- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
(ತೆಂಕ್ಲಾಗಿ ವೊರುಶಾಂತ ಗೌಜಿ ಸಮಯಲ್ಲಿ ನವಗೆ ರಜಾ ಬೇರೆ ತೆರಕ್ಕಿತ್ತಿದ್ದರಿಂದ ವೊರುಶಾಂತಂಗೆ ಹೋಪ ಸುಭಗರತ್ರೆ ನೋಡಿಗೊಂಬಲೆ ಹೇದಿಕ್ಕಿ ನಾವು ಇತ್ತೆ ಬಂದಿತ್ತು. ಅವಕ್ಕಲ್ಲಿ ವೊರುಶಾಂತಂದ ಮತ್ತೆ ಅಲ್ಲಿಂದ ತೆಂಕ್ಲಾಗಿ ಹೋಪಲೆ ಅಂಬೇರ್ಪು ಆದಕಾರಣ ಸುಭಗವಾರದ ತುಂಡೆರಡು ಅವರಕೈಲೇ ಬಾಕಿ ಆತು. ತೆಂಕ್ಲಾಗಿಂದ ಬಂದು ಜಗುಲ್ಲಿ ಅಂಗಿಬಿಡಿಸಿ ಹಾಕಿ ಕಾಲುನೀಡಿ ಕೂದ ಮತ್ತೆ ಇದಾ ಮಾರಾಪಿಂದ ಎರಡ್ಣೇ ತುಂಡು ಹರಗಿ ಹಾಕಿದವು. ಅದರ್ನೇ ಬಾಚಿ ಈ ವಾರಕ್ಕೆ – ಸುಭಗ ವಾರ – ತುಂಡು ಎರಡು – ದೊಡ್ಡಜ್ಜನ ವರುಷಾಂತ ವಿಶೇಷಾಂಕ)
1.
ಅಡಿಗೆ ಸತ್ಯಣ್ಣ° ಹೋದ್ಸು ಒಂದು ವೊರುಶಾಂತಿಕ ಅಡಿಗ್ಗೆ.
ಚಂದ್ರಗಿರಿ ಹೊಳೆಮೇಗಂದ ದಾಂಟಿ ಕಾಞಂಗಾಡಿಂದಲೂ ಮುಂದೆ ಹೋಯೆಕ್ಕು.
ದೂರ ಆತು ಹೇದು ಬಿಟ್ಟಿಕ್ಕುವಾಂಗಿಲ್ಲೆ. ಲಾಗಾಯ್ತಿಂದ ಅದು ಸತ್ಯಣ್ಣನ ಖಾಯಂ ಶಿಷ್ಯವರ್ಗಕ್ಕೆ ಒಳಪ್ಪಟ್ಟ ಮನೆಯೇ.
ಅಷ್ಟೇ ಅಲ್ಲ; ಅಲ್ಲಿಗೆ ಹೋದರೆ ಸತ್ಯಣ್ಣ° ಆ ಮನೆಯೋರ ಹಾಂಗೆಯೇ. ಅಷ್ಟು ಆತ್ಮೀಯತೆ ಆ ಮನೆಯೋರೊಟ್ಟಿಂಗೆ.
ಅಲ್ಲಿಗೆ ತಂದ ಸೊಸೆಯಕ್ಕಳನ್ನೂ ಅಲ್ಲಿಂದ ಕೊಟ್ಟ ಮಗಳಕ್ಕಳನ್ನೂ “ಎಂತಬ್ಬೋ..?” ಹೇದು ಒಂದಾರಿಯಾದರು ಮಾತಾಡ್ಸದ್ದೆ ಇರ° ಸತ್ಯಣ್ಣ°.
ಅಲ್ಲಿಂದ ಕೂಸುಗಳ ಎಲ್ಲ ಗಡಿದಾಂಟ್ಸಿ ಕೊಟ್ಟಿದವು ಅಲ್ಯಾಣಜ್ಜ°. ಒಂದರ ಮೂಡ ಹೊಡೆ ಗಡಿಗೆ , ಮತ್ತಾಣದ್ದರ ಸಮುದ್ರ ಕರೆ ಗಡಿಗೆ ಅದರಿಂದ ಮತ್ತಾಣದ್ದು ಅತ್ತೆ ಮೂಡವೂ ಅಲ್ಲ ಇತ್ತ ಪಡುವೂ ಅಲ್ಲ ಹೇಳ್ವಾಂಗಿಪ್ಪ ಗಡಿಗೆ
ಬೈಲಿನವು ಹೇಳ್ತದು ನೋಡಿರೆ ಇವ್ವೇ ಗಡಿಗೆ ಕಾವಲುಗಾರಕ್ಕಳೋ ಹೇದೂ ಜಾನ್ಸಿ ಹೋಕು!
ಹಾಂಗೆ ಎಂತದೋ ಪಾತ್ರೆ ತಪ್ಪಲೋ, ತುಪ್ಪ ತಪ್ಪಲೋ ಅಡಿಗೆ ಕೊಟ್ಟಗೆಂದ ಒಳ ಬಪ್ಪಗ ಆ ಸುರುವಾಣದ್ದರಿಂದ ಮತ್ತಾಣದ್ದು ಹೊಸ್ತಿಲ ಬುಡಲ್ಲಿ ಗೋಡಗೆ ಸಾಂಚಿ ಮಗಳ ಕೈಬೆರಳ್ಳಿ ನೇಲ್ಸಿ ಹಿಡ್ಕೊಂದು ನಿಂದೊಂದು ಕಂಡತ್ತು.
