Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರದ ಸಮಸ್ಯೆ :
” ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ ”
- ಈ ಸಮಸ್ಯೆ “ಭೋಗ ಷಟ್ಪದಿಲಿ” ಇದ್ದು.
ಮೂರು ಮೂರರ ನಾಲ್ಕು ಮೊದಲೆರಡು ಸಾಲುಗಳಲ್ಲಿ,
ಮೂರ್ನೇ ಸಾಲಿಲಿ ಆರು ಗುಚ್ಛ, ಕೊನೆಗೊಂದು ಗುರು.
ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:
- ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
- ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
- ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
- ಶರ: “ಆಟಿಯ ತಿಂಗಳ ಮಳೆಗಾಲ”
- ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
- ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
- ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
- ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
- ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
- ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
- ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
- ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
- ವಾರ್ಧಕ : ” ಕೋಲು ತೆಕ್ಕೊ೦ಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊ೦ಡು ಓಡೋಡಿದ°”
- ಶರ : ” ಚಳಿಗಾಲಕ್ಕಿದು ಬೇಕಕ್ಕೊ”
- ಕುಸುಮ : ಗಡಿಲಿ ಕೆನ್ನೆತ್ತರಿನ ಹೊಳೆಯೆ ಹರಿಗೊ?
ಭರ್ತಿ ಇಪ್ಪತ್ತೈದು ಹೋಳಿಗೆ ತಿ೦ದ ಹಾ೦ಗಾತು,ಈ ವಾರದ ಸಮಸ್ಯಾಪೂರಣಲ್ಲಿ.
ಆಹಾ…
25 X 6 = 150 ಆತಿಲ್ಯೋ ಭಾವಯ್ಯ ?!!!
ಕುಡ್ತೆ , ಕುಡ್ತ್ತೆ ತುಪ್ಪ ತಿನ್ಸಿ ತೋರ ಅಪ್ಪ ಮಾಣಿಯ ಯಾವ ಕೂಸು ಮದುವೆ ಅಪ್ಪಲೆ ಒಪ್ಪುಗು ಹೇಳಿ ಭಾಗ್ಯಕ್ಕನ
ಹತ್ತರೆ ಬೈಲ ಮಾಣಿದೊಂದು ಕಂಪ್ಲೇಂಟ್ ಹೀ೦ಗೆ ——
ಕಪ್ಪ ತುಂಬ ತುಪ್ಪ ತಿಂದು
ದಪ್ಪ ವಪ್ಪ ಮಾಣಿ ಕಂಡು
ಒಪ್ಪು ಗಾರು ಹೇಂಗೆ ? ಹೇಳು ನೀನು ಆ
ತಪ್ಪ ತಿದ್ದು ಬೇಗ ಹೇಳಿ
ಬೆಪ್ಪ ಮೋರೆ ಮಾಡಿ ಹೋಗಿ
ತುಪ್ಪ ಹಾಕಿ ತಿಂದ ಮಾಣಿಯಾರು ಹೋಳಿಗೆ
ಆತು ಎಡಿತ್ತಾ ನೋಡವಾ ಹೇಳಿ ಭಾಗ್ಯಕ್ಕ ಹೇಳಿತ್ತು .ಮಾಣಿದು ಈಗ ಕ೦ಡಿಶನು– “.ಪದ್ಯಲ್ಲಿ ಬಪ್ಪ ಮಾಣಿ ಸ್ಲಿಮ್ ಆಂಡು ಟ್ರಿಮ್ ಆಗಿರೆಕ್ಕು .ಹೋಳಿಗೆಯ ಲೆಕ್ಕದೆ ಚುಕ್ತಾ ಮಾಡ್ಲೆ ಎಡಿಯೆಕ್ಕು ”
ಒಪ್ಪ ಕೆಂಪು ಜುಬ್ಬ ಅಕ್ಕ
ಇಪ್ಪ ಪಂಚೆ ಹಸಿರು ಅಂಚು
ದಪ್ಪ ಶಾಲು ನೆರಿಗೆ ಮಾಡಿ ಕೂದ ಬೆಳಿಯವಾ°
ಅಪ್ಪ° ಹೇಳಿ ಮೂರು ಬಳುಸಿ
ಅಪ್ಪ° ನಪ್ಪ° ಮತ್ತೆ ಮೂರು
ತುಪ್ಪ ಹಾಕಿ ತಿಂದ ಮಾಣಿಯಾರು? ಹೋಳಿಗೆ
ಒಂದು ಒಪ್ಪಕ್ಕಂಗೆ ಅದರತ್ತಿಗೆ ಮದುವೆಲಿ ಅಪ್ಪಂದೆ, ಅಜ್ಜಂದೆ ಒತ್ತಾಯ ಮಾಡಿ ಹೋಳಿಗೆ ತಿನ್ಸುವ ಆ ಮಾಣಿಯ ಬಗ್ಗೆ ತಿಳ್ಕೊಂಬ ಕುತೂಹಲ ಈ ಪದ್ಯದ ಭಾವನೆ
ಬೈಲ ಮಾಣಿಗೆ ಈಗ ಕೊಶಿಯಾತು . ಅವ ಹೋದ . ಆದರೆ ಭಾಗ್ಯಕ್ಕ೦ಗೆ ಒಂದು ಸಮಸ್ಯೆ ಉದ್ಭವಿಸಿತ್ತು . ಅಪ್ಪ , ಅಪ್ಪನಪ್ಪ ( ಅಜ್ಜ ) ಹೇಳಿ ಒಂದು ಗೆರೆಯ ಕೆಳ ಇನ್ನೊಂದು ಗೆರೆಲಿ ವಿಭಿನ್ನ ಅರ್ಥದ ಪದ ಪ್ರಾಸ ಸರಿ ಆವುತೋ ?
