Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 01 – 09

ಬರದೋರು :   ಚೆನ್ನೈ ಬಾವ°    on   28/02/2013    4 ಒಪ್ಪಂಗೊ

ಚೆನ್ನೈ ಬಾವ°

ಇಲ್ಲಿಯವರೇಂಗೆ ಭಗವಂತ° ಅರ್ಜುನಂಗೆ ಸತ್ಯ, ಆತ್ಮ, ಪರಮಾತ್ಮ, ಕ್ಷೇತ್ರ-ಕ್ಷೇತ್ರಜ್ಞ°, ಜ್ಞಾನ, ಇವುಗಳ ಸ್ವರೂಪ, ಮತ್ತೆ  ಸಾಧಕನ ಸ್ವಭಾವ ಮತ್ತೆ ಗುಣಂಗಳ ವಿವರವಾಗಿ ವಿವರಿಸಿಗೊಂಡು ಬಂದ°. ಇಲ್ಲಿಯವರೇಂಗೆ ಭಗವಂತನ ಸ್ವರೂಪದ ಮಹಿಮೆಯ ಕುರಿತಾಗಿಯೇ ಹೆಚ್ಚಾಗಿ ವರ್ಣಿಸಲ್ಪಟ್ಟಿದು. ಹನ್ನೆರಡನೇ ಅಧ್ಯಾಯಲ್ಲಿ ಭಗವಂತನ ನೇರ ಉಪಾಸನೆ ಮೋಕ್ಷದ ಸುಲಭ ಮಾರ್ಗ,  ಶ್ರೀ ತತ್ವದ ಉಪಾಸನೆ ಬಹು ಕಷ್ಟ, ಇದು ನೇರ ದಾರಿಯ ಬಿಟ್ಟು ಬಳಸುದಾರಿಲಿ ಭಗವಂತನತ್ರೆ ಹೋವ್ತ ಮಾರ್ಗ, ಸಾಧಕ ಇದರ ಬಹು ಕಠಿಣ ಕ್ರಮಂದ ಅನುಸರುಸೆಕು ಹೇಳ್ವ ಎಚ್ಚರವನ್ನೂ ಕೊಟ್ಟಿದ°. ಹದಿಮೂರನೇ ಅಧ್ಯಾಯಲ್ಲಿ ಸ್ಥಿರ ಮತ್ತೆ ಚರ ಜೀವಿಗಳಲ್ಲಿ ಏವುದು ಹುಟ್ಟಿರೂ ಅದು ಕ್ಷೇತ್ರ(ಶ್ರೀತತ್ವ) ಮತ್ತೆ ಕ್ಷೇತ್ರಜ್ಞ°(ಭಗವಂತ°)ರ ಸಂಯೋಗಂದಲೇ ಉಂಟಾದ್ದು ಹೇಳಿ ವಿವರಿಸಿದ್ದ°. ಸಾಮಾನ್ಯವಾಗಿ ಸೃಷ್ಟಿಯ ಮಾತು ಬಪ್ಪಗ “ಭಗವಂತ° ಸೃಷ್ಟಿ ಮಾಡಿದ°” ಹೇಳ್ವ ಮಾತು ಬಪ್ಪದು. ಎಲ್ಲಿಯೂ ಲಕ್ಷ್ಮಿಯ ಶುದ್ಧಿ ನೇರ ಬತ್ತಿಲ್ಲೆ. ಅದರ ಹದಿಮೂರನೇ ಅಧ್ಯಾಯಲ್ಲಿ ಭಗವಂತ° ಸ್ಪಷ್ಟವಾಗಿಯೇ ಹೇಳಿದ್ದ° – “ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ವಿದ್ಧಿ ಭರತರ್ಷಭ “॥ (ಭ.ಗೀ.೧೩.೨೬॥) –  “ಈ ಸೃಷ್ಟಿ ಲಕ್ಷ್ಮೀನಾರಯಣರ ಸಂಯೋಗಂದ” ಹೇದು. ಈ ಕಾರಣಂದಾಗಿ, ಸೃಷ್ಟಿ ಮೂಲದ ಚಿಂತನೆಲಿ ಲಕ್ಷ್ಮೀನಾರಾಯಣರ ಒಟ್ಟಿಂಗೇ ಸ್ತುತಿ ಮಾಡ್ತದು ಶ್ರೇಷ್ಠ. ಲಕ್ಷ್ಮಿಯ ಸ್ತುತಿ ಮಾಡುವಾಗ ಒಟ್ಟಿಂಗೆ ನಾರಾಯಣ ಸ್ತುತಿಯನ್ನೂ ಮದಾಲು ಮಾಡಿಕ್ಕಿ ಲಕ್ಷ್ಮಿ ಸ್ತುತಿಯ ಮುಂದುವರ್ಸೆಕು. ಹೀಂಗೆ ಲಕ್ಷ್ಮೀನಾರಾಯಣರ ಸಂಯೋಗಂದ ಈ ಜಗತ್ತು ಸೃಷ್ಟಿಯಾತು, ಹಾಂಗಾಗಿ ನಾವೆಲ್ಲ ಅವರ ಮಕ್ಕೊ.

“ಪ್ರಕೃತಿ-ಪುರುಷರ ಸಂಯೋಗಂದ (ಸಹವಾಸಂದ) ಜಗತ್ತು ಸೃಷ್ಟಿ ಆತು”. ಈ ವರೇಂಗೆ ಭಗವಂತನ ಬಗ್ಗೆ ಸಾಕಷ್ಟು ವಿವರಣೆಯ ಕೊಟ್ಟಿದ°. ಇನ್ನು ಈ ಪ್ರಕೃತಿಯ (ಶ್ರೀತತ್ವ / ಲಕ್ಷ್ಮಿ) ಬಗ್ಗೆ ತಿಳಿಯೆಕು. ಭಗವಂತನ ಒಟ್ಟಿಂಗೆ ಸೃಷ್ಟಿ ಪ್ರಕ್ರಿಯೆಲಿ ಲಕ್ಷ್ಮಿಯ ಅನುಸಂಧಾನ ಹೇಂಗೆ,  ಈ ಪ್ರಕೃತಿಯ (ಪ್ರಕೃತಿ = ಲಕ್ಷ್ಮಿ – ಹೇಳಿರೆ ಶ್ರೀ-ಭೂ-ದುರ್ಗ) ಗುಣಂಗೊ ಎಂತರ (ಸತ್ವ ತಮ ರಜ – ಈ ತ್ರಿಗುಣಂಗೊ ಎಂತರ), ಅದು ಹೇಂಗೆ ಕೆಲಸ ಮಾಡುತ್ತು, ಅವು ಹೇಂಗೆ ಬಂಧಿಸುತ್ತು ಮತ್ತೆ ಹೇಂಗೆ ಬಿಡುಗಡೆಯ ಕೊಡುತ್ತು (ಅಮ್ಮಲ್ಲಿಪ್ಪ ರಾಜಸ, ತಾಮಸ ಅಂಶವ ತಿದ್ದಿ ಹೇಂಗೆ ಸಾತ್ವಿಕ ದಾರಿಲಿ ಸಾಧನೆಯ ಮಾಡ್ಳಕ್ಕು)  ಇತ್ಯಾದಿ ವಿಚಾರಂಗೊ ಮುಂದೆ ಇಲ್ಲಿ –

 

ಶ್ರೀಕೃಷ್ಣಪರಮಾತ್ಮನೇ ನಮಃ ॥

ಶ್ರೀಮದ್ಭಗವದ್ಗೀತಾ ॥

ಅಥ ಚತುರ್ದಶೋsಧ್ಯಾಯಃ – ಗುಣತ್ರಯವಿಭಾಗಯೋಗಃ (ಗುಣ-ತ್ರಯ-ವಿಭಾಗ-ಯೋಗಃ) – ಶ್ಲೋಕಾಃ 01 – 09

 

ಶ್ಲೋಕ

ಶ್ರೀಭಗವಾನುವಾಚ-

ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥೦೧॥ BHAGAVADGEETHA

ಪದವಿಭಾಗ

ಶ್ರೀ ಭಗವಾನ್ ಉವಾಚ-

ಪಮ್ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಮ್ ಜ್ಞಾನಮ್ ಉತ್ತಮಮ್ । ಯತ್ ಜ್ಞಾತ್ವಾ ಮುನಯಃ ಸರ್ವೇ ಪರಾಮ್ ಸಿದ್ಧಿಮ್ ಇತಃ ಗತಾಃ ॥

ಅನ್ವಯ

ಶ್ರೀ ಭಗವಾನ್ ಉವಾಚ –

ಯತ್ ಜ್ಞಾತ್ವಾ ಮುನಯಃ ಇತಃ ಪರಾಂ ಸಿದ್ಧಿಂ ಗತಾಃ, (ತತ್) ಜ್ಞಾನಾನಾಮ್ ಉತ್ತಮಂ ಪರಂ ಜ್ಞಾನಂ ಭೂಯಃ (ಅಹಂ ತೇ) ಪ್ರವಕ್ಶ್ಯಾಮಿ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವದೇವೋತ್ತಮ ಪರಮ ಪುರುಷ ಹೇಳಿದ°, ಯತ್ ಜ್ಞಾತ್ವಾ – ಏವುದರ ತಿಳುದು, ಸರ್ವೇ ಮುನಯಃ – ಎಲ್ಲ ಮುನಿಗೊ, ಇತಃ – ಇಲ್ಲಿಂದ (ಈ ಪ್ರಪಂಚಂದ), ಪರಾಮ್ ಸಿದ್ಧಿಂಮ್ – ದಿವ್ಯವಾದ ಸಿದ್ಧಿಯ, ಗತಾಃ – ಹೊಂದಿದವೋ, (ತತ್ – ಅದು), ಜ್ಞಾನಾನಾಮ್ – ಎಲ್ಲ ಜ್ಞಾನಗಳ, ಉತ್ತಮಮ್ – ಉತ್ತಮವಾದ (ಶ್ರೇಷ್ಠವಾದ), ಪರಮ್ ಜ್ಞಾನಮ್ – ಪರಮೋನ್ನತ (ದಿವ್ಯವಾದ) ಜ್ಞಾನವು, ಭೂಯಃ – ಮತ್ತೆ, (ಅಹಮ್ ತೇ – ಆನು ನಿನಗೆ), ಪ್ರವಕ್ಷ್ಯಾಮಿ – ಹೇಳುತ್ತೆ.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಭಗವಂತ° ಹೇಳಿದ° –  ಏವ ಜ್ಞಾನವ ತಿಳುದು ಎಲ್ಲ ಮುನಿಗೊ ಪರಮ ಸಿದ್ಧಿಯ ಪಡದವೋ, ಅದು ಅತ್ತ್ಯುತ್ತಮವಾದ ಜ್ಞಾನವು. ಅದರ ಮತ್ತೀಗ ನಿನಗೆ ಆನು ಹೇಳುತ್ತೆ.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷ ಭಗವಂತ° ಅರ್ಜುನಂಗೆ ಹೇಳುತ್ತ° – “ಏವ ಹಿರಿದಾದ, ದಿವ್ಯವಾದ ಜ್ಞಾನವ ಪಡದು ಈ ಮದಲಾಣ ಮುನಿಗೊ ಪರಮಪದವ ಪಡದವೋ ಅಂತಹ ಅತ್ಯುತ್ತಮವಾದ ಜ್ಞಾನವ ಇನ್ನಷ್ಟು ಮತ್ತೀಗ ನಿನಗೆ ಹೇಳುತ್ತೆ”. ಭಗವಂತ ಇಲ್ಲಿ ಹೇಳಿದ “ಭೂಯಃ ಪ್ರವಕ್ಷ್ಯಾಮಿ” – ‘ಇನ್ನೂ ಹೇಳುತ್ತೆ’ ಹೇಳ್ವ ಮಾತು ಬಹು ಮುಖ್ಯವಾದ್ದು. ಸಾಮಾನ್ಯವಾಗಿ ಶಿಷ್ಯರು ಒತ್ತಾಯ ಮಾಡಿರೂ ಗುರುಗು ಕೆಲವೊಂದು ಬಹು ರಹಸ್ಯವಾದ ವಿಚಾರಂಗಳ ಹೇಳ್ತವಿಲ್ಲೆ. ಅದರ ಶಿಷ್ಯನ ಪರೀಕ್ಷಿಸಿ ಯೋಗ್ಯ ಹೇದು ಮನಗಂಡರಷ್ಟೇ ಹೇಳ್ತದು. ಗುರುವಿಂಗೆ ಶಿಷ್ಯನ ಜ್ಞಾನ ತೃಷೆ ಕಂಡು ಹೇಳೇಕು ಹೇದು ಆಯೇಕು ಮತ್ತೆ ಅವ್ವು ಅದರ ಸಂಪೂರ್ಣ ಇಷ್ಟ ಮನಸ್ಸಿಂದ ಸಂತೋಷಂದ ಹೇಳೆಕು. ಅಂಬಗ ಶಿಷ್ಯಂಗೆ ಆ ವಿದ್ಯೆ ಫಲುಸುತ್ತು. ಇಲ್ಲಿ ಭಗವಂತ° ಅರ್ಜುನನ ಪ್ರಾಮಾಣಿಕ ನಿಷ್ಠೆಯ ನೋಡಿ ಅಪೂರ್ವವಾದ ಜ್ಞಾನವ ಹೇಳುತ್ತೆ ಹೇಳಿ ಮುಂದೆ ಬೈಂದ°. ‘ಹಿಂದೆ ಹೇಳಿದ ಕ್ಷೇತ್ರ(ಪ್ರಕೃತಿ-ಲಕ್ಷ್ಮಿ) ಮತ್ತೆ ಕ್ಷೇತ್ರಜ್ಞ°(ನಾರಾಯಣ)ರ ವಿಚಾರವ ಇನ್ನೂ  (‘ಭೂಯಃ’) ಹೇಳುತ್ತೆ ಹೇಳಿ ಸುರುಮಾಡುತ್ತ°. ಈ ಜಗತ್ತಿನ ಸೃಷ್ಟಿಯ ಹಿಂದಿಕೆ ಅಬ್ಬೆ-ಅಪ್ಪ°ನಾಗಿ ಲಕ್ಷ್ಮೀ-ನಾರಾಯಣರಿದ್ದವು. ಹಾಂಗಾಗಿ ಕೇವಲ ಅಪ್ಪನ ಸ್ಮರಣೆ ಅಥವಾ ಬರೇ ಅಬ್ಬೆಯ ಸ್ಮರಣೆ ಮಾಡ್ತದರಿಂದ ಅಬ್ಬೆ-ಅಪ್ಪನ ಸ್ಮರಣೆಯ (ಸೇವೆಯ) ಒಟ್ಟಿಂಗೇ ಅರ್ತು ಮಾಡ್ತದು ಉತ್ತಮ ಹೇಳ್ವದು ಭಗವಂತನ ತೀರ್ಮಾನ. ಇದು ಮೋಕ್ಷಸಾಧಕ° ಅರ್ತಿರೆಕ್ಕಾದ ಬಹುಮುಖ್ಯ ವಿಚಾರ. ಈ ಮಾರ್ಗಲ್ಲೇ ಹಿಂದಾಣ ಮುನಿವರ್ಯರು ಸಾಧನೆಯ ಗುರಿಯ ತಲುಪಿದ್ದವು ಹೇಳಿ ಹೇಳಿದ್ದ° ಇಲ್ಲಿ ಭಗವಂತ° . ಲಕ್ಷ್ಮೀ-ನಾರಾಯಣರ ಸೃಷ್ಟಿ ಮೂಲಲ್ಲಿ ಚಿಂತನೆ ಮಾಡದ್ದೆ ಮೋಕ್ಷ ಸಾಧನೆ ಅಸಾಧ್ಯ, ಈ ಸಾಧನಾ ಭೂಮಿಲಿ ಈ ಮದಲೆ ಹುಟ್ಟಿಬಂದ ಬ್ರಹ್ಮಸಾಕ್ಷಾತ್ಕಾರ ಪಡದ ಮುನಿಗೊ ಕೂಡ ಇದರ ಅರ್ತೇ ಜೀವನದ ಪರಮ ಗುರಿಯಾದ ಮೋಕ್ಷವ ಪಡದವು ಹೇಳ್ವ ವಿಚಾರ ಇಲ್ಲಿ ಭಗವಂತ° ಹೇಳಿದಾಂಗೆ ಆತು.

ಶ್ಲೋಕ

ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ ।
ಸರ್ಗೇsಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ ॥೦೨॥

ಪದವಿಭಾಗ

ಇದಮ್ ಜ್ಞಾನಮ್ ಉಪಾಶ್ರಿತ್ಯ ಮಮ ಸಾಧರ್ಮ್ಯಮ್ ಆಗತಾಃ । ಸರ್ಗೇ ಅಪಿ ನ ಉಪಜಾಯಂತೇ ಪ್ರಲಯೇ ನ ವ್ಯಥಂತಿ ಚ ॥

ಅನ್ವಯ

( ಯೇ ) ಇದಂ ಜ್ಞಾನಂ ಉಪಾಶ್ರಿತ್ಯ ಮಮ ಸಾಧರ್ಮ್ಯಮ್ ಆಗತಾಃ, ( ತೇ ) ಸರ್ಗೇ ಅಪಿ ನ ಉಪಜಾಯಂತೇ, ಪ್ರಲಯೇ ಚ ನ ವ್ಯಥಂತಿ ।

ಪ್ರತಿಪದಾರ್ಥ

(ಯೇ – ಆರೆಲ್ಲಾ), ಇದಮ್ ಜ್ಞಾನಮ್ – ಈ ಜ್ಞಾನವ, ಉಪಾಶ್ರಿತ್ಯ – ಆಶ್ರಯಿಸಿ, ಮಮ ಸಾಧರ್ಮ್ಯಮ್ – ಎನ್ನ ಸಮಾನ ಸ್ವಭಾವವ, ಆಗತಾಃ – ಹೊಂದಿದವೋ, (ತೇ – ಅವ್ವು), ಸರ್ಗೇ ಅಪಿ – ಸೃಷ್ಟಿಲಿಯೂ ಕೂಡ, ನ ಉಪಜಾಯಂತೇ – ಹುಟ್ಟುತ್ತವಿಲ್ಲೆ, ಪ್ರಲಯೇ ಚ – ಪ್ರಳಯಲ್ಲಿಯೂ ಕೂಡ, ನ ವ್ಯಥಂತಿ – ಕ್ಷೋಭೆಗೊಳ್ಳುತ್ತವಿಲ್ಲೆ.

ಅನ್ವಯಾರ್ಥ

ಆರು ಈ ಜ್ಞಾನವ ಆಶ್ರಯಿಸಿ (ನೆಲೆಗೊಂಡು), ಎನ್ನ ಸಮಾನ ಸ್ವಭಾವವ  ಪಡೆತ್ತವೋ ಅವ್ವು ಮತ್ತೆ ಸೃಷ್ಟಿಕಾಲಲ್ಲಿ ಹುಟ್ಟುತ್ತವಿಲ್ಲೆ, ಪ್ರಳಯ ಕಾಲಲ್ಲಿಯೂ ಕ್ಷೋಭೆಗೊಳ್ಳುತ್ತವಿಲ್ಲೆ.

ತಾತ್ಪರ್ಯ / ವಿವರಣೆ

ಲಕ್ಷ್ಮೀ-ನಾರಾಯಣರು ಜಗತ್ತಿನ ಅಬ್ಬೆ-ಅಪ್ಪ° ಹೇಳ್ವ ಜ್ಞಾನಂದ ಉಪಾಸನೆ ಮಾಡಿದೋರು ಭಗವಂತನ ದಿವ್ಯ ಸ್ವಭಾವವ ಹೊಂದುತ್ತವು. ಅಂಥವು ಸರ್ವದೋಷಂಗಳ ಕಳದು ತ್ರಿಗುಣಾತೀತ ಸ್ಥಿತಿಲಿ ಭಗವಂತನ ಸೇರಿ ಭಗವಂತನಲ್ಲಿ ನೆಲೆಸುತ್ತವು ಹೇಳಿ ಭಗವಂತ° ಈ ಮದಲೇ ಸ್ಪಷ್ಟಪಡಿಸಿದ್ದ. ಈ ಜಗತ್ತು ಸೃಷ್ಟಿಯಪ್ಪದು ಲಕ್ಷ್ಮೀ-ನಾರಾಯಣರಿಂದ ಮತ್ತೆ ಹೋಗಿ ಸೇರುವದೂ ಅವರನ್ನೇ. ಇದರ ತಿಳುದವು ಹುಟ್ಟು-ಸಾವಿನ ಬಂಧನಂದ ಕಳಚಿ ಮತ್ತೆ ಎಂದೂ ಮರಳಿ ಈ ಸಂಸಾರ ಬಂಧನಲ್ಲಿ (“ಸರ್ಗೇsಪಿ ನ ಉಪಜಾಯಂತೇ”)  ಸಿಲುಕುತ್ತವಿಲ್ಲೆ. ಇಲ್ಲಿ ‘ಉಪಜಾಯತೇ’ ಹೇಳ್ವ ಪದ ಬಳಕೆ ಬಹು ವಿಶೇಷವಾದ್ದು. ಉಪ ಹೇಳಿರೆ ಹತ್ರೆ/ಸಮೀಪ, ಅಲ್ಲದ್ದೆ – ಮೇಗೆ, ಶ್ರೇಷ್ಠ, ಅತ್ಯುತ್ತಮ ಹೇಳ್ವ ಅರ್ಥವೂ ಇದ್ದು. ಭಗವಂತನ ಜ್ಞಾನಕ್ಕೋಸ್ಕರ ಈ ಮನುಷ್ಯ ದೇಹಧಾರಣೆ ಮಾಡಿ ಹುಟ್ಟುತ್ತದು ಎತ್ತರದ/ ಶ್ರೇಷ್ಠ/ ಅತ್ಯುತ್ತಮವಾದ್ದು. ಅಧ್ಯಾತ್ಮದ ಸಾಧನೆಂದ ಎತ್ತರಕ್ಕೇರುವ ಜನನ ‘ಉಪಜನನ’. ತನ್ನ ಜೀವಮಾನಲ್ಲಿ  ಈ ಸೃಷ್ಟಿಯ ಮೂಲದ ಜ್ಞಾನವ ಗಳಿಸಿದವ° ಮತ್ತೆ ಹುಟ್ಟುತ್ತನಿಲ್ಲೆ. ಅವ° ಭಗವಂತನಲ್ಲಿ ನಿರಂತರ ವಾಸ ಮಾಡುವ ಪರಮ ಪದವ ಪಡೆತ್ತ° ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.

ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದದು – ಪರಿಪೂರ್ಣ ದಿವ್ಯಜ್ಞಾನವ ಪಡದ ಮನುಷ್ಯ ದೇವೋತ್ತಮ ಪರಮ ಪುರುಷನೊಟ್ಟಿಂಗೆ ಗುಣಾತ್ಮಕ ಸಮಾನತೆಯ ಪಡೆತ್ತ°, ಹುಟ್ಟು-ಸಾವುಗಳ ಪುನರಾವರ್ತನೆಂದ ಬಿಡುಗಡೆಯ ಹೊಂದುತ್ತ°. ಆದರೆ ಜೀವಾತ್ಮನಾಗಿ ತನ್ನ ಪ್ರತ್ಯೇಕ ಅಸ್ತಿತ್ವವ ಕಳಕ್ಕೊಳ್ಳುತ್ತನಿಲ್ಲೆ. ಆಧ್ಯಾತ್ಮಿಕ ಗಗನದ ದಿವ್ಯಲೋಕವ ಸೇರಿದ ಮುಕ್ತಾತ್ಮರು ಪರಮ ಪ್ರಭುವಿನ ಪ್ರೀತಿಪೂರ್ವಕ ದಿವ್ಯಸೇವೆಲಿ ನಿರತರಾಗಿದ್ದು ಸದಾ ಅವನ ಪಾದಕಮಲವ ನೋಡುತ್ತ ದಿವ್ಯಾನಂದ ನಿತ್ಯಾನಂದ ಸವಿಯ ನಿರಂತರ  ಅನುಭವಿಸುತ್ತವು.  ಅದನ್ನೇ ಇಲ್ಲಿ ಹೇಳಿದ್ದದು – “ಮಮ ಸಾಧರ್ಮ್ಯ” – ‘ಎನ್ನ ಸಮಾನ ಸ್ವಭಾವವ’ ಹೇದು,  ಅಲ್ಲದ್ದೆ ಮುಕ್ತಾತ್ಮ ಭಗವಂತನಲ್ಲಿ ಐಕ್ಯವಾವ್ತವು ಅಥವಾ ಲೀನ ಆವ್ತವು ಹೇದು ಅಲ್ಲ. ಹೀಂಗೆ ಭವಬಂಧನಂದ ಮೋಕ್ಷವ ಪಡದರೂ ಮುಕ್ತಾತ್ಮ ತನ್ನ ಪ್ರತ್ಯೇಕ ಅಸ್ತಿತ್ವವ ಕಳಕ್ಕೊಳ್ಳುತ್ತಿಲ್ಲೆ. ಸಾಮಾನ್ಯವಾಗಿ ಈ ಐಹಿಕ ಜಗತ್ತಿಲ್ಲಿ ನಾವು ಪಡವ ಜ್ಞಾನ ಐಹಿಕ ಪ್ರಕೃತಿಯ ಗುಣತ್ರಯಂಗಳಿಂದ ಕಲ್ಮಷ ಹೊಂದಿಪ್ಪದಾಗಿರ್ತು. ಪ್ರಕೃತಿಯ ಗುಣತ್ರಯಂಗಳ ಕಲ್ಮಶದ ಸೋಂಕಿಲ್ಲದ್ದ ಜ್ಞಾನಕ್ಕೆ ದಿವ್ಯಜ್ಞಾನ ಹೇದು ದೆಸರು. ಈ ದಿವ್ಯಜ್ಞಾನಲ್ಲಿ ನೆಲೆಸುತ್ತಲೇ ಮನುಷ್ಯ° ಪರಮಪುರುಷನ ಒಟ್ಟಿಂಗೆ ಒಂದೇ ನೆಲೆಲಿರುತ್ತ°. ಸಮಾನ ಭಾವ ಸ್ಥಿತಿ. ಆಧ್ಯಾತ್ಮಿಕ ಗಗನದ ತಿಳುವಳಿಕೆ ಇಲ್ಲದ್ದೋರು ಐಹಿಕ ರೂಪದ ಐಹಿಕ ಕರ್ಮಂಗಳಿಂದ ಬಿಡುಗಡೆಯಾದಮತ್ತೆ ಈ ಆಧ್ಯಾತ್ಮಿಕ ವ್ಯಕ್ತಿತ್ವ ವೈವಿಧ್ಯವೇ ಇಲ್ಲದ್ದ ರೂಪರಹಿತವಾವ್ತು ಹೇಳಿ ಅಭಿಪ್ರಾಯ ಪಡುತ್ತವು. ಆದರೆ ಈ ಜಗತ್ತಿಲ್ಲಿ ಐಹಿಕ ವೈವಿಧ್ಯ ಇಪ್ಪ ಹಾಂಗೆ ಆಧ್ಯಾತ್ಮಿಕ ಜಗತ್ತಿಲ್ಲಿಯೂ ವೈವಿಧ್ಯಂಗೊ ಇರ್ತು. ಇದರ ತಿಳಿಯದ್ದೋರು ಆಧ್ಯಾತ್ಮಿಕ ಅಸ್ತಿತ್ವವು ಐಹಿಕ ವೈವಿಧ್ಯಕ್ಕೆ ವಿರುದ್ಧವಾದ್ದು ಹೇದು ತಿಳ್ಕೊಳ್ಳುತ್ತವು. ಆದರೆ, ವಾಸ್ತವವಾಗಿ ಆಧ್ಯಾತ್ಮಿಕ ಗಗನಲ್ಲಿ ಮನುಷ್ಯ° ಆಧ್ಯಾತ್ಮಿಕ ರೂಪವ ಪಡೆತ್ತ°. ಆಧ್ಯಾತ್ಮಿಕ ಚಟುವಟಿಕೆಗೊ  ಇರ್ತು , ಮತ್ತೆ ಆಧ್ಯಾತ್ಮಿಕ ಸನ್ನಿವೇಶವ ಭಕ್ತಿಪೂರ್ವಕ ಜೀವನ ಹೇದು ಹೇಳಲ್ಪಡುತ್ತು. ಆ ವಾತಾವರಣ ಕಲ್ಮಷರಹಿತ ಹೇದು ಹೇಳಲ್ಪಡುತ್ತು. ಅಲ್ಲು ಗುಣಲ್ಲಿ ಮನುಷ್ಯ° (ಮುಕ್ತಾತ್ಮ) ಭಗವಂತಂಗೆ ಸಮಾನ. ಇಂತಹ ಜ್ಞಾನವ ಪಡವಲೆ ಮನುಷ್ಯ ಎಲ್ಲ ಆಧ್ಯಾತ್ಮಿಕ ಗುಣಂಗಳ ಮೈಗೂಡಿಸಿಗೊಳ್ಳೆಕು. ಹೀಂಗೆ ಆಧ್ಯಾತ್ಮಿಕ ಗುಣಂಗಳ ಬೆಳೆಶಿಗೊಂಡವಂಗೆ ಐಹಿಕ ಜಗತ್ತಿನ ಸೃಷ್ಟಿಂದಲಾಗಲೀ, ವಿನಾಶಂದಲಾಗಲೀ ಏವ ಪರಿಣಾಮವೂ ಉಂಟಾವ್ತಿಲ್ಲೆ.

ಶ್ಲೋಕ

ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ ।
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ॥೦೩॥

ಪದವಿಭಾಗ

ಮಮ ಯೋನಿಃ ಮಹತ್ ಬ್ರಹ್ಮ ತಸ್ಮಿನ್ ಗರ್ಭಮ್ ದಧಾಮಿ ಅಹಮ್ । ಸಂಭವಃ ಸರ್ವ-ಭೂತಾನಾಮ್ ತತಃ ಭವತಿ ಭಾರತ ॥

ಅನ್ವಯ

ಹೇ ಭಾರತ!, ಮಮ ಯೋನಿಃ ಮಹತ್ ಬ್ರಹ್ಮ (ಅಸ್ತಿ), ತಸ್ಮಿನ್ ಅಹಂ ಗರ್ಭಂ ದಧಾಮಿ, ತತಃ ಸರ್ವ-ಭೂತಾನಾಂ ಸಂಭವಃ ಭವತಿ ।

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶ ಶ್ರೇಷ್ಠನೇ!, ಮಮ – ಎನ್ನ, ಯೋನಿಃ – ಜನನ ಮೂಲವು, ಮಹತ್ ಬ್ರಹ್ಮ (ಅಸ್ತಿ) – ಮಹತ್ ತತ್ವವುಳ್ಳದ್ದಾದ ಪರಮೋನ್ನತವಾಗಿದ್ದು. ತಸ್ಮಿನ್ – ಅದರ್ಲಿ, ಅಹಮ್ – ಆನು, ಗರ್ಭಮ್ – ಗರ್ಭವ, ದಧಾಮಿ – ಸೃಷ್ಟಿಸುತ್ತೆ, ತತಃ – ಮತ್ತೆ(ಅಲ್ಲಿಂದ), ಸರ್ವ-ಭೂತಾನಾಮ್  – ಎಲ್ಲ ಜೀವಿಗಳ, ಸಂಭವಃ – ಉಂಟಾಗುವಿಕೆಯು, ಭವತಿ – ಆವುತ್ತು.

ಅನ್ವಯಾರ್ಥ

ಏ ಭರತವಂಶಶ್ರೇಷ್ಠನಾದ ಅರ್ಜುನ!,  ಎನ್ನ ಜನನಮೂಲಸ್ಥಾನ (ಪ್ರಕೃತಿ) ಮಹತ್ತರವಾದ (ಮಹಾತತ್ವ) ಬ್ರಹ್ಮನ್ ಹೇಳ್ವದು, ಅದರ್ಲಿ ಆನು ಗರ್ಭಾಧಾನ ಮಾಡಿ ಅಲ್ಲಿಂದ ಎಲ್ಲ ಜೀವಿಗಳ ಹುಟ್ಟುವಿಕೆ ಉಂಟಾವ್ತು.

ತಾತ್ಪರ್ಯ / ವಿವರಣೆ

ಇದು ಜಗತ್ತಿನ ಸೃಷ್ಟಿಯ ವಿವರಣೆ. ಸೃಷ್ಟಿಯ ಕಾರಣವಾದ ಕ್ಷೇತ್ರ ಮತ್ತೆ ಕ್ಷೇತ್ರಜ್ಯರ ಸಂಯೋಜನೆ. ಪ್ರಕೃತಿ ಮತ್ತೆ ಪುರುಷರ ಈ ಸಂಯೋಜನೆಯ ಸ್ವತಃ ಭಗವಂತನೇ ಉಂಟುಮಾಡುತ್ತ°. ಸಮಸ್ತ ವಿಶ್ವದ ಅಭಿವ್ಯಕ್ತಿಯ ಒಟ್ಟು ಕಾರಣ ಮಹತ್ ತತ್ವ. ಇದನ್ನೆ ಬ್ರಹ್ಮ ಹೇಳಿ ಹೇಳುವದು. ಇದರ್ಲಿ ಗುಣತ್ರಯಂಗೊ (ಸತ್ವ ರಜ ತಮ). ಒಟ್ಟು ವಸ್ತುವು ಪರಮಪುರುಷನಾದ ಭಗವಂತನಿಂದ ಗರ್ಭವ ಪಡೆತ್ತು. ಹಿಂಗೆ ಅಸಂಖ್ಯಾತ ಜೀವಜಾತ ಉಂಟಾವ್ತು. ಈ ಒಟ್ಟು ಐಹಿಕ ವಸ್ತು ಅಥವಾ ಮಹತ್ ತತ್ವವ ವೇದಸಾಹಿತ್ಯಲ್ಲಿ ಬ್ರಹ್ಮನ್ ಹೇದು ಹೇಳಿದ್ದದು. ಆ ಬ್ರಹ್ಮಕ್ಕೆ ಪರಮಪುರುಷನಾದ ಭಗವಂತ° ಜೀವಿಗಳ ಬೀಜವ ನೀಡಿ ಗರ್ಭಾಧಾನ ಮಾಡುತ್ತ° ಭೂಮಿ, ನೀರು, ಅಗ್ನಿ, ವಾಯು ಇವುಗಳಿಂದ ತೊಡಗಿ ಇಪ್ಪತ್ತನಾಲ್ಕು ಘಟಕಾಂಶಂಗೊ ಎಲ್ಲವೂ ಐಹಿಕ ಶಕ್ತಿ, ಅವೆಲ್ಲವು ಸೇರಿ ಮಹತ್ ಬ್ರಹ್ಮ ಅಥವಾ ಐಹಿಕ ಪ್ರಕೃತಿ. ಏಳನೇ ಅಧ್ಯಾಯಲ್ಲಿ ವಿವರಿಸಿದಾಂಗೆ ಇದರಿಂದ ಆಚಿಗೆ ಇದಕ್ಕಿಂತ ಶ್ರೇಷ್ಠವಾದ ಒಂದು ಪ್ರಕೃತಿ ಇದ್ದು. ಅದು ಜೀವಿ. ದೇವೋತ್ತಮ ಪರಮಪುರುಷನ ಸಂಕಲ್ಪಂದ  ಶ್ರೇಷ್ಥ ಪ್ರಕೃತಿಲಿ ಐಹಿಕ ಪ್ರಕೃತಿಯ ಬೆರೆಸಲ್ಪಡುತ್ತು. ಮತ್ತೆ ಆ ಐಹಿಕ ಪ್ರಕೃತಿಂದ ಎಲ್ಲ ಜೀವಿಗೊ ಹುಟ್ಟುತ್ತು.

ಚೇಳು ಅಕ್ಕಿಯ ರಾಶಿಲಿ ಮೊಟ್ಟೆ ಮಡುಗುತ್ತು. ಚೇಳು ಅಕ್ಕಿಂದ ಹುಟ್ಟುತ್ತು ಹೇದು ಹೇಳ್ವದಿದ್ದು. ಆದರೆ ಅಕ್ಕಿಯು ಚೇಳಿನ ಕಾರಣ ಅಲ್ಲ. ವಾಸ್ತವವಾಗಿ ಮೊಟ್ಟೆ ಮಡಿಗಿದ್ದು ಅಬ್ಬೆ ಚೇಳು. ಹಾಂಗೇ ಜೀವಿಗಳ ಹುಟ್ಟಿಂಗೆ ಐಹಿಕ ಪ್ರಕೃತಿ ಕಾರಣ ಅಲ್ಲ. ದೇವೋತ್ತಮ ಪರಮ ಪುರುಷ ಬೀಜವ ನೀಡುತ್ತ. ಅವು ಐಹಿಕ ಪ್ರಕೃತಿಯ ಉತ್ಪನ್ನವಾಗಿ ಹೆರ ಬತ್ತಾಂಗೆ ಕಾಣುತ್ತದು ಮಾಂತ್ರ. ಹೀಂಗೆ ಪ್ರತಿಯೊಬ್ಬ ಜೀವಿಯೂ ತನ್ನ ಹಿಂದಾಣ ಕರ್ಮಕ್ಕನುಗುಣವಾಗಿ ಬೇರೆ ಬೇರೆ ದೇಹವ ಪಡೆತ್ತ°. ಇದರ ಐಹಿಕ ಪ್ರಕೃತಿ ಸೃಷ್ಟಿಸುತ್ತು. ಇದರಿಂದ ಜೀವಿಯು ತನ್ನ ಹಿಂದಾಣ ಕರ್ಮಕ್ಕನುಗುಣವಾಗಿ ಸುಖವನ್ನೋ ದುಃಖವನ್ನೋ ಅನುಭವಿಸುತ್ತದು. ಹೀಂಗೆ ಈ ಐಹಿಕ ಜಗತ್ತಿಲ್ಲಿ ಜೀವಿಗಳ ಎಲ್ಲ ಅಭಿವ್ಯಕ್ತಿಗೊಕ್ಕೆ ಭಗವಂತನೇ ಕಾರಣ.

ಈ ಶ್ಲೋಕದ ವಿವರಣೆಯ ಬನ್ನಂಜೆಯವರ ವ್ಯಾಖ್ಯಾನಂದಲೂ ನೋಡುವೋ. ಬನ್ನಂಜೆ ವಿವರುಸುತ್ತವು – ಈ ಶ್ಲೋಕ ಅರ್ಥ ಆಯೇಕ್ಕಾರೆ ನಾವು ಮದಾಲು ‘ಭಾ-ರತ’ರಾಯೇಕು. ಅದಕ್ಕಾಗಿಯೇ ಇಲ್ಲಿ ಅರ್ಜುನನ ಭಗವಂತ° ‘ಭಾರತ’ ಹೇಳಿ ದೆನಿಗೊಂಡದು. ‘ರತ’ ಹೇಳಿರೆ ತತ್ಪರತೆ. ನಾವು ಭಗವಂತನಲ್ಲಿ ‘ರತ’ರಾಯೇಕು. ಜ್ಞಾನದ ಮಾರ್ಗಲ್ಲಿ ರತರಾಯೇಕು. ಭಕ್ತಿಂದ ಭರಿತರಾಗಿ ತುಂಬಿದ ಕೊಡವಾಯೇಕು, ವಿನೀತರಾಯೇಕು. ಹೀಂಗೆ  ನಾವು ‘ಭಾ-ರತ’ ಆದರೆ ಸೃಷ್ಟಿಯ ಈ ಗುಟ್ಟು ಅರ್ಥ ಆವ್ತು.

ಏವುದೇ ಒಂದು ವಸ್ತು ಸೃಷ್ಟಿ ಆಯೇಕ್ಕಾರೆ ಅಲ್ಲಿ ಒಂದಕ್ಕಿಂತ ಹೆಚ್ಚು ಕಾರಣಂಗೊ ಬೇಕು. ಜಡವಾದರೆ ಅಲ್ಲಿ ಎರಡು ಕಾರಣ ಅಗತ್ಯ. ಉದಾಹರಣೆಗೆ ಒಂದು ‘ಮಡಕೆ’ ಸೃಷ್ಟಿಯಾಯೇಕ್ಕಾರೆ ಅಲ್ಲಿ ಮೂಲದ್ರವ್ಯ ಬೇಕು ಮತ್ತೆ ರೂಪವ ಕೊಡುವ ಕುಂಬಾರ° ಬೇಕು. ವನಸ್ಪತಿಗಳ ಸೃಷ್ಟಿಗೆ ಜಡದೊಳ ಭಗವಂತ ಜೀವವ ಸೇರುಸುವದರ ಮೂಲಕ ಆವ್ತು ನಡೆತ್ತದು. ಆದರೆ ಗರ್ಭದ ಮೂಲಕ ಹುಟ್ಟುವ “ಚೇತನ ಸೃಷ್ಟಿ”ಗೆ ಜಡದ್ರವ್ಯದೊಟ್ಟಿಂಗೆ ಸೃಷ್ಟಿಮಾಡತಕ್ಕ ಒಂದು ಗೆಂಡು ಮತ್ತೆ ಒಂದು ಹೆಣ್ಣು ಬೇಕು. ಇಬ್ಬರ ಸಮಾಗಮನಂದ ಮೂರನೇದು ಸೃಷ್ಟಿಯಾವ್ತು.

ಈ ಶ್ಲೋಕಲ್ಲಿ “ಮಮ ಯೋನಿಃ ಮಹತ್ ಬ್ರಹ್ಮ” ಹೇಳ್ತಲ್ಲಿ ಬಂದಿಪ್ಪ “ಯೋನಿ” ಮತ್ತೆ “ಬ್ರಹ್ಮ” ಹೇಳ್ವ ಪದಂಗೊ ಅನೇಕ ಅರ್ಥಂಗಳ ಕೊಡುತ್ತು. ಏವ ಸಂದರ್ಭಲ್ಲಿ ಏವ ಅರ್ಥ ಹೊಂದಿಕೆ ಆವ್ತು ಹೇದು ಅರ್ತು ನಾವು ಶ್ಲೋಕವ ಅರ್ಥ ಮಾಡಿಗೊಳ್ಳೆಕು. ‘ಯೋನಿ’- ಕಾರಣ, ಉತ್ಪತ್ತಿಸ್ಥಾನ, ಹೆಂಡತಿ ಇತ್ಯಾದಿ ಅರ್ಥವ ಕೊಡುತ್ತು. ಅದೇ ರೀತಿ ‘ಬ್ರಹ್ಮ’ – ಜೀವ, ಚತುರ್ಮುಖ°, ಲಕ್ಷ್ಮಿ, ಭಗವಂತ° ಇತ್ಯಾದಿ ಅನೇಕ ಅರ್ಥಂಗೊ.  ಈ ಶ್ಲೋಕಲ್ಲಿ ‘ಯೋನಿ’ ಹೇಳಿರೆ ಹೇಳಿರೆ ಹೆಂಡತಿ, ‘ಮಹತ್ ಬಹ್ಮ’ ಹೇಳಿರೆ ಚತುರ್ಮುಖಂಗೂ ಅಬ್ಬೆಯಾಗಿಬ್ಬ ಶ್ರೀಲಕ್ಷ್ಮಿ. ಭಗವಂತ° ಹೇಳ್ತ° – “ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಂ” – ಆನು ಎನ್ನ ಪತ್ನಿಯಾದ ಚಿತ್ ಪ್ರಕೃತಿ (ಲಕ್ಷ್ಮಿ)ಲಿ ಗರ್ಭಾಧಾನ ಮಾಡುತ್ತೆ. ಆ ಗರ್ಭ ಬೆಳದು ಸಮಸ್ತ ಜೀವಜಾತಂಗೊ ಸೃಷ್ಟಿಯಾವುತ್ತು.

ಬನ್ನಂಜೆಯವು ಇನ್ನೊಂದು ವಿಷಯವ ಇಲ್ಲಿ ಸ್ಪಷ್ಟಪಡುಸುತ್ತವು. ಈ ಮೇಗೆ ಹೇಳಿದ್ದದು-  ಚತುರ್ಮುಖಂಗೂ ಅಬ್ಭೆಯಾಗಿಪ್ಪ ಶ್ರೀಲಕ್ಷ್ಮಿ ಹೇದು. ಆದರೆ ನಾವೆಲ್ಲ ತಿಳುದಾಂಗೆ, ಋಗ್ವೇದಲ್ಲಿ ಹೇಳಲ್ಪಟ್ಟಾಂಗೆ – “ತಮಿದ್ಗರ್ಭಂ ಪ್ರಥಮಂ ದಧ್ರ ಆಪೋ ಯತ್ರ ದೇವಾಃ ಸಮಗಚ್ಛಂತ ವಿಶ್ವೇ । ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ೧೦.೮೨.೦೬॥ –   ‘ಚತುರ್ಮುಖ’ ವಿಷ್ಣುವಿನ ನಾಭಿಕಮಲಂದ ಹೆರಬಂದ°, ಚತುರ್ಮುಖಂದ ಜೀವ ಸೃಷ್ಟಿ ನಿರ್ಮಾಣ ಆತು, ಹಾಂಗಾಗಿ ಚತುರ್ಮುಖ ಜಗತ್ತಿನ ಅಪ್ಪ° ಹೇಳಿ. ವೇದಲ್ಲಿ ಇನ್ನೊಂದಿಕ್ಕೆ ಅಂಭ್ರಿಣೀ ಸೂಕ್ಲಲ್ಲಿ ಲಕ್ಷ್ಮಿ ಹೇಳ್ವ ಮಾತು ಅಹಂ ಸುವೇ ಪಿತರಮಸ್ಯ ಮೂರ್ಧನ್ ಮಮ ಯೋನಿರಪ್ಸ್ವಂತಃ ಸಮುದ್ರೇ । ತತೋ ವಿ ತಿಷ್ಠೇ ಭುವನಾಮ ವಿಶ್ವೋ-ತಾಮೂಂ ದ್ಯಾಂ ವರ್ಷ್ಮಣೋಪ ಸ್ಪೃಶಾಮಿ॥೭॥ – ‘ಆನು ಈ ಜಗತ್ತಿನ ಅಪ್ಪನಾದ ಚತುರ್ಮುಖನ ಎನ್ನ ನೆತ್ತಿಂದ (ಮೂರ್ಧನ್ – ಬೈತಲೆ) ಹೆತ್ತೆ. ಎನಗೂ ಕಾರಣನಾದ ಭಗವಂತ ಸಮುದ್ರಲ್ಲಿದ್ದ°’ ಹೇದು. ಸಮಸ್ತ ಬ್ರಹ್ಮಾಂಡದ ಸೃಷ್ಟಿ ಶಿವಂದ ಆತು ಹೇಳಿಯೂ ಕೆಲೋರು ಹೇಳುತ್ತವು. ಇವೆಲ್ಲ ಗೊಂದಲಕ್ಕೆ ಈಡುಮಾಡುತ್ತು. ಮೋಕ್ಷ ಸಾಧನೆ ಮಾಡುವೋರು ಇದರ ಸೂಕ್ಷ್ಮವಾಗಿ ವಿಶ್ಲೇಷಿಸಿ ಅರ್ಥೈಸಿ ಚಿಂತಿಸಿರೆ ಸತ್ಯದ ಸಾಕ್ಷಾತ್ಕಾರ ಆವ್ತು.

ಬನ್ನಂಜೆ ವಿವರಣೆಯ ಮುಂದುವರ್ಸಿಗೊಂಡು ಹೇಳ್ತವು – ಜೀವ-ಪ್ರಕೃತಿ-ಭಗವಂತ ಅನಾದಿ ಅನಂತ°. ಸೃಷ್ಟಿ ಪೂರ್ವಲ್ಲಿ ಸಮಸ್ತ ಪ್ರಪಂಚ ಸೂಕ್ಷ್ಮ ರೂಪಲ್ಲಿ ಭಗವಂತನ ಉದರಲ್ಲಿದ್ದತ್ತು. ಇದರ ಇನ್ನೂ ಸೂಕ್ಷ್ಮವಾಗಿ ನೋಡಿರೆ – ಸಮಸ್ತ ವಿಶ್ವ ಲಕ್ಷ್ಮೀದೇವಿಯ ಉದರಲ್ಲಿತ್ತು ಮತ್ತೆ ಲಕ್ಷ್ಮೀ ಭಗವಂತನ ಉದರಲ್ಲಿದ್ದತ್ತು. ಭಗವಂತ° ಲಕ್ಷ್ಮಿಯ ಉದರಲ್ಲಿ ಸಮಸ್ತ ಜೀವಜಾತಂಗಳ ಬೀಜಕ್ಷೇಪ ಮಾಡಿದ°. ಕಮಲ ರೂಪದ ಇಡೀ ಬ್ರಹ್ಮಾಂಡ ಲಕ್ಷ್ಮಿಯ ನೆತ್ತಿಯ ಮೂಲಕ ಭಗವಂತನ ನಾಭಿಂದ ಹೆರಬಂತು. ಅದರ್ಲಿ ಚತುರ್ಮುಖ ಇತ್ತಿದ್ದ°, ಒಟ್ಟಿಂಗೆ ಅವ್ಯಕ್ತ ರೂಪಲ್ಲಿ ಸಮಸ್ತ ದೇವತೆಗೊ, ಜೀವಜಾತರು ಹುಟ್ಟಿದವು. ಹೀಂಗೆ ಲಕ್ಷ್ಮೀ-ನಾರಾಯಣರು ಸಮಸ್ತ ವಿಶ್ವಕ್ಕೆ ಅಬ್ಬೆ-ಅಪ್ಪ°. ಇನ್ನು ಇಲ್ಲಿ ನಾವು ತಿಳ್ಕೊಳ್ಳೆಕ್ಕಾದ ಇನ್ನೊಂದು ಮುಖ್ಯ ವಿಚಾರ ಹೇಳಿರೆ, – ಸೃಷ್ಟಿ ಕ್ರಿಯೆ ಹಂತ ಹಂತವಗಿ ನಡದ ಕ್ರಿಯೆ. ಲಕ್ಷ್ಮೀ-ನಾರಾಯಣರ ಸಮಾಗಮಂದ ನಿರ್ಮಾಣವಾದ್ದು ಕೇವಲ ಅವ್ಯಕ್ತ ಸೃಷ್ಟಿ. ಮತ್ತೆ ಚತುರ್ಮುಖ ಬ್ರಹ್ಮ ಈ ಸೂಕ್ಷ್ಮರೂಪಿ ಅವ್ಯಕ್ತ ಪ್ರಪಂಚಕ್ಕೆ (ಜೀವಜಾತಕ್ಕೆ) ಒಂದು ಮೂಲ ಸ್ಥೂಲರೂಪವ ಕೊಟ್ಟು ಜಗತ್ತಿನ ಪಿತಾಮಹ ಎನಿಸಿಗೊಂಡ. ಮತ್ತೆ ಶಿವಂದ ಈ ಪ್ರಪಂಚ ಪೂರ್ಣ ಸ್ಥೂಲರೂಪವ ಪಡದತ್ತು. ಈ ಇಡೀ ಪ್ರಕ್ರಿಯ ನಾವು ಅರ್ಥಮಾಡಿಗೊಂಡರೆ ಸೃಷ್ಟಿಯ ಬಗ್ಗೆ ಗೊಂದಲ ಮತ್ತೆ ಇಲ್ಲೆ. ಈಗ ಚತುರ್ಮುಖ ಲಕ್ಷ್ಮಿಯ ನೆತ್ತಿಂದ ಹುಟ್ಟಿದ್ದು ಅಪ್ಪು, ಶಿವಂದ ಈ ಸ್ಥೂಲ ಪ್ರಪಂಚ ನಿರ್ಮಾಣ ಆದ್ದೂ ಅಪ್ಪು. ಲಕ್ಷ್ಮೀ-ನಾರಾಯಣರು ಸಮಸ್ತ ಜೀವಜಾತದ ಅಬ್ಬೆ-ಅಪ್ಪನೂ ಅಪ್ಪು.

ಒಂದು ಚೇತನದ [ಭೂತಿ(ಉನ್ನತಿ) ಇಪ್ಪ ಜೀವದ] ಸೃಷ್ಟಿಗೆ ಒಂದು ಗೆಂಡು ಒಂದು ಹೆಣ್ಣಿನ  ಸಮಾಗಮ ಅಗತ್ಯ. ಇದು ಸೃಷ್ಟಿ ಆರಂಭಂದಲೇ ಬೆಳಕ್ಕೊಂಡು ಬಂದ ಸಂಪ್ರದಾಯ. ಜಗತ್ತಿನ ಎಲ್ಲಾ ಸೃಷ್ಟಿಯ ಹಿಂದೆ ಲಕ್ಷ್ಮೀ-ನಾರಾಯಣರು ಅಬ್ಬೆ-ಅಪ್ಪನಾಗಿ ನಿಂದುಗೊಂಡಿದ್ದವು. ಅದನ್ನೇ ಭಗವಂತ° ಈ ಶ್ಲೋಕಲ್ಲಿ ಹೇಳಿದ್ದದು – “ಜನನಕ್ಕೆ ಮೂಲವಾದ ಎನ್ನ ಪ್ರಕೃತಿಲಿ (ಲಕ್ಷ್ಮಿ) ಗರ್ಭಾಧಾನಮಾಡಿ ಸಮಸ್ತ ಜೀವಿಗಳ ಹುಟ್ಟಿಂಗೆ ಕಾರಣನಾಗಿ ಇದ್ದೆ”.

ಶ್ಲೋಕ

ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ ।
ತಾಸಾಂ ಬ್ರಹ್ಮ ಮಹದ್ಯೋನಿಃ ಅಹಂ ಬೀಜಪ್ರದಃ ಪಿತಾ ॥೦೪॥

ಪದವಿಭಾಗ

ಸರ್ವ-ಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ । ತಾಸಾಮ್ ಬ್ರಹ್ಮ ಮಹತ್ ಯೋನಿಃ ಅಹಮ್ ಬೀಜ-ಪ್ರದಃ ಪಿತಾ ॥

ಅನ್ವಯ

ಹೇ ಕೌಂತೇಯ!, ಸರ್ವ-ಯೋನಿಷು ಯಾಃ ಮೂರ್ತಯಃ ಸಂಭವಂತಿ ತಾಸಾಂ ಯೋನಿಃ ಮಹತ್ ಬ್ರಹ್ಮ (ಅಸ್ತಿ), ಅಹಂ ಬೀಜ-ಪ್ರದಃ ಪಿತಾ (ಚ ಅಸ್ಮಿ) ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನಾದ ಅರ್ಜುನ!, ಸರ್ವ-ಯೋನಿಷು – ಎಲ್ಲ ಜೀವಜಾತಿಗಳಲ್ಲಿ, ಯಾಃ – ಏವೆಲ್ಲ, ಮೂರ್ತಯಃ – ಆಕಾರಂಗೊ, ಸಂಭವಂತಿ – ಪ್ರಕಟವಾವ್ತೋ, ತಾಸಾಮ್ – ಅವೆಲ್ಲವುಗಳ, ಯೋನಿಃ – ಭೌತಿಕ ತತ್ವದ ಜನನಮೂಲವು, ಮಹತ್ ಬ್ರಹ್ಮ (ಅಸ್ತಿ) – ಪರಮ ಮಹೋನ್ನತ ಆಗಿದ್ದು, ಅಹಮ್ – ಆನು, ಬೀಜ-ಪ್ರದಃ ಪಿತಾ (ಚ ಅಸ್ಮಿ) – ಬೀಜ ನೀಡುವ ಅಪ್ಪನೂ ಆಗಿದ್ದೆ.

ಅನ್ವಯಾರ್ಥ

ಏ ಕುಂತೀಮಗನಾದ ಅರ್ಜುನ!, ಐಹಿಕ ಪ್ರಕೃತಿಲಿ ವಿವಿಧ ಯೋನಿಗಳಲ್ಲಿ ಏವೆಲ್ಲ ಜೀವ ಆಕಾರಂಗೊ ಹುಟ್ಟುತ್ತವೋ ಅವೆಲ್ಲವುದರ ಜನನಮೂಲವು ಪರಮ ಮಹೋನ್ನತವಾಗಿಪ್ಪ ಪ್ರಕೃತಿ ತತ್ವ (ಮಹತ್ ಬ್ರಹ್ಮ) ಆಗಿದ್ದು ಮತ್ತೆ  ಆನೇ ಬೀಜವ ನೀಡುವ ಅಪ್ಪ° ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳ್ತ° – ವಿವಿಧ ಯೋನಿಗಳಲ್ಲಿ ಹುಟ್ಟುವ ಜೀವ ರೂಪಂಗೆಕ್ಕೆಲ್ಲ ಪ್ರಕೃತಿಯೇ ಅಬ್ಬೆ, ಬೀಜಪ್ರದನಾಗಿ ಭಗವಂತ° ಅಪ್ಪ°. ಹಾಂಗಾಗಿ, ಎಲ್ಲ ಜೀವಿಗಳ ಮೂಲಪಿತ° ಭಗವಂತ° ಹೇಳ್ತದು ಇಲ್ಲಿ ಸ್ಪಷ್ಟವಾಗಿ ಹೇಳಿದ್ದ°. ಜೀವಿಗೊ ಐಹಿಕ ಪ್ರಕೃತಿ ಮತ್ತೆ ಆಧ್ಯಾತ್ಮಿಕ ಪ್ರಕೃತಿಗಳ ಸಂಯೋಜನೆಗೊ. ಇಂತಹ ಜೀವಿಗೊ ಈ ಲೋಕಲ್ಲಿ ಮಾಂತ್ರ ಅಲ್ಲ, ಎಲ್ಲ ಲೋಕಂಗಳಲ್ಲಿಯೂ ಕಂಡುಬತ್ತು. ಬ್ರಹ್ಮ° ನೆಲೆಸಿಪ್ಪ ಅತ್ಯುನ್ನತ ಲೋಕಲ್ಲಿಯೂ ಇದೇ ತತ್ವ. ಜೀವಿಗೊ ಎಲ್ಲೆಲ್ಲಿಯೂ ಇದ್ದವು. ಭೂಮಿ, ನೀರು, ಅಗ್ನಿಗಳಲ್ಲಿಯೂ ಕೂಡ ಜೀವಿಗೊ ಇದ್ದವು. ಎಲ್ಲ ಅಭಿವ್ಯಕ್ತಿಗೊಕ್ಕೆ ಕಾರಣ ಅಬ್ಬೆಯಾಗಿ ಐಹಿಕ ಪ್ರಕೃತಿ ಮತ್ತೆ ಪಿತೃ ಸ್ಥಾನಲ್ಲಿ ಭಗವಂತನ ಗರ್ಭಾಧಾನ ಪ್ರಕ್ರಿಯೆ. ಅರ್ಥಾತ್, ಐಹಿಕ ಜಗತ್ತು ಬೀಜಂಗಳಿಂದ ಗರ್ಭ ಧರಿಸುತ್ತು. ಸೃಷ್ಟಿಯ ಸಮಯಲ್ಲಿ ಅದು ತಮ್ಮ ಹಿಂದಾಣ ಕರ್ಮಕ್ಕನುಗುಣವಾಗಿ ವಿವಿಧ ರೂಪಂಗಳ ಪಡದು ಹೆರಬತ್ತು.

ಕೇವಲ ದೇವತೆಗೊ, ಮಾನವರು ಅಷ್ಟೇ ಅಲ್ಲ. ಸಮಸ್ತ ಜೀವಜಾತದ ಹುಟ್ಟಿನ ಹಿಂದೆ ಅಬ್ಬೆ-ಅಪ್ಪನಾಗಿ ಲಕ್ಷ್ಮೇ-ನಾರಯಣರಿದ್ದವು. ಎಲ್ಲವುದರ ಅಬ್ಬೆ – ಚೇತನ ಪ್ರಕೃತಿ ಲಕ್ಷ್ಮಿ. ಬೀಜ ಬಿತ್ತುವ ಅಪ್ಪ° – ನಾರಾಯಣ°. ಹೇಂಗೆ ಹೊಲಲ್ಲಿ ಬೀಜ ಬಿತ್ತಿರೆ ಅದು ಅಲ್ಲಿ ನಿಜವಾ ರೂಪ ತಾಳುತ್ತೋ ,ಹಾಂಗೇ, ಭಗವಂತ° ಜಡಪ್ರಕೃತಿಯ ಅಭಿಮಾನಿನಿಯಾದ ಶ್ರೀಲಕ್ಷ್ಮಿಲಿ ಬೀಜಪ್ರದ ಮಾಡಿ, ಅಬ್ಬೆ ಲಕ್ಶ್ಮಿ ಆ ಬೀಜಕ್ಕೆ ಒಂದು ಆಕಾರ ಕೊಡುತ್ತು. ಅದಕ್ಕಾಗಿಯೇ ಪ್ರಾಚೀನರು ಗರ್ಭಿಣಿ ಹೆಣ್ಣಿನ ದೇಹವ ದೇವಾಲಯ ಹೇಳಿಯೂ, ಆ ಗರ್ಭಿಣಿಯ ಗರ್ಭವಿಪ್ಪ ಜಾಗೆ ಗರ್ಭಗುಡಿ ಹೇಳಿಯೂ, ಆ ಗರ್ಭದ ಒಳ ಸನ್ನಿಹಿತನಾಗಿ ಜೀವವ ಬೆಳೆಶುತ್ತಿಪ್ಪವ° ಭಗವಂತ° ಹೇಳಿಯೂ ಗೌರವಿಸುತ್ತಿದ್ದಿದ್ದವು. ಇದು ನಮ್ಮ ಪ್ರಾಚೀನರು ಪ್ರತಿಯೊಂದು ಕ್ರಿಯೆಲಿಯೂ ಭಗವಂತನ ಅನುಸಂಧಾನ ಮಾಡುವ ಭವ್ಯತೆ. ಹೆಣ್ಣು ದೇವಾಲಯ ಅಪ್ಪದು ಅದು ಗರ್ಭಿಣಿಯಾದಪ್ಪಗ. ಹಾಂಗಾಗಿ ಪ್ರತಿಯೊಂದು ಹೆಣ್ಣಿನ ಸರ್ವಶ್ರೇಷ್ಠ ಬಯಕೆ ತಾನು ಅಬ್ಬೆಯಾಯೆಕು ಹೇಳ್ವದಾವ್ತು. ಹೆಣ್ಣಿನ ಬಯಕೆಯ ಅಕೇರಿಯಾಣ ಗುರಿ ಮಾತೃತ್ವ. ಲಕ್ಷ್ಮಿ ಆಕೆಲಿ ಪೂರ್ಣ ಪ್ರಮಾಣಲ್ಲಿ ಸನ್ನಿಹಿತವಪ್ಪದು ಅದು ಗರ್ಭವತಿಯಾದಪ್ಪಗ. ಹೀಂಗಾಗಿ ದಾಂಪತ್ಯ ಹೇಳ್ವದು ಲಕ್ಷ್ಮೀನಾರಾಯಣರ ಆರಾಧನೆ. ಹಾಂಗಾಗಿಯೇ ವೈದಿಕ ನಮ್ಮ ಮದುವೆ ಕ್ರಮಲ್ಲಿಯೂ ವಧೂವರರ ಲಕ್ಷ್ಮೀ-ನಾರಾಯಣರ ಸದೃಶರು ಹೇಳಿ ಆವ್ತು ಅವಕ್ಕೆ ಲಕ್ಷ್ಮೀ-ನಾರಾಯಣರ ಆರಾಧನೆ ಮಾಡಿ ವಿಶೇಷ ಗೌರವಂದ ನೋಡಿಗೊಂಬದು. ಅಲ್ಲಿ ಆವಾಹನೆ ಮಾಡಿದ ಲಕ್ಷ್ಮೀ-ನಾರಾಯಣರ ಬಾಕಿ ಪೂಜೆಲಿ ಉದ್ವಾಸನೆ ಮಾಡ್ತಾಂಗೆ ಉದ್ವಾಸನೆ ಮಾಡ್ಳೆ ಇಲ್ಲೆ. ಜೀವನ ಉದ್ದಕ್ಕೂ ಅವರದ್ದು ಲಕ್ಷ್ಮೀ-ನಾರಾಯಣರ ಹಾಂಗೆ ಅನ್ಯೋನ್ಯವಾಗಿ ದಾಂಪತ್ಯ ಜೀವನ ಮಾಡಿ ವಂಶೋದ್ಧಾರ ಚಟುವಟಿಕೆಲಿ ತೊಡಗೆಕು, ಸೃಷ್ಟಿ ಮುಂದುವರಿಯೆಕು ಹಾಂಗೇ ಮುಂದೆ ಸೃಷ್ಟಿಯಾದ್ದು ಮೋಕ್ಷ ಸಾಧನೆಯ ಮಾರ್ಗಲ್ಲಿ ಮುಂದುವರಿಯೆಕು ಹೇಳ್ವ ತತ್ವ. ದಾಂಪತ್ಯಲ್ಲಿ ಗಂಡು ಹೆಣ್ಣಿನ ಸಮಾಗಮ ಹೇಳ್ವದು ಲಕ್ಷ್ಮೀ-ನಾರಾಯಣರ ಸಮಾಗಮ. ಇಲ್ಲಿ ನಮ್ಮ ಭಾಗ್ಯ ಹೇಳಿರೆ ನಮ್ಮ ಮಾಧ್ಯಮವಾಗಿ ಬಳಸಿ ಭಗವಂತ° ಸೃಷ್ಟಿ ಕಾರ್ಯವ ಮಾಡುವದು ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.

ಶ್ಲೋಕ

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ ।
ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್ ॥೦೫॥

ಪದವಿಭಾಗ

ಸತ್ವಮ್ ರಜಃ ತಮಃ ಇತಿ ಗುಣಾಃ ಪ್ರಕೃತಿ-ಸಂಭವಾಃ । ನಿಬಧ್ನಂತಿ ಮಹಾ-ಬಾಹೋ ದೇಹೇ ದೇಹಿನಮ್ ಅವ್ಯಯಮ್ ॥

ಅನ್ವಯ

ಹೇ ಮಹಾ-ಬಾಹೋ!, ಸತ್ವಂ ರಜಃ ತಮಃ ಇತಿ ಗುಣಾಃ ಪ್ರಕೃತಿ-ಸಂಭವಾಃ (ಸಂತಿ, ತೇ) ದೇಹೇ ಅವ್ಯಯಂ ದೇಹಿನಂ ನಿಬಧ್ನಂತಿ ॥

ಪ್ರತಿಪದಾರ್ಥ

ಹೇ ಮಹಾಬಾಹೋ! – ಏ ಮಹಾಬಾಹುವೇ!, ಸತ್ವಮ್ – ಸತ್ವಗುಣ, ರಜಃ – ರಜೋಗುಣ, ತಮಃ – ತಮೋಗುಣ, ಇತಿ ಗುಣಾಃ  – ಹೇಳ್ವ ಗುಣಂಗೊ, ಪ್ರಕೃತಿ-ಸಂಭವಾಃ – ಭೌತಿಕ ಪ್ರಕೃತಿಯ ಉತ್ಪನ್ನಂಗೊ, (ಸಂತಿ – ಆಗಿದ್ದು, ತೇ – ಅವ್ವು), ದೇಹೇ – ಶರೀರಲ್ಲಿ, ಅವ್ಯಯಮ್ ದೇಹಿನಮ್ – ನಿತ್ಯನಾದ ಜೀವಿಯ, ನಿಬಧ್ನಂತಿ – ಬದ್ಧಗೊಳುಸುತ್ತು.

ಅನ್ವಯಾರ್ಥ

ಏ ಮಹಾಬಾಹುವಾದ ಅರ್ಜುನ! – ಸತ್ವ, ರಜಸ್ಸು, ತಮಸ್ಸು ಹೇಳ್ವ ಈ ಗುಣಂಗೊ ಪ್ರಕೃತಿಂದ ಉದ್ಭವವಾದ್ದು (ಪ್ರಕೃತಿಂದ ಉಂಟಾದ್ದು). (ಪ್ರಕೃತಿಯ ಸಂಪರ್ಕಂದಲಾಗಿ) ದೇಹಲ್ಲಿದ್ದುಗೊಂಡು ಇದು ನಿತ್ಯನಾದ ಜೀವಿಯ ಈ ಗುಣಂಗಳ ಬಂಧನಕ್ಕೆ ಒಳಪಡುಸುತ್ತು.

ತಾತ್ಪರ್ಯ / ವಿವರಣೆ

ಜೀವಿಯು ಆಧ್ಯಾತ್ಮಿಕನಾಗಿದ್ದವ°. ಹಾಂಗಾಗಿ ಅವಂಗೂ ಐಹಿಕ ಪ್ರಕೃತಿಗೂ ಸಂಬಂಧ ಇಲ್ಲೆ. ಆದರೂ ಅ ಜೀವಿ ಐಹಿಕ ಪ್ರಕೃತಿಯ ಸಂಪರ್ಕಂದಲಾಗಿ ಪ್ರಕೃತಿಲಿಯೇ ಅಂಟಾಗಿಪ್ಪ ಸತ್ವ-ತಮ-ರಜೋಗುಣಂಗಳೆಂಬ ಪ್ರಕೃತಿಯ ತ್ರಿಗುಣಂಗೊ ಅವನ ಬಂಧನಕ್ಕೆ ಸಿಕ್ಕುಸುತ್ತು. ಹೇಳಿರೆ ಪ್ರಕೃತಿಯ ಪ್ರಭಾವಂದ ಜೀವಿಯು ಜೀವಿಸುತ್ತ°, ಪ್ರಕೃತಿಯ ಪ್ರಭಾವಕ್ಕೆ ಮಣಿತ್ತ°, ಹೊಂದಿಗೊಳ್ಳುತ್ತ°, ವರ್ತಿಸುತ್ತ°. ಇಲ್ಲಿ ಸೂಕ್ಷ್ಮವಾಗಿಪ್ಪ ವಿಶೇಷ ಎಂತರ ಹೇಳಿರೆ ವಸ್ತುಶಃ ಜೀವಿಯ ಸ್ವಭಾವ ಸ್ವರೂಪ ಬೇರೆ, ವರ್ತನೆ ಬೇರೆ. ಇದಕ್ಕೆ ಕಾರಣ ಪ್ರಕೃತಿಯ ತ್ರಿಗುಣ ತತ್ವಂಗೊ. ಸುಖ-ದುಃಖಂಗಳ ವೈವಿಧ್ಯಕ್ಕೆ ಇದುವೇ ಕಾರಣ.

ಬನ್ನಂಜೆ ಈ ಶ್ಲೋಕವ ಸೊಗಸಾಗಿ ಮತ್ತು ವಿವರವಾಗಿ ವ್ಯಾಖ್ಯಾನಿಸಿದ್ದವು – ಸತ್ವ-ರಜಸ್ಸು-ತಮಸ್ಸು ಹೇಳ್ವ ಈ ಮೂರು ಜಡಪ್ರಕೃತಿಂದ ಮೂಡಿಬಂದ ತ್ರಿಗುಣಂಗೊ. ಅಳಿವಿಲ್ಲದ್ದ ಜೀವನ ಇವು ದೇಹಲ್ಲಿ ಕಟ್ಟಿಹಾಕುತ್ತು. ಈ ಪ್ರಪಂಚದ ಸರ್ವ ಜೀವಜಾತದ ಅಬ್ಬೆಯಾದ ಪ್ರಕೃತಿ – ಗುಣತ್ರಯಮಾನಿನಿ. ಹಾಂಗಾಗಿ ಪ್ರತಿಯೊಂದು ಜೀವ ಹುಟ್ಟುವಾಗಳೂ ಕೂಡ ಸತ್ವ-ರಜಸ್ಸು-ತಮಸ್ಸೆಂಬ ಮೂರು ಗುಣಂಗಳೊಂದಿಂಗೆ ಹುಟ್ಟುತ್ತು ಮತ್ತು ಈ ಗುಣಂಗಳ ಪ್ರಭಾವಲ್ಲಿ ಬೆಳೆತ್ತು. ಮೂರು ಗುಣಂಗಳಲಿಲ್ಲದ್ದೆ ಶುದ್ಧವಾದ ಏಕಗುಣಂದ ಏವ ಜೀವಿಯೂ ಸೃಷ್ಟಿಯಾವ್ತಿಲ್ಲೆ. ಜಡಲ್ಲಿಯೂ ಕೂಡ ಈ ಮೂರು ಗುಣಂಗಳ ಕಾಂಬಲಕ್ಕು. ಸದಾ ಊರ್ಧ್ವಮುಖ ಬೆಣಚಿಯ ಕೊಡುವ ಕಿಚ್ಚು ಸತ್ವ, ಅಸ್ಪಷ್ಟತೆಯ ಸ್ಥಾನವಾದ ನೀರು ರಜಸ್ಸು ಮತ್ತೆ ಸದಾ ಕೆಳಮುಖವಾಗಿ ಸೆಳವ ಮಣ್ಣು ತಮಸ್ಸು. ಜಗತ್ತಿನ ಎಲ್ಲ ವಸ್ತುಗೊ ಈ ಮೂರರ ಸಂಯೋಗ. ಉದಾಹರಣಗೆ ಬತ್ತ., ಅದರ ಭೂಮಿಲಿ (ಮಣ್ಣು- ತಮಸ್ಸು) ಬಿತ್ತುತ್ತೆಯೊ°. ಅಲ್ಲಿ ಅದಕ್ಕೆ ನೀರರದು (ನೀರು – ರಜಸ್ಸು), ಅದು ಸೂರ್ಯನ ಪ್ರಕಾಶವ (ಸೂರ್ಯ – ಸತ್ವ) ಹೀರಿ ಚಿಗುರಿ ಬೆಳದು ಫಸಲು ಕೊಡುತ್ತು. ಆ ಫಸಲಿನ ಕೊಯ್ದು ಅಕ್ಕಿ ಮಾಡಿ ನಾವು ಆಹಾರವಾಗಿ ಉಪಯೋಗಿಸುತ್ತು. ಅಕ್ಕಿಗೆ (ತಮಸ್ಸು) ನೀರ (ರಜಸ್ಸು) ಸೇರ್ಸಿ ಬೇಶಿ (ಶಾಖ – ಸತ್ವ) ಅನ್ನವನ್ನಾಗಿ ಮಾಡಿ ಉಣ್ತು. ಅಕಿಯಾಗಲಿ, ಅಶನವಾಗಲಿ ಎಲ್ಲವೂ ಮಣ್ಣು-ನೀರು-ಕಿಚ್ಚು ಈ ಮೂರರ ಸಂಯೋಜನೆ. ಹೀಂಗೆ ಸತ್ವ-ರಜಸ್ಸು-ತಮಸ್ಸು ಹೇಳ್ವ ಗುಣತ್ರಯಂಗಳಿಂದ ಈ ಸಮಗ್ರ ಸೃಷ್ಟಿ ನಿರ್ಮಾಣ ಆಯ್ದು.  ಹುಟ್ಟುವ ಪ್ರತಿಯೊಂದು ಜೀವವೂ ಈ ಮೂರು ಗುಣಂಗಳ ಪ್ರಭಾವಂದ ಹುಟ್ಟುತ್ತು. ಜೀವವ ಈ ಮೂರು ಗುಣಂಗೊ ಬಂಧಿಸುತ್ತು.

ಒಬ್ಬ ವ್ಯಕ್ತಿಲಿ ಮೂರು ಗುಣಂಗಳ ಪ್ರಮಾಣ ಬೇರೆ ಬೇರೆ ಆಗಿರುತ್ತು. ಅತ್ಯಂತ ಸಾತ್ವಿಕನಾದ ಮೋಕ್ಷಯೋಗ್ಯ ಜೀವಿಲಿ ಕೂಡ ಈ ಮೂರು ಗುಣಂಗ ಇದ್ದೇ ಇರ್ತು. ನೂರಕ್ಕೆ ನೂರು ಶುದ್ಧ ಸತ್ವಗುಣ ಒಬ್ಬನಲ್ಲೂ ಕಾಂಬಲೆಡಿಯ. ಜಡಲ್ಲಿ ನೋಡಿರೆ ಕಿಚ್ಚು – ಸತ್ವ, ಆದರೆ ಅದರೊಟ್ಟಿಂಗೆ ಹೊಗೆ – ರಜಸ್ಸು, ಸೌದಿ – ತಮಸ್ಸು. ಸತ್ವ ಗುಣದ ಸಾಕ್ಷಾತ್ಕಾರ ಇಪ್ಪದೇ ರಜಸ್ಸು ಮತ್ತೆ ತಮಸ್ಸಿನ ಮೂಲಕ. ಹೀಂಗೆ ಈ ಗುಣತ್ರಯಂಗಳ ಬಂಧನಂದಲಾಗಿ ಸ್ವರೂಪತಃ ಹುಟ್ಟುಸಾವಿಲ್ಲದ ಜೀವ ಸ್ಥೂಲ ದೇಹವ ಪಡದು ಹುಟ್ಟುತ್ತು, ಮತ್ತೆ ಮುಂದೆ ಆ ದೇಹವ ಕಳದು ಸಾಯುತ್ತು. ಹುಟ್ಟು ಸಾವಿಲ್ಲದ ಮೋಕ್ಷವ ಸೇರ್ಲೆ ನಾವು ನಮ್ಮೊಂದಿಗಿಪ್ಪ ಈ ಮೂರು ಅಂತಃಶತ್ರುಗಳ ಗೆಲ್ಲೆಕು.

ಇಲ್ಲಿ ‘ಮಹಾಬಾಹು’ ಹೇಳಿ ಅರ್ಜುನನ ದೆನಿಗೊಂಡಿದ° ಭಗವಂತ°. “ನಿನ್ನ ಬಂಧಿಸಿ ತಮ್ಮ ಇಷ್ಟದಂತೆ ಕುಣುಶುವ ಈ ತ್ರಿಗುಣಂಗಳ ಗೆಲ್ಲುವ ‘ಮಹಾಬಾಹು’ ಆಗು, ಕುಸ್ಸಿತವ ನಿರಾಕರಣೆ ಮಾಡಿ ಅಧ್ಯಾತ್ಮದ ಶೂರನಾಗು” ಹೇಳ್ವ ಧ್ವನಿ ಈ ವಿಶೇಷಣದ ಹಿಂದೆ ಇದ್ದು ಹೇದು ಭಗವಂತ° ಹೇಳಿದ್ದಾಗಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಬನ್ನಂಜೆ ಇನ್ನೂ ವಿಶ್ಲೇಷಿಸುತ್ತವು – ಇಡೀ ವಿಶ್ವ, ನಮ್ಮ ಬದುಕು, ಎಲ್ಲವೂ ಗುಣತ್ರಯದ ವಿಕಾರ. ನಮ್ಮ ಮನಸ್ಸು, ನಮ್ಮ ಚಿಂತನೆ, ನಮ್ಮ ನಿರ್ಧಾರ, ನಮ್ಮ ಓದು, ನಮ್ಮ ನಂಬಿಕೆ ಎಲ್ಲವೂ ಈ ಗುಣಂಗಳ ಪ್ರಭಾವಂದ ನಡವದು. ನಮ್ಮ ಸರಿ ದಾರಿಲಿ ನಡಶುವದೂ ಇದೇ ತ್ರಿಗುಣಂಗೊ, ನಮ್ಮ ದಾರಿ ತಪ್ಪುಸುವದೂ ಇದೇ ಈ ತ್ರಿಗುಣಂಗೊ. ಏವ ದಾರಿಲಿ ಸಾಗಿರೆ ನವಗೆ ಒಳಿತಾವ್ತು ಹೇಳ್ವ ತೀರ್ಮಾನ ಮಾಡಿಗೊಂಡು ಆಯ್ಕೆ ಮಾಡುವ ಎಚ್ಚರ ನವಗೆ ಬರೇಕ್ಕಾರೆ ನಾವು ಏವ ದಾರಿಲಿ ಸಾಗುತ್ತಿದ್ದು ಹೇಳ್ವ ಜ್ಞಾನ ನವಗೆ ಬೇಕು. ಹಾಂಗಾಗಿ ತ್ರಿಗುಣಂಗಳ ಬಗ್ಗೆ ಜ್ಞಾನ ಅತೀ ಮುಖ್ಯ.
ಒಬ್ಬ ವ್ಯಕ್ತಿಯ ನಿಯಂತ್ರುಸುವ ಸಂಗತಿಗೊ ನಾಲ್ಕು. ಒಂದು ಅನಾದಿಕಾಲಂದ ಜೀವದೊಟ್ಟಿಂಗೆ ಜೀವ ಸ್ವರೂಪಲ್ಲಿ ಸೇರಿಕೊಂಡಿಪ್ಪ ‘ಸ್ವಭಾವ’. ಇದು ಅದರ ಸಹಜ ಸ್ವಭಾವ. ಇದರೊಟ್ಟಿಂಗೆ ಸತ್ವ, ರಜಸ್ಸು, ತಮಸ್ಸು ಈ ಮೂರು ‘ಪ್ರಭಾವಂಗೊ’.  ಸ್ವಭಾವ ಎಂದೂ ಬದಲಾವುತ್ತಿಲ್ಲೆ. ನಾವು ನಮ್ಮ ಸ್ವಭಾವವ ಗುರುತಿಸಿಗೊಳ್ಲೆಕು. ಆದರೆ ನಮ್ಮ ಮೂಲಸ್ವಭಾವ ಎಂತರ ಹೇಳ್ವದು ನವಗೆ ಗೊಂತೇ ಆವ್ತಿಲ್ಲೆ. ಎಂತಕೆ ಹೇಳಿರೆ ಈ ಸ್ವಭಾವದ ಮೇಗಂದ ಮುಚ್ಚಿಗೆಯಾಗಿ ‘ಪ್ರಭಾವ’ ಕೂದೊಂಡಿದ್ದು. ನಾವು ಸದಾ ಈ ಮುಚ್ಚಳದ ಪ್ರಭಾವನ್ನೇ ನಮ್ಮ ಸ್ವಭಾವ ಹೇದು ಭ್ರಮೆಂದ ಇರ್ತು. ಆದರೆ ಅದು ನಮ್ಮ ನಿಜಸ್ವರೂಪ ಸ್ವಭಾವ ಅಲ್ಲ. ಅದು ಪ್ರಭಾವ. ಇಡೀ ಜೀವಮಾನದುದ್ದಕ್ಕೂ ನಮ್ಮ ಸ್ವಭಾವ ಎಂತರ ಹೇಳ್ವದು ನವಗೆ ತಿಳಿಯದ್ದೇ ಹೋಕು. ಸ್ವಭಾವ ಎಂತರ ಹೇದು ತಿಳಿಯದ್ದೆ ನಾವು ಈ ಪ್ರಭಾವದೊಳ ಬಿದ್ದು ಒದ್ದಾಡುತ್ತಿರುತ್ತು. ನವಗೆ ಈ ತ್ರಿಗುಣಂಗಳ ಪ್ರಭಾವ ಹೇಂಗೆ ಕೆಲಸ ಮಾಡುತ್ತು ಹೇಳ್ವದರ ತಿಳಿಯದ್ದೆ ಇದ್ದರೆ ನಮ್ಮ ನಾವು ತಿದ್ದಿಗೊಂಬಲೆ ಎಡಿವಲೇ ಎಡಿಯ. ಇಂದು ನಾವು ನಮ್ಮ ಸ್ವಭಾವವ ಮತ್ತೆ ಸತ್ವಗುಣವ ಮೂಲಗೆ ಒತ್ತಿ, ರಜಸ್ಸು ಮತ್ತೆ ತಮಸ್ಸುಗಳ ಹತೋಟಿಲಿ ಬದುಕುತ್ತಿದ್ದು.

ಮದಾಲು ನಾವು ನಮ್ಮ ತಿದ್ದಿಗೊಳ್ಳೆಕು – ಸಮಾಜವ ಅಲ್ಲ. ನಮ್ಮಲ್ಲಿ ಸತ್ವದ ಅಂಶ ಎಷ್ಟಿದ್ದು, ರಜಸ್ಸಿನ ಅಂಶ ಎಷ್ಟಿದ್ದು, ತಮಸ್ಸಿನ ಅಂಶ ಎಷ್ಟಿದ್ದು ಹೇಳ್ವದರ ತಿಳುದು, ನಮ್ಮ ನಡೆಲಿ ಸತ್ವದ ಅಂಶವ ಹೆಚ್ಚಿಗೆ ಬಳಸಿ, ಅದರ ಅಂಶವ ಹೆಚ್ಚಿಸಿಗೊಂಬಲೆ ಪ್ರಯತ್ನಿಸೆಕು. ಹಿಂದೆ ನಡದ ಘಟನೆಗಳಲ್ಲಿ ನಾವು ಎಲ್ಲಿ ರಜಸ್ಸಿನ ಮತ್ತೆ ತಮಸ್ಸಿನ ಪ್ರಭಾವಂದ ತಪ್ಪಿದ್ದು ಹೇಳ್ವ ಆತ್ಮಚಿಂತನೆ ನಡೆಶಿ ಮುಂದೆ ಹಾಂಗಾಂಗದ್ದಾಂಗೆ ಎಚ್ಚರವಹಿಸೆಕು. ಈ ವಿಚಾರವ ತಿಳುದು ನಡದರೆ ನಾವು ನಮ್ಮ ನಿಯಂತ್ರಿಸಿಗೊಂಡು ಬಹು ಆನಂದಂದ ಬದುಕ್ಕಲೆಡಿಗು.

ಹಾಂಗಾರೆ ಸತ್ವದ, ರಜಸ್ಸಿನ, ತಮಸ್ಸಿನ ಬದುಕು ಹೇಂಗಿರುತ್ತು ? –

ಶ್ಲೋಕ

ತತ್ರ ಸತ್ತ್ವಂ ನಿರ್ಮಲತ್ವಾತ್ ಪ್ರಕಾಶಕಮನಾಮಯಮ್ ।
ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ ॥೦೬॥

ಪದವಿಭಾಗ

ತತ್ರ ಸತ್ತ್ವಮ್ ನಿರ್ಮಲತ್ವಾತ್ ಪ್ರಕಾಶಕಮ್ ಅನಾಮಯಮ್ । ಸುಖ-ಸಂಗೇನ ಬಧ್ನಾತಿ ಜ್ಞಾನ-ಸಂಗೇನ ಚ ಅನಘ ॥

ಅನ್ವಯ

ಹೇ ಅನಘ!, ತತ್ರ ಅನಾಮಯಂ ಪ್ರಕಾಶಕಂ ಸತ್ತ್ವಂ ನಿರ್ಮಲತ್ವಾತ್ (ಆತ್ಮಾನಂ) ಸುಖ-ಸಂಗೇನ ಜ್ಞಾನ-ಸಂಗೇನ ಚ ಬಧ್ನಾತಿ ।

ಪ್ರತಿಪದಾರ್ಥ

ಹೇ ಅನಘ! – ಏ ಪಾಪರಹಿತನಾದ ಅರ್ಜುನ!, ತತ್ರ – ಅಲ್ಲಿ (ಸತ್ವ, ತಮ, ರಜೋಗುಣಂಗಳಲ್ಲಿ),  ಅನಾಮಯಮ್ – ಏವ ಪ್ರತಿಕ್ರಿಯೆಯೂ ಇಲ್ಲದ್ದ, ಪ್ರಕಾಶಕಮ್ – ಪ್ರಕಾಶಮಾನವಾದ, ಸತ್ತ್ವಮ್ – ಸತ್ವಗುಣವು, ನಿರ್ಮಲತ್ವಾತ್ – ಭೌತಿಕ ಜಗತ್ತಿಲ್ಲಿ ಅತಿಶುದ್ಧವಾಗಿದ್ದುಗೊಂಡದ್ದರಿಂದಲಾಗಿ, (ಆತ್ಮಾನಮ್ – ಜೀವಿಯ), ಸುಖ-ಸಂಗೇನ – ಸುಖಸಂಗಂದ,  ಜ್ಞಾನ-ಸಂಗೇನ – ಜ್ಞಾನಸಂಗಂದ, ಚ – ಕೂಡ, ಬಧ್ನಾತಿ – ಬದ್ಧಗೊಳುಸುತ್ತು.

ಅನ್ವಯಾರ್ಥ

ಏ ಪಾಪರಹಿತನಾದ ಅರ್ಜುನ!, ಸಾತ್ವಿಕಗುಣ (ಇತರ ಗುಣಂಗಳಿಂದ) ನಿರ್ಮಲವಾದ್ದರಿಂದಲಾಗಿ, ಅದು ಪ್ರಕಾಶಮಾಗಿದ್ದು, ಜೀವಿಯ ಸುಖಸಂಗಂದ, ಜ್ಞಾನಸಂಗದ ಬದ್ಧಗೊಳುಸುತ್ತು (ಪಾಪ ಪ್ರತಿಕ್ರಿಯೆಂದ ಬಿಡಗಡೆಗೊಳುಸಿ ಜ್ಞಾನ ಮತ್ತೆ ಸುಖಲ್ಲಿ ಬದ್ಧಗೊಳುಸುತ್ತು).

ತಾತ್ಪರ್ಯ / ವಿವರಣೆ

ಐಹಿಕ ಪ್ರಕೃತಿಂದ ಬದ್ಧರಾದ ಜೀವಿಗೊ ಹಲವು ಬಗೆವು. ಒಬ್ಬ° ಸುಖವಾಗಿರುತ್ತ°, ಮತ್ತೊಬ್ಬ° ಬಹು ಚಟುವಟಿಕೆಂದ ಇರುತ್ತ°, ಇನ್ನೊಬ್ಬ° ನಿಸ್ಸಾಯಕನಾಗಿರುತ್ತ°. ಈ ಎಲ್ಲ ಬಗೆಯ ಮಾನಸಿಕ ಅಭಿವ್ಯಕ್ತಿಗೊ ಪ್ರಕೃತಿಲಿ ಜೀವಿಯ ಬದ್ಧಸ್ಥಿತಿಯ ಕಾರಣ. ಅವು ಹೇಂಗೆ ಭಿನ್ನಭಿನ್ನವಾಗಿ ಬದ್ಧವಾಗಿರುತ್ತು ಹೇಳ್ವದರ ಭಗವಂತ° ಈ ಭಾಗಲ್ಲಿ ವಿವರಿಸಿದ್ದ°.

ಇದನ್ನೂ ಬನ್ನಂಜೆಯವರ ವಿಶ್ಲೇಷಣೆಂದಲೆ ವಿವರಣೆಯ ನೋಡುವೊ° –  ಕಣ್ಣುಮುಚ್ಚಿ ಕೂದುಗೊಂಡು ನಮ್ಮೊಳ ನಾವು ನೋಡೆಕು. ನಮ್ಮೊಳ ನಡವ ಮಾನಸಿಕ ಬೆಳವಣಿಗೆಗೊ, ಚಿಂತನೆಗೊ, ಯೋಚನೆಗೊ, ಭಾವನೆಗಳ ನೋಡೆಕು. ಸತ್ವಗುಣದ ಪ್ರಭಾವ ನಮ್ಮ ಮೇಗೆ ಆಗಿದ್ದರೆ, ನಮ್ಮೊಳ ನಾವು ಸ್ವಚ್ಛ, ನಿರ್ಮಲ, ನಿರಾಳವಾದ ಪ್ರಜ್ಞಲುಸುವ ಬೆಣಚ್ಚಿಯ ನಾವು ಕಾಂಬಲೆಡಿಗು. ನಮ್ಮ ಅಂತರಂಗ ಪ್ರಪಂಚಕ್ಕೆ ಪೂರ್ಣ ವಿದ್ಯುತ್ ಸಂಪರ್ಕ ಆಯ್ದು. ದೀಪವ, ಆ ದೀಪವ ನಿಯಂತ್ರುಸುವ ಅನೇಕ ಸ್ವಿಚ್ ಅಳವಡಿಸಿಗೊಂಡಿದ್ದು. ಇಲ್ಲಿ ನಿರಂತರ ವಿದ್ಯುತ್ ಸರಬರಾಜು ಆವ್ತಾ ಇದ್ದು. ಆದರೆ ನವಗೆ ಆ ಸ್ವಿಚ್ ಎಲ್ಲಿದ್ದು ಹೇಳ್ವದು ಗೊಂತಿರ್ತಿಲ್ಲೆ. ಹಾಂಗಾಗಿ ಎಲ್ಲ ಇದ್ದರೂ ಸದಾ ನಮ್ಮೊಳದಿಕ್ಕೆ ಕಸ್ತಲೆ ಆವರಿಸಿಗೊಂಡಿದ್ದು. ನಾವು ಅದರ ಉಪಯೋಗುಸುತ್ತೇ ಇಲ್ಲೆ. ನಮ್ಮಲ್ಲಿ ಸತ್ವಗುಣ ಜಾಗೃತವಾಗಿಪ್ಪಗ ನವಗೆ ಆ ಸ್ವಿಚ್ ಸಿಕ್ಕುತ್ತು. ಹಾಂಗಾಗಿ ಏವುದೇ ದೋಷ ಇಲ್ಲದ್ದೆ ಜ್ಞಾನದ ಬೆಣಚ್ಚಿ ನಮ್ಮೊಳದಿಕ್ಕೆ ಪ್ರಕಾಶಿಸುತ್ತು. ಸತ್ವದ ಗುಣ ಜಾಗೃತವಾದಪ್ಪಗ ನಮ್ಮಲ್ಲಿ ಅಂತರಂಗದ ಆನಂದ ತುಂಬಿ ತುಳುಕುತ್ತು. ನಮ್ಮಲ್ಲಿ ಹೆಚ್ಚಿನವಕ್ಕೆ ಈ ಅನುಭವ ಆಗಿರ್ತು. ಉದಾಹರಣಗೆ, ಕೆಲವೊಂದರಿ ನಾವು ಹೇಳ್ತದಿದ್ದು – ‘ಎಂತಕೋ ಎನಗಿಂದು ಅತೀ ಸಂತೋಷ ಆವ್ತಾ ಇದ್ದು’. ಅಲ್ಲಿ ಎಂತ ವಿಶೇಷವೂ ಕಾರಣವಾಗಿರ್ತಿಲ್ಲೆ. ಆದರೆ ಅಂತರಂಗದ ಆನಂದ ಹೊರಹೊಮ್ಮುತ್ತದರ ನಾವು ಅನುಭವುಸುತ್ತದು ಅಷ್ಟೇ. ಇದು ಸತ್ವ ಗುಣದ ಜಾಗೃತಾವಸ್ಥೆ. ಜ್ಞಾನಂದ ಬಪ್ಪ ಸುಖವೆಲ್ಲವೂ ಸಾತ್ವಿಕ.

ಇನ್ನು ಇಲ್ಲಿ ಭಗವಂತ° ಒಂದು ಎಚ್ಚರಿಕೆಯನ್ನೂ ಹೇಳಿದ್ದ°. ಸತ್ವಗುಣ ನಮ್ಮಲ್ಲಿ ಜಾಗೃತ ಆಯೇಕ್ಕಾರೆ ನಾವು ‘ಅನಘ’ರಾಯೇಕು. ಪಾಪಸ್ಪರ್ಶ ನಮ್ಮಲ್ಲಿದ್ದರೆ ಸತ್ವಗುಣ ಜಾಗೃತವಾಗ. ಹಾಂಗಾಗಿ ನಾವು ಪಾಪಂದ ದೂರ ಇರೆಕು. ಪಾಪಸ್ಪರ್ಶ ಎಷ್ಟು ಹೆಚ್ಚುತ್ತೋ ಅಷ್ಟು ಸತ್ವಗುಣ ದೂರ ಹೋವ್ತು.

ಮೋಕ್ಷ ಸಾಧನೆಲಿ ಸತ್ವಗುಣ ಸಾಧನವಾದರೂ, ಇದು ತ್ರಿಗುಣಂಗಳಲ್ಲಿ ಒಂದು. ಹಾಂಗಾಗಿ ಸತ್ವಗುಣ ಕೂಡ ಬಂಧಕವಾಗಿಹೋಪಲೆಡಿಗು. ಇದು ಸುಖದ ನಂಟಿಂದ, ತಿಳಿವಿನ ನಂಟಿಂದ ನಮ್ಮ ಕಟ್ಟಿ ಹಾಕುಗು. ಉದಾಹರಣಗೆ, ಜ್ಞಾನ ಸಾಧನೆ ಸಾತ್ವಿಕ ಗುಣ. ಇಲ್ಲಿ ಭಗವಂತನ ವಿಷಯವಲ್ಲದ್ದ ಜ್ಞಾನ ಸಾಧನೆಯ ನಂಟಿಲ್ಲಿ ಬಿದ್ದರೆ ಅದು ಬಂಧಕವಾವ್ತು. ನಾವು ಏವುದೋ ಸಂಶೋಧನೆ, ಅನ್ವೇಷಣೆಲಿ ಮುಳುಗಿದ್ದರೆ ಅದು ನಮ್ಮ ಮೋಕ್ಷದೆಡೆಂಗೆ ಕೊಂಡೋಗ. ನಾವು ಆ ಸಂಶೋಧನೆಲಿ ಬಪ್ಪ ಫಲಿತಾಂಶದ ಸುಖದ ನಂಟಿಲ್ಲಿ ಸಿಲುಕಿ ಸತ್ವಗುಣದ ಬಂಧನಕ್ಕೊಳಗಾವ್ತು. ಮೋಕ್ಷ ಸಾಧನೆಲಿ ನಾವು ಸತ್ವವನ್ನೂ ದಾಂಟೆಕು. ಎಂತಕೆ ಹೇಳಿರೆ ಮೋಕ್ಷ ತ್ರಿಗುಣಾತೀತ. ಇಲ್ಲಿ ಭಗವಂತ° ಸತ್ವ ಗುಣವನ್ನೂ ‘ಬಧ್ನಾತಿ’ – ಬಂಧನಕ್ಕೊಳಪಡುಸುತ್ತು ಹೇಳಿ ಹೇಳಿದ್ದ°. ಎಂತಕೆ ಹೇಳಿರೆ ಈ ಬಂಧನ ಸುಲಭಲಿ ಬಿಡಿಸಿಗೊಂಬಲೆ ಎಡಿಗಪ್ಪ ಬಂಧನ. ಅದು ಎಂದೂ ನಮ್ಮ ಕೆಳತ್ತಾಗಿ ತಳ್ಳುತ್ತಿಲ್ಲೆ. ಏವ ‘ಸತ್ವ’ ಭಗವಂತನ ಹತ್ರಂಗೆ ಹೋಗದ್ದೆ ನಮ್ಮ ಬಂಧನಲ್ಲಿ ಸುತ್ತಾಡುಸುತ್ತೋ ಆ ಸತ್ವಂದ ಪಾರಾಯೇಕು, ಭಗವಂತನ ಜ್ಞಾನವ ಗಳುಸುವ ‘ಸತ್ವಗುಣ’ವ ಬೆಳೆಶೆಕು.

ಶ್ಲೋಕ

ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಮ್ ।
ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಮ್ ॥೦೭॥

ಪದವಿಭಾಗ

ರಜಃ ರಾಗ-ಆತ್ಮಕಂ ವಿದ್ಧಿ ತೃಷ್ಣಾ-ಸಂಗ-ಸಮುದ್ಭವಂ । ತತ್ ನಿಬಧ್ನಾತಿ ಕೌಂತೇಯ ಕರ್ಮ-ಸಂಗೇನ ದೇಹಿನಂ ॥

ಅನ್ವಯ

ಹೇ ಕೌಂತೇಯ!, ರಾಗ-ಆತ್ಮಕಂ ರಜಃ ತೃಷ್ಣಾ-ಸಂಗ-ಸಮುದ್ಭವಂ ವಿದ್ಧಿ । ತತ್ ದೇಹಿನಂ ಕರ್ಮ-ಸಂಗೇನ ನಿಬಧ್ನತಿ ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನೇ!, ರಾಗ-ಆತ್ಮಕಮ್ ರಜಃ – ಆಸೆ/ಆಸಕ್ತಿಂದ ಕೂಡಿಪ್ಪದ ರಜೋಗುಣ, ತೃಷ್ಣಾ-ಸಂಗ-ಸಮುದ್ಭವಮ್ – ದಾಹ/ಕಾತರತೆಯ ಸಂಗಂದ ಉತ್ಪನ್ನವಾದ್ದು, ವಿದ್ಧಿ – ತಿಳುಕ್ಕೊ, ತತ್ ದೇಹಿನಮ್ – ಅದು ದೇಹಿಯ (ಜೀವಿಯ), ಕರ್ಮ-ಸಂಗೇನ – ಕಾಮ್ಯಕರ್ಮಸಂಗಂದ, ನಿಬಧ್ನತಿ – ಬಂಧಿಸುತ್ತು.

ಅನ್ವಯಾರ್ಥ

ಏ ಕುಂತಿಯ ಮಗನಾದ ಅರ್ಜುನ!, ಆಸೆ/ಆಸಕ್ತಿ ಕೂಡಿಪ್ಪ ರಜೋಗುಣವು ದಾಹ/ಬಯಕೆಯ ಸಂಗಂದ (ಪ್ರಭಾವಂದ) ಹುಟ್ಟುತ್ತದು ಹೇದು ನೀನು ತಿಳುಕ್ಕೊ. ಇದು (ರಜೋಗುಣವು) ಜೀವಿಯ ಐಹಿಕ ಕಾಮ್ಯ ಕರ್ಮಂಗಳಲ್ಲಿ ಸಿಕ್ಕುಸುತ್ತು (ಬಂಧಿಸುತ್ತು).

ತಾತ್ಪರ್ಯ / ವಿವರಣೆ

ರಜೋಗುಣ ರಂಜಿಸುವಂಥಾದ್ದು. ಆಸೆ-ಆಸಕ್ತಿಗಳ ಹುಟ್ಟುಸುವಂಥಾದ್ದು. ಅದು ಜೀವವ ಕರ್ಮದ ನಂಟಿಂದ ಕಟ್ಟಿಹಾಕುತ್ತು. ರಜಸ್ಸು ಹೇಳಿರೆ ‘ರಾಗ’ – ಒಂದು ವಸ್ತು/ವಿಷಯವ ತುಂಬಾ ಇಷ್ಟಪಡುವದು, ಬಯಕೆಗಳ ಸರಮಾಲೆ. ಹೀಂಗೆ ಎಲ್ಲಾ ಪಂಚೇಂದ್ರಿಯಂಗಳ ಬಯಕೆ ರಜೋಗುಣದ ಪ್ರಭಾವಂದ ಉಂಟಪ್ಪಂತಾದ್ದು. ಇದು ತೃಷ್ಣಾ (ದಾಹ) ಮತ್ತೆ ಸಂಗ (ಒಡನಾಟಕ್ಕೆ) ಕಾರಣ. ಇಲ್ಲಿ ತೃಷ್ಣಾ ಹೇಳಿರೆ ಬೇಕು ಬೇಕು ಹೇಳ್ವ ದಾಹ. ಸಂಗ ಹೇಳಿರೆ ಒಂದು ವಸ್ತುವಿನತ್ರೆ ಒಡನಾಟ. ರಜೋಗುಣ ಬಯಕೆಯ ಹೆಚ್ಚುಸುತ್ತು. ಆ ಬಯಕೆಂದ ಒಡನಾಟ. ಒಡನಾಟ ಜೀವಿಯ ಅಂಟುಸುತ್ತು. ಹೀಂಗೆ ಹಂತಹಂತವಾಗಿ ರಜೋಗುಣ ನಮ್ಮ ಬಿಡಿಸಿಗೊಂಬಲೆಡಿಗಾಗದ್ದ ಬಂಧನಕ್ಕೊಳಪಡುಸುತ್ತು. ಇದರ ಪ್ರಭಾವಂದ ನಾವು ಜ್ಞಾನದ ಬಯಕೆ ಇಲ್ಲದ್ದೆ ಕರ್ಮಸಂಗ ಮಾಡ್ಳೆ ಸುರುಮಾಡುತ್ತು. ಪೈಸಗೆ (ಸಂಪತ್ತಿಂಗೆ) ಹೋರಾಟ ಪರದಾಟ ಬಡಿದಾಟ, ಸ್ತ್ರೀ ಪುರುಷರ ಪರಸ್ಪರ ಆಕರ್ಷಣೆ, ಇಂದ್ರಿಯ ತೃಪ್ತಿಯ ಭೋಗದ ಹಂಬಲ, ಪ್ರತಿಷ್ಠೆ, ಅದಕ್ಕಾಗಿ ನಾನಾ ಕರ್ಮ, ಶ್ರಮ, ದಾರಿಗಳ ಹುಡುಕ್ಕಲೆ ಸುರುಮಾಡುತ್ತು.  ಹೀಂಗೆ ನಾನ ಕಾಮ್ಯಕರ್ಮದ ದಾಸನಾಗಿಬಿಡುತ್ತು. ಸತ್ವಗುಣದವಕ್ಕೇ ಬಿಡುಗಡೆ ಇಲ್ಲದ್ದಿಪ್ಪಗ ಇನ್ನು ರಜೋಗುಣಲ್ಲಿ ಸಿಕ್ಕಿಗೊಂಡವಕ್ಕೆಲ್ಲಿಂದ ಬಿಡುಗಡೆ !

ಶ್ಲೋಕ

ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಮ್ ।
ಪ್ರಮಾದಾಲಸ್ಯನಿದ್ರಾಭಿಃ ತನ್ನಿಬಧ್ನಾತಿ ಭಾರತ ॥೦೮॥

ಪದವಿಭಾಗ

ತಮಃ ತು ಅಜ್ಞಾನಜಮ್ ವಿದ್ಧಿ ಮೋಹನಮ್ ಸರ್ವ-ದೇಹಿನಾಮ್ । ಪ್ರಮಾದ-ಆಲಸ್ಯ-ನಿದ್ರಾಭಿಃ ತತ್ ನಿಬಧ್ನಾತಿ ಭಾರತ ॥

ಅನ್ವಯ

ಹೇ ಭಾರತ!, ತಮಃ ತು ಸರ್ವ-ದೇಹಿನಾಂ ಮೋಹನಮ್ ಅಜ್ಞಾನಜಂ ವಿದ್ಧಿ । ತತ್ (ದೇಹಿನಾಮ್) ಪ್ರಮಾದ-ಆಲಸ್ಯ-ನಿದ್ರಾಭಿಃ ನಿಬಧ್ನಾತಿ ॥

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶಜನೇ!, ತಮಃ ತು – ತಮೋಗುಣ ಆದರೋ, ಸರ್ವ-ದೇಹಿನಾಮ್ – ಎಲ್ಲ ದೇಹಿಗಳ, ಮೋಹನಮ್ – ಮೋಹ, ಅಜ್ಞಾನಜಮ್ ವಿದ್ಧಿ – ಅಜ್ಞಾನಂದಲಾಗಿ ಉತ್ಪನ್ನವಾದ್ದಾಗಿ ತಿಳುಕ್ಕೊ, ತತ್ – ಅದು, (ದೇಹಿನಾಮ್ – ದೇಹಿಗಳ), ಪ್ರಮಾದ-ಆಲಸ್ಯ-ನಿದ್ರಾಭಿಃ – ಮತಿಭ್ರಮಣೆ-ಆಲಸ್ಯ-ಒರಕ್ಕಿಂದ, ನಿಬಧ್ನಾತಿ – ಬಂಧಿಸುತ್ತು.

ಅನ್ವಯಾರ್ಥ

ಏ ಭರತವಂಶಜನಾದ ಅರ್ಜುನ!, ತಮೋಗುಣವಾದರೋ ಅಜ್ಞಾನಂದಲಾಗಿ ಹುಟ್ಟಿಗೊಳ್ತು ಹೇದು ತಿಳುಕ್ಕೊ, ಅದು ದೇಹಿಯ (ಜೀವಿಯ) ಮರ್ಳು(ಬುದ್ಧಿಭ್ರಮಣೆ), ಆಲಸ್ಯ, ಒರಕ್ಕಿಂದ ಬಂಧಿಸುತ್ತು.

ತಾತ್ಪರ್ಯ / ವಿವರಣೆ

ಇಲ್ಲಿ ಭಗವಂತ° “ತಮಃ ತು” – ತಮೋಗುಣವಾದರೋ ಹೇಳಿ ಪದಪ್ರಯೋಗ ಮಾಡಿದ್ದ°. ಇಲ್ಲಿ ‘ತು’ವಿಂಗೆ ವಿಶೇಷ ಪ್ರಾಧಾನ್ಯತೆ ಕೊಟ್ಟಿದ°. ಇದರ ನಿಖರವಾದ ಅನ್ವಯ ತುಂಬಾ ಅರ್ಥವತ್ತಾಗಿದ್ದು. ತಮೋಗುಣ ಬದ್ಧ ಆತ್ಮನ ಒಂದು ಬಹು ವಿಶಿಷ್ಠ ಗುಣ ಹೇಳ್ವದರ ಇಲ್ಲಿ ಒತ್ತಿ ಹೇಳಿದಾಂಗೆ ಇದ್ದು. ತಮೋಗುಣ ಸತ್ವಗುಣಕ್ಕೆ ವಿರುದ್ಧವಾಗಿದ್ದು. ಸತ್ವಗುಣಲ್ಲಿ ಮನುಷ್ಯ° ಜ್ಞಾನವ ಬೆಳೆಶಿಗೊಳ್ಳುತ್ತನಾದರೆ ತಮೋಗುಣಲ್ಲಿ ಅಜ್ಞಾನವೇ ಬೆಳವದು. ತಮೋಗುಣದ ಪ್ರಭಾವಕ್ಕೆ ಸಿಕ್ಕಿದ ಮನುಷ್ಯ ಕಡೇಂಗೆ ಮರ್ಳನೇ ಅಪ್ಪದು. ಮರ್ಳಂಗೆ ಮತ್ತೆ ಸರಿ ಏವುದು , ತಪ್ಪು ಏವುದು ಹೇಳ್ವ ವಿವೇಚನಾ ಶಕ್ತಿ ಇರ್ತಿಲ್ಲೆ. ಇದರಿಂದ ಮತ್ತೂ ಕೀಳುಸ್ಥಿತಿಗೆ ಹೋವ್ತ°. ತಮೋಗುಣಂದ ಪ್ರಭಾವಂದ ಅಜ್ಞಾನ, ಅಜ್ಞಾನದ ಕಾರಣಂದ ವಸ್ತುಸ್ಥಿತಿಯ ತಿಳಿವ ಶಕ್ತಿ ಇಲ್ಲದ್ದಪ್ಪದು. ಮುಂದೆ ಸೋಮಾರಿಗಳಪ್ಪದು. ಸೋಮರಿಯಾದವಂಗೆ ಏವ ಕರ್ಮ ಮಾಡುವ ಲಕ್ಷ್ಮ್ಯ ಇರ್ತಿಲ್ಲೆ. ಏವುತ್ತು ನೋಡಿರು ಒರಗುವದೊಂದೇ ಜ್ಞಾನ. ಒರಗಿ ಸಾಧುಸುವದಾದರೂ ಎಂತರ!. ಒರಗಿ ಒರಗಿ ಎಷ್ಟು ಒರಗಲೆಡಿಗು. ಮತ್ತೆ ಒರಕ್ಕಿಂಗೆ ಮಾತ್ರೆ ತೆಕ್ಕೊಂಬಲೆ ಸುರುಮಾಡುವದು, ಮಾದಕ ದ್ರವ್ಯ ವ್ಯಸನಿ ಇತ್ಯಾದಿ ಅಧಃಪತನದ ಹಾದಿ ಹಿಡಿಯೆಕ್ಕಾವ್ತು. ಹೀಂಗೆ ತಮೋಗುಣ ಮನುಷ್ಯನ ಅಜ್ಞಾನಕ್ಕೆ ತಳ್ಳಿ ಆಲಸಿಯನ್ನಾಗಿಸಿ ಸಾತ್ವಿಕ ಕರ್ಮದತ್ತೆ ಹೋಪಲೆಡಿಯದ್ದಾಂಗೆ ಬಂಧನಕ್ಕೆ ಸಿಲುಕಿಸುತ್ತು.

ತಮೋಗುಣ ಜೀವಿಗೆ ಅಜ್ಞಾನವ ನೀಡುವಂಥಾದ್ದು, ಭ್ರಮೆಗೊಳುಸುವಂಥಾದ್ದು. ಅದು ಮೈಮರವು, ಸೋಮಾರಿತನ, ಒರಕ್ಕಿಂದ ಕಟ್ಟಿ ಹಾಕುತ್ತು. ಎಂತದೂ ಗೊಂತಿಲ್ಲದ್ದೆ ಇಪ್ಪದು ತಮಸ್ಸು. ಎನಗರಡಿಯ, ಎನ್ನಂದೆಡಿಯ, ಎನಗೆಂತಾಗೆಡ ಇತ್ಯಾದಿ ಭಾವನೆಗೊ ಉಂಟಪ್ಪದು ತಮೋಗುಣಂದ. ಎನಗರಡಿಯ ಎನ್ನಂದೆಡಿಯ ಹೇಳ್ತವಂಗೆ ಜ್ಞಾನವಾದರೂ ಬಪ್ಪದೆಲ್ಲಿಂದ!. ಅದರ ಫಲವಾಗಿ ಬಪ್ಪದು ಒರಕ್ಕು, ಆಲಸ್ಯ, ಪ್ರಮಾದ. ಬೋಧಲ್ಲಿಯೂ ಬೋಧ ಇಲ್ಲದ್ದೆ ಇಪ್ಪದು ಪ್ರಮಾದ. ತಪ್ಪು ಮಾಡ್ತದು ತಪ್ಪಲ್ಲ. ತಪ್ಪು ಮಾಡಿ ಗೊಂತಾಗಿಯೂ ತಿದ್ದಿಗೊಳ್ಳದ್ದೆ ಇಪ್ಪದು ಪ್ರಮಾದ. ಇದಕ್ಕೆಲ್ಲ ಕಾರಣ ತಮೋಗುಣ.

ಶ್ಲೋಕ

ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ !
ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ ॥೦೯॥

ಪದವಿಭಾಗ

ಸತ್ತ್ವಮ್ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ ! ಜ್ಞಾನಮ್ ಆವೃತ್ಯ ತು ತಮಃ ಪ್ರಮಾದೇ ಸಂಜಯತಿ ಉತ ॥

ಅನ್ವಯ

ಹೇ ಭಾರತ!, ಸತ್ತ್ವಂ (ದೇಹಿನಾಮ್) ಸುಖೇ ಸಂಜಯತಿ, ರಜಃ ಕರ್ಮಣಿ, ತಮಃ ತು ಜ್ಞಾನಮ್ ಆವೃತ್ಯ ಪ್ರಮಾದೇ ಸಂಜಯತಿ (ಇತಿ) ಉತ ॥

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶಜನೇ!, ಸತ್ತ್ತ್ವಮ್ – ಸತ್ವಗುಣವು, (ದೇಹಿನಾಮ್ – ಜೀವಿಗಳ), ಸುಖೇ – ಸುಖಲ್ಲಿ, ಸಂಜಯತಿ – ಬದ್ಧಗೊಳುಸುತ್ತು, ರಜಃ – ರಜೋಗುಣವು, ಕರ್ಮಣಿ – ಕಾಮ್ಯಕರ್ಮಲ್ಲಿ, ತಮಃ ತು – ತಮೋಗುಣವಾದರೋ, ಜ್ಞಾನಮ್ ಆವೃತ್ಯ – ಜ್ಞಾನವ ಆವರಿಸಿ, ಪ್ರಮಾದೇ – ಮತಿಭ್ರಮಣೆಲಿ, ಸಂಜಯತಿ (ಇತಿ) ಉತ – ಬದ್ಧಗೊಳುಸುತ್ತು (ಹೇದು) ಹೇಳಲಾಯ್ದು.

ಅನ್ವಯಾರ್ಥ

ಏ ಭರತವಂಶಜನಾದ ಅರ್ಜುನ!, ಸತ್ವಗುಣವು ಮನುಷ್ಯನ ಸುಖವಾಗಿಪ್ಪಲೆ ಬದ್ಧಗೊಳುಸುತ್ತು, ರಜೋಗುಣವು ಕಾಮ್ಯಕರ್ಮಂಗಳಲ್ಲಿ ನಿರತನಾಗಿಪ್ಪಲೆ, ತಮೋಗುಣವಾದರೋ ಮನುಷ್ಯನ ಜ್ಞಾನವ ಆವರಿಸಿ ಅವನ ಪ್ರಮಾದಸ್ಥಿತಿಗೆ ಬದ್ಧಗೊಳುಸುತ್ತು ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ಸತ್ವ-ತಮ-ರಜೋಗುಣಂಗಳ ಒಟ್ಟಿಲ್ಲಿ ಸಂಕ್ಷೇಪಿಸಿ ಹೇಳಿದ್ದ°. ಸತ್ವದ ಮೂಲ ಗುಣಧರ್ಮ ಎಂತ ಹೇಳಿರೆ ಸತ್ವಂದಲಾಗಿ ನಮ್ಮಿಂದ ಒಂದು ಸಹಜವಾದ ಆನಂದ ಚಿಮ್ಮುತ್ತು. ರಜೋಗುಣ ಎಂತಾರು ಮಾಡೆಕು ಇಲ್ಲದ್ರೆ ಜೀವನಲ್ಲಿ ಸುಖ ಇಲ್ಲೆ ಹೇದು ಜೀವನ ತಳವಲೆ ಪ್ರಚೋದಿಸುತ್ತು, ತಮಸ್ಸು ನಮ್ಮಲ್ಲಿಪ್ಪ ಜ್ಞಾನವ ಮುಚ್ಚಿ ನಮ್ಮ ಗೊಂದಲ ಪ್ರಮಾದಕ್ಕೆ ತಳ್ಳುತ್ತು. ಕಷ್ಟಲ್ಲಿಪ್ಪವಕ್ಕೆ ಸಕಾಯ ಮಾಡೆಕು ಹೇಳ್ವ ಒಳ್ಳೆತನ , ಕೊಡ್ತದರ್ಲಿ ಕೊಶಿ ಅಪ್ಪದು – ಸತ್ವಗುಣ. ತಾನು ಸುಖವಾಗಿರೆಕು ಹೇದು ಸದಾ ಸುಖದ ಅನ್ವೇಷಣೆಲಿ ತೊಡಗಿ, ಮಾಡ್ಳಾಗದ್ದ ಕೆಲಸವನ್ನೂ ಮಾಡ್ತದು – ರಜೋಗುಣ, ಅಜ್ಞಾನ, ಆಲಸ್ಯ, ಒರಕ್ಕು, ಪ್ರಮಾದ ಇವೆಲ್ಲವೂ ತಮೋಗುಣದ ಪ್ರಭಾವ. ಗೀತೆಯ ಮೂಲಕ ನವಗೆ ಭಗವಂತ° ನೀಡಿದ ಅತ್ಯುನ್ನತ ಮನಃಶಾಸ್ತ್ರ ಇದು. ಹೀಂಗೆ ಈ ಗುಣತ್ರಯಂಗೊ ಹೇಂಗೆ ನಮ್ಮ ನಿಯಂತ್ರಣಕ್ಕೆ ತೆಕ್ಕೊಂಡು ನಮ್ಮ ಕೊಣುಶುತ್ತು ಹೇಳ್ವದರ ಭಗವಂತ ಇಲ್ಲಿ ನಿರೂಪಿಸಿದ್ದ°.

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

4 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 01 – 09

    1. ಚೆನ್ನೈ ಬಾವ,
      ಹರೇ ರಾಮ; ನಿ೦ಗಳ ವಿಶ್ಲೇಷಣಾತ್ಮಕವಾದ ವಿವರಣೆ ಓದಲೆ ತು೦ಬಾ ಕೊಶಿಯಾವುತ್ತು;ಒಟ್ಟಿ೦ಗೆ ನಿ೦ಗಳ ಆಳವಾದ ಅಧ್ಯನವನ್ನುದೆ ದರ್ಶನ ಮಾಡ್ಸುತ್ತು.ನಿ೦ಗಳ ಈ ಭಾವಧಾರೆಯ ಓದಿಗೊ೦ಡಿದ್ದಾ೦ಗೆ ನಿ೦ಗಳ ಮು೦ದೆ ಒ೦ದು ವಿನ೦ತಿಯ ಮಾಡ್ತಾ ಇದ್ದೆ ಇದಾ. ಶ್ರೀ ಭಗವದ್ಗೀತೆಯ ಸುದೀರ್ಘ ಉಪದೇಶಲ್ಲಿ, ಭಗವಾನ್ ಶ್ರೀಕೃಷ್ಣ ಅರ್ಜುನನ ಹಲವು ಅನ್ವರ್ಥ ನಾಮಲ್ಲಿ ದೆನಿಗೋಳ್ತ!ಅದರಲ್ಲಿ ಅವನ ಪ್ರಸಿದ್ಧವಾದ ೧೦ ಹೆಸರುಗೊ ಅಲ್ಲದ್ದೆ ಇನ್ನೂ ಹಲವಾರು ಹೆಸರುಗೊ ಬಯಿ೦ದವನ್ನೆ! ಅ೦ಥ ಹೆಸರುಗಳ ಒ೦ದು ವಿಶ್ಲೇಷಣಾತ್ಮಕ ಚಿ೦ತನಾತ್ಮಕ ದಾಖಲಾತಿ ಆಯೆಕು ಹೇಳುವದೇ ಎನ್ನ ಆಶೆ-ಆಶಯ.ನಿ೦ಗಳ ಸದ್ಯದ ಈ ಕಾರ್ಯ ಸ೦ಪನ್ನವಾದ ಮೇಗೆ ದಯಮಾಡಿ ಈ ಒ೦ದು ಕಾರ್ಯವ ನೆರವೇರ್ಸೆಕು,ಕಯಿಗೂಡ್ಸೆಕು ಹೇದು ಕೋರಿಕೆ.ನಿ೦ಗಳ ಈ ಸ್ತುತ್ಯರ್ಹ ಕಾರ್ಯಕ್ಕೆ ಧನ್ಯವಾದ೦ಗೊ.ನಮಸ್ತೇ.

      1. ಹರೇ ರಾಮ . ಧನ್ಯವಾದಂಗೊ ಎಲ್ಲೊರಿಂಗೂ. ಶ್ರೀಕೃಷ್ಣಾರ್ಪಣಮಸ್ತು.

        ಉಡುಪುಮೂಲೆ ಅಪ್ಪಚ್ಚಿದು ಉತ್ತಮ ಸಲಹೆ. ಸಂಗ್ರಹಿಸಿ ಶುದ್ದಿ ಮಾಡುವೊ°.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×