Oppanna.com

ಶ್ರೀಮದ್ಭಗವದ್ಗೀತಾ – ಸಪ್ತಮೋsಧ್ಯಾಯಃ – ಜ್ಞಾನವಿಜ್ಞಾನಯೋಗಃ (ಜ್ಞಾನ-ವಿಜ್ಞಾನ-ಯೋಗಃ) – ಶ್ಲೋಕಂಗೊ 01 – 10

ಬರದೋರು :   ಚೆನ್ನೈ ಬಾವ°    on   23/08/2012    1 ಒಪ್ಪಂಗೊ

ಚೆನ್ನೈ ಬಾವ°

ಶ್ರೀ ಕೃಷ್ಣಪರಮಾತ್ಮನೇ ನಮಃ

ಶ್ರೀಮದ್ಭಗವದ್ಗೀತಾ

ಅಥ ಸಪ್ತಮೋsಧ್ಯಾಯಃಜ್ಞಾನವಿಜ್ಞಾನಯೋಗಃ (ಜ್ಞಾನ-ವಿಜ್ಞಾನ-ಯೋಗಃ)

 

ಶ್ಲೋಕ

ಶ್ರೀಭಗವಾನುವಾಚ
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತಚ್ಛ್ರುಣು ॥೦೧॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಮಯಿ ಆಸಕ್ತ-ಮನಾಃ ಪಾರ್ಥ ಯೋಗಮ್ ಯುಂಜನ್ ಮತ್ ಆಶ್ರಯಃ । ಅಸಂಶಯಮ್ ಸಮಗ್ರಮ್ ಮಾಮ್ ಯಥಾ ಜ್ಞಾಸ್ಯಸಿ ತತ್ ಶೃಣು ॥

ಅನ್ವಯ

ಶ್ರೀ ಭಗವಾನ್ ಉವಾಚ
ಹೇ ಪಾರ್ಥ!, ಮಯಿ ಆಸಕ್ತ-ಮನಾಃ ಮತ್ ಆಶ್ರಯಃ (ತ್ವಂ) ಯೋಗಂ ಯುಂಜನ್, ಮಾಂ ಸಮಗ್ರಂ ಯಥಾ ಅಸಂಶಯಂ ಜ್ಞಾಸ್ಯಸಿ, ತತ್ ಶೃಣು।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವದೇವೋತ್ತಮ ಪರಮ ಪುರುಷ° (ಭಗವಂತ) ಹೇಳಿದ°, ಹೇ ಪಾರ್ಥ! – ಏ ಪೃಥೆಯ ಮಗನೇ!, ಮಯಿ – ಎನ್ನಲ್ಲಿ, ಆಸಕ್ತ-ಮನಾಃ – ಸಂಪೂರ್ಣ ಮನಸ್ಸಿನ ಆಸಕ್ತವಾಗಿಸಿ, ಮತ್ ಆಶ್ರಯಃ – ಎನ್ನ ಪ್ರಜ್ಞೆಲಿ (ಕೃಷ್ಣಪ್ರಜ್ಞೆಲಿ), (ತ್ವಮ್ – ನೀನು), ಯೋಗಮ್ – ಆತ್ಮಸಾಕ್ಷಾತ್ಕಾರವ (ಭಕ್ತಿಯೋಗವ), ಯುಂಜನ್ – ಅಭ್ಯಸಿಸಿಗೊಂಡು, ಮಾಮ್ – ಎನ್ನ, ಸಮಗ್ರಮ್ – ಸಂಪೂರ್ಣವಾಗಿ, ಯಥಾ – ಹೇಂಗೆ, ಅಸಂಶಯಮ್ – ಸಂಶಯವಿಲ್ಲದ್ದೆ, ಜ್ಞಾಸ್ಯಸಿ – ತಿಳಿತ್ತೆ, ತತ್ – ಅದರ, ಶೃಣು – ಕೇಳುವಂತನಾಗು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷ°, ಭಗವಂತ° ಹೀಂಗೆ ಹೇಳಿದ° – ಪಾರ್ಥ!, ಎನ್ನಲ್ಲಿ ಆಸಕ್ತನಾದ ಮನಸ್ಸಿಂದ, ಎನ್ನನ್ನೇ ಆಶ್ರಯಿಸಿದ ಸಂಪೂರ್ಣ ಪ್ರಜ್ಞೆಲಿ ಯೋಗಾಭ್ಯಾಸವ ಮಾಡಿಗೊಂಡು, ನೀನು ಎನ್ನ ಸಂಪೂರ್ಣವಾಗಿ (ಸಮಗ್ರವಾಗಿ)  ಸಂಶಯವಿಲ್ಲದ್ದೆ (ಅಸಂಶಯಂ) ತಿಳ್ಕೊಂಬಲೆಡಿಗು. ಅದು ಹೇಂಗೆ ಹೇಳ್ವದರ ನೀ ಕೇಳು.

ತಾತ್ಪರ್ಯ / ವಿವರಣೆ

ಭಗವದ್ಗೀತೆಯ ಆರನೇ ಅಧ್ಯಾಯಲ್ಲಿ ಭಗವಂತ° ಅರ್ಜುನಂಗೆ ಸಾಧಕನಾದವ° ಯಾವ ರೀತಿ ಸಾಧನಗೆ ತೊಡಗೆಕು, ಕರ್ಮ ಹೇಂಗಿರೆಕು, ಧ್ಯಾನ ಹೇಂಗಿರೆಕು ಇತ್ಯಾದಿ ಭಗವಂತನ ತಿಳ್ಕೊಂಬ ಸಾಧನದ ಬಗ್ಗೆ ವಿವರಿಸಿದ್ದ°. ಸಾಧನೆಯ ಮೂಲಕ ನಾವು ತಿಳ್ಕೊಳ್ಳೆಕ್ಕಾದ ಭಗವಂತನ ಸ್ವರೂಪ, ವಿಭೂತಿ, ವೈಭವ ವಿವರಣೆಯನ್ನೂ ಅಲ್ಲೇ ಮುಂದೆ ಹೇಳಿದ್ದ°. ಮಾತ್ರ ಅಲ್ಲದ್ದೆ ಸಾಧನೆ, ಅರ್ಧ ಸಾಧನೆಂದ ಅಪ್ಪ ಪ್ರಯೋಜನವನ್ನೂ ವಿವರಿಸಿದ್ದ°.  ಭಗವಂತ ಎಲ್ಲ ಭಾಗ್ಯಂಗಳಲ್ಲಿ ಪೂರ್ಣನಾದವ°. ಹಾಂಗಾರೆ ನಮ್ಮ ಬುದ್ಧಿಶಕ್ತಿಯ ಉಪಯೋಗಿಸಿಗೊಂಡು ಆ ಮಹಿಮಹಿನ ತಿಳ್ಕೊಂಬದು ಹೇಂಗೆ ಹೇಳ್ವ ವಿವರವ ಭಗವಂತ° ಇಲ್ಲಿ ಹೇಳುತ್ತ°.

‘ಜೀವಿ’ಯ ಬೇರೆ ಬೇರೆ ಬಗೆಯ ಯೋಗಂಗಳಿಂದ ಆತ್ಮಸಾಕ್ಷಾತ್ಕಾರಕ್ಕೆ ಏರ್ಲೆಡಿಗಪ್ಪ ಭೌತಿಕವಲ್ಲದ ಆತ್ಮ ಹೇಳಿ ವರ್ಣಿಸಿದ್ದು. ಮನಸ್ಸಿನ ಸ್ಥಿರವಾಗಿ ಭಗವಂತನಲ್ಲಿ ನೆಡುವದು. ಹೇಳಿರೆ, ಸಂಪೂರ್ಣ ಕೃಷ್ಣಪ್ರಜ್ಞೆಯ ಅವಸ್ಥೆಗೆ ತನ್ನ ಕೊಂಡೋಪದು ಹೇಳಿ ಅರ್ಥ. ಕೃಷ್ಣಪ್ರಜ್ಞೆಯು ಎಲ್ಲ ಯೋಗಂಗಳಲ್ಲಿ ಅತ್ಯುನ್ನತ ಸ್ವರೂಪದ್ದು ಹೇಳಿ ಈ ಮದಲೇ ಹೇಳಿದ್ದದು. ಮನಸ್ಸಿನ ಭಗವಂತನಲ್ಲಿ ಕೇಂದ್ರೀಕರಿಸಿದರೆ ಮನುಷ್ಯ° ಪರಮ ಸತ್ಯವ ಅರ್ತುಗೊಂಬಲೆ ಎಡಿಗು. ಇಲ್ಲದ್ರೆ ಎಡಿಯ. ನಿರಾಕಾರ ಬ್ರಹ್ಮಜ್ಯೋತಿಯ ಅಥವಾ ಅಂತರ್ಯಾಮಿ ಪರಮಾತ್ಮನ ಸಾಕ್ಷಾತ್ಕಾರವು ಪರಮ ಸತ್ಯದ ಪರಿಪೂರ್ಣ ಅರಿವಲ್ಲ. ಅದು ಭಾಗಶಃವಾದ್ದು. ಸಂಪೂರ್ಣವಾದ ಮತ್ತೆ ವೈಜ್ಞಾನಿಕವಾದ ಜ್ಞಾನವೇ ಭಗವಂತ°. ಸಂಪೂರ್ಣ ಕೃಷ್ಣಪ್ರಜ್ಞೆಲಿಪ್ಪ ಮನುಷ್ಯಂಗೆ ಮಾತ್ರವೇ ಅದು ತನ್ನಿಂತಾನೇ ಪ್ರಕಟ ಅಕ್ಕು. ಸಂಪೂರ್ಣ ಕೃಷ್ಣಪ್ರಜ್ಞೆಲಿ, ಯಾವ ಸಂಶಯವೂ ಇಲ್ಲದ್ದೆ ಕೃಷ್ಣನೇ (ಭಗವಂತನೇ) ಅಂತಿಮ ಜ್ಞಾನ ಹೇಳ್ವದು ಮನುಷ್ಯಂಗೆ ಗೊಂತಕ್ಕು. ಯೋಗದ ಬೇರೆ ಬೇರೆ ಬಗೆಗೊ ಕೃಷ್ಣಪ್ರಜ್ಞೆಯ ಮಾರ್ಗಲ್ಲಿ ಮೆಟ್ಟುಗಲ್ಲುಗೊ ಮಾತ್ರ. ನೇರವಾದ ಕೃಷ್ಣಪ್ರಜ್ಞೆಲಿ ನಿರತನಾಗಿಪ್ಪವಂಗೆ ಬ್ರಹ್ಮಜ್ಯೋತಿಯ ಮತ್ತು ಪರಮಾತ್ಮನ ಸಂಪೂರ್ಣ ಅರಿವು ಪ್ರಯತ್ನ ಇಲ್ಲದ್ದೆ ಆವುತ್ತು. ಅಷ್ಟು ಆಯೇಕಾರೆ ಬಹುಕಾಲದ ಅವಿರತ ಅಭ್ಯಾಸ ಮತ್ತೆ ಪ್ರಯತ್ನ ಅಗತ್ಯ. ಕೃಷ್ಣಪ್ರಜ್ಞೆಯ ಯೋಗಾಭ್ಯಾಸಂದ ಮನುಷ್ಯ° ಎಲ್ಲವನ್ನೂ ಸಂಪೂರ್ಣವಾಗಿ ತಿಳ್ಕೊಂಬಲೆ ಎಡಿಗು. ಪರಮ ಸತ್ಯ, ಜೀವಿಗೊ, ಭೌತಿಕ ಪ್ರಕೃತಿ ಮತ್ತೆ ಸಾಧನ ಸಾಮಾಗ್ರಿಗಳತ್ರೆ ಅವುಗಳ ಅಭಿವ್ಯಕ್ತಿ ಎಲ್ಲವನ್ನೂ ಸರಿಯಾಗಿ ಅರ್ತುಗೊಂಬಲೆ ಎಡಿಗು. ಹಾಂಗಾಗಿ ಇಲ್ಲಿ ಭಗವಂತ° ಹೇಳಿದ್ದು “ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಂಜನ್ ಮದಾಶ್ರಯಃ” – ಎನ್ನನ್ನೇ ನಂಬಿ, ಎನ್ನನ್ನೇ ಮೊರೆಹೊಕ್ಕು, ಯೋಗಸಾಧನೆ ಮಾಡಿಗೊಂಡು ಖಚಿತವಾದ ಅರಿವು (ಜ್ಞಾನ) ನೀನು ಪಡೆ. ಒಂದು ವಿಷಯದ ಬಗ್ಗೆ ಜ್ಞಾನ (ತಿಳುವಳಿಕೆ) ಬರೇಕು ಹೇಳಿ ಆದರೆ ಮದಾಲು ಅದರ ಬಗ್ಗೆ ವಿಶ್ವಾಸ, ನಂಬಿಕೆ ಇರೆಕು. ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದು ‘ಎನ್ನಲ್ಲಿ ಆಸಕ್ತನಾಗಿ, ಯೋಗಾಭ್ಯಾಸಿಯಾಗಿ, ಎನ್ನನ್ನೇ ನಂಬಿ ಎನ್ನ ತಿಳಿವ ಪ್ರಯತ್ನವ ಮಾಡು’ ಹೇಳಿ. ವಿಷಯದ ಬಗ್ಗೆ ತಿಳಿವದು ಹೇಳಿರೆ ಮದಲಾಣದ್ದು ಮತ್ತು ಮುಖ್ಯವಾದ್ದು – ಕೇಳುವದು – ‘ಶ್ರವಣ’. ಹಾಂಗಾಗಿ  ಭಗವಂತ ಅರ್ಜುನಂಗೆ ಹೇಳಿದ್ದು – ‘ತಚ್ಛ್ರುಣು’ –  ಅದರ ‘ಕೇಳು’. ಭಗವಂತನಿಂದ ಮಿಗಿಲಾದ ಇನ್ನೊಬ್ಬ° ಇಲ್ಲೆ. ಅವನೇ ಶ್ರೇಷ್ಠ°, ಅವನೇ ಆದಿಯೂ, ಅಂತಿಮವೂ. ಹಾಂಗಾಗಿ ಅವನಿಂದಲೇ ಕೇಳಿದಮತ್ತೆ ಬೇರೆ ಸಂಶಯಂಗೊಕ್ಕೆ ಅವಕಾಶ ಇಲ್ಲೆ. ಅವನಿಂದ ಕೇಳಿದವ° ಪರಿಪೂರ್ಣ ಕೃಷ್ಣಪ್ರಜ್ಞೆಯವನಪ್ಪಲೆ ಅತ್ಯುತ್ತಮ ಅವಕಾಶ ಪಡೆತ್ತ°. ಹಾಂಗಾಗಿ ನೇರವಾಗಿ ಭಗವಂತನಿಂದ ಅಥವಾ ಒಬ್ಬ ಪರಿಶುದ್ಧ ಕೃಷ್ಣಭಕ್ತನಿಂದ ಜ್ಞಾನವ ತಿಳಿಯೆಕು ಹೇಳಿ ಹೇಳ್ವದು. ಬರೇ ಪಾಂಡಿತ್ಯಪೂರ್ಣ ಶಿಕ್ಷಣ ಹೊಂದಿದ್ದು, ಅಹಂಕಾರ ಬೀಗುವ, ಭಕ್ತನಲ್ಲದವನಿಂದ ಕಲಿವಲಾಗ. ಹಾಂಗರೆ ಪಾಂಡಿತ್ಯ ಗಳುಸುವದು/ಕಲಿವದು ಬರೇ ತನ್ನ ಸ್ವಂತಕ್ಕೆ ಅಲ್ಲ, ತಿಳಿವದು, ಇತರರಿಂಗೆ ತಿಳಿಯಪಡಿಸುವದು ನಿಜವಾದ ಪಂಡಿತನ ಲಕ್ಷಣ.

ಚಂಚಲ ಮನಸ್ಸಿನ ಯೋಗಸಾಧನೆಯ ಮೂಲಕ ಭಗವಂತನಲ್ಲಿ ಸಂಪೂರ್ಣ ಸ್ಥಿರಗೊಳುಸಿ, ಮತ್ತೆ ಅಲ್ಲಿಂದ ಚಂಚಲವಾಗದ್ದ ಹಾಂಗೆ ಮನಸ್ಸಿನ ಅಲ್ಲೇ ಸುದೃಢಗೊಳುಸಿ ಗಾಢವಾದ ಭಕ್ತಿಂದ, ಅಹಂಕಾರವ ಪೂರ್ಣ ಬಿಟ್ಟು, ಸಂಪೂರ್ಣ ಶರಣಾಗತಿಂದ, ತನ್ನ ಭಗವಂತಂಗೆ ಅರ್ಪುಸಿ, ಧ್ಯಾನಯೋಗಲ್ಲಿ ತೊಡಗಿದ ಮತ್ತೆ ಅರಿವಿನ ಪೂರ್ಣ ಸಾಮರ್ಥ್ಯದಷ್ಟು ಭಗವಂತನ ಹೇಂಗೆ ತಿಳಿಯೆಕು ಹೇಳ್ವದರ ನೀ ಕೇಳು ಹೇಳಿ ಹೇಳುತ್ತ° ಅರ್ಜುನಂಗೆ ಇಲ್ಲಿ  ಭಗವಂತ°.

ಶ್ಲೋಕ

ಜ್ಞಾನಂ ತೇsಹಂ ಸವಿಜ್ಞಾನಮ್ ಇದಂ ವಕ್ಷ್ಯಾಮ್ಯಶೇಷತಃ ।
ಯಜ್ಞಾತ್ವಾ ನೇಹ ಭೂಯಃ ಅನ್ಯತ್ ಜ್ಞಾತವ್ಯಮವಶಿಷ್ಯತೇ ॥೦೨॥

ಪದವಿಭಾಗ

ಜ್ಞಾನಮ್ ತೇ ಅಹಮ್ ಸವಿಜ್ಞಾನಮ್ ಇದಮ್ ವಕ್ಷ್ಯಾಮಿ ಅಶೇಷತಃ । ಯತ್ ಜ್ಞಾತ್ವಾ ನ ಇಹ ಭೂಯಃ ಅನ್ಯತ್ ಜ್ಞಾತವ್ಯಮ್ ಅವಶಿಷ್ಯತೇ॥

ಅನ್ವಯ

ಅಹಮ್ ಇದಂ ಸವಿಜ್ಞಾನಂ ಜ್ಞಾನಂ ತೇ ಅಶೇಷತಃ ವಕ್ಷ್ಯಾಮಿ । ಯತ್ ಜ್ಞಾತ್ವಾ ಇಹ ಭೂಯಃ ಅನ್ಯತ್ ಜ್ಞಾತವ್ಯಂ ನ ಅವಶಿಷ್ಯತೇ ।

ಪ್ರತಿಪದಾರ್ಥ

ಅಹಮ್ – ಆನು, ಇದಮ್ – ಈ, ಸವಿಜ್ಞಾನಮ್ – ಆಧ್ಯಾತ್ಮಿಕ ಜ್ಞಾನವ, ಜ್ಞಾನಮ್ – ಇಂದ್ರಿಯಗೋಚರ ಜ್ಞಾನವ, ತೇ – ನಿನಗೆ, ಅಶೇಷತಃ – ಪೂರ್ಣವಾಗಿ (ಏನೂ ಶೇಷವಿಲ್ಲದ್ದೆ), ವಕ್ಷ್ಯಾಮಿ – ವಿವರುಸುತ್ತೆ. ಯತ್ – ಯಾವುದರ, ಜ್ಞಾತ್ವಾ – ತಿಳುದು, ಇಹ – ಈ ಪ್ರಪಂಚಲ್ಲಿ, ಭೂಯಃ – ಮತ್ತೆ, ಅನ್ಯತ್ – ಬೇರೆ ಎಂತದೂ, ಜ್ಞಾತವ್ಯಮ್ – ತಿಳಿಯೆಕ್ಕಪ್ಪದು, ನ ಅವಶಿಷ್ಯತೇ – ಒಳಿತ್ತಿಲ್ಲೆ.

ಅನ್ವಯಾರ್ಥ

ಈಗ ಆನು ನಿನಗೆ ಇಂದ್ರಿಯಗೋಚರವಾದ ಜ್ಞಾನವನ್ನೂ, ಆಧ್ಯಾತ್ಮಿಕ ಜ್ಞಾನವನ್ನೂ ಸಂಪೂರ್ಣವಾಗಿ ತಿಳಿಶಿಕೊಡುತ್ತೆ. ಇದರ ತಿಳ್ಕೊಂಡಮತ್ತೆ  ನೀನು ತಿಳ್ಕೊಳ್ಳೆಕ್ಕಪ್ಪದು ಬೇರೆ ಎಂತದೂ ಇಲ್ಲೆ ( ತಿಳಿಯೆಕ್ಕಪ್ಪದು  ಬೇರೆಂತದೂ ಉಳಿತ್ತಿಲ್ಲೆ).

