- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಶ್ರೀಮದ್ಭಗವದ್ಗೀತಾ – ದಶಮೋsಧ್ಯಾಯಃ – ವಿಭೂತಿಯೋಗಃ – ಶ್ಲೋಕಾಃ 19 – 26
ಶ್ಲೋಕ
ಶ್ರೀಭಗವಾನುವಾಚ
ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ ।
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ ॥೧೯॥
ಪದವಿಭಾಗ
ಶ್ರೀ ಭಗವಾನ್ ಉವಾಚ
ಹಂತ ತೇ ಕಥಯಿಷ್ಯಾಮಿ ದಿವ್ಯಾಃ ಹಿ ಆತ್ಮ-ವಿಭೂತಯಃ । ಪ್ರಾಧಾನ್ಯತಃ ಕುರು-ಶ್ರೇಷ್ಠ ನ ಅಸ್ತಿ ಅಂತಃ ವಿಸ್ತರಸ್ಯ ಮೇ ॥
ಅನ್ವಯ
ಶ್ರೀ ಭಗವಾನ್ ಉವಾಚ
ಹೇ ಕುರು-ಶ್ರೇಷ್ಠ! ಹಂತ, ದಿವ್ಯಾಃ ಆತ್ಮ-ವಿಭೂತಯಃ ಪ್ರಾಧಾನ್ಯತಃ ತೇ ಕಥಯಿಷ್ಯಾಮಿ, ಮೇ ವಿಸ್ತರಸ್ಯ ಅಂತಃ ಹಿ ನ ಅಸ್ತಿ ।
ಪ್ರತಿಪದಾರ್ಥ
ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮ ಪುರುಷ° ಹೇಳಿದ°, ಹೇ ಕುರುಶ್ರೇಷ್ಠ! – ಏ ಕುರುವಂಶಲ್ಲಿ ಶ್ರೇಷ್ಠನೆನಿಸಿಗೊಂಡ ಅರ್ಜುನ!, ಹಂತ – ಆಗಲಿ, ದಿವ್ಯಾಃ – ದೈವೀಕವಾದ, ಆತ್ಮ-ವಿಭೂತಯಃ – ವೈಯಕ್ತಿಕ ಐಶ್ವರ್ಯಂಗಳ, ಪ್ರಾಧಾನ್ಯತಃ – ಪ್ರಧಾನವಾಗಿಪ್ಪಂತದರ, ತೇ ಕಥಯಿಷ್ಯಾಮಿ – ನಿನಗೆ ಹೇಳುತ್ತೆ, ಮೇ – ಎನ್ನ, ವಿಸರಸ್ಯ – ವೈಶಾಲ್ಯದ, ಅಂತಃ – ಮಿತಿ/ಎಲ್ಲೆ, ಹಿ – ಖಂಡಿತವಾಗಿಯೂ, ನ ಅಸ್ತಿ – ಇಲ್ಲೆ.
ಅನ್ವಯಾರ್ಥ
ದೇವೋತ್ತಮ ಪರಮ ಪುರುಷ ಹೀಂಗೆ ಹೇಳಿದ° – ಆಗಲಿ, ಅರ್ಜುನ!, ಎನ್ನ ದಿವ್ಯ ವಿಭೂತಿಗಳ ಬಗ್ಗೆ ಪ್ರಧಾನವಾದ್ದದರ ನಿನಗೆ ಹೇಳುತ್ತೆ. ಎನ್ನ ಮಹಿಮೆಯ ವಿಸ್ತರದ ವ್ಯಾಪ್ತಿಯೇ ಇಲ್ಲೆ (ಮೇ ವಿಸ್ತರಸ್ಯ ಅಂತಃ ಹಿ ನ ಅಸ್ತಿ).
ತಾತ್ಪರ್ಯ / ವಿವರಣೆ
ಸಂಸ್ಕೃತಲ್ಲಿ ‘ಹಂತ’ ಹೇಳ್ವ ಶಬ್ದ ಸಂತೋಷ ಮತ್ತೆ ವಿಸ್ಮಯವ ವ್ಯಕ್ತಪಡುಸಲೆ ಉಪಯೋಗುಸುವ ಒಂದು ಪದ. ಭಲೇ, ಒಳ್ಳೆದು, ಉತ್ತಮ, ಆಗಲಿ ಮುಂತಾದ ಉದ್ಗಾರ ಸೂಚಕ ಅರ್ಥ ಕೊಡುವ ಪದ. ಭಗವಂತನ ವೈಭವವ ಭಗವಂತನಿಂದಲೇ ತಿಳ್ಕೊಳ್ಳೆಕು ಹೇಳಿ ಅರ್ಜುನನ ಅಭಿಲಾಷೆಯ ಕಂಡು ಇಲ್ಲಿ ಭಗವಂತ° ಆಗಲಿ, ಭಲೇ ಹೇಳ್ವ ಸಂತೋಷವ ವ್ಯಕ್ತಪಡಿಸಿದ್ದದು.
ಅರ್ಜುನನ ಬಿನ್ನಹವ ಕೇಳಿ ಭಗವಂತ° ಹೇಳುತ್ತ° – “ಆಗಲಿ, ಎನ್ನ ಅಲೌಕಿಕ ವಿಭೂತಿಯ ಪ್ರಧಾನವಾದ್ದರ ಆಯ್ದು ವಿವರುಸುತ್ತೆ, ಎನ್ನ ಬಿತ್ತರಕ್ಕೆ ಮಿತಿ ಇಲ್ಲೆ”
ಭಗವಂತ° ಮತ್ತೆ ಅವನ ಸಿರಿಯ ಹಿರಿಮೆಯ ಅರ್ಥಮಾಡಿಗೊಂಬದು ಅಷ್ಟು ಸುಲಭದ ಕೆಲಸ ಅಲ್ಲ. ವ್ಯಕ್ತಿಗತ ಇಂದ್ರಿಯಂಗೊ ಒಂದು ಮಿತಿಗೆ ಒಳಪ್ಪಟ್ಟದ್ದು. ಕೃಷ್ಣನ ವ್ಯವಹಾರವ ಸಮಗ್ರವಾಗಿ ಗ್ರಹಿಸಲೆ ಅವು ಅವಕಾಶ ಕೊಡುತ್ತಿಲ್ಲೆ. ಅಂದರೂ ಭಕ್ತರು ಭಗವಂತನ ಬಗ್ಗೆ ಮತ್ತು ತಿಳ್ಕೊಂಬಲೆ ಪ್ರಯತ್ನಿಸುತ್ತವು. ಆದರೆ ಯಾವುದೇ ನಿರ್ದಿಷ್ಟ ಸಮಯಲ್ಲಿ ವಾ ಹಂತಲ್ಲಿ ಭಗವಂತನ ಪೂರ್ಣವಾಗಿ ಅರ್ಥ ಮಾಡಿಗೊಂಬಲೆ ಎಡಿಗಕ್ಕು ಹೇಳ್ವ ಭಾವನೆಂದ ಅಲ್ಲ. ಅದು ಭಗವಂತನ ಸಂಬಂದಿಸಿದ ವಿಷಯಂಗೊ ಎಷ್ಟು ಸವಿ ಹೇಳಿರೆ ಅದು ಅಮೃತದ ಹಾಂಗೆ ಆವುತ್ತು. ಭಕ್ತರು ಅದರ ಸವಿಯುತ್ತವು. ಅವನ ಲೀಲಾವೈಭವವ ಕೇಳಿ ದಿವ್ಯಾನಂದವ ಪಡೆತ್ತವು. ಹಾಂಗಾಗಿ ಅವು ಇನ್ನೂ ಕೇಳೆಕು, ಚರ್ಚಿಸೆಕು ಹೇಳಿ ಬಯಸುವದು. ತನ್ನ ಸಿರಿ ವಿಸ್ತಾರಂಗೊ ಜೀವಿಗೊಕ್ಕೆ ಪೂರ್ತಿಯಾಗಿ ಅರ್ಥ ಆಗ ಹೇಳ್ವದು ಭಗವಂತಂಗೇ ಗೊಂತಿದ್ದು. ಹಾಂಗಾಗಿಯೇ ಇಲ್ಲಿ ‘ಪ್ರಾಧಾನ್ಯತಃ’ – ಪ್ರಧಾನವಾದವುಗಳ, ನವಗೆ ಜೀರ್ಣಿಸಿಗೊಂಬಲೆ ಎಡಿಗಪ್ಪದರ ಹೇಳ್ತೆ ಹೇಳಿ ಭಗವಂತ° ಸುರುಮಾಡುತ್ತ°.
ಇಲ್ಲಿ ‘ಕುರುಶ್ರೇಷ್ಠ’ ಹೇಳಿ ವಿಶೇಷಣ ಪ್ರಯೋಗ ಮಾಡಿದ್ದ° ಭಗವಂತ°. ತಮ್ಮ ತಾವು ಭಗವದುಪಾಸನೆ ದಾರಿಲಿ ತೊಡಗಿಸಿಗೊಂಡ ಸಾಧಕರು ‘ಕುರುಗೊ’. ಇದು ಅಧ್ಯಾತ್ಮಕ್ಕೆ ಬೇಕಾದ ಕನಿಷ್ಠ ಅರ್ಹತೆ. ಹಾಂಗಾಗಿ ಭಗವಂತ° ಹೇಳಿದ್ದದು -“ನೀನು ಅಧ್ಯಾತ್ಮ ಸಾಧನೆಲಿ ಎತ್ತರಕ್ಕೇರಿದವ°. ನಿನಗೆ ಈ ಸಾಧನೆಲಿ ಕಳಕಳಿ ಇದ್ದು. ಹಾಂಗಾಗಿ ನಿನಗೆ ಖಂಡಿತವಾಗಿ ಹೇಳುತ್ತೆ” ಹೇಳಿ ಭಗವಂತ° ಹೇಳಿದ° ಹೇಳಿ ಬನ್ನಂಜೆಯವು ವ್ಯಾಖ್ಯಾನಿಸುತ್ತವು.
ಶ್ಲೋಕ
ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ।
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ॥೨೦॥
ಪದವಿಭಾಗ
ಅಹಂ ಆತ್ಮಾ ಗುಡಾಕಾ-ಈಶ ಸರ್ವ-ಭೂತ-ಆಶಯ-ಸ್ಥಿತಃ । ಅಹಂ ಆದಿಃ ಚ ಮಧ್ಯಮ್ ಚ ಭೂತಾನಾಮ್ ಅಂತಃ ಏವ ಚ ॥
ಅನ್ವಯ
ಹೇ ಗುಡಾಕಾ-ಈಶ!, ಅಹಂ ಸರ್ವ-ಭೂತ-ಆಶಯ-ಸ್ಥಿತಃ ಆತ್ಮಾ, ಭೂತಾನಾಮ್ ಆದಿಃ ಚ ಮಧ್ಯಂ ಚ ಅಂತಃ ಚ ಅಹಮ್ ಏವ ಅಸ್ಮಿ ಮ್
ಪ್ರತಿಪದಾರ್ಥ
ಹೇ ಗುಡಾಕಾ-ಈಶ! – ಏ ಒರಕ್ಕಿನ(ನಿದ್ರೆಯ) ಜಯಿಸಿದವನೇ! (ಏ ಅರ್ಜುನ!), ಅಹಮ್ – ಆನು, ಸರ್ವ-ಭೂತ-ಆಶಯ-ಸ್ಥಿತಃ ಆತ್ಮಾ – ಎಲ್ಲ ಜೀವಿಗಳ ಹೃದಯಲ್ಲಿ ನೆಲೆಸಿದ ಆತ್ಮ°. ಅಹಮ್ ಆದಿಃ ಚ – ಆನು ಮೂಲನೂ ಕೂಡ, ಮಧ್ಯಮ್ ಚ – ಮಧ್ಯನೂ ಕೂಡ, ಅಂತಃ ಚ – ಅಂತ್ಯನೂ ಕೂಡ, ಅಹಮ್ ಏವ ಅಸ್ಮಿ – ಆನೇ ಆಗಿದ್ದೆ.
ಅನ್ವಯಾರ್ಥ
ಏ ಒರಕ್ಕಿನ ಗೆದ್ದಿಪ್ಪ ಅರ್ಜುನ!, ಆನು ಎಲ್ಲ ಜೀವಿಗಳ ಹೃದಯಲ್ಲಿ ನೆಲೆಸಿಪ್ಪ ಪರಮಾತ್ಮ. ಎಲ್ಲ ಜೀವಿಗಳ ಆದಿ, ಮಧ್ಯ ಮತ್ತೆ ಅಂತ್ಯವೂ ಆನೇ ಆಗಿದ್ದೆ.
ತಾತ್ಪರ್ಯ / ವಿವರಣೆ
ಇಲ್ಲಿ ‘ಗುಡಾಕಾ-ಈಶಃ’, ನಿದ್ರೆಯ ತಮಸ್ಸಿನ ಗೆದ್ದವ° ಹೇಳಿ ಅರ್ಥ. ಅಜ್ಞಾನದ ನಿದ್ರೆ. ಆಜ್ಞಾನ್ದ ಕತ್ತಲೆಲಿ ಒರಗಿಯೊಂಡಿಪ್ಪವಂಗೆ ದೇವೋತ್ತಮ ಪರಮ ಪುರುಷ° ಭೌತಿಕ ಮತ್ತೆ ಆಧ್ಯಾತ್ಮಿಕ ಜಗತ್ತಿಲ್ಲಿ ತನ್ನ ಹೇಂಗೆ ಪ್ರಕಟಮಾಡಿಗೊಳ್ತ ಹೇಳ್ವದರ ಅರ್ಥಮಾಡಿಗೊಂಬಲೆ ಎಡಿಯ. ಹಾಂಗಾಗಿ ಇಲ್ಲಿ ಅರ್ಜುನ ಇಂತಹ ಅಜ್ಞಾನದ ಕತ್ತಲೆಯ ಮೀರಿದವನಾಗಿಪ್ಪದರಿಂದ ಅವನ ಈ ರೀತಿಯಾಗಿ ಸಂಬೋಧಿಸಿದ್ದ°.
ಬನ್ನಂಜೆ ವಿವರುಸುತ್ತವು – ಭಗವಂತನ ವಿಭೂತಿಯ ಒಟ್ಟು ಸಾರ ಹೇಳಿರೆ – “ಭಗವಂತ° ಎಲ್ಲರ ಒಳವೂ ತುಂಬಿಗೊಂಡಿದ್ದ°” ಹೇಳ್ವದು. ಭಗವಂತ° ಹೇಳುತ್ತ° – “ಆನು ಪ್ರತಿಯೊಂದು ಜೀವಿಯ ಒಳ ಆತ್ಮವಾಗಿ ತುಂಬಿದ್ದೆ. ಎಲ್ಲ ಜೀವಿಗಳ ಆತ್ಮ° ಆನು. ಮೇಲ್ನೋಟಕ್ಕೆ ಇಲ್ಲಿ ಜೀವಾತ್ಮ-ಪರಮಾತ್ಮ ಒಂದೇ ಹೇಳಿ ಕಾಂಗು. ಆದರೆ ಭಗವಂತ° ಹೇಳಿದ್ದದು- “ಪ್ರತಿಯೊಬ್ಬ ಜೀವಾತ್ಮನ ಆತ್ಮವಾಗಿ ಆನು ತುಂಬಿದ್ದೆ” ಹೇಳಿ, ಹೊರತು ‘ಆನೇ ಜೀವಾತ್ಮ°’ ಹೇಳಿ ಅಲ್ಲ. ಇದು ಪ್ರತಿಯೊಂದು ಜೀವದ ಒಳ ಅಂತರ್ಯಾಮಿಯಾಗಿಪ್ಪ ಬಿಂಬರೂಪಿ ಭಗವಂತನ ಹೇಳುವದು. ಭಗವಂತ° ‘ಸರ್ವಭೂತಾಶಯಸ್ಥಿತಃ’ – ಎಲ್ಲ ಜೀವಿಗಳ ಒಳ(ಹೃದಯಲ್ಲಿ) ನೆಲೆಸಿದವ°, ಎಲ್ಲ ಜೀವಿಗಳ ಹೃದಯಗುಹೆಲಿ ಅಂತರ್ಯಾಮಿಯಾಗಿ ನಿಂದುಗೊಂಡಿದ್ದ ಆ ಹೃತ್ಕಮಲ ಮಧ್ಯ ನಿವಾಸಿ ಭಗವಂತ°. ಇದು ಭಗವಂತನ ಅತೀ ದೊಡ್ಡ ವಿಭೂತಿ. ಅನಂತ ಜೀವರೊಳ ಅನಂತ ವಿಭೂತಿ ರೂಪಲ್ಲಿ ಭಗವಂತ ವ್ಯಕ್ತನಾವುತ್ತ. ಹಾಂಗಾಗಿ ಒಂದೊಂದು ಜೀವಿಲಿ ಒಂದೊಂದು ಶಕ್ತಿವೈಶಿಷ್ಟ್ಯವ ಕಾಂಬದು. ಸಮಸ್ತ ಜೀವಂಗೊ ಹುಟ್ಟುವದಕ್ಕೆ ಮುಂದೆ ಅವುಗಳ ಒಳ ನಿಯಾಮಕನಾಗಿ ನಿಂದು, ಅವುಗಳ ಸೃಷ್ಟಿಗೆ ಕಾರಣನಾಗಿ (ಆದಿಃ), ಅವುಗಳ ರಕ್ಷಣೆ (ಮಧ್ಯಂ) ಮಾಡಿ, ಪ್ರಳಯಕಾಲಲ್ಲಿಯೂ ಕೂಡ ಎಲ್ಲವನ್ನೂ ತನ್ನೊಳ ಕಾಪಾಡುವ ಭಗವಂತ° (ಅಂತ್ಯಃ), ಎಲ್ಲ ಅವಸ್ಥೆಗಳಲ್ಲಿಯೂ ಒಳನಿಂದು ರಕ್ಷಣೆ ಮಾಡುವ ಶಕ್ತಿ – ಆ ಭಗವಂತ°- “ಆದಿಶ್ಚ ಮಧ್ಯಂ ಚ ಭೂತಾನಾಂ ಅಂತಃ ಏವ ಚ”.
ಇಲ್ಲಿ ‘ಗುಡಾಕೇಶ’ – ‘ನಿನ್ನೊಳ ನಿದ್ದೆಯ ಗೆಲ್ಲುವ ಶಕ್ತಿಯಾಗಿ ತುಂಬಿಗೊಂಡಿಪ್ಪವನೂ ಆನೇ’ ಹೇಳ್ವ ಧ್ವನಿ.
