Oppanna.com

ಸ್ವಯಂವರ : ಕಾದಂಬರಿ : ಭಾಗ 15 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   09/09/2019    2 ಒಪ್ಪಂಗೊ

ಕಲ್ಪಣೆ ಕೆಲಸ ಸುರುಮಾಡಿ ಎರಡು ಮೂರು ತಿಂಗಳಾತು.ಆಳುಗೊಕ್ಕೆ ಊಟ, ಚಾಯ ಕೊಡದ್ರೂ ಹಾಲು, ಮಜ್ಜಿಗೆ ನೀರು,ಉಪ್ಪಿನಕಾಯಿ ಎಲ್ಲ ಕೊಡೆಕಾಗಿ ಬಂದೊಂಡಿದ್ದತ್ತು. ಶಾರದೆಗೆ ಅಷ್ಟು ದೂರ ಹೋಗಿ ಬಪ್ಪಷ್ಟು ಪುರ್ಸೊತ್ತಿರ್ತಿಲ್ಲೆ.ಅಂಬಗ ಅದು ಎಲ್ಲವನ್ನೂ ಸುಶೀಲನ ಕೈಲಿ ಕೊಟ್ಟು ಕಳ್ಸುದು. ಹಾಂಗಾಗಿ ಅದಕ್ಕೆ ಆ ಆಳುಗಳ ಎಲ್ಲ ಸರೀ ಗುರ್ತಾತು. ತಮಿಳು ಮಿಶ್ರಿತ ಕನ್ನಡಲ್ಲಿ ಮಾತಾಡುಗ ಇದು ಜೋರು ನೆಗೆ ಮಾಡಿಂಡು ಕೇಳುಗು.
ತಂಗಮ್ಮನೂ ಸುಶೀಲನೊಟ್ಟಿಂಗೆ ಪಟ್ಟಾಂಗಕ್ಕೆ ಬಕ್ಕು.ಸುಶೀಲಂಗೂ ಮನೆಲಿದ್ದರೆ ಅಬ್ಬೆ ಏನಾರು ಕೆಲಸಕ್ಕೆ ದಿನಿಗೇಳುಗು ಹೇಳಿ ಗೊಂತಿದ್ದು. ಹಾಂಗಾಗಿ ಆ ಕೆಲಸ ತಪ್ಸುವ ಉಪಾಯ ಇದು.
ಸುರು ಸುರುವಿಂಗೆ ಆಳುಗೊ ಇದರತ್ರೆ ಸೀದಾ ಮಾತಾಡಿಂಡಿತ್ತಿದ್ದವಿಲ್ಲೆ. ಇದರ ಕಾಂಬಗ ಅವರಷ್ಟಕ್ಕೇ ಏನಾರು ಕುಶಾಲು ಮಾತಾಡುದು, ಸಿನೆಮಾ ಪದ್ಯ ಹೇಳುದು, ಅಂತೇ ಮರ್ಲುಗಟ್ಟಿ ನೆಗೆ ಮಾಡುದು…
ಹೀಂಗೆಲ್ಲ ಅಪ್ಪಗ ಸುಶೀಲಂಗೆ ಅವರತ್ರೆ ಮಾತಾಡ್ಲೆ ಆಶೆಯಪ್ಪದು.ಅವು ಮಾತಾಡುವಾಂಗೆ ಮಾತಾಡೆಕೂಳಿ ಅಪ್ಪದು. ಚಂದ್ರಣ್ಣ ಇದ್ದರೆ ಮಾತ್ರ ಕೆಂಪುಕಣ್ಣು ಮಾಡುಗು ಹೇಳಿ ಹೆದರಿಕೆ ಅದಕ್ಕೆ.