ಹಪ್ಪಳಲ್ಲಿ ಸಾರಿನಶನ
ಸೊಪ್ಪಿನಮರೆಕೊಂಬು ತಾಳು
ಚಪ್ಪೆ ಕೊದಿಲು,ಕಾಯಿಹುಳಿಯ ಕಂಡು ಬೊಡ್ತದಾ
ಕೆಪ್ಪೆ ಕಣ್ಣು,ಹಸರ ಪಾಚ
ತಪ್ಪದೆಂತಕಿಲ್ಲಿ ಹೇಳಿ
ತುಪ್ಪ ಹಾಕಿ ಹೊಡೆದ ಮಾಣಿಯಾರು ಹೋಳಿಗೆ
ಅಬ್ಬಬ್ಬ..! ಒಂದರಿಂದ ಒಂದು ರೈಸಿದ್ದು. ಶ್ರೀಶಣ್ಣ, ಇಂದಿರತ್ತೆ, ಅದಿತಿಯಕ್ಕ,ಬೊಳುಂಬು ಮಾವ,ಜಯಗೌರಿ ಅಕ್ಕ ಎಲ್ಲೊರ ಪದ್ಯಂಗೊ ಲಾಯಕ ಇದ್ದು, ತುಪ್ಪ ಹಾಕಿ ಹೋಳಿಗೆ ತಿಂದ ಹಾಂಗೆ ಆತು.
ಭಾಗ್ಯಲಕ್ಷ್ಮಿ ಅಕ್ಕ ಪ್ರಾಸದ ಬಗ್ಗೆ ಗಮನ ಕೊಟ್ರೆ ಪದ್ಯ ರೈಸುಗು.
ಪ್ರಾಸದ ಬಗ್ಗೆ ಇನ್ನೊಂದು ವಿಷಯ ಹೇಳೆಕ್ಕು.
ಎರಡನೆ ಅಕ್ಷರ ಸಜಾತೀಯ ಸಂಯುಕ್ತಾಕ್ಷರ ಬಂದರೆ ಅದು ಹಯಪ್ರಾಸ. ಅಪ್ಪ, ತುಪ್ಪ, ಒಪ್ಪ, ಚಪ್ಪೆ, ಕುಪ್ಪಿ,ಸೊಪ್ಪು ಇತ್ಯಾದಿ.
ಅದರೊಟ್ಟಿಂಗೆ ‘ಹೋಪ'( ಜಯಲಕ್ಷ್ಮಿ ಅಕ್ಕನ ಪದ್ಯದ ಎರಡ್ನೆ ಸಾಲು -ಇದು ಗಜ ಪ್ರಾಸ – ಶುರುವಾಣದು ಗುರು ಆಗಿ ಎರಡ್ನೆದು ಲಘು ಬಪ್ಪದು. ) ‘ತಡ್ಪೆ’ ಇತ್ಯಾದಿ ಬಂದರೆ ಪ್ರಾಸ ರಜ್ಜ ತ್ರಾಸ ಆದ ಹಾಂಗೆ ಆವುತ್ತು.
ಎಲ್ಲೋರು ತುಂಬ ಶ್ರದ್ಧೆಲಿ ಪ್ರಯತ್ನ ಮಾಡುದು ಕಂಡು, ಇನ್ನೂ ಲಾಯಕಲ್ಲಿ ಬರವಲೆ ಎಡಿಗಾಗಲಿ ಹೇಳ್ತ ಆಶಯಲ್ಲಿ ಈ ಸೂಚನೆ.
ಧನ್ಯ ವಾದನ್ಗೋ ಮಾವ . ಟಿ ಕೆ ಮಾವನ ಟೀಕೆ, ಟಿಪ್ಪಣಿ ಇದ್ದರೆ ಒಳ್ಳೇದು . ಕೆಲವು ಸರ್ತಿ ಸರಿ ಮಾಡಲೇ ಎಡಿಯದ್ದರೂ, ತಪ್ಪು ಎಲ್ಲಿ ಹೇಳಿ ಗೊಂತಾವುತ್ತು .
ಅಪ್ಪ ನಾ೦ಗೆ ಬೆಳಿಯ ಪಂಚೆ
ದಪ್ಪ ಅಂಚ ಉದ್ದ ಶಾಲು
ಒಪ್ಪ ಕಾಂಬ ಹಾಂಗೆ ಮಾಡಿ ಕೂದ ಬೆಳಿಯ ವಾ°
ಸೊಪ್ಪ ಸಾರು ಎನಗೆ ಬೇಡ
“ಕಪ್ಪ ” ತುಂಬ ತಂದು ಬಳುಸಿ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಮಾಣಿ ರಜ ನೊ೦ಪಣ್ಣ. ಕೊತ್ತ೦ಬರಿ ಸೊಪ್ಪು ಅವ೦ಗೆ ವಾಸನೆ ಬಪ್ಪದಡ. ತುಪ್ಪ ತಿ೦ಬಲೆ
ಬಲು ರೂಮಿ . “ಕಪ್ಪ” ಹೇಳಿದರೆ ಇಲ್ಲಿ ” cup” ಹೇಳಿ ಅರ್ಥ. ಪ್ರಾಸಕ್ಕಾಗಿ ಉಪಯೊಗಿಸಿದ್ದು.
“ಅಪ್ಪನಾ೦ಗೆ ಬೆಳಿಯ ಪಂಚೆ
ದಪ್ಪದ೦ಚದುದ್ದ ಶಾಲು
ಒಪ್ಪ ಕಾಂಬ ಹಾಂಗೆ ಮಾಡಿ ಕೂದ ಬೆಳಿಯ ವಾ°
ಸೊಪ್ಪ ಸಾರಿದೆನಗೆ ಬೇಡ
“ಕಪ್ಪ ” ತುಂಬ ತಂದು ಬಳುಸಿ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ ”
ಹೇಳಿ ತಿದ್ದಿರೆ ಹೆಚ್ಚಿನ ವಿಸ೦ಧಿ ದೋಷ ಪರಿಹಾರ.