ಶ್ಲೋಕ
ಆದಿತ್ಯಾನಾಮಹಂ ವಿಷ್ಣುಃ ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ॥೨೧॥
ಪದವಿಭಾಗ
ಆದಿತ್ಯಾನಾಮ್ ಅಹಮ್ ವಿಷ್ಣುಃ ಜ್ಯೋತಿಷಾಮ್ ರವಿಃ ಅಂಶುಮಾನ್ । ಮರೀಚಿಃ ಮರುತಾಮ್ ಅಸ್ಮಿ ನಕ್ಷತ್ರಾಣಾಮ್ ಅಹಮ್ ಶಶೀ ॥
ಅನ್ವಯ
ಆದಿತ್ಯಾನಾಂ ವಿಷ್ಣುಃ ಅಹಮ್, ಜ್ಯೋತಿಷಾಮ್ ಅಂಶುಮಾನ್ ರವಿಃ, ಮರುತಾಂ ಮರೀಚಿಃ ನಕ್ಷತ್ರಾಣಾಂ ಶಶೀ ಚ ಅಹಮ್ ಅಸ್ಮಿ ।
ಪ್ರತಿಪದಾರ್ಥ
ಆದಿತ್ಯನಾಮ್ – ಆದಿತ್ಯರ (ಆದಿತ್ಯರಲ್ಲಿ ಹೇದರ್ಥ ಇಲ್ಲಿ), ವಿಷ್ಣುಃ – ವಿಷ್ಣುವು / ಪರಮ ಪ್ರಭುವು, ಅಹಮ್ – ಆನು. ಜ್ಞೋತಿಷಾಮ್ – ಸಕಲ ಜ್ಯೋತಿಗಳಲ್ಲಿ, ಅಂಶುಮಾನ್ ರವಿಃ – ಪ್ರಕಾಶಬೀರುವ ಸೂರ್ಯ°, ಮರುತಾಮ್ – ಮರುತ್ತುಗಳಲ್ಲಿ, ಮರೀಚಿಃ – ಮರೀಚಿಯು, ನಕ್ಷತ್ರಾಣಾಮ್ – ನಕ್ಷತ್ರಂಗಳಲ್ಲಿ, ಶಶೀ – ಚಂದ್ರ°, ಚ – ಕೂಡ, ಅಹಮ್ ಅಸ್ಮಿ – ಆನು ಆಗಿದ್ದೆ.
ಅನ್ವಯಾರ್ಥ
ಆನು ಆದಿತ್ಯರಲ್ಲಿ ವಿಷ್ಣು, ಜ್ಯೋತಿಗಳಲ್ಲಿ ತೇಜಸ್ವೀ ಸೂರ್ಯ°, ಮರುತರಲ್ಲಿ ಮರೀಚಿ, ಮತ್ತೆ ನಕ್ಷತ್ರಂಗಳಲ್ಲಿ ಆನು ಚಂದ್ರ° ಆಗಿದ್ದೆ.
ತಾತ್ಪರ್ಯ / ವಿವರಣೆ
ಭಗವಂತ° ಹೇಳಿರೇ ದೊಡ್ಡವ°. ಅವನ ಹಿರಿಮೆಗೆ ಎಲ್ಲೆ/ಬೇಲಿ ಇಲ್ಲೆ. ಎಲ್ಲದರಲ್ಲೂ ಶ್ರೇಷ್ಠ° – ಭಗವಂತ°. ಹಾಂಗಾಗಿ ಇಲ್ಲಿ ನಮ್ಮ ಲೌಕಿಕ ಕಣ್ಣಿಂಗೆ ಯಾವುದೆಲ್ಲ ದೊಡ್ಡದು ಹೇಳಿ ಕಾಣುತ್ತ್ತೋ ಅದೆಲ್ಲ ಭಗವಂತನ ಸ್ವರೂಪ ಹೇಳಿ ಹೇಳುತ್ತ° ಭಗವಂತ°. ಮೇಲ್ನೋಟಕ್ಕೆ ಇಲ್ಲಿ ಸೂರ್ಯ°, ಚಂದ್ರ° ನಕ್ಷತ್ರ ಮರೀಚಿ ಹೇಳಿ ಹೆಸರುಗೊ ಮಾತ್ರ ನವಗೆ ಓದಲೆ ಸಿಕ್ಕುತ್ತಷ್ಟೆ. ಆ ಪ್ರತಿಯೊಂದು ಶಬ್ದದ ಸುತ್ತುದೆ ಒಂದಾರಿ ಕಣ್ಣು ಹಾಯ್ಸುವೊ. ಇದರ ಬನ್ನಂಜೆಯವರ ವ್ಯಾಖ್ಯಾನಂದಲೇ ನೋಡಿ ತಿಳ್ಕೊಂಬದು ಸುಲಭಕ್ಕೆ ಅರ್ಥ ಅಪ್ಪಲೆ ಸಹಾಯಕ ಆವ್ತು.
ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು – ಹನ್ನೆರಡು ಮಂದಿ ಅದಿತಿಯ ಮಕ್ಕಳಲ್ಲಿ (‘ಆದಿತ್ಯಾನಾಮ್’), ಎಲ್ಲೋದಿಕ್ಕೆ, ಎಲ್ಲವುದರೊಳ ತುಂಬಿಪ್ಪದರಿಂದ ವಿಷ್ಣು (ವಾಮನ)ನಾಮಕನಾಗಿದ್ದ°. ಪ್ರಪಂಚಕ್ಕೆ ಬೆಳಕು ಕೊಡುವ ಪ್ರಕಾಶ ಕಿರಣಂಗಳಲ್ಲಿ ಹಿರಿದಾದ್ದು ರವಿಯ ಬೆಣಚ್ಚಿ. ಹಾಂಗಾಗಿ ರವಿಯೊಳ ಇಪ್ಪವ° – ಭಗವಂತ°. (ರವ – ನಾದಗಳಿಂದ, ಇ – ಜ್ಞೇಯನಾಗಿ = ರವಿ ಹೇಳಿ ಹೆಸರಿಸಲ್ಪಟ್ಟು). ಮರುತ್ತುಗಳ ಸಂತತಿಲಿ ಮರೀಚಿ -ಆ ಭಗವಂತ°. (ಮರಿ – ನೀರು ತುಂಬಿದ ಮೋಡ, ಚಿ – ಪ್ರಚೋದಿಸುವ = ‘ಮರೀಚಿ’ ಹೇಳಿಸಿಗೊಂಡು ಪ್ರವಹವಾಯುತನಯ° ಮರೀಚಿಲಿ ಭಗವಂತ° ಇದ್ದ. ನಕ್ಷತ್ರಂಗಳ ಒಡೆಯ° ಚಂದ್ರ (ಶಶೀ). ಶ = ಎಲ್ಲ ಸುಖಂಗಳಿಂದ, ಶಿ – ಅಧಿಕ ಸುಖರೂಪನಾಗಿ ಶಶಿ ಎನಿಸಿ ಚಂದ್ರನೊಳ ಇದ್ದು ಅವಂಗೆ ನಕ್ಷತ್ರಂಗಳ ಒಡೆತನವ ಕೊಟ್ಟದು ಭಗವಂತ°.
ತನ್ನ ವಿಭೂತಿಗಳ ಬಗ್ಗೆ ಹೇಳ್ಳೆ ಸುರುಮಾಡಿದ ಭಗವಂತ° ಸುರೂವಿಂಗೆ ನಿತ್ಯ ಉಪಾಸನೆಲಿ ಬಹಳ ಮುಖ್ಯವಾಗಿ ತಿಳುದಿರೆಕಾದ ತನ್ನ ಸ್ವರೂಪ ವಿಭೂತಿಯ ಹೇಳುತ್ತ°. ಅದಿತಿಯ ಹನ್ನೆರಡು ಮಂದಿ ಮಕ್ಕಳಲ್ಲಿ (ದ್ವಾದಶಾದಿತ್ಯರು – ವಿವಸ್ವಾನ್ (ಸೂರ್ಯ), ಅರ್ಯಮಾ, ಪೂಷಾ, ತ್ವಷ್ಟಾ, ಸವಿತಾ, ಭಗ, ಧಾತಾ, ವಿಧಾತ, ವರುಣ, ಮಿತ್ರ, ಇಂದ್ರ, ಮತ್ತೆ ವಾಮನರೂಪಿ ವಿಷ್ಣು ). ಇದರಲ್ಲಿ ಒಬ್ಬ° ಭಗವಂತನ ಸಾಕ್ಷಾತ್ ವಿಭೂತಿ. ಅವನೇ ವಾಮನ ರೂಪಿ ವಿಷ್ಣು. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದದು – “ದಾವಶಾದಿತ್ಯರಲ್ಲಿ ವಿಷ್ಣುವು ಆನು”. ಇನ್ನು ಆದಿತ್ಯರು ಹೇಳಿರೆ ಸಮಸ್ತ ದೇವತೆಗಳೂ ಹೇಳುವ ಅರ್ಥವೂ ಅಪ್ಪು. ಸಮಸ್ತ ದೇವತೆಗಳಲ್ಲಿ ಸರ್ವೋತ್ತಮ ದೇವೋತ್ತಮ ವಿಷ್ಣುವು ಶ್ರೇಷ್ಠ°.
ಬನ್ನಂಜೆ ಹೇಳ್ತವು – ಈ ಅಧ್ಯಾಯಲ್ಲಿ ಬಪ್ಪ ಪ್ರತಿಯೊಂದು ನಾಮ (ಹೆಸರು) ಕೂಡ ಭಗವಂತನ ವಿಭೂತಿ ನಾಮ. ಹಾಂಗಾಗಿ ಪ್ರತಿಯೊಂದು ನಾಮದ ಹಿಂದೆ ಅನೇಕ ಅರ್ಥನಿಷ್ಪತ್ತಿ ಅಡಗಿದ್ದು. ಅದನ್ನೂ ಒಟ್ಟೊಟ್ಟಿಂಗೆ ಅರ್ಥೈಸಿಕ್ಕಾದ್ದು ಪ್ರಾಮುಖ್ಯ ವಿಷಯ. ಇಲ್ಲಿ ಮದಾಲು ಹೇಳಿದ್ದದು ‘ವಿಷ್ಣುಃ’. ಪೌರಾಣಿಕ ಅರ್ಥವ್ಯಾಪ್ತಿಯ ನೋಡಿರೆ ಈ ಪದಕ್ಕೆ, ವಿಷಲ್-ವ್ಯಾಪ್ತಃ, ವಿಷತಿ-ಪ್ರವೇಶೇ, ವೇತಿ- ಪ್ರಜನಯತಿ, ಗತಿ, ಕಾಂತಿ, ಕಾದನೇಷು ಗಚ್ಛತಿ ಹೇಳ್ವ ಅರ್ಥ ವ್ಯಾಪ್ತಿ ಇದ್ದು. ಹಾಂಗಾಗಿ ಈ ಅರ್ಥಲ್ಲಿ ನೋಡಿರೆ, ವಿಷ್ಣುಃ ಹೇಳಿರೆ ಎಲ್ಲ ಕಡೆ ವ್ಯಾಪ್ತ°, ತುಂಬಿಗೊಂಡಿಪ್ಪವ°. ಅವ° ಎಲ್ಲವುದರ ಹೆರವೂ ಎಲ್ಲವುದರ ಒಳವೂ ತುಂಬಿಗೊಂಡಿದ್ದ°. ಹಾಂಗಾಗಿಯೇ ನಾರಾಯಣ ಸೂಕ್ತಲ್ಲಿ ಹೇಳಿದ್ದದು – “ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ಇನ್ನು ‘ವೇತೇತಿ -ವಿಷ್ಣುಃ’. ಎಲ್ಲೋರು ಆರ ಆಶ್ರಯಿಸಿಗೊಂಡಿದ್ದವೋ ಅವ° ವಿಷ್ಣು – ಸರ್ವಾಶ್ರಯಧಾತ° ಭಗವಂತ°. ‘ವೇತಿ-ಪ್ರಜನಯತಿ’ – ಆರು ಈ ಇಡೀ ಪ್ರಪಂಚವ ಸೃಷ್ಟಿ ಮಾಡಿದನೋ ಅವ° – ವಿಷ್ಣು. ಎಲ್ಲೋರನ್ನು ರಕ್ಷಣೆ ಮಾಡುವವ° – ‘ವೇತಿ-ಗತಿ’. ಇಡೀ ಜಗತ್ತಿನ ರಕ್ಷಿಸಿ ಉದ್ಧಾರ ಮಾಡುವವ° – ‘ವೇತಿ-ಕಾಂತಿ'(ಇಚ್ಛೆ). ಸಮಸ್ತ ವಿಶ್ವವ ಯಾರು ಸಂಹಾರ ಮಾಡುತ್ತನೋ ಅವ° – ‘ವೇತಿ-ಕಾದನೇಶು’. ಮೂರು ಹೆಜ್ಜೆಂದ ತ್ರಿವಿಕ್ರಮನಾಗಿ ಮೂರು ಲೋಕವ ವ್ಯಾಪಿಸಿದವ° – ‘ವೇತಿ-ಗಚ್ಛತಿ’. ಸಮಷ್ಟಿಯಾಗಿ ವಿಷ್ಣು ಹೇಳಿರೆ ‘ದೇವರು’ ಹೇಳ್ವ ಅರ್ಥವ ಕೊಡುತ್ತು. ಇವು ವಿಷ್ಣುಃ ಶಬ್ದಂದ ಅನುಸಂಧಾನ ಮಾಡೇಕ್ಕಾದ ಕೆಲವು ಅರ್ಥಂಗೊ. ಒಟ್ಟಿಲ್ಲಿ “ಎಲ್ಲೋರಿಂಗೂ ಅಶ್ರಯನಾದ, ಎಲ್ಲರ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ, ಎಲ್ಲವುದರ ಒಳವೂ ಹೆರವೂ ತುಂಬಿಪ್ಪ, ಮೂರು ಹೆಜ್ಜೆಂದ ಮೂರು ಲೋಕವ ಅಳದ ವಿಷ್ಣು – ಆ ಭಗವಂತ° ಆನು” ಹೇಳಿ ತನ್ನ ಸ್ವರೂಪ ವಿಭೂತಿಯ ಇಲ್ಲಿ ವಿವರಿಸಿದ್ದ° ಭಗವಂತ°.
ಸ್ವರೂಪ ವಿಭೂತಿಯ ಹೇಳಿದ ಭಗವಂತ°, ಮತ್ತೆ ವಿಷ್ಣುವಿನ ಉಪಾಸನೆಗೆ ಅತ್ಯಂತ ಹಿರಿದಾದ ಪ್ರತೀಕ ‘ಸೂರ್ಯ°’. ಅವನಲ್ಲಿ ತನ್ನ ವಿಭೂತಿಯ ಹೇಳುತ್ತ°. ನಾವು ಗಾಯತ್ರೀ ಪ್ರತಿಪಾದ್ಯನಾದ ವಿಷ್ಣುವಿನ ಸೂರ್ಯನಲ್ಲಿ ಉಪಾಸನೆ ಮಾಡುವದು. ಇದು ಸೌರಶಕ್ತಿಲಿ ಭಗವಂತನ ಉಪಾಸನೆ. ಇದು ಭಗವಂತನ ಉಪಾಸನೆಲಿ ಎರಡನೇ ಮಜಲು. ಸೂರ್ಯ° ನಮ್ಮ ಕಣ್ಣಿಂಗೆ ಕಾಂಬ ಜ್ಯೋತಿಲಿ ಅತ್ಯಂತ ದೊಡ್ಡ ಜ್ಯೋತಿ. ಸೂರ್ಯನಲ್ಲಿ ‘ರವಿ’ ನಾಮಕನಾಗಿ ತುಂಬಿಗೊಂಡಿಪ್ಪವ° – ಭಗವಂತ° ಸೌರಶಕ್ತಿಯಾಗಿ ಇಡೀ ವಿಶ್ವಲ್ಲಿ ವ್ಯಾಪಿಸಿಗೊಂಡಿದ್ದ. ರವ+ಇ = ರವಿ. ರವ ಹೇಳಿರೆ ನಾದ. ಆರು ಗಾಯತ್ರೀ ‘ರವ’ಂದ ಜ್ಞೇಯನೋ ಅವ° -‘ರವಿಃ’. ಹಾಂಗೆ ಬೆಣಚ್ಚಿಂಗೆ ಬೆಣಚ್ಚು ಕೊಡುವ ಭಗವಂತ°, ಗಾಯತ್ರೀ ಪ್ರತಿಪಾದ್ಯನಾಗಿ ‘ರವಿ’ನಾಮಕನಾಗಿ ಸೂರ್ಯನಲ್ಲಿ, ಸೂರ್ಯಕಿರಣಲ್ಲಿ ಸನ್ನಿಹಿತನಾಗಿ ವಿಶ್ವದೆಲ್ಲೆಡೆ ವ್ಯಾಪಿಸಿಗೊಂಡಿದ್ದ°.
ಭಗವಂತ° ಮುಂದೆ ಹೇಳಿದ್ದು – ‘ಮರೀಚಿಃ’. ಆಕಾಶಲ್ಲಿ ವಾತಾವರಣದ ಬೇರೆಬೇರೆ ಪದರವ ನಿಯಮಿಸುವ ಮರುತ್ತುಗಳ ಸಂತತಿ ಮರೀಚಿ. ಮೂಲಭೂತವಾಗಿ ಮರುತ್ತುಗೊ ನಲ್ವತ್ತೊಂಬತ್ತು ಮಂದಿ. ಇವರಲ್ಲಿ ಹತ್ತು ಮಂದಿ ನಮ್ಮ ಪಿಂಡಾಂಡವ ನಿಯಮನ ಮಾಡುವವು. ಈ ಮರುತ್ತುಗಳ ನಿಯಮನ ಮಾಡುವವ ಪ್ರವಹವಾಯು. ಮರೀಚಿ ಈ ಪ್ರವಹವಾಯುವಿನ ಪುತ್ರ°. ಇವ° ಹದಿನೆಂಟನೇ ಕಕ್ಷೆಲಿಪ್ಪ ಭೂತವಾಯು ದೇವತೆ. ಇವ° ಆಕಾಶ ಅಭಿಮಾನಿ ದೇವತೆ ಗಣಪತಿಯ ಸಮಾನಸ್ಮಂದ. ಭಗವಂತ° ಮರೀಚಿನಾಮಕನಾಗಿ ಭೂತವಾಯುವಿನ ಅಭಿಮಾನಿ ದೇವತೆಯೊಳ ವಿಭೂತಿಯಾಗಿ ನಿಂದುಗೊಂಡಿದ್ದ°. ಇದನ್ನೇ ಇನ್ನೊಂದು ಕೋನಲ್ಲಿ ನೋಡಿರೆ, ‘ಮರೀಚಿ’ – ಮರ ಹೇಳಿರೆ ನೀರು. ಮರಿ ಹೇಳಿರೆ ನೀರು ತುಂಬಿಪ್ಪ ಮೋಡ. ಈ ಮೋಡವ ಎಲ್ಲಿಗೆ ಕಳುಸೆಕೋ, ಅಲ್ಲಿಗೆ ಸೇರುಸುವ ವಾಯುವಿಲ್ಲಿ ಸನ್ನಿಹಿತನಾಗಿ ಮಳೆ ಬರುಸುವ ಶಕ್ತಿಯ ಮರೀಚಿಗೆ ಕೊಟ್ಟು ಅವನಲ್ಲಿ ವಿಭೂತಿರೂಪಲ್ಲಿ ಕೂದವ° – ಭಗವಂತ° – ‘ಮರೀಚಿ’.