ಹೇಂಗೆ ಸಲಿಗೆ ಬಂತೋ,ಎಂತಾತೋ ಗೊಂತಿಲ್ಲೆ, ಸುಶೀಲಂಗೂ ದಿನೇಸಂಗೂ ದಿನನಿತ್ಯ ಕಾಣದ್ರೆ ಆಗ ಹೇಳುವಷ್ಟು ಸಂಪರ್ಕ ಆತು.ಹತ್ತನೇ ಕ್ಲಾಸು ರಿಸಲ್ಟು ಬಂತು. ಸುಶೀಲ ಅಲ್ಲಿಂದಲ್ಲಿಗೆ ಮಾರ್ಕು ಸಿಕ್ಕಿ ಪಾಸಾತು.
“ನಿನ್ನ ಅಕ್ಕ,ಅಣ್ಣ ಎಲ್ಲ ಕಲಿವಲೆಷ್ಟು ಉಶಾರಿ.ನೀನು ಮಾತ್ರ ಸರೀ ಕಲಿವಲೆ ಮನಸ್ಸು ಕೊಡ್ತಿಲ್ಲೆ ಕಾಣ್ತು” ಹೇಳಿ ಶಾಲೆಯ ಒಂದು ಟೀಚರು ಹೇಳಿದ್ದದು ಸುಶೀಲಂಗೆ ಭಾರೀ ಅವಮರ್ಯಾದೆ ಆತು.
“ಎನಗೆ ಬೇಕಾದಾಂಗೆ ಆನಿಪ್ಪದು,ಆರೂ ಹೇಳಿದ ಹಾಂಗಲ್ಲ” ಹೇಳಿ ಅಲ್ಲಿಯೇ ಎರಡು ಪರಂಚಿಕ್ಕಿ ಮನಗೆ ಬಂತು. ಬಪ್ಪಗ ದಾರಿಲಿ ದಿನೇಸ ಸಿಕ್ಕಿತ್ತು. ಸುಶೀಲನ ಕೈಲಿ ಮಾತಾಡೆಕೂಳಿಯೇ ಎಷ್ಟೊತ್ತಿಂಗೂ ಕಾದು ಕೂಬ ಮನುಶ್ಯ ಅದು.ಈಗ ಒಬ್ಬನೇ ಸಿಕ್ಕಿಯಪ್ಪಗ ಕೇಳೆಕೋ?

ಅದರ ಕಂಡಪ್ಪಗ ಸುಶೀಲಂಗೂ ಹಾಂಗೇ ಆತು.ಕರಿ ಕರಿ ಬಣ್ಣದ ಮೋರೆಲಿ ಬೆಳೀ ಹಲ್ಲು ಮಾತ್ರ ನೆಗದು ಕಾಂಬ ರಜ ಕೆಂಪು ಕಣ್ಣಿನ ದಿನೇಸನ ಅದಕ್ಕೆ ತುಂಬ ಇಷ್ಟ ಆತು.ಅಂದು ಅವು ಇಬ್ರು ಗುಡ್ಡೆಯ ಮರದ ಬುಡಲ್ಲಿ ಕೂದು ತುಂಬ ಮಾತಾಡಿದವು.

ಇಷ್ಟರವರೆಗೆ ಇಲ್ಲದ್ದ ಹೊಸ ರೀತಿಲಿ ಅದು ನೋಡುಗ ಸುಶೀಲಂಗೆ ಮೈಯೆಲ್ಲಾ ಎಂತೋ ಆತು. ರಾಮಾಚಾರಿ ಸಿನೆಮಾದ “ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು…..” ಪದ್ಯ ಹೇಳಿಕ್ಕಿ ಮೆಲ್ಲಂಗೆ
“ನೀನೆಷ್ಟು ಚೆಂದ ಇದ್ದೆ ಗೊಂತಿದ್ದಾ?” ಹೇಳಿ ದಿನೇಸ ಕೇಳಿಯಪ್ಪಗ ಇದಕ್ಕೆ ಆಕಾಶಕ್ಕೆ ಹಾರಿದಷ್ಟು ಕೊಶಿ.
“ನಿಜವಾಗಿಯೂ ಅಪ್ಪಾ?” ಭಾರೀ ಸಂಭ್ರಮ. ಆನು ಯೇವದೋ ರಂಭೆ,ಊರ್ವಶಿ ಹೇಳುವ ಭಾವ ಸುಶೀಲನ ಮನಸ್ಸಿಂಗೆ ಆತು.

