- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಕಳುದ ವಾರ: ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 01 – 10 ಇಲ್ಲಿ ಒತ್ತಿ
ಶ್ಲೋಕ
ಅಯನೇಶು ಚ ಸರ್ವೇಷು ಯಥಾಭಾಗಮವಸ್ಥಿತಾಃ ।
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ॥೧೧॥
ಪದವಿಭಾಗ
ಅಯನೇಷು ಚ ಸರ್ವೇಷು ಯಥಾ-ಭಾಗಮ್ ಅವಸ್ಥಿತಾಃ । ಭೀಷ್ಮಮ್ ಏವ ಅಭಿರಕ್ಷಂತು ಭವಂತಃ ಸರ್ವೇ ಏವ ಹಿ ॥
ಅನ್ವಯ
ಭವಂತಃ ಸರ್ವೇ ಏವ ಹಿ ಸರ್ವೇಷು ಅಯನೇಷು ಚ ಯಥಾ-ಭಾಗಮ್ ಅವಸ್ಥಿತಾಃ ಭೀಷ್ಮಮ್ ಏವ ಅಭಿರಕ್ಷಂತು ।
ಪ್ರತಿಪದಾರ್ಥ
ಭವಂತಃ – ತಾವು (ನಿಂಗೊ), ಸರ್ವೇ – ಎಲ್ಲೋರು, ಏವ ಹಿ – ನಿಶ್ಚಿತವಾಗಿಯೂ, ಸರ್ವೇಷು – ಎಲ್ಲಾ ಕಡೇಲಿಯೂ, ಅಯನೇಶು –ಮಾರ್ಗಲ್ಲಿ, ಚ – ಕೂಡ, ಯಥಾ-ಭಾಗಮ್ – ವಿಭಿನ್ನವಾಗಿ ವ್ಯವಸ್ಥೆಮಾಡಿದಾಂಗೆ, ಅವಸ್ಥಿತಾಃ – ಇಪ್ಪ, ಭೀಷ್ಮಮ್ – ಭೀಷ್ಮನ, ಏವ – ಖಂಡಿತವಾಗಿಯೂ, ಅಭಿರಕ್ಷಂತು – ಬೆಂಬಲಿಸೆಕು.
ಅನ್ವಯಾರ್ಥ
ಈ ಯುದ್ಧತಂತ್ರಲ್ಲಿ, ಸೈನ್ಯವ್ಯೂಹವ ಪ್ರವೇಶಿಸಲೆ ಇಪ್ಪ ಎಲ್ಲಾ ಆಯಕಟ್ಟಿನ ಜಾಗೆಲಿಯೂ (ಎಲ್ಲಾ ಕಡೇಲಿಯೂ) ವಿಶೇಷರೀತಿಲಿ ವ್ಯವಸ್ಥೆಮಾಡಿಗೊಂಡಿಪ್ಪ ನಿಂಗೊ ಎಲ್ಲೋರು ನಿಂದುಗೊಂಡು ನಿಶ್ಚಯವಾಗಿ ಭೀಷ್ಮನ ಅನುಸರುಸಿ ಬೆಂಬಲಿಸಿ ರಕ್ಷಿಸೆಕು.
ತಾತ್ಪರ್ಯ / ವಿವರಣೆ
ದುರ್ಯೋಧನ° ಎಲ್ಲೋರ ಎದುರ ಭೀಷ್ಮನ ಪ್ರಶಂಸಿದನಷ್ಟೆ!. ಇದರ ನೋಡಿ ಬಾಕಿದ್ದವಕ್ಕೆ ದುರ್ಯೋಧನನ ದೃಷ್ಟಿಲಿ ಭೀಷ್ಮನಾಂಗೆ ನಾವೆಲ್ಲಾ ಮುಖ್ಯ ಅಲ್ಲದೋ ಅಂಬಗ!, ಹೇದು ತೋರ್ಲಾಗನ್ನೇದು, ತನ್ನ ಬುದ್ಧಿಕೌಶಲವ ಉಪಯೋಗಿಸಿ ಸನ್ನಿವೇಶವ ನಿಭಾಯಿಸುವ ಚತುರತನವ ತೋರ್ಸುತ್ತ°. ದುರ್ಯೋಧನ° ನಿಜವಾಗಿಯೂ ಭೀಷ್ಮನ ಪ್ರಶಂಸಿಸಿದ್ದೋ! ಒಂದು ರೀತಿಯ ಯುದ್ಧದ ಅಳುಕಿಲ್ಲಿ ಕುಹಕತನದ ಹೊಗಳಿಕೆ ಅದು. “ನಿಂಗೊ ಎಲ್ಲಾ ಸೇರಿ ಭೀಷ್ಮನ ರಕ್ಷಿಸೆಕ್ಕು” ಹೇದು ದುರ್ಯೋಧನ° ಹೇಳಿದ್ದು, ಅವನ ಈ ಮಾತಿನ ಧಾಟಿ ಭೀಷ್ಮಂಗೆ ಅರ್ಥ ಆಗದ್ದೆ ಹೋಕೋ?! ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ತಾನು ಹುಟ್ಟಿಬಂದ ರಾಜಾಜ್ಞೆಗೆ ಬದ್ಧನಾಗಿ, ತನ್ನ ಅಂತರಂಗದ ಇಚ್ಛೆಗೆ ವಿರುದ್ಧವಾಗಿ, ತಾನು ಪ್ರೀತಿಸಿದ ತನ್ನ ಮೊಮ್ಮಕ್ಕಳ ವಿರುದ್ಧ ಹೋರಾಟಕ್ಕೆ ಪ್ರಾಮಾಣಿಕವಾಗಿ ನಿಂದಿಪ್ಪಗ, “ಈ ತೊಂಡ ಭೀಷ್ಮನ ರಜಾ ನೋಡಿಗೊಳ್ಳಿ” ಹೇದು ಹೇದ ದುರ್ಯೋಧನನ ಈ ಮಾತುಗೊ ಭೀಷ್ಮನ ಮನಸ್ಸಿಂಗೆ ಅದೆಷ್ಟು ನೋವುಂಟಾಗಿರ!- ಹೇದು ಬನ್ನಂಜೆಯವರ ವ್ಯಾಖ್ಯಾನ.
ಈ ಮಾತುಗಳ ಕೇಳಿಸಿಗೊಂಡ ಭೀಷ್ಮ° ಎಂತ ಮಾಡಿದ ಹೇಳಿ ಮುಂದೆ –
ಶ್ಲೋಕ
ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ ।
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ॥೧೨॥
ಪದವಿಭಾಗ
ತಸ್ಯ ಸಂಜನಯನ್ ಹರ್ಷಮ್ ಕುರು-ವೃದ್ಧಃ ಪಿತಾಮಹಃ । ಸಿಂಹನಾದಮ್ ವಿನದ್ಯ ಉಚ್ಚೈಃ ಶಂಖಮ್ ದಧ್ಮೌ ಪ್ರತಾಪವಾನ್ ॥
ಅನ್ವಯ
ತಸ್ಯ ಹರ್ಷಂ ಸಂಜನಯನ್ ಪ್ರತಾಪವಾನ್ ಕುರು-ವೃದ್ಧಃ ಪಿತಾಮಹಃ, ಉಚ್ಚೈಃ ಸಿಂಹನಾದಂ ವಿನದ್ಯ ಶಂಖಂ ದಧ್ಮೌ ।
ಪ್ರತಿಪದಾರ್ಥ
ತಸ್ಯ – ಅವನ, ಹರ್ಷಮ್ – ಹರ್ಷವ, ಸಂಜನಯನ್ – ಹೆಚ್ಚಿಸ್ಯೊಂಡು (ಹುರಿದುಂಬಿಸಿಗೊಂಡು), ಪ್ರತಾಪವಾನ್ – ಪ್ರತಾಪಶಾಲಿ , ಕುರು-ವೃದ್ಧಃ – ಕುರುಕುಲದ ವೃದ್ಧನಾದ, ಪಿತಾಮಹಃ – ಅಜ್ಜ (ಭೀಷ್ಮ), ಉಚ್ಚೈಃ – ಏರುಸ್ವರಲ್ಲಿ, ಸಿಂಹನಾದಮ್ – ಸಿಂಹನಾದವ, ವಿನದ್ಯ – ಮೊಳಗಿಸಿ, ಶಂಖಮ್ – ಶಂಖವ, ದಧ್ಮೌ – ಊದಿದವು.
ಅನ್ವಯಾರ್ಥ
ಹಾಂಗೆ ಹೇಳಿದ ದುರ್ಯೋಧನಂಗೆ ಹರ್ಷ ಹೆಚ್ಚುಸಲೆ (ಸಂತೋಷಭರುಸಲೆ) ಕುರುಕುಲಪಿತಾಮಹನೂ, ಅಸಾಮಾನ್ಯ ಪ್ರತಾಪಶಾಲಿಯೂ ಆದ ಭೀಷ್ಮ° ಸಿಂಹನಾದವ ಮಾಡಿ ಏರುಸ್ವರಲ್ಲಿ ಶಂಖವ ಊದಿದ.
ತಾತ್ಪರ್ಯ / ವಿವರಣೆ
ಕುರುಕುಲ-ಪಿತಾಮಹ° ಭೀಷ್ಮಂಗೆ ಪುಳ್ಳಿ ದುರ್ಯೋಧನನ ಆಂತರ್ಯ ಅರ್ಥ ಆಗಿದ್ದತ್ತು. ಅವನ ಮೇಗೆ ಕರುಣೆ ಉಂಟಾಗಿ ಅವಂಗೆ ಸಂತೋಷ ಅಪ್ಪಲೆ ತನ್ನ ಘನತೆಗೆ ತಕ್ಕಾಂಗೆ ಗಟ್ಟಿಯಾಗಿ ಸಿಂಹನಾದ ಮಾಡಿ, ಸಾಂಕೇತಿಕವಾಗಿ ಶಂಖವ ಊದಿ ಹರ್ಷವ ಉಂಟುಮಾಡಿದ°. ಜಗನ್ನಿಯಾಮಕ ವಾಸುದೇವ° ಎದುರು ಪಕ್ಷಲ್ಲಿ ಇಪ್ಪಕಾರಣ ದುರ್ಯೋಧನಂಗೆ ಜಯದ ಸಾಧ್ಯತೆಯೇ ಇಲ್ಲೆ ಹೇದು ಭೀಷ್ಮಂಗೆ ಗೊಂತಿತ್ತು ಮತ್ತೆ ಇದು ಅದರ ಪರೋಕ್ಷ ಸಂದೇಶವೂ ಆಗಿತ್ತು. ಅಂದರೂ ಯುದ್ಧನಿಭಾಯಿಸುವದು ಭೀಷ್ಮನ ಕರ್ತವ್ಯವೂ ಆಗಿತ್ತು.
ಶಂಖನಾದ ಬಹುದೊಡ್ಡ ದುಷ್ಟ ಸಂಹಾರಕ ಶಕ್ತಿ. ದೇವೀ ಮಹಾತ್ಮೆಲಿಯೂ ದೇವಿ ವನಲ್ಲಿ ರಾಕ್ಷಸರ ದಮನಕ್ಕೆ ಆರಂಭಲ್ಲಿ ಶಂಖನಾದ ಮಾಡಿ ಕೋಲಾಹಲ ಕೆರಳಿಸಿದ್ದು ನಾವು ಕತೆಲಿ ಓದಿದ್ದು. ಮದಲಿಂದಲೂ ಪ್ರತಿದಿನ ಉದಿಯಪ್ಪಗ ಮತ್ತು ಸಾಯಂಕಾಲ ಮನೆ ಮನೆಗಳಲ್ಲಿಯೂ ಅಷ್ಟದಿಕ್ಕುಗೊಕ್ಕೂ ಕೇಳ್ವಾಂಗೆ ಶಂಖನಾದ ಮಾಡುತ್ತಾ ಇದ್ದು. ಇದಕ್ಕೆ ಕಾರಣ ಶಂಖಾನಾದಲ್ಲಿ ಇಪ್ಪ ದುಷ್ಟಶಕ್ತಿಯ ಎದೆಒಡೆವ ಸಾಮರ್ಥ್ಯ. ಶಂಖದ ನಾದ ಎಷ್ಟು ದೂರದ ವರೇಂಗೆ ಕೇಳುತ್ತೋ ಅಲ್ಲಿಯವರೇಂಗೆ ದುಷ್ಟಶಕ್ತಿಗೊ ಸುಳಿಯ. ಮೃತ್ಯುವಿನ ತಾಂಡವವಾದ ರಣರಂಗಲ್ಲಿ ಅಸುರೀ ಶಕ್ತಿಯ ಪ್ರಭಾವ ಇಪ್ಪಲಾಗ ಹೇಳ್ವದಕ್ಕೆ ಯುದ್ಧಕ್ಕೆ ತಮ್ಮವರ ಸಿದ್ಧಗೊಳುಸುಲೆ ಮತ್ತು ಶತ್ರುಗೊಕ್ಕೆ ತಾವು ಸಿದ್ಧ ಹೇಳ್ವ ಸಂಕೇತ ಕೊಡ್ಳೆ ರಣರಂಗಲ್ಲಿ ಶಂಖಾನಾದವ ಬಳುಸಿಗೊಂಡಿತ್ತಿದ್ದವು. ಭೀಷ್ಮ° ಶಂಖಾನಾದ ಮಾಡುವುದರ ಮೂಲಕ ‘ತಾನು ಯುದ್ಧಕ್ಕೆ ಸಿದ್ಧ°’ ಹೇಳ್ವ ಸೂಚನೆ ಕೌರವ ಪಕ್ಷಕ್ಕೆ ಮತ್ತು ಪಾಂಡವರ ಸೈನ್ಯಕ್ಕೆ ರವಾನಿಸಿದ ಹಾಂಗೆ ಆತಡ.
ಶ್ಲೋಕ
ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ ।
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋsಭವತ್ ॥೧೩॥
ಪದವಿಭಾಗ
ತತಃ ಶಂಖಾಃ ಚ ಬೇರ್ಯಃ ಚ ಪಣವ-ಅನಕ-ಗೋಮುಖಾಃ । ಸಹಸಾ ಏವ ಅಭ್ಯಹನ್ಯಂತ ಸಃ ಶಬ್ದಃ ತುಮುಲಃ ಅಭವತ್ ॥
ಅನ್ವಯ
ತತಃ ಶಂಖಾಃ ಚ ಭೇರ್ಯಃ ಚ ಪಣವ-ಆನಕ-ಗೋಮುಖಾಃ ಸಹಸಾ ಏವ ಅಭ್ಯಹನ್ಯಂತ । ಸಃ ಶಬ್ದಃ ತುಮುಲಃ ಅಭವತ್ ।
ಪ್ರತಿಪದಾರ್ಥ
ತತಃ – ಮತ್ತೆ, ಶಂಖಾಃ – ಶಂಖಂಗೊ, ಚ – ಕೂಡ, ಭೇರ್ಯಃ – ಭೇರಿಗೋ, ಚ – ಮತ್ತು, ಪಣವ-ಆನಕ –ಗೋಮುಖಾಃ – ಮದ್ದಳೆಗೊ, ನಗಾರಿಗೊ, ಕಹಳೆಗೊ, ಸಹಸಾ – ಒಟ್ಟೊಟ್ಟಿಂಗೆ/ಕೂಡ್ಳೆ/ಒಂದರ ಬೆನ್ನಾರೆ ಇನ್ನೊಂದು (ಒಂದೇ ಹೊತ್ತಿಂಗೆ / ಏಕಾಏಕಿ, ಇದ್ದಕ್ಕಿಂದಾಂಗೆ), ಏವ – ನಿಶ್ಚಯವಾಗಿಯೂ, ಅಭ್ಯಹನ್ಯಂತ – ಒಟ್ಟೊಟ್ಟಿಂಗೆ ಧ್ವನಿಮಾಡಿದವು, ಸಃ – ಆ, ಶಬ್ದಃ – ಧ್ವನಿಯು, ತುಮುಲಃ – ತುಂಬಾಜೋರಾಗಿ ಗದ್ದಲ, ಅಭವತ್ – ಆತು.
ಅನ್ವಯಾರ್ಥ
ಅನಂತರ ಶಂಖ, ಭೇರಿ, ಡೋಲು, ತಮಟೆ, ನಗಾರಿ ಮುಂತಾದ ವಾದ್ಯಂಗೊ ಇದ್ದಕ್ಕಿದ್ದಾಂಗೆ ಒಂದರ್ಯೇ ಮೊಳಗಿತ್ತು. ಆ ರಣಶಬ್ದ ಭೀಷಣವಾಗಿತ್ತು.
ತಾತ್ಪರ್ಯ / ವಿವರಣೆ
ಭೀಷ್ಮಾಚಾರ್ಯನ ಶಂಖನಾದದ ಬೆನ್ನಿಂಗೇ ಕೌರವ ಸೈನ್ಯಂದ ಶಂಖ, ಭೇರಿ, ಡೋಲು, ತಮ್ಮಟೆ, ನಗಾರಿ ಇತ್ಯಾದಿಗೊ ಏಕಾಏಕಿ ಮೊಳಗಿ ವ್ಯವಸ್ಥಿತ ರೀತಿಲ್ಲಿ ಇಲ್ಲದ್ದೆ ಒಟ್ಟು ಸದ್ದುಗದ್ದಲದ ಹಾಂಗೆ ಆತು. ಹೇಳಿರೆ ದುರ್ಯೋಧನ ತನ್ನ ಸೈನ್ಯವ ವ್ಯವಸ್ಥಿತ ರೀತಿಲಿ ಯೋಜಿಸಿದ್ದನಿಲ್ಲೆ ಹೇಳ್ವದು ಸ್ಪಷ್ಟ ಆತು. ಎಷ್ಟೇ ಸಾಮರ್ಥ್ಯ, ಸಾಧನ ಇದ್ದರೂ ಎಲ್ಲಿವರೆಂಗೆ ಅದರ ವ್ಯವಸ್ಥಿತ ರೀತಿಲಿ ಉಪಯೋಗುಸುಲೆ ಆರಡಿತ್ತಿಲ್ಲ್ಯೋ ಅಲ್ಲಿವರೆಂಗೆ ಅವೆಲ್ಲಾ ಇದ್ದೂ ನಿಷ್ಪ್ರಯೋಜನ. ಸಾಧನವ ಕೈಲಿ ಮಡಿಕ್ಕೊಂಡು ಅಧಿಕಾರದ ಆಸೆಂದ ಮನಃಸ್ಥಿತಿಯ ಕಳಕ್ಕೊಂಡವ° ಎಂದೂ ಯಶಸ್ಸು ಕಾಂಬಲೆಡಿಯ – ಹೇದು ಬನ್ನಂಜೆಯವರ ವ್ಯಾಖ್ಯಾನ.
ಶ್ಲೋಕ
ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ ।
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ॥೧೪॥
ಪದವಿಭಾಗ
ತತಃ ಶ್ವೇತೈಃ ಹಯೈಃ ಯುಕ್ತೇ ಮಹತಿ ಸ್ಯಂದನೇ ಸ್ಥಿತೌ । ಮಾಧವಃ ಪಾಂಡವಃ ಚ ಏವ ದಿವ್ಯೌ ಶಂಖೌ ಪ್ರದಧ್ಮತುಃ ॥
ಅನ್ವಯ
ತತಃ ಶ್ವೇತೈಃ ಹಯೈಃ ಯುಕ್ತೇ ಮಹತಿ ಸ್ಯಂದನೇ ಸ್ಥಿತೌ ಮಾಧವಃ ಪಾಂಡವಃ ಚ ಏವ ದಿವ್ಯೌ ಶಂಖೌ ಪ್ರದಧ್ಮತುಃ ।
ಪ್ರತಿಪದಾರ್ಥ
ತತಃ – ಮತ್ತೆ, ಶ್ವೇತೈಃ – ಬಿಳಿಬಣ್ಣದ, ಹಯೈಃ – ಕುದುರೆಗಳಿಂದ, ಯುಕ್ತೇ – ಹೂಡಲಾದ (ಕೂಡಲಾದ), ಮಹತಿ – ದೊಡ್ಡದಾದ, ಸ್ಯಂದನೇ – ರಥಲ್ಲಿ, ಸ್ಥಿತೌ – ಇತ್ತಿದ್ದ, ಮಾಧವಃ – ಕೃಷ್ಣ°, ಪಾಂಡವಃ – ಅರ್ಜುನ°, ಚ – ಕೂಡ , ಏವ – ಖಂಡಿತಾವಾಗಿಯೂ, ದಿವ್ಯೌ – ದಿವ್ಯವಾದ, ಶಂಖೌ – ಶಂಖಂಗಳ, ಪ್ರದಧ್ಮತುಃ – ಊದಿದವು.
