ಅದೊಂದು ಆದಿತ್ಯವಾರ. ಆಳುಗೊಕ್ಕೆ ರಜೆ.ಆ ದಿನ ಅವು ಹೆಚ್ಚಾಗಿ ಪೇಟಗೆಲ್ಲ ಹೋಗಿ ಅವಕ್ಕೆ ಬೇಕಾದ್ದರ ತಿಂದು,ಕುಡುದು ಮಾಡಿಕ್ಕಿ ಬಪ್ಪದು ಹೇಳಿ ಚಂದ್ರಣ್ಣಂಗೆ ಗೊಂತಿದ್ದು. ಹಾಂಗಾಗಿ ಆ ದಿನ ಅವು ಶಾರದೆಯ,ಸುಶೀಲನ ಎಲ್ಲ ಕೊಟ್ಟಗೆ ಹೊಡೆಂಗೆ ಹೋಪದು ಬೇಡ ಹೇಳುದು.
ಶಾರದೆಗೆ ಹೇಂಗೂ ಅತ್ಲಾಗಿ ಹೋಪಲೆ ಪುರ್ಸೊತ್ತಾವ್ತಿಲ್ಲೆ. ಹೋಪ ಅಗತ್ತವೂ ಇಲ್ಲೆ.ಆದರೆ ಸುಶೀಲಂಗೆ ದಿನೇಸನತ್ರೆ ಮಾತಾಡೆಕಾರೆ ,ಅದರ ನೋಡೆಕಾರೆ ಅತ್ಲಾಗಿ ಹೋಗದ್ದೆ ಆಗ.ದಿನೇಸಂಗೆ ಕೇಶವ ಬಂದ ಮತ್ತೆ ಸುಶೀಲನತ್ರೆ ಮದ್ಲಾಣಾಂಗೆ ಪಟ್ಟಾಂಗ ಹೊಡವಲೆ ಧೈರ್ಯ ಬತ್ತಿಲ್ಲೆ.ಆದಿತ್ಯವಾರ ದಿನೇಸ ಹೆರ ಹೋಗಿ ಬಪ್ಪಗ ಸುಶೀಲಂಗೆ ಎಂತಾರು ತಂದು ಕೊಟ್ಟು ಕೊಂಡಿದ್ದತ್ತು. ಹಾಂಗಾಗಿ ಸುಶೀಲ ಆ ದಿನಕ್ಕೆ ಬೇಕಾಗಿ ಕಾವದು.
ಅಂದುದೆ ಆಳುಗೊ ಪೇಟಗೆ ಹೋದವು.ಅವು ಸುಮಾರು ಮೂರು ಗಂಟೆ ಹೊತ್ತಿಂಗೆ ಬಪ್ಪದು ಹೇಳಿ ಸುಶೀಲಂಗೆ ಗೊಂತಿದ್ದು. ಆ ಹೊತ್ತಿಂಗಪ್ಪಗ ಮೆಲ್ಲಂಗೆ ಹೆರಟತ್ತದು.ಅಲ್ಲೇ ಇತ್ತಿದ್ದ ಕೇಶವ
“ಈಗ ದೂರ ಹೆರಡುದು?” ಕೇಳಿದ°. ” ಜತೆಕ್ಕಾರ್ತಿಯ ಮನಗೆ” ಹೇಳಿತ್ತದು.
“ಆರು ಶುಭನಾ?” ಕೇಳಿದ°.ಅವರ ಊರಿಲ್ಲಿ ಸುಶೀಲಂಗಿಪ್ಪ ಒಂದೇ ಫ್ರೆಂಡು ಅದು ಮಾತ್ರ. ಮಾಳಿಗೆಮನೆ ಚುಬ್ಬಣ್ಣನ ಮಗಳದು. ಒಂದೇ ಕೋಲೇಜಿಂಗೆ ಹೋಪದು,ಒಂದೇ ಪ್ರಾಯ ಹೇಳುದು ಬಿಟ್ರೆ ಅದು ಸುಶೀಲಂಗೆ ದೊಡ್ಡ ಫ್ರೆಂಡೆಂತ ಅಲ್ಲ,ಅಂದರೂ ಅಣ್ಣನೇ ಆ ಹೆಸರು ಕೇಳಿಯಪ್ಪಗ “ಅಪ್ಪು” ಹೇಳ್ಲೆ ಅದಕ್ಕೆ ಸುಲಾಭಾತು
“ಈಗ ಎಂತಕೆ ಅದರ ಮನಗೆ ಒಬ್ಬನೇ ಹೋಪದು, ರೆಜಾ ನಿಲ್ಲು ಎನಗೂ ಅತ್ಲಾಗಿ ಹೋಪಲಿದ್ದು,ಜೀಪಿಲ್ಲಿ ಹೋಪ°”
“ಏ….ಬೇಡ..ಆನು ನೆಡಕ್ಕೊಂಡು ಹೋಪೆ.ಎನಗೆ ಅದರ ನೋಟ್ಸು ಬೇಕು.ಒಟ್ಟಿಂಗೆ ಕೂದು ಓದಿರೆ ಅದು ಎನಗೆ ಗೊಂತಿಲ್ಲದ್ದರ ಹೇಳಿ ಕೊಡ್ತು” ಅಣ್ಣನ ಕೈಂದ ತಪ್ಸಲೆ ಒಳ್ಳೆ ಉಪಾಯ ಸಿಕ್ಕಿತ್ತದಕ್ಕೆ.
“ಇಷ್ಟೊತ್ತಿಂಗೆ ಒಬ್ಬನೇ ಆ ದಾರಿಲಿ ನೆಡಕ್ಕೊಂಡು ಹೋಗೆಡ” ಅವ° ಎಷ್ಟು ಹೇಳಿರೂ ಅದು ಕೇಳಿದ್ದೇಯಿಲ್ಲೆ. ತಂಗೇಳಿ ಎಷ್ಟು ಪ್ರೀತಿ ಇದ್ದರೂ ಅದು ಇಷ್ಟು ಹಠ ಮಾಡುಗ ಅವಂಗೂ ಕೋಪ ಬಂತು.ಸರೀ ಜೋರು ಮಾಡಿದ°
“ಈಗಲೇ ಹೋಪಷ್ಟು ಅಂಬ್ರೆಪ್ಪು ಎಂತಯಿದ್ದು ನಿನಗೆ? ಆನೀಗಳೇ ಪೋನು ಮಾಡಿ ಅವರ ಮನಗೆ ಹೇಳ್ತೆ,ನೀನಿಂದು ಹೋಪದು ಬೇಡ,”
“ಎನಗಿಂದು ಹೋಪಲೇ ಬೇಕು,ಆನೀಗಳೇ ಹೋವ್ತೆ,ಅದಲ್ಲಿ ಕಾದು ಕೂರುಗು.ಕಲಿಯೆಕು ಹೇಳಿ ಬೈವದು, ನಿಂಗೊ ಆರೂ ಎಂತದೂ ಹೇಳಿಕೊಡ್ಲಿಲ್ಲೆ.ಅದರತ್ರೆ ಕೇಳ್ಲೆ ಹೋಪಲೂ ಆಗ” ಸುಶೀಲನೂ ಬೊಬ್ಬೆ ಹಾಕಿತ್ತು.
