Oppanna.com

ಸ್ವಯಂವರ : ಕಾದಂಬರಿ : ಭಾಗ 42 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   23/03/2020    4 ಒಪ್ಪಂಗೊ

ಸ್ವಯಂವರ 42

“ಸುಶೀಲನ ಮತ್ತೊಂದು ಜನ್ಮ ಇದು. ಹಳೇ ಸುಶೀ ಸತ್ತು ಹೋಯಿದು ಗ್ರೇಶೆಕು” ಹೇಳಿ ಹೇಳಿಕ್ಕಿ ಅಣ್ಣನ ಪ್ರೀತಿಯ ಮಾತಿಂಗೆ ಕರಗಿ ಅವನೊಟ್ಟಿಂಗೆ ಅಪ್ಪನಮನಗೆ ಬಂತು ಸುಶೀಲ.

ಒಪ್ಪಕ್ಕಂಗೆ ಇಲ್ಲಿ ತುಂಬ ಕೊಶಿಯಾತು. ಮಾವ ,ಅಜ್ಜಿ ಅದರ ಕೊಂಗಾಟ ಮಾಡಿದವು. ಅಜ್ಜಿ ಲಾಯ್ಕಲ್ಲಿ ಪದ್ಯ ,ಕತೆ ಹೇಳಿಂಡಿತ್ತಿದ್ದವು. ಅದು ಇಷ್ಟರವರೆಗೆ ತಿನ್ನದ್ದ ತಿಂಡಿ,ಪಾಚ ಎಲ್ಲ ಮಾಡಿಕೊಟ್ಟವು.
ಮಾವ ಸುಮಾರು ಅಂಗಿ ತಂದುಕೊಟ್ಟ°. ಕಾಲಿಂಗೆ ಗೆಜ್ಜೆ ತಂದುಕೊಟ್ಟತ್ತು ದೊಡ್ಡಮ್ಮ.
ಅಷ್ಟು ದೊಡ್ಡ ಮನೆಲಿ ಅದಕ್ಕೆ ಆಟ ಆಡ್ಲೂ ಬೇಕಾದಷ್ಟು ಜಾಗೆ ಇದ್ದು. ಕೂದು ತೂಗಲೆ ಉಯ್ಯಾಲೆ ಇದ್ದು. ಜಾಲಿನ ಸುತ್ತೂ ಬಣ್ಣ ಬಣ್ಣದ ಹೂಗಿಪ್ಪ ಸೆಸಿಗೊ.

“ಇದು ಮಲ್ಲಿಗೆ ಹೂಗು. ಸಣ್ಣ ಆದರೂ ಎಷ್ಟು ಪರಿಮ್ಮಳ ನೋಡು” ಅಜ್ಜಿ ಪೂಜಗೆ ಹೂಗು ಕೊಯ್ವಗ ಒಪ್ಪಕ್ಕನನ್ನು ಕರಕ್ಕೊಂಡು ಹೋಗಿ ಒಂದೊಂದೇ ಸೆಸಿಯ ಹೂಗಿನ ಗುರ್ತ ಮಾಡಿದವು.
ಮೈಗೆಲ್ಲ ಮುಳ್ಳಿನ ಹಾಂಗೆ ಕಂತುವ ಉತ್ತರಣೆ ಸೆಸಿ, ಸಣ್ಣ ಉರೂಟು ಸೊಪ್ಪಿನ ಉರಗೆ,ಶೀತ ಆದರೆ ಬಾಡ್ಸಿ,ಎಸರು ಹಿಂಡಿ ಜೇನದೊಟ್ಟಿಂಗೆ ಕೊಡುವ ದಪ್ಪ ಸೊಪ್ಪಿನ ಸಾಂಬ್ರಾಣಿ, ಅಡಿಗೆ ಮಾಡುಗ ಪರಿಮ್ಮಳಕ್ಕೆ ಹಾಕುವ ಬೇವಿನಸೊಪ್ಪು ಎಲ್ಲವೂ ಅದಕ್ಕೆ ಗುರ್ತ ಆತು.

ತೋಟದ ಕರೇಲಿಪ್ಪ ಸಂಪಗೆ ಮರ ನೋಡುಗ ಅದಕ್ಕೆ ಆಶ್ಚರ್ಯ ಆತು. ಇಷ್ಟು ದೊಡ್ಡ ಮರಲ್ಲಿ ಇಷ್ಟು ಕುಞ್ಞಿ ಹೂಗು. ಹಾಂಗೇ ನೆಲ್ಲಿಕಾಯಿ, ನಕ್ಷತ್ರ ನೇರಳೆ,ಪೇರಳೆ, ಚಿಕ್ಕು……ಹೀಂಗೇ ಅವರ ತೋಟದ ಸುತ್ತಮುತ್ತ ಇಪ್ಪ ಎಲ್ಲವನ್ನು ನೋಡಿದ ಕೂಡ್ಲೇ ಗುರ್ತ ಹಿಡಿವಷ್ಟು ಉಶಾರಿ ಆತದು.

