Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 27 – 34

ಬರದೋರು :   ಚೆನ್ನೈ ಬಾವ°    on   22/11/2012    4 ಒಪ್ಪಂಗೊ

ಚೆನ್ನೈ ಬಾವ°

ಶ್ರೀಮದ್ಭಗವದ್ಗೀತಾ – ದಶಮೋsಧ್ಯಾಯಃ – ವಿಭೂತಿಯೋಗಃ – ಶ್ಲೋಕಂಗೊ 27 34

ಶ್ಲೋಕ

ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಂ ।
ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಂ ॥೨೭॥

ಪದವಿಭಾಗ

ಉಚ್ಚೈಃಶ್ರವಸಂ ಅಶ್ವಾನಾಂ ವಿದ್ಧಿ ಮಾಂ ಅಮೃತ-ಉದ್ಭವಂ । ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಂ ॥

ಅನ್ವಯ

ಅಶ್ವಾನಾಂ ಅಮೃತ-ಉದ್ಭವಂ ಉಚ್ಚೈಃಶ್ರವಸಂ, ಗಜೇಂದ್ರಾಣಾಂ ಐರಾವತಂ, ನರಾಣಾಂ ನರಾಧಿಪಂ ಚ ಮಾಂ ವಿದ್ಧಿ ॥

ಪ್ರತಿಪದಾರ್ಥ

ಅಶ್ವಾನಾಂ – ಕುದುರೆಗಳಲ್ಲಿ, ಅಮೃತ-ಉದ್ಭವಂ – ಸಾಗರಮಥನಂದ ಉದ್ಭವವಾದ, ಉಚ್ಚೈಃಶ್ರವಸಂ – ಉಚ್ಚೈಃಶ್ರವ° (ಉಚ್ಚೈಃಶ್ರವ° ಹೇದು), ಗಜೇಂದ್ರಾಣಾಂ – ಗಜೇಂದ್ರಂರಲ್ಲಿ, ಐರಾವತಂ – ಐರಾವತ (ಐರಾವತ ಹೇದು),  ನರಾಣಾಂ – ಮಾನವರಲ್ಲಿ, ನರಾಧಿಪಂ – ರಾಜ° (ರಾಜ° ಹೇದು),  ಚ – ಕೂಡ, ಮಾಂ ವಿದ್ಧಿ – ಎನ್ನ ತಿಳುಕ್ಕೊ.

ಅನ್ವಯಾರ್ಥ

ಅಶ್ವಂಗಳಲ್ಲಿ ಆನು ಅಮೃತಮಥನಕಾಲಲ್ಲಿ ಉದ್ಭವವಾದ ಉಚ್ಚೈಃಶ್ರವ°, ಗಜೇಂದ್ರರಲ್ಲಿ ಆನು ಐರಾವತ, ಮನುಷ್ಯರಲ್ಲಿ ಆನು ರಾಜ° ಹೇದು ನೀನು ತಿಳುಕ್ಕೊ.

ತಾತ್ಪರ್ಯ / ವಿವರಣೆ

ಋಷಿ, ಬ್ರಹ್ಮರ್ಷಿ, ದೇವರ್ಷಿ, ಮಹರ್ಷಿಗೊ ಮತ್ತೆ ಬ್ರಹ್ಮ , ತೇಜಸ್ಸು, ಮತ್ತೆ ಅವು ಮಾಡ್ವ ವೇದಾಧ್ಯಯನ, ತಪಸ್ಸು, ಯಜ್ಞ ಎಲ್ಲದರ ಬಗ್ಗೆ ಹೇಳಿದ ಭಗವಂತ° ಮುಂದೆ ಇಲ್ಲಿ  ಕ್ಷಾತ್ರತೇಜಸ್ಸಿನ ಬಗ್ಗೆ ಹೇಳುತ್ತ°. “ಆನು ಕುದುರೆಗಳಲ್ಲಿ ಕಡಲಿಂದ ಮೂಡಿಬಂದ ಉಚ್ಚೈಃಶ್ರವಸ° (ಉನ್ನತ ಕೀರ್ತಿ ಪಡದು – ‘ಉಚ್ಚೈಃಶ್ರವಸ್’), ಹಿರಿಯಾನೆಗಳಲ್ಲಿ ಐರಾವತ (ಐರಾವತ – ಲಕ್ಷ್ಮಿಗೆ ರಕ್ಷಕ ಎನುಸಿ ಐರಾವತ), ನರರಿಂಗೆ ಅಧಿಪನಾಗಿ ನರಾಧಿಪ° ಎನಿಸುಗೊಂಬ ರಾಜನಲ್ಲಿ ಆನಿದ್ದೆ”.

ಬನ್ನಂಜೆಯವರ ಪ್ರತಿಯೊಂದು ಶಬ್ದಂಗಳ ವ್ಯಾಖ್ಯಾನಂಗಳೂ ಗೀತೆಯ ಲಾಯಕ ಮನದಟ್ಟಪ್ಪಾಂಗೆ ಅರ್ಥ ಮಾಡಿಗೊಂಬಲೆ ನಿಸ್ಸಂದೇಹವಾಗಿ ಸಹಾಯಕ ಆವ್ತು. ಅವು ವಿವರುಸುತ್ತವು –  ಮದಲಿಂಗೆ ಸೇನೆಲಿ ಮುಖ್ಯವಾಗಿ ಕುದುರೆಗಳ ಹಾಂಗೂ ಆನೆಗಳ ಬಳಸಿಗೊಂಡಿತ್ತಿದ್ದವು. ಭಗವಂತ° ತನ್ನ ಈ ಐಹಿಕ ಪ್ರಪಂಚಲ್ಲಿ ತನ್ನ ವಿಭೂತಿಯ ವಿವರಿಸಿಗೊಂಡು ಹೇಳುತ್ತ° – “ಸಮುದ್ರಮಥನಲ್ಲಿ ಅಮೃತದ ಒಟ್ಟಿಂಗೆ ಹುಟ್ಟಿದ ಅಶ್ವ ‘ಉಚ್ಚೈಃಶ್ರವಸ್ಸು’ ಮತ್ತೆ ಹಿರಿಯಾನೆ ‘ಐರಾವತ’ ಆನು ಹೇಳಿ ತಿಳುಕ್ಕೊ”.  ಭಗವಂತ° ಹೇಳ್ವ ಈ ಎರಡೂ ಪ್ರಾಣಿಗೊ ಬಹಳ ವಿಶೇಷ ಅರ್ಥವುಳ್ಳ ಪ್ರಾಣಿಗೊ. ಕುದುರೆ ಮತ್ತೆ ಆನೆ ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗೊ. ಇವು ತನ್ನ ಪ್ರೀತಿಂದ ಸಾಂಕುವ ಧನಿಗೆ ಎಂದೂ ಮೋಸ ಮಾಡುತ್ತವಿಲ್ಲೆ.

ಇನ್ನು “ನರಾಣಾಂ ನರಾಧಿಪಃ” – ಮನುಷ್ಯರಲ್ಲಿ ರಾಜ°. ನರರಲ್ಲಿ ಶ್ರೇಷ್ಠ ನರಾಧಿಪ°.  ನರಾಧಿಪ° ಸಮಸ್ತ ನರರ (ಪ್ರಜೆಗಳ) ಪ್ರತೀಕ/ಒಡೆಯ°, ಪ್ರತಿನಿಧಿ ನಾಯಕ°.  ರಾಜ° ಮನುಕುಲಕ್ಕೆ ನಾಯಕನಾಗಿ ನಿಂದುಗೊಂಡು ಧರ್ಮನಿಷ್ಠನಾಗಿ ಪ್ರಜಾಪಾಲನೆ ಮಾಡುವ ಜವಾಬ್ದಾರಿ ಮುಖಂಡ°. ಅಂತಹ ಧರ್ಮನಿಷ್ಠ° ರಾಜನಲ್ಲಿ ಭಗವಂತನ ಸನ್ನಿಧಾನ ಇದ್ದು. ಹಿಂದೆ ರಾಜ್ಯಭಾರ ಮಾಡಿದ ಧರ್ಮರಾಜ°, ಪರೀಕ್ಷಿತ° ಇತ್ಯಾದಿ ರಾಜರುಗೊ ಇದಕ್ಕೆ ಉತ್ತಮ ಉದಾಹರಣೆ. 

ಇಲ್ಲಿ ಬಂದಿಪ್ಪ ಭಗವಂತನ ವಿಭೂತಿನಾಮ – ಉಚ್ಚೈಃಶ್ರವಸ್ಸು , ಐರಾವತ, ಮತ್ತೆ ನರಾಧಿಪ. ಉಚ್ಚ – ಉನ್ನತ್ತ, ಶ್ರೇಷ್ಠ; ಶ್ರವಸ್ಸು ಹೇಳಿರೆ ಕೀರ್ತಿ, ಜ್ಞಾನ, ಕರ್ಮ. ಹಬ್ಬಿಪ್ಪ ಕೀರ್ತಿ ಹೊಂದಿಪ್ಪ, ಮಹಾಜ್ಞಾನಿಯಾದ ಭಗವಂತ° ಈ ಸೃಷ್ಟಿ-ಸ್ಥಿತಿ-ಲಯ ಎಂಬ ಮಹಾಕರ್ಮವ ಸದಾ ಮಾಡುವ ಉಚ್ಚೈಃಶ್ರವಸ್ಸು’. ಐರಾ ಹೇಳಿರೆ ಭೂದೇವಿಲಿ ಸನ್ನಿಹಿತೆಯಾಗಿಪ್ಪ ಲಕ್ಷ್ಮಿ. ಇಂತಹ ಲಕ್ಷ್ಮಿಗೆ ಪತಿಯಾಗಿಪ್ಪ ಭಗವಂತ° ‘ಐರಾವತಃ’. ನರರಿಂಗೆ, ಸರ್ವಜೀವಜಾತಕ್ಕೆ ಅಧಿಪತಿಯಾಗಿ, ಅರಸನಲ್ಲಿ ಸನ್ನಿಹಿತನಾಗಿಪ್ಪ ಭಗವಂತ° ‘ನರಾಧಿಪಃ’.

ಶ್ಲೋಕ

ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥೨೮॥

ಪದವಿಭಾಗ

ಆಯುಧಾನಾಂ ಅಹಂ ವಜ್ರಂ ಧೀನೂನಾಂ ಅಸ್ಮಿ ಕಾಮಧುಕ್ । ಪ್ರಜನಃ ಚ ಅಸ್ಮಿ ಕಂದರ್ಪಃ ಸರ್ಪಾಣಾಂ ಅಸ್ಮಿ ವಾಸುಕಿಃ

ಅನ್ವಯ

ಆಯುಧಾನಾಂ ವಜ್ರಂ ಅಹಂ, ಧೇನೂನಾಂ ಕಾಮಧುಕ್ ಅಹಂ ಅಸ್ಮಿ, ಪ್ರಜನಃ ಕಂದರ್ಪಃ ಚ ಅಸ್ಮಿ, ಸರ್ಪಾಣಾಂ ವಾಸುಕಿಃ ಚ ಅಸ್ಮಿ ॥

ಪ್ರತಿಪದಾರ್ಥ

ಆಯುಧಾನಾಂ – ಎಲ್ಲ ಆಯುಧಂಗಳಲ್ಲಿ, ವಜ್ರಂ – ವಜ್ರಾಯುಧವು, ಅಹಂ – ಆನು, ಧೇನೂನಾಂ – ಹಸುಗಳಲ್ಲಿ, ಕಾಮಧುಕ್ – ಸುರಭಿ, ಅಹಂ ಅಸ್ಮಿ – ಆನು ಆಗಿದ್ದೆ, ಪ್ರಜನಃ – ಮಕ್ಕಳ ಪಡವಲೆ ಕಾರಣನಾದ, ಕಂದರ್ಪಃ  – ಮನ್ಮಥ°, ಚ – ಕೂಡ, ಅಸ್ಮಿ – ಆಗಿದ್ದೆ, ಸರ್ಪಾಣಾಂ – ಸರ್ಪಂಗಳಲ್ಲಿ, ವಾಸುಕಿಃ – ವಾಸುಕಿಯು, ಚ ಅಸ್ಮಿ – ಕೂಡ ಆಗಿದ್ದೆ.