ತಿಳಿಶಿಕೊಟ್ಟದಕ್ಕೆ ಮುಳಿಯದಣ್ಣನ್ಗೆ ಧನ್ಯವಾದನ್ಗೊ.
ಧನ್ಯವಾದಂಗೊ ಮಾವ. ಇನ್ನೂ ಲಾಯಿಕ ಬರವಲೆ ಪ್ರಯತ್ನ ಮಾಡ್ತೆ .
ಕೆ೦ಪು ಜುಬ್ಬ ನೋಡು ಅಕ್ಕ
ಅ೦ಚು ಹಸಿರು ಬಿಳಿಯ ಪ೦ಚೆ
ಉದ್ದ ಶಾಲು ನೆರಿಗೆ ಮಾಡಿ ಕೂದ ಬೆಳಿಯ ವಾ°
ಮುದ್ದು ಮಾವ ಬಳುಸಿ ಮೂರು
ಈಚ ಅಣ್ಣ ಹಾಕಿ ಮೂರು
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
* * * * *
ಕೆ೦ಪು ಜುಬ್ಬ ನೋಡು ಅಕ್ಕ
ಅ೦ಚು ಹಸಿರು ಬಿಳಿಯ ಪ೦ಚೆ
ಉದ್ದ ಶಾಲು ನೆರಿಗೆ ಮಾಡಿ ಕೂದ ಬೆಳಿಯ ವಾ°
ಮುದ್ದು ಮಾವ ಬಳುಸಿ ಮೂರು
ಈಚ ಅಣ್ಣ ಹಾಕಿ ಮೂರು
ತುಪ್ಪ ಹಾಕಿ ಹೊಡದ ಮಾಣಿಯಾರು? ಹೋಳಿಗೆ
ಪ್ರಶ್ನಾರ್ಥಕ ಚಿನ್ಹೆ ಹಾಕಿದರೆ ಇನ್ನೊ೦ದು ಅರ್ಥ!!
ಕಪ್ಪು ಕೂಸು ಸಾರವಿಲ್ಲೆ
ದಪ್ಪವಿದ್ರು ಚಿಂತೆ ಮಾಡೆ
ತಪ್ಪಲಿಪ್ಪ ಕೂಸದುವೇ – ಹೇಳಿದ ಮಾಣಿಗೆ
ಬಪ್ಪ ಕೂಸು ಬಳುಸುವಾಗ
ತಡ್ಪೆ ತುಂಬ ತಂತು ನೋಡು
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ತಪ್ಪಲಿಪ್ಪ ಕೂಸದುವೇ – ಹೇಳಿದ ಮಾಣಿಗೆ
ಇಲ್ಲಿ ಮಾತ್ರೆ ರಜಾ ತಪ್ಪಿದ್ದು.
“ತಪ್ಪಲಿಪ್ಪದದುವೆ ಕೂಸ ಹೇಳಿ ಮಾಣಿಯು”
ಇನ್ನು, ಐದನೆ ಸಾಲಿಲಿ
“ತಡ್ಪೆ ತುಂಬ ತಂತು ನೋಡು”
ಇಲ್ಲಿ “ನೋಡಿ” ಹೇಳಿ ಬದಲ್ಸಿರೆ ಇನ್ನೂ ಅರ್ಥಪೂರ್ಣ.
ಅಕ್ಕು ಅಣ್ಣ.ತಿದ್ದಿದ್ದಕ್ಕೆ ತಂಬಾ ಧನ್ಯವಾದಂಗೊ
ದಪ್ಪ ಮುಸಲ ಧಾರೆ ಬೀಳು
ಲಪ್ಪ ಹೊತ್ತಿಗಡಿಗೆಯಾತು
ತುಪ್ಪಿ ಬಂದೆಲಡಿಕೆ ಮಣೆಲಿ ಕೂದ ಮಾಣಿಯು
ಚಪ್ಪರಿಸುತ ಪೋಡಿ ತಿಂದು
ಕುಪ್ಪಿಲಿಪ್ಪ ದೇಸಿ ಹಸುವ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಓಳ್ಳೆ ಹದ ಬ೦ದ ಪೂರಣ.ಲಾಯ್ಕ ಆಯಿದು.
ಕಪ್ಪು ಪಚ್ಚೆ ಮೋರೆಗುದ್ದಿ
ಬೆಪ್ಪು ನಾಟ್ಯ ಮಾಡಿಗೊ೦ಡು
ಬಪ್ಪ ಸುರ್ಪ ನೋಡುಲೆಡಿಯ ಪೇಟೆ ಮಾಣಿಯ?।
ನಪ್ಪಳಿಸಿದ° ಕ೦ಡರಾಸೆ
ಚಪ್ಪೆ ಚಟ್ನಿ ದಪ್ಪ ದೋಸೆ
ತುಪ್ಪ ಹಾಕಿ ಹೊಡದ°, ಮಾಣಿಯಾರು? ಹೋಳಿಗೆ।।
ಇದು ಹೋಳಿ ಹಬ್ಬದ ದಿನ ಅಜ್ಜ೦ದಿರ ಒ೦ದು ಮಾತುಕತೆ..
