Oppanna.com

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 41 – 50

ಬರದೋರು :   ಚೆನ್ನೈ ಬಾವ°    on   05/04/2012    9 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ವ್ಯವಸಾಯಾತ್ಮಿಕಾ ಬುದ್ಧಿಃ ಏಕೇಹ ಕುರುನಂದನ ।
ಬಹುಶಾಖಾ ಹ್ಯನಂತಾಶ್ಚ ಬುದ್ಧಯೋsವ್ಯವಸಾಯಿನಾಮ್ ॥೪೧॥

ಪದವಿಭಾಗ

ವ್ಯವಸಾಯ-ಆತ್ಮಿಕಾ ಬುದ್ಧಿಃ ಏಕಾ ಇಹ ಕುರು-ನಂದನ । ಬಹು-ಶಾಖಾಃ ಹಿ ಅನಂತಾಃ ಚ ಬುದ್ಧಯಃ ಅವ್ಯವಸಾಯಿನಾಮ್ ॥

ಅನ್ವಯ

ಹೇ ಕುರು-ನಂದನ!, ಇಹ ವ್ಯವಸಾಯ-ಆತ್ಮಿಕಾ ಏಕಾ ಬುದ್ಧಿಃ । ಅವ್ಯವಸಾಯಿನಾಂ ಹಿ ಬುದ್ಧಯಃ ಅನಂತಾಃ ಬಹು-ಶಾಖಾಃ ಚ ॥

ಪ್ರತಿಪದಾರ್ಥ

ಹೇ ಕುರುನಂದನ! – ಏ ಕುರುವಂಶದ ಪ್ರಿಯ ಮಗನೇ!, ಇಹ – ಈ ಜಗತ್ತಿಲ್ಲಿ, ವ್ಯವಸಾಯ-ಆತ್ಮಿಕಾ – ಕೃಷ್ಣಪ್ರಜ್ಞೆಲಿ ದೃಢನಿಶ್ಚಯ ಇಪ್ಪವನದ್ದು, ಏಕಾ – ಒಂದೇ ಒಂದು, ಬುದ್ಧಿಃ – ಬುದ್ಧಿ, ಅವ್ಯವಸಾಯಿನಾಮ್ – ಕೃಷ್ಣಪ್ರಜ್ಞೆಲಿ ಇಲ್ಲದಿಪ್ಪವರ, ಹಿ – ನಿಜವಾಗಿಯೂ, ಬುದ್ಧಯಃ – ಬುದ್ಧಿಶಕ್ತಿಗೊ, ಅನಂತಾಃ – ಅಪರಿಮಿತವಾದ್ದು, ಬಹುಶಾಖಾಃ – ಅನೇಕ ಶಾಖೆಗಳಿಪ್ಪದು, ಚ – ಕೂಡ

ಅನ್ವಯಾರ್ಥ

ಈ ಮಾರ್ಗಲ್ಲಿ ಇಪ್ಪವ್ವು ದೃಢಸಂಕಲ್ಪ ಹೊಂದಿರುತ್ತವು ಮತ್ತು ಅವಕ್ಕೆ ಒಂದೇ ಒಂದು ಗುರಿ. ಪ್ರಿಯ ಕುರುನಂದನನೇ, ನಿಶ್ಚಯ ಸ್ವಭಾವವಿಲ್ಲದ್ದವರ ಬುದ್ಧಿಗೆ ಅನೇಕ ಶಾಖೆಗೊ ಇರುತ್ತು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಂದ ಮನುಷ್ಯ° ಬದುಕಿನ ಅತ್ಯುನ್ನತ ಪರಿಪೂರ್ಣತೆಯ ಪಡೆಯಬಹುದೆಂಬ ದೃಢವಿಶ್ವಾಸಕ್ಕೆ ವ್ಯವಸಾಯಾತ್ಮಿಕಾ ಬುದ್ಧಿ ಹೇಳಿ ಹೇಳುವದು. ಶ್ರದ್ಧೆ ಹೇಳಿರೆ ಭವ್ಯವಾದ ವಿಷಯವೊಂದರಲ್ಲಿ ಅಚಲ ನಂಬಿಕೆ. ಮನುಷ್ಯ° ಕೃಷ್ಣಪ್ರಜ್ಞೆಯ ಕರ್ತವ್ಯಲ್ಲಿ ನಿರತನಾಗಿಪ್ಪಗ ಸಂಸಾರದ ಸಂಪ್ರದಾಯಂಗೊ, ಮಾನವ ಕುಲ ಅಥವಾ ರಾಷ್ಟ್ರೀಯತೆ ಇಂತಹ ಐಹಿಕ ಜಗತ್ತಿನ ಕರ್ತವ್ಯಂಗೊಕ್ಕಾಗಿ ಕೆಲಸ ಮಾಡೆಕ್ಕಾದ್ದಿಲ್ಲೆ. ಹಿಂದಾಣ ಒಳ್ಳೆಯ ವಾ ದುಷ್ಟಕಾರ್ಯಂಗೊಕ್ಕೆ ವ್ಯಕ್ತಿಯು ತೋರುವ ಪ್ರತಿಕ್ರಿಯೆಗಳ ಫಲವೇ, ಫಲಾಪೇಕ್ಷೆಯಾದ ಕರ್ಮ. ಮನುಷ್ಯ° ಕೃಷ್ಣಪ್ರಜ್ಞೆಲಿ ಜಾಗೃತನಾಗಿಪ್ಪಗ ತನ್ನ ಕರ್ಮಂಗಳ ಒಳ್ಳೆಯ ಫಲಂಗೊಕ್ಕೆ ಶ್ರಮಿಸೆಕ್ಕಾದ್ದಿಲ್ಲೆ. ಮನುಷ್ಯ° ಕೃಷ್ಣಪ್ರಜ್ಞೆಲಿ ಸ್ಥಿರನಾಗಿಪ್ಪಗ ಅವನ ಎಲ್ಲ ಕೆಲಸಕಾರ್ಯಂಗೊ ಒಳ್ಳೇದು ಮತ್ತು ಕೆಟ್ಟದ್ದು ಎಂಬ ದ್ವಂದ್ವಕ್ಕೆ ಒಳಗಾವ್ತನಿಲ್ಲೆ. ಎಲ್ಲ ಕೆಲಸ ಕಾರ್ಯಂಗೊ ಒಂದು ಪರಾತ್ಪರ ಮಟ್ಟಲ್ಲೇ ಇರುತ್ತು. ಕೃಷ್ಣಪ್ರಜ್ಞೆಯ ಅತ್ಯುನ್ನತ ಪರಿಪೂರ್ಣತೆ ಹೇಳಿರೆ ಬದುಕಿನ ಐಹಿಕ ಕಲ್ಪನೆಯ ತೊರವದು. ಕೃಷ್ಣಪ್ರಜ್ಞೆಲಿ ಮುಂದುವರಿತ್ತಾಂಗೆ ಈ ಸ್ಥಿತಿಯ ತಂತಾನೇ ತಲುಪಲೆಡಿಗು. ಕೃಷ್ಣಪ್ರಜ್ಞೆಲಿ ನೆಲೆಸಿದವನ ದೃಢಸಂಕಲ್ಪಕ್ಕೆ ಜ್ಞಾನವೇ ಆಧಾರ. ‘ವಾಸುದೇವಃ ಸರ್ವಂ ಇತಿ ಸ ಮಹಾತ್ಮಾ ಸು ದುರ್ಲಭಃ’ , ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ ಹೇಳಿರೆ, ವಾಸುದೇವ (ಕೃಷ್ಣನೇ) ಎಲ್ಲ ವ್ಯಕ್ತ ಕಾರಣಂಗೊಕ್ಕೆ ತಾಯಿಬೇರು ಹೇಳಿ ಸಂಪೂರ್ಣವಾಗಿ ಅರಿತಿಪ್ಪ ದುರ್ಲಭನಾದ ಒಳ್ಳೆಯ ಆತ್ಮ. ಮರದ ಬೇರಿಂಗೆ ನೀರೆರೆದರೆ ತಾನಾಗಿಯೇ ಎಲೆಗೊಕ್ಕೂ, ಕೊಂಬೆಗೊಕ್ಕೂ ನೀರು ಲಭ್ಯ ಅಪ್ಪಂತೆ ಕೃಷ್ಣಪ್ರಜ್ಞೆಲಿ ಕೆಲಸ ಮಾಡುವದರಿಂದ ಮನುಷ್ಯ° ತನಗೂ, ಸಂಸಾರಕ್ಕೂ, ಸಮಾಜಕ್ಕೂ, ದೇಶಕ್ಕೂ, ಮನುಕುಲಕ್ಕೂ ಎಲ್ಲೋರಿಂಗೂ ಅತ್ಯುನ್ನತ ಸೇವೆಯ ಸಲ್ಲುಸಲೆಡಿಗು. ಮನುಷ್ಯನ ಕಾರ್ಯಂದ ಪರಮಾತ್ಮಂಗೆ ತೃಪ್ತಿ ಆದರೆ, ಎಲ್ಲೋರಿಂಗೂ ತೃಪ್ತಿಯಾವ್ತು.  

ಪರಮಾತ್ಮನ ಪ್ರತಿನಿಧಿಯಾದ ಗುರುವಿನ ಸಮರ್ಥ ಮಾರ್ಗದರ್ಶನಲ್ಲಿ ಕೆಲಸ ಮಾಡುವದೇ ಕೃಷ್ಣಪ್ರಜ್ಞೆಯಲ್ಲಿನ ಸೇವೆಯ ಅತ್ಯುತ್ತಮ ಅನುಷ್ಠಾನ. ಇಂತಹ ಗುರುವಿಂಗೆ ಶಿಷ್ಯನ ಸ್ವಭಾವವು ತಿಳುದಿರುತ್ತು. ಕೃಷ್ಣಪ್ರಜ್ಞೆಲಿ ಕರ್ಮನಿರತನಾಗುವಂತೆ ಶಿಷ್ಯಂಗೆ ಗುರು ಮಾರ್ಗದರ್ಶನ ನೀಡಬಲ್ಲ°. ಕೃಷ್ಣಪ್ರಜ್ಞೆಲಿ ಪ್ರವೀಣನಪ್ಪಲೆ ಮನುಷ್ಯ° ದೃಢವಾಗಿ ಕೆಲಸ ಮಾಡೇಕು ಮತ್ತು ಕೃಷ್ಣ ಪ್ರತಿನಿಧಿಗೆ (ಗುರುವಿಂಗೆ) ವಿಧೇಯನಾಗಿರೇಕು. ಗುರುವಿನ ಮಾರ್ಗದರ್ಶನದಂತೆ ನಡವದೇ ಅವನ ಬದುಕಿನ ಮಹುದುದ್ಧೇಶ ಅಗಿರೆಕು. ಗುರುವಿಂಗೆ ಸಂತೃಪ್ತಿ ಆದರೆ ದೇವೋತ್ತಮ ಪರಮ ಪುರುಷಂಗೆ ಸಂತೃಪ್ತಿಯಾವ್ತು. ಇಡೀ ಈ ಪ್ರಕ್ರಿಯೆಯು ದೇಹದ ಕಲ್ಪನೆಯ ಮೀರಿದ ಪರಿಪೂರ್ಣವಾದ ಆತ್ಮಜ್ಞಾನವ ಅವಲಂಬಿಸಿಗೊಂಡಿದ್ದು. ಈ ಜ್ಞಾನದ ಊಹೆಯು ಸ್ವರೂಪದ್ದಾಗಿಪ್ಪಲಾಗ., ಅನುಷ್ಠಾನ ರೂಪದ್ದಾಗಿರೇಕು. ಕಾಮ್ಯಕರ್ಮಲ್ಲಿ ಪ್ರಕಟವಪ್ಪ ಇಂದ್ರಿಯ ತೃಪ್ತಿಗೆ ಅವಕಾಶವೇ ಇಪ್ಪಲಾಗ. ಸ್ಥಿರಚಿತ್ತ ಇಲ್ಲದ್ದವ ಹಲವು ಬಗೆಯ  ಫಲಾಕಾಂಕ್ಷಿ ಕರ್ಮಂಗಳಿಂದ ಮಾರ್ಗಭ್ರಷ್ಟನಾವುತ್ತ°.

ಆದ್ದರಿಂದ, ನಾವು ಮಾಡುವ ಸಾಧನೆ ಏಕನಿಷ್ಥೆಲಿ ಇರೇಕು. ಏಕನಿಷ್ಠೆಂದ ನಾವು ಮಾಡುವ ಸಾಧನೆ ವ್ಯರ್ಥ ಆವ್ತಿಲ್ಲೆ ಹೇಳಿ ಈ ಮೊದಲೇ ವಿವರಿಸಿದ್ದು. ಆದರೆ, ಏಕನಿಷ್ಠೆಲಿ ಯಾವುದು ಸರಿ ಯಾವುದು ತಪ್ಪು ಎಂಬುದರ ತಿಳಿವದು ಹೇಂಗೆ ? ಎಲ್ಲಾ ಕಾಲಲ್ಲಿಯೂ ನಿರ್ಣಾಯಕವಾದ ಮಾತು ಏಕರೂಪದ್ದಾಗಿರುತ್ತು. ನಿರ್ಣಯ ಇಲ್ಲದ್ದೆ ಆಡುವ ಮಾತು ಒಂದೊಂದು ಒಂದೊಂದು ತರ. ಗೊಂತಿಲ್ಲದ್ದೆ ಅಜ್ಞಾನಂದ ಆಡುವ ಮಾತುಗೊ ತಲೆಬುಡ ಇಲ್ಲದ್ದ ಅನಂತ ಶಾಖೆಗೊ. ಆದರೆ, ನಿಜವಾಗಿ ತಿಳುದವರ ನಿರ್ಣಾಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತು.  ಹಾಂಗಾಗಿ ನಾವು ಏವತ್ತೂ ಸತ್ಯವ ತಿಳುದವರ ಮಾರ್ಗದರ್ಶನದಂತೆ ನಡೆಕು. 

