Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 26 – 40

ಬರದೋರು :   ಚೆನ್ನೈ ಬಾವ°    on   16/05/2013    0 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರ ಜ್ಞಾನ ಮತ್ತೆ ಕರ್ಮಲ್ಲಿ ಸತ್ವ-ರಜ-ತಮ ಹೇಳಿ ಮೂರು ವಿಧ ಇದ್ದು ಹೇಳಿ ಭಗವಂತ° ವಿವರಿಸಿದ್ದರ ನಾವು ನೋಡಿದ್ದು.  ‘ಕರ್ತಾ’ನಲ್ಲಿಯೂ ಮೂರು ವಿಧ ಹೇಂಗೆ ಹೇಳ್ವದು ಇಲ್ಲಿಂದ ಮುಂದೆ –

ಶ್ರೀಮದ್ಭಗವದ್ಗೀತಾ – ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ – 26 – 40

ಶ್ಲೋಕ

ಮುಕ್ತಸಂಗೋsನಹಂವಾದೀ ಧೃತ್ಯುತ್ಸಾಹಸಮನ್ವಿತಃ ।
ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥೨೬॥ BHAGAVADGEETHA

ಪದವಿಭಾಗ

ಮುಕ್ತ-ಸಂಗಃ ಅನಹಮ್-ವಾದೀ ಧೃತಿ-ಉತ್ಸಾಹ-ಸಮನ್ವಿತಃ । ಸಿದ್ಧಿ-ಅಸಿದ್ಧಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ ॥

ಅನ್ವಯ

ಮುಕ್ತ-ಸಂಗಃ, ಅನಹಂ-ವಾದೀ, ಧೃತಿ-ಉತ್ಸಾಹ-ಸಮನ್ವಿತಃ, ಸಿದ್ಧಿ-ಅಸಿದ್ಧಯೊಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ ।

ಪ್ರತಿಪದಾರ್ಥ

ಮುಕ್ತ-ಸಂಗಃ – ಸಕಲ ಭೌತಿಕ ಸಂಗಂದ ಮುಕ್ತನಾದ, ಅನಹಮ್-ವಾದೀ, ಅಹಂಕಾರ ಇಲ್ಲದ್ದಂವ, ಧೃತಿ-ಉತ್ಸಾಹ-ಸಮನ್ವಿತಃ – ದೃಢ ನಿರ್ಧಾರ, ಮಹಾಉತ್ಸಾಹಂಗಳಿಂದ ಕೂಡಿದ, ಸಿದ್ಧಿ-ಅಸಿದ್ಧಯೋ – ಪರಿಪೂರ್ಣತೆ-ವಿಫಲತೆಗಳಲ್ಲಿ, ನಿರ್ವಿಕಾರಃ – ಬದಲಾಗದ (ವಿಕಾರವಾಗದ), ಕರ್ತಾ – ಕರ್ತಾರ°, ಸಾತ್ತ್ವಿಕಃ ಉಚ್ಯತೇ – ಸಾತ್ವಿಕ ಗುಣದವನಾಗಿದ್ದ° ಹೇದು ಹೇಳಲ್ಪಡುತ್ತು.

ಅನ್ವಯಾರ್ಥ

ಐಹಿಕ ಪ್ರಕೃತಿಯ ಗುಣಂಗಳ ಸಂಗಂಗಳಿಂದ ಮುಕ್ತನಾಗಿ, ದುರಹಂಕಾರ ಇಲ್ಲದ್ದೆ, ಜಯಾಪಜಯಗಳಲ್ಲಿ ವಿಚಲಿತನಾಗದ್ದೆ , ದೃಢ ನಿಶ್ಚಯ ಮತ್ತೆ ಮಹಾ ಉತ್ಸಾಹಂದ ತನ್ನ ಕಾರ್ಯವ ಮಾಡುವಂವ ಸಾತ್ವಿಕ ಕರ್ತ ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ಸಂಪೂರ್ಣ ಕೃಷ್ಣಪ್ರಜ್ಞೆಲಿಪ್ಪವ ಅರ್ಥತ್ ನಿಜವಾದ ಸಾತ್ವಿಕ ಸಾಧಕ° ಹೇಂಗಿರುತ್ತ° ಹೇಳ್ವದರ ಭಗವಂತ° ಇಲ್ಲಿ ವಿವರಿಸಿದ್ದ°.  ಹೇಳಿರೆ ನಿಜವಾದ ಸಾತ್ವಿಕ ಸಾಧಕನ ಗುಣಂಗೊ ಹೇಂಗೆ ಹೇಳ್ವದು ಇಲ್ಲಿ ಹೇಳಲ್ಪಟ್ಟಿದು. ಅವಂಗೆ ಐಹಿಕ ಪ್ರಕೃತಿಯ ಗುಣಂಗಳ ಹರಟೆ ಇಲ್ಲೆ. ಅಂವ ಅದರಿಂದ ಮುಕ್ತನಾದಂವ. ಅವನ ನಂಬಿಕೆ ಮತ್ತೆ ಶ್ರದ್ಧೆಲಿ ಅಚಲ ನಿಶ್ಚಯ / ದೃಢ ಮನಸ್ಸು, ಹಾಂಗೇ ಸೋಲು ಗೆಲುವು ಹೇಳ್ವ ಚಿಂತೆ ಅವಂಗೆ ಇಲ್ಲೆ. ಅಂವ ಎಲ್ಲ ಸಂದರ್ಭಲ್ಲಿಯೂ ನಿರ್ವಿಕಾರವಾಗಿ ವ್ಯವಹರುಸುತ್ತ°. ಹಾಂಗಾಗಿ ಅಂವ ಮಾಡುವ ಎಲ್ಲ ಕಾರ್ಯಲ್ಲಿಯೂ ಅವಂಗೆ ಉತ್ಸಾಹ ಮತ್ತೆ ಸಂತೋಷ ಸದಾ ಇರ್ತು. ಹೀಂಗಿಪ್ಪ ಸಾಧಕ° ಸಾತ್ವಿಕ ಗುಣದೋನು ಹೇಳಿ ಹೇಳಲ್ಪಡುತ್ತು.

ಸಾತ್ವಿಕ ಕರ್ತಾ° ಏವುದನ್ನೂ ಅಂಟಿಸಿಗೊಳ್ಳುತ್ತನಿಲ್ಲೆ. ಎಲ್ಲವನ್ನೂ ‘ಶ್ರೀಕೃಷ್ಣಾರ್ಪಣಮಸ್ತು’ ಹೇಳಿ ತನ್ನ ಜೀವನಲ್ಲಿ ಅನುಸಂಧಾನ ಮಾಡಿಗೊಂಡಿರುತ್ತ°. ಆನು ಮಾಡಿದೆ, ಆನು ಮಾಡುತ್ತೆ ಹೇಳ್ವ ಅಹಂಭಾವಂದ ಬೀಗುತ್ತನಿಲ್ಲೆ. ಭಗವಂತನ ಏವ ಕೆಲಸವಿರಲೀ ಆದರ ಸದಾ ಹರುಷ ಉತ್ಸಾಹಂದ ಕೈಗೊಳ್ಳುತ್ತ°. ಕಾರ್ಯ ಕೈಗೂಡಿರೆ ಅಥವಾ ಕೈಕೊಟ್ಟರೆ ಏನೂ ಬೇಜಾರು ಮಾಡಿಗೊಳ್ಳುತ್ತನಿಲ್ಲೆ. ಎಲ್ಲವನ್ನೂ ನಿರ್ವಿಕಾರಚಿತ್ತಂದ ಸ್ವೀಕರುಸುವ ಅವನ ಗುಣ – ಸಾತ್ವಿಕ°.

ಶ್ಲೋಕ

ರಾಗೀ ಕರ್ಮಫಲಪ್ರೇಪ್ಸುಃ  ಲುಬ್ಧೋ ಹಿಂಸಾತ್ಮಕೋsಶುಚಿಃ ।
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥೨೭॥

ಪದವಿಭಾಗ

ರಾಗೀ ಕರ್ಮ-ಫಲ-ಪ್ರೇಪ್ಸುಃ ಲುಬ್ಧಃ ಹಿಂಸಾತ್ಮಕಃ ಅಶುಚಿಃ । ಹರ್ಷ-ಶೋಕ-ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥

ಅನ್ವಯ

ರಾಗೀ, ಕರ್ಮ-ಫಲ-ಪ್ರೇಪ್ಸುಃ, ಲುಬ್ಧಃ, ಹಿಂಸಾತ್ಮಕಃ, ಅಶುಚಿಃ, ಹರ್ಷ-ಶೋಕ-ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ।

ಪ್ರತಿಪದಾರ್ಥ

ರಾಗೀ – ಐಹಿಕಲಿ ಆಸ್ತಕ್ತನಾದ, ಕರ್ಮ-ಫಲ-ಪ್ರೇಪ್ಸುಃ – ಕರ್ಮಫಲವ ಅಪೇಕ್ಷಿಸುವಂವ, ಲುಬ್ಧಃ – ಲೋಭಿ, ಹಿಂಸಾತ್ಮಕಃ – ಹಿಂಸಾ ಮನೋವೃತ್ತಿಯ (ಸದಾ ಅಸೂಯೆ ಪಡುವ), ಅಶುಚಿಃ – ಅಶುಚಿಯಾದ, ಹರ್ಷ-ಶೋಕ-ಅನ್ವಿತಃ – ಸುಖದುಃಖಂಗೊಕ್ಕೆ ಒಳಗಾದ, ಕರ್ತಾ – ಕರ್ತ°, ರಾಜಸಃ – ರಜೋಗುಣಲ್ಲಿಪ್ಪಂವ°, ಪರಿಕೀರ್ತಿತಃ – ಹೇದು ಹೇಳಲಾಯ್ದು.

ಅನ್ವಯಾರ್ಥ

ಐಹಿಕ ಕರ್ಮ ಮತ್ತೆ ಕರ್ಮಫಲಕ್ಕೆ ಅಂಟಿಗೊಂಡು, ಆ ಫಲವ ಬಯಸುವವನಾಗಿ, ಲೋಭಿಯಾಗಿ, ಸದಾ ಅಸೂಯಾ / ಹಿಂಸಾ ಮನೋವೃತ್ತಿಯ, ಕೊಳಕ್ಕ°, ಸುಖದುಃಖಂಗೊಕ್ಕೆ ವಿಚಲಿತನಪ್ಪ ಮನುಷ್ಯ° ರಾಜಸ ಸ್ವಭಾವದಂವ° ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ರಾಜಸನಾದಂವ° ಒಳ್ಳೆ ಕೆಲಸ ಮಾಡುತ್ತ°, ಇಲ್ಲೆ ಹೇದು ಏನಿಲ್ಲೆ. ಆದರೆ, ಅಂವ ಹರ್ಷಶೋಕಲ್ಲಿ ತುಂಬಿರುತ್ತ°. ತನ್ನ ಕಾರ್ಯಲ್ಲಿ ಯಶಸ್ವಿಯಪ್ಪಗ ಹಿಗ್ಗುವದು, ಸೋತಪ್ಪಗ ಕರಗುವದು ಹೀಂಗೆ ಸಂತೋಷ ಮತ್ತೆ ದುಃಖಲ್ಲಿ ನರಳಿಗೊಂಡಿರುತ್ತ°. ಇದಕ್ಕೆ ಮೂಲ ಕಾರಣ ಕರ್ಮಲ್ಲಿ ಅವಂಗೆ ಮನಸಾರೆ ಇಪ್ಪ ಫಲಾಪೇಕ್ಷೆ. ಅಂವ ಕರ್ಮ ಮಾಡುತ್ತದೇ ಫಲವ ಪಡವಲೆ. ಫಲಾಪೇಕ್ಷೆ ಸುರುವಿಂಗೆ ಸಂತೋಷಜನಕವಾಗಿದ್ದರೂ ಕಾರಣಂತರಂಗಳಿಂದ ಅದುವೇ ಅವನ ದುಃಖಕ್ಕೆ ಮೂಲ ಆವ್ತು. ಇನ್ನು ತನಗೆ ಸಿಕ್ಕಿದ ಲಾಭಲ್ಲಿ ಲೋಭ, ಸ್ವಾರ್ಥತೆ, ಅಹಂಭಾವ ಪ್ರದರ್ಶನಕ್ಕೆ ಇದ್ದೇ ಇರ್ತು. ತಾನು ಗಳಿಸಿದ್ದು, ತಾನು ಕೊಡುವದು ಹೇದು ಕೊಚ್ಚಿಗೊಂಡಿರುತ್ತ°. ಇನ್ನು ಕಾರ್ಯಲ್ಲಿ ಶ್ರದ್ಧೆ ಹೇಳಿರೆ ಕಾರ್ಯ ಅಪ್ಪನ್ನಾರ ಮಾಂತ್ರ ಮತ್ತೆ ಅದರ ಗೊಡವೆಯೇ ಇರ. ಇನ್ನು ಶುಚಿತ್ವ. ಮನಸ್ಸಿಲ್ಲಿಯೇ ಮೂಲಲ್ಲಿಯೇ ಅಶುಚಿಯೇ ಹೊಂದಿಪ್ಪ ಇವಂಗೆ ಮಾನಸಿಕ ಕೊಳಕ್ಕು ಸದಾ. ಹೆರಂಗೆ ಮಿಂದು ವಿಭೂತಿ ಮೆತ್ತಿಗೊಂಡು ತಿರುಗುತ್ತವನಾದರೂ ಮನಸ್ಸಿನೊಳ ಕೊಳಕ್ಕ ಮೆತ್ತಿಗೊಂಡಿಪ್ಪಂವ ಅಂತರಂಗಲ್ಲಿ ಅಶುಚಿಯಾಗಿಯೇ ಇದ್ದು ಬಿಡುತ್ತ°. ಅಂತರಂಗ ಶುದ್ಧಿ ಇಲ್ಲದ್ದೆ ಆಧ್ಯಾತ್ಮಿಕ ಉನ್ನತಿ ಅಸಾಧ್ಯ. ಹೀಂಗೆ, ಐಹಿಕ ಅನುರಾಗಿಯಾಗಿ ಕರ್ಮಫಲಾಪೇಕ್ಷೆಂದ ಮಾನಸಿಕ ಸ್ವಚ್ಚತೆ ಇಲ್ಲದ್ದೆ ಕೇವಲ ಅಹಂಕಾರಕ್ಕಾಗಿ ಕರ್ಮ ಮಾಡುವ ಕರ್ತಾ – ರಾಜಸ ಸ್ವಭಾವದಂವ ಎಂದೆಣಿಸುತ್ತ°.