ಮುಂದೆ, ನಕ್ಷತ್ರಂಗಳ ರಾಜ° ಚಂದ್ರನಲ್ಲಿ ತನ್ನ ವಿಭೂತಿಯ ಹೇಳುತ್ತ°. ಚಂದ್ರನಲ್ಲಿ ಎಲ್ಲ ನಕ್ಷತ್ರಂಗಳ ನಿಯಮಿಸುವ ಶಕ್ತಿಯಾಗಿ ಶಶಿ ಶಬ್ದವಾಚ್ಯ° ಭಗವಂತ° ಇದ್ದ°. ಶಶ ಇಪ್ಪವ ಶಶಿ. ‘ಶ’ ಹೇಳಿರೆ ಆನಂದದ ಆನಂದ – ಪರಮಾನಂದ. ಇಂತಹ ಪರಮಾನಂದ ಉಳ್ಳ ಭಗವಂತ° ಆನಂದಮೂರ್ತಿಯಾಗಿ ಚಂದ್ರನಲ್ಲಿ ಕೂದ°. ಹಾಂಗಾಗಿ ನವಗೆ ಬೆಳದಿಂಗಳು ಆನಂದವ ಕೊಡುತ್ತು.
ಶ್ಲೋಕ
ವೇದಾನಾಂ ಸಾಮವೇದೋsಸ್ಮಿ ದೇವಾನಾಮಸ್ಮಿ ವಾಸವಃ ।
ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ॥೨೨॥
ಪದವಿಭಾಗ
ವೇದಾನಾಮ್ ಸಾಮವೇದಃ ಅಸ್ಮಿ ದೇವಾನಾಮ್ ಅಸ್ಮಿ ವಾಸವಃ । ಇಂದ್ರಿಯಾಣಾಮ್ ಮನಃ ಚ ಅಸ್ಮಿ ಭೂತಾನಾಮ್ ಅಸ್ಮಿ ಚೇತನಾ ॥
ಅನ್ವಯ
ವೇದಾನಂ ಸಾಮವೇದಃ ಅಹಮ್ ಅಸ್ಮಿ, ದೇವಾನಾಂ ವಾಸವಃ ಅಸ್ಮಿ, ಇಂದ್ರಿಯಾಣಾಂ ಮನಃ ಅಸ್ಮಿ, ಭೂತಾನಾಂ ಚೇತನಾ ಚ ಅಸ್ಮಿ ।
ಪ್ರತಿಪದಾರ್ಥ
ವೇದಾನಾಮ್ – ಎಲ್ಲ ವೇದಂಗಳಲ್ಲಿ, ಸಾಮವೇದಃ – ಸಾಮವೇದವು, ಅಹಮ್ ಅಸ್ಮಿ – ಆನು ಆಗಿದ್ದೆ, ದೇವಾನಾಮ್ – ಸಮಸ್ತ ದೇವತೆಗಳಲ್ಲಿ, ವಾಸವಃ ಅಸ್ಮಿ – ಸ್ವರ್ಗಾಧಿಪತಿ ಆನು ಆಗಿದ್ದೆ, ಇಂದ್ರಿಯಾಣಾಮ್ – ಎಲ್ಲ ಇಂದ್ರಿಯಂಗಳಲ್ಲಿ, ಮನಃ ಅಸ್ಮಿ – ಮನಸ್ಸು ಆನಾಗಿದ್ದೆ, ಭೂತಾನಾಮ್ – ಸಮಸ್ತ ಜೀವಿಗಳಲ್ಲಿ, ಚೇತನಾ ಚ ಆಸ್ಮಿ – ಜೀವಶಕ್ತಿಯೂ ಕೂಡ ಆನಾಗಿದ್ದೆ.
ಅನ್ವಯಾರ್ಥ
ವೇದಂಗಳಲ್ಲಿ ಸಾಮವೇದ, ದೇವತೆಗಳಲ್ಲಿ ಸ್ವರ್ಗಾಧಿಪತಿಯಾದ ದೇವೇಂದ್ರ, ಇಂದ್ರಿಯಂಗಳಲ್ಲಿ ಮನಸ್ಸು, ಮತ್ತೆ ಎಲ್ಲ ಜೀವಿಗಳಲ್ಲಿ ಚೇತನ ಆನು ಆಗಿದ್ದೆ.
ತಾತ್ಪರ್ಯ / ವಿವರಣೆ
ಮತ್ತೆ ಬನ್ನಂಜೆಯವರ ವ್ಯಾಖ್ಯಾನಂದಲೇ ಹೆರ್ಕಿದ್ದು – ಭಗವಂತ° ತನ್ನ ವಿಭೂತಿಯ ಹೇಳುತ್ತಾ ಮತ್ತೆ ಮುಂದುವರುಸುತ್ತ° – ವೇದಂಗಳಲ್ಲಿ ಸಾಮವೇದ ಆನು. ಸಾಮ = ಎಲ್ಲೆಡೆ ಸಮನಾಗಿದ್ದು, ವೇದ = ಜ್ಞಾನರೂಪನಾಗಿಪ್ಪದು – ‘ಸಾಮವೇದ’. ದೇವತೆಗಳಲ್ಲಿ ಇಂದ್ರ (ವಾಸವಃ). ವಾಸ = ಎಲ್ಲ ನೆಲೆಲಿ , ವಃ = ಇಪ್ಪವ° – ‘ವಾಸವ°’ ಎನಿಸಿ ದೇವೇಂದ್ರನಲ್ಲಿ ಭಗವಂತ° ಇದ್ದ°. ಇಂದ್ರಿಯಂಗಳಲ್ಲಿ ಮನಸ್ಸು. ಅರಿವು ನೀಡುವದರಿಂದ ‘ಮನಸ್’ ಎಂದೆಣಿಸಿ ಮನಸ್ಸಿಲ್ಲಿ ಭಗವಂತ ನೆಲೆಸಿದ್ದ°. ಜೀವಿಗಳ ಚೈತನ್ಯ – ಭಗವಂತ°. ಚೇತಸ್ = ಎಲ್ಲ ಜೀವಿಗಳ ನೆನಪಿನ ಗೆಂಟು, ನಾ = ಬಿಡುಸವದರಿಂದ = ಚೇತನಾ.
ಅಕಾಶಲ್ಲಿ ಸೂರ್ಯ°, ಚಂದ್ರ°, ನಕ್ಷತ್ರ, ಗಾಳಿಲಿ ತನ್ನ ವಿಭೂತಿಯ ಹೇಳಿದ ಭಗವಂತ° ಇಲ್ಲಿ ಆಕಾಶದ ವಿಶೇಷ ಗುಣವಾದ ಶಬ್ದದ ಬಗ್ಗೆ ಹೇಳುತ್ತ°. ಶಬ್ದದ ವಿಭೂತಿ – ‘ವೇದ’. ವೇದಲ್ಲಿ ವಿಶಿಷ್ಟವೇದ – ‘ಸಾಮವೇದ’. ವೇದಂಗೊ ಎಲ್ಲವೂ ಅಪೂರ್ವವೇ ಆಗಿದ್ದರೂ ಸಾಮವನ್ನೇ ಎಂತಕೆ ಇಲ್ಲಿ ವಿಶೇಷವಾಗಿ ಹೆಸರಿಸಿದ್ದದು ಹೇಳ್ವದು ಕುತೂಹಲವೇ. ವೇದಂಗಳಲ್ಲಿ ತಾರತಮ್ಯ ಇಲ್ಲೆ. ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯ ಇದ್ದು. ಸಾಮವೇದದ ಅಭಿಮಾನಿ ಪ್ರಾಣದೇವರು. ಪ್ರಾಣದೇವರ ಪ್ರಿಯವಾದ್ದು , ಮಧುರವಾಗಿ ಹಾಡುವದು ‘ಸಾಮಗಾನ’., ಭಗವಂತಂಗೂ ಅತೀ ಇಷ್ಟ. ಸಾಮವೇದದ ವೈಶಿಷ್ಟ್ಯ ‘ನಾದ’. ಒಂದು ಶಬ್ದವ ಹೇಂಗೆ ಒಡದರೂ, ಅದರ ಹೇಂಗೆ ಪದಪಾಠ ಮಾಡಿರೂ, ಅದರಲ್ಲಿ ಯಾವ ನಾದ ತುಂಬಿದರೂ ಅದು ಭಗವಂತನ ನಾಮದೇಯವಾವ್ತು ಹೇಳ್ವ ಪ್ರಯೋಗ ಸಾಮವೇದ. ಋಗ್ವೇದ, ಯಜುರ್ವೇದಂಗಳಲ್ಲಿ ಮಂತ್ರಂಗಳ ಹಾಂಗೂ ಶಬ್ದಂಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದಲ್ಲಿ ಶಬ್ದಂಗಳ ಒಟ್ಟಿಂಗೆ ನಾದವ ಭಗವಂತನಲ್ಲಿ ಸಮನ್ವಯಗೊಳುಸುವ ಅಪೂರ್ವ ಗುಣಧರ್ಮ ಇದ್ದು. ಶಬ್ದಂಗಳ ಹಿಂದಾಣ ನಾದಂದ ಭಗವಂತನ ಕಾಂಬ ನಾದೋಪಾಸನೆ ಇಪ್ಪ ವೇದ ಸಾಮವೇದವಾದ್ದರಿಂದ ಭಗವಂತ° ಸಾಮವೇದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದ°. ಹಾಂಗಾಗಿ ‘ಸಾಮ’ ಭಗವಂತನ ಅನ್ವರ್ಥ ನಾಮ. ಅಂತೂ ಎಲ್ಲ ಶಬ್ದಂಗೊ ಭಗವದ್ ಪರ ಹೇಳ್ವದರ ಋಗ್ವೇದ ತೋರುಸಿದರೆ, ಶಬ್ದವಷ್ಟೇ ಅಲ್ಲ, ಎಲ್ಲ ಘೋಷಂಗಳೂ ಭಗವಂತನ ಹೇಳುತ್ತು ಹೇಳ್ವದರ ಸಾಮವೇದ ತೋರುಸುತ್ತು. ಭಗವಂತ° ‘ಸಾಮಃ’ ಹಾಂಗೇ ‘ವೇದಃ’. ಇಲ್ಲಿ ಸಾಮಃ ಹೇಳಿರೆ ಎಲ್ಲದಿಕ್ಕೆ ಸಮನಾಗಿಪ್ಪವ° ಹೇಳಿ ಅರ್ಥ. ‘ವೇದಃ’ ಹೇಳಿರೆ ತಿಳಿಯೆಕ್ಕಾದವ°, ಜ್ಞಾನರೂಪ°. ಹೀಂಗೆ ನಾದವಾಗಿ ಸಾಮವೇದಲ್ಲಿ ತುಂಬಿ ಭಗವಂತ° ತನ್ನ ವಿಭೂತಿಯ ಮೆರೆಸಿದ್ದ°.
ವೇದದ ಮತ್ತೆ ವೇದಪ್ರತಿಪಾದ್ಯ ದೇವತೆಗೊ. ದೇವತೆಗಳಲ್ಲಿ ಮುಖ್ಯವಾಗಿ ತತ್ವಾಭಿಮಾನಿ ದೇವತೆಗೊ. ಭಗವಂತನ ಅಧಿಷ್ಠಾನವಾಗಿ ಇಂದ್ರಿಯಂಗಳ ನಿಯಮಿಸುವ ದೇವತೆಗಳಲ್ಲಿ ಮುಖ್ಯನಾದವ° ‘ವಾಸವ°’ (ಇಂದ್ರ). ಇವ° ಬಾಹ್ಯೇಂದ್ರಿಯಾಭಿಮಾನಿ ದೇವತೆಗಳಲ್ಲಿ ಶ್ರೇಷ್ಠ°. ಇವ° ಐದು ಜ್ಞಾನೇಂದ್ರಿಯಂಗ (ಕಣ್ಣು, ಕೆಮಿ, ಮೂಗು, ನಾಲಗೆ, ಚರ್ಮ) ಮತ್ತೆ ಐದು ಕರ್ಮೇಂದ್ರಿಯಂಗಳಲ್ಲಿ (ಕೈ, ಕಾಲು, ಬಾಯಿ, ಪಾಯು, ಉಪಸ್ಥ) ಅತ್ಯಂತ ವಿಶಿಷ್ಟವಾದ ಕೈ(ಹಸ್ತ)ದ ಅಭಿಮಾನಿ ದೇವತೆ. ಇತರ ಎಲ್ಲಾ ಇಂದ್ರಿಯಂಗೊ ಬೇರೆ ಪ್ರಾಣಿಗೊಕ್ಕೂ ಇದ್ದು. ಆದರೆ, ಕುಸುರಿ ಕೆಲಸ, ನಾಟ್ಯಭಂಗಿ, ಶಿಲ್ಪ ಇತ್ಯಾದಿ ಅತ್ಯದ್ಭುತ ಹಸ್ತಕೌಶಲ ಕೇವಲ ಮನುಷ್ಯರಿಂಗೆ ಮಾಂತ್ರ ಭಗವಂತ° ಕೊಟ್ಟದು. ಕೈಯ ಅಭಿಮಾನಿ ದೇವತೆ ‘ವಾಸವ’ನಲ್ಲಿ ಭಗವಂತ° ವಾಸಮಾಡಿ ಇತರ ಎಲ್ಲಾ ತತ್ವಾಭಿಮಾನಿ ದೇವತೆಗಳ ನಿಯಂತ್ರುಸುವ ಶಕ್ತಿಯ ತುಂಬಿದ್ದ°. ಇಂತಹ ‘ವಾಸವ’ನಾಮಕ° ಭಗವಂತ° ವಿಭೂತಿಯಾಗಿ ಇಂದ್ರನಲ್ಲಿ ತುಂಬಿಗೊಂಡಿಪ್ಪದರಿಂದ ಇಂದ್ರನ ವಾಸವ° ಹೇಳಿ ಹೇಳುವದು. ಇನ್ನೊಂದು ಅರ್ಥಲ್ಲಿ ಭಗವಂತನ ವಿಭೂತಿನಾಮ ‘ವಾಸವ°’ ಹೇಳಿರೆ ವಸುಗಳ ಸಮುದಾಯ. ವಸುಗೊ ಹೇಳಿರೆ ದೇವತೆಗಳ ಸಮುದಾಯ. ಬ್ರಹ್ಮಾಂಡಲ್ಲಿದ್ದು ಬ್ರಹ್ಮಾಂಡವನ್ನೂ ಪಿಂಡಾಂಡವನ್ನೂ ನಿಯಂತ್ರುಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ° – ‘ವಾಸವಃ’, ಎಲ್ಲ ನೆಲೆಗಳಲ್ಲೂ ಇಪ್ಪ ಭಗವಂತ° – ‘ವಾಸವಃ’.
ಬಾಹ್ಯೇಂದ್ರಿಯದ ಮತ್ತೆ ನಮ್ಮ ಅಂತರಂಗ ಪ್ರಪಂಚಲ್ಲಿ ಭಗವಂತ° ತನ್ನ ವಿಭೂತಿಯ ವಿವರುಸುತ್ತ° – ಮನುಷ್ಯನ ಎಲ್ಲ ಕಾರುಬಾರಿಂಗೆ ‘ಮನಸ್ಸು’ ಕಾರಣ. ಮನಸ್ಸಿಲ್ಲದ್ರೆ ಎಲ್ಲವೂ ಶೂನ್ಯ. ಇಂದ್ರಿಯಂಗಳ ಚಟುವಟಿಕೆಗೆ ಮೂಲ ಪ್ರೇರಣೆ ಇದು. ಹೆರಾಣ ವಿಷಯಂಗಳ ಒಳಾಣ ಆತ್ಮಕ್ಕೆ ಮುಟ್ಟುಸುವ ಮಾಧ್ಯಮ – ‘ಮನಸ್ಸು’. ಇಂದ್ರಿಯಂಗೊ ಇಪ್ಪದು ಸಾರ್ಥಕ ಅಪ್ಪದು ಮನಸ್ಸಿನ ಮೂಲಕ. ಹೆರಾಣ ವಾ ಒಳಾಣ ವಿಷಯಂಗೊ ಹೊಳವದು ಮನಸ್ಸಿನ ಮೂಲಕ. ಭಗವಂತ° ಮನನಕ್ಕೆ ಕಾರಣನಾಗಿ ‘ಮನಃ’ ಶಬ್ದವಾಚ್ಯನಾಗಿ ನಮ್ಮ ಮನಸ್ಸಿಲ್ಲಿ ಕೂದುಗೊಂಡಿಪ್ಪದರಿಂದ ನವಗೆ ಗ್ರಹಿಕೆಯ/ಗ್ರಹಣ ಶಕ್ತಿ ಬಂತು. ‘ಮನುತೇ ಇತಿ ಮನಃ’. ಜ್ಞಾನಸ್ವರೂಪನಾದ ಭಗವಂತ. ಎಲ್ಲವನ್ನೂ ತಿಳಿವವ, ಎಲ್ಲವನ್ನೂ ಬಲ್ಲವ ‘ಮನಸ್’ ಶಬ್ದವಾಚ್ಯ° – ಆ ಭಗವಂತ°.
ಮನಸ್ಸಿನ ಮತ್ತೆ ಮನಸ್ಸಿನ ಮೂಲಕ ಬಪ್ಪ ವಿಷಯವ ಗ್ರಹಣ ಮಾಡುವ ಶಕ್ತಿ – ಅರಿವು (ಪ್ರಜ್ಞೆ). ಭಗವಂತ° ನಮ್ಮೊಳ ಇದ್ದುಗೊಂಡು ಮನಸ್ಸು ಕಂಡದ್ದರ ಅರಿವಾಗಿ, ವಿಷಯವ ಸ್ವೀಕರುಸುವ ಗ್ರಹಣ ಶಕ್ತಿಯಾಗಿ ಕೂದವ° – ಭಗವಂತ°. ಇದರಿಂದ ಪ್ರಪಂಚವ ಗ್ರಹನ ಮಾಡುವ ಶಕ್ತಿ ಜೀವಕ್ಕೆ ಬಂತು. ಇಡೀ ವಿಶ್ವವ ತನ್ನ ಅರಿವಿಣ್ದ ಗ್ರಹಣ ಮಾಡಿ ವ್ಯಾಪುಸುವ ವಿಸ್ಮಯ ಭಗವಂತ° – ‘ಚೇತನಃ’. ಚೇತಸ್ ಹೇಳಿರೆ ನಮ್ಮ ಸುಪ್ತಪ್ರಜ್ಞೆ. ನಮ್ಮ ಪ್ರತಿಯೊಂದು ಅನುಭವ ನಮ್ಮ ಸುಪ್ತಪ್ರಜ್ಞೆಲಿ ಸಂಗ್ರಹ ಆವುತ್ತು. ಚಿತ್ತಕ್ಕೆ ಎಲ್ಲವನ್ನೂ ಗ್ರಹಿಸಿಗೊಂಬ ಶಕ್ತಿ ಕೊಟ್ಟವ° – ‘ಚೇತನಃ’ ನಾಮಕನಾದ ಭಗವಂತ°. ಇದು ಭಗವಂತನ ವಿಭೂತಿ.
