Oppanna.com

ಸ್ವಯಂವರ : ಕಾದಂಬರಿ : ಭಾಗ 45 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   20/04/2020    3 ಒಪ್ಪಂಗೊ

ಸ್ವಯಂವರ ಭಾಗ 45

 

“ಓಹ್……ಅಣ್ಣಾ…..ಅಮ್ಮಾ….ನಿಂಗೊಗೆ ಆನಿಲ್ಲಿದ್ದೇಳಿ ಹೇಂಗೆ ಗೊಂತಾತು?” ಸುಪ್ರಿಯಂಗೆ ಫಕ್ಕನೆ ಅಲ್ಲಿ ಅಮ್ಮನನ್ನು, ಅಣ್ಣನನ್ನು ಕಂಡಪ್ಪಗ ಆಶ್ಚರ್ಯ ಆತು.

ಅಷ್ಟಪ್ಪಗ ಸುಪ್ರಿಯನ ಕಳ್ಸಲೆ ಬಾಗಿಲ ಹತ್ರಂಗೆ ಬಂದ ವಿಜಯ° ಹೆರ ಬಂದು ಅವರ ಒಳಾಂಗೆ ದಿನಿಗೇಳಿತ್ತು.

“ಪುಟ್ಟತ್ತೇ…..ನಿಂಗಳೂ ಇದ್ದೀರಾ…ಇದೆಂತ ಎಲ್ಲೋರು ಒಟ್ಟಿಂಗೆ ಬಂದದು. ಆನಿಲ್ಲಿದ್ದೇಳಿ ಹೇಂಗೆ ಗೊಂತಾತು?” ಸುಪ್ರಿಯಂಗೆ ಅಲ್ಲಿಗೆ ಅವು ಬಂದದೆಂತಕೇಳಿ ಗೊಂತಾಯಿದಿಲ್ಲೆ.

“ಹಾಸ್ಟೆಲಿಲ್ಲಿ ಇದ್ದೆ ಗ್ರೇಶಿಕ್ಕಿ ಅಲ್ಲಿಗೆ ಹೋದಪ್ಪಗ ನೀನಿಲ್ಲೆ. ಇಂದು ಸರೋಜ ಚಿಕ್ಕಮ್ಮನ ಮನೆಲಿ ಪೂಜೆ. ಹೋಗಿ ಬಪ್ಪಗ ನಿನ್ನ ಕಂಡು ಮಾತಾಡ್ಸಿಕ್ಕಿ ಹೋಪೋ° ಹೇಳಿ ಆತು. ಅಲ್ಲಿ ಕಾಣದ್ದಿಪ್ಪಗ ಪೋನು ಮಾಡಿರೆ ನೀನೆಲ್ಲಿ ತೆಗೆತ್ತೆ? ಅಂಬಗ ನಿನ್ನ ರೂಮಿಲ್ಲಿಪ್ಪ ಗಾಯತ್ರಿ ‘ ಇಲ್ಲಿಗೆ ಬಂದಿಪ್ಪೆ’ ಹೇಳಿತ್ತು. ಹಾಂಗೆ ಇಲ್ಲಿಗೆ ಬಂದೆಯ°. ಆ ಲೆಕ್ಕಲ್ಲಿ ನಿನ್ನ ಫ್ರೆಂಡಿನ ನೋಡಿದಾಂಗಾತು” ಸುಪ್ರಿಯನ ಅಮ್ಮ ಶೋಭ° ಹೇಳಿದವು.

ವಿಜಯ ಒಳ ಬಪ್ಪಲೆ ಹೇಳಿದ ಕಾರಣ ಎಲ್ಲೋರು ಒಳ ಬಂದವು. ಸಣ್ಣ ಒಂದೇ ರೂಮಿನ ಅರ್ಧಕ್ಕೆ ಪರದೆ ಕಟ್ಟಿ ಎರಡು ರೂಮಿನ ಹಾಂಗೆ ಮಾಡಿದ್ದದು.  ಒಂದು ಹೊಲಿಗೆ ಮಿಶನು ಅದರ ಹತ್ತರೆ ಒಂದು ಬೆಂಚು. ಅಲ್ಲೇ ಒಂದು ಸಣ್ಣ ಸ್ಟೂಲು….ಇಷ್ಟೇ ಅಲ್ಲಿದ್ದದು.

