Oppanna.com

ಸ್ವಯಂವರ : ಕಾದಂಬರಿ : ಭಾಗ 28 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   16/12/2019    3 ಒಪ್ಪಂಗೊ

ತಂಗಮ್ಮ ಮದಾಲು ಕಾರಿಂದ ಇಳುದಿಕ್ಕಿ ಆ ಮನೆಯೊಳಾಂಗೆ ಹೋತು.ದಿನೇಸ ಇಳುದು ಸುಶೀಲನ ಬೇಗನ್ನೂ ಕೆಳ ಮಡುಗಿಕ್ಕಿ ಅದರ ಮೆಲ್ಲಂಗೆ ಕೈ ಹಿಡುದು ಇಳಿಶಿತ್ತು.

ಸುಶೀಲ ಕಲ್ಪನೆಲಿ ಕೂಡ ಹೀಂಗಿದ್ದ ಮನೆ ಕಂಡಿದಿಲ್ಲೆ. ಚಂದ್ರಣ್ಣನ ಮನೆ ಆ ಊರಿಲ್ಲೇ ದೊಡ್ಡ ಮನೆ.ಸಾಲದ್ದಕ್ಕೆ ಎಲ್ಲಾ ಸೌಕರ್ಯಂಗಳೂ ಇಪ್ಪ ಮನೆ.ಹಾಂಗಾಗಿ ಈ ಮನೆ ನೋಡುಗಳೇ ಒಂದರಿ ಹೆದರಿ ಝುಂ ಆತದಕ್ಕೆ.ಇದು ಮನೆಯಾ? ಇದೆಂತ ಹೀಂಗೆ?! ಅದರ ಮೈಯೆಲ್ಲ ಬೆಗರಿತ್ತು.

ಇವು ಕಾರಿಂದ ಇಳುದ್ದು ಕಂಡು ಆಚ ಈಚ ಮನೆಲಿಪ್ಪವೆಲ್ಲ ಇವರ ನೋಡ್ಲೆ ಓಂಗಿಂಡು ಬಂದವು.
ಮೀಯದ್ದೆ ನಾಲ್ಕು ತಿಂಗಳಾದ ಹಾಂಗಿದ್ದತ್ತು ಅವರ ಮೈ.ಅವು ಹಾಕಿದ ಅಂಗಿ ವಸ್ತ್ರ ಕೂಡ ಹಾಂಗೇ. ನೀರು ಕಾಣದ್ದೆ ಎಷ್ಟು ಕಾಲ ಆತೋ ಏನೋ!!
ಅವು ಹತ್ತರೆ ಬಂದಪ್ಪಗ ಸುಶೀಲ ರಜ ಹಿಂದಂಗೆ ಹೋತು.ಅವರೊಟ್ಟಿಂಗೆ ಬಂದ ಹೆಣ್ಣುಗೊ ಇದರ ಬಿಡೆಕನ್ನೇ
“ಮದಿಮ್ಮಾಳ ಒಂದರಿ ನೋಡ್ತೆಯ°” ಹೇಳಿಂಡು ಕೈ ಹಿಡುದು ಎಳದವು.ಸುಶೀಲಂಗೆ ಹೇಸಿಗೆಯಾತು.ಹೀಂಗಿದ್ದವರ ಇಷ್ಟರವರೆಗೆ ನೋಡಿದ್ದಿಲ್ಲೆ ಅದು‌.ಅವು ಅದರ ಜಡೆ ಮುಟ್ಟಿ ನೋಡಿದವು,ಅಂಗಿ ಮುಟ್ಟಿದವು.ಅವರ ಭಾಶೆಲಿ ನೆಗೆ ನೆಗೆ ಮಾಡಿಂಡು ಎಂತೋ ಹೇಳಿದವು.
ಸುಶೀಲಂಗೆ ಅವು ಹೇಳಿದ್ದೆಂತದೂ ಅರ್ಥಾಗದ್ರೂ ಅವು ‘ಚಂದ ಇದ್ದೂಳಿ ಹೊಗಳಿದ್ದೂಳಿ ಗೊಂತಾತು.ಅಷ್ಟಪ್ಪಗ ತಂಗಮ್ಮ ಮನೆಂದ ಹೆರ ಬಂತು.ಅಲ್ಲಿಪ್ಪವರ ಎಲ್ಲ ಎಂತೋ ಹೇಳಿ ದೂರ ಕಳ್ಸಿಕ್ಕಿ ಇದರ ಮನೆಯೊಳಾಂಗೆ ದಿನಿಗೇಳಿತ್ತು.