“ಎಂತರ ನಿಂಗಳ ಗಲಾಟೆ ಮಕ್ಕಳೇ?” ಶಾರದೆ ಇವರ ಗೌಜಿ ಕೇಳಿ ಹೆರ ಬಂದು ಕೇಳಿತ್ತು.
“ಅದಿಲ್ಯಾ ಅಬ್ಬೇ……” ಕೇಶವ° ವಿಷಯ ಹೇಳಿದ°
“ಆನು ರೆಜ ಮತ್ತೆ ಹೋಪೊ° ಹೇಳಿರೂ ಇದಕ್ಕೆಂತ ಅಂಗಲ್ಪು?”
ಸುಶೀಲ ಈಗ ಎರಡು ವಾರಂದ ‘ಶುಭನ ಮನಗೆ ಹೋವ್ತೆ’ ಹೇಳಿ ಹೋಪ ಕಾರಣ ಶಾರದೆಗೂ ಅದು ಹೋಪ ವಿಶಯ ಗೊಂತಿದ್ದು. ಪ್ರತಿ ವಾರವೂ ಮಗಳು ಓದಲೆ ಹೇಳಿಂಡು ಇನ್ನೊಬ್ಬರ ಮನಗೆ ಹೋಪದು ಅದಕ್ಕೂ ಸಮದಾನಯಿಲ್ಲೆ.ಹಾಂಗಾಗಿ ಅದೂದೆ ಕೇಶವ° ಹೇಳಿದಾಂಗೆ ಹೇಳಿತ್ತು
ಅಣ್ಣ ಹೇಳಿದಾಂಗೆ ಕೇಳು,ಅಲ್ಲದ್ರೂ ಪ್ರತಿವಾರವೂ ನೀನದರ ಮನಗೆ ಹೋಪದಕ್ಕಿಂತ ಒಂದು ವಾರ ಅದಕ್ಕೆ ಇತ್ಲಾಗಿ ಬಪ್ಪಲಕ್ಕನ್ನೇ.ಯೇವಗಳೂ ತಿರುಗಾಡಿ ಹಾಂಗೆ ತಿರುಗಿಂಡಿಪ್ಪಲಾಗ ಕೂಸುಗೊ, ಹೋವ್ತರೆ ಅಣ್ಣನೊಟ್ಟಿಂಗೆ ಹೋಗು,ಇಲ್ಲದ್ರೆ ಸುಮ್ಮನೇ ಮನೆಲಿ ಕೂರು.ಇಂದೀಗ ಓದಲೆ ಅಲ್ಲಿಗೆ ಹೋಯೆಕೂಳಿಲ್ಲೆ”
ಅಬ್ಬೆ ಹಾಂಗೆ ಹೇಳಿಯಪ್ಪಗ ಸುಶೀಲ ಮುಸುಡು ಪೀಂಟುಸಿ ದೊಡ್ಡಕೆ ಕೂಗಲೆ ಸುರು ಮಾಡಿತ್ತು
“ನಿಂಗೊಗಾರಿಂಗೂ ಎನ್ನತ್ರೆ ಪ್ರೀತಿ ಇಲ್ಲೆ, ಎನ್ನ ಫ್ರೆಂಡಿನ ಮನಗೆ ಕೂಡ ಹೋಪಲಾಗದ ಆನು, ಇದೆಂತ ಜೈಲಾ? ಆನಿಂದು ಬತ್ತೆ ಹೇಳಿದ್ದೆ ಅದರತ್ರೆ. ಈಗಲೇ ಹೋಗದ್ರೆ ಎಂಗೊಗೆ ಒಟ್ಟಿಂಗೆ ಓದಲೆಡಿತ್ತಿಲ್ಲೆ…..ಬೇಡ, ಎನಗೆಂತದೂ ಬೇಡ,ಆನೆಲ್ಲಿಗೂ ಹೋವ್ತಿಲ್ಲೆ, ನಿಂಗೊಗಾರಿಂಗೂ ಆನು ಬೇಡನ್ನೇ,ಆನು ಹೋಗಿ ಸಾಯ್ತೆ………”
“ಎಂತಾರು ಅಸಂಬದ್ಧ ಮಾತಾಡೆಡ ಕೂಸೇ,ನಿನಗೆಂತಾಯಿದೀಗ?ಕಳುದ ವಾರ ಎಲ್ಲ ಹೋಪಗ ನಿನ್ನತ್ರೆ ಬೇಡ ಹೇಳಿದ್ದಾ? ಈಗಳೂದೆ ಅಣ್ಣನೊಟ್ಟಿಂಗೆ ಹೋಗು ಹೇಳಿದ್ದಷ್ಟೆ, ಅದಕ್ಕಿಷ್ಟು ಕೂಗುದೆಂತಕೆ?”
“ಆನೊಬ್ಬನೇ ಹೋದರೆಂತಾವ್ತು, ನಿಂಗೊಗಾರಿಂಗೂ ಎನ್ನ ಕಂಡ್ರಾಗ……” ಪರಂಚಿಂಡೇ ಮುಣು ಮುಣು ಹೇಳಿ ಎಕ್ಕಿ ಎಕ್ಕಿ ಕೂಗಲೆ ಸುರುಮಾಡಿತ್ತು.
“ಹೀಂಗೆ ಕೂಗಲೆ ನಿನಗಾರಾರು ಜೆಪ್ಪಿದ್ದವೋ,ದಗಣೆ!! ಅದರ ಹಾಂಕಾರ ನೋಡಬ್ಬೇ, ಹೀಂಗೆ ಕೂಗುತ್ತರೆ ನಿನ್ನ ಮನೆಂದ ಹೆರ ಇಳಿವಲೆ ಬಿಡೆ ಆನು, ನಿನಗೆ ರೆಜ ಕೊಂಗಾಟ ಹೆಚ್ಚಿಗಾತು,ಒಟ್ಟಿಂಗೆ ಹೋಪ° ಹೇಳಿರೆ ಇಷ್ಟು ಕೂಗುಲೆಂತಾಯಿದು?” ಕೇಶವಂಗೆ ಅದರತ್ರೆ ಒಳ್ಳೆತ ಕೋಪ ಬಂತು.
