Oppanna.com

ಸ್ವಯಂವರ : ಕಾದಂಬರಿ : ಭಾಗ 17 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   23/09/2019    1 ಒಪ್ಪಂಗೊ

ಕೇಶವಂಗೆ ತಂಗೆಯ ಕೈಲಿಪ್ಪ ಕಾಜು ಕಾಂಬಗ ಒಂದರಿ ಝಿಮ್ ಆತು.ಬೇಂಗದ ಮರದ ಬುಡಲ್ಲಿ ಕೂದ ದಿನೇಸನತ್ರೆ ಇದ್ದ ಅದೇ ಕಾಜು ಈಗ ತಂಗೆಯ ಕೈಲಿ!! ಅಲ್ಲಿದ್ದ ಅದೇ ಬಣ್ಣ ಬಣ್ಣದ ಮುತ್ತಿನ ಮಾಲೆ ಕೊರಳಿಲ್ಲಿ. ಅಂಬಗ ಇದರ ಅರ್ಥ!!???!
ಎರಡೂ ಸೇರಿ ಮಾಡುವ ಕಳ್ಳಕ್ಕೆಣಿಯಾ ಇದು? ..ಒಂದರಿ ದೊಡ್ಡಕೆ ಬೊಬ್ಬೆ ಹಾಕಿ ಅದಕ್ಕೆರಡು ಪೊಳಿ ಕೊಡುವೊ° ಹೇಳಿ ಮನಸಿಲ್ಲಿ ಬಂದರೂ ಒಂದರಿಯೇ ಹಾಂಗೆ ಮಾಡಿರೆ ಕಾರ್ಯ ಕೆಡುಗು ಹೇಳಿ ಆತು.ಮನ್ನೆ ಕುಚ್ಚಿ ತೆಗಶಲೆ ಬಂಡಾರಿ ಕೊಟ್ಟಗ್ಗೆ ಹೋದಿಪ್ಪಗ ಅಲ್ಲಿದ್ದ ಕೆಲವು ಜೆನಂಗೊ ಎಂತೋ ಗುಟ್ಟಾಗಿ ಮಾತಾಡಿ ನೆಗೆ ಮಾಡಿಂಡಿತ್ತಿದ್ದದು ಇದರ ವಿಶಯವನ್ನೇ ಆದಿಕ್ಕೋ?

“ತಮಿಳನ ಮನೆ ಅಳಿಯ ಮಾಡಿರೆ ಕೆಲಸಕ್ಕೆ ಭಾರೀ ಅನುಕೂಲಕ್ಕು” ಹೇಳಿ ಒಬ್ಬ° ಹೇಳಿಯಪ್ಪಗ ಮತ್ತೊಬ್ಬ° “ಅದಪ್ಪು,ಆಳಿಂಗೆ ಸಂಬಳ ಕೊಡುವ ಕೆಲಸಯಿಲ್ಲೆ.ಹ್ಹ..ಹ್ಹ..” ಹೇಳಿ ದೊಡ್ಡಕೆ ನೆಗೆ ಮಾಡಿದ°.ಹಾಂಗೆ ಹೇಳಿಯಪ್ಪಗ ಬೇರೊಬ್ಬ°
“ಬೇರೆ ಜಾತಿಂದ ನಮ್ಮ ಜಾತಿಗೆ ತಂದು ಮಾದರಿ ಆದಾಂಗೆ ನಮ್ಮಲ್ಲಿಂದಲೂ ಕೊಟ್ರಾತು.ಹ್ಹ..ಹ್ಹ..ಅದರ್ಲಿ ತಪ್ಪೆಂತಯಿದ್ದು.ಒಂದು ಸಂಕ ಹಾಕಿರೆ ಇತ್ಲಾಗಿ ಬಪ್ಪಲೆ ಮಾಂತ್ರಲ್ಲ ಅತ್ಲಾಗಿ ಹೋಪಲೂ ಆವ್ತೂಳಿ ಗೊಂತಾಯೆಕು”.
ಆ ಜೆನ ಹಾಂಗೆ ಹೇಳಿಯಪ್ಪಗ
” ಅದು ಸರಿಯಲ್ದೋ ಕೇಶವಣ್ಣ,ನಿಂಗೊ ಎಂತ ಹೇಳ್ತಿ?” ಕೇಳಿತ್ತು ಬಂಢಾರಿಯುದೆ. ಕೇಶವಂಗೆ ವಿಶಯ ಎಂತರಾಳಿಯೇ ಅಂದಾಜಾಗದ್ದೆ ಸುಮ್ಮನೇ “ಹೂಂ” ಹೇಳಿದ°. ಅಷ್ಟಪ್ಪಗ ಅವೆಲ್ಲ ಎಂತೋ ಸಣ್ಣಕೆ ಹೇಳಿ ಗುಟ್ಟು ಗುಟ್ಟು ಮಾತಾಡಿಕ್ಕಿ ಅವರವರಷ್ಟಕೇ ನೆಗೆ ಮಾಡಿದವು. ಕೇಶವಂಗೆ ವಿಶಯ ಎಂತರ ಹೇಳಿ ಗೊಂತಾಗದ್ದ ಕಾರಣ ಬಂಡಾರಿಯತ್ರೆ ಕೇಳಿದ°
“ಎಂತರ ವಿಶಯ!? ಎನಗೆಂತದೂ ಗೊಂತಾಯಿದಿಲ್ಲೆ”

