Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 12 – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   10/01/2013    2 ಒಪ್ಪಂಗೊ

ಚೆನ್ನೈ ಬಾವ°

ಶ್ರೀಕೃಷ್ಣಪರಮಾತ್ಮನೇ ನಮಃ ॥

ಶ್ರೀ ಮದ್ಭಗವದ್ಗೀತಾ

ಅಥ ದ್ವಾದಶೋsಧ್ಯಾಯಃ – ಭಕ್ತಿಯೋಗಃ – ಶ್ಲೋಕಾಃ  – 01 – 10

ಶ್ಲೋಕ

ಅರ್ಜುನ ಉವಾಚ
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ ।
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ॥೦೧॥

ಪದವಿಭಾಗ

ಅರ್ಜುನಃ ಉವಾಚ
ಏವಮ್ ಸತತ-ಯುಕ್ತಾಃ ಯೇ ಭಕ್ತಾಃ ತ್ವಾಮ್ ಪರ್ಯುಪಾಸತೇ । ಯೇ ಚ ಅಪಿ ಅಕ್ಷರಮ್ ಅವ್ಯಕ್ತಮ್ ತೇಷಾಮ್ ಕೇ ಯೋಗ-ವಿತ್ತಮಾಃ ॥

ಅನ್ವಯ

ಅರ್ಜುನಃ ಉವಾಚ –
(ಹೇ ಭಗವನ್!), ಏವಂ ಸತತ-ಯುಕ್ತಾಃ ಯೇ ಭಕ್ತಾಃ ತ್ವಾಂ ಪರ್ಯುಪಾಸತೇ, ಯೇ ಚ ಅಪಿ ಅವ್ಯಕ್ತಮ್ ಅಕ್ಷರಮ್ (ಪರ್ಯುಪಾಸತೇ), ತೇಷಾಂ (ಮಧ್ಯೇ) ಕೇ ಯೋಗ-ವಿತ್ತಮಾಃ (ಸಂತಿ) ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಭಗವನ್ – ಓ ಭಗವಂತನೇ!, ಏವಮ್ – ಹೀಂಗೆ, ಸತತ-ಯುಕ್ತಾಃ – ನಿರಂತರವಾಗಿ ನಿರತರಾದ, ಯೇ ಭಕ್ತಾಃ – ಏವ ಭಕ್ತರು, ತ್ವಾಮ್ – ನಿನ್ನ, ಪರ್ಯುಪಾಸತೇ – ಸಮರ್ಪಕವಾಗಿ ಪೂಜಿಸುತ್ತವೋ, ಯೇ – ಆರು, ಚ – ಕೂಡ, ಅಪಿ – ಮತ್ತೆ, ಅವ್ಯಕ್ತಮ್ – ಅವ್ಯಕ್ತವಾದ, ಅಕ್ಷರಮ್ – ಅಳಿವಿರದ್ದರ ( ಅಳಿವಿಲ್ಲದ್ದ ಅವ್ಯಕ್ತತತ್ವ / ಶ್ರೀತತ್ವ ಹೇಳಿ ಅರ್ಥ)  (ಪರ್ಯುಪಾಸತೇ – ಪೂಜಿಸುತ್ತವೊ), ತೇಷಾಮ್ (ಮಧ್ಯೇ) – ಅವರೊಳ, ಕೇ ಯೋಗ-ವಿತ್ತಮಾಃ (ಸಂತಿ) [ಕೇ ಯೋಗವಿತ್ ತಮಾಃ] – ಆರು ಯೋಗಜ್ಞಾನಲ್ಲಿ ಪರಿಪೂರ್ಣರು?

ಅನ್ವಯಾರ್ಥ

ಅರ್ಜುನ° ಹೇಳಿದ°, ಹೇ ಭಗವನ್,  ಹೀಂಗೆ ಆರು ನಿರಂತರ ಸಾಧನೆಂದ ನಿನ್ನ ಭಕ್ತಿಸೇವೆಲಿ ಸಮರ್ಪಕವಾಗಿ ಸೇವಾನಿರತರಾಗಿತ್ತವೋ, ಮತ್ತೆ, ಆರು ನಿನ್ನ ಅವ್ಯಕ್ತವಾದ ಅಕ್ಷರ ತತ್ವವ (ನಿರಾಕಾರ ಬ್ರಹ್ಮವ) ಪೂಜಿಸುತ್ತವೋ, ಅವರೊಳ (ಅವರಲ್ಲಿ) ಪರಿಪೂರ್ಣರು ಆರು ?

ತಾತ್ಪರ್ಯ / ವಿವರಣೆ

ಬನ್ನಂಜೆಯವರ ಪೀಠಿಕೆಂದಲೇ ಸುರುಮಾಡುವೋ° –

ಹಿಂದಾಣ ಅಧ್ಯಾಯದ ಅಕೇರಿಲಿ ಭಗವಂತ° “ನಿಷ್ಕಾಮ ಭಕ್ತಿಂದ ಮಾಂತ್ರ ಎನ್ನ ಕಾಂಬಲೆ ಸಾಧ್ಯ” ಹೇದು ಹೇಳಿತ್ತಿದ್ದ°. ಹಾಂಗಾರೆ ನಾವು ಏವ ರೀತಿಲಿ ಭಗವಂತನತ್ರೆ ಭಕ್ತಿ ಮಡಿಕ್ಕೊಳ್ಳೆಕು, ಏವುದು ನಿಜವಾದ ಭಕ್ತಿ, ನಿಜವಾದ ಭಕ್ತನಲ್ಲಿರೆಕಾದ ಗುಣಂಗೊ ಎಂತರ ಇತ್ಯಾದಿ ಪ್ರಶ್ನಗೊ ಸಹಜವಾಗಿ ಮೂಡುತ್ತು. ಪ್ರಶ್ನೋಪನಿಷತ್ತಿಲ್ಲಿ ಹೇಳಿಪ್ಪಂತೆ –

ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನಃ ।
ಅನ್ನಮನ್ನಾದ್ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ಚ ನಾಮ ಚ ॥

ಭಗವಂತ° ಈ ಪ್ರಪಂಚವ ಸೃಷ್ಟಿ ಮಾಡಿ ಹದಿನೈದು ಬೇಲಿಗಳ ಈ ಸಂಸಾರಲ್ಲಿ ಜೀವವ ಮಡಿಗಿದ°. ಈ ಹದಿನೈದು ಬೇಲಿಗೊ ಹೇದರೆ –

೧. ಶ್ರದ್ಧೆಯ ಬೇಲಿ – ಕಿತ್ತಿಡುಕ್ಕಲೆ ಎಡಿಯದ್ದ ಬೇಲಿ – ಜೀವ ಸ್ವಭಾವಂದ ಬಂದ ಶ್ರದ್ಧೆ ., ಮತ್ತೆ, ಕಿತ್ತಿಡುಕ್ಕೆಕ್ಕಾದ ಬೇಲಿ – ಮನೆತನ, ಕುಟುಂಬ, ಬೆಳದ ವಾತಾವರಣದ ಪ್ರಭಾವಂದ ಬಂದ ಶ್ರದ್ಧೆ.

೨ – ೬.  ಪಂಚಭೂತಂಗಲ ಬೇಲಿ – ಮಣ್ಣು-ನೀರು (ಅನ್ನಮಯಕೋಶ) ಕಿಚ್ಚು-ಗಾಳಿ-ಆಕಾಶ (ಪ್ರಾಣಮಯ ಕೋಶ)

೭. ಇಂದ್ರಿಯಂಗಳ ಬೇಲಿ – ಐದು ಜ್ಞಾನೇಂದ್ರಿಯಂಗೊ, ಐದು ಕರ್ಮೇಂದ್ರಿಯಂಗೊ.

೮. ಅಂತಃಕರಣದ ಬೇಲಿ – ಕೆಟ್ಟದ್ದರ ಯೋಚನೆ ಮಾಡ್ವ ಮನಸ್ಸು.

೯ ಅನ್ನದ ಬೇಲಿ – ಆಹಾರ.

೧೦ ವೀರ್ಯದ ಬೇಲಿ – ಶಕ್ತಿ

೧೧. ತಪಃ – ಹಾಂಗಾಯೇಕು ಹೀಂಗಾಯೇಕು ಹೇಳ್ವ ಆಲೋಚನೆ (ತಿರುಕನ ಕನಸ್ಸಿನಾಂಗೆ)

೧೨. ಮಂತ್ರಃ – ತನ್ನ ಕನಸ್ಸಿನ ನನಸು ಮಾಡ್ಳೆ ಆಡುವ ಮಾತುಗೊ

೧೩. ಕರ್ಮಃ – ಕನಸ್ಸಿನ ಸಾಧುಸಲೆ ಮಾಡುವ ಕರ್ಮ

೧೪. ಲೋಕಂಗೊ – ಸ್ಥಿರ-ಚರ ಸೊತ್ತುಗೊ (ಆನು ಮಾಡಿದ್ದು, ಎನ್ನದು ಹೇಳ್ವ ಸೊತ್ತುಗೊ)

೧೫ ನಾಮದ ಬೇಲಿ – ಕೀರ್ತಿ.

ಈ ಹದಿನೈದು ಬೇಲಿಯ ಒಳ ಸಿಕ್ಕಿ ಹಾಕಿಗೊಂಡಿಪ್ಪ ಹದಿನಾರನೇಯ ‘ಕ್ಷರ’ ಜೀವಂಗೆ ಈ ಮೇಗಾಣ ೧೫ ಬೇಲಿ ಹೇಳ್ವ ಅಂಗಿ ಹಾಕಿ ಈ ಪ್ರಪಂಚಕ್ಕೆ ಚಿತ್ ಪ್ರಕೃತಿ – ಹದಿನೇಳನೇಯದಾದ – ಲಕ್ಷ್ಮಿ. ಅದು ಅಕ್ಷರ. ಕ್ಷರ-ಅಕ್ಷರಂಗೊಕ್ಕೆ ಅತೀತನಾದ ಭಗವಂತ° ಹದಿನೆಂಟನೇಯವನಾದ ‘ಪುರುಷಃ’. ಅವನೇ ಪುರುಷೋತ್ತಮ.

ಗೀತೆಲಿ ಇಲ್ಲಿಯವರೇಂಗೆ ಮುಖ್ಯವಾಗಿ ಭಗವಂತ° ಒತ್ತುಗೊಟ್ಟು ಹೇಳಿದ್ದದು – ” ಎನ್ನ ಅನನ್ಯ ಭಕ್ತಿಂದ ಪೂಜಿಸುವವ° ಈ ಸಂಸಾರಬಂಧನಂದ ಮುಕ್ತಿ ಪಡದು ಎನ್ನ ಬಂದು ಸೇರುತ್ತ°. ಹಾಂಗಿಪ್ಪಗ, ಇಲ್ಲಿ ನವಗೆ ಬಪ್ಪ ಸಹಜ ಪ್ರಶ್ನೆ –  ಭಗವಂತನ ಬಿಟ್ಟು ಹದಿನೇಳನೇಯೋಳಾದ ಶ್ರೀತತ್ವವ ಎಂತಕೆ ಆರಾಧುಸಲಾಗ?. ಅಪ್ಪನಿಂದ ಅಬ್ಬೆ ಕರುಣಾಮಯಿ. ನಮ್ಮ ಸಂಸಾರಬಂಧನಲ್ಲಿ ಹಾಕಿದ ಅಬ್ಬೆಯ ಪೂಜಿಸುವದರಿಂದ ನವಗೆ ಮೋಕ್ಷಪ್ರಾಪ್ತಿ ಸುಲಭ ಆವ್ತಿಲ್ಲೆಯಾ? ಏವ ದಾರಿ ಹೆಚ್ಚು ಸೂಕ್ತ ? ಶ್ರೀತತ್ವದ ಉಪಾಸನೆಂದ ಮುಕ್ತಿ ಸಾಧ್ಯ ಹೇದು ಸ್ತುತಿಲಿ ಹೇಳಿದ್ದು. ಉದಾಹರಣಗೆ ಶ್ರೀಸೂಕ್ತದ ಸಾಲುಗೊ –

ಶ್ರಿಯೇ ಜಾತಃ ಶ್ರಿಯ ಆನಿರ್ಯಾಯಃ ಶ್ರಿಯಂ ವಯೋ ಜನಿತೃಭ್ಯೋದಧಾತು ।
ಶ್ರಿಯಂ ವಸಾನಾಃ ಅಮೃತತ್ವಮಾಯನ್ ಭಜಂತಿ ಸದ್ಯಸ್ಸಮಿಧಾ ಮಿತದ್ಯೂನ್ ॥

ಇಲ್ಲಿ ಹೇಳಿಪ್ಪಂತೆ “ಶ್ರೀ ತತ್ವದ ಉಪಾಸನೆಗಾಗಿ ನಾವು ಹುಟ್ಟಿದ್ದು, ಶ್ರೀ ತತ್ವವ ಸ್ತೋತ್ರ ಮಾಡುವವಂಗೆ ಅದು (ಶ್ರೀ) ಸಂಪತ್ತನ್ನೂ ದೀರ್ಘಾಯುಷ್ಯವನ್ನೂ ಕೊಡುತ್ತು. ಶ್ರೀ ತತ್ವ ಉಪಾಸನೆ ಮಾಡಿದವು ಅಮೃತತ್ವ ಪಡದವು. ದಂಪತಿಗೊ ಶ್ರೀತತ್ವವ ಉಪಾಸನೆ ಮಾಡುವದರಿಂದ ಅವರ ಇಷ್ಟಾರ್ಥ ಸಿದ್ಧಿಯಾವುತ್ತು. ಅದು ಮೋಕ್ಷಪ್ರದೆ”. ಹೀಂಗೆ ಹೇಳಿದ ಪ್ರಕಾರ, ಶ್ರೀ ತತ್ವದ ಉಪಾಸನೆಂದ ಕೂಡ ಮೋಕ್ಷಪಡವಲೆಡಿಗು ಹೇಳ್ವ ಅಂಶ ಸ್ಪಷ್ಟ. ಪುರುಷೋತ್ತಮ ಭಗವಂತನ ಉಪಾಸನೆ ಮತ್ತೆ ಶ್ರೀತತ್ವ ಅಥವಾ ಅಕ್ಷರ ಉಪಾಸನೆ ಇದರಲ್ಲಿ ಏವುದು ಹೆಚ್ಚು ಸೂಕ್ತ ಹೇಳ್ವದು ನಮ್ಮೆಲ್ಲರ ಪ್ರಶ್ನೆ. ನಮ್ಮ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯ ಭಗವಂತನ ಮುಂದೆ ಮಡುಗುವದರೊಂದಿಂಗೆ ಈ ಅಧ್ಯಾಯ ಆರಂಭ ಆವುತ್ತು.

ಭಗವಂತ° ಈಗಾಗಲೇ ತನ್ನ ಸಾಕಾರ ರೂಪ, ನಿರಾಕಾರ ರೂಪ ಮತ್ತೆ ವಿಶ್ವರೂಪ ಈ ಮೂರನ್ನೂ ತಿಳಿಶಿದ್ದ°. ಹಾಂಗೇ ತನ್ನ ಎಲ್ಲ ಬಗೆಯ ಭಕ್ತರ ಮತ್ತೆ ಯೋಗಿಗಳ ಬಗ್ಗೆಯೂ ವರ್ಣಿಸಿದ್ದ°. ಸಾಮಾನ್ಯವಾಗಿ ಅಧ್ಯಾತ್ಮಿಕವಾದಿಗಳ ಎರಡು ವರ್ಗಂಗಳಾಗಿ ವಿಂಗಡುಸಲಕ್ಕು. ಒಂದು ವರ್ಗ – ನಿರಾಕಾರವಾದಿಗೊ. ಇನ್ನೊಂದು ವರ್ಗ – ಸಾಕಾರವಾದಿಗೊ. ಸಾಕಾರವಾದಿಯಾದವ° ತನ್ನ ಎಲ್ಲ ಶಕ್ತಿಗಳ ಬಳಸಿ ಭಗವಂತನ ಸೇವೆಲಿ ತೊಡಗುತ್ತ°. ನಿರಾಕಾರವಾದಿಯಾದವ° ನೇರವಾಗಿ ಭಗವಂತನ ಸೇವೆಲಿ ತೊಡಗುತ್ತನಿಲ್ಲೆ, ಅವ್ಯಕ್ತವಾದ ನಿರಾಕಾರ ಬ್ರಹ್ಮನ ಧ್ಯಾನಲ್ಲಿ ನಿರತನಾಗಿರುತ್ತ°. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರದ ವಿವಿಧ ಪ್ರಕ್ಇಯೆಗಳಲ್ಲಿ ಭಕ್ತಿಸೇವೆ ಅಥವಾ ಭಕ್ತಿಯೋಗವೇ ಶ್ರೇಷ್ಠ ಹೇಳಿ ಭಗವಂತ° ಆಗಳೇ ಹೇಳಿತ್ತಿದ್ದ°. ದೇವೋತ್ತಮ ಪರಮಪುರುಷನ ಸಹವಾಸ ಬೇಕು ಹೇದು ಬಯಕೆ ಇಪ್ಪವ ಭಕ್ತಿಸೇವೆಲಿ ತೊಡಗುತ್ತ°. ಭಕ್ತಿಸೇವೆಲಿ ಭಗವಂತನ ನೇರವಾಗಿ ಪೂಜಿಸುವವಕ್ಕೆ ಸಾಕಾರವಾದಿಗೊ ಹೇಳಿ ಹೆಸರು. ನಿರಾಕಾರ ಬ್ರಹ್ಮನ್ ಧ್ಯಾನಲ್ಲಿ ತೊಡಗುವವಕ್ಕೆ ನಿರಾಕಾರವಾದಿಗೊ ಹೇದು ಹೆಸರು. ಇಲ್ಲಿ ಅರ್ಜುನ° ಇವೆರಡರಲ್ಲಿ ಏವ ನಿಲುವು ಉತ್ತಮ ಹೇದು ಭಗವಂತನತ್ರೆ ಪ್ರಶ್ನಿಸುತ್ತ°.

