- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಕಳುದವಾರದ ಭಾಗಲ್ಲಿ ಭಗವಂತ° ಗರುಡಂಗೆ ಸುಕೃತಿಯ ದಹನ ಸಂಸ್ಕಾರದ ಬಗ್ಗೆ ಹೇಳಿಗೊಂಡಿತ್ತದ್ದನ್ನೂ, ಧನಿಷ್ಠಾ ಪಂಚಕ ದೋಷ ಇದ್ದರೆ ಆ ಸಂದರ್ಭಲ್ಲಿ ಮಾಡೇಕ್ಕಾದ ಕರ್ತವ್ಯವನ್ನೂ ಮಹತ್ವವನ್ನೂ ಹೇಳಿದ್ದ°. ಆ ರೀತಿ ದಹನ ಸಂಸ್ಕಾರ ಮಾಡಿ ಪುತ್ರನಾದವ° ಪಿತೃಋಣವ ತೀರುಸೆಕು, ಅದರಿಂದ ಪುತ್ರನ ಜೀವನಕ್ಕೂ ಮೃತನ ಸದ್ಗತಿಗೂ ಉತ್ತಮವಾವ್ತು ಹೇದು ನಾವು ಇಲ್ಲಿ ಓದಿದ್ದದು. ಮುಂದೆ ಭಗವಂತ° ಹೇಳುತ್ತ°-
ಗರುಡ ಪುರಾಣ – ಅಧ್ಯಾಯ 10 – ಭಾಗ 02
ಏವಂ ಪಂಚಕದಾಹಃ ಸ್ಯಾತ್ತದ್ವಿನಾ ಕೇವಲಂ ದಹೇತ್ ।
ಸತೀ ಯದಿ ಭವೇತ್ಪತ್ನಿಃ ತಯಾ ಸಹ ವಿನಿರ್ದಹೇತ್ ॥೩೪॥
ಈ ರೀತಿ ಪಂಚಕಲ್ಲಿ ದಹನ ಕ್ರಿಯೆ ಆಯೇಕು. ಪಂಚಕ ಇಲ್ಲದ್ರೆ ಅವನ ಒಬ್ಬನ ಮಾತ್ರ ದಹಿಸೆಕು. ಒಂದುವೇಳೆ, ಅವನ ಹೆಂಡತಿಯೂ ಸತೀಯಾಯೆಕು ಹೇದಾದರೆ ಅದರನ್ನೂ ಅವನ ಒಟ್ಟಿಂಗೇ ದಹಿಸೆಕು.
ಪತಿವ್ರತಾ ಯದಾ ನಾರೀ ಭರ್ತುಃ ಪ್ರಿಯಹಿತೇ ರತಾ ।
ಇಚ್ಛೇತ್ಸಹೈವ ಗಮನಂ ತದಾ ಸ್ನಾನಂ ಸಮಾಚರೇತ್ ॥೩೫॥
ಪತಿಯ ಹಿತಲ್ಲಿ ನಿರತಳಾದ ಪತಿವ್ರತೆಯಾದ ನಾರಿ ತಾನೂ ಜೊತೆಲಿ ಹೋಪಲೆ ಇಚ್ಛಿಸಿರೆ, ಅಂಬಗ ಮೀಯೆಕು.
ಕುಂಕುಮಾಂಜನಸದ್ವಸ್ತ್ರ ಭೂಷಣೈರ್ಭೂಷಿತಾಂ ತನುಮ್ ।
ದಾನಂ ದದ್ಯಾದ್ದ್ವಿಜಾತಿಭ್ಯೋ ಬಂಧುವರ್ಗೇಭ್ಯ ಏವ ಚ ॥೩೬॥
ಕುಂಕುಮ, ಕಾಡಿಗೆ, ಉತ್ತಮ ವಸ್ತ್ರ, ಒಡೆವಗಳಿಂದ ಶರೀರವ ಅಲಂಕರಿಸ್ಯೊಂಡು ದ್ವಿಜರಿಂಗೂ ಮತ್ತು ಬಂಧುವರ್ಗದೋರಿಂಗೂ ದಾನ ಕೊಡೆಕು.
ಗುರುಂ ನಮಸ್ಕೃತ್ಯ ತದಾ ನಿರ್ಗಚ್ಛೇನ್ಮಂದಿರಾದ್ಬಹಿಃ ।
ತತೋ ದೇವಾಲಯಂ ಗತ್ವಾ ಭಕ್ತ್ಯಾ ತಂ ಪ್ರಣಮೇದ್ಧರಿಮ್ ॥೩೭॥
ಮತ್ತೆ ಗುರುವಿಂಗೆ ನಮಸ್ಕರಿಸಿ, ಮನೆಂದ ಹೆರಬರೆಕು. ಮತ್ತೆ ದೇವಾಲಯಕ್ಕೆ ಹೋಗಿ ಅಲ್ಲಿ ಭಕ್ತಿಂದ ಶ್ರೀ ಹರಿಗೆ ನಮಸ್ಕಾರ ಮಾಡೆಕು.
ಸಮರ್ಪ್ಯಾಭರಣಂ ತತ್ರ ಶ್ರೀಫಲಂ ಪರಿಗೃಹ್ಯ ಚ ।
ಲಜ್ಜಾಂ ಮೋಹಂ ಪರಿತ್ಯಜ್ಯ ಶ್ಮಶಾನಭವನಂ ವ್ರಜೇತ್ ॥೩೮॥
ಅಲ್ಲಿ ಆಭರಣಂಗಳ ಸಮರ್ಪಿಸಿ, ಶ್ರೀ ಫಲವ ಪರಿಗ್ರಹಿಸಿ, ಲಜ್ಜೆಯನ್ನೂ, ಮೋಹವನ್ನೂ ಬಿಟ್ಟಿಕ್ಕಿ ಶ್ಮಶಾನಭೂಮಿಗೆ ಹೋಯೆಕು.
ತತ್ರ ಸೂರ್ಯಂ ನಮಸ್ಕೃತ್ಯ ಪರಿಕ್ರಮ್ಯ ಚಿತಾಂ ತದಾ ।
ಪುಷ್ಪಶಯ್ಯಾಂ ತದಾರೋಹೇನ್ನಿಜಾಂಕೇ ಸ್ವಾಪಯೇತ್ಪತಿಮ್ ॥೩೯॥
ಅಲ್ಲಿ ಸೂರ್ಯಂಗೆ ನಮಸ್ಕರಿಸಿ, ಚಿತಗೆ ಪ್ರದಕ್ಷಿಣೆ ಬಂದು ಪುಷ್ಪಶಯ್ಯೆಯ ಮೇಗೆ ಹತ್ತಿ ತನ್ನ ತೊಡೆಯ ಮೇಗೆ ಗಂಡನ ಮನುಗೆಸೆಕು.
ಸಖಿಭ್ಯಃ ಶ್ರೀಫಲಂ ದದ್ಯದ್ದಾಹಮಾಜ್ಞಾಪಯೇತ್ತತಃ ।
ಗಂಗಾಸ್ನಾನಸಮಂ ಜ್ಞಾತ್ವಾ ಶರೀರಂ ಪರಿದಾಹಯೇತ್ ॥೪೦॥
ಸಖಿಯರಿಂಗೆ ಶ್ರೀಫಲವ ಕೊಟ್ಟು, ಮತ್ತೆ ದಹನ ಕ್ರಿಯಗೆ ಆಜ್ಞಾಪಿಸೆಕು. ಅಂಬಗ ಗಂಗಾಸ್ನಾನಕ್ಕೆ ಸಮ ಹೇದು ಗ್ರೇಶಿಗೊಂಡು ಶರೀರವ ದಹಿಸೆಕು.
ನ ದಹೇದ್ಗರ್ಭಿಣೀ ನಾರೀ ಶರೀರಂ ಪತಿನಾ ಸಹ ।
ಜನಯಿತ್ವಾ ಪ್ರಸೂತಿಂ ಚ ಬಾಲಂ ಪೋಷ್ಯ ಸತೀ ಭವೇತ್ ॥೪೧॥
ಗರ್ಭವತಿಯಾದ ನಾರಿ ತನ್ನ ಪತಿಯ ಜೊತೆಲಿ ಶರೀರವ ದಹಿಸಲಾಗ. ತನ್ನ ಸಂತತಿಗೆ ಜನ್ಮ ಕೊಟ್ಟಿಕ್ಕಿ ಮಗುವಿನ ಪೋಷಿಸಿ ಸತಿಯಾಯೆಕು.
ನಾರೀ ಭರ್ತಾರಮಾಸಾದ್ಯ ಶರೀರಂ ದಹತೇ ಯದಿ ।
ಅಗ್ನಿರ್ದಹತಿ ಗಾತ್ರಾಣಿ ನೈವಾತ್ಮಾನಂ ಪ್ರಪೀಡಯೇತ್ ॥೪೨॥
ನಾರಿ ತನ್ನ ಪತಿಗೆ ಸಮರ್ಪಿಸಿದ ದೇಹವ ಪತಿಯ ಜೊತೆಲಿ ದಹಿಸಿರೆ ಅಗ್ನಿ ಅದರ ಶರೀರವ ಮಾಂತ್ರ ದಹಿಸುತ್ತು. ಅದರ ಜೀವಾತ್ಮಕ್ಕೆ ಬೇನೆಯುಂಟುಮಾಡುತ್ತನಿಲ್ಲೆ.
ದಹ್ಯತೇ ಧ್ಯಾಯಮಾನಾನಾಂ ಧಾತೂನಾಂ ಚ ಯಥಾ ಮಲಃ ।
ತಥಾ ನಾರೀ ದಹೇತ್ಪಾಪಂ ಹುತಾಶೇ ಹ್ಯಮೃತೋಪಮೇ ॥೪೩॥
ಲೋಹಂಗಳ ಕರುಗುಸುವಾಗ ಹೇಂಗೆ ಕಲ್ಮಷಂಗೊ ದಹಿಸಲ್ಪಡುತ್ತೋ, ಹಾಂಗೇ ನಾರಿ ಅಮೃತ ಸಮಾನವಾದ ಅಗ್ನಿಲಿ ತನ್ನ ಪಾಪವ ದಹಿಸುತ್ತು.
