Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ – 11 – 25

ಬರದೋರು :   ಚೆನ್ನೈ ಬಾವ°    on   09/05/2013    1 ಒಪ್ಪಂಗೊ

ಚೆನ್ನೈ ಬಾವ°

ಕಳುದವಾರದ ಭಾಗಲ್ಲಿ ಸಂನ್ಯಾಸ ಮತ್ತೆ ತ್ಯಾಗದ ವೆತ್ಯಾಸ ಎಂಸರ ಹೇದು ಅರ್ಜುನ° ಭಗವಂತನಲ್ಲಿ ಕೇಳಿದ್ದಕ್ಕೆ ತ್ಯಾಗಲ್ಲಿ ಸಾತ್ವಿಕ, ರಾಜಸ, ತಾಮಸ ಹೇದು ಮೂರು ಬಗೆಯಾಗಿಯೂ, ಕರ್ಮಲ್ಲಿ ವ್ಯಾಮೋಹ ಮತ್ತೆ ಫಲಾಪೇಕ್ಷೆಯ ತ್ಯಜಿಸಿ ನಿಷ್ಕಾಮ ಕರ್ಮ ನಿರತನಪ್ಪದು ಸಾತ್ವಿಕ ತ್ಯಾಗ ಹೇದೂ ಭಗವಂತ° ವಿವರಿಸಿದ್ದ. ಸಾತ್ವಿಕ ತ್ಯಾಗಿ ಸಾತ್ವಿಕಕರ್ಮಲ್ಲಿ ನೆಲೆಗೊಂಡು ಆ ನೆಲೆಲಿ ಸಂಶಯರಹಿತನಾಗಿಪ್ಪವನಾಗಿರುತ್ತ°. ಅಂವ° ಅಶುಭ ಕರ್ಮವ ದ್ವೇಷಿಸುತ್ತನಿಲ್ಲೆ, ಶುಭಕರ್ಮಲ್ಲಿ ಮೋಹಗೊಳ್ಳುತ್ತನೂ ಇಲ್ಲೆ.  ಮುಂದೆ –

 

ಶ್ರೀಮದ್ಭಗವದ್ಗೀತಾ ಅಷ್ಟಾದಶೋsಧ್ಯಾಯಃ – ಮೋಕ್ಷಸಂನ್ಯಾಸಯೋಗಃ – ಶ್ಲೋಕಾಃ 11 – 25

 

ಶ್ಲೋಕ

ನ ಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ ॥೧೧॥BHAGAVADGEETHA

ಪದವಿಭಾಗ

ನ ಹಿ ದೇಹ-ಭೃತಾ ಶಕ್ಯಮ್ ತ್ಯಕ್ತುಮ್ ಕರ್ಮಾಣಿ ಅಶೇಷತಃ । ಯಃ ತು ಕರ್ಮ-ಫಲ-ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ ॥

ಅನ್ವಯ

ದೇಹ-ಭೃತಾ ಅಶೇಷತಃ ಕರ್ಮಾಣಿ ತ್ಯಕ್ತುಂ ನ ಶಕ್ಯಮ್ , ಯಃ ತು ಹಿ ಕರ್ಮ-ಫಲ-ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ ।

ಪ್ರತಿಪದಾರ್ಥ

ದೇಹ-ಭೃತಾ – ದೇಹಧಾರಿಂದ, ಅಶೇಷತಃ ಕರ್ಮಾಣಿ – ಸಂಪೂರ್ಣವಾಗಿ ಕರ್ಮಂಗಳ, ತ್ಯಕ್ತುಮ್ – ತ್ಯಜಿಸಲೆ, ನ ಶಕ್ಯಮ್ – ಸಾಧ್ಯವಿಲ್ಲೆ, ಯಃ ತು ಹಿ  – ಆರಾದರೋ ಖಂಡಿತವಾಗಿಯೂ, ಕರ್ಮ-ಫಲ-ತ್ಯಾಗೀ – ಕರ್ಮಫಲದ ತ್ಯಾಗಿ ಇದ್ದರೆ, ಸಃ ತ್ಯಾಗೀ ಇತಿ ಅಭಿಧೀಯತೇ – ಅವ° ತ್ಯಾಗೀ ಹೇದು ಕರೆಯಲ್ಪಡುತ್ತ°.

ಅನ್ವಯಾರ್ಥ

ದೇಹಧಾರಿಯಾದವಂಗೆ ಸಂಪೂರ್ಣವಾಗಿ ಕರ್ಮವ ಬಿಡ್ಳೆ ಸಾಧ್ಯ ಇಲ್ಲೆ. ನಿಜ. ಆದರೆ, ಕರ್ಮಫಲವ ತ್ಯಜಿಸುವವನ ನಿಜವಾದ ತ್ಯಾಗಿ ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ಮನುಷ್ಯನಾದವ° ಕರ್ಮವ ಎಂದಿಂಗೂ ಬಿಡ್ಳೆ ಸಾಧ್ಯ ಇಲ್ಲೆ ಹೇಳಿ ಈ ಮದಲೇ ಅನೇಕ ಬಾರಿ ಭಗವಂತ° ಎಚ್ಚರಿಸಿದ್ದ°. ಹಾಂಗಾಗಿ ಕರ್ಮತ್ಯಾಗಿ ಹೇಳ್ವ ಮಾತಿನ ಅರ್ಥ ಕರ್ಮವ ಬಿಟ್ಟವ° ಹೇಳಿ ಅಲ್ಲ. ಬದಲಾಗಿ, ಕರ್ಮಫಲದ ನಂಟಿನ ಬಿಟ್ಟವ° ಹೇಳಿ ಅರ್ಥ. ಭಗವಂತನ ಪ್ರೀತಿಗೋಸ್ಕರ ಕರ್ಮವ ಮಾಡಿ, ಕರ್ಮಲ್ಲಿ ವ್ಯಾಮೋಹ ಇಲ್ಲದ್ದೆ, ಕರ್ಮ ಫಲವನ್ನೂ ಹಾತೊರಯದ್ದೆ ಎಲ್ಲವನ್ನೂ ಭಗವಂತಂಗೆ ಅರ್ಪಣೆ, ಸಿಕ್ಕಿದ್ದು ಭಗವಂತನ ಪ್ರಸಾದ ಹೇಳ್ವ ಮನೋಧರ್ಮಲ್ಲಿ ಕರ್ಮ ಮಾಡುವವನೇ ಕರ್ಮತ್ಯಾಗೀ ಹೇದು ಹೇಳಲ್ಪಡುತ್ತು. ಹಾಂಗಾಗಿ ಮನುಷ್ಯ ಬಿಡೇಕ್ಕಾದ್ದು ಕರ್ಮವ ಅಲ್ಲ, ಬದಲಾಗಿ ಕರ್ಮಫಲವ.

ಶ್ಲೋಕ

ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ॥೧೨॥

ಪದವಿಭಾಗ

ಅನಿಷ್ಟಮ್ ಇಷ್ಟಮ್ ಮಿಶ್ರಮ್ ಚ ತ್ರಿವಿಧಮ್ ಕರ್ಮಣಃ ಫಲಮ್ । ಭವತಿ ಅತ್ಯಾಗಿನಾಮ್ ಪ್ರೇತ್ಯ ನ ತು ಸಂನ್ಯಾಸಿನಾಮ್ ಕ್ವಚಿತ್ ॥

ಅನ್ವಯ

ಅನಿಷ್ಟಮ್, ಇಷ್ಟಮ್, ಮಿಶ್ರಮ್ ಚ (ಇತಿ) ತ್ರಿವಿಧಮ್ ಕರ್ಮಣಃ ಫಲಮ್ ಪ್ರೇತ್ಯ ಅತ್ಯಾಗಿನಾಮ್ ಭವತಿ, ಸಂನ್ಯಾಸಿನಾಮ್ ತು ಕ್ವಚಿತ್ ನ (ಭವತಿ) ।

ಪ್ರತಿಪದಾರ್ಥ

ಅನಿಷ್ಟಮ್ – ಅನಿಷ್ಟವಾದ್ದು (ಅಪ್ರಿಯವಾದ್ದು / ನರಕಕ್ಕೆ ಒಯ್ವ), ಇಷ್ಟಮ್ – ಇಷ್ಟವಾದ (ಪ್ರಿಯುವಾದ್ದು / ಸ್ವರ್ಗಕ್ಕೆ ಒಯ್ವ) , ಮಿಶ್ರಮ್ – ಮಿಶ್ರವಾದ, ಚ – ಕೂಡ, (ಇತಿ – ಹೇದು), ತ್ರಿವಿಧಮ್ – ಮೂರು ಬಗೆಯ, ಕರ್ಮಣಃ – ಕರ್ಮದ, ಫಲಮ್ – ಫಲವು, ಪ್ರೇತ್ಯ – ಮರಣದ ನಂತ್ರ, ಅತ್ಯಾಗಿನಾಮ್ – ತ್ಯಾಗಿಗಳಲ್ಲದ್ದೋರಿಂಗೆ, ಭವತಿ – ಉಂಟಾವ್ತು, ಸಂನ್ಯಾಸಿನಾಮ್ – ಸಂನ್ಯಾಸಿಗೊಕ್ಕೆ, ತು – ಆದರೋ, ಕ್ವಚಿತ್ – ಎಂದಿಂಗೂ, ನ (ಭವತಿ) – ಉಂಟಾವುತ್ತಿಲ್ಲೆ.

ಅನ್ವಯಾರ್ಥ

ತ್ಯಾಗಿಗಳಲ್ಲದ್ದೋರಿಂಗೆ ಮರಣಾನಂತ್ರ ಪ್ರಿಯವಾದ್ದು, ಅಪ್ರಿಯವಾದ್ದು, ಮಿಶ್ರವಾದ್ದು ಹೇದು ಮೂರು ಬಗೆಯ ಕರ್ಮಫಲಂಗೊ ಲಭಿಸುತ್ತು. ಆದರೆ ಸಂನ್ಯಾಸಿಗೊಕ್ಕೆ ಹೀಂಗೆ ಎಂದೂ ಉಂಟಾವ್ತಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತನೊಂದಿಂಗೆ ತನ್ನ ಸಂಬಂಧದ ಪ್ರಜ್ಞೆ ಮಡಿಕ್ಕೊಂಡು ಕರ್ಮ ಮಾಡುವವ° ಏವತ್ತೂ ಮುಕ್ತ°. ಅವಂಗೆ ಮರಣಾನಂತ್ರ ತನ್ನ ಕರ್ಮ ಫಲವ ಅನುಭವುಸೆಕು ಹೇಳ್ವ ಪ್ರಶ್ನೆ ಬತ್ತಿಲ್ಲೆ. ಆದರೆ ತ್ಯಾಗಿ ಅಲ್ಲದ್ದೋರಿಂಗೆ ತನ್ನ ಕರ್ಮಕ್ಕನುಗುಣವಾಗಿ ಪ್ರಿಯ, ಅಪ್ರಿಯ, ಮಿಶ್ರ ಹೇಳ್ವ ಕರ್ಮ ಫಲ ಮರಣಾನಂತರವೂ ಅನುಭವುಸೇಕ್ಕಾಗಿ ಬತ್ತು. ಕರ್ಮ ಮಾಡುವದರಿಂದ ಸುಖವಪ್ಪಲೂ ಸಾಕು, ದುಃಖವಪ್ಪಲೂ ಸಾಕು, ಸುಖ-ದುಃಖದ ಮಿಶ್ರಫಲವಾಗಿಪ್ಪಲೂ ಸಾಕು. ಅದು ಅವನ ಕರ್ಮ ಮಾಡಿದ್ದರ ಯೋಗ್ಯತೆಯ ಹೊಂದಿಗೊಂಡು ಅವನ ಅಂಟಿಗೊಂಡು ನಿಲ್ಲುತ್ತು. ಮರಣಾನಂತರವೂ ಅದು ಅವನ ಬಿಡುತ್ತಿಲ್ಲೆ. ಜನ್ಮ ಜನ್ಮಾಂತರಂಗಳಲ್ಲಿಯೂ ಅದರ ಪ್ರಭಾವ ಇದ್ದೇ ಇದ್ದು. ಹೀಂಗೆ ಕರ್ಮಫಲತ್ಯಾಗಿ ಅಲ್ಲದ್ದೋರಿಂಗೆ ಕರ್ಮಫಲದ ಸುಳಿಲಿ ಸಿಕ್ಕಿ ಮತ್ತೆ ಮತ್ತೆ ಸಂಸಾರ ಬಂಧನಲ್ಲಿ ಸಿಲುಕಿಗೊಳ್ಳುತ್ತವು. ಆದರೆ ಕರ್ಮಫಲಾಸಕ್ತಿಯ ಬಿಟ್ಟೋರಿಂಗೆ (ತ್ಯಾಗಿಗೆ) ಇದರ ಸೋಂಕು ಲವಲೇಶವೂ ಇಲ್ಲೆ. ಅವಕ್ಕೆ ಬೇಕಾದ್ದು ಬೇಡದ್ದು ಹೇಳ್ವ ಭೇದ ಇಲ್ಲೆ. ಏವುದು ಬಂದರೂ ಅದು ಭಗವಂತನ ಪ್ರಸಾದ ಹೇಳಿ ನಿರ್ಲಿಪ್ತ ಧೋರಣೆಂದ ಮತ್ತೆ ನಿಷ್ಕಾಮ ಕರ್ಮಲ್ಲಿಯೇ ಮುಂದುವರಿತ್ತವು. ಅದು ಮೋಕ್ಷದ ಮಾರ್ಗವ ಸುಗಮಗೊಳುಸುತ್ತು.

