Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 15 – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   21/03/2013    2 ಒಪ್ಪಂಗೊ

ಚೆನ್ನೈ ಬಾವ°

ಈ ಮದಲು, ಹದಿಮೂರನೇ ಅಧ್ಯಾಯಲ್ಲಿ ಕ್ಷೇತ್ರ ಮತ್ತೆ ಕ್ಷೇತ್ರಜ್ಞರ ಬಗ್ಗೆ ಭಗವಂತ° ವಿವರವಾಗಿ ತಿಳಿಶಿದ್ದ°. ಹದಿನಾಲ್ಕನೇ ಅಧ್ಯಾಯಲ್ಲಿ ಪ್ರಕೃತಿಯ ತ್ರಿಗುಣಂಗಳ ಪ್ರಭಾವ ಮತ್ತೆ ಅದರಿಂದ ಮುಕ್ತನಾಗಿ ಮುಕ್ತಿಮಾರ್ಗಲ್ಲಿ ಮುನ್ನೆಡವದು ಹೇಂಗೆ ಹೇಳಿಯೂ ವಿವರಿಸಿದ್ದ°. ವಿಶ್ವ ಮತ್ತೆ ವಿಶ್ವನಿಯಾಮಕ° ಭಗವಂತನ ವಿಷಯದ ಬಗ್ಗೆ ಇನ್ನೊಂದು ಆಯಾಮಲ್ಲಿ ಭಗವಂತ° ಮುಂದೆ ಇಲ್ಲಿ ಈ ಅಧ್ಯಾಯಲ್ಲಿ ವಿವರಿಸಿದ್ದದರ ಇನ್ನು ಮುಂದೆ ನೋಡುವೋ° –

ಶ್ರೀಕೃಷ್ಣ ಪರಮಾತ್ಮನೇ ನಮಃ ॥

ಶ್ರೀಮದ್ಭಗವದ್ಗೀತಾ ॥

ಅಥ ಪಂಚದಶೋsಧ್ಯಾಯಃ – ಪುರುಷೋತ್ತಮಯೋಗಃ – ಶ್ಲೋಕಾಃ 01 – 10

 

ಶ್ಲೋಕ

ಶ್ರೀಭಗವಾನುವಾಚ

ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ.
ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ.

ಊರ್ಧ್ವಮೂಲಮಧಃಶಾಖಮ್ ಅಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ॥೦೧॥

ಪದವಿಭಾಗ

ಶ್ರೀ ಭಗವಾನ್ ಉವಾಚ

ಊರ್ಧ್ವ-ಮೂಲಮ್ ಅಧಃ-ಶಾಖಮ್ ಅಶ್ವತ್ಥಮ್ ಪ್ರಾಹುಃ ಅವ್ಯಯಮ್ । ಛಂದಾಂಸಿ ಯಸ್ಯ ಪರ್ಣಾನಿ ಯಃ ತಮ್ ವೇದ ಸಃ ವೇದವಿತ್ ॥

ಅನ್ವಯ

ಶ್ರೀ ಭಗವಾನ್ ಉಚಾಚ

ಛಂದಾಂಸಿ ಯಸ್ಯ ಪರ್ಣಾನಿ (ಸಂತಿ, ತಮ್) ಅಶ್ವತ್ಥಮ್ ಊರ್ಧ್ವ-ಮೂಲಮ್ ಅಧಃ-ಶಾಖಮ್ ಅವ್ಯಯಂ ಪ್ರಾಹುಃ । ಯಃ ತಂ ವೇದ, ಸಃ ವೇದವಿತ್ (ಇತಿ ಉಚ್ಯತೇ) ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವದೇವೋತ್ತಮ° ಭಗವಂತ° ಹೇಳಿದ°, ಛಂದಾಂಸಿ – ವೇದಮಂತ್ರಂಗೊ, ಯಸ್ಯ ಪರ್ಣಾನಿ – ಏವುದರ ಎಲೆಗೊ, (ಸಂತಿ, ತಮ್ – ಇದ್ದೋ, ಅದು), ಅಶ್ವತ್ಥಮ್ – ಅಶ್ವತ್ಥವೃಕ್ಷವ, ಊರ್ಧ್ವ-ಮೂಲಮ್ – ಬುಡ ಮೇಗಿಪ್ಪದಾಗಿ (ಮೂಲ = ಬುಡ, ಬೇರು), ಅಧಃ-ಶಾಖಮ್ – ಕೆಳಂತಾಗಿ ಗೆಲ್ಲುಗಳ ಹೊಂದಿಪ್ಪ, ಅವ್ಯಯಮ್ – ಶಾಶ್ವತವಾದ್ದು (ಹೇದು), ಪ್ರಾಹುಃ – ಹೇಳಲಾಯ್ದು, ಯಃ – ಯಾವಾತ°, ತಮ್ – ಅದರ, ವೇದ – ತಿಳುದವನೋ, ಸಃ – ಅವ°, ವೇದವಿತ್ – ವೇದಂಗಳ ತಿಳುದವ°, (ಇತಿ ಉಚ್ಯತೇ – ಹೇದು ಹೇಳುತ್ತವು).

ಅನ್ವಯಾರ್ಥ

ದೇವದೇವೋತ್ತಮ° ಭಗವಂತ° ಹೇಳಿದ° – ವೇದಮಂತ್ರಂಗೊ ಎಲೆಗಳಾಗಿಪ್ಪ, ಬೇರು ಮೇಗಂತಾಗಿಪ್ಪ, ರೆಂಬೆಗೊ ಕೆಳಂತಾಗಿಪ್ಪ, ಯಾವ ಮರ ಇದ್ದೋ, ಅದರ ‘ಅಶ್ವತ್ಥ’, ಅದು  ‘ಅವಿನಾಶಿ’ ಹೇದು ಹೇಳಲ್ಪಟ್ಟಿದು. [ಬುಡಮೇಲಾಗಿ ಕೊಂಬೆಕೆಳಾಗಿ ಇಪ್ಪ ಅಶ್ವತ್ಥಮರವ ಅಳಿವಿಲ್ಲದ್ದು (ಅವ್ಯಯ) ಹೇಳಿ ಹೇಳುತ್ತವು. ಅದರ ಎಲೆಗಳೇ ವೇದಮಂತ್ರಂಗೊ]. ಯಾವಾತ° ಇದರ ತಿಳುದ್ದನೋ, ಅವ° ವೇದವಿತ್ (ವೇದವ ತಿಳುದವ°) ಹೇದು ಹೇಳಲ್ಪಡುತ್ತು.

ತಾತ್ಪರ್ಯ / ವಿವರಣೆ

[ಅಶ್ವತ್ಥ ವೃಕ್ಷಲ್ಲಿ ಭಗವಂತನ ವಿಶೇಷ ಸಾನಿಧ್ಯ ಇದ್ದು ಹೇಳಿ ನಾವು ಈ ಮದಲೆ ಹತ್ತನೇ ಅಧ್ಯಾಯಲ್ಲಿ ಓದಿದ್ದು (“ಅಶ್ವತ್ಥಃ ಸರ್ವವೃಕ್ಷಾಣಾಮ್..”- ಭ.ಗೀ 10.26). ಅಶ್ವತ್ಥ ಮರ ಗಾತ್ರಲ್ಲಿ ದೊಡ್ಡದು, ಅದರ ಆಳ ವಿಸ್ತಾರವೂ ದೊಡ್ಡದು. ಅದರಲ್ಲಿ ಅನೇಕ ಎಲಗೊ ಶಾಖೆಗೊ ಬೆಳೆತ್ತು. ಅದರ ಎಲೆಗೊ ಅತೀ ಸಣ್ಣ ಗಾಳಿಗೂ ಹಂದಾಡಿಗೊಂಡೇ ಇರ್ತು ಹಾಂಗಾಗಿ ಅದಕ್ಕೆ ‘ಚಲಪತ್ರ’ ಹೇಳಿ ಇನ್ನೊಂದು ಹೆಸರು. ಅದರ ಸೊಪ್ಪುಗೊ ಹಂದಾಡುವಾಗಿ ಪಿಲಿಪಿಲಿ ಶಬ್ದಕಾರಣ ಅದಕ್ಕೆ ಪಿಪ್ಪಲ ವೃಕ್ಷ ಹೇಳಿಯೂ ಹೆಸರಿದ್ದು. ಅಶ್ವತ್ಥವೃಕ್ಷಲ್ಲಿ ಭೂತ-ಪ್ರೇತಂಗೊ ವಾಸಿಸುತ್ತವಿಲ್ಲೆ. ಅನೇಕ ದೇವಸ್ಥಾನಂಗಳ ಹತ್ರೆ ಅಶ್ವತ್ಥ ಮರ ಇದ್ದೇ ಇರ್ತು. ಇದರ ಸೊಪ್ಪುಗೊ ಆನೆಗೊಕ್ಕೆ ತಿಂಬಲೆ ಅತೀ ಪ್ರಿಯ. 4 – 5 ದಿನಕ್ಕೊಂದರಿಯಾದರೂ ಆನೆಗೊಕ್ಕೆ ಅಶ್ವತ್ಥ ಎಲೆ ಸಿಕ್ಕಲೇ ಬೇಕಡ., ಇಲ್ಲದ್ರೆ ಉನ್ಮತ್ತಗೊಳ್ಳುತ್ತವಡ. ಹಾಂಗಾಗಿ ಅದಕ್ಕೆ ‘ಗಜಾಶನ’, ‘ಗಜಭಕ್ಷ್ಯ’ ಹೇಳಿ ಹೆಸರುಗೊ ಇದ್ದು. ಪೂಜನೀಯವಾದ ಅಶ್ವತ್ಥ ವೃಕ್ಷದ ಬುಡಲ್ಲಿ ಧ್ಯಾನಕ್ಕೂ ಪ್ರಶಸ್ತ. ಮಕ್ಕೊ ಆಗದ್ದ ದಂಪತಿಗೊ ಅಶ್ವತ್ಥವೃಕ್ಷಕ್ಕೆ ಸುತ್ತು ಬಂದು ನಾಗನ ಕಲ್ಲಿಂಗೆ ಪೂಜಿಸಿರೆ ಸಂತತಿ ಭಾಗ್ಯ ಸಿಕ್ಕುತ್ತು ಹೇಳಿ ನಂಬಿಕೆ ಇದ್ದು. ಅಶ್ವತ್ಥ ಮರದ ಬೇರು, ಕೆತ್ತೆ, ಸೊಪ್ಪು ತುಂಬಾ ಔಷಧೀಯ ಗುಣ ಇಪ್ಪಂತಾದ್ದು. “ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ” ., – ಮೂಲಲ್ಲಿ ಬ್ರಹ್ಮ, ಮಧ್ಯಲ್ಲಿ ವಿಷ್ಣು, ಕೊಡಿಲಿ ಶಿವ° ಹೀಂಗೆ ತ್ರಿಮೂರ್ತಿಗಳ ಸಾನ್ನಿಧ್ಯ ಹೊಂದಿಪ್ಪ ಈ ಅಶ್ವತ್ಥ ವೃಕ್ಷಕ್ಕೆ ‘ವೃಕ್ಷರಾಜ’ ಹೇಳ್ವ ಕೀರ್ತಿಯೂ ಇದ್ದು].

ಭಗವಂತ° ಇಲ್ಲಿ ವೇದ ತತ್ವ ವಿಚಾರಂಗಳ ಸೂಕ್ಷವಾಗಿ ವಿವರುಸುಲೆ ಸುರುಮಾಡುತ್ತ°. ಸರ್ವ ವೇದದ ಸಾರ ಭಗವಂತನ ತಿಳಿವದು. ವೇದವೇ ಭಗವಂತನಿಂದ ಬಂದದು. ಆ ವೇದವ ತಿಳಿವದು ಹೇಳಿರೆ ಭಗವಂತನ ತಿಳುವ ಹಾಂಗೇ ಆವ್ತು.

ಮೇಲ್ನೋಟಕ್ಕೆ ಈ ಶ್ಲೋಕದ ಅರ್ಥ ನೋಡಿರೆ ಎಂತದೋ ಹಾಸ್ಯಾಸ್ಪದವಾಗಿ ಕಾಣುತ್ತು. ಅಶ್ವತ್ಥ ಮರದ ಬುಡ ಮೇಲಿದ್ದು, ಟೊಂಗೆ ಕೆಳ ಇದ್ದು ಹೇದು ಹೇಳಿದಾಂಗೆ ಅಕ್ಕಷ್ಟೆ. ಯಾವ ಅಶ್ವತ್ಥ ಮರ ಆ ರೀತಿ ತಲೆ ಕೆಳ ಬುಡ ಮೇಗೆಯಾಗಿ ಕಾಂಬಲೆ ಸಿಕ್ಕುತ್ತು?!! ., ಆದರೆ.. ಹಾಂಗೆ ಇದ್ದರೆ, ಅದು ‘ಅಶ್ವತ್ಥ’, ಅದು ‘ಅವ್ಯಯ’, ಅದು ಛಂದಸ್ಸು (ವೇದ) (ವೇದ ಹೇಳಿರೆ ತಿಳಿಯೇಕ್ಕಾದ್ದು , ತಿಳಿಯೇಕ್ಕಾದ ಜ್ಞಾನ). ಹಾಂಗೆ ಇಪ್ಪದರ ಕಂಡವ° (ಅರ್ತವ°) >  ‘ವೇದವಿತ್’ – ವೇದವ ತಿಳುದವ°, ಅರ್ಥಾತ್ – ‘ಜ್ಞಾನಿ’. ‘ತಲೆಕೆಳವಾದ ಅಶ್ವತ್ಥಮರ ಇಡೀ ಬ್ರಹ್ಮಾಂಡದ ರೂಪ’ ಹೇಳಿ ಇಲ್ಲಿ ಭಗವಂತನ ಮಾತಿನ ಮುಖ್ಯ ಅರ್ಥ. ಬುಡ ಮೇಗೆಯಾಗಿಯೂ , ಗೆಲ್ಲುಗೊ ಕೆಳಮುಖವಾಗಿಯೂ ಇಪ್ಪ ಅಶ್ವತ್ಥಮರ ಅವ್ಯಯವಾದ್ದು (ಶಾಶ್ವತವಾದ್ದು) . ಇಲ್ಲಿ ನಿಜವಾಗಿ ಇದು ನಮ್ಮ ಊರಿಲ್ಲಿ ಕಾಂಬ ಬರೇ ಅಶ್ವತ್ಥ ಮರದ ಕಲ್ಪನೆ ಅಲ್ಲ, ಬದಲಾಗಿ ಜ್ಞಾನವೃಕ್ಷದ ಕಲ್ಪನೆ. ವೃಕ್ಷಂಗಳಲ್ಲಿ ಸರ್ವಶ್ರೇಷ್ಠ ವೃಕ್ಷ ಯಾವ ಅಶ್ವತ್ಥವೃಕ್ಷ ಹೇದು ಹೇಳಲ್ಪಟ್ಟಿದೋ ಹಾಂಗೇ ಜ್ಞಾನಲ್ಲಿ ಶ್ರೇಷ್ಠ – ‘ಭಗವತ್ ಜ್ಞಾನ’. ಹಾಂಗಾಗಿ ಇದು ಜ್ಞಾನರೂಪೀ ಅಶ್ವತ್ಥವೃಕ್ಷದ ಕಲ್ಪನೆ. ಈ ಶ್ಲೋಕಲ್ಲಿ ತಲೆಕೆಳ ಇಪ್ಪ ಕಲ್ಪನೆಯ ಅಶ್ವತ್ಥವ ಮಾದರಿಯಾಗಿ ತೆಕ್ಕೊಂಬದು ಅಷ್ಟೆ. ಹೂಗೂ ಬಿಡದ್ದ, ಹಣ್ಣೂ ಕೊಡದ್ದ, ಮನೆಕಟ್ಳೂ ಸಹಾಯಕ ಅಲ್ಲದ್ದ ಈ ಮರದ ಪ್ರಸ್ತಾಪ ಇಲ್ಲಿ ಭಗವಂತ° ಎಂತಕೆ ಮಾಡಿದ° ಹೇಳ್ವದರ ಬನ್ನಂಜೆ ವ್ಯಾಖ್ಯಾನಲ್ಲಿ ಸೊಗಸಾಗಿ ವರ್ಣಿಸಿದ್ದವು. ಅಲ್ಲಿಂದಲೇ ವಿವರಣೆ ನೋಡುವೊ°.

೦೧) ಅಶ್ವತ್ಥ ಹೇಳ್ವದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚಲ್ಲಿಪ್ಪ ಎಲ್ಲ ಮರಂಗಳಿಂದ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದ್ದಿಪ್ಪಗಳೂ ಅಥವಾ ಬರೇ ಸಣ್ಣ ಗಾಳಿಗೂ ಏವ ಮರವೂ ಅಲ್ಲಾಡುತ್ತಿಲ್ಲೆ. ಆದರೆ ಅಶ್ವತ್ಥಮರದ ಎಲೆಗೊ ಗಿಲಿಗಿಲಿ ಹೇದು ಹಂದಾಡುತ್ತು.   ಹೇಳಿರೆ, ಏವತ್ತೂ ಚಲನಶೀಲ ಸೊಪ್ಪುಗೊ (ಎಲೆಗೊ) ಇಪ್ಪ ಮರ ಹೇದು ಅರ್ಥ. ಈ ಪ್ರಪಂಚಕ್ಕೂ ಅಶ್ವತ್ಥಮರಕ್ಕೂ ಇದೇ ಸಾಮ್ಯ. ಪ್ರಪಂಚ ಏವತ್ತೂ ಚಲನಶೀಲ. ಅದು ಸದಾ ಚಲಿಸಿಗೊಂಡು ಬದಲಾಗಿಯೊಂಡು ಇರುತ್ತು. ಹಾಂಗೇ ಅಶ್ವತ್ಥಮರದ ಎಲೆಗೊ ಕೂಡ ಸದಾ ಹಂದಾಡಿಗೊಂಡೇ ಇರ್ತು.

