Oppanna.com

ಸ್ವಯಂವರ : ಕಾದಂಬರಿ : ಭಾಗ 09 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   22/07/2019    0 ಒಪ್ಪಂಗೊ

“ಎಂತಬ್ಬೇ ಇನ್ನೂ ಒರಗಿದ್ದಿಲ್ಲೆಯಾ? ಗಂಟೆ ಎರಡಾತು.ಇನ್ನೂ ಒರಗದ್ರೆ ಉದಿಯಪ್ಪಗ ಅಪ್ಪನ ನೋಡ್ಲೆ ಹೋಪ ಹೊತ್ತಿಂಗೆ ಎಚ್ಚರಿಕೆ ಆಗ” ಶೈಲ ರೂಮಿನ ಒಳಾಂಗೆ ಬಪ್ಪಗ ಅಲ್ಲಿಪ್ಪ ಮಂಚಲ್ಲಿ ಗೆಡ್ಡಕ್ಕೆ ಕೈ ಕೊಟ್ಟುಕೊಂಡು ಎಂತದೋ ಆಲೋಚನೆ ಮಾಡಿಂಡಿಪ್ಪ ಅಬ್ಬೆ ಹತ್ತರೆ ಹೇಳಿತ್ತು.

“ಎಂತರ ಒರಗುದು? ಎಂಗೊ ಒರಗದ್ದೆ ಐದಾರು ವೊರುಷಾತು.ಮನುಗುತ್ತು, ಏಳುತ್ತು ಹೇಳಿ ಮಾಂತ್ರ.”
ಅಬ್ಬೆ ಹೇಳದ್ರೂ ಆ ವಿಶಯ ಶೈಲಂಗೆ ಗೊಂತಿದ್ದು ‌.ಹಾಂಗೆ ಹೇಳಿ ಮತ್ತೆ ಮತ್ತೆ ಹಳೆಯ ಕತೆಗಳ ಒಕ್ಕಿ ಹಾಕಿ ಅವರ ಮನಸಿಂಗೆ ಹೆಚ್ಚು ಬೇನೆ ಕೊಡ್ಲೆ ಮನಸಿಲ್ಲದ್ದೆ ಅಬ್ಬೆಯ ಹತ್ತರೆ ಕೂದತ್ತು.

“ನೀನೆಂತಾರು ಉಂಡೋ,ತಿಂದೋ ಮಾಡಿದ್ದೆಯಾ ಅಬ್ಬೆ?ಅಪ್ಪಂಗೆಂತಾಗ.ತಲೆಬೆಶಿ ಮಾಡೆಡ. ನೀನು ಈ ಬನ್ನು ತಿನ್ನು” ಒಪ್ಪಕ್ಕಂಗೆ ಬೇಕಾರೆ ಕೊಡ್ಲೆ ಹೇಳಿ ತೆಗದ ಬನ್ನಿನ ಅಬ್ಬೆಯ ಕೈಗೆ ಕೊಟ್ಟತ್ತದು.

“ಎನಗೆಂತದೂ ಬೇಡ ಮೋಳೇ..ಹಶುವಿಲ್ಲೆ..” ಶಾರದಕ್ಕ ಮಂಚಕ್ಕೆ ಬೆನ್ನು ಎರಗಿಸಿ ಕೂದ ಜೆನ ರಜಾ ಗೋಡೆ ಕರೇಂಗೆ ಎರಗಿ ಮಗಳಿಂಗೆ ಸರಿಯಾಗಿ ಕೂಬಲೆ ಜಾಗೆ ಮಾಡಿ ಕೊಟ್ಟವು.

“ನೀನು ಮನುಗಬ್ಬೇ ಎಷ್ಟೊತ್ತು ಹೀಂಗೇ ಕೂಬದು?”

“ಎಂತದೂ ಬೇಡ, ಕೂದರೂ ,ಮನುಗಿರೂ ಒರಕ್ಕು ಬರೆಕನ್ನೇ”

ಹೆಚ್ಚು ಮಾತಾಡಿ ಅಬ್ಬೆಯ ಮನಸಿಂಗೆ ಬೇಜಾರು ಮಾಡ್ಸುದು ಬೇಡಾಳಿ ಶೈಲ ತಳಿಯದ್ದೆ ಕೂದತ್ತು.ಶಾರದಕ್ಕನೂ ಮಾತಾಡದ್ದೆ ಕೂದರೂ ಅವರ ತಲೆಲಿ ಮಾಂತ್ರ ಸಾವಿರ ಆಲೋಚನೆಗೊ ತಿರುಗಿಂಡಿದ್ದತ್ತು.