ಸುಶೀಗೆ ಮಾಂತ್ರ ಅಪ್ಪನಮನಗೆ ಬಂದದು ಹೆಚ್ಚು ಕೊಶಿ ಆಯಿದಿಲ್ಲೆ. ಅಣ್ಣ ಇನ್ನೂ ಮದುವೆ ಆಗದ್ದೆ ಕೂಯಿದ°. ಕಾರಣ ಕೇಳಿರೆ ಸರಿಯಾಗಿ ಉತ್ತರ ಕೊಡ್ತಾಯಿಲ್ಲೆ. ಬಹುಶಃ ಎನ್ನಂದಾಗಿ ಅವನ ಮನಸಿಂಗೆ ಎಂತಾರು ಬೇಜಾರಾಗಿಕ್ಕು . ಹಾಗಾಗಿಯೇ ಮದುವೆ ವಿಶಯ ತೆಗವಗ ತಳಿಯದ್ದೆ ತಲೆ ತಗ್ಗಿಸಿಕ್ಕಿ ಹೋವ್ತ°. ಈ ಸಮಯಲ್ಲಿ ಆನು ಮಕ್ಕಳ ಕಟ್ಯೊಂಡು ಇಲ್ಲಿಗೆ ಬಂದರೆ ಮತ್ತೂ ರಗಳೆ . ಅಕ್ಕ ಬಂದಪ್ಪಗ ಅದರತ್ರೆ ಅಣ್ಣಂಗೆ ಬುದ್ದಿ ಹೇಳ್ಲೆ ಹೇಳೆಕು. ಮದುವೆ ಆಗದ್ದೆ ಅಂತೇ ದಿನ ನೂಕಿರೆ ಮತ್ತೆ ಪ್ರಾಯಪ್ಪಗ ಆರೂ ಇಲ್ಲೇಳಿ ಅಕ್ಕು…..ಸುಶೀಲನ ಆಲೋಚನೆಗೊ ಹೀಂಗೆಲ್ಲ ಹೋಗಿಂಡಿದ್ದತ್ತು.
ಸುಶೀಲ ಮಕ್ಕೊ ಇದ್ದ ಕಾರಣ ಶೈಲನೂ ವಾರಕ್ಕೊಂದರಿ ಅಪ್ಪನಮನಗೆ ಬಂದೊಂಡಿದ್ದತ್ತು. ಅಬ್ಬೆಯ ಮನಸ್ಸು ಸುಶೀಯ ಹೊಡೆಂಗೆ ಇನ್ನೂ ಪೂರ್ತಿ ಸರಿ ಆಯಿದಿಲ್ಲೆ. ಮನಸ್ಸಿನ ಮೂಲೆಲಿ ಇನ್ನೂ ಅಸಮಾಧಾನ ಇದ್ದು.ಮನೆ ಒಳಾಂಗೆ ಬಪ್ಪಲೆ ಇನ್ನೂ ಸುಶೀಗೆ ಒಪ್ಪಿಗೆ ಸಿಕ್ಕಿದ್ದಿಲ್ಲೆ ಹೇಳಿ ಗೊಂತಿದ್ದ ಕಾರಣ ಅದು ಎಡೇ ಎಡೇಲಿ ಬಂದುಕೊಂಡಿದ್ದದು.
ಸುಶೀಗೆ ಆ ವಿಶಯಲ್ಲಿ ಬೇಜಾರಿಲ್ಲೆ ಹೇಳಿ ಶೈಲಂಗೆ ಗೊಂತಿದ್ದರೂ ಕೇಶವಂಗೆ ಕೆಲವು ವಿಶಯಲ್ಲಿ ಬೇಜಾರಿದ್ದೂಳಿ ಗೊಂತಿದ್ದದಕ್ಕೆ.
ಒಪ್ಪಕ್ಕನ ಮಾತ್ರ ಅಬ್ಬೆ ಕೊಂಗಾಟ ಮಾಡುದು ರಜ ಸಮದಾನ.

