Oppanna.com

ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 11-20

ಬರದೋರು :   ಚೆನ್ನೈ ಬಾವ°    on   03/05/2012    9 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ॥೧೧॥

ಪದವಿಭಾಗ

ದೇವಾನ್ ಭಾವಯತಾ ಅನೇನ ತೇ ದೇವಾಃ ಭಾವಯಂತು ವಃ । ಪರಸ್ಪರಮ್ ಭಾವಯಂತಃ ಶ್ರೇಯಃ ಪರಮ್ ಅವಾಪ್ಸ್ಯಥ ॥

ಅನ್ವಯ

ಅನೇನ ಯೂಯಂ ದೇವಾನ್ ಭಾವಯತ, ತೇ ದೇವಾಃ ವಃ ಭಾವಯಂತು । ಏವಂ ಪರಸ್ಪರಂ ಭಾವಯಂತಃ ಪರಂ ಶ್ರೇಯಃ ಅವಾಪ್ಸ್ಯಥ ।

ಪ್ರತಿಪದಾರ್ಥ

ಅನೇನ – ಈ ಯಜ್ಞಂದ, ಯೂಯಮ್ – ನಿಂಗಳ, ದೇವಾನ್ – ದೇವತೆಗಳ, ಭಾವಯತಾ – ತೃಪ್ತಿಗೊಳುಸುವ,    ತೇ ದೇವಾಃ – ಆ ದೇವತೆಗೊ, ವಃ – ನಿಂಗಳ,  ಭಾವಯಂತು – ಸಂತೋಷಪಡುಸಲಿ, ಏವಮ್ – ಹೀಂಗೆ, ಪರಸ್ಪರಮ್ – ಪರಸ್ಪರ, ಭಾವಯಂತಃ – ಒಬ್ಬರ ಮತ್ತೊಬ್ಬರ ಸಂತೋಷಪಡುಸಿ, ಪರಮ್  ಶ್ರೇಯಃ  – ಉತ್ಕೃಷ್ಟವಾದ ಶ್ರೇಯಸ್ಸ, ಅವಾಪ್ಸ್ಯಥ – ಹೊಂದಿಗೊಳ್ಳಿ.

ಅನ್ವಯಾರ್ಥ

ದೇವತೆಗಳ ಸಂತುಷ್ಟಿಪಡುಸುವ ಈ ಯಜ್ಞಂದ ಸಂತುಷ್ಟರಾದ ದೇವತೆಗೊ ನಿಂಗಳ ಸಂತೋಷಪಡುಸುತ್ತವು. ಹೀಂಗೆ ಮನುಷ್ಯನ ಮತ್ತು ದೇವತೆಗಳ ಪರಸ್ಪರ ಸಹಕಾರಂದ ಎಲ್ಲರಿಂಗೂ ಸಮೃದ್ಧಿಯುಂಟಾವ್ತು.

ತಾತ್ಪರ್ಯ/ವಿವರಣೆ

ಕಳುದ ಶ್ಲೋಕಲ್ಲಿ ಪ್ರಜಾಪತಿಯು ಜಗತ್ತಿನ ಸೃಷ್ಟಿಮಾಡಿ, ಜೀವಿಗಳನ್ನೊ ಸೃಷ್ಟಿಸಿ ಜಗತ್ತಿಂಗೆ ಕಳುಸಿ ಯಜ್ಞಂಗಳ ಮೂಲಕ ವಿಷ್ಣುವಿನ ಸಂಪ್ರೀತಿಗೊಳುಸಿ ಇಷ್ಟಕಾಮಂಗಳ ಸಿದ್ಧಿಸಿಗೊಳ್ಳಿ ಹೇಳಿ ಆದೇಶಿಸಿದ್ದರ ನೋಡಿದ್ದು. ದೇವತೆಗೊ ಐಹಿಕ ವ್ಯವಹಾರಂಗಳ ಆಡಳಿತ ನಿರ್ವಹಿಸಲೆ ಅಧಿಕಾರ ಪಡಕ್ಕೊಂಡವು. ಪ್ರತಿಯೊಬ್ಬ ಜೀವಿಯ ದೇಹ ಮತ್ತು ಆತ್ಮ ಪೋಷಣಗೆ ವಾಯು, ಬೆಳಕು, ನೀರು, ಆಹಾರ ಮತ್ತಿತರ ಎಲ್ಲ ವರಂಗಳ ಒದಗುಸುವ ಹೊಣೆ ದೇವತೆಗೊ ವಹಿಸಿಕೊಂಡಿದವು. ಅವ್ವು ದೇವೋತ್ತಮ ಪರಮ ಪುರುಷನ ಶರೀರದ ವಿವಿಧ ಭಾಗಂಗಳಲ್ಲಿ ಅಸಂಖ್ಯ ಸಹಾಯಕರುಗೊ. ಅವರ ಸಂತೋಷ ಮತ್ತು ಅಸಂತೋಷಂಗೊ ಮನುಷ್ಯರು ಮಾಡುವ ಯಜ್ಞವ ಅವಲಂಬಿಸಿಗೊಂಡಿದ್ದು. ಕೆಲವು ಯಜ್ಞಂಗಳ ಉದ್ದೇಶ ನಿರ್ದಿಷ್ಟ ದೇವತೆಯ ಪ್ರಸನ್ನಗೊಳುಸುವದಾಯಿಕ್ಕು. ಆದರೆ, ಎಲ್ಲ ಯಜ್ಞಂಗಳಲ್ಲಿ ಮುಖ್ಯ ಭೋಕ್ತಾರ (ಭೋಕ್ತಾರಂ ಯಜ್ಞತಪಸಾಂ) ಹೇಳಿ ಶ್ರೀವಿಷ್ಣುವಿನ ಪೂಜುಸುವದು. ಆದ್ದರಿಂದ ಯಜ್ಞಪತಿಯ ಕಟ್ಟಕ್ಡೆಯ ಸಂತೃಪ್ತಿಯೇ ಎಲ್ಲ ಯಜ್ಞಂಗಳ ಗುರು. ಈ ಯಜ್ಞಂಗಳ ಪರಿಪೂರ್ಣ ರೀತಿಲಿ ನಡೆಸಿದಪ್ಪಗ, ಸಹಜವಾಗಿ ಬೇರೆ ಬೇರೆ ವಿಭಾಗಂಗಳ ವಹಿಸಿಗೊಂಡಿಪ್ಪ ದೇವತೆಗೊ ಸಂತುಷ್ಟರಾವುತ್ತವು ಮತ್ತು ನೈಸರ್ಗಿಕ ಉತ್ಪನ್ನಂಗಳ ಒದಗುಸುವದರಲ್ಲಿ ಅಭಾವಕ್ಕೆಡೆ ಆವುತ್ತಿಲ್ಲೆ. ಯಜ್ಞಂಗಳ ನಡಸುವದರಿಂದ ಹಲವು ಉಪಪ್ರಯೋಜನಂಗೊ ಇದ್ದು. ಅದು ಕಡೆಂಗೆ ಭವಬಂಧನಂದ ಮುಕ್ತಿಗೆ ಕರೆದೊಯ್ಯುತ್ತು. ಯಜ್ಞಂಗಳ ನಡೆಸುವದರಿಂದ ಎಲ್ಲ ಕರ್ಮಂಗಳೂ ಪರಿಶುದ್ಧವಾವುತ್ತು. ವೇದಂಗಳಲ್ಲಿ ಹೇಳಿದಂತೆ “ಆಹಾರಶುದ್ಧೌ, ಸತ್ತ್ವಶುದ್ಧಿಃ ಸ್ತ್ತ್ವಶುದ್ಧೌ ಧ್ರುವಾ ಸ್ಮೃತಿಃ ಸ್ಮೃತಿಲಂಭೇ ಸರ್ವಗ್ರಂಥೀನಾಂ ವಿಪ್ರಮೋಕ್ಷಃ”. ಯಜ್ಞಾಚರಣೆಂದ ಮನುಷ್ಯನ ಆಹಾರ ಪವಿತ್ರವಾವುತ್ತು, ಪವಿತ್ರವಾದ ಆಹಾರ ಸೇವನೆಂದ ಮನುಷ್ಯನ ಬದುಕೇ ಪವಿತ್ರವಾವುತ್ತು, ಬದುಕು ಪವಿತ್ರ ಆದಪ್ಪಗ ಸ್ಮೃತಿಯು ಪವ್ತಿತ್ರ ಆವುತ್ತು, ಸ್ಮೃತಿಯು ಪವಿತ್ರ ಆದಪ್ಪಗ ಮನುಷ್ಯ° ಮೋಕ್ಷಮಾರ್ಗವ ಕುರಿತು ಚಿಂತುಸಲಕ್ಕು. ಇವೆಲ್ಲವೂ ಮನುಷ್ಯನ ಕೃಷ್ಣಪ್ರಜ್ಞೆ ಕಡೆಂಗೆ ಕೊಂಡೊಯ್ಯುತ್ತು. ಇಂದಿನ ಸಮಾಜಕ್ಕೆ ಅತ್ಯಗತ್ಯವಾದ್ದು ಕೃಷ್ಣಪ್ರಜ್ಞೆ.

ಬನ್ನಂಜೆಯವರ ವ್ಯಾಖ್ಯಾನಂದ ನೋಡಿರೆ- ಪ್ರಪಂಚ, ಮನುಷ್ಯ, ಯಜ್ಞ ಸೃಷ್ಟಿ ಮಾಡಿದ ಚತುರ್ಮುಖ, ಯಜ್ಞಂಗಳ ಮೂಲಕ ನಿಂಗೊ ದೇವತೆಗೊಕ್ಕೆ ನೆರವಾಗಿ ಮತ್ತು ಅವ್ವು ನಿಂಗಳ ಅಭೀಷ್ಟವ ಪೂರೈಸಲಿ ಹೇಳಿ ಆದೇಶಿಸಿದ°.  ಹೀಂಗೆ ಪರಸ್ಪರ ಒಬ್ಬರಿಗೊಬ್ಬರು ನೆರವಾಗುತ್ತ ಹಿರಿಯ ಹಿತವ ಹೊಂದಿ ಹೇಳಿ ಹೇಳಿದ. ನಾವು ನವಗೆ ಬೇಕಾದ್ಧರ ಸೃಷ್ಟಿಸಿಗೊಳ್ತೆಯೋ ಹೇಳ್ವದು ಬರೀ ಭ್ರಮೆ. ನಾವು ಬಿತ್ತಿ ಬೆಳೆಕು. ಹೇಳಿರೆ, ಪ್ರಕೃತಿಲಿ ವಾತಾವರಣ ವೈಪರಿತ್ಯ ಆಗದ್ದೆ ಇರೆಕು. ಇಲ್ಲದ್ರೆ ನವಗೆ ಎಂತ ಬೆಳಸಲೂ ಎಡಿಗಾಗ. ಪ್ರತಿಯೊಂದು ಕ್ರಿಯೆಯೆ ಹಿಂದೆ ಅನೇಕ ದೇವತಾ ಶಕ್ತಿಗೊ ಕಾರ್ಯ ನಿರ್ವಹಿಸುತ್ತು. ನಮ್ಮ ಪ್ರತಿಯೊಂದು ಅಂಗಾಂಗಳಲ್ಲೂ ಒಬ್ಬ ಅಭಿಮಾನಿ ದೇವರು ಇದ್ದ. ಆ ಶಕ್ತಿ ಕೆಲಸ ಮಾಡದೆ ಇದ್ದರೆ ನಾವು ಏನ ಮಾಡಲೂ ಸಾಧ್ಯ ಇಲ್ಲೆ. ಹೀಂಗೆ ನವಗೆ ಬದುಕು ಕೊಟ್ಟು, ನೋಡುವ ಕಣ್ಣು, ಕೇಳ್ವ ಕೆಮಿ ಕೊಟ್ಟು,ಒಳ್ಳೆದರ ನೋಡುವ, ಕೇಳುವ ಬುದ್ಧಿ ಕೊಟ್ಟು ಈ ಎಲ್ಲಾ ಕಾರ್ಯವ ಒಂದು ದೇವತಾಸಮೂಹ ನಿರಂತರ ನಡೆಸುವಂತೆ ಭಗವಂತನ ವ್ಯವಸ್ಥೆ. ಹೀಂಗಿಪ್ಪಗ ನಾವು ಇಂಥಹ ದೇವತಾಶಕ್ತಿಗೆ ಕೃತಜ್ಞತೆ ಸಲ್ಲುಸೆಕ್ಕಾದ್ದು ಧರ್ಮ. ಹೀಂಗೆ ಒಬ್ಬರಿಗೊಬ್ಬ ನೆರವು ಕೊಟ್ಟಪ್ಪಗ ನಾವು ಹಿತವ ಕಾಂಬಲೆ ಸಾಧ್ಯ.

ಸಾಮಾನ್ಯವಾಗಿ ಅಗ್ನಿಮುಖಲ್ಲಿ ಮಾಡುವ ಪೂಜೆಯ ಯಜ್ಞ ಹೇಳುವದು ವಾಡಿಕೆ. ದೇವರ ಪೂಜೆಲಿ ಅಗ್ನಿ ಅತ್ಯಂತ ಮುಖ್ಯ ಪ್ರತೀಕ. ಎಂತಕೆ ಹೇಳಿರೆ ಅಗ್ನಿ ಅತ್ಯಂತ ಶುದ್ಧ. ಅಗ್ನಿಗೆ ಎಂತ ಹಾಕಿರೂ ಅದು ಶುದ್ಧವಾವ್ತು. ಅಗ್ನಿ ಭಗವಂತನ ಪ್ರತೀಕ. ಭಗವಂತಂಗೆ ಆಕಾರ ಇಲ್ಲೆ. ಅವ° ಬೆಳಕಿನ ಪುಂಜ ಮತ್ತು ಪವಿತ್ರ. ಇದೇ ಗುಣವ ನಾವು ಅಗ್ನಿಲಿಯೂ ಕಾಂಬದು. ಯಜ್ಞಲ್ಲಿ ನಾವು ಪೂಜೆ ಮಾಡುವದು ಕಿಚ್ಚಿನ ಅಲ್ಲ. ಅಗ್ನಿ ಮುಖೇನ ಅಗ್ನಿನಾರಾಯಣನ ಪೂಜೆ – ಯಜ್ಞ. ಈ ಅರಿವಿಲ್ಲದ್ದೆ ಯಜ್ಞಮಾಡಿರೆ ಹೊಗೆ ಮಾತ್ರ ದಕ್ಕುಗು. ನಮ್ಮ ಪೂಜೆ ಅಗ್ನಿನಾರಾಯಣಂದ ಸೂರ್ಯನಾರಾಯಣನ ಸೇರಿ ಮರಳಿ ನರನಾರಾಯಣನ ತಲಪುತ್ತು. ಇದಕ್ಕಾಗಿಯೇ ದೇವರ ಕುರಿತು ಮಾಡುವ ಯಜ್ಞಂಗೊ ಯಾವಾಗಲೂ ಹಗಲು ಹೊತ್ತಿಲ್ಲಿಯೇ ನಡವದು. ಅಗ್ನಿಗೆ ಏಳು ಬಣ್ಣಂಗಳ ಮುಖೇನ ಸೂರ್ಯನ ಏಳು ಬಣ್ಣಂಗೊ ವಿಲೀನ ಅಪ್ಪ ಯಜ್ಞಶಕ್ತಿ ವಾತಾವರಣವ ಸೇರಿ ಲೋಕಕ್ಕೆ ಮಂಗಳವನ್ನುಂಟು ಮಾಡುವದು. ಇದರ ಇಲ್ಲಿ ಕೊಂಡು ಕೊಂಬುವ ಪ್ರಕ್ರಿಯೆ (ಪರಸ್ಪರ) ಹೇಳಿ ಹೇಳಿದ್ದು.

