ಸುಶೀಲ ಹೇಂಗೋ ಮಿಂದ ಶಾಸ್ತ್ರ ಮಾಡಿಕ್ಕಿ ಒಳಾಂಗೆ ಬಪ್ಪಗ ತಂಗಮ್ಮನೂ ,ಬೇರೆ ಎರಡು ಹೆಣ್ಣುಗಳೂ ಒಟ್ಟಿಂಗೆ ಒಂದು ಕೋಳಿಯ ತೆಕ್ಕೊಂಡು ಬಂದಿಕ್ಕಿ ಒಂದು ಫಳಫಳ ಹೊಳವ ಬಾಳುಕತ್ತಿಲಿ ಅದರ ಕೊರಳು ಕೊಯ್ವಲೆ ಹೆರಟುಕೊಂಡಿತ್ತಿದ್ದವು.
ಕೋಳಿ ಅರಜ್ಜುದು ಕೇಳಿ ಸುಶೀಲಂಗೆ ಹೆದರಿ ನೆಡುಗಿತ್ತು.
“ದೇವರೇ..ಆ ಕೋಳಿಯ ಇವು ಕೊಂದು ತಿಂಗಾ? ಈ ತಂಗಮ್ಮ ಇಷ್ಟು ಜೋರಿದ್ದಾ? ಮನೆಲಿಪ್ಪಗ “ಎಂಗೊ ಮೂರು ಹೊತ್ತು ಉಂಬಲೆ ಎಡಿಗಾದ್ದದೇ ನಿಂಗಳ ದಯಂದ” ಹೇಳಿ ಅಂಬಗಂಬಗ ಅಬ್ಬೆ ಹತ್ತರೆ, ಅಪ್ಪನತ್ರೆ ಕೂಗಿದ ಹಾಂಗೆ ಹೇಳಿಂಡಿದ್ದ ಜೆನ ಈಗ ರಾಕ್ಷಸಿ ಹಾಂಗೆ ಕೋಳಿಯ ಕೊರಳು ಕೊಯ್ವಲೆ ಹೆರಟಿದನ್ನೇ.
ಬಾಳು ತೆಕ್ಕೊಂಡು ಅದು ಕೋಳಿಯ ಕೊರಳು ಕೊಯ್ವಲೆ ಹೆರಟಪ್ಪಗ ಸುಶೀಲ ಹೆದರಿ ಒಂದು ಆರ್ಭಟೆ ಕೊಟ್ಟತ್ತು.ಅದು ಕೇಳಿ ಅವೆಲ್ಲ ತಿರುಗಿ ನೋಡುವ ಹೊತ್ತಿಂಗೆ ಕೋಳಿ ಅಲ್ಲಿಂದ ತಪ್ಸಿ ಜಾಲಿಂಗೆ ಓಡಿತ್ತು.
“ಎಂತಾತು, ಎಂತಾತು?” ಕೇಳಿಂಡು ಮೂರು ಜೆನವೂ ಇದರ ಹತ್ರಂಗೆ ಬಂದವು. ಸುಶೀಲ ಕಣ್ಣು ಮುಚ್ಚಿ ನಿಂದು ಗಡಗಡ ನಡುಗುದು ಕಂಡಪ್ಪಗ ಅವರಲ್ಲಿ ಒಂದು ಹೆಣ್ಣಿಂಗೆ ವಿಶಯ ಅಂದಾಜಾತು.
“ಇದಕ್ಕೆ ಹೀಂಗಿದ್ದದು ನೋಡಿ ಗೊಂತಿರ.ತಂಗಮ್ಮಾ..ನಿನಗೆ ಬೆಂದಿ ಬೇಕಾರೆ ಎನ್ನ ಮನೆಲಿ ಮಾಡಿ ತಪ್ಪಲಕ್ಕು.ಇದಕ್ಕೆ ಹೆದರಿಕೆ ಮತ್ತೋ ಕೂದರೆ ಅದರ ಅಬ್ಬೆಪ್ಪನ ಕಂಡರೂ ಗುರ್ತ ಸಿಕ್ಕದ್ದಕ್ಕು”
ತಂಗಮ್ಮಂಗೂ ಅದು ಸರಿ ಹೇಳಿ ಕಂಡತ್ತು ಕಾಣ್ತು .
“ಆತಂಬಗ ಇದರ ನೋಡಿ ಹೆದರುದು ಬೇಡ,ಆನು ನಿನ್ನ ಮನಗೆ ಬತ್ತೆ” ಹೇಳಿತ್ತು.
