ಪರಯಿ ಪೆಟ್ಟ ಪಂದಿರುಕುಲಂ
{ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 3
ಮನದ ವ್ಯಾಕುಲ ಕಮ್ಮಿ ಅಪ್ಪಲೆ ಬೇಕಾಗಿ ಎಲ್ಲವನ್ನೂ ಬಿಟ್ಟು ದೇಶಾಂತರಕ್ಕೆ ಹೆರಟ ವರರುಚಿ ಹೋಪಗ ದಾರಿಲಿ ಹೆಂಡತಿಗೆ ಎಲ್ಲಾ ವಿಶಯವನ್ನು ಹೇಳಿದ°. ಇಷ್ಟರವರೆಗೆ ಸತ್ಕುಲಲ್ಲಿ ಹುಟ್ಟಿದ್ದು ಹೇಳಿ ಜಾನ್ಸಿಂಡಿದ್ದ ಅದಕ್ಕೆ ಕುಲಧರ್ಮ ತಪ್ಪಿರೆ ಎಂತಕ್ಕೂಳಿ ಗೊಂತಿದ್ದು. ಹಾಂಗಾಗಿ ಬೇಜಾರ ಮಾಡಿದ್ದಿಲ್ಲೆ. ಅಂದರೂ “ತಲೆಲಿ ಬರದ್ದು ಎಲೆಲಿ ಉದ್ದಿರೆ ಹೋಗ” ಹೇಳುವ ಸತ್ಯವ ಕಣ್ಣೆದುರೇ ಕಂಡಪ್ಪಗ ದೇವರ ಲೀಲೆಗೆ ಆಶ್ಚರ್ಯವೂ ಆತು.
ಎಲ್ಲಿಯೂ ಒಂದು ದಿನವೂ ಅವು ವಿಶ್ರಾಂತಿ ತೆಕ್ಕೊಂಡಿದವಿಲ್ಲೆ. ಇರುಳಿಂಗೆ ಎಲ್ಲಿಗೆ ಎತ್ತಿದವೋ ಅಲ್ಲಿ ನಿಂದವು. ತಿಂಬಲೆ ಎಂತ ಸಿಕ್ಕಿತ್ತೋ ಅದರ ತಿಂದವು. ಭಿಕ್ಷೆ ಬೇಡುದಕ್ಕಿಂತಲೂ ಹೆಚ್ಚಾಗಿ ಅವು ಕಾಡಿಲ್ಲಿ ಸಿಕ್ಕಿದ ಹಣ್ಣು ಹಂಪಲುಗಳಲ್ಲೇ ಹೊಟ್ಟೆ ತುಂಬುಸಿದವು.
ಉತ್ತರ ಭಾರತದ ಹೊಡೆಂದ ನಡದು ನಡದು ಅವು ಎತ್ತಿದ್ದು ಮಲೆಯಾಳ ನಾಡಿಂಗೆ. ಅಲ್ಲಿಯೂ ಅವರ ಪ್ರಯಾಣಕ್ಕೆ ನಿಲುಗಡೆ ಇಲ್ಲೆ. ಮುಂದೆ ಮುಂದೆ ಹೋವ್ತಾಯಿಪ್ಪಗಳೇ ಕಾಲನಿಯಮಕ್ಕನುಸಾರವಾಗಿ ವರರುಚಿಯ ಹೆಂಡತಿ ಬಸರಿಯಾತು. ಆದರೂ ಅವು ಮುಂದೆ ಮುಂದೆ ಹೋವ್ತಾ ಇತ್ತಿದ್ದವು. ಹೆರಿಗೆ ಸಂಕಟ ಬಪ್ಪಗ ವರರುಚಿ ಹೆಂಡತಿಯ ಹತ್ತರೆ
“ಆ ಕಾಡಿನ ಬಲ್ಲೆಗೆ ಅಡ್ಡ ಹೋಗಿ ಹೆತ್ತಿಕ್ಕಿ ಬಾ” ಹೇಳಿ ಅಲ್ಲಿಯೇ ಒಂದು ಕಲ್ಲಿಲ್ಲಿ ಕೂದ°. ರೆಜ ಹೊತ್ತಪ್ಪಗ ಅದು ಹೆತ್ತತ್ತು.
