Oppanna.com

ಶ್ಲೋಕವ ಅರ್ಥಮಾಡಿಗೊಂಬದು ಹೇಂಗೆ ?

ಬರದೋರು :   ಚೆನ್ನೈ ಬಾವ°    on   13/10/2012    7 ಒಪ್ಪಂಗೊ

ಚೆನ್ನೈ ಬಾವ°

ಆಯಾ ಭಾಷೆಯ ಸೌಂದರ್ಯ ಇಪ್ಪದು ಆಯಾ ಭಾಷಾ ಸಾಹಿತ್ಯಲ್ಲಿಯೇ. ಅದರ ಆಯಾ ಭಾಷೇಲಿ ಆಸ್ವಾದಿಸಿದರಷ್ಟೇ ಅದರ ನಿಜ ಮಾಧುರ್ಯ ಸಿಕ್ಕುವದು. ಭಾಷೆ ಗೊಂತಿಲ್ಲದ್ದಿಪ್ಪಗ ಭಾಷಾಂತರಿಸಿ ಅರ್ಥಮಾಡಿಗೊಂಬದು ತಪ್ಪಲ್ಲ. ಅರ್ಥಮಾಡಿಗೊಂಡಮತ್ತೆ ಮೂಲಭಾಷೆಲಿ ಆಸ್ವಾದುಸಲೆ ಮತ್ತಷ್ಟು ಮಾಧುರ್ಯ ಇಪ್ಪದು ಸುಳ್ಳಲ್ಲ.

ನವಗೆ ಕೆಲವು / ಹಲವು ಶ್ಲೋಕಂಗೊ ಗೊಂತಿರುತ್ತು. ಚಂದಕ್ಕೆ ಹೇಳ್ಳೂ, ಹಾಡ್ಳೂ ಅರಡಿತ್ತು. ಆದರೆ ಅರ್ಥ ಗೊಂತಿಪ್ಪ ಶ್ಲೋಕಂಗೊ ಇಂತಿಷ್ಟೇ ಹೇದು ಹೇಳ್ತದರ್ಲಿ ನಾಚಿಕೆ ಮಾಡ್ಳೆ ಎಂತ್ಸೂ ಇಲ್ಲೆ. ಅರ್ಥ ಆಗದ್ರ ಅರಡಿತ್ತವರತ್ರೆ ಕೇಳಿ ಅರ್ಥ ಮಾಡ್ತದರ್ಲಿ ನಾಮೋಸು ಮಾಡ್ಳೂ ಏನಿಲ್ಲೆ.

ಹಾಂಗಾರೆ ಒಂದು ಶ್ಲೋಕವ ನೋಡಿರೆ ಅದರ ಅರ್ಥಮಾಡಿಗೊಳ್ಳೆಕ್ಕಾದ್ದು ವಿಷಯ ಹೇಳಿ ಆತು. ಶ್ಲೋಕವ ಅರ್ಥಮಾಡ್ತದು ಹೇಳಿರೆ ಹೇಂಗೆ? ಅದಕ್ಕೆ ಕೆಲವು ಸ್ಟೆಪ್ಸು ಇದ್ದಡ. ಅದೆಂತರ ಹೇದು ಒಂದು ಚೂರು ಇಲ್ಲಿ ನೋಡುವೋ°.

ಶ್ಲೋಕದ ಒಂದು ಸಾಲು – “ಕೃಷ್ಣಂ ವಂದೇ ಜಗದ್ಗುರುಮ್”. ಇದು ಸುಲಾಭ ಇದ್ದು. ಸಾಮಾನ್ಯ ಭಾಷಾಜ್ಞಾನ ಅಥವಾ ಶಬ್ದ ಅರ್ಥ ಜ್ಞಾನ ಇದ್ದರೆ ‘ಜಗದ್ಗುರು ಕೃಷ್ಣನ ವಂದಿಸುತ್ತೆ’ ಹೇಳಿ ಮೇಲ್ಮೈ ಅರ್ಥಮಾಡಿಗೊಂಬಲಾವ್ತು.