ಒಂದರಿ ಅವರ ಕೈಂದ ತಪ್ಸಿರೆ ಸಾಕೂಳಿ ಆಗಿಂಡಿದ್ದ ಸುಶೀಲ ತಂಗಮ್ಮ ಹೇಳಿಯಪ್ಪಗ ಬಚಾವ್ ಹೇಳಿ ಜಾನ್ಸಿ ಒಳಾಂಗೆ ಹತ್ತಿತ್ತು.ಒಳಾಣ ಅವಸ್ಥೆ ಕಾಂಬಗ ಅದಕ್ಕೆ ಹೆರವೇ ನಿಂದಿಕ್ಕಲಾವ್ತಿತೂಳಿ ಕಂಡತ್ತು.
ಜರುದು ಬೀಳ್ಲೆ ಸುರುವಾದ ಹಾಂಗಿದ್ದ ಮಣ್ಣಿನ ಗೋಡೆ.ಅದಕ್ಕೆಲ್ಲ ಮಸಿ ಅಂಟಿಂಟಿದ್ದು.ಉದ್ದಕ್ಕೆ ಒಂದು ಬಳ್ಳಿ ಕಟ್ಟಿ ಹರ್ಕಟೆ ವಸ್ತ್ರಗಳನ್ನು ನೇಲ್ಸಿಂಡಿದ್ದತ್ತು.ರೂಮು ಹೇಳಿ ಎಂತದೂ ಇತ್ತಿದ್ದಿಲ್ಲೆ. ಕರಿಕಸ್ತಲೆ ಗುಂಡಿ ಹಾಂಗಿದ್ದ ಜಾಗೆಲಿ ಮೂರು ನಾಲ್ಕು ಕಲ್ಲು ಮಡುಗಿ ಒಲೆ ಮಾಡಿ ,ಅದರ ಹತ್ತರೆ ಞಳಿ ಬಿದ್ದ ಎರಡು ಮೂರು ಕುಞಿ ಪಾತ್ರಂಗಳೂ ಕಂಡತ್ತದಕ್ಕೆ.
ಹೆರ ಸರೀ ಬೆಣಚ್ಚಾದರೂ ಒಳ ಮಾಂತ್ರ ಕಾರ್ಗುಂಡಿ ಕಸ್ತಲೆ. ಒಳ ಹತ್ತಿ ಒಂದು ದಿಕೆ ನಿಂದ ಜೆನಕ್ಕೆ ಅಲ್ಲಿಂದ ಒಂದಡಿ ಕೂಡ ಮುಂದೆ ಮಡುಗುಲೆ ಎಡಿಗಾತಿಲ್ಲೆ.ಸಣ್ಣ ಗೂಡಿನ ಹಾಂಗಿದ್ದ ಅಲ್ಲಿ ಉಸಿಲು ಕಟ್ಟುವ ಹಾಂಗಪ್ಪಗ ಅದು ತಿರುಗಿ ದಿನೇಸನ ನೋಡಿತ್ತು.ಅದು ಭಾರೀ ಕೊಶಿಲಿ ಹೆರ ಇಪ್ಪವರತ್ರೆ ಮಾತಾಡುದು ಕಂಡತ್ತು.

ತುಂಬ ಹೊತ್ತು ಕಾರಿಲ್ಲಿ ಕೂದು ಹೊಟ್ಟೆ ಎರ್ಕಿದಾಂಗಪ್ಪಗ ಬೇರೆ ನಿವೃತ್ತಿ ಇಲ್ಲದ್ದೆ ಹೆರ ಇಳುದು ಬಂದು
“ಬೆಶಿನೀರ ಕೊಟ್ಟಗೆ ಎಲ್ಲಿದ್ದು?” ಕೇಳಿತ್ತು ದಿನೇಶನತ್ರೆ.
“ಬೆಶಿ ನೀರ ಕೊಟ್ಟಗೆಯಾ? ಇಲ್ಲಿ? ಹ್ಹ…..ಹ್ಹ….” ಅದು ದೊಡ್ಡಕೆ ನೆಗೆ ಮಾಡುಗ ಕೋಪ ಬಂತು ಸುಶೀಲಂಗೆ.
“ಅಪ್ಪು, ಎನಗೀಗ ಮೋರೆ ತೊಳೆಕು,ಮೀಯೆಕು,ಮನೆಲಿ ಮೀಯದ್ದೆ ಕಾಪಿ ಕುಡಿವ ಅಭ್ಯಾಸ ಇಲ್ಲೆನಗೆ”