ಹೆರಿಗೆ ಮಾಡ್ಸಲೆ ಜನ ಇಲ್ಲೆ. ಸರಿಯಾದ ವ್ಯೆವಸ್ಥೆ ಇಲ್ಲೆ. ಆದರೂ ಆ ಸಾಧ್ವಿ ರಜವೂ ಸಂಕಟ ಪಟ್ಟಿದಿಲ್ಲೆ.
“ಹುಟ್ಟಿದ ಶಿಶುವಿಂಗೆ ಬಾಯಿ ಇದ್ದಾ ನೋಡು” ಹೇಳಿದ° ವರರುಚಿ ಹೆಂಡತಿ ಹತ್ತರೆ.
ಚೆಂದದ ಗೆಂಡು ಮಗು. ಅದು ಕಣ್ತುಂಬಾ ನೋಡಿತ್ತು.
“ಇದ್ದು, ಬಾಯಿ,ಕಣ್ಣು, ಮೂಗು ಎಲ್ಲವೂ ಚೆಂದವೇ”
“ಹಿಳ್ಳಗೆ ಬಾಯಿ ಇದ್ದನ್ನೇ. ಹಾಂಗಾರೆ ಅದರ ಅಲ್ಲೇ ಬಿಟ್ಟಿಕ್ಕಿ ಬಾ, ಬಾಯಿ ಕೊಟ್ಟ ದೇವರು, ಹೊಟ್ಟೆ ತುಂಬುಸುಲಿಪ್ಪ ದಾರಿಯನ್ನು ತೋರ್ಸುಗು” ಹೇಳಿಕ್ಕಿ ವರರುಚಿ ಮುಂದೆ ನೆಡದ°. ಗೆಂಡ° ಹೇಳಿದ್ದರ ಅನುಸರಿಸೆಕಾದ್ದು ಪತಿವ್ರತೆಯ ಧರ್ಮ ಅಲ್ಲದಾ? ಹಾಂಗೇ ಅಷ್ಟು ಚೆಂದದ ಮಗನ ಅಲ್ಲೇ ಕಾಡಿಲ್ಲಿ ಬಿಟ್ಟು ಗೆಂಡನೊಟ್ಟಿಂಗೆ ಹೆರಟತ್ತದು.
ಹಾಂಗೇ ಅವು ಮುಂದೆ ಹೋದವು. ವರರುಚಿಯ ಹೆಂಡತಿ ಹನ್ನೊಂದು ಮಕ್ಕಳ ಹೆತ್ತತ್ತು. ಎಲ್ಲಾ ಮಕ್ಕಳನ್ನೂ
“ಬಾಯಿ ಇದ್ದರೆ ಅಲ್ಲೇ ಬಿಡು” ಹೇಳಿ ಅವ° ಹೇಳಿದಾಂಗೆ ಎಲ್ಲಾ ಮಕ್ಕಳನ್ನೂ ಹೆತ್ತಲ್ಲೇ ಬಿಟ್ಟಿಕ್ಕಿ ಹೋಯೆಕಾದ ಅವಸ್ಥೆ ಬಂತು ಆ ಪತಿವ್ರತೆಗೆ. ಬಸರಿ,ಬಾಳಂತಿ ಹೇಳಿ ಆರೈಕೆ ಇಲ್ಲೆ,ಆರೂ ಉಂಡಾತ,ತಿಂದಾತ ಕೇಳುವವಿಲ್ಲೆ. ಒಟ್ಟಾರೆ ಎಲ್ಲಿಗೆ ಹೋಪದು ಹೇಳಿ ಗೊಂತಿಲ್ಲದ್ದ ಹಾಂಗೆ ಒಂದು ಹಗಲೂ ವಿರಾಮ ಇಲ್ಲದ್ದ ಅವರ ಪ್ರಯಾಣ ಮುಂದುವರಿತ್ತಾ ಇದ್ದತ್ತು.