ಅದರನ್ನೂ ಸತ್ಯಣ್ಣಂಗೆ ಹುಟ್ಟಿಂದಲೇ ಗುರ್ತ. ‘ಎಂತಬ್ಬೋ’ – ಕೇಟ° ಸತ್ಯಣ್ಣ° 😀
ಅದೂ ‘ಒಳ್ಳೆದು ಮಾವ°’ ಹೇದು ಪಿಸಕ್ಕನೆ ನೆಗೆ ಮಾಡ್ಯೊಂಡು ತಲೆ ತಗ್ಗಿಸಿ ಆಚಿಗೆ ಓಡಿತ್ತು.
ಸತ್ಯಣ್ಣಂಗೆ ಅಂದಾಜಿ ಆತು – ‘ಅಬ್ಬೋ’ ಹೇಳ್ಳೆ ತನಗೆ ಮಗಳಿಪ್ಪಗ ತನ್ನ ‘ಅಬ್ಬೋ’ ಹೇಳ್ತ° ಇದ್ದಾನ್ನೆ!’ ಹೇದು ಗ್ರೇಶಿತ್ತಾಯ್ಕದು 😀
* * *
2.
ಒರುಷಾಂತದ ದಿನ ಕರ್ತೃಗಳ ಕೈಲಿ ಬಟ್ಟಮಾವ ಕ್ರಿಯಾಭಾಗಂಗಳ ಮಾಡ್ಸುತ್ತಾ ಇದ್ದವು.
ಎರಡು ಮಗಳಕ್ಕಳೂ ಸೇರೆಕ್ಕಾದ ರೀತಿಲಿ ಅಲ್ಲಿಯೇ ಇದ್ದು ಕ್ರಿಯೆಗೆ ಸೇರಿಯೊಂಡಿದ್ದವು.
ಓ ಆ ಮೂಡಂತಾಗಿ ಕೊಟ್ಟ ಅಕೇರಿಯಾಣದ್ದು ಮಾಂತ್ರ ಅಲ್ಲಿ ಇಲ್ಲಿ ಸುಳ್ಕೊಂಡು, ಹೆರಾಂದ ಹೆರವೇ ಇದ್ದು.
ಸತ್ಯಣ್ಣಂಗೆ ಸಂಗತಿ ಎಂತರ ಹೇದು ಅರಡಿಯದ್ದೆ ಮನಸ್ಸು ಕೇಟತ್ತಿಲ್ಲೆ.
“ಎಂತಬ್ಬೋ ವಿಷಯ? ನೀನು ಹೆರವೇ ಇದ್ದೆ?”
“ಎಂಗೊಗೆ ಸೂತಕ ಅಲ್ಲದೋ ಮಾವ..? ಬೆಂಗ್ಳೂರ ನಾಕನೇ ಮಾಳಿಗೆಲಿ ನಿಂಗೊ ಕೋಡಿ ಮಾಡ್ಸಿದ ಹೆಮ್ಮಕ್ಕೊ ಮನ್ನೆ 2ಕ್ಕೆ ಹೆತ್ತಿದಿದಾ..ಎಂಗೊ ಒಂದೇ ಕುಟುಂಬ..”
ಸತ್ಯಣ್ಣ ಹೇದ° – “ಓ..ಹಾಂಗೋ..? ಸಮ.., ಅದು ನಾಡದ್ದಿಂಗೆ ಪುಣ್ಯಾಯ ಅದಾ. ಹೋಪಲಿದ್ದು” 😀
* * *
3.
ಆ ಹೆಮ್ಮಕ್ಕೊ ಅತ್ತಂದಾಗಿ ದಾಂಟಿ ದೂರ ಹೋದಪ್ಪಗ ರಂಗಣ್ಣ ಕೇಟ –
” ಅಪ್ಪೊ ಮಾವ, ಈ ಹೆಮ್ಮಕ್ಕೊ ಜೆಂಬ್ರಕ್ಕೆ ಹೋಪಲಿದ್ದರೆ ಎಂತದೋ ಮಾತ್ರೆ ತಿಂದು ಅಡ್ಡಿ ಬಾರದ್ದಹಾಂಗೆ ನೋಡಿಯೋಳ್ತವನ್ನೆ , ಅಂಬಗ ಅವಕ್ಕೆ ಸೂತಕ ಬಾರದ್ದಾಂಗೆ ಮಾಡ್ತ ಏವ ಮಾತ್ರೆಯೂ ಇಲ್ಯೋ ಮಾವಾ…?”
“ಉಮ್ಮ ನಾಂದಿ ಮಾಡಿ ಕಂಕಣ ಕಟ್ಟಿರೆ ಆವ್ತೋದು ಬಟ್ಟಮಾವನತ್ರೇ ಕೇಳೇಕ್ಕಟ್ಟೆಯೋ” – ಸತ್ಯಣ್ಣ ಹೇದಿಕ್ಕಿ ಆಚಿಗೆ ನಡದ° 😀
**
4
ಅಡಿಗೆ ಸತ್ಯಣ್ಣನ ಒಂದೊಂದು ಒಗ್ಗರಣೆಗಳೂ ಎಷ್ಟು ಪಷ್ಟಾವ್ತು ಕೇಳಿರೆ ನೆಗೆ ಮಾಡ್ತವಕ್ಕೆ ನೆಗೆ ಮಾಡ್ಳೂ ಆವ್ತು, ಕರೇಲಿ ನಿಂದು ಉಗುರು ಕಚ್ಚಿಯೊಂಡೋ, ಗೆಡ್ಡಕ್ಕೆ ಮಡಿಗ್ಯೊಂಡೋ ಏಚನೆ ಮಾಡ್ತವಕ್ಕೆ ಏಚನೆ ಮಾಡ್ಳೂ ಮಾರ್ಮಿಕ ಆಗಿರ್ತು.
ಮನ್ನೆ ಹಾಂಗೇ ಆತು ಅಲ್ಲಿ. ದೊಡ್ಡಜ್ಜನ ವೊರ್ಶಾಂತಕ್ಕೆ ಬೈಲ ಮಾಣಿ ಬಾವಯ್ಯನೂ ಹಾಜರಾಗಿತ್ತಿದ್ದ°
ಏವತ್ತೂ ಏನಾದರೊಂದು ಕಾರಣ ಹೇಳಿಗೊಂಡು ಬೈಲ ಕರೇಂದಲೇ ಬಗ್ಗಿ ನೋಡ್ತ ಮಾಣಿ ಬಾವಂಗೆ ಸತ್ಯಣ್ಣನ ಪ್ರತ್ಯಕ್ಷ ಕಾಂಬ ಅವಕಾಶ
ಹತ್ತರೆ ನಿಂದುಗೊಂಡು ಸತ್ಯಣ್ಣ ಹೇಳ್ಸರ ಎಲ್ಲ ಕೇಟು ಕೆಕೆಪೆಕೆ ನೆಗೆ ಮಾಡಿ ಸಾಕು ಸಾಕಾತು.
ಅಕೇರಿಗೆ ಸತ್ಯಣ್ಣ ಎದ್ದಿಕ್ಕಿ ಇನ್ನು ಹಪ್ಪಳ ಹೊರಿವನೋ ಹೇದಪ್ಪಗ ಮಾಣಿ ಬಾವಂಗೆ ಅರಡಿಯದ್ದೆ ಹೇಳಿ ಹೋತು – “ಎಡಿಯಪ್ಪಾ ಎಡಿಯ ನಿಂಗಳೊಟ್ಟಿಂಗೆ…!”
ಸತ್ಯಣ್ಣ° ಹೇದ° – ಅಂಬಗ ಈ ರಂಗನೊಟ್ಟಿಂಗೆ ಎಡಿಗೋ ನೋಡು 😀
ಆಚೊಡೆಂಗೆ ತಿರುಗಿ ಬಗ್ಗಿ ಕುಟ್ಟುಗಂದ ಕವಂಗಕ್ಕೆ ಸಮಲ್ಸಿ ಮಡಿಕ್ಕೊಂಡಿದ್ದ ರಂಗಣ್ಣ° ಹೇದ° – “ಎಡಿಯದ್ರೆ ಕೆಳಮಡಿಗಿಕ್ಕಿ ಬಾವ, ಹೊತ್ತ ಹಾಕಿಕ್ಕೆಡಿನ್ನು” 😀
**
5
ಸತ್ಯಣ್ಣ° ಅಡಿಗ್ಗೆ ತೆಂಕ್ಲಾಗಿ ಹೋಯಿದ ಹೇದರೆ ಅದು ದೊಡ್ಡಜ್ಜನ ಒರುಶಾಂತಕ್ಕೇ ಹೇದು ಪ್ರತ್ಯೇಕ ಹೇಳದ್ದರೂ ಬೈಲಿನೋರಿಂಗೆ ಅಂದಾಜಿ ಅಕ್ಕು
ಏಕೆ ಹೇದರೆ ಲಾಗಾಯ್ತಿನಿಂದಲೂ ದೊಡ್ಡಜ್ಜನಲ್ಲಿ ಸತ್ಯಣ್ಣನದ್ದೇ ಅಡಿಗೆ ಸುದರಿಕೆ ಹೇಳ್ತದು ಸರ್ವವಿದಿತ ಸತ್ಯ ವಿಚಾರ
ಸತ್ಯಣ್ಣ ಹೋಪದೂ ಅಪ್ಪು; ಒಟ್ಟಿಂಗೆ ರಂಗಣ್ಣ ಇಪ್ಪದೂ ಅಪ್ಪು. ಆದರೆ ಒರುಶಾಂತ ಅಡಿಗೆ ಹೇದರೆ ಅಷ್ಟು ಎಳುಪ್ಪದ ವೈವಾಟೇನೂ ಅಲ್ಲ ಹೇಳ್ತ ವಿಚಾರ ಗೊಂತಿಪ್ಪವಕ್ಕೆ ಮಾಂತ್ರ ಗೊಂತಿಕ್ಕಷ್ಟೆ.
ಒರುಶಾಂತದ ದೊಡ್ಡ ಅಡಿಗೆ, ಮುನ್ನಾಣ ದಿನ ಅರೆಮಾಸಿಕ ; ಮರದಿನ ಪತಂಗ – ಎರಡು ಪ್ರತಿ ಸಣ್ಣ ಆಡಿಗೆಗೊ.
ಮರುದಿನವೂ ಮೂರುಬಗೆ ಕಜ್ಜಾಯಂಗೊ ಸ್ವೀಟುಗೊ. ಸಳ್ಳಿ ತಂಬುಳಿ ತೊವ್ವೇತ್ಯಾದಿ ಚಿಲ್ಲರೆ ಐಟಮುಗೊ ಅಲಾಯಿದ. ಒಟ್ಟಾರೆ ಮೆನಕ್ಕೆಡದ್ದೆ ಒಲೆಬುಡಲ್ಲಿ ಮೂರುದಿನ ಕೂರೆಕ್ಕಾದ ಪರಿಸ್ಥಿತಿ.
ಆದರೆ ಸತ್ಯಣ್ಣ ಹೇಳ್ಸು – ಶ್ರದ್ಧೆಲಿ ಮಾಡಿರೆ ಇದರಷ್ಟು ಎಳ್ಪದ ಕೆಲಸ ಇನ್ನೊಂದಿಲ್ಲೆ. ಆದರೆ ಮನೆಯೋರ ಸಹಕಾರ ಇಲ್ಲದ್ರೆ ಇದರಷ್ಟು ನರಕದ ಕೆಲಸ ಇನ್ನೊಂದಿಲ್ಲೆ . ಎಲ್ಲ ಇಪ್ಪದು ಮನೆಯೋರ ಮನಸ್ಸ ಹೊಂದಿ. 😀
* * *
6
ಸತ್ಯಣ್ಣನ ಸವಾರಿ ಅರೆಮಾಸಿಕದ ಮುನ್ನಾದಿನವೇ ಬೈಂದು ದೊಡ್ಡಜ್ಜನಲ್ಲಿಗೆ.