ದಿನೇಸನ ಹತ್ತರೆ ನಿಂದೊಂಡಿದ್ದವಕ್ಕೆ ಇದರ ಭಾಷೆ ಅರ್ಥಾಗದ್ದ ಕಾರಣ ಅದರತ್ರೆ ಕೇಳಿ ತಿಳ್ಕೊಂಡಿಕ್ಕಿ ಅವುದೆ ದೊಡ್ಡಕೆ ನೆಗೆ ಮಾಡ್ಲೆ ಸುರು ಮಾಡಿದವು‌.ಎಂತಕೆ ಹೀಂಗೆ ನೆಗೆ ಮಾಡ್ತವು ಹೇಳಿ ಅವರನ್ನೇ ಕೋಪಲ್ಲಿ ನೋಡಿಂಡು ನಿಂದಪ್ಪಗ ದಿನೇಸ ಹೇಳಿತ್ತು
“ಇಲ್ಲಿ ನಿನ್ನ ಊರಿನ ಹಾಂಗಿದ್ದ ಸೌಕರ್ಯ ಎಲ್ಲ ಇಲ್ಲೆ.ನೀರು ತಪ್ಪದು ಅರ್ಧ ಮೈಲು ದೂರದ ಗವರ್ಮೆಂಟು ಬಾವಿಂದ.ನಿನ್ನ ಮನೆಲಿ ಮೀವ ಹಾಂಗೆ ದಿನಕ್ಕೆರಡು ಸರ್ತಿ ಮೀವಲೆಲ್ಲ ಎಡಿಯ, ಎರಡು ದಿನಕ್ಕೆ ಒಂದರಿ ಮಿಂದರೆ ಸಾಕು. ನಿನ್ನ ಬಾಕಿದ್ದ ನಿತ್ಯವೃತ್ತಿಗೊಕ್ಕೆಲ್ಲ ಓ ..ಅಲ್ಲಿಪ್ಪ ಕಾಡಿನೊಳಾಂಗೆ ಚೆಂಬು ತೆಕ್ಕೊಂಡು ಹೋದರಾತು”

ಸುಶೀಲಂಗೆ ಅದು ಎಂತರ ಹೇಳುದು ಹೇಳಿ ಅರ್ಥಾಯೆಕಾರೆ ರೆಜಾ ಹೊತ್ತು ಹಿಡುದತ್ತು.ಅರ್ಥಾದಪ್ಪಗ ಬೋದ ತಪ್ಪಿ ಬೀಳುವ ಹಾಂಗಾತು.ಅದಕ್ಕೆ ಹೀಂಗಿದ್ದ ವಿಶಯದ ಕಲ್ಪನೆ ಕೂಡ ಇದ್ದತ್ತಿಲ್ಲೆ.
‘ದೇವರೇ ಇದೆಂತ ಅವಸ್ಥೆ!! ಹೀಂಗಾದರೆ ಇಲ್ಲಿ ಬದ್ಕುದು ಹೇಂಗೆ? ” ಇಷ್ಟರವರೆಗೆ ಅದು ಹೀಂಗಿದ್ದ ಆಲೋಚನೆ ಮಾಡಿದ್ದೇ ಇಲ್ಲೆ.

‘ಒಂದು ವಾರ,ಹತ್ತು ದಿನ ಹೀಂಗೇ ಬಂಙ ಬರೆಕಕ್ಕು.ಮತ್ತೆ ಅಪ್ಪ° ಬಂದು ಕರಕ್ಕೊಂಡು ಹೋಗು,ಹೆಚ್ಚಿದರೆ ಒಂದು ತಿಂಗಳೊಳ’ ಹಾಂಗೊಂದು ಧೈರ್ಯ ಒಳ ಮನಸಿಂದ ಹುಟ್ಟಿಯಪ್ಪಗ ಹೇಂಗೋ ರಜಾ ಸಮದಾನ ಮಾಡ್ಯೊಂಡತ್ತು.

“ನಿನಗೆ ಮೀಯೆಕಾರೆ ಒಳ ನೀರು ಕಾಸಿದ್ದೆ” ತಂಗಮ್ಮ ಬಂದು ಹೇಳಿಯಪ್ಪಗ ಅದರನ್ನೇ ಆಶ್ಚರ್ಯಲ್ಲಿ ನೋಡಿತ್ತು.ಇಷ್ಟರವರೆಗೆ “ನಿಂಗೊ, ಕುಂಞಕ್ಕ°, ಸಣ್ಣಕ್ಕ° ….” ಹೇಳಿಂಡಿದ್ದದು ಈಗ ಎಷ್ಟು ಲಾಯ್ಕಲ್ಲಿ “ನೀನು” ಹೇಳ್ತು.ಅದು ಹಾಂಗೆ ಹೇಳುದು ಕೇಳುಗ “ಛೀ” ಹೇಳಿಂಡೇ ತಲೆ ಆಡ್ಸಿತ್ತು.

