ಪ್ರೀತಿಯ ಆರೈಕೆ ಇಲ್ಲದ್ದೆ, ಬಸರಿ ಹೇಳುವ ಯಾವುದೇ ವಿಶೇಷ ಅಕ್ಕರೆ ಇಲ್ಲದ್ದೆ ಒಂಭತ್ತು ತಿಂಗಳು ಪಾಪುವಿನ ಹೊಟ್ಟೆಲಿ ಹೊತ್ತ ಸುಶೀಲಂಗೆ ಹೆರಿಗೆ ಆಗಿ ಡಾಕ್ಟರ° “ಮಗಳ ನೋಡು, ನಿನ್ನ ಹಾಂಗೇ ಇದ್ದು” ಹೇಳಿಯಪ್ಪಗ ಒಂದರಿಂಗೆ ಮನಸ್ಸು ತಂಪಾತು.
ಸುರುಳಿ ಸುರುಳಿ ತಲೆಕಸವಿನ ಒಂದು ಪುಟ್ಟು ಬಾಬೆಯ ನರ್ಸ್ ಹತ್ತರೆ ತಂದು ಹಿಡುದಪ್ಪಗ ಎದೆಯಾಳದ ಮಾತೃ ವಾತ್ಸಲ್ಯ ಎಲ್ಲ ಒಂದರಿಯೇ ಹೆರ ಬಂದು ಮಗಳಿಂಗೆ ಕೊಂಗಾಟಲ್ಲಿ ಒಂದು ಮುತ್ತು ಕೊಟ್ಟತ್ತು.
“ಈಗ ನೋಡಿದ್ದು ಸಾಕು, ಇನ್ನು ಮತ್ತೆ ನೋಡ್ಲಕ್ಕು” ಹೇಳಿಕ್ಕಿ ಹೆರ ಕರಕ್ಕೊಂಡು ಹೋದಪ್ಪಗ ಒಂದರಿ ಝಿಮ್ ಆತು. ಆ ತಂಗಮ್ಮನೂ, ದಿನೇಸನೂ ಮಗಳಿಂಗೆ ಎಂತಾರು ಮಾಡಿರೆ!!
ಅಯ್ಯೋ…..!! ಈಗ ಅಬ್ಬೆ ಇರೆಕಾತು. ಎಷ್ಟು ಕೊಶಿ ಪಡ್ತಿತು. ಎಷ್ಟು ಜಾಗ್ರತೆಲಿ ಮಗಳ ನೋಡ್ತಿತು. ಇಲ್ಲಿ ಎಂತ ಆರೈಕೆ ಸಿಕ್ಕುಗು ಎನ್ನ ಮಗಳಿಂಗೆ! ದಿನೇಸಂಗೆ ಅಪ್ಪ° ಆಯಿದೆ ಹೇಳಿ ಯೇವ ಕೊಶಿಯೂ ಇರ. ತಂಗಮ್ಮಂಗಂತೂ ಈಗೀಗ ಎನ್ನ ಕಂಡ್ರೇ ಆಗ. ಮತ್ತೆ ಎನ್ನ ಮಗಳ ನೋಡುಗಾ! ಎಣ್ಣೆ ಕಿಟ್ಟಿ ಮೀಶುದಾರು? ಪಾಪುವಿಂಗೆ ಹಶುವಾದರೆ ಎಂತ ಮಾಡುದು!……ಆರಿದ್ದವು ಕಷ್ಟ ಸುಖ ಹೇಳಿಕೊಂಬಲೆ.!! ದೇವರೇ..! ಬೇಕಾತ ಎನಗೆ ಈ ಕೆಲಸ! ಕೊಶೀಲಿ ಅಬ್ಬೆ ಅಪ್ಪ ಹೇಳಿದ್ದರ ಕೇಳಿಂಡಿದ್ದರೆ ಅಕ್ಕ ಮದುವೆ ಆದ ಹಾಂಗೆ ಒಂದು ಒಳ್ಳೆ ಸುಸಂಸ್ಕೃತ ಕುಟುಂಬದ ಸೊಸೆಯಾಗಿ ಹೋಗಿ ಗೆಂಡ, ಮನೆ ಮಕ್ಕೊ ಹೇಳಿ ಚೆಂದಕೆ ಬದ್ಕುಲಾವ್ತಿತು. ಎಂತ ಗ್ರಾಚಾರವೋ! ಎನ್ನ ಹಾಳು ಬುದ್ಧಿಂದಾಗಿ ಎನ್ನ ಬದುಕನ್ನೇ ಹಾಳು ಮಾಡ್ಯೊಂಡೆ…..! ‘
“ನಿಂಗಳ ಗೆಂಡನಾ ಹೆರ ಇಪ್ಪದು?” ನರ್ಸಿಂಗೆ ಕೂಡ ಪಾಪುವಿನ ಅವರ ಕೈಲಿ ಕೊಡ್ಲೆ ಧೈರ್ಯ ಬಯಿಂದಿಲ್ಲೆ ಕಾಣ್ತು. ಸುಶೀಲ “ಅಪ್ಪು” ಹೇಳಿದ ಮತ್ತೆ ಅವರತ್ರೆ ಕೊಟ್ಟದದು.