೨) ಅಶ್ವ+ತ್ಥಃ  – ಇಲ್ಲಿ ಅಶ್ವ ಹೇದರೆ ಕುದುರೆ. ಪ್ರಪಂಚ ಅಶ್ವದ ಹಾಂಗೆ ಇರ್ತದು. ಕುದುರೆಯ ಗಮನಿಸಿರೆ ನವಗೆ ಇದರ ಅರ್ಥವ ಕಲ್ಪಿಸಿಗೊಂಬಲಾವ್ತು. ಇತರ ಪ್ರಾಣಿಗೊಕ್ಕೂ ಕುದುರೆಗೂ ಒಂದು ವ್ಯತ್ಯಾಸ ಇದ್ದು. ಎಲ್ಲಾ ಪ್ರಾಣಿಗೊ ವಿಶ್ರಾಮದ ಕಾಲಲ್ಲಿ ನಿಶ್ಚಲವಾಗಿ ನಿಂಬಲೆಡಿತ್ತು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲ. ಈ ಜಗತ್ತೂ ಕೂಡ ಅಶ್ವದ ಹಾಂಗೆ. ಇದು ಎಂದೂ ಹಂದಾಡದ್ದೆ ಸ್ಥಿರವಾಗಿ ನಿಲ್ಲುತ್ತಿಲ್ಲೆ.

೩) ಅ+ಶ್ವ+ತ್ಥ – ಇಲ್ಲಿ ‘ಶ್ವ’ ಹೇದರೆ ನಾಳೆ, ‘ತ್ಥ’ ಹೇಳಿರೆ ಇಪ್ಪಂಥದ್ದು. ಅಶ್ವತ್ಥ ಹೇದರೆ ‘ನ ಶ್ವ ತಿಷ್ಠತಿ’. ಇಂದು ಇದ್ದು, ನಾಳೆ ಇಕ್ಕು ಹೇಳ್ವ ಖಾತರಿ ಇಲ್ಲೆ. ಹೇಳಿರೆ ಈ ಪ್ರಪಂಚ ಕ್ಷಣಿಕ.

೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವ ನೋಡಿರೆ – ‘ಅಶು+ವಾ+ತ+ಥ’. ಇಲ್ಲಿ ಅಶು+ವಾ ಹೇಳಿರೆ ಎಲ್ಲೋಕ್ಕಿಂತ ವೇಗವಾಗಿ ಹೋಪಂಥಾದ್ದು – ಅದು ಭಗವಂತ°. ಹಾಂಗಾಗಿ ಭಗವಂತನ ‘ಅಶ್ವ’ ಹೇದೂ ಹೇಳುತ್ತವು. ಕುದುರೆ ಮೋರೆಯ ಹಯಗ್ರೀವ ರೂಪಲ್ಲಿ ಭಗವಂತ° ಸಮಸ್ತ ವೇದ ವಿದ್ಯೆಯ ಪ್ರಪಂಚಕ್ಕೆ ಕೊಟ್ಟು, ಎಲ್ಲವನ್ನೂ ಎಲ್ಲಕ್ಕಿಂತ ಮದಲು ತಿಳುದ ಭಗವಂತ° ಈ ಜಗತ್ತಿಲ್ಲಿ, ಇದರ ಒಳವೂ, ಹೆರವೂ ನಿಯಮನ ಮಾಡುವದಕ್ಕೆ ‘ಅಶ್ವ’ ನಾಮಕನಾಗಿ ‘ತ್ಥ’ – ಕೂಯ್ದ. ಇವ° ಇಡೀ ಪ್ರಪಂಚಲ್ಲಿ ‘ತತ’ (ತುಂಬಿದ್ದ°), ಮತ್ತೆ ಇಡೀ ಜಗತ್ತು ಅವಂಗೆ ‘ಥಂ’. ‘ಥಂ’ – ಹೇಳಿರೆ ಆಹಾರ, ಇಡೀ ಜಗತ್ತಿನ ಕಬಳುಸುವ ಶಕ್ತಿ).

ಇವು ನಾವು ‘ಅಶ್ವತ್ಥ’ ಹೇಳ್ವ ಪದಲ್ಲಿ ಕಂಡುಗೊಂಬಲೆಡಿಗಪ್ಪ ಅರ್ಥಂಗೊ. ಈ ರೀತಿ ಒಂದು ಪದಲ್ಲಿ ಅನೇಕ ವಿಷಯಂಗಳ ತುಂಬುಸಲೆ ಬೇರೆ ಏವ ಭಾಷೆಲಿಯೂ ಸಾಧ್ಯ ಇಲ್ಲೆ. ಹಾಂಗಾಗಿ ಸಂಸ್ಕೃತವ ‘ಗರ್ಭಿಣಿ’ – ಅರ್ಥಗರ್ಭಿತ ಭಾಷೆ ಹೇದು ಹೇಳುತ್ತವು.

“ಪ್ರಾಹುಃ ಅವ್ಯಯಮ್” ಹೇಳುವಲ್ಲಿ ‘ಪ್ರಾಹುಃ’ ಹೇಳಿರೆ, ತಿಳುದು ಹೇಳುವದು. ‘ವೇದಕಾಲದ ಋಷಿಗೊ ಈ ಪ್ರಪಂಚವ ಒಂದು ಅಶ್ವತ್ಥ ಹೇದು ತಿಳುದು ಹೇಳಿದ್ದವು’ ಹೇಳಿ ಹೇಳ್ತ° ಇಲ್ಲಿ ಭಗವಂತ°.  ಈ ಪ್ರಪಂಚ ನಶ್ವರ, ಒಂದು ದಿನ ನಾಶ ಅಪ್ಪಂಥಾದ್ದು. ಕೂಡ್ಳೆ , ‘ಇದು ಅವ್ಯಯ’ – ಹೇಳಿರೆ ನಾಶ ಇಲ್ಲದ್ದು. ಓದುವಾಗ ವಿಚಿತ್ರವಾಗಿಯೇ ತೋರ್ತು. ಇದು ಅರ್ಥ ಆಯೇಕ್ಕಾರೆ ನಾವು ಸಮುದ್ರ ತಡಿಗೆ ಹೋಗಿ ಕೂದು ಅಲ್ಲಿ ಬಪ್ಪ ತೆರೆಗಳ ಗಮನುಸೆಕು. ಪ್ರತಿಯೊಂದು ತೆರೆಯೂ ಕೂಡ ಅಬ್ಬರಂದ ಬತ್ತು. ಆದರೆ ಏವ ತೆರೆಯೂ ಶಾಶ್ವತ ಅಲ್ಲ. ಎಲ್ಲ ತೆರೆಯೂ ಕ್ಷಣಿಕ. ಆದರೆ, ಸಮುದ್ರಲ್ಲಿ ತೆರೆ ಇಲ್ಲದ್ದ ಕ್ಷಣವೇ ಇಲ್ಲೆ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶ ಆವ್ತು, ಇನ್ನೊಂದು ಪ್ರಪಂಚ ಹುಟ್ಟುತ್ತು. ಪ್ರಪಂಚ ನಾಶ ಅಕ್ಕು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ಮತ್ತೆ ಇನ್ನೊಂದು ಸೃಷ್ಟಿ. ಸೃಷ್ಟಿಯ ಮತ್ತೆ ಪ್ರಳಯ. ಇದು ನಿರಂತರ. ಹಾಂಗಾಗಿ ಪ್ರಪಂಚ ಅವ್ಯಯ, ಜೀವ ಅನಾದಿ ಅನಂತ; ಹುಟ್ಟು-ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ; ಅದರ ಬೆರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ಬದಲಾವಣೆಯ ಕಾಣುತ್ತು. ಒಟ್ಟಿಲ್ಲಿ ಈ ಜಗತ್ತು ಹೇಳಿರೆ ಅಳಿವಿಲ್ಲದ್ದ ಅಶ್ವತ್ಥ.

ಇನ್ನು, “ಊರ್ಧ್ವಮೂಲಮ್”- ಈ ಮರದ ಮೂಲ/ಬುಡ ಮೇಗೆ ಇದ್ದು ಹೇಳಿ ಹೇಳಿದ್ದ° ಭಗವಂತ°. ಮೇಗೆ ಹೇಳಿರೆ ಎಲ್ಲಕ್ಕಿಂತ ಹಿರಿದಾದ ಭಗವಂತ°. ಈ ಪ್ರಪಂಚ ಹೇಳ್ವ ಮರಕ್ಕೆ ಮೂಲ ಆ ಭಗವಂತ°. ಪ್ರಪಂಚದ ಮೂಲಲ್ಲಿ ಎಲ್ಲಕ್ಕಿಂತ ಎತ್ತರಲ್ಲಿ ಅಬ್ಬೆ-ಅಪ್ಪ°ನಾಗಿ ಲಕ್ಷ್ಮೀ-ನಾರಾಯಣರಿದ್ದವು. ಜಡಪ್ರಕೃತಿಂದ ಈ ಮರ ವಿಕಸನ ಆವುತ್ತು. ಭಗವಂತನಿಂದ ಚತುರ್ಮುಖಬ್ರಹ್ಮ (ಮಹತತ್ವ), ವಾಯು, ಗರುಡ, ಶೇಷ, ರುದ್ರರು(ಅಹಂಕಾರ ತತ್ವ), ಇಂದ್ರಾದಿ ದೇವತೆಗೊ, ಅವಾಂತರ ದೇವತೆಗೊ, ಗಂಧರ್ವರು, ಮನುಷ್ಯರು, ಪ್ರಾಣಿಗೊ, ಪಕ್ಷಿಗೊ ಹೀಂಗೆ ಒಂದರ ಮತ್ತೆ ಒಂದು ಶಾಖೆಗೊ ಸೃಷ್ಟಿ ಆತು.  ಇವೆಲ್ಲವೂ ಸೇರಿ ಒಂದು ಮರ ಆತು. ಇಲ್ಲಿ ‘ಅಧಃ ಶಾಖಂ’ ಹೇಳಿರೆ ಮೇಗಂದ ಕೆಳಂತಾಗಿ ಬೆಳವದು. ಇದು ದೇವತಾ ತಾರತಮ್ಯವ ಸೂಚಿಸುತ್ತು.

ಮರದ ಟೊಂಗೆಯ ನಂತ್ರ ಅದರ ಎಲೆಗೊ. ‘ಛಂದಾಂಸಿ ಪರ್ಣಾನಿ’ – ಈ ಮರದ ಎಲೆಗಳೇ ವೇದಂಗೊ ಹೇದು ಹೇಳುತ್ತ° ಭಗವಂತ°. ನವಗೆ ಗೊಂತಿಪ್ಪಾಂಗೆ ಪ್ರಪಂಚಕ್ಕೆ ಎರಡು ಮೋರೆಗೊ. ಒಂದು ನಾಮಾತ್ಮಕ ಪ್ರಪಂಚ, ಇನ್ನೊಂದು ರೂಪಾತ್ಮಕ ಪ್ರಪಂಚ. ಇಲ್ಲಿ ರೂಪಾತ್ಮಕ ಪ್ರಪಂಚ ಟೊಂಗೆ-ಟಿಸಿಲುಗೊ ಆದರೆ, ನಾಮಾತ್ಮಕ ಪ್ರಪಂಚ ಮರದ ಎಲೆಗೊ. ಸುರುಸುರುವಿಲ್ಲಿ ನಾಮಾತ್ಮಕ ಪ್ರಪಂಚಲ್ಲಿ ಸೃಷ್ಟಿಯಾದ್ದು ವೇದಂಗೊ. ವಸ್ತುವಿಂಗೆ ಒಂದು ಹೆಸರು ಕೊಟ್ಟಿಪ್ಪದು ಈ ವೇದಲ್ಲಿಪ್ಪ ವೈದಿಕ ಶಬ್ದಂಗೊ.

ಎಂತಕೆ ವೇದವ ಇಲ್ಲಿ ಎಲೆಗೆ ಹೋಲಿಸಿದವು ಹೇದರೆ, ಒಂದು ಮರ ಹೂ-ಹಣ್ಣು ಕೊಡೆಕ್ಕಾರೆ ಅಲ್ಲಿ ಫಲಪ್ರದತ್ವ ಇಪ್ಪದು ಎಲಗೆ. ಹಾಂಗೇ ನವಗೆ ಅಧ್ಯಾತ್ಮ ಸಾಧನೆಯ ಫಲವ ಕೊಡತಕ್ಕವು ವೇದಂಗೊ. ಈ ಕಾರಣಕ್ಕಾಗಿ ಮರವ ವಿಶ್ವಕ್ಕೆ ಹೋಲುಸಿರೆ, ಮರದ ಎಲೆಯ ವೇದಕ್ಕೆ ಹೋಲಿಸಿದ° ಭಗವಂತ°. ಪ್ರಳಯಕಾಲಲ್ಲಿ ಮರ ನಾಶವಾವ್ತು. ಆದರೆ ಮರದ ಎಲೆ ನಾಶ ಆವುತ್ತಿಲ್ಲೆ. ಹಾಂಗಾಗಿ ‘ಪ್ರಳಯ ಕಾಲಲ್ಲಿ ಭಗವಂತ° ಆಲದ ಎಲೆಯ ಮೇಗೆ ಮನಿಕ್ಕೊಂಡಿರುತ್ತ° ಹೇದು ಹೇಳುತ್ತವು. ವೇದ ನಿತ್ಯ., ಅದಕ್ಕೆ ನಾಶ ಇಲ್ಲೆ. ಎಲೆಯ ಮೇಗೆ ಭಗವಂತ° ಮನಿಕ್ಕೊಂಡಿದ ಹೇದರೆ ವೇದ ವಾಚ್ಯನಾಗಿ ಮನಿಕ್ಕೊಂಡ° ಹೇದರ್ಥ.

ಬನ್ನಂಜೆ ಇನ್ನೊಂದು ವಿಚಾರವನ್ನೂ ಇಲ್ಲಿ ಸ್ಪಷ್ಟಪಡುಸುತ್ತವು – ಪ್ರಳಯಲ್ಲಿ ಏವ ವಸ್ತುವೂ ಇಲ್ಲದ್ದೆ ಇಪ್ಪಗ ವೇದಂಗೊ ಇತ್ತಿದ್ದು ಹೇದರೆ ಎಂತರ ಅರ್ಥ?! ‘ಅಗ್ನಿಮೀಳೆ ಪುರೋಹಿತಂ..’ ಹೇಳುವಲ್ಲಿ ಅಗ್ನಿಯೂ ಇಲ್ಲೆ, ಪುರೋಹಿತನೂ ಇಲ್ಲೆ. ಹೀಂಗಿಪ್ಪಗ ಆರು ವೇದವ ಹೇಳುವವ° ಮತ್ತೆ ಪ್ರಳಯ ಕಾಲಲ್ಲಿ ವೇದಂಗೊ ಆರ ಹೇಳುತ್ತದು??! – ಪ್ರಳಯ ಕಾಲಲ್ಲಿ ವೇದಂಗೊಕ್ಕೆ ಭಗವಂತ° ಒಬ್ಬನೇ ಅರ್ಥ. ಇನ್ನೇವ ಅರ್ಥವೂ ಇಲ್ಲೆ. ಹಾಂಗಾಗಿ ವೇದಂಗಳಲ್ಲಿನ ಸರ್ವ ಶಬ್ದವೂ ಭಗವಂತನನ್ನೇ ಸೂಚಿಸುವಂಥಾದ್ದು. “ನಾಮಾನಿ ಸರ್ವಾಣಿ ಯಮಾ ವಿಷಂತಿ ತಂ ವೈ ವಿಷ್ಣುಂ ಪರಮ ಉದಾಹರಂತಿ” – ಆರಲ್ಲಿ ಎಲ್ಲ ಶಬ್ದಂಗೊ ಪ್ರವೇಶ ಮಾಡುತ್ತೋ – ಅವ° ವಿಷ್ಣು. ಅವ° ಸರ್ವ ಶಬ್ದವಾಚ್ಯ°. ವಿಷ್ಣು ಹೇಳಿರೆ ‘ವಿಷಂತಿ ಸರ್ವಾಣಿ ನಾಮಾನಿ ಅತ್ರ’. ಹೀಂಗಾಗಿ ಪ್ರಳಯ ಕಾಲಲ್ಲಿ ವೇದಾಭಿಮಾನಿನಿ ಲಕ್ಷ್ಮಿ ವೇದವ ಹಾಡುತ್ತಿರುತ್ತು (ಶ್ರುತಿಗೀತ) ಮತ್ತೆ ಭಗವಂತ ಕೇಳುತ್ತಿರುತ್ತ°. ಇದು ನಾಮಾತ್ಮಕ ಪ್ರಪಂಚದ ಪರಿಕಲ್ಪನೆ.

ಭಗವಂತ° ಹೇಳುತ್ತ° – “ಯಃ ತಂ ವೇದ ಸಃ ವೇದವಿತ್” – ಇದರ (ಈ ವಿಚಾರವ) ಆರು ತಿಳಿತ್ತನೋ ಅವ° ಸಮಸ್ತ ವೇದವ ತಿಳಿದವ°.

ಶ್ಲೋಕ

ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ ॥೦೨॥ oordhvamoolamadhahshaakhaa

ಪದವಿಭಾಗ

ಅಧಃ ಚ ಊರ್ಧ್ವಮ್ ಪ್ರಸೃತಾಃ ತಸ್ಯ ಶಾಖಾಃ ಗುಣ-ಪ್ರವೃದ್ಧಾಃ ವಿಷಯ-ಪ್ರವಾಲಾಃ । ಅಧಃ ಚ ಮೂಲಾನಿ ಅನುಸಂತತಾನಿ ಕರ್ಮ-ಅನುಬಂಧೀನಿ ಮನುಷ್ಯ-ಲೋಕೇ ॥

ಅನ್ವಯ

ತಸ್ಯ ಗುಣ-ಪ್ರವೃದ್ಧಾಃ ವಿಷಯ-ಪ್ರವಾಲಾಃ ಶಾಖಾಃ ಅಧಃ ಊರ್ಧ್ವಂ ಚ ಪ್ರಸೃತಾಃ (ಸಂತಿ); ಅಧಃ ಚ ಮನುಷ್ಯ-ಲೋಕೇ ಕರ್ಮ-ಅನುಬಂಧೀನಿ ಮೂಲಾನಿ ಅನುಸಂತತಾನಿ (ಸಂತಿ) ।

ಪ್ರತಿಪದಾರ್ಥ

ತಸ್ಯ – ಅದರ, ಗುಣ-ಪ್ರವೃದ್ಧಾಃ – ಪ್ರಕೃತಿಗುಣಂಗಳಿಂದ ಬೆಳದ, ವಿಷಯ-ಪ್ರವಾಲಾಃ – ಇಂದ್ರಿಯವಿಷಯಂಗಳೆಂಬ ಚಿಗುರುಗೊಳಿಪ್ಪ, ಶಾಖಾಃ – ರೆಂಬೆಗೊ, ಅಧಃ – ಕೆಳ(ಕೆಳಂತಾಗಿ), ಊರ್ಧ್ವಮ್ – ಮೇಗೆ (ಮೇಗಂತಾಗಿ), ಚ – ಕೂಡಾ, ಪ್ರಸೃತಾಃ (ಸಂತಿ) – ವಿಸ್ತರಿಸಿಗೊಂಡಿದ್ದು (ಪಸರಿಸಿಗೊಂಡಿದ್ದು), ಅಧಃ – ಕೆಳ, ಚ – ಕೂಡ, ಮನುಷ್ಯ-ಲೋಕೇ – ಮಾನವ ಸಮಾಜದ ಪ್ರಪಂಚಲ್ಲಿ, ಕರ್ಮ-ಅನುಬಂಧೀನಿ – ಕರ್ಮಕ್ಕೆ ಬದ್ಧವಾದ, ಮೂಲಾನಿ – ಬೇರುಗೊ, ಅನುಸಂತತಾನಿ (ಸಂತಿ) – ವಿಸ್ತರಿಸಿಗೊಂಡಿದ್ದು.