ಶ್ಲೋಕ

ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞಭಾವಿತಾಃ ।
ತೈರ್ದತ್ತಾನಪ್ರದಾಯೈಭ್ಯೋಃ ಯೋ ಭುಂಕ್ತೇಸ್ತೇನ ಏವ ಸಃ ॥೧೨॥

ಪದವಿಭಾಗ

ಇಷ್ಟಾನ್ ಭೋಗಾನ್ ಹಿ ವಃ ದೇವಾಃ ದಾಸ್ಯಂತೇ ಯಜ್ಞ-ಭಾವಿತಾಃ । ತೈಃ ದತ್ತಾನ್ ಅಪ್ರಹದಾಯ ಏಭ್ಯಃ ಯಃ ಭುಂಕ್ತೇ ಸ್ತೇನಃ ಏವಃ ಸಃ ॥

ಅನ್ವಯ

ಯಜ್ಞ-ಭಾವಿತಾಃ ದೇವಾಃ ವಃ ಇಷ್ಟಾನ್ ಭೋಗಾನ್ ದಾಸ್ಯಂತೇ । ತೈಃ ದತ್ತಾನ್ ಏಭ್ಯಃ ಅಪ್ರದಾಯ, ಯಃ ಭುಂಕ್ತೇ. ಸಃ ಹಿ ಸ್ತೇನಃ ಏವ ।।

ಪ್ರತಿಪದಾರ್ಥ

ಯಜ್ಞ-ಭಾವಿತಾಃ – ಯಜ್ಞಾಚರಣೆಂದ ತೃಪ್ತರಾದ, ದೇವಾಃ – ದೇವತೆಗೊ, ವಃ – ನಿಂಗೊಗೆ, ಇಷ್ಟಾನ್ – ಅಪೇಕ್ಷಿಸಿದ್ದರ, ಭೋಗಾನ್ – ಜೀವನ ಆವಶ್ಯಕತೆಗಳ, ದಾಸ್ಯಂತೇ – ನೀಡುತ್ತವು. ತೈಃ – ಅವರಿಂದ, ದತ್ತಾನ್ – ಕೊಡಲ್ಪಟ್ಟ ವಸ್ತುಂಗಳ, ಏಭ್ಯಃ – ಈ ದೇವತೆಗೊಕ್ಕೆ, ಅಪ್ರದಾಯ – ಅರ್ಪುಸದ್ದೆ, ಯಃ – ಆರು, ಭುಂಕ್ತೇ – ಭುಂಜಿಸುತ್ತವೋ, ಸಃ – ಅವ°, ಹಿ – ಖಂಡಿತವಾಗಿಯೂ,  ಸ್ತೇನಃ – ಕಳ್ಳ°, ಏವ – ನಿಶ್ಚಯವಾಗಿಯೂ. 

ಅನ್ವಯಾರ್ಥ

ಬದುಕಿನ ವಿವಿಧ ಅಗತ್ಯಂಗಳ ಪೂರೈಕೆಯ ಹೊಣೆ ಹೊತ್ತಿಪ್ಪ ದೇವತೆಗೊ ಯಜ್ಞದ ಆಚರಣೆಂದ ಸಂಪ್ರೀತರಾಗಿ ನಮ್ಮ ಎಲ್ಲ ಅಗತ್ಯಂಗಳ ಪೂರೈಸುತ್ತವು. ಆದರೆ, ಈ ವರವ ದೇವತೆಗೊಕ್ಕೆ ಅರ್ಪುಸದ್ದೆ ಅನುಭವಿಸುವವ ನಿಜವಾಗಿಯೂ ಕಳ್ಳನೇ ಸರಿ.

ತಾತ್ಪರ್ಯ / ವಿವರಣೆ

ದೇವತೆಗೊ, ದೇವೋತ್ತಮ ಪರಮ ಪುರುಷನ ಪರವಾಗಿ ಕೆಲಸಮಾಡ್ಳೆ ಅಧಿಕಾರ ಪಡೆದ ಅಭಿಕರ್ತರುಗೊ. ಆದ್ದರಿಂದ ಯಜ್ಞಂಗಳ ಆಚರಣೆ ಮೂಲಕ ಅವರ ತೃಪ್ತಿಗೊಳುಸೆಕ್ಕಾದ್ದು ಕರ್ತವ್ಯ. ವೇದಂಗಳಲ್ಲಿ ಬೇರೆ ಬೇರೆ ದೇವತೆಗಳ ತೃಪ್ತಿಗಾಗಿ ಮಾಡೆಕಾದ ಹಲವಾರು ಯಜ್ಞಂಗಳ ವಿಧಿಸಿದ್ದು. ಆದರೆ ಎಲ್ಲ ಯಜ್ಞಂಗೊ ಕಟ್ಟಕಡೇಂಗೆ ಅರ್ಪುಸುವದು ದೇವೋತ್ತಮ ಪರಮ ಪುರುಷಂಗೆ. ದೇವೋತ್ತಮ ಪರಮ ಪುರುಷನ ಅರಿಯಲಾಗದ್ದವು ದೇವತೆಗೊಕ್ಕೆ ಯಜ್ಞಂಗಳ ಮಾಡೆಕ್ಕಾದ್ದು ಹೇಳಿ ವಿಧಿ. ಸಂಬಂಧಿಸಿದ ವ್ಯಕ್ತಿಗಳ ಐಹಿಕ ಗುಣಂಗೊಕ್ಕೆ ಅನುಸಾರವಾಗಿ ವೇದಂಗಳಲ್ಲಿ ಬೇರೆ ಬೇರೆ ಬಗೆಗಳ ಯಜ್ಞಂಗಳ ಹೇಳಿದ್ದು. ಬೇರೆ ಬೇರೆ ದೇವತೆಗಳ ಪೂಜಗೂ ಇದೇ ಆಧಾರ ಮತ್ತು ಬೇರೆ ಬೇರೇ ಗುಣಂಗೊ. ಉದಾಹರಣೆಗೆ, ಮಾಂಸಾಹಾರಿಗೊ ಕಾಳಿದೇವತೆಯ ಪೂಜಿಸೆಕು ಹೇಳಿ ಹೇಳಿದ್ದು. ಕಾಳಿದೇವತೆಯ ಐಹಿಕ ಪ್ರಕೃತಿಯ ಭಯಂಕರ ರೂಪ; ಈ ದೇವಿಗೆ ಪ್ರಾಣಿಬಲಿ ಅರ್ಪುಸೆಕ್ಕು ಹೇಳಿದ್ದು. ಆದರೆ, ಸಾತ್ವಿಕಗುಣ ಉಳ್ಳವು ವಿಷ್ಣುವಿನ ಆಧ್ಯಾತ್ಮಿಕ ಆರಾಧನೆಯ ಮಾಡೇಕು ಹೇಳಿದ್ದು. ಆದರೆ, ಅಂತಿಮವಾಗಿ ಎಲ್ಲ ಯಜ್ಞಂಗಳ ಗುರಿಯೂ ಆಧ್ಯಾತ್ಮಿಕ ನೆಲೆಗೆ ಕ್ರಮೇಣ ಮೇಲೇರುತ್ತದು. ಸಾಮಾನ್ಯ ಮನುಷ್ಯರು, ಕಡೇಯಪಕ್ಷ ಪಂಚಮಹಾಯಜ್ಞಂಗಳನ್ನಾದರೂ ನಡಸೆಕು.

ಮಾನವ ಸಮಾಜದ ಎಲ್ಲ ಅಗತ್ಯಂಗಳನ್ನೂ ಭಗವಂತನ ಪರ ಕಾರ್ಯಪ್ರವೃತ್ತರಾದ ದೇವತೆಗೊ ಪೂರೈಸುತ್ತವು ಎಂಬುದರ ತಿಳ್ಕೊಳ್ಳೆಕು. ಆರೂ ಏನನ್ನೂ ಉತ್ಪಾದಿಸಲೆ ಸಾಧ್ಯವಿಲ್ಲೆ. ಉದಾಹರಣೆಗೆ, ಮನುಷ್ಯ ಸಮುದಾಯದ ಆಹಾರ ಪದಾರ್ಥಂಗಳನ್ನೇ ತೆಕ್ಕೊಂಬಲಕ್ಕು. ಸಾತ್ವಿಕ ಸ್ವಭಾವದವಕ್ಕೆ ಆಹಾರ ಧಾನ್ಯಂಗೊ, ಹಣ್ಣುಗೊ, ತರಕಾರಿ, ಹಾಲು , ಸಕ್ಕರೆ ಇತ್ಯಾದಿ.., ಮಾಂಸಾಹಾರಿಗೊಕ್ಕೆ ಮಾಂಸ., ಇದರಲ್ಲಿ  ಯಾವುದನ್ನೂ ಮನುಷ್ಯ ಉತ್ಪಾದನೆ ಮಾಡ್ಳೆ ಎಡಿಯ. ಬದುಕಿಂಗೆ ಬೇಕಾಗಾದ ಶಾಖ, ಬೆಳಕು, ನೀರು, ಗಾಳಿ … ಯಾವುದನ್ನೂ ಮನುಷ್ಯ ಸಮಾಜ ಉತ್ಪಾದನೆ ವಾ ಸೃಷ್ಟಿ ಮಾಡ್ಳೆ ಎಡಿಯ. ಇವು ಇಲ್ಲದ್ದೆ ಬದುಕ್ಕಲೂ ಎಡಿಯ. ಭಗವಂತನಿಲ್ಲದ್ದೆ ಸೂರ್ಯನ ಬೆಳಕು, ಬೆಳದಿಂಗಳು, ಮಳೆ, ಗಾಳಿ ಯಾವುದೂ ಇಲ್ಲೆ. ನಮ್ಮ ಬದುಕು ಭಗವಂತನ ವರವನ್ನೇ ಅವಲಂಬಿಸಿಗೊಂಡಿಪ್ಪದು. ನಮ್ಮ ಉತ್ಪಾದನೆ ಹೇಳಿಗೊಂಬ ಉದ್ಯಮಂಗೊಕ್ಕೂ ಲೋಹ, ಗಂಧಕ, ಪಾದರಸ, ಮ್ಯಾಂಗನೀಶ್ ಮುಂತಾದ ವಸ್ತುಗೊ ಅತ್ಯಗತ್ಯ. ಇವೆಲ್ಲವೂ ಭಗವಂತನ ಪ್ರತಿನಿಧಿಗಳೇ ಕೊಡುವದು. ಅವುಗಳ ಸಮರ್ಪಕವಾಗಿ ಬಳಸಿ ಆರೋಗ್ಯಕರ ಜೀವನ ನಡೆಶುತ್ತಾ ಆತ್ಮ ಸಾಕ್ಷಾತ್ಕಾರ ಪಡೇಕು. ಹೀಂಗೆ ವ್ಯಕ್ತಿಯು ಜೀವನದ ಅಂತಿಮ ಗುರಿಯತ್ತ ಸಾಗುತ್ತ°.  ಅಸ್ತಿತ್ವಕ್ಕಾಗಿ ಹೋರಾಟಂದ ಬಿಡುಗಡೆ ಪಡವದೇ ಜೀವನದ ಅಂತಿಮ ಉದ್ಧೇಶ. ಈ ಗುರಿಯ ಯಜ್ಞಂಗಳ ಆಚರಣೆಂದ ನಾವು ಮುಟ್ಟೆಕು. ಮನುಷ್ಯನ ಬದುಕಿನ ಗುರಿಯ ಮರದು ಭಗವಂತನ ಪ್ರತಿನಿಧಿಗೊ ಕೊಡುತ್ತದರ ತನ್ನ ಸ್ವಾರ್ಥ ಇಂದ್ರಿಯ ಸುಖಂಗೊಕ್ಕೆ ಬಳಸಿಗೊಂಡರೆ ನಿಶ್ಚಯವಾಗಿಯೂ ನಾವು ಕಳ್ಳಂಗಳೇ. ಎಂತಕೆ ಹೇಳಿರೆ ಸೃಷ್ಟಿಯ ಗುರಿ ಇದಲ್ಲ. ಹೀಂಗೆ ಮಾಡಿರೆ ಐಹಿಕ ಪ್ರಕೃತಿ ನಿಯಮಂಗೊ ನಮ್ಮ ಖಂಡಿತವಾಗಿಯೂ ಶಿಕ್ಷಿಸುಗು. ಕಳ್ಳರ ಸಮಾಜಲ್ಲಿ ಸುಖ ಸಾಧ್ಯ ಇಲ್ಲೆ. ಎಂತಕೆ ಹೇಳಿರೆ ಅವಕ್ಕೆ ಬದುಕಿಲ್ಲಿ ಅಂತಿಮ ಗುರಿ ಹೇಳ್ವದೇ ಇಲ್ಲೆ. ಅವರ ಮನಸ್ಸು ಇಂದ್ರಿಯ ತೃಪ್ತಿಯತ್ತಲೇ. ಯಜ್ಞಂಗೊ ಮಾಡುತ್ತದು ಎಂತಕೆ ಹೇಂಗೆ ಹೇಳ್ವದು ಅವಕ್ಕೆ ಅರಡಿಯ. ಕೃಷ್ಣಪ್ರಜ್ಞೆ ಇದ್ದರೆ ಮಾತ್ರ ಇದೆಲ್ಲ ಸಾಧ್ಯ.

ಸೂಕ್ಷ್ಮವಾಗಿ ಹೇಳುತ್ತರೆ, ಯಜ್ಞಂದ ಪ್ರೀತರಾದ ದೇವತೆಗೊ ನವಗೆ ಎಂತರ ಯೋಗ್ಯವೋ ಅದರ ಕೊಡುತ್ತವು. ನವಗೆ ಎಂತದು ಬೇಕೋ ಅದರ ಪ್ರಕೃತಿ ಕೊಡುತ್ತು. ಪ್ರಕೃತಿ ಭಗವಂತನ ಅಂಶ. ಅದರ ಉಪಯೋಗುಸುವ ನವಗೆ ಕೃತಜ್ಞತೆ ಬೇಕು. ಅವು ನೀಡಿದ್ದರ ಅವಕ್ಕೆ ನೀಡಿಯೇ ನಾವೂ ತೆಕ್ಕೊಳ್ಳೆಕ್ಕು. ಅದರ ಬಿಟ್ಟು ಇದು ಎನ್ನದು, ಎನ್ನಿಂದ ಹೇಳಿ ಅಧಿಕಾರ ಅಹಂಕಾರ ತೋರಿಸಿದರೆ ಉದ್ಧಾರ ಇಲ್ಲೆ. ಪ್ರಕೃತಿ ಕೊಟ್ಟದರ ಕೃತಜ್ಞತೆ ಇಲ್ಲದ್ದೆ ತಿಂದು ತೇಗುವವ ಕಳ್ಳ° ಎನಿಸಿಗೊಳ್ತ°.