ಶ್ಲೋಕ

ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ ।
ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ ॥೪೨॥

ಕಾಮಾತ್ಮಾ ನಃ ಸ್ವರ್ಗಪರಾ ಜನ್ಮ ಕರ್ಮಫಲಪ್ರದಾಮ್ ।
ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ ॥೪೩॥

ಭೋಗೈಶ್ವರ್ಯಪ್ರಸಕ್ತಾನಾಂ ತಯಾಪಹೃತಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ ॥೪೪॥

ಪದವಿಭಾಗ

ಯಾಮ್ ಇಮಾಮ್ ಪುಷ್ಪಿತಾಂ ವಾಚಮ್ ಪ್ರವದಂತಿ ಅವಿಪಶ್ಚಿತಃ । ವೇದ-ವಾದ-ರತಾಃ ಪಾರ್ಥ ನ ಅನ್ಯತ್ ಅಸ್ತಿ ಇತಿ ವಾದಿನಃ ॥

ಕಾಮ-ಆತ್ಮಾನಃ ಸ್ವರ್ಗ-ಪರಾಃ ಜನ್ಮ-ಕರ್ಮ-ಫಲ-ಪ್ರದಾಮ್ । ಕ್ರಿಯಾ-ವಿಶೇಷ-ಬಹುಲಾಮ್ ಭೋಗ-ಐಶ್ವರ್ಯ-ಗತಿಮ್ ಪ್ರತಿ ॥

ಭೋಗ-ಐಶ್ವರ್ಯ-ಪ್ರಸಕ್ತಾನಾಮ್ ತಯಾ ಅಪಹೃತ-ಚೇತಸಾಮ್ । ವ್ಯವಸಾಯ-ಆತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ ॥

ಅನ್ವಯ

ಹೇ ಪಾರ್ಥ!, ವೇದ-ವಾದ-ರತಾಃ, ಅನ್ಯತ್ ನ ಅಸ್ತಿ ಇತಿ ವಾದಿನಃ, ಅವಿಪಶ್ಚಿತಃ, ಕಾಮ-ಆತ್ಮನಃ, ಸ್ವರ್ಗ-ಪರಾಃ, ಭೋಗ-ಐಶ್ವರ್ಯ-ಗತಿಂ ಪ್ರತಿ ಕ್ರಿಯಾ-ವಿಶೇಷ-ಬಹುಲಾಂ ಜನ್ಮ-ಕರ್ಮ-ಪ್ರದಾಂ  ಯಾಂ ಇಮಾಂ ಪುಷ್ಪಿತಾಂ ವಾಚಂ ಪ್ರವದಂತಿ, ತಯಾ ಅಪಹೃತ-ಚೇತಸಾಂ ಭೋಗ-ಐಶ್ವರ್ಯ-ಪ್ರಸಕ್ತಾನಾಂ ಬುದ್ಧಿಃ ವ್ಯವಸಾಯ-ಆತ್ಮಿಕಾ ಭೂತ್ವಾ ಸಮಾಧೌ ನ ವಿಧೀಯತೇ ॥

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನೇ!, ವೇದ-ವಾದ-ರತಾಃ – ವೇದಂಗಳ ಅನುಯಾಯಿ ಎಂದೆಣಿಸಿಗೊಂಡವು, ಅನ್ಯತ್ – ಬೇರೆ ಏವುದೂ,   ನ ಅಸ್ತಿ  – ಎಂದಿಂಗೂ ಇಲ್ಲೆ, ಇತಿ –  ಹೇದು, ವಾದಿನಃ – ವಾದಿಸುವವು,  ಅವಿಪಶ್ಚಿತಃ – ಅಲ್ಪಜ್ಞಾನಿಗಳಾದ , ಕಾಮ-ಆತ್ಮಾನಃ – ಇಂದ್ರಿಯತೃಪ್ತಿಯ ಅಪೇಕ್ಷಿಸುವವು, ಸ್ವರ್ಗ-ಪರಾಃ – ಸ್ವರ್ಗವ ಸಾಧುಸುವ ಗುರಿಯುಳ್ಳವು, ಭೋಗ-ಐಶ್ವರ್ಯ-ಗತಿಮ್  – ಇಂದ್ರಿಯಾನುಭವಲ್ಲಿ ಐಶ್ವರ್ಯಲ್ಲಿ ಪ್ರಗತಿಯ, ಪ್ರತಿ – ಕುರಿತಾಗಿ, ಕ್ರಿಯಾ-ವಿಶೇಷ-ಬಹುಲಾಮ್ –  ಕ್ರಿಯಾವಿಶೇಷ ಆಚರಣೆಗಳ ವೈಭವಯುಕ್ತ ಬಾಹುಳ್ಯ ಇಪ್ಪ, ಜನ್ಮ-ಕರ್ಮ-ಫಲ-ಪ್ರದಾಮ್ – ಉತ್ತಮ ಜನ್ಮ ಮತ್ತು ಇತರ ಕಾಮ್ಯಫಲಂಗಳಲ್ಲಿ ಪರಿಣಮಿಸುವ, ಯಾಮ್ ಇಮಾಮ್  – ಈ ಎಲ್ಲ, ಪುಷ್ಪಿತಾಮ್ – ಹೂವಿನ ಹಾಂಗಿಪ್ಪ, ವಾಚಮ್ – ಮಾತುಗಳ, ಪ್ರವದಂತಿ – ಹೇಳುತ್ತವೋ, ತಯಾ ಅಪಹೃತ ಚೇತಸಾಮ್ – ಅಂತವುಗಳಿಂದ ಚಿತ್ತ ಅಪಹೃತವಾದವರ (ಚಿತ್ತಭ್ರಮಣೆ ಹೊಂದಿದವರ), ಭೋಗ-ಐಶ್ವರ್ಯ-ಪ್ರಸಕ್ತಾನಾಮ್ – ಭೌತಿಕ ಭೋಗ ಐಶ್ವರ್ಯಕ್ಕೆ ಆಸಕ್ತರಾದವರ, ಬುದ್ಧಿಃ – ಬುದ್ಧಿ, ವ್ಯವಸಾಯ-ಆತ್ಮಿಕಾ ಭೂತ್ವಾ – ದೃಢಸಂಕಲ್ಪವಿಪ್ಪ ಭಗವಂತನ ಭಕ್ತಿಸೇವೆಯವೆಯಾಗಿದ್ದುಗೊಂಡು,  ಸಮಾಧೌ – ನಿಯಂತ್ರಿತ ಮನಸ್ಸಿಲ್ಲಿ,  ನ ವಿಧೀಯತೇ – ಉಂಟಾವುತ್ತಿಲ್ಲೆ.

ಅನ್ವಯಾರ್ಥ

ಏ ಪಾರ್ಥನೇ!, ಅಲ್ಪಜ್ಞಾನಿಗಳಾದವು ವೇದಂಗಳಲ್ಲಿನ ಅಲಂಕಾರದ ಮಾತುಗೊಕ್ಕೆ ಮೋಹಗೊಳ್ಳುತ್ತವು. ಈ ಮಾತುಗೊ ಸ್ವರ್ಗಲೋಕಪ್ರಾಪ್ತಿ, ಒಳ್ಳೆಯ ಜನ್ಮ, ಅಧಿಕಾರ ಮುಂತಾಗಿ ಹಲವಾರು ಕಾಮ್ಯಕರ್ಮಂಗಳ ಪ್ರಶಂಸಿಸಿ  ಹೇಳುತ್ತು. ಇಂದ್ರಿಯ ತೃಪ್ತಿ ಮತ್ತು ಭೋಗಜೀವನಂಗಳ ಬಯಸಿ ಇವಕ್ಕಿಂತ ಉತ್ತಮವಾದ್ದು ಏನೂ ಇಲ್ಲೆ ಹೇಳಿ ಅವ್ವು ಹೂವಿನ ಆಕರ್ಷಣೆ ಹಾಂಗೆ ಹೇಳುತ್ತವು.  ಭೌತಿಕ ಭೋಗ ಮತ್ತೆ ಪ್ರಾಪಂಚಿಕ ಸಂಪತ್ತುಗಳ ಆಸಕ್ತಿಯಿಪ್ಪೋರಿಂಗೆ ಮತ್ತು ಇಂತಹ ವಿಷಯಂಗಳಿಂದ ಬುದ್ಧಿ ಭ್ರಮಣೆಗೊಂಡವರಲ್ಲಿ ಭಕ್ತಿಸೇವಗೆ ಬುದ್ಧಿ ದೃಢಸಂಕಲ್ಪಲ್ಲಿ ಇರ್ತಿಲ್ಲೆ

ತಾತ್ಪರ್ಯ / ವಿವರಣೆ

ಅರೆಬರೆ ತಿಳುದವು ವೇದಂಗಳಲ್ಲಿನ ಅರ್ಥವ ತಿಳಿಯದ್ದೆ ಅದರಲ್ಲಿಪ್ಪ ಕರ್ಮಭಾಗವ ಪ್ರಶಂಸಿಸಿ ಇದರಿಂದ ಆಚಿಗೆ ಹೆಚ್ಚಿನದ್ದು ಬೇರೇನೂ ಇಲ್ಲೆ ಹೇಳಿ ಹೇಳುತ್ತವು. ಸ್ವರ್ಗವನ್ನೇ ಗುರಿಯಾಗಿಟ್ಟುಗೊಂಡು ತಮ್ಮ ಕರ್ಮಂಗೊಕ್ಕೆ ಪ್ರತಿಫಲವ ಅಪೇಕ್ಷಿಸುತ್ತಾ ನಾನಾವಿಧ ಭೋಗಂಗೊಕ್ಕೆ ಬೇಕಾಗಿ ವಿವಿಧ ಕರ್ಮಂಗಳ ಮಾಡುತ್ತವು. ಆರು ಭೋಗ ಐಶ್ವರ್ಯಲ್ಲಿಯೇ ಆಸಕ್ತಿ ಹೊಂದಿರುತ್ತವೋ ಅವು ದೃಢಬುದ್ಧಿಯ ಕಳಕ್ಕೊಂಡು ಸಮಧಾನವನ್ನೇ ಕಳಕ್ಕೊಳ್ಳುತ್ತವು.

ಬನ್ನಂಜೆಯ ಈ ಮೇಗಾಣ ಮೂರು ಶ್ಲೋಕಂಗಳ ಸುಂದರವಾಗಿ ವಿವರುಸುತ್ತವು.- “ಮೇಲಾಣ ಮೂರು ಶ್ಲೋಕಂಗೊ ಅತ್ಯಂತ ಮುಖ್ಯವಾದ್ದು. ಹೆಚ್ಚಿನೋರಿಂಗೆ ಇದು ಅರ್ಥವೇ ಆಗದ್ದೆ ಈ ಶ್ಲೋಕವ ಟೀಕೆ ಮಾಡುವವೂ ಇದ್ದವು!. ಪ್ರಾಚೀನ ಗ್ರಂಥಂಗಳಲ್ಲಿ, ವೇದಂಗಳಲ್ಲಿ, ಶ್ರುತಿಗಳಲ್ಲಿ ಕೇವಲ ಅಧ್ಯಾತ್ಮವಲ್ಲದ್ದೆ ಅನೇಕ ಲೌಕಿತ ವಿಷಯಂಗೊ ತುಂಬಿಗೊಂಡಿದ್ದು. ಬರೇ ವೇದ ಗ್ರಂಥಂಗಳ ಓದಿ ಅದರ ಸಾರವ ತಿಳ್ಕೊಂಬಲೆ ಸಾಧ್ಯ ಇಲ್ಲೆ. ಕೃಷ್ಣ° ಹೇಳುತ್ತ° – ವೇದವಾದಿಗೊ ವೇದದ ಮೇಲ್ನೋಟದ ಅರ್ಥವೆಂಬ ಹೂವ ಕಿತ್ತು ತೆಕ್ಕೊಂಡು ಆಳವಾದ ಜ್ಞಾನಸಾಗರ ಎಂಬ ಹಣ್ಣಿಂದ ವಂಚಿತರಾವ್ತವು. ವೇದವ ಆಳವಾಗಿ ಸಾರವತ್ತಾಗಿ ಅರ್ಥಮಾಡಿಕೊಳ್ಳದ್ದೆ, ಕೇವಲ ಮೇಲ್ನೋಟದ ಅರ್ಥಲ್ಲೇ ನಿಂದು ವೇದವೆಂದರೆ ಇಷ್ಟೇ ಹೇಳುವವವು ವೇದವಾದರು. ಹೇಳಿರೆ , ವೇದದ ಅರ್ಥವ ತಿಳಿಯದ್ದೇ ಅದರ ಬಗ್ಗೆ ವಾದ ವಿವಾದ ಮಾಡುವವು. ವೇದವ ಬಾಯಿಪಾಠ ಮಾಡಿ ಅದ್ರ ಅರ್ಥ ತಿಳಿಯದ್ದೆ ಮಾತಾಡುವವು. ಇವು ವೇದ ಸಾಗರದ ಮೇಲ್ಮೈಲಿ ಈಜುವವು. ಇದರ ತಳಭಾಗಲ್ಲಿ ಮುತ್ತು ರತ್ನಂಗಳಿದ್ದು ಎಂಬ ಅರಿವಿಲ್ಲದ್ದವ್ವು. ಅದರ ಸರಿಯಾದ ಅರ್ಥವ ಮನಗಾಣದ್ದೆ ತಪ್ಪು ಕಲ್ಪನೆ ಮಾಡಿಗೊಂಡು ಇತರರಿಂಗೂ ಅದನ್ನೇ ಹೇಳುವವು. ಇದು ನರಕ್ಕಕ್ಕೆ ನೇರ ದಾರಿ. ಪೌರೋಹಿತ್ಯ ಕೂಡ ಹೀಂಗೆ. ನಿಜವಾದ ಜ್ಞಾನ ಇಲ್ಲದ್ದೆ, ಮಂತ್ರದ ಅರ್ಥ ಗೊಂತಿಲ್ಲದ್ದೆ ಪೌರೋಹಿತ್ಯ ಮಾಡುವದೂ ಅಪಾಯಕಾರಿ. ಪೌರೋಹಿತ್ಯ ಎಂಬುದು ಒಂದು ಜವಾಬ್ದಾರಿಯುತ ಕೆಲಸ. ಒಬ್ಬ ಮನುಷ್ಯನ ಪಾಪವ ಪರಿಹರಿಸಿ ಅವನ ಎತ್ತರಕ್ಕೇರುಸೆಕ್ಕಾರೆ ಪೌರೋಹಿತ್ಯ ಮಾದುತ್ತವನೂ ಕೂಡ ಎತ್ತರಲ್ಲಿರೇಕು. ವೇದ ಮಂತ್ರದ ರಹಸ್ಯ ತಿಳುದವನಾಗಿರೇಕು. ವೇದದ ಅಂತರಂಗದ ಅರ್ಥ ತಿಳಿಯದ್ರೆ ಅಲ್ಲವೂ ಅಪಾರ್ಥ ಆವ್ತು. ಆರು ಪ್ರಾಚೀನ ಗ್ರಂಥಂಗಳ ಮೇಲ್ನೋಟದ ಅರ್ಥವ ಹೇಳಿ ಸಮಾಜಕ್ಕೆ ಬೋಧನೆ ಮಾಡುತ್ತವೋ ಅವ್ವು ‘ಅವಿಪಶ್ಚಿತರು’. ‘ವಿಪಶ್ಚಿತರು’ ಹೇಳಿರೆ,  ಜ್ಞಾನ ಸ್ವರೂಪವಾದ ಆತ್ಮ ಕಂಡವು, ಆತ್ಮಜ್ಞಾನಿಗೊ. ಅವಿಪಶ್ಚಿತರು ಶಾಸ್ತ್ರಕ್ಕೆ ಮೇಲ್ನೋಟದ ಅರ್ಥವ ಹೇಳುವವು – ಮೂಢರು. ಈ ಮಾತು ಪ್ರತಿಯೊಂದು ಧರ್ಮಗ್ರಂಥಂಗಳಲ್ಲಿಯೂ ಇದ್ದು. ಬೈಬಲ್ ನಲ್ಲಿ ಇದರ ಗೂಡಾರ್ಥ ಹೇಳಿ ಹೇಳುತ್ತವು. ಕುರಾನಿಲ್ಲಿ ಕೂಡ ಈ ಬಗ್ಗೆ ಎಚ್ಚರದ ನುಡಿ ಇದ್ದು.  “There are Sentences that are clear in meaning and there are Sentences that are susceptible of different interpretations”. ಇದು ಕುರಾನಿಲ್ಲಿ ಬಪ್ಪ ಒಂದು ನುಡಿ. ಎಲ್ಲಾ ಪ್ರಾಚೀನ ಅನುಭವ ಸಾಹಿತ್ಯಲ್ಲಿ ಈ ಎಚ್ಚರ ಕೊಟ್ಟಿದವು. ಪ್ರಾಚೀನ ಗ್ರಂಥಂಗೊ ಹೇಳಿರೆ ಒಂದು ತರ ಒಗಟಿನ ಹಾಂಗೆ. ಅದರ ಮೇಲ್ನೋಟದ ಅರ್ಥವ ಮಾತ್ರ ನೋಡಿರೆ ಅಸಂಗತವಾವ್ತು. ಆ ರೀತಿಯ ಒಗಟಿನ ಭಾಷೆಯ (mystical language) ಭಾಷೇಲಿ ಇಪ್ಪದು. ವೇದವ ಸಾಂಕೇತಿಕ ಭಾಷೆ ಹೇಳಿ ತಿಳಿಯದ್ದೆ ಅರ್ಥ ಮಾಡಿಗೊಂಡರೆ ಅಧ್ಯಾತ್ಮ ಚಿಂತನೆ ಅನರ್ಥವಾವ್ತು. ಈ ರೀತಿ ತಿಳಿಯದ್ದೇ ಮಾಡುವ ಸಾಧನೆಂದ ಏನೂ ಉಪಯೋಗ ಇಲ್ಲೆ.

