Oppanna.com

ಶ್ರೀಮದ್ಭಗವದ್ಗೀತಾ – ಚತುರ್ಥೋsಧ್ಯಾಯಃ – ಜ್ಞಾನಯೋಗಃ – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   31/05/2012    4 ಒಪ್ಪಂಗೊ

ಚೆನ್ನೈ ಬಾವ°

ಶ್ರೀಕೃಷ್ಣಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ
ಅಥ ಚತುರ್ಥೋsಧ್ಯಾಯಃ       –      ಜ್ಞಾನಯೋಗಃ

ಶ್ಲೋಕ

ಶ್ರೀ ಭಗವಾನುವಾಚ –
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ ।
ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇsಬ್ರವೀತ್ ॥೦೧॥

ಪದವಿಭಾಗ

ಶ್ರೀ ಭಗವಾನ್ ಉವಾಚ –
ಇಮಮ್ ವಿವಸ್ವತೇ ಯೋಗಮ್ ಪ್ರೋಕ್ತವಾನ್ ಅಹಮ್ ಅವ್ಯಯಂ । ವಿವಸ್ವಾನ್ ಮನವೇ ಪ್ರಾಹ ಮನುಃ ಇಕ್ಷ್ವಾಕವೇ ಅಬ್ರವೀತ್ ॥

ಅನ್ವಯ

ಶ್ರೀ ಭಗವಾನ್ ಉವಾಚ – ಅಹಮ್ ಇಮಮ್ ಅವ್ಯಯಂ ಯೋಗಂ ವಿವಸ್ವತೇ ಪ್ರೋಕ್ತವಾನ್ । ವಿವಸ್ವಾನ್ ಮನವೇ ಪ್ರಾಹ । ಮನುಃ ಇಕ್ಷ್ವಾಕವೇ ಅಬ್ರವೀತ್  ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಅಹಮ್ – ಆನು, ಇಮಮ್  ಅವ್ಯಯಮ್  – ಈ ಅವಿನಾಶಿಯಾದ, ಯೋಗಮ್ – ಪರಮೋನ್ನತದೊಂದಿಂಗೆ ವ್ಯಕ್ತಿಯ ಸಂಬಂಧದ ವಿಜ್ಞಾನವ, ವಿವಸ್ವತೇ – ಸೂರ್ಯದೇವಂಗೆ,  ಪ್ರೋಕ್ತವಾನ್ – ಹೇಳಿದೆ ( ಉಪದೇಶಿಸಿದೆ), ವಿವಸ್ವಾನ್ – ವಿವಸ್ವಾನ° (ಸೂರ್ಯ), ಮನವೇ – ಮಾನವ ಕುಲದ ಪಿತಂಗೆ (ವೈವಸ್ವತಂಗೆ), ಪ್ರಾಹ – ಹೇಳಿದ, ಮನುಃ – ಮಾನವ ಕುಲದ ಪಿತ ಮನುವು, ಇಕ್ಷ್ವಾಕವೇ – ಸೂರ್ಯವಂಶದ ಇಕ್ಷ್ವಾಕು ರಾಜಂಗೆ, ಅಬ್ರವೀತ್ – ಹೇಳಿದ°.    

ಅನ್ವಯಾರ್ಥ

ದೇವದೇವೋತ್ತಮನಾದ ಪರಮ ಪುರುಷನಾದ ಶ್ರೀಕೃಷ್ಣ° ಹೇಳಿದ° – ಅವಿನಾಶಿಯಾದ (ನಾಶವಿಲ್ಲದ) ಈ ಯೋಗವಿಜ್ಞಾನವ ಆನು ಮದಲಿಂಗೆ ವಿವಸ್ವಾನ್ ಹೇಳಿರೆ ಸೂರ್ಯಂಗೆ ಹೇಳಿದೆ. ವಿವಸ್ವಾನ್ ಅದರ ಮಾನವ ಕುಲದ ಪಿತನಾದ ಮನುವಿಂಗೆ ಹೇಳಿದ. ಮನುವು ಮತ್ತೆ ಸೂರ್ಯವಂಶದವನಾದ ಇಕ್ಷ್ವಾಕುವಿಂಗೆ ಹೇಳಿದ°.

ತಾತ್ಪರ್ಯ / ವಿವರಣೆ

ಸೂರ್ಯಗ್ರಹಂದ ಸುರುವಾಗಿ ಎಲ್ಲ ಗ್ರಹಂಗಳ ರಾಜವರ್ಗಕ್ಕೆ ಭಗವದ್ಗೀತೆಯ ಉಪದೇಶಿಸಲಾಯ್ದು ಹೇಳ್ವ ಚರಿತ್ರೆಯ ನಾವಿಲ್ಲಿ ಗುರುತುಸಲಕ್ಕು. ಎಲ್ಲ ಗ್ರಹಂಗಳ ರಾಜರುಗೊ ಇಪ್ಪದು ನಿವಾಸಿಗಳ ರಕ್ಷಣೆಗಾಗಿ. ರಾಜವರ್ಗದವು ಪ್ರಜೆಗಳ ಆಳಿ ಅವರ ಕಾಮದ ಐಹಿಕ ಬಂಧನಂದ ರಕ್ಷಿಸೆಕ್ಕಾರೆ ಅವಕ್ಕೆ ಭಗವದ್ಗೀತೆ ತಿಳಿದಿರೆಕು. ಮಾನವ ಜೀವನದ ಗುರಿ ದೇವೋತ್ತಮ ಪರಮ ಪುರುಷನನೊಟ್ಟಿಂಗೆ ನಿರಂತರ ಸಂಬಂಧಲ್ಲಿ ಆಧ್ಯಾತ್ಮಿಕ ಜ್ಞಾನವ ಬೆಳೆಸಿಕೊಂಬದು. ಈ ಪಾಠವ ಶಿಕ್ಷಣ, ಸಂಸ್ಕೃತಿ ಮತ್ತು ಭಕ್ತಿಗಳ ಮೂಲಕ ಎಲ್ಲ ರಾಜ್ಯಂಗಳ ಮತ್ತು ಎಲ್ಲ ಗ್ರಹಂಗಳ ಅಧಿಪತಿಗಳ ಕರ್ತವ್ಯ.  ಇನ್ನೊಂದು ರೀತಿಲಿ ಹೇಳ್ತರೆ, ಮಾನವ ಜನ್ಮದ ಈ ಅವಕಾಶವ ಉಪಯೋಗಿಸಿಗೊಂಡು ಜನಂಗೊ ಈ ಶ್ರೇಷ್ಠ ಶಾಸ್ತ್ರದ ಸದುಪಯೋಗ ಮಾಡಿಕೊಂಡು ಯಶಸ್ವಿಯಾದ ಮಾರ್ಗಲ್ಲಿ ಮುಂದುವರಿಯೆಕು. ಇದಕ್ಕಾಗಿ ಕೃಷ್ಣಪ್ರಜ್ಞೆಯ ಶಾಸ್ತ್ರವ ಹರಡುವದು ಎಲ್ಲ ರಾಜ್ಯಂಗಳ ಅಧಿಪತಿಗಳ ಕರ್ತವ್ಯ.

ಸೌರವ್ಯೂಹದ ಎಲ್ಲ ಗ್ರಹಂಗೊಕ್ಕೆ ಮೂಲ ಸೂರ್ಯಲೋಕ. ಇದರ ರಾಜನಾದ ಸೂರ್ಯದೇವಂಗೆ ಈ ಕಲ್ಪಲ್ಲಿ ‘ವಿವಸ್ವಾನ್’ ಹೇಳಿ ಹೆಸರು. ಬ್ರಹ್ಮಸಂಹಿತೆಲಿ ಹೇಳಿಪ್ಪಂತೆ – ಬ್ರಹ್ಮ ಹೇಳಿದ್ದು – “ದೇವೋತ್ತಮ ಪರಮ ಪುರುಷನಾದ ಭಗವಂತ°ನ  ಆನು ಪೂಜಿಸುತ್ತೆ. ಅವ° ಆದಿಪುರುಷ. ಎಲ್ಲಾ ಗ್ರಹಂಗಳ ರಾಜನಾದ ಸೂರ್ಯ° ಅವನ ಆಜ್ಞೆಯಂತೆ ಅಗಾಧ ಶಕ್ತಿಯನ್ನೂ ಶಾಖವನ್ನೂ ಪಡಕ್ಕೊಂಡಿದ. ಸೂರ್ಯ° ಭಗವಂತನ ಕಣ್ಣಿನ ಪ್ರತಿನಿಧಿ. ಭಗವಂತನ ಆದೇಶಾನುಸಾರವಾಗಿ ಸೂರ್ಯ° ತನ್ನ ಪಥಲ್ಲಿ ಸಂಚರಿಸುತ್ತ°. ವಿವಸ್ವಾನ್ ಎಂಬ ಹೆಸರಿನ ಸೂರ್ಯ°, ಸೂರ್ಯಗ್ರಹವ ಆಳುತ್ತ. ಶಾಖ ಮತ್ತು ಬೆಳಕು ನೀಡಿ ಸೂರ್ಯಗ್ರಹ ಎಲ್ಲ ಗ್ರಹಂಗಳ ನಿಯಂತ್ರುಸುತ್ತ. ಕೃಷ್ಣನ (ಭಗವಂತನ) ಅಪ್ಪಣೆಯಂತೆ ಸೂರ್ಯ° ಪರಿಭ್ರಮಿಸುತ್ತ°. ಆದಿಲಿ, ಭಗವಂತ°, ವಿವಸ್ವಾನ್ ಭಗವದ್ಗೀತಾಶಾಸ್ತ್ರವ ತಿಳಿಕ್ಕೊಂಬ ಮೊದಲ ಶಿಷ್ಯನಾಗಿ ಮಾಡಿಕೊಂಡ. ಆದ್ದರಿಂದ ಭಗವದ್ಗೀತೆ ಹೇಳ್ವದು ಇಹಲೋಕದ ಕ್ಷುದ್ರ ಪಂಡಿತಂಗೊಕ್ಕೆ ರಚಿತವಾದ ಊಹಾತ್ಮಕ ಗ್ರಂಥ ಅಲ್ಲ ಹೇಳುವದು ಮಾತು. ಅನಾದಿ ಕಾಲಂದ ಹರುದು ಬಂದ ಜ್ಞಾನ ಪ್ರಮಾಣಗ್ರಂಥ. ಇಲ್ಲಿ ಭಗವಂತ ಹೇಳಿದಾಂಗೆ, ಪರಮ ಪ್ರಭು ಭಗವಂತಂಗೆ ಸಂಬಂಧಿಸಿಪ್ಪ ಈ ಶಾಸ್ತ್ರವ ವಿವಸ್ವಾನ್ ಮತ್ತೆ ಮನುವಿಂಗೆ ತ್ರೇತಾಯುಗದ ಪ್ರಾರಂಭಲ್ಲಿ ಉಪದೇಶಿಸಿದ. ಮಾನವ ಕುಲದ ಅಪ್ಪ° ಮನು ಅದರ ತನ್ನ ಮಗ ಇಕ್ವಾಕು ಮಹಾರಾಜಂಗೆ ತಿಳಿಸಿದ°. ಇಕ್ಷ್ವಾಕು ಭೂಗ್ರಹದ ರಾಜ ಮತ್ತು ರಘುವಂಶದ ಮೂಲಪುರುಷ. ಶ್ರೀ ರಾಮಚಂದ್ರಮ ಈ ರಘುವಂಶಲ್ಲಿ ಜನಿಸಿದ°. ಆದ್ದರಿಂದ ಭಗವದ್ಗೀತೆಯು ಇಕ್ಷ್ವಾಕು ಮಹಾರಜನ ಕಾಲಂದ ಮಾನವ ಕುಲಲ್ಲಿ ಉಳುದು ಬಯಿಂದು. 

ಕಲಿಯುಗದ ಅವಧಿ 4,32000 ವರ್ಷಂಗೊ. ಇದರ್ಲಿ ಈಗ 5000 ವರ್ಷಂಗೊ ಕಳುದತ್ತು. ಇದಕ್ಕೆ ಹಿಂದಾಣದ್ದು ದ್ವಾಪರಯುಗ (8,00,000 ವರ್ಷಂಗೊ), ಅದಕ್ಕೆ ಮದಲು ತ್ರೇತಾಯುಗ (12,00,000 ವರ್ಷಂಗೊ). ಹೀಂಗೆ ಸುಮಾರು 20,05,000 ವರ್ಷಂಗಳ ಹಿಂದೆ ಮನುವು ಭಗವದ್ಗೀತೆಯ ತನ್ನ ಮಗನೂ ಶಿಷ್ಯನೂ ಭೂಲೋಕದ ಅರಸನೂ ಆದ ಇಕ್ಷ್ವಾಕು ಮಹರಾಜಂಗೆ ಉಪದೇಶಿಸಿದ. ಈಗಾಣ ಮನುವಿನ ಯುಗವು ಸುಮಾರು 30,53,00,000 ವರ್ಷಂಗೊ ಹೇದು ಲೆಕ್ಕ. ಇದರಲ್ಲಿ 12,04,00,000 ವರ್ಷಂಗೊ ಮುಗುತ್ತು. ಮನುವು ಹುಟ್ಟುವ ಮದಲು ಭಗವಂತ ತನ್ನ ಶಿಷ್ಯ ಸೂರ್ಯದೇವನೂ ಆದ ವಿವಸ್ವಾನಂಗೆ ಉಪದೇಶಿಸಿದ ಹೇಳಿ ಲೆಕ್ಕ ಹಾಕಿರೆ ಸುಮಾರು ಅಂದಾಜಿಲ್ಲಿ ಗೀತೆಯು ಕಮ್ಮಿಲಿ 12,04,00,000 ವರ್ಷಂಗಳ ಹಿಂದೆಯೇ ಉಪದೇಶಿಸಿರೆಕು. ಮಾನವ ಕುಲಲ್ಲಿ ಅದು ಇಪ್ಪತ್ತು ಲಕ್ಷ ವರ್ಷಂಗಳಷ್ಟು ಉಳುದು ಬಯಿಂದು. ಇಲ್ಲೀಗ ಸುಮಾರು ಐದುಸಾವಿರ ವರ್ಷಂಗಳ ಕೆಳ ಭಗವಂತ° ಮತ್ತೆ ಅರ್ಜುನಂಗೆ ಉಪದೇಶ ಮಾಡಿದ°. ಗೀತೆಯೇ ಹೇಳುವ ಪ್ರಕಾರ ಮತ್ತು ಉಪದೇಶ ಮಾಡುವ ಶ್ರೀ ಕೃಷ್ಣನ ಪ್ರಕಾರ ಇದು ಭಗವದ್ಗೀತೆಯ ಚರಿತ್ರೆ.