ಸುಶೀಲಂಗೆ ಜೋರು ಹಶುವಪ್ಪಲೆ ಸುರುವಾತು. ಮೀವಲೆ , ಬಾಕಿದ್ದ ಕೆಲಸಂಗೊಕ್ಕೆ ಆದ ಬಂಙ ಗ್ರೇಶುಗ ಇನ್ನು ಆರತ್ರೂ ಎಂತದೂ ಕೇಳ್ಲಿಲ್ಲೆ ಹೇಳಿ ಜಾನ್ಸಿತ್ತು.ದಿನೇಸ ಒಂದು ಇನ್ನೂ ಒಳಾಂಗೆ ಹತ್ತದ್ದೆ ಹೆರವೇ ಆರತ್ರೋ ಪಟ್ಟಾಂಗ ಹೊಡಕ್ಕೊಂಡು ನಿಂದೊಂಡಿದ್ದತ್ತು.ಅದರ ಗೆಳೆಯರಿಂಗೆಲ್ಲ ಸುಶೀಲನ ಹಾಂಗಿದ್ದ ಕೂಸು ಅದರೊಟ್ಟಿಂಗೆ ಬಂದದು ಭಾರೀ ಆಶ್ಚರ್ಯ. ಹಾಂಗೆ ಅದರ ಶುದ್ದಿ ಕೇಳಿಂಡು ಅದರ ಹೊಗಳಿ ಬೆನ್ನು ತಟ್ಟಿಂಡಿತ್ತಿದ್ದವು.
ಸುಶೀಲಂಗೆ ಅಬ್ಬೆ ಮಾಡುವ ಉದ್ದಿನದೋಸೆ ನೆಂಪಾತು. ರವೆ ,ತುಪ್ಪ ಹಾಕಿ ಬೆಶಿ ಬೆಶಿ ದೋಸೆ ತಿಂಬಲೆ ಭಾರೀ ಇಷ್ಟ ಅದಕ್ಕೆ. ವಾರಲ್ಲಿ ನಾಲ್ಕೈದು ದಿನವೂ ಅಬ್ಬೆ ಉದ್ದಿನದೋಸೆ ಮಾಡುದು ಸುಶೀಗೆ ಬೇಕಾಗಿ.
“ತೆಳ್ಳವು, ಉಂಡೆ ಎಲ್ಲ ಮಾಡಿರೆ ಸುಶೀಗೆ ಸರೀ ಮೆಚ್ಚುತ್ತಿಲ್ಲೆ. ಉದ್ದಿನದೋಸೆ ಆದರೆ ಪ್ರೀತಿಲಿ ತಿಂತು” ಹೇಳಿಂಡು ಅಬ್ಬೆ ಎರದು ಕೊಡುವ ಕುಞಿ ದೋಸೆ ಹೇಳಿರೆ ಅದಕ್ಕೆ ಭಾರೀ ಪ್ರೀತಿ.
ಇಲ್ಲಿ ಎಂತ ಮಾಡ್ತವೋ ತಿಂಬಲೆ, ಅದು ಸುತ್ತೂ ನೋಡಿತ್ತು. ಇವು ಮಾಡಿದ್ದರ ತಿಂಬದಾದರೂ ಹೇಂಗೆ? ಕೋಳಿ ಕೊಯ್ದ ಕೈಲಿ…….ಥಕ್!! ಅದರ ಗ್ರೇಶುಗಳೇ ಹೇಸಿಗೆ ಆತು.
ಎಂತ ಮಾಡ್ಲೂ ಎಡಿಯದ್ದ ಅಸಹಾಯಕತೆಲಿ ಸುಶೀ ಕಣ್ಣನೀರು ಹಾಕಿತ್ತು. ಒಂದರಿ ಬೇಗನೆ ಅಪ್ಪ° ಪೋಲೀಸಿಂಗೆ ಕಂಪ್ಲೇಂಟ್ ಕೊಟ್ಟು ಆದಷ್ಟು ಬೇಗ ಅವು ಇಲ್ಲಿಗೆ ಹುಡ್ಕಿಂಡು ಬಂದು ವಾಪಾಸು ಮನಗೆ ಹೋಪ ಹಾಂಗಾಗಿದ್ದರೆ ಸಾಕಾವ್ತಿತು’ ಹೇಳಿ ಮಾಂತ್ರ ಅದರ ಆಲೋಚನೆ ಇದ್ದದು.