“ಹ್ಹ….ಹ್ಹ…ನಿಂಗೊಗೀಗ ಗೊಂತಾಗದ್ರೂ ರೆಜ ಸಮಯಲ್ಲಿ ಗೊಂತಕ್ಕಣ್ಣಾ…..ನಿಂಗೊ,ನಿಂಗಳ ಅಕ್ಕ° ಎಲ್ಲ ಕೋಲೇಜಿಂಗೆ ಹೋದ್ದು ಕಲಿವಲೆ ಮಾಂತ್ರ. ಅಲ್ಲಿ ಬೇರೆಂತೆಲ್ಲ ಕಲುಶುತ್ತವು ಗೊಂತಿದ್ದಾ? ನಿಂಗೊ ಬರೀ ಒಪ್ಪಣ್ಣ,ಒಪ್ಪಕ್ಕ ಆಗಿ ಕಲ್ತಿದಿ ಹೇಳಿ ಎಲ್ಲೋರು ಹಾಂಗಿರ್ತವಾ? ಅಲ್ಲದ್ರೂ ಈಗಾಣ ಕೂಸುಗೊ ಹಾಂಗೇ..” ಬಂಡಾರಿ ಹಾಂಗೆ ಹೇಳಿ ರಾಗ ಎಳಾದು ಹೇಳಿಕ್ಕಿ ಅಲ್ಲಿಪ್ಪವೆಲ್ಲ ಅವರವರಷ್ಟಕೇ ಮಾತಾಡುವ ಹೊತ್ತಿಂಗೆ ಇವನ ಕೆಮಿಲಿ ಗುಟ್ಟಿಲ್ಲಿ ಒಂದು ಮಾತು ಹೇಳಿತ್ತು

“ನಮ್ಮ ಮನೆ ಕೊಬಳಿಂಗೆ ಕಿಚ್ಚಿಡುದರೆ ಬೇರೆಯವಕ್ಕೆ ಮದಾಲು ಕಾಂಗಷ್ಟೆ.ಹಾಂಗಾಗಿ ಮನೆಯ ಹೊಡೇಲಿ ರೆಜ ಜಾಗ್ರತೆ ಮಾಡಿ.ಎಷ್ಟು ಲಾಯ್ಕ ಮಾವಿನಹಣ್ಣಾದರೂ ಕಾಕೆ ಕೊಡಪ್ಪಿರೆ ಮತ್ತೆ ನಮಗಾಗನ್ನೆ ಅಣ್ಣಾ….” ಅದೂದೆ ಎಂತಕೆ ಹೇಳಿದ್ದೂಳಿ ಕೇಶವಂಗೆ ತಲಗೋಯಿದಿಲ್ಲೆ.