ಶ್ಲೋಕ

ಏವಂ ಪರಂಪರಾಪ್ರಾಪ್ತಮ್ ಇಮಂ ರಾಜರ್ಷಯೋ ವಿದುಃ ।
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ ॥೦೨॥

ಪದವಿಭಾಗ

ಏವಮ್ ಪರಂಪರಾ-ಪ್ರಾಪ್ತಮ್ ಇಮಮ್ ರಾಜ ಋಷಯಃ ವಿದುಃ । ಸಃ ಕಾಲೇನ ಇಹ ಮಹತಾ ಯೋಗಃ ನಷ್ಟಃ ಪರಂತಪ ॥

ಅನ್ವಯ

ಹೇ ಪರಂತಪ!, ಏವಂ ಪರಂಪರಾ-ಪ್ರಾಪ್ತಮ್ ಇಮಂ ಯೋಗಂ ರಾಜರ್ಷಯಃ ವಿದುಃ । ಸಃ ಯೋಗಃ ಮಹತಾ ಕಾಲೇನ ಇಹ ನಷ್ಟಃ ।

ಪ್ರತಿಪದಾರ್ಥ

ಹೇ ಪರಂತಪ! – ಏ ಶತ್ರುದಮನನೇ! (ಅರ್ಜುನನೇ!), ಏವಂ – ಹೀಂಗೆ , ಪರಂಪರಾ-ಪ್ರಾಪ್ತಮ್  – ಗುರುಶಿಷ್ಯ ಪರಂಪರೆಂದ ಪ್ರಾಪ್ತವಾದ, ಇಮಮ್ ಯೋಗಮ್ – ಈ  ಭಗವಂತನಲ್ಲಿ ವ್ಯಕ್ತಿಯ ಸಂಬಂಧವಾದ ವಿಜ್ಞಾನವ, ರಾಜ-ಋಷಯಃ – ರಾಜರ್ಷಿಗೊ, ವಿದುಃ – ತಿಳುಕ್ಕೊಂಡವು. ಸಃ ಯೋಗಃ – ಆ ಭಗವಂತನಲ್ಲಿ ವ್ಯಕ್ತಿಯ ಸಂಬಂಧ ವಿಜ್ಞಾನವು , ಮಹತಾ ಕಾಲೇನ – ಮಹತ್ತರವಾದ ಕಾಲಕ್ರಮಲ್ಲಿ, ಇಹ – ಈ ಪ್ರಪಂಚಲ್ಲಿ, ನಷ್ಟಃ – ನಷ್ಟವಾತು.

ಅನ್ವಯಾರ್ಥ

ಈ ಉತ್ತಮೋತ್ತಮವಾದ ವಿಜ್ಞಾನವು ಗುರುಶಿಷ್ಯಪರಂಪರೆಲಿ ಬಂತು. ರಾಜರ್ಷಿಗೊ ಅದರ ಹಾಂಗೆಯೇ ತಿಳ್ಕೊಂಡವು. ಆದರೆ, ಕಾಲಕ್ರಮಲ್ಲಿ ಈ ಪರಂಪರೆ ಬದಲಾತು. ಹಾಂಗಾಗಿ ಈ  ಭಕ್ತಿ ವಿಜ್ಞಾನ ನಷ್ಟವಾತು.

ತಾತ್ಪರ್ಯ / ವಿವರಣೆ

ಹಾಂಗಾರೆ, ಜ್ಞಾನವ ಗುರು ಮುಖೇನವೇ ಪಡಕ್ಕೊಳ್ಳೆಕು ಹೇಳುದು ಸ್ಪಷ್ಟ ಆತು. ಹಾಂಗಾಗಿಯೇ ಗುರುವ ಜ್ಞಾನದ ಕಣ್ಣು ತೆರವವ°, ಅಜ್ಞಾನ ಅಂಧಕಾರವ ನೀಗಿ ಜ್ಞಾನ ಹೇಳ್ವ ಪ್ರಕಾಶ ಕೊಡುವವ° ಹೇದು ಹೇಳುವದು.

ಸೂರ್ಯದೇವನಾದ ವಿವಸ್ವಾನ್ ಒಬ್ಬ° ಕ್ಷತ್ರಿಯ°, ಅವ° ಸೂರ್ಯವಂಶ ಕ್ಷತ್ರಿಯರೆಲ್ಲೋರ ಹಿರಿಯವ° (ಅಪ್ಪ°), ಆದ್ದರಿಂದಲೇ ಅವನ ಕಾಲಲ್ಲಿಯೇ ಅವಂಗೇ (ವಿವಸ್ವಾನಂಗೆ) ಭಗವಂತನಿಂದ ಗೀತೆಯ ಉಪದೇಶ ಮಾಡಲ್ಪಟ್ಟತ್ತು. ಅದು ವೇದಂಗೊಕ್ಕೆ ಸಮಾನ ವಾ ಶ್ರೇಷ್ಥವೂ ಕೂಡ. ಆದ್ದರಿಂದ ಈ ಜ್ಞಾನವು ಅಪೌರುಷೇಯ. ರಾಜರ್ಷಿಗೊ ಪ್ರಜೆಗಳ ಆಳುವಾಗ ಗೀತೆಯ ಉದ್ದೇಶವ ಕಾರ್ಯಗತ ಮಾಡೆಕು ಎಂಬ ತಳಹದಿಲಿಯೇ ಎಂಬುದು ಸ್ಪಷ್ಟ. ಅಸುರರಿಂಗೆ ಇದು ಎಂದೂ ಉದ್ದೇಶಿತವಾಗಿಲ್ಲೆ. ಎಂತಕೆ ಹೇಳಿರೆ ಅವ್ವು ಅದರ ಯಾರಿಂಗೂ ಪ್ರಯೋಜನ ಆಗದ್ದ ಹಾಂಗೆ ಹಾಳು ಮಾಡಿ ಹಾಕುತ್ತಿದ್ದವು ಮತ್ತು ಮನಸೋ ಇಚ್ಛೆಯಾಗಿ ಎಲ್ಲಾ ಬಗೆಯ ವಿಕೃತ ವ್ಯಾಖ್ಯಾನಂಗಳ ಸೃಷ್ತಿಮಾಡಿಬಿಡುತ್ತಿದ್ದವು. ಆದ್ದರಿಂದ ಭಗವದ್ಗೀತೆ ಹೇಳ್ವದು ರಾಕ್ಷಸೀ ಪ್ರವೃತ್ತಿಯೋರಿಂಗೆ ಅಲ್ಲ ಹೇಳ್ವದು ತಾತ್ಪರ್ಯ. ನೀತಿನಿಷ್ಠೆಗೊ ಇಲ್ಲದ್ದ ವ್ಯಾಖ್ಯಾನಕಾರರ ಕೈಗೆ ಗೀತೆ ಸಿಕ್ಕಿರೆ ಗೀತೆಯ ಮೂಲ ಉದ್ದೇಶವೇ ಹಾಳಕ್ಕು ಹೇಳ್ವದು ಭಾವ. ನಷ್ಟವಾಗತೊಡಗಿದ ಗುರುಶಿಷ್ಯ ಪರಂಪರೆಯ ಮತ್ತೆ ಸ್ಥಾಪಿಸುವ ಅಗತ್ಯವೂ ಭಗವದ್ಗೀತೆಲಿ ಇದ್ದು ಹೇಳ್ವದು ಅಂದಾಜು ಮಾಡ್ಳಕ್ಕು. ಗುರುಪರಂಪರೆಯು ನಷ್ಟವಾಯ್ದು ಹೇಳಿ ಸುಮಾರು ಐದು ಸಾವಿರ ವರ್ಷಂಗಳ ಮದಲೇ ಶ್ರೀಕೃಷ್ಣ ಕಂಡುಗೊಂಡಿದ ಹೇಳ್ವದು ಈ ಶ್ಲೋಕಂದ ಗೊಂತಾವ್ತು. ನೀತಿನಿಷ್ಠೆ ರಹಿತರ ಕೈಗೆ ಸಿಕ್ಕಿ ಮನಸೋಚಿತ ವ್ಯಾಖ್ಯಾನಕ್ಕೆ ಬಲಿಯಾಗಿ ಸಿಕ್ಕ ಸಿಕ್ಕವು ವ್ಯಾಖ್ಯಾನವ ಬರದ್ದವು ಹೇಳ್ವದು ಭಾವ. ಈಗಾಣ ಕಾಲಲ್ಲಿಯೂ ಭಗವದ್ಗೀತೆಯ ಅನೇಕಾನೇಕರು ವ್ಯಾಖ್ಯಾನಿಸಿದ್ದವ, ಪ್ರಕಟಿಸಿದ್ದವು. ಆದರೆ, ಬಹುತೇಕ ಅವುಗೊ ಗುರುಶಿಷ್ಯಪರಂಪರೆಂದ ಮೂಡಿ ಬಂದದ್ದಲ್ಲವಾದ್ದರಿಂದ ಅಸಂಗತ ವ್ಯಾಖ್ಯೆಗಳೇ ಇಪ್ಪದು ಬಹುತೇಕ. ಕೆಲವೊಂದರಲ್ಲಿ ಶ್ರೀಕೃಷ್ಣ ಭಗವಂತ ಹೇಳ್ವದರ ಒಪ್ಪಿಗೊಂಡಾಂಗೆ ಇಲ್ಲೆ. ಇದು ರಾಕ್ಷಸೀ ಮನೋಧರ್ಮ. ಎಂತಕೆ ಹೇಳಿರೆ ರಾಕ್ಷಸರಿಂಗೆ ದೇವರಲ್ಲಿ ನಂಬಿಕೆ ಇಲ್ಲೆ. ಅದರೆ ಅವನ ಸೊತ್ತಿನ ಅನುಭೋಗಿಸುತ್ತವು. ಊಹಾಪೋಹ ಚಿತ್ರಿತ ವಿಷಯಂಗಳ ಸ್ವೀಕರುಸಲಾಗ , ಗುರುಶಿಷ್ಯ ಪರಂಪರೆಲಿಯೇ ಜ್ಞಾನ ಪಡಕ್ಕೊಳ್ಳೆಕು ಹೇಳಿ ಭಗವಂತನ ತಾತ್ಪರ್ಯ ಇಲ್ಲಿ.

ಶ್ಲೋಕ

ಸ ಏವಾಯಂ ಮಯಾ ತೇsದ್ಯ ಯೋಗಃ ಪ್ರೋಕ್ತಃ ಪುರಾತನಃ ।
ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ ॥೦೩॥

ಪದವಿಭಾಗ

ಸಃ ಏವ ಅಯಮ್ ಮಯಾ ತೇ ಅದ್ಯ ಯೋಗಃ ಪ್ರೋಕ್ತಃ ಪುರಾತನಃ । ಭಕ್ತಃ ಅಸಿ ಮೇ ಸಖಾ ಚ ಇತಿ ರಹಸ್ಯಮ್  ಹಿ ಏತತ್ ಉತ್ತಮಮ್ ॥

ಅನ್ವಯ

ಸಃ ಏವ ಅಯಂ ಪುರಾತನಃ ಯೋಗಃ ಮಯಾ ಅದ್ಯ ತೇ ಪ್ರೋಕ್ತಃ । ತ್ವಂ ಮೇ ಭಕ್ತಃ ಸಖಾ ಚ ಅಸಿ ಇತಿ ಹಿ ಏತತ್ ಉತ್ತಮಂ ರಹಸ್ಯಮ್ ।

ಪ್ರತಿಪದಾರ್ಥ

ಸಃ – ಅದೇ , ಏವ – ಖಂಡಿತವಾಗಿಯೂ, ಅಯಮ್ – ಇದು, ಪುರಾತನಃ – ಬಹುಪ್ರಾಚೀನವಾದ, ಯೋಗಃ – ಯೋಗವಿಜ್ಞಾನವು, ಮಯಾ – ಎನ್ನಿಂದ , ಅದ್ಯ – ಇಂದು , ತೇ – ನಿನಗೆ,  ಪ್ರೋಕ್ತಃ – ಹೇಳಲ್ಪಟ್ಟತ್ತು. ತ್ವಮ್ – ನೀನು, ಮೇ – ಎನ್ನ , ಭಕ್ತಃ – ಭಕ್ತ°,  ಸಖಾ – ಸ್ನೇಹಿತ°, ಚ – ಕೂಡ, ಅಸಿ – ಆಗಿದ್ದೆ,  ಇತಿ – ಹೇದು, ಹಿ – ಖಂಡಿತವಾಗಿಯೂ, ಏತತ್  ಉತ್ತಮಮ್  – ಈ ದಿವ್ಯವಾದ, ರಹಸ್ಯಮ್ – ರಹಸ್ಯ.