ಅನ್ವಯಾರ್ಥ
ಮತ್ತೆ ಎದುರು ಪಕ್ಷಲ್ಲಿ, ಬೆಳಿ ಕುದುರೆಗಳ ಕಟ್ಟಿದ ಮಹಾರಥಲ್ಲಿ ಇತ್ತಿದ್ದ ಮಾಧವನೂ (ಶ್ರೀಕೃಷ್ಣನೂ), ಅರ್ಜುನನೂ ತಮ್ಮ ಅಲೌಕಿಕ (ದಿವ್ಯವಾದ) ಶಂಖಂಗಳ ಊದಿದವು.
ತಾತ್ಪರ್ಯ / ವಿವರಣೆ
ಬನ್ನಂಜೆಯವರ ವ್ಯಾಖ್ಯಾನಲ್ಲಿ ಗಮನಿಸಿದರೆ – ಇಲ್ಲಿ ಮಾಧವ° ಮತ್ತು ಪಾಂಡವ° ಹೇದು ಎರಡು ವಿಶೇಷಣ ಪದ ಬಳಕೆ ಆಯ್ದು. ಭಗವಂತ ಶ್ರೀಕೃಷ್ಣನ ಇಲ್ಲಿ ಮಾಧವ° ಹೇದು ಹೇಳಿದ್ದದು. ಮಾ ಹೇಳಿರೆ ಲಕ್ಷ್ಮಿ. ಹಾಂಗಾಗಿ ಮಾಧವ° ಹೇದರೆ ಲಕ್ಷ್ಮೀಪತಿ (ಭಗವಾನ್ ಶ್ರೀಮನ್ನಾರಾಯಣ°) ಹೇಳಿ ಅರ್ಥ. ಇನ್ನು ಮಾ ಹೇಳಿರೆ ಜ್ಞಾನ ಹೇಳಿಯೂ ಅಪ್ಪಡ. ಭಗವಂತ° ಜ್ಞಾನದ ಒಡೆಯ°. ಹಾಂಗಾಗಿ ಅವ° ಮಾಧವ°. ಮಧುವಂಶಲ್ಲಿ ಹುಟ್ಟಿಬಂದದ್ದರಿಂದ ಮಾಧವ°. ವೇದಲ್ಲಿ ಮಾತೃ ಹೇಳ್ವ ಪದವ ಮಾತು ಅಥವಾ ವಾಙ್ಮಯ ಹೇಳ್ವ ಅರ್ಥಲ್ಲಿ ಉಪಯೋಗಿಸಿದ್ದವಡ. ಏಳು ಮಹಾನ್ ಗ್ರಂಥಂಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ರಾಮಾಯಣ, ಮಹಾಭಾರತ ಹಾಂಗೂ ಪುರಾಣಂಗಳ ಮಾತೃ ಹೇಳಿ ಹೇಳುವದಡ. ಹಾಂಗಾಗಿ ಸಮಸ್ತ ವೈದಿಕ ವಾಙ್ಮಯ ಪ್ರತಿಪಾದಕ ಭಗವಂತ° – ‘ಮಾಧವ°’.
ಮತ್ತೆ ಇಲ್ಲಿ ಅರ್ಜುನನ ‘ಪಾಂಡವ°’ ಹೇದು ಉಲ್ಲೇಖಿಸಿದ್ದು. ಪಾಂಡವರು ಐದು ಮಂದಿ ಆಗಿದ್ದರೂ ಪಾಂಡವ ಹೇಳಿ ವಿಖ್ಯಾತಿ ಆದವ° ಅರ್ಜುನನೇ. ಕುಂತಿಗೆ ಅರ್ಜುನನತ್ರೆ ರಜಾ ಹೆಚ್ಚಿಗೇ ಪ್ರೀತಿ ಇತ್ತಿದ್ದಡ. ಅರ್ಜುನನಲ್ಲಿ ಭಗವಂತನ ವಿಶೇಷ ಸಾನ್ನಿಧ್ಯ ಇದ್ದತ್ತಡ. ಅವ° ನಾರಾಯಣನ ಜೊತೆಗಾರ ‘ನರ’ನ ರೂಪವೂ ಅಪ್ಪಡ.
ನಮ್ಮ ದೇಹ ಕೂಡ ಒಂದು ರಥ. ಅಂತಹ ರಥಲ್ಲಿ ಜೀವನವ ನಡೆಸುವ ಭಗವಂತನ ಸನ್ನಿಧಾನ ಇದ್ದಡ. ನಾಲ್ಕು ಕುದುರೆಗ ಹೇದರೆ ನಾಲ್ಕು ವೇದಂಗಳ ಸಂಕೇತ. ಬೆಳಿ ಬಣ್ಣ – ಸತ್ವಗುಣದ ಸಂಕೇತ ಹೇಳಿ ಬನ್ನಂಜೆಯವು ವ್ಯಾಖ್ಯಾನ ಹೇಳಿದ್ದವು.
ಶ್ಲೋಕ
ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ ।
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ ॥೧೫॥
ಪದವಿಭಾಗ
ಪಾಂಚಜನ್ಯಮ್ ಹೃಷೀಕೇಶಃ ದೇವದತ್ತಮ್ ಧನಂಜಯಃ । ಪೌಂಡ್ರಮ್ ದಧ್ಮೌ ಮಹಾ-ಶಂಖಮ್ ಭೀಮ-ಕರ್ಮಾ ವೃಕ-ಉದರಃ ॥
ಅನ್ವಯ
ಹೃಷೀಕೇಶಃ ಪಾಂಚಜನ್ಯಂ, ಧನಂಜಯಃ ದೇವದತ್ತಂ, ಭೀಮ-ಕರ್ಮಾ ವೃಕ-ಉದರಃ ಮಹಾ-ಶಂಖಂ ಪೌಂಡ್ರಮ್ ದಧ್ಮೌ ।
ಪ್ರತಿಪದಾರ್ಥ
ಹೃಷೀಕೇಶಃ (ಹೃಷೀಕ-ಈಶಃ) – ಹೃಷೀಕೇಶ° ( ಭಕ್ತರ ಇಂದ್ರಿಯ ನಿಯಂತ್ರಕನಾದ ಶ್ರೀಕೃಷ್ಣ°), ಪಾಂಚಜನ್ಯಮ್ – ‘ಪಾಂಚಜನ್ಯ’ ಶಂಖವ, ಧನಂಜಯಃ – ಅರ್ಜುನ° (ಧನಂಜಯ° – ಸಂಪತ್ತುಗಳ ಗೆಲ್ಲುವವ°), ದೇವದತ್ತಮ್ – ‘ದೇವದತ್ತ’ ಶಂಖವ, ಭೀಮ-ಕರ್ಮಾ- ದುಸ್ಸಾಹಸ ಕೆಲೆಸವನ್ನು ಮಾಡುವ, ವೃಕೋದರಃ (ವೃಕ-ಉದರಃ – ತೋಳನ ಹೊಟ್ಟೆಯ ಹಾಂಗೆ ಇಪ್ಪವ) – ಹೊಟ್ಟೆಬಾಕನಂತೆ ಹೊಟ್ಟೆಇಪ್ಪವ° /ತಿಂಬವ° (ಭೀಮ°), ಪೌಂಡ್ರಮ್ – ‘ಪೌಂಡ್ರ’ ಎಂಬ ಹೆಸರಿಪ್ಪ, ಮಹಾಶಂಖಮ್ – ಭಯಂಕರವಾದ ಶಂಖವ, ದಧ್ಮೌ – ಊದಿದವು.
ಅನ್ವಯಾರ್ಥ
ಹೃಷೀಕೇಶ° (ಶ್ರೀಕೃಷ್ಣ) ತನ್ನ ಪಾಂಚಜನ್ಯ ಹೇಳ್ವ ಶಂಖವ, ಅರ್ಜುನ° ತನ್ನ ಶಂಖವಾದ ದೇವದತ್ತವ, ಅದ್ಭುತ ಸಾಹಸಂಗಳ ಮಾಡಬಲ್ಲ ಭೀಮ° ತನ್ನ ಪೌಂಡ್ರ ಹೇಳ್ವ ಮಹಾಶಂಖವ ಊದಿದವು.
ತಾತ್ಪರ್ಯ / ವಿವರಣೆ
ಪಾಂಡವರ ಕಡೆಂದ ಸುರುವಿಂಗೆ ಶ್ರೀಕೃಷ್ಣ° ತನ್ನ ಶಂಖ ಪಾಂಚಜನ್ಯವ ಊದಿದ°. ಶ್ರೀಕೃಷ್ಣನ ಶಂಖಕ್ಕೆ ಪಾಂಚಜನ್ಯ ಹೇದು ಹೆಸರು. ಶ್ರೀಕೃಷ್ಣ ತನ್ನ ವಿದ್ಯಾಭ್ಯಾಸ ಮಾಡಿದ್ದು ಸಾಂದೀಪಿನಿ ಮುನಿಯ ಆಶ್ರಮಲ್ಲಿ. ‘ಪಾಂಚಜನ’ ಹೇಳ್ವ ಅಸುರ ಸಾಂದೀಪನಿ ಮುನಿಯ ಮಗನ ಕೊಂದಿತ್ತಿದ್ದ. ವಿದ್ಯಾಭ್ಯಾಸ ಮುಗುದು ಹೋಪ ಸಮಯಲ್ಲಿ ಶ್ರೀಕೃಷ್ಣ ಗುರುದಂಪತಿಗೊಕ್ಕೆ ಗುರುದಕ್ಷಿಣೆಯಾಗಿ ಅವರ ಮಗನನ್ನೇ ಮರಳಿಸಿದ್ದನಡ. ಪಾಂಚಜನ ಹೇಳ್ವ ರಾಕ್ಷಸ ಇದ್ದ ಶಂಖವೇ ಪಾಂಚಜನ್ಯ. ಪಾಂಚಜನ್ಯ ಅಸುರ ಸಂಹಾರಕ ಮತ್ತು ಜ್ಞಾನಾನಂದದ ಸಂಕೇತಡ. ಮತ್ತೆ ಅರ್ಜುನ° ತನ್ನ ‘ದೇವದತ್ತ’ ಶಂಖವ ಊದಿದ°. ವಾನಪ್ರಸ್ಥ ಕಾಲಲ್ಲಿ ಅಸುರರ ವಿರುದ್ಧ ಹೋರಾಡಿ ದೇವತೆಗೊಕ್ಕೆ ಸಂತೋಷಗೊಳಿಸಿದ್ದಕ್ಕಾಗಿ ಅರ್ಜುನಂಗೆ ಇಂದ್ರ ದೇವಲೋಕಲ್ಲಿ ವಿಶಿಷ್ಟ ಕಿರೀಟವ ತೊಡಿಸಿ ಈ ಶಂಖವ ಉಡುಗೊರೆಯಾಗಿ ಕೊಟ್ಟದಡ. ಈ ಶಂಖವೂ ಕೂಡ ದುಷ್ಟನಿಗ್ರಹದ ಸಂಕೇತ. ಅರ್ಜುನನ ಮತ್ತೆ ಭೀಮ° ತನ್ನ ಮಹಾಶಂಖವಾದ ‘ಪೌಂಡ್ರ’ವ ಊದಿದ°. ಪೌಂಡ್ರ ಹೇದರ ಪುಂಡ್ರ ದೇಶದ್ದು. ಭೀಮನ ಪ್ರೀತಿಯ ಶಂಖ. ದುಷ್ಟನಿಗ್ರಹ ಶಕ್ತಿ ಶಿಷ್ಟರ ಪ್ರೀತಿಂದ ಪ್ರೇರೇಪಿಸುವ ಶಕ್ತಿ ಇಂಪಂತದ್ದು.
ಶ್ಲೋಕಲ್ಲಿ ಕೃಷ್ಣನ ಹೃಷೀಕೇಶ° ಹೇಳಿ ಹೇಳಿದ್ದು. ಹೃಷೀಕ° ಹೇಳಿರೆ ಇಂದ್ರಿಯ. ಹೃಷೀಕ + ಈಶಃ = ಹೃಷೀಕೇಶಃ. ಈಶ ಹೇಳಿರೆ ಒಡೆಯ°. ಇಂದ್ರಿಯಂಗಳ ನೀಡಿ ಅದಲ್ಲಿ ಇದ್ದು ಇಂದ್ರಿಯಂಗಳ ನಡೆಸುವವ° – ಹೃಷೀಕೇಶ°.
ವೃಕ ಹೇಳಿರೆ ಅಗ್ನಿ ಹೇಳ್ವ ಅರ್ಥ ಕೂಡ. ಭೀಮನ ಉದರಲ್ಲಿ ಇಡೀ ವಿಶ್ವವನ್ನೇ ಸುಡಬಲ್ಲ ಅಗ್ನಿಯ ಧರಿಸಿಗೊಂಡಿತ್ತಿದ್ದವನಾದ್ದರಿಂದ ಭೀಮನ ವೃಕೋದರ° ಹೇಳಿಯೂ ಹೇಳುತ್ತವು
ಶ್ಲೋಕ
ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ ।
ನಕುಲಃ ಸಹದೇವಶ್ಚ ಸುಘೋಷ ಮಣಿಪುಷ್ಪಕೌ ॥೧೬॥
ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ ।
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾsಪರಾಜಿತಃ ॥೧೭।।
ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ ।
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ ॥೧೮॥
ಪದವಿಭಾಗ
ಅನಂತವಿಜಯಮ್ ರಾಜಾ ಕುಂತೀ-ಪುತ್ರಃ ಯುಧಿಷ್ಠಿರಃ । ನಕುಲಃ ಸಹದೇವಃ ಚ ಸುಘೋಷ-ಮಣಿ-ಪುಷ್ಪಕೌ ॥
ಕಾಶ್ಯಃ ಚ ಪರಮ-ಇಷು-ಆಸಃ ಶಿಖಂಡೀ ಚ ಮಹಾ-ರಥಃ । ಧೃಷ್ಟದ್ಯುಮ್ನಃ ವಿರಾಟಃ ಚ ಸಾತ್ಯಕಿಃ ಚ ಅಪರಾಜಿತಃ ॥
ದ್ರುಪದಃ ದ್ರೌಪದೇಯಾಃ ಚ ಸರ್ವಶಃ ಪೃಥಿವೀ-ಪತೇ । ಸೌಭದ್ರಃ ಚ ಮಹಾ-ಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ ॥
ಅನ್ವಯ
ಕುಂತೀ-ಪುತ್ರಃ ರಾಜಾ ಯುಧಿಷ್ಠಿರಃ ಅನಂತವಿಜಯಮ್, ನಕುಲಃ ಸಹದೇವಃ ಚ ಸುಘೋಷ-ಮಣಿ-ಪುಷ್ಪಕೌ ಶಂಖಾನ್ ದಧ್ಮುಃ ।
ಪರಮ-ಇಷು-ಆಸಃ ಕಾಶ್ಯಃ ಚ, ಮಹಾ-ರಥಃ ಶಿಖಂಡೀ ಚ , ಧೃಷ್ಟದ್ಯುಮ್ನಃ ವಿರಾಟಃ ಚ, ಅಪರಾಜಿತಃ ಸಾತ್ಯಕಿಃ ಚ ಶಂಖಾನ್ ದಧ್ಮುಃ ।
ಹೇ ಪೃಥಿವೀ-ಪತೇ!, ದ್ರುಪದಃ ದ್ರೌಪದೇಯಃ ಚ, ಮಹಾ-ಬಾಹುಃ ಸೌಭದ್ರಃ ಚ ಪೃಥಕ್ ಪೃಥಕ್ ಸರ್ವಶಃ ಶಂಖಾನ್ ದಧ್ಮುಃ ।
ಪ್ರತಿಪದಾರ್ಥ
ಕುಂತೀ-ಪುತ್ರಃ – ಕುಂತಿಯ ಮಗನಾದ, ರಾಜಾ – ರಾಜನಾದ, ಯುಧಿಷ್ಠಿರಃ – ಯುಧಿಷ್ಠಿರ°, ಅನಂತ ವಿಜಯಮ್ – ಅನಂತವಿಜಯ ಹೇಳ್ವ ಶಂಖವ, ನಕುಲಃ – ನಕುಲ°, ಸಹದೇವಃ – ಸಹದೇವ°, ಚ – ಮತ್ತು, ಸುಘೋಷ-ಮಣಿ-ಪುಷ್ಪಕೌ – ಸುಘೋಷ ಮತ್ತು ಮಣಿಪುಷ್ಪಕ ಎಂಬ ಹೆಸರುಗಳಿಪ್ಪ, ಶಂಖಾನ್ – ಶಂಖಂಗಳ, ದಧ್ಮುಃ – ಊದಿದವು.
ಪರಮ-ಇಷು-ಆಸಃ – ಪರಮ ಬಿಲ್ಗಾರ° ಆದ, ಕಾಶ್ಯಃ (ವಾರಣಾಸೀ) ಕಾಶೀರಾಜ°, ಚ – ಮತ್ತು, ಮಹಾ-ರಥಃ – ಮಹಾರಥಿಕನಾದ, ಶಿಖಂಡೀ – ಶಿಖಂಡಿಯು, ಚ – ಕೂಡ, ಧೃಷ್ಟದ್ಯುಮ್ನಃ – ಧೃಷ್ಟದ್ಯುಮ್ನ° (ದ್ರುಪದನ ಮಗ), ವಿರಾಟಃ – ವಿರಾಟ°, ಚ – ಕೂಡ, ಅಪರಾಜಿತಃ – ಎಂದೂ ಸೋಲದ, ಸಾತ್ಯಕಿಃ – ಕೃಷ್ಣನ ಸಾರಥಿಯಾದ ಯುಯುಧಾನ° (ಸಾತ್ಯಕಿ), ಚ – ಮತ್ತು, ಶಂಖಾನ್ – ಶಂಖಂಗಳ, ದಧ್ಮುಃ – ಊದಿದವು.
ಹೇ ಪೃಥಿವೀ-ಪತೇ! – ಏ ರಾಜನೇ!, ದ್ರುಪದಃ – ಪಾಂಚಾಲರಾಜನಾದ ದ್ರುಪದ°, ದ್ರೌಪದೇಯಃ – ದ್ರೌಪದಿಯ ಮಕ್ಕೊ, ಚ – ಕೂಡ, ಮಹಾ-ಬಾಹುಃ – ಮಹಾಬಲಶಾಲಿಯಾದ, ಸೌಭದ್ರಃ – ಸುಭದ್ರೆಯ ಮಗ(ಅಭಿಮನ್ಯು), ಚ – ಕೂಡ, ಪೃಥಕ್ ಪೃಥಕ್ – ಬೇರೆ ಬೇರೆಯಾಗಿ, ಸರ್ವಶಃ – ಎಲ್ಲೋರೂ, ಶಂಖಾನ್ – ಶಂಖಂಗಳ, ದಧ್ಮುಃ – ಊದಿದವು.
ಅನ್ವಯಾರ್ಥ
ಕುಂತೀಪುತ್ರನಾದ ಯುಧಿಷ್ಠಿರ° ಅನಂತವಿಜಯ ಹೇಳ್ವ ತನ್ನ ಶಂಖವ ಊದಿದ°. ನಕುಲ-ಸಹದೇವ ಸುಘೋಷ – ಮಣಿಪುಷ್ಪ ಹೇಳ್ವ ತಮ್ಮ ತಮ್ಮ ಶಂಖಂಗಳ ಊದಿದವು. ಏ ರಾಜನೇ!, (ಸಂಜಯ ಧೃತರಾಷ್ಟ್ರನತ್ರೆ ಹೇಳುತ್ಸು)] ಮಹಾಧನುರ್ಧಾರಿಯಾದ ಕಾಶೀರಾಜ°, ಮಹಾರಥನಾದ ಶಿಖಂಡಿ, ಧೃಷ್ಟದ್ಯುಮ್ನ°, ವಿರಾಟ°, ಅಜೇಯನಾದ ಸಾತ್ಯಕಿ, ದ್ರುಪದ°, ದ್ರೌಪದಿಯ ಮಕ್ಕೊ, ಮಹಾಬಾಹುವೂ ಸುಭದ್ರೆಯ ಮಗನೂ ಆದ ಅಭಿಮನ್ಯು ಎಲ್ಲೋರು ತಮ್ಮ ತಮ್ಮ ಶಂಖಂಗಳ ಪ್ರತ್ಯೇಕ ಪ್ರತ್ಯೇಕವಾಗಿ ಊದಿ ಶಂಖನಾದವಗೈದವು.
