Oppanna.com

–ತಿಥಿ– {ಹವ್ಯಕ ಕತೆ – ೨೦೧೩ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಿತ ಕತೆ}

ಬರದೋರು :   ವಿಜಯತ್ತೆ    on   19/04/2014    2 ಒಪ್ಪಂಗೊ

—ತಿಥಿ—
ಲೇಖಿಕೆ:-ಉಷಾನಾರಾಯಣ ಹೆಗಡೆ, ಹೊಸಳ್ಳಿ,ಶಿರಸಿ ತಾಲೂಕು. { ಕಳುಸಿದ್ದು  ವಿಜಯಾಸುಬ್ರಹ್ಮಣ್ಯ,ಕುಂಬಳೆ. ಸಂಚಾಲಕಿ,ಕೊಡಗಿನಗೌರಮ್ಮ ಕಥಾಸ್ಪರ್ಧೆ}
————————————————————————————————————————————————-
ಒಲೆ ಮೇಲೆ ಹಿತ್ತಾಳೆ ಬೋಗುಣಿಲಿ ಬೇಯ್ತಾಇದ್ದ ಕಡ್ಲೆಬೇಳೆ ಪರಿಮಳ ಮನೆತುಂಬ ತುಂಬ್ತಾ ಇತ್ತು. ಇವ್ರ ಮನೆಲಿ ಇವತ್ತು ಹೋಳಿಗೆ ಮಾಡ್ತ ಹೇಳಿ ಎಲ್ಲರಿಗೂ ಹೇಳ್ತಾ ಇತ್ತು.
ಅಟ್ಟದ ಮ್ಯಾಲೆ ಇದ್ದ ತಾಮ್ರದ ಚರಿಗೆ,ಸೊಟ್ಟುಗ, ಯಶಮುಚ್ಚಲು ಎಲ್ಲ ಇಳಿಸ್ಕಂಡು ಹುಣಸೆಹಣ್ಣು ,ಉಪ್ಪು ಹಾಕಿ ತೊಳಿಯದು…,ಗರಗತ್ತಿಎಲೆಹಾಕಿ ಮಣೆ ಎಲ್ಲ ತಿಕ್ಕದು,ಹೀಂಗಿದ್ದೆ ಕೆಲ್ಸ ಇವತ್ತು ಆಯಿಗೆ. “ಎಂಟು ಮಣೆಸಾಕು ಅಲ್ದಾ” ಗೊತ್ತಿದ್ರೂ ಅತ್ತೇರ ಹತ್ರ ಕೇಳೊ ಅಭ್ಯಾಸ ಆಯಿಗೆ!
‘ಸೊಂಟಕ್ಕೆ ಕಸ…..ಕಾಲುನೋವು…..’ ಹೇಳಿ ಹೇಳ್ಕೊತ್ತ ತನ್ನ ಕೆಲ್ಸವೇ ತಂಗೆ ಹರಿದೊದ್ದ ಅಜ್ಜಿಗೂ ಇವೊತ್ತು ಜೋರು ಉಮೇದಿ! ದೇವರ ಮುಂದಿನ ದೀಪಕ್ಕೆ ಎಣ್ಣೆ ಹಾಕದೇನ ….ನಾಳೆ ಕಡುಬು ಮಾಡುಲೆ ಅಕ್ಕಿ ಹೊರಿಯದೇನ……ಮಧ್ಯೆ ಸೊಸೆಗೆ ಕೆಲ್ಸ ಹಂಬ್ಲು ಮಾಡಿ ಕೊಡುದು!
ಬೆನ್ನುಹುರಿ ನೋವಿಗೆ ಅಪರೇಶನ್ ಮಾಡಿಸ್ಕೊಂಡು “ಇನ್ನು ಯಾವಾಗ್ಲೂ ಹದಾಕೆ ಕೆಲ್ಸ ಮಾಡವು…” ಹೇಳಿ  ಡಾಕ್ಟರ್ ಹೇಳಿದ್ನ ತಂಗಲ್ಲ ಹೇಳಿ ತೋಟ,ಗದ್ದೆ,ಕೊಟ್ಟಿಗೆ ಕೆಲ್ಸ….ಒಂದು ಗಳಿಗೆನೂ ಹಾಳು ಮಾಡ್ದೆ ದುಡ್ಕಂಡು ಜೀವನ ಇಡೀ ದುಡಿಕೊತಾ ಬಂದ ಅಪ್ಪಯ್ಯಗಂತೂ ಇವತ್ತು ಕುಂಡೆ ತೊರ್ಸಲೇ ಪುರುಸೊತ್ತಿಲ್ಲೆ! ನಾಳೆ ತನ್ನಪ್ಪನ ತಿಥಿ ಹೇಳಿ ಭಕ್ತಿಂದ ತಯಾರು ಮಾಡ್ತಾ ಇದ್ದ.
ಹೋಳಿಗೆ ಕಂಬ್ಳ ಬೇಗ್ನೆ ಶುರು ಮಾಡವು….ಬಾಳೆ ತಂದ್ಕೊಡ್ರೊ……ಮೂರು ಗಂಟೆ ಬಸ್ಸಿಗೆ ಇಂದಿರಾ ಬತ್ತಿ ಹೇಳಿದ್ದು-ಜನ ಇದ್ದಷ್ಟು ಸಾಕಾಗ್ತಿಲ್ಲೆ. ಹೋಳ್ಗೆ ಕಂಬ್ಳ ಅಂದ್ರೆ ಸಸಾರವ……” ಆಯಿ ಗಡಬಡೆ ಮಾಡ್ತಾ ಇತ್ತು. “ಬೆಲ್ಲ ಹದಾಕೆ ಹಾಕು. ಹೆಂಗಂದ್ರು ಸಕ್ರೆಪಾಕ ಮಾಡವು..” ಅಜ್ಜಿ ಬೆಂಕಿ ಮುಂದೆಹಾಕ್ತಾ ಹೇಳ್ಚು.  “ಯೇ  ಯಂಕಟು ಸ್ವಲ್ಪ ಕಟ್ಟಿಗೆ ದೊಡ್ಡ ದೊಡದು ತಂದು ಹಾಕು ಹಿತ್ಲಾಕಡೆಗೆ  ಎಂತಾ ಜಬ್ಬ ಹರಿತೆ…”   ಆಳು ಯೆಂಕಟುನ ಹತ್ರೆ ಹೇಳ್ದಾಗ  “ಬಯ್ಯಾಡ್ದೆ….ಮದ್ಲೆ ಕೆಲ್ಸಕ್ಕೆ ಜನ ಇಲ್ಲೆ. ಬಯಿದ್ರೆ.., ನಾಳೆ ಕೆಲ್ಸಕ್ಕೆ ಬತ್ನಿಲ್ಲೆ….” ಅಪ್ಪಯ್ಯನ ಸಲಹೆ .”ಕಡ್ಲೆ ಬೇಳೆ ಬೇಯ್ಸಿದ ನೀರು ಚೆಲ್ಲಾಡ್ದೆ? ಸಾರು ಮಾಡು ಬೇವಿನಸೊಪ್ಪು ಹಾಕಿ….ಚಲೋ ಆಗ್ತು….” ಅಜ್ಜಿಗೆ ಸಾರು ಉಣ್ಣುವ ಚಪಲ! “ಇವತ್ತು ಒಪ್ಪತ್ತು….ಎಲ್ರಿಗೂ ಆಸ್ರಿಗೆ ನೆನಪಿಲ್ಯ…?” ಒಣ ಅವಲಕ್ಕಿ ಸಂತಿಗೆ ಸಾರು ಚಲೋ ಆಗ್ತು ಹೇಳ…” ಅತ್ತೇರ ಬಯಕೆ ಅರಿತ ಸೊಸೆ!.
“ಅಜ್ಜೀ.. ಭಟ್ಟರಿಗೆ ಕುಡಿಬಾಳೆ ಎಷ್ಟು ಬೇಕು….ಮೊನ್ನೆ ಎಷ್ಟು ಮಾಡವು…….” ತಿಥಿ ಮಾಡಲು ಹಣಕಿ ಸುಮಾರು ಇಪ್ಪತ್ತೈದು ವರ್ಷ ಆತನ……ಆದ್ರೂ ಅಪ್ಪಯ್ಯಂಗೆ ಎಲ್ಲದನ್ನೂ ಅವನ ಅಬ್ಬೆನೆ ಹೇಳವು! ಅವ್ನು ಅಷ್ಟೇಯ…ಎಂತಾದ್ರೂ ಅಬ್ಬೆಗೆ ಬಂದು ಹೇಳ್ತಾ !.ಯಾನಮ್ನಿ ತಾಯಿ-ಮಗನ ಉಲ್ಮೆ. ಆಯಿ ಒಂದೊಂದುಸಾರಿ ಗೊಣಗುತ್ತಿತ್ತು.
“ನಾಲ್ಕು ದೊನ್ನೆ ಸಾಕು…ಭಟ್ಟರಿಗೆ ಕೊಡೊ ದುಡ್ನ ತೆಗೆದಿಟ್ಟ್ ಕಂಡ್ಯ? ನಾಳೆ ಗಡಬಡ ಮಾಡ್ಕ್ಯಳಾಡ. ಬಾಳೆ ಮದ್ಲು ತಗಂಡು ಬಾ.. ಹುಶಾರು. ಮಳೆಹೊಯ್ದು..ತೊಲನದ ಬಣ್ಣ ಜಾರ್ತು..”ಅಜ್ಜಿಗೆ ಮಗ ಜಾರಿ ಬಿದ್ದೋದ್ರೆ ಹೇಳ ಚಿಂತೆ!.
“ಸೊಂಟನೋವು…ಐದ್ ನಿಮಿಷ ಕೋತಲ್ಲಿ ಕುಳ್ಳಲಾಗ್ತಿಲ್ಲೆ. ನಿಂಗೆ ನಾಳೆ ಅಂತೂ ಪಿಂಡ ಕಟ್ಟಲೆ  ದೇವರ ಮುಂದೆ ರಾಶಿ ಹೊತ್ತು ಕೂತ್ಕೊಳಕಾಗ್ತು.ಹೆಂಗೆ ಮಾಡ್ತಿಯಾ ಬನ. “ ಹೆತ್ತಬ್ಬೆಯ ಕಳಕಳಿಯ ಮಾತು. “ಮಾಡಲಾಗ್ತಿಲ್ಲೆ ಹೇಳಿ ಕೂತ್ಕಂಡ್ರೆ ಎಲ್ಲದೂ ಬಿಟ್ಟೋಗ್ತು. ಆಗ್ತು ಹೇಳಿ ಮನಸನ್ನ ಗಟ್ಟಿ ಮಾಡಿಕಳ್ಳವು. ಪಿತೃರುಣ  ತೀರಿಸವು. ಹೇಳಿ ಹೇಳ್ಕತ್ತ  ಅರಗತ್ತಿಕೋಲು ತಗಂಡು ಕಲ್ಲು ಮೆಟ್ಳು ಇಳ್ದು ತೋಟಕ್ಕೆ ಹೋದ ಅಪ್ಪಯ್ಯ.
“ಮಾಣಿ…ಯೇ..ಮಾಣೆ…ಎಲ್ಲೋದೆ…ಕಾಯಿ ಸೊಲಿಯವು.ಕರಂಗೆ ಅಕ್ಕಚ್ಚು ಕುಡಿಸದಿದ್ದು….ಆ ಸುಟ್ಟ ಫೋನ್ ಒಂದು ಕಿವಿಗೆ ಇಟ್ಕಂಬುಟ್ರೆ ಬೇರೆ ಎಂತದೂ ಬೇಡ ನಿಂಗೆ!..ಬಾ  ಇಲ್ಲಿ  ಬೇಗ್ನೆ”   ಆಯಿಗೆ ಯೆನ್ನ ಮೊಬೈಲ್ ಕಂಡ್ರೆ ಸೊಟ್ಟು! ಮೊಬೈಲ್ ಫೋನನ್ನ ಚಾರ್ಜಿಗೆ ಹಾಕಿ : ಕಾಯಿ ರಾಶಿಯಲ್ಲಿನ ಒಳ್ಳೊಳ್ಳೆ ಕಾಯಿ ತೆಗ್ದು , ಸುಲ್ದು ಬುಟ್ಟಿ ತುಂಬಿಸೊ ಹೊತ್ತಿಗೆ ,ಅಪ್ಪಯ್ಯ ಬಾಳೆ ರಾಶಿ ತೆಗಂಡು ’ಉಸ್ಸ್’ ಹೇಳ್ತಾ  ಬಂದ. ಹಲಸಿನ ಬ್ಯಾಳೆಹುಳಿ  ಊಟದ ಹಸಿವನ್ನ ಹೆಚ್ಚಾಗಸ್ತಾ ಇತ್ತು.
“ಬನ್ನಿ  ಇಬ್ರಿಗು ಬಡಿಸಿಕ್ಕೆ  ಮುಂದಿನ ಕೆಲ್ಸ ಮಾಡ್ತಿ.”  ಆಯಿಯ ಕರೆಗೆ ಊಟಕ್ಕೆ ಬಂದು ಕುಂತೆ. “ಅದೆಂತ ರೂಪವ…ಅಂಗಿ ಸಹಿತ ಕಳಚದೆಯ….ಸಂಧ್ಯಾವಂದನೆ ದೇವರ ಪೂಜೆಯಂತೂ ಬಿಟ್ತೋತು..”  ದೇವರು, ಶಾಸ್ತ್ರ, ಸಂಪ್ರದಾಯಗಳಲ್ಲಿ ಅಪಾರ ಶ್ರದ್ಧೆ,ನಂಬಿಕೆ ಇಪ್ಪ ಅಪ್ಪಯ್ಯ ಇಂತಾ ವಿಷಯಗಳನ್ನ ಹೇಳಲೆ ಬಿಡ್ಲೆ ಮಾಡ್ಕತ್ನನೇ ಇಲ್ಲೆ.! ಅಂಗಿ ಬಿಚ್ಚಿ ಗಾಯತ್ರಿ ಮಂತ್ರ ಹೇಳಿ, ಅನ್ನವನ್ನು’ಧರಿಸಿ’ ಊಟಮಾಡಲೇ ಹಣಕ್ದಿ.ತಿಥಿಯ ಹಿಂದಿನ ದಿನ ಆಗಿದ್ದಕ್ಕೆ ಕಡ್ಲೆ, ಉಳ್ಳಾಗಡ್ಡಿ ಹಾಕದ ಸೊಳೆ ಪಲ್ಯ..,ಹಲಸಿನಬ್ಯಾಳೆ ಹುಳಿ..,ಆಯಿ ಕೈ ಅಡಿಗೆ. ಊಟ ಚಲೂಆಗಿತ್ತು. “ಮಾಣಿ, ಊಟ ಮಾಡಿ ಮಲಗೆದ್ದು ಕೊಂಡು  ಹೋಳಿಗೆ ಉಂಡೆ ಕಟ್ಟಿ ಕೊಡವು. ನಾಳೆ ನಿನ್ನಜ್ಜನ ತಿಥಿ.. ಮೊಮ್ಮಗ ಉಂಡೆ ಕಟ್ಟಿದ್ದ ಹೇಳಿ ನಿನ್ನಜ್ಜ ರಾಶಿ ಹೋಳಿಗೆ ತಿಂತಾ…” ಅಜ್ಜಿ ಬೊಚ್ಚುಬಾಯಿ ಬಿಟ್ಟು ನೆಗ್ಯಾಡ್ತು. ಮೊಮ್ಮಗ ಉಂಡೆ ಕಟ್ತಾ ಅಂತ ನೆಗ್ಯಾಡ್ತ…ಗಂಡನ ತಿಥಿ ಹೇಳಿ ನೆಗ್ಯಾಡ್ತ ಹೇಳಿ ಆನು ತಜಬಿಜಲಾದಿ.
“ಮೊಸರು ಬೇಕನ..,ಎಲ್ಲಿದ್ದು ತಲೆ ನಿಂದು..ಸಾಕುಸಾಕೇಳ್ದಿ…ಬಂದಾಗಿಂದ ನೋಡ್ತಾ ಇದ್ದಿ…ಎಂತಾರೂ ಯೋಚ್ನೆ ಮಾಡ್ತಾ ಇರ್ತೆ..ಕರದ್ರು ಕೇಳ್ತೆ ಇಲ್ಲೆ…ಪರೀಕ್ಷೆ ಬರದಾತಲ…ಇನ್ನು ಅದೇ ಚಿಂತೆ ಮಾಡೆಡ…ಆ ದೇವ್ರು ಇದ್ದ… ಕೈ ಬಿಡ್ತ್ನಿಲ್ಲೆ.” ಹೇಳಿ ಹೇಳ್ದ ಆಯಿ ಅನ್ನಕ್ಕೆ ಮೊಸರು ಹಾಕಿ  “ಎಂಕಟು..ಎಂಕಟು…ಕೂ..ಕೂ..” ಹೇಳಿ ತೋಟಾಕ್ಕೆ ಹೋದ ಎಂಕಟುನ್ನ ಕರೆಯಲೆ ಹಣಕ್ತು. ಎಷ್ಟು ಆರಾಮಾಗಿ ಎಲ್ಲಾ ಭಾರಾನೂವಾ ದೇವ್ರ ಮ್ಯಾಲೆ ಹಾಕಿ  ’ಕರ್ಮಣ್ಯೇ ವಾದಿಕಾರಸ್ಥೆ  ಮಾಫಲೇಷು ಕದಾಚನ..” ಹೇಳಿ ಭಗದ್ಗೀತೆಲಿ  ಹೇಳಿದಾಂಗೆ ಎಗಡ್ತ ಈ ಜನ. ಜೀವಮಾನನೇ ಹಿಂಗೆ ಕಳಿತ.ಚೂರು ಬೇಜಾರು ಮಾಡಿಕ್ಯಳ್ತವಿಲ್ಲೆ….ಅಬ್ಬೊರೆ..ರಾಶಿ ಆಶ್ಚರ್ಯ ಆಗ್ತು. ಯಂಗೆ ಇವ್ರ ಮನೋಭಾವ್ನೆ ನೋಡಿ!.
ಮಾಳಿಗೆ ಕಸ್ಲೆ ಮ್ಯಾಲೆ ,ತಡಿರಾಶಿ ಮ್ಯಾಲೆ ಮಲಕ್ಯಂಡವಂಗೆ  ಮಳೆಜಿರ್ಲೆ ಹೊಟ್ಟೆ ಒಡಿವಂಗೆ ಕೂಗದನ್ನ ಕೇಳಿ ನಿದ್ರೆನೆ ಬಂಜ್ಞಿಲ್ಲೆ. ಹಳೆ ನೆನಪು ಸಣ್ಣಕಿದ್ದಾಗಿಂದು ,ಎಲ್ಲ ಕೌಳಿ ಹಾರ್ದಾಂಗೆ ಹಾರಲೇ ಹಣಕ್ಚು!. ಇಂತದ್ದೇ ಮಳೆಗಾಲ..ಎರಡು ಅಕ್ಕಂದಿಕ್ಕ…ಆನು,ಆಯಿ,ಅಪ್ಪಯ್ಯ ಬಯಲುಸೀಮೆಲಿದ್ದ ಗದ್ದೆ ಬೂರಾಟ ಮಾಡಿಕ್ಕಿ, ವಸ್ಸಾದ ಅಜ್ಜ,ಅಜ್ಜಿ ನೋಡಿಕ್ಕಳ್ಳಲೆ ಎಂಗಳ ಮೂಲ ಮನೆ  ಇಳ್ಕುಮನಿಗೆ ಬಂದಿದ್ಯ.ವಂಶದ ಕುಡಿ ಒಬ್ಬನೇ ಮೊಮ್ಮಗ…ಅಜ್ಜ-ಅಜ್ಜಿ ಇಬ್ರಿಗೂ ಯನ್ನ ಕಂಡ್ರೆ ರಾಶಿ ಪ್ರೀತಿ.
ಕೈಲಿ ಹರಿಯದ ಅಜ್ಜನ ಆಳ್ವಿಕೆಂದ ಬರೀ ಜಿಂಗು ಜೋಲ ಅಡಿಕೆಮರ…ಗೊಬ್ಬರ ಕಾಣದ ಬಾಳೆ ಪ್ಲಾಟು…,ಎಲ್ಲ ಸರಿಮಾಡ ಹೊತ್ತಿಗೆ  ಅಪ್ಪಯ್ಯಂಗೆ ಎರಡು ವರ್ಷ ಬೇಕಾಗಿತ್ತು!.ಅಂತಾ ಬಂಜಲ್ ಸೀಮೆಯ  ಲಂಬಾಣಿಗ್ರು,ಗೌಳಿಜನಗ,ಒಡ್ಡರು, ಅವರ್ ಸಂತಿಗೆ  ಛಲದಿಂದ ಬದುಕು ಎದುರಿಸ್ಕ್ಯಂಡು, ಕೋಣದ ಗಾಡಿ ಕಟ್ಟಿ, ನೀರು ಹೊಡ್ದು, ಹತ್ತಿಯ, ಜೋಳವ, ಭತ್ತವ, ಒಟ್ಟಲ್ಲಿ ಎಂತನ್ನಾರು ಮಾಡಿ,ಸಂಸಾರ ಉಪವಾಸ ಬೀಳ್ದೋಗದಂಗೆ ನೋಡ್ಕ್ಯಂಡವಂಗೆ ಮಲೆನಾಡ್ನ ಈ ಕೆಲ್ಸ ಎಲ್ಲ ಯಾವ ಲೆಕ್ಕ!ಸಂತಿಗೆ  ಅಪ್ಪಯ್ಯ –ಆಯಿ ಜೊತಿಗೆ ಇಪ್ಪ ಅವಕಾಶ…ಅವಂಗೆ ಭಾರೀ ಕುಶಿ ಆಗಿತ್ತು.ಹೋರಾಟ ಅವ್ನ ಜೀವ್ನದ ಅವಿಭಾಜ್ಯ ಅಂಗಆಗಿಬಿಟ್ಟಿತ್ತು.