ಆರೂ ಬಾಯಿ ಬಿಟ್ಟು ಹೇಳದ್ರೆ ಅದರ ಬಗ್ಗೆ ತಿಳಿವ ಕೆಟ್ಟ ಕುತೂಹಲವೂ ಅವಂಗಿಲ್ಲೆ.ಈಗ ಮಾಂತ್ರ ಅವು ಹೇಳಿದ್ದದು ಇದರನ್ನೇ ಆದಿಕ್ಕೋಳಿ ರೆಜ ಸಂಶಯ ಬಂತು.ಅಬ್ಬೆ ಅಪ್ಪನ ಕಣ್ಣುಕಟ್ಟಿ ತಂಗೆ ಎಂತೋ ದಗಲ್ಬಾಜಿ ಮಾಡುತ್ತು ಹೇಳಿ ಅಂದಾಜಾತು.

“ಎನ್ನತ್ರೆ ನೀರು ತಂದು ಕೊಡ್ಲೆ ಹೇಳಿಕ್ಕಿ ಆನು ತಂದು ಕೊಟ್ಟಪ್ಪಗ ಅದರ ಇಲ್ಲಿ ಚೆಲ್ಲಿದ°. ನೋಡಬ್ಬೇ ಈ ಅಣ್ಣ, ಎನಗೆಡಿಯ ಇನ್ನಿಲ್ಲಿ ಉದ್ದಲೆ…..” ಕೇಶವನ ಆಲೋಚನೆ ತುಂಡಪ್ಪಾಂಗೆ ಸುಶೀಲನ ಪರಂಚಾಣ ಕೇಳಿತ್ತು.

“ನೀರು ಚೆಲ್ಲುದಲ್ಲ,ನಿನ್ನ ತಲಗೆ ಒಂದು ಕೊಡಪ್ಪಾನ ನೀರೆರೆಕಾದ್ದು,” ಹೇಳಿದವ° ಕೋಪಲ್ಲಿ ತಂಗೆಯ ಕೆಪ್ಪಟೆಗೆ ಒಂದು ಕೊಟ್ಟ°. ತಂಗೆಯ ಅವತಾರ ಕಂಡು ಅಷ್ಟು ಪಿಸ್ರು ಬಂತು ಅವಂಗೆ.

“ಹೋ…..ಅಣ್ಣ ಬಡಿತ್ತಾ..” ಹೇಳಿ ಆರ್ಬಾಯಿ ಕೊಟ್ಟೊಂಡು ಅಡಿಗೊಳಾಂಗೆ ಓಡಿತ್ತದು.

“ಎಂತದಾ° ಇದು,ಇಷ್ಟು ದೊಡ್ಡಾದ ತಂಗೆಯ ಬಡಿವದು?ಸ್ವಯ ಇದ್ದ ನಿನಗೆ? ವಿಶಯ ಎಂತರಾಳಿ ಎನ್ನತ್ರೆ ಹೇಳ್ಲಾಗದಾ?” ಹಾಲು ಕಾಸಿಂಡಿದ್ದ ಶಾರದೆ ಮಗಳ ಆಚೊಡೆಂಗೆ ನಿಲ್ಸಿಕ್ಕಿ ಕೇಶವನ ಹೊಡೆಂಗೆ ತಿರುಗಿ ನಿಂದತ್ತು.
ಸುಶೀಲಂಗೆ ಅಬ್ಬೆ ಒಟ್ಟಿಂಗೆ ಇದ್ದು ಹೇಳಿಯಪ್ಪಗ ರಜ ಹೆಚ್ಚು ಧೈರ್ಯ ಬಂತು.ಅಬ್ಬೆ ಒಟ್ಟಿಂಗೆ ಇದ್ದರೆ ಅಪ್ಪನೂ ಎನ್ನೊಟ್ಟಿಂಗೆ ಇಕ್ಕಷ್ಟೆ ಹೇಳುವ ಪೋರ್ಸುದೆ.