ಮನೆಯ ಹಿಂದಾಣ ಹೊಡೆಲಿ ಒಂದು ಬಾಲ್ದಿ ನೀರು ಕೊಂಡೋಗಿ ಮಡುಗಿತ್ತು ತಂಗಮ್ಮ. ಅಲ್ಲಿ ಒಂದು ಮರೆ ಕೂಡ ಇದ್ದತ್ತಿಲ್ಲೆ. ಆಚ ಈಚ ಮನೆಯವಕ್ಕೆಲ್ಲ ಕಾಂಬ ಹಾಂಗಿದ್ದಲ್ಲಿ ನಿಂದು ಮೀವದೇಂಗೆ!!

“ಇಲ್ಲಿ ಹೇಂಗೆ ಮೀವದಾನು? ಎಲ್ಲಿಯೂ ಒಂದು ಗೋಡೆ ಕೂಡ ಇಲ್ಲೆ ತಂಗಮ್ಮಾ”
“ತಂಗಮ್ಮನಾ? ಇನ್ನೆನ್ನ ಹಾಂಗೆ ಹೆಸರು ಹೇಳ್ಲಾಗ ನೀನು.ಆನೀಗ ನಿನ್ನ ಅತ್ತೆಯೋರು” ರಜ ದೊಡ್ಡ ಸ್ವರಲ್ಲಿ ಹೇಳಿತ್ತು ತಂಗಮ್ಮ.
ಮನೆಲಿ ಮಾತಾಡುಗ ಎಷ್ಟು ಚೆಂದದ ಸ್ವರ ಇದ್ದತ್ತಿದಕ್ಕೆ‌‌.ಈಗ…. ‌.!! ಸುಶೀಲ ಮಾತಾಡಿದ್ದಿಲ್ಲೆ.
“ಬೇಗ ಹೋಗಿ ಮಿಂದಿಕ್ಕಿ ಬಾ” ತಂಗಮ್ಮ ಮತ್ತೊಂದರಿ ಹೇಳಿಯಪ್ಪಗ ಸುಶೀಲ ಮೆಲ್ಲಂಗೆ “ಎನಗಲ್ಲಿ ಮೀವಲೆಡಿಯ” ಹೇಳಿತ್ತು.
“ಹ್ಹ…ಹ್ಹ….ಹ್ಹ…ಹ್ಹ….ಅಲ್ಲಿ ಮೀಯದ್ದೆ ಮತ್ತೆ ಎಲ್ಲಿ ಮೀಯ್ತೆ? ಇಲ್ಯಾಣ ಹೆಮ್ಮಕ್ಕೊಗೆ ಇಲ್ಲದ್ದ ವಿಶೇಶ ಎಂತದೂ ನಿನಗಿಲ್ಲೆ.ಬಣ್ಣ ಮಾಂತ್ರ ಸುಣ್ಣದ ಹಾಂಗೇಳಿ ಅಷ್ಟೇ” ಎಲೆ ತಿಂದು ಕೆರಕ್ಕಟೆ ಆದ ಕರಿ ಕರಿ ಹಲ್ಲು ತೋರ್ಸಿ ಅದು ಅಟ್ಟಹಾಸ ಕೊಟ್ಟು ನೆಗೆ ಮಾಡುಗ ಸುಶೀಲಂಗೆ ಹೇಂಗೆಂಗೋ ಆತು.