ದಿವ್ಯಾದೌ ಸತ್ಯಯುಕ್ತಶ್ಚ ಶುದ್ಧೋ ಧರ್ಮಯುತೋ ನರಃ ।
ಯಥಾ ನ ದಹ್ಯತೇ ತಪ್ತ ಲೋಹಪಿಂಡೇನ ಕರ್ಹಿಚತ್ ॥೪೪॥
ಏವ ರೀತಿಲಿ ಸತ್ಯವಂತನಾದ, ಶುದ್ಧನಾದ, ಧರ್ಮಾತ್ಮನಾದ ಮನುಷ್ಯ° ದೈವ ಪರೀಕ್ಷೆಲಿ ಕಾಸಿದ ಲೋಹದ ಪಿಂಡಂಗಳಿಂದ ರಜವೂ ದಹಿಸಲ್ಪಡುತ್ತನಿಲ್ಲೆಯೋ
ತಥಾ ಸಾ ಪತಿ ಸಂಯುಕ್ತಾ ದಹ್ಯತೇ ನ ಕದಾಚನ ।
ಅಂತರಾತ್ಮಾತ್ಮನಾ ಭರ್ತ್ರಾ ಮೃತೇನೈಕತ್ವಮಾಗತಾ ॥೪೫॥
ಅದೇ ರೀತಿ ಗೆಂಡನೊಡಗೂಡಿದ ಆ ನಾರಿ ಎಂದಿಂಗೂ ದಹಿಸಲ್ಪಡುತ್ತಿಲ್ಲೆ. ಅದರ (ಆ ನಾರಿಯ) ಅಂತರಾತ್ಮವು ಮೃತನಾದ ಗಂಡನ ಆತ್ಮಲ್ಲಿ ದೇಹವು ದಹಿಸುವದಕ್ಕೆ ಮದಲೇ ಒಂದಾವುತ್ತು.
ಯಾವಚ್ಚಾಗ್ನೌ ಮೃತೇ ಪತ್ಯೌ ಸ್ತ್ರೀ ನಾತ್ಮಾನಂ ಪ್ರದಾಹಯೇತ್ ।
ತಾವನ್ನ ಮುಚ್ಯತೇ ಸಾ ಹಿ ಸ್ತ್ರೀಶರೀರಾತ್ಕಂಥಂಚನ ॥೪೬॥
ಎಲ್ಲಿವರೆಂಗೆ ಸ್ತ್ರೀ ಮೃತನಾದ ತನ್ನ ಪತಿಯ ಜೊತೆಲಿ ತನ್ನ ಅಗ್ನಿಲಿ ದಹಿಸಿಕೊಳ್ಳುತ್ತಿಲ್ಯೋ ಅಲ್ಲಿವರೆಂಗೆ ಆ ಸ್ತ್ರೀ ಏವ ರೀತಿಲಿಯೂ ಸ್ತ್ರೀಶರೀರಂದ ಬಿಡುಗಡೆ ಹೊಂದುತ್ತಿಲ್ಲೆ.
ತಸ್ಮಾತ್ಸರ್ವಪ್ರಯತ್ನೇನ ಸ್ವಪತಿಂ ಸೇವಯೇತ್ಸದಾ ।
ಕರ್ಮಣಾ ಮನಸಾ ವಾಚಾ ಮೃತೇ ಜೀವತಿ ತದ್ಗತಾ ॥೪೭॥
ಹಾಂಗಾಗಿ ನಾರಿ ಕಾಯಾ ವಾಚಾ ಮನಸಾ ಎಲ್ಲ ಪ್ರಯತ್ನಂಗಳಿಂದಲೂ ತನ್ನ ಪತಿಯ ಬದುಕಿಲ್ಲಿಯೂ, ಸಾವಿಲ್ಲಿಯೂ ಅನುಸರುಸಿ ಸದಾ ಸೇವಿಸಲಿ.
ಮೃತೇ ಭರ್ತರಿ ಯಾ ನಾರೀ ಸಮಾರೋಹೇದ್ಧುತಾಶನಮ್ ।
ಸಾರುಂಧತೀಸಮಾ ಭೂತ್ವಾ ಸ್ವರ್ಗಲೋಕೇ ಮಹೀಯತೇ ॥೪೮॥
ಏವ ನಾರಿ ಪತಿ ಮರಣ ಹೊಂದಿದ ಮತ್ತೆ ಚಿತಾಗ್ನಿಯ ಪ್ರವೇಶಿಸುತ್ತೋ ಅದು ಅರುಂಧತಿಯ ಸಮಾನಳಾಗಿ ಸ್ವರ್ಗಲೋಕಲ್ಲಿ ಗೌರವಿಸಲ್ಪಡುತ್ತು.
ತತ್ರ ಸಾ ಭರ್ತೃಪರಮಾ ಸೂಯಮಾನಾಪ್ಸರೋಗಣೈಃ ।
ರಮತೇ ಪತಿನಾ ಸಾರ್ಧಂ ಯಾವದಿಂದಾಶ್ಚತುರ್ದಶ ॥೪೯॥
ಅಲ್ಲಿ ಅದು ಪತಿಯನ್ನೇ ಶ್ರೇಷ್ಠ° ಹೇದು ತಿಳುದು ಅಪ್ಸರ ಗಣಂಗಳಿಂದ ಹೊಗಳಲ್ಪಟ್ಟುಗೊಂಡು, ಹದಿನಾಲ್ಕು ಇಂದ್ರರು ಇಪ್ಪನ್ನಾರವೂ ತನ್ನ ಪತಿಯ ಜೊತೆಲಿ ವಿಹರಿಸಿಗೊಂಡಿರುತ್ತು.
ಮಾತೃಕಂ ಪೈತೃಕಂ ಚೈವ ಯತ್ರ ಸಾ ಚ ಪ್ರದೀಯತೇ ।
ಕುಲತ್ರಯಂ ಪುನಾತ್ಯತ್ರ ಭರ್ತಾರಂ ಯಾನುಗಚ್ಛತಿ ॥೫೦॥
ಹೀಂಗೆ ಪತಿಯ ಅನುಸರುಸುತ್ತೋಳು ಅಬ್ಬೆಯ, ಅಪ್ಪನ ಮತ್ತೆ ಅದರ ಎಲ್ಲಿಗೆ ಕೊಡಲ್ಪಟ್ಟಿರುತ್ತೋ ಆ ಮೂರು ಕುಲಗಂಗಳನ್ನೂ ಪಾವನಗೊಳುಸುತ್ತು.
ತಿಸ್ರಃ ಕೋಟ್ಯೋsರ್ಧಕೋಟೀ ಚ ಯಾನಿ ರೋಮಾಣಿ ಮಾನುಷೇ ।
ತಾವತ್ಕಾಲಂ ವಸೇತ್ಸ್ವರ್ಗೇ ಪತಿನಾ ಸಹ ಮೋದತೇ ॥೫೧॥
ಮೂರುವರೆ ಕೋಟಿ ಯಾವ ರೋಮಂಗೊ ಮನುಷ್ಯರಲ್ಲಿರುತ್ತೋ, ಅಷ್ಟು ಕಾಲದ ವರೇಂಗೆ ತನ್ನ ಪತಿಯ ಜೊತೆಲಿ ಸ್ವರ್ಗಲೋಕಲ್ಲಿ ಆನಂದಪಡುತ್ತು.
ವಿಮಾನೇ ಸ್ರೂಯಸಂಕಾಶೇ ಕ್ರೀಡತೇ ರಮಣೇನ ಸಾ ।
ಯಾವದಾದಿತ್ಯಚಂದ್ರೌ ಚ ಭರ್ತೃಲೋಕೇ ಚಿರಂ ವಸೇತ್ ॥೫೨॥
ಸೂರ್ಯನಾಂಗೆ ಪ್ರಕಾಶಮಾನವಾದ ವಿಮಾನಲ್ಲಿ ಕೂದುಗೊಂಡು ತನ್ನ ಪತಿಯ ಜೊತೆಲಿ ಅದು ವಿಹರಿಸುತ್ತು. ಮತ್ತೆ, ಎಲ್ಲಿಯವರೇಂಗೆ ಸೂರ್ಯಚಂದ್ರರು ಇರುತ್ತವೋ, ಅಲ್ಲಿವರೇಂಗೆ ಪತಿಯಿಪ್ಪ ಲೋಕಲ್ಲಿ ಏವತ್ತೂ ವಾಸಮಾಡುತ್ತು.
ಪುನಶ್ಚಿರಾಯ ಸಾ ಭೂತ್ವಾ ಜಾಯತೇ ವಿಮಲೇ ಕುಲೇ ।
ಪತಿವ್ರತಾ ತು ಯಾ ನಾರೀ ತಮೇವ ಲಭತೇ ಪತಿಮ್ ॥೫೩॥
ಮತ್ತೆ ದೀರ್ಘಾಯುಸ್ಸ ಪಡದು ಅದು ಪರಿಶುದ್ಧವಾದ ಕುಲಲ್ಲಿ ಹುಟ್ಟುತ್ತು. ಏವ ನಾರಿ ಪತಿವ್ರತೆಯಾಗಿದ್ದೋ ಅದು ಅದೇ ಪತಿಯ ಮತ್ತೆ ಪಡೆತ್ತು.
ಯಾ ಕ್ಷಣಂ ದಾಹದುಃಖೇನ ಸುಖಮೇತಾದೃಶಂ ತ್ಯಜೇತ್ ।
ಸಾ ಮೂಢಾ ಜನ್ಮಪರ್ಯಂತಂ ದಹ್ಯತೇ ವಿರಹಾಗ್ನಿನಾ ॥೫೪॥
ಯಾವಾಕೆ ಒಂದು ಕ್ಷಣದ ದಹನ ದುಃಖಂದ ಈ ರೀತಿಯ ಸುಖವ ತ್ಯಜಿಸುತ್ತೋ, ಆ ಮೂಢ ಸ್ತ್ರೀ ಜನ್ಮಪರ್ಯಂತ ವಿರಹಾಗ್ನಿಂದ ದಹಿಸಲ್ಪಡುತ್ತು.
