Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   18/04/2013    1 ಒಪ್ಪಂಗೊ

ಚೆನ್ನೈ ಬಾವ°

 

ಮನುಷ್ಯ° ಶಾಸ್ತ್ರೋಕ್ತ ವಿಧಿನಿಯಮಂಗಳ ಅನುಸರುಸುವದರ ಮೂಲಕ ಮುಕ್ತಿಮಾರ್ಗಕ್ಕೆ ಹೋಪಲೆ ಯೋಗ್ಯನಾವುತ್ತ° ಹೇಳಿ ಭಗವಂತ ಹಿಂದಾಣ ಅಧ್ಯಾಯಲ್ಲಿ ಅಕೇರಿಗೆ ಹೇಳಿದ್ದ°. ಯಾವುದು ಮಾಡೇಕ್ಕಾದ್ದು, ಏವುದು ಮಾಡ್ಳಾಗದ್ದು ಹೇಳಿ ತಿಳಿವಲೆ ಶಾಸ್ತ್ರವೇ ಪ್ರಮಾಣ. ಶಾಸ್ತ್ರ ವಿಧಿಯ ಮೀರಿ ನಡವವಂಗೆ ಸಿದ್ಧಿಯೂ ಇಲ್ಲೆ ಗತಿಯೂ ಇಲ್ಲೆ ಹೇಳಿ ಭಗವಂತ° ಸ್ಪಷ್ಟಮಾತಿಂದ ಎಚ್ಚರಿಸಿದ್ದ°. ಕರ್ಮಫಲದ ಆಸಕ್ತಿಯ ಬಿಟ್ಟು ಭಗವಂತನ ಪೂಜೆ ಹೇದು ತಿಳ್ಕೊಂಡು ಕರ್ಮವ ಮಾಡು ಹೇಳಿ ಈ ಮದಲೇ ಭಗವಂತ° ಸೂಚಿಸಿದ್ದ°. ಇಲ್ಲಿ ಕರ್ಮ ಹೇಳಿರೆ ಶಾಸ್ತ್ರೋಕ್ತ , ಸತ್ಕರ್ಮವ ಮಾಡೆಕು ಹೇಳಿ ಭಗವಂತ° ಹೇಳಿದ್ದದು. ಸತ್ವ-ರಜಸ್ಸು-ತಮಸ್ಸುಗಳೆಂಬ ತ್ರಿಗುಣಂಗಳ ಪ್ರಭಾವಂದ ಕರ್ಮ ಮಾಡಲ್ಪಡುವದರಿಂದ ತನ್ನಲ್ಲಿ ಆ ತ್ರಿಗುಣಸ್ಥಿತಿಯ ಅರ್ತು ಸತ್ವದ  ಪರಿಧಿಲಿಯೇ ಕರ್ಮ ಮಾಡೇಕ್ಕಾದ್ದು ಕರ್ತವ್ಯ. ಹಾಂಗಾಗಿ ಆ ತ್ರಿಗುಣಂಗಳ ಪ್ರಭಾವ ಹೇಂಗೆ ನಡೆತ್ತಾ ಇದ್ದು ಹೇಳ್ವ ವಿವೇಚನೆ ನಮ್ಮಲ್ಲಿ ಸದಾ ಜಾಗೃತವಾಗಿರೆಕು. ಮನಸ್ಸಿಂಗೆ ಬಂದಾಂಗೆ ಕರ್ಮ ಮಾಡ್ಳಾಗ, ಶಾಸ್ತ್ರೋಕ್ತ ವಿಧಿಯ ಮೀರ್ಲಾಗ, ಫಲಸಿದ್ಧಿಯ ನಂಟು ಇಪ್ಪಲಾಗ, ಮಾಡೇಕ್ಕಾದ್ದರ ಮಾಡದ್ದಿಪ್ಪಲಾಗ ಹೇಳಿ ಭಗವಂತ° ಸ್ಪಷ್ಟವಾಗಿ ಉಪದೇಶಿಸಿದ್ದ°. ಮುಂದೆ –

 

ಶ್ರೀಕೃಷ್ಣಪರಮಾತ್ಮನೇ ನಮಃ ॥

ಶ್ರೀಮದ್ಭಗವದ್ಗೀತಾ ॥

ಅಥ ಸಪ್ತದಶೋsಧ್ಯಾಯಃ – ಶ್ರದ್ಧಾತ್ರಯವಿಭಾಗಯೋಗಃ – ಶ್ಲೋಕಾಃ 01 – 10

(ಶ್ರದ್ಧಾ-ತ್ರಯ-ವಿಭಾಗ-ಯೋಗಃ )

ಶ್ಲೋಕ

ಅರ್ಜುನ ಉವಾಚ-

ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾನ್ವಿತಾಃ ।
ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ ॥೦೧॥BHAGAVADGEETHA

ಪದವಿಭಾಗ

ಅರ್ಜುನಃ ಉವಾಚ-

ಯೇ ಶಾಸ್ತ್ರ-ವಿಧಿಮ್ ಉತ್ಸೃಜ್ಯ ಯಜಂತೇ ಶ್ರದ್ಧಯಾ ಅನ್ವಿತಾಃ । ತೇಷಾಮ್ ನಿಷ್ಠಾ ತು ಕಾ ಕೃಷ್ಣ ಸತ್ತ್ವಮ್ ಆಹೋ ರಜಃ ತಮಃ ॥

ಅನ್ವಯ

ಅರ್ಜುನಃ ಉವಾಚ-

ಹೇ ಕೃಷ್ಣ!, ಯೇ ಶಾಸ್ತ್ರ-ವಿಧಿಮ್ ಉತ್ಸೃಜ್ಯ, ಶ್ರದ್ಧಯಾ ಅನ್ವಿತಾಃ (ಸಂತಃ) ಯಜಂತೇ, ತೇಷಾಂ ತು ಕಾ ನಿಷ್ಠಾ ? ಸತ್ತ್ವಂ ರಜಃ ಆಹೋ ತಮಃ ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಕೃಷ್ಣ! – ಏ ಕೃಷ್ಣ!, ಯೇ – ಆರು, ಶಾಸ್ತ್ರ-ವಿಧಿಮ್ – ಶಾಸ್ತ್ರವಿಧಿಗಳ, ಉತ್ಸೃಜ್ಯ – ಬಿಟ್ಟಿಕ್ಕಿ, ಶ್ರದ್ಧಯಾ ಅನ್ವಿತಾಃ (ಸಂತಃ) – ಪೂರ್ಣಶ್ರದ್ಧೆಯಾಗಿದ್ದುಗೊಂಡವಾಗಿ, ಯಜಂತೇ – ಪೂಜಿಸುತ್ತವೋ, ತೇಷಾಮ್ ತು – ಅವರದ್ಧಾದರೋ, ಕಾ ನಿಷ್ಠಾ? – ಎಂತ ಶ್ರದ್ಧೆ (ನಿಷ್ಠೆ)?, ಸತ್ತ್ವಮ್ – ಸತ್ವಗುಣದ್ದೋ, ರಜಃ – ರಜೋಗುಣದ್ದೋ, ಆಹೋ – ಅಥವಾ, ತಮಃ – ತಮೋಗುಣದ್ದೋ?

ಅನ್ವಯಾರ್ಥ

ಅರ್ಜುನ° ಹೇಳಿದ°, ಏ ಕೃಷ್ಣ!, ಧರ್ಮಶಾಸ್ತ್ರತತ್ವಂಗಳ ಅನುಸರುಸದ್ದೆ, ಅವರವರ ಕಲ್ಪನೆಗೆ (ಇಚ್ಛೆಗೆ) ಶ್ರದ್ಧಾವಂತರಾಗಿ ಪೂಜೆಮಾಡುವೋರ ಸ್ಥಿತಿ ಎಂತರ? ಅವ್ವು ಸತ್ವಗುಣದೋರೋ, ರಜೋಗುಣದೋರೋ ಅಲ್ಲಾ ತಾಮಸಗುಣದೋರೋ?

ತಾತ್ಪರ್ಯ / ವಿವರಣೆ

ಹದಿನಾರನೇ ಅಧ್ಯಾಯದ ಅಕೇರಿಗೆ ಭಗವಂತ° ಹೇಳಿದ ‘ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ’ – ‘ಶಾಸ್ತ್ರೋಕ್ತವಿಧಾನಂಗಳ ಅರ್ತು ಕರ್ಮ ಮಾಡುತ್ತದು ಯೋಗ್ಯ’ ಹೇಳಿ ಹೇಳಿದ್ದರ ಕೇಳಿ ಕುತೂಹಲಗೊಂಡ ಅರ್ಜುನ° ಸಾಮನ್ಯ ಜನರ ತಿಳುವಳಿಕೆಗೆ ಬೇಕಾಗಿ ಮತ್ತೆ ಭಗವಂತನತ್ರೆ ಪ್ರಶ್ನೆ ಮಾಡುತ್ತ° – ‘ಶಾಸ್ತ್ರೋಕ್ತ ವಿಧಾನಂಗಳ ಅರಡಿಯದ್ದೆ ಬರೇ ಶ್ರದ್ಧಾನಿವ್ತನಾಗಿ ಕರ್ಮ ಮಾಡುವದರಿಂದ ಎಂತ ಗೆತಿ ಆವ್ತು? ಅದು ಸತ್ವಗುಣವೋ, ರಜೋ ಗುಣವೋ, ಅಲ್ಲಾ ತಮೋಗುಣವೋ?’.

ಶಾಸ್ತ್ರೋಕ್ತ ವಿಧಿ ಕರ್ಮವ ಅನುಸರುಸೆಕ್ಕಾದ್ದೇನೋ ಸರಿ,  ಆದರೆ ಲೋಕಲ್ಲಿ ಎಲ್ಲೋರಿಂಗೂ ಶಾಸ್ತ್ರ ತಿಳಿದಿರುತ್ತಿಲ್ಲೆ. ತಿಳ್ಕೊಂಬ ಅವಕಾಶವೂ ಇರ್ತಿಲ್ಲೆ. ಅಂಥೋರು ತಮ್ಮ ಶ್ರದ್ಧಾಭಕ್ತಿವುಳ್ಳವರಾಗಿ ಕರ್ಮವ ಸತ್ಕಾರ್ಯ ಹೇಳ್ವ ಭಾವನೆಂದಗೂಡಿ ಮಾಡುತ್ತವು. ಅಂಬಗ ಅಂಥವರ ಪರಿಸ್ಥಿತಿ ಎಂತರ?!. ಶಾಸ್ತ್ರವಿಧಿಯ ತಿಳಿಯದ್ದೋರು ಬರೇ ನಂಬಿಕೆ ಆಧಾರಲ್ಲಿ ಮಾಡುವ ಕರ್ಮದ ಪ್ರಭಾವ ಎಂತರ?

ಬನ್ನಂಜೆ ವಿವರುಸುತ್ತವು – ಭಗವಂತ ಈ ಮದಲೇ ಹಿಂದಾಣ ಅಧ್ಯಾಯಂಗಳಲ್ಲಿ ಹೇಳಿದ್ದ° – ನೀ ಎಂತ ಮಾಡ್ತರೂ ಅದರ ಜ್ಞಾನಪೂರ್ವಕವಾಗಿ ತಿಳುದು ಮಾಡು. ಜ್ಞಾನಪೂರ್ವಕವಾಗಿ ಮಾಡಿದ ಕರ್ಮ ಸಫಲ, ಇಲ್ಲದ್ದರೆ ಅದು ವ್ಯರ್ಥ’. ಹಾಂಗಾರೆ ನಾವು ವೇದಾಧ್ಯಯನ ಮಾಡಿದ್ದಿಲ್ಲೆ, ನವಗೆ ಶಾಸ್ತ್ರ ವಿಧಿಗೊ ಗೊಂತಿಲ್ಲೆ. ಅದರ ತಿಳ್ಕೊಂಬ ಪರಿಸ್ಥಿತಿ ಇತ್ತಿಲ್ಲೆ. ಶಾಸ್ತ್ರ ಗೊಂತಿಲ್ಲದ್ದಿಪ್ಪದರಿಂದ ಪಶ್ಚಾತ್ತಾಪ  ಇದ್ದು, ಶಾಸ್ತ್ರದ ಬಗ್ಗೆ ಶ್ರದ್ಧೆ, ನಂಬಿಕೆ ಇದ್ದು. ಅದರ ಪ್ರಕಾರ ಬದುಕ್ಕೆಕು ಹೇಳ್ವ ಬಯಕೆಯೂ ಇದ್ದು. ಈ ರೀತಿ ಶ್ರದ್ಧೆಂದ ಮಾಡುವ ಕರ್ಮ ಎಂತಾವ್ತು ಹೇಳ್ವದು ಸಾಮಾನ್ಯ ಜನರ ತಿಳುವಳಿಕೆಗಾಗಿ ಅರ್ಜುನನ ಪ್ರಶ್ನೆ.