ಅನ್ವಯಾರ್ಥ

ಪರಮಪುರುಷ° ಭಗವಂತನನೊಡನೆ ಸಂಬಂಧ ಇಪ್ಪ ಈ ಬಹುಪ್ರಾಚೀನ ವಿಜ್ಞಾನ ಶಾಸ್ತ್ರವ ಇಂದು ಆನು ನಿನಗೆ ಹೇಳುತ್ತಾ ಇದ್ದೆ. ನೀನು ಎನ್ನ ಭಕ್ತ° (ಶಿಷ್ಯ) ಮತ್ತು  ಸ್ನೇಹಿತ ಕೂಡ ಆಗಿದ್ದೆ. ಆದ್ದರಿಂದ ಈ ಶಾಸ್ತ್ರದ ಅಲೌಕಿಕ ರಹಸ್ಯವ ನೀನು ಅರ್ಥಮಾಡಿಗೊಂಬೆ.

ತಾತ್ಪರ್ಯ / ವಿವರಣೆ

ಮನುಶ್ಯರಲ್ಲಿ ಎರಡು ವರ್ಗಂಗೊ – ಭಕ್ತರು ಮತ್ತು ರಾಕ್ಷಸರು (ರಾಕ್ಷಸೀ ಸ್ವಭಾವದವು). ಈ ಶ್ರೇಷ್ಠ ಶಾಸ್ತ್ರವ ತಿಳ್ಕೊಂಬಲೆ ಭಗವಂತ° ಅರ್ಜುನನ ಆರಿಸಿಗೊಂಡ. ಎಂತಕೆ ಹೇಳಿರೆ ಅರ್ಜುನ ಭಗವಂತನ ಪರಮ ಭಕ್ತ ಮತ್ತು ಗೆಳೆಯ° ಮತ್ತು ನೆಂಟನೂ. ಸಾಮಾನ್ಯನೋನಿಂಗೆ, ರಾಕ್ಷಸರಿಂಗೆ (ರಾಕ್ಷಸ ಪ್ರವೃತ್ತಿ ಮನಸ್ಸಿನವಕ್ಕೆ)  ರಹಸ್ಯವಾದ ಈ ಶಾಸ್ತ್ರವ ಗ್ರಹಿಸಿಗೊಂಬಲೆ ಸಾಧ್ಯ ಇಲ್ಲೆ. ಭಕ್ತ್ರರ ಗ್ರಹಣ ಶಕ್ತಿ ಯೋಗ್ಯವಾದ್ದು. ರಾಕ್ಷಸರ ಚಿಂತನೆ ಕೆಲಸಕ್ಕೆ ಬಾರದ್ದು. ಅರ್ಜುನ° ಶ್ರೀಕೃಷ್ಣನ ದೇವೋತ್ತಮ ಪರಮ ಪುರುಷ° ಹೇಳಿ ನಂಬಿಗೊಂಡಿದ್ದ. ಅರ್ಜುನನ ಹೆಜ್ಜೆ ಭಕ್ತಿಪೂರ್ವಕ ಸೇವೆ ಹೇಳಿ ಕೃಷ್ಣ ಒಪ್ಪಿದ್ದ. ಹಾಂಗೆ ಶ್ರೀಕೃಷ್ಣ ಅರ್ಜುನನ ಹಾಂಗೆ ಇಪ್ಪ ಗುರುಶಿಶ್ಯ ಪರಂಪರೆಲಿ ಜ್ಞಾನವ ಪಡಕ್ಕೊಳ್ಳೆಕು ಹೇಳಿ ತಾತ್ಪರ್ಯ.

ಇಲ್ಲಿಗೆ ಕೆಲವೊಂದು ಸೂಕ್ಷ್ಮ ವಿಷಯಂಗಳ ನೋಡೆಕ್ಕಾಗಿದ್ದು.  

ಮೇಲಾಣ ಮೂರು ಶ್ಲೋಕಂಗಳಲ್ಲಿ ಸೃಷ್ಟಿಯ ಆದಿಂದ ಈ ಜ್ಞಾನಂದ ಪರಂಪರೆ ಹೇಂಗೆ ಬೆಳದು ಬಂತು ಹೇಳಿ ಪರಮಾತ್ಮ ವಿವರಿಸಿದ್ದ°. ಭಗವದ್ಗೀತೆ ಹೇಳಿರೆ ಸಾಕ್ಷಾತ್ ವೇದವೇ ಅಲ್ಲ. ವೇದಕ್ಕಿಂತಲೂ ಸಮಾನ ವಾ ಶ್ರೇಷ್ಠ ಹೇಳಿ ಭಾವನೆ. ವಾಸ್ತವವಾಗಿ ಜ್ಞಾನದ ಮೂಲ – ವೇದಂಗೊ. ಎಲ್ಲ ವೇದಂಗಳ ಸಾರ ಸಂಗ್ರಹವೇ ಭಗವದ್ಗೀತೆ. ಇದು ಜ್ಞಾನ, ಅನಾದಿ ನಿತ್ಯ. ಪ್ರತಿಸೃಷ್ಟಿಯ ಆದಿಲಿ ಭಗವಂತನಿಂದ ಹೇಳಲ್ಪಟ್ಟಿದು. ಸೃಷ್ಟಿಯ ಆದಿಲಿ ವೈವಸ್ವತ (ವಿವಸ್ವಾನ್) ಮನ್ವಂತರಲ್ಲಿ ಭಗವಂತ°, ವಿವಸ್ವಾನ್ ನಾಮಕ ಸೂರ್ಯಂಗೆ ಉಪದೇಶಿಸಿದ. ಸೂರ್ಯ°, ಗ್ರಹಂಗಳ ಅಧಿಪತಿ, ದೇವತೆ. ಹಾಂಗೇ ಸುರುವಿಂಗೆ ಹೀಂಗೆ ದೇವತೆಗೊಕ್ಕೆ ಉಪದೇಶಿಸಲ್ಪಟ್ಟತ್ತು. ಸೂರ್ಯ ಭೂಮಿಗೂ ದೇವತೆಗೊಕ್ಕೂ ಸಂಪರ್ಕ ದೇವತೆ.  ಸೂರ್ಯ ಮನುವಿಂಗೆ, ಮನು ಇಕ್ಷ್ವಾಕುವಿಂಗೆ ಹೀಂಗೆ ಗುರು-ಶಿಷ್ಯ ಪರಂಪರೆಲಿ ಹರುದು ಬಂತು. ಇಲ್ಲಿ ಅಂಬಾಗ ಅವಂಗೆ (ಅವಕ್ಕೆ) ಒಬ್ಬಂಗೇ ಅದು ಸೀಮಿತವೋ ? ಅಲ್ಲ., ಆ ಕಾಲಲ್ಲಿ ಸಮಾನ ಜ್ಞಾನಿಗೊಕ್ಕೆ ಮತ್ತೆ ನಂತ್ರಾಣವಂಗೆ ಉಪದೇಶಿಸಲ್ಪಟ್ಟತ್ತು. ಈ ಕಾಲಕ್ರಮೇಣ ಗುರುಶಿಷ್ಯ ಪರಂಪರೆ ಶಿಥಿಲವಾಗತೊಡಗಿ ಅಸಂಗತ ವ್ಯಾಖ್ಯಾನಕ್ಕೆ ಕಾರಣ ಆತು. ಅದು ಸ್ವೀಕಾರಾರ್ಹವಲ್ಲ. ಈ ಕಾಲಲ್ಲಿ ಅರ್ಜುನ ಒಬ್ಬ ದೊಡ್ಡ ಜ್ಞಾನಿ. ಆದರೂ ಕಾರಣಾಂತರಂದ ಅವ° ಮರದುಬಿಡ್ತ. ಆದ್ದರಿಂದ ಪರಂತಪನಾದ ( ಸದಾ ಭಗವಂತನ ಜ್ಞಾನದ ದೃಷ್ಟಿಂದ ಕಂಡುಗೊಂಬವ°) ಅರ್ಜುನಂಗೆ ಭಗವಂತ° ನೇರವಾಗಿ ಗೀತೋಪದೇಶಕ್ಕೆ ಸುರುಮಾಡಿದ್ದ°.  ಭಗವದ್ಗೀತೆ ಎಂಬುದು ಯಾವುದೋ ಒಂದು ಜಾತಿಗೋ ಪಂಗಡಕ್ಕೋ ಸೀಮಿತವಾದದ್ದಲ್ಲ. ಅದು ಜ್ಞಾನ-ವಿಜ್ಞಾನ ತತ್ವ ಒಳಗೊಂಡದು. ಜ್ಞಾನದ ಮೂಲಕ ಪರಮಾತ್ಮನ ಕಂಡುಗೊಂಬ ವಿಜ್ಞಾನ. ಯಾವನೇ ಸಾಧಕ, ಉತ್ತಮ ಗುರುವಿನ ಮಾರ್ಗದರ್ಶನಲ್ಲಿ ಅರ್ತುಗೊಂಬಲಕ್ಕು ಹೇಳ್ವದು ಸ್ಪಷ್ಟ. ಇಲ್ಲಿ ಶ್ರೀಕೃಷ್ಣ°, ಜ್ಞಾನದ ರಹಸ್ಯವ ನಿನಗೆ ಹೇಳುತ್ತೆ ಹೇಳಿ ಸುರುಮಾಡುತ್ತ°. ಅದು ರಹಸ್ಯ ಆಗಿಪ್ಪದು ಎಂತಕೆ?!. ಅದಕ್ಕೆ ಎರಡು ಕಾರಣಂಗೊ – ಒಂದು ಅದರ ದುರುಪಯೋಗ, ಇನ್ನೊಂದು ಅದರ ನಿರುಪಯೋಗ. ಆರು ಜ್ಞಾನವ ಪಡದು ಅದರ ಮತ್ತೆ ತನ್ನ ಮತ್ತಾಣ ತಲೆಮಾರಿಂಗೆ ಕೊಡ್ತವಿಲ್ಲೆಯೋ ಅಂಥವಕ್ಕೆ ಜ್ಞಾನವ ಕೊಡುವದು ವ್ಯರ್ಥ. ಇದರಿಂದ ಜ್ಞಾನ ಪರಂಪರೆ ಹರುದು ಬಾರ. ನಿರುಪಯೋಗವಾಗಿ ಬಿಡ್ತು. ಇನ್ನು ದುರುಪಯೋಗ. ಜ್ಞಾನ ಇಪ್ಪದು ಅಂತರಂಗದ ಉದ್ಧಾರಕ್ಕಾಗಿ ಮತ್ತು ಮತ್ತೊಬ್ಬನ ಉದ್ಧಾರಕ್ಕೆ ದಾರಿದೀಪವಾಗಿ ಹೊರತು ವ್ಯಾಪಾರ ಮಾಡ್ಳೆ ಅಲ್ಲ. ಜ್ಞಾನಂದ ಸಮಾಜವ ಮೋಸಮಾಡ್ಳಾಗ. ಅದಕ್ಕಾಗಿಯೇ ದುರುಪಯೋಗ ಅಪ್ಪಲಾಗ, ನಿಷ್ಪ್ರಯೋಜಕ ಅಪ್ಪಲಾಗ ಎಂಬ ಉದ್ಧೇಶಂದ ಇದು ರಹಸ್ಯ. ಇದೇ ರೀತಿಯಾಗಿ ಹಲವಾರು ವಿಷಯಂಗೊವಿದ್ಯೆಗೊ ರಹಸ್ಯವಾಗಿಯೇ ಇಪ್ಪದು., ಸದ್ಬುದ್ಧಿಂದ ತಿಳ್ಕೊಂಡು ಸಂಶೋಧನೆ ಮಾಡಿ ಉನ್ನತಿಗೆ ಏರೆಕು ಹೇದು ಬನ್ನಂಜೆಯವರ ವ್ಯಾಖ್ಯಾನಲ್ಲಿ ವಿಶ್ಲೇಷಿಸಿದ್ದವು.

ಶ್ಲೋಕ

ಅರ್ಜುನ ಉವಾಚ –
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ ।
ಕಥಮೇತದ್ ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ॥೦೪॥

ಪದವಿಭಾಗ

ಅರ್ಜುನಃ ಉವಾಚ
ಅಪರಮ್ ಭವತಃ ಜನ್ಮ ಪರಮ್ ಜನ್ಮ ವಿವಸ್ವತಃ । ಕಥಮ್ ಏತತ್ ವಿಜಾನೀಯಾಮ್ ತ್ವಮ್ ಆದೌ ಪ್ರೋಕ್ತವಾನ್ ॥

ಅನ್ವಯ

ಅರ್ಜುನಃ ಉವಾಚ –
ಭವತಃ ಜನ್ಮ ಅಪರಮ್, ವಿವಸ್ವತಃ ಜನ್ಮ ಪರಮ್., ಅತಃ, ತ್ವಮ್ ಆದೌ ಏತತ್ ಪ್ರೋಕ್ತವಾನ್ ಇತಿ ಕಥಂ ವಿಜಾನೀಯಾಂ ?!