ಒಳ ಬಂದು ಬೆಂಚಿಲ್ಲಿ ಕೂದ ಸುಪ್ರಿಯನ ಅಮ್ಮ ವಿಜಯನ ಕೈ ಹಿಡುದು ಪ್ರೀತಿಲಿ ಮಾತಾಡ್ಸಿದವು.
“ಸುಪ್ರಿಯಂಗೆ ನಿನ್ನ ಶುದ್ದಿ ಹೇಳದ್ರೆ ಒರಕ್ಕು ಬಾರ. ಅಷ್ಟೂ ಪ್ರೀತಿ ನಿನ್ನತ್ರೆ. ಒಂದರಿ ಮನಗೆ ಕರಕ್ಕೊಂಡು ಬಾ’ ಹೇಳಿ ಸುಮಾರು ಸರ್ತಿ ಹೇಳಿದೆ. ನಿನಗೆ ಒಂದೊಂದು ಅರ್ಜೆಂಟು ಹೇಳಿತ್ತು. ಅಂಬಗ ಈ ಊರಿಂಗೆ ಬಂದಿಪ್ಪಗ ಒಂದರಿ ನಿನ್ನನ್ನೂ ಮಾತಾಡ್ಸಿಕ್ಕಿ ಹೋಪ° ಹೇಳಿ ಕಂಡತ್ತು”

ವಿಜಯ° ಸುಮ್ಮನೇ ನೆಗೆ ಮಾಡಿತ್ತು. ಒಟ್ಟಿಂಗೆ ಇಪ್ಪ ಪುಟ್ಟತ್ತೆ ವಿಜಯನ ಮೋರೆಯನ್ನೇ ನೋಡಿದವು. ಈ ಕೂಸಿನ ಎಲ್ಲಿಯೋ ಕಂಡ ಹಾಂಗಾವ್ತು. ಈ ನೆಗೆ, ಮಾತು, ಪ್ರಾಯಂದಲೂ ಮೀರಿದ ಗಾಂಭೀರ್ಯ…. ಎಲ್ಲಿ?…ಎಲ್ಲಿ….!!” ಅವರ ಮನಸ್ಸು ಎಲ್ಲೆಲ್ಲಿಯೋ ಹೊಡಚ್ಚಿಂಡಿದ್ದತ್ತು.

“ನಿನ್ನ ಮನೆ ಎಲ್ಲಿ ಅಕ್ಕೋ?, ಅಬ್ಬೆ ಅಪ್ಪ° ಎಂತ ಮಾಡ್ತವು?” ಅವು ಸೀದಾ ವಿಜಯನತ್ರೆ ಕೇಳಿಯಪ್ಪಗ ಸುಪ್ರಿಯಂಗೆ ಗಾಬರಿ ಆದರೆ ಅದರ ಅಮ್ಮಂಗೆ ಫಕ್ಕನೆ ಎಂತ ಹೇಳುದು ಗೊಂತಾಯಿದಿಲ್ಲೆ.
ಅಂದರೂ ವಿಜಯ ಹೆದರಿದ್ದಿಲ್ಲೆ. ಅದು ಯೇವಗಲೂ ಜನರ ಮಧ್ಯಲ್ಲಿ ಸೇರದ್ದಿಪ್ಪಲೆ ಕಾರಣ ಇದುವೇ. ಎಲ್ಲೋರು ಸಹಜವಾಗಿ ಕೇಳುವ ಪ್ರಶ್ನೆ ಇದು.

“ಎನಗೆ ಅಬ್ಬೆಯೂ ,ತಮ್ಮನೂ ಮಾತ್ರ ಇಪ್ಪದು. ಬೇರೆ ಆರೂ ಇಲ್ಲೆ” ವಿಜಯ ಅಷ್ಟೇ ಉತ್ತರ ಕೊಟ್ಟದು.

ಸುಪ್ರಿಯಂಗೆ ಅತ್ತೆ ಹಾಂಗೆ ಕೇಳಿದ್ದು ಸಮದಾನ ಆಗದ್ದೆ ಅಣ್ಣನ ಮೋರೆ ನೋಡಿತ್ತು. ಅವಂಗೆ ತಂಗೆಯ ಅಸಮಾಧಾನ ಅರ್ಥಾತು. ಕೂಡ್ಲೇ ವಿಶಯ ಬದಲ್ಸಿ ಸುಪ್ರಿಯನ ತಮಾಶೆ ಮಾಡಿದ°
“ಎಷ್ಟು ಸರ್ತಿ ಪೋನು ಮಾಡಿರೂ ನೀನು ತೆಗೆಯದ್ದಿಪ್ಪಗ ಆನೆಂತ ಗ್ರೇಶಿದೆ ಗೊಂತಿದ್ದಾ….. ನೀನು ಯೇವದಾರು “ಬಾಯ್ ಫ್ರೆಂಡ್” ನೊಟ್ಟಿಂಗೆ ತಿರುಗುಲೆ ಹೋಯಿದೇಳಿ….” ಅವನ ಮಾತು ಕುಶಾಲಿಂಗೆ ಆದರೂ ಸುಪ್ರಿಯನ ಒಳ ಮನಸ್ಸು ಝಿಮ್ ಹೇಳಿತ್ತು. ಇಂದು ವಿಜಯನೊಟ್ಟಿಂಗೆ ಹೋಗದ್ರೆ ಹಾಂಗೇ ಆವ್ತಿತು ಮಾತ್ರ..
ಸದ್ಯ ದೇವರು ವಿಜಯನ ರೂಪಲ್ಲಿ ಬಂದು ಬುದ್ದಿ ಹೇಳಿ ತಿದ್ದಿ ನೇರ್ಪ ದಾರಿಗೆ ತಿರುಗಿಸಿ ಬಿಟ್ಟ°.