ತಾತ್ಪರ್ಯ / ವಿವರಣೆ

ಸಂಪೂರ್ಣ ಜ್ಞಾನಲ್ಲಿ ಇಂದ್ರಿಯಗ್ರಾಹ್ಯ ಪ್ರಪಂಚ, ಅದರ ಹಿಂದೆ ಇಪ್ಪ ಚೇತನ ಮತ್ತೆ ಇವ್ವೆರಡರ ಮೂಲ – ಇವೆಲ್ಲವುಗಳ ತಿಳುವಳಿಕೆಯೂ ಸೇರಿದ್ದು. ಇದುವೇ ಆಧ್ಯಾತ್ಮಿಕ ಜ್ಞಾನ. ಅರ್ಜುನ° ಭಗವಂತಂಗೆ ಅಂತರಂಗದ ಭಕ್ತ° ಮತ್ತೆ ಚೆಂಙಾಯಿಯುದೇ. ಹಾಂಗಾಗಿ ಅವನ ಬಗ್ಗೆ ಸಂಪೂರ್ಣ ವಿಶ್ವಾಸವ / ಭರವಸೆಯ ಮಡಿಕ್ಕೊಂಡ ಭಗವಂತ° ಅರ್ಜುನಂಗೆ ಈ ವಿವರವ ತಿಳಿಶಲೆ ತೀರ್ಮಾನ ಮಾಡಿದ್ದದು. ಈ ಮದಲೇ ನಾಲ್ಕನೇ ಅಧ್ಯಾಯಲ್ಲಿ ಹೇಳಿಪ್ಪ ಹಾಂಗೆ ಭಗವಂತನಿಂದ ನೇರವಾಗಿ ಬಂದ ಗುರುಶಿಷ್ಯ ಪರಂಪರೆಲ್ಲಿಪ್ಪ ಭಗವದ್ಭಕ್ತ° ಮಾತ್ರ ಸಂಪೂರ್ಣಜ್ಞಾನವ ಪಡವಲೆಡಿಗಷ್ಟೆ ಹೇಳ್ವದರ ಈ ಮೂಲಕ ಮತ್ತೆ ದೃಢಪಡುಸುತ್ತ° ಭಗವಂತ°. ಹಾಂಗಾಗಿ ಎಲ್ಲ ಕಾರಣಂಗಳ ಕಾರಣನಾದ, ಮತ್ತೆ ಎಲ್ಲ ಯೋಗಂಗಳ ಧ್ಯಾನದ ಗುರಿಯಾದ,  ಎಲ್ಲ ಜ್ಞಾನಂಗಳ ಮೂಲವ ಅರ್ಥಮಾಡಿಗೊಂಬಷ್ಟು ಬುದ್ಧಿ ಮನುಷ್ಯಂಗೆ ಇರೆಕು. ಎಲ್ಲ ಕಾರಣಂಗಳ ಕಾರಣ ತಿಳುದಪ್ಪಗ ತಿಳ್ಕೊಂಬಲೆಡಿಗಪ್ಪದೆಲ್ಲ ತಿಳ್ಕೊಂಬಲೆಡಿತ್ತು. ಮತ್ತೆ ಯಾವುದೂ ತಿಳಿವಲೆ ಬಾಕಿ ಉಳಿತ್ತಿಲ್ಲೆ. “ಕಸ್ಮಿನ್ ಭಗವೋ ವಿಜ್ಞಾತೇ ಸರ್ವಂ ಇದಂ ವಿಜ್ಞಾತಂ ಭವತಿ” – ಆರಿಂದ ಭಗವಂತನ ತಿಳಿವಲೆಡಿಗಾವ್ತೋ ಅವಂಗೆ ಎಲ್ಲವೂ ತಿಳಿದಾಂಗೆ, ಮತ್ತೆ ತಿಳಿವಲಿಪ್ಪದು ಎಂತದೂ ಬಾಕಿ ಇಲ್ಲೆ. ನಾವು ಭಗವಂತನ ತಿಳುದರೆ ಈ ಪ್ರಪಂಚವನ್ನೇ ತಿಳುದ ಹಾಂಗೆ. “ಯಾವ ಸಂಗತಿಯ ತಿಳುದರೆ ಮತ್ತೆ ಬೇರೆ ತಿಳುಕ್ಕೊಳ್ಳೆಕ್ಕಾದ ಸಂಗತಿ ಒಳಿತ್ತಿಲ್ಲ್ಯೋ ಅಂತಹ ವಿಜ್ಞಾನವ ನಿನಗೆ ಕೊಡುತ್ತೆ” ಹೇಳಿ ಹೇಳುತ್ತ° ಇಲ್ಲಿ ಭಗವಂತ°.

ವಿಜ್ಞಾನ = ವಿ + ಜ್ಞಾನ. ಇಲ್ಲಿ ‘ವಿ’ ಉಪಸರ್ಗ. ವಿ= ವಿಲಕ್ಷಣವಾದ, ವಿಶಿಷ್ಟವಾದ, ವಿಶೇಷವಾದ ಇತ್ಯಾದಿ ಅರ್ಥಂಗೊ. ಒಂದು ವಿಷಯವ ವಿಶೇಷವಾಗಿ ತಳಸ್ಪರ್ಶಿಯಾಗಿ ತಿಳಿವದು ವಿಜ್ಞಾನ. ಇಲ್ಲಿ ಭಗವಂತ ಹೇಳುತ್ತ ಇಪ್ಪದು ವಿಜ್ಞಾನ. ಅಧ್ಯಾತ್ಮಿಕಲ್ಲಿ ವಿಜ್ಞಾನ ಹೇಳಿರೆ ಆಧ್ಯಾತ್ಮಿಕ ಜ್ಞಾನ. ಜ್ಞಾನದ ಮೂಲಕ ವಿಜ್ಞಾನವ ತಿಳಿಯೆಕ್ಕಪ್ಪದು. ‘ದೇವರು ಇದ್ದ°, ಅವ° ಸರ್ವಸಮರ್ಥ°, ಸರ್ವಾಂತರ್ಯಾಮಿ°’ ಹೇಳ್ವದು ಜ್ಞಾನ. ಅವ° ಎಲ್ಲೆಲ್ಲಿ ಹೇಂಗಿದ್ದ°, ಯಾವ ವಸ್ತುವಿಲ್ಲಿ ಯಾವ ವಿಭೂತಿಯಾಗಿದ್ದ° ಹೇಳಿ ವಿವರವಾಗಿ ತಿಳಿವದು ವಿಜ್ಞಾನ ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು.

ಶ್ಲೋಕ

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ ।
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ॥೦೩॥

ಪದವಿಭಾಗ

ಮನುಷ್ಯಾಣಾಮ್ ಸಹಸ್ರೇಷು ಕಶ್ಚಿತ್ ಯತತಿ ಸಿದ್ಧಯೇ । ಯತತಾಮ್ ಅಪಿ ಸಿದ್ಧಾನಾಮ್ ಕಶ್ಚಿತ್ ಮಾಮ್ ವೇತ್ತಿ ತತ್ತ್ವತಃ ॥

ಅನ್ವಯ

ಮನುಷ್ಯಾಣಾಂ ಸಹಸ್ರೇಷು ಕಶ್ಚಿತ್ ಸಿದ್ಧಯೇ ಯತತಿ । ಯತತಾಂ ಸಿದ್ಧಾನಾಂ ಅಪಿ ಕಶ್ಚಿತ್ ಮಾಂ ತತ್ತ್ವತಃ ವೇತ್ತಿ ।

ಪ್ರತಿಪದಾರ್ಥ

ಮನುಷ್ಯಾಣಾಮ್ – ಮನುಷ್ಯರ, ಸಹಸ್ರೇಷು – ಸಾವಿರಾರುಗಳಲ್ಲಿ, ಕಶ್ಚಿತ್ – ಆರೋ ಒಬ್ಬ°, ಸಿದ್ಧಯೇ – ಸಿದ್ಧಿಗೆ (ಪರಿಪೂರ್ಣತೆಗೆ), ಯತತಿ – ಪ್ರಯತ್ನಿಸುತ್ತ°, ಯತತಾಮ್ – ಹಾಂಗೆ ಪ್ರಯತ್ನಿಸುವವರಲ್ಲಿ , ಸಿದ್ಧಾನಾಮ್ – ಪರಿಪೂರ್ಣತೆಯ ಸಾಧುಸುವವರಲ್ಲಿ, ಅಪಿ – ಕೂಡ, ಕಶ್ಚಿತ್ – ಆರೋ ಒಬ್ಬ°, ಮಾಮ್ – ಎನ್ನ, ತತ್ತ್ವತಃ – ವಾಸ್ತವಿಕವಾಗಿ, ವೇತ್ತಿ – ತಿಳಿತ್ತ°.

ಅನ್ವಯಾರ್ಥ

ಸಾವಿರಾರು ಜನರಲ್ಲಿ ಆರೋ ಒಬ್ಬ° ಸಾಧನೆಗೆ ಪ್ರಯತ್ನಿಸುವದಿಕ್ಕು. ಹಾಂಗೆ ಪ್ರಯತ್ನಿಸುವವರಲ್ಲಿ ಆರೋ ಒಬ್ಬ° ಮಾಂತ್ರ ಎನ್ನ ತತ್ತ್ವತಃ (ವಾಸ್ತವಿಕವಾಗಿ, ನಿಜವಾಗಿ)  ಅರ್ಥಮಾಡಿಗೊಳ್ಳುತ್ತ°.

ತಾತ್ಪರ್ಯ / ವಿವರಣೆ

ಮನುಷ್ಯರಲ್ಲಿ ಬೇರೆ ಬೇರೆ ಮಟ್ಟದವು ಇರುತ್ತವು. ಆತ್ಮ ಹೇಳಿರೆಂತರ, ದೇಹ ಹೇಳಿರೆಂತರ, ಪರಮಸತ್ಯ ಹೇಳಿರೆ ಎಂತರ ಇತ್ಯಾದಿ ಇವೆಲ್ಲವ ತಿಳ್ಕೊಂಬಲೆ ದಿವ್ಯಸಾಕ್ಷಾತ್ಕಾರಲ್ಲಿ ಸಾವಿರಲ್ಲಿ ಒಬ್ಬಂಗೆ ಮಾತ್ರ ತಕ್ಕ ಆಸಕ್ತಿಯಿಕ್ಕು. ತಿಂಬದು, ಒರಗುವದು, ತನ್ನಲ್ಲಿಪ್ಪದರ ರಕ್ಷಣೆ, ಇಂದ್ರಿಯಭೋಗ ಇತ್ಯಾದಿಗಳಲ್ಲೇ ಮನುಷ್ಯರು ಐಹಿಕಲ್ಲಿ ತನ್ಮಯರಾಗಿರುತ್ತವು. ದಿವ್ಯಜ್ಞಾನದ ಬಗ್ಗೆ ಸಾಮಾನ್ಯವಾಗಿ ಆರಿಂಗೂ ಆಸಕ್ತಿಯಿರುತ್ತಿಲ್ಲೆ. ಇದ್ದರೂ ಅತೀ ವಿರಳ. ದಿವ್ಯಜ್ಞಾನ, ಆತ್ಮ, ಪರಮಾತ್ಮ, ಜ್ಞಾನಯೋಗ, ಧ್ಯಾನಯೋಗ ಮೂಲಕ ಸಾಕ್ಷಾತ್ಕಾರದ ಪ್ರಕ್ರಿಯೆ ಆತ್ಮನ ಜಡವಸ್ತುವಿಂದ ಪ್ರತ್ಯೇಕಿಸುವದು – ಇದುವೇ ಆ ವಿಶಿಷ್ತವಾದ ದಿವ್ಯಜ್ಞಾನ. ಕೃಷ್ಣಪ್ರಜ್ಞೆ ಇಪ್ಪವ್ವು ಮಾತ್ರ ಭಗವಂತನ ತಿಳ್ಕೊಂಬಲೆ ಎಡಿಗಪ್ಪವ್ವು.  ನಿರಾಕಾರ ಬ್ರಹ್ಮನ್ ಸಾಕ್ಷಾತ್ಕಾರ ಭಗವಂತನ ಅರ್ಥೈಸಿಗೊಂಬದರಿಂದ ಸುಲಭ. ಹಾಂಗಾಗಿ ಆಧ್ಯಾತ್ಮಿಕವಾದಿಗೊ ನಿರಾಕಾರ ಬ್ರಹ್ಮಸಾಕ್ಷಾತ್ಕಾರವ ಸಾಧುಸಲೆ ಪ್ರಯತ್ನಿಸುತ್ತವು. ಭಗವಂತ ಪರಮ ಪುರುಶ°. ಆದರೆ ಅವ° ಬ್ರಹ್ಮನ್ ಮತ್ತೆ ಪರಮಾತ್ಮ ಜ್ಞಾನವನ್ನೂ ಮೀರಿದವ°. ಅವನಿಂದ ಮತ್ತೆ ಬೇರೆ ಎಂತದೂ ಇಲ್ಲೆ. ಭಗವಂತನ ತಿಳ್ಕೊಂಬ ಪ್ರಯತ್ನಲ್ಲಿ ಯೋಗಿಗಳೂ, ಜ್ಞಾನಿಗಳೂ ಕೂಡ ಗೊಂದಲಕ್ಕೆ ಒಳಗಾವುತ್ತವು. ನಿಜವಾದ ಸಂಪೂರ್ಣ ಕೃಷ್ಣಪ್ರಜ್ಞೆಯಿಲ್ಲದ್ದವರಿಂದ ಭಗವಂತನ ತಿಳಿವದು ಬಹುಕಷ್ಟ ಸಾಧ್ಯ ವಿಷಯ. ಭಕ್ತರಲ್ಲದ್ದವಕ್ಕೆ ಭಕ್ತಿಮಾರ್ಗ ಬಹು ಸುಲಭ ಹೇಳಿ ಹೇಳ್ತವಾದರೂ ಅವಕ್ಕೆ ಅದರ ಅಭ್ಯಾಸ ಮಾಡ್ಳೆ ಎಡಿತ್ತಿಲ್ಲೆ. ಭಕ್ತಿಮಾರ್ಗವು ಭಕ್ತರಲ್ಲದ್ದವು ಹೇಳುವಷ್ಟು ಸುಲಭವಾಗಿದ್ದರೆ ಅವೆಂತಕೆ ಕಷ್ಟವಾದ ಮಾರ್ಗವ ಆಚರಿಸುತ್ತವು ?!. ವಾಸ್ತವವಾಗಿ ಭಕ್ತಿಮಾರ್ಗ ಸುಲಭದ್ದೇನೂ ಅಲ್ಲ. ಭಕ್ತಿಯ ಅರಡಿಯದ್ದ, ಅಧಿಕಾರ ಇಲ್ಲದ್ದ ಜನಂಗೊ ಭಕ್ತಿಮಾರ್ಗ ಹೇದು ಹೆಸರುಸುವ ಮಾರ್ಗ ಸುಲಭವಾಗಿಕ್ಕು. ಆದರೆ ನಿಯಮ ನಿಬಂಧನೆಗೊಕ್ಕೆ ಬದ್ಧವಾಗಿ ಅದರ ಅನುಸರುಸುವಾಗಿ ಊಹಾತ್ಮಕ ಚಿಂತನೆಲಿ ತೊಡಗುವ ಪಂಡಿತರುಗಳೂ, ತತ್ತ್ವಶಾಸ್ತ್ರಜ್ಞರೂ ಆ ಮಾರ್ಗಂದ ದೂರ ರಟ್ಟುತ್ತವು.

ಭಕ್ತನಾದವ° ನಿಜಭಕ್ತಿಂದ (ಸಂಪೂರ್ಣ ಕೃಷ್ಣಪ್ರಜ್ಞೆಂದ) ಭಗವಂತನ ಪ್ರೇಮಪೂರ್ವಕ ಸೇವೆಯ ಅಭ್ಯಾಸಮಾಡದ್ದರೆ ಭಗವಂತನ ‘ತತ್ತ್ವತಃ’ – ಇಪ್ಪದರ ಇಪ್ಪಹಾಂಗೆ / ನಿಜವಾದ ಸ್ವರೂಪವ ತಿಳ್ಕೊಂಬಲೆ ಸಾಧ್ಯ ಇಲ್ಲೆ. ಭಗವಂತ° ಎಲ್ಲ ಕಾರಣಂಗಳ ಕಾರಣ°, ಅವ° ಸರ್ವವ್ಯಾಪಿ, ಮತ್ತೆ ಶ್ರೇಷ್ಠ° (ಶ್ರೀಮಂತಿಕೆ). ಅವನಲ್ಲಿ ಶ್ರೀಮಂತಿಕೆ, ಕೀರ್ತಿ, ಶಕ್ತಿ, ಸೌಂದರ್ಯ, ಜ್ಞಾನ, ವೈರಾಗ್ಯ ಈ ಎಲ್ಲ ಊಹಾತೀತ ದಿವ್ಯಗುಣಂಗೊ. ಪರಿಶುದ್ಧ ಕೃಷ್ಣಪ್ರಜ್ಞೆಲಿಪ್ಪವಕ್ಕೆ ಮಾತ್ರ ಭಗವಂತನ ಈ ಗುಣಂಗಳ ರಜಾಮಟ್ಟಿಂಗೆ ಅರ್ಥೈಸಿಗೊಂಬಲೆ ಸಾಧ್ಯ ಅಕ್ಕು.  ಭಗವಂತ° ಭಕ್ತರ ಬಗ್ಗೆ ದಯಾಳುವಾಗಿಯೇ ಇರುತ್ತ°. ಆದರೆ ಭಕ್ತನ ಭಕ್ತಿ ಎಷ್ಟು ಹೇಳ್ವದರ ಹೊಂದಿಗೊಂಡು ಅವ° ಅವಂಗೆ ಒಲಿವದು. ಹಾಂಗಾಗಿ ತನ್ನ ನಿಜಭಕ್ತರಿಂಗೆ ಮಾತ್ರ ಅವ ಸಾಕ್ಷಾತ್ಕಾರ ಅಪ್ಪದು. ಜಡ ಭೌತಿಕ ಇಂದ್ರಿಯಂಗಳ ಮೂಲಕ ಆರೂ ಭಗವಂತನ ಗ್ರಹಿಸಲೆ ಎಡಿಯ. ಆದರೆ, ಅವ° ಸಂಪೂರ್ಣ ಕೃಷ್ಣಪ್ರಜ್ಞೆಂದ ಭಕ್ತರು ಮಾಡುವ ನಿಜ ಪ್ರೇಮಪೂರ್ವಕ ಭಕ್ತಿಸೇವೆಂದ ಸುಪ್ರೀತನಾವುತ್ತ°, ಅವಕ್ಕೆ ಪ್ರತ್ಯಕ್ಷ ಆವುತ್ತ°.

ಹಾಂಗಾಗಿ ಭಗವಂತ ಇಲ್ಲಿ ಹೇಳುತ್ತ° – “ಸಾವಿರಾರು ಮನುಷ್ಯರಲ್ಲಿ ಕೆಲವೇ ಕೆಲವರು ಸಿದ್ಧಿಗೆ ಪ್ರಯತ್ನಿಸುತ್ತವು. ಹೀಂಗೆ ಯೋಗಲ್ಲಿ ತೊಡಗಿಸಿಗೊಂಡು ಅದರಲ್ಲಿ ಗುರುಮುಟ್ಟಿದ ಅನೇಕರಲ್ಲಿ ಒಬ್ಬ° ಎನ್ನ ನಿಜವಾಗಿ ಅರ್ಥಮಾಡಿಗೊಂಡಿರುತ್ತ°.”  ಅರ್ಥಾತ್, ಅಪರೋಕ್ಷಜ್ಞಾನಲ್ಲಿ ಎತ್ತರಕ್ಕೇರಿದ ಸಿದ್ಧಪುರುಷರಲ್ಲೂ ಕೂಡ ಭಗವಂತನ ತತ್ತ್ವತಃ ತಿಳ್ಕೊಂಡವು ಬಹಳ ವಿರಳ ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು.

ಶ್ಲೋಕ

ಭೂಮಿರಾಪೋsನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥೦೪॥

ಪದವಿಭಾಗ

ಭೂಮಿಃ ಆಪಃ ಅನಲಃ ವಾಯುಃ ಖಮ್ ಮನಃ ಬುದ್ಧಿಃ ಏವ ಚ । ಅಹಂಕಾರಃ ಇತಿ ಇಯಮ್ ಮೇ ಭಿನ್ನಾ ಪ್ರಕೃತಿಃ ಅಷ್ಟಧಾ ॥

ಅನ್ವಯ

ಭೂಮಿಃ, ಆಪಃ, ಅನಲಃ, ವಾಯುಃ, ಖಮ್, ಮನಃ, ಬುದ್ಧಿಃ, ಏವ ಚ ಅಹಂಕಾರಃ ಇತಿ ಅಷ್ಟಧಾ ಭಿನ್ನಾ ಮೇ ಇಯಮ್ ಪ್ರಕೃತಿಃ ॥

ಪ್ರತಿಪದಾರ್ಥ

ಭೂಮಿಃ – ಭೂಮಿ, ಆಪಃ – ನೀರು, ಅನಲಃ – ಕಿಚ್ಚು, ವಾಯುಃ – ಗಾಳಿ, ಖಮ್ – ಆಕಾಶ, ಮನಃ – ಮನಸ್ಸು, ಬುದ್ಧಿಃ – ಬುದ್ಧಿ, ಏವ ಚ – ಖಂಡಿತವಾಗಿಯೂ ಕೂಡ, ಅಹಂಕಾರಃ – ಅಹಂಕಾರವು, ಇತಿ – ಹೀಂಗೆ , ಅಷ್ಟಧಾ – ಎಂಟುವಿಧದ, ಭಿನ್ನಾ – ಬೇರೆಯಾದ, ಮೇ – ಎನ್ನ, ಇಯಮ್ – ಇವೆಲ್ಲವೂ, ಪ್ರಕೃತಿಃ – ಪ್ರಕೃತಿ ಶಕ್ತಿಯು.

ಅನ್ವಯಾರ್ಥ

ಭೂಮಿ, ನೀರು, ಕಿಚ್ಚು, ವಾಯು, ಗಾಳಿ, ಆಕಾಶ, ಮನಸ್ಸು, ಬುದ್ಧಿ ಹಾಂಗೂ ಅಹಂಕಾರ – ಈ ಎಂಟು ಎನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗೊ.

ತಾತ್ಪರ್ಯ / ವಿವರಣೆ

ದೇವರ ವಿಜ್ಞಾನ ಭಗವಂತನ ಸಹಜ ಸ್ವರೂಪವನ್ನೂ ಅವನ ವಿವಿಧ ಶಕ್ತಿಗಳನ್ನೂ ವಿಶ್ಲೇಷಿಸುತ್ತು. ಮೇಗೆ ಹೇಳಿದ ಎಂಟು ಶಕ್ತಿಗೊ ಭಗವಂತನ ಶಕ್ತಿಯ ರೂಪಂಗೊ. ಈ ಶ್ಲೋಕದ ಗೂಢಾರ್ಥವ ತಿಳ್ಕೊಳ್ಳೆಕ್ಕಾರೆ ಬನ್ನಂಜೆಯವರ ಸರಳ ವ್ಯಾಖ್ಯಾನವ ನೋಡಿರೆ ಸುಲಭಲ್ಲಿ ಅರ್ಥ ಆವ್ತು. ಬನ್ನಂಜೆ ವ್ಯಾಖ್ಯಾನಿಸುತ್ತವುಭಗವಂತ° ಇಲ್ಲಿ ಭಗವಂತನ ಪ್ರಪಂಚ ಸೃಷ್ಟಿಯ ವಿರಾಟ ರೂಪವ ಸಮಷ್ಟಿಯಾಗಿ ತಿಳಿಶುತ್ತ°. ಸೃಷ್ಟಿಯ ಪೂರ್ವಲ್ಲಿ ಈ ಸಂಪೂರ್ಣ ಜಗತ್ತು ಸೂಕ್ಷ್ಮರೂಪಲ್ಲಿ ಆ ಭಗವಂತನ ಉದರಲ್ಲಿ ನೆಲೆಗೊಂಡಿತ್ತಿದ್ದು. ಮತ್ತೆ ಭಗವಂತ ಈ ಸೃಷ್ಟಿಯ ನಿರ್ಮಿಸಿದ°. ಹೀಂಗೆ ಮದಾಲು ನಿರ್ಮಾಣವಾದ್ದು ಈ ಜಡ ಪ್ರಕೃತಿ. ಇಲ್ಲಿ ಪಂಚಭೂತಂಗೊ – ಮಣ್ಣು, ನೀರು , ಕಿಚ್ಚು, ಗಾಳಿ, ಆಕಾಶ; ಒಟ್ಟಿಂಗೆ ಮನಸ್ಸು, ಬುದ್ಧಿ, ಅಹಂಕಾರ ಹೀಂಗೆ ಒಟ್ಟು ಎಂಟು ಬಗೆ. ಈ ಇಡೀ ಸ್ಥೂಲಪ್ರಪಂಚ ಮಣ್ಣು, ನೀರು, ಕಿಚ್ಚು, ಗಾಳಿ, ಆಕಾಶ ಇದರ ವಿಕಾರ. ಹಾಂಗಾಗಿ, ಈ ಪ್ರಪಂಚದಲ್ಲಿಪ್ಪ ಸಮಸ್ತ ಜಡಪದಾರ್ಥಂಗಳ ಮೂಲದ್ರವ್ಯ ಪಂಚಭೂತಂಗೊ. ಬನ್ನಂಜೆ ಇನ್ನೂ ವಿಶ್ಲೇಷಿಸುತ್ತವು – ಪಂಚಭೂತಂಗಳ ಸೃಷ್ಟಿಲಿ ಆಕಾಶದ ಸೃಷ್ಟಿ ಹೇಳಿರೆ ಎಂತರ? . ಮೂಲತಃ ಆಕಾಶದ ಸೃಷ್ಟಿ ವಾಸ್ತವ ಅಲ್ಲ. ಇದು ಸಾಪೇಕ್ಷವಾಗಿ. ಅಂತರಿಕ್ಷ ಮದಲೇ ಇತ್ತಿದ್ದು. ಅದರಲ್ಲಿ ಭಗವಂತ ತನ್ನ ರೂಪವ ಆವಿರ್ಭಾವಗೊಳುಸುವದೇ ಆಕಾಶ ಸೃಷ್ಟಿ. ಬಣ್ಣ ಇಲ್ಲದ್ದ ಅಂತರಿಕ್ಷಲ್ಲಿ ಕಣ್ಣಿಂಗೆ ಕಾಣದ ನೀಲವರ್ಣದ ಆಕಾಶ ಸೃಷ್ಟಿ ಆತು. ಅಲ್ಲಿ ಕಂಪನ ಉಂಟಾಗಿ ಅದರಿಂದ ಗಾಳಿ ಹುಟ್ಟಿತ್ತು. ಗಾಳಿಯ ಕಂಪನಂದ ಕಿಚ್ಚು ಮತ್ತೆ ನೀರಿನ ಸೃಷ್ಟಿ ಆತು. ಈ ನೀರು ಗಟ್ಟಿಯಾಗಿ ಕಾಲಕ್ರಮೇಣ ಭೂಮಿಯಾಗಿ ವಿಕಾರಗೊಂಡತ್ತು. ಹೀಂಗೆ ಈ ಪಂಚಭೂತಂಗಳಿಂದ ಅನಂತ ವಸ್ತುಗಳ ನಿರ್ಮಾಣವಾತು.