ಅನ್ವಯಾರ್ಥ

ಆಯುಧಂಗಳಲ್ಲಿ ಆನು ವಜ್ರಾಯುಧ, ಗೋವುಗಳಲ್ಲಿ ಆನು ಸುರಭಿ, ಪ್ರಜೋತ್ಪತ್ತಿಗೆ ಕಾರಣನಾದವನಲ್ಲಿ ಆನು ಮನ್ಮಥ° (ಪ್ರೇಮದೇವತೆ), ಸರ್ಪಂಗಳಲ್ಲಿ ಆನು ವಾಸುಕಿ ಆಗಿದ್ದೆ.  

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಆಯುಧಂಗಳಲ್ಲಿ ಅರಿವರ್ಜಿತನಾಗಿ ‘ವಜ್ರ’ ಎನುಸಿ ವಜ್ರಾಯುಧಲ್ಲಿ ಆನಿದ್ದೆ, ಗೋವುಗಳಲ್ಲಿ ಬಯಸಿದ್ದರ ಕೊಡುವದರಿಂದ ‘ಕಾಮಧುಕ್’ ಎನುಸಿ ಕಾಮಧೇನುವಿಲ್ಲಿ (ಸುರಭಿಲಿ) ಆನಿದ್ದೆ, ಸಂತಾನಕ್ಕೆ ಕಾರಣನಾದ ಕಾಮದೇವ°ನಲ್ಲಿ ಕಂ – ಸುಖದ, ದರ – ಹಲವು ತರದ, ಪ – ಉಣ್ಣುಸಿ ‘ಕಂದರ್ಪ’ ಎನುಸಿ ಅವಂಗೆ ಹುಟ್ಟಿನ ಸೆಳೆತವ ಕೊಟ್ಟವನಾಗಿ ಆನಿದ್ದೆ. ಹಾವುಗಳಲ್ಲಿ ಎಲ್ಲೆಡೆ ವಾಸಮಾಡಿ (ವಾಸು) ಸುಖವನ್ನೀಯುವವನಾಗಿ (ಕಿ) ‘ವಾಸುಕಿ’ ನಾಮಕನಾಗಿ ಆನಿದ್ದೆ”.

ಆಯುಧಂಗಳಲ್ಲಿ ಸರ್ವಶ್ರೇಷ್ಠ ಕಠಿಣ ಆಯುಧ ವಜ್ರಾಯುಧ. ಅದು ದೇವತೆಗಳ ಒಡೆಯ° ಇಂದ್ರನ ಕೈ ಆಯುಧ. ಆ ವಜ್ರಾಯುಧಲ್ಲಿ ಭಗವಂತ° ಸನ್ನಿಹಿತನಾಗಿ ಮೂರು ಲೋಕವ ನಿಯಂತ್ರುಸುವ ಶಕ್ತಿಯ ಕೊಟ್ಟವ° ಭಗವಂತ°. ವ್ರತ್ರನ ಸಂಹಾರ ಮಾಡ್ಳೆ ಭಗವಂತನ ಆದೇಶದಂತೆ ದಧೀಚಿ ಹೇಳ್ವ ಮುನಿಯ ಪೂರ್ಣ ತಪಸ್ಸಿನ ಫಲವ ಆವಾಹನೆ ಮಾಡಿ ನಿರ್ಮಾಣಗೊಂಡ ಆಯುಧ ವಜ್ರಾಯುಧ. ಮಳೆ ಬಪ್ಪಗ ಕಾಂಬ ಸೆಡ್ಳು-ಮಿಂಚು ವಜ್ರಾಯುಧದ ಪ್ರತೀಕ ಹೇಳಿ ಹೇಳ್ತವು. ಈ ಆಯುಧಲ್ಲಿ ಭಗವಂತ° ‘ವಜ್ರಃ’ ನಾಮಕನಾಗಿ ಸನ್ನಿಹಿತನಾಗಿದ್ದ°. ವರ್ಜನಾತಿ ಇತಿ ವಜ್ರಃ – ಸಮಸ್ತ ದೋಷಂಗಳ, ಶತ್ರುಗಳ ವರ್ಜನೆ ಮಾಡುವ ಭಗವಂತ° – ‘ವಜ್ರಃ’. 

ಅಸ್ತ್ರದ ಬಗ್ಗೆ ಹೇಳಿದ ಭಗವಂತ° ಮುಂದೆ ವಿಶ್ವಾಮಿತ್ರನ ಸಮಸ್ತ ಅಸ್ತ್ರವ ನಾಶಮಾಡಿದ ವಸಿಷ್ಠಮುನಿಯ ಕಾಮಧೇನುವಿನ ಬಗ್ಗೆ ಹೇಳುತ್ತ°. ಪ್ರಾಣಿಗಳಲ್ಲಿ ಅತ್ಯಂತ ಶ್ರೇಷ್ಠ ಪ್ರಾಣಿ – ಧೇನು (ಹಸು/ಗೋವು). ನಮ್ಮ ಜೀವಮಾನವಿಡೀ ನವಗೆ ಹಾಲುಣಿಸಿ ಪೋಷಿಸುವ ಭಗವಂತನ ವಿಶಿಷ್ಟ ವಿಭೂತಿ -ಹಸು. ಹಾಂಗಾಗಿ ಕೃಷ್ಣ ಬಾಲಕನಾಗಿಪ್ಪಗಳೇ ಗೋಪೂಜೆಯ ಚಾಲ್ತಿಗೆ ತಂದ°. ಹಸುವಿನ ಮಲ-ಮೂತ್ರ ಕೂಡ ತ್ಯಾಜ್ಯ ಆಲ್ಲ. ಏವುದರಿಂದಲೂ ಗುಣವಾಗದ್ದ ಚರ್ಮರೋಗ ಗೋಮಯ ಮತ್ತೆ ಮೃತ್ತಿಕೆಂದ  (ಕೆಂಪುಮಣ್ಣು) ಮಿಂದರೆ ಆ ರೋಗ ಗುಣವಾವ್ತು. ಮನೆ ಒಳ ಹೆರ ಸಗಣ ಬಳಿವದರಿಂದ ಅಲ್ಲಿ ಕ್ರಿಮಿ ಕೀಟ ಹತ್ರೆ ಬಾರದ್ದಾಂಗೆ ಆವ್ತು. ಗೋಮಯಲ್ಲಿ ಲಕ್ಷ್ಮಿಯ ಸನ್ನಿಧಾನ ಇದ್ದು. ಹೀಂಗೆ ಹಸುವಿಲ್ಲಿ ಅನೇಕಾನೇಕ ಉಪಯೋಗ ಇದ್ದು. ಭಗವಂತ ಬಯಸಿದ್ದರ ಕೊಡುವ ‘ಕಾಮಧುಕ್’ ನಾಮಕನಾಗಿ ಕಾಮಧೇನುವಿಲ್ಲಿ ವಿಭೂತಿಯಾಗಿ ಇದ್ದ°.

ಈ ಪ್ರಪಂಚಲ್ಲಿಪ್ಪ ಜೀವಿಗೊಕ್ಕೆ ಗಂಡು-ಹೆಣ್ಣಿನ ನಡುವೆ ಹುಟ್ಟಿನ ಸೆಳೆತವಾಗಿ ನಿಂದಿಪ್ಪವ° ಸಂತಾನವನ್ನೀವ ಕಾಮದೇವ°. ಈ ಕಾಮದೇವ° (ಕಂದರ್ಪ°)ನಲ್ಲಿ ಭಗವಂತನ ವಿಶಿಷ್ಟ ಶಕ್ತಿ ತುಂಬಿದ್ದು. ಸೃಷ್ಟಿಲಿ ಸಂತಾನ ಕ್ರಿಯೆ ನಡವಲೆ ಅಧಮ್ಯ ಬಯಕೆಯ ಎಲ್ಲರೊಳ ತುಂಬಿ ಅಲ್ಲಿ ಭಗವಂತ ಕೂದುಗೊಂಡಿದ್ದ°. ಈ ಕಾರಣಂದ ಭಗವಂತನ ಅನುಗ್ರಹ ಇಲ್ಲದ್ದೆ ಲೀಲಾಜಾಲವಾಗಿ ಆರೂ ಕೂಡ ಈ ಶಕ್ತಿಂದ ಹೆರಬಪ್ಪಲೆಡಿಯ. ಬಲವಂತವಾಗಿ ಅದರ ಬಿಡ್ಳೆ ಎಡಿಯ. ಭಗವಂತ° ಕಂದರ್ಪಃ ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದ°. ಮನುಷ್ಯಂಗೆ ಅನೇಕ ರೀತಿಯ ಬಯಕೆಗಳ ಕೊಟ್ಟು, ಆ ಬಯಕೆಂದ ಅವನ ಸಂತೃಪ್ತಿಗೊಳುಸಿ, ವಿಚಿತ್ರ ಸುಖದ ಸುಪ್ಪತ್ತಿಗೆಲಿ ಓಲಾಡುಸುವ ಭಗವಂತ° – ‘ಕಂದರ್ಪಃ’.

ಇನ್ನು ಹೊಟ್ಟೆಯ ಎಳಕ್ಕೊಂಡು ಹೋಪ ಸರೀಸೃಪ – ಸರ್ಪ. ಸರೀಸೃಪಂಗಳಲ್ಲಿ ರಾಜ° -ವಾಸುಕಿ. ಭಗವಂತ° ‘ವಾಸುಕಿಃ’ ನಾಮಕನಾಗಿ ನಿಂದು ವಾಸುಕಿಗೆ ಆ ಸ್ಥಾನವ ಕೊಟ್ಟ. ಭಗವಂತ° ಇಲ್ಲದ್ದ ಜಾಗೆ ಇಲ್ಲೆ. ಎಲ್ಲೆಡೆ ವಾಸಮಾಡುವ ಭಗವಂತ° – ‘ವಾಸುಕಿಃ’ (ವಾಸು – ಎಲ್ಲೆಡೆ ವಾಸಮಾಡಿ, ಕಿ – ಸುಖವ ನೀಡುವದು) ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಅನಂತಶ್ಚಾಸ್ಮಿನಾಗಾನಾಂ ವರುಣೋ ಯಾದಸಾಮಹಂ ।
ಪಿತೄಣಾಮರ್ಯಮಾಚಾಸ್ಮಿ ಯಮಃ ಸಂಯಮತಾಮಹಂ ॥೨೯॥

ಪದವಿಭಾಗ

ಅನಂತಃ ಚ ಅಸ್ಮಿ ನಾಗಾನಾಂ ವರುಣಃ ಯಾದಸಾಂ ಅಹಂ । ಪಿತೄಣಾಂ ಅರ್ಯಮಾ ಚ ಅಸ್ಮಿ ಯಮಃ ಸಂಯಮತಾಂ ಅಹಂ ॥

ಅನ್ವಯ

ನಾಗಾನಾಂ ಅನಂತಃ, ಯಾದಸಾಂ ವರುಣಃ ಚ ಅಹಂ ಅಸ್ಮಿ । ಪಿತೄಣಾಂ ಅರ್ಯಮಾ ಚ ಸಂಯಮತಾಂ ಯಮಃ ಚ ಅಹಂ ಅಸ್ಮಿ ॥