ಅಂದಿಂದ ಮತ್ತೆ ಎರಡು ಜೆನವೂ ಬೇರೆ ಆರಿಂಗೂ ಕಾಣದ್ದ ಹಾಂಗೆ ಗುಟ್ಟಾಗಿ ಎಲ್ಲೆಲ್ಲೋ ಕೂದು ಮಾತಾಡ್ಲೆ ಸುರು ಮಾಡಿದವು. ಅಷ್ಟಪ್ಪಗ ಸುಶೀಲ ಕೋಲೇಜಿಂಗೂ ಸೇರಿತ್ತು.
“ದೊಡ್ಡ ದೊಡ್ಡ ಶಾಲಗೆ ಹೋಪಗ ಅಲ್ಲಿ ತುಂಬ ಜೆನಂಗೊ ಇಕ್ಕು. ಗೆಂಡು ಮಕ್ಕಳೂ ಮಾತಾಡ್ಲೆ ಎಲ್ಲ ಬಕ್ಕು. ಅಂದರೂ ನಮ್ಮ ಜಾಗ್ರತೆ ನಾವು ಮಾಡೆಕು.ಬಾಳೆ ಮುಳ್ಳಿಂಗೆ ಬಿದ್ದರೂ ಮುಳ್ಳು ಬಾಳಗೆ ಬಿದ್ದರೂ ಹರಿವದು ಬಾಳೆ’ ಹೇಳಿ ನೆಂಪು ಬೇಕು.ಕೂಸುಗೊಕ್ಕೆ ಯೇವಗಲೂ ಕೆಟ್ಟ ಹೆಸರು ಬಪ್ಪದು. ಹಾಂಗಾಗಿ ನಿನ್ನ ಅಕ್ಕ° ಹೋದಾಂಗೆ ಮರ್ಯಾದೆಲಿ ಹೋಗಿ ಬಂದು ಮಾಡೆಕು” ಪುಳ್ಳಿಗೆ ಭಾಮೆಯಕ್ಕನ ಉಪದೇಶ ಆತು.

“ಅದೆಲ್ಲ ಹಳೇ ಕಾಲಲ್ಲಿ ಅಜ್ಜೀ.ಈಗ ಮಾಣಿಯಂಗಳತ್ರೆ ಮಾತಾಡದ್ದೆ ಹೋದವರ ತಮಾಷೆ ಮಾಡುಗಷ್ಟೆ.ಮತ್ತೆ ನಿಂಗೊ ಬಾಳೆ,ಮುಳ್ಳು ಹಾಂಗೆಲ್ಲ ಹೇಳಿರೆ ಎನಗೆ ಅರ್ಥಾಗ ನಿಂಗಳ ಪುರುಂಕು ಭಾಶೆ”.
“ಈ ಕೂಸಿಂಗೆ ಬುದ್ದಿ ಹೇಳುದಕ್ಕಿಂತ ಹೊಳಗೆ ಹಾರುದೊಳ್ಳೆದು” ಅಜ್ಜಿ ಪರಂಚಿಂಡು ಹೋದವು.