ಶ್ಲೋಕ
ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ ।
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ॥೨೩॥
ಪದವಿಭಾಗ
ರುದ್ರಾಣಾಮ್ ಶಂಕರಃ ಚ ಅಸ್ಮಿ ವಿತ್ತ-ಈಶಃ ಯಕ್ಷ-ರಕ್ಷಸಾಮ್ । ವಸೂನಾಮ್ ಪಾವಕಃ ಚ ಅಸ್ಮಿ ಮೇರುಃ ಶಿಖರಿಣಾಮ್ ಅಹಮ್ ॥
ಅನ್ವಯ
ಅಹಂ ರುದ್ರಾಣಾಂ ಶಂಕರಃ, ಯಕ್ಷ-ರಕ್ಷಸಾಂ ಚ ವಿತ್ತ-ಈಶಃ, ವಸೂನಾಂ ಪಾವಕಃ ಶಿಖರಿಣಾಂ ಮೇರು ಚ ಅಸ್ಮಿ ।
ಪ್ರತಿಪದಾರ್ಥ
ಅಹಮ್ – ಆನು, ರುದ್ರಾಣಾಮ್ ಶಂಕರಃ – ಏಕಾದಶರುದ್ರರಲ್ಲಿ ಶಿವ°, ಯಕ್ಷ-ರಕ್ಷಸಾಮ್ ಚ ವಿತ್ತ-ಈಶಃ – ಯಕ್ಷ-ರಾಕ್ಷಸರಲ್ಲಿ ಧನಾಧಿಪತಿ ಕುಬೇರ°, ವಸೂನಾಮ್ ಪಾವಕಃ – ಅಷ್ಟವಸುಗಳಲ್ಲಿ ಅಗ್ನಿ, ಶಿಖರಿಣಾಮ್ ಮೇರುಃ ಚ ಅಸ್ಮಿ – ಪರ್ವತಂಗಳಲ್ಲಿ ಮೇರುಪರ್ವತ ಕೂಡ ಆಗಿದ್ದೆ.
ಅನ್ವಯಾರ್ಥ
ಏಕಾದಶ (ಹನ್ನೊಂದು)ರುದ್ರರಲ್ಲಿ ಆನು ಶಿವ°, ಯಕ್ಷ-ರಾಕ್ಷಸರಲ್ಲಿ ಆನು ಧನಾಧಿಪತಿಯಾದ ಕುಬೇರ°, ಅಷ್ಟವಸುಗಳಲ್ಲಿ ಆನು ಅಗ್ನಿ, ಮತ್ತೆ ಪರ್ವತಂಗಳಲ್ಲಿ ಮೇರು ಪರ್ವತ ಕೂಡ ಆನು ಆಗಿದ್ದೆ.
ತಾತ್ಪರ್ಯ / ವಿವರಣೆ
ಭಗವಂತ° ಮತ್ತೆ ಮುಂದುವರುಶಿ ಹೇಳುತ್ತ° – “ಹನ್ನೊಂದು ಮಂದಿ ರುದ್ರರಲ್ಲಿ (ಏಕಾದಶ ರುದ್ರರಲ್ಲಿ) ಪ್ರಧಾನ ರುದ್ರ ಆನು ಶಂಕರ°(ಶಮ್ – ಸುಖವ, ಕರ – ಕರುಣಿಸುವದು = ಶಂಕರ), ಯಕ್ಷ-ರಾಕ್ಷಸ ಪಡೆಯ ಒಡೆಯ ಕುಬೇರ° – ‘ವಿತ್ತ-ಈಶಃ’ (ವಿತ್ತ – ಧನ (ಸಿರಿ/ಸಂಪತ್ತು), ಈಶ – ಒಡೆಯ° = ‘ವಿತ್ತೇಶಃ’), ಅಷ್ಟವಸುಗಳಲ್ಲಿ ಅಗ್ನಿದೇವ° ಆನು ‘ಪಾವಕಃ’ (ಪಾವನಗೊಳುಸುವದರಿಂದ ಪಾವಕ°), ಬೆಟ್ಟಂಗಳಲ್ಲಿ ಮೇರು ಪರ್ವತ ( ಈರು – ಬೇರೊಬ್ಬ ಪ್ರೇರಕ°, ಮಾ – ಇಲ್ಲದ್ದಿಪ್ಪದು = ಮೇರು) ಆಗಿ ಆನಿದ್ದೆ”.
ಮತ್ತೆ ಈ ಶ್ಲೋಕದ ಗೂಢಾರ್ಥವ ಸುಲಭವಾಗಿ ಸರಳವಾಗಿ ಅರ್ಥೈಸಿಗೊಂಬಲೆ ಪುನಃ ಬನ್ನಂಜೆಯವರ ವ್ಯಾಖ್ಯಾನಂದಲೆ ನೋಡುವೊ° – ಪ್ರಪಂಚಲ್ಲಿ ತನ್ನ ವಿಭೂತಿಯ ವಿವರುಸುವ ಭಗವಂತ° ಮತ್ತೆ ಹೇಳುತ್ತ° – “ರುದ್ರಾಣಾಮ್ ಶಂಕರಃ ಅಸ್ಮಿ” – ರುದ್ರರು ಹೇಳಿರೆ ಏಕಾದಶರುದ್ರರು – ರೈವತ, ಓಜ, ಭವ, ಭೀಮ, ವಾಮದೇವ, ಉಗ್ರ, ವೃಷಾಕಪಿ, ಅಜೈಕಪಾತ್, ಅಹಿರ್ಬುದ್ನಿ, ವಿರೂಪಾಕ್ಷ, ಮತ್ತೆ ಗಣಪ್ರಧಾನನಾದ ಮಹಾದೇವ°. ಈ ಏಕಾದಶರುದ್ರರಿಂಗೆ ಒಬ್ಬೊಬ್ಬಂಗೂ ಅನೇಕ ಹೆಸರುಗೊ ಇದ್ದು, ಬೇರೆಬೇರೆ ದಿಕ್ಕೆ ಬೇರೆಬೇರೆ ಹೆಸರಿಂದ ಉಲ್ಲೇಖಿಸಿದ್ದವು. ಇಲ್ಲಿ ನಮ್ಮ ಮನಸ್ಸಿನ ಅಭಿಮಾನಿ ದೇವತೆಯಾಗಿಪ್ಪದು ಶಿವ° (ರುದ್ರ°/ಮಹಾದೇವ°), ಅವಂಗೆ ಶಂಕರ° ಹೇಳಿಯೂ ಹೆಸರು. ‘ರೋದಯತಿ ಇತಿ ರುದ್ರಃ’ – ದುಃಖ ಕೊಡುವವ° ಹೇಳುವ ಒಂದು ಅರ್ಥ, ಅದು ಕೊಡುವದು ಕೇವಲ ದುಷ್ಟರಿಂಗೆ. ‘ರುಜಂ ದ್ರಾವಯತಿ ಇತಿ ರುದ್ರಃ’ – ನಮ್ಮಲ್ಲಿಪ್ಪ ರೋಗವ ಪರಿಹಾರ ಮಾಡಿ ಸುಖವ ಕೊಡುವವ° – ‘ರುದ್ರ°’. ಮೂಲತಃ ರೋಗ ಮಾನಸಿಕ. ನಮ್ಮ ಮನಸ್ಸು ದೃಢವಾಗಿದ್ದರೆ ಕಾಯಿಲೆ ಬತ್ತಿಲ್ಲೆ. ಒಂದು ವೇಳೆ ಕಾಯಿಲೆ ಬಂದರೆ ಅದರ ಎದುರುಸುವೆ ಹೇಳ್ವ ದೃಢಮನಸ್ಸು ಇದ್ದರೆ ಮನಸ್ಸೇ ಆ ರೋಗವ ಗುಣಪಡುಸುಗು. ಇನ್ನು ‘ಶಂಕರಃ’ – ಸುಖವ, ಸಂತೋಷವ ಕೊಡುವವ° ಹೇಳಿ ಅರ್ಥ. ಆರೋಗ್ಯವಂತ ದೇಹವೇ ಜೀವನದ ಬಹಳ ದೊಡ್ಡ ಸುಖ. ಯಾವುದೇ ಪುಣ್ಯ ಕರ್ಮ ಸಾಧನೆ ಮಾಡೇಕಾರೆ, ಆರೋಗ್ಯವಂತ ದೇಹ ಬೇಕು. ‘ರುದ್ರ°’ ಶರೀರಪುರುಷ°. ಈ ದೇಹ ಸರ್ತ ನಿಂದುಗೊಂಡು ನಡೆಕಾರೆ ದೇಹಲ್ಲಿ ಶರೀರಪುರುಷನಾದ ಶಿವಶಕ್ತಿ ಕಾರಣ. ನಮ್ಮ ಮನಸ್ಸಿಲ್ಲಿ ಕೂದುಗೊಂಡು ನಮ್ಮ ಮಾನಸಿಕ ತುಮುಲವ ಹೋಗಲಾಡುಸಿ, ಅರೋಗ್ಯವಂತ ಶರೀರವ ಕೊಟ್ಟು, ಆನಂದ ಕೊಡುವವ° – ‘ರುದ್ರ°’. ಶಿವನ ‘ಭಿಶಕ್ತಮಾಮ್ ತ್ವ ಭಿಶಜಮ್ ಹೇಳಿ ಋಗ್ವೇದಲ್ಲಿ ಹೇಳುತ್ತವು., ಹೇಳಿರೆ, ‘ನೀನು ವೈದ್ಯರ ವೈದ್ಯ’. ಹಾಂಗಾಗಿ ಶಿವನ ‘ವೈದ್ಯನಾಥ°’ ಹೇಳಿಯೂ ಹೇಳುತ್ತವು. ರುದ್ರನ ಮಹಾದೇವ° ಹೇಳಿಯೂ ಹೇಳುತ್ತವು. ಶಿವ° ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಎಲ್ಲೋರಿಂದ ದೊಡ್ಡವ°. ದೇವತಾ ತಾರತಮ್ಯಲ್ಲಿ ನೋಡಿರೆ, ಹನ್ನೊಂದು ಮಂದಿ ರುದ್ರರಲ್ಲಿ ಹತ್ತು ಮಂದಿ ರುದ್ರರು ಹದಿನೆಂಟನೇ ಕಕ್ಷೆಲಿದ್ದರೆ, ಶಿವ° ಅದಕ್ಕಿಂತ ಬಹಳ ಎತ್ತರಲ್ಲಿ ಐದನೇ ಕಕ್ಷೆಲಿದ್ದ°. ಶಿವ° ಭಗವಂತನ ಸಂಹಾರ ಕರ್ಮಲ್ಲಿ ವಾಯುದೇವರೊಂದಿಂಗೆ ಅಂಗಭೂತನಾಗಿ ಸಹಕಾರಿಯಾಗಿಪ್ಪ ಬಹು ದೊಡ್ಡ ಶಕ್ತಿ. ಭಗವಂತ° ‘ಶಂಕರ°’ ನಾಮಕನಾಗಿ ಶಿವನಲ್ಲಿ ನೆಲೆಸಿದ್ದ°. ನಮ್ಮ ಭಗವಂತನ ಉಪಾಸನೆಯ ದಾರಿಲಿ ಕರಕ್ಕೊಂಡೋಗಿ, ಭಗವದ್ ಸಾಕ್ಷಾತ್ಕಾರಕ್ಕೆ ಮನಸ್ಸಿನ ಅಣಿ ಮಾಡುವದೇ ರುದ್ರ ದೇವರು. ಹಾಂಗಾಗಿ ಇದು ಭಗವಂತನ ಬಹು ದೊಡ್ಡ ವಿಭೂತಿ. ಮದಲೇ ಹೇಳಿಪ್ಪ ಹಾಂಗೆ, ಇಲ್ಲಿ ಭಗವಂತನ ವಿಭೂತಿನಾಮ ‘ಶಂಕರಃ’ – ‘ಶಮ್’ ಹೇಳಿರೆ ಸುಖ, ‘ಕರ’ ಹೇಳಿರೆ ಕರುಣಿಸುವವ°. ಸ್ವಯಂ ಆನಂದ ಸ್ವರೂಪನಾಗಿದ್ದುಗೊಂಡು, ದುಃಖಮಯವಾದ ಸಂಸಾರವ ಖಂಡುಸಿ ನವಗೆ ಮುಕ್ತಿ ಕೊಡುವ ಭಗವಂತ°- ‘ಶಂಕರಃ’.
ಮತ್ತೆ ಇನ್ನು ಭಗವಂತನ ವಿಭೂತಿನಾಮ “ವಿತ್ತೇಶಃ’ – ವಿತ್ತ ಹೇಳಿರೆ ಸಿರಿ/ಸಂಪತ್ತು, ಈಶ° ಹೇಳಿರೆ ಒಡೆಯ°. ಭಗವಂತ° ‘ವಿತ್ತೇಶ°’ ನಾಮಕನಾಗಿ ಧನಾಧಿಪತಿಯಾದ ಕುಬೇರನಲ್ಲಿದ್ದ°. ಅವಂಗೆ ಯಕ್ಷ-ರಾಕ್ಷಸರ ಒಡೆತನವ ಕೊಟ್ಟು, ಅವನ ಬಾಹ್ಯ ಸಂಪತ್ತಿನ ಒಡೆಯನನ್ನಾಗಿ ಮಾಡಿದ°. ಹೀಂಗೆ ಕುಬೇರನಲ್ಲಿಯೂ ಭಗವಂತನ ವಿಭೂತಿ ಇದ್ದು.
ಇನ್ನು ‘ವಸೂನಾಮ್ ಪಾವಕಃ’. ವೇದಂಗಳಲ್ಲಿ ಬಪ್ಪ ದೇವತಾಗಣವ ಪರಿಗಣನೆ ಮಾಡುವಾಗ, ಆದಿತ್ಯ-ವಸು-ರುದ್ರಗಣ ಮೂರು ಜೊತೆಜೊತೆಯಾಗಿ ಬಪ್ಪದು. ಮೂರು ಹೊತ್ತಿನ ಸವನಲ್ಲಿ (ಯಜ್ಞ/ಯಾಗ ವಿಧಿ)ಭಗವಂತಂಗೆ ಆಹುತಿ ಕೊಡುವದು ಕೂಡ ಈ ದೇವತಾಗಣಲ್ಲಿಪ್ಪ ಭಗವಂತಂಗೇ. ಅಷ್ಟವಸುಗಳಲ್ಲಿ ಇಪ್ಪ ಭಗವಂತಂಗೆ ಪ್ರಾತಃಕಾಲಲ್ಲಿ ಅಷ್ಟಾಕ್ಷರ ಮಂತ್ರ ಗಾಯತ್ರೀ ಮೂಲಕ ಆಹುತಿ. ಮಧ್ಯಾಹ್ನದ ಸವನ (ಯಾಗ) ಏಕಾದಶ ರುದ್ರರಿಂಗೆ ಸಂಬಂಧಪಟ್ಟದ್ದು. ಇದಕ್ಕಾಗಿ ಇಲ್ಲಿ ಹನ್ನೊಂದು ಅಕ್ಷರದ ‘ತ್ರಿಷ್ಟುಪ್’ ಬಳಸುತ್ತವು. ಹೊತ್ತೋಪಗಾಣ ಸವನ ದ್ವಾದಶಾದಿತ್ಯರಿಂಗೆ ಸಂಬಂಧಪಟ್ಟದ್ದು. ಅದಕ್ಕಾಗಿ ಅಲ್ಲಿ ದ್ವಾದಶಾಕ್ಷರದ ‘ಜಗತಿ’ ಬಳಸುತ್ತವು. ಭಗವಂತ° ಇಲ್ಲಿ ಆದಿತ್ಯ, ರುದ್ರರ ಬಗ್ಗೆ ಹೇಳಿಕ್ಕಿ ಮತ್ತೆ ವಸುಗಳ ಬಗ್ಗೆ ಹೇಳುತ್ತ°. ‘ವಸೂನಾಮ್ ಪಾವಕಃ’ – ವಸುಗಳಲ್ಲಿ ಆನು ಪಾವಕ°/ಅಗ್ನಿ ಆಗಿದ್ದೆ. ವಸುಗೊ ಎಂಟು ಮಂದಿಗೊ – ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ, ದೋಷ, ವಸು, ಮತ್ತೆ ವಿಭಾವಸು. ಇವಕ್ಕೆ ಮತ್ತೂ ಅನೇಕ ಹೆಸರುಗೊ ಇದ್ದು. ಐದನೇವನಾದ ಅಗ್ನಿಗೆ ವೈಶ್ವಾನರ°, ವಹ್ನಿ, ಜಾತವೇದ°, ಹುತಾಶನ°, ಪಾವಕ°, ಅನಲ°, ದಹನ° ಇತ್ಯಾದಿಗೊ ಹೆಸರು ಇದ್ದು. ಇತರ ವಸುಗೊ ದೇವತಾ ತಾರತಮ್ಯಲ್ಲಿ ಹದಿನೆಂಟನೇ ಕಕ್ಷೆಲಿದ್ದರೆ ಅಗ್ನಿ ಅವರಿಂದ ಎತ್ತರಲ್ಲಿ ಹದಿನೈದನೇ ಕಕ್ಷೆಲಿದ್ದ°. ಭೂಸ್ತರಲ್ಲಿ ಭಗವಂತನ ಆರಾಧನೆ ಮಾಡುವ ಶ್ರೇಷ್ಠ ಪ್ರತೀಕ – ಅಗ್ನಿ. ಇಡೀ ಜಗತ್ತಿನ ಪಾವನಗೊಳುಸುವ ಶಕ್ತಿಯಾದ ಭಗವಂತ° ಅಗ್ನಿಲಿ ‘ಪಾವಕಃ’ (ಪಾವನಗೊಳುಸುವವ°) ನಾಮಕನಾಗಿ ಕೂದು ಅಗ್ನಿಗೆ ಶ್ರೇಷ್ಠ ಸ್ಥಾನವ ಕೊಟ್ಟ°. ಅಗ್ನಿಲಿ ಭಗವಂತನ ತೇಜಸ್ಸಿದ್ದು. ತೇಜಸ್ಸಿಲ್ಲಿ ಬೆಣಚ್ಚಿಯ ಶಕ್ತಿ ಇದ್ದು, ಶಾಖ ಕೊಡುವ ಶಕ್ತಿ ಇದ್ದು, ಹಾಂಗೇ, ಸುಡುವ ಶಕ್ತಿಯೂ ಇದ್ದು. ಇಷ್ಟೇ ಅಲ್ಲದ್ದೆ ಈ ತೇಜಸ್ಸಿಲ್ಲಿ ಪಚನ ಶಕ್ತಿಯೂ ಇದ್ದು. ಅಗ್ನಿಯ ಸಂಪರ್ಕಕ್ಕೆ ಬಪ್ಪ ವಸ್ತುಗೊ ಪಾವನವಾವ್ತವು. ಅಗ್ನಿಲಿದ್ದುಗೊಂಡು ಅಗ್ನಿಗೆ ಇಂತಹ ತೇಜಸ್ಸಿನ ಕೊಟ್ಟ ಭಗವಂತ° ಜಗತ್ತಿನ ಪಾವನಗೊಳುಸುವ ‘ಪಾವಕಃ’, ಎಲ್ಲವನ್ನೂ ಪಾವನಗೊಳುಸುವ ಭಗವಂತ° ದೇವತೆಗೊಕ್ಕೂ ಕೂಡ ಅವಕ°(ರಕ್ಷಕ°).