ಇನ್ನೂ ಧೈರ್ಯಮಾಡಿ ಒಂದು ಹಂತ ಮುಂದೆಹೋಗಿ ಪ್ರಯತ್ನ ಮಾಡಿರೆ ಶ್ಲೋಕದ ಅರ್ಥವ ತಿಳ್ಕೊಂಬಲೆ ಸುಲಭ ಆವ್ತು ಹೇದು ತಿಳುದೋರು ಹೇಳುತ್ತವು. ಅದೇಂಗೆ?

ಅದಕ್ಕೆ ಒಂದು ಶ್ಲೋಕವ ಓದಿದ ಕೂಡ್ಳೆ, ಮದಾಲು ಶ್ಲೋಕದ ‘ಪದಚ್ಛೇದ’ ಮಾಡೆಕ್ಕಡ. ಪದಚ್ಛೇದ ಹೇಳಿ ಪದವ ತುಂಡು ತುಂಡಾಗಿ ಕತ್ತರುಸುವದಲ್ಲ. ಅರ್ಥ ಇಪ್ಪಾಂಗೆ, ಅರ್ಥ ಬಪ್ಪಾಂಗೆ, ಶ್ಲೋಕಲ್ಲಿ ಹೇಳಿಪ್ಪಾಂಗೆ ಪದವಿಂಗಡುಸುವದು – ‘ಪದಚ್ಛೇದ’. ಇದಕ್ಕೆ ಶಬ್ದಂಗಳ ರಜಾ ಪರಿಚಯ ಅಗತ್ಯ ಬೇಕು. ಮತ್ತೆ ಅದರಲ್ಲಿಪ್ಪ ಕ್ರಿಯಾಪದವ (ಕ್ರಿಯಾಪದಂಗಳ) ಗಮನುಸೆಕಡ. ಮತ್ತೆ ನಾಮಪದ, ಕರ್ತೃ, ವಿಶೇಷಣ, ವಿಶೇಷ್ಯ, ಸಂಧಿ, ಸಮಾಸ, ಅಲಂಕಾರ, ಉಪಮೆ ಇತ್ಯಾದಿ ಗೊಂತಿರೆಕಡ. ಮತ್ತೆ ಕ್ರಿಯಾಪದಕ್ಕೆ, ಕರ್ತೃವಿಂಗೆ ಕಃ, ಕಿಂ, ಕೀದೃಶಂ, ಕಿಮರ್ಥಂ.. ( ಆರು, ಎಂತರ, ಎಂತಕೆ ..) ಇತ್ಯಾದಿ ಪ್ರಶ್ನೆ ಮಾಡಿಗೊಂಡು ನೋಡಿರೆ ಅನ್ವಯರೂಪಲ್ಲಿ ಉತ್ತರ ಸಿಕ್ಕುತ್ತು. ಶ್ಲೋಕಾರ್ಥ ತಿಳುದಾಂಗೆ ಆವ್ತು. ಇದು ಸರಿಯಾಗಿ ವ್ಯಾಕರಣಪೂರ್ವಕ ಅರ್ಥಮಾಡಿಗೊಂಬವಕ್ಕೆ. ನವಗೆ ಅಷ್ಟಿಲ್ಲದ್ದರೂ ಸರಳವಾಗಿ ಶ್ಲೋಕಾರ್ಥ ಅರ್ಥ ಮಾಡಿಗೊಂಬಲೆ ಸಂಧಿ, ಸಮಾಸ, ಉಪಮೆ, ಅಲಂಕಾರಂಗಳ ತಲಗೆ ಅರಯದ್ದೆ ಸುಲಾಭಲ್ಲಿ ಶ್ಲೋಕಾರ್ಥ ಮಾಡಿಗೊಂಬದು ಹೇಂಗೆ ಹೇಳ್ವದರ ಇಲ್ಲಿ ರಜಾ ನೋಡುವೋ°. ನಾವು ಬೈಲಿಲಿ ಭಗವದ್ಗೀತೀಯ ಓದುಸ್ಸು ಅದೇ ಕ್ರಮಲ್ಲಿ ಅಪ್ಪೋ!.