ಶ್ಲೋಕ

ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ ।
ಭುಂಜತೇ ತೇ ತ್ವಘಂ ಪಾಪಾ ಯೇ ಪಚಿಂತ್ಯಾತ್ಮಕಾರಣಾತ್ ॥೧೩॥

ಪದವಿಭಾಗ

ಯಜ್ಞ-ಶಿಷ್ಟ ಅಶಿನಃ ಸಂತಃ ಮುಚ್ಯಂತೇ ಸರ್ವ-ಕಿಲ್ಬಿಷೈಃ । ಭುಂಜತೇ ತೇ ತು ಅಘಮ್ ಪಾಪಾಃ ಯೇ ಪಚಂತಿ ಆತ್ಮ-ಕಾರಣಾತ್ ।।

ಅನ್ವಯ

ಯಜ್ಞ-ಶಿಷ್ಟ ಅಶಿನಃ ಸಂತಃ ಸರ್ವ-ಕಿಲ್ಬಿಷೈಃ ಮುಚ್ಯಂತೇ । ಯೇ ತು ಆತ್ಮ-ಕಾರಣಾತ್ ಪಚಂತಿ, ತೇ ಪಾಪಾಃ ಅಘಂ ಭುಂಜತೇ ॥

ಪ್ರತಿಪದಾರ್ಥ

ಯಜ್ಞ-ಶಿಷ್ಟ – ಯಜ್ಞದ ಆಚರಣೆಯ ನಂತರ ಸ್ವೀಕರುಸಿದ ಆಹಾರವ, ಅಶಿನಃ  ಸಂತಃ – ಆಶಿಸಿದ (ತಿಂದ) ಭಕ್ತರು, ಸರ್ವ-ಕಿಲ್ಬಿಷೈಃ – ಎಲ್ಲಾವಿಧವಾದ ಪಾಪಂಗಳಿಂದ,ಮುಚ್ಯಂತೇ – ಬಿಡುಗಡೆ ಪಡೆತ್ತವು,  ಯೇ – ಆರು, ತು – ಆದರೋ, ಆತ್ಮ-ಕಾರಣಾತ್ – ಇಂದ್ರಿಯತೃಪ್ತಿಗಾಗಿ, ಪಚಂತಿ – ಆಹಾರವ ಸಿದ್ಧಪಡುಸುತ್ತವೋ, ತೇ ಪಾಪಾಃ – ಆ ಪಾಪಿಗೊ,  ಅಘಮ್ – ಘೋರಪಾಪಂಗಳ, ಭುಂಜತೇ – ತಿಂತವು (ಅನುಭವುಸುತ್ತವು).

ಅನ್ವಯಾರ್ಥ

ಆರು ಯಜ್ಞಾಚರಣೆ ಮಾಡಿ ನಂತರ ಯಜ್ಞಶೇಷವ ಪ್ರಸಾದ ರೂಪವಾಗಿ ಧನ್ಯತೆಂದ ಸಂತೋಷಂದ ಸ್ವೀಕರುಸುತ್ತವೋ ಅವು ಎಲ್ಲ ಬಗೆಯ ಪಾಪಂಗಳಿಂದ ಬಿಡುಗಡೆ ಹೊಂದುತ್ತವು. ವೈಯುಕ್ತಿಕ ಸಂತೋಷಕ್ಕೋಸ್ಕರ ಪಾಕಯತನ ಮಾಡಿಗೊಂಬವು ಖಂಡಿತವಾಗಿಯೂ ಪಾಪವನ್ನೇ ಉಣ್ಣುತ್ತವು.

ತಾತ್ಪರ್ಯ / ವಿವರಣೆ

ಭಗವಂತನ ಭಕ್ತರಿಂಗೆ, ಹೇಳಿರೆ, ಕೃಷ್ಣಪ್ರಜ್ಞೆ ಇಪ್ಪವಕ್ಕೆ ಸಂತರು ಹೇಳಿ ಹೇಳುವದು. ಅವ್ವು ಯಾವಾಗಲೂ ಭಗವಂತನ ಪ್ರೇಮಿಗೊ. ಸದಾ ದೇವೋತ್ತಮ ಪರಮ ಪುರುಷ, ಗೋವಿಂದ (ಎಲ್ಲ ಸಂತಸಂಗಳ ಅನುಗ್ರಹಿಸುವವ°) ಅಥವಾ ಮುಕುಂದ (ಮುಕ್ತಿಯ ಕೊಡುವವ°) ಅಥವಾ ಕೃಷ್ಣ (ಸರ್ವಾಕರ್ಷಕ)ನತ್ರೆ ಪ್ರೇಮಭಾವಲ್ಲಿಪ್ಪ ಸಂತರು ಪುರುಷೋತ್ತಮಂಗೆ ಸಮರ್ಪಣೆ ಮಾಡದ್ದೆ ಏನನ್ನೂ ಸ್ವೀಕರುಸವು. ಆದ್ದರಿಂದ ಇಂತಹ ಭಕ್ತರುಗೊ ಶ್ರವಣ್, ಕೀರ್ತನ, ಸ್ಮರಣ, ಅರ್ಚನ ಮೊದಲಾದ ಭಕ್ತಿಸೇವೆಗಳ ಯಜ್ಞಲ್ಲಿ ನಿರತರಾಗಿರುತ್ತವು. ಈ ಬಗೆಯ ಯಜ್ಞಂಗಳ ಆಚರಣೆಂದ ಐಹಿಕ ಜಗತ್ತಿಲ್ಲಿ ಪಾಪಮಯ ಸಹವಾಸದ ಎಲ್ಲ ಕಲ್ಮಷಂಗಳಿಂದ ದೂರ ಇರುತ್ತವು.  ತಮಗಾಗಿಯೇ ಅಥವಾ ಇಂದ್ರಿಯತೃಪ್ತಿಗಾಗಿಯೇ ಆಹಾರವ ಮಾಡಿಗೊಂಬವು ಕಳ್ಳಂಗೊ ಮಾತ್ರವಲ್ಲ ಅವ್ವು ಆ ಎಲ್ಲ ರೀತಿಯ ಪಾಪಂಗಳನ್ನೂ ತಿಂಬವು. ಕಳ್ಳನೂ ಪಾಪಿಯೂ ಆಗಿಪ್ಪ ಮನುಷ್ಯಂಗೊ ಸುಖಿಯಾಗಿಪ್ಪಲೆ ಹೇಂಗೆ ಸಾಧ್ಯ. ಆದ್ದರಿಂದ ಎಲ್ಲ ರೀತಿಯ ಸುಖವಾಗಿರೇಕು ಹೇಳಿ ಭಾವುಸುತ್ತರೆ ಸಂಪೂರ್ಣ ಕೃಷ್ಣಪ್ರಜ್ಞೆಲಿ ಸಂಕೀರ್ತನ ಯಜ್ಞವ ಮಾಡುವ ಸುಲಭ ಪ್ರಕ್ರಿಯೆಯ ತಿಳುದಿರೆಕು. ಇಲ್ಲದ್ದರೆ, ಜಗತ್ತಿಲ್ಲಿ ಶಾಂತಿಯಾಗಲೀ, ಸುಖವಾಗಲೀ, ಸಮೃದ್ಢಿಯಾಗಲೀ ಸಾಧ್ಯವಿಲ್ಲೆ.

ದೇವತೆಗೊಕ್ಕೆ ಸಲ್ಲುಸಿ ಉಳುದ್ದರ ಉಂಬ ಸಜ್ಜನರುಗೊ ಎಲ್ಲ ಪಾಪಂದ ಮುಕ್ತರಾಗುತ್ತವು. ಅಲ್ಲದ್ದೇ, ತನಗೆ ಬೇಕಾಗಿಯೇ ಆಹಾರ ಕಂಡುಗೊಂಬ ಮನುಷ್ಯರು ತಮ್ಮ ಪಾಪವನ್ನೇ ತಿನ್ನುತ್ತವು. ಆರು ತಾನು ಪಡದ್ದರ ಭಗವದರ್ಪಣೆ ಮಾಡಿ ಅದರ ಭಗವಂತನ ಪ್ರಸಾದ ಹೇಳಿ ಭಾವಿಸಿ ಸ್ವೀಕರುಸುತ್ತವೋ, ಅವ್ವು, ಬದುಕಿನ ಎಲ್ಲಾ ಕೊಳೆಗಳಿಂದ ಬಿಡುಗಡೆ ಹೊಂದಿ ಸ್ವಚ್ಛ ಬದುಕಿಂದ ಬಾಳುತ್ತವು. ಆರ ಮನೆಲಿ ತಮಗೋಸ್ಕರವಾಗಿ ಅನ್ನ ಬೇಯುತ್ತೋ ಅವ್ವು ಅದರ ಮಾತ್ರ ತಿಂಬದಲ್ಲ, ಪಾಪವನ್ನೂ ಕೂಡ. ನವಗೆ ಅನ್ನವ ಕೊಟ್ಟವ° ಆ ಭಗವಂತ. ಅವಂಗೆ ಮದಾಲು ಕೃತಜ್ಞತಾಪೂರ್ವಕ ಸಮರ್ಪಣೆ ಆಯೇಕು. ಅದರ ಬಿಟ್ಟು ಇದು ಎನ್ನ ಸಂಪಾದನೆ, ಇದು ಎನಗೇ ಇಪ್ಪದು ಹೇಳಿ ಭಾವನೆ ಬೆಳಸಿಗೊಂಡರೆ ಆತ ಪಾಪದ ಗಂಟು ಬೆಳೆಶುತ್ತ ಹೇಳಿ ಅರ್ಥ. ಸೃಷ್ಟಿಯ ಉದ್ದೇಶದಂತೆ ನಡಕ್ಕೊಳ್ಳದ್ರೆ ನಾವು ಗಳಿಸಿದ್ದು ನವಗೇ ದಕ್ಕಲಿಲ್ಲೆ.

ಶ್ಲೋಕ

ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ ।
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ ॥೧೪॥

ಪದವಿಭಾಗ

ಅನ್ನಾತ್ ಭವಂತಿ ಭೂತಾನಿ ಪರ್ಜನ್ಯಾತ್ ಅನ್ನ-ಸಂಭವಃ । ಯಜ್ಞಾತ್ ಭವತಿ ಪರ್ಜನ್ಯಃ ಯಜ್ಞಃ ಕರ್ಮ-ಸಮುದ್ಭವಃ ॥

ಅನ್ವಯ

ಭೂತಾನಿ ಅನ್ನಾತ್ ಭವಂತಿ, ಪರ್ಜನ್ಯಾತ್ ಅನ್ನ-ಸಂಭವಃ, ಪರ್ಜನ್ಯಃ ಯಜ್ಞಾತ್ ಭವತಿ, ಯಜ್ಞಃ ಕರ್ಮ-ಸಮುದ್ಭವಃ ॥

ಪ್ರತಿಪದಾರ್ಥ

ಭೂತಾನಿ – ಭೌತಿಕ ದೇಹಂಗೊ, ಅನ್ನಾತ್ – ಧಾನ್ಯಂಗಳಿಂದ, ಭವಂತಿ – ಆಗುತ್ತು (ಬೆಳೆತ್ತು), ಪರ್ಜನ್ಯಾತ್ – ಮಳೆಂದ , ಅನ್ನ-ಸಂಭವಃ – ಆಹಾರ ಧಾನ್ಯಂಗಳ ಉತ್ಪತ್ತಿ ಆವ್ತು, ಪರ್ಜನ್ಯಃ – ಮಳೆಯು, ಯಜ್ಞಾತ್ – ಯಜ್ಞ ಆಚರಣೆಂದ, ಭವತಿ – ಸಾಧ್ಯವಾವುತ್ತು, ಯಜ್ಞಃ – ಯಜ್ಞಾಚರಣೆಯು, ಕರ್ಮ-ಸಮುದ್ಭವಃ  — ವಿದ್ಯುಕ್ತಕರ್ಮಂಗಳಿಂದ (ಕರ್ತವ್ಯಂಗಳಿಂದ) ಉಂಟಾವುತ್ತು .

ಅನ್ವಯಾರ್ಥ

ಎಲ್ಲಾ ಭೌತಿಕ ಜೀವಿಗೊ ಅನ್ನಾಹಾರ ಧಾನ್ಯಂಗಳಿಂದ ಬದುಕುತ್ತವು.  ಆಹಾರ ಧಾನ್ಯಂಗೊ ಮಳೆಯಿಂದಾಗಿ ಉತ್ಪತ್ತಿ ಆವುತ್ತು.  (ಮೋಡ) ಮಳೆಯು ಯಾಗಯಜ್ಞಾದಿ ಆಚರಣೆಂದ ಉಂಟಾವುತ್ತು. ಯಜ್ಞವು ನಿಯತ ಕರ್ಮಂಗಳಿಂದ  ಮಾಡಲ್ಪಡುತ್ತು.

ತಾತ್ಪರ್ಯ / ವಿವರಣೆ

ಇನ್ನೊಂದು ರೀತಿಲಿ ಹೇಳುತ್ತರೆ, ಜೀವರಾಶಿಗೊ ಆಹಾರಂದ, ಆಹಾರವು ಮಳೆಂದ, ಮಳೆಯು ಮೋಡಂದ, ಮೋಡವು ಯಜ್ಞಂದ, ಯಜ್ಞವು ಮನುಷ್ಯ ಕರ್ಮಂದ ಉಂಟಾವ್ತು. ಇದು ಪ್ರಕೃತಿ ಚಕ್ರ ನಿಯಮ.