ವಿಜಯ ಒಳ ಹೋಗಿ ನಾಲ್ಕೈದು ಗ್ಲಾಸು ಸರ್ಬತ್ತು ಮಾಡಿ ತಂತು. ಎರಡು ನಿಂಬೆಹುಳಿ ತಂದದು ಇದ್ದ ಕಾರಣ ಬಚಾವ್ ಹೇಳಿ ಗ್ರೇಶಿತ್ತು. ಚಾಯ,ಕಾಪಿ ಅದು ಕುಡಿವಲಿಲ್ಲೆ. ಬಂದವಕ್ಕೆ ಆಸರಿಂಗೆ ಕೊಡ್ಲೆ ಇದಾದರು ಇದ್ದನ್ನೇಳಿ ಸಮದಾನ ಅದಕ್ಕೆ.

“ಹೋ..ಇದೆಲ್ಲ ಮಾಡೆಕಾತಿಲ್ಲೆ.ಎಂಗೊ ಈಗ ಅನುಪ್ಪತ್ಯದ ಊಟ ಉಂಡಿಕ್ಕಿ ಬಂದದು” ಹೇಳಿರೂ ಅವೆಲ್ಲ ಕೊಶೀಲಿ ಸರ್ಬತ್ತು ಕುಡುದವು.
“ಇದಾ…ನಿನಗೆ ಒಂದು ಬಗೆ ಕೊಡ್ಲಿದ್ದು. ವಿಜಯನ ಹತ್ತರೆ ದಿನಿಗೇಳಿ ಸುಪ್ರಿಯನ ಅಮ್ಮ ಅದಕ್ಕೆ ಒಂದು ಕಟ್ಟ ಕೊಟ್ಟವು
” ನಾಡ್ದು ಯುಗಾದಿ ಅಲ್ಲದಾ. ಮನೆಲಿ ಪೂಜೆ ಇದ್ದು. ನೀನುದೆ ಸುಪ್ರಿಯನೊಟ್ಟಿಂಗೆ ಮನಗೆ ಬಾ..ಇದಾ..ಈ ಸೀರೆ ನಿನಗೆ. ಸುಪ್ರಿಯಂಗೆ ತೆಗವಗ  ನಿನಗೂ ಒಂದು ತೆಗದ್ದಷ್ಟೆ” ಅವರ ಪ್ರೀತಿಗೆ ವಿಜಯನ ಹೃದಯ ತುಂಬಿ ಬಂತು.

“ಎನಗೆ ಸೀರೆ ಎಲ್ಲ ಬೇಕಾತಿಲ್ಲೆ. ನಿಂಗೊ ಪ್ರೀತಿಲಿ ಇಲ್ಲಿಗೆ ಬಂದದು ಕೊಶಿಯಾತು”

“ನೀನು ಬೇರೆ ಅಲ್ಲ, ಸುಪ್ರಿಯ° ಬೇರೆ ಅಲ್ಲ…..ಒಂದೊಂದರಿ ತಮ್ಮನನ್ನೂ ಕರಕ್ಕೊಂಡು ಮನಗೆ ಬಾ”

“ಆತು ” ಹೇಳಿ ತಲೆಯಾಡ್ಸಿದ್ದಷ್ಟೆ ವಿಜಯ°.

“ಭಾರೀ ಚಂದದ ಸೀರೆ. ಎನಗೂ ಹೀಂಗಿದ್ದದೆಯಾ..” ಸುಪ್ರಿಯ ಸೀರೆ ತೆಗದು ಬಿಡ್ಸಿ ನೋಡಿತ್ತು.

“ಅಲ್ಲ..ನಿನ್ನ ಸೀರೆ ಇಷ್ಟು ಚೆಂದ ಇಲ್ಲೆ….” ಅಣ್ಣ ತಮಾಶೆ ಮಾಡಿದ°.
“ಹೋಗಾ°..ಎನಗೆ ವಿಜಯ ಹೇಳಿರೆ ಎಷ್ಟು ಪ್ರೀತಿ ಗೊಂತಿದ್ದಾ ನಿನಗೆ. ಎನ್ನಂದ ಲಾಯ್ಕದ ಸೀರೆ ಅದಕ್ಕೆ ಕೊಡೆಕೂಳಿಯೇ ಹೇಳಿದ್ದಾನು”
ಅದರ ಕುಶಾಲಿಂಗೆ ಎಲ್ಲರೂ ನೆಗೆ ಮಾಡಿದವು.