“ಅದು ಅದರ ಹೊತ್ತಿಂಗೆ ಹೋಗಿಂಡು ಬರ್ಲಿ,ನೀನು ಮಾತಾಡ್ಲೆ ಹೋಗೆಡ” ಸುಶೀಲನ ಹಾರಾಟ ಕಂಡು ಶಾರದೆಗೆ ಮಂಡೆ ಬೆಶಿಯಾತು.
“ನಿಂಗೊ ಮಾತಾಡೆಡಿ ಅಬ್ಬೇ, ಆನು ಸರಿ ಮಾಡ್ತೆ ಅದರ,ಇಂದದು ಮನೆಂದ ಹೆರ ಇಳಿತ್ತಿಲ್ಲೆ.ಆನೂದೆ ಎಲ್ಲಿಗೂ ಹೋವ್ತಿಲ್ಲೆ, ಇದು ಹೀಂಗೆ ಹಠ ಮಾಡುದು ಕಾಂಬಗ ಶುಭನ ಮನಗೆ ಹೋಪದಾ ಅಲ್ಲದಾಳಿ ಸಂಶಯ ಬತ್ತು,ಅದರ ಮುಸುಡು ನೋಡುಗಳೇ ಎಂತೋ ಕಳ್ಳಂಟಿಗೆ ಲಕ್ಷಣ ಕಾಣ್ತು, ಶುಭನ ಮನಗೆ ಈಗಳೇ ಪೋನ್ ಮಾಡಿ ಹೇಳ್ತೆ” ಹಾಂಗೆ ಹೇಳಿಂಡೇ ಅವ° ಚುಬ್ಬಣ್ಣನ ಮನಗೆ ಪೋನ್ ಮಾಡ್ಲೆ ಹೆರಟ°. ಅಣ್ಣ ಪೋನು ಮಾಡ್ಲೆ ಹೆರಟಪ್ಪಗ ಸುಶೀಲಂಗೆ ಹೆದರಿಕೆಯಾತು.ಕಳ್ಳತನ ಹೆರ ಗೊಂತಕ್ಕು. ಶುಭನ ಮನಗೆ ಹೋಪದು ಬಿಟ್ಟು ಅದರತ್ರೆ ಮಾತಾಡುದು ಕೂಡ ಕಮ್ಮಿ ಅದು.ಸಾಲದ್ದಕ್ಕೆ ಅದು ಇದರ ಕ್ಲಾಸೇ ಆದರೂ ಅದರ ವಿಭಾಗ ಬೇರೆ. ಮತ್ತೆ ಹೇಂಗೆ ಒಟ್ಟಿಂಗೆ ಓದುದು? ಈಗ ಅಣ್ಣಂಗೆ ದಮ್ಮಯ್ಯ ಹಾಕದ್ದೆ ಬೇರೆ ದಾರಿಯಿಲ್ಲೇಳಿಯಾತು
“ಅಣ್ಣ ಪೋನು ಮಾಡೆಡ, ಆನು ನೀನು ಹೇಳಿದಾಂಗೆ ಕೇಳ್ತೆ” ಹೇಳಿಂಡು ಅವನ ಹತ್ತರಂಗೆ ಬಂತು. ಕೇಶವ° ಒಂದರಿ ಅದರ ಕೋಪಲ್ಲಿ ನೋಡಿಂಡೇ ಪೋನು ಕೆಮಿಗೆ ಮಡುಗಿದ°.
“ಅಣ್ಣ ಬೇಡಣ್ಣಾ..ಪೋನು ಮಾಡೆಡ…..” ಸುಶೀಲ ಓಡಿಂಡು ಬಂದು ಅವನ ಕೈಂದ ಪೋನಿನ ರಿಸೀವರ್ ಹಿಡುದು ಎಳದತ್ತು. ಅಷ್ಟೊತ್ತಿಂಗೆ ಚುಬ್ಬಣ್ಣ ಆಚೊಡೆಲಿ
“ಹಲೋ..ಹಲೋ” ಹೇಳ್ಲೆ ಸುರು ಮಾಡಿದ್ದ°.
“ಹಲೋ ಶುಭ ಇದ್ದ ಮಾವಾ°, ಎನ್ನ ತಂಗೆ ಇಂದು ಓದಲೆ ಬತ್ತಿಲ್ಲೆ ಹೇಳಿ ಅದರತ್ರೆ ಹೇಳಿಕ್ಕಿ” ಅಷ್ಟು ಹೇಳಿಯಪ್ಪಗ
ಆಚೊಡೆಂದ ಚುಬ್ಬಣ್ಣನ ದೊಡ್ಡ ನೆಗೆ ಕೇಳಿತ್ತು
“ನಿನ್ನ ತಂಗೆ ಇಲ್ಲಿಗೆ ಓದಲೆ ಬಪ್ಪದೋ? ಹ್ಹ..ಹ್ಹ….ಬರ್ಲಿ ಒಳ್ಳೆದಾತು. ಆದರೆ ಇಂದು ಬೇಡ, ಇಂದು ಶುಭನೂ ಅದರಬ್ಬೆಯೂ ತೋಟದ ಕರೆ ನಾಣಣ್ಣನ ಮನೆಗೆ ಹೋಯಿದವು. ಎಷ್ಟು ಸಮಯಾತು ನಿನ್ನ ತಂಗೆಯ ಕಾಣದ್ದೆ..ಇನ್ನಾಣ ಆದಿತ್ಯವಾರ ಬರ್ಲಿ.ಒಟ್ಟಿಂಗೆ ಕೂದು ಓದಲಕ್ಕು…..” ಚುಬ್ಬಣ್ಣ ಹೇಳಿಂಡಿದ್ದರೂ ಕೇಶವ° ಪೋನು ಕೆಳ ಮಡುಗಿದ°.
ಚುಬ್ಬಣ್ಣ ಮಾವ ಹೇಳಿದ್ದಕ್ಕೂ ತಂಗೆ ಹೇಳಿದ್ದಕ್ಕೂ ತುಂಬ ವೆತ್ಯಾಸಯಿದ್ದು. ತಂಗೆಯೆಂತಕೆ ಲೊಟ್ಟೆ ಹೇಳೆಕು? ಇದರ ಹಿಂದೆ ಎಂತೋ ಇದ್ದು,ಇಲ್ಲದ್ರೆ ಅಷ್ಟು ಹಠ ಹಿಡಿಯ ಇದು,ಸತ್ಯ ಹೇಂಗೆ ತಿಳಿವದು…’ ಹೇಳಿ ಆಲೋಚನೆ ಮಾಡಿಂಡು ಹೆರ ಬಂದ°.