“ಅಬ್ಬೇ..ನಿಂಗೊ ಇದರ ಸರಿಯಾಗಿ ನೋಡ್ತೀರೋ ಇಲ್ಯೋ ಹೇಳಿ ಎನಗೊಂತಿಲ್ಲೆ.ಇದರ ಈಗಾಣ ಆಟಂಗೊ ಯೇವದೂ ಸರಿಯಿಲ್ಲೆ. ನಿಂಗೊಗೆ ಇಪ್ಪತ್ತ್ನಾಕು ಗಂಟೆಯೂ ಮನೆ ಕೆಲಸ ಮುಗಿವಲಿಲ್ಲೆ.ಅದರೆಡೆಲಿ ಈ ಮನುಶ್ಯೆತ್ತಿ ಎಂತ ಮಾಡ್ತು ಹೇಳ್ಯಾದರು ಗೊಂತಿದ್ದಾ?” ಕೇಶವ ಆದಷ್ಟು ಸ್ವರ ಸಣ್ಣ ಮಾಡಿ ಅಬ್ಬೆಯತ್ರೆ ಹೇಳಿದ°.
ಮಗ ಹಾಂಗೇಳಿಯಪ್ಪಗ ಶಾರದೆಗೆ ಎಂತೋ ವಿಶಯ ಇದ್ದೂಳಿಯಾತು.
ಒಲೆಲಿಪ್ಪ ಹಾಲಿಳಿಗಿ ಮಡುಗಿಕ್ಕಿ ಸುಶೀಲನ ಕೈ ಹಿಡ್ಕೊಂಡು ಕೇಶವನೊಟ್ಟಿಂಗೆ ಹೆರಾಣ ಉಗ್ರಾಣಕ್ಕೆ ಬಂತು.
ಈಗ ಸುಶೀಲಂಗೆ ಎದೆಲಿ ಅವಲಕ್ಕಿ ಕುಟ್ಲೆ ಸುರುವಾತು. ಅಣ್ಣಂಗೆ ಎಂತೋ ವಿಶಯ ಗೊಂತಾಗಿರೆಕು.ಇಲ್ಲದ್ರೆ ನೀರು ಚೆಲ್ಲಿದ್ದಕ್ಕೆ ಬಡಿಯ’ ಈಗ ಅಬ್ಬೆಯತ್ರೆ ಎಂತೋ ಹೇಳ್ತ.ದಿನೇಸನ ಶುದ್ದಿ ಅಬ್ಬಗೆ ಗೊಂತಾದರೆ……!!

ಹೇಂಗೆ ತಪ್ಸುದು!? ಗ್ರೇಶಿಂಡು ಎಕ್ಕಿ ಎಕ್ಕಿ ಕೂಗಲೆ ಸುರು ಮಾಡಿತ್ತು.

“ನೀನು ಕೂಗೆಡ ಸುಶೀ..ಅವ° ಎಂತಕೆ ಬಡ್ದು? ಅಂತೇ ಕೋಪ ಬಾರ ಅವಂಗೆ. ನೀನೆಂತ ಮಾಡಿದೆ?” ಶಾರದೆ ಅಲ್ಲಿಪ್ಪ ಮಂಚಲ್ಲಿ ಕೂದೊಂಡು ಕೇಳಿತ್ತು.
“ಆನೆಂತದೂ ಮಾಡಿದ್ದಿಲ್ಲೆ ಅಬ್ಬೇ..ನೀರು ಕೊಂಡೋಗಿ ಕೊಡುಗ ಅವಂಗೆ ಕೊಟ್ಟದು. ಆನು ಕೊಟ್ಟರೂ ಅವ° ತೆಕ್ಕೊಂಡಿದಾಯಿಲ್ಲೆ.ಅಷ್ಟಪ್ಪಗ ಗ್ಲಾಸು ಕೆಳ ಬಿದ್ದತ್ತು……ಅವಂಗೆನ್ನ ಕಂಡ್ರಾಗ,ಆನು ಸಾಯ್ತೆ” ಸುಶೀಲ ಹೇಳಿಂಡು ಮತ್ತೂ ಕೂಗಲೆ ಸುರು ಮಾಡಿತ್ತು.

