯಂತ್ರ ನಿರಂತರ ಚಲುಸುವ ಹಾಂಗೆ ಮಾಡುವದು ಆ ಭಗವಂತ°. ಅಂವ ಸರ್ವವ್ಯಾಪಕನಾಗಿ, ಸರ್ವಾಂತರ್ಯಾಮಿಯಾಗಿ, ಎಲ್ಲರ ಒಳವೂ ಇದ್ದು ಅವಕ್ಕೆ ಅನುಭವವ ಕೊಟ್ಟು ನಿಯಂತ್ರುಸುವ ಮಹಾಚೈತನ್ಯ ಆ ಭಗವಂತ°. ಸರ್ವ ಕರ್ಮವೂ ಭಗವಂತನ ಮಹಿಮೆಂದ ಅವನ ಇಚ್ಛೆಯಂತೇ ನಡವದು. ಇಲ್ಲಿ ‘ಪ್ರಜ್ಞೆ’ ಹೇಳ್ವ ಸ್ವಾತಂತ್ರ್ಯ ಮಾಂತ್ರ ಜೀವಿಗೆ ಕೊಟ್ಟಿಪ್ಪದು. ಅದರ ಸರಿಯಾದ ರೀತಿಲಿ ಉಪಯೋಗಿಸಿ, ಬುದ್ಧಿಪೂರ್ವಕವಾಗಿ ಮುಂದೆ ನಡೇಕ್ಕಪ್ಪದು ಮನುಷ್ಯನ ಕರ್ತವ್ಯ. ಅವನ ಸದಿಚ್ಛೆ ಯಾವುದಿದ್ದೋ ಅದರ ಭಗವಂತ° ನೆರವೇರುಸುತ್ತ°. ವಿರುದ್ಧ ದಿಕ್ಕಿಲ್ಲಿ ಹೋಪ ಇಚ್ಚೆ ಆದರೆ ಅವನ ಹಾಂಗೇ ನಡಶುತ್ತ°. ಆದರೆ ಅವನಿಂದ ಮಾಡೇಕ್ಕಪ್ಪ ಕಾರ್ಯವ ಭಗವಂತ° ಮಾಡಿಸಿಯೇ ಮಾಡುಸುತ್ತ°. ಹೀಂಗೆ ಜೀವಿಗೆ ಅಲ್ಪ ಸ್ವಾತಂತ್ರ್ಯವ ನೀಡಿ ಅವನೊಳ ನೆಲೆಸಿ ಅವನ ಕ್ರಿಯಾಶೀಲನನ್ನಾಗಿ ಮಾಡುವದು – ಆ ಭಗವಂತ°.
ಇನ್ನೂ ರಜ ಆಳವಾವಿ ವಿವೇಚನೆ ಮಾಡಿರೆ – ದೇವೋತ್ತಮ ಪರಮ ಪುರುಷ° – ಆ ಭಗವಂತ°, ಸ್ವಯಂ ಅಂತರ್ಯಾಮಿ ಪರಮಾತ್ಮನಾಗಿ ಎಲ್ಲಾ ಜೀವಿಗಳ ಹೃದಯಲ್ಲಿ ನೆಲೆಸಿ ಜೀವಿಗಳ ನಿಯಂತ್ರುಸುತ್ತ°. ಹಾಂಗಾಗಿ ಅಂವ° – ‘ಈಶ್ವರಃ ಸರ್ವಭೂತಾನಾಂ’- ಸಮಸ್ತ ಜೀವಿಗಳ ಒಡೆಯ° ಆ ಭಗವಂತ°. ಒಂದು ನಿರ್ದಿಷ್ಟ ಜೀವಾವಧಿಯ ಕಳುದು ಆ ದೇಹವ ತ್ಯಜಿಸಿ ಬೇರೆ ದೇಹವ ಪ್ರವೇಶಿಸುವಾಗ ಜೀವಿ ತನ್ನ ಹಿಂದಾಣ ಕರ್ಮವೆಲ್ಲವ ಮರದುಬಿಡ್ತ°. ಆದರೆ ಭೂತ, ವರ್ತಮಾನ, ಭವಿಷ್ಯತ್ತು ಸಂಪೂರ್ಣವಾಗಿ ತಿಳುದಂವ° ಆ ಭಗವಂತ° ಒಬ್ಬ° ಮಾಂತ್ರ. ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೆ ಅಂವ ಸಾಕ್ಷಿಯಾಗಿರುತ್ತ°. ಹಾಂಗಾಗಿ ಆ ಭಗವಂತ° ಜೀವಿಯ ಎಲ್ಲ ಕಾರ್ಯಂಗಳ ನಿರ್ದೇಶಿಸುತ್ತ°. ಮುಂದೆ ಜೀವಿ ತನ್ನ ಅರ್ಹತೆಗನುಗುಣವಾದ್ದರ ಭಗವಂತನಿಂದ ಪಡೆತ್ತ°. ಪರಮಾತ್ಮನ ನಿರ್ದೇಶನಲ್ಲಿ ಐಹಿಕ ಶಕ್ತಿಲಿ ಸೃಷ್ಟಿಯಾದ ಐಹಿಕ ದೇಹಲ್ಲಿ ಜೀವಿಯು ಸಾಗುತ್ತ°. ಈ ರೀತಿಯಾಗಿ ತಿರುಗುವ ಯಂತ್ರದ ಮೇಲೆ ಇರಿಸಿದ ಜೀವಿಯಾಗಿ ಇರುತ್ತ°. ಯಂತ್ರದ ತಿರುಗುಸುವ ಚಾಲಕ°- ಆ ಭಗವಂತ°. ಇವಂಗೆ ಇದರಲ್ಲಿ ಕೂಬದಷ್ಟೇ ಕೆಲಸ. ಹೇಂಗೆ ತಿರುಗುಸೆಕು, ಎತ್ಲಾಗಿ ತಿರುಗುಸೆಕು, ಎತ್ತಂದಾಗಿ ಕೊಂಡೋಯೆಕು ಹೇಳ್ವದು ಜೀವಿಯ ಯೋಗ್ಯತೆಗನುಗುಣವಾಗಿ ಭಗವಂತನ ಇಚ್ಛೆ. ಇಲ್ಲಿ ಮನುಷ್ಯಂಗೆ ಕೆಡುಕು ಉಂಟಾದರೆ ಅದು ಭಗವಂತ° ಕೊಡುವ ದಂಡನೆ ಕೇವಲ ಅವನ ತಿದ್ದುಲೆ ಬೇಕಾಗಿ ಹೊರತು ಶಿಕ್ಷೆ ಅಲ್ಲ. ಭಗವಂತ° ಪ್ರತಿಯೊಬ್ಬನನ್ನೂ ಪ್ರೀತಿಸುತ್ತ°. ಅಬ್ಬೆ ಮಕ್ಕಳ ಹೇಂಗೆ ಪ್ರೀತಿಸುತ್ತೊ, ಮಕ್ಕಳ ತಿದ್ದಲೆ ಏವ ರೀತಿ ಕೆಲವು ಸರ್ತಿ ಹುಸಿಕೋಪ ತಾಳುತ್ತೋ ಹಾಂಗೇ ಭಗವಂತನೂ ಜೀವಿ ಮಾಡುವ ತಪ್ಪಿನ ಜ್ಞಾನ ಅವಂಗೆ ಉಂಟಪ್ಪಲೆ ಕೆಲವೊಂದು ಮಾರ್ಗಲ್ಲಿ ಅವನ ದಾಂಟುಸುತ್ತ°. ಪ್ರಜ್ಞಾಪೂರ್ವಕವಾಗಿ ಭಗವಂತನ ಚಿಂತುಸಿರೆ ಈ ಜ್ಞಾನ ಪ್ರಾಪ್ತವಾವ್ತು. ಹಾಂಗಾಗಿ ಮನುಷ್ಯ° ಸ್ವತಂತ್ರ ಹೇದು ಎಂದೂ ಯೋಚನೆ ಮಾಡ್ಳಾಗ. ಪ್ರತಿಯೊಬ್ಬ ಮನುಷ್ಯನೂ ಭಗವಂತನ ನಿಯಂತ್ರಣಲ್ಲೇ ನಡವದು. ಹಾಂಗಾಗಿ ಸಂಪೂರ್ಣವಾಗಿ ಆ ಭಗವಂತಂಗೆ ಶರಣಾಗತನಾಯೇಕ್ಕಾದ್ದು ಮನುಷ್ಯನ ಕರ್ತವ್ಯ.
