Oppanna.com

ಗರುಡ ಪುರಾಣ – ಅಧ್ಯಾಯ 07 – ಭಾಗ 02

ಬರದೋರು :   ಚೆನ್ನೈ ಬಾವ°    on   10/10/2013    4 ಒಪ್ಪಂಗೊ

ಚೆನ್ನೈ ಬಾವ°

ಬೇಟೆಯಾಡ್ಳೆ ಹೋದ ರಾಜ ಬಭ್ರುವಾಹನ°, ಬೇಟೆಂದ ಆಯಾಸಗೊಂಡು ಅರಣ್ಯಲ್ಲಿದ್ದ ಜಲಾಶಯವೊಂದರಲ್ಲಿ ಮಿಂದು ಮರದಬುಡದತ್ರೆ ತುಸು ವಿಶ್ರಾಂತಿಗಾಗಿ ಕೂದಪ್ಪಗ ಅಲ್ಯೊಂದು ಭೀಕರವಾದ ಪ್ರೇತವೊಂದರ ಕಂಡ°. ರಾಜ° ಪ್ರೇತವ ನೋಡಿ, ಪ್ರೇತ ರಾಜನ ನೋಡಿ ಪರಸ್ಪರ ವಿಸ್ಮಿತರಾಗಿ, ರಾಜ° ಪ್ರೇತದತ್ರೆ ಅದರ ವೃತ್ತಾಂತವ ಕೇಳುತ್ತ°. ರಾಜಂಗೆ ಪ್ರೇತ ತನ್ನ ಬಗ್ಗೆ ಎಂತ ಹೇಳಿತ್ತು ಹೇದು ಮುಂದಾಣ ಭಾಗ –
 
ಗರುಡ ಪುರಾಣ – ಅಧ್ಯಾಯ 07  –  ಭಾಗ  02shri_narayana_on_shesha_venerated_by_garuda_wj19 copy
 
ಪ್ರೇತ ಉವಾಚ-
ಕಥಯಾಮಿ ನೃಪಶ್ರೇಷ್ಠ ಸರ್ವಮೇವಾದಿತಸ್ತವ ।
ಪ್ರೇತತ್ವಕಾರಣಂ ಶ್ರುತ್ವಾ ದಯಾಂ ಕರ್ತುಂ ತ್ವಮರ್ಹಸಿ ॥೩೪॥
ಪ್ರೇತವು ಹೇಳಿತ್ತು – ಏ ರಾಜನೇ!, ಸುರೂವಿಂದಲೇ ನಿನಗೆಲ್ಲವನ್ನೂ ಹೇಳುತ್ತೆ. ಎನ್ನ ಪ್ರೇತತ್ವದ ಕಾರಣವ ಕೇಳಿ ನೀನು ಎನ್ನ ಮೇಗೆ ದಯೆತೋರುವೆ
ವೈದಶಂ ನಾಮ ನಗರಂ ಸರ್ವಸಂಪತ್ಸುಮನ್ವಿತಮ್ ।
ನಾನಾಜನಪದಾಕೀರ್ಣಂ ನಾನಾರತ್ನಸಮಾಕುಲಮ್ ॥೩೫॥
ಎಲ್ಲ ಸಂಪತ್ತುಗಳಿಂದ ಸಮನ್ವಿತವಾದ ವೈದಶ ಹೇಳ್ವ ಹೆಸರಿನ ಒಂದು ನಗರ. ನಾನಾ ತರದ ಜೆನರಿಂದ ಕೂಡಿದ, ನಾನಾ ರತ್ನಸಂಪತ್ತುಗಳಿಂದ ಕೂಡಿಗೊಂಡಿತ್ತು.
ಹರ್ಮ್ಯಪ್ರಾಸಾದಶೋಭಾಢ್ಯಂ ನಾನಾಧರ್ಮಸಮನ್ವಿತಮ್ ।
ತತ್ರಾಹಂ ನ್ಯವಸಂ ತಾತ ದೇವಾರ್ಚನರತಃ ಸದಾ ॥೩೬॥
ದೊಡ್ಡ ಗೋಪುರ ಅರಮನೆ ಭವನಂಗಳಿಂದ ಶೋಭಾಯಮಾನವಾದ, ನಾನಾ ಧರ್ಮಜರಿಂದ ತುಂಬಿದ ಅಲ್ಲಿ ಆನು ಸದಾ ದೇವತಾರ್ಚನೆಲಿ ನಿರತನಾಗಿ ವೈಶ್ಯನಾಗಿ ವಾಸವಾಗಿತ್ತಿದ್ದೆ.
ವೈಶ್ಯೋ ಜಾತ್ಯಾ ಸುದೇವೋsಹಂ ನಾಮ್ನಾ ವಿದಿತಮಸ್ತು ತೇ ।
ಹವ್ಯೇನ ತರ್ಪಿತಾ ದೇವಾಃ ಕವ್ಯೇನ ಪಿತರಸ್ತಥಾ ॥೩೭॥
ಎನ್ನ ವಿಷಯವ ವಿವರವಾಗಿ ಹೇಳುತ್ತೆ. ಆನು ಜಾತಿಲಿ ವೈಶ್ಯ°. ಸುದೇವ° ಹೇದು ಎನ್ನ ಹೆಸರು. ಆನು ಹವಿಸ್ಸಿನಿಂದ ದೇವತೆಗಳನ್ನೂ, ಕವ್ಯಂದ ಪಿತೃಗಳನ್ನೂ ತೃಪ್ತಿ ಪಡಿಸಿತ್ತಿದ್ದೆ.
ವಿವಿಧೈರ್ದಾನಯೋಗೈಶ್ಚ ವಿಪ್ರಾಃ ಸಂತರ್ಪಿತಾ ಮಯಾ ।
ದೀನಾಂಧಕೃಪಣೇಭ್ಯಶ್ಚ ದತ್ತಮನ್ನ ಮನೇಕಧಾ ॥೩೮॥
ಎನ್ನಂದ ಅನೇಕ ರೀತಿಯ ದಾನೋಪಚಾರಂಗಳಿಂದ ವಿಪ್ರರು ತೃಪ್ತಿಪಡಿಸಲ್ಪಟ್ಟಿತ್ತಿದ್ದು. ದೀನರಿಂಗ್, ಕುರುಡರಿಂಗೆ ಹಾಂಗೂ ದರಿದ್ರರಿಂಗೆ ಕೂಡ ಎನ್ನಿಂದ ಅನೇಕರೀತಿಯ ಅನ್ನದಾನ ಮಾಡಲ್ಪಟ್ಟಿತ್ತಿದ್ದು.
ತತ್ಸರ್ವಂ ನಿಷ್ಫಲಂ ರಾಜನ್ ಮಮ ದೈವಾದುಪಾಗತಮ್ ।
ಯಥಾ ಮೇ ನಿಷ್ಫಲಂ ಜಾತಂ ಸುಕೃತಂ ತದ್ವದಾಮಿ ತೇ ॥೨೯॥
ಏ ರಾಜನೇ!, ಅವೆಲ್ಲವೂ ಎನ್ನ ದುರದೃಷ್ಟಂದ ನಿಷ್ಫಲವಾತು.  ಎನ್ನ ಸೃಕೃತಂಗೊ ಹೇಂಗೆ ನಿಷ್ಫಲವಾತು ಹೇಳ್ವದರ ನಿನಗೆ ಆನು ಹೇಳುತ್ತೆ.
ಮಮ ವೈ ಸಂತತಿರ್ನಾಸ್ತಿ ನ ಸುಹೃನ್ನ ಚ ಬಾಂಧವಃ ।
ನ ಚ ಮಿತ್ರಂ ಹಿ ತಾದೃಗ್ಯಃ ಕುರ್ಯಾದೌರ್ಧ್ವದೇಹಿಕಮ್ ॥೪೦॥
ಎನಗೆ ಸಂತಾನ ಇಲ್ಲೆ, ಜೊತೆಗಾರರಿತ್ತವಿಲ್ಲೆ, ಬಾಂಧವರಿಲ್ಲೆ. ಎನಗೆ ಔರ್ಧ್ವದೇಹಿಕ ಕ್ರಿಯೆಗಳ ಮಾಡುವಂತ ಗೆಳೆಯರು ಆರು ಇಲ್ಲೆ.
ಯಸ್ಯ ನ ಸ್ಯಾನ್ಮ ಹಾರಾಜ ಶ್ರಾದ್ಧಂ ಮಾಸಿಕಷೋಡಶಮ್ ।
ಪ್ರೇತತ್ವಂ ಸುಸ್ಥಿರಂ ತಸ್ಯ ದತ್ತೈಃ ಶ್ರಾದ್ಧಶತೈರಪಿ ॥೪೧॥
ಮಹಾರಾಜ!, ಆರ ಷೋಡಶ ಮಾಸಿಕ ಶ್ರಾದ್ಧವು ಮಾಡಲ್ಪಟ್ಟಿದ್ದಿಲ್ಲೆಯೋ ಅವಂಗೆ ನೂರಾರು ಶ್ರಾದ್ಧಂಗಳ ಮಾಡಿರೂ ಅವನ ಪ್ರೇತತ್ವ ಸ್ಥಿರವಾಗಿಯೇ ಇರುತ್ತು.