“ಇಂದು ಬೆಶಿನೀರು ಕಾಸಿ ಕೊಟ್ಟಿದೆ ಹೇಳಿ ನಾಳಂಗೆ ಮಾಡಿ ಕೊಡೆ.ನೀನೇ ಮಾಡೆಕಷ್ಟೆ. ಹೂಂ..ಹೋಗು….” ತಂಗಮ್ಮ ಹಾಂಗೆ ಹೇಳಿರೂ ಸುಶೀಲಂಗೆ ಮಾಡಿಲ್ಲದ್ದ ಮರೆಯಿಲ್ಲದ್ದ ಅಲ್ಲಿ ಮೀವಲೆ ಧೈರ್ಯ ಬಯಿಂದಿಲ್ಲೆ. ಸಾಲದ್ದಕ್ಕೆ ಅದರತ್ರೆ ಒಂದು ಚೆಂಡಿ ಹರ್ಕು ,ಸಾಬೂನು ಯೇವದೂ ಇತ್ತಿದ್ದಿಲ್ಲೆ. ಗಡಿಬಿಡಿಲಿ ಬೇಗು ತುಂಬುಸುಗ ಅದರ ಅಂಗಿಗಳ ಮಾಂತ್ರ ತುಂಬುಸಿದ್ದಷ್ಟೆ ಹೊರತು ತೋರ್ತು,ಸೋಪು,ಬ್ರೆಶ್ಶು ಯೇವದೂ ಬೇಕಕ್ಕು ಹೇಳಿ ತಲಗೋಯಿದಿಲ್ಲೆ. ಈಗ ಹೇಂಗೆ ಕೇಳುದು? ಫಕ್ಕನೆ ಅಬ್ಬೆಯ ನೆಂಪಾತು.

ಅಕ್ಕ° ಮದುವೆ ಕಳುದು ಹೋಪಗ ಕೊಂಡೋಪಲೆ ಅಬ್ಬೆ ಎರಡು ತೋರ್ತು ಕೊಟ್ಟದು ಕಂಡು ಅಣ್ಣ ಅಂದು ನೆಗೆ ಮಾಡಿತ್ತಿದ್ದ° ” ಇದರನ್ನೂ ಇಲ್ಲಿಂದ ಕೊಂಡೋಯೆಕಾ? ಅಲ್ಲಿಪ್ಪವು ತೋರ್ತು ಉಪಯೋಗ್ಸುವ ಕ್ರಮ ಇಲ್ಲೇದಿಕ್ಕು…” ಅವ° ಕುಶಾಲಿಂಗೆ ಹೇಳಿದ್ದಕ್ಕೆ ಅಬ್ಬೆ ನೆಗೆ ಮಾಡಿದ್ದಿಲ್ಲೆ “ಶೈಲ ಆ ಮನಗೆ ಹೊಸಬ್ಬೆತ್ತಿ,ಎಲ್ಲವನ್ನೂ ಕೇಳಿ ತೆಕ್ಕೊಂಬಲೆ ಲಾಯ್ಕ ಆಗ.ಮದುವೆ, ಸಟ್ಟುಮುಡಿ ಗೌಜಿಗೆ ಅವಕ್ಕೆ ಕೆಲವು ಸರ್ತಿ ಹೀಂಗಿದ್ದ ವಿಶಯ ನೆಂಪಾಗದ್ದಿಪ್ಪಲೂ ಸಾಕು.ಹಾಂಗಾಗಿ ಆ ಮನಗೆ ಸರೀ ಹೊಂದಿಕೊಂಬನ್ನಾರ ಕೆಲವು ವಸ್ತುಗೊ ನಾವು ಕೊಡೆಕಾವ್ತು.ಉಪಯೋಗ ಬಂದರೆ ತೆಗದರಾತು.ಇಲ್ಲದ್ರೆ ಅಲ್ಲಿರ್ತು ಅಷ್ಟೇ” ಅದೆಷ್ಟು ಸತ್ಯ!!
ಅಬ್ಬೆ ಎಲ್ಲಾ ವಿಶಯಲ್ಲೂ ಎಷ್ಟು ಶಿಸ್ತು. ಮಕ್ಕೊಗೆ ಬೇಕಾದ್ದರ ಎಲ್ಲ ಎಷ್ಟು ಜಾಗ್ರತೆಲಿ ತೆಗದು ಮಡುಗಿ, ನೆಂಪು ಮಾಡಿ ಕೊಡುಗು.
ಅಂದು ಶಾಲೆಂದ ನಾಕು ದಿನದ ಪ್ರವಾಸಕ್ಕೆ ಹೋಪಗಳೂ ಅಬ್ಬೆ ಎಲ್ಲ ಸಾಮಾನು ನೆಂಪು ಮಾಡಿ ತುಂಬುಸಿ ಕೊಟ್ಟಿದ್ದತ್ತು
“ಎಷ್ಟೇ ಫ್ರೆಂಡುಗೊ ಆದಿಕ್ಕು ,ಆದರೆ ಇನ್ನೊಬ್ಬರ ತೋರ್ತು,ಸೋಪು ನಾವು ಉಪಯೋಗಿಸುಲಾಗ ಮಗಳೂ,ಅವರ ಮೈಲಿ ಯೇವದಾರು ಅಲರ್ಜಿಯೋ,ಹುಳುಕ್ಕಡಿಯೋ ಇದ್ದರೆ ಅದು ನಮಗೂ ಪಗರುತ್ತು.ನಮ್ಮಲ್ಲಿದ್ದರೆ ಅವಕ್ಕೆ ಪಗರುತ್ತು.ಒಂದರಿ ಹಾಂಗಿದ್ದದು ಬಂದರೆ ಮತ್ತೆ ಬೇಗ ಹೋವ್ತೂ ಇಲ್ಲೆ.ಹಾಂಗಾಗಿ ಜಾಗ್ರತೆ ಹೇಳುದಷ್ಟೆ”