ತಸ್ಮಾತ್ಪತಿಂ ಶಿವಂ ಜ್ಞಾತ್ವಾ ಸಹ ತೇನ ದಹೇತ್ತನುಮ್ ।
ಯದಿ ನ ಸ್ಯಾತ್ಸತೀ ತಾರ್ಕ್ಷ್ಯ ತಮೇವಂ ಪ್ರದಹೇತ್ತದಾ ॥೫೫॥
ಹಾಂಗಾಗಿ ‘ಸತಿ’ಯಾದೋಳು ಪತಿಯ ‘ಶಿವ°’ ಹೇದು ತಿಳ್ಕೊಂಡು ತನ್ನ ಶರೀರವ ಅವನ ಒಟ್ಟಿಂಗೆ ದಹಿಸೆಕು. ಎಲೈ ಗರುಡ!, ಒಂದು ವೇಳೆ ಆಕೆ ಸತಿಯಾಗದ್ರೆ ಕೇವಲ ಅವನ ದೇಹವನ್ನೇ ದಹಿಸೆಕು.
ಅರ್ಧೇ ದಗ್ಧೇsಥವಾ ಪೂರ್ಣೇ ಸ್ಫೋಟಯೇತ್ತಸ್ಯ ಮಸ್ತಕಮ್ ।
ಗೃಹಸ್ಥಾನಂ ತು ಕಾಷ್ಠೇನ ಯತೀನಾಂ ಶ್ರೀಫಲೇನ ಚ ॥೫೬॥
ದೇಹವು ಅರ್ಥ ಅಥವಾ ಪೂರ್ಣವಾಗಿ ದಗ್ಧವಾದ ಮತ್ತೆ, ಗೃಹಸ್ಥನಾಗಿದ್ದರೆ ಕಟ್ಟಿಗೆಂದ, ಯತಿಯಾಗಿದ್ದರೆ ಶ್ರೀಫಲಂದ ಅವನ ತಲೆಯ ಒಡೆಕು.
ಪ್ರಾಪ್ತಯೇ ಪಿತೃಲೋಕಾನಾಂ ಭಿತ್ವಾ ತದ್ಬ್ರಹ್ಮರಂಧ್ರಕಮ್ ।
ಆಜ್ಯಾಹುತಿಂ ತತೋ ದದ್ಯಾನ್ಮಂತ್ರೇಣಾನೇನ ತಸ್ತುತಃ ॥೫೭॥
ಪಿತೃಲೋಕದ ಪ್ರಾಪ್ತಿಗೋಸ್ಕರ ಬ್ರಹ್ಮರಂಧ್ರವ ಭೇದಿಸಿ ಮತ್ತೆ ಆ ಪುತ್ರ° ಈ ಮಂತ್ರಂದ ಆಜ್ಯವ ಆಹುತಿಯ ಕೊಡೆಕು –
ಅಸ್ಮಾತ್ತ್ವಮಧಿಜಾತೋsಸಿ ತ್ವದಯಃ ಜಾಯತಾಂ ಪುನಃ ।
ಅಸೌ ಸ್ವರ್ಗಾಯ ಲೋಕಾಯ ಸ್ವಾಹಾ ಜ್ವಲತು ಪಾವಕಃ ॥೫೮॥
“ನೀನು ಅವನಿಂದ (ಭಗವಂತನಿಂದ) ಹುಟ್ಟಿದ್ದೆ, ಪುನಃ ನಿನ್ನ ಮೂಲಕ ಇವನ ತೇಜೋಮಯ ದಿವ್ಯ ಶರೀರದ ಉತ್ಪತ್ತಿ ಆಗಲಿ. ಸ್ವರ್ಗಲೋಕಲ್ಲಿ ಗಮನ ಮಾಡ್ಳೆ ಇವನ ಸ್ಥೂಲ ಶರೀರವ ಸುಟ್ಟು ನಿನ್ನ ಹವಿಸ್ಸಾಗಲಿ. ಹಾಂಗಾಗಿ ನೀನು ಪ್ರಜ್ವಲಿಸು”. (ಅಕಾರೋ ವಾಸುದೇವಃ ಸ್ಯಾತ್ ತಥಾ ಅಕ್ಷರಾಣಾಮಕಾರೋsಸ್ಮಿ ಇತ್ಯಾದಿ ವಚನಂಗಳ ಅನುಸಾರ ‘ಅ’ ಭಗವಂತನ ಹೆಸರು)
ಏವಮಾಜ್ಯಾಹುತಿಂ ದತ್ವಾ ತಿಲಮಿಶ್ರಾಂ ಸಮಂತ್ರಕಾಮ್ ।
ರೋದಿತವ್ಯಂ ತತೋ ಗಾಢಂ ತೇನ ತಸ್ಯ ಸುಖಂ ಭವೇತ್ ॥೫೯॥
ಈ ರೀತಿ ಎಳ್ಳಿನೊಟ್ಟಿಂಗೆ ಮಂತ್ರಸಹಿತವಾಗಿ ತುಪ್ಪದ ಆಹುತಿಯ ಕೊಡೆಕು. ಮತ್ತೆ ಜೋರಾಗಿ ಕೂಗೆಕು. ಅದರಿಂದ ಆ ಜೀವಂಗೆ ಸುಖ ಉಂಟಾವುತ್ತು.
ದಾಹಾದನಂತರಂ ಕಾರ್ಯಂ ಸ್ತ್ರೀಭಿಃ ಸ್ನಾನಂ ತತಃ ಸುತೈಃ ।
ತಿಲೋದಕಂ ತತೋ ದದ್ಯಾನ್ನಾಮಗೋತ್ರೋಪಕಲ್ಪಿತಮ್ ॥೬೦॥
ದಹನ ಸಂಸ್ಕಾರದ ಮತ್ತಾಣ ಕಾರ್ಯ ಮದಾಲು ಹೆಮ್ಮಕ್ಕಳಿಂದ, ಮತ್ತೆ ಪುತ್ರರಿಂದ ಸ್ನಾನ. ಮತ್ತೆ ನಾಮ ಗೋತ್ರಂಗಳ ಉಚ್ಚರಿಸಿ ತಿಲೋದಕ ಕೊಡೆಕು.
ಪ್ರಾಶಯೇನ್ನಿಂಬಪ್ರತ್ರಾಣಿ ಮೃತಕಸ್ಯ ಗುಣಾನ್ವದೇತ್ ।
ಸ್ತ್ರೀಜನೋsಗ್ರೇ ಗೃಹಂ ಗಚ್ಛೇತ್ಪೃಷ್ಠತೋ ನರಸಂಚಯಃ ॥೬೧॥
ಮತ್ತೆ ನಿಂಬೆ ಎಲೆಯ ತಿಂದು ಮರಣ ಹೊಂದಿದದವನ ಗುಣಂಗಳ ವರ್ಣನೆ ಮಾಡೆಕು. ಮತ್ತೆ ಸ್ತ್ರೀಯರೂ ಅವರ ಹಿಂದೆ ಪುರುಷರ ಸಮೂಹವೂ ಮನಗೆ ಹೋಯೆಕು.
ಗೃಹೇ ಸ್ನಾನಂ ಪುನಃ ಕೃತ್ವಾ ಗೋಗ್ರಾಸಂ ಚ ಪ್ರದಾಪಯೇತ್ ।
ಪತ್ರಾವಲ್ಯಾಂ ಚ ಭುಂಜೀಯಾದ್ಗೃಹಾನ್ನಂ ನೈವ ಭಕ್ಷಯೇತ್ ॥೬೨॥
ಮನೆಲಿ ಮತ್ತೆ ಮಿಂದಿಕ್ಕಿ ಗೋಗ್ರಾಸವ ಕೊಡೆಕು. ಮತ್ತೆ ಉಂಬ-ತಿಂಬದರ ಊಟದೆಲೆಲಿ ಹಾಕಿಸಿ ಉಣ್ಣೆಕು. ತನ್ನ ಮನೆಯನ್ನವ ಉಂಬಲಾಗ. [ದಹನ ಕ್ರಿಯೆ ಮುಗಿಶಿ ಬಂದಿಕ್ಕಿ ಗಮ್ಮತ್ತು ತಿಂಬಲೆ ಅಡಿಗೆ ಮಾಡಿಗೊಂಡು ಕೂಬದಲ್ಲ., ಬದಲಾಗಿ, ಮೃತನ ಗುಣವ ಸ್ತುತಿಸೆಕು., ಪ್ರಕೃತ ಭೋಜನಕ್ಕಾಗಿ ಬೇರೆಯವರ ಮನೆಂದ ತಂದು ಪತ್ರಾವಳಿಲಿ ಊಟ ಮಾಡೆಕು. , ತನ್ನ ಮನೇಲಿಯೇ ಮದಲೆ ಬೇಶಿ ಮಡಿಗೊಂಡಿತ್ತಿದ್ದ ಅನ್ನವ ಉಂಬಲಾಗ, ಹಾಂಗೇಳಿ ಅದರ ಇಡ್ಕದ್ದೆ ಗೋಗ್ರಾಸವಾಗಿ ಕೊಟ್ಟು ಸದುಪಯೋಗ ಮಾಡೆಕು ಹೇದರ್ಥ]
ಮೃತಕಸ್ಥಾನಮಾಲಿಪ್ಯ ದಕ್ಷಿಣಾಭಿಮುಖಂ ತತಃ ।
ದ್ವಾದಶಾಹಕಪರ್ಯಂತಂ ದೀಪಂ ಕುರ್ಯಾದಹರ್ನಿಶಮ್ ॥೬೩॥
ಮೃತಸ್ಥಾನವ ಉದ್ದಿಕ್ಕಿ, ದಕ್ಷಿಣಾಭಿಮುಖವಾಗಿ ಹನ್ನೆರಡು ದಿನಗಳವರೆಂಗೆ ಹಗಲು ರಾತ್ರಿ ನಂದುಸದ್ದೆ ದೀಪ ಉರುಸೆಕು.
ಸೂರ್ಯಾsಸ್ತ್ರಮಾಗತೇ ತಾರ್ಕ್ಷ್ಯ ಶ್ಮಶಾನೇ ವಾ ಚತುಷ್ಪಥೇ ।
ದುಗ್ಧಂ ಚ ಮೃಣ್ಮಯೇ ಪಾತ್ರೇ ತೋಯಂ ದದ್ಯಾದ್ದಿನತ್ರಯಮ್ ॥೬೪॥
ಏ ಗರುಡ!, ಸೂರ್ಯಾಸ್ತಮಾನ ಆದ ಮತ್ತೆ ಶ್ಮಶಾನಲ್ಲಿ ಅಥವಾ ನಾಲ್ಕು ಮಾರ್ಗ ಸೇರುತ್ತ ಜಾಗೆಲಿ ಹಾಲು ಮತ್ತೆ ನೀರಿನ ಮಣ್ಣಿನ ಪಾತ್ರೆಲಿ ಮೂರು ದಿನಂಗಳ ವರೇಂಗೆ ಕೊಡೆಕು.
