Oppanna.com

ಸ್ವಯಂವರ : ಕಾದಂಬರಿ : ಭಾಗ 46 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   27/04/2020    4 ಒಪ್ಪಂಗೊ

ಸ್ವಯಂವರ ಭಾಗ 46

 

“ಈ ಕತೆ ಎನಗೆ ಗೊಂತಿಲ್ಲೆ. ಆನು ಹೇಳಿದ ಶೈಲ° ಬೇರೆ. ಛೇ..ಇದು ಯಾವ ಕೂಸೋ? ಸುಶೀಲ° ಆರ ಮಗಳೋ..ಒಬ್ಬನ ಮನೆ ಹೆಸರಾದರೂ ಗೊಂತಾಗಿದ್ದರೆ ನಮಗೆ ತಿಳಿವಲೆಡಿತ್ತಿತು. ನೀನು ಹೇಳುದು ಕೇಳುಗ ಇದು ಸತ್ಯ ಕತೆಯೇ ಆದಿಕ್ಕು ಕಾಣ್ತು. ಛೇ..ಎಂತಾರು ಒಂದು ಸುಳಿವು ಸಿಕ್ಕಿದ್ದರೆ….!! ಆದರೂ ಆ ಕೂಸಿನ ಎಲ್ಲೋ ಕಂಡ ಹಾಂಗಾವ್ತು. ಅದರ ಅಲ್ಲ..ಅದರ ಹಾಂಗಿದ್ದವರ…..” ಪುಟ್ಟತ್ತೆ ಕತೆ ಪೂರ್ತಿ ಕೇಳಿಕ್ಕಿ ಹೇಳಿದವು.

“ಈ ಕತೆ ಇಂದು ಹೇಳಿದ್ದೋ ವಿಜಯ ನಿನ್ನತ್ರೆ..” ಶೋಭಂಗೂ ಕತೆ ಕೇಳಿ ಮಾತು ಹೆರಡದ್ದಾಂಗಾತು.

“ಅಪ್ಪು, ಇಷ್ಟು ದಿನ ಅದರ ಮನೆಶುದ್ದಿ ಎಂತದೂ ಹೇಳಿದ್ದಿಲ್ಲೆ. ಎನಗೆ ಅದರ ಸರೀ ಗುರ್ತಾಗಿ ಒಂದೂವರೆ ವರ್ಷ ಆತಷ್ಟೆ. ಒಂದೆರಡು ಸರ್ತಿ ಎಂತೋ ಕೇಳಿದ್ದಕ್ಕೆ ಸರಿಯಾಗಿ ಉತ್ತರ ಕೊಟ್ಟಿದಿಲ್ಲೆ. ಅದಕ್ಕೆ ಬೇಜಾರಾದಾಂಗೆ ಕಂಡ ಕಾರಣ ಮತ್ತೆ ಆನೆಂತ ಕೇಳ್ಲೆ ಹೋಯಿದಿಲ್ಲೆ.ಇಂದೀಗ ಅದರೊಟ್ಟಿಂಗೆ ಆಶ್ರಮಕ್ಕೆ ಹೋಗಿ ಬಪ್ಪಗ ಈ ಕತೆ ಹೇಳಿದ್ದು.

“ಸುಮ್ಮನೇ ಅದೂ,ಇದೂ ಕೇಳ್ಲೆ ಹೋಗೆಡ. ಕೂಸು ತುಂಬ ಪಾಪದ್ದು. ಮನೆಶುದ್ದಿ ಹೇಳ್ಲೆ ಮನಸಿಲ್ಲದ್ರೆ ನಾವುದೆ ತೊಳಚ್ಚಿಕೊಂಡು ಹೋಪಲಾಗ” ಪುಟ್ಟತ್ತೆ ಹೇಳಿಯಪ್ಪಗ ಸುಪ್ರಿಯ ತಲೆ ಆಡ್ಸಿತ್ತು.