“ಇದಾ..ನಿನಗೆ ಹಶುವಾವ್ತಾದಿಕ್ಕು.ಎಂಗೊ ಎಲ್ಲ ಹನ್ನೊಂದು ಗಂಟಗೆ ಉಂಬದಷ್ಟೆ” ಹೇಳಿ ಎರಡು ಬಾಳೆಹಣ್ಣು ತಂದು ಕೊಟ್ಟತ್ತು ತಂಗಮ್ಮ.
“ಬೇರೆಂತದೂ ಇಲ್ಯಾ?” ಹೇಳುವಾಂಗೆ ಅದರ ಮೋರೆ ನೋಡಿತ್ತು ಸುಶೀ.
“ನಿನ್ನ ಮನೆಯ ಹಾಂಗೆ ಮೂರೊತ್ತೂ ತಿಂಬಲೇ ಮಾಡುದಲ್ಲ ಎಂಗಳ ಕೆಲಸ, ಇಪ್ಪದರ್ಲಿ ಹೊಟ್ಟೆ ತುಂಬುಸೆಕು” ತಂಗಮ್ಮ ಹಾಂಗೆ ಹೇಳಿ ರಜ ದೊಡ್ಡಕೆ ನೆಗೆ ಮಾಡಿಯಪ್ಪಗ ಸುಶೀಗೆ ದುಃಖ ಬಂತು. ಅಂದರೂ ತಳಿಯದ್ದೆ ಅದು ಕೊಟ್ಟ ಬಾಳೆಹಣ್ಣು ತಿಂದಿಕ್ಕಿ ಕೂದತ್ತು.
ಸುಮಾರು ಹನ್ನೊಂದು ಗಂಟೆ ಹೊತ್ತಿಂಗೆ ದಿನೇಸ ಒಳ ಬಂತು. ಇದರ ಕಂಡಪ್ಪಗ ಒಂದು ತಮಿಳು ಚಿತ್ರಗೀತೆಯ ಹೇಳಿಂಡು ನೆಗೆ ಮಾಡಿತ್ತು. ಸುಶೀಲಂಗೆ ಇಂದು ಅದರ ಕಂಡಪ್ಪಗ ಏವತ್ತಾಣಾಂಗೆ ನೆಗೆ ಬಯಿಂದಿಲ್ಲೆ. ಅದು ಹತ್ತರೆ ಕೂದಪ್ಪಗ ಹೆದರಿಕೆ ಆಗಿ ಫಕ್ಕನೆ ರಜಾ ದೂರ ಕೂದತ್ತು.
“ಇಷ್ಟು ದಿನ ಇಲ್ಲದ್ದ ನಾಚಿಕೆ ಈಗಳಾ?” ಹೇಳಿ ದಿನೇಸ ಕೈ ಹಿಡುದಪ್ಪಗ ಆ ಕೈ ಕುಡುಗಿ ಹೆರ ಓಡಿ ಹೋಪೋ° ಹೇಳುವಾಂಗಾದರೂ ಅಷ್ಟು ಧೈರ್ಯ ಸಾಕಾಯಿದಿಲ್ಲೆ.
“ನಾಳಂಗೆ ನಮ್ಮ ಮದುವೆ.ಮತ್ತೆ ನೋಡು….. ಹ್ಹ….ಹ್ಹ….” ಅದರ ನೆಗೆ ನೋಡುಗ ಮದಲು ಅಪ್ಪನೊಟ್ಟಿಂಗೆ ಹೋದ ಆಟಲ್ಲಿ ನೋಡಿದ ಕೀಚಕನ ನೆಂಪಾತು.
ಮಧ್ಯಾಹ್ನ ಞಳಿ ಬಿದ್ದ ಕೀಜಿ ಬಟ್ಲಿಲ್ಲಿ ಹೆಜ್ಜೆ ಹಾಕಿ ತಂದು ಕೊಟ್ಟತ್ತು ತಂಗಮ್ಮ. ಎಂಗೊ ಅಲ್ಲಿ ಉಣ್ತೆಯ° .ನಿನಗೆ ಕೋಳಿ ತಿಂಬಲೆ ಈಗ ಬಂಙಕ್ಕು! ಅಭ್ಯಾಸಾದರೆ ರುಚಿ ಬಿಡೆ” ಅರಶಿನ ಹಲ್ಲು ತೋರ್ಸಿ ನೆಗೆ ಮಾಡಿದ ಅದರ ಮೋರೆ ನೋಡ್ಳೇ ಮನಸ್ಸು ಬಯಿಂದಿಲ್ಲೆ ಸುಶೀಲಂಗೆ.