ಅಪಕ್ವಮೃಣ್ಮಯಂ ಪಾತ್ರಂ ಕ್ಷೀರನೀರಪ್ರಪೂರಿತಮ್ ।
ಕಾಷ್ಠತ್ರಯಂ ಗುಣೈರ್ಬದ್ಧಂ ಧೃತ್ವಾ ಮಂತ್ರಂ ಪಠೇದಿಮಮ್ ॥೬೫॥
ಹಾಲು ಮತ್ತೆ ನೀರು ತುಂಬಿದ, ಬಳ್ಳಿಂದ ಕಟ್ಟಲ್ಪಟ್ಟ ಮೂರು ಕೋಲಿಲಿ ಹಸಿ ಮಣ್ಣ ಮಡಕ್ಕೆಯ ಹಿಡ್ಕೊಂಡು ಈ ಮಂತ್ರವ ಹೇಳೆಕು-
ಶ್ಮಶಾನಾನಲದಗ್ಧೋsಸಿ ಪರಿತ್ಯಕ್ತೋsಸಿ ಬಾಂಧವೈಃ ।
ಇದಂ ನೀರಮಿದಂ ಕ್ಷೀರಮತ್ರ ಸ್ನಾಹಿ ಮಿದಂ ಪಿಬ ॥೬೬॥
“ನೀನು ಶ್ಮಶಾನಲ್ಲಿ ಅಗ್ನಿಂದ ದಹಿಸಲ್ಪಟ್ಟಿದ್ದೆ. ಬಾಂಧವರಿಂದ ಪರಿತ್ಯಜಿಸಲ್ಪಟ್ಟಿದ್ದೆ. ಇದು ನೀರು, ಇದು ಹಾಲು. ಇಲ್ಲಿ ಮಿಂದು, ಇದರ ಕುಡಿ”.
ಚತುರ್ಥೇ ಸಂಚಯಃ ಕಾರ್ಯಃ ಸಾಗ್ನಿಕೈಶ್ಚ ನಿರಗ್ನಿಕೈಃ ।
ತೃತೀಯೇsಹ್ನಿ ದ್ವಿತೀಯೇ ವಾ ಕರ್ತವ್ಯಶ್ಚಾವಿರೋಧತಃ ॥೬೭॥
ಮರಣ ಹೊಂದಿದವ° ಅಗ್ನಿಹೋತ್ರಿಯಾಗಿದ್ದರೆ ನಾಲ್ಕನೇ ದಿನ ಅಸ್ಥಿ ಸಂಚಯನ ಮಾಡೆಕು. ಅವ° ಅಗ್ನಿಹೋತ್ರಿಯಲ್ಲದ್ದರೆ ಎರಡ್ನೇ ದಿನ ಅಥವಾ ಮೂರನೇ ದಿನ ತಿಥಿ-ವಾರ ವಿರೋಧ ಇಲ್ಲದ್ರೆ (ಅವಿರೋಧವಾಗಿ) ಅಸ್ಥಿ ಸಂಚಯನ ಮಾಡೆಕು.
ಗದ್ಯರೂಪಲ್ಲಿ –
ಕಳುದ ಭಾಗಲ್ಲಿ ಹೇಳಿದ ರೀತಿಲಿ ಪಂಚಕಲ್ಲಿ ಮರಣ ಹೊಂದಿರೆ ವ್ಯಕ್ತಿಯ ದಹನ ಸಂಸ್ಕಾರವ ಮಾಡೆಕು. ಒಂದು ವೇಳೆ ಮೃತ ವ್ಯಕ್ತಿಯ ಪತ್ನಿ ಸತಿ ಆಯೇಕ್ಕಾರೆ, ಅದರನ್ನೂ ಅವನ ಶವದ ಒಟ್ಟಿಂಗೇ ದಹನ ಮಾಡೆಕು. ತನ್ನ ಪತಿಯ ಹಿತಲ್ಲಿ ನಿರತೆಯಾದ ಪತಿವ್ರತೆಯಾದ ಸ್ತ್ರೀ ತಾನೂ ಒಟ್ಟಿಂಗೆ ಹೋಪಲೆ ಇಚ್ಛಿಸಿರೆ (ಇಲ್ಲಿ ಸತಿ ಅಪ್ಪದು ಸ್ತ್ರೀಯ ಇಚ್ಛೆ, ಬಲವಂತವಾಗಿ ಮಾಡ್ತದಲ್ಲ) ಮದಾಲು ಆಕೆ ಹೋಗಿ ಮಿಂದಿಕ್ಕಿ ಬರೆಕು. ಮತ್ತೆ ತನ್ನ ಶರೀರವ ಕಾಡಿಗೆ, ಕುಂಕುಮ, ಒಡವೆ, ಉತ್ತಮವಸ್ತ್ರವ ಧರಿಸಿ ಅಲಂಕರಿಸಿಗೊಳ್ಳೆಕು. ಬ್ರಾಹ್ಮಣರಿಂಗೆ ಬಂಧುಗೊಕ್ಕೆ ದಾನ ನೀಡೆಕು. ಗುರುಜನಂಗೊಕ್ಕೆ ನಮಸ್ಕರಿಸಿ ಮತ್ತೆ ಮನೆಂದ ಹೆರ ಬರೆಕು. ಮತ್ತೆ ದೇವಾಲಯಕ್ಕೆ ಹೋಗಿ ಭಕ್ತಿಂದ ಭಗವಂತ° ವಿಷ್ಣುವಿಂಗೆ ನಮಸ್ಕಾರ ಮಾಡೆಕು. ಅಲ್ಲಿ ತನ್ನ ಆಭೂಷಣಂಗಳ ಸಮರ್ಪಿಸಿಕ್ಕಿ, ಶ್ರೀ ಫಲವ ಪಡಕ್ಕೊಂಡು, ನಾಚಿಕೆ ಮೋಹಾದಿಗಳ ಬಿಟ್ಟು ಸ್ಮಶಾನ ಭೂಮಿಗೆ ಹೋಯೆಕು. ಅಲ್ಲಿ ಸೂರ್ಯಂಗೆ ನಮಸ್ಕರಿಸಿ, ಚಿತೆಗೆ ಪ್ರದಕ್ಷಿಣೆ ಬರೆಕು. ಪುಷ್ಪಶಯಾರೂಪಿ ಚಿತೆಯ ಮೇಗೆ ಏರಿ ತನ್ನ ಪತಿಯ ಶಿರವ ತನ್ನ ಮಡಿಲಿಲ್ಲಿ ಮಡಿಕ್ಕೊಂಡು ಗೆಳತಿಯರಿಂಗೆ ಶ್ರೀ ಫಲವ ಕೊಟ್ಟು ದಹನಕ್ಕೆ ಆಜ್ಞೆ ಮಾಡೆಕು ಮತ್ತು ಶರೀರದಹನವ ಗಂಗಾಜಲದ ಸ್ನಾನಕ್ಕೆ ಸಮಾನ ಹೇದು ತಿಳ್ಕೊಂಡು ತನ್ನ ಶರೀರವ ದಹಿಸಿಕೊಳ್ಳೆಕು.
ಗರ್ಭವತಿ ಸ್ತ್ರೀ ತನ್ನ ಗಂಡನೊಟ್ಟಿಂಗೆ ತನ್ನ ಶರೀರವ ದಹನ ಮಾಡಿಗೊಂಬಲಾಗ. ಪ್ರಸವವಾದ ಮತ್ತೆ ಜನಿಸಿದ ಮಗುವಿನ ಪಾಲನೆ ಪೋಷಣೆ ಮಾಡಿ ಮತ್ತೆ ಸತಿ ಹೋಪಲಕ್ಕು. ಒಂದು ವೇಳೆ ಪತಿವ್ರತಾ ಸ್ತ್ರೀ ತನ್ನ ಮೃತ ಪತಿಯ ಶರೀರದೊಟ್ಟಿಂಗೆ ತನ್ನ ಶರೀರವ ದಹಿಸಿಗೊಂಡರೆ, ಅಗ್ನಿ ಆ ಸ್ತ್ರೀಯ ಶರೀರವ ಮಾತ್ರ ಸುಡುತ್ತದು. ಅದರ ಆತ್ಮಕ್ಕೆ ಯಾವುದೇ ಪೀಡೆ ಆವುತ್ತಿಲ್ಲೆ. ಲೋಹಸುಡುವಾಗ ಹೇಂಗೆ ಕಲ್ಮಷಂಗೊ ದಹಿಸಿ ಹೋವುತ್ತೋ ಹಾಂಗೇ ಸ್ತ್ರೀ ಅಮೃತ ಸಮಾನವಾದ ಅಗ್ನಿಲಿ ತನ್ನ ಪಾಪಂಗಳ ದಹಿಸಿಗೊಳ್ಳುತ್ತು. ಏವ ರೀತಿ ಸತ್ಯವಂತನಾದ, ಶುದ್ಧನಾದ, ಧರ್ಮಾತ್ಮನಾದ ಮನುಷ್ಯ° ದೈವಪರೀಕ್ಷೆಲಿ ಕಾಸಿದ ಲೋಹದ ಪಿಂಡಂಗಳಿಂದ ರಜವೂ ದಹಿಸಿಗೊಳ್ಳುತ್ತನಿಲ್ಲೆಯೋ, ಅದೇ ಪ್ರಕಾರ ಚಿತೆಯ ಮೇಗೆ ಏರಿದ ಪತಿಯ ಶರೀರದೊಟ್ಟಿಂಗೆ ಇಪ್ಪ ಸ್ತ್ರೀ ಕೂಡ ಎಂದಿಂಗೂ ಸುಟ್ಟುಹೋವುತ್ತಿಲ್ಲೆ. ಹೇಳಿರೆ, ಅದಕ್ಕೆ ದಹನದ ಕಷ್ಟದ ಅನುಭವ ಆವುತ್ತಿಲ್ಲೆ. ಬದಲಾಗಿ, ಆಕೆಯ ಅಂತರಾತ್ಮ ಮೃತ ವ್ಯಕ್ತಿಯ ಅಂತರಾತ್ಮದೊಟ್ಟಿಂಗೆ ಏಕತ್ವವ ಪ್ರಾಪ್ತಿ ಹೊಂದುತ್ತು.