ಬಾಯಿಲಿ ಆರತ್ರೂ ಹೇಳದ್ರೂ ‘ಹೇಳದ್ದೆ ಕೇಳದ್ದೆ ಪ್ರೀತಿಸಿದ ಜೆನರೊಟ್ಟಿಂಗೆ ಓಡಿ ಹೋದ ಸುಶೀಲೆಯ ನೆಂಪು, ಅದೇ ಯೇಚನೆಲಿ ಹಾಸಿಗೆ ಹಿಡುದ ಗೆಂಡ, ಸಿಕ್ಕಿದ ಕೆಲಸವನ್ನು ಬಿಟ್ಟಿಕ್ಕಿ ಬಂದ ಮಗ…….’ ಆರು ಎಷ್ಟು ಬೇಡಾ ಹೇಳಿರೂ ಅವರ ಮನಸು ಐದು ನಿಮಿಷ ಸುಮ್ಮನೆ ಕೂದರೂ ಹಿಂದಂಗೇ ಹೋಪದು.ಹಾಂಗೆ ಹೋದ ಮನಸ್ಸಿನ ಇತ್ಲಾಗಿ ಬಲ್ಗಿ ತಪ್ಪದು ಅಷ್ಟು ಸುಲಭಯಿಲ್ಲೆ.

ಇಂದೂದೆ ಹಾಂಗೇ ಆತು.ಶೈಲ ಅಬ್ಬಗೆ ಬಚ್ಚುತ್ತರಾತು ರಜ ಒರಗಲಿ ಹೇಳಿ ಮಾತಾಡದ್ದೆ ಕೂದ್ದದು.ಅಂದರೂ ಶಾರದಕ್ಕನ ಮನಸು ಕೇಳೆಕನ್ನೇ. ಹಿಂದೆ ಹಿಂದೆ ಹೋಗಿ ಕೆಲವು ವರುಶದ ಹಿಂದಂಗೆತ್ತಿತ್ತು.

ಶಾರದೆಗೆ ಹದಿನೆಂಟು ವೊರುಶಪ್ಪಗ ಮೂಲೆಮನೆ ಭಾಮೆ ಅಕ್ಕನ ಅಕೇರಿಯಾಣ ಮಗ ಚಂದ್ರಶೇಖರನ ಕೈ ಹಿಡುದು ಆ ಮನಗೆ ಸೊಸೆಯಾಗಿ ಬಂದದು. ನಾಲ್ಕು ಜನ ಭಾವನೋರಕ್ಕೊ ,ಮೂರು ಜನ ಮೈದಿನಿಯಕ್ಕೊ.ಶಾರದೆ ಬಪ್ಪಗ ಕೂಸುಗಳದ್ದೆಲ್ಲ ಮದುವೆಯೂ ಕಳುದು ಎಲ್ಲೋರಿಂಗು ಪಾಲುದೆ ಆಯಿದು. ಚಂದ್ರಶೇಖರ ಮನೆಲಿ ಸಣ್ಣ ಆದರೂ ಚಂದ್ರಣ್ಣ ಹೇಳಿಯೇ ದಿನಿಗೇಳುವ ಕಾರಣ ಅವ° ಊರಿಂಗೇ ಚಂದ್ರಣ್ಣ.

ಅಪ್ಪ° ಇಲ್ಲದ್ದ ಕಾರಣ ಅಬ್ಬೆಯೂ ಮಗನು ಮಾಂತ್ರ ಇದ್ದದು ಹಳೆಯ ತರವಾಡು ಮನೆಲಿ.ಶಾರದೆಗೂ ಚಂದ್ರಣ್ಣಂಗೂ ಹದಿನಾಲ್ಕು ವೊರುಷ ಅಂತರ ಇದ್ದತ್ತು.ಆ ಕಾಲಲ್ಲಿ ಎಲ್ಲೋದಿಕ್ಕೆಯು ಅದು ಸಾಮಾನ್ಯ.