ಬನ್ನಂಜೆ ಈ ಭಾಗವ ವ್ಯಾಖ್ಯಾನಿಸುತ್ತವು – ಈ ಶ್ಲೋಕಲ್ಲಿ ಮೇಲ್ನೋಟಕ್ಕೆ ಭಗವಂತನ ವಿಶಿಷ್ಟರೂಪದ ಉಪಾಸನೆ ಮತ್ತೆ ಏವುದೇ ರೂಪಂಗಳಿಂದ ವ್ಯಕ್ತವಾಗದ್ದ ನಿರಾಕಾರ ಭಗವಂತನ ಉಪಾಸನೆ  – ಇವೆರಡರಲ್ಲಿ ಏವುದು ಸೂಕ್ತ ಹೇದು ಕೇಳಿದಾಂಗೆ ಕಾಣುತ್ತು. ಆದರೆ, ಇಲ್ಲಿ ಅರ್ಜುನನ  ಮೂಲ ಪ್ರಶ್ನೆಯೇ ಬೇರೆ. ಭಗವಂತನ ಚಿಂತನೆ ಮಾಡ್ತವು ಎಲ್ಲೋರೂ ಭಗವದ್ ಭಕ್ತರಾಗಿರೆಕು ಹೇದೇನಿಲ್ಲೆ. ಭಗವಂತನ ಚಿಂತನೆ ಮಾಡ್ಳೆ ಬೇಕಾಗಿಪ್ಪ ಮೂಲದ್ರವ್ಯ ಪ್ರೀತಿ. ಜ್ಞಾನಪೂರ್ವಕವಾದ ಪ್ರೀತಿಯೇ – ಭಕ್ತಿ. ಮದಲಾಣ ಕಾಲಲ್ಲಿ ಪ್ರತಿಯೊಬ್ಬನ ಮನೆಯ ದೇವರ ಕೋಣೆಲಿ ಒಂದು ವಿಗ್ರಹ ಇರ್ತಿತ್ತು. ಅವರವರ ಉಪಾಸನೆಗೆ ಏವುದು ಇಷ್ಟವೋ ಅಂತಹ ಇಷ್ಟದೇವತೆಯ ವಿಗ್ರಹ. ನಾವು ಈ ಅಂಶವ ವಿಶ್ಲೇಷಿಸಿರೆ ಎಂತಕೆ ಈ ರೀತಿ ಪ್ರತಿಮೆಯ ಮಡಿಕ್ಕೊಂಡು ಪೂಜಿಸಿಗೊಂಡಿತ್ತವು ಹೇಳುವದು ಗೊಂತಾವುತ್ತು. ಇಲ್ಲಿ ಮದಾಲು ನಾವು ನಮ್ಮ ಮನಸ್ಸು ಹೇಂಗೆ ಕೆಲಸ ಮಾಡುತ್ತು ಹೇಳ್ವದರ ವಿಚಾರಮಾಡೆಕು. ಕಣ್ಣಿಂಗೆ ಕಾಣದ್ದರೆ ಮನಸ್ಸು ಗ್ರಹಿಸುತ್ತಿಲ್ಲೆ. ಗ್ರಾಸವಾಗದ್ದರ ಮನಸ್ಸು ಒಪ್ಪುತ್ತಿಲ್ಲೆ. ಉದಾಹರಣಗೆ, ಭಗವಂತ° ‘ಅತ್ಯಂತ ಸುಂದರ’ ಹೇದು ನಾವು ಗ್ರೇಶಿ ಕಣ್ಣುಮುಚ್ಚಿ ಧ್ಯಾನಕ್ಕೆ ಕೂದರೆ ನಮ್ಮ ಮನಸ್ಸು ನಾವು ನೋಡಿದ ಯೇವುದೋ ಒಬ್ಬ ಸುಂದರ ಪುರುಷನ /ವ್ಯಕ್ತಿ/ವಸ್ತು ನವಗೆ ತೋರುಸುತ್ತು. ಹಾಂಗಾಗಿ ಮದಲಾಣೋರು ಭಗವಂತಂಗೆ ನಮ್ಮಾಂಗೆ ಕರಚರಣ ಇದ್ದು, ಆದರೆ ಅವ° ಏವ ಮನುಷ್ಯನಾಂಗೂ ಇಲ್ಲೆ (ಮನುಷ್ಯಗುಣಂದ ವಿಭಿನ್ನ, ಶ್ರೇಷ್ಠ) ಹೇಳ್ವಾಂಗೆ ಅವನ (ಭಗವಂತನ) ಪ್ರತಿಮೆಯ ಕೆತ್ತಿದವು. ಆ ಪ್ರತಿಮೆಯ ನೆಂಪಿಲ್ಲಿ ಮಡಿಕ್ಕೊಂಡು ಕಣ್ಣುಮುಚ್ಚಿ ಭಗವಂತನ ಗುಣಾನುಸಂಧಾನ ಮಾಡಿರೆ, ನವಗೆ ಕೇವಲ ಆ ಮೂರ್ತಿ ಕಾಣುತ್ತೇ ಹೊರತು ನಮ್ಮ ಪರಿಯಚದ ವ್ಯಕ್ತಿಯಲ್ಲ. ಇದರಿಂದ ಧ್ಯಾನ ಸುಲಭಸಾಧ್ಯ ಆವ್ತು. ಮನಸ್ಸು ಏವುದೋ ವ್ಯಕ್ತಿಯ ಚಿಂತುಸದ್ದೆ ಪ್ರತಿಮೆಯ ರೂಪಲ್ಲಿ ಭಗವಂತನ ಕಾಂಬಲೆ ಸುರುಮಾಡುತ್ತು. ಹಾಂಗಾಗಿ ಭಗವಂತನ ಚಿಂತನೆ ಮಾಡ್ಳೆ ಒಂದು ರೂ ಅಗತ್ಯ ಕಂಡತ್ತು. 

ನವಗೆ ಗೊಂತಿಪ್ಪಾಂಗೆ ಮಾತೆ ಶ್ರೀಲಕ್ಷ್ಮಿಯ ಶ್ರೀತತ್ವ, ಅಕ್ಷರ, ಅವ್ಯಕ್ತೆ, ಪ್ರಕೃತಿ, ಹ್ರೀ ಇತ್ಯಾದಿ ಅನೇಕ ಹೆಸರಿಂದ ಹೇಳುತ್ತದು. ಗೀತೆಲೂ ಅನೇಕ ದಿಕ್ಕೆ ಆ ರೀತಿಯ ಸಂಬೋಧನೆ ಕಾಣುತ್ತು. ಕಠೋಪನಿಷತ್ತಿಲ್ಲಿ ಹೇಳ್ತಾಂಗೆ “ಮಹತಃ ಪರಮವ್ಯಕ್ತಮವ್ಯಕ್ತಾತ್ಪುರುಷಃ ಪರಃ” – ಹೇಳಿರೆ, ಮಹತತ್ವಂದ ಅವ್ಯಕ್ತ ತತ್ವ ಹಿರಿದು, ಅವ್ಯಕ್ತ ತತ್ವಂದ ಪುರುಷನಾದ ಭಗವಂತ° ಹಿರಿಯ°.  ಇಲ್ಲಿ ಸ್ಪಷ್ಟವಾವ್ತದು ಎಂತರ ಹೇದರೆ, ಅವ್ಯಕ್ತೆ, ಅಕ್ಷರಾ ಹೇದರೆ ಮಾತೆ ಶ್ರೀಲಕ್ಷ್ಮಿ.

ನಿರಂತರವಾಗಿ ಮನಸ್ಸಿಲ್ಲಿ ನೀನು ಹೇಳಿಪ್ಪ ನಿನ್ನ ಗುಣಂಗಳ ಅನುಸಂಧಾನ ಮಾಡಿಗೊಂಡು, ಶಾಸ್ತ್ರಂಗಳ ಮೂಲಕ ನಿನ್ನ ಮಹಿಮೆ, ಹಿರಿಮೆ, ನಿನ್ನ ರೂಪ ವಿಶೇಷಂಗಳ ಅರ್ತುಗೊಂಡು ಅದರಲ್ಲಿ ಭಕ್ತಿಯ ಬೆಳಶಿಗೊಂಡು ನಿನ್ನ ಉಪಾಸನೆ ಮಾಡಿರೆ ಒಳ್ಳೆದೋ ಅಲ್ಲಾ ಕ್ಷರಾತೀತ (ಅಕ್ಷರ)ವಾದ ಶ್ರೀತತ್ವದ ಉಪಾಸನೆ ಒಳ್ಳೆದೋ? ಏವ ದಾರಿ ಹೆಚ್ಚು ಸೂಕ್ತ? – ಹೇಳ್ವದು ಅರ್ಜುನನ ಪ್ರಶ್ನೆ.

ಶ್ಲೋಕ

ಶ್ರೀ ಭಗವಾನುವಾಚ
ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ ।
ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತತಮಾ ಮತಾಃ ॥೦೨॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಮಯಿ ಆವೇಶ್ಯ ಮನಃ ಯೇ ಮಾಮ್ ನಿತ್ಯ-ಯುಕ್ತಾಃ ಉಪಾಸತೇ । ಶ್ರದ್ಧಯಾ ಪರಯಾ ಉಪೇತಾಃ ತೇ ಮೇ ಯುಕ್ತತಮಾಃ ಮತಾಃ ॥

ಅನ್ವಯ

ಶ್ರೀ ಭಗವನ್ ಉವಾಚ
(ಹೇ ಅರ್ಜುನ!), ಮಯಿ ಮನಃ ಆವೇಶ್ಯ ನಿತ್ಯ-ಯುಕ್ತಾಃ (ಸಂತಃ)  ಯೇ ಪರಯಾ ಶ್ರದ್ಧಯಾ ಉಪೇತಾಃ ಮಾಮ್ ಉಪಾಸತೇ, ತೇ ಯುಕ್ತತಮಾಃ (ಇತಿ) ಮೇ ಮತಾಃ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ಭಗವಂತ° ಹೇಳಿದ°. (ಹೇ ಅರ್ಜುನ! – ಏ ಅರ್ಜುನ!), ಮಯಿ – ಎನ್ನಲ್ಲಿ, ಮನಃ ಅವೇಶ್ಯ – ಮನಸ್ಸಿನ ಸ್ಥಿರಗೊಳುಸಿ, ನಿತ್ಯ-ಯುಕ್ತಾಃ (ಸಂತಃ) ಸದಾನಿರತನಾಗಿದ್ದುಗೊಂಡು, ಯೇ – ಆರು, ಪರಯಾ ಶ್ರದ್ಧಯಾ ಉಪೇತಾಃ – ಅಲೌಕಿಕವಾದ (ಶ್ರೇಷ್ಠ) ಶ್ರದ್ಧೆಂದೆ ಕೂಡಿಗೊಂಡು,  ಮಾಮ್ ಉಪಾಸತೇ – ಎನ್ನ ಉಪಾಸನೆಮಾಡುತ್ತವೋ,   ತೇ – ಅವ್ವು, ಯುಕ್ತ-ತಮಾಃ – ಯೋಗಲ್ಲಿ ಅತ್ಯಂತ ಪರಿಪೂರ್ಣರು, (ಇತಿ – ಹೇದು), ಮೇ ಮತಾಃ – ಎನ್ನಿಂದ ಪರಿಗಣಿಸಲ್ಪಡುತ್ತವು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ° ಹೇಳಿದ° – ಏ ಅರ್ಜುನ!, ಆರು ಎನ್ನ ಬಗೆಲಿ ತುಂಬು ನಂಬಿಕೆಂದ ಮನಸ್ಸಿನ ಸ್ಥಿರಗೊಳುಸಿ ನಿತ್ಯಯುಕ್ತರಾಗಿ ಶ್ರದ್ಧೆಂದ ಎನ್ನ ಉಪಾಸನೆಲಿ ತೊಡಗಿಯೊಂಡಿರುತ್ತವೋ ಅವ್ವೇ ಶ್ರೇಷ್ಠ ಸಾಧಕರು / ಪರಿಪೂರ್ಣರು ಹೇದು ಎನ್ನಿಂದ ಪರಿಗಣಿಸ್ಲಡುತ್ತವು.

ತಾತ್ಪರ್ಯ / ವಿವರಣೆ

ಅರ್ಜುನನ ಪ್ರಶ್ನಗೆ ಭಗವಂತ° ಉತ್ತರ ಹೇಳುತ್ತ° – “ಶ್ರದ್ಧೆಂದ ಆರು ಎನ್ನ ಎನ್ನ ಉಪಾಸನೆ ಮಾಡುತ್ತವೋ ಅವ್ವೇ ಸಾಧಕರಲ್ಲಿ ಶ್ರೇಷ್ಠರು. ಬನ್ನಂಜೆ ವಿವರುಸುತ್ತವು –ಲ್ಲಿ ಶ್ರದ್ಧೆ ಹೇಳಿರೆ ನಂಬಿಕೆ. ಸಾಧನೆಲಿ ಮುಖ್ಯವಾಗಿ ಬೇಕಾದ್ದು ಶ್ರದ್ಧೆ. ಶ್ರದ್ಧೆ ಇಲ್ಲದ್ದೆ ಉಪಾಸನೆ ಮಾಡಿ ಎಂತ ಗುಣವೂ ಇಲ್ಲೆ. ಇದು ಒಂದು ರೀತಿ ಮನಃಶಾಸ್ತ್ರ. ಉದಾಹರಣಗೆ  – ರೋಗಿ ಮತ್ತೆ ವೈದ್ಯ°. ರೋಗಿಗೆ ತನ್ನ ಪರೀಕ್ಷಿಸಿ ಔಷಧಿ ಕೊಡ್ವ ವೈದ್ಯನತ್ರೆ ನಂಬಿಕೆ ಇಲ್ಲದ್ರೆ ತೆಕ್ಕೊಂಬ ಔಷಧ ಅಷ್ಟೊಂದು ಪರಿಣಾಮ ಆವ್ತಿಲ್ಲೆ. ಗಾಢವಾದ ನಂಬಿಕೆ ಇದ್ದರೆ ವೈದ್ಯ° ಏವ ಕಾಯಿಲೆಗೆ ಏವ ಮದ್ದು ಕೊಟ್ರೂ ರೋಗ ಗುಣ ಆವ್ತು!. ಇದು ವೈಜ್ಞಾನಿಕವಾಗಿಯೂ ದೃಢಪಟ್ಟದು. ಹಾಂಗಾಗಿ ನಂಬಿಕೆ ಇಲ್ಲದ್ದೆ ಬರೇ ಕಣ್ಮುಚ್ಚಿ ಉಪಾಸನೆ ಮಾಡ್ವದರಿಂದ ಎಂತ ಪ್ರಯೋಜನವೂ ದಕ್ಕುತ್ತಿಲ್ಲೆ. ದೃಢವಾದ ಶ್ರದ್ಧೆಂದ, ಅರ್ತು, ಭಗವಂತನ ಗುಣರೂಪವ ಧ್ಯಾನ ಮಾಡ್ತದು ಶ್ರೇಷ್ಠ ಭಕ್ತಿ ಹೇದು ಹೇಳಲ್ಪಡುತ್ತು. ಪೂರ್ಣ ಶ್ರದ್ಧೆಂದ ಏವ ರೂಪಂದಲೂ, ಏವ ನಾಮಂದಲೂ ಭಗವಂತನ ಉಪಾಸನೆ ಮಾಡ್ಳಕ್ಕು.  ಭಗವಂತನ ರೂಪ ಅಲ್ಲದ್ದ ರೂಪ ಒಂದೂ ಇಲ್ಲೆ. ಭಗವಂತ° ಸಮಸ್ತ ರೂಪಂಗಳಲ್ಲಿಯೂ ಕಾಣಿಸಿಗೊಂಬ ಮಹಾಶಕ್ತಿ. ಭಗವಂತನ ನಾಮವಲ್ಲದ್ದು ನಾಮವೊಂದಿಲ್ಲೆ. ಪೂರ್ಣ ಶ್ರದ್ಧೆ ಇಪ್ಪಗ ನಾಮ-ರೂಪ ಸಮಸ್ಯೆ ಆವುತ್ತಿಲ್ಲೆ. ಹಾಂಗಾಗಿ ಭಗವಂತ° ಹೇಳಿದ್ದು – “ಎನ್ನ ರೂಪ ಮತ್ತು ಗುಣ ವಿಶೇಷವ ಯಾರು ಶ್ರದ್ಧೆಂದ ಅರ್ತು ಉಪಾಸನೆ ಮಾಡುತ್ತವೋ ಅವ್ವೇ ಶ್ರೇಷ್ಠ ಸಾಧಕರು”. ಇಲ್ಲಿಗೆ ಮೇಲ್ನೋಟ ಪ್ರಶ್ನೆ ಸಾಕರವೋ ನಿರಾಕಾರವೋ ಹೇಳಿ ಕೇಳಿದ್ದಕ್ಕೆ ಸಾಕಾರವೇ (ಸಗುಣಭಕ್ತಿಯೇ ನಿರ್ಗುಣಭಕ್ತಿಂದ) ಶ್ರೇಷ್ಠ ಹೇಳಿ ಹೇಳಿದಾಂಗೆ ಆತು.

[ಈ ವಿಷ್ಯ ಹೇಳ್ವಾಗ ಇನ್ನೊಂದು ವಿಷಯವೂ ನೆಂಪಾತು. ಒಬ್ಬ ಒಂದಿಕ್ಕೆ ಗಣಪತಿ ಹೋಮ ಆವ್ತಾ ಇಪ್ಪದರ ನೋಡಿ ಭಕ್ತಿಂದಲೋ ತನಗೊಂತಿಲ್ಲದ್ದೆಯೋ ಅವನ ಬಾಯಿಂದ ಬಂತು – ‘ಮಹಾಗಣಪತಿಂ ನಮಃ’. ಆನೇಳಿದೆ – ‘ಹಾಂಗೆ ಹೇಳಿದ್ದದು ಸಮ ಅಲ್ಲ, ‘ಗಣಪತಯೇ ನಮಃ’ ಹೇದು ಹೇಳೇಕು. ಅದಕ್ಕೆ ಅವ° ಹೇಳಿದ್ದು – “ದೇವರು ಎನ್ನ ಹೀಂಗೇ ಪೂಜಿಸೆಕು ಹೇಳಿ ಎಲ್ಲಿಯೂ ಹೇಳಿದ್ದನಿಲ್ಲೆ, ಹೇಂಗೆ ಬೇಕಾರು ಅಥವಾ ಗೊಂತಿಪ್ಪಾಂಗೆ ಪೂಜಿಸಿರೆ ಸಾಕು. ಆನೆಂತೂ ಪಂಡಿತ ಅಲ್ಲ”. ಹೀಂಗಿರ್ತವರತ್ರೆ ಚರ್ಚೆ ಮಾಡ್ತದು ಎಂತ ಗುಣ ಇಲ್ಲೆ ಹೇಳಿ ಕಂಡತ್ತು.  ಇಲ್ಲಿ ಗಮನುಸೆಕ್ಕಾದ್ದು – ಮುಗ್ಧ ಭಕ್ತಿಯ ದೇವರು ಮೆಚ್ಚುತ್ತ° ಸರಿ. ಹಾಂಗೇಳಿ ಹೀಂಗಿರ್ತರ  ಮುಗ್ಧ ಭಕ್ತಿ ಹೇಳಿ ಗ್ರೇಶಿರೆ ಅವರವರ ಮೂಢತನವೇ ಸರಿ. ಎಂತ ಮಾಡುತ್ತರೂ ಅದರ ಅರ್ತು, ಅರ್ಥವತ್ತಾಗಿ ಮಾಡೆಕ್ಕಪ್ಪದು ಹೇಳಿ ಭಗವಂತ° ಹೇಳಿದ್ದ° ಹೇಳ್ವದು ಆ ಜೆನಕ್ಕೆ ಗೊಂತಾಗದ್ರೆ ಬಾಕಿದ್ದವ° ಎಂತ ಮಾಡ್ಳೂ ಎಡಿಯ!! ] 

ಇದನ್ನೇ ಇನ್ನೊಂದು ಆಯಾಮಲ್ಲಿ ವಿವೇಚಿಸಿರೆ – ಅರ್ಜುನನ ನೇರ ಪ್ರಶ್ನೆ – “ಸಾಕಾರ ಭಕ್ತಿಸೇವೆ ಪರಿಪೂರ್ಣವೋ ಅಲ್ಲ ನಿರಾಕಾರ ಭಕ್ತಿಸೇವೆ ಉತ್ತಮವೋ?”. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರಕ್ಕೆ ಬೇರೆ ಬೇರೆ ಮಾರ್ಗಂಗಳ ಭಗವಂತ° ಈ ಮದಲೇ ವಿವರಿಸಿದ್ದ°. ಎರಡನೇ ಅಧ್ಯಾಯಲ್ಲಿ ಭಗವಂತ°, ಭಗವಂತ° ಜೀವಿ ಭೌತಿಕ ದೇಹವಲ್ಲ, ಅದೊಂದು ಅಲೌಕಿಕ ಕಿಡಿ. ಪರಿಪೂರ್ಣ ಸತ್ಯ ಹೇಳ್ತದು ಅದೊಂದು ಅಲೌಕಿಕ ಸಮಗ್ರತೆ ಹೇಳಿ ಹೇಳಿದ್ದ. ಏಳನೇ ಅಧ್ಯಾಯಲ್ಲಿ ಜೀವಿಯು ಪರಮ ಸಮಗ್ರತೆಯ ಭಾಗ ಹೇಳಿ ಸೂಚಿಸಿದ್ದ. ಅಂತ್ಯಕಾಲಲ್ಲಿ ಆರು ಭಗವಂತನ ಚಿಂತನೆಮಾಡಿಗೊಂಡು ದೇಹತ್ಯಾಗ ಮಾಡುತ್ತವೋ ಅಂತವು ಭಗವಂತನ ನಿವಾಸವ ಸೇರುತ್ತವು ಹೇಳಿ ಎಂಟನೇ ಅಧ್ಯಾಯಲ್ಲಿ ಹೇಳಿದ್ದ°. ಆರನೇ ಅಧ್ಯಾಯದ ಅಕೇರಿಲಿ, ‘ ಆರು ಸದಾ ತನ್ನಲ್ಲಿ ತನ್ಮಯನಾಗಿರುತ್ತನೋ ಅವನೇ ಅತ್ಯಂತ ಪರಿಪೂರ್ಣ°’ ಹೇಳಿ  ಹೇಳಿದ್ದ°. ಹೀಂಗೆ ಒಟ್ಟಿಲ್ಲಿ ಪ್ರತಿಯೊಂದು ಅಧ್ಯಾಯದ ತೀರ್ಮಾನವಾಗಿ, ಮನುಷ್ಯ° ಭಗವಂತನ ಸಾಕಾರ ರೂಪಲ್ಲಿ ಅನುರಕ್ತನಾಯೇಕು, ಅದೇ ಅತ್ಯುನ್ನತ ಆಧ್ಯಾತ್ಮಿಕ ಸಾಕ್ಷಾತ್ಕಾರ ಹೇಳಿ ಹೇಳಿದ್ದ°.   

ಅಂದರೂ ಭಗವಂತನ ಸಾಕಾರ ರೂಪಲ್ಲಿ ಅನುರಕ್ತರಾಗದ್ದೋರು ಅನೇಕರು ಇದ್ದವು. ಅವು ಭಗವಂತನ ಚಿಂತನೆಲಿ ಸದಾ ಅವರ ಮನಸ್ಸಿನ ನಿರಾಕಾರ ಬ್ರಹ್ಮಜ್ಯೋತಿಗೆ ಬದಲುಸುಲೆ ಪ್ರಯತ್ನ ಪಡುತ್ತವು. ಪರಿಪೂರ್ಣ ಸತ್ಯದ ಅರಿವು ಇಂದ್ರಿಯಂಗೊಕ್ಕೆ ಸಿಕ್ಕುತ್ತಿಲ್ಲೆ. ಅದು ಅವ್ಯಕ್ತ. ಹಾಂಗಾಗಿ ಅವು ಪರಿಪೂರ್ಣ ಸತ್ಯದ ನಿರಾಕಾರ ರೂಪವನ್ನೇ ಧ್ಯಾನಿಸುವದು.

ಹಾಂಗಾಗಿ ಸಾಕಾರ ಭಗವಂತನ ಉಪಾಸನೆ ಶ್ರೇಷ್ಠವೋ ಅಲ್ಲಾ ನಿರಾಕಾರ ಬ್ರಹ್ಮನ್ ಸೇವೆ ಶ್ರೇಷ್ಠವೋ ಹೇದು ಭಗವಂತನಲ್ಲಿ ಜಿಜ್ಞಾಸೆ ಮಡಿಗಿದ್ದದು ಅರ್ಜುನ°. ಅದಕ್ಕೆ ಭಗವಂತನ ಉತ್ತರ – ‘ ಯಾವಾತ°ಎನ್ನಲ್ಲಿ ಮನಸ್ಸಿನ ಕೇಂದ್ರೀಕರಿಸಿ ಶ್ರದ್ಧಾಭಕ್ತಿಂದ ಅರಾಧಿಸುತ್ತನೋ ಅವನೇ ಶ್ರೇಷ್ಠ°’ ಹೇದು ಹೇಳಿದ°. ಮನಸ್ಸಿನ ಒಂದಿಕ್ಕೆ ಕೇಂದ್ರೀಕರುಸೆಕ್ಕಾರೆ ಮನಸ್ಸಿಂಗೆ ಅದು ಒಪ್ಪಿಗೆ ಆಗಿರೆಕು. ಮನಸ್ಸಿಂಗೆ ಅದು ಒಪ್ಪಿಗೆ ಆಯೇಕಾರೆ ಮನಸ್ಸು ಅದರ ಗ್ರಹಿಶೆಕು. ಮನಸ್ಸು ಅದರ ಗ್ರೇಶೆಕ್ಕಾರೆ ಕಣ್ಣಿಂಗೆ ಅದು ಕಂಡಿರೆಕು. ಹಾಂಗಾಗಿ ಇದು ಸಗುಣ ಭಕ್ತಿ / ಸಾಕಾರ ಉಪಾಸನೆ ಉತ್ತಮ ಹೇಳಿದಾಂಗೆ ಆತು. ಇಂತಹ ಸ್ಥಿತಿಲಿ ಕೃಷ್ಣಪ್ರಜ್ಞೆ ಗ್ರಾಹ್ಯ ಸುಲಭ ಸಾಧ್ಯ. ಇಂತಹ ಕೃಷ್ಣಪ್ರಜ್ಞೆಯ ಸ್ಥಿತಿಲಿ ಇಪ್ಪವಂಗೆ ಐಹಿಕ ಚಟುವಟಿಕೆಗಳ ಬಯಕೆ ಬತ್ತಿಲ್ಲೆ. ಎಂತಕೆ ಹೇದರೆ ಅವ° ಮಾಡುತ್ತದೆಲ್ಲವೂ ಭಗವಂತಂಗಾಗಿ. ಅವ° ಸದಾ ಭಗವಂತನ ಸೇವೆಲಿ ಅನುರಕ್ತನಾಗಿರುತ್ತ. ಅವ ಮಾಡುತ್ತದೆಲ್ಲವೂ ಆ ಭಗವಂತಂಗೆ ಅರ್ಪಣೆ ಮಾಡ್ಳೆ. ಅವನ ಪ್ರತಿಯೊಂದು ಕಾರ್ಯವೂ ಭಗವಂತನ ಸೇವೆ ಹೇದು ನಿಶ್ಚಿತ ಮನಸ್ಸಿಂದ.  ಅವ° ಮಾಡುವ ಸ್ನಾನ ಪೂಜೆ ನೈವೇದ್ಯ ಶ್ರವಣ ಪಠಣ ಕಥನ – ಭಗವಂತನ ಪ್ರೀತಿಗೆ. ಅವ ಅಡುಗೆ ಮಾಡುವದು ಭಗವಂತನ ನೈವೇದ್ಯಕ್ಕೆ ಮತ್ತೆ ಅದರ ಮಹಾಪ್ರಸಾದವಾಗಿ ಸ್ವೀಕರುಸುವದು. ಅವ° ಅಂಗಡಿಗೆ ಹೋವ್ತದು ಭಗವಂತಂಗೆ ಅರ್ಪುಸಲೆ ಎಂತದೋ ತಪ್ಪಲೆ ಬೇಕಾಗಿ. ಅವ° ಉಡುಗಿ ಉದ್ದಿ ಸ್ವಚ್ಛಗೊಳುಸುವದು ಭಗವಂತನ ಪರಿಸರ ಶುಚಿಯಾಗಿರೆಕು ಹೇಳ್ವ ಅರ್ಥಲ್ಲಿ. ಹೀಂಗೆ ಅವನ ಪ್ರತಿಯೊಂದು ಚಟುವಟಿಕೆಯೂ ಭಗವಂತಂಗೆ ಅರ್ಪುಸಲೆ. ಇಂತಹ ಕ್ರಿಯೆಯು ಪೂರ್ಣ ಸಮಾಧಿ ಸ್ಥಿತಿಲಿ ಇರ್ತು.

ಶ್ಲೋಕ

ಯೇ ತ್ವಕ್ಷರಮನಿರ್ದೇಶ್ಯಮ್ ಅವ್ಯಕ್ತಂ ಪರ್ಯುಪಾಸತೇ ।
ಸರ್ವತ್ರಗಮಿಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಮ್ ॥೦೩॥

ಸಂನ್ನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ ।
ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ ॥೦೪॥

ಪದವಿಭಾಗ

ಯೇ ತು ಅಕ್ಷರಮ್ ಅನಿರ್ದಿಶ್ಯಮ್ ಅವ್ಯಕ್ತಮ್ ಪರ್ಯುಪಾಸತೇ । ಸರ್ವತ್ರಗಮ್ ಅಚಿಂತ್ಯಮ್ ಚ ಕೂಟಸ್ಥಮ್ ಅಚಲಮ್ ಧ್ರುವಮ್ ॥

ಸಂನ್ನಿಯಮ್ಯ ಇಂದ್ರಿಯ-ಗ್ರಾಮಮ್ ಸರ್ವತ್ರ ಸಮ-ಬುದ್ಧಯಃ । ತೇ ಪ್ರಾಪ್ನುವಂತಿ ಮಾಮ್ ಏವ ಸರ್ವ-ಭೂತ-ಹಿತೇ ರತಾಃ ॥

ಅನ್ವಯ

ಯೇ ತು ಸರ್ವ-ಭೂತ-ಹಿತೇ ರತಾಃ ಸರ್ವತ್ರ ಸಮ-ಬುದ್ಧಯಃ (ಸಂತಃ) ಇಂದ್ರಿಯ-ಗ್ರಾಮಂ ಸಂನ್ನಿಯಮ್ಯ, ಅವ್ಯಕ್ತಮ್, ಅಚಿಂತ್ಯಮ್, ಅನಿರ್ದಿಶ್ಯಮ್, ಸರ್ವತ್ರಗಮ್, ಕೂಟಸ್ಥಮ್, ಅಚಲಮ್, ಧ್ರುವಮ್ ಅಕ್ಷರಮ್ ಚ ಪರ್ಯುಪಾಸತೇ ತೇ ಮಾಂ ಏವ ಪ್ರಾಪ್ನುವಂತಿ ।

ಪ್ರತಿಪದಾರ್ಥ

ಯೇ – ಆರು, ತು – ಆದರೆ (ಆದರೋ), ಸರ್ವ-ಭೂತ-ಹಿತೇ ರತಾಃ – ಸಕಲಜೀವಿಗಳಕಲ್ಯಾಣಕ್ಕಾಗಿ ತೊಡಗಿಪ್ಪವು,  ಸರ್ವತ್ರ ಸಮ-ಬುದ್ಧಯಃ  – ಎಲ್ಲ ದಿಕ್ಕೆ ಸಮಬುದ್ಧಿಯಿದ್ದುಗೊಂಡಿಪ್ಪವು, ಇಂದ್ರಿಯ-ಗ್ರಾಮಮ್ – ಸಕಲ ಇಂದ್ರಿಯಂಗಳ, ಸಂನ್ನಿಯಮ್ಯ – ನಿಯಂತ್ರುಸಿ, ಅವ್ಯಕ್ತಮ್ – ಅವ್ಯಕ್ತವಾದ್ದರ, ಅಚಿಂತ್ಯಮ್ – ಗ್ರೇಶುಲೆಡಿಯದ್ದ (ಚಿಂತನೆಗೆ ಸಿಲುಕದ್ದ), ಅನಿರ್ದಿಶ್ಯಮ್ – ಅನಿರ್ದಿಷ್ಟವಾದ, ಸರ್ವತ್ರಗಮ್ – ಸರ್ವವ್ಯಾಪಕನಾದ, ಕೂಟಸ್ಥಮ್ – ಬದಲಾವಣೆಯಿಲ್ಲದ್ದ (ಸೇರ್ಪಡೆಯಾದ), ಅಚಲಮ್ – ಚಲುಸದ್ದ, ಧ್ರುವಮ್ – ಸ್ಥಿರವಾದ, ಅಕ್ಷರಮ್  – ಕ್ಷರತೀತನಾಗಿಪ್ಪವನ, ಚ – ಕೂಡ, ಪರ್ಯುಪಾಸತೇ – ಸಮರ್ಪಕವಾಗಿ ಆರಾಧಿಸುತ್ತವೋ, ತೇ – ಅವ್ವು, ಮಾಮ್ ಏವ – ಎನ್ನನ್ನೇ, ಪ್ರಾಪ್ನುವಂತಿ – ಪಡೆತ್ತವು (ಹೊಂದುತ್ತವು).