ಶೈಲ ಆ ಸರ್ತಿ ಮನಗೆ ಬಂದಪ್ಪಗ ಸುಶೀಲ ಅಕ್ಕನತ್ರೆ ಅಣ್ಣನ ವಿಶಯ ಮಾತಾಡಿತ್ತು.ಇಬ್ಬರೂ ಸೇರಿ ಒತ್ತಾಯ ಮಾಡಿಯಪ್ಪಗ ಅವ° ಸುರುವಿಂಗೆ ಬೇಡ ಹೇಳಿರೂ ಅಕೇರಿಗೆ “ಆತು ನಿಂಗೊಗೆ ಕೊಶಿ ಕಂಡ ಹಾಂಗೆ ಮಾಡಿ” ಹೇಳಿದ°.
ಶೈಲಂಗೂ ಸುಶೀಗೂ ಸಮದಾನ ಆತು. ಶಾರದಕ್ಕಂಗೂ ಮಗ° ಮದುವೆಗೆ ಒಪ್ಪಿದನ್ನೇಳಿ ಸಂತೋಶಾತು.
“ಅಬ್ಬಾ..ಸಮದಾನ ಆತೆನಗೆ. ನಿನಗೆ ಬೇಕಾದ ಹಾಂಗಿದ್ದ ಕೂಸಿನ ಆನು ಹುಡ್ಕಿ ಕೊಡುವೆ” ಶೈಲ ಸೆರಗಿನ ಸೊಂಟಕ್ಕೆ ಸಿಕ್ಸಿಂಡು ಕೂದಲ್ಲಿಂದ ಎದ್ದು ನಿಂದತ್ತು.

“ಹಾ..ಕೂಸಿನ ಹುಡ್ಕಲೆ ಹೆರಟ ಚಂದ ನೋಡುಗ ….” ರಾಮಚಂದ್ರ ಹೆಂಡತಿಯ ತಮಾಶೆ ಮಾಡಿದ°.

“ಒಳ್ಳೆ ಕೆಲಸಕ್ಕೆ ಹೆರಾಡುಗ ನಿಂಗಳದ್ದೊಂದು…….” ಶೈಲ ಗಂಡನ ಕುಶಾಲಿಂಗೆ ಜೋರು ಮಾಡಿತ್ತು.
“ಅಯ್ಯೋ…ಇಲ್ಲೆ ಮಾರಾಯ್ತೀ….ಅಪಶಕುನ ಹೇಳಿದ್ದಲ್ಲ. ನೀನು ಹೆರಟ ಚಂದವ ಹೊಗಳಿದ್ದಷ್ಟೇ” ಅವನೂ ಅದೇ ರಾಗಲ್ಲಿ ಹೇಳಿಯಪ್ಪಗ ಅಲ್ಲಿಪ್ಪವಕ್ಕೆಲ್ಲ ಜೋರು ನೆಗೆ ಬಂತು.
ಸುಶೀಲಂಗೆ ಅಕ್ಕ° ಭಾವನ ಈ ಸರಸ ದಾಂಪತ್ಯದ ಮಧುರ ಸಲ್ಲಾಪ ಕಾಂಬಗ ಒಂದು ಕ್ಷಣ ಮನಸ್ಸು ಚುಂಯಿ ಹೇಳಿ ಆತು.
‘ಮರ್ಲುಗಟ್ಟಿ ಆ ದಿನೇಸನೊಟ್ಟಿಂಗೆ ಓಡಿ ಹೋಗದ್ರೆ ಎನಗೂ ಈಗ ಒಬ್ಬ ಒಳ್ಳೆಯ ವ್ಯಕ್ತಿಯ ಮದುವೆ ಆಗಿ ಕೊಶೀಲಿಪ್ಪಲಾವ್ತಿತು. ಎಷ್ಟು ಗೌರವ , ಮರ್ಯಾದೆ ಇರ್ತಿತು. ಇದೀಗ ನೆರೆಕರೆ ಹೆಮ್ಮಕ್ಕೊ ಕೂಡ ಮಾತಾಡ್ಸುತ್ತವಿಲ್ಲೆ. ಅಬ್ಬೆಯ ಮಾತಾಡ್ಸಲೆ ಬಂದರೂ ದೂರಂದಲೇ ಒಂದು ರೀತಿಲಿ ನೋಡಿಕ್ಕಿ ಹೋಪದು.

“ನಿತ್ಯ ಪೂಜೆ ಪುರಸ್ಕಾರ ಇಪ್ಪ ಮನೆ ಅಶುದ್ಧ ಅಪ್ಪಲಾಗ.ಜಾಗ್ರತೆ ಬೇಕು” ಹೇಳಿ ಅಬ್ಬೆ ಆಸ್ಪತ್ರೆಂದ ಬಂದ ದಿನವೇ ಹೇಳಿದ್ದು ಎಂತಕೆ ಹೇಳಿ ಸುಶೀಗೆ ಗೊಂತಾಯಿದು. ಹಾಂಗಾಗಿಯೇ ಅದು ಮನೆಯ ಹಿಂದಾಣ ಜೆಗುಲಿಯ ಕರೇಯಾಣ ಉಗ್ರಾಣವೇ ಅಕ್ಕು ಹೇಳಿ ಅಲ್ಲೇ ಮನುಗುಲೆ ವ್ಯವಸ್ಥೆ ಮಾಡಿದ್ದು. ಒಪ್ಪಕ್ಕನ ಒಳಾಂಗೆ ಕಳ್ಸಲೆ ಮನಸ್ಸಿಲ್ಲದ್ರೂ ಅಬ್ಬೆಯೇ ಬಂದು ಕರಕ್ಕೊಂಡು ಹೋದ್ದು ರೆಜ ಸಮದಾನ ಅದಕ್ಕೆ.