ರಪ್ಪ ಬಂದ ಗಾಳಿ ಮಳೆಗೆ
ಅಪ್ಪಿ ಕೊಡೆಯ ಹಿಡುದ ಮಾಣಿ
ತಪ್ಪು ತಪ್ಪು ಹೆಜ್ಜೆ ಹಾಕಿ ಮನೆಗೆ ಓಡಿದಾ°।
ಬಪ್ಪ ನೆಗಡಿ ಅಂಗಿಲೊರೆಸಿ
ಇಪ್ಪ ಚೀಲ ಅಲ್ಲೆ ಇಡ್ಕಿ
ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ।।
ಸೊಪ್ಪು ಕಡುದು ತ೦ದು ಕಾಯಿ
ಸೊಪ್ಪು ಹಾಕಿ ತಿಕ್ಕಿ ಮಿ೦ದೆ
ರೆಪ್ಪು ಬಟ್ಯಗೆರಡು ಬೈದು ಕ೦ಡ° ಜೋಳಿಗೆ।
ಅಪ್ಪ° ಜೆ೦ಬ್ರದೂಟ ಕಳುದು
ಬಪ್ಪ ಹೊತ್ತು ತ೦ದ ಕಟ್ಟು!
ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ।।
ಅಪ್ಪ ನಿಂಗೊಗಿದ್ದು ಬೀಪಿ
ಬಪ್ಪ ಶುಗರು ಬೇಡದಿದ್ರೆ
ತಪ್ಪಲಾಗ ನಿತ್ಯ ಮನೆಗೆ ಸ್ವೀಟು ಖಾರವಾ
ಅಪ್ಪಿ ತಪ್ಪಿ ತಿಂಬಲಾಗ
ಉಪ್ಪು ಸಿಹಿಯು ನಿತ್ಯ ವರ್ಜ್ಯ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಕೊಪ್ಪು ಬುಗುಡಿ ಚಕ್ರಸರವ
ಡೆಪ್ಪಿದುರುಟು ಮೋರೆ ಕೂಸು
ಕೆಪ್ಪಟೆಗಳ ಕೆ೦ಪು ಮಾಡಿ ಕೇಳಿತಕ್ಕನ।
ಇಪ್ಪ ಜವ್ವನಿಗರ ನೆಡುಕೆ
ಚಪ್ಪೆ ಕಾಯಿಹಾಲ ಮೇಲೆ
ತುಪ್ಪ ಹಾಕಿ ಹೊಡದ ಮಾಣಿಯಾರು?ಹೋಳಿಗೆ॥
ಒಂದು ಮದುವೆ ಜೆಂಬಾರ ಬೇಗ ಇದ್ದೊ ಭಾವಯ್ಯ ಅಂಬಗ ?!! ಹೊಸ ಕಲ್ಪನೆ ಲಾಯಕಾಯಿದು.
ಹೇಳಿದ ಹಾಂಗೆ ಜಯಗೌರಿ ಪದ್ಯಲ್ಲಿ ನೋಂಪು ಹೇಳಿರೆ ಎಂತರ ?? ಎನಗೆ ಹೊಸತ್ತು ಈ ಶಬ್ದ.
ನೋ೦ಪು ಹೇಳಿರೆ ವ್ರತ, ಉಪಾಸ ಹೇಳ್ತ ಅರ್ಥ ಅಲ್ಲದೊ ಬೊಳು೦ಬು ಮಾವಾ.. ಇದು ಮಲಯಾಳ೦ದ ಬ೦ದ ಶಬ್ದವೋ ಕಾಣ್ತು, ಸರೀ ಗೊ೦ತಿಲ್ಲೆ.
ಆನು ಹಬ್ಬ ಹೇಳಿ ಗ್ರೇಶಿತ್ತಿದ್ದೆ . ಉಪವಾಸ – ಅದು ನೋ೦ಬು ಅಲ್ಲದೊ?
ಮಲಯಾಳಲ್ಲಿ ಉಚ್ಛರಿಸುವದು ನೋ೦ಬು ಹೇಳಿ ಆದರುದೆ, ಬರವದು ನೋ೦ಪು ಹೇಳಿಯೇ.. ಕನ್ನಡಲ್ಲಿ ಇದರ ವಿಶಯ ಎನಗೆ ಜಾಸ್ತಿ ಗೊ೦ತಿಲ್ಲೆ, ಆರಾರು ಗೊ೦ತಿಪ್ಪವು ಹೇಳಿರೆ ಬೈಲಿಲ್ಲಿ ಎಲ್ಲೋರಿ೦ಗು ಗೊ೦ತಕ್ಕು. illiyaaNa oTTartha nODuvaga habba hELta arthave sari kaaNtu..
ಎನಗೆ ಗೊಂತಿಪ್ಪ ಹಾಂಗೆ ನೋಂಪು ಹೇಳಿರೆ ಹಬ್ಬ ಅಥವಾ ಪೂಜೆ .ಊರಿಲಿ ಕೆಲವು ಕಡೆ ಈ ಪದ ಪ್ರಯೋಗ ಕೇಳಿದ್ದೆ.ಹಾಂಗಾಗಿ ಹಬ್ಬ ಹೇಳುವ ಅರ್ಥಲ್ಲೇ ಬರದ್ದದು.