“ಇದಾ.. ಮರಗೆಣಂಗಿನ ಬೆಂದಿ, ಇದರ ಹಾಕಿ ಉಣ್ಣು” ಹೇಳಿಕ್ಕಿ ಕೆಂಪು ಕೆಂಪು ಬಣ್ಣದ ಒಂದು ಮುದ್ದೆ ತಾಳಿನ ಹಾಂಗಿದ್ದದರ ಸುಶೀಯ ಬಟ್ಲಿಂಗೆ ಬಳ್ಸಿತ್ತದು. ಬೆಳ್ಳುಳ್ಳಿಯ ಘಾಟಿಂಗೆ ಮೂಗು ಮುಚ್ಚುವ ಹಾಂಗಾತದಕ್ಕೆ.
ಚಂದ್ರಣ್ಣನ ಮನೆಲಿ ಪೂಜೆ, ಶುದ್ಧ ಎಲ್ಲ ಇಪ್ಪ ಕಾರಣ ಮದಲಿಂದಲೂ ನೀರುಳ್ಳಿ, ಬೆಳ್ಳುಳ್ಳಿ ನಿಷಿದ್ಧ. ಹಾಂಗಾಗಿ ಸುಶೀಗೆ ಅದರ ಘಾಟು ಬಂದರೆ ಹೊಟ್ಟೆ ತೊಳಸಿದ ಹಾಂಗಪ್ಪದು. ಒಂದೆರಡು ಸರ್ತಿ ದಿನೇಸನೊಟ್ಟಿಂಗೆ ಹೋಟ್ಲಿಂಗೆ ಹೋದಿಪ್ಪಗ ಬೆಳ್ಳುಳ್ಳಿ ಹಾಕಿದ ಬೆಂದಿ ತಿಂದು ರುಚಿ ನೋಡಿರೂ ಅದಕ್ಕೆ ಬೇರೆ ಮಸಾಲೆ ಹಾಕುವ ಕಾರಣ ಆದಿಕ್ಕು ಈ ಬೆಂದಿಯ ಹಾಂಗಾಯಿದಿಲ್ಲೆ.
ಇದೀಗ ಬೆಳಿ ಅಕ್ಕಿ ಹೆಜ್ಜೆ, ಆ ಬೆಂದಿ ಹಾಕಿ ಉಂಬದಾದರೂ ಹೇಂಗೆ? ಮನೆಲಿ ಬೆಶಿ ಬೆಶಿ ಕೆಂಪಕ್ಕಿ ಅಶನ, ತುಪ್ಪ , ಚೆಪ್ಪೆ ಚೆಪ್ಪೆ ತಾಳು,ಮೇಲಾರ ಹಾಕಿ ಉಂಬ ಕೂಸಿಂಗೆ ಇದು ದೊಂಡೆಂದ ಕೆಳ ಇಳುದ್ದಿಲ್ಲೆ. ಮಜ್ಜಿಗೆ, ಮಸರಾದರೂ ಇರ್ತಿದ್ದರೆ..!!
ಬೆಂದಿಯ ಕೆಂಪು ಕೆಂಪು ಬಣ್ಣ ನೋಡುಗ ಕೋಳಿಯನ್ನೇ ನೆಂಪಾತು. ಆದರೆ ಹಶುವಾಗಿ ಹೊಟ್ಟೆ ಕರಂಚಿದ ಅದಕ್ಕೆ ಇದರ ತಿನ್ನದ್ದೆ ಬೇರೆ ನಿವೃತ್ತಿಯೂ ಇದ್ದತ್ತಿಲ್ಲೆ.
“ಸುಶೀ ಎಲ್ಲೋರ ಹಾಂಗಲ್ಲ, ಅದಕ್ಕೆ ಹೆಚ್ಚೊತ್ತು ಹಶು ತಡಕ್ಕೊಂಡು ನಿಂಬಲೆಡಿಯ. ರುಚಿಯೂ ಆಯೆಕು, ಬಾಕಿದ್ದವೆಲ್ಲ ಹೇಂಗೆ ಮಾಡಿರೂ ತಿಂತವು. ಇದರ ಬಾಯಿ ಸಾಗರ” ಹೇಳಿ ಅಬ್ಬೆ ಒಂದರಿ ದೊಡ್ಡಬ್ಬೆ ಬಂದಿಪ್ಪಗ ಹೇಳಿ ನೆಗೆ ಮಾಡಿದ್ದು ನೆಂಪು ಬಂತು!!