ಮದಾಲು ಪಂಚಭೂತಂಗಳಿಂದ ಅನ್ನಮಯಕೋಶದ ಸೃಷ್ಟಿ. ಮತ್ತೆ ಕಿಚ್ಚು, ಗಾಳಿ, ಆಕಾಶಂದ ಪ್ರಾಣಮಯಕೋಶದ ಸೃಷ್ಟಿ. ಈ ಪ್ರಾಣಮಯಕೋಶದ ಒಳ ಮನಸ್ಸು ಮತ್ತು ಬುದ್ಧಿಯ ಒಳಗೊಂಡ ಮನೋಮಯಕೋಷದ ಸೃಷ್ಟಿ. ಮತ್ತೆ ನಮ್ಮ ನೆಂಪಿನ ಶಕ್ತಿಯ ಅಹಂಕಾರತತ್ವಂದಲಾಗಿ  (ಚಿತ್ತಚೇತನ) ವಿಜ್ಞಾನಮಯಕೋಶದ ಸೃಷ್ಟಿ ಆತು. ಇಲ್ಲಿ ಮನಸ್ಸು ಸೃಷ್ಟಿ ಆತು ಹೇಳಿರೆ ಮನಸ್ಸಿನ ಅಭಿಮಾನಿ ದೇವತೆಯ ಸೃಷ್ಟಿ ಆತು ಹೇಳಿ ಅರ್ಥ. ಭೂಮಿ ಸೃಷ್ಟಿ ಆತು ಹೇಳಿರೆ ಈ ಜಡವಾದ ಭೂಮಿಯ ಒಟ್ಟಿಂಗೆ ಭೂಮಿಯ ಅಭಿಮಾನಿ ದೇವತೆಯ ಸೃಷ್ಟಿ ಆತು ಹೇಳಿ ಅರ್ಥ. ಅದೇ ರೀತಿ ವಾಯುವಿನ ಸೃಷ್ಟಿ ಹೇಳಿರೆ ಅಲ್ಲಿ ವಾಯುವಿನ ಒಟ್ಟಿಂಗೆ ನಲ್ವತ್ತೊಂಬತ್ತು ದೇವತೆಗಳ ಸೃಷ್ಟಿ ಆತು ಹೇಳಿ ಅರ್ಥ. ನವಗೆ ಗೊಂತಿಪ್ಪಾಂಗೆ ಭೂಮಿಯ ಆವರಿಸಿಪ್ಪ ವಾಯುವಿನ ಪದರ ನಲ್ವತ್ತೊಂಬತ್ತು. ಭೂಮಿಂದ ವಿವಿಧ ದೂರಲ್ಲಿ ಗಾಳಿಯ ವಿವಿಧ ಒತ್ತಡಕ್ಕನುಗುಣವಾಗಿ ಈ ವಿಭಾಗ. ಇದರ ನಿಯಮಿತವಾಗಿ ಆಯಾ ಅಭಿಮಾನಿ ದೇವತೆಗೊ ನಿರ್ವಹಿಸುತ್ತವು. ಹೀಂಗೆ ಭಗವಂತನ ಅಧೀನವಾಗಿ ಅಷ್ಟರೂಪದ ಅಕ್ಷರಪ್ರಕೃತಿ ರೂಪುಗೊಂಡತ್ತು. ಈ ಅಷ್ಟವಿಧದ ಪ್ರಪಂಚಲ್ಲಿ ಅಷ್ಟಾಕ್ಷರ ವಾಚ್ಯನಾಗಿ ಭಗವಂತ ತುಂಬಿದ°.

ನಾದಸೃಷ್ಟಿಯ ಮೊದಲ ಸೃಷ್ಟಿ ಓಂಕಾರ. ಓಂಕಾರಲ್ಲಿ ಎಂಟು ಅಕ್ಷರಂಗೊ. ನಾಭಿಂದ ಹೆರಟು ಉಚ್ಚಾರದ ಅಕೇರಿಯಣ ವರೇಂಗೆ ಒಟ್ಟು ಎಂಟು ಅಕ್ಷರಂಗೊ- ಅಕಾರ, ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಹೀಂಗೆ ಎಂಟು ಅಕ್ಷರಂದ ವಾಚ್ಯನಾಗಿ, ವಿಶ್ವ, ತೈಜಸ, ಪ್ರಾಜ್ಞ, ತುರಿಯ, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ ಎಂಬ ಎಂಟು ರೂಪಲ್ಲಿ ಭಗವಂತ° ಈ ಅಷ್ಟವಿಧ ಪ್ರಕೃತಿಲಿ ತುಂಬಿದ್ದ°. ಹೀಂಗೆ ಇಡೀ ಪ್ರಪಂಚ ಅಷ್ಟವಿಧಲ್ಲಿ ವಿಕಾರಗೊಂಡತ್ತು.

ಶ್ಲೋಕ

ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್ ।
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ॥೦೫॥

ಪದವಿಭಾಗ

ಅಪರಾ ಇಯಮ್ ಇತಃ ತು ಅನ್ಯಾಮ್ ಪ್ರಕೃತಿಮ್ ವಿದ್ಧಿ ಮೇ ಪರಾಮ್ । ಜೀವ-ಭೂತಾಮ್ ಮಹಾಬಾಹೋ ಯಯಾ ಇದಮ್ ಧಾರ್ಯತೇ ಜಗತ್ ॥

ಅನ್ವಯ

ಹೇ ಮಹಾಬಾಹೋ!, ಇಯಮ್ ಅಪರಾ, ಇತಃ ತು ಅನ್ಯಾಂ ಜೀವ-ಭೂತಾಂ ಮೇ ಪರಾಂ ಪ್ರಕೃತಿಂ ವಿದ್ಧಿ, ಯಯಾ ಇದಂ ಜಗತ್ ಧಾರ್ಯತೇ ।

ಪ್ರತಿಪದಾರ್ಥ

ಹೇ ಮಹಾಬಾಹೋ – ಏ ಮಹಾಬಾಹುವುಳ್ವವನಾಗಿಪ್ಪ ಅರ್ಜುನ!, ಇಯಮ್- ಈ, ಅಪರಾ – ಕೆಳಮಟ್ಟದ, ಇತಃ – ಇದರ ಉಳುದು (ಇದರಿಂದ),  ತು – ಆದರೋ, ಅನ್ಯಾಮ್ – ಇನ್ನೊಂದು, ಜೀವ-ಭೂತಾಮ್ – ಜೀವಂಗಳ ಒಳಗೊಂಡ, ಮೇ – ಎನ್ನ, ಪರಾಮ್ – ಶ್ರೇಷ್ಠವಾದ, ಪ್ರಕೃತಿಮ್ – ಪ್ರಕೃತಿಯ (ಶಕ್ತಿಯ), ವಿದ್ಧಿ – ತಿಳ್ಕೊ, ಯಯಾ – ಏವುದರಿಂದ, ಇದಮ್ – ಈ, ಜಗತ್ – ಜಗತ್ತು, ಧಾರ್ಯತೇ – ಧರಿಸಲ್ಪಟ್ಟಿದ್ದು (ಬಳಸಲ್ಪಟ್ಟಿದ್ದು / ಉಪಯೋಗಿಸಲ್ಪಟ್ಟಿದ್ದು).

ಅನ್ವಯಾರ್ಥ

ಮಹಾಬಾಹುವಾದ ಅರ್ಜುನ!, ಇದು ಈ ಭೌತಿಕ ಮತ್ತು ಕೆಳಮಟ್ಟದ್ದು (ಅಪರಾಪ್ರಕೃತಿ). ಇದಲ್ಲದ್ದೆ ಎನ್ನ ಇನ್ನೂ ಶ್ರೇಷ್ಠವಾದ ಎನ್ನ ಅಧೀನವಾದ ಮತ್ತೊಂದು ಪ್ರಕೃತಿ (ಶಕ್ತಿಯೂ) ಇದಕ್ಕಿಂತ ಮಿಗಿಲಾಗಿಪ್ಪದು ಇದ್ದು (ಪರಾಪ್ರಕೃತಿ). ಅದೇ ಚೇತನಪ್ರಕೃತಿ. ಎಲ್ಲ ಜೀವಿಗೊಕ್ಕೆ ಆಸರೆಯಾಗಿಪ್ಪಂತದ್ದು. ಅದು ಈ ಜಗತ್ತನ್ನೇ ಹೊತ್ತುಗೊಂಡಿದು.

ತಾತ್ಪರ್ಯ / ವಿವರಣೆ

ಜೀವಿಗೊ ಪರಮ ಪ್ರಭುವಿನ ಶ್ರೇಷ್ಠ ಪ್ರಕೃತಿಗೆ (ಭಗವದ್ ಶಕ್ತಿಗೆ) ಸೇರಿದ್ದು ಹೇಳ್ವದು ಇಲ್ಲಿ ಸ್ಪಷ್ಟ ಆವ್ತು. ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂಕಾರ – ಈ ಎಂಟು ಅಂಶಗಳಲ್ಲಿ ಪ್ರಕಟವಪ್ಪ ಜಡವಸ್ತುವೇ ಕೆಳಮಟ್ಟದ ಶಕ್ತಿ. ಸ್ಥೂಲ (ಭೂಮಿ ಇತ್ಯಾದಿ) ಮತ್ತೆ ಸೂಕ್ಷ್ಮ (ಮನಸ್ಸು ಇತ್ಯಾದಿ) – ಐಹಿಕ ಪ್ರಕೃತಿಯ ಈ ಎರಡು ರೂಪಂಗೊ ಕೆಳಮಟ್ಟದ ಶಕ್ತಿಯ ಎರಡು ಉತ್ಪನ್ನಂಗೊ. ಈ ಕೆಳಮಟ್ಟದ ಶಕ್ತಿಗಳ ಬೇರೆ ಬೇರೆ ಉದ್ದೇಶಂಗೊಕ್ಕೆ ಬಳಸಿಗೊಂಬ ಜೀವಿಗೊ ಭಗವಂತನ ಶ್ರೇಷ್ಠ ಶಕ್ತಿ. ಇಡೀ ಪ್ರಪಂಚ ಕೆಲಸಮಾಡುತ್ಸು ಈ ಶಕ್ತಿಂದಲೇ. ವಿಶ್ವದ ಅಭಿವ್ಯಕ್ತಿಯ ಶ್ರೇಷ್ಠಶಕ್ತಿಯಾದ ಜೀವಿಯು ಚಾಲನೆಗೊಳ್ಳದ್ದರೆ ಅದಕ್ಕೆ ಕೆಲಸ ಮಾಡುತ್ತ ಶಕ್ತಿಯೇ ಇಲ್ಲೆ. ಏವತ್ತೂ ಶಕ್ತಿಯ ನಿಯಂತ್ರಣಲ್ಲಿ ಇಟ್ಟುಗೊಂಬದು ಶಕ್ತಿಶಾಲಿಗಳೇ. ಹಾಂಗಾಗಿ ಜೀವಿಗಳ ಏವತ್ತೂ  ಭಗವಂತ° ನಿಯಂತ್ರಿಸುತ್ತ°.  ಜೀವಿಗೆ ಪ್ರತ್ಯೇಕ ಅಸ್ತಿತ್ವ ಇಲ್ಲೆ. ಅದಕ್ಕೆ ಎಂದೂ ಸಮಾನ ಶಕ್ತಿ ಹೇದು ಯಾವುದೂ ಇಲ್ಲೆ. ಜೀವಿಗೊ ಭಗವಂತನ ಸೂಕ್ಷ್ಮ ಶಕ್ತಿಗೊ. ಜೀವಿಗೊ ಪರಮಾತ್ಮನ ಪರಮಾಧಿಕಾರಕ್ಕೆ ಒಳಗಾಗಿಪ್ಪವು. ಹಾಂಗಾಗಿ ಮುಕ್ತಿಯ ಬಯಸುವವ ಭಗವಂತನ ಶಕ್ತಿಗೆ ಶರಣಪ್ಪಲೇ ಬೇಕು. ಇಡೀ ಪ್ರಪಂಚವ ಭಗವಂತನೊಬ್ಬನೇ ನಿಯಂತ್ರುಸುವದು. ಎಲ್ಲಾ ಜೀವತ್ಮಂಗಳೂ ಅವನ ಆಜ್ಞಗೆ ಬದ್ಧರು. ಈ ಜೀವಾತ್ಮ ಅವನ ಶ್ರೇಷ್ಠ ಶಕ್ತಿ. ಅವನ ಅಸ್ತಿತ್ವದ ಗುಣ ಪರಮಾತ್ಮನ ಗುಣವೇ. ಆದರೆ, ಶಕ್ತಿಯ ಪ್ರಮಾಣಲ್ಲಿ ಅವು ಎಂದಿಂಗೂ ಭಗವಂತಂಗೆ ಸಮರಲ್ಲ. ಸ್ಥೂಲವೂ ಸೂಕ್ಷ್ಮವೂ ಆದ ಕೆಳಮಟ್ಟದ ಶಕ್ತಿಯ (ಜಡವಸ್ತು) ಬಳಸಿಗೊಂಬಗ ಶ್ರೇಷ್ಠಶಕ್ತಿಯು (ಜೀವಾತ್ಮ) ತನ್ನ ನಿಜವಾದ ಆಧ್ಯಾತ್ಮಿಕ ಮನಸ್ಸನ್ನೂ ಬುದ್ಧಿಯನ್ನೂ ಮರತುಬಿಡ್ತ. ಈ ಮರದುಹೋಪದಕ್ಕೆ ಕಾರಣ ಜೀವಾತ್ಮದ ಮೇಗೆ ಜಡವಸ್ತುಗಳ ಪ್ರಭಾವ. ಆದರೆ, ಮಾಯಾ ಐಹಿಕ ಶಕ್ತಿಯ ಪ್ರಭಾವಂದ ಜೀವಿಯು ಬಿಡುಗಡೆ ಹೊಂದಿಯಪ್ಪಗ ಅದು ಮುಕ್ತಿಯ ಪಡೆತ್ತು. ಅಹಂಕಾರವು ಭೌತಿಕ ಮಾಯೆಯ ಪ್ರಭಾವಂದ ‘ಆನು ಜಡವಸ್ತು, ಐಹಿಕ ಗಳಿಗೆ ಎಲ್ಲ ಎನ್ನದು’ ಹೇಳಿ ಯೋಚಿಸುತ್ತು. ಅದಕ್ಕೆ ತನ್ನ ಸಹಜ ಸ್ವರೂಪದ ತಿಳುವಳಿಕೆ ಆದಪ್ಪಗ ತಾನು ಎಲ್ಲ ರೀತಿಗಳಲ್ಲೂ ಭಗವಂತನೊಟ್ಟಿಂಗೆ ಒಂದಾವುತ್ತೆ ಎಂಬ ಭಾವನೆಯೂ ಸೇರಿಗೊಂಡು ಎಲ್ಲಾ ಐಹಿಕ ಯೋಚನೆಂಗಳಿಂದ ಮುಕ್ತವಾವುತ್ತು. ಜೀವಿಯು ಭಗವಂತನ ಹಲವು ಶಕ್ತಿಗಳಲ್ಲಿ ಒಂದು ಮಾತ್ರ. ಈ ಶಕ್ತಿಯು ಐಹಿಕ ಕಲ್ಮಷಂದ ಬಿಡುಗಡೆ ಆದಪ್ಪಗ ಅದು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯ ಪಡಕ್ಕೊಳ್ಳುತ್ತು ಅಥವಾ ಮುಕ್ತ ಆವುತ್ತು.

ಬನ್ನಂಜೆ ವಿವರುಸುತ್ತವುಅಚೇತನ ಸೃಷ್ಟಿಗೆ ಒಬ್ಬ° ನಿಮಿತ್ತ ಕಾರಣ ಮತ್ತೆ ಒಂದು ಉಪಾದಾನ ಕಾರಣ. ಜಡಪ್ರಕೃತಿ ಪ್ರಪಂಚಕ್ಕೆ ಉಪಾದಾನ ಕಾರಣ ಮತ್ತೆ ಅದರ ಮೂಲಕ ಭಗವಂತ ಸಮಸ್ತ ಸೃಷ್ಟಿಗೆ ನಿಮಿತ್ತ ಕಾರಣ. ಚೇತನಲ್ಲಿ ಎರಡು ವಿಧ. ಚರ ಮತ್ತೆ ಅಚರ. ಅಚರವಾದ ಚೇತನ (ಉದಾಃ ಮರಗಿಡಂಗೊ)ಲ್ಲಿ ಸೃಷ್ಟಿಗೆ ಮೇಗೆ ಹೇಳಿದಾಂಗೆ ಒಬ್ಬ ನಿಮಿತ್ತ ಕಾರಣ ಮತ್ತೆ ಒಂದು ಉಪಾದಾನ ಕಾರಣ. ಆದರೆ, ಚೇತನಲ್ಲಿ ಚರವಾದ ಚೇತನ (ಅಂಡಜ ಮತ್ತೆ ಜರಾಯು) ಸೃಷ್ಟಿಗೆ ಒಂದು ನಿಮಿತ್ತ ಕಾರಣ ಸಾಲ. ಇಲ್ಲಿ ಎರಡು ನಿಮಿತ್ತ ಕಾರಣ ಬೇಕು. ಒಂದು ಅಪ್ಪ, ಇನ್ನೊಂದು ಅಬ್ಬೆ. ಎರಡು ಚೇತನಂದ ಒಂದು ಚೇತನದ ಸೃಷ್ಟಿ. ಇದರ ಸುರು ಮೂಲಸೃಷ್ಟಿಲ್ಲಿಯೇ ಆಯ್ದು. ಹೀಂಗೆ ಎರಡು ಚೇತನ ಮತ್ತೆ ಒಂದು ಜಡ ಸೇರಿ ಈ ಸಮಸ್ತ ಸೃಷ್ಟಿಯಾಗಿಪ್ಪದು. ಮದಲೇ ಹೇಳಿದಾಂಗೆ ವಸ್ತುತಃ ಪ್ರಳಯಕಾಲಲ್ಲಿ ಇಡೀ ಪ್ರಪಂಚ ಭಗವಂತನ ಉದರಲ್ಲಿ ಇತ್ತಿದ್ದದು. ಹಾಂಗಾಗಿ ಅವನೇ ಅಪ್ಪ°, ಅವನೇ ಅಬ್ಬೆ ಅಂದರೂ ಈ ಪ್ರಪಂಚಲ್ಲಿಪ್ಪ ಜೀವಜಾತದ ಸೃಷ್ಟಿಗೆ ಮುಂದೆ ಹೇಂಗೆ ಅಪ್ಪ-ಅಬ್ಬೆ ಹೇಳ್ವ ಎರಡು ಚೇತನ ಬೇಕೋ ಅದರ ಸೃಷ್ಟಿಯ ಆದಿಲ್ಲಿಯೇ ಭಗವಂತ ಮಾಡಿದ್ದ. ಪ್ರಪಂಚಲ್ಲಿ ಯಾವರೀತಿ ಜೀವದ ಸೃಷ್ಟಿ ಪ್ರಕ್ರಿಯೆ ಮುಂದುವರಿತ್ತೋ ಅದೇ ರೀತಿ ಸುರುವಿಂದಲೇ ಆ ವ್ಯವಸ್ಥೆ ಮಾಡಿದ್ದ ಭಗವಂತ°. ಅದರದ್ದೇ ಮುಂದುವರಿಕೆ ಈ ಸೃಷ್ಟಿ.