 ಶ್ಲೋಕ

ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ ॥೧೩॥

ಪದವಿಭಾಗ

ಪಂಚ ಏತಾನಿ ಮಹಾ-ಬಾಹೋ ಕಾರಣಾನಿ ನಿಬೋಧ ಮೇ । ಸಾಂಖ್ಯೇ ಕೃತ-ಅಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ-ಕರ್ಮಣಾಮ್ ॥

ಅನ್ವಯ

ಹೇ ಮಹಾ-ಬಾಹೋ! ಸರ್ವ-ಕರ್ಮಣಾಂ ಸಿದ್ಧಯೇ ಕೃತ-ಅಂತೇ ಸಾಂಖ್ಯೇ ಪ್ರೋಕ್ತಾನಿ ಏತಾನಿ ಪಂಚ ಕಾರಣಾನಿ ಮೇ ನಿಬೋಧ ।

ಪ್ರತಿಪದಾರ್ಥ

ಹೇ ಮಹಾ-ಬಾಹೋ! – ಏ ಮಾಹಾಬಾಹುವೇ!, ಸರ್ವ-ಕರ್ಮಣಾಮ್ – ಎಲ್ಲ ಕರ್ಮಂಗಳ, ಸಿದ್ಧಯೇ – ಸಿದ್ಧಿಗಾಗಿ, ಕೃತ-ಅಂತೇ – ಸಿದ್ಧಾಂತಲ್ಲಿ, ಸಾಂಖ್ಯೇ – ವೇದಾಂತಲ್ಲಿ, ಪ್ರೋಕ್ತಾನಿ – ಹೇಳಲ್ಪಟ್ಟ, ಏತಾನಿ ಪಂಚ ಕಾರಣಾನಿ – ಈ ಐದು ಕಾರಣಂಗಳ, ಮೇ – ಎನ್ನಿಂದ, ನಿಬೋಧ – ತಿಳುಕ್ಕೊ.

ಅನ್ವಯಾರ್ಥ

ಏ ಮಹಾಬಾಹುವಾದ ಅರ್ಜುನ!, ವೇದಾಂತಕ್ಕೆ ಹೇಳಲ್ಪಟ್ಟ ಪ್ರಕಾರ ಎಲ್ಲ ಕರ್ಮಂಗಳ ಸಿದ್ಧಿಗೆ ಆ ಐದು ಕಾರಣಂಗಳ ನೀನು ಎನ್ನಂದ ಕೇಳಿ ತಿಳುಕ್ಕೊ.

ತಾತ್ಪರ್ಯ / ವಿವರಣೆ

ಎಲ್ಲ ಕಾರ್ಯಂಗೊ ಕೈಗೂಡ್ಳೆ ಐದು ಕಾರಣಂಗೊ ಹೇಳಿ ವೇದಾಂತಲ್ಲಿ ಹೇಳಲ್ಪಟ್ಟಿದು. ಆ ವೈದಿಕ ಸಿದ್ಧಾಂತಲ್ಲಿ ಹೇಳಲಾದ ಆ ಐದು ಕಾರಣಂಗಳ ಎನ್ನಂದ ನೀನು ಕೇಳಿ ತಿಳುಕ್ಕೊ ಹೇಳಿ ಭಗವಂತ° ಮಹಾಬಾಹುವಾದ ಅರ್ಜುನಂಗೆ ಹೇಳುತ್ತ°. ‘ಮಹಾ-ಬ’ ಹೇಳಿರೆ ಮಹತ್ತಾದ ಬಯಕೆಗೊ. ಅದರ ತ್ಯಾಗ ಮಾಡಿದವ° – ‘ಮಹಾಬಾಹು’-   ಅರ್ಜುನ°. ನಾವೆಲ್ಲರೂ ನಮ್ಮ ಜೀವನಲ್ಲಿ ಕರ್ಮಫಲತ್ಯಾಗ ಮಾಡಿ, ಕೇವಲ ಭಗವದರ್ಪಣಾ ಭಾವಂದ ಕರ್ಮ ಮಾಡುವದರ ಕಲ್ತು ಮಹಾಬಾಹುಗಳಾಯೇಕು ಹೇಳಿ ಭಗವಂತನ ಧ್ವನಿ ಹೇದು ಬನ್ನಂಜೆಯವರ ವ್ಯಾಖ್ಯಾನಂದ ಗುರುತಿಸಿದ್ದು.

ಶ್ಲೋಕ

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್ ।
ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥೧೪॥

ಪದವಿಭಾಗ

ಅಧಿಷ್ಠಾನಮ್ ತಥಾ ಕರ್ತಾ ಕರಣಮ್ ಚ ಪೃಥಕ್-ವಿಧಮ್ । ವಿವಿಧಾಃ ಚ ಪೃಥಕ್ ಚೇಷ್ಟಾಃ ದೈವಮ್ ಚ ಏವ ಅತ್ರ ಪಂಚಮಮ್ ॥

ಅನ್ವಯ

ಅಧಿಷ್ಠಾನಮ್, ತಥಾ ಕರ್ತಾ ಚ, ಪೃಥಕ್-ವಿಧಂ ಕರಣಂ ಚ, ವಿವಿಧಾಃ ಪೃಥಕ್ ಚೇಷ್ಟಾಃ, ಅತ್ರ ದೈವಂ ಪಂಚಮಮ್ ಏವ (ಭವತಿ) ।

ಪ್ರತಿಪದಾರ್ಥ

ಅಧಿಷ್ಠಾನಮ್ – ಜಾಗೆ (ಸ್ಥಳ / ತಾಣ), ತಥಾ – ಹಾಂಗೇ (ಮತ್ತೆ), ಕರ್ತಾ – ಕರ್ತ, ಚ – ಕೂಡ, ಪೃಥಕ್-ವಿಧಮ್ ಕರಣಮ್ – ಭಿನ್ನ ಬಗೆಯ ಸಾಧನ, ಚ – ಕೂಡ, ವಿವಿಧಾಃ ಪೃಥಕ್ ಚೇಷ್ಟಾಃ – ವಿವಿಧವಾದ ಪ್ರತ್ಯೇಕ ಪ್ರಯತ್ನಂಗೊ/ಕ್ರಿಯೆಗೊ, ಅತ್ರ – ಇಲ್ಲಿ, ದೈವಮ್ – ದೇವರು/ಭಗವಂತ°/ಅದೃಷ್ಟ, ಪಂಚಮಮ್ ಏವ (ಭವತಿ) – ಐದನೇದು ಹೇದು ಖಂಡಿತಾ ಆವುತ್ತು.

ಅನ್ವಯಾರ್ಥ

ಕ್ರಿಯೆ ನಡವ ಜಾಗೆ, ಮತ್ತೆ ಮಾಡುವವ° (ಕರ್ತ), ಬೇರೆ ಬೇರೆ ಸಾಧನಂಗೊ, ಮತ್ತೆ ಬಗೆಬಗೆಯ (ವಿವಿಧ) ಪೂರಕ ಕ್ರಿಯೆಗೊ  ಮತ್ತೆ ಐದನೇದು ಭಗವಂತ° / ಅದೃಷ್ಟ ಆವುತ್ತು.

ತಾತ್ಪರ್ಯ / ವಿವರಣೆ

ಮೇಲ್ಮೈಗೆ ಸಾಮಾನ್ಯವಾಗಿ ಕಾಂಬ ಈ ಶ್ಲೋಕಲ್ಲಿ ಸೂಕ್ಷ್ಮ ಸಂದೇಶ ಒಳಗೊಂಡಿದ್ದು. ಪ್ರತಿಯೊಂದು ಕ್ರಿಯೆ ನಡವಲೆ ಐದು ಕಾರಣಂಗೊ ಇಪ್ಪದಾಗಿ ಭಗವಂತ° ಇಲ್ಲಿ ವಿವರಿಸಿದ್ದ°. ಅದು ಏವುದೆಲ್ಲ ಹೇಳಿರೆ –

೧. ಅಧಿಷ್ಠಾನ – ಇಲ್ಲಿ ಅಧಿಷ್ಠಾನ ಹೇಳಿರೆ ಜಾಗೆ / ಸ್ಥಳ – ಅರ್ಥಾತ್ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರ ಇಲ್ಲದ್ದೆ ಯಾವ ಕ್ರಿಯೆಯೂ ನಡೆತ್ತಿಲ್ಲೆ. ಅದುವೇ ಬುನಾದಿ. ಶರೀರದ ಮೂಲಕವಾಗಿಯೇ ಎಲ್ಲ ಕಾರ್ಯ / ಕರ್ಮ ನಡವದು. ಅದೊಂದು ಭದ್ರ ಪೀಠದ ಹಾಂಗೇ. ಹಾಂಗಾಗಿ ಏವುದೇ ಕರ್ಮ/ಕಾರ್ಯಕ್ಕೆ ಶರೀರ ಪ್ರಥಮ ಅಸ್ತಿವಾರ ಅಥವಾ ಸಾಧನಾ ಸಾಮಾಗ್ರಿ. ನವಗೆ ಲಭಿಸಿದ ಈ ಸಾಧನಾ ಶರೀರ ಆ ಭಗವಂತನ ಪ್ರಸಾದ.

೨. ಕರ್ತಾ – ಶರೀರದೊಳ ಕೂದೊಂಡು ನಮ್ಮ ಕ್ರಿಯೆಗಳ ನಿಯಂತ್ರಿಸುವವ° ಕರ್ತಾ – ಆ ಭಗವಂತ°. ಅಂವ° ಸ್ವತಂತ್ರ°. ಅವಂಗೆ ಅಧೀನವಾಗಿಪ್ಪ ಜೀವ ಸ್ವತಂತ್ರ ಅಲ್ಲ. ಆದರೆ ಜೀವಂಗೆ ಇಚ್ಛಾಪೂರ್ವಕ ಕೃತಿ ಮಾಂತ್ರ ಇದ್ದು. ಜೀವಿ ಇಚ್ಛಿಸಿದ್ದರ ಕರ್ತನಾಗಿ ಭಗವಂತ° ಕಾರ್ಯವ ಜೀವಿಯ ಮೂಲಕ ನೆರವೇರುಸುತ್ತ°.

೩. ವಿವಿಧ ಕರಣಂಗೊ –  ಕರಣಂಗೊ ಹೇಳಿರೆ ಸಾಧನಂಗೊ ->  ಶರೀರಲ್ಲಿ ಇಪ್ಪ ಕರ್ಮ ಸಾಧನಂಗೊ ಅರ್ಥಾತ್ ಇಂದ್ರಿಯಂಗೊ. ನಮ್ಮ ವಿವಿಧ ಇಂದ್ರಿಯಂಗಳಲ್ಲಿ ಬೇರೆ ಬೇರೆ  ಇಂದ್ರಿಯಾಭಿಮಾನಿ ದೇವತೆಗೊ ಇಂದ್ರಿಯಂಗಳ ನಿಯಂತ್ರುಸುತ್ತವು. ಆ ಇಂದ್ರಿಯಾಭಿಮಾನಿ ದೇವತೆಗೊಕ್ಕೆ ಒಡೆಯ ಆ ಭಗವಂತ°. ಅವನ ಆದೇಶ ಪ್ರಕಾರ ಇವು ಕಾರ್ಯ ನಿರ್ವಹಿಸುವದು. ಅವಕ್ಕೂ ಸ್ವತಂತ್ರ ನಿರ್ಧಾರ ಹಕ್ಕು ಇಲ್ಲೆ. ಎಲ್ಲವೂ ಭಗವಂತನ ಆದೇಶ ಪ್ರಕಾರ ಅವು ನಡಶುವದು. ಹಾಂಗಾಗಿ ಎಲ್ಲ ಇಂದ್ರಿಯಂಗೊಕ್ಕೆ ಅಂತಿಮ ಒಡೆಯ ಏಕೈಕ ಆ ಭಗವಂತ° = ಹೃಷೀಕೇಶ°. ಹಾಂಗಾಗಿ ಈ ಇಂದ್ರಿಯಂಗೊ ಆ ಭಗವಂತನ ಪ್ರಸಾದ.

೪. ವಿವಿಧ ಪೂರಕ ಸಾಧನಂಗೊ – ಒಂದು ಕ್ರಿಯೆ ಪೂರ್ತಿ ಆಯೇಕ್ಕಾರೆ ಅದಕ್ಕೆ ಪೂರಕವಾದ ಅನೇಕ ಕ್ರಿಯೆ ನಡವಲೇ ಬೇಕು. ಅಂದರಷ್ಟೇ ಆ ಕ್ರಿಯೆ ಪೂರ್ತಿ ಆವ್ತು. ಹಾಂಗಾಗಿ ಕರ್ಮಕ್ಕೆ ಪೂರಕವಾಗಿ (ಪ್ರತಿಕ್ರಿಯೆಯಾಗಿ) ಅನೇಕ ಪೂರಕ ಸಾಧನಂಗಳ ಅಗತ್ಯ ಇದ್ದು.