ಪತಿಯ ಮರಣವಾದಪ್ಪಗ ಎಲ್ಲಿವರೇಂಗೆ ಸ್ತ್ರೀ ಆತನ ಶರೀರದೊಟ್ಟಿಂಗೆ ತನ್ನ ಶರೀರವ ದಹಿಸಿಗೊಳ್ಳುತ್ತಿಲ್ಲೆಯೋ, ಅಲ್ಲಿವರೇಂಗೆ ಆಕೆ ಏವುದೇ ಪ್ರಕಾರಂದಲೂ ಕೂಡ ಸ್ತ್ರೀ ಶರೀರ ಪ್ರಾಪ್ತಿಹೊಂದುವದರಿಂದ ಮುಕ್ತಳಾವುತ್ತಿಲ್ಲೆ. ಹಾಂಗಾಗಿ ಸರ್ವಪ್ರಯತ್ನಪೂರ್ವಕ ಕಾಯಾವಾಚಾಮನಸಾ ತನ್ನ ಪತಿಯ ಬದುಕಿಲ್ಲಿಯೂ, ಸಾವಿಲ್ಲಿಯೂ ಅನುಸರಿಸಿ ಸೇವೆ ಮಾಡೆಕು. ಪತಿಯ ಮರಣಲ್ಲಿ ಏವ ಸ್ತ್ರೀ ಅಗ್ನಿ ಪ್ರವೇಶ ಮಾಡುತ್ತೋ ಆಕೆ ಅರುಂಧತಿಗೆ ಸಮಾನಳಾಗಿ ಸ್ವರ್ಗಲೋಕಲ್ಲಿ ಸನ್ಮಾಳಿತಳಾವುತ್ತು. ಅಲ್ಲಿ ಆ ಪತಿಪರಾಯಣ ಸ್ತ್ರೀ ಅಪ್ಸರೆಯರ ಗಣಂದ ಸ್ತುತಿಸಲ್ಪಟ್ಟು ಹದಿನಾಲ್ಕು ಇಂದ್ರರ ರಾಜ್ಯಕಾಲ ಪರ್ಯಂತ, ಹೇಳಿರೆ- ಒಂದು ಕಲ್ಪದವರೇಂಗೆ ತನ್ನ ಪತಿಯೊಟ್ಟಿಂಗೆ ಸ್ವರ್ಗಲೋಕಲ್ಲಿ ವಿಹರಿಸಿಗೊಂಡಿರುತ್ತು. ಏವ ಸತಿ ತನ್ನ ಪತಿಯ ಅನುಗಮನ ಮಾಡುತ್ತೋ, ಆಕೆ ತನ್ನ ಮಾತೃಕುಲ, ಪಿತೃಕುಲ ಮತ್ತೆ ಪತಿಕುಲ – ಈ ಮೂರೂ ಕುಲವ ಪವಿತ್ರಗೊಳುಸುತ್ತು. ಮನುಷ್ಯನ ಶರೀರಲ್ಲಿ ಏವ ಮೂರುವರೆ ಕೋಟಿ ರೋಮಂಗಳಿರುತ್ತೋ ಅಷ್ಟು ಕಾಲ ತನ್ನ ಪತಿಯ ಜೊತೆಲಿ ಸ್ವರ್ಗಲೋಕಲ್ಲಿ ಆನಂದ ಪಡುತ್ತು. ಸೂರ್ಯನಾಂಗೆ ಪ್ರಕಾಶಮಾನವಾದ ವಿಮಾನಲ್ಲಿ ಕೂದುಗೊಂಡು ತನ್ನ ಪತಿಯೊಟ್ಟಿಂಗೆ ಅದು ವಿಹರುಸುತ್ತು. ಎಲ್ಲಿವರೇಂಗೆ ಸೂರ್ಯಚಂದ್ರರು ಇರುತ್ತವೋ ಅಲ್ಲಿವರೇಂಗೆ ಅದು ತನ್ನ ಪತಿಯೊಟ್ಟಿಂಗೆ ಸದಾ ವಾಸಮಾಡಿಗೊಂಡಿರುತ್ತು. ಮತ್ತೆ ದೀರ್ಘಾಯುಷ್ಯ ಪ್ರಾಪ್ತಿ ಹೊಂದಿ, ಪವಿತ್ರ ಕುಲಲ್ಲಿ ಜನ್ಮತಾಳಿ ಆ ಪತಿವ್ರತಾ ನಾರಿ, ಅದೇ ಪತಿಯ ಜನ್ಮಾಂತರಲ್ಲಿ ಪತಿಯಾಗಿ ಪಡೆತ್ತು. ಯಾವ ಸ್ತ್ರೀ ಕ್ಷಣಮಾತ್ರಕ್ಕಾಗಿ ಉಂಟಪ್ಪ ದಹನ ದುಃಖದ ಕಾರಣ ಈ ಪ್ರಕಾರದ ಸುಖವ ಬಿಡುತ್ತೋ, ಆ ಮೂಢ ಸ್ತ್ರೀ ಜನ್ಮ ಪರ್ಯಂತ ವಿರಹಾಗ್ನಿಂದ ದಹಿಸಿಗೊಂಡಿರುತ್ತು. ಹಾಂಗಾಗಿ ಸತಿಯಾದೋಳು ಪತಿಯ ಶಿವ° ಹೇದು ತಿಳ್ಕೊಂಡು ತನ್ನ ಶರೀರವ ಅವನೊಟ್ಟಿಂಗೆ ದಹಿಸಿಗೊಳ್ಳೆಕು. ಒಂದು ವೇಳೆ ಆಕೆ ಸತಿ ಆವ್ತಿಲ್ಲೆಯಾದರೆ ಅವನ ದೇಹವ ಮಾತ್ರ ದಹನಕ್ರಿಯೆ ಮಾಡೆಕು.
ದೇಹ ಅರ್ಧ ಅಥವಾ ಪೂರ್ಣ ಸುಟ್ಟುಹೋದಪ್ಪಗ ಅವನ ತಲೆಯ ಗೃಹಸ್ಥನಾದರೆ ಕಾಷ್ಠಂದ, ಯತಿಯಾದರೆ ಶ್ರೀ ಫಲಂದ ಒಡದುಬಿಡೆಕು. ಪಿತೃಲೋಕದ ಪ್ರಾಪ್ತಿಗಾಗಿ ಅವನ ಬ್ರಹ್ಮರಂಧ್ರವ ಭೇದನ ಮಾಡಿ ಅವನ ಮಕ್ಕ ಈ ಮುಂದಾಣ ಮಂತ್ರಂದ ಅಗ್ನಿಲಿ ತುಪ್ಪದ ಆಹುತಿಯ ನೀಡೆಕು. “ಅಸ್ಮಾತ್ವಮಧಿ ಜಾತೋsಸಿ ತ್ವದಯ ಜಾಯತಾಂಪುನಃ….” – ‘ ನೀನು ಅವನಿಂದ (ಭಗವಂತನಿಂದ) ಹುಟ್ಟಿದ್ದೆ, ಪುನಃ ನಿನ್ನ ಮೂಲಕ ಇವನ ತೇಜೋಮಯ ದಿವ್ಯ ಶರೀರದ ಉತ್ಪತ್ತಿ ಆಗಲಿ . ಸ್ವರ್ಗಲೋಕಲ್ಲಿ ಗಮನ ಮಾಡ್ಳೆ ಇವನ ಸ್ಥೂಲ ಶರೀರವ ಸುಟ್ಟು ನಿನ್ನ ಹವಿಸ್ಸಾಗಲಿ. ಹಾಂಗಾಗಿ ನೀನು ಪ್ರಜ್ವಲಿಸು’ (ಅಕಾರೋ ವಾಸುದೇವಃ ಸ್ಯಾತ್ ತಥಾ ಅಕ್ಷರಾಣಾಮಕಾರೋsಸ್ಮಿ ಇತ್ಯಾದಿ ವಚನಂಗಳ ಅನುಸಾರ ‘ಅ’ ಭಗವಂತನ ಹೆಸರು). ಈ ಪ್ರಕಾರ ಮಂತ್ರಸಹಿತ ತಿಲ ಮಿಶ್ರಿತ ತುಪ್ಪದ ಆಹುತಿ ನೀಡಿ, ಜೋರಾಗಿ ರೋದನ ಮಾಡೆಕು. ಅದರಿಂದ ಜೀವ ಸುಖ ಪ್ರಾಪ್ತಿ ಹೊಂದುತ್ತು.
ದಹನದ ಬಳಿಕ, ಸ್ತ್ರೀಯರು ಮದಾಲು ಮೀಯೆಕು. ಮತ್ತೆ ಮಕ್ಕಳೂ ಮೀಯೆಕು. ಮತ್ತೆ ಮೃತನ ನಾಮ ಗೋತ್ರಂಗಳ ಹೇಳಿ ತಿಲೋದಕವ ನೀಡೆಕು. ಮತ್ತೆ ನಿಂಬು ಎಲೆಯ ಸೇವಿಸಿ, ಮೃತನ ಗುಣಗಾನ ಮಾಡೆಕು. ಮತ್ತೆ ಮುಂದೆ ಹೆಮ್ಮಕ್ಕಳೂ ಅವರಿಂದ ಮತ್ತೆ ಗೆಂಡುಮಕ್ಕಳೂ ಮನಗೆ ಹೋಯೆಕು. ಮನೆಲಿ ಮತ್ತೆ ಮಿಂದಿಕ್ಕಿ ಗೋವಿಂಗೆ ಗ್ರಾಸವ ಕೊಡೆಕು. ಮತ್ತೆ ತನ್ನ ಮನೆಯನ್ನವ ಉಂಬಲಾಗ. ಬೇರೆಯವರ ಮನೆ ಅನ್ನವ ಪತ್ರಾವಳಿಲಿ ಊಟ ಮಾಡೆಕು. (ತನ್ನ ಮನೇಲಿ ಬೇಶಿ ಮಡಿಗೊಂಡಿಪ್ಪ ಅನ್ನವ ಉಂಬಲಾಗ, ತನ್ನ ಮನೇಲಿ ಮದಲೇ ಬೇಶಿ ಮಡಿಗೊಂಡಿತ್ತಿದ್ದ ಅನ್ನವ ಉಂಬಲಾಗ, ಹಾಂಗೇಳಿ ಅದರ ಇಡ್ಕದ್ದೆ ಗೋಗ್ರಾಸವಾಗಿ ಕೊಟ್ಟು ಸದುಪಯೋಗ ಮಾಡೆಕು, ಹಾಂಗೇ, ಊಟ ಆಗ್ಬೇಕು ಹೇದಿನ್ನು ದೊಡ್ಡಕೆ ಅಡಿಗೆ ಗೌಜಿಗೆ ಹೋಪಲಾಗ ಹೇದರ್ಥ).