ಹನ್ನೊಂದು ಮಕ್ಕಳಲ್ಲಿ ಒಂದು ಕೂಸುದೆ ಇದ್ದತ್ತು. ಅದರನ್ನಾರು ಒಟ್ಟಿಂಗೆ ಕರಕ್ಕೊಂಡು ಹೋಪನಾ°ಳಿ ಹೆಂಡತಿ ಕೇಳಿದ್ದಕ್ಕೆ ಒಪ್ಪಿದ್ದಾ° ಇಲ್ಲೆ ವರರುಚಿ. ಹೆಂಡತಿಗೆ ಸಂಕಟ ತಡವಲೇ ಎಡ್ತಿದಿಲ್ಲೆ. ಆದರೂ ಅದರ ಕಣ್ಣೀರಿನ ಮುಂದೆ ಅವ° ಕುರುಡನ ಹಾಂಗೆ ಇತ್ತಿದ್ದ°. ಮದುವೆ ಆದ ಸಮಯಲ್ಲಿ ಇದ್ದ ಗೆಂಡನ ಪ್ರೀತಿಗೂ ಈಗಾಣದ್ದಕ್ಕೂ ಎಷ್ಟೋ ಅಂತರ ಇದ್ದರೂ ಗೆಂಡನತ್ರೆ ಕೋಪ ಬಯಿಂದಿಲ್ಲೆ. ಮನಸಿಲ್ಲೇ ಕಣ್ಣೀರು ಹಾಕಿಂಡು ಗೆಂಡನ ಅನುಸರಿಸಿಂಡು ನೆಡದತ್ತು.
ಹನ್ನೆರಡನೇ ಸರ್ತಿ ಬಸರಿಯಪ್ಪಗ ಅದಕ್ಕೆ ಮನಸಿನ ವೇದನೆ ತಡವಲೇ ಎಡಿಯದ್ದಷ್ಟಾತು. ದಿನ ತುಂಬಿ ಹೆರಿಗೆ ಬೇನೆ ಬಪ್ಪನ್ನಾರವೂ ನೆಡವದೇ. ಹೆತ್ತ ಮತ್ತೆಯೂ ಹಿಳ್ಳೆಯ ಬಿಟ್ಟಿಕ್ಕಿ ಎಂತದೂ ಆಗದ್ದವರ ಹಾಂಗೆ ನಡವಲೇ ಬೇಕು. ಒಂದೇ ಒಂದು ಮಗುವಿನ ಆದರೂ ಕೊಂಗಾಟಲ್ಲಿ ತೆಚ್ಚೆಕು, ಒಂದರಿ ಎದೆಗೊತ್ತಿ ಹಾಲುಕೊಡೆಕು ಹೇಳುವ ಆಶೆ ಇದ್ದರೂ ಆ ಯೋಗ ಪಡಕ್ಕೊಂಡು ಬಯಿಂದಿಲ್ಲೆ ಅದು. ಮದಲು ಕಾಡಿಲ್ಲಿ ಬಿಟ್ಟ ಮಕ್ಕೊ ಎಂತಾದಿಕ್ಕು ಹೇಳಿಯೂ ಅರಡಿತ್ತಿಲ್ಲೆ. ಒಟ್ಟಾರೆ ಹೀಂಗೇ ವಿಷಾದ ಭಾವವನ್ನೇ ಅರದು ಕುಡುದ ಹಾಂಗೆ ಗೆಂಡನ ಅನುಸರಿಸಿದ ಅದಕ್ಕೆ ಈ ಸರ್ತಿಯೂ ಯೇವದೋ ಕಾಡಿನ ಹತ್ತರೆ ಎತ್ತಿಯಪ್ಪಗ ಹೆರಿಗೆ ಬೇನೆ ಸುರುವಾತು.
ಯಥಾ ಪ್ರಕಾರ ವರರುಚಿ ರಜ ದೂರ ಹೋಗಿ ಕೂದ°. ಇದು ಕಾಡಿನ ಬಲ್ಲೆಯ ಎಡೇಲಿ ಹೋಗಿ ರಜ ಹೊತ್ತಿಲ್ಲಿ ಹೆತ್ತತ್ತು. ಚೆಂದದ ಮಾಣಿ.
‘ಹನ್ನೊಂದು ಮಕ್ಕಳನ್ನೂ ಬಿಡೆಕಾಗಿ ಬಂತು. ಇವನ ಖಂಡಿತ ಒಟ್ಟಿಂಗೆ ಕರಕ್ಕೊಂಡು ಹೋಪದೇ’ ಹೇಳಿ ಮನಸಿಲ್ಲಿ ಅಂದಾಜಿ ಮಾಡಿಕ್ಕಿ ಗೆಂಡ “ಬಾಯಿ ಇದ್ದಾ?” ಕೇಳಿಯಪ್ಪಗ ಹಿಂದೆ ಮುಂದೆ ನೋಡದ್ದೆ “ಇಲ್ಲೆ” ಹೇಳಿತ್ತು.
“ಬಾಯಿ ಇಲ್ಲದ್ರೆ ಅವನ ಒಟ್ಟಿಂಗೆ ಕರಕ್ಕೊಂಡು ಬಾ” ಹೇಳಿದ° ವರರುಚಿ. ಹೆಂಡತಿಗೆ ಸಂತೋಶಾತು. ಒಂದು ಸಣ್ಣ ಲೊಟ್ಟೆ ಹೇಳೆಕಾಗಿ ಬಂದರೂ ಮಗನ ಕರಕ್ಕೊಂಡು ಹೋಪ ಅವಕಾಶ ಸಿಕ್ಕಿತ್ತನ್ನೇ.
ಆದರೆ ರಜಾ ಮುಂದೆ ಹೋಪಗ ಅದಕ್ಕೆ ಆ ಸತ್ಯ ಗೊಂತಾತು.’ಈ ಮಗಂಗೆ ನಿಜವಾಗಿಯೂ ಬಾಯಿ ಇಲ್ಲೆ’!!!!
ಪತಿವ್ರತೆಯಾದ ಅದು ಹೇಳಿದ ಆ ಸಣ್ಣ ಲೊಟ್ಟೆ ಕೂಡ ಅದರ ವಿಶೇಶ ಶಕ್ತಿಂದಾಗಿ ಸತ್ಯವೇ ಆತು. ಸಂಕಟ ತಡವಲೇ ಎಡಿಯದ್ದೆ ಮುಂದೆ ಹೋಪ ಗೆಂಡನ ದಿನಿಗೇಳಿ ವಿಶಯ ಹೇಳಿತ್ತು.
“ಆನಾಗ ಮಗನ ಬಿಟ್ಟಿಕ್ಕಿ ಬರೆಕನ್ನೇಳಿ ನಿಂಗಳತ್ರೆ ಬಾಯಿ ಇಲ್ಲೇಳಿ ಲೊಟ್ಟೆ ಹೇಳಿದೆ. ಆದರೆ ಈಗ ನೋಡಿ, ಹಿಳ್ಳಗೆ ನಿಜವಾಗಿಯೂ ಬಾಯಿ ಇಲ್ಲೆ”.
ಮುಂದೆ ಹೋಗಿಂಡಿದ್ದ ವರರುಚಿ ಫಕ್ಕನೆ ಅಲ್ಲಿಯೇ ನಿಂದ°.
” ಹೋ..ಹಾಂಗಾ.. ಅಂಬಗ ಆ ಶಿಶುವಿನ ಎನ್ನ ಕೈಲಿ ಕೊಡು” ಹೇಳಿ ಮಗುವಿನ ತೆಕ್ಕೊಂಡಿಕ್ಕಿ ಅಲ್ಲೇ ಹತ್ತರೆ ಇಪ್ಪ ಒಂದು ಪಾರೆಕಲ್ಲಿನ ಗುಡ್ಡೆಯ ಕೊಡೀಲಿ ನಿಲ್ಸಿದ. ಅಲ್ಲಿಗೇ ಆ ಮಗು ಶಿಲೆಯಾಗಿ ಹೋತು. ಅದುವೇ ಮುಂದೆ “ವಾಯಿಲ್ಲಾ ಕುನ್ನಿಲಪ್ಪನ್ನ್” ( ಬಾಯಿ ಇಲ್ಲದ್ದ ಗುಡ್ಡೆ ದೇವರು) ಹೇಳುವ ಹೆಸರಿಲ್ಲಿ ಆ ಊರಿನವೆಲ್ಲ ನಂಬುವ ಒಂದು ದೇವರಾತು.