ತ್ವಮೌರ್ಧ್ವದೇಹಿಕಂ ಕೃತ್ವಾ ಮಾಮುದ್ಧರ ಮಹೀಪತೇ ।
ವರ್ಣಾನಾಂ ಚೈವ ಸರ್ವೇಷಾಂ ರಾಜಾ ಬಂಧುರಿಹೋಚ್ಯತೇ ॥೪೨॥
ಎಲೈ ರಾಜನೇ!, ನೀನು ಔರ್ಧ್ವದೇಹಿಕ ಕರ್ಮಂಗಳ ಮಾಡಿ ಎನ್ನ ಉದ್ಧರುಸು. ಈ ಲೋಕಲ್ಲಿ ಎಲ್ಲ ವರ್ಣದೋರಿಂಗೂ ರಾಜನೇ ಬಂಧು ಹೇದು ಹೇಳಲ್ಪಡುತ್ತು.
ತನ್ಮಾಂ ತಾರಯ ರಾಜೇಂದ್ರ ಮಣಿರತ್ನಂ ದದಾಮಿ ತೇ ।
ಯಥಾ ಮೇ ಸದ್ಗತಿರ್ಭೂಯಾತ್ಪ್ರೇತಯೋನಿಶ್ಚ ಗಚ್ಛತಿ ॥೪೩॥
ಏ ರಾಜೇಂದ್ರ!, ಹಾಂಗಾಗಿ ಎನ್ನ ಪಾರುಮಾಡು. ನಿನಗೊಂದು ಮಣಿರತ್ನವ ಕೊಡುತ್ತೆ. ಅದರಿಂದ ಎನ್ನ ಪ್ರೇತದೇಹವು ಹೊರಟುಹೋಗಲಿ ಹಾಂಗೂ ಎನಗೆ ಸದ್ಗತಿ ಉಂಟಾಗಲಿ.
ತಥಾ ಕಾರ್ಯಂ ತ್ವಯಾ ವೀರ ಮಮ ಚೇದಿಚ್ಛಸಿ ಪ್ರಿಯಮ್ ।
ಕ್ಷುಧಾತೃಷಾದಿಭಿರ್ದುಃಖ್ಯೈಃ ಪ್ರೇತತ್ವಂ ದುಃಸಹಂ ಮಮ ॥೪೪॥
ಹೇ ವೀರನೇ!, ಎನ್ನ ಪ್ರಿಯವಾದ್ದರ ಮಾಡ್ಳೆ ಇಚ್ಛಿಸುತ್ತೇಳಿಯಾದರೆ ಹಾಂಗೆ ಮಾಡು. ಹಶು ಆಸರುಗಳಿಂದ ದುಃಖಂದ ಕೂಡಿ ಎನ್ನ ಈ ಪ್ರೇತತ್ವ ಸಹುಸಲೆ ಕಷ್ಟಕರವಾಗಿದ್ದು.
ಸ್ವಾದೂದಕಂ ಫಲಂ ಚಾಸ್ತಿ ವನೇsಸ್ಮಿನ್ ಶೀತಲಂ ಶಿವಮ್ ।
ನ ಪ್ರಾಪ್ನೋಮಿ ಕ್ಷುಧಾರ್ತೋsಹಂ ತೃಷಾರ್ತೋ ನ ಜಲಂ ಕ್ವಚಿತ್ ॥೪೫॥
ಈ ವನಲ್ಲಿ ರುಚಿಕರವಾದ ಹಣ್ಣುಗೊ, ಶೀತಲವಾದ ನೀರೂ ಇದ್ದು. ಅಂದರೂ ಹಶುವಿಂದ ಆರ್ತನಾಗಿದ್ದರೂ ಹಶುವಿಂದ ಬಳಲಿದ್ದರೂ ಹಣ್ಣು ನೀರುಗಳ ಎನಗೆ ಪ್ರಾಪ್ತಿಯಾವ್ತಿಲ್ಲೆ.
ಯದಿ ಮೇ ಹಿ ಭವೇದ್ರಾಜನ್ವಿಧಿರ್ನಾರಾಯಣೋ ಮಹಾನ್ ।
ತದಗ್ರೇ ವೇದಮಂತ್ರೈಶ್ಚ ಕ್ರಿಯಾ ಸರ್ವೌರ್ಧ್ವದೇಹಿಕೇ ॥೪೬॥
ಹೇ ಮಹಾರಾಜನೇ!, ಒಂದುವೇಳೆ ಮಹಾನಾರಾಯಣವಿಧಿಯ ಪ್ರಕಾರ ಮಾಡಿರೆ, ಅದರ ಮುಂದಾಣ ಕರ್ಮಂಗಳೂ, ಔರ್ಧ್ವದೇಹಿಕ ಕರ್ಮ ಮುಂತಾದ ಸಕಲ ಕರ್ಮಂಗಳೂ ವೇದಮಂತ್ರಂಗಳಿಂದ ಮಾಡಿರೆ
ತದಾ ನಶ್ಯತಿ ಮೇ ನೂನಂ ಪ್ರೇತತ್ವಂ ನಾತ್ರ ಸಂಶಯಃ ।
ವೇದಾ ಮಂತ್ರಾಸ್ತಪೋ ದಾನಂ ದಯಾ ಸರ್ವತ್ರ ಜಂತುಷು ॥೪೭॥
ಅಂಬಗ ನಿಶ್ಚಯವಾಗಿಯೂ ಎನ್ನ ಪ್ರೇತತ್ವವು ನಾಶಹೊಂದುತ್ತು. ಅದರ್ಲಿ ಸಂಶಯ ಇಲ್ಲೆ. ವೇದ ಮಂತ್ರಂಗೊ, ತಪಸ್ಸು, ದಾನ, ಸಕಲಪ್ರಾಣಿಗಳಲ್ಲಿ ದಯೆ
ಸಚ್ಛಾಸ್ತ್ರಶ್ರವಣಂ ವಿಷ್ಣೋಃ ಪೂಜಾ ಸಜ್ಜನಸಂಗತಿಃ ।
ಪ್ರೇತಯೋನಿವಿನಾಶಾಯ ಭವಂತೀತಿ ಮಯಾ ಶ್ರುತಮ್ ॥೪೮॥
ಒಳ್ಳೆಯ ಶಾಸ್ತ್ರಂಗಳ ಓದುವದು, ವಿಷ್ಣು ಪೂಜೆ, ಸಜ್ಜನರ ಸಂಗ – ಇವುಗಳಿಂದ ಪ್ರೇತರೂಪ ನಾಶವಾವ್ತು ಹೇಳ್ವದರ ಆನು ಕೇಳಿದ್ದೆ.
ಅತೋ ವಕ್ಷ್ಯಾಮಿ ತೇ ವಿಷ್ಣು ಪೂಜಾಂ ಪ್ರೇತತ್ವನಾಶಿನೀಮ್ ।
ಸುವರ್ಣದ್ವಯಮಾನೀಯ ಸುವರ್ಣನ್ಯಾಯಸಂಚಿತಮ್ ।
ತಸ್ಯ ನಾರಾಯಣಸ್ಯೈಕಾಂ ಪ್ರತಿಮಾಂ ಭೂಪ ಕಲ್ಪಯೇತ್ ॥೪೯॥
ಹಾಂಗಾಗಿ ಪ್ರೇತತ್ವ ನಾಶಮಾಡುವ ವಿಷ್ಣು ಪೂಜೆಯ ನಿನಗೆ ಆನು ಹೇಳುತ್ತೆ. ಏ ರಾಜನೇ!, ನ್ಯಾಯವಾಗಿ ಸಂಪಾದಿಸಿದ ಎರಡು ಸುವರ್ಣದ ಅಳತೆಯ (32 ಉದ್ದಿನಕಾಳಿನಷ್ಟು ತೂಕದ) ಚಿನ್ನವ ತೆಕ್ಕೊಂಡು ಅದರಿಂದ ಒಂದು ನಾರಾಯಣ ಪ್ರತಿಮೆಯ ಮಾಡುಸು.
ಪೀತವಸ್ತ್ರಯುಗಚ್ಛನ್ನಾಂ ಸರ್ವಾಭರಣಭೂಷಿತಾಮ್ ।
ಸ್ನಾಪಿತಾಂ ವಿವಿಧೈಸ್ತೋಯೈರಧಿವಾಸ್ಯ ಯಜೇತ್ತತಃ ॥೫೦॥
ಆ ಪ್ರತಿಮೆಗೆ  ವಿವಿಧ ಪವಿತ್ರ ಜಲಂದ ಅಭಿಷೇಕ ಮಾಡಿ, ಎರಡು ಹಳದಿ ವಸ್ತ್ರವ ಹೊದೆಶಿ, ಸರ್ವಾಭರಣಂಗಳ ಅಲಂಕಾರ ಮಾಡಿ, ಮತ್ತೆ ಪೂಜೆ, ಅರ್ಚನೆ ಮಾಡೆಕು.