ಮೂರ್ಸಂದಿ ಆಯೆಕ್ಕರೆ ಅಲ್ಲಿಗೆ ಎತ್ತಿ ಆಸರಿಂಗೆ ಕುಡುದು ಅಡಿಗೆ ಕೊಟ್ಟಗ್ಗೆ ಹೋಗಿ ಮಾರಾಪಿನ ಆಣಿಲಿ ತೂಗುಸಿಕ್ಕಿ ಸುತ್ತೂ ಒಂದಾರಿ ಕಣ್ಣುಹಾಯಿಸಿದ ಸತ್ಯಣ್ಣ.
ಜೆಂಬ್ರದ ವೆವಸ್ತೆಗೊ ಏವ ನಮುನೆಲಿ ಆಯಿದು ಹೇದು ಆ ಒಂದೇ ನೋಟಲ್ಲಿ ಅಳದು ತೀರ್ಮಾನ ಮಾಡ್ತಷ್ಟು ಸಾಮರ್ತಿಕೆ ಇದ್ದು ಸತ್ಯಣ್ಣಂಗೆ.
ಜಾಲಿಂಗೆ ಶೀಟಿನ ಚೆಪ್ಪರ ಆಯಿದು, ಕುರ್ಚಿ ಮೇಜುಗಳೂ ಬಯಿಂದು. ಅಡಿಗೆ ಕೊಟ್ಟಗೆಲಿ ಸಾಮಾನು, ಪಾತ್ರೆಗೊ, ಸೌದಿ, ಹೋಳಿಗೆ ಒಲೆ ಸರ್ವವೂ ವೆವಸ್ತೆ ಆಯಿದು.
ಎಲ್ಲ ಸಮ; ಆದರೆ ಜನರೇಟರ್ ಮಾಂತ್ರ ಕಾಣ್ತಿಲ್ಲೆನ್ನೇ? ಪಕ್ಕನೆ ಕರೆಂಟು ಕೈಕೊಟ್ಟತ್ತೂಳಿ ಆದರೆ ಬೆಣಚ್ಚಿಂಗೆ ಎಂತ ದಾರಿ..?
ಬೇರೆಲ್ಲಿಗು ಇಲ್ಲದ್ರೂ ಒಲೆಬುಡಕ್ಕೆ ಒಂದು ಲೈಟು ಬೇಕೇಬೇಕು.
ಸತ್ಯಣ್ಣ ವಿಚಾರ್ಸಿದ ಕುಂಟಾಂಗಿಲ ಭಾವನತ್ರೆ.
” ಶಾಮಿಯಾನದ ಮನಿಶ್ಶ ಬಾಡಿಗ್ಗೆ ಕೊಟ್ಟ ಜೆನರೇಟರ್ ವಾಪಾಸು ಬಂದು ಎತ್ತಿದ್ದಿಲ್ಲೆಡ. ನಾಳೆ ಉದಿಯಪ್ಪಗ ಸಿಕ್ಕುಗಡ, ಕೂಡ್ಲೆ ಇಲ್ಲಿಗೆ ಕಳುಸುತ್ತಡ” ಹೇದ ಕು.ಭಾವ.
“ನಾಳಂಗಾಣ ಸಂಗತಿ ನಾಳಂಗೆ. ಇಂದಿಂಗೆ ಒಂದು ಗೇಸುಲೈಟೊ ಮಣ್ಣ ಸಿಕ್ಕುತ್ತೊ ನೋಡು ಭಾವ” – ಸತ್ಯಣ್ಣ ಹೇದ.
“ಅದಪ್ಪು. ಇಲ್ಲೇ ಹತ್ತರೆ ನೆಲ್ಲಿಪ್ಪುಣಿ ಭಾವಯ್ಯನತ್ರೆ ಒಂದು ಇದ್ದು. ಫೋನು ಮಾಡಿ ಕೇಳ್ತೆ”
“ಹೊ! ನೆಲ್ಲಿಪ್ಪುಣಿ ಭಾವಯ್ಯನತ್ರೊ? ಉಪಕಾರಕ್ಕೆ ಸಿಕ್ಕ- ನಾಯಿ ಮೈಲಿಪ್ಪ ರೋಮದಾಂಗೆ ಅದು. ಉಮ್ಮಪ್ಪ..ಕೇಳ್ತರೆ ಕೇಳಿಗೊ..”
ಕು.ಭಾವ ಕೈ ಹಾಕಿ ಫೋನು ತೆಗದು ಒತ್ತಿ ಕೆಮಿಗೆಂಡಗೆ ಮಡುಗಿದ°
“ಭಾವಾ, ಇಂದ್ರಾಣ ಮಟ್ಟಿಂಗೆ ನಿಂಗಳ ಗೇಸುಲೈಟು ಕೊಡ್ಲೆಡಿಗೋ..?” ಕೇಟ
“ಗೇಸುಲೈಟೋ..? ಅದೂ.. ಅದರಲ್ಲಿ ಮೆಂಟ್ಲು ಇಲ್ಲೆನ್ನೆ ಭಾವಾ..” – ನೆಲ್ಲಿಪ್ಪುಣಿ ಭಾವ
“ಮೆಂಟ್ಲು ಇಲ್ಲಿ ತಂದದು ಇದ್ದು; ನಿಂಗೊ ಅದಕ್ಕೆ ಹೆದರೆಡಿ”-ಇತ್ಲಾಗಿಂದ ಕು.ಭಾವ
“ಅಪ್ಪೊ? ಅಲ್ಲ.. ಅದೂ…ಅದಲ್ಲಿ ಎಣ್ಣೆ ಖಾಲಿ ಆಯಿದೋ ತೋರ್ತು” -ನೆ.ಪು. ಭಾವ
“ಛೆ, ಎಣ್ಣೆ ಇಲ್ಲದ್ರೆ ಎಂತಾತು? ಎಂಗಳಲ್ಲಿ ಇದ್ದದರ ಎರಕ್ಕೊಂಡ್ರೆ ಆತಿಲ್ಯೋ?”- ಇತ್ಲಾಗಿಂದ.