ಯಜ್ಞಪುರುಷ° ಅಥವಾ ಎಲ್ಲ ಯಜ್ಞಂಗಳ ಭೋಕ್ತಾರ° ಹೇದು ವರ್ಣಿಸಲ್ಪಟ್ಟಿಪ್ಪವ° ಎಲ್ಲ ದೇವತೆಗಳ ಪ್ರಭು ಆ ಭಗವಂತ°. ದೇಹದ ಅಂಗಾಂಗಂಗೊ ಇಡೀ ಶರೀರವ ಸೇವೆ ಮಾಡುತ್ತ ಹಾಂಗೆ, ಎಲ್ಲ ದೇವತೆಗೊ ಸೇವಿಸುವದು ಆ ಭಗವಂತನ. ಇಂದ್ರ ಚಂದ್ರ ವರುಣ ಮೊದಲಾದ ದೇವತೆಗೊ ಐಹಿಕ ವ್ಯವಹಾರಂಗಳ ನಿರ್ವಹಿಸಲೆ ನೇಮಿತರಾದ ಅಧಿಕಾರಿಗೊ. ಆಹಾರ ಧಾನ್ಯಂಗಳ ಉತ್ಪತ್ತಿಮಾಡ್ಳೆ ಅಗತ್ಯವಿದ್ದಷ್ಟು ಗಾಳಿ, ಬೆಳಕು, ನೀರು  ಒದಗಿಸಿಕೊಡ್ಳೆ ಆ ದೇವತೆಗೊ ಸುಪ್ರೀತರಪ್ಪಲೆ ಯಜ್ಞಂಗಳ ಮಾಡೆಕು ಹೇಳಿ ವೇದ ವಿಹಿತ. ಶ್ರೀಕೃಷ್ಣನ ಅರ್ಚಿಸಿದರೆ ಭಗವಂತನ ವಿವಿಧ ಅಂಗಾಂಗಂಗಳಾದ ದೇವತೆಗೊಕ್ಕೂ ತಾನಾಗಿಯೇ ಅರ್ಚನೆ ಆವುತ್ತು. ಆದ್ದರಿಮ್ದ ಈ ದೇವತೆಗಳ ಪ್ರತ್ಯೇಕ ಪೂಜೆ ಮಾಡೆಕ್ಕಾದ ಅಗತ್ಯ ಇಲ್ಲೆ. ಈ ಕಾರಣಕ್ಕಾಗಿಯೇ ಕೃಷ್ಣಪ್ರಜ್ಞೆಲಿಪ್ಪ ಭಗವದ್ಭಕ್ತರು ಆಹಾರವ ಕೃಷ್ಣಂಗೆ ಅರ್ಪಿಸಿ ತಾವೂ ಸ್ವೀಕರುಸುವದು. (ನಮ್ಮಲ್ಲಿ ಭೋಜನ ಸಮಯಲ್ಲಿ ಹಸ್ತೋದಕ ಕೊಡುವಾಗ ಶ್ರೀಕೃಷ್ಣಾರ್ಪಣಮಸ್ತು ಹೇಳಿ ಬ್ರಹ್ಮಾರ್ಪಣ ಬಿಡುವದು, ಭೋಜನಾಂತೇ ಗೋವಿಂದ ನಾಮ ಸಂಕೀರ್ತನ ಆಚರಣೆ ಇವೆಲ್ಲವೂ ಇದೇ ಉದ್ಧೇಶಂದ – ಎಲ್ಲವೂ ಆ ಭವಂತಂಗೇ ಅರ್ಪಣೆ). ಈ ಪ್ರಕ್ರಿಯೆಂದ ದೇಹವು ಅಧ್ಯಾತ್ಮಿಕವಾಗಿ ಪುಷ್ಟಿಗೊಳ್ಳುತ್ತು. ಇಂತಹ ಕರ್ಮವು ಪಾಪಕರ್ಮಫಲವ ನಿವಾರುಸುವದು ಮಾತ್ರವಲ್ಲ ದೇಹದ ಐಹಿಕ ಪ್ರಕೃತಿಯ ಎಲ್ಲ ಕಶ್ಮಲ ಸೋಂಕಿಂದ ರಕ್ಷಿಸುತ್ತು.

ಸಾಂಕ್ರಾಮಿಕ ರೋಗ ತಲೆದೋರಿಯಪ್ಪಗ ಪೂತಿನಾಶಕ ಲಸಿಕೆಯು ಮನುಷ್ಯನ ಅಂತಹ ರೋಗದ ಸೋಂಕಿಂದ ಕಾಪಾಡುತ್ತು. ಹಾಂಗೆಯೇ ವಿಷ್ಣುವಿಂಗೆ ನೈವೇದ್ಯ ಮಾಡಿ ಸ್ವೀಕರಿಸ ಪ್ರಸಾದವು ಐಹಿಕ ಸೋಂಕಿಂದ ನವಗೆ ಸಾಕಷ್ಟು ರಕ್ಷಣೆಯ ನೀಡುತ್ತು. ಈ ರೊಢಿಯಮಾಡಿಗೊಂಡವನೇ ಭಗವದ್ಭಕ್ತ° ಅನಿಸಿಗೊಳ್ತ. ಆದ್ದರಿಂದ ಕೃಷ್ಣಪ್ರಜ್ಞೆಲಿದ್ದು ಕೃಷ್ಣನ ಪ್ರಸಾದವ ಸ್ವೀಕರುಸುವ ಮನುಷ್ಯರು ಹಿಂದಾಣ ಎಲ್ಲಾ ಐಹಿಕ ಸೋಂಕುಗಳ ಪ್ರತಿರೋಧಿಸುವ ಶಕ್ತಿ ಪಡೆತ್ತವು°. ಈ ಐಹಿಕ ಸೋಂಕುಗೊ ಆತ್ಮಸಾಕ್ಷಾತ್ಕಾರದ ಮಾರ್ಗಲಿ ಅಡ್ಡಿಗೊ. ಇದಕ್ಕೆ ಪ್ರತಿಯಾಗಿ, ಹೀಂಗೆ ನಡಕ್ಕೊಳ್ಳದ್ದೆ ಇಪ್ಪವ° ಪಾಪಕರ್ಮದ ಗಾತ್ರವ ಹೆಚ್ಚಿಸಿಗೊಳ್ತ ಹೋವ್ತ°. ಇದು ಈ ಎಲ್ಲಾ ಪಾಪಕರ್ಮಂಗಳ ಫಲವ ಅನುಭವುಸಲೆ ಮುಂದಾಣ ಜನ್ಮಲ್ಲಿ ನಾಯಿ ಹಂದಿ ಶರೀರವ ಸಿದ್ಧಗೊಳುಸುತ್ತು. ಕಶ್ಮಲಂಗಳ ಸೋಂಕಿಂದ ಐಹಿಕ ಜಗತ್ತು ತುಂಬಿ ಹೋಯ್ದು. ಕೃಷ್ಣಪ್ರಜ್ಞೆಂದ ಭಗವಂತನ ಪ್ರಸಾದವ ಸ್ವೀಕರುಸಿ ಈ ಎಲ್ಲ ಸೋಂಕಿಂದ ರಕ್ಷಣೆ ಪಡದವ° ರೋಗದ ದಾಳಿಂದ ತಪ್ಪಿ ಉಳಿತ್ತ°. ಹೀಂಗೆ ಮಾಡದ್ದವ ಐಹಿಕ ಸೋಂಕಿಂಗೆ ಗುರಿಯಾವುತ್ತ°.

ಅಹಾರ ಧಾನ್ಯಂಗೊ ಅಥವಾ ತರಕಾರಿಗೊ ವಾಸ್ತವವಾಗಿ ಆಹಾರವೇ. ಮನುಷ್ಯ° ಬಗೆಬಗೆಯ ಆಹಾರ ಧಾನ್ಯಂಗಳ, ತರಕಾರಿಗಳ, ಹಣ್ಣುಗಳ ಮೊದಲಾದುವುಗಳ ತಿನ್ನುತ್ತ°. ಪ್ರಾಣಿಗೊ ಆಹಾರಧಾನ್ಯಂಗಳಲ್ಲಿ ಮತ್ತು ತರಕಾರಿಗಳಲ್ಲಿ ಉಳಿದ ಭಾಗ, ಹುಲ್ಲು, ಸಸ್ಯಾದಿಗಳ ತಿನ್ನುತ್ತವು. ಮಾಂಸಾಹಾರವ ತಿಂಬ ಮನುಷ್ಯರೂ, ಪ್ರಾಣಿಗಳ ತಿಂಬಲೆ ಸಸ್ಯಂಗಳ ಬೆಳೆಗೆ ನೆಚ್ಚಲೇಬೇಕು. ಹೀಂಗೆ ಅಂತಿಮವಾಗಿ ನಾವು ಹೊಲದ ಉತ್ಪನ್ನವನ್ನೇ ನೆಚ್ಚೆಕ್ಕಾವ್ತು ಹೊರತು ಕಾರ್ಖಾನೆ ಉತ್ಪನ್ನವ ಅಲ್ಲ. ಆಹಾರದ ಉತ್ಪನ್ನವು ಆಕಾಶಂದ ಬೇಳುವ ಮಳೆಂದ ಅಪ್ಪದು. ಮಳೆಯ ಇಂದ್ರ, ಸೂರ್ಯ ಚಂದ್ರ ಮೊದಲಾದ ದೇವತೆಗೊ ನಿಯಂತ್ರಿಸುತ್ತವು. ಅವೆಲ್ಲರೂ ಭಗವಂತನ ಸೇವಕರೆ. ಭಗವಂತ ಯಜ್ಞಂದ ಸುಪ್ರೀತನಾವುತ್ತ°. ಆದ್ದರಿಂದ ಯಜ್ಞಾದಿಗಳ ಮಾಡದ್ದವಂಗೆ ಅಭಾವವೇ ಗತಿ. ಇದು ನಿಸರ್ಗ ನಿಯಮ. ಆದ್ದರಿಂದ ನವಗೆ ಆಹಾರದ ಅಭಾವವುಂಟಾಗದ ಹಾಂಗೆ ಸಮಾಜವ ಕಾಪಾಡ್ಳೆ ಯಜ್ಞವ ಮಾಡೆಕು. ಕಲಿಯುಗಲ್ಲಿ ಸಂಕೀರ್ತನ ಯಜ್ಞವು ಸುಲಭ ಉಪಾಯವು.

ಶ್ಲೋಕ

ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್ ।
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್ ॥೧೫॥

ಪದವಿಭಾಗ

ಕರ್ಮ ಬ್ರಹ್ಮ-ಉದ್ಭವಮ್ ವಿದ್ಧಿ ಬ್ರಹ್ಮ ಅಕ್ಷರ-ಸಮುದ್ಭವಮ್ । ತಸ್ಮಾತ್ ಸರ್ವ ಗತಮ್ ಬ್ರಹ್ಮ ನಿತ್ಯಮ್ ಯಜ್ಞೇ ಪ್ರತಿಷ್ಠಿತಮ್ ॥

ಅನ್ವಯ

ಕರ್ಮ ಬ್ರಹ್ಮ-ಉದ್ಭವಂ ವಿದ್ಧಿ, ಬ್ರಹ್ಮ ಅಕ್ಷರ-ಸಮುದ್ಭವಮ್ । ತಸ್ಮಾತ್ ಸರ್ವಗತಂ ಬ್ರಹ್ಮ ಯಜ್ಞೇ ನಿತ್ಯಂ ಪ್ರತಿಷ್ಠಿತಮ್ ।

ಪ್ರತಿಪದಾರ್ಥ

ಕರ್ಮ – ಕರ್ಮವು, ಬ್ರಹ್ಮ-ಉದ್ಭವಮ್  – ವೇದಂಗಳಿಂದ ಉತ್ಪತ್ತಿಯಾಯ್ದು ಹೇದು, ವಿದ್ಧಿ – ತಿಳಿ, ಬ್ರಹ್ಮ – ವೇದಂಗೊ, ಅಕ್ಷರ-ಸಮುದ್ಭವಮ್  – ಅವ್ಯಯನಾದ (ಅಕ್ಷರನಾದ) ಪರಬ್ರಹ್ಮನಿಂದ ಸಾಕ್ಷಾತ್ತಾಗಿ ವ್ಯಕ್ತ ಆಯ್ದು. ತಸ್ಮಾತ್ – ಹಾಂಗಾಗಿ, ಸರ್ವಗತಮ್ – ಸರ್ವವ್ಯಾಪ್ತನಾದ, ಬ್ರಹ್ಮ – ದಿವ್ಯತ್ತೋಮ°, ಯಜ್ಞೇ – ಯಜ್ಞಲ್ಲಿ, ನಿತ್ಯಮ್ – ಶಾಶ್ವತವಾಗಿ, ಪ್ರತಿಷ್ಠಿತಮ್ – ನೆಲೆಸಿದ್ದ°.

ಅನ್ವಯಾರ್ಥ

ವೇದಂಗಳಲ್ಲಿ ನಿಯಂತ್ರಿತವಾದ ಕರ್ಮಂಗಳ ವಿಧಿಸಿದ್ದು. ವೇದಂಗೊ ದೇವೋತ್ತಮ ಪರಮ ಪುರುಷನಿಂದ ನೇರವಾಗಿ ವ್ಯಕ್ತವಾದ್ದು. ಆದ್ದರಿಂದ ಸರ್ವಾಂತರ್ಯಾಮಿ ಪರಬ್ರಹ್ಮ° ನಿತ್ಯವಾಗಿ ಯಜ್ಞಕರ್ಮಲ್ಲಿ ಪ್ರತಿಷ್ಠಿತನಾಗಿದ್ದ° .

ತಾತ್ಪರ್ಯ / ವಿವರಣೆ

ಭಗವಂತನ ಸುಪ್ರೀತಿಗಾಗಿಯೇ ಕರ್ಮಂಗಳ ಮಾಡೆಕ್ಕು ಹೇಳಿ ಹೇಳಿದ್ದು. ಯಜ್ಞಪುರುಷನಾದ ಶ್ರೀ ಮಹಾವಿಷ್ಣುವಿನ ಪ್ರಸನ್ನಗೊಳುಸಲೆ ನಾವು ಕರ್ಮ ಮಾಡೆಕ್ಕಾರೆ ಬ್ರಹ್ಮನಲ್ಲಿ ಅಥವಾ ಅಲೌಕಿಕ ವೇದಂಗಳಲ್ಲಿ ಕರ್ಮದ ದಿಕ್ಕು ಕಂಡುಕೊಳ್ಳೆಕು. ವೇದಂಗಳ ದಿಗ್ದರ್ಶನ ಇಲ್ಲದ್ದೆ ಏನ ಮಾಡಿದರೂ ಅದಕ್ಕೆ ವಿಕರ್ಮ ಅಥವಾ ಅನಧಿಕೃತ ಅಥವಾ ಪಾಪಕರ್ಮ ಹೇಳಿ ಹೇಳುವದು. ಆದ್ದರಿಂದ ಕರ್ಮಫಲಂದ ಉದ್ಧಾರ ಅಪ್ಪಲೆ ನಾವು ಯಾವಾಗಲೂ ವೇದಂಗಳ ಮಾರ್ಗದರ್ಶನ ಪಡೆಕು. ಸಾಮಾನ್ಯವಾಗಿ ಸಮಾಜ ಜೀವನಲ್ಲಿ ಹೇಂಗೆ ರಾಜ್ಯವು ಮಾರ್ಗದರ್ಶನ ಮಾಡಿದಂತೆ ಮನುಷ್ಯರು ಕೆಲಸ ಮಾಡೆಕ್ಕಾವ್ತೋ ಹಾಂಗೆಯೇ ಭಗವಂತನ ಪರಮ ಸಾಮ್ರಾಜ್ಯದ ಮಾರ್ಗದರ್ಶನಲ್ಲಿ ಕೆಲಸ ಮಾಡೆಕ್ಕಾವ್ತು. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಹೇಳಿ ನಾಲ್ಕು ವೇದಂಗೊ ದೇವೋತ್ತಮ ಪರಮ ಪುರುಷನ ಉಸಿರಿನಿಂದ ಮೂಡಿಬಂದದು. ಬ್ರಹ್ಮಸಂಹಿತೆಲಿ ವಿಶದೀಕರಿಸಿದ ಹಾಂಗೆ, ಭಗವಂತ° ತನ್ನ ಪ್ರತಿಯೊಂದು ಇಂದ್ರಿಯಂಗಳ ಮೂಲಕ ಇತರ ಇಂದ್ರಿಯಂಗಳ ಕೆಲಸ ಮಾಡಬಲ್ಲ°. ಹೇಳಿರೆ, ಭಗವಂತ ತನ್ನ ಉಸಿರಿನಿಂದ ಮಾತಾಡಬಲ್ಲ°, ಕಣ್ಣೋಟಂದಲೇ ಗರ್ಭಾಧಾನ ಮಾಡಬಲ್ಲ°. ಆತ° ಐಹಿಕ ನಿಸರ್ಗದ ಮೇಲೆ ಕಣ್ಣಾಡಿಸಿದ ಮಾತ್ರಕ್ಕೇ ಎಲ್ಲ ಜೀವಿಗಳ ಸೃಷ್ಟಿ ಮಾಡಿದ°, ಅಥವಾ ಉತ್ಪತ್ತಿಮಾಡಿದ ನಂತರ ಈ ಜೀವಿಗೊ ಮತ್ತೆ ಹೇಂಗೆ ಭಗವದ್ಧಾಮಕ್ಕೆ ಮರಳಿ ಸೇರಲಕ್ಕು ಹೇಳಿಯೂ ಮಾರ್ಗದರ್ಶನ ವೇದಂಗಳ ಮೂಲಕ ಮಾಡಿದ°.