ಮತ್ತೆ, ಮೃತ ಜಾಗೆಯ ಗೋಮಯಂದ ಉದ್ದಿ, ಅಲ್ಲಿ ಹನ್ನೆರಡು ದಿನದವರೆಂಗೆ ಹಗಲು-ಇರುಳು ದಕ್ಷಿಣಾಭಿಮುಖವಾಗಿ ಅಖಂಡ ದೀಪವ ಹೊತ್ತಿಸಿ ಮಡುಗೆಕು. ದಹನದ ದಿನದಂದಿಂದ ಮೂರು ದಿನಗಳ ವರೆಂಗೆ ಸೂರ್ಯಾಸ್ತ ಆದ ಮತ್ತೆ, ಶ್ಮಶಾನ ಭೂಲಿ ಅಥವಾ ನಾಲ್ಕು ಮಾರ್ಗ ಸೇರುತ್ತಲ್ಲಿ, ಮೂರು ಕೋಲಿನ ಬಳ್ಳಿಲಿ ಕಟ್ಟಿ ಮಣ್ಣಿನ ಪಾತ್ರವ ಅದರ್ಲಿ ಮಡುಗಿ ಅದಕ್ಕೆ ಹಾಲು ಮತ್ತು ನೀರು (ಪ್ರಪ್ರತ್ಯೇಕ ಮಣ್ಣಿನ ಪಾತ್ರಲ್ಲಿ) ತುಂಬಿಸಿ ಮಡುಗಿ, ಈ ಮಂತ್ರವ ಹೇಳೆಕು- “ಶ್ಮಶಾನಾನಲದಗ್ಧೋsಸಿ ಪರಿತ್ಯಕ್ತೋsಸಿ ಬಾಂಧವೈಃ….” – ಹೇ ಪ್ರೇತವೇ!, ನೀನು ಶ್ಮಶಾನದ ಅಗ್ನಿಲಿ ದಹಿಸಿದ್ದೆ, ಬಂಧುಗಳಿಂದ ಪರಿತ್ಯಕ್ತನಾಗಿದ್ದೆ. ಇಲ್ಲಿ ಇದು ಹಾಲು, ಇದು ನೀರು. ಇದರ್ಲಿ ಮಿಂದಿಕ್ಕಿ ಇದರ ಸೇವಿಸು.
ಮರಣ ಹೊಂದಿದವ° ಅಗ್ನಿಹೋತ್ರಿಯಾಗಿದ್ದರೆ ನಾಲ್ಕನೇ ದಿನ ಅಸ್ಥಿಸಂಚಯನ ಮಾಡೆಕು. ಅವ° ಅಗ್ನಿಹೋತಿ ಅಲ್ಲದ್ರೆ ಎರಡ್ನೇ ದಿನ ಅಥವಾ ಮೂರ್ನೇ ದಿನ ತಿಥಿ-ವಾರ ನಿಷಧಂಗಳ ವಿಚಾರಮಾಡಿ ಅವಿರೋಧವಾಗಿದ್ದರೆ ಅಸ್ಥಿ ಸಂಚಯನ ಮಾಡೆಕು.
ಅಸ್ಥಿ ಸಂಚಯನ ಬಗ್ಗೆ ಭಗವಂತ° ಎಂತ ಹೇಳಿದ್ದ°?… ಬಪ್ಪ ವಾರ ನೋಡುವೋ°
[ಚಿಂತನೀಯಾ –
ಗರುಡಪುರಾಣಲ್ಲಿ ಸತಿಪದ್ಧತಿಯ ಸಮರ್ಥಿಸಿ ಹೇಳಿದ್ದವು. ಆದರೆ ಒಟ್ಟಿಂಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದವು – ಯದಿ ಸತೀ ಭವೇತ್ – ಇಲ್ಲಿ ಅದು ಸ್ತ್ರೀಯ ಇಚ್ಛೆಗೆ ಬಿಟ್ಟದ್ದು. ಬಲವಂತವಾಗಿ ಆಯೇಕು ಹೇಳಿ ಏನಿಲ್ಲೆ. ಅದಕ್ಕೆ ಸಂಪೂರ್ಣ ಒಪ್ಪಿಗೆ ಇದ್ದರೆ ಮಾಂತ್ರ. ಅದಕ್ಕೆ ಅದು ಸಂಪೂರ್ಣ ಪತಿವ್ರತಾಧರ್ಮಿಣಿ ಆಗಿರೆಕು. ಸಾಮಾನ್ಯರಿಂಗೆ ಹೇಳಿದ್ದದೂ ಅಲ್ಲ ಅದು. ಸಾಮಾನ್ಯರಿಂದ ಅದು ಎಡಿಯ. ಈಗಾಣ ಕಾಲಕ್ಕೆ ಇದು ಅಸಹಜ ಹೇದು ಕಂಡರೂ ಮದಲಿಂಗೆ ಇದ್ದತ್ತು ಹೇಳ್ವದು ನಾವು ಇತಿಹಾಸಂದ ತಿಳ್ಕೊಂಬಲಕ್ಕು. ಕೌಸಲ್ಯೆ ಮುಂತಾದ ದಶರಥನ ಹೆಂಡತಿಯಕ್ಕೊ, ಕುಂತಿ ಮೊದಲಾದೊರು ಸತಿ ಹೋಗದ್ದಿಪ್ಪ ಸಾಕಷ್ಟು ದೃಷ್ಟಾಂತಂಗೊ ಇದ್ದು. ಸತಿ ಸಹಗಮನ ಮಾಡ್ತರೆ ಏವ ಕ್ರಮ ಹೇಳಿ ಅಷ್ಟೇ ಇಲ್ಲಿ ಹೇಳಿದ್ದದು ಮತ್ತು ಅದರ ಮಹತ್ವವನ್ನೂ ವಿವರಿಸಿದ್ದವು. ಆದರೆ ಅದು ಸ್ತ್ರೀಯ ಇಚ್ಚಗೆ ಬಿಟ್ಟದ್ದು. ಅದೇ ಸಂದರ್ಭಲ್ಲಿ ಗರ್ಭಿಣಿ ಸ್ತ್ರೀಯ, ರಜೆಸ್ವಲೆ, ಋತುಕಾಲ ಕಂಡಿರದ ಮುಂತಾದ ಸ್ತ್ರೀಯರ ಸಹಗಮನ ಶಾಸ್ತ್ರ ನಿಷಿದ್ಧವಾಗಿದ್ದು. ಸಮಾಜಲ್ಲಿ ಸ್ತ್ರೀ ಪೂರೈಸಕ್ಕಪ್ಪ ಜವಾಬ್ದಾರಿಯುತ ಕರ್ತವ್ಯಂಗೊ ಇದ್ದು ಹೇಳ್ವದು ಇಲ್ಲಿ ಒಪ್ಪೆಕೊಳ್ಳೆಕ್ಕಾದ ಮಾತು.
ಸತಿ ಏರುವ ಪ್ರಮೇಯ ಇಲ್ಲದ್ದಲ್ಲಿ ಮೃತನ ಮಾತ್ರ ದಹನ ಕ್ರಿಯೆ ಮಾಡಿ ಮುಂದೆ ಅವನ ಸದ್ಗತಿಗೋಸ್ಕರ ಮುಂದಾಣ ಕಾರ್ಯಂಗಳ ಶ್ರದ್ಧೆಲಿ ನೆರೆವೇರಿಸಕ್ಕಾದ್ದು ಮಗನ, ಬಂಧುಗಳ ಕರ್ತವ್ಯ.
ಮೃತನ ಬಗ್ಗೆ ಎಲ್ಲೋರಿಂಗೂ ಸದ್ಭಾವನೆ ಇರಲಿ, ಅವನ ಗುಣಗಾನ ಮಾಡುವ ಔದಾರ್ಯ ಇರಲಿ, ಎಲ್ಲೋರಿಂಗೂ ಸದ್ಬುದ್ಧಿ ಸನ್ಮಾರ್ಗವ ಭಗವಂತ° ಪ್ರಚೋದಿಸಲಿ ಹೇಳಿಗೊಂಡು ಈ ಭಾಗಕ್ಕೆ ಹರೇ ರಾಮ.]
ಸತಿ ಸಹಗಮನ ಪದ್ಧತಿಯನ್ನು ಯಾವ ಶಾಸನದಲ್ಲಿ ಉಲ್ಖೆಸಿಲಾಗಿದೆ
ಬದಲಾವಣೆಯ ನಮ್ಮ ಸಮಾಜ ಒಪ್ಪಿಗೊಂಡು ಬಯಿಂದು. ಅದಕ್ಕೆ ವಿರುದ್ಧ ಹೋದ ಉದಾಹರಣೆಗೊ ಇದ್ದರೂ ತುಂಬಾ ಕಮ್ಮಿ ಇಕ್ಕು. ಒಂದು ಕಾಲಲ್ಲಿ ವಿಧವೆ ಆದವು ಮಾಂಗಲ್ಯ ಸೂಚಕವಾದ ಕುಂಕುಮ, ಬಳೆ, ತಾಳಿ ಇತ್ಯಾದಿ ತ್ಯಜಿಸಿಗೊಂಡು ಇತ್ತಿದ್ದವಾದರೂ ಇತ್ತೀಚೆಗಾಣ ಬೆಳವಣಿಗೆಲಿ, ಪ್ರಾಯ ಆದ ವಿಧವೆಗೊ ಇದರ ಧರಿಸಿಗೊಳ್ತಾ ಇದ್ದವು.