ಇಲ್ಲಿ ‘ಶ್ರದ್ಧಾ’  ಹೇಳಿರೆ ಅತೀಂದ್ರಿಯವಾಗಿಪ್ಪ, ನಮ್ಮ ನಿಯಂತ್ರುಸುವ ಅಗೋಚರ ಶಕ್ತಿಯ ಬಗ್ಗೆ ನವಗಿಪ್ಪ ನಂಬಿಕೆ. ಅರ್ಥಾತ್, ಭಗವಂತನ ಮೇಗೆ ನಂಬಿಕೆ, ಶಾಸ್ತ್ರದ ಮೇಗೆ ನಂಬಿಕೆ, ಪಾಪ-ಪುಣ್ಯದ ನಂಬಿಕೆ, ಎಲ್ಲವನ್ನೂ ನಿಯಂತ್ರುಸುವ ಪರಶಕ್ತಿ ಒಂದು ಇದ್ದು ಹೇಲ್ವ ನಂಬಿಕೆ. ಕರ್ಮಕ್ಕೆ ಫಲ ಇದ್ದು ಹೇಳ್ವ ನಂಬಿಕೆಯೇ ಮನುಷ್ಯನ ಬದುಕಿನ ಆಧಾರ ಸ್ಥಂಭ. ಹೀಂಗಿಪ್ಪಗ, ನಂಬಿಕೆಂದ ಶ್ರದ್ಧೆ ಇದ್ದುಗೊಂಡು ಶಾಸ್ತ್ರದ ತಿಳುವಳಿಕೆ ಇಲ್ಲದ್ದೆ ಕರ್ಮ ಮಾಡಿರೆ ಅಂತವರ ನೆಲೆ ಎಂತರ? ಎಲ್ಲರನ್ನೂ ಕರ್ಷಣೆ ಮಾಡುವ ಕೃಷ್ಣ ನೀನು ಇಂಥವರ ಎಲ್ಲಿಗೆ ಕರ್ಷಣೆ ಮಾಡುತ್ತೆ ಹೇಳಿ ಭಗವಂತನತ್ರೆ ಅರ್ಜುನನ ಪ್ರಶ್ನೆ.

ಶ್ಲೋಕ

ಶ್ರೀಭಗವಾನುವಾಚ-

ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।
ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥೦೨॥

ಪದವಿಭಾಗ

ಶ್ರೀ ಭಗವಾನ್ ಉವಾಚ-

ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಮ್ ಸಾ ಸ್ವಭಾವಜಾ । ಸಾತ್ತ್ವಿಕೀ ರಾಜಸೀ ಚ ಏವ ತಾಮಸೀ ಚ ಇತಿ ತಾಮ್ ಶೃಣು ॥

ಅನ್ವಯ

ಶ್ರೀ ಭಗವಾನ್ ಉವಾಚ-

ದೇಹಿನಾಂ ಸ್ವಭಾವಜಾ ಶ್ರದ್ಧಾ, ಸಾ ಸಾತ್ತ್ವಿಕೀ ಚ ರಾಜಸೀ, ತಾಮಸೀ ಚ ಏವ ಇತಿ ತ್ರಿವಿಧಾ ಭವತಿ, ತಾಂ ಶೃಣು ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ದೇಹಿನಾಮ್ – ದೇಹಿಗಳ (ಜೀವಿಗಳ), ಸ್ವಭಾವಜಾ – ಸ್ವಭಾವಲ್ಲಿ ( ಅವನ ಐಹಿಕ ತ್ರಿಗುಣಂಗೊಕ್ಕೆ ಅನುಗುಣವಾಗಿ), ಶ್ರದ್ಧಾ – ಶ್ರದ್ಧೆ, ಸಾ – ಅದು, ಸಾತ್ತ್ವಿಕೀ – ಸತ್ವಗುಣದ್ದು, ಚ – ಕೂಡ, ರಾಜಸೀ – ರಜೋಗುಣದ್ದು, ತಾಮಸೀ – ತಮೋಗುಣದ್ದು (ಕೂಡ), ಏವ – ಖಂಡಿತವಾಗಿಯೂ, ಇತಿ – ಹೀಂಗೆ, ತಿವಿಧಾ ಭವತಿ – ಮೂರು ಬಗೆ ಆಗಿದ್ದು, ತಾಮ್ ಶೃಣು – ಅದರ ಕೇಳು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ°, ದೇಹಧಾರಿಯಾದ ಆತ್ಮ ಪಡದ ತ್ರಿಗುಣಂಗೊಕ್ಕನುಗುಣವಾಗಿ ಮನುಷ್ಯನ ಶ್ರದ್ಧೆಯ ಮೂರು ವಿಧದ್ದು ಆಗಿದ್ದು.  ಸಾತ್ವಿಕ, ರಾಜಸ, ತಾಮಸ ಹೇದು. ಆ ಬಗ್ಗೆ ನೀನು ಕೇಳು.

ತಾತ್ಪರ್ಯ / ವಿವರಣೆ

ಜೀವಿಗೊ ಹುಟ್ಟುಗುಣಂದಲೇ (ಸ್ವಭಾವಂದಲೇ) ಹುಟ್ಟಿಬಪ್ಪ ಈ ನಂಬಿಕೆ (ಶ್ರದ್ಧೆ) ಮೂರು ರೀತಿದು – ಸಾತ್ವಿಕ, ರಾಜಸ, ತಾಮಸ. ಆ ಬಗ್ಗೆ ವಿವರವ ಆನು ಹೇಳುತ್ತೆ, ನೀನು ಕೇಳು ಹೇಳಿ ಅರ್ಜುನಂಗೆ ವಿವರುಸುವದಕ್ಕೆ ಭಗವಂತ° ಮುಂದಾವ್ತ°.

ಸಾಧನಾ ಶರೀರಲ್ಲಿಪ್ಪ ‘ಜೀವ’ ಮೂಲಭೂತವಾಗಿ ಸಾತ್ವಿಕ, ರಾಜಸ, ಮತ್ತೆ ತಾಮಸ ಹೇಳಿ ಮೂರು ರೀತಿಗೊ ಇರ್ತು. ಇದರ ಮೇಗೆ ಪರಿಸರ ಮತ್ತೆ ಮನೆತನದ ಪ್ರಭಾವಂದ ಮಾನಸಿಕವಾಗಿ ನಾವು ಮತ್ತೆ ಮೂರು ರೀತಿಯ ಶ್ರದ್ಧೆಯ ಬೆಳೆಶಿಗೊಳ್ತು. ಹಾಂಗಾಗಿ ಈ ಮದಲೇ ಹೇಳಿಪ್ಪಂತೆ ಸ್ವರೂಪತಃ ಸಾತ್ವಿಕನಾದರೂ ಮಾನಸಿಕವಾಗಿ ಪ್ರಭಾವಂದ ರಾಜಸನೋ, ತಾಮಸನೋ ಆವುತ್ತ°. ಜೀವಸ್ವರೂಪ ಸಾತ್ವಿಕ ಏವ, ರಾಜಸ ಏವ, ತಾಮಸ ಏವ (ಕೇವಲ ಯಾವುದೋ ಒಂದು ಮಾತ್ರ) ಹೇಳಿ ಆವುತ್ತಿಲ್ಲೆ. ಅದು ಹುಟ್ಟುವಾಗಲೇ ತ್ರಿಗುಣಂಗಳ ಮಿಶ್ರಿತ ಜನನ ಅಪ್ಪದು ಹೇಳಿ ಈ ಮದಲೇ ವಿವರಣೆ ಆಯ್ದು. ಮತ್ತೆ ಐಹಿಕ ಪ್ರಕೃತಿಲಿ ಪರಿಸರ ಪ್ರಭಾವಂದ ಗುಣಂಗೊ ಬೆಳವದು. ಅದುವೇ ಮತ್ತೆ ಶ್ರದ್ಧೆಯಾಗಿ ಗಟ್ಟಿನಿಲ್ಲುತ್ತು.  ಈ ಮೂರು ಬಗೆಯ ಶ್ರದ್ಧೆಯ ಬಗ್ಗೆ ಇನ್ನಷ್ಟು ವಿವರಂಗಳ ಭಗವಂತ° ಮುಂದೆ ಹೇಳುತ್ತ° –

ಶ್ಲೋಕ

ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।
ಶ್ರದ್ಧಾಮಯೋsಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ ॥೦೩॥

ಪದವಿಭಾಗ

ಸತ್ತ್ವ-ಅನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ । ಶ್ರದ್ಧಾಮಯಃ ಅಯಮ್ ಪುರುಷಃ ಯಃ ಯತ್ ಶ್ರದ್ಧಃ ಸಃ ಏವ ಸಃ ॥

ಅನ್ವಯ

ಹೇ ಭಾರತ!, ಸರ್ವಸ್ಯ ಸತ್ತ್ವ-ಅನುರೂಪಾ ಶ್ರದ್ಧಾ ಭವತಿ, ಅಯಂ ಪುರುಷಃ ಶ್ರದ್ಧಾಮಯಃ ಅಸ್ತಿ, ಯಃ ಯತ್ ಶ್ರದ್ಧಃ (ಭವತಿ), ಸಃ ಏವ ಸಃ ।

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶಜನೇ, ಸರ್ವಸ್ಯ – ಪ್ರತಿಯೊಬ್ಬನ, ಸತ್ತ್ವ-ಅನುರೂಪಾ – ಅಸ್ತಿತ್ವಕ್ಕೆ ಅನುರೂಪವಾಗಿ, ಶ್ರದ್ಧಾ – ಶ್ರದ್ಧೆ, ಭವತಿ – ಉಂಟಾವುತ್ತು, ಅಯಮ್ ಪುರುಷಃ – ಈ ಜೀವಿಯು, ಶ್ರದ್ಧಾಮಯಃ ಅಸ್ತಿ – ಶ್ರದ್ಧಾಪೂರ್ಣನಾದವ ಆಗಿದ್ದ°, ಯಃ – ಯಾವಾತ°, ಯತ್ ಶ್ರದ್ಧಃ (ಭವತಿ) – ಯಾವ ಶ್ರದ್ಧೆಯುಳ್ಳವನಾಗಿರುತ್ತನೋ,  ಸಃ ಏವ- ಅದೇ, ಸಃ – ಅಂವ°.

ಅನ್ವಯಾರ್ಥ

ಏ ಭರತವಂಶಜನಾದ ಅರ್ಜುನ!, ಸ್ವಭಾವಕ್ಕನುಗುಣವಾಗಿ ಎಲ್ಲೋರ (ಪ್ರತಿಯೊಬ್ಬನ) ನಂಬಿಕೆಯೂ (ಶ್ರದ್ಧೆಯೂ) ಇರುತ್ತು. ಈ ಜೀವ ನಂಬಿಕೆಯ ಸ್ವರೂಪ. ಅವನ ನಂಬಿಕೆ ಎಂಥದ್ದೋ ಅಂವ ಅಂಥಂವ° ಆವುತ್ತ°.