ಶ್ಲೋಕ

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ ।
ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ ॥೧೬।।

ಪದವಿಭಾಗ

ಏವಂ ಪ್ರವರ್ತಿತಮ್ ಚಕ್ರಮ್ ನ ಅನುವರ್ತಯತಿ ಇಹ ಯಃ । ಅಘ ಆಯಃ ಇಂದ್ರಿಯ-ಆರಾಮಃ ಮೋಘಮ್ ಪಾರ್ಥ ಸಃ ಜೀವತಿ ॥

ಅನ್ವಯ

ಹೇ ಪಾರ್ಥ!, ಏವಂ ಪ್ರವರ್ತಿತಂ ಚಕ್ರಂ ಯಃ ಇಹ ನ ಅನುವರ್ತಯತಿ, ಸಃ ಇಂದ್ರಿಯ-ಆರಾಮಃ ಅಘಾಯುಃ ಮೋಘಂ ಜೀವತಿ ।

ಪ್ರತಿಪದಾರ್ಥ

ಹೇ ಪಾರ್ಥ –  ಏ ಪೃಥೆಯ ಮಗನೇ, ಏವಮ್ – ಹೀಂಗೆ, ಪ್ರವರ್ತಿತಮ್ – ವೇದಂಗಳಿಂದ ಸ್ಥಾಪಿತವಾದ (ಪ್ರವರ್ತಿಸಿದ), ಚಕ್ರಂ – ಚಕ್ರವ, ಯಃ – ಆರು, ಇಹ – ಈ ಜೀವನಲ್ಲಿ, ನ ಅನುವರ್ತಯತಿ – ಅನುಸರಿಸುತ್ತವಿಲ್ಲೆಯೋ, ಸಃ  – ಅವ°, ಇಂದ್ರಿಯ-ಆರಾಮಃ – ಇಂದ್ರಿಯ ತೃಪ್ತಿಲಿಯೇ ಸಂತೃಪ್ತನಾದ, ಅಘ-ಆಯುಃ – ಪಾಪಭರಿತನಾಗಿ ಬದುಕಿನವ°, ಮೋಘಮ್ – ವ್ಯರ್ಥವಾಗಿ, ಜೀವತಿ – ಬದುಕುತ್ತ°.     

ಅನ್ವಯಾರ್ಥ

ಅರ್ಜುನ!, ವೇದಂಗೊ ಪ್ರವರ್ತಿಸಿದ ಈ ಯಜ್ಞಚಕ್ರವ ಆರು ಈ ಮಾನವ ಜೀವನಲ್ಲಿ ಅನುಸರುಸುತ್ತವಿಲ್ಲೆಯೋ ಅವರದ್ದು ನಿಶ್ಚಯವಾಗಿಯೂ ಪಾಪವೇ ತುಂಬಿದ ಬದುಕು. ಇಂದ್ರಿಯಂಗಳ ತೃಪ್ತಿಗಾಗಿಯೇ ಬದುಕುವ ಇಂತಹ ಮನುಷ್ಯರ ಬದುಕು ವ್ಯರ್ಥ.

ತಾತ್ಪರ್ಯ / ವಿವರಣೆ

ದುಡಿಯೆಕು – ಸುಖಪಡೇಕು ಹೇಳ್ವ ತತ್ವವ ಭಗವಂತ° ಒಪ್ಪುತ್ತನಿಲ್ಲೆ. ಈ ಐಹಿಕ ಜಗತ್ತಿನ ಸವಿಯಬಯಸುವವಕ್ಕೆ ಯಜ್ಞಾಚರಣೆಯ ಚಕ್ರವು ತೀರಾ ಅಗತ್ಯ. ಇಂತಹ ನಿಯಮಂಗಳ ಪಾಲುಸದ್ದವು ಅಪಾಯದ ಬದುಕಿನ ನಡೆಸಿದಾಂಗೆ. ನಿಸರ್ಗದ ನಿಯಮಾನುಸಾರ ಮನುಷ್ಯನ ಜೀವನದ ಉದ್ದೇಶ ಆತ್ಮಸಾಕ್ಷಾತ್ಕಾರ. ಇದರ ಸಾಧುಸಲೆ ಕರ್ಮಯೋಗ, ಜ್ಞಾನಯೋಗ ಮತ್ತು ಭಕ್ತಿಯೋಗ ಮಾರ್ಗಂಗೊ. ಪಾಪಪುಣ್ಯಂಗಳ ಮೀರಿದ ಆಧ್ಯಾತ್ಮವಾದಿಗೆ ನಿಯಮಿತ ಯಜ್ಞಂಗಳ ಕಟ್ಟುನಿಟ್ಟಾಗಿ ಪಾಲುಸುವ ಅಗತ್ಯ ಇಲ್ಲೆ. ಆದರೆ, ಇಂದ್ರಿಯತೃಪ್ತಿಲಿ ನಿರತರಾದೋರು ಮದಲು ಹೇಳಿದ ಯಜ್ಞಚಕ್ರಲ್ಲಿ ಸಕ್ರಿಯರಾಗಿ ಆಚರಿಸಿ ಪರಿಶುದ್ಧರಾಯೆಕ್ಕಪ್ಪ ಆವಶ್ಯಕತೆ ಇದ್ದು. ಕೃಷ್ಣಪ್ರಜ್ಞೆಲಿ ನಿರತರಾಗದ್ದವು ಇಂದ್ರಿಯಪ್ರಜ್ಞೆಲಿ ತಲ್ಲೀನರಾಗಿರುತ್ತವು. ಆದ್ದರಿಂದ ಪುಣ್ಯಕಾರ್ಯ ಆಚರಣೆ ಅನಿವಾರ್ಯ. ಇಂದ್ರಿಯ ಪ್ರಜ್ಞೆ ಇಪ್ಪವ್ವು ಇಂದ್ರಿಯತೃಪ್ತಿಯ ಪ್ರತಿಕ್ರಿಯೆಗೆ ಸಿಕ್ಕಿಹಾಕಿಗೊಳ್ಳದ್ದೆ ತಮ್ಮ ಬಯಕೆಂಗಳ ತೃಪ್ತಿಗೊಳುಸುವದು ಸಾಧ್ಯ ಅಪ್ಪಹಾಂಗೆ ಯಜ್ಞವ್ಯವಸ್ಥೆಯ ಯೋಜನೆ ಆಯ್ದು. ಜಗತ್ತಿನ ಕಲ್ಯಾಣವು ನಮ್ಮ ಪ್ರಯತ್ನಂಗಳ ಅವಲಂಬಿಸಿಗೊಂಡಿಲ್ಲೆ. ದೇವತೆಗೊ ನೇರವಾಗಿ ಕಾರ್ಯಗತ ಮಾಡುವ ಭಗವಂತನ ಹಿನ್ನಲೆಯ ಜೋಡಣೆಯ ಅವಲಂಬಿಸಿಗೊಂಡಿದ್ದು. ಆದ್ದರಿಂದಲೇ ಯಜ್ಞಂಗಳ ವೇದಂಗಳಲ್ಲಿ ಹೇಳಿಪ್ಪಂತೆ ದೇವತೆಗೊಕ್ಕೆ ನೇರವಾಗಿ ನಿರ್ದೇಶಿಸಲಾಯ್ದು. ಇದು ಪರೋಕ್ಷವಾಗಿ ಕೃಷ್ಣಪ್ರಜ್ಞೆಯೇ ಆಚರಣೆ. ಎಂತಕೆ ಹೇಳಿರೆ ಯಜ್ಞಂಗಳ ಆಚರಣೆ ಆರು ಸಂಪೂರ್ಣವಾಗಿ ಕಲಿತ್ತವೋ ಅವು ಕೃಷ್ಣಪ್ರಜ್ಞೆಯ ಪಡೆತ್ತವು. ಆದರೆ, ಯಜ್ಞಂಗಳ ಆಚರಿಸಿದ ಮನುಷ್ಯಂಗೆ ಕೃಷ್ಣಪ್ರಜ್ಞೆ ಬಾರದೆಹೋದರೆ ಅಂತಹ ತತ್ವಂಗಳ ನೀತಿಸಂಹಿತೆ ಹೇಳಿ ಪರಿಗಣಿಸಲಾವ್ತು. ಆದ್ದರಿಂದ ಯಾವ ಮನುಷ್ಯನೂ ತನ್ನ ಮುನ್ನಡೆಯ ನೀತಿಸಂಹಿತೆಗಳ ಎಲ್ಲೆಗೆ ಸೀಮಿತಗೊಳುಸಲಾಗ. ಅದರ ಮೀರಿ ಕೃಷ್ಣಪ್ರಜ್ಞೆಯ ಸಾಧುಸೆಕು.

ಬನ್ನಂಜೆ ವ್ಯಾಖ್ಯಾನಿಸುತ್ತವು – ಜೀವಜಾತದ ಹುಟ್ಟು ಆಹಾರಂದ, ಆಹಾರ ಇಲ್ಲದ್ದೆ ಬದುಕು ಇಲ್ಲೆ. ಈ ಆಹಾರ ಸಿಕ್ಕುವದು ಬೆಳೆಂದ. ಬೆಳಗೆ ಮೂಲ ಸೌರಶಕ್ತಿ ಮತ್ತು ಮಳೆ. ಮಳೆ ಬಪ್ಪದು ಯಜ್ಞಂದ, ನಾವು ಮಾಡುವ ಪ್ರಾಮಾಣಿಕ ಬದುಕಿಂದ, ಭಗವದರ್ಪಣೆ ಬುದ್ಧಿಂದ. ಯಜ್ಞದ ನಿರ್ವಹಣೆ ಕರ್ಮಂದ, ನಮ್ಮ ಕ್ರಿಯಾಶೀಲತೆಂದ. ಕರ್ಮ ಹೇಳಿರೆ ಕರ್ತವ್ಯ ಕರ್ಮ, ಪ್ರಾಮಾಣಿಕ ಕ್ರಿಯೆ. ಇಂಥಹ ಕರ್ಮ ನಡವದು ಭಗವಂತನಿಂದ. ಈ ಭಗವಂತ (ಬ್ರಹ್ಮ) ನೆಲೆಸಿಪ್ಪದು ವೇದ(ಅಕ್ಷರ)ಲ್ಲಿ. ವೇದ ಇಪ್ಪದು ಜೀವಜಾತರಲ್ಲಿ (ಮನುಷ್ಯರಲ್ಲಿ). ಆದ್ದರಿಂದ ಇದೊಂದು ಚಕ್ರ. ಮಾನವ <-> ಆಹಾರ <-> ಮಳೆ <-> ಯಜ್ಞ <-> ಭಗವಂತ <-> ವೇದ <-> ಮಾನವ. ಇಲ್ಲಿ ವೇದ ಹೇಳಿರೆ ವೇದಮಂತ್ರವ ಬಾಯಿಪಾಠ ಮಾಡುವದಲ್ಲ. ವೈದಿಕ ವಾಙ್ಮಯದ ಎಚ್ಚರಪ್ರಜ್ಞೆ. ಈ ಚಕ್ರಲ್ಲಿ ನಾವು ನಮ್ಮ ಕರ್ಮವ ತೊರವಲೆ ಇಲ್ಲೆ. ಕರ್ಮವ ಸದಾ ಯಜ್ಞವಾಗಿ, ಭಗವದರ್ಪಣೆಯಾಗಿ ಮಾಡೆಕು. ಭಗವಂತನ ಎಚ್ಚರ, ವೈದಿಕವಾಙ್ಮಯ ಪ್ರಜ್ಞೆ ಎಲ್ಲವೂ ಸಮನಾಗಿದ್ದರೆ ಮಳೆ, ಮಳೆಂದಲಾಗಿ ಬೆಳೆ, ಬೆಳೆಂದಲಾಗಿ ಜೀವನ. ಈ ಚಕ್ರವ ಆರು ಅನುಸರುಸುತ್ತವಿಲ್ಲೆಯೋ ಅವ್ವು ಈ ವಿಶ್ವಚಕ್ರವ ಮುರುದವು, ಸಮಾಜದ ಸಹಜ ನಡಗೆ ಅಡ್ಡಗಾಲು ಹಾಕಿದವು ಆವ್ತವು. ಅಂತವು ಬರೇ ಇಂದ್ರಿಯ ಸುಖ ಭೋಗಲ್ಲಿ ಮೈಮರತು ತನ್ನ ಜೀವನವ ವ್ಯರ್ಥಮಾಡಿಗೊಳ್ಳುತ್ತವು.

ಇಲ್ಲಿ ಹೇಳಿಪ್ಪ ಈ ವಿಶ್ವಚಕ್ರದ ಪ್ರಜ್ಞೆ ನವಗೆ ನಮ್ಮ ದೈನಂದಿನ ಜೀವನಲ್ಲಿ ಕಾರ್ಯಲ್ಲಿ ಇದ್ದರೆ ನಮ್ಮ ಜೀವನ ಸಾರ್ಥಕ. ನಮ್ಮ ಉದ್ಧಾರ ಸಿದ್ಧ. ನಮ್ಮ ದೈನಂದಿನ ಬದುಕನ್ನೇ ಒಂದು ಯಜ್ಞವಾಗಿ ಮಾಡಿಗೊಂಡು, ಭಗವಂತನ ಪ್ರಜ್ಞೆಲಿ ನಮ್ಮ ಬದುಕಿನ ನಾವು ರೂಢಿಸಿಗೊಳ್ಳೆಕು. ಇದು ನಿಜವಾದ ಕರ್ಮಯೋಗ. ಇದುವೇ ಮೋಕ್ಷದ ನಡೆ. ಇದುವೇ ಭಗವಂತನ ಸೇರುವ ಮಾರ್ಗ.