ಭಗವಂತ° ಇಲ್ಲಿ ಹೇಳುತ್ತ° – “ಈ ಮದಲೇ ಹೇಳಿಪ್ಪ ಪ್ರಕೃತಿ – ‘ಜಡಪ್ರಕೃತಿ’. ಆದರೆ, ಅದಕ್ಕಿಂತ ಭಿನ್ನವಾದ ಮತ್ತೆ ಶ್ರೇಷ್ಠವಾದ ಇನ್ನೊಂದು ಪ್ರಕೃತಿ ಇದ್ದು”. ಅದುವೇ ಇಡೀ ಪ್ರಪಂಚಕ್ಕೆ ಮಾತೃಸ್ಥಾನ ಕೊಟ್ಟ ‘ಚಿತ್-ಪ್ರಕೃತಿ’. ವೇದಲ್ಲಿ ಹೇಳಿಪ್ಪಂತೆ ಜಡಪ್ರಕೃತಿ – ‘ಅಕ್ಷರ’, ಅದರಿಂದ ಭಿನ್ನವಾದ ಚೇತನಪಕೃತಿ – ‘ಪರಮಾಕ್ಷರ’. ಭಗವಂತ ‘ಪರತ-ಪರಮಾಕ್ಷರ°’. ಹೀಂಗೆ ಭಗವಂತಂಗೂ ಮತ್ತೆ ಈ ಪ್ರಪಂಚಕ್ಕೂ ಮಾಧ್ಯಮವಾಗಿ ‘ಶ್ರೀತತ್ವ’ (ಶ್ರೀಲಕ್ಷ್ಮೀ) ಇದ್ದು. ಹಾಂಗಾಗಿ ಲಕ್ಶ್ಮಿಯ ‘ಲೋಕಮಾತೆ’ ಹೇಳಿ ಹೇಳುವದು. ಈ ಜಗತ್ತಿನ ಸೃಷ್ಟಿ ಮಾಡುವಾಗ ಜಡಪ್ರಕೃತಿಯ ಉಪಾದಾನ ಕಾರಣವಾಗಿ ಬಳಸಿರೆ, ಆ ಜಡವಾದ ಶರೀರ (ಪಿಂಡಾಂಡ)ಲ್ಲಿ ಜೀವದ ಸೃಷ್ಟಿಯಾಯೆಕ್ಕಾರೆ ಜೀವಭೂತೆಯಾದ ‘ಚೇತನಾ ಶಕ್ತಿ’ ಹೊಂದಿಪ್ಪ ‘ಚಿತ್-ಶಕ್ತಿ’ (ಚಿತ್ ಪ್ರಕೃತಿ)ಯ ಕಾರಣವಾಗಿ ಬಳಸಿಗೊಂಡ° ಭಗವಂತ°. ಹೀಂಗೆ ಜಗತ್ತಿನ ಮದಲಾಣ (ಸುರುವಾಣ) ಜೀವ ಚತುರ್ಮುಖನ ಸೃಷ್ಟಿ ಶ್ರೀತತ್ವಂದಲಾತು.

ಹೀಂಗೆ ಜಗತ್ತಿನ ಮೂಲಲ್ಲಿಯೇ ಪ್ರಕೃತಿ ಮತ್ತೆ ಪುರುಷ° ಹೇಳುವ ಎರಡು ವಿಧದ ಚೇತನವ ನಾವು ಕಾಣುತ್ತು. ಜೀವ ಸ್ವರೂಪಲ್ಲಿಯೂ ಗಂಡು ಹೆಣ್ಣು ಹೇಳುವ ಎರಡು ಪ್ರಭೇದ ಇದ್ದು ಹೇಳುವದು ಸೃಷ್ಟಿಯ ಆದಿಂದಲೇ ಗೊಂತಾವುತ್ತು. ಪುರುಷ° ಮತ್ತೆ ಪ್ರಕೃತಿ ಹೇಳ್ವ ಭಗವಂತನ ಎರಡು ಮುಖಂದ ಈ ಸೃಷ್ಟಿ ಆತು. ಜಡಕ್ಕೆ ಲಿಂಗಭೇದ ಇಲ್ಲೆ. ಅಂದರೂ ನಾವು ಕೆಲವು ಜಡ ವಸ್ತುಗಳ ಗಂಡು ಹೆಣ್ಣು ಹೇಳಿ ಗುರುತುಸುತ್ತು. ಇದು ಆ ವಸ್ತುಗಳ ಅಭಿಮಾನಿ ದೇವತೆಯ ಲಿಂಗಕ್ಕನುಗುಣವಾಗಿ ಗುರುತುಸುವದು. ಉದಾಹರನೆಗೆ ನದಿ – ನದಿಯ ಅಭಿಮಾನಿ ದೇವತೆಗಳಲ್ಲಿ ಹೆಚ್ಚಿನದ್ದೂ ಸ್ತ್ರೀಲಿಂಗೆ. ಅದೇ ರೀತಿ, ಭೂಮಿಯ ಅಭಿಮಾನಿ ದೇವತೆ ಕೂಡ ಹೆಣ್ಣು. ಹಾಂಗಾಗಿ ನದಿಯ, ಭೂಮಿಯ ನಾವು ಅಬ್ಬೆ ರೂಪಲ್ಲಿ ಕಾಣುತ್ತು.

ಹೀಂಗೆ ಜಗತ್ತಿನ ಮೂಲ ಸಂಗತಿ ಭಗವಂತ (ಪುರುಷ°) ಮತ್ತೆ ಅವನ ಅಧೀನವಾಗಿ ಜಡಪ್ರಕೃತಿ ಮತ್ತೆ ಚಿತ್ ಪ್ರಕೃತಿ. ಇವು ಸದಾ ನಿತ್ಯ. ಎಂದೂ ನಾಶವಿಲ್ಲದ್ದು. ಆಕಾರದ (ವಿಕೃತಿ) ನಾಶ ಆವುತ್ತು ಹೊರತು ಮೂಲದ್ರವ್ಯ ಉತ್ಪತ್ತಿ ನಾಶ ಜಗತ್ತಿಲ್ಲಿ ಇಲ್ಲೆ. ಹಾಂಗಾಗಿ ಇವು ಕ್ಷರವಿಲ್ಲದ್ದ (ಅ-ಕ್ಷರ) ಸಂಗತಿಗೊ. ಈ ಮೂರರಿಂದ ‘ಕ್ಷರ’ವಾದ ಪ್ರಪಂಚ ಸೃಷ್ಟಿಯಾವುತ್ತು ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಇಲ್ಲಿ ಬರದದ್ದು.

ಶ್ಲೋಕ

ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ ।
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ ॥೦೬॥

ಪದವಿಭಾಗ

ಏತತ್ ಯೋನೀನಿ ಭೂತಾನಿ ಸರ್ವಾಣಿ ಇತಿ ಉಪಧಾರಯ । ಅಹಮ್ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಃ ತಥಾ ॥

ಅನ್ವಯ

ಸರ್ವಾಣಿ ಭೂತಾನಿ ಏತತ್ ಯೋನೀನಿ ಇತಿ ಉಪಧಾರಯ । ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ತಥಾ ಪ್ರಲಯಃ ಅಸ್ಮಿ ।

ಪ್ರತಿಪದಾರ್ಥ

ಸರ್ವಾಣಿ ಭೂತಾನಿ – ಸೃಷ್ಟಿಯಾದ ಎಲ್ಲ ಜೀವಿಗೊ, ಏತತ್ – ಈ ಪ್ರಕೃತಿ, ಯೋನೀನಿ – ಜನ್ಮದ ಆಕರವಾಗಿಪ್ಪಂತಹವು,  ಇತಿ – ಹೇದು, ಉಪಧಾರಯ – ತಿಳುಕ್ಕೊ, ಅಹಮ್ – ಆನು, ಕೃತ್ಸ್ನಸ್ಯ – ಎಲ್ಲವನ್ನೊಳಗೊಂಡ, ಜಗತಃ – ಪ್ರಪಂಚದ, ಪ್ರಭವಃ – ಅಭಿವ್ಯಕ್ತಿಯ ಆಕರ, ತಥಾ – ಹಾಂಗೇ, ಪ್ರಲಯಃ – ಲಯವೂ,  ಅಸ್ಮಿ – ಆಗಿದ್ದೆ.

ಅನ್ವಯಾರ್ಥ

ಎನ್ನ ಪರಾಪರ (ಪರಾ-ಅಪರಾ) ಪ್ರಕೃತಿಗಳಿಂದಲೇ ಜಡಚೇತನಂಗೊ ಆದ ಸರ್ವಭೂತಂಗೊ ( ಎಲ್ಲ ಜೀವಿಗೊ) ಉತ್ಪನ್ನ ಆದ್ದು (ಸೃಷ್ಟಿಯಾದ ಎಲ್ಲ ಜೀವಿಗೊಕ್ಕೂ ಈ ಎರಡು ಪ್ರಕೃತಿಗಳೇ ಮೂಲ). ಈ ಜಗತ್ತಿಲ್ಲಿ ಭೌತಿಕವಾದ ಮತ್ತು ಆಧ್ಯಾತ್ಮಿಕವಾದ ಎಲ್ಲದರ ಮೂಲವೂ ಅಂತ್ಯವೂ (ಪ್ರಭವಃ ಪ್ರಲಯಃ) ಆನೇ ಆಗಿದ್ದೆ ಹೇಳುವದರ ತಿಳುಕ್ಕೊ.

ತಾತ್ಪರ್ಯ / ವಿವರಣೆ

ಅಸ್ತಿತ್ವಲ್ಲಿಪ್ಪದೆಲ್ಲವು ಜಡ ಮತ್ತೆ ಚೇತನಂಗಳಿಂದ ಉತ್ಪನ್ನವಾದ್ದು. ಚೇತನ ಸೃಷ್ಟಿಯ ಮೂಲ ಕ್ಷೇತ್ರ. ಚೇತನವು ಜಡವಸ್ತುವಿಲ್ಲಿ ಸೃಷ್ತಿಸುತ್ತದು. ಚೇತನವು ಜಡವಸ್ತುವಿನ ಬೆಳವಣಿಗೆಯ ಒಂದು ನಿರ್ಧಿಷ್ಟ ಘಟ್ಟಲ್ಲಿ ಸೃಷ್ಟಿಯಾದ್ದಲ್ಲ. ಈ ಐಹಿಕ ಜಗತ್ತು ಆಧ್ಯಾತ್ಮಿಕ ಚೈತನ್ಯದ ಆಧಾರದ ಮೇಲೆಯೇ ವ್ಯಕ್ತವಾದ್ದು. ಜಡವಸ್ತುವಿಂದಾದ ದೇಹವು ಬೆಳವದಕ್ಕೆ ಕಾರಣ ಜಡವಸ್ತುವಿಲ್ಲಿಪ್ಪ ಚೇತನವೆ. ಬಾಬೆ ಕ್ರಮಕ್ರಮವಾಗಿ ಬಾಲ್ಯ, ಕೌಮಾರ ಯೌವನ .. ಬೆಳೆತ್ತು. ಇದಕ್ಕೆ ಕಾರಣ ಶ್ರೇಷ್ಥಶಕ್ತಿಯಾದ ಆತ್ಮ ಇಪ್ಪದು. ಇದೇರೀತಿಲಿ ಈ ಬೃಹತ್ ವಿಶ್ವದ ಅಭಿವ್ಯಕ್ತಿಯು ಬೆಳವದು ಭಗವಂತನ ಅಂಶ ಇಪ್ಪದರಿಂದ. ಹಾಂಗಾಗಿ, ಈ ಬೃಹದಾಕಾರದ ವಿಶ್ವದ ಆವಿರ್ಭಾವಕ್ಕೆ ಒಂದುಗೂಡುವ ಚೇತನವೂ ಜಡವಸ್ತುವೂ ಮೂಲತಃ ಭಗವಂತನ ಎರಡು ಶಕ್ತಿಗೊ. ಹಾಂಗಾಗಿ ಎಲ್ಲ ವಸ್ತುಗಳ ಮೂಲ ಕಾರಣ ಭಗವಂತ°. ಭಗವಂತನ ವಿಭಿನ್ನಾಂಶವಾದ ಜೀವಿಯು ದೊಡ್ಡದೊಡ್ಡ ಗಗನಚುಂಬಿ ಕಟ್ಟಡಂಗಳ, ಕಾರ್ಖಾನೆಗಳ, ನಗರಂಗಳ ಎಲ್ಲಕ್ಕೂ ಕಾರಣ. ಇಲ್ಲಿ ಜೀವಿಯೊಳ ಭಗವಂತನಿಪ್ಪದೇ ಕಾರಣ. ಆದರೆ ಇಡೀ ವಿಶ್ವಕ್ಕೇ ಒಬ್ಬ ಜೀವಿ ಕಾರಣನಪ್ಪಲೆ ಸಾಧ್ಯ ಇಲ್ಲೆ. ಬೃಹತ್ತಾದ ವಿಶ್ವಕ್ಕೆ ಕಾರಣ ಬೃಹತ್ತಾದ ಆತ್ಮ° ಅಥವಾ ಪರಮಾತ್ಮ°. ಪರಮೋನ್ನತನಾದ ಆ ಭಗವಂತ° ದೊಡ್ಡ ಮತ್ತೆ ಸಣ್ಣ ಆತ್ಮಂಗೊಕ್ಕೆರಡಕ್ಕೂ ಕಾರಣ°. ಹಾಂಗಾಗಿ ಪರಮೋನ್ನತನಾದ ಭಗವಂತನೇ ಎಲ್ಲ ಕಾರಣಂಗೊಕ್ಕೆ ಮೂಲಕಾರಣ°.

ಬನ್ನಂಜೆಯವರ ವ್ಯಾಖ್ಯಾನವ ಅವಲೋಕಿಸಿದರೆ,ಜಡಪ್ರಕೃತಿ ಮತ್ತೆ ಚಿತ್-ಪ್ರಕೃತಿ ಇವೇ ಇಡೀ ಜಗತ್ತಿನ ಎಲ್ಲಾ ಜೀವಜಾತಂಗೊಕ್ಕೆ ಮೂಲ ಕಾರಣ. ಭಗವಂತ ಜೀವಜಾತದ ಅಪ್ಪನಾಗಿ, ಲಕ್ಷ್ಮೀದೇವಿ ಅಬ್ಬೆಯಾಗಿ ನಿಂದು ಈ ಜಗತ್ತಿನ ಸೃಷ್ಟಿ ಮಾಡಿದವು. ಅಬ್ಬೆಯ ಗರ್ಭಲ್ಲಿ ಬೆಳವ ಭ್ರೂಣದ ಹಾಂಗೆ ಜಡಪ್ರಕೃತಿ ವಿಕಾರಗೊಂಡತ್ತು. ಹೀಂಗೆ ಚಿತ್ ಪ್ರಕೃತಿ , ಜಡಪ್ರಕೃತಿಗೆ ರೂಪ ಕೊಟ್ಟು ಧಾರಣೆ ಮಾಡಿಗೊಂಡತ್ತು. ಅದುವೇ ‘ಜಗತ್ತು’ ಆತು.

ಭಗವಂತನ ಶಕ್ತಿ ಆಧಾನಂದ, ಪ್ರೇರಣೆಂದ, ಜಡ ಮತ್ತೆ ಚಿತ್ ಪ್ರಕೃತಿಯ ಮೂಲಕ ಈ ಜಗತ್ತಿನ ಹುಟ್ಟಿಂಗೆ ಭಗವಂತ° ಹೇಂಗೆ ಕಾರಣನೋ ಹಾಂಗೇ ಇಡೀ ಜಗತ್ತಿನ ಪ್ರಳಯ ಕೂಡ ಭಗವಂತನೇ. ಭಗವಂತ° ಇಲ್ಲಿ  ಹೇಳಿದ್ದ – “ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಸ್ತಥಾ” – ‘ ಸಮಸ್ತ ಜಗತ್ತಿನ ಉತ್ಪತ್ತಿಗೆ ಮೂಲಕಾರಣ ಆನು, ಜಗತ್ತಿನ ಸಂಹಾರಕ್ಕೂ ಕಾರಣ ಆನು”. ಈ ಜಗತ್ತಿನ ಹುಟ್ಟಿನ ಮದಲು, ಹುಟ್ಟಿಂಗೆ ಕಾರಣ, ಸಂಹಾರಕ್ಕೆ ಕಾರಣ, ಸಂಹಾರದ ಮತ್ತೆ ಇಪ್ಪವ° ಆ ಭಗವಂತ° ಒಬ್ಬನೇ.

ಶ್ಲೋಕ

ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ ।
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ ॥೦೭॥

ಪದವಿಭಾಗ

ಮತ್ತಃ ಪರತರಮ್ ನ ಅನ್ಯತ್ ಕಿಂಚಿತ್ ಅಸ್ತಿ ಧನಂಜಯ । ಮಯಿ ಸರ್ವಮ್ ಇದಮ್ ಪ್ರೋತಮ್ ಸೂತ್ರೇ ಮಣಿಗಣಾಃ ಇವ ॥

ಅನ್ವಯ

ಹೇ ಧನಂಜಯ!, ಮತ್ತಃ ಪರತರಮ್ ಅನ್ಯತ್ ಕಿಂಚಿತ್ ನ ಅಸ್ತಿ । ಸೂತ್ರೇ ಮಣಿಗಣಾಃ ಇವ ಇದಂ ಸರ್ವಂ ಮಯಿ ಪ್ರೋತಂ ॥

ಪ್ರತಿಪದಾರ್ಥ

ಹೇ ಧನಂಜಯ! – ಏ ಧನಂಜಯ!, ಮತ್ತಃ – ಎನ್ನಂದ, ಪರತರಮ್ – ಶ್ರೇಷ್ಠವಾದ್ದು, ಅನ್ಯತ್ – ಬೇರೆ, ಕಿಂಚಿತ್ – ಯಾವುದೂ, ನ ಅಸ್ತಿ – ಇಲ್ಲೆ, ಸೂತ್ರೇ – ದಾರಲ್ಲಿ (ನೂಲಿಲ್ಲಿ), ಮಣಿಗಣಾಃ  ಇವ – ಮುತ್ತುಗಳ ಹಾಂಗೆ, ಇದಮ್ ಸರ್ವಮ್ – ಈ ಎಲ್ಲವು, ಮಯಿ – ಎನ್ನಲ್ಲಿ, ಪ್ರೋತಮ್ – ಪೋಣಿಸಲ್ಪಟ್ಟಿದು.

ಅನ್ವಯಾರ್ಥ

ಏ ಧನಂಜಯ!,  ಎನ್ನಿಂದ ಮಿಗಿಲಾದ್ದು (ಉತ್ತಮವಾದ್ದು, ಶ್ರೇಷ್ಠವಾದ್ದು) ಮತ್ತೆ ಬೇರೆ ಎಂತದೂ ಇಲ್ಲೆ. ನೂಲಿಲ್ಲಿ ಮಣಿಗಳ ಪೋಣಿಸಿದ ಹಾಂಗೆ ಎಲ್ಲವೂ ಎನ್ನಲ್ಲಿ ಪೋಣಿಸಲ್ಪಟ್ಟಿದು.

ತಾತ್ಪರ್ಯ / ವಿವರಣೆ

ಪರಮ ಪುರುಷ° ಆ ಭಗವಂತನೇ ಅತ್ಯಂತ ಉನ್ನತನಾಗಿಪ್ಪವ°, ಪರಮಶ್ರೇಷ್ಠ. ಹಾಂಗಾಗಿ ಅವನಿಂದ ಶ್ರೇಷ್ಠವಾದ ಸತ್ಯ ಬೇರೆ ಇನ್ನೊಂದು ಇಲ್ಲೆ. ಅವ° ಅತ್ಯಂತ ಸಣ್ಣದಾಗಿಪ್ಪದರಿಂದಲೂ ಸಣ್ಣ°, ಬೃಹತ್ತಮವಾಗಿಪ್ಪದರಿಂದಲೂ ಬೃಹತ್ತಾಗಿಪ್ಪವ°. ಭಗವಂತ° ಇಲ್ಲಿ ಹೇಳುತ್ತ° – ಆನಲ್ಲದ್ದೆ ಎನ್ನಂದ ಪರತರವಾಗಿಪ್ಪ ಇನ್ನೊಂದು ವಸ್ತು ವಿಷಯಂಗೊ ಬೇರೆ ಯಾವುದೂ ಇಲ್ಲೆ. ಎಲ್ಲವೂ ಎನ್ನಲ್ಲೇ ಅಡಕವಾಗಿಪ್ಪದು. ಚಿತ್ ಪ್ರಕೃತಿ, ಜಡಪ್ರಕೃತಿ, ಇದರಿಂದ ದೇಹಧಾರಣೆ ಮಾಡಿದ ಜೀವಜಾತ°, ವಾಸುಸುವ ಬ್ರಹ್ಮಾಂಡ, ಈ ಪಿಂಡಾಂಡ ಎಲ್ಲವೂ ಕೂಡ ಆ ಭಗವಂತನಲ್ಲಿ ದಾರಲ್ಲಿ ಪೋಣಿಸಿದ ಮಣಿಗಳ ಹಾಂಗೆ ಹೆಣದುಗೊಂಡಿದ್ದು (ಪೋಣಿಸಿಗೊಂಡಿದ್ದು). ಹಾಂಗಾಗಿ ಇಡೀ ವಿಶ್ವವ , ಜೀವಜಾತವ ಪೋಣಿಸಿದ ಸೂತ್ರ (ದಾರ) ಅವ° ಆ ಭಗವಂತ°.

ಶ್ಲೋಕ

ರಸೋsಹಮಪ್ಸು ಕೌಂತೇಯ ಪ್ರಭಾಸ್ಮಿ ಶಶಿಸೂರ್ಯಯೋಃ ।
ಪ್ರಣವಃ ಸರ್ವವೇದೇಷು ಶಬ್ದಃ ಖೇ ಪೌರುಷಂ ನೃಷು ॥೦೮॥

ಪದವಿಭಾಗ

ರಸಃ ಅಹಮ್ ಅಪ್ಸು ಕೌಂತೇಯ ಪ್ರಭಾ ಅಸ್ಮಿ ಶಶಿ-ಸೂರ್ಯಯೋಃ । ಪ್ರಣವಃ ಸರ್ವ-ವೇದೇಷು ಶಬ್ದಃ ಖೇ ಪೌರುಷಮ್ ನೃಷು ॥

ಅನ್ವಯ

ಹೇ ಕೌಂತೇಯ !, ಅಹಮ್ ಅಪ್ಸು ರಸಃ, ಶಶಿ-ಸೂರ್ಯಯೋಃ ಪ್ರಭಾ, ಸರ್ವ-ವೇದೇಷು ಪ್ರಣವಃ , ಖೇ ಶಬ್ದಃ, ನೃಷು ಪೌರುಷಂ ಅಸ್ಮಿ ।

ಪ್ರತಿಪದಾರ್ಥ

ಹೇ ಕೌಂತೇಯ – ಏ ಕುಂತಿಯ ಮಗನೇ!, ಅಹಮ್ – ಆನು, ಅಪ್ಸು – ನೀರಿಲ್ಲಿ, ರಸಃ  – ರುಚಿಯು, ಶಶಿ-ಸೂರ್ಯಯೋಃ – ಚಂದ್ರ ಮತ್ತು ಸೂರ್ಯರಲ್ಲಿ, ಪ್ರಭಾ – ಬೆಣಚ್ಚಿ, ಸರ್ವ-ವೇದೇಷು – ಎಲ್ಲ ವೇದಂಗಳಲ್ಲಿ, ಪ್ರಣವಃ – ಅಕಾರ ಉಕಾರ ಮಕಾರದ ಸಂಯುಕ್ತವಾಗಿಪ್ಪ ಓಂಕಾರ (ಪ್ರಣವ) ಅಕ್ಷರಂಗೊ, ಖೇ – ಆಕಾಶಲ್ಲಿ, ಶಬ್ದಃ – ಶಬ್ದ ಕಂಪನವು, ನೃಷು – ಮಾನವರಲ್ಲಿ, ಪೌರುಷಮ್ – ಸಾಮರ್ಥ್ಯವು, ಅಸ್ಮಿ – ಆಗಿದ್ದೆ.