“ನಾಡ್ದಿಂಗೆ ಬಾ..ವಿಜಯಾ..” ಹೇಳಿ ವಿಜಯಂಗೆ ಮತ್ತೊಂದರಿ ಒತ್ತಾಯದ ಹೇಳಿಕೆ ಹೇಳಿಕ್ಕಿ ಅವು ಹೆರಟವು. ಹೆರ ಇಳಿವ ಮದಲು ಪುಟ್ಟತ್ತೆ ಒಳ ಹೋಗಿ ವಿಜಯನ ಕೈ ಹಿಡುದು
“ನಿನ್ನ ಎಲ್ಲೋ ಕಂಡ ಹಾಂಗಾವ್ತು. ನಿನ್ನ ಅಬ್ಬೆ ಹೆಸರೆಂತ ? ಅಜ್ಜನಮನೆ ಎಲ್ಲಿ?” ಕೇಳಿಯಪ್ಪಗ ವಿಜಯ ತಲೆ ತಗ್ಸಿತ್ತು
“ಎನ್ನ ಅಬ್ಬಗೆ ಆರೂ ಇಲ್ಲೆ ಅತ್ತೇ. ಎಂಗೊ ಎರಡು ಜನ ಮಕ್ಕೊ ಮಾಂತ್ರ ಇಪ್ಪದು. ಬೇರೆಂತ ವಿಶಯ ಎನಗೂ ಗೊಂತಿಲ್ಲೆ” ಅಷ್ಟು ಹೇಳಿಯಪ್ಪಗ ಅವಕ್ಕೆ ಎಂತಾತು ಗೊಂತಿಲ್ಲೆ. ವಿಜಯನ ಹೆಗಲಿಂಗೆ ಕೈ ಹಾಕಿ ಹತ್ತರೆ ನಿಲ್ಸಿ

“ಆತು, ಆನು ಕೇಳಿದ್ದೇಳಿ ಬೇಜಾರ ಮಾಡೆಡ, ನಿನ್ನ ಎನಗೆ ಎಲ್ಲಿಯೋ ಕಂಡ ಹಾಂಗಾತು. ಇಲ್ಲದ್ರೆ ನಿನ್ನ ಹಾಂಗೇ ಇಪ್ಪ ಜನರ…..ಎನಗೆ ತುಂಬಾ ಹತ್ತರಂದ ಗೊಂತಿದ್ದು. ಎಲ್ಲಿ, ಏನು,ಹೇಂಗೆ ಹೇಳಿ ಫಕ್ಕನೆ ನೆಂಪಾವ್ತಿಲ್ಲೆ ಅಷ್ಟೇ. ನಿನ್ನ ಹಾಂಗೇ ಕಾಂಬಲೆ, ಮಾತು,ನೆಗೆ,ವಜಾಯವೂ ಹಾಂಗೇ ಇದ್ದು…..”

“ಒಬ್ಬನ ಹಾಂಗಿದ್ದವು ಪ್ರಪಂಚಲ್ಲಿ ಏಳು ಜನ ಇದ್ದವಾಡ. ಅವರಲ್ಲಿ ಒಬ್ಬನ ಆದಿಕ್ಕು ಅತ್ತೆ ಕಂಡದು” ಸುಪ್ರಿಯ ನೆಗೆ ಮಾಡಿತ್ತು.
“ಅಲ್ಲ..ಇಬ್ರ…..” ಸುರೇಶನೂ ಅವರೊಟ್ಟಿಂಗೆ ನೆಗೆ ಮಾಡಿದ°.

ಅವರ ಕಾರು ಹೋದ ಕೂಡ್ಲೇ ಒಳ ಬಂದ ವಿಜಯ ಹೆರಾಣ ಬಾಗಿಲು ಹಾಕಿಕ್ಕಿ ಅವು ಕೊಟ್ಟ ಸೀರೆ ಬಿಡ್ಸಿ ನೋಡಿತ್ತು..

‘ಎಷ್ಟು ಚಂದ ಇದ್ದು ಸೀರೆ, ಇಷ್ಟು ಕ್ರಯದ ಸೀರೆ ಆನು ಪೈಸೆ ಕೊಟ್ಟು ತೆಗದು ಸುತ್ತಿದ ಹಾಂಗೇ ಇದ್ದು..ಸುಪ್ರಿಯ° ನಿಜವಾಗಿಯೂ ಪುಣ್ಯ ಮಾಡಿದ್ದು.ಅಮ್ಮ,ಅಣ್ಣ ಎಷ್ಟು ಪ್ರೀತಿ ಮಾಡ್ತವು ಅದರ. ಅವರ ಪ್ರೀತಿಯ ಅರ್ಥ ಮಾಡದ್ದೆ ಅದು ಆ ಜನರೊಟ್ಟಿಂಗೆ ಹೋಗಿದ್ದರೆ ಅವಕ್ಕೆ ತಡವಲೆಡಿತ್ತಿತಿಲ್ಲೆ..ಯುಗಾದಿಗೆ ಅವರ ಮನಗೆ ಹೋಗದ್ರೆ ಬೇಜಾರ ಮಾಡುಗು. ಹೋಪಲೆ ಏಕೋ ಮನಸ್ಸು ಬತ್ತಿಲ್ಲೆ. ಇನ್ನೊಂದು ವಾರ ಮಾತ್ರ ಇಪ್ಪದು ಯುಗಾದಿಗೆ..’ ಹೀಂಗೆಲ್ಲ ಲೆಕ್ಕ ಹಾಕಿಂಡು ಸೀರೆ ಪುನಾ ಮಡುಸಿ ಮಡುಗಿತ್ತು.