ಶ್ಲೋಕ

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋsಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥೨೮॥

ಪದವಿಭಾಗ

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠಃ ನೈಷ್ಕೃತಿಕಃ ಅಲಸಃ । ವಿಷಾದೀ ದೀರ್ಘ-ಸೂತ್ರೀ ಚ ಕರ್ತಾ ತಾಮಸಃ ಉಚ್ಯತೇ ॥

ಅನ್ವಯ

ಅಯುಕ್ತಃ, ಪ್ರಾಕೃತಃ, ಸ್ತಬ್ಧಃ, ಶಠಃ, ನೈಷ್ಕೃತಿಕಃ, ಅಲಸಃ, ವಿಷಾದೀ, ದೀರ್ಘ-ಸೂತ್ರೀ ಚ ಕರ್ತಾ ತಾಮಸಃ ಉಚ್ಯತೇ ।

ಪ್ರತಿಪದಾರ್ಥ

ಅಯುಕ್ತಃ – ಶಾಸ್ತ್ರವಿಧಿಗಳ ಗಮನುಸದ್ದ, ಪ್ರಾಕೃತಃ – ಪ್ರಾಪಂಚಿಕನಾದ, ಸ್ತಬ್ಧಃ – ಹಠಮಾರಿ, ಶಠಃ – ವಂಚಕ°, ನೈಷ್ಕೃತಿಕಃ – ಇತರರ ಹೀಯಾಳುಸುವದರಲ್ಲಿ ಪರಿಣತನಾದ, ಅಲಸಃ – ಸೋಮಾರಿ, ವಿಷಾದೀ – ಉತ್ಸಾಹವಿಹೀನನಾದ, ದೀರ್ಘ-ಸೂತ್ರೀ – ತಡಮಾಡುವ ಪ್ರವೃತ್ತಿ, ಚ – ಕೂಡ, ಕರ್ತಾ – ಕರ್ತಾರ°, ತಾಮಸಃ ಉಚ್ಯತೇ – ತಾಮಸ ಸ್ವಭಾವದಂವ° ಹೇದು ಹೇಳಲ್ಪಡುತ್ತು.

ಅನ್ವಯಾರ್ಥ

ಶಾಸ್ತ್ರವಿಧಿಗೊಕ್ಕೆ ಬದ್ಧನಲ್ಲದ್ದ, ಪ್ರಾಪಂಚಿಕ ಮನೋಧರ್ಮದವನಾದ, ಹಠಮಾರಿ, ವಂಚಕ°, ಇತರರ ಹೀಯಾಳುಸುವದರ್ಲ್ಲಿ ಪಂಡಿತನಾದ, ಸೋಮಾರಿ, ಉತ್ಸಾಹವಿಹೀನನಾದ, ಮಾಡೇಕ್ಕಾದ ಕೆಲಸವ ಮುಂದೆ ದೂಡುತ್ತಾ ಇಪ್ಪವನಾದ ಕರ್ತಾರನ ತಾಮಸ ಗುಣದೋನು ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ತಾಮಸ ಗುಣದಲ್ಲಿಪ್ಪ ವಿಶೇಷತೆಯ ಭಗವಂತ° ಇಲ್ಲಿ ಹೇಳಿದ್ದ°. ಬನ್ನಂಜೆಯವರ ವ್ಯಾಖ್ಯಾನಂದ ಇಲ್ಲಿ ಹೇಳಲ್ಪಟ್ಟ ಒಂದೊಂದು ವಿಶೇಷತೆಗಳ ಗಮನುಸುವೋ° –

೧. ಅಯುಕ್ತಃ – ಮಾಡುವ ಕೆಲಸಲ್ಲಿ ನಂಬಿಕೆ, ಶ್ರದ್ಧೆ ಇಲ್ಲದ್ದಿಪ್ಪಂವ°. ಅರ್ಥಾತ್, ಶಾಸ್ತ್ರ ವಿಹಿತ ಕರ್ಮಲ್ಲಿ ಶ್ರದ್ಧಾ ಭಕ್ತಿಯಾಗಲೀ ನಂಬಿಕೆ ಆಗಲೀ ಇಲ್ಲದ್ದಿಪ್ಪದು. ಹೇಳಿರೆ, ಕರ್ಮ ಮಾಡುವಾಗ ಕರ್ಮ ನಿಯಾಮಕನಾದ ಭಗವಂತನ ಸ್ಮರಣೆಯೇ (ಎಚ್ಚರಿಕೆಯೇ) ಇಲ್ಲದ್ದಿಪ್ಪದು

೨. ಪ್ರಾಕೃತಃ – ದೇವರ ಮೇಗೆ ನಂಬಿಕೆಯೇ ಇಲ್ಲದ್ದಿಪ್ಪದು. ಕೇವಲ ಕಣ್ಣೆದುರಂಗೆ ಎಂತ ಕಾಣುತ್ತೋ ಅದರಲ್ಲಿಯೇ ನಂಬಿಕೆ – ಪ್ರಾಪಂಚಿಕ ವಿಷಯಲ್ಲಿ ಆಸಕ್ತಿ ಮಡಿಕ್ಕೊಂಡಿಪ್ಪಂವ.

೩. ಸ್ತಬ್ಧಃ – ತಾನು ಮಾಡುವ ಕರ್ಮಲ್ಲಿ ತಪ್ಪಿದ್ದರೂ ಅದರ  ಅರ್ತುಗೊಳ್ಳದ್ದೆ, ಅರ್ತರೂ ತಿದ್ದಿಗೊಂಬ ಮನಸ್ಸಿಲ್ಲದ್ದೆ, ತಿಳುವಳೀಕೆ ಇಲ್ಲದ್ದೆ, ತಪ್ಪು ನಂಬಿಕೆಲೇ ಮುನ್ನೆಡೆವಂವ°

೪. ಶಠಃ – ತಪ್ಪು ಹೇದು ಗೊಂತಾದರೂ ತಿದ್ದಿಗೊಂಬ ಅಪೇಕ್ಷೆ ಇಲ್ಲದ್ದೆ ಒಂದು ರೀತಿಯ ಹಠಮಾರಿ. ತಾನು ಎಣಿಸಿದ್ದೇ ಸರಿ ಹೇಳ್ವ ಮದ ಮನೋವೃತ್ತಿ ಇಪ್ಪಂವ°.

೫. ನೈಷ್ಕೃತಿಕಃ – ತಾನು ಮಾತ್ರ ಒಳ್ಳೆಂವ°, ಬಾಕಿದ್ದೋರು ಮೂರ್ಖರು, ತಾನು ಎಲ್ಲ ತಿಳುದಂವ, ಪಂಡಿತ°, ಬಾಕಿದ್ದೋರು ಬೆಪ್ಪಂಗೊ ಹೇದು ಹೀಯಾಳುಸುವಂವ°,  ಒಳ್ಳೆಯಂವ ಹೇದು ವೇಷ ಹಾಕಿಗೊಂಡು ಬುದ್ಧಿಪೂರ್ವಕವಾಗಿ ಇನ್ನೊಬ್ಬಂಗೆ ಮೋಸಮಾಡಿ ಲಾಭಪಡವ ಕಪಟತನ ಮನೋವೃತ್ತಿಯಂವ°,  ಎಲ್ಲದರಲ್ಲಿಯೂ ಕೃತ್ರಿಮತೆ ಮಾಡುವಂವ°.

೬. ಅಲಸಃ – ಸೋಮಾರಿತನ. ತನಗೆ ಗೊಂತಿಪ್ಪದು ಇಷ್ಟು, ಇದರಿಂದ ಹೆಚ್ಚಿಗೆ ಇನ್ನೆಂತ ತಿಳಿಯೇಕ್ಕಾದ್ದಿಲ್ಲೆ ಹೇದು ಆಲಸ್ಯ ಸ್ವಭಾವದಂವ.

೭ ವಿಷಾದೀ – ಸಂಕಟಪಡುವಂವ. ಒಂದು ಕೆಲಸ ಮಾಡೇಕ್ಕನ್ನೇ ಹೇದು ಮತ್ತೆ ಮತ್ತೆ ಬೇಜಾರಮಾಡಿಗೊಂಡು ಕರ್ಮಲ್ಲಿ ಉತ್ಸಾಹ ಇಲ್ಲದ್ದೆ ಕೂಬಂವ°.

೮. ದೀರ್ಘಸೂತ್ರೀ – ಮತ್ತೆ ಮಾಡಿರಾತು ಹೇದು ವೃಥಾ ಕಾಲವಿಳಂಬ ಮಾಡುವಂವ, ಏವುದನ್ನೂ ಪಕ್ಕಕ್ಕೆ ಮಾಡಾದ್ದೆ ಸಮಯ ಉದ್ದ ಎಳವಂವ°.

ಹೀಂಗೆ ಮೇಗೆ ಹೇಳಿಪ್ಪ ಏವ ಒಂದು ಗುಣ ಇದ್ದರೂ ಅಂವ° ತಾಮಸ ಗುಣದಂವ° ಹೇಳಿ ಅನುಸುತ್ತ°.

ಶ್ಲೋಕ

ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು ।
ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ ॥೨೯॥

ಪದವಿಭಾಗ

ಬುದ್ಧೇಃ ಭೇದಮ್ ಧೃತೇಃ ಚ ಏವ ಗುಣತಃ ತ್ರಿವಿಧಮ್ ಶೃಣು । ಪ್ರೋಚ್ಯಮಾನಮ್ ಅಶೇಷೇಣ ಪೃಥಕ್ತ್ವೇನ ಧನಂಜಯ ॥

ಅನ್ವಯ

ಹೇ ಧನಂಜಯ!, ಬುದ್ಧೇಃ ಧೃತೇಃ ಚ ಏವ ಗುಣತಃ ತ್ರಿವಿಧಂ ಭೇದಮ್ ಅಶೇಷೇಣ ಪೃಥಕ್ತ್ವೇನ ಪ್ರೋಚ್ಯಮಾನಂ ಶೃಣು ।

ಪ್ರತಿಪದಾರ್ಥ

ಹೇ ಧನಂಜಯ! – ಏ ಧನಂಜಯನೇ!, ಬುದ್ಧೇಃ – ಬುದ್ಧಿಯ, ಧೃತೇಃ – ಧೃತಿಯ(ನಿಶ್ಚಲತೆಯ), ಚ – ಕೂಡ, ಏವ – ಖಂಡಿತವಾಗಿಯೂ, ಗುಣತಃ – ಭೌತಿಕ ಗುಣಂಗಳಿಂದ, ತ್ರಿವಿಧಂ ಭೇದಮ್ – ಮೂರು ವಿಧವಾದ ವ್ಯತ್ಯಾಸವ (ಭಿನ್ನತೆಯ), ಅಶೇಷೇಣ – ವಿವರವಾಗಿ (ಸಂಪೂರ್ಣವಾಗಿ), ಪೃಥಕ್ತ್ವೇನ – ಪ್ರತ್ಯೇಕವಾಗಿ, ಪ್ರೋಚ್ಯಮಾನಮ್ – ವಿವರಿಸಲ್ಪಡುವದರ, ಶೃಣು – ನೀನು ಕೇಳು

ಅನ್ವಯಾರ್ಥ

ಏ ಧನಂಜಯನೇ, ಬುದ್ಧಿ (ತಿಳುವಳಿಕೆ) ಮತ್ತೆ ಧೃತಿ (ನಿಶ್ಚಲತೆ) ಅಥವಾ ದೃಢಸಂಕಲ್ಪದ ಭೌತಿಕ ಗುಣಂಗೊಕ್ಕೆ ಅನುಗುಣವಾಗಿ ಮೂರುವಿಧ ಭಿನ್ನತೆಯ ಸಂಪೂರ್ಣವಾಗಿ (ವಿವರವಾಗಿ) ಪ್ರತ್ಯೇಕವಾಗಿ ಎನ್ನಿಂದ ವಿವರಿಸಲ್ಪಡುವದರ ನೀನು ಕೇಳು.