ಪ್ರತಿಪದಾರ್ಥ

ನಾಗಾನಾಂ ಅನಂತಃ – ನಾಗರಲ್ಲಿ (ಸರ್ಪಂಗಳಲ್ಲಿ) ಅನಂತ°, ಯಾದಸಾಂ ವರುಣಃ – ಎಲ್ಲ ಜಲಚರಂಗಳಲ್ಲಿ ಜಲನಿಯಂತ್ರಕ ದೇವತೆ ವರುಣ°, ಚ – ಕೂಡ, ಅಹಂ ಅಸ್ಮಿ – ಆನು ಆಗಿದ್ದೆ. ಪಿತೄಣಾಂ ಅರ್ಯಮಾ ಚ – ಪೂರ್ವಜರಲ್ಲಿ (ಪಿತೃಗಳಲ್ಲಿ) ಅರ್ಯಮ° ಕೂಡ, ಸಂಯಮತಾಂ ಯಮಃ ಚ – ಎಲ್ಲ ನಿಯಂತ್ರಕರಲ್ಲಿ (ಸಂಯಮ) ಮರಣ ನಿಯಂತ್ರಕನಾದ ಯಮ ಕೂಡ, ಅಹಂ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ಬಹುಹೆಡೆಗಳಿಪ್ಪ ನಾಗರಲ್ಲಿ ಆನು ಅನಂತ°, ಜಲವಾಸಿಗಳಲ್ಲಿ ಆನು ವರುಣ ದೇವತೆ, ಪಿತೃಗಳಲ್ಲಿ ಆನು ಅರ್ಯಮಾ, ಮತ್ತು ಸಂಯಮಲ್ಲಿ ಯಮನೂ ಆನು ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ನಾಗರಹಾವುಗಳಲ್ಲಿ ಆನು ಅನಂತ° (ಅಳಿವಿಲ್ಲದ್ದು ‘ಅನಂತ’), ಜಲಚರಂಗಳಲ್ಲಿ ಅದರೊಡೆಯ ವರುಣ° (ವರ – ಹಿರಿದಾದ್ದು, ಣ – ಆನಂದಸ್ವರೂಪನಾಗಿಪ್ಪದು = ವರುಣ) ಆನು. ಪಿತೃದೇವತೆಗಳಲ್ಲಿ ಅರ್ಯಮ° [ಅರ್ಯ – ಅರಿಯಬೇಕಾದವ° (ತಿಳಿಯಬೇಕಾದವ°), ಮಾ – ಅರ್ತವ° = ‘ಅರ್ಯಮನ್’] ಆನು. ಸಂಯಮಲ್ಲಿ ಯಮ° (ನಿಯಮುಸುವದರಿಂದ ‘ಯಮ’ ಎನಿಸಿ ಅವಂಗೆ ಪಾಪಿಗಳ ದಂಡುಸುವ ಹೊಣೆಕೊಟ್ಟವ°) ಆನು ಆಗಿದ್ದೆ.

ಸರ್ಪಂಗಳ ಜಾತಿಲಿ ಹೆಡೆ ಇಪ್ಪದು ‘ನಾಗರ’. ನಾಗರಲ್ಲಿ ಅತ್ಯಂತ ಶ್ರೇಷ್ಠ° ಶೇಷ°. ಬಲರಾಮನಾಗಿ, ಲಕ್ಷ್ಮಣನಾಗಿ ಸದಾ ಭಗವಂತನ ಹಾಸಿಗೆಯಾಂಗೆ ಇಪ್ಪ ಬಹುದೊಡ್ಡ ದೇವತಾಶಕ್ತಿ – ಶೇಷ°. ಶೇಷ° ಭೂಮಿಯ ಆಕರ್ಷಣ ಶಕ್ತಿಯಾದ ಸಂಕರ್ಷಣ°. ಹಾಂಗಾಗಿ ಈ ಭೂಮಿಯ ಶೇಷ ಹೊತ್ತುಗೊಂಡಿದ್ದ ಹೇಳಿ ಹೇಳುವದು. ಇಂತಹ ಶೇಷನಲ್ಲಿ ಭಗವಂತ° ವಿಶೇಷವಾಗಿ ಸನ್ನಿಹಿತನಾಗಿದ್ದ° ಹೆಡೆಯಿಪ್ಪ ಹಾವುಗೊಕ್ಕೆಲ್ಲ ಮೂಲಶಕ್ತಿಯಾಗಿ ಶೇಷನಲ್ಲಿ ತುಂಬಿಪ್ಪ ಭಗವಂತ° ಎಂದೂ ಅಳಿವಿಲ್ಲದ್ದ ಶೇಷಶಯನ ಭಗವಂತ° – ‘ಅನಂತಃ’.

ಭಗವಂತ° ಮುಂದೆ ಹೇಳುತ್ತ° – “ಜಲಚರ ಪ್ರಾಣಿಗಳಲ್ಲಿ ಅವುಗಳ ಒಡೆಯ° ‘ವರುಣ°’ ಆನು”. ನೀರಿನ ಆವರಣಲ್ಲಿ ಅನೇಕ ಜಲಚರಪ್ರಾಣಿಗೊಕ್ಕೆ ಬದುಕು ಕೊಡುವ ವರುಣನೊಳ ವಿಶೇಷ ವಿಭೂತಿಯಾಗಿ ಭಗವಂತ° ತುಂಬಿಗೊಂಡಿದ್ದ°. ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿನಾಮ ‘ವರುಣಃ’ – ವರ = ಹಿರಿದಾದ, ಣ = ಆನಂದ ಸ್ವರೂಪನಾದ್ದರಿಂದ ‘ವರುಣ’ ಎನ್ನುಸಿ ವರುಣನಲ್ಲಿದ್ದುಗೊಂಡು ಅವಂಗೆ ಜಲಚರಂಗಳ ಒಡೆತನವ ಕೊಟ್ಟ ಭಗವಂತ° – ‘ವರುಣಃ’.

ಭೂಮಿಂದ ದೇಹತ್ಯಾಗ ಮಾಡಿ ಹೋಪ ಜೀವಿಗಳ ನಿಯಂತ್ರುಸುವ ದೇವತಾಶಕ್ತಿ – ‘ಪಿತೃದೇವತೆಗೊ’. ಅವರಲ್ಲಿ ಅವರ ಮುಖಂಡನಾದ, ದ್ವಾದಶಾದಿತ್ಯರಲ್ಲಿ ಒಬ್ಬನಾದ ಅರ್ಯಮನಲ್ಲಿ ಭಗವಂತ° ವಿಶೇಷ ಶಕ್ತಿಯಾಗಿ ನಿಂದ°. ಅರ್ತುಗೊಂಡಿರೆಕಾದವ° – ‘ಅರ್ಯ°’, ಮತ್ತೆ ಅರ್ತವ° – ‘ಮಾ ‘ = ‘ಅರ್ಯಮನ್’ ಹೇದು ಪಿತೃಪತಿಯಾದ ‘ಅರ್ಯಮ’ ಹೇದು ಹೇಳ್ವ ಆದಿತ್ಯನಲ್ಲಿ ಭಗವಂತ° ಸನ್ನಿಹಿತನಾಗಿದ್ದ°.

ಪಾಪ ಮಾಡಿದ ಜೀವಿಗಳ ನಿಯಂತ್ರುಸುವದು ಯಮ°. ಆ ಯಮನಲ್ಲಿ ಭಗವಂತನ ವಿಶೇಷ ಸನ್ನಿಧಾನ ಇದ್ದು. ಯಮನಲ್ಲಿದ್ದು ಪ್ರಪಂಚವ ನಿಯಮಿಸುವ ಭಗವಂತ° – ‘ಯಮಃ’. ಯೋಗಶಾಸ್ತ್ರಲ್ಲಿ ಯಮ ಹೇಳ್ವ ಪದವ ವಿಶಿಷ್ಟ ಅರ್ಥಲ್ಲಿ ಬಳಸಿದ್ದವು. ಅದು ನಾವು ಮಾಡ್ಳಾಗದ್ದ ಐದು ನಿಯಮಂಗಳ ತಿಳಿಶುತ್ತು. ೧.ಹಿಂಸೆ, ೨.ಸುಳ್ಳು ಹೇಳುವದು, ೩.ಕದ್ದುಗೊಂಬದು, ೪.ಅತಿಯಾದ ಕಾಮ, ೫. ಇನ್ನೊಬ್ಬನ ಮುಂದೆ ಕೈ ನೀಡುವದು. ಇದು ಭಗವಂತನ ಉಪಾಸನೆಯ ಮಾರ್ಗಲ್ಲಿ ಬಿಡೆಕಾದ ಈ ಐದು ನಿಯಮಂಗಳ ಕೊಟ್ಟ ಭಗವಂತ° – ‘ಯಮಃ’. ಇಡೀ ಜಗತ್ತಿನ ನಿಯಂತ್ರುಸುವ, ಯಮಧರ್ಮನನ್ನೂ ನಿಯಂತ್ರುಸುವ ಭಗವಂತ° – ‘ಯಮಃ’.

 ಶ್ಲೋಕ

ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಂ ।
ಮೃಗಾಣಾಂ ಚ ಮೃಗೇಂದ್ರೋsಹಂ ವೈನತೇಯಶ್ಚ ಪಕ್ಷಿಣಾಂ ॥೩೦॥

ಪದವಿಭಾಗ

ಪ್ರಹ್ಲಾದಃ ಚ ಅಸ್ಮಿ ದೈತ್ಯಾನಾಂ ಕಾಲಃ ಕಲಯತಾಂ ಅಹಂ । ಮೃಗಾಣಾಂ ಚ ಮೃಗೇಂದ್ರಃ ಅಹಂ ವೈನತೇಯಃ ಚ ಪಕ್ಷಿಣಾಂ ॥

ಅನ್ವಯ

ದೈತ್ಯಾನಾಂ ಪ್ರಹ್ಲಾದಃ, ಕಲಯತಾಂ ಕಾಲಃ ಚ ಅಹಂ ಅಸ್ಮಿ । ಮೃಗಾಣಾಂ ಮೃಗೇಂದ್ರಃ ಚ, ಪಕ್ಷಿಣಾಂ ವೈನತೇಯಃ ಚ ಅಹಂ ಅಸ್ಮಿ ॥

ಪ್ರತಿಪದಾರ್ಥ

ದೈತ್ಯಾನಾಂ – ದೈತ್ಯರಲ್ಲಿ (ದಿತಿಯ ಮಕ್ಕಳಲ್ಲಿ), ಪ್ರಹ್ಲಾದಃ – ಪ್ರಹ್ಲಾದ°, ಕಲಯತಾಂ – ಕ್ಷಯಕಾರಕರಲ್ಲಿ, ಕಾಲಃ ಚ- ಕಾಲವು ಕೂಡ , ಅಹಂ ಅಸ್ಮಿ – ಆನು ಆಗಿದ್ದೆ. ಮೃಗಾಣಾಂ – ಮೃಗಂಗಳಲ್ಲಿ, ಮೃಗೇಂದ್ರಃ – ಮೃಗಂಗಳ ಒಡೆಯ° (ಸಿಂಹ), ಚ – ಕೂಡ, ಪಕ್ಷಿಣಾಂ – ಪಕ್ಷಿಗಳಲ್ಲಿ, ವೈನತೇಯಃ – ಗರುಡ°, ಚ – ಕೂಡ, ಅಹಂ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ದೈತ್ಯರಲ್ಲಿ ಆನು ಭಕ್ತ ಪ್ರಹ್ಲಾದ°, ಕ್ಷಯವನ್ನುಂಟುಮಾಡುವವರಲ್ಲಿ ಆನು ಕಾಲ°, ಪ್ರಾಣಿಗಳಲ್ಲಿ ಆನು ಸಿಂಹ, ಮತ್ತೆ ಪಕ್ಷಿಗಳಲ್ಲಿ ಆನು ಗರುಡ ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ದಿತಿಯ ವಂಶಲ್ಲಿ ಹಿರಿಯವನಾದ ಪ್ರಹ್ಲಾದ (ಹಿರಿಯ ಆನಂದಂದ – ಪ್ರಹ್ಲಾದ°) ಆನು,  ಲೆಕ್ಕಿಗರಲ್ಲಿ ಕಾಲ° ಆನು (ಕೊಲ್ಲುವವನಾದ್ದರಿಂದ ‘ಕಾಲ°), ಮೃಗಂಗಳಲ್ಲಿ ‘ಮೃಗೇಂದ್ರ’ನಾದ ಸಿಂಹಲ್ಲಿ ಆನಿದ್ದೆ (ಮೃಗ – ಭಗವಂತನ ಅರಸುವ ಭಕ್ತರಿಂಗೆ, ಇಂದ್ರಃ – ಒಡೆಯ°) ಹಕ್ಕಿಗಳಲ್ಲಿ ವೈನತೇಯನಾದ ಗರುಡ (ವಿನತ – ಶರಣಾದವರಿಂಗೆ ಆಸರೆಯಾಗಿ ‘ವೈನತೇಯ°’) ಆನಾಗಿದ್ದೆ.

ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದ್ದು, ದುರ್ಜನರಲ್ಲಿಯೂ ಇದ್ದು. ದೈತ್ಯರಿಂಗೆ ಬಲವ ಕೊಡುವವನೂ ಭಗವಂತ°. ಸಾಮಾನ್ಯವಾಗಿ ದೈತ್ಯರು ಇನ್ನೊಬ್ಬರ ಬದುಕಿನ ಹಾಳುಮಾಡುತ್ತದು. ಆದರೆ ಇಂತಹ ದೈತ್ಯವಂಶದ ಆದಿಲಿ ಹುಟ್ಟಿದ ಪ್ರಹ್ಲಾದ° ಎಲ್ಲೋರಿಂದ ಭಿನ್ನ. ಇದಕ್ಕೆ ಕಾರಣ ಭಗವಂತ ಆತನಲ್ಲಿ ವಿಶೇಷವಾಗಿ ಸನ್ನಿಧಾನ ಇಪ್ಪದು. ದೈತ್ಯ ವಂಶಲ್ಲಿ ಹುಟ್ಟಿ, ಆ ಸ್ವಭಾವಂದ ಕಳಚಿಗೊಂಡು ಬಹಳ ಎತ್ತರಕ್ಕೇರಿದವ° ಪ್ರಹ್ಲಾದ°. ಹಾಂಗಾಗಿ ದೈತ್ಯರಲ್ಲೇ ಶ್ರೇಷ್ಠ ಇವ°. ಪ್ರಹ್ಲಾದನಲ್ಲಿ ಭಗವಂತನ ವಿಶೇಷ ಅನುಗ್ರಹ ಇತ್ತಿದ್ದು. ಅವ° ಗರ್ಭಲ್ಲಿಪ್ಪಗಳೇ ಅವಂಗೆ ದೇವರ್ಷಿ ನಾರದನ ಮೂಲಕ ವಿಶೇಷ ಅಧ್ಯಾತ್ಮ ಉಪದೇಶ ಪಡವ ಭಾಗ್ಯ ಸಿಕ್ಕಿದ್ದತ್ತು. ಇವ° ಧ್ರುವನ ಹಾಂಗೆ ತನ್ನ ಐದನೇ ವಯಸ್ಸಿಲ್ಲಿ ದೇವರ ಕಂಡ ಸಾಧಕ°. ಪ್ರಹ್ಲಾದನ ಮುಖೇನ ಪ್ರಪಂಚಕ್ಕೆ ಭಗವಂತ° ಬಹಳ ಮುಖ್ಯವಾದ ಸಂದೇಶವ ನೀಡಿದ್ದ°. “ಭಗವಂತ° ಭಯಾನಕ ಅಲ್ಲ, ಪ್ರೀತಿಂದ ಭಗವಂತನ ಹತ್ರೆ ಹೋದರೆ, ಅವ° ನಮ್ಮ ಅಷ್ಟೇ ಪ್ರೀತಿಂದ ಕಾಣುತ್ತ°. ಭಗವಂತನ ಪೂಜೆ ಒಂದು ವ್ಯಾಪಾರ ಅಲ್ಲ. ನಮ್ಮ ಯಾವುದೋ ಬಯಕೆಯ ಸಾಧುಸಲೆ ನಾವು ದೇವರ ಪೂಜೆ ಮಾಡ್ಳಾಗ. ನಮ್ಮ ನಿಷ್ಕಾಮ ಭಕ್ತಿ ಭಗವಂತಂಗೆ ಇಷ್ಟ. ಈ ರೀತಿ ಭಗವಂತನ ಪೂಜಿಸುವದರಿಂದ ನಾವು ಸದಾ ಆನಂದಂದ ಇಪ್ಪಲಕ್ಕು” ಹೇಳ್ವ ಸತ್ಯವ ಪ್ರಹ್ಲಾದ ಪ್ರಪಂಚಕ್ಕೆ ತೋರಿಸಿಕೊಟ್ಟ°. ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿನಾಮ ‘ಪ್ರಹ್ಲಾದಃ’ – ಎಂದೂ ದುಃಖ ಇಲ್ಲದ್ದ ಆನಂದಮೂರ್ತಿ ಭಗವಂತ° – ‘ಪ್ರಹ್ಲಾದಃ’.  

ಮುಂದೆ ‘ಕಾಲಃ ಕಲಯತಾಂ ಅಹಂ’ – ಈ ಜಗತ್ತಿಲ್ಲಿ ಅನಾಧಿ ಅನಂತ ಕಾಲಲ್ಲಿ ನಡವ ಪ್ರತಿಯೊಂದು ಹುಟ್ಟು-ಸಾವು ಪೂರ್ವ ನಿಶ್ಚಿತ. ಇದರ ಬದಲುಸಲೆ ಆರಿಂದಲೂ ಎಡಿಯ. ಇಲ್ಲಿ ಕಾಲ ಹೇಳ್ವ ಪದಕ್ಕೆ ಲೆಕ್ಕ, ಮೃತ್ಯು, ಶಿವ, ದುರ್ಗೆ, ಕಾಲಾಗ್ನಿ ಹೇಳಿ ಅನೇಕ ಅರ್ಥವ ಕೊಡುತ್ತು. ಇವೆಲ್ಲದರಲ್ಲಿಯೂ ಭಗವಂತನ ವಿಶೇಷ ವಿಭೂತಿ ಅಡಗಿದ್ದು. ಭಗವಂತ° ಕಾಲಃ ನಾಮಕನಾಗಿ ‘ಕಾಲ’ಲ್ಲಿ ತುಂಬಿಗೊಂಡಿದ್ದ°. ‘ಕಲ’ ಹೇಳ್ವ ಧಾತುವಿಂದ ಬಂದ ಪದ – ‘ಕಾಲಃ’. ಎಲ್ಲಾ ಗುಣಂಗಳ, ಎಲ್ಲಾ ಸಾಮರ್ಥ್ಯಂಗಳ ತನ್ನೊಳ ‘ಕಲೆ’ ಹಾಕಿದವ° -‘ಕಾಲಃ’. ಭಗವಂತ ಸಮಸ್ತ ಸದ್ಗುಣಂಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವ ನಾವು ತಿಳ್ಕೊಳ್ಳದ್ದೆ ಅಹಂಕಾರಿಗೊ ಆದಪ್ಪಗ ಅದೇ ತತ್ವ ‘ಕಾಲಪುರುಷ’ನಾಗಿ ನಮ್ಮ ಸಂಹಾರಕ್ಕೆ ಕಾರಣ ಆವ್ತು. ನಮ್ಮ ಉದ್ಧಾರ ಕೆಲವೊಂದರಿ ಬದುಕಿಲ್ಲಿದ್ದರೆ ಇನ್ನು ಕೆಲವೊಂದರಿ ನಮ್ಮ ‘ಸಾವಿಲ್ಲಿ’, ಕೆಲವೊಂದರಿ ನಮ್ಮ ‘ಮಾನಲ್ಲಿ’, ಇನ್ನು ಕೆಲವೊಂದರಿ ‘ಅವಮಾನಲ್ಲಿ’, ಕೆಲವೊಂದರಿ ನಮ್ಮ ‘ಜ್ಞಾನಲ್ಲಿ’ ಉದ್ಧಾರ ಇದ್ದರೆ ಇನ್ನು ಕೆಲವೊಂದರಿ ನಮ್ಮ ‘ಅಜ್ಞಾನಲ್ಲಿ’ ನಮ್ಮ ಉದ್ಧಾರ ಇರುತ್ತು. ಆದರೆ ನಮ್ಮ ‘ಅಹಂಕಾರಲ್ಲಿ’ ಎಂದೆಂದೂ ಉದ್ಧಾರ ಇಲ್ಲೆ. ಜಗತ್ತಿಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿಯಪ್ಪಗ ಭಗವಂತ° ‘ಕಾಲಪುರುಷ’ನಾಗಿ ಬೆಳೆದು ನಿಲ್ಲುತ್ತ. ಕಾಲ ಹೇಳ್ವದಕ್ಕೆ ಇನ್ನೊಂದು ಅರ್ಥ ‘ಸಮಯ’. ಪ್ರತಿಯೊಂದು ಕ್ರಿಯೆಯ ಹಿಂದೆ ‘ಕಾಲ’ ಸರ್ವಕಾರಣವಾಗಿರುತ್ತು. ಕಾಲನಿಯಾಮಕ° ಭಗವಂತ° -‘ಕಾಲಃ’. ಜ್ಞಾನಕಾರಕವಾದ ಅವತಾರಂಗಳಿಂದ (ವ್ಯಾಸ°, ಕಪಿಲ°, ದತ್ತಾತ್ರೇಯ°, ನರ-ನಾರಾಯಣ° ಇತ್ಯಾದಿ) ಅಜ್ಞಾನಕ್ಕೆ  ‘ಕಾಲವಾದ’ ಭಗವಂತ°, ಬಲಕಾರಕ ಅವತಾರಂಗಳಿಂದ (ನರಸಿಂಹ°, ವರಾಹ, ರಾಮ, ಪರಶುರಾಮ ಇತ್ಯಾದಿ) ಅಹಂಕಾರಕ್ಕೆ ‘ಕಾಲನಾದ°’. ಹೀಂಗೆ ಸರ್ವ ಗುಣಪೂರ್ಣ°, ಸರ್ವ ಸಂಹಾರಕ° ಹಾಂಗೂ ಕಾಲನಿಯಾಮಕ ಭಗವಂತ° – ‘ಕಾಲಃ’.