“ಸುಶೀ ಎಂತರ ಆಲೋಚನೆ ಮಾಡುದು? ನಿನಗೆ ಗೊಂತಿಪ್ಪ ಕೂಸುಗೊ ಆರಾರು ಇದ್ದವಾ?” ಶೈಲ ತಂಗೆ ಎಂತೋ ಮಂಡೆಬೆಶಿ ಮಾಡುವಾಂಗೆ ಕಂಡಪ್ಪಗ ಸುಮ್ಮನೇ ಕೇಳಿತ್ತು. ಆ ಮಾತು ಶಾರದಕ್ಕಂಗೆ ಹಿತ ಆತಿಲ್ಲೆ.

“ಅದರತ್ರೆ ಇಕ್ಕು ಕೂಸುಗೊ ಅಲ್ಲ…..” ಅಬ್ಬೆ ಅಷ್ಟು ಹೇಳಿಯಪ್ಪಗ ಸುಶೀಲ ತಲೆ ಅಡಿಯಂಗೆ ಹಾಕಿತ್ತು. ತೊಟ್ಲಿಲ್ಲಿ ಮನುಶಿದ ಮಗ° ಎಚ್ಚರಿಕೆ ಆಗಿ ಕೂಗಲೆ ಸುರು ಮಾಡಿದ ಕಾರಣ ಕಣ್ಣ ಕರೇಲಿ ತುಂಬಿ ಬಂದ ನೀರಿನ ಆರಿಂಗೂ ಕಾಣದ್ದ ಹಾಂಗೆ ಉದ್ದಿಕ್ಕಿ ಮೆಲ್ಲಂಗೆ ಮಗನ ಹತ್ತರಂಗೆ ಬಂತದು.
‘ಈ ಮನೆಲಿ ಇದ್ದಷ್ಟು ಸಮಯವೂ ಹೀಂಗೇ ಅಬ್ಬೆಯ ಮಾತುಗಳ ಕೇಳೆಕಕ್ಕು. ಅಣ್ಣನ ಮದುವೆ ಆಗಿ ಬಪ್ಪದು ಹೇಂಗಿದ್ದ ಕೂಸು ಗೊಂತಿಲ್ಲೆ. ಹೇಂಗಿಪ್ಪದಾದರೂ ಸ್ವಂತ ಅಬ್ಬೆಯೇ ದೂರ ಮಾಡಿದ ಮತ್ತೆ ಬಂದವಕ್ಕೆ ಆನು ಹತ್ತರೆ ಅಪ್ಪದು ಹೇಂಗೆ!
ದೇವರೇ ಎಂಥಾ ಅವಸ್ಥೆ ತಂದು ಹಾಕಿದೆ ಎನಗೆ..! ಇಲ್ಲಿಂದ ಹೋಪದಾದರು ಎಲ್ಲಿಗೆ! ಆರಿದ್ದವು ಪ್ರೀತಿಲಿ ನೋಡ್ಯೊಂಬವು….ಸುಶೀಲ ಹೀಂಗೆಲ್ಲ ಆಲೋಚನೆ ಮಾಡಿಂಡು ದಿನ ದೂಡುಗ ಶೈಲ ಕೇಶವಂಗೆ ಕೂಸು ಹುಡ್ಕಲೆ ಸುರು ಮಾಡಿತ್ತು.
ಕೇಶವಂಗೆ ಕೂಸು ಹೇಳಿ ಗೊಂತಪ್ಪಗ ಅಷ್ಟು ಫಕ್ಕನೆ ಆರೂ ಜಾತಕ ಕೊಡ್ಲೆ ಒಪ್ಪಿದ್ದವಿಲ್ಲೆ. ಸುಶೀಲನ ವಿಶಯವನ್ನೇ ದೊಡ್ಡ ಮಾಡಿ
“ಬೇರೆ ಜಾತಿದರೊಟ್ಟಿಂಗೆ ಓಡಿ ಹೋದ್ದರ ವಾಪಾಸು ಮನಗೆ ಕರಕ್ಕೊಂಡು ಬಯಿಂದವನ್ನೇ. ಅದು ಬಾಳಂತನಕ್ಕೆ ಬಂದದಾದರೆ ಅದರ ಗೆಂಡನೂ ನಾಡ್ದಿಂಗೆ ಅಲ್ಲಿ ನಿಂಬಲೆ ಬಕ್ಕು ‌. ಎಂಗೊ ಎಲ್ಲ ರಜ ಆಚಾರ ಇಪ್ಪವು. ಹೀಂಗಿದ್ದ ಸಂಬಂಧ ಎಂಗಳ ಕೂಸಿಂಗೆ ಬೇಡ, ಬೇರೆ ಸಿಕ್ಕುಗಪ್ಪಾ…” ಹೇಳಿ ಕೈ ಕುಡುಗಿಂಡಿತ್ತಿದ್ದವು.