ಮಹಾಕವಿ ಕಾಳಿದಾಸ ಬರದ ‘ರಘುವಂಶ’ ಕಾವ್ಯದ ಪ್ರಥಮ ಶ್ಲೋಕವ ಇಲ್ಲಿ ತೆಕ್ಕೊಂಬೊ. ಕಾಳಿದಾಸ ಎಂತ ಅದ್ಭುತ ಕವಿ ಹೇಳ್ಸು ಬೈಲಿಲಿ ನವಗೆ ಹಲವು ಸರ್ತಿ ಮಾತಾಡಿ ರಜಾ ಗೊಂತಿದ್ದು. ಕಾಳಿದಾಸನ ಶುದ್ಧಿ ಬಂದಮತ್ತೆ ಬೋಸಬಾವನೂ ಬೈಲಿಲಿ ತಿರುಗುತ್ಸು ರಜಾ ಕಮ್ಮಿ ಆಯ್ದಡ. ಕಾರಣ ಬೋಸಬಾವ ತಪಸ್ಸಿಂಗೆ ಕೂಯ್ದಾ ಹೇದು ಒಂದು ಹೊಡೆಲಿ ಶುದ್ದಿ. ಇರ್ಲಿ.

‘ರಘುವಂಶ’ದ ಪ್ರಥಮ ಶ್ಲೋಕ – 

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ ।
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ॥

ಈಗ ಎಂತಮಾಡೆಕು ? – ‘ಪದಚ್ಛೇದ’ –

ವಾಕ್-ಅರ್ಥ-ಇವ ಸಂಪೃಕ್ತೌ ವಾಕ್-ಅರ್ಥ ಪ್ರತಿಪತ್ತಯೇ ।
ಜಗತಃ ಪಿತರೌ ವಂದೇ ಪಾರ್ವತೀ-ಪರಮೇಶ್ವರೌ ॥

ಇನ್ನು ಈಗ ಕ್ರಿಯಾಪದ ಹುಡ್ಕೆಕು –

ಇಲ್ಲಿ ‘ವಂದೇ’ – ವಂದಿಸುತ್ತೆ ಹೇಳ್ವದು ಕ್ರಿಯಾಪದ. ವಂದೇ (ವಂದಿಸುತ್ತೆ) ಹೇಳಿರೆ  ಅಹಂ ವಂದೇ [(ಆನು ವಂದಿಸುತ್ತೆ – (ಕರ್ತೃ ಸಿಕ್ಕಿತ್ತು)] ಹೇಳಿಯೇ ಅರ್ಥ. ಹಾಂಗಾಗಿ ಕಃ ವಂದೇ? (ಆರು ವಂದಿಸುತ್ತೆ?) ಹೇಳಿ ಪ್ರಶ್ನೆ ಮಾಡ್ತ ಕ್ರಮ ಇಲ್ಲೆ.  ಆಂಗ್ಲಭಾಷೆಲಿ ಹೇಳ್ತಾಂಗೆ ಅದು ಅಂಡರ್ಸ್ಟುಡ್ (ಸ್ವಯಂ ತಿಳ್ಕೊಂಬದು) ಅಥವಾ ನಾವೇ ಸೇರ್ಸಿಗೊಂಡರೆ ಆತು.

ಈಗ ಅಹಂ ವಂದೇ (ಆನು ವಂದಿಸುತ್ತೆ) ಹೇಳಿ ತೀರ್ಮಾನ ಆತು. ಇನ್ನೀಗ ಆರ ವಂದಿಸುತ್ತೆ? (ಕಂ ವಂದೇ?) ಹೇಳಿ ಪ್ರಶ್ನೆ ಹಾಕುವೋ°. ಅಂಬಗ ಕರ್ಮಪದವೂ ಸಿಕ್ಕುತ್ತು. ಇಲ್ಲಿ ಪಾರ್ವತೀಪರಮೇಶ್ವರೌ [ ಪಾರ್ವತೀಂ+ಪರಮೇಶ್ವರಂ = ಪಾರ್ವತೀಪರಮೇಶ್ವರೌ (ದ್ವಿತೀಯಾವಿಭಕ್ತಿ ದ್ವಿವಚನ) ಹೇಳಿ ಹೇಳಿದ್ದ° ಕಾಳಿದಾಸ°. ಹಾಂಗಾಗಿ “ಅಹಂ ಪಾರ್ವತೀಪರಮೇಶ್ವರೌ ವಂದೇ” – ಆನು ಪಾರ್ವತೀಪರಮೇಶ್ವರರ ವಂದಿಸುತ್ತೆ ಹೇಳಿ ಆತು. (ಕರ್ಮಪದವೂ ಸಿಕ್ಕಿತ್ತು)