‘ಅಪ್ಪು, ಅಬ್ಬೆ ಯೇವಗಲೂ ಎನ್ನತ್ರೆ ಕೇಳಿಯೇ ಅಡಿಗೆ ಮಾಡುದು!! ಆದರೆ ಈಗ!! ಇಲ್ಲಿ!!
ಅಬ್ಬೆ ಕರಡಿಗೆಲಿ ಮಾಡಿ ಮಡುಗಿದ ಮೈಸೂರು ಪಾಕಿನ ತುಂಡು ರಜ ತೆಕ್ಕೊಂಬಲಾವ್ತಿತು. ಆ ಕರಡಿಗೆಲಿ ಇಪ್ಪದರೆಲ್ಲ ಬೇಗಿಂಗೆ ಹಾಕಿರೂ ಅಬ್ಬಗೆ ಗೊಂತಾಗ. ಉಂಡ್ಳಕಾಳು ಅಡಿಗೊಳ ಜೆಂಗದ ಡಬ್ಬಿಲಿ ಇದ್ದತ್ತು. ಅದನ್ನಾದರೂ ತಂದಿದ್ದರೇ…. ಹೊರುದ ಮೆಣಸಿನ ಸೆಂಡಗೆ, ಬಾಳಕ್ಕು, ಮೆಡಿ ಉಪ್ಪಿನಕಾಯಿ…..!! ಯೇವದಾರು ಒಂದರನ್ನಾರು ತಂದಿದ್ದರೆ ಹೀಂಗೆ ನರಕ್ಕ ಬರೆಕಾಗಿ ಬತ್ತಿತಿಲ್ಲೆ. ಅಬ್ಬೆ ಉಪ್ಪಿನಕಾಯಿ, ಸೆಂಡಗೆ ಎಲ್ಲ ಎಷ್ಟು ಜೆನಕ್ಕೆ ಕಟ್ಟಿ ಕೊಡ್ತು..ಅಬ್ಬೆ ಮಾಡುವ ಉಪ್ಪಿನಕಾಯಿ ಭಾರೀ ರುಚಿ ಹೇಳಿ ಆ ಊರಿಲ್ಲೇ ಪ್ರಚಾರ ಇದ್ದು. ಅಜ್ಜಿಯ ಕೈಂದ ಕಲ್ತದಾಡ ಅಬ್ಬೆ ಎಲ್ಲ ಕೆಲಸವನ್ನೂದೆ!!
ಈಗ ಆನು ತಂಗಮ್ಮನ ಕೈಂದ ಹಾಂಗೇ ಕಲಿಯೆಕಕ್ಕಾ? ಆ ನೆಂಪೇ ಅದರ ಮೈಯ ನಡುಗಿಸಿತ್ತು.
ಯೇವದೇ ಅಡೆತಡೆ ಇಲ್ಲದ್ದಿಪ್ಪಗ ನೀರು ಸರಾಗ ಹರಿವ ಹಾಂಗೆ ಸುಶೀಲನ ಕಣ್ಣಿಂದಲೂ ನೀರು ಇಳುಕ್ಕೊಂಡೇ ಇದ್ದತ್ತು. ತಂಗಮ್ಮ ಕೊಟ್ಟ ರಜ್ಜ ನೀರಿಲ್ಲಿ ಕೈ ತೊಳದ ಶಾಸ್ತ್ರ ಮಾಡಿಕ್ಕಿ ಪುನಾ ಒಳ ಬಂದು ಅದೇ ನೆಲಕ್ಕಲ್ಲಿ ಅಲ್ಲಿಪ್ಪ ಒಂದು ತೂಣಿಂಗೆರಗಿ ಕೂದತ್ತದು.
ಬೇರೆ ಗುಡಿಸಲಿನ ಹೆಣ್ಣುಗೊ ಸುಶೀಲನ ನೋಡ್ಲೆ ಬಂದವು. ಅದರ ಜೆಡೆ, ಬಣ್ಣ ಎಲ್ಲೋರಿಂಗು ಆಶ್ಚರ್ಯ. ಒಂದೊಂದೇ ಸಿನೆಮಾ ನಟಿಯರ ಹೆಸರು ಹೇಳಿಂಡು ಇದರ ಮೈ ಕೈ ಮುಟ್ಟುಗ ಬೇಡ ಹೇಳ್ಲೆಡಿಯದ್ದ ಅಸಹಾಯಕತೆಲಿ ಬೋಸಿ ಹಾಂಗೆ ಕೂದತ್ತದು.