“ಮಾಣಿ ಉಶಾರಿದ್ದನೋ,ಕೂಸಿನ ನೋಡಿಕೊಂಬ ತಾಕತ್ತು ಇದ್ದೋ” ಹೇಳಿ ಮಾತ್ರ ನೋಡುವ ಕಾಲ ಅದು.ಅಬ್ಬೆ ಇಲ್ಲದ್ದೆ ಚಿಕ್ಕಮ್ಮನ ಆರೈಕೆಲಿ ಹೇಂಗು ಹೇಂಗೋ ಬೆಳದ ಕೂಸಿಂಗೆ ಈ ಮನಗೆ ಎತ್ತಿಯಪ್ಪಗ ಸ್ವರ್ಗಕ್ಕೆ ಎತ್ತಿದಾಂಗಾತು.

ಅತ್ತೆ ಭಾಮೆಯಕ್ಕನೂ ಸೊಸೆ ಸಣ್ಣ ಹೇಳಿ ತುಂಬ ಕೊಂಡಾಟಲ್ಲಿ ನೋಡಿಕೊಂಡವು.ಗೊಂತಿಲ್ಲದ್ದ ಕೆಲಸಂಗಳ ಅತ್ತೆ ಹತ್ತರೆ ಕೇಳಿ ನೇರ್ಪ ಮಾಡ್ಲೆ ಕಲಿವ ಅದರ ಒಳ್ಳೆ ಗುಣ ಭಾಮೆಯಕ್ಕಂಗೆ ಭಾರೀ ಕೊಶಿಯಾತು.

ಬೆಳಿ ಬೆಳಿಯಾಗಿ ಉರುಟುರುಟಾಗಿ ಬೊಂಬೆ ಹಾಂಗಿದ್ದ ಶಾರದೆಯ ಚಂದ್ರಣ್ಣನೂ ಪ್ರೀತಿಲಿ ನೋಡಿಕೊಂಡ.

ಮನೆಲಿ ಪ್ರತಿ ವೊರುಷವೂ ಅಂಬಗಂಬಗ ಪೂಜೆ,ಹೋಮ,ಹಬ್ಬ, ತಿಥಿ ..ಹೇಳಿ ಹೆಚ್ಚಾಗಿ ಕಾರ್ಯಕ್ರಮಂಗೊ ನಡೆತ್ತಾ ಇದ್ದತ್ತು. ಅದಕ್ಕೆಲ್ಲ ಮನೆಯವು ಎಲ್ಲೋರು ಸೇರುಗು.
ನಿತ್ಯ ದೇವರಪೂಜೆಯೂ ಇದ್ದು.

ಅಷ್ಟಮಿ,ಚೌತಿ,ಹಬ್ಬ ಹೇಳಿ ವಿಶೇಷ ಇದ್ದರೆ ದೇವರಿಂಗೆ ಬೇರೆ ಬೇರೆ ರೀತಿಯ ನೈವೇದ್ಯ ಎಲ್ಲ ಆಯೆಕು.ಶಾರದೆ ಎಷ್ಟು ಉಶಾರಿ ಹೇಳಿರೆ ಬಂದು ಎರಡು ವೊರುಶಾಯೆಕಾರೆ ಎಲ್ಲಾ ಕೆಲಸವನ್ನು ಕಲ್ತು ಎಲ್ಲೋರು ಹೊಗಳುವಷ್ಟು ಗಟ್ಟಿಗೆತ್ತಿಯಾತು.

“ಇನ್ನು ನಿನ್ನ ಮಕ್ಕಳ ಆಡ್ಸಿಂಡು ಕೂದರಾತೆನಗೆ” ಹೇಳಿ ಅತ್ತೆ ಒಂದೊಂದರಿ ಹೇಳುಗ ಶಾರದೆಗೆ ಮನಸಿಂಗೆ ಚುಂಯಿ ಅಪ್ಪದು.ಅದರೊಟ್ಟಿಂಗೆ ಮದುವೆ ಆದ ಕೆಲವು ಕೂಸುಗೊಕ್ಕೆಲ್ಲ ಮಕ್ಕೊ ಆದವು.ಕೆಲವು ಜನ ಕೋಡಿ ಕಳುದು ಅಪ್ಪನಮನೆಲಿ ಇದ್ದವು.ಆದರೆ ಶಾರದೆ ಮಾಂತ್ರ ತಿಂಗಳು ತಿಂಗಳು ಚೆಂಬು ಹಿಡ್ಕೊಂಡು ಮೂಲೆಲಿ ಕೂಬದು ತಪ್ಪಿದ್ದಿಲ್ಲೆ.