’ಬರಿ ಅಡಿಕೆ ತೋಟ ನಂಬಿಕ್ಯಂಡ್ರೆ ಜೀವನ ಸಾಗ್ತಿಲ್ಲೆ.’.  ಹೇಳಿ ನಾಲ್ಕು ಜರ್ಸಿದನ ಕಟ್ಟಿದ.. ಅವ್ಕೆ ಹಶಿಹುಲ್ಲು ಹಾಕಿರೆ ಹಾಲು ಜಾಸ್ತಿ ಆಗ್ತು.’ ಹೇಳಿ ಕರಡದ ಬ್ಯಾಣಕ್ಕೆ ನೀರು ಹೋಪಂಗೆ ಮಾಡಿ ಹಶಿಹುಲ್ಲು ನೆಡ್ತಿ ಹೇಳಿ ಹೇಳ್ದಾಗ ಊರವೆಲ್ಲ ನೆಗ್ಯಾಡ್ದಿದ್ದ. ಇವಂಗೆಂತ ಮಳ್ಳನ…ಕರಡವೆ ಸಮಾ ಬೆಳಿತಿಲ್ಲೆ ಅಲ್ಲಿ….ಇನ್ನು..ಹುಲ್ಲು ಬೆಳೆಯೋದು ಹೌದಾ.. ಹಣ್ಣಿನ ಗಿಡ ಬೇರೆ ನೆಡ್ತಿ ಅಂಬ… ಪೂರಾ ಒಡ್ಡರ ಆಲೋಚನೆಯ….’ ಹೇಳಿ ಜನ ಹೇಳಿದ್ದನ್ನ ಕೇಳ್ದೆ , ಸಕತ್ ದುಡ್ಡು, ನೀರು ಹಾಯ್ಸಿದ. ಹುಲ್ಲು  ಹಸಿರಾಗಿ ಎದ್ದು ಬಂದು…ಎಲ್ರ ಕಣ್ನುಕುಕ್ಕಲೇ ಹಣತ್ಚು. ಉಮ್ಮಣ್ಣ, ನಂಗೊಂದು ಬಾಳೆ ಹಿಳ್ಳು ಕೊಡ…ಒಳ್ಳೆ ಮುರುಗ್ಲು ಶಶಿ ಇದ್ದ…….”ಹೇಳಿ ಕೈಚಾಚೊ ಹಾಂಗೆ ಆತು.!.ಎಲ್ಲ ಸುಲಲಿತ ಆತು  ಹೇಳ ಹೊತ್ತಿಗೆ ಅಜ್ಜ ಒಂದಿನ ರಾತ್ರಿ ಮನಕ್ಯಂಡವ ’ಹರಹರ’ ಅಂದ್ಬಿಟ್ಟ.ಅಪ್ಪಯ್ಯಂತೂ ಸಣ್ಣಹುಡುಗ್ರ  ಹಾಗೆ ತೀಡಿ, ತೀಡಿ ಇಟ್ಟಿದ್ದು ಕಣ್ಣಿಗ್ ಕಟ್ತು ಈಗ್ಲುವಾ! ತಲೆ ಮ್ಯಾಲೆ ಕೈಹೊತ್ಕೊಂಡು  ಕುತ್ಕಂಡ್ರವ ಬಾರಿ ಬೇಜಾರು ಮಾಡ್ಕಂಡ್ರು ಕರ್ತವ್ಯ ಮರತಿದ್ನಲ್ಲೆ.
ಅಜ್ಜನ ಕ್ರಿಯೆ ಹಿಡ್ದ. ಇಪ್ಪತ್ತೊಂದು ಜನ ಶರಣರನ್ನ ಕರ್ಸಿ ಗೋದಾನ,ಸುವರ್ಣದಾನ,ಶಯ್ಯಾದಾನ ಎಲ್ಲ ಹೆಂಗೆ ಕೊಡವ ಹಂಗೆ ಕೊಟ್ಟ.ಕುಟುಂಬದವರ ತೆಕ್ಕಂಡು ಗೋಕರ್ಣಕ್ಕೆ ಹೋಗಿ ಅಸ್ಥಿ ವಿಸರ್ಜನೆನೂ ಮಾಡಿ ಆತು. ’ವರ್ಷಾಂತಿಕ ಅಪ್ಪತಂಕ ಗಂಧಾಕ್ಷತೆ ಕೊಟ್ರೆ ಸಾಕು ಒಂದು ಭಟ್ರ ಕರ್ದು ಕೇಳ್ದೆ ತಿಂಗ್ಳ ತಿಂಗ್ಳಾ ಮಾಸಿಕ ಮಾಡ್ತಾ ಬಂದ. ಯಂಗ ಮೂರ್ ಜನ ಹುಡುಗ್ರು……ಸಣ್ಣ ಮನೆ.ಆಯಿಗೆ ಅತ್ತೆಕ್ಕಗೆ ಎಲ್ಲ ಮುಚ್ಚಾಪ ದಿವ್ಸ  ಬತ್ತಿತ್ತು. ತಾನೇ ಅನ್ನದ ಚರಿಗೆ ಬಾಗಿಸಿಯಾದ್ರೂ ಮಾಸಿಕ ಮಾಡುದನ್ನ ಬಿಡಲಿಲ್ಲೆ. ಸಾಕೊ ನೀವಿಂತ ಗನಾಕೆ ದುಡ್ಡಿದ್ದವ್ನ….ಹೆಣ್ಣು ಮಕ್ಕಳ ಮದುವೆ  ಮಾಡವು…ಮಗಂಗೆ ಕಲ್ಸವು…ಸೊಕಾಗಿ ದುಡ್ಡು ಖರ್ಚು ಮಾಡಡ.ಹೇಳಿ ಅವ್ನ ತಲೆಲಿ ತುಂಬಿರೂ ಕೇಳಿದ್ನೆ ಇಲ್ಲೆ.
’ಕೊಡಂವ…..ತಗಂಬವ ಎಲ್ಲ ಆದೇವ್ರು….ಅಂತಾ ಬಯಲು ಸೀಮೆಲ್ಲೆ  ಹದ್ನಾಕು ವರ್ಷ ವನವಾಸ ಕಳ್ದಂಗೆ ಕಳ್ದಿ…..ಜೀವ್ನ  ಹೆಂಗಾರೂ ಕಳೀತು…..ದೇವ್ರು ಕೈ ಬಿಟ್ಟಿದ್ನಿಲ್ಲೆ. ದುಡ್ಡು ಖರ್ಚಾಗ್ತು ಹೇಳಿ ಪಿತೃರುಣ  ಇಟ್ಕಂಬಲೆ ಬತ್ತ…. ನಾವು ಸರಿ ದಾರಿಲೀ ನಡದ್ರೆ  ಮಕ್ಕನೂ ಅದೇ ದಾರಿಲಿ ನಡಿತಾ.. ಹೇಳಿ ಹೇಳ್ತಾ ಸುಳ್ಳು ಸಪಟೆ ದಾರಿಲಿ ನೆಡ್ಯದೆ ದಾನ-ಧರ್ಮ ಮಾಡ್ಕೊತ .ಇದ್ದಷ್ಟರಲ್ಲೆ  ಸಂತೃಪ್ತಿ ಜೀವನ  ನಡೆಸ್ಕೊತ ಬಂದ್ವ್ನ ಬಾಳು ಚೆಂದ ಆಗಿತ್ತು. ಅಕ್ಕಂದಿಕ್ಕಳ  ಮದುವೆ ಹೂವೆತ್ತಿದಾಂಗೆ ಆಗಿ ಮುಗುದಿತ್ತು,!ಯಂಗೆ ಚಲೂ ಕಾಲೇಜಿಲ್ಲಿ ಸೀಟುನು ಸಿಕ್ಕಿತ್ತು.!