ಇಲ್ಲಿ ಒಂದು ಪ್ರಶ್ನೆ ಹುಟ್ಟುತ್ತು. ಅದೆಂತರ ಹೇಳಿರೆ, ಪ್ರಾಚೀನ ಅಧ್ಯಾತ್ಮ ಗ್ರಂಥಂಗೊ ಎಂತಕೆ ಈ ರೀತಿ ಒಗಟಿನ ರೂಪಲ್ಲಿ ಇದ್ದು ?

ತರಗತಿಗೊಂದು ಪಠ್ಯಪುಸ್ತಕ ಇಪ್ಪ ಹಾಂಗೆ ಈ ಗ್ರಂಥಂಗಳ ಹಂತ ಹಂತವಾಗಿ ಅರ್ಥವಪ್ಪ ರೀತಿಲಿ ಏಕೆ ಬರದ್ದವಿಲ್ಲೆ. ಇಲ್ಲಿ ನಾವು ತಿಳ್ಕೊಳ್ಳೆಕ್ಕಾದ ಒಂದು ಪ್ರಾಮುಖ್ಯ ವಿಷಯ ಎಂತರ ಹೇಳಿರೆ, ಈ ಗ್ರಂಥಂಗಳ ತಿಳ್ಕೊಂಬಲೆ ‘ಯೋಗ್ಯತೆ’ ಬೇಕು. ಇಲ್ಲಿ ಪುಸ್ತಕ ಒಂದೆ.  ಆದರೆ, ಆ ಪುಸ್ತಕಲ್ಲಿ ವಿವಿಧ ಹಂತದ ಶಿಕ್ಷಣ ಅಡಗಿದ್ದು. ಈ ವೇದ ಗ್ರಂಥಂಗೊ ಎಂದೂ ಅಯೋಗ್ಯರಿಂಗೆ ದಕ್ಕ. ಅದು ಕೇವಲ ತನ್ನ ಅರ್ತುಗೊಂಬಲೆ, ಅರ್ತು ಸದುಪಯೋಗಪಡಿಸಿಗೊಂಬವನ ಮುಂದೆ ಮಾತ್ರ ತೆರೆದುಕೊಳ್ಳುತ್ತು. ಯೋಗ್ಯನಾದವ ಈ ಗ್ರಂಥದ ಆಳಕ್ಕಿಳುದಷ್ಟೂ ಹೆಚ್ಚು ಹೆಚ್ಚು ವಿಷಯಂಗಳ ತಿಳ್ಕೊಳ್ಳುತ್ತ°. ಒಂದು ಗ್ರಂಥವ ತಿಳ್ಕೊಂಬಲೆ ಅನೇಕ ಜನ್ಮದ ಸುಕೃತ ಸಾಧನೆ ಬೇಕು.

ಶ್ಲೋಕ

ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ ।
ನಿರ್ದ್ವಂದ್ವೋ ನಿತ್ಯಸತ್ತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್ ॥೪೫॥ 

ಪದವಿಭಾಗ

ತ್ರೈಗುಣ್ಯ-ವಿಷಯಾಃ ವೇದಾಃ ನಿಸ್ತ್ರೈಗುಣ್ಯಃ ಭವ ಅರ್ಜುನ । ನಿರ್ದ್ವಂದ್ವಃ ನಿತ್ಯ-ಸತ್ತ್ವಸ್ಥಃ ನಿರ್ಯೋಗಕ್ಷೇಮಃ ಆತ್ಮವಾನ್ ॥

ಅನ್ವಯ

ಹೇ ಅರ್ಜುನ!, ವೇದಾಃ ತ್ರೈಗುಣ್ಯ-ವಿಷಯಾಃ । ತ್ವಂ ನಿಸ್ತ್ರೈಗುಣ್ಯಃ, ನಿತ್ಯಸತ್ತ್ವಸ್ಥಃ, ನಿರ್ದ್ವಂದ್ವಃ, ನಿರ್ಯೋಗಕ್ಷೇಮಃ, ಆತ್ಮವಾನ್ ಭವ॥

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ವೇದಾಃ – ವೈದಿಕ ಸಾಹಿತ್ಯಂಗೊ, ತ್ರೈಗುಣ್ಯ-ವಿಷಯಾಃ – ಭೌತಿಕ ಪ್ರಕೃತಿಯ ಮೂರು ಗುಣಂಗೊಕ್ಕೆ ಸಂಬಂಧಿಸಿದ ವಿಷಯಂಗೊ, ತ್ವಮ್ – ನೀನು, ನಿಸ್ತ್ರೈಗುಣ್ಯಃ – ಪ್ರಕೃತಿಯ ಮೂರು  ಗುಣಂಗೊಕ್ಕೆ ಅತೀತನಾದವ°, ನಿತ್ಯ-ಸತ್ತ್ವಸ್ಥಃ – ಶುದ್ಧ ಆಧ್ಯಾತ್ಮಿಕ ಸ್ಥಿತಿಲಿಪ್ಪವ°, ನಿರ್ದ್ವಂದ್ವಃ – ದ್ವಂದ್ವರಹಿತ°, ನಿರ್ಯೋಗಕ್ಷೇಮಃ – ಲಾಭ ಮತ್ತು ರಕ್ಷಣೆಯ ವಿಚಾರಂಗಳಿಂದ ಮುಕ್ತನಾದವ°, ಆತ್ಮವಾನ್ – ಆತ್ಮನಲ್ಲಿ ಸ್ಥಿರನಾದವ°, ಭವ – ಆಗು.

ಅನ್ವಯಾರ್ಥ

ವೇದಂಗೊ ಬಹುಮಟ್ಟಿಂಗೆ ತ್ರೈಗುಣ್ಯದ ವಿಷಯಂಗಳ ಹೇಳುತ್ತು. ಅರ್ಜುನ, ನೀನು ತ್ರೈಗುಣ್ಯಂಗಳ ಮೀರಿದವನಾಗು, ಎಲ್ಲ ದ್ವಂದ್ವಂಗಳಿಂದ ಮುಕ್ತನಾಗಿರು. ಲಾಭ ಮತ್ತು ಯೋಗಕ್ಷೇಮಂಗಳ ಕುರಿತು ಚಿಂತೆಯಿಲ್ಲದವನಾಗು. ಆತ್ಮನಲ್ಲಿ ನಿಷ್ಠನಾಗು.

ತಾತ್ಪರ್ಯ / ವಿವರಣೆ

ಈವರೇಗೆ ನಾವು ವೇದವ ಹೇಂಗೆ ಅನುಸಂಧಾನ ಮಾಡೇಕು ಹೇಳಿ ಕೃಷ್ಣ° ಹೇಳಿದ್ಸರ ನೋಡಿದ್ದು. ಅದರ ಮೇಲ್ನೋಟದ ಅರ್ಥಂದ ಆಳಕ್ಕೆ ಇಳಿಯೇಕು ಹೇಳಿ ಅರ್ಜುನಂಗೆ ಸ್ಪಷ್ಟಪಡಿಸಿದ್ದ° ಭಗವಂತ ಶ್ರೀಕೃಷ್ಣ. ಇನ್ನು ಅದು ಹೇಂಗೆ ಕಾಣುತ್ತು ಮತ್ತು ಹೇಂಗೆ ನೋಡೆಕು ಎಂಬ ವಿಚಾರ. ಇದು ಒಂದು ರೀತಿಲಿ ಇಡೀ ಅಧ್ಯಾತ್ಮದ ಅನುಸಂಧಾನದ ಪ್ರಮುಖ ವಿಚಾರ. ನವಗೆ ಮೇಲ್ನೋಟಕ್ಕೆ ವೇದ ಸತ್ವ – ತಮ – ರಜ (ತ್ರೈಗುಣ್ಯ) ಸಂಬಂಧಪಟ್ಟ ಪ್ರಾಪಂಚಿಕ ವಿಷಯ ಮತ್ತು ಕೇವಲ ಪ್ರಾಪಂಚಿಕ ಅರ್ಥವನ್ನೇ ಹೇಳ್ತಾಂಗೆ ಕಾಣುತ್ತು. ಕೆಂಪು ಕನ್ನಡಕ ಮಡಿಗಿದವಂಗೆ ಪ್ರಪಂಚವೇ ಕೆಂಪಾಗಿ ಕಾಂಬ ಹಾಂಗೆ. ಇದಕ್ಕೆ ಈಗ ತ್ರೈಗುಣ್ಯವರ್ಜಿತರಾಗಿ ವಿಷಯವ ಮಂಥನ ಮಾಡೆಕ್ಕು, ಮತ್ತು ವಿಷಯದ ನಿಜಸ್ವರೂಪ ಕಾಂಬಲೆ ಪ್ರಯತ್ನಪಡೇಕು. ಆಗ ಮಾತ್ರ ಶುದ್ಧ ಚಿಂತನೆ ಸಾಧ್ಯ. ತ್ರಿಗುಣದ ಬೇಲಿಯ ದಾಂಟದ್ದೆ ಸತ್ಯಶೋಧನೆ ಅಸಾಧ್ಯ. ಅದಕ್ಕೆ ಮನಸ್ಸು ಶುದ್ಧವಾಗಿರೇಕು. ನಾವು ಎಷ್ಟೇ ಅಪವಿತ್ರವಿರಲಿ ಬಾಯಿಲಿ ಭಗವಂತನ ನಾಮ ಸ್ಮರಣೆ, ನಮ್ಮೊಳ ಭಗವಂತ ಇದ್ದ° ಹೇಳ್ವ ಎಚ್ಚರ ನಮ್ಮ ಶುದ್ಧಗೊಳುಸುತ್ತು.

ಧ್ಯಾನ ಮಾಡುವಾಗ ನಮ್ಮ ಮನಸ್ಸು ಹೊರ ಪ್ರಪಂಚದತ್ತ ಸುಳಿಯದ ಹಾಂಗೆ ನೋಡಿಕೊಳ್ಳೆಕ್ಕು. ಮನಸ್ಸು ಸಂಪೂರ್ಣ ಕಾರ್ಯಲ್ಲಿ ಮಗ್ನವಾಗಿರೇಕು. ಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸಾಧನೆ ಆಗಿರೇಕು. ಎಂದೂ ಕಪಟ ವಂಚನೆ ಇಲ್ಲದ್ದ ಧರ್ಮವ ಆಚರುಸೇಕು. ನಮ್ಮ ಮನಸ್ಸಿನ ಶುದ್ಧ ಭಾವ ಚಿಂತನೆಗೆ ಅಣಿಗೊಳುಸೆಕ್ಕು. ನಮ್ಮ ಸ್ವಾರ್ಥದತ್ತ, ಐಹಿಕ ಸುಖ ಇಚ್ಛೆಪಡಲಾಗ. ಆವಾಗ ಮಾತ್ರ ವೇದದ ನಿಜ ತತ್ವವ ತಿಳ್ಕೊಂಬಲೆ ಸಾಧ್ಯ. ನಾವು ಮಾಡುವ ಪ್ರತಿಯೊಂದು ಕರ್ಮ ಪೂಜೆ ಪುರಸ್ಕಾರಂಗಳ ನಿಸ್ವಾರ್ಥವಾಗಿ ಭಗವಂತನ ಆರಾಧನೆ ಹೇದು ಗ್ರೇಶಿ ಮಾಡೆಕ್ಕು. ನವಗೆ ಎಂತರ ಬೇಕು ಹೇಳ್ವದರ ಚಿಂತನೆ ನವಗೆ ಬೇಡ. ನವಗೆ ಅಗತ್ಯ ಇಪ್ಪದರ ನಮ್ಮ ಕರ್ಮಕ್ಕೆ ಅನುಗುಣವಾಗಿ ಭಗವಂತ ಕೊಟ್ಟೇ ಕೊಡುತ್ತ°.  ಈ ರೀತಿ ನಮ್ಮ ಭವಿಷ್ಯದ ಚಿಂತೆಯ ಭಗವಂತಂಗೆ ಒಪ್ಪುಸಿ ಮುನ್ನೆಡದರೆ ಜ್ಞಾನಸಿದ್ಧಿ ಆವ್ತು. 