ಪೂರ್ವೇ ತು ಶ್ರೀಧರಂ ತಸ್ಯಾ ದಕ್ಷಿಣೇ ಮಧುಸೂದನಮ್ ।
ಪಶ್ಚಿಮೇ ವಾಮನಂ ದೇವಮುತ್ತರೇ ಚ ಗದಾಧರಮ್ ॥೫೧॥
ಅದರ ಪೂರ್ವಭಾಗಲ್ಲಿ ಶ್ರೀಧರನ, ದಕ್ಷಿಣಲ್ಲಿ ಮಧುಸೂದನನ, ಪಶ್ಚಿಮಲ್ಲಿ ವಾಮನನ್ನೂ ಉತ್ತರಲ್ಲಿ ಗದಾಧರನ
ಮಧ್ಯೇ ಪಿತಾಮಹಂ ಚೈವ ತಥಾ ದೇವಂ ಮಹೇಶ್ವರಮ್ ।
ಪೂಜಯೇಚ್ಚ ವಿಧಾನೇನ ಗಂಧಪುಷ್ಪಾದಿಭಿಃ ಪೃಥಕ್ ॥೫೨॥
ಮಧ್ಯಲ್ಲಿ ಪಿತಾಮಹನಾದ ಬ್ರಹ್ಮನ ಮತ್ತೆ ಮಹೇಶ್ವರನನ್ನೂ ವಿಧಿಪೂರ್ವಕವಾಗಿ ಗಂಧಪುಷ್ಪಾದಿಗಳಿಂದ ಕ್ರಮವಾಗಿ (ಪ್ರತ್ಯೇಕವಾಗಿ) ಪೂಜೆ ಮಾಡೆಕು.
ತತಃ ಪ್ರದಕ್ಷಿಣೀಕೃತ್ಯ ವಹ್ನೌ ಸಂತರ್ಪ್ಯ ದೇವತಾಃ ।
ಘೃತೇನ ದಧ್ನಾ ಕ್ಷೀರೇಣ ವಿಶ್ವೇದೇವಾಂಶ್ಚ ತರ್ಪಯೇತ್ ॥೫೩॥
ಮತ್ತೆ ಪ್ರದಕ್ಷಿಣೆ ಮಾಡಿಕ್ಕಿ, ಅಗ್ನಿಲಿ (ಹೋಮದ ಮೂಲಕ ) ದೇವತೆಗಳ ತೃಪ್ತಿಪಡಿಸಿ, ತುಪ್ಪ, ಮೊಸರು, ಹಾಲಿಂದ ವಿಶ್ವೇದೇವರ ತೃಪ್ತಿಪಡುಸೆಕು.
ತತಃ ಸ್ನಾತೋ ವಿನೀತಾತ್ಮ ಯಜಮಾನಃ ಸಮಾಹಿತಃ ।
ನಾರಾಯಣಾಗ್ರೇ ವಿಧಿವತ್ಸ್ವಾಂ ಕ್ರಿಯಾಮೌರ್ಧ್ವದೇಹಿಕಮ್ ॥೫೪॥
ಮತ್ತೆ ಯೆಜಮಾನ ಮಿಂದಿಕ್ಕಿ ವಿನೀತನಾಗಿ, ಸಮಧಾನಂದ ನಾರಾಯಣನ ಮುಂದೆ ಕೂದೊಂಡು ವಿಧಿವತ್ತಾಗಿ ಔರ್ಧ್ವದೇಹಿಕ ಕ್ರಿಯೆಗಳ ಮಾಡೆಕು.
ಆರಭೇತ ಯಥಾಶಾಸ್ತ್ರಂ ಕೋಧಲೋಭವಿವರ್ಜಿತಃ ।
ಕುರ್ಯಾಚ್ಛಾದ್ಧಾನಿ ಸರ್ವಾಣಿ ವೃಷಸ್ಯೋತ್ಸರ್ಜನಂ ತಥಾ ॥೫೫॥
ಕ್ರೋಧ ಲೋಭಂಗಳ ಬಿಟ್ಟು ಶಾಸ್ತ್ರಲ್ಲಿ ಹೇಳಿಪ್ಪಂತೆ ಸುರುಮಾಡೆಕು. ಮತ್ತೆ ಶ್ರಾದ್ಧ, ವೃಷೋತ್ಸರ್ಗ ಮತ್ತೆಲ್ಲವನ್ನೂ ಮಾಡೆಕು.
ತತಃ ಪದಾನಿ ವಿಪ್ರೇಭ್ಯೋ ದದಾಚ್ಚೈವ ತ್ರಯೋದಶ ।
ಶಯ್ಯಾದಾನಂ ಪ್ರದತ್ವಾ ಚ ಘಟಂ ಪ್ರೇತಸ್ಯ ನಿರ್ವಪೇತ್ ॥೫೬॥
ಮತ್ತೆ ಅರ್ಹರಾದ ಹದಿಮೂರು ಬ್ರಾಹ್ಮಣರಿಂಗೆ ಹದಿಮೂರು ಬಗೆಯ ‘ಪದದಾನ’ ಮಾಡೆಕು.  [ತ್ರಯೋದಶ ಪದದಾನಂಗೊ -> ಕೊಡೆ, ಪಾದರಕ್ಷೆ, ವಸ್ತ್ರ, ಉಂಗುರ, ಕಮಂಡಲ, ಆಸನ, ಪಂಚಪಾತ್ರೆ, ಇವೇಳು ಮತ್ತು ದಂಡ, ತಾಮ್ರದ ಪಾತ್ರೆ, ಅಕ್ಕಿ, ಭೋಜನ, ಧನ ಮತ್ತೆ ಯಜ್ಞೋಪವೀತ ] ಹಾಸಿಗೆ+ತಲೆಗೊಂಬು+ಹಾಸಲೆ+ಹೊದವಲಿಪ್ಪದು ಸೇರಿದ ಶಯ್ಯಾದಾನವ ಮಾಡಿ, ಒಂದು ಉದಕ ಕುಂಭವ (ನೀರ ಕೊಡ / =ಪ್ರೇತಘಟ)  ಪ್ರೇತಕ್ಕಾಗಿ ಅರ್ಪುಸೆಕು.
ರಾಜೋವಾಚ-
ಕಥಂ ಪ್ರೇತಘಟಂ ಕುರ್ಯಾದ್ದದ್ಯಾತ್ಕೇನ ವಿಧಾನತಃ ।
ಬ್ರೂಹಿ ಸರ್ವಾನುಕಂಪಾರ್ಥಂ ಘಟಂ ಪ್ರೇತವಿಮುಕ್ತಿದಮ್ ॥೫೭॥
ರಾಜ° ಹೇಳಿದ° – ಪ್ರೇತಘಟವ ಹೇಂಗೆ ಮಾಡೆಕು. ಏವ ವಿಧಾನಂದ ಕೊಡೆಕು. ಸಕಲ ಜೆನರ ಹಿತಾರ್ಥವಾಗಿ ಪ್ರೇತಕ್ಕೆ ಮುಕ್ತಿಯ ದೊರಕುಸುವ ಪ್ರೇತಘಟದ ವಿಷಯವ ಹೇಳು.
ಪ್ರೇತ ಉವಾಚ-
ಸಾಧುಪೃಷ್ಟಂ ಮಹಾರಾಜ ಕಥಯಾಮಿ ನಿಬೋಧ ತೇ ।
ಪ್ರೇತತ್ವಂ ನ ಭವೇದ್ಯೇನ ದಾನೇನ ಸುದೃಢೇನ ಚ ॥೫೮॥
ಪ್ರೇತ ಹೇಳಿತ್ತು – ಹೇ ಮಹಾರಾಜ!, ಒಳ್ಳೆದನ್ನೇ ಕೇಳಿದೆ ನೀನು. ಏವ ಸುದೃಢವಾದ ದಾನಂದ ಪ್ರೇತತ್ವ ಉಂಟಾವ್ತಿಲ್ಲೆಯೋ ಅದರ ಹೇಳುತ್ತೆ. ಲಕ್ಷ್ಯ ಗೊಟ್ಟು ಕೇಳು.
ದಾನಂ ಪ್ರೇತಘಟಂ ನಾಮ ಸರ್ವಾಶುಭವಿನಾಶನಮ್ ।
ದುರ್ಲಭಂ ಸರ್ವಲೋಕಾನಾಂ ದುರ್ಗತಿಕ್ಷಯಕಾರಕಮ್ ॥೫೯॥
ಈ ಪ್ರೇತಘಟ ಹೇಳ್ವ ಹೆಸರಿನ ದಾನವು ಎಲ್ಲ ಅಶುಭಂಗಳ ನಾಶವುಂಟುಮಾಡುವಂತಾದ್ದು ಹಾಂಗೂ ದುರ್ಗತಿಯನ್ನೂ ಕ್ಷಯಮಾಡುವಂತಾದ್ದು. ಸಕಲಲೋಕಂಗಳಲ್ಲಿಯೂ ಇದು ದುರ್ಲಭವಾದ್ದು.