ತಾತ್ಪರ್ಯ / ವಿವರಣೆ

ಬುದ್ಧಿ ಮತ್ತೆ ಧೈರ್ಯ ಗುಣಂದ ಮೂರು ವಿಧ ಹೇಳಿ ಭಗವಂತ° ಅದರ ಪ್ರತ್ಯೇಕವಾಗಿ ವಿವರಣೆಯ ಎನ್ನತ್ರಂದ ಕೇಳಿ ತಿಳಿ ಹೇದು ಅರ್ಜುನಂಗೆ ಹೇಳುತ್ತ°.  ದೇಹ ಮತ್ತೆ ಇಂದ್ರಿಯಂಗೊ ಪೂರ್ಣಪ್ರಮಾಣಲ್ಲಿ ವಿಕಸನಗೊಂಬದು ಮಾನವರಲ್ಲಿಯೇ. ಹಾಂಗಾಗಿ ಮಾನವ ಶರೀರವ ‘ಪುರ’ ಹೇಳುತ್ತವು. ಈ ದೇಹಲ್ಲಿಪ್ಪ ಜೀವಂಗೆ (ಪುರುಷ) ಬುದ್ಧಿ ಮತ್ತೆ ಧೃತಿ ಬಹು ಮುಖ್ಯವಾದ ಅಂಶಂಗೊ. ನಾವು ನಮ್ಮ ಜೀವನಲ್ಲಿ ಹೇಡಿಗಳಾಗದೆ ಬುದ್ಧಿವಂತರಾಗಿ ಬದುಕ್ಕೆಕು. ಈ ಬುದ್ಧಿ ಮತ್ತೆ ಧೃತಿಲ್ಲಿಯೂ ಮೂರು ವಿಧ – ಸಾತ್ವಿಕ, ರಾಜಸ, ಮತ್ತೆ ತಾಮಸ. ನಾವು ಜೀವನಲ್ಲಿ ರಾಜಸ ಮತ್ತೆ ತಾಮಸವನ್ನೋ ಆಚರುಸಲಾಗ. ಅದು ಶ್ರೇಯಸ್ಕರವಲ್ಲ. ಹಾಂಗಾರೆ ಸಾತ್ವಿಕರಾಯೇಕ್ಕಾರೆ ಮದಾಲು ರಾಜಸ ಹೇಳಿರೆಂತರ ತಾಮಸ ಹೇಳಿರೆಂತರ ಹೇಳ್ವದು ತಿಳಿದಿರೆಕು. ಅದಕ್ಕಾಗಿ ಭಗವಂತ° ಪ್ರತ್ಯೇಕವಾಗಿ ಹೇದ್ದು – “ಬುದ್ಧಿ ಮತ್ತೆ ಧೃತಿಗಳ ಬಗ್ಗೆ ಅಶೇಷೇಣ, ಅರ್ಥಾತ್, ಏನೂ ಬಾಕಿ ಉಳಿಯದ್ದೆ , ಹೇಳಿರೆ ಸಂಪೂರ್ಣವಾಗಿ / ವಿವರವಾಗಿ ಎನ್ನತ್ರಂದ  ಇನ್ನೀಗ ಪ್ರತ್ಯೇಕವಾಗಿ ಕೇಳಿ ತಿಳುಕ್ಕೋ” ಹೇದು ಹೇಳಿದ°. ಇನ್ನು, ನಾವು ಸಾತ್ವಿಕ ಧೃತಿಯ ಗೆದ್ದು ಧನಂಜಯರಾಯೇಕು ಹೇಳ್ವದು ಇಲ್ಲಿ ಭಗವಂತನ ಸಂದೇಶದ ಮೂಲ ಉದ್ದೇಶ. ಹಾಂಗಾಗಿಯೇ ಇಲ್ಲಿ ಭಗವಂತ ಅರ್ಜುನನ ‘ಧನಂಜಯ’ ಹೇಳಿ ನೆಂಪುಮಾಡಿಸಿ ದೆನಿಗೊಂಡದು.

ಶ್ಲೋಕ

ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥೩೦॥

ಪದವಿಭಾಗ

ಪ್ರವೃತ್ತಿಮ್ ಚ ನಿವೃತ್ತಿಮ್ ಚ ಕಾರ್ಯ-ಅಕಾರ್ಯೇ ಭಯ-ಅಭಯೇ । ಬಂಧಮ್ ಮೋಕ್ಷಮ್ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥

ಅನ್ವಯ

ಹೇ ಪಾರ್ಥ!, ಯಾ ಬುದ್ಧಿಃ ಪ್ರವೃತ್ತಿಂ ಚ ನಿವೃತ್ತಿಂ ಕಾರ್ಯ-ಅಕಾರ್ಯೇ ಭಯ-ಅಭಯೇ ಚ ಬಂಧಂ ಮೋಕ್ಷಂ ಚ ವೇತ್ತಿ, ಸಾ ಸಾತ್ತ್ವಿಕೀ (ಮತಾ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪಾರ್ಥನೇ!, ಯಾ ಬುದ್ಧಿಃ – ಏವ ಬುದ್ಧಿಯು, ಪ್ರವೃತ್ತಿಮ್ – ಕೆಲಸ ಮಾಡುವದರ(ವೃತ್ತಿಯ) , ಚ – ಕೂಡ, ನಿವೃತ್ತಿಮ್ – ಕೆಲಸ ಮಾಡದ್ದಿಪ್ಪದರ (ನಿವೃತ್ತಿಯ), ಕಾರ್ಯ-ಅಕಾರ್ಯೇ – ಮಾಡ್ಳೇ ಬೇಕಾದ್ದರಲ್ಲಿ-ಮಾಡ್ಳೇ ಆಗದ್ದರಲ್ಲಿ, ಭಯ-ಅಭಯೇ – ಭೀತಿಲಿ-ನಿರ್ಭೀತಿಲಿ, ಚ – ಕೂಡಾ, ಬಂಧಮ್ – ಬಂಧನವ, ಮೋಕ್ಷಮ್ – ಬಿಡುಗಡೆಯ (ಮುಕ್ತಿಯ), ಚ – ಕೂಡಾ, ವೇತ್ತಿ – ತಿಳಿತ್ತೋ, ಸಾ ಸಾತ್ತ್ವಿಕೀ (ಮತಾ) – ಅದು ಸತ್ವಗುಣಲ್ಲಿಪ್ಪದು ಹೇದು ಅಭಿಪ್ರಾಯ.

ಅನ್ವಯಾರ್ಥ

ಏ ಅರ್ಜುನ!, ಏವ ಬುದ್ಧಿಯು ಇಹದ ಧರ್ಮ ಮತ್ತೆ ಪರದ ಧರ್ಮವ (ಪ್ರವೃತ್ತಿ – ನಿವೃತ್ತಿ) ಅಥವಾ ಮಾಡೇಕ್ಕಾದ ಧರ್ಮ ಮತ್ತೆ ಮಾಡ್ಳಾಗದ್ದ ಧರ್ಮ,  ಏವುದಕ್ಕೆ ಹೆದರೆಕು ಏವುದಕ್ಕೆ ಹೆದರ್ಲಾಗ, ಏವುದು ಬಂಧನ ಏವುದು ಮುಕ್ತಿ ಹೇಳ್ವದರ ತಿಳಿತ್ತೋ ಅದು ಸಾತ್ತ್ವಿಕ ಗುಣಲ್ಲಿಪ್ಪದು ಹೇದು ಅಭಿಪ್ರಾಯ.

ತಾತ್ಪರ್ಯ / ವಿವರಣೆ

ಧರ್ಮಗ್ರಂಥ ಶಾಸ್ತ್ರವಿಧಿಗೆ ಅನುಗುಣವಾಗಿ ಕೆಲಸ ಮಾಡ್ತದಕ್ಕೆ ಪ್ರವೃತ್ತಿ ಹೇದು ಹೇಳ್ವದು. ಹೇಳ್ರೆ ಯೋಗ್ಯವಾದ ಕೆಲಸ ಮಾಡುವದು. ಹೀಂಗೆ ಶಾಸ್ತ್ರಲ್ಲಿ ಹೇಳದ್ದರ ಮಾಡುವದು ನಿವೃತ್ತಿ. ಧರ್ಮಗ್ರಂಥಂಗಳ ಅದೇಶಂಗಳ ತಿಳಿಯದ್ದಂವ° ಕರ್ಮದ ಕ್ರಿಯೆ ಮತ್ತೆ ಪ್ರಕ್ರಿಯೆಲ್ಲಿ ಸಿಕ್ಕಿಗೊಳ್ತ°. ಅದರ ಬುದ್ಧಿಶಕ್ತಿಂದ ತಾರತಮ್ಯ ಮಾಡುವದು ಸಾತ್ವಿಕ ಗುಣ ಹೇಳಿ ಭಗವಂತನ ಅಂಬೋಣ. ನಮ್ಮ ಜೀವನಲ್ಲಿ ಮುಖ್ಯವಾಗಿ ಸಮಸ್ಯೆ ಹೇಳಿರೆ ಒಂದು ಕೆಲಸವ ಮಾಡೇಕೋ ಬೇಡದೋ ಹೇಳ್ವ ಗೊಂದಲ. ಏವುದರ ಹಿಡಿಯೇಕು ಏವುದರ ಬಿಡೇಕು, ಏವುದು ಒಳ್ಳೆದು ಏವುದು ಕೆಟ್ಟದು, ಹೇಳ್ವ ತೀರ್ಮಾನಕ್ಕೆ ಬಪ್ಪದು ಗೊಂದಲ. ನಮ್ಮ ಕರ್ತವ್ಯ ಏವುದು, ನಮ್ಮ ಕರ್ತವ್ಯ ಅಲ್ಲದ್ದು ಏವುದು, ಧರ್ಮ ಏವುದು ಅಧರ್ಮ ಏವುದು, ಪಾಪ ಏವುದು, ಪುಣ್ಯ ಏವುದು, ಬಂಧನ ಏವುದು ಮುಕ್ತಿ ಏವುದು ಹೀಂಗೆ ಇವೆಲ್ಲವುದರ ಬಗ್ಗೆ ಖಚಿತವಾದ ನಿರ್ಧಾರ ಬಪ್ಪದು – ಸಾತ್ತ್ವಿಕ ಮನಸ್ಸಿಂಗೆ.

ಶ್ಲೋಕ

ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ ।
ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥೩೧॥

ಪದವಿಭಾಗ

ಯಯಾ ಧರ್ಮಮ್ ಅಧರ್ಮಮ್ ಚ ಕಾರ್ಯಮ್ ಚ ಅಕಾರ್ಯಮ್ ಏವ ಚ । ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥

ಅನ್ವಯ

ಹೇ ಪಾರ್ಥ!, ಯಯಾ ಚ (ಬುದ್ಧ್ಯಾ) ಧರ್ಮಮ್ ಅಧರ್ಮಂ ಚ, ಕಾರ್ಯಮ್ ಅಕಾರ್ಯಂ ಚ, ಅಯಥಾವತ್ ಏವ ಪ್ರಜಾನಾತಿ ಸಾ ಬುದ್ಧಿಃ ರಾಜಸೀ (ಮತಾ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪಾರ್ಥನೇ!, ಯಯಾ – ಏವುದರಿಂದ, ಚ – ಕೂಡ, (ಬುದ್ಧ್ಯಾ – ಬುದ್ಧಿಂದ)  ಧರ್ಮಮ್ – ಧರ್ಮತತ್ವವ, ಅಧರ್ಮಮ್ – ಅಧರ್ಮವ, ಚ – ಕೂಡ, ಕಾರ್ಯಮ್ – ಮಾಡೇಕ್ಕಾದ್ದು, ಅಕಾರ್ಯಮ್ – ಮಾಡ್ಳಾಗದ್ದು, ಚ – ಕೂಡ, ಅಯಥಾವತ್ – ಅಪರಿಪೂರ್ಣವಾಗಿ (ಅಸಮರ್ಪಕವಾಗಿ, ಯಥಾವತ್ ಅಲ್ಲದ್ದೆ), ಏವ – ಖಂಡಿತವಾಗಿಯೂ, ಪ್ರಜಾನಾತಿ – ತಿಳಿತ್ತೋ, ಸಾ ಬುದ್ಧಿಃ – ಆ ಬುದ್ಧಿಯು, ರಾಜಸೀ (ಮತಾ) – ರಜೋಗುಣಲ್ಲಿಪ್ಪದು ಹೇದು ಅಭಿಮತ.

ಅನ್ವಯಾರ್ಥ

ಏ ಪಾರ್ಥನೇ, ಏವ ಬುದ್ಧಿಂದ ಧರ್ಮಾಧರ್ಮವ, ಮಾಡೇಕ್ಕಾದ್ದು (ಮಾಡ್ಳಕ್ಕಾದ್ದು) ಮಾಡ್ಳಾಗದ್ದರ, ಅಪರಿಪೂರ್ಣವಾಗಿ ತಿಳಿತ್ತೋ (ಸರಿಯಾಗಿ ತಿಳಿಯಲೆಡಿತ್ತಿಲ್ಯೋ) ಆ ಬುದ್ಧಿ ರಾಜಸ ಗುಣಲ್ಲಿ ಇಪ್ಪೋದು ಹೇಳ್ವದು ಅಭಿಪ್ರಾಯ.