೫. ದೈವಮ್ – ಇನ್ನು ನಾವೆಂತ ಹಸಬಡುದು ಲಾಗ ಹಾಕಿರೂ ಆ ಭಗವಂತನ ಕೃಪೆ ಇಲ್ಲದ್ರೆ ಎಂತ ಕ್ರಿಯೆಯೂ ನಡವಲೋ, ಪೂರ್ತಿಯಪ್ಪಲೋ ಸಾಧ್ಯ ಇಲ್ಲೆ. ನಾವು ಗ್ರೇಶಿದ ಮಾತ್ರಕ್ಕೆ ಭಗವಂತ° ಅದರ ಪೂರೈಸೆಕು  ಹೇಳ್ವ ಒತ್ತಡ ಅವಂಗೆ ಇಲ್ಲೆ. ಅದು ಅವನ ಸ್ವ-ಇಚ್ಛೆ. ಅದು ನಮ್ಮ ಯೋಗ್ಯತೆಯ ಹೊಂದಿಗೊಂಡು ಅಂವ ನಿರ್ಧರಿಸುವದು. ಹಾಂಗಾಗಿ ಅದು ನಮ್ಮ ಅದೃಷ್ಟ. ಅದೃಷ್ಟ ಒಳ್ಳೆದಿದ್ದರೆ ಕಾರ್ಯವೂ ಸಾಂಗವಾಗಿ ಪೂರ್ತಿ ಆವ್ತು. ನವಗೆ ಅದು ದುರದೃಷ್ಟ ಆದರೆ ನಮ್ಮ ಯೋಗ್ಯತೆ ಅದಕ್ಕೆ ಪೂರಕವಾಗಿಲ್ಲೆ ಹೇಳಿಯೇ ತಿಳಿಯೇಕ್ಕಷ್ಟೆ.

ಬನ್ನಂಜೆ ಈ ಮೇಗಾಣ ಐದು ವಿಷಯಂಗಳ ಒಂದು ಚೊಕ್ಕ ಉದಾಹರಣೆಯ ಮೂಲಕ ವಿವರುಸುತ್ತವು – ಒಬ್ಬ ಅತ್ಯುತ್ತಮ ಮಾತುಗಾರ°. ಅಂವ° ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತಾಡುತ್ತ°. ಈಗ ಅಂವ ಹೀಂಗೆ ಮಾತಾಡೇಕ್ಕಾರೆ – ಅವ ಮೂಗನಾಗಿಪ್ಪಲಾಗ. ಬಾಯಿ ಇದ್ದರೆ ಸಾಲ, ಬಾಯಿಲಿ ಶಬ್ದ ಬರೇಕು. ಕೇವಲ ಶಬ್ದ ಅಲ್ಲ, ಎಂತರ ಮಾತಾಡೇಕೋ ಅದಕ್ಕೆ ಅನುಗುಣವಾದ ಮಾತು / ಶಬ್ದ ಬರೇಕು. ಆ ಶಬ್ದ ಬರೇಕಾರೆ ಮಾತಿಂಗೆ ಒಂದು ಭಾವ ಬೇಕು. ಭಾವ ಹೇಳ್ವದು ಮನಸ್ಸಿಲ್ಲಿ ಹೊಳೆತ್ತದು. ಹೊಳದ ಭಾವಕ್ಕೆ ಅನುಗುಣವಾಗಿ ಶಬ್ದ ಬರೇಕು, ಆ ಶಬ್ದ ಬಾಯಿಯ ಮೂಲಕ ಸ್ಪುಟವಾಗಿ ಹೊರಹೊಮ್ಮೆಕು. ಭಾವನೆಂದ ಶಬ್ದದ ಹುಟ್ಟಿಂಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲ ಕ್ರಿಯೆ ಸುಸೂತ್ರವಾಗಿ ನಡದರೆ ಮಾಂತ್ರ ಅಂವ ಲಾಯಕಕ್ಕೆ ಮಾತಾಡುಗು. ಈಗ ಇಲ್ಲಿ ಅಲೋಚನೆ ಮಾಡೇಕ್ಕಾದ್ದು – ಮನಸ್ಸಿಲ್ಲಿ ಭಾವ ಮತ್ತೆ ಶಬ್ದವ ಹೊಳಸುವವ° ಆರು ?, ಅಲ್ಲದ್ರೆ, ಹೇಳೇಕು ಹೇಳಿ ಕಾಂಬ ವಿಷಯಕ್ಕೆ ಅನುಗುಣವಾಗಿ ಶಬ್ದ ಹೊಳೆಯದ್ರೆ?!. ನಮ್ಮ ಮೆದುಳಿನ ಏವುದೋ ಒಂದು ಗುಬ್ಬಿ (ಸ್ವಿಚ್) ಆ ಕ್ಷಣಲ್ಲಿ ಕೆಲಸ ಮಾಡದ್ದೇ ಹೋದರೆ?, ಹುಟ್ಟುವಾಗಳೇ ಮೂಗನಾಗಿ ಹುಟ್ಟಿರೆ? ಜ್ಞಾನ ಪರಂಪರೆಯೇ ಇಲ್ಲದ್ದ ಮನೆತನಲ್ಲಿ ಹುಟ್ಟಿರೆ?!. ಇಲ್ಲಿ ನಮ್ಮ ಕೈವಾಡ ಎಂತ ಇದ್ದು? ಇದರ ಅರ್ಥೈಸಿರೆ ‘ಆನು ಮಾಡಿದೆ’ ಹೇಳ್ವ ಅಹಂಕಾರ ಬಾರ. ಆ ಭಗವಂತ° ನಮ್ಮ ಮೂಲಕ ಮಾಡುಸುವದು. ಅಷ್ಟೇ. ನಮ್ಮ ನೆಲೆ ಹೀಂಗೆ ಸ್ಥಿರವಾದರೆ (ಈ ಪರಿಜ್ಞಾನ ಇದ್ದರೆ), ಎಲ್ಲವುದರ ಒಟ್ಟಿಂಗೇ ಇದ್ದು, ಏವುದರ ಅಂಟಿಂಗೂ ತಾಗದ್ದೆ ಇಪ್ಪಲೆ ಎಡಿಗು.

ಶ್ಲೋಕ

ಶರೀರವಾಙ್ಮನೋಭಿರ್ಯತ್ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ ॥೧೫॥

ಪದವಿಭಾಗ

ಶರೀರ-ವಾಕ್-ಮನೋಭಿಃ ಯತ್ ಕರ್ಮ ಪ್ರಾರಭತೇ ನರಃ । ನ್ಯಾಯ್ಯಮ್ ವಾ ವಿಪರೀತಮ್ ವಾ ಪಂಚ ಏತೇ ತಸ್ಯ ಹೇತವಃ ॥

ಅನ್ವಯ

ನರಃ ಶರೀರ-ವಾಕ್-ಮನೋಭಿಃ ನ್ಯಾಯ್ಯಂ ವಾ ವಿಪರೀತಂ ವಾ ಯತ್ ಕರ್ಮ ಪ್ರಾರಭತೇ, ತಸ್ಯ ಏತೇ ಪಂಚ ಹೇತವಃ (ಸಂತಿ) ।

ಪ್ರತಿಪದಾರ್ಥ

ನರಃ – ಮನುಷ್ಯ°, ಶರೀರ-ವಾಕ್-ಮನೋಭಿಃ – ದೇಹ, ಮಾತು, ಮನಸ್ಸುಗಳಿಂದ, ನ್ಯಾಯ್ಯಮ್ – ನ್ಯಾಯವಾದ್ದು, ವಾ ಅಥವಾ, ವಿಪರೀತಮ್ – ವಿರುದ್ಧವಾದ್ದು, ವಾ – ಅಥವಾ, ಯತ್ ಕರ್ಮ – ಏವ ಕರ್ಮವ, ಪ್ರಾರಭತೇ – ಸುರುಮಾಡುತ್ತನೋ, ತಸ್ಯ – ಅದರ, ಏತೇ ಪಂಚ – ಈ ಐದು, ಹೇತವಃ (ಸಂತಿ) – ಕಾರಣಂಗೊ ಇದ್ದು.

ಅನ್ವಯಾರ್ಥ

ಮನುಷ್ಯ ದೇಹ, ಮಾತು, ಮನಸ್ಸುಗಳ ಮೂಲಕ ಮಾಡುವ ನ್ಯಾಯ ಅಥವಾ ಅನ್ಯಾಯ ಏವುದೇ ಕರ್ಮಕ್ಕೂ ಈ ಐದು ಅಂಶಂಗ ಕಾರಣಂಗ ಇದ್ದು.

ತಾತ್ಪರ್ಯ / ವಿವರಣೆ

ಮೈ ಮಾತು ಮನಸ್ಸಿಂದ ಮನುಷ್ಯ ಏವ ಕೆಲಸ ಕೈಗೊಂಡರೂ, ಅದು ನ್ಯಾಯವಾಗಿರಲಿ ಅಥವಾ ಅನ್ಯಾಯವಾಗಿರಲಿ (ಒಪ್ಪಿರಲಿ ಅಥವಾ ತಪ್ಪಿರಲಿ) ಅದಕ್ಕೆ ಇವು ಐದು ಕಾರಣಂಗೊ ಆಗಿದ್ದು. ಮಾಡಿದ ಕ್ರಿಯ ಒಳ್ಳೆದಾಗಿರಲ್ಲಿ, ಕೆಟ್ಟದ್ದಾಗಿರಲಿ ಕ್ರಿಯೆ ಮಾಂತ್ರ ಈ ಐದು ಕಾರಣಂದಲೇ ನಡವದು ಹೇದು ಭಗವಂತ° ಹೇಳುತ್ತ°.

ಶ್ಲೋಕ

ತತ್ರೈವಂ ಸತಿ ಕರ್ತಾರಮ್ ಆತ್ಮಾನಂ ಕೇವಲಂ ತು ಯಃ ।
ಪಶ್ಯತ್ಯಕೃತಬುದ್ಧಿತ್ವಾನ್ ನ ಸ ಪಶ್ಯತಿ ದುರ್ಮತಿಃ ॥೧೬॥

ಪದವಿಭಾಗ

ತತ್ರ ಏವಮ್ ಸತಿ ಕರ್ತಾರಮ್ ಆತ್ಮಾನಮ್ ಕೇವಲಮ್ ತು ಯಃ । ಪಶ್ಯತಿ ಅಕೃತ-ಬುದ್ಧಿತ್ವಾತ್ ನ ಸಃ ಪಶ್ಯತಿ ದುರ್ಮತಿಃ ॥

ಅನ್ವಯ

ತತ್ರ ಏವಂ ಸತಿ ಯಃ ತು ಕೇವಲಮ್ ಆತ್ಮಾನಂ ಕರ್ತಾರಂ ಪಶ್ಯತಿ, ಸಃ ದುರ್ಮತಿಃ ಅಕೃತ-ಬುದ್ಧಿತ್ವಾತ್ ನ ಪಶ್ಯತಿ ।

ಪ್ರತಿಪದಾರ್ಥ

ತತ್ರ – ಅಲ್ಲಿ, ಏವಮ್ – ಹೀಂಗೆ, ಸತಿ – ಇದ್ದುಗೊಂಡು, ಯಃ – ಯಾವಾತ°, ತು – ಆದರೋ, ಕೇವಲಮ್ ಆತ್ಮಾನಮ್ – ತನ್ನ ಮಾತ್ರವೇ, ಕರ್ತಾರಮ್ – ಕರ್ತ (ಹೇದು), ಪಶ್ಯತಿ – ಕಾಣುತ್ತ°, ಸಃ – ಅವ°, ದುರ್ಮತಿಃ – ಮೂರ್ಖ°, ಅಕೃತ-ಬುದ್ಧಿತ್ವಾತ್ – ಮಂದಬುದ್ಧಿಯ ಕಾರಣಂದ, ನ ಪಶ್ಯತಿ – (ವಸ್ತುಸ್ಥಿತಿಯ) ಕಾಣ°.

ಅನ್ವಯಾರ್ಥ

ಅಲ್ಲಿ ಹೀಂಗೆ ಇದ್ದುಗೊಂಡು, ಯಾವಾತ° (ಆ ಐದು ಅಂಶಂಗಳ ಗಮನುಸುದ್ದೆ/ತಿಳಿಯದ್ದೆ) ಕೇವಲ ತಾನೊಬ್ಬನೇ (ತಾನೇ) ಕರ್ತ ಹೇದು ಕಾಣುತ್ತ° / ಯೋಚಿಸುತ್ತ°. ಅಂವ° (ನಿಶ್ಚಯವಾಗಿಯೂ) ಮೂರ್ಖನಾಗಿದ್ದ° ಮತ್ತು (ವಸ್ತುಸ್ಥಿತಿಯ) ಕಾಣುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ ಮಿತ್ರನಾಗಿ ನಮ್ಮ  ಶರೀರದೊಳ ಇದ್ದುಗೊಂಡು ತನ್ನ ಮೂಲಕ ಕರ್ಮವ ಮಾಡುಸುತ್ತ° ಹೇಳ್ವದರ ಮೂರ್ಖನಾದವ ತಿಳಿತ್ತನಿಲ್ಲೆ. ಕರ್ಮಸ್ಥಳ/ದೇಹ, ಕರ್ತ, ವಿವಿಧ ಇಂದ್ರಿಯಂಗೊ, ವಿವಿಧ ಪ್ರಯತ್ನಂಗೊ ಇವು ಐಹಿಕ ಪ್ರಯತ್ನಂಗೊ ಆಗಿದ್ದರೂ ದೇವೋತ್ತಮ ಪರಮ ಪುರುಷನೇ ಅಂತಿಮ ಕಾರಣನಾಗಿರುತ್ತ°. ಆದರೆ ಮೂರ್ಖನಾದವಂಗೆ ಇದಾವುದೂ ಕಣ್ಣಿಂಗೆ ಕಾಣುತ್ತಿಲ್ಲೆ. ಕಾರ್ಯಸಾಧಕ ಕಾರಣಂಗಳ ಅರ್ಥಮಾಡಿಗೊಳ್ಳದ್ದವ° ತಾನೇ ಕರ್ತ° ಹೇಳಿ ತಿಳಿತ್ತ°. ಹಾಂಗಾಗಿ ಕಾರ್ಯಸಾಧನ ಕಾರಣಂಗಳ ಅರ್ಥಮಾಡದ್ದೆ ‘ಆನು ಮಾಡಿದೆ’ ಹೇದು ಅಹಂಕಾರ ಪಟ್ಟುಗೊಂಬದು ಶುದ್ಧ ಮೂರ್ಖತನ ಅಥವಾ ಅವಿವೇಕವೇ ಸರಿ.

