Oppanna.com

ಸ್ವಯಂವರ : ಕಾದಂಬರಿ : ಭಾಗ 30 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   30/12/2019    3 ಒಪ್ಪಂಗೊ

“ಎಂಥಾ ಒರಕ್ಕು ನಿನಗೆ, ಏಳು ,ಇಂದು ನಿನ್ನ ಮದುವೆ” ತಂಗಮ್ಮ ಮೈ ಮುಟ್ಟಿ ಏಳ್ಸಿಯಪ್ಪಗಳೇ ಸುಶೀಲಂಗೆ ಎಚ್ಚರಿಕೆ ಆದ್ದದು. ಫಕ್ಕನೆ ಎದ್ದು ಕೂದು ಸುತ್ತೂ ನೋಡಿಯಪ್ಪಗ ಒಂದರಿ ಝುಮ್ ಆದರೂ ನಿನ್ನಾಣ ವಿಶಯಂಗೊ ಎಲ್ಲ ನೆಂಪಾಗಿ “ಅಬ್ಬೇ…..ಅಪ್ಪಾ….” ಹೇಳಿ ಸಣ್ಣ ಸ್ವರಲ್ಲಿ ಹೇಳಿಂಡು ಎದ್ದು ನಿಂದತ್ತು.

“ಇದಾ..ಎಲ್ಲೋರು ಕಾಡಿಂಗೆ ಹೋವ್ತವು. ಅವರೊಟ್ಟಿಂಗೆ ನೀನೂದೆ ಹೋದರಾತು. ಒಬ್ಬೊಬ್ಬನೇ ಹೋಪ ಜಾಗೆ ಅದಲ್ಲ! ಹಂದಿಯೆಲ್ಲ ಬಕ್ಕು” ಹೇಳಿಂಡು ಒಂದು ಸಣ್ಣ ಪ್ಲಾಸ್ಟಿಕು ಕೊಡಪಾನಲ್ಲಿ ನೀರು ತುಂಬ್ಸಿ ಕೊಟ್ಟಿಕ್ಕಿ ಹೆರ ಇಪ್ಪ ಹತ್ತು ಹದ್ನೈದು ಹೆಣ್ಣುಗಳೊಟ್ಟಿಂಗೆ ಹೋಪಲೆ ಹೇಳಿತ್ತು.
ಬೇರೆ ದಾರಿ ಇಲ್ಲದ್ದೆ ಅದು ಹೇಳಿದಾಂಗೆ ಅವರೊಟ್ಟಿಂಗೆ ಹೋಗಿ ಬಂತು. ಹೋಗಿ ಬಂದ ಮತ್ತೆ ಅದಕ್ಕೆ ದುಃಖ ತಡವಲೇ ಎಡ್ತಿದಿಲ್ಲೆ
‘ ಹೀಂಗಿದ್ದ ವಿಶಯಂಗೊ ಎಲ್ಲ ಅಂದೇಕೆ ಎನಗೆ ತಲಗೆ ಹೋಯಿದಿಲ್ಲೆ! ಸಿನೆಮದ ಹಾಂಗೆ ಬದುಕು ಹೇಳಿ ಗ್ರೇಶಿ ಹೋದ್ದೇಕೆ? ಅಪ್ಪಂಗೆ ಈ ವಿಶಯ ಗೊಂತಾದರೆ ಇಂದೇ ಜೀಪು ತೆಕ್ಕೊಂಡು ಬಕ್ಕು. ಮತ್ತೆ ಇತ್ಲಾಗಿ ಬಪ್ಪಲಿಲ್ಲೆ. ಈ ತಂಗಮ್ಮನೂ ಬೇಡ, ಬರೀ ಹೇಸಿಗೆ ಆವ್ತು. ಮನೆಲಿದ್ದ ಜೆನವೇ ಅಲ್ಲ ಅದೀಗ. ಇಲ್ಲಿಗೆತ್ತಿಯಪ್ಪಗ ಅದರ ಗುಣವೇ ಬದಲಿತ್ತು. ದಿನೇಸನ ಮದುವೆ ಆದ ಮತ್ತೆ ಅಪ್ಪ° ಅದರ ಒಪ್ಪುಗು….’