ತಾತ್ಪರ್ಯ / ವಿವರಣೆ
ಇಲ್ಲಿ ಶಿಖಂಡಿಯ ಮಹಾರಥ° ಹೇಳಿ ಹೇಳಿದ್ದವು. ಶಿಖಂಡಿ ಹೇಳಿರೆ ನಪುಂಸಕ ಹೇಳಿ ಭಾವನೆ ನಮ್ಮಲ್ಲಿ. ಆದರೆ, ಶಿಖಂಡಿ ನಪುಂಸಕ° ಅಲ್ಲಡ. ಶಿಖಂಡಿ ಹೇಳಿರೆ ಮೂಲಭೂತವಾಗಿ ಶಿಖಂಡ (ಶಿಖ+ಅಂಡ) ಇಪ್ಪವ°. ಇಲ್ಲಿ ಶಿಖ ಹೇಳಿರೆ ತಲೆಕೂದಲು. ತಲೆಕೂದಲ ಚಂದಕೆ ಬಾಚಿ ಹಿಂದೆ ಮೊಟ್ಟೆಯಂತೆ (ಅಂಡದಂತೆ) ಕಟ್ಟುವವ ಶಿಖಂಡಿ. ಮಹಾಭಾರತದ ಈ ಶಿಖಂಡಿ ಹುಟ್ಟುವಾಗ ಹೆಣ್ಣಾಗಿದ್ದು ಆ ಬಳಿಕ ಗಂಡಾಗಿ ಪರಿವರ್ತನೆ ಆದ ಮಹಾರಥ ಶಿಖಂಡಿ. ಈತ ಸ್ತ್ರೀಪೂರ್ವ ಆದ್ದರಿಂದ ಭೀಷ್ಮಾಚಾರ್ಯ ಇವನ ವಿರುದ್ಧ ಬಾಣಪ್ರಯೋಗ ಮಾಡಿದ್ದ ಇಲ್ಲೇ ಹೇಳಿ ಬನ್ನಂಜೆಯವರ ವ್ಯಾಖ್ಯಾನ.
ಇಲ್ಲಿ ಸೂಕ್ಷ್ಮವಾಗಿ ನೋಡಿರೆ ಪಾಂಡವರಕಡೆ ಇದ್ದ ಶಿಸ್ತು ಎದ್ದು ಕಾಣುತ್ತು. ಕೌರವನ ಪಾಳಯಂದ ಗದ್ದಲರೂಪವಾಗಿ ಶಂಖ ನಗಾರಿ ಗದ್ದಲವಾಗಿ ಮೊಳಗಿರೆ ಉತ್ತರವಾಗಿ ಪಾಂಡವರ ಕಡೆಂದ ಶಿಸ್ತುಬದ್ಧವಾಗಿ ಕ್ರಮಬದ್ಧವಾಗಿ ಶಂಖಾನಾದ ಮಾಡಿದ್ದವು. ಶಿಸ್ತುಬದ್ಧವಾದ ಸಣ್ಣ ಸೇನೆ ಅಶಿಸ್ತಿಂದ ಕೂಡಿದ ದೊಡ್ಡ ಸೇನೆಯ ಯಾವ ರೀತಿ ಎದೆನಡುಗುಸುಗು ಹೇದು ಗಮನುಸಲಕ್ಕು. ಭಗವಂತಂಗೆ ಸರ್ವ-ಸಮರ್ಪಣ ಭಾವಲ್ಲಿ, ಯಾವುದೇ ಅಹಂಕಾರ ಇಲ್ಲದ್ದೆ ಭಗವಂತನ ಸಾರಥ್ಯಲ್ಲಿ, ಧರ್ಮಯುದ್ಧಕ್ಕೆ ಸಿದ್ಧವಾದ ಪಾಂಡವಸೇನೆ ಮಾನಸಿಕವಾಗಿ ಸಂಪೂರ್ಣ ಸಿದ್ಧವಾಗಿತ್ತು. ಅಹಂಕಾರದ ಅಮಲಿಲ್ಲಿ, ಅಧಿಕಾರದ ಅಸೆಂದ ಮಾನಸಿಕ ಸ್ಥಿಮಿತ ಕಳಕೊಂಡ, ಭಗವಂತನ ವಿರುದ್ಧ ನಿಂದ ದುರ್ಯೋಧನನ ಮುಂದಾಳುತ್ವಲ್ಲಿ ಕೌರವಸೇನೆ ಈಗಾಗಲೇ ಆತ್ಮವಿಶ್ವಾಸ ಕಳಕ್ಕೊಂಡಿದು.
ಅರಸ° ಧೃತರಾಷ್ಟ್ರ° ಪಾಂಡುಮಕ್ಕೊಗೆ ಮೋಸಮಾಡಿ ತನ್ನ ಮಕ್ಕಳನ್ನೇ ಸಿಂಹಾಸನಲ್ಲಿ ಕೂರ್ಸಿ ಕೈಗೊಂಡ ಅವಿವೇಕದ ನೀತಿ ಮೆಚ್ಚುವಂತದ್ದಲ್ಲ, ಕುರುಕುಲ ಪಿತಾಮಹಂದ ತೊಡಗಿ ಮೊಮ್ಮಗ ಅಭಿಮನ್ಯುವರೆಂಗೆ, ಮತ್ತೆ ಇತರ ರಾಜರುಗೊ ಅಲ್ಲಿ ಇದ್ದವು. ಈ ಮಹಾಸಮರಲ್ಲಿ ಕುರುಕುಲವೇ ನಾಶ ಆವ್ತಾ ಇದ್ದು ಹೇದು ಜಾಣ್ಮೆಲಿ ಸಂಜಯ° ಧೃತರಾಷ್ಟ್ರಂಗೆ ಸೂಚುಸುತ್ತಾ ಇದ್ದ°.
ಶ್ಲೋಕ
ಸ ಘೋಷೋ ಧಾರ್ತರಾಷ್ತ್ರಾಣಾಂ ಹೃದಯಾನಿ ವ್ಯದಾರಯತ್ ।
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ ॥೧೯॥
ಪದವಿಭಾಗ
ಸ ಘೋಷಃ ಧಾರ್ತರಾಷ್ಟ್ರಾಣಾಮ್ ಹೃದಯಾನಿ ವ್ಯದಾರಯತ್ । ನಭಃ ಚ ಪೃಥಿವೀಮ್ ಚ ಏವ ತುಮುಲಃ ವ್ಯನುನಾದಯನ್ ॥
ಅನ್ವಯ
ಸಃ ತುಮುಲಃ ಘೋಷಃ ನಭಃ ಚ ಪೃಥಿವೀಂ ಚ ಏವ ವ್ಯನುನಾದಯನ್, ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ ।
ಪ್ರತಿಪದಾರ್ಥ
ಸ – ಆ, ತುಮುಲಃ – ಕೋಲಾಹಲವು, ಘೋಷಃ – ಧ್ವನಿಸ್ಪಂದನವು, ನಭಃ – ಆಕಾಶವ, ಚ – ಕೂಡ, ಪೃಥಿವೀಮ್ – ಭೂಮಿಯ ಮೇಲ್ಭಾಗವ, ಚ – ಸಾನ, ಏವ – ಖಂಡಿತವಾಗಿಯೂ, ವ್ಯನುನಾದಯನ್ – ಮೊಳಗಿಸ್ಯೊಂಡು, ಧಾರ್ತರಾಷ್ತ್ರಾಣಾಮ್ – ಧೃತರಾಷ್ಟ್ರನ ಮಕ್ಕಳ, ಹೃದಯಾನಿ – ಹೃದಯಂಗಳ , ವ್ಯದಾರಯತ್ – ಭೇದಿಸಿತು.
ಅನ್ವಯಾರ್ಥ
ಈ ಶಂಖಂಗಳ ನಾದಂದ ಕೋಲಾಹಲ ಉಂಟಾಗಿ ಭೂಮಿ ಆಕಶಂಗಳಲ್ಲಿ ಪ್ರತಿಧ್ವನಿಸಿ ಕೌರವರ ಹೃದಯಂಗಳ ಭೇದುಸುವ ಹಾಂಗೆ ಇತ್ತು.
ತಾತ್ಪರ್ಯ / ವಿವರಣೆ
ಹುಗ್ಗಿಸಿ ಮಡಿಗಿದ ಹೃದಯ/ಮನಸ್ಸಿಲ್ಲಿಪ್ಪ ರಹಸ್ಯ ಭಾವನೆಗೊ ಕದಡಿರೆ ಒಂದರಿಯಂಗೆ ಒದೆ ಒಡದು ಉರಿವ ಅನುಭವ ಯಾವನೇ ಕೇಡಂಗೆ ಅಪ್ಪದು ಸಹಜ. ದುರ್ಯೋಧನಂಗೂ ಆದ್ದು ಇದೇ ಹತಾಷೆ.