ಇಲ್ಲಿ ಕೆಲವು ಸಂಶಯಂಗೊ. ಜ್ಞಾನವೇ ಶ್ರೇಷ್ಠ ಹೇಳಿ ಈ ಮದಲು ಶ್ರೀಕೃಷ್ಣ ಹೇಳಿದ್ದ°. ಆದರೆ ಕರ್ಮವ ಬಿಟ್ಟಲ್ಲ ಹೇಳಿಯೂ ಹೇಳಿದ್ದ°. ಆದರೆ, ಶಾಸ್ತ್ರಂಗಳಲ್ಲಿ ಜ್ಞಾನಿಗೊಕ್ಕೆ ಕರ್ಮ ಬೇಡ ಹೇಳಿ ಹೇಳಿದ್ದು. ಹಾಂಗಾರೆ ಎಂತರ ಇದರ ಅರ್ಥ? ಒಬ್ಬ° ಅಂತರಂಗಲ್ಲಿ ಯಜ್ಞ ಮಾಡುತ್ತವಂಗೆ ಕರ್ಮ ಇದ್ದೋ? ಅವ° ಕರ್ಮ ಮಾಡದ್ದರೆ ಲೋಪ ಆವುತ್ತೋ? ಮನುಷ್ಯ ಕರ್ಮ ಬಂಧನ ಇಲ್ಲದ್ದೆ ಇಪ್ಪ ಸ್ಥಿತಿ ಯಾವುದು? ಮೋಕ್ಷಕ್ಕೆ ಮದಲು ಸಂಸಾರಿಕ ಸ್ಥಿತಿಲಿ ಕರ್ಮ ಮಾಡದ್ದೇ ಇಪ್ಪಲೆ ಸಾಧ್ಯವೋ? ಕರ್ಮ ಇಲ್ಲದ್ದೇ ಸದಾ ಅಂತರಂಗದ ಸ್ಥಿತಿಲಿ ಇಪ್ಪಲೆ ಸಾಧ್ಯವೋ? ಇದಕ್ಕೆಲ್ಲ ಉತ್ತರವಾಗಿ ಶ್ರೀಕೃಷ್ಣ° ಮುಂದೆ ಹೇಳುತ್ತ° –

ಶ್ಲೋಕ

ಯಸ್ತ್ವಾತ್ಮರತಿರೇವ ಸ್ಯಾತ್ ಆತ್ಮ ತೃಪ್ತಶ್ಚ ಮಾನವಃ ।
ಆತ್ಮನ್ಯೇವ ಚ ಸಂತುಷ್ಟಃ ತಸ್ಯ ಕಾರ್ಯಂ ನ ವಿದ್ಯತೇ ॥೧೭॥

ಪದವಿಭಾಗ

ಯಃ ತು ಆತ್ಮ-ರತಿಃ ಏವ ಸ್ಯಾತ್ ಆತ್ಮ-ತೃಪ್ತಃ ಚ ಮಾನವಃ । ಆತ್ಮನಿ ಏವ ಚ ಸಂತುಷ್ಟಃ ತಸ್ಯ ಕಾರ್ಯಮ್ ನ ವಿದ್ಯತೇ ॥

ಅನ್ವಯ

ಯಃ ತು ಮಾನವಃ ಆತ್ಮ-ರತಿಃ ಏವ, ಆತ್ಮ-ತೃಪ್ತಃ ಚ, ಆತ್ಮನಿ ಏವ ಚ ಸಂತುಷ್ಟಃ ಸ್ಯಾತ್ ತಸ್ಯ ಕಾರ್ಯಂ ನ ವಿದ್ಯತೇ ॥

ಪ್ರತಿಪದಾರ್ಥ

ಯಃ ತು – ಯಾವನಾದರೋ, ಮಾನವಃ – ಮನುಷ್ಯ°, ಆತ್ಮ-ರತಿಃ – ಆತ್ಮನಲ್ಲಿ ಸುಖಪಡವವನಾಗಿ, ಏವ – ಖಂಡಿತವಾಗಿಯೂ, ಆತ್ಮ-ತೃಪ್ತಃ – ಆತ್ಮ ತೃಪ್ತನಾಗಿ (ಆತ್ಮಪ್ರಕಾಶಿತನಾಗಿ), ಚ – ಮತ್ತು, ಆತ್ಮನಿ – ತನ್ನಲ್ಲಿ, ಏವ – ಮಾತ್ರ, ಚ – ಮತ್ತು, ಸಂತುಷ್ಟಃ – ಪೂರ್ಣತೃಪ್ತನಾಗಿ, ಸ್ಯಾತ್ – ಇರುತ್ತನೋ,  ತಸ್ಯ – ಅವನ , ಕಾರ್ಯಮ್ – ಕರ್ತವ್ಯವು, ನ ವಿದ್ಯತೇ – ಇರುತ್ತಿಲ್ಲೆ.

ಅನ್ವಯಾರ್ಥ

ಯಾವಾತ° ಮನುಷ್ಯ° ತನ್ನ ಆತ್ಮಲ್ಲಿಯೇ ಸಂತೋಷ ಕಂಡುಕೊಳ್ಳುತ್ತನೋ, ಯಾವಾತನ ಮನುಷ್ಯ ಜನ್ಮವು ಆತ್ಮಸಾಕ್ಷಾತ್ಕಾರದ ಬದುಕಾಗಿಯೇ ಆಗಿದ್ದೋ, ಆರು ಆತ್ಮನಲ್ಲಿಯೇ ಸಂತುಷ್ಟನಾಗಿರುತ್ತನೋ ಅವಂಗೆ ಯಾವ ಕರ್ತವ್ಯವೂ ಇರುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಿದ್ದು ಕೃಷ್ಣಪ್ರಜ್ಞೆಲಿ ತಾನು ಮಾಡುವ ಕಾರ್ಯಲ್ಲಿ ಸಂಪೂರ್ಣ ಸಂತುಷ್ಟನಾವುತ್ತನೋ ಅವಂಗೆ ಮತ್ತೆ ಯಾವ ಬೇರೆ ಕರ್ತವ್ಯಂಗೊ ಇರುತ್ತಿಲ್ಲೆ. ಅವಂಗೆ ಕೃಷ್ಣಪ್ರಜ್ಞೆ ಇಪ್ಪದರಿಂದ ಒಳಾಣ ಕಲ್ಮಷ ಎಲ್ಲ ಒಂದೇ ಕ್ಷಣಲ್ಲಿ ತೊಳದುಹೋವುತ್ತು. ಇದು ಸಹಸ್ರ ಸಹಸ್ರ ಯಜ್ಞಂಗಳ ಆಚರಣೆಂದ ಉಂಟಪ್ಪ ಪರಿಣಾಮ. ಹೀಂಗೆ ಪ್ರಜ್ಞೆಯು ಶುದ್ಧವಾಗಿಪ್ಪದರಿಂದ ಮನುಷ್ಯ° ಭಗವಂತನತ್ರೆ ತನ್ನ ನಿತ್ಯ ಸಂಬಂಧವ ಕುರಿತು ಸಂಪೂರ್ಣ ಚಿಂತುಸಿಗೊಂಡಿರುತ್ತ°, ಭರವಸೆಯನ್ನೂ ಹೊಂದಿರುತ್ತ°. ಭಗವಂತನ ಕೃಪೆಂದ ತನ್ನ ಕರ್ತವ್ಯವು ತಾನಾಗಿಯೇ ಗೋಚರವಾವ್ತು. ಆದ್ದರಿಂದ ಅವಂಗೆ ವೇದಂಗಳ ಅಪ್ಪಣೆಗಳ ಪರಿಪಾಲುಸುವ ಕರ್ತವ್ಯ ಇರುತ್ತಿಲ್ಲೆ. ಹೀಂಗೆ ಕೃಷ್ಣಪ್ರಜ್ಞೆ ಇಪ್ಪ ಮನುಷ್ಯಂಗೆ ಐಹಿಕ ಕರ್ಮಲ್ಲಿ ಆಸಕ್ತಿ ಇರುತ್ತಿಲ್ಲೆ. ಅವಂಗೆ ಐಹಿಕ ಯಾವುದೇ ಇಂದ್ರಿಯ ಕಾಮನೆಗೊ ಆಕರ್ಷಣೆಗೊ ಇರುತ್ತಿಲ್ಲೆ.

ಪರಮಾತ್ಮನ ಕರುಣೆಂದ ಪರಮಾತ್ಮನ ಕಂಡು ಸುಖವುಂಡವಂಗೆ ಪರಮಾತ್ಮನ ಕರುಣೆಂದ ಕೃತಕೃತ್ಯನಾಗಿ, ಬೇರೇವುದೂ ಬೇಡ ಎನುಸಿ ಪರಮಾತ್ಮನಲ್ಲೇ ಆನಂದವಾಗಿಪ್ಪ ಸಮಾಧಿಮಗ್ನನಾಗಿಪ್ಪದು ಹೊರತು ಬೇರೇನೂ ಬೇಕಾದ್ದಿಲ್ಲೆ.

ಭಗವಂತನ ಅಂತರಂಗಲ್ಲಿ ಕಂಡು ಪಡುವ ಆನಂದ – ‘ಆತ್ಮರತಿ’. ಈ ಸ್ಥಿತಿಲಿ ಸಮಾಧಿಸ್ಥಿತಿಯ ತಲುಪಲಕ್ಕು. ನಿಜವಾದ ಸಮಾಧಿಸ್ಥಿತಿಲಿ ನಮ್ಮ ಇಂದ್ರಿಯಂಗೊ ಮತ್ತು ಮನಸ್ಸು ಕೆಲಸ ಮಾಡುತ್ತಿಲ್ಲೆ. ಜ್ಞಾನಸ್ವರೂಪವಾದ ಜೀವಸ್ವರೂಪ ನೇರವಾಗಿ ಭಗವಂತನ ಕಾಂಬ ಸ್ಥಿತಿ – ‘ಸಮಾಧಿಸ್ಥಿತಿ’. ಈ ಸ್ಥಿತಿಲಿ ಭಗವಂತನತ್ರೆ ನೇರ ಸಂಪರ್ಕ ಸಾಧ್ಯ. ಇಂತಹ ಸ್ಥಿತಿಲಿಪ್ಪವಂಗೆ ಯಾವುದೇ ಕರ್ಮದ ಲೇಪವಿಲ್ಲೆ. ದೇವರ ಕಂಡ ಮತ್ತೆ (ಆತ್ಮಸಾಕ್ಷಾತ್ಕಾರ ಪಡದ ಮತ್ತೆ) ಅವಂಗೆ ಈ ಲೌಕಿಕ ಪ್ರಪಂಚ ಎಂತದೂ ಬೇಡ ಎನುಸುತ್ತು. ಕೇವಲ ಭಗವಂತನ ಸಾಕ್ಷಾತ್ಕಾರದ ಆನಂದ ಸಾಗರಲ್ಲಿ ಆತ° ಮುಳುಗಿರುತ್ತ°. ಈ ಸ್ಥಿತಿಲಿ ಅವಂಗೆ ಯಾವುದೇ ಕರ್ತವ್ಯ ಕರ್ಮಂಗೊ ಇಲ್ಲೆ. ಎಲ್ಲ ವಿಧಿ ನಿಷೇಧಂಗಳಿಂದ ಅತೀತನಾಗಿರುತ್ತ°.

ಶ್ಲೋಕ

ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ ।
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ ॥೧೮॥

ಪದವಿಭಾಗ

ನ ಏವ ತಸ್ಯ ಕೃತೇನ ಅರ್ಥಃ ನ ಅಕೃತೇನ ಇಹ ಕಶ್ಚನ । ನ ಚ ಅಸ್ಯ ಸರ್ವ-ಭೂತೇಷು ಕಸ್ಚಿತ್ ಅರ್ಥ-ವ್ಯಪಾಶ್ರಯಃ ॥

ಅನ್ವಯ

ಇಹ ಕೃತೇನ ತಸ್ಯ ಅರ್ಥಃ ನ ಏವ, ಅಕೃತೇನ ಅಪಿ ಕಶ್ಚನ ಅಸ್ಯ ಅರ್ಥಃ ತಥಾ ಸರ್ವ-ಭೂತೇಷು ಚ ಅಸ್ಯ ಕಶ್ಚಿತ್ ಅರ್ಥ-ವ್ಯಪಾಶ್ರಯಃ ನ ॥

ಪ್ರತಿಪದಾರ್ಥ

ಇಹ – ಈ ಪ್ರಪಂಚಲ್ಲಿ,  ಕೃತೇನ –  ಕರ್ತವ್ಯ ನಿರ್ವಹಣೆಂದ, ತಸ್ಯ – ಅವನ, ಅರ್ಥಃ – ಉದ್ದೇಶವು, ನ – ಇಲ್ಲೆ, ಏವ – ಖಂಡಿತವಾಗಿಯೂ, ಅಕೃತೇನ – ಕರ್ತವ್ಯಂಗಳ ನಿರ್ವಹಿಸದ್ದೆ ಇಪ್ಪದರಿಂದ, ಅಪಿ – ಕೂಡ, ಕಶ್ಚನ – ಏವುದಾರು, ಅಸ್ಯ – ಇವನ, ಅರ್ಥ – ಉದ್ದೇಶವು , ತಥಾ – ಹಾಂಗೇ, ಸರ್ವ-ಭೂತೇಷು – ಎಲ್ಲ ಜೀವಿಗಳಲ್ಲಿಯೂ, ಚ – ಮತ್ತು, ಅಸ್ಯ – ಇವನ, ಕಶ್ಚಿತ್ – ಏವುದೇ, ಅರ್ಥ-ವ್ಯಪಾಶ್ರಯಃ – ಉದ್ದೇಶ ಆಶ್ರಯವ ಪಡೆದ, ನ – ಎಂದಿಂಗೂ ಇಲ್ಲೆ.

ಅನ್ವಯಾರ್ಥ

ಆತ್ಮಸಾಕ್ಷಾತ್ಕಾರವ ಸಾಧಿಸಿದವಂಗೆ ನಿಯಮಿತ ಕರ್ಮಂಗಳ ಅನುಷ್ಠಾನಲ್ಲಿ ಯಾವ ಉದ್ದೇಶವೂ ಇರುತ್ತಿಲ್ಲೆ. ಅಂತಹ ಕರ್ಮವ ಮಾಡದೇ ಇಪ್ಪಲೆ ಅವಂಗೆ ಯಾವುದೇ ಕಾರಣವೂ ಇರುತ್ತಿಲ್ಲೆ. ಆತ° ಬೇರೊಬ್ಬ ಜೀವಿಯ ಅವಲಂಬಿಸಲೂ ಕಾರಣವೂ /ಉದ್ದೇಶವೂ ಇರುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಆತ್ಮ ಸಾಕ್ಷಾತ್ಕಾರವಾದ ಮನುಷ್ಯ° ಕೃಷ್ಣಪ್ರಜ್ಞೆಯ ಚಟುವಟಿಕೆಂಗಳ ಬಿಟ್ಟು ಬೇರೆ ಯಾವ ನಿಯಮಿತ ಕರ್ತವ್ಯವ ಮಾಡುವ ಅಗತ್ಯವೂ ಇಲ್ಲೆ. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ಬೇರೆ ಯಾವುದೇ ವ್ಯಕ್ತಿಯ, ಅಥವಾ ಶಕ್ತಿಯ, ವಿಷಯದ ಆಶ್ರಯ ಪಡೆತ್ತನಿಲ್ಲೆ. ಕೃಷ್ನಪ್ರಜ್ಞೆಲಿ ಅವ° ಎಂತ ಮಾಡುತ್ತನೋ ಅಷ್ಟರಲ್ಲೇ ಅವನ ಕರ್ತವ್ಯ ಪಾಲನೆಯೂ ನಡೆತ್ತು.