“ಎಂತರ ಆಲೋಚನೆ ಮಾಡಿಂಡು ನಿಂದದು, ನೀನಿಂದು ಮದಿಮ್ಮಾಳು , ಇನ್ನೆಷ್ಟು ಕೆಲಸ ಇದ್ದು ಗೊಂತಿದ್ದಾ?” ತಂಗಮ್ಮ ಸುಶೀಲನ ಮನೆಂದ ಹೆರ ಕರಕ್ಕೊಂಡು ಹೋತು. ಅಲ್ಲಿ ಹತ್ತಿಪ್ಪತ್ತು ಹೆಣ್ಣುಗೊ ನೆಗೆ ನೆಗೆ ಮಾಡಿಂಡು ಇದರ ದಿನಿಗೇಳಿದವು. ರಜಾ ಹೆದರಿಕೆ ಆದರೂ ತಂಗಮ್ಮ ಹೇಳಿಯಪ್ಪಗ ಅವರೊಟ್ಟಿಂಗೆ ಹೋತು. ಅವೆಲ್ಲ ಸೇರಿ ಅರಶಿನ ತಳದು ಮೈಗೆ ಕಿಟ್ಟಿ ಮೀಶುಗ ಮನಸಿಂಗೆ ಹೇಂಗು ಹೇಂಗೋ ಆದರೂ ಇಲ್ಲಿ ತಳಿಯದ್ದೆ ಕೂರದ್ದೆ ಬೇರೆ ದಾರಿ ಕಂಡಿದಿಲ್ಲೆ ಅದಕ್ಕೆ.