ಸಂತಪ್ತ ಹಾಟಕಮಯಂ ತು ಘಟಂ ವಿಧಾಯ ಬ್ರಹ್ಮೇಶಕೇಶವಯುತಂ ಸಹ ಲೋಕಪಾಲೈಃ ।
ಕ್ಷೀರಾಜ್ಯಪೂರ್ಣವಿವರಂ ಪ್ರಣಿಪತ್ಯ ಭಕ್ತ್ಯಾ ವಿಪ್ರಾಯ ದೇಹಿ ತವ ದಾನಶತೈಃ ಕಿಮನ್ನೈಃ ॥೬೦॥
ಕಾಸಿದ ಚಿನ್ನಂದ ಘಟವ ಮಾಡಿ, ವಿಧಿಪೂರ್ವಕ ಬ್ರಹ್ಮ°, ಈಶ್ವರ°, ಕೇಶವ°, ಇಂದ್ರಾದಿ ಲೋಕಪಾಲರ ಜತೆಲಿ ಅದರಲ್ಲಿ ಆವಾಹನೆ ಮಾಡಿ ಅದರ ಹಾಲು ತುಪ್ಪಂಗಳಿಂದ ತುಂಬುಸಿ ಅದಕ್ಕೆ ನಮಸ್ಕರಿಸಿ, ಭಕ್ತಿಂದ ಅದರ ಬ್ರಾಹ್ಮಣಂಗೆ ದಾನ ಕೊಡೆಕು. ಬೇರೆ ನೂರಾರು ದಾನಂಗಳಿಂದ ಎಂತ ಪ್ರಯೋಜನ?!
ಬ್ರಹ್ಮಾ ಮಧ್ಯೇ ತಥಾ ವಿಷ್ಣುಃ ಶಂಕರಃ ಶಂಕರೋsವ್ಯಯಃ ।
ಪ್ರಾಚ್ಯಾದಿಷು ಚ ತತ್ಕಂಠೇ ಲೋಕಪಾಲಾನ್ ಕ್ರಮೇಣ ತು ॥೬೧॥
ಮಧ್ಯಲ್ಲಿ ಬ್ರಹ್ಮ°, ವಿಷ್ಣು ಮತ್ತೆ ಅವಿನಾಶಿಯಾದ ಸುಖವ ಶಂಕರ° ಇವರುಗಳನ್ನೂ, ಪೂರ್ವಾದಿ ದಿಕ್ಕುಗಳಲ್ಲಿ ಅದರ ಕಂಠಲ್ಲಿ ಲೋಕಪಾಲಕರನ್ನೂ ಕ್ರಮವಾಗಿ
ಸಂಪೂಜ್ಯ ವಿಧಿವದ್ರಾಜನ್ ಧೂಪೈಃ ಕುಸುಮಚಂದನೈಃ ।
ತತೋ ದುಗ್ಧಾಜ್ಯಸಹಿತಂ ಘಟಂ ದೇಯಂ ಹಿರಣ್ಮಯಮ್ ॥೬೨॥
ಏ ರಾಜನ್!, ಚಂದನ ಹೂಗು ಧೂಪಂಗಳಿಂದ ವಿಧಿಪೂರ್ವಕವಾಗಿ ಅರ್ಚಿಸಿ, ಮತ್ತೆ ಹಾಲು ತುಪ್ಪಂಗಳ ಸಹಿತ ಆ ಚಿನ್ನದ ಘಟವ ದಾನ ಕೊಡೆಕು.
ಸರ್ವದಾನಾಧಿಕಂ ಚೈತನ್ಮ ಹಾಪಾಕನಾಶನಮ್ ।
ಕರ್ತವ್ಯಂ ಶ್ರದ್ಧಯಾ ರಾಜನ್ಪ್ರೇತತ್ವವಿನಿವೃತ್ತಯೇ ॥೬೩॥
ಏ ರಾಜನೇ, ಇದು ಎಲ್ಲ ದಾನಂಗಳಲ್ಲಿಯೂ ಶ್ರೇಷ್ಠವಾದ್ದು ಮತ್ತೆ ಮಹಾಪಾತಕಂಗಳ ನಾಶಮಾಡುವಂತಾದ್ದು. ಹಾಂಗಾಗಿ ಪ್ರೇತತ್ವದ ವಿಮೋಚನೆಗೆ ಬೇಕಾಗಿ ಇದರ ಶ್ರದ್ಧೆಂದ ಮಾಡೆಕು.
ಶ್ರೀಭಗವಾನುವಾಚ –
ಏವಂ ಸಂಜಲ್ಪತಸ್ತಸ್ಯ ಪ್ರೇತೇನ ಸಹ ಕಾಶ್ಯಪ ।
ಸೇನಾ ಜಗಾಮಾನುಪದಂ ಹಸ್ತ್ಯಶ್ವರಥಸಂಕುಲಾ ॥೬೪॥
ಭಗವಂತ° ಮಹಾವಿಷ್ಣು ಹೇಳಿದ° – ಹೇ ಕಾಶ್ಯಪನೇ!, ಈ ರೀತಿ ಆ ಪ್ರೇತದ ಒಟ್ಟಿಂಗೆ ರಾಜ ಮಾತಾಡಿಗೊಂಡಿಪ್ಪಗ, ರಾಜನ ಹಿಂಬಾಲಿಸಿಗೊಂಡು ಬಂದಿತ್ತಿದ್ದ ಆನೆ, ಕುದುರೆ, ರಥಂಗಳಿಂದ ಕೂಡಿದ ರಾಜನ ಸೈನ್ಯವು ಅಲ್ಲಿಗೆ ಬಂದು ಎತ್ತಿತ್ತು.
ತತೋ ಬಲೇ ಸಮಾಯಾತೇ ದತ್ವಾ ರಾಜ್ಞೇ ಮಹಾಮಣಿಮ್ ।
ನಮಸ್ಕೃತ್ಯ ಪುನಃ ಪ್ರಾರ್ಥ್ಯ ಪ್ರೇತೋsದರ್ಶನಮೇಯಿವಾನ್ ॥೬೫॥
ರಾಜನ ಸೈನ್ಯವು ಅಲ್ಲಿಗೆ ಬಂದು ಎತ್ತಿದ ಮತ್ತೆ, ಆ ಪ್ರೇತವು ರಾಜಂಗೆ ಮಹಾಮಣಿಯ ಕೊಟ್ಟಿಕ್ಕಿ, ನಮಸ್ಕರಿಸಿ, ಪುನಃ ಪ್ರಾರ್ಥಿಸಿ ಅದೃಶ್ಯ ಆತು.
ತಸ್ಮಾದ್ವನಾದ್ವಿನಿಷ್ಕ್ರಮ್ಯ ರಾಜಾಪಿ ಸ್ವಪುರಂ ಯಯೌ ।
ಸ್ವಪುರಂ ಚ ಸಮಾಸಾದ್ಯ ತತ್ಸರ್ವಂ ಪ್ರೇತಭಾಷಿತಮ್ ॥೬೬॥
ಮತ್ತೆ ರಾಜನೂ ಆ ಕಾಡಿಂದ ಹೆರಟು ತನ್ನ ಪಟ್ಟಣಕ್ಕೆ ಹೋದ°. ತನ್ನ ಊರ ಸೇರಿ, ಪ್ರೇತವು ಹೇಳಿದ ಎಲ್ಲವನ್ನೂ
ಚಕಾರ ವಿಧಿವತ್ಪಕ್ಷಿನ್ನೌರ್ಧ್ವದೇಹಿಕಜಂ ವಿಧಿಮ್ ।
ತಸ್ಯ ಪುಣ್ಯಪ್ರದಾನೇನ ಪ್ರೇತೋ ಮುಕ್ತೋ ದಿವಂ ಯಯೌ ॥೬೭॥
ಔರ್ಧ್ವದೇಹಿಕ ಕ್ರಿಯೆಂಗಳ ವಿಧಿಪೂರ್ವಕವಾಗಿ ಮಾಡಿ ಅದರ ಪುಣ್ಯ ಫಲವ ದಾನ ಮಾಡಿ, ಏ ಪಕ್ಷಿಯೇ!, ಪ್ರೇತವು ಮುಕ್ತಿಹೊಂದಿ ಸ್ವರ್ಗಲೋಕಕ್ಕೆ ಹೋತು.
ಶ್ರಾದ್ಧೇನ ಪರದತ್ತೇನ ಗತಃ ಪ್ರೇತೋsಪಿ ಸದ್ಗತಿಮ್ ।
ಕಿಂ ಪುನಃ ಪುತ್ರದತ್ತೇನ ಪಿತಾ ಯಾತೀತಿ ಚಾದ್ಭುತಮ್ ॥೬೮॥
ಇತರರು ಮಾಡಿದ ಶ್ರಾದ್ಧಂದ ಪ್ರೇತವು ಸದ್ಗತಿಯ ಹೊಂದಿತ್ತು. ಮತ್ತೆ ಮಗ° ಮಾಡಿದ್ದರಿಂದ ಅಪ್ಪ° ಸದ್ಗತಿಯ ಹೊಂದುತ್ತರ್ಲಿ ಎಂತ ಆಶ್ಚರ್ಯ ಇದ್ದು?!.