ಅನ್ವಯ

ಸಕಲ ಜೀವಿಗಳ ಕಲ್ಯಾಣಕ್ಕಾಗಿ ತೊಡಗಿಪ್ಪವವರಾಗಿ, ಎಲ್ಲವುದರಲ್ಲಿಯೂ ಸಮಚಿತ್ತವುಳ್ಳವರಾಗಿ/ಸಮಭಾವವುಳ್ಳವರಾಗಿ ತಮ್ಮ ಸಕಲ ಇಂದ್ರಿಯಂಗಳ ನಿಯಂತ್ರುಸಿ ಅವ್ಯಕ್ತ°, ಅಚಿಂತ್ಯ°, ಅನಿರ್ದಿಶ್ಯ°, ಸರ್ವವ್ಯಾಪಕ°, ಬದಲಾವಣೆಯಿಲ್ಲದ್ದವ°, ಅಚಲ°, ಸ್ಥಿರ°,  ಅಕ್ಷರ°ನಾದ (ಪರಮ ಸತ್ಯದ ನಿರಾಕಾರ ಪರಿಕಲ್ಪನೆ ಇದು) ಎನ್ನ ಆರು ಸಂಪೂರ್ಣ ಸಮರ್ಪಕವಾಗಿ ಆರಾಧಿಸುತ್ತವೋ, ಅವ್ವು ಅಕೇರಿಗೆ ಎನ್ನನ್ನೇ ಹೊಂದುತ್ತವು.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷನಾದ ಭಗವಂತನ ನೇರವಾಗಿ ಪೂಜಿಸದ್ದೆ (ಸಕಾರ ಭಕ್ತಿ) ಅದೇ ಗುರಿಯ ಪರೋಕ್ಷ ರೀತಿಲಿ (ನಿರಾಕಾರ ಭಕ್ತಿ) ಮುಟ್ಳೆ ಪ್ರಯತ್ನಿಸುವವು ಕೂಡ ಅದೇ ಗುರಿಯಾದ ಭಗವಂತನನ್ನೇ ಅಕೇರಿಗೆ ಸೇರುತ್ತವು. ‘ವಾಸುದೇವನೇ ಸರ್ವಸ್ವ’ ಹೇದು ತಿಳ್ಕೊಂಡು ಜ್ಞಾನಿ ಹಲವು ಜನ್ಮಂಗಳ ನಂತ್ರ ಭಗವಂತನಲ್ಲಿ ಆಶ್ರಯವ ಅರಸುತ್ತ°. ಹಲವು ಜನ್ಮಂಗಳ ಮತ್ತೆ ಮನುಷ್ಯಂಗೆ ಪೂರ್ಣಜ್ಞಾನ ಬಂದಪ್ಪಗ ಅವ° ಭಗವಂತಂಗೆ ಸಂಪೂರ್ಣವಾಗಿ ಶರಣಾಗತನಾವುತ್ತ° ಮತ್ತು ಅಕೇರಿಗೆ ಅವನನ್ನೇ ಸೇರುತ್ತ°. ಈ ಶ್ಲೋಕಲ್ಲಿಯೂ ಹೇಳಿಪ್ಪಂತೆ ಭಗವಂತನ ಸಾಕ್ಷಾತ್ಕಾರ ಆಯೇಕ್ಕಾರೆ ಸಂಪೂರ್ಣ ಇಂದ್ರಿಯ ನಿಯಂತ್ರಣ ಸಾಧಿಸಿರೆಕು, ಎಲ್ಲರಲ್ಲೂ ಸಮಭಾವವ ಹೊಂದಿದವನಾಗಿರೆಕು, ಎಲ್ಲ ಜೀವಿಗಳ ಹಿತವ ಬಯಸುವವನಾಗಿರೆಕು. ಅಷ್ಟಪ್ಪಗಷ್ಟೇ ಭಗವಂತನೇ ಸರ್ವಸ್ವ, ಅಚಿಂತ್ಯ°, ಅನಿರ್ದಿಶ್ಯ°, ಕ್ಷರಾತೀತ°, ಅಚಲ°, ಸ್ಥಿರ° ಹೇಳ್ವ ಸತ್ಯ ಜ್ಞಾನ ಪ್ರಾಪ್ತಿ ಆವ್ತು. ವ್ಯಕ್ತಿಗತ ಆತ್ಮಲ್ಲಿ ಪರಮಾತ್ಮನ ಕಾಂಬಲೆ ಇಂದ್ರಿಯ ನಿಗ್ರಹ ಅನಿವಾರ್ಯ ಹೇಳ್ವದು ಇಲ್ಲಿ ಗೊಂತಾವ್ತು. ಅಂಬಗಷ್ಟೇ ಭಗವಂತ° ಸರ್ವಗತ ಹೇಳ್ವ ಸತ್ಯದ ತಿರುಳು ಅರ್ಥ ಆವ್ತು. ಅಂತಹ ಮನುಷ್ಯ ಆರಲ್ಲಿಯೂ ಅಸೂಯೆ ಪಡುತ್ತನಿಲ್ಲೆ. ಎಲ್ಲರಲ್ಲಿಯೂ, ಎಲ್ಲವುದರಲ್ಲಿಯೂ ಸಮಭಾವವ ಮಡಿಕ್ಕೊಂಡವವನಾಗಿರುತ್ತ°. ಆ ಸ್ಥಿತಿಲಿ ಭಗವಂತನ ಆರಾಧನೆ ಮಾಡುವವ ಅಕೇರಿಗೆ ಭಗವಂತನ ಸೇರುತ್ತ ಹೇಳ್ವದು ಭಗವಂತ° ಇಲ್ಲಿ ಹೇಳಿದ್ದದು.

ಇದನ್ನೇ ಇನ್ನೊಂದು ಆಯಾಮಲ್ಲಿ ಬನ್ನಂಜೆಯವು ವಿವರಿಸುತ್ತವು – ಅವ್ಯಕ್ತವೂ ಅಳಿವಿರದ್ದ ತತ್ವ. ಮಾತಿಂಗೆ ನಿಲುಕದ, ಚಿಂತನಗೆ ಎಟುಕ್ಕದ್ದ ತತ್ವ – ಆ ‘ಅವ್ಯಕ್ತತತ್ವ’. ಆಗಸಲ್ಲಿ ನೆಲೆಸಿ ಎಲ್ಲೆಡೆಯೂ ತುಂಬಿಗೊಂಡಿಪ್ಪಂಥದ್ದು, ನೆಲೆಗೆಡದ ನಿರ್ವಿಕಾರವಾದ ತತ್ವ. ಇಂದ್ರಿಯಗಡಣವ ಬಿಗಿಹಿಡುದು ಎಲ್ಲ ದಿಕ್ಕೆ ಸಮದೃಷ್ಟಿಂದ ಸಕಲ ಜೀವಿಗಳ ಒಳಿತಿನ ಬಯಸಿಗೊಂಡು ಇಂಥ ಅವ್ಯಕ್ತತತ್ವವ ಆರಾಧಿಸುವವೂ ಕೂಡ ಅಕೇರಿಗೆ ಭಗವಂತನನ್ನೇ ಸೇರುತ್ತವು.

ಅವ್ಯಕ್ತತತ್ವ – ಶ್ರೀಲಕ್ಷ್ಮಿ. ಲಕ್ಷ್ಮಿಯ ಉಪಾಸನೆ ಬಗ್ಗೆ ಇಲ್ಲಿ ಭಗವಂತ° ಹೇಳಿದ್ದದು. ಲೋಕನೀತಿಗೂ ಭಗವಂತನ ಉಪಾಸನೆಗೂ ಒಂದು ವ್ಯತ್ಯಾಸ ಇದ್ದು. ಲೋಕಲ್ಲಿ ಸಾಮಾನ್ಯವಾಗಿ ಅಬ್ಬೆ ಏವತ್ತೂ ತನ್ನ ಮಗನ ತಪ್ಪಿನ ಕ್ಷಮಿಸುವವಳಾವ್ತು. ಅಪ್ಪ° ಶಿಕ್ಷಿಸುತ್ತ (ತಿದ್ದಲೆ). ಆದರೆ ಅಬ್ಬೆ ಶ್ರೀಲಕ್ಷ್ಮಿಯ ಉಪಾಸನೆ ಮತ್ತೆ ಅಪ್ಪ° ಭಗವಂತನ ಉಪಾಸನೆಲಿ ಇದು ವ್ಯತಿರಿಕ್ತ. ಉಪಾಸನೆಲಿ ಏನಾರು ಲೋಪ ದೋಷಂಗೊ ಇದ್ದರೆ ಅಬ್ಬೆ ಕ್ಷಮಿಸ. ಆದರೆ ಭಗವಂತ° (ಅಪ್ಪ°) ಕ್ಷಮಿಸುತ್ತ°. ಈ ಕಾರಣಕ್ಕಾಗಿ ಅವ್ಯಕ್ತೆಯಾದ ಅಕ್ಷರೆಯ (ಅಕ್ಷರಾ ಅಬ್ಬೆಯ) ಉಪಾಸನೆ ಕಷ್ಟ. ಇಲ್ಲಿ ಭಗವಂತ° ಮಾತೆ ಲಕ್ಷ್ಮಿಯ ಉಪಾಸನೆ ಮಾಡ್ತೋರು ತಿಳಿದಿರೆಕ್ಕಾದ ಅಂಶವ ವಿವರಿಸಿದ್ದ°. ಅಳಿವಿರದ್ದ ದೇಹವಿಪ್ಪ ಅಬ್ಬೆ ಅದು ಅಕ್ಷರ (ಅಕ್ಷರೆ), ನಮ್ಮ ಬುದ್ಧಿಗೆ ಗೋಚರವಾಗದ್ದ ಪ್ರಕೃತಿ ಅದು ಅನಿರ್ದೇಶ್ಯೆ, ಎಂದೂ ವ್ಯಕ್ತವಾಗದ್ದೆ ಇಪ್ಪ ಆ ಅಬ್ಬೆ ಅವ್ಯಕ್ತೆ. ಈ ಎಲ್ಲಾ ಗುಣಂಗೊ ಭಗವಂತಂಗೂ ಅನ್ವಯವಾವ್ತು.

ಜಗತ್ತಿನ ಸೃಷ್ಟಿಗೆ ಮೂಲ ತತ್ವವಾದ ಆಕಾಶಲ್ಲಿ ನೆಲೆಸಿ, ಇಡೀ ವಿಶ್ವದ ವಿಸ್ತಾರಕ್ಕೆ ಕಾರಣಳಾದೋಳು ಲಕ್ಷ್ಮಿ. ಸ್ಥಿರ ಮತ್ತೆ ಶಾಶ್ವತವಾಗಿಪ್ಪ ಅದು (ಅಬ್ಬೆ ಲಕ್ಷ್ಮಿ) ಸದಾ ಭಗವಂತನ ಪಾದವ ಸೇವಿಸಿಗೊಂಡಿಪ್ಪದು. ಇಂತಹ ಶಕ್ತಿ ದೇವತೆಯ ಉಪಾಸನೆ ಮಾಡ್ಲೆ ಕಠೋರವಾದ ಇಂದ್ರಿಯ ನಿಗ್ರಹ ಅಗತ್ಯ. ಎಲ್ಲವನ್ನೂ ಸಮಬುದ್ಧಿಂದ ಕಂಡುಗೊಂಡು, ಯಾವುದೇ ನ್ಯೂನತೆ ಇಲ್ಲದ್ದೆ ಉಪಾಸನೆ ಮಾಡುವದು ( ಪರ್ಯುಪಾಸತೇ – ಸರಿಯಾದ ಸಮರ್ಪಕ ರೀತಿಲಿ ಉಪಾಸನೆ ಮಾಡುವದು) ಅತ್ಯಗತ್ಯ. ಉದಾಹರಣೆಗೆ ಲಲಿತಾಸಹಸ್ರನಾಮ ಪಾರಾಯಣ. ಇಲ್ಲಿ ರಜ ಲೋಪದೋಷ ಆದರೂ ಅದರಿಂದ ಅನರ್ಥವಾವ್ತು. ಈ ರೀತಿ ಅತ್ಯಂತ ನಿಯಮಬದ್ಧವಾಗಿ ಅವ್ಯಕ್ತತತ್ವದ ಉಪಾಸನೆಂದ ಭಗವಂತನ ಸೇರ್ಲೆ ಸಾಧ್ಯ ಹೇಳಿ ಇಲ್ಲಿ ಭಗವಂತ° ಹೇಳಿದ್ದದು.

ಶ್ಲೋಕ

ಕ್ಲೇಶೋsಧಿಕತರಸ್ತೇಷಾಮ್ ಅವ್ಯಕ್ತಾಸಕ್ತಚೇತಸಾಮ್ ।
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ॥೦೫॥

ಪದವಿಭಾಗ

ಕ್ಲೇಶಃ ಅಧಿಕತರಃ ತೇಷಾಮ್ ಅವ್ಯಕ್ತ-ಆಸಕ್ತ-ಚೇತಸಾಮ್ । ಅವ್ಯಕ್ತಾ ಹಿ ಗತಿಃ ದುಃಖಮ್ ದೇವಹವದ್ಭಿಃ ಅವಾಪ್ಯತೇ ॥ 

ಅನ್ವಯ

ಅವ್ಯಕ್ತ-ಆಸಕ್ತ-ಚೇತಸಾಂ ತೇಷಾಂ ಅಧಿಕತರಃ ಕ್ಲೇಶಃ (ಅಸ್ತಿ/ಭವತಿ) । (ತೈಃ )ದೇಹವದ್ಭಿಃ ಅವ್ಯಕ್ತಾ ಗತಿಃ ದುಃಖಮ್ ಅವಾಪ್ಯತೇ ಹಿ ।

ಪ್ರತಿಪದಾರ್ಥ

ಅವ್ಯಕ್ತ-ಆಸಕ್ತ-ಚೇತಸಾಮ್ – ಅವ್ಯಕ್ತವಾಗಿಪ್ಪದರಲ್ಲಿ ಆಸಕ್ತಿ ಹೊಂದಿಕೊಂಡಿಪ್ಪವರ (ಅವ್ಯಕ್ತತತ್ವಾಸಕ್ತರಿಂಗೆ  ಹೇಳಿ ಅರ್ಥ), ತೇಷಾಮ್ – ಅವರ (ಅವಕ್ಕೆ), ಅಧಿಕತರಃ ಕ್ಲೇಶಃ ಅಸ್ತಿ/ಭವತಿ – ಅತೀಹೆಚ್ಚು ಕ್ಲೇಶ (ಚಿಂತೆ/ಕಷ್ಟ/ತೊಂದರೆ) ಇರ್ತು/ಆವ್ತು.  ತೈಃ – ಅವರಿಂದ, ದೇಹವದ್ಭಿಃ – ದೇಹವುಳ್ಳವರಿಂದ, ಅವ್ಯಕ್ತಾ ಗತಿಃ – ಅವ್ಯಕ್ತದ ಕಡೆಂಗೆ, ದುಃಖಮ್ – ದುಃಖವು/ತೊಂದರೆಯು, ಅವಾಪ್ಯತೇ – ಹೊಂದಲ್ಪಡುತ್ತು, ಹಿ – ಖಂಡಿತವಾಗಿಯೂ.

ಅನ್ವಯಾರ್ಥ

ಪರಮ ಪ್ರಭುವಿನ ಅವ್ಯಕ್ತವಾದ ಮತ್ತೆ ನಿರಾಕಾರವಾದ ರೂಪವ ಪ್ರೀತಿಸುವವಕ್ಕೆ ಪ್ರಗತಿ ತುಂಬಾ ಕ್ಲೇಶಕರವಾಗಿರ್ತು. ಆ ಶಿಸ್ತಿಲ್ಲಿ ಅವ್ಯಕ್ತದ ಕಡೇಂಗೆ ಮುಂದುವರಿವದು ದೇಹಧಾರಿಗಳಿಂದ  ದುಃಖವೇ (ಕಷ್ಟವೇ) ಹೊಂದಲ್ಪಡುತ್ತು.

ತಾತ್ಪರ್ಯ / ವಿವರಣೆ

ಭಗವಂತನ ನಿರ್ಗುಣೋಪಾಸನೆ ಅಷ್ಟು ಸುಲಭಕರ ಅಲ್ಲ ಹೇಳಿ ಭಗವಂತ° ಇಲ್ಲಿ ಹೇಳಿದ್ದ°. ಆ ಗತಿ / ಹಾದಿ ದೇಹಾಭಿಮಾನಿಗೊಕ್ಕೆ ಪ್ರಯಾಸಕರ. ಅವ್ಯಕ್ತತತ್ವದ ಉಪಾಸನೆ ಮೆಚ್ಚುವವಕ್ಕೆ ಕ್ಲೇಶ (ದಣಿವು/ಕಷ್ಟ) ಹೆಚ್ಚು. ಅವ್ಯಕ್ತತತ್ವ ಉಪಾಸನೆ ಮೂಲಕ ಮೋಕ್ಷದ ದಾರಿ ಸಾಧಕರಿಂಗೆ ಕಷ್ಟದ ಮತ್ತು ಬಳಸು ದಾರಿ.