ಹಳೇ ಕಾಲದ ಸಂಪ್ರದಾಯಸ್ಥ ಮನೆತನ ಅವರದ್ದು.ಹಾಂಗಾಗಿ ಶುದ್ದ,ಮಡಿ ಎಲ್ಲಾ ಆಚರಣೆಗಳೂ ಕ್ರಮ ಪ್ರಕಾರ ಇದ್ದು.ಉಂಡಲ್ಲಿ ಸಗಣ ನೀರು ಹಾಕಿ ಉದ್ದೆಕು. ಅಶನ,ಅಕ್ಕಿಲಿ ಮಾಡಿ ಬೇಶಿದ ತಿಂಡಿಗಳ ಎಲ್ಲ ಕೊಳೆ ಹೇಳಿ ಬೇರೆ ಮಡುಗೆಕ್ಕು.ಅದರ ಮುಟ್ಟಿಕ್ಕಿ ಬೇರೆಂತಾರು ಮುಟ್ಟೆಕಾರೆ ಕೈ ನಾದೆಕು.

ಯೇವದಾದರು ಒಪ್ಪತ್ತು,ತಿಥಿ ಮುನ್ನಾಳ ದಿನ ಎಲ್ಲ ಬಸಳೆ,ಬಪ್ಪ°ಗಾಯಿ,ನುಗ್ಗಿಕೊಂಬು, ಸೊರೆಕ್ಕಾಯಿ ಎಲ್ಲ ಬೆಂದಿ ಮಾಡುವ ಕ್ರಮ ಇಲ್ಲೆ ಆ ಮನೆಲಿ.ನೀರುಳ್ಳಿ, ಬೆಳ್ಳುಳ್ಳಿ ಹೇಂಗೂ ಬ್ರಾಹ್ಮರು ತಿನ್ನದ್ದ ಸಾಮಾನು ಹೇಳಿ ಅದರ ತಪ್ಪಲೇ ಇಲ್ಲೆ.

ಹಟ್ಟಿಲಿ ಏಳೆಂಟು ದನಗೊ ಇತ್ತಿದ್ದವು. ಹಾಲು ಕರವದು ಭಾಮೆಯಕ್ಕ ಆದರೂ ಕಾಸುದು ಶಾರದೆ.ಅದರಲ್ಲಿ ಕಂಜಿ ಇಲ್ಲದ್ದ ದನದ ಹಾಲು ಬೇರೆ ಕಾಸೆಕು.ಅದು ಶುದ್ಧಕ್ಕೆ ಆಗ.ಕಂಜಿ ಇಲ್ಲದ್ದ ದನಗಳ ಕರವದೂ ಅಪರೂಪ.

ಹೆಮ್ಮಕ್ಕೊ ತಿಂಗಳಿಲ್ಲಿ ಮೂರು ದಿನ ಬೇರೆ ನಿಂಬಲೇ ಬೇಕು.ನಾಲ್ಕನೇ ದಿನ ಅರಶಿನ ನೀರು ಹಾಕಿ ಮಿಂದರೂ ಐನ್ನೀರು ಮಿಂದ ಮತ್ತೆಯೇ ದೇವರೊಳಾಂಗೆ ಹೋಪಲೆಡಿಗಷ್ಟೆ. ಆ ಕಾಲಲ್ಲಿ ಇದೆಲ್ಲ ಎಲ್ಲಾ ಮನೆಗಳಲ್ಲೂ ಇಪ್ಪ ಕ್ರಮ ಆದ ಕಾರಣ ಶಾರದೆಗೆ ಯೇವದೂ ಹೊಸತ್ತು ಹೇಳಿ ಆಯಿದಿಲ್ಲೆ.