ಇತಿಹಾಸಮಿಮಂ ಪುಣ್ಯಂ ಶೃಣೋತಿ ಶ್ರಾವಯೇಚ್ಚ ಯಃ ।
ನ ತೌ ಪ್ರೇತತ್ವಮಾಯಾತಃ ಪಾಪಾಚಾರಯುತಾವಪಿ ॥೬೯॥
ಈ ಪುಣ್ಯಕರವಾದ ಇತಿಹಾಸವ ಕೇಳುವಂವ°, ಕೇಳುಸುವಂವ° ಪಾಪಂಗಳ ಮಾಡಿದ್ದರೂ ಅಂವ° ಪ್ರೇತತ್ವವ ಪಡೆತ್ತನಿಲ್ಲೆ.
 
ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಬಭ್ರುವಾಹನೇನ ಪ್ರೇತಸಂಸ್ಕಾರೋ ನಾಮ ಸಪ್ತಮೋsಧ್ಯಾಯಃ ॥
ಇಲ್ಲಿಗೆ ಶ್ರೀಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಬಭ್ರುವಾಹನನ ಮೂಲಕ ಪ್ರೇತ ಸಂಸ್ಕಾರ’ ಹೇಳ್ವ ಏಳನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
ಪ್ರೇತವು ಹೇಳಿತ್ತು – ಹೇ ರಾಜಶ್ರೇಷ್ಠನೇ!, ಆನು ಸುರುವಿಂದಲೇ ನಿನಗೆ ಎಲ್ಲವನ್ನೂ ಹೇಳುತ್ತೆ. ಪ್ರೇತತ್ವದ ಕಾರಣವ ಕೇಳಿ ನಿನಗೆ ದಯೆ ಉಂಟಪ್ಪಲೆ ಇದ್ದು. ನಾನಾ ತರದ ಜನರಿಂದ ಕೂಡಿ ನಾನಾ ರತ್ನಂಗಳಿಂದ ಸರ್ವಸಂಪತ್ಭರಿತವಾದ ‘ವೈದಿಶ’ ಹೇಳ್ವ ನಗರ ಒಂದು ಇದ್ದತ್ತು. ವಿಶಾಲ ಭವನಂಗಳಿಂದ ಕೂಡಿದ ಶೋಭಾಯಮಾನವಾದ ಬೃಹತ್ ಅರಮನೆ ಅದಾಗಿದ್ದತ್ತು. ನಾನಾ ಧರ್ಮ ಜನರಿಂದ ಕೂಡಿದ ಅಲ್ಲಿ ಆನು ಧರ್ಮನಿಷ್ಠನಾದ ವೈಶ್ಯನಾಗಿ ವಾಸಿಸುತ್ತಿದ್ದೆ. ಸುದೇವನೆಂಬ ಹೆಸರು ಎನ್ನದಾಗಿತ್ತು. ದೇವಾನಿಮಿತ್ಥವಾದ ಹವ್ಯಂದ ದೇವತೆಗಳನ್ನೂ ಪಿತೃನಿಮಿತ್ಥ ಕವ್ಯಂದ ಪಿತೃಗಳನ್ನೂ ತೃಪ್ತಿಪಡಿಸಿದೆ. ವಿವಿಧದಾನಂಗಳಿಂದ ಬ್ರಾಹ್ಮಣರನ್ನೂ ಸಂತೋಷಿಸಿದೆ. ದೀನ, ಅಂಧ ಮತ್ತು ದರಿದ್ರರಿಂಗೂ ಹಲವು ರೀತಿಲಿ ಅನ್ನದಾನವ ಮಾಡಿತ್ತಿದ್ದೆ.
ಆದರೆ, ಹೇ ರಾಜ!, ಅವೆಲ್ಲವೂ ಎನ್ನ ದುರದೃಷ್ಟಂದ ನಿಷ್ಫಲವಾತು. ಅದೇಂಗೆ ಎನ್ನ ಸುಕೃತಂಗ ನಿಷ್ಫಲವಾತು ಹೇಳ್ವದರ ಆನು ನಿನಗೆ ಹೇಳುತ್ತೆ ಕೇಳು. – ಎನ್ನ ಮರಣಾನಂತರ ಎನ್ನ ಔರ್ಧ್ವದೇಹಿಕ ಕ್ರಿಯೆಗಳ ಮಾಡ್ಳೆ ಎನಗೆ ಮಕ್ಕೊ ಇಲ್ಲೆ, ಸಹೃದಯಿಗೊ ಇಲ್ಲೆ, ಬಂಧು-ಬಾಂಧವರಾಗಲೀ, ಗೆಳೆಯರಾಗಲೀ ಆರೂ ಇತ್ತಿದ್ದವಿಲ್ಲೆ. ಮರಣದ ನಂತರ ಯಾವ ವ್ಯಕ್ತಿಯ ಉದ್ದೇಶಂದ ಷೋಡಶ ಮಾಸಿಕ ಶ್ರಾದ್ಧವ ಮಾಡಲ್ಪಟ್ಟಿದಿಲ್ಲೆಯೋ, ಅಂತಹ ವ್ಯಕ್ತಿಗೆ ನೂರಾರು ಶ್ರಾದ್ಧ ಮಾಡಿರೂ ಕೂಡ ಅವನ ಪ್ರೇತತ್ವ ಸ್ಥಿರವಾಗಿಯೇ ಇರುತ್ತು (ಪ್ರೇತತ್ವ ನಾಶ /ಮುಕ್ತಿ ಆವ್ತಿಲ್ಲೆ).
ಹೇ ರಾಜನೇ, ನೀನು ಎನ್ನ ಔರ್ಧ್ವದೈಹಿಕ ಕರ್ಮವ ನೆರವೇರಿಸಿ ಎನ್ನ ಉದ್ಧರುಸು. ಮಹಾರಾಜ° ಎಲ್ಲೋರಿಂಗೂ ಬಂಧುವಾಗಿರುತ್ತ° ಹೇದು ಹೇಳಲ್ಪಡುತ್ತು. ಹೇ ರಾಜನೇ, ನೀನು ಎನ್ನ ಉದ್ಧಾರ ಮಾಡು. ನಿನಗಾನು ಒಂದು ಮಣಿರತ್ನವ ಕೊಡುತ್ತೆ. ಅದರಿಂದ ಎನ್ನ ಪ್ರೇತತ್ವ ತೊಲಗಲಿ ಮತ್ತು ಎನಗೆ ಸದ್ಗತಿ ಉಂಟಾಗಲಿ. ಹೇ ವೀರನೇ!, ಒಂದು ವೇಳೆ ನೀನು ಎನ್ನ ಹಿತವ ಉಂಟುಮಾಡ್ಳೆ ಬಯಸುತ್ತೇಳಿಯಾದರೆ ನೀನು ಎನಗೆ ಆ ಕಾರ್ಯವ ಮಾಡು. ಹಶು-ಆಸರ ದುಃಖದ ಕಾರಣಂದ ಎನಗೆ ಈ ಪ್ರೇತತ್ವ ದುಃಸಹನೀಯವಾಗಿ ಹೋಯ್ದು.
ಈ ವನಲ್ಲಿ ರುಚಿಕರವಾದ ಹಣ್ಣುಗೊ ಮತ್ತು ಶೀತಲ ಜಲ ಇದ್ದು. ಆದರೂ ಹಶು-ಆಸರಂದ ಆನು ಪೀಡಿತನಾಗಿದ್ದೆ. ಎನಗೆ ಜಲ ಫಲದ ಪ್ರಾಪ್ತಿ ಆವ್ತಿಲ್ಲೆ. ಹೇ ರಾಜ!, ಒಂದು ವೇಳೆ ಎನಗಾಗಿ ಯಥಾವಿಧಿ ನಾರಾಯಣ ಬಲಿ ಮಾಡಿರೆ, ಅದರ ಮತ್ತೆ ವೇದಮಂತ್ರಂಗಳ ಮೂಲಕ ಎನ್ನ ಸಮಸ್ತ ಔರ್ಧ್ವದೈಹಿಕ ಕ್ರಿಯೆಗಳ ಮಾಡಿರೆ, ಖಂಡಿತವಾಗ್ಯೂ ಎನ್ನ ಪ್ರೇತತ್ವ ನಾಶವಾವ್ತು. ಇದರ್ಲಿ ಸಂಶಯ ಇಲ್ಲೆ. ಆನು ಕೇಳಿದಾಂಗೆ, ವೇದಮಂತ್ರ, ತಪಸ್ಸು, ದಾನ ಮತ್ತು ಸಮಸ್ತ ಜೀವಿಗಳಲ್ಲಿ ದಯೆ, ಸತ್ ಶಾಸ್ತ್ರ ಶ್ರವಣ, ವಿಷ್ಣುಪೂಜೆ ಮತ್ತೆ ಸತ್ಸಂಗ ಇವುಗಳಿಂದ ಪ್ರೇತತ್ವ ನಾಶ ಆವ್ತು.