ಸುಶೀಲ ಎಂತದೂ ಆಗದ್ದವರ ಹಾಂಗೆ ಮೋರಗೆ ಮತ್ತೊಂದರಿ ಪೌಡರು ಹಾಕಿಕ್ಕಿ ಕೈಲಿ ಪುಸ್ತಕ ಹಿಡ್ಕೊಂಡು ಹೆರಟತ್ತು.
“ಏಯ್….ನಿಲ್ಲ° ಅಲ್ಲಿ..ಎಲ್ಲಿಗೆ ಹೆರಟದು? ” ಕೇಶವ° ಆದಷ್ಟು ಮೆಲ್ಲಂಗೆ ಕೇಳಿದ°.ದೊಡ್ಡಕೆ ಕೇಳಿರೆ ಸುಶೀಲನೂದೆ ಆರ್ಬಾಯಿ ಕೊಟ್ರೆ ಮತ್ತೆ ಉಪಾಯಲ್ಲಿ ವಿಶಯ ತಿಳಿವಲೆಡಿಯ.
“ಆಗಳೇ ಹೇಳಿದ್ದಲ್ದಾ? ಶುಭನ ಮನಗೇಳಿ.ಇನ್ನೆಂತರ ಕೇಳ್ಲಿಪ್ಪದು ನಿನಗೆ?” ರಜವು ಹೆದರಿಕೆ, ಅಂಜಿಕೆ ಇಲ್ಲದ್ದೆ ಅದು ಹಾಂಗೆ ಕೇಳುಗ ಕೇಶವಂಗೆ ಮತ್ತೂ ಕೋಪ ಬಂತು.
“ಶುಭ ಮನೆಲಿಲ್ಲೇಡ,ನೀನೀಗ ಹೋಯೆಕೂಳಿಲ್ಲೆ.ಆಗಲೇ ಚುಬ್ಬಣ್ಣ ಮಾವ° ಹೇಳಿದ್ದವು, ಹೋಗಿ ಒಳ ಕೂರ್ತೆಯೋ ಅಲ್ಲ ನಾಕು ಜೆಪ್ಪೆಕೋ?” ಸುಶೀಲಂಗೆ ಒಂದರಿ ಝುಮ್ ಹೇಳಿಯಾತು.ಶುಭ ಮನೆಲಿಲ್ಲದ್ರೆ ಇನ್ನೇಂಗೆ ಹೋಪದು! ಮನೆಂದ ಹೆರ ಇಳಿಯದ್ರೆ ದಿನೇಸನ ಕಾಂಬಲೂ ಎಡಿಯ. ಅಣ್ಣ ಮನೆಲಿಪ್ಪನ್ನಾರ ಇನ್ನು ಹೀಂಗೇ ಬಂಙ ಬರೆಕಷ್ಟೆ.
“ಆನಂಬಗ ಉಮನ ಮನಗೆ ಹೋಗಿಂಡು ಬತ್ತೆ, ಸುಮಾರು ಸಮಯಾತು ಅಲ್ಲಿಗೆ ಹೋಗದ್ದೆ.ಅಂಗಿ ಹೊಲಿವಲೆ ಕೊಟ್ಟದರ ತಯಿಂದೇಯಿಲ್ಲೆ” .ಉಮ ಅವರ ಕಾಯಮ್ಮಿನ ಟೈಲರು.ಮನೆಯವಕ್ಕೆ ಬೇಕು ಬೇಕಾದಾಂಗೆ ಹೊಲುದು ಕೊಡುವ ಜೆನ.ಇವರ ತೋಟಂದ ಆಚೊಡೆಲಿ ಅದರ ಮನೆ ಆದ ಕಾರಣ ಹತ್ತು ನಿಮಿಷಲ್ಲಿ ಹೋಗಿ ಬಪ್ಪಲೆಡಿಗು.
ಆದರೆ ಇಂದು ಕೇಶವ° ಬಿಟ್ಟಿದಾ°ಯಿಲ್ಲೆ
“ಉಮನೂ ಬೇಡ,ಸುಮನೂ ಬೇಡ,ಬಾಯಿಮುಚ್ಚಿ ಕೂರಿಲ್ಲಿ ” ಹೇಳಿದ.
ಅಷ್ಟಪ್ಪಗಳೇ ಅವರ ಜಾಲಿಲ್ಲಿ ಶೈಲನೂ ಅದರ ಗೆಂಡ ರಾಮಚಂದ್ರನೂ ಸ್ಕೂಟರಿಲ್ಲಿ ಬಂದು ಇಳುದವು.ಅವರ ಕಂಡಪ್ಪಗ ಸುಶೀಲಂಗೆ ಇನ್ನು ಹೋಪಲೆಡಿಯ ಹೇಳಿ ಗೊಂತಾತು. ಮತ್ತೆ ಎಷ್ಟೊತ್ತಿಂಗಾರು ಅಮ್ಮನ, ಅಣ್ಣನ ಕಣ್ಣು ತಪ್ಪುಸಿ ಮಾತಾಡ್ಲೆಡಿಗು.ಅಕ್ಕ,ಭಾವ° ಬಂದ ಕಾರಣ ಅವರ ಗಮನ ಅತ್ಲಾಗಿ ಇಕ್ಕಷ್ಟೆ ಹೇಳಿ ಮನಸಿಲ್ಲಿ ಗ್ರೇಶಿಂಡು ಒಳಾಂಗೆ ಹೋತು.
“ಬನ್ನಿ ಭಾವಾ,° ಶೈಲಾ..ಬಾ….” ಹೇಳಿ ಅವರ ಒಳಾಂಗೆ ದಿನಿಗೇಳಿ ಕೈಕಾಲು ತೊಳದು ಒಳ ಹತ್ತಿದವಕ್ಕೆ ಒಂದು ಬೆಳೀ ತೋರ್ತನ್ನೂ ಕೊಟ್ಟು ಸುಶೀಲನತ್ರೆ ಆಸರಿಂಗೆ ತಪ್ಪಲೆ ಹೇಳಿದ°. ಅದು ಸುರುವಿಂಗೆ ಹೆರ ಬಯಿಂದಿಲ್ಲೆ.