ಇಲ್ಲದ್ದರ ಪಡವದು ಯೋಗ. ಪಡದ್ದರ ಉಳುಸಿಗೊಂಬದು ಕ್ಷೇಮ. ಲೌಕಿಕವಾದ ಯೋಗ ಕ್ಷೇಮಲ್ಲೇ ನಮ್ಮ ಇಡೀ ಜೀವನ ಕಳದು ಹೋವ್ತು. ಇದರ ಬಿಟ್ಟು ಭಗವಂತ ನವಗೆ ಎಂತ ಕೊಟ್ಟಿದನೋ ಅದರಲ್ಲಿ ಸಂತೋಷವಾಗಿಪ್ಪಲೆ ಅರಡಿಯೇಕು. ನಿರ್ಯೋಗಕ್ಷೇಮದ ಸ್ಥಿತಿಲಿ ಮಾತ್ರ ಸತ್ಯದ ಸಾಕ್ಷಾತ್ಕಾರ ಆವ್ತು. ನಮ್ಮ ಯೋಗಕ್ಷೇಮದ ಹೊಣೆ ಆ ಭಗವಂತನದ್ದು. ಎಲ್ಲಾ ಕಡೆ, ಎಲ್ಲೋರಲ್ಲೂ ಅಂತರ್ಯಾಮಿಯಾಗಿಪ್ಪ ಭಗವಂತ ಎಂದೆಂದೂ ನಮ್ಮ ರಕ್ಷಿಸುತ್ತ° ಎಂಬ ಭರವಸೆಂದ ಭಗವಂತನ ಚಿಂತನೆಗೆ ತೊಡಗೆಕು. ಇದು ಅಧ್ಯಾತ್ಮ ಸಾಧನೆಗೆ ಬೇಕಾದ ಮಾನಸಿಕ ತಯಾರಿ. ಇಂತಹ ಮನಃಸ್ಥಿತಿಲಿ ಯಾವ ಗ್ರಂಥ ಓದಿದರೂ ಅದು ಭಗವಂತನ ಸ್ತುತಿ ಆವ್ತು. ಈ ಮನಃಸ್ಥಿತಿಯ ತಲುಪದ್ದೆ ವೇದಾಂತ ನವಗೆ ಅರ್ಥಮಾಡಿಗೊಂಬಲೆ ಸಾಧ್ಯ ಇಲ್ಲೆ.

ಅಧ್ಯಾತ್ಮ ಮಾರ್ಗಲ್ಲಿ ಸಾಗುವ ವ್ಯಕ್ತಿಯ ಸಾಧನೆ ಎಂತಿರೇಕ್ಕು. ಅಂತರಂಗದ ಅನುಷ್ಠಾನ ಹೇಂಗಿರೆಕ್ಕು ಹೇಳುವದರ ಸ್ಪಷ್ಟಪಡಿಸಿದ ಭಗವಂತ ಕರ್ಮ ಮತ್ತು ಜ್ಞಾನ ಇದರಲ್ಲಿ ಜ್ಞಾನಕ್ಕೇ ಒತ್ತುಕೊಟ್ಟು ಸಾಗೆಕು, ನಮ್ಮ ಯಾವುದೇ ಕ್ರಿಯೆಯ ಅನುಸಂಧಾನ ಜ್ಞಾನದ ಕಡೆಂಗೆ ಪೂರಕವಾಗಿರೇಕು ಹೇದು ಹೇಳುತ್ತ°. ಎಂತಕೆ ಜ್ಞಾನಕ್ಕೆ ಇಷ್ಟೊಂದು ಮಹತ್ವ? ಕರ್ಮಯೋಗಂದ ಮೋಕ್ಷ ಪಡವಲಕ್ಕಲ್ಲದಾ ಎಂಬುದೀಗ ಜಿಜ್ಞಾಸೆ. ಭಗವಂತ ಹೇಳ್ತ°-  ವೇದಲ್ಲಿ ಜ್ಞಾನಕಾಂಡ, ಕರ್ಮಕಾಂಡ ಮತ್ತು ಉಪಾಸನಕಾಂಡ ಹೇದು ಮೂರು ವಿಭಾಗ. ಆದರೆ, ವೇದಕ್ಕೆ ಇಪ್ಪದು ಒಂದೇ ಮುಖ. ಕರ್ಮ ಉಪಾಸನೆ ಎಲ್ಲವುದರ ಹಿಂದೆ ಜ್ಞಾನವೇ ಅಡಗಿಪ್ಪದು. ಎಲ್ಲವೂ ಜ್ಞಾನಕ್ಕೊಸ್ಕರವಾಗಿಯೇ. ಹಾಂಗಾಗಿ ಇಡೀ ವೇದವೇ ಜ್ಞಾನಕಾಂಡ ಹೇದು ಈ ವಿವರಣೆಯ ಬನ್ನಂಜೆಯವರ ವ್ಯಾಕ್ಯಾನಂದ ಹೆರ್ಕಿದ್ದದು.

ಶ್ಲೋಕ

ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ ।
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ ॥೪೬॥

ಪದವಿಭಾಗ

ಯಾವಾನ್ ಅರ್ಥಃ ಉದಪಾನೇ ಸರ್ವತಃ ಸಂಪ್ಲುತ-ಉದಕೇ । ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ ।

ಅನ್ವಯ

ಯಾವಾನ್ ಅರ್ಥಃ ಉದಪಾನೇ (ತಾವಾನ್) ಸರ್ವತಃ ಸಂಪ್ಲುತ-ಉದಕೇ (ಭವತಿ) । (ತಥಾ ಯಾವಾನ್ ಅರ್ಥಃ ) ಸರ್ವೇಷು ವೇದೇಷು ತಾವಾನ್ ವಿಜಾನತಃ ಬ್ರಾಹ್ಮಣಸ್ಯ (ಭವತಿ) ॥

ಪ್ರತಿಪದಾರ್ಥ

ಯಾವಾನ್ – ಯಾವೆಲ್ಲ, ಅರ್ಥಃ – ಉದ್ದೇಶವೋ, ಉದಪಾನೇ – ನೀರಿನ ಬಾವಿಲಿ,  (ತಾವಾನ್ – ಅವೆಲ್ಲ), ಸರ್ವತಃ – ಎಲ್ಲ ಪ್ರಕಾರಂಗಳಲ್ಲಿ, ಸಂಪ್ಲುತ-ಉದಕೇ – ದೊಡ್ಡ ಜಲಾಶಯಲ್ಲಿಯೂ, (ಭವತಿ – ಆವುತ್ತು), (ತಥಾ ಯಾವಾನ್ ಅರ್ಥಃ – ಹಾಂಗೇ ಯಾವೆಲ್ಲ ಉದ್ಧೇಶ)  ಸರ್ವೇಷು ವೇದೇಷು – ಎಲ್ಲ ವೈದಿಕ ಸಾಹಿತ್ಯಂಗಳಲ್ಲಿ, ತಾವಾನ್ – ಅವೆಲ್ಲ, ವಿಜಾನತಃ – ಪೂರ್ಣಜ್ಞಾನಲ್ಲಿ ಇಪ್ಪ, ಬ್ರಾಹ್ಮಣಸ್ಯ ಭವತಿ – ಪರಬ್ರಹ್ಮವ ತಿಳುದವನದ್ದು  (ಬ್ರಹ್ಮಜ್ಞಾನ ಪಡದವಂಗೆ / ಬ್ರಾಹ್ಮಣಂಗೆ) ಆವುತ್ತು.

ಅನ್ವಯಾರ್ಥ

ಒಂದು ಸಣ್ಣ ಬಾವಿ ಮಾಡುವ ಕೆಲಸಂಗಳ ಎಲ್ಲವ ದೊಡ್ಡ ಜಲಾಶಯ ಮಾಡತ್ತು. ಹಾಂಗೆಯೇ, ವೇದಂಗಳ ಒಳ ಉದ್ದೇಶಂಗಳ ತಿಳುದವಂಗೆ (ಬ್ರಹ್ಮಜ್ಞಾನವ ಪಡದವಂಗೆ) ವೇದಂಗಳ ಎಲ್ಲ ಪ್ರಯೋಜನ ಆವುತ್ತು.

ತಾತ್ಪರ್ಯ / ವಿವರಣೆ

ವೈದಿಕ ಸಾಹಿತ್ಯದ ಕರ್ಮಕಾಂಡದ ಭಾಗಲ್ಲಿ ಪ್ರಸ್ತಾಪಿಸಿಪ್ಪ ಎಲ್ಲ ವಿಧಿಗಳ ಮತ್ತು ಯಾಗಂಗಳ ಉದ್ದೇಶವು ಕ್ರಮೇಣ ಆತ್ಮಸಾಕ್ಷಾತ್ಕಾರವ ಗಳುಸುವಂತೆ ಪ್ರೋತ್ಸಾಹಿಸಿದ್ದಾಗಿದ್ದು. ವೇದಂಗಳ ಅಧ್ಯಯನದ ಗುರಿ ಎಲ್ಲ ವ್ಯಕ್ತಿಗಳ ಮೂಲಕಾರಣನಾದ ಶ್ರೀಕೃಷ್ಣನ ತಿಳ್ಕೊಂಬದಾವ್ತು. ಹಾಂಗಾಗಿ, ಆತ್ಮಸಾಕ್ಷಾತ್ಕಾರದ ಅರ್ಥ ಕೃಷ್ಣನ ಅರ್ಥಮಾಡಿಗೊಂಬದು ಮತ್ತು ಅವನತ್ರ ಅನಂತವಾದ ಸಂಬಂಧವ ಪಡವದು.  

ಬನ್ನಂಜೆ ಇದರ ಈ ರೀತಿ ವಿಶ್ಲೇಸಿಸುತ್ತವು –   ಬಾವಿಂದ ಏನೇನು ಉಪಯೋಗ ಆವ್ತೋ ಅದೆಲ್ಲವೂ ತುಂಬಿ ಹರಿವ ದೊಡ್ಡ ಜಲರಾಶಿಂದಲೂ ಆವ್ತು. ಎಲ್ಲಾ ವೇದಂಗಳಿಂದ ಏನು ಫಲವೋ ಅದು ಬ್ರಹ್ಮವ ಬಲ್ಲ ವಿಜ್ಞಾನಿಯ ಫಲಲ್ಲಿ ಒಳಗೊಂಡಿದ್ದು. ಈ ಶ್ಲೋಕದ ಮೇಲ್ಮೈಲಿ ಇಷ್ಟೇ ಅರ್ಥ ಕಾಂಬದಾರೂ, ಇದರ ಗೂಢಾರ್ಥವ ಚಿಂತಿಸೆಕ್ಕಾಗಿದ್ದು. ಒಂದು ಬಾವಿ ತೋಡಿ ಅದರಿಂದ ದೊರಕುವ ನೀರಿಂದ ಏನು ಪ್ರಯೋಜನವೋ, ಆ ಎಲ್ಲಾ ಪ್ರಯೋಜನಂಗಳ ಜೊತಗೆ ಇನ್ನೂ ಅನೇಕಾನೇಕ ಪ್ರಯೋಜನಂಗೊ ತುಂಬಿ ಹರಿವ ನೀರಿನ ನೆಲೆ ಕೊಡುಗು. ಜ್ಞಾನವಿಲ್ಲದ್ದೆ ಕರ್ಮಕಾಂಡವ ಮಾಡುವವನ ಸ್ಥಿತಿ ಮನೆಲಿ ಕಷ್ಟಪಟ್ಟು ಬಾವಿ ತೋಡಿ ಅದರಿಂದ ನೀರು ಸೇದಿದ ಹಾಂಗೇ. ಭಗವಂತನ ಸಾಕ್ಷಾತ್ಕಾರಗೊಳುಸಿಗೊಂಡವನ ಸ್ಥಿತಿ ತುಂಬಿ ಹರಿವ ನೀರಿನ ನೆಲೆಯ ದಡದಲ್ಲಿಪ್ಪಾಂಗೆ. ಅಪರೋಕ್ಷ ಜ್ಞಾನಿ ಎಲ್ಲವುದರಲ್ಲಿಯೂ ಭಗವಂತನ ಕಾಣುತ್ತ. ಬ್ರಹ್ಮಜ್ಞಾನಿ ಸದಾ ನಿರ್ಮಲವಾಗಿ ತುಂಬಿ ಹರಿವ ನೀರಿನ ನೆಲೆಯ ಪಕ್ಕ ನಿಂದುಗೊಂಡಿಪ್ಪವನಾಂಗೆ. ಇಡೀ ವೇದವ ಓದಿ ಕರ್ಮದಲ್ಲೇ ಕೂದುಕೊಂಡವ° ಬೆವರು ಸುರುಸಿ ಬಾವಿಂದ ನೀರು ಎಳೆತ್ತವನ ಹಾಂಗೆ.  ಈ ಶ್ಲೋಕಲ್ಲಿ ‘ಬ್ರಾಹ್ಮಣ’ ಹೇದು ಪದಪ್ರಯೋಗ ಆಯ್ದು. ಇದು ಬರೇ ಜಾತಿ ಸೂಚಿತವಾಗಿಪ್ಪದಲ್ಲ. ಇದು ಬ್ರಹ್ಮತತ್ವವ ಅರ್ಥಮಾಡಿಗೊಂಡವ° ಹೇದು ಅರ್ಥ. ‘ಬ್ರಹ್ಮ’ ಹೇಳಿರೆ ಎಲ್ಲಕ್ಕಿಂತ ದೊಡ್ಡದಾದ್ದು. ಎಲ್ಲಕ್ಕಿಂತ ದೊಡ್ಡದು ವೇದ  ಮತ್ತು ವೇದವೇದ್ಯನಾದ ಭಗವಂತ°. ಹಾಂಗಾಗಿ ವೇದವ ಸರಿಯಾಗಿ ಅರ್ಥಮಾಡಿಗೊಂಡವ°, ವೇದವೇದ್ಯ ಭಗವಂತನ ಸಾಕ್ಷಾತ್ಕರಿಸಿಗೊಂಡವ° – ಬ್ರಾಹ್ಮಣ°.     

ಬ್ರಹ್ಮನ ಅಪರೋಕ್ಷವಾಗಿ ತಿಳುದ ಜ್ಞಾನಿಗೆ ತುಂಬಿ ಹರಿವ ನೀರಿನ ಫಲ, ಕರ್ಮಕಂಗೆ ಬಾವಿಯ ಫಲ. ಶಾಸ್ತ್ರಂದ ವಿಶಿಷ್ಟವಾದ ಅರಿವು ಪಡದ ವಿಜ್ಞಾನಿ ಮಾತ್ರ ಭಗವಂತನ ಕಾಂಬಲೆ ಸಾಧ್ಯ. ಇಲ್ಲಿ ವಿಜ್ಞಾನಿ ಹೇದರೆ ಏವುದೇ ಒಂದು ವಸ್ತುವಿನ ಬಗ್ಗೆ ವಿಶಿಷ್ಟ (ತಳಸ್ಪರ್ಶಿ) ಜ್ಞಾನ ಇಪ್ಪವ° ಹೇದು ಅರ್ಥ.