ತಾತ್ಪರ್ಯ / ವಿವರಣೆ

ಜೀವದ ಸ್ವರೂಪಕ್ಕೆ ಅನುಗುಣವಾಗಿಯೇ ಮೂಲ ಶ್ರದ್ಧೆ ಇರುತ್ತು. ಆದರೆ ಕೆಲವೊಂದರಿ ಅದು ವ್ಯಕ್ತವಾಗದ್ದೇ ಇಪ್ಪಲೂ ಸಾಕು. ಅದು ವ್ಯಕ್ತವಾಗದ್ದೆ ಇಪ್ಪಗ, ಮನಸ್ಸಿಲ್ಲಿ ಯಾವ ಬಾಹ್ಯ ಪ್ರಭಾವ ಶ್ರದ್ಧೆ ಇರುತ್ತೋ ಅದೇ ಅವನ ನಂಬಿಕೆಯಾವ್ತು. ಮನುಷ್ಯ° ಶ್ರದ್ಧೆಯ ಕೈಗೊಂಬೆ. ಆರ ಸ್ವರೂಪ ಶ್ರದ್ಧೆ ಸಾತ್ವಿಕವೋ ಅಂವ° ಸಾತ್ವಿಕ°, ಆರ ಸ್ವರೂಪ ಶ್ರದ್ಧೆ ರಾಜಸವೋ ಅಂವ° ರಾಜಸ°, ತಾಮಸ ಶ್ರದ್ಧೆ ಇಪ್ಪ ಜೀವ – ತಾಮಸ ಜೀವ. ನಾವು ಧ್ಯಾನಂದ ಮನಸ್ಸಿನ ಸ್ಥಗನಗೊಳುಸಿ ಉನ್ಮನಿ/ತುರಿಯ ಸ್ಥಿತಿಯ ತಲುಪಿಯಪ್ಪಗ ಬಾಹ್ಯ ಶ್ರದ್ಧೆ ಕಣ್ಮರೆಯಾಗಿ ಕೇವಲ ಸ್ವರೂಪ ಶ್ರದ್ಧೆ ವ್ಯಕ್ತವಾವ್ತು ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಮನುಷ್ಯ° ಏನೇ ಆಗಿರರ್ಲಿ ಅವಂಗೊಂದು ನಿರ್ದಿಷ್ಟ ರೀತಿಯ ಶ್ರದ್ಧೆ ಇರ್ತು. ಅಂವ ಪಡಕ್ಕೊಂಡು ಬಂದ ಸ್ವಭಾವಕ್ಕನುಗುಣವಾಗಿ ಅವನ ಶ್ರದ್ಧೆ ಸಾತ್ವಿಕ, ರಾಜಸ, ತಾಮಸ ಹೇದು ತಿಳಿಯಲ್ಪಡುತ್ತು. ತನ್ನ ವಿಶಿಷ್ಟ ರೀತಿಯ ಶ್ರದ್ಧೆಗನುಗುಣವಾಗಿ ಮನುಷ್ಯ ನಿರ್ದಿಷ್ಟ ಜೆನರೊಟ್ಟಿಂಗೆ ಬೆರೆತ್ತ°. ವಾಸ್ತವಾಂಶ ಎಂತ ಹೇಳಿರೆ ಹದಿನೈದನೇ ಅಧ್ಯಾಯಲ್ಲಿ ಹೇಳಿಪ್ಪಂತೆ ಪ್ರತಿಯೊಬ್ಬ° ಜೀವಿಯುದೇ ಮೂಲತಃ ಭಗವಂತನ ವಿಭಿನ್ನಾಂಶ. ಹಾಂಗಾಗಿ ಮೂಲತಃ ಮನುಷ್ಯ° ಐಹಿಕ ಪ್ರಕೃತಿಯ ಎಲ್ಲ ಗುಣಂಗೊಕ್ಕೆ ಅತೀತ°. ಆದರೆ ಮನುಷ್ಯ° ಭಗವಂತನತ್ರೆ ತನಗಿಪ್ಪ ಸಂಬಂಧವ ಮರದು ಬದ್ಧಜೀವನಲ್ಲಿ ಐಹಿಕ ಪ್ರಕೃತಿಯ ಸಂಪರ್ಕ ಬೆಳೆಶಿಗೊಂಡಪ್ಪಗ, ಅಂವ° ಐಹಿಕ ಪ್ರಕೃತಿಯ ವೈವಿಧ್ಯಂಗಳೊಟ್ಟಿಂಗೆ, ಸಹಯೋಗದೊಟ್ಟಿಂಗೆ ತನ್ನ ಸ್ಥಾನವ ರೂಪುಸುತ್ತ°. ಇದರ ಪರಿಣಾಮ ಕೃತಕ ಶ್ರದ್ಧೆ ಮತ್ತೆ ಅಸ್ತಿತ್ವ ಐಹಿಕ. ಮನುಷ್ಯನ ಯಾವುದೋ ಒಂದು ಭಾವನೆ, ಗ್ರಹಿಕೆ ಮುನ್ನೆಡೆಶುಗು. ಆದರೆ ಮೂಲತಃ ಅಂವ ಸಗುಣ ನಿರ್ಗುಣಂಗೊಕ್ಕೆ ಅತೀತ°. ಹಾಂಗಾಗಿ ಭಗವಂತನೊಟ್ಟಿಂಗೆ ತನ್ನ ಸಂಬಂಧವ ಮರಳಿ ಪಡಕ್ಕೊಂಬಲೆ ತಾನಿಲ್ಲಿ ಪಡಕ್ಕೊಂಡ ಐಹಿಕ ಕಲ್ಮಷವ ತೊಳೆಕು. ಇದಕ್ಕೆ ಕೃಷ್ಣಪ್ರಜ್ಞೆ ಒಂದೇ ದಾರಿ. ಕೃಷ್ಣಪ್ರಜ್ಞೆಲಿ ನೆಲೆಸಿರೆ ಮನುಷ್ಯ° ಆ ಮಾರ್ಗದ ಮೂಲಕ ಪರಿಪೂರ್ಣತೆಯ ಹಂತಕ್ಕೆ ಏರ್ಲೆ ಸಮರ್ಥನಾವುತ್ತ°.  ಅಂವ° ಕೃಷ್ಣಪ್ರಜ್ಞೆಯ ಸ್ಥಿತಿಗೆ ಬಾರದ್ರೆ, ಆತ್ಮಸಾಕ್ಷಾತ್ಕಾರದ ಮಾರ್ಗವ ಹಿಡಿಯದ್ರೆ ಖಂಡಿತವಾಗ್ಯೂ ಪ್ರಕೃತಿಗುಣಂಗಳ ಪ್ರಭಾವವೇ ಅವನ ನಡೆಶುವದು.

ಇನ್ನಿಲ್ಲಿ ‘ಶ್ರದ್ಧಾ’ ಹೇಳ್ವ ಮಾತು ಬಹು ಮುಖ್ಯವಾದ್ದು. ಶ್ರದ್ಧೆ ಮೂಲತಃ ಸಾತ್ವಿಕ ಗುಣಂದ ಬಪ್ಪದು. ಮನುಷ್ಯನ ಬಲವಾದ ಶ್ರದ್ಧೆ ಐಹಿಕ ಒಳಿತಿನ ಕಾರ್ಯಂಗಳ ಸೃಷ್ಟಿಸುತ್ತು ಹೇಳ್ವದು ನಂಬಿಕೆ. ಆದರೆ ಐಹಿಕ ಬದ್ಧಜೀವನಲ್ಲಿ ಯಾವ ಕ್ರಿಯೆಗಳೂ ಸಂಪೂರ್ಣವಾಗಿ ಪರಿಶುದ್ಧವಾಗಿಲ್ಲೆ. ಅವುಗಳಲ್ಲಿ ಬೆರಕ್ಕೆ ಇರ್ತು. ಅವು ಪರಿಶುದ್ಧವಾದ ಸಾತ್ವಿಕವಾಗಿರುತ್ತಿಲ್ಲೆ. ಪರಿಶುದ್ಧ ಸಾತ್ವಿಕತೆ ಹೇಳ್ವದು ದಿವ್ಯವಾದ್ದು. ಪರಿಶುದ್ಧ ಸಾತ್ವಿಕತೆಲಿ ಮನುಷ್ಯ° ಭಗವಂತನ ನಿಜಸ್ವರೂಪವ/ಸ್ವಭಾವವ ಅರ್ಥಮಾಡಿಗೊಂಗು. ಮನುಷ್ಯನ ಶ್ರದ್ಧೆ ಸಂಪೂರ್ಣವಾಗಿ ಪರಿಶುದ್ಧವಾದ ಸಾತ್ವಿಕತೆ ಅಪ್ಪನ್ನಾರ ಆ ಶ್ರದ್ಧೆ ಐಹಿಕ ಪ್ರಕೃತಿಯ ಗುಣಂದ ಮಲಿನವಾಗಿರುತ್ತು. ಕಲ್ಮಷಗೊಂಡ ಐಹಿಕ ಪ್ರಕೃತಿಯ ಗುಣಂಗೊ ಹೃದಯದವರೇಂಗೆ ಹರಡಿಗೊಂಡಿರುತ್ತು. ಹಾಂಗಾಗಿ ಐಹಿಕ ಪ್ರಕೃತಿಯ ಒಂದು ನಿರ್ದಿಷ್ಟಗುಣದ ಸಂಪರ್ಕ ಹೊಂದಿಪ್ಪ ಹೃದಯದ ಸ್ಥಾನಕ್ಕನುಗುಣವಾಗಿ ಮನುಷ್ಯನ ಶ್ರದ್ಧೆಯ ಸ್ಥಾಪನೆ ಆವ್ತು. ಮನುಷ್ಯನ ಹೃದಯ ಸಾತ್ವಿಕ ಆಗಿದ್ದರೆ ಅವನ ಮನಸ್ಸು / ಶ್ರದ್ಧೆಯೂ ಸಾತ್ವಿಕವಾಗಿರುತ್ತು. ಹೀಂಗೆ ಶ್ರದ್ಧೆಯ ಬೇರೆ ಬೇರೆ ವಿಧಕ್ಕನುಗುಣವಾಗಿ ಪೂಜೆಯ ಬೇರೆ ಬೇರೆ ವಿಧಂಗೊ ಆಗಿರುತ್ತು. ಹಾಂಗಾಗಿ ಪ್ರತಿಯೊಬ್ಬನ ಶ್ರದ್ಧೆಯೂ ಅವರವರ ಸಂಸ್ಕಾರಕ್ಕನುಗುಣವಾಗಿ ನೆಲೆಗೊಳ್ಳುತ್ತು. ಶ್ರದ್ಧೆ ಇಲ್ಲದ್ದವನೇ ಇಲ್ಲೆ. ಆದರೂ ಮೂಲತಃ ಸಾತ್ವಿಕನಾಗಿದ್ದರೂ ಮನಸ್ಸಿಲ್ಲಿ ಯಾವ ರೀತಿಯ ಶ್ರದ್ಧೆ ಸ್ಥಿರಗೊಳ್ಳುತ್ತೋ ಅದೇ ರೀತಿಯ ಶ್ರದ್ಧಾಗುಣ ಅವನದ್ದಾವುತ್ತು.

ಶ್ಲೋಕ

ಯಜಂತೇ ಸಾತ್ತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।
ಪ್ರೇತಾನ್ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥೦೪॥

ಪದವಿಭಾಗ

ಯಜಂತೇ ಸಾತ್ತ್ವಿಕಾಃ ದೇವಾನ್ ಯಕ್ಷ-ರಕ್ಷಾಂಸಿ ರಾಜಸಾಃ । ಪ್ರೇತಾನ್ ಭೂತಗಣಾನ್ ಚ ಅನ್ಯೇ ಯಜಂತೇ ತಾಮಸಾಃ ಜನಾಃ ॥

ಅನ್ವಯ

ಸಾತ್ತ್ವಿಕಾಃ ದೇವಾನ್ ಯಜಂತೇ, ರಾಜಸಾಃ ಯಕ್ಷ-ರಕ್ಷಾಂಸಿ (ಯಜಂತೇ), ಅನ್ಯೇ ತಾಮಸಾಃ ಜನಾಃ ಪ್ರೇತಾನ್ ಭೂತಗಣಾಣ್ ಚ ಯಜಂತೇ ।

ಪ್ರತಿಪದಾರ್ಥ

ಸಾತ್ತ್ವಿಕಾಃ – ಸತ್ವಗುಣದೋರು, ದೇವಾನ್ – ದೇವತೆಗಳ, ಯಜಂತೇ – ಆರಾಧಿಸುತ್ತವು, ರಾಜಸಾಃ – ರಜೋಗುಣದೋರು, ಯಕ್ಷ-ರಕ್ಷಾಂಸಿ (ಯಜಂತೇ) – ಯಕ್ಷ-ದೈತ್ಯರ ಆರಾಧಿಸುತ್ತವು, ಅನ್ಯೇ ತಾಮಸಾಃ ಜನಾಃ – ಇತರ ತಾಮಸ ಗುಣದ ಜನಂಗೊ, ಪ್ರೇತಾನ್ ಭೂತಗಣಾನ್ – ಪ್ರೇತಂಗಳ, ಭೂತಗಣಂಗಳ, ಚ – ಕೂಡ, ಯಜಂತೇ – ಪೂಜಿಸುತ್ತವು.

ಅನ್ವಯಾರ್ಥ

ಸಾತ್ವಿಕ ಸ್ವಭಾವದ ಮನುಷ್ಯರು ದೇವತೆಗಳ ಪೂಜಿಸುತ್ತವು, ರಾಜಸ ಸ್ವಭಾವದೋರು ರಾಕ್ಷಸರ ಪೂಜಿಸುತ್ತವು, ತಾಮಸಗುಣದೋರು ಭೂತಪ್ರೇತಂಗಳ ಪೂಜಿಸುತ್ತವು.

