Oppanna.com

ನೀ ಶುದ್ದಿಯೊಳಗೋ…. ನಿನ್ನೊಳು ಶುದ್ದಿಯೋ…

ಬರದೋರು :   ಅನು ಉಡುಪುಮೂಲೆ    on   17/04/2020    6 ಒಪ್ಪಂಗೊ

ಅನು ಉಡುಪುಮೂಲೆ

ಈ ವಾಟ್ಸಾಪ್ , ಫೇಸ್ ಬುಕ್ ಬಂದ ಮೇಲೆ ಇಡೀ ಪ್ರಪಂಚವೇ ತುಂಬ ಸಣ್ಣ ಆಯ್ದೋ ಹೇಳಿ ಎನಗೊಂದು ಸಂಶಯ. ಮೊಬೈಲ್ ಲಿ ಎಷ್ಟು ಬೆಶಿ ಬೆಶಿ ಶುದ್ದಿ ಬತ್ತು ಹೇಳಿದರೆ ಪಬ್ಲಿಕ್ ಟೀವಿ ರಂಗಣ್ಣನೂ ತಣ್ಣಂಗೆ ತಣ್ಣಂಗೆ ಇದ್ದ ಹೇಳಿ ಆವ್ತು. “ನೀ ಮಾಯೆಯೊಳಗೋ… ನಿನ್ನೊಳು ಮಾಯೆಯೋ…” ಹೇಳಿ ಕನಕದಾಸರು ೧೪ನೇ ಶತಮಾನಲ್ಲಿಯೇ ಹೇಳಿದ್ದವು. ಆಗಲೇ ಈ ಮೊಬೈಲ್ ಹೇಳ್ತ ಮಾಯೆಯ ಬಗ್ಗೆ ಅವಕ್ಕೆ ದೂರ ದೃಷ್ಠಿ ಇದ್ದತ್ತು ಹೇಳಿ ಎನಗೆ ಅನ್ಸುತ್ತು. ಈಗ ‘ನೀ ಶುದ್ದಿಯೊಳಗೋ….
ನಿನ್ನೊಳು ಶುದ್ದಿಯೋ…..’ ಹೇಳುದು ಮೊಬೈಲಿಂಗೆ ಅನ್ವರ್ಥ ಆಯ್ದು. ಎಂತದೇ ಆಗಲಿ ಕೈಲಿಪ್ಪ ಮೊಬೈಲ್ ಸರ್ವಾಂತಸ್ಥ !