ತಾತ್ಪರ್ಯ / ವಿವರಣೆ

ಧರ್ಮಾಧರ್ಮದ ವಿವೇಚನೆ ಮಾಡ್ಳೆ ಎಡಿಗಾಗದ್ದ, ಕಾರ್ಯ ಅಕಾರ್ಯಂಗಳ ವ್ಯತ್ಯಾಸವ ತಿಳಿವಲೆಡಿಯದ್ದ ಬುದ್ಧಿ ರಾಜಸ ಗುಣದ್ದು ಹೇಳಿ ಭಗವಂತ ಅಭಿಪ್ರಾಯಪಡ್ತ°. ಸಾಮಾನ್ಯ ಮನುಷ್ಯನ ಜೀವನಲ್ಲಿ ಕೆಲವೊಂದರಿ ಧರ್ಮವನ್ನೇ ಅಧರ್ಮ ಹೇಳಿ ತಿಳುದುಬಿಡ್ತದಿದ್ದು, ಅಧರ್ಮವನ್ನೇ ಧರ್ಮ ಹೇಳಿ ನಂಬಿಹೋಪದಿದ್ದು. ಇದಕ್ಕೆ ಬುದ್ಧಿಪೂರ್ವಕವಾಗಿ ಸರಿಯಾಗಿ ವಿವೇಚನೆ ಮಾಡದ್ದೇ ಕಾರಣ. ಹೇಳಿರೆ, ಬುದ್ಧಿಗೆ ಏವುದು ಸರಿ ಏವುದು ತಪ್ಪು ಹೇಳ್ವದರ ಸರಿಯಾಗಿ ತೀರ್ಮಾನುಸಲೆ ಎಡಿಗಾಗದ್ದೆ ಅಪ್ಪದು. ಜೀವನಲ್ಲಿ ಉಪಯೋಗಕ್ಕೆ ಬಾರದ್ದ ಈ ವಿಧವಾದ ಬುದ್ಧಿ, ಸರಿಯಾದ್ದು ಏವುದು ಹೇಳ್ವ ತೀರ್ಮಾನಕ್ಕೆ ಬಪ್ಪಲೆಡಿಯದ್ದ ಅರ್ಥಾತ್ ಸರಿಯಲ್ಲದ್ದರ ಸರಿ ಹೇದೂ, ಸರಿಯಾದ್ದರ ಸರಿಯಲ್ಲ ಹೇಳಿಯೂ ತೀರ್ಮಾನುಸುವ ಈ ಅಪಕ್ವ ಬುದ್ಧಿ ರಾಜಸ ಗುಣದ್ದು ಹೇಳಿ ಭಗವಂತನ ಅಭಿಪ್ರಾಯ.

ಶ್ಲೋಕ

ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಾಮಸಾssವೃತಾ ।
ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥೩೨॥

ಪದವಿಭಾಗ

ಅಧರ್ಮಮ್ ಧರ್ಮಮ್ ಇತಿ ಯಾ ಮನ್ಯತೇ ತಾಮಸಾ ಆವೃತಾ । ಸರ್ವ-ಅರ್ಥಾನ್ ವಿಪರೀತಾನ್ ಚ ಬುದ್ಧಿಃ ಸಾ ಪಾರ್ಥ ತಾಮಸೀ ॥

ಅನ್ವಯ

ಹೇ ಪಾರ್ಥ!, ಯಾ ತಾಮಸಾ ಅವೃತಾ (ಬುದ್ಧಿಃ) ಅಧರ್ಮಂ ಧರ್ಮಮ್ , ಸರ್ವ-ಅರ್ಥಾನ್ ವಿಪರೀತಾನ್ ಚ ಇತಿ ಮನ್ಯತೇ, ಸಾ ಬುದ್ಧಿಃ ತಾಮಸೀ (ಸ್ಮೃತಾ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪಾರ್ಥನೇ!, ಯಾ ತಾಮಸಾ ಆವೃತಾ (ಬುದ್ಧಿಃ) – ಏವ, ಭ್ರಾಂತಿಂದ (ಮಾಯೆ/ಕಸ್ತಲೆ/ಅಜ್ಞಾನ) ಆವೃತವಾದ ಬುದ್ಧಿಯಿದ್ದೋ, ಅಧರ್ಮಮ್ – ಅಧರ್ಮವ, ಧರ್ಮಮ್ – ಧರ್ಮ, ಸರ್ವ-ಅರ್ಥಾನ್ – ಎಲ್ಲ ವಿಷಯಂಗಳ, ವಿಪರೀತಾನ್ – ವಿಪರೀತಂಗಳ,  ಚ – ಕೂಡಾ , ಇತಿ ಮನ್ಯತೇ – ಹೇದು ತಿಳಿತ್ತೋ, ಸಾ ಬುದ್ಧಿಃ – ಆ ಬುದ್ಧಿಯು, ತಾಮಸೀ (ಸ್ಮೃತಾ) – ತಮೋಗುಣಲ್ಲಿಪ್ಪದು ಹೇಳಿ ತಿಳಿಯಲ್ಪಟ್ಟಿದು.

ಅನ್ವಯಾರ್ಥ

ಏ ಪಾರ್ಥನೇ!, ಏವ ಬುದ್ಧಿ ಭ್ರಾಂತಿಂದ (ಅಜ್ಞಾನ / ಕಸ್ತಲೆ / ಮಾಯೆ) ಅಧರ್ಮವ ಧರ್ಮ ಹೇಳಿಯೂ, ಧರ್ಮವ ಅಧರ್ಮ ಹೇಳಿಯೂ, ಎಲ್ಲ ವಿಷಯಂಗಳನ್ನೂ ವಿಪರೀತವಾಗಿಯೇ (ವಿರುದ್ಧವಾಗಿಯೇ) ತಿಳಿತ್ತೋ ಆ ಬುದ್ಧಿ ತಮೋಗುಣದ್ದು ಹೇದು ತಿಳಿಯಲ್ಪಟ್ಟಿದು.

ತಾತ್ಪರ್ಯ / ವಿವರಣೆ

ತಾಮಸಿಕ ಬುದ್ಧಿ ಕೆಲಸ ಮಾಡೇಕ್ಕಾದ ವಿರುದ್ಧ ದಿಕ್ಕಿಂಗೆ ಕೆಲಸ ಮಾಡುತ್ತು ಹೇಳಿ ಭಗವಂತ° ಇಲ್ಲಿ ಅಭಿಪ್ರಾಯಪಡ್ತ°. ವಾಸ್ತವವಾಗಿ ಧರ್ಮ ಅಲ್ಲದ್ದರ ಧರ್ಮ ಹೇಳಿ, ಧರ್ಮವ ಅಧರ್ಮ ಹೇಳಿ .. ಹೀಂಗೆ ಎಲ್ಲ ವಿಷಯಂಗಳನ್ನೂ ವಿರುದ್ಧವಾಗಿ ತೀರ್ಮಾನುಸುವ ಬುದ್ಧಿ – ತಾಮಸ. ಅದು ಎಲ್ಲ ಕೆಲಸಂಗಳನ್ನೂ ತಪ್ಪು ದಾರಿಲೇ ಕೊಂಡೋವ್ತು. ಇಪ್ಪ ವಿಷಯಂಗಳ ಯಥಾವತ್ ತಿಳಿಯದ್ದೆ, ಎಲ್ಲವನ್ನೂ ವ್ಯತಿರಿಕ್ತವಾಗಿಯೇ ತೀರ್ಮಾನುಸುವದು ತಾಮಸ ಬುದ್ಧಿ. ಬನ್ನಂಜೆ ಹೇಳ್ತವು ಈ ಬುದ್ಧಿಗೆ ದುಃಖವೇ ಸುಖದ ವಸ್ತು. ಉದಾಹರಣೆಗೆ – ಮದ್ಯಪಾನ ಮಾಡುವದು ಆನಂದ ಹೇದು ಗ್ರೇಶಿ ಮದ್ಯವ್ಯಸನಿಗೊ ಆವ್ತವು. ಜ್ಞಾನವನ್ನೇ ಅಜ್ಞಾನ ಹೇದು ತಿಳುದು ಜ್ಞಾನ ಶೂನ್ಯರಾವ್ತವು, ಇನ್ನೊಬ್ಬನ ಹಿತವಚನವನ್ನೂ ಕೇಡು ಹೇಳಿಯೇ ಗ್ರೇಶುವ ಈ ಬುದ್ಧಿ – ತಾಮಸ.

ಹೀಂಗೆ ಭಗವಂತ° ಮೂರು ವಿಧವಾದ ಬುದ್ಧಿಯ ಗುಣಂಗಳ ವಿವರಿಸಿದ್ದ°. ಮುಂದೆ –

ಶ್ಲೋಕ

ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥೩೩॥

ಪದವಿಭಾಗ

ಧೃತ್ಯಾ ಯಯಾ ಧಾರಯತೇ ಮನಃ-ಪ್ರಾಣ-ಇಂದ್ರಿಯ-ಕ್ರಿಯಾಃ । ಯೋಗೇನ ಅವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥

ಅನ್ವಯ

ಹೇ ಪಾರ್ಥ!, (ನರಃ) ಯಯಾ ಅವ್ಯಭಿಚಾರಿಣ್ಯಾ ಧೃತ್ಯಾ ಮನಃ-ಪ್ರಾಣ-ಇಂದ್ರಿಯ-ಕ್ರಿಯಾಃ ಯೋಗೇನ ಧಾರಯತೇ, ಸಾ ಧೃತಿಃ ಸಾತ್ತ್ವಿಕೀ (ಅಸ್ತಿ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪಾರ್ಥನೇ!, (ನರಃ – ಮನುಷ್ಯ°), ಯಯಾ – ಏವ, ಅವ್ಯಭಿಚಾರಿಣ್ಯಾ – ಭಂಗ ಇಲ್ಲದ್ದೆ / ದಾರಿ ತಪ್ಪದ್ದೆ, ಧೃತ್ಯಾ – ದೃಢನಿರ್ಧಾರಂದ, ಮನಃ-ಪ್ರಾಣ-ಇಂದ್ರಿಯ-ಕ್ರಿಯಾಃ – ಮನಸ್ಸು ಪ್ರಾಣ ಇಂದ್ರಿಯ ಕ್ರಿಯೆಗೊ (ಚಟುವಟಿಕೆಗೊ), ಯೋಗೇನ – ಭಕ್ತಿಯೋಗಾಭ್ಯಾಸಂದ, ಧಾರಯತೇ – ಧಾರಣೆಮಾಡಲ್ಪಡುತ್ತೋ, ಸಾ ಧೃತಿಃ – ಆ ದೃಢತೆಯು, ಸಾತ್ತ್ವಿಕೀ (ಅಸ್ತಿ) – ಸತ್ವಗುಣಲ್ಲಿ ಇಪ್ಪದಾಗಿದ್ದು.

ಅನ್ವಯಾರ್ಥ

ಏ ಪಾರ್ಥನೇ!, ಏವ ದೃಢನಿರ್ಧಾರಂದ ಗಟ್ಟಿಮನಸ್ಸು, ಪ್ರಾಣ, ಇಂದ್ರಿಯ ಕ್ರಿಯೆಗೊ ಭಕ್ತಿಯೋಗಾಭ್ಯಾಸಂದ ಭಂಗ ಇಲ್ಲದ್ದೆ (ಅಡಚಣೆ ಇಲ್ಲದ್ದೆ, ಬಿರುಕು ತೊಡರುಗಳಿಲ್ಲದ್ದೆ, ದಾರಿತಪ್ಪದ್ದೆ) ಧರಿಸಲ್ಪಡುತ್ತೋ ಆ ದೃಢತೆ ಸಾತ್ವಿಕವಾದ್ದು.

ತಾತ್ಪರ್ಯ / ವಿವರಣೆ

ಬುದ್ಧಿಯ ವಿವರಣೆಯ ಬಳಿಕ ಭಗವಂತ° ಇಲ್ಲಿ ‘ಧೃತಿ’ಯ ತ್ರೈಗುಣ್ಯ ವೈವಿಧ್ಯವ ವಿವರುಸುತ್ತ°. ಯಾವ ಧೃತಿಂದ (ಧೈರ್ಯ ನಿರ್ಧಾರಂದ) ಮನಸ್ಸು, ದೇಹ, ಇಂದ್ರಿಯಂಗೊ ದಾರಿತಪ್ಪದ್ದೆ ಒಂದಕ್ಕೊಂದು ಪೂರಕವಾಗಿ ಭಕ್ತಿಯೋಗಲ್ಲಿ ಕೆಲಸ ಮಾಡುತ್ತೋ ಅಂತಹ ಧೃತಿ ಸಾತ್ವಿಕ ಧೃತಿ. ಮನಸ್ಸು ಯಥಾವತ್ತಾದ್ದರ ಗ್ರೇಶುತ್ತು, ಇಂದ್ರಿಯಂಗೊ ಮತ್ತೆ ದೇಹ ಅದಕ್ಕೆ ಪೂರಕವಾಗಿ, ಭಕ್ತಿಂದ ಕೆಲಸ ಮಾಡುತ್ತು. ಇಲ್ಲಿ ಯೋಗ ಹೇಳಿರೆ ಭಗವದ್ ಭಕ್ತಿಗೆ ಪೂರಕವಾಗಿ ವಾಸ್ತವವ ಗ್ರಹಿಸುವ ಉಪಾಯ – ಹೇಳಿರೆ, ನಮ್ಮ ಆತ್ಮವಿಶ್ವಾಸ. ಬನ್ನಂಜೆ ಹೇಳುತ್ತವು – ಇಲ್ಲಿ ಅನೇಕ ಮುಖಂಗೊ ಇದ್ದು. ಉದಾಹರಣೆಗೆ – ತಪ್ಪನ್ನು ತಪ್ಪು ಹೇಳುವ ಧೈರ್ಯ. ಸಾಮಾನ್ಯವಾಗಿ ತಪ್ಪಿನ ತಪ್ಪು ಹೇಳ್ಳೆ ಅನೇಕ ತೊಂದರೆಗೊ ಇರ್ತು. ಇದಕ್ಕೆ ಮದಲಾಣ ಅಡ್ಡಿ – ದಾಕ್ಷಿಣ್ಯ. ಭಗವದ್ ಭಕ್ತಿಗೆ ಪೂರಕವಾಗಿ ನಾವು ನಿರ್ದಯವಾಗಿ ಹೇಳೇಕು. ಧೈರ್ಯವಾಗಿ ತಪ್ಪಿನ ಪ್ರತಿಭಟಿಸೆಕು. ತಪ್ಪು ಗ್ರಹಿಕೆ ಮಾಡದ್ದೆ, ತಪ್ಪು ದಾರಿಲಿ ಸಾಗದ್ದೆ, ಭಗವದ್ ಭಕ್ತಿಗೆ ವಿರುದ್ಧವಾಗಿ ನಡಕ್ಕೊಳ್ಳದ್ದೆ, ಸತ್ಯವ ನಿಷ್ಠುರವಾಗಿ ಹೇಳ್ವದು – ಸಾತ್ವಿಕ ಧೃತಿ. ಮನಸ್ಸಿನ ಕೆಟ್ಟದ್ದರ ಬಗ್ಗೆ ಯೋಚುಸದ್ದ ಹಾಂಗೆ ನೋಡಿಗೊಳ್ಳೆಕು, ದೇಹ ಕೆಟ್ಟದ್ದರ ಕಡೇಂಗೆ ಚಲುಸದ್ದ ಹಾಂಗೆ ನೋಡಿಗೊಳ್ಳೆಕು, ಇಂದ್ರಿಯಂಗೊ ಕೆಟ್ಟದ್ದರ ಗ್ರೇಶದ್ದೆ ಇರೆಕು – ಹೀಂಗೆ ಭಗವದ್ ಭಕ್ತಿಗೆ ಪೂರಕವಾಗಿ ಎಲ್ಲವೂ ಸಾತ್ವಿಕ ಧೃತಿ.