“ಆ ಕೂಸಿನ ಎನಗೆ ಎಲ್ಲೋ ಕಂಡಾಂಗಾವ್ತು.ಅದರ ವಿಷಯ ಎಂತರಾಳಿ ನಿನಗೆ ಗೊಂತಿದ್ದಾ? ಗೊಂತಿದ್ದರೆ ಹೇಳು?” ಪುಟ್ಟತ್ತೆ ಕಾರಿಲ್ಲಿ ಹೋಪಗ ಸುಪ್ರಿಯನತ್ರೆ ವಿಜಯನ ವಿಶಯವ ಕೇಳಿದವು.

“ಎನಗೆ ಗೊಂತಿಲ್ಲೆ ಅತ್ತೇ..” ಸುಪ್ರಿಯಂಗೆ ನಿಜವಾಗಿಯೂ ವಿಜಯನ ವಿಶಯ ಹೆಚ್ಚೆಂತದೂ ಗೊಂತಿಲ್ಲೆ.
“ಆದರೆ ಅದು ಬರೀ ಪಾಪ ಮಾತ್ರ. ಅದೂದೆ ಅದರ ತಮ್ಮನುದೆ ಒಟ್ಟಿಂಗೆ ಇಪ್ಪದು. ಅದರ ಅಮ್ಮ ಬೇರೆಲ್ಲೋ ಇಪ್ಪದಾಡ. ಆನು ಹೆಚ್ಚು ಕೇಳಿದ್ದಿಲ್ಲೆ”

“ಆತು ಬಿಡು, ಇಂದೆಂತ ಉದಿಯಪ್ಪಗಳೇ ಅದರ ಮನಗೆ ಹೋಗಿ ಕೂದ್ದಾ” ಶೋಭ° ಬೇರೆ ವಿಶಯ ಮಾತಾಡ್ಲೆ ಸುರು ಮಾಡಿದವು.
ಅಷ್ಟಪ್ಪಗ ಸುಪ್ರಿಯಂಗೆ ವಿಜಯ ಹೇಳಿದ ಕತೆ ನೆಂಪಾತು. ಈ ಪುಟ್ಟತ್ತೆಗೆ ಸುಶೀಲನ ಗೊಂತಿಕ್ಕಾ? ನಡದ ಕತೆಯೇ ಆಗಿರೆಕು ಅದು ಹೇಳಿದ್ದು. ಬಹುಶಃ ಅದರ ಅಬ್ಬೆಯ ಕತೆ ಆಗಿದ್ದರೇ……! ಆದರೆ ಹೆಸರು ಬದಲ್ಸಿರೆ ಗೊಂತಾಗ. ಅಂದರೂ ಕೇಳಿ ನೋಡುವ°. ಎಷ್ಟೋ ವಿಶಯಂಗೊ ಗೊಂತಿದ್ದು ಹೇಳಿ ಮನಸಿಲ್ಲಿ ಮಡುಗಿ ಪ್ರಯೋಜನ ಇಲ್ಲೆ. ಹೇಳಿರೇ ನಾಕು ಜನಕ್ಕೆ ಗೊಂತಕ್ಕಷ್ಟೆ. ಈ ವಿಷಯ ಪ್ರಚಾರ ಮಾಡ್ಲೆ ಬೇಕಾಗಿ ಅಲ್ಲದ್ರೂ ಅಲ್ಲಿಪ್ಪ ಕೇಶವಂಗೆ ಎಂತಾತು, ಸುಶೀಲ° ಎಂತ ಮಾಡಿದ್ದಾದಿಕ್ಕು? ಆ ತಂಗಮ್ಮ, ದಿನೇಸ ಪುನಾ ಬಂದು ಎಂತ ಮಾಡಿದವು…..?