ಶ್ಲೋಕ
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ ।
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ॥೨೦॥
ಪದವಿಭಾಗ
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿ-ಧ್ವಜಃ । ಪ್ರವೃತ್ತೇ ಶಸ್ತ್ರ-ಸಂಪಾತೇ ಧನುಃ ಉದ್ಯಮ್ಯ ಪಾಂಡವಃ ॥
ಅನ್ವಯ
ಹೇ ಮಹೀಪತೇ!, ಅಥ ಕಪಿ-ಧ್ವಜಃ ಪಾಂಡವಃ ಧಾರ್ತರಾಷ್ಟ್ರಾನ್ ವ್ಯವಸ್ಥಿತಾನ್ ದೃಷ್ಟ್ವಾ, ಶಸ್ತ್ರ-ಸಂಪಾತೇ ಪ್ರವೃತ್ತೇ, ಧನುಃ ಉದ್ಯಮ್ಯ ।
ಪ್ರತಿಪದಾರ್ಥ
ಹೇ ಮಹೀಪತೇ – ಏ ರಾಜನೇ!, ಅಥ – ಮತ್ತೆ, ಕಪಿಧ್ವಜಃ – ಹನುಮಂತನ ಚಿಹ್ನೆಯ ಧ್ವಜಯಿಪ್ಪವನಾದ, ಪಾಂಡವಃ – ಪಾಂಡುಪುತ್ರ° (ಅರ್ಜುನ°), ಧಾರ್ತರಾಷ್ಟ್ರಾನ್ – ಧೃತರಾಷ್ಟ್ರನ ಮಕ್ಕಳ (ಕೌರವಾದಿಗಳ), ವ್ಯವಸ್ಥಿತಾನ್ – ವ್ಯವಸ್ಥಿತವಾಗಿದ್ದ, ದೃಷ್ಟ್ವಾ – ನೋಡಿ, ಶಸ್ತ್ರಸಂಪಾತೇ – ಬಾಣಬಿಡ್ಳೆ, ಪ್ರವೃತ್ತೇ – ತೊಡಗುತ್ತಿಪ್ಪಗ, ಧನುಃ – ಬಿಲ್ಲ, ಉದ್ಯಮ್ಯ – ತೆಕ್ಕೊಂಡು,
ಅನ್ವಯಾರ್ಥ
ಮತ್ತೆ (ಅಂಬಗ) ಕಪಿಧ್ವಜನಾದ ಅರ್ಜುನ° ಯುದ್ಧಸನ್ನದ್ಧರಾದ ಕೌರವಂಗಳ ನೋಡಿ, ತನ್ನ ಧನುಸ್ಸೆತ್ತಿ ಹಿಡುದು ಬಾಣ ಬಿಡ್ಳೆ ಸಜ್ಜಾಗಿ –
ತಾತ್ಪರ್ಯ / ವಿವರಣೆ
ಎರಡೂ ಕಡೆ ಶಂಖನಾದ ಆದಪ್ಪಗ ಯುದ್ಧಕ್ಕೆ ಸಜ್ಜಾತು ಹೇಳಿ ಅರ್ಥ. ಕೌರವನ ಪಕ್ಷಲ್ಲಿ ಯುದ್ಧಸನ್ನದ್ಧರಾಗಿ, ಪಾಂಡವರ ಕಡೆಂಗೆ ಬಾಣಪ್ರಯೋಗ ಸುರುಮಾಡ್ಳೆ ಸಿದ್ಧರಾದ ಅವರ ನೋಡಿ ಅರ್ಜುನ° ತನ್ನ ಧನುಸ್ಸೆತ್ತಿ ಹಿಡುದು ಬಾಣಪ್ರಯೋಗಕ್ಕೆ ಸಜ್ಜಾಗಿ –
ಶ್ಲೋಕ
ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ ।
ಅರ್ಜುನ ಉವಾಚ-
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯಮೇsಚ್ಯುತ ॥೨೧॥
ಪದವಿಭಾಗ
ಹೃಷೀಕೇಶಮ್ ತದಾ ವಾಕ್ಯಮ್ ಇದಮ್ ಆಹ ಮಹೀಪತೇ।
ಅರ್ಜುನ ಉವಾಚ।
ಸೇನಯೋಃ ಉಭಯೋಃ ಮಧ್ಯೇ ರಥಮ್ ಸ್ಥಾಪಯ ಮೇ ಅಚ್ಯುತ ॥
ಅನ್ವಯ
ಹೇ ಮಹೀಪತೇ!, ತದಾ ಅರ್ಜುನಃ ಹೃಷೀಕೇಶಮ್ ಇದಂ ವಾಕ್ಯಮ್ ಆಹ ।
ಅರ್ಜುನಃ ಉವಾಚ – ಹೇ ಅಚ್ಯುತ!, ಸೇನಯೋಃ ಉಭಯೋಃ ಮಧ್ಯೇ ಮೇ ರಥಂ ಸ್ಥಾಪಯ ॥
ಪ್ರತಿಪದಾರ್ಥ
ಹೇ ಮಹೀಪತೇ! – ಏ ರಾಜನೇ!, ತದಾ – ಅಂಬಗ (ಅಷ್ಟಪ್ಪಗ), ಅರ್ಜುನಃ – ಅರ್ಜುನ°, ಹೃಷೀಕೇಶಮ್ – ಇಂದ್ರಿಯಂಗಳ ಒಡೆಯನಾದ ಶ್ರೀಕೃಷ್ಣಂಗೆ, ಇದಮ್ ವಾಕ್ಯಮ್ – ಈ ಮಾತಿನ, ಆಹ – ಹೇಳಿದ°.
ಅರ್ಜುನ ಉವಾಚ – ಅರ್ಜುನ° ಹೇಳಿದ°,
ಹೇ ಅಚ್ಯುತ! – ಹೇ ಚ್ಯುತಿರಹಿತನೆ! (ಅಚ್ಯುತನೇ!), ಸೇನಯೋಃ ಉಭಯೋಃ – ಸೇನೆಗಳ ಎರಡರ, ಮಧ್ಯೇ – ನೆಡುಕೆ, ಮೇ – ಎನ್ನ, ರಥಮ್ – ರಥವ, ಸ್ಥಾಪಯ – ನಿಲ್ಲುಸು.
ಅನ್ವಯಾರ್ಥ
ಸಂಜಯ° ಧೃತರಾಷ್ಟ್ರಂಗೆ ಹೇಳ್ತ° – ರಾಜನೇ, ಈ ರೀತಿ ಯುದ್ಧಕ್ಕೆ ಸನ್ನದ್ಧನಾದ ಅರ್ಜುನ° ಕೃಷ್ಣನ ಹತ್ರೆ ಹೇಳ್ತ°- “ಕೌರವ ಪಾಂಡವ ಈ ಎರಡೂ ಸೇನೆಯ ನೆಡುಕೆ ಎನ್ನ ರಥವ ನಿಲ್ಲುಸು”
ತಾತ್ಪರ್ಯ / ವಿವರಣೆ
ತನ್ನ ರಥಲ್ಲಿ ಆಂಜನೇಯನ ವಿಶೇಷ ಸಾನ್ನಿಧ್ಯ ಇತ್ತಿದ್ದ ಅರ್ಜುನ°, ಇಂದ್ರಿಯಂಗಳ ಒಡೆಯನಾದ ಶ್ರೀಕೃಷ್ಣನ (ಹೃಷೀಕೇಶ°) ಹತ್ರೆ ಹೇಳುತ್ತ°. ಇಲ್ಲಿ ಅರ್ಜುನನ ರಥಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನ ಇತ್ತು. ನಮ್ಮ ದೇಹವೆಂಬ ರಥಲ್ಲಿ ಕೂಡ ಜೀವನವ ಸದಾ ಪ್ರಾಣ ಭಗವಂತನ ಸನ್ನಿಧಾನಲ್ಲಿ ರಕ್ಷಿಸುತ್ತಾ ಇರ್ತ°. ಎಲ್ಲಿ ಪ್ರಾಣನೋ ಅಲ್ಲಿ ಭಗವಂತನ ಸನ್ನಿಧಾನ. ಅರ್ಜುನನ ರಥಲ್ಲಿ ಆಂಜನೇಯನ ಸಾನ್ನಿಧ್ಯ ಇಪ್ಪಲೆ ವಾಯುದೇವರ ಇನ್ನೊಂದು ರೂಪವಾದ ಭೀಮಸೇನ°. ಸೌಗಂಧಿಕಾ ಪುಷ್ಪ ತಪ್ಪಲೆ ಹೆರಟ ಭೀಮನ ಹನುಮಂತ° ತನ್ನ ಬಾಲಂದ ತಡದ°. ಆ ಸಂದರ್ಭಲ್ಲಿ ನಡದ ಘಟನೆಲಿ ಆಂಜನೇಯ° ಮುಂದೆ ಅರ್ಜುನನ ರಥಲ್ಲಿ ಸನ್ನಿಹಿತನಾಗಿರ್ತೆ ಹೇಳಿ ಮಾತು ಕೊಡ್ತ°. ಇಲ್ಲಿ ಭೀಮಸೇನ° ಮತ್ತು ಆಂಜನೇಯ° ಹೇಳ್ವದು ಪ್ರಾಣದೇವರ ಎರಡು ರೂಪ.
ತನ್ನ ರಥದ ಧ್ವಜಲ್ಲಿ ಆಂಜನೇಯನ ಸನ್ನಿಧಾನ, ಕೈಲಿ ಗಾಂಡೀವ, ರಥದ ಸಾರಥಿ ಕೃಷ್ಣ, ಒಟ್ಟಿಂಗೆ ಮಹಾಪರಾಕ್ರಮಿ ಭೀಮಸೇನ° ಇಪ್ಪ ಈ ಸಂದರ್ಭಲ್ಲಿ ಅರ್ಜುನಂಗೆ ಅಹಂಕಾರ ರಜಾ ಕಾಡಿತ್ತು. ಆ ಅಹಂಕಾರಂದ ಅರ್ಜುನ° ಕೃಷ್ಣನತ್ರೆ ಹೀಂಗೆ ಹೇಳುತ್ತ° – “ಸೇನಯೋಃ ಉಭಯೋಃ ಮಧ್ಯೇ ರಥಂ ಸ್ಥಾಪಯ ಮೇ ಅಚ್ಯುತ”. ಮೇ ಹೇಳಿರೆ ಎನ್ನ. ಅರ್ಜುನನ ಸಾರಥ್ಯವ ಸ್ವಯಂ ಶ್ರೀಕೃಷ್ಣನೇ ವಹಿಸಿದ್ದರೂ ಕೂಡ, ಇಲ್ಲಿ ಅಹಂಕಾರಂದ ಶ್ರೀ ಕೃಷ್ಣನ ಸಾಮಾನ್ಯ ಸಾರಥಿಯಂತೆ ಮಾತಾಡಿಸಿ “ಎನ್ನ ರಥವ ಎರಡೂ ಸೈನ್ಯಂಗಳ ಮಧ್ಯಲ್ಲಿ ನಿಲ್ಲುಸು” ಹೇಳ್ವ ಆಜ್ಞಾಧ್ವನಿಲಿ ಹೇಳುತ್ತ° – ಹೇದು ಬನ್ನಂಜೆ ವ್ಯಾಖ್ಯಾನಿಸುತ್ತವು.