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°,  ಭವತಃ – ನಿನ್ನ, ಜನ್ಮ – ಜನ್ಮವು, ಅಪರಮ್ – ಕಿರಿದು (ಮತ್ತಾಣದ್ದು), ವಿವಸ್ವತಃ – ವಿವಸ್ವಾನನ (ಸೂರ್ಯದೇವನ), ಜನ್ಮ – ಜನನವು, ಪರಮ್ – ಹಿರಿದು (ಶ್ರೇಷ್ಠ, ಮದಲಾಣ),  ಅತಃ – ಹಾಂಗಾಗಿ,  ತ್ವಮ್ – ನೀನು, ಆದೌ – ಸುರುವಿಂಗೆ, ಏತತ್ – ಇದರ,   ಪ್ರೋಕ್ತವಾನ್ ಇತಿ – ಉಪದೇಶಿಸಿದ್ದೆ ಹೇದು, ಕಥಮ್ – ಹೇಂಗೆ? ವಿಜಾನೀಯಾಂ – ಅರ್ಥಮಾಡಿಗೊಳ್ಳಲಿ ?!

ಅನ್ವಯಾರ್ಥ

ಅರ್ಜುನ° ಕೇಳುತ್ತ° – ಸೂರ್ಯದೇವನಾದ ವಿವಸ್ವಾನ ನಿನ್ನಂದ ಮದಲೇ ಹುಟ್ಟಿದವ°. ಹೀಂಗಾದಲ್ಲಿ ನೀನು ಅವಂಗೆ ಈ ಶಾಸ್ತ್ರವ ಬೋಧಿಸಿದೆ ಹೇಳಿರೆ ಆನು ಹೇಂಗೆ ತಿಳ್ಕೊಳ್ಳೆಕು ?!

ತಾತ್ಪರ್ಯ / ವಿವರಣೆ

ಅರ್ಜುನ° ಭಗವಂತನಿಂದ ಅಂಗೀಕೃತನಾದ ಭಕ್ತ°. ಅವನ ಮಾತುಗಳ ನಂಬದಿಪ್ಪದು ಹೇಂಗೆ. ವಾಸ್ತವ ಸಂಗತಿ ಹೇಳಿರೆ, ಅರ್ಜುನ° ಇಲ್ಲಿ  ಈ ರೀತಿಯಾಗಿ ಪ್ರಶ್ನೆ ಕೇಳಿದ್ದು ತನಗಾಗಿ ಅಲ್ಲ. ದೇವೋತ್ತಮ ಪರಮ ಪುರುಷನಲ್ಲಿ ನಂಬಿಕೆ ಇಲ್ಲದ್ದಿಪ್ಪವಕ್ಕಾಗಿ ಶ್ರೀಕೃಷ್ಣನ  ಮಹಾವಿಷ್ಣುವಿನ ಅವತಾರ ಹೇಳಿ ನಂಬದ್ದ ರಾಕ್ಷಸೀ ಮನೋಭಾವದವಕ್ಕಾಗಿ. ಅದು ಅವನ ಬಾಯಿಂದಲೇ ಅಧಿಕೃತವಾಗಿ ಸಾರಲ್ಪಡಲಿ ಹೇಳ್ವ ಅರ್ಥಕ್ಕಾಗಿ. ಪ್ರತಿಯೊಬ್ಬನೂ ತನ್ನ ಕಲ್ಯಾಣಕ್ಕಾಗಿ ಕೃಷ್ಣನ ಅರ್ಥಮಾಡಿಕ್ಕೊಳ್ಳೆಕ್ಕಾಗಿದ್ದು. ಇಲ್ಲಿ ಗೀತೋಪದೇಶ ಅರ್ಜುನಂಗೇ ನೇರವಾಗಿ ಹೇಳಲ್ಪಡುತ್ತದಾದರೂ ಅದು ಇಡೀ ವಿಶ್ವಕ್ಕೆ ಸಾರುತ್ತಾ ಇಪ್ಪದು. ಅದರ ಅರ್ಥೈಸಿಗೊಂಬಲೆ ಸಾಧ್ಯ ಇಪ್ಪವಕ್ಕೆ ಮಾತ್ರ ಗೊಂತಕ್ಕಷ್ಟೇ. ಭಕ್ತರಾದವು ಭಗವಂತನ ವಿಷಯದ ಬಗ್ಗೆ ಹೆಚ್ಚು ಹೆಚ್ಚು ತಿಳ್ಕೊಂಬಲೆ ಬಯಸುತ್ತವು. ಕೃಷ್ಣ° ಒಬ್ಬ ಸಾಮಾನ್ಯ ಮನುಷ್ಯ ಹೇಳಿ ತಿಳ್ಕೊಂಡಿಪ್ಪವಕ್ಕೆ ಅವನ ಬಗ್ಗೆ ವಿಷಯ ಗೊಂತಾಗಲಿ ಎಂಬ ಉದ್ದೇಶಂದ ಅರ್ಜುನನ ಈ ರೀತಿ ಪ್ರಶ್ನೆ. ಇದರಿಂದ ಶ್ರೀಕೃಷ್ಣ ಮಾನವಾತೀತ, ಸಚ್ಚಿದಾನಂದ°, ಸಕಲ ಲೋಕದ ಒಡೆಯ°, ಸಕಲ ವಿಷಯಂಗಳ ಒಡೆಯ°, ಲೌಕಿಕ – ಅಲೌಕಿಕ, ನಿಸರ್ಗ ಗುಣಂಗೊಕ್ಕೆ ಮೀರಿದವ° ಹೇಳ್ವದು ಪ್ರಪಂಚಕ್ಕೆ ಸ್ವಯಂ ಕೃಷ್ಣನ ಮೂಲಕ ಗೊಂತಾಗಲಿ ಹೇಳ್ವ ಉದ್ದೇಶ.  ನಾಸ್ತಿಕವಾದ ಧಿಕ್ಕರಿಸಲಿ ಹೇಳಿ ಅರ್ಜುನನ ಪ್ರಯತ್ನ. ನರ ಎಂದು ಖ್ಯಾತಿಗೆ ಪ್ರತಿಬಿಂಬಿತವಾಗಿಪ್ಪ ಅರ್ಜುನ°, ಯಾವುದೇ ಕರ್ಮಬಂಧನ ಇಲ್ಲದ್ದ, ಗುಣತ್ರಯಂಗೊಕ್ಕೆ ಅತೀತನಾದ  ಭಗವಂತ° ಎಂತಕೆ ಭೂಮಿಲಿ ಅವತರಿಸಿ ಬತ್ತ° ಹೇಳಿ ನರರಾದ ನಮ್ಮೆಲ್ಲರ ಸಂಶಯ ನಿವಾರಣೆಗೆ ಭಗವಂತನಲ್ಲೇ ಈ ರೀತಿ ನೇರವಾಗಿ ಪ್ರಶ್ನಿಸುತ್ತ°.

ನರ ಎಂದು ಖ್ಯಾತಿಗೆ ಪ್ರತಿಬಿಂಬಿತವಾಗಿಪ್ಪ ಅರ್ಜುನ°, ಯಾವುದೇ ಕರ್ಮಬಂಧನ ಇಲ್ಲದ್ದ, ಗುಣತ್ರಯಂಗೊಕ್ಕೆ ಅತೀತನಾದ  ಭಗವಂತ° ಎಂತಕೆ  ಭೂಮಿಲಿ ಅವತರಿಸಿ ಬತ್ತ° ಹೇಳಿ ನರರಾದ ನಮ್ಮೆಲ್ಲರ ಸಂಶಯ ನಿವಾರಣೆಗೆ ಅರ್ಜುನ ಈ ರೀತಿಯಾಗಿ ಪ್ರಶ್ನುಸುತ್ತ°.

ಶ್ಲೋಕ

ಶ್ರೀ ಭಗವಾನುವಾಚ –
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ॥೦೫॥

ಪದವಿಭಾಗ

ಶ್ರೀ ಭಗವಾನ್ ಉವಾಚ –
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚ ಅರ್ಜುನ । ತಾನಿ ಅಹಮ್ ವೇದ ಸರ್ವಾಣಿ ನ ತ್ವಮ್ ವೇತ್ಥ ಪರಂತಪ ॥

ಅನ್ವಯ

ಶ್ರೀ ಭಗವಾನ್ ಉವಾಚ –
ಹೇ ಪರಂತಪ!, ಅರ್ಜುನ!, ಮೇ ತವ ಚ ಬಹೂನಿ ಜನ್ಮಾನಿ ವ್ಯತೀತಾನಿ । ತಾನಿ ಸರ್ವಾಣಿ ಅಹಮ್ ವೇದ., ತ್ವಂ ನ ವೇತ್ಥ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ ಭಗವಂತ° ಹೇಳಿದ°,  ಹೇ ಪರಂತಪ – ಏ ಶತ್ರುದಮನನೇ! ( ಅಪರೋಕ್ಷ ಜ್ಞಾನಿಯೇ!), ಅರ್ಜುನ! – ಅರ್ಜುನನೇ!, ಮೇ – ಎನ್ನ, ತವ – ನಿನ್ನ, ಚ – ಕೂಡ, ಬಹೂನಿ ಜನ್ಮಾನಿ – ಅನೇಕ ಜನ್ಮಂಗೊ, ವ್ಯತೀತಾನಿ – ಕಳದ್ದು, ತಾನಿ  ಸರ್ವಾಣಿ – ಅವುಗಳ ಎಲ್ಲವ, ಅಹಮ್ – ಆನು , ವೇದ – ತಿಳುದ್ದೆ,  ತ್ವಮ್ – ನೀನು, ನ ವೇತ್ಥ – ತಿಳಿದ್ದಿಲ್ಲೆ.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ ಭಗವಂತ° ಹೇಳುತ್ತ – ಶತ್ರುದಮನನಾದ (ಅಪರೋಕ್ಷ ಜ್ಞಾನಿಯಾದ) ಅರ್ಜುನನೇ!, ನೀನು ಆನು ಅನೇಕ ಜನ್ಮಂಗಳ ಕಳುದ್ದೆಯೋ°. ಎನಗೆ ಅವೆಲ್ಲ ಜನ್ಮಂಗಳ ನೆಂಪಿದ್ದು, ಅದರೆ ನಿನಗೆ ಇಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಅದ್ವಿತೀಯನಾದರೂ ಅಸಂಖ್ಯಾತ ರೂಪಂಗಳಲ್ಲಿ ಪ್ರಕಟ ಆವುತ್ತ° ಹೇಳಿ ವೇದಂಗಳಲ್ಲಿ ಹೇಳಿದ್ದು. ಅವ° ವರ್ಣ ಬದಲಾಯಿಸಿಗೊಂಡರೂ ತಾನೇ ಆಗಿ ಉಳಿವ ವೈಡೂರ್ಯದ ಹಾಂಗೆ ಇರುತ್ತ°. ಪರಿಶುದ್ಧರಾದ ಭಕ್ತರುಗೊ ಮಾತ್ರ ಅವನ ಹಲವು ರೂಪಂಗಳ ಅರ್ಥ ಮಾಡಿಗೊಂಬಲೆ ಸಾಧ್ಯ. ವೇದಂಗಳ ಸರಳ ಅಧ್ಯಯನಂದ ಅವನ ಅರ್ಥಮಾಡಿಗೊಂಬಲೆ ಕಷ್ಟ. ಅರ್ಜುನನಂತಹ ಭಕ್ತರುಗೊ ಭಗವಂತನ ನಿತ್ಯ ಸಂಗಾತಿಗೊ. ಭಗವಂತ ಅವತರಿಸಿದಪ್ಪಗೆಲ್ಲಾ ಸಂಗಾತಿಗೊ ಆದ ಆ ಭಕ್ತರುಗೊ ಬೇರೆ ಬೇರೆ ಪಾತ್ರಂಗಳಲ್ಲಿ ಅವನ ಸೇವಗೆ ಅವ್ವೂ ಅವತರಿಸುತ್ತವು. ಅರ್ಜುನ ಅಂತಹ ಭಕ್ತರಲ್ಲಿ ಒಬ್ಬ°. ಹಾಂಗಾದರೆ, ಕೋಟ್ಯಂತರ ವರ್ಷಂಗಳ ಹಿಂದೆ ಶ್ರೀಕೃಷ್ಣ ಸೂರ್ಯದೇವನಾದ ವಿವಸ್ವಾನಂಗೆ ಭಗವದ್ಗೀತೆಯ ಉಪದೇಶಸಿಪ್ಪಗ ಅರ್ಜುನ° ಬೇರೊಂದು ಪಾತ್ರಲ್ಲಿ ಅಲ್ಲಿತ್ತಿದ್ದ ಹೇಳುವದು ಈ ಶ್ಲೋಕಂದ ಅರ್ಥಮಾಡಿಗೊಂಬಲಕ್ಕು. ಆದರೆ, ಭಗವಂತಂಗೂ ಅರ್ಜುನಂಗೂ ವ್ಯತ್ಯಾಸ ಎಂತ ಹೇಳಿರೆ ಭಗವಂತಂಗೆ ಆ ಘಟನೆ ನೆಂಪಿಲ್ಲಿ ಇರುತ್ತು. ಅರ್ಜುನಂಗೆ ಜ್ಞಾಪಿಸಿಗೊಂಬಲೆ ಎಡಿತ್ತಿಲ್ಲೆ. ವಿಭಿನ್ನಾಂಶವಾದ ಜೀವಿಗೂ ಭಗವಂತಂಗೂ ಇದೇ ವ್ಯತ್ಯಾಸ. ಇಲ್ಲಿ ಅರ್ಜುನ° ಪರಂತಪನಾಗಿದ್ದರೂ (ಅಪರೋಕ್ಷ ಜ್ಞಾನಿ) ಅವಂಗೆ ಈ ರಹಸ್ಯ ಗೊಂತಾಗ ಹೇಳಿ ಕೃಷ್ಣ° ಹೇಳುತ್ತ°.