ವಿತ್ತೇಶ° ಕುಬೇರನ ಬಗ್ಗೆ ಹೇಳಿದ ಭಗವಂತ° ಮತ್ತೆ ಭೂಮಿಯ ಸಂಪತ್ತಿನ ನೆಲೆಯಾದ ಶ್ರೇಷ್ಠ ಮೇರು ಪರ್ವತಲ್ಲಿ ತನ್ನ ವಿಭೂತಿಯ ಹೇಳುತ್ತ°. “ಮೇರುಃ ಶಿಖರಿಣಾಮಹಮ್” – ‘ಶಿಖರಂಗಳಲ್ಲಿ ಮೇರು ಶಿಖರ ಆನು ಆಗಿದ್ದೆ’. ಮೇರುಶಿಖರ ಹಿಮಾದ್ರಿಯೂ (ಮಂಜಿನ ಬೆಟ್ಟ) ಅಪ್ಪು ಹೇಮಾದ್ರಿಯೂ (ಚಿನ್ನದ ಬೆಟ್ಟ) ಅಪ್ಪು. ಅದು ವಸುಗಳ ನೆಲೆ. ಹಿಮಾಲಯಲ್ಲಿ ಸಂಪತ್ತು ಇಪ್ಪದು ಸಾಮಾನ್ಯ ಮನುಷ್ಯರಿಂಗೆ ಅರ್ಥವಾಗದ್ದ ವಿಚಾರ. ಈ ವಿಚಾರ ಅಲ್ಲಿ ತಪಸ್ಸು ಮಾಡುವ ಯೋಗಿಗೊಕ್ಕೂ ಗೊಂತಿದ್ದು. ಯುದ್ಧಲ್ಲಿ ಪೂರ್ಣ ಸಂಪತ್ತು ನಾಶವಾದಪ್ಪಗ ಧರ್ಮರಾಯ ಬೆಟ್ಟಂಗಳ ಸಾಲಿಲ್ಲಿ ಹುದುಗಿರಿಸಿದ ಸಂಪತ್ತಿನ ತರುಸಿ ಯಜ್ಞ ಮಾಡಿದ್ದಾಗಿ ಮಹಾಭಾರತಲ್ಲಿ ಹೇಳುತ್ತು. ಇಂತಹ ಸಂಪತ್ತಿನ ನೆಲೆ ಮೇರು. ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿನಾಮ ‘ಮೇರುಃ’ – ಮಾ+ಈರು = ಮೇರು. (ಮಾ – ಇಲ್ಲೆ, ಈರು – ಬೇರೆ ಪ್ರೇರಕ°) ಸಮಸ್ತ ಚೈತನ್ಯಲ್ಲಿ ಸರ್ವ ಶ್ರೇಷ್ಠಳಾದ ಅಬ್ಬೆ ಮಹಾಲಕ್ಷ್ಮಿಗೂ ಸಹಪ್ರೇರಕನಾಗಿ ನಿಂದಿಪ್ಪವ° – ಭಗವಂತ°. ಇಂತಹ ಭಗವಂತಂಗೆ ಇನ್ನೊಬ್ಬ° ಪ್ರೇರಕ° ಇಲ್ಲೆ. ಹಾಂಗಾಗಿ ‘ಮೇರುಃ’ ಭಗವಂತನ ಅನ್ವರ್ಥನಾಮ ಆಗಿದ್ದು.
ಶ್ಲೋಕ
ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ ।
ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ॥೨೪॥
ಪದವಿಭಾಗ
ಪುರೋಧಸಾಮ್ ಚ ಮುಖ್ಯಮ್ ಮಾಮ್ ವಿದ್ಧಿ ಪಾರ್ಥ ಬೃಹಸ್ಪತಿಮ್ । ಸೇನಾನೀನಾಮ್ ಅಹಮ್ ಸ್ಕಂದಃ ಸರಸಾಮ್ ಅಸ್ಮಿ ಸಾಗರಃ ॥
ಅನ್ವಯ
ಹೇ ಪಾರ್ಥ!, ಪುರೋಧಸಾಮ್ ಚ ಮುಖ್ಯಂ ಬೃಹಸ್ಪತಿಂ ಮಾಂ ವಿದ್ಧಿ, ಸೇನಾನೀನಾಂ ಸ್ಕಂದಃ, ಸರಸಾಂ ಸಾಗರಃ ಅಹಮ್ ಅಸ್ಮಿ ।
ಪ್ರತಿಪದಾರ್ಥ
ಹೇ ಪಾರ್ಥ!- ಏ ಪೃಥೆಯ ಮಗನಾದ ಅರ್ಜುನ! ಪುರೋಧಸಾಮ್ – ಎಲ್ಲ ಪುರೋಹಿತರುಗಳಲ್ಲಿ, ಚ – ಕೂಡ, ಮುಖ್ಯಮ್ – ಮುಖ್ಯನಾದವ°, ಬೃಹಸ್ಪತಿಮ್ – ಬೃಹಸ್ಪತಿ ಹೇದು, ಮಾಮ್ ವಿದ್ಧಿ – ಎನ್ನ ತಿಳುಕ್ಕೊ, ಸೇನಾನೀನಾಮ್ – ಎಲ್ಲ ಸೇನಾಪತಿಗಳಲ್ಲಿ, ಸ್ಕಂದಃ – ಸ್ಕಂದ°, ಸರಸಾಮ್ – ಎಲ್ಲ ಜಲಾಶಯಂಗಳಲ್ಲಿ, ಸಾಗರಃ ಅಹಮ್ ಅಸ್ಮಿ – ಸಮುದ್ರವು ಆನು ಆಗಿದ್ದೆ.
ಅನ್ವಯಾರ್ಥ
ಅರ್ಜುನ!, ಪುರೋಹಿತರಲ್ಲಿ ಅನು ಮುಖ್ಯನಾದ ಬೃಹಸ್ಪತಿ ಹೇಳಿ ನೀನು ತಿಳುಕ್ಕೊ, ಸೇನಾಧಿಪತಿಗಳಲ್ಲಿ ಆನು ಕಾರ್ತಿಕೇಯ ಮತ್ತೆ ಸರಸ್ಸಿಲ್ಲಿ (ಜಲಾಶಯಂಗಳಲ್ಲಿ) ಆನು ಸಾಗರ ಆಗಿದ್ದೆ.
ತಾತ್ಪರ್ಯ / ವಿವರಣೆ
ನಾವು ಪೂಜುಸುವ ಭಗವಂತನ ಪ್ರತೀಕವ ಹೇಳಿದ ಭಗವಂತ° ಮತ್ತೆ ಎಲ್ಲವುದಕ್ಕೂ ಮುಖ್ಯವಾಗಿ ಬೇಕಾಗಿಪ್ಪ ಪುರೋಹಿತರ ಬಗ್ಗೆ ಹೇಲುತ್ತ°. “ಪುರೋಹಿತರಲ್ಲಿ ಹಿರಿಯವನಾದ ಆನು ಬೃಹಸ್ಪತಿ (ಬೃಹತ್ – ಹಿರಿಯರಿಂಗು, ಪತಿ – ಒಡೆಯ), ದಳವಾಯಿಗಳಲ್ಲಿ ಸ್ಕಂದ (ಅರಿಗಳ ಬೀರವ ಹೀರುವವನಾಗಿ ಸ್ಕಂದ), ಸರಸ್ಸುಗಳಲ್ಲಿ (ಜಲ ಆಸರೆ) ಸಾಗರ (ಸಾ = ಸಾರವ, ಗರ = ಉಂಬವ) ಆಗಿದ್ದೆ”
ಭಗವಂತ° ವಿವರುಸುತ್ತ° – “ಪುರೋಧಸಾಮ್ ಬೃಹಸ್ಪತಿಃ” – ಪುರೋಹಿತರರಲ್ಲಿ ಬೃಹಸ್ಪತಿ ತಾನು ಆಗಿದ್ದೆ. ಪುರೋಹಿತರರಲ್ಲಿ ತನ್ನ ಸನ್ನಿಧಾನ ಇದ್ದು. ಋಗ್ವೇದ ಮಂತ್ರದ ಪ್ರಥಮ ಸೂಕ್ತಲ್ಲಿ ಹೇಳಿಪ್ಪಂತೆ – “ಅಗ್ನಿಮೀಳೆ ಪುರೋಹಿತಮ್, ಯಜ್ಞಸ್ಯ ದೇವಂ-ಋತ್ವಿಜಮ್, ಹೋತಾರಂ ರತ್ನ ಧಾತಮಮ್” – ಇಲ್ಲಿ ಹೇಳುವ ‘ಹೋತಾ’ ಋಗ್ವೇದದ ಪುರೋಹಿತ°. ಹಿಂದೆ ಒಂದು ಯಾಗ ಮಾಡುವಾಗ ಅಲ್ಲಿ ಹದಿನಾರು ಜನ ಪುರೋಹಿತರುಗೊ ಇರ್ತಿದ್ದವು. ಋಗ್ವೇದಕ್ಕೆ ‘ಹೋತಾ’ ಪ್ರಧಾನ ಮತ್ತೆ ಅವಂಗೆ ಮೂರು ಮಂದಿ (ಮೈತ್ರಾವರುಣ, ಅಚ್ಛಾವಾಕ° ಗ್ರಾಮಸ್ತುತ್) ಸಹಾಯಕರುಗೊ. ಯಜುರ್ವೇದಕ್ಕೆ ಅದ್ವರ್ಯು ಪ್ರಧಾನ ಮತ್ತೆ ಅವಂಗೆ ಮೂರು ಜೆನ ಸಕಾಯಕ್ಕೆ (ಪ್ರತಿಪಸ್ಥುತಾ, ನೇಷ್ಟಾ, ಉನ್ನೇತಾ). ಸಾಮವೇದಕ್ಕೆ ಉದ್ಗಾತಾ ಪ್ರಧಾನ, ಸಹಾಯಕರುಗೊ ಮೂರು ಮಂದಿ (ಪ್ರಸ್ತೋತಾ, ಪ್ರತಿಹರ್ತಾ, ಸುಬ್ರಹ್ಮಣ್ಯ). ಈ ಎಲ್ಲೋರ ಪ್ರಧಾನ ಮೇಲ್ವಿಚಾರಕ್ಕೆ, ಯಜ್ಞಲ್ಲಿ ಏವುದೇ ಲೋಪದೋಷಂಗೊ ಬಾರದ್ದಾಂಗೆ ನೋಡಿಗೊಂಬಲೆ ಸರ್ವವೇದ ಪಾರಂಗತ° ಪ್ರಧಾನ ಪುರೋಹಿತ°. ಅವಂಗೆ ‘ಬ್ರಹ್ಮಾ’ ಹೇದು ಹೆಸರು. ಇವಂಗೂ ಬ್ರಾಹ್ಮಣಾಇಚ್ಛಂಸಿ, ಅಗ್ನೀಧ್ರ, ಪ್ರೋತಾ ಹೇಳಿ ಮೂರು ಮಂದಿ ಸಕಾಯಕರು. ಹೀಂಗೆ ಭಗವಂತನ ವಿಶೇಷ ಸನ್ನಿಧಾನ ಇಪ್ಪ ಹದಿನಾರು ಮಂದಿ ಪುರೋಹಿತರುಗೊ ಸೇರಿ ಯಜ್ಞವ ನೆರವೇರುಸುವದು. ಪುರೋಹಿತನ ಸ್ಥಾನ ಸಮಾಜಲ್ಲಿ ಅತ್ಯಂತ ಹಿರಿದಾದ್ದು. ಪುರೋಹಿತರು ನವಗೆ ಹಿತವಾದ್ದರ ನಮ್ಮಿಂದ ಮದಲೇ ತಿಳ್ಕೊಂಡು ನಮ್ಮ ತಿದ್ದಿ ಆ ದಾರಿಲಿ ನಡವಲೆ ಮಾರ್ಗದರ್ಶನ ಮಾಡುವವು. ನಮ್ಮ ಅಭಿವೃದ್ಧಿಗೆ ಪೂರಕರಾಗಿಪ್ಪಂತ ಕ್ರಿಯೆಗಳ ಮಾಡಿ ನಾವು ಅಭಿವೃದ್ಧಿಯಪ್ಪಾಂಗೆ ಮುಂಜಾಗ್ರತೆ ಕೊಡುವ ಗುರುಸ್ಥಾನಲ್ಲಿಪ್ಪ ಸಲಹೆಗಾರರು ಪುರೋಹಿತರು. ಇಡೀ ಸಮಾಜಕ್ಕೆ ಇವು ಮಾರ್ಗದರ್ಶಕರು. ಪೌರೋಹಿತ್ಯ ಬಹು ಜವಾಬ್ದಾರಿಯುತ ಕೆಲಸ. ಒಂದು ಧಾರ್ಮಿಕ ನಡೆಲಿ ಸಂಶಯ ಬಂದಪ್ಪಗ ಸಮಾಜಕ್ಕೆ ಮಾರ್ಗದರ್ಶಕನಾಗಿ ಕೆಲಸ ಮಾಡುವ ಪುರೋಹಿತನ ಜವಾಬ್ದಾರಿ ಬಹು ದೊಡ್ಡದು. ಮಂತ್ರ ಹೇಳುವಾಗ ಏನಾರು ಲೋಪದೋಷಂಗೊ ಆದರೆ ಅದಕ್ಕೆ ಪುರೋಹಿತ° ಹೊಣೆಗಾರನಾವ್ತ°. ಹಾಂಗಾಗಿ ಭಗವಂತನ ವಿಶೇಷ ಸನ್ನಿಧಾನ ಪುರೋಹಿತನಲ್ಲಿ ಇದ್ದು. ಭೂಮಿಲಿ ಎಲ್ಲ ಪುರೋಹಿತರರಲ್ಲಿ ದೊಡ್ಡ ಪುರೋಹಿತರು ಇಬ್ರು. ಒಬ್ಬ° ದೈತ್ಯ ಪುರೋಹಿತನಾದ ಶುಕ್ರಾಚಾರ್ಯ°, ಇನ್ನೊಬ್ಬ° ದೇವತೆಗಳ ಪುರೋಹಿತನಾದ ಬೃಹಸ್ಪತಿಯಾಚಾರ್ಯ°. ಬೃಹಸ್ಪತಿ ದೇವತಾ ತಾರತಮ್ಯಲ್ಲಿ ಹತ್ತನೇ ಕಕ್ಷೆಲಿ ಇಪ್ಪದು. ಇವ° ದೇವತೆಗೊಕ್ಕೆ ಮತ್ತು ದೇವತೆಗಳ ಅಧಿಪತಿ ದೇವೇಂದ್ರಂಗೂ ಸಲಹೆಗಾರ°. ದೇವತೆಗಳ ಪುರೋಹಿತನಾಗಿಪ್ಪ ಬೃಹಸ್ಪತಿಲಿ ಭಗವಂತನ ವಿಶೇಷ ಸನ್ನಿಧಾನ ಇದ್ದು. ದೇವತಾ ತಾರತಮ್ಯಲ್ಲಿ ಎಂಟನೇ ಕಕ್ಷೆಲಿ ಇಪ್ಪ ಇಂದ್ರ ಹತ್ತನೇ ಕಕ್ಷೆಲಿಪ್ಪ ಬೃಹಸ್ಪತಿಗೆ ನಮಸ್ಕರಿಸಿ ಅವನ ಮಾರ್ಗದರ್ಶನದಂತೆ ನಡವಲೆ ಅಲ್ಲಿಪ್ಪ ಭಗವಂತನ ಸನ್ನಿಧಾನವೇ ಕಾರಣ. ಇನ್ನೊಂದು ಮುಖಲ್ಲಿ ನೋಡಿರೆ, ವೇದಂಗಳಲ್ಲಿ ಬೃಹಸ್ಪತಿ ಹೇಳಿರೆ ಪ್ರಾಣದೇವರು. ಸರಸ್ವತಿ ಭಾರತಿಯರ ಪತಿ – ಬೃಹಸ್ಪತಿ. ಇವೇ ಬ್ರಹ್ಮ-ವಾಯು. ಇವು ಸಮಸ್ತ ದೇವತೆಗೊಕ್ಕೆ ಪುರೋಹಿತರು. ಭಗವಂತ° ಪ್ರಾಣದೇವರಲ್ಲಿ ಗಾನದ (ಕಂಠಸಿರಿ) ವಿಶೇಷ ವಿಭೂತಿಯಾಗಿ ನೆಲೆಸಿದ್ದ°. ಇನ್ನು, ಇಲ್ಲಿ ಭಗವಂತನ ವಿಭೂತಿನಾಮ ‘ಬೃಹಸ್ಪತಿ’, ಬೃಹತ್ ಹೇಳಿರೆ ಹಿರಿಯವ°, ಪತಿ ಹೇಳಿರೆ ಒಡೆಯ°. ಬ್ರಹ್ಮಾದಿ ಸಕಲ ದೇವತೆಗೊಕ್ಕೂ ಒಡೆಯನಾದ, ಪುರೋಹಿತರಿಂಗೂ ಪುರೋಹಿತನಾದ ಭಗವಂತ°- ‘ಬೃಹಸ್ಪತಿಃ’.
ಮುಂದೆ ಭಗವಂತ° ಯುದ್ಧಲ್ಲಿ ವಿಜಯವ ತಂದುಕೊಟ್ಟು ರಕ್ಷಣೆ ಮಾಡುವ ಯೋಧರಲ್ಲಿ ತನ್ನ ವಿಶೇಷ ವಿಭೂತಿಯ ವಿವರುಸುತ್ತ°. ದೇವತೆಗೊ ಬೃಹಸ್ಪತಿಯಾಚಾರ್ಯರ ಮಾರ್ಗದರ್ಶನಲ್ಲಿ ಸಂಪಾದಿಸಿದ ಸಂಪತ್ತುಗಳ ಅಸುರರು ಅಪಹರಿಸಿಯಪ್ಪಗ ಅವರ ವಿರುದ್ಧ ಹೋರಾಡಿ ಅದರ ಹಿಂದಕ್ಕೆ ತಂದುಗೊಟ್ಟವ° ಸ್ಮಂದ°. ಭಗವಂತ° ‘ಸ್ಕಂದಃ’ ನಾಮಕನಾಗಿ ಸೇನಾನಿಲಿ ನಿಂದು ನಡೆಶುತ್ತ°. ಸ್ಕಂದಂಗೆ ಸೇನಾಧಿಪತಿಯಾಗಿ ತಾರಕಾಸುರನ ಸಂಹಾರ ಮಾಡುವ ಶಕ್ತಿ ಕೊಟ್ಟಂತಹ, ಅಂತರಂಗದ ಒಳ ಕೂದ ಅಂತರ್ಯಾಮಿ ತತ್ವ – ಆ ಭಗವಂತ°. ಸ್ಕಂದಃ ಹೇಳಿರೆ ಇಡೀ ಜಗತ್ತಿನ ಸಂಹಾರ ಮಾಡುವ ಶಕ್ತಿ. “ಸೇನಾನೀನಾಮಹಂ ಸ್ಕಂದಃ”, “ಅರಿಗಳ ಬೀರವ ಹೀರಿ ಸ್ಕಂದ” ಎನುಸಿ ತಾನು ಸೇನಾಪತಿ ಸ್ಕಂದನಲ್ಲಿ ಇದ್ದೆ ಹೇಳಿ ಭಗವಂತ° ಹೇಳುತ್ತ°.