ಇಲ್ಲಿ ಅರ್ಜುನ° ಶ್ರೀಕೃಷ್ಣನ ಅಚ್ಯುತ° ಹೇದು ಹೇಯ್ದ°. ಅಚ್ಯುತ ಹೇಳಿರೆ ಸ್ವಯಂ ಚ್ಯುತಿ ಇಲ್ಲದ್ದ, ಭಕ್ತರ ಚ್ಯುತಿಯ ಹರಣ ಮಾಡುವ ಭಗವಂತ° ಹೇಳಿ ಅರ್ಥ. ಅರ್ಜುನ° ಬಾಹ್ಯವಾಗಿ ಅಹಂಕಾರ ತೋರಿದವನಾಗಿದ್ದರೂ ಅವನ ಅಂತರಾತ್ಮ ಮಾತ್ರ ಎಚ್ಚರಂದ ಇತ್ತು. ಆ ಅಂತರಾತ್ಮ ಅವನ ಬಾಯಲ್ಲಿ ಈ ನಾಮವ ನುಡಿಸಿತ್ತು. ಅಹಂಕಾರ ಎಂತ ಮಹಾತ್ಮರನ್ನೂ ಬಿಟ್ಟಿಲ್ಲೆ. ಒಂದರಿ ನಮ್ಮ ಕೈಲಿ ಬಲ ಇದ್ದು ಹೇದು ತಿಳುದಪ್ಪಗ ನಾವು ಎಲ್ಲವನ್ನೂ ಮರದು ಅಹಂಕಾರದ ದಾಸರಾವ್ತು. ಈ ಅಹಂಕಾರ ನಮ್ಮ ಅಧೋಗತಿಗೆ ತಳ್ಳುತ್ತು. ಅರ್ಜುನ° ಜ್ಞಾನಿ ಹಾಂಗೂ ಶ್ರೀಕೃಷ್ಣನ ಭಕ್ತ°. ತನ್ನ ಪರಮ ಭಕ್ತ° ಅಹಂಕಾರಕ್ಕೆ ಒಳಪಟ್ಟಪ್ಪಗ ಶ್ರೀಕೃಷ್ಣ ಯಾವ ರೀತಿ ಪ್ರತಿಕ್ರಯಿಸುತ್ತ° ಹೇಳಿ ಮುಂದಾಣ ಭಾಗಲ್ಲಿ ನೋಡುವೋ°. }
ಮುಂದುವರಿತ್ತು..
ಭಗವದ್ಗೀತಾ ಶ್ಲೋಕ ಶ್ರವಣಕ್ಕೆ:
[audio:audio/Bhagavadgeete/CHAPTER-01-SHLOKA-11-21.mp3]ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtsey: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಎಲ್ಲವನ್ನೂ ನಿಂಗಳೇ ಕೂದು ಟೈಪು ಮಾಡಿ ಬೈಲಿಂಗೆ ಹಂಚುತ್ತ ಇಪ್ಪದು ಶ್ಲಾಘನೀಯ. ಇದರ ಎಲ್ಲವನ್ನೂದೆ ಪ್ರಿಂಟೌಟ್ ತೆಗದು ಮಡಗಿರೆ ಹೇಂಗೆ ಹೇಳಿ ಕಾಣುತ್ತು. ಆದರೆ ನಿಂಗಳ ಒಪ್ಪಿಗೆ ಇಲ್ಲದ್ದೆ ಆಗ. “ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನೈ ಭಾವನ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು. ” ಒಪ್ಪಣ್ಣ ಹಾಂಗೆ ಹೇಳ್ತ°. 🙂
ಹರೇ ರಾಮ ಬೊಳುಂಬು ಭಾವ. ನಿಂಗಳ ಪ್ರೀತಿಗೆ ಅಭಾರಿ. ಈ ಕೆಲಸ ಬೈಲ ಮೂಲಕ ಆ ಪರಮಾತ್ಮಂಗೆ ಅರ್ಪಣೆ. ಅಪ್ಪು.. ಸುಮಾರು ಒಂದುವರೆ ವರುಷ ಪ್ರತಿನಿತ್ಯ ಹೇಳ್ತಾಂಗೆ ಕೂದೊಂಡು ಬನ್ನಂಜೆ ಮುಂತಾದ ಹಿರಿಯ ಮೇಧಾವಿಗೊ ಈ ಮದಲೆ ಹೇಳಿದ್ದರ ನೆಟ್ಟಿಲ್ಲಿ ಸಿಕ್ಕಿದ್ದರ ಎನಗೆ ಓದಿ ತಿಳಿವಲೆ ಸಂಗ್ರಹಿಸಿ ಸಂಕಲಿಸಿ ಆನು ಅರ್ಥಮಾಡಿಗೊಂಡಗೊಂಡಹಾಂಗೆ ಬರದು ಬೈಲಿಲ್ಲಿ ಎನ್ನಾಂಗೆ ನಾಕು ಜೆನಕ್ಕೆ ಉಪಯೋಗ ಆಗಲಿ ಹೇದು ಬೈಲಿಲ್ಲಿ ಅನಾವರಣಗೊಳಿಸಿದ್ದದು. ಎಲ್ಲ ಒಟ್ಟಪ್ಪಗ ಸುಮಾರು 700 ಪುಟಂಗಳಿಂದಲೂ ಹೆಚ್ಚಿಗೆ ಅಪ್ಪಾಂಗಿಪ್ಪ ಇದರ ಪುಸ್ತಕ ರೂಪಲ್ಲಿ ನವಗೆ ತಪ್ಪ ಆರ್ಥಿಕ ಶೆಗ್ತಿ ನವಗಿಲ್ಲೆ, ಹೆರಂದ ಎರವಲು ಪಡದು ಮಾಡಿರೂ ಅಷ್ಟಕ್ಕೆ ತೆಕ್ಕೊಂಬವು ಇಕ್ಕೊ ಹೇಳ್ತದು ಸಂಶಯವೆ. ಸದ್ಯಕ್ಕಂತೂ ಬೈಲಿಲಿ ನೋಡಿಗೊಂಬದೋ, ಪ್ರಿಂಟು ತೆಗದು ಮಡಿಕ್ಕೊಂಬದೋ ಆಯೆಕ್ಕಷ್ಟೇ. ಬರದ್ದರ್ಲಿ ಕೈಕಣ್ಣು ತಪ್ಪಿ ಕೆಲವೊಂದು ಅಕ್ಷರದೋಷಂಗಳೋ, ಲೌಕಿಕ ನಮ್ಮ ಭಾಷೆಲಿ ಬರವಾಗ ವ್ಯಾಕರಣ ದೋಷಂಗಳೋ ಆಗಿಪ್ಪಲೂ ಸಾಕು. ಹಾಂಗಿರ್ತದಿದ್ದರೆ ಕ್ಷಮೆಯಿರಳಿ. ತಿಳಿಶಿ, ಬೈಲಿಲ್ಲಿ ಸರಿಮಾಡಿ ಮಡಿಕ್ಕೊಂಬೊ°. ಹರೇ ರಾಮ.
ಪ್ರತಿಯೊಂದು ಶಬ್ದ ಶಬ್ದದ ಅರ್ಥ ಕೊಟ್ಟದು ಖುಶಿ ಆತು ಭಾವಾ..
ಅಬ್ಬ,ಸ ಶಬ್ದಸ್ತುಮುಲೋಭವತ್ ಹೇಳುವದರಲ್ಲಿ ಇಪ್ಪ ಗೂಢಾರ್ಥ ವಿವರಿಸಿದ್ದು ಲಾಯ್ಕ ಆಯಿದು.