ನೋಂಪು ಹೇಳಿರೆ ಅನಂತಚತುರ್ದಶಿ. ಭಾದ್ರಪದಮಾಸದ ಶುಕ್ಲಪಕ್ಷದ ಚತುರ್ದಶಿ. ಚೌತಿಹಬ್ಬಂದಮತ್ತೆ ಬಪ್ಪ ಚತುರ್ದಶಿಯೇ ಅನಂತನಚತುರ್ದಶಿ. ಇದನ್ನೇ ನೋಂಪು ಹೇಳುದು. ಆ ದಿನ ಅನಂತ ಹುಟ್ಟಿದ ದಿನ ಹೇಳ್ತ ನಂಬಿಕೆ. ಇದರ ವ್ರತದ ಹಾಂಗೆ ಮಾಡ್ತದು. ವ್ರತ ಮಾಡುವವರ ಕೈಗೆ ರಕ್ಷೆ ಕಟ್ಟಿ,ವ್ರತ ಸಮಾಪ್ತಿ ಆದ ಮತ್ತೆ ಆರಕ್ಷೆಯ ಹರಿವ ನೀರಿಲಿ ಬಿಡೆಕಡ. ಹರಿವ ನೀರಿಲಿ ಹೋದ ರಕ್ಷೆ ಆರ ಕೈಗಾದರೂ ಸಿಕ್ಕಿರೆ ಅವು ಮತ್ತೆ ಆ ವ್ರತವ ಮಾಡೆಕ್ಕಡ. ಮಧ್ಯಾಹ್ನ ಪೂಜೆ,ಇರುಳು ಪೂಜೆ ಮತ್ತೆ ಇರುಳು ಜಾಗರಣೆದೆ ಇದ್ದಡ. ಎಲ್ಲಾ ಮನೆಗಳಲ್ಲಿ ಮಾಡ್ತವಿಲ್ಲೆ, ಕುಟುಂಬದ ಒಂದು ಮನೆಲಿ ಮಾಡ್ತ ಕ್ರಮ ಆಗಿರೆಕ್ಕು. ಈಗ ಅದೂ ಇದ್ದೋ ಗೊಂತಿಲ್ಲೆ. ಆನು ಸಣ್ಣಾದಿಪ್ಪಾಗ ನೋಂಪಿನ ಪೂಜೆಯ ಊಟಕ್ಕೆ ಶಾಲೆಂದ ಹೋಯ್ಕೊಂಡಿತ್ತಿದ್ದೆ. ನೋಂಪಿನ ಬಗ್ಗೆ ಅಷ್ತೇ ನೆಂಪು.
ನೋಂಪು ಹೇಳಿರೆ ಅನಂತಚತುರ್ದಶಿ. ಭಾದ್ರಪದಮಾಸದ ಶುಕ್ಲಪಕ್ಷದ ಚತುರ್ದಶಿ. ಚೌತಿಹಬ್ಬಂದಮತ್ತೆ ಬಪ್ಪ ಚತುರ್ದಶಿಯೇ ಅನಂತನಚತುರ್ದಶಿ. ಇದನ್ನೇ ನೋಂಪು ಹೇಳುದು. ಆ ದಿನ ಅನಂತ ಹುಟ್ಟಿದ ದಿನ ಹೇಳ್ತ ನಂಬಿಕೆ. ಇದರ ವ್ರತದ ಹಾಂಗೆ ಮಾಡ್ತದು. ವ್ರತ ಮಾಡುವವರ ಕೈಗೆ ರಕ್ಷೆ ಕಟ್ಟಿ,ವ್ರತ ಸಮಾಪ್ತಿ ಆದ ಮತ್ತೆ ಆರಕ್ಷೆಯ ಹರಿವ ನೀರಿಲಿ ಬಿಡೆಕಡ. ಹರಿವ ನೀರಿಲಿ ಹೋದ ರಕ್ಷೆ ಆರ ಕೈಗಾದರೂ ಸಿಕ್ಕಿರೆ ಅವು ಮತ್ತೆ ಆ ವ್ರತವ ಮಾಡೆಕ್ಕಡ. ಮಧ್ಯಾಹ್ನ ಪೂಜೆ,ಇರುಳು ಪೂಜೆ ಮತ್ತೆ ಇರುಳು ಜಾಗರಣೆದೆ ಇದ್ದಡ. ಎಲ್ಲಾ ಮನೆಗಳಲ್ಲಿ ಮಾಡ್ತವಿಲ್ಲೆ, ಕುಟುಂಬದ ಒಂದು ಮನೆಲಿ ಮಾಡ್ತ ಕ್ರಮ ಆಗಿರೆಕ್ಕು. ಈಗ ಅದೂ ಇದ್ದೋ ಗೊಂತಿಲ್ಲೆ. ಆನು ಸಣ್ಣಾದಿಪ್ಪಾಗ ನೋಂಪಿನ ಪೂಜೆಯ ಊಟಕ್ಕೆ ಶಾಲೆಂದ ಹೋಯ್ಕೊಂಡಿತ್ತಿದ್ದೆ. ನೋಂಪಿನ
ಬಗ್ಗೆ ಅಷ್ತೇ ನೆಂಪು.
ಈ ವರ್ಷ ಅನಂತನ ಚತುರ್ದಶಿ ಸೆಪ್ಟಂಬರ್ ೧೮ ಕ್ಕೆ ಬತ್ತೋ ಹೇಳಿ ಕಾಣ್ತು.
ಎನಗೆ ಗೊಂತಿಪ್ಪದು ಹೀಂಗೆ – ವ್ಯತ್ಯಾಸ ಇದ್ದರೆ ತಿಳುಶಿ.
ಅಪ್ಪಲಪ್ಪದಲ್ಲವಿದುದೆ
ತಪ್ಪಲಾಗದೊಂದು ಕೆರುಶಿ
ಉಪ್ಪು ತುಪ್ಪ ಅಶನವೊಂದೆ ಸಾಕೊ ಎಂಗೊಗೆ
ಒಪ್ಪ ಪಾಚ ಉಂಡ ಮತ್ತೆ
ಇಪ್ಪ ಲಾಡು ತಿಂದು ತೇಗಿ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಅದಾ..ಶ್ರೀಶಣ್ಣನೂ ಸ್ವರ ಸೇರ್ಸಿದ°.ಈಗ ಹೋಳಿಗೆ ಎರಡು ಹೆಚ್ಚೇ ಹೋಕು.ಲಾಯ್ಕ ಆತು.