ಶ್ಲೋಕ

ಅಜೋsಪಿ ಸನ್ನವ್ಯಯಾತ್ಮಾ ಭೂತಾನಾಂ ಈಶ್ವರೋsಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮ ಮಾಯಯಾ ॥೦೬॥

ಪದವಿಭಾಗ

ಅಜಃ ಅಪಿ ಸನ್ ಅವ್ಯಯ ಆತ್ಮಾ ಭೂತಾನಾಮ್ ಈಶ್ವರಃ ಅಪಿ ಸನ್ । ಪ್ರಕೃತಿಮ್ ಸ್ವಾಮ್ ಅಧಿಷ್ಠಾಯ ಸಂಭವಾಮಿ ಆತ್ಮ-ಮಾಯಯಾ ॥

ಅನ್ವಯ

ಅಹಮ್ ಅಜಃ ಅವ್ಯಯ-ಆತ್ಮಾ ಅಪಿ ಸನ್, ಭೂತಾನಾಂ ಈಶ್ವರಃ ಅಪಿ ಸನ್, ಸ್ವಾಂ ಪ್ರಕೃತಿಮ್ ಅಧಿಷ್ಠಾಯ, ಆತ್ಮ-ಮಾಯಯಾ ಸಂಭವಾಮಿ।

ಪ್ರತಿಪದಾರ್ಥ

ಅಹಮ್ – ಆನು,  ಅಜಃ – ಜನ್ಮರಹಿತ°,  ಅವ್ಯಯ-ಆತ್ಮಾ – ನಾಶರಹಿತವಾದ ದೇಹವು,  ಅಪಿ – ಆದರೂ, ಸನ್ – ಹಾಂಗಿದ್ದೂ, ಭೂತಾನಾಮ್ – ಜನಿಸಿದ ಎಲ್ಲರ, ಈಶ್ವರಃ – ಪರಮ ಪ್ರಭುವು, ಅಪಿ – ಆದರೂ, ಸನ್ – ಹಾಂಗಿದ್ದೂ, ಸ್ವಾಮ್ – ಎನ್ನ ಹಾಂಗೇ,  ಪ್ರಕೃತಿಮ್ ಅಧಿಷ್ಠಾಯ – ದಿವ್ಯರೂಪಲ್ಲಿ ಇದ್ದುಗೊಂಡು, ಆತ್ಮ- ಮಾಯಯಾ – ಎನ್ನ ಅಂತರಂಗ ಶಕ್ತಿಂದ, ಸಂಭವಾಮಿ – ಅವತರುಸುತ್ತೆ.

ಅನ್ವಯಾರ್ಥ

ಹುಟ್ಟು ಸಾವುಗೊ ಇಲ್ಲದ್ದ, ಸಮಸ್ತ ಭೂತಂಗಳಿಂಗೂ ಈಶ್ವರನಾದ ಆನು ಎನ್ನ ಪ್ರಕೃತಿಯ ವಶಮಾಡಿಗೊಂಡು ಎನ್ನ ಅಂತರಂಗ ಮಾಯಾ ವಿಲಾಸಂದ ದಿವ್ಯರೂಪಲ್ಲಿ  ಅವತರುಸುತ್ತೆ.

ತಾತ್ಪರ್ಯ / ವಿವರಣೆ

ಭಗವಂತ° ತನ್ನ ಜನ್ಮವೈಚಿತ್ರ್ಯದ ಕುರಿತು ಇಲ್ಲಿ ಹೇಳುತ್ತ°. ಅವ° ಸಾಮಾನ್ಯ ಮನುಷ್ಯನ ಹಾಂಗೆ ಕಂಡರೂ ತನ್ನ ಹಿಂದಾಣ ‘ಜನ್ಮಂಗಳ’ (ಅವತಾರಂಗಳ) ಎಲ್ಲ ವಿಷಯಂಗೊ ಅವಂಗೆ ಗೊಂತಿರುತ್ತು. ಅವ° ಹೇಳಿದಾಂಗೆ ಅವನ ಮೂಲಗುಣವ ಅವನ ಅಧೀನಲ್ಲೇ ಮಡಿಕ್ಕೊಂಡು ತನ್ನ ಶಕ್ತಿಂದಲೇ ಪ್ರಪಂಚಲ್ಲಿ ಜನಿಸುವದು. ಮನುಷ್ಯಂಗೆ ಆದರೆ ತಾನು ಎಂತ ಮಾಡಿದ್ದೆ ಹೇಳ್ವದು ಕೆಲವೇ ಗಂಟೆಲಿ ಮರದು ಬಿಡುಗು. ಆದರೆ ಭಗವಂತಂಗೆ ಹಾಂಗಲ್ಲ. ಜನ್ಮಜನ್ಮಾಂತರಲ್ಲಿ ಅವ° ಎಂತ ಮಾಡಿದ್ದ ಹೇಳ್ವದು ಗೊಂತಿರುತ್ತು.  ಭಗವಂತಂಗೆ ಹುಟ್ಟೂ ಇಲ್ಲೆ ಸಾವೂ ಇಲ್ಲೆ. ಅಂದರೂ ಅವ° ಹಲವು ರೂಪಂಗಳಲ್ಲಿ ಜನ್ಮತಾಳುತ್ತ. ಅವನ ಶರೀರ ಮತ್ತು ಆತ್ಮಲ್ಲಿ ಅಥವಾ ಅವನ ಗುಣ ಮತ್ತು ದೇಹಲ್ಲಿ ಭಿನ್ನತೆ ಇಲ್ಲೆ. ಬಾಹ್ಯಪ್ರಪಂಚಕ್ಕೆ ಅವ° ಒಬ್ಬ ಸಮಾನ್ಯನಾಂಗೆ ಕಂಡರೂ ಅವ° ಅವನ ಅಧೀನಲ್ಲೇ ಇರುತ್ತ°. ಆದ್ದರಿಂದ ಪರಮಾತ್ಮ ನಿತ್ಯ ಸತ್ಯ°. 

ಬನ್ನಂಜೆ ಹೇಳುತ್ತವು –ಇಲ್ಲಿ ಹೇಳಿಪ್ಪ ‘ಆತ್ಮ-ಮಾಯಯಾ’ , ಹೇಳುವದಕ್ಕೆ ಅನೇಕ ಅರ್ಥಂಗೊ. ಜೀವಕ್ಕೆ ಆವರಿಸಿಪ್ಪ ಜ್ಞಾನ ಆತ್ಮ ಮಾಯೆ. ಭಗವಂತ° ಭೂಮಿಲಿ ಹುಟ್ಟಿ ಬಪ್ಪದು ಅವನ ಜ್ಞಾನದ ಮಹಿಮೆಂದ ಹೊರತು ಯಾವುದೋ ಬಾಹ್ಯ ಮಾಯೆಯ ಅಧೀನನಾಗಿ ಅಲ್ಲ. ತನ್ನಿಚ್ಛಾಪೂರ್ವಕವಾಗಿ ತನ್ನ ಪ್ರಕೃತಿಯ ಮೂಲಕ ಇಳುದು ಬತ್ತ°. ಮೋಹದ ಪರದೆಲಿ ಇಪ್ಪ ನವಗೆ ಆದೊಂದು ಸಾಮಾನ್ಯ ಹುಟ್ಟು ಎಂಬಂತೆ ಕಾಂಗು. ಎಂತಕೆ ಹೇಳಿರೆ, ನವಗೆ ಅವನ ಜ್ಞಾನಾನಂದಮಯ ಶರೀರವ ಕಾಂಬಲೆ ಸಾಧ್ಯ ಇಲ್ಲೆ. ನವಗೆ ನಮ್ಮ ಸ್ವಯಂ ಜೀವ ಸ್ವರೂಪವೇ ಅರಡಿಯದ್ದ ಮತ್ತೆ ಭಗವಂತನ ಅರ್ತುಗೊಂಬದಾದರೂ ಹೇಂಗೆ.

ಶ್ಲೋಕ

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥೦೭॥

ಪದವಿಭಾಗ

ಯದಾ ಯದಾ ಹಿ ಧರ್ಮಸ್ಯ ಗ್ಲಾನಿಃ ಭವತಿ ಭಾರತ । ಅಭ್ಯುತ್ಥಾನಂ ಅಧರ್ಮಸ್ಯ ತದಾ ಆತ್ಮಾನಮ್ ಸೃಜಾಮಿ ಅಹಮ್ ॥

ಅನ್ವಯ

ಹೇ ಭಾರತ!, ಯದಾ ಯದಾ ಹಿ ಧರ್ಮಸ್ಯ ಗ್ಲಾನಿಃ, ಅಧರ್ಮಸ್ಯ ಅಭ್ಯುತ್ಥಾನಂ ಚ ಭವತಿ, ತದಾ, ಅಹಮ್ ಆತ್ಮಾನಂ ಸೃಜಾಮಿ ।

ಪ್ರತಿಪದಾರ್ಥ

ಹೇ ಭಾರತ! – ಏ ಭರತ ವಂಶಜನೇ!, ಯದಾ ಯದಾ – ಯಾವ್ಯಾವಾಗ,  ಹಿ – ಖಂಡಿತವಾಗಿಯೂ, ಧರ್ಮಸ್ಯ – ಧರ್ಮದ, ಗ್ಲಾನಿಃ – ಏರುಪೇರುಗೊ (ದೌರ್ಬಲ್ಯ), ಅಧರ್ಮಸ್ಯ – ಅಧರ್ಮದ, ಅಭ್ಯುತ್ಥಾನಂ – ಪ್ರಾಬಲ್ಯವು, ಚ – ಕೂಡ, ಭವತಿ – ಆವುತ್ತೋ (ವ್ಯಕ್ತವಾವ್ತೋ), ತದಾ – ಅಂಬಗ (ಆ ಕಾಲಲ್ಲಿ), ಅಹಮ್ – ಆನು. ಆತ್ಮಾನಂ – ಸ್ವಯಮ್, ಸೃಜಾಮಿ – ವ್ಯಕ್ತನಾಗುತ್ತೆ (ಉತ್ಪತ್ತಿಯಾವ್ತೆ.

ಅನ್ವಯಾರ್ಥ

ಭರತವಂಶಜನಾದ ಅರ್ಜುನನೇ!, ಯಾವ್ಯಾವಾಗ ಎಲ್ಲೆಲ್ಲಿ ಧರ್ಮದ ಅಧಃಪತನ (ಶಿಥಿಲ) ಆವ್ತೋ ಮತ್ತು ಅಧರ್ಮವು ಹೆಚ್ಚಾವುತ್ತೋ ಅಂಬಗ ಆನು ಸ್ವಯಂ ಅವತಾರ ಮಾಡುತ್ತೆ.