ಶ್ಲೋಕ
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಂ ॥೬೨॥
ಪದವಿಭಾಗ
ತಂ ಏವ ಶರಣಮ್ ಗಚ್ಛ ಸರ್ವ-ಭಾವೇನ ಭಾರತ । ತತ್ ಪ್ರಸಾದಾತ್ ಪರಾಮ್ ಶಾಂತಿಮ್ ಸ್ಥಾನಮ್ ಪ್ರಾಪ್ಸ್ಯಸಿ ಶಾಶ್ವತಮ್ ॥
ಅನ್ವಯ
ಹೇ ಭಾರತ!, (ತ್ವಮ್) ತಮ್ ಏವ ಸರ್ವ-ಭಾವೇನ ಶರಣಂ ಗಚ್ಛ । ತತ್ ಪ್ರಸಾದಾತ್ ಪರಾಂ ಶಾಂತಿಂ ಶಾಶ್ವತಂ ಸ್ಥಾನಂ (ಚ) ಪ್ರಾಪ್ಸ್ಯಸಿ ।
ಪ್ರತಿಪದಾರ್ಥ
ಹೇ ಭಾರತ! – ಏ ಭರತಶ್ರೇಷ್ಥನಾದ ಅರ್ಜುನನೇ!, (ತ್ವಮ್ – ನೀನು), ತಮ್ ಏವ – ಅವನನ್ನೇ (ಅವಂಗೇ), ಸರ್ವ-ಭಾವೇನ – ಎಲ್ಲ ರೀತಿಲಿ, ಶರಣಮ್ ಗಚ್ಛ – ಶರಣು ಹೋಗು, ತತ್ ಪ್ರಸಾದಾತ್ – ಆ (ಅವನ) ಅನುಗ್ರಹಂದ, ಪರಾಮ್ – ದಿವ್ಯವಾದ, ಶಾಂತಿಮ್ – ಶಾಂತಿಯ, ಶಾಶ್ವತಮ್ ಸ್ಥಾನಮ್ – ಶಾಶ್ವತ ಸ್ಥಾನವ (ಪರಂಧಾಮವ) (ಚ – ಕೂಡ), ಪ್ರಾಪ್ಸ್ಯಸಿ – ಹೊಂದುವೆ.
ಅನ್ವಯಾರ್ಥ
ಏ ಭರತಶ್ರೇಷ್ಥನಾದ ಅರ್ಜುನ!, ನೀನು ಅವಂಗೇ ಸಂಪೂರ್ಣವಾಗಿ (ಎಲ್ಲ ರೀತಿಲಿ) ಶರಣಾಗತನಾಗು. ಅವನ ಕೃಪೆಂದ ನೀನು ದಿವ್ಯವಾದ ಶಾಂತಿಯ, ಪರಮ ಶಾಶ್ವತವೂ ಆದ ಸ್ಥಾನವ (ಪರಂಧಾಮವ) ಹೊಂದುವೆ.
ತಾತ್ಪರ್ಯ / ವಿವರಣೆ
ಭಗವಂತನ ನಿಜಭಕ್ತನಾದವಂಗೆ ಎಂತ ದಕ್ಕುತ್ತು ಹೇಳ್ವದು ಇಲ್ಲಿ ಹೇಳಿದ್ದ ಭಗವಂತ°. ಸಂಪೂರ್ಣವಾಗಿ ಭಗವಂತನೊಬ್ಬನೇ ಮಹಾಮಹಿಮ, ಅದ್ವಿತೀಯ, ಸರ್ವ ಸಮರ್ಥ°, ಸರ್ವಾಂತರ್ಯಾಮಿ, ಉದ್ಧಾರಕ° ಸಂಪೂರ್ಣ ಮನಸ್ಸಿಂದ ಅವನನ್ನೇ ಸಂಪೂರ್ಣವಾಗಿ ನಂಬಿ ಅವಂಗೆ ಶರಣಾಗತನಾಗಿ ಅವನ ಭಕ್ತಿಸೇವೆಯ ಕಾರ್ಯಲ್ಲಿ ನಿರತನಾದರೆ ಅಕೇರಿಗೆ ಅವನ ಕೃಪೆಂದ ಆ ದಿವ್ಯವಾದ ಶಾಶ್ವತವಾದ ಶಾಂತಿಧಾಮವ ಪಡವಲೆ ಸಾಧ್ಯ ಇದ್ದು.