ಅದ್ಯಾವುದನ್ನೂ ವಿಜಯ ಹೇಳಿದ್ದೇಯಿಲ್ಲೆ. ಪುಟ್ಟತ್ತೆಗೆ ಏನಾರು ವಿಷಯ ಗೊಂತಿಪ್ಪಲೂ ಸಾಕು.ಶೈಲನ ಗೊಂತಿದ್ದಾಳಿ ಕೇಳುವ°.ಅದಾದರೆ ಟೀಚರು ಹೇಳಿದ್ದಲ್ಲದಾ,ಎಲ್ಯಾರು ಗೊಂತಿದ್ದರೆ….! ವಿಜಯ ಹೇಳಿದ್ದು ಅದರ ಅಬ್ಬೆಯ ಕತೆ ಆದಿಕ್ಕು. ಇಲ್ಲದ್ರೆ ಆರ ಸಂಪರ್ಕವೂ ಇಲ್ಲದ್ದ ಅದಕ್ಕೆ ನಮ್ಮ ಭಾಷೆ ,ಕ್ರಮಂಗೊ ಇಷ್ಟು ಲಾಯ್ಕಲ್ಲಿ ಗೊಂತಿಪ್ಪದು ಹೇಂಗೆ?……
ಮನಸಿಂಗೆ ಆಲೋಚನೆ ಬಂದ ಕೂಡ್ಲೇ ಅದು ಸೀದಾ
“ನಿಂಗೊಗೆ ಶೈಲನ ಗೊಂತಿದ್ದಾ ಪುಟ್ಟತ್ತೇ…” ಕೇಳಿತ್ತು.

“ಶಾರದಕ್ಕನ ಮಗಳೋ…..” ಪುಟ್ಟತ್ತೆ ಅಷ್ಟು ಕೇಳಿದ್ದದೂದೆ ಸುಪ್ರಿಯ
“ಅಣ್ಣ ಕಾರು ನಿಲ್ಸು” ಹೇಳಿ ಬೊಬ್ಬೆ ಹಾಕಿತ್ತು. ತಂಗೆ ಎಂತಕೆ ಹಾಂಗೆ ಹೇಳಿದ್ದೂಳಿ ಗೊಂತಾಗದ್ದೆ ಅವ° ಫಕ್ಕನೆ ಕಾರು ನಿಲ್ಸಿದ. ಎದುರು ಅಣ್ಣನತ್ರೆ ಕೂದೊಂಡಿದ್ದ ಅದು ಅಲ್ಲಿಂದ ಇಳುದು ಹಿಂದಾಣ ಬಾಗಿಲು ತೆಗದು ಅತ್ತೆ ಹತ್ತರೆ ಕೂದತ್ತು.

ಅತ್ತಗೆ ಶೈಲನ ಗೊಂತಿದ್ದೂಳಿ ಆದರೆ ಅದು ಖಂಡಿತ ವಿಜಯನ ದೊಡ್ಡಮ್ಮನೇ ಆದಿಕ್ಕಷ್ಟೆ. ಅವರ ವಿಷಯ ಪೂರ್ತಿ ತಿಳುದು ಆ ಕೇಶವಂಗೆ ಎಂತಾತೂಳಿ ಗೊಂತಾಯೆಕು.

“ಶೈಲನ ನಿಜವಾಗಿಯೂ ಗೊಂತಿದ್ದಾ? ಅವರ ಮನೆ ಎಲ್ಲಿ ಹೇಳಿ ಪುಟ್ಟತ್ತೇ…!”

“ಯಾವ ಶೈಲನ ನೀನು ಹೇಳುದು? ಯೇವ ಶಾರದಕ್ಕನ ಮಗಳು? ಅದರ ಸುಪ್ರಿಯಂಗೆ ಹೇಂಗೆ ಗೊಂತಿಪ್ಪದು?” ಶೋಭಂಗೆ ಒಂದೂ ಅರ್ಥಾಯಿದಿಲ್ಲೆ.

“ಅದಪ್ಪು.. ಆನೀಗ ನಿನ್ನತ್ರೆ ಹೇಳಿದ ಶೈಲನ ನಿನಗೆ ಹೇಂಗೆ ಗುರ್ತ?”
ಅಬ್ಬೆ, ಅತ್ತೆ ಇಬ್ರೂ ಕೇಳಿಯಪ್ಪಗ ಸುಪ್ರಿಯಂಗೆ ವಿಜಯ ಹೇಳಿದ ಕತೆಯ ಅವರತ್ರೆ ಹೇಳದ್ದೆ ನಿವೃತ್ತಿ ಇಲ್ಲದ್ದಾಂಗಾತು. ಅಂದರೂ ಹೇಳಿದ್ದಿಲ್ಲೆ ಅದು.

“ಎಂತ ಇಲ್ಲೆ ಪುಟ್ಟತ್ತೇ..ಆನಂತೇ ಹೇಳಿದ್ದು,ಎನಗಾರನ್ನೂ ಗುರ್ತಯಿಲ್ಲೆ. ಸುಮ್ಮನೇ ಹೇಳಿದ್ದಷ್ಟೆ”

“ಹಾಂಗಾರೆ ಮತ್ತೆ ಆಗ ಬೊಬ್ಬೆ ಹಾಕಿ ಕಾರು ನಿಲ್ಸಿದ್ದೆಂತಕೆ? ಸರಿಯಾಗಿ ಗೊಂತಿಪ್ಪದರ ಹೇಳು. ಎಂತೋ ಹುಗ್ಸಿ ಮಡುಗುತ್ತೆ ನೀನು” ಅಣ್ಣ ಒತ್ತಾಯ ಮಾಡಿದ°.