“ಸರಸಾಮಸ್ಮಿ ಸಾಗರಃ” – ಭೂಮಿಯ ಮೇಗೆ ಅಪಾರ ಸಂಪತ್ತಿನ ತಾಣ ಮೇರು ಪರ್ವತವಾದರೆ, ರಸಂದ ಸಹಿತವಾದ ಜಲಾಶಯಂಗಳಲ್ಲಿ ಬಹಳ ದೊಡ್ಡದಾಗಿಪ್ಪದು ಸಾಗರ. ‘ಆ ಸಾಗರಲ್ಲಿ ವಿಭೂತಿಯಾಗಿ ಆನು ಇದ್ದೆ’ ಹೇಳಿ ಭಗವಂತ° ಹೇಳುತ್ತ°. ಭೂಮಿಲಿ ಏವ ಭಾಗಲ್ಲಿ ಬಾವಿ ತೋಡಿರೂ ಸಿಹಿನೀರು ಸಿಕ್ಕುವದು. ಆದರೆ ಸಾಗರದ ನೀರು ಉಪ್ಪು. ಇದು ಎಂತಕೆ ಹೀಂಗೆ ಹೇಳಿ ನವಗೆ ಗೊಂತಿಲ್ಲೆ. ಭಗವಂತ° ಇತರ ಎಲ್ಲ ರಸವ ಹಣ್ಣಿಲ್ಲಿ ಮಡುಗಿದ್ದ. ಆದರೆ ರಸದ ರಸ ಲವಣರಸ ಉಪ್ಪಿನ ಮಾಂತ್ರ ಏವ ಹಣ್ಣಿಲ್ಲಿಯೂ ಮಡುಗದ್ದೆ ಸಮುದ್ರದ ನೀರಿಲ್ಲಿ ಮಡುಗಿದ್ದ°!. ಈ ಸಮುದ್ರ ಒಂದು ವಿಸ್ಮಯ. ಭೂಮಿ ಮೇಗೆ ಇಪ್ಪ ಪ್ರಾಣಿ ವೈವಿಧ್ಯಕ್ಕಿಂತ ಹೆಚ್ಚು ವೈವಿಧ್ಯ ಸಮುದ್ರಲ್ಲಿ ಇದ್ದು. ಭಗವಂತ° ಸಮುದ್ರವ ಸೃಷ್ಟಿ ಮಾಡಿ ಅದರಲ್ಲಿ ‘ಸಾಗರಃ’ ಶಬ್ದವಾಚ್ಯನಾಗಿ ತುಂಬಿಗೊಂಡಿದ್ದ°. ಇಲ್ಲಿ ಬಂದಿಪ್ಪ ಭಗವಂತನ ವಿಭೂತಿನಾಮ ‘ಸಾಗರಃ’ – ಸಾರ+ಗರ = ಸಾಗರ. ಸಾರವಾಗಿಪ್ಪದರ ಸ್ವೀಕರುಸುವ ಭಗವಂತ° ‘ಸಾರಃ’, ಎಲ್ಲಕ್ಕಿಂತ ಮಹತ್ತಾದ ಸಾರ – ‘ಲವಣ’, ಅದರಲ್ಲಿ ತುಂಬಿಪ್ಪ ಭಗವಂತ° – ‘ಸಾಗರಃ’. “ಸಾರಮ್ ಗರತಿ ದದಾತಿ ಇತಿ ಸಾಗರಃ” – ಜಗತ್ತಿಂಗೆ ಜೀವನದ ಸಾರ ಸರ್ವಸ್ವವ ಕೊಡುವ ಭಗವಂತ° ‘ಸಾಗರಃ’. ಇವೆಲ್ಲವೂ ಬನ್ನಂಜೆಯವರ ವ್ಯಾಖ್ಯಾನಂದ ಇಲ್ಲಿಗೆ ಬರದ್ದದು.
ಶ್ಲೋಕ
ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್ ।
ಯಜ್ಞಾನಾಂ ಜಪಯಜ್ಞೋsಸ್ಮಿ ಸ್ಥಾವರಾಣಾಂ ಹಿಮಾಲಯಃ ॥೨೫॥
ಪದವಿಭಾಗ
ಮಹರ್ಷೀಣಾಮ್ ಭೃಗುಃ ಅಹಮ್ ಗಿರಾಮ್ ಅಸ್ಮಿ ಏಕಮ್ ಅಕ್ಷರಂ । ಯಜ್ಞಾನಾಮ್ ಜಪ-ಯಜ್ಞಃ ಸ್ಥಾವರಾಣಾಮ್ ಹಿಮಾಲಯಃ ॥
ಅನ್ವಯ
ಮಹರ್ಷೀಣಾಂ ಭೃಗುಃ, ಗಿರಾಂ ಏಕಂ ಅಕ್ಷರಮ್ ಅಹಂ ಅಸ್ಮಿ । ಯಜ್ಞಾನಾಂ ಜಪ-ಯಜ್ಞಃ, ಸ್ಥಾವರಾಣಾಂ ಹಿಮಾಲಯಃ ಚ ಅಸ್ಮಿ ।
ಪದವಿಭಾಗ
ಮಹರ್ಷೀಣಾಮ್ ಭೃಗುಃ – ಮಹರ್ಷಿಗಳಲ್ಲಿ ಭೃಗು, ಗಿರಾಮ್ – ಶಬ್ದಂಗಳಲ್ಲಿ, ಏಕಮ್ ಅಕ್ಷರಮ್ – ಒಂದು ಅಕ್ಷರ, ಅಹಮ್ ಅಸ್ಮಿ – ಆನು ಆಗಿದ್ದೆ, ಯಜ್ಞಾನಾಮ್ – ಯಜ್ಞಂಗಳಲ್ಲಿ, ಜಪ-ಯಜ್ಞಃ – ಜಪಯಜ್ಞ, ಸ್ಥಾವರಾಣಾಮ್ – ಸ್ಥಿರವಸ್ತುಗಳಲ್ಲಿ, ಹಿಮಾಲಯಃ ಚ ಅಸ್ಮಿ – ಹಿಮಲಯವೂ ಕೂಡ ಆನು ಆಗಿದ್ದೆ.
ಅನ್ವಯಾರ್ಥ
ಮಹರ್ಷಿಗಳಲ್ಲಿ ಭೃಗು, ಶಬ್ದಂಗಳಲ್ಲಿ ಒಂದು ಅಕ್ಷರ (ಕಂಪನಲ್ಲಿ ಒಂದಕ್ಷರ – ಪ್ರಣವ), ಯಜ್ಞಂಗಳಲ್ಲಿ ಆನು ಜಪಯಜ್ಞ°, ಸ್ಥಿರವಸ್ತುಗಳಲ್ಲಿ ಆನು ಹಿಮಾಲಯ ಆಗಿದ್ದೆ.
ತಾತ್ಪರ್ಯ / ವಿವರಣೆ
ಸರಳವಾಗಿ ಸುಲಭವಾಗಿ ಅರ್ಥಮಾಡಿಗೊಂಬಲೆ ಎಳ್ಪ ಆಗಿಪ್ಪ ಬನ್ನಂಜೆಯವರ ವ್ಯಾಖ್ಯಾನಂದಲೇ ಹೆರ್ಕಿದ್ದು – ಈ ಪ್ರಪಂಚಲ್ಲಿ ಭಗವಂತನ ವೈಭವವ ವಿವಿರಿಸಿಗೊಂಡು ಭಗವಂತ° ಮತ್ತೆ ಮುಂದುವರುಸಿ ಹೇಳುತ್ತ° – “ಮಹರ್ಷಿಗಳಲ್ಲಿ ಆನು ಭೃಗು (ಕೆಟ್ಟದ್ದರ ಸುಡುಸುವದು ಭೃಗು), ಶಬ್ದಂಗಳಲ್ಲಿ (ವಾಙ್ಮಯಂಗಳಲ್ಲಿ/ನಾದಲ್ಲಿ ಓಂಕಾರವೆಂಬ ಒಂದಕ್ಷರದ ಪ್ರಣವ° (ಎಲ್ಲಕ್ಕಿಂತ ಮಿಗಿಲಾಗಿ ‘ಏಕ’ ಎನುಸಿ, ಅಳಿವಿಲ್ಲದ್ದರಿಂದ ‘ಅಕ್ಷರ’ ಎನುಸಿಗೊಂಡ ಓಂಕಾರ ವಾಚ್ಯ°) ಆನು, ಯಜ್ಞಂಗಳಲ್ಲಿ ಜಪಯಜ್ಞ° (‘ಜ’ – ಹುಟ್ಟಿದ್ದರ ಎಲ್ಲ ‘ಪ’ ಪಾಲುಸುವದು = ಜಪ, ಎಲ್ಲೋರ ಎಲ್ಲ ಪೂಜೆಯ ಸ್ವೀಕರುಸುವದರಿಂದ ‘ಯಜ್ಞ’), ಸ್ಥಿರವಾಗಿ ಘಟ್ಟಿಯಾಗಿ ದೃಢವಾಗಿಪ್ಪ ಬೆಟ್ಟಂಗಳಲ್ಲಿ ಶ್ರೇಷ್ಠವಾದ ಹಿಮಾಲಯ ಆನು ( ಹ್ರೀ – ಲಕ್ಷ್ಮಿಯ ‘ಹ್ರೀ’ನಾಮಕ ರೂಪಕ್ಕೆ (ಶ್ರೀಲಕ್ಷ್ಮೀ/ಶ್ರೀದೇವಿ) ಹಾಂಗೂ ಮಾ – ‘ಶ್ರೀ’ ನಾಮಕ ರೂಪಕ್ಕೆ (ಭೂದೇವಿ) ಆಲಯ – ನೆಲೆಯಾಗಿಪ್ಪದರಿಂದ ಹಿಮಾಲಯ) ಆಗಿದ್ದೆ.
ಮದಲಾಣ ಶ್ಲೋಕಲ್ಲಿ ಬೃಹಸ್ಪತಿಯ ಬಗ್ಗೆ ಹೇಳಿದ್ದ ಭಗವಂತ°. ಅವ ದೇವಲೋಕಕ್ಕೆ ಸಂಬಂಧಪಟ್ಟವ°. ಇಲ್ಲೀಗ ಇತರ ಮಹರ್ಷಿಗಳ ನೋಡಿರೆ ಭಗವಂತನ ದೃಷ್ಟಿಲಿ ವಿಶಿಷ್ಟರಲ್ಲಿ ಅತ್ಯಂತ ಶ್ರೇಷ್ಠನಾದವ° ಭೃಗು ಮಹರ್ಷಿ. ವಿಶ್ವಾಮಿತ್ರ – ವಸಿಷ್ಠರು ತಾರತಮ್ಯ ಕಕ್ಷೆಲಿ ಹದಿನಾರನೇ ಸ್ಥಾನಲ್ಲಿದ್ದರೆ ಭೃಗುಮುನಿ ಇವರಿಂದ ಎತ್ತರಲ್ಲಿ ಹದಿನೈದನೇ ಕಕ್ಷೆಲಿ ಅಗ್ನಿಗೆ ಸಮಾನನಾಗಿದ್ದ°. ಇವ° ಭೂಮಿಲಿ ಋಷಿಗಳ ಮಾಲಿಕೆಲಿ ಹೊಸ ಆವಿಷ್ಕ್ರಾರಂಗಳ ಮಾಡಿದವ°. ಭಾಗವತಲ್ಲಿ ಬಪ್ಪ ಒಂದು ಕಥೆಯ ಪ್ರಕಾರ, ತ್ರಿಮೂರ್ತಿಗಳಲ್ಲಿ ಆರು ಅತ್ಯಂತ ಶ್ರೇಷ್ಠ° ಹೇದು ಅಳವ ನಿಯೋಗಶ್ರೇಷ್ಠನಾಗಿ ಹೋಗಿ, ‘ನಾರಾಯಣ ಸರ್ವ ಶ್ರೇಷ್ಠ°’ ಹೇಳಿ ಜಗತ್ತಿಂಗೆ ಸಾರಿದ ಬುಹು ದೊಡ್ಡ ಮುನಿ ಭೃಗು. ಈ ಕಥೆಲಿ ಹೇಳ್ತಾಂಗೆ, ನಿಯೋಗಶ್ರೇಷ್ಠನಾಗಿ ಭೃಗು ಮದಾಲು ಶಿವನಲ್ಲಿಗೆ ಮತ್ತೆ ಬ್ರಹ್ಮನಲ್ಲಿಗೆ ಹೋವುತ್ತ°. ಅಲ್ಲಿ ಅವಂಗೆ ಏವ ಪುರಸ್ಕಾರವೂ ಸಿಕ್ಕದ್ದಪ್ಪಗ, ಭೃಗು ಕೋಪಂದಲೇ ನಾರಾಯಣನ ಹತ್ರಂಗೆ ಹೋವುತ್ತ°. ಅಲ್ಲಿ ವಿಷ್ಣುವು ಕೂಡ ಇವನ ಗಮನುಸದ್ದೇ ಅಪ್ಪಗ ಕೋಪಂದ ವಿಷ್ಣುವಿನ ಎದಗೆ ಮೆಟ್ಟುತ್ತ°. ಅಷ್ಟಪ್ಪಗ ಭಕ್ತವತ್ಸಲ° ನಾರಾಯಣ° – “ನೀನು ದೆನಿಗೋಳ್ತಿದ್ದರೆ ಆನೇ ಬತ್ತಿತ್ತೆ, ಈ ರೀತಿ ನೀನು ಮೆಟ್ಟಿದ್ದರಿಂದ ನಿನ್ನ ಪಾದಕ್ಕೆ/ಕಾಲಿಂಗೆ ಅದೆಷ್ಟು ಬೇನೆ ಆತೋ ಎಂತೋ” ಹೇದು ಹೇಳಿಗೊಂಡು ಅವನ ಕಾಲು ಉದ್ದಲೆ ಸುರುಮಾಡುತ್ತ°. ಅಷ್ಟಪ್ಪಗ ಭೃಗು ಮುನಿಗೆ ತನ್ನ ತಪ್ಪು ಗೊಂತಾಗಿ ನಾರಾಯಣನಲ್ಲಿ ಶರಣಾಗತನಾವುತ್ತ°. ಇಲ್ಲೀಗ ಅಂಬಗ ಭೃಗುವಿಂಗೆ ಭಗವಂತನ ಮಹತ್ವ ಗೊಂತಾಗದ್ದೆ ಇತ್ತಿದ್ದ ಬೋಸನೋ ಹೇಳ್ವ ಸಂಶಯ ಮೂಡುತ್ತು. ಖಂಡಿತವಾಗಿಯೂ ಅವಂಗೆ ಭಗವಂತನ ಪೂರ್ಣ ಮಹತ್ವ ಗೊಂತಿದ್ದತ್ತು. ಇದು ಬರೇ ಜನಸಾಮಾನ್ಯರಿಂಗೆ ಕ್ರಿಯೆಯ ಮೂಲಕ ವಿಷಯವ ತಿಳುಸುವ ಒಂದು ಕಾರ್ಯ ಮಾಡಿದ್ದುಳ್ಳೋ. ಇದೇ ರೀತಿ “ನೀನು ಭೂಮಿಲಿ ಹತ್ತು ಸರ್ತಿ ಅವತಾರ ತಾಳು” ಹೇದು ಭಗವಂತಂಗೆ ಶಾಪಕೊಟ್ಟವ° ಭೃಗು. ಅವನ ಶಾಪಕ್ಕೆ ಪುರಸ್ಕಾರ ಕೊಡ್ಳೆ ಭಗವಂತ° ಭೂಮಿಗೆ ಹತ್ತು ಅವತಾರ ತಾಳಿದ°. ಲಕ್ಷ್ಮಿ ಭಾರ್ಗವಿಯಾಗಿ ಭೃಗು ಮುನಿಗೆ ಮಗಳಾಗಿ ಹುಟ್ಟಿತ್ತು. ಈ ರೀತಿ ಭೃಗುವಿಲ್ಲಿ ಅನೇಕ ವೈಶಿಷ್ಟ್ಯಂಗೊ ಕಾಣುತ್ತು. ಇದಕ್ಕೆಲ್ಲ ಕಾರಣ ಭೃಗುವಿಲ್ಲಿ ಭಗವಂತನ ವಿಶೇಷ ಸನ್ನಿದಾನ ಇಪ್ಪದಾವ್ತು. ಇಲ್ಲಿ ಬಂದಿಪ್ಪ ಭಗವಂತನ ವಿಭೂತಿ ನಾಮ ‘ಭೃಗುಃ’ – ಭರ್ಜನಾತ್ ಇತಿ ಭೃಗುಃ – ಪ್ರಳಯಕಾಲಲ್ಲಿ ಎಲ್ಲವನ್ನೂ ಭರ್ಜನೆ (ನಾಶ) ಮಾಡುವ ಭಗವಂತ°, ಮುಖ್ಯವಾಗಿ ಭಕ್ತರ ಪಾಪವ ಭರ್ಜನೆ ಮಾಡುವ ಭೃಗುಃ. ಭಗವಂತ° ತನ್ನ ಭಕ್ತರ ಜೀವನಲ್ಲಿ ಅಡ್ಡಿ ಮಾಡುವ ದುಷ್ಟ ಶಕ್ತಿಗಳ ಭರ್ಜನೆ ಮಾಡುವವ°. ದುಷ್ಟರ ಮತ್ತು ಅಧರ್ಮವ ಭರ್ಜನೆ ಮಾಡಿ ಧರ್ಮ ಸಂಸ್ಥಾಪನೆ ಮಾಡುವ ಭಗವಂತ° – ‘ಭೃಗುಃ’ ಶಬ್ದವಾಚ್ಯ°. ಋಷಿಗಳಲ್ಲಿ ಅತ್ಯಂತ ಎತ್ತರ ಸ್ಥಾನ ಭೃಗುವಿಂಗೆ ಬಪ್ಪಾಂಗೆ ಮಾಡಿ, ಅವನಲ್ಲಿ ಭೃಗು ಶಬ್ದವಾಚ್ಯನಾಗಿ ಭಗವಂತ° ಸನ್ನಿಹಿತನಾಗಿದ್ದ°.