“ಎಂತರ ಆಲೋಚನೆ ಮಾಡುದು?” ತಂಗಮ್ಮ ಪುನಾ ಕೇಳಿತ್ತು.
“ಆನು ತೋರ್ತು ತಯಿಂದಿಲ್ಲೆ” ಸುಶೀಲ ಇಷ್ಟು ಸಣ್ಣಕೆ, ಹೀಂಗಿದ್ದ ಸ್ವರಲ್ಲಿ ಆರತ್ರೂ ಇಷ್ಟರವರೆಗೆ ಮಾತಾಡಿರ.

“ಹಾಂಗಾ..ಇದಾ..ಕೊಡ್ತೆ” ಹೇಳಿಕ್ಕಿ ಒಂದು ಕಪ್ಪು ಕಪ್ಪಾದ ಹಳೇ ಸೀರೆಯ ತುಂಡಿನ ಕೊಟ್ಟತ್ತು. ಕೈಲಿ ಹಿಡ್ಕೊಂಡಪ್ಪಗಳೇ ಹೊಟ್ಟೆ ತೊಳಸಿ ಕಾರ್ಲೆ ಬಪ್ಪಷ್ಟು ವಾಸನೆ ಬಪ್ಪ ಆ ವಸ್ತ್ರದ ತುಂಡು ನೋಡುಗ ಅಬ್ಬೆ ಮನೆಲಿ ಬಂದವಕ್ಕೆ ಕೊಡ್ಲೆ ಹೇಳಿ ಲಾಯ್ಕಲ್ಲಿ ಬೆಶಿನೀರಿಲ್ಲಿ ತೊಳದು, ಅಜ್ಜಿಯ ಉಗ್ರಾಣಲ್ಲಿಪ್ಪ ಮರದ ಪೆಟ್ಟಿಗೆಲಿ ತೋಳೆಕಾಯಿ ಹಾಕಿ ಮಡುಗುವ ಪರಿಮ್ಮಳ ಬಪ್ಪ ಬೆಳಿ ಬೆಳಿ ಚೆಂಡಿ ಹರ್ಕು ನೆಂಪಾತು.
“ಆನಿದರ್ಲಿ ಮೈಯುದ್ದುದು,ಒಳ್ಳೆ ಪರಿಮ್ಮಳ ಬತ್ತು” ಹೇಳಿ ಒಂದೊಂದರಿ ಅಬ್ಬೆ ಆ ಪೆಟ್ಟಿಗೆಯ ಮುಚ್ಚಲು ತೆಗವಗ ಒಂದು ತೋರ್ತು ತೆಕ್ಕೊಂಡು ಓಡಿ ಅಬ್ಬೆಯ ಬೊಡುಶಿಂಡಿದ್ದತ್ತದು.
“ಬಂದವಕ್ಕೆ ಕೊಡುವ ವಸ್ತ್ರ ಶುಭ್ರ ಬೇಕು ಕೂಸೇ,ನಾಳಂಗೆ ಇನ್ನೊಂದು ಮನಗೆ ಹೋದಪ್ಪಗ ನೀನೂದೆ ಹೀಂಗೇ ಮಾಡೆಕು.ಚಂದ ಕಾಣ್ತು, ಪರಿಮ್ಮಳ ಬತ್ತು ಹೇಳಿ ಮೈ ಉದ್ದಿರೆ ಅದು ಹಾಳಕ್ಕು.ಹಾಳಾದ್ದರ,ಲಾಯ್ಕ ಇಲ್ಲದ್ದರ ಅತಿಥಿಗೊಕ್ಕೆ ಕೊಡ್ಲಾಗ” ಹೇಳಿ ಅಬ್ಬೆ ಅದರ ಹಿಂದಂದಲೇ ಓಡಿ ಬಂದು ಅದರ ತೆಕ್ಕೊಂಡು ಪುನಾ ಪೆಟ್ಟಿಗೆಲಿ ಮಡುಗ್ಗು.