ಸಂಹಾರ ಶಕ್ತಿಯಾಗಿ ತನ್ನ ವಿಭೂತಿಯ ಹೇಳಿದ ಭಗವಂತ° ಮುಂದೆ ಪ್ರಾಣಿಗಳಲ್ಲಿ ಬಹಳ ಉಗ್ರ ಹಾಂಗೂ ಬಲಿಷ್ಠ ಪ್ರಾಣಿಲಿ ತನ್ನ ವಿಭೂತಿಯ ವಿವರುಸುತ್ತ°. “ಮೃಗಾಣಾಂ ಚ ಮೃಗೇಂದ್ರಃ” – ಭೂಮಿಲಿ ಹೆಚ್ಚು ಬಲಿಷ್ಠ ಹಾಂಗೂ ದೊಡ್ಡ ಪ್ರಾಣಿ – ಆನೆ. ಆದರೆ ಇಂಥಹ ಆನೆಯನ್ನೂ ಕೂಡ ಸಂಹಾರ ಮಾಡ್ಳೆ ಎಡಿಗಪ್ಪ ಕಾಡಿನ ರಾಜ° – ಮೃಗೇಂದ್ರ° – ‘ಸಿಂಹ’. ಮೃಗಂಗಳಲ್ಲಿ ಶ್ರೇಷ್ಠ ಮೃಗ ಎನ್ನಿಸಿಗೊಂಬ ಸಿಂಹಲ್ಲಿ ಭಗವಂತ ವಿಶೇಷ ವಿಭೂತಿ ಇದ್ದು. ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿನಾಮ ‘ಮೃಗೇಂದ್ರಃ’ – ಭಗವಂತನ ಸಾಧನೆಲಿ ನಿರತರಾದವಕ್ಕೆ ಮಾರ್ಗದರ್ಶಕನಾಗಿ ನಿಂಬ (ಮೃಗ) ಸರ್ವಶ್ರೇಷ್ಠ ಭಗವಂತ° – ‘ಮೃಗೇಂದ್ರಃ’.

ಪ್ರಾಣಿಯ ನಂತ್ರ ಪಕ್ಷಿಗಳಲ್ಲಿ ಭಗವಂತನ ವಿಭೂತಿಯ ಹೇಳಿದ್ದ° ಭಗವಂತ°. ಪಕ್ಷಿಗಳಲ್ಲೇ ಅತ್ಯಂತ ಶ್ರೇಷ್ಠ ಪಕ್ಷಿ ‘ಗರುಡ°’. ಹೊಟ್ಟೆಯ ಭಾಗ ಬೆಳ್ಳಂಗಿಪ್ಪ ಹದ್ದಿನ ಜಾತಿಯ ಪಕ್ಷಿ – ಗರುಡ. ಭಗವಂತನ ವಾಹನ ಗರುಡ° ವಿನುತೆಯ ಮಗ ಆದ್ದರಿಂದ ಇವನ ‘ವೈನತೇಯ’ ಹೇಳಿ ಹೇಳುವದು. ತನಗೆ ಶರಣಾಗತರಪ್ಪ ಭಕ್ತರಿಂಗೆ (ವಿನತ) ಆಸರೆಯಾಗಿ ‘ವೈನತೇಯ’ ಎನುಸಿ ಭಗವಂತ° ಗರುಡನಲ್ಲಿ ಸನ್ನಿಹಿತನಾಗಿದ್ದ°. ಭಗವಂತನ ತನ್ನ ಹೆಗಲ ಮೇಲೆ ಹೊತ್ತು ಓಡಾಡುವ ‘ಗರುಡ°’ – ಭಗವಂತನ ವಿಶೇಷ ವಿಭೂತಿ ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು. 

ಶ್ಲೋಕ

ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಂ ।
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ॥೩೧॥

ಪದವಿಭಾಗ

ಪವನಃ ಪವತಾಂ ಅಸ್ಮಿ ರಾಮಃ ಶಸ್ತ್ರ-ಭೃತಾಂ ಅಹಂ । ಝಷಾಣಾಂ ಮಕರಃ ಚ ಅಸ್ಮಿ ಸ್ರೋತಸಾಂ ಅಸ್ಮಿ ಜಾಹ್ನವೀ ॥

ಅನ್ವಯ

ಪವತಾಂ ಪವನಃ ಅಸ್ಮಿ, ಶಸ್ತ್ರ-ಭೃತಾಂ ಚ ರಾಮಃ ಅಹಂ ಅಸ್ಮಿ । ಝಷಾಣಾಂ ಮಕರಃ ಅಸ್ಮಿ , ಸ್ರೋತಸಾಂ ಜಾಹ್ನವೀ ಚ ಅಹಂ ಅಸ್ಮಿ ॥

ಪ್ರತಿಪದಾರ್ಥ

ಪವತಾಂ – ಚಲುಸುವದರಲ್ಲಿ, ಪವನಃ – ವಾಯುವು, ಅಸ್ಮಿ – ಆಗಿದ್ದೆ, ಶಸ್ತ್ರ-ಭೃತಾಂ – ಶಸ್ತ್ರಪಾಣಿಗಳಲ್ಲಿ, ರಾಮಃ – ರಾಮನು, ಚ – ಕೂಡ, ಅಹಂ ಅಸ್ಮಿ – ಆನು ಆಗಿದ್ದೆ. ಝಷಾಣಾಂ – ಮೀನುಗಳಲ್ಲಿ, ಮಕರಃ – ತಿಮಿಂಗಿಲವು, ಅಸ್ಮಿ – ಆಗಿದ್ದೆ, ಸ್ರೋತಸಾಂ – ಹರಿವ ನದಿಗಳಲ್ಲಿ, ಜಾಹ್ನವೀ – ಗಂಗಾನದಿ, ಚ- ಕೂಡ, ಅಹಂ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ಚಲುಸುವದರಲ್ಲಿ ಆನು ವಾಯುವು, ಶಸ್ತ್ರಧಾರಿಗಳಲ್ಲಿ ಆನು ರಾಮ°, ಮೀನುಗಳಲ್ಲಿ ಆನು ತಿಮಿಂಗಿಲ, ಹರಿವ ನದಿಗಳಲ್ಲಿ ಆನು ಗಂಗಾನದಿ ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಚಲುಸುವದರಲ್ಲಿ ಶ್ರೇಷ್ಠವಾದ ಗಾಳಿ (ಪವನ = ಪ – ಜಗತ್ತಿನ ಪಾಲುಸುವ ದೇವತೆಗಳಿಂದಲೂ, ವನ – ಸೇವ್ಯನಾದವ) ಆನಾಗಿದ್ದೆ. ಆಯುಧಪಾಣಿಗಳಾಗಿ ಹೋರಾಡುವ ವೀರರಲ್ಲಿ ಆನು ರಾಮ° (ರ – ಆನಂದರೂಪನಾಗಿ, ಅಮ – ಅಪರಿಮಿತನಾದ್ದರಿಂದ ಮತ್ತೆ ಲೋಕವ ರಮಿಸುವದರಿಂದ = ರಾಮ°) ಆಗಿದ್ದೆ. ಮೀನುಗಳಲ್ಲಿ ತಿಮಿಂಗಿಲ (ಮಕರ = ಮ – ತಿಳಿವು, ಕರ – ಕೊಡುವವನಾದ್ದರಿಂದ ‘ಮಕರ’) ಆನಾಗಿದ್ದೆ. ಹರಿವ ನದಿಗಳಲ್ಲಿ ಆನು ಗಂಗೆ (ಜಾಹ್ನವೀ = ಜಹತ್ – ಕಾಮನೆಗಳ ತೊರೆದವಕ್ಕೆ, ಅವಿ – ರಕ್ಷಕನಾಗಿ ‘ಜಾಹ್ನವೀ’) ಆಗಿದ್ದೆ”.

ಬನ್ನಂಜೆಯವು ಇದರ ಇನ್ನೂ ವಿಶಾಲವಾಗಿ ಸರಳವಾಗಿ ವಿಶ್ಲೇಷಿಸಿದ್ದರ ನೋಡಿರೆ – “ಪವನಃ ಪವತಾಮಸ್ಮಿ” – ಪವನ ಹೇಳಿರೆ ಗಾಳಿಯ ಇನ್ನೊಂದು ಪ್ರಸಿದ್ಧ ಹೆಸರು, ಅಥವಾ ವಾಯುದೇವ°. ಆಕಾಶಲ್ಲಿ ಸಂಚರುಸುವ ಶಕ್ತಿಗಳಲ್ಲಿ ದೊಡ್ಡ ವಿಭೂತಿ -‘ವಾಯು’. ನಮ್ಮ ಜೀವವ ನಿಯಂತ್ರುಸುವ ವಾಯುದೇವರಲ್ಲಿ ವಿಶೇಷವಾಗಿ ಸನ್ನಿಹಿತನಾಗಿಪ್ಪ ಭಗವಂತನ ವಿಭೂತಿ ನಾಮ – ‘ಪವನಃ’. ಪವತೇ ಇತಿ ಪವನಃ – ನಿರಂತರ ಚಲುಸುವಂತಾದ್ದು. ಎಲ್ಲರ ಒಳವೂ ಹೆರವೂ ಅಂತರ್ಯಾಮಿಯಾಗಿಪ್ಪ ಭಗವಂತ ಆಯಾ ವಸ್ತುವಿಲ್ಲಿ ಆಯಾ ರೂಪಲ್ಲಿದ್ದುಗೊಂಡು ನಿರಂತರ ಚಲನೆ ಕೊಡುತ್ತಾ ಇರುತ್ತ°. ನಮ್ಮ ದೇಹಲ್ಲಿ ಅವನ ಚಲನೆ ನಿಂದಪ್ಪಗ ನಾವ ‘ಶವ’ ಆವ್ತು. ಉಪನಿಷತ್ತಿಲ್ಲಿ ಭಗವಂತನ ‘ವನಃ’ ಹೇಳಿ ಹೇಳಿದ್ದವು. ಹಾಂಗಾಗಿ ಭಗವಂತ° – ‘ಪ+ವನಃ’. ಇಲ್ಲಿ ‘ಪ’ ಹೇಳಿರೆ ಪಾಲನೆ, ನಮ್ಮ ಹಾಂಗೂ ಸಮಸ್ತ ಬ್ರಹ್ಮಾದಿ ದೇವತೆಗಳ ಪಾಲುಸುವ ಶಕ್ತಿ. ‘ವನಃ’ ಹೇಳಿರೆ ಎಲ್ಲೋರು ಭಜಿಸೆಕ್ಕಾದ, ಪ್ರೀತಿಂದ ಉಪಾಸನೆ ಮಾಡೆಕ್ಕಪ್ಪ, ಎಲ್ಲೋರು ಆಶ್ರೈಸೇಕ್ಕಪ್ಪ ಶಕ್ತಿ. ಸಹಸ್ರರೂಪನಾಗಿ, ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲುಸುವ ಭಗವಂತ° – ‘ಪವನಃ’.