ತಾತ್ಪರ್ಯ / ವಿವರಣೆ

ಯಾವುದೇ ಐಹಿಕ ಬಂಧನಂಗೊ ಇಲ್ಲದ್ದ, ಗುಣಂಗೊ ಅಂಟಿಗೊಳ್ಳದ್ದ ಭಗವಂತ ಹುಟ್ಟಿಗೊಳ್ತ ಹೇಳುವದು ಉಚಿತವಾದ ಮಾತು ಆವುತ್ತಿಲ್ಲೆ. ಅವನ ಹುಟ್ಟು ಅವನ ಅಧೀನಲ್ಲೇ ಇಪ್ಪದು. ಆದ್ದರಿಂದ ಇಲ್ಲಿ ಸೃಜಾಮಿ ಹೇಳ್ವದಕ್ಕೆ ವ್ಯಕ್ತನಾವುತ್ತ°, ಅವತರಿಸುತ್ತ° ಹೇಳುವುದು ಸಮಂಜಸ. ಯಾವ್ಯಾವ ಕಾಲಲ್ಲಿ ಎಲ್ಲೆಲ್ಲಿ ಧರ್ಮಕ್ಕೆ ಚ್ಯುತಿ ಬಂದು ಅವನತಿ ಹೊಂದುತ್ತಾ ಅಧರ್ಮ ಪ್ರಾಬಲ್ಯ ಅಪ್ಪಗ ಧರ್ಮದ ಪುನರುತ್ಥಾನಕ್ಕಾಗಿ ಪರಮಾತ್ಮ ಐಹಿಕ ಪ್ರಕೃತಿಲಿ ತನ್ನ ಇಚ್ಛಾಶಕ್ತಿ ಮತ್ತು ಪ್ರಕೃತಿಗುಣಂದ ಕಾಣಿಸಿಗೊಳ್ಳುತ್ತ°. ಅವ° ಯಾವ ಸಮಯಲ್ಲಿ ಯಾವ ರೂಪಲ್ಲಿ ಆವಿರ್ಭವಿಸುತ್ತ° ಹೇಳ್ವದು ಅದು ಅವನದ್ದೇ ಇಚ್ಛೆ. ಅವನ ಉದ್ಧೇಶ ಭೂಮಿಲಿ ಭಗವತ್ಪ್ರಜ್ಞೆ ನೆಲೆಗೊಳುಸುವದು.  ಪ್ರಸ್ತುತ ಯುಗಲ್ಲಿ, ಒಂದೆಡೆ ಜರಾಸಂಧ ಪ್ರಪಂಚದ ಮೂಲೆ ಮೂಲೆಂದ ೨೨೮೦೦ ರಾಜಕುಮಾರರ ತನ್ನ ಸೆರೆಲಿ ಇಟ್ಟಿತ್ತಿದ್ದ°, ಕಂಸಂಗೆ ಮಗಳ ಕೊಟ್ಟು, ಕುತಂತ್ರ ಕಟ್ಟಿ ಶೂರಸೇನನ ಸೆರೆಮನಗೆ ತಳ್ಳುವಂತೆ ಮಾಡಿದ, ಜರಾಸಂಧನ ಮಿತ್ರ ನರಕಾಸುರ ೧೬೧೦೦ ರಾಜಕುಮಾರಿಯರ ಸೆರೆಮನೆಲಿ ಇರಿಸಿತ್ತಿದ್ದ°, ಭೀಷ್ಮಾಚಾರ್ಯನ ಹತ್ರೆ ಶಾಂತಿ ಒಪ್ಪಂದ ಮಾಡಿಗೊಂಡು ಇಡೀ ಭೂಲೋಕಲ್ಲಿ ತನ್ನದೇ ಆದ ಏಕಚಕ್ರಾಧಿಪತ್ಯವ ಸ್ಥಾಪಿಸುವ ಮತ್ತು ಪೂರ್ಣ ಸುಲಿಗೆ ಮಾಡಿಗೊಂಬ ಯೋಜನೆಲಿ ಇತ್ತಿದ್ದ°., ಇವೆಲ್ಲವುದರ ಪರಿಣಾಮವಾಗಿ ಭೂಮಿಲಿ ಅಶಾಂತಿ , ಅಧರ್ಮ, ಸಜ್ಜನರ ದುಃಸ್ಥಿತಿಗಳಿಂದಲಾಗಿ ಭೂಮಂಡಲ ಪಾಪಿಗಳ ವಶ ಆಗಿ ಇತ್ತಿದ್ದು. ಆ ಕಾಲಕ್ಕೆ ಕೃಷ್ಣ° ಅವತಾರ ತಾಳಿದ. ಕಂಸನ ಕೊಂದು ಶೂರಸೇನನ ಬಿಡುಗಡೆ  ಮಾಡಿ ಮರಳಿ ರಾಜನನ್ನಾಗಿ ಮಾಡಿದ° ಕೃಷ್ಣ°,  ನರಕಾಸುರನ ಕೊಂದು ಆತನ ಬಂಧನಲ್ಲಿದ್ದ ರಾಜಕುಮಾರಿಯ ಬಿಡುಗಡೆ ಮಾಡಿದ°, ಹೀಂಗೆ ಬಿಡುಗಡೆ ಮಾಡಿ ಆ ರಾಜಕುಮಾರಿಯರ ಶೀಲ ಶಂಕಿಸುವ ಭಯ ಸಮಾಜಲ್ಲಿ ತೋರಿಯಪ್ಪಗ ಅವೆಲ್ಲರನ್ನು ತಾನೇ ಮದುವೆ ಆಗಿ ಅವರ ಗೌರವವ ಕಾಪಾಡಿದ°, ಜರಾಸಂಧನ ಅಂಬಗಂಬಗ ಕೆಣಕ್ಕಿ ಓಡಿ ಹೋದವನ ಹಾಂಗೆ ನಟಿಸಿ ಭೀಮಾರ್ಜುನರೊಂದಿಂಗೆ ಜರಾಸಂಧನ ಸಂಧಿಸಿ ಜರಾಸಂಧನ ವಧೆ ಮಾಡಿಸಿದ°, ಬಂಧನಲ್ಲಿದ್ದ ರಾಜಕುಮಾರರ ಬಿಡುಗಡೆಗೊಳುಸಿದ°. ಹೀಂಗೆ ಭೂಲೋಕಲ್ಲಿ ಅಧರ್ಮ ತಾಂಡವ ಅಪ್ಪಗ ಅಧರ್ಮದ ದಾಸ್ಯಂದ ಕಾಪಾಡ್ಳೆ ಭಗವಂತನ ಅವತಾರ ಆವುತ್ತು.

ಶ್ಲೋಕ

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥೦೮॥

ಪದವಿಭಾಗ

ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಮ್ । ಧರ್ಮ-ಸಂಸ್ಥಾಪನ-ಅರ್ಥಾಯ ಸಂಭವಾಮಿ ಯುಗೇ ಯುಗೇ ॥

ಅನ್ವಯ

ಸಾಧೂನಾಂ ಪರಿತ್ರಾಣಾಯ, ದುಷ್ಕೃತಾಂ ವಿನಾಶಾಯ, ಧರ್ಮ-ಸಂಸ್ಥಾಪನ-ಅರ್ಥಾಯ ಚ ಅಹಂ ಯುಗೇ ಯುಗೇ ಸಂಭವಾಮಿ ।

ಪ್ರತಿಪದಾರ್ಥ

ಸಾಧೂನಾಮ್ – ಭಕ್ತರ, ಪರಿತ್ರಾಣಾಯ – ಉದ್ಧಾರಕ್ಕಾಗಿ, ದುಷ್ಕೃತಾಮ್ – ದುಷ್ಟರ, ವಿನಾಶಾಯ – ನಾಶಕ್ಕಾಗಿ, ಧರ್ಮ-ಸಂಸ್ಥಾಪನ-ಅರ್ಥಾಯ – ಧರ್ಮತತ್ವಂಗಳ ಪುನರ್ ಸ್ಥಾಪನೆಗಾಗಿ,  ಚ – ಕೂಡ, ಯುಗೇ ಯುಗೇ – ಯುಗಯುಗಂಗಳಲ್ಲೂ, ಸಂಭವಾಮಿ – ಪ್ರಕಟನಾವ್ತೆ.

ಅನ್ವಯಾರ್ಥ

(ಧರ್ಮವು ಶಿಥಿಲವಾಗಿ ಅಧರ್ಮವೇ ತಾಂಡವ ಆಡುವಾಗ) ಸಜ್ಜನರ ರಕ್ಷಣೆಗಾಗಿ (ಉದ್ಧಾರಕ್ಕಾಗಿ), ದುಷ್ಟರ ನಾಶಮಾಡಿ ಧರ್ಮತತ್ವಂಗಳ ಮತ್ತೆ ಸ್ಥಾಪಿಸುವದಕ್ಕಾಗಿ ಆನು ಪ್ರತಿ ಯುಗಲ್ಲಿ ಅವತರುಸುತ್ತೆ.

ತಾತ್ಪರ್ಯ / ವಿವರಣೆ

ಇಲ್ಲಿ ಸಾಧುಗೊ ಹೇದರೆ ಸಜ್ಜನರು, ಕೃಷ್ಣಪ್ರಜ್ಞೆಯುಳ್ಳವು, ಧರ್ಮಿಗೊ ಹೇಳಿಯೂ, ದುಷ್ಕೃತಾಂ ಹೇದರೆ ದುಷ್ಟಕಾರ್ಯಂಗಳ ಮಾಡುವವು, ಅಧರ್ಮಿಗೊ, ಕೃಷ್ಣಪ್ರಜ್ಞೆಗೆ ಲಕ್ಷ್ಯ ಕೊಡದ್ದವು, ನಾಸ್ತಿಕರು ಹೇಳಿ ಅರ್ಥೈಸೆಕು. ದುಷ್ಟರ ನಾಶಮಾಡ್ಳೆ ಭಗವಂತ° ನೇರವಾಗಿ ಇಳುದು ಬರೆಕ್ಕಾದ್ದಿಲ್ಲೆ. ಆದರೆ, ಇಲ್ಲಿ ಮುಖ್ಯವಾಗಿ ತನ್ನ ಭಕ್ತರ ಕಾಪಾಡ್ಳೆ, ಭಕ್ತರ ಸಂತೋಷಕ್ಕೋಸ್ಕರಕ್ಕಾಗಿ ಪ್ರಪಂಚಲ್ಲಿ ಕಾಣಿಸಿಗೊಂಬದು ಅವರ ಮಧ್ಯಲ್ಲಿ ಅವರ (ಸಾಮಾನ್ಯನ) ಹಾಂಗೆ.  ಭಕ್ತನಾದವ ತನ್ನ ನೆಂಟನೇ ಆಗಿದ್ದರೂ ರಾಕ್ಷಸರು / ದುಷ್ಟರು, ಅಧರ್ಮಿಗೊ ಅವರ ಹಿಂಸಿಸುತ್ತವು. ಪ್ರಹ್ಲಾದ ತನ್ನ ಮಗನೇ ಆದರೂ ಅಪ್ಪ° ಹಿರಣ್ಯಕಶಿಪು ಅವನ ಹಿಂಸಿಸಿದ, ದೇವಕಿ ತನ್ನ ತಂಗೆ ಆಗಿದ್ದರೂ ಕಂಸ ದೇವಕಿಯ ಮತ್ತು ಅದರ ಗಂಡನ ಹಿಂಸಿಸಿದ°. ಇಲ್ಲಿ ಭಗವಂತ° ಅವರ ಸಂತೋಷಪಡುಸುವ ಉದ್ಧೇಶಕ್ಕಾಗಿ ಮನುಷ್ಯ ರೂಪಲ್ಲಿ ಅವರ ಮುಂದೆ ಅವತರಿಸಿಗೊಂಡ°.

ಬನ್ನಂಜೆ ಹೇಳುತ್ತವು – ಆರು ಸಮಾಜಕ್ಕೆ ಕೆಟ್ಟದ್ದು ಮಾಡಿ, ಅಧರ್ಮಲ್ಲಿ ಮೆರೆತ್ತವೋ ಅಂಥವರ ಪೂರ್ಣನಾಶಕ್ಕಾಗಿ ಮತ್ತು ಸಜ್ಜನರ ಮತ್ತು ಪ್ರಪಂಚದ ಸಮಗ್ರ ರಕ್ಷಣೆಗಾಗಿ ಧರ್ಮದ ಬೀಜವ ಪುನಃ ಬಿತ್ತಲೆ ಭಗವಂತ° ಭೂಲೋಕಲ್ಲಿ ಅವತರುಸುತ್ತ°. ಇಲ್ಲಿ ಯುಗೇ ಯುಗೇ ಹೇಳಿ ಹೇಳಿಪ್ಪದು ಯುಗ ಯುಗಂಗಳಲ್ಲೂ ಭಗವಂತ ಅವತರುಸುತ್ತ° ಹೇಳ್ವ ಅರ್ಥಲ್ಲಿ ಅಲ್ಲ. ಎಲ್ಲೆಲ್ಲಿ ಯಾವ್ಯಾವಾಗ ಅಧರ್ಮ ಬೆಳೆತ್ತೋ ಅಂಬಗೆಲ್ಲಾ ಪರಮಾತ್ಮನ ಆಗಮನ ಆವುತ್ತು. ಅವ° ಅವತರುಸುವದು ಅಂಥಹ ಸಂದರ್ಭ ಬಂದಪ್ಪಗ ಮಾತ್ರ. ಕೆಲವು ಯುಗಲ್ಲಿ ಅವತಾರ ಇಲ್ಲದ್ದಿಪ್ಪಲೂ ಸಾಕು. ಅಥವಾ, ಒಂದೇ ಯುಗಲ್ಲಿ ಕೆಲವು ಅವತಾರ ಇಪ್ಪಲೂ ಸಾಕು. ಆದರೆ ಭಗವಂತನ ಆವಿರ್ಭಾವವಿಪ್ಪ ಅನೇಕ ಮಹಾಪುರುಷರು ಯುಗ ಯುಗಲ್ಲಿಯೂ ಬಂದು ಹೋಗ್ಯೊಂಡಿರುತ್ತವು. ಅವರ ಮುಖೇನ ಭಗವಂತ° ನಿರಂತರ ಧರ್ಮ ರಕ್ಷಣೆಲಿ ಇರುತ್ತ°.

ಶ್ಲೋಕ

ಜನ್ಮ ಕರ್ಮ ಚ ಮೇ ದಿವ್ಯಮ್ ಏವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋsರ್ಜುನ ॥೦೯॥

ಪದವಿಭಾಗ

ಜನ್ಮ ಕರ್ಮ ಚ ಮೇ ದಿವ್ಯಮ್ ಏವಮ್ ಯಃ ವೇತ್ತಿ ತತ್ವತಃ । ತ್ಯಕ್ತ್ವಾ ದೇಮ್ ಪುನಃ ಜನ್ಮ ನ ಏತಿ ಮಾಮ್ ಏತಿ ಸಃ ॥

ಅನ್ವಯ

ಹೇ ಅರ್ಜುನ!, ಯಃ ಮೇ ದಿವ್ಯಂ ಜನ್ಮ ಕರ್ಮ ಚ ಏವಂ ತತ್ವತಃ ವೇತ್ತಿ, ಸಃ ದೇಹಂ ತ್ಯಕ್ತ್ವಾ, ಪುನಃ ಜನ್ಮ ನ ಏತಿ, ಕಿಂತು ಸಃ, ಮಾಮ್ ಏತಿ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಯಃ – ಆರು, ಮೇ – ಎನ್ನ, ದಿವ್ಯಮ್ – ಅಲೌಕಿಕವಾದ, ಜನ್ಮ – ಹುಟ್ಟ (ಜನ್ಮವ), ಕರ್ಮ – ಕಾರ್ಯವ, ಚ – ಕೂಡ, ಏಮ್ – ಹೀಂಗೆ, ತತ್ವತಃ – ನೈಜತೆಲಿ, ವೇತ್ತಿ – ತಿಳ್ಕೊಂಡಿರುತ್ತವೋ, ಸಃ – ಅವ°, ದೇಮ್ – (ಈ) ಶರೀರವ, ತ್ಯಕ್ತ್ವಾ – ತ್ಯಜಿಸಿ (ಬಿಟ್ಟು), ಪುನಃ – ಮತ್ತೆ, ಜನ್ಮ – ಹುಟ್ಟ, ನ ಏತಿ – ಪಡೆತ್ತಿಲ್ಲೆ, ಕಿಂತು – ಆದರೆ, ಸಃ – ಅವ°, ಮಾಮ್ – ಎನ್ನ, ಏತಿ – ಹೊಂದುತ್ತ°. 