ಭಗವದ್ಗೀತೆಯ ಹದಿನೈದನೇ ಅಧ್ಯಾಯಲ್ಲಿ ಭಗವಂತ° ಆಗಳೇ ಹೇಳಿದ್ದ° – “ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂಚ । ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಂ” ॥ಭ.ಗೀ.೧೫.೧೫॥ – ‘ಆನು ಪ್ರತಿಯೊಬ್ಬರ ಹೃದಯಲ್ಲಿ ನೆಲೆಸಿದ್ದೆ. ಸ್ಮರಣೆ(ಸ್ಮೃತಿ), ಜ್ಞಾನ, ಮರವದು ಎನ್ನಂದ ಬಪ್ಪದು. ಎಲ್ಲ ವೇದಂಗಳಿಂದ ತಿಳಿಯಲ್ಪಡಬೇಕಾದವ° ಆನು. ವೇದಾಂತ ಕರ್ತೃ ಆನೇ, ವೇದಂಗಳ ತಿಳುದವನೂ ಆನೇ ಆಗಿದ್ದೆ’. ಹಾಂಗಾಗಿ ಭಗವಂತಂಗೆ ಪ್ರತಿಯೊಬ್ಬನೂ ಸಂಪೂರ್ಣವಾಗಿ ಶರಣಾಗತನಪ್ಪಲೇ ಬೇಕು. ಅವನ ಕೃಪಾದೃಷ್ಟಿ ಇಲ್ಲದ್ದೆ ಏನ ಪಡವಲೂ ಎಡಿಯ. ಭರತವಂಶಲ್ಲಿ ಅನೇಕ ಮಂದಿ ಆಗಿಹೋಗಿದ್ದರೂ ಭರತವಂಶಶ್ರೇಷ್ಠ° ಹೇಳ್ವ ಖ್ಯಾತಿ ಅರ್ಜುನಂಗೆ ಮಾಂತ್ರ. ಭಗವದ್ಭಕ್ತನಾಗಿ ಅಂತಹ ಭಾರತ° ನಾವು ಆಗಿ ಪರಮಾತ್ಮನ ಕೃಪಾದೃಷ್ಟಿಗೆ ಪಾತ್ರರಾಯೇಕು ಹೇಳ್ವ ಗುಪ್ತ ಸಂದೇಶವ ಭಗವಂತ° ಈ ಶ್ಲೋಕಲ್ಲಿ ಹೇಳಿದ್ದ°.
ಶ್ಲೋಕ
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ ।
ವಿಮೃಶೈತದಶೇಷೇಣ ಯಥೇಚ್ಛಸಿ ತಥಾ ಕುರು ॥೬೩॥
ಪದವಿಭಾಗ
ಇತಿ ತೇ ಜ್ಞಾನಮ್ ಆಖ್ಯಾತಮ್ ಗುಹ್ಯಾತ್ ಗುಹ್ಯತರಮ್ ಮಯಾ । ವಿಮೃಶ್ಯ ಏತತ್ ಅಶೇಷೇಣ ಯಥಾ ಇಚ್ಛಸಿ ತಥಾ ಕುರು ॥
ಅನ್ವಯ
ಇತಿ ಗುಹ್ಯಾತ್ ಗುಹ್ಯತರಂ ಜ್ಞಾನಂ ಮಯಾ ತೇ ಆಖ್ಯಾತಮ್ । ಏತತ್ ಅಶೇಷೇಣ ವಿಮೃಶ್ಯ, ಯಥಾ ಇಚ್ಛಸಿ ತಥಾ ಕುರು ।
ಪ್ರತಿಪದಾರ್ಥ
ಇತಿ – ಹೀಂಗೆ, ಗುಹ್ಯಾತ್ – ರಹಸ್ಯಂದ, ಗುಹತರಮ್ – ಇನ್ನೂ ರಹಸ್ಯಮಯವಾದ, ಜ್ಞಾನಮ್ – ಜ್ಞಾನವು, ಮಯಾ – ಎನ್ನಂದ, ತೇ – ನಿನಗೆ, ಆಖ್ಯಾತಮ್ – ಹೇಳಲ್ಪಟ್ಟತ್ತು, ಏತತ್ – ಇದರ, ಅಶೇಷೇಣ – ಸಂಪೂರ್ಣವಾಗಿ (ಶೇಷ ಇಲ್ಲದ್ದೆ), ವಿಮೃಶ್ಯ – ವಿಮರ್ಶಿಸಿ, ಯಥಾ ಇಚ್ಛಸಿ – ಹೇಂಗೆ ಇಷ್ಟಪಡುತ್ತೆಯೋ, ತಥಾ ಕುರು – ಹಾಂಗೆ ಮಾಡು (ಆಚರುಸು).
ಅನ್ವಯಾರ್ಥ
ಹೀಂಗೆ ರಹಸ್ಯಲ್ಲಿಯೂ ರಹಸ್ಯಕರವಾದ ವಿಶೇಷ ಜ್ಞಾನವ ನಿನಗೆ ಎನ್ನಂದ ಹೇಳಲ್ಪಟ್ಟತ್ತು. ಇದರ ಕುರಿತು ಸಂಪೂರ್ಣವಾಗಿ ವಿಮರ್ಶೆ ಮಾಡಿ ಇನ್ನ ಇಚ್ಛೆಯಂತೆ ಆಚರುಸು (ನಡಕ್ಕೊ / ಮಾಡು).
ತಾತ್ಪರ್ಯ / ವಿವರಣೆ
ಭಗವಂತ° ಜ್ಞಾನದ ಮೂಲಕ ಉಪಾಸನೆಯ ರಹಸ್ಯವ ಸಂಕ್ಷೇಪವಗಿ ಇಷ್ಟು ಹೇಳಿಕ್ಕಿ ವಿಷಯವ ಉಪಸಂಹಾರ ಮಾಡುತ್ತ°. ಇದು ಪ್ರಪಂಚದ ರಹಸ್ಯಂಗಳಲ್ಲಿ ಅತೀ ರಹಸ್ಯವಾದ ವಿಚಾರಂಗೊ. ಎಲ್ಲೋರಿಂಗೆ ಇದು ಅರ್ಥ ಆಗ. ಅರ್ಥ ಆಗದ್ದವರತ್ರೆ ಇದರ ಬಿಕ್ಕಿರೆ ವ್ಯರ್ಥ ಮಾಂತ್ರ ಅಲ್ಲ ಅಪಾರ್ಥ ತಪ್ಪು ದಾರಿಲಿ ಅರ್ಥ ಮಾಡಿಕೊಂಗಷ್ಟೆ. ‘ಅಂತಹ ಆಧ್ಯಾತ್ಮದ ಅಂತರಂಗದ ರಹಸ್ಯವ ನಿನಗೆ ಹೇಳಿದ್ದೆ. ಇದರ ಸರಿಯಾಗಿ ಜ್ಞಾನಪೂರ್ವಕ ನೀನು ವಿಮರ್ಶೆ ಮಾಡಿ ನಿನಗೆ ಎಂತ ತೋರುತ್ತೋ (ನಿನ್ನ ಇಷ್ಟಪ್ರಕಾರ) ನೀನು ಮಾಡಿಗೊ’. ಅರ್ಥಾತ್, ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಎಂತ ಹೇಳುತ್ತೋ ಹಾಂಗೆ ಮಾಡು’ ಹೇಳಿ ಭಗವಂತ° ಅರ್ಜುನಂಗೆ ಹೇಳುವ ಮೂಲಕ ನಾವು ಇನ್ನೊಬ್ಬರ ಮೇಲೆ ನಮ್ಮ ಮನಬಂದಂತೆ ವಿಷಯದ ಯಥಾರ್ಥವ ವಿಮರ್ಷೆ ಮಾಡಿ ತಿಳಿಯದ್ದೆ ಅಭಿಪ್ರಾಯ ಹೇಳ್ಳಾಗ ಹೇಳ್ವ ಸಮಾಜನೀತಿಯ ಎತ್ತಿ ತೋರ್ಸಿದ್ದ° ಹೇಳಿ ಬನ್ನಂಜೆ ವ್ಯಾಖ್ಯಾನಿಸುತ್ತವು.