ಆತ್ಮಸಾಕ್ಷಾತ್ಕಾರ ಹೊಂದಿದವು ಎಂತಾರು ಮಾಡುತ್ತದರಿಂದ ಹೆಚ್ಚಿನ ಸಾಧನೆಯಾಗಲೀ, ಮಾಡದ್ದೇ ಇಪ್ಪದರಿಂದ ಯಾವುದೇ ಬಾಧಕವಾಗಲೀ ಇಲ್ಲೆ. ಆರಿಂದಲೂ ಅವಂಗೆ ಫಲದ ಹಂಗಿಲ್ಲೆ. ಸಮಾಧಿ ಸ್ಥಿತಿಲಿ ಇಪ್ಪ ಅವಂಗೆ ಹಶು ಆಸರು ಇಲ್ಲೆ. ಅವಂಗೆ ಹೊರ ಪ್ರಪಂಚದ ಅರಿವು ಹೇಳ್ವದೇ ಇಲ್ಲೆ. ಇಂತಹ ಸ್ಥಿತಿಲಿ ಇನ್ಯಾವುದೋ ಸಾಧನೆ ಮಾಡಿ ಉದ್ಧಾರ ಅಪ್ಪದಾಗಲಿ, ಕರ್ತವ್ಯ ಕರ್ಮ ಮಾಡದ್ದೆ ಇಪ್ಪದರಿಂದ ದೋಷಂಗಳಾಗಲಿ ಇಲ್ಲೆ. ಪಂಚಭೂತಂಗಳ, ಪಂಚಕೋಶಂಗಳ ಆಸರೆ ಕೂಡ ಅವಮ್ಗೆ ಬೇಕಾಗಿಲ್ಲೆ. ಸಮಸ್ತ ಜನಾಂಗ, ಪರಿವಾರ ಹೇಳುವ ಮಮಕಾರವೂ ಅವಂಗೆ ಇಲ್ಲೆ. ಹೆರ ಪ್ರಪಂಚದ ಅರಿವೂ ಇಲ್ಲೆ ಹಂಗೂ ಇಲ್ಲೆ. ಈ ರೀತಿ ಸಮಾಧಿ ಸ್ಥಿತಿಲಿ ದೇವರ ಕಾಂಬವಂಗೆ ಕರ್ತವ್ಯ ಕರ್ಮಂದ ಆಚಿಗೆ ಇರುತ್ತ°.

ಶ್ಲೋಕ

ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ ।
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ॥೧೯॥

ಪದವಿಭಾಗ

ತಸ್ಮಾತ್ ಅಸಕ್ತಃ ಸತತಮ್ ಕಾರ್ಯಮ್ ಕರ್ಮ ಸಮಾಚರ । ಅಸಕ್ತಃ ಹಿ ಆಚರನ್ ಕರ್ಮ ಪರಮ್  ಆಪ್ನೋತಿ ಪೂರುಷಃ ॥

ಅನ್ವಯ

ತಸ್ಮಾತ್ ತ್ವಮ್ ಅಸಕ್ತಃ ಸನ್ ಸತತಂ ಕಾರ್ಯಂ ಕರ್ಮ ಸಮಾಚರ ।  ಪೂರುಷಃ ಅಸಕ್ತಃ ಸನ್ ಕರ್ಮ ಆಚರನ್, ಪರಮ್ ಆಪ್ನೋತಿ ಹಿ ॥

ಪ್ರತಿಪದಾರ್ಥ

ತಸ್ಮಾತ್ – ಹಾಂಗಾಗಿ, ತ್ವಮ್ – ನೀನು  ಅಸಕ್ತಃ ಸನ್ – ಅನಾಸಕ್ತನಾಗಿ, ಸತತಮ್ – ನಿರಂತರವಾಗಿ, ಕಾರ್ಯಮ್ – ಕರ್ತವ್ಯ ಹೇದು, ಕರ್ಮ- ಕರ್ಮವ, ಸಮಾಚರ – ಆಚರುಸು, ಪೂರುಷಃ – ಮನುಷ್ಯ°,  ಅಸಕ್ತಃ  ಸನ್ – ಅನಾಸಕ್ತನಾಗಿ,  ಕರ್ಮ – ಕರ್ಮವ, ಆಚರನ್ – ಆಚರಿಸಿಗೊಂಡು,  ಪರಮ್ – ಪರಮ ಉನ್ನತವ, ಆಪ್ನೋತಿ – ಹೊಂದುತ್ತ°,  ಹಿ – ಖಂಡಿತವಾಗಿಯೂ.

ಅನ್ವಯಾರ್ಥ

ಹಾಂಗಾಗಿ ನೀನು ಕರ್ಮಫಲಲ್ಲಿ ಆಸಕ್ತಿ ಇಲ್ಲದ್ದೆ, ಕರ್ತವ್ಯ ಹೇಳಿಗೊಂಡು ಕರ್ಮವ ಮಾಡೆಕು. ಅನಾಸಕ್ತ ಕರ್ಮಂದ ಮನುಷ್ಯ° ಪರಮ ಉನ್ನತಿಯ (ಭಗವಂತನ) ಹೊಂದುತ್ತ°.

ತಾತ್ಪರ್ಯ / ವಿವರಣೆ

ಭಕ್ತಂಗೊಕ್ಕೆ ದೇವೋತ್ತಮ ಪರಮ ಪುರುಷ° ಪರಾತ್ಪರ, ಮಾಯಾವಾದಿಗೊಕ್ಕೆ ಮುಕ್ತಿ. ಆದ್ದರಿಂದ ಯೋಗ್ಯ ಮಾರ್ಗದರ್ಶನ ಪಡದು ಭಗವಂತಂಗಾಗಿ ಅಥವಾ ಕೃಷ್ಣಪ್ರಜ್ಞೆಲಿ ಕೆಲಸ ಮಾಡಿಗೊಂಡು ಕರ್ಮಫಲದ ಬಗ್ಗೆ ನಿರ್ಲಿಪ್ತನಾಗಿಪ್ಪವ ನಿಶ್ಚಯವಾಗಿಯೂ ಬದುಕಿನ ಪರಮ ಗುರಿಯತ್ತ ಮನುಷ್ಯ ಮುನ್ನಡೆತ್ತ°. ಅರ್ಜುನ ಯುದ್ಧಮಾಡೇಕು ಹೇಳಿ ಕೃಷ್ಣ ಅಪೇಕ್ಷಿಸುವದರಿಂದ ಕೃಷ್ನಂಗೆ ಬೇಕಾಗಿ ಅರ್ಜುನ ಯುದ್ಧಮಾಡೇಕು ಹೇಳಿ ಅಜುನಂಗೆ ಶ್ರೀಕೃಷ್ಣನ ಉಪದೇಶ. ಒಳ್ಳೆಯ ಮನುಷ್ಯನಾಗಿಪ್ಪದು ಅಥವಾ ಅಹಿಂಸಾನಿಷ್ಠನಾಗಿಪ್ಪದು ವೈಯಕ್ತಿಕ ಆಸಕ್ತಿ. ಆದರೆ, ಭಗವಂತನ ಪರವಾಗಿ ಕಾರ್ಯತತ್ಪರನಪ್ಪದು ನಿಷ್ಕಾಮಕರ್ಮ. ಇದು ಅತ್ಯಂತ ಶ್ರೇಷ್ಠರೀತಿಯ ಪರಿಪೂರ್ಣ ಕರ್ಮ ಹೇಳಿ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣ° ಅರ್ಜುನಂಗೆ ಹೇಳುವದು.

ಆದ್ದರಿಂದ ಫಲದ ನಂಟು ಬಿಟ್ಟು ಕರ್ತವ್ಯ ಕರ್ಮವ ಮಾಡು. ಫಲದ ನಂಟು ಬಿಟ್ಟು ಕೃಷ್ಣಪ್ರಜ್ಞೆಂದ ಕರ್ತವ್ಯಲ್ಲಿ ನಿಷ್ಥನಪ್ಪದರಿಂದ ಸಾಧಕ ಭಗವಂತನ ಸೇರ್ಲೆ ಸಾಧ್ಯ.  ಈ ಎಲ್ಲ ಕಾರಣಂದ ನಾವು ನಮ್ಮ ಕರ್ತವ್ಯ ಕರ್ಮವ ಮಾಡೆಕು. “ಎಲ್ಲವನ್ನೂ ಮಾಡು ಆದರೆ ಯಾವುದನ್ನೂ ಅಂಟುಸಿಗೊಳ್ಳದ್ದೇ, ಎಂತ ಮಾಡೆಕೋ ಅದರ ಫಲದ ಬಗ್ಗೆ (ಅಧಿಕಾರದ ಬಗ್ಗೆ) ಯೋಚುಸಕ್ಕೆ ಕರ್ತವ್ಯವ ಮಾಡೆಕು. ಹೀಂಗೆ ಕರ್ಮವ ಮಾಡಿರೆ ಅದು ನಮ್ಮ ಭಗವಂತನೆಡೆಂಗೆ ಕೊಂಡೋಯ್ಯುತ್ತು. ಹೊರತು ಕರ್ಮ ತ್ಯಾಗಂದ ಅಲ್ಲ.

ಇಲ್ಲಿ ‘ಪೂರುಷಃ’ ಹೇಳಿ ಹೇಳಿದ್ದು. ಪುರಲ್ಲಿ (ಪೂರ್ಣವಾದ ಶರೀರಲ್ಲಿ) ಇಪ್ಪವ° – ಪುರುಷ°. ಪುರವ ಪೂರ್ಣಪ್ರಮಾಣಲ್ಲಿ ಉಪಯೋಗುಸುವವ° – ಸಾಧಕಪೂರುಷಃ, ಸಾಧನಾ ಶರೀರಲ್ಲಿದ್ದು ಸಾಧನೆಲಿ ತೊಡಗಿದವ -‘ಜೀವಪೂರುಷಃ’.

ಶ್ಲೋಕ

ಕರ್ಮಣೈವ ಹಿ ಸಂಸಿದ್ಧಿಂ ಆಸ್ಥಿತಾಜನಕಾದಯಃ ।
ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ ॥೨೦॥

ಪದವಿಭಾಗ

ಕರ್ಮಣಾ ಏವ ಹಿ ಸಂಸಿದ್ಧಿಮ್ ಆಸ್ಥಿತಾಃ ಜನಕ-ಆದಯಃ । ಲೋಕ-ಸಂಗ್ರಹಮ್ ಏವ ಅಪಿ ಸಂಪಶ್ಯನ್ ಕರ್ತುಮ್ ಅರ್ಹಸಿ ॥

ಅನ್ವಯ

ಹಿ ಜನಕ-ಆದಯಃ ಕರ್ಮಣಾ ಏವ ಸಂಸಿದ್ಧಿಮ್ ಆಸ್ಥಿತಾಃ । ತ್ವಮ್ ಅಪಿ ಲೋಕ-ಸಂಗ್ರಹಮ್ ಏವ ಸಂಪಶ್ಯನ್ ಕರ್ತುಮ್ ಅರ್ಹಸಿ ॥

ಪ್ರತಿಪದಾರ್ಥ

ಹಿ – ನಿಶ್ಚಯವಾಗಿಯೂ, ಜನಕ-ಆದಯಃ – ಜನಕ ಮತ್ತು ಇತರ ರಾಜರುಗೊ, ಕರ್ಮಣಾ ಏವ  – ಕರ್ಮಂದಲೇ,  ಸಂಸಿದ್ಧಿಮ್ – ಪರಿಪೂರ್ಣತೆಯ, ಆಸ್ಥಿತಾಃ – ಪಡೆದವು, ತ್ವಮ್ – ನೀನು, ಅಪಿ – ಕೂಡ, ಲೋಕ-ಸಂಗ್ರಹಮ್ – ಜನಸಾಮಾನ್ಯರ,    ಏವ  – ಕೂಡ, ಸಂಪಶ್ಯನ್ – ಪರಿಭಾವಿಸಿ, ಕರ್ತುಮ್ – ಮಾಡ್ಳೆ, ಅರ್ಹಸಿ – ಅರ್ಹನಾಗಿದ್ದೆ.

ಅನ್ವಯಾರ್ಥ

ಜನಕನಂತಹ ಮತ್ತು ಇತರ ರಾಜರುಗೊ ನಿಯಮಿತ ಕರ್ಮಂಗಳ ಮಾಡುವದರಿಂದಲೇ ಪರಿಪೂರ್ಣತೆಯ ಪಡದವು. ಆದ್ದರಿಂದ ಜನಸಾಮಾನ್ಯರಿಂಗೆ ತಿಳಿಯಪಡುಸಲೆಬೇಕಾಗಿ ನೀನು ನಿನ್ನ ಕೆಲಸವ ಮಾಡ್ಳೆ ಅರ್ಹನಾಗಿದ್ದೆ (ಮಾಡೆಕು).