ಅನ್ವಯಾರ್ಥ

ಪ್ರಕೃತಿಗುಣಂಗಳಿಂದ ಬೆಳದ ಆ ಮರದ ರೆಂಬೆಗೊ ಕೆಳಂತಾಗಿಯೂ ಮೇಗಂತಾಗಿಯೂ ಹಬ್ಬಿಗೊಂಡಿದ್ದು, ಇಂದ್ರಿಯವಿಷಯಂಗಳೆಂಬ ಚಿಗುರುಗಳಿಂದ ವಿಸ್ತರಿಸಿಗೊಂಡಿದ್ದು, ಇದರ ಬೇರುಗೊ (ಬುಡ) ಮಾನವ ಸಮಾಜದ ಪ್ರಪಂಚಲ್ಲಿ ಕರ್ಮಕ್ಕನುಗುಣವಾಗಿ ಭೂಮಿಲಿ ಬೇರೂರಿ ವ್ಯಾಪಿಸಿಗೊಂಡಿದ್ದು.

ತಾತ್ಪರ್ಯ / ವಿವರಣೆ

ತ್ರಿಗುಣಂಗಳಿಂದ ಕೊಬ್ಬಿದ ಇದರ ಟೊಂಗೆಗೊ ಕೆಳವೂ ಮೇಗೂ ಹಬ್ಬಿ ಹರಡಿದ್ದು. ಇಂದ್ರಿಯ ವಿಷಯಂಗಳೇ ಇವುಗಳ ಚಿಗುರುಗೊ. ಇದರ ಬುಡ ಜೀವಿಗಳ ಕರ್ಮಕ್ಕನುಗುಣವಾಗಿ ಭೂಮಿಲಿ ಬೇರೂರು ವಿಸ್ತಾರವಾಗಿ ಹಬ್ಬಿಗೊಂಡಿದ್ದು.

ಮರದ (ಜ್ಞಾನವೃಕ್ಷದ) ವರ್ಣನೆಯ ಇಲ್ಲಿ ಮತ್ತಷ್ಟು ವಿವರಿಸಿದ್ದ ಭಗವಂತ°. ಪುನಃ ಸರಳ ಶೈಲಿಯ ಬನ್ನಂಜೆಯ ವ್ಯಾಖ್ಯಾನಂದಲೇ ಅರ್ಥೈಸಿಗೊಂಬೊ.

ಭಗವಂತ° ಹೇಳುತ್ತ° – “ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾಃ..” ಈ ಮರದ ಶಾಖೆಗೊ (ರೆಂಬೆಗೊ) ಕೆಳಮುಖವಾಗಿಯೂ ಮೇಲ್ಮುಖವಾಗಿಯೂ ಪಸರಿಸಿಗೊಂಡಿದ್ದು. ಇಲ್ಲಿ ಆ ಮರದ ಬೇರುಗೊ ವ್ಯಾಪಕವಾಗಿ ಆಳವಾಗಿ ಮತ್ತು ವಿಶಾಲವಾಗಿ ನೆಲಕ್ಕಲ್ಲಿ ಮೇಗೆಯೂ ಕೆಳಂತಾಗಿಯೂ ಹಬ್ಬಿಗೊಂಡಿದ್ದು ಹೇಳ್ವ ಧ್ವನಿ.  ಪಂಚಭೂತಂಗೊ ಆಗಿಪ್ಪ ಗೆಲ್ಲುಗೊ ಮೇಗಂತಾಗಿಂದ ಕೆಳಂತಾಗಿವರೇಂಗೆ ವ್ಯಾಪಿಸಿಗೊಂಡಿದ್ದು. ನಮ್ಮ ಶರೀರವನ್ನೇ ನೋಡಿರೆ – ನಮ್ಮ ಸಹಸ್ರಾರಲ್ಲಿ ಭಗವಂತ° ಕೂದುಗೊಂಡಿದ್ದ°. ಮೇಗಂದ ಕೆಳವರೇಂಗೆ ಪಂಚಭೂತಂಗೊ, ಸತ್ವ-ರಜಸ್ಸು-ತಮಸ್ಸು ಹೇಳ್ವ ತ್ರಿಗುಣಂಗೊ ಗೆಲ್ಲುಗಳಾಗಿ ನಿಂದುಗೊಂಡಿದ್ದು. ಇಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಹೇಳ್ವ ಚಿಗುರೆಲೆಗೊ. ಹೇಳಿರೆ ಪಂಚಭೂತಾತ್ಮಕವಾದ ವಿಷಯಂಗಳೇ ಈ ಮರದ ಚಿಗುರುಗೊ. ಈ ಚಿಗುರು ನವಗೆ ಏವತ್ತೂ ಆಕರ್ಷಣೆ. ಭಗವಂತನ ಅನಂತ ರೂಪ ಮೇಗಂದ ಕೇಳವರೇಂಗೆ ನಮ್ಮ ಅಂಗಾಂಗಳಲ್ಲಿ ತುಂಬಿಗೊಂಡಿದ್ದು. ಅಲ್ಲಿ ನಮ್ಮ ಕರ್ಮವ ಅವಲಂಬಿಸಿ ಅವನ ಕ್ರಿಯೆ. ಭಗವಂತನ ಮೂಲ ಮೇಗೆ, ಆದರೆ ಅವ° ಮೇಗಂದ ಕೇಳವರೇಂಗೆ ವ್ಯಾಪಿಸಿಗೊಂಡಿದ್ದ°. ಹೀಂಗೆ ಅವ ಎಲ್ಲೆಡೆ ಹಬ್ಬಿಗೊಂಡು ಸರ್ವವ್ಯಾಪಿ ಎನಿಸಿಗೊಂಡಿದ್ದ°.

ಇಲ್ಲಿ ಮುಖ್ಯವಾಗಿ ಗಮನುಸೆಕ್ಕಾದ್ದು, ಭಗವಂತ° ಹೇಳಿದ್ದದು – ಜ್ಞಾನವೃಕ್ಷದ ಕೊಂಬೆಗೊ/ಕವಲುಗೊ (ಶಾಖಾಃ) ಕೆಳಮುಖವಾಗಿದ್ದು ಮತ್ತು ಅದರ ಬುಡ ಕೆಳಮುಖವಾಗಿದ್ದು. ಅಲ್ಪವಾದ ಜ್ಞಾನದವ ಒಂದು ಗೆಲ್ಲ ಹಿಡುದು ಮೇಗಂತಾಗಿ ಹೋಪಲೆ ಪ್ರಯತ್ನಿಸಿ ಜ್ಞಾನ ವೃದ್ಢಿಸಿ ಜ್ಞಾನದ ಮೂಲವ ಸೇರ್ಲಕ್ಕು (ಬುಡವ = ಭಗವಂತನ ಸೇರ್ಲಕ್ಕು).

ಇದರ ಇನ್ನೊಂದು ಆಯಾಮಲ್ಲಿ ನೋಡಿರೆ – ಅಶ್ವತ್ಥ ಮರದ ರೆಂಬೆಗೊ ಎಲ್ಲ ದಿಕ್ಕಿಲ್ಲಿಯೂ ಚಾಚಿಗೊಂಡಿದ್ದು. ಹೇಳಿರೆ ಮೇಗಂದ ಕೆಳಂತಾಗಿ ಎಲ್ಲೆಡೆ ಹಬ್ಬಿಗೊಂಡಿದ್ದು. ಇನ್ನು ಅದರ ಅಡಿಲಿ (ಕೆಳ) ಮನುಷ್ಯ°, ಪ್ರಾಣಿ, (ಕುದುರೆ, ದನ, ನಾಯಿ ಪುಚ್ಚೆ…) ಅರ್ಥಾತ್ ಜೀವ ಜಾತಂಗೊ. ಮೇಗಾಣ ಭಾಗಲ್ಲಿ ದೇವತೆಗೊ, ಗಂಧರ್ವರು ಮೊದಲಾದ ಉತ್ತಮ ರೂಪದ ಜೀವಿಗೊ ಹಾಂಗೇ ಉನ್ನತ ಜೀವ ವರ್ಗ. ನೀರು ಮರವ ಪೋಷಿಸುತ್ತ ಹಾಂಗೆ ಐಹಿಕ ಪ್ರಕೃತಿಯ ಮೂರು ಗುಣಂಗೊ ಈ ಮರವ ಪೋಷಿಸುತ್ತು. ಕೆಲವೊಂದರಿ ಒಂದಿಷ್ಟು ಭೂಭಾಗ ನೀರಿಲ್ಲದ್ದೆ ಬಂಜರಾಗಿಪ್ಪದು, ಕೆಲವೊಂದರೈ ಒಂದು ಭಾಗ ಹಸಿರಾಗಿಪ್ಪದು ಕಾಣುತ್ತು. ಇದೇ ರೀತಿಲಿ ಐಹಿಕ ಪ್ರಕೃತಿಯ ನಿರ್ಧಿಷ್ಟ ಗುಣಂಗಳ ಪ್ರಮಾಣ ಹೆಚ್ಚಾದಪ್ಪಗ ಅದಕ್ಕನುಗುಣವಾಗಿ ವಿವಿಧ ಜೀವವರ್ಗಂಗೊ ಕಾಣಿಸಿಗೊಳ್ಳುತ್ತು. ಈ ಮರದ ಚಿಗುರುಗೊ ಇಂದ್ರಿಯ ವಸ್ತುಗೊ ಹೇದು ಹೇಳಲಾಯ್ದು. ಬೇರೆ ಬೇರೆ ಪ್ರಕೃತಿಯ ಗುಣಂಗಳ ಬೆಳೆಶಿಗೊಂಡಪ್ಪಗ ನಾವು ಬೇರೆ ಬೇರೆ ಇಂದ್ರಿಯಂಗಳ ಬೆಳೆಶಿಗೊಳ್ಳುತ್ತು. ಇಂದ್ರಿಯಂಗಳ ಮೂಲಕ ನಾವು ವಿವಿಧ ರೀತಿಯ ಇಂದ್ರಿಯ ವಸ್ತುಗಳ ಅನುಭವುಸುತ್ತು. ವಿವಿಧ ಇಂದ್ರಿಯ ವಸ್ತುಗಳ ಅನುಭವಕ್ಕೆ ಅಂಟಿಗೊಂಡ ಕೆಮಿ, ಮೂಗು, ಕಣ್ಣು ಇತ್ಯಾದಿ ಇಂದ್ರಿಯಂಗೊ ರೆಂಬೆಯ ಕೊನೆಗೊ. ಶಬ್ದ, ರೂಪ, ಸ್ಪರ್ಶ, ಮೊದಲಾದ ಇಂದ್ರಿಯ ವಸ್ತುಗೊ ಕೊಡಿಗೊ. ಪ್ರಿಯ ಅಪ್ರಿಯಂಗೊ ಸಣ್ಣಪುಟ್ಟ ಬೇರುಗೊ. ಇವು ಕಷ್ಟದ ಮತ್ತೆ ಇಂದ್ರಿಯ ಸುಖದ ವಿವಿಧ ರೂಪಂಗಳ ಉಪಉತ್ಪನ್ನಂಗೊ. ಪಾಪ ಪುಣ್ಯಂಗಳ ಪ್ರವೃತ್ತಿಗೊ ಈ ಉಪಬೇರುಗಳಿಂದ ಬೆಳೆತ್ತು. ಈ ಉಪಬೇರುಗೊ ಎಲ್ಲಾ ದಿಕ್ಕೆ ಚಾಚಿಗೊಂಡಿದ್ದು. ನಿಜವಾದ ಬೇರು ಬ್ರಹ್ಮಲೋಕಲ್ಲಿದ್ದು, ಇತರ ಬೇರುಗೊ ಮನುಷ್ಯ ಲೋಕವ್ಯೂಹಲ್ಲಿದ್ದು. ಮನುಷ್ಯ ಹಲವಾರು ಕರ್ಮಂಗಳ ಫಲಂಗಳ ಮೇಗಾಣ ಲೋಕವ್ಯೂಹಲ್ಲಿ ಅನುಭವಿಸಿದ ಮತ್ತೆ ಭೂಮಿಗಿಳುದು ಬತ್ತ, ಮತ್ತೆ ತನ್ನ ಕರ್ಮವ ಮುಂದುವರುಸುತ್ತ°. ಹಾಂಗಾಗಿ ಈ ಮನುಷ್ಯ ಲೋಕವ ಕರ್ಮಕ್ಷೇತ್ರ ಹೇದು ಹೇಳಲಾಯ್ದು.

ಶ್ಲೋಕ

ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ನ ಚ ಸಂಪ್ರತಿಷ್ಠಾ ।
ಅಶ್ವತ್ಥಮೇನಂ ಸುವಿರೂಢಮೂಲಮ್ ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ॥೦೩॥

ತತಃ ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ಗತಾ ನ ನಿವರ್ತಂತಿ ಭೂಯಃ ।
ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥೦೪॥

 

ಪದವಿಭಾಗ

ನ ರೂಪಮ್ ಅಸ್ಯ ಇಹ ತಥಾ ಉಪಲಭ್ಯತೇ ನ ಅಂತಃ ನ ಚ ಆದಿಃ ನ ಚ ಸಂಪ್ರತಿಷ್ಠಾ । ಅಶ್ವತ್ಥಮ್ ಏನಂ ಸುವಿರೂಢ-ಮೂಲಮ್ ಅಸಂಗ-ಶಸ್ತ್ರೇಣ ದೃಢೇನ ಛಿತ್ತ್ವಾ ॥

ತತಃ ಪದಂ ತತ್ ಪರಿಮಾರ್ಗಿತವ್ಯಂ ಯಸ್ಮಿನ್ ಗತಾಃ ನ ನಿವರ್ತಂತಿ ಭೂಯಃ । ತಮ್ ಏವ ಚ ಆದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ ॥

ಅನ್ವಯ

(ಯಥಾ ಅಯಂ ವರ್ಣಿತಃ) ತಥಾ ಅಸ್ಯ ರೂಪಮ್ ಇಹ ನ ಉಪಲಭ್ಯತೇ । (ಅಸ್ಯ) ಅಂತಃ ನ, ಆದಿಃ ಚ ನ, ಸಂಪ್ರತಿಷ್ಠಾ ಚ ನ (ಉಪಲಭ್ಯತೇ), ಸುವಿರೂಢ-ಮೂಲಮ್ ಏನಮ್ ಅಶ್ವತ್ಥಂ ದೃಢೇನ ಅಸಂಗ-ಶಸ್ತ್ರೇಣ ಛಿತ್ತ್ವಾ ,

ತತಃ ಯತಃ ಪುರಾಣೀ ಪ್ರವೃತ್ತಿಃ ಪ್ರಸೃತಾ ತಂ ಏವ ಚ ಆದ್ಯಂ ಪುರುಷಂ ಪ್ರಪದ್ಯೇ, (ಇತಿ) ತತ್ ಪದಂ ಪರಿಮಾರ್ಗಿತವ್ಯಮ್, ಯಸ್ಮಿನ್ ಗತಾಃ ಭೂಯಃ ನ ನಿವರ್ತಂತಿ ।

ಪ್ರತಿಪದಾರ್ಥ

(ಯಥಾ ಅಯಂ ವರ್ಣಿತಃ – ಹೇಂಗೆ ಇದು ವರ್ಣಿಸಲ್ಪಟ್ಟಿದೋ), ತಥಾ – ಹಾಂಗೇ, ಅಸ್ಯ ರೂಪಮ್ – ಇದರ (ಈ ವೃಕ್ಷದ) ರೂಪ, ಇಹ – ಈ ಪ್ರಪಂಚಲ್ಲಿ, ನ ಉಪಲಭ್ಯತೇ – ಕಾಂಬಲೆ ಸಿಕ್ಕುತ್ತಿಲ್ಲೆ, (ಅಸ್ಯ – ಇದರ), ಅಂತಃ ನ – ಕೊನೆ ಇಲ್ಲೆ, ಆದಿಃ ಚ ನ – ಆದಿಯೂ ಕೂಡ ಇಲ್ಲೆ, ಸಂಪ್ರತಿಷ್ಠಾ ಚ – ತಳಪಾಯವೂ ಕೂಡ (ಬುಡವೂ ಕೂಡ), ನ (ಉಪಲಭ್ಯತೇ) – ಇಲ್ಲೆ, ಸುವಿರೂಢ-ಮೂಲಮ್ – ಬಲವಾಗಿ ಬೇರುಬಿಟ್ಟಿಪ್ಪ (ಬೇರೂರಿಪ್ಪ), ಏನಮ್ ಅಶ್ವತ್ಥಮ್ – ಈ ಅಶ್ವತ್ಥದ, ದೃಢೇನ – ದೃಢವಾಗಿ, ಅಸಂಗ-ಶಸ್ತ್ರೇಣ – ಆಸಂಗದ ಶಸ್ತ್ರಂದ, ಛಿತ್ತ್ವಾ – ಕತ್ತರುಸಿ (ತುಂಡರಿಸಿ),

ತತಃ – ಮತ್ತೆ, ಯತಃ ಪುರಾಣೀ – ಯಾವ ಪ್ರಾಚೀನವಾದ್ದರಿಂದ, ಪ್ರವೃತ್ತಿಃ ಪ್ರಸೃತಾ – ಪ್ರಾರಂಭವು ವಿಸ್ತರಿಸಿದ್ದೋ, ತಮ್ ಏವ – ಅದನ್ನೇ, ಚ – ಕೂಡ, ಆದ್ಯಮ್ ಪುರುಷಮ್ – ಮೂಲನಾದ ಪುರುಷೋತ್ತಮನ, ಪ್ರಪದ್ಯೇ – ಶರಣಾಗತನಾಯೇಕು, (ಇತಿ – ಈ ರೀತಿಯಾಗಿ), ತತ್ ಪದಮ್ – ಆ ಸ್ಥಿತಿಯ, ಪರಿಮಾರ್ಗಿತವ್ಯಮ್ – ಕಂಡುಹಿಡಿಯೆಕು, ಯಸ್ಮಿನ್ – ಯಾವುದರಲ್ಲಿ, ಗತಾಃ – ಗತಿಸಿಹೋದವು, ಭೂಯಃ – ಮತ್ತೆ, ನ ನಿವರ್ತಂತಿ – ಹಿಂದುರುಗುತ್ತವಿಲ್ಲೆ.