ಪ್ರಪಂಚಲ್ಲಿಪ್ಪ ಅತ್ಯಂತ ಮಹತ್ವವಾದ ಮತ್ತೆ ಶ್ರೇಷ್ಠ ಶಬ್ದ ಓಂಕಾರ. ಈ ಓಂಕಾರಲ್ಲಿ ‘ಅ-ಕ್ಷರಃ’ ನಾಮಕ ಭಗವಂತನ ವಿಶೇಷ ಸನ್ನಿಧಾನ ಇದ್ದು. ಓಂಕಾರ ಭಗವಂತನ ವಿಶೇಷ ನಾಮ. ಓಂಕಾರ ಋಗ್-ಯಜು-ಸಾಮವೇದಂಗಳ ಸಾರ ಮುಂತಾಗಿ ಓಂಕಾರದ ಮಹತ್ವವ ಈ ಮದಲೇ ಏಳನೇ ಅಧ್ಯಾಯಲ್ಲಿ ಹೇಳಿದ್ದು (ಭ.ಗೀ ೭.೮). ಎಂದೂ ನಾಶ ಇಲ್ಲದ್ದ ಅ-ಕ್ಷರ ಭಗವಂತ° ಎಲ್ಲರಿಂದ ಹಿರಿದಾದ ಏಕಮಾತ್ರ ತತ್ವ. ಹಾಂಗಾಗಿ ಅವ° ‘ಏಕಃ’. ಓಂಕಾರದ ಉಪಾಸನೆಂದ ಭಗವಂತನ ಸಾಕ್ಷಾತ್ಕಾರ ಗಳಿಸಿಗೊಳ್ಳೆಕು.
ಭಗವಂತ° ಮತ್ತೆ ಹೇಳುತ್ತ° – “ಯಜ್ಞಾನಾಂ ಜಪಯಜ್ಞಃ ಅಸ್ಮಿ”. ಎಲ್ಲಕ್ಕಿಂತ ದೊಡ್ಡ ಯಜ್ಞ ಹೇಳಿರೆ ಜಪಯಜ್ಞ. ಅಗ್ನಿಮುಖಲ್ಲಿ ಮಡುವ ಪೂಜೆ ಮಾಂತ್ರ ಯಜ್ಞ ಅಲ್ಲ. ಭಗವಂತನ ಪ್ರೀತಿಗೋಸ್ಕರ ಮಾಡುವ ಯಾವುದೇ ಕರ್ಮ ಯಜ್ಞ ಆವ್ತು. ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇಪ್ಪದರ ಇಲ್ಲದ್ದವಂಗೆ ಹಂಚಿ ಬದುಕುವದು ಯಜ್ಞವೇ ಆವ್ತು. ಇಲ್ಲಿ ಕರ್ಮ ಭಗವಂತನ ಅನುಸಂಧಾನದೊಟ್ಟಿಂಗೆ ಆಯೇಕು ಎಂಬುದು ಮುಖ್ಯ. ಸಾಮಾನ್ಯವಾಗಿ ಯಜ್ಞಲ್ಲಿ ಎರಡು ವಿಧ. ಒಂದು ಅಂತರಂಗಯಜ್ಞ. ಇನ್ನೊಂದು ಬಾಹ್ಯಯಜ್ಞ. ಅಂತರಂಗಲ್ಲಿ ಭಗವಂತನ ನಿರಂತರ ಪೂಜೆ (ದೇವಪೂಜಾ), ಚಿತ್ತ-ಮನಸ್ಸು ಭಗವಂತನ ಒಟ್ಟಿಂಗೆ ಸೇರುವದು (ಸಂಗತೀಕರಣ), ಮತ್ತೆ, ನಮ್ಮ ನಾವು ಭಗವಂತಂಗೆ ಚಿತ್ತಶುದ್ಧಿಂದ ಅರ್ಪಿಸಿಗೊಂಬದು – ಪರಿಪೂರ್ಣವಾದ ಮಾನಸ ಯಜ್ಞ ಆವುತ್ತು. ಈ ರೀತಿ ಮನಸ್ಸಿಲ್ಲಿ ಮಾಡುವ ಜಪಯಜ್ಞ ಅತ್ಯಂತ ಶ್ರೇಷ್ಠ. ಇದಕ್ಕೆ ಕಾರಣ ಜಪಯಜ್ಞಲ್ಲಿಪ್ಪ ಭಗವಂತನ ವಿಭೂತಿ.
ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿನಾಮ ‘ಜಪಃ’ ಮತೆ ‘ಯಜ್ಞಃ’ – ಜಗತ್ತಿಲ್ಲಿ ಹುಟ್ಟಿಬಪ್ಪ ಪ್ರತಿಯೊಂದು ಜೀವವ ಪಾಲುಸುವ ಭಗವಂತ ‘ಜಪಃ’ (ಜ – ಹುಟ್ಟು, ಪ – ಪಾಲುಸುವದು), ಇಂತಹ ಭಗವಂತ° ಎಲ್ಲ ಎಲ್ಲ ಪೂಜೆಗಳ ಸ್ವೀಕರುಸುವವನಾದ್ದರಿಂದ ಅವ° ‘ಯಜ್ಞಃ’ (ಯಃ ಜ್ಞಃ ಇತಿ ಯಜ್ಞಃ – ಆರ ಪೂರ್ತಿಯಾಗಿ ತಿಳಿಯೆಕ್ಕಾಗಿದ್ದೋ ಅವ° ಯಜ್ಞ° ಹೇಳ್ವ ಅರ್ಥವೂ ಇದ್ದು). ಇಂತಹ ಭಗವಂತ° ಎಲ್ಲೋರ ಪೂಜೆಯ ಕೊಂಬುವದರಿಂದ ಭಗವಂತ ‘ಜಪಯಜ್ಞಃ’ ಆಗಿದ್ದ°.
ಜಪದ ಬಗ್ಗೆ ಹೇಳಿದ ಭಗವಂತ° ಮುಂದೆ ಸಾತ್ವಿಕ ಕಂಪನ ಇಪ್ಪ ಅತ್ಯಂತ ಶ್ರೇಷ್ಠ ಸ್ಥಾವರದ ಬಗ್ಗೆ ಹೇಳುತ್ತ°. ಹಿಂದೆ ಮನೆ ಕಟ್ಟುವಾಗ ಅಲ್ಲಿ ಹೆಚ್ಚು ಸಾತ್ವಿಕ ಕಂಪನ ಇಪ್ಪ ಸ್ಥಳಲ್ಲಿ ದೇವರ ಕೋಣೆಯ ನಿರ್ಮಿಸುವದು. ಒಂದು ಊರಿಲ್ಲಿ ಅತೀ ಹೆಚ್ಚು ಸಾತ್ವಿಕ ಕಂಪನ ಇಪ್ಪ ಜಾಗೆಲಿ ದೇವಾಸ್ಥಾನ ಕಟ್ಟುವದು. ಈ ಭೂಮಿಲಿ ಅತೀ ಹೆಚ್ಚು ಸಾತ್ವಿಕ ಕಂಪನ ಇಪ್ಪ ಏಕ ಮಾತ್ರ ಜಾಗೆ ಹಿಮಾಲಯ. ಇಲ್ಲೆ ಎಲ್ಲಿ ಕೂದರೂ ನಮ್ಮ ಮನಸ್ಸು ಸುಲಭಲ್ಲಿ ಭಗವಂತನಲ್ಲಿ ಶ್ರುತಿಗೂಡುತ್ತು. ಹಿಮಾಲಯಕ್ಕೆ ಈ ಶಕ್ತಿ ಭಗವಂತನ ವಿಶೇಷ ಸನ್ನಿಧಾನಂದ ಬಂತು. ಭಗವಂತ° ‘ಹಿಮಾಲಯಃ’ ನಾಮಕನಾಗಿ ಅಲ್ಲಿ ನೆಲೆಸಿದ್ದ°. ಭಗವಂತನ ಈ ವಿಭೂತಿನಾಮಕ್ಕೆ ವಿಶೇಷ ಅರ್ಥ ಇದ್ದು. ಹ್ರೀ+ಮಾ+ಆಲಯ = ಹಿಮಾಲಯ. ಹ್ರೀ ಹೇಳಿರೆ ಶ್ರೀಲಕ್ಷ್ಮಿ, ಮಾ ಹೇಳಿರೆ ಭೂದೇವಿ. ಶ್ರೀದೇವಿ ಹಾಂಗೂ ಭೂದೇವಿಯರ ಆಲಯನಾದ ಭಗವಂತ° ‘ಹಿಮಾಲಯಃ’. ಭಗವಂತನ ಈ ವಿಶೇಷ ವಿಭೂತಿಂದಾಗಿ ಹಿಮಾಲಯದ ಕಣಕಣವೂ ಅಧ್ಯಾತ್ಮದ ವಿಸ್ಮಯಂದ ತುಂಬಿದ್ದು. ಮನುಷ್ಯನ ಮನಃಪರಿವರ್ತನೆ ಮಾಡಿ ಅವನ ಅಧ್ಯಾತ್ಮದತ್ತೆ ತಿರುಗುಸುವ ವಿಶೇಷ ಶಕ್ತಿ ಹಿಮಾಲಯಕ್ಕೆ ಇದ್ದು. ವೇದವ್ಯಾಸರು, ನರ-ನಾರಾಯಣರು ಮೊದಲಾದೋರು ನೆಲೆಸಿದ ತಾಣ ಹಿಮಾಲಯ. ಅನೇಕ ದೇವತೆಗೊ ನೆಲೆಸಿದ ನಿಗೂಢ ತಾಣ ಆ ಹಿಮಾಲಯ. ಭಗವಂತನ ವಿಭೂತಿ ಈ ಸ್ಥಾನಕ್ಕೆ ಈ ಅದ್ಭುತ ಶಕ್ತಿಯ ತಂದುಕೊಟ್ಟಿದು.
ಶ್ಲೋಕ
ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ ।
ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ ॥೨೬॥
ಪದವಿಭಾಗ
ಅಶ್ವತ್ಥಃ ಸರ್ವ-ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ । ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ ॥
ಅನ್ವಯ
ಸರ್ವ-ವೃಕ್ಷಾಣಾಮ್ ಅಶ್ವತ್ಥಃ, ದೇವರ್ಷೀಣಾಂ ಚ ನಾರದಃ, ಗಂಧರ್ವಾಣಾಂ ಚಿತ್ರರಥಃ, ಸಿದ್ಧಾನಾಂ ಕಪಿಲಃ ಮುನಿಃ ಅಹಮ್ ಅಸ್ಮಿ ।
ಪ್ರತಿಪದಾರ್ಥ
ಸರ್ವ-ವೃಕ್ಷಾಣಾಮ್ – ಎಲ್ಲ ಮರಂಗಳಲ್ಲಿ, ಅಶ್ವತ್ಥಃ – ಅಶ್ವತ್ಥಮರವು, ದೇವರ್ಷೀಣಾಮ್ – ದೇವರ್ಷಿಗಳಲ್ಲಿ, ಚ – ಕೂಡ, ನಾರದಃ – ನಾರದ°, ಗಂಧರ್ವಾಣಾಮ್ – ಗಂಧರ್ವರಲ್ಲಿ, ಚಿತ್ರರಥಃ – ಚಿತ್ರರಥ°, ಸಿದ್ಧಾನಾಮ್ – ಸಿದ್ಧರಲ್ಲಿ, ಕಪಿಲಃ ಮುನಿಃ – ಕಪಿಲಮುನಿ, ಅಹಮ್ ಅಸ್ಮಿ – ಆನು ಆಗಿದ್ದೆ.
ಅನ್ವಯಾರ್ಥ
ವೃಕ್ಷಂಗಳಲ್ಲಿ ಆನು ಅಶ್ವತ್ಥವೃಕ್ಷ, ದೇವ ಋಷಿಗಳಲ್ಲಿ ನಾರದ°, ಗಂಧರ್ವರಲ್ಲಿ ಚಿತ್ರರಥ° ಮತ್ತೆ ಸಿದ್ಧರಲ್ಲಿ ಆನು ಕಪಿಲಮುನಿ ಆಗಿದ್ದೆ.
ತಾತ್ಪರ್ಯ / ವಿವರಣೆ
ಪುನಃ ಬನ್ನಂಜೆ ವಿವರಣೆಂದಲೇ – ಭಗವಂತ° ಹೇಳುತ್ತ° – “ಎಲ್ಲ ಮರಂಗಳಲ್ಲಿ ಅಶ್ವತ್ಥ ಮರ ಆನು. ( ಅಶ್ವ – ಕುದುರೆಯ ರೂಪಲ್ಲಿ + ಸ್ಥ – ಇಪ್ಪದರಿಂದ = ಅಶ್ವತ್ಥ), ದೇವಲೋಕದ ಋಷಿಗಳಲ್ಲಿ ನಾರದ° ಆನು (ನಾರ – ನರರ ಬಯಕೆಯೆಲ್ಲವ + ದ – ಕೊಡುವವನಾಗಿ = ನಾರದ°), ಗಂಧರ್ವಲೋಕಲ್ಲಿ ಗಂಧರ್ವ ದೊರೆ ಚಿತ್ರರಥ (ಚಿತ್ರ – ಅಚ್ಚರಿಯ + ರಥ – ರಥಲ್ಲಿ ಸಂಚರಿಸುವವ° = ಚಿತ್ರರಥ°) ಆನು, ಯೋಗಸಿದ್ಧರಲ್ಲಿ ಕಪಿಲ ಮುನಿ (ಕ – ಸುಖರೂಪನಾಗಿ + ಪಿ – ಪಾಲುಸುವದರಿಂದ = ಕಪಿಲ°) ಆನು ಆಗಿದ್ದೆ.
“ಅಶ್ವತ್ಥಃ ಸರ್ವವೃಕ್ಷಾಣಾಮ್” – ಮರಂಗಳಲ್ಲಿ ಅಶ್ವತ್ಥ ಮರ. ಅಶ್ವತ್ಥ ಮರ ಮೇಲ್ನೋಟಕ್ಕೆ ನೋಡುವವಂಗೆ ಏವುದಕ್ಕೂ ಉಪಯೋಗ ಇಲ್ಲದ್ದ ಮರ. ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿರುತ್ತಿದ್ದರೆ ನವಗೆ ಈ ಮರದ ಬಗ್ಗೆ ಎಂತೂ ಗೊಂತಾವುತ್ತಿತ್ತಿಲ್ಲೆ. ಈ ಮರ ತಿಂಬ ಹಣ್ಣಾಗಲೀ, ಸುಗಂಧ ಹೂವಾಗಲೀ ಕೊಡುತ್ತಿಲ್ಲೆ. ಈ ಮರಂದ ಪೀಠೋಪಕರಣ ಮಾಡ್ಳೂ ಬತ್ತಿಲ್ಲೆ. ಅಂದರೂ ವಿಶಾಲವಾಗಿ ಬೆಳದು ತನ್ನ ಸುತ್ತಲಿನ ಪ್ರದೇಶವ ಆಕ್ರಮಿಸಿ ನಿಂಬ ಆಳ ಮತ್ತು ಬೃಹತ್ ಮರ. ಮೇಲ್ನೋಟಕ್ಕೆ ಇದು ಒಂದು ಬರೇ ತಣಿಲು ಕೊಡುವ ಮರ. ಅಂದರೂ ಇದರ ಮಹತ್ವ ಅರಡಿಯದ್ದೆ ಮರಂಗಳಲ್ಲಿ ವಿಶೇಷ ಮರ ಅಶ್ವತ್ಥ ಮರ ಹೇಳಿ ನಾವದಕ್ಕೆ ಸುತ್ತ ಬಂದು ನಮಸ್ಕರಿಸಿ ಪೂಜಿಸುತ್ತು. ಈ ಮರವ ನೆಟ್ರೆ ಪುಣ್ಯ ಬತ್ತು ಹೇಳಿ ಓ ಅಲ್ಲಿ ದೇವಸ್ಥಾನದ ಬುಡಲ್ಲಿ ಹೋಗಿ ನೆಡುತ್ತು. ಇದರಿಂದ ಹೆಚ್ಚಿಗೆ ನವಗರಡಿಯ. ಮದಲಾಣೋರು ಆಲ, ಅಶ್ವತ್ಥ, ಅತ್ತಿ ಹೇಳಿ ಮೂರು ಮರಂಗೊ ಶ್ರೇಷ್ಠ ಹೇಳಿ ಮಹತ್ವ ಕೊಟ್ಟಿದವು. ಮದಲಿಂಗೆ ಯಜ್ಞ ಮಾಡ್ಳೆ ಶಮಿ ಮತ್ತೆ ಅರಣಿ (ಅರಳಿ, ಅಶ್ವತ್ಥ) ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರುಸಿ ಅಗ್ನಿ ಸೃಷ್ಟಿ ಮಾಡಿಗೊಂಡಿತ್ತವು. ಯಜ್ಞಲ್ಲಿ ಅರಳಿಯ ಸಮಿಧೆ (ಸಮಿತ್ತು) ವಿಶೇಷವಾಗಿ ಉಪಯೋಗಿಸಿಗೊಂಡಿತ್ತಿದ್ದವು. ಅಶ್ವತ್ಥ ಮರದ ಸಮಿತ್ತಿನ ಕಾಷ್ಟವಾಗಿ ಯಜ್ಞಲ್ಲಿ ಉಪಯೋಗಿಸಿದರೆ ಅಲ್ಲಿ ಉರಿವ ಕಿಚ್ಚಿನ ಜ್ಞಾಲೆಂದ ಒಂದು ವಿಶಿಷ್ಟ ಶಕ್ತಿ ಹೊರಹೊಮ್ಮುತ್ತು. ಹೇಂಗೆ ಸೂರ್ಯನ ಕಿರಣಲ್ಲಿ ಏಳು ಬಣ್ಣಂಗೊ ಇದ್ದೋ ಹಾಂಗೇ ಅಗ್ನಿಲಿ ಏಳು ಬಣ್ಣಂಗೊ ಇದ್ದು. ಮುಂಡಕ ಉಪನಿಷತ್ತಿಲ್ಲಿ ಅಗ್ನಿಯ ಜ್ಞಾಲೆಂದ ಹೊರಹೊಮ್ಮುವ ಏಳು ಬಣ್ಣವ ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಹೇಳಿ ಹೇಳಿದ್ದು. ಅಗ್ನಿಯ ಈ ಏಳು ಬಣ್ಣವ ಸೂರ್ಯ ಕಿರಣದ ಏಳು ಬಣ್ಣಂಗಳೊಟ್ಟಿಂಗೆ ಸಂಕ್ರಾಂತಗೊಳುಸಿ ವಾತಾವರಣಲ್ಲಿ ಅದರ ಪ್ರಭಾವವ ಉಂಟುಮಾಡುತ್ತದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥ ಸಮಿಧೆ ಒಂದು ಪ್ರಮುಖ ಸಾಧನ. ಇಂದು ನಾವು ಅಶ್ವತ್ಥಮರಲ್ಲಿ ದೇವತಾ ಸನ್ನಿಧಾನ ಇದ್ದು ಹೇದು ಅದಕ್ಕೆ ಪ್ರದಕ್ಷಿಣೆ ಬತ್ತು. ಜ್ಞೋತಿಷ್ಯಲ್ಲಿ ಕೆಲವು ಸಮಸ್ಯಗೆ ಪರಿಹಾರವಾಗಿ ಅಶ್ವತ್ಥ ಪ್ರದಕ್ಷಿಣೆ ಪರಿಹಾರ ಸೂಚಿಸುತ್ತವು. ಅಶ್ವತ್ಥ ಮರದ ಮಹತ್ವವ ಅರಡಿಯದ್ದ ಬುದ್ಧಿಜೀವಿಗೊ ಅಶ್ವತ್ಥ ಪ್ರದಕ್ಷಿಣೆ ಹೇಳ್ವದು ಭ್ರಾಂತು, ಮೂಢನಂಬಿಕೆ ಹೇಳಿ ಹೇಳ್ವವೂ ಇದ್ದವು. ಜಗತ್ತಿಲ್ಲಿ ಎಲ್ಲ ಮರಂಗೊಕ್ಕಿಂತ ಹೆಚ್ಚು ಆಮ್ಲಜನಕವ ಕೊಡ್ತ ಮರ ಅಶ್ವತ್ಥ ಮರ. ಇಂತಹ ಶುದ್ಧ ವಾಯುವಿನ ಉಸಿರಾಟಂದ ಗರ್ಭದೋಷ ಸರಿಯಪ್ಪ ಸಾಧ್ಯತೆ ಇದ್ದು ಹೇಳ್ವದರ ಆಧುನಿಕ ವಿಜ್ಞಾನವೂ ಒಪ್ಪಿಗೊಂಡಿದು. ಮದಲಾಣ ಕಾಲಲ್ಲಿ ಋಷಿಗೊ ಅಶ್ವತ್ಥ ಮರದ ಬುಡಲ್ಲಿ ಕೂದುಗೊಂಡು ವೇದಾಧ್ಯಯನ ಮಾಡಿಗೊಂಡಿತ್ತಿದ್ದವು. ಹೀಂಗೆ ಅಶ್ವತ್ಥ ಮರಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ವಿಶೇಷ ಶಕ್ತಿಯ ಕೊಟ್ಟಿದು. ಇಲ್ಲಿ ಬಂದಿಪ್ಪ ಭಗವಂತನ ನಾಮ ಅಶ್ವತ್ಥಃ., ವೇದವ ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ°. ಅಶ್ವದ ಹಾಂಗೆ ಇದ್ದು ವೇದೋಪದೇಷ ಮಾಡಿದ ಭಗವಂತನ ‘ಅಶ್ವತ್ಥಃ’ ಹೇಳ್ವ ಹೆಸರಿಂದ ದೆನಿಗೊಳ್ಳಲ್ಪಡುತ್ತು.