ಅವು ಸುಶೀಯ ತಲಗೆ ಮೈಗೆ ನೀರೆರದು ಮೀಶಿ ಹೊಸ ಸೀರೆ ಸುತ್ತುಸಿದವು. ನೇರಳೆ ,ಕೆಂಪು ಬಣ್ಣದ ಗೆರೆ ಗೆರೆ ಇಪ್ಪ ಆ ಸೀರೆಯ ಬಣ್ಣ ಅದಕ್ಕೆ ರಜವೂ ಕೊಶಿಯಾಯಿದಿಲ್ಲೆ. ಅಕ್ಕನ ಮದುವೆ ದಿನ ಅದು ಸುತ್ತಿದ ಸೀರೆ ನೆಂಪಾತು. ಕೆಂಪು ಬಣ್ಣದ ಹೊಳವ ಜರಿ ಇಪ್ಪ ಪಟ್ಟೆಸೀರೆ.
ಈ ಸೀರಗೆ ಒಂದು ಜರಿಯೂ ಇಲ್ಲೆ, ಹೂಗೂ ಇಲ್ಲೆ. ಬರೀ ಕಳಕಳ ಇಪ್ಪ ಆ ದೊರಗು ಸೀರೆ ಸುತ್ತಿಯಪ್ಪಗ ಮೈಯೆಲ್ಲ ತೊರ್ಸುವ ಹಾಂಗಾತು. ಹಾಳಿತ ನೋಡಿ ಹೊಲುಶಿದ ರವಕ್ಕೆ ಅಲ್ಲದ್ದ ಕಾರಣ ರೆಜಾ ದೊಡ್ಡಾಗಿ ಹೆಗಲೆಲ್ಲ ಜಾರುಗ ಸುಶೀಗೆ ಒಟ್ಟಾರೆ ಒಂದರಿ ಈ ಸೀರೆ ಮಾತೆಕೂಳಿ ಆಗಿಂಡಿದ್ದತ್ತು.
ಪುನಾ ಎಲ್ಲೋರು ಒಟ್ಟು ಸೇರಿ ಅದರ ತಲೆ ಕಟ್ಟಿದವು. ಹಬ್ಬಲ್ಲಿಗೆ ಹೂಗು ಒಂದು ರಾಶಿ ಇದ್ದತ್ತು. ಅದರ ತಲಗೆ ಸೂಡ್ಸಿಯಪ್ಪಗ ತೆಗದಿಡ್ಕೆಕೂಳಿ ಆತದಕ್ಕೆ.
‘ಮನೆ ಹತ್ತರೆ ತುಂಬ ಹೂಗಿನ ಸೆಸಿ ಬೆಳಶಿದ್ದು ಶೈಲನೇ. ಅದರ್ಲಿ ಅರಶಿನ, ಕೇಸರಿ, ಕೆಂಪು ಹಬ್ಬಲ್ಲಿಗೆ ಸೆಸಿಯೂ ಇದ್ದತ್ತು. ಬಣ್ಣ ಬಣ್ಣದ ಗೆಂಟಿಗೆ, ದಾಸನ ಎಲ್ಲ ಶೈಲನ ಹೂಗಿನ ತೋಟಲ್ಲಿದ್ದತ್ತು. ಜಾಜಿ ಮಲ್ಲಿಗೆ , ಮಲ್ಲಿಗೆ, ಸೇವಂತಿಗೆ ಎಲ್ಲ ಇದ್ದರೂ ಶೈಲ ಕೆಲವು ಸರ್ತಿ ಹಬ್ಬಲ್ಲಿಗೆ, ಗೆಂಟಿಗೆ ಎಲ್ಲ ಮಾಲೆ ಕಟ್ಟಿ ಸೂಡುಗು. ಸುಶೀಲಂಗೆ ಅದು ಇಷ್ಟವೇ ಅಲ್ಲ ,
“ಅದೆಂತರ ಆಳುಗಳ ಹಾಂಗೆ ಹಬ್ಬಲ್ಲಿಗೆ ಎಲ್ಲ ಸೂಡುದು? ಮಲ್ಲಿಗೆ ಹೂಗಿಂಗಾದರೆ ಪರಿಮ್ಮಳ ಆದರೂ ಇದ್ದು. ಇದು ಬರೀ ವಾಸನೆ ,ಎನಗೆ ಬೇಡ ಇದು, ಆನು ಜನ್ಮಲ್ಲಿ ಹೀಂಗಿದ್ದ ಹೂಗಿನ ಸೂಡೆ” ಹೇಳಿ ಅಕ್ಕನ ತಮಾಷೆ ಮಾಡಿಂಡಿದ್ದದು ನೆಂಪಾತು.
“ಆತು ನಿನಗೆ ಬೇಡದ್ರೆ ಬೇಡ, ಮಲ್ಲಿಗೆ ಮಾಲೆ ಇದ್ದು ಸುಶೀ..ಅಪ್ಪನ ಪೂಜೆ ಆದ ಕೂಡ್ಲೇ ಮಲ್ಲಿಗೆ ಮಾಲೆ ಕೇಳಿ ತೆಕ್ಕೊ, ಅದರ ಪೂಜಗೆ ಮಡುಗಿದ್ದೆ” ಶೈಲ ಅಷ್ಟೇ ಹೇಳುಗಷ್ಟೆ.
‘ಈಗ!! ಈ ಜನ್ಮಲ್ಲಿ ಹಬ್ಬಲ್ಲಿಗೆ ಸೂಡ್ತಿಲ್ಲೆ ಹೇಳಿದ ಜೆನ ಮದುವೆಗೆ ಸೂಡೆಕಾಗಿ ಬಂದ ಹೂಗು ಇದುವೇ ಆತನ್ನೇ.. ಅಯ್ಯೋ.. ಎಂಥಾ ಅವಸ್ಥೆ’ ಮನಸಿಲ್ಲಿ ಸಂಕಟ ಪಟ್ಟರೂ ಆರೂ ಹೇಳುವವು ಕೇಳುವವು ಇಲ್ಲದ್ದ ಕಾರಣ ಬೊಂಬೆ ಹಾಂಗೆ ನಿಂದತ್ತದು.

ರಜ್ಜ ಹೊತ್ತಿಲ್ಲಿ ಸುಮಾರು ಜೆನಂಗೊ ಆ ಮನೆಯ ಹತ್ರಂಗೆ ಬಂದವು. ಎಲ್ಲೋರು ಕಣ್ಣಿಂಗೆ ಕುತ್ತುವ ಬಣ್ಣದ ಅಂಗಿಯನ್ನೇ ಹಾಕಿದ್ದು.
“ಮದಿಮ್ಮಾಳ ಆಯತ ಆದರೆ ದೇವಸ್ಥಾನಕ್ಕೆ ಹೋಪೋ° ” ಒಂದು ರಜಾ ಪ್ರಾಯಾದ ಜೆನ ಬಂದು ಹೇಳಿತ್ತು.
“ಆತು, ಇನ್ನು ಹೋಪದೇ..” ಹೇಳಿ ತಂಗಮ್ಮನೂ ಬೇರೆ ಸೀರೆ ಸುತ್ತಿಂಡು ಹೆರ ಇಳುದತ್ತು.

ದಿನೇಸ ಬೆಳಿ ಅಂಗಿ,ವೇಷ್ಟಿ ಸುತ್ತಿಂಡು, ಒಂದು ಶಾಲು ಹೆಗಲಿಂಗೆ ಹಾಕಿ ಸರೀ ಸೆಂಟು ಹಾಕಿಂಡು ಬಂತು. ಮನೆಲಿಪ್ಪಗ ಸುಶೀಲಂಗೆ ದಿನೇಸನತ್ರೆ ತುಂಬಾ ಪ್ರೀತಿ ಇದ್ದತ್ತು. ಅದಿಲ್ಲದ್ರೆ ಬದುಕುಲೆಡಿಯ ಹೇಳಿ ಎಲ್ಲ ಗ್ರೇಶಿದ್ದತ್ತು. ಆದರೆ ಏಕೋ ಇಲ್ಲಿಗೆ ಬಂದ ಮತ್ತೆ ದಿನೇಸನ ನೋಡುಗ ಬೇರೆ ಆರನ್ನೋ ನೋಡಿದಾಂಗಾಗಿಂಡಿದ್ದತ್ತು. ಅದು ಇದರ ನೋಡಿ ನೆಗೆ ಮಾಡಿರೂ ಎದೆಯೊಳ ಚಳಿ ಕೂದಾಂಗಾಗಿ ನೆಗೆ ಮಾಡ್ಲೇ ಎಡ್ತಿದಿಲ್ಲೆ.