ಅನ್ವಯಾರ್ಥ

ಏ ಅರ್ಜುನ!, ಆನು ನೀರಿಲ್ಲಿ ರುಚಿಯೂ, ಚಂದ್ರಸೂರ್ಯರಲ್ಲಿ ಬೆಣಚ್ಚಿಯೂ, ಎಲ್ಲ ವೇದದ ಮಂತ್ರಂಗಳಲ್ಲಿ ಓಂಕಾರವೂ ಆಗಿದ್ದೆ. ಆಕಾಶಲ್ಲ್ಲಿ ಶಬ್ದವೂ, ಪುರುಷರಲ್ಲಿ ಪೌರುಷವೂ ಆನೇ ಆಗಿದ್ದೆ.

ತಾತ್ಪರ್ಯ / ವಿವರಣೆ  

ತನ್ನ ವಿವಿಧ ಐಹಿಕ ಮತ್ತೆ ಆಧ್ಯಾತ್ಮಿಕ ಶಕ್ತಿಗಳಿಂದ ಭಗವಂತ ಹೇಗೆ ಸರ್ವವ್ಯಾಪಿ ಹೇಳ್ವದರ ಇಲ್ಲಿ ಹೇಳಿದ್ದ ಭಗವಂತ°. ಭಗವಂತನ ಮದಾಲು ಅವನ ವಿವಿಧ ಶಕ್ತಿಗಳಿಂದ ಗ್ರಹಿಸಲಕ್ಕು. ಇದು ನಿರಾಕಾರವಾಗಿ ಅವನ ಗ್ರಹಿಸುವ ರೀತಿ. ಇಲ್ಲಿ ಬನ್ನಂಜೆಯವು ವ್ಯಾಖ್ಯಾನಿಸಿದ್ದನ್ನೇ ಅವಲೋಕಿಸಿದರೆ ಸರಳವಾಗಿ ಮತ್ತು ಸುಲಭವಾಗಿ ಅರ್ಥಮಾಡಿಗೊಂಬಲೆಡಿಗು. ಬನ್ನಂಜೆ ಹೇಳ್ತವುಭಗವಂತ° ಈ ಶ್ಲೋಕಲ್ಲಿ ಹೇಳಿಪ್ಪದರ ಗೂಢಾರ್ಥವ ರಜಾ ಚಿಂತನೆ ಮಾಡಿರೆ, –  ನೀರಿಲ್ಲಿ ರುಚಿ ಇಪ್ಪದು ಭಗವಂತನಿಂದ, ಹಾಂಗಾಗಿ ಅವ° ‘ರಸ’ ನಾಮಕ°, ಚಂದ್ರ-ಸೂರ್ಯರಲ್ಲಿ ಬೆಣಚ್ಚಿ ಇಪ್ಪದು ಭಗವಂತನಿಂದ, ಹಾಂಗಾಗಿ ಅವ° (ಭಗವಂತ°) ‘ಪ್ರಭಾ’ ನಾಮಕ°, ಎಲ್ಲ ವೇದಂಗಳಲ್ಲಿ ಓಂಕಾರ ಸಾರವಾದ್ದು ಭಗವಂತನಿಂದ, ಹಾಂಗಾಗಿ ಅವ° ‘ಪ್ರಣವ’ ನಾಮಕ°, ಆಕಾಶಲ್ಲಿ ಶಬ್ದ ಮೂಡುತ್ತದು ಭಗವಂತನಿಂದ, ಹಾಂಗಾಗಿ ಅವ° ‘ಶಬ್ದ’ ನಾಮಕ°. ಪುರುಷರಲ್ಲಿ ಪೌರುಷ ಇಪ್ಪದು ಅವನಿಂದ, ಹಾಂಗಾಗಿ ಅವ° ‘ಪೌರುಷ’  ನಾಮಕ°.

ಭಗವಂತ° ಈ ಪ್ರಪಂಚವ ಸೃಷ್ಟಿ ಮಾಡಿದ°. ಮತ್ತೆ ಈ ಪ್ರಪಂಚದೊಳ ಪ್ರವೇಶ ಮಾಡಿದ°. ಇಲ್ಲಿ ಪ್ರವೇಶ ಮಾಡಿದ° ಹೇಳಿದರೆ – ಭಗವಂತಂಗೆ ಅನಂತ ರೂಪ. ಅವ° ಒಂದೊಂದು ವಸ್ತುವಿಲ್ಲಿ ಒಂದೊಂದು ರೂಪಲ್ಲಿ ಆ ವಸ್ತುವಿನ ವಿಶೇಷ ಶಕ್ತಿಯಾಗಿ ಅವ ಇಪ್ಪದು.  ಹೀಂಗೆ ಪ್ರತಿಯೊಂದು ವಸ್ತುವಿಲ್ಲಿಯೂ ಅಗೋಚರವಾಗಿ ಒಂದೊಂದು ಶಕ್ತಿಯ ನೀಡಿ ವಿಭೂತಿ ರೂಪಲ್ಲಿ ಪ್ರವೇಶಮಾಡಿ ಆ ವಸ್ತುವಿಂಗೆ ಪ್ರತ್ಯೇಕ ಅನುಭೂತಿಯ / ಅಭಿವ್ಯಕ್ತಿಯ ಉಂಟುಮಾಡುವದು ಭಗವಂತ. ಇದು ಅವನ ವಿಭೂತಿ ರೂಪ. ಆ ವಸ್ತುವಿಲ್ಲಿ ಅಡಕವಾಗಿಪ್ಪ ಶಕ್ತಿ ವಿಭೂತಿ ವಿಜ್ಞಾನ.  ಈ ಶ್ಲೋಕದ ಸುರುವಿಲ್ಲಿ ಪಂಚಭೂತಂಗಳಲ್ಲಿ ಬಹಳ ಮುಖ್ಯವಾದ ನೀರಿಲ್ಲಿ ತನ್ನ ವಿಭೂತಿಯ ಹೇಳಿದ್ದ°. ನಮ್ಮ ಎಲ್ಲಾ ಚಟುವಟಿಕೆಗೊಕ್ಕೂ, ಭಗವಂತನ ಸೇವೆ (ಪೂಜೆ) ಮಾಡ್ಳೂ ನೀರು ಬೇಕೇ ಬೇಕು. ಅರ್ಘ್ಯಮ್ ಸಮರ್ಪಯಾಮಿ, ಪಾದ್ಯಮ್ ಸಮರ್ಪಯಾಮಿ, ಆಚಮನೀಯಮ್ ಸಮರ್ಪಯಾಮಿ, ಸ್ನಾನಮ್ ಸಮರ್ಪಯಾಮಿ ಹೀಂಗೆ ಸ್ನಾನ, ಆಚಮನ ಪಾದ್ಯ ಅರ್ಘ್ಯ ತರ್ಪಣ ಎಲ್ಲದಕ್ಕೂ ನೀರು ಬೇಕು. ಪೂಜೆ ಮಾಡುವಾಗ ಏನೂ ಇಲ್ಲದ್ದಲ್ಲಿ ಒಂದು ಸಕ್ಕಣ ನೀರನ್ನೇ ಬಿಟ್ರಾತು.  ಗಂಧಮ್ /ಅಕ್ಷತಾಮ್/ಧೂಪ-ದೀಪ-ನೈವೇದ್ಯಮ್ ಸಮರ್ಪಯಾಮಿ ಹೇಳ್ವಲ್ಲಿ ಎಲ್ಲ  ಒಂದು ಸಕ್ಕಣ ನೀರು ಬಿಟ್ಟು ಸುಧಾರ್ಸುವದು. ಹೀಂಗೆ ಯಾವುದೂ ಇಲ್ಲದ್ದಿಪ್ಪಗ ಅದಕ್ಕ್ಕೆ ಪ್ರತಿನಿಧಿಯಾಗಿ ನೀರಿನ ಅರ್ಪುಸುವದು. ಒಳ್ಳೆತ ಹಶುವಪ್ಪಗ, ತಿಂಬಲೆ ಏನೂ ಇಲ್ಲದ್ದಿಪ್ಪಗಳು ಒಂದಿಷ್ಟು ನೀರು ಕುಡುದು ತೃಪ್ತಿ ಪಡೆತ್ತು ನಾವು. ಹೀಂಗೆ ಭಗವಂತನ ಸೃಷ್ಟಿಯ ವಿಸ್ತಾರಕ್ಕೆ ನೀರೇ ಮೂಲದ್ರವ್ಯ. ಅದರ ಭಕ್ತಿಂದ ಅರ್ಪಿಸಿದರೆ ಎಲ್ಲವನ್ನೂ ಅರ್ಪಿಸಿದ ಹಾಂಗೆ. ಭಗವಂತ ಇಲ್ಲಿ ಹೇಳುತ್ತ° – “ರಸಃ ಅಹಂ ಅಪ್ಸು ಕೌಂತೇಯ” – ರಸನಾಮಕನಾಗಿ ನೀರಿಲ್ಲಿ ಆನು ರಸವಾಗಿ ಇದ್ದೆ. ರಸ ಹೇಳಿ ಸಾರಭೂತವಾದ್ದು, ಹರಿಯುವದು ಇತ್ಯಾದಿ ಅರ್ಥಂಗೊ. ಹರಿಯುವ ಶಕ್ತಿ ನೀರಿನ ವಿಶಿಷ್ಟ ಗುಣ. ಹರಿಯುವ ಶಕ್ತಿಯಾಗಿ ‘ಹರಿ’ ನೀರಿಲ್ಲಿ ಕೂದಿಪ್ಪದರಿಂದ ನೀರಿಂಗೆ ಆ ಶಕ್ತಿ ಬಂತು. ಉಪಾಸನೆಲಿ ಈ ಜ್ಞಾನ ಬಹಳ ಮುಖ್ಯ.

ಭಗವಂತ° ನೀರಿಲ್ಲಿ ರಸವಾಗಿ (ರುಚಿಯಾಗಿ) ಕೂದ°. ನವಗೆ ರುಚಿಯ ಅನುಭವವ ಕೊಟ್ಟು ಅವ° ಆ ನೀರಿಲ್ಲಿ ರಸವಾಗಿ ಕೂರದೇ ಇರ್ತಿದ್ರೆ ನವಗೆ ನಾಲಗೆ ಇದ್ದೂ ಏನೂ ಉಪಯೋಗ ಆವ್ತಿತ್ತಿಲ್ಲೆ. ಹೀಂಗೆ ಪ್ರತಿಯೊಂದರಲ್ಲಿಯೂ ಸಾರಭೂತವಾದ ಇಂತಹ ಅಸಧಾರಣ ಶಕ್ತಿ ಏನಿದ್ದೋ ಅದು ಆ ಭಗವಂತನ ವಿಭೂತಿ. ಅವ° ‘ರಸಃ’ – ರ ಹೇಳಿರೆ ಆನಂದ, ಸ ಹೇಳಿರೆ ಜ್ಞಾನ. ಹೀಂಗೆ ರಸಃ ನಾಮಕ ಭಗವಂತ ಜ್ಞಾನಾನಂದಪೂರ್ಣ.

ಮತ್ತೆ., “ಪ್ರಭಾ ಅಸ್ಮಿ ಶಶಿ-ಸೂರ್ಯಯೋಃ” – ಚಂದ್ರ-ಸೂರ್ಯರಲ್ಲಿ ಪ್ರಭೆ (ಬೆಣಚ್ಚಿ) ಇಪ್ಪದು ಪ್ರಭಾನಾಮಕ ನಾಗಿ ಭಗವಂತ ಇಪ್ಪದರಿಂದ. ಮನುಷ್ಯನ ಜೀವನಕ್ಕೆ ಸೌರಶಕ್ತಿ ಕಾರಣವಾದರೂ ಸಮಸ್ತ ವನಸ್ಪತಿಗೊಕ್ಕೆ ಚಂದ್ರನ ವಿಶೇಷ ಸಂಬಂಧ ಇದ್ದು. ಹಾಂಗಾಗಿ, ವನಸ್ಪತಿ ತಜ್ಞರು ಯಾವ ಯಾವ ಮರಲ್ಲಿ ಎಂತೆಂಥಾ ಶಕ್ತಿ ಚಂದ್ರನಿಂದ ನಿಷ್ಪನ್ನವಾಗಿದ್ದು ಹೇಳ್ತದರ ಅಧ್ಯಯನ ಮಾಡಿ ಚಂದ್ರನ ಗತಿಗನುಗುಣವಾಗಿ ವಸಸ್ಪತಿಗಳ ಕತ್ತರುಸುವದು. ಮನೆ ಕಟ್ಳೆ ಮರಕಡಿತ್ತರು ಚಂದ್ರನ ಗತಿಗನುಗುಣವಾಗಿ ನೋಡಿಯೇ ಕಡಿವದು. ಇದರ ನೋಡದ್ದೆ ಮರಕಡುದರೆ ಬಾಳಿಕೆ ಬಾರ. ಭಗವಂತ° ಸೂರ್ಯಚಂದ್ರರಿಂದ ನಿರಂತರ ಶಕ್ತಿ (ಬೆಣಚ್ಚಿ) ಹರುಸುವದರ ಮೂಲಕ ಈ ಜೀವಲೋಕ ಬದುಕ್ಕುತ್ತು. ಹೀಂಗೆ ಬೆಣಚ್ಚಿಲ್ಲಿ ಬೆಳಕಾಗಿ ಶಬ್ದವಾಚ್ಯ ‘ಪ್ರಭಾ’ ಆಗಿ ಭಗವಂತ ಕೂದುಗೊಂಡಿದ್ದ. ಪ್ರ ಹೇಳಿರೆ ಪ್ರಕೃಷ್ಟವಾದ ಭ ಹೇಳಿರೆ ಜ್ಞಾನಾನಂದಮಯವಾದ. ಭಗವಂತ° ಹೀಂಗೆ ಜ್ಞಾನನಂದಮಯವಾದ ಬೆಣಚ್ಚಿಯಾಗಿ ಸೂರ್ಯಚಂದ್ರರಲ್ಲಿದ್ದು ಜೀವಜಾತಕ್ಕೆ ನಿರಂತರ ಪ್ರಾಣಶಕ್ತಿಯ ಕೊಟ್ಟು ಕಾಪಾಡುತ್ತ°.

ಮುಂದೆ ಭಗವಂತ° ಹೇಳುತ್ತ° – “ಪ್ರಣವಃ ಸರ್ವ-ವೇದೇಷು” – ಎಲ್ಲಾ ವೇದಂಗಳಲ್ಲಿಯೂ ವೇದ ಶಬ್ದ ವಾಚ್ಯನಾಗಿ ಆನು ತುಂಬಿದ್ದೆ. ವೇದ ಹೇಳಿ ಜ್ಞಾನ ಕೊಡುವಂತಾದ್ದು ಹೇಳಿ ಅರ್ಥ. ಎಲ್ಲೋರಿಂಗೂ ಜ್ಞಾನ (ಅರಿವು) ಕೊಡುವದು ಭಗವಂತ°. ಸ್ವಯಂ ಪೂರ್ಣನಾಗಿ ಸರ್ವರಿಂಗೂ ಜ್ಞಾನಪ್ರದನಾಗಿ, ಸರ್ವಶಬ್ದವಾಚ್ಯನಾಗಿ, ಸರ್ವ ವೇದಂಗಳಲ್ಲಿ ಭಗವಂತ° ನೆಲೆಸಿದ್ದ°. ವೇದದ ಅರ್ಥವ ತಿಳುದವನ ಬದುಕು ಸದಾ ಮಂಗಳಮಯ. ಅಂತಹ ವೇದದ ಸಾರ ‘ಓಂಕಾರ’ ಅದೇ ಪ್ರಣವ, ಅದು ಭಗವಂತ°.

ಓಂಕಾರಲ್ಲಿ ಸರ್ವ ವೇದಂಗಳ ಸಾರ ಇದ್ದು ಹೇಳುತ್ತವು. ಅದು ಹೇಂಗೆ ?! – ವೇದಂಗೊ ಅನೇಕ. ಋಗ್ವೇದಲ್ಲಿ 24 ಶಾಖೆಗೊ, ಯಜುರ್ವೇದಲ್ಲಿ 101 ಶಾಖೆಗೊ, ಸಾಮವೇದಲ್ಲಿ 1000 ಶಾಖೆಗೊ, ಅಥರ್ವವೇದಲ್ಲಿ 12 ಶಾಖೆಗೊ. ಹೀಂಗೆ ಒಟ್ಟು 1137 ಸಂಹಿತೆಗೊ. ಮತ್ತೆ ಅದಕ್ಕೆ ಅಷ್ಟೇ ಬ್ರಾಹ್ಮಣ, ಅರಣ್ಯಕ, ಉಪನಿಷತ್ತುಗೊ. ಹೀಂಗೆ ವೇದ ಹೇಳಿರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಂಗೊ ಇದ್ದರೂ ಕೂಡ ಮೂಲತಃ ವೇದಲ್ಲಿ ಪ್ರಮುಖವಾಗಿ ಮೂರು ವಿಭಾಗಂಗೊ. ಪದ್ಯರೂಪ (ಋಗ್ವೇದ), ಗದ್ಯರೂಪ (ಯಜುರ್ವೇದ), ಗಾನರೂಪ (ಸಾಮವೇದ). ಈ ಮೂರು ವೇದಂಗಳ ಮೂರು ಅಕ್ಷರಂಗಳ ತೆಕ್ಕೊಂಡು ನಿರ್ಮಾಣ ಅಪ್ಪದು ‘ಓಂಕಾರ’.  ಓಂಕಾರಕ್ಕೆ ಸಾರತ್ವವ ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ಓಂಕಾರಲ್ಲಿ ಭಗವಂತ ನೆಲೆಸಿಗೊಂಡಿದ್ದ°. ಪ್ರಾಕಿಲ್ಲಿ ಮೂರು ವೇದಂಗಳ ಸಂಕಲಿಸಿ ಭಟ್ಟಿಇಳಿಸಿ ಅದರ ಸಾರವಾದ ಮೂರು ವರ್ಗಂಗಳ ಒಂದು ಸೂಕ್ತ ಮಾಡಿದವು. ಅದೇ ಪುರುಷಸೂಕ್ತ. ಹಾಂಗಾಗಿಯೇ ವೇದಸೂಕ್ತಂಗಳಲ್ಲಿ ಅತ್ಯಂತ ಶ್ರೇಷ್ಠವಾದ್ದು ‘ಪುರುಷಸೂಕ್ತ’.  ಈ ಸೂಕ್ತವ ಮತ್ತೆ ಭಟ್ಟಿಇಳಿಸಿ ಮೂರು ಪಾದಂಗಳ ಗಾಯತ್ರೀ ಮಂತ್ರ (ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್ ॥) ನಿರ್ಮಾಣ ಆತು. ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟದ್ದು, ‘ಧೀಯೋ ಯೋನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟದ್ದು. ಹೀಂಗೆ ಮೂರು ವೇದಂಗಳ ಸಾರ ಗಾಯತ್ರಿಯ ಮೂರು ಪಾದಂಗಳುಳ್ಳ ಒಂದು ಮಂತ್ರ. ಹಾಂಗಾಗಿ ಗಾಯತ್ರೀ ಮಂತ್ರವ ‘ವೇದಮಾತೆ’ ಹೇಳಿ ಹೇಳುತ್ತವು. ಈ ಗಾಯತ್ರಿಂದ ‘ರಸ’ ತೆಗದಪ್ಪಗ ಮೂರು ಪಾದಂಗಳಿಂದ ಮೂರು ಪದಗಳಿಪ್ಪ ವ್ಯಾಹೃತಿ “ಭೂಃ ಭುವಃ ಸ್ವಃ”; ಈ ಮೂರು ಪದಂಗಳ ಸಾರ ಮೂರು ಅಕ್ಷರದ ಅ+ಉ+ಮ = ‘ಓಂ’ಕಾರ.

ಓಂಕಾರಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತೆ ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟದ್ದು. ಋಗ್ವೇದ “ಅಗ್ನಿಮೀಳೆ ಪುರೋಹಿತಮ್ …. ।” ಹೇಳಿ ‘ಅ’ಕಾರಂದ ಸುರುವಾಗಿ , “ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ।” ಹೇಳಿ ‘ಇ’ಕಾರಲ್ಲಿ ಮುಗಿತ್ತು. ಅಲ್ಲಿಂದ ಮುಂದುವರುದು ಯಜುರ್ವೇದ “ಇಷೇ ತ್ವೋರ್ಜೇತ್ವಾ….” ಹೇಳಿ ‘ಇ’ಕಾರಂದ ಸುರುವಾಗಿ “…..ಸಮುದ್ರೋ ಬಂಧುಃ” ಹೇಳಿ ‘ಉ’ಕಾರಲ್ಲಿ ಮುಕ್ತಾಯವಾವ್ತು. ಹೀಂಗೆ ‘ಓಂ’ಕಾರಲ್ಲಿಪ್ಪ ‘ಅ’ಕಾರ ಮತ್ತೆ ‘ಉ’ಕಾರ ಋಗ್ವೇದ ಮತ್ತೆ ಯಜುರ್ವೇದವ ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ ರೂಪವಾಗಿ,  ಮುಂದೆ ಸಾಮವೇದ “ಅಗ್ನ ಆ ಯಾಹಿ ……..” ಹೇಳಿ ‘ಅ’ಕಾರಂದ ಸುರುವಾಗಿ “…….. ಬೃಹಸ್ಪತಿರ್ದಧಾತು” ಹೇಳಿ ‘ಉ’ಕಾರಲ್ಲಿ ಮುಗಿತ್ತು. ಆದರೆ ಇಲ್ಲಿ ‘ಮ’ಕಾರ ಬಯಿಂದಿಲ್ಲೆನ್ನೆ!. ಅದು ಎಂತ ಹೇಳಿರೆ, ಸಾಮವೇದ ನಾದ ರೂಪಲ್ಲಿಪ್ಪದು. ‘ಓಂ’ಕಾರಲ್ಲಿಯೂ ‘ಮ’ ಹೇಳ್ವದು ನಾದರೂಪಲ್ಲಿ ಹೊರಹೊಮ್ಮುವ ಅಕ್ಷರ. ಅದು ಸಂಗೀತ. ಹೀಂಗೆ ಓಂಕಾರ ವೇದದ ಸಂಕ್ಷೇಪಣಾರೂಪದ ಬೀಜಾಕ್ಷರ. ಇದು ನವಗೆ ವೇದವ ಗುರುತುಸುವ ಮಾರ್ಗದರ್ಶಿ. ಹಾಂಗಾಗಿ ಇದು ಭಗವಂತನ ಸ್ತೋತ್ರ ಮಾಡುವ ಮಂತ್ರಂಗಳಲ್ಲಿ ಅತ್ಯಂತ ಶ್ರೇಷ್ಠವಾದ್ದು, ಸಾರವಾದ್ದು, ಶಕ್ತಿಯಾದ್ದು. ಇದಕ್ಕಿಂತ ಬಲವಾಗಿ ಸ್ತೋತ್ರಮಾಡುವ ಶಬ್ದ ಈ ಪ್ರಪಂಚಲ್ಲಿ ಇಲ್ಲೆ.