ತಾತ್ಪರ್ಯ / ವಿವರಣೆ

ಅವರವರ ಬಹಿರಂಗ ಕರ್ಮಂಗಳ ಅನುಗುಣವಾಗಿ ಪೂಜಿಸುವವರ ವಿವಿಧ ಬಗೆಗಳ ಭಗವಂತ° ಇಲ್ಲಿ ವರ್ಣಿಸಿದ್ದ°. ಧರ್ಮಗ್ರಂಥಂಗಳ ಆದೇಶದ ಪ್ರಕಾರ ದೇವೋತ್ತಮ ಪರಮ ಪುರುಷ ಮಾತ್ರ ಪೂಜಾರ್ಹ°. ಆದರೆ ಧರ್ಮಗ್ರಂಥಂಗಳ ಅದೇಶಂಗಳ ತಿಳಿಯದ್ದೋರು , ಅದರ್ಲಿ ಹೆಚ್ಚು ಶ್ರದ್ಧೆ ಇಲ್ಲದ್ದೋರು ಐಹಿಕ ಪ್ರಕೃತಿಯ ಗುಣಂಗಳಲ್ಲಿ ತಮ್ಮ ತಮ್ಮ ವಿಶಿಷ್ಟ ನೆಲೆಗನುಗುಣವಾಗಿ ಬೇರೆ ಬೇರೆ ಪೂಜೆ ಮಾಡುತ್ತವು. ಸಾತ್ವಿಕ ಸ್ವಭಾವಲ್ಲಿ ನೆಲೆಗೊಂಡವ್ವು ಸಾಮಾನ್ಯವಾಗಿ ದೇವತೆಂಗಳನ್ನೇ ಪೂಜಿಸುತ್ತವು. ಬ್ರಹ್ಮ, ಶಿವ, ಇಂದ್ರ, ಚಂದ್ರ, ಸೂರ್ಯ … ಇತ್ಯಾದಿ ಇವೆಲ್ಲ ದೇವತಾಗಣಲ್ಲಿಪ್ಪೋರು. ಇವರ ಪೂಜಿಸುತ್ತವು. ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ದಿಷ್ಟ ದೇವತೆಯ ಪೂಜಿಸುತ್ತವು. ಹಾಂಗೇ ರಾಜಸಗುಣದೋರು ರಾಕ್ಷಸರ ಪೂಜಿಸುತ್ತವು. ಮದಲಿಂಗೆ ಒಬ್ಬ° ಎರಡನೇ ಮಹಾಯುದ್ಧ ಕಾಲಲ್ಲಿ ಕಲ್ಕತ್ತಾನಗರಲ್ಲಿ ಹಿಟ್ಲರನ ಪೂಜಿಸಿಗೊಂಡಿತ್ತಿದನಡ!. ಎಂತಕೆ ಹೇಳಿರೆ ಆ ಮನುಷ್ಯ ಕಾಳಸಂತೆಲಿ ವ್ಯವಹಾರ ಮಾಡಿ ಕೋಟಿ ಐಶ್ವರ್ಯವ ಸಂಪಾದಿಸಿದ್ದನಡ! ಹೀಂಗೆ ರಾಜಸದೋರು ಸಾಮಾನ್ಯವಾಗಿ ಬಲಶಾಲಿ ಮನುಷ್ಯನ / ವ್ಯಕ್ತಿಯ ದೇವರಾಗಿ ಆರಿಸಿಗೊಳ್ಳುತ್ತವು. ಆರ ಬೇಕಾರು ಪೂಜೆ ಮಾಡ್ಳಕ್ಕು. ಫಲ ಒಂದೇ ಹೇಳ್ವ ತಿಳುವಳಿಕೆ ಅವರದ್ದು. ರಾಜಸಗುಣದೋರು ಈ ರೀತಿಯ ಪೂಜಾಮಗ್ನರಾಗಿರುತ್ತವಾದರೆ ಭಗವಂತ° ಹೇಳುತ್ತ° – ತಾಮಸಗುಣದೋರು ಭೂತಪ್ರೇತಂಗಳ ಪೂಜಿಸುತ್ತವು. ಕೆಲವೊಂದರಿ ಸತ್ತು ಹೋದ ಮನುಷ್ಯನ ಸಮಾಧಿಲಿ ಹೋಗಿ ಪೂಜೆ ಮಾಡುತ್ತವು!. ಹಾಂಗೇ ಭೂತ-ಪ್ರೇತಂಗಳ ಪೂಜೆಯನ್ನೂ ಮಾಡುತ್ತವು. ಬಲಿಕೊಡುತ್ತವು, ಆರಾಧನೆ ಮಾಡಿಗೊಂಡು ಬತ್ತವು. ಈ ವಿಧವಾದ ಪೂಜೆಗೊ ನಿಜವಾದ ದೇವರ ಪೂಜೆ ಅಲ್ಲ. ಮನುಷ್ಯ ಸಂಪೂರ್ಣವಾಗಿ ಶುದ್ಧಸತ್ವಲ್ಲಿ ನೆಲೆಸಿಗೊಂಡು ವಾಸುದೇವನ ಪೂಜೆ ಮಾಡುವದು ನಿಜವಾದ ಸಾತ್ವಿಕ ಪೂಜೆ. ಒಟ್ಟಿಲ್ಲಿ ಇಲ್ಲಿ ತಾತ್ಪರ್ಯ ಎಂತರ ಹೇಳಿರೆ – ಐಹಿಕ ಪ್ರಕೃತಿಯ ಗುಣಂಗಳ ಸಂಪೂರ್ಣವಾಗಿ ಕಳಕ್ಕೊಂಡು ಪರಿಶುದ್ಧರಾದೋರು ಆಧ್ಯಾತ್ಮಿಕ ನೆಲೆಲಿ ನೆಲೆಗೊಂಡು ದೇವೋತ್ತಮ ಪರಮ ಪುರುಷನ ಪೂಜಿಸುತ್ತವು.

ಬನ್ನಂಜೆ ವಿವರುಸುತ್ತವು – ಈ ಶ್ಲೋಕಲ್ಲಿ ಗೂಢಾರ್ಥ ಎಂತ ಇದ್ದು ಹೇಳ್ವದರನ್ನೂ ವಿವೇಚಿಸೆಕ್ಕಾಗಿದ್ದು. ಮೇಲ್ನೋಟಕ್ಕೆ ಸಾತ್ವಿಕರು ದೇವತೆಗಳ, ರಾಜಸರು ಯಕ್ಷ-ರಾಕ್ಷಸರ, ತಾಮಸರು ಭೂತ-ಪ್ರೇತಂಗಳ ಆರಾಧಿಸುತ್ತವು ಹೇಳಿ ಅಷ್ಟೇ ಅರ್ಥ ಕೊಡುತ್ತು. ಆದರೆ ಇಲ್ಲಿ ಅಡಗಿಪ್ಪ ಮೂಲ ಅರ್ಥವೇ ಬೇರೆ. ಸಾಮಾನ್ಯವಾಗಿ ನಾವು ಕಂಡಾಂಗೆ ಸಾತ್ವಿಕರಾಗಲೀ, ರಾಜಸರಾಗಲೀ, ತಾಮಸರಾಗಲೀ ಪೂಜೆ ಮಾಡುತ್ತದು ಭಗವಂತನ ಅಥವಾ ಇನ್ಯಾವುದೋ ದೇವತೆಯನ್ನೆ. ವಾಮಾಚಾರ ಮಾಡುವವರ ಬಿಟ್ರೆ ಬೇರೆ ಆರೂ ಭೂತ-ಪ್ರೇತ-ಪಿಶಾಚಿ-ರಾಕ್ಷಸರ ಪೂಜಿಸುತ್ತವಿಲ್ಲೆ. ಹಾಂಗಾಗಿ ಬನ್ನಂಜೆ ಹೇಳ್ತವು ಇಲ್ಲಿ ಹೇಳಿಪ್ಪ ಕೆಲವು ಶಬ್ದಂಗಳ ಆಧಾರಲ್ಲಿ ಶ್ಲೋಕವ ಅರ್ಥೈಸೆಕು –

ಇಲ್ಲಿ ‘ದೇವಾನ್’ ಹೇಳಿರೆ ಭಗವಂತ° ಮತ್ತೆ ಅವನ ಅನೇಕ ರೂಪ ಮತ್ತೆ ಭಗವಂತನ ಪರಿವಾರ ದೇವತೆಗೊ ಹೇಳಿ ಅರ್ಥ. ಯಜಂತೇ ಸಾತ್ವಿಕಾ ದೇವಾನ್’ – ಸಾತ್ವಿಕದೋರು ಭಗವಂತನ ಅನುಸಂಧಾನಂದ ಮೂಡುವ ಪೂಜೆ ದೇವತೆಗಳ ಸೇರುತ್ತು. ಅದೇ ರೀತಿ, ‘ಯಕ್ಷ-ರಕ್ಷಾಂಸಿ ರಾಜಸಾಃ’ – ರಾಜಸರು ಮಾಡುವ ಪೂಜೆ ಯಕ್ಷ-ರಾಕ್ಷಸರ ಸೇರುತ್ತು ಹೇದರ್ಥ. ರಾಜಸರು ಸಾಮಾನ್ಯವಾಗಿ ಭಗವಂತನ ಪಾರಮ್ಯದ ಎಚ್ಚರ ಇಲ್ಲದ್ದೆ, ಭಯಂದ. ದೇವತೆಗೊ ನವಗೆ ತೊಂದರೆ ಕೊಡದ್ದಿರಲಿ ಹೇಳ್ವ ಹರಕೆ ಸಂದಾಯ ಭಾವನೆಂದ ಪೂಜೆ ಮಾಡುತ್ತವು. ಎನ ಮಾಡೇಕ್ಕಾದ ರಜಾ ಕೆಲಸ ಇದ್ದು ನೀ ಉಪದ್ರ ಮಾಡದ್ದೆ ಇದ್ದರೆ ಸಾಕು ಹೇಳ್ವ ಭಾವನೆ. ಲಂಚ ಕೊಟ್ಟು ಕೆಲ್ಸ ಸಾಧುಸುತ್ತಾಂಗೆ ಇದು. ಈ ರೀತಿ ಪೂಜೆ ಮಾಡಿಯಪ್ಪಗ, ನಾವು ಭಗವಂತಂಗೆ ಹೇಳಿ ಸಲ್ಲುಸುವ ಪೂಜೆಯ ಆ ಹೆಸರಿನ ಯಕ್ಷ-ರಾಕ್ಷಸರು ಬಂದು ಸ್ವೀಕರುಸುತ್ತವು. ಇನ್ನು ಮೂರನೇ ವರ್ಗ ತಾಮಸ; ಇವು ಪೂಜೆ ಮಾಡುತ್ತದು ತಮ್ಮ ಅಂತಸ್ತು ತೋರುಸಿಗೊಂಬಲೆ. ಹೀಂಗೆ ದುರುದ್ಧೇಶಂದ ತಾಮಸರು ಮಾಡ್ವ ಪೂಜೆಯ ಬಂದು ಸ್ವೀಕರುಸುವವು ದೇವತೆಗಳ ಹೆಸರಿನ ಭೂತ-ಪ್ರೇತಂಗೊ.