ಹತ್ತು ಮೂವತ್ತು ಜೆನ ನಡಕ್ಕೊಂಡು ರಜಾ ದೂರ ಹೋದವು. ಸುಶೀಲಂಗೆ ಆ ಊರು ಹೊಸತ್ತಾದ ಕಾರಣ ಅತ್ಲಾಗಿತ್ಲಾಗಿ ಕೊರಳು ತಿರುಗ್ಸಿ ನೋಡಿಂಡಿದ್ದತ್ತು. ಎಲ್ಲಿ ನೋಡಿರೂ ಕಸವಿನ ರಾಶಿ, ಒಡದ ಕುಪ್ಪಿಗೊ, ಮಣ್ಣಿನಳಗೆಗೊ,ಪೈಪ್ಪಿನ ತುಂಡುಗೊ, ಹರ್ಕಟೆ ವಸ್ತ್ರ, ತುಂಡಾದ ಜೋಡುಗಳ ರಾಶಿಯೇ ಇದ್ದತ್ತು. ಇದೆಂತ ಹೀಂಗೆ ಹೇಳಿ ಮನಸಿಲ್ಲಿ ಗ್ರೇಶಿಂಡಿಪ್ಪಗ ತಂಗಮ್ಮ ಇದರ ಹತ್ತರೆ ಬಂದು
“ನಿನ್ನ ಅಪ್ಪ° ಬಂದು ಎಂಗಳ ಕರಕ್ಕೊಂಡು ಹೋಗದ್ರೆ ಮತ್ತೆ ನಾವುದೆ ಮನೆಮನೆಗೆ ‘ಗುಜರಿ ಸಾಮಾನು ಇದ್ದಾ’ ಕೇಳಿಂಡು ಹೋಯೆಕಷ್ಟೆ ‌. ಎಂಗಳ ಜೀವನ ಮಾರ್ಗವೇ ಇದು” ಸುಶೀಲಂಗೆ ಬೋದ ತಪ್ಪದ್ದದು ಪುಣ್ಯ.!!
‘ ಹೋಗಿ ಹೋಗಿ ಆನು ಪ್ರೀತಿಸಿದ್ದದು ಈ ಗುಜರಿ ಸಾಮಾನು ಹೆರ್ಕುವ ಜೆನವನ್ನಾ‌‌! ಶಾಲಗೋಪ ದಾರಿಲಿ ಹತ್ತಿಪ್ಪತ್ತು ಡೇರೆ ಹಾಕಿ , ಅಡ್ಡ ಬಿದ್ದ ಕರೆಂಟಿನ ಕಂಬಲ್ಲಿ ಕಾಯಿ ಹಾಕಿ ಕಲ್ಲಿಲ್ಲಿ ಅರಕ್ಕೊಂಡಿದ್ದ ಜೆನಂಗಳ ನೆಂಪಾತು. ಅಷ್ಟಪ್ಪಗ ಎಲ್ಲ ಗೆಳತಿಯರೊಟ್ಟಿಂಗೆ ಅದರ ನೋಡ್ಲೆ ಕುತೂಹಲ ಆಗಿಂಡಿದ್ದತ್ತು. ಹರ್ಕಟೆ ಸೀರೆ ಸುತ್ತಿ ತಲಗೆ ಮೈಗೆ ಎಣ್ಣೆ ಕಾಣದ್ದೆ ದೊಡ್ಡಕೆ ಆರ್ಭಟೆ ಕೊಟ್ಟ ಹಾಂಗೆ ಮಾತಾಡುವ ಹೆಣ್ಣುಗೊ,! ಅವರ ಸೌದಿ ತುಂಡು ತೆಕ್ಕೊಂಡು ಬಡಿವಲೆ ಹೋಪ ಗೆಂಡುಗೊ!, ಮೂಗಿಲ್ಲಿ ನೆಗುಡಿ ಅರಿಶಿಂಡು ಒಂದು ಅಂಗಿ ಸಾನೂ ಹಾಕದ್ದೆ ಆ ಮಣ್ಣಿಲ್ಲಿ ಆಟಾಡುವ ಸುಮಾರು ಮಕ್ಕೊ!
ಅಬ್ಬಾ….ಹೇಸಿಗೆ, ನಾಚಿಕೆ ಯೇವದೂ ಇಲ್ಲದ್ದವರ ಹಾಂಗೆ ಒಟ್ಟಾರೆ ಬದ್ಕುವ ಅವರ ಜೀವನ ಶೈಲಿ ಸುಶೀಲಂಗೆ ಸರಿಯಾಗಿ ಗೊಂತಿದ್ದು.
ಒಂದೆರಡು ತಿಂಗಳು ಅಲ್ಲಿ ಇಕ್ಕು. ಮತ್ತೆ ರಜ ಸಮಯ ಡೇರೆ ಇರ. ಮತ್ತೂ ರಜ್ಜ ಸಮಯ ಅಪ್ಪಗ ಪುನಾ ಡೇರೆ ಕಟ್ಟುಗು. ಅಲ್ಲಿಗೆ ಬಪ್ಪವು ಒಂದೇ ಜೆನಂಗಳಾ, ಬೇರೆ ಬೇರೆ ಜೆನಂಗಳಾ ಹೇಳಿ ಸಾನು ಗೊಂತಾಗಿಂಡಿದ್ದತ್ತಿಲ್ಲೆ. ಅವರ ಕೆಲಸ ಹೀಂಗೇ ಕಸವು, ಗುಜರಿ ಹೆರ್ಕುದು ಹೇಳಿ ಮಾಂತ್ರ ಗೊಂತಿದ್ದದು. ಶಾಲಗೆ ಹೋಪಗಳೇ ಹಾಂಗಿದ್ದವರ ಹತ್ತರಂದ ನೋಡಿ ಗೊಂತಿದ್ದ ಕಾರಣ ಈಗ ತಂಗಮ್ಮ “ನಾವೂದೆ ಹಾಂಗೇ” ಹೇಳಿಯಪ್ಪಗ ಕಾಲು ಮುಂದೆ ಮುಂದೆ ಹೋವ್ತರೂ ತಲೆ ಒಂದರಿಂಗೆ ಖಾಲಿ ಖಾಲಿಯಾಗಿ ಆಲೋಚನೆ ಮಾಡುವ ಶಕ್ತಿಯೇ ಕಳಕ್ಕೊಂಡ ಹಾಂಗಾತು ಸುಶೀಲಂಗೆ.