ಈಗ ಅದಕ್ಕೆ ರಜಾ ಮಂಡೆಬೆಚ್ಚ ಅಪ್ಪಲೆ ಸುರುವಾದ ವಿಶಯ ಬೇರೆ. ಗೆಂಡನತ್ರೆ ಮೆಲ್ಲಂಗೆ ಸೂಚ್ಯವಾಗಿ ಹೇಳಿಯಪ್ಪಗ ಅವ° ನೆಗೆ ಮಾಡಿದ°

“ನೀನೆಂತ ಅಜ್ಜಿ ಆದೆಯಾ? ಸುಮ್ಮನೇ ತಲೆಬೆಶಿ ಮಾಡೆಡ.ಅಷ್ಟೆಲ್ಲ ಪ್ರಾಯಾಯಿದಿಲ್ಲೆ ನವಗೆ”

ಅಂದರೂ ಶಾರದೆಗೆ ಸಮದಾನ ಆಯಿದಿಲ್ಲೆ. ನಿತ್ಯ ದೇವರತ್ರೆ ಬೇಡಿಕೊಂಗು.ಆ ಸಮಯಲ್ಲೇ ಅವರ ಮನೆಲೊಂದು ಪೂಜೆ ಇದ್ದತ್ತು.ಅದಕ್ಕೆ ಅವರ ನೆರೆಕರೆಲಿಪ್ಪ ಜಾನಕಿ ಅಕ್ಕ ಬಪ್ಪಗ ಅದರ ಅಬ್ಬೆಯೂ ಬಂದಿತ್ತಿದ್ದವು.ದೇವಕಿ ಹೇಳಿ ಅವರ ಹೆಸರು.ಈ ದೇವಕಿ ಅಕ್ಕನೂ ಭಾಮೆಯಕ್ಕನೂ ಸಣ್ಣಾದಿಪ್ಪಗಲೇ ಚೆಂಙಾಯಿಗೊ.

ಪೂಜೆ ಕಳುದು ಊಟಾಗಿ ಎಲ್ಲೋರು ಹೋದ ಮತ್ತೆ ದೇವಕಿಯಕ್ಕ ಭಾಮೆಯಕ್ಕನ ದಿನಿಗೇಳಿ ಗುಟ್ಟಿಲ್ಲಿ ಶಾರದೆಯ ವಿಶಯ ಕೇಳಿತ್ತು. ಭಾಮೆಯಕ್ಕಂಗೆ ಜತೆಕ್ಕಾರ್ತಿ ಕೇಳಿಯಪ್ಪಗ ಮನಸಿಂಗೆ ರಜ ಸಮದಾನ ಆತು.

“ಎಂತದೋ ಗೊಂತಿಲ್ಲೆ.ನಾಳ್ದು ಹಬ್ಬಕ್ಕಪ್ಪಗ ಎರಡ ವೊರುಶ ಕಳುದು ಮೂರು ವೊರುಶ ಆವ್ತು. ಕೂಸಿನ ಕಾಂಬಗ ಎಂತದೂ ಅನಾರೋಗ್ಯ ಗೊಂತಾವ್ತಿಲ್ಲೆ. ಇಬ್ರೂ ಚೆಂದಕೆ ಸಂಸಾರ ಮಾಡಿಂಡಿದ್ದವು.ಏಕೋ ದೇವರಿಂಗೆ ಮನಸು ಬಯಿಂದಿಲ್ಲೆ ಕಾಣ್ತು…”

ದೇವಕಿಯಕ್ಕ ಭಾಮೆಯಕ್ಕಂಗೆ ಸಮದಾನ ಹೇಳಿತ್ತು

“ನೀನೆಂತ ಆಲೋಚನೆ ಮಾಡೆಡ.ಈಗಾಣ ಕಾಲಲ್ಲಿ ನಾವು ದೇವರ ನಂಬಿದ ಹಾಂಗೆ ಡಾಕ್ಟರಕ್ಕಳನ್ನು ನಂಬೆಕಾವ್ತು.ಕಾಸ್ರೋಡಿಲ್ಲಿ ಒಂದು ಒಳ್ಳೆ ಹೆಮ್ಮಕ್ಕೊ ಡಾಕ್ಟರಿದ್ದು.ಎನ್ನ ತಮ್ಮನ ಹೆಂಡತಿಗೆ ಅದರ ಮದ್ದು ಮಾಡಿ ಮಕ್ಕೊ ಆದ್ದದು. ಇವರ ಒಂದರಿ ಅಲ್ಲಿಗೆ ಕಳ್ಸು.”