“ಎಂಗೊಗೀಗ ಆಸರಿಂಗೆ ಎಲ್ಲ ಬೇಡ,ಈಗ ಮನೆಂದ ಉಂಡಿಕ್ಕಿ ಹೆರಟದು. ಸ್ಕೂಟರ್ ಲಿ ಆದ ಕಾರಣ ಕುಡುದ ನೀರು ಹಂದದ್ದ ಹಾಂಗೆ ಇಲ್ಲೇ ಇಳುದೆ” ಶೈಲ ನೆಗೆ ಮಾಡಿತ್ತು. ಶಾರದೆಯೂ ಹೆರ ಬಂದು ಮಗಳು ಅಳಿಯನತ್ರೆ ಕುಶಲ ವಿಚಾರ್ಸಿ ಆಸರಿಂಗೆ ಕೊಟ್ಟು ಉಪಚಾರ ಮಾಡಿತ್ತು.
“ಏ ಸುಶೀ…ಬಾ..ಎಲ್ಲಿದ್ದೆ ? ” ಶೈಲ ಅದು ತಂದ ಕಟ್ಟವ ಹಿಡ್ಕೊಂಡೇ ತಂಗೆಯ ಹುಡ್ಕಿಂಡು ಒಳ ಹೋತು.ದೊಡ್ಡ ದೊಡ್ಡ ಉಗ್ರಾಣ ಇಪ್ಪ ಆ ಮನೆಲಿ ಈಗ ಕರೆಂಟು ಇದ್ದ ಕಾರಣ ಮದ್ಲಾಣಾಂಗೆ ಕಸ್ತಲೆ ಅಲ್ಲ.ಅಕ್ಕನ ಕಂಡಪ್ಪಗ ಬಾಗಿಲ ಕರೇಲಿ ನಿಂದೊಂಡಿದ್ದ ಸುಶೀಲ ಹೆರ ಬಂತು.
“ಹೋ…ಮದಿಮ್ಮಾಳಿನ ಹಾಂಗೆ ಬಾಗಿಲ ಹಿಂದೆ ಹುಗ್ಗಿದ್ದಾ ಕೂಸೇ..ಇದಾ..ನಿನಗೆಂತ ತಯಿಂದೆ ನೋಡು” ಅದರ ಕೈ ಹಿಡುದು ಹೆರ ಕರಕ್ಕೊಂಡು ಬಂತದು.
ಗುಡ್ಡೆಲಿ ದಿನೇಸ ಕಾದು ಕೂದೊಂಡಿಕ್ಕು’ ಹೇಳುದೊಂದೇ ಅದರ ತಲೆಲಿದ್ದದು.ಅಕ್ಕನೊಟ್ಟಿಂಗೆ ಹೆರ ಬಂದರೂ ಯೇವಗಾಣಾಂಗೆ ಕೊಶೀಲಿಪ್ಪಲೆ ಎಡ್ತಿದಿಲ್ಲೆ ಅದಕ್ಕೆ.
“ಇದಾ..ಈ ಸ್ವೀಟ್ ನಿನಗೆ, ಇದರ ಎಲ್ಲೋರಿಂಗು ಕೊಡು” ತಂಗೆಯ ಕೈಲಿ ಮೈಸೂರುಪಾಕಿನ ದೊಡ್ಡ ಕಟ್ಟ ಕೊಟ್ಟಿಕ್ಕಿ ಹೇಳಿತ್ತು ಶೈಲ.
“ಅಂತೇ ಸ್ವೀಟು ಕೊಟ್ಟರೆ ಸಾಲ, ಆನು ಚಿಕ್ಕಮ್ಮ ಆವ್ತೆ ಹೇಳಿ ಕೂಡಾ ಹೇಳೆಕು” ರಾಮಚಂದ್ರ ಶೈಲನ ಪ್ರೀತಿಲಿ ನೋಡಿಂಡು ಸುಶೀಲನತ್ರೆ ಹೇಳಿಯಪ್ಪಗ ಶೈಲನ ಮೋರೆ ನಾಚಿಕೆಲಿ ಕೆಂಪಾತು.
“ಹೋ…..ಅಪ್ಪೋ..ಅಂಬಗ ಆನು ಸೋದರಮಾವ° ಆವ್ತೆ.ಎನಗೆ ದೊಡ್ಡ ತುಂಡು ಸ್ವೀಟ್ ಕೊಡದ್ರೆ ಆನು ಉಡುಗೊರೆ ಕೊಡೆ” ಕೇಶವನೂ ಶೈಲನ ತಮಾಶೆ ಮಾಡಿದ°.
ಸುಶೀಲಂಗೂ ರೆಜಾ ಕೊಶಿಯಾತು. ಅಬ್ಬೆ ಹತ್ರೆ ಓಡಿಂಡು ಹೋಗಿ ಹೇಳಿತ್ತು
“ಅಪ್ಪೋ..” ಅಲ್ಲೇ ಮಂಚಲ್ಲಿ ಕೂದೊಂಡಿದ್ದ ಭಾಮೆಯಕ್ಕಂಗೂ ತುಂಬ ಕೊಶಿ.
“ಇನ್ನೂ ಅದರ ಬಿ.ಎಡ್ ಕೋರ್ಸು ಮುಗಿವಲೆ ಮೂರು ನಾಲ್ಕು ತಿಂಗಳಿದ್ದನ್ನೇ, ಬಂಙ ಅಕ್ಕೋಪ್ಪಾ..” ಶಾರದೆ ಕೇಳ್ಲೆ ಗ್ರೇಶಿದ ಪ್ರಶ್ನೆಯ ದೊಂಡೆಲೇ ಕಟ್ಟಿ ಮಡುಗಿತ್ತು.
“ಅದರ ಪರೀಕ್ಷೆ ಕಳಿವಗ ಕೋಡಿ ಮಾಡ್ಲೆ ಸರೀಯಕ್ಕು.ಕ್ಲಾಸಿಂಗೆ ಹೋಪಲೆ ಬಂಙ ಆಗದ್ರೆ ಸಾಕು” ಭಾವನ ಮಾತಿಂಗೆ ಕೇಶವ°
“ಶೈಲಂಗೆ ಬಂಙ ಆಗ” ಹೇಳಿದ°.
“ಅಬ್ಬೇ..ಎಂಗೊ ಈಗಳೇ ಹೋವ್ತೆಯೋ°, ಅಪ್ಪ° ಎಲ್ಲಿದ್ದವು? ” ಶೈಲಂಗೆ ಮರದಿನ ಕ್ಲಾಸು ಇಪ್ಪ ಕಾರಣ ಮನಗೆ ಹೋಗದ್ದೆ ಕಳಿಯ.