ಹೆಚ್ಚಿನ ದಿಕೆಲೂ ಇದೇ ಅನುಭವ ಅಪ್ಪಗ ಶೈಲಂಗೆ ಸಂಕಟಾತು. ಈ ವಿಶಯ ಆರತ್ರೆ ಹೇಳುದು! ಕೇಶವನತ್ರೆ ಹೇಳಿರೆ ಅವ ‘ಎನಗೆ ಮದುವೆಯೇ ಬೇಡ, ನೀನು ಕೂಸು ಹುಡ್ಕಿ ಬಂಙ ಬರೆಡ’ ಹೇಳುಗು.
ಅಬ್ಬಗೆ ಗೊಂತಾದರೆ ಸುಶೀಯ ಬೈಗು. ಈಗಲೇ ಜೀವನಲ್ಲಿ ತುಂಬಾ ಬಂಙ ಬಂದು ಬೇಜಾರಲ್ಲಿಪ್ಪ ಅದರ ಮನಸಿನ ಗಾಯಕ್ಕೆ ಉಪ್ಪು ಹಾಕುವ ಕೆಲಸ ಮಾಡುಗು . ಎಂತ ಮಾಡುದು ಹೇಳಿ ಅರಡಿಯದ್ದಾಂಗಾತು.

ತಿಂಗಳೊಂದು ಕಳುದತ್ತು. ಒಂದು ದಿನ ಶೈಲನೊಟ್ಟಿಂಗೆ ಕೆಲಸ ಮಾಡುವ ಟೀಚರು ಯೇವದೋ ಲೆಕ್ಕ ತೆಗವಲೆ ಇವರ ಊರಿಂಗೆ ಬಂತು. ಹಳ್ಳಿಲಿ ದೂರ ದೂರ ಇಪ್ಪ ಮನೆಗೊ.ಒಂದೇ ಹೆಮ್ಮಕ್ಕೊಗೆ ಹೋಪಲೆ ಬಂಙ ಹೇಳಿ ಶೈಲ ಕೇಶವಂಗೆ ಮದಲೇ ವಿಶಯ ತಿಳಿಶಿದ್ದು. ಹಾಂಗಾಗಿ ಅವ° ಆ ದಿನ ಆ ಟೀಚರಿಂಗೆ ದಾರಿ ತೋರ್ಸಲೆ ಆ ಊರಿನ ಮನೆ ಮನಗೂ ಹೋದ°. ಮಧ್ಯಾಹ್ನ ಉಂಬಲೂ ಆ ಟೀಚರ ಮನಗೆ ಕರಕ್ಕೊಂಡು ಬಂದ ಕೇಶವ°.
ಅವಕ್ಕೆ ಕೇಶವನ ಗುಣ ತುಂಬಾ ಕೊಶಿಯಾತು. ಅವರೊಟ್ಟಿಂಗೆ ಹೋದ ಮನೆಗಳಲ್ಲೆಲ್ಲ ಕೇಶವಂಗೆ ಕೊಡುವ ಗೌರವ, ಅವನ ಚೆಂದದ ಮಾತು.ಸೌಜನ್ಯದ ನಡೆನುಡಿ ಎಲ್ಲವೂ ಇಷ್ಟ ಆತು. ಮನಗೆ ಬಂದು ಉಂಬಗ ಶಾರದಕ್ಕನ ಗುರ್ತವೂ ಆತು. ಒಪ್ಪಕ್ಕನ ಅಲ್ಲಿ ಕಂಡಪ್ಪಗ ಸುಶೀಲ ಅಲ್ಲಿಪ್ಪದು ಗೊಂತಾತು. ಅವರ ಬಸ್ಸಿಂಗೆ ಬಿಡ್ಲೆ ಜೀಪಿಲ್ಲಿ ಕರಕ್ಕೊಂಡು ಹೋದ ಕೇಶವ°.