ಸಾಮಾನ್ಯವಾಗಿ ನಾವು ನಮ್ಮ ದೇಹ ಇಂದ್ರಿಯಂಗಳ ನಿಯಂತ್ರುಸಲೆ ಎಡಿಗು. ಆದರೆ ಮನಸ್ಸು ಹಿಡಿತಕ್ಕೆ ತಪ್ಪದು ಅಷ್ಟು ಸುಲಭವಾದ್ದಲ್ಲ. ಮನಸ್ಸಿನ ಒಂದರಿಯಂಗೆ ಒಂದು ಕ್ಷಣಕ್ಕೆ ಹತೋಟಿಲಿ ಹಿಡುದು ಮಡಿಕ್ಕೊಂಡ್ರೆ ಸಾಲ. ಮುಂದೆ ಜೀವನದುದ್ದಕ್ಕು ಅದೇ ಸ್ಥಿಮಿತಲ್ಲಿ ಮನಸ್ಸು ಇರೆಕು. ಇದಕ್ಕೆ ದೀರ್ಘ ಕಾಲದ ಅವಿರತ ಸಾಧನೆ ಅಗತ್ಯ. ಇವೆಲ್ಲವ ಅರ್ತು ಧೈರ್ಯಂದ ಭಗವದ್ ಭಕ್ತಿಗೆ ಕರ್ಮಕ್ಕೆ ಯೋಗ್ಯವಾಗಿ ಮನಸ್ಸಿನ, ದೇಹೇಂದ್ರಿಯಂಗಳ, ನಮ್ಮ ಉಸಿರನ್ನೇ ದೃಢತೆಲ್ಲಿ ಮಡಿಕ್ಕೊಂಡಿಪ್ಪ ಧೃತಿ – ಸಾತ್ವಿಕ.

ಶ್ಲೋಕ

ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾ ಧಾರಯತೇsರ್ಜುನ ।
ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ॥೩೪॥

ಪದವಿಭಾಗ

ಯಯಾ ತು ಧರ್ಮ-ಕಾಮ-ಅರ್ಥಾನ್ ಧೃತ್ಯಾ ಧಾರಯತೇ ಅರ್ಜುನ । ಪಸಂಗೇನ ಫಲ-ಆಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ॥

ಅನ್ವಯ

ಹೇ ಅರ್ಜುನ!, ಯಯಾ ಧೃತ್ಯಾ ಪ್ರಸಂಗೇನ ಫಲ-ಆಕಾಂಕ್ಷೀ ತು (ಸನ್) ಧರ್ಮ-ಕಾಮ-ಅರ್ಥಾನ್ (ನರಃ) ಧಾರಯತೇ, ಹೇ ಪಾರ್ಥ!, ಸಾ ಧೃತಿಃ ರಾಜಸೀ (ಅಸ್ತಿ) ।

ಪ್ರತಿಪದಾರ್ಥ

ಹೇ ಅರ್ಜುನ ! – ಏ ಅರ್ಜುನ°! ಯಯಾ ಧೃತ್ಯಾ – ಏವ ದೃಢತೆಂದ, ಪ್ರಸಂಗೇನ – ಆಸಕ್ತಿಂದಲಾಗಿ, ಫಲ-ಆಕಾಂಕ್ಷೀ – ಕಾಮ್ಯಫಲಂಗಳ ಆಶಿಸಿ, ತು – ಆದರೋ, (ಸನ್ – ಆಗಿದ್ದುಗೊಂಡು), ಧರ್ಮ-ಕಾಮ-ಅರ್ಥಾನ್ – ಧರ್ಮ, ಇಂದ್ರಿಯತೃಪ್ತಿ, ಆರ್ಥಿಕ ಅಭಿವೃದ್ಧಿಗಳ, (ನರಃ – ಮನುಷ್ಯ°), ಧಾರಯತೇ – ಧರಿಸಲ್ಪಡುತ್ತೋ, ಹೇ ಪಾರ್ಥ !- ಏ ಅರ್ಜುನ!, ಸಾ ಧೃತಿಃ – ಆ ಧೃತಿಯು, ರಾಜಸೀ (ಅಸ್ತಿ) – ರಜೋಗುಣಲ್ಲಿಪ್ಪದಾಗಿದ್ದು.

ಅನ್ವಯಾರ್ಥ

ಏ ಅರ್ಜುನ!, ಏವ ದೃಢತೆಂದ ಮನುಷ್ಯ° ಆಸಕ್ತಿಂದಲಾಗಿ, ಕಾಮ್ಯ ಫಲಂಗಳ ಆಶಿಸಿಗೊಂಡು ಧರ್ಮ, ಇಂದ್ರಿಯ ಕಾಮನೆ, ಆರ್ಥಿಕ ಬೇಳವಣಿಗೆಗೆ  ದೃಢಸಂಕಲ್ಪವು ಧರಿಸಿಗೊಂಡಿರುತ್ತೋ ಅದು ರಾಜಸವಾದ್ದಾಗಿದ್ದು.

ತಾತ್ಪರ್ಯ / ವಿವರಣೆ

ರಾಜಸ ಗುಣಲ್ಲಿಪ್ಪೋರಿಂಗೆ ಧಾರ್ಮಿಕ ಅಥವಾ ಆರ್ಥಿಕ ಚಟುವಟಿಕೆಲಿ ಏವತ್ತೂ ಕರ್ಮಫಲಾಪೇಕ್ಷೆಯನ್ನೇ ಮಡಿಕ್ಕೊಂಡಿರುತ್ತವು. ಅವು ಕರ್ಮ ಮಾಡುವದು ಐಹಿಕ ಲಾಭ ಪಡವ ಉದ್ದೇಶ ಮಡಿಕ್ಕೊಂಡೇ. ಇಂದ್ರಿಯ ತೃಪ್ತಿ ಅವರ ಬಯಕೆ. ಹಾಂಗಾಗಿ ಅವರ ಮನಸ್ಸು ಪ್ರಾಣ ಇಂದ್ರಿಯಂಗೊ ಅವಳ ಪಡವಲ್ಲಿಯೇ ಚಟುವಟಿಕೆಲಿ ತೊಡಗಿಯೊಂಡಿರುತ್ತು. ಅಂತಹ ಅವರ ದೃಢ ನಿರ್ಧಾರ ರಾಜಸವಾದ್ದು. ಅಬ್ಬೆ ಮಗುವಿನ ಪ್ರೀತಿಸುವ ಹಾಂಗೆ ಭಕ್ತ° ದೇವರ (ಭಗವಂತನ) ಅಪಾರ ಅನನ್ಯ ನಿಸ್ವಾರ್ಥ ಭಕ್ತಿಂದ ಪ್ರೀತಿಸೆಕು. ಅಲ್ಲಿ ಫಲಾಪೇಕ್ಷೆ ಸೇರಿರೆ ಅದು ಸ್ವಾರ್ಥ ಆವ್ತೇ ಹೊರತು ನಿಜ ಭಕ್ತಿ ಅಲ್ಲ. ರಾಜಸ ತನ್ನ ಇಷ್ಟಾರ್ಥ ಸಿದ್ಧಿಗಾಗಿಯೇ ಕರ್ಮಲ್ಲಿ ತೊಡಗುವದು ಆದರೂ ಧರ್ಮದ ಚೌಕಟ್ಟಿಲ್ಲಿಯೇ ಕರ್ಮವ ಮಾಡುತ್ತ° ಅಂದರೂ ಅವರ ಭಕ್ತಿ ಫಲಾಪೇಕ್ಷೆಂದ ಕೂಡಿದ್ದದು. ಅಂವ ಪೈಸೆ ಮಾಡುವದು ಅಥವಾ ಅತಿಯಾದ ಮೋಹಂದ ಫಲಸ ಆಸೆ ಹೊತ್ತುಗೊಂಡು ದೇವರ ಪ್ರೀತಿಸುವುದು ಎಲ್ಲವೂ ಸ್ವಾರ್ಥಕ್ಕಾಗಿ. ಅದು ನಿಜ ಸಾತ್ವಿಕ ಭಕ್ತಿ ಆವ್ತಿಲ್ಲೆ. ಅದಕ್ಕೆ ರಾಜಸ ಭಕ್ತಿ ಹೇದು ಹೆಸರು, ಅವನ ಧೃತಿಗೆ ರಾಜಸ ಹೇಳಿಯೇ ಹೇಳುವದು. ಅವನ ದೃಢ ನಿರ್ಧಾರ (ಧೃತಿ) ಎಲ್ಲವೂ ಏನ್ನನ್ನೋ ಪಡವಲೆ ಹೆರಟ ಭಗವದ್ ಭಕ್ತಿ.

ಶ್ಲೋಕ

ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥೩೫॥

ಪದವಿಭಾಗ

ಯಯಾ ಸ್ವಪ್ನಮ್ ಭಯಮ್ ಶೋಕಮ್ ವಿಷಾದಮ್ ಮದಮ್ ಏವ ಚ । ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥

ಅನ್ವಯ

ಹೇ ಪಾರ್ಥ!, ದುರ್ಮೇಧಾ (ನರಃ) ಯಯಾ ಸ್ವಪ್ನಮ್, ಭಯಮ್, ಶೋಕಮ್, ವಿಷಾದಮ್, ಮದಮ್ ಏವ ಚ ನ ವಿಮುಂಚತಿ, ಸಾ ಧೃತಿಃ ತಾಮಸೀ (ಮತಾ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪಾರ್ಥನೇ!, ದುರ್ಮೇಧಾ (ನರಃ)  – ಬುದ್ಧಿಯಿಲ್ಲದ್ದ ಮನುಷ್ಯ°, ಯಯಾ – ಏವುದರಿಂದ, ಸ್ವಪ್ನಮ್ – ಸ್ವಪ್ನವ, ಭಯಮ್ – ಭೀತಿಯ, ಶೋಕಮ್ – ದುಃಖವ, ವಿಷಾದಮ್ – ಸಂಕಟವ, ಮದಮ್ – ಗರ್ವವ, ಏವ – ಖಂಡಿತವಾಗಿಯೂ, ಚ – ಕೂಡ, ನ ವಿಮುಂಚತಿ – ತ್ಯಜಿಸುತ್ತನಿಲ್ಲೆಯೋ, ಸಾ ಧೃತಿಃ – ಆ ದೃಢತೆಯು, ತಾಮಸೀ (ಮತಾ) – ತಾಮಸಗುಣಲ್ಲಿಪ್ಪದು ಹೇದು ಅಭಿಪ್ರಾಯ.

ಅನ್ವಯಾರ್ಥ

ಹೇ ಪಾರ್ಥ!, ಬುದ್ಧಿಹೀನನಾದ ಮನುಷ್ಯ° ಯಾವ ದೃಢತೆಂದ ಕನಸು, ಭಯ, ಶೋಕ, ವಿಷಾದ, ಭ್ರಮೆಯ ಬಿಟ್ಟು ಹೆರಬತ್ತನಿಲ್ಲೆಯೋ ಆ ದೃಢತೆಯು ತಾಮಸಗುಣದ್ದು ಹೇಳಿ ಅಭಿಪ್ರಾಯ.