ಪೂಜೆಲಿ ಕೇವಲ ಶ್ರದ್ಧೆ ಮುಖ್ಯ ಅಲ್ಲ, ಬದಲಿಂಗೆ ಅದು ಎಂಥಾ ಶ್ರದ್ಧೆ ಹೇಳ್ತದು ಮುಖ್ಯ. ಶಾಸ್ತ್ರ ಗೊಂತಿಲ್ಲದ್ದರೂ ಕೂಡ, ಸಾತ್ವಿಕ ಶ್ರದ್ಧೆಂದ ‘ಭಗವಂತ ಎನಗೆ ಏನೂ ಗೊಂತಿಲ್ಲೆ, ಆನು ಭಕ್ತಿಂದ ನಿನ್ನ ಆರಾಧನೆ ಮಾಡುತ್ತೆ, ಎನ್ನ ತಪ್ಪ ನೀ ಕ್ಷಮಿಸೆಕು’ ಹೇಳ್ವ ಶರಣಾಗತಿಯ ಬೇಡಿರೆ ಆ ಪೂಜೆಯ ಸ್ವತಃ ಭಗವಂತನೇ ಬಂದು ಸ್ವೀಕರುಸುತ್ತ°. ಆದರೆ ಸ್ವಾರ್ಥ, ಅಹಂಕಾರ, ಡಂಭಂದ ಮಾಡ್ವ ರಾಜಸ ವಾ ತಾಮಸ ಪೂಜೆಯ ಭಗವಂತನಾಗಲೀ, ಅವನ ಪರಿವಾರ ದೇವತೆಗೊ ಆಗಲೀ ಸ್ವೀಕರುಸುತ್ತವಿಲ್ಲೆ. ನಮ್ಮ ಕರ್ಮ ಕಾಮರಹಿತ (ನಿಷ್ಕಾಮ)ವಾಗಿರೆಕು. ಇಲ್ಲಿ ಕಾಮ ಹೇಳಿರೆ ಕೆಟ್ಟಬಯಕೆ. ಬಯಕೆಲಿ ಎಂದೂ ಸ್ವಾರ್ಥ ಇಪ್ಪಲಾಗ. ಎನಗೆ ಮಾಂತ್ರ ಒಳ್ಳೆದಾಯೇಕು  ಹೇಳ್ವ ಸಂಕುಚಿತ ಉದ್ಧೇಶ ಮಡಿಕ್ಕೊಂಡು ಪೂಜೆ ಮಾಡ್ಳಾಗ. ಉದಾಹರಣೆಗೆ “ಎನ್ನ ವ್ಯವಹಾರಲ್ಲಿ ಏಳಿಗೆ ಆಗಲಿ, ಉತ್ತಮ ವರ/ವಧು ಸಿಕ್ಕಲಿ, ಅದು ದೊರಕಲಿ, ಇದು ಪ್ರಾಪ್ತಿಯಾಗಲಿ” ಹೇಳಿ ಮನಸ್ಸಿಲ್ಲಿ ಫಲಾಪೇಕ್ಷೆ ಮಡಿಕ್ಕೊಂಡು ಪೂಜೆ ಮಾಡುತ್ತದು ನಿಷ್ಕಾಮ ಕರ್ಮ ಅಲ್ಲ. ನವಗೆ ಏವುದು ಆಯೇಕ್ಕಾದು, ಎಂತರ ಆಯೇಕ್ಕಾದ್ದು, ಏವುದು ಒಳ್ಳೆದು, ಏವುದು ಬೇಡದ್ದು ಹೇಳ್ತದು ಭಗವಂತಂಗೆ ನೇರವಾಗಿ ಸ್ಪಷ್ಟವಾಗಿ ಗೊಂತಿದ್ದು. ಹಾಂಗಾಗಿ ಯೋಗ್ಯತೆಗೆ ಕೊಟ್ಟೇ ಕೊಡುತ್ತ°. ಹಾಂಗಾಗಿ ನಾವು ಅದಾಯೇಕು ಇದಾಯೇಕು ಹೇಳಿ ಫಲಾಪೇಕ್ಷೆಂದ ಪೂಜೆಮಾಡಿರೆ ಅದರಿಂದ ಅಪ್ಪ ತೊಂದರೆಗೆ ಹಲವು. ದೇವರತ್ರೆ ಏವುದೋ ಬಯಕೆಯ ನಿವೇದನೆ ಮಾಡಿಗೊಂಡು ಅಷ್ಟು ಪೈಸೆ ಖರ್ಚು ಮಾಡಿ ಪೂಜೆ ಮಾಡಿಕ್ಕಿ, ಆದರೆ ಆ ಬಯಕೆ ಈಡೇರದ್ದೇ ಹೋದಲ್ಲಿ ನವಗೆ ದೇವರತ್ರೆ ಕೋಪ-ದ್ವೇಷ ಹುಟ್ಟುತ್ತು, ಪೈಸೆ ಅಷ್ಟು ಹಾಳಾತನ್ನೇ ಹೇದು ಮಂಡೆಬೆಶಿ ಸುರುವಾವ್ತು. ಇದರಿಂದಾಗಿ ತಾನು ನಿಜವಾಗಿ ಮಾಡೇಕ್ಕಾದ್ದರ್ಲಿ ಶ್ರದ್ಧೆ ವಿಮುಖವಾಗಿ ನಮ್ಮ ದಾರಿ ತಪ್ಪುಸುತ್ತು. ಹೀಂಗೆ ಪೂಜೆ ವ್ಯಾಪಾರವಾಗಿರದ್ದೆ, ಭೂತ-ಪ್ರೇತಂಗೊಕ್ಕೆ ಸೇರದ್ದೆ ನಿಷ್ಕಾಮ ಸಾತ್ವಿಕ ಶ್ರದ್ಧಾಯುಕ್ತ ಪೂಜೆ ನಮ್ಮದಾಗಿರೆಕು.

ಶ್ಲೋಕ

ಅಶಾಸ್ತ್ರವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ ।
ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ ॥೦೫॥

ಕರ್ಷಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ ।
ಮಾಂ ಚೈವಾಂತಃ ಶರೀರಸ್ಥಂ ತಾನ್ವಿಧ್ಯಾಸುರನಿಶ್ಚಯಾನ್ ॥೦೬॥

ಪದವಿಭಾಗ

ಅಶಾಸ್ತ್ರ-ವಿಹಿತಮ್ ಘೋರಮ್ ತಪ್ಯಂತೇ ಯೇ ತಪಃ ಜನಾಃ । ದಂಭ-ಅಹಂಕಾರ-ಸಂಯುಕ್ತಾಃ ಕಾಮ-ರಾಗ-ಬಲ-ಅನ್ವಿತಾಃ ॥

ಕರ್ಷಯಂತಃ ಶರೀರಸ್ಥಮ್ ಭೂತ-ಗ್ರಾಮಮ್ ಅಚೇತಸಃ । ಮಾಮ್ ಚ ಏವ ಅಂತಃ-ಶರೀರಸ್ಥಮ್ ತಾನ್ ವಿದ್ಧಿ ಆಸುರ-ನಿಶ್ಚಯಾನ್ ॥

ಅನ್ವಯ

ದಂಭ-ಅಹಂಕಾರ-ಸಂಯುಕ್ತಾಃ ಕಾಮ-ರಾಗ-ಬಲ-ಅನ್ವಿತಾಃ ಯೇ ಜನಾಃ ಅಶಾಸ್ತ್ರ-ವಿಹಿತಂ ಘೋರಂ ತಪಃ ತಪ್ಯಂತೇ, ಅಚೇತಸಃ ಚ (ಯೇ) ಶರೀರಸ್ಥಂ ಭೂತ-ಗ್ರಾಮಮ್ ಅಂತಃ-ಶರೀರಸ್ಥಂ ಮಾಮ್ ಏವ ಕರ್ಷಯಂತಃ ತಾನ್ ಆಸುರ-ನಿಶ್ಚಯಾನ್ ವಿದ್ಧಿ ।

ಪದವಿಭಾಗ

ಧಂಭ-ಅಹಂಕಾರ-ಸಂಯುಕ್ತಾಃ ಕಾಮ-ರಾಗ-ಬಲ-ಅನ್ವಿತಾಃ – ಜಂಭ-ಅಹಂಕಾರಂಗಳಿಂದ ಕೂಡಿದ ಕಾಮದ ಆಸಕ್ತಿಯ ಬಲಂದ ಒತ್ತಾಯಿಸಲ್ಪಟ್ಟ, ಯೇ ಜನಾಃ – ಯಾವ ಜನಂಗೊ (ಆರು), ಅಶಾಸ್ತ್ರ-ವಿಹಿತಮ್ ಘೋರಮ್ ತಪಃ – ಶಾಸ್ತ್ರಲ್ಲಿ ಇಲ್ಲದ್ದರ ನಿರ್ದೇಶಿತವಾದ ಘೋರವಾದ ತಪಸ್ಸಿನ, ತಪ್ಯಂತೇ – ಆಚರುಸುತ್ತವೋ, ಅಚೇತಸಃ ಚ (ಯೇ) ದಾರಿತಪ್ಪಿದ ಮನೋಭಾವಂದ ಕೂಡಿದ ಆರು, ಶರೀರಸ್ಥಮ್ – ಶರೀರಲ್ಲಿಪ್ಪ, ಭೂತ-ಗ್ರಾಮಮ್ – ಭೌತಿಕಾಂಶಂಗಳ ಸಂಯೋಜನೆಯ (ದೇಹವ ನಿಯಮಿಸುವ ದೇವತಾಗಣವ), ಅಂತಃ-ಶರೀರಸ್ಥಮ್ – ಒಳಶರೀರಲ್ಲಿಪ್ಪ, ಮಾಮ್ ಏವ – ಎನ್ನನ್ನೂ ಕೂಡ, ಕರ್ಷಯಂತಃ – ದಂಡಿಸುವಂತರಾದ(ದುಡಿಮೆ ಮಾಡುಸುವ),  ತಾನ್ – ಅವರ, ಅಸುರ-ನಿಶ್ಚಯಾನ್ ವಿದ್ಧಿ – ನಿಶ್ಚಯವಾಗಿ ದೈತ್ಯರು ಹೇದು ತಿಳುಕ್ಕೊ.

ಅನ್ವಯಾರ್ಥ

ಜಂಭ ಅಹಂಕಾರಂಗಳಿಂದ ಕೂಡಿ ಕಾಮದ ಒತ್ತಾಯಕ್ಕೆ (ಬಲಕ್ಕೆ) ಸಿಲುಕಿ (ಪ್ರೇರಿತರಾಗಿ) ಆರು ಶಾಸ್ತ್ರವಿಹಿತ ಅಲ್ಲದ್ದ (ಅಶಾಸ್ತ್ರ-ವಿಹಿತಂ) ಘೋರತಪಸ್ಸುಗಳ ಆಚರುಸುತ್ತವೋ, ಅಚೇತಸರಾಗಿ (ಅಜ್ಞಾನಂದ ದಾರಿತಪ್ಪಿ) ಶರೀರಲ್ಲಿಪ್ಪ ದೇಹದ ಭೌತಿಕಾಂಶಂಗಳನ್ನೂ (ದೇಹವ ನಿಯಮಿಸುವ ದೇವತಾಗಣವ), ಶರೀರದೊಳ ವಾಸಿಸುವ ಎನ್ನನ್ನೂ ಹಿಂಸಿಸುತ್ತವು, ಅವರ ನಿಶ್ಚಯವಾಗಿ ಅಸುರರು ಹೇದೇ ನೀನು ತಿಳುಕ್ಕೊ.

ತಾತ್ಪರ್ಯ / ವಿವರಣೆ

ಧರ್ಮಶಾಸ್ತ್ರವಿಹಿತವಲ್ಲದ್ದ ಆಚರಣೆ ವ್ಯರ್ಥ, ಅದು ಬರೇ ದೇಹ ದಂಡನೆ ಮತ್ತು ದೇಹದೊಳ ಇಪ್ಪ ಇಂದ್ರಿಯಾಭಿಮಾನಿದೇವತೆಗಳ ಹಾಂಗೇ ದೇಹದೊಳ ಇಪ್ಪ ಭಗವಂತಂಗೇ ಮಾಡುವ ತೊಂದರೆ/ ಹಿಂಸೆ, ಅದು ಆಸುರೀ ಸ್ವಭಾವ ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°. ಶ್ರದ್ಧೆಲೇ ಅತ್ಯಂತ ನೀಚವಾದ ಶ್ರದ್ಧೆ ತಾಮಸ ಶ್ರದ್ಧೆ, ಅದು ಹೇಂಗಿರುತ್ತು ಹೇಳ್ವದರ ಇಲ್ಲಿ ವರ್ಣಿಸಲ್ಪಟ್ಟಿದ್ದು. ಶಾಸ್ತ್ರೋಕ್ತ ವಿಧಿ ವಿಧಾನಕ್ಕೆ ಅತಿರೇಕವಾಗಿ, ವಿಧಿಗಳ ಮೀರಿ ತಪಸ್ಸಿನ ಆಚರುಸುವದು – ಆ ತಪಸ್ಸಿನ ಹಿಂದಿಪ್ಪ ಉದ್ದೇಶ ಘೋರ. ಇಲ್ಲಿ ತಪ್ಪಸ್ಸು ಹೇಳಿ ಬರೇ ಋಷಿ-ಮುನಿಗೊ ಮಾಡ್ತ ತಪಸ್ಸು ಅಲ್ಲ. ಶ್ರದ್ಧೆಂದ ಮಾಡ್ವ ಏವ ಕ್ರಿಯೆಯೂ ತಪಸ್ಸೇ. ತಪಸ್ಸು ಮಾಡುವಾಗ ತನಗೆ ಒಳ್ಳೆದಾಗಲಿ, ನವಗೆಲ್ಲರಿಂಗೂ ಒಳ್ಳೆದಾಗಲಿ ಹೇಳ್ವ ಆಶಯ ಇಪ್ಪಲಕ್ಕು. “ಧೀಯೋ ಯೋನಃ ಪ್ರಚೋದಯಾತ್” – ನವಗೆಲ್ಲರಿಂಗೂ ಒಳ್ಳೆಯ ಬುದ್ಧಿಯ ಪ್ರಚೋದಿಸು ದೇವರೇ’ ಹೇಳಿ ಮಾಡ್ವ ತಪಸ್ಸು – ಸಾತ್ವಿಕ ಶ್ರದ್ದೆ. ಇದರ ಬಿಟ್ಟು ‘ಎನಗೆ ಮಾಂತ್ರ ಒಳ್ಳೆದು ಮಾಡು’ ಹೇಳ್ವದು ರಾಜಸ. ‘ಎನಗೆ ಮಾಂತ್ರ ಒಳ್ಳೆದಾಯೇಕು – ಬಾಕಿ ಎಲ್ಲೋರಿಂಗೂ ಒಳ್ಳೆದಪ್ಪಲಾಗ’ ಹೇಳ್ವದು ತಾಮಸ. ಇದು ಲೋಕಕಂಟಕವಾದ ಘೋರ ಶ್ರದ್ಧೆ ಹೇದು ಬನ್ನಂಜೆ ವರ್ಣಿಸುತ್ತವು.