“ಹಾಂಗಲ್ಲ ಅಣ್ಣ, ಎನಗೆ ಇಂದು ವಿಜಯ ಅಪರೂಪಕ್ಕೆ ಒಂದು ಕತೆ ಹೇಳಿದ್ದು. ಆದರೆ ಅರ್ಧ ಹೇಳಿ ನಿಲ್ಸಿದ್ದು. ಆ ಕತೆಲಿ ಒಂದು ಶೈಲ,ಶಾರದಕ್ಕ ಎಲ್ಲ ಇದ್ದವು. ಆನು ಅತ್ತೆ ವಿಜಯನ ಎಲ್ಲೋ ಕಂಡ ಹಾಂಗಾವ್ತು ಹೇಳಿಯಪ್ಪಗ ಅದು ಹೇಳಿದ ಕತೆ ಅದರ ಜೀವನ ಕತೆಯಾ ಹೇಳಿ ಸಂಶಯ ಬಂತು..”

“ಹೋ….ಹಾಂಗಾ..ಹಾಂಗಾರೆ ಆ ಕತೆ ಹೇಳು. ಎಂಗಳೂ ಕೇಳ್ತೆಯ°” ಶೋಭಂಗೂ ವಿಜಯ ಹೇಳಿದ ಕತೆ ಕೇಳೆಕೂಳಿ ಆತು.

“ಅದು ಹೀಂಗೆಲ್ಲ ಹೇಳ್ಲೆಡಿಯ, ಸರಿಯಾಗಿ ಹೇಳ್ತರೆ ಸುಮಾರು ಹೊತ್ತು ಬೇಕು.ಎನ್ನ ಹಾಸ್ಟೆಲ್ ಎತ್ತಿತ್ತು. ಆನಿಲ್ಲಿ ಇಳಿತ್ತೆ” ಹೇಳಿತ್ತು ಸುಪ್ರಿಯ.

ಕತೆ ಹೇಳ್ತೆ ಹೇಳಿ ಸುರುವಿಂಗೆ ಹೇಳಿರೂ ಹಾಂಗೆ ಹೇಳಿದ್ದರಿಂದ ವಿಜಯನ ಬದುಕಿಂಗೆ ಮುಂದೆ ತೊಂದರೆ ಆದರೇಳಿ ರಜಾ ಹೆದರಿಕೆ ಸುರುವಾದ ಕಾರಣ ಉಪಾಯಲ್ಲಿ ತಪ್ಸಲೆ ನೋಡಿತ್ತದು.

ಅಂದರೂ ಅಬ್ಬೆ ಬಿಡೆಕೇ….
“ನೀನಿಂದು ಮನಗೆ ಬಾ..ನಾಳಂಗೆ ಮನೆಂದ ಅಣ್ಣ ತಂದು ಬಿಡುಗು. ಹಾಸ್ಟೆಲ್ ಗೆ ಹೋಗಿ ಬೇಗು ತೆಕ್ಕೊಂಡು ಹೋಪ°” ಅಮ್ಮನೇ ಹೇಳಿದ ಮತ್ತೆ ಸುಪ್ರಿಯಂಗೆ ಎಂತ ಹೇಳುದೂಳಿ ಗೊಂತಾಯಿದಿಲ್ಲೆ. ಹಾಸ್ಟೆಲ್ ಗೆ ಹೋಗಿ ವಾರ್ಡನ್ ಹತ್ತರೆ ಹೇಳಿಕ್ಕಿ ಬೇಗು ತೆಕ್ಕೊಂಡು ಬಂತು.
ಹೆರ ಬಪ್ಪಗ ಅಲ್ಲಿ ನೆಟ್ಟಿಕಾಯಿ ಟೆಂಪೋ ನಿಲ್ಸಿಂಡು ಕಂಡತ್ತು. ಅದರ ಡ್ರೈವರು ಹೋರ್ನು ಹಾಕಿ ದಿನಿಗೇಳಿರೂ ತಿರುಗಿ ನೋಡದ್ದೆ ಸೀದಾ ಬಂದು ಕಾರಿಂಗೆ ಹತ್ತಿ ಬಾಗಿಲು ಹಾಕಿತ್ತದು.
‘ಇನ್ನು ನಿನ್ನ ಮೋರೆ ನೋಡ್ತಿಲ್ಲೆ ಆನು. ಎನ್ನ ಬದುಕು ಎನ್ನದು’ ಹೇಳಿ ಮನಸಿಲ್ಲಿ ಹೇಳಿಂಡು ಬೆಗರಿದ ಮೋರೆಯ ಚೂಡೀದಾರ್ ನ ಶಾಲಿಲ್ಲಿ ಉದ್ದಿತ್ತು.