ತಾತ್ಪರ್ಯ / ವಿವರಣೆ

ಸಾತ್ವಿಕ ಗುಣಲ್ಲಿಪ್ಪವ ಕನಸು ಕಾಣುತ್ತನೇ ಇಲ್ಯೋ ಹೇದು ಗ್ರೇಶಲಾಗ. ಇಲ್ಲಿ ‘ಸ್ವಪ್ನಂ’ ಹೇಳಿರೆ ಬರೇ ಸ್ವಪ್ನ / ಕನಸು ಹೇದು ಅರ್ಥ ಅಲ್ಲ. ಸ್ವಪ್ನಂ ಹೇದು ಇಲ್ಲಿ ಹೇಳಿದ್ದದು ಅತಿನಿದ್ರೆಯ. ಅತೀ ಒರಕ್ಕು. ಕನಸು ಕಾಂಬದು ಎಲ್ಲಾ ಗುಣಲ್ಲಿಯೂ ಇದ್ದು. ಸತ್ವ, ರಜೋ, ತಮೋಗುಣಲ್ಲಿಯೂ ಕನಸು ಹೇಳ್ವದು ಇದ್ದು. ಆದರೆ ಇಲ್ಲಿ ಹೇಳಿಪ್ಪ ಸ್ವಪ್ನ ಅತೀ ಒರಕ್ಕಿನ. ಸೋಮಾರಿಯಾಗಿ, ಏವ ಕಾರ್ಯಕ್ಕೂ ಆಸಕ್ತಿ ಇಲ್ಲದ್ದೆ ಏವತ್ತು ನೋಡಿರೂ ಒರಗಿಯೊಂಡಿಪ್ಪದು, ಏನೇನೂ ಸಂಬಂಧ ಇಲ್ಲದ್ದರ ಚಿಂತಿಸಿ ಕನಸು ಕಾಂಬದು. ಐಹಿಕವಾದ ವಸ್ತು ವಿಷಯಂಗಳ ಬಗ್ಗೆ ಯಜಮಾಂತಿಕೆಯ ಕನಸು ಕಾಂಬದು. ಅವರ ಪ್ರಾಣ, ಮನಸ್ಸು, ಇಂದ್ರಿಯಂಗೊ ಹೀಂಗೇ ನಿರತವಾಗಿಯೊಂಡಿರುತ್ತು. ಹೀಂಗೆ ಕನಸು ಕಾಂಬವರಿಂಗೆ ಕರ್ತವ್ಯ ಮಾಡೇಕು ಹೇಳ್ವ ಉದ್ದೇಶ ಏನೇನೂ ಇಲ್ಲೆ. ಹೇಂಗಾರು ಏನಾರು ಮಾಡಿಯಾರೂ ಕಾರ್ಯ ಸಾಧನೆ ಮಾಡೇಕು ಹೇಳ್ವದೊಂದೋ ಜ್ಞಾನ / ನಿರ್ಧಾರ. ಹಾಂಗಾಗಿ ಇವಕ್ಕೆ ಹೆದರಿಕೆ ಹೆಚ್ಚಿಗೆ. ಎಂತ ಆಗಿಹೋಕೋ, ಎಲ್ಯಾರು ನಷ್ಟ ಆಗಿಹೋಕೋ ಹೇಳ್ವ ಭಯ. ಇವಕ್ಕೆ ಜೀವನಲ್ಲಿ ಉತ್ಸಾಹ , ಗೆಲುವು ಎಂತರ್ಲಿಯೂ ಇಲ್ಲೆ. ತಾನು ಶ್ರೇಷ್ಠ ಬಾಕಿದ್ದೋರು ಬೇಕೂಪಂಗೊ ಹೇದು ಇವರ ಮನಸ್ಸಿಲ್ಲಿ ಅಡರಿರುತ್ತು. ಲಂಚ ತೆಕ್ಕೊಂಬದು, ಮತ್ತೆ ಎಲ್ಯಾರು ಸಿಕ್ಕಿ ಬೀಳುಗೋ ಹೇಳ್ವ ಹೆದರಿಕೆ!, ಇವಕ್ಕೆ ಸೊಕ್ಕು ಎಂದೂ ತಗ್ಗಲೆ ಇಲ್ಲೆ, ಮನಸ್ಸು ತಿಳಿಗೇಡಿತನಲ್ಲಿ ದೃಢವಾಗಿರುತ್ತು. ಹೀಂಗಿಪ್ಪ ಧೃತಿಗೆ ತಾಮಸ ಹೇದು ಹೇಳುವದು.

ಶ್ಲೋಕ

ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।
ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥೩೬॥

ಪದವಿಭಾಗ

ಸುಖಮ್ ತು ಇದಾನೀಮ್ ತ್ರಿವಿಧಮ್ ಶೃಣು ಮೇ ಭರತರ್ಷಭ । ಅಭ್ಯಾಸಾತ್ ರಮತೇ ಯತ್ರ ದುಃಖಾಂತಮ್ ಚ ನಿಗಚ್ಛತಿ ॥

ಅನ್ವಯ

ಹೇ ಭರತರ್ಷಭ!, ಇದಾನೀಂ ತು ತ್ರಿವಿಧಂ ಸುಖಂ ಮೇ ಶೃಣು । ಯತ್ರ (ಸುಖೇ ಜೀವಃ) ಅಭ್ಯಾಸಾತ್ ರಮತೇ, ದುಃಖಾಂತಂ ಚ ನಿಗಚ್ಛತಿ ।

ಪ್ರತಿಪದಾರ್ಥ

ಹೇ ಭರತರ್ಷಭ! – ಏ ಭರತವಂಶ ಶ್ರೇಷ್ಠನೇ!, ಇದಾನೀಮ್ – ಈಗ, ತು – ಆದರೆ, ತ್ರಿವಿಧಮ್ ಸುಖಮ್ – ಮೂರು ವಿಧದ ಸುಖವ, ಮೇ ಶೃಣು – ಎನ್ನಂದ ಕೇಳು, ಯತ್ರ (ಸುಖೇ ಜೀವಃ) – ಎಲ್ಲಿ ಸುಖಲ್ಲಿ ಜೀವಿಯು, ಅಭ್ಯಾಸಾತ್ ರಮತೇ – ಅಭ್ಯಾಸಂದ ಭೋಗಿಸುತ್ತನೋ, ದುಃಖಾಂತಮ್ – ದುಃಖದ ಕೊನೆಯ, ಚ – ಕೂಡ, ನಿಗಚ್ಛತಿ – ಹೊಂದುತ್ತ°

ಅನ್ವಯಾರ್ಥ

ಹೇ ಭರತವಂಶ ಶ್ರೇಷ್ಠನಾದ ಅರ್ಜುನ!, ಈಗ, (ಗುಣಭೇದಕ್ಕನುಸಾರವಾಗಿ) ಸುಖದ ಮೂರು ಬಗೆಯ ಎನ್ನಂದ ಕೇಳು. ಅದರಿಂದ ಎಡೆಬಿಡದ ಅಭ್ಯಾಸಂದ ಸಂತೋಷಂದ ಅನುಭೋಗಿಸಿ ದುಃಖಾಂತ್ಯವನ್ನೂ ಹೊಂದುತ್ತ° .

ತಾತ್ಪರ್ಯ / ವಿವರಣೆ

ಬದ್ಧ ಆತ್ಮ (ಜೀವಿ) ಐಹಿಕ ಸುಖವ ಮತ್ತೆ ಮತ್ತೆ ಸವಿಯಲೇ ಪ್ರಯತ್ನಿಸುತ್ತ°. ಇದು ಚರ್ವಿತ ಚರ್ವಣ. ಆದರೆ, ಕೆಲವೊಂದರಿ ಹೀಂಗೆ ಸಂತೋಷಪಡುವಾಗ ಮಹಾತ್ಮನೊಬ್ಬನ ಸಹವಾಸಂದ ಅಂವ ಐಹಿಕ ಬಂಧನಂದ ಬಿಡುಗಡೆಯಾವ್ತ°. ಜೀವಿ ಏವುದಾದರೊಂದು ಬಗೆಯ ಇಂದ್ರಿಯ ತೃಪ್ತಿಲಿ ನಿರತನಾಗಿರುತ್ತ°. ಆದರೆ, ಸತ್ಸಂಗಂದಾಗಿ ಇದು ಒಂದೇ ಅಂಶದ ಪುನರಾವರ್ತನೆ ಹೇದು ಅರ್ಥವಾಗಿ ತನ್ನ ನಿಜವಾದ ಕೃಷ್ಣಪ್ರಜ್ಞೆ ಅವನಲ್ಲಿ ಜಾಗೃತವಾದಪ್ಪಗ, ಅಂವ ಎಚ್ಛರಗೊಂಡು ಅಭ್ಯಾಸಮಾಡಿಗೊಂಡು ಹೆರಕಣ್ಣಿಂಗೆ ಸುಖವಾಗಿ ಕಾಂಬ ನಿಜವಾದ ಆ ದುಃಖದ ಅಂತ್ಯವ ಕಾಣುತ್ತ°. ಅರ್ಥಾತ್ ದುಃಖಂದ ಪಾರಾವ್ತ ಸ್ಥಿತಿಯ ಹೊಂದುತ್ತ°. ಹೇಳಿರೆ., ಸಾಮಾನ್ಯವಾಗಿ ಐಹಿಕ ವಿಷಯಂಗೊ ಸುಖಪ್ರದವಾಗಿಪ್ಪದಾಗಿ ಬರಿಗಣ್ಣಿಂಗೆ ಕಾಣುತ್ತು. ಆದರೆ ಅದುವೇ ದುಃಖದ ಮೂಲ ಹೇತು. ಈವರೇಂಗೆ ಅಭ್ಯಾಸವಾಗಿ ಭೋಗಿಸಿಗೊಂಡಿಪ್ಪ ಆ ಸುಖದ ನಿಜ ಮೂಲ ದುಃಖವಾಗಿದ್ದು. ಕೃಷ್ಣಪ್ರಜ್ಞೆಯ ಜಾಗೃತ ಸ್ಥಿತಿಲಿ ಇದು ಅರಿವಾಗಿ ಅಂವ ಆ ವರೇಂಗೆ ಸುಖ ಹೇದು ಗ್ರೇಶಿಯೊಂಡಿದ್ದ ಮೂಲವಾಗಿ ದುಃಖವಾಗಿಪ್ಪ ಅದರ ತ್ಯಜಿಸಿ ನಿಜದುಃಖವ ಅಭ್ಯಾಸ ಪೂರ್ವಕವಾಗಿ ಪಾರಾವ್ತ°. ಅರ್ಥಾತ್ ದುಃಖಮುಕ್ತನಾವ್ತ°. ದುಃಖದ ಅಂತ್ಯವ ಕಾಣುತ್ತ°. ಅದರಿಂದ ಮತ್ತೆ ಭಗವಂತನ ನಿಜಸುಖವೇ ಅವಂಗೆ ಪರಮ ಸುಖ.

ಶ್ಲೋಕ

ಯತ್ತದಗ್ರೇ ವಿಷಮಿವ ಪರಿಣಾಮೇsಮೃತೋಪಮಮ್ ।
ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್ ಆತ್ಮಬುದ್ಧಿಪ್ರಸಾದಜಮ್ ॥೩೭॥

ಪದವಿಭಾಗ

ಯತ್ ತತ್ ಅಗ್ರೇ ವಿಷಮ್ ಇವ ಪರಿಣಾಮೇ ಅಮೃತ-ಉಪಮಮ್ । ತತ್ ಸುಖಮ್ ಸಾತ್ತ್ವಿಕಮ್ ಪ್ರೋಕ್ತಮ್ ಆತ್ಮ-ಬುದ್ಧಿ-ಪ್ರಸಾದಜಮ್ ॥

ಅನ್ವಯ

ಯತ್ ಅಗ್ರೇ ವಿಷಮ್ ಇವ, ಪರಿಣಾಮೇ ಅಮೃತ-ಉಪಮಂ ತತ್ ಆತ್ಮ-ಬುದ್ಧಿ-ಪ್ರಸಾದಜಮ್ (ಅಸ್ತಿ), ತತ್ ಸುಖಂ ಸಾತ್ತ್ವಿಕಂ ಪ್ರೋಕ್ತಮ್ ।

ಪ್ರತಿಪದಾರ್ಥ

ಯತ್ – ಏವದು, ಅಗ್ರೇ – ಸುರೂವಿಲ್ಲಿ, ವಿಷಮ್ ಇವ – ವಿಷದ ಹಾಂಗೇ, ಪರಿಣಾಮೇ – ಅಂತ್ಯಲ್ಲಿ, ಅಮೃತ-ಉಪಮಮ್ – ಅಮೃತಕ್ಕೆ ಹೋಲುಸಲೆಡಿಗಪ್ಪದಾದ್ದು ಇದ್ದೋ, ತತ್ – ಅದು, ಆತ್ಮ-ಬುದ್ಧಿ-ಪ್ರಸಾದಜಂ (ಅಸ್ತಿ) – ಆತ್ಮ ಬುದ್ಧಿಗಳ ತೃಪ್ತಿಂದ ಜನಿಸಿದ್ದಾಗಿದ್ದು, ತತ್ ಸುಖಮ್ – ಆ ಸುಖವು, ಸಾತ್ವಿಕಮ್ ಪ್ರೋಕ್ತಮ್ – ಸಾತ್ವಿಕವಾಗಿದ್ದು ಹೇಳಿ ಹೇಳಲ್ಪಟ್ಟಿದು.

ಅನ್ವಯಾರ್ಥ

ಏವುದು ಸುರುವಿಲ್ಲಿ ವಿಷದ ಹಾಂಗೆ ಇದ್ದು ಕಡೇಂಗೆ (ಅಂತ್ಯಲ್ಲಿ) ಅಮೃತದ ಹಾಂಗೆ ಆವ್ತೋ, ಅದು ಆತ್ಮ ಮತ್ತೆ ಬುದ್ಧಿಗಳ ತೃಪ್ತಿಗಾಗಿ ಜನಿತವಾಗಿದ್ದಾಗಿದ್ದು, ಆ ಸುಖವು ಸಾತ್ವಿಕ ಸುಖ ಹೇದು ಹೇಳಲ್ಪಟ್ಟಿದು.