ದೇವಸ್ಥಾನಕ್ಕೆ ಎತ್ತಿಯಪ್ಪಗ ಅವಕ್ಕೆಲ್ಲ ಭಾರೀ ಕೊಶಿ. ಉದಿಯಪ್ಪಾಣ ಹೊತ್ತಾದ ಕಾರಣ ಆ ಸಣ್ಣ ದೇವಸ್ಥಾನಲ್ಲಿ ಬೇರೆ ಜೆನಂಗೊ ಇತ್ತಿದ್ದವಿಲ್ಲೆ. ಪೂಜೆ ಬಟ್ಟ ದೇವರಿಂಗೆ ಆರತಿ ಮಾಡುವ ಹೊತ್ತಿಂಗೆ ದಿನೇಸ ಸುಶೀಲನ ಕೊರಳಿಂಗೆ ಒಂದು ಅರಶಿನ ನೂಲಿಲ್ಲಿ ಒಂದು ಅರಶಿನ ಕೊಂಬು ಕಟ್ಟಿ ಮದುವೆಯಾತು!!

ಮಂತ್ರ ಇಲ್ಲೆ,ಬಟ್ಟಕ್ಕೊ ಇಲ್ಲೆ, ಲಾಯ್ಕದ ಸೀರೆ, ತಲೆ ತುಂಬ ಹೂಗು ಯೇವದೂ ಇಲ್ಲೆ. ಅಕೇರಿಗೆ ಕೊರಳಿಂಗೆ ಕರಿಮಣಿ ಮಾಲೆ,ತಾಲಿ ಒಂದೂ ಇಲ್ಲದ್ದ ಈ ಮದುವೆ ನೋಡಿ ಇಷ್ಟು ಹೊತ್ತು ಎದೆಲಿ ಕಟ್ಟಿ ಮಡುಗಿದ ದುಃಖ ಪೂರಾ ಕಟ್ಟೆ ಒಡದಾಂಗೆ ಎಕ್ಕಿ ಎಕ್ಕಿ ಕೂಗಿತ್ತು ಸುಶೀಲ.

“ಮನೆ ನೆಂಪಾತಾದಿಕ್ಕು” ಹೇಳಿ ಒಂದು ಹೆಣ್ಣು ಬಂದು ಅದರ ಬೆನ್ನುದ್ದಿತ್ತು.
“ಕೂಗೆಡ, ಇಂದು ಮದುವೆ ದಿನ ಕೊಶೀಲಿರೆಕು” ಹೇಳಿ ಮತ್ತೊಂದು ಜೆನ ಹೇಳಿತ್ತು.
ಅಂದರೂ ಅದಕ್ಕೆ ದುಃಖ ಅಷ್ಟು ಬೇಗನೆ ತಡವಲೆ ಎಡ್ತಿದಿಲ್ಲೆ. ಅದರ ಕನಸಿನ ಮದುವೆಯ ಹತ್ತರಂಗೂ ಬಾರದ್ದ ಈ ಮದುವೆಯ ಕಂಡು ಮನಸ್ಸು, ಹೃದಯ ಒಡದ ಹಾಂಗಾತದಕ್ಕೆ.
“ಎಂತಕೆ ಮದಿಮ್ಮಾಳು ಕೂಗುದು? ಎಂತಾತು? ಅದರ ಮನೆ ಎಲ್ಲಿ? ನಿಂಗಳ ಹಾಂಗೆ ಕಾಣ್ತಿಲ್ಲೆ ಅದರ‌‌ ..ಎಲ್ಲಿಂದಾರು ಕದ್ದೊಂಡು ಬಂದದಾ ಈ ಮಲ್ಲಿಗೆ ಹೂಗಿನ ಹಾಂಗಿದ್ದ ಕೂಸಿನ?” ಪೂಜೆ ಬಟ್ಟ ಪ್ರಸಾದ ಕೊಡುಗ ದಿನೇಸನತ್ರೆ ಕೇಳಿದ°.
“ಅಯ್ಯೋ ಅಲ್ಲಪ್ಪಾ..ಅದು ಎಂಗಳ ಜಾತಿಯೇ. ಈ ಊರಲ್ಲ ಹೇಳಿ ಮಾಂತ್ರ. ಎನ್ನ ಮಗನ ಇಷ್ಟಾಗಿಯೇ ಮದುವೆ ಆದ್ದದು ” ಉತ್ತರ ಹೇಳಿದ್ದು ತಂಗಮ್ಮ.