ಹಟ್ಟಿಯ ಗೋಡೆಯ ಕೆಲಸ ಆಗಿಂಡಿದ್ದತ್ತು. ಆಳುಗೊ ಬಂದು ಮೂರು ನಾಲ್ಕು ತಿಂಗಳಾತು.ಕೊಟ್ಟಗೆಲೇ ಇದ್ದರೂ ಅವರದ್ದು ಯೇವ ರಗಳೆಯೂ ಇಲ್ಲೆ ಹೇಳಿ ಸಮದಾನ ಶಾರದೆಗೆ. ತಂಗಮ್ಮ ಒಂದೊಂದರಿ ಮನೆ ಹತ್ರಂಗೆ ಬಂದರೆ ಮನೆಲಿ ಮಾಡಿದ ಎಂತಾರು ವಿಶೇಷ ತಿಂಡಿಯ ಎಲ್ಲ ಕೊಟ್ಟು ಕೊಂಡಿದ್ದತ್ತು.ಮನೆ ಜಾಲಿಲ್ಲಿ ಬೆಳಶುವ ನೆಟ್ಟಿಕಾಯಿಗಳನ್ನೂ ಬೆಂದಿ ಮಾಡ್ಲೆ ಕೊಡುಗು. ಅದೂದೆ ಹಾಂಗೇ ಹೂಗಿನ ಬುಡಂದ ಹುಲ್ಲು ತೆಗವದೋ,ತೋಟಂದ ಹಾಳೆಯೋ,ಸೋಗೆಯೋ ಎಂತಾರು ತಂದದಿದ್ದರೆ ಕೊಚ್ಚಿ ಕೊಡುದೋ..ಹೀಂಗೇ ಎಂತಾರು ಹೊಡಿ ಕೆಲಸಂಗೊ ಇದ್ದರೆ ಶಾರದೆಗೆ ಮಾಡಿಕೊಡುಗು.
ಚಂದ್ರಣ್ಣಂಗೆ ತೋಟದ ಕೆಲಸದ ಗೌಜಿ.ಕಾಲಂಟೆ ಎದ್ದು ಮಿಂದು ಪೂಜೆ ಮಾಡಿ,ಕಾಪಿ ಕುಡುದು ,ಹಟ್ಟಿ ಕಟ್ಟುವಲ್ಲಿಗೆ ಹೋಗಿ ಅವಕ್ಕೆ ಬೇಕಾದಾಂಗೆ ಸಲಹೆ ಕೊಟ್ಟಿಕ್ಕಿ ತೋಟಕ್ಕೆ ಹೋದರೆ ಬಪ್ಪಗ ಮಧ್ಯಾಹ್ನಕ್ಕು. ಅದರೆಡೆಲಿ ಭಾಮೆಯಕ್ಕಂಗೂ ಏನೂ ಎಡಿಯದ್ದಾತು.ಕೂದಲ್ಲಿಂದ ಏಳೆಕಾರೆ ಆರಾರು ಕೈ ಹಿಡಿಯೆಕು. ಶಾರದೆಗೆ ಒಟ್ಟಾರೆ ನಿಂದಲ್ಲಿಂದ ತಿರುಗುಲೆ ಎಡಿಯದ್ದಷ್ಟು ಕೆಲಸಂಗಳುದೆ.

ಸುಶೀಲ ದಿನೇಸನೊಟ್ಟಿಂಗೆ ಪಟ್ಟಾಂಗ ಹೊಡವದು,ಒಂದು ದಿನ ಅದರೊಟ್ಟಿಂಗೆ ಜೆತೆಕ್ಕಾರ್ತಿಯ ಮನಗೆ ಹೋಪದು ಹೇಳಿ ಲೊಟ್ಟೆ ಹೇಳಿಕ್ಕಿ ಸಿನೆಮಾ ನೋಡ್ಲೆ ಹೋದ್ದದು ಎಲ್ಲ ಊರಿಲ್ಲಿ ಕೆಲವು ಜೆನಂಗೊಕ್ಕೆ ಗೊಂತಾತು.