ಮುಂದೆ, “ರಾಮಃ ಶಸ್ತ್ರ-ಭೃತಾಂ ಅಹಮ್” – ‘ಆಯುಧಂಗಳ ಹಿಡುದು ಹೋರಾಡುವ ವೀರರಲ್ಲಿ ‘ರಾಮ°’ ಆನು’. ಭಗವಂತನ ಇತರ ಎಲ್ಲ ಅವತಾರಂಗೊಕ್ಕಿಂತ ರಾಮಾವತಾರಲ್ಲಿ ಅವ° ಕೋದಂಡಪಾಣಿಯಾಗಿ ಶಸ್ತ್ರದ ಪೂರ್ಣ ಬಳಕೆ ಮಾಡಿ ಶತ್ರುನಿಗ್ರಹ ಮಾಡಿದ್ದ°. ‘ರಾಮ’ ಹೇಳ್ವ ಪದಕ್ಕೆ ಶಾಸ್ತ್ರಲ್ಲಿ ಅನೇಕ ಅರ್ಥಂಗೊ ಇದ್ದು. ‘ರಾ+ಅಮಃ’, ಹೇಳಿರೆ, ಅಪರಿಮಿತವಾದ ಆನಂದಸ್ವರೂಪ° ಹಾಂಗೂ ಎಲ್ಲೋರಿಂಗೂ ಆನಂದವ ಹಂಚುವವ°. ಭಗವಂತನ ಈ ಗುಣ ರಾಮಾವತಾರಲ್ಲಿ ಸ್ಪಷ್ಟವಾಗಿ ಕಾಣುತ್ತು. ರಾಮಾವತಾರಲ್ಲಿ ಭಗವಂತ° ಎಲ್ಲಿಯೂ ಇನ್ನೊಬ್ಬಂಗೆ ಬೇನೆ ಅಪ್ಪಂತೆ ನಡಕ್ಕೊಂಡಿದನಿಲ್ಲೆ. ತನ್ನನ್ನೇ ಕಾಡಿಂಗೆ ಕಳುಸಲೆ ಕಾರಣಕರ್ತೆಯಾದ ಕೈಕೇಯಿಯ ಮೇಗೆ ಎಲ್ಲೋರು ಕೋಪಗೊಂಡಿಪ್ಪಗಳೂ ಕೂಡ, ರಾಮಚಂದ್ರ° ಒಂದರಿಯೂ ಕೋಪದ ಮಾತಿನ ಆಡಿದ್ದನಿಲ್ಲೆ. ಬದಲಿಂಗೆ, ‘ಎನ್ನಿಂದೇನಾರು ಅಪರಾಧವಾಗಿದ್ದರೆ ಕ್ಷಮಿಸು’ ಹೇಳಿಕ್ಕಿ ಸಂತೋಷಂದ ಕಾಡಿಂಗೆ ಹೆರಟು ಹೋದ°. ಹೀಂಗೆ ಇನ್ನೊಬ್ಬರ ಸಂತೋಷಕ್ಕೋಸ್ಕರವಾಗಿ ತ್ಯಾಗಮಾಡಿ ತೋರುಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸನಾದ ಸೀತಾಪತಿ ಭಗವಂತ°, ಈ ಅವತಾರಲ್ಲಿ ಗಂಡು-ಹೆಣ್ಣಿನ ಮಧ್ಯೆ ದಾಂಪತ್ಯ ಜೀವನ ಹೇಂಗಿರೆಕು, ಅಣ್ಣ-ತಮ್ಮಂದ್ರ ಪ್ರೀತಿ ಹೇಂಗಿರೆಕು, ಅಬ್ಬೆ-ಅಪ್ಪ°-ಮಕ್ಕಳ ಬಾಂಧವ್ಯ ಹೇಂಗಿರೆಕು ಹೇಳ್ವದರ ಸ್ವಯಂ ತೋರ್ಸಿಕೊಟ್ಟಿದ°. ಇದು ಜಗತ್ತಿಂಗೇ ಆನಂದ ಕೊಟ್ಟ ಭಗವಂತನ ಅಮಿತಾನಂದಸ್ವರೂಪ ವಿಭೂತಿ – ‘ರಾಮಃ’.

ಮತ್ತೆ, ‘ಝಷಾಣಾಂ ಮಕರಶ್ಚಾಸ್ಮಿ’ – ‘ಮೀನುಗಳಲ್ಲಿ ತಿಮಿಂಗಲ ಆಗಿದ್ದೆ’. ನೀರಿಲ್ಲಿಪ್ಪ ಮೀನುಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತೆ ಗಾತ್ರಲ್ಲಿಯೂ ದೈತ್ಯ° ಆಗಿಪ್ಪದು ತಿಮಿಂಗಿಲ. ಮಕರಃ ಹೇಳಿರೆ ತಿಮಿಂಗಿಲ. ಭಗವಂತ ‘ಮಕರಃ’ ಹೇಳ್ವ ಶಬ್ದವಾಚ್ಯನಾಗಿ ತಿಮಿಂಗಿಲಲ್ಲಿ ವಿಶೇಷ ವಿಭೂತಿಯಾಗಿ ಅದಕ್ಕೆ ಆ ಶಕ್ತಿಯ ಕೊಟ್ಟಿದ°. ತಿಳಿವ (ಮ) ಕೊಡುವ (ಕರ) ಭಗವಂತ° – ‘ಮಕರಃ’.

‘ಸ್ರೋತಸಾಮಸ್ಮಿ ಜಾಹ್ನವೀ’ – ‘ನದಿಗಳಲ್ಲಿ ಗಂಗೆ ಆನು ಆಗಿದ್ದೆ’. ಗಂಗಾನದಿ ನೀರಿಂಗೆ ಸಾಟಿಯಾದ ಔಷಧ ಇನ್ನೊಂದಿಲ್ಲೆ. ಗಂಗೆಲಿ ಮಿಂದರೆ ನಾವು ನಮ್ಮ ಮನಃ ಶುದ್ಧಿ ಮಾಡಿಗೊಂಬಲಕ್ಕು. ಅಲ್ಲಿಪ್ಪ ಏವುದೇ ಕೊಳೆ ನವಗೆ ಅಂಟ. ಶೇಖರಿಸಿಮಡುಗಿರೆ ಎಂದೂ ಕೆಡದ್ದೆ ಇಪ್ಪ ನೀರು ಗಂಗೆ. ಗಂಗಗೆ ಆ ಮಹಾನ್ ಶಕ್ತಿಯ ಕೊಟ್ಟ ಭಗವಂತನ ವಿಭೂತಿನಾಮ ‘ಜಾಹ್ನವೀ’. ‘ಜಹ್ನು’ ಹೇಳಿರೆ ತೊರವದು. ಕ್ಷುದ್ರ ಭೌತಿಕ ಬಯಕೆಗಳ ತೊರದು, ಭಗವಂತನ ಮಾರ್ಗಲ್ಲಿ ಸಾಗುತ್ತೋರ ರಕ್ಷಣೆ ಮಾಡುವ ಭಗವಂತ° – ‘ಜಾಹ್ನವೀ’. ಇದು ಭಗವಂತನ ಸ್ತ್ರೀರೂಪ ಪ್ರತೀಕ ನಾಮ. ಅಬ್ಬೆ ಹಾಂಗೆ ಸಲಹುವ ಭಗವಂತನ ಸ್ತ್ರೀರೂಪಲ್ಲಿ ಕೂಡ ನಾವು ಉಪಾಸನೆ ಮಾಡುತ್ತು. ಐಹಿಕ ಕಾಮನೆಗಳ ಬಿಟ್ಟವಕ್ಕೆ (‘ಜಹತ್’ ) ರಕ್ಷಕನಾಗಿ (‘ಅವಿ’) ಇಪ್ಪ ಭಗವಂತ° – ‘ಜಾಹ್ನವೀ’.

ಶ್ಲೋಕ

ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ ।
ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಂ ॥೩೨॥

ಪದವಿಭಾಗ

ಸರ್ಗಾಣಾಂ ಆದಿಃ ಅಂತಃ ಚ ಮಧ್ಯಂ ಚ ಏವ ಅಹಂ ಅರ್ಜುನ । ಅಧ್ಯಾತ್ಮ-ವಿದ್ಯಾ ವಿದ್ಯಾನಾಂ ವಾದಃ ಪ್ರವದತಾಂ ಅಹಂ

ಅನ್ವಯ

ಹೇ ಅರ್ಜುನ!, ಸರ್ಗಾಣಾಂ ಆದಿಃ ಮಧ್ಯಂ ಚ ಅಂತಃ ಚ ಏವ ಅಹಂ ಅಸ್ಮಿ । ವಿದ್ಯಾನಾಂ ಅಧ್ಯಾತ್ಮ-ವಿದ್ಯಾ, ಪ್ರವದತಾಂ ವಾದಃ ಅಹಂ ಅಸ್ಮಿ ॥

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಸರ್ಗಾಣಾಂ – ಎಲ್ಲ ಸೃಷ್ಟಿಗಳ, ಆದಿಃ – ಪ್ರಾರಂಭ, ಮಧ್ಯಂ – ಮಧ್ಯ, ಚ – ಕೂಡ, ಅಂತಃ – ಕೊಡಿ, ಚ – ಕೂಡ, ಏವ – ಖಂಡಿತವಾಗಿಯೂ, ಅಹಂ ಅಸ್ಮಿ – ಆನು ಆಗಿದ್ದೆ. ವಿದ್ಯಾನಾಂ – ಎಲ್ಲ ವಿದ್ಯೆಗಳಲ್ಲಿ , ಅಧ್ಯಾತ್ಮ-ವಿದ್ಯಾ – ಅಧ್ಯಾತ್ಮವಿದ್ಯೆಯು (ಜ್ಞಾನವು), ಪ್ರವದತಾಂ – ವಾದಂಗಳಲ್ಲಿ / ತಾರ್ಕಿಕರಲ್ಲಿ, ವಾದಃ – ಸ್ವಾಭಾವಿಕ ಸಿದ್ಧಾಂತವು,  ಅಹಂ ಅಸ್ಮಿ – ಆನು ಆಗಿದ್ದೆ.

ಅನ್ವಯಾರ್ಥ

ಏ ಅರ್ಜುನ!, ಇಡೀ ಸೃಷ್ಟಿಗೆ ಆನೇ ಆದಿ, ಮಧ್ಯ, ಅಂತ್ಯ°. ಎಲ್ಲ ವಿದ್ಯೆಗಳಲ್ಲಿ ಆನು ಅಧ್ಯಾತ್ಮ ವಿದ್ಯೆ. ಎಲ್ಲ ತಾರ್ಕಿಕರಲ್ಲಿ  ಆನೇ ನಿರ್ಣಾಯಕ ಸತ್ಯ ಆಗಿದ್ದೆ.  

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಏ ಅರ್ಜುನ!. ಸೃಷ್ಟಿಲಿ ಹುಟ್ಟು-ಸ್ಥಿತಿ-ಲಯಕ್ಕೆ ಕಾರಣೀಭೂತನಾಗಿ ಆದಿ, ಮಧ್ಯ ಅಂತ್ಯನಾಗಿ ಇಪ್ಪವ° ಆನು, ಜ್ಞಾನಲ್ಲಿ ಅಧ್ಯಾತ್ಮ ಜ್ಞಾನ ಆನು, ತಾರ್ಕಿಕಕರ ತರ್ಕಲ್ಲಿ ಮೂಲತತ್ವವಾಗಿ ಇಪ್ಪವ° ಆನು ಆಗಿದ್ದೆ.

ಪ್ರಪಂಚದ ಪ್ರತಿಯೊಂದು ವಸ್ತುವಿಲ್ಲಿಯೂ ಭಗವಂತನ ವಿಭೂತಿ ಅಡಗಿದ್ದು. ನವಗೆ ಮೇಲ್ನೋಟಕ್ಕೆ ವ್ಯರ್ಥ ಹೇಳಿ ಕಾಂಬ ವಸ್ತುವಿಲ್ಲಿಯೂ ಕೂಡ ಇನ್ನೊಂದು ವಸ್ತುವಿಲ್ಲಿ ಇಲ್ಲದ್ದ ಒಂದು ವಿಶಿಷ್ಟ ಗುಣ ಅಡಗಿದ್ದು. ಹುಲ್ಲುಕಡ್ಡಿಂದ ಹಿಡುದು ಚತುರ್ಮುಖ ಬ್ರಹ್ಮನವರೇಂಗೆ ಎಲ್ಲವೂ ಭಗವಂತನ ವಿಭೂತಿ. ಇಲ್ಲಿ ಭಗವಂತ ಆ ಗುಂಪಿಲ್ಲಿ ವಿಶಿಷ್ಟ ವಿಭೂತಿಯ ಹೇಳಿದ್ದ°. ಜೀವದ ಹುಟ್ಟಿಂಗೆ ಮದಲು, ಜೀವ ಹುಟ್ಟಿದ ಮತ್ತೆ ಇಪ್ಪದಕ್ಕೆ ಮತ್ತೆ ಅಕೇರಿಗೆ ಸಂಹಾರಕ ಶಕ್ತಿಯಾಗಿ ನಿಂಬವ° ಭಗವಂತ°. ಅವನೇ ಆದಿ – ಸೃಷ್ಟಿಸುವವ, ಅವನೇ ಮಧ್ಯ – ಬೆಳೆಶುವವ/ಪಾಲುಸುವವ°, ಅವನೇ ಅಂತ್ಯ – ಅಕೇರಿಗೆ ಹೋಪದೂ ಅವನಲ್ಲಿಗೇ. ಹಾಂಗಾಗಿ ಭಗವಂತ ಹೇಳುತ್ತ° – “ಹುಟ್ಟುವಾಗ, ಇಪ್ಪಗ, ಅಂತ್ಯಲ್ಲಿಯೂ ಆನಿದ್ದೆ”. “ಈ ವಿಷಯ-ಜ್ಞಾನಾರ್ಜನ ಮಾಡಿದ ಸಾತ್ವಿಕನಾದ ‘ಅರ್ಜುನ’ ನಿನಗೆ ಗೊಂತಿದ್ದು” ಹೇಳ್ವ ಧ್ವನಿಲಿ ಭಗವಂತ° ‘ಅರ್ಜುನ’ ಹೇಳಿ ಅವನ ದೆನಿಗೊಂಡು ಹೇಳಿದ್ದದು ಇಲ್ಲಿ.