ಒಂದು ಮಂತ್ರದ ಅಕೇರಿಲಿ ಹೇಳುವ ‘ಓಂ’ಕಾರಕ್ಕೆ ವ್ಯಾಕರಣದ ಪರಿಭಾಷೆಲಿ ‘ಪ್ರಣವಃ’ ಹೇಳಿ ಹೇಳುವದು. ಆದಿಂದ ಅಂತದವರೇಂಗೆ ಸಮಸ್ತ ನಾಮ ಪ್ರತಿಪಾದ್ಯ ‘ಭಗವಂತ’ ಹೇಳಿ ತೋರುಸುವದಕ್ಕೆ ಓಂಕಾರವ ಆದಿ-ಅಂತ್ಯಲ್ಲಿ ಉಚ್ಛಾರ ಮಾಡುತ್ತದು. ಹೀಂಗಾಗಿ, ಮಂತ್ರದ ಆದಿಲಿ ಮತ್ತು ಅಂತ್ಯಲ್ಲಿ ಬಳಸುವ ಓಂಕಾರವ ಎಂದೂ ಪ್ರತ್ಯೇಕವಾಗ ಹೇಳ್ಳಾಗ. ಉದಾಹರಣಗೆ ವಿಷ್ಣುಸಹಸ್ರನಾಮದ ಅಕೇರಿಲಿ “ಸರ್ವಪ್ರಹರಣಾಯುಧಃ ಓಂ ನಮಃ ಇತಿ” ಹೇದು ಹೇಳದ್ದೆ “ಸರ್ವಪ್ರಹರಣಾಯುಧೋಂ ನಮಃ ಇತಿ” ಹೇಳಿ ಹೇಳೆಕು. ಆಯುಧಃ ಎಂಬಲ್ಲಿ ವಿಸರ್ಗವ ತೆಗದು ಅಲ್ಲಿ ‘ಓಂ’ ಸೇರಿಸಿ ಅದರ ಸಮಸ್ತಪದವಾಗಿ ಹೇಳುತ್ತದು.

ಭಗವಂತ° ಇಲ್ಲಿ ಹೇಳುತ್ತ° “ಪ್ರಣವಃ ಸರ್ವವೇದೇಷು” – ವೇದದ ಸಾರಭೂತವಾದ ‘ಪ್ರಣವಃ’ ಆನು. ಪ್ರಣವಃ ವಿಸ್ತೃತವಾಗಿ ವ್ಯಾಹೃತಿ, ವ್ಯಾಹೃತಿ ವಿಸ್ತಾರವಾಗಿ ಗಾಯತ್ರೀ, ಗಾಯತ್ರೀ ವಿಸ್ತಾರವಾಗಿ ಸೂಕ್ತ, ಮತ್ತೆ ಮೂರು ವೇದಂಗೊ, ಅಲ್ಲಿಂದ ಸಮಸ್ತ ವೇದಂಗೊ. ಹೀಂಗೆ ಪ್ರಣವಲ್ಲಿ , ವ್ಯಾಹೃತಿಲಿ, ಪುರುಷ ಸೂಕ್ತಲ್ಲಿ, ಸಮಸ್ತವೇದಂಗಳಲ್ಲಿ ಭಗವಂತ° ನೆಲೆಸಿದ್ದ°.

“ಶಬ್ದಃ ಖೇ” – ವೇದದ ಶಬ್ದಂಗಳಿಂದಲೇ ಹುಟ್ಟಿ ಬಂದ ಪ್ರಪಂಚದ ಎಲ್ಲಾ ಶಬ್ಧಂಗಳಲ್ಲಿಯೂ, ಎಲ್ಲಾ ಲೌಕಿಕ ನಾದಲ್ಲಿಯೂ ತುಂಬಿಪ್ಪ ಭಗವಂತ°, ಆಕಾಶಲ್ಲಿ ಅನಂತ ಶಬ್ದಂಗಳನ್ನೂ, ಅನಂತ ನಾದಂಗಳನ್ನೂ ಸೃಷ್ಟಿ ಮಾಡಿದ°.  ನವಗೆ ಶಬ್ದಂದ ಅನಂತ ಅನುಭವವ ಕೊಟ್ಟು, ಆ ಶಬ್ದವ ಗ್ರಹಿಸುವ ಅಲ್ಲದೆ ಅದರ ಪುನರುಚ್ಛರಿಸುವ ವಿಶೇಷ ಶಕ್ತಿಯ ಭಗವಂತ° ಕರುಣಿಸಿದ್ದ°. ಜ್ಞಾನದ ಮೂಲಕ ಈ ‘ಶಬ್ದ ನಾಮಕ°’   ಭಗವಂತನ ತಿಳಿವ ವಿಶೇಷ ಶಕ್ತಿ ಮನುಷ್ಯಂಗೆ ಭಗವಂತನ ವಿಶೇಷ ಕೊಡುಗೆ. “ಪೌರುಷಂ ನೃಷು” – ಜೀವಲೋಕಕ್ಕೆ ನಾನಾ ವಿಧದ ಪೌರುಷವ ಕೊಟ್ಟ ಭಗವಂತ°, ‘ಪುರುಷ’ ಶಬ್ದ ವಾಚ್ಯನಾಗಿ ಮನುಷ್ಯರಲ್ಲಿ ಬಹುವಿಧ ಪೌರುಷಲ್ಲಿ ತುಂಬಿದ್ದ°.

ಮೇಗಾಣ ವಿವರಣೆ ಎಲ್ಲವೂ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು. ಅಪ್ರತಿಮ ವಿದ್ವಾನ್ ಅವು (ಬನ್ನಂಜೆ) ಓಂಕಾರದ ಬಗ್ಗೆ ಇನ್ನೂ ವಿಶ್ಲೇಷಣೆಯ ಕೊಟ್ಟಿದವು. ನಮ್ಮ ತಿಳುವಳಿಕೆಗೆ ಇರಲಿ ಹೇಳಿ ಅದನ್ನೂ ಇಲ್ಲಿ ಬರವದು ಸೂಕ್ತ ಹೇಳಿ ಗ್ರೇಶುತ್ತೆ.

ಈ ಮೇಗೆ ಹೇಳಿಪ್ಪಂತೆ ಸಮಸ್ತ ವೇದಂಗಳಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಎಲ್ಲಾ ಗುಣಂಗಳ ‘ಓಂ’ಕಾರ ಹೇಳುತ್ತು. ‘ಓಮ್’ ಹೇಳ್ವದಕ್ಕೆ ಒಂದು ಅಖಂಡ ಅರ್ಥ ಇದ್ದು. ‘ಓಂ’ಕಾರ ‘ಅವ’ ಅಥವಾ ‘ಉಯಿ’ ಹೇಳ್ವ ಎರಡು ಧಾತುವಿಂದ ನಿಷ್ಪನ್ನವಾದ್ದು. ‘ಅವತಿ ಇತಿ ಓಮ್’. ಇಲ್ಲಿ ‘ಅವತಿ’ ಪದೇಕ ಅನೇಕ ಅರ್ಥಂಗೊ. ‘ಅವ ವ್ಯಾಪ್ತೋ’ ಧಾತು. ಅವತಿ ಹೇದರೆ ಎಲ್ಲ ದಿಕ್ಕೆ ತುಂಬಿಪ್ಪ. ಹಾಂಗಾಗಿ ಓಮ್ ಹೇದರೆ ಸರ್ವಗತ°. ‘ಅವ’ ಹೇಳಿರೆ ಜ್ಞಾನ. ‘ಅವತಿ’ ಹೇದರೆ ಎಲ್ಲವನ್ನೂ ತಿಳುದವ°. ಹಾಂಗಾಗಿ ಓಮ್ ಹೇದರೆ., ಸರ್ವಜ್ಞ°. ‘ಅವ ಸಾಮರ್ಥ್ಯೇ’ ಹೇದು ಇನ್ನೊಂದು ಧಾತು. ಹಾಂಗಾಗಿ ಅವತಿ ಹೇದರೆ ‘ಸರ್ವಸಮರ್ಥ°’. ಹೀಂಗೆ ಭಗವಂತ° ಸರ್ವಸಮರ್ಥ°, ಸರ್ವಗತ°, ಸರ್ವಜ್ಞ° ಹೇಳ್ವ ಪ್ರಮುಖ ಮೂರು ಮುಖವ ಓಂಕಾರ ತಿಳಿಶುತ್ತು. ಇದು ಭಗವಂತನ ಗುರುತುಸುವ ಮೂರು ಮೂಲಭೂತ ಗುಣಂಗೊ. ಜೀವ° ‘ಅಣು’ ಆದರೆ ಭಗವಂತ° ಸರ್ವಗತ°; ಜೀವ ಅಲ್ಪಜ್ಞ ಆದರೆ ಭಗವಂತ° ಸರ್ವಜ್ಞ°, ಜೀವ ಅಲ್ಪ ಸಾಮರ್ಥ್ಯ ಇಪ್ಪವನಾದರೆ ಭಗವಂತ° ಸರ್ವ ಸಮರ್ಥ°. ಹೀಂಗೆ ನಮ್ಮಿಂದ ಭಿನ್ನವಾಗಿಪ್ಪ ಆ ಶಕ್ತಿ ಎಷ್ಟು ಭಿನ್ನ ಹೇಳ್ವದರ ಓಂಕಾರ ಸೂಚಿಸುತ್ತು.

‘ಅವ ಪ್ರವೇಶೇ’ ಹೇಳ್ವ ಇನ್ನೊಂದು ಧಾತು. ಇಲ್ಲಿ ಅವತಿ ಹೇಳಿರೆ ‘ಪ್ರವೇಶ ಮಾಡುತ್ತ°’ ಹೇಳಿ ಅರ್ಥ. ಭಗವಂತ° ಸರ್ವಗತ°. ಹಾಂಗಾಗಿ ಅವ° ಎಲ್ಲರ ಒಳವೂ ಹೆರವೂ ಇದ್ದ°. ಇದನ್ನೇ ನಾರಯಣ ಸೂಕ್ತಲ್ಲಿ – “ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ” ಹೇಳಿದ್ದು. ‘ಅವ ವದೇ’ ಹೇಳಿ ಇನ್ನೊಂದು ಧಾತು. ಅವತಿ ಹೇಳಿರೆ ರಕ್ಷಣೆ ಮಾಡುವವ° ಹೇಳಿ ಒಂದು ಅರ್ಥ, ಸಂಹಾರ ಮಾಡುವದು ಹೇಳಿ ಇನ್ನೊಂದು ಅರ್ಥವೂ. ಹಾಂಗಾಗಿ ಓಂ ಹೇಳಿರೆ ಸರ್ವರಕ್ಷಕ°, ಸರ್ವಸಂಹಾರಕ ಶಕ್ತಿ. ಭಗವಂತ° ನಮ್ಮಲ್ಲಿಪ್ಪ ಅಜ್ಞಾನವ, ನಮ್ಮಲ್ಲಿಪ್ಪ ದುಃಖವ, ನಮ್ಮಲ್ಲಿಪ್ಪ ದೋಷವ ಸಂಹಾರ ಮಾಡುವವ – ಸರ್ವ ದೋಷ ನಾಶಕ° . ಇದು ನಾವು ಓಂಕಾರಲ್ಲಿ ‘ಸಂಹಾರಕ ಶಕ್ತಿ’ ಭಗವಂತನ ಉಪಾಸನೆ ಮಾಡುವಾಗ ತಿಳುದಿರೆಕಾದ ವಿಚಾರ. ‘ಅವ ಪ್ರವೇಶೇ’ ಹೇಳ್ವ ಇನ್ನೊಂದು ಧಾತು. ಇಲ್ಲಿ ಅವತಿ ಹೇಳಿರೆ ‘ಪ್ರವೇಶ ಮಾಡುತ್ತ°’ ಹೇಳಿ ಅರ್ಥ. ಭಗವಂತ° ಸರ್ವಗತ°. ಹಾಂಗಾಗಿ ಅವ° ಎಲ್ಲರ ಒಳವೂ ಹೆರವೂ ಇದ್ದ°. ಇದನ್ನೇ ನಾರಯಣ ಸೂಕ್ತಲ್ಲಿ – “ಅಂತರ್ ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ” ಹೇಳಿದ್ದು. ‘ಅವ ವದೇ’ ಹೇಳಿ ಇನ್ನೊಂದು ಧಾತು. ಅವತಿ ಹೇಳಿರೆ ರಕ್ಷಣೆ ಮಾಡುವವ° ಹೇಳಿ ಒಂದು ಅರ್ಥ, ಸಂಹಾರ ಮಾಡುವದು ಹೇಳಿ ಇನ್ನೊಂದು ಅರ್ಥವೂ. ಹಾಂಗಾಗಿ ಓಂ ಹೇಳಿರೆ ಸರ್ವರಕ್ಷಕ°, ಸರ್ವಸಂಹಾರಕ ಶಕ್ತಿ. ಭಗವಂತ° ನಮ್ಮಲ್ಲಿಪ್ಪ ಅಜ್ಞಾನವ, ನಮ್ಮಲ್ಲಿಪ್ಪ ದುಃಖವ, ನಮ್ಮಲ್ಲಿಪ್ಪ ದೋಷವ ಸಂಹಾರ ಮಾಡುವವ – ಸರ್ವ ದೋಷ ನಾಶಕ° . ಇದು ನಾವು ಓಂಕಾರಲ್ಲಿ ‘ಸಂಹಾರಕ ಶಕ್ತಿ’ ಭಗವಂತನ ಉಪಾಸನೆ ಮಾಡುವಾಗ ತಿಳುದಿರೆಕಾದ ವಿಚಾರ.

ಎರಡನೇ ಧಾತು “ಊಯತೇ ಇತಿ ಓಮ್”. ಇಲ್ಲಿ ಜಗತ್ತು ಆರಲ್ಲಿ ಓತವಾಗಿದ್ದೋ (ಆಶ್ರಿತವಾಗಿದ್ದೋ, ಹೆಣೆದಿದ್ದೋ) ಅವ° ಓಮ್. ಹೇದರೆ., ಇಡೀ ಜಗತ್ತು ಆರಲ್ಲಿ ಆಶ್ರಿತವಾಗಿದ್ದೋ ಅವ° ‘ಓಂ’ಕಾರ ವಾಚ್ಯ ಭಗವಂತ°. ಎಲ್ಲ ಗುಣಂಗೊ ಆರಲ್ಲಿ ಓತವಾಗಿದ್ದೋ (ಹೆಣೆದಿರುತ್ತೋ)  ಅವ° ‘ಓಮ್’. ಹೇಳಿರೆ, ಭಗವಂತ° ಸರ್ವಾಧಾರ°, ಸರ್ವಗುಣಪೂರ್ಣ°.

ಇನ್ನು ‘ಓಂಕಾರ’ ಮತ್ತೆ ‘ಪ್ರಣವ’ ಪದದ ಒಂದೊಂದು ಅಕ್ಷರ ಒಂದೊಂದು ಅಕ್ಷರದ ವಿಂಗಡುಸಿ ವಿವರಣಾರೂಪ. ಅ+ಉ+ಮ = ಓಮ್. ಸುರುವಾಣ ‘ಅ’ – ಅಧಿಕ. ಎಲ್ಲವುದಕ್ಕಿಂತ ಅಧಿಕ ಆ ಭಗವಂತ°. ‘ಪ್ರಣವ’ ಪದದ ಪ್ರ ಅಕ್ಷರ ಪ್ರಕೃಷ್ಟವಾಗಿಪ್ಪದು ಹೇಳಿ ಸೂಚಿಸುತ್ತು, ಎಲ್ಲಕ್ಕಿಂತ ಪ್ರಕೃಷ್ಟವಾದ ಅನಂತ ಶಕ್ತಿ ಆ ಭಗವಂತ°. ಓಂಕಾರದ ಎರಡನೇ ಅಕ್ಷರ ‘ಉ’. ಉ ಹೇಳಿರೆ ಉತ್ತಮವಾದ. ಜ್ಞಾನಾನಂದಂದ ತುಂಬಿ ಉನ್ನತವಾದ್ದು. ‘ಪ್ರಣವ’ದ ಎರಡನೇ ಅಕ್ಷರ ‘ಣ’ . ಣ ಹೇಳಿ ಜ್ಞಾನಾನಂದದ ಆತ್ಮಬಲ. ಹಾಂಗಾಗಿ ಭಗವಂತ° ಜ್ಞಾನಾನಂದ ಸ್ವರೂಪ° ಸರ್ವ ಸಮರ್ಥ°. ಓಂಕಾರದ ಮೂರನೇ ಅಕ್ಷರ ‘ಮ’. ‘ಮ’ ಹೇಳಿರೆ ಜ್ಞಾನಸ್ವರೂಪ. ಪ್ರಣವದ ಮೂರನೇ ಅಕ್ಷರ ‘ವ’. ‘ವ’ ಹೇಳಿರೆ ಜ್ಞಾನ. ಅದು ಸರ್ವಜ್ಞ° ಹೇಳ್ವ ಅರ್ಥವ ಕೊಡುತ್ತದು. ಹೀಂಗೆ ಓಂಕಾರದ ಒಂದು ಮುಖವ ‘ಪ್ರಣವ’ ಸೂಚಿಸುತ್ತು.

ಬನ್ನಂಜೆ ಇನ್ನೂ ವಿವರಿಸಿಗೊಂಡು – ಬೃಹದಾರಣ್ಯಕ ಉಪನಿಷತ್ತಿಲ್ಲಿ ಹೇಳಿಪ್ಪಂತೆ- “ನೇತಿ ನೇತಿ ಆತ್ಮಾ ಅಗ್ರಹ್ಯಃ ನ ಹಿ ಗ್ರಹ್ಯತೇ” – ಹೇಳಿರೆ, ಭಗವಂತನ ಮದಾಲು ತಿಳಿವದೆಂತರ ಹೇದರೆ, “ಭಗವಂತ° ಪೂರ್ಣವಾಗಿ ತಿಳಿವಲೆಡಿಗಪ್ಪ ವಸ್ತುವಲ್ಲ”!. ಅವನ ಪೂರ್ಣವಾಗಿ ತಿಳಿವದು ಅಸಾಧ್ಯ ಹೇಳಿ ತಿಳಿವದೇ ಮದಾಲು ನಾವು ಭಗವಂತನ ಬಗ್ಗೆ ತಿಳಿಯೆಕ್ಕಾದ ವಿಷಯ. ಇದನ್ನೇ ಓಂಕಾರವೂ ಹೇಳುತ್ತು. ಇಲ್ಲಿ (ಅ+ಉ+ಮ) ಅ ಹೇಳಿರೆ ಅಲ್ಲ/ಇಲ್ಲೆ. ಭಗವಂತ° ಅಲ್ಲ / ಇಲ್ಲೆ. ಹೇಳಿರೆ, ಭಗವಂತ° ಪೂರ್ಣವಾಗಿ ತಿಳಿವಲೆ ಎಡಿಗಪ್ಪ ಸಂಗತಿ ಅಲ್ಲ. ಎಂತಕೆ ಹೇಳಿರೆ ನಾವು ತಿಳುದಿಪ್ಪ  ವಸ್ತುವಿಲ್ಲಿ ಏನಿದ್ದೋ ಅದು ಅವನಲ್ಲಿಲ್ಲೆ. ನವಗೆ ತ್ರಿಗುಣಾತ್ಮಕ ಪ್ರಪಂಚದ ಪರಿಚಯ ಮಾತ್ರ ಇಪ್ಪದು. ಆದರೆ, ಭಗವಂತ° ತ್ರಿಗುಣಾತೀತ°!. ತ್ರಿಗುಣಾತ್ಮಕವಾದ ನಮ್ಮ ಮನಸ್ಸು ತ್ರಿಗುಣಾತೀತನ ಗ್ರೇಶುಲೆಡಿಯ. ಭಗವಂತನಲ್ಲಿ ಯಾವ ದೋಷವೂ ಇಲ್ಲೆ. ಅವ° ಸರ್ವಗುಣಪೂರ್ಣ°. ಹಾಂಗಾಗಿ ಭಗವಂತ ನಮ್ಮ ನಿಲುವಿಂದ ಅತೀತ°.

ಇನ್ನು ‘ಉ’. ನಮ್ಮ ಮನಸ್ಸು ಏರ್ಲೆ ಎಡಿಗಪ್ಪದಕ್ಕಿಂತಲೂ ಉನ್ನತವಾಗಿಪ್ಪದು. ನಮ್ಮ ಮನಸ್ಸು ಆ ಎತ್ತರಕ್ಕೆ ಏರ್ಲೇ ಎಂದಿಂಗೂ ಸಾಧ್ಯ ಇಲ್ಲೆ. ಅಂದರೂ ಅವ° ‘ಮ’. ‘ಮ’ ಹೇಳಿರೆ ತಿಳಿವಲೆಡಿಗಪ್ಪದು!. ಹೇಳಿರೆ ಭಗವಂತ° ಸಮುದ್ರದ ಹಾಂಗೆ. ನಾವು ಪೂರ್ಣ ಸಮುದ್ರವ ತಂದು ನಮ್ಮ ಮನೆ ಹಂಡೆಲಿ ತುಂಬುಸಲೆ ಎಡಿಯ. ಆದರೆ, ನಮ್ಮ ಹಂಡೆಲಿ ಹಿಡಿತ್ತಷ್ಟು ತುಂಬುಸುತ್ತಕ್ಕೆ ಅಡ್ಡಿ ಇಲ್ಲೆ. ಹಾಂಗೇ, ಭಗವಂತನ ನಾವು ಪೂರ್ಣವಾಗಿ ಗ್ರೇಶುಲೆ ಎಡಿಯ., ಅಂದರೂ, ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಅವನ ತಿಳ್ಕೊಂಬಲೆ ಪ್ರಯತ್ನಿಸಲಕ್ಕು. ಓಂಕಾರ ” ಭಗವಂತನ ಪೂರ್ಣ ತಿಳಿವಲೆ ಅಸಾಧ್ಯ, ನಮ್ಮ ನಮ್ಮ ಯೋಗ್ಯತಗೆ ತಕ್ಕ ಹಾಂಗೆ ಭಗವಂತನ ತಿಳಿವಲೆ ಪ್ರಯತ್ನುಸಲಕ್ಕು” ಹೇಳುವ ವೇದದ ಸಂದೇಶವ ನವಗೆ ತಿಳುಶುತ್ತು.