“ಅಪ್ಪ ಗೋವಿಂದ ಮಾವನ ಮನಗೆ ಪೂಜಗೆ ಹೋಯಿದವು. ಬಸ್ಸಿಲ್ಲಿ ಹೋದ ಕಾರಣ ಎಷ್ಟೊತ್ತಕ್ಕು ಎತ್ತುಗ ಹೇಳಿ ಗೊಂತಿಲ್ಲೆ”
“ಹೋ..ಅಂಬಗ ಅಪ್ಪ° ಬಪ್ಪಷ್ಟು ಹೊತ್ತು ಕಾವಲಿಲ್ಲೆ.ಮೂರು ಸಂಧಿಯಪ್ಪಂದ ಮದಲೇ ಮನಗೆತ್ತೆಕು ಹೇಳಿದ್ದವು ಅತ್ತೆ”
“ಆತು ಶೈಲ, ನಿನ್ನ ಶುದ್ದಿ ಕೇಳಿ ಕೊಶಿಯಾತು. ಅಲ್ಲಿ ಅತ್ತಗೆ ನೀನು ಹೇಳಿರೆ ಭಾರೀ ಕೊಂಗಾಟ ಹೇಳಿಯೂ ಗೊಂತಾದ ಕಾರಣ ಎನಗೆ ಸಮದಾನ.”
“ಅಪ್ಪಬ್ಬೇ..ಉದಿಯಪ್ಪಗ ಅತ್ತೆ ಬೇಗ ಎದ್ದು ಅಡಿಗೆ ಎಲ್ಲ ಮಾಡ್ತವು.ಆನಂತೇ ಹಸ್ತ ಮುಟ್ಟುದು ಮಾಂತ್ರ” ಶೈಲಂಗೂ ಅದರ ಅತ್ತೆ ಹತ್ತರೆ ಅಷ್ಟೇ ಪ್ರೀತಿ.
“ಅತ್ತೇ ಇಲ್ಲಿ ಬೇಂಗದ ಮರ ಇದ್ದಾ? ಅಬ್ಬೆ ಅದರ ಕೆತ್ತೆ ತಪ್ಪಲೆ ಹೇಳಿತ್ತಿದ್ದವು.ಈಗ ಅಬ್ಬೆ ವಿಶಯ ಮಾತಾಡುಗ ನೆಂಪಾತು. ಎನಗೆ ಮರ ಗುರ್ತಯಿಲ್ಲೆ. ಹಾಂಗಾಗಿ ಎಂಗಳಲ್ಲಿ ಇದ್ದೋಳಿ ಗೊಂತಿಲ್ಲೆ”
“ಆ ಮರ ಇಲ್ಲಿ ಗುಡ್ಡೆಲಿ ಸುಮಾರಿದ್ದು ಭಾವಾ° ,ಎನಗೆ ಗುರ್ತಯಿದ್ದು. ಇವರ ಕಾಪಿ ತಯಾರಿ ಅಪ್ಪಗ ಆನು ಹೋಗಿ ಕೆತ್ತಿಂಡು ಬತ್ತೆ” ಭಾವ° ಬೇಂಗದ ಕೆತ್ತೆ ಬೇಕು ಹೇಳಿದ್ದದೂದೆ ಕೇಶವ° ಕತ್ತಿ ತೆಕ್ಕೊಂಡು ಹೆರಟ°.
“ಎನಗೆ ಆ ಮರ ಗುರ್ತಯಿಲ್ಲೆ.ಆನೂದೆ ಬತ್ತೆ ಭಾವಾ°, ಈ ಹೆಮ್ಮಕ್ಕಳ ಪಟ್ಟಾಂಗದ ಎಡೇಲಿ ಆನೆಂತರ ಮಾತಾಡುದು?” ಹೇಳಿಂಡು ರಾಮಚಂದ್ರನೂ ಹೆರಟ°.
ಇಬ್ರೂ ಗುಡ್ಡೆ ಹತ್ತಿ ಬೇಂಗದ ಮರದ ಹತ್ತರೆ ಬಪ್ಪಗ ಅಲ್ಲಿ ಒಂದು ಜೆನ ಕೂದೊಂಡಿದ್ದು. ಆಚೊಡೆಂಗೆ ತಿರುಗಿ ಕೂದ ಕಾರಣ ಅದರ ಬೆನ್ನು ಮಾಂತ್ರ ಕಂಡದವಕ್ಕೆ.
“ನಮ್ಮ ಗುಡ್ಡೆಲಿ ಹೀಂಗೆ ಕೂಬದಾರಪ್ಪಾ” ಹೇಳಿಂಡೇ ಕೇಶವ° ಮೆಲ್ಲಂಗೆ ಸೆಮ್ಮಿದ.ಅಷ್ಟಪ್ಪಗ ಆ ಜೆನ ಹಿಂದಂಗೆ ನೋಡಿಂಡೇ ಗಡಿಬಿಡಿಲಿ ಎದ್ದತ್ತು.ಏಳುಗ ಅದರ ಕೈಲಿಪ್ಪ ಕಟ್ಟವೂ ಕೆಳ ಬಿದ್ದತ್ತು.ಅದರಿಂದ ಪಚ್ಚೆ, ಕೆಂಪು ಬಣ್ಣದ ಕುಪ್ಪಿ ಕಾಜು,ಒಂದು ಕುಟ್ಟಿಕ್ಕೂರ ಪೌಡರು,ಬೇರೆಂತೋ ಬಣ್ಣ ಬಣ್ಣದ ಕಿಲಿಪ್ಪೋ ಎಲ್ಲ ನೆಲಕ್ಕಕ್ಕೆ ಬಿದ್ದತ್ತು.
“ಏ..ದಿನೇಸಾ..ನೀನಾ..ಇಲ್ಲೆಂತಕೆ ಕೂದ್ದು? ಆನು ನಮ್ಮ ಗುಡ್ಡಗೆ ಆರೋ ಕಳ್ಳರು ಬಂದವು ಗ್ರೆಶಿದ್ದು” ಕೇಶವ° ನೆಗೆ ಮಾಡಿಂಡು ಕೇಳಿರೂ ಅದು ರೆಜಾ ಹೆದರಿದ ಹಾಂಗೆ ಕಂಡತ್ತವಂಗೆ.
“ಈ ಮರದ ಕೆತ್ತೆ ಕೆತ್ತಿ ಕೊಡುವೆಯಾ!? ನೀನಿಲ್ಲಿ ಸಿಕ್ಕಿದ್ದು ಒಳ್ಳೆದಾತು. ಆ ಕಾಜು,ಪೌಡರೆಲ್ಲ ತೊಟ್ಟೆಗೆ ಹಾಕಿಕ್ಕಿ ಕೆತ್ತಿ ಕೊಟ್ರೆ ಸಾಕು” ಅದರನ್ನೇ ನೋಡಿಂಡು ಹೇಳಿದವ°.
