Oppanna.com

ಶ್ರೀಮದ್ಭಗವದ್ಗೀತಾ – 08– ಅಕ್ಷರಬ್ರಹ್ಮಯೋಗಃ – ಶ್ಲೋಕಂಗೊ 21 – 28

ಬರದೋರು :   ಚೆನ್ನೈ ಬಾವ°    on   27/09/2012    8 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಅವ್ಯಕ್ತೋsಕ್ಷರ ಇತ್ಯುಕ್ತಃ ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ ॥೨೧॥

ಪದವಿಭಾಗ

ಅವ್ಯಕ್ತಃ ಅಕ್ಷರಃ ಇತಿ ಉಕ್ತಃ ತಮ್ ಆಹುಃ ಪರಮಾಮ್ ಗತಿಮ್ । ಯಮ್ ಪ್ರಾಪ್ಯ ನ ನಿವರ್ತಂತೇ ತತ್ ಧಾಮ ಪರಮಮ್ ಮಮ ॥

ಅನ್ವಯ

ಯಃ ಅವ್ಯಕ್ತಃ ಭಾವಃ, ಅಕ್ಷರಃ ಇತಿ ಉಕ್ತಃ, ತಂ ಪರಮಾಂ ಗತಿಮ್ ಆಹುಃ, ಜ್ಞಾನಿನಃ ಯಂ ಪ್ರಾಪ್ಯ ನ ನಿವರ್ತಂತೇ, ತತ್ ಮಮ ಪರಮಂ ಧಾಮ ಅಸ್ತಿ । 

ಪ್ರತಿಪದಾರ್ಥ

ಯಃ ಅವ್ಯಕ್ತಃ ಭಾವಃ – ಏವುದು ಅವ್ಯಕ್ತ ಭಾವದ್ದು, ಅಕ್ಷರಃ – ಅಚ್ಯುತವಾದ್ದು, ಇತಿ ಉಕ್ತಃ – ಹೇಳಿ ಹೇಳಲ್ಪಟ್ಟಿದೋ, ತಮ್ – ಅದರ, ಪರಮಾಂ – ಅಂತಿಮವಾದ, ಗತಿಮ್ ಆಹುಃ – ಗಮ್ಯಸ್ಥಾನ ಹೇದು ತಿಳಿಯಲಾಯ್ದು. ಜ್ಞಾನಿನಃ ಯಮ್ ಪ್ರಾಪ್ಯ – ಜ್ಞಾನಿಗೊ ಯಾವುದರ ಹೊಂದಿ, ನ ನಿವರ್ತಂತೇ – ಹಿಂತುರುಗುತ್ತವಿಲ್ಲೆಯೋ, ತತ್ – ಅದು, ಮಮ – ಎನ್ನ, ಪರಮಮ್ ಧಾಮ ಅಸ್ತಿ – ಪರಮೋನ್ನತವಾದ ವಾಸಸ್ಥಾನ ಆಗಿದ್ದು.

ಅನ್ವಯಾರ್ಥ

ವೇದಾಂತಿಗೊ ಯಾವುದರ ಅವ್ಯಕ್ತ, ಅಕ್ಷರ ಹೇಳಿ ವರ್ಣಿಸುತ್ತವೋ, ಯಾವುದರ ಪರಮಗತಿ ( ಅಂತಿಮ ಗುರಿ) ಹೇಳಿ ತಿಳಿತ್ತವೋ, ಯಾವ ವಾಸಸ್ಥಾನವ ಒಂದರಿ ಸೇರಿದರೆ ಜೀವಿಗೊ ಮತ್ತೆ ಎಂದೂ ಹಿಂದೆ ಬತ್ತವಿಲ್ಲೆಯೋ ಅದು ಎನ್ನ ಪರಮ ನಿವಾಸ ಆಗಿದ್ದು.

ತಾತ್ಪರ್ಯ / ವಿವರಣೆ

ಎಲ್ಲರೂ ಹೋಗಿ ಸೇರೇಕ್ಕಾದ ಸರ್ವಶ್ರೇಷ್ಠ ಸ್ಥಾನ ಆ ಅವ್ಯಕ್ತ ತತ್ವ. ಅವನೇ ಅಕ್ಷರ°. ಅಕ್ಷರ ಹೇಳಿರೆ ಕ್ಷರ/ನಾಶ ಇಲ್ಲದ್ದು. ಎಲ್ಲಾ ಕಡೆ ವ್ಯಾಪಿಸಿದ್ದು, ಎಂದೂ ನಾಶ ಇಲ್ಲದ್ದೂ, ಏನ ಬಯಸಿರೂ ಕೊಡುವಂತಹ, ಸರ್ವಸಮರ್ಥ°, ಇಂದ್ರಿಯಂಗಳ ಅನುಭವ ಕೊಡುವವ°, ಸಮಸ್ತ ಶಬ್ದವಾಚ್ಯ° – ಆ ಭಗವಂತ°. ಅವನ ಸೇರಿರೆ ಮತ್ತೆ ಮರಳಿ ಸಂಸಾರಲ್ಲಿ ಹುಟ್ಟೆಕ್ಕಾದ್ದಿಲ್ಲೆ. ಅದರಿಂದ ಸುಖವಾದ್ದು ಮತ್ತೆಂತದೂ ಇಲ್ಲೆ. ಹಾಂಗಾಗಿ ಆ ಭಗವಂತನೇ ಅಂತಿಮ ಗುರಿ.  ಭಗವಂತನ ಪರಮ ನಿವಾಸವ ಚಿಂತಾಮಣಿಧಾಮ ಹೇಳಿ ವರ್ಣಿಸಿದ್ದು, ಹೇಳಿರೆ ಸಕಲ ಇಷ್ಟಾರ್ಥಂಗೊ ಕೈಗೂಡುವ ಜಾಗೆ. ಭಗವಂತನ ಕಾಣೆಕ್ಕಾರೆ ಎಲ್ಲ ಐಹಿಕ ಅಸೆಗೊ ಬಿಟ್ಟಿರೆಕು. ಬೇರೆ ಯಾವ ಬಯಕೆಯೂ ಮನಸ್ಸಿಲ್ಲಿ ಲವಲೇಶವೂ ಇಪ್ಪಲಾಗ. ಅಂತಹ ಸ್ಥಿತಿಲಿ ಭಗವಂತನ ಪ್ರಾಪ್ತಿಸಿಗೊಂಡವಂಗೆ ಅವನ ಕಾಂಬ ಸುಖದ ಹೆಚ್ಚಿಗೆಯಾಣದ್ದು ಬೇರೆಂತದೂ ಇರ್ತಿಲ್ಲೆ. ಜೀವಿಗೆ ಪರಮ ಸುಖ ಹೇಳಿರೆ ಭಗವಂತನ ಶಾಂತಿಧಾಮ. ಅಲ್ಲಿಗೆ ಸೇರಿರೆ ಜೀವಿಯ ಎಲ್ಲ ಬಯಕೆಗೊ ಮುಗಿತ್ತು, ಎಲ್ಲ ಚಿಂತೆಯೂ ತೀರ್ತು. ಅಂತಹ ಮಹಾಮಹಿಮಾನ್ವಿತ°, ಸರ್ವಶ್ರೇಷ್ಠ°, ದಿವ್ಯರೂಪ°, ಮೇಘವರ್ಣ°, ಸೌಂದರ್ಯದ ಗಣಿ, ಲಕ್ಷ್ಮೀ ಸೇವಿತ°, ಸುರಭಿಯ ಅಮೃತವ ಕೊಡುವವ°, ಕಲ್ಪವೃಕ್ಷದ ಮೂಲಕ ಸಕಲ ಭಕ್ಷ್ಯಂಗಳನ್ನೂ ಕೊಡುವವ, ವೇಣುನಾದದ ಮೂಲಕ ವಿಶ್ವವನ್ನೇ ಆಕರ್ಷಿಸುವವ°, ಮನಮೋಹಕ°, ಆಧ್ಯಾತ್ಮಿಕ ಲೋಕದ ಗೋಲೋಕ ವೃಂದಾವನ ಆ ಭಗವಂತನ ಧಾಮ. ಆ ದಿವ್ಯ ಪುರುಷನ ನಿವಾಸವ ಮೀರುಸುವದು ಏವುದೂ ಇಲ್ಲೆ. ಅಂತಹ ಸರ್ವಶ್ರೇಷ್ಠ  ನಿವಾಸ ಆ ಭಗವಂತನದ್ದು. 

ಶ್ಲೋಕ

ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ ।
ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್ ॥೨೨॥

ಪದವಿಭಾಗ

ಪುರುಷಃ ಸಃ ಪರಃ ಪಾರ್ಥ ಭಕ್ತ್ಯಾ ಲಭ್ಯಃ ತು ಅನನ್ಯಯಾ । ಯಸ್ಯ ಅಂತಃ-ಸ್ಥಾನಿ ಭೂತಾನಿ ಯೇನ ಸರ್ವಮ್ ಇದಮ್ ತತಮ್ ॥

ಅನ್ವಯ

ಹೇ ಪಾರ್ಥ!, ಭೂತಾನಿ ಯಸ್ಯ ಅಂತಃಸ್ಥಾನಿ ಸಂತಿ, ಯೇನ ಇದಂ ಸರ್ವಂ ತತಮ್, ಸಃ ತು ಪರಃ ಪುರುಷಃ ಅನನ್ಯಯಾ ಭಕ್ತ್ಯಾ ಲಭ್ಯಃ ಅಸ್ತಿ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನಾದ ಅರ್ಜುನ!, ಭೂತಾನಿ – ಎಲ್ಲ  ಭೌತಿಕ ಅಭಿವ್ಯಕ್ತಿಗೊ, ಯಸ್ಯ ಅಂತಃ-ಸ್ಥಾನಿ ಸಂತಿ – ಆರ ಒಳ ಇದ್ದೋ, ಯೇನ ಇದಮ್ ಸರ್ವಮ್ ತತಮ್  – ಆರಿಂದ  ಈ ಸರ್ವವೂ ವ್ಯಾಪ್ತವಾಗಿದ್ದೋ , ಸಃ – ಅವ°, ತು – ಆದರೋ, ಪರಃ ಪುರುಷಃ – ಪರಮ ಶ್ರೇಷ್ಠ ಪುರುಷ°, ಅನನ್ಯಯಾ – ಶುದ್ಧವಾದ, ಅವಿಚಲಿತವಾದ (ಬೇರೆ ಏನನ್ನೂ ಚಿಂತುಸದ್ದೆ), ಭಕ್ತ್ಯಾ – ಭಕ್ತಿಸೇವೆಂದ, ಲಭ್ಯಃ ಅಸ್ತಿ – ದೊರಕುತ್ತವ° ಆಗಿದ್ದ°.

ಅನ್ವಯಾರ್ಥ

ಏ ಅರ್ಜುನ!, ಸಮಸ್ತ ಭೂತಂಗಳೂ, ಸಮಸ್ತ ಭೌತಿಕ ಅಭಿವ್ಯಕ್ತಿಗೊ ಆರೊಳ ಇದ್ದೋ, ಆರಿಂದ ಈ ಜಗತ್ತು ವ್ಯಾಪಿಸಿಗೊಂಡಿದ್ದೋ, ಅವ° ಪರಮ ಪುರುಷ°, ಅನನ್ಯ ಭಕ್ತಿಸೇವೆಂದ ಲಭ್ಯನಪ್ಪವ° ಆಗಿದ್ದ°.

ತಾತ್ಪರ್ಯ / ವಿವರಣೆ

ಒಂದರಿ ಹೋಗಿ ಸೇರಿದ ಮತ್ತೆ ಎಂದೆಂದೂ ಹಿಂದೆ ಬರೇಕ್ಕಾಗದ್ದ ಒಂದೇ ಒಂದು ಜಾಗೆ ಆ ಪರಮ ಪುರುಷ°, ಭಗವಂತನ ನಿವಾಸ. ಅದು ಆನಂದ ಚಿನ್ಮಯ ರಸ. ಅಲ್ಲಿ ಎಲ್ಲವೂ ದಿವ್ಯವಾದ್ದು, ದಿವ್ಯಾನಂದಂದ ತುಂಬಿಗೊಂಡಿಪ್ಪದು. ಐಹಿಕವಾದ್ದು ಅಲ್ಲಿ ಎಂತದೂ ಇಲ್ಲೆ. ಅಲ್ಲಿ ಇಪ್ಪದೆಲ್ಲವೂ ದಿವ್ಯವಾದ್ದು, ಪರಮಾನಂದದಾಯಕವಾಗಿಪ್ಪದು. ಅಲ್ಲಿ ಅಭಿವ್ಯಕ್ತಿಯೆಲ್ಲವೂ ಅಧ್ಯಾತ್ಮಿಕ ಶಕ್ತಿಯುಳ್ಳದ್ದು. ಭಗವಂತ° ಸದಾ ತನ್ನ ಪರಮನಿವಾಸಲ್ಲೇ ಇದ್ದರೂ ತನ್ನ ಶಕ್ತಿಂದ ಅವ ಸರ್ವಾಂತರ್ಯಾಮಿಯಾಗಿದ್ದ°. ಹಾಂಗಾಗಿ ಇಲ್ಲಿ ಹೇಳಿದ್ದು –  ‘ಯಸ್ಯಾಂತಃಸ್ಥಾನಿ’, ಹೇಳಿರೆ ಎಲ್ಲವನ್ನೂ ಅವ° ಅವನೊಳವೇ ಮಡಿಕ್ಕೊಂಡಿದ್ದ°, ಹಾಂಗೇ ಎಲ್ಲೆಡೆಯೂ, ಪ್ರತಿಯೊಂದರಲ್ಲಿಯೂ ಅಂತರ್ಯಾಮಿ ಆಗಿದ್ದ°. ಭಗವಂತನ ಆ ಪರಮ ನಿವಾಸಕ್ಕೆ ಹೋಯೇಕ್ಕಾರೆ ‘ಭಕ್ತ್ಯಾ’ ಹೇಳಿ ಇಲ್ಲಿ ಸ್ಪಷ್ಟವಾಗಿ ಹೇಳಿದ್ದ° ಭಗವಂತ°. ಸಂಪೂರ್ಣ ಭಕ್ತಿಸೇವೆಂದ ಭಗವಂತನ ಸುಪ್ರೀತಿಗೊಳುಸಿ ಅವನ ಪ್ರಸನ್ನೀಕರಿಸಿಗೊಳ್ಳೆಕ್ಕಾದ್ದು ಜೀವಿಯ ಕರ್ತವ್ಯ ಎಂಬುದು ಅರ್ಥ. ಭಕ್ತಿ ಹೇಳಿರೆ ಹೇಂಗಿಪ್ಪದು. ಅನನ್ಯ ಭಕ್ತಿ ಆಗಿರೇಕು, ಅದೇ ಕಾಲಕ್ಕೆ ಕರ್ತವ್ಯವನ್ನೂ ಪಾಲುಸೇಕು. ಹಾಂಗಾದಪ್ಪಗ ಅವ° ಪರಮ ದಯಾಪರ°. ಹಾಂಗೆ, ಭಕ್ತಿಪೂರ್ವಕ ಕರ್ಮ ಸಾಧನೆ ಮಾಡಿ ಭಗವಂತನ ಸಾಕ್ಷಾತ್ಕಾರ ಮಾಡಿಗೊಳ್ಳೆಕು.  ಆ ರೀತಿಲಿ ಅವ° ಸುಲಭ ಲಭ್ಯ°. ಆ ಭಕ್ತಿ ಜೀವಿಯ ಕೊನೆಗಾಲದವರೇಂಗೂ ಇರೆಕು. 

ಶ್ಲೋಕ

ಯತ್ರ ಕಾಲೇ ತ್ವನಾವೃತ್ತಿಮ್ ಆವೃತ್ತಿಂ ಚೈವ ಯೋಗಿನಃ ।
ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ ॥೨೩॥

ಪದವಿಭಾಗ

ಯತ್ರ ಕಾಲೇ ತು ಅನಾವೃತ್ತಿಮ್ ಆವೃತ್ತಿಮ್ ಚ ಏವ ಯೋಗಿನಃ । ಪ್ರಯಾತಾಃ ಯಾಂತಿ ತಮ್ ಕಾಲಮ್ ವಕ್ಷ್ಯಾಮಿ ಭರತರ್ಷಭ

ಅನ್ವಯ

ಹೇ ಭರತರ್ಷಭ!, ಯತ್ರ ಕಾಲೇ ತು ಪ್ರಯಾತಾಃ ಯೋಗಿನಃ ಅನಾವೃತ್ತಿಮ್ ಆವೃತ್ತಿಂ ಚ ಏವ ಯಾಂತಿ, ತಂ ಕಾಲಂ ವಕ್ಷ್ಯಾಮಿ ।

ಪ್ರತಿಪದಾರ್ಥ

ಹೇ ಭರತರ್ಷಭ! – ಏ ಭರತಶ್ರೇಷ್ಠನೇ!, ಯತ್ರ ಕಾಲೇ ತು – ಏವ ಸಮಯಲ್ಲಿ ಆದರೋ, ಪ್ರಯಾತಾಃ ಯೋಗಿನಃ – ಹೆರಟು ಹೋದ ನಾನಾ ಬಗೆಯ ಯೋಗಿಗೊ, ಅನಾವೃತ್ತಿಮ್ – (ಪುನರಾವೃತ್ತಿ ಇಲ್ಲದ್ದದು ) ಹಿಂದುರುಗದ್ದೇ ಇಪ್ಪದರ, ಆವೃತ್ತಿಮ್ – ಹಿಂದುರುಗುವುದರ, ಚ – ಕೂಡ, ಏವ – ಖಂಡಿತವಾಗಿಯೂ, ಯಾಂತಿ – ಹೊಂದುತ್ತವು, ತಮ್ ಕಾಲಮ್ – ಆ ಕಾಲವ, ವಕ್ಷ್ಯಾಮಿ – ವಿವರುಸುತ್ತೆ.

ಅನ್ವಯಾರ್ಥ

ಭರತವಂಶಲ್ಲಿ ಶ್ರೇಷ್ಠನಾದ ಏ ಅರ್ಜುನ!, ಯೋಗಿಗೊ ಯಾವ ಕಾಲಲ್ಲಿ ದೇಹವ ತ್ಯಜಿಸಿ ಪುನರ್ಜನ್ಮವ ಪಡೆತ್ತವೋ ವಾ ಮರಳಿ ಬತ್ತವಿಲ್ಲೆಯೋ ಆ ಕುರಿತಾಗಿ ನಿನಗೆ ವಿವರುಸುತ್ತೆ.

ತಾತ್ಪರ್ಯ / ವಿವರಣೆ

ಶರೀರವ ತ್ಯಾಗ ಮಾಡಿದ ಜೀವಿಯ ಮುಂದಾಣ ಸ್ಥಿತಿಯ ಭಗವಂತ° ಮುಂದೆ ಹೇಳಬಯಸುತ್ತ°. ಇಲ್ಲಿ ಕಾಲ ಹೇಳಿರೆ ಹಗಲೋ ಇರುಳೋ ಹೇಳ್ವ ಸಮಯವ (ಕಾಲ) ಅಲ್ಲ. ಶರೀರ ತ್ಯಾಗ ಮಾಡಿದ ಜೀವದ ನಿಯಮನ ಮಾಡುವ ದೇವತೆಗಳ ಗಣ’ಕಾಲ’. ಶರೀರವ ತ್ಯಾಗ ಮಾಡಿದ (ಕಾಲವಶನಾದ) ಜೀವವ ಯಾವಯಾವ ದೇವತೆಗೊ ನಿಯಮನ ಮಾಡಿ ಮುಂದೆ ಕರಕ್ಕೊಂಡು ಹೋವ್ತವು, ಯಾವ ದಾರಿಲಿ ಹೋವ್ತವು, ಆರು ಮೋಕ್ಷವ ಸೇರುತ್ತವು, ಆರು ಮರಳಿ ಜನಿಸುತ್ತವು ಮುಂತಾದ ವಿಚಾರ. ಸಂಪೂರ್ಣವಾಗಿ ಭಗವಂತಂಗೆ ಶರಣಾಗತರಾದವು ಅರ್ಥಾತ್ ಪರಮ ಪ್ರಭುವಿನ ಪರಿಶುದ್ಧ ಭಕ್ತರು ತಮ್ಮ ದೇಹವ ಯಾವಾಗ ಹೇಂಗೆ ತ್ಯಜಿಸುತ್ತೆಯೋ° ಹೇಳ್ವ ಚಿಂತೆಯೇ ಇರ್ತಿಲ್ಲೆ. ಅವಂಗೆ ಭಗವಂತನ ದರ್ಶನ ಒಂದೇ ಕಾಂಬದು. ಅವ ಎಲ್ಲವನ್ನೂ ಭಗವಂತನ ಕೈಗೆ ಒಪ್ಪಿಸಿರುತ್ತ°. ಅವಂಗೆ ಮತ್ತೆ ಇನ್ನು ಈ ಐಹಿಕ ಬೇಕಾದ್ದು ಎಂತದೂ ಇಲ್ಲೆ. ಹಾಂಗಾಗಿ ದೇಹತ್ಯಾಗದ ಚಿಂತೆಯೂ ಇಲ್ಲೆ. ಹಾಂಗಿರ್ತವು ಸುಲಭವಾಗಿ ಸಂತೋಷಲ್ಲಿ ಭಗವದ್ಧಾಮವ ಸೇರುತ್ತವು. ಆದರೆ, ಪರಿಶುದ್ಧ ಭಕ್ತರಲ್ಲದ್ದವಕ್ಕೆ, ಅರ್ಥಾತ್ ಕರ್ಮಯೋಗ, ಜ್ಞಾನಯೋಗ, ಮತ್ತೆ ಹಠಯೋಗ ಹೀಂಗಿಪ್ಪ ಸಾಧನಂಗಳ ಅವಲಂಬಿಸಿಪ್ಪವಕ್ಕೆ ದೇಹವ ಸೂಕ್ತವಾದ ಸಮಯಲ್ಲಿ ತ್ಯಜಿಸೆಕು. ಯೋಗಿಯು ಪರಿಪೂರ್ಣನಾಗಿದ್ದರೆ ಈ ಐಹಿಕ ಜಗತ್ತಿನ ಬಿಡುವ ಕಾಲವ ಸನ್ನಿವೇಶವ ಆರಿಸಿಗೊಂಬಲೆಡಿಗು. ಅವಂಗೆ ಅದರ ಮೇಲೆ ನಿಯಂತ್ರಣ ಸಣ್ಣ ಮಟ್ಟಿಂಗೆ ಸಾಧನೆ ಮೂಲಕ ಲಭಿಸಿರುತ್ತು. ಆದರೆ ಅಷ್ಟು ಪ್ರವೀಣನಲ್ಲದ್ರೆ, ಅಕಸ್ಮಾತ್ ಮರಣಹೊಂದುವದು ಅವನ ಯಶಸ್ಸು ಅವಲಂಬಿಸುತ್ತು.ಇಲ್ಲಿ ಹೇಳಿಪ್ಪ ‘ಕಾಲ’ ಹೇಳಿರೆ ಕಾಲದ ದೇವತೆಯ ಸೂಚಿಸುತ್ತು.  

ಶ್ಲೋಕ

ಅಗ್ನಿರ್ಜ್ಯೋತಿರಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ।
ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ ॥೨೪॥

ಪದವಿಭಾಗ

ಅಗ್ನಿಃ ಜ್ಯೋತಿಃ ಅಹಃ ಶುಕ್ಲಃ ಷಣ್ಮಾಸಾಃ ಉತ್ತರ-ಆಯಣಮ್ । ತತ್ರ ಪ್ರಯಾತಾಃ ಗಚ್ಛಂತಿ ಬ್ರಹ್ಮ ಬ್ರಹ್ಮವಿದಃ ಜನಾಃ ॥

ಅನ್ವಯ

ಅಗ್ನಿಃ, ಜ್ಯೋತಿಃ, ಅಹಃ, ಶುಕ್ಲಪಕ್ಷಃ, ಷಣ್ಮಾಸಾಃ ಉತ್ತರ-ಆಯನಮ್, ತತ್ರ (ಕಾಲೇ) ಪ್ರಯಾತಾಃ ಬ್ರಹ್ಮವಿದಃ ಜನಾಃ ಬ್ರಹ್ಮ ಗಚ್ಛಂತಿ ।

ಪ್ರತಿಪದಾರ್ಥ

ಅಗ್ನಿಃ – ಅಗ್ನಿ, ಜ್ಯೋತಿಃ – ಪ್ರಕಾಶ, ಅಹಃ – ಹಗಲು, ಶುಕ್ಲಪಕ್ಷಃ, ಷಟ್-ಮಾಸಾಃ – ಆರು ತಿಂಗಳು, ಉತ್ತರ-ಆಯನಮ್ – ಉತ್ತರಾಯಣ (ಸೂರ್ಯ° ಉತ್ತರ ದಿಕ್ಕಿಲ್ಲಿ ಸಂಚರುಸುವ ಕಾಲ), ತತ್ರ – ಅಲ್ಲಿ (ಕಾಲೇ – ಆ ಕಾಲಲ್ಲಿ), ಪ್ರಯಾತಾಃ – ಗತುಸುವವ್ವು, ಬ್ರಹ್ಮವಿದಃ ಜನಾಃ – ಪರಾತ್ಪರನ ತಿಳುದವು (ಭಗವಂತನ ತಿಳುದವು, ಬ್ರಹ್ಮವಿದರು), ಬ್ರಹ್ಮ ಗಚ್ಛಂತಿ – ಪರತರನಲ್ಯಂಗೆ ಹೋವುತ್ತವು.

ಅನ್ವಯಾರ್ಥ

ಪರಬ್ರಹ್ಮನ ತಿಳುದವು (ಆತ್ಮಸಾಕ್ಷಾತ್ಕಾರ ಹೊಂದಿದವು) ಅಗ್ನಿದೇವತೆಯ ಪ್ರಭಾವದ ಕಾಲಲ್ಲಿ, ಬೆಣಚ್ಚಿಲ್ಲಿ, ಹಗಲು, ಶುಭಕ್ಷಣಲ್ಲಿ, ಶುಕ್ಲಪಕ್ಷಲ್ಲಿ, ಉತ್ತರಾಯಣದ ಆರು ಮಾಸ ಕಾಲಲ್ಲಿ ಈ ಜಗತ್ತಿನ ಬಿಟ್ಟು ಪರಬ್ರಹ್ಮನ ಸೇರುತ್ತವು.

ತಾತ್ಪರ್ಯ / ವಿವರಣೆ

ಅಗ್ನಿ, ಬೆಣಚ್ಚಿ, ಹಗಲು, ಮತ್ತೆ ಶುಕ್ಲಪಕ್ಷ ಇವುಗಳ ಹೆಸರಿಸಿದ ಕಾರಣ ಆತ್ಮದ ಪ್ರಯಾಣಕ್ಕೆ ವ್ಯವಸ್ಥೆಮಾಡುವ ಅಧಿದೇವತೆಗೊ ಇವುಗಳ ಮೇಲೆ ಇದ್ದವು ಹೇಳಿ ಆತು. ಮರಣ ಕಾಲಲ್ಲಿ ಮನಸ್ಸು ಮನುಷ್ಯನ ಒಂದು ಹೊಸ ಬದುಕಿನ ಮಾರ್ಗಕ್ಕೆ ಕೊಂಡೊಯ್ಯುತ್ತು. ಆಕಸ್ಮಿಕವಾಗಿ ಆಗಲೀ, ವ್ಯವಸ್ಥೆ ಮಾಡಿಗೊಂಡೂ ಆಗಲಿ, ಮೇಗೆ ಹೇಳಿದ ಕಾಲಲ್ಲಿ ದೇಹವ ಬಿಟ್ಟ ಮನುಷ್ಯಂಗೆ ನಿರಾಕಾರ ಬ್ರಹ್ಮಜ್ಯೋತಿಯ ಸೇರುಲೆ ಸಾಧ್ಯ ಆವ್ತು. ಯೋಗಾಭ್ಯಾಸಲ್ಲಿ ಮುಂದುವರುದ ಯೋಗಿಗೊ ದೇಹವ ಬಿಡುವ ಕಾಲವ ಸ್ಥಳವ ನಿರ್ಧರಿಸಿಗೊಂಬಲೆಡಿಗು. ಆದರೆ ಇತರರಿಂಗೆ ಇದರ ನಿಯಂತ್ರಣ ಇಲ್ಲೆ. ಆಕಸ್ಮಿಕವಾಗಿ ಶುಭಕ್ಷಣಲ್ಲಿ ದೇಹವ ಬಿಟ್ಟರೆ ಅವು ಜನನ ಮರಣಂಗಳ ಚಕ್ರಕ್ಕೆ ಹಿಂದುರುಗುತ್ತವಿಲ್ಲೆ. ಹಾಂಗೆ ಆಗದ್ರೆ ಅವ್ವು ಹಿಂದೆ ಬಪ್ಪ ಸಾಧ್ಯತೆಯೇ ಹೆಚ್ಚು.

ಬನ್ನಂಜೆ ಹೇಳ್ತವು – ದೇಹಂದ ಹೆರಬಂದ ಮೋಕ್ಷಯೋಗ್ಯ ಜೀವವ ಮದಾಲು ಸ್ವಾಗತುಸುವವ್ವು ವೈಶ್ವಾನರ (ಪ್ರಧಾನ ಅಗ್ನಿ)ನ ಮಕ್ಕೊ ಆದ ಅಗ್ನಿ ಮತ್ತೆ ಜ್ಯೋತಿ. ಈ ದೇವತೆಗೊ ಜೀವವ ಸತ್ಕರಿಸಿ ಮುಂದಂಗೆ ಕಳುಸುತ್ತವು. ಮುಂದೆ ಜೀವವ ಬೆಣಚ್ಚು ಮತ್ತು ಮಧ್ಯಾಹ್ನದ ದೇವತೆಗೊ ಸ್ವಾಗತಿಸುತ್ತವು. ಈ ನಿಜವಾದ ಬೆಣಚ್ಚಿಯ ಅನುಭವದೊಟ್ಟಿಂಗೆ ಜೀವ ಮುಂದೆ ಹೋಗಿ ಶುಕ್ಲಪಕ್ಷ ಮತ್ತೆ ಹುಣ್ಣಮೆಯ ದೇವತೆಯ ತಲಪುತ್ತು. ಮತ್ತೆ , ಸಂಕ್ರಮಣದ, ಉತ್ತರಾಯಣದ ದೇವತೆ ಒಟ್ಟಿಂಗೆ ಇದ್ದು ಉತ್ತರಾಯಣದ ಆರು ತಿಂಗಳ ದೇವತೆಗೊ ಜೀವವ ಭಗವಂತನನೆಡೆಂಗೆ ಕಳುಸುತ್ತವು. ಹೀಂಗೆ ಆರು ಈ ದಾರಿಲಿ ಸಾಗುತ್ತವೋ ಅವು ಎಂದೂ ಮತ್ತೆ ಮರಳಿ ಬತ್ತವಿಲ್ಲೆ. ನಿತ್ಯ ಸತ್ಯನಾದ ಭಗವಂತನ ಸೇರುತ್ತವು.

ಶ್ಲೋಕ

ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಂ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ ॥೨೫॥

ಪದವಿಭಾಗ

ಧೂಮಃ ರಾತ್ರಿಃ ತಥಾ ಕೃಷ್ಣಃ ಷಣ್ಮಾಸಾಃ ದಕ್ಷಿಣ-ಅಯನಮ್ । ತತ್ರ ಚಾಂದ್ರಮಸಮ್ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ ॥

ಅನ್ವಯ

ಧೂಮಃ, ರಾತ್ರಿಃ ತಥಾ ಕೃಷ್ಣಃ (ಕೃಷ್ಣಪಕ್ಷಃ), ಷಣ್ಮಾಸಾಃ  ದಕ್ಷಿಣ-ಆಯನಮ್, ತತ್ರ (ಕಾಲೇ ಪ್ರಯಾತಾಃ) ಯೋಗೀ ಚಾಂದ್ರಮಸಂ ಜ್ಯೋತಿಃ ಪ್ರಾಪ್ಯ ನಿವರ್ತತೇ ।

ಪ್ರತಿಪದಾರ್ಥ

ಧೂಮಃ – ಹೊಗೆ, ರಾತ್ರಿಃ – ಇರುಳು, ತಥಾ – ಹಾಂಗೆಯೇ, ಕೃಷ್ಣಃ – ಕೃಷ್ಣಪಕ್ಷ, ಷಣ್ಮಾಸಾಃ ದಕ್ಷಿಣ-ಆಯನಮ್ – ಆರುತಿಂಗಳ ದಕ್ಷಿಣಾಯನ (ಸೂರ್ಯ ದಕ್ಷಿಣಭಾಗಲ್ಲಿ ದಾಂಟುವ ಕಾಲ), ತತ್ರ (ಕಾಲೇ ಪ್ರಯಾತಾಃ) – ಅಲ್ಲಿ (ಆ ಕಾಲಲ್ಲಿ ಗತಿಸಿದವು), ಯೋಗೀ – ಯೋಗಿಯು, ಚಾಂದ್ರಮಾಸಮ್ – ಚಂದ್ರಲೋಕದ, ಜ್ಯೋತಿಃ – ಬೆಣಚ್ಚಿಯ, ಪ್ರಾಪ್ಯ – ಹೊಂದಿ, ನಿವರ್ತತೇ – ಹಿಂತುರುಗುತ್ತ°.

ಅನ್ವಯಾರ್ಥ

ಧೂಮಕಾಲಲ್ಲಿ, ಇರುಳು ಹೊತ್ತಿಲ್ಲಿ, ಕೃಷ್ಣಪಕ್ಷಲ್ಲಿ, ದಕ್ಷಿಣಾಯನದ ಆರು ತಿಂಗಳಿನ ಸಮಯಲ್ಲಿ, ಮರಣ ಹೊಂದುವ ಯೋಗಿ ಚಂದ್ರಲೋಕವ ಸೇರುತ್ತ°, ಮತ್ತೆ  ಅಲ್ಲಿಂದ ಈ ಐಹಿಕ ಪ್ರಪಂಚಕ್ಕೆ ಹಿಂದುರುಗುತ್ತ°.

ತಾತ್ಪರ್ಯ / ವಿವರಣೆ

ಮೋಕ್ಷ ಯೋಗ್ಯ ಅಲ್ಲದ್ದ ಜೀವ ದೇಹಂದ ಹೆರ ಬಂದಪ್ಪಗ ಅವನ ಸ್ವಾಗತಿಸುವ ದೇವತೆಗೊ – ಹೊಗೆಯ ಮತ್ತೆ ಇರುಳಿನ ದೇವತೆಗೊ. ಮತ್ತೆ ಕೃಷ್ಣಪಕ್ಷದ ದೇವತೆ. ಮತ್ತೆ, ದಕ್ಷಿಣಾಯನದ ಹಾಂಗೂ ದಕ್ಷಿಣಾಯಾನದ ಆರು ತಿಂಗಳ ದೇವತೆಗೊ ಜೀವವ ಚಂದ್ರಲೋಕಕ್ಕೆ ಮುಟ್ಟುಸುತ್ತವು. ಜೀವ ಅಲ್ಲಿ ತನ್ನ ಪುಣ್ಯ ಕ್ಷಯ ಅಪ್ಪನ್ನಾರ ಅಲ್ಯಾಣ ಸುಖವ ಅನುಭವುಸಿ, ಮತ್ತೆ ಮೋಡವ ಸೇರಿ, ಮಳೆಯ ಮೂಲಕ ಭೂಮಿಯ ತಲುಪಿ ಒಂದು ಗೆಂಡಿನ ದೇಹದ ಮೂಲಕ ಹೆಣ್ಣಿನ ಗರ್ಭವ ಪ್ರವೇಶಿಸಿ ಮತ್ತೆ ಭೂಮಿಲಿ ಹುಟ್ಟುತ್ತು ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದು.

ಶ್ಲೋಕ

ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ ।
ಏಕಯಾ ಯಾತ್ಯನಾವೃತ್ತಿಮ್ ಅನ್ಯಯಾವರ್ತತೇ ಪುನಃ ॥೨೬॥

ಪದವಿಭಾಗ

ಶುಕ್ಲ-ಕೃಷ್ಣೇ ಗತೀ ಹಿ ಏತೇ ಜಗತಃ ಶಾಶ್ವತೇ ಮತೇ । ಏಕಯಾ ಯಾತಿ ಅನಾವೃತ್ತಿಮ್ ಅನ್ಯಯಾ ಆವರ್ತತೇ ಪುನಃ ॥

ಅನ್ವಯ

ಜಗತಃ ಏತೇ  ಶುಕ್ಲ-ಕೃಷ್ಣೇ ಗತೀ ಶಾಶ್ವತೇ ಮತೇ ಹಿ । ಏಕಯಾ ಅನಾವೃತ್ತಿಂ ಯಾತಿ ಅನ್ಯಯಾ ಪುನಃ ಆವರ್ತತೇ ।

ಪ್ರತಿಪದಾರ್ಥ

ಜಗತಃ – ಭೌತಿಕ ಜಗತ್ತಿನ, ಏತೇ – ಈ ಎರಡು, ಶುಕ್ಲ – ಬೆಣಚ್ಚಿ, ಕೃಷ್ಣ – ಕತ್ತಲೆ, ಗತೀ – ಗತಿಸುವ ದಾರಿಗೊ, ಶಾಶ್ವತೇ – ವೇದಂಗಳ, ಮತೇ – ಅಭಿಪ್ರಾಯಲ್ಲಿ, ಹಿ – ಖಂಡಿತವಾಗಿಯೂ ಇದ್ದು. ಏಕಯಾ – ಒಂದರಿಂದ, ಅನಾವೃತ್ತಿಮ್ – ಮರಳಿಬಾರದ್ದಕ್ಕೆ, ಯಾತಿ – ಹೋವ್ತ°, ಅನ್ಯಯಾ – ಇನ್ನೊಂದರಿಂದ, ಪುನಃ ಆವರ್ತತೇ – ಮತ್ತೆ ಹಿಂದುರುಗುತ್ತ°.

ಅನ್ವಯಾರ್ಥ

ವೈದಿಕ ಅಭಿಪ್ರಾಯದಂತೆ ಈ ಜಗತ್ತಿನ ಬಿಡ್ಳೆ ಎರಡು ರೀತಿ. ಒಂದು ಬೆಣಚ್ಚಿಲ್ಲಿ, ಇನ್ನೊಂದು ಕತ್ತಲೆಲಿ. (ಶುಕ್ಲ ಪಕ್ಷ – ಕೃಷ್ಣಪಕ್ಷವೂ ಅಪ್ಪು). ಒಂದರಿಂದ (ಬೆಣಚ್ಚಿಂದ) ನಿರ್ಗಮಿಸಿದವ° ಹಿಂದೆ ಬತ್ತನಿಲ್ಲೆ, ಆದರೆ, ಕತ್ತಲೆಲಿ ನಿರ್ಗಮಿಸಿದವ ಹಿಂದಕ್ಕೆ ಬತ್ತ°.

ತಾತ್ಪರ್ಯ / ವಿವರಣೆ

ಜಗತ್ತಿಲ್ಲಿ ಬೆಳಿ (ಶುಕ್ಲ) ಮತ್ತೆ ಕಪ್ಪು (ಕೃಷ್ಣ) ಇವ್ವೆರಡು ದಾರಿಗೊ. ಸದಾ ಇಪ್ಪದು ಹೇಳಿ ವೇದ ತೀರ್ಮಾನ. ಒಂದರಿಂದ ಮರಳಿ ಬಪ್ಪಲೆ ಇಲ್ಲೆ. ಇನ್ನೊಂದರಿಂದ ಶಾಶ್ವತವೂ ಇಲ್ಲೆ (ಮರಳಿ ಬಾರದ್ದೆ ಇಲ್ಲೆ). ಹೀಂಗೆ ಒಂದು ಮೋಕ್ಷಕ್ಕೆ ಹೋಪ ಬೆಣಚ್ಚಿನ ದಾರಿ, ಇನ್ನೊಂದು ಮರಳಿ ಸಂಸಾರಕ್ಕೆ ಬಪ್ಪ ಕಸ್ತಲೆಯ ದಾರಿ. ಜ್ಞಾನದ ಬೆಣಚ್ಚಿ ಸಿಕ್ಕಿದವಂಗೆ  ಬೆಳಿಯ ದಾರಿ, ಅಜ್ಞಾನಲ್ಲೇ ಸಾಯ್ತವಂಗೆ ಕಸ್ತಲೆಯ ದಾರಿ. ಈ ಎರಡೂ ದಾರಿಗೊ ಅನಾದಿ ಅನಂತ ಕಾಲಲ್ಲಿ ಎಲ್ಲ ಜೀವಿಗೊಕ್ಕೆ ಸಮಾನವಾಗಿ ಇಪ್ಪ ಶಾಶ್ವತ ವ್ಯವಸ್ಥೆ. ಇದನ್ನೆ ‘ಶಾಶ್ವತೇ’ ಹೇಳಿದ್ದದು. ಬೆಣಚ್ಚಿಯ ಮಾರ್ಗಲ್ಲಿ ಹೋದವಂಗೆ ಮರುಜನ್ಮ ಇಲ್ಲೆ, ಮೋಕ್ಷವ ಪಡೆತ್ತ°, ಕತ್ತಲೆಯ ದಾರಿಲಿ ಹೋದವಂಗೆ ಶಾಶ್ವತ ಸುಖ ಸಿಕ್ಕುತ್ತಿಲ್ಲೆ, ಮರಳಿ ಐಹಿಕ ಜಗತ್ತಿಲ್ಲಿ ಹುಟ್ಟು ನಿಶ್ಚಯ. ಇಲ್ಲಿ ‘ಬೆಣಚ್ಚಿ’ ಮತ್ತೆ ‘ಕಸ್ತಲೆ’ ಹೇಳ್ವ ಎರಡು ಪದಕ್ಕೂ ವಿಶೇಷ ಮಹತ್ವ ಇದ್ದು. ಬೆಣಚ್ಚಿ ಜ್ಞಾನಕ್ಕೆ ಹೋಲುಸಿದ್ದು. ಜ್ಞಾನದ ಮೂಲಕ ಬೆಣಚ್ಚಿಯ ಕಂಡವ ಬೆಣಚ್ಚಿಯ ದಾರಿಲಿ ಸಾಗುತ್ತ, ಜ್ಞಾನ ಸಿದ್ಧಿಯಾಗದ್ದೆ, ಅಜ್ಞಾನಲ್ಲೇ ಕಾಲ ಕಳವವ ಅಜ್ಞಾನಕಸ್ತಲೆಲೇ ಸಾಗುತ್ತ° ಹೇಳ್ವ ಧ್ವನಿಯೂ ಅಪ್ಪು.

ಶ್ಲೋಕ

ನೈತೇ ಸೃತಿ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ॥೨೭॥

ಪದವಿಭಾಗ

ನ ಏತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ । ತಸ್ಮಾತ್ ಸರ್ವೇಷು ಕಾಲೇಷು ಯೋಗ-ಯುಕ್ತಃ ಭವ ಅರ್ಜುನ

ಅನ್ವಯ

ಹೇ ಪಾರ್ಥ!, ಏತೇ ಸೃತೀ ಜಾನನ್ ಕಶ್ಚನ ಯೋಗೀ ನ ಮುಹ್ಯತಿ । ತಸ್ಮಾತ್ ಹೇ ಅರ್ಜುನ!, ತ್ವಂ ಸರ್ವೇಶು ಕಾಲೇಷು ಯೋಗ-ಯುಕ್ತಃ ಭವ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನೇ!, ಏತೇ – ಈ ಎರಡೂ, ಸೃತೀ – ಭಿನ್ನಮಾರ್ಗಂಗೊ, ಜಾನನ್ – ತಿಳ್ಕೊಂಡು, ಕಶ್ಚನ ಯೋಗೀ – ಯಾವನೇ ಯೋಗಿಯು, ನ ಮುಹ್ಯತಿ – ಭ್ರಾಂತಿಗೆ ಒಳಗಾವ್ತನಿಲ್ಲೆ. ತಸ್ಮಾತ್ – ಹಾಂಗಾಗಿ, ಹೇ ಅರ್ಜುನ! – ಏ ಅರ್ಜುನ!, ತ್ವಮ್ – ನೀನು , ಸರ್ವೇಷು ಕಾಲೇಷು – ಏವತ್ತೂ (ಎಲ್ಲ ಕಾಲಲ್ಲಿಯೂ), ಯೋಗ-ಯುಕ್ತಃ – ಕೃಷ್ಣಪ್ರಜ್ಞೆಲಿ ತೊಡಗಿದವನಾಗಿ, ಭವ – ಆಗಿರು.

ಅನ್ವಯಾರ್ಥ

ಏ ಅರ್ಜುನ!, ಈ ಎರಡೂ ಮಾರ್ಗವ ತಿಳುದಿಪ್ಪ ಯೋಗಿಗೊ ಭ್ರಾಂತಿಗೆ ಒಳಗಾವ್ತವಿಲ್ಲೆ. ಹಾಂಗಾಗಿ ನೀನು ಏವತ್ತೂ ಯೋಗಯುಕ್ತನಾಗಿ (ಕೃಷ್ಣಪ್ರಜ್ಞೆಲಿ ಇಪ್ಪವನಾಗಿ) ಇದ್ದುಗೊ.

ತಾತ್ಪರ್ಯ / ವಿವರಣೆ

ಐಹಿಕ ಜಗತ್ತಿನ ಬಿಡುವಾಗ ಆತ್ಮ° ಬಳಸುವ ವಿವಿಧ ಮಾರ್ಗಂಗಳಿಂದ ಅರ್ಜುನನ ಮನಸ್ಸು ಕಲಂಕಲಾಗ ಹೇಳಿ ಭಗವಂತ° ಇಲ್ಲಿ ಅರ್ಜುನಂಗೆ ಉಪದೇಶ ಮಾಡುತ್ತ°. ಪೂರ್ವ ಏರ್ಪಾಡಿಂದ ನಿರ್ಗಮಿಸುತ್ತನೋ ಅಥವಾ ಅಕಸ್ಮಿಕವಾಗಿ ನಿರ್ಗಮಿಸುತ್ತನೋ ಹೇಳ್ವದರ ಬಗ್ಗೆ ಭಕ್ತ° ಆತಂಕ ಪಡ್ಳಾಗ. ಎರಡು ಮಾರ್ಗಂಗಳ ಬಗ್ಗೆ ಚಂದಕೆ ತಿಳ್ಕೊಂಡಿರೆಕ್ಕಾದ್ದು ಅಗತ್ಯ. ಹಾಂಗಾದಪ್ಪಗ ಸ್ಥಿತಪ್ರಜ್ಞಂಗೆ ಅಂತ್ಯಕಾಲಕ್ಕೆ ಮನಸ್ಸಿಂಗೆ ಗೊಂದಲ ಬಪ್ಪಲೆ ಇಲ್ಲೆ. ಕೃಷ್ಣಪ್ರಜ್ಞೆಲಿ ತನ್ಮಯನಾಗಿರೆಕು. ಇದರಿಂದ ಆಧ್ಯಾತ್ಮಿಕ ರಾಜ್ಯಕ್ಕೆ ಮನುಷ್ಯನ ಮಾರ್ಗವು ಸುರಕ್ಷಿತ ಖಚಿತ ಮತ್ತು ನೇರ ಆವ್ತು. ಇಲ್ಲಿ ‘ಯೋಗಯುಕ್ತ’ ಹೇಳಿರೆ ಯೋಗಲ್ಲಿ (ಕೃಷ್ಣಪ್ರಜ್ಞೆಲಿ) ದೃಢವಾಗಿಪ್ಪದು ಹೇಳಿ ಅರ್ಥ.  ಭಗವಂತ° ಅರ್ಜುನಂಗೆ ಹೇಳುತ್ತ° – ‘ಈ ಎರಡೂ ದಾರಿಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದು, ನೀನು ಹೋಯೇಕ್ಕಾದ ದಾರಿ ಏವುದು ಹೇಳ್ವದರ ತಿಳ್ಕೊಂಡು ಆಯಾ ಅಭಿಮಾನಿ ದೇವತೆಗಳ ಹತ್ರಂಗೆ ಮುಂದೆ ಸಾಗೆಕು. ಆಯಾ ಅಭಿಮಾನಿ ದೇವತೆಗೊ ಬೇರೆಬೇರೆ ಮೆಟ್ಳಿಲ್ಲಿ ಬಂದು ಜೀವನವ ಮುಂದಂಗೆ ಕರಕ್ಕೊಂಡು ಹೋವುತ್ತವು. ಈ ಕಾರಣಂದ ಅಂತ್ಯ ಕಾಲದ ಭಗವಂತನ ಸ್ಮರಣೆಲಿ ಮಾರ್ಗ ಮತ್ತು ಅಭಿಮಾನಿ ದೇವತೆಗಳ ಚಿಂತನೆ ಅತ್ಯಗತ್ಯ. ಇದರ ತಿಳ್ಕೊಂಡು ಅನುಸಂಧಾನ ಮಾಡಿಗೊಂಡು ಅನುಷ್ಠಾನ ಮಾಡಿರೆ ಯಾವ ಸಾಧಕಂಗೂ ಗೊಂದಲ ಇಲ್ಲೆ. ಹಾಂಗಾಗಿ ನೀನು ಎಲ್ಲ ಕಾಲಲ್ಲಿಯೂ ಈ ಉಪಾಯವ ಅರ್ತು ನೆಡೆ’.

ಶ್ಲೋಕ

ವೇದೇಷು ಯಜ್ಞೇಷು ತಪಸ್ಸು ಚೈವ ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಮ್ ।
ಅತ್ಯೇತಿ ತತ್ಸರ್ವಮಿದಂ ವಿದಿತ್ವಾ ಯೋಗೀ ಪರಂ ಸ್ಥಾನಮುಪೈತಿ ಚಾದ್ಯಮ್ ॥೨೮॥

ಪದವಿಭಾಗ

ವೇದೇಷು ಯಜ್ಞೇಷು ತಪಸ್ಸು ಚ ಏವ ದಾನೇಷು ಯತ್ ಪುಣ್ಯ-ಫಲಂ ಪ್ರದಿಷ್ಟಮ್ । ಅತ್ಯೇತಿ ತತ್ ಸರ್ವಮ್ ಇದಮ್ ವಿದಿತ್ವಾ ಯೋಗೀ ಪರಂ ಸ್ಥಾನಂ ಉಪೈತಿ ಚ ಆದ್ಯಮ್ ॥

ಅನ್ವಯ

ಯೋಗೀ ಇದಂ ವಿದಿತ್ವಾ, ವೇದೇಷು ಯಜ್ಞೇಷು ತಪಸ್ಸು ದಾನೇಷು ಚ ಏವ  ಯತ್ ಪುಣ್ಯ-ಫಲಂ ಪ್ರದಿಷ್ಟಂ, ತತ್ ಸರ್ವಮ್ ಅತ್ಯೇತಿ, ಆದ್ಯಂ ಪರಂ ಚ ಸ್ಥಾನಂ ಉಪೈತಿ |

ಪ್ರತಿಪದಾರ್ಥ

ಯೋಗೀ – ಭಕ್ತನಾದವ°, ಇದಮ್ ವಿದಿತ್ವಾ – ಇದರ ತಿಳ್ಕೊಂಡು, ವೇದೇಷು – ದೇದಂಗಳ ಅಧ್ಯಯನಲ್ಲಿ, ಯಜ್ಞೇಷು – ಯಜ್ಞಾಚರಣೆಗಳಲ್ಲಿ, ತಪಸ್ಸು – ನಾನಾ ವಿಧದ ತಪಸ್ಸುಗಳ ಮಾಡ್ತದರ್ಲಿ, ದಾನೇಷು – ದಾನ ಮಾಡ್ತದರ್ಲಿ, ಚ – ಕೂಡ, ಏವ – ಖಂಡಿತವಾಗಿಯೂ, ಯತ್ ಪುಣ್ಯ-ಫಲಮ್ – ಯಾವ ಪುಣ್ಯಕಾರ್ಯದ ಫಲವು, ಪ್ರದಿಷ್ಟಮ್ – ಸೂಚಿಸಲ್ಪಟ್ಟಿದ್ದೋ, ತತ್ ಸರ್ವಮ್ – ಅವೆಲ್ಲವ, ಅತ್ಯೇತಿ – ದಾಂಟುತ್ತ°, ಆದ್ಯಮ್ – ಮೂಲವಾದ್ದು, ಪರಮ್ – ಪರಮವಾದ (ಅಕೇರಿಯಾಣದ್ದು , ಆದಿ-ಅಂತ್ಯದ್ದರ),  ಚ – ಕೂಡ, ಸ್ಥಾನಮ್ – ಸ್ಥಾನವ  / ಧಾಮವ, ಉಪೈತಿ – ಹೊಂದುತ್ತ°.

ಅನ್ವಯಾರ್ಥ

ಭಕ್ತಿಪೂರ್ವಕ ಸೇವೆಯ ಮಾರ್ಗವ ಸ್ವೀಕರುವವ°, ವೇದಾಧ್ಯಯನ, ಯಜ್ಞಂಗಳ ಆಚರಣೆ, ದಾನ ಅಥವಾ ತಾತ್ವಿಕ ಮತ್ತೆ ಕಾಮ್ಯಕರ್ಮಂಗಳಿಂದ ಬಪ್ಪ ಫಲವ ಕಳಕ್ಕೊಳ್ಳೆಕ್ಕಾದ್ದಿಲ್ಲೆ. ಭಕ್ತಿಸೇವೆ ಮಾಡಿರೆ ಸಾಕು, ಅವ° ಇವೆಲ್ಲವನ್ನೂ ಪಡಕ್ಕೊಳ್ಳುತ್ತ° ಮತ್ತೆ ಅಕೇರಿಗೆ ಮೂಲವೂ ಅಂತ್ಯವೂ ಆಗಿಪ್ಪ ಪರಮ ಶಾಶ್ವತ ನಿವಾಸವ ಹೊಂದುತ್ತ°.

ತಾತ್ಪರ್ಯ / ವಿವರಣೆ

ಅಕೇರಿಗೆ ಮುಕ್ತಾಯ ಮಾಡಿಗೊಂಡು ಭಗವಂತ° ಹೇಳುತ್ತ° – ಎಲ್ಲಕ್ಕಿಂತ ಮಿಗಿಲಾಗಿ ತಿಳಿವು ಹೇಳಿರೆ ಆ ಅಂತ್ಯಕಾಲದ ಅರಿವು ಹೇದು. ಸಮಸ್ತ ಶಾಸ್ತ್ರಂಗಳಲ್ಲಿ, ಯಜ್ಞ-ದಾನ-ತಪಸ್ಸುಗಳ ಮೂಲಕ ಏನು ಪುಣ್ಯಂಗಳ ಹೇಳಿದ್ದವೋ ಈ ಅಂತ್ಯಕಾಲದ ಸಾವಿನ ರಹಸ್ಯದ ಅರಿವು ಆ ಎಲ್ಲ ಪುಣ್ಯ ಫಲಂಗಳ ಮೀರಿದ್ದದು. ಹಾಂಗಾಗಿ, ಎಲ್ಲಕ್ಕಿಂತ ದೊಡ್ಡ ಸಾಧನೆ ಹೇಳಿರೆ ಅಂತ್ಯಕಾಲದ ಚಿಂತನೆ. ಈ ಕಾರಣಂದಾಗಿ ಬದುಕಿಂದಲೂ ಸಾವಿನ ಬಗ್ಗೆ ಹೆಚ್ಚು ಚಿಂತನೆಯ ಅಗತ್ಯ ಇದ್ದು. ಸಾವು ಅಮಂಗಳ ಅಲ್ಲ. ಸಾವು ದುಃಖದ ಅನುಭವ ಹೇಳ್ವದು ನಮ್ಮ ಬರೇ ಭ್ರಮೆ. ದೇಹದ ಒಳ ಇಪ್ಪ ಭೌತಿಕ ಶರೀರದ ಎಲ್ಲ ಯಾತನೆಗೊ ಜೀವಕ್ಕೆ ಅಂಟಿಗೊಂಡಿರುತ್ತು. ಸಾವು ಹೇಳಿರೆ ಈ ಸ್ಥೂಲ ಶರೀರಂದ ಬಿಡುಗಡೆ. ಹಾಂಗಾಗಿ ಸೂಕ್ಷ್ಮ ಶರೀರಲ್ಲಿಪ್ಪ ಜೀವ ಪಂಜರಂದ ಹೆರ ಬಂದು ಮುಕ್ತವಾಗಿ ಆಕಾಶಲ್ಲಿ ಹಾರುವ ಪಕ್ಷಿಯ ಹಾಂಗೆ.  ಹಾಂಗಾಗಿ, ಸಾವಿನ ಭಯ ಬಿಟ್ಟಿಕ್ಕಿ ಅಕೇರಿಯಾಣ ಕ್ಷಣಲ್ಲಿ ಮಾಂಗಲಿಕವಾಗಿ ಎತ್ತರಕ್ಕೇರುವ ದೇವತಾ ಅನುಸಂಧಾನ ನಿರಂತರವಾಗಿ ನಮ್ಮ ಬದುಕ್ಕಿಲ್ಲಿರೆಕು ಹೇಳಿ ಬನ್ನಂಜೆಯವರ ವ್ಯಾಖ್ಯಾನ.

ಹೀಂಗೆ ಏಳು ಮತ್ತೆ ಎಂಟನೇ ಅಧ್ಯಾಯಂಗೊ ವಿಶೇಷವಾಗಿ ಕೃಷ್ಣಪ್ರಜ್ಞೆ ಮತ್ತೆ ಭಕ್ತಿಸೇವೆಯ ಕುರಿತಾಗಿ ಹೇಳಿದ್ದು. ಕೃಷ್ಣಪ್ರಜ್ಞೆಯ ಸೊಗಸು ಹೇಳಿರೆ ಭಕ್ತಿಸೇವೆಲಿ ನಿರಂತರವಾಗಿ ನಿರತನಪ್ಪದರಿಂದ ಆ ಮೂಲಕವಾಗಿ ಮನುಷ್ಯ° ಬೇರೆ ಬೇರೆ ಆಶ್ರಮಂಗಳ ವಿವಿಧ ವಿಧಿಕರ್ಮಂಗಲ ದಾಂಟಿಹೋಪಲಕ್ಕು. ‘ಇದಂ ವಿದಿತ್ವಾ’ – ಹೇಳ್ವ ಅಕೇರಿಯಾಣ ಮಾತು, ಭಗವಂತ° ಏಳನೇ ಅಧ್ಯಾಯಲ್ಲಿ ಮತ್ತೆ ಎಂಟನೇ ಅಧ್ಯಾಯಲ್ಲಿ ಭಗವಂತ° ಕೊಟ್ಟಿಪ್ಪ ಆದೇಶಂಗಳ ಅರ್ಥ ಮಾಡಿಕೊಳ್ಳೆಕು ಹೇಳಿ ಸೂಚಿಸುತ್ತು. ವಿದ್ವತ್ತಿಂದ ಅಥವಾ ಊಹಾತ್ಮಕ ಚಿಂತನೆಂದ ಇವುಗಳ ಅರ್ಥಮಾಡಿಗೊಂಬಲಾಗ ಹೇಳಿ ಧ್ವನಿ ಹೇಳಿ ಹೇಳ್ವಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಅಕ್ಷರಬ್ರಹ್ಮಯೋಗೋ ನಾಮ ಅಷ್ಟಮೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೆಲಿ ಅಕ್ಷರಬ್ರಹ್ಮಯೋಗಃ ಹೇಳ್ವ ಎಂಟ್ನೇ ಅಧ್ಯಾಯ ಮುಗುದತ್ತು.

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

॥ ಶ್ರೀಕೃಷ್ಣಾರ್ಪಣಮಸ್ತು ॥

 

….ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 08 – SHLOKAS 21 – 28 by CHENNAI BHAAVA

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

8 thoughts on “ಶ್ರೀಮದ್ಭಗವದ್ಗೀತಾ – 08– ಅಕ್ಷರಬ್ರಹ್ಮಯೋಗಃ – ಶ್ಲೋಕಂಗೊ 21 – 28

  1. ಚೆನ್ನೈ ಭಾವನ ಅಭಿಪ್ರಾಯಕ್ಕೆ ಎನ್ನ ಸಹಮತ ಇದ್ದು. ಮನ್ನೆ ಬೈಲ ಪುಸ್ತಕ ಬಿಡುಗಡೆ ಸಮಯಲ್ಲಿ ಶ್ರೀ ಗುರುಗೊ ಒಂದು ದಿನ ಪೂರ್ತಿ ಬೈಲ ಬಾಂಧವರೊಟ್ಟಿಂಗೆ ಇಪ್ಪ ಆಶಯವ ಅದೇಶ ಕೊಟ್ಟಿದವನ್ನೆ.ಆ ಸಮಯಲ್ಲಿ ನಾವು ಸಾಮೂಹಿಕ ಪಾರಾಯಣ ಮಾಡುವ ಸಂಕಲ್ಪ ಮಾಡಿರೆ ಹೇಂಗಕ್ಕು.? ಎನ್ನ ಲೆಕ್ಕಲ್ಲಿ ಅದೊಂದು ಅಪೂರ್ವ ಕಾರ್ಯಕ್ರಮ ಅಕ್ಕು.

  2. ಹರೇ ರಾಮ । ಪ್ರೋತ್ಸಾಹಿಸುವ ಪ್ರತಿಯೊಬ್ಬಂಗೂ ಹೃತ್ಪೂರ್ವಕ ಧನ್ಯವಾದಂಗೊ.

    ಬೈಲಿಲಿ ಭಗವದ್ಗೀತಾ ಅಭಿಯಾನದ ಮುಖ್ಯ ಎನ್ನ ಉದ್ದೇಶ ಎಲ್ಲೋರ ಮನೆಗಳಲ್ಲೂ ಪೂಜಾಕೋಣೆಲಿಯೋ, ಪುಸ್ತಕ ಕವಾಟಿಲ್ಲಿಯೋ ಬಾಕಿಯಪ್ಪ ನಮ್ಮ ಸನಾತನ ಧರ್ಮದ ಪವಿತ್ರ, ಶ್ರೇಷ್ಠ ಗ್ರಂಥ ಎಲ್ಲೋರು ಸುಲಭವಾಗಿ ಓದುವಾಂಗೆ ಆಯೇಕು, ಸರಳವಾಗಿ ಅದರಲ್ಲಿಪ್ಪ ತಾತ್ಪರ್ಯವ ಅರ್ಥಮಾಡಿಗೊಂಡು ಓದುವಾಂಗೆ ಆಯೇಕು, ಜೀವನಕ್ಕೆ ಸದುಪಯೋಗವಾಯೇಕು. ನಮ್ಮ ಗುರುಗಳ ಮಾರ್ಗದರ್ಶನ ಪ್ರಕಾರ ಎಲ್ಲೋರು ರುದ್ರ ಕಲಿವಲೆ ಸ್ವಯಂ ಆಸಕ್ತಿ ಹೊಂದಿ ಮೂಲೆಮೂಲೆಲಿದ್ದೋರು ಕೂಡ ರುದ್ರ ಕಲಿವಲೆ ಸಾಧ್ಯ ಆತು. ಅದೇ ಆಸಕ್ತಿ ಉತ್ಸಾಹವ ಈ ಭಗವದ್ಗೀತೆಲಿಯೂ ತೋರ್ಸಿರೆ ಆಸಕ್ತರಿಂಗೆ ಗೀತಾ ಪುಸ್ತಕ ಹಿಡ್ಕೊಂಡು ಅರ್ಥಗರ್ಭಿತವಾಗಿ ಪಾರಯಣ ಮಾಡ್ಳೆ ಭಂಙ ಆಗ. ಹಾಂಗಾಗಿ ಆವ್ತು ದಿನಕ್ಕೆರಡು ಶ್ಲೋಕ ಓದಿ ಅರ್ಥೈಸಿಗೊಂಬಹಾಂಗೆ, ಸಲಿಲವಾಗಿ ಓದ್ಲೆ ಕಲ್ತುಗೊಂಬಲೂ ಸಹಾಯಕ ಅವ್ತರೀತಿಲಿ ವಾರಕ್ಕೆ ಸರಾಸರಿ ಹತ್ತು ಶ್ಲೋಕಂಗೊ ಹೇಳಿ ಶುರುಮಾಡಿದ್ದದು.

    ಎಲ್ಲಾ ಅಧ್ಯಾಯವ ಬೈಲಿಂಗೆ ಇಳುಶಿಕ್ಕಿ ಮುಂದೆ ಒಂದು ದಿನ ಇದರಲ್ಲಿ ಆಸಕ್ತಿಯಿಪ್ಪೆಲ್ಲೋರು ಒಂದಿಕ್ಕೆ ಸೇರಿಗೊಂಡು ಇಡೀ ಭಗವದ್ಗೀತೆಯ ಒಂದಿನ ಸಾಮೂಹಿಕ ಪಾರಾಯಣ ಮಾಡೆಕು ಹೇಳ್ವ ಬಯಕೆ ಇದ್ದು. ಹಾಂಗಾಗಿ, ಆಸಕ್ತಿ ಇಪ್ಪ ಎಲ್ಲೋರು ಇದಕ್ಕೆ ತಮ್ಮ ತಾವು ತಯಾರು ಮಾಡಿಗೊಂಬಲೆ ಒಂದು ಅವಕಾಶ ಬೈಲು ಮಾಡಿ ಕೊಟ್ಟಿದು.

    ಹರೇ ರಾಮ । ಎಲ್ಲೋರಿಂಗು ಗೀತಾಚಾರ್ಯ° ಸನ್ಮಾರ್ಗವನ್ನೀಯಲಿ.

  3. ಈ ಚೆನ್ನೈ ಭಾವಂಗೆ ‘ಒರಕ್ಕು’ ಕಮ್ಮಿ, ‘ವರ್ಕು’ ಜಾಸ್ತಿ.
    ಅವರ ಸಂಗ್ರಹ ಯೋಗ್ಯ ಶ್ರಮಕ್ಕೆ ನಮೋ ನಮಃ.

  4. ಚೆನ್ನೈ ಭಾವಯ್ಯನ ಶ್ರಮಕ್ಕೆ ಮತ್ತೊಂದರಿ ಅಡ್ಡ ಬಿದ್ದೆ. ಧನ್ಯವಾದಂಗೊ.

  5. [ಹೀಂಗೆ ಒಂದು ಮೋಕ್ಷಕ್ಕೆ ಹೋಪ ಬೆಣಚ್ಚಿನ ದಾರಿ, ಇನ್ನೊಂದು ಮರಳಿ ಸಂಸಾರಕ್ಕೆ ಬಪ್ಪ ಕಸ್ತಲೆಯ ದಾರಿ. ಜ್ಞಾನದ ಬೆಣಚ್ಚಿ ಸಿಕ್ಕಿದವಂಗೆ ಬೆಳಿಯ ದಾರಿ, ಅಜ್ಞಾನಲ್ಲೇ ಸಾಯ್ತವಂಗೆ ಕಸ್ತಲೆಯ ದಾರಿ]-ಭಗವದ್ಗೀತೆಯ ಓದಿ, ಜೀವನಲ್ಲಿ ರೆಜಾ ಅದರೂ ಕೃಷ್ಣ ಪ್ರಜ್ಞೆ ಬೆಳೆಶಿಗೊಂಡವಕ್ಕೆ ಬೆಣಚ್ಚಿಯ ದಾರಿಯೇ ಸಿಕ್ಕುಗು.

  6. ಫೇಸ್ ಬುಕ್ ಬಿಡುಸಿದ ಕೂಡ್ಳೇ  ಭಗವದ್ಗೀತೆ  ಎದೂರು  ಬಂತು .   ಇದರ  ಲಿಂಕ್ ತೆಗದು ಮಡಿಕ್ಕೊಂಡಿದೆ ,   ಪುರುಸೊತ್ತಿಲ್ಲಿ  ಪುನಃ  ಪುನಃ  ಓದುಲೆ …

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×