ಅಂದರೂ ಅವಂಗೆ ಸಮದಾನ ಆಯಿದಿಲ್ಲೆ ಕಾಣ್ತು. ಕಣ್ಣೀರು ತುಂಬಿ ನಿಂದ ಸುಶೀಯನ್ನೇ ನೋಡುಗ ಎಂತೋ ಅವನ ಮನಸಿಂಗೂ ಬೇಜಾರಾತ ಏನಾ..
“ಕೂಸಿಂಗೆ ಹದಿನೆಂಟು ವರ್ಷ ಆದಾಂಗೆ ಕಾಣ್ತಿಲ್ಲೆ. ಎನಗೇಕೋ ನಿಂಗಳ ಮೇಗೆ ಸಂಶಯ ಬತ್ತು. ಪೋಲೀಸ್ ಕೇಸ್ ಎಲ್ಲ ಆದರೆ ಎನಗೆಡಿಯ ಸಾಕ್ಷಿ ಹೇಳ್ಲೆ ಬಪ್ಪಲೆ”

“ನಿಂಗೊ ಬೇಕಾರೆ ಆ ಕೂಸಿನತ್ರೆ ಕೇಳಿ, ಎನ್ನ ಮಗನ ಮದುವೆ ಆಯೆಕೂಳಿಯೇ ಒಪ್ಪಿ ಬಂದದದು” ತಂಗಮ್ಮನ ಮಾತು ಕೇಳಿ ಅವ° ಆಶ್ಚರ್ಯಲ್ಲಿ ಸುಶೀಲನ ನೋಡಿದ°.
‘ಬೆಳಿ ಬೆಳಿ ಬೆಣ್ಣೆ ಮುದ್ದೆ ಹಾಂಗಿದ್ದ ಕೂಸಿನ ಕಾಂಬಗಳೇ ಗೊಂತಾವ್ತು, ಪೈಸೆಕ್ಕಾರಂಗಳ ಮಗಳು ಹೇಳಿ. ಆ ಮೋರೆ ನೋಡುಗ ಮಕ್ಕಳಾಟಿಕೆ ಇನ್ನೂ ಬಿಡದ್ದ ಹಾಂಗಿದ್ದು. ಎಂತ ಕಂಡು ಈ ಜೆನರೊಟ್ಟಿಂಗೆ ಬಂತೋ..! ಆ ದೇವರಿಂಗೇ ಗೊಂತು! ‘ ಅವ° ಮತ್ತೆ ಎಂತದೂ ಹೇಳಿದ್ದಾಯಿಲ್ಲೆ.