“ಅಂದರೂ ಈ ಕತೆ ಕೇಳುಗ ಎಲ್ಲೋ ನಡದ ಕತೆ ಹಾಂಗೆ ಆವ್ತು. ಪಾಪ ಸುಶೀಲ°. ಸಣ್ಣ ಪ್ರಾಯಲ್ಲಿ ಬುದ್ದಿ ಇಲ್ಲದ್ದೆ ಮಾಡಿದ ಒಂದು ತಪ್ಪಿಂದಾಗಿ ಎಷ್ಟು ಜೆನ ಕಷ್ಟ ಅನುಭವಿಸೆಕಾಗಿ ಬಂತು. ಅಬ್ಬೆ, ಅಪ್ಪ°, ಅಣ್ಣ ಅದರೊಟ್ಟಿಂಗೆ ಅದರ ಮಕ್ಕೊ ಅಂತೂ ಜೀವನ ಪೂರ್ತಿ ಬಂಙ ಬರೆಕು. ಆ ಕೂಸಿನ ಕೊಡ್ಲಪ್ಪಗ ಗೊಂತಕ್ಕು ಕಷ್ಟ.. ! ಎಂತೋ ಈಗಾಣ ಕಾಲದ ಕೂಸುಗಳ ಮನಸ್ಸೇ ಅರ್ಥಾವ್ತಿಲ್ಲೆ” ಪುಟ್ಟತ್ತೆಯ ಮಾತು ಸುಪ್ರಿಯನ ಮನಸ್ಸಿಂಗೆ ತಟ್ಟಿತ್ತು.
‘ಅಪ್ಪು, ಅತ್ತೆ ಹೇಳಿದ್ದೆಷ್ಟು ಸತ್ಯ. ಆನುದೆ ಅದೇ ದಾರಿಲಿ ಹೋಪಲೆ ಹೆರಟ ಜೆನ. ಎಂತೋ ದೇವರ ದಯಂದ ಮನಸ್ಸು ತಿರುಗಿತ್ತು. ಇಲ್ಲದ್ರೆ….ಅಮ್ಮ, ಅಣ್ಣ, ಅಪ್ಪ°…..ಓಹ್! ದೇವರೇ……‌‌‌!!!!

“ಬೇಜಾರಿನ ಕತೆ ಇದು . ಬಹುಶಃ ದಿನೇಸ,ತಂಗಮ್ಮ ಬಾರದ್ರೆ ಸುಶೀಲ° ಮಕ್ಕಳೊಟ್ಟಿಂಗೆ ನೆಮ್ಮದಿಲಿ ಇರ್ತಿತೋ ಏನೋ. ಅಂದರೂ ಕೇಶವನ ಮದುವೆ ಆಗಿ ಬಪ್ಪ ಕೂಸು ಹೇಂಗಿರ್ತೋ..ಒಟ್ಟಾರೆ ಸುಶೀಲ° ಮಾಡಿದ ತಪ್ಪಿಂದಾಗಿ ಅದರ ಬದ್ಕಿಡೀ ಕಣ್ಣೀರಿಲ್ಲೇ ಕೈ ತೊಳವ ಹಾಂಗಾತು”.

“ಅಪ್ಪತ್ತಿಗೇ..ಕತೆ ಕೇಳುಗ ಬೇಜಾರಾವ್ತು. ಎಲ್ಲ ಸರಿಯಾತೂಳಿ ಅಪ್ಪಗ ಆ ದಿನೇಸ ,ತಂಗಮ್ಮ ಬಂದವನ್ನೇ. ಇಲ್ಲದ್ರೆ ಸುಶೀಲಂಗೆ ಬಂಙ ಆದರೂ ಅದರ ಮಕ್ಕಳ ಬದ್ಕು ನೇರ್ಪ ಆವ್ತಿತು” ಶೋಭನೂ ಹೇಳಿತ್ತು.

“ಛೇ..ಆನೀಗ ನಿಂಗಳತ್ರೆ ಸುಮ್ಮನೇ ಕತೆ ಹೇಳಿದ್ದು. ಬೇರೆಯವಕ್ಕೆ ಗೊಂತಾದರೆ ವಿಜಯಂಗೆ ಸಮಸ್ಯೆ ಅಕ್ಕೋ ಏನೋ” ಸುಪ್ರಿಯಂಗೆ ಹೆದರಿಕೆ ಸುರುವಾತು.