ಮತ್ತೆ, “ದೇವರ್ಷೀಣಾಮ್ ಚ ನಾರದಃ” – ‘ದೇವಲೋಕದ ಋಷಿಗಳಲ್ಲಿ ನಾರದ°’ ಆನು ಹೇಳಿ ಭಗವಂತ° ಹೇಳುತ್ತ°. ನಾರದ° ಗಂಧರ್ವರಲ್ಲಿ ಒಬ್ಬ°. ಆದರೆ ಭಗವಂತನ ವಿಶೇಷ ಸನ್ನಿಧಾನಂದ ಅವ° ತುಂಬಾ ಎತ್ತರಕ್ಕೆ ಏರಿ ದೇವರ್ಷಿಯಾದ°. ನಾರದ° ಭಗವಂತನ ಪಡದ್ದದು ಮಹಾಸಾಧನೆಂದ ಆವ್ತು. ಹಿಂದಾಣ ಬ್ರಹ್ಮಕಲ್ಪಲ್ಲಿ ನಾರದ° ಒಂದು ಬಡ ಕುಟುಂಬಲ್ಲಿ ಹುಟ್ಟಿದ್ದ°. ಅವನ ಅಬ್ಬೆ ಋಷಿ-ಮುನಿಗಳ ಆಶ್ರಮಲ್ಲಿ ಕೆಲಸ ಮಾಡಿಗೊಂಡು ಬದುಕ್ಕಿಯೊಂಡಿತ್ತು. ಕುಂಞಿಮಾಣಿಯಾಗಿಪ್ಪಗ ಈ ನಾರದ° ಋಷಿಮುನಿಗಳ ಅಧ್ಯಾತ್ಮ ಸಂಭಾಷಣೆಯ ಕೇಳಿಗೊಂಡು ಬೆಳದ°. ಈ ಮಾಣಿಗೆ ಐದು ವರ್ಷ ಪ್ರಾಯ ಅಪ್ಪಗ ಇವನ ಅಬ್ಬೆ ಹಾವು ಕಚಿ ಸಾಯುತ್ತು. ಪ್ರಾಜ್ಞರು ಹೇಳ್ವ ಹಾಂಗೆ ‘ನವಗೆ ದೇವರೇ ನಾಥ°’ ಹೇಳ್ವದರ ಗೊಂತುಮಾಡುಸಲೆ ಮದಾಲು ನಮ್ಮ ಅನಾಥನನ್ನಾಗಿ ಮಾಡುತ್ತ°. ಹಾಂಗೆ, ಅನಾಥನಾದ ಇವ° ತನ್ನ ಐದನೇ ವರ್ಷಂದಲೇ ಋಷಿಗಳಿಂದ ತಿಳ್ಕೊಂಡ ಜ್ಞಾನಂದ ಸಾಧನೆಯ ಸುರುಮಾಡುತ್ತ°. ಆದರೆ ಅವಂಗೆ ಆ ಜನ್ಮಲ್ಲಿ ಭಗವದ್ ದರ್ಶನ ಆವ್ತಿಲ್ಲೆ. ಆದರೆ ಅವ ಭಗವದ್ ವಾಣಿಯ ಕೇಳಿದ° – “ಈ ಜನ್ಮಲ್ಲಿ ಎನ್ನ ಕಾಂಬ ಪ್ರಯತ್ನ ಮಾಡೆಡ, ನೀನು ಮುಂದಾಣ ಕಲ್ಪಲ್ಲಿ ಸದಾ ಎನ್ನ ಕಾಂಬೆ” ಹೇಳಿ. ಮತ್ತೆ ಇವ° ಈ ಬ್ರಹ್ಮಕಲ್ಪಲ್ಲಿ ನಾರದನಾಗಿ ಹುಟ್ಟಿ ಭಗವಂತನ ಮಹಾ ಅನುಗ್ರಹಕ್ಕೆ ಪಾತ್ರನಾದ°.
ನಾರದ° ನಮ್ಮ ಅಂತಃಪ್ರಜ್ಞೆಯ ಅಭಿಮಾನಿ ದೇವತೆ. ಹಿಂದಾಣ ಕಾಲದ ಕಥೆಗಳ ನೋಡಿರೆ ಏವುದಾರು ಏಲ್ಯಾರು ಒಳ್ಳೆ ಕೆಲಸ ಆಯೇಕ್ಕಾರೆ ಅಲ್ಲಿ ನಾರದ° ಬಂದು ಹೇಳಿಕ್ಕಿ ಬೀಜ ಬಿತ್ತಿಕ್ಕಿ ಹೋಗಿಯೊಂಡಿತ್ತಿದ್ದ°. ಬನ್ನಂಜೆ ಹೇಳ್ತವು – ‘ಅಂಬಗ ಈಗ ಏಕೆ ನಾರದ° ಬತ್ತನಿಲ್ಲೆ, ಅವನ ಮಾರ್ಗದರ್ಶನ ಏಕೆ ನವಗೆ ಸಿಕ್ಕುತ್ತಿಲ್ಲೆ?”. ನಾರದನ ನಾವು ಇಂದಿಂಗೂ ದೆನೆಗೊಂಡ್ರೆ ಖಂಡಿತಾ ಬಕ್ಕು. ‘ನಾರದ’ ಹೇಳಿರೆ ನಮ್ಮ ಅಂತರಂಗದ ಧ್ವನಿ. ನಾವು ನಮ್ಮ ಆತ್ಮದ ಧ್ವನಿಗೆ ಕೆಮಿಕೊಟ್ರೆ ಅಲ್ಲಿ ನಾರದ ಮಾತಾಡುತ್ತರ ಕೇಳುಗು. ನಾವು ನಮ್ಮ ಒಳಾಣ ಸಂದೇಶವ ಕೇಳ್ಳೆ ಅಭ್ಯಾಸ ಮಾಡಿರೆ ನಮ್ಮ ‘ಆಜ್ಞಾಚಕ್ರ’ ತೆರೆದುಗೊಳ್ಲುತ್ತು. ಇದರಿಂದ ‘ಈ ರೀತಿ ಮಾಡು’ ಹೇಳ್ವ ಸಂದೇಶ ಬತ್ತು. ಇದೇ ಅಶರೀರವಾಣಿ ಅಥವಾ ಅಂತಃರ್ವಾಣಿ. ಇದೇ ನಾರದ°. ಪ್ರತ್ಯಕ್ಷ ಕಾಂಬಲೆಡಿಯದ್ದರೂ ಅದರ ಕೇಳ್ಳೆ ಎಡಿಗು. ನಾರದಂಗೆ ಈ ಎಲ್ಲಾ ವಿಶಿಷ್ಟ ಶಕ್ತಿ ಭಗವಂತನ ವಿಶೇಷ ಸನ್ನಿಧಾನಂದ ಬಂತು. ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿ ನಾಮ ‘ನಾರದಃ’ – ನರರ ಅಜ್ಞಾನವ ಕಳದು (ನಾರ-ಧ್ಯತಿ), ಅವು ಬಯಸ್ಸಿದ್ದರ ಧಾರೆ ಎರೆತ್ತವ° (ನಾರ-ದದಾತಿ) ಭಗವಂತ° – ‘ನಾರದಃ’.
ನಾರದನ ಮತ್ತೆ ಗಂಧರ್ವರಲ್ಲಿ ತನ್ನ ವಿಶೇಷ ವಿಭೂತಿಯ ಭಗವಂತ° ಹೇಳುತ್ತ°. “ಗಂಧರ್ವಾಣಾಮ್ ಚಿತ್ರರಥಃ” – ‘ಗಂಧರ್ವರಲ್ಲಿ ಆನು ಚಿತ್ರರಥ° ಆಗಿದ್ದೆ’. ದೇವಲೋಕದ ಪರಿಚಾರಿಕೆ ಮಾಡ್ತ ಉಪದೇವತಾ ಗಣ -‘ಗಂಧರ್ವರು’. ಇವು ಅವಾಂತರ ದೇವತೆಗೊ. ಈ ಗಣದ ರಾಜ°- ‘ಚಿತ್ರರಥ°’. ‘ರಾಜಾ ಪ್ರತ್ಯಕ್ಷ ದೇವತಾ’ ಹೇಳ್ವಾಂಗೆ ಭಗವಂತ° ಚಿತ್ರರಥನಲ್ಲಿ ವಿಶೇಷ ವಿಭೂತಿಯಾಗಿ ಸನ್ನಿಹಿತನಾಗಿದ್ದ°. ಇಲ್ಲಿ ಬಂದಿಪ್ಪ ಭಗವಂತನ ವಿಭೂತಿ ನಾಮ “ಚಿತ್ರರಥಃ” – ವಿಚಿತ್ರವಾದ ರಥ ಇಪ್ಪ ಭಗವಂತ° – ‘ಚಿತ್ರರಥಃ’. ಭಗವಂತನ ವಾಹನ – ‘ಗರುಡ°’. ಇದು ಇತರ ಎಲ್ಲ ವಾಹನಂಗಳಿಂತ ವಿಶಿಷ್ಟ. ಇಂತಹ ರಥಲ್ಲಿ ಸಂಚರುಸುವ ಭಗವಂತ° – ‘ಚಿತ್ರರಥಃ’.
ಮತ್ತೆ, “ಸಿದ್ಧಾನಾಮ್ ಕಪಿಲೋ ಮುನಿಃ” – ಸಾಧಕರಲ್ಲಿ ಆನು ಕಪಿಲ ಮುನಿ ಆಗಿದ್ದೆ. ಇತಿಹಾಸಲ್ಲಿ ಇಬ್ರು ಕಪಿಲ ಮುನಿಗೊ ಬತ್ತವು. ಇಬ್ರೂ ಸಾಂಖ್ಯವ ಹೇಳಿದವ್ವು. ಆದರೆ, ಒಬ್ಬ ಭಗವಂತನ ನಂಬದ್ದವ°, ಇನ್ನೊಬ್ಬ° ಕಪಿಲ ವಾಸುದೇವ° (ಕಪಿಲಮುನಿ) – ಸಾಂಖ್ಯವ ಮೂಲತಃ ಜಗತ್ತಿಂಗೆ ಕೊಟ್ಟ ಇವ° ಸಾಕ್ಷಾತ್ ಭಗವಂತನ ಅವತಾರ ಹೇಳಿ ಹೇಳಲ್ಪಟ್ಟವ°. ಸ್ವಾಯಂಭುವ ಮನುವ ಮಗಳು ದೇವಭೂತಿ ಹಾಂಗೂ ಕರ್ಧಮ ಪ್ರಜಾಪತಿಯ ದಾಂಪತ್ಯಂದ ಮೂಡಿಬಂದ ಭಗವಂತನ ಅವತಾರ – ಕಪಿಲಮುನಿ. ವೇದವ್ಯಾಸರೂ ಕೂಡ ಈ ಕಪಿಲ ಮುನಿ ಹೇಳಿದ್ದರನ್ನೇ ಮುಂದಂಗೆ ಪ್ರಸ್ತುತಪಡಿಸಿದ್ದದು. ಹಾಂಗಾಗಿ ಅದರ ‘ಕಪಿಲಾವತಾರ’ ಹೇಳಿಯೂ ಹೇಳುತ್ತವು. ಇಲ್ಲಿ ಹೇಳಿಪ್ಪ ಭಗವಂತನ ವಿಭೂತಿನಾಮ – ‘ಕಪಿಲಃ’ – ಕ-ಪಿ-ಲ – ಇಡೀ ಜಗತ್ತಿಂಗೆ ಆನಂದ ಮೂರ್ತಿ -‘ಕ’, ಇಡೀ ಜಗತ್ತಿನ ಪಾಲುಸುವವ ‘ಪಿ’, ಮತ್ತೆ, ಇಡೀ ಜಗತ್ತಿನ ಲಯಗೊಳುಸುವವ° ‘ಲ’ – ಆ ಭಗವಂತ° ‘ಕಪಿಲಃ’. ಸದಾ ಆನಂದವ ಪಾನಮಾಡುವ, ಅದ್ಭುತ ಸಾಂಖ್ಯದ ಮೂಲಕ ವಿಶ್ವದ ರಹಸ್ಯವ ಬಿಡುಸಿಮಡುಗಿದ ಭಗವಂತ° – ‘ಕಪಿಲಃ’.
ಮುಂದೆ ಎಂತರ….. ? ಬಪ್ಪವಾರ ನೋಡುವೋ° .
…ಮುಂದುವರಿತ್ತು.
ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 10 – SHLOKAS 19 – 26
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಚೆನೈಭಾವಾ,
ನಿ೦ಗಳ ಶ್ರದ್ದೆಗೆ ಒ೦ದು ಸೆಲ್ಯೂಟ್!
ಶ್ರೀ ಕುಮಾರ ಮಾವ ಹೇಳ್ದ೦ಗೆ ನಿಮ್ಮ ಬರವಣಿಗೆ ವ್ಯಾಪ್ತಿಯೂ ಹೆಚ್ಚೇ ಇದ್ದೇನೊ ಅನ್ನುಸ್ತು. ಹೀ೦ಗೇ ಮು೦ದುವರೆಯಲಿ.
ಹರೇ ರಾಮ; ಇದರ ಓದುವಾಗ ಎನಗಾದ ಅನುಭವವ ಇಲ್ಲಿ ಹೇಳೆಕು ಹೇದು ನೋಡಿರೆ ಅದರ ಈಗಾಗಳೆ ಶರ್ಮಪ್ಪಚ್ಚಿ ಬರದಾಯಿದು. ಆದೇ ಅಭಿಪ್ರಾಯ ಎನ್ನದು. ಲಾಯಕಾಗಿ ಬತ್ತಾ ಇದ್ದು. ಧನ್ಯವಾದಗೊ.
ಭಗವಂತನ ವ್ಯಾಪ್ತಿಯ ವಿಸ್ತರಿಸಿ ಮುಂದೆ ಹೋದ ಹಾಂಗೆ, ಪ್ರತಿಯೊಂದು ಅಕ್ಷರವನ್ನೂ ಬಿಡುಸಿ ಬಿಡುಸಿ ಕೊಟ್ಟ ವಿವರಣೆ ತುಂಬಾ ಲಾಯಿಕ ಆಯಿದು. ಬನ್ನಂಜೆ ವ್ಯಾಖ್ಯಾನವೂ ಸೇರಿ ಅಪ್ಪಗ ಪರಿಪೂರ್ಣ ಆತು.
ಧನ್ಯೋಸ್ಮಿ
ಭಗವಂತನ ಮಹಿಮೆಯ ವ್ಯಾಪ್ತಿಯ ವಿವರುಸುಲೆ ಹೆರಟರೆ ಅದಕ್ಕೆ ಅಂತ್ಯ ಇಲ್ಲೆ.
ಹರೆ ರಾಮ.
ಚೆನ್ನೈ ಭಾವ,
[ಎನ್ನ ಮಹಿಮೆಯ ವಿಸ್ತರದ ವ್ಯಾಪ್ತಿಯೇ ಇಲ್ಲೆ (ಮೇ ವಿಸ್ತರಸ್ಯ ಅಂತಃ ಹಿ ನ ಅಸ್ತಿ).]
ಭಗವಂತನ ಮಹಿಮೆಯ ವಿಸ್ತರಿಸುಲೆ ನಿಜವಾಗಿಯೂ ಕಷ್ಟ.
ಭಗವಂತನ ಅನುಗ್ರಹಂದಲೇ ಬಂದ ಭಗವದ್ಗೀತೆಯ ಇಷ್ಟು ವಿವರವಾಗಿ, ವಿಸ್ತಾರವಾಗಿ ವಿವರ್ಸಿ ಬರದು, ಎಲ್ಲೊರಿಂಗೂ ಓದಿ ಅರ್ಥೈಸಿಗೊಂಬಲೆ ತುಂಬಾ ಸುಲಾಬ ಮಾಡಿ ಬರವ ನಿಂಗಳ ಬರವಣಿಗೆಯ ಕೌಶಲ ನೋಡುವಾಗ ತುಂಬಾ ಕೊಶಿ ಆವುತ್ತು.
ತುಂಬಾ ತುಂಬಾ ಧನ್ಯವಾದಂಗೊ ಭಾವ..