ಇಲ್ಲಿ ಇನ್ನೊಂದು ಮುಖ್ಯವಿಷಯ – “ಸರ್ವತಃ ಸಂಪ್ಲುತೋದಕ”., ಹೇಳಿರೆ, ನೀರು ತುಂಬಿದ ಸ್ಥಿತಿ. ಇಲ್ಲಿ ನೀರು ಹೇಳಿರೆ ಎಂದರೆ ಪ್ರಳಯ ಜಲ. ಪ್ರಕೃತಿ ಸೂಕ್ಷ್ಮವಾದ ಪರಮಾಣುವಿನ ಸಮುದ್ರ ರೂಪದಲ್ಲಿಪ್ಪ ಕಾಲ – ಪ್ರಳಯಕಾಲ. ಇಂತಹ ಪ್ರಳಯ ಸಮುದ್ರಲ್ಲಿ ಮಲಗಿಪ್ಪವನ ‘ಉದಪಾನ’. ಉತ್+ಅಪ+ಅನ ಹೇದರೆ, ಎಲ್ಲಕ್ಕಿಂತ ಉತ್ಕೃಷ್ಟವಾದ, ಸದಾ ಎಚ್ಚರಂದ ಇಪ್ಪ (ಉತ್), ಎಲ್ಲೊರನ್ನೂ ಪಾಲುಸುವ, ಹಾಂಗೂ ತನಗೆ ಹಿರಿದಾದ ಇನ್ನೊಬ್ಬ ಪಾಲಕನಿಲ್ಲದ ಸರ್ವೋತ್ತಮ (ಅಪ), ಎಲ್ಲರನ್ನೂ ನಿಯಂತ್ರಿಸುವ ಸರ್ವಚೇಷ್ಟಕ (ಅನ). ಈ ತತ್ವದ ಮೂಲಕ ಏನೇನು ಉಪಯೋಗ ಪಡವಲೆಡಿಗೋ ಆ ಉಪಯೋಗವ ಸಮಸ್ತ ವೇದಲ್ಲಿ, ವೇದದ ಒಂದೊಂದು ಮಂತ್ರಲ್ಲಿ, ಮಂತ್ರದ ಒಂದೊಂದು ವಾಕ್ಯಲ್ಲಿ, ವಾಕ್ಯದ ಒಂದೊಂದು ಪದಲ್ಲಿ, ಪದದ ಒಂದೊಂದು ಅಕ್ಷರಲ್ಲಿ ಭಗವಂತನ ಕಾಂಬವ° ಬ್ರಹ್ಮಜ್ಞಾನಿ ಎನಿಸಿಗೊಳ್ತ°. 

ಫಲಕಾಮನೆಂದ ಕರ್ಮಕಾಂಡ ಬೇಡ. ಸಮಗ್ರವೇದವ ಭಗವಂತನ ಚಿಂತನೆಗೆ ಮೀಸಲಿಡಿ ಹೇದು ಭಗವಂತ° ಇಲ್ಲಿ ಹೇದ್ದು ರಜಾ ಗೊಂದಲಕ್ಕೆ ಎಡೆಮಾಡುತ್ತು. ಎಂತಕೆ ಹೇದರೆ, ವೇದದ ಪ್ರತಿಯೊಂದು ಕಡೆಲಿಯೂ ಫಲ ಇದ್ದು ಹೇದು ಹೇಯಿದು. ಅದು ಎಂತ್ಸಕೆ ಅಂಬಗ ಹೇದು ಪ್ರಶ್ನೆ ಮೂಡುತ್ತದು ಸಹಜ. ಈ ಮದಲೇ ಹೇದಾಂಗೆ ಅಧ್ಯಾತ್ಮದ ಪಠ್ಯಪುಸ್ತಕ ಸಾಧನೆಯ ಎಲ್ಲಾ ಹಂತಲ್ಲಿಯೂ ಸಣ್ಣವರಿಂದ ದೊಡ್ಡವರವರೇಂಗೆ ಎಲ್ಲೊರಿಂಗೂ ಒಂದೇ. ಇನ್ನೂ ಸುರೂವಾಣ ಹಂತದಲ್ಲಿಪ್ಪೋರಿಂಗೆ ಏನನ್ನೂ ಬಯಸದೆ ನಿರ್ಲಿಪ್ತರಾಗಿ ಅನುಸರಿಸಿ ಹೇದು ಹೇದರೆ ಅವಕ್ಕೆ ವೇದಾಂತದ ಬಗ್ಗೆ ಆಸಕ್ತಿ ಆದರೂ ಹೇಂಗೆ ಬಕ್ಕು. ಅದಕ್ಕಾಗಿ, ಮಕ್ಕೊಗೆ ಬೆಲ್ಲಕೊಟ್ಟಿಕ್ಕಿ ಔಷಧ ಕುಡುಸುತ್ತಾಂಗೆ ವೇದಂಗಳಲ್ಲಿ ಅಲ್ಲಲ್ಲಿ ಫಲವ ಹೇಳಿದ್ಸು. ಇದು ವೇದಾಭ್ಯಾಸದ ಆರಂಭದ ಹಂತಲ್ಲಿ ಉಪಯುಕ್ತ.

ಹಾಂಗಾರೆ, ಕರ್ಮ ಮಾಡುವಾಗ ನಮ್ಮ ಮನಃಸ್ಥಿತಿ ಹೇಂಗಿರೇಕ್ಕು?. ಮುಂದಾಣ ಶ್ಲೋಕಲ್ಲಿ –

ಶ್ಲೋಕ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋsಸ್ತ್ವಕರ್ಮಣಿ ॥೪೭॥

ಪದವಿಭಾಗ

ಕರ್ಮಣಿ ಏವ ಅಧಿಕಾರಃ ತೇ ಮಾ ಫಲೇಷು ಕದಾಚನ । ಮಾ ಕರ್ಮ-ಫಲ-ಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ ॥

ಅನ್ವಯ

ತೇ ಅಧಿಕಾರಃ ಕರ್ಮಣಿ ಏವ ., ಕದಾಚನ ಮಾ ಫಲೇಷು । ಕರ್ಮ-ಫಲ-ಹೇತುಃ ಮಾ ಭೂಃ ತೇ ಸಂಗಃ (ಚ) ಅಕರ್ಮಣಿ ಮಾ ಅಸ್ತು ॥

ಪ್ರತಿಪದಾರ್ಥ

ತೇ – ನಿನಗೆ, ಅಧಿಕಾರಃ – ಅಧಿಕಾರ, ಕರ್ಮಣಿ – ವಿಹಿತ ಕರ್ತವ್ಯಲ್ಲಿ,  ಏವ – ಖಂಡಿತವಾಗಿಯೂ, ಕದಾಚನ – ಏವತ್ತೂ , ಮಾ ಫಲೇಷು – ಫಲಂಗಳಲ್ಲಿ ಅಲ್ಲ.  ಕರ್ಮ-ಫಲ-ಹೇತುಃ  – ಕರ್ಮದ ಕಾರಣ ಫಲಲ್ಲಿ, ಮಾ ಭೂಃ – ಅಪ್ಪದು ಬೇಡ, ತೇ – ನಿನಗೆ, ಸಂಗಃ (ಚ) – ಆಸಕ್ತಿಯು (ಕೂಡ), ಅಕರ್ಮಣಿ – ವಿಹಿತ ಕರ್ತವ್ಯಂಗಳ ಮಾಡದ್ದಿಪ್ಪದರಲ್ಲಿ, ಮಾ ಅಸ್ತು – ಆಗದೆ ಇರಲಿ.

ಅನ್ವಯಾರ್ಥ

ನಿನಗೆ ನಿಯೋಜಿತ ಕರ್ತವ್ಯಂಗಳ ಮಾಡುವದಕ್ಕಷ್ಟೇ ಅಧಿಕಾರ. ಆದರೆ, ಕರ್ಮಫಲಕ್ಕೆ ನಿನಗೆ ಅಧಿಕಾರ ಇಲ್ಲೆ. ಕರ್ಮ ಫಲಕ್ಕೆ ಕಾರಣ ಹೇಳಿ ನೀನು ಭಾವಿಸೇಡ. ಕರ್ಮವ ಬಿಡೆಕು ಹೇಳಿ ನಿನಗೆ ಮನಸ್ಸಾಗದಿರಲಿ.

ತಾತ್ಪರ್ಯ / ವಿವರಣೆ

ಇಲ್ಲಿ ಮೂರು ವಿಚಾರಂಗೊ. ನಿಯೋಜಿತ ಕರ್ತವ್ಯಂಗೊ, ಮನಬಂದಂತೆ ಮಾಡುವ ಕೆಲಸ ಮತ್ತು ಕರ್ಮ ಮಾಡದ್ದೆ ಇಪ್ಪದು. ಮನುಷ್ಯ ಪಡಕ್ಕೊಂಡ ಪ್ರಕೃತಿಗುಣಂಗೊಕ್ಕೆ ಅನುಗುಣವಾಗಿ ವಿಧಿಸಿದ ಕಾರ್ಯಂಗೊ ನಿಯೋಜಿತ ಕರ್ತವ್ಯಂಗೊ. ಮನಸ್ವೀ ನಡತೆಯ ಕೆಲಸ ಹೇದರೆ ಪ್ರಮಾಣಾಧಿಕಾರದ ಒಪ್ಪಿಗೆಯಿಲ್ಲದ್ದ ಕೆಲಸ. ಕರ್ಮ ಮಾಡದ್ದೇ ಇಪ್ಪದು ಹೇದರೆ ನಿಯೋಜಿತ ಕರ್ತವ್ಯಂಗಳ ಮಾಡದ್ದೆ ಇಪ್ಪದು. ಅರ್ಜುನ ಕರ್ಮವ ಬಿಟ್ಟುಬಿಡಲಾಗ, ಆದರೆ, ತನ್ನ ನಿಯೋಜಿತ ಕರ್ತವ್ಯವ ಫಲದ ಆಸೆಯಿಲ್ಲದ್ದೆ ಮಾಡೇಕ್ಕು ಹೇದು ಭಗವಂತನ ಬೋಧನೆ. ತನ್ನ ಕರ್ಮದ ಫಲಕ್ಕಾಗಿ ಆಸೆ ಪಡುವವ ತನ್ನ ಕರ್ಮದ ಕಾರಣನೂ ಆವುತ್ತ. ಆದ್ದರಿಂದ ಅಂತಹ ಕರ್ಮದ ಫಲಂದ ಸಂತೋಷ ವಾ ದುಃಖಕ್ಕೆ ಗುರಿಯಾವುತ್ತ.

ನಿಯೋಜಿತ ಕೆಲಸ ಹೇಳಿರೆ ಮೂರು ವರ್ಗ. ದೈನಂದಿನ ಕೆಲಸ , ತುರ್ತುಕೆಲಸ ಮತ್ತು ಬಯಸಿದ ಚಟುವಟಿಕೆಗೊ. ಶಾಸ್ತ್ರಂಗಳ ಆದೇಶಕ್ಕನುಗುಣವಾಗಿ ಫಲಾಪೇಕ್ಷೆಯಿಲ್ಲದ್ದೆ ಕರ್ತವ್ಯವ ಮಾಡಿದ ದೈನಂದಿನ ಕೆಲಸವು ಸತ್ವಗುಣಂದ ಮಾಡಿದ ಕರ್ಮ ಆವ್ತು. ಫಲವ ಅಪೇಕ್ಷಿಸಿ ಮಾಡುವ ಕೆಲಸ ಬಂಧನಕ್ಕೆ ಕಾರಣವಾವ್ತು. ಆದ್ದರಿಂದ ಇಂತಹ ಕೆಲಸವು ಶುಭಕರವಲ್ಲ. ನಿಯೋಜಿತ ಕರ್ತವ್ಯಂಗಳ ಮಾಟ್ಟಿಂಗೆ ಪ್ರತಿಯೊಬ್ಬಂಗೂ ಅಧಿಕಾರ ಇದ್ದು. ಆದರೆ, ಇದು ಫಲದ ಆಸೆಯಿಲ್ಲದ್ದ ಕರ್ಮ ಆಗಿರೇಕು. ಇಂತಹ ನಿರ್ಲಿಪ್ತ ನಿಯೋಜಿತ ಕರ್ತವ್ಯಂಗೊ ನಿಸ್ಸಂಶಯವಾಗಿ ಮುಕ್ತಿ ಮಾರ್ಗಕ್ಕೆ ಕರೆದೊಯ್ಯುತ್ತು. ಆದ್ದರಿಂದ ಫಲದ ಅಪೇಕ್ಷೆ ಇಲ್ಲದ್ದೆ ಅರ್ಜುನ ಕರ್ತವ್ಯ ದೃಷ್ಟಿಂದ ಯುದ್ಧಮಾಡೇಕು ಹೇಳಿ ಭಗವಂತನ ಉಪದೇಶ. ಅರ್ಜುನ ಈಗ ಯುದ್ಧಮಾಡದಿಪ್ಪದಕ್ಕೆ ವ್ಯಾಮೋಹವೇ ಕಾರಣ. ಇಂತಹ ಮೋಹ ಮುಕ್ತಿಯ ದೊರಕುಸದು. ಧನಾತ್ಮಕವಾಗಲಿ, ಋಣಾತ್ಮಕವಾಗಿರಲಿ ಯಾವುದೇ ಬಗೆಯ ಮೋಹವು ಬಂಧನಕ್ಕೆ ಕಾರಣ ಆವ್ತು. ಕರ್ಮ ಮಾಡದ್ದಿಪ್ಪದು ಪಾಪಕರ . ಆದ್ದರಿಂದ ಮುಕ್ತಿಗೆ ಒಂದೇ ಶುಭಕರ ಮಾರ್ಗ ಹೇಳಿರೆ ಫಲಾಪೇಕ್ಷೆ ಇಲ್ಲದ್ದೆ ಕರ್ತವ್ಯ ಮಾಡುವದು.