ಭಗವಂತನ ಯಾವ ರೀತಿ ಅನುಸಂಧಾನ ಮಾಡೆಕು ಹೇಳ್ವದರ ಓಂಕಾರ ತಿಳಿಶುತ್ತು. ಭಗವಂತ° ‘ಅ’ – ಅತೀತ°. ಯಾವುದು ಸೃಷ್ಟಿಯ ಪೂರ್ವಲ್ಲಿ ಇತ್ತೋ ಅದು ಅತೀತ. ನಾವು ಉತ್ಪನ್ನ ಆದ ಮತ್ತೆ ಇಪ್ಪ ಭಗವಂತ° – ‘ಉ’, ಎಲ್ಲವೂ ನಾಶವಾದ ಮತ್ತೆ ಇಪ್ಪದು ಭಗವಂತ° ‘ಮ’. ತ್ರಿಕಾಲಲ್ಲಿಯೂ ಏಕರೂಪನಾಗಿಪ್ಪ ಭಗವಂತ° ‘ಓಂ’.  ಭಗವಂತ° ‘ಅ’  ಹೇಳಿರೆ ಭೂಃ (ಭೂಮಿ), ಅವ° ‘ಉ’ – ಭೂಮಿಯ ಉಪರಿಲಿಪ್ಪ ಅಂತರಿಕ್ಷ (ಭುವಃ), ಅವ° ‘ಮ’ – ಜ್ಞಾನಪ್ರದವಾದ ಸ್ವರ್ಗ (ಸ್ವಃ). ಹೀಂಗೆ ಮೂರು ಲೋಕವ ನಿಯಮಿಸುವ ಶಕ್ತಿ ಆ ಭಗವಂತ° ‘ಓಂ’. ನಮ್ಮ ಮೂರು ಅವಸ್ಥೆಗೊ ಆಗಿಪ್ಪ ‘ಅ’ – ಎಚ್ಚರ, ‘ಉ’ – ಕನಸು, ‘ಮ’ – ಒರಕ್ಕು; ಈ ಮೂರರ ನಿಯಂತ್ರುಸುವ ಅನಂತ ಶಕ್ತಿ ಭಗವಂತ° – ‘ಓಂ’.

ಹೀಂಗೆ ಸಮಸ್ತ ವೈದಿಕ ವಾಙ್ಮಯ ಯಾವ ಗುಣವ ಭಗವಂತನಲ್ಲಿ ಉಪಾಸನೆ ಮಾಡೆಕು ಹೇಳಿ ಹೇಳುತ್ತೋ, ಸರ್ವನಾವ ವಾಚ್ಯನಾದ ಭಗವಂತನಲ್ಲಿ ಸರ್ವನಾಮಂಗೊ ಯಾವ ಗುಣಂಗಳ ಹೇಳುತ್ತೋ , ಅವೆಲ್ಲವ ಸಂಗ್ರಹ ಮಾಡಿ ಭಟ್ಟಿ ಇಳಿಶಿ ಸಾರಯುಕ್ತವಾಗಿ ಹೇಳುವಂತಹ ಬೀಜಾಕ್ಷರ – ‘ಓಂ’ಕಾರ. ಇದು ಭಗವಂತನ ಸ್ತ್ರೋತ್ರಂಗಳಲ್ಲೇ ಅತ್ಯಂತ ಶ್ರೇಷ್ಠವಾದ ಸ್ತುತಿ. ಹಾಂಗಾಗಿ ‘ಓಂ’ ಹೇಳಿ ಆರಿಂಗೂ ಹೆಸರು ಮಡುಗುತ್ತವಿಲ್ಲೆ!

ಹೀಂಗೆ, ಅ+ಉ+ಮ = ಓಮ್. ಅಕಾರ ಉಕಾರ ಮಕಾರಂಗಳ ಸಂಗಮವೇ ‘ಓಂ’ ಕಾರ ಹೇಳಿ ತಿಳ್ಕೊಂಡತ್ತು. ‘ಅ’ಕಾರ ಶಬ್ದವು ಗಂಟಲಿಂದ ಉಗಮ. ಬಾಯಿ ಮತ್ತು ಗಂಟಲಿನ ಮಧ್ಯಂದ ‘ಉ’. ಬಾಯಿ ಮುಚ್ಚಿ ಹೊರಬಪ್ಪೋದೇ ‘ಮ’ಓಂಕಾರದ ಹಿಂದಿಪ್ಪ ಎಲ್ಲಾ ಅರ್ಥಾನುಸಂಧಾನದೊಟ್ಟಿಂಗೆ ಜಪ ಮಾಡಿದರೆ ಅದು ಅತ್ಯಂತ ಪರಿಣಾಮಕಾರಿ. ಸಾಮಾನ್ಯವಾಗಿ ಸನ್ಯಾಸಿಗೊ ಓಂಕಾರ ಜಪವ ಮಾಡುತ್ತವು. ಗ್ರಹಸ್ಥನಾದವ ನಿರಂತರ ಓಂಕಾರ ಜಪ ಮಾಡುವದು ಅಷ್ಟು ಸೂಕ್ತವಲ್ಲ. ಗರಿಷ್ಠ ಹತ್ತು ಸರ್ತಿ ಮಾಡ್ಳಕ್ಕು. ಸಂಸಾರ ಜೀವನ ಮಾಡುವ ಹೆಮ್ಮಕ್ಕೊ ಓಂಕಾರ ಜಪಮಾಡದ್ದಿಪ್ಪದು ಒಳ್ಳೆದು. ಎಂತಕೆ ಹೇಳಿರೆ ಓಂಕಾರವ ಪೂರ್ಣವಾಗಿ ತೊಡಗಿಸಿಗೊಂಡು ಅರ್ಥಾನುಸಂಧಾನಂದ ಜಪ ಮಾಡುವುದರಿಂದ ಅದು ಮನಸ್ಸಿನ ಮೇಲೆ ಮಹತ್ತರ ಪರಿಣಾಮವ ಬೀರುತ್ತು. ಇದಕ್ಕೆ ಸ್ತ್ರೀಯರ ಶರೀರ ನಿರ್ಮಾಣ ವ್ಯವಸ್ಥೆಯೇ ಕಾರಣ. ಓಂಕಾರವ ಜಪುಸಲೆ ದೀರ್ಘವಾದ, ಕ್ರಮವಾದ ನಿಧಾನವಾದ ವಿಧಲ್ಲಿ ಶ್ವಾಸವ ಹೆರ ಬಿಡೆಕ್ಕಾವ್ತು. ಹಾಂಗೆ ‘ಓಮ್’ ನಾಭಿಂದ ಉಚ್ಚರುಸುವಾಗ ಶರೀರದ ಸುತ್ತೂ ಹೆಚ್ಚಿನ ಸ್ಥಾಯಿಲಿ ಶಕ್ತಿ ತರಂಗಂಗೊ ವ್ಯಕ್ತವಾವ್ತು. ಈ ಶಬ್ಧ ತರಂಗಂಗೊ ಉತ್ಪತ್ತಿಯಪ್ಪ ಮಧ್ಯ ಭಾಗಲ್ಲಿ ಗರ್ಭಾಶಯ ಇಪ್ಪ ಕಾರಣ ಈ ಶಬ್ಧ ತರಂಗಂಗೊ ಗರ್ಭಾಶಯಕ್ಕೆ ವಿರುದ್ಧವಾಗಿ ಪ್ರಭಾವಿತ ಆವ್ತು ಮತ್ತು ಮುಚ್ಚಿ ಹೋಪ ಅಪಾಯವೂ ಇರ್ತು. ನಾಲ್ಕಾರು ಬಾರಿ ಹಾಂಗೆ ಮಾಡಿದ್ದರಿಂದ ದೊಡ್ಡ ತೊಂದರೆಗೊ ಇಲ್ಲದ್ದಿಪ್ಪದು ಅಪ್ಪಾಯ್ಕು. ಆದರೆ, ಬಹುಬಾರಿ ಈ ರೀತಿ ಮಾಡುವದರಿಂದ ಮುಂದೆ ತೊಂದರೆಗೊ ಅಪ್ಪ ಸಾಧ್ಯತೆ ಇದ್ದು. ಮಾಂತ್ರ ಅಲ್ಲ , ಕೂಸುಗೊ / ಹೆಮ್ಮಕ್ಕೊ ಬಹಳ ಸಮಯ ಶ್ವಾಸವ ಕ್ರಮಬದ್ಧವಾಗಿ ಓಂಕಾರವ ಜಪಿಸಲೆ ಅವರ ಸ್ವರ ಯಂತ್ರಾಂಗ ಅನುಕೂಲವಾಗಿ ಇರ್ತಿಲ್ಲೆಡ. ಹಾಂಗಾಗಿ ಸ್ತ್ರೀಯರು ‘ಓಂ’ಕಾರವ ಜಪಿಸಲಾಗ ಹೇಳಿ ಹೇಳುವದು. ಸುದೀರ್ಘವಲ್ಲದ ಅಲ್ಪ ಸಮಯದ ಓಂಕಾರ ಪಠಣಕ್ಕೆ ಸ್ತ್ರೀಯರಿಂಗೆ ತೊಂದರೆ ಇಲ್ಲೆ. ಮಾನಸಿಕ ಜಪಕ್ಕೆ ಅಡ್ಡಿಯೂ ಇಲ್ಲೆ. ಹಾಂಗೇಳಿ ಮನಸ್ಸಿಂಗೆ ಬಂದ ಧಾಟಿಲಿ ಉಚ್ಚರಿಸಿದರೆ ಅಸಂಬದ್ಧವೇ ಅಕ್ಕಷ್ಟೆ. ಓಂಕಾರ ಉಪಾಸನೆ ಒಂದು ರೀತಿಯ ಧ್ಯಾನ. ಇದರಿಂದ ಮನಸ್ಸು ಮಗ್ನವಾಗಿ ಸಂಸಾರಿಕ ಜೀವನಲ್ಲಿ ವೈರಾಗ್ಯ ಬಪ್ಪ ಅಪಾಯ ಇದ್ದು. ಆದರೆ ಸನ್ಯಾಸಿಗೆ ಈ ರೀತಿಯ ಯಾವ ಸಮಸ್ಯೆಗೊ ಇಲ್ಲೆ. ಅವ (ಸನ್ಯಾಸಿ) ತನ್ನ ದೇಹ ತಡಕ್ಕೊಂಬಷ್ಟು (ಗರಿಷ್ಠ 12000) ಸರ್ತಿ ಓಂಕಾರ ಜಪ ಮಾಡ್ಳಕ್ಕು. ಹಾಂಗೇಳಿ ಜಪ / ಉಪಾಸನೆ/ ಧ್ಯಾನ ಇಷ್ಟೇ ಮಾಡೇಕ್ಕಾದ್ದು ಅಥವಾ ಮಾಡ್ಳಕ್ಕು ಹೇಳಿ ಸೀಮಿತ ಪರಿಧಿಯೋ , ನಿಷೇಧವೋ ಇಲ್ಲೆ. ಅದು ನಮ್ಮ ಗುರಿಯ ಹೊಂದಿಗೊಂಡು, ಸಾಮರ್ಥ್ಯವ ಹೊಂದಿಗೊಂಡು, ಜವಾಬ್ದಾರಿಯ ಹೊಂದಿಗೊಂಡು ಮಾಡುವಂತಾದ್ಧು.

ಶ್ಲೋಕ

ಪುಣ್ಯೋ ಗಂಧಃ ಪೃಥಿವ್ಯಾಂ ಚ ತೇಜಶ್ಚಾಮಿ ವಿಭಾವಸೌ ।
ಜೀವನಂ ಸರ್ವಭೂತೇಷು ತಪಶ್ಚಾಮಿ ತಪಸ್ವಿಷು ॥೦೯॥

ಪದವಿಭಾಗ

ಪುಣ್ಯಃ ಗಂಧಃ ಪೃಥಿವ್ಯಾಮ್ ಚ ತೇಜಃ ಚ ಅಸ್ಮಿ ವಿಭಾವಸೌ । ಜೀವನಮ್ ಸರ್ವ-ಭೂತೇಷು ತಪಃ ಚ ಅಸ್ಮಿ ತಪಸ್ವಿಷು ॥

ಅನ್ವಯ

ಚ ಪೃಥಿವ್ಯಾಂ ಪುಣ್ಯಃ ಗಂಧಃ , ವಿಭಾವಸೌ ತೇಜಃ ಚ ಅಸ್ಮಿ । ಸರ್ವ-ಭೂತೇಷು  ಜೀವನಮ್, ತಪಸ್ವಿಷು ಚ ತಪಃ ಅಸ್ಮಿ ।

ಪ್ರತಿಪದಾರ್ಥ

ಚ ಪೃಥಿವ್ಯಾಮ್ – ಭೂಮಿಲ್ಲಿಯೂ ಕೂಡ, ಪುಣ್ಯಃ – ಮೂಲ, ಗಂಧಃ – ಸುವಾಸನೆಯು, ವಿಭಾವಸೌ – ಅಗ್ನಿಲಿ, ತೇಜಃ ಚ – ಶಾಖವು ಕೂಡ, ಅಸ್ಮಿ – ಆಗಿದ್ದೆ, ಸರ್ವ-ಭೂತೇಷು – ಸಮಸ್ತ ಜೀವಿಗಳಲ್ಲಿ, ಜೀವನಮ್ – ಜೀವನವು, ತಪಸ್ವಿಷು – ತಪಸ್ವಿಗಳಲ್ಲಿ, ತಪಃ ಚ – ತಪಸ್ಸು ಕೂಡ, ಅಸ್ಮಿ – ಆನಾಗಿದ್ದೆ.

ಅನ್ವಯಾರ್ಥ

ಆನು ಭೂಮಿಲಿ ಮೂಲ ಪರಿಮಳ. ಅಗ್ನಿಲಿ ತೇಜಸ್ಸು (ಶಾಖ) ಕೂಡ ಆನಾಗಿದ್ದೆ, ಎಲ್ಲ ಜೀವಿಗಳಲ್ಲಿ ಆನೇ ಜೀವ, ಎಲ್ಲ ತಪಸ್ವಿಗಳ ತಪಸ್ಸೂ ಕೂಡ ಆನೇ ಆಗಿದ್ದೆ.

ತಾತ್ಪರ್ಯ / ವಿವರಣೆ

ಪುಣ್ಯ ಹೇಳಿರೆ ಕೊಳೆಯದ್ದೆ ಇಪ್ಪದು. ಪುಣ್ಯವು ಮೂಲವಾಗಿಪ್ಪದು. ಐಹಿಕ ಜಗತ್ತಿಲ್ಲಿ ಪ್ರತಿಯೊಂದು ವಸ್ತುವಿಂಗೂ ಒಂದೊಂದು ವಾಸನೆ (ಕಂಪು / ಸುವಾಸನೆ) ಇರುತ್ತು. ಒಂದು ಹೂವಿಲ್ಲಿ ಅಥವಾ ಭೂಮಿಲಿ, ನೀರಿಲ್ಲಿ, ಅಗ್ನಿಲಿ, ವಾಯು ಇತ್ಯಾದಿ ಎಲ್ಲದರಲ್ಲಿಯೂ ಇಪ್ಪ ಆ ಮೂಲ ಗಂಧ (ಮೂಲವಾಸನೆ / ಸುಗಂಧ) ಭಗವಂತ°.  ಎಲ್ಲವನ್ನೂ ವ್ಯಾಪಿಸಿಪ್ಪ ಮೂಲ ಸುಗಂಧ ಭಗವಂತ°. ಹಾಂಗೆಯೇ ಎಲ್ಲ ವಸ್ತುಗಳಲ್ಲಿಯೂ ಇಪ್ಪ ಮೂಲ ರುಚಿ ಆ ಭಗವಂತ°. ವಿಭಾವಸು ಹೇಳಿರೆ ಅಗ್ನಿ. ಅಗ್ನಿ ಇಲ್ಲದ್ದೆ ನಾವು ಎಂತದನ್ನೂ ಮಾಡ್ಳೆ ಎಡಿಯ. ಅಡುಗೆಂದ ತೊಡಗಿ ಕಾರ್ಖಾನೆವರೇಂಗೂ ಅಗ್ನಿ ಬೇಕು. ಆ ಅಗ್ನಿ – ಭಗವಂತ°. ಆ ಅಗ್ನಿಲಿಪ್ಪ ತೇಜಸ್ಸು ಭಗವಂತ°.  ಎಲ್ಲ ಜೀವಿಗಳ ಪಚನ ಕ್ರಿಯೆಗೆ ಶಾಖ ಅಗತ್ಯ. ಇಲ್ಲದ್ರೆ ಅಜೀರ್ಣ ಅಕ್ಕು. ಹೀಂಗೆ ಜೀವಿಯ ಜೀವದೊಳ ಇಪ್ಪ ಶಾಖವೂ ಭಗವಂತ°. ಜೀವಿಗೊ ಆಚರುಸುವ ತಪಸ್ಸಿನ ತಪಸ್ಸೂ ಕೂಡ ಆ ಭಗವಂತನೇ. ಹಾಂಗಾಗಿ ಕೃಷ್ಣಪ್ರಜ್ಞೆಯು ಪ್ರತಿಯೊಂದು ರಂಗಲ್ಲಿಯೂ ಕ್ರಿಯಾಶಾಲಿಯಾಗಿದ್ದು. ಕಣ್ಣಿಂಗೆ ಕಾಣುತ್ತಿಲ್ಲೆ.

ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿಪ್ಪದರ ಗಮನಿಸಿದರೆಯಾವ ಗಂಧ ನಮ್ಮ ಮೂಗಿಂಗೆ ಆಹ್ಲಾದವ ಕೊಡುತ್ತೋ ಅದು ಪುಣ್ಯಗಂಧ. ಇಲ್ಲಿ ಪುಣ್ಯ ಹೇಳಿರೆ ಪವಿತ್ರ, ಮೂಲ, ಸುಂದರ ಹೇಳಿ ಅರ್ಥಂಗೊ. ಈ ಭೂಮಿಲಿ ಹುಟ್ಟುವ ಪ್ರತಿಯೊಂದು ವಸ್ತುವಿಂಗೂ ಸುಗಂಧವ ಕೊಡುವದು ‘ಪುಣ್ಯನಾಮಕ°’ ಆ ಭಗವಂತ°. ಅವ° ತನ್ನ ವಿಶೇಷ ರೂಪಲ್ಲಿ ‘ಗಂಧ’ ನಾಮಕನಾಗಿ ಆ ವಸ್ತುಗಳಲ್ಲಿ ಸೇರಿಪ್ಪದರಿಂದ ಆ ವಸ್ತುಗೊಕ್ಕೆ ವಿಶೇಷ ಗುಣ ಬಂತು. ಈ ಭೂಮಿಲಿ ಹುಟ್ಟುವ ಗಿಡಬಳ್ಳಿಗಳಲ್ಲಿ, ವನಸ್ಪತಿಗಳಲ್ಲಿ, ಹೂಗಳಲ್ಲಿ, ಹಣ್ಣುಗಳಲ್ಲಿ ಹೀಂಗೆ ಪ್ರತಿಯೊಂದರಲ್ಲಿ ಕಂಪಿನ ಸೊಂಪಿನ ನೀಡುವವ° ಆ ಭಗವಂತನೇ. ಭೂಮಿಯ ಅಭಿಮಾನಿ ದೇವತೆ – ‘ಪೃಥ್ವಿ’ ಒಳಇದ್ದು, ಪೃಥ್ವಿಲಿ ಗಂಧವಾಚ್ಯನಾಗಿ ಭಗವಂತ° ಇದ್ದ°. ಹೀಂಗೆ ಸೃಷ್ಟಿಯ ಸಕಲ ವಸ್ತುಗಳಲ್ಲಿಯೂ ಸುಗಂಧವ ನೀಡಿ ಸೌಂದರ್ಯವ ತುಂಬುಸುವದು ಭಗವಂತ°. ಈ ವಿಶಿಷ್ಟ ಗಂಧದ ಪ್ರಪಂಚವನ್ನೇ ನಮ್ಮ ಮೂಗನ ಮುಂದೆ ಮಡುಗಿದ° ಭಗವಂತ°.

ಒಂದೇ ಮಣ್ಣಿಲ್ಲಿ ಬೆಳವ ಬೇರೆ ಬೇರೆ ಬಗೆಯ ಹೂಗಳಲ್ಲಿ, ಗಿಡಬಳ್ಳಿಗಳಲ್ಲಿ, ಒಂದೊಂದು ವಿಶಿಷ್ಟಗುಣವ ಭಗವಂತ° ತುಂಬಿದ್ದ°. ಹೂವಿಲ್ಲಿಯೂ ಅನೇಕ ಬಗೆ ಹೂಗುಗೊ ಇದ್ದು. ಒಂದೊಂದು ಹೂಗಿಂಗೆ ಒಂದೊಂದು ಪರಿಮಳ. ಆದರೆ ಇದೇ ಮಣ್ಣಿಲ್ಲಿ ಆದ ಆ ಗಿಡಬಳ್ಳಿಗಳ ಎಲ್ಲ ಬಗೆ ಹೂಗಳನ್ನೂ ಭಗವಂತನ ಪೂಜಗೆ ಅರ್ಪುಸುತ್ತಿಲ್ಲೆ. ಕೆಲವು ಹೂವುಗಳಲ್ಲಿ ನವಗೆ ಗ್ರಹಿಸುಲೆ ಅಸಾಧ್ಯವಾದ ವಾಸನೆಯೂ ಇರ್ತು. ಹಾಂಗಾಗಿ ಇಂತಹ ಹೂಗಳ ದೇವರ ಪೂಜಗೆ ಉಪಯೋಗುಸಲೆ ಇಲ್ಲೆ. ಇದಕ್ಕೆ ಕಾರಣ – ಪ್ರತಿಯೊಂದು ಪೂಜೆಯ ಉದ್ದೇಶ ಆನಂದಮಯವಾಗಿರೆಕು, ಆಹ್ಲಾದಕರವಾಗಿರೆಕು ಎಂಬ ನಮ್ಮ ಅನುಸಂಧಾನ. ಪೂಜೆ ಮಾಡುವಾಗ ಆ ಹೂವಿನ ಆಹ್ಲಾದಕರ ಕಂಪು ನಮ್ಮ ಮೂಗಿಂಗೆ ಬಡುದಪ್ಪಗ ನವಗೆ ಪುಣ್ಯ ಅಥವಾ ಗಂಧ ನಾಮಕ ಭಗವಂತನ ಅರಿವು ಮೂಡೆಕು ಹೇಳಿ ಆವ್ತು.