ಆಸ್ಪತ್ರೆಲಿ ಸುಶೀಲನ ನೋಡಿ ಕೊಂಬಲೆ ತಂಗಮ್ಮ ನಿಂದದು. ಅಲ್ಲಿ ಅದರ ಆರ್ಭಟೆ, ನರ್ಸುಗಳ ಬೈವದು ಕಂಡು ಸುಶೀಗೆ ಬೊಡುದತ್ತು. ಅದರ ಕಂಡಿಕ್ಕಿ ಇದರ ಕಾಂಬಗ ಎಲ್ಲೋರಿಂಗು ಆಶ್ಚರ್ಯ ಅಪ್ಪದು
“ನೀನು ಅವರ ಹಾಂಗಿಲ್ಲೆನ್ನೇ, ನಿನ್ನದೆಂತ ಅಂತರ್ಜಾತಿ ಮದುವೆಯಾ?” ಹೇಳಿ ಒಂದೆರಡು ಜೆನ ಕೇಳಿದವುದೆ. ಎಂತರ ಹೇಳುದು ಹೇಳಿ ಅರಡಿಯದ್ದೆ ಸುಮ್ಮನೇ ತಲೆಯಾಡ್ಸಿತ್ತು ಸುಶೀಲ.
ಅಂತೂ ಇಂತೂ ಮೂರು ದಿನ ಕಳುದು ಮನಗೆ ಬಂತು ಸುಶೀಲ. ಬಾಣಂತಿಗೆ ಮನುಗುಲೂ ಅಲ್ಲಿ ಸರಿಯಾದ ಜಾಗೆ ಇತ್ತಿದ್ದಿಲ್ಲೆ. ಕೋಳಿ,ನಾಯಿ,ಆಡು,ಪುಚ್ಚೆ ಎಲ್ಲ ಯೇವಗಲೂ ಒಳ ಹೆರ ಹೋಗಿಂಡಿಪ್ಪ ಆ ಮುರ್ಕಟೆ ಮನೆಲಿ ಅದರ ಬಾಣಂತನ ಹೇಂಗೋ ಕಳುದತ್ತು.
ಬಾಳಂತಿ ಹೇಳಿ ಎಣ್ಣೆ ಕಿಟ್ಟಿ ಮಿಂದಿದಿಲ್ಲೆ, ಅರಿಷ್ಟ, ಲೇಹ, ಕಷಾಯ ಯೇವದೂ ಇಲ್ಲೆ. ಪಾಪುವಿಂಗೂ ಅಷ್ಟೇ. ಅದು ಕೂಗಿರೂ ಆರೂ ಮುಟ್ಲೆ ಬಾರವು. ದಿನೇಸ ಅಂತೂ ಮಗಳು ಹುಟ್ಟಿದ ಮತ್ತೆ ಅದರ ನೋಡ್ಲೆ ಸಾನೂ ಹತ್ತರೆ ಬಯಿಂದಿಲ್ಲೆ.
‘ನೀನೆಂತಕೆ ಎನ್ನ ಹೊಟ್ಟೆಲಿ ಹುಟ್ಟಿದೆ ಮಗಳೇ..ಎನಗಾದರೆ ಮರ್ಲು, ಆದರೆ ಎನ್ನ ಮರುಳಿಂದ ನಿನ್ನ ಒಪ್ಪ ಬದುಕು ಕೂಡ ಹಾಳಾತು. ಎನ್ನ ಮಗಳು ಹೇಳಿ ನಿನಗೆ ಸಮಾಜಲ್ಲಿ ಒಳ್ಳೆ ಹೆಸರಿರ, ಎನ್ನಷ್ಟೂ ಶಾಲಗೋಪಲೆ ಎಡಿಯ, ಇಲ್ಯಾಣ ಈ ಮಕ್ಕಳೊಟ್ಟಿಂಗೆ ಚರಂಡಿ ನೀರಿಲ್ಲಿ ಸೊಕ್ಕಿಂಡು, ಗುಜರಿ ಸಾಮಾನು ಹೆರ್ಕಿಂಡು…….’ ಅಷ್ಟು ಆಲೋಚನೆ ಮಾಡ್ಯಪ್ಪಗ ಸುಶೀಲಂಗೆ ದುಃಖ ತಡವಲೆ ಮಣ್ಣೋ ಎಡಿಯ.