ಶ್ಲೋಕ

ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ ।
ಹತ್ವಾsಪಿ ಸ ಇಮಾಂಲ್ಲೋಕಾನ್ ನ ಹಂತಿ ನ ನಿಬಧ್ಯತೇ ॥೧೭॥

ಪದವಿಭಾಗ

ಯಸ್ಯ ನ ಅಹಂಕೃತಃ ಭಾವಃ ಬುದ್ಧಿಃ ಯಸ್ಯ ನ ಲಿಪ್ಯತೇ । ಹತ್ವಾ ಅಪಿ ಸಃ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ॥

ಅನ್ವಯ

ಯಸ್ಯ ಅಹಂಕೃತಃ ಭಾವಃ ನ, ಯಸ್ತ್ಯ ಬುದ್ಧಿಃ ನ ಲಿಪ್ಯತೇ, ಸಃ ಇಮಾನ್ ಲೋಕಾನ್ ಹತ್ವಾ ಅಪಿ ನ ಹಂತಿ, ನ ನಿಬಧ್ಯತೇ ।

ಪ್ರತಿಪದಾರ್ಥ

ಯಸ್ಯ – ಆರ, ಅಹಂಕೃತಃ ಭಾವ ನ – ಅಹಂಕಾರದ ಭಾವನೆ (ಸ್ವಭಾವ) ಇಲ್ಲೆಯೋ, ಯಸ್ಯ – ಆರ, ಬುದ್ಧಿಃ ನ ಲಿಪ್ಯತೇ – ಬುದ್ಧಿ ಅಂಟಿಗೊಳ್ತಿಲ್ಯೋ, ಸಃ – ಅವ°, ಇಮಾನ್ ಲೋಕಾನ್ – ಈ ಲೋಕಂಗಳ, ಹತ್ವಾ ಅಪಿ – ಕೊಂದರೂ ಸಾನ, ನ ಹಂತಿ – ಕೊಲ್ಲುತ್ತಿಲ್ಲೆ, ನ ನಿಬಧ್ನತೇ – ನಿಲುಕುತ್ತಿಲ್ಲೆ

ಅನ್ವಯಾರ್ಥ

ಆರ ಸ್ವಭಾವ ಅಹಂಕಾರ ಭಾವನೆಂದ ಕೂಡಿರ್ತಿಲ್ಯೋ, ಆರ ಬುದ್ಧಿ ಕರ್ಮಫಲ ವಿಷಯಲ್ಲಿ  ಅಂಟಿಗೊಳ್ತಿಲ್ಯೋ, ಅವ° ಈ ಲೊಕಂಗಳ ಎಲ್ಲವ (ಪರದೃಷ್ಟಿಲಿ) ಕೊಂದರೂ ಅವ° (ಯಥಾರ್ಥಲ್ಲಿ) ಕೊಲ್ಲುತ್ತನಿಲ್ಲೆ, ಅಂವ ಕರ್ಮದ ಸೆರೆಗೆ ನಿಲುಕುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಅಹಂಕಾರ ವರ್ಜಿತಂಗೆ, ಫಲದ ನಂಟು ಬಿಟ್ಟವಂಗೆ ಈ ಪ್ರಪಂಚಲ್ಲಿ ಆರನ್ನೂ ನೋಯಿಸೆಕು ಹೇಳಿ ಕಾಣುತ್ತಿಲ್ಲೆ, ಕರ್ಮದ ಅಂಟಿಂಗೂ ಅಂವ° ಸಿಲುಕುತ್ತನಿಲ್ಲೆ. ಕರ್ಮದ ಸೆರೆ ಅವಂಗೆ ಸೋಂಕ. ಹೇಳಿರೆ – ಕರ್ಮಫಲದ ತ್ಯಾಗ ಮಾಡಿದವ ಯಾವ ಕರ್ಮ ಮಾಡಿರೂ ಅದು ಅವಂಗೆ ಬಾಧಕ ಆವುತ್ತಿಲ್ಲೆ. ನಾವು ‘ಎನ್ನಂದಲಾತು’ ಹೇದು ಅಂಟಿಗೊಂಡಿರದ್ದೆ, ಏವುದೇ ಫಲಾಪೇಕ್ಷೆ ಇಲ್ಲದ್ದೆ ಕರ್ಮ ಮಾಡಿಯಪ್ಪಗ ಆ ಕರ್ಮದ ಫಲ ಎಂದೂ ನಮ್ಮ ಬಾಧಿಸುತ್ತಿಲ್ಲೆ. ತನ್ನ ಕರ್ತವ್ಯ ಕರ್ಮವ ಫಲಾಪೇಕ್ಷೆ ಇಲ್ಲದ್ದೆ ಮಾಡುವದು ಮಾಂತ್ರ ಅವರ ಲಕ್ಷ್ಯ. ಆ ರೀತಿಯ ನಿರ್ಲಿಪ್ತ ಮನಸ್ಸು ಅವರದ್ದು. ಹಾಂಗಿಪ್ಪಗ ಅವಕ್ಕೆ ಕರ್ಮಫಲದ ಯಾವುದೇ ಅಂಟು ಇಲ್ಲೆ. ಅಂವ ಕರ್ಮ ಮಾಡುವದು ಅವನ ಪಾಲಿನ ಕರ್ತವ್ಯ ದೃಷ್ಟಿಂದ. ಲೋಕದ ದೃಷ್ಟಿಗೆ ಅಂವ° ಈ ಇಡೀ ಪ್ರಪಂಚವನ್ನೇ ಕೊಂದರೂ ಅದು ಅಂವ ಕೊಲ್ಲುತ್ತನಿಲ್ಲೆ. ಹೇಳಿರೆ ಆ ಕರ್ಮಫಲ ಅವಂಗೆ ಅಂಟುತ್ತಿಲ್ಲೆ. ಅಂವ ಮಾಡಿದ್ದು ತನ್ನ ಕರ್ತವ್ಯ ಪಾಲಿನ ಮಾಂತ್ರ. ಅದರಿಂದ ತನಗೆ ಲಾಭ ಆಯೇಕು ಹೇಳ್ವ ಯೋಚನೆಯೇ ಇಲ್ಲೆ. ಅವೆಲ್ಲವನ್ನೂ ಅಂವ° ಭಗವಂತಂಗೆ ಸಮರ್ಪಿಸುತ್ತ°. ಹಾಂಗಾಗಿ ಅವಂಗೆ ಇಡೀ ಲೋಕವನ್ನೇ ಕೊಂದರೂ ಆ ಕರ್ಮ ಫಲ ಅಂವಂಗೆ ಅಂಟುತ್ತಿಲ್ಲೆ.

ಇಲ್ಲಿ ಪಾಂಡವರಿಂಗೆ ಯುದ್ಧ ಎದುರಾದ್ದು ಅನಿವಾರ್ಯ. ಅವ್ವು ಬೇಕು ಹೇಳಿ ಎಳದು ಹಾಕಿದ್ದಲ್ಲ. ಯುದ್ಧಲ್ಲಿ ಗೆದ್ದು ಅಧಿಕಾರ ಪಡೆಕು ಹೇಳ್ವ ಯೋಚನೆ ಅವಕ್ಕೆ ಇಲ್ಲೆ. ಅದು ದೈವೇಚ್ಛೆ ಹೇದು ಸ್ವೀಕರಿಸಿದ್ದವು. ಹಾಂಗಾಗಿ ಭಗವಂತ° ಇಲ್ಲಿ ವಿಶೇಷವಾಗಿ ಎಚ್ಚರಿಸಿ ಅರ್ಜುನಂಗೆ ಹೇಳಿದ್ದದು –   ‘ಇಮಾನ್ ಲೋಕಾನ್ ಹತ್ವಾ ಅಪಿ ನ ಹಂತಿ’ – ಇಡೀ ಲೋಕವನ್ನೇ ಕೊಂದರು ಅದು ಅವ ಕೊಲ್ಲುತ್ತನಿಲ್ಲೆ. ಹಾಂಗಾಗಿ ‘ನ ನಿಬಧ್ಯತೇ’ –   ಅಂಟಿಂಗೂ ಸಿಲುಕುತ್ತನಿಲ್ಲೆ. ದೈವೇಚ್ಛೆ, ಭಗವದ್ ಸಂಕಲ್ಪ ಹೇಳಿ ತಿಳುದು ಯುದ್ಧ ಮಾಡು ಹೇಳಿ ಅರ್ಜುನಂಗೆ ಸೂಚನೆ.

ಶ್ಲೋಕ

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ ।
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮ-ಸಂಗ್ರಹಃ ॥೧೮॥

ಪದವಿಭಾಗ

ಜ್ಞಾನಮ್ ಜ್ಞೇಯಮ್ ಪರಿಜ್ಞಾತಾ ತ್ರಿವಿಧಾ ಕರ್ಮ-ಚೋದನಾ । ಕರಣಮ್ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮ-ಸಂಗ್ರಹಃ ॥

ಅನ್ವಯ

ಜ್ಞಾನಮ್, ಜ್ಞೇಯಮ್, ಪರಿಜ್ಞಾತಾ ಇತಿ ತ್ರಿವಿಧಾ ಕರ್ಮ-ಚೋದನಾ (ಅಸ್ತಿ) । ಕರಣಮ್, ಕರ್ಮ, ಕರ್ತಾ (ಇತಿ) ತ್ರಿವಿಧಃ ಕರ್ಮ-ಸಂಗ್ರಹಃ (ಅಸ್ತಿ) ।

ಪ್ರತಿಪದಾರ್ಥ

ಜ್ಞಾನಮ್ – ಜ್ಞಾನವು, ಜ್ಞೇಯಮ್ – ತಿಳಿಯೇಕ್ಕಾದ್ದದು (ಜ್ಞಾನವಿಷಯವು), ಪರಿಜ್ಞಾತಾ – ತಿಳಿವಂವ°, ಇತಿ – ಹೇದು, ತ್ರಿವಿಧಾ – ಮೂರು ಬಗೆಯ, ಕರ್ಮ-ಚೋದನಾ (ಅಸ್ತಿ) – ಕರ್ಮ ಪ್ರಚೋದನೆ ಇದ್ದು, ಕರಣಮ್ – ಇಂದ್ರಿಯಂಗೊ, ಕರ್ಮ – ಕರ್ಮ, ಕರ್ತಾ – ಕರ್ತ°, (ಇತಿ – ಹೇದು), ತ್ರಿವಿಧಃ – ಮೂರು ಬಗೆಯ, ಕರ್ಮ-ಸಂಗ್ರಹಃ (ಅಸ್ತಿ) – ಕರ್ಮದ ಸಂಗ್ರಹಂಗೊ ಇದ್ದು.

ಅನ್ವಯಾರ್ಥ

ಜ್ಞಾನ, ಜ್ಞೇಯ, ಜ್ಞಾನಿ ಇವು ಮೂರು ಕರ್ಮವ ಪ್ರೇರಿಪಿಸುವ ಅಂಶಂಗೊ ಆಗಿದ್ದು. ಇಂದ್ರಿಯಂಗ, ಕರ್ಮ ಮತ್ತೆ ಕರ್ತ ಇವು ಮೂರು ಕರ್ಮದ ಅಂಶಂಗೊ (ಘಟಕಂಗೊ) ಆಗಿದ್ದು.

ತಾತ್ಪರ್ಯ / ವಿವರಣೆ

ಜೀವಿಗೆ ಸ್ವತಂತ್ರ ಕರ್ತೃತ್ವ ಇಲ್ಲೆ, ಕರ್ಮ ಭಗವದಿಚ್ಛೆ ಪ್ರಕಾರ ನಡೆತ್ತು. ಹಾಂಗಾರೆ ಜೀವಿಗೆ ವಿಧಿನಿಷೇಧ ಎಂತಕೆ , ಶಾಸ್ತ್ರ ಅದು  ಮಾಡು, ಇದು ಮಾಡೇಡ ಹೇದು ಹೇಳುತ್ತು ಹೇಳ್ವದಕ್ಕೆ ಇಲ್ಲಿ ಭಗವಂತ° ಉತ್ತರಿಸಿದ್ದ°. ಭಗವಂತ° ಹೇಳುತ್ತ° – ಕರ್ಮ ವಿಧಿಯ ಉದ್ದೇಶ ಮೂರು – ಮಾಡೇಕು ಹೇಳ್ವ ಚಿಂತನೆ (ಜ್ಞಾನ), ಅದಕ್ಕಾಗಿ ತಿಳಿಯೇಕ್ಕಾದ ಕರ್ಮ. ಕರ್ಮಫಲ ಮತ್ತೆ ಅರ್ತು ಮಾಡುವಂವ° – ಹೀಂಗೆ ಮೂರು ಅಂಶಂಗೊ. ಕರ್ಮಕ್ಕೆ ಕಾರಣವಾದ ಭಗವಂತನ ಪ್ರೇರಣೆ ಅವನ ಸ್ವರೂಪವೇ. ಹಾಂಗಾಗಿ ಮುಮ್ಮುಖವಾದ ಅದು ಜ್ಞಾನದ ರೂಪ, ಎಲ್ಲೋರು ತಿಳಿಯೇಕ್ಕಾದಂತದ್ದು ಮತ್ತೆ ಎಲ್ಲವನ್ನೊ ತಿಳುದ್ದದು – ಈ ರೀತಿಯಾಗಿ ಮೂರು ಅಂಶಂಗೊ. ಮತ್ತೆ, ಕರ್ಮದ ಕಾರಣವೂ ಅಡಕವಾಗಿ ಮೂರು ಘಟಕಂಗೊ – ಉಪಕರಣ, ಕರ್ಮ, ಮಾಡುವಂವ° (ಕರಣ, ಕರ್ಮ, ಕರ್ತ).