ತಾತ್ಪರ್ಯ / ವಿವರಣೆ

ಆತ್ಮ ಸಾಕ್ಷಾತ್ಕಾರದ ಅನ್ವೇಷಣೆಲಿ ಮನಸ್ಸು ಮತ್ತೆ ಇಂದ್ರಿಯಂಗಳ ನಿಯಂತ್ರಣಗೊಳುಸಲೆ ಮತ್ತೆ ಮನಸ್ಸಿನ ಆತ್ಮನಲ್ಲಿ ಕೇಂದ್ರೀಕರುಸಲೆ ಮನುಷ್ಯ° ಅನೇಕ ನಿಬಂಧನೆಗಳ ಅನುಸರುಸೇಕ್ಕಾವ್ತು. ಈ ಎಲ್ಲ ಪ್ರಕ್ರಿಯೆಗೊ ತುಂಬಾ ಕಷ್ಟದ್ದಾಗಿದ್ದು ಸುರುವಿಲ್ಲಿ. ಅದು ವಿಷಸದೃಶವಾಗಿ ಕಾಂಗು ಸುರೂವಿಲ್ಲಿ. ಬಳಿಕ ಪರಿಣಾಮಲ್ಲಿ ಅದು ಅಮೃತ ಸದೃಶವಾಗಿ ಆತ್ಮನ್ನೋತಿಗೆ ಶ್ರೇಯಸ್ಕರವಾಗಿಪ್ಪ ಅಮೃತದ ಹಾಂಗೆ ಪರಿಣಮುಸುಗು. ಆದರೆ ಆ ಎಲ್ಲ ನಿಯಮ ತ್ರಾಸವ ಯಶಸ್ವಿಯಾಗಿ ಪಾಲಿಸಿರೆ ಮತ್ತೆ ಅಂವ ಅಮೃತವನ್ನೇ ಕುಡಿವಲೆ ಸುರುಮಾಡುತ್ತ°, ಅರ್ಥಾತ್ ನಿಜ ಸುಖವ ಅನುಭವುಸುತ್ತ°. ಇದು ಸಾತ್ವಿಕ ಸುಖ ಹೇದು ಹೇಳಲ್ಪಡುತ್ತು.

ಮೇಗಾಣ ಎರಡು ಶ್ಲೋಕಂಗಳ ಒಟ್ಟು ತಾತ್ಪರ್ಯವ ಇನ್ನೊಂದರಿ ಗಮನಿಸಿರೆ –

ಭಗವಂತ° ಹೇಳ್ತ° – ‘ಮೂರು ರೀತಿಯ ಸುಖವ ಎನ್ನತ್ರಂದ ನೀನು ಕೇಳಿ ತಿಳುಕ್ಕೊ’. ಸುಖಲ್ಲಿಯೂ ಸತ್ವ, ರಾಜಸ, ತಾಮಸ ಹೇದು ಮೂರು ವಿಧ ಇದ್ದು ಹೇಳ್ವದು ಭಗವಂತನ ಅಭಿಪ್ರಾಯ.  ಇನ್ನು ಭಗವಂತ° ಇಲ್ಲಿ ಹೇಳಿಪ್ಪದು ನೋಡಿರೆ – ‘ಅಬ್ಯಾಸಾತ್ ರಮತೇ’ – ಅಭ್ಯಾಸಂದ ರಮಿಸತಕ್ಕುದಾದ್ದು – ಹೇಳಿರೆ ಕಷ್ಟಪಟ್ಟು ಶ್ರಮವಹಿಸಿ ಖುಶಿಕೊಡುವಂತಾದ್ದು; ‘ದುಂಖಾಂತಂ ನಿಗಚ್ಛತಿ’ – ದುಃಖದ ಅಂತ್ಯವನ್ನೇ ಹೊಂದುವದು, ಅರ್ಥಾತ್., ದುಃಖವ ನೀಗಿಸುವಂಥಾದ್ದು; ಮತ್ತೆ ಸುರೂವಿಲ್ಲಿ ಅಪ್ರಿಯವಾಗಿ (ವಿಷವಾಗಿದ್ದು) ಅಕೇರಿಗೆ ಸಿಹಿಯಪ್ಪಾಂತಾದ್ದು. – ಇಂಥ ಸುಖ – ಸಾತ್ವಿಕ. ಇದು ತನ್ನ (ಆತ್ಮ) ಬಗೆ ತಿಳಿಯಾದಪ್ಪಗ, ಭಗವಂತನ ಕರುಣೆಂದ ಬಪ್ಪಂಥಾದ್ದು. ಹಾಂಗಾಗಿ “ಆತ್ಮ-ಬುದ್ಧಿ-ಪ್ರಸಾದಜಂ”. ಆತ್ಮ ಪ್ರಸಾದ ಹೇಳಿರೆ ದೇವರ ಅನುಗ್ರಹ. ಸಾತ್ವಿಕ ಸುಖ ನಾವು ಬೇಕು ಹೇಳಿ ಬಯಸಿದ ಮಾತ್ರಕ್ಕೆ ಅದು ಸಿಕ್ಕ. ಕೃಷ್ಣಪ್ರಜ್ಞೆಲಿ ಕಠಿಣ ಸಾಧನೆಂದ ಅಕೇರಿಗೆ ಭಗವಂತನ ಅನುಗ್ರಹಂದ ಸಿಕ್ಕುವದು. ಅದರ ಪಡವಲೆ ನವಗೆ ಪಾರದರ್ಶಕವಾದ ಶುದ್ಧ ಮನಸ್ಸು ಬೇಕು. ಅದು ಹೆರಂದ ಬಪ್ಪದಲ್ಲ, ಅದು ಒಳಂದಲೇ ಚಿಮ್ಮುವದು. ಹೀಂಗೆ ಭಗವಂತನ ಅನುಗ್ರಹ ಮತ್ತೆ ಮನಸ್ಸಿನ ಪ್ರಸನ್ನೆತೆಂದ ಒಳಾಣ ಸ್ವರೂಪಾನಂದದ ಸುಖವ ಅನುಭವುಸಲೆ ಎಡಿಗು.

ಒಟ್ಟಾರೆ ಮನುಷ್ಯ° ಜೀವನಲ್ಲಿ ಬಯಸುವದು- ಸುಖವ. ಅವನ ಜೀವನದ ಗುರಿ – ಸುಖ. ಆದರೆ ಏವುದು ನಿಜವಾದ ಸುಖ?  ತ್ರೈವಿದ್ಯ (ತ್ರಿವಿಧ) ವ ವಿವರಣೆ (ಸಾತ್ವಿಕ ರಾಜಸ ತಾಮಸ) ಮಾಡಿಗೊಂಡಿಪ್ಪ ಭಗವಂತ° “ಇದಾನೀಂ ತು ಸುಖಂ ತ್ರಿವಿಧಂ ಮೇ ಶೃಣು ” – ಈಗಲಾದರೋ ಸುಖದ ಮೂರು ಬಗೆಯ ಎನ್ನಂದ ಕೇಳು ಹೇಳಿದ°. ಹಾಂಗಾರೆ ಸುಖಲ್ಲಿಯೂ ಮೂರು ವಿಧ – ಸಾತ್ವಿಕ, ರಾಜಸ, ತಾಮಸ ಇದ್ದು ಹೇಳ್ವದು ಇಲ್ಲಿ ನಾವು ಗಮನುಸಲಕ್ಕು. ಇದೀಗ ಮೇಗೆ ಹೇಳಿದ್ದದು ಸಾತ್ವಿಕ ಸುಖದ ಕುರಿತಾಗಿ ಆತು.

ಇಲ್ಲಿ ಭಗವಂತ° ಅರ್ಜುನನ ವಿಶೇಷವಾಗಿ ‘ಭರತರ್ಷಭ’ ಹೇಳ್ವ ಹೆಸರಿಂದ ದೆನಿಗೊಂಡಿದ°. ಭಗವಂತನ ಭಕ್ತಿಲಿ -‘ರತ’ = ಶ್ರೇಷ್ಠ°, ಭರತನಾಂಗೆ ಸುಖದ ಆಸೆ ಇಲ್ಲದ್ದೆ ಪೂರ್ಣ ಪ್ರಮಾಣಲ್ಲಿ ಭಗವಂತನ ಪ್ರೀತಿಸಿಯಪ್ಪಗ, ಭಗವಂತನ ಭಕ್ತಿಲಿ ನಿರತನಾದವರಲ್ಲಿ ಶ್ರೇಷ್ಠನಾದ ವಾಯು (ಹನುಮಂತ) ದೇವರಲ್ಲಿ ಗುರುಭಕ್ತಿಯ ಮಡಿಕ್ಕೊಂಡು, ಭಗವದರ್ಪಣಾಭಾವಂದ ನಮ್ಮ ಕರ್ಮ ನಿರ್ವಹಿಸಿಯಪ್ಪಗ ನಾವು ‘ಭರತರ್ಷಭ’ ಹೇದು ಬನ್ನಂಜೆಯವು ವ್ಯಾಖ್ಯಾನಿಸಿದ್ದವು. ಭರತರ್ಷಭನಾದವಂಗೆ ನಿಜವಾದ ಸುಖ ಹೇದರೆ ಎಂತರ ಹೇಳ್ವದು ತಿಳಿವಲೆ, ಅದರ ಅರ್ತು ಅನುಭವುಸಲೆ ಸಾಧ್ಯ ಹೇಳ್ವ ಗೂಢಾರ್ಥ ಇಲ್ಲಿ ಅಡಗಿದ್ದು.

ಶ್ಲೋಕ

ವಿಷಯೇಂದ್ರಿಯಸಂಯೋಗಾತ್ ಯತ್ತದಗ್ರೇsಮೃತೋಪಮಮ್ ।
ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಮ್ ॥೩೮॥

ಪದವಿಭಾಗ

ವಿಷಯ-ಇಂದ್ರಿಯ-ಸಂಯೋಗಾತ್ ಯತ್ ತತ್ ಅಗ್ರೇ ಅಮೃತ-ಉಪಮಮ್ । ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್ ಸ್ಮೃತಮ್ ॥

ಅನ್ವಯ

ಯತ್ ವಿಷಯ-ಇಂದ್ರಿಯ-ಸಂಯೋಗಾತ್ ಅಗ್ರೇ ಅಮೃತ-ಉಪಮಮ್, ತತ್ ಪರಿಣಾಮೇ (ಚ) ವಿಷಮ್ ಇವ (ಅಸ್ತಿ) ತತ್ ಸುಖಂ ರಾಜಸಂ ಸ್ಮೃತಮ್ ।

ಪ್ರತಿಪದಾರ್ಥ

ಯತ್ – ಏವ, ವಿಷಯ-ಇಂದ್ರಿಯ-ಸಂಯೋಗಾತ್ – ಇಂದ್ರಿಯವಿಷಯಂಗಳ, ಇಂದ್ರಿಯಂಗಳ ಸಂಯೋಗಂದ, ಅಗ್ರೇ – ಪ್ರಾರಂಭಲ್ಲಿ, ಅಮೃತ-ಉಪಮಮ್ – ಅಮೃತೋಪಾಧಿಲಿ (ಅಮೃತದ ಹಾಂಗೆ), ತತ್ – ಅದು, ಪರಿಣಾಮೇ – ಪರಿಣಾಮಲ್ಲಿ (ಅಕೇರಿಗೆ) (ಚ – ಕೂಡಾ), ವಿಷಮ್ ಇವ – ವಿಷದ ಹಾಂಗೆ, (ಅಸ್ತಿ  – ಇದ್ದೋ), ತತ್ – ಅದು, ಸುಖಮ್ – ಸುಖವು, ರಾಜಸಮ್ – ರಾಜಸವು, ಸ್ಮೃತಮ್ – ಹೇದು ಹೇಳಲ್ಪಟ್ಟಿದು.

ಅನ್ವಯಾರ್ಥ

ಏವ ಸುಖವು ಇಂದ್ರಿಯ ವಿಷಯಂಗಳ ಮತ್ತು ಇಂದ್ರಿಯಂಗಳ ಸಂಯೋಗಂದ ಸುರುವಿಲ್ಲಿ ಅಮೃತದ ಹಾಂಗೆ ಸುಖವಾಗಿ, ಅದು ಮತ್ತೆ ಅಂತ್ಯಲ್ಲಿ ವಿಷಕರವಾಗಿ ಪರಿಣಮಿಸುತ್ತೋ, ಆ ಸುಖ ರಾಜಸ ಸುಖ ಹೇದು ಹೇಳಲ್ಪಟ್ಟಿದು.