ಹಾಂಗಾಗಿ ಆನು ನಿನಗೆ ಪ್ರೇತತ್ವವ ನಷ್ಟಗೊಳುಸುವ ವಿಷ್ಣು ಪೂಜೆಯ ಕುರಿತು ಹೇಳುತ್ತೆ. ಹೇ ರಾಜ!, ನ್ಯಾಯಂದ ಸಂಪಾದಿಸಿದ ಎರಡು ಸುವರ್ಣ ಭಾರದ (32ಉದ್ದಿನಕಾಳಿನಷ್ಟು ತೂಕದ) ಬಂಗಾರವ ತೆಕ್ಕೊಂಡು ಅದರಿಂದ ಒಂದು ನಾರಾಯಣ ಪ್ರತಿಮೆಯ ಮಾಡುಸೆಕು. ಅದಕ್ಕೆ ವಿವಿಧ ಪವಿತ್ರ ಜಲಂದ ಅಭಿಷೇಕ ಮಾಡೆಕು. ಅದಕ್ಕೆ ಹಳದಿ ವರ್ಣದ ವಸ್ತ್ರವ ಧಾರಣೆ ಮಾಡಿಸಿ, ಸಮಸ್ತ ಅಲಂಕಾರಂಗಳಿಂದ ಅಲಂಕರಿಸಿ ಮತ್ತೆ ಪ್ರತಿಮೆಗೆ ಪೂಜಾರ್ಚನೆ ಮಾಡೆಕು.
ಆ ಪ್ರತಿಮೆಯ ಪೂರ್ವಭಾಗಲ್ಲಿ ಶ್ರೀಧರ, ದಕ್ಷಿಣಲ್ಲಿ ಮಧುಸೂದನ, ಪಶ್ಚಿಮಲಿ ವಾಮನ, ಮತ್ತೆ ಉತ್ತರಲ್ಲಿ ಗದಾಧರ, ಮಧ್ಯಲ್ಲಿ ಪಿತಾಮಹ ಬ್ರಹ್ಮ ಹಾಂಗೂ ಮಹಾದೇವ ಶಿವನ  ವಿಧಿಪೂರ್ವಕ ಸ್ಥಾಪನೆ ಮಾಡಿ, ಗಂಧ-ಪುಷ್ಪಾದಿ  ದ್ರವ್ಯಂಗಳಿಂದ ಪ್ರಪ್ರತ್ಯೇಕವಾಗಿ ಪೂಜಾರ್ಚನೆ ಮಾಡೆಕು. ಮತ್ತೆ ಪ್ರದಕ್ಷಿಣೆ ಬಂದು ಅಗ್ನಿಲಿ (ಹವನ ಮಾಡಿ) ದೇವತೆಗಳ ತೃಪ್ತಿಪಡಿಸಿ ತುಪ್ಪ ಮೊಸರು ಮತ್ತೆ ಹಾಲಿಂದ ವಿಶ್ವೇದೇವತೆಗಳ ತೃಪ್ತಿಪಡುಸೆಕು.
ಆ ಮತ್ತೆ, ಪ್ರಸನ್ನಚಿತ್ತಂದ ಯೆಜಮಾನ ಮಿಂದಿಕ್ಕಿ, ನಾರಾಯಣನ ಎದುರಿಲ್ಲಿ ವಿನೀತನಾಗಿ ವಿಧಿಪೂರ್ವಕ ಮನಸ್ಸಿಲ್ಲಿ ಸಂಕಲ್ಪ ಮಾಡಿ ಔರ್ಧ್ವದೇಹಿಕ ಕ್ರಿಯೆಯ ಸುರುಮಾಡೆಕು. ಮತ್ತೆ, ಕ್ರೋಧ, ಲೋಭರಹಿತನಾಗಿ ಶಾಸ್ತ್ರೋಕ್ತ ವಿಧಿಂದ ಸಮಸ್ತ ಶ್ರಾದ್ಧಂಗಳ, ವೃಷೋತ್ಸರ್ಗಾದಿಗಳ ಮಾಡೆಕು. ತದನಂತರ ಅರ್ಹರಾದ ಹದಿಮೂರು ಬ್ರಾಹ್ಮಣರಿಂಗೆ ಹದಿಮೂರು ಬಗೆಯ ‘ಪದದಾನ’ ಮಾಡೆಕು.  [ತ್ರಯೋದಶ ಪದದಾನಂಗೊ ->  ಛತ್ರೋಪಾನಹವಸ್ತ್ರಾಣಿ ಮುದಿಕಾ ಚ ಕಮಂಡಲುಃ । ಆಸನಂ ಪಂಚ ಪಾತ್ರಾಣಿ ಪದಂ ಸಪ್ತವಿಧಂ ಸ್ಮೃತಮ್ ॥ ದಂಡೇನ ತಾಮ ಪ್ರಾತ್ರೇಣ ಹ್ಯಾಮಾನ್ನೈರ್ಭೋಜನೈರಪಿ । ಅರ್ಥಯಜ್ಞೋಪವೀತೈಶ್ಚ ಪದಂ ಸಂಪೂರ್ಣತಾಂ ವ್ರಜೇತ್ ॥ ಗ.ಪು.13.83-84 ॥ -ಕೊಡೆ, ಪಾದರಕ್ಷೆ, ವಸ್ತ್ರ, ಉಂಗುರ, ಕಮಂಡಲ, ಆಸನ, ಪಂಚಪಾತ್ರೆ, ಇವೇಳು ಮತ್ತು ದಂಡ, ತಾಮ್ರದ ಪಾತ್ರೆ, ಅಕ್ಕಿ, ಭೋಜನ, ಧನ ಮತ್ತೆ ಯಜ್ಞೋಪವೀತ ಇವುಗಳಿಂದ ಪದ (13 ಪದ) ಹೇಳ್ವದು ಸಂಪೂರ್ಣ ಆವುತ್ತು. ಒಂದಷ್ಟು ವಸ್ತುಗಳ ಗುಂಪಿಂಗೆ  ‘ಪದ’ ಹೇಳ್ವ ಸಂಜ್ಞೆ. ದಶಪದದಾನ, ತ್ರಯೋದಶಪದದಾನ., ಉಪಪದದಾನ -ಹೇಳಿ ಹದಿನಾಲ್ಕು ವಸ್ತುಗಳ ಗುಂಪು ಇತ್ಯಾದಿಗೊ ಬೇರೆ ಬೇರೆ ಇದ್ದು. ಇಲ್ಲಿ ತ್ರಯೋದಶ  ಪದಾನಿ  (ಹದಿಮೂರು ಪದ/ವಸ್ತುಗೊ) ಹೇಳಿಯೂ ತ್ರಯೋದಶ ವಿಪ್ರೇಭ್ಯಃ  (೧೩ ಬ್ರಾಹ್ಮಣರಿಂಗೆ) ಹೇಳಿಯೂ ಅರ್ಥ ]. ಹಾಸಿಗೆ+ತಲೆಗೊಂಬು+ಹಾಸಲೆ+ಹೊದವಲಿಪ್ಪದು ಸೇರಿದ ಶಯ್ಯಾದಾನವ ಮಾಡಿ, ಒಂದು ಉದಕ ಕುಂಭವ (ನೀರ ಕೊಡ / =ಪ್ರೇತಘಟ)  ಪ್ರೇತಕ್ಕಾಗಿ ಅರ್ಪುಸೆಕು.
ರಾಜಾ ಬಭ್ರುವಾಹನ° ಕೇಳಿದ° – ಹೇ ಪ್ರೇತವೇ!, ಏವ ವಿಧಂದ ಪ್ರೇತಘಟವ ನಿರ್ಮಾಣ ಮಾಡೆಕು ಮತ್ತೆ ಏವ ವಿಧಾನಂದ ಅದರ ದಾನ ನೀಡೆಕು? ಸಮಸ್ತ ಜೀವಿಗೊಕ್ಕೆ ಅನುಕಂಪ ತೋರುವ ಉದ್ದೇಶಂದ, ಪ್ರೇತಂಗೊಕ್ಕೆ ಮುಕ್ತಿನೀಡುವಂತಹ ‘ಪ್ರೇತಘಟ’ ದಾನದ ವಿಷಯವಾಗಿ ಎನಗೆ ಹೇಳು.
ಪ್ರೇತ ಹೇಳಿತ್ತು – ಹೇ ಮಹಾರಜನೇ!, ಸೂಕ್ತವಾದ್ದನ್ನೇ ಕೇಳಿದೆ. ಏವ ಸುದೃಢ ದಾನಂದ ಪ್ರೇತತ್ವ ಆವುತ್ತಿಲ್ಲೆಯೋ ಅದರ ಹೇಳುತ್ತೆ. ನೀನು ಗಮನಗೊಟ್ಟು ಕೇಳು- ಪ್ರೇತಘಟದ ದಾನ ಸಮಸ್ತ ಪ್ರಕಾರದ ಅಮಂಗಳವ ವಿನಾಶ ಮಾಡುವಂತಾದ್ದು. ಸಮಸ್ತ ಲೋಕಂಗಳಲ್ಲಿಯೂ ದುರ್ಲಭವಾದ್ದು ಮತ್ತು ದುರ್ಗತಿಯ ನಾಶಮಾಡುವಂತಾದ್ದಾಗಿದ್ದು. ಯುಕ್ತ ಕಾಸಿದ ಬಂಗಾರದ ಒಂದು ಘಟವ ಸಿದ್ಧಗೊಳುಸಿ, ಅದಕ್ಕೆ ಬ್ರಹ್ಮ, ಶಿವ ಹಾಂಗೂ ವಿಷ್ಣು ಸಹಿತ ಲೋಕಪಾಲರ ಕ್ರಮವಾಗಿ ಆವಾಹಿಸಿ,  ಅದಕ್ಕೆ  ಹಾಲು, ತುಪ್ಪಾದಿಗಳ ತುಂಬಿಸಿ, ಭಕ್ತಿಂದ ನಮಿಸಿ, ಬ್ರಾಹ್ಮಣಂಗೆ ದಾನ ಕೊಡೆಕು. ಇದಲ್ಲದ್ದೆ ಬೇರೆ ನೂರಾರು ದಾನಂಗಳಿಂದ ಎಂತ ಪ್ರಯೋಜನ?!