ಬಪ್ಪ ವಾರ ನೋಂಪು ಇದ್ದು
ಹೋಪ ನಾವು ಎಲ್ಲ ಸೇರಿ
ಅಪ್ಪ ಹೇದ್ದು ಕೇಳಿ ಬಂತು ಹುರುಪು ಮಾಣಿಗೆ
ಇಪ್ಪ ಪೈಕಿಲಿದ್ದ ಒಂದು
ಒಪ್ಪ ಅಂಗಿ ಹಾಕಿ, ಹೋಗಿ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ನಮ್ಮ ಭಾಷೆಲಿ ವಿಸ೦ಧಿ ದೋಷವ ತಪ್ಪುಸುಲೆ ಕೆಲವು ಸರ್ತಿ ಕಷ್ಟ ಆವುತ್ತು ಹೇಳ್ತದಕ್ಕೆ ಇದು ಉದಾಹರಣೆ.ನೋ೦ಪು ಇದ್ದು ಹೇಳಿ ಕೇಳಿ ಹುರುಪಿಲಿಯೇ ಇಷ್ಟು ಹೊಡದವ° ಇನ್ನು ಬಪ್ಪ ವಾರ ಎನು ಮಾಡುಗೊ! ಯಬ್ಬ.ಲಾಯ್ಕ ಆಯಿದು.
ಎನ್ನ ಜೀವನಲ್ಲೇ ಬರದ ಎರಡನೇ ಪದ್ಯ ಇದು .ಆನು ವಿಸಂಧಿ ದೋಷಂಗಳ ತಪ್ಪುಸುಲೆ ಶತಪ್ರಯತ್ನ ಮಾಡಿದೆ.ಮತ್ತೆ ಆಗದ್ದೆ ಬೈಲಿನೋರು ಚೂರು ‘ಎಜೆಸ್ಟ್ ‘ ಮಾಡುಗೋ…ಳಿ ನಿರೀಕ್ಷೆಲಿ ಕಳುಸಿದೆ.ಧನ್ಯವಾದಂಗೊ ಅಣ್ಣ .
ಮಾಣಿ ನೋಂಪಿಗೆ ಹೋಗಿ ಹೋಳಿಗೆ ಆರು ಹೊಡದ ಹೇಳುವ ಅರ್ಥಲ್ಲಿ ಬರದದ್ದು.ಆದರೆ ಪದ್ಯವ ಅವರವರ ಭಾವಕ್ಕೆ ತಕ್ಕ ಹಾಂಗೆ ಅರ್ಥ ಮಾಡಿಕೊಂಬಲಕ್ಕು:). ಮೊದಲೇ ಆರು ಹೊಡದು ಅಭ್ಯಾಸ ಮಾಡಿಕೊಂಡು ನೋಂಪಿಲಿ ಹನ್ನೆರಡರ ಗುರಿ ಮಡುಗಿದರೆ ಮಾಣಿ ಲಾಯಿಕ ಬಾಟು ಕಾಯಿ ಕುಟ್ಟುಗು 🙂
ಎರಡ್ನೆ ಪದ್ಯ! ನ೦ಬುಲೆ ಕಷ್ಟ,ಆದರೆ ಸತತ ಓದುವಿಕೆ ಇಪ್ಪ ಹಾ೦ಗೆ ಕಾಣುತ್ತು.ಭಾರೀ ಒಳ್ಳೆದು,ಬರವಣಿಗೆ ಹೀ೦ಗೆಯೇ ಮು೦ದುವರಿಯಲಿ ಹೇಳಿ ಹಾರೈಸುವ°.
ಅಪ್ಪು,ನಿ೦ಗೊ ಹೇಳಿದ ಹಾ೦ಗೆಯೂ ಅರ್ಥ ಮಾಡ್ಲಕ್ಕು,ಆದರೆ ಕವಿತೆಯ ಓಟ ರಜಾ ಹೆಚ್ಚಕ್ಕು. ಇನ್ನು,ವಿಸ೦ಧಿ ದೋಷ ತಪ್ಪುಸುಲೆ ಎಡಿತ್ತೋ ನೋಡುವ°.
ಬಪ್ಪ ವಾರವಿದ್ದು ನೋ೦ಪು
ಹೋಪವೆಲ್ಲ ಸೇರಿಯೊಟ್ಟು
ಅಪ್ಪ ಹೇದ್ದು ಕೇಳಿ ಬ೦ತು ಹುರುಪು ಮಾಣಿಗೆ।
ಇಪ್ಪ ಪೈಕಿಲಿದ್ದದೊ೦ದ
ದೊಪ್ಪದ೦ಗಿ, ಹಾಕಿ ಹೋಗಿ
ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ।।
ಅಪ್ಪ – ಹೇಳ್ತಲ್ಲಿ ತಪ್ಪುಸುಲೆ ಎರಡ್ನೆ ಗೆರೆಲಿ ಶಬ್ದ ಬದಲ್ಸೆಕ್ಕಕ್ಕು.ಹಾ೦ಗಾಗಿ ಎಜೆಷ್ಟು ಮಾಡುವ°..
ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗೊ ಅಣ್ಣ.
ಮುಂದಣ ಪದ್ಯಂಗಳಲ್ಲಿ ನಿಂಗ ಕೊಟ್ಟ ಸುಳುವಿನ ಗಮನಲ್ಲಿಟ್ಟುಕೊಳ್ತೆ
ಎರಡ್ನೇ ಸಾಲುದೆ ಮೂರ್ನೇ ಸಾಲುದೆ ಹೀ೦ಗೆ ಮಾಡಿರೆ ಹೇ೦ಗಕ್ಕು ಮುಳಿಯಬಾವಾ?
ಹೋಪವೆಲ್ಲರೊಟ್ಟುಸೇರಿ-
ಯಪ್ಪ ಹೇದ್ದು ಕೇಳಿ…
ಸ೦ಧಿಯ ಮಟ್ಟಿ೦ಗೆ ಸರಿ,ಅರ್ಥ ರಜಾ ತೂಕ ಕಮ್ಮಿ ಆವುತ್ತು.ಅಪ್ಪ ಹೇಳಿದ ಮಾತು ಹೇಳಿ ಎಡಕ್ಕಿಲಿ ಒ೦ದು ತಡೆ ಕೊಡೆಕ್ಕಲ್ಲದೊ ಭಾವ.