ಮುಂದಿಂದ್ರ ಬಗ್ಗೆ ಯೋಚಿಸ್ದೆ…..ಹಿಂದಿಂದ್ರ ಬಗ್ಗೆ ಕೊರಗ್ದೆ ಶ್ರದ್ಧೆ, ಭಕ್ತಿಂದ ಕೆಲ್ಸ ಮಾಡೊ ರಾಶಿ ಅಪ್ಪಯ್ಯ ,ಆಯಿ ಹಾಂಗೆ ತಾನು ಇದ್ದಿದ್ದ್ರೆ ಎಷ್ಟೂ ಚಲೊ ಆಗ್ತಿತ್ತು…..ಮುಂಚೆ ಸಣ್ಣಕ್ಕಿದ್ದಾಗ ಇವ್ರ ಹಂಗೆ ಇದ್ದಿದ್ದಿ…..ಆ ಹಾಸ್ಟೆಲು  ಸೇರಿದ್ದೇ ಸೇರಿದ್ದು…ಪೂರಾಕೆಟ್ಟೋದಿ…ಎಲ್ಲಾ ಆ ಮೋಹನ ಮಾಡಿದ್ದು…’’ಎಂಜಾಯಾ ಮಾಡೊ ಮಗನೆ ಎಂತಾ ಭಟ್ಟರ  ಹಂಗೆ ಮಾಡ್ತೆ….ಇಲ್ಲಿ ಎಲ್ಲಾ ಜಾತಿನೂ ಒಂದೇ ಹಳೆಕಾಲ್ದ  ಕಂದಾಚಾರ,ಸಂಪ್ರದಾಯ ನಮ್ಗೆ ಎಂತಕ್ಕೆ?ಈಗಿನ ಹೆಣ್ಣ್ಮಕ್ಕ ನಿನ್ನಕ್ಕಿಂತ ಪಾಸ್ಟ್ ಇರ್ತ…..ತಗ ಈ ಬಾಟ್ಲಿ….ಚಿಕನ್ ಪರೋಟ ಮಸ್ತ್ ಇರ್ತು….ನಿನ್ನ ಗೋವೆಕಾಯಿ ಕಡಬ ಬದಿಗಿಡವು……”  ಬಲವಂತ ಮಾಡಿ ಕುಡಿಸಿ ಬಿಟ್ಟ. ರಾತ್ರಿಯೆಲ್ಲ ಅಮಲು…ಮರುದಿನ ಕಾಲೇಜಿಗೆ ಹೋಗದೆ ಹಾಸಿಗೆಲಿಯೇ ಬಿದ್ದು ತೀಡಿದ್ದೇ ತೀಡಿದ್ದು. ಬ್ರಾಹ್ಮಣನಾಗಿ ಹುಟ್ಟಿ ಇಂತಾ ತಪ್ಪು ಮಾಡಿ ಬಿಟ್ಟೆ ಅಂತ, ಕೂತಲ್ಲಿ, ನಿಂತಲ್ಲಿ ಪಾಪಪ್ರಜ್ಞೆ! ಮನಸ್ಸಿನ ಏಕಾಗ್ರತೆಗೆ ಹಾಸ್ಟೆಲಲ್ಲೆ ಸಂಧ್ಯಾವಂದನೆ ಮಾಡ್ದಿ. ’ಸರಿ ಆದಿ ಅನ್ಕಂಡಿ!” ಆದ್ರೆ ’ಹೊಸ ವರ್ಷದ ಪಾರ್ಟಿ ’ ಅಂತ ಕರ್ದಾಗ ಮತ್ತೆ ಹೋಗಿ ಬಿಡ್ಲಿ ತುಂಡು ಎಲ್ಲ  ಯಂಗರಿವಿಲ್ದೆ ನಡೆದುಹೋತು.ಮರ್ದಿನ  ಮತ್ತೆ ಕಣ್ಣೀರು,ಅಪ್ಪಯ್ಯ,ಆಯಿಗೆ ಮತ್ತೆ ದ್ರೋಹ ಮಾಡಿ ಬಿಟ್ಟೆ ಹೇಳಿ ಕಣ್ಣೀರು!.ಹೆಂಗೆ ಸಂಧ್ಯಾವಂದನೆ,ಜಪ,ತಪ..ಹೇಳಿ ಬಡ್ಕತ್ತಿದ್ದ…..ಹೆಂಗಾತು! ಮೋಹನ ಅಲ್ಲ್ಯಾರತ್ರೋ ಹೇಳಿ ನಗ್ಯಾಡ್ತಿದ್ದ.! ಎಷ್ಟು ಮನಸ್ಸು ಗಟ್ಟಿ ಮಾಡ್ಕಂಡ್ರೂ ಬಲಹೀನತೆಯೋ ದೌರ್ಬಲ್ಯವೋ ಮತ್ತೆ ಹಳೇ ತಪ್ಪಿನ ಪುನರಾವರ್ತನೆ! ’ಗೆಲ್ಲಲು ಸಾಧ್ಯವೇಇಲ್ಲೆ’ ಎಂಬೊ ಹಾಗೆ ಸೋತು ಹೋದಿ.
ಪಾರ್ಟಿಲಿ ಮಜಾ ಮಾಡ್ತಾ ಇಪ್ಪಕ್ಕಿರೆಕರೆ ಯನ್ನ ಮನೆತನ ಗೌರವ, ಎಲ್ಲ ಹಂಬಲಾಗಿ ಓಡಿಹೋಗಿ ಬಿಡನ ಹೇಳಿ ಅನ್ಸತ್ತಿತ್ತು. “ಆ  ಮಾಡದು ಸರಿಇಲ್ಲೆ”  ಹೇಳಿ ಮನಸ್ಸು ಚುಚ್ಚುತ್ತಿತ್ತು. ಮನಿಗೆ ಬಂದು ಅಪ್ಪಯ್ಯನ ಜೊತೆ  ’ರುದ್ರ..ಚಮೆ’ ಹೇಳಕ್ಕಿರೆ ಸರಕ್ಕನೆ  ಪಾರ್ಟಿ ಹಂಬಲಾಗಿ“ಯಂಗೆ ಇದ್ನ ಮಾಡಲೆ ಅಧಿಕಾರ ಇಲ್ಲೆ” ಹೇಳಿ ಹೇಳ್ದಂಗಾಗ್ತಿತ್ತು. ಒಟ್ನಲ್ಲಿ ಯಾವ್ದನ್ನ ಸರಿ ಮಾಡಲಾಗದೇ  ರಾಶಿ ತ್ರಾಸು ಅನುಭವಿಸ್ತಾ  ಇದ್ದಿ. ಮನಸ್ನ ಯನ್ನ ಹಿಡಿತದಲ್ಲಿ ಇಟ್ಕಂಬ್ಲೆ ಆಗ್ತಾನೆ ಇಲ್ಲೆ…..ಶ್ಶೀ ,ಇವ್ರೆಲ್ಲ ಶ್ರದ್ಧೆ,ತಾಳ್ಮೆಯಲ್ಲಿ ಕಾಲು ಭಾಗನೂ ಇಲ್ದೊದಂಗೆ ಆಜಿ. ಆ ಎಂತಕೆ ಹಿಂಗಾದಿ… ಉತ್ತರ ಇಲ್ಲೆ. ”ಹಾಸ್ಟೆಲ್ಲಿದ್ರು ಯೆನ್ನ ಮಗ ವ್ರತ, ನೇಮ, ಬಿಟಿದ್ನಿಲ್ಲೆ” ಹೇಳಿ ಎದೆ ಉಬ್ಬಿಸಿ ಹೇಳವು. ಹಂಗೆ ಮಾಡ್ತಿ ಹೇಳಿ ಅಂದ್ಕಂಡಿದ್ದು ಎಷ್ಟು ಸಲನ…ಛೀ….