ಶಾಸ್ತ್ರವಿಹಿತವಾದ ತಪಸ್ಸು ಹೇಳಿರೆ ಭಗವಂತನ ಪಾರಮ್ಯವ ಅರ್ತು, ಇನ್ನೊಬ್ಬರ ಕೆಡುಕಿನ ಯೋಚನೆ ಮಾಡದ್ದೆ, ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಹೇಳಿ ಪ್ರಾರ್ಥಿಸುವದು ಸಾತ್ವಿಕ. ಲೋಕಲ್ಲಿ ಎಲ್ಲೋರಿಂಗೂ ಒಳ್ಳೇದಾಗಲಿ ಹೇಳ್ವ ಪ್ರಾರ್ಥನೆ ನಾವು ಮಾಡೇಕ್ಕಪ್ಪದು. ಇದರ ಬಿಟ್ಟಿಕ್ಕಿ ಎನಗೆ ಮಾಂತ್ರ ಒಳ್ಳೆದಾಗಲೀ, ಎನ್ನಾಂಗೆ ಒಳ್ಳೆದು ಇತರರಿಂಗೆ ಆಗದ್ದಿರಲಿ ಹೇಳಿ ಆಶಿಸುವದು ಅಶಾಸ್ತ್ರವಿಹಿತವಾವ್ತು (ಶಾಸ್ತ್ರಸಮ್ಮತವಲ್ಲ). ಏವುದು ಶಾಸ್ತ್ರ ಸಮ್ಮತ ಅಲ್ಲದೋ ಅದು ಭಗವಂತಂಗೂ ಸಮ್ಮತ ಅಲ್ಲ. ಅದು ಘೋರ ಕ್ರಿಯೆ. ಇದರ ಹಿಂದೆ ಇಪ್ಪದು ಡಂಭಾಚಾರ, ಅಹಂಕಾರ – ಇದರ ಏವ ದೇವತೆಗಳೂ ಸಹಿಸುತ್ತವಿಲ್ಲೆ.

ಕೆಲೋರು ತಮ್ಮ ದೈಹಿಕ ಬಲಂದ ಇನ್ನೊಬ್ಬನ ಬಗ್ಗುಬಡಿಯೇಕು ಹೇಳ್ವ ದುಷ್ಟ ಉದ್ದೇಶವ ಮಡಿಕ್ಕೊಂಡು ಪ್ರಾರ್ಥನೆ / ತಪಸ್ಸು ಮಾಡುತ್ತವು. ಆರು ತಮ್ಮ ಕಾಮನೆಗೆ ಅಡ್ಡಿಯಾಯ್ತವೋ, ಆರು ತಮ್ಮ ಇಷ್ಠಾನಿಷ್ಠಕ್ಕೆ ಸ್ಪಂದಿಸುತ್ತವಿಲ್ಲೆ ಅಂಥವರ ಮುಗುಶೆಕು ಹೇಳ್ವ ಕೆಟ್ಟಾ ಯೋಚನೆ ಮನಸ್ಸಿಲ್ಲಿ ಇಪ್ಪದು ತಾಮಸ. ಅಹಂಕಾರಂದ, ಡಂಭಾಚಾರಂದ, ಸಂಕುಚಿತ ಕಾಮನೆಂದ, ಸ್ವಾರ್ಥಂದ, ತೋಳ್ಬಲಂದ ಕರ್ಮಮಾಡುತ್ತದು ಮೂರ್ಖತನ. ಭಗವಂತ° ಇಂಥಾದ್ದರ ಸಹಿಸುತ್ತನಿಲ್ಲೆ. ಇದು ತಮ್ಮ ದೇಹವ ದಂಡುಸುವದಲ್ಲದ್ದೆ ದೇಹಲ್ಲಿಪ್ಪ ಇಂದ್ರಿಯಾಭಿಮಾನಿ ದೇವತೆಗಳಿಂಗೂ, ಪರಮಾತ್ಮಂಗೂ ಮಾಡುವ ಅಪಚಾರ ಆವ್ತು. ಅವರ ನಿರ್ಲಕ್ಷ್ಯ ಮಾಡಿದಾಂಗೆ ಆವ್ತು. ಇದು ಆಸುರೀ ಸ್ವಭಾವ/ಶ್ರದ್ಧೆ ಹೇಳಿಯೇ ತಿಳಿಯೇಕು ಹೇಳಿ ಭಗವಂತ° ಇಲ್ಲಿ ಆದೇಶಿಸಿದ್ದ°.  ಭಗವಂತನ ಈ ನುಡಿಂದ ನಮ್ಮ ಒಳ ಇಪ್ಪ ಈ ಅಸುರ ಶ್ರದ್ಧೆ ಎಷ್ಟು ಭಯಾನಕ ಹೇಳ್ವ ಅಂಶವ ನಾವೇ ಚಿಂತುಸೆಕ್ಕಾಗಿದ್ದು. ಇದರ ನಾವು ನಮ್ಮ ಪ್ರತಿಯೊಂದು ಕ್ರಿಯೆಲಿಯೂ ನೋಡಿ ತಿದ್ದಿಗೊಳ್ಳೆಕ್ಕಾಗಿದ್ದು.

ಶ್ಲೋಕ

ಅಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥೦೭॥

ಪದವಿಭಾಗ

ಆಹಾರಃ ತು ಅಪಿ ಸರ್ವಸ್ಯ ತ್ರಿವಿಧಃ ಭವತಿ ಪ್ರಿಯಃ । ಯಜ್ಞಃ ತಪಃ ತಥಾ ದಾನಮ್ ತೇಷಾಮ್ ಭೇದಮ್ ಇಮಮ್ ಶೃಣು ॥

ಅನ್ವಯ

ಸರ್ವಸ್ಯ ಪ್ರಿಯಃ ಆಹಾರಃ ಅಪಿ ತು ತ್ರಿವಿಧಃ ಭವತಿ, ತಥಾ ಯಜ್ಞಃ ತಪಃ ದಾನಂ (ಚ ಸರ್ವಸ್ಯ ತ್ರಿವಿಧಂ ಭವತಿ, ತ್ವಮ್) ತೇಷಾಮ್ ಇಮಂ ಭೇದಂ ಶೃಣು ।

ಪ್ರತಿಪದಾರ್ಥ

ಸರ್ವಸ್ಯ – ಪ್ರತಿಯೊಬ್ಬನ, ಪ್ರಿಯಃ – ಪ್ರಿಯವಾದ, ಆಹಾರಃ ಅಪಿ ತು – ಆಹಾರವಾದರೋ ಕೂಡ, ತ್ರಿವಿಧಃ ಭವತಿ – ಮೂರು ವಿಧವಾಗಿಪ್ಪದು ಆಗಿದ್ದು, ತಥಾ – ಹಾಂಗೇ, ಯಜ್ಞಃ ತಪಃ ದಾನಮ್ – ಯಜ್ಞ ತಪಸ್ಸು ದಾನವು (ಚ ಸರ್ವಸ್ಯ ತ್ರಿವಿಧಮ್ ಭವತಿ – ಕೂಡ ಪ್ರತಿಯೊಬ್ಬನದ್ದೂ ಮೂರು ವಿಧವಾಗಿದ್ದು. ತ್ವಮ್ – ನೀನು) , ತೇಷಾಮ್ ಇಮಮ್ ಭೇದಮ್ – ಅವುಗಳ ಈ ವ್ಯತ್ಯಾಸವ, ಶೃಣು – ಕೇಳು.

ಅನ್ವಯಾರ್ಥ

ಪ್ರತಿಯೊಬ್ಬನ ಇಷ್ಟವಾದ ಆಹಾರಲ್ಲಿಯೂ ಕೂಡ ಮೂರು ರೀತಿಯದ್ದು ಆಗಿದ್ದು, ಹಾಂಗೇ, ಪ್ರತಿಯೊಬ್ಬನ ಯಜ್ಞ ತಪಸ್ಸು ದಾನ ವಿಷಯಲ್ಲಿಯೂ ಕೂಡ ಮೂರು ವಿಧಂಗೊ ಇದ್ದು. ಅವುಗಳ ವ್ಯತ್ಯಾಸವ ನೀ ಕೇಳು.  

ತಾತ್ಪರ್ಯ / ವಿವರಣೆ

ಐಹಿಕ ಪ್ರಕೃತಿಯ ಗುಣಂಗಳ ನೆಲೆಲಿ ಅವುಗೊಕ್ಕೆ ಅನುಗುಣವಾಗಿ ಆಹಾರ ಸ್ವೀಕಾರ, ಯಜ್ಞ ತಪಸ್ಸು ದಾನ ಆಚರಣೆಗಳಲ್ಲಿಯೂ ವ್ಯತ್ಯಾಸಂಗೊ ಇದ್ದು. ಅವೆಲ್ಲ ಒಂದೇ ಮಟ್ಟಿಲ್ಲಿ ಇರ್ತಿಲ್ಲೆ. ಅವುಗಳ ವ್ಯತ್ಯಾಸಂಗಳ ನೀನು ತಿಳಿಯೆಕು ಹೇಳು ಅರ್ಜುನಂಗೆ ಎಚ್ಚರುಸುತ್ತ° ಭಗವಂತ°.

ತಿಂಬ ಆಹಾರಲ್ಲಿಯೂ ಸಾತ್ವಿಕ, ರಾಜಸ, ತಾಮಸ ಹೇಳಿ ಮೂರು ವಿಧ ಆಹಾರಂಗೊ. ನಾವು ತೆಕ್ಕೊಂಬ ಆಹಾರಂಗಳ ನಮ್ಮೊಳ ಇಪ್ಪ ಪ್ರಾಣ ಮತ್ತೆ ವೈಶ್ವಾನರರು ಮೂರು ಬಗೆಯಾಗಿ ವಿಂಗಡುಸಿ ಅದರ ದೇಹದ ವಿವಿಧ ಭಾಗಂಗೊಕ್ಕೆ ಸರಬರಾಜು ಮಾಡುತ್ತವು. ನಮ್ಮ ಆಹಾರಕ್ಕೂ ನಮ್ಮ ಮನಸ್ಸಿಂಗೂ ನೇರ ಸಂಬಂಧ ಇದ್ದು. ಇದರ ನಮ್ಮ ಪ್ರಾಚೀನರು ಮದಲಿಂದಲೇ ಕಂಡುಗೊಂಡಿದವು. ಹಾಂಗಾಗಿ ಮನಸ್ಸಿನ ಮೇಗೆ ನೇರ ಪ್ರತಿಕೂಲ ಪರಿಣಾಮ ಉಂಟುಮಾಡುವ ಆಹಾರಂಗಳ ಸೇವನೆಗೆ ನಿಷೇಧ ಹೇರಿದವು. ಉದಾಹರಣೆಗೆ ಬೆಳ್ಳುಳ್ಳಿ. ಇದು ಔಷಧೀಯ ವಸ್ತು. ಆದರೆ ಇದರ ನಿತ್ಯ ಆಹಾರವಾಗಿ ಉಪಯೋಗುಸುವದು ನಿಷೇಧ. ಎಂತಕೆ ಹೇಳಿರೆ ಇದು ಬುದ್ಧಿ ಬೆಳವಣಿಗಗೆ ಪೂರಕವಾಗಿಪ್ಪದಲ್ಲ. ಇದೇ ರೀತಿ ನುಗ್ಗೆ ನೀರುಳ್ಳಿ ಇತ್ಯಾದಿಗಳೂ. ಇವುಗಳ ಔಷಧವಾಗಿ ಉಪಯೋಗುಸಲಕ್ಕು ಆದರೆ ಆಹಾರಲ್ಲಿ ಉಪಯೋಗುಸಲಾಗ ಹೇಳಿ ನಿಷೇಧ ಹೇರಿದ್ದವು. ಹೀಂಗೆ ಮನುಷ್ಯನ ಬುದ್ಧಿಗೆ ಯಾವ ವಿಧದ ಆಹಾರ ಸೂಕ್ತ ಹೇಳ್ವದರ ತಿಳ್ಕೊಂಡು ಎಚ್ಚರಂದ ಇರೆಕು ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°. ಇಲ್ಲಿ ಇವುಗಳ ತಿಂದರೆ ಜಾತಿ ಕೆಡ್ತು ಹೇಳಿ ಹೇಳಿಪ್ಪದಲ್ಲ. ಬದಲಾಗಿ ಮನಸ್ಸಿನ / ಚಿತ್ತವ ಚಾಂಚಲ್ಯಗೊಳುಸುವ, ಉದ್ರೇಕಿಸುವ ಆಹಾರಂಗಳ ನಿತ್ಯ ಆಹಾರಲ್ಲಿ ಉಪಯೋಗುಸಲಾಗ ಹೇಳಿ ಎಚ್ಚರಿಕೆ ನೀಡಿದ್ದದು.