ಸಂತೋಶ ಇಲ್ಲದ್ದ ಅವನ ಮೋರೆ ಕಾಂಬಗ ಆ ಟೀಚರಿಂಗೆ ಇವನ ಮನಸ್ಸಿನ ಬೇಜಾರ ತಿಳಿಯೆಕೂಳಿ ಆತು. ಹಾಂಗೆ ಮೆಲ್ಲಂಗೆ ಕೇಳಿ ಕೇಳಿ ಸುಶೀಲನ ವಿಶಯ ತಿಳ್ಕೊಂಡತ್ತು. ತಂಗೆಯ ತುಂಬ ಪ್ರೀತಿಸುವ ಕೇಶವನ ಮನಸ್ಸು ಅವಕ್ಕೆ ಅರ್ಥ ಆತು. ಇಷ್ಟೊಳ್ಳೆ ಮಾಣಿಯ ಮದುವೆ ಅಪ್ಪಲೆ ಕೂಸುಗೊ ಪುಣ್ಯ ಮಾಡೆಕು ಹೇಳಿ ಮನಸ್ಸಿಲ್ಲಿ ಜಾನ್ಸಿದ ಅವು ಆ ದಿನ ಮನಗೆ ಹೋದ ಕೂಡ್ಲೇ ಅವರ ಅಣ್ಣನತ್ರೆ ಕೇಶವನ ವಿಶಯ ಎಲ್ಲ ಹೇಳಿ ಅವನ ಮಗಳ ಜಾತಕ ಪಟ ತಂದು ಮರದಿನವೇ ಶೈಲನ ಕೈಲಿ ಕೊಟ್ಟವು.
“ನಿನ್ನ ಅಪ್ಪನಮನೆ ವಿಶಯ ಎಲ್ಲ ಗೊಂತಿದ್ದು. ಕೇಶವನ ಗುಣವೂ ನಿನ್ನೆ ಗೊಂತಾತು. ಜಾತಕಲ್ಲಿ ಅಕ್ಕಾದರೆ ಎನ್ನ ಅಣ್ಣ ಮಗಳ ಕೊಡ್ತಾಡ”
ಶೈಲಂಗೆ ಸಂತೋಶಲ್ಲಿ ಕಣ್ಣು ತುಂಬಿ ಬಂತು. ಪದ್ಮಿನಿ ಹೇಳುವ ಆ ಟೀಚರು ಕೇಶವನ ಕಂಡು, ಮೆಚ್ಚಿ ಜಾತಕ ತಂದು ಕೊಟ್ಟತ್ತನ್ನೇ. ಇನ್ನು ಜಾತಕಲ್ಲಿ ಸೇರಿ ಬಂದರೆ ಸಾಕು. ಹಾಂಗೆ ಗ್ರೇಶಿಂಡು ಅದು ಮರದಿನವೇ ಜಾತಕ ಗೆಂಡನ ಕೈಲಿ ಕೊಟ್ಟು ಕಳ್ಸಿತ್ತು. ರಾಮಚಂದ್ರನು,ಕೇಶವನು ಹೋಗಿ ಜಾತಕ ತೋರ್ಸಿಕ್ಕಿ ಬಂದವು.
“ಉತ್ತಮಲ್ಲಿ ಕೂಡಿ ಬತ್ತು” ಹೇಳಿ ಜೋಯಿಶ ಹೇಳಿದ್ದು ಕೇಳಿ ಶಾರದಗೂ ,ಸುಶೀಲಂಗು ಸಂತೋಶಾತು.