ಅನ್ವಯಾರ್ಥ

ಈ ಮರದ ನಿಜವಾದ ರೂಪವ ಈ ಜಗತ್ತಿಲ್ಲಿ ಕಾಂಬಲೆ ಎಡಿತ್ತಿಲ್ಲೆ. ಅದರ ಆದಿ ಅಂತ್ಯ ಅಥವಾ ಬುಡ (ಅಸ್ತಿವಾರ) ಆರಿಂಗೂ ಅರ್ಥಮಾಡಿಗೊಂಬಲೆಡಿಯ. ಆದರೆ ಮನುಷ್ಯ° ದೃಢಮನಸ್ಸಿಂದ ಅನಾಸಕ್ತಿಯ ಶಸ್ತ್ರಂದ (ಅಸಂಗ ಶಸ್ತ್ರ) ದೃಢವಾಗಿ ಬೇರೂರಿಪ್ಪ ಈ ಮರವ ಕಡುದು ಹಾಕೇಕು

ಮತ್ತೆ ಏವ ಸ್ಥಿತಿಗೆ/ಸ್ಥಳಕ್ಕೆ (ಪದಮ್)/ ಜಾಗಗೆ ಒಂದರಿ ಹೋದರೆ ಮತ್ತೆ ಮರಳಿ ಬತ್ತವಿಲ್ಲೆಯೋ, ಆ ಅತೀ ಪ್ರಾಚೀನವಾದ, ಅನಾದಿಕಾಲಂದ ಆರಿಂದ ಆರಂಭ ಆತೋ ಆ ಪುರುಷೋತ್ತಮಂಗೆ ಸಂಪೂರ್ಣ ಶರಣಾಗತನಾಯೆಕು.

ತಾತ್ಪರ್ಯ / ವಿವರಣೆ

ಅಶ್ವತ್ಥ ವೃಕ್ಷದ ನಿಜವಾದ ರೂಪವ ಈ ಐಹಿಕ ಜಗತ್ತಿಲ್ಲಿ ಅರ್ಥಮಾಡಿಗೊಂಬಲೆ ಸಾಧ್ಯ ಇಲ್ಲೆ ಹೇದು ಇಲ್ಲಿ ಹೇಳಿದಾಂಗೆ ಇದ್ದು.  ಹೇಳಿರೆ ಅದರ ಬೇರು ಎಲ್ಲ್ಯೆಲ್ಲ ಹಬ್ಬಿದ್ದು, ಎಷ್ಟು ವಿಶಾಲವಾಗಿದ್ದು ಹೇಳಿ ಅರ್ಥ ಮಾಡಿಗೊಂಬದು ಕಷ್ಟ ಹೇಳ್ವ ಒಂದು ಅರ್ಥ. ಭಗವಂತನೇ ಅಶ್ವತ್ಥ ಹೇಳಿ ತೆಕ್ಕೊಂಡ್ರೆ ಭಗವಂತನ ಅರ್ಥಮಾಡಿಗೊಂಬದು ಸಾಧ್ಯ ಇಲ್ಲೆ ಹೇಳ್ವ ಅರ್ಥವೂ ಅಪ್ಪು. ಅಶ್ವತ್ಥ ಮರದ ಮೂಲವ ಹುಡ್ಕಿಗೊಂಡು ಇನ್ನೂ ಇನ್ನೂ ಆಳವಾಗಿ ವಿಸ್ತಾರವಾಗಿ ಸಂಶೋಧನೆ ಮಾಡೆಕ್ಕಡಾ. ಹಾಂಗೇ ಭಗವಂತನ ಕುರಿತು ಇನ್ನೂ ಇನ್ನೂ ತಿಳಿ ಹೇಳ್ವ ತಾತ್ಪರ್ಯ. ಅದೂ ಹೇಂಗೆ ? – ‘ಅಸಂಗ ಶಸ್ತ್ರೇಣ ದೃಢೇನ’  ಹೇಳಿ ಹೇಳಿದ್ದ° ಇಲ್ಲಿ ಭಗವಂತ°. ‘ಸಂಗವ ಬಿಟ್ಟು ದೃಢ ಮನಸ್ಸಿಂದ ಅನನ್ಯ ಶ್ರದ್ಧಾಭಕ್ತಿಂದ ಚಿಂತನೆಯ ಆಳಕ್ಕೂ ವಿಸ್ತಾರಕ್ಕೂ ಹೋಯೇಕು’ ಹೇಳ್ವ ಧ್ವನಿ.

ಭಗವಂತ° ಇಲ್ಲಿ ವಿಶ್ವವ ರಜ ವಿಸ್ತಾರವಾಗಿಯೇ ವರ್ಣಿಸಿದ್ದ°.  ಈ ಪ್ರಪಂಚಲ್ಲೇ ಇದ್ದು ಪ್ರಪಂಚವ ನೋಡಿರೆ ಭಗವಂತನ ಅಖಂಡತ್ವ ದರ್ಶನ ಸಾಧ್ಯ ಇಲ್ಲೆ. ಸಮುದ್ರ ತೀರಲ್ಲಿಪ್ಪ ಕೆಪ್ಪೆ ಸಮುದ್ರದ ಆಳ ಮತ್ತೆ ವಿಶಾಲವ ಅರ್ಥ ಮಾಡಿಗೊಂಬಲೆ ಹೇಂಗೆ ಅಸಮರ್ಥವೋ ಹಾಂಗೇ ಈ ವಿಶ್ವವ ಸಂಪೂರ್ಣ ಅರ್ಥ ಮಾಡಿಗೊಂಬಲೆ ನಾವೂ ಅಸಮರ್ಥರೇ. ಇಲ್ಲಿ ವಿಶ್ವ ಹೇಳಿರೆ ಈ ಬರೇ ಭೂಮಿ ಅಲ್ಲ. ಸಮಸ್ತ ವಿಶ್ವ, ಹೇಳಿರೆ-  ಭಗವಂತ°. ಬನ್ನಂಜೆ ಹೇಳ್ತವು – ಈ ಪ್ರಪಂಚ ಹೇಂಗೆ ಸೃಷ್ಟಿ ಆತು ? ಅದು ಪ್ರಳಯ ಕಾಲಲ್ಲಿ ನಾಶವಾಗಿ ಎಲ್ಲಿಗೆ ಹೋವ್ತು? ಈ ಆಕಾಶಲ್ಲಿ ಎಲ್ಲ ಗ್ರಹ ಗೋಲಂಗೊ ನಿರಾಧಾರವಾಗಿ ಹೇಂಗೆ ನಿಂದಿದು?… ಹೀಂಗೆ ನಾವು ಪ್ರಶ್ನೆ ಹಾಕ್ಯೊಂಡು ಹೋದರೆ ಇದಕ್ಕೆ ನಮ್ಮತ್ರೆ ಸ್ಪಷ್ಟ ಉತ್ತರ ಇಲ್ಲೆ. ವಿಜ್ಞಾನಲ್ಯೂ ಇದಕ್ಕೆಲ್ಲ ಸ್ಪಷ್ಟ ಉತ್ತರ ಇಲ್ಲೆ. ಎಂತಕೆ ಹೇಳಿರೆ ವಿಜ್ಞಾನ ನಿಂದುಗೊಂಡಿಪ್ಪದು ಬರೇ ಕಲ್ಪನೆಯ ಗೋಪುರದ ಮೇಗೆ. ಪ್ರಳಯಕಾಲಲ್ಲಿ ಈ ಪ್ರಪಂಚವೇ ಇರ್ತಿಲ್ಲೆ [“ನಾಸದಾಸೀನೋsಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ…”(ಋಗ್ವೇದ ೧೦.೧೨೯-೧)] . ಪ್ರಳಯ ಕಾಲಲ್ಲಿ ಭಗವಂತ° ಸಮುದ್ರಲ್ಲಿ ಆಲದೆಲೆಲಿ ಮನಿಕ್ಕೊಂಡಿರುತ್ತ° ಹೇದು ನಾವು ಕೇಳಿದ್ದದು. ಈ ಲೋಕವೇ ಇಲ್ಲದ್ದಿಪ್ಪಗ ಏವ ಸಮುದ್ರ, ಏವ ನೀರು??!

ಬನ್ನಂಜೆ ವಿವರುಸುತ್ತವು – ಸಂಕ್ಷಿಪ್ತವಾಗಿ ಹೇಳೇಕ್ಕಾರೆ, – ಪ್ರಳಯಕಾಲಲ್ಲಿ ಎಲ್ಲವೂ ಸೆಡುದು ಪರಮಾಣು ರೂಪವ ಪಡಕ್ಕೊಳ್ಳುತ್ತು. ಇದುವೇ ಪ್ರಳಯ ಸಮುದ್ರ. ಈ ಕಾಲಲ್ಲಿ ಎಲ್ಲ ಜೀವ ಜಾತಂಗೊ ತಮ್ಮ ಸ್ಥೂಲ ಶರೀರವ ಬಿಡಿಸಿಗೊಂಡು ಸೂಕ್ಷ್ಮಶರೀರಲ್ಲಿ ತಮ್ಮ ಅಸ್ತಿತ್ವದ ಅರಿವೂ ಇಲ್ಲದ್ದೆ ಭಗವಂತನ ಒಡಲ ಸೇರುತ್ತು. ಸೃಷ್ಟಿ ಕಾಲಲ್ಲಿ ಹಂತಹಂತವಾಗಿ ಈ ಪ್ರಪಂಚ ರೂಪುಗೊಳ್ಳುತ್ತು. ಇವೆಲ್ಲವ ಮಾಡುವವ° ಆ ಭಗವಂತ°. ಇಂಥಹ ಪ್ರಪಂಚ ತಲೆ ಬುಡ ನೆಡು ಏವುದೂ ಅರ್ಥವಾಗದಷ್ಟು ಆಳವಾಗಿದ್ದು. ಇದಕ್ಕಾಗಿ ನಾವು ಏವುದರ ತಿಳುದರೆ ಎಲ್ಲವೂ ತಿಳಿತ್ತೋ ಅದರ ಮದಾಲು ತಿಳಿಯೇಕು. ಅಣು ಹೇಳಿರೆ ಎಂತರ ಗೊಂತಿಲ್ಲದ್ದೆ ಪರಮಾಣು ಬಗ್ಗೆ ತಿಳ್ಕೊಂಬಲೆ ಎಡಿಗೊ!. ಭಗವಂತ° ಇಲ್ಲಿ ಹೇಳಿದ್ದ° –  “ಏವುದರ ತಿಳುದರೆ ಎಲ್ಲವೂ ತಿಳಿತ್ತೋ ಅದರ ತಿಳಿವಲೆ ಆ ಪರಶಕ್ತಿಲಿ ಶರಣಾಗು”.

ಭಗವಂತನ ತಿಳುದರೆ ಎಲ್ಲವೂ ತಿಳುದಾಂಗೆ ಹೇಳ್ವದೇನೋ ಸರಿ, ಆದರೆ ಅವನ ತಿಳಿವದು ಹೇಂಗೆ? ಈ ಅಖಂಡವಾಗಿ ಬೇರೂರಿಪ್ಪ ಅಶ್ವತ್ಥ ಮರದ ಮೂಲವ ಸೇರುವದು ಹೇಂಗೆ?. ಅದಕ್ಕೆ ಭಗವಂತ° ಇಲ್ಲಿ ದಾರಿಯನ್ನೂ ಸೂಚಿಸಿದ್ದ° –  “ಅಸಂಗಶಸ್ತ್ರೇಣ ದೃಢೇನ ಛಿತ್ತ್ವಾ ” –  ‘ಜ್ಞಾನವೆಂಬ ಕತ್ತಿಯ ಅನಾಸಕ್ತಿ ಮತ್ತೆ ಉಪಾಸನೆ ಹೇಳ್ವ ಸಾಣೆಕಲ್ಲಿಲಿ ಹರಿತಗೊಳುಸಿ ಈ ಆಳವಾಗಿ ಬೇರೂರಿಪ್ಪ ಮರವ ಕತ್ತರಿಸಿ ಪರತತ್ವವ ಹುಡುಕು’. “ಯಸ್ಮಿನ್ಗತಾ ನ ನಿವರ್ತಂತಿ ಭೂಯಃ ..” – ನಾವು ಎಲ್ಲಿಗೆ ಹೋದರೆ ಮರಳಿ ಇಲ್ಲಿಗೆ ಬರೆಕ್ಕಾದ್ದು ಇಲ್ಯೋ ಅದರ ಅನ್ವೇಷಣೆ ಮಾಡೇಕು. ಭಗವಂತನ ಇತಿಮಿತಿರಾಹಿತ್ಯವ ತಿಳಿವ ಜ್ಞಾನಕ್ಕೆ ಇದುವೇ ‘ಕೊಡಲಿ’. ಇಲ್ಲಿಯೂ ನಾವೇ ನಮ್ಮ ಪ್ರಯತ್ನಂದ ಮೂಲವ ಹುಡುಕ್ಯೊಂಡು ಹೋಗುತ್ತೇನೆ ಹೇಳಿರೆ ಅಲ್ಲಿಗೆ ಎತ್ತಲೆ ಇಲ್ಲೆ. ಅದಕ್ಕಾಗಿ ಇಪ್ಪ ಒಂದೇ ಮಾರ್ಗ – ಆ ಪರಶಕ್ತಿಲಿ ಶರಣಾಗತನಪ್ಪದು. ಅದನ್ನೇ ಭಗವಂತ° ಇಲ್ಲಿ ಹೇಳಿದ್ದದು – “ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ” – ಯಾವ ಅತೀ ಪ್ರಾಚೀನನೂ, ಆದಿ ಪುರುಷನೂ ಆಗಿಪ್ಪ ಆ ಪುರುಷೋತ್ತಮಂಗೆ ಸಂಪೂರ್ಣ ಅನನ್ಯ ಭಕ್ತಿಂದ, ಸಂಪೂರ್ಣ ನಂಬಿಕೆ ವಿಶ್ವಾಸಂದ ಶರಣಾಗತನಾಯೇಕು. ಅದು ಅವನ ಕಾಂಬಲೆ ಹೋಪ ಮಾರ್ಗ.

ಶ್ಲೋಕ

ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈಃ ಗಚ್ಛಂತ್ಯಮೂಢಾಃ ಪದಮವ್ಯಯಂ ತತ್ ॥೦೫॥

ಪದವಿಭಾಗ

ನಿರ್ಮಾನ-ಮೋಹಾಃ ಜಿತ-ಸಂಗ-ದೋಷಾಃ ಅಧ್ಯಾತ್ಮ-ನಿತ್ಯಾ ವಿನಿವೃತ್ತ-ಕಾಮಾಃ । ದ್ವಂದ್ವೈಃ ವಿಮುಕ್ತಾಃ ಸುಖ-ದುಃಖ-ಸಂಜ್ಞೈಃ ಗಚ್ಛಂತಿ ಅಮೂಢಾಃ ಪದಮ್ ಅವ್ಯಯಂ ತತ್ ॥

ಅನ್ವಯ

ನಿರ್ಮಾನ-ಮೋಹಾಃ, ಜಿತ-ಸಂಗ-ದೋಷಾಃ, ಅಧ್ಯಾತ್ಮ-ನಿತ್ಯಾಃ, ವಿನಿವೃತ್ತ-ಕಾಮಾಃ, ಸುಖ-ದುಃಖ-ಸಂಜ್ಞೈಃ ದ್ವಂದ್ವೈಃ ವಿಮುಕ್ತಾಃ, ಅಮೂಢಾಃ, ತತ್ ಅವ್ಯಯಂ ಪದಂ ಗಚ್ಛಂತಿ ।

ಪ್ರತಿಪದಾರ್ಥ

ನಿರ್ಮಾನ-ಮೋಹಾಃ – ಮಿಥ್ಯಾಹಂಕಾರ ಮತ್ತೆ ಭ್ರಾಂತಿಗೊ ಇಲ್ಲದ್ದ, ಜಿತ-ಸಂಗ-ದೋಷಾಃ – ಸಹವಾಸದೋಷವ ಗೆದ್ದ, ಅಧ್ಯಾತ್ಮ-ನಿತ್ಯಾ – ಅಧ್ಯಾತ್ಮಲ್ಲಿ ಶಾಶ್ವತರಾದ, ವಿನಿವೃತ್ತ-ಕಾಮಾಃ – ಕಾಮಸಂಗವಿವರ್ಜಿತರಾದ, ಸುಖ-ದುಃಖ-ಸಂಜ್ಞೈಃ – ಸುಖ-ದುಃಖ ಎಂಬ ಸಂಜ್ಞೆಗಳಿಂದ, ದ್ವಂದ್ವೈಃ – ದ್ವಂದ್ವಂಗಳಿಂದ, ವಿಮುಕ್ತಾಃ – ಮುಕ್ತರಾದವು, ಅಮೂಢಾಃ – ದಿಗ್ಭ್ರಮೆಗೊಳ್ಳದ್ದ ಇಪ್ಪವು, ತತ್ ಅವ್ಯಯಮ್ ಪದಮ್ – ಆ ಅವ್ಯಯವಾದ (ಶಾಶ್ವತವಾದ) ಪದವ (ಸ್ಥಳವ/ಜಾಗೆಯ/ಸ್ಥಿತಿಯ), ಗಚ್ಛಂತಿ – ಹೋವುತ್ತವು.

ಅನ್ವಯಾರ್ಥ

ಸುಳ್ಳುಪ್ರತಿಷ್ಠೆಂದ, ಮೋಹಂದ, ಸುಳ್ಳುಸಂಗಂದ ಮುಕ್ತರಾದವು, ಐಹಿಕ ಕಾಮವ ತ್ಯಜಿಸಿದವು, ಅಧ್ಯಾತ್ಮವೇ ನಿತ್ಯ ಹೇಳ್ವದರ ತಿಳುದವು, ಸುಖ-ದುಃಖಂಗಳೆಂಬ ದ್ವಂದ್ವಂಗಳಿಂದ ಮುಕ್ತರಾದವು, ಭ್ರಾಂತಿಗೊಳಗಾಗದ್ದವು, ನಿತ್ಯ ಅಧ್ಯಾತ್ಮ ಚಿಂತನೆಲಿಪ್ಪವ್ವು (ಆ ಪರಮಪುರುಷಂಗೆ ಹೇಂಗೆ ಸಂಪೂರ್ಣ ಶರಣಾಗತನಪ್ಪದು ಹೇಳ್ವದರೆ ತಿಳುದವು) ಶಾಶ್ವತವಾದ ಆ ಸ್ಥಿತಿಯ ಹೊಂದುತ್ತವು.

ತಾತ್ಪರ್ಯ / ವಿವರಣೆ

ಶರಣಾಗತಿಯ ಪ್ರಕ್ರಿಯೆಯ ಇಲ್ಲಿ ಸೊಗಸಾಗಿ ನಿರೂಪಿಸಿದ್ದ° ಭಗವಂತ°. ಸುರುವಾಣದ್ದಾಗಿ, ಮನುಷ್ಯ ಗರ್ವಂದಲಾಗಿ ಭ್ರಾಂತನಪ್ಪಲಾಗ. ತಾನೇ ಐಹಿಕ ಪ್ರಕೃತಿಯ ಪ್ರಭು ಹೇದು ಜಂಭಂದ ಬೀಗಿರೆ ಮತ್ತೆ ಪರಮಾತ್ಮಂಗೆ ಶರಣಪ್ಪ ಅರ್ಹತೆ, ಅವಕಾಶವೇ ಇಲ್ಲದಾವ್ತು. ಅದನ್ನೇ ಭಗವಂತ° ಹೇಳಿದ್ದದು – ‘ನಿರ್ಮಾನಮೋಹಾಃ’ – ಠೊಳ್ಳು ಅಹಂಕಾರದ ಭ್ರಾಂತಿಯ ಬಿಟ್ಟು. ದೇವೋತ್ತಮ ಪರಮಪುರುಷೋತ್ತಮನೇ ಸರ್ವೋತ್ತಮ° ಹೇಳ್ವದರ ತಿಳಿಯೆಕು. ಅಂತೇ ಬಾಯಿಲಿ ಪುರುಷೋತ್ತಮ°, ದೇವಾದಿದೇವ°, ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ° ಹೇಳಿ ಹೇಳಿಕ್ಕಿ ಬಿಟ್ಟರೆ ಆ ಕೆಣಿ ಆವ್ತಿಲ್ಲೆ. ಅದೆಲ್ಲ ಪಟ್ಟಿಲ್ಲಿ ಸೇರ್ಸಿಗೊಂಬಲೆ ಆವ್ತಿಲ್ಲೆ. ಕಪಟ ಭಕ್ತಿಯ ಎಂದೂ ಭಗವಂತ° ಮೆಚ್ಚುತ್ತನಿಲ್ಲೆ. ಅವ° ಮೆಚ್ಚುವದು ನಿಶ್ಚಲ ಅನನ್ಯ ಭಕ್ತಿ. ಹಾಂಗಾಗಿ ಅವನೇ ಸರ್ವಸ್ವ ಹೇಳ್ವದರ ಶ್ರದ್ಧಾಪೂರ್ವಕ ನಂಬಿ, ಎಲ್ಲವೂ ಅವನಿಂದ ಹೇಳ್ವದರ ಅರ್ತು, ನಮ್ಮದೇನಿಲ್ಲೆ ಹೇಳ್ವ ನಿಗರ್ವಿಗೊ ಆಯೇಕು ನಾವು. ಗರ್ವಂದ ಬಪ್ಪ ಭ್ರಮೆಂದ ಮುಕ್ತರಾಯೆಕು. ಹಾಂಗೇ ಮಾಯೆಯ ಪ್ರಭಾವಂದ ಬಪ್ಪ ಅಹಂಕಾರ. ಅದೂ ಗರ್ವವೇ. ಹಾಂಗಿಪ್ಪದೆಲ್ಲವ ಬಿಟ್ಟು ಶರಣಾಗತಿಗೆ ಮುಂದಾಯೇಕು. ಮತ್ತೆ ‘ಜಿತಸಂಗದೋಷಾಃ’ – ಸಹವಾಸಂದ ದೋಷಂಗಳೇ ಉಂಟಪ್ಪದು. ಆದರಲ್ಲಿ ಮತ್ತೆ ಮತ್ತೆ ವ್ಯಾಮೋಹ ಅಂಟಿಗೊಳ್ಳುತ್ತು. ವ್ಯಾಮೋಹ ನಮ್ಮ ನಿಜ ಗತಿಯ ಬದಲುಸುತ್ತು. ಹಾಂಗೇ ಐಹಿಕ ವ್ಯಾಮೋಹಂದ ಪಾರಾಗಿ, ‘ಅಧ್ಯಾತ್ಮ-ನಿತ್ಯಾಃ’ ಸದಾ ಸತ್ಚಿಂತನೆ, ಭಗವಂತನ ಜ್ಞಾನವೇ ನಮ್ಮ ಉಸಿರಾಗಿ ನೆಲೆಸೆಕು. ಅಧ್ಯಾತ್ಮ ನೆಲೆಗೆ ನಮ್ಮ ಮನಸ್ಸು ಸ್ಥಿರಗೊಳ್ಳೆಕ್ಕಾರೆ ‘ವಿನಿವೃತ್ತ-ಕಾಮಾಃ’ – ಭೋಗಂದ ಮುಕ್ತರಾಯೇಕು. ಐಹಿಕ ಭೋಗಲ್ಲಿ ಸುಖವ ಕಾಂಬವಂಗೆ ಸಚ್ಚಿದಾನಂದನ ಸದಾನಂದ ರುಚಿ ಕಾಣ. ‘ಸುಖ-ದುಃಖ-ದ್ವಂದ್ವೈಃ ವಿಮುಕ್ತಾಃ’ ಸುಖ-ದುಃಖ ಹೇಳ್ವದು ದ್ವಂದ್ವ ಸಿದ್ಧಾಂತ. ಎರಡೂ ಇಪ್ಪಂತಾದ್ದೇ. ತ್ರಿಗುಣಂಗಳ ಪ್ರಭಾವಂದ ಸುಖ-ದುಃಖ ಉಂಟಾವುತ್ತಲೇ ಇರ್ತು. ಇದರ ತಪ್ಪುಸಲೆ ನಮ್ಮಂದ ಎಡಿಯ. ಅದು ನಮ್ಮ ಕರ್ಮ ಫಲ. ಕರ್ಮಕ್ಕನುಗುಣವಾಗಿ ಭಗವಂತ° ನೀಡುವದು. ಏವಾಗ ಕೊಡುತ್ತ° ಹೇಳ್ವದು ಅವನ ನಿರ್ಧಾರ. ಹಾಂಗಾಗಿ ಸುಖವಾಗಿಲಿ ದುಃಖವಾಗಲೀ ಎರಡನ್ನೂ ನಿರ್ಲಿಪ್ತವಾಗಿ ಸ್ವೀಕರುಸೆಕು. ಅಪ್ಪದೆಲ್ಲ ಒಳ್ಳೆದಕ್ಕೆ, ಭಗವಂತ° ನಮ್ಮ ಕರ್ಮಕ್ಕೆ ನೀಡಿದ ಪ್ರಸಾದ ಹೇಳಿ ತೆಕ್ಕೊಳ್ಳೆಕ್ಕು. ಈ ರೀತಿಯಾಗಿ ‘ಅಮೂಢಾಃ’ – ದಿಗ್ಭ್ರಮೆಗೆ ಒಳಗಾಗದ್ದೆ, ಭಗವಂತನ ವಿಷಯಲ್ಲಿ ಮೂಢತ್ವವೂ ಇಲ್ಲದ್ದೆ ಭಗವಂತನ ಪದವ ಅರಸುತ್ತಾ ಹೋದರೆ ಮುಂದೆ ಅವ್ಯಯವಾದ ಶಾಶ್ವತವಾದ ಆ ಭಗವಂತನ ನೆಲೆಯ ಹೋಗಿ ಸೇರ್ಲಕ್ಕು.

ಹೀಂಗೆ ಮಾನ-ಮೋಹ ಅಹಂಕಾರವ ಬಿಟ್ಟು, ಸಂಗದೋಷವಿವರ್ಜಿತನಾಗಿ, ಕಾಮವರ್ಜಿತನಾಗಿ, ದ್ವಂದ್ವಾತೀತನಾಗಿ, ನಿರೀಕ್ಷೆ-ನಿರಾಶೆಯ ಬಿಟ್ಟು ಯಾವ ಭ್ರಾಂತಿಗೂ ಒಳಗಾಗದ್ದೆ, ಸದಾ ಸಂಪೂರ್ಣ ಕೃಷ್ಣಪ್ರಜ್ಞೆಲಿ ನಿತ್ಯ ಅಧ್ಯಾತ್ಮ ಸೇವೆಲಿ ಮುಂದುವರುದರೆ ಜ್ಞಾನಿಯಾಗಿ ನಿರಾಯಾಸವಾಗಿ ಭಗವಂತನ ಲೋಕವ ಸೇರ್ಲಕ್ಕು ಹೇಳಿ ಭಗವಂತ° ಇಲ್ಲಿ ಮಾರ್ಗವ ಸೂಚಿಸಿದ್ದ°.

ಬನ್ನಂಜೆ ಹೇಳುತ್ತವು – ದೇವರ ಬಗ್ಗೆ ದೇವರ ನಂಬುವವರಲ್ಲೇ ಅನೇಕ ಅಭಿಪ್ರಾಯ ಭೇದಂಗೊ ಇದ್ದು. ಪ್ರತಿಯೊಬ್ಬಂಗೂ ತಮ್ಮ ವಿಚಾರಧಾರೆ ಸರಿ ಹೇಳ್ವ ಭಾವನೆ ಇರುತ್ತು. ಅದಕ್ಕಾಗಿ ಭಗವಂತ° ಜೀವ-ಜಗತ್ತು-ಭಗವಂತ° ಈ ತ್ರಿಪುಟಿಗಳ ಕಲ್ಪನೆಯ ಮುಂದೆ ವಿವರುಸುತ್ತಾ ಇದ್ದ°. ನಮ್ಮ ಜೀವನಲ್ಲಿ ನಾವು ಹೇಂಗೆ ಸಾಧನೆ ಮಾಡೆಕು, ಹೇಂಗೆ ಭಗವಂತನ ಚಿಂತನೆ ಮಾಡೆಕು ಹೇಳ್ವದರ ಸಮಸ್ತ ಸಾರವ ಭಗವಂತ° ಈ ಮುಂದೆ ಇಲ್ಲಿ ಹೇಳುತ್ತ° –

ಶ್ಲೋಕ

ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ ।
ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ ॥೦೬॥

ಪದವಿಭಾಗ

ನ ತತ್ ಭಾಸಯತೇ ಸೂರ್ಯಃ ನ ಶಶಾಂಕಃ ನ ಪಾವಕಃ । ಯತ್ ಗತ್ವಾ ನ ನಿವರ್ತಂತೇ ತತ್ ಧಾಮ ಪರಮಮ್ ಮಮ ॥

ಅನ್ವಯ

ನ ಸೂರ್ಯಃ, ನ ಶಶಾಂಕಃ, ನ ಪಾವಕಃ (ಚ) ತತ್ (ಪದಮ್) ಭಾಸಯತೇ । ಯತ್ ಗತ್ವಾ ನ ನಿವರ್ತಂತೇ ತತ್ ಮಮ ಪರಮಂ ಧಾಮ ।

ಪ್ರತಿಪದಾರ್ಥ

ನ ಸೂರ್ಯಃ ನ ಶಶಾಂಕಃ ನ ಪಾವಕಃ (ಚ) ತತ್ (ಪದಮ್) ಭಾಸಯತೇ – ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ಆ ಪದವ ಬೆಳಗುತ್ತಿಲ್ಲೆ, ಯತ್ ಗತ್ವಾ – ಯಾವುದರ ಸೇರಿ, ನ ನಿವರ್ತಂತೇ – ಹಿಂತುರುಗುತ್ತಿಲ್ಲೆಯೋ, ತತ್ ಮಮ – ಅದು ಎನ್ನ, ಪರಮಮ್ ಧಾಮ – ಶ್ರೇಷ್ಠವಾದ ಧಾಮವು.

ಅನ್ವಯಾರ್ಥ

ಎನ್ನ ಆ ಪರಮಧಾಮವ ಸೂರ್ಯ ಚಂದ್ರರಾಗಲೀ, ಅಗ್ನಿಯಾಗಲೀ ಬೆಳಗುತ್ತಿಲ್ಲೆ (ಪ್ರಕಾಶ ಮಾಡುತ್ತಿಲ್ಲೆ). ಯಾವುದರ ಸೇರಿ ಜೀವಿಗೊ ಮತ್ತೆ ಮರಳಿ ಬತ್ತವಿಲ್ಲೆಯೋ ಅಂತಹ ಶ್ರೇಷ್ಠ ಧಾಮವು ಎನ್ನದು.

ತಾತ್ಪರ್ಯ / ವಿವರಣೆ

ಭಗವಂತನ ಸೂರ್ಯನಾಗಲೀ, ಚಂದ್ರನಾಗಲೀ ಅಥವಾ ಏವ ಬೆಣಚ್ಚಿಯ ಪ್ರಭೆಯೂ ಬೆಳಗುತ್ತವಿಲ್ಲೆ. ಅವಂಗೆ ಯಾವ ಪ್ರಕಾಶದ ಅಗತ್ಯವೂ ಇಲ್ಲೆ. ಅವಂ ಸ್ವಯಂ ಪ್ರಭೆ. ಈ ವಿಶ್ವಲ್ಲಿ ಸ್ವಯಂ ಪ್ರಭೆಂದ ಪ್ರಕಾಶಮಾನವಾಗಿ ಇಪ್ಪದು ಒಂದೇ ಒಂದು. ಅದು ಸೂರ್ಯ. ಆದರೆ ಭಗವಂತನ ಲೋಕಲ್ಲಿ ಇವುಗಳ ಪ್ರಭೆ ಪ್ರಕಾಶವ ನೀಡುತ್ತಿಲ್ಲೆ. ಅಲ್ಲಿ ಭಗವಂತನ ಬ್ರಹ್ಮ ಜ್ಯೋತಿಯೇ ನಿತ್ಯ ಜ್ಯೋತಿ. ಅದರ ಹತ್ರಂಗೆ ಹೋದವು ಆರು ಮತ್ತೆ ಹಿಂತುರುಗುತ್ತವಿಲ್ಲೆ. ಅದುವೇ ಭಗವಂತನ ಹಿರಿಯ ರೂಪ/ಧಾಮ.

ಇಲ್ಲಿ “ಪರಮಮ್ ಮಮ” ಹೇಳ್ವದಕ್ಕೆ ವಿಶೇಷ ಮಹತ್ವ ಇದ್ದು. ವಾಸ್ತವವಾಗಿ ಪ್ರಪಂಚದ ಮೂಲೆ ಮೂಲೆಯೂ ಭಗವಂತನ ಸೊತ್ತು. ಆದರೆ ಆಧ್ಯಾತ್ಮಿಕ ಜಗತ್ತು ‘ಪರಮಮ್’. ಅಲ್ಲಿ ಸೂರ್ಯನ ಬೆಣಚ್ಚಿಯೋ, ಚಂದ್ರನ ಬೆಣಚ್ಚಿಯೋ, ಅಥವಾ ನಕ್ಷತ್ರವೋ, ಅಥವಾ ಇನ್ನೇವುದೇ ಬೆಣಚ್ಚಿಯ/ಪ್ರಕಾಶದ ಅಗತ್ಯ ಇಲ್ಲೆ. “ನ ತತ್ರ ಸೂರ್ಯೋಭಾತಿ ನ ಚಂದ್ರತಾರಕಮ್” (ಕಠೋ.2.2.15). ಇಡೀ ಅಧ್ಯಾತ್ಮಿಕ ಜಗತ್ತು ಪರಮ ಪ್ರಭುವಿನ ಅಂತರಂಗ ಶಕ್ತಿಯ ಬೆಣಚ್ಚಿಂದ ಪ್ರಕಾಶಮಾನವಾಗಿದ್ದು, ಆಪ್ಯಾಯಮಾನವಾಗಿದ್ದು. ಆ ಬೆಣಚ್ಚಿಯ ಕಂಡವಂಗೆ ಮತ್ತೇ ಏನನ್ನೂ ಅನುಭವುಸಲೆ ಬಾಕಿ ಇಲ್ಲೆ. ಹಾಂಗಾಗಿ ಭಗವಂತನ ಆ ಧಾಮ ‘ಪರಮಮ್’. ಸಂಪೂರ್ಣ ಕೃಷ್ಣಪ್ರಜ್ಞೆಯ ಶರಣಾಗತಿಂದ ಮಾತ್ರವೇ ಆ ಪರಮ ಧಾಮವ ಪಡವಲೆ ಸಾಧ್ಯ. ಬೇರೇವ ರೀತಿಂದಲೂ ಎಡಿಯ.

ಬನ್ನಂಜೆಯವರ ವ್ಯಾಖ್ಯಾನವ ಗಮನಿಸಿರೆ – ಭಗವಂತನ ಸೂರ್ಯ-ಚಂದ್ರ ಅಥವಾ ಅಗ್ನಿಯ ಬೆಣಚ್ಚಿಯಾಗಲೀ ಅಥವಾ ಇನ್ಯಾವುದೇ ಪ್ರಕಾಶವಾಗಲೀ ಬೆಳಗುಸುತ್ತಿಲ್ಲೆ. ಅವಂಗೆ ಯಾವ ಬೆಣಚ್ಚಿಯ ಅಗತ್ಯವೂ ಇಲ್ಲೆ. ಭೂಲೋಕಲ್ಲಿ ಭಗವಂತನ ಉಪಾಸನೆ ಅಗ್ನಿಮುಖಲ್ಲಿ. ಇದು ಬೆಣಚ್ಚಿಯ ಪ್ರತೀಕ. ಆದರೆ ಇದು ನೇರವಾಗಿ ಭಗವಂತನ ತೋರುಸುತ್ತಿಲ್ಲೆ. ಭಗವಂತನ ಕಾಂಬಲೆ ನಮ್ಮೊಳ ಇಪ್ಪ ಸ್ವರೂಪಭೂತವಾದ ಅಂತಃಜ್ಯೋತಿಯ ಬಳಸೆಕು. ಇದಕ್ಕೆ ‘ಆತ್ಮಜ್ಯೋತಿ’ ಹೇದು ಹೆಸರು. ನಾವು ನಮ್ಮ ಅಂತರಂಗದೊಳ ಇಪ್ಪ ಆತ್ಮಜ್ಯೋತಿಯ ಗುರ್ತ ಆಗದ್ದೆ ಭಗವಂತನ ಕಾಂಬಲೆ ಎಡಿಯ. ಸೂರ್ಯ, ಚಂದ್ರ, ಅಗ್ನಿಯ ಭಗವಂತನ ಪ್ರತೀಕವಾಗಿ ಬಳಸಿ ನಮ್ಮ ಅಂತರಂಗದ ಜ್ಯೋತಿಯ ನಾವು ಜಾಗೃತಗೊಳುಸೆಕು. ಏವ ಸ್ಥಾನಲ್ಲಿ ಭಗವಂತ ಸದಾ ಜ್ಞಾನಿಗೊಕ್ಕೆ ಗೋಚರವಾವ್ತನೋ ಅದು “ಪರಮಧಾಮ”. ಅದೇ ಮೋಕ್ಷ. ಅಲ್ಲಿ ಸೂರ್ಯನಾಗಲೀ, ಚಂದ್ರನಾಗಲೀ ಬೆಣಚ್ಚಿಯಲ್ಲ. ಈ ಪರಮಧಾಮಂದಲೇ ಸೂರ್ಯ, ಚಂದ್ರ, ಅಗ್ನಿ ಬೆಣಚ್ಚಿಯ ಪಡಕ್ಕೊಂಬದು. ಆತ್ಮಜ್ಯೋತಿಯ ಗುರುತಿಸಿ, ಆತ್ಮದಲ್ಲಿನ ಪರಮಾತ್ಮನ ಕಂಡುಗೊಂಡವ° ಎಂದೂ ಹಿಂತುರುಗದ್ದ ಆ ಪರಮಧಾಮವ ಸೇರುತ್ತ°.

ಶ್ಲೋಕ

ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।
ಮನಃ ಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥೦೭॥

ಪದವಿಭಾಗ

ಮಮ ಏವ ಅಂಶಃ ಜೀವ-ಲೋಕೇ ಜೀವ-ಭೂತಃ ಸನಾತನಃ । ಮನಃ-ಷಷ್ಠಾನಿ-ಇಂದ್ರಿಯಾಣಿ ಪ್ರಕೃತಿ-ಸ್ಥಾನಿ ಕರ್ಷತಿ ॥

ಅನ್ವಯ

(ಅಸ್ಮಿನ್) ಜೀವಲೋಕೇ ಮಮ ಏವ ಸನಾತನಃ ಅಂಶಃ ಜೀವ-ಭೂತಃ (ಅಸ್ತಿ, ಸಃ) ಪ್ರಕೃತಿ-ಸ್ಥಾನಿ ಮನಃ-ಷಷ್ಠಾನಿ-ಇಂದ್ರಿಯಾಣಿ ಕರ್ಷತಿ ।

ಪ್ರತಿಪದಾರ್ಥ

(ಅಸ್ಮಿನ್) ಜೀವಲೋಕೇ – ಈ ಬದ್ಧಜೀವನದ ಜಗತ್ತಿಲ್ಲಿ, ಮಮ ಏವ – ಎನ್ನದೇ, ಸನಾತನಃ ಅಂಶಃ – ಶಾಶ್ವತವಾದ ಅವಶಿಷ್ಟ ಕಣ, ಜೀವ-ಭೂತಃ (ಅಸ್ತಿ) – ಬದ್ಧ ಜೀವಿ ಆಗಿದ್ದ°, (ಸಃ – ಅವ°), ಪ್ರಕೃತಿ-ಸ್ಥಾನಿ – ಭೌತಿಕಪ್ರಕೃತಿಲಿ ನೆಲೆಸಿ, ಮನಃ-ಷಷ್ಠಾನಿ-ಇಂದ್ರಿಯಾಣಿ – ಮನಸ್ಸಿನೊಟ್ಟಿಂಗೆ ಆರು ಇಂದ್ರಿಯಂಗಳ, ಕರ್ಷತಿ – ಕಠಿಣವಾಗಿ ಹೋರಾಡುತ್ತ°.

ಅನ್ವಯಾರ್ಥ

ಈ ಬದ್ಧಜೀವಜಗತ್ತಿಲ್ಲಿ ಈ ಜೀವಿಗೊ ಎನ್ನದೇ ಆದ ಶಾಶ್ವತವಾದ ಸಣ್ಣ ಸಣ್ಣ ಕಣಂಗೊ (ಅಂಶಂಗೊ). ಭೌತಿಕ ಪ್ರಕೃತಿಲಿ ಬದ್ಧಜೀವನಂದಾಗಿ ಅವ° ಮನಸ್ಸೂ ಸೇರಿ ಆರು ಇಂದ್ರಿಯಂಗಳೊಟ್ಟಿಂಗೆ ಬಹುವಾಗಿ ಹೋರಾಡುತ್ತ°.

ಶ್ಲೋಕ

ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ ।
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್ ॥೦೮॥

ಪದವಿಭಾಗ

ಶರೀರಮ್ ಯತ್ ಅವಾಪ್ನೋತಿ ಯತ್ ಚ ಅಪಿ ಉತ್ಕ್ರಾಮತಿ ಈಶ್ವರಃ । ಗೃಹೀತ್ವಾ ಏತಾನಿ ಸಂಯಾತಿ ವಾಯುಃ ಗಂಧಾನ್ ಇವ ಆಶಯಾತ್ ॥

ಅನ್ವಯ

ಯತ್ (ಏಷಃ) ಈಶ್ವರಃ ಶರೀರಂ ಅವಾಪ್ನೋತಿ, ಅಪಿ ಚ ಯತ್ ಉತ್ಕ್ರಾಮತಿ (ತತ್) ವಾಯುಃ ಆಶಯಾತ್ ಗಂಧಾನ್ ಇವ ಏತಾನಿ ಗೃಹೀತ್ವಾ ಸಂಯಾತಿ ।

ಪ್ರತಿಪದಾರ್ಥ

ಯತ್ – ಹೇಂಗೆ, (ಏಷಃ – ಇವ°), ಈಶ್ವರಃ – ದೇಹದ ಒಡೆಯ° (ಇಲ್ಲಿ ಜೀವಿ ಹೇದರ್ಥ), ಶರೀರಮ್ – ಶರೀರವ, ಅವಾಪ್ನೋತಿ – ಪಡೆತ್ತನೋ, ಅಪಿ ಚ – ಕೂಡ, ಯತ್ – ಹೇಂಗೆ, ಉತ್ಕ್ರಾಮತಿ – ತ್ಯಜಿಸುತ್ತನೋ (ಉದ್ಧರಿಸುತ್ತನೋ), (ತತ್) ವಾಯುಃ – ಆ ವಾಯುವು, ಆಶಯಾತ್ – ಆಕರಂದ / ರೀತಿಲಿ/ಪ್ರಕಾರವಾಗಿ (ವಾಯುವು ಮಾಡ್ತಾಂಗೆ ಹೇಳಿ ಇಲ್ಲಿ ಅರ್ಥ), ಗಂಧಾನ್ – ಸುಗಂಧವ / ವಾಸನೆಗಳ, ಇವ – ಹಾಂಗೆ, ಏತಾನಿ – ಇವೆಲ್ಲವುಗಳ, ಗೃಹೀತ್ವಾ – ಸ್ವೀಕರುಸಿ (ತೆಕ್ಕೊಂಡು), ಸಂಯಾತಿ – ಹೆರಟು ಹೋವುತ್ತ°.

ಅನ್ವಯಾರ್ಥ

ಗಾಳಿಯು ಸುಗಂಧವ ಒಯ್ವ ಹಾಂಗೆ ಐಹಿಕ ಜಗತ್ತಿಲ್ಲಿ ಜೀವಿಯು ತನ್ನ ಜೀವನದ ವಿವಿಧ ಕಲ್ಪನೆಗಳ ಒಂದು ದೇಹಂದ ಇನ್ನೊಂದು ದೇಹಕ್ಕೆ ಒಯ್ತ°.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಜೀವಿಯ ವ್ಯಕ್ತಿತ್ವವ ಸ್ಪಷ್ಟವಾಗಿ ಹೇಳಿದ್ದ°. ಜೀವಿ ಎಂದೆಂದೂ ಭಗವಂತನ ವಿಭಿನ್ನಾಂಶದ ಒಂದು ಸಣ್ಣ ಕಣ. ಜೀವಿ ತನ್ನ ಬದ್ಧಜೀವನಲ್ಲಿ ಅವ° ಸ್ವಂತ ವ್ಯಕ್ತಿತ್ವವ ಪಡೆತ್ತ°., ಮತ್ತೆ ಮುಕ್ತ ಸ್ಥಿತಿಲಿ ಭಗವಂತನಲ್ಲಿ ಒಂದಾವುತ್ತ° ಹೇಳಿ ಅರ್ಥ ಅಲ್ಲ. ಅವ ನಿರಂತರವಾಗಿ ಬೇರೆಯೇ ಆಗಿರುತ್ತ°. ಭಗವಂತ ಅದರ “ಸನಾತನಃ” ಹೇಳಿ ಇಲ್ಲಿ ಪ್ರಯೋಗಿಸಿದ್ದ°. ಭಗವಂತ° ಅಸಂಖ್ಯಾತ ವಿಸ್ತರಣಂಗಳಲ್ಲಿ ಪ್ರಕಟವಾವ್ತ°, ಮತ್ತೆ ವಿಸ್ತಾರವಾವ್ತ°. ಇದಕ್ಕೆ ‘ವಿಷ್ಣುತತ್ವ’ ಹೇದು ಹೇಳ್ವದು. ಇನ್ನು, ಮಹತ್ವದ ಇನ್ನೊಂದು ವಿಸ್ತರಣ – ‘ಜೀವಿ’. ತನ್ನ ವೈಯಕ್ತಿಕ ವಿಸ್ತರಣೆಂದ ಅವ° ರಾಮ, ನರಸಿಂಹ, ವಿಷ್ಣುಮೂರ್ತಿ ಮುಂತಾದ ರೂಪಂಗಳಲ್ಲಿ ಹಾಂಗೇ ವೈಕುಂಠ ಲೋಕದ ಪ್ರಮುಖದೇವತೆಗಳಲ್ಲಿ ಪ್ರಕಟವಾವ್ತ°. ಬೇರೇಯೇ ಆದ ವಿಸ್ತರಣಂಗೊ ಹೇಳಿರೆ ಜೀವಿಗೊ. ನಿತ್ಯ ಸೇವಕರು. ದೇವೋತ್ತಮ ಪರಮ ಪುರುಷನ ವೈಯಕ್ತಿಕ ವಿಸ್ತರಣೆಗಳಾದ ದೇವೋತ್ತಮನ ಪ್ರತ್ಯೇಕ ವ್ಯಕ್ತಿತ್ವ ಎಂದೆಂದೂ ಇರುತ್ತವು. ಹೀಂಗೇ ಬೇರೆಯಾದ ವಿಸ್ತರಣಂಗಳಾದ ಜೀವಿಗೊಕ್ಕೂ ವ್ಯಕ್ತಿತ್ವಂಗೊ ಇದ್ದು. ಜೀವಿಗೊ ಪರಮ ಪ್ರಭುವಿಂದ ಬೇರೆಯಾದ ವಿಭಿನ್ನಾಂಶಂಗೊ. ಅವಕ್ಕೂ ಅವನ ಗುಣಲಕ್ಷಣಂಗಳ ಕಣ ರಜಾ ಇದ್ದು. ಅವುಗಳಲ್ಲಿ ಸ್ವಾತಂತ್ರ್ಯವೂ ಒಂದು. ಆ ಸ್ವಾತಂತ್ರ್ಯವ ದುರುಪಯೋಗ ಮಾಡಿಗೊಂಡು ಮನುಷ್ಯ ಬದ್ಧ ಜೀವಿ ಆವ್ತ°. ಎರಡರಲ್ಲಿ ಏವುದೇ ಆಗಲಿ, ಅವ° ಭಗವಂತನ ಹಾಂಗೇ ನಿತ್ಯ°. ಮುಕ್ತಸ್ಥಿತಿಲಿ ಅವ° ಐಹಿಕ ಸ್ಥಿತಿಂದ ಬಿಡುಗಡೆ ಹೊಂದುತ್ತ°, ಭಗವಂತನ ದಿವ್ಯಸೇವಗೆ ಮುಡಿಪ್ಪಾವ್ತ°. ಅವನ ಬದ್ಧಸ್ಥಿತಿಲಿ ಪ್ರಕೃತಿಯ ಐಹಿಕ ಗುಣಂಗೊ ಅವನ ಮೇಲೆ ಪ್ರಭಾವ ಬೀರುತ್ತು. ಭಗವಂತನ ಪ್ರೇಮಪೂರ್ವಕ ಸೇವೆಯ ಮರೆತ್ತ°. ಪರಿಣಾಮವಾಗಿ ಅವ° ಐಹಿಕ ಜಗತ್ತಿಲ್ಲಿ ತನ್ನ ಅಸ್ತಿತ್ವವ ಒಳಿಶಿಗೊಂಬಲೆ -‘ಕರ್ಷತಿ’. ಹೇಳಿರೆ., ಕಠಿಣವಾಗಿ ದುಡಿತ್ತ°- ಐಹಿಕ ಜಗತ್ತಿಲ್ಲಿ ತ್ರಿಗುಣಂಗಳ ಪ್ರಭಾವಂದ ಮಿಥ್ಯಾ ಅಹಂಭಾವಂದ ಬಂಧನಕ್ಕೊಳಪ್ಪಟ್ಟು ತನ್ನ ಅಸ್ತಿತ್ವಕ್ಕಾಗಿ ದುಡಿತ್ತ°.

ಜೀವಿಗೊ ಭಗವಂತನ ವಿಭಿನ್ನಾಂಶಂಗೊ. ಮನುಷ್ಯರು, ನಾಯಿ, ಪುಚ್ಚೆ, ಆನೆ, ಕುದುರೆ, ಮೃಗ, ಪಕ್ಷಿ ಮಾಂತ್ರ ಅಲ್ಲ, ಐಹಿಕ ಜಗತ್ತಿನ ಮಹಾನ್ ನಿಯಂತ್ರಕರಾದ ಬ್ರಹ್ಮ, ಶಿವ ಮತ್ತೆ ವಿಷ್ಣುವೂ ಕೂಡ ಭಗವಂತನ ವಿಭಿನ್ನಾಂಶಂಗೊ. ಅವೆಲ್ಲರೂ ಶಾಶ್ವತರು. ಅಲ್ಪಕಾಲದ ಅಭಿವ್ಯಕ್ತಿಗೊ ಅಲ್ಲ. ಐಹಿಕ ಶರೀರವು ಬದ್ಧ ಆತ್ಮನ ಮನಸ್ಸು ಮತ್ತೆ ಇಂದ್ರಿಯಂಗೊ ಮುಚ್ಚುತ್ತು. ಮತ್ತೆ ಮುಕ್ತನಾದಪ್ಪಗ ಈ ಐಹಿಕ ಮರೆ ನಾಶ ಆವ್ತು. ಆದರೆ ಅವನ ಅಧ್ಯಾತ್ಮ ದೇಹವು ತನ್ನ ವೈಯಕ್ತಿಕ ರೂಪಲ್ಲಿ ಪ್ರಕಟವಾವ್ತು. ಜೀವಿ ಈ ಐಹಿಕ ಶರೀರವ ಬಿಟ್ಟು ಆಧ್ಯಾತ್ಮಿಕ ಲೋಕವ ಪ್ರವೇಶಿಸುವಾಗ ಅವ° ತನ್ನ ಆಧ್ಯತ್ಮಿಕ ಶರೀರವ ಮತ್ತೆ ಪಡೆತ್ತ°. ಜೀವಿ ತನ್ನ ಆಧ್ಯಾತ್ಮಿಕ ಶರೀರಲ್ಲಿ ಭಗವಂತನ ತನ್ನ ಕಣ್ಣೆದುರೇ ಕಾಣುತ್ತ°.

ಇನ್ನು ಇಲ್ಲಿ ಜೀವಿಯ ‘ಈಶ್ವರ’ ಹೇಳಿ ವರ್ಣಿಸಿದ್ದು. ಈಶ್ವರ ಹೇಳಿರೆ ಒಡೆಯ, ಪ್ರಭು, ನಿಯಂತ್ರುಸುವವ° ಹೇಳ್ವ ಅರ್ಥ. ತನ್ನ ದೇಹವವ ಇಪ್ಪನ್ನಾರ ನಿಯಂತ್ರುಸುವದು ಜೀವಿ. ಅವ° ಬಯಸಿದಲ್ಲಿ ತನ್ನ ದೇಹವ ಉತ್ತಮ ವರ್ಗಕ್ಕೆ ಬದಲಾಯಿಸಿಗೊಂಬಲಕ್ಕು ಅಥವಾ ಬಯಸಿದಲ್ಲಿ ತನ್ನ ಕೆಳಾಣ ವರ್ಗಕ್ಕೊ ಸಾಗುವಂತೆ ಮಾಡ್ಳಕ್ಕು!. ಇದು ಬಹು ಅಲ್ಪವಾದ ಸ್ವಾತಂತ್ರ್ಯ. ಅವನ ದೇಹಕ್ಕೆ ಅಪ್ಪ ಬದಲಾವಣೆ ಅವನ ಅವಲಂಬಿಸಿಗೊಂಡಿದ್ದು. ಸಾವಿನ ಸಮಯಲ್ಲಿ ಅವ° ಸೃಷ್ಟಿಸಿಪ್ಪ ಪ್ರಜ್ಞೆ ಅವನ ಮುಂದಾಣ ಬಗೆಯ ದೇಹಕ್ಕೆ ಕೊಂಡೋವುತ್ತು. ಅವ° ತನ್ನ ಪ್ರಜ್ಞೆಯ ಪುಚ್ಚೆ ಅಥವಾ ನಾಯಿಯ ಪ್ರಜ್ಞೆಯ ಹಾಂಗೆ ಮಾಡಿರೆ ಅವ° ಮುಂದೆ ನಾಯಿ ಪುಚ್ಹೆ ದೇಹವ ಪಡೆತ್ತ°. ಅವ° ತನ್ನ ಮನಸ್ಸಿನ ದೈವೀಗುಣಲ್ಲಿ ಕೇಂದ್ರೀಕರಿಸಿರೆ ಮುಂದೆ ಅವ ದೇವತೆಯ ರೂಪವ ತಾಳುತ್ತ°. ಅವ° ಕೃಷ್ಣಪ್ರಜ್ಞೆಲಿ ಇದ್ದರೆ ಅವ ಭಗವಂತನ ಲೋಕಕ್ಕೆ ವರ್ಗ ಆವ್ತ°. ಭಗವಂತನ ಸಂಗಾತಿಯಾಗಿ ಸೇರುತ್ತ°. ಈ ದೇಹ ನಾಶ ಆದಪ್ಪಗ ಎಲ್ಲವೂ ಮುಗುದತ್ತು ಹೇಳ್ವದು ಸುಳ್ಳು. ಮುಗುದ್ದದು ಸ್ಥೂಲ ದೇಹ ಮಾಂತ್ರ. ಸೂಕ್ಷ್ಮ ದೇಹ ಸ್ಥೂಲ ದೇಹಂದ ಬಿಟ್ಟಿಕ್ಕಿ ಹೆರ ಬತ್ತು. ಅಷ್ಟೇ. ವ್ಯಕ್ತಿಗತ ಬದ್ಧಾತ್ಮ ದೇಹಂದ ದೇಹಕ್ಕೆ ರವಾನೆ ಆಗಿಯೊಂಡಿರುತ್ತ°. ಅವನ ಈಗಾಣ ಚಟುವಟಿಕೆಗೊ ಅವನ ಮುಂದಾಣ ದೇಹಕ್ಕೆ ಹಿನ್ನಲೆಯಾಗಿರುತ್ತು. ಒಟ್ಟಿಲ್ಲಿ ಕರ್ಮಕ್ಕನುಗುಣವಾಗಿ ಜೀವಿಗೆ ಬೇರೆ ಬೇರೆ ಶರೀರ ದೊರಕ್ಕುತ್ತದು. ಕಾಲ ಕಳುದಪ್ಪಗ ಅವ ಆ ದೇಹವ ತ್ಯಜಿಸುತ್ತ°. ಮುಂದಾಣ ದೇಹದತ್ತ ಸೂಕ್ಷ್ಮ ಶರೀರ ಕೊಂಡೋವುತ್ತು. ಹೇಳಿರೆ ಸೂಕ್ಷ್ಮದೇಹ ಮುಂದೆ ಇನ್ನೊಂದು ದೇಹವ ಪಡೆತ್ತು. ದೇಹಂದ ದೇಹಕ್ಕೆ ಸಾಗಿ ದೇಹಲ್ಲಿಪ್ಪಗ ಹೋರಾಡುತ್ತದಕ್ಕೆ ಇಲ್ಲಿ ‘ಕರ್ಷತಿ’ – ಉಳಿವಿಂಗೆ ಹೋರಾಟ ಹೇಳಿ ಹೇಳಿದ್ದದು.

ಇನ್ನು ಇಲ್ಲಿ “ಮಮೈವಾಂಶಃ” – ಭಗವಂತನ ಸಣ್ಣ ಭಾಗವಾಗಿಪ್ಪ ವಿಭಿನ್ನಾಂಶ ಹೇಳ್ವದೂ ತುಂಬ ಅರ್ಥವತ್ತಾದ್ದು. ಭಗವಂತನ ಸಣ್ಣ ಭಾಗವು ಏವುದಾರು ಐಹಿಕ ಭಾಗದ ಹಾಂಗಲ್ಲ. ಆತ್ಮವ ತುಂಡುಮಾಡ್ಳೆ ಎಡಿಯ. ಈ ಭಾಗವ ಭೌತಿಕವಾಗಿ ರೂಪಿಸದ್ದನಿಲ್ಲೆ. ಅದು ತುಂಡು ತುಂಡಾಗಿ ಮಾಡಿ ಮತ್ತೆ ಜೋಡುಸುವಂಥಾದ್ದೂ ಅಲ್ಲ. ಅದಕ್ಕಾಗಿ ಇಲ್ಲಿ ‘ಸನಾತನಃ’ – ಶಾಶ್ವತ ಹೇಳ್ವ ಪದ ಬಳಕೆಯಾಯ್ದು. ಭಗವಂತನ ಈ ವಿಭಿನ್ನಾಂಶ ಸಣ್ಣ ಭಾಗವೂ ಶಾಶ್ವತ. ಪ್ರತಿಯೊಂದು ಪ್ರತ್ಯೇಕ ದೇಹಲ್ಲಿಯೂ ಭಗವಂತನ ಸಣ್ಣ ಭಾಗ ಇದ್ದು (‘ದೇಹಿನೋsಸ್ಮಿನ್ ಯಥಾದೇಹೇ’ – ಭ.ಗೀ ಎರಡ್ನೇ ಅಧ್ಯಾಯಲ್ಲಿ ಹೇಳಿದ್ದು). ಆ ಸಣ್ಣ ಭಾಗ ದೇಹದ ತೊಡಕಿಂದ ಬಿಡುಗಡೆಯಾದಪ್ಪಗ ಆಧ್ಯಾತ್ಮಿಕ ಗಗನಲ್ಲಿ, ಆಧ್ಯಾತ್ಮಿಕ ಲೋಕಲ್ಲಿ ತನ್ನ ಮೂಲ ಆಧ್ಯಾತ್ಮಿಕ ದೇಹವ ಮತ್ತೆ ಪಡೆತ್ತು. ಅದು ಭಗವಂತನ ಸಹವಾಸವ ಅನುಭವುಸುತ್ತು. ಚಿನ್ನದ ವಿಭಿನ್ನಾಂಶಂಗೊ ಕೂಡ ಚಿನ್ನವೇ ಆಗಿಪ್ಪಂತೆ, ಭಗವಂತನ ಸಣ್ಣ ಭಾಗವು ವಿಭಿನ್ನಾಂಶವಾದ್ದರಿಂದ, ಜೀವಿ ಗುಣಲ್ಲಿ ಭಗವಂತನೊಟ್ಟಿಂಗೆ ಒಂದು ಹೇಳ್ವದು ಇಲ್ಲಿ ತಾತ್ಪರ್ಯ.

ಹೀಂಗೆ ಈ ದೇಹಲ್ಲಿ ಅಳಿವಿಲ್ಲದ್ದ ಜೀವ ಎನ್ನದೇ ಒಂದು ತುಣುಕು ಹೇಳಿ ಹೇಳಿದ್ದ° ಭಗವಂತ° ಇಲ್ಲಿ. ಅವ°  ಶರೀರಲ್ಲಿಪ್ಪ ಐದು ಜ್ಞಾನೇಂದ್ರಿಯಂಗಳ ಮತ್ತೆ ಆರನೇಯ ಮನಸ್ಸಿನ ಜೊತೆಲಿ ವಿಷಯಂಗಳತ್ತ ಹರುದುಬೀಳುತ್ತ°. ಜೀವ ಈ ಶರೀರವ ಹೊಕ್ಕುವಾಗ ಮತ್ತೆ ಬಿಟ್ಟು ಹೋಪಗ ಸರ್ವಶಕ್ತನಾದ ಭಗವಂತನೇ ಈ ಇಂದ್ರಿಯಂಗಳ ನಿಯಂತ್ರಿಸಿಗೊಂಡು ಒಟ್ಟಿಗೆ ಬತ್ತ° – ಗಾಳಿ ಹೂವಿನ ಕಂಪಿನ ಬೀರುತ್ತ ಹಾಂಗೆ.

ಇನ್ನು ಈ ಶ್ಲೋಕದ ತಾತ್ಪರ್ಯವ ಬನ್ನಂಜೆಯವ ವ್ಯಾಖ್ಯಾನದ ದೃಷ್ಟಿಕೋನಂದಲೂ ನೋಡೆಕ್ಕಾಗಿದ್ದು. ಎಂತಕೆ ಹೇಳಿರೆ ಇಲ್ಲಿ ಬರೇ ಶ್ಲೋಕಾರ್ಥ ಮೇಲ್ಮೈಗೆ ಅಸ್ಪಷ್ಟವಾಗಿ ಅರ್ಥವ ಕೊಡುತ್ತು. ಮೇಲ್ನೋಟಕ್ಕೆ ಭಗವಂತ° ಹೇಳಿದ ‘ಮಮೈವಾಂಶಃ’ – ಎಲ್ಲ ಜೀವರೂ ಎನ್ನದೇ ಅಂಶ ಹೇಳೋದು ವಿಚಿತ್ರವಾಗಿ ಕಾಣುತ್ತು. ರಜಾ ಆಳವಾಗಿ ಅರ್ಥೈಸಿರೆ, ಇಲ್ಲಿ ‘ಅಂಶ’ ಹೇಳುವಲ್ಲಿ ಎರಡು ಮುಖಂಗೊ ಇದ್ದು. ಒಂದು ಸ್ವರೂಪಭೂತ ಅಂಶ ಇನ್ನೊಂದು ಭಿನ್ನಾಂಶ. ಭಗವಂತ° ಜ್ಞಾನ ಸ್ವರೂಪ°, ಈ ಜೀವವೂ ಕೂಡ ಜ್ಞಾನ ಸ್ವರೂಪ. ಭಗವಂತ° ಮಹಾ ಬೆಣಚ್ಚಿಯಾದರೆ, ಈ ಜೀವ ಆ ಬೆಣಚ್ಚಿಯ ಒಂದು ಕಿಡಿ. ಭಗವಂತ° ಬಿಂಬ ಆದರೆ ಜೀವಿ ಅವನ ಪ್ರತಿಬಿಂಬ. ಇದು ಸನಾತನ – ಅನಾದಿ ಅನಂತವಾಗಿಪ್ಪಂತಾದ್ದು. ಜೀವ ಭಗವಂತನ ಪ್ರತಿಬಿಂಬ ಹೇಳಿರೆ ಅದು ಭಗವಂತನ ಭಿನ್ನಾಂಶ. ಈ ಜೀವದೊಳದಿಕೆ ‘ಜೀವನಾಗಿ’ ಧಾರಣೆಮಾಡಿಗೊಂಡು ಉಸುರಾಡುವ ಬಿಂಬರೂಪಿ ಭಗವಂತ°.  ಅದು ಭಗವಂತನ ಸ್ವರೂಪಾಂಶ. ಈ ರೀತಿ ಜೀವ ಹೆರಾಣ ಪಂಚಭೂತಂಗಳ ಅನುಭವುಸುವ ಪಂಚೇಂದ್ರಿಯ ಮತ್ತೆ ಆ ಅನುಭವವ ಒಳಾಣ ಜೀವಕ್ಕೆ ಮುಟ್ಟುಸುವ ಆರನೇ ಮನಸ್ಸಿನೊಟ್ಟಿಂಗೆ ಬಿಂಬರೂಪ ಭಗವಂತನ ಧಾರಣೆಲಿ, ಅಬ್ಬೆಯ ಗರ್ಭಲ್ಲಿ ರೂಪುಗೊಂಡುಗೊಂಡಿಪ್ಪ ಸ್ಥೂಲ ಶರೀರವ ಪ್ರವೇಶ ಮಾಡುತ್ತ° (ಭಗವಂತ° ಪ್ರವೇಶ ಮಾಡುಸುತ್ತ°). ಹೆಂಗೆ ಪ್ರವೇಶ ಮಾಡಿದ ಜೀವಕ್ಕೆ ಬಿಂಬರೂಪ ಭಗವಂತ° ಸರ್ವೇಂದ್ರಿಯಂಗಳಲ್ಲಿದ್ದು, ಇಂದ್ರಿಯಾಭಿಮಾನಿ ದೇವತೆಗಳ ಮುಖೇನ ಅನುಭವ ಕೊಡುತ್ತ°. ಜೀವ ಭಗವಂತನ ಅನುಗ್ರಹಂದ ವಿಷಯಂಗಳ ಅನುಭವುಸಲೆ ಆರಂಭಿಸುತ್ತ°.

ಒಬ್ಬ ಜೀವಂಗೆ ಒಟ್ಟು ಮೂರು ಶರೀರಂಗೊ. ಒಂದು ಕಣ್ಣಿಂಗೆ ಕಾಂಬ ಸ್ಥೂಲ ಶರೀರ, ಅದರೊಳ ಸೂಕ್ಷ್ಮ ಶರೀರ (ಅನಿರುದ್ಧ ಶರೀರ), ಮತ್ತೆ ಅದರೊಳ ಲಿಂಗ ಶರೀರ. ಈ ಸ್ಥೂಲ ಶರೀರವ ಪ್ರವೇಶಿಸುವ ಸೂಕ್ಷ್ಮಶರೀರಿ ಜೀವಕ್ಕೆ ಎಲ್ಲ ಇಂದ್ರಿಯಂಗೊ ಇರುತ್ತು. ಹಾಂಗಾಗಿ ಈ ಜೀವ ತನ್ನ ಪೂರ್ವಜನ್ಮದ ನೆನಪಿನ ಅಂತರಂಗಲ್ಲಿ ಮಡಿಕ್ಕೊಂಡು ಗರ್ಭವ ಪ್ರವೇಶಿಸುತ್ತ°. ಪೂರ್ವ ಜನ್ಮದ ಅಧ್ಯಾತ್ಮ ಸಾಧನೆ ಈ ಸೂಕ್ಷ್ಮಜೀವದ ಮನಸ್ಸಿಲ್ಲಿ ಪೂರ್ಣವಾಗಿ ಉಳಿದಿರುತ್ತು. ಹಾಂಗಾಗಿ ‘ಅಧ್ಯಾತ್ಮ ಸಾಧನೆ’ ಎಂದೂ ವ್ಯರ್ಥ ಆವುತ್ತಿಲ್ಲೆ. ಅದು ಸದಾ ನಮ್ಮೊಂದಿಂಗೆ ಸಾವಿಲ್ಲಿಯೂ ಒಟ್ಟಿಂಗೆ ಬತ್ತು. ಸಾವು ಏವತ್ತೂ ಸ್ಥೂಲ ಶರೀರಕ್ಕೇ ಹೊರತು ಸೂಕ್ಷ್ಮ ಶರೀರಕ್ಕೆ ಅಲ್ಲ. ಸಂಮೋಹನ ಒರಕ್ಕಿಲ್ಲಿ ಜೀವದ ಪೂರ್ವಜನ್ಮದ ವಿಷಯವ ತಿಳಿವಲೆ ಸಾಧ್ಯ ಅಪ್ಪದು ಈ ಕಾರಣಂದ ಆವ್ತು. ನವಗೆ ಕೆಲವೊಂದರಿ ಒಬ್ಬನ ನೋಡಿಯಪ್ಪಗ ಹಿಂದೆ ತುಂಬಾ ಪರಿಚಿತನಾಗಿ ನಮ್ಮೊಟ್ಟಿಂಗೆ ಇದ್ದವನ ಹಾಂಗೆ ಕಂಡರೆ ಅದಕ್ಕೆ ಪೂರ್ವ ಜನ್ಮದ ನೆಂಪೂ ಒಂದು ಕಾರಣ. ಈ ನೆಂಪು ಒಳಾಣ ಸೂಕ್ಷ್ಮ ಶರೀರಲ್ಲಿ ಮಾಂತ್ರ ಜಾಗೃತವಾಗಿರುತ್ತು. ಆದರೆ ಸ್ಥೂಲ ಇಂದ್ರಿಯಂಗಳಲ್ಲಿ ಇದು ಜಾಗೃತಾವಾಗಿರುತ್ತಿಲ್ಲೆ. ಹೀಂಗೆ ಜೀವ ಸ್ಥೂಲ ಶರೀರವ ಪ್ರವೇಶ ಮಾಡುವಾಗ ಇಂದ್ರಿಯಂಗಳ ಕರ್ಷಣೆ ಮಾಡಿಗೊಂಡು ಬತ್ತ° ಮತ್ತೆ ಹೋಪಗ ಕರ್ಷಣೆ ಮಾಡಿಗೊಂಡು ಹೋವ್ತ°. ಈ ಕ್ರಿಯೆಲಿ ಜೀವ ಸ್ವತಂತ್ರನಲ್ಲ. ಇದರ ಮಾಡುಸುವವ° ‘ಈಶ್ವರ°’. ಇಲ್ಲಿ ಈಶ್ವರ° ಹೇದರೆ, ಸರ್ವ ಸಮರ್ಥ ಭಗವಂತ° ಹೇದರ್ಥ. ‘ಈಶ್ವರಃ ಈಶನಶೀಲೋ ನಾರಾಯಣಃ’ – ಇಲ್ಲಿ ‘ಈಶನಶೀಲಃ’ ಹೇಳಿರೆ ಸರ್ವಸಮರ್ಥ° ಹೇದರ್ಥ.

ಇನ್ನು ಈ ಶ್ಲೋಕಲ್ಲಿ ಹೇಳಿಪ್ಪ ‘ಅವಾಪ್ನೋತಿ’ – ಇಲ್ಲಿ ‘ಅವ’ ಹೇಳ್ವದು ಉಪಸರ್ಗ. ಹದಿನೈದು ಬೇಲಿಗಳೊಟ್ಟಿಂಗೆ ಜೀವ ದೇಹವ ಪ್ರವೇಶಿಸುವದು ಜೀವದ ಬಂಧನ. ಇದು ಒಂದು ರೀತಿಯ ‘ಅಧಃಪಾತ’. ಆದರೆ ಇದು ಊರ್ಧ್ವಗಮನಕ್ಕೆ ಪೂರ್ವ ಜೀವದ ಅಧಃಪಾತ. ಎಂತಕೆ ಹೇಳಿರೆ ಜೀವ ಮೋಕ್ಷ ಸೇರ್ಲೆ ಈ ಸಾಧನಾ ಶರೀರ ಬೇಕೇಬೇಕು. ಇದೇ ರೀತಿ ಜೀವ ದೇಹವ ಬಿಟ್ಟು ಹೊರ ಹೋಪದಕ್ಕೆ ‘ಉತ್ಥಾಮತಿ’ ಹೇದು ಹೇಳಿದ್ದವು. ಸಾವು ಹೇಳಿರೆ ಜೀವವ ಭಗವಂತ° ಸ್ಥೂಲ ಶರೀರಂದ ಅತ್ಲಾಗಿ ಕರ್ಕೊಂಡು ಹೋಪದು. ಇದು ಅಮಂಗಳ ಅಲ್ಲ. ಹಾಂಗಾಗಿ ಇಲಿ ‘ಉತ್’ ಹೇಳ್ವ ಉಪಸರ್ಗ ಬಳಸಿದ್ದು. ಇನ್ನು ಭಗವಂತ ಜೀವವ ಕರಕ್ಕೊಂಡು ಬಪ್ಪದರ ಇಲ್ಲಿ ‘ಸಂಯಾತಿ’ ಹೇಳಿ ಹೇಳಿದ್ದದು.  ಸಂ ಹೇಳಿರೆ ಸ್ವಯಂ, ಸ್ವೇಚ್ಛಾಯ, ಸ್ವಾತಂತ್ರೇಣ. ಎಲ್ಲವೂ ಭಗವಂತನ ಅಧೀನ. ಜೀವ ಸ್ವತಂತ್ರ ಅಲ್ಲ . ಕೇವಲ ಭಗವಂತ° ಸ್ವತಂತ್ರ ಹೇಳ್ವದರ ಇದು ಸೂಚಿಸುತ್ತು. ಜೀವಕ್ಕೆ ಹುಟ್ಟುವದಾಗಲೀ ಸಾಯುವದಾಗಲೀ ಸ್ವಾತಂತ್ರ್ಯ ಇಲ್ಲೆ. ಎಲ್ಲವೂ ಭಗವಂತನ ನಿಯಮದ ಪ್ರಕಾರ ನಡವದು. ಅರಳಿಗೊಂಡಿಪ್ಪ ಹೂವಿನ ಸುಗಂಧ ಹೇಂಗೆ ನಮ್ಮ ಮೂಗಿನ ಬಂದು ಪ್ರವೇಶಿಸುತ್ತೋ ಹಾಂಗೇ ಈ ಜೀವದ ಗತಿ. ಅದು ಕಾಣುತ್ತಿಲ್ಲೆ. ಹೂವಿನ ಸುಗಂಧದ ಸೂಕ್ಷ್ಮಾಣುಗೊ ನಮ್ಮ ಮೂಗಿನ ಪ್ರವೇಶ ಮಾಡುತ್ತದು ನವಗೆ ಗೊಂತಪ್ಪದು ಕೇವಲ ಸುವಾಸನೆಂದ ಹೊರತು ಭೌತಿಕವಾಗಿ ಅಲ್ಲ. ಜೀವದ ಈ ಎಲ್ಲ ಗತಿಗೊ ಕೂಡ ಹೀಂಗೆಯೇ. ಅದು ಕಾಣುತ್ತಿಲ್ಲೆ.

ಶ್ಲೋಕ

ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ ।
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ॥೦೯॥

ಪದವಿಭಾಗ

ಶ್ರೋತ್ರಮ್ ಚಕ್ಷುಃ ಸ್ಪರ್ಶನಮ್ ಚ ರಸನಮ್ ಘ್ರಾಣಮ್ ಏವ ಚ । ಅಧಿಷ್ಠಾಯ ಮನಃ ಚ ಅಯಮ್ ವಿಷಯಾನ್ ಉಪಸೇವತೇ ॥

ಅನ್ವಯ

ಅಯಂ (ಜೀವಃ) ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಂ ಮನಃ ಚ ಏವ ಅಧಿಷ್ಠಾಯ ವಿಷಯಾನ್ ಉಪಸೇವತೇ ।

ಪ್ರತಿಪದಾರ್ಥ

ಅಯಮ್ ಜೀವಃ – ಈ ಜೀವಿಯು, ಶ್ರೋತ್ರಮ್ – ಕೆಮಿ, ಚಕ್ಷುಃ – ಕಣ್ಣು, ಸ್ಪರ್ಶನಮ್ – ಸ್ಪರ್ಶವ, ಚ – ಕೂಡ, ರಸನಮ್ – ನಾಲಗೆ, ಘ್ರಾಣಮ್ – ಘ್ರಾಣಶಕ್ತಿಯ, ಮನಃ – ಮನಸ್ಸು, ಚ – ಕೂಡ, ಏವ – ಖಂಡಿತವಾಗಿಯೂ, ಅಧಿಷ್ಠಾಯ – ಆಶ್ರಯಿಸಿ, ವಿಷಯಾನ್ – ಇಂದ್ರಿಯವಿಷಯಂಗಳ, ಉಪಸೇವತೇ – ಅನುಭೋಗುಸುತ್ತ°.

ಅನ್ವಯಾರ್ಥ

ಜೀವಿಯು ಕೆಮಿ, ಕಣ್ಣು, ಸ್ಪರ್ಶೇಂದ್ರಿಯ, ನಾಲಗೆ, ಘ್ರಾಣಶಕ್ತಿಯ, ಮನಸ್ಸಿನ ಸುತ್ತ ಜೋಡಿಸಿಗೊಂಡು ಇಂದ್ರಿಯವಿಷಯಂಗಳ ಅನುಭೋಗುಸುತ್ತ°.

ತಾತ್ಪರ್ಯ / ವಿವರಣೆ

ಭಗವಂತ° ನಮ್ಮ ಪ್ರತಿಯೊಂದು ಇಂದ್ರಿಯಂಗಳಲ್ಲಿ ನಿಯಾಮಕನಗಿ ಆಯಾ ರೂಪಲ್ಲಿ ನಿಂದು ವಿಷಯಂಗಳ ದುಃಖದ ಲೇಪವಿಲ್ಲದ್ದೆ ಗ್ರಹಿಸುತ್ತ° ಮತ್ತು ನವಗೆ ವಿಷಯದ ಅನುಭವವ ಕೊಡುತ್ತ°. ಇಲ್ಲಿ ಭಗವಂತ° ನಿಂದುಗೊಂಡಿಪ್ಪದರಿಂದ ಇಲ್ಲಿ ‘ಉಪ-ಸೇವತೇ’ ಮತ್ತು ‘ಅಧಿಷ್ಠಾಯ’ ಹೇಳ್ವ ಎರಡು ವಿಶೇಷವ ಬಳಸಿದ್ದ ಹೇಳಿ ಬನ್ನಂಜೆಯವು ವರ್ಣಿಸುತ್ತವು. ಉಪ ಹೇಳಿರೆ ಉಪರಿ = ಎತ್ತರ. ನಾವು ಸುಖ-ದುಃಖಲ್ಲಿ ಮುಳುಗಿ ವಿಷಯಂಗಳ ಭೋಗಿಸಿರೆ ಭಗವಂತ° ಅವೆಲ್ಲವ ಮೀರು ನಿಂದು ದುಃಖದ ಲೇಪ ಇಲ್ಲದ್ದೆ ಎಲ್ಲವನ್ನೂ ಅನುಭವುಸುತ್ತ°. ಭಗವಂತ ಆಯಾ ಇಂದ್ರಿಯಂಗಳಲಿ ವಿಶೇಷ ರೂಪಲ್ಲಿ ಸನ್ನಿಹಿತನಾಗಿ ನಿಯಮಿಸುವದರಿಂದ ಇಲ್ಲಿ ‘ಅಧಿಷ್ಠಾಯ’ = ಆಶ್ರಯಿಸಿ ಹೇಳ್ವ ವಿಶೇಷ ಪದ ಬಳಕೆ. ಇದು ಭಗವಂತನ ವಿಶೇಷ ಗುಣವ ಬಿಂಬಿಸುತ್ತು.

ಶ್ಲೋಕ

ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಮ್ ।
ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ ॥೧೦॥

ಪದವಿಭಾಗ

ಉತ್ಕ್ರಾಮಂತಮ್ ಸ್ಥಿತಮ್ ವಾ ಅಪಿ ಭುಂಜಾನಮ್ ವಾ ಗುಣ-ಅನ್ವಿತಮ್ । ವಿಮೂಢಾಃ ನ ಅನುಪಶ್ಯಂತಿ ಪಶ್ಯಂತಿ ಜ್ಞಾನ-ಚಕ್ಷುಷಃ ॥

ಅನ್ವಯ

ಉತ್ಕ್ರಾಮಂತಮ್ ಸ್ಥಿತಂ ವಾ, ಭುಂಜಾನಂ ಗುಣ-ಅನ್ವಿತಂ ವಾ ಅಪಿ ವಿಮೂಢಾಃ ನ ಅನುಪಶ್ಯಂತಿ, ಜ್ಞಾನ-ಚಕ್ಷುಷಃ ಪಶ್ಯಂತಿ ।

ಪ್ರತಿಪದಾರ್ಥ

ಉತ್ಕ್ರಾಮಂತಮ್ – ದೇಹ ಬಿಡುವವನ, ಸ್ಥಿತಮ್ – ದೇಹಲ್ಲಿ ನೆಲೆಸಿಪ್ಪವನ, ವಾ – ಅಥವಾ, ಭುಂಜಾನಮ್ – ಅನುಭೋಗಿಸುತ್ತಿಪ್ಪವನ, ಗುಣ-ಅನಿತಮ್ – ಭೌತಿಕ ಪ್ರಕೃತಿ ಗುಣಂಗಳ ಪ್ರಭಾವಲ್ಲಿಪ್ಪವನ, ವಾ – ಅಥವಾ, ಅಪಿ – ಕೂಡ, ವಿಮೂಢಾಃ – ಮೂರ್ಖವ್ಯಕ್ತಿಗೊ, ನ ಅನುಪಶ್ಯಂತಿ – ಎಂದೂ ಕಾಣವು, ಜ್ಞಾನ-ಚಕ್ಷುಷಃ – ಜ್ಞಾನದೃಷ್ಟಿಯ ಹೊಂದಿದವು, ಪಶ್ಯಂತಿ – ಕಾಣುತ್ತವು.

ಅನ್ವಯಾರ್ಥ

ದೇಹ ಬಿಟ್ಟು ಹೋಪ, ದೇಹಲ್ಲಿಪ್ಪ ಅಥವಾ ಒಳಿತಿನ ಸಾರವ ಸವಿವ ಇವನ ಯಾವ ತಿಳಿಗೇಡಿಗೊಗಳೂ ತಿಳಿವಲೆ ಸಾಧ್ಯ ಇಲ್ಲೆ. ತಿಳಿಗಣ್ಣು (ಜ್ಞಾನದೃಷ್ಟಿ) ಇಪ್ಪವು ಮಾಂತ್ರ ತಿಳಿತ್ತವು.

ತಾತ್ಪರ್ಯ / ವಿವರಣೆ

ಜೀವಿಯು ಅವನ ಈಗಾಣ ದೇಹವ ಹೇಂಗೆ ಬಿಡುತ್ತ°, ಮುಂದಾಣ ಜನ್ಮಲ್ಲಿ ಅವ° ಯಾವ ದೇಹ ರೂಪವ ಪಡೆತ್ತ°,  ಅವ ಈಗಾಣ ಸ್ಥಿತಿಲಿ ಹೇಂಗೆ ಇದ್ದ° ಇತ್ಯಾದಿಗಳ ಜ್ಞಾನ ಇಲ್ಲದ್ದ ವ್ಯಕ್ತಿಗಳಿಂದ ತಿಳ್ಕೊಂಬಲೆ ಸಾಧ್ಯ ಇಲ್ಲೆ. ‘ಜ್ಞಾನಚಕ್ಷುಷಃ’ – ದಿವ್ಯದೃಷ್ಟಿ / ಜ್ಞಾನದೃಷ್ಟಿ ಹೊಂದಿದವರಿಂದ ಮಾಂತ್ರ ಇದು ಸಾಧ್ಯ ಆವ್ತು.

ಇನ್ನು ಇಲ್ಲಿ ‘ಗುಣಾನ್ವಿತಮ್’ ಹೇಳ್ವ ಪದ, ಭಗವಂತ° ಇಲ್ಲಿ ಹೇಳ್ತ ಇಪ್ಪದು ಭಗವಂತನ ಹೇಳ್ವದರ ಸ್ಪಷ್ಟವಾಗಿ ಸೂಚಿಸುತ್ತು. ಅರ್ಥಾತ್ ‘ಜೀವಿ ಒಟ್ಟಿಂಗೇ ಭಗವಂತ° ಇರುತ್ತ°’ ಹೇದು ಹೇಳ್ವದರ ಆವ್ತು ಭಗವಂತ° ಇಲ್ಲಿ ವಿವರುಸುತ್ತಾ ಇಪ್ಪದು. ಹೇಳಿರೆ ಜೀವಿಯೊಟ್ಟಿಂಗೇ ಇದ್ದುಗೊಂಡು ಜೀವಿಯ ಭಗವಂತ° ಹೇಂಗೆ ಕುಣುಶುತ್ತ° ಕೊಂಡೋವ್ತ° ಎಂಬೀ ಅಂಶಂಗೊ. ಜೀವವ ದೇಹಕ್ಕೆ ತಪ್ಪ, ಎಚ್ಚರ ಕನಸು ಒರಕ್ಕು ಹೇಳ್ವ ಮೂರು ಅವಸ್ಥೆಗಳಲ್ಲಿ ಜೀವಕ್ಕೆ ವಿಷಯ ಭೋಗವ ಕೊಡುವ ಭಗವಂತ° – ತಾನು ಶುಭ ಭೋಗವ ಉಂಬುವವ°. ದೇಹಂದ ಹೆರ ಹೋಪಗ, ದೇಹಲ್ಲಿಪ್ಪಗ ಎಲ್ಲವನ್ನೂ ಮಾಡುಸುವವ° ಭಗವಂತ°. ಅವ ನಮ್ಮೊಳವೇ ಇದ್ದರೂ ಕೂಡ ವಿಮೂಢರಿಂಗೆ ಅದು ಗೊಂತಾವುತ್ತಿಲ್ಲೆ. ಜ್ಞಾನದ ಕಣ್ಣು ತೆಗದವಕ್ಕೆ ಮಾಂತ್ರ ಅದರ ತಿಳಿವಲೆ ಎಡಿಗು. ಇಲ್ಲಿ ಮೂಢರು ಹೇಳಿರೆ ಸತ್ಯವ ತಪ್ಪಾಗಿ ತೆಕ್ಕೊಂಬವು, ಯಥಾರ್ಥಜ್ಞಾನ ಮರೆ ಆಗಿ ವಿಪರೀತ ಜ್ಞಾನಲ್ಲೇ ಬದುಕ್ಕುವವು.  ಜ್ಞಾನಚಕ್ಷುಷಃ ಹೇಳಿರೆ ಜ್ಞಾನಪೂರ್ವಕ ವಿಷಯ ಯಥಾರ್ಥ ಗ್ರಾಹ್ಯಮಾಡಿಗೊಂಬವು. ‘ವಿ-ಮೂಢ’ – ಹೇಳಿರೆ ಎಂದೂ ತಮ್ಮ ತಪ್ಪಿನ ತಿಳಿಯದ್ದೆ ತಪ್ಪನ್ನೇ ಸರಿ ಹೇದು ಸದಾ ವಿಪರೀತ ಜ್ಞಾನಲ್ಲಿ ಬದುಕ್ಕುವವು. ಇವಕ್ಕೆ ಭಗವಂತನ ತಿಳಿವಲೆ ಎಂದಿಂಗೂ ಸಾಧ್ಯ ಇಲ್ಲೆ. ಭಗವಂತನ ಕಾಂಬಲೆ ಕ್ಷಮತೆ ಇಪ್ಪವು ಜ್ಞಾನಚಕ್ಷುಷರು. ಹೇಳಿರೆ, ಶಾಸ್ತ್ರವ ಓದಿ ಅದರಿಂದ ಅರಿವಿನ ಒಳಗಣ್ಣು ತೆರದವು. ಇವಕ್ಕೆ ಭಗವಂತನ ತಿಳಿವಲೆ ಎಡಿಗು ಮತ್ತೆ ತಮ್ಮ ಸ್ವರೂಪಭೂತವಾದ ಕಣ್ಣಿಂದ ಭಗವಂತನ ಕಾಂಬಲೆ ಸಮರ್ಥರು. ಅರ್ಥಾತ್, ಜೀವಿಯೊಳವೇ ಜೀವವಾಗಿಪ್ಪ ಭಗವಂತನ ಕಂಡುಗೊಂಬಲೆ ವಿಮೂಢರಿಂಗೆ ಅಸಾಧ್ಯ. ಭಗವಂತನ ಕಾಣಕ್ಕಾರೆ ಜ್ಞಾನಚಕ್ಷು ಬೇಕು, ಜ್ಞಾನಚಕ್ಷುವಿಂದ ಭಗವಂತನ ಕಾಂಬಲೆ ಪ್ರಯತ್ನುಸೆಕು.

 

… ಮುಂದೆ ಎಂತರ?  …. ಬಪ್ಪ ವಾರ ನೋಡುವೊ°

 ಮುಂದುವರಿತ್ತು.

ಮೇಗಾಣ ಶ್ಲೋಕಂಗಳ ಕೇಳ್ಳೆ-

SRIMADBHAGAVADGEETHA – CHAPTER 15 – SHLOKAS 01 – 10

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

2 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 15 – ಶ್ಲೋಕಂಗೊ 01 – 10

  1. ಓದಿದೆ ಓದಿದೆ.. ಓದಿಗೊಂಡು ಹೋದೆ.. ಸಮುದ್ರದೊಳ ಮುಳುಗಿದ ಹಾಂಗಾತು. ಸಮುದ್ರ ಸ್ನಾನ ಮಾಡಿದೆ, ಎಲ್ಲವೂ ಸಿಕ್ಕಿತ್ತು ಹೇಳ್ತಿಲ್ಲೆ.. ಪುನಃ ಓದೆಕ್ಕು.

    ಒಳ್ಳೆ ವಿವರಣೆ. ಕಾಯ್ತಾ ಇರ್ತೆ ಮುಂದಾಣದ್ದಕ್ಕೆ.

    1. ಹರೇ ರಾಮ ಚೆನ್ನೈಬಾವ;ಅಶ್ವತ್ಥದ ವಿವರಣೆ ಬಾರೀ ಲಾಯಕಕೆ ಬಯಿ೦ದು.ಬನ್ನ೦ಜೆಯವರ ಭಾಷ್ಯವ ಹನಿ ಹನಿ[H0ney – H0ney]ಯಾಗಿ ಹವಿಗನ್ನಡಲ್ಲಿ ಸರಿಯಾಗಿ ಪ್ರತಿಬಿ೦ಬುಸುವ ನಿ೦ಗೊಗೆ ನಮೋನ್ನಮಃ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×