ಬನ್ನಂಜೆಯವು ಇಲ್ಲಿ ಹೇಳುತ್ತವು – ಈ ಶ್ಲೋಕಲ್ಲಿಯೂ ವಿಶೇಷ ಅರ್ಥ ಇದ್ದು. ಮೇಲ್ಮೈಂದ ನೋಡಿರೆ ಅಪಾರ್ಥ ಅಷ್ತೇ ಅಕ್ಕು. ಕರ್ಮ ಮಾಡೆಕು ಆದರೆ ಫಲವ ಬಯಸಲಾಗ. ಹಾಂಗೆ ಹೇಳಿರೆ ಎಂತರ? . ಇದು ಮನುಷ್ಯನ ನಿಷ್ಕ್ರಿಯಗೊಳಿಸದೋ ? ಆದರೆ, ಇಲ್ಲಿ ರಹಸ್ಯವಾಗಿ ಹುದುಗಿಪ್ಪ ಗೂಢಾರ್ಥ ಕರ್ತವ್ಯವ ಚಾಚೂತಪ್ಪದ್ದೆ ಮಾಡು ಆದರೆ, ಫಲಲ್ಲಿ ಅಧಿಕಾರ ಸಾಧುಸೇಡ. ಕರ್ಮ ನಿನ್ನ ಕೈಲಿ ಇದ್ದು. ಆದರೆ, ಕರ್ಮ ಫಲ ಭಗವಂತನ ಕೈಲಿ ಇಪ್ಪದು. ನೀನು ಆನೇ ಕರ್ಮ ಫಲದ ಹೇತು (ಕಾರಣ) ಹೇಳಿ ತಿಳ್ಕೊಳ್ಳೆಡ. ಕರ್ಮಫಲದ ಹೇತು ಭಗವಂತ° ಎಂಬ ಎಚ್ಚರ ನಿನಗಿರಲಿ. ಇಲ್ಲಿ ಭಗವಂತ° ಬಯಕೆಯ ನಿರಾಕರಣೆ ಮಾಡಿದ್ದನಿಲ್ಲೆ. ಆದರೆ, ‘ಹೀಂಗೇ ಆಯೇಕ್ಕು’ ಇಲ್ಲದ್ರೆ ಈ ಕರ್ಮವ ಆನು ಮಾಡುತ್ತಿಲ್ಲೆ ಎಂಬ ಅಭಿಪ್ರಯಕ್ಕೆ ಬಪ್ಪದು ಸರಿಯಲ್ಲ. ಬಯಸುವ ಅಧಿಕಾರ ನವಗಿದ್ದು. ಆದರೆ, ಫಲವ ಕೊಡುವವ° ಭಗವಂತ ಹೇಳ್ತ ಪರಿಜ್ಞಾನ ಬೇಕು. ಎಷ್ಟೋ ಸರ್ತಿ ನವಗರಡಿಯದ್ದೆ ತಪ್ಪು ಬಯಸುತ್ತು. ಆದರೆ, ಭಗವಂತ ಅದರ ಕೊಡ°. ಎಂತಕೆ ಯಾವುದು ಸರಿ ಯಾವುದು ತಪ್ಪು ಹೇಳ್ವ ಪರಿಜ್ಞಾನ ನವಗಿಲ್ಲೆ.  ಈ ಎಚ್ಚರ ಇದ್ದರೆ ನವಗೆ ಫಲ ಸಿಕ್ಕದ್ದಿಪ್ಪಗ ದುಃಖವ ಉಂಟುಮಾಡುತ್ತಿಲ್ಲೆ. ಯಥಾ ಯೋಗ್ಯಂ ತಥಾ ಕುರು ಹೇಳಿ ನಾವು ಬೇಡಿಗೊಂಡರೆ ಆತು. ಬೇಕೋ ಬೇಡದೋ ಹೇದು ನಿರ್ಧಾರ ಅವನದ್ದು. ಸತ್ಪಾತ್ರಂಗೆ ಯೋಗ್ಯವಾದುದ ಅನುಗ್ರಹಿಸುವದು ಭಗವಂತ°.  ನಾವು ಮಾಡುವ ಕರ್ಮವ ನಿಷ್ಠೆಂದ ಭಗವದರ್ಪಣೆ ಮಾಡಿ ಅದರಿಂದ ಏನು ಫಲ ಬಂತೋ ಅದರ ಹಾಂಗೇ ಸ್ವೀಕರುಸುವ ಮನೋವೃತ್ತಿಯ ಬೆಳೆಸಿಗೊಂಡರೆ ನವಗೆ ದುಃಖಕ್ಕೆ ಕಾರಣ ಇರ್ತಿಲ್ಲೆ. ಹಾಂಗಾಗಿ ಯಾವ ಕಾಲಕ್ಕೂ ನಿಷ್ಕ್ರಿಯನಾಗಿ ಕೂರದ್ದೆ ಸದಾ ಕರ್ತವ್ಯಶೀಲನಾಗು ಹೇದು ಭಗವದುಪದೇಶ. ಇಂತಹ ಫಲವೇ ಸಿಕ್ಕೆಕು ಹೇಳ್ವ ವಿಚಾರವ ಬಿಟ್ಟು ಕರ್ತವ್ಯ ನಿರ್ವಹಿಸಿದರೆ ಯಾವ ದುಃಖವೂ ಇಲ್ಲೆ. ಅದರ ಬಿಟ್ಟು ಫಲಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದ್ದೇ ಹೋಪಗ ಅಪ್ಪದು ಮಾನಸಿಕ ಆಘಾತ, ವ್ಯಾಕುಲತೆ ( Mental Depression) ಭಯಾನಕ. ಸೋಲನ್ನಾಗಲಿ ಗೆಲುವನ್ನಾಗಲಿ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮ ಎತ್ತರಕ್ಕೆ ಕೊಂಡೊಯ್ಯುತ್ತು. ಭಗವಂತ ನಮಗೆ ಫಲವ ಕೊಡುವಾಗ ನಮ್ಮ ಒಳಿತಿನ ಗಮನಲ್ಲಿಟ್ಟುಗೊಂಡೇ ಕೊಡುತ್ತ° ಹೊರತು ನಾವು ಗ್ರೇಶಿದಾಂಗೇನೂ ಅಲ್ಲ. ಹಾಂಗಾಗಿ, ಬಂದದ್ದರ ಬಂದ ಹಾಂಗೆ ಸ್ವೀಕರುಸಿ, ಎಂದೂ ನಿಷ್ಕ್ರಿಯನಾಗದ್ದೆ, ಫಲಲ್ಲಿ ಅಧಿಕಾರ ಸಾಧುಸದ್ದೆ ಮುನ್ನೆಡೆಕು ಹೇಳ್ವದು ಶ್ರೀ ಕೃಷ್ಣನ ಕರ್ಮ ಸಿದ್ಧಾಂತ. ಏನೇ ಪಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಹೇಳಿ ಧನ್ಯತೆಂದ ಸ್ವೀಕರುಸೆಕ್ಕು ಮುಂದೆ ಸಾಗೆಕು.

ಶ್ಲೋಕ

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥೪೮॥

ಪದವಿಭಾಗ

ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ । ಸಿದ್ಧಿ ಅಸಿದ್ಧ್ಯೋಃ ಸಮಃ ಭೂತ್ವಾ ಸಮತ್ವಮ್ ಯೋಗಃ ಉಚ್ಯತೇ ॥

ಅನ್ವಯ

ಹೇ, ಧನಂಜಯ!, ಸಂಗಂ ತ್ಯಕ್ತ್ವಾ, ಸಿದ್ಧಿ-ಅಸಿದ್ಧ್ಯೋಃ ಸಮಃ ಭೂತ್ವಾ, ಯೋಗಸ್ಥಃ ಕರ್ಮಾಣಿ ಕುರು। ಸಮತ್ವಂ ಯೋಗಃ ಉಚ್ಯತೇ ॥

ಪ್ರತಿಪದಾರ್ಥ

ಹೇ ಧನಂಜಯ! – ಏ ಸಂಪತ್ತಿನ ಆರ್ಜಿಸಿದವನೇ! (ಏ ಅರ್ಜುನ!), ಸಂಗಮ್ – ಆಸಕ್ತಿಯ, ತ್ಯಕ್ತ್ವಾ- ಬಿಟ್ಟಿಕ್ಕಿ, ಸಿದ್ಧಿ-ಅಸಿದ್ಧ್ಯೋಃ – ಜಯ ಅಪಜಯಂಗಳಲ್ಲಿ, ಸಮಃ  ಭೂತ್ವಾ – ಸಮನಾದವ° ಆಗಿ, ಯೋಗಸ್ಥಃ – ಸಮಚಿತ್ತಲ್ಲಿದ್ದು, ಕರ್ಮಾಣಿ – ಕರ್ತವ್ಯಂಗಳ,  ಕುರು – ಮಾಡು, ಸಮತ್ವಮ್ – ಸಮಚಿತ್ತವ, ಯೋಗಃ ಉಚ್ಯತೇ  – ಯೋಗ ಹೇದು ಕರೆಯಲಾವುತ್ತು.

ಅನ್ವಯಾರ್ಥ

ಗೆಲುವು ಸೋಲುಗಳಲ್ಲಿ ಯಾವುದೇ ಆಸಕ್ತಿಯ ಮಡಿಕ್ಕೊಳ್ಳದ್ದೆ ಸಮಚಿತ್ತಂದ ನಿನ್ನ ಕರ್ತವ್ಯವ ಮಾಡು. ಅರ್ಜುನ!, ಇಂತಹ ಸಮಚಿತ್ತ ಸ್ಥಿತಿಗೆ ‘ಯೋಗ’ ಹೇಳಿ ಹೆಸರು.

ತಾತ್ಪರ್ಯ / ವಿವರಣೆ

ಅರ್ಜುನ° ಯೋಗಲ್ಲಿದ್ದು ಕರ್ಮವ ಮಾಡೇಕು ಹೇಳಿ ಕೃಷ್ಣನ ಉಪದೇಶ. ಯೋಗ ಹೇಳಿರೆಂತರ ? ಯೋಗ ಹೇಳಿರೆ, ಸದಾ ಚಂಚಲವಾಗುವ ಇಂದ್ರಿಯಂಗಳ ನಿಗ್ರಹಿಸಿ ಪರಾತ್ಪರದಲ್ಲಿ ಮನಸ್ಸಿನ ಸ್ಥಿರವಾಗಿ ನಿಲ್ಲುಸುವದು. ಪರಾತ್ಪರ ಹೇಳಿರೆ ಭಗವಂತ°. ಇಲ್ಲಿ  ಭಗವಂತನೇ ಯುದ್ಧ ಮಾಡು ಹೇಳಿ ಅರ್ಜುನಂಗೆ ಹೇಳುತ್ತಿಪ್ಪದ್ದಾದ್ದರಿಂದ ಯುದ್ಧದ ಫಲಕ್ಕೂ ಅರ್ಜುನಂಗೂ ಯಾವುದೇ ಸಂಬಂಧ ಇಲ್ಲೆ. ಲಾಭ ಅಥವಾ ನಷ್ಟ, ಅರ್ಥಾತ್., ಜಯ-ಅಪಜಯ ಕೃಷ್ಣಂಗೆ ಸೇರಿದ್ದು. ಕೃಷ್ಣನ ಮಾರ್ಗದರ್ಶನಕ್ಕೆ ಅನುಗುಣವಾಗಿ ಕಾರ್ಯನಿರತನಾಯೆಕ್ಕಪ್ಪದು ಅರ್ಜುನಂಗೆ ಉಪದೇಶ. ಕೃಷ್ಣನ ಮಾರ್ಗದರ್ಶನಕ್ಕೆ ಅನುಗುಣವಾಗಿ ನಡಕ್ಕೊಂಬದು ನಿಜವಾದ ಯೋಗ. ಇದು ಕೃಷ್ಣಪ್ರಜ್ಞೆ ಎಂಬ ಪ್ರಕ್ರಿಯೆಲಿ ಅಭ್ಯಾಸ ಆವ್ತು. ಕೃಷ್ಣಪ್ರಜ್ಞೆಂದ ಮಾತ್ರವೇ ಮನುಷ್ಯ° ತಾನು ಒಡೆಯ° ಎನ್ನುವ ಭಾವನೆ ಬಿಡ್ಳಕ್ಕು. ಮನುಷ್ಯ ಕೃಷ್ಣನ ಸೇವಕನಾಗಿರೇಕು ಅಥವಾ ಕೃಷ್ಣನ ಸೇವಕನ ಸೇವಕನಾಗಿರೆಕ್ಕು. ಕೃಷ್ಣಪ್ರಜ್ಞೆ ಒಂದೇ ಮನುಷ್ಯ ಯೋಗಸ್ಥಿತಿಲಿ ಕರ್ಮವ ಮಾಡ್ಳೆ ಸಕಾಯ ಅಕ್ಕು.

ಅರ್ಜುನ° ಕ್ಷತ್ರಿಯ°. ಹಾಂಗಾಗಿ ಅವ° ವರ್ಣಾಶ್ರಮ ಧರ್ಮಲ್ಲಿ ಭಾಗಿ. ವರ್ಣಾಶ್ರಮ ಧರ್ಮದ ಸಂಪೂರ್ಣ ಗುರಿ ಭಗವಂತನ ಸಂಪ್ರೀತಿಗೊಳುಸುವದು. ಐಹಿಕ ಪ್ರಪಂಚದ ನಿಯಮವಾದರೋ ತನ್ನ ತೃಪ್ತಿಗಾಗಿ ಕೆಲಸ ಮಾಡುವದು. ಹೀಂಗೆ ಮಾಡದ್ದೆ, ಕೃಷ್ಣನ ತೃಪ್ತಿಗೊಳುಸೇಕು. ಕೃಷ್ಣನ ತೃಪ್ತಿಗೊಳುಸದ್ದೆ ವರ್ಣಾಶ್ರಮ ಧರ್ಮದ ತತ್ವಂಗಳ ಸರಿಯಾಗಿ ಪಾಲುಸಲೆ ಸಾಧ್ಯವಿಲ್ಲೆ. ಕೃಷ್ಣ° ಹೇದಾಂಗೆ ನಡೇಕು ಹೇದು ಪರೋಕ್ಷವಾಗಿ ಅರ್ಜುನಂಗೆ ಉಪದೇಶ.

ಶ್ಲೋಕ

ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ಧನಂಜಯ ।
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ ॥೪೯॥

ಪದವಿಭಾಗ

ದೂರೇಣ ಹಿ ಅವರಮ್ ಕರ್ಮ ಬುದ್ಧಿ-ಯೋಗಾತ್ ಧನಂಜಯ । ಬುದ್ಧೌ ಶರಣಮ್ ಅನ್ವಿಚ್ಛ ಕೃಪಣಾಃ ಫಲಹೇತವಃ ॥

ಅನ್ವಯ

ಹೇ ಧನಂಜಯ!, ಕರ್ಮ ಬುದ್ಧಿ-ಯೋಗಾತ್  ಅವರಂ ದೂರೇಣ ಹಿ । ಬುದ್ಧೌ ಶರಣಮ್ ಅನ್ವಿಚ್ಛ । ಫಲ-ಹೇತವಃ ಕೃಪಣಾಃ॥

ಪ್ರತಿಪದಾರ್ಥ

ಹೇ ಧನಂಜಯ! – ಏ ಐಶ್ವರ್ಯವ ಜಯಿಸಿದವನೇ! (ಅರ್ಜುನನೇ!), ಕರ್ಮ – ಕರ್ಮವ, ಬುದ್ಧಿಯೋಗಾತ್ – ಕೃಷ್ಣಪ್ರಜ್ಞೆಯ ಬಲಂದ,  ಅವರಮ್ – ಹೇಯವಾದ್ದು,  ದೂರೇಣ – ಬಹುದೂರಲ್ಲೇ (ಬಿಟ್ಟು), ಹಿ – ಖಂಡಿತವಾಗಿಯೂ,  ಬುದ್ಧೌ – ಅಂತಹ ಪ್ರಜ್ಞೆಲಿ, ಶರಣಮ್ – ಪೂರ್ಣ ಶರಣಾಗತಿಯ, ಅನ್ವಿಚ್ಛ – ಪ್ರಯತ್ನುಸು, ಫಲ-ಹೇತವಃ – ಕಾಮ್ಯಕರ್ಮ ಫಲಾಪೇಕ್ಷಿಗೊ, ಕೃಪಣಾಃ – ಜಿಪುಣರು.