ಕೆಲವು ವಿಶಯಂಗೊ ಎಲ್ಲ ಹಾಂಗೇ. ಆರಿಂಗೂ ಗೊಂತಾಗ ಹೇಳಿ ಗ್ರೇಶಿಂಡೇ ಮಾಡಿರೂ ಜೆನಂಗೊಕ್ಕೆ ಗೊಂತಾಗದ್ದಿರ್ತಿಲ್ಲೆ. “ಅಂಡೆ ಬಾಯಿ ಕಟ್ಲಕ್ಕು, ದೊಂಡೆ ಬಾಯಿ ಕಟ್ಲೆಡಿಯ” ಹೇಳುವ ಗಾದೆ ಹಾಂಗೆ ವಿಷಯ ಗೊಂತಾದವು ಮತ್ತೊಬ್ಬನತ್ರೆ ಹೇಳ್ತವು.ಅವು ಇನ್ನೊಬ್ಬನತ್ರೆ…..!
ಸುಶೀಲನ ವಿಷಯಲ್ಲಿಯೂ ಹೀಂಗೇ ಆತು.ಅದು ದಿನೇಸನತ್ರೆ ಕದ್ದುಮುಚ್ಚಿ ಮಾತಾಡುದು ಆರಿಂಗೋ ಗೊಂತಾತು.ಸಣ್ಣ ಸಣ್ಣಕೆ ಊರಿನವೆಲ್ಲ ಮಾತಾಡ್ಲೆ ಸುರು ಮಾಡಿದವು
“ಅಲ್ಲದ್ರೂ ಈ ಚಂದ್ರಣ್ಣಂಗೆ ಸ್ವಯ ಇದ್ದಾ? ಪ್ರಾಯದ ಕೂಸುಗೊ ಇಪ್ಪ ಮನೆಲಿ ತಿಂಗಳುಗಟ್ಲೆ ಆಳುಗಳ ತಂದು ನಿಲ್ಸಲಕ್ಕೋ? ಆ ಶಾರದೆಗಾದರೂ ಮಗಳು ಎಂತ ಮಾಡ್ತು ಹೇಳಿ ರೆಜ ನೋಡ್ಲಾಗದಾ? ”
“ಈಗಾಣ ಕಾಲವೇ.ದೊಡ್ಡ ಜೆನಂಗೊ ಮಾಡಿರೆ ಆರೂ ಹೇಳುವವು ಕೇಳುವವು ಇಲ್ಲೆ.ಇನ್ನು ಆ ತಮಿಳನ ಅಳಿಯ ಮಾಡ್ಲಿ.”
“ಆ ಕೂಸಿನ ಸೆಡವು ನೋಡುಗಳೇ ಅಂದಾಜಿ ಮಾಡಿದ್ದೆ,ಅದು ಅಬ್ಬೆಪ್ಪಂಗೆ ಹಿಡಿವಲೆ ಸಿಕ್ಕ ಹೇಳಿ”
ಹೀಂಗೇ ಬಾಯಿಗೆ ಬಂದ ಹಾಂಗೆ ಒಬ್ಬೊಬ್ಬನೇ ಮಾತಾಡ್ಲೆ ಸುರು ಮಾಡಿದವು. ಆದರೂ ಅದು ಮನೆಯವಕ್ಕೆ ಮಾಂತ್ರ ಗೊಂತೇ ಆಗದ್ದ ಕಾರಣ ಸುಶೀಲಂಗೆ ಆರ ಹೆದರಿಕೆಯೂ ಇತ್ತಿದ್ದಿಲ್ಲೆ ‌.