ಧನ್ಯವಾದ ಮುಳಿಯ ಭಾವಾ.. ನಿ೦ಗೊ ಹೇಳಿದ್ದು ಸರಿ..
ಹಪ್ಪಳವನು ನುರಿದು ಕೊಂಡ°
ಇಪ್ಪ ತಾಳು ಗಸಿಯನುಂಡ°
ಕಪ್ಪು ಪಾಚ ಬಾಳೆ ಹಣ್ಣ ಸುರುದು ಹಾಳಗೆ ॥
ದಪ್ಪ ಹೊಟ್ಟೆ ಸವರಿಗೊಂಡ°
ಯಪ್ಪ ಶಿವನೆ ಹೇಳಿಯೊಂಡ°
ತುಪ್ಪ ಹಾಕಿ ಹೊಡದ° ಮಾಣಿಯಾರು ಹೋಳಿಗೆ ॥
ಸುದರಿಕೆ ಮಾಡಿಕ್ಕಿ 3ನೇ ಹಂತಿಗೆ ಉಂಬಲೆ ಕೂದ ಕಾರಣ ರಜಾ ತಡವಾತು.
ಹ.ಹಾ..ಹಾಳೆಯೂಟವೂ ಆತದಾ.ಲಾಯ್ಕ ಆಯಿದು ಮಾವ.
ಹಾಳೆಲಿ ಆದರೆ ಗುಂಡಿ ಆಗಿ ಸಿಕ್ಕಿ ತುಂಬಾ ಸೀವು ಸುರಿಯಲಾವುತ್ತದ !
ಅಪ್ಪ ಚಕ್ಲಿ ಕಡುಬು ನಿನಗೆ
ಕಪ್ಪು ಕಡಲೆಯುಸುಲಿ ಕೊಡುವೆ
ಒಪ್ಪುಸುತ್ತೆ ಹೋಳಿಗೆಯನು ಶಿವನ ಮಾಣಿಗೇ।
ಉಪ್ಪುಯಿರದ ಚಪ್ಪೆ ಭಕ್ಷ್ಯ
ಒಪ್ಪದಿಂದ ಕೊಟ್ತರವಗೆ
ತುಪ್ಪ ಹಾಕಿ ಹೊಡೆಗು ಮಾಣಿಯಾರು ಹೋಳಿಗೆ ॥
ಕಪ್ಪುಯಿದ್ದರೆಂತ ಮಾಣಿ
ಉಪ್ಪರಿಗೆಯ ಮನೆಯೆ ಚೆಂದ
ಒಪ್ಪಿಗೊಂಡು ಕೂಸುಮಾಣಿ ಮದುವೆಯಾದವೂ।
ಚಪ್ಪರಲ್ಲಿ ಪಂಥಕಟ್ಟಿ
ಅಪ್ಪೆಮೆಡಿಯ ನೆಕ್ಕಿಗೊಂಡು
ತುಪ್ಪಹಾಕಿ ಹೊಡದ ಮಾಣಿಯಾರು ಹೋಳಿಗೆ ॥
ಅದಾ.ಇ೦ದಿರತ್ತೆ ಶಿವನ ಮಾಣಿಯನ್ನೇ ಕರಕ್ಕೊ೦ಡು ಬ೦ದವು.
ಎರಡ್ನೆ ಪರಿಹಾರಲ್ಲಿ ಮಾಣಿ/ಯುಪ್ಪರಿಗೆಯ ,ಮನೆಯೆ ಚೆ೦ದ/ವೊಪ್ಪಿಗೊ೦ಡು ,ಪ೦ಥ ಕಟ್ಟಿ/ಯಪ್ಪೆ ಮೆಡಿಯ – ಹೇಳಿ ಮಾಡಿರೆ ವಿಸ೦ಧಿ ದೋಷವೂ ಮಾಯ.
ಲಾಯ್ಕ ಆಯಿದು ಅತ್ತೆ.
ಇಪ್ಪ ಮದುವೆಗೆಲ್ಲ ಬಪ್ಪ
ಬಪ್ಪನಾಡಿನಿಂದ ಮಾಣಿ
ಯೊಪ್ಪವಾಗಿ ಜೋಡಿಸಿಟ್ಟ ಸೀವಿನಾಸೆಗೆ
ರಪ್ಪ ಧಾರೆ ಕಳುದ ಮೇಲೆ
ಟಪ್ಪ ಹಾರಿ ಹಂತಿ ಹಿಡುದು
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ರಪ್ಪ,ಟಪ್ಪ – ಒಳ್ಳೆಯ ಪ್ರಯೋಗ ಅಕ್ಕ.
ಒಪ್ಪ ತಂಗೆ ಮದುವೆ ಹೇದು
ಚೆಪ್ಪರಾಕಿ ಸಡಗರಲ್ಲಿ
ಒಪ್ಪಕುಂಞಿ ಜವುಳಿ ತಂದ ಮದುವೆ ಮಕ್ಕೊಗೆ
ಇಪ್ಪ ಸಕಲ ಬಂಧುಗೊಕ್ಕೆ
ಒಪ್ಪದೂಟ ಬಡುಸಿಗೊಂಡು
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಚೊಕ್ಕ ಆಯ್ದು ಅತ್ತೆ.
ಒಪ್ಪಕುಂಞಿ ನಮ್ಮ ಮಾಣಿ
ಯಪ್ಪಿತಪ್ಪಿ ಕೂಡಿಗೊಂಡ
ದಪ್ಪು ಮನ್ನೆ ಹೇಳಿಕೇಳಿಯೊಂದು ಮದುವೆಗೆ
ಒಪ್ಪ ಬಾಳೆ ಮುಂದೆ ಕೂದು
ಚಪ್ಪರಿಸಿಯೆ ಪಾಚ ಲಾಡು
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ.