ಮಕ್ಕೊ ಕೂಡಾ “ಅಬ್ಬೆ, ನಿನ್ನ ಮೋರೆ ನೋಡ್ಲೆ ಎಡಿತ್ತಿಲ್ಲೆ, ಮೊದಲಾಣ ಹಾಂಗೇ ಬಳೆ, ಕುಂಕುಮ ಹಾಕಿಂಡು ಇರು” ಹೇಳಿ ತಾಕೀತು ಮಾಡಿದ ಸಂದರ್ಭಂಗೊ ಎಷ್ಟೋ ಇದ್ದು.
ವಿಧವಾ ವಿವಾಹಕ್ಕೆ ಕೂಡಾ ನಮ್ಮಲ್ಲಿ ಪ್ರೋತ್ಸಾಹ ಸಿಕ್ಕುವದು ಇನ್ನೊಂದು ಒಳ್ಳೆ ಬೆಳವಣಿಗೆಯೇ ಸರಿ.
ಬದಲಾವಣೆ ಸಮಾಜದ ಸುಕ್ಷೇಮಕ್ಕೆ ಅಪ್ಪದಾದರೆ, ಅದರ ನಾವು ಸಂತೋಷಲ್ಲಿ ಸ್ವಾಗತಿಸುವೊ°
ಲಕ್ಷ್ಮಿ ಅಕ್ಕಂಗೆ ನಮಸ್ಕಾರ. ನಮ್ಮ ಸಮಾಜದ ಲೋಪ ದೋಶಂಗಳ ಕಾಲಕ್ಕೆ ತಕ್ಕ ಹಾಂಗೆ ತಿದ್ದುಪಡಿ ಮಾಡಿಕೊಂಡು ನಾವು ಮುಂದುವರಿತ್ತಾ ಇದ್ದು.” ಮಂಗನಿಂದ ಮಾನವ” ಹೇಳುವ ನಾವು ಅಂದಿಂದ ಇಂದಿನವರೆಗೆ ಎಷ್ಟೋ ಬದಲಾವಣೆಗಳ ಮಾಡಿಕೊಂಡಿದು, ಹಾಂಗೂ ಮುಂದೆ ಮಾಡಲಿದ್ದು. ಈಗ ನಾವು ಆಚರಿಸುವ ಎಷ್ಟೋ ಪದ್ದತಿಗಳ ಮುಂದಿನ ಜನಾಂಗ ಮೌಡ್ಯ ಹೇಳಿ ತಿಳುದು ತಿದ್ದುಗು. ಹಾಂಗಾಗಿ ಅಂದಿಂಗೆ ಅದು ಸರಿ. ಇಂದಿಂಗೆ ಇದೂ ಸರಿ.-ಹರೇ ರಾಮ.
ಅರೆಕಲ್ಲಿಲಿ ನೈದಾಲ ಪಾಂಡಿ ಎಂಬ ಭೂತವಾಗಿ ಗಾಳಿ ಬೀಡಿನ ಪಾಂಡೀರ ರಾಜ ಮನೆತನದೋರಿಂದ ಆರಾಧನೆ ಹೊಂದುವ ಕಾಸರಗೋಡು ಕಾಳಯ್ಯ ಎಂಬ ಮೂಲ ಹೆಸರಿನ ಬೆಳ್ಳಾರೆ ಮಾಗಣೆ ಯ ರಾಜ ಕುಮಾರ ಆರು ?ಬೆಳ್ಳಾರೆ ಬೀಡು ಟಿಪ್ಪುವಿನ ಆಕ್ರಮಣ ಕಾಲಕ್ಕೆ ಆರ ಕೈಲಿ ಇತ್ತು ?ಬೆಳ್ಳಾರೆ ಬೀಡಿನ ಒಡೆಯರು ಆರು (ಎ ಬಗ್ಗೆ ಏನೊಂದು ಮಾಹಿತಿ ಲಭ್ಯ ಇಲ್ಲೇ ಎಲ್ಲಿಯೂ ) ಹೇಳಿ ತಿಳಿವ ಪ್ರಯುಕ್ತ ಆನು ಬೇಕಲ ನಾಯಕರ ವಂಶದ ಯುವಕ Arish bekal ಹತ್ತರೆ ಫೇಸ್ ಬುಕ್ ಮೂಲಕ ಸಂರ್ಕಿಸಿ ಮಾತಾಡಿದೆ.ಎನಗೆ ಬೇಕಾದ ವಿಷಯ ಬಗ್ಗೆ ಏನೂ ಗೊಂತಾತಿಲ್ಲ್ಲೇ
ಆದರೆ ಟಿಪ್ಪುವಿನ ಆಕ್ರಮಣ ಆಗಿ ಅಪ್ಪಗ ಯುದ್ಧಲ್ಲಿ ಸತ್ತ ಅವರ ವಂಶದ ಯೋಧರ ಹೆಂಡತಿಯಕ್ಕ ಎಲ್ಲ ಟಿಪ್ಪು ಮತ್ತು ಆ ಸೈನಿಕರ ಕೈಂದ ಹೆಂಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಬಾವಿಗೆ ಹಾರಿ ಸತ್ತವು ಹೇಳಿ arish ಬೆಕಲದ ಅಜ್ಜ್ಜಿ ಹೇಳಿದ್ದರ ಎನಗೆ ತಿಳಿಸಿದ .ಅವನ ಅಜ್ಜಿ ಯ ಅಜ್ಜಿಯಂದಿರು ಹಾಂಗೆ ಸತ್ತದಡ
ರವಿಗನ ಮಗಳು ದೇಕಬ್ಬೆ ಕೂಡಾ ಸಹಗಮನ ಮಾಡುವಾಗ ಮುಂಡೆ ಯಾಗಿ ಬದುಕುದಕ್ಕಿಂತ ಬೇರೆಯೋರ ಮನೆಯ ತೊತ್ತಾಗಿ ಬಾಳುದಕ್ಕಿಂತ ಸಹಗಮನ ಮೇಲು ಹೇಳಿ ಹೇಳಿದ ಬಗ್ಗೆ ಅಲ್ಲಿ ಶಾಸನಲ್ಲಿ ಉಲ್ಲೇಖ ಇದ್ದು .ಹೇಳ್ರೆ ಸಾಯಕ್ಕು ಹೇಳಿ ನಿರ್ಬಂಧ ಇತ್ತಿಲ್ಲ್ಲೇ ಆದರೆ ಸಾವೇ ಮೇಲು ಹೇಳುವ ಪರಿಸ್ಥಿತಿ ಇತ್ತು
ಹವ್ಯಕ ಸಮಜಲ್ಲಿಯೂ ವಿಧವೆಯರ ಪರಿಸ್ಥಿತಿ ಇದಕ್ಕಿಂತ ಭಿನ್ನ ಇತ್ತಿಲ್ಲೆ .ತಿಂಗಳಿನ್ಗೊಂದರಿ ಬಂಡಾರಿ ಎದುರು ತಲೆ ತಗ್ಗಿಸಿ ಕೂಡು ತಲೆ ಬೋಳಿಸಿಕೊಳ್ಳಕಾದ,ಒಪ್ಪೊತ್ತು ಆಚರಿಸಕ್ಕಾದ (ಹೊಟ್ಟೆ ತುಂಬಾ ಎರಡು ಹೊತ್ತು ಉಮ್ಬಲೂ ಸ್ವಾತಂತ್ರ ಇಲ್ಲೇ!) ವಿಧವೆ ಅಬ್ಬೆಯ ನೋಡುದು ಕೂಡಾ ಅಪಶಕುನ ಹೇಳಿ ಮಕ್ಕ ಭಾವಿಸಿಪ್ಪ ಪರಿಸ್ಥಿತಿ ಇತ್ತು ತೀರಾ ಇತ್ತೀಚಿನ ವರೆಗೂ
ಹಾಂಗಾಗಿ ಸಹಗಮನ ಸ್ವ ಇಚ್ಚ್ಚೆಂದ ಆಗಿದ್ದರೂ ಅದು ಸ್ವ ಇಚ್ಛೆ ಅಲ್ಲ ಮುಂದಿನ ದಾರುಣ ಬದುಕಿಂಗೆ ಹೆದರಿ,ವಿಧವೆಯಾಗಿ ಅಪಶಕುನದ ವಸ್ತುವಾಗಿ ಒಂದರಿಯೇ ಸಾವದು ಒಳ್ಳೇದು ಹೇಳುವ ಪರಿಸ್ಥಿತಿ ಕಾರಣ .ಕಾಲಿ ಶತ್ರುಗಳ ಕೈಗೆ ಸಿಕ್ಕಿ ಬೀಳುಗು ಹೇಳುವ ಹೆದರಿಕೆ ಇಲ್ಲದ್ದೆ ಇಪ್ಪಗಲೂ ಮುಂದಿನ ಕೀಳು ಬದುಕಿಂಗೆ ಹೆದರಿ ಸತ್ತದಕ್ಕೆ ಅನೇಕ ನಿದರ್ಶನಂಗ ಇತ್ಹಿಹಾಸಲ್ಲಿ ಸಿಕ್ಕುತ್ತು
ಅದೇ ರೀತಿ ಒಂದರಿ ಗಂಡನ ಕಳಕೊಂಡ ದುಃಖದ ತೀವ್ರತೆಗೆ ಒಳಗಾಗಿಯೋ ಮುಂದಿನ ದಾರುಣ ಬದುಕಿಂಗೆ ಹೆದರಿಯೋ ಸಹಗಮನ ಅಪ್ಪಲೆ ಹೆರಟರು ಕಿಚ್ಚು ಮುಟ್ಟಿ ಅಪ್ಪಗ ಬೇಗೆ ತಡವಲೆ ಎದಿಯದ್ದೆ ಎದ್ದು ಓಡಿಗೊಂದು ಬಂದುಗೊಂಡು ಇತ್ತಿದವು.ಅವರ ಅಮ್ಬಗ ಸುತ್ತ ಮುತ್ತ ಜನಂಗ ನಿಂದು ದೊಡ್ಡ ದೊಣ್ಣೆ ಲಿ ನೂಕಿ ಒಳ ಹಾಕಿ ಹಿಡುಕ್ಕೊಂದು ಇದ್ದದು (ಒಂದು ಕೈಗೆ ಸಣ್ಣ ಸಾಸಮೆ ರಟ್ಟಿರೇ ತಡವಲೆ ಎದಿತ್ತಿಲ್ಲೇ ಇನ್ನು ಮೇಲಂದ ಕಿಚ್ಚು ಹಿಡುದು ಒಳ ಎದೆ ಮೆದುಳು ಶ್ವಾಸಕೊಶಂಗೊಕ್ಕೆ ಮುಟ್ಟಿ ಸಾಯಕಾದರೆ ಎಷ್ಟು ಹೊತ್ತು ಬೇಡ !ಸಾವುಗಳಲ್ಲಿ ಅತ್ಯಂತ ದಾರುಣ ಸಾವು ಬೆಂಕಿ ಹಿಡುದು ಸಾವದಡ )
ಆನು ಒಂದು ವಿಷಯವ ಪ್ರಾಮಾಣಿಕವಾಗಿ ಹೇಳ್ತೆ .ಶಾಸನ ಕ್ಲಾಸ್ ಲಿ ಕೂದು ಸಹಗಮದ ವಿಧಾನವ ತಿಳುದ ದಿನ ಎಂಗ ಸುಮಾರು ಜನ ಹೆಮ್ಮಕ್ಕ ಮಾತಾಡಿಗೊಂಡಿದೆಯ ಸಧ್ಯ ನಾವು ಈ ಕಾಲಲ್ಲಿ ಹುಟ್ಟಿದ್ದು ಅಬ್ಬಾ!ಹೇಳಿ
ನಮ್ಮ ಸಂಸ್ಕೃತಿ ತುಂಬಾ ಶ್ರೇಷ್ಠ ,ನಮ್ಮಲ್ಲಿ ಇಪ್ಪಷ್ಟು ಹೆಂಗಸರಿಗೆ ಒಳ್ಳೆ ಸ್ಥಾನ ಮಾನ ಬೇರೆಕಡೆ ಇಲ್ಲೆ (ಈಗ ಸಮ ಆದರೆ ನಾವು ಸಂಸ್ಕೃತಿ ಹೇಳುದು ಹಿಂದಿಂದಲೇ ನಡಕೊಂಡು ಬಂದದರನ್ನೂ ಸೇರಿಸಿ ಕೊಂಡು ಅಲ್ಲದ ?)ಹೇಳಿ ಯತ್ರ ನಾರ್ಯಸ್ತು ಪೂಜ್ಯಂತೇ |ರಮಂತೇ ತತ್ರ ದೇವತಾಃ ಹೇಳುದರ ಕೇಳುವಾಗ ನಿಜವಾಗಿಯೂ ಎನಗೆ ಈ ವಿಚಾರ ನೆನಪಾವುತ್ತು !