ಇನ್ನು ಅಲ್ಲಿ ಬಾಕಿ ಇಪ್ಪದು ಎಂತರ ಹೇದು ನೋಡುವೋ°. ಈ ಪಾರ್ವತೀಪರಮೇಶ್ವರರು ಆರು? (ಕೌ ಪಾರ್ವತೀಪರಮೇಶ್ವರೌ?) ಅವರ ಪರಿಚಯದ ಬಗ್ಗೆ ಎಂತ ಹೇಳಿದ್ದ°? – ಜಗತಃ ಪಿತರೌ (ಪ್ರ.ವಿ. ದ್ವಿ.ವ) .

ಪಾರ್ವತೀಪರಮೇಶ್ವರೌ [ಪಾರ್ವತೀ ಪರಮೇಶ್ವರರು (ಪ್ರ.ವಿ. ದ್ವಿ.ವ)] ಜಗತಃ ಪಿತರೌ (ಜಗತ್ತಿನ ಅಬ್ಬೆ-ಅಪ್ಪ°). ಜಗತ್ತಿನ ಅಬ್ಬೆ-ಅಪ್ಪ° ಆಗಿಪ್ಪ ಪಾರ್ವತೀಪರಮೇಶ್ವರರು. ಹಾಂಗಾಗಿ ಈಗ

“ಅಹಂ ಜಗತಃ ಪಿತರೌ ಪಾರ್ವತೀಪರಮೇಶ್ವರೌ ವಂದೇ” – ‘ಆನು ಜಗತ್ತಿನ ಅಬ್ಬೆ-ಅಪ್ಪಯಾಗಿಪ್ಪ ಪಾರ್ವತೀಪರಮೇಶ್ವರರ ವಂದಿಸುತ್ತೆ’ ಹೇಳಿ ತೀರ್ಮಾನ ಆತು.

ಇನ್ನೀಗ ಹೇಂಗಿಪ್ಪ ಪಾರ್ವತೀ-ಪರಮೇಶ್ವರರು? ಅವರ ವಿಶೇಷಣ ಎಂತ ಹೇಳಿ ವರ್ಣಿಸಿದ್ದ° ಕವಿ ಹೇಳಿ ಪ್ರಶ್ನೆ ಮಾಡೇಕು. ಅವು ಹೇಂಗಿಪ್ಪವು? – ಕೀದೃಶೌ ಪಾರ್ವತೀಪರಮೇಶ್ವರೌ?  (ಪ್ರಥಮಾವಿಭಕ್ತಿ ದ್ವಿವಚನ).