ಇಲ್ಲಿ ಮತ್ತೂ ಒಂದು ಎಚ್ಚರವ ಗಮನುಸಲಕ್ಕು. ‘ಯಥಾ ಇಚ್ಛಸಿ ತಥಾ ಕುರು’ – ಹೇಂಗೆ ಇಷ್ಟಪಡುತ್ತೆಯೋ ಹಾಂಗೆ ಮಾಡು ಹೇಳಿ ಭಗವಂತ° ಹೇಳ್ವ ಮೂಲಕ ಜೀವಿಯ ಅಲ್ಪಸ್ವಾತಂತ್ರ್ಯಕ್ಕೆ ತಾನು ಕೈ ಹಾಕಲಿಲ್ಲೆ ಹೇಳಿ ಗೂಢವಾಗಿ ಹೇಳಿದ°. ಮಾಡೇಕ್ಕಪ್ಪದು ಹೀಂಗೆ, ಮತ್ತೆ ನಿನ್ನ ಮನಸ್ಸು ಬುದ್ಧಿ ಚಿತ್ತಕ್ಕೆ ಬಿಟ್ಟ ವಿಚಾರ. ಯಾವುದು ಬೇಕಾದ್ದು ಹೇಳ್ವ ತೀರ್ಮಾನ ತೀರ್ಮಾನ ತೆಕ್ಕೊಳ್ಳೆಕ್ಕಾದ್ದು ಮನುಷ್ಯನ ಜವಾಬ್ದಾರಿ. ಮನುಷ್ಯ° ಯಾವ ತೀರ್ಮಾನ ತೆಕ್ಕೊಂಡು ಮುಂದುವರಿಯಲೆ ಬಯಸುತ್ತನೋ ಆ ದಾರಿಲಿ ಭಗವಂತ° ಅವನ ನಡೆಶುತ್ತ°, ಆದರೆ ಅದರಿಂದ ಬಪ್ಪ ತೊಂದರೆಗಳ ಅಂವ ಅನುಭವಿಸಿಯೇ ತೀರೇಕ್ಕಾವ್ತು, ಭಗವಂತ° ನಮ್ಮ ಕೈಲಿ ಯಾವುದು ಮಾಡ್ಳೆ ಇಚ್ಛಿಸುತ್ತನೋ ಅದರ ಅಂವ° ನಮ್ಮತ್ರಂದ ಮಾಡಿಸಿಯೇ ಮಾಡುತ್ತ° ಹೇಳ್ವದೂ ನೆಂಪಿಲ್ಲಿರೆಕ್ಕಾದ ವಿಚಾರ.
ಶ್ಲೋಕ
ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟೋsಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥೬೪॥
ಪದವಿಭಾಗ
ಸರ್ವ-ಗುಹ್ಯತಮಮ್ ಭೂಯಃ ಶೃಣು ಮೇ ಪರಮಮ್ ವಚಃ । ಇಷ್ಟಃ ಅಸಿ ಮೇ ದೃಢಮ್ ಇತಿ ತತಃ ವಕ್ಷ್ಯಾಮಿ ತೇ ಹಿತಮ್ ॥
ಅನ್ವಯ
ಸರ್ವ-ಗುಹ್ಯತಮಂ ಪರಮಂ ವಚಃ ಮೇ ಭೂಯಃ ಶೃಣು । ಮೇ ದೃಢಮ್ ಇಷ್ಟಃ ಅಸಿ, ಇತಿ ತತಃ ತೇ ಹಿತಂ ವಕ್ಷ್ಯಾಮಿ ।
ಪ್ರತಿಪದಾರ್ಥ
ಸರ್ವ-ಗುಹ್ಯತಮಮ್ – ಎಲ್ಲದರಿಂದ ಅತೀ ರಹಸ್ಯವಾದ, ಪರಮಮ್ – ಪರಮೋನ್ನತವಾದ, ವಚಃ – ಉಪದೇಶವ, ಮೇ – ಎನ್ನ, ಭೂಯಃ – ಮತ್ತೆ / ಪುನಃ, ಶೃಣು – ಕೇಳು (ಆಲಿಸು), ಮೇ – ಎನಗೆ, ದೃಢಮ್ ಇಷ್ಟಃ – ದೃಢವಾದ (ಅತ್ಯಂತ, ಬಹಳ) ಪ್ರೀತಿಯವ°, ಅಸಿ – ನೀನು ಆಗಿದ್ದೆ, ಇತಿ – ಹೇದು, ತತಃ – ಹಾಂಗಾಗಿ, ತೇ ಹಿತಮ್ – ನಿನ್ನ ಹಿತಕ್ಕೋಸ್ಕರವಾಗಿ, ವಕ್ಷ್ಯಾಮಿ – ಹೇಳುತ್ತೆ.
ಅನ್ವಯಾರ್ಥ
ಎಲ್ಲವುದರಲ್ಲಿ ಅತ್ಯಂತ ರಹಸ್ಯವಾದ, ಪರಮೋನ್ನತವಾದ ಉಪದೇಶವ ಪುನಃ ನಿನಗೆ ಹೇಳುತ್ತೆ. ನೀನು ಎನಗೆ ಅತ್ಯಂತ ಪ್ರೀತಿಪಾತ್ರನಾದ್ದರಿಂದ ನಿನ್ನ ಹಿತಕ್ಕೋಸ್ಕರವಾಗಿ ಅದರ ನಿನಗೆ ಹೇಳುತ್ತೆ ಕೇಳು.