“ಇನ್ನು ಕತೆ ಸುರು ಮಾಡು” ಅತ್ತೆ ಹೇಳಿಯಪ್ಪಗ ಸುಪ್ರಿಯ ಮೆಲ್ಲಂಗೆ ವಿಜಯ ಹೇಳಿದ ಕತೆಯ ಪೂರಾ ಹೇಳಿತ್ತು.

“ಮತ್ತೆಂತಾತೂಳಿ ಅದು ಹೇಳಿದ್ದಿಲ್ಲೆ.  ಇಂದು ಒಂದು ಆಶ್ರಮಕ್ಕೆ ಹೋಗಿತ್ತೆ ಅದರೊಟ್ಟಿಂಗೆ. ಅಲ್ಲಿ ಅದರ ಅಬ್ಬೆ ಇದ್ದಾಳಿ ಗೊಂತಾಯಿದಿಲ್ಲೆ. ವಿಶೇಷವಾಗಿ ಆರತ್ರೂ ಮಾತಾಡುದು ಕಂಡಿದಿಲ್ಲೆ. ಅಲ್ಯಾಣ ಮೆನೇಜರ್ ಮಾತ್ರ ಭಾರೀ ಚೆಂದಕೆ ಮಾತಾಡಿತ್ತು. ಅದು ಸಣ್ಣ ಪ್ರಾಯದ್ದು.ಹಾಂಗಾಗಿ ಎನಗೆ ಒಂದೂ ಅರ್ಥಾಯಿದಿಲ್ಲೆ….” ಸುಪ್ರಿಯ ಅಷ್ಟು ಹೇಳಿ ನಿಲ್ಸಿತ್ತು.

 

ಇನ್ನೂ ಇದ್ದು ಇನ್ನಾಣ ವಾರಕ್ಕೆ >>>>

ಪ್ರಸನ್ನಾ ಚೆಕ್ಕೆಮನೆ

3 thoughts on “ಸ್ವಯಂವರ : ಕಾದಂಬರಿ : ಭಾಗ 45 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಕಥೆ ತುಂಬಾ ಲಾಯ್ಕಲ್ಲಿ ಹೋವುತ್ತ ಇದ್ದು…ವಿಜಯಂಗು ಅದು ಹೇಳಿದ ಕಥೆಗೂ ಸಂಬಂಧ ಇಕ್ಕೊ ಹೇಳಿ ಸಂಶಯ ಇತ್ತು….ಅಂತೂ ಸುಪ್ರಿಯಾ ಜೀವನ ಹಾಳಾಗದೆ ಇಪ್ಪ ಹಾಂಗೆ ಮಾಡಿತ್ತು… ಸುಶಿಯ ಮಗಳಾಗಿ ಅದರ ಬುದ್ಧಿ ಬಾರದ್ದೆ innobbange ಬುದ್ದಿ ಹೇಳುವ ಮಟ್ಟಿಗೆ ಉಷಾರಿ ಆತನ್ನೆ… ಮತ್ತೆ ಕೇಶವನ ನೋಡದೇ ಆಗ…ಅವು ಎಂತ ಮಾಡ್ತವೋ…ಮದುವೆ ಕಳ್ತ…ಒಳ್ಳೆ ಬುದ್ದಿಗಿಪ್ಪ ಹವ್ಯಕ ಕಾದಂಬರಿ ಹೇಳಿರೆ ತಪ್ಪಲ್ಲ….ಜೀವನಲ್ಲಿ ಕಷ್ಟ anubhavisire ಬುದ್ದಿ ಬಪ್ಪದು ಹೇಳುದು ಸುಮ್ಮನೆ ಅಲ್ಲ…

  2. ಕತೆ ಚೆಂದಕೆ ಓದುಸೆಂಡು ಹೋವ್ತಾ ಇದ್ದು., ಸುಶೀಲ ಎಲ್ಲಿದ್ದಪ್ಪ ಈಗ. ಕೇಶವನ ಕತೆ ಎಂತ. ಎಲ್ಲವುದೆ ಸಸ್ಪೆನ್ಸ್ ಲ್ಲಿ ಇದ್ದು. ರೈಸಲಿ. ಸ್ವಯಂವರ, ಒಳ್ಳೆ ಒಂದು ಹವ್ಯಕ ಕಾದಂಬರಿಯಾಗಿ ಹೆರಬರಲಿ.

  3. Ho… Ega kathege innu “jeevakale” batta iddu… Supriyana samshaya nijavaadde heli enna anisike.. vijaya sathyagataneyanne adara edure vivarisiddu.. vijaya adara kanneduru kanda gatanegalanne kathe roopali heliddu.. adakkaada novu sankata snehite supriyana makkoge baradde irali heli adu acchukattagi gataneya bagge tilisittu.. kathe laikalli hovta iddu chikki.. vaara vaarake kutoohala hecchavtu..👌👌

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×