ವಿಧವಾ ಸ್ತ್ರೀಯರು ಸ್ತ್ರೀಯರು ಅಲ್ಲದ ?ನಮ್ಮಲ್ಲಿ ಎಲ್ಲಿ ಅವಕ್ಕೆ ಸ್ಥಾನ ಇತ್ತು ?ಅವರ ಬದುಕು ಎಷ್ಟು ದಾರುಣ ವಾಗಿ ಇತ್ತು ಹೇಳ್ರೆ ಕಿಚ್ಚಿಲಿ ಬೆಂದರೂ ಅಕ್ಕು ಸತ್ತರೂ ಅಕ್ಕು ಇದರಂದ ಹೇಳುವಷ್ಟು !
ಹಾಂಗಾಗಿ ಸಹಗಮನಲ್ಲಿ ಪ್ರೇರಿತ ಮತ್ತು ಬಲವಂತದ್ದು ಹೇಳುವ ಎರಡು ವಿಧ ಸ್ವ ಇಚ್ಛೆ ಹೇಳುದು ಇಲ್ಲೇ ಹೇಳಿ ಎನ್ನ ಅಭಿಪ್ರಾಯ
ಎಂತಕೋ ಸಹಗಮನದ ವಿಚಾರ ಇಲ್ಲಿ ಓದಿ ಈ ಬಗ್ಗೆ ನಿಂಗಳ ಹತ್ತರೆ ಎನ್ನ ಭಾವನೆಗಳ ಹಂಚಿಕೊಳ್ಳಕ್ಕು ಹೇಳಿ ಅನ್ಸಿತ್ತು
ನಿಂಗಳ ಅನಿಸಿಕೆ ಲಾಯಕ ಪ್ರಸ್ತುತ ಪಡಿಸಿದ್ದಿ ಅಕ್ಕ° . ಧನ್ಯವಾದ. ಹರೇ ರಾಮ
ಸತಿ ಸಹಗಮನ ಪದ್ದತಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಹಾಂಗಾರೆ ಹಿಂದಾಣ ಕಾಲಲ್ಲಿ ಸ್ಮಶಾನಕ್ಕೆ ಸ್ತ್ರೀಯರೂ ಬಂದೊಂಡಿತ್ತಿದ್ದವು ಹೇಳಿ ಕಾಣ್ತು. (ಭ್ರಾಹ್ಮಣರಲ್ಲಿ ಈಗ ಆ ಕ್ರಮ ಇಲ್ಲೆ). ಮತ್ತೆ ಮನೆಲಿ ರಾತ್ರಿ- ಹಗಲು ದೀಪ ಹೊತ್ತುಸುವದಲ್ಲದ್ದೆ, ಒಂದು ಪಾತ್ರೆಲಿ ನೀರು ತುಂಬಿ, ಅದರಲ್ಲಿ ಅರಿಸಿನ ಕೊಂಬು ದಾರಲ್ಲಿ ಕಟ್ಟಿ ನೀರಿಂಗೆ ಮುಳುಗಿಸಿ ಮಡಗುವ ಕ್ರಮವೂ ಇದ್ದು. ಅದಕ್ಕೆ ನೆಳಲು ನೀರು ಹೇಳ್ತವು. ಅದರ ಬಗ್ಗೆ ಎಲ್ಲಾದರೂ ಉಲ್ಲೇಖ ಇದ್ದೋ ?. ತಿಳಿಸಿ. ಈಗೀಗ ಪೇಟೆಗಳಲ್ಲಿ ಆರಾರು ದೊಡ್ಡವು (ಪುಡಾರಿಗೊ) ಸತ್ತರೆ ಕೂಗಲೆ ಬಾಡಿಗ್ಗೆ ಜೆನವೂ ಸಿಕ್ಕುತ್ತು.
ನಾವು ಒಂದನೇ ಅಧ್ಯಾಯಲ್ಲಿ ಓದಿದ ಪ್ರಕಾರ (https://oppanna.com/lekhana/samskara-lekhana/garuda-puraana/garudapurana-ch01-part03) ಜೀವಾತ್ಮ ಈ ಶರೀರವ ಬಿಟ್ಟಿಕ್ಕಿ ಹೋಪದು ಮರಣ. ಮರಣದ ಬಳಿಕ ಯಮದೂತರು ಪಾಶಂದ ಬಂಧಿಸಿ ಎರಡು ವಾ ಮೂರು ಮುಹೂರ್ತ ಅವಧಿಯೊಳ ಯಮನೆದುರು ಹಾಜರುಪಡಿಸಿ ಮತ್ತೆ ಯಮನ ಆಜ್ಞೆಪ್ರಕಾರ ಮತ್ತೆ ಇತ್ತಂದಾಗಿ ಅದೇ ವೇಗಲ್ಲಿ ಕರ್ಕೊಂಡು ತಂದು ಬಿಡ್ತವು. ಮನುಷ್ಯ ಲೋಕದ ವಾಸನೆಂದ ಬದ್ಧನಾದ ಆ ಜೀವಿ ಇನ್ನೊಂದು ದೇಹವ ಪ್ರವೇಶಿಸುಲೆ ಇಚ್ಚ್ಹಿಸುತ್ತ°. ಆದರೆ ಯಮದೂತರ ಪಾಶಲ್ಲಿ ಬಂಧಿಸಿಪ್ಪದರಿಂದ ಅದು ಎಡಿಗಾಗದ್ದೆ ಹಶು ಆಸರಂದ ಬಳಲುತ್ತ°. ಹಿಂತಿರುಗಿ ಬಂದ ಜೀವಾತ್ಮ ಹನ್ನೆರೆಡು ದಿನಗಳ ಪರ್ಯಂತ ಇಲ್ಲಿದ್ದು ಹದಿಮೂರನೇ ದಿನಂದ ಅವನ ಪರಲೋಕ ಯಾತ್ರೆ ಹೆರಡುತ್ತ°. ಅದಕ್ಕಾಗಿ ಮಗನಿಂದ ದಶದಿನ ಪರ್ಯಂತ ನಿತ್ಯ ಪಿಂಡ ತರ್ಪಣ ಕೊಡಲ್ಪಡೆಕು. ಅದರಿಂದ ಆ ಜೀವಾತ್ಮಕ್ಕೆ ಸೂಕ್ಷ್ಮ ಪ್ರೇತ ಶರೀರ ಪ್ರಾಪ್ತಿಯಾಗಿ ಈ ಆಹಾರಂದ ಶರೀರ ಬಲಗೊಳ್ಳುತ್ತು. ಆ ಪ್ರೇತಾತ್ಮಂಗೆ ಈ ನಿತ್ಯಪಿಂಡ ದೊರಕುಸುವ ಉದ್ದೇಶಂದ ನಿತ್ಯ ತೆಂಕಂತಾಗಿ ದೀಪ ಹೊತ್ತುಸಿ ಮಡುಗೆಕು, ಪಾತ್ರಲ್ಲಿ ಹಾಲು ನೀರು ಮಡಿಗೆ ಅದಕ್ಕೆ ಒಂದು ಅರಶಿನಕೊಂಬು ಬೆಳಿ ನೂಲಿಲ್ಲಿ ಕಟ್ಟಿ ನೇಲ್ಸಿ ಆ ದಾರದ ಮೂಲಕ ಬಂದು ಈ ನೀರು-ಹಾಲು ತೆಂಕಂಬದು ಹೇಳ್ವ ಸೂಚಕವಾಗಿ ಈ ರೀತಿ ಮಾಡುವದಾಗಿ ಶಾಸ್ತ್ರ.
ವಿಷಯ ಪ್ರಸ್ತಾಪಿಸಿದ್ದಕ್ಕೆ ಹರೇ ರಾಮ ವೆಂಕಟ ಭಾವ.
ವಿಷಯವ ಸವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದ. ಹರೇ ರಾಮ.