ಬನ್ನಂಜೆ ವಿವರುಸುತ್ತವು – ವಿಧಿನಿಷೇಧ ಇಪ್ಪದು ನಮ್ಮ ಜ್ಞಾನಕ್ಕಾಗಿ. ‘ಭಗವಂತನ ಆನು ತಿಳುಕ್ಕೊಳ್ಳೆಕು’  ಹೇಳ್ವದಕ್ಕೆ ಕರ್ಮದ ವಿಧಿನಿಷೇಧ. ಕರ್ಮ ಮಾಡುವದು ಕರ್ಮಕ್ಕಾಗಿ ಅಲ್ಲ – ಜ್ಞಾನಕ್ಕಾಗಿ. ಕರ್ಮದ ವಿಧಾನದ ಹಿಂದೆ ಇಪ್ಪದು ಕಾರುಣ್ಯ. ಜ್ಞಾನವಿಲ್ಲದ್ದ ಲೋಕಕ್ಕೆ ಭಗವಂತನ ಜ್ಞಾನ – ಆ ಜ್ಞಾನಕ್ಕೆ ಪೂರಕವಾಗಿ ಕರ್ಮ. ಕರ್ಮದ ಹಿಂದಿಪ್ಪ ಪ್ರೇರಣೆ ಮೂರು – ಜ್ಞಾನ, ಜ್ಞೇಯ ಮತ್ತೆ ಜ್ಞಾತಾ. ಒಂದು ಕ್ರಿಯೆಯ ಮಾಡೇಕು ಹೇಳ್ವ ಅರಿವು, ಆ ಕ್ರಿಯೆಯ ಮಾಡ್ಳೆ ಅರಿಯೆಕ್ಕಾದ ಕರ್ಮ ಮತ್ತೆ ಕರ್ಮವ ಅರ್ತು ಕರ್ಮವ ಮಾಡುವಂವ°. ಭಗವಂತನ ತಿಳುಕ್ಕೊಳ್ಳೆಕು ಹೇಳ್ವದು ಕರ್ಮದ ಹಿಂದಿಕೆ ಇಪ್ಪ ಮೂಲ ಪ್ರೇರಣೆ. ಕರ್ಮ ಮಾಡುತ್ತದು ನಮ್ಮ ತಿಳಿಗೇಡಿತನವ ಬಿಡುಸಿ ಜ್ಞಾನವ ಪಡವಲೆ, ನಮ್ಮ ಅರಿವಿನ ಬೆಳೆಶುಲೆ, ಆ ಅರಿವು ಭಗವನ್ಮುಖ ಅಪ್ಪಲೆ. ನಾವು ಅರುವುಳ್ಳವರಪ್ಪಲೆ ಬೇಕಾಗಿಯೇ ಕರ್ಮವಿಧಿನಿಷೇಧ ಶಾಸ್ತ್ರಕಾರರಿಂದ ಬಂತು.

ಜೀವಿಗೆ ಕರ್ಮ ಮಾಡೆಕು ಹೇಳ್ವ ಪ್ರೇರಣೆ ಮಾಡುವಂವ° – ಭಗವಂತ°. ಅದಕ್ಕನುಗುಣವಾಗಿ ಜೀವಿ ಕರ್ಮ ಮಾಡುತ್ತ°. ಯಾವ ಜೀವಿ ಎಂತರ ಆಯೇಕು ಹೇಳ್ವದು ಆ ಜೀವದ ಸ್ವರೂಪಕ್ಕೆ ಸಂಬಂಧಪಟ್ಟ ವಿಚಾರ. ಆದರೆ ಸ್ವಯಂ ಜೀವಿಗೆ ಅದರ ಅಭಿವ್ಯಕ್ತಗೊಳುಸುವ ಶಕ್ತಿ ಇಲ್ಲೆ. ಭಗವಂತ° ಆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವನಲ್ಲಿ ಪ್ರೇರಣೆ ಮಾಡುತ್ತ°. ಭಗವಂತನ ಪ್ರೇರಣೆಂದ ಜೀವಯೋಗ್ಯತೆ ವ್ಯಕ್ತವಾವ್ತು, ಮತ್ತೆ ಅದಕ್ಕನುಗುಣವಾಗಿ ಜೀವಿ ಕರ್ಮಲ್ಲಿ ತೊಡಗುತ್ತ°. ಇಲ್ಲಿ ಎಲ್ಲವೂ ಮೂಲತಃ ಭಗವತ್ ಸ್ವರೂಪ. ಭಗವಂತನ ಜ್ಞಾನ- ಭಗವದ್ ಸ್ವರೂಪ, ಭಗವಂತನ ಕ್ರಿಯೆ- ಭಗವದ್ ಸ್ವರೂಪ, ಭಗವಂತನ ಪ್ರೇರಣೆ- ಭಗವದ್ ಸ್ವರೂಪ. ಭಗವಂತನ ಸ್ವರೂಪ ನೇರ ನಮ್ಮ ಮೇಗೆ ಕೆಲಸ ಮಾಡುತ್ತಿರುತ್ತು. ಅವನೇ ಜ್ಞಾನ, ಅವನೇ ಜ್ಞೇಯ°, ಅವನೇ ಜ್ಞಾತೃ. ಹಾಂಗಾಗಿ ಅವನ ಪ್ರೇರಣೆ – ಜ್ಞಾನಸ್ವರೂಪ, ಅವನ ಪ್ರೇರಣೆ – ಜ್ಞಾತೃಸ್ವರೂಪ, ಅವನ ಪ್ರೇರಣೆ – ಜ್ಞೇಯಸ್ವರೂಪ. ಹೀಂಗೆ ಜ್ಞಾನಸ್ವರೂಪನಾದ ಭಗವಂತನ ಪ್ರೇರಣೆಂದ ಜೀವ ಕರ್ಮ ಮಾಡುತ್ತ° ಮತ್ತೆ ಎಲ್ಲವೂ ಅವನ ಅಧೀನವಾಗಿ ನಡೆತ್ತು.

ಒಟ್ಟಿಲ್ಲಿ ಕರ್ಮದ ಕಾರಣವಾದ ಅಡಕವಾಗಿ ಹೇಳ್ತದಾದರೆ ಅವು ಮೂರು ವಿಧ – ದೇಹ ಇಂದ್ರಿಯಾದಿ ಉಪಕರಣಂಗೊ, ಮಾಡುವಿಕೆ (ಕರ್ಮ) ಮತ್ತೆ ಕರ್ತಾ (ಜೀವ, ಭಗವಂತ ಮತ್ತೆ ಅದೃಷ್ಟ).

ಶ್ಲೋಕ

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥೧೯॥

ಪದವಿಭಾಗ

ಜ್ಞಾನಮ್ ಕರ್ಮ ಚ ಕರ್ತಾ ಚ ತ್ರಿಧಾ ಏವ ಗುಣ-ಭೇದತಃ । ಪ್ರೋಚ್ಯತೇ ಗುಣ-ಸಂಖ್ಯಾನೇ ಯಥಾವತ್ ಶೃಣ ತಾನಿ ಅಪಿ ॥

ಅನ್ವಯ

ಜ್ಞಾನಮ್, ಕರ್ಮ ಚ ಕರ್ತಾ ಚ ತ್ರಿಧಾ ಏವ ಗುಣ-ಭೇದತಃ । ಗುಣ-ಸಂಖ್ಯಾನೇ ಪ್ರೋಚ್ಯತೇ, ತಾನಿ ಅಪಿ ಯಥಾವತ್ ಶೃಣು ।

ಪ್ರತಿಪದಾರ್ಥ

ಜ್ಞಾನಮ್ – ಜ್ಞಾನ, ಕರ್ಮ – ಕರ್ಮ, ಚ – ಕೂಡ (ಮತ್ತೆ), ಕರ್ತಾ – ಕರ್ತಾರ°, ಚ – ಕೂಡ, ತ್ರಿಧಾ – ಮೂರು ಬಗೆಯ, ಏವ – ಖಂಡಿತವಾಗಿಯೂ, ಗುಣ-ಭೇದತಃ – ವಿಭಿನ್ನ ಪ್ರಕೃತಿ ಗುಣಂಗಳ ಪ್ರಕಾರ, ಗುಣ-ಸಂಖ್ಯಾನೇ – ವಿಭಿನ್ನ ಗುಣಂಗಳ ಪ್ರಕಾರ / ವೈದಿಕ ಸಾಂಖ್ಯಾ ಶಾಸ್ತ್ರಲ್ಲಿ), ಪ್ರೋಚ್ಯತೇ – (ಹೇದು) ಹೇಳಲಾವ್ತು, ತಾನಿ ಅಪಿ – ಅವೆಲ್ಲವನ್ನೂ ಕೂಡ, ಯಥಾವತ್ – ಅದು ಇಪ್ಪ ಹಾಂಗೇ, ಶೃಣು – ಕೇಳು.

ಅನ್ವಯಾರ್ಥ

ಜ್ಞಾನ, ಕರ್ಮ ಮತ್ತೆ ಕರ್ತಾರ ಕೂಡ ಗುಣಭೇದಂದ ಮೂರು ರೀತಿದು ಹೇದು ಗುಣಂಗಳ ಎಣಿಕೆಯ ಪ್ರಕರಣಲ್ಲಿ ( ವೈದಿಕ ಸಾಂಖ್ಯಾ ಶಾಸ್ತ್ರಲ್ಲಿ) ಹೇಳಲಾಯ್ದು. ಅವುಗಳ ಹಾಂಗೇಯೇ ಇಪ್ಪಹಾಂಗೇ (ಯಥಾರ್ಥವಾಗಿ) ಕೇಳು.

ತಾತ್ಪರ್ಯ / ವಿವರಣೆ

ಪ್ರತಿಯೊಬ್ಬನ ಬದುಕ್ಕಿಲ್ಲಿಪ್ಪ ಮೂರು ಪ್ರಮುಖ ಘಟಕಂಗೊ ಹೇದರೆ ಜ್ಞಾನ, ಕಾಯಕ (ಕರ್ಮ) ಮತ್ತೆ ಕರ್ತಾ (ಮಾಡುವಂವ°). ಎಂತದೇ ಮಾಡುವದಾದರೂ ಕೂಡ ಒಂದು ತಿಳುವಳಿಕೆಂದ (ಜ್ಞಾನಂದ) ಮಾಡುತ್ತದು. – ಅದು ಜ್ಞಾನ. ಆ ತಿಳುವಳಿಕೆಂದ ಮಾಡುವದು – ಕರ್ಮ., ಜ್ಞಾನ ಮತ್ತೆ ಕರ್ಮಕ್ಕೆ ಆಶ್ರಿತನಾಗಿಪ್ಪಂವ – ಕರ್ತಾ. ಈ ಮೂರೂ ಕೂಡ ಗ್ರುಣತ್ರಯ ವಿಭಾಗಕ್ಕೆ ಒಳಪಟ್ಟು ಪ್ರತಿಯೊಂದೂ ಮತ್ತೆ ಮೂರು ವಿಧ. ಶಾಸ್ತ್ರಲ್ಲಿ ಎಲ್ಲಿ ಗುಣಂಗಳ ಪರಿಗಣನೆ ಆವ್ತೋ ಅಲ್ಲಿ ಈ ವಿಷಯ ಹೇಳಿದ್ದವು ಮತ್ತೆ ಭಗವಂತ ಕಪಿಲವಾಸುದೇವನಾಗಿ ಜಗತ್ತಿಂಗೆ ಕೊಟ್ಟ ‘ಪರಮಸಾಂಖ್ಯಲ್ಲಿ’ ಇದು ಹೇಳಲ್ಪಟ್ಟಿದು. ಇದನ್ನೇ ವೈದಿಕ ಸಾಂಖ್ಯ ಶಾಸ್ತ್ರ ಹೇಳಿ ಹೇಳಿದ್ದದು. ಇದು ಕಪಿಲವಾಸುದೇವನಿಂದ ಸುರೂವಿಂಗೆ ಹೇಳಲ್ಪಟ್ಟ, ಪುರಾತನ ಕಾಲಂದಲೂ ಇದ್ದ, ಜಗತ್ತಿಂಗೆ ಹೇಳೇಕ್ಕಾದ ವಿಷಯಂಗಳಲ್ಲೇ ಅತ್ಯಂತ ಪ್ರಕೃಷ್ಟವಾದ ವಿಷಯ. ತ್ರೈಗುಣ್ಯ ಇಲ್ಲದ್ದೆ ಜೀವನ ಇಲ್ಲೆ. ನಮ್ಮ ಬದುಕಿನ ಎಲ್ಲ ಮುಖಲ್ಲಿಯೂ ವ್ಯಾಪಿಸಿಪ್ಪ ಈ ತ್ರೈಗುಣ್ಯಂಗಳ ನಾವು ಅರ್ಥ ಮಾಡಿಗೊಳ್ಳದ್ರೆ ನಮ್ಮ ಬದುಕಿನ ತಿದ್ಧಿಗೊಂಬಲೆ ಎಡಿಯ, ಮತ್ತೆ, ತ್ರಿಗುಣಾತೀತ ಭಗವಂತನ ಹತ್ರೆ ಹೋಪಲೂ ಎಡಿಯ. ಅತ್ಯಂತ ಪುರಾತನವಾದ ಈ ಮೂಲಭೂತ ಸತ್ಯವ ತದ್ವತ್ತಾಗಿ ನೀನು  ಗಮನಗೊಟ್ಟು ಕೇಳು ಹೇಳಿ ಭಗವಂತ° ಅರ್ಜುನಂಗೆ ಹೇಳುತ್ತ°.