“ಎಂತದೂ ಆಗ. ನೀನಂತೇ ತಲೆಬೆಶಿ ಮಾಡೆಡ. ಎಂಗೊ ಇದರ ಆರತ್ರೂ ಹೇಳ್ತಿಲ್ಲೆ. ಆದರೂ ನೀನು ಹೇಳಿದಾಂಗೆ ಅಕೇರಿಗೆ ಎಂತಾತೂಳಿ ಒಂದು ಕುತೂಹಲ ಇದ್ದು. ಸುಶೀಲ° ಎಂತ ಮಾಡಿಕ್ಕು ಹೇಳಿ. ಒಂದಾ ಮಕ್ಕಳ ಕಟ್ಟಿಂಡು ಅಲ್ಲಿಂದ ಹೆರಟಿಕ್ಕು. ಹೆಚ್ಚಿನಂಶ ಸುಶೀಲನ ಮಗಳಾದಿಕ್ಕು ವಿಜಯ. ಮತ್ತೆ ಅದಕ್ಕೆ ಕೇಶವನ ಶುದ್ದಿ ಗೊಂತಿಪ್ಪದು ಹೇಂಗೆ?” ಪುಟ್ಟತ್ತೆ ಹೇಳಿಯಪ್ಪಗ ಅದು ಸರಿಯಾದಿಕ್ಕು ಹೇಳಿ ಆತು ಎಲ್ಲೋರಿಂಗು.

“ಆತು ಈಗ ಆ ವಿಶಯ ಬಿಡುವ°. ಸುಶೀಲನ ಕತೆ ಕೇಳಿ ಬೇಜಾರದ್ದಕ್ಕೆ ಈಗ ಒಂದರಿ ದೊಡ್ಡತ್ತೆ  ಮನಗೆ ಹೋಗಿಂಡು ಹೋಪನಾ? ಅಲ್ಲಿಗೆ ಹೋಗಿ ಮಾವನತ್ರೆ,ಅತ್ತೆ ಹತ್ತರೆ ಪಟ್ಟಾಂಗ ಹೊಡದಪ್ಪಗ ಒಂದರಿ ಕೊಶೀ ಅಕ್ಕು….ಸುದೀಪ ಮನೆಲಿಪ್ಪಲೂ ಸಾಕು” ಸುಪ್ರಿಯನ ನೋಡಿಂಡು ಅಣ್ಣ ಕೇಳಿಯಪ್ಪಗ ಮದಲಾಗಿದ್ದರೆ ಅದಕ್ಕೆ ಕೋಪ ಬತ್ತಿತು. ಈಗ ಏಕೋ ಒಂದರಿ ಸುದೀಪನ ಕಾಣೆಕೂಳಿ ಆತು ಅದಕ್ಕುದೆ.

“ಅದಕ್ಕೆಂತಾತು..ನಾವು ಹೋಪಗ ಅಪ್ಪಂಗೆ ಹಟ್ಟಿ ಕೆಲಸ ಎಲ್ಲ ಮಾಡಿ ಆದಿಕ್ಕು. ಹಾಂಗಾಗಿ ತಡವಪ್ಪಲೆ ಹೇಳಿ ಎಂತೂ ಇಲ್ಲೆ. ಸುದೀಪಂಗೆ ಗವರ್ಮೆಂಟು ಕೆಲಸ ಸಿಕ್ಕಿದ ಮತ್ತೆ ಅವನ ಕಂಡಿದೇ ಇಲ್ಲೆ. ಪುಟ್ಟತ್ತೆಗೂ ಒಂದರಿ ಹೋದ ಹಾಂಗಾತು” ಅಮ್ಮನೂ ಒಪ್ಪಿಯಪ್ಪಗ ಸುಪ್ರಿಯಂಗೆ ಮನಸ್ಸಿನ ಮೂಲೆಲಿ ರಜಾ ಸಂತೋಶ.

“ಅವಂಗೇವಗ ಗವರ್ಮೆಂಟು ಕೆಲಸ ಸಿಕ್ಕಿದ್ದು? ಎನಗೆ ಗೊಂತೇ ಆಯಿದಿಲ್ಲೆ. ಎಲ್ಲಿ?” ಸುಪ್ರಿಯಂಗೆ ನಿಜವಾಗಿಯೂ ವಿಶಯವೇ ಗೊಂತಿತ್ತಿಲ್ಲೆ.