“ನೀನು ಕೂಗೆಡ,ಸಾಯ್ತೆ ಹೇಳ್ಲೆಂತಾಯಿದೀಗ? ನೀನೆಂತೋ ಪೀಕ್ಲಾಟ ಮಾಡಿಪ್ಪೆ” ಶಾರದೆಗೆ ಮಗಳ ಪೂರ್ತಿ ನಂಬಿಕೆಯಿಲ್ಲೆ. ಸುಶೀಲ° ಕೇಶವಂಗೆ ತೊಂದರೆಯಪ್ಪಾಂಗೆ ಎಂತಾರು ಮಾಡಿಕ್ಕೂಳಿ ಮಾಂತ್ರ ಅದು ಗ್ರೇಶಿದ್ದು.
“ಅಬ್ಬೇ……ನಿಂಗೊ ಅದರ ಕೈಲಿಪ್ಪ ಕಾಜು ನೋಡಿದ್ದೀರಾ? ಅದೆಲ್ಲಿಂದ ಸಿಕ್ಕಿತ್ತು?ಕೊರಳಿಲ್ಲಿಪ್ಪ ಮಾಲೆ ಆರು ತಂದು ಕೊಟ್ಟದು ಕೇಳಿದ್ದೀರಾ?” ಕೇಶವ° ಸೀದಾ ಅಬ್ಬೆಯತ್ರೆ ಕೇಳಿದ°.
“ಇದೊಳ್ಳೆ ಸಂಗತಿಯಾತನ್ನೇ..ಅದು ಕೋಲೇಜಿಂಗೆ ಹೋಪಗ ಬೇಕಾದ್ದರ ತೆಗೆತ್ತು.ಅದರ ಎಲ್ಲ ನೋಡಿಂಡು, ಕೇಳಿಂಡು ಕೂಬ ಕ್ರಮ ಇಲ್ಲೆನಗೆ.ಈ ಪ್ರಾಯಲ್ಲಿ ಎಲ್ಲರೂ ಚೆಂದ ಕಾಣೆಕೂಳಿ ಆಶೆ ಪಡುವವು.ಈಗ ನಮಗೆ ಮದ್ಲಾಣಾಂಗೆ ಪೈಶೆಗೆ ಬಂಙ ಇಲ್ಲೆ.ಅದಕ್ಕೆಲ್ಲ ನೀನು ಗಲಾಟೆ ಮಾಡೆಡ.ಅದಕ್ಕೆಲ್ಲ ಪೈಸೆ ಕೊಡುದು ಅಪ್ಪನೇ.” ಶಾರದೆಗೆ ಮಗ° ಸುಶೀಲಂಗೆ ಪೆಟ್ಟು ಕೊಟ್ಟದು ಇಷ್ಟು ಸಣ್ಣ ವಿಶಯಕ್ಕೇಳಿ ರಜ ಕೋಪವೇ ಬಂತು.