ಅನ್ವಯಾರ್ಥ

ಅರ್ಜುನ!, ಆರು ಈ ರೀತಿಯಾಗಿ ಎನ್ನ ಹುಟ್ಟಿನ ಮತ್ತು ಕರ್ಮದ ದಿವ್ಯ ಸ್ವರೂಪವ ಯಥಾರ್ಥವಾಗಿ ತಿಳ್ಕೊಳ್ಳುತ್ತವೋ ಅವು ದೇಹತ್ಯಾಗ ಮಾಡಿದ ಮತ್ತೆ ಈ ಐಹಿಕ ಜಗತ್ತಿಲ್ಲಿ ಹುಟ್ಟುತ್ತವಿಲ್ಲೆ. ಅವ್ವು ಎನ್ನ ನಿತ್ಯ ನಿವಾಸಕ್ಕೆ ಬತ್ತವು.

ತಾತ್ಪರ್ಯ / ವಿವರಣೆ

ದೇವದೇವೋತ್ತಮ ಪರಮ ಪುರುಷ° ಭಗವಂತನ ಅವತಾರದ ರಹಸ್ಯವ ಅರ್ಥಮಾಡಿಕೊಂಡವಂಗೆ ಐಹಿಕ ಬಂಧನಂದ ಮುಕ್ತಿ ಆವುತ್ತು. ಆದ್ದರಿಂದ ಈಗಾಣ ಭೌತಿಕ ಶರೀರವ ತ್ಯಜಿಸಿದ ಕೂಡ್ಳೆ ನೇರವಾಗಿ ಅವ ಭಗವಂತನ ಸಾಮ್ರಾಜ್ಯಕ್ಕೆ ಹಿಂತಿರುಗುತ್ತ°. ಐಹಿಕ ಬಂಧನಂದ ಮುಕ್ತಿ ಅಪ್ಪದು ಜೀವಿಗೆ ಸುಲಭವಲ್ಲ. ಯೋಗಿಗಳೂ ಕೂಡ ಅನೇಕ ಜನ್ಮಾನಂತರ ಕರ್ಮಫಲಾನುಸಾರ ಮುಕ್ತಿ  ಪಡೆತ್ತವು. ಅಂದರೂ ಅವು ಪಡವ ಮುಕ್ತಿ ಹೇಳಿರೆ ಭಗವಂತನ ನಿರಾಕಾರ ಬ್ರಹ್ಮಜ್ಯೋತಿಲಿ ಲೀನ ಅಪ್ಪದು. ಅಂಬಗಳೂ ಅದು ಭಾಗಶಃ ಮುಕ್ತಿ. ಅವು ಮುಂದೆ ಮತ್ತೆ ಈ ಐಹಿಕ ಜಗತ್ತಿಂಗೆ ಹಿಂದುರುಗುವ ಸಂಭವ ಇದ್ದೇ ಇದ್ದು. ಆದರೆ, ಯಾವಾತ° ಭಗವಂತನ ದೇಹ ಮತ್ತು ಕರ್ಮಂಗಳ ದಿವ್ಯ ಸ್ವರೂಪವ ಅರ್ಥಮಾಡಿಕೊಳ್ಳುತ್ತನೋ ಅವ° ಕೊನೆಲಿ ನೇರವಾಗಿ ಭಗವಂತನ ನಿವಾಸವನ್ನೇ ಸೇರುತ್ತ°. ಮತ್ತೆ ಈ ಐಹಿಕ ಜಗತ್ತಿಂಗೆ ಹಿಂತುರುಗುವ ಪ್ರಮೇಯವೇ ಇಲ್ಲೆ. ಇನ್ನೊಂದು ಮಾತಿಲ್ಲಿ ಹೇಳುವದಾದರೆ, ನಿಷ್ಠಾವಂತ ಭಗವಂತನ ಭಕ್ತ° ಪರಿಪೂರ್ಣತೆಯ ಸಾಧುಸುತ್ತ°.

ಹಾಂಗೇದು ಬರೇ ತಾತ್ವಿಕವಾಗಿ ಭಗವಂತನ ದೇವೋತ್ತಮ ಹೇಳಿ ಹೇಳಿಗೊಂಡಿದ್ದರೆ ಸಾಲ. ಭಗವಂತನ ನಿಜಸ್ವರೂಪವ ಆಧ್ಯಾತ್ಮಿಕವಾಗಿ ಸ್ವಯಂ ಅನುಭವಿಸಿ ತಿಳಿಯೆಕು. ಬರೇ ಭಗವದ್ಗೀತೆಯ ಓದಿದ ಮಾತ್ರಕ್ಕೆ ಎಲ್ಲದಕು ಕಾರಣನು ಭಗವಂತನು ಹೇಳಿ ನಿಟ್ಟುಸಿರು ಬಿಟ್ಟು ಕೂಪ ಹಾಂಗೆ ಇಲ್ಲೆ. ನಿಷ್ಠಾವಂತನಾಗಿ ಕೃಷ್ಣಪ್ರಜ್ಞೆಲಿ ಅವನ ತಿಳ್ಕೊಳ್ಳೆಕು. ಇಲ್ಲದ್ರೆ ಜೇನದ ಕುಪ್ಪಿಯ ಹೆರಂದ ನಕ್ಕಿದಷ್ಟೇ ಗುಣ. ಹೇದರೆ ಭಗವದ್ಗೀತೆಯ ಐಹಿಕ ವಿದ್ವತ್ತಿಂಗೆ ಅನುಗುಣವಾಗಿ ವ್ಯಾಖ್ಯಾನ ಮಾಡಿದ ಮಾತ್ರಕ್ಕೆ ಮುಕ್ತಿ ಪಡವಲೆ ಎಡಿಯ. ಉದ್ದಕೆ ಪ್ರವಚನ ನೀಡಿ ಸಮಾಜಲ್ಲಿ ದೊಡ್ಡ ವ್ಯಕ್ತಿ ಹೇಳಿ ಗುರುತಿಸಿಗೊಂಬಲಕ್ಕು ಆದರೆ ಅವನ ಅಂತರಂಗವ ಪರಮಾತ್ಮ ನೋಡಿಗೊಂಡೇ ಇರುತ್ತ°. ಅಂತವು ಭಗವಂತನ ಅವ್ಯಾಜ ಕರುಣೆಗೆ ಕಾದುಕೂರೆಕ್ಕಾಗಿದ್ದು. ಆದ್ದರಿಂದ ಮನುಷ್ಯ ಸಂಪೂರ್ಣ ಶ್ರದ್ಧೆ ಮತ್ತು ವಿಶ್ವಾಸ, ಜ್ಞಾನಂದ ಕೃಷ್ಣಪ್ರಜ್ಞೆಯ ಬೆಳೆಸಿಗೊಂಡು ಮೈಗೂಡಿಸಿ ಆ ಮೂಲಕ ಪರಿಪೂರ್ಣತೆಯ ಪಡೆಕು.

ಶ್ಲೋಕ

ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ ।
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ ॥೧೦॥

ಪದವಿಭಾಗ

ವೀತ-ರಾಗ-ಭಯ-ಕ್ರೋಧಾಃ ಮತ್ ಮಯಾ ಮಾಮ್ ಉಪಾಶ್ರಿತಾಃ । ಬಹವಃ ಜ್ಞಾನ-ತಪಸಾ ಪೂತಾಃ ಮತ್ ಭಾವಮ್ ಆಗತಾಃ ॥

ಅನ್ವಯ

ವೀತ-ರಾಗ-ಭಯ-ಕ್ರೋಧಾಃ, ಮನ್ಮಯಾಃ ಮಾಮ್ ಉಪಾಶ್ರಿತಾಃ, ಜ್ಞಾನ-ತಪಸಾ ಪೂತಾಃ, ಬಹವಃ ಮದ್ಭಾಮ್ ಆಗತಾಃ ।

ಪ್ರತಿಪದಾರ್ಥ

ವೀತ-ರಾಗ-ಭಯ-ಕ್ರೋಧಾಃ – ಆಸಕ್ತಿ, ಭೀತಿ, ಕೋಪಂಗಳಿಂದ ಮುಕ್ತರಾಗಿ (ವೀತ – ಮುಕ್ತರಾಗಿ, ರಾಗ – ಆಸಕ್ತಿ, ಭಯ – ಭೀತಿ, ಕ್ರೋಧಾಃ – ಕೋಪಂಗಳಿಂದ),  ಮತ್-ಮಯಾಃ (ಮನ್ಮಯಾ) – ಪೂರ್ಣವಾಗಿ ಎನ್ನಲ್ಲಿ, ಮಾಮ್ – ಎನ್ನ, ಉಪಾಶ್ರಿತಾಃ – ಪೂರ್ಣವಾಗಿ ಆಶ್ರಯಪಡದು, ಜ್ಞಾನ-ತಪಸಾ – ಜ್ಞಾನದ ತಪಸ್ಸಿಂದ, ಪೂತಾಃ – ಪರಿಶುದ್ಧರಾಗಿ, ಬಹವಃ – ಅನೇಕರು,  ಮತ್-ಭಾಮ್ (ಮದ್ಭಾಮ್) – ದಿವ್ಯಪ್ರೇಮವ, ಆಗತಾಃ – ಸಾಧಿಸಿದವು.

ಅನ್ವಯಾರ್ಥ

ಅನೇಕರು ಕಾಮಕ್ರೋಧ ಭಯಂಗಳ ಬಿಟ್ಟು, ಎನ್ನಲ್ಲಿಯೇ ಮನಸ್ಸಿರಿಸಿ, ಎನ್ನನ್ನೇ ಆಶ್ರಯಿಸಿದವು.  ಈ ರೀತಿ ಹಲವರು ಜ್ಞಾನ-ತಪಸ್ಸಿಂದ ಪವಿತ್ರರಾಗಿ ಎನ್ನ ದಿವ್ಯಪ್ರೇಮವ (ಎನ್ನ ದಿವ್ಯಸ್ವರೂಪವ) ಹೊಂದಿದವು.

ತಾತ್ಪರ್ಯ / ವಿವರಣೆ

ಅತಿಯಾಗಿ ಪ್ರಾಪಂಚಿಕಲ್ಲೇ ಮನಸ್ಸಿಪ್ಪವಕ್ಕೆ ಪರಮ ಪರಿಪೂರ್ಣ ಸತ್ಯದ ಸಾಕಾರ ಸ್ವರೂಪ ಅರ್ಥಮಾಡಿಗೊಂಬದು ಬಹುಕಷ್ಟ. ಸಾಮಾನ್ಯವಾಗಿ ದೈಹಿಕ ಕಲ್ಪನೆಲಿ ಇಪ್ಪವು ಪ್ರಾಪಂಚಿಕಲ್ಲೇ ತನ್ಮಯರಾಗಿಬಿಡುತ್ತವು. ಅವಕ್ಕೆ ಸತ್ಯದ ಅರಿವು ಅರ್ಥಮಾಡಿಗೊಂಬಲೂ ಸಾಧ್ಯ ಇಲ್ಲೆ. ಇಂತಹ ಪ್ರಾಪಂಚಿಕ ಮನಸ್ಸಿಪ್ಪವಕ್ಕೆ ನಾಶವಿಲ್ಲದ, ಜ್ಞಾನ ಮತ್ತು ನಿತ್ಯಾನಂದ ಪರಿಪೂರ್ಣವಾದ ದಿವ್ಯ ಶರೀರದ ಕಲ್ಪನೆ ಮಾಡಿಗೊಂಬಲೂ ಎಡಿಯ. ಐಹಿಕ ಕಲ್ಪನೆಲಿ ದೇಹವು ನಾಶವಪ್ಪಂತದ್ದು. ಅಜ್ಞಾನ ಮತ್ತು ದುಃಖಂಗಳಿಂದ ತುಂಬಿಪ್ಪಂತದ್ದು. ಆದ್ದರಿಂದ ಭಗವಂತನ ಸಾಕಾರಸ್ವರೂಪದ ವಿಷಯವ ಹೇಳುವಾಗ ಜನಂಗೊಕ್ಕೆ ಇದೇ ಭೌತಿಕ ಶರೀರದ ಕಲ್ಪನೆಯೇ ಮನಸ್ಸಿಲ್ಲಿ ಮೂಡುವದು. ಇಲ್ಲಿ ಆಧ್ಯಾತ್ಮಿಕ ಅಸ್ತಿತ್ವದ ಪರಿಪೂರ್ಣ ತಿಳುವಳಿಕೆ ಇಲ್ಲೆ. ಆಧ್ಯಾತ್ಮಿಕ ಅಸ್ತಿತ್ವ ಹೇಳ್ವದನ್ನೆ ಅರ್ಥಮಾಡಿಗೊಂಬಲೆಡಿಯದ್ದವು (ಊಹಿಸಲೂ) ಎಡಿಯದ್ದವು ಬಹುಮಂದಿ ಇದ್ದವು. ನಾನಾ ವಾದಂಗಳಿಂದ, ಮತ್ತು ವಿವಿಧ ರೀತಿಯ ಊಹಾತ್ಮಕ ಚಿಂತನೆಂಗೆಳಿಂದ ಅವರ ಜ್ಞಾನ ಗೊಂದಲಲ್ಲಿ ಮುಳುಗಿರ್ತು. ಅಂತವಕ್ಕೆ ಇದೆಲ್ಲ ಅಸಹ್ಯ ಅಥವಾ ಕೋಪದಾಯಕ. ಕಟ್ಟಕಡೇಂಗೆ ಎಲ್ಲವೂ ಶೂನ್ಯವೇ ಅವಕ್ಕೆ.  ಅಂತವು ಅಸ್ವಸ್ಥ ಸ್ಥಿತಿಲಿ ಪ್ರಪಂಚಲ್ಲಿ ಇರ್ತವು. ಗೊಂದಲಾತ್ಮಕ ವಾದಂಗಳಿಂದ ಮನಸ್ಸು ಹದೆಗೆಟ್ಟು ನಂಬಿಕೆಯನ್ನೇ ಕಳಕ್ಕೊಂಡು ಇತರ ವಿಚಾರಂಗಳಲ್ಲಿ ವ್ಯಸನಿಗೊ ಆಗಿ ಬಿಡ್ತವು. ಇದು ಆಧ್ಯಾತಿಮ್ಕ ಬದುಕಿನ ನಿರ್ಲಕ್ಷ್ಯ, ಆಧ್ಯಾತ್ಮಿಕ ವ್ಯಕ್ತಿತ್ವದ ಭಯ  ಮತ್ತು ಬದುಕಿನ ನಿರಾಸೆಂದ ಉದ್ಭವವಪ್ಪ ಶೂನ್ಯದ ಕಲ್ಪನೆ. ಇದರ ಮದಾಲು ತೊಲಗುಸೆಕು. ಇದಕ್ಕೆ ಮನುಷ್ಯ ನಿಜವಾದ ಗುರುವಿನ ಮಾರ್ಗದರ್ಶನ ಪಡದು ಭಗವಂತನಲ್ಲಿಯೇ ಸಂಪೂರ್ಣ ಆಶ್ರಯ ಪಡದು, ಭಕ್ತಿಜೀವನದ ಶಿಸ್ತಿನ ನಿಯಂತ್ರಕ ತತ್ವಂಗಳನ್ನೂ ಅನುಸರುಸೇಕು. ಭಕ್ತಿಜೀವನದ ಕೊನೆಯ ಹಂತವ ‘ಭಾವ’ ಅಥವಾ ಪರಮ ಪುರುಷನಲ್ಲಿ ದಿವ್ಯಪ್ರೇಮ ಹೇಳಿ ಹೇಳುವದು.

