ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ)

April 7, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ)

(ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹವ್ಯಕರ ಪಡೆನುಡಿಗಳ ಸಂಗ್ರಹ ಮತ್ತು ಅಧ್ಯಯನ)

ಸಂಪಾದಕರು : ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ & ಡಾ. ಹರಿಕೃಷ್ಣ ಭರಣ್ಯ

ಪ್ರಕಾಶಕರು : ಹವ್ಯಕ ಅಧ್ಯಯನ ಕೇಂದ್ರ , ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) – ಬೆಂಗಳೂರು.Nudi samskriti - padenudikosha

ಪ್ರಥಮ ಮುದ್ರಣ & ಬಿಡುಗಡೆ : 2005

ಅರ್ತಿಕಜೆ ಮಾವನ ಹವ್ಯಕ ಕೃತಿಗಳ ಪೈಕಿ ಹವ್ಯಕ ಗಾದೆಗಳು ಹೇಳ್ವದರ ಪರಿಚಯ ನಾವಿಲ್ಲಿ ಇತ್ತೀಚಗೆ ಮಾಡ್ಯೊಂಡತ್ತಪ್ಪೋ?

ಅದೇ ಕ್ರಮಲ್ಲಿ ಇಂದು ಇನ್ನೊಂದು ಇದು. ಅರ್ತಿಕಜೆ ಮಾವನೂ ಭರಣ್ಯ ಮಾವನೂ ಸೇರಿಗೊಂಡು ಸಂಪಾದಿಸಿದ ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ) ಹೇಳ್ವ ಕೃತಿಯ ನಾವಿಲ್ಲಿ ಪರಿಚಯಿಸುತ್ತ ಇದ್ದು.

ಸುದೀರ್ಘ ಇತಿಹಾಸ ಇಪ್ಪ ಕನ್ನಡದ ಉಪಭಾಷೆಯಾಗಿಪ್ಪ ಹವಿಗನ್ನಡವು ಹಳೆಗನ್ನಡ ಮತ್ತೆ ನಡುಗನ್ನಡ ಸೊಗಡಿಂದ ಕೂಡಿಪ್ಪದು ಗಮನಾರ್ಹ. ಇದು ಅದರ ಹಿರಿಮೆ ಹೇದೂ ಹೇಳ್ಳಕ್ಕು. ಹವಿಗನ್ನಡಲ್ಲಿಯೂ ಪ್ರಾದೇಶಿಕ ಭೇದ ಇಪ್ಪದು ಅಭ್ಯಸನೀಯ. ಸಾಹಿತ್ಯ ಹೇಳ್ಸು ಸಮಾಜವ ಪ್ರತಿಬಿಂಬುಸುವ ಒಂದು ಸುವರ್ಣ ದರ್ಪಣ ಹೇದು ತಿಳುದೋರು ಹೇಳ್ತವು. ದಕ್ಷಿಣ ಕನ್ನಡ, ಕಾಸರಗೋಡು ಹವ್ಯಕ ಭಾಷೆಗಳಲ್ಲಿಪ್ಪ ಸತ್ವವ ಪ್ರಕಾಶಕ್ಕೆ ತಪ್ಪ ನಿಟ್ಟಿಲ್ಲಿ ಅರ್ತಿಕಜೆ ಮಾವನೂ ಭರಣ್ಯಮಾವನೂ ಸೇರಿಗೊಂಡು ಮಾಡಿದ ಒಂದು ಸಣ್ಣ ