Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 32 – 42

ಬರದೋರು :   ಚೆನ್ನೈ ಬಾವ°    on   27/12/2012    6 ಒಪ್ಪಂಗೊ

ಚೆನ್ನೈ ಬಾವ°

 

ಅರ್ಜುನ° ಭಗವಂತನಲ್ಲಿ ಕಾಂಬ  ವಿಚಿತ್ರ ಸಂಗತಿಗಳ ನೋಡಿ ಕಂಗಾಲಾಗಿ ಹೇಳುತ್ತ° – ಹೇ ದೇವದೇವೋತ್ತಮ! ದೇವತೆಗಳಲ್ಲಿ ಶ್ರೇಷ್ಥನೇ!, ಇಡೀ ಪ್ರಪಂಚವನ್ನೇ ಹೆದರುಸುವ ನೀನಾರು?. ನಿನ್ನ ಭೀಕರ ರೂಪವ ನಿಲ್ಲುಸಿ ಪ್ರಸನ್ನನಾಗು. ನಿನಗೆ ತಲೆಬಾಗಿ ನಮಸ್ಕಾರ ಸಲ್ಲುಸುತ್ತಾ ಇದ್ದೆ. ದಯೆತೋರು. ಮದಾಲು ಎಲ್ಲೋದಕ್ಕೂ ಮೊದಲಿಗನಾದ ನಿನ್ನ ತಿಳಿವಲೆ ಆನು ಬಯಸುತ್ತೆ. ನಿನ್ನ ಉದ್ದೇಶವಾದರೂ ಎಂತರ?”. ಈ ರೀತಿಯಾಗಿ ದೈನ್ಯಭಾವಂದ ತಲೆಬಾಗಿ ನಮಸ್ಕರಿಸಿ ಅಂಗಲಾಚಿ ಭಗವಂತನಲ್ಲಿ ಬೇಡುತ್ತ° ಅರ್ಜುನ°.

ಅದಕ್ಕೆ –

ಶ್ರೀಮದ್ಭಗವದ್ಗೀತಾ – ಏಕಾದಶೋsಧ್ಯಾಯಃ – ವಿಶ್ವರೂಪದರ್ಶನಯೋಗಃ – ಶ್ಲೋಕಾಃ 32 – 42

ಶ್ಲೋಕ

ಶ್ರೀಭಗವಾನುವಾಚ
ಕಾಲೋsಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ ।
ಋತೇsಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇsವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥೩೨॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಕಾಲಃ ಅಸ್ಮಿ ಲೋಕ-ಕ್ಷಯ-ಕೃತ್ ಪ್ರವೃದ್ಧಃ ಲೋಕಾನ್ ಸಮಾಹರ್ತುಮ್ ಇಹ ಪ್ರವೃತ್ತಃ । ಋತೇ ಅಪಿ ತ್ವಾಮ್ ನ ಭವಿಷ್ಯಂತಿ ಸರ್ವೇ ಯೇ ಅವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥

ಅನ್ವಯ

ಶ್ರೀ ಭಗವಾನ್ ಉವಾಚ
ಅಹಂ ಲೋಕ-ಕ್ಷಯ-ಕೃತ್ ಪ್ರವೃದ್ಧಃ ಕಾಲಃ ಅಸ್ಮಿ, ಇಹ ಲೋಕಾನ್ ಸಮಾಹರ್ತುಂ ಪ್ರವೃತ್ತಃ ಅಸ್ಮಿ, ತ್ವಾಮ್ ಋತೇ ಅಪಿ ಪ್ರತ್ಯನೀಕೇಷು ಯೇ ಯೋಧಾಃ ಅವಸ್ಥಿತಾಃ, ತೇ ಸರ್ವೇ ನ ಭವಿಷ್ಯಂತಿ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವದೇವೋತ್ತಮ ಪರಮ ಪುರುಷ° ಹೇಳಿದ, ಅಹಮ್ – ಆನು, ಲೋಕ-ಕ್ಷಯ-ಕೃತ್ ಪ್ರವೃದ್ಧಃ  ಕಾಲಃ ಅಸ್ಮಿ – ಪ್ರಪಂಚವ ನಾಶಮಾಡುವ ಬೆಳದುನಿಂದ ಕಾಲ° ಆಗಿದ್ದೆ, ಇಹ ಲೋಕಾನ್ – ಈ ಲೋಕವ (ಲೋಕದ ಜನರೆಲ್ಲರ), ಸಮಾಹರ್ತುಮ್ ಪ್ರವೃತ್ತಃ ಅಸ್ಮಿ – ನಾಶಮಾಡ್ಳೆ ತೊಡಗಿದವನಾಗಿದ್ದೆ, ತ್ವಾಮ್ ಋತೇ ಅಪಿ – ನಿನ್ನ ಹೊರತುಪಡಿಸಿರೂ, ಪ್ರತ್ಯನೀಕೇಷು (ಪ್ರತಿ-ಅನೀಕೇಷು) – ಉಭಯಪಕ್ಷಂಗಳಲ್ಲಿ, ಯೇ ಯೋಧಾ – ಯಾವ ಯೋಧರು, ಅವಸ್ಥಿತಾಃ – ನೆಲೆಸಿಪ್ಪವು (ಇದ್ದವೋ) ತೇ ಸರ್ವೇ – ಅವೆಲ್ಲರೂ, ನ ಭವಿಷ್ಯಂತಿ – ಇರುತ್ತವಿಲ್ಲೆ.

ಅನ್ವಯಾರ್ಥ

ಭಗವಂತ° ಹೇಳಿದ° – ಆನು ಈ ಇಡೀ ಪ್ರಪಂಚವ ನಾಶಮಾಡ್ಳೆ ಬೆಳದು ನಿಂದಿಪ್ಪ ಕಾಲಪುರುಷ° ಆಗಿದ್ದೆ. ಈಗಿಲ್ಲಿ ಈ ಲೋಕವ ಮುಗುಶಿ ನಾಶಮಾಡ್ಳೆ ಹೆರಟವನಾಗಿದ್ದೆ. ನಿನ್ನ ಹೊರತುಪಡಿಸಿರೂ (ನಿನ್ನ ಹೇಳಿರೆ ಇಲ್ಲಿ ಪಾಂಡವರು ಹೇಳಿ ಅರ್ಥ) ಇಲ್ಲಿಪ್ಪ ಎರಡೂ ಪಡೆಯ ಯೋಧರು ಉಳಿತ್ತವಿಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಇಲ್ಲಿ ತಾನು ಸರ್ವಭಕ್ಷಕ ಕಾಲಪುರುಷನ ರೂಪಲ್ಲಿ ಪ್ರಕಟನಾಗಿದ್ದೆ ಹೇಳ್ವ ತಾತ್ಪರ್ಯಲ್ಲಿ ತನ್ನ ಸ್ಥಿತಿಯ ಬಗ್ಗೆ ಹೇಳುತ್ತ°. ‘ತಾನು ಕಾಲಪುರುಷನಾಗಿ ಸರ್ವವನ್ನೂ ನಾಶಮಾಡ್ಳೆ ಎದ್ದು ನಿಂದಿಪ್ಪ ಮಹಾಕಾಲ° ಆಗಿದ್ದೆ’. ಬನ್ನಂಜೆ ಹೇಳ್ತವು – ಇಲ್ಲಿ  ‘ಕಲ’ ಧಾತುವಿಂದ ಬಂದ ಕಾಲ° ಹೇಳ್ವ ಪದ ಸರ್ವಸಂಹಾರಕ°, ಸರ್ವಗುಣಪೂರ್ಣ°, ಸರ್ವಜ್ಞ° ಇತ್ಯಾದಿ ಅನೇಕ ಅರ್ಥವ ಕೊಡುತ್ತು. ಇಲ್ಲಿ ಭಗವಂತ° ವಿಶೇಷವಾಗಿ ಸಂಹಾರ ಶಕ್ತಿಯಾಗಿ ನಿಂದಿದ°. ತಾನು ಅರ್ಜುನಂಗೆ ಸಾರಥಿಯಾಗಿ ನಿಂದು ಭೂಮಿಗೆ ಭಾರವಾಗಿಪ್ಪವರ ಮುಗುಶಲೆ ಹೇಳಿಯೇ ನಿಂದಿಪ್ಪವ ಹೇಳಿ ಭಗವಂತ°  ಹೇಳುತ್ತ°. [ಮಹಾಭಾರತ ಯುದ್ಧವ ನೋಡಿರೆ ಅದು ಒಂದು ಮಹಾಯುದ್ಧ. ಅಲ್ಲಿ ಸುಮಾರು ಐವತ್ತು ಲಕ್ಷ ಮಂದಿ ಸತ್ತಿದವು. ಅಂದಿನ ದೇಶದ ಜನಸಂಖ್ಯೆಯ ನೋಡಿರೆ ಅದು ಒಟ್ಟು ಜನಸಂಖ್ಯೆಯ ಸುಮಾರು ಹತ್ತನೇ ಒಂದು ಭಾಗ.]   “ಋತೇsಪಿ ತ್ವಾಂ ನ ಭವಿಷ್ಯಂತಿ ಸರ್ವೇ” – ನೀನಿಲ್ಲದ್ದರೂ ಈ ಎರಡು ಕಡೆಲ್ಲಿಪ್ಪವೆಲ್ಲ ಉಳಿತ್ತವಿಲ್ಲೆ. ಇಲ್ಲಿ ನೀನು ಹೇಳಿ ಪಾಂಡವರು ಮತ್ತು ಪಾಂಡವರ ಹಾಂಗಿಪ್ಪ ಸಜ್ಜನರು. ಅವರ ಸಾವು ನಿಶ್ಚಿತವಾಯ್ದು. ಭಗವಂತ° ಮಹಾಕಾಲಪುರುಷನಾಗಿ ಎಂದು ನಿಂದಾಯ್ದು. ಭಗವಂತ° ಸರ್ವಶಕ್ತ°. ಅವಂಗೆ ಇನ್ನೊಬ್ಬನ ಹಾಂಗೇನೂ ಇಲ್ಲೆ. ಹಾಂಗಾಗಿ ಹೇಳಿದ್ದು ನೀನಿಲ್ಲದ್ದರೂ (ನಿನ್ನ ಸಹಾಯ ಇಲ್ಲದ್ದರೂ) ಇವು ಉಳಿತ್ತವಿಲ್ಲೆ. ಭಗವಂತನ ಸಂಕಲ್ಪದಂತೆ ಅವರ ಸಾವು ತೀರ್ಮಾನ ಆಗಿ ಆಯ್ದು.  ಅರ್ಥಾತ್ ಭಗವಂತ° ನೇರವಾಗಿ ಅರ್ಜುನಂಗೆ ಹೇಳಿಯೇ ಬಿಟ್ಟ° –   ನೀನು ಯುದ್ಧಮಾಡದ್ದರೂ ಇಲ್ಲಿಪ್ಪ ಇವೆಲ್ಲೋರು ನಾಶ ಆವ್ತವು ನಿಶ್ಚಿತ. ಅರ್ಜುನ° ಹೋರಾಡದ್ದ ಮಾತ್ರಕ್ಕೆ ಅವರ ಸಾವು ತಪ್ಪುಸಲೆ ಎಡಿಯ. ಕಾಲ ಹೇಳಿರೆ ನಾಶ. ಭಗವಂತನ ಇಚ್ಛೆಗೆ ಅನುಗುಣವಾಗಿ ಎಲ್ಲ ಅಭಿವ್ಯಕ್ತಿಗೊ ನಾಶ ಅಪ್ಪಲೇ ಬೇಕು. ಇದು ಭಗವದ್ ಸಂಕಲ್ಪ.

ಶ್ಲೋಕ

ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೇತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ॥೩೩॥

ಪದವಿಭಾಗ

ತಸ್ಮಾತ್ ತ್ವಮ್ ಉತ್ತಿಷ್ಠ ಯಶಃ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವರಾಜ್ಯ ಸಮೃದ್ಧಮ್ । ಮಯಾ ಏವ ಏತೇ ನಿಹತಾಃ ಪೂರ್ವಮ್ ಏವ ನಿಮಿತ್ತ-ಮಾತ್ರಮ್ ಭವ ಸವ್ಯ-ಸಾಚಿನ್ ॥

ಅನ್ವಯ

ತಸ್ಮಾತ್ ಹೇ ಸವ್ಯ-ಸಾಚಿನ್!, ತ್ವಮ್ ಉತ್ತಿಷ್ಠ, ಯಶಃ ಲಭಸ್ವ, ಶತ್ರೂನ್ ಜಿತ್ವಾ ಸಮೃದ್ಧಂ ರಾಜ್ಯಂ ಭುಂಕ್ಷ್ವ। ಮಯಾ ಏವ ಏತೇ ಪೂರ್ವಮ್ ಏವ ನಿಹತಾಃ । ತ್ವಂ ನಿಮಿತ್ಥ-ಮಾತ್ರಂ ಭವ ।

ಪ್ರತಿಪದಾರ್ಥ

ತಸ್ಮಾತ್ – ಹಾಂಗಾಗಿ, ಹೇ ಸವ್ಯ-ಸಾಚಿನ್! – ಏ ಸವ್ಯಸಾಚಿಯೇ!, ತ್ವಮ್ ಉತ್ತಿಷ್ಠ – ನೀ ಎದ್ದುನಿಲ್ಲು, ಯಶಃ ಲಭಸ್ವ – ಯಶಸ್ಸು (ಕೀರ್ತಿ) ಪಡಕ್ಕೊ, ಶತ್ರೂನ್ ಜಿತ್ವಾ – ಶತ್ರುಗಳ ಗೆದ್ದು, ಸಮೃದ್ಧಮ್ ರಾಜ್ಯಮ್ ಭುಂಕ್ಷ್ವ – ಸಮೃದ್ಧವಾಗಿಪ್ಪ ರಾಜ್ಯವ ಭೋಗುಸು, ಮಯಾ ಏವ – ಎನ್ನಿಂದಲೇ, ಏತೇ – ಇವೆಲ್ಲೋರು,  ಪೂರ್ವಮ್ ಏವ – ಈ ಮದಲೇ, ನಿಹತಾಃ – ಕೊಲ್ಲಲ್ಪಟ್ಟಿದವು, ತ್ವಮ್ – ನೀನು, ನಿಮಿತ್ಥ-ಮಾತ್ರಮ್ ಭವ – ನೆಪಕ್ಕೆ ಮಾತ್ರಕ್ಕೆ ಆಗು.

ಅನ್ವಯಾರ್ಥ

ಹಾಂಗಾಗಿ ಓ ಸವ್ಯಸಾಚಿಯಾದ ಅರ್ಜುನ!, ನೀ ಎದ್ದು ನಿಲ್ಲು. ಶತ್ರುಗಳೊಟ್ಟಿಂಗೆ ಯುದ್ಧಮಾಡಿ  ಕೀರ್ತಿ ಪಡೆ. ಶತ್ರುಗಳ ಗೆದ್ದು ರಾಜ್ಯ ಸುಖವ ಅನುಭವಿಸುವವನಾಗು. ಇವೆಲ್ಲೋರು ಎನ್ನಂದ ಈ ಮದಲೇ ಕೊಲ್ಲಲ್ಪಟ್ಟಿದವು. ನೀನೀಗ ನೆಪಮಾತ್ರಕ್ಕೆ ಕೊಲ್ಲುವವ ಆಗು.

ತಾತ್ಪರ್ಯ / ವಿವರಣೆ

ಭಗವಂತ° ಅರ್ಜುನನ ಹುರುದುಂಬುಸಲೆ ಹೇಳುತ್ತ° – ನೀ ಯುದ್ಧ ಮಾಡದ್ರೂ ಇವೆಲ್ಲ ಹೇಂಗೂ ಉಳಿತ್ತವಿಲ್ಲೆ. ಹಾಂಗಾಗಿ ಏ ಸವ್ಯೋಪಸವ್ಯ (ಎಡಬಲ /ಪರಸ್ಪರ ವಿರುದ್ಧವಾದ) ಕೈಗಳಲ್ಲಿ ಬಾಣಪ್ರಯೋಗ ಪಾರಂಗತನಾಗಿ ಸವ್ಯಸಾಚಿಯಾಗಿ ಹೆಸರುಗಳಸಿದ ಅರ್ಜುನ!, ಏಳು, ಯುದ್ಧ ಮಾಡು. ಇವೆಲ್ಲ ಏವತ್ತೇ ಎನ್ನಿಂದ ಸತ್ತಾಯ್ದು. ಈಗ ನಿಮಿತ್ಥ ಮಾತ್ರಕ್ಕೆ ನೀನು ಯುದ್ಧ ಮಾಡು, ಶತ್ರುಗಳ ಗೆದ್ದು ರಾಜ್ಯ ಸುಖವ ಅನುಭವುಸು. ಇದು ಭಗವದ್ ಭಕ್ತಂಗೆ ಭಗವಂತನಿಂದ ಕೊಡಲ್ಪಡ್ತ ಪ್ರಸಾದ. ಹಾಂಗಾಗಿ ನಿನ್ನ ಪಾಲಿನ ಕೆಲಸವ ಕರ್ತವ್ಯ ದೃಷ್ಟಿಂದ ಮಾಡ್ಳೆ ತಯಾರಾಗು.

ಶ್ಲೋಕ

ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥೩೪॥

ಪದವಿಭಾಗ

ದ್ರೋಣಮ್ ಚ ಭೀಷ್ಮಮ್ ಚ ಜಯದ್ರಥಮ್ ಚ ಕರ್ಣಮ್ ತಥಾ ಅನ್ಯಾನ್ ಅಪಿ ಯೋಧ-ವೀರಾನ್ । ಮಯಾ ಹತಾನ್ ತ್ವಂ ಜಹಿ ಮಾ ವ್ಯಥಿಷ್ಠಾಃ ಯುಧ್ಯಸ್ವ ಜೇತಾ ಅಸಿ ರಣೇ ಸಪತ್ನಾನ್ ॥

ಅನ್ವಯ

ತ್ವಂ ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾ ಮಯಾ ಹತಾನ್ ಅನ್ಯಾನ್ ಅಪಿ ಯೋಧ-ವೀರಾನ್ ಜಹಿ । ಮಾ ವ್ಯಥಿಷ್ಠಾಃ, ಯುಧ್ಯಸ್ವ, ರಣೇ ಸಪತ್ನಾನ್ ಜೇತಾ ಅಸಿ ॥

ಪ್ರತಿಪದಾರ್ಥ

ತ್ವಮ್ – ನೀನು, ದ್ರೋಣಮ್ ಚ ಭೀಷ್ಮಂ ಚ ಜಯದ್ರಥಂ ಚ – ದ್ರೋಣನ, ಭೀಷ್ಮನ, ಜಯದ್ರಥನ, ಕರ್ಣಂ – ಕರ್ಣನ, ತಥಾ – ಹಾಂಗೇ, ಮಯಾ ಹತಾನ್  – ಎನ್ನಿಂದ ಹತರಾದವರ, ಅನ್ಯಾನ್ ಅಪಿ ಯೋಧವೀರಾನ್ –  ಮತ್ತೆ ಅನ್ಯ ಯೋಧರೆಲ್ಲರ ಕೂಡ,  ಜಹಿ – ನಾಶಮಾಡು/ಕಳೆ/ಮುಗುಶು. ಮಾ ವ್ಯಥಿಷ್ಠಾಃ – ಕ್ಷೋಭೆಗೊಳ್ಳೆಡ, ಯುಧ್ಯಸ್ವ- ಯುದ್ಧಮಾಡು, ರಣೇ – ರಣಲ್ಲಿ / ಯುದ್ಧಲ್ಲಿ, ಸಪತ್ನಾನ್ – ಶತ್ರುಗಳ, ಜೇತಾ ಅಸಿ – ಗೆಲ್ಲುವವನಾವುತ್ತೆ.

ಅನ್ವಯಾರ್ಥ

ನೀನು ಭೀಷ್ಮ  ದ್ರೋಣ ಜಯದ್ರಥ ಕರ್ಣ ಮತ್ತೆ  ಎನ್ನಿಂದ ಹತರಾದ ಇತರ ಅನ್ಯ ಯೋಧರೆಲ್ಲರ ಕೊಲ್ಲು. ಕ್ಷೋಭೆಗೊಳಗಾಗೆಡ, ಯುದ್ಧಮಾಡು. ಯುದ್ಧಲ್ಲಿ ನೀನು ಶತ್ರುಗಳ ಗೆಲ್ಲುವವನಾವುತ್ತೆ.

ತಾತ್ಪರ್ಯ / ವಿವರಣೆ

ಇಲ್ಲಿ ಹಲವು ಸರ್ತಿ ‘ಚ’ ಹೇಳಿ ಉಪಯೋಗಿಸಿದ್ದು ಕಾಣುತ್ತು. ಚ ಹೇಳಿರೆ ಕೂಡ, ಮತ್ತು ಹೇಳ್ವ ಅರ್ಥ. ಸಂಸ್ಕೃತ ಶ್ಲೋಕಂಗಳಲ್ಲಿ ಚ ವೈ ಹಿ ತು ಹೆಚ್ಚಾಗಿ ಧಾರಾಳವಾಗಿ ಬಳಸ್ಪಲ್ಪಡುವ ಪದಂಗೊ. ಈ ಬಗ್ಗೆ ಒಪ್ಪಣ್ಣನ ಶುದ್ಧಿಲ್ಲಿ ಇತ್ತೀಚೆಗೆ ನಾವು ನೋಡಿದ್ದು. https://oppanna.com/?p=22898

ಭಗವಂತ° ತನ್ನ ಭಕ್ತ° ಅರ್ಜುನತ್ರೆ ತನಗಿಪ್ಪ ಇಪ್ಪ ನಂಬಿಕೆ/ಭರವಸೆಯ ಸ್ಪಷ್ಟಪಡುಸುತ್ತ° ಇಲ್ಲಿ ಅರ್ಜುನಂಗೆ. ಭಗವಂತಂಗೆ ತನ್ನ ನಿಜಭಕ್ತರಲ್ಲಿ ಅಪಾರ ಕರುಣೆ ಇಪ್ಪದನ್ನೂ ಇಲ್ಲಿ ಹೇಳಿದಾಂಗೆ ಆವ್ತು. ಪರಮ ಶ್ರದ್ಧಾಭಕ್ತಂಗೆ ಭಗವಂತ° ಬೇಕಾದ್ದರ ಕೊಡುತ್ತ°. ಪ್ರತಿಯೊಬ್ಬನೂ ಸಂಪೂರ್ಣಕೃಷ್ಣಪ್ರಜ್ಞೆಲಿ ಕೆಲಸಮಾಡಿ ಒಬ್ಬ ನಿಜಗುರುವಿನ ಮೂಲಕ ದೇವೋತ್ತಮ ಪರಮ ಪುರುಷನ ಅರ್ಥಮಾಡಿಗೊಳ್ಳೆಕು. ಬದುಕು ಹೀಂಗೆ ಸಾಗೆಕು. ಹಾಂಗಾದಪ್ಪಗ ಭಗವಂತನ ಕೃಪೆಂದ ಅವನ ಯೋಜನೆಗೊ ಅರ್ಥ ಆವ್ತು. ಭಕ್ತರ ಯೋಜನೆಗೊ ಆ ಕಾಲಕ್ಕೆ ಭಗವಂತನ ಯೋಜನೆ ಹಾಂಗೇ ನಡೆತ್ತು. ಮನುಷ್ಯರು ಇಂತಹ ಯೋಜನೆಗಳ ಅನುಸರುಸಿ ಬದುಕ್ಕಲೆ ನಡಸುವ ಹೋರಾಟಲ್ಲಿ ಜಯಶಾಲಿ ಆಯೇಕು.

ಇಲ್ಲಿ ಭಗವಂತ° ಅರ್ಜುನಂಗೆ ಹೇಳುತ್ತ° – “ಇಲ್ಲಿ ಕೂಡಿಪ್ಪ ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮೊದಲಾದವರ ಆಯಸ್ಸು ಆನು ಆಗಳೇ ಹೀರಿ ಆಯ್ದು. ನೀನು ಬೇಕು ಹೇಳಿರೂ ಅವಿನ್ನು ಬದುಕ್ಕಿ ಉಳಿವಲೆ ಇಲ್ಲೆ. ಇದರ ಆರಿಂದಲೂ ತಡವಲೆ ಎಡಿಯ. ಹಾಂಗಾಗಿ ನೀನೀಗ ಚಿಂತಿಸಿಗೊಂಡು ಕೂಬದೋ, ಎನ್ನವ್ವು ನಾಶ ಆವ್ತನ್ನೇ ಹೇಳ್ವ ಕ್ಲೇಶಂದಲೋ ಯುದ್ಧ ಮಾಡದ್ದೆ ಕೂರೆಡ. ಎಂದು ನಿಂದು ಕರ್ತವ್ಯ ದೃಷ್ಟಿಂದ ಯುದ್ಧಮಾಡಿ ಎನ್ನಿಂದ ಹತರಾದ ಇವೆಲ್ಲರ ಕೊಲ್ಲು. ಎನ್ನ ರಕ್ಷಣೆ ನಿನಗಿದ್ದು. ಯುದ್ಧಲ್ಲಿ ಇವರೆಲ್ಲರ ಕೊಂದು ಜಯಶಾಲಿಯಾಗಿ ರಾಜ್ಯ ಸಂಪತ್ತಿಯ ಆನಂದಂದ ಅನುಭವುಸು. ಕಂಗೆಡೆಡ, ಹೋರಡು. ಈ ಯುದ್ಧಲ್ಲಿ ಶತ್ರುಗಳ ಗೆಲ್ಲುವವನಾವ್ತೆ ನೀನು.” 

ಯುದ್ಧರಂಗವ ಭಗವಂತನ ಸಾರಥ್ಯಲ್ಲಿ ಪ್ರವೇಶಿಸಿದ ಅರ್ಜುನ° ಸುರುವಿಂಗೆ “ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ” ಹೇದು ಅಹಂಕಾರಂದ ಹೇಳಿತ್ತಿದ್ದ°. ಮತ್ತೆ ಉಭಯಸೇನೆಯ ಮಧ್ಯಲಿ ಭಗವಂತ° ಅರ್ಜುನನ ರಥವ ತಂದು ನಿಲ್ಲಿಸಿ “ಪಶ್ಯೇತಾನ್ ಸಮಾವೇತಾನ್ ಕುರೂನ್” ಹೇಳಿ ಹೇಳಿಯಪ್ಪಗ ಅಲ್ಲಿ ಸೇರಿಪ್ಪ ಸೇನೆಯ, ಸೇನಾಪ್ರಮುಖರ, ಸಂಬಂಧಿಗಳ ಕಂಡು ಹೆದರಿ ಬೆಚ್ಚಿಬಿದ್ದ° ಅರ್ಜುನ°. ಇವರೆಲ್ಲರ ಕೊಲ್ಲುವೆ  ಗೆಲ್ಲುವೆ  ಯಶಸ್ಸು ಸಿಕ್ಕುಗು, ಇದರಿಂದ ಭಗವದ್ಪ್ರೀತಿ ಅಕ್ಕು ಹೇಳ್ತ ನಂಬಿಕೆ ಎನಗಿಲ್ಲೆ ಹೇಳಿ ಭಗವಂತನತ್ರೆ ತನ್ನ ಮನಸ್ಥಿತಿಯ ಹೇಳಿದ° ಅರ್ಜುನ°. ಮತ್ತೆ ಭಗವಂತ° ಅರ್ಜುನಂಗೆ ಸಹಜ ಸ್ಥಿತಿಯ ಅರ್ಥಮಾಡುಸಲೆ ಸೃಷ್ಟಿ-ಸ್ಥಿತಿ-ಲಯದ ರೀತಿಯ ವಿವರಿಸಿ ವಿಶ್ವರೂಪದರ್ಶನವನ್ನೂ ಮಾಡುಸಿ, “ನೀನು ಬರೇ ನಿಮಿತ್ಥ ಮಾತ್ರ” ಹೇಳ್ವದರ ಮನವರಿಕೆ ಮಾಡಿದ ಭಗವಂತ° ಅರ್ಜುನಂಗೆ. 

ಶ್ಲೋಕ

ಸಂಜಯ ಉವಾಚ
ಏತಚ್ಛೃತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ॥೩೫॥

ಪದವಿಭಾಗ

ಸಂಜಯಃ ಉವಾಚ
ಏತತ್ ಶ್ರುತ್ವಾ ವಚನಮ್ ಕೇಶವಸ್ಯ ಕೃತ-ಆಂಜಲಿಃ ವೇಪಮಾನಃ ಕಿರೀಟೀ । ನಮಸ್ಕೃತ್ವಾ ಭೂಯಃ ಏವ ಆಹ ಕೃಷ್ಣಮ್ ಸಗದ್ಗದಮ್ ಭೀತ-ಭೀತಃ ಪ್ರಣಮ್ಯ ॥

ಅನ್ವಯ

ಸಂಜಯಃ ಉವಾಚ
ಕೇಶವಸ್ಯ ಏತತ್ ವಚನಂ ಶ್ರುತ್ವಾ ವೇಪಮಾನಃ ಕಿರೀಟೀ ಕೃತ-ಅಂಜಲಿಃ ಕೃಷ್ಣಂ ನಮಃ ಕೃತ್ವಾ ಭೀತ-ಭೀತಃ ಪ್ರಣಮ್ಯ ಭೂಯಃ ಏವ ಸಗದ್ಗದಮ್ ಆಹ ।

ಪ್ರತಿಪದಾರ್ಥ

ಸಂಜಯಃ ಉವಾಚ – ಸಂಜಯ° ಹೇಳಿದ°, ಕೇಶವಸ್ಯ – ಭಗವಂತನ ಏತತ್ ವಚನಮ್ – ಈ ಮಾತುಗಳ, ಶ್ರುತ್ವಾ – ಕೇಳಿ, ವೇಪಮಾನಃ ಕಿರೀಟೀ – ನಡುಗ್ಯೊಂಡು ಅರ್ಜುನ°, ಕೃತ-ಅಂಜಲಿಃ – ಕೈಮುಗುದು, ಕೃಷ್ಣಮ್ – ಕೃಷ್ಣನ (ಕೃಷ್ಣಂಗೆ ಹೇದರ್ಥ), ನಮಃ ಕೃತ್ವಾ – ನಮಸ್ಕಾರ ಮಾಡಿ, ಭೀತ-ಭೀತಃ – ಹೆದರಿದವನಾಗಿ, ಪ್ರಣಮ್ಯ ಭೂಯಃ – ನಮಸ್ಕರಿಸ್ಯೊಂಡು, ಏವ – ಕೂಡ, ಸಗದ್ಗದಮ್ – ಗದ್ಗದ ಧ್ವನಿಲಿ, ಆಹ – ಹೇಳಿದ°.

ಅನ್ವಯಾರ್ಥ

ಸಂಜಯ° ಧೃತರಾಷ್ಟ್ರಂಗೆ ಹೇಳಿದ° – ದೇವೋತ್ತಮ ಪರಮ ಪುರುಷನ ಈ ಮಾತುಗಳ ಕೇಳಿ ಅರ್ಜುನ° ಕೈಮುಗುದು, ನಡುಗ್ಯೊಂಡು, ಮತ್ತೆ ಮತ್ತೆ ನಮಸ್ಕಾರ ಮಾಡ್ಯೋಂಡು ಭಯಭೀತನಾಗಿ ಗದ್ಗದಕಂಠಲ್ಲಿ ಭಗವಂತನತ್ರೆ ಹೇಳಿದ°.

ತಾತ್ಪರ್ಯ / ವಿವರಣೆ

ಯುದ್ಧವ ಸನ್ನಿವೇಶವ ಧೃತರಾಷ್ಟ್ರಂಗೆ ವಿವರಿಸಿಗೊಂಡು ಸಂಜಯ° ಹೇಳುತ್ತ – “ದೇವೋತ್ತಮ ಪರಮ ಪುರುಷನ ವಿಶ್ವರೂಪವು ಸೃಷ್ಟಿಸಿದ ಸನ್ನಿವೇಶವ ನೋಡಿ ಅರ್ಜುನ° ಆಶ್ಚರ್ಯಚಕಿತನಾದ್ದು ಮಾಂತ್ರವಲ್ಲ, ಭಗವಂತನ ಅದ್ಭುತ ಶಕ್ತಿಯ ನೋಡಿ ದಿಗ್ಭಾಂತನಾದ°. ಮತ್ತೆ ಎದ್ದು ಇಂದು ಯುದ್ಧ ಮಾಡು, ಇವೆಲ್ಲರ ಆನಾಗಳೇ ಕೊಂದಾಯ್ದು. ನೆಪಮಾತ್ರಕ್ಕೆ ನೀನೀಗ ಈ ಶತ್ರುಗಳ ಕೊಂದು ರಾಜ್ಯವ ಪಡಕ್ಕೊ ಹೇಳಿ ಭಗವಂತ° ಹೇಳಿಯಪ್ಪಗ ಎಂತ ಮಾಡೆಕು ಹೇಳಿ ಅರಡಿಯದ್ದೆ  ಹೆದರಿಕೆಂದ ನಡುಗಿದ° ಅರ್ಜುನ°. ಪೂರ್ತಿ ಭಕ್ತಿಭಾವಂದ ಅರ್ಜುನ° ಭಗವಂತಂಗೆ ಮತ್ತೆ ಮತ್ತೆ ನಮಸ್ಕರ ಮಾಡಿಗೊಂಡು ಬೆರಗಾದ ಭಕ್ತನಾಗಿ ಗದ್ಗದ ಸ್ವರಲ್ಲಿ ಹೇಳುತ್ತ°”. 

ಬನ್ನಂಜೆ ವಿವರುಸುತ್ತವು – ಇಲ್ಲಿ ಸಂಜಯ° ಭಗವಂತನ ‘ಕೇಶವ’ ಮತ್ತೆ ‘ಕೃಷ್ಣ’ ಹೇಳಿ ಹೇಳಿದ್ದ°. ಕೇಶವ° ಹೇಳಿರೆ ಜಗತ್ತಿನ ಸೃಷ್ಟಿ ಮತ್ತೆ ಸಂಹಾರದ ಮೂಲಲ್ಲಿಪ್ಪ ಶಕ್ತಿಗೊ ಆದ ಬ್ರಹ್ಮ-ರುದ್ರರ ಸೃಷ್ಟಿ-ಸಂಹಾರಲ್ಲಿ ತೊಡಗಿಸಿ ನಿಯಂತ್ರುಸುವವ°. ಸಮಸ್ತ ಜೀವಜಾತದೊಳ ಇದ್ದುಗೊಂಡು ಅವರ ನಿಯಂತ್ರುಸುವ ಸರ್ವಾಂತರ್ಯಾಮಿ ಭಗವಂತ°- ‘ ಕೇಶವ°’. ಕಾ+ಈಶ+ವ = ಕೇಶವ. ಸೃಷ್ಟಿಗೆ ಕಾರಣವಾಗಿಪ್ಪವ° ಚತುರ್ಮುಖ ಬ್ರಹ್ಮ°. ಈಶ ಹೇಳಿರೆ ಸಂಹಾರಕ್ಕೆ ಕಾರಣವಾಗಿಪ್ಪವ – ಶಂಕರ°. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯ ಒಳಗೊಂಡದ್ದು – ಪರಶಕ್ತಿ. ಸೃಷ್ಟಿ-ಸ್ಥಿತಿ-ಸಂಹಾರ- ಮೋಕ್ಷಕ್ಕೆ ಕಾರಣವಾಗಿಪ್ಪವ° = ‘ಕೇಶವ’. ಇನ್ನು ‘ಕೃಷ್ಣ’  ಹೇಳ್ತದು ಭಗವಂತನ ಮೂಲ ನಾಮವೂ ಅಪ್ಪು. ನಮ್ಮ ಅಹಂಕಾರವ ಅಜ್ಞಾನವ ಕರ್ಷಣೆ ಮಾಡುವ, ಇಡೀ ಲೋಕವ ಆಕರ್ಷಣೆ ಮಾಡುವ ಭಗವಂತ°, ಸಂಸಾರಂದ ನಮ್ಮ ಕರ್ಷಣೆ ಮಾಡುವ ಭಗವಂತ° – ‘ಕೃಷ್ಣ°’.   

ಶ್ಲೋಕ

ಅರ್ಜುನ ಉವಾಚ
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನುರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ॥೩೬॥

ಪದವಿಭಾಗ

ಅರ್ಜುನಃ ಉವಾಚ
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತಿ ಅನುರಜ್ಯತೇ ಚ । ರಕ್ಷಾಂಸಿ ಭೀತಾನಿ ದಿಶಃ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧ-ಸಂಘಾಃ ॥

ಅನ್ವಯ

ಅರ್ಜುನಃ ಉವಾಚ –   ಹೇ ಹೃಷೀಕೇಶ!, ಸ್ಥಾನೇ, ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತಿ, ಅನುರಜ್ಯತೇ ಚ, ಭೀತಾನಿ ರಕ್ಷಾಂಸಿ ದಿಶಃ ದ್ರವಂತಿ, ಸರ್ವೇ ಚ ಸಿದ್ಧ-ಸಂಘಾಃ ನಮಸ್ಯಂತಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಹೃಷೀಕೇಶ!, – ಏ ಹೃಷೀಕೇಶ!(ಸಕಲೇಂದ್ರಿಯ ಸ್ವಾಮಿಯೇ!), ಸ್ಥಾನೇ – ಸರಿಯಾಗಿ, ತವ ಪ್ರಕೀರ್ತ್ಯಾ – ನಿನ್ನ ಕೀರ್ತಿಮಹಿಮೆಂದ, ಜಗತ್ – ಪ್ರಪಂಚವು, ಪ್ರಹೃಷ್ಯಂತಿ – ಸಂತೋಷಪಡುತ್ತಿದ್ದು, ಅನುರಜ್ಯತೇ ಚ – ಅನುರಕ್ತವಾಗುತ್ತಿದ್ದು ಕೂಡ, ಭೀತಾನಿ – ಭಯಂದ, ರಕ್ಷಾಂಸಿ – ರಾಕ್ಷಸರು, ದಿಶಃ ದ್ರವಂತಿ – ಎಲ್ಲ ದಿಕ್ಕುಗಳಲ್ಲಿ ಓಡುತ್ತಿದ್ದವು, ಸರ್ವೇ ಚ ಸಿದ್ಧ-ಸಂಘಾಃ – ಎಲ್ಲ ಸಿದ್ಧರ ಸಮೂಹವು ಕೂಡ, ನಮಸ್ಯಂತಿ – ನಮಸ್ಕರಿಸುತ್ತಿದ್ದವು.

ಅನ್ವಯಾರ್ಥ

ಅರ್ಜುನ° ಹೇಳಿದ° – ಓ ಇಂದ್ರಿಯಂಗಳ ಒಡೆಯನಾಗಿ ‘ಹೃಷೀಕೇಶ’ ಎಂದೆಣಿಸಿಗೊಂಡ ಭಗವಂತನೇ!, ಎಲ್ಲಾ ಸರಿಯೇ., ನಿನ್ನ ನಿನ್ನ ಮಹಿಮೆಯ ಕೀರ್ತಿಂದ ಇಡೀ ಪ್ರಪಂಚವೇ ಸಂತೋಷಪಡುತ್ತಿದ್ದು. ಇಡೀ ಜಗತ್ತು ನಿನ್ನತ್ತ ಅನುರಕ್ತವಾವ್ತಿದ್ದು. ಭಯಂದ ರಕ್ಕಸರು ದಿಕ್ಕೆಟ್ಟು ಓಡುತ್ತಿದ್ದವು. ಸಿದ್ಧರು ಗುಂಪುಗೂಡಿ ನಿನಗೆ ನಮಸ್ಕರಿಸುತ್ತಿದ್ದವು.

ತಾತ್ಪರ್ಯ / ವಿವರಣೆ

ಕುರುಕ್ಷೇತ್ರದ ಪರಿಣಾಮದ ಬಗ್ಗೆ ಭಗವಂತನಿಂದ ಕೇಳಿದ ಅರ್ಜುನಂಗೆ ಜ್ಞಾನೋದಯ ಆತು. ದೇವೋತ್ತಮ ಪರಮ ಪುರುಷನ ಭಕ್ತನಾಗಿ ಅರ್ಜುನ ಮಾಡಿದ್ದೆಲ್ಲ ಯೋಗ್ಯವೇ ಹೇಳಿ ಹೇಳಿದ್ದ ಭಗವಂತ°. ಭಕ್ತರ ರಕ್ಷಿಸುವವ°, ಶಿಷ್ಟರ ರಕ್ಷಿಸುವವ°, ದುರ್ಜನರ ನಾಶಗೈವವ°, ಭಕ್ತರ ಆರಾಧ್ಯ ದೈವ° – ಆ ಭಗವಂತ° ಹೇಳ್ವದು ಅರ್ಜುನಂಗೆ ಮನದಟ್ಟಾತು. ಅರ್ಜುನಂಗೆ ವಿಶ್ವರೂಪ ದರ್ಶನವಾದಪ್ಪಗ, ಇಡೀ ವಿಶ್ವಲ್ಲಿ ಅನೇಕ ಮಂದಿ ಜ್ಞಾನಿಗೊಕ್ಕೆ, ದೇವತೆಗೊಕ್ಕೂ ಕೂಡ ಆ ಅಪರೂಪದ ಭಗವಂತನ ರೂಪ ದರ್ಶನ ಆಯ್ದು. ಅರ್ಜುನ ತನ್ನ ಅಂತರಂಗಲ್ಲಿ ತನಗೆ ಕಾಣುತ್ತಿಪ್ಪ ವಿಚಾರವ ಹೇಳುತ್ತಲಿದ್ದ°. ಇಷ್ಟೇ ಅಲ್ಲದೆ ಬಾಹ್ಯ ವಸ್ತುಸ್ಥಿತಿ ಕೂಡ ಅವಂಗೆ ಭಗವಂತನಲ್ಲಿ ಕಾಣುತ್ತಲಿದ್ದು. ಅದರ ಅರ್ಜುನ° ಇಲ್ಲಿ ಹೇಳುತ್ತಲಿದ್ದ° – “ಋಷಿಗಳು, ಜ್ಞಾನಿಗಳು ನಿನ್ನ ಗುಣಗಾನ ಮಾಡುತ್ತಲಿದ್ದವು. ನಿನ್ನ ಕೊಂಡಾಡಿ ಮೈಮರದು ನಿನ್ನಲ್ಲಿ ಅನುರಕ್ತರಾಗಿ ಆನಂದವ ಪಡೆತ್ತಲಿದ್ದವು. ದುಷ್ಟಶಕ್ತಿಗಳಾದ ರಾಕ್ಷಸರು ನಿನ್ನ ಕಂಡು ಹೆದರಿ ಓಡುತ್ತಲಿದ್ದವು. ಸಾತ್ವಿಕರು ಸಿದ್ಧರು ಸಂತೋಷಂದ ಧನ್ಯತೆಂದ ನಿನ್ನ ಸ್ತುತಿಸಿ ನಿನಗೆ ನಮಸ್ಕರಿಸುತ್ತಿದ್ದವು”. ಭಗವಂತ° ಭಕ್ತರನ್ನೂ ನಾಸ್ತಿಕರನ್ನೂ ನಡಶುವ ರೀತಿಯ ಅರ್ಜುನ ಇಲ್ಲಿ ಹೊಗಳುತ್ತ°.

ಶ್ಲೋಕ

ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್ ಗರೀಯಸೇ ಬ್ರಹ್ಮಣೋsಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್ ॥೩೭॥

ಪದವಿಭಾಗ

ಕಸ್ಮಾತ್ ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣಃ ಅಪಿ ಆದಿ-ಕರ್ತ್ರೇ । ಅನಂತ ದೇವೇಶ ಜಗತ್-ನಿವಾಸ ತ್ವಮ್ ಅಕ್ಷರಮ್ ಸತ್ ಅಸತ್ ತತ್ ಪರಮ್ ಯತ್ ॥

ಅನ್ವಯ

ಹೇ ಮಹಾತ್ಮನ್!, ಅನಂತ!, ದೇವೇಶ!, ಬ್ರಹ್ಮಣಃ ಅಪಿ ಗರೀಯಸೇ ಆದಿ-ಕರ್ತ್ರೇ!, ತುಭ್ಯಂ ತೇ ಕಸ್ಮಾತ್ ಚ ನ ನಮೇರನ್, ಹೇ ಜಗತ್-ನಿವಾಸ!, ಯತ್ ಸತ್ ಅಸತ್ ಅಸ್ತಿ ತತ್ ಪರಮ್ ಅಕ್ಷರಂ ತ್ವಮ್ ಅಸಿ ।

ಪ್ರತಿಪದಾರ್ಥ

ಹೇ ಮಹಾತ್ಮನ್! ಅನಂತ!, ದೇವೇಶ! – ಓ ಮಹಾತ್ಮನೇ, ಅಪರಿಮಿತನೇ!, ದೇವದೇವನೇ!, ಬ್ರಹ್ಮಣಃ ಅಪಿ – ಬ್ರಹ್ಮನಿಂದಲೂ ಕೂಡ, ಗರೀಯಸೇ – ಉತ್ತಮನಾದ, ಆದಿ-ಕರ್ತ್ರೇ – ಆದಿ ಸೃಷ್ಟಿಕರ್ತೃವೇ, ತುಭ್ಯಮ್ ತೇ – ನಿನಗೆ ಅವು, ಕಸ್ಮಾತ್ ಚ – ಯಾವಕಾರಣಂದ ಕೂಡ (ಎಂತಕಾಗಿ ಕೂಡ), ನ ನಮೇರನ್ –  ನಮಸ್ಕರಿಸದ್ದೆ ಇದ್ದವು?, ಹೇ ಜಗತ್-ನಿವಾಸ – ಓ ಜಗದಾಶ್ರಯನೇ, ಯತ್ ಸತ್-ಅಸತ್ –  ಯಾವ ಕಾರಣ ಮತ್ತು ಪರಿಣಾಮಂಗೊ, ಅಸ್ತಿ  – ಇದ್ದು(ಇದ್ದೋ), ತತ್ ಪರಮ್ – ಅತೀತ°, ಅಕ್ಷರಮ್ – ಕ್ಷಯರಹಿತ°, ತ್ವಮ್ ಅಸಿ –  ನೀನಾಗಿದ್ದೆ.

ಅನ್ವಯಾರ್ಥ

ಓ ಮಹಾತ್ಮನೇ!, ಅನಂತನೇ!, ದೇವದೇವೇಶನೇ!,  ಬ್ರಹ್ಮನಿಂದಲೂ ಶ್ರೇಷ್ಠನಾದ, ಆದಿ ಸೃಷ್ಟಿಕರ್ತನೇ, ಅವೆಲ್ಲ ನಿನಗೆ ನಮಸ್ಕರುಸದ್ದೆ ಹೇಂಗೆ ಇಪ್ಪಲೆಡಿಗು. ಓ ಜಗದಾಶ್ರಯನೇ ಸತ್-ಅಸತ್ತ್ ಗೊಕ್ಕೆ ಅತೀತನಾದ, ಕ್ಷಯರಹಿತ° ನೀನು ಪರಬ್ರಹ್ಮನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಅರ್ಜುನ° ಹೇಳುತ್ತ° – “ಓ ಮಹಾಮಹಿಮನೇ, ಅನಂತನೇ, ದೇವದೇವೋತ್ತಮನೇ, ನಿನ್ನ ತಿಳುದವು ಬ್ರಹ್ಮಾದಿ ದೇವತೆಗಳಾದರೂ ಸೃಷ್ಟಿಗೆ ಕಾರಣನಾದ ನಿನ್ನ ನಮಸ್ಕರುಸದ್ದೆ ಹೇಂಗೆ ಇಪ್ಪಲೆಡಿಗು ಅವಕ್ಕೆ. ನೀನು ದೇಶ-ಕಾಲ-ಗುಣಂಗೊಕ್ಕೆ ಅತೀತನಾದವ°, ಅಪರಿಮಿತ°, ಎಲ್ಲ ಗುಣಂಗಳಲ್ಲಿಯೂ ಅನಂತ°ನಾಗಿದ್ದೆ. ನೀನು ಎಲ್ಲೋರ ಒಳವೂ ಹೆರವೂ ತುಂಬಿ ನಿಂದಿಪ್ಪ ಜಗನ್ನಿವಾಸ° (ಜಗತ್ತಿಂಗೇ ಆಶ್ರಯದಾತ°). ಸಕಲ ಗುಣಪೂರ್ಣ°, ದೋಷರಹಿತ°, ಸತ್-ಚಿತ್ ಆನಂದ ಮೂರ್ತಿ (ಸಚ್ಚಿದಾನಂದಮೂರ್ತಿ). ಅವ್ಯಕ್ತಮೂರ್ತಿಯಾದ ನಿನ್ನ ಅಸತ್ (ಹೊರಗಣ್ಣಿಂದ) ಕಾಂಬಲೆಡಿಯ°. ನೀನು ಅಕ್ಷರ°, ನೀನು ದೇವೇಶ°, ಎಲ್ಲ ಕಾರಣಂಗೊಕ್ಕೂ ಕಾರಣ ನೀನು ಆಗಿದ್ದೆ. ನೀನು ಸಮಸ್ತ ಜಗದ ಆಸರೆಯಾಗಿ ಪರಬ್ರಹ್ಮನೇ ಆಗಿದ್ದೆ”.

ಶ್ಲೋಕ

ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ॥೩೮॥

ಪದವಿಭಾಗ

ತ್ವಮ್ ಆದಿದೇವಃ ಪುರುಷಃ ಪುರಾಣಃ ತ್ವಮ್ ಅಸ್ಯ ವಿಶ್ವಸ್ಯ ಪರಮ್ ನಿಧಾನಮ್ । ವೇತ್ತಾ ಅಸಿ ವೇದ್ಯಮ್ ಚ ಪರಮ್ ಚ ಧಾಮ ತ್ವಯಾ ತತಮ್ ವಿಶ್ವಮ್ ಅನಂತ-ರೂಪ ॥

ಅನ್ವಯ

ತ್ವಮ್ ಆದಿದೇವಃ, ಪುರಾಣಃ ಪುರುಷಃ, ತ್ವಮ್ ಅಸ್ಯ ವಿಶ್ವಸ್ಯ ಪರಂ ನಿಧಾನಮ್ । ತ್ವಂ ವೇತ್ತಾ ಚ ವೇದ್ಯಮ್ । ಪರಂ-ಧಾಮಃ ಚ ಅಸಿ । ಹೇ ಅನಂತ-ರೂಪ!, ತ್ವಯಾ ವಿಶ್ವಂ ತತಮ್ ।

ಪ್ರತಿಪದಾರ್ಥ

ತ್ವಮ್ ಆದಿದೇವಃ – ನೀನು ಮೂಲ ಪರಮ ದೇವ°, ಪುರಾಣಃ ಪುರುಷಃ – ಪ್ರಾಚೀನ ಪುರುಷ°, ತ್ವಮ್ – ನೀನು,  ಅಸ್ಯ ವಿಶ್ವಸ್ಯ – ಈ ವಿಶ್ವದ, ಪರಮ್ ನಿಧಾನಮ್ – ದಿವ್ಯವಾದ ಆಶ್ರಯ°, ತ್ವಮ್ – ನೀನು, ವೇತ್ತಾ ಚ – ತಿಳುದವ° ಕೂಡ, ವೇದ್ಯಮ್ – ತಿಳಿಯಲ್ಪಡುವವ°,  ಪರಮ್-ಧಾಮಃ – ದಿವ್ಯವಾದ ಆಶ್ರಯದಾತ°, ಚ ಅಸಿ – ಕೂಡ ಆಗಿದ್ದೆ. ಹೇ ಅನಂತ-ರೂಪ – ಓ ಅನಂತ ರೂಪನೇ, ತ್ವಯಾ – ನಿನ್ನಂದ, ವಿಶ್ವಮ್ – ವಿಶ್ವವು, ತತಮ್ – ವ್ಯಾಪ್ತವಾಗಿದ್ದು.

ಅನ್ವಯಾರ್ಥ

ನೀನು ಆದಿದೇವೋತ್ತಮ°, ಪುರಾಣಪುರುಷ°,  ಈ ಪ್ರಕಟಿತ ವಿಶ್ವದ ಅಕೇರಿಯಾಣ ಆಶ್ರಯ° ನೀನು. ಎಲ್ಲವನ್ನೂ ತಿಳುದವ° ನೀನು, ಎಲ್ಲೋರಿಂದಲೂ ತಿಳಿಯಲ್ಪಡೇಕ್ಕಾದವ° ಕೂಡ ನೀನು ಆಗಿದ್ದೆ. ಭೌತಿಕ ಗುಣಂಗಳ ಮೀರಿದ ಪರಂಧಾಮ ನೀನು. ಹೇ ಅನಂತರೂಪನೇ!, ಈ ವಿಶ್ವವೆಲ್ಲ ನಿನ್ನಿಂದ ವ್ಯಾಪ್ತವಾಗಿದ್ದು.

ತಾತ್ಪರ್ಯ / ವಿವರಣೆ

ಈ ಪ್ರಪಂಚಲ್ಲಿ ಎಲ್ಲವೂ ಆ ದೇವೋತ್ತಮ ಪರಮ ಪುರುಷನ ಅವಲಂಬಿಸಿದ್ದು (ನಿಧಾನಂ). ಹಾಂಗಾಗಿಯೇ ಅವನೇ ಅಕೇರಿಯಾಣ ಶಾಂತಿಯ ತಾಣ°. ಈ ಪ್ರಪಂಚಲ್ಲಿ ನಡೆತ್ತದೆಲ್ಲವನ್ನೂ ತಿಳುದವ° ಆ ಭಗವಂತ. ಈ ಪ್ರಪಂಚ ತಿಳಿಯೇಕ್ಕಾದ್ದೂ ಕೂಡ ಅವನನ್ನೇ. ಅವನೇ ಜ್ಞಾನದ ಗುರಿ. ಅವ° ಸರ್ವವ್ಯಾಪಿ. ಎಲ್ಲದಕ್ಕೂ ಕಾರಣ° ಅವ°, ಹಾಂಗಾಗಿ ಅವ° ದಿವ್ಯ°. ಸಮಸ್ತ ಜಗತ್ತಿಲ್ಲಿ ಅವನೇ ಪ್ರಧಾನ°. ಹಾಂಗಾಗಿ ಅರ್ಜುನ° ಹೇಳುತ್ತ° – “ಓ ಮಹಾಮಹಿಮನೇ!, ನೀನು ಆದಿದೇವ°, ನೀನು ಪುರಾಣಪುರುಷ°. ಈ ಜಗತ್ತಿಂಗೆ ಕೊನೆಯಾಸರೆ ನೀನು. ಎಲ್ಲೋರೂ ತಿಳಿಯೇಕ್ಕಾದವ ನೀನು ಎಲ್ಲವನ್ನೂ ತಿಳುದವ° ಹಾಂಗೂ ಎಲ್ಲವನ್ನೂ ಮೀರಿದ ಪರಂಧಾಮ°. ಅನಂತರೂಪನಾದ ನೀನು ಇಡೀ ವಿಶ್ವವ ವ್ಯಾಪಿಸಿ ನಿಂದಿದೆ”.

ಶ್ಲೋಕ

ವಾಯುರ್ಯಮೋsಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇsಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋsಪಿ ನಮೋ ನಮಸ್ತೇ ॥೩೯॥

ಪದವಿಭಾಗ

ವಾಯುಃ ಯಮಃ ಅಗ್ನಿಃ ವರುಣಃ ಶಶಾಂಕಃ ಪ್ರಜಾಪತಿಃ ತ್ವಮ್ ಪ್ರಪಿತಾಮಹಃ ಚ । ನಮಃ ನಮಃ ತೇ ಅಸ್ತು ಸಹಸ್ರ-ಕೃತ್ವಃ ಪುನಃ ಚ ಭೂಯಃ ಅಪಿ ನಮಃ ನಮಃ ತೇ ॥

ಅನ್ವಯ

ತ್ವಂ ವಾಯುಃ ಯಮಃ ಅಗ್ನಿಃ ವರುಣಃ ಶಶಾಂಕಃ ಪ್ರಜಾಪತಿಃ ಚ ಪ್ರಪಿತಾಮಹಃ ಅಸಿ । ತೇ ಸಹಸ್ರ-ಕೃತ್ವಃ ನಮಃ ನಮಃ, ಪುನಃ ಚ ಭೂಯಃ ಅಪಿ ತೇ ನಮಃ ನಮಃ ಅಸ್ತು ।

ಪ್ರತಿಪದಾರ್ಥ

ತ್ವಮ್ – ನೀನು, ವಾಯುಃ – ವಾಯು, ಯಮಃ – ಯಮ°, ಅಗ್ನಿಃ – ಅಗ್ನಿ, ವರುಣಃ – ವರುಣ°, ಶಶಾಂಕಃ (ಶಶ+ಅಂಕಃ) – ಚಂದ್ರ°, ಪ್ರಜಾಪತಿಃ – ಬ್ರಹ್ಮ°, ಚ – ಕೂಡ, ಪ್ರಪಿತಾಮಹಃ – ಪ್ರಪಿತಾಮಹ° (ಮುತ್ತಜ್ಜ°), ಅಸಿ – ಆಗಿದ್ದೆ. ತೇ – ನಿನಗೆ, ಸಹಸ್ರ-ಕೃತ್ವಃ – ಸಾವಿರ ಸರ್ತಿ, ನಮಃ ನಮಃ – ನಮಸ್ಕಾರಂಗೊ ನಮಸ್ಕಾರಂಗೊ. ಪುನಃ ಚ – ಮತ್ತೂ ಕೂಡ, ಭೂಯ – ಮತ್ತೆ (ಮತ್ತೊಂದರಿ), ಅಪಿ – ಕೂಡ, ತೇ – ನಿನಗೆ, ನಮಃ ನಮಃ – ನಮಸ್ಕ್ರಾರಂಗೊ ನಮಸ್ಕಾರಂಗೊ, ಅಸ್ತು – ಆಗಲಿ.

ಅನ್ವಯಾರ್ಥ

ನೀನು ವಾಯು, ಯಮ°, ಅಗ್ನಿ, ವರುಣ°, ಚಂದ್ರ°, ಬ್ರಹ್ಮ°, ಮುತ್ತಜ್ಜ° ಕೂಡ ಆಗಿದ್ದೆ. ನಿನಗೆ ಸಾವಿರ ಸರ್ತಿ ನಮಸ್ಕಾರಂಗೊ. ಮತ್ತೆ ಮತ್ತೆ ನಿನಗೆ ನಮಸ್ಕಾರಂಗೊ.  

ತಾತ್ಪರ್ಯ / ವಿವರಣೆ

ಬನ್ನಂಜೆ ವಿವರುಸುತ್ತವು – ಭಗವಂತನ ಮಹಿಮೆಯ ಅವಲೋಕಿಸಿ ಮೈಮರದು ಭಗವಂತಂಗೆ ನಮಸ್ಕರಿಸಿಗೊಂಡು ಹೇಳುತ್ತ° – “ನೀನು ‘ವಾಯು’ (ವ=ಬಲರೂಪ°+ಆಯಾ=ಜ್ಞಾನರೂಪ°), ಎಲ್ಲವನ್ನೂ ನಿಯಮಿಸುವದರಿಂದ ಯಮ°, ಚಲನೆ ಇಲ್ಲದ್ದ (ಅಗ) ವಿಶ್ವಕ್ಕೆ ಚಲನೆ (ನಿ) ನೀಡುವವನಾದ್ದರಿಂದ ‘ಅಗ್ನಿ’, ಭಕ್ತರ ವರಣ ಮಾಡುವದರಿಂದ ‘ವರುಣಃ’, ಶಶಃ = ಮಿಗಿಲಾದ ಆನಂದಂದ ಅಂಕಃ – ಅಂಕಿತನಾದ್ದರಿಂದ – ‘ಶಶಾಂಕಃ’, ಪ್ರಜೆಗಳ ಪಾಲಕನಾದ್ದರಿಂದ ‘ಪ್ರಜಾಪತಿಃ’, ಎಲ್ಲೋರಿಂಗೂ ಹಿರಿಯವನಾದ ನೀನು ಈ ವಿಶ್ವಕ್ಕೇ ‘ಪ್ರಪಿತಾಮಹಃ’ (ಮುತ್ತಜ್ಜ°) ಆಗಿದ್ದೆ. ನಿನಗೆ ಸಾವಿರಾರು ನಮಸ್ಕಾರಂಗೊ . ಮತ್ತೊಂದರಿ, ಮಗುದೊಂದರಿ ನಿನಗೆ ನಮಸ್ಕಾರಂಗೊ”.

ಶ್ಲೋಕ

ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋsಸ್ತುತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವ ಸಮಾಪ್ನೋಷಿ ತತೋsಸಿ ಸರ್ವಃ ॥೪೦॥

ಪದವಿಭಾಗ

ನಮಃ ಪುರಸ್ತಾತ್ ಅಥ ಪೃಷ್ಠತಃ ತೇ ನಮಃ ಅಸ್ತು ತೇ ಸರ್ವತಃ ಏವ ಸರ್ವ । ಅನಂತ-ವೀರ್ಯ-ಅಮಿತ-ವಿಕ್ರಮಃ ತ್ವಮ್ ಸರ್ವಮ್ ಸಮಾಪ್ನೋಷಿ ತತಃ ಅಸಿ ಸರ್ವಃ ॥

ಅನ್ವಯ

ಹೇ ಸರ್ವ!, ತೇ ಪುರಸ್ತಾತ್ ನಮಃ , ಅಥ ತೇ ಪೃಷ್ಠತಃ ನಮಃ, ತೇ ಸರ್ವತಃ ಏವ ನಮಃ ಅಸ್ತು । ಹೇ ಅನಂತ-ವೀರ್ಯ!, ತ್ವಂ ಅಮಿತ-ವಿಕ್ರಮಃ ಸರ್ವಂ ಸಮಾಪ್ನೋಷಿ  । ತತಃ ಸರ್ವಃ ಅಸಿ ।

ಪ್ರತಿಪದಾರ್ಥ

ಹೇ ಸರ್ವ! – ಏ ಸರ್ವಶಕ್ತನೇ (ಸರ್ವನೇ!), ತೇ – ನಿನಗೆ, ಪುರಸ್ತಾತ್ ನಮಃ – ಎದುರಂದ (ಮುಂದಿಕ್ಕಂದ) ನಮಸ್ಕಾರಂಗೊ, ಅಥ – ಕೂಡ (ಹಾಂಗೇ, ಮತ್ತೆ), ತೇ – ನಿನಗೆ, ಪೃಷ್ಠತಃ ನಮಃ – ಹಿಂದಿಕ್ಕಂದ ನಮಸ್ಕಾರಂಗೊ, ತೇ – ನಿನಗೆ ಸರ್ವತಃ ಏವ – ಎಲ್ಲ ಹೊಡೆಂದಲೂ ಕೂಡ (ಖಂಡಿತವಾಗಿಯೂ), ನಮಃ ಅಸ್ತು – ನಮಸ್ಕಾರಂಗೊ ಇರಲಿ. ಹೇ ಅನಂತ-ವೀರ್ಯ! – ಓ ಅಮಿತ ಶಕ್ತಿಶಾಲಿಯೇ!, ತ್ವಮ್ – ನೀನು, ಅಮಿತ-ವಿಕ್ರಮಃ – ಅಪರಿಮಿತ ಬಲಶಾಲಿ (ವಿಕ್ರಮಿ), ಸರ್ವಮ್ – ಎಲ್ಲವನ್ನೂ, ಸಮಾಪ್ನೋಷಿ – ಆವರಿಸುತ್ತಿದ್ದೆ, ತತಃ – ಹಾಂಗಾಗಿ, ಸರ್ವಃ ಅಸಿ – ಪ್ರತಿಯೊಂದೂ ಆಗಿದ್ದೆ.

ಅನ್ವಯಾರ್ಥ

ಹೇ ಶರ್ವಶಕ್ತನೇ!, ನಿನಗೆ ಮುಂದಿಕ್ಕಂದ ನಮಸ್ಕಾರ, ಹಿಂದಿಕ್ಕಂದ ನಮಸ್ಕಾರ, ಎಲ್ಲ ಹೊಡೆಂದಲೂ ನಮಸ್ಕಾರ. ಓ ಅನಂತ ಶಕ್ತಿಶಾಲಿಯೇ!, ನೀನು ಅನಂತ ಪರಾಕ್ರಮಿ ಪ್ರಭು. ನೀನು ಎಲ್ಲವನ್ನೂ ವ್ಯಾಪಿಸಿದ್ದೆ. ಹಾಂಗಾಗಿ ಎಲ್ಲವೂ ನೀನೆ.

ತಾತ್ಪರ್ಯ / ವಿವರಣೆ

ಭಗವಂತನ ಲೀಲೆಯ ಮಹಿಮೆಯ ಕಂಡ ಅರ್ಜುನ°, ಭಗವಂತ° ಅದೆಷ್ಟು ಮಹೋನ್ನತ ಹೇಳ್ವದರ ತಿಳುದು ಹರ್ಷೋನ್ಮಾದಲ್ಲಿ ಭಗವಂತನ ಹೊಗಳಿಗೊಂಡು  ಎಲ್ಲ ಹೊಡೆಂದಲೂ ನಮಸ್ಕಾರ ಸಲ್ಲುಸುತ್ತ°.  ಬನ್ನಂಜೆ ಹೇಳುತ್ತವು – ಭಗವಂತನ ವಿಶ್ವರೂಪಲ್ಲಿ ಅವನ ಮುಂದೊಡೆ ಏವುದು ಹಿಂದೊಡೆ ಏವುದು ಹೇದು ಗುರುತುಸಲೆ ಎಡಿಯ. ಹಾಂಗಾಗಿ ಅರ್ಜುನ ಹೇಳುತ್ತ° – “ನಿನಗೆ ಎದುರಂದ ನಮಸ್ಕಾರ, ಹಿಂದಿಕ್ಕಂದ ನಮಸ್ಕಾರ, ಎಲ್ಲೆಡೆ ತುಂಬಿಪ್ಪ ನಿನಗೆ ಎಲ್ಲ ಹೊಡೆಂದಲೂ ನಮಸ್ಕಾರ. ನೀನು ಅನಂತವೀರ್ಯ°, ಅಮಿತವಿಕ್ರಮಿ, ಸರ್ವಶಕ್ತ, ಸರ್ವವ್ಯಾಪಿ, ಅನಂತಶಕ್ತಿ. ಜಗತ್ತಿನ ಸಮಸ್ತ ಸೃಷ್ಟಿಗೆ ಕಾರಣವಾಗಿ, ಅಲ್ಲಿ ಪ್ರತಿಯೊಂದರಲ್ಲೂ ತುಂಬಿಗೊಂಡು, ಜಗತ್ತಿನ ನಿಯಾಮಕನಾಗಿ ನಿಂದಿಪ್ಪ ನಿನ್ನ ಅನಂತ ಶಕ್ತಿಗೆ ಮತ್ತ್ತೆ ಮತ್ತೆ ನಮಸ್ಕಾರ. ಪ್ರಪಂಚದ ಎಲ್ಲವುದರಲ್ಲಿಯೂ ನೀನಿದ್ದೆ. ಈ ಪ್ರಪಂಚದ ಎಲ್ಲವೂ ನೀನೆ”.

ಶ್ಲೋಕ

ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಪಿ ॥೪೧॥

ಯಚ್ಚಾವಹಾಸಾರ್ಥಮಸತ್ಕೃತೋsಸಿ ವಿಹಾರಶಯ್ಯಾಸನಭೋಜನೇಷು ।
ಏಕೋsಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹಮಪ್ರಮೇಯಮ್ ॥೪೨॥

ಪದವಿಭಾಗ

ಸಖಾ ಇತಿ ಮತ್ವಾ ಪ್ರಸಭಮ್ ಯತ್ ಉಕ್ತಮ್ ಹೇ ಕೃಷ್ಣ ಹೇ ಯಾದವ ಹೇ ಸಖಾ ಇತಿ । ಅಜಾನತಾ ಮಹಿಮಾನಮ್ ತವ ಇದಮ್ ಮಯಾ ಪ್ರಮಾದಾತ್ ಪ್ರಣಯೇನ ವಾ ಅಪಿ ॥

ಯತ್ ಚ ಅವಹಾಸರ್ಥಮ್ ಅಸತ್ ಕೃತಃ ಅಸಿ ವಿಹಾರ-ಶಯ್ಯಾ-ಆಸನ-ಭೋಜನೇಷು । ಏಕಃ ಅಥವಾ ಅಪಿ ಅಚ್ಯುತ ತತ್ ಸಮಕ್ಷಮ್ ತತ್ ಕ್ಷಾಮಯೇ ತ್ವಾಮ್ ಅಹಮ್ ಅಪ್ರಮೇಯಮ್ ॥

ಅನ್ವಯ

ತವ ಇದಂ ಮಹಿಮಾನಂ ಅಜಾನತಾ ಮಯಾ ಸಖಾ ಇತಿ ಮತ್ವಾ, ಹೇ ಕೃಷ್ಣ!, ಹೇ ಯಾದವ!, ಹೇ ಸಖಾ! ಇತಿ ಪ್ರಮಾದಾತ್ ಪ್ರಣಯೇನ ವಾ ಅಪಿ ಪ್ರಸಭಮ್ ಉಕ್ತಮ್, ಹೇ ಅಚ್ಯುತ!, ಯತ್ ಚ ವಿಹಾರ-ಶಯ್ಯಾ-ಆಸನ-ಭೋಜನೇಷು, ಅವಹಾಸಾರ್ಥಮ್ ಏಕಃ ಅಥವಾ ತತ್ ಸಮಕ್ಷಮ್ ಅಪಿ, ಅಸತ್ ಕೃತಃ ಅಸಿ ತತ್ ಅಹಮ್ ಅಪ್ರಮೇಯಂ ತ್ವಾಂ ಕ್ಷಾಮಯೇ ॥

ಪ್ರತಿಪದಾರ್ಥ

ತವ – ನಿನ್ನ, ಇದಮ್ ಮಹಿಮಾನಮ್ – ಈ ಮಹಿಮೆಯ,  ಅಜಾನತಾ – ತಿಳಿಯದ್ದೆ, ಮಯಾ – ಎನ್ನಂದ, ಸಖಾ ಇತಿ – ಗೆಳೆಯ ಹೇದು, ಮತ್ವಾ – ತಿಳುದು, ಹೇ ಕೃಷ್ಣ! – ಏ ಕೃಷ್ಣ!, ಹೇ ಯಾದವ! – ಏ ಯಾದವ!, ಹೇ ಸಖಾ – ಏ ಆಪ್ತ ಮಿತ್ರನೇ!, ಇತಿ – ಹೀಂಗೆ, ಪ್ರಮಾದಾತ್ – ಮೌಢ್ಯಂದ, ಪ್ರಣಯೇನ – ಪ್ರೇಮಂದ, ವಾ – ಅಥವಾ, ಅಪಿ – ಕೂಡ, ಪ್ರಸಭಮ್ – ಪೂರ್ವಗ್ರಹಿಕೆಂದ, ಉಕ್ತಮ್ – ಹೇಳಲ್ಪಟ್ಟತ್ತೋ, ಹೇ ಅಚ್ಯುತ! – ಓ ಅಚ್ಯುತ!, ಯತ್ ಚ – ಏವುದೇ ಆದರೂ ಕೂಡ, ವಿಹಾರ-ಶಯ್ಯಾ-ಆಸನ-ಭೋಜನೇಷು – ವಿಹಾರಲ್ಲಿ, ಮನಿಕ್ಕೊಂಬದರಲ್ಲಿ, ಕೂಬದರಲ್ಲಿ, ಉಂಬದರಲ್ಲಿ, ಅವಹಾಸಾರ್ಥಮ್ – ಪರಿಹಾಸಕ್ಕಾಗಿ,  ಏಕಃ – ಒಬ್ಬನೇ, ಅಥವಾ – ಅಥವಾ, ತತ್ ಸಮಕ್ಷಮ್ – ಆ ಒಡನಾಟಲ್ಲಿ, ಅಪಿ – ಕೂಡ, ಅಸತ್ ಕೃತಃ ಅಸಿ – ಅವಮಾನಿತನು ನೀನು ಆಗಿದ್ದೆ, ತತ್ ಅಹಮ್ – ಅದರ ಆನು, ಅಪ್ರಮೇಯಮ್ – ಅಪ್ರಮೇಯನಾದ ( ಅಳೆಯಲೆಡಿಯದವನಾದ, ನಿರ್ಣೈಸುಲೆಡಿಯದವನಾದ, ಅಪ್ರಮೇಯಃ – ನ ಪ್ರಮಾತುಂ ಯೋಗ್ಯಃ) , ತ್ವಾಮ್ – ನಿನ್ನಲ್ಲಿ, ಕ್ಷಾಮಯೇ – ಕ್ಷಮೆಯಾಚಿಸುತ್ತಿದ್ದೆ.

ಅನ್ವಯಾರ್ಥ

ನಿನ್ನ ಮಹಿಮೆಂಗಳ ತಿಳಿಯದ್ದೆ ಎನ್ನಂದ ನಿನ್ನ ಆಪ್ತಮಿತ್ರ° ಹೇಳಿ ತಿಳುದು, ನಿನ್ನ ಹೇ ಕೃಷ್ಣ, ಹೇ ಯಾದವ, ಹೇ ಸಖನೇ ಹೀಂಗೆಲ್ಲೆ ಮೌಢ್ಯಂದ, ಪ್ರೀತಿಂದ ಅಥವಾ ಪೂರ್ವಗ್ರಹಿಕೆಂದ ಹೇಳಲ್ಪಟ್ಟತ್ತೋ , ಅದೇವುದಿದ್ದರೂ ನಾವೊಟ್ಟಿಂಗೆ ವಿಹಾರಲ್ಲಿ, ಮನಿಕ್ಕೊಂಬಗ, ಕೂಬಗ, ಉಂಬಗ, ಅಥವಾ ನಿನ್ನ ಒಡನಾಟಲ್ಲಿ  ಇಪ್ಪಗ  ಹೇಳಿದ್ದರಿಂದಲಾಗಿ ನೀನು ಎನ್ನಂದ ಅವಮಾನಿತನಾದೆ. ಅದೆಲ್ಲವ ಅಪ್ರಮೇಯನಾದ ನಿನ್ನಲ್ಲಿ ಕ್ಷಮೆಯಾಚಿಸುತ್ತಿದ್ದೆ.

ತಾತ್ಪರ್ಯ / ವಿವರಣೆ

ಅರ್ಜುನಂಗೆ ಭಗವಂತನ ಅದ್ಭುತ ಮಹಿಮೆಯ ನೋಡಿ ಕೃಷ್ಣನತ್ರೆ ತಾನು ಈ ಹಿಂದೆ ನಡಕ್ಕೊಂಡದರ ಗ್ರೇಶಿ ಪಶ್ಚಾತ್ತಾಪ ಆವುತ್ತು. ಕೃಷ್ಣ ಜಗತ್ತಿನ ಮೂಲಶಕ್ತಿ ಹೇಳ್ವ ಕಲ್ಪನೆ ಇಲ್ಲದ್ದೆ ತಾನು ನಡಕ್ಕೊಂಡ ರೀತಿ ಬಗ್ಗೆ ಅವ ಕೃಷ್ಣನಲ್ಲಿ (ಭಗವಂತನಲ್ಲಿ) ಕ್ಷಮೆ ಬೇಡುತ್ತ°. ತಿಳುದೋ ತಿಳಿಯದ್ದೆಯೋ, ಬೇಜವಾಬ್ದಾರಿಂದಲೋ ಅಥವಾ ಪ್ರೀತಿ ಸಲುಗೆಂದಲೋ ಮಾಡಿದ ತಪ್ಪುಗಳ ಅಪ್ರಮೇಯನಾದ ನೀನು ಕ್ಷಮಿಸೆಕು ಹೇಳಿ ಭಗವಂತನಲ್ಲಿ ಬೇಡಿಗೊಳ್ತ ಇದ್ದ° ಅರ್ಜುನ°.

ಬನ್ನಂಜೆ ಹೇಳ್ತವುಇಲ್ಲಿ ಹೇಳಿಪ್ಪ ‘ಏಕಃ’  ಹೇಳ್ವ ಪದಕ್ಕೆ ವಿಶೇಷ ಅರ್ಥ ಇದ್ದು. ಏಕಃ ಹೇದರೆ ಸರ್ವೋತ್ತಮ° ಮತ್ತು ಸರ್ವಕರ್ತ° (ಏಷಃ ಏವ ಕರೋತಿ – ಏಕಃ). ಸರ್ವಕರ್ತ-ಸರ್ವೋತ್ತಮನಾದ ನಿನ್ನ ಪರಿಹಾಸ್ಯ ಮಾಡಿ ಸಲುಗೆಂದ ಮಾತಾಡಿದೆ, ನೀನು ಅಚ್ಯುತಃ. ನಿನ್ನ ಸಾಮರ್ಥ್ಯ, ಗುಣ, ದೇಹಲ್ಲಿ ಚ್ಯುತಿ ಇಲ್ಲೆ. ಚ್ಯುತವಾದ ಎನ್ನ ಬುದ್ಧಿಂದ ಇದರ ಆನು ಗ್ರೇಶಿದ್ದಿಲ್ಲೆ. ಆನು ಈ ರೀತಿ ಮಾಡ್ಳಾವ್ತಿತ್ತಿಲ್ಲೆ. ಆನು ಮಾಡಿದ ಅಪರಾಧಕ್ಕೆ ನಿನ್ನತ್ರೆ ಕ್ಷಮೆ ಬೇಡುತ್ತಲಿದ್ದೆ. ನೀನು ಅಪ್ರಮೇಯ°, ಕಾಲ-ದೇಶಂಗಳಿಂದ ವ್ಯಾಪ್ತನಾದ ನೀನು ಎಂಗಳ ತಿಳುವಳಿಕೆಗೆ ಎಟುಕದ್ದವ°. ಈಗ ಎನಗೆ ಎನ್ನ ತಪ್ಪಿನ ತಿಳುವಳಿಕೆ ಆತು. ಅಜ್ಞಾನಂದ ತಪ್ಪು ಮಾಡುತ್ತಿದ್ದೆ ಹೇಳ್ತ ಜ್ಞಾನ ಬಂತು. ಹಾಂಗಾಗಿ ಅವೆಲ್ಲವ ನೀನು ಕ್ಷಮಿಸೆಕು ಹೇಳಿ ಬೇಡುತ್ತಲಿದ್ದ° ಅರ್ಜುನ°.  ಕೃಷ್ಣ ತನ್ನ ಆತ್ಮೀಯ ಸಖನಾಗಿ ಎಲ್ಲವನ್ನೂ ವಿವರಿಸಿದ್ದರೂ, ಅವ° ಇಂತಹ ವಿಶ್ವರೂಪವ ಧರಿಸಿಗೊಂಬಲೆ ಸಮರ್ಥ° ಹೇಳ್ವದರ ಗ್ರೇಶಿನೋಡಿ ಗೊಂತಿತ್ತಿಲ್ಲೆ ಅರ್ಜುನಂಗೆ. ಕೃಷ್ಣನ ಸಿರಿಯ ಗುರುತುಸದ್ದೆ ಅವನ ಚೆಂಙಾಯಿ ಹಾಂಗೆ ಪ್ರೀತಿ ಸಲುಗೆಂದ ಗೆಳೆಯ°, ಕೃಷ್ಣ°, ಯಾದವ° ಇತ್ಯಾದಿಯಾಗಿ ಎಲ್ಲ ಈ ಹಿಂದೆ ದೆನಿಗೊಂಡಿದ° ಅರ್ಜುನ°. ಇಷ್ಟು ಸಿರಿ ವೈಭವ ಇದ್ದರೂ ಕೃಷ್ಣ° ಅರ್ಜುನನತ್ರೆ ಯೇವತ್ತೂ ದಯಾಮಯನಾಗಿ ಕರುಣಾಳುವಾಗಿ ಇತ್ತಿದ್ದ°. ಹಾಂಗಾಗಿ ಭಗವಂತನ ಬಗ್ಗೆ ತಾನು ಆರೀತಿ ಸಲುಗೆಂದ ಮಾತಾಡಿದ್ದು ಅವಂಗೆ ಅವಮಾನ ಮಾಡಿದ ಹಾಂಗೆ ಆತು. ಅಚಾತುರ್ಯಂದಲೋ, ಅಜ್ಞಾನಂದಲೋ ತಾನು ಆ ರೀತಿ ಮಾಡಿದ್ದಾಗಿರೆಕು. ಈಗ ತಿಳುವಳಿಕೆ ಬಂತು. ಅವೆಲ್ಲವ ಕ್ಷಮಿಸೆಕು ಹೇಳಿ ಅರ್ಜುನ° ಭಗವಂತನತ್ರೆ ಬೇಡಿಗೊಳ್ತಲಿದ್ದ°.