ತಾತ್ಪರ್ಯ / ವಿವರಣೆ
ಭಗವಂತ° ಇಲ್ಲಿ ಹೇಳ್ತಾ ಇಪ್ಪದು ಬರೇ ಅರ್ಜುನಂಗೆ ಅಲ್ಲ. , ಅದು ಅರ್ಜುನನ ಮೂಲಕ ನವಗೆ ಹೇಳಿದ ಉಪದೇಶ. ನಾವೆಲ್ಲರೂ ಅರ್ಜುನನ ಹಾಂಗೆ ಭಗವಂತನ ದೃಢ ಭಕ್ತರಾಯೇಕು ಹೇಳ್ವ ಗೂಢಾರ್ಥ ಇಲ್ಲಿ ತುಂಬಿದ್ದು,
ಆಧ್ಯಾತ್ಮಿಕ ಜ್ಞಾನ ಪರಮ ಶ್ರೇಷ್ಠವಾದ್ದು, ರಹಸ್ಯವಾದ್ದು. ಸುಲಭಕ್ಕೆ ಅರ್ಥ ಅಪ್ಪಂತಾದ್ದಲ್ಲ. ಭಗವಂತನ ಸಂಪೂರ್ಣವಾಗಿ ನಂಬಿ ಅವನಲ್ಲಿ ಶರಣಾಗತನಾದರೆ ಮಾಂತ್ರ ಅದರ ಯಥಾರ್ಥವಾಗಿ ತಿಳಿವಲೆ ಎಡಿಗು. ಅರ್ಜುನ° ಎಲ್ಲ ರೀತಿಲಿಯೂ ಹೇದು ಹೇಳ್ವದಕ್ಕಿಂತಲೂ, ಭಕ್ತನಾಗಿ ಭಗವಂತಂಗೆ ಪ್ರೀತಿಪಾತ್ರನಾದ್ದರಿಂದ ನೇರವಾಗಿ ಅವಂಗೆ ಭಗವಂತನಿಂದ ಜ್ಞಾನ ರಹಸ್ಯಂಗಳ ಉಪದೇಶ ಮಾಡಿದ°. ಅದರನ್ನೇ ಎಚ್ಹರಿಸಿ ಭಗವಂತ° ಇಲ್ಲಿ ಅರ್ಜುನಂಗೆ ಮತ್ತೊಂದರಿ ಹೇಳುತ್ತ° – ‘ಜ್ಞಾನಂಗಳಲ್ಲಿ ವಿಶೇಷವಾದ ಮತ್ತು ರಹಸ್ಯವಾದ ವಿಚಾರಂಗಳ ನಿನಗೆ ಹೇಳಿದ್ದೆ. ನೀನು ಅತ್ಯಂತ ಪ್ರಿಯ ಭಕ್ತನಾದ್ದರಿಂದ ಮತ್ತೆ ನಿನಗೆ ಮತ್ತೊಂದರಿ ಹೇಳ್ತೆ ಕೇಳು’ –
ಶ್ಲೋಕ
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ ॥೬೫॥
ಪದವಿಭಾಗ
ಮತ್-ಮನಾಃ ಭವ ಮತ್-ಭಕ್ತಃ ಮತ್-ಯಾಜೀ ಮಾಮ್ ನಮಸ್ಕುರು । ಮಾಮ್ ಏವ ಏಷ್ಯಸಿ ಸತ್ಯಮ್ ತೇ ಪ್ರತಿಜಾನೇ ಪ್ರಿಯಃ ಅಸಿ ಮೇ ॥
ಅನ್ವಯ
ಮತ್-ಮನಾಃ, ಮತ್-ಭಕ್ತಃ, ಮತ್-ಯಾಜೀ (ಚ) ಭವ । ಮಾಂ ನಮಸ್ಕುರು । (ಏವಂ ಕೃತ್ವಾ ತ್ವಂ) ಮಾಮ್ ಏವ ಏಷ್ಯಸಿ । (ಇತಿ) ತೇ ಸತ್ಯಂ ಪ್ರತಿಜಾನೇ, (ಯತಃ ತ್ವಂ) ಮೇ ಪ್ರಿಯಃ ಅಸಿ ।
ಪ್ರತಿಪದಾರ್ಥ
ಮತ್-ಮನಾಃ – ಎನ್ನ ಕುರಿತು ಚಿಂತಿಸುವವ° (ಮನ್ನಸ್ಸು ಎನ್ನಲ್ಲಿ ನೆಲೆಗೊಳಿಸಿದವನಾಗಿ), ಮತ್-ಭಕ್ತಃ – ಎನ್ನ ಭಕ್ತ°, ಮತ್-ಯಾಜೀ – ಎನ್ನ ಆರಾಧಕ°, (ಚ – ಕೂಡ), ಭವ – ನೀನು ಆಗು, ಮಾಮ್ ನಮಸ್ಕುರು – ಎನ್ನ ನಮಸ್ಕರಿಸು, (ಏವಮ್ ಕೃತ್ವಾ ತ್ವಮ್ – ಈ ರೀತಿಯಾಗಿ ಮಾಡಿ ನೀನು), ಮಾಮ್ ಏವ – ಎನ್ನನ್ನೇ, ಏಷ್ಯಸಿ – ಹೊಂದುವೆ, ((ಇತಿ – ಹೇದು), ತೇ – ನಿನಗೆ, ಸತ್ಯಮ್ – ಸತ್ಯ, ಪ್ರತಿಜಾನೇ – ಮಾತುಕೊಡುತ್ತೆ (ತೇ ಸತ್ಯಮ್ ಪ್ರತಿಜಾನೇ – ನಿನ್ನಾಣಗೂ ಸತ್ಯ), (ಯತಃ ತ್ವಮ್ – ಎಂತಕೇಳಿರೆ ನೀನು), ಮೇ – ಎನಗೆ, ಪ್ರಿಯಃ – ಪ್ರೀತಿಪಾತ್ರ°, ಅಸಿ – ಆಗಿದ್ದೆ.
ಅನ್ವಯಾರ್ಥ
ಏವತ್ತೂ ಎನ್ನ ಕುರಿತು ಚಿಂತನೆ ಮಾಡುವವನಾಗಿ, ಎನ್ನ ಸಂಪೂರ್ಣ ಭಕ್ತನಾಗಿ, ಎನ್ನ ಆರಾಧಕನಾಗಿ ನೀನು ಆಗು. ಎನಗೆ ನಮಸ್ಕಾರ ಮಾಡು. ಈ ರೀತಿ ಮಾಡುವದರಿಂದ ನೀನು ಮುಂದೆ ಎನ್ನನ್ನೇ ಹೊಂದುವೆ ಹೇದು ನಂಬಿಗೊ. ಎಂತಕೇಳಿರೆ ನೀನು ಎನಗೆ ಅತ್ಯಂತ ಪ್ರೀತಿಪಾತ್ರನಾದ ಭಕ್ತ° ಆಗಿದ್ದೆ.