ನೀರು, ಸೂರ್ಯ, ಚಂದ್ರ, ಆಕಾಶ ಮತ್ತೆ ಭೂಮಿಯ ಬಗ್ಗೆ ಹೇಳಿದ ಭಗವಂತ° ಮತ್ತೆ ಮುಂದುವರುಸಿ ಭೂಮಿಲಿ ಭಗವಂತನ ಆರಾಧನಗೆ ಮುಖ್ಯ ಪ್ರತಿಷ್ಠಾನವಾದ ಅಗ್ನಿಲಿ (ವಿಭಾವಸು) ತನ್ನ ವಿಭೂತಿ ಜ್ಞಾನವ ಹೇಳುತ್ತ°. ಅಗ್ನಿಯ ಅಭಿಮಾನಿ ದೇವತೆ ವಿಭಾವಸು. ಈ ವಿಭಾವಸು ಅಷ್ಟವಸುಗಳಲ್ಲಿ (ದ್ರೋಣ, ಪ್ರಾಣ, ಧ್ರುವ, ಅರ್ಕ, ಅಗ್ನಿ(ವಿಭಾವಸು), ದೋಷ, ವಸ್ತು, ದ್ಯುವಸು) ಐದನೇಯವ°. ಇವಂಗೆ ವೈಶ್ವಾನರ, ವಹ್ನಿ, ಜಾತವೇದ, ಹುತಾಶನ, ಪಾವಕ, ಅನಲ, ದಹನ ಇತ್ಯಾದಿ ಹಲವು ಹೆಸರುಗೊ. ನವಗೆ ಭೂಮಿಲಿ ಅಗ್ನಿ ಬಹಳ ಮುಖ್ಯವಾದ ಭಗವಂತನ ಪ್ರತೀಕ. ವೇದ ಪ್ರಾರಂಭ ಅಪ್ಪದೂ ಕೂಡ “ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” ಹೇಳ್ವ ಅಗ್ನಿನಾಮಂದ. ಭೂಮಿಲಿ ಭಗವಂತನ ಪೂಜಿಸಲೆ ಅಗ್ನಿಗಿಂತ ಉತ್ತಮ ಪ್ರತೀಕ ಇನ್ನೊಂದಿಲ್ಲೆ. ಅಗ್ನಿ ಬೆಣಚ್ಚಿಯ ರೂಪ. ಅಗ್ನಿ ಪವಿತ್ರ. ಕೊಟ್ಟದ್ದರ ಸ್ವೀಕರುಸುವ ಭಗವಂತನ ಏಕೈಕ ಪ್ರತೀಕ ಅಗ್ನಿ. ಭಗವಂತ ಹೇಳುತ್ತ° – “ತೇಜಶ್ಚಾಸ್ಮಿ ವಿಭಾವಸೌ”. ಇಂತಹ ಅಗ್ನಿಯೊಳದಿಕೆ ದಾಹಕ, ಪಾಚಕ, ಪ್ರಕಾಶಕ ಶಕ್ತಿಯಾಗಿ, ತೇಜಸ್ಸಾಗಿ ಆನು ಇದ್ದೆ. ವೈಶ್ವಾನರನಾಗಿ ನಮ್ಮ ಪಚನ ಕ್ರಿಯೆಯ ನಿಯಂತ್ರುಸುವವನೂ ಅವನೇ.

ಭಗವಂತ° ಮತ್ತೂ ಮುಂದುವರುಸಿ ಹೇಳುತ್ತ° – “ಜೀವನಂ ಸರ್ವ-ಭೂತೇಷು”. ವಾಯುವಿಲ್ಲಿ ತುಂಬಿ ಪ್ರತಿಯೊಂದು ಜೀವಜಾತದ ಉಸಿರಾಗಿ, ಜೀವಕ್ಕೆ ಉಸುರಿನ ಶಕ್ತಿ ಕೊಟ್ಟು ನಿಂದಿಪ್ಪದು ಆನು. ಜೀವನಪ್ರದ ಅಭಿಮಾನಿ ದೇವತೆ -‘ಪ್ರಾಣದೇವರು’. ನಾವು ಇತರ ಇಂದ್ರಿಯಂಗಳ ಕೆಲಸ ಮಾಡದ್ದೆ ಬದುಕ್ಕಲೆಡಿಗು. ಆದರೆ, ಪ್ರಾಣಶಕ್ತಿ (ಉಸಿರಾಟ) ಕೆಲಸ ಮಾಡದ್ದೆ ಬದುಕ್ಕಲೆ ಎಡಿಯ. ನಾವು ಒರಗಿಪ್ಪಗ ಪ್ರಾಣದೇವತೆ ಒರಗಿರೆ ನವಗೆ ಮತ್ತೆ ಏಳ್ಳೆ ಎಡಿಯ!. ಹಾಂಗಾಗಿ ಭಗವಂತ° ಅಹೋರಾತ್ರಿ ಜೀವನಪ್ರದವಾದ ಪ್ರಾಣಶಕ್ತಿ ಒಳ ಪ್ರಾಣನಾಗಿ ನಿಂದು ನಮ್ಮ ಬದುಕುಸುತ್ತ°.

ಪಂಚಭೂತಂಗಳ ಬಗ್ಗೆ ವಿವರಿಸಿದ ಭಗವಂತ° ಮುಂದೆ ಮಾನಸ ಪ್ರಪಂಚದ ಬಗ್ಗೆ ಹೇಳುತ್ತ. ಮನೋಮಯ ಪ್ರಪಂಚಲ್ಲಿ ಬದುಕ್ಕುವವು ತಪಸ್ವಿಗೊ. ಮನಸ್ಸಿನ ಆಳವಾದ ಚಿಂತನಗೆ ತಪಸ್ಸು ಹೇಳಿ ಹೇಳುವದು. ಇದರ ಅಭಿಮಾನಿ ದೇವತೆ ಶಿವ°. ನಾವು ಮಾತಾಡುವದು ನಮ್ಮ ಮನಸ್ಸಿಂಗೆ ಹೊಳವ ವಿಚಾರಂಗಳ. ನಮ್ಮ ಮನಸ್ಸಿಂಗೆ ಅಂತಹ ಅದ್ಭುತ ಆಲೋಚನಾಶಕ್ತಿ ಕೊಟ್ಟು, ಮನೋಮಯಕೋಶಲ್ಲಿ ನಿಂದು ನವಗೆ ಆನಂದದ ಅನುಭವವ ಕೊಡುವವ° ಆ ಭಗವಂತ°. ಹೀಂಗೆ ಪಂಚಭೂತಂಗಳಲ್ಲಿ, ಅನ್ನಮಯಕೋಶಂದ ಹಿಡುದು ಆನಂದಮಯಕೋಶದ ವರೇಂಗೆ ಭಗವಂತ° ವಿಭೂತಿರೂಪಲ್ಲಿ ನಿಂದುಗೊಂಡಿದ್ದ°. ಹೀಂಗೆ ಭಗವಂತ° ಪಿಂಡಾಂಡ-ಬ್ರಹ್ಮಾಂಡಲ್ಲಿ ನಿಂದು ವಿಭೂತಿಯಾಗಿ ಬೇರೆ ಬೇರೆ ವಸ್ತುಗಳಲ್ಲಿ ವಿಶಿಷ್ಟ ಶಕ್ತಿಯ ತುಂಬುತ್ತ°.

ಶ್ಲೋಕ

ಬೀಜಂ ಮಾಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ ।
ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ॥೧೦॥

ಪದವಿಭಾಗ

ಬೀಜಮ್ ಮಾಮ್ ಸರ್ವ-ಭೂತಾನಾಮ್ ವಿದ್ಧಿ ಪಾರ್ಥ ಸನಾತನಮ್ । ಬುದ್ಧಿಃ ಬುದ್ಧಿಮತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ ॥

ಅನ್ವಯ

ಹೇ ಪಾರ್ಥ!, ಮಾಂ ಸರ್ವ-ಭೂತಾನಾಂ ಸನಾತನಂ ಬೀಜಂ ವಿದ್ಧಿ । ಅಹಮ್ ಬುದ್ಧಿಮತಾಂ ಬುದ್ಧಿಃ , ತೇಜಸ್ವಿನಾಂ ತೇಜಃ ಅಸ್ಮಿ ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪೃಥೆಯ ಮಗನೇ!, ಮಾಮ್ – ಎನ್ನ, ಸರ್ವ-ಭೂತಾನಾಮ್ – ಎಲ್ಲ ಜೀವಿಗಳ, ಸನಾತನಮ್ – ಮೂಲವಾದ / ಶಾಶ್ವತವಾದ, ಬೀಜಮ್ – ಬೀಜವು, ವಿದ್ಧಿ – ಹೇಳಿ ತಿಳ್ಕೊಂಬಲೆ ಪ್ರಯತ್ನಿಸು, ಅಹಮ್ – ಆನು, ಬುದ್ಧಿಮತಾಮ್ – ಬುದ್ಧಿವಂತರ, ಬುದ್ಧಿಃ – ಬುದ್ಧಿಯು, ತೇಜಸ್ವಿನಾಮ್ – ಬಲಿಷ್ಠರ, ತೇಜಃ – ಶೌರ್ಯಯೂ (ಶಕ್ತಿಯೂ), ಅಸ್ಮಿ – ಆಗಿದ್ದೆ.

ಅನ್ವಯಾರ್ಥ

ಏ ಪಾರ್ಥ!, ಆನು ಎಲ್ಲ ಅಸ್ತಿತ್ವಂಗಳ (ಸರ್ವಭೂತಂಗಳ) ಮೂಲ ಬೀಜ. ಬುದ್ಧಿವಂತರ ಬುದ್ಧಿಶಕ್ತಿ ಮತ್ತೆ ಎಲ್ಲ ಶಕ್ತಿಶಾಲಿಗಳ ಶಕಿಯೂ ಆಗಿದ್ದೆ ಹೇಳ್ವದರ ನೀನು ತಿಳಿಕ್ಕೊ.

ತಾತ್ಪರ್ಯ / ವಿವರಣೆ

ಭಗವಂತ° ಎಲ್ಲ ವಸ್ತುಗಳ ಬೀಜ. ಚರಾಚರ ಜೀವಿಗೊ ಹಲವು ಇದ್ದು. ಪಕ್ಷಿಗೊ, ಪ್ರಾಣಿಗೊ, ಮನುಷ್ಯರು ಹೀಂಗೆ ಚಲಿಸುವ ಪ್ರಾಣಿಗೊ, ಸಸ್ತ್ಯಂಗೊ ಮರಂಗೊ ಚಲುಸದ್ದ (ಅಚರ) ಜೀವಂಗೊ. ಪ್ರತಿಯೊಂದು ಜೀವಿಯೂ 84,00,000 ಜೀವವರ್ಗಂಗಳ ವ್ಯಾಪ್ತಿಲಿ ಸೇರಿಪ್ಪದು. ಇವುಗಳಲ್ಲಿ ಕೆಲವು ಚಲಿಸುತ್ತು, ಕೆಲವು ಚಲಿಸುತ್ತಿಲ್ಲೆ. ಅಂದರೆ, ಇವೆಲ್ಲವುದರ ಜೀವದ ಬೀಜ ಭಗವಂತನೇ. ವೇದ ಸಾಹಿತ್ಯಲ್ಲಿ ಹೇಳಿಪ್ಪಂತೆ ಬ್ರಹ್ಮನ್ ಅಥವಾ ಪರಮ ಪರಾತ್ಪರ ಸತ್ಯಂದಲೇ ಪ್ರತಿಯೊಂದೂ ಮೂಡುತ್ತದು. ಕೃಷ್ಣ ಪರಬ್ರಹ್ಮ, ಪರಮಾತ್ಮ. ಬ್ರಹ್ಮನ್ ನಿರಾಕಾರವಾದ್ದು, ಪರಬ್ರಹ್ಮ° ಸಾಕಾರವಾಗಿಪ್ಪದು. ನಿರಾಕಾರ ಬ್ರಹ್ಮನ್ ಸಾಕಾರ ರೂಪಲ್ಲಿ ನೆಲೆಸಿದ್ದ°. ಹಾಂಗಾಗಿ ಭಗವಂತ° ಪ್ರತಿಯೊಂದು ವಸ್ತುವಿಲ್ಲಿಯೂ ಮೂಲ. ಅವನೇ ಬೇರು. ಮರದ ಬೇರು ಇಡೀ ಮರವ ಪೋಷಿಸುವಂತೆ ಭಗವಂತ° ಎಲ್ಲ ವಸ್ತುಗಳ ತಾಯಿಬೇರು ಆಗಿದ್ದು ಈ ಐಹಿಕ ಅಭಿವ್ಯಕ್ತಿಲಿ ಪ್ರತಿಯೊಂದರನ್ನೂ ಪೋಷಿಸುತ್ತ°. ಹಾಂಗೇ, ಬುದ್ಧಿಶಕ್ತಿ ಇಲ್ಲದ್ದೆ ಮನುಷ್ಯ° ಎಂತರನ್ನೂ ಮಾಡ್ಳೆ ಎಡಿಯ. ಬುದ್ಧಿಶಕ್ತಿಯ ಮೂಲ – ಆ ಭಗವಂತ°.  ಶಕ್ತಿಯ / ಶೌರ್ಯದ ಮೂಲ – ಆ ಭಗವಂತ°.

ಬನ್ನಂಜೆ ಹೇಳ್ತವು – ಭಗವಂತ° ಎಲ್ಲ ಜೀವಿಗಳ ಬೀಜನಾಮಕನಾಗಿ, ಬುದ್ಧಿನಾಮಕನಾಗಿ, ತೇಜಸ್ ನಾಮಕನಾಗಿ ಸಮಸ್ತ ಜೀವಿಗಳಲ್ಲಿ ಇದ್ದ°. “ಬೀಜಮ್ ಮಾಮ್ ಸರ್ವಭೂತಾನಾಮ್” – ಎಲ್ಲ ಜೀವಿಗಳ ಬೀಜ ಆನು. ಬೀಜ ಹೇಳಿಯಪ್ಪಗ ನವಗೆ ಮನಸ್ಸಿಂಗೆ ಕಾಂಬದು ಗಿಡಬಳ್ಳಿಗಳ ಬೀಜ. ಈ ಬೀಜವ ಬಿತ್ತಿಯಪ್ಪಗ ಅದು ಬಳ್ಳಿ ಗಿಡ ಮರವಾಗಿ ಬೆಳೆತ್ತದು ನಮ್ಮ ಕಣ್ಣ ಎದುರೆ ಕಾಣುತ್ತು. ಬೀಜ ಹೇಳುವ ಪದ ‘ಅಂಜು’ ಧಾತುವಿಂದ ಬಂದದು. ಇಲ್ಲಿ ‘ವಿ’ ಉಪಸರ್ಗ. ಯಾವುದು ವ್ಯಂಜನ ಅದು ಅಭಿವ್ಯಂಜನ. ಹೇಳಿರೆ ಆರಿಂದ ಅಭಿವ್ಯಕ್ತವಾತೋ ಅದು ಬೀಜ. ಯಾವು ಮೂಲವಸ್ತು ಇದ್ದೂ ಕಾಣುತ್ತಿಲ್ಲೆಯೋ ಅದಕ್ಕೆ ಕಾಂಬಹಾಂಗಿಪ್ಪ ಆಕಾರವ ಕೊಟ್ಟವ ಆ ಭಗವಂತ°. ಸೂಕ್ಷ್ಮರೂಪಲ್ಲಿ ತುಂಬಿದ್ದ ಈ ಅವ್ಯಕ್ತ ಪ್ರಪಂಚಕ್ಕೆ ವ್ಯಕ್ತರೂಪವ ಕೊಟ್ಟವ- ಭಗವಂತ°. ಹಾಂಗಾಗಿ ಇಡೀ ಪ್ರಪಂಚಲ್ಲಿಪ್ಪ ಜೀವಜಾತಕ್ಕೆ ಅಭಿವ್ಯಕ್ತವ ಕೊಟ್ಟವ ಆರೋ ಅವ° ಸರ್ವಭೂತಂಗಳ ಬೀಜ.  ಈ ಜಗತ್ತಿಂಗೆ ಅಪ್ಪನೂ ಅಬ್ಬೆಯೂ ಆದ ಆ ಭಗವಂತ°-  ಬೀಜ. ಪ್ರಳಯಕಾಲಲ್ಲಿ ಕಣ್ಣಿಂಗೆ ಕಾಣದ್ದ (ಅವ್ಯಕ್ತ) ಸೂಕ್ಷ್ಮರೂಪಲ್ಲಿ ಇದ್ದ ಈ ಪ್ರಪಂಚಕ್ಕೆ ವ್ಯಕ್ತವಾದ ರೂಪವ ಕೊಟ್ಟವ ‘ಸರ್ವಭೂತಾನಾಂ ಬೀಜಮ್’.

ಜಗತ್ತಿನ ಸಮಸ್ತ ಜೀವಜಾತಕ್ಕೆ ಹೇಳಿರೆ – ಚತುರ್ಮುಖ-ಪ್ರಾಣ-ಗರುಡ-ಶೇಷ-ರುದ್ರ-ಇಂದ್ರ-ಕಾಮ-ಸರ್ವದೇವತೆಗೊಕ್ಕೆ, ಮನುಷ್ಯರಿಂಗೆ, ಹೂಗಿಡಬಳ್ಳಿಗೊಕ್ಕೆ ಹೀಂಗೆ, ಸಮಸ್ತ ಜೀವಕೋಟಿಗೆ ದೇಹಕೊಟ್ಟು, ಆಕಾರ ಕೊಟ್ಟು, ಅಭಿವ್ಯಕ್ತಿ ಕೊಟ್ಟು, ಇಡೀ ಜೀವಜಾತದ ಹಿಂದೆ ಅಪ್ಪನಾಗಿ ನಿಂದುಗೊಂಡಿಪ್ಪವ° – ಆ ಭಗವಂತ°. ಈ ಪ್ರಪಂಚಲ್ಲಿ ಯಾವಯಾವ ಜೀವಜಾತಂಗೊ ಇದ್ದೋ ಅದಕ್ಕೆಲ್ಲ ಜೀವವ ಕೊಟ್ಟು, ಅದಕ್ಕೊಂದು ದೇಹ, ರೂಪವ ಕೊಟ್ಟು ಅದರಲ್ಲಿಪ್ಪ ವಿಶೇಷ ಶಕ್ತಿಯಾಗಿ ಭಗವಂತ° ಇದ್ದ°.

ಇನ್ನು ಇಲ್ಲಿ ‘ಸನಾತನಮ್’ ಹೇಳಿ ಹೇಳಿದ್ದ ಭಗವಂತ°. ಸನಾತನ ಯಾವತ್ತೂ ಒಂದೇ ಹಾಂಗೆ ಇಪ್ಪ, ಬದಲಾಗದ್ದ ಹೇಳಿ ಅರ್ಥ.   ನವಗೆ ಬೀಜದ ಬಗ್ಗೆ ಇಪ್ಪ ಸಾಮಾನ್ಯ ಕಲ್ಪನೆ – ಬೀಜ ಬಿತ್ತಿ ಅದು ಮರವಾಗಿ ಬೆಳದಪ್ಪಗ ಅದು ಅದರ ಮೂಲ ಆಕಾರವ ಕಳಕ್ಕೊಳ್ಳುತ್ತು. ಇಲ್ಲಿ ಭಗವಂತ° ಹೇಳುತ್ತ° – “ಆನು ಆನಾಗಿಯೇ ಇದ್ದು ಪ್ರಪಂಚಕ್ಕೆ ಆಕಾರವ ಕೊಡುತ್ತೆ”. ಹೇಳಿರೆ ಭಗವಂತ ಎಂದೂ ಬದಲಾವುತ್ತನಿಲ್ಲೆ. ಆದರೆ ಪ್ರಪಂಚ ಬದಲಾವುತ್ತು. ಭಗವಂತ ಈ ಪ್ರಪಂಚಕ್ಕೆ ಬೇರೆ ಬೇರೆ ಆಕಾರದ ಅಭಿವ್ಯಕ್ತ ಕೊಡುತ್ತ. ಹೊಸ ಶಕ್ತಿಯ ಕೊಡುತ್ತ. ಅದರಿಂದ ಅದು ಬದಲಾವುತ್ತಾ, ಹೊಸ ರೂಪವ ಪಡೆತ್ತಾ ಇರುತ್ತು. ಇದಕ್ಕೆ ಕಾರಣಪುರುಷನಾದ ಭಗವಂತ ಮಾತ್ರ ಎಲ್ಲಾ ಕಾಲಲ್ಲಿಯೂ ಏಕರೂಪಲ್ಲಿ ಇರುತ್ತ°. ಹೀಂಗೆ ಭಗವಂತ° ಸಮಸ್ತಭೂತಂಗೊಕ್ಕೆ ( ಜಡ, ಚೇತನ, ಮುಕ್ತರು) ಬೀಜ ಮತ್ತು ಅವ° ಸನಾತನ°.

ಭಗವಂತ° ಮತ್ತೂ ಹೇಳಿದ್ದ°- “ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್”. ಹೇಳಿರೆ,  ಬುದ್ಧಿವಂತರ ಬುದ್ಧಿ ಹೇಳಿ ಏನಿದ್ದೋ, ಅದು ಎನ್ನ ಕೊಡುಗೆ. ಹಾಂಗೇ ತೇಜಸ್ವಿಗೊಕ್ಕೆ ತೇಜಸ್ವಿಯೂ ಆನೇ. ಜ್ಞಾನಪ್ರದ ಜೀವಿಗಳಲ್ಲಿ ಜ್ಞಾನಶಕ್ತಿಯ ಭಗವಂತ° ಅಭಿವ್ಯಕ್ತಗೊಳುಸಿದ°. ಹೀಂಗಾಗಿ ಅವು ಜ್ಞಾನಯೋಗಿಗೊ ಆದರು ಮತ್ತೆ ಸಂಸಾರಲ್ಲಿ ಜ್ಞಾನಪರಂಪರೆಯ ಬೆಳೆಶಿ ಮುಕ್ತಿಯ ಪಡದವು. ಅದೇರೀತಿ, ಕರ್ಮಪ್ರಧಾನವಾಗಿಪ್ಪ ಕರ್ಮಯೋಗಿಗೊಕ್ಕೆ ತೇಜಸ್ಸಾಗಿ ನಿಂದು ಅವರ ಮುನ್ನೆಡೆಶುವವ° ಆ ಭಗವಂತ°. ಅವಕ್ಕೆ ತೇಜಸ್ಸಾಗಿ ಮುಕ್ತಿ ಕರುಣಿಸುವವ ಅವ°. ಬುದ್ಧಿಃ , ತೇಜಃ ಹೇಳ್ವದು ಭಗವಂತನ ಹೆಸರುಗೊ. ಜ್ಞಾನದ ಅಪಾರ, ಅನಂತ ಕಡಲಾಗಿಪ್ಪ ಭಗವಂತ°, ‘ಬುದ್ಧಿಃ’. ದೇಹಬಲ, ಆತ್ಮಬಲ ಎಲ್ಲವೂ ಪೂರ್ಣಪ್ರಮಾಣಲ್ಲಿಪ್ಪ ಸರ್ವಸಮರ್ಥ ಭಗವಂತ° – ‘ತೇಜಃ’.

ಮುಂದೆ ಎಂತರ..? ಬಪ್ಪವಾರ ನೋಡುವೋ.

 

    … ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 07 – SHLOKAS 01 – 10 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

One thought on “ಶ್ರೀಮದ್ಭಗವದ್ಗೀತಾ – ಸಪ್ತಮೋsಧ್ಯಾಯಃ – ಜ್ಞಾನವಿಜ್ಞಾನಯೋಗಃ (ಜ್ಞಾನ-ವಿಜ್ಞಾನ-ಯೋಗಃ) – ಶ್ಲೋಕಂಗೊ 01 – 10

  1. ವಿಶಿಷ್ಟವಾದ ಕೃಷ್ಣತತ್ತ್ವದ ನಿರೂಪಣೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×