“ನೀನು ಹೋಗಿ ಓದು ಮಗಳೂ, ಅವಂಗೆಂತೋ ಇಂದು ಮನಸು ಸರಿಯಿಲ್ಲೆ ಅಷ್ಟೇ” ಹೇಳಿ ಸುಶೀಲನ ಒಳಾಂಗೆ ಕಳ್ಸಿತ್ತು. ‘ಬದುಕಿದೆಯಾ ಬಡ ಜೀವವೇ’ ಹೇಳಿ ಒಂದು ಗಾದೆ ಮಾತಿದ್ದಲ್ಲದಾ? ಹಾಂಗೇ ಸುಶೀಲ° ಒಂದರಿಯಂಗೆ ಅಲ್ಲಿಂದ ಬಚಾವಾತು. ಅದು ಹೋದ ಮತ್ತೆ ಶಾರದೆ ಕೇಶವಂಗೆ ಬುದ್ದಿ ಹೇಳ್ಲೆ ಸುರು ಮಾಡಿತ್ತು.
“ತಂಗೆಯಾದರೂ ದೊಡ್ಡಾದ ಮತ್ತೆ ಬಡಿವಲಾಗ,ಸಣ್ಣ ಮಗಳು ಹೇಳಿ ರೆಜ ಕೊಂಗಾಟ ಹೆಚ್ಚದಕ್ಕೆ ಅಷ್ಟೇ,ಅದರಷ್ಟಕೆ ಇರ್ತು. ನೀನು ಅದರ ಅಂಗಿ,ವಸ್ತ್ರ,ಬೇಗು,ಚೀಲ ನೋಡ್ಲೆ ಹೋಗೆಡ………”

ಕೇಶವಂಗೆ ಹೆರ ಇಪ್ಪ ಪಾರೆಕಲ್ಲಿಂಗೆ ಹೋಗಿ ಮೋರೆ ಜೆಪ್ಪುವೋ° ಹೇಳುವಷ್ಟು ಸಂಕಟಾತು.ಈ ಅಬ್ಬಗೆ ಅರ್ಥ ಮಾಡ್ಸುದು ಹೇಂಗೆ? ಕೊಂಗಾಟಾಡ ಕೊಂಗಾಟ,ಖಂಡಿತ ಇದು ಹೋಪ ದಾರಿ ನೇರ್ಪಯಿಲ್ಲೆ.ತಿದ್ದಿ ಕೊಂಡೋಪೋ° ಹೇಳಿರೆ ಆನು ಹೇಳುದರ ಪೂರ್ತಿ ಕೇಳ್ಲೂ ಪುರ್ಸೊತ್ತಿಲ್ಲೆ ಅಬ್ಬಗೆ. ಮಗಳ ವಿಶಯ ಅಬ್ಬೆತ್ರೆ ಅಲ್ಲದ್ದೆ ಬೇರಾರತ್ರೆ ಹೇಳುದು? ಈ ಹಟ್ಟಿಯಾ? ಕೊಟ್ಟಗೆಯಾ,ಕೆಲಸವಾ……!! ಒಟ್ಟಾರೆ ಊರಿಡೀ ನಾರಿರೂ ಮನೆ ಹೆರಡದ್ದ ಅಬ್ಬಗೆ ಎಂತದೂ ಗೊಂತಾಗ.ಅಪ್ಪ° ಹೇಂಗೂ ದೊಡ್ಡ ಜೆನ.ಹಾಂಗಾಗಿ ಅಪ್ಪನತ್ರೂ ಆರೂ ಹೆಚ್ಚು ಮಾತಾಡುವ ಕ್ರಮಯಿಲ್ಲೆ. ಒಟ್ಟಾರೆ ಎಂತ ಮಾಡೆಕೂಳಿ ಅರಡಿಯದ್ದೆ ಅವ° ಅತ್ಲಾಗಿತ್ಲಾಗಿ ನಡದ.