ಆ ಸಮಯಲ್ಲಿ ಅವರ ಊರಿಲ್ಲಿ ಒಂದು ವಿಶೇಷ ಘಟನೆ ನೆಡದತ್ತು. ಆಚಕರೆ ಗೋಪಣ್ಣನ ಮಗ ವಿಶ್ವ ಅವನೊಟ್ಟಿಂಗೆ ಕೆಲಸ ಮಾಡುವ ಬೇರೆ ಜಾತಿಯ ಹುಡುಗಿಯ ಮದುವೆ ಅಪ್ಪದೂಳಿ ಹಠ ಹಿಡುದ°. ಗೋಪಣ್ಣ,ಅವನ ಹೆಂಡತಿ ಒಪ್ಪಿದ್ದವೇ ಇಲ್ಲೆ.ಅಕೇರಿಗೆ ವಿಶ್ವ° ಚಂದ್ರಣ್ಣನಲ್ಲಿಗೆ ಬಂದು ವಿಶಯ ಹೇಳಿ “ಹೇಂಗಾರು ಅಬ್ಬೆಪ್ಪನ ಒಪ್ಪುಸೆಕು ಮಾವ°, ಆನು ಮದುವೆ ಆವ್ತರೆ ಅದನ್ನೇ ಅಪ್ಪದು,ಇಲ್ಲದ್ರೆ ಮದುವೆಯೇ ಬೇಡ” ಹೇಳಿಯಪ್ಪಗ ಚಂದ್ರಣ್ಣನ ಮನಸ್ಸು ಕರಗಿತ್ತು.ಅವು ಹೋಗಿ ಆ ಕೂಸಿನ ಮನೆಯವರತ್ರೆ ಮಾತಾಡಿದವು. ಅವು ವಿಶ್ವಂಗೆ ಮಗಳ ಕೊಡ್ಲೆ ಒಪ್ಪಿದವು.ವಿಶ್ವನ ಮನೆಯವು ಮಾಂತ್ರ ಒಪ್ಪಿದ್ದವಿಲ್ಲೆ

“ಬೇರೆ ಜಾತಿ ಕೂಸು ನಮ್ಮ ಮನಗೆ ಬಪ್ಪದು ಬೇಡ,ಎಷ್ಟೇ ಕಲ್ತರೂ ನಮ್ಮ ಆಚಾರವಿಚಾರಂಗೊ ಬೇರೆ, ಅವರದ್ದು ಬೇರೆ, ಹೊಂದಾಣಿಕೆ ಆಗ,ಸುಮ್ಮನೇ ರಗಳೆ ಎಳದಾಕುದು ಬೇಡ” ಹೇಳಿ ಗೋಪಣ್ಣನ ಹೆಂಡತಿ ಪದ್ಮಕ್ಕನೇ ಹೇಳಿದವು.
ಚಂದ್ರಣ್ಣನ ಸಂಧಾನಕ್ಕೆ ಎಷ್ಟು ಮಾತ್ರಕ್ಕೂ ಅವು ಒಪ್ಪದ್ದಿಪ್ಪಗ ಅಕೇರಿಗೆ ಚಂದ್ರಣ್ಣ ಒಂದು ಗಟ್ಟಿ ತೀರ್ಮಾನ ತೆಕ್ಕೊಂಡವು.
“ನಿಂಗೊ ಮದುವೆ ಮಾಡ್ಸದ್ರೆ ಆನೇ ಅವರ ಮದುವೆ ಮಾಡ್ಸುತ್ತೆ.ಎರಡು ಜೆನವೂ ಅತ್ಲಾಗಿತ್ಲಾಗಿ ತುಂಬ ಪ್ರೀತಿಸಿದ ಕಾರಣ ಅವರ ಬೇರೆ ಮಾಡುದು ಸರಿಯಲ್ಲ ಕಾಣ್ತು. ಕೂಸಿನತ್ರೆ,ಅದರ ಮನೆಯವರತ್ರೆ ಆನು ಮಾತಾಡಿದ್ದೆ.ಜಾತಿ ಬೇರೆ ಆದರೂ ಒಳ್ಳೆ ಸಂಸ್ಕಾರ ಇಪ್ಪವು.ಹೊಂದಿಕೊಂಡು ಹೋಪ ಕೂಸಿನ ಹಾಂಗೆ ಕಾಣ್ತು. ಹಾಂಗಾಗಿ ಅವು ನೇರ್ಪ ಇರ್ಲಿ ಹೇಳಿ ಆಶೀರ್ವಾದ ಮಾಡಿ ಗೋಪಣ್ಣಾ” ಹೇಳಿಕ್ಕಿ ಬಂದವು ಚಂದ್ರಣ್ಣ.