ಎರಡೂ ರೈಸಿದ್ದು ಮಾವ.
ದಪ್ಪ ಮೈಲಿ ದೊಡ್ಡ ಹೊಟ್ಟೆ
ಕಪ್ಪುಮೋರೆ ಕೋಲುಕಾಲಿ
ಲಿಪ್ಪ ಮಾಣಿ ಹೆರಟು ಹೋದ ಜೆಂಬ್ರದೂಟಕೆ
ಒಪ್ಪ ಶಾಲನೇರ್ಸಿ ಬಳುಸು
ತಿಪ್ಪ ಭಾವನತ್ರೆ ಕೇಳಿ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಪಷ್ಟಾತು.
ಊಟ ಆಂದು ಇಪ್ಪದರ ಊಟವಂದು ಹೇಳಿ ಮಾಡ್ಲಕ್ಕು.
ತುಪ್ಪೆಕ್ಕಲ್ಲ ಭಾವನಲ್ಲಿ
ದಪ್ಪಮೀಸೆ ಮಾವನತ್ರೆ
ಒಪ್ಪಮಾಣಿ ಕೂದುಗೊಂಡ° ಊಟದಂತಿಲಿ ।
ಉಪ್ಪಿನಾನ ಊಟ ಅಂದು
ರಪ್ಪನೇದು ಬಂತು ಪಾಚ
ತುಪ್ಪಹಾಕಿ ಹೊಡದ° ಮಾಣಿ ಆರು ಹೋಳಿಗೆ ॥
ಆರೋಗ್ಯದ ವಿಶಯಲ್ಲಿ ಭಯ೦….ಕರ ಕಾಳಜಿ ಶುರುವಾದ ಮತ್ತೆ ಶುಬತ್ತೆಯೂ ಮಾವನೂ ಸೇರ್ಯೊ೦ಡು ಮಾಣಿಯ ಎ೦ತ ತಿ೦ಬಲು ಬಿಡ್ಳೇ ಇಲ್ಲೆಡ, ಅವ ಶುಬತ್ತೆ ಹೇಳಿದ್ದರ ಕೇಳ್ಳೂ ಇಲ್ಲೆಡ. 😉
ಹಪ್ಪ! ಮಾಣಿ ಬೇಡ ಬೇಡ,
ತುಪ್ಪ ಸೀವು ಕೊಬ್ಬಿನ೦ಶ
ತಪ್ಪಿ ಹೋಗಿ ತಿ೦ದು ಬಿಡೆಡ ಹೇಳುಗೆಲ್ಲರು..
ಅಪ್ಪೊ? ಮಾವ, ಹಾ೦ಗೆ ಗ್ರೇಶಿ-
ಯೊಪ್ಪವಿಪ್ಪ ತಿ೦ಡಿ ಬಿಡುಗೊ?
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ..
ಆಹ..!
ಮೂರನೆ ಸಾಲಿಲಿ ರಜ್ಜ ತಪ್ಪಿದ್ದು.
ಭೋಗ ಛಂದಸ್ಸಿನ ಪ್ರಕಾರ ಮೂರು ಮೂರರ ಗಣ ವಿಭಜನೆ ಮಾಡೊಗ “ತೆಪ್ಪ।ಗಾಶ।ಲಿ ಕಾ।ದ ಜೆಂ।ಬ್ರ ಕರೆ।ಯೋಲೆ।ಗೆ” – ಮೂರನೆ ಮತ್ತೆ ನಾಕನೆದು “ಲಗಂ” ಆವುತ್ತು.( ಹಾಂಗಾಗಿ ಓದುವಾಗ ತಪ್ಪುತ್ತು) ಶುರುವಾಣದ್ದು ಲಘು + ಎರಡ್ನೆದು ಗುರು ಬಂದರೆ “ಲಗಂ”
ಇಅದರ ತಿದ್ದಿ ಬರದರೆ ಪದ್ಯ ಪಷ್ಟಾವುತ್ತು.
ಧನ್ಯವಾದಗೊ ಮಾವ. ಕೆಳ ಕ೦ಡ ಹಾ೦ಗೆ ಬರೆದರೆ ಸರಿ ಅಕ್ಕಾ?
ಉಪ್ಪು ಗಂಜಿ ಬೇಡಿ ತಿಂಬ
ಚಪ್ಪೆ ಮೋರೆ ಮಾಣಿ ಕೂದು
ತೆಪ್ಪಗಾಶೆ ಮಾಡಿ ಕಾದ ಜೆಂಬ್ರದೋಲೆಗೆ
ತಪ್ಪಿ ಹೋಗಿ ತುಂಬ ಕೂಗಿ
ಯಪ್ಪಿ ನಿದ್ದೆ ಜಾನ್ಸಿಯೂಟ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ
ಈಗ ಸರಿ ಆತು. ಧನ್ಯವಾದ.
ಉಪ್ಪು ಗಂಜಿ ಬೇಡಿ ತಿಂಬ
ಚಪ್ಪೆ ಮೋರೆ ಮಾಣಿ ಕೂದು
ತೆಪ್ಪಗಾಶೆಲಿ ಕಾದ ಜೆಂಬ್ರ ಕರೆಯೋಲೆಗೆ
ತಪ್ಪಿ ಹೋಗಿ ತುಂಬ ಕೂಗಿ
ಯಪ್ಪಿ ನಿದ್ದೆ ಜಾನ್ಸಿಯೂಟ
ತುಪ್ಪ ಹಾಕಿ ಹೊಡದ ಮಾಣಿಯಾರು ಹೋಳಿಗೆ