“ಕಳುದ ಸರ್ತಿ ಬಂದಪ್ಪಗ ಆನು ನಿನ್ನತ್ರೆ ಹೇಳಿದ್ದೆ. ಅಂಬಗ ಕೆಮಿಕೊಟ್ಟಿದಿಲ್ಲೆ. ನಿನ್ನ ಕೋಲೇಜಿನ ಹತ್ತರೆ ಇಪ್ಪ ಆಯುರ್ವೇದ ಆಸ್ಪತ್ರೆಲಿ ಕೆಲಸ. ಮಧ್ಯಾಹ್ನ ವರೆಗೆ ಹೋದರಾತು. ವಾರಲ್ಲಿ ಎರಡು ರಜೆ…….”!!” ಅಮ್ಮ ಹೇಳುಗ ಅದಕ್ಕೆ ರಜಾ ನೆಂಪಾತು. ಅಂಬಗ ತಲೆಲಿದ್ದ ಜೆನವೇ ಬೇರೆ. ಸುದೀಪನ ತಮಾಷೆ ಮಾಡ್ಲೆ ಲಾಯ್ಕ ಆಗಿಂಡಿದ್ದದು. ವಿಜಯ ಯೇವಗಲೂ ಹೇಳ್ಲಿದ್ದು
‘ಅವನ ಕಲಿಯುವಿಕೆಗಾದರೂ ಬೆಲೆ ಕೊಡೆಕು’ ಹೇಳಿ. ಅದು ಸತ್ಯ. ಗವರ್ಮೆಂಟು ಕೆಲಸ ಸಿಕ್ಕೆಕಾರೆ ಅಷ್ಟು ಸುಲಭಯಿಲ್ಲೆ. ಅವು ನಡಶುವ ಪರೀಕ್ಷೆ, ಇಂಟರ್ ವ್ಯೂ ಎಲ್ಲದರಲ್ಲೂ ಪಾಸಾಯೆಕು.

ಸುದೀಪನ ಹಾಂಗಿದ್ದ ಡಾಕ್ಟರನ ಬಿಟ್ಟಿಕ್ಕಿ ಎನ್ನ ಮನಸ್ಸು ಹೋದ್ದೆಲ್ಲಿಗೆ! ವಿಜಯ ಇಂದು ಈ ಕತೆ ಹೇಳದ್ರೆ ಆ ಡ್ರೈವರನೊಟ್ಟಿಂಗೆ ಹೋಪ ಪ್ಲಾನು ಮಾಡಿಂಡಿರ್ತಿತೆ. ಪುಣ್ಯಕ್ಕೆ ಅದರೊಟ್ಟಿಂಗೆ ಎಲ್ಲಿಗೂ ಹೋಯಿದಿಲ್ಲೆ. ಎಲ್ಲ ಮೊಬೈಲ್ ಚಾಟಿಂಗಿಲ್ಲೇ ಮುಗುದ್ದು. ಅಂದರೂ ಎಷ್ಟು ಗಂಟೆ ಹೊತ್ತು ಚಾಟ್ ಮಾಡಿಂಡಿತ್ತಿದ್ದೆ. ಶ್ಶೋ….! ಎನ್ನ ಅವಸ್ಥೆಯೇ..! ಅದು ಯೇವ ಜಾತಿ,ಎಷ್ಟು ಕಲ್ತಿದು ಒಂದೂ ಗೊಂತಿಲ್ಲೆ. ಎಲ್ಯಾರು ಅದರೊಟ್ಟಿಂಗೆ ಬದ್ಕುದು ಹೇಳಿ ಹೆರಟು ಹೋಗಿದ್ದರೆ…..!
ಅದರ ಗ್ರೇಶುಗಳೇ ಮೈ ಝುಮ್ ಹೇಳಿ ಆತು.

ಅದರ ಬಿಟ್ಟು ಜೀವನವೇ ಇಲ್ಲೆ ಹೇಳಿ ಗ್ರೇಶಿಂಡು ಆಕಾಶಲ್ಲಿ ತೇಲಿಂಡಿದ್ದ ಕಾರಣ ಇಲ್ಲಿ ಭೂಮಿಲಿ ಎಂತಾಯಿದು ಹೇಳಿ ಗೊಂತಾಗದ್ದದು. ಅದರ ಮದುವೆ ಆಗಿ ಹೋಗಿದ್ದರೆ ಅಬ್ಬೆ ಅಪ್ಪ° ಎಂತ ಮಾಡ್ತಿತವು? ಪಾಪ ಅಣ್ಣ! ಸುದೀಪನೂ ಹಾಂಗೇ. ಅವನ ಮದುವೆ ಅಪ್ಪದೂಳಿ ಗೊಂತಿದ್ದರೂ ಒಂದು ದಿನವೂ ಹೆಚ್ಚು ಸಲಿಗೆಲಿ ಮಾತಾಡಿದ್ದಾಯಿಲ್ಲೆ. ಈಗ ಕೆಲವು ಸಮಯಂದ ಕಂಡಪ್ಪಗ ಒಂದರಿ ಸಣ್ಣಕೆ ಏನಾರು ಒಂದು ಮಾತು ಕೇಳುದು ಬಿಟ್ರೆ ಬೇರೆ ಮಾತೇ ಇಲ್ಲೆ. ಅದಕ್ಕೇ ಮನಸ್ಸು ಆ ಡ್ರೈವರನೊಟ್ಟಿಂಗೆ ಹೋದ್ದು. ಅಬ್ಬಾ…ಎಷ್ಟು ಚಂದಕೆ ಮಾತಾಡ್ತು. ಇಪ್ಪ ಸಿನೆಮಾ ಡಯಲೋಗು ಪೂರಾ ಅದರ ಬಾಯಿಲಿ ಬಂದದರ ಕೇಳಿಂಡು ಆನು……ಛೇ..’

“ಸುದೀಪನ ಬೇಡ ಹೇಳುವ ಕೂಸುಗೊ ಇರವು. ನೀನು ಅಂತೇ ಭವಿಷ್ಯ ಹಾಳು ಮಾಡೆಡ. ಹಗಲುಗನಸು ಯೇವಗಲೂ ನಿಜ ಆಗ” ವಿಜಯ ಒಂದರಿ ಹೇಳಿದ ಮಾತು ನೆಂಪಾತು.
ಒಂದೆರಡು ಸರ್ತಿ ಕುಶಾಲಿಂಗೆ ಬುದ್ದಿ ಹೇಳಿರೂ ಮತ್ತೆ ಎಂತದೂ ಹೇಳಿದ್ದಿಲ್ಲೆ ಅದು. ಇಂದೀಗ ಆಶ್ರಮಕ್ಕೆ ಕರಕ್ಕೊಂಡು ಹೋದ್ದು.
ನಿಜವಾದ ಬುದ್ಧಿವಂತೆ ಅದು. ಇಲ್ಲದ್ರೆ ಎನಗೆ ಇಷ್ಟೆಲ್ಲಾ ತಲಗೆ ಹೋವ್ತಿತಿಲ್ಲೆ. ಅದರ ಅಮ್ಮ ಆ ಆಶ್ರಮಲ್ಲಿ ಇಪ್ಪದಾದಿಕ್ಕು. ಆದರೂ ಸೀದಾ ಕೇಳ್ಲೆ ಲಾಯ್ಕ ಆಯಿದಿಲ್ಲೆ. ಎಷ್ಟು ಹತ್ರಾಣವು ಆದರೂ ಕೆಲವು ವಿಶಯ ಹೇಳ್ಲೆ ಇಷ್ಟ ಪಡ್ತವಿಲ್ಲೆ. ವಿಜಯ ಹಾಂಗೇ. ಎನ್ನ ಬಿಟ್ಟು ಬೇರೆ ಆರ ಸಂಪರ್ಕವೂ ಇಲ್ಲೆ ಅದಕ್ಕೆ. ಹೊಲಿಗೆ ಮಾಡುವ ಕಾರಣ ಕೆಲವು ಜನರ ಗುರ್ತಯಿಕ್ಕು. ಆದರೂ ಒಂದೇ ಒಂದು ಜನರ ಬಗ್ಗೆ ಎಂತದೂ ಬಾಯಿ ಬಿಟ್ಟು ಹೇಳ್ತಿಲ್ಲೆ. ಒಂದೊಂದೇ ಆಲೋಚನೆಗೊ ಅದರ ತಲೆಲಿ ತುಂಬಿ ಕಾರಿಲ್ಲಿಪ್ಪವು ಮಾತಾಡಿದ್ದೊಂದೂ ಅದಕ್ಕೆ ಕೇಳಿದ್ದೇ ಇಲ್ಲೆ.

“ಹೋ..ಭಾರೀ ಅಪರೂಪದ ಅತಿಥಿಗೊ ಬಯಿಂದವು. ಬನ್ನೀ..ಬನ್ನೀ….” ಕಾರು ನಿಲ್ಸಿದಲ್ಲಿಗೆ  ಬಂದು ಮಾವ° ಹೇಳಿಯಪ್ಪಗ ಸುಪ್ರಿಯನ ಆಲೋಚನೆಯ ಸರಪ್ಪುಳಿ ತುಂಡಾತು.