ಪರಮ ಪ್ರಭು ಭಗವಂತನ ಅಚಿಂತ್ಯವೂ, ಅವ್ಯಕ್ತವೂ, ನಿರಾಕಾರವೂ ಆದ ರೂಪದ ಮಾರ್ಗವ ಅನುಸರುಸುವ ಅಲೌಕಿಕವಾದಿಗಳ ಜ್ಞಾನಯೋಗಿಗೊ ಹೇದು ಹೇಳುತ್ತದು. ಸಂಪೂರ್ಣ ಕೃಷ್ಣಪ್ರಜ್ಞೆಲಿದ್ದುಗೊಂಡು ಭಗವಂತನ ಭಕ್ತಿಸೇವೆಲಿ ನಿರತರಾಗಿಪ್ಪೋರ ಭಕ್ತಿಯೋಗಿಗೊ ಹೇದು ಹೇಳುವದು. ಇಲ್ಲಿ ಜ್ಞಾನಯೋಗ ಮತ್ತೆ ಭಕ್ತಿಯೋಗಗಳ ನೆಡುಕಾಣ ವ್ಯತ್ಯಾಸವ ವಿವರಿಸಲ್ಪಟ್ಟಿದು. ಎರಡು ಉಪಾಸನೆಯ ಗುರಿ ಒಂದೇ (ಅಕೇರಿಗೆ ಆ ಭಗವಂತನ ಸೇರುವದು) ಆಗಿದ್ದರೂ ಜ್ಞಾನಯೋಗದ ಪ್ರಕ್ರಿಯೆ ತುಂಬಾ ಕ್ಲೇಶಕರವಾದ್ದು ಹೇಳಿ ಇಲ್ಲಿ ಭಗವಂತ° ಹೇಳಿದ್ದ. ಆದರೆ, ದೇವೋತ್ತಮ ಪರಮ ಪುರುಷನ ನೇರಸೇವೆಯ ಭಕ್ತಿಯೋಗದ ಮಾರ್ಗ ಇನ್ನೂ ಸುಲಭವಾಗಿಪ್ಪದು ಮತ್ತು ದೇಹಧಾರಿಯಾದ ಆತ್ಮಕ್ಕೆ ಸಹಜವಾಗಿಪ್ಪಂತಾದ್ದು. ಅನಾದಿಕಾಲಂದ ವ್ಯಕ್ತಿಗತ ಆತ್ಮವು ದೇಹಲ್ಲಿ ವಾಸವಾಗಿದ್ದು. ತಾನು ದೇಹ ಅಲ್ಲ ಹೇಳ್ವದು ತಾತ್ವಿಕವಾಗಿ ಅರ್ತುಗೊಂಬದು ಬಹುಕಷ್ಟ. ಹಾಂಗಾಗಿ ಭಕ್ತಿಯೋಗವು ವಿಗ್ರಹ ಪೂಜೆಯ ಪೂಜಾರ್ಹ ಹೇದು ಸ್ವೀಕರುಸುತ್ತು. ಎಂತಕೆ ಹೇದರೆ, ಇಲ್ಲಿ ಮನಸ್ಸಿಲ್ಲಿ ಸ್ಥಿರವಾಗಿಪ್ಪ ದೈಹಿಕ ಪರಿಕಲ್ಪನೆಯ ಹೀಂಗೆ ಅನ್ವಯಿಸುವದು ಸುಲಭ ಸಾಧ್ಯ ಆವ್ತು. ದೇವಸ್ಥಾನಲ್ಲಿಯೋ, ಮಂದಿರಲ್ಲಿಯೋ, ಮನೇಲಿಯೋ ದೇವೋತ್ತಮ ಪರಮ ಪುರುಷನ ವಿಗ್ರಹ ರೂಪಲ್ಲಿ ಪೂಜಿಸುವದು ಮಿಥ್ಯ ಕಾಲ್ಪನಿಕ ಪ್ರತಿಮೆಯ ಆರಾಧನೆ ಅಲ್ಲ. ಪೂಜೆ ಭಗವಂತನ ಗುಣಂಗಳ ಹೊಂದಿಪ್ಪ ಅಥವಾ ಹೊಂದಿಲ್ಲದ್ದ, ಹೇಳಿರೆ., ಸಗುಣ ಮತ್ತೆ ನಿರ್ಗುಣ ರೀತಿಗಳಲ್ಲಿ ಏವುದಾರು ಆದಿಕ್ಕು ಹೇಳ್ವದು ವೈದಿಕ ಸಾಹಿತ್ಯದ ಸಮರ್ಥನೆ.  ದೇವಸ್ಥಾನಲ್ಲಿ ವಿಗ್ರಹ ಪೂಜಿಸುವದು ಸಗುಣ ಪೂಜೆ. ಎಂತಕೆ ಹೇಳಿರೆ ಭೌತಿಕ ಗುಣಂಗೊ ಭಗವಂತನ ಚಿತ್ರಿಸುತ್ತು. ಆದರೆ, ಕಲ್ಲು, ಮರ ಅಥವಾ ಚಿತ್ರ ಮೊದಲಾದ ಭೌತಿಕ ಗುಣಂಗೊ ಭಗವಂತನ ಚಿತ್ರಿಸಿರೂ ವಾಸ್ತವವಾಗಿ ಭಗವಂತ° ಭೌತಿಕ° ಅಲ್ಲ. ಭಗವಂತನ ಪರಿಪೂರ್ಣ ಸ್ವಭಾವ ಇದು.

ಆಚಾರ್ಯ° ಶ್ರೀಮದ್ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಗೀತೋಪನಿಷದ್ – ಭಗವದ್ಗೀತಾ ಯಥಾರೂಪಲ್ಲಿ ಉಲ್ಲೇಖಿಸಿಪ್ಪ ಒಂದು ಉದಾಹರಣೆಯ ಇಲ್ಲಿ ನಾವು ಗಮನುಸಲಕ್ಕು. ನಾವು ದಾರಿಲಿ ಕೆಲವು ಅಂಚೆಪೆಟ್ಟಿಗೆಗಳ ಕಾಂಬಲೆಡಿಗು. ನಮ್ಮ ಪತ್ರಂಗಳ ಆ ಪೆಟ್ಟಿಗೆಲಿ ಹಾಕಿರೆ ಅದು ಕಷ್ಟ ಇಲ್ಲದ್ದೆ ಸಹಜವಾಗಿ ಅದರ ಗುರಿಯ (ವಿಳಾಸವ) ಸೇರುತ್ತು. ಆದರೆ ಅಂಚೆಕಛೇರಿ ಅಧಿಕೃತವಾಗಿ ಪರಿಗಣುಸದ್ದ ಎಲ್ಯೋ ಮಡಿಕ್ಕೊಂಡಿಪ್ಪ, ಅನುಕರಣೆ ಪೆಟ್ಟಿಗೆ ಅಥವಾ ಉಪಯೋಗುಸದ್ದ ಹಳೇ ಪೆಟ್ಟಿಗೆಲಿ ಪತ್ರ ಹಾಕಿರೆ ಅದು ಸೇರ್ಲೆ ಇಲ್ಲೆ.  ಹಾಂಗೇ, ಭಗವಂತಂಗೆ ವಿಗ್ರಹ ರೂಪಲ್ಲಿ ಒಂದು ಅಧಿಕೃತ ಚಿತ್ರಣ ಇದ್ದು. ಇದಕ್ಕೆ ಅರ್ಚಾವಿಗ್ರಹ ಹೇದು ಹೆಸರು. ಈ ಅರ್ಚಾವಿಗ್ರಹವು ಭಗವಂತನ ಸ್ವರೂಪ. ಆ ರೂಪದ ಮೂಲಕ ನಾವು ಭಗವಂತನ ಸೇವೆಯ ಮಾಡುವದರ ಭಗವಂತ° ಸ್ವೀಕರುಸುತ್ತ°. ಭಗವಂತ° ಸರ್ವಶಕ್ತ°. ಹಾಂಗಾಗಿ, ಅರ್ಚಾವಿಗ್ರಹದ ಸ್ವರೂಪದ ಮೂಲಕ , ಭಕ್ತಂಗೆ ಬದ್ಧ ಬದುಕಿಲ್ಲಿ ಅನುಕೂಲ ಮಾಡುಕೊಡ್ವದಕ್ಕೆ ಅವನ ಸೇವೆಯ ಭಗವಂತ ಸ್ವೀಕರುಸುತ್ತ°. ಹಾಂಗಾಗಿ, ಆ ಪರಮನಾದ ಭಗವಂತನ ಹತ್ರಂಗೆ ನೇರವಾಗಿ ಸಾಗಲೆ ಭಕ್ತಂಗೆ ಏವ ಕಷ್ಟವೂ ಇಲ್ಲೆ. ಆದರೆ ಆಧ್ಯಾತ್ಮಿಕ ಸಾಕ್ಶಾತ್ಕಾರಕ್ಕೆ ನಿರಾಕಾರ ಮಾರ್ಗವ ಅನುಸರುಸುವವಕ್ಕೆ ಕಷ್ಟ ಇದ್ದು. ಉಪನಿಷತ್ತುಗಳಂತಹ ವೇದ ಸಾಹಿತ್ಯದ ಮೂಲಕ ಅವು ಭಗವಂತನ ಅವ್ಯಕ್ತ ಲಕ್ಷಣವ ಅರ್ಥಮಾಡೆಕು. ಅವ್ವು ಭಾಷೆಯನ್ನೂ, ಕಲ್ಪನೆಗೆ ನಿಲುಕದ ಭಾವವನ್ನೂ ಅರ್ಥಮಾಡೆಕು, ಹಾಂಗೇ, ಎಲ್ಲ ಪ್ರಕ್ರಿಯೆಂಗಳನ್ನೂ ಸಾಕ್ಷಾತ್ಕಾರ ಮಾಡಿಕೊಂಡಿರೆಕು. ಸಾಮಾನ್ಯ ಮನುಷ್ಯರಿಂಗೆ ಇದು ಸುಲಭಸಾಧ್ಯವಲ್ಲ. ಭಕ್ತಿಸೇವೆಲಿ ನಿರತನಾಗಿಪ್ಪ ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ ಯೋಗ್ಯ ಗುರುವಿನ ಮಾರ್ಗದರ್ಶನ ಮಾತ್ರಂದ ವಿಗ್ರಹಕ್ಕೆ ವಿಧಿಪೂರ್ವಕ ಪ್ರಣಾಮವ ಅರ್ಪಿಸುವ ಮಾತ್ರಂದ ಭಗವಂತನ ಮಹಿಮೆಯ ಕೇಳ್ವದರ ಮೂಲಕ, ಭಗವಂತನ ಪ್ರಸಾದದ ಶೇಷಭಾಗವ ಸ್ವೀಕರುಸುವದರ ಮೂಲಕ ಸುಲಭವಾಗಿ ದೇವೋತ್ತಮ ಪರಮ ಪುರುಷನ ಸಾಕ್ಷಾತ್ಕರಿಸಿಗೊಂಬಲೆಡಿಗು. ಹೀಂಗೆ ಸಾಕಾರವಾದಿ ಸಗುಣ ಭಕ್ತಿಸೇವೆಯ ಮೂಲಕ ಯಾವುದೇ ಅಪಾಯ ಇಲ್ಲದ್ದೆ ನೇರವಾಗಿ ಭಗವಂತನತ್ರೆ ಹೋಪಲೆ ಎಡಿಗು. ನಿರಾಕಾರವಾದಿ ನಿರ್ಗುಣ ಭಕ್ತಿಸೇವೆಯ ಮೂಲಕ ಅಕೇರಿಲಿ ಪರಮ ಸತ್ಯವ ಸಾಕ್ಷಾತ್ಕಾರ ಮಾಡಿಗೊಂಬಲೆಡಿಗಾಗದ್ದೆ ಎಡೆಲಿ ಜಾರಿ ಬೀಳುವ ಅಪಾಯ ಹೆಚ್ಚು. ಭಗವಂತನಲ್ಲಿ ಸಂಪೂರ್ಣ ಶರಣಾಗತಿಯ ಭಕ್ತಿಸೇವೆ ಸುಲಭ. ಅದಲ್ಲದ್ದೆ ಏವುದು ಬ್ರಹ್ಮನ್, ಏವುದು ಬ್ರಹ್ಮನ್ ಅಲ್ಲ ಹೇಳಿಗೊಂಡೇ ವೃಥಾ ಚಿಂತಿಸಿ ಮನಸ್ಸಿಲ್ಲಿ ಚಂಚಲವ ತಂದುಗೊಂಡು ಇಡೀ ಜೀವಮಾನವ ಅದರಲ್ಲಿ ಕಳುದರೆ ಬರೇ ಕ್ಲೇಶವಷ್ಟೆ ಸಿಕ್ಕುವದು. ಹಾಂಗಾಗಿ ಮನುಷ್ಯ° ಆತ್ಮಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವ ಅನುಸರುಸೆಕ್ಕಾದ್ದಿಲ್ಲೆ. ಎಂತಕೆ ಹೇಳಿರೆ ಕಡೆಂಗೆ ಪರಿಣಾಮ ಆ ಕಷ್ಟದ ಮಾರ್ಗಲ್ಲಿ ಅನಿಶ್ಚಯ.  ಕೃಷ್ಣಪ್ರಜ್ಞೆಯ ಪ್ರಕ್ರಿಯೆ ಹೇಳಿರೆ ಭಕ್ತಿಸೇವೆಲಿ ಸಂಪೂರ್ಣವಾಗಿ ತೊಡಗುವದು. ಪ್ರತಿಯೊಂದು ವ್ಯಕ್ತಿಗತ ಜೀವಾತ್ಮಕ್ಕೂ ಇದೇ ಅತ್ಯುತ್ತಮ ಮಾರ್ಗ. ಈ ಭಕ್ತಿಸೇವೆಯ ಅಲಕ್ಷಿಸಿದರೆ ಮನುಷ್ಯ ನಾಸ್ತಿಕತಗೆ ಜಾರುವ ಅಪಾಯ ಇದ್ದು. ಎಂತಕೆ ಹೇಳಿರೆ ಅವ್ಯಕ್ತವಾದ್ದರ, ಅನೂಹ್ಯವಾದ್ದ್ದರ ಹತ್ರಂಗೆ ಇಂದ್ರಿಯಂಗೊ ಹೋಗ. ಹಾಂಗಾಗಿ ಅವ್ಯಕ್ತವೂ, ಅನೂಹ್ಯವೂ ಆಗಿಪ್ಪದ್ದಂತದ್ದರ್ಲಿ ಗಮನವ ಕೇಂದ್ರೀಕರುಸುವ ಪ್ರಯತ್ನ ಸುಲಭವಲ್ಲ, ಗುರಿ ತಲುಪುವ ಸಾಧ್ಯತೆ ಕಠಿಣ.

ಇದನ್ನೇ ಇನ್ನೊಂದು ಆಯಾಮಲ್ಲಿ ಹೇಳ್ವದಾದರೆ, ಶಕ್ತಿ (ಶ್ರೀತತ್ವದ) ಉಪಾಸನೆ ಮಾಡುವವಕ್ಕೆ ‘ಅಧಿಕತರ ಕ್ಲೇಶಃ’.  ಉಪಾಸನೆ ತುಂಬಾ ಕಷ್ಟ. ಇದು ನೇರ ಹಾದಿಯ ಬಿಟ್ಟು ಸುತ್ತುದಾರಿಲಿ ಹೋಪಲೆ ಹೆರಟಾಂಗೆ. ಸಾಧಕರು ಇದರ ಬಹಳ ಕಷ್ಟಂದ ಸಾಧುಸೆಕು. ಕಾರಣ – ಈ ಮದಲೇ ಹೇಳಿಪ್ಪಂತೆ , ಇಂದ್ರಿಯಂಗೊ ಅವ್ಯಕ್ತ ತತ್ವವ ಗ್ರೇಶುಲೆ ಕಷ್ಟ, ಗುರಿತಲುಪುವ ಮದಲೆ ಜಾರಿ ದಾರಿ ತಪ್ಪುವ ಅಪಾಯ ಹೆಚ್ಚು, ಸಂಪೂರ್ಣ ಇಂದ್ರಿಯ ನಿಗ್ರಹವೂ ಸುಲಭ ಮಾತಲ್ಲ. ಹಾಂಗೇ ಶ್ರೀ ಮಾತೆ  ಭಗವಂತನ ಉಪಾಸನೆಲಿ ಬಹು ಕಟ್ಟುನಿಟ್ಟು (ಸ್ಟ್ರಿಕ್ಟ್), ಸಣ್ಣ ಲೋಪದೋಷಂಗಳನ್ನೂ ಅಬ್ಬೆ ಸಹಿಸ.