ಹೇ ರಾಜನ್!, ಆ ಘಟದ ಮಧ್ಯಲ್ಲಿ ಬ್ರಹ್ಮ, ವಿಷ್ಣು, ಮತ್ತೆ ಕಲ್ಯಾಣಕಾರಿ ಅವಿನಾಶಿ ಶಂಕರನ ಸ್ಥಾಪನೆ ಮಾಡೆಕು ಹಾಂಗೂ ಘಟದ ಕಂಠಲ್ಲಿ ಪೂರ್ವಾದಿ ದಿಕ್ಕುಗಳಲ್ಲಿ ಅನುಕ್ರಮವಾಗಿ ಲೋಕಪಾಲಕರ ಆವಾಹನೆ ಮಾಡಿ ಅವಕ್ಕೆ ಧೂಪ, ಪುಷ್ಪ, ಚಂದನ ಇತ್ಯಾದಿಗಳಿಂದ ವಿಧಿವತ್ತಾಗಿ ಪೂಜೆ ಮಾಡಿ, ಹಾಲು ಮತ್ತೆ  ತುಪ್ಪದೊಟ್ಟಿಂಗೆ ಆ ಬಂಗಾರದ ಘಟವ (ಪ್ರೇತಘಟವ) ಬ್ರಾಹ್ಮಣಂಗೆ ದಾನ ಕೊಡೆಕು. ಹೇ ರಾಜ!, ಪ್ರೇತತ್ವದ ನಿವೃತ್ತಿಗಾಗಿ ಸಮಸ್ತ ದಾನಂಗಳಲ್ಲಿ ಶ್ರೇಷ್ಠ ಮತ್ತು ಮಹಾಪಾತಕ ನಾಶ ಮಾಡುವಂಥ ಈ ದಾನವ ಶ್ರದ್ಧೆಂದ ಮಾಡೆಕು.
ಭಗವಂತ° ಹೇಳಿದ° – ಹೇ ಕಾಶ್ಯಪ ಗರುಡನೇ, ಪ್ರೇತದೊಟ್ಟಿಂಗೆ ಈ ಪ್ರಕಾರದ ಮಾತುಕತೆ ನಡಕ್ಕೊಂಡಿಪ್ಪಗ ಆನೆ ಕುದುರೆ ಇತ್ಯಾದಿಗಳಿಂದ ಕೂಡಿದ ರಾಜನ ಸೇನೆ ಹಿಂದಂದ ಅಲ್ಲಿಗೆ ಬಂದತ್ತು. ಸೇನೆ ಬಂದಮತ್ತೆ ರಾಜಂಗೆ ಮಹಾಮಣಿಯ ನೀಡಿಕ್ಕಿ, ಅವಂಗೆ ನಮಸ್ಕರಿಸಿಕ್ಕಿ, ಪುನಃ ತನ್ನ ಉದ್ಧಾರಕ್ಕಾಗಿ ಔರ್ಧ್ವದೇಹಿಕ ಕ್ರಿಯೆಯ ಮಾಡ್ಳೆ ಪ್ರಾರ್ಥಿಸಿ ಆ ಪ್ರೇತ ಅಲ್ಲಿಂದ ಅದೃಶ್ಯವಾಗಿ ಹೋತು.
ಹೇ ಗರುಡ!, ಮತ್ತೆ ಆ ವನಂದ ತನ್ನ ನಗರಕ್ಕೆ ಹೆರಟ ರಾಜ° ತನ್ನ ನಗರವ ಸೇರಿ, ಆ ಪ್ರೇತವು ಹೇಳಿದ ಪ್ರಕಾರ, ವಿಧಿ-ವಿಧಾನಂದ ಔರ್ಧ್ವದೇಹಿಕ ಕ್ರಿಯೆಯ ಮಾಡಿದ°. ಅವನ ಪುಣ್ಯಪ್ರದಾನಂದ ಮುಕ್ತವಾದ ಪ್ರೇತವು  ಪ್ರೇತತ್ವಂದ ಮುಕ್ತಿಯಾಗಿ ಸ್ವರ್ಗಕ್ಕೆ ಹೆರಟು ಹೋತು.
ಅನ್ಯರು ಮಾಡಿದ ಶ್ರಾದ್ಧಂದ ಪ್ರೇತಕ್ಕೆ ಸದ್ಗತಿಯಾವುತ್ತು ಹೇದಾದರೆ, ಇನ್ನು ಮಗನಿಂದ ಮಾಡಿದ ಶ್ರಾದ್ಧಂದ ಅಪ್ಪಂಗೆ ಸದ್ಗತಿಯಪ್ಪದರಲ್ಲಿ ಆಶ್ಚರ್ಯ ಎಂತ ಇದ್ದು!. ಈ ಪುಣ್ಯಕರವಾದ ಇತಿಹಾಸವ ಆರು ಕೇಳುತ್ತವೋ, ಕೇಳುಸುತ್ತವೋ, ಅವು ಪಾಪಂಗಳ ಮಾಡಿದ್ದರೂ ಅವು ಪ್ರೇತತ್ವವ ಹೊಂದುತ್ತವಿಲ್ಲೆ.
ಇಲ್ಲಿಗೆ ಗರುಡಪುರಾಣದ ಉತ್ತರಖಂಡಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಬಭ್ರುವಾಹನನ ಮೂಲಕ ಪ್ರೇತ ಸಂಸ್ಕಾರ’ ಹೇಳ್ವ ಏಳನೇ ಅಧ್ಯಾಯ ಮುಗುದತ್ತು.
 
 
[ಚಿಂತನೀಯಾ –
ಶತಶತಮಾನಂಗಳಿಂದ ಸತ್ವಯುತವಾಗಿ  ಸತ್ಯವಾಗಿ ಜಯಿಸಿ ನಿಂದುಗೊಂಡಿಪ್ಪದು ಸನಾತನ. ಅದರಲ್ಲಿ ಶ್ರದ್ಧಾ ಭಕ್ತಿಯ ಮಡಿಕ್ಕೊಂಡವಂಗೆ ಶಾಂತಿ ನೆಮ್ಮದಿ ದೊರಕ್ಕುತ್ತು ಹೇಳ್ವದು ಸನಾತನ ವಿಚಾರವೇ ಅಪ್ಪು.  ಸದಾ ಸತ್ಸಂಗಲ್ಲಿಪ್ಪದು, ಸದ್ಭಾವನೆಲಿಪ್ಪದು, ಸತ್ಕಾರ್ಯ ನಿರತನಾಗಿಪ್ಪದು ನಮ್ಮ ಗುರಿಯತ್ತ ಕೊಂಡೊಯ್ಯುತ್ತು ಹೇಳ್ವದರ್ಲಿ ಸಂಶಯ ಬೇಡ. ಶ್ರದ್ಧಾಭಕ್ತಿಂದ ಫಲಾಪೇಕ್ಷೆ ಇಲ್ಲದ್ದೆ ಮಾಡುವ ಪ್ರತಿಯೊಂದು ಕಾರ್ಯವೂ ತಪಸ್ಸು. ಅದರಿಂದ ಭಗವಂತನ ಪ್ರೀತಿ ಪಡವದು ಸುಲಭ ಸಾಧನ. ಶ್ರದ್ಧಾ ಭಕ್ತಿಂದ ಮಾಡುವ ಕಾರ್ಯಂದ ಭಗವಂತ° ಪ್ರಸನ್ನನಾಗಿ ನಾವೆಲ್ಲಿದ್ದರೂ, ಹೇಂಗಿದ್ದರೂ ಭಗವಂತನ ಕರುಣೆ ನವಗಿರುತ್ತು.