ವರರುಚಿ ದಂಪತಿಗೊ ಮತ್ತೆಯೂ ಹೀಂಗೇ ನೆಡದು ನೆಡದು ಅವರ ಮುಂದಿನ ಆಯುಶ್ಯ ಕಳದವು.
ಅವರ ಹನ್ನೊಂದು ಮಕ್ಕಳು ಒಂದೊಂದು ಜಾತಿಯವಕ್ಕೆ ಸಿಕ್ಕಿದ ಕಾರಣ ಆ ಮಕ್ಕೊ ಎಲ್ಲಾ ಅವರ ಸಾಂಕಿದ ಜಾತಿಯವರ ಕ್ರಮಲ್ಲೇ ಬೆಳದವು .ಅವಕ್ಕೆಲ್ಲೋರಿಂಗೂ ವಿಶೇಶವಾದ ಒಂದೊಂದು ದಿವ್ಯಶಕ್ತಿಯೂ ಇತ್ತಿದ್ದು.
ಆ ಮಕ್ಕಳಲ್ಲಿ ದೊಡ್ಡವನ ಕರಕ್ಕೊಂಡು ಹೋಗಿ ಸಾಂಕಿದ್ದು ಅಗ್ನಿಹೋತ್ರಿ ಹೇಳುವ ಮನೆತನದವಾದ ಕಾರಣ ಅವ° ಶ್ರೇಷ್ಠವಾದ ಕುಲಕ್ಕೆ ಸೇರಿದ°.
ಎರಡನೇ ಮಗ “ಅಕವೂರ್ ಚಾತ್ತನ್ , ಮೂರನೆಯವ° ಪಾಕ್ಕನಾರ್,ಮತ್ತೆ ಪಾಣನಾರ್, ವಡುತಲ ನಾಯರ್,ಪೆರುಂತಚ್ಚನ್, ಉಪ್ಪುಕೊಟ್ಟನ್, ರಜಕನ್, ವಳ್ಳುವೋನ್, ಕಾರಯ್ಕಲಮ್ಮ, ನಾರಾಣತ್ತ್ ಭ್ರಾಂತನ್.
ಹೀಂಗೇ ವರರುಚಿಯ ಹನ್ನೆರಡು ಮಕ್ಕಳಲ್ಲಿ ಹನ್ನೊಂದು ಮಕ್ಕಳೂ ಬೇರೆ ಬೇರೆ ಕುಲಕ್ಕೆ ಸೇರಿ ಹೋದವು. ಒಬ್ಬ° ಗುಡ್ಡೆ ದೇವರಾದ°.
ಬ್ರಾಹ್ಮಣನ ಮಕ್ಕಳೇ ಆದರೂ ಅವರ ಅಬ್ಬೆ ಪರಯಿ ‘ ಆದ ಕಾರಣ ಆ ಮಕ್ಕಳ ಎಲ್ಲೋರನ್ನೂ ಒಟ್ಟಿಂಗೆ
” ಪರಯಿ ಪೆಟ್ಟ ಪಂದಿರುಕುಲಂ” ಹೇಳಿಯೇ ಊರಿಲ್ಲಿ ರೂಢಿ ಹೆಸರು ಬಂತು.
ಇನ್ನೂ ಇದ್ದು…..
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಬರದ ಶೈಲಿ,ವಿಶೇಷವಾದ ಕಥೆ,ಈ ಸಂಗತಿಗ ಎಲ್ಲ ಒಳ್ಳೆದಿದ್ದು..ಗೊಂತಿಲ್ಲದ್ದ ವಿಷಯ ಇದು…ಲಾಯ್ಕಿದ್ದು