ಮಗಳ ಭವಿಷ್ಯದ ಬದುಕಿನ ಶೂನ್ಯವ ಗ್ರೇಶಿರೆ ಅದಕ್ಕೆ ಅದಕ್ಕೆ ಕಣ್ಣು ಮುಚ್ಚಿ ಮನುಗುಲೆ ಸಾನು ಎಡಿಯದ್ದಾಂಗಾತು.
ದಿನ ಆರನ್ನೂ ಕಾಯದ್ದೆ ಮುಂದೆ ಉರುಳ್ಲೆ ಸುರುವಾತು. ಸುಶೀಲನ ಮಗಳಿಂಗೆ ತಂಗಮ್ಮ “ಪೊನ್ನಮ್ಮ” ಹೇಳುವ ಹೆಸರು ಮಡುಗುವ ಅಂದಾಜು ಮಾಡಿತ್ತು.
“ಇದು ಎನ್ನ ಅಬ್ಬೆಯ ಹೆಸರು .ಈ ಹೆಸರೇ ಚೆಂದ” ಹೇಳಿಯಪ್ಪಗ ದಿನೇಸನೂ ಅದಕ್ಕೆ ಒಪ್ಪಿತ್ತು.
“ಅಪ್ಪು ಲಾಯ್ಕದ ಹೆಸರು. ಪೊನ್ನೂ ಹೇಳಿ ದಿನಿಗೇಳ್ಲಕ್ಕು”
ಸುಶೀಲಂಗೆ ಮಾಂತ್ರ ಆ ಹೆಸರು ಕೇಳುಗಳೇ ಮೈ ಉರಿವ ಹಾಂಗಾತು. ನಮ್ಮ ಜಾತಿಲಿ ಮದುವೆ ಆಗಿದ್ದರೆ ಮಗಳಿಂಗೆ ಎಷ್ಟು ಚೆಂದದ ಹೆಸರು ಮಡುಗುಲಾವ್ತಿತು. ಅಜ್ಜಿ ಹೆಸರು ಬೇಕಾರೆ ಹಾಕಿತ್ತು. ಅದರೊಟ್ಟಿಂಗೆ ಒಂದು ಹೊಸ ಹೆಸರನ್ನು ಸೇರ್ಸಿರೆ ಎಷ್ಟು ಲಾಯ್ಕ!!
“ಮಕ್ಕೊಗೆ ದೇವರ ಹೆಸರು ಮಡುಗೆಕು. ಸಾವಗ ದೇವರ ಹೆಸರು ಹೇಳಿ ಸತ್ತರೆ ಪುಣ್ಯ ಸಿಕ್ಕುಗು. ಅದಕ್ಕೆ ಬೇಕಾಗಿ ನಮ್ಮ ಹಿರಿಯರು ಮಕ್ಕೊಗೆ ದೇವರ ಹೆಸರು ಮಡುಗುದು” ಹೇಳಿ ಅಜ್ಜಿ ಒಂದರಿ ಆರತ್ರೋ ಹೇಳುದು ಕೇಳಿದ ನೆಂಪು ಬಂತು.