ವಿಗ್ರಹ ಆರಾಧನೆ ಮುಖ್ಯತ್ವ ಅಲ್ಲದ್ರೂ ವಿಗ್ರಹ ಭಗವದ್ ಚೈತನ್ಯದ ಪ್ರತೀಕ ಹೇಳ್ವ ಮನೋಭಾವನೆ ನಮ್ಮಲ್ಲಿ ಸ್ಥಿರವಪ್ಪಲೆ ವಿಗ್ರಹಾರಾಧನೆ ಅನಿವಾರ್ಯ. ಆ ಮೂಲಕ ವಿಗ್ರಹಲ್ಲಿಯೂ, ತನ್ನಲ್ಲಿಯೂ, ಎಲ್ಲೆಲ್ಲಿಯೂ ಭಗವಂತನ ಚೈತನ್ಯ ತುಂಬಿಗೊಂಡಿದ್ದು ಹೇಳಿ ಅರ್ಥೈಸಿಗೊಂಬಲೆ ಸುಲಭ ಸಾಧನ. ಪೂಜೆಲಿ ಮಾಡುವ ಷೋಡಶೋಪಚಾರಂಗೊ ಭಕ್ತಂಗೆ ತನ್ನ ಪ್ರೇಮವ ಪ್ರಕಟುಸುವ ಒಂದು ಮಾಧ್ಯಮ. ಇವೆಲ್ಲವು ಉನ್ನತಮಟ್ಟದ ಕರ್ಮಂಗೊ. ಇವೆಲ್ಲವುಗಳ ಅಂತಿಮ ಫಲಿತಾಂಶವೇ ಜ್ಞಾನ.
ಲೋಕಕ್ಕೆ ಶಾಸ್ತ್ರವೇ ನೇತ್ರಸ್ವರೂಪ. ಸದ್ದಾರಿಲಿ ನಡವಲೆ, ಸದಾಚಾರ ಪ್ರವೃತ್ತಿಲಿ ನಿರತನಾಗಿಪ್ಪಲೆ ಶಾಸ್ತ್ರೋಕ್ತ ವಿಧಿಯ ಅನುಸರುಸುವದು ಉತ್ತಮ ಧರ್ಮ.
ಪುರಾಣ ಪಠಣ, ಪ್ರವಚನ ಕೇಳುವದು, ಕೇಳುಸುವದು ಎರಡೂ ಸತ್ಕಾರ್ಯ. ಇದರಿಂದ ಭಗವಂತ° ಸಂಪ್ರೀತನಾವುತ್ತ° .  ಭಗವಂತನ ಕೃಪಾಕಟಾಕ್ಷಂದ ಪಾಪದ ಪ್ರಭಾವ ಕಮ್ಮಿ ಆವ್ತು. ಮನಸ್ಸು ಭಗವಂತನಲ್ಲಿ ಸ್ಥಿರಗೊಂಡು ಉತ್ತಮ ಗತಿಯತ್ತ ನಮ್ಮ ನಾವು ಕೊಂಡೋಪಲೆ ಸಾಧ್ಯ ಆವುತ್ತು.
 
ಎಲ್ಲೋರಿಂಗೂ ಸನ್ಮಾರ್ಗಚಿತ್ತ ಉಂಟಾಗಲಿ. ಹರೇ ರಾಮ. ]

4 thoughts on “ಗರುಡ ಪುರಾಣ – ಅಧ್ಯಾಯ 07 – ಭಾಗ 02

  1. harerama.
    shradhava shradheli madekku. pitru karyangala aaru madidaru pretakke mukti sikkuthu.hangippaga makko madidare sikkutho heli samshayave elle. ennadaru pitru karyangala madadda nammavu kannu teradu edara odi nodali.haa avelli edaraella oduthavu?
    harerama.

  2. ಶ್ರದ್ಧಾ ಭಕ್ತಿಂದ ಮಾಡಿದ್ದೇ ಶ್ರಾದ್ಧ. ಕ್ರಮಂಗಳಲ್ಲಿ ವೆತ್ಯಾಸವಿದ್ದರೂ ಶ್ರಾದ್ಧ ಮಾಡುವವನ ಶ್ರದ್ಧೆ ಮುಖ್ಯ. ನಿಜಕ್ಕೂ ಶ್ರಾದ್ಧದ ದಿನ ಅಪ್ಪ, ಅಮ್ಮನ ಮನಸ್ಸಿಲ್ಲಿ ಧ್ಯಾನ ಮಾಡಿ ಅವು ನಮಗೋಸ್ಕ್ರರ ಮಾಡಿದ ತ್ಯಾಗಂಗಳ ನೆನಪಿಸಿಕೊಂಡು ಪಿಂಡಕ್ಕೆ ನಮಸ್ಕರಿಸಿದರೆ ತುಂಬಾ ನೆಮ್ಮದಿ ಸಿಕ್ಕುತ್ತು. ಹರೇ ರಾಮ.

    1. ಹರೇ ರಾಮ;[ ವಿಗ್ರಹ ಆರಾಧನೆ ಮುಖ್ಯತ್ವ ಅಲ್ಲದ್ರೂ ವಿಗ್ರಹ ಭಗವದ್ ಚೈತನ್ಯದ ಪ್ರತೀಕ ಹೇಳ್ವ ಮನೋಭಾವನೆ ನಮ್ಮಲ್ಲಿ ಸ್ಥಿರವಪ್ಪಲೆ ವಿಗ್ರಹಾರಾಧನೆ ಅನಿವಾರ್ಯ. ಆ ಮೂಲಕ ವಿಗ್ರಹಲ್ಲಿಯೂ, ತನ್ನಲ್ಲಿಯೂ, ಎಲ್ಲೆಲ್ಲಿಯೂ ಭಗವಂತನ ಚೈತನ್ಯ ತುಂಬಿಗೊಂಡಿದ್ದು ಹೇಳಿ ಅರ್ಥೈಸಿಗೊಂಬಲೆ ಸುಲಭ ಸಾಧನ. ಪೂಜೆಲಿ ಮಾಡುವ ಷೋಡಶೋಪಚಾರಂಗೊ ಭಕ್ತಂಗೆ ತನ್ನ ಪ್ರೇಮವ ಪ್ರಕಟುಸುವ ಒಂದು ಮಾಧ್ಯಮ. ಇವೆಲ್ಲವು ಉನ್ನತಮಟ್ಟದ ಕರ್ಮಂಗೊ. ಇವೆಲ್ಲವುಗಳ ಅಂತಿಮ ಫಲಿತಾಂಶವೇ ಜ್ಞಾನ.
      ಲೋಕಕ್ಕೆ ಶಾಸ್ತ್ರವೇ ನೇತ್ರಸ್ವರೂಪ. ಸದ್ದಾರಿಲಿ ನಡವಲೆ, ಸದಾಚಾರ ಪ್ರವೃತ್ತಿಲಿ ನಿರತನಾಗಿಪ್ಪಲೆ ಶಾಸ್ತ್ರೋಕ್ತ ವಿಧಿಯ ಅನುಸರುಸುವದು ಉತ್ತಮ ಧರ್ಮ.
      ಪುರಾಣ ಪಠಣ, ಪ್ರವಚನ ಕೇಳುವದು, ಕೇಳುಸುವದು ಎರಡೂ ಸತ್ಕಾರ್ಯ. ಇದರಿಂದ ಭಗವಂತ° ಸಂಪ್ರೀತನಾವುತ್ತ° . ಭಗವಂತನ ಕೃಪಾಕಟಾಕ್ಷಂದ ಪಾಪದ ಪ್ರಭಾವ ಕಮ್ಮಿ ಆವ್ತು. ಮನಸ್ಸು ಭಗವಂತನಲ್ಲಿ ಸ್ಥಿರಗೊಂಡು ಉತ್ತಮ ಗತಿಯತ್ತ ನಮ್ಮ ನಾವು ಕೊಂಡೋಪಲೆ ಸಾಧ್ಯ ಆವುತ್ತು.]
      – ವಿವರಣೆ ಬಾರೀ ಲಾಯಕಕೆ ಬಯಿ೦ದು.ಧನ್ಯವಾದ೦ಗೊ ಚೆನ್ನೈ ಭಾವ೦ಗೆ. “ಸದ್ದಾರಿ” ಹೇಳುವ ಪದ ಹವ್ಯಕಕ್ಕೆ ಹೊಸ ನೆ೦ಟ!ಕನ್ನಡ ಭಾಷೆಲಿ ಆದರೆ ಹೀ೦ಗೆ ಸಂಸ್ಕೃತ+ಕನ್ನಡ ಪದವ ಸೇರಿಸಲಾಗ ಹೇದು ಹೇಳುಗು.ನಮ್ಮ ಭಾಷಗೆ ಅ೦ಥ ಕಟ್ಟು ನಿಟ್ಟು ಬರದು ಮಾಡಗಿದ ವ್ಯಾಕರಣ ಎ೦ತದೂ ಇಲ್ಲೆನ್ನೆ; “ಪ್ರಯೋಗ ಶರಣ ವಯ್ಯಾಕರಣ”ಅಲ್ಲದ್ದೆ “ಯೋಗಾತ್ ರೂಢಿರ್ಬಲಿಯಸಿ.” ಹೇದೆಲ್ಲ ಹೆರಿಯವು ಹೇಳಿದ್ದವನ್ನೆ! ನಿ೦ಗಳ ಈ ಸತ್ಕಾರ್ಯಕ್ಕೆ ಮತ್ತೊ೦ದಾರಿ ಧನ್ಯವಾದ೦ಗ ಹೇಳ್ಲೇ ಬೇಕು.ಸ್ವೀಕರುಸಿ.ನಮಸ್ತೇ.ಮತ್ತೆ ಕಾ೦ಬೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×