ಇನ್ನು ಆಹಾರದ ಒಟ್ಟಿಂಗೆ ನಾವು ಮಾಡ್ತ ದೇವರ ಪೂಜೆ, ತಪಸ್ಸು, ನಮ್ಮ ಚಿಂತನಾ ಕ್ರಮ, ದಾನ, ಜೀವನದ ನಡೆ ಮಾತು ಎಲ್ಲದರ್ಲಿಯೂ ಸತ್ವ ರಜ ತಮ ಹೇಳಿ ಮೂರು ವಿಧವ ಗುರುತುಸಲಕ್ಕು.

ಹಾಂಗಾರೆ ಅಹಾರಲ್ಲಿ , ಯಜ್ಞ ತಪ ದಾನಲ್ಲಿ ಈ ಮೂರು ಬಗೆಯ ಗುರುತುಸುವದು ಹೇಂಗೆ? –

ಶ್ಲೋಕ

ಆಯುಃ ಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ತ್ವಿಕಪ್ರಿಯಾಃ ॥೦೮॥

ಪದವಿಭಾಗ

ಆಯುಃ-ಸತ್ವ-ಬಲ-ಆರೋಗ್ಯ-ಸುಖ-ಪ್ರೀತಿ-ವಿವರ್ಧನಾಃ । ರಸ್ಯಾಃ ಸ್ನಿಗ್ಧಾಃ ಸ್ಥಿರಾಃ ಹೃದ್ಯಾಃ ಆಹಾರಾಃ ಸಾತ್ತ್ವಿಕ-ಪ್ರಿಯಾಃ ॥

ಅನ್ವಯ

ಆಯುಃ-ಸತ್ತ್ವ-ಬಲ-ಆರೋಗ್ಯ-ಸುಖ-ಪ್ರೀತಿ-ವಿವರ್ಧನಾಃ, ರಸ್ಯಾಃ ಸ್ನಿಗ್ಧಾಃ ಸ್ಥಿರಾಃ ಹೃದ್ಯಾಃ ಆಹಾರಾಃ ಸಾತ್ತ್ವಿಕ-ಪ್ರಿಯಾಃ (ಸಂತಿ) ।

ಪ್ರತಿಪದಾರ್ಥ

ಆಯುಃ – ಆಯುರ್ದಾಯಕ, ಸತ್ತ್ವ – ಅಸ್ತಿತ್ವ, ಬಲ – ಶಕ್ತಿ, ಅರೋಗ್ಯ – ಆರೋಗ್ಯ, ಸುಖ – ಸುಖ, ಪ್ರೀತಿ-ವಿವರ್ಧನಾಃ – ಪ್ರ್ರೆತಿ/ತೃಪ್ತಿ ಹೆಚ್ಚುಸುವಂತಾದ್ದು, ರಸ್ಯಾಃ – ರಸರೂಪಿಯಾಗಿಪ್ಪ, ಸ್ನಿಗ್ಧಾಃ – ಸ್ನಿಗ್ಧವಾದ, ಸ್ಥಿರಾಃ – ಬಹುಕಾಲ ಇಪ್ಪ, ಹೃದ್ಯಾಃ – ಹೃದಾಯಕ್ಕೆ ಮುದ ನೀಡುವ, ಆಹಾರಾಃ – ಆಹಾರಂಗೊ, ಸಾತ್ತ್ವಿಕ-ಪ್ರಿಯಾಃ – ಸತ್ವಗುಣಯುಕ್ತನಾದವಕ್ಕೆ ಇಷ್ಟವಾದ್ದು.

ಅನ್ವಯಾರ್ಥ

ಸಾತ್ವಿಕರಿಂಗೆ ಇಷ್ಟವಾದ ಆಹಾರಂಗೊ – ಆಯಸ್ಸು, ಸತ್ವ (ಪೌಷ್ಟಿಕ), ತ್ರಾಣ, ಆರೋಗ್ಯ, ಹೆಚ್ಚುಸುವಂತಾದ್ದು, ಬಹುಕಾಲ ಮೆಚ್ಚುಗೆಯಪ್ಪಂತಾದ್ದು, ತಿಂದಪ್ಪಗ ಕೊಶಿಯಪ್ಪಂತಾದ್ದು, ರುಚಿಯಾಗಿಪ್ಪಂತಾದ್ದು, ಜಿಡ್ಡು ಇಪ್ಪಂತಾದ್ದು, ದೀರ್ಘಕಾಲ ಪರಿಣಾಮ ಬೀರುವಂತಾದ್ದು ಮತ್ತೆ ಮತ್ತೆ ಮುದನೀಡುವಂತಾದ್ದು.

ತಾತ್ಪರ್ಯ / ವಿವರಣೆ

ಇಲ್ಲಿ ಶ್ಲೋಕದ ನೇರ ಅರ್ಥ ಮಾಡಿಗೊಂಬಂತಾದ್ದಲ್ಲ. ಮೇಲ್ಮೈ ಅರ್ಥವಷ್ಟರನ್ನೇ ನೋಡಿರೆ ಅರೋಗ್ಯದಾಯಕ ಮತ್ತೆ ಶಕ್ತಿದಾಯಕ, ರುಚಿಯಪ್ಪ, ಬೇಗಲ್ಲಿ ಕೆಡದ, ಮನಸ್ಸಿಂಗೂ ಶರೀರಕ್ಕೂ ಮುದನೀಡುವ ಪದಾರ್ಥಂಗೊ ಸೇವನೆಗೆ ಯೋಗ್ಯ ಹೇಳಿದಾಂಗೆ ಅಕ್ಕಷ್ಟೆ. ಆದರ ಭಗವಂತ° ಇಲ್ಲಿ ಹೇಳಿಪ್ಪದು ಸಾತ್ವಿಕರ ಆಹಾರ ಹೇಂಗಿರೆಕು ಹೇಳ್ವದರ ಬಗ್ಗೆ. ಏವ ಆಹಾರ ನಮ್ಮ ಆಯುಸ್ಸಿನ ವೃದ್ಧಿಗೆ ಪೂರಕವೋ, ಯಾವ ಆಹಾರ ನವಗೆ ಸೌಮ್ಯ ಸ್ವಭಾವವ ಕೊಡುತ್ತೋ, ಯಾವ ಆಹಾರ ದೇಹಕ್ಕೆ ಪೌಷ್ಟಿಕಾಂಶವ ನೀಡುವಂತಾದ್ದೋ, ಏವ ಆಹಾರ ತಿಂದರೆ ಅರೋಗ್ಯ ಹದೆಗೆಡುತ್ತಿಲ್ಲ್ಯೋ, ಅಜೀರ್ಣದಾಯಕವಲ್ಲದೊ, ಯಾವ ಆಹಾರಂದ ಮನಸ್ಸು ಮತ್ತೆ ಹೃದಯ ಪುಳಕೋತ್ಸಹಲ್ಲಿ ದೀರ್ಘ ಸಮಯ ಉಳಿತ್ತೋ ಅಂತಹ ಆಹಾರ – ಸಾತ್ವಿಕ ಆಹಾರ.  ನಿಜವಾದ ಸಾತ್ವಿಕರು ಎಂತ ತಿಂತವೋ ಅದು ಸಾತ್ವಿಕ ಅಹಾರವಾಗಿರುತ್ತು. ಅದರಿಂದ ದೇಹದ ಆರೋಗ್ಯ, ಆಯಸ್ಸು, ಕಾಂತಿ ವೃದ್ಧಿಸುತ್ತು, ರಸವತ್ತಾಗಿರುತ್ತು, ಅರೋಗ್ಯಕ್ಕೆ ಕೆಡುಕುಂಟುಮಾಡುತ್ತಿಲ್ಲೆ, ಸಾತ್ವಿಕ ಪ್ರವೃತ್ತಿಗೆ ಧಕ್ಕೆ ಉಂಟುಮಾಡುತ್ತಿಲ್ಲೆ. ಇನ್ನು ಜಿಡ್ಡು ಕೂಡ ಆರೋಗ್ಯಕ್ಕೆ ಬೇಕಾದ್ದದೇ ಆದರೆ ಅದರ ಹಿತವಾದ ಬಳಕೆ ಮಾಡಿರೆ ಅದು ಸಾತ್ವಿಕ, ಅತಿಯಾಗಿ ಬಳಸಿರೆ ಅದುವೇ ಮಾರಕವೂ ಅಪ್ಪು. ಹಾಂಗಾಗಿ ರುಚಿಯಾಗಿಪ್ಪ, ಆಯುರಾರೋಗ್ಯ ಹಿತಕರವಾದ, ಸಾತ್ವಿಕ ಮನೋಭಾವಕ್ಕೆ ಪೂರಕವಾದ ಆಹಾರವ ಸಾತ್ವಿಕರು ಬಳಸುವಂತಾದ್ದು ಹೇಳಿ ಭಗವಂತನಿಂದಲೇ ಹೇಳಲ್ಪಟ್ಟಿದು. 

ಶ್ಲೋಕ

ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ॥೦೯॥

ಪದವಿಭಾಗ

ಕಟು-ಅಮ್ಲ-ಲವಣ-ಅತಿ-ಉಷ್ಣ-ತೀಕ್ಷ್ಣ-ರೂಕ್ಷ-ವಿದಾಹಿನಃ । ಆಹಾರಾಃ ರಾಜಸಸ್ಯ ಇಷ್ಟಾಃ ದುಃಖ-ಶೋಕ-ಆಮಯ-ಪ್ರದಾಃ ॥

ಅನ್ವಯ

ಕಟು-ಅಮ್ಲ-ಲವಣ-ಅತಿ-ಉಷ್ಣ-ತೀಕ್ಷ್ಣ-ರೂಕ್ಷ-ವಿದಾಹಿನಃ ದುಃಖ-ಶೋಕ-ಆಮಯ-ಪ್ರದಾಃ ಆಹಾರಾಃ ರಾಜಸಸ್ಯ ಇಷ್ಟಾಃ (ಭವತಿ) ।

ಪ್ರತಿಪದಾರ್ಥ

ಕಟು – ಕಯಿಕ್ಕೆ, ಅಮ್ಲ – ಹುಳಿ (ಕಟು+ಅಮ್ಲ; ಅಮ್ಲ = ಆಮ್ಲ), ಲವಣ – ಉಪ್ಪು, ಅತಿ-ಉಷ್ಣ – ಹೆಚ್ಛು ಉಷ್ಣವಾದ್ದು, ತೀಕ್ಷ್ಣ – ಖಾರ, ರೂಕ್ಷ – ಒಣಕ್ಕಟೆ, ವಿದಾಹಿನಃ – ಸುಡ್ಕಟೆ, ದುಃಖ-ಶೋಕ – ದುಃಖ ಶೋಕ, ಆಮಯ-ಪ್ರದಾಃ – ರೋಗಂಗಳ ಉಂಟುಮಾಡುವಂತಾದ್ದು,  ಆಹಾರಾಃ – ಆಹಾರಂಗೊ, ರಾಜಸಸ್ಯ – ರಾಜಸ ಸ್ವಭಾವದೋರ, ಇಷ್ಟಾಃ – ಇಷ್ಟವಾದ್ದು, (ಭವತಿ – ಆಗಿದ್ದು).

ಅನ್ವಯಾರ್ಥ

ಅತೀ ಕಯ್ಕಟೆ, ಅತೀ ಹುಳಿ, ಅತೀ ಉಪ್ಪು, ಅತೀ ಉಷ್ಣ, ಅತೀ ಖಾರ, ಬರೇ ಒಣಕ್ಕಟೆ, ಬರೇ ಸುಡುಕ್ಕಟೆ ಮನಸ್ಸಿಂಗೆ ದುಃಖ ಶೋಕಂಗಳ,  ರೋಗಂಗಳ ಉಂಟುಮಾಡುವಂತಾದ್ದು – ರಾಜಸರಿಂಗೆ ಪ್ರಿಯವಾದ ಆಹಾರಂಗೊ ಆಗಿದ್ದು.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ರಾಜಸ ಆಹಾರದ ವಿಷಯವಾಗಿ ಹೇಳಿದ್ದ°. ವಿಪರೀತ ಹುಳಿ, ಖಾರ, ಉಪ್ಪು, ಕೊದಿಪ್ಪಟೆ, ಒಣಕ್ಕಟೆ, ನೀರಸ ಇತ್ಯಾದಿಗೊ ರಾಜಸರಿಂಗೆ ಪ್ರಿಯವಾದ ಆಹಾರಂಗೊ. ಇಂತಹ ಆಹಾರ ಸೇವನೆಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕೆಡುತ್ತದು ಮಾಂತ್ರ. ಅನಗತ್ಯ ರೋಗಂಗೊಕ್ಕೆ ದುಃಖ ಅಶಾಂತಿಗೆ (ಚಿಂತೆ/ಶೋಕ)ಕ್ಕೆ ತಳ್ಳುತ್ತು. ಹಸಿಮೆಣಸಿನ ಹಾಂಗೇ ಹಸಿ ಹಸಿ ತಿಂಬದು, ಓಟೆಹುಳಿಯ ಚೀಪಿ ಚೀಪಿ ತಿಂಬದು, ಸಮಾ ಉಪ್ಪು ತಿಂಬದು, ಕೊದಿಪ್ಪಟೆ ಕಾಪಿ ವಾ ತಿಂಡಿಗಳ ಬಯಸುವದು, ಅತೀ ಸಾಸಮೆ, ಮಸಾಲೆ ಪದಾರ್ಥಂಗಳ ಉಪಯೋಗುಸುವದು, ಹಾಂಗೇ ಸತ್ವಹೀನ (ಪೌಷ್ತಿಕಹೀನ) ಪದಾರ್ಥಂಗೊ, ಬರೇ ಬಾಯಿರುಚಿಗೆ ಮಾಂತ್ರ ಯೋಗ್ಯವಪ್ಪ ಇಂತಹ ಪದಾರ್ಥಂಗಳ ಸೇವನೆಂದ ಶರೀರಕ್ಕೆ ಎಂತ ಉತ್ತಮ ಪ್ರಯೋಜನವೂ ಇಲ್ಲೆ. ಅಂತೇ ಬಾಯಿರುಚಿ ತಣುಶಲೆ ಅಕ್ಕಷ್ಟೆ. ಪರಿಣಾಮವಾಗಿ ಇಪ್ಪ ಆರೋಗ್ಯವೂ ಕೆಡುತ್ತರ ಜೊತೆಲಿ ಮಾನಸಿಕ ಚಂಚಲತೆಯನ್ನೂ, ಚಿಂತೆಯನ್ನೂ ತಂದೊಡ್ಡುತ್ತು. ಪುಷ್ಟಿಕ ಯುಕ್ತ ಅರೋಗ್ಯದಾಯಕ ಅಹಾರಂಗೊ ಸಾತ್ವಿಕ.  ಹಾಂಗೇ ಬಾಯಿಗೂ ರುಚಿ ಹೇಳಿ ಅತಿಯಾದ ಸಾತ್ವಿಕ ಆಹಾರ ಸೇವನೆಯೂ ಅನಾರೋಗ್ಯಕರ. ಇನ್ನು ಇಲ್ಲಿಪ್ಪ ಹೇಳಿಪ್ಪ ವಿಷಯಂಗೊ ಆಹಾರದ ವಿಷಯವಾಗಿ. ಇಲ್ಲಿ ಇನ್ನೊಂದು ಮುಖ್ಯವಾಗಿ ತಿಳುಕ್ಕೊಳ್ಳೆಕ್ಕಾದ್ದು ಎಂತರ ಹೇಳಿರೆ ಕೆಲವೊಂದು ಆಹಾರವಸ್ತುಗೊ / ಪದಾರ್ಥಂಗೊ  ಮೇಗೆ ಹೇಳಿಪ್ಪಂತಾದ್ದು ಆಹಾರವಿಷಯವಾಗಿ. ಅದೇ ಸಮಯ ಅಲ್ಲಿ ಮದ್ದಿನ ವಿಷಯಲ್ಲಿ (ಚಿಕಿತ್ಸಾ ವಿಷಯಲ್ಲಿ) ಅದು ನಿಷೇಧ ಅಲ್ಲ. 

ಶ್ಲೋಕ

ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಂ ॥೧೦॥

ಪದವಿಭಾಗ

ಯಾತಯಾಮಮ್ ಗತರಸಮ್ ಪೂತಿ ಪರ್ಯುಷಿತಮ್ ಚ ಯತ್ । ಉಚ್ಛಿಷ್ಟಮ್ ಅಪಿ ಚ ಅಮೇಧ್ಯಮ್ ಭೋಜನಮ್ ತಾಮಸ-ಪ್ರಿಯಮ್ ॥

ಅನ್ವಯ

ಯತ್ ಯಾತಯಾಮಮ್, ಗತ-ರಸಮ್, ಪೂತಿ,  ಪರ್ಯುಷಿತಂ ಚ ಉಚ್ಛಿಷ್ಟಮ್ ಅಪಿ ಚ ಅಮೇಧ್ಯಂ ಭೋಜನಂ, (ತತ್)  ತಾಮಸ-ಪ್ರಿಯಮ್  (ಅಸ್ತಿ) ।

ಪ್ರತಿಪದಾರ್ಥ

ಯತ್ – ಏವುದು, ಯಾತಯಾಮಮ್ – ಮೂರು ಗಂಟೆ ಕಳುದ್ದು (ಗಂಟೆಗಟ್ಳೆ ಮದಲೇ ಮಾಡಿಮಡುಗಿದ್ದ/ಬೇಶಿಹಾಕಿದ ಆಹಾರ ಹೇದು ಅರ್ಥ), ಗತ-ರಸಮ್ – ರುಚಿಕಳಕ್ಕೊಂಡದ್ದು, ಪೂತಿ – ದುರ್ವಾಸನೆಯುಂಟಾದ್ದು, ಪರ್ಯುಷಿತಮ್ – ಹಳಸಿದ್ದು, ಚ – ಕೂಡ, ಉಚ್ಛಿಷ್ಟಮ್ – ಎಂಜಲು, ಅಪಿ – ಕೂಡ, ಚ – ಮತ್ತೆ / ಕೂಡ ( ಅಪಿ ಚ – ಕೂಡವೇ / ಹಾಂಗೇ ), ಅಮೇಧ್ಯಮ್ – ಮುಟ್ಳೆ ಎಡಿಯದ್ದು / ತಿಂಬಲೆಡಿಯದ್ದು, ಭೋಜನಮ್ – ಆಹಾರವು, (ತತ್ – ಅದು), ತಾಮಸ-ಪ್ರಿಯಮ್ (ಅಸ್ತಿ) – ತಾಮಸರಿಂಗೆ ಪ್ರಿಯವಾದ್ದಾಗಿದ್ದು.

ಅನ್ವಯಾರ್ಥ

ಏವುದು ಗಂಟೆಗಟ್ಳೆ ಮದಲೇ ಮಾಡಿಮಡಿಗಿದ್ದೋ (ಪಾಕಮಾಡಿ ಮಡಿಗಿದ್ದೋ) , ರುಚಿ ಕಳಕ್ಕೊಂಡಿದೋ, ದುರ್ವಾಸನೆ ಬೀರ್ಲೆ ಸುರುವಾಯ್ದೋ, ಹಳಸಿದ್ದೋ, ಎಂಜಲೋ ಹಾಂಗೇ ತಿಂಬಲೆ ಯೋಗ್ಯವಾಗಿಲ್ಲೆಯೋ ಅಂತಹ ಆಹಾರಂಗೊ ತಾಮಸರಿಂಗೆ ಪ್ರಿಯವಾದ್ದಾಗಿದ್ದು.

ತಾತ್ಪರ್ಯ / ವಿವರಣ

ತಾಮಸರ ಆಹಾರದ ಬಗ್ಗೆ ಇಲ್ಲಿ ವರ್ಣಿಸಲ್ಪಟ್ಟಿದು. ಯಾಮ ಹೇಳಿರೆ ಮೂರು ಗಂಟೆಯ ಕಾಲಾವಧಿ. ದಿನದ ಎಂಟನೇ ಒಂದು ಭಾಗ (21 x 1/8). ತಾಮಸರಿಂಗೆ ಜೀವನಲ್ಲಿ ಅತೀ ದೊಡ್ಡ ಸಂಗತಿ ಹೇದರೆ ತಿಂಬದು. ಇವರ ತಿಂಬ್ರಾಣಕ್ಕೆ ಹೊತ್ತುಗೊತ್ತೂ ಇಲ್ಲೆ, ಇಂತಾದ್ದು ಹೇಳಿಯೂ ಇಲ್ಲೆ. ತಿನ್ನೆಕು ಹೇಳಿ ಕಾಂಬಗ ತಿಂಬದು; ಇಂತಾದ್ದೂ ಹೇಳಿಯೂ ಇಲ್ಲೆ; ಎಂತ ಸಿಕ್ಕಿತ್ತೋ ಅದು. ದೇವರಿಂಗೆ ಸಮರ್ಪುಸುವದು ಹೇಳ್ವ ಸಂಗತಿಯೇ ಇಲ್ಲೆ. ರುಚಿ ಹೋದರೂ ಅಡ್ಡಿ ಇಲ್ಲೆ, ಹಳಸಿ ವಾಸನೆ ಬಂದರೂ ತೊಂದರೆ ಇಲ್ಲೆ, ಕೊಳೆ ಎಂಜಲು ಹೇಳ್ವದೂ ಇಲ್ಲೆ. ಒಂದೇ ತಟ್ಟೇಲಿ ಮಡಿಕ್ಕೊಂಡು ಕಚ್ಚಿ ನಕ್ಕಿ ತಿಂಬದೆ. ಹೀಂಗೆ ಹೊತ್ತುಗೊತ್ತು ಇಲ್ಲದ್ದೆ ಎಂತರ ಏವುದು ಹೇಳಿಯೂ ನೋಡದ್ದೆ ತಿಂಬ್ರಾಂಡಿಗಳ ಹಾಂಗೆ ತಿಂಬದು ತಾಮಸ ಆಹಾರ ಕ್ರಮ.

ಅಹಾರದ ಉದ್ದೇಶ ದೇಹವ ಅರೋಗ್ಯಲ್ಲಿ ಮಡಿಕ್ಕೊಂಬದು, ಕರ್ಮಕ್ಕೆ ಸತ್ವಯುತ ದೇಹಶಕ್ತಿಯ ಪಡಕ್ಕೊಂಬದು. ಅರೋಗ್ಯಕ್ಕ ಸಹಾಯಕವಾಗಿಪ್ಪ ಸಾತ್ವಿಕ ಆಹಾರ ಸೇವನೆ ಆಯಸ್ಸನ್ನೂ ಹೆಚ್ಚಿಸುತ್ತು, ಶರೀರವನ್ನೂ ದೃಢವಾಗಿರಿಸುತ್ತು. ರುಚಿಕರವಾದ ಪೌಷ್ಟಿಕ ಸತ್ವ ಆಹಾರ ಸೇವನೆ ಮಾಡೆಕು ಹೇಳಿ ಭಗವಂತ° ಸಾತ್ವಿಕರಿಂಗೆ ಇಲ್ಲಿ ಹೇಳಿದ್ದ°. ಅನಗತ್ಯ ಕೊಬ್ಬಿನಾಂಶ ಸೇವನೆಂದ ಮನೋವಿಕಾರ ಉಂಟಾವ್ತು ಅದು ರಾಜಸೀ ಸ್ವಭಾವವ ಪ್ರೋತ್ಸಾಹಿಸುತ್ತು. ಕೊಳಕ್ಕು, ಎಂಜಲು, ರುಚಿಹೀನ ಪದಾರ್ಥಂಗೊ ತಾಮಸ ಆಹಾರ. ಇದರಿಂದ ಸ್ವೇಚ್ಛೆಯೇ ಬಲವಾವ್ತು. 

ಹೀಂಗೆ ಆಹಾರಂದ ವ್ಯಕ್ತಿ ಯಾವ ಸ್ವಭಾವದವ° ಹೇಳ್ವದರ ಗುರುತುಸಲೆ ಆವ್ತು.

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 17 – SHLOKAS 01 – 10

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

One thought on “ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 01 – 10

  1. ಧರ್ಮಶಾಸ್ತ್ರ ಸಮ್ಮತವಾದ ಆಚರಣೆಯನ್ನೇ ಮಾಡೆಕ್ಕು.
    ನಾವು ತೆಕ್ಕೊಂಬ ಆಹಾರಂಗೊ ಯಾವ ಗುಣದ್ದು ಆಗಿರೆಕು, ಅದರ ವಿವರಣೆಗೊ ತುಂಬಾ ಲಾಯಿಕಕೆ ತಿಳಿಶಿಕೊಟ್ಟಿದ ಶ್ರೀಕೃಷ್ನ.
    ಸಾತ್ವಿಕ ,ರಾಜಸಿಕ, ತಾಮಸಿಕ ಆಹರಂಗೊ ಹೇಳಿರೆ ಎಂತರ, ಯಾವುದು ನವಗೆ ಯೋಗ್ಯ ಹೇಳಿ ತಿಳುವಳಿಕೆ ಕೊಡುವ ಶ್ರೇಷ್ಠ ಆಹಾರ ವಿಜ್ನಾನ ಇಲ್ಲಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×