‘ಪೊನ್ನಮ್ಮ ಹೆಸರು ಇವಕ್ಕೆ ಲಾಯ್ಕ ಇಕ್ಕು. ದೇವರ ಹೆಸರೇ ಆದಿಪ್ಪಲೂ ಸಾಕು. ಆದರೆ ಅದು ಮನಸಿಂಗೆ ಹಿತ ಆಯೆಕನ್ನೇ……
ಎದೆಗೆ ಅಂಟಿ ಜಾಯಿ ಕುಡಿವ ಮಗಳ ಮುದ್ದು ಮೋರೆಯ ನೋಡಿತ್ತು ಸುಶೀಲ
“ನೀನೆನ್ನ ಮುದ್ದು ಒಪ್ಪಕ್ಕ ಅಲ್ಲದಾ.. ನಿನ್ನ ಆನು ಒಪ್ಪಕ್ಕ ಹೇಳಿಯೇ ಹೇಳ್ತೆ ಮಗಳೂ.. ಮತ್ತೆ ಶಾಲಗೆ ಸೇರ್ಸುಗ ಒಪ್ಪ ಹೆಸರು ಹುಡ್ಕಿ ಹಾಕುವೆ..” ಮಗಳ ಪುಟ್ಟು ಕೆಮಿಲಿ ಗುಟ್ಟಾಗಿ ಹೇಳಿಕ್ಕಿ ಮಗಳ ಮತ್ತಷ್ಟು ಗಟ್ಟಿಯಾಗಿ ಅಪ್ಪಿ ಹಿಡ್ಕೊಂಡತ್ತು.
ದಿನಂಗೊ ಒಂದೊಂದೇ ಚಕ್ರ ತಿರುಗಿದ ಹಾಂಗೆ ತಿರುಗುಲೆ ಸುರುವಾತು. ಸುಶೀಲನ ಪುಟ್ಟು ಮಗಳು ಒಪ್ಪಕ್ಕ ಆ ಮನೆಲಿ ಎದ್ದು ಬಿದ್ದು ನಡವಲೆ ಸುರು ಮಾಡಿತ್ತು. ಮಗಳ ಅಷ್ಟು ದೊಡ್ಡ ಮಾಡೆಕಾರೆ ಸುಶೀಲಂಗೆ ಭಾರೀ ಬಂಙವೇ ಆತು.
ಎಣ್ಣೆ ಕಿಟ್ಟಿ ಮೀಶಲೆ ಎಣ್ಣೆ ಇಲ್ಲೆ. ಬೇಕಾದಷ್ಟು ನೀರಿಲ್ಲೆ. ಮನುಶುಲೆ ತೊಟ್ಟಿಲಿಲ್ಲೆ. ಸೀರೆಯ ಕಟ್ಟಿ ಮನುಶುಲೆ ಆ ಮುರ್ಕಟೆ ಮನೆಲಿ ಗಟ್ಟಿಯಾದ ಒಂದೇ ಒಂದು ಅಡ್ಡವೂ ಇತ್ತಿದ್ದಿಲ್ಲೆ. ಬೆಶಿಲು ,ಮಳೆ ಎಲ್ಲ ಹೆರಾಂದಲೂ ಹೆಚ್ಚು ಒಳಾಂಗೆ ಬಿದ್ದುಕೊಂಡಿದ್ದದು.
ಅಲ್ಲಿಪ್ಪವಕ್ಕೆ ಮಕ್ಕೊ ಹೇಳಿ ವಿಶೇಶ ಎಂತದೂ ಇಲ್ಲೆ. ಒಂದು ಮನೆಲಿ ಏಳು ಎಂಟರಿಂದ ಕಮ್ಮಿ ಮಕ್ಕಳೇ ಇಲ್ಲೆ. ಹಾಂಗಾಗಿ ಸುಶೀಲನ ಪಾಪುವಿನ ನೋಡ್ಲೆ, ಅದರತ್ರೆ ಮಾತಾಡ್ಸಲೆ ಹೇಳಿ ಆರೂ ಬಂದು ಕೊಂಡಿತ್ತಿದ್ದವಿಲ್ಲೆ.
ಮಗಳ ಪರಿಮ್ಮಳದ ಸೋಪು ಹಾಕಿ ಮೀಶಿ, ಮಸಿಬೊಟ್ಟು, ಪೌಡರು ಎಲ್ಲ ಹಾಕಿಕ್ಕಿ ಚೆಂದ ಚೆಂದದ ಅಂಗಿ , ಕೆಂಪು ಟೊಪ್ಪಿ, ಕಾಲಿಂಗೆ ಸೋಕ್ಸು ಎಲ್ಲ ಹಾಕ್ಸಿ ಬೆಚ್ಚಂಗಿಪ್ಪ ತೊಟ್ಲಿಲ್ಲಿ ಮನುಶೆಕು ಹೇಳುವ ಸುಶೀಲನ ಆಶೆ ಅದು ಬರೀ ಕನಸಾಗಿಯೇ ಒಳುದತ್ತು.