ನೇರ್ಪ ತಿಂಬಲೂ ,ಕುಡಿಯಲೂ ಎಡಿಯದ್ದ, ರಜವೂ ಮನಾರ ಇಲ್ಲದ್ದ ದಿನೇಸನ ಮನೆ ಹೇಳುವ ಆ ಗೂಡಿಲ್ಲಿ ಸುಶೀಲ ಕಸ್ತಲೆ ವರೆಗೂ ಹೆರ ಸಾನು ಇಳಿಯದ್ದೆ ಕೂದತ್ತು. ಇರುಳು ಮನುಗುಲೆ ಒಂದು ಗೋಣಿಯೂ, ಸೀರೆಯೂ ಕೊಟ್ಟತ್ತು ತಂಗಮ್ಮ.
ಯೇವಗಲೂ ಮಂಚದ ಮೇಗೆ ಹಾಸಿಗೆಲಿ ಮನುಗಿ ಒರಗಿಂಡಿದ್ದ ಕೂಸಿಂಗೆ ಈ ಕಲ್ಲಕೊಟಂಕಿನ ಹಾಂಗಿದ್ದ ನೆಲಕ್ಕಲ್ಲಿ ಗೋಣಿಯ ಮೇಗಂಗೆ ಒಂದು ಹರ್ಕಟೆ ಸೀರೆ ಹಾಕಿ ಕೊಟ್ಟರೆ ಒರಗುಲೆಡಿಗೋ..!!
ಮೈಯೆಲ್ಲಾ ನೆಲಕ್ಕಕ್ಕೆ ಒತ್ತಿ ಬೇನೆ ಅಪ್ಪಲೆ ಸುರುವಾತು. ಆ ಸೀರೆ ತೊಳೆಯದ್ದೆ ಮಡುಗಿ ಯೇವ ಕಾಲ ಆತೋ ಗೊಂತಿಲ್ಲೆ. ವಾಸನೆ ಬಪ್ಪ ಆ ವಸ್ತ್ರವ ಅದು ಕರೇಲಿ ಮಡುಗಿ ಬರೀ ಗೋಣಿಲಿ ಮನುಗಿತ್ತು. ಆ ಗೋಣಿಂದ ಧೂಳೆಲ್ಲ ಮೈಗೆ ಹಿಡುದು ಸೆಮ್ಮ ಬಪ್ಪಲೆ ಸುರುವಾತು.
“ಹೇಂಗಿದ್ದ ನಾಜೂಕಿನ ಹೆಣ್ಣಪ್ಪಾ ಇದೂ, ಗೋಣಿಲಿ ಮನುಗಿ ಗೊಂತಿಲ್ಯಾ? ನಿಂಗೊ ಇದರ ಹೇಂಗೆ ಒಳ ಹಾಕಿದ್ದು?” ತಂಗಮ್ಮನ ಹತ್ತರೆ ಮನುಗಿದ ಮತ್ತೊಂದು ಹೆಣ್ಣು ಅವರ ಭಾಶೆಲಿ ಕೇಳಿರೂ ಸುಶೀಲಂಗೆ ಅದು ರಜಾ ಅರ್ಥಾತು. ದಿನೇಸನ ಪ್ರೀತಿಸುಲೆ ಸುರು ಮಾಡುಗಳೇ ಅದು ರೆಜ ರೆಜ ಅವರ ಭಾಷೆ ಕಲಿವಲೆ ಸುರು ಮಾಡಿದ್ದತ್ತು.