ಮುಂದೆ ಎಂತಾತು….. ?         ಬಪ್ಪವಾರ ನೋಡುವೋ°

… ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 11 – SHLOKAS 32 – 42 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

6 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 11 – ಶ್ಲೋಕಂಗೊ 32 – 42

  1. [ನೀನು ಬರೇ ನಿಮಿತ್ಥ ಮಾತ್ರ” ಹೇಳ್ವದರ ಮನವರಿಕೆ ಮಾಡಿದ ಭಗವಂತ° ಅರ್ಜುನಂಗೆ].
    ನಾವೆಲ್ಲರೂ ಇಲ್ಲಿ ನಿಮಿತ ಮಾತ್ರ, ನಾವು ಮಾಡ್ತ ಕೆಲಸಂಗೊ ಎಲ್ಲವೂ ಭಗವಂತಂಗೆ ಅರ್ಪಿತ ಹೇಳಿ ಎಲ್ಲರೂ ತಿಳ್ಕೊಂಡರೆ, ಕೆಟ್ಟದು ಮಾಡ್ಲೆ ಆರಿಂಗೂ ಮನಸ್ಸು ಬಾರ.
    ಚೆನ್ನೈ ಭಾವನ ಈ ಲಹರಿಗೆ ನಮೋ ನಮಃ

  2. ವಿಶ್ವರೂಪ ನೋಡಿ ಗದ್ಗದಿತ ಆದ ಅರ್ಜುನನ ದೃಶ್ಯವ ಕಣ್ಣಿಂಗೆ ತಂದರೆ ,ನವಗೂ ಗದ್ಗದಿತ ಅಪ್ಪ ಹಾಂಗೆ ಆವುತ್ತು!ಈ ಅಧ್ಯಾಯಲ್ಲಿ ಶ್ಲೋಕಂಗಳಿಂದ ಹೆಚ್ಚು ವೃತ್ತಂಗೊ,ಉಪಜಾತಿಗೊ ಇದ್ದವು.ರಾಗವಾಗಿ ಓದಿರೆ ಭಾವುಕತೆ ಬತ್ತು.

  3. ಭೀಷ್ಮ ದ್ರೋಣ ಜಯದ್ರಥ ಕರ್ಣ…ಇವ್ವ್ವೆಲ್ಲಾ ಸರಿ/ತಪ್ಪುಗಳ ಸ್ವವಿಮರ್ಶೆ ಮಾಡದ್ದೆ ಕುರುಡು ಬುದ್ಧಿಲಿ ಕೌರವನ ಪಕ್ಷಲ್ಲಿ ನಿ೦ದವು,ತನ್ಮೂಲಕ ದೇವರಿ೦ದ ಕೊಲ್ಲಲ್ಪಟ್ತವು ಹೇಳಿ ಅರ್ಥ ಮಾಡಿದೆ,ಸರಿಯೋ ಚೆನ್ನೈ ಭಾವ?
    ಗೀತಾ ಸಾರದೊಟ್ಟಿ೦ಗೆ ಸ೦ಸ್ಕೃತ ಶಬ್ದ೦ಗಳ ಸುಲಾಭಲ್ಲಿ ಕಲಿವಲೆ ಒ೦ದು ಸುಲಭ ದಾರಿ ಬೈಲಿಲಿ.

    1. [ಸ್ವವಿಮರ್ಷೆ ಮಾಡದ್ದೆ ಕುರುಡು ಬುದ್ಧಿಲ್ಲಿ ] – ಮೇಲ್ಮೈಗೆ ಮೂರನೇ ವ್ಯಕ್ತಿಯಾಗಿ / ಲೋಕದ ದೃಷ್ಟಿಲಿ ಅಪ್ಪು ಹೇಳಿ ಹೇಳಿಗೊಂಬಲಕ್ಕು. ಆದರೆ ಅವು ಸ್ವವಿಮರ್ಷೆ ಮಾಡದ್ದಿಪ್ಪಲೆ ಅವರ ಪ್ರಾರಭ್ಧವೂ, ಮತ್ತು ಪ್ರಕೃತಿಯ ಸಹಯೋಗ, ಪ್ರಕೃತಿಯ ತ್ರಿಗುಣಂಳ (ಸತ್ವ-ರಜಸ್ಸು-ತಮಸ್ಸು) ಪ್ರಭಾವ ಹೇಳಿ ಅರ್ಥ ಮಾಡಿಗೊಳ್ಳೆಕಾಗಿದ್ದು. ತ್ರಿಗುಣಂಗಳ ಪ್ರಭಾವದ ಬಗ್ಗೆ ಮುಂದೆ ಹದಿನಾಲ್ಕನೇ ಅಧ್ಯಾಯಲ್ಲಿ ವಿವರವಾಗಿ ಬತ್ತು.

      ಒಪ್ಪ ಕೊಟ್ಟು ಪ್ರೋತ್ಸಾಹಿಸುವ ನಿಂಗೊ ಎಲ್ಲೋರ ಮಾತುಗೊ ಇನ್ನೂ ಉತ್ತೇಜನ / ಪ್ರೇರಣೆ ನೀಡುತ್ತಾ ಇದ್ದು. ಜಾಗ್ರತೆ, ಹೊಣೆಗಾರಿಕೆಯನ್ನೂ ಹೆಚ್ಚುಸುತ್ತು ಹೇದು ಧನ್ಯವಾದಂಗೊ. ನಿಂಗಳ ಮೆಚ್ಚುಗೆ ಗೀತಾಚಾರ್ಯ° ಭಗವಂತಂಗೆ ಅರ್ಪಣೆ.

  4. ವಿವರಣೆ ತುಂಬಾ ಲಾಯಕಾಯ್ದು. ವಿಶ್ವ ರೂಪದ ವರ್ಣನೆಯ ಓದುತ್ತಾ ಓದುತ್ತಾ ತಲ್ಲೀನನಾಗಿಪ್ಪಗಳೇ ಮುಂದಿನ ವಾರ ನೋಡುವ ಹೇಳಿ ಚೆನ್ನೈ ಭಾವ ಹೇಳಿದವು. ಇನ್ನಾಣ ವಾರಕ್ಕೆ ಕಾತರಂದ ಕಾಯ್ತಾ ಇದ್ದೆ.

    1. ಹರೇ ರಾಮ, ಚೆನ್ನೈ ಬಾವ; ವಿವರಣೆ ಹೇದರೆ ಇದಿದಾ! ಬೆಟ್ಟು ತೋರ್ಸಿ ಹೇಳ್ವಾ೦ಗಿದ್ದು. ಅರ್ಜುನನ ಹಾ೦ಗೆ ನಾವೆಲ್ಲರುದೆ ಅ೦ಧಃತಮಸ್ಸಿಲ್ಲಿ ಮುಳುಗಿ ಇಪ್ಪದಕ್ಕೆ ತಪ್ಪು ಮಾಡ್ವದೇ ಹೆಚ್ಚು!ಭಗವ೦ತ ನಮ್ಮ ಮಾಯೆಯ ಮುಸುಕಿಲ್ಲಿ ಮಡಗಿ,ಅವನ ಲೀಲಾ ಪ್ರಪ೦ಚವ ಮೆರಸುತ್ತ!ನಾವೆಲ್ಲ ಅವ೦ಗೆ ಆಟದ ಗೊ೦ಬಗೊ!ಅಲ್ಲದೋ!ಅರ್ಜುನಲ್ಲಿಪ್ಪ`ನರತ್ವ ‘ದ ಅನಾವರಣ ಅವನ ಮಾತಿಲ್ಲಿ ಬಾರೀ ಲಾಯಕಕೆ ಬಯಿ೦ದು.ಇನ್ನು ಮು೦ದೆಯುದೆ ಅದು ಬತ್ತು.ಅವನಲ್ಲಿ ನಮ್ಮನ್ನುದೆ ಕ೦ಡಾ೦ಗೆ ಆವುತ್ತು- ಕೆಲವು ವಿಷಯಲ್ಲಿ!ಬ೦ಗಾರದ ಚೌಕಟ್ಟಿಲ್ಲಿ ಕೂರಿಸಿದ ವಜ್ರದ ಹರಳಿನ ಹಾ೦ಗೆ ಶೋಭಾಯಮಾನವಾದ ವಿವರಣೆ. ಹವಿಗನ್ನಡದ ಸೌ೦ದರ್ಯ ಬೆಳಗುತ್ತಾ ಇದ್ದು, ನಿ೦ಗಳ ಪದ ಪ್ರಯೋಗ!“ವಾಕ್ಯ೦ ರಸಾತ್ಮಕ೦ ಕಾವ್ಯ೦. ” ಇದು ಹವಿಗನ್ನಡದ ನಿ೦ಗಳ ಗದ್ಯಶೈಲಿಯ ಓದಿಯಪ್ಪಗ ನೆ೦ಪಾದ ಮಾತು;ಸಹಜವಾಗಿ ಒಪ್ಪುವ ಮಾತು.ಧನ್ಯತಾ ಭಾವ೦ದ ನಮೋನ್ನಮಃ ಹೇಳ್ತಾ ಇರ್ತೆ.ನಮಸ್ತೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×