ವಾಗರ್ಥಾವಿವ ಸಂಪೃಕ್ತೌ – ವಾಕ್-ಅರ್ಥಃ ಇವ ಸಂಪೃಕ್ತೌ – ಶಬ್ದ(ಮಾತು/ನುಡಿ) ಮತ್ತೆ ಅರ್ಥ ಸಂಯೋಗ ಇಪ್ಪಂತೆ. (ಇವ = ಯಥಾ = ಇಪ್ಪ ಹಾಂಗೇ). ನಾವಿಲ್ಲಿ ಈಗ ಬರೇ ಶ್ಲೋಕಾರ್ಥ ಮಾತ್ರ ನೋಡ್ತಕಾರಣ ಇಲ್ಲಿಗೆ ಸಂಧಿ, ಸಮಾಸ, ಉಪಮೆ ಅಲಂಕಾರ ಇತ್ಯಾದಿಗಳ ಕೈಬಿಡುವೋ. ನಾವು ಬಾಯಿಲಿ ಹೇಳುವ ಪ್ರತಿಯೊಂದು ಮಾತು (ವಾಕ್) ವಾ ಪದ/ಶಬ್ದ ಅರ್ಥಂದ ಕೂಡಿಯೇ ಹೊರಬತ್ತು. ಅರ್ಥಸಹಿತವಾಗಿಯೇ ಮಾತು ಉಚ್ಚರಿಸಲ್ಪಡುತ್ತು. ಪ್ರತಿಯೊಂದು ಮಾತಿಂಗೂ (ಪದಕ್ಕೂ) ಇದಕ್ಕೆ ಇದು ಅರ್ಥ ಹೇಳಿ ಪ್ರತ್ಯೇಕ ಹೇಳ್ಳೆ ಇಲ್ಲೆ. ಹಾಂಗಾಗಿ ‘ಮಾತು’ ಮತ್ತೆ ‘ಅರ್ಥ’ ಸಂಯೋಗಗೊಂಡಿಪ್ಪದು (ಒಟ್ಟಿಂಗೇ ಕೂಡಿಪ್ಪದು = ಸಂಪೃಕ್ತೌ). ಹಾಂಗಾಗಿ ಅದು ವಾಕ್ ಮತ್ತು ಅರ್ಥ ಸಂಯೋಗಗೊಂಡಿಪ್ಪಂತೆ (ಇವ ಸಂಪೃಕ್ತೌ = ಇವ ಸಂಯುಕ್ತೌ = ಹಾಂಗೆ ಸಂಯೋಗಗೊಂಡಿಪ್ಪಂತೆ). ಕಃ? (ಆರು?)  – ಪಾರ್ವತೀಪರಮೇಶ್ವರೌ.

ಹಾಂಗಾರೆ ಈಗ

‘ಅಹಂ ವಾಗರ್ಥಾವಿವ ಸಂಪೃಕ್ತೌ ಜಗತಃ ಪಿತರೌ ಪಾರ್ವತೀಪರಮೇಶ್ವರೌ ವಂದೇ’ ಹೇಳಿ ಅರ್ಥ ಸಿಕ್ಕಿತ್ತು.

ಈಗಿನ್ನು ಅಲ್ಲಿ ಇಪ್ಪ ಬಾಕಿ ಎಂತರ ಅದು? –  ‘ವಾಕ್-ಅರ್ಥ ಪ್ರತಿಪತ್ತಯೇ’.

ಕಃ ಕಂ ವಂದೇ, ಕೀದೃಶಂ ತಂ ವಂದೇ  ( ಆರು ಆರ ಹೇಂಗಿಪ್ಪವನ ವಂದಿಸುತ್ತೆ ಹೇಳ್ವ ಉತ್ತರ ಸಿಕ್ಕಿತ್ತು.) ಇನ್ನೀಗ ಎಂತದಕ್ಕೆ ಬೇಕಾಗಿ (ಕಿಮರ್ಥಂ?) ಹೇಳಿ ಒಂದು ಪ್ರಶ್ನೆ ಹಾಕುವೋ°. ಅದಕ್ಕೆ ಉತ್ತರ ಅಲ್ಲಿ ಹೇಳಿದ್ದವು –

‘ವಾಕ್-ಅರ್ಥ ಪ್ರತಿಪತ್ತಯೇ’ ( ಮಾತಿನ ಅರ್ಥವ ತಿಳ್ಕೊಂಬಲೆ, ಸಾಧುಸಲೆ, ಸಿದ್ಧಿಸಲೆ – ‘ಪ್ರಾಪ್ತಯೇ’, ‘ತನ್ನಿಮಿತ್ಥಮ್’, ‘ತಸ್ಮೈ’ – ಅದಕ್ಕಾಗಿ).