ಅಬ್ಬೆ ಈಗ ಎಂತ ಮಾಡ್ತೋ,ಎನ್ನ ಹುಡ್ಕುತ್ತಾದಿಕ್ಕು.ಒಂದರಿ ಬೇಗ ಪೋಲಿಸುಗಳತ್ರೆ ಹೇಳಿ ಎನ್ನ ಹುಡ್ಕಿಸಿದ್ದರೆ ಆದಷ್ಟು ಬೇಗ ಮನಗೆ ಹೋಪಲಾವ್ತಿತು.ಮೀವದು,ಬಾಕಿ ಕೆಲಸಂಗೊಕ್ಕೆಲ್ಲ ಇಷ್ಟು ಬಂಙ ಇದ್ದೂಳಿ ಇಷ್ಟರವರೆಗೂ ಗೊಂತಿತ್ತಿದ್ದಿಲ್ಲೆ’ ಹೀಂಗೆಲ್ಲ ಗ್ರೇಶಿಂಡು ಹೇಂಗೋ ಅಲ್ಲಿ ಅತ್ಲಾಗಿತ್ಲಾಗಿ ನೋಡಿಂಡು ಮಿಂದ ಶಾಸ್ತ್ರ ಮಾಡಿ , ಪೆಟ್ಟಿಕೋಟಿಲ್ಲೇ ಮೈ ಉದ್ದಿದ ಹಾಂಗೆ ಮಾಡಿಕ್ಕಿ ಬೇರೆ ಅಂಗಿ ಹಾಕಿಯಪ್ಪಗ ಆಚೊಡೆಂದ ಈಚೊಡೆಂದ ಎಲ್ಲ ಗೆಂಡುಮಕ್ಕೊ ಚಪ್ಪಾಳೆ ತಟ್ಟಿ ನೆಗೆ ಮಾಡುವ ಶಬ್ದ ಕಳಿತ್ತು.
ಹೆದರಿ ತಿರುಗಿ ನೋಡುಗ ರಜಾ ದೂರಲ್ಲಿ ಹತ್ತಿಪ್ಪತ್ತು ಗೆಂಡುಗೊ ಇದರನ್ನೇ ನೋಡಿಂಡು ತಮಿಳು ಪದ್ಯವನ್ನು ಹೇಳಿಂಡು ದೊಡ್ಡಕೆ ನೆಗೆ ಮಾಡ್ತವು.
ಇದು ಅತ್ಲಾಗಿ ನೋಡಿದ್ದು ಕಂಡಪ್ಪಗ ಅವರ ಬೊಬ್ಬೆ ಮತ್ತೂ ಹೆಚ್ಚಿತ್ತು.
“ಸೂಪರೋ…ಸೂಪರು….” ಹೇಳುದೊಂದು ಮಾಂತ್ರ ಇದಕ್ಕೆ ಅರ್ಥಾದ್ದು.
‘ಶ್ಶೋ..ಆನು ಮೀವಲೆ ಹೆರಟಪ್ಪಗ ಏವದೂ ಇತ್ತಿದ್ದಿಲ್ಲೆ. ಈಗ ಎಷ್ಟು ಜೆನ….!!!!’ ಸುಶೀಗೆ ಕೂಗಲೆ ಬಂತು.
ಉಂಬಲೆ ಕೂಬಗ ಅಂಗಿ ಮೊಳಪ್ಪು ಮುಚ್ಚದ್ರೆ ಅಬ್ಬೆ ಬೈಗು “ಇದೆಂತರ ಕೋಲ ಸುಶೀ..ನೇರ್ಪ ಕೂರು.ಕೂಸುಗೊ ಮೈ ಕಾಂಬ ಹಾಂಗಿದ್ದ ಅಂಗಿಗಳ ಹಾಕಲೂ ಆಗ,ಮೈ ತೋರ್ಸಿಂಡು ಕೂಬಲೂ ಆಗ”
ಅಂದು ಹಾಂಗೆ ಹೇಳುಗ ” ಆತಪ್ಪಾ ನಿನ್ನ ಹರಟೆ ಒಂದರಿ ನಿಲ್ಸು.ನಿನ್ನ ಉಪದೇಶ ಕೇಳಿರೆ ಹತ್ತು ಜನರ ಎದುರು ಆನು ಬರೀ ಮೈಲಿ ನಿಂದ ಹಾಂಗಿದ್ದು” ಹೇಳಿ ಅಬ್ಬೆಯನ್ನೇ ತಿರುಗಿ ಜೋರು ಮಾಡಿದ್ದತ್ತು.
ಅಬ್ಬೆಯ ಅಂದು ಬೈದ ಮಾತು ಈಗ ಸತ್ಯ ಆತನ್ನೇ’ ಹೇಳಿ ಸಣ್ಣಕೆ ಕೂಗಿಂಡು ತಂಗಮ್ಮ ಕೊಟ್ಟ ಸೀರೆ ತುಂಡಿನ ಎಡದ ಕೈಲಿ ಹಿಡ್ಕೊಂಡು ಒಳ ಬಂದ ಸುಶೀಲ ಒಳ ನಡೆತ್ತಾ ಇಪ್ಪ ದೃಶ್ಯವ ಕಂಡು ಉಸಿಲು ತೆಗವಲೆ ಸಾನು ಮರದವರ ಹಾಂಗೆ ಹೆದರಿ ನಿಂದತ್ತು!!!!!