ತಾತ್ಪರ್ಯ / ವಿವರಣೆ
ಜ್ಞಾನದ ಅತ್ಯಂತ ಹಿರಿಯ ರಹಸ್ಯ ಭಾಗ ಇದು. ಮನುಷ್ಯ° ಭಗವಂತನ ಪರಿಶುದ್ಧ ಭಕ್ತನಾಯೇಕು ಹೇಳ್ವ ಸಾರ ಇಲ್ಲಿ ಅಡಗಿದ್ದು. ಸದಾ ಭಗವಂತನ ಕುರಿತು ಚಿಂತನೆ ಮನಸ್ಸಿಲ್ಲಿ ಇರೆಕು, ಅವನ ಮಹಿಮೆ ಹಿರಿಮೆ ಮನಸ್ಸಿಲ್ಲಿ ಸದಾ ಜಾಗೃತವಾಗಿರೆಕು. ಸದಾ ಅವನ ಧ್ಯಾನಲ್ಲಿ ಇದ್ದುಗೊಂಡು ಕರ್ತವ್ಯವ ಭಗವದ್ ಕೆಲಸ ಹೇಳ್ವ ಅನುಷ್ಠಾನವ ಮಾಡಿ ಅವಂಗೆ ನಮಸ್ಕರಿಸಿದರೆ ಕಡೇಂಗೆ ಶಾಶ್ವತನಾದ ಅವನ ಪಡವಲಕ್ಕು.
ಸಾಧನೆಯ ಸಾರವ ಇಲ್ಲಿ ವಿವರಿಸಿದ್ದ°. ಈ ಮದಲೇ ಹೇಳಿದ ವಿಷಯಂಗಳ ಒಟ್ಟು ಸಾರ ಹೇಳಿರೆ ಭಗವಂತ° ಪರಮೋನ್ನತ°, ಸರ್ವಶ್ರೇಷ್ಠ°, ಸರ್ವಗತ, ಸರ್ವಾಂತರ್ಯಾಮಿ, ಸರ್ವ ಸಮರ್ಥ° ಹೇಳ್ವದರ ಅರ್ತು ಅಂವ ಇಲ್ಲದ್ದೆ ಎಂತದೂ ಇಲ್ಲೆ, ಏವುದೂ ಹಂದುತ್ತಿಲ್ಲೆ ಹೇಳ್ವ ವಿಚಾರ ಸತ್ಯರೂಪವಾಗಿ ಬುದ್ಧಿಗೆ ಗೋಚರವಾಯೇಕು, ನಡವಳಿಕೆಲಿ ಅದರ ನಿಷ್ಠಾಪೂರ್ವಕವಾಗಿ ಅನುಸರುಸೆಕು. ಭಗವಂತನಲ್ಲಿ ಪರಿಶುದ್ಧ ಭಕ್ತಿ, ಪರಿಶುದ್ಧ ಪ್ರೀತಿ ಇರೆಕು. “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ”- ಹೇಳ್ವ ಸತ್ಯವ ತಿಳುದು ಸರ್ವಾಂತರ್ಯಾಮಿ ಸರ್ವಶಕ್ತ ಅದ್ವಿತೀಯ ಅಪ್ರತಿಮ ಗುಣಮಹಿಮ, ಸರ್ವಗುಣ ಪರಿಪೂರ್ಣನಾದ ಭಗವಂತನ ಪೂಜಿಸಿ ನಮಸ್ಕರುಸೆಕು. ಈ ರೀತಿ ಮನುಷ್ಯ° ಎಲ್ಲ ಉಪಾಸನೆಲಿ ಭಗವಂತನ ಕಂಡರೆ ಆ ಭಗವಂತನ ಪ್ರೀತಿಪಾತ್ರನಾದ ಭಕ್ತನಾಗಿ ಅವನ ಕೃಪಾಕಟಾಕ್ಷಂದ ಅವನನ್ನೇ ಹೋಗಿ ಸೇರುತ್ತ°. ಇದು ‘ನಿನ್ನಾಣೆ ಸತ್ಯ’ ಹೇಳಿ ಹೇಳುತ್ತ ಭಗವಂತ°.
ಶ್ಲೋಕ
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷ್ಯಯಿಷ್ಯಾಮಿ ಮಾ ಶುಚಃ ॥೬೬॥
ಪದವಿಭಾಗ
ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ ಶರಣಮ್ ವ್ರಜ । ಅಹಮ್ ತ್ವಾ ಸರ್ವ-ಪಾಪೇಭ್ಯಃ ಮೋಕ್ಷ್ಯಯಿಷ್ಯಾಮಿ ಮಾ ಶುಚಃ ॥
ಅನ್ವಯ
(ತ್ವಂ) ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ । ಅಹಂ ತ್ವಾ ಸರ್ವ-ಪಾಪೇಭ್ಯಃ ಮೋಕ್ಷ್ಯಯಿಷ್ಯಾಮಿ, (ತ್ವಂ) ಮಾ ಶುಚಃ ।
ಪ್ರತಿಪದಾರ್ಥ
(ತ್ವಮ್ – ನೀನು), ಸರ್ವ-ಧರ್ಮಾನ್ – ಎಲ್ಲ ಧರ್ಮಂಗಳ, ಪರಿತ್ಯಜ್ಯ – ಬಿಟ್ಟು, ಮಾಮ್ ಏಕಮ್ – ಎನ್ನ ಒಬ್ಬನ ಮಾತ್ರ, ಶರಣಮ್ ವ್ರಜ – ಶರಣು ಹೋಗು, ಅಹಮ್ – ಆನು, ತ್ವಾ (=ತ್ವಾಂ) – ನಿನ್ನ, ಸರ್ವ-ಪಾಪೇಭ್ಯಃ – ಎಲ್ಲ ಬಗೆ ಪಾಪಂಗಳಿಂದ, ಮೋಕ್ಷ್ಯಯಿಷ್ಯಾಮಿ – ವಿಮೋಚನೆಗೊಳುಸುತ್ತೆ, (ತ್ವಮ್ – ನೀನು), ಮಾ ಶುಚಃ – ಶೋಕಪಡೆಡ (ದುಃಖಿಸೆಡ, ಚಿಂತೆಮಾಡೆಡ).
ಅನ್ವಯಾರ್ಥ
ಎಲ್ಲ ‘ಧರ್ಮಂಗಳ’ ತ್ಯಜಿಸಿ ನೀನು ಎನ್ನ ಒಬ್ಬನ ಮಾತ್ರ ಶರಣು ಹೋಗು. ಆನು ನಿನ್ನ ಸರ್ವಪಾಪಂಗಳಿಂದ ವಿಮೋಚನೆಗೊಳುಸುತ್ತೆ. ಇದಕ್ಕೆ ನೀನು ಚಿಂತೆಮಡೆಡ.