“ಅಲ್ಲ ಭಾವ..ಅದೂ.. ಅದು ಸಮ ಆಗ.. ಅದು ಗೇಸುಲೈಟು ಪುಕುಪುಕು ಹೇಳ್ತು. ನಿಂಗೊಗೆ ಪ್ರಯೋಜನಕ್ಕೆ ಬಾರ..”- ಅತ್ಲಾಗಿಂದ.
ಕು.ಭಾವ ಫೋನು ಮಡುಗಿದ.
“ಗೇಸುಲೈಟು ಪುಕುಪುಕು ಹೇಳ್ತಡ ಸತ್ಯಣ್ಣ ಭಾವಾ..ಸಿಕ್ಕುವ ಅಂದಾಜಿ ಇಲ್ಲೆ..” ಹೇದ.
“ಹ್ಹ ಹ್ಹ ಹ್ಹಾ…!! ಆನು ಹೇಳಿಕ್ಕಿ ಎಲ್ಲಿಗೋಯಿದೆ..? ಯೆನಗೊಂತಿದ್ದು ಅದು ಸಿಕ್ಕ ಹೇದು. ನಿಜವಾಗಿಯೂ ಪುಕುಪುಕು ಹೇಳ್ತಾ ಇಪ್ಪದು ಗೇಸುಲೈಟಲ್ಲ- ಅವನ ಮನಸ್ಸು! ಉಪಕಾರಕೇಡಿಗಳ ಮನಸ್ಸು ಹೀಂಗೆ ಆರಾರು ಸಕಾಯ ಕೇಳಿಯಪ್ಪಗ ಪುಕುಪುಕು ಹೇಳ್ಳೆ ಸುರುವಾವ್ತು..” 😀
ಹೀಂಗೆ ಸತ್ಯಣ್ಣ ಹೇಳಿಂಡಿಪ್ಪಗ ಆಚಿಗೆ ರಿಕ್ಷ ಬಂದು ನಿಂದತ್ತು, ಅದರಲ್ಲಿ ಜನರೇಟರೂ ಬಂತು. ಜೆಂಬ್ರ ಮುಗಿವನ್ನಾರ ಬೆಣಚ್ಚಿಗೆ ಯೇವ ತೊಂದರೆಯೂ ಇಲ್ಲದ್ದಾಂಗೆ ಆತು.
ಕಂಡತ್ತೋ… ದೊಡ್ಡಜ್ಜನ ಜೆಂಬ್ರಕ್ಕೆ ಏವುದರ್ಲಿಯೂ ಪೋಕುಮುಟ್ಟಿಹೋಗ . ಸಮಯಕ್ಕಪ್ಪಗ ಎಲ್ಲವೂ ಒದಗಿ ಬತ್ತು 😀
**
7
ದೊಡ್ಡಜ್ಜನ ವೊರಿಶಾಂತಲ್ಲಿ ಅಳಿಂಯಂದ್ರ ಸುದರಿಕೆಯೇ ಸುದರಿಕೆ.
ಕೂಸುಕೊಟ್ಟ ಅಳಿಯಂದ್ರೂ, ಕೂಸು ಕೊಂಡೋಗದ್ದ ಅಳಿಯಂದ್ರೂ ಎಲ್ಲ ಮುನ್ನಾಣ ದಿನ ಮಜ್ಜಾನಕ್ಕೇ ಹಾಜರಿ ಆಯ್ದವು
ಒಬ್ಬಂಗೆ ಮಾತ್ರ ಅದೆಂತ್ಸೋ ಶಾಲೆ ಕೆಲಸವೋ, ಮನೆ ಕಾವ ಕೆಲಸವೋ, ಕರೆತ್ತ ಕೆಲಸವೊ.. ಅಂದು ಉದಿಯಪ್ಪಗಟ್ಟೆ ಬಪ್ಪಲೆಡಿಗಾತು.
ಅದೆಂತ್ಸೋ ನಮ್ಮ ಪೈಕಿಯೋರು ಹೊಸ ಆಪೀಸರ ಆದ ಲೆಕ್ಕಲ್ಲಿಯೋ, ಬಂದ ಹೊಸತ್ತರ್ಲೇ ಈ ಅಳಿಯಂಗೆ ಒಂದು ಗ್ರೇಡೂ ಸಿಕ್ಕತ್ತಡ
ಅಳಿಯ ಬರೆಕ್ಕಾರೆ ಮದಲೆ ಅಳಿಯನ ಶುದ್ದಿ ಬೈಲಮೂಲಕ ದೊಡ್ಡಜ್ಜನಲ್ಲಿಗೆ ಎತ್ತಿದ್ದು
ಅಳಿಯನ ಕಂಡಪ್ಪದ್ದೇ ಸತ್ಯಣ್ಣ ಹೇದ° – ಅದಾ ಗ್ರೇಡು ಬಂದ್ಸು ಗೊಂತಾವ್ತದ.. ಈಗಟ್ಟೇ ಬತ್ತ°
ಎಂತ ಮಾತಾಡಿಕ್ಕಲೂ ಗೊಂತಿಲ್ಲೆ, ಏವತ್ತೂ ಮುನ್ನಾಣ ದಿನ ಬತ್ತ ಈ ಅಳಿಯ ಈ ಸರ್ತಿ ಅಂದಿಗಪ್ಪಗ ಬಂದ್ಸಷ್ಟೇ .. ತಳಿಯದ್ದೆ ಬೆಳಿನೆಗೆ ಮಾಡ್ಯೊಂಡು ಸಜ್ಜಿಗೆ ಅವಲಕ್ಕಿ ಬಾಳೆ ಎದುರು ಕೂದ್ದರ್ಲಿ ವಿಷಯ ಅಲ್ಲಿಗೆ ತಣ್ಣಂಗೆ ಆತು 😀
**
8
ದೊಡ್ಡಜ್ಜನ ವೊರುಶಾಂತಕ್ಕೆ ಒಬ್ಬಬ್ಬನೇ ಬಂದು ಸೇರಿಗೊಂಡಿತ್ತಿದ್ದವು
ಎಡಕ್ಕಿಲ್ಲಿ ಬಂದ ಓ ಅಲ್ಯಾಣ ಭಾವಯ್ಯ ಒಬ್ಬ° ಅದೆಂತ್ಸೋ ಮಾತಾಡ್ಯೊಂಡು ಎಡೆಲಿ ಒಂದು ಹೇದ° –
ಸತ್ಯಣ್ಣ° ಇದಾ ಆಚೊರಿಶ ಜೋಯಿಸ ಹೇದ ಹೇದು ಈಶಾನ್ಯ ಮೂಲೆಲಿ ಕಾಟು ಕೆಸವು ಆವ್ತಲ್ಲಿ ಇಪ್ಪತ್ತೆರಡು ಕೋಲಿಲ್ಲಿ ಒಳ್ಳೆ ನೀರು ಸಿಕ್ಕುಗು ಹೇದು ಎಂಟಾಳು ಮಡಿಗಿ ಬಾವಿ ತೋಡಿದೆ
ಸುರುವಿಂಗೆ ಕಲ್ಪಣೆ ಕಲ್ಲಿನಾಂಗೆ ಇದ್ದತ್ತು . ಹತ್ತು ಕೋಲು ಇಳುದಪ್ಪಗ ಹೊಡಿ ಧೂಳು, ಬಿಟ್ಟಿದಿಲ್ಲೆ..ಜೋಯಿಸಣ್ಣ ಹೇದ್ದರ ನಂಬಿ ಮುಂದುವರ್ಸಿತ್ತು ಕೆಲಸ
ಇಪ್ಪತ್ತಾತು, ಇಪ್ಪತ್ತೆರಡಾತು ಹೊಡಿ ಧೂಳೇ. ಮತ್ತೂ ಸಿಕ್ಕುತ್ತರೆ ಸಿಕ್ಕಲಿ ಹೇದು ಮತ್ತೂ ನಾಕು ಕೋಲು ನಿಗುದೆ ಸತ್ಯಣ್ಣ. ಇಪ್ಪತ್ತಾರು ಕೋಲು ಅಡಿ ಹೋದರೂ ಪೊಟ್ಟು ಪಸೆ ಇಲ್ಲೆ. ಎಂತ ಮಾಡೆಕ್ಕಂಬಗ ಇವು ಹೇದ್ಸರ ಕೇಟು!
ಸತ್ಯಣ್ಣ ಹೇದ° – ನಿನ್ನತ್ರೆ ಮತ್ತೆ ಅಷ್ಟು ಗರ್ಪಲೆ ಆರು ಹೇದ್ದು. ಇಪ್ಪತ್ತೆರಡಕ್ಕೆ ನಿಲ್ಸಿ ಅವನತ್ರೆ ಕೇಳೇಕ್ಕಾತು. ಇಪ್ಪತ್ತಾರು ಮಾಡಿಕ್ಕಿ ಹೇದರೆ ಎಂತ ಗುಣ ಈಗ 😀
**
9
ಒರುಶಾಂತದ ಅಡಿಗೆಯ ವಿಶೇಷತೆ ಎಂತರ ಹೇದು ಗೊಂತಾಯೆಕ್ಕಾರೆ ಸತ್ಯಣ್ಣನತ್ರೆ ಕೇಳೆಕು.
ಸತ್ಯಣ್ಣ° ಹೇಳುಗು – ಬಾಕಿ ಜೆಂಬ್ರಂಗಳಲ್ಲಿಯಾದರೆ ಬೇಕಾದ ‘ಬಗೆ’ಗಳ ಜೆಂಬ್ರದ ದಿನವೋ ಮುನ್ನಾಣ ದಿನವೋ ಮಣ್ಣ ಮಾಡುಗಷ್ಟೆ. ಆದರೆ ವರ್ಷಾಂತಲ್ಲಿ ಹಾಂಗಲ್ಲ. ಒಂದು ಐಟಮ್ಮಿನ ಮೂರೂ ದಿನಕ್ಕೆ ಬೇಕಾದಷ್ಟು ಮೂರು ದಿನ ಮದಲೇ ಮಾಡಿ ಮಡುಗಲಕ್ಕು!
ಏವ ಬಗೆ ಅದು?
ಸುಕ್ರುಂಡೆ..!!
ಅಪ್ಪು, ಒರುಶಾಂತಕ್ಕೂ ಪತಂಗಕ್ಕೂ ಸುಕ್ರುಂಡೆ ಬೇಕೇಬೇಕು.
ಇಲ್ಲದ್ರೆ ಇದೆಂತ್ಸರ ಸುಕ್ರುಂಡೆ ಇಲ್ಲದ್ದ ಒರುಶಾಂತ ಪತಂಗ ಹೇಳುಗು ಬೆಟ್ಟುಕಜೆ ಬಾವ°!
ಇದರ ಒರುಶಾಂತದ ದಿನ ಮಾಡಿ ಪೂರೈಸ. ಬರೇ ಅಡಿಗೆಯೋರು ಮಾಂತ್ರ ಈ ಕೆಲಸಕ್ಕೆ ಹೆರಟ್ರೂ ಸಾಗ. ದೊಡ್ಡಜ್ಜನ ಒರುಶಾಂತದಾಂಗಿಪ್ಪ ದೊಡ್ಡ ಜೆಂಬ್ರಕ್ಕೆ ಅದ್ದಿಟ್ಟು ಹಾಕಿದ್ದು ಬೇರೆ, ಹಾಕದ್ದು ಬೇರೆ, ಬಳುಸಲೆ ಇಷ್ಟು-ಕಳಿಯಬಾರದ್ದವಕ್ಕೆ ಕಟ್ಟಿಕೊಡ್ಲೆ ಅಷ್ಟು – ಹೀಂಗೆಲ್ಲ ಲೆಕ್ಕಾಚಾರ ಹಾಕಿರೆ ಕಮ್ಮಿಲಿ ಏನಿಲ್ಲದ್ದರೂ 750-800 ಸುಕ್ರುಂಡೆ ಆದರೂ ಆಯೆಕ್ಕು.
ಇಷ್ಟು ದೊಡ್ಡ ಪ್ರಮಾಣಲ್ಲಿ ಸುಕ್ರುಂಡೆ ತಯಾರಾಯೆಕ್ಕಾರೆ ಅದಕ್ಕೆ ಮಗಳಕ್ಕೊ ಅಳಿಯಂದ್ರು ಇತ್ಯಾದಿಯಾದವರು ಬಂದು ಸೇರಿ ಕೈ ಸೇರ್ಸಿರೇ ಅಕ್ಕಷ್ಟೆ.
ಹಾಂಗೆ ಸತ್ಯಣ್ಣ ಒಂದರಿ ಸಭಗೆ ಬಂದು ನೋಡಿದ ಹೇಂಗೆ ಬರೇಕ್ಕಾದವು ಎಲ್ಲ ಬಂದವೋ, ಬೆಲ್ಲದ ಪಾಕ ಮಾಡ್ಳಕ್ಕೋದು
“ಮೂಡ ಹೊಡೆಂದ ಒಬ್ಬ, ಪಡು ಹೊಡೆಂದ ಒಬ್ಬ ಬಿಟ್ಟು ಬಾಕಿ ಬರೆಕ್ಕಾದವು ಬೈಂದವು” ಹೇದಿಕ್ಕಿ ಅಡಿಗೆ ಕೊಟ್ಟಗ್ಗೆ ಹೋದ° ಅಡಿಗೆ ಸತ್ಯಣ್ಣ° 😀
**
10
ಒರುಶಾಂತದ ಮುನ್ನಾಣ ದಿನ ಹೊತ್ತೋಪಗ ಹೇದರೆ ಇರುಳು ಅಡಿಗೆ ಸತ್ಯಣ್ಣ ದೊಡಾ ಪಾತ್ರಲ್ಲಿ ಬೆಲ್ಲ ಪಾಕ ಮಾಡಿ ಅದಕ್ಕೆ ಹೊದಳಹೊಡಿ ಎಳ್ಳು ಇತ್ಯಾದಿ ಹಾಕಿ ಬೆರುಸಿ ತಂದು ಹೆರ ಚಾವುಡಿಲಿ ಮಡುಗಿದ.
“ಬನ್ನಿ ಅಣ್ಣೋ.. ಇದಾ ಏ ಅಕ್ಕೋ, ಇದಾ ಏ ಅಬ್ಬೋ.. ನಿಂಗಳೂ ಬನ್ನಿ ಕೈ ಸೇರ್ಸಿ..” ಹೇದ° ಅಡಿಗೆ ಸತ್ಯಣ್ಣ ಸುಕ್ರುಂಡೆ ಕಟ್ಳಾತು ಹೇಳ್ವ ಸೂಚನೆ ಕೊಡ್ತಾಂಗೆ.
ಅಲ್ಲೆ ಇಲ್ಲೆ ಅಂತೇ ಕೂದು ಪಟ್ಟಾಂಗ ಹೊಡೆತ್ತಾ ಇದ್ದಿದ್ದ ಅಣ್ಣಂದಿರು ಹೇದರೆ ಬಾವಂದ್ರು, ಅಕ್ಕಂದಿರು, ದೊಡ್ಡ ಆದ ಪುಳ್ಳ್ಯಕ್ಕೊ ಸುಕ್ರುಂಡೆ ಕಳಕ್ಕೆ ಬಂದು ಸತ್ಯಣ್ಣನೊಟ್ಟಿಂಗೆ ಸೇರಿಯೊಂಡವು.
ಅಲ್ಲೇ ಆಚಿಗೆ ಪುಳ್ಳರುಗಳ ಸಂತೆ. ಅವರ ಗೌಜಿ ಗದ್ದಲ ಆಗಾಣಿಂದ ನೆಡೆತ್ತಾ ಇದ್ದು. ಸುಕ್ರುಂಡೆ ಕಟ್ಟಿಂಡು ಕೂದ ಒಬ್ಬ ಭಾವಯ್ಯ – “ಯೇ ಮಕ್ಕಳೇ, ನಿಂಗೊ ಹೀಂಗೆ ಅಂತೇ ಚೆರಪ್ಪಿಂಡು ಕೂಪ್ಪ ಬದಲು ಆರಾರು ಲಾಯಕಲ್ಲಿ ಪದ ಹೇಳಿ, ನೋಡುವೊ..” ಹೇದ. ದೊಡ್ಡಜ್ಜನ ಮನೆಲಿ ಪದ ಹೇಳ್ತ ಮಕ್ಕೊಗೆ ಏನೂ ಕಮ್ಮಿ ಇಲ್ಲೆ. ದೊಡ್ಡಜ್ಜನ ಸಣ್ಣ ತಮ್ಮನ ದೊಡ್ಡ ಮಗಳು ‘ಸಬ್ಜಿಲ್ಲೆ ಕಲೋಲ್ಸವ’ಲ್ಲಿ ಪ್ರೈಸುದೆ ತೆಕ್ಕೊಂಡು ಬಯಿಂದಿದಾ! ಚಕ್ಕನಾಟಿ ಕೂದೊಂಡು ಸುರುಮಾಡಿತ್ತು ‘ಚಲಮೇಲರಾ ಸಾಕೇತ ರಾಮಾ…’ ತ್ಯಾಗರಾಜಸ್ವಾಮಿಯ ಕೃತಿಯ ಮಾರ್ಗಹಿಂದೋಳ ರಾಗಲ್ಲಿ ಚೆಂದಕೆ ಹೇಳಿ ಮುಗುಶುವನ್ನಾರ ಎಲ್ಲೋರು ತಳಿಯದ್ದೆ ಕೂದು ಕೇಳಿದವು
ಪದ ಮುಗುದಪ್ಪಗ ಸತ್ಯಣ್ಣ ಬಾಯಿತೆಗದ. “ಅಪ್ಪೊ ಕೂಸೆ, ಅಂಬಗ ಎಂಗೊ ಇಲ್ಲಿ ಸುಕ್ರುಂಡೆ ಮಾಡ್ತಾ ಇಪ್ಪದು, ನಾಳಂಗೆ ಅಷ್ಟು ಬಗೆಗೆ ತಯಾರು ಮಾಡ್ತಾ ಇಪ್ಪದು ಎಲ್ಲ ಸುಮ್ಮನೆ ಆತನ್ನೆ?!” ಹೇದ.
ಕೂಸಿಂಗೆ ತಲೆಬುಡ ಅರ್ಥ ಆಯಿದಿಲ್ಲೆ. “ಎಂತರ ಸತ್ಯಮಾವ ನಿಂಗೊ ಹೇಳುದೂ..??” ಕೂಸು ರಾಗ ಎಳದತ್ತು.
“ಅಲ್ಲ, ಮತ್ತೆ ನೀನೆಂತಕೆ ಸೊಳೆ ಮೇಲಾರ ಸಾಕಾತೊ ರಾಮಾ…. ಇಷ್ಟೊತ್ತು ರಾಗ ಎಳದ್ದದು?” – ಕೇಟ ಅಡಿಗೆ ಸತ್ಯಣ್ಣ° 😀
ಸತ್ಯಣ್ಣನ ಕುಶಾಲಿಂಗೆ ಅಲ್ಲಿದ್ದೋರು ಹ್ಹೊ ಹ್ಹೊ ಹ್ಹೋ ಹೇದು ಬಿದ್ದು ಬಿದ್ದು ನೆಗೆಮಾಡಿದವೇನೋ ಸಮ…. , ಸುಭಗಣ್ಣ ಮಾಂತ್ರ ಬಾಯಿಗೆ ಹೆಗಲ ತೋರ್ತು ಅಮರ್ಸಿ ಹಿಡ್ಕೊಂಡು ಚಪ್ಪರದ ಹೇರ ಹೋದವು ಮತ್ತೆ ಬಪ್ಪಗ ಸುಕ್ರುಂಡೆ ಎಲ್ಲ ಕಟ್ಟಿ ಆಗಿತ್ತಡ 😀
**
*** 😀 😀 😀 ***
ಕೂಸುಗಳ ಅಲ್ಯಾಣ ಅಜ್ಜ°ಒಂದೊಂದು ‘ಗಡಿ’ಗೆ ಕೊಟ್ಟದು, ‘ದಿಕ್ಕಂಗೆ’ ಕೊಟ್ತದಲ್ಲನ್ನೆ! ಮಾಣಿ ಮನೆ ಹೆಸರು ನೆಂಪಾಗದ್ದರೆ ಹೇಳ್ತವನ್ನೆ- ‘ಎಲ್ಲಿಗೋ ಒಂದು ದಿಕ್ಕಂಗೆ ಕೊಡುದು’ ಹೇಳಿ!!
ಸುಭಗಣ್ಣ ಚಪ್ಪರಂದ ಹೆರ ಹೋಪಾಗ ಹೆಗಲಿನ ತೋರ್ತಿನ ಬಾಯಿಗೆ ಅಮರ್ಸಿ ಹಿಡ್ಕೊಂಡದು ಸುಕ್ರುಂಡೆ ಬಾಯಿಂದ ಬೀಳದ್ದಾಂಗೆಯೋ ಅಲ್ಲ, ಆರಿಂಗೂ ಕಾಂಬಲಾಗ ಹೇಳಿಯೋ?
ಅಂತೂ ವರ್ಶಾಂತ ಚಿಂದಕ್ಕೆ ಕಳ್ತು ಅಲ್ಲದಾ? ‘ಸೊಳೆಮೇಲಾರ’ವೂ ರುಚಿ…..ಆಯಿದನ್ನೆ!
ಸುಭಗಣ್ಣನ ಮಾವನ ವರ್ಷಾಂತ ರೈಸಿದ್ದು.ಹರೇ ರಾಮ.
ಅಂಬಗ ಈಗಳೂ ಆ ಚಿಮ್ಣಿಎಣ್ಣೆ ಗೇಸು ಲೈಟು ಅಲ್ಲಿ ಇದ್ದೋ?
( “ಎಡಿಯಪ್ಪಾ ಎಡಿಯ ನಿಂಗಳೊಟ್ಟಿಂಗೆ…!”)
ಇದೆಂತ? 29ನೆ ಕಂತಿಲಿ ಸುರೂವಾಣ ಒಪ್ಪ ಕೊಟ್ಟೋರಿಂಗೆ ಬತ್ತಿ ಮಡುಗಿದ್ದೋ?
ವರ್ಷಾಂತ ವಿಶೇಷಾಂಕ ರೈಸಿದ್ದು ಚೆನ್ನೈಭಾವ.ಕುಮಾರ ಭಾವನೂ ಸಿಕ್ಕಿತ್ತಿದ್ದವು.