ಶುಭಸ್ಯ ಶೀಘ್ರಂ ಹೇಳಿ ಒಂದು ಮಾತಿದ್ದು .ಅದರ ಪ್ರಕಾರ ಶುಭ ಕಾರ್ಯಂಗಳ ಆದಷ್ಟು ಬೇಗ ಮಾಡೆಕಾಡ. ಕೇಶವನ ವಿಶಯಲ್ಲೂ ಹಾಂಗೇ ಆತು. ಕೂಸು ನೋಡಿ ಮಾಣಿಗೂ ಕೂಸಿಂಗೂ ಒಪ್ಪಿಗೆ ಆತು. ಮನೆ ನೋಡ್ಲೆ ಕೂಸಿನ ಸೋದರ ಮಾವ,ಅತ್ತೆ,ಅಪ್ಪ, ಅಕ್ಕ, ಭಾವ ,ಅಪ್ಪ ಬಂದಿಕ್ಕಿ ಹೋದವು. ಅವಕ್ಕೂ ಇಲ್ಯಾಣ ಕ್ರಮ ಕೊಶೀ ಆತು.
ಬದ್ಧವು ಗೌಜಿಲಿ ಕಳುದತ್ತು. ಆದರೆ ಸುಶೀ ಯಾವುದಕ್ಕೂ ಹೋಯಿದಿಲ್ಲೆ. ಕೇಶವ ಬದ್ದಕ್ಕೆ ಬಪ್ಪಲೆ ಒತ್ತಾಯ ಮಾಡಿದ್ದು ಶಾರದಕ್ಕಂಗೆ ಅಸಮಾಧಾನ ಆತು.
“ಎಲ್ಲಿಗೆ ಇದರ ಕಟ್ಯೊಂಡು,ಸಂಬಂಧ ಕೇಳಿರೆ ಎಂತ ಹೇಳ್ತೆ? ಆ ದಿನೇಸ ಎನ್ನ ಭಾವ° ಹೇಳ್ತೆಯಾ? ” ಅಬ್ಬೆ ಅಷ್ಟು ಜೋರು ಮಾಡುಗು ಹೇಳಿ ಅವಂಗೆ ಅಂದಾಜಿತ್ತಿದ್ದಿಲ್ಲೆ. ಮತ್ತೆ ಶೈಲನೇ ಅಬ್ಬೆಯ ಸಮದಾನ ಮಾಡಿತ್ತು.

ಮನಸ್ಸಿಲ್ಲಿ ಅಣ್ಣನ ಬದ್ದಕ್ಕೆ ಹೋಯೆಕೂಳಿ ಆಶೆ ಇದ್ದರೂ ಸುಶೀಲ ಮನಸ್ಸು ಗಟ್ಟಿ ಮಾಡಿ “ಆನು ಬತ್ತಿಲ್ಲೆ” ಹೇಳಿ ಕೂದತ್ತು. ಕೇಶವಂಗೆ ಬೇಜಾರಾದರೂ ಮಾತಾಡಿದ್ದಾ° ಇಲ್ಲೆ.
ಹಾಂಗೆ ಬದ್ದವೂ ಕಳುದತ್ತು. ಮದುವೆಗೆ ಜವುಳಿ ತೆಗವಗ ಸುಶೀಲಂಗೂ ಶೈಲಂಗೆ ತೆಗದ ಹಾಂಗೇ ಇಪ್ಪ ಸೀರೆಗಳ ತೆಗದ್ದು ಶಾರದಕ್ಕಂಗೆ ಹಿತ ಆಯಿದಿಲ್ಲೆ. ಆದರೂ ಎಲ್ಲದಕ್ಕೂ ಕೇಶವನ ಬೈವದೆಂತಕೆ ಹೇಳಿ ತಳಿಯದ್ದೆ ಕೂದವು.

ಒಪ್ಪಕ್ಕಂಗೆ ಮಾವನ ಮದುವೆಯ ಸಂಭ್ರಮ. ಎಂತಕೆ ಗೌಜಿ ಹೇಳಿ ಗೊಂತಿಲ್ಲದ್ರೂ ಮಾವನ ಲೆಕ್ಕಲ್ಲಿ ಅದಕ್ಕೆ ಚೆಂದ ಚೆಂದದ ನಾಲ್ಕು ಅಂಗಿ ಸಿಕ್ಕಿತ್ತು. ಚಿನ್ನ ತೆಗವಲೆ ಹೋದ ದಿನವೇ ಒಪ್ಪಕ್ಕನ ಕೆಮಿ ಕುತ್ತಿ ಚೆಂದದ ಒಪ್ಪಿಯನ್ನು ಹಾಕ್ಸಿದ° ಮಾವ°. ಕೊರಳಿಂಗೊಂದು ಸಣ್ಣ ಪದಕ ಇಪ್ಪ ಚೈನುದೆ ಹಾಕಿಯಪ್ಪಗ ಒಪ್ಪಕ್ಕನ ಒಪ್ಪೊಪ್ಪ ಕಂಡು ಕೊಂಡಿದ್ದತ್ತು.
“ಎಂತಕಣ್ಣಾ..ಅಂತೇ ಅದಕ್ಕೀಗ ಚೈನೆಲ್ಲ ಬೇಕಾತಿಲ್ಲೆ” ಸುಶೀಲ ಅಬ್ಬಗೆ ಕೇಳದ್ದಾಂಗೆ ಅಣ್ಣನತ್ರೆ ಹೇಳಿತ್ತು

“ಎನಗೆ ನೀನು ಬೇರೆ ಅಲ್ಲ,ಶೈಲ ಬೇರೆ ಅಲ್ಲ.ನಿನ್ನ ಮಗಳು ಎನ್ನ ಸೊಸೆ ಅಲ್ಲದಾ. ಸೋದರಮಾವ ಅದಕ್ಕಲ್ಲದ್ದೆ ಬೇರೆ ಆರಿಂಗೆ ತೆಗದುಕೊಡುದು? ಶೈಲನ ಮಕ್ಕೊಗೆ ಬೇಕಾದ್ದೆಲ್ಲ ಭಾವನೇ ತೆಗದು ಕೊಡ್ತವು”
ಸುಶೀಲನ ಹೃದಯ ಭಾರ ಆತು.ಅಣ್ಣನ ಈ ಪ್ರೀತಿ ಮೊದಲೇ ಅರ್ಥ ಆಗಿದ್ದರೇ……!