ದೇವಕಿಯ ಮಾತು ಭಾಮೆಗೆ ಸರಿ ಹೇಳಿ ಕಂಡತ್ತು.

“ನೀನು ಹೇಳಿದ್ದು ಒಳ್ಳೆದಾತು ದೇಕಿ .ಮಲೆಯಾಳಲ್ಲಿ ಒಂದು ಗಾದೆ ಇದ್ದು ‘ತಾನ್ ಪಾದಿ ತೈಯಂ ಪಾದಿ’ ಹೇಳಿ. ಹಾಂಗೇ ನಾವು ಬರೀ ದೇವರ ಮಾತ್ರ ನಂಬಿಂಡು ಕೂದರಾಗ.’ವೈದ್ಯೋ ನಾರಾಯಣೋ ಹರಿಃ ‘ ಹೇಳುದು ಕೇಳಿದ್ದೆ. ನಾಳಂಗೆ ಚಂದ್ರನತ್ರೆ ಹೇಳ್ತೆ.”

“ಆತಪ್ಪಾ.. ನವಗೆ ಗೊಂತಿಪ್ಪ ವಿಶಯವ ಇನ್ನೊಬ್ಬರತ್ರೆ ಹೇಳಿರೆ ನವಗೆಂತ ನಷ್ಟ ಅಪ್ಪಲಿಲ್ಲೆ.ಒಳ್ಳೆದೇ ಅಕ್ಕಷ್ಟೆ” ದೇವಕಿಯಕ್ಕ ಅಷ್ಟು ಹೇಳಿಕ್ಕಿ ಹೆರಟವು.

“ಹಾಂಗೆ ಎದ್ದಿಕ್ಕಿ ಹೋಗೆಡ, ರಜ ಹೊತ್ತು ಕೂರು” ಹೇಳಿ ಭಾಮೆಯಕ್ಕ ಒತ್ತಾಯ ಮಾಡಿರೂ ನಿಂದಿದವಿಲ್ಲೆ.

“ಈಗ ಹೆರಡ್ತೆ ಭಾಮೇ..ಇನ್ನೊಂದರಿ ಬತ್ತೆ.ನಿನ್ನ ಸೊಸೆಯ ಕೋಡಿಗೆ” ಹೇಳಿ ನೆಗೆ ಮಾಡಿಂಡು ಅಲ್ಲೇ ಹತ್ತರೆ ಯೇವದೋ ಕೆಲಸಲ್ಲಿದ್ದ ಶಾರದೆಯ ಹತ್ತರೆ ಹೋಗಿ
“ದೇವರು ಒಳ್ಳೆದು ಮಾಡಲಿ ಮಗಳೂ” ಹೇಳಿಕ್ಕಿ ಆ ಅತ್ತೆ ಹೆರಟವು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

  • ಸ್ವಯಂವರ : ಕಾದಂಬರಿ : ಭಾಗ 08 : https://oppanna.com/kathe/swayamvara-08-prasanna-chekkemane/

  • ಪ್ರಸನ್ನಾ ಚೆಕ್ಕೆಮನೆ
    ಒಪ್ಪಣ್ಣ
    ದೇವಸ್ಯ ಮಾಣಿ
    ಕಾವಿನಮೂಲೆ ಮಾಣಿ
    ಅಕ್ಷರ°
    ಅನಿತಾ ನರೇಶ್, ಮಂಚಿ
    ಅನು ಉಡುಪುಮೂಲೆ
    ಎಬಿ ಭಾವ
    ಬಂಡಾಡಿ ಅಜ್ಜಿ
    ಬಟ್ಟಮಾವ°
    ಪುಣಚ ಡಾಕ್ಟ್ರು
    ಮಾಲಕ್ಕ°
    ಬೋಸ ಬಾವ
    ಒಪ್ಪಣ್ಣ
    Menu
    ×