“ವಿದ್ಯಾನಾಂ ಅಧ್ಯಾತ್ಮವಿದ್ಯಾ” – ‘ವಿದ್ಯೆಗಳಲ್ಲಿ ಅಧ್ಯಾತ್ಮ ವಿದ್ಯೆ ಆನು’. ಭಗವಂತನ ಸ್ಪರ್ಶಮಾಡುವ ಅಧ್ಯಾತ್ಮ ವಿದ್ಯೆಲಿ ಭಗವಂತ° ತುಂಬಿಗೊಂಡಿದ್ದ°. ಎಲ್ಲ ಆತ್ಮಂಗೊಕ್ಕೆ ಹಿರಿದಾದ್ದು ಭಗವಂತನ ಅಧಿಕ-ಆತ್ಮ – ‘ಅಧ್ಯಾತ್ಮ’. ಅಧ್ಯಾತ್ಮ ವಿದ್ಯೆಯ ಪದೇಕ್ಕಾರೆ ನಾವು ಇನ್ನೊಬ್ಬನೊಟ್ಟಿಂಗೆ ಸಂವಾದ ಮಾಡೆಕು. ಇದು ನಮ್ಮ ತಿಳುವಳಿಕೆಯ ಹೆಚ್ಚಿಸಿಗೊಂಬಲೆ, ಜ್ಞಾನ ದಾಹವ ಇಂಗಿಸಿಗೊಂಬಲೆ ನಾವು ಮಾಡುವ ಶಾಸ್ತ್ರೀಯ ಚರ್ಚೆ. ಇಂತಹ ಚರ್ಚೆಲಿ ‘ವಾದಃ’ ಶಬ್ದವಾಚ್ಯನಾಗಿ ಭಗವಂತ° ನೆಲೆಸಿದ್ದ°. ಎಲ್ಲ ನಾಮಂಗಳಿಂದ ವಾಚ್ಯನಾದ ಭಗವಂತ° – ‘ವಾದಃ’.

ಶ್ಲೋಕ

ಅಕ್ಷರಾಣಾಮಕಾರೋsಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।
ಅಹಮೇವಾಕ್ಷಯಃ ಕಾಲೋ ಧಾತಾsಹಂ ವಿಶ್ವತೋಮುಖಃ ॥೩೩॥

ಪದವಿಭಾಗ

ಅಕ್ಷರಾಣಾಂ ಅಕಾರಃ ಅಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ । ಅಹಂ ಏವ ಅಕ್ಷಯಃ ಕಾಲಃ ಧಾತಾ ಅಹಂ ವಿಶ್ವತೋಮುಖಃ ॥

ಅನ್ವಯ

ಅಕ್ಷರಾಣಾಂ ಅಕಾರಃ, ಸಾಮಾಸಿಕಸ್ಯ ಚ ದ್ವಂದ್ವಃ, ಅಕ್ಷಯಃ ಕಾಲಃ ಅಹಂ ಏವ, ವಿಶ್ವತೋಮುಖಃ ಧಾತಾ ಚ ಅಹಂ ಅಸ್ಮಿ

ಪ್ರತಿಪದಾರ್ಥ

ಅಕ್ಷರಾಣಾಂ – ಅಕ್ಷರಂಗಳಲ್ಲಿ, ಅಕಾರಃ ಅಸ್ಮಿ – ಮದಾಲಾಣ ಅಕ್ಷರ ಆನಾಗಿದ್ದೆ.  ಸಾಮಾಸಿಕಸ್ಯ – ಸಮಾಸಂಗಳಲ್ಲಿ, ಚ – ಕೂಡ,  ದ್ವಂದ್ವಃ – ದ್ವಂದ್ವವು, ಅಹಂ ಏವ – ಆನೇ, ಅಕ್ಷಯಃ – ಕ್ಷಯವಿಲ್ಲದ್ದು (ಅಕ್ಷಯವು / ಶಾಶ್ವತವು), ಕಾಲಃ – ಕಾಲ°, ಧಾತಾ – ಸೃಷ್ಟಿಕರ್ತನು, ಅಹಂ – ಆನು, ವಿಶ್ವತೋಮುಖಃ (ವಿಶ್ವತಃ ಮುಖಃ) – ಬ್ರಹ್ಮ°.

ಅನ್ವಯಾರ್ಥ

ಅಕ್ಷರಂಗಳಲ್ಲಿ ಆನು ‘ಅ’ಕಾರ, ಸಮಾಸಂಗಳಲ್ಲಿ ದ್ವಂದ್ವಸಮಾಸ, ನಾಶರಹಿತನಾದ ಆನೇ ಕಾಲ°, ಸೃಷ್ಟಿಕರ್ತರಲ್ಲಿ ಆನು ಬ್ರಹ್ಮ° ಕೂಡ ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – “ಅಕ್ಷರಂಗಳಲ್ಲಿ ಸುರುವಾಣ ಅಕ್ಷರವಾದ ‘ಅ’ಕಾರ (‘ಅ’ ಎಂದು ಹೇಳುಸಿಗೊಂಡು ಅಕಾರ° ಎನ್ನುಸಿ ಅ-ಕಾರ ವಾಚ್ಯನಾಗಿದ್ದೆ) ಆನು. ಸಮಾಸಂಗಳ ಗುಂಪಿಲ್ಲಿ ದ್ವಂದ್ವ (ಎರಡು ರೂಪಂಗಳಿಂದ ಒಳವೂ ಹೆರವೂ ಇಪ್ಪದರಿಂದ ದ್ವಂದ್ವ° ಎನ್ನುಸಿ ದ್ವಂದ್ವ ಸಮಾಸಲ್ಲಿದ್ದೆ) ಸಮಾಸ ಆನು. ಶಾಶ್ವತನಾದ ಆನೇ ಕಾಲನಲ್ಲಿದ್ದುಗೊಂಡು ಲಯವ ಮಾಡುವದು. ವಿಶ್ವದ ಎಲ್ಲೆಡೆ ತುಂಬಿದ್ದು ಎಲ್ಲವನ್ನೂ ಪಾಲುಸುವವ° ಆನೇ.

ಹಿಂದೆ ಶಬ್ದಂಗಳಲ್ಲಿ ಓಂಕಾರವ ಹೇಳಿದ ಭಗವಂತ° ಇಲ್ಲಿ ಅಕ್ಷರಂಗಳಲ್ಲಿ ತನ್ನ ವಿಭೂತಿಯ ಹೇಳುತ್ತ°. “ಅಕ್ಷರಾಣಾಂ ಅಕಾರಃ ಅಸ್ಮಿ” – ‘ಅ’ ಪೂರ್ತಿಯಾಗಿ ಭಗವಂತನ ಎಲ್ಲ ಗುಣಂಗಳ ಹೇಳುವ ವಿಶಿಷ್ಟ ಅಕ್ಷರ. ಅ ಹೇಳಿರೆ ‘ಅಲ್ಲ’. ಭಗವಂತ° ‘ಅಲ್ಲ’. ಹೇಳಿರೆ, ನವಗೆ ಗೊಂತಿಪ್ಪ ಏವ ವಸ್ತುವೂ ಅವ° ಅಲ್ಲ. ಅವ ಈ ಪ್ರಪಚಂದ ವಿಲಕ್ಷಣ°. ಇಂತಹ ಭಗವಂತ° ‘ಅಲ್ಲ’, ಅವನಿಲ್ಲಿಪ್ಪದು ಏವ ದೋಷವೂ ‘ಅಲ್ಲ’. ಅವ° ಸರ್ವಗುಣಪೂರ್ಣ°. ಹೀಂಗೆ ಸರ್ವವಿಲಕ್ಷಣ°, ಸರ್ವದೋಷದೂರ°, ಸರ್ವಗುಣಪೂರ್ಣ° ಭಗವಂತ° ‘ಅಕಾರ’ವಾಚ್ಯನಾಗಿ ‘ಅ’ಕಾರಲ್ಲಿ ತುಂಬಿಗೊಂಡಿದ್ದ°. ಎಲ್ಲ ಭಾಷೆಯ ಮೊದಲ ಅಕ್ಷರ ‘ಅ’. ಎಲ್ಲವುದರ ಮೊದಲಿಗ° ಭಗವಂತ°. ಅಕ್ಷರಗುಂಪಿಲ್ಲಿಯೂ ಮದಲಾಣ ಅಕ್ಷರ ‘ಅ’ಕಾರವಾಗಿ ನೆಲೆಸಿದ್ದ°.

ಅಕ್ಷರಂದ ಮತ್ತೆ ಸಮಾಸದ ಬಗ್ಗೆ ಹೇಳುತ್ತ° – “ದ್ವಂದ್ವಃ ಸಾಮಾಸಿಕಸ್ಯ”. ನವಗೆ ಗೊಂತಿಪ್ಪಾಂಗೆ ಏವುದೇ ಸಮಾಸ ಆಯೇಕ್ಕಾರೆ ಅಲ್ಲಿ ಎರಡು ಶಬ್ದಂಗೊ ಇರೆಕು. ಅಥವಾ ಒಂದು ಶಬ್ದ ಮತ್ತೆ ಒಂದು ಪ್ರತ್ಯಯ ಇರೆಕು. ಇತರ ಎಲ್ಲ ಸಮಾಸಂಗಳಲ್ಲಿ ಒಂದು ಪದ, ಅಥವಾ ಎರಡೂ ಪದ (ಬಹುವ್ರೀಹಿ) ತನ್ನ ಪ್ರಾಧಾನ್ಯತೆಯ ಕಳಕ್ಕೊಂಬದು. ಆದರೆ ದ್ವಂದ್ವ ಸಮಾಸಲ್ಲಿ ಎರಡೂ ಪದಂಗೊ ಮುಖ್ಯ. ಉಭಯ ಪದ ಪ್ರಧಾನ ಸಮಾಸವಾದ ದ್ವಂದ್ವ ಸಮಾಸಲ್ಲಿ ಭಗವಂತ° – ‘ದ್ವಂದ್ವಃ’ ನಾಮಕನಾಗಿದ್ದ°. ಎರಡು ರೂಪಂದ ನಮ್ಮ ಒಳವೂ ಹೆರವೂ ತುಂಬಿಗೊಂಡಿಪ್ಪ ಭಗವಂತ° – ‘ದ್ವಂದ್ವಃ’.