ರೆಜ ಹೊತ್ತು ಕಳುದಪ್ಪಗ ಚಂದ್ರಣ್ಣನೂ ಬಂದು ಕೇಶವನತ್ರೆ ಸುಶೀಲಂಗೆ ಪೆಟ್ಟು ಕೊಟ್ಟ ಲೆಕ್ಕಲ್ಲಿ ಎರಡು ಮಾತು ಹೇಳಿದವು.ಅಬ್ಬೆ, ಅಪ್ಪ° ಇಬ್ರೂ ಬೈದಪ್ಪಗ ಅವಂಗೆ ಕೋಪ,ದುಃಖ ತಡದ್ದಿಲ್ಲೆ. ತಂಗೆ ದಿನೇಸನತ್ರೆ ಮಾತಾಡ್ತು,ಅದು ಕೊಟ್ಟದರ ತೆಕ್ಕೊಳ್ತು ,ಆ ವಿಶಯ ಊರಿಲ್ಲಿ ಗೊಂತಪ್ಪಲೆ ಸುರುವಾಯಿದು. ಕೆಲವು ಜೆನ ಹಿಂದಂದ ತಮಾಶೆ ಮಾಡ್ಲೆ ಸುರು ಮಾಡಿದ್ದವು..!!
ಇಷ್ಟೆಲ್ಲ ಆದರೂ ಇವಕ್ಕೆ ಮಗಳು ಕುಂಞಿ..ಅದರ ಕಣ್ಣೀರು ಹಾಕ್ಸಲಾಗ,ನಾಳಂಗೆ ಕೊಡ್ಲಿಪ್ಪ ಕೂಸು…..!! ಹೀಂಗೆಲ್ಲ ಮಾಡಿರೆ ನಾಳಂಗೆ ಊರಿಲ್ಲಿ ತಲೆನೆಗ್ಗಿ ನೆಡವದಾದರೂ ಹೇಂಗೆ? ಅಕ್ಕ° ಇದ್ದರೆ ಆವ್ತಿತು, ಅದಕ್ಕೆ ಬೇಗ ಅರ್ಥಕ್ಕು.ಅಂದರೂ ಈಗ ಅದರತ್ರೆ ಹೇಳುದೇಂಗೆ?

ಅಬ್ಬೆ ಬಂದು ಉಂಬಲೆ ದಿನಿಗೇಳಿರೂ ಕೇಶವ° ಕೆಳ ಇಳುದು ಹೋಯಿದನೇಯಿಲ್ಲೆ.ಉಪ್ಪರಿಗೆಯ ಅವನ ಉಗ್ರಾಣದ ಚಾಪೆ ಮಂಚಲ್ಲಿ ಸುಮ್ಮನೇ ಮನುಗಿಂಡು ಗಿಳಿಬಾಗಿಲಿನ ಎಡೇಲಿ ಕಾಂಬ ಆಕಾಶವನ್ನೇ ನೋಡಿಂಡು ಯೆಂತದೋ ಆಲೋಚನೆ ಮಾಡಿಂಡಿತ್ತಿದ್ದ°.
ಇಂಜಿನಿಯರಿಂಗ್ ಕಲ್ತು ಕೆಲಸಕ್ಕೆ ಅಲ್ಲಲ್ಲಿ ಅಪ್ಲಿಕೇಶನುದೆ ಕೊಟ್ಟ ಕಾರಣ ಎಲ್ಯಾದರು ಕೆಲಸ ಸಿಕ್ಕಿರೆ ಆದಷ್ಟು ಬೇಗ ಮನೆ ಬಿಟ್ಟು ಹೋಯೆಕೂಳಿ ಅವನ ಮನಸು ಹೇಳಿಂಡಿದ್ದತ್ತು.
ತಂಗೆಯ ಕೊಂಗಾಟಾಡ ಹಾರಾಟವನ್ನು, ಅಬ್ಬೆಪ್ಪಂಗೆ ಅದರತ್ರೆ ಇಪ್ಪ ಅತಿಯಾದ ಪ್ರೀತಿಯನ್ನು ಗ್ರೇಶುಗ ಅವನ ಮನಸಿಂಗೆ ಎಂತೋ ದೊಡ್ಡ ಅನಾಹುತ ಅಪ್ಪಲಿಪ್ಪ ಲಕ್ಷಣ ಇದು ಹೇಳಿ ಒಳ ಮನಸ್ಸು ಹೇಳಿತ್ತು.