ಅದಕ್ಕೆಂತಾತೋ ಗೊಂತಿಲ್ಲೆ.
“ಆತು ಈಗಲೇ ಕೆತ್ತಿ ಕೊಡ್ತೆ ಹೇಳಿ ಲುಂಗಿ ಮಡುಸಿ ಕಟ್ಟಿ ಮರಕ್ಕೆ ಹತ್ತಲೆ ಹೆರಟರೂ ಮೈ ಕೈ ಎಲ್ಲ ನಡುಗಿಂಡಿದ್ದತ್ತು.
” ನಿನಗೆ ಹೆದರಿಕೆ ಆವ್ತರೆ ಬೇಡ,ಆನೇ ಹತ್ತಿ ಕೆತ್ತುವೆ” ಹೇಳಿದ° ಕೇಶವ°.
ಅವನ ಸೌಮ್ಯವಾದ ಮಾತು ಕೇಳಿ ಆದಿಕ್ಕು ಅದಕ್ಕೆ ರೆಜ ಧೈರ್ಯ ಬಂದಾಂಗಾತು.ಕೆಳ ಬಿದ್ದ ಸಾಮಾನಿನ ತೊಟ್ಟಗೆ ತುಂಬುಸಿ ಮಡುಗಿಕ್ಕಿ ಮರ ಹತ್ತಿ ಕೆತ್ತೆ ಕೆತ್ತಿ ಕೊಟ್ಟತ್ತು.
“ನೀನು ಮರ ಹತ್ತಲೆ ಒಳ್ಳೆ ಉಶಾರಿದ್ದೆ.ಸುರುವಿಂಗೆ ನೀನು ಹೆದರಿ ನೆಡುಗುದು ಕಂಡು ನಿನಗೆ ಅಭ್ಯಾಸಯಿಲ್ಲೋದು ಜಾನ್ಸಿದೆ.ಎಂಗೊ ಹೋವ್ತೆಯ° .ನೀನು ಈ ಗುಡ್ಡೆ ಕೊಡೀಲಿ ಕೂದೊಂಡು ಎಂತ ಮಾಡುದು? ”
“ಆನು ಸುಮ್ಮನೇ ಒಂದರಿ ಬಂದದಷ್ಟೆ.ಎಂಗಳ ಊರಿಲ್ಲಿ ಹೀಂಗಿದ್ದ ಗುಡ್ಡೆ, ಮರಂಗೊ ಯೇವದೂ ಇಲ್ಲೆ.ಕೆಲಸಕ್ಕೆ ರಜೆಯಿಪ್ಪಗ ಆನೊಂದೊಂದರಿ ಹೀಂಗೆ ಬಪ್ಪ ಕ್ರಮಯಿದ್ದು” ಹೇಳಿತ್ತದು.
“ನಿನ್ನ ಊರಿಲ್ಲಿ ಇಲ್ಲದ್ದ ಹಂದಿಯೂ ಇಕ್ಕಿಲ್ಲಿ,ಹೆಚ್ಚು ಕಸ್ತಲಪ್ಪಂದ ಮದಲೇ ಮನಗೆ ಬಾ….” ದಿನೇಸನತ್ರೆ ಎರಡು ಲೊಟ್ಟೆ ಪಟ್ಟಾಂಗ ಹೊಡದಿಕ್ಕಿ ಭಾವನೂ,ಭಾವನೂ ಕೆಳ ಇಳುದು ಮನಗೆ ಬಂದವು.
ಅಷ್ಟಪ್ಪಗ ಚಂದ್ರಣ್ಣನೂ ಮನಗೆ ಬಂದಾಗಿದ್ದತ್ತು.ಮಾವ° ಅಳಿಯನ ಕುಶಲ ವಿಚಾರಣೆ ಎಲ್ಲ ಆಗಿ ಶಾರದೆ ಮಾಡಿದ ಕಾಪಿ,ತಿಂಡಿ ಎಲ್ಲ ಕುಡುದು,ತಿಂದು ಮಾಡಿಕ್ಕಿ ಅವು ಐದೂವರೆ ಗಂಟಗೆ ಅವರ ಮನಗೆ ಹೆರಟವು.
ಅವು ಹೋದಪ್ಪಗಳೇ ಸುಶೀಲಂಗೆ ಸಮದಾನ ಆದ್ದದು. ಅವು ಅತ್ಲಾಗಿ ಹೋದಪ್ಪಗ ಕೇಶವನೂ ಅವಂಗೆ ಹೋಯೆಕಾದಲ್ಲಿಗೆ ಹೆರಟಿಕ್ಕಿ ಹೋದ°. ಚಂದ್ರಣ್ಣ ಒಂದಾರಿ ತೋಟಕ್ಕೆ ಇಳುದಿಕ್ಕಿ ಬತ್ತೆ ಹೇಳಿ ಹೆರಟವು.ಶಾರದೆಗೆ ಹಟ್ಟಿಂದ ತುಂಗೆಯು,ನಂದಿನಿಯೂ ಆಗಂದಲೇ ಕೆಲೆತ್ತವು ಹೇಳಿ ಚೆಂಬು ತೆಕ್ಕೊಂಡು ಕರವಲೆ ಕಂಜಿಯ ಬಿಡ್ಲೆ ಹೋತು.
ಸುಶೀಲಂಗೆ ಇದುವೇ ಸರಿಯಾದ ಸಮಯ ಹೇಳಿ ಆತು.ಮೆಲ್ಲಂಗೆ ಕೊಟ್ಟಗೆಯ ಹಿಂದಾಣ ಬಾಗಿಲಿಲ್ಲಿ ಹೋಗಿ ದಿನೇಸನ ದಿನಿಗೇಳಿತ್ತು.
ಅವಕ್ಕಿಬ್ರಿಂಗೂ ಒಳ್ಳೆದಿದ್ದು ಹೇಳಿ ತಂಗಮ್ಮಂಗೆ ಗೊಂತಿದ್ದು. ಹಾಂಗಾಗಿ ಅದು ದಿನೇಸನ ಕಣ್ಣ ಭಾಶೆಲಿ ಹೆರ ಹೋಪಲೆ ಹೇಳಿತ್ತು.ಬಾಕಿದ್ದವಕ್ಕೆ ವಿಶಯ ಈಗಳೇ ಗೊಂತಾದರೆ ಅಡ್ಡಕೆ ಸಿಗುದು ಹಾಕಲೂ ಹೇಸವು’ ಹೇಳಿ ತಂಗಮ್ಮಂಗೆ ಗೊಂತಿದ್ದು. ಇಷ್ಟು ಪೈಸೆಕ್ಕಾರಂಗಳ ಮಗಳು ಎನ್ನ ಮಗನ ಪ್ರೀತಿಸಿರೆ ಅವು ಮದುವೆ ಮಾಡಿ ಕೊಡುಗು ಹೇಳಿ ಅದಕ್ಕೆ ನಂಬಿಕೆ.