ಅನ್ವಯಾರ್ಥ

ಧನಂಜಯ, ಭಕ್ತಿಪೂರ್ವಕ ಸೇವೆಂದ ಎಲ್ಲ ಹೇಯಕಾರ್ಯಂಗಳ ದೂರಮಾಡು. ಇಂತಹ ಪ್ರಜ್ಞೆಲಿ ಭಗವಂತಂಗೆ ಶರಣಾಗತನಾಗು. ತಮ್ಮ ಕರ್ಮಂಗಳ ಫಲಕ್ಕಾಗಿ ಆಸೆ ಪಡುವವು ಜಿಪುಣರು.

ತಾತ್ಪರ್ಯ / ವಿವರಣೆ

ಪ್ರಪಂಚಲ್ಲಿ ಕೆಲವು ಜೆನಂಗೊ ಕರ್ಮಯೋಗಿಗೊ, ಇನ್ನು ಕೆಲವು ಜೆನಂಗೊ ಜ್ಞಾನಯೋಗಿಗೊ. ಕರ್ಮಯೋಗಿಗೊಕ್ಕೆ ಜ್ಞಾನ ಇಲ್ಲೆ, ಮತ್ತೆ, ಜ್ಞಾನ ಬಂದ ಮತ್ತೆ ಕರ್ಮ ಬೇಕಿಲ್ಲೆ ಹೇಳ್ತ ಚಿಂತನೆ ಕೆಲವರದ್ದು. ಕೆಲವರು ಕರ್ಮ ಮೇಲು ಹೇದು ಹೇಳುತ್ತವು, ಮತ್ತೆ ಕೆಲವರು ಜ್ಞಾನ ಮೇಲು ಹೇದು ಹೇಳುತ್ತವು. ಇನ್ನು ಕೆಲವರು ಕರ್ಮ ಮತ್ತು ಜ್ಞಾನ – ‘ಎರಡು ಚಕ್ರದಂತೆ’ ಸಮಾನ ಹೇದು ಗ್ರೇಶುತ್ತವು. ಇದರಿಂದ ಅನೇಕ ದ್ವಂದ್ವಂಗೊ ಹುಟ್ಟಿಗೊಳ್ತು. ಇಲ್ಲಿ ಕೃಷ್ಣ ಸ್ಪಷ್ತವಾಗಿ ಹೇಳುತ್ತ°- ಜ್ಞಾನದ ಮುಂದೆ ಕರ್ಮ ಬಹಳ ದೂರ ಹೇದು. ಕರ್ಮ ಮಾಡುವಾಗ ಜ್ಞಾನ ಅತೀ ಮುಖ್ಯ. ಜ್ಞಾನಕ್ಕೋಸ್ಕರವಾಗಿಯೇ ಕರ್ಮ ಇಪ್ಪದು ಹೊರತು ಅದು ಜ್ಞಾನಕ್ಕೆ ಸಮಾನ ಅಲ್ಲ. ಅದಕ್ಕಾಗಿ ಜ್ಞಾನಕ್ಕೆ ಶರಣಾಗಿ ಜ್ಞಾನಕ್ಕೆ ಪೂರಕವಾದ ಕರ್ಮಂಗಳ ಮಾಡೇಕ್ಕು. ಜ್ಞಾನವಿಲ್ಲದ್ದೆ, ಫಲಾಪೇಕ್ಷೆಂದ ಕರ್ಮ ಮಾಡುವ ಜಿಪುಣರ ಸ್ಥಿತಿ ಶೋಚನೀಯ. ಇವ್ವು ಕರ್ಮದ ಮರ್ಮವ ತಿಳಿಯದ್ದೆ ಕರ್ಮ ಮಾಡಿ ಪರಿತಪಿಸುತ್ತವು.

ಜ್ಞಾನದ ಮಾರ್ಗಲ್ಲಿ ಎತ್ತರಕ್ಕೇರಲೆ ನಾವು ಕರ್ಮವ ಮಾಡೇಕ್ಕು. ಇದರಿಂದ ಭಗವಂತನ ಸಾಕ್ಷಾತ್ಕಾರ ಆವ್ತು. ಆ ಸ್ಥಿತಿಲಿ ಅಹಂಕಾರ ಪಡದ್ದೆ, ಭಗವಂತನೇ ಎನ್ನ ರಕ್ಷಕ, ಆತನೇ ಎನ್ನ ನೆಲೆ ಹೇಳಿ ಭಾವಿಸಿ ಆತನಲ್ಲಿ ಶರಣಾಯೇಕ್ಕು. ದೇವರಿಂಗೆ ಆನು ಎನ್ನ ಅರ್ಪಿಸಿಕೊಂಡಿದ್ದೆ. ಆತ° ಎನ್ನ ರಕ್ಷಿಸಿಯೇ ರಕ್ಷಿಸುತ್ತ° ಹೇಳ್ವ ಮನವರಿಕೆಯೇ ಶರಣಾಗತಿ. ನವಗೆ ಏನಾರು ಸಮಸ್ಯೆ ಬಂದಪ್ಪಗ ಭಗವಂತನ ಹತ್ರೆ ಪ್ರಾರ್ಥಿಸಿಗೊಳ್ಳೆಕ್ಕೇ ಹೊರತು ಅನ್ಯರತ್ರಲ್ಲ. ಓ ಭಗವಂತ, ಸಮಸ್ಯೆಲಿ ಸಿಲುಕಿದ್ದೆ. ಇದಕ್ಕೆ ಪರಿಹಾರ ತೋರುಸು ತಂದೆ ಹೇದು ಮನಃಪೂರ್ವಕ ಪ್ರಾರ್ಥಿಸಿಗೊಂಡರೆ ಭಗವಂತ ನಮ್ಮ ಸಂಕಟಂದ ಪಾರು ಮಾಡುತ್ತ°. ಇಲ್ಲಿ ಕೂಡ ಫಲದ ಅಧಿಕಾರ ಸಾಧುಸದ್ದೆ ಕೇವಲ ಭಗವಂತನನ್ನೇ ನಂಬಿ, ನಮ್ಮ ಎಲ್ಲಾ ಸಮಸ್ಯೆಗಳ ನಡುವೆಯೂ ನಿಶ್ಚಿಂತೆಂದ ಬದುಕಲೆ ಕಲಿಯೆಕ್ಕು.

ಇಲ್ಲಿ ಅರ್ಜುನನ ಧನಂಜಯ° ಹೇದು ಭಗವಂತ° ದೆನಿಗೊಳ್ತ. ಧನಂಜಯ° ಹೇಳಿರೆ, ಲೌಕಿಕವಾಗಿ ಅನೇಕ ಕಡೆ ಯುದ್ಧವ ಮಾಡಿ, ದೇಶದ ಸೀಮೆಯ ವಿಸ್ತರಿಸಿ, ರಾಜಕೋಶದ ಸಂಪತ್ತು ವೃದ್ಧಿ ಮಾಡಿದವ°,  ಧನವ ಆರ್ಜಿಸಿಗೊಂಡವ°. ಅಧ್ಯಾತ್ಮಿಕವಾಗಿ ನೋಡಿರೆ., ಭಗವಂತನ ಆರಾಧನೆ, ಅಧ್ಯಾತ್ಮದ ಅರಿವು – ನಿಜವಾದ ಧನ. ಭಗವಂತನ ಅರಿವು, ಜ್ಞಾನ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಅರ್ಜುನ° ಆ ಕಾಲದ ಅಪರೋಕ್ಷ ಜ್ಞಾನಿ. ಅವ° ಸ್ವಯಂ ಇಂದ್ರ. ಆವ° ಜ್ಞಾನದ ಸಂಪತ್ತಿನ ಪರಾಕಾಷ್ಠೆ. ಇಂತಹ ಜ್ಞಾನಿಯಾದ ನೀನು ಭಗವಂತಂಗೆ ಶರಣಾಗಿ ಬುದ್ಧಿಪೂರ್ವಕವಾಗಿ ಕರ್ಮ ಮಾಡು ಹೇದು ಅರ್ಜುನಂಗೆ ಕೃಷ್ಣನ ಬೋಧನೆ. 

ಶ್ಲೋಕ

ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ ।
ತಸ್ಮಾದ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ ॥೫೦॥

ಪದವಿಭಾಗ

ಬುದ್ಧಿ-ಯುಕ್ತಃ ಜಹಾತಿ ಇಹ ಉಭೇ ಸುಕೃತ-ದುಷ್ಕೃತೇ । ತಸ್ಮಾತ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್ ॥

ಅನ್ವಯ

ಇಹ ಬುದ್ಧಿ-ಯುಕ್ತಃ ಉಭೇ ಸುಕೃತ-ದುಷ್ಕೃತೇ ಜಹಾತಿ । ತಸ್ಮಾತ್ ಯೋಗಾಯ ಯುಜ್ಯಸ್ವ । ಯೋಗಃ ಕರ್ಮಸು ಕೌಶಲಮ್ ॥

ಪ್ರತಿಪದಾರ್ಥ

ಇಹ – ಈ ಬದುಕಿಲ್ಲಿ, ಬುದ್ಧಿ-ಯುಕ್ತಃ – ಭಕ್ತಿಸೇವೆಲಿ ತೊಡಗಿದವ°, ಉಭೇ – ಎರಡೂ, ಸುಕೃತ-ದುಷ್ಕೃತೇ – ಒಳ್ಳೆದು ಮತ್ತು ಕೆಟ್ಟ ಪರಿಣಾಮಂಗಳ, ಜಹಾತಿ – ದೂರಮಾಡಬಲ್ಲವ°, ತಸ್ಮಾತ್ – ಆದ್ದರಿಂದ, ಯೋಗಾಯ – ಭಕ್ತಿಸೇವೆಯ ಸಲುವಾಗಿ, ಯುಜ್ಯಸ್ವ – ತೊಡಗು, ಯೋಗಃ – ಕೃಷ್ಣಪ್ರಜ್ಞೆಯು, ಕರ್ಮಸು – ಎಲ್ಲ ಕರ್ಮಂಗಳಲ್ಲಿಯೂ, ಕೌಶಲಮ್ – ಕೌಶಲ್ಯವು

ಅನ್ವಯಾರ್ಥ

ಭಕ್ತಿಸೇವೆಲಿ ನಿರತನಾದವ° ಈ ಜನ್ಮಲ್ಲಿಯೇ ಸುಕೃತ ದುಷ್ಕೃತಂಗಳ ದೂರ ಮಾಡುತ್ತ°. ಹಾಂಗಾಗಿ ಯೋಗವ ಪಡವಲೆ ಪ್ರಯತ್ನ ಮಾಡು. ಅದುವೇ ಕರ್ಮಕೌಶಲ.

ತಾತ್ಪರ್ಯ / ವಿವರಣೆ

ಅನಂತ ಕಾಲಂದ ಪ್ರತಿಯೊಬ್ಬ ಜೀವಿಯೂ ಸುಕೃತ-ದುಷ್ಕೃತಂಗಳ ಹಲವು ಪರಿಣಾಮಂಗಳ ರಾಶಿಮಾಡಿಕೊಂಡಿದ್ದ. ಆದ್ದರಿಂದ ಅವಂಗೆ ಸದಾ ತನ್ನ ಸಹಜ ಸ್ವರೂಪದ ಅರಿವೇ ಇರುತ್ತಿಲ್ಲೆ. ಸದಾ ಭಗವಂತನ ಚಿಂತನೆ ಮತ್ತು ಕೃಷ್ಣೆಪ್ರಜ್ಞೆಂದ ಜ್ಞಾನವ ಪಡವಲೆ ಸಾಧ್ಯ. ಎಲ್ಲಾ ರೀತಿಲಿ ಭಗವಂತಂಗೆ ಶರಣಾಗಿ, ಜನ್ಮ ಜನ್ಮಾಂತರಂಗಳಲ್ಲಿ ಕ್ರಿಯೆ – ಪ್ರತಿಕ್ರಿಯೆಗಳ ಬಂಧನದ ಯಾತನೆಂದ ಮುಕ್ತಿ ಸಾಧುಸಲೆ ಈ ಯೋಗಂದ ಮಾತ್ರ ಸಾಧ್ಯ. ಭಗವಂತನ ಅರ್ತುಗೊಂಡು ಬೇಡವಾದ ಪುಣ್ಯ ಪಾಪಂಗಳೆರಡರನ್ನೂ ತೊರದು ಭಗವಂತನ ಸಂಪ್ರೀತಿಗೊಳುಸುವ ಯೋಗಕ್ಕೆ ತೊಡಗೆಕು. ಯೋಗ ಹೇದರಿಲ್ಲಿ ತಿಳುದು ಮಾಡುವ ಜಾಣತನ. ತಿಳುವಳಿಕೆಂದ ಕರ್ಮ ಮಾಡಿರೆ ತನ್ನ ಎಲ್ಲಾ ಪಾಪಂಗಳನ್ನೂ ಮತ್ತು ಬೇಡವಾದ ಪುಣ್ಯವನ್ನೂ ತೊರದು ಭಗವಂತನ ಸೇರುಲೆಡಿಗು. ಇಲ್ಲಿ ಬೇಡವಾದ ಪುಣ್ಯ ಹೇಳಿರೆ ಉದಾಹರಣೆಗೆ – ಒಬ್ಬ ಮಹಾತ್ಮ° ತನ್ನ ಜ್ಞಾನ ಕರ್ಮಂಗಳಿಂದ ಮೋಕ್ಷವ ಪಡೆತ್ತ. ಹೀಂಗೆ ಈ ಮಾರ್ಗಲ್ಲಿಪ್ಪಗ ಆವ° ಇತರ ಪುಣ್ಯವನ್ನೂ ಗಳುಸುತ್ತ°. ಒಂದುವೇಳೆ ಆವ° ಚಕ್ರವರ್ತಿಯಾಗಿ ಮೆರೆವ ಪುಣ್ಯವ ಪಡದ್ದಿದ್ದರೆ ಅದು ಅವಂಗೆ ಬೇಡವಾದ ಪುಣ್ಯ. ಮೋಕ್ಷವ ಬಯಸಿ ಹೋಪ ದಾರಿಲಿ ಇತರ ಸುಕೃತಫಲವಾಗಿ ಚಕ್ರವರ್ತಿ ಸ್ಥಾನ ಫಲ ಸಿಕ್ಕಿರೂ ಅಲ್ಲಿಂದ ವಿಚಲಿತನಾಗದ್ದೆ ತನ್ನ ಕರ್ತವ್ಯ ನಿಷ್ಠೆಲಿಯೇ ಮುನ್ನಡೆಕ್ಕು ಹೇಳ್ವ ತಾತ್ಪರ್ಯ. ಆರು ಈ ರೀತಿಯಾಗಿ ಭಗವತ್ಪ್ರಜ್ಞೆಲಿ ಬದುಕುತ್ತವೊ ಅವ್ವು ಮಾಡಿದ ಕರ್ಮ ಅವರ ಪಾಪ ಪುಣ್ಯದ ಬಂಧನಕ್ಕೆ ಕಾರಣ ಆವ್ತಿಲ್ಲೆ. ಆದ್ದರಿಂದ ಜ್ಞಾನಯೋಗಲ್ಲಿ ನಿಂದು ಆ ಅರಿವಿನಿಂದ ಕರ್ಮ ಮಾಡುವುದೇ ಜಾಣತನ. ವಿಚಲಿತನಾದರೆ ಅದು ಜಿಪುಣತನ.