ಶ್ಲೋಕ

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ ।
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ ॥೦೬॥

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ ।
ಭವಾಮಿ ನ ಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಮ್ ॥೦೭॥

ಪದವಿಭಾಗ

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್-ಪರಾಃ । ಅನನ್ಯೇನ ಏವ ಯೋಗೇನ ಮಾಮ್ ಧ್ಯಾಯಂತಃ ಉಪಾಸತೇ ॥

ತೇಷಾಮ್ ಅಹಮ್ ಸಮುದ್ಧರ್ತಾ ಮೃತ್ಯು-ಸಂಸಾರ-ಸಾಗರಾತ್ । ಭವಾಮಿ ನ ಚಿರಾತ್ ಪಾರ್ಥ ಮಯಿ ಆವೇಶಿತ-ಚೇತಸಾಮ್ ॥

ಅನ್ವಯ

ಯೇ ತು ಮತ್-ಪರಾಃ (ಸಂತಃ), ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ, ಮಾಂ ಧ್ಯಾಯಂತಃ ಅನನ್ಯೇನ ಯೋಗೇನ ಏವ ಉಪಾಸತೇ ,

ಹೇ ಪಾರ್ಥ!, ಮಯಿ ಆವೇಶಿತ-ಚೇತಸಾಂ ತೇಷಾಂ ಮೃತ್ಯು-ಸಂಸಾರ-ಸಾಗರಾತ್ ನ ಚಿರಾತ್ ಅಹಂ ಸಮುದ್ಧರ್ತಾ ಭವಾಮಿ ।

ಪ್ರತಿಪದಾರ್ಥ

ಯೇ ತು – ಯಾರಾದರೋ, ಮತ್-ಪರಾಃ (ಸಂತಃ) – ಎನ್ನಲ್ಲಿ ಆಸಕ್ತರಾಗಿದ್ದುಗೊಂಡು, ಸರ್ವಾಣಿ ಕರ್ಮಾಣಿ – ಎಲ್ಲ ಕರ್ಮಂಗಳನ್ನೂ, ಮಯಿ ಸಂನ್ಯಸ್ಯ – ಎನ್ನಲ್ಲಿ ತ್ಯಜಿಸಿ, ಮಾಮ್ ಧ್ಯಾಯಂತ – ಎನ್ನ ಧ್ಯಾನಿಸಿಗೊಂಡು, ಅನನ್ಯೇನ ಯೋಗೇನ – ಅನನ್ಯ (ವಿಚಲಿತವಾಗದ್ದ) ಭಕ್ತಿಯೋಗದ ಅಭ್ಯಾಸಂದ, ಏವ – ಖಂಡಿತವಾಗಿಯೂ, ಉಪಾಸತೇ – ಆರಾಧಿಸುತ್ತವೋ,

ಹೇ ಪಾರ್ಥ! – ಏ ಅರ್ಜುನ!, ಮಯಿ ಆವೇಶಿತ-ಚೇತಸಾಮ್ ತೇಷಾಮ್ – ಎನ್ನಲ್ಲಿ ಸ್ಥಿರಗೊಳುಸಿದ ಮನಸ್ಸುಳ್ಳವರಾಗಿಪ್ಪ ಅವರ, ಮೃತ್ಯು-ಸಂಸಾರ-ಸಾಗರಾತ್ – ಮರಣದ ಭೌತಿಕ ಸಂಸಾರ ಸಮುದ್ರಂದ, ನ ಚಿರಾತ್ – ವಿಳಂಬವಿಲ್ಲದ್ದೆ (ಬಹುಬೇಗ), ಅಹಮ್ – ಆನು, ಸಮುದ್ಧರ್ತಾ ಭವಾಮಿ – ಉದ್ಧರಿಸುವವನಾವುತ್ತೆ.

ಅನ್ವಯಾರ್ಥ

ಆರು ತಮ್ಮ ಎಲ್ಲ ಕರ್ಮಂಗಳ ಎನಗೆ ಅರ್ಪಿಸಿ, ನಿಶ್ಚಿಲವಾಗಿ ಎನ್ನಲ್ಲಿ ಭಕ್ತಿಯೋಗ ನಿರತರಾಗಿ ಸದಾ ಎನ್ನನ್ನೇ ಧ್ಯಾನಿಸಿಗೊಂಡು, ಎನ್ನಲ್ಲೇ ಮನಸ್ಸಿನ ಸ್ಥಿರಗೊಳುಸಿ ಪೂಜಿಸುತ್ತವೋ (ಆರಾಧಿಸುತ್ತವೋ, ಉಪಾಸನೆ ಮಾಡುತ್ತವೋ), ಅವರ ಆನು ಹುಟ್ಟು-ಸಾವು ಹೇಳ್ವ ಈ ಭೌತಿಕ ಸಾಗರಂದ ಶ್ರೀಘ್ರವಾಗಿ ಉದ್ಧಾರ ಮಾಡುವವನಾವುತ್ತೆ.      

ತಾತ್ಪರ್ಯ / ವಿವರಣೆ

ಸಗುಣ ಭಕ್ತಿ ಮತ್ತೆ ನಿರ್ಗುಣ ಭಕ್ತಿಯ ವಿವರಿಸಿದ ಭಗವಂತ°, ಇಲ್ಲಿ ಸುಲಭ ಭಕ್ತಿ ಮಾರ್ಗವ ವಿವರುಸುತ್ತ°.  ಭಗವಂತನ ಸೇರುವ ಸುಲಭ ಸಾಧನ ಹೇಳಿರೆ ನಿಜ ಸಗುಣ ಭಕ್ತಿಯೋಗ (ಸಾಕಾರ ಆರಾಧನೆ). “ನೀನು ಜೀವನ ನಿರ್ವಹಣೆಗೆ ಏವ ಕಾರ್ಯ/ಕ್ರಿಯೆಯ ಮಾಡುತ್ತೆಯೋ ಅದರ ಎನಗೆ ಅರ್ಪುಸು”. ಇಲ್ಲಿ ಭಗವಂತ° ಹೇಳಿಪ್ಪದು ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದೆ ಇರೆಕಾದ ಕರ್ಮ ಅನುಸಂಧಾನದ  ರೀತಿಯ. “ಭಗವಂತ° ಸತ್ಯ, ಸ್ಥಿರ, ಶಾಶ್ವತ°, ಪರಮಾನಂದದಾಯಕ°, ಸರ್ವಗತ°. ಈ ಕಾರ್ಯವ ಭಗವಂತ° ಎನ್ನ ಕೈಂದ ಮಾಡಿಸಿದ., ಇದು ಅವಂಗೆ ಅರ್ಪಿತವಾಗಲಿ” ಹೇಳ್ವ ಪ್ರಜ್ಞಾಪೂರ್ವಕ ನಿಷ್ಠೆ. ಇಲ್ಲಿ ಕರ್ಮಫಲ ಅಧಿಕಾರದ ಬಗ್ಗೆ ಒಂದಿಷ್ಟು ಸೋಂಕೂ ಬಪ್ಪಲಾಗ. ಈ ಜಗತ್ತು ಭಗವಂತನದ್ದು, ನಾವೆಲ್ಲ ಅವನ ಕೈ ಆಳು. ನಾವು ಮಾಡ್ತದು ಅವನ ಸೇವೆ. ಅದು ಅವನ ಉದ್ದೇಶಕ್ಕಾಗಿ ಮಾಡಿದ್ದದು ಹೇಳ್ವ ಚಿಂತನೆ ನಮ್ಮಲ್ಲಿರೆಕು. ಹಾಂಗೆ ಮಾಡಿರೆ ನಾವು ಭಗವಂತನ ಪೂರ್ಣಾನುಗ್ರಹಕ್ಕೆ  ಪಾತ್ರರಪ್ಪಲೆ ಸಾಧ್ಯ. ಇಲ್ಲಿ ನಮ್ಮಲ್ಲಿರೆಕಾದ ಅತೀ ಮುಖ್ಯ ಅಂಶ ಹೇದರೆ, ಭಗವಂತನ ಅನನ್ಯವಾಗಿ ಏಕನಿಷ್ಠೆಂದ ಉಪಾಸನೆ ಮಾಡುವದು. ನಮ್ಮ ಸಾಧನೆಲಿ ಕೊರತೆ ಇಕ್ಕು, ಇಂದ್ರಿಯ ನಿಗ್ರಹ ಕಷ್ಟ ಅಕ್ಕು, ಸರ್ವಭೂತಹಿತಚಿಂತನೆ ಇಲ್ಲದ್ದಿಕ್ಕು. ಚಿಂತನೆಲಿ ಲೋಪದೋಷಂಗೊ ಇಕ್ಕು, ಏಕಾಗ್ರತೆ ಬಾರದ್ದೇ ಇಕ್ಕು. ಆದರೆ ಭಗವಂತನಲ್ಲಿ ನಂಬಿಕೆ ಇರೆಕು, ಶ್ರದ್ಧೆ ಇರೆಕು. ಅದು ಏಕನಿಷ್ಠೆ ಮತ್ತು ಅನನ್ಯ ಅಚಲವಾಗಿರೆಕು. “ಎನ್ನಲ್ಲಿ ಸಂಪೂರ್ಣವಾಗಿ ಶರಣಾಗತನಾಗಿ ನಿನ್ನ ಮನಸ್ಸು ಪೂರ್ತಿ ಎನ್ನಲ್ಲಿ ಕೇಂದ್ರೀಕರುಸು / ನೆಡು. ಆನು ನಿನ್ನ ಉದ್ಧರುಸುತ್ತೆ” ಹೇದು ಇಲ್ಲಿ ಭಗವಂತ° ಭರವಸೆ  ಕೊಟ್ಟಿದ°. ನಮ್ಮ ಚಿತ್ತಲ್ಲಿ ಭಗವಂತನ ಸ್ಥಿರಗೊಳುಸಿ, ಅನನ್ಯ ಭಕ್ತಿಂದ ಭಗವದರ್ಪಣೆರೀತ್ಯಾ ಕರ್ಮೋಪಾಸನೆ ಮಾಡಿರೆ, ಭಗವಂತ° ನಮ್ಮ ಈ ಹುಟ್ಟುಸಾವಿನ ಸಂಸಾರ ಸಾಗರಂದ ಪಾರುಮಡುವ ಜವಬ್ದಾರಿಯ ವಹಿಸುತ್ತ°.

ಶ್ಲೋಕ

ಮಯಿ ಏವ ಮನಃ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ ।
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ॥೦೮॥

ಪದವಿಭಾಗ

ಮಯಿ ಏವ ಮನಃ ಆಧತ್ಸ್ವ ಮಯಿ ಬುದ್ಧಿಮ್ ನಿವೇಶಯ । ನಿವಸಿಷ್ಯಸಿ ಮಯಿ ಏವ ಅತಃ ಊರ್ಧ್ವಮ್ ನ ಶಂಶಯಃ ॥

ಅನ್ವಯ

ಮಯಿ ಏವ ಮನಃ ಆಧತ್ಸ್ವ, ಮಯಿ ಬುದ್ಧಿಂ ನಿವೇಶಯ, ಅತಃ ಊರ್ಧ್ವಂ ಮಯಿ ಏವ ನಿವಸಿಷ್ಯಸಿ, (ಅತ್ರ) ಸಂಶಯಃ ನ ।

ಪ್ರತಿಪದಾರ್ಥ

ಮಯಿ ಏವ – ಎನ್ನಲ್ಲಿಯೇ, ಮನಃ ಅಧತ್ಸ್ವ – ಮನಸ್ಸಿನ ಸ್ಥಿರಗೊಳುಸು, ಮಯಿ – ಎನ್ನಲ್ಲಿ, ಬುದ್ಧಿಮ್ – ಬುದ್ಧಿಯ (ಚಿತ್ತವ), ನಿವೇಶಯ – ಮಡುಗು, ಅತಃ ಊರ್ಧ್ವಮ್ – ಮತ್ತೆ ( ಆ ನಂತರ),  ಮಯಿ ಏವ – ಎನ್ನಲ್ಲಿಯೇ, ನಿವಸಿಷ್ಯಸಿ – ನೀನು ನೆಲಸುವೆ, ಅತ್ರ – ಇಲ್ಲಿ (ಇದರಲ್ಲಿ), ಸಂಶಯಃ ನ – ಸಂಶಯವೇ ಇಲ್ಲೆ.

ಅನ್ವಯಾರ್ಥ

ಎನ್ನಲ್ಲಿ ಮನಸ್ಸಿನ ಸ್ಥಿರಗೊಳುಸು, ಬುದ್ಧಿಯ ಸಂಪೂರ್ಣವಾಗಿ ಎನ್ನಲ್ಲಿ ಮಡುಗು(ತೊಡಗು), ಆ ಬಳಿಕ ನೀನು ನಿಸ್ಸಂದೇಹವಾಗಿ ಎನ್ನಲ್ಲೇ ನೆಲಸುವೆ.

ತಾತ್ಪರ್ಯ / ವಿವರಣೆ

ಬನ್ನಂಜೆ ಇದರ ಸೊಗಸಾಗಿ ವಿವರಿಸಿದ್ದವು ಭಗವಂತ° ಅರ್ಜುನಂಗೆ ಹೇಳುತ್ತ° – ‘ಮನಸ್ಸಿನ ಎನ್ನಲ್ಲಿ ಆಧಾನ ಮಾಡು’. ‘ಆಧಾನ’ ಹೇಳಿರೆ ಬೀಜ ಬಿತ್ತುವದು ಅಥವಾ ಕಿಡಿ ಹಚ್ಚುವದು ಹೇಳಿ ಅರ್ಥ. ಮನಸ್ಸಿಂಗೆ ಭಗವಂತನ ಭಕ್ತಿಯ  ಕಿಡಿಯ ಹಚ್ಚಿ ಅದು ಪ್ರಜ್ವಲಿಸುವಾಂಗೆ ಮಾಡೆಕು. ಭಕ್ತಿಯ ಬೀಜ ಬೆಳವಾಂಗೆ ಪೋಷಿಸೆಕು. ನಿಶ್ಚಯಜ್ಞಾನ ಬುದ್ಧಿಲಿ ಗಟ್ಟಿಗೊಳ್ಳೆಕು. ಈ ರೀತಿ ಸದಾ ಮನಸ್ಸಿನ ಭಗವಂತನಲ್ಲಿ ನೆಲೆಗೊಳಿಸಿಯಪ್ಪಗ, ಏವುದೇ ಕ್ಲೇಶಂಗೊ ಇಲ್ಲದ್ದೆ ನಿಶ್ಚಯವಾಗಿ ಭಗವಂತನ ಸೇರ್ಲಕ್ಕು. ಇದು ಶಕ್ತಿ ಉಪಾಸನೆಂದ ಭಗವಂತನ ಉಪಾಸನೆ ಎಷ್ಟು ಸುಲಭ ಹೇಳ್ವ ವಿವರಣೆ. ಭಗವಂತನ ಉಪಾಸನೆಗೆ ಕಟ್ಟುಪಾಡು ನಿರ್ಭಂಧ ಬಹು ಕಮ್ಮಿ. ಉದಾಹರಣಗೆ ವಿಷ್ಣುಸಹಸ್ರನಾಮ ಪಾರಾಯಣ. ವಿಷ್ಣುಸಹಸ್ರನಾಮ ಚಿಂತನಗೆ ಏವುದೇ ನಿರ್ದಿಷ್ಟ ಸಮಯದ ನಿರ್ಬಂಧವಿಲ್ಲೆ. ಆರು ಬೇಕಾರು ಏವ ಹೊತ್ತಿಲ್ಲಿ ಬೇಕಾರು ಪಠಣ ಮಾಡ್ಳಕ್ಕು. ಸರ್ವ ರೋಗಕ್ಕೆ ಮದ್ದು ವಿಷ್ಣುಸಹಸ್ರನಾಮ. ಭಗವಂತನ ಚಿಂತನೆಲಿ ಅರಡಿಯದ್ದೆ ಆಗಿಹೋಪ ಲೋಪಂಗೊಕ್ಕೆ ಭಗವಂತನ ಕ್ಷಮೆ ಇದ್ದು.

ಬನ್ನಂಜೆ ಮತ್ತೂ ಹೇಳುತ್ತವು ನಾರಾಯಣನ ಉಪಾಸನೆ ಹೇಳಿರೆ ಅದು ಲಕ್ಷ್ಮೀಸಮೇತ ನಾರಾಯಣನ ಉಪಾಸನೆ. ನಾರಾಯಣ ಉಪಾಸನೆ ಮಾಡ್ತೋರು ಲಕ್ಷ್ಮಿಯ ವಾ ಇತರ ದೇವತೆಗಳ ಉಪಾಸನೆ ಮಾಡೇಕ್ಕಾದ್ದಿಲ್ಲೆ. ಲಕ್ಷ್ಮಿಗೆ ಮತ್ತೆ ಸರ್ವ ದೇವತೆಗೊಕ್ಕೆ ಅತ್ಯಂತ ಪ್ರೀತಿಪೂರ್ವಕವಾದ್ದು – ಸರ್ವೋತ್ತಮ ಭಗವಂತನ ಉಪಾಸನೆ. ನಾರಾಯಣನ ಉಪಾಸನೆ ಮಾಡುವ ಸಾಧಕಂಗೆ ಸಕಲ ದೇವತೆಗೊ ಸಹಾಯಮಾಡಿ, ಅವ° ತನ್ನ ಸಾಧನಾ ಮಾರ್ಗಲ್ಲಿ ಎತ್ತರಕ್ಕೇರುತ್ತಾಂಗೆ ನೋಡಿಗೊಳ್ತವು. ಇದರ ಅರ್ತಪ್ಪಗ ನಮ್ಮ ಉಪಾಸನೆಲಿ ನಾವು ಸುಲಭವಾಗಿ ಏಕಭಕ್ತಿಯ ಸಾಧಿಸಲೆಡಿಗು. ಭಕ್ತಿಮಾರ್ಗಲ್ಲಿ ಮನಸ್ಸು ಸ್ಥಿರಗೊಳುಸಿ ಸಾಧನೆಯ ಗಟ್ಟಿಗೊಳುಸಲಕ್ಕು.

ಅದನ್ನೇ ಭಗವಂತ° ಇಲ್ಲೆ ಹೇಳಿದ್ದದು – “ಎನ್ನಲ್ಲಿ ನಿನ್ನ ಚಿತ್ತ-ಮನ-ಬುದ್ಧಿಯ ಸಂಪೂರ್ಣವಾಗಿ ಸ್ಥಿರಗೊಳುಸು,  ಆ ಬಳಿಕ, ನಿನ್ನ ಸಾಧನೆ ಮೂಲಕ ನಿಸ್ಸಂದೇಹವಾಗಿ ಎನ್ನನ್ನೇ ಸೇರುತ್ತೆ”.