ತಾತ್ಪರ್ಯ / ವಿವರಣೆ

ಜನಕನಂತಹ ರಾಜರುಗೊ ಆತ್ಮಸಾಕ್ಷಾತ್ಕಾರವ ಪಡದವು. ಆದ್ದರಿಂದ ವೇದಂಗಳಲ್ಲಿ ಹೇಳಿದ ಕರ್ತವ್ಯಂಗಳ ಅವು ಮಾಡೆಕ್ಕಾಗಿದ್ದತ್ತಿಲ್ಲೆ. ಆದರೂ ಜನಸಾಮಾನ್ಯರುಗೊಕ್ಕೆ ಉನ್ನತ ಸ್ಥಾನ ಪಡವಲೆ (ಉನ್ನತಿ ಹೊಂದಲೆ) ಅವ್ವು ಎಲ್ಲ ನಿಯಮಿತ ಕರ್ತವ್ಯಂಗಳ ಮಾಡಿದವು. ಜನಕ ಸೀತೆಯ ಅಪ್ಪ°, ಶ್ರೀರಾಮನ ಮಾವ°. ಭಗವಂತನ ಮಹಾಭಕ್ತನಾದ್ದರಿಂದ ಅವ° ಆಧ್ಯಾತ್ಮಿಕ ನೆಲೆಲಿ ಇತ್ತಿದ್ದ°. ಆದರೆ ಮಿಥಿಲೆಯ ರಾಜನಾದ್ದರಿಂದ ಅವನ ಪ್ರಜೆಗೊಕ್ಕೆ ನಿಯಮಿತ ಕರ್ತವ್ಯಂಗಳ ಹೇಂಗೆ ಮಾಡೇಕ್ಕಾದ್ದು ಹೇಳಿ ತಿಳಿಯಪಡುಸಲೆ ಕರ್ತವ್ಯಲ್ಲಿ ತೊಡಗಿತ್ತಿದ್ದ°. ಶ್ರೀಕೃಷ್ಣನೂ, ಭಗವಂತನ ನಿತ್ಯ ಸ್ನೇಹಿತನಾದ ಅರ್ಜುನನೂ ಕ್ರುರುಕ್ಷೇತ್ರಲ್ಲಿ ಯುದ್ಧಮಾಡೇಕಾದ ಅಗತ್ಯ ಇತ್ತಿಲ್ಲೆ. ಆದರೆ, ಒಳ್ಳೆಯ ವಾದಂಗೊ ನಿಷ್ಪಲ ಆದಪ್ಪಗ ಹಿಂಸೆಯ ಅಗತ್ಯ ಎಂಬುದರ ಜನಸಾಮಾನ್ಯರಿಂಗೆ ಹೇಳಿಕೊಡ್ಳೆ ಅವು ಯುದ್ಧಮಾಡೆಕು ಹೇಳಿ ಭಗವಂತನ ಸಂದೇಶ. ಕುರುಕ್ಷೇತ್ರ ಯುದ್ಧಕ್ಕೆ ಮದಲು ಯುದ್ಧವ ತಪ್ಪುಸಲೆ ಎಲ್ಲ ರೀತಿಯ ಪ್ರಯತ್ನಂಗಳ ಮಾಡಿತ್ತು. ದೇವೋತ್ತಮ ಪರಮ ಪುರುಷನೇ ಪ್ರಯತ್ನಿಸಿದ. ಆದರೆ ಕೌರವನ ಕಡೆ ಯುದ್ಧವೇ ದೃಢನಿಶ್ಚಯ ಮಾಡಿತ್ತು. ಅದೂ ಭಗವತ್ ಸಂಕಲ್ಪವೇ. ಈಗ ನ್ಯಾಯವಾದ ಗುರಿಗೆ ಬೇಕಾಗಿ ಯುದ್ಧ ಅನಿವಾರ್ಯ ಆಗಿದ್ದು. ಕೃಷ್ಣಪ್ರಜ್ಞೆಲಿ ನೆಲೆಯಾಗಿಪ್ಪವಂಗೆ ಜಗತ್ತಿಲ್ಲಿ ಯಾವ ಆಸಕ್ತಿಯೂ ಇಲ್ಲದ್ದಿಕ್ಕು. ಆದರೂ ಆತ° ಹೇಂಗೆ ಬದುಕೆಕು ಮತ್ತು ಹೇಂಗೆ ಕೆಲಸ ಮಾಡೆಕು ಹೇಳ್ವದರ ಜನಂಗೊಕ್ಕೆ ತೋರಿಸಿಕೊಡ್ಳೆ ಈ ಕೆಲಸ ಮಾಡುಸುತ್ತ°. ಕೃಷ್ಣಪ್ರಜ್ಞೆಲಿ ಅನುಭವಿಗಳಾದವು ಇತರರಿಂಗೆ ತಮ್ಮ ಅನುಸರುಸುವಂತೆ ಕ್ರಿಯಾನಿರತರಾಯೆಕು ಹೇಳ್ವದು ಭಗವಂತನ ನುಡಿ. ಅದಕ್ಕಾಗಿಯೇ ಕೃಷ್ಣ ಹೇಳುತ್ತ° – “ಜನಕ ಮುಂತಾದ ರಾಜರ್ಷಿಗೊ ಕರ್ಮಯೋಗಂದಲೇ ಜ್ಞಾನ ಪಡದು, ಕರ್ಮ ಮಾಡಿಗೊಂಡೇ ಉನ್ನತಿಗೆ ಏರಿದವು ಹೊರತು ಕರ್ಮ ತ್ಯಾಗಂದ ಅಲ್ಲ. ಈ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾದ ನೀನು ಸಮಾಜಕ್ಕೋಸ್ಕರ ಯುದ್ಧಮಾಡು”.

ಹಿಂದಾಣ ಕಾಲಲ್ಲಿ ಅನೇಕ ರಾಜರ್ಷಿಗೊ ಈ ಮಾರ್ಗಲ್ಲಿ ನಡದು ಮೋಕ್ಷ ಪಡದವು. ಅವು ಆರೂ ಎಲ್ಲವನ್ನೂ ತ್ಯಜಿಸಿ ಕಾಡಿಂಗೆ ಹೋಯ್ದವಿಲ್ಲೆ. ಇದಕ್ಕೆ ಉತ್ತಮ ಉದಾಹರಣೆ ಜನಕ ಮಹಾರಾಜ. ಈತ° ಎಲ್ಲ ರಾಜ್ಯ ವೈಭೋಗಂಗಳೊಂದಿಗೆ ರಾಜ್ಯಭಾರ ಮಾಡಿದ ವ್ಯಕ್ತಿ. ಆದರೆ ಅವನಷ್ಟು ದೊಡ್ಡ ಜ್ಞಾನಿ ಆ ಕಾಲಲ್ಲಿ ಆರೂ ಇತ್ತಿದ್ದವಿಲ್ಲೆ. ಅಂತಹ ಮಹಾ ರಾಜರ್ಷಿ ಆತ°. ಆ ಕಾಲಲ್ಲಿ ಶುಖಾಚಾರ್ಯ ವೈರಾಗ್ಯದ ಬಗ್ಗೆ ಸರಿಯಾಗಿ (ತಿಳುವಳಿಕೆ)ಅರಡಿಯದ್ದೆ ಅದರ ಬಗ್ಗೆ ತಿಳಿವಲೆ ಜನಕನಲ್ಲಿಗೆ ಬಯಿಂದ°. ಇದು ನಿಜವಾದ ಸಾಧಕನ ಬದುಕು. ಜನಕ° ಎಲ್ಲಾ ಅಧಿಕಾರದ ಭೋಗದ ನಡುವೆ ಇದ್ದು, ವಿರಕ್ತನಾಗಿ ಬದುಕಿದವ°. ಆದ್ದರಿಂದಲೆ ಅರ್ಜುನಂಗೆ ನೆಂಪುಮಾಡುಸಲೆ ಅವನ ಪ್ರಸ್ತಾಪುಸುತ್ತ° ಇಲ್ಲಿ ಶ್ರೀಕೃಷ್ಣ°.

ಮುಂದೆ ಎಂತ ಆತು…. ಬಪ್ಪ ವಾರ ನೋಡುವೋ°.

….. ಮುಂದುವರಿತ್ತು.

ಕೆಮಿಲಿ ಕೇಳ್ಳೆ –
BHAGAVADGEETHA – CHAPTER 03 – SHLOKAS 11 -20 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

9 thoughts on “ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 11-20

  1. ಈ ವಾರದ್ದು ದಿವ್ಯ ಸಂದೇಶದೊಟ್ಟಿಂಗೆ ಮೂಡಿಬಂತು.
    ಧನ್ಯವಾದ .

  2. ಭಾರತ ದೇಶದ ದೊಡ್ಡ ದುರಂತ ಹೇಳಿದರೆ — “ಶ್ರೀಮದ್ಭಗದ್ಗೀತೆ”ಯಂತಹಾ ಅತ್ಯಂತ ಶ್ರೇಷ್ಠ ಗ್ರಂಥವ — ಬರೇ ಪೂಜಾ ಗೃಹಕ್ಕೆ “ಸೀಮಿತವಾಗಿ ” ಮಡಿಕೊಂಡಿದವು | ಅದರಲ್ಲಿ ಇಪ್ಪಷ್ಟು ” self management ” ವಿಷಯ ಪ್ರಾಯಃ ಬೇರೆಲ್ಲಿಯೂ ಕಾಂಬಲೆ ಕಷ್ಟ | ” ಪರಸ್ಪರಂ ಭಾವಯಂತಃ ” ಇದೊಂದು ಅತ್ಯಂತ ಶ್ರೇಷ್ಠವಾದ ಮಂತ್ರ | ಈ ಗೀತೆಲಿ — ೭೦೦ ಶ್ಲೋಕಂಗಳಲ್ಲಿ ಒಂದರಿಂದ ಒಂದಕ್ಕೆ ಎಲ್ಲೆಡೆಯೂ ಸಂಪರ್ಕ ಸಿಕ್ಕುತ್ತು | — ಸರ್ವಸ್ಯ ಚಾಹಂ ಹೃದಿ ಸಂನಿವಿಷ್ಟೋ ————– (ಭ.ಗೀ. ೧೫-೧೫ ) ಅರ್ಥ – ಸಮಸ್ತ ರ ಹೃದಯಲ್ಲಿಯೂ ” ಆನು ” ಸ್ಥಿತನಾಗಿ ಇದ್ದೆ — ಹೇಳಿ ಪರಮಾತ್ಮ ಹೇಳುತ್ತ — ಪುನಃ ಅವ ಇಪ್ಪಲ್ಲಿ ಸಮಸ್ತ ದೇವತೆಗಳು ಇರುತ್ತವು ಹೇಳ್ತದು ಶಾಸ್ತ್ರೋಕ್ತ | ಅಂಬಗ ದೇವತೆಗಳ ಇಲ್ಲಿಯೂ ಕಾಂಬಲೆ ಎಡಿಗು ಹೇಳಿ ಅರ್ಥ | ಆದರೆ ಸರ್ವರಲ್ಲಿಯೂ ಅವನ ಕಂಡುಗೊಂಬ ವಿಷಯ ನವಗೆ ಬಿಟ್ಟದು | ಈ ” ಪರಸ್ಪರಂ ಭಾವಯಂತಃ ” ಮಂತ್ರವ ಮೊದಲಾಗಿ ನಮ್ಮ ಮನೆಯೊಳಗೇ ಪ್ರಯೋಗಿಸುಲೆ ಎಡಿಗು — ಹೇಂಗೆ ಹೇಳಿದರೆ — ನಮ್ಮ ಗ್ರಹಿಕೆಲಿ ಎನ್ನ ಮನೆಯೋರ ರೂಪಲ್ಲಿ (ಹೆಂಡತಿ, ಗಂಡ, ಮಕ್ಕೋ, ಅಕ್ಕ, ತಂಗೆ ರೂಪಲ್ಲಿ ) ಸ್ವಯಂ ಪರಮಾತ್ಮನೇ ಬಂದು ಎನಗೆ ಸಂತೋಷ ಕೊಡುತ್ತ — ಅವೇ ನಮ್ಮ್ ಕಣ್ಣಿಂಗೆ ಕಾಂಬ ದೇವತಗೋ ಹೇಳಿ ಭಾವನೆ ಮಾಡಿಗೊಂದರೆ — ಮನೆಯೇ ಸ್ವರ್ಗ ಅಕ್ಕು — ಅಲ್ಲಿಗೆ ” ಶೇಯಃ ಪರಮವಾಪ್ಸ್ಯಥ ” ಇದು ಮನೆಯೊಳಗೇ ಪ್ರಾದುರ್ಭವಿಸುತ್ತು ||

    1. ಧನ್ಯವಾದ ಮಾವ°. ನಿಂಗೊ ನೀಡುವ ಪೂರಕ ಮಾಹಿತಿ ಮತ್ತು ಇನ್ನಷ್ಟು ಮಾಹಿತಿಗೊ ಒಳ್ಳೆ ಉತ್ತೇಜನ ಕೊಡುತ್ತು.

  3. ಪರಸ್ಪರಂ ಭಾವಯಂತಃ-ದೇವತೆಗಳೂ ಮನುಷ್ಯರೂ ಪರಸ್ಪರ ಹೊಂದಿಕೊಂಡು ನಡೆಯೆಕು.ಎಷ್ಟು ಲಾಯಕ ಮಾತು ಅಲ್ಲದೊ?ಚೆನ್ನೈ ಭಾವ ಬರೆದ್ದು ತುಂಬಾ ಚೆಂದ ಆಯಿದು.ಒಂದು ಸಣ್ಣ ಸೂಚನೆ-ಹನ್ನೆರಡನೇ ಶ್ಲೋಕಲ್ಲಿ ಒ ಬದಲು ವೋ ಹೇಳಿ ಹಾಕುವಿರೊ? ವಃ ಹೇಳುವ ಶಬ್ದ ವೋ ಹೇಳಿಯೂ ನಃ ಹೇಳುವ ಶಬ್ದ ನೋ ಆಗಿಯೂ ರೂಪಾಂತರ ಹೊಂದುತ್ತು ಅಲ್ಲದೊ?

    1. ಧನ್ಯವಾದ ಗೋಪಾಲಣ್ಣ . ಟೈಪು ಮಾಡುವಾಗ ತಪ್ಪು ಆದ್ದು ಅದು. ಗೋಷ್ಠಿ ಆಗದ್ದೆ ಹೋತು. ಈಗ ಸರಿಮಾಡಿತ್ತು

  4. ಇಲ್ಲಿ ಈ ಅಧ್ಯಾಯಲ್ಲಿ ಕೆಲವು ಜಾಗೆಲಿ ಲೌಕಿಕ ಅರ್ಥ ಬೇಕಾವುತ್ತು | ದೇವಾನ್ ಭಾವಯತಾನೇನ —————- ಇಲ್ಲಿ ವಾಕ್ಯಾರ್ಥ — ನಿಂಗೋ ದೇವತೆಗಳ (ಯಜ್ಞ ದ ಮೂಲಕ) ಸಂತೋಷಪಡಿಸಿ — ಅವಾಗ ಅವು ನಿಂಗಳ (ಮಳೆ ಬೆಳೆ ಇತ್ಯಾದಿಗಳ ಮೂಲಕ) ಸಂತೋಷ ಪಡಿಸುತ್ತವು ಹೇಳಿ || ಇಲ್ಲಿ ಲೌಕಿಕ ಅರ್ಥ ಮಾಡೆಕ್ಕಾದದು — ಮನುಷ್ಯನ ಪ್ರತಿಯೊಂದು ಇಂದ್ರಿಯಕ್ಕು ಒಂದೊಂದು “ಅಭಿಮಾನಿ ದೇವತೆ ಇದ್ದು ” — ಹೇಳಿದರೆ — ಇಲ್ಲಿ ಇಪ್ಪ ಪ್ರತಿಯೊಂದು ಜೀವಿಗಳ ಒಳಗೂ ದೇವತೆ ಗಳು “ಅಂತರ್ಯಾಮಿ” ಗಳಾಗಿ ಕೆಲಸ ಮಾಡುತ್ತವು | ” ಪ್ರರಸ್ಪರಂ ಭಾವಯಂತಃ ” — ಹೇಳಿದರೆ ಒಬ್ಬನ ಇನ್ನೊಬ್ಬ ಸಂತೋಷ ಪಡಿಸಿ — ಅವನಿಂದ ಸಂತೋಷ ಪಡವದು (Mutual co – opeartion ) — ಇದರಂದಾಗಿ ಎಲ್ಲರು ಪರಮ ಶ್ರೇಯಸ್ಸನ್ನು ಹೊಂದುತ್ತವು – “ಶ್ರೇಯಃ ಪರಮವಾಪ್ಸ್ಯಥ ” || ಗೀತೆ ಲಿ ಹೇಳಿದ ಈ “ಪರಸ್ಪರಂ ಭಾವಯಂತಃ” ಇಲ್ಲದ್ದದರಂದಾಗಿ — ಈ ನಮ್ಮ ದೇಶ ಅವನತಿಯ ಕಾಣುತ್ತಾ ಇದ್ದು ||

  5. ಚೈನ್ನೈಭಾವಂಗೆ ಅನಂತ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×