ತಾತ್ಪರ್ಯ / ವಿವರಣೆ

ಏವುದು ಮದಾಲು ಅನುಭವುಸುವಾಗ ಬಹು ಸುಖವಾಗಿಯೂ ಆನಂದದಾಯಕವಾಗಿಯೂ ಇದ್ದುಗೊಂಡು ಮತ್ತೆ ಅದರ ಪರಿಣಾಮ ದುಃಖಕಾವಾಗಿರುತ್ತೋ ಅದು ರಾಜಸ. ಇದು ಬಾಹ್ಯ ಸುಖ. ಇದು ಹೆರಾಣ ವಿಷಯಲ್ಲಿ ನಮ್ಮ ಇಂದ್ರಿಯ ಸಂಪರ್ಕಂದ ತತ್ಕಾಲಿಕ ಸಿಕ್ಕುವ ಸುಖ. ಆದರೆ ಇದರೆ ಪರಿಣಾಮ ದೀರ್ಘ ವಿಷಕರವಾಗಿದ್ದು , ದುಃಖಕರವಾಗಿಪ್ಪದು. ಮತ್ತೆ ಅದರ ಬಹು ಸಮಯ ದುಃಖಂದ ಅನುಭವಿಸಿ ಸಂಕಷ್ಟಲ್ಲಿ ನೆಗರಿಗೊಂಡಿರೆಕ್ಕಾವ್ತು. ವಿಷಯ ಸುಖವ ಅನುಭವುಸುದು ಇಲ್ಲಿ ತಪ್ಪು ಹೇಳಿ ಹೇಳಿದ್ದಲ್ಲ ಆದರೆ ಅದರ ಮಿತಿ ಮೀರಿ ಉಪಯೋಗಿಸಿದಲ್ಲಿ ಅನಾಹುತವೇ ಅಪ್ಪದು ಹೇಳ್ವ ಎಚ್ಚರಿಕೆ ಇಲ್ಲಿ ಭಗವಂತ° ಹೇಳಿದ್ದದು. ಒಟ್ಟಿಲ್ಲಿ ಕ್ಷಣಿಕ ಸುಖವ ಗೆಲ್ಲೆಕು ಇಲ್ಲದ್ರೆ ಅದನ್ನೇ ಚಟವಾಗಿ ತೆಕ್ಕೊಂಬದು ರಾಜಸ.

ಶ್ಲೋಕ

ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ ।
ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ ॥೩೯॥

ಪದವಿಭಾಗ

ಯತ್ ಅಗ್ರೇ ಚ ಅನುಬಂಧೇ ಚ ಸುಖಮ್ ಮೋಹನಮ್ ಆತ್ಮನಃ । ನಿದ್ರಾ-ಆಲಸ್ಯ-ಪ್ರಮಾದ-ಉತ್ಥಮ್ ತತ್ ತಾಮಸಮ್ ಉದಾಹೃತಮ್ ॥

ಅನ್ವಯ

ಯತ್ ಅಗ್ರೇ ಚ ಅನುಬಂಧೇ ಚ ಆತ್ಮನಃ ಮೋಹನಂ ನಿದ್ರಾ-ಆಲಸ್ಯ-ಪ್ರಮಾದ-ಉತ್ಥಮ್, ತತ್ ಸುಖಂ ತಾಮಸಂ ಉದಾಹೃತಮ್ ।

ಪ್ರತಿಪದಾರ್ಥ

ಯತ್ – ಏವುದು, ಅಗ್ರೇ – ಸುರುವಿಲ್ಲಿ, ಚ – ಕೂಡ, ಅನುಬಂಧೇ – ಅಂತ್ಯಲ್ಲಿ, ಚ – ಕೂಡ, ಆತ್ಮನಃ – ತನ್ನ, ಮೋಹನಮ್ – ಮೋಹಕ, ನಿದ್ರಾ – ಒರಕ್ಕು, ಆಲಸ್ಯ – ಸೋಮಾರಿತನ, ಪ್ರಮಾದ – ಭ್ರಮೆ, ಉತ್ಥಮ್ – ಉತ್ಪನ್ನಂಗಳಾದವು ಆಗಿದ್ದವೋ, ತತ್ ಸುಖಮ್ – ಆ ಸುಖವು, ತಾಮಸಮ್ – ತಾಮಸ ಗುಣದ್ದು, ಉದಾಹೃತಮ್ – ಹೇದು ಹೇಳಲಾಯ್ದು.

ಅನ್ವಯಾರ್ಥ

ಏವ ಸುಖವು ಸುರಿವಿಲ್ಲ್ಯೂ ಅಕೇರಿಗೂ ತನ್ನ ಮೋಹ, ಒರಕ್ಕು, ಆಲಸ್ಯ, ಭ್ರಮೆಗಳ ಉತ್ಪನ್ನವಾಗಿದ್ದೋ ಆ ಸುಖವು ತಾಮಸ ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ಆತ್ಮಸಾಕ್ಷಾತ್ಕಾರಕ್ಕೆ ಕುರುಡಾದ ತನ್ನ ಏಳಿಗೆಯನ್ನೇ ಪಡವಲೆ ಬಿಡದ್ದ, ಸುರುವಿಂದ ಅಕೇರಿವರೇಂಗೂ ಭ್ರಾಂತಿಯೇ ಆದ, ಸೋಮಾರಿತನ, ಮತ್ತೆ ಮಾಯೆಂದ ಉದ್ಭವವಪ್ಪ ಸುಖವ ತಾಮಸಿಕ ಹೇದು ಹೇಳಲ್ಪಟ್ಟಿದು. ಸೋಮಾರಿತನಲ್ಲಿ ಮತ್ತೆ ಒರಕ್ಕಿಲ್ಲಿ ಸಂತೋಷಪಡುವವನದ್ದು ನಿಶ್ಚಯವಾಗಿಯೂ ತಾಮಸ ಗುಣ ಹೇದು ಭಗವಂತ° ಇಲ್ಲಿ ವರ್ಣಿಸಿದ್ದ°. ಇದಕ್ಕೆ ಸುರುವಾದರೆ ಮತ್ತೆ ಅಂತ್ಯ ಇಲ್ಲೆ. ಏವತ್ತೂ ಏವುದೇ ಏಳಿಗೆಲಿ ತನ್ನ ತೊಡಗಿಸಿಗೊಂಬಲೆ ಮನಸೇ ಬಾರ. ಏವತ್ತೂ ಆಲಸ್ಯ ಮೈ ಬಿಡ. ಒರಕ್ಕಿಲ್ಲಿಯೇ ಸುಖ ಕಾಂಬ ತೃಪ್ತಿ ಇದು. ಇದರಿಂದ ಆತ್ಮೋತ್ಕರ್ಷ ಇಲ್ಲವೇ ಇಲ್ಲೆ. ರಾಜಸ ಗುಣದೋನಿಂಗೆ ಸುರುವಿಲ್ಲಿಯಾರು ಕ್ಷಣಿಕ ಸುಖ ಇದ್ದು ಆದರೆ ಅಕೇರಿಗೆ ಸಂಕಟಕ್ಕೆ ದೂಡಲ್ಪಡುತ್ತ°. ತಾಮಸಿಗೆ ಸುಖ ಹೇಳ್ವದು ಬರೇ ಭ್ರಮೆ ಮಾಂತ್ರ. ಭ್ರಮೆಯ ಸುಖವ ಗ್ರೇಷಿ ನಿಜ ಸಂಕಟಲ್ಲಿ ನರಳಿಗೊಂಡಿರುತ್ತ° – ತಾಮಸೀ.

ಮನುಷ್ಯನ ವಾಸ್ತವ ಪ್ರಪಂಚಂದ ಭ್ರಮೆಗೆ ತಳ್ಳಿ, ಅವನ ಮೋಹದ ಬಲೆಲಿ ಬೀಳುಸಿ, ಬುದ್ಧಿಗೇಡಿಯನ್ನಾಗಿಸಿ, ಸಂತೋಷದ ಭ್ರಮೆ ಹುಟ್ಟುಸುವದು ತಾಮಸ ಸುಖದ ಲಕ್ಷಣ ಹೇಳಿ ಭಗವಂತ° ಇಲ್ಲಿ ವರ್ಣಿಸಿದ್ದ°. ಇದರಲ್ಲಿ ಸುರುವಿಂದ ಅಕೇರಿವರೇಂಗೂ ಸುಖ ಇಲ್ಲೆ. ಅದು ಬರೇ ಭ್ರಮೆ. ಬನ್ನಂಜೆ ಕೆಲವು ಉದಾಹರಣೆ ಹೇಳ್ತವು – ಮದ್ಯಪಾನ, ಧೂಮಪಾನ ಇತ್ಯಾದಿ ವ್ಯಸನ / ದುಶ್ಚಟಂಗೊ, ಜೂಜು, ಕಾಮ  ಇತ್ಯಾದಿ. ಇನ್ನು ಮನುಷ್ಯಂಗೆ ಒರಕ್ಕು ಬೇಡ ಹೇಳಿ ಅಲ್ಲ, ಎಷ್ಟು ಒರಕ್ಕು ಬೇಕೋ ಅಷ್ಟು ಒರಗೆಕು. ಅದು ಬಿಟ್ಟು ದಿನ ಇಡೀ ಒರಗಿರೆ ಅದು ಸೋಮಾರಿತನ, ತನ್ನ ದುರ್ವ್ಯಸಕ್ಕೆ ಪರೋಕ್ಷವಾಗಿ ತಳ್ಳುವದು. – ಇದು ತಾಮಸ. ಇದು ಅಜ್ಞಾನ, ಮನುಷ್ಯನ ದಾರಿ ತಪ್ಪುಸುವಂತಾದ್ದು.

ಶ್ಲೋಕ

ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ ॥೪೦॥

ಪದವಿಭಾಗ

ನ ತತ್ ಅಸ್ತಿ ಪೃಥಿವ್ಯಾಮ್ ವಾ ದಿವಿ ದೇವೇಷು ವಾ ಪುನಃ । ಸತ್ತ್ವಮ್ ಪ್ರಕೃತಿಜೈಃ ಮುಕ್ತಮ್ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ ॥

ಅನ್ವಯ

ಯತ್ ಸತ್ತ್ವಮ್ ಏಭಿಃ ಪ್ರಕೃತಿಜೈಃ ತ್ರಿಭಿಃ ಗುಣೈಃ ಮುಕ್ತಂ ಸ್ಯಾತ್, ತತ್ ಪೃಥಿವ್ಯಾಂ ವಾ ದಿವಿ ವಾ ಪುನಃ ದೇವೇಷು (ವಾ) ನ ಅಸ್ತಿ ।

ಪ್ರತಿಪದಾರ್ಥ

ಯತ್ ಸತ್ತ್ವಮ್ – ಏವ ಅಸ್ತಿತ್ವವು , ಏಭಿಃ ಪ್ರಕೃತಿಜೈಃ – ಈ ಭೌತಿಕಪ್ರಕೃತಿಗಳಿಂದ ಹುಟ್ಟಿದ, ತ್ರಿಭಿಃ ಗುಣೈಃ – ಮೂರು ಗುಣಂಗಳಿಂದ, ಮುಕ್ತಃ ಸ್ಯಾತ್ – ಮುಕ್ತವಾದ್ದು ಇದ್ದೋ, ತತ್ – ಅದು, ಪೃಥಿವ್ಯಾಮ್ ವಾ – ಭೂಮಿಲ್ಲಿಯೋ, ದಿವಿ ವಾ – ಊರ್ಧ್ವಲೋಕಂಗಳಲ್ಲಿಯೋ, (ವಾ = ಅಥವಾ), ಪುನಃ – ಮತ್ತೆ, ದೇವೇಷು(ವಾ) – ದೇವತೆಗಳಲ್ಲಿಯೋ , ನ ಅಸ್ತಿ – ಇಲ್ಲೆ.

ಅನ್ವಯಾರ್ಥ

ಭೌತಿಕ ಪ್ರಕೃತಿಲಿ ಜನಿಸಿದ ಏವ ಅಸ್ತಿತ್ವ ಇದ್ದೋ ಅದು ಪ್ರಕೃತಿಯ ಮೂರುಗುಣಂಗಳಿಂದ ಮುಕ್ತವಾದ್ದು ಈ ಪ್ರಪಂಚಲ್ಲಾಗಲೀ, ಮೆಲೆ ಇಪ್ಪ ಲೋಕಂಗಳಲ್ಲಿ ಆಗಲಿ ಅಥವಾ ದೇವತೆಗಳಲ್ಲಾಗಲೀ ಇಲ್ಲೆ.

ತಾತ್ಪರ್ಯ / ವಿವರಣೆ

ಪ್ರಕೃತಿಜನ್ಯಂಗಳಾದ ಈ ಮೂರು ಗುಣಂಗಳ ಮೀರಿದ / ಮುಕ್ತವಾದ ಅಸ್ತಿತ್ವ /ಜೀವಜಾತಂಗೊ ಈ ಐಹಿಕ ಸೃಷ್ಟಿಲಿ ಇಲ್ಲೆ ಹೇಳಿ ಭಗವಂತ° ಇಲ್ಲಿ ಹೇಳಿದ್ದ°. ಸಮಸ್ತ ಜೀವಜಾತಂಗೊ ತ್ರಿಗುಣಂಗಳ ಅಧೀನ. ಪ್ರತಿಯೊಂದು ಜೀವವೂ / ಇಡೀ ಜಗತ್ತು ಈ ತ್ರಿಗುಣಂಗಳ ಮಿಶ್ರಣ.  ನೂರಕ್ಕೆ ನೂರು ಸಾತ್ವಿಕ / ರಾಜಸ/ ತಾಮಸ ಹೇಳಿ ಏವುದೂ ಇಲ್ಲೆ. ಜೀವ ಸ್ವಭಾವವ ನೇರವಾಗಿ ಸಾತ್ವಿಕ / ರಾಜಸ/ ತಾಮಸ ಹೇಳಿ ವಿಭಾಗ ಮಾಡ್ಳೆ ಬತ್ತಿಲ್ಲೆ.

 

ಅಂಬಗ ಮುಂದೆ ಎಂತರ..?!        … ಬಪ್ಪ ವಾರ ನೋಡುವೋ°.

 

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 26 – 40

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×