ಶ್ಲೋಕ

ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಮ್ ।
ಅಭ್ಯಾಸಯೋಗೇನ ತತೋ ಮಾಮಿಚ್ಛಾsಪ್ತುಂ ಧನಂಜಯ ॥೦೯॥

ಪದವಿಭಾಗ

ಅಥ ಚಿತ್ತಮ್ ಸಮಾಧಾತುಮ್ ನ ಶಕ್ನೋಷಿ ಮಯಿ ಸ್ಥಿರಮ್ । ಅಭ್ಯಾಸ-ಯೋಗೇನ ತತಃ ಮಾಮ್ ಇಚ್ಛ ಆಪ್ತುಮ್ ಧನಂಜಯ ॥

ಅನ್ವಯ

ಹೇ ಧನಂಜಯ!, ಅಥ ಮಯಿ ಸ್ಥಿರಂ ಚಿತ್ತಂ ಸಮಾಧಾತುಂ ನ ಶಕ್ನೋಷಿ, ತತಃ ಅಭ್ಯಾಸ-ಯೋಗೇನ ಮಾಮ್ ಆಪ್ತುಂ ಇಚ್ಛ ।

ಪ್ರತಿಪದಾರ್ಥ

ಹೇ ಧನಂಜಯ! – ಏ ಧನಂಜಯನಾದ ಅರ್ಜುನನೇ!,  ಅಥ – ಈಗ(ಇನ್ನು, ಬಳಿಕ, ಮತ್ತೆ), ಮಯಿ – ಎನ್ನಲ್ಲಿ, ಸ್ಥಿರಮ್ ಚಿತ್ತಮ್ – ದೃಢವಾದ (ಸ್ಥಿರವಾದ) ಮನಸ್ಸಿನ, ಸಮಾಧಾತುಮ್ – ಸ್ಥಿರಗೊಳುಸಲೆ, ನ ಶಕ್ನೋಷಿ – ಸಮರ್ಥನಾಗೆ, ತತಃ – ಅಂಬಗ (ಹಾಂಗಾಗಿ), ಅಭ್ಯಾಸ-ಯೋಗೇನ – ಭಕ್ತಿಯೋಗ ಅಭ್ಯಾಸಂದ, ಮಾಮ್ – ಎನ್ನ, ಆಪ್ತುಂ – ಹೊಂದಲೆ, ಇಚ್ಛ – ಬಯಸು.

ಅನ್ವಯಾರ್ಥ

ಏ ಧನಂಜಯ!, ಈಗ ನೀನು ಎನ್ನಲ್ಲಿ ಮನಸ್ಸಿನ ಸ್ಥಿರಗೊಳುಸಲೆ ಸಮರ್ಥನಾಗಲಾರೆ. ಅದಕ್ಕೆ ಅಂಬಗ (ಹಾಂಗಾಗಿ) ಭಕ್ತಿಯೋಗದ ನಿಯಂತ್ರಕ ತತ್ವಂಗಳ ಅನುಸರುಸಿ (ಅಭ್ಯಸಿಸಿ ಆ ಮೂಲಕ) ಎನ್ನ ಪಡವಲೆ ಬಯಕೆಯ ಬೆಳೆಶಿಗೊ.

ತಾತ್ಪರ್ಯ / ವಿವರಣೆ

ಇಲ್ಲಿ ಭಕ್ತಿಯೋಗದ ಎರಡು ಬೇರೆ ಬೇರೆ ಪ್ರಕ್ರಿಯೆಗಲ ಸೂಚಿಸಿದ್ದು. ಸುರುವಾಣದ್ದು ದೇವೋತ್ತಮ ಪರಮ ಪುರುಷನಲ್ಲಿ ಆಧ್ಯಾತ್ಮಿಕ ಪ್ರೀತಿಂದ ವಾಸ್ತವವಾಗಿ ಆಸಕ್ತಿಯ ಬೆಳಶಿಗೊಂಡವಕ್ಕೆ ಅನ್ವಯಿಸುತ್ತದು. ಇನ್ನೊಂದು ಪರಮ ಪುರುಷನಲ್ಲಿ ಆಧ್ಯಾತ್ಮಿಕ ಪ್ರೀತಿಂದ ಆಸಕ್ತಿಯ ಬೆಳೆಶಿಗೊಂಡಿರದವಕ್ಕೆ ಸೂಚಿಸುವ ಪ್ರಕ್ತಿಯೆ. ದೈವಾನುರಾಗದ ಘಟ್ಟಕ್ಕೆ ಏರ್ಲೆ ಮನುಷ್ಯ° ಅನುಸರಿಸಲೆಡಿಗಪ್ಪ ಈ ಎರಡನೇ ವರ್ಗದೋರಿಂಗೆ ನಿಗದಿತ ಬೇರೆ ಬೇರೆ ವಿಧಿ ನಿಯಮಂಗಳ ಇಲ್ಲಿ ಒತ್ತಿ ಹೇಳಿದ್ದು.

ಭಕ್ತಿಯೋಗ ಹೇಳಿರೆ ಇಂದ್ರಿಯಂಗಳ ಶುದ್ಧಿಗೊಳುಸುವದು. ಈಗ ಐಹಿಕ ಅಸ್ತಿತ್ವಲ್ಲಿ ಇಂದ್ರಿಯಂಗೊ ತಮ್ಮ ಸುಖಲ್ಲಿ ಮಗ್ನವಾಗಿ ಸದಾ ಮಲಿನವಾಗಿರುತ್ತು. ಭಕ್ತಿಯೋಗದ ಅಭ್ಯಾಸಂದ ಈ ಇಂದ್ರಿಯಂಗಳ ಪರಿಶುದ್ಧಗೊಳುಸಲಕ್ಕು. ಈ ಪರಿಶುದ್ಧ ಸ್ಥಿತಿಲಿ ಅವು ನೇರವಾಗಿ ಭಗವಂತನ ಸಂಪರ್ಕಕ್ಕೆ ಯೋಗ್ಯ ಆವ್ತು. ಆಧ್ಯಾತ್ಮಿಕ ಜೀವನಕ್ಕೆ ಭಗವದ್ಪ್ರೀತಿಯ ಪರಿಶುದ್ಧ ಮಟ್ಟಕ್ಕೆ ಏರೆಕು. ಅದರಿಂದ ಭಗವಂತನ ಸಂಪರ್ಕ ಸಾಧ್ಯ. ಅದಕ್ಕೆ ಇಂದ್ರಿಯಂಗಳ ಸಂಪೂರ್ಣವಾಗಿ  ನಿಯಂತ್ರುಸಿ ಸಂಪೂರ್ಣ ಮನಸ್ಸಿನ ಭಗವಂತನಲ್ಲಿ ಸ್ಥಿರಗೊಳುಸೆಕು. ಅರ್ಥಾತ್ ಸಂಪೂರ್ಣ ಇಂದ್ರಿಯಕಾಮನೆಗಳ ನಿಯಂತ್ರುಸಿದರೆ ಮಾತ್ರವೇ ಭಗವಂತನ ಪ್ರೀತಿಸೇವೆಲಿ ಮನಸ್ಸಿನ ಸಂಪೂರ್ಣವಾಗಿ  ತೊಡಗುಸಲೆ ಎಡಿಗಷ್ಟೆ.

ಈ ಭಗವತ್ಪ್ರೇಮವು ಈಗ ಪ್ರತಿಯೊಬ್ಬರ ಹೃದಯಲ್ಲಿ ಸುಪ್ತವಾಗಿದ್ದು. ಅಲ್ಲಿ ದೇವರ ಪ್ರೀತಿ ಬೇರೆ ಬೇರೆ ರೀತಿಲಿ ಪ್ರಕಟವಾವ್ತು. ಆದರೆ, ಐಹಿಕ ಸಂಪರ್ಕಂದ ಅದು ಮಲಿನವಾವ್ತು. ಈಗ ಹೃದಯವ ಐಹಿಕ ಸಂಪರ್ಕದ ಮಾಲಿನ್ಯಂದ ಪರಿಶುದ್ಧಗೊಳುಸೆಕು. ಸುಪ್ತವಾದ ಸಹಜವಾದ ಭಗವತ್ಪ್ರೇಮ ಪುನಶ್ಚೇತನಗೊಳುಸೆಕು. ಇದೇ ಸಂಪೂರ್ಣ ಪ್ರಕ್ರಿಯೆ. ಭಕ್ತಿಯೋಗದ ನಿಯಂತ್ರಕ ತತ್ವಂಗಳ ಅಭ್ಯಾಸ ಮಾಡ್ಳೆ ತಜ್ಞ ಗುರುವಿನ ಮಾರ್ಗದರ್ಶನಲ್ಲಿ ಕೆಲವು ತತ್ವಂಗಳ ಆಚರುಸೆಕು. ನಿಯಮ ನಿಯಂತ್ರಣಂಗಳ ಅನುಸರುಸಿ. ಗುರುಗಳ ಮಾರ್ಗದರ್ಶನಲ್ಲಿ ಭಕ್ತಿಯೋಗವ ಆಚರುಸಿರೆ ಭಗವತ್ಪ್ರೇಮದ ಹಂತವ ನಿಶ್ಚಿತವಾಗಿಯೂ ತಲುಪಲೆಡಿಗು.

ಇದನ್ನೇ ಇನ್ನೂ ಸರಳವಾಗಿ ಹೇಳ್ತದಾದರೆ, ಮನಸ್ಸಿಲ್ಲಿ ಭಗವಂತನ ಬಗ್ಗೆ ಭಕ್ತಿ ಇದ್ದು. ಬುದ್ಧಿಲಿ ಜ್ಞಾನಪೂರ್ಣ ಭಕ್ತಿಯ ಅಂಕುರ ಇದ್ದು. ಅಂದರೂ ಸ್ಥಿರವಾದ ಸ್ಮರಣೆ ಬತ್ತಿಲ್ಲೆ. ಮನಸ್ಸು ಗಟ್ಟಿಯಾಗಿ ನೆಲೆನಿಲ್ಲುತ್ತಿಲ್ಲೆ. ಅಂಬಗ ಎಂತ ಮಾಡೇಕು ? . ಅದನ್ನೇ ಇಲ್ಲಿ ಭಗವಂತ° ಹೇಳಿದ್ದದು – ‘ಅಭ್ಯಾಸಯೋಗಯುಕ್ತೇನ ಮಾಂ ಆಪ್ತುಂ ಇಚ್ಛ’- ‘ಭಕ್ತಿಯೋಗದ ಅಭ್ಯಾಸವ ಮಾಡಿ ಮನಸ್ಸು ಸ್ಥಿರಗೊಳುಸಿ ಎನ್ನ ಪಡವಲೆ ಬಯಕೆಯ ಬೆಳೆಶಿಗೊ.’

ಅದನ್ನೇ ಬನ್ನಂಜೆ ಈ ರೀತಿಯಾಗಿ ವಿವರಿಸಿದ್ದವು – ಮನಸ್ಸಿನ ಭಗವಂತನಲ್ಲಿ ಗಟ್ಟಿಯಾಗಿ ನೆಲೆಗೊಳ್ಳುವಂತೆ ಮಾಡ್ಳೆ ಅಭ್ಯಾಸ ಮಾಡೆಕು. ಶಾಸ್ತ್ರಲ್ಲಿ ಹೇಳಿಪ್ಪಂತೆ – “ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ಜಾತುಚಿತ್ । ಸರ್ವೇ ವಿಧಿ ನಿಷೇಧಾಸ್ಸ್ಯುಹುಃ ಏತಯೋರೇವ ಕಿಂಕರಾಃ” ॥ – ಹೇದರೆ., ನಾವು ನಿರಂತರ ಭಗವಂತನ ನೆಂಪಿಲ್ಲಿಮಡಿಕ್ಕೊಂಡಿರೆಕು (ಸ್ಮರ್ತವ್ಯಃ ಸತತಂ ವಿಷ್ಣುಃ), ಎಂದೂ ಭಗವಂತನ ಮರವಲಾಗ (ವಿಸ್ಮರ್ತವ್ಯೋ ನ ಜಾತುಚಿತ್), ಸಮಸ್ತ ವಿಧಿನಿಷೇಧ ಹೇಳ್ತದೂ ಕೂಡ ಇದನ್ನೇ (ಸರ್ವೇ ವಿಧಿ ನಿಷೇಧಾಸ್ಸ್ಯುಹುಃ ಏತಯೋರೇವ). ಅಂಬಗ ಇಂಥಾ ಸಮಯಲ್ಲಿ ಎಂತ ಮಾಡೆಕು ಹೇಳ್ವದರ ಇಲ್ಲಿ ಭಗವಂತ° ವಿವರಿಸಿದ್ದ° – “ಮನಸ್ಸಿನ ಏಕಾಗ್ರತೆ ಕಡೆಂಗೆ ಕೊಂಡೋಪ ಶಕ್ತಿಕೊಡು ಹೇದು ಎನ್ನ ಪ್ರಾರ್ಥಿಸು, ಅಧ್ಯಾತ್ಮದ ದಾರಿಲಿ ಏವ ಇಚ್ಛೆ ಮಾಡಿರೂ ಅದರ ಪೂರೈಸುವ ಜವಬ್ದಾರಿ ಎನ್ನದು”. ಅಭ್ಯಾಸ ಮತ್ತೆ ಇಚ್ಛೆ ಇದ್ದರೆ ಖಂಡಿತವಾಗಿಯೂ ಏಕಾಗ್ರತೆ ಸಾಧ್ಯ. ಹಾಂಗಾಗಿ ನಾವು ಲೌಕಿಕ ಸಂಪತ್ತಿನ (ಧನವ) ಬೆನ್ನು ಹಿಡಿತ್ತರ ಬಿಟ್ಟು, ‘ಭಗವಂತ’ ಹೇದು ಹೇಳ್ವ ಅಮೂಲ್ಯ ಧನವ ಗೆಲ್ಲುವ ‘ಧನಂಜಯ’ ಆಯೇಕು ಹೇಳಿ ಭಗವಂತ° ಇಲ್ಲಿ ಆದೇಶಿಸಿದ್ದ°.

ಶ್ಲೋಕ

ಅಭ್ಯಾಸೇsಪ್ಯಸಮರ್ಥೋsಸಿ ಮತ್ಕರ್ಮಪರಮೋ ಭವ ।
ಮದರ್ಥಮಪಿ ಕರ್ಮಾಣಿ ಕುರ್ವನ್ಸಿದ್ಧಿಮವಾಪ್ಸ್ಯಸಿ ॥೧೦॥

ಪದವಿಭಾಗ

ಅಭ್ಯಾಸೇ ಅಪಿ ಅಸಮರ್ಥಃ ಅಸಿ ಮತ್-ಕರ್ಮ-ಪರಮಃ ಭವ । ಮತ್-ಅರ್ಥಮ್ ಅಪಿ ಕರ್ಮಾಣಿ ಕುರ್ವನ್ ಸಿದ್ಧಿಮ್ ಅವಾಪ್ಸ್ಯಸಿ ॥

ಅನ್ವಯ

(ತ್ವಮ್) ಅಭ್ಯಾಸೇ ಅಪಿ ಅಸಮರ್ಥಃ ಅಸಿ (ಚೇತ್), ಮತ್-ಕರ್ಮ-ಪರಮಃ ಭವ । ಮತ್-ಅರ್ಥಂ ಕರ್ಮಾಣಿ ಕುರ್ವನ್ ಅಪಿ ಸಿದ್ಧಿಮ್ ಅವಾಪ್ಸ್ಯಸಿ ।

ಪ್ರತಿಪದಾರ್ಥ

(ತ್ವಮ್ – ನೀನು), ಅಭ್ಯಾಸೇ ಅಪಿ – ಅಭ್ಯಸಿಸುವದರಲ್ಲಿಯೂ ಕೂಡ, ಅಸಮರ್ಥಃ ಅಸಿ (ಚೇತ್) – ಅಸಮರ್ಥನಾಗಿದ್ದೇಳಿಯಾದರೆ, ಮತ್-ಕರ್ಮ-ಪರಮಃ ಭವ – ಎನ್ನ ಕರ್ಮ ಪರಾಯಣನಾಗು, ಮತ್-ಅರ್ಥಮ್ – ಎನಗಾಗಿ, ಕರ್ಮಾಣಿ – ಕರ್ಮಂಗಳ, ಕುರ್ವನ್ ಅಪಿ – ಮಾಡಿಗೊಂಡಾದರೂ, ಸಿದ್ಧಿಮ್ – ಸಿದ್ಧಿಯ (ಗೆಲುವಿನ), ಅವಾಪ್ಸ್ಯಸಿ – ಹೊಂದುವವನಾವುತ್ತೆ.

ಅನ್ವಯಾರ್ಥ

ನೀನು ಭಕ್ತಿಯೋಗದ ಅಭ್ಯಾಸಂಗಳ ಮಾಡ್ಳೆ ಕೂಡ ಅಸಮರ್ಥನಾವುತ್ತೇಳಿಯಾದರೆ, ಎನ್ನ ಕರ್ಮಂಗಳ ಮಾಡುವವನಾಗು (ಎನಗಾಗಿ ಕೆಲಸ ಮಾಡು). ಎನಗಾಗಿ ಕರ್ಮಂಗಳ ಮಾಡಿಗೊಂಡಾದರೂ ನೀನು ಸಿದ್ಧಿಯ ಪಡವವನಾವುತ್ತೆ.