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

4 thoughts on “ಸ್ವಯಂವರ : ಕಾದಂಬರಿ : ಭಾಗ 42 – ಪ್ರಸನ್ನಾ. ವಿ. ಚೆಕ್ಕೆಮನೆ

  1. ನೊಂದು ಬೆಂದ ಸುಶೀಲಂಗೆ ಜೀವನದ ಸತ್ಯ ಅರ್ಥ ಅಪ್ಪಲೆ ಸುರು ಆತು. ಅದಕ್ಕೆ ಸರಿಯಾಗಿ ಅಪ್ಪನ ಮನೆಲಿ ಹೊಂದುಗೊಂಡು ಹೋಯೆಕ್ಕು ಹೇಳಿಯೂ ತಿಳ್ಕೊಂಡತ್ತು. ಇನ್ನಾದರೂ ಒಂದು ಸುಖಾಂತ್ಯ ಆಗಲಿ

  2. ಸುಶೀಲನ ಜೀವನ ಒಂದು ಸರಿಯಾದ ದಾರಿಗೆ ಬಂದ ಹಾಂಗೆ ಕಾಣ್ತು. ದಿನೇಶನ ಪ್ರವೇಶ ಇನ್ನೊಂದರಿ ಅಪ್ಪಲಿದ್ದೊ , ಅಯ್ಯೋ ಬೇಡಪ್ಪಾ ಅದರ ಸಾವಾಸ.
    ಕೇಶವನ ಜೀವನ ಮದುವೆಯಾಗಿ ಚೆಂದಕೆ ನಡೆಯಲಿ. ಮುಂದೆ ಎಂತಾವುತ್ತು ನೋಡುವೊ.

  3. ಸುಶಿ ಜೀವನ ಸರಿ ಆತು ಹೇಳಿ ಒಂದು ಖುಷಿ ಅಪ್ಪಗಳೆ ಕೇಶವ ನ ಮದುವೆ ಹೇಂಗೆ ನಡಗೂ…. ಬಂದ ಕೂಸು ಹೇಂಗಿಕ್ಕು ಹೇಳಿ ಬೇಜಾರು ಆವುತ್ತು…ಮುಂದೆ ಅತ್ತಿಗೆ ಬಂದಪ್ಪಗ ಸುಷಿ ಎಂಥ ಮಾಡುಗು..ಕೂಸು ಸುಷಿಯ ಯಾವ ರೀತಿಲಿ ನೋಡುಗು…ಮುಂದೆ ಎಂತ ಅಕ್ಕು …ಅಪ್ಪನ ಕೊನೆ ಆಸೆ ನೆರವೇರಿತ್ತು…ಶಾರದೆ ಅಕ್ಕ ಇನ್ನೂ ಸುಷಿ ಹೊಡೆಂಗೆ ಇಲ್ಲೆ…ಇದರಿಂದಾಗಿ ಕೇಶವನ ಜೀವನ ಹಾಳಾಗದೆ ಇದ್ದರೆ ಸಾಕು…ಕೇಶವನ ಕೂಸಿಗೆ ಸುಷಿ ಹತ್ರೆ ಪ್ರೀತಿ ಕರುಣೆ ಬಂದರೆ ಎಲ್ಲವೂ ಸರಿ ಅಕ್ಕು ಗ್ರೈಸುತ್ತೆ…ಎಲ್ಲವೂ ಮದುವೆ ಆಗಿ ಬಪ್ಪ ಕೂಸಿನ ಗುಣ ಲ್ಲಿ ಇದ್ದು…ಮುಂದುವರಿಯಲಿ ಹೇಂಗೆ ನೋಡುವ

  4. Susheela alochane maduva reethi mecchekkaadde. Arotingo odi hogi baduku haalu madigonda koosu puna appana manege bandu koodare, adara annana maduve agi bappa koosu sahisudu kastave.. mundondu dina athi ghora yuddha akku..
    Adare susheelangaru bere jeevana elliddu? Ellige hoku? Appana kone aaseyu adara manege sersekkuli..
    Keshavana jeevanavu olle reethili saagekku
    Ellavu eega susheelana kaili iddu..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×