ಹಾಂಗೇ ಮನಗಿದವಂಗೆ ಎಷ್ಟೊತ್ತಿಂಗೆ ಒರಕ್ಕು ಬಯಿಂದೋ ಗೊಂತಿಲ್ಲೆ. ದನಗೊ ಹಟ್ಟಿಲಿ “ಹ್ಹುಂ..ಹ್ಹುಂ..” ಮಾಡುದು ಕೇಳಿ ಎಚ್ಚರಿಕೆ ಆತು. ಹಟ್ಟಿಲಿ ಯೇವ ಶಬ್ದ ಆದರೂ ಕೆಳಾಂಗೆ ಕೇಳುದರಿಂದ ಲಾಯ್ಕಕ್ಕೆ ಕೇಳುದು ಉಪ್ಪರಿಗೆಗೆ. ಹಾಂಗಾಗಿ ಗಿಳಿ ಬಾಗಿಲ ಎಡೇಲಿ ಹೆರ ನೋಡಿದ°.ಎಂತದೂ ಅಂದಾಜಾಯಿದಿಲ್ಲೆ.
ಯೇವದೋ ದನ ಚನೆ ಇಳಿಶಿಂಡಿದ್ದೂಳಿ ಅಬ್ಬೆ ನಿನ್ನೆಯೋ,ಮನ್ನೆಯೋ ಹೇಳುದು ಕೇಳಿದ್ದು ನೆಂಪಾತು.

ಗಂಟೆ ನೋಡುಗ ನಾಲ್ಕೂವರೆ. ಅಬ್ಬೆ ಏಳುಗ ಇನ್ನೂ ಒಂದು ಗಂಟೆ ಕಳಿಗು.ಅಜ್ಜಿ ಇರುಳು ಒರಗದ್ರೆ ಅಬ್ಬಗೆ ಒರಕ್ಕೂ ಸರಿಯಾಗಿ ಇರ,ಪಾಪ!! ಯೇವಗಲೂ ಕೆಲಸ ಕೆಲಸ ಹೇಳಿ ಅಸಬಡಿವದು…..!! ದನ ಕಂಜಿ ಹಾಕಿರೆ ಹೋಗಿ ನೋಡದ್ರೆ ಮತ್ತೆ ಬಂಙಕ್ಕು.
ಈ ಹೊತ್ತಿಲ್ಲಿ ಅವರ ಏಳ್ಸುದಕ್ಕೆ ಆನೇ ನೋಡಿಕ್ಕಿ ಬತ್ತೆ ಹೇಳಿ ಕೆಳ ಇಳುದು ಹಟ್ಟಿ ಹತ್ತರಂಗೆ ಹೋಪಲೆ ಮೆಟ್ಲು ಇಳಿವಲೆ ಹೆರಟ ಕೇಶವ° ಅಲ್ಲಿಂದ ಬಪ್ಪ ಎರಡು ಜೆನಂಗಳ ಆಕೃತಿಯ ಕಂಡು ಬೀಸರೋದಾಂಗೆ ನಿಂದ°. ಉದೆಕಾಲದ ಆ ಚಳಿಗೂ ಅವನ ಮೈಯೆಲ್ಲ ಬೆಗರಿ ಚೆಂಡಿಯಾಗಿ,ನಾಲಗೆ ಒಣಗಿ ಮಾತು ಬಾರದ್ದವನಾಂಗೆ ಅಲ್ಲೇ ಕೂದು ಹೋದ್ದದೂ ಅವಂಗೆ ಗೊಂತಾಯಿದಿಲ್ಲೆ.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

One thought on “ಸ್ವಯಂವರ : ಕಾದಂಬರಿ : ಭಾಗ 17 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಓದುವಾಗಲೇ ಚಳಿ ಕೂರುತ್ತು..ಎಂಥಾ ಮನಸ್ಥಿತಿ ಎಲ್ಲ ಇದ್ದು…ಒಳ್ಳೆ ಓದಿಸಿ ಕೊಂಡು ಹೋವುತ್ತು.ಲಾಯ್ಕಿದ್ದು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×