“ಮಗ ಒಂದಮ್ನಿ ಆಗೋಜ….ಮುಂಚಿನಂಗೆ ಇಲ್ಲೆ  …ರಾತ್ರಿ ನಿದ್ರೆಲ್ಲೂ ಹಲಮತ…ಪರೀಕ್ಷೆ ಬಗ್ಗೆನೆ ಚಿಂತೆ ಮಾಡ್ತ್ಕು. ಆಯಿಗೆ ಯಂದೇ ಚಿಂತೆ ’ಪರೀಕ್ಷೆ ಬರದ್ರೆ ಅದ್ರ ಬಗ್ಗೆ ಯೋಚಿಸೊದು’!
“ಯೇ  ಮಾಣಿ…ಎದ್ಕ ಸಾಕು ನಿದ್ರೆ. ಹೆಗ್ಗರಗೆ ಬಸ್ಸಿಗೆ ರಾಧತ್ತೆ ಬತ್ತಡ. ಕರ್ಕಂಡು ಬಾ…”ಆಯಿಯ ಸುಗ್ರೀವಾಜ್ಞೆ.ತೋಟದ ಸಂಕ ದಾಟಿ ಜಂಬ್ ನೇರಳೆ ಬುಡದಲ್ಲಿ ಬಸ್ ಸ್ಟಾಪು. ನೆಗ್ಗು ಶಾಲೆ ಎಲ್ಲ ಮೊದ್ಲು ಯನ್ನ ಅಜ್ಜ ಕಟ್ಟಿಸಿದವನಡ.ಸೋಗೆ ಮಾಡಿನ ತಂಪಾದ ಬಸ್ಸ್ ಸ್ಟಾಪು ಆವಗ.! ಅಜ್ಜಿಗೆ ಸೆಗಣಿ ಹಾಕಿ ಸಾರ್ಸೊ ಕೆಲ್ಸ!.ಶಾಲೆಯ ಅಜ್ಜ ಕಟ್ಟಿಸೆಕರೆ, ಮಕ್ಕಳ ಕರ್ಕಂಬಪ್ಪದು ಅಜ್ಜಿಯಡ!. ಸ್ವಾತಂತ್ರ್ಯಹೋರಾತದಲ್ಲೂ ಇಬ್ರೂ ಭಾಗವಹಿಸಿದ್ದವಡ…..ಅಂತ ಬ್ರಿಟಿಷರನ್ನೇ ಎದುರಿಸಿದ ಮನೆತನ ಯಂದು….’ಆನು ಹೆಂಗೆ ಇರಕಾಗಿತ್ತು.!…ಆದ್ರೆ…ಶ್ಶೀ..
’ಕಟ..ಕಟ.. ಬಾಗ್ಲು  ಬಿದ್ದೇ ಹೋತು….ಹೇಳ ಹಂಗೆ ಬಸ್ಸು ಬಂದು ನಿಂತು. ರಾಧತ್ತೆ ಎರಡು ದೊಡ್ಡ ಚೀಲದ ಸಂತಿಗೆ ಇಳ್ತು.. “ಎಂತದೆ ಇದು ಮದ್ವೆಗೆ ಬಪ್ಪ ಹಂಗೆ ಬಂಜೆ…ಆ ನಮ್ನಿ  ಸಂಚಿ” ಅಂದಿ.  “ಎಂತ ಮಾಣಿ….ನೀನು ಹೆಣ್ಣಾಗಿದ್ರೆ ತಿಳಿತಿತ್ತು….ಅಪ್ಪನ ಮನಿಗೆ ಬಪ್ಪ ಸಂಭ್ರಮ…ನಿನ್ನ ಅಪ್ಪಯ್ಯಂಗೆ ಪ್ರೀತಿ ಹೇಳಿ ನಾಲ್ಕುಕೊಸಗಾಯಿ,ನಿನ್ನಾಯಿಗೆ ಮುರುಗಲ ಉಂಡೆ..ಅಜ್ಜಿಗೆ ಸೊಳೆ..ನೀ ಬಂಜೆ ಹೇಳಿ ಗೊತ್ತೇಇಲ್ಲೆ.ಇಲ್ದೊರೆ ಬದ್ನೆಕಾಯಿ ತಗಬತ್ತಿದ್ದಿ.. ಬಜ್ಜಿ ಮಾಡಲಾಗ್ತಿತ್ತು.” ದಾರಿ ಮ್ಯಾಲೆ ಬಿದ್ದ ಬಿಕ್ಕೆಹಣ್ಣು ಒಡ್ದು, ಅರ್ಧಮಾಡಿ,ಯಂಗೆ ಕೊಟ್ಟು, ಬೆರಳಹಾಕಿ ಪೆರಟಿ ತಿಂದು, “ಏನು ಚಲೂ ಇದ್ದು. “ಜಗತ್ತಿನ ಅಷ್ಟೂ ಸಂತೋಷನೆ ತನ್ನ ಕೈಲಿ ಇದ್ದು ಹೇಳ ಹಂಗೆ ರಾಧತ್ತೆ!.ಇವಕ್ಕೆಲ್ಲ ಸಣ್ಣ-ಪುಟ್ಟ ಖುಷಿನೂ ಇಡಿಯಾಗಿ ಅನುಭವಿಸುವ ಮನಸ್ಸಿದ್ದು ಹೇಳುದೆ ದೊಡ್ಡ ಸಂಗತಿ!.ಮನಿಗೆ  ಹೋಪತಂಕ ಇಂದಿರತ್ತೆನೂ ಬಂದಾಗಿತ್ತು.
ರಾಧತ್ತೆ..ಇಂದಿರತ್ತೆ ಇಬ್ರೂ ಮಾತಾಡದೆ ಮಾತಾಡದು! “ಹೋಳ್ಗೆ ಸರಿ ಒರಿರೆ…ಬರೆ ಸುದ್ದಿಲ್ಲೆ ಮುಗ್ಸಾಡಿ..”  ಅಜ್ಜಿಗೆ ಹೋಳ್ಗೆ ಚಿಂತೆ!. ಸಂಜೆ ಒಪ್ಪತ್ತಿಗೆ  ಮೋಗೆಕಾಯಿ ತೇಳ್ಳವು…ಕಾಯಿಚಟ್ನಿ..ಕುಡಿಯಲೆ ಸಾರು.”ನಾಳೆನೂ ಚಲೂ ಮಾಡಿ ಅಡಿಗೆ ಮಾಡು.” ಅಪ್ಪಯ್ಯ ಹೇಳ್ದ. ಅಡ್ಡಿಲ್ಲೆ ಬೆಳಿಗ್ಗೆ ಕರೆಂಟೂ ಇಲ್ದೆ ಹೋದ್ರೆ ಎಂತ ಮಾಡುದು… ಅಚ್ಚೆಮನೆ ಯಮುನಕ್ಕಂಗೂ ಬರಲಾಗ್ತಿಲ್ಲೇಡ…ಸುಮಂಗೆ ರಜೆ ದಿನವಡ…ಎಲ್ಲ ನಾವೇ ಮಾಡ್ಕಳ್ಳದೇಯ.ಆಯಿ ತೆಳ್ಳವು ಎರ್ಕೊತ. “ಅಯ್ಯ ಅತ್ಗೆ ಎಂತಾ ಹೆದ್ರಿಕೆ..,ಅಂತ ಹನ್ನೆರಡು ವರ್ಷಾಂತ್ಗವನ್ನೇ ಮಾಡಾಜು..ಅಪ್ಪ ಜನಕ್ಕೆ ಅಡಿಗೆ ಮಾಡಾಜು..ಇಷ್ಟ ಸಣ್ಣ ಪಡಿಮಾಡಲ್ಲಿ…ಎಲ್ಲದ್ನು ಕಳ್ಕಂಡು ಬಂದಾತು…ಇದಕ್ಕೆಲ್ಲ ಹೆದ್ರಿಕ್ಯೆ…ಮಾಣಿ ಇದ್ದ ಪ್ರಾಯಕ್ಕೆ ಬಂದಂವ” ಇಂದಿರತ್ತೆ ಯಂಗೆ ಕಣ್ಣು ಹೊಡ್ದು ಹೇಳ್ಚು!. “ಮಾಣಿ..,ನಿಂಗೆ ಮುಂದಿನ ವರ್ಷ ಕಲ್ತು ಮುಗಿತಲ. ನೌಕ್ರಿ ಸಿಕ್ಕು ಕೂಡ್ಲೆ ಯಂಗಕಿಗೆ  ಸೀರೆ ತಂದು ಕೊಡವು.ಮತ್ತೆ…ಹ..” ರಾಧತ್ತೆಯ ಕುಶಾಲು. “ಇವ್ರ ಪ್ರೀತಿಗೆಲ್ಲ ಆನು ಅರ್ಹನೆ ಹೇಳ ಪ್ರಶ್ನೆ ಕಾಡಲೆ ಹಣಕ್ಚು. ಆ ಮೋಹನ್ನ ಇಲ್ಲಿಗೆ ಅಂದ್ರೆ ಊರಿಗೆ ಬಂದಾಗ ನಾಗರಬನ ,ಚೌಡಿಬನ,ಬಿರ್ಲು ಅಂತೆಲ್ಲ ಹೇಳ್ತಾ ಪೂಜೆಪುನಸ್ಕಾರ  ಮಾಡದೇ ಮಾಡದು. ಅಲ್ಲಿ ಹೋದ್ರು ಬೇರೆ ಜಾತಿಯವರಂಗೆ ಇಲ್ದೊದ್ದ ಎಲ್ಲ ಮಾಡ್ತ….ಎಂತ ಕೊರಗ್ಗು ಇಲ್ಲೆ ಯನ್ನಹಂಗೆ!.