ಅಂಬಗ ಕಾರಣವೂ ಸಿಕ್ಕಿತ್ತು. ಈಗ ಎಲ್ಲವನ್ನೂ ಸೇರಿಸಿ ಅನ್ವಯಮಾಡಿರೆ

‘ಅಹಂ ವಾಗರ್ಥಪ್ರತಿಪತ್ತಯೇ ವಾಗರ್ಥಾವಿವ ಸಂಪೃಕ್ತೌ ಜಗತಃ ಪಿತರೌ ಪಾರ್ವತೀಪರಮೇಶ್ವರೌ ವಂದೇ’ ‘ಆನು ಮಾತು ಮತ್ತು ಮಾತಿನ ಅರ್ಥವ ತಿಳ್ಕೊಂಬ ಶಕ್ತಿಗೋಸ್ಕರ ಮಾತು-ಅರ್ಥ ಒಟ್ಟಿಂಗಿಪ್ಪ ಹಾಂಗೇ (ಉಪಮೆ) ಇಪ್ಪ ಜಗತ್ತಿನ ಅಬ್ಬೆ-ಅಪ್ಪ°ರಾದ ಪಾರ್ವತೀಪರಮೇಶ್ವರರ ವಂದಿಸುತ್ತೆ’.

ನಾವಿಲ್ಲಿ ಈ ಶ್ಲೋಕಾರ್ಥವ ಹಂತ ಹಂತವಾಗಿ ಅರ್ಥಮಾಡಿಗೊಂಡದು ಹೇಂಗೆ –
ವಂದೇ
ಅಹಂ ವಂದೇ
ಅಹಂ ಪಾರ್ವತೀಪರಮೇಶ್ವರೌ ವಂದೇ
ಅಹಂ ಜಗತಃ ಪಿತರೌ ಪಾರ್ವತೀಪರಮೇಶ್ವರೌ ವಂದೇ
ಅಹಂ ವಾಗರ್ಥಾವಿವ ಸಂಪೃಕ್ತೌ ಜಗತಃ ಪಿತರೌ ವಂದೇ
ಅಹಂ ವಾಗರ್ಥ ಪ್ರತಿಪತ್ತಯೇ ವಾಗರ್ಥಾವಿವ ಸಂಪೃಕ್ತೌ ಜಗತಃ ಪಿತರೌ ಪಾರ್ವತೀಪರಮೇಶ್ವರೌ ವಂದೇ ।

ಕಾಳಿದಾಸ° ಬಹುಬುದ್ಧಿವಂತ°!. ಸುರುವಾಣ ಗೆರೆಲಿ ವಾಕ್-ಅರ್ಥಃ ಹೇಳಿ ಸ್ತ್ರೀ ಪುರುಷ ನಮೂದಿಸಿದ್ದ° . ಅದನ್ನೇ ಅನುಸರಿಸಿ ಎರಡನೇ ಗೆರೆಲಿಯೂ ಪಾರ್ವತೀಪರಮೇಶ್ವರೌ ಹೇಳಿ ಸ್ತ್ರೀ ಪುರುಷ ಪದಪ್ರಯೋಗ ಮಾಡಿದ್ದ°!.

ಇನ್ನೂ ಸೂಕ್ಷ್ಮವಾಗಿ ನೋಡಿರೆ –

ಪಾರ್ವತೀಪರಮೇಶ್ವರೌ = ಪಾರ್ವತೀ + ಪರಮೇಶ್ವರಃ (ಪಾರ್ವತೀ + ಪರಮೇಶ್ವರ°).
ಪಾರ್ವತೀಪರಮೇಶ್ವರೌ = [ಪಾರ್ವತೀ + ಪಃ + ರಮೇಶ್ವರಃ (ರಮಾಯಾಃ ಈಶ್ವರಃ)]   

  ಹಾಂಗೆ, ‘ವಾಕ್-ಅರ್ಥ ಒಟ್ಟಿಂಗೆ ಇಪ್ಪ ಹಾಂಗೇ ಪರಮೇಶನೂ ರಮೇಶನೂ ಒಟ್ಟಿಂಗೇ ಇಪ್ಪದು’ ಹೇಳ್ವ ತತ್ವವನ್ನೂ ಬಿಗುದ್ದ°!.