“ಇದಾ..ಇಲ್ಲಿ ಆರು ಬಯಿಂದವು ನೋಡು” ಮಾವ ಕೊಶೀಲಿ ಒಳ ಇಪ್ಪ ಅತ್ತೆಯ ದಿನಿಗೇಳಿ ಹೇಳುಗ ಅವರ ಪ್ರೀತಿಗೆ ಮನಸ್ಸು ತುಂಬಿ ಬಂತು ಸುಪ್ರಿಯಂಗೆ.

“ವಿಶೇಶವಾಗಿ ಆರೂ ಇಲ್ಲೆ ಎಂಗಳೇ ಬಂದದು” ಹೇಳಿಂಡು ಪುಟ್ಟತ್ತೆಯೂ, ಅಮ್ಮನೂ ಒಳ ಹೋಪಗ ಸುಪ್ರಿಯನೂ ಅವರೊಟ್ಟಿಂಗೆ ಹೋತು.

“ಹೋ..ಇದಾರು..ಸುಪ್ರಿಯನೂ ಇದ್ದೆಯಾ? ” ಅತ್ತೆ ಪ್ರೀತಿಲಿ ಅದರ ಕೈ ಹಿಡುದವು .
‘ಓಹ್! ಇವಕ್ಕೆ ಎನ್ನತ್ರೆ ಎಷ್ಟು ಪ್ರೀತಿ! ‘ ಅದರ ಕಣ್ಣು ಸುದೀಪನ ಹುಡ್ಕಿತ್ತು. ಅಂದರೂ ಬಾಯಿ ಬಿಟ್ಟು ಕೇಳುದೇಂಗೆ? ಅವ° ಈಗ ಕಂಡರೂ ಹೆಚ್ಚು ಮಾತಾಡ°. ಹಾಂಗಿದ್ದ ಸಲಿಗೆ ಅವನತ್ರೆ ಇನ್ನೂ ಇಲ್ಲೆ.

“ಎಂತ ಕೂಸೇ ಸುಮ್ಮನೇ ನಿಂದದು. ನಾಳಂಗೆ ರಜೆಯೋ ನಿನಗೆ?” ಮಾವ° ಕೇಳಿಯಪ್ಪಗ
“ಅಲ್ಲ ಮಾವಾ….” ಹೇಳಿಂಡು ಅವರತ್ರೆ ಪಟ್ಟಾಂಗ ಹೊಡವಲೆ ಕೂದತ್ತು.

“ಎಲ್ಲಿದ್ದ° ಮದಿಮ್ಮಾಯ° ಕಾಣ್ತಿಲ್ಲೆ” ಪುಟ್ಟತ್ತೆ ಸುಪ್ರಿಯನ ನೋಡಿ  ಕುಶಾಲು ಮಾಡಿಂಡು ಮಾವನತ್ರೆ ಕೇಳಿದವು.

“ಹ್ಹ..ಹ್ಹ…ಮದಿಮ್ಮಾಯನಾ….ಹಾಂಗೆ ಹೇಳ್ಲೆ ಅವಂಗೆ ಕೂಸು ನಿಗಂಟು ಮಾಡಿಕ್ಕಿ ಬಂದದೋ ನೀನು” ಮಾವನೂ ಅದೇ ರೀತಿಲಿ ಕುಶಾಲು ಮಾತಾಡಿದವು.

“ನಿಗಂಟೆಂತರ!! ಇದಾ….ಕರಕ್ಕೊಂಡೇ ಬಯಿಂದೆ…” ಪುಟ್ಟತ್ತೆ ಹಾಂಗೆ ಹೇಳುಗ ಸುಪ್ರಿಯನ ಮೋರೆ ಕೆಂಪಾತು. ಅಲ್ಲಿಂದ ಮೆಲ್ಲಂಗೆ ಎದ್ದು “ಅತ್ತೇ….” ಹೇಳಿಂಡು ಒಳ ಹೋಪಗ ಹೆರಾಂದ ಮಾವ° ಹೇಳಿದ ಒಂದು ಮಾತು ಅದರ ಮನಸ್ಸಿಂಗೆ ತಟ್ಟಿತ್ತು.