“ಸತ್ತು ಹೋದ್ರು …ಯನ್ನತ್ರ ಆಗ್ತಿಲ್ಲೆ…ಆ  ದೇವ್ರಿಗೆ ಬುದ್ಧಿಲ್ಲೆ”  ಯಂಗೆ ಅರಿವಿಲ್ದೆ ಹೇಳಿ ಬಿಟ್ಟೆ.ಪಟಕ್ಕನೆ ಎಲ್ರೂ ಗಾಬ್ರಿಯಿಂದ ಯನ್ನ ನೋಡ್ದ.! “ಈಗಿತ್ಲಾಗಿ ಎಂತಕೊ ಮಾಣಿ ಎಂತೆತಲ್ಲ ಹೇಳ್ತ.ಎಂತಾ ಮಾಡವನ…ಪಾರಿ ಹತ್ರ ದೃಷ್ಟಿ ತೆಗ್ಸಾತು…” ಆಯಿ ಕಣ್ಣಲ್ಲಿ ನೀರು!. ಅಪ್ಪಯ್ಯನೆಡೆ ನೋಡೊ ಧೈರ್ಯ ಸಾಲ್ದೆ ಎದ್ದು ಕೈತೊಳ್ಕಂಡಿ.  ರಾತ್ರಿಯಿಡೀ ಅದೇ ಆಲೋಚ್ನೆ….ಯನ್ನಿಂದ ಎಲ್ರಿಗೂ ಬೇಜಾರು ಹೇಳಿ ಬೆಳಿಗ್ಗೆ ಮುಂಚೆ ಎದ್ದು ’ಇವತ್ತಿಂದ ಹೊಸ ಮನುಷ್ಯ ಆಗ್ತಿ ಆನು’ ಹೇಳಿ ದೇವರ ಮುಂದೆ ನಿಂತು ಶಪಥ ಮಾಡ್ದಿ….ನಿನ್ನೆ ಎಂತದೂ ನಡ್ದಿಲ್ಲೆ’ ಹೇಳ  .ಹಂಗೆ ಎಲ್ರ ಹತ್ರ ರಾಶಿ ಮಾತಾಡ್ದಿ.
ಜಗ್ಲಿಗೆ ಜಮಖಾನ  ಹಾಸ ಹೊತ್ತಿಗೆ ಅಕ್ಕಂದಿಕ್ಕ , ಭಾವಂದಿಕ್ಕಳ ಕರಕ್ಕಂಡು ಬಂದ. “ಭಾರೀ ದೊಡ್ಡ ಮನುಷ ನೀನು….ಇಷ್ಟು ದಿನ ಆದ್ರೂ  ಯಮ್ಮನಿಗೆ ಬಂಜೇ ಇಲ್ಲೆ….ಆ “ ಭಾವಂದಿಕ್ಕಳ ಪುಕಾರು! ಹೋಳ್ಗೆ..ಅಂಬೊಡೆಯ ಪರಿಮಳ ನೆಂಟರಿಷ್ಟರ ಮಾತುಕತೆ.
ಉರ್ಟು ಭಟ್ಟರು ಒಳಗೆ… “ಜನಿವಾರ ಎಡಕ್ಕೆ ಹಾಕ್ಯ…ಬಲಕ್ಕೆ ಹಾಕ್ಯ..”  ಪಿಂಡ ಗಟ್ಟಿ ಕಟ್ಟು. ಭಟ್ಟರು ಹೇಳ್ದಂಗೆ ಮಾಡ್ತಾ ಇದ್ದ ಅಪ್ಪಯ್ಯ.ಒದ್ದೆ ಪಂಜಿ…ಮೈಯೆಲ್ಲ ಗಡಗಡ….ಚುಮುಗುಟ್ಟುವ ಸೊಂಟ …ಆದ್ರು ಛಲ ’ಹಟ’  ಇಂತಾ ಅಪ್ಪಯ್ಯನ ಮಗ ಆನು ಸಣ್ಣ ದೌರ್ಬಲ್ಯನ  ಎದುರಿಸಲಾಗ್ತಿಲ್ಲೆ..ಅಂದ್ರೆ….ಎಂತಕ್ಕೆ ಆನು…ಇವತ್ತಿಂದ  ಆ  ಮೋಹನ್ನ ಸಹವಾಸ ಬಿಟ್ತಿ…ಇವತ್ತೆ ಸಂಜೆ ಅಪ್ಪಯ್ಯನ ಎದುರು  ಎಲ್ಲದನ್ನ ಹೇಳಿ ಬಿಟ್ತಿ. ಮತ್ತೆ ಇಂತಾ ತಪ್ಪನ್ನ ಮಾಡ್ತಿನಿಲ್ಲೆ.