ತಾತ್ಪರ್ಯ / ವಿವರಣೆ
ಭಗವಂತನಲ್ಲಿ ಸಂಪೂರ್ಣ ಶರಣಾಗತನಾದರೆ ಎಂತ ಪ್ರಯೋಜನ ಹೇಳ್ವದರ ಒಂದೇ ಮಾತಿಲ್ಲಿ ಭಗವಂತ° ಇಲ್ಲಿ ಹೇಳಿದ್ದ°. ಭಗವಂತ° ಹೇಳುತ್ತ° – ‘ಸರ್ವ-ಧರ್ಮಾನ್ ಪರಿತ್ಯಜ್ಯ’ – ಇಲ್ಲಿ ಧರ್ಮ ಹೇಳಿರೆ ಲೌಕಿಕ ಮತವೋ, ನಂಬಿಕೆಯೋ, ಜಾತಿಯೋ, ಗುಣವೋ ಅಲ್ಲ. ಇಲ್ಲಿ ಧರ್ಮಾನ್ ಹೇಳಿರೆ ಪಲಾಫೇಕ್ಷೆಗೊ. ಲೌಕಿಕಲ್ಲಿ ಆ ಧರ್ಮ, ಈ ಧರ್ಮ ಹೇಳಿ ಹತ್ತು ಹಲವು ಬಗೆ ಮತ್ತೆ ಹಾಂಗೇ ಗೊಂದಲಂಗೊ. ಹಾಂಗೇ ಫಲಾಪೇಕ್ಷೆಂದ ಕರ್ಮವ ಮಾಡಿರೆ ಮತ್ತೆ ಆ ಫಲದ ಬಗ್ಗೆಯೇ ಚಿಂತೆ ಅಪ್ಪದು. ಹಾಂಗಾಗಿ ಮಾಡುವ ಕರ್ಮವ ಫಲಾಪೇಕ್ಷೆಯ ಲವಲೇಶವೂ ಹಂಗಿಲ್ಲದ್ದೆ (= ಸರ್ವ ಧರ್ಮಾನ್ ಪರಿತ್ಯಜ್ಯ) ಮಾಡೆಕು. ಸಂಪೂರ್ಣವಾಗಿ ಭಗವಂತನಲ್ಲಿ ನಂಬಿಕೆ ಭರವಸೆಯ ಮಡಿಕ್ಕೊಳ್ಳೆಕು. ಜಗತ್ತಿಂಗೆ ಒಬ್ಬನೇ ಒಬ್ಬ ಸರ್ವಸಮರ್ಥನಾದ ಅವ° ಒಬ್ಬನನ್ನೇ ಸಂಪೂರ್ಣವಾಗಿ ಮನಸ್ಸಿಲ್ಲಿ ಮಡಿಕ್ಕೊಂಡು ಅವಂಗೆ ಶರಣಾಗತನಾಗಿ ಅವನ ಭಕ್ತಿಸೇವೆಯ ಆಚರುಸುವಂವನಾಯೆಕು. ಎಂತಕೆ ಹೇಳಿರೆ ಅಂವ ಒಬ್ಬನೇ ನಮ್ಮ ಉದ್ಧರುಸಲೆ ಸಮರ್ಥ°. ಇದರ ನಿಜವ ತಿಳುದು ಅವಂಗೆ ಶರಣಾಗತನಾಗಿ, ಫಲಾಪೇಕ್ಷಯ ಸಂಪೂರ್ಣವಾಗಿ ವರ್ಜಿಸಿ, ಪಾಲಿಂಗೆ ಬಂದದು ಪಂಚಾಮೃತ ಹೇದು ಭಗವತ್ಪ್ರಸಾದ ರೂಪವಾಗಿ ಫಲವ ಉಣ್ಣೆಕು. ಅಹಂಕಾರವರ್ಜಿತನಾಗಿ, ನಿಷ್ಕಾಮ ಕರ್ಮವ ಮಾಡಿ, ನಿರ್ಲಿಪ್ತ ಜೀವನವ ನಡೆಶಿಗೊಂಡು ಹೋದರೆ ಮುಂದೆ ಹೋಗಿ ಅವನನ್ನೇ ಸೇರ್ಲಕ್ಕು. ಅಂವ° ನಮ್ಮ ಪಾಪಂಗಳಿಂದ ವಿಮೋಚನೆಗೊಳಿಸಿ ಪರಿಶುದ್ಧರನ್ನಾಗಿಸಿ ಅವನ ಶಾಂತಿಧಾಮಕ್ಕೆ ಸೇರುಲೆ ಅರ್ಹರನ್ನಾಗಿ ಮಾಡುತ್ತ°. ಭಗವಂತನ ಸಂಪೂರ್ಣ ನಂಬಿ ಅವನಲ್ಲಿ ಶರಣಾಗತನಾಗಿ ಅವನ ಭಕ್ತಿಸೇವೆಲಿ ತೊಡಗುವ ಭಕ್ತಂಗೆ ಏವ ಚಿಂತೆಯೂ ಬೇಕಾಗಿಲ್ಲೆ ಹೇಳಿ ಭಗವಂತ° ಇಲ್ಲಿ ಆಶ್ವಾಸನೆ ಹೇಳಿದ್ದ°.
ಶ್ಲೋಕ
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋsಭ್ಯಸೂಯತಿ ॥೬೭॥
ಪದವಿಭಾಗ
ಇದಮ್ ತೇ ನ ಅತಪಸ್ಕಾಯ ನ ಅಭಕ್ತಾಯ ಕದಾಚನ । ನ ಚ ಅಶುಶ್ರೂಷವೇ ವಾಚ್ಯಮ್ ನ ಚ ಮಾಮ್ ಯಃ ಅಭ್ಯಸೂಯತಿ ॥
ಅನ್ವಯ
ಇದಂ ತೇ ನ ಅತಪಸ್ಕಾಯ, (ಚ) ನ ಅಭಕ್ತಾಯ, ನ ಚ ಅಶುಶ್ರೂಷವೇ, ನ ಚ ಯಃ ಮಾಮ್ ಅಭ್ಯಸೂಯತಿ (ತಸ್ಮೈ) ಕದಾಚನ ವಾಚ್ಯಮ್ ।
ಪ್ರತಿಪದಾರ್ಥ
ಇದಮ್ – ಇದು (ಇದರ), ತೇ – ನಿನ್ನಂದ, ಅತಪಸ್ಕಾಯ – ತಪಸ್ಸು ಮಾಡದ್ದಿಪ್ಪವಂಗೆ, ಅಭಕ್ತಾಯ – ಭಕ್ತನಲ್ಲದ್ದವಂಗೆ, ಅಶುಶ್ರೂಷವೇ – ಭಕ್ತಿಸೇವೆಲಿ ತೊಡಗದ್ದೆ ಇಪ್ಪವಂಗೆ, ಯಃ ಮಾಮ್ ಅಭ್ಯಸೂಯತಿ – ಆರು ಎನ್ನ ಅಸೂಯೆಪಡುತ್ತನೋ, (ತಸ್ಮೈ- ಅವಂಗೆ), ಕದಾಚನ – ಏವತ್ತೂ, ನ ವಾಚ್ಯಮ್ – ಹೇಳ್ಳಾಗ
ಅನ್ವಯಾರ್ಥ
ತಪಸ್ಸು ಆಚರುಸುದ್ದವಂಗೆ, ಭಕ್ತನಲ್ಲದ್ದವಂಗೆ, ಭಕ್ತಿಸೇವೆಲಿ ತೊಡಗದ್ದವಂಗೆ, ಎನ್ನ ಅಸೂಯೆಪಡುವವಂಗೆ ಏವತ್ತೂ ಇದು (ಈ ರಹಸ್ಯ ವಿಚಾರಂಗೊ) ನೀನು ಹೇಳ್ಳಾಗ.