ತಾತ್ಪರ್ಯ / ವಿವರಣೆ

ಕೆಲವರಿಂಗೆ ಎಷ್ಟೇ ಅಭ್ಯಾಸ ಮಾಡಿರೂ ಏಕಭಕ್ತಿ ಸಾಧ್ಯ ಆವುತ್ತಿಲ್ಲೆ. ಆಧ್ಯಾತ್ಮ ಮಾರ್ಗದ ಸಾಧನೆಲಿ ಮನಸ್ಸಿಂಗೆ ಒಂದು ಜನ್ಮದ ಅಭ್ಯಾಸ ಸಾಕಾವುತ್ತಿಲ್ಲೆ (ಎಡಿತ್ತಿಲ್ಲೆ). ಇಡೀ ಜನ್ಮ ಅಭ್ಯಾಸ ಮಾಡಿರೂ ಸಾಕಾಗದ್ದೆ ಅಕ್ಕು. ಅಂಥವಕ್ಕೆ ಬೇಕಾಗಿ ಭಗವಂತ° ಹೇಳುತ್ತ° – ‘ನೀನು ಮಾಡುವ ಕರ್ಮವ ಸ್ವಾರ್ಥಕ್ಕಾಗಿ ಮಾಡದ್ದೆ, ಭಗವಂತನ ಪೂಜೆ ಹೇಳ್ವ ಅನುಸಂಧಾನಂದ ಮಾಡು”. ‘ನಿನ್ನ ಕೆಲಸ, ಆರದ್ದೋ ಕೆಲಸ ಹೇಳಿ ಗ್ರೇಶಿಗೊಂಡು ಕರ್ಮವ ಮಾಡುವದಲ್ಲ. ಬದಲಾಗಿ ಅದು ಎನಗೆ ಬೇಕಾಗಿ ನೀನು ಕರ್ಮ ಮಾಡುವವನಾಗು. ಆ ಮೂಲಕ ನೀನು ಸಿದ್ಧಿಯ ಪಡವಲೆ ಯೋಗ್ಯನಾವುತ್ತೆ’. ಹೇಳಿರೆ., ನಮ್ಮ ದೈನಂದಿನ ಪ್ರತಿ ಕರ್ಮವ ಭಗವದ್ಪ್ರೀತಿ / ಅರ್ಪಣಾಭಾವಂದ ಭಗವಂತನ ಪೂಜೆ ಹೇದು ಮಾಡಿಗೊಂಡಿದ್ದರೆ ಆ ಮೂಲಕ ಸಿದ್ಧಿಯ ಪಡವಲ್ಲಿ ಸಫಲನಪ್ಪಲೆ ಎಡಿಗು.

ಗುರುವಿನ ಮಾರ್ಗದರ್ಶನಲ್ಲಿ ಭಕ್ತಿಯೋಗದ ನಿಯಂತ್ರಕ ತತ್ವಂಗಳ ಆಚರುಸಲೆ ಎಡಿಗಾಗದ್ದವನೂ ಕೂಡ ಭಗವಂತನ ಪ್ರೀತಿಗೋಸ್ಕರ ಹೇಳ್ವ ಅರ್ಪಣಾಭಾವಂದ ಕೆಲಸ ಮಾಡುವದರ ಮೂಲಕ ಪರಿಪೂರ್ಣತೆಯ ಸಾಧುಸಲೆ ಎಡಿಗು ಹೇಳಿ ಭಗವಂತನ ಆದೇಶ. ಅದನ್ನೇ ಹನ್ನೊಂದನೇ ಅಧ್ಯಾಯದ ಐವತ್ತೈದನೇ ಶ್ಲೋಕಲ್ಲಿ ಭಗವಂತ° ಹೇಳಿದ್ದದು – “ಮತ್-ಕರ್ಮ-ಕೃತ್ ಮತ್-ಪರಮಃ ಮತ್-ಭಕ್ತಃ ಸಂಗ-ವರ್ಜಿತಃ । ನಿರ್ವೈರಃ ಸರ್ವ-ಭೂತೇಷು ಯಃ ಸಃ ಮಾಂ ಏತಿ “॥ – ‘ಆರು ಸಂಪೂರ್ಣವಾಗಿ ಎನ್ನ ಕಾರ್ಯಮಾಡುವದರಲ್ಲಿ ತೊಡಗಿ (ಭಕ್ತಿಸೇವೆಲಿ ತೊಡಗಿ), ಎನ್ನನ್ನೇ ಆಶ್ರಯಿಸಿ, ಎಲ್ಲಾ ಕಾಮ್ಯ ಕರ್ಮಫಲ ಚಿಂತನೆಂದ ಮುಕ್ತರಾಗಿ ಸಮಸ್ತ ಜೀವಿಗಳಲ್ಲೂ ವೈರ ಇಲ್ಲದ್ದೆ ಎನ್ನ ಭಕ್ತನಾಗಿ ಸೇವೆಮಾಡುವದರಲ್ಲಿ ನಿರಂತರ ತೊಡಗುತ್ತನೋ ಅವ° ಎನ್ನನ್ನೇ ಬಂದು ಸೇರುತ್ತ°’.

ಇನ್ನೂ ರಜಾ ವಿಸ್ತಾರವಾಗಿ ಈ ಶ್ಲೋಕವ ಚಿಂತಿಸಿರೆ, ಅಧ್ಯಾತ್ಮ ಸಾಧನೆಲಿ ಸಂಪೂರ್ಣವಾಗಿ ನೇರವಾಗಿ ತೊಡಗಲೆ ಎಡಿತ್ತಿಲ್ಲೇಳಿಯಾದರೆ, ತನ್ನ ಕರ್ಮವ ಭಗವದರ್ಪಣೆ ಮನೋಭಾವಂದ ಭಗವದ್ಪ್ರೀತಿಕಾರಣಕ್ಕಾಗಿ ಮಾಡುವದರ ಮೂಲಕ ಭಗವಂತನ ಪ್ರೀತಿಮಾರ್ಗದತ್ತ ಹರುದು ಸಿದ್ಧಿಯ ಪ್ರಾಪ್ತಿಸಿಗೊಂಬಲೆಡಿಗು. ಕೃಷ್ಣಪ್ರಜ್ಞೆಲಿ ಭಗವಂತನ ಪ್ರೀತಿಸೇವೆ ಎಷ್ಟು ಮುಖ್ಯವೋ, ಕೃಷ್ಣಪ್ರಜ್ಞೆಯ ಪ್ರಸಾರವೂ ಅಷ್ಟೇ ಮುಖ್ಯ. ಕೃಷ್ಣಪ್ರಜ್ಞೆಯ ಪ್ರಸಾರ ಕಾರ್ಯಲ್ಲಿ ಎಷ್ಟೋ ಜನ ಕೆಲಸ ಮಾಡಿಗೊಂಡಿದ್ದವು. ಅವಕ್ಕೆ ಸಹಾಯವೂ ಅಗತ್ಯ. ಹಾಂಗಾಗಿ ನೇರ ಅಭ್ಯಾಸಕ್ಕೆ ತೊಡಗಿಯೊಂಬಲೆ ಎಡಿಗಾಗದ್ದೋರು ಇಂತವಕ್ಕೆ ಸಹಾಯ ಮಾಡಿ ಇವರ ಕಾರ್ಯಲ್ಲಿ ನೆರವು ನೀಡಿ ಭಗವದ್ಪ್ರೀತಿಯ ಗಳುಸಲಕ್ಕು. ಏವುದೇ ಪ್ರಯತ್ನಕ್ಕೂ ಭೂಮಿ(ಜಾಗೆ), ಭಂಡವಾಳ, ವ್ಯವಸ್ಥೆ, ಶ್ರಮ ಅಗತ್ಯ. ಇದರ ವಿಸ್ತರುಸಲೆ ಸಂಘ ಸಹಕಾರಂಗಳೂ ಅಗತ್ಯ. ಹಾಂಗೇ ಭಗವಂತನ ಸೇವೆಲಿ ಇದು ಅಗತ್ಯ. ಪ್ರಾಪಂಚಿಕತೆಲಿ ಮನುಷ್ಯ° ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡುತ್ತ°. ಅದೇ ಇಂದ್ರಿಯ ಸುಖವ ತ್ಯಜಿಸಿ ಭಗವದ್ ಪ್ರೀತಿಗೆ ಕರ್ಮಲ್ಲಿ ತೊಡಗಿರೆ ಸಾಧನೆ ಮಾರ್ಗಲ್ಲಿ ಮುನ್ನಡೆ ಸಾಧಿಸಿದಾಂಗೆ ಆವ್ತು. ಅದುವೇ ಆಧ್ಯಾತ್ಮಿಕ ಚಟುವಟಿಕೆಯ ಆರಂಭವೂ ಆವ್ತು. ತಕ್ಕಷ್ಟು ಪೈಸೆ ಇಪ್ಪೋರು ಕೃಷ್ಣಪ್ರಜ್ಞೆಯ ಪ್ರಸಾರಕ್ಕಾಗಿ ಒಂದು ಜಾಗೆಯನ್ನೋ, ಧನಸಹಾಯವನ್ನೋ, ಪ್ರಕಟಣೆಯನ್ನೋ ಅಥವಾ ಪೈಸೆ ಇಲ್ಲದ್ದೋರು ಸೇವಾಸಹಾಯವನ್ನೋ ನೀಡಿರೆ ಅದರಿಂದ ಭಗವಂತಂಗೆ ಮೆಚ್ಚುಗೆ ಆವ್ತು. ಹೀಂಗೆ, ಸ್ವಯಂಪ್ರೇರಣೆಂದ ಭಗವದ್ ಕಾರ್ಯ ಹೇದು ಮನಃಪೂರ್ವಕವಾಗಿ ಮಾಡುವ ಭಗವತ್ಪ್ರೇಮ ಕರ್ಮದ ಮೂಲಕ ಇನ್ನೂ ಮೇಗಾಣ ಮೆಟ್ಳ ಹತ್ತಿ ಮುಂದೆ ಪರಿಪೂರ್ಣನಪ್ಪಲೆ ಎಡಿಗು.

 

          ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

 

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 12 – SHLOKAS 01 – 10

 

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

 

2 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 12 – ಶ್ಲೋಕಂಗೊ 01 – 10

  1. ಭಕ್ತಿಯೋಗದ ಸುರುವಿಲ್ಲೇ ಭಗವಂತ ಸಗುಣ ಮತ್ತೆ ನಿರ್ಗುಣ ಭಕ್ತಿಯ ವಿವರಿಸಿ, ಸುಲಭವಾದ ಭಕ್ತಿ ಮಾರ್ಗವ ತೋರಿಸಿಕೊಡ್ತ°
    ಎನ್ನಲ್ಲಿ ಸಂಪೂರ್ಣ ಶರಣಾಗು, ನಿನ್ನ ಮನಸ್ಸಿನ ಎನ್ನಲ್ಲಿ ಕೇಂದ್ರೀಕರಿಸು, ಆನು ನಿನ್ನ ಉಧ್ಧಾರ ಮಾಡ್ತೆ ಹೇಳ್ತ°
    ಮಾಡುವ ಕರ್ಮವ ಸ್ವಾರ್ಥಕ್ಕಾಗಿ ಮಾಡದ್ದೆ ಭಗವಂತಂಗೆ ಸಮರ್ಪಿಸುವ ಪೂಜೆ ಇದು ಎನ್ನದು ಹೇಳಿ ತಿಳ್ಕೊಂಡು ಮಾಡು ಹೇಳಿ ಸುಲಭೋಪಾಯಂಗಳ ಹೇಳಿ ಕೊಡುವ ವಿಶೇಷತೆ ಇಪ್ಪ ವಿವರಣೆಗೊ ಮನಸ್ಸಿಂಗೆ ತುಂಬಾ ಹತ್ತರೆ ಆವ್ತು.
    ಎಲ್ಲರಿಂಗೂ ಸುಲಭಲ್ಲಿ ಅರ್ಥ ಆವ್ತ ಹಾಂಗೆ ತಿಳಿಶಿಕೊಟ್ಟ ಚೆನ್ನೈ ಭಾವಯ್ಯಂಗೆ ನಮೋ ನಮಃ

  2. ಚೆನ್ನೈ ಭಾವ,
    ಹರೇ ರಾಮ;

    [‘ ಯಾವಾತ°ಎನ್ನಲ್ಲಿ ಮನಸ್ಸಿನ ಕೇಂದ್ರೀಕರಿಸಿ ಶ್ರದ್ಧಾಭಕ್ತಿಂದ ಅರಾಧಿಸುತ್ತನೋ ಅವನೇ ಶ್ರೇಷ್ಠ°’ ಹೇದು ಹೇಳಿದ°. ಮನಸ್ಸಿನ ಒಂದಿಕ್ಕೆ ಕೇಂದ್ರೀಕರುಸೆಕ್ಕಾರೆ ಮನಸ್ಸಿಂಗೆ ಅದು ಒಪ್ಪಿಗೆ ಆಗಿರೆಕು. ಮನಸ್ಸಿಂಗೆ ಅದು ಒಪ್ಪಿಗೆ ಆಯೇಕಾರೆ ಮನಸ್ಸು ಅದರ ಗ್ರಹಿಶೆಕು. ಮನಸ್ಸು ಅದರ ಗ್ರೇಶೆಕ್ಕಾರೆ ಕಣ್ಣಿಂಗೆ ಅದು ಕಂಡಿರೆಕು. ಹಾಂಗಾಗಿ ಇದು ಸಗುಣ ಭಕ್ತಿ / ಸಾಕಾರ ಉಪಾಸನೆ ಉತ್ತಮ ಹೇಳಿದಾಂಗೆ ಆತು.ಸಗುಣ ಭಕ್ತಿ ಮತ್ತೆ ನಿರ್ಗುಣ ಭಕ್ತಿಯ ವಿವರಿಸಿದ ಭಗವಂತ°, ಭಗವಂತನ ರೂಪ ಅಲ್ಲದ್ದ ರೂಪ ಒಂದೂ ಇಲ್ಲೆ. ಭಗವಂತ° ಸಮಸ್ತ ರೂಪಂಗಳಲ್ಲಿಯೂ ಕಾಣಿಸಿಗೊಂಬ ಮಹಾಶಕ್ತಿ. ಭಗವಂತನ ನಾಮವಲ್ಲದ್ದು ನಾಮವೊಂದಿಲ್ಲೆ. ಪೂರ್ಣ ಶ್ರದ್ಧೆ ಇಪ್ಪಗ ನಾಮ-ರೂಪ ಸಮಸ್ಯೆ ಆವುತ್ತಿಲ್ಲೆ. ಹಾಂಗಾಗಿ ಭಗವಂತ° ಹೇಳಿದ್ದು – “ಎನ್ನ ರೂಪ ಮತ್ತು ಗುಣ ವಿಶೇಷವ ಯಾರು ಶ್ರದ್ಧೆಂದ ಅರ್ತು ಉಪಾಸನೆ ಮಾಡುತ್ತವೋ ಅವ್ವೇ ಶ್ರೇಷ್ಠ ಸಾಧಕರು”. ಇಲ್ಲಿಗೆ ಮೇಲ್ನೋಟ ಪ್ರಶ್ನೆ ಸಾಕರವೋ ನಿರಾಕಾರವೋ ಹೇಳಿ ಕೇಳಿದ್ದಕ್ಕೆ ಸಾಕಾರವೇ (ಸಗುಣಭಕ್ತಿಯೇ ನಿರ್ಗುಣಭಕ್ತಿಂದ) ಶ್ರೇಷ್ಠ ಹೇಳಿ ಹೇಳಿದಾಂಗೆ ಆತು.]; ಸಾಕಾರ / ನಿರಾಕಾರ ಭಕ್ತಿಯ ನಿರ್ವಚನೆ; ಇದರಲ್ಲಿ ಏವದು ಶ್ರೇಷ್ಠ ಇತ್ಯಾದಿ ವಿಚಾರ೦ಗಳ ಸರಳವಾಗಿ ಮತ್ತಷ್ಟೇ ಸು೦ದರವಾಗಿ ಸುಲಭಲ್ಲಿ ಮನತಟ್ಟಿ ಎಚ್ಚರುಸುವಾ೦ಗೆ ವಿವರಿಸಿದ ರೀತಿ
    ಹೃದ್ಯವಾಗಿ ಬಯಿ೦ದು. ನಿ೦ಗಳ ಈ ಕೃಷ್ಣ ಪ್ರಜ್ಞೆಯ ಸತ್ಕಾರ್ಯಕ್ಕೆ ಧನ್ಯತಾ ಭಾವ ತು೦ಬಿದ ಮನಸ್ಸಿ೦ದ ನಮೋನ್ನಮಃ ಮು೦ದಾಣ ವಾರಕ್ಕೆ ಮತ್ತೆ ನವಗೆ ಇನ್ನಷ್ಟು ಭಕ್ತಿಯ ಮಹೋನ್ನತಿಯ ದರ್ಶನ ಮಾಡ್ಸುಗು ಹೇಳುವ ನಿರೀಕ್ಷೆ೦ದ ಸದ್ಯ ಕಾ೦ಬೊ°

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×