ಸುಶೀಲ ದುಃಖ ತಡವಲೆಡಿಯದ್ದೆ ಕಣ್ಣೀರು ಉದ್ದಿಂಡೇ ಅವಂಗೆ ಹೊಡಾಡಿತ್ತು.
“ಎಂತಾಳಿ ಆಶೀರ್ವಾದ ಮಾಡೆಕು ನಿನಗೆ ಹೇಳಿ ಎನಗೆ ಅಂದಾಜಾವ್ತಿಲ್ಲೆ ತಂಗೇ..ಎನ್ನ ತಂಗೆಂದಲೂ ಸಣ್ಣ ನೀನು ಹೇಳಿ ಆವ್ತೆನಗೆ. ಎಂತೋ ಗಡಿಬಿಡಿ ಮಾಡಿ ,ಸರಿಯಾಗಿ ಆಲೋಚನೆ ಮಾಡದ್ದೆ ಮುಂದೆ ಕಾಲು ಮಡುಗಿದ್ದೆ ನೀನು. ಈ ಕಷ್ಟಂಗಳ ಎದುರಿಸಿ ಬದ್ಕುವ ಶಕ್ತಿ ಆ ದೇವರು ನಿನಗೆ ಕೊಡಲಿ” ಹೇಳಿ ಹರಸಿದ ಆ ಪೂಜೆ ಬಟ್ಟನ ಮನಸ್ಸು ಕೂಡ ಈ ಸುಶೀಲನ ಬೆಗುಡು ಬುದ್ದಿಗೆ ಅಯ್ಯೋ ಹೇಳಿ ಸಂಕಟ ಪಟ್ಟತ್ತು.
ಮುಂದಿನ ಬದುಕಿನ ಬಗ್ಗೆ ಸ್ಪಷ್ಟ ನಿರ್ಧಾರ ಇಲ್ಲದ್ದ ಸುಶೀಲ ಒಂದು ಕೀಲುಗೊಂಬೆ ಹಾಂಗೆ ತಂಗಮ್ಮ ಹೇಳಿದ್ದದರ ಎಲ್ಲ ಕೇಳಿ ಹಾಂಗೇ ಮಾಡಿಕ್ಕಿ, ದಿನೇಸನ ಕೈ ಹಿಡ್ಕೊಂಡು ಹೊಸ ಬದುಕಿಂಗೆ ಕಾಲು ಮಡುಗಿತ್ತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

3 thoughts on “ಸ್ವಯಂವರ : ಕಾದಂಬರಿ : ಭಾಗ 30 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಅಯ್ಯೋ ಅವಸ್ಥೆಯೇ. ಬೇಜಾರಾತು. ನಿಜವಾಗಿಯು ಮನಸ್ಸಿಂಗೆ ತಟ್ಟಿತ್ತು. ಹಬ್ಬದಿಗೆ ಹೂಗಿನ ಅಲಂಕಾರ, ನೇರಳೆ ದಪ್ಪ ಸೀರೆ ಮದುಮ್ಮಾಳು ಹೇಳಿಯಪ್ಪಗ ನಮ್ಮ ಊರಿನ ಹೊಲತಿಮದುಮಾಳುಗಳ ನೆಂಪಾತು. ನಿಜವಾಗಿಯೂ ಬಟ್ರಿಂಗೆ ಹೆಲ್ಪ್ ಮಾಡ್ಲಾವ್ತಿತು. ಕತೆಯಂತು ಸೂಪರು.

  2. ಇದು ಕಥೆ ಅಲ್ಲ..ಕಣ್ಣಿಂಗೆ ಕಟ್ಟಿದ ಹಾಂಗೆ ಆವುತ್ತು… ಎಂಥಾ ಚೆಂದಕ್ಕೆ ವಿವರಣೆ… ಸುಶಿ ಪೂಜೆ ಭಟ್ಟ ನತ್ರೆ ವಿಷಯ ಹೇಳಿ ತಪ್ಸುಲೆ ಆವುತಿತ್ತು…ಆದರೆ ಮನಸಾರೆ ಪ್ರೀತಿ ಮಾಡಿದ್ದಕ್ಕೆ ಈ ಶಿಕ್ಷೆಯ…ಪ್ರೀತಿ ಸುಳ್ಳಾ…ಅಲ್ಲ ಕೆಟ್ಟ ಮನಸ್ಸ..ಅಬ್ಬೇ ಅಪ್ಪಂಗೆ ಮಾಡಿದ ಮೋಸಕ್ಕೆ ಶಿಕ್ಷೆಯ…ಇನ್ನೂ ಎಷ್ಟು ಅನುಭವ ಅಪ್ಪಲೆ ಇದ್ದಾ ಇನ್ನು…ಬುದ್ಧಿ kalivale ಒಳ್ಳೆ ಕಥೆ..ಲಾಯ್ಕ ಬರದ್ದಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×