ಅದಾಗಿ ಒಂದು ವಾರಲ್ಲಿ ಊರಿನ ಒಂದು ಹಾಲ್ ಲಿ ಅವರ ಮದುವೆಯನ್ನು ಮಾಡ್ಸಿದವು.ರೆಜ ಗೌಜಿಲಿ ಮಾಡಿದ ಕಾರಣ ಊರಿನವಕ್ಕೆಲ್ಲ ಹೇಳಿಕೆಯೂ ಇದ್ದತ್ತು.ಈ ವಿಶಯಲ್ಲಿ ಊರಿನವು ಎರಡು ವಿಭಾಗ ಆದವು.ಕೆಲವು ಜೆನ ಮದುವೆಗೆ ಒಪ್ಪಿಗೆ ಕೊಟ್ಟರೆ ,ಇನ್ನು ಕೆಲವು ಜೆನ ಚಂದ್ರಣ್ಣನ ಬೈದವು
“ಒಂದೊಂದು ಹೊಸ ಕ್ರಮ ಮಾಡ್ಲೆ ಹೆರಟಿದ°.ಅಗತ್ಯ ಇದ್ದತ್ತೋ? ”
“ಇವಂಗೆಂತ ಪೋಕಾಲ ಬಯಿಂದು, ವಿಶ್ವನ ಅಬ್ಬೆಪ್ಪ ಮದುವೆ ಮಾಡ್ಸದ್ರೆ ಇವ° ಮದುವೆ ಮಾಡ್ಸುದೆಂತಕೆ? ಇವ° ಎಂತ ಸೋದರಮಾವನೋ? ರಿಜಿಸ್ಟ್ರಿ ಮದುವೆ ಮಾಡಿರೆ ಸಾಕಾವ್ತಿತು”

“ಮಾಡ್ಲಾಗದ್ದರ ಮಾಡಿರೆ ಆಗಬಾರದ್ದು ಆವ್ತಾಡ,ನಮಗೆಂತಕೆ ಅವರ ಶುದ್ದಿ! ಎಂತ ಬೇಕಾರೂ ಮಾಡ್ಲಿ……”
ಆರು ಎಂತ ಹೇಳಿರೂ ‘ಆನು ಮಾಡಿದ್ದು ಸರಿ’ ಹೇಳುವ ಧೈರ್ಯ ಚಂದ್ರಣ್ಣಂಗೆ ಇದ್ದತ್ತು.