ಮತ್ತೆ, “ಅಕ್ಷಯಃ ಕಾಲಃ ಧಾತಾ ಅಹಂ ವಿಶ್ವತೋಮುಖಃ”. ನಿತ್ಯ ಶಾಶ್ವತನಾದ, ಎಂದೂ ವಿಕಾರಗೊಳ್ಳದ, ಎಂದೂ ನಾಶ ವಿಲ್ಲದ್ದ ‘ಅಕ್ಷಯಃ’ ಭಗವಂತ° ಎಲ್ಲವನ್ನೂ ಸಂಹರ ಮಾಡುವ ಕಾಲಪುರುಷ° ಆಗಿದ್ದ°. ಅವ° ಎಲ್ಲವನ್ನೂ ಸೃಷ್ಟಿಮಾದುವ ‘ಧಾತಾ’ ಆಗಿದ್ದುಗೊಂಡು ಎಲ್ಲೆಡೆ ತುಂಬಿಗೊಂಡಿದ್ದು ‘ವಿಶ್ವತೋಮುಖಃ’ ಶಬ್ದವಾಚ್ಯನಾಗಿ ನೆಲೆಸಿದ್ದ°. ಅವ° ಇಲ್ಲದ್ದ ಜಾಗೆಯೇ ಇಲ್ಲೆ.

ಶ್ಲೋಕ

ಮೃತ್ಯುಃ ಸರ್ವಹರಶ್ಚಾಹಂ ಉದ್ಭವಶ್ಚ ಭವಿಷ್ಯತಾಂ ।
ಕೀರ್ತಿಃ ಶ್ರೀರ್ವಾಕ್ಚನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥೩೪॥

ಪದವಿಭಾಗ

ಮೃತ್ಯುಃ ಸರ್ವ-ಹರಃ ಚ ಅಹಂ ಉದ್ಭವಃ ಚ ಭವಿಷ್ಯತಾಂ । ಕೀರ್ತಿಃ ಶ್ರೀಃ ವಾಕ್ ಚ ನಾರೀಣಾಂ ಸ್ಮೃತಿಃ ಮೇಧಾ ಧೃತಿಃ ಕ್ಷಮಾ ॥

ಅನ್ವಯ

ಸರ್ವ-ಹರಃ ಮೃತ್ಯುಃ, ಭವಿಷ್ಯತಾಂ ಉದ್ಭವಃ ಚ ಅಹಂ ಅಸ್ಮಿ। ನಾರೀಣಾಂ ಚ ಕೀರ್ತಿಃ, ಶ್ರೀಃ, ವಾಕ್, ಸ್ಮೃತಿಃ, ಮೇಧಾ, ಧೃತಿಃ, ಕ್ಷಮಾ ಚ ಅಹಂ ಅಸ್ಮಿ ॥

ಪ್ರತಿಪದಾರ್ಥ

ಸರ್ವ-ಹರಃ – ಸರ್ವಭಕ್ಷಕನಾದ ಮೃತ್ಯುಃ – ಮೃತ್ಯುವು, ಭವಿಷ್ಯತಾಂ – ಭವಿಷ್ಯದ ಅಭಿವ್ಯಕ್ತಿಗಳಲ್ಲಿ, ಉದ್ಭವಃ – ಹುಟ್ಟು, ಚ – ಕೂಡ, ಅಹಂ ಅಸ್ಮಿ – ಆನು ಆಗಿದ್ದೆ. ನಾರೀಣಾಂ – ಸ್ತ್ರೀಯರ, ಚ – ಕೂಡ, ಕೀರ್ತಿಃ – ಕೀರ್ತಿ, ಶ್ರೀಃ – ಐಶ್ವರ್ಯ/ಸೌಂದರ್ಯ, ವಾಕ್ – ಮಾತು, ಸ್ಮೃತಿಃ – ನೆಂಪು, ಮೇಧಾ – ಬುದ್ಧಿಶಕ್ತಿ, ಧೃತಿ – ದೃಢತೆ, ಕ್ಷಮಾ – ತಾಳ್ಮೆ, ಚ – ಕೂಡ, ಅಹಂ ಅಸ್ಮಿ – ಆನು ಆಗಿದ್ದೆ.   

ಅನ್ವಯಾರ್ಥ

ಸರ್ವಭಕ್ಷಕನಾದ ಮೃತ್ಯುವು ಆನು. ಇನ್ನೂ ಹುಟ್ಳೆ ಇಪ್ಪ ಎಲ್ಲವುದರ ಉತ್ಪತ್ತಿ ತತ್ವ ಆನೇ. ಸ್ತ್ರೀಯರಲ್ಲಿ ಕೀರ್ತಿ, ಸೌಂದರ್ಯ, ಮಾತು, ಸ್ಮೃತಿ, ಮೇಧಾಶಕ್ತಿ, ದೃಢತೆ ಮತ್ತೆ ತಾಳ್ಮೆ ಕೂಡ ಆನು ಆಗಿದ್ದೆ.

ತಾತ್ಪರ್ಯ / ವಿವರಣೆ

ಭಗವಂತ° ಹೇಳುತ್ತ° – ಎಲ್ಲವನ್ನೂ ಕಬಳುಸುವ ಮೃತ್ಯುದೇವತೆ (ಸಾಯಿಸುವವನಾದ್ದರಿಂದ ‘ಮೃತ್ಯು’ನಾಮಕನಾಗಿ, ಯಮನ ಪರಿವಾರ ದೇವತೆಯಾದ ಮೃತ್ಯುವಿಲ್ಲಿದ್ದುಗೊಂಡು ಅವಂಗೆ ಎಲ್ಲವನ್ನೂ ಕಬಳುಸುವ ಶಕ್ತಿಯ ಕೊಟ್ಟವ°) ಆನು. ಮುಂದೆ ಅಪ್ಪವರ ಹುಟ್ಟುಸುವವನೂ ಆನು. ಸ್ತ್ರೀಯರಲ್ಲಿ ಕೀರ್ತಿಯ ದೇವತೆ ಆನು, ಶ್ರೀ ದೇವಿ ಆನು, ವಾಗ್ದೇವಿ ಆನು. ಸ್ಮರಣಶಕ್ತಿಯ ದೇವತೆ ಆನು, ಧಾರಣಶಕ್ತಿಯ ದೇವತೆ ಆನು, ಸಹನೆಯ ದೇವತೆ ಆನು, ಕ್ಷಮಾ ದೇವಿ ಆನು (ಕೀರ್ತನೀಯವಗಿ ‘ಕೀರ್ತಿ’, ಆಶ್ರಯನಾಗಿ ‘ಶ್ರೀ’, ವಕ್ತಾರನಾಗಿ ‘ವಾಕ್’, ಸ್ಮರಣೀಯನಾಗಿ ‘ಸ್ಮೃತಿ’, ಅರಿವಿನ ಮೂರ್ತಿಯಾಗಿ ‘ಧೃತಿ’, ತಪ್ಪುಗಳ ಕ್ಷಮಿಸುವಗುಣವಾಗಿ ‘ಕ್ಷಮಾ’ ಗುಣವಾಗಿ ದೇವಿರೂಪಲ್ಲಿ ಹೆಮ್ಮಕ್ಕಳಲ್ಲಿ ) ಆನಿದ್ದೆ.

ಭಗವಂತ° ಪ್ರಳಯಕಾಲಲ್ಲಿ ಎಲ್ಲವನ್ನೂ ಕಬಳುಸುವ ಮೃತ್ಯುದೇವತೆ. ಪ್ರಳಯಂದ ಮತ್ತೆ ಸೃಷ್ಟಿಯ ಪುನಃ ನಿರ್ಮಾಣ ಮಾಡುವವನೂ ಅವನೇ. ಮತ್ತೆ ಸ್ತ್ರೀರೂಪಲ್ಲಿ ಇಪ್ಪ ತನ್ನ ವಿಭೂತಿಯ ಹೇಳುತ್ತ°. ಭಗವಂತ ಮುಖ್ಯವಾಗಿ ಇಲ್ಲಿ ಲಕ್ಷ್ಮೀ, ಸರಸ್ವತೀ, ಭಾರತೀ ಲಿ ತನ್ನ ವಿಭೂತಿಯ ಹೆಸರಿಸಿದ್ದ. ಕೀರ್ತಿ, ಅದೃಷ್ಟ, ಸುಂದರ ಮಾತು, ಸ್ಮರಣಶಕ್ತಿ, ಬುದ್ಧಿಶಕ್ತಿ, ದೃಢತೆ, ತಾಳ್ಮೆ – ಇವುಗಳ ಅಭಿಮಾನಿ ದೇವತೆಗೊ ಮುಖ್ಯವಾಗಿ ಲಕ್ಶ್ಮೀ-ಸರಸ್ವತೀ-ಭಾರತೀ. ಇವರಲ್ಲಿ ಕೀರ್ತಿಲಕ್ಷ್ಮೀರೂಪವಾಗಿ, ಸೌಂದರ್ಯರೂಪವಾಗಿ (ಶ್ರೀಃ), ಉತ್ತಮ ವಾಕ್/ಮಾತಿನ ರೂಪಲ್ಲಿ .ಸ್ಮರಣಶಕ್ತಿರೂಪಲ್ಲಿ, ಬುದ್ಧಿಶಕ್ತಿರೂಪಲ್ಲಿ (ಸರಸ್ವತೀ), ದೃಢಗುಣಲ್ಲಿ ಹಾಂಗೂ ಕ್ಷಮಾಗುಣವಾಗಿ (ಭಾರತೀ)  ಶ್ರೀಲಕ್ಮೀ-ಸರಸ್ವತೀ-ಭಾರತೀ ದೇವಿಯರಲ್ಲಿ ಭಗವಂತನ ಸ್ತ್ರೀ ರೂಪ ವಿಭೂತಿಯಾಗಿ ಅಡಗಿದ್ದು. 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

 ..ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 10 – SHLOKAS 27 – 34

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

4 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 10 – ಶ್ಲೋಕಂಗೊ 27 – 34

  1. ಚೆನ್ನೈ ಭಾವ, ನಿಂಗಳ ವಿವರಣೆ ತುಂಬಾ ಲಾಯಕಾಗಿ ಬತ್ತಾ ಇದ್ದು. ನಿಂಗೊಗೆ ಧನ್ಯವಾದಂಗ.

  2. ಸಂಗ್ರಹಯೋಗ್ಯ ಕೃತಿಯಾಗಿ ಮೂಡಿ ಬತ್ತಾ ಇದ್ದು.
    ಧನ್ಯವಾದಂಗೊ

  3. ಅಮೂಲ್ಯ ಭಗವದ್ಗೀತೆಯ ಸಾರ ನಮ್ಮ ಭಾಷೆಲಿ ಓದಲೆ ಕೊಶೀ ಆವುತ್ತು.
    ವಾರಂದ ವಾರಕ್ಕೆ ವಿವರಣೆ ಮಾಂತ್ರ ಅದ್ಭುತ ಆವುತ್ತಾ ಇದ್ದು ಹೇಳ್ತದು ಹೆಮ್ಮೆಯ ವಿಶಯ.

    { ಆಯುಧಾನಾಮಹಂ ವಜ್ರಂ }
    ಪ್ರತಿಯೊಬ್ಬನೂ ಹೀಂಗೇ ಚಿಂತನೆ ಮಾಡೇಕು. ಅಲ್ದೋ?
    ಇದು ಇಂದ್ರಾಣ ಅಗತ್ಯವೂ ಅಪ್ಪು. ಅಲ್ಲದೋ?

    ಶ್ರದ್ಧೆಯ ಬರಹಕ್ಕೆ ಒಪ್ಪಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×