ಸುರುವಿಲ್ಲಿ ಮನುಷ್ಯಂಗೆ ಆತ್ಮಸಾಕ್ಷಾತ್ಕಾರದ ಕಿಂಚಿತ್ ಹಂಬಲ ಇರೇಕು. ಇದು ಆತನ ಆಧ್ಯಾತ್ಮಿಕವಾಗಿ ಉನ್ನತಿ ಪಡದವರ ಸಹವಾಸ ಪಡವಲೆ ಪ್ರಯತ್ನುಸುವ ಹಂತಕ್ಕೆ ತಂದುಬಿಡುತ್ತು. ಮತ್ತೆ, ಅವ° ಉನ್ನತ ಸ್ಥಿತಿಗೇರಿದ ಗುರುವಿನಿಂದ ದೀಕ್ಷೆಯ ಪಡೇಕು. ಅವನ ಮಾರ್ಗದರ್ಶನಲ್ಲಿ ಭಕ್ತಿಸೇವೆಲಿ ತೊಡಗೆಕು (ಪ್ರಾರಂಭಿಸೆಕು). ಅದರಿಂದ ಆತ್ಮ ಸಾಕ್ಷಾತ್ಕಾರದ ದೃಢತೆಯ ಪಡಕ್ಕೊಳ್ಳುತ್ತ° ಮತ್ತು ದೇವೋತ್ತಮ ಪರಮ ಪುರುಷನ ವಿಷಯವ ಮತ್ತೂ ಮತ್ತೂ ತಿಳಿಯೆಕು ಹೇಳ್ವ ಅಭಿರುಚಿ ಹೊಂದುತ್ತ°. ಈ ಅಭಿರುಚಿ ಆತನ ಕೃಷ್ಣಪ್ರಜ್ಞೆಲಿ ಆಸಕ್ತಿಯನ್ನುಂಟುಮಾಡುತ್ತು. ಇಂತಹ ಆಸಕ್ತಿ ‘ಭಾವ’ಲ್ಲಿ, ಹೇಳಿರೆ, ಭಗವಂತನ ಅಲೌಕಿಕ ಪ್ರೇಮದ ಪ್ರಾರಂಭದ ಹಂತಕ್ಕೆ ತಂದುಮಡುಗುತ್ತು. ಭಗವಂತನಲ್ಲಿ ನಿಜವಾದ ಪ್ರೀತಿಗೆ ‘ಪ್ರೇಮ’ ಹೇಳಿ ಹೇಳುವದು. ಇದು ಬದುಕಿನ ಅತ್ಯುನ್ನತ ಪರಿಪೂರ್ಣ ಸ್ಥಿತಿ. ಪ್ರೇಮದ ಹಂತಲ್ಲಿ ಭಕ್ತ° ಭಗವಂತನ ದಿವ್ಯ ಭಕ್ತಿಸೇವೆಲಿ ಸತತವಾಗಿ ತೊಡಗಿರುತ್ತ°. ಹೀಂಗೆ ಯೋಗ್ಯ ಗುರುವಿನ ಮಾರ್ಗದರ್ಶನಲ್ಲಿ ಭಕ್ತಿಸೇವೆಯ ಪ್ರಕ್ರಿಯೆಂದ ಮನುಷ್ಯ° ಕ್ರಮೇಣ ಅತ್ಯುನ್ನತ ಹಂತಕ್ಕೆ ಏರುತ್ತ°. ಆ ಕಾಲಕ್ಕೆ ಆತ° ಎಲಾ ಐಹಿಕ ಮೋಹಂದ, ಆಧ್ಯಾತ್ಮಿಕ ಭಯಂದ, ಶೂನ್ಯ ತತ್ವ ಹತಾಶೆಂದ ಬಿಡುಗಡೆಯಾಗಿ ಭಗವಂತನ ನಿವಾಸವ ಸೇರುತ್ತ°.

ಬನ್ನಂಜೆ ವ್ಯಾಖ್ಯಾನಲ್ಲಿ ಹೇಳುತ್ತವು – ಮೂರನೇ ಅಧ್ಯಾಯದ ಕೊನೆಲಿ ಕೃಷ್ಣ ಹೇಳಿದಾಂಗೆ ರಾಗ ದ್ವೇಷಾದಿಗೊ ನಮ್ಮ ಪರಮ ಶತ್ರುಗೊ. ನಾವು ನಮ್ಮ ಜೀವನದ ಸರ್ವ ಸಮಸ್ಯೆಗೊಕ್ಕೆ ಕಾರಾಣವಾದ ಒಲವು (ಆಸೆ, ರಾಗ), ಭಯ, ಕೋಪವ ಬಿಟ್ಟು ಎಂತ ಇದ್ದೋ ಅದರಲ್ಲಿ ಸಂತೋಷಪಟ್ಟುಗೊಂಡು, ಏನು ಬಂತೋ ಅದರ ಭಗವಂತನ ಪ್ರಸಾದ ಹೇಳಿ ಸ್ವೀಕರುಸುವ ಮನೋಪ್ರವೃತ್ತಿಯ ಬೆಳೆಸಿಗೊಂಡು ಮನ್ಮಯರಾಯೇಕು. ‘ಮನ್ಮಯ’ ತನ್ನ ಮನಸ್ಸಿಲ್ಲಿ ಅರ್ಥಾತ್ ತನ್ನ ಜೀವನದ ಎಲ್ಲಾ ನಡೆ, ನುಡಿ, ಚಿಂತನೆ, ಕಾರ್ಯಲ್ಲಿ ಭಗವಂತನ ತುಂಬಿಸಿಗೊಂಬದು ಮತ್ತು ಲೌಕಿಕ ಪ್ರಜ್ಞೆಯ ಬಿಟ್ಟು ಕೃಷ್ಣಪ್ರಜ್ಞೆಯ ತುಂಬಿಸಿಗೊಂಬದು. ಹಾಂಗಾದಪ್ಪಗ ಲೌಕಿಕ ಜೀವನಲ್ಲಿ ರಾಗದ್ವೇಷಾದಿಗೊ ಕ್ಷುಲ್ಲಕವಾಗಿ ಕಾಂಗು. ಭಗವಂತ ಸರ್ವೋತ್ತಮ ಎಂಬ ಸತ್ಯವ ಅರ್ತು, ನಮ್ಮ ರಕ್ಷಗೆ ಸದಾ ಭಗವಂತನಿದ್ದಾ ಹೇದು ತಿಳ್ಕೊಂಡು, ದುರಾಭಿಮಾನವ ಕಿತ್ತೆಸದು, ಆ ಭಗವಂತನಲ್ಲಿ ಶರಣಾದವು ಮೋಕ್ಷ ಮಾರ್ಗವ ಕಾಣುತ್ತವು. ನಮ್ಮ ಜೀವನಲ್ಲಿ ಪ್ರತಿಯೊಂದು ಕರ್ಮಲ್ಲಿಯೂ ಈ ರೀತಿಯ ಭಾವನೆಯ ಬೆಳೆಶಿಗೊಂಬದು ಒಂದು ತಪಸ್ಸು. ಇದರಿಂದ ಬದುಕು ಪವಿತ್ರ ಆವುತ್ತು. ನಮ್ಮ ರಾಗ ದ್ವೇಷ ಕ್ರೋಧಲ್ಲಿಯೂ ಭಗವಂತನನ್ನೇ ಕೂರುಸೇಕು. ಅವನೇ ಸರ್ವಸ್ವ, ನಂಬಿಪ್ಪದ್ದು ಅವನನ್ನೇ, ಆಶ್ರಯಿಸಿಪ್ಪದೂ ಅವನನ್ನೇ, ತಪ್ಪು ಮಾಡಿದರೆ ಭಗವಂತ° ಕ್ಷಮಿಸ° ಹೇಳ್ವ ಭಾವನೆ ನಮ್ಮ ಶರೀರಲ್ಲಿ ಕರಗಿಸಿಗೊಂಡು ಆಧ್ಯಾತ್ಮ ಸಾಧನೆ ಮಾಡಿರೆ ಕೊನೆಲಿ ಆತ° ಸರ್ವ ಕೊಳೆಂದಲೂ ಮುಕ್ತನಾಗಿ ಪವಿತ್ರ ಭಗವಂತನ ನಿವಾಸವ ಸೇರುತ್ತ°.

ಮುಂದೆ ಎಂತರ..?           ಬಪ್ಪವಾರ ನೋಡುವೋ°

                                        ….ಮುಂದುವರಿತ್ತು.

ಕೆಮಿಲಿ ಕೇಳ್ಳೆ –

SRIMADBHAGAVADGEETHA – CHAPTER 04 – SHLOKAS 01 – 10 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

4 thoughts on “ಶ್ರೀಮದ್ಭಗವದ್ಗೀತಾ – ಚತುರ್ಥೋsಧ್ಯಾಯಃ – ಜ್ಞಾನಯೋಗಃ – ಶ್ಲೋಕಂಗೊ 01 – 10

  1. ಚೆನ್ನೈ ಭಾವಾ, ನಿ೦ಗಳ ನಿರ೦ತರ ಭಗವದ್ಗೀತಾ ಶುದ್ದಿಗೆ ನಮೋನ್ನಮಃ.
    ಎನ್ನ ಅನುಭವದಲ್ಲಿ ಇದು ಸುಲಭ ಕಾರ್ಯ ಅಲ್ಲ, ತಪಸ್ಸು.
    ಇವತ್ತಿನ ಓದುಗರ ಮೆಚ್ಚಿಸಲೆ ಎ೦ಥೆ೦ತೋ ಬರೆಲಕ್ಕು. ಆದ್ರೆ ನಿ೦ಗಳು ಬರೇತಿರೋ ನ೦ಗಳ ಮನೆಮಾತಿನ ಈ ಸ೦ಕಲನ ಈಗಿನ ಕಾಲದಲ್ಲಿ ತಪಸ್ಸಲ್ಲದೇ ಇನ್ನೇನು? ಇದು ಎಲ್ಲ ಕಾಲಕ್ಕೂ ಅಮೂಲ್ಯ ಸ೦ಗ್ರಹ ಆಗ್ತು. ಎಲ್ಲ ಆದಮೇಲೆ ಪುಸ್ತಕವಾಗಿ ಪ್ರಕಟಿಸಿ…
    ರ೦ಗನಾಥನ್ ಕೂಡಾ ಲಾಯ್ಕ್ ಹಾಡಿದ್ದ, ಅವ್ರ ಶಾರೀರ ಚೊಲೋ ಇದ್ದು, ಅಭಿನ೦ದನೆಗೊ.

    1. ಪ್ರೋತ್ಸಾಹಿಸಿ ಹುರಿದುಂಬುಸುವ ನಿಂಗೊ ಎಲ್ಲೋರ ಒಪ್ಪಕ್ಕೆ ನಮೋ ನಮಃ. ಈ ರೀತಿಯ ಪ್ರೋತ್ಸಾಹ ಇನ್ನಷ್ಟು ಉತ್ತೇಜನ ಕೊಡುತ್ತು.

  2. ಈಗಾಣ ಸಾಮಾಜಿಕ, ರಾಜಕೀಯ ಪರಿಸ್ಥಿತಿಲಿ ಬಹುಶಃ ನಾವೆಲ್ಲೊರು ಮಾಡೆಕ್ಕಾದ ಕರ್ತವ್ಯ ಒಂದೆ – “ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ “

  3. ಸಂಭವಾಮಿ ಯುಗೇ ಯುಗೇ-
    ಬಹಳ ಪ್ರಸಿದ್ಧವಾದ ಈ ಭಾಗವ ಸುಲಲಿತವಾಗಿ ವಿವರಿಸಿದ ಚೆನ್ನೈ ಭಾವಂಗೆ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×