ತಾತ್ಪರ್ಯ / ವಿವರಣೆ
ಅಧ್ಯಾತ್ಮ ಜ್ಞಾನವ ಹೇಂಗೆ ಕಾಪಾಡೆಕು ಹೇಳ್ವದರ ಇಲ್ಲಿ ಭಗವಂತ ಎಚ್ಚರಿಸಿದ್ದ°. ಆರಿಂಗೆ ನಿಯಮನಿಷ್ಥೆ ಇಲ್ಲೆಯೋ (ತಪಸ್ಸು ಮಾಡದ್ದವಂಗೆ), ಭಗವಂತನಲ್ಲಿ, ಧಾರ್ಮಿಕತೆಲಿ ಭಕ್ತಿ ಇಲ್ಲದ್ದವಂಗೆ, ಭಗವದ್ ವಿಷಯವ ಕೇಳುಲೆ ಆಸಕ್ತಿ ಇಲ್ಲದ್ದವಂಗೆ, ದೇವರು ಹೇಳಿರೆ ತಾತ್ಸಾರವಾಗಿ ನೋಡುವವಂಗೆ, ನಾಸ್ತಿಕನಾದವಂಗೆ ಅಧ್ಯಾತ್ಮ ರಹಸ್ಯ ವಿಚಾರಂಗಳ ವಿವರುಸಲಾಗ. ಆರಿಂಗೆ ಆಳವಾದ ಚಿಂತನಶೀಲತೆ ಇಲ್ಯೋ, ಚಿಂತನಶೀಲತೆ ಇದ್ದರೂ ಕೇಳ್ವ ಆಸಕ್ತಿ ಇಲ್ಯೋ, ಆಸಕ್ತಿ ಇದ್ದರೂ ಭಕ್ತಿ/ಪ್ರೀತಿ ಇಲ್ಯೋ ಅಂಥವಕ್ಕೆ ಇದರ ಹೇಳ್ಳಾಗ. ಹಾಂಗೇ ಭಗವಂತನ ಬಗ್ಗೆ ಅಸಹನೆ, ಅಸೂಯೆ, ದ್ವೇಷ ಇಪ್ಪವರತ್ರೆ ಸರ್ವಥಾ ಹೇಳ್ಳಾಗ. ಇದು ಎಂದೂ ಬೀದಿ ಸೊತ್ತಪ್ಪಲಾಗ.
ಬನ್ನಂಜೆ ವ್ಯಾಖ್ಯಾನಲ್ಲಿ ಹೇಳ್ತವು – ಒಂದು ಕಾಲಲ್ಲಿ ವೇದಾಂತವ ಸಾರ್ವಜನಿಕವಾಗಿ ಬಿಚ್ಚಲಾಗ, ಅದರ ರಹಸ್ಯವಾಗಿ ಮಡಿಕ್ಕೊಳ್ಳೆಕು ಹೇಳ್ವ ಅಭಿಪ್ರಾಯ ಹೆಚ್ಹಿಗೆ ಬೆಳದತ್ತು. ಇದರ ಪರಿಣಾಮ ಕಾಲಕ್ರಮೇಣ ಈ ಮುಚ್ಚಿಮಡಿಗಿದ್ದು ಹಾಂಗೇ ಮುಚ್ಚಿಮಡಿಗಿದ ಗಂಟು ಆಗಿಯೇ ಉಳುದತ್ತು. ಅದರ ಬಿಡುಸುವವೇ ಇಲ್ಲದ್ದಾತು. ಇಂದು ನಮ್ಮಲ್ಲಿ ಹೆಚ್ಚಿನೋರು ಆಧ್ಯಾತ್ಮಿಕ ಗ್ರಂಥಂಗೊಕ್ಕೆ ಗಂಧ-ಕುಂಕುಮ ಹಚ್ಚಿ ಆರತಿ ಎತ್ತಿ ಮುಚ್ಚಿ ಮಡುಗುವವೇ ಆಗಿ ಹೋತು. ಹಾಂಗಾಗಿ ಈ ಮುಚ್ಚಿಮಡಿಗಿದ್ದ ಗ್ರಂಥವ ಬಿಡುಸುವವೇ ಇಲ್ಲದ್ದಾಗ್ಯೊಂಡು ಬತ್ತಾ ಇದ್ದು.
ನಿಜವಾಗಿ ಭಗವಂತ° ಹೀಂಗೆ ಮುಚ್ಚಿಮಡುಗಲೆ ಹೇಳಿದ್ದನಿಲ್ಲೆ. ಆರಿಂಗೆ ಆಸಕ್ತಿ, ನಂಬಿಕೆ ಇಲ್ಯೋ ಅವಕ್ಕೆ ಇದು ಪ್ರಯೋಜನಕ್ಕೆ ಬಾರ ಹೇಳಿ ಮಾಂತ್ರವೇ ಹೇಳಿದ್ದದು. ಆಸಕ್ತಿ ಇಪ್ಪೋರು, ನಂಬಿಕೆ ಇಪ್ಪೋರು ಇದರ ಆಳ ಚಿಂತನೆಲಿ ತೊಡಗಿ ಜ್ಞಾನಾರ್ಜನೆ ಮಾಡಿ, ತಮ್ಮ ಜೀವನದ ಮುಂದಾಣ ದಾರಿಯ ಸುಗಮಗೊಳಿಸಿಗೊಂಡು, ಸಾಧನಾಪಥಲ್ಲಿ ಮುಂದುವರಿಯೇಕ್ಕಾದ್ದು ಮನುಷ್ಯನ ಕರ್ತವ್ಯ.
ಮುಂದೆ ಎಂತರ….. ? ಬಪ್ಪವಾರ ನೋಡುವೋ° .
…ಮುಂದುವರಿತ್ತು.
ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 61 – 67
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in