ದಿನೇಸ ಈಗ ನಿತ್ಯ ಕುಡುದಿಕ್ಕಿ ಬಂದು ಸುಶೀಲಂಗೆ ಬಡಿವಲೆ ಸುರು ಮಾಡಿತ್ತು
“ನಿನ್ನ ಅಪ್ಪನ ಮನೆಂದ ಬಪ್ಪಗ ಎಂತದೂ ತಯಿಂದಿಲ್ಲೆ. ಈ ನಿನ್ನ ಬಣ್ಣ ಆರಿಂಗೆ ಬೇಕು? ಎನಗೆ ಮೋಸ ಮಾಡಿದೆ ನೀನು. ಅಲ್ಲಿಂದ ಬಪ್ಪಗ ರಜ ಚಿನ್ನ, ಪೈಸೆ ತಾರದ್ದೆ ಎನ್ನ ಒಳ ಹಾಕಲೆ ನೋಡಿದ್ದು…..” ಹೇಳಿ ತಲೆಕಸವೆಲ್ಲ ಹಿಡುದು ನೆಲಕ್ಕಲ್ಲಿ ದರದರ ಎಳದು ,ಮೆಟ್ಟಿ, ಗುದ್ದಿ ಹಿಂಸೆ ಕೊಟ್ಟು ಕೊಶಿ ಪಡುಗು. ಇದರ ನೋಡ್ಲೆ ತಂಗಮ್ಮಂಗೂ ಭಾರೀ ಸಂತೋಶಪ್ಪದು.
“ಇನ್ನೂ ನಾಕು ಜೆಪ್ಪದಕ್ಕೆ, ಹಾಂಗಾಯೆಕು ಅದರ ಹಾಂಕಾರಕ್ಕೆ” ಹೇಳಿ ಅದು ನೆಗೆ ಮಾಡುಗ ಸುಶೀಲ ತಡವಲೆಡಿಯದ್ದ ಬೇನೆ ಆದರೂ ಹಲ್ಲು ಮುಟ್ಟೆ ಕಚ್ಚಿ ತಡಕ್ಕೊಂಬದು. ಒಪ್ಪಕ್ಕಂಗೆ ಈ ಗಲಾಟೆ ಕಾಂಬಗ ಹೆದರಿಕೆ ಆಗಿ ಆರ್ಬಾಯಿ ಕೊಟ್ರೆ ತಂಗಮ್ಮ ಅದರ ಬಾಯಿಗೆ ವಸ್ತ್ರ ಚಳ್ಳಿ ಬಿಡುಗು.
ಉಂಬಲೆ ತಿಂಬಲೆ ಸಾನೂ ದಿನೇಸ ಎಂತದೂ ತಂದು ಕೊಡದ್ದಿಪ್ಪಗ ಸುಶೀಲಂಗೆ ಈ ಬದುಕೇ ಬೇಡ ಹೇಳುವ ಆಲೋಚನೆ ಬಂತು. ನೀರಾದರೂ ಕುಡಿವ° ಹೇಳಿರೆ ಕುಡಿವ ನೀರು ತಪ್ಪಲೆ ಒಂದು ಮೈಲು ನಡಕ್ಕೊಂಡು ಹೋಯೆಕು. ಹಶು ತಡೆಯದ್ದಿಪ್ಪಗ ಒಪ್ಪಕ್ಕ ಆಚಮನಗೆ ಈಚಮನಗೆ ಹೋಗಿ ಅಲ್ಯಾಣ ಮಕ್ಕಳೊಟ್ಟಿಂಗೆ ಉಂಬಲೆ,ತಿಂಬಲೆ ಕೂಬಲೆ ಸುರು ಮಾಡಿತ್ತು. ಮಗಳು ಹಾಂಗೆ ಇನ್ನೊಂದು ಮನಗೆ ಹೋಪದರ ತಡೆಕು ಹೇಳಿ ಸುಶೀಲಂಗೆ ಆಗಿಂಡಿದ್ದರೂ ಹೊಟ್ಟೆ ಕೇಳೆಕನ್ನೇ….!
ಹಾಂಗೆ ಇನ್ನೊಂದು ಮನಗೆ ಹೋಗಿ ಅವರತ್ರೆ ಊಟ ಕೇಳಿದ್ದಕ್ಕೆ ಒಂದು ದಿನ ಆ ಮನೆಯ ಹೆಣ್ಣು ತಂಗಮ್ಮನ ಹತ್ರೆ ದೂರು ಹೇಳಿತ್ತು. ಇದುವೇ ಸಾಕಾತು ತಂಗಮ್ಮಂಗೆ ಸುಶೀಲಂಗೆ ಬಡಿವ ಒಂದು ಅವಕಾಶ ಸಿಕ್ಕಲೆ.