“ನಾಳಂಗೆ ನಮ್ಮ ಮದುವೆ” ಹೇಳಿದ್ದತ್ತು ದಿನೇಸ. ಆದರೆ ಇಲ್ಲಿ ಮದುವೆಯ ಯೇವ ತಯಾರಿಯೂ ಕಾಣ್ತಿಲ್ಲೆ. ಫಕ್ಕನೆ ಅಕ್ಕನ ಮದುವೆಯ ಮುನ್ನಾಣ ದಿನದ ಗೌಜಿ ನೆಂಪಾತು. ಮನೆಲಿ ಜಾಲಿಂಗಿಡೀ ಚಪ್ಪರ, ಅದಕ್ಕೆ ಮಾವಿನ ಸೊಪ್ಪು, ಬಣ್ಣದ ಕಾಗದದ ಅಲಂಕಾರ, ಕೊನೆ ಹಾಕಿದ ಬಾಳೆ ತಂದು ತೋರಣ, ಅಡಕ್ಕೆ ಸುರುದು ಮಾಲೆ ಮಾಡಿ ಮಂಟಪದ ಕಂಬಂಗೊಕ್ಕೆ ಮಾಡಿದ ಅಲಂಕಾರ….!
ಎಲ್ಲ ಕೆಲಸಕ್ಕೂ ಮುಂದೆ ನಿಂದದು ಅಣ್ಣನೇ. ಅಕ್ಕನ ತಮಾಷೆ ಮಾಡಿಂಡು, ಕುಶಾಲು ಮಾಡಿಂಡು ಎಷ್ಟು ಜನ!! ನೆರೆಕರೆಯವು, ನೆಂಟ್ರು….. ! ಬೆಂದಿಗೆ ಕೊರವ ಗೌಜಿ, ಹೋಳಿಗೆ ಮಾಡುವ ಗೌಜಿ, ಹೆಮ್ಮಕ್ಕೊ, ಮಕ್ಕಳ ಮಾತು,ನೆಗೆ…..ಓಹ್!!
ಮದುವೆ ಹೇಳಿದ ಕೂಡ್ಲೇ ಮನಸಿಂಗೆ ಬಪ್ಪದೇ ಅದು. ಅಂದೇ ಆರೋ ಸುಶೀಲನನ್ನೂ ತಮಾಷೆ ಮಾಡಿದ್ದವು
“ಸುಶೀಯ ಮದುವೆ ಇದರಿಂದಲೂ ಗೌಜಿ ಮಾಡೆಕು.ಬೇಂಡು,ವಾದ್ಯ ಎಲ್ಲ ತರ್ಸೆಕು. ಈಗಳೇ ಮದುವೆಪ್ಪಲೆ ಕೊದಿ ಆಯಿದು ಕಾಣ್ತು ಕೂಸಿಂಗೆ” ಹೇಳಿ….’ ಅಂಬಗ ಮನಸಿನೊಳ ಕೊಶಿಯೋ, ನಾಚಿಕೆಯೋ ಎಂತೋ ಆಗಿದ್ದತ್ತು. ಆದರೆ ಇಂದು!!
ಹೇಂಗಿದ್ದ ಮದುವೆ ಆದಿಕ್ಕು?
ಅಕ್ಕನ ಮದುವೆಯ ದಿನ ಅದರ ಆಯತ ಮಾಡುವ ಸಡಗರ!
ಸೋದರತ್ತೆಕ್ಕೊ, ದೊಡ್ಡಬ್ಬೆಕ್ಕೊ ,ಹತ್ತರಾಣ ಮನೆ ಹೆಮ್ಮಕ್ಕೊ ಎಷ್ಟು ಜೆನ!! ಪಟ್ಟೆ ಸೀರೆ, ಮಲ್ಲಿಗೆ ಹೂಗು. ಪರಿಮ್ಮಳದ ಸೆಂಟು…..ಅಬ್ಬಬ್ಬಾ….! ಆ ದಿನ ರಾಜಕುಮಾರಿಯ ಹಾಂಗೆ ಮೆರದ್ದದು ಆನೇ ಅಲ್ಲದಾ? ಅಕ್ಕನಿಂದ ಹೆಚ್ಚು ಚೆಂದ, ಅದರಿಂದಲೂ ಉದ್ದದ ಜೆಡೆ ಇದ್ದ ಕಾರಣ ಕೆಲವು ವಿಶಯಲ್ಲಿ ಅಕ್ಕನ ತಾಪು ಮಾಡ್ಲೆ ಲಾಯ್ಕ ಆಗಿಂಡಿದ್ದತ್ತು. ಆದರೆ ಅಕ್ಕ° ಹಾಂಗೆ ಗ್ರೇಶಿದ್ದು ಕೂಡ ಇಲ್ಲೆ. ಅದಕ್ಕೆ “ಸುಶೀ” ಹೇಳಿರೆ ಯೇವಗಲೂ ಪಾಪುವೇ….!!