ಹೇಂಗೆ…. ಈಗ ಒಂದು ಕೆಣಿಲಿ ಪಿಡಿ ಸಿಕ್ಕಿತ್ತಿಲ್ಲಿಯೋ?. ಅಡಿಗೆಂದ ತೊಡಗಿ, ಪದ್ಯಪೂರಣ, ಗೀತೆಯವರೆಂಗೆ ಒಂದರ ಓದಿದಮತ್ತೆ ಒಂದು ಅಭ್ಯಾಸಪ್ರಯೋಗವನ್ನೂ ಮಾಡಿ ನೋಡುವದು ನಮ್ಮ ಕ್ರಮ ಅಪ್ಪೋ. ಹಾಂಗಾಗಿ, ಇನ್ನೊಂದು ಸಣ್ಣ ಸರಳ ಶ್ಲೋಕವ ಅಭ್ಯಾಸಮಾಡಿ ನೋಡ್ತೀರೋ –

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ ।
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥

 ಇದು ಅತೀ ಸುಲಭ ಇದ್ದು ಹೇಳಿ ಕಾಣುತ್ತರೆ ಇನ್ನೊಂದು ಪ್ರಯತ್ನಮಾಡಿ ನೋಡ್ಳಕ್ಕು –

ಮನಸ್ತೇ ಪಾದಾಬ್ಜೇ ನಿವಸತು ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ ।
ತವ ಧ್ಯಾನೇ ಬುದ್ಧಿರ್ನಯನಯುಗಳಂ  ಮೂರ್ತಿವಿಭವೇ
ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ ॥

ಗೊಂತಿಪ್ಪಷ್ಟು, ಅರ್ಥ ಅವ್ತಷ್ಟು ಪ್ರಯತ್ನಮಾಡ್ಳಕ್ಕು. ಗೊಂತಿಲ್ಲದ್ದರ ಹತ್ರೆ ಗೊಂತಿಪ್ಪವರತ್ರೆ ಕೇಳ್ಳಕ್ಕು. ಬೈಲಿಂಗೆ ಬಂದಮತ್ತೆ ಆರೂ ದೂರ ಹೇಳಿ ಆವ್ತಿಲ್ಲೆ ಅಲ್ಲದಾ. ಶಬ್ದಾರ್ಥಕ್ಕೆ ಶಬ್ದಕೋಶ ನೋಡಿರಾತು ಅದರ್ಲ್ಲಿ ಇಲ್ಲದ್ರೆ www.spokensanskrit.de ನೋಡಿರಾತು. ಅಲ್ಲಿಯೂ ಸಿಕ್ಕದ್ರೆ ನಮ್ಮ ಡಾ.ಮಹೇಶಣ್ಣ ಹೇಂಗೂ ಇದ್ದವನ್ನೇ.

““““

 

 

7 thoughts on “ಶ್ಲೋಕವ ಅರ್ಥಮಾಡಿಗೊಂಬದು ಹೇಂಗೆ ?

  1. ಮೇಲಿನ ಬರಹದಲ್ಲಿ “ಮನವರಿಕೆಯಾಗುವ೦ತೆ” ಮತ್ತು ಕೊಲ್ಲುವವರ ಸೇನೆ ಎ೦ದು ದಯವಿಟ್ಟು ಓದಿಕೊಳ್ಳುವುದು