ಒಲೆಲಿ ಹೊತ್ತಿಂಡಿಪ್ಪ ಅಡರಿಲ್ಲಿ ಸುಶೀಲನ ಬೆನ್ನಿಂಗೆ ಒಂದು ಬಾರ್ಸಿತ್ತು ತಂಗಮ್ಮ.
“ಅಯ್ಯೋ….. ಅಬ್ಬೇ…….” ಆರೋ ತಂದು ಕೊಟ್ಟ ಮರಗೆಣಂಗಿನ ಚೊಲ್ಲಿಂಡಿದ್ದ ಸುಶೀಲ ತಂಗಮ್ಮ ಕಿಚ್ಚಿನ ಕೊಳ್ಳಿಲಿ ಬಡುದಪ್ಪಗ ಅರಡಿಯದ್ದೆ ಬೊಬ್ಬೆ ಹಾಕಿ ಓಡಿತ್ತು.
ಹೆದರಿಕೆ, ಹಶು,ಬೇನೆ ಇದರ ಎಲ್ಲ ತಡವಲೆಡಿಯದ್ದೆ ಅದು ಮಾರ್ಗಲ್ಲಿ ಕೂಗಿಂಡು ಓಡ್ಲೆ ಸುರು ಮಾಡಿತ್ತು. ಎಲ್ಲಿಗೆ ಹೋಯೆಕು ಗೊಂತಿಲ್ಲೆ. ಎಂತ ಮಾಡೆಕು ಅರಡಿಯದ್ದೆ ಅದು “ಅಯ್ಯೋ…. ಎನ್ನಬ್ಬೇ…..ಅಪ್ಪಾ….” ಹೇಳಿಂಡು ಮುಂದೆ ಮುಂದೆ ಹೋಪಗ ಪುಟ್ಟು ಒಪ್ಪಕ್ಕನೂ “ಅಬ್ಬೇ…..ಅಮ್ಮಾ…” ಹೇಳಿ ಕೂಗಿಂಡು ಹಿಂದಂದಲೇ ಬಂದು ಕೊಂಡಿದ್ದತ್ತು……!!
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 31: https://oppanna.com/kathe/swayamvara-31-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಸುಶಿ ಅವಸ್ಥೆ ಕಣ್ಣೀರು ಬತ್ತು…ಅದಕ್ಕೆ ಈ ಜೀವನ ಬೇಕಾ… ಎಂಥಾ ಆಶಾಗೋಪುರ ಕಟ್ಟಿತ್ತು..ಮುರುದತ್ತನ್ನೆ…ಮಗಳು.. ಛೆ.ಇನ್ನೂ ಅದರ ಸ್ಥಿತಿ ಎಂಥದೋ…ಎಲ್ಲವೂ ಕಣ್ಣಿಂಗೆ ಕಟ್ಟುವ ಹಾಂಗೆ ಬರದ್ದೆ ಪ್ರಸನ್ನ…ಎಲ್ಲ ಮನಸ್ಸಿಂಗೆ ತಟ್ಟುತ್ತು…ಯಾವ ಕೂಸುಗೊಕ್ಕು ಈ ಪರಿಸ್ಥಿತಿ ಬಾರದ್ದೆ ಇರಲಿ
ಅಯ್ಯೋ ಸುಶೀಲನ ಅವಸ್ಥೆಯೇ.ಅದರ ಜೀವನದೊಟ್ಟಿಂಗೆ ಮಗಳ ಜೀವನವೂ ಹಾಳಾತನ್ನೇ.ಈ ಕತೆ ಓದಿದರೆ ಕೂಸುಗೊ ಮತ್ತೆ ತಪ್ಪು ಮಾಡವು.ಕತೆ ನೈಜವಾಗಿ ಮೂಡಿ ಬಯಿಂದು.ಮುಂದಾಣ ಸೋಮವಾರವ ಕಾಯ್ತಾ ಇದ್ದೆ.
ಯೋ, ಸುಶೀಲನ ಅವಸ್ಥೆಯೇ. ಬೇಕಾತೊ ಅದಕ್ಕೆ ಈ ತಮಿಳನ ಲವ್ವು.
Maduve appaga banna bannada kanasu matra kanda koosinge dinanityavu kastagala saramaaleye athanne.. adara novu aa devaringe preethi..