ಚೆನ್ನೈ ಭಾವ,
ನಿಂಗೊ ಬನ್ನಂಜೆ ಯವರ ರೆಫರ್ ಮಾಡುದು ಅತ್ಯಂತ ಖುಷಿ. ಅವರದ್ದು ಪಾಂಡಿತ್ಯ ಪೂರ್ಣ ಮತ್ತು ವೈಜ್ಞಾನಿಕ ವಿಶ್ಲೇಷಣೆ | ಈ ಜಾಗೆಲಿ ಕೆಲವು ಶ್ಲೋಕಂಗೊಕ್ಕೆ ಮಾತ್ರ ಬೇರೆ ರೀತಿಯ ಚಿಂತನಗೋ ಇಪ್ಪಾಗ ಮತ್ತು important ವಿಷಯ ಬಿಟ್ಟು ಹೋದಲ್ಲಿ ಬರವ ಒಂದು ಪ್ರಯತ್ನ ಆವುತ್ತು | ಇಲ್ಲಿ ಇಪ್ಪೋರ ಉತ್ಸಾಹ ನೋಡಿ ಎನಗೆ ಬಹಳ ಖುಷಿ ಆತು |
ಇಲ್ಲಿ ಒಂದು ಸಣ್ಣ ವಿಚಾರ ಬರವಲೆ ಇಷ್ಟ ಪಡುತ್ತೆ. | ಕೆಲವು ಜನ ಈ ಮಹಾ ಭಾರತ ವನ್ನೇ ಒಂದು epic (ಹೇಳಿದರೆ ನಡದ ಕಥೆ ಅಲ್ಲ ಹೇಳುವವರು ಇದ್ದವು) | ಕಾರಣ ನಾವು ಓದಿದ ಚರಿತ್ರೆ ಹಾಂಗಿದ್ದು. ಇದು ಸತ್ಯವ ಮುಚ್ಚಿ ರಾಜಕೀಯ ಒತ್ತಡ ಮತ್ತು ಲಾಭಕ್ಕಾಗಿ ಹತ್ತಾರು ವರುಷಂದ ಲೇ ಲೊಟ್ಟೆ ಯನ್ನೇ ಮಕ್ಕೊಗೆ ಕಲಿಸುದು ನಡೆಸು ಬಯಿಂದು.| ಅದು ರಜ ದೊಡ್ಡ ಕಥೆ ಮತ್ತೆ ಬರೆತ್ತೆ | ಮುಖ್ಯ ಕಾರಣ ಲಾರ್ಡ್ Mcalley ಯಿಂದ Max ಮುಲ್ಲರ್ ನ ಮೂಲಕ ಬರೆಯಲ್ಪಟ್ಟ ಚರಿತ್ರೆ ಯ ಆಧಾರ | ಇವು ಬಪ್ಪ ಮೊದಲು ಮಹಾಭಾರತ ಮತ್ತು ರಾಮಾಯಣ ( ರಾಮಾಯಣಲ್ಲಿಯೂ “ಯೋಗ ವಾಸಿಸ್ಥ” ಎಂಬ ಅಧ್ಯಾತ್ಮ ಸಾರ ಇದ್ದು) ಇವುಗಳು ನಿಜವಾಗಿ ನಡದ ಚರಿತ್ರೆ ಹೇಳಿ ಭಾರತೀಯರ ಧೃಢ ನಂಬಿಕೆ ಆಗಿತ್ತು ( ಹಾಂಗಾಗಿ ಅದು ” ಇತಿಹಾಸ” ಇತಿ =ಹೀಗೆ , ಹ + ಆಸ =ಇತ್ತು = ನಡದ ಘಟನೆ ಯ ಆಧಾರ ದ ಗ್ರಂಥ ಹೇಳಿ ಅರ್ಥ )| ಮಹಾಭಾರತ ನಡದ್ದು ಹೇಳುದಕ್ಕೆ ತುಂಬಾ ಅಧಾರಂಗೋ ಇದ್ದು (ಕೆಲವರ ಮುಂದೆ ಬರೆತ್ತೆ) | ಈ ” ಗೀತೆ ” ಮತ್ತು ” ಯೋಗ ವಾಸಿಸ್ಥ” ಇವುಗಳೇ ಮಹಾಭಾರತ ಮತ್ತು ರಾಮಾಯಣ ನಡದ್ದಕ್ಕೆ ಇಪ್ಪಸಾಕ್ಷಿ ಗಳ ಒಂದೊಂದು ರೂಪ| ಸದ್ಯಕ್ಕೆ ಈ “ಶ್ರೀಮದ್ಭಗವದ್ಗೀತೆ” ಸ್ವಯಂ ಶ್ರೀ ಹರಿ ಯ ಪುರ್ಣಾವತಾರ ವಾದ ಶ್ರೀ ಕೃಷ್ಣ ನಿಂದ ಅರ್ಜುನನ ಮೂಲಕ ಈ ಭೂ ಮಂಡಲಕ್ಕೆ ಕೊಡಲ್ಪಟ್ಟ ಅತ್ಯಂತ ಶ್ರೇಷ್ಠ ತಮ “ಮಹಾನ್ ಸಂದೇಶ ” ಹೇಳಿ ನಾವು ಶ್ರದ್ಧಾ ಪೂರ್ವಕ ತಿಳುವಳಿಕೆಯ ಹೊಂದುದು ಮುಖ್ಯ ||
ಇನ್ನು ಮುರು ದಿನ ಕಳುದು ಬೈಲಿನ್ಗೆ ಬತ್ತೆ |
ಅಪ್ಪು… ಆ ಬಲವಾದ ನಂಬಿಕೆ ಮತ್ತು ಶ್ರದ್ದೆ ಇದ್ದರೆ ಅತ್ಯಂತ ಸುಲಭಲ್ಲಿ ಅರ್ಥ ಆವುತ್ತು…
ನಮೋ ನಮಃ । ಇತಿ + ಹ + ಆಸ ಲಾಯಕ ಅರ್ಥ ಮಾಡಿಸಿದಿ. ಧನ್ಯವಾದಂಗೊ. ನಿಂಗಳ ಎಲ್ಲಾ ರೀತಿಯ ಪ್ರೋತ್ಸಾಹ ಎಂದಿಂಗೂ ಕೃತಜ್ಞತಾಪೂರ್ವಕ ಸ್ವೀಕರುಸುತ್ತು. ಬೈಲಿಲ್ಯೇ ಇದ್ದು ಮಾರ್ಗದರ್ಶನ ಮಾಡುತ್ತಾ ಇರಿ ಹೇಳಿ ಕೇಳಿಕೆಯೂ.
ಗೀತೆಗೆ ಹವ್ಯಕ ಭಾಷೆಲಿ ಉತ್ತಮ ನಿರೂಪಣೆ. ಅರ್ಥದೊಟ್ಟಿಂಗೆ, ಉಪಕಥೆಗೊ, ನಾಮವಿಶ್ಲೇಷಣೆ ಎಲ್ಲವು ಚೆಂದ. ಚೆನ್ನೈಭಾವನಿಂದ ಇದು ಒಂದು ಗ್ರಂಥರೂಪಲ್ಲಿ ಹೊರಹೊಮ್ಮಲಿ.
ವಿವರಣೆ ಅತ್ಯಂತ ಉತ್ಕ್ರುಷ್ಟ ವಾಗಿದ್ದು — ಓದುವವರೆಲ್ಲಾ ಪಡುವ ಸಂತೋಷ ವ ಅವರ ಕಾಮೆಂಟ್ ಗಳ ನೋಡಿ ಸಂತೋಷ ಆವುತ್ತು |
ಧನ್ಯತಾ ಪೂರ್ವಕವಾಗಿ ಇದಕ್ಕೆ ಕಾರಣ ನಿಂಗಳೇ ಹೇಳಿ ಹೇಳ್ಳೆ ಸಂತೋಷಡುತ್ತೆ. ಪ್ರಥಮ ಹಂತಲ್ಲೇ ಪೀಠಿಕೆ ಭಾಗಲ್ಲೇ ನಿಂಗಳ ಒಪ್ಪ ಎನ್ನ ಎಚ್ಚರಿಸಿತ್ತು ಉತ್ತೇಜನ ನೀಡಿದ್ದು, ಜವಾಬ್ದಾರಿ ಹೆಚ್ಚಿಸಿದ್ದು. ಇಲ್ಲದಿರುತ್ತಿದ್ರೆ ಇಷ್ಟು ಆಳವಾಗಿ ಬರವಲೆ ಆನು ಹೆರಡುತ್ತಿತ್ತಿಲ್ಲೆ ಹೇಳ್ವದು ಪ್ರಾಮಾಣಿಕ ಸತ್ಯ. ಮಾವ°, ಏನಾರು ಸಂದೇಹ ಬಂದರೆ ನಿಂಗಳನ್ನೇ ಗಟ್ಟಿ ಹಿಡ್ಕೊಂಬದು ಹೇಳಿ ಅಂದಾಜು ಮಾಡಿದ್ದೆ. ಧನ್ಯವಾದ.
“ಅಹಂಕಾರ ಎಂತ ಮಹಾತ್ಮರನ್ನೂ ಬಿಟ್ಟಿಲ್ಲೆ. ಒಂದರಿ ನಮ್ಮ ಕೈಲಿ ಬಲ ಇದ್ದು ಹೇಳಿ ತಿಳುದಪ್ಪಗ ನಾವು ಎಲ್ಲವನ್ನೂ ಮರದು ಅಹಂಕಾರದ ದಾಸರಾವ್ತು. ಈ ಅಹಂಕಾರ ನಮ್ಮ ಅಧೋಗತಿಗೆ ತಳ್ಳುತ್ತು.”
ಇದರ ಎಷ್ಟು ಸರ್ತಿ ಉಚ್ಚರಿಸಿ ನೆನಪು ಮಾಡಿಕ್ಕೊಂಡರೂ ಸಾಲ… ನಮ್ಮ ಆಂತರ್ಯದ ಶತ್ರುಗಳಲ್ಲಿ ಅತ್ಯಂತ ಬಲಶಾಲಿ ಮತ್ತು ಅತೀ ವೇಗವಾಗಿ ಆಕ್ರಮಣ ಮಾಡುವವ ‘ಅಹ೦’… ಆಂತರ್ಯದ ಶತ್ರುಗಳ ಗೆದ್ದರೆ ಬಾಹ್ಯಲ್ಲಿ ಯಾವ ಶತ್ರುಗಳೂ ಇರುತ್ತವಿಲ್ಲೇ…
ಅದ್ಭುತ ವಿವರಣೆ…
ತುಂಬಾ ವಿಶ್ಲೇಷಣಾತ್ಮಕವಾಗಿ ಇದ್ದುಗೊಂಡು ಜೀವನ ಮೌಲ್ಯವ ತೋರಿಸಿಕೊಡುತ್ತು.
ಬರೇ ಶ್ಲೋಕ ಮತ್ತೆ ಅದರ ಅರ್ಥ ತಿಳಿವದಕ್ಕಿಂತ ಎಶ್ಟೋ ಹೆಚ್ಚು ವಿವರಂಗೊ- ತುಂಬಾ ಕೊಶಿ ಕೊಡ್ತು.
ಮನೆಯವೆಲ್ಲಾ ಒಟ್ಟಿಂಗೆ ಕೂದೊಂಡು ದೊಡ್ಡಕೆ ಓದಿದೆ. ಹಾಂಗೇ ಶ್ಲೋಕವನ್ನೂ ಕೇಳಿದೆಯೊ°.
ಶ್ರೀ ಕೃಷ್ಣಾರ್ಪಣಮಸ್ತು
ಚೆಂದಕೆ ಬರದ್ದಿ ಭಾವ.
ಒಪ್ಪಂಗೊ…
ಭೇಶು. ತುಂಬ ಚೆಂದಕೆ ಬರದ್ದಿ. ನಿಂಗಳ ಪ್ರಯತ್ನ ನಿಜಕ್ಕು ಶ್ಲಾಘನೀಯ. ಹೀಂಗೆ ಮುಂದುವರಿಯಲಿ. ಧನ್ಯವಾದಂಗೊ.
{ಎಷ್ಟೇ ಸಾಮರ್ಥ ಸಾಧನ ಇದ್ದರೂ ಎಲ್ಲಿವರೇಗೆ ಅದರ ವ್ಯವಸ್ಥಿತ ರೀತಿಲಿ ಉಪಯೋಗುಸಲೆ ಆರಡಿತ್ತಿಲ್ಲ್ಯೋ ಅವೆಲ್ಲಾ ಇದ್ದೂ ನಿಷ್ಪ್ರಯೋಜನ.}.. ನಮ್ಮ ಸಾಮರ್ಥ್ಯ,ಸಾಧನಂಗಳ ಉಪಯೋಗಿಸಿರೆ ಸಾಲ, ವ್ಯವಸ್ಥಿತ ರೀತಿಲಿ ಉಪಯೋಗುಸುಲೆ ಗೊಂತಿಲ್ಲದ್ದರೆ ಯಶಸ್ಸು ಸಿಕ್ಕ ಹೇಳುದು ಸದಾ ಸತ್ಯ.
ಒಪ್ಪಂಗೊ 🙂