ಈಗ ಅಬ್ಬೆ ಎಂತ ಮಾಡ್ತಾದಿಕ್ಕು? ಎನ್ನ ಹೆಸರು ಹೇಳಿಂಡು ಕೂಗುತ್ತಾದಿಕ್ಕು!! ಅಪ್ಪಂಗೆ ಬೇಜಾರು ತಡವಲೆಡಿಯ.ಪೋಲೀಸಿನತ್ರೆ ಹೇಳಿ ಆದಿಕ್ಕು. ಅಣ್ಣಂಗೆ ಗೊಂತಾದಿಕ್ಕಾ…..!! ನಾಳಂಗೆ ಪೋಲಿಸಿನವು ಬಂದರೆ ಸಾಕಿತ್ತು.. ಇಲ್ಲಿ ಒಂದು ದಿನವೂ ಬದ್ಕುಲೆಡಿಯ. ಮನೆಲಿ ಸೌದಿ ಕೊಟ್ಟಗೆ ಕೂಡ ಇದಕ್ಕಿಂತ ಲಾಯ್ಕ ಇದ್ದು……!! ಹೀಂಗಿದ್ದ ಆಲೋಚನೆಗಳನ್ನೇ ತಲೆಲಿ ತುಂಬಿ ಕೊಂಡಿದ್ದ ಸುಶೀಲಂಗೆ ಅತ್ಲಾಗಿತ್ಲಾಗಿ ಹೊಡಚ್ಚಿ ಹೊಡಚ್ಚಿ ಬಚ್ಚಿಯಪ್ಪಗ ಎಷ್ಟೊತ್ತಿಂಗೋ ಕಣ್ಣಿಂಗೆ ಒರಕ್ಕು ಹಿಡುದತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 28: https://oppanna.com/kathe/swayamvara-28-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಛೇ ಸುಶೀಲನ ಗ್ರೇಶಿದರೆ ಸಂಕಟ ಆವುತ್ತು.ರಾಜಕುಮಾರಿ ಹಾಂಗಿದ್ದದು ಕೈಯಾರೆ ಬಾಳು ಹಾಳು ಮಾಡಿಕೊಂಡತ್ತು.ಈಗ ಆದರೂ ತಿರುಗಿ ಹೋಪ ಹೇಳಿ ಅದಕ್ಕೆ ಮನಸ್ಸಿಂಗೆ ಬಯಿಂದಿಲ್ಲೆನ್ನೇ ಶಿವನೆ.
ನಮ್ಮ ಭಾಷೇಲಿ ವಿವರಿಸಿ ಬರದ್ದು ತುಂಬಾ ಲಾಯ್ಕಿದ್ದು…ಅವರ ಕ್ರಮ ನಮ್ಮ ಕ್ರಮ ಛೆ ಬೇಕಿತ್ತಾ ಸುಶೀಗೆ.. ಎಂಥಾ ಸುಂದರ ಬದುಕು ಇತ್ತು ಅದಕ್ಕೆ… ಹಾಳು ಮಾಡಿತ್ತು ಎಲ್ಲ…ನೋಡುವ ಸ್ವಯಂ ವರ ಹೇಂಗೆ ಇಕ್ಕು…ಅತಿಯಾಸೆ ಗತಿಗೇಡು…ಅದರ ತಪ್ಪಿಂಗೆ ರಕ್ಷಣೆ ಮಾಡ್ಳೆ ಆರು ಸಿಕ್ಕವು ಕಾಂತು.. ವಿವರಣೆ ಶೈಲಿ ಮಾತ್ರ ಮೆಚ್ಚೆಕ್ಕು…ಓದುವಾಗ ಕಣ್ಣೀರು ಬತ್ತು
ಸ್ವಯಂವರ ಮಾಡಿಯೊಂಡ ಸುಶೀಲಂಗೆ ಸ್ವಯ ಇದ್ದೋ ಅಂಬಗ. ಛಿ. ಅದರ ಹಾಂಕಾರಕ್ಕೆ ಸರಿಯಾಗಿ ಆಯಿದು. ಹವ್ಯಕ /ಶೂದ್ರತಮಿಳಂಗಳ ನಡವಳಿಕೆಯ ತುಲನೆ ಮಾಡಿದ್ದದು ಸೂಪರ್ ಆಗಿ ಬಯಿಂದು. ಇನ್ನಾಣವಾರ ಮದುವೆ ಗೌಜಿಯ ನೋಡುವೊ. ಕಾಯ್ತಾ ಇದ್ದೆ.