ಶ್ಲೋಕ

ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್’ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥೨೦॥

ಪದವಿಭಾಗ

ಸರ್ವ-ಭೂತೇಷು ಯೇನ ಏಕಮ್ ಭಾವಮ್ ಅವ್ಯಯಮ್ ಈಕ್ಷತೇ । ಅವಿಭಕ್ತಮ್ ವಿಭಕ್ತೇಷು ತತ್ ಜ್ಞಾನಮ್ ವಿದ್ಧಿ ಸಾತ್ತ್ವಿಕಮ್ ॥

ಅನ್ವಯ

ಯೇನ (ಜೀವಃ) ವಿಭಕ್ತೇಷು ಸರ್ತ-ಭೂತೇಷು ಅವಿಭಕ್ತಮ್, ಏಕಮ್ ಅವ್ಯಯಮ್ ಭಾವಮ್  ಈಕ್ಷತೇ, ತತ್ ಜ್ಞಾನಂ ಸಾತ್ತ್ವಿಕಂ ವಿದ್ಧಿ ।

ಪ್ರತಿಪದಾರ್ಥ

ಯೇನ – ಏವುದರಿಂದ, (ಜೀವಃ – ಜೀವಿಯು), ವಿಭಕ್ತೇಷು – ಅಸಂಖ್ಯ ವಿಭಾಗಂಗಳಲ್ಲಿ, ಸರ್ವ-ಭೂತೇಷು – ಎಲ್ಲ ವಸ್ತುಗಳಲ್ಲಿ (ಎಲ್ಲವುದರಲ್ಲಿ), ಅವಿಭಕ್ತಮ್ – ವಿಭಜಿತವಾಗದ್ದ, ಏಕಮ್ ಭಾವಮ್ – ಒಂದು ಸನ್ನಿವೇಶವ, ಅವ್ಯಯಮ್ – ನಾಶರಹಿತವಾದದ್ದರ, ಈಕ್ಷತೇ – ನೋಡುತ್ತನೋ, ತತ್ ಜ್ಞಾನಮ್ – ಆ ಜ್ಞಾನವು, ಸಾತ್ತ್ವಿಕಮ್ ವಿದ್ಧಿ – ಸತ್ವಗುಣಲ್ಲಿ ಇಪ್ಪದು ಹೇದು ತಿಳುಕ್ಕೊ.

ಅನ್ವಯಾರ್ಥ

ಏವುದರಿಂದ ಜೀವಿಯು ಭಿನ್ನ ಭಿನ್ನವಾಗಿ ಕಾಂಬ ಎಲ್ಲ ವಸ್ತುಗಳಲ್ಲಿ ಬದಲಾಗದ್ದ, ನಾಶವಾಗದ್ದ, ಅಖಂಡವಾದ ಒಂದು ವಸ್ತುವು ಇಪ್ಪದಾಗಿ ಗ್ರಹಿಸುವ ಜ್ಞಾನ ಇದ್ದೋ ಅದು ಸಾತ್ವಿಕ ಜ್ಞಾನ ಹೇದು ತಿಳುಕ್ಕೊಳ್ಳೆಕು.

ತಾತ್ಪರ್ಯ / ವಿವರಣೆ

ಎಲ್ಲ ಜೀವಿಗಳಲ್ಲಿ / ವಸ್ತುಗಳಲ್ಲಿ ಅರ್ಥಾತ್ ಐಹಿಕ ಪ್ರಪಂಚದ ಸರ್ವ ವಸ್ತು ವಿಷಯಲ್ಲಿ (ಸರ್ವ-ಭೂತೇಷು)  ಅಖಂಡವಾದ ಅವ್ಯಯವಾದ ಒಂದು ಪರತತ್ವವ, ಬಗೆ ಬಗೆಯ ವಸ್ತುಗಳಲ್ಲಿ ಒಂದು ಬಗೆಯ ಭಗವಂತನ ಕಾಂಬ ಜ್ಞಾನ – ಸಾತ್ವಿಕ ಜ್ಞಾನ ಹೇದು ಭಗವಂತ ವಿವರಿಸಿದ್ದ° ಇಲ್ಲಿ. ವಿಷ್ಣು ಸಹಸ್ರನಾಮಲ್ಲಿ ಹೇಳಿಪ್ಪಾಂಗೆ – “ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ”, ಒಬ್ಬನೇ ಒಬ್ಬ° ವಿಷ್ಣು ಹಿರಿಯ ಚೇತನ (ಮಹಾಭೂತ), ಅಲ್ಪ ಚೇತನ (ಭೂತ) ಹಲವಾರು ಹೇದರ್ಥ. ಸಾತ್ವಿಕ ತಿಳುವಳಿಕೆ / ಜ್ಞಾನದ ಬಗ್ಗೆ ಭಗವಂತ° ಹೇಳುತ್ತ°  – ಪರಸ್ಪರ ಭಿನ್ನವಾದ, ಒಂದರಾಂಗೆ ಇನ್ನೊಂದಿಲ್ಲದ್ದ, ವಿಲಕ್ಷಣವಾದ ಜೀವಪ್ರಪಂಚಲ್ಲಿ ಯಾವ ಭೇದವೂ ಇಲ್ಲದ್ದೆ ಪೂರ್ಣ ಗುಣಕ್ರಿಯೆಲಿ ಅಖಂಡ ಸತ್ಯವಾಗಿಪ್ಪ ಒಂದು ತತ್ವ ನೆಲೆಸಿದ್ದು. ಅನಂತಲ್ಲಿ ಏಕವಾಗಿಪ್ಪ, ತ್ರೈಗುಣ್ಯವರ್ಜಿತ ಭಗವಂತನ ಈ ತತ್ವ ಯಾವ ಅರಿವಿಂಗೆ ಗೋಚರ ಆವ್ತೋ ಆ ಅರಿವು – ‘ಸಾತ್ವಿಕ ಜ್ಞಾನ.

ಶ್ಲೋಕ

ಪೃಥಕ್ತ್ವೇನ ತು ಯಜ್’ಜ್ಞಾನಂ ನಾನಾಭಾವಾನ್ ಪೃಥಗ್ವಿಧಾನ್ ।
ವೇತ್ತಿ ಸರ್ವೇಷು ಭೂತೇಷು ತಜ್’ಜ್ಞಾನಂ ವಿದ್ಧಿ ರಾಜಸಮ್ ॥೨೧॥

ಪದವಿಭಾಗ

ಪೃಥಕ್ತ್ವೇನ ತು ಯತ್ ಜ್ಞಾನಮ್ ನಾನಾ-ಭಾವಾನ್ ಪೃಥಕ್-ವಿಧಾನ್ । ವೇತ್ತಿ ಸರ್ವೇಷು ಭೂತೇಷು ತತ್ ಜ್ಞಾನಮ್ ವಿದ್ಧಿ ರಾಜಸಮ್ ॥

ಅನ್ವಯ

ಯತ್ ಜ್ಞಾನಂ ಪೃಥಕ್ತ್ವೇನ ಸರ್ವೇಷು ಭೂತೇಷು ತು ಪೃಥಕ್-ವಿಧಾನ್ ನಾನಾ-ಭಾವಾನ್ ವೇತ್ತಿ, ತತ್ ಜ್ಞಾನಂ ರಾಜಸಂ ವಿದ್ಧಿ ।

ಪ್ರತಿಪದಾರ್ಥ

ಯತ್ ಜ್ಞಾನಮ್ – ಏವ ಜ್ಞಾನ, ಪೃಥಕ್ತ್ವೇನ – ವಿಭಜಿತವಾದ ಕಾರಣಂದ, ಸರ್ವೇಷು ಭೂತೇಷು – ಸಕಲ ಜೀವಿಗಳಲ್ಲಿ (ವಸ್ತುಗಳಲ್ಲಿ), ತು – ಆದರೋ, ಪೃಥಕ್-ವಿಧಾನ್ – ವಿಭಿನ್ನವಾದ, ನಾನಾ-ಭಾವಾನ್ – ನಾನಾ ಭಾವನೆಯ/ರೂಪವ (ಸನ್ನಿವೇಶವ), ವೇತ್ತಿ – ತಿಳಿತ್ತೋ, ತತ್ ಜ್ಞಾನಮ್ – ಆ ಜ್ಞಾನವು, ರಾಜಸಮ್ ವಿದ್ಧಿ – ರಾಜಸ ಹೇದು ತಿಳುಕ್ಕೊ.

ಅನ್ವಯಾರ್ಥ

ಯಾವ ಜ್ಞಾನದ ಕಾರಣಂದ ಪ್ರತಿಯೊಂದು ಬೇರೆ ದೇಹಲ್ಲಿಯೂ ಬೇರೆ ಬಗೆಯ ಜೀವಿಯ ಮನುಷ್ಯ° ಕಾಣುತ್ತನೋ ಆ ಜ್ಞಾನವು ರಾಜಸ ಹೇದು ತಿಳಿಯೆಕು.

ತಾತ್ಪರ್ಯ / ವಿವರಣೆ

ಭಾವಭೇದಂಗಳ ಅನುಸರುಸಿ ಆ ವಿಧವಾಗಿ ಸಮಸ್ತ ಚರಾಚರ ಭೂತಂಗಳಲ್ಲಿ (ಸರ್ವ-ಭೂತೇಷು) ಭಿನ್ನ ಭಿನ್ನ ಸ್ವರೂಪವ ಕಾಂಬದು ರಾಜಸ ಜ್ಞಾನ. ಅರ್ಥಾತ್, ಭಗವಂತನ ಶಕ್ತಿಲಿ ಅಂತರವ ಕಾಂಬದು, ಎಲ್ಲ ಜೀವಿಗಳಲ್ಲಿ/ವಸ್ತುಗಳಲ್ಲಿ ಬಗೆಬಗೆಯ ದೈವೀಶಕ್ತಿಗೊ ಬೇರೆ ಬೇರೆಯಾಗಿ ಕೆಲಸ ಮಾಡುತ್ತು ಹೇದು ತಿಳುವದು (ಎಲ್ಲ ಜೀವಿಗಳಲ್ಲಿ ಭೇದವ ಮಾತ್ರ ಗುರುತುಸುವ, ಒಂದರಾಂಗೆ ಒಂದಿಲ್ಲೆ ಹೇದು ತಿಳಿವ, ಆದರೆ ಭಗವತ್ ಪ್ರಜ್ಞೆಯಿರದ ಕೇವಲ ಭೌತಿಕ ನಿಜದರಿವು) ರಾಜಸ ಹೇದು ತಿಳಿಯೇಕು ಹೇದು ಭಗವಂತ ಇಲ್ಲಿ ಆದೇಶಿಸಿದ್ದ°.