ಮನೆಗೆ ಕೆಲಸಕ್ಕೆ ಬಪ್ಪ ಆಳುಗೊ ಆ ಮನೆಯ ಕೂಸಿನ ಮದುವೆಯಾಗಿ ಶ್ರೀಮಂತಿಕೆಲಿ ಮೆರವದರ ಅದು ತುಂಬ ಸಿನೆಮಲ್ಲಿ ಕಂಡಿದೂದೆ. ಹಾಂಗೆ ಮಗಂಗೆ ಒಳ್ಳೆ ಪ್ರೋತ್ಸಾಹ ಕೊಟ್ಟಿಕ್ಕಿ’ನೀನದರ ಪ್ರೀತಿಸಿ ಮದುವೆ ಆದರೆ ನಮಗಿಲ್ಲಿ ಈ ಆಸ್ತಿಲಿ ಪಾಲು ಸಿಕ್ಕುಗು. ಮತ್ತೆ ಹೀಂಗೆ ಬಂಙ ಬಪ್ಪ ಕೆಲಸಯಿಲ್ಲೇಳಿ ಅಂಬಗಂಬಗ ಹೇಳುಗುದೆ.ಹಾಂಗೆ ದಿನೇಸಂಗೂ ಸುಶೀಲನ ಮತ್ತೂದೆ ಹತ್ತರೆ ಮಾಡೆಕೂಳಿ ಆದ್ದದು.
ಹೆರ ಹೋದ ಕೇಶವ° ಮನಗೆತ್ತುಗ ಎಂಟು ಗಂಟೆಯಾತು. ಕರೆಂಟಿನ ಬೆಣಚ್ಚಿಲ್ಲಿ ಆ ದೊಡ್ಡ ಮನೆಯ ಚೆಂದ ಮತ್ತೂದೆ ಹೊಳದ ಹಾಂಗೆ ಕಾಂಬದವಂಗೆ.ಇನ್ನು ಹೀಂಗಿದ್ದ ಮನೆ ಎಲ್ಲ ಕಟ್ಸೆಕಾರೆ ಎಷ್ಟು ಪೈಸೆ ಬೇಕಕ್ಕೋ,ಈಗಾಣ ಹೊಸ ನಮೂನೆಯ ಮನಗೊ ಇದರ ಹತ್ತರಂಗೂ ಬಾರ ಹೇಳಿ ಗ್ರೇಶಿಂಡೇ ಒಳ ಹತ್ತಿದವಂಗೆ ಚಾವಡಿಲಿ ಒಂದು ಪುಸ್ತಕ ಮೋರಗೆ ಹಿಡ್ಕೊಂಡು ಕೂದೊಂಡಿದ್ದತ್ತು ಸುಶೀಲನ ಕಂಡತ್ತು.ಮೂಗಿಂಗೆ ಎಂತೋ ಘಾಟು ಅಡ್ಪಿಯಪ್ಪಗ ತಂಗೆಯ ಮೋರೆಯನ್ನೇ ನೋಡಿದ°. ಈ ಪರಿಮ್ಮಳ ಎಲ್ಲೋ …….!! ಅವಂಗೆ ಫಕ್ಕ ಎಂತೋ ನೆಂಪಾತು.
“ಒಂದು ಗ್ಲಾಸು ನೀರು ತಂದು ಕೊಡು ಮಾರಾಯ್ತಿ, ಬಚ್ಚಿ ಸಾಯ್ತು” ಹೇಳಿದ° ಅದರತ್ರೆ.
“ಆಗ ಎನ್ನ ಬೈದಿಕ್ಕಿ……ಈಗ ನೀರು ತಂದು ಕೊಡೆಕಾಡ,ಎನಗೆಡಿಯ,ನೀನೇ ಹೋಗಿ ಕುಡಿ” ದಿನೇಸನತ್ರೆ ಹೆಚ್ಚೊತ್ತು ಮಾತಾಡ್ಲೆಡಿಯದ್ದ ಕಾರಣ ಅದರ ಜೆನ ಅಣ್ಣ ಹೇಳಿ ಅವನತ್ರೆ ಪಿಸ್ರು ಬಂದುಕೊಂಡಿದ್ದತ್ತು ಅದಕ್ಕೆ.
“ತಾರ° ಒಂದರಿ,ನಿನಗೆನ್ನತ್ರೆ ಕೋಪವಾ ಹೇಂಗೆ?”
ಅವ° ಹೇಳಿದ ರೀತಿ ಕಂಡಪ್ಪಗ ಸುಶೀಲಂಗೆ ಜೋರು ನೆಗೆ ಬಂತು
“ಆತಪ್ಪಾ.. ಇದಾ..ಇನ್ನು ಆನು ನೀರು ತಂದು ಕೊಡದ್ದೆ ನಿನಗೆ ನಿತ್ರಾಣಾತೂಳಿ ಅಬ್ಬೆ ಎನ್ನ ಬೈವದು ಬೇಡ” ಹೇಳಿಂಡೇ ಅಡಿಗೊಳಾಂಗೆ ಹೋಗಿ ಏಲಕ್ಕಿ ಹಾಕಿ ಕೊದುಶಿ,ತಣುಶಿ ಮಡುಗಿದ ನೀರಿನ ತಂದು ಅಣ್ಣನ ಎದುರು ಹಿಡುದತ್ತು.
ನೀರು ತೆಕ್ಕೊಂಬಲೆ ಕೈ ಉದ್ದ ಮಾಡಿದ ಕೇಶವನ ದೃಷ್ಟಿ ತಂಗೆ ಹಾಕಿದ ಬಳೆಯ ಹೊಡೆಂಗೆ ಹೋದ್ದದೂದೆ ಅವನ ಕೈಲಿಪ್ಪ ನೀರಿನ ಗ್ಲಾಸು ಕೆಳ ಬಿದ್ದು ನೆಲಕ್ಕ ಇಡೀ ನೀರು ಹರಡಿತ್ತು!!!!.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 15: https://oppanna.com/kathe/swayamvara-15-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020