  2. ನಾನು ಕನ್ನಡಿಗ, ಹವ್ಯಕ ಕನ್ನಡ ಬಾರದಿದ್ದರೂ ಅರ್ಥ ಮಾಡಿಕೊಳ್ಳಲು ಸುಲಭ; ಸಾಕಷ್ಟು ಹೆಗ್ಡೇರು ಭಟ್ರು ಭಾಗವತರು ಹಾಸ್ಯಗಾರ್ರು ಸ್ಸ್ನೇಹಿತರಿದ್ದಾರೆ. ಚೆನ್ನೈ ಭಾವ ಬರೆದ ಕನ್ನಡ ಸ೦ಸ್ಕೃತ ತಪ್ಪಿಲ್ಲದ ಒಪ್ಪ ಬರವಣಿಗೆ ಮನವರಿಕೆಯಾಗುವ್೦ತೆ ಬರೆವ ಶೈಲಿ ನನ್ನನ್ನು ಭಾವುಕನನ್ನಾಗಿ ಮಾಡಿತು. ಈ ದಿನಗಳಲ್ಲಿ ದಕ್ಷಿಣ ಕರ್ನಾಟಕದವರ ಹಕಾರಗೆಟ್ಟ ಅಲ್ಪಪ್ರಾಣಿ ಕನ್ನಡ, ಉತ್ತರ ಕರ್ನಾಟಕದ ಅರ್ಥವೇ ಇಲ್ಲದ ಬರವಣಿಗೆ (ನಮ್ಮನಿಮ್ಮ೦ತೆ ಸಮಾನ್ಯರದ್ದು, ಸಾಹಿತಿಗಳದ್ದಲ್ಲ) ಕನ್ನಡ ಕೊಳ್ಳುವವರ ಸೇನೆಗಳಿ೦ದ ಆಚೆ ಬ೦ದು ಅವಲೋಕಿಸಿದಾಗ ಈ ರೀತಿಯ ಎಲೆ ಮರೆಯ ಕಾಯಿಗಳು ದೊರಕಿದರೆ ಆಗುವ ಸ೦ಸ ಹೇಳಲಸದಳ. ತು೦ಬಾ ಸ೦ತೋಷವಾಯಿತಪ್ಪ ನಿಮ್ಮ ಪಾ೦ಡಿತ್ಯ

  3. ಮುಸುಂಬಿ ಸಿಪ್ಪೆ ತೆಗೆದು,ಎಸಳು ಬಿಡಿಸಿ,ಬಿತ್ತು ತೆಗೆದು ತಿರುಳು ತಿನ್ನಿಸುವ ಹಾಂಗೆ,ಚೆನ್ನೈ ಭಾವ ಶ್ಲೋಕವ ಬಿಡಿಸಿದ್ದವು.
    ನಮೋ ನಮಃ

  4. ಒಳ್ಳೆ ಮಾಹಿತಿ. ಪಾಠ ಮಾಡಿದ ಹಾಂಗೇ ಆಉ. ಧನ್ಯವಾದಂಗೊ

    ಕರ + ಅರವಿಂದೇನ+ಪದ+ಅರವಿಂದಂ+ಮುಖ+ಅರವಿಂದೇ+ವಿನಿವೇಶಯಂತಂ
    ವಟಸ್ಯ ಪತ್ರಸ್ಯ +ಪುಟೇ +ಶಯಾನಂ + ಬಾಲಂ +ಮುಕುಂದಂ +ಮನಸಾ + ಸ್ಮರಾಮಿ

    ಅಹಂ ಬಾಲಂ ಮುಕುಂದಂ ಮನಸಾ ಸ್ಮರಾಮಿ (ಆನು ಆರ ಸ್ಮರಿಸುತ್ತೆ?)
    ಅಹಂ ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ (ಅವ° ಎಂತ ಮಾಡ್ತಾ ಇದ್ದ?)
    ತಾವರೆಯ ಹಾಂಗಿಪ್ಪ ಕೈಲಿ ,ತಾವರೆ ಹಾಂಗಿಪ್ಪ ಕಾಲಿನ ಹಿಡುದು,ತಾವರೆ ಹಾಂಗಿಪ್ಪ ಬಾಯಿ ಒಳಂಗೆ ಮಡುಗಿಂಡು, ಗೋಳಿ ಮರದ ಎಲೆಯ ಮೇಗೆ ಮನುಗಿಂಡಿಪ್ಪ ಬಾಲ ಮುಕುಂದನ ಆನು ಸ್ಮರಣೆ ಮಾಡ್ತೆ

  5. ಬಹು ಉಪಯುಕ್ತ ಲೇಖನ ಭಾವಾ.. ಧನ್ಯವಾದ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×