ಮೊಬೈಲ್ ಗುರುಟುದು…. ಬಂದ ಶುದ್ದಿಗಳ ಇನ್ನೊಂದು ಕಡೆಂಗೆ ದೂಡಿ ಬಿಡುದು ಇದು ಮಾಮೂಲಿ. ಅದರ ಸತ್ಯಾಸತ್ಯತೆಯ ಆರೂ ವಿಮರ್ಶೆ ಮಾಡ್ಳೆ ಹೋವುತ್ತವಿಲ್ಲೆ. ಮೊಬೈಲ್ ಲಿ ಶುದ್ದಿಗಳ ಅತ್ಲಾಗಿ ಇತ್ಲಾಗಿ ದಾಂಟಿಸಿ ಬಿಡುದರಿಂದ ಕೆಲವು ಸರ್ತಿ ಉಪಯೊಗವೂ ಇದ್ದು ಅಷ್ಟೇ ಉಪದ್ರವೂ ಇದ್ದು. ಅಂದೊಂದರಿ ಎನಗೆ ಹುಶಾರಿಲ್ಲದ್ದೆ ಆಸ್ಪತ್ರೆಲಿತ್ತಿದ್ದೆ. ಡಾಕ್ಟ್ರು “ಅರ್ಜೆಂಟು ಒಂದು ಕುಪ್ಪಿ ನೆತ್ತರು ಕೊಡೆಕ್ಕಾವುತ್ತು ವ್ಯವಸ್ಥೆ ಮಾಡಿ” ಹೇಳಿದವು. ಆ ಗಡಿಬಿಡಿಲಿ ಎಂತ ಮಾಡೆಕ್ಕು ಹೇಳಿ ಗೊಂತಾಗ. ಅಂಬಗ ತಲಗೆ ಹೋದ್ದದು ಈ ವಾಟ್ಸಾಪ್ ಗುಂಪುಗ. ಎಲ್ಲಾ ಗುಂಪುಗಳಲ್ಲೂ ಒಂದು ಶುದ್ದಿ ಹಾಕಿದೆ. ಅರ್ಧ ಗಂಟೆಯೊಳ ನೆತ್ತರಿನ ವ್ಯವಸ್ಥೆ ಆತು. ಅ ದಿನ ಎನ್ನ ಬದುಕಿಸಿದ್ದದೇ ಮೊಬೈಲ್ ಹೇಳ್ಲೆ ಅಡ್ಡಿ ಇಲ್ಲೆ. ಮತ್ತೆ ದಿನಾ ಎನ್ನ ನಂಬರಿಂಗೆ ಕಾಲ್ ಬಪ್ಪಲೆ ಸುರುವಾತು…. “ಯಾವ ಆಸ್ಪತ್ರೆಲಿದ್ದಿ? ಎಷ್ಟು ಕುಪ್ಪಿ ನೆತ್ತರು ಬೇಕು?” ಹೇಳಿ . ನಾಲ್ಕೈದು ತಿಂಗಳು ಕಳುದರೂ ಹೀಂಗೆ ಫೋನ್ ಬಪ್ಪದು ನಿಲ್ತೇ ಇಲ್ಲೆ. ಆ ಶುದ್ದಿ ಇನ್ನುದೆ ಎಲ್ಲಾ ಗುಂಪುಗಳಲ್ಲಿ ಹೊಡಚ್ಚುತ್ತಾ ಇದ್ದತ್ತು. ಕಿರಿಕಿರಿ ತಡೆಯದ್ದೆ ಎನ್ನ ಮೊಬೈಲ್ ನಂಬರ್ ಬದಲ್ಸಿದೆ.

ಹೀಂಗೆ ಇನ್ನೊಂದು ಸಂಗತಿಯೂ ನಡದ್ದು. ಎನ್ನ ಮೈದಿನಿಯ ಕಂಪೆನಿಯ ಬಾಸ್ ನ ಮಕ್ಕ ಪಾರ್ಕಿಲಿ ಆಡ್ಳೆ ಹೋದಿಪ್ಪಗ ಕಾಣೆ ಆಗಿತ್ತಿದ್ದವು. ಅವ ಗಾಬರಿಯಾಗಿ ಮಕ್ಕಳ ಫೊಟೋ ಹಾಕಿ “ಈ ಮಕ್ಕ ಕಾಣೆ ಆಯ್ದವು . ಆರಾದರೂ ಕಂಡರೆ ತಿಳಿಸಿ” ಹೇಳಿ ವಾಟ್ಸಾಪ್ ಲಿ ಶುದ್ದಿ ಹಾಕಿದ . ಪೋಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟು ಕೊಟ್ಟು ಮನಗೆ ಎತ್ತುವಗ ಮಕ್ಕ ಮನಗೆತ್ತಿ ಆಗಿತ್ತಡ. ಕಂಪ್ಲೇಂಟು ವಾಪಾಸು ತೆಕ್ಕೊಂಡು ವರ್ಷ ಒಂದಾದರೂ ಈಗಲೂ ಮಕ್ಕ ದಾರಿಲಿ ಎಲ್ಯಾದರೂ ನಡಕ್ಕೊಂಡು ಹೋಪದು ಕಂಡ ಕೂಡಲೇ ಅವನ ಮನಗೆ ಫೋನ್ ಬತ್ತಡ. ಎಂತಾ ಅವಸ್ಥೆ….

ಈಗ ಈ ಕೊರೋನಾ ಹೇಳ್ತ ರೋಗ ಬಂದ ಮತ್ತೆ ನೇರ್ಪಕ್ಕೆ ಹೋಗ್ಯೊಂಡಿದ್ದ ಇಡೀ ಪ್ರಪಂಚವೇ ಅಲ್ಲೋಲ ಕಲ್ಲೋಲ ಆಗ್ಯೊಂಡಿದ್ದು. ಲಾಕ್ ಡೌನ್ , ಸೀಲ್ ಡೌನ್ ಆಗಿ ಪಾಪದ ಬಡಪಾಯಿಗ ಅರೆಜೀವ ಆದವು. ಆರನ್ನೂ ದೂಷಿಸಿ ಪ್ರಯೋಜನ ಇಲ್ಲೆ. ಬೇರೆ ದೇಶಕ್ಕೆ ಹೋಲಿಸಿದರೆ ನಾವು ಭಾಗ್ಯವಂತರು ಹೇಳುದರಲ್ಲಿ ಅನುಮಾನವೇ ಇಲ್ಲೆ. ನಿನ್ನೆ ‘ಕಾಂಚಿ ಮಠಂದ ಎಲ್ಲಾ ಅರ್ಚಕರಿಂಗೂ ಸಹಾಯ ಧನ ಕೊಡ್ತವು .ಅದಕ್ಕೆ ಬೇಕಾದ ಅರ್ಜಿಯ ತುಂಬ್ಸಿ ಮೈಲ್ ಮಾಡೆಕ್ಕು’ ಹೇಳಿ ಒಂದು ಶುದ್ದಿ ಕಂಡತ್ತಿದಾ. ಪೂಜೆ ಭಟ್ಟಕ್ಕೊಗೆ ಸಹಾಯ ಆವುತ್ತರೆ ಆಗಲಿ ಹೇಳಿ ಆನು ಎನ್ನ ಪೈಕಿ ಹತ್ತು ಮೂವತ್ತು ಜನಕ್ಕೆ ಆ ಅರ್ಜಿಯ ಕಳ್ಸಿದೆ. ಎಲ್ಲರಿಂಗೂ ಕೊಶಿ ಆತು. ‘ಮುಳುಗುವವಂಗೆ ಹುಲ್ಲು ಕಡ್ದಿ ಆಸರೆ’ ಹೇಳ್ತ ಹಾಂಗೆ ಈ ಸಮಯಲ್ಲಿ ಸಣ್ಣ ಮೊತ್ತವೂ ದೊಡ್ದ ವಿಷಯವೇ ಅಲ್ಲದಾ? ಅದಾ….. ಹೊತ್ತೋಪಗಾಣ ಹೊತ್ತಿಂಗೆ ಇನ್ನೊಂದು ಶುದ್ಧಿಕಂಡತ್ತದಾ….. ‘ಆಗ ಬಂದ ಶುದ್ದಿ ತಮಿಳುನಾಡಿನ ಭಟ್ಟಕ್ಕೊಗೆ ಮಾಂತ್ರ’ ಹೇಳಿ. ಇನ್ನು ಇದನ್ನೂ ಆಗಾಣ ಮೂವತ್ತು ಜನಕ್ಕೆ ಕಳ್ಸಿದರೆ ಅವರ ಕೈಲಿ ನಾಯಿಂದ ಕಡೆ ಪರಂಚಾಣ ತಿನ್ನೆಕ್ಕಕ್ಕು ಹೇಳಿ ಈ ಶುದ್ದಿಯ ………. ಅಡಿಯಂಗೆ ಹಾಕ್ಯೊಂಡು ತಳಿಯದ್ದೆ ಕೂದೆ.

ಹೋ…. ಫೇಸ್ ಬುಕ್ ಲಿ ಇನ್ನೊಂದು ವಿಶೇಷ ಶುದ್ದಿ ಕಂಡತ್ತಿದಾ ….. ‘ಕುಂಬಳ ಕೃಷಿಯ ಸಾಧಕ….ಕೊರೋನಾ ಸಂತ್ರಸ್ತ…….’ ಪೋಸ್ಟ್ ನ ಇನ್ನೊಂದರಿ ಸರಿಯಾಗಿ ಓದಿದೆ. ಅದರಲ್ಲಿ ನಮ್ಮ ಬೈಕ್ಕುಂಜ ಶಂಕರಣ್ಣನ ಹೆಸರೂ , ಫೋನ್ ನಂಬರೂ ಕಂಡತ್ತು. ಅಯ್ಯೋ… ದೇವರೇ… ಅಂಬಗ ಶಂಕರಣ್ಣಂಗೆ ಕೊರೋನಾ ಇದ್ದಾ…. ಅವ ನಮ್ಮ ಆಚಕರೆ ಬಾಲಣ್ಣನ ಸೋದರ ಬಾವ ಅಲ್ಲದಾ…. ಎಂತದಕ್ಕೂ ಬಾಲಣ್ಣನ ವಿಚಾರ್ಸುವ ಹೇಳಿ ಅಲ್ಲಿಗೆ ಹೋದೆ. “ಅಪ್ಪೋ ಬಾಲಣ್ಣಾ …ನಿನ್ನ ಶಂಕರ ಬಾವಂಗೆ ಕೊರೋನಾ ಬಯಿಂದಾ….” ಕೇಳಿದೆ.
ಬಾಲಣ್ಣ “ಯೇ… ಇಲ್ಲೆಪ್ಪಾ.. ಮೊನ್ನೆ ಮಾತಾಡಿದ್ದೆ. ಈ ಸರ್ತಿ ಕುಂಬ್ಳ ಕೃಷಿ ಲಾಯ್ಕಾಯ್ದ ಹೇಳ್ಯೊಂಡಿತ್ತ” ಹೇಳಿದ.
“ಬಾಲಣ್ಣಾ.. ಎಂತದಕ್ಕೂ ನೀನೊಂದರಿ ಫೋನ್ ಮಾಡು” ಹೇಳಿದೆ.
“ಹಲೋ ಕುಂಞಿ ಬಾವೋ ….. ಹೇಂಗಿದ್ದೆ? ನಿನಗೆ ಕೊರೋನಾ ಬಯಿಂದು ಹೇಳಿ ಶುದ್ದಿ ಇದ್ದನ್ನೇ…..?”
ಶಂಕರಣ್ಣ “ಶ್ಶೆಲಾ….. ನಿನಗೂ ಆ ಶುದ್ದಿ ಸಿಕ್ಕಿದ್ದಾ….? ಕೊರೋನಾ ಬಂದದು ಎನಗಲ್ಲ….ಎನ್ನ ಹಣೆಬರಹಕ್ಕೆ…. ೧೪ ಟನ್ ಕುಂಬ್ಳಕಾಯಿ ಬೆಳದ್ದೆ. ಅದರ ಮಾರಾಟ ಮಾಡ್ಳೆ ವ್ಯವಸ್ಥೆ ಇಲ್ಲೆ. ಎಲ್ಲಾ ಜಾತ್ರೆಗಳೂ, ಬ್ರಹ್ಮಕಲಶಂಗಳೂ ಇಪ್ಪದು ಇದೇ ಸಮಯಲ್ಲಿ ಅಲ್ಲದಾ…. ಈ ವರ್ಷ ಎಂತದೂ ಇಲ್ಲೆ. ಆನು ಮೇಲೆ ಕೆಳ ನೋಡೆಕ್ಕಷ್ಟೇ…” ಹೇಳಿದ.
“ಆತು ಬಾವ ತಲೆ ಬೆಶಿ ಮಾಡೆಡ . ದೇವರಿದ್ದ. ಎಲ್ಲವೂ ಒಳ್ಳೆದಕ್ಕು” ಹೇಳಿದ ಬಾಲಣ್ಣ.
“ಕುಂಬಳಕಾಯಿ ಮಾರಾಟ ಮಾಡುದರಂದಲೂ , ಬಪ್ಪ ಫೋನುಗೊಕ್ಕೆ ಉತ್ತರ ಕೊಡುದೇ ದೊಡ್ದ ತಲೆಬೆಶಿ ಆಯ್ದು. ಉದಿಯಾದ ಮೇಲೆ ಸಾಧಾರಣ ೫೦೦ ಕಾಲ್ ಬಂತು. ಪಂಚಾಯ್ತು, ಆರೋಗ್ಯ ಇಲಾಖೆ, ಪೋಲೀಸುಗೊ ಎಲ್ಲರೂ ವಿಚಾರ್ಸುವೋರೆ. ಉತ್ತರ ಕೊಟ್ಟೂ ಕೊಟ್ಟೂ ಬೊಡುದತ್ತು. ಮೊದಲು ಇದಕ್ಕೆ ಪರಿಹಾರ ಸಿಕ್ಕಿದರೆ ಸಾಕಿತ್ತು” ಹೇಳಿಕ್ಕಿ ಫೋನು ಮಡುಗಿದ. ಇದಂದ ಹೆಚ್ಚಿಗೆ ವಿವರಣೆ ಎನಗೂ ಬೇಕಿತ್ತಿಲ್ಲೆ. ಪರಿಸ್ಥಿತಿಗೆ ಹಿಡಿಶಾಪ ಹಾಕ್ಯೊಂಡು ಮನಗೆ ಬಂದೆ.
ಜನಂಗೊಕ್ಕೆ ಅವರ ೧೪ ಟನ್ ಕುಂಬಳಕಾಯಿಯ ವ್ಯವಸ್ಥೆ ಮಾಡುವುದರಿಂದಲೂ ಹೆಚ್ಚಿಗೆ ಅವರ ಕೊರೋನಾ ವಿಷಯವೇ ಮುಖ್ಯವಾಗಿತ್ತು. ಕುಂಬಳಕಾಯಿಯ ಸುತ್ತ ಅನುಮಾನದ ಹುತ್ತವೇ ಬೆಳದತ್ತು.

ಕುಂಬಳಕಾಯಿ ತೆಕ್ಕೊಂಬಲಕ್ಕು ಆದರೆ ಅವಕ್ಕೆ ಕೊರೋನಾ ಇಪ್ಪಗ ಅದರ ತೆಕ್ಕೊಂಡರೆ ಸಮಸ್ಯೆ ಆಗದೋ….’ ಹೇಳಿ ಒಬ್ಬ ಹೇಳಿದ.

ಎನಗೆ ಹಲ್ವ  ಎರಡು ಕುಂಬಳಕಾಯಿ ಬೇಕಿತ್ತು.ಈಗ ತಪ್ಪದು ಹೇಂಗೆ?’ ಇನ್ನೊಬ್ಬನ ಉವಾಚ.

‘ಹೇಂಗೂ ಲಾಕ್ ಡೌನ್ ಇಪ್ಪ ಕಾರಣ ಇಡೀ ಊರಿಂಗೆ ಕುಂಬಳಕಾಯಿಯ ಧರ್ಮಕ್ಕೆ ಕೊಡ್ಳಾವ್ತಿತ್ತು’ ಹೇಳಿ ಒಬ್ಬ ಹೇಳಿದ .

ಅಷ್ಟಪ್ಪಗ ಇನ್ನೊಂದು ಗುಂಪಿಲಿ ‘ಅವು ಕುಂಬಳಕಾಯಿಯ ಧರ್ಮಕ್ಕೆ ಹಂಚುಲೆ ಶುರು ಮಾಡಿದ್ದವಡ’ ಹೇಳಿ ಶುದ್ದಿ ಬಂತು.

ತೋಟಂದ ಸೋಗೆ ಎಳವಲೆ ಬಂದ ಚೋಮ “ಧರ್ಮೊಗು ಕೊರ್ಪುಂಡ ಎಂಕೊಂಜಿ ಉಪ್ಪಡ್ , ಎನ್ನ ಅಮ್ಮೇರೆಗ್ ಲಾ ಒಂಜಿ…” ಹೇಳಿತ್ತು. ಅದರ ಅಪ್ಪ ಸತ್ತು ಮೂರು ವರ್ಷ ಕಳುದ ಸಂಗತಿ ನಮಗೆ ಗೊಂತಿಲ್ಲೆಯಾ….
ಅಲ್ಲಾ….ಈ ಜನಂಗೊಕ್ಕೆ ತಲೆ ಸರಿ ಇದ್ದಾ….. ಇಡೀ ಊರಿಂಗೆ ಕುಂಬಳಕಾಯಿ ದಾನ ಹೆಟ್ಟುತ್ತೆ ಹೇಳಿ ಶಂಕರಣ್ಣ ಎಂತ ಹರಕೆ ಹೊತ್ತಿದವಾ….. ಅಷ್ಟು ಬೆಳೆಶೆಕ್ಕಾದರೆ ಅವು ಎಷ್ಟು ಬಂಙ ಬಯಿಂದವು ಹೇಳುದು ಅವಕ್ಕೇ ಗೊಂತು. ಎಲ್ಲರೂ ಬಾಯಿಗೆ ಬಂದ ಹಾಂಗೆ ಮಾತಾಡ್ತವನ್ನೇ ……

ಕೊನೆಗೂ ಅವು ಕೊರೋನಾ ಸಂತ್ರಸ್ತ ಅಲ್ಲ….ಲಾಕ್ ಡೌನ್ ಸಂತ್ರಸ್ತ ಹೇಳಿ ಎಲ್ಲರಿಂಗೂ ಗೊಂತಾತು. ಎಲ್ಲಾ ಗುಂಪಿಲೂ ಇದೇ ವಿಷಯ ಚರ್ಚೆ. ಹೇಂಗಾದರೂ ಅವಕ್ಕೆ ಸಹಾಯ ಮಾಡೆಕ್ಕು….. ಎಲ್ಲಾ ಅಂಗಡಿಗೊಕ್ಕೂ ಚೂರು ಚೂರು ಕೊಟ್ಟರೆ ಅಕ್ಕೋ…. ಅಂಗಡಿಗೊಕ್ಕೆ ಎತ್ತುಸುದು ಹೇಂಗೆ…..? ೧೪ ಟನ್ ಖಾಲಿ ಆಯೆಕ್ಕಾದರೆ ಅಂಗಡಿ ಎಷ್ಟು ಬೇಕು…? ಕೆಲವು ಸಂಘ ಸಂಸ್ಥೆಗೊ ಸಹಾಯಕ್ಕೆ ನಿಲ್ತೆಯಾ ಹೇಳಿದವಡಾ…… ದಿನ ಇಡೀ ಎಲ್ಲಾ ಗುಂಪುಗಳಲ್ಲೂ ಕುಂಬಳಕಾಯಿಯೇ ಹೊರಳಿಗೊಂಡಿತ್ತು…… ತಲೆಚಿಟ್ಟು ಹಿಡುದು ಹೋಪಷ್ಟು. ಒಂದೇ ದಿನಲ್ಲಿ ಸಾವಿರಗಟ್ಳೆ ಮೆಸ್ಸೇಜುಗ ನೂರಾರು ಗುಂಪಿಲಿ ತಿರುಗಿತ್ತು.

ಈ ಶುದ್ದಿ ತಿರುಗೀ ತಿರುಗೀ ರಾಜ್ಯದ ಕೃಷಿ ಸಚಿವನವರೆಗೂ ಎತ್ತಿತ್ತಡ. ಸಚಿವ ಕೂಡಲೇ ಶಂಕರಣ್ಣಂಗೆ ಫೋನ್ ಮಾಡಿ ಅವು ಬೆಳದ ಅಷ್ಟೂ ಕುಂಬಳಕಾಯಿಯ ಹಾರ್ಟಿಕಲ್ಚರ್ ಇಲಾಖೆಯ ಮುಖಾಂತರ ತೆಕ್ಕೊಳ್ತೆ ಹೇಳಿ ಸಮಾಧಾನದ ಮಾತು ಹೇಳಿದವಡ. ಅಂತೂ ಶಂಕರಣ್ಣನ ಕುಂಬಳಕಾಯಿಗೆ ಒಳ್ಳೆ ಬೆಲೆ ಸಿಕ್ಕಿತ್ತು ಹೇಳುವಲ್ಲಿಗೆ ಎಲ್ಲವೂ ಶುಭಾಂತ್ಯ. ‘ಮಣ್ಣಿನ ನಂಬಿದರೆ ಹೊನ್ನು ಸಿಕ್ಕುಗು’ ಹೇಳುವ ಹಿರಿಯರ ಮಾತು ನಿಜ ಆತು.

6 thoughts on “ನೀ ಶುದ್ದಿಯೊಳಗೋ…. ನಿನ್ನೊಳು ಶುದ್ದಿಯೋ…

  1. ಅಪ್ಪು..ಇವರ ಬಗ್ಗೆ ಸರಿಯಾದ ಮಾಹಿತಿಯ ಹಾಕದ್ದೆ ಅಪಾರ್ಥ ಬಪ್ಪ ಹಾಂಗೆ ಫೇಸ್ಬುಕ್ಕಿಲಿ ಹಾಕಿ ಗೊಂದಲ ಮಾಡಿದವು.

  2. ಧನ್ಯವಾದಂಗೊ ಅಪ್ಪಚ್ಚಿ.
    ಪತ್ರಿಕೆಯವರ ಅವಾಂತರ ಒಂದೆರಡಲ್ಲ. ಮೊನ್ನೆ ನಿಖಿಲ್ ಕುಮಾರ ಸ್ವಾಮಿಯ ಮದುವೆ ಕಳುದ ಮತ್ತೆ ಕುಮಾರ ಸ್ವಾಮಿಯ ಪತ್ರಿಕಾ ಹೇಳಿಕೆ ಲಾಯ್ಕಿತ್ತಲ್ಲ 😄😄😄

  3. ವಾಟೆಸೊಪ್ಪಿನ ಆವಾಂತರಂಗೊ ಎಲ್ಲ ಚೆಂದಕೆ, ಶುದ್ದಿ ರೂಪಲ್ಲಿ ಬಯಿಂದು. ಲಾಕ್ ಡೌನಿಂದಾಗಿ ವಾಟ್ಸ್ ಆಪ್ ನ ಉಪಯೋಗ ಇತ್ತೀಚೆಗೆ ತುಂಬಾ ಜಾಸ್ತಿ ಆಯಿದು. ಟಿವಿ ರಾಮಾಯಣ ಮಹಾಭಾರತದ ಬಗ್ಗೆ ಕಮೆಂಟ್ರಿಯೇ ಸುರುವಾಯಿದು ವಾಟ್ಸ್ ಅಪ್ಪಿಲ್ಲಿ. ಅದರಿಂದಾಗಿ ನಮ್ಮ ಒಪ್ಪಣ್ಣ ಬೈಲು ಸೊರಗಿದ್ದಂತೂ ಖಂಡಿತ. ಆ ಹುಳು ವಾಟ್ಸ್ ಅಪ್ಪು ರಜ್ಜ ಕರೇಂಗೆ ಮಡಗಿ ನಮ್ಮ ಬೈಲಿಂಗೆ ಎಲ್ಲೊರು ಬನ್ನಿ ನೋಡೋ. ಅನುಪಮಕ್ಕಾ, ಒಳ್ಳೆ ಶುದ್ದಿ, ಈಗಾಣ ಕಾಲಕ್ಕೆ ಹೊಂದುವ ಶುದ್ದಿ ಬರದ್ದಿ.

    1. ಅದಪ್ಪು. ವಾಟ್ಸಾಪ್ ಸುರುವಾದ ಮೇಲೆ ಬೈಲಿನ ಒಳ ಬಂದು ಶುದ್ದಿ ಓದುವೋರು ಅರೂ ಇಲ್ಲೆ ಹೇಳಿ ಆಯ್ದು. ಎಲ್ಲೋರಿಂಗು ವಾಟ್ಸಾಪ್ ಶುದ್ದಿ ಸಾಕಾವ್ತು.

  4. ತುಂಬಾ ಒಳ್ಳೆ ಬರಹ. ಲಾಕ್ಡೌನ್ ಆದ ಈ ಸಂದರ್ಭಲ್ಲಿ ಒಪ್ಪಣ್ಣ ಒದಗಿಸಿದ ಸಾಂದರ್ಭಿಕ ಪ್ರಬಂಧ.

  5. ಪ್ರಸ್ತುತ ಸಂದರ್ಭಕ್ಕೆ ಒಪ್ಪುವ ಲೇಖನ.
    ಲಾಯಿಕ ಆಯಿದು.
    ಉಡುಪಿ ಸ್ವಾಮಿಗೊ ಒಬ್ಬರು ವಾರಕ್ಕೆ ಮೂರು ಹೊತ್ತಿನ ಊಟ ಬಿಡಿ ಹೇಳಿದವು.
    ಒಂದು ಪತ್ರಿಕೆಯವು ಅದರ “ಸ್ವಾಮಿಗೊ ಮೂರೂ ಹೊತ್ತು ಊಟ ಬಿಡ್ಲೆ ಹೇಳಿದ್ದವು: ಹೇಳಿ ಹಾಕಿದವಡ.
    ಸತ್ಯಾಸತ್ಯತೆಯ ತಿಳಿಯದ್ದೆ ತಾನು ಮುಂದೆ ತಾನು ಮುಂದೆ ಹೇಳಿ ಮುಂದಂಗೆ ಕಳ್ಸುವಲ್ಲಿಅಪ್ಪ ಅವಾಂತರಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×