“ಅದರ ಎದುರಂದ ಹಾಂಗೆಲ್ಲ ಹೇಳೆಡಿ ಅತ್ತಿಗೇ. ಈಗಾಣ ಕಾಲದ ಕೂಸುಗಳ ಮನಸ್ಸಿಲ್ಲಿ ಎಂತ ಇದ್ದು ಗೊಂತಾಗ. ಎಂಗೊ ಹಿರಿಯರು ಮಾತಾಡಿದ್ದು ಅಪ್ಪು. ಅಂದರೂ ಅದರ ಒಪ್ಪಿಗೆ ಸಿಕ್ಕದ್ದೆ ಮುಂದುವರಿವದು ಬೇಡ ಹೇಳಿ ಮಗ° ಹೇಳಿದ್ದ°. ಅವನತ್ರೂ ಹೆಚ್ಚು ಮಾತಾಡ್ತಿಲ್ಲೆ ಅದು. ಸುಮ್ಮನೇ ಅವರ ಮನಸಿಲ್ಲಿ ಇಲ್ಲದ್ದದರ ನಾವಾಗಿ ತುಂಬುಸಿ,ಸಂಬಂಧ ಹಾಳು ಮಾಡಿಯೊಂಬದು ಬೇಡಾಳಿ ಈಗ ಆ ಶುದ್ದಿ ಬಿಟ್ಟು ಕೂಯಿದೆಯ° ಎಂಗ”

ಸುಪ್ರಿಯಂಗೆ ಮೋರಗೆ ಬಡುದಷ್ಟು ಸಂಕಟ ಆತು. ಮಾವ° ಹೇಳಿದ್ದು ಸತ್ಯವೇ. ಸುದೀಪನತ್ರೆ ಮಾತಾಡುದೇ ಎನಗೆ ಇಷ್ಟ ಅಲ್ಲ..ಅದವಂಗೆ ಗೊಂತಾಯಿದು. ಹಾಂಗೆ ಅವ° ದೂರ ನಿಂದದಂಬಗ. ಮನೆಲಿ ಅಬ್ಬೆ ,ಅಪ್ಪ° ಈಗಲೂ ಸುದೀಪನೇ ಅಳಿಯ ಹೇಳಿ ಗ್ರೇಶಿಂಡಿದ್ದವು. ಆನು ಸುದೀಪನ ತಮಾಶೆ ಮಾಡುದು, ಬೈವದು ಬರೀ ಮಕ್ಕಳಾಟಿಕೆ ಹೇಳಿ ಜಾನ್ಸಿದ್ದವು. ಛೇ..ಎನ್ನ ತಪ್ಪು ಈಗ ಎನಗೆ ಅರ್ಥಾಯಿದು. ಸುದೀಪ° ಒಬ್ಬನೇ ಸಿಕ್ಕಿರೆ ಅವನತ್ರೆ ಮಾತಾಡೆಕು. ತಪ್ಪಾತು ಹೇಳೆಕು. ಮದುವೆ ಆವ್ತರೆ ಅವನ ಮಾಂತ್ರ…..’ ಹಾಂಗೆ ಗ್ರೇಶಿರೂ ‘ಎನ್ನ ತೀರ್ಮಾನಂಗೊಕ್ಕೆ ಯೇವ ಬಲವೂ ಇಲ್ಲೆ, ದೊಡ್ಡ ಗಾಳಿಗೆ ಹಾರಿ ಹೋಪ ಕಾಗದದ ತುಂಡಿನ ಹಾಂಗಿಪ್ಪದು. ವಿಜಯನ ಹಾಂಗಿದ್ದ ಗಟ್ಟಿ ಮನಸ್ಸು ಆಯೆಕಾರೆ ಎಂತ ಮಾಡೆಕಕ್ಕು…..’ ಸುಮ್ಮನೇ ಮನೆಯ ಹಿಂದಾಣ ಬಾಗಿಲಿನ ಹತ್ತರೆ ಹೋಗಿ ನಿಂದು ಅಲ್ಲಿಪ್ಪ ಹೂಗಿನ ಸೆಸಿಗಳ ನೋಡ್ಲೆ ಸುರು ಮಾಡಿತ್ತು.