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

3 thoughts on “ಸ್ವಯಂವರ : ಕಾದಂಬರಿ : ಭಾಗ 28 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಯಬ್ಬ. ಸುಶೀಲನ ಅವಸ್ಥೆ ನೋಡುವಗ, ಅದರ ಹಾಂಕಾರಕ್ಕೆ ಹಾಂಗಾಯೆಕು ಹೇಳಿ ಕಾಣುತ್ತು. ಆದರೂ ಚೆ, ಒಪ್ಪಕ್ಕಂಗೆ ಹೀಂಗಾತಾನೆ ಹೇಳಿ ಬೇಜಾರುದೆ ಆವ್ತಿತು. ಎಷ್ಟು ಒಳ್ಳೆ ಹವ್ಯಕ ಮಾಣಿಯ ಅದಕ್ಕೆ ಮದುವೆ ಅಪ್ಪಲಾವ್ತಿತು. ನಿಜ. ಈಗಾಣ ದಾರಿ ತಪ್ಪುತ್ತ ಹಾಂಗಿಪ್ಪ ಕೂಸುಗೊ ಅವಶ್ಯ ಓದೆಕಾದ ಕತೆ ಇದು. ಪ್ರಸನ್ನಕ್ಕಾ, ತಮಿಳಂಗಳ ಮನೆಯ ವರ್ಣನೆ ಸೂಪರ್ ಆಯಿದು.

  2. ಅಯ್ಯೋ ಸುಷಿಯ ಪರಿಸ್ಥಿತಿಯೇ..ಹೆಂಗಿದ್ದ ಕುಟುಂಬ ಲ್ಲಿ ಹುಟ್ಟಿ ದ್ದು ಹೆಂಗಾತು ಜೀವನ…ಕಥೆಯ ನೈಜತೆ.. ಓದುವಾಗಲೇ ಮೈ ಅಕ್ಕಿಕಟ್ಟುತ್ತು…ತಿರುಗಿ ಮನೆಗೆ ಹೊಯ್ಕ್ಕಾತು…ಕಣ್ಣಾರೆ ಕಂಡ ಅನುಭವ ಆವುತ್ತು…ಸೂಪರ್ ಶೈಲಿಲಿ ಕಥೆ ಬರದ್ದಿ..

  3. ಅಬ್ಬ ಓದುವಗಳೇ ಹೆದರಿಕೆ ಆವುತ್ತು ಅಲ್ಯಾಣ ಪರಿಸ್ಥಿತಿ.ಒಂದು ಚೂರೂ ಬುದ್ಧಿ ಇಲ್ಲದ್ದ ಕೂಸು.ಅಂಬಗಾದರೂ ತಿರುಗಿ ಮನೆಗೆ ಹೋವುತಿದ್ದರೆ ಆವುತಿತ್ತು.ಸಿಕ್ಕಿಸಿಕ್ಕಿದ ಕಾಟುಗಳ ಲವ್ ಮಾಡುವಗ ರಜಾ ಆಲೋಚನೆ ಮಾಡಕ್ಕು.ನಿಜವಾಗಿಯೂ ಕೂಸುಗೊ ಈ ಕತೆಯ ಓದಿದರೆ ಮತ್ತೆ ತಪ್ಪು ಮಾಡವು.ಸಹಜವಾಗಿ,ಸುಂದರವಾಗಿ ಮೂಡಿ ಬಯಿಂದು ಕತೆ.ಕತೆ ಹೇಳಿ ಅನಿಸುತ್ತೇ ಇಲ್ಲ.ನೈಜವಾಗಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×