 ಮುಂದೆ ಎಂತಾತು..   ಬಪ್ಪವಾರ ನೋಡುವೋ°

….. ಮುಂದುವರಿತ್ತು

ಕೆಮಿಲಿ ಕೇಳ್ಳೆ –

BHAGAVADGEETHA – CHAPTER 02 SHLOKAS 41 – 50 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

9 thoughts on “ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 41 – 50

  1. ಅರ್ಥಪೂರ್ಣ ವಿವರಣೆ ಚೆನ್ನೈಭಾವ.
    ಪರೀಕ್ಷೆಗೆ ಕೂಪವ ಫಲಿತಾ೦ಶದ ಯೋಚನೆಲಿಯೇ ಮುಳುಗಿರೆ ಹೇ೦ಗಕ್ಕು?ಆನು ಪರೀಕ್ಷೆಲಿ ಪಾಸಾಗಿ ಮು೦ದೆ ಹೆಚ್ಚು ಕಲ್ತು ದೊಡ್ದ ಕೆಲಸಕ್ಕೆ ಸೇರಿ ,ಮನೆ ಕಟ್ಟಿ… ಇತ್ಯಾದಿ ಇತ್ಯಾದಿ ಕನಸುಗಳಲ್ಲಿಯೇ ಮುಳುಗಿ ಪರೀಕ್ಷೆಯನ್ನೇ ಸರಿ ಬರೆಯದ್ದರೆ?
    ಕೆಲಸ ಮಾಡೊಗ ಅದರ ಫಲದ ಚಿ೦ತೆ ಬೇಡ.ಆದರೆ ಕೆಲಸ ಮಾಡದ್ದೆ ಕೂಪಲಾಗ.
    ಜ್ಞಾನಕೋಶದ ಮು೦ದೆ ಲೌಕಿಕ ಸ೦ಪತ್ತಿನ ಕೋಶಕ್ಕೆ ಬೆಲೆ ಇಲ್ಲೆ ಹೇಳ್ತದು ಸತ್ಯ.

  2. ಭಾವಾ,
    ಇದರ ಓದುವಾಗ ರಾಮಾಯಣದ ಭರತ° ನೆಂಪಾದ°.
    ಗುರುಗೊ ಓ ಅಂದ್ರಾಣ ಚಾತುರ್ಮಾಸ್ಯಲ್ಲಿ ಹೇಳಿತ್ತಿದ್ದ ಮಾತುಗೊ,
    ನಾವು ಭರತನ ಹಾಂಗಿರೆಕು. ಹೇಂಗೆ ಹೇಳಿರೆ, ನಮ್ಮ ಪಾಲಿನ ಎಲ್ಲ ಕೆಲಸ ನಮ್ಮದು – ಎಲ್ಲ ಜವಾಬ್ದಾರಿ ನವಗೇ, ಆದರೆ ಫಲ ನವಗೆ ಬೇಡ. ಹಾಂಗೆ ಹೇಳಿಯೊಂಡು ಕೆಲಸ ಮಾಡದ್ದೇ ಇಪ್ಪದಲ್ಲ. ಎಲ್ಲವನ್ನೂ ಮಾಡೆಕು – ಯಾವದೂ ಎನ್ನದಲ್ಲ, ಎಲ್ಲವೂ ಎನ್ನ ಜವಾಬ್ದಾರಿ ಹೇಳಿ ಗ್ರೇಶಿಯೊಂಡು ಮಾಡೆಕು.

    ದೊರೆತನದ ಜಟಿಲಗಳ ಕುಟಿಲಗಳ ಭರತನುಳಿಸಿದನೆ ರಾಮನ ತೀರ್ಪಿಗೆಂದು? ಹೇಳಿ ಕೇಳ್ತವು ಗುಂಡಪ್ಪಜ್ಜ° ಕಗ್ಗಲ್ಲಿ.
    ಅಪ್ಪ° ಸ್ವರ್ಗಸ್ಥ° – ಅಣ್ಣ° ವನಸ್ಥ°, ರಾಜ್ಯಕ್ಕೆ ಆರು ಅಂಬಗ?
    ಭರತನೇ…! ಅವನ ಹೇಳುವವ್ವು ಕೇಳುವವ್ವು ಆರೂ ಇಲ್ಲೆ.
    ಅವ° ಹೇಳಿದ್ದೇ ಮಾತು.
    ಆದರೂ ಅವ° ಮಾಡಿದ್ದೆಂತ?
    ಅಪ್ಪ°, ಅಣ್ಣನ ಅನುಪಸ್ಥಿತಿಲಿ ಎಲ್ಲ ಕೆಲಸ ಅವನೇ ಮಾಡಿದ°.
    ಕೆಲಸ ಆರದ್ದು ಕೇಳಿರೆ – ಉತ್ತರ – ಭರತಂದು 🙂
    ರಾಜ° ಅವನೋ ಕೇಳಿರೆ – ಅವ° ಕೊಡುವ ಉತ್ತರ – ಅಲ್ಲ ಅಣ್ಣಂದು, ಅಣ್ಣನ ಪಾದುಕೆಯ ರಜ್ಯಭಾರ 🙂

    ***

    “ಮಾ ಫಲೇಷು ಕದಾಚನ” ಹೇಳುದರ ಸುಲಭವಾಗಿ “ಅನುಪಾಲನೆ” ಹೇಳಿ ಹೇಳ್ಲಕ್ಕೋಳಿ.
    ಈ ಎಲ್ಲ ಸೃಷ್ಟಿ ನಾವು ಬಪ್ಪಂದ ಮದಲೂ ಇತ್ತು, ಮತ್ತೆಯೂ ಇರ್ತು.
    ಪಾಲನೆ ಆ ದೇವರು ಮಾಡ್ತು.
    ಅಂಬಗ ನಮ್ಮ ಕೆಲಸ ಎಂತರ?
    – ಭರತ° ಮಾಡಿದ ಹಾಂಗೆ ಅನುಪಾಲನೆ.
    ನವಗೆ ಕೊಟ್ಟ ಕೆಲಸವ ನೋಡಿಂಡು ಹೋದರಾತು.

    ಎಲ್ಲ ಕೆಲಸ ನಮ್ಮದು, ಯಾವುದರಲ್ಲೂ ಕೊರತೆ ಕಾಂಬಲಾಗ.
    ಆದರೆ, ಅದರಿಂದ ಬಂದ ಯಾವುದೇ ಫಲಕ್ಕೂ ನಾವು ಜೆನ ಅಲ್ಲ.
    ಉದಾಃ ಪರೀಕ್ಷೆಗೆ ಕಲಿವದು ನಮ್ಮ ಕೆಲಸ. ಬರದಿಕ್ಕುದು ಪರೀಕ್ಷೆ ಒಂದರಿ – ಪಾಸಾತೋ ಹೆಚ್ಚುಗಾರಿಕೆ ನಮ್ಮದಲ್ಲ – ಆಯಿದಿಲ್ಲೆಯೋ ಬೇಜಾರಿಲ್ಲೆ ಮತ್ತೊಂದರಿ ಬರದತ್ತು.
    ಹಾಂಗೆ ಹೇಳಿಯೊಂದು ಓದದ್ದೇ ಕೂಪದಲ್ಲ. 🙂

    ಮೇಗಾಣ ಏವದರು ಶೆಕ್ತಿಯ ಹಿಡುಕ್ಕೊಂಬದು –
    ದೇವರೋ, ಗುರುವೋ, ಹಿರಿಯರೋ – ಆರಾರು..
    ನಮ್ಮೆಲ್ಲ ಕೆಲಸವ ಅವರ ಪರವಾಗಿ – ಅವರ ಹೆಸರಿಲ್ಲಿ – ಅವಕ್ಕಾಗಿ ಮಾಡೆಕು.

    ಆ ಶಕ್ತಿ – ಯಾವುದಾದರೋಂದು ನಿಸ್ವಾರ್ಥ ಗುರಿಯೂ ಆದಿಕ್ಕು.

    ***

    ಹಾಂಗೇ ಡುಂಡಿರಾಜರ ಕವಿತೆಯೂ ನೆಂಪಾತು,
    ದಿಕ್ಕೆಟ್ಟು ನಿಂತ ನರನಿಗೆ ನಾರಾಯಣ ತೋರಿದ ರಸ್ತೆ
    ಕರ್ಮಣ್ಯೇವಾಧಿಕಾರಸ್ತೇ…

    1. ಸಾರವ ಸವಿದುಂಡು ಬರವ ನಿಂಗಳ ಒಪ್ಪ ಓದಿ ಕೊಶಿ ಆತು ಮಂಗ್ಳೂರ ಭಾವ. ಧನ್ಯವಾದಂಗೊ ನಿಂಗೊಗೂ ಮತ್ತು ಪ್ರತಿಯೊಬ್ಬಂಗೂ.

  3. [ನಾವು ಮಾಡುವ ಪ್ರತಿಯೊಂದು ಕರ್ಮ ಪೂಜೆ ಪುರಸ್ಕಾರಂಗಳ ನಿಸ್ವಾರ್ಥವಾಗಿ ಭಗವಂತನ ಆರಾಧನೆ ಹೇಳಿ ಭಾವಿಸಿ ಮಾಡೆಕ್ಕು. ನವಗೆ ಎಂತ ಬೇಕು ಹೇಳ್ವದರ ಚಿಂತನೆ ನವಗೆ ಬೇಡ. ನವಗೆ ಅಗತ್ಯ ಇಪ್ಪದರ ನಮ್ಮ ಕರ್ಮಕ್ಕೆ ಅನುಗುಣವಾಗಿ ಭಗವಂತ ಕೊಟ್ಟೇ ಕೊಡುತ್ತ°]
    ಕರ್ಮಣ್ಯೇ…. ಗೀತೆಯ ಒಂದು ಪ್ರಸಿದ್ಧ ಶ್ಲೋಕ. ಅದರ ಅರ್ಥ ವಿವರಣೆ ಅಂತೂ ತುಂಬಾ ಲಾಯಿಕ ಆಯಿದು.
    ಧನ್ಯೋಸ್ಮಿ

  4. ಯೋಗಃ ಕರ್ಮಸು ಕೌಶಲಂ .!
    ಸುದೀರ್ಘವಾದ ವಿವರಣೆ ಓದಿ ತೃಪ್ತಿ ಆತು.

  5. ಚೆನ್ನೈ ಭಾವ… ಶಬ್ದಂಗಳೇ ಇಲ್ಲೇ…

    ಇದಿಷ್ಟನ್ನೆ ಸಾಕು ನಿತ್ಯ ಓದಿ ಓದಿ ಮನಸ್ಸಿನಾಳಕ್ಕೆ ಇಳಿಸಿಗೊಂಡರೆ ಕೆಲವೇ ದಿನಲ್ಲಿ ಜೀವನ್ಮುಕ್ತಿ ಪಡವಲೆ ಎಡಿಗು… ದಯವಿಟ್ಟು ಎಲ್ಲರೂ ಅವಕಾಶವ ಸದುಪಯೋಗ ಮಾಡಿಗೊಳ್ಳಿ…

    1. ‘ಜೀವನ್ಮುಕ್ತಿ’ ಹೇಳಿರೆ ಎಂತರ? ಅದರ ಪಡದರೆ ಎಂತ ಲಾಭ?

      S.S.L.C. ಇಪ್ಪಗ ಕಷ್ಟಪಟ್ಟು ಓದಿ,ಕಲಿವದು ಪರೀಕ್ಷೆಲ್ಲಿ ಉತ್ತಮ ಅಂಕ ಸಿಕ್ಕೆಕ್ಕು ಹೇಳಿ ಆದರೆ ಉತ್ತಮ ಫಲಿತಾಂಶ ನೋಡಿಯಪ್ಪಗ ಅವಂಗೆ ‘ಮುಕ್ತಿ’ ಸಿಕ್ಕಿದ ಹಾಂಗೆ ಆವುತ್ತು. ಅದೇ ವಿದ್ಯಾರ್ಥಿಯ ಜ್ಹಾನವ ನೋಡಿ ನಿನಗೆ ಇರೆಕ್ಕಾದ ಎಲ್ಲಾ ಜ್ಹಾನವೂ ಇದ್ದು… ನಿನಗೆ ಎಲ್ಲದರಲ್ಲಿ ನೂರರಲ್ಲಿ ನೂರು ಅಂಕ ಹೇಳಿ ಪರೀಕ್ಷೆ ಬರವ ಮೊದಲೇ ಸರ್ಟಿಫಿಕೇಟ್ ಕೊಟ್ಟರೆ ಅವಂಗೆ ಮೊದಲೇ ಮುಕ್ತಿ ಸಿಕ್ಕಿದ ಹಾಂಗೆ ಆತು. ಜೀವನ್ಮುಕ್ತಿ ಹೇಳಿರೆ ಹೀಂಗೆ…

      ನಾವು ಜನ್ಮ ಜನ್ಮಾಂತರಗಳಿಂದ ಜೀವಿಸುತ್ತಾ ಇಪ್ಪದು ಎಂತಕೆ? ಕೇವಲ ‘ಮುಕ್ತಿ’ ಪಡವಲೆ ಅಥವಾ ಆ ಒಂದು ಜ್ಹಾನವ ಪಡವಲೆ. ಅದರ ಪಡದರೆ ನಮ್ಮ ಜೀವನದ ಗುರಿಯ ನಾವು ಸೇರಿತ್ತು. ಮರಣಲ್ಲಿ ಆ ಜ್ಹಾನವ ಕಾಂಬದು ಒಂದು ಸಾಧನೆಯೇ… ಅದು ಸುಲಭ ಸಾಧ್ಯ ಅಲ್ಲ… ಜೀವಂತ ಆಗಿಪ್ಪಗಲೇ ಆ ಜ್ಹಾನವ ಪಡದರೆ ಅದುವೇ ‘ಜೀವನ್ಮುಕ್ತಿ’.

  6. ಅಲಂಕಾರ ಅಲ್ಲ ಹುರುಳು ನೋಡಿ ಶಾಸ್ತ್ರಂಗಳ ತಿಳಿಯೆಕ್ಕು-ಸರಿಯಾದ ವಿವರಣೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×