ಕೇಶವನ ಪರೀಕ್ಷೆ ಕಳುದು ಅವ° ಮನಗೆ ಬಂದ°.ಇನ್ನು ಎಲ್ಲಿಯಾದರು ಕೆಲಸ ಹುಡ್ಕೆಕಷ್ಟೆ.ಅವ° ಬಂದದು ಚಂದ್ರಣ್ಣಂಗೆ ಎಷ್ಟೋ ಸಮದಾನ ಆತು.ಅರ್ಧಕ್ಕರ್ಧ ಕೆಲಸ ಅವ ತಲಗೆ ತೆಕ್ಕೊಂಡ°. ಅಣ್ಣ ಬಂದ ಮತ್ತೆ ಸುಶೀಲಂಗೆ ದಿನೇಸನತ್ರೆ ಮಾತಾಡ್ಲೆ ರೆಜಾ ಹೆದರಿಕೆ ಅಪ್ಪಲೆ ಸುರುವಾತು. ಅವ° ಎಷ್ಟೊತ್ತಿಂಗೆ ಎಲ್ಲಿ ಇರ್ತ° ಹೇಳಿ ಅಂದಾಜಾವ್ತಿಲ್ಲೆ. ತಂಗೆ ಹೇಳಿ ತುಂಬಾ ಕೊಂಗಾಟ ಇದ್ದರೂ ಅದರ ಕೆಲವು ಕ್ರಮಂಗೊ ಆಗಿಂಡಿತ್ತಿಲ್ಲೆ ಅವಂಗೆ.
ಆಳುಗಳ ಕೆಲಸ ಮುಗುದ ಮತ್ತೆ ಗುಡ್ಡೆ ಕೊಡೀಲೋ,ತೋಟದ ತಲೇಲೋ ಹೋಗಿ ಮಾತಾಡಿಂಡಿದ್ದವಕ್ಕೆ ಈಗ ಕೇಶವ ಇದ್ದ ಕಾರಣ ಸಮಯ ಹೊಂದಾಣಿಕೆ ಮಾಡ್ಲೆ ಕಷ್ಟ ಆತು.ಆದರೂ ಸುಶೀಲ ಭಯಂಕರ ಉಶಾರಿ. ಮೂರು ಸಂಧಿಯಪ್ಪಗ ಅಪ್ಪ° ಪೂಜೆ ಮಾಡುವ ಹೊತ್ತಿಂಗೆ, ಅಣ್ಣ ಮಿಂದು ಜೆಪ ಮಾಡುವ ಹೊತ್ತಿಂಗೆ ಮನೆಯ ಉರುವೆಲು ದಾಂಟಿ ಹೆರ ಬಂದು ಆರಿಂಗೂ ಕಾಣದ್ದ ಹಾಂಗೆ ಅಲ್ಲೆಲ್ಲಿಯಾದರೂ ದಿನೇಸನತ್ರೆ ಸಿಕ್ಕಲೆ ಹೇಳಿತ್ತು.

“ಆನು ಮದುವೆ ಆವ್ತರೆ ನಿನ್ನನ್ನೇ ಮದುವೆ ಅಪ್ಪದು” ಹೇಳಿ ದಿನೇಸನತ್ರೆ ಸುಶೀಲನೂ,ಸುಶೀಲನತ್ರೆ ದಿನೇಸನೂ ಅತ್ಲಾಗಿತ್ಲಾಗಿ ಭಾಶೆ ತೆಕ್ಕೊಂಡಿದವು. ಅದರ ಕಾಣದ್ರೆ ಒಂದು ದಿನವೂ ಕಳಿವಲೆಡಿಯ ಹೇಳುವಷ್ಟಾತು ಸುಶೀಲಂಗೆ ‌.ದಿನೇಸ ಅದರ ಕೊರಳಿಂಗೆ ಒಂದು ಕಪ್ಪು ನೂಲು ತಂದು ಕಟ್ಟಿದ್ದು.ಅದರಿಂದ ಮತ್ತೆ ಅದು ಗೆಂಡ ಹೇಳಿಯೇ ಮನಸಿಲ್ಲಿ ಜಾನ್ಸಲೆ ಸುರುಮಾಡಿತ್ತು ಸುಶೀಲ.ಕೋಲೇಜಿನ ಪಾಠಂಗೊ ಯೇವದೂ ಅದರ ತಲಗೆ ಅರ್ಥಾಗದ್ದ ಹಾಂಗಾತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 15 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಎರಡು ಕಂತಿನ ಒಟ್ಟಿಂಗೆ ಓದಿ ಮುಗುಶಿದೆ. ಅಬ್ಬಾ ಸುಶೀಲನ ಹಾಂಕಾರವೇ. ಗ್ರೇಶಿಯಪ್ಪಗಳೇ ಬೇಜಾರಾವ್ತು. ಈಗಾಣ ಕೆಲವು ಕೂಸುಗಳ ಮನಸ್ಥಿತಿ ನವಗೆ ಅರ್ಥವೇ ಆವ್ತಿಲ್ಲೆ.

  2. ಸುಶೀಲ ಜೀವನ ಯೋಚನೆ ಮಾಡ್ಳೆ ಬೇಜಾರು ಆವುತ್ತು.ಒಳ್ಳೆದಾಗಲಿ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×