“ಇದೆಂತಾ ಇಲ್ಲಿ ಒಬ್ಬನೇ ನಿಂದುಕೊಂಡು ಎಂತ ಮಾಡುದು? ಅಲ್ಲಿ ಎಲ್ಲೋರಿಂಗು ಕಾಪಿ ಕುಡುದಾತು” ಹತ್ತರಂದ ಕೇಳಿದ ದನಿಗೆ ತಲೆನೆಗ್ಗಿ ನೋಡಿದ ಸುಪ್ರಿಯಂಗೆ ಅಲ್ಲಿ ಸುದೀಪನ ಕಂಡಪ್ಪಗ ಸಂತೋಶವು,ದುಃಖವೂ ಒಟ್ಟಿಂಗೆ ಬಂದು ಕಣ್ಣಿಲ್ಲಿ ನೀರು ತುಂಬಿ ಗೆಂಟ್ಲಿಂದ ಸ್ವರ ಹೆರಡದ್ದಾಂಗಾತು.

ಇನ್ನೂ ಇದ್ದು  ಇನ್ನಾಣ ವಾರಕ್ಕೆ >>>>

ಪ್ರಸನ್ನಾ ಚೆಕ್ಕೆಮನೆ

4 thoughts on “ಸ್ವಯಂವರ : ಕಾದಂಬರಿ : ಭಾಗ 46 – ಪ್ರಸನ್ನಾ. ವಿ. ಚೆಕ್ಕೆಮನೆ

  1. ವಾರಂರ ವಾರಕ್ಕೆ ಕುತೂಹಲ ಹೆಚ್ಚು ಮಾಡ್ತಾ ಹೋವುತ್ತು.ಗೆಳತಿಯ ಜೀವನ ಸರಿ ಮಾಡಿದ ವಿಜಯಂಗೂ ಒಳ್ಳೆ ಜೀವನ ಸಿಕ್ಕಲಿ.

  2. ಒಳ್ಳೆ ಚೆಂದಕ್ಕೆ ಕಥೆ ಬೈಂದು…gelethiya ಜೀವನ ಸರಿ ಮಾಡಿದ ವಿಜಯ ಎಷ್ಟು ಬೇನೆ ತಿಂದಿಕ್ಕು ammanottinge… ಈ ಕಥೆಲಿ ಬಂದ ಎರಡು ಕುಟುಂಬ…ಕೂಸುಗಳ ಮನಸ್ಸಿನ ಭಾವನೆ…ಯಾವುದನ್ನು ವಿಮರ್ಶೆ maadadde ಎನ್ನದೆ ಸರಿ ಹೇಳಿ ಮುಂದೆ ಹೋಪ ಕೂಸುಗಳ ಜೀವನ ಎಂಥ ಆವುತ್ತು …ಪ್ರತಿ ಒಬ್ಬನ ಮಾನಸಿಕ ಭಾವನೆ ವಿವರ್ಸಿ ಬರದ್ದು ಭಾರಿ ಲಾಯ್ಕಲ್ಲಿ ಮೂಡಿ ಬೈಂದು… ಸುಶಿ ಕುಟುಂಬ ಎಂತಾತು ಹೇಳಿ ಕಾಯ್ತಾ ಇದ್ದೆಯೋ…ಕೇಶವನ ಸಂಗತಿ..ಎಲ್ಲವೂ ಕುತೂಹಲಲ್ಲಿ ಕಾವ ಹಾಂಗೆ ಆತನ್ನೆ…ಗೆಳತಿಯರ ಆತ್ಮೀಯತೆ ಸೂಪರ್..ಈ ಕಥೆ ಓದಿದವಕ್ಕೆ ಖಂಡಿತ ಬುದ್ಧಿ ಬಕ್ಕು….

  3. ಸುಶೀಲನ ಕತೆ ಕೇಳಿ ಒಂದು ಕೆಟ್ಟದಾರಿ ಹಿಡಿಯಲಿದ್ದ ಒಪ್ಪಕ್ಕಂಗೆ ಒಳ್ಳೆ ಬುದ್ದಿ ಬಂದದು ಕುಶಿಯಾತು. ಉತ್ತಮ ಸಂದೇಶ ಇಪ್ಪ ಕತೆ. ಮುಂದುವರಿಯಲಿ.

  4. Hadihareyada koosina manasili bappantaha ella bhaavanegalannu spastavaagi ee Kaadambarili chitrisiddi… Bannada mathinge marulaagi haadi thappida esto gatanego vaastavali nadaddu.. hangeye kaanada devaru daaari thappuva koosina jeevanava sari madidadu iddu.. supriyana gelati madida onde olle kelasanda supriyana idee kutumba edursekkada aaghaathava thapsithu..
    Istelladara naduve sushee entatu helva kuthoohala dine dine hecchavta iddu chikki😄

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×