ಸಕಲ ಕಜ್ಜಾಯ ಹಾಕಿ ಬಾಳೆಯಲ್ಲಿ , ಕೊಟ್ಟಿಗೆ ಮಾಡಿನ ಮ್ಯಾಲೆ ಇಟ್ಟು  ’ಹೊಯ್…ಹೊಯ್’ ಅಪ್ಪಯ್ಯ ಕರ್ದಾಗ ಎಲ್ಲಿಂದಲೋ ಬಂದ ಕಾಗೆ  ಅಂಬಡೆ ಕಚ್ಚಿ  ಹಾರಿಹೋದಾಗ  ಬಾಗಿಲ ಸಂದಿಯಲ್ಲಿ ನಿಂತ ಅಜ್ಜಿಗೆ ’ತನ್ನ ಗಂಡನೇ ಬಂದು ತಿಂದು ಹೋದ್ನೋ’ ಹೇಳ ಸಂಭ್ರಮ!.ಪರಿಶುದ್ಧ ನಂಬಿಕೆ,ಶ್ರದ್ಧೆ,ಭಕ್ತಿ. ಇವೇ ಇವ್ರನ್ನೆಲ್ಲ ಕಾಪಾಡಿಕೊಂಡು ಬಂತು.ಇನ್ಮೇಲೆ ಆನು ಹಿಂಗೇ ಆಗವು.ಕಳೆದಿದ್ರ ಬಗ್ಗೆ ಚಿಂತೆ ಮಾಡಲೇ ಇಲ್ಲೆ.ಮಂತ್ರಾಕ್ಷತೆ ತಗಂಬಪ್ದಕ್ಕಿರೆ ಮನ್ಸಲ್ಲೆ ಇವತ್ತಿಂದ ಹೊಸ ಮನುಷ ಆಗ್ತಿ. ಹೇಳಿ ನಿರ್ಧಾರ ಮಾಡ್ದಿ.
ನೆಂಟರ ಸಂತಿಗೆ ಕೂತು ಊಟ ಮಾಡ್ದಿ. ಅಕ್ಕಂದಿಕ್ಕಳ ಮಕ್ಕಳ ಸಂತಿಗೆ ಆಟ ಆಡ್ದಿ.ಬೇರೆ ಯೋಚ್ನೆನೆ ಮಾಡ್ನಿಲ್ಲೆ.ನೆಂಟರು ಹೋಗಿ ಆದ ಮ್ಯಾಲೆ  ಜಮಖಾನ ತೆಗ್ದು ಗುಡ್ಸೊ ಹೊತ್ತಿಗೆ  “ತಮ್ಮಾ, ಜಂತಿ ಮ್ಯಾಲಿನ ನಿನ್ನ ಫೋನು ಕೂಗ್ತಾ ಇದ್ದು.ತಗಳ” ಅಕ್ಕನ ಕರೆ. ಹೋಗಿ ನೋಡಿರೆ, ಮೋಹನನ ಫೋನಿಂದ ಬಂದಿತ್ತು!. ಸಿಟ್ಟು ಬಂತು ಕಟ್ಟು ಮಾಡ್ದಿ.ಪದೇ ಪದೇ ರಿಂಗಾತು.ಈಗ ಫೋನ್ ರಿಸೀವ್ ಮಾಡಿ ಸಮಾ ಬಯ್ಯವು ಹೇಳಿ ಮಾಡ್ಕ್ಯಂಡು  ’ಹಲೋ’ ಅಂದಿ. ಯೇ  ಮಾರಾಯ ಎಂತಾ ಕಟ್ ಮಾಡ್ತೆ?..ಇವತ್ತು ನಿನ್ನ ಸಲುವಾಗೆ ಪಾರ್ಟಿ…ನಮ್ಮ ಮಾಮೂಲಿ ಜಾಗದಲ್ಲಿ….ಫಾರಿನ್…ಬೇಕಾದಷ್ಟು!…ಹದಾ ಹೊತ್ತಿಗೆ ಬಂದುಬಿಡು….ನೀ ಇಲ್ದೆ ..ಶುರು ಮಾಡ್ತಿಲ್ಲೆ…ಬಾ…ಬರ್ಲೇ ಬೇಕು ಮತ್ತೆ…” ಹೇಳಿ ಮೋಹನ ಹೆದರಿಸುವಂಗೆ ಹೇಳ್ದಾಗ  “ಎಷ್ಟೊತ್ತಿಗೆ ಬರವು  ಮತ್ಯಾರು..ಬತ್ತ  ಅಡ್ಡಿಲ್ಲೆ” ಯಂಗೆ ಅರಿವಿಲ್ಲದಂಗೆ  ಯನ್ನ ದ್ವನಿ! ’ಇಲ್ಲೆ ಯನ್ನತ್ರ ಈ ಚಟ ಬಿಡಲಾಗ್ತಿಲ್ಲೆ….ಆನು ಹಿಂಗೆ ತೊಳಲಾಡ್ಕೊತ ಇಪ್ಪದೆಯ… ದೇವ್ರೆ  ಆ  ಎಂತಕೆ ಹಿಂಗೆ ಆಗೋದಿ…’ ಕುಸಿದು ಕುತ್ಕೊಳ ಹೊತ್ತಿಗೆ ,ಅಪ್ಪಯ್ಯ ಪುರೋಹಿತ ಭಟ್ಟರ ಹತ್ರ ಸಣ್ಣಧ್ವನಿಲಿ “ಯಮ್ಮನೆ ಮಾಣಿ ಜಾತ್ಕ ನೋಡಿ. ಎಂತಾರು ಶಾಂತಿ ಮಾಡ್ಸದಾರೆ  ಮಾಡ್ಸಲಾಗ್ತು. ಇತ್ತಿತ್ತಲಾಗಿ ರಾಶಿ ಮಬ್ಬು ಆಗೋಜ..ಎಷ್ಟು ಖರ್ಚಾದ್ರು  ಅಡ್ಡಿಲ್ಲೆ….ಮಾಣಿ ಮೊದ್ಲಿನಂಗೆ ಆಗವು….ಅಷ್ಟ್ಟೆ…” ಜಾತಕ ತೋರಸ್ತಾ ಸಣ್ಣಮುಖ ಮಾಡ್ಕಂಡು ಕೂತ್ಕಂಡಿದ್ದ. ಪಿಂಡದ ಬಾಳೆಗೆ ಕಾಗಗೊ ಎಲ್ಲ ಕಚ್ಚಾಡ್ತಿದ್ದ.
————-೦————–

2 thoughts on “–ತಿಥಿ– {ಹವ್ಯಕ ಕತೆ – ೨೦೧೩ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಿತ ಕತೆ}

  1. ಕೋತಿ ತಾನು ಕೆಡುವುದಲ್ಲದೆ ವನವನ್ನೆಲ್ಲಾ ಕೆಡಿಸಿತು. ಹೇಳುವ ಗಾದೆ ಹಾಗೆ ಕಾಲೇಜು ಜೀವನದಲ್ಲಿ ಹತ್ತಕ್ಕೊಬ್ಬ ಮೋಹನರು ತಾವು ಕೆಡುವುದಲ್ಲದೇ ಪೂರ್ತಿ ಕಾಲೇಜು ಮಕ್ಕಳನ್ನು ಕೆಡಿಸುತ್ತಾರೆ. ಹೆತ್ತವರು ಗಮನಿಸದಿದ್ದರೆ ಮಕ್ಕಳ ಜೀವನ ಹಾಳಾಗುವುದು ಸತ್ಯ.ಹರೇ ರಾಮ.

  2. ಕಥೆಯ ಎಡೆಲಿ ಕೆಲವು ಶಬ್ದ ಅರ್ಥ ಆಗದ್ರೊ ಕಥೆ ಅರ್ಥ ಆತು.ಪ್ರಬುದ್ಧ ಬರಹ .ತು೦ಬಾ ತು೦ಬಾ ಲಾಯಿಕ ಆಯಿದು.ಕೆಟ್ಟ ಚಟಕ್ಕೆ ಬಲಿಯಾದರೆ ಮತ್ತೆ ಅದರ೦ದ ಹೆರ ಬಪ್ಪಲೆ ಎಡಿತ್ತಿಲ್ಲೆ ಹೇಳುದಕ್ಕೆ ಈ ಕಥೆಯೇ ಉತ್ತಮ ಉದಾಹರಣೆ. ಉಷಾನಾರಾಯಣ ಅವಕ್ಕೆ ಧನ್ಯವಾದ೦ಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×