ಇದರರ್ಥ – ಏಕಭಕ್ತಿ ಇಲ್ಲದ್ದೆ ಅನೇಕ ದೇವತಾವಾದಲ್ಲಿ ನಂಬಿಕೆ ಇಪ್ಪದು ರಾಜಸ ಜ್ಞಾನ ಹೇಳಿ ತಿಳಿಯೆಕು. ಇವಕ್ಕೆ ಅಖಂಡವಾದ ಪರತತ್ವದ ಎಚ್ಚರ ಇಲ್ಲೆ. ಇವು ಬೇರೆ ಬೇರೆ ಸಂದರ್ಭಂಗಳಲ್ಲಿ ಬೇರೆ ಬೇರೆ ದೇವತೆಗಳ ಪೂಜೆ ಮಾಡುವದು. ಅಖಂಡವಾದ ಭಗವಂತನ ಎಚ್ಚರ ಇಲ್ಲದ್ದೆ ಒಂದೊಂದು ಗ್ರಹಚಾರಕ್ಕೆ ಒಂದೊಂದು ದೇವತೆಯ ಪೂಜೆ ಮಾಡುವದು ರಾಜಸ ಜ್ಞಾನ ಆವ್ತು. ಏವ ಪೂಜೆಯೇ ಇರಲಿ ಅದರ ಸರ್ವನಿಯಾಮಕ° ಭಗವಂತನ ಎಚ್ಚರಂದ ಮಾಡಿರೆ ಆ ಪೂಜೆ ಸಾತ್ವಿಕ ಅಪ್ಪದು . ಅದರ ಬಿಟ್ಟು ನಾನಾ ದೇವತೆಗಳ ಬೇರೆ ಬೇರೆಯಾಗಿ ಪೂಜಿಸಿರೆ ಅದೇ ಪೂಜೆ ರಾಜಸ ಆವ್ತು ಹೇದು ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಯತ್ತು ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ ।
ಅತತ್ತ್ವಾರ್ಥವದಲ್ಪಂ ಚ ತತ್ತಾಮಸಮುದಾಹೃತಂ ॥೨೨॥

ಪದವಿಭಾಗ

ಯತ್ ತು ಕೃತ್ಸ್ನವತ್ ಏಕಸ್ಮಿನ್ ಕಾರ್ಯೇ ಸಕ್ತಮ್ ಅಹೈತುಕಮ್ । ಅತತ್ತ್ವಾರ್ಥವತ್ ಅಲ್ಪಮ್ ಚ ತತ್ ತಾಮಸಮ್ ಉದಾಹೃತಮ್ ॥

ಅನ್ವಯ

ಯತ್ ತು ಏಕಸ್ಮಿನ್ ಕಾರ್ಯೇ ಕೃತ್ಸ್ನವತ್ ಸಕ್ತಮ್ ಅಹೈತುಕಮ್ ಅತತ್ತ್ವಾರ್ಥವತ್ ಅಲ್ಪಂ ಚ, ತತ್ (ಜ್ಞಾನಮ್) ತಾಮಸಮ್ ಉದಾಹೃತಮ್ ।

ಪ್ರತಿಪದಾರ್ಥ

ಯತ್ – ಏವ, ತು – ಆದರೋ, (ಯತ್ ತು – ಏವುದರಿಂದಲಾದರೋ), ಏಕಸ್ಮಿನ್ ಕಾರ್ಯೇ – ಒಂದು ಕಾರ್ಯಲ್ಲಿ, ಕೃತ್ಸ್ನವತ್ – ಸರ್ವಸ್ವವಾಗಿ (ಇಡೀಯಾಗಿ), ಸಕ್ತಮ್ – ಆಸಕ್ತವಾದುದೋ, ಅಹಿತುಕಮ್ – ಕಾರಣವಿಲ್ಲದ್ದ, ಅತತ್ವಾರ್ಥವತ್ (ಅತತ್ವ-ಅರ್ಥವತ್)- ನೈಜತೆಯ ಜ್ಞಾನ ಇಲ್ಲದ್ದರಿಂದ, ಅಲ್ಪಮ್ – ಅತ್ಯಲ್ಪವಾದ, ಚ – ಕೂಡ, ತತ್ (ಜ್ಞಾನಮ್) – ಅದು (ಆ ಜ್ಞಾನವು), ತಾಮಸಮ್ ಉದಾಹೃತಮ್ – ತಮೋಗುಣಲ್ಲಿ ಇಪ್ಪದಾಗಿ ಹೇಳಲಾಯ್ದು.

ಅನ್ವಯಾರ್ಥ

ಏವುದರಿಂದ (ಏವ ಜ್ಞಾನಂದ) ಒಂದು ಕಾರ್ಯಲ್ಲಿ ಸಮಗ್ರವಾಗಿ ತಿಳುವಳಿಕೆ ಇಲ್ಲದ್ದೆ ಒಂದು ಬಗೆಯ ಕರ್ಮವೇ  ಸರ್ವಸ್ವ ಹೇದು ಭಾವಿಸುತ್ತೋ, ಏವ ಜ್ಞಾನ ಅಲ್ಪವಾದ್ದೋ, ಅದು ತಾಮಸಗುಣದ ಜ್ಞಾನ ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ಏವುದೋ ಒಂದು ಕ್ಷುದ್ರವಾದ ಕಜ್ಜಕ್ಕೆ ಅಂಟಿಗೊಂಡು ಅದೇ ಸರ್ವಸ್ವ ಹೇದು ನಂಬುವ, ಕಾರಣವಿರದ, ನಿಜವ ಗ್ರಹಿಸಿದ ಕ್ಷುಲ್ಲಕವಾದ ಜ್ಞಾನ ತಾಮಸ ಹೇದು ಹೇಳಲ್ಪಟ್ಟಿದು. ಬನ್ನಂಜೆ ವಿವರುಸುತ್ತವು – ತಾಮಸ ಸ್ವಭಾವಕ್ಕೆ ಅನೇಕ ಮುಖಂಗೊ. ಕಾಂಬದು ಅನೇಕ, ಇಪ್ಪದು ಏಕ ಹೇದು ತಿಳಿವದು, ಜೀವಂದ ಬೇರೆಯಾಗಿಪ್ಪ ಭಗವಂತನ ಒಪ್ಪದ್ದಿಪ್ಪದು, ಈ ಪ್ರಪಂಚಲ್ಲಿ ಯಥಾರ್ತವಾದ ವಸ್ತುವಿಂಗೆ ಅಸ್ತಿತ್ವವೇ ಇಲ್ಲೆ ಹೇದು ತಿಳಿವದು, ಅಜ್ಞಾನಂದ ವಿಪರೀತ ಜ್ಞಾನ, ಗೊಂತಿಲ್ಲದ್ದರೂ ಗೊಂತಿದ್ದು ಹೇದು ಕೊಚ್ಚಿಗೊಂಬದು, ಏವುದೋ ಒಂದು ವಿಷಯವ ತಿಳ್ಕೊಂಡು ಆನು ಎಲ್ಲವನ್ನೂ ತಿಳುದ್ದೆ ಹೇದು ಭ್ರಮಿಸಿಗೊಂಬದು .. ಇತ್ಯಾದಿಗೊ ತಾಮಸ ಗುಣ ಆವ್ತು. ನಾವು ನಮ್ಮ ಜ್ಞಾನದ ಇತಿಮಿತಿಯ ಅರ್ತು ಪ್ರತಿಕ್ಷಣ ಅದರಿಂದ ಹೆಚ್ಚಿನ ಸತ್ವವ ತಿಳಿವಲೆ ನಿರಂತರ ಪ್ರಾಮಾಣಿಕ ನಿಗರ್ವ ಪ್ರಯತ್ನ ಮಾಡೆಕು. ಇಲ್ಲದ್ರೆ ಅದು ನಾವು  ತಾಮಸರಾಗಿ ಉಳುದುಬಿಡ್ಳೆ ಕಾರಣ ಆವ್ತು. ಬನ್ನಂಜೆ ಹೇಳ್ತವು – ದ್ವೈತ ಸಿದ್ಧಾಂತ ನವಗೆ ಸರಿಯಾಗಿ ಅರ್ಥ ಆಯೇಕ್ಕಾರೆ ನಾವು ಅದ್ವೈತ ಮತ್ತೆ ವಿಶಿಷ್ಟಾದ್ವೈತವ ಓದಿರೆಕು. ಹಿಂದುತ್ವ ಅರ್ಥ ಆಯೇಕ್ಕಾರೆ ಮುಸ್ಲಿಂ, ಕ್ರೈಸ್ತ ಧರ್ಮ ಎಂತ ಹೇಳುತ್ತು ಹೇಳ್ತ ಜ್ಞಾನ ನವಗಿರೆಕು. ಇದರ ಬಿಟ್ಟಿಕ್ಕಿ, ಆನು ನಂಬಿದ್ದೇ ಸತ್ಯ, ಉಳುದ್ದೆಲ್ಲ ಮಿಥ್ಯ ಹೇದು ತಿಳಿವವನ ಮೂಢ ಅರಿವು ತಾಮಸ ಎನಿಸುತ್ತು. ಸದಾ ಸತ್ಯದ ಹುಡುಕ್ಕಾಟ, ಜ್ಞಾನದ ದಾಹ ನಮ್ಮ ಸಾತ್ವಿಕತೆಯತ್ತೆ ಕೊಂಡೋವುತ್ತು. ಜ್ಞಾನವ ತನ್ನ ಲೌಕಿಕ, ವ್ಯಾವಹಾರಿಕ ಬದುಕಿಂಗೆ ಸೀಮಿತಗೊಳಿಸಿಗೊಂಡು, ಇನ್ನೊಬ್ಬನಲ್ಲಿಪ್ಪ ಸಾತ್ವಿಕ ಜ್ಞಾನವ ಗುರುತುಸದ್ದೆ. ಪರಮಾತ್ಮನ ಪ್ರಜ್ಞೆ ಇಲ್ಲದ್ದೆ ಅನುಷ್ಠಾನಲ್ಲಿ ಬದುಕುತ್ತಾಂಗೆ ಮಾಡುವ ಜ್ಞಾನ – ತಾಮಸ.

ಶ್ಲೋಕ

ನಿಯತಂ ಸಂಗರಹಿತಮ್ ಅರಾಗದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ತತ್ ಸಾತ್ತ್ವಿಕಮುಚ್ಯತೇ ॥೨೩॥

ಪದವಿಭಾಗ

ನಿಯತಮ್ ಸಂಗ-ರಹಿತಮ್ ಅರಾಗ-ದ್ವೇಷತಃ ಕೃತಮ್ । ಅಫಲ-ಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮ್ ಉಚ್ಯತೇ ॥

ಅನ್ವಯ

ಅಫಲ-ಪ್ರೇಪ್ಸುನಾ ಯತ್ ನಿಯತಂ ಕರ್ಮ ಸಂಗ-ರಹಿತಮ್ ಅರಾಗ-ದ್ವೇಷತಃ ಕೃತಮ್, ತತ್ ಸಾತ್ತ್ವಿಕಮ್ ಉಚ್ಯತೇ ।

ಪ್ರತಿಪದಾರ್ಥ

ಅಫಲ-ಪ್ರೇಪ್ಸುನಾ – ಕಾಮ್ಯಫಲಾಪೇಕ್ಷೆ ಇಲ್ಲದ್ದವನಿಂದ, ಯತ್ ನಿಯತಮ್ ಕರ್ಮ – ಏವ ನಿಯತವಾದ ಕರ್ಮಂಗೊ, ಸಂಗ-ರಹಿತಮ್ – ಆಸಕ್ತಿರಹಿತವಾಗಿ, ಅರಾಗ-ದ್ವೇಷತಃ – ಪ್ರೀತಿ ಅಥವಾ ಅಸೂಯೆ ಇಲ್ಲದ್ದೆ, ಕೃತಮ್ – ಮಾಡಲ್ಪಡುತ್ತೋ, ತತ್ – ಅದು, ಸಾತ್ತ್ವಿಕಮ್ ಉಚ್ಯತೇ – ಸಾತ್ವಿಕ ಹೇದು ಹೇಳಲ್ಪಡುತ್ತು.

ಅನ್ವಯಾರ್ಥ

ಕಾಮ್ಯಫಲಾಪೇಕ್ಷೆ ಇಲ್ಲದ್ದವನಿಂದ  ಆಸಕ್ತರಹಿತನಾಗಿ, ರಾಗ ದ್ವೇಷ ರಹಿತವಾಗಿ ಏವ ನಿಯತವಾದ ಕರ್ಮಂಗೊ ಮಾಡಲ್ಪಡುತ್ತೋ ಅದು ಸಾತ್ವಿಕ ಹೇದು ಹೇಳಲ್ಪಡುತ್ತು.

ತಾತ್ಪರ್ಯ / ವಿವರಣೆ

ಸಾತ್ವಿಕ ಕರ್ಮದ ಬಗ್ಗೆ ಈ ಮದಲಾಣ ಅಧ್ಯಾಯಂಗಳಲ್ಲಿ ಸಾಕಷ್ಟು ಹೇಳಿ ಆಯ್ದು. ಭಗವಂತ° ಇಲ್ಲಿಯೂ ಮತ್ತೊಂದರಿ ಅದನ್ನೇ ನೆಂಪುಮಾಡುತ್ತ°. ಸಾತ್ವಿಕ ಕರ್ಮಲ್ಲಿ ಕರ್ಮಫಲದ ಆಸಕ್ತಿ ಇಪ್ಪಲಾಗ, ಮೋಹವರ್ಜಿತನಾಗಿ ಭಗವದ್ ಅರ್ಪಣಾ ಭಾವಂದ ಏವ ಕರ್ಮಂಗೊ ಮಾಡಲ್ಪಡುತ್ತೋ ಅದು ಸಾತ್ವಿಕ ಕರ್ಮ ಆವ್ತು. ಈ ಕರ್ಮಲ್ಲಿ ಏವುದೇ ರಾಗ-ದ್ವೇಷ ಇಲ್ಲೆ. ಫಲಾಪೇಕ್ಷೆ ಇಲ್ಲೆ. ಹಾಂಗಾಗಿ ಅಲ್ಲಿ ಅಹಂಕಾರವೂ ಬತ್ತಿಲ್ಲೆ. ಏವುದೇ ಕರ್ಮಫಲದ ಅಂಟು ಅಲ್ಲಿ ಉಂಟಾವ್ತಿಲ್ಲೆ. ಶ್ರದ್ಧಾ-ಭಕ್ತಿಂದ, ನಿರ್ಲಿಪ್ತತೆಂದ, ಕರ್ತವ್ಯವ ನಿರ್ವಂಚನೆಂದ ಭಗವದರ್ಪಣಾಭಾವಂದ ಮಾಡುವ ಕರ್ಮ – ಸಾತ್ವಿಕ ಕರ್ಮ.

ಶ್ಲೋಕ

ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।
ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ ॥೨೪॥

ಪದವಿಭಾಗ

ಯತ್ ತು ಕಾಮ-ಈಪ್ಸುನಾ ಕರ್ಮ ಸ-ಅಹಂಕಾರೇಣ ವಾ ಪುನಃ । ಕ್ರಿಯತೇ ಬಹುಲ ಆಯಾಸಮ್ ತತ್ ರಾಜಸಮ್ ಉದಾಹೃತಮ್ ॥

ಅನ್ವಯ

ಪುನಃ ಯತ್ ತು ಕಾಮ-ಈಪ್ಸುನಾ, ಸ-ಅಹಂಕಾರೇಣ, ವಾ ಬಹುಲ ಆಯಾಸಂ ಕರ್ಮ ಕ್ರಿಯತೇ, ತತ್ ರಾಜಸಮ್ ಉದಾಹೃತಂ ॥

ಪ್ರತಿಪದಾರ್ಥ

ಪುನಃ – ಮತ್ತೆ, ಯತ್ – ಏವುದು, ತು – ಆದರೋ, ಕಾಮ-ಈಪ್ಸುನಾ – ಕಾಮ್ಯಫಲಾಪೇಕ್ಷೆಯುಳ್ಳವಂದ, ಸ-ಅಹಂಕಾರೇಣ – ಅಹಂಕಾರಂದೊಡಗೂಡಿ, ವಾ – ಅಥವಾ, ಬಹುಲ ಆಯಾಸಮ್ – ಬಹಳ ಶ್ರಮಂದ, ಕರ್ಮ ಕ್ರಿಯತೇ – ಕರ್ಮವು ಮಾಡಲ್ಪಡುತ್ತೋ, ತತ್ – ಅದು, ರಾಜಸಮ್ ಉದಾಹೃತಮ್ – ರಾಜಸ ಹೇದು ಹೇಳಲಾಯ್ದು.

ಅನ್ವಯರ್ಥ

ಏವ ಕರ್ಮವು ಕಾಮ್ಯಫಲಾಪೇಕ್ಷೆಯುಳ್ಳವನಿಂದ, ಅಹಂಕಾರಯುತನಾಗಿ ಅಥವ ಬಹು ಪರಿಶ್ರಮಂದ (ಗರ್ವಂದ) ಮಾಡಲ್ಪಡುತ್ತೋ ಅದು ರಾಜಸ ಕರ್ಮ ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ಫಲಾಪೇಕ್ಷೆಯ ಮನಸ್ಸಿಲ್ಲಿ ಮಡಿಕ್ಕೊಂಡು, ಗರ್ವಂದ ದೇಹವ ಬಳಲಿಸಿ, ದಂಡಿಸಿ ಮಾಡುವ ಕರ್ಮ ರಾಜಸ ಕರ್ಮ ಆವ್ತು ಹೇಳಿ ಭಗವಂತ ಮತ್ತೆ ಇಲ್ಲಿ ಜ್ಞಾಪಿಸಿದ್ದ°. ಮಾಡ್ತ ಕೆಲಸ ಏನೋ ಒಳ್ಳೆದೆ. ಆದರೆ ಅದರೆ ಹಿಂದೆ ಇಪ್ಪ ಅನೇಕ ಕಾಮನೆ, ಮತ್ತೆ ಆನು ಮಾದಿದೆ ಹೇಳ್ವ ಅಹಂಕಾರ, ಮತ್ತೆ ಹೇಂಗಾರು ಕಷ್ಟಪಟ್ಟಾರು ಆನು ಮಾಡಿಯೇ ಮಾಡಿ ತೀರುತ್ತೆ ಹೇಳಿ ತೊಡಗುವ ಕರ್ಮ ರಾಜಸ.  ನಮ್ಮ ಏವುದೋ ಒಂದು ಸಮಸ್ಯೆಯ ಪರಿಹಾರಕ್ಕೆ ಕರ್ಮ ಮಾಡುವದು, ಆ ಕರ್ಮದ ಮೂಲಕ ಏವುದೋ ಲಾಭ ಬಯಸುವದು, ಮಾಡಿಕ್ಕಿ ಆನು ಮಾಡಿದೆ ಹೇಳ್ವ ಗರ್ವ ಪಟ್ಟುಗೊಂಬದು, ಸಿಕ್ಕದ್ರೆ ಮತ್ತೆ ದ್ವೇಷ ಇತ್ಯಾದಿಗೊ ರಾಜಸ ಕರ್ಮದ ಲಕ್ಷಣಂಗೊ. ಜೀವನಪೂರ್ತಿ ಏವುದೋ ಕಾಮನೆಯ ಬೆನ್ನು ಹಿಡ್ಕೊಂಡು ನಾಳೆಯಾಣ ಸುಖವ ಬಯಸಿ, ಇತ್ತಿದ್ದ ಇಂದ್ರಾಣ ಸುಖವ ಮರದು ದೇಹವ ಬಳಲಿಸಿ ಮಾಡುವ ಕರ್ಮ ರಾಜಸ ಕರ್ಮ ಆವ್ತು ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಉದಾಹರಿಸಿದ್ದವು.

ಶ್ಲೋಕ

ಅನುಬಂಧಂ ಕ್ಷಯಂ ಹಿಂಸಾಮ್ ಅನವೇಕ್ಷ್ಯ ಚ ಪೌರುಷಮ್ ।
ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ ॥೨೫॥

ಪದವಿಭಾಗ

ಅನುಬಂಧಮ್ ಕ್ಷಯಮ್ ಹಿಂಸಾಮ್ ಅನವೇಕ್ಷ್ಯ ಚ ಪೌರುಷಮ್ । ಮೋಹಾತ್ ಆರಭ್ಯತೇ ಕರ್ಮ ಯತ್ ತತ್ ತಾಮಸಮ್ ಉಚ್ಯತೇ ॥

ಅನ್ವಯ

ಅನುಬಂಧಂ ಕ್ಷಯಂ ಹಿಂಸಾಂ ಪೌರುಷಂ ಚ ಅನವೇಕ್ಷ್ಯ ಯತ್ ಕರ್ಮ ಮೋಹಾತ್ ಆರಭ್ಯತೇ, ತತ್ ತಾಮಸಮ್ ಉಚ್ಯತೇ ।

ಪ್ರತಿಪದಾರ್ಥ

ಅನುಬಂಧಮ್ – ಭವಿಷ್ಯದ ಬಂಧನ, ಕ್ಷಯಮ್ – ನಾಶ, ಹಿಂಸಾಮ್ – ಹಿಂಸೆಯ/ ಸಂಕಟವ, ಪೌರುಷಮ್ – ಸ್ವಾಯತ್ತವಾದ (ಯೋಗ್ಯತೆಯ ಹೇಳಿ ಇಲ್ಲಿ ಅರ್ಥ), ಚ – ಕೂಡ  ಅನವೇಕ್ಷ್ಯ – ಪರಿಣಾಮಂಗಳ ಗ್ರೇಶದ್ದೆ/ಗಮನುಸದ್ದೆ, ಯತ್ ಕರ್ಮ – ಏವ ಕರ್ಮ, ಮೋಹಾತ್ – ಭ್ರಮೆಂದ, ಆರಭ್ಯತೇ – ಆರಂಭ ಮಾಡುಲ್ಪಡುತ್ತೋ, ತತ್ – ಅದು, ತಾಮಸಮ್ ಉಚ್ಯತೇ – ತಾಮಸ ಹೇದು ಹೇಳಲ್ಪಡುತ್ತು.

ಅನ್ವಯಾರ್ಥ

ಭವಿಷ್ಯದ ಬಂಧನ, ನಾಶ, ಹಿಂಸೆಗಳ, ಯೋಗ್ಯತೆಯ ಲೆಕ್ಕಿಸದೆ ಬರೇ ಪೌರುಷಂದ ಭ್ರಮೆಂದ ಏವ ಕರ್ಮ ಮಾಡಲ್ಪಡುತ್ತೋ ಅದು ತಾಮಸ ಹೇದು ಹೇಳಲ್ಪಡುತ್ತು.

ತಾತ್ಪರ್ಯ / ವಿವರಣೆ

ಭವಿಷ್ಯದ ಪರಿಣಾಮ, ನಷ್ಟ, ತೊಂದರೆ, ಅನಾಹುತಂಗಳ, ಮತ್ತೆ ತನ್ನ ಯೋಗ್ಯತೆಯನ್ನೂ ಗಮನುಸದ್ದೆ, ತಿಳಿಗೇಡಿತನಂದ ತೊಡಗುವ ಕರ್ಮ ತಾಮಸ ಎನಿಸುತ್ತು. ತನ್ನ ಯೋಗ್ಯತೆಯನ್ನೂ ತಿಳಿಯದ್ದೆ, ತನ್ನ ಇತಿಮಿತಿಯನ್ನೂ ತಿಳಿಯದ್ದೆ, ಮುಂದೆ ಎಂತ ಅಕ್ಕು ಹೇಳ್ವ ಜ್ಞಾನವೇ ಇಲ್ಲದ್ದೆ, ಫಲಾಪೇಕ್ಷೆ, ಅಹಂಕಾರ, ದ್ವೇಷಂದ ಭಗವಂತನನ್ನೂ ಮರದು ಮಾಡುವ ಕಾರ್ಯ ತಾಮಸ. ಇವಕ್ಕೆ ಒಟ್ಟಾರೆ ಮನಸ್ಸಿಲ್ಲಿ ಗ್ರೇಶಿದ ಕಾರ್ಯ ಸಾಧುಸೆಕು ಹೇಳ್ವ ಒಂದೇ ಒಂದು ಯೋಚನೆ. ಅದರ ಪರಿಣಾಮ ಒಳ್ಳೆದೋ ಕೆಟ್ಟದೋ ಹೇಳ್ವ ವಿವೇಚನೆ ಮಾಡ್ಳೆ ಅವರ ಅವಿವೇಕ ಎಡೆಕೊಡುತ್ತಿಲ್ಲೆ. ಅದರಿಂದ ತನಗೆ ಒಳ್ಳೆದಾಗದ್ರೂ ಬೇಡ ಇನ್ನೊಬ್ಬನ ಲಗಾಡಿ ತೆಗೆಕು ಹೇಳ್ವ ಮನೋಭಾವ ಇವರದ್ದು. ಅದೇ ರೀತಿ ಒಳ್ಳೆ ಕರ್ಮವೂ ಅದರ ಪರಿಣಾಮ ಅರಡಿಯದ್ದೆ ಮಾಡಿರೆ ಅರ್ಥಾತ್ ಕೆಟ್ಟ ಉದ್ದೇಶಂದ ಮಾಡಿರೆ ಅದು ತಾಮಸ ಆವ್ತು.

 

ಈ ರೀತಿಯಾಗಿ ಜ್ಞಾನ ಮತ್ತೆ ಕರ್ಮಲ್ಲಿ ತ್ರೈವಿದ್ಯ ವಿಧವ ಭಗವಂತ° ವಿವರಿಸಿದ್ದ°. ಮುಂದೆ ‘ಕರ್ತಾ’ ನಲ್ಲಿ ಮೂರು ವಿಧ ಹೇಂಗೆ ಹೇಳ್ವದರ ಮುಂದಾಣ ಭಾಗಲ್ಲಿ ವಿವರುಸುತ್ತ°.

 

ಅದರ ಬಪ್ಪ ವಾರ ನೋಡುವೋ°.

 

 

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 18 – SHLOKAS 11 – 25

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

One thought on “ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ – 11 – 25

  1. ಹರೇ ರಾಮ;ಕರ್ಮ ತ್ಯಾಗದ ವಿವರಣೆ ನಿ೦ಗ ಕೊಟ್ಟದು ಸ್ಪಷ್ಟವಾಗಿದ್ದು.-
    [ಮನುಷ್ಯನಾದವ° ಕರ್ಮವ ಎಂದಿಂಗೂ ಬಿಡ್ಳೆ ಸಾಧ್ಯ ಇಲ್ಲೆ ಹೇಳಿ ಈ ಮದಲೇ ಅನೇಕ ಬಾರಿ ಭಗವಂತ° ಎಚ್ಚರಿಸಿದ್ದ°. ಹಾಂಗಾಗಿ ಕರ್ಮತ್ಯಾಗಿ ಹೇಳ್ವ ಮಾತಿನ ಅರ್ಥ ಕರ್ಮವ ಬಿಟ್ಟವ° ಹೇಳಿ ಅಲ್ಲ. ಬದಲಾಗಿ, ಕರ್ಮಫಲದ ನಂಟಿನ ಬಿಟ್ಟವ° ಹೇಳಿ ಅರ್ಥ. ಭಗವಂತನ ಪ್ರೀತಿಗೋಸ್ಕರ ಕರ್ಮವ ಮಾಡಿ, ಕರ್ಮಲ್ಲಿ ವ್ಯಾಮೋಹ ಇಲ್ಲದ್ದೆ, ಕರ್ಮ ಫಲವನ್ನೂ ಹಾತೊರಯದ್ದೆ ಎಲ್ಲವನ್ನೂ ಭಗವಂತಂಗೆ ಅರ್ಪಣೆ, ಸಿಕ್ಕಿದ್ದು ಭಗವಂತನ ಪ್ರಸಾದ ಹೇಳ್ವ ಮನೋಧರ್ಮಲ್ಲಿ ಕರ್ಮ ಮಾಡುವವನೇ ಕರ್ಮತ್ಯಾಗೀ ಹೇದು ಹೇಳಲ್ಪಡುತ್ತು. ಹಾಂಗಾಗಿ ಮನುಷ್ಯ ಬಿಡೇಕ್ಕಾದ್ದು ಕರ್ಮವ ಅಲ್ಲ, ಬದಲಾಗಿ ಕರ್ಮಫಲವ] ಬಾರೀ ಲಾಯ್ಕಿನ ವ್ಯಾಖ್ಯಾನ. ತು೦ಬಾ ಕೊಶಿಯಾತು.ವಿವರಣೆಯ ಖಚಿತತೆಯ ಬಗ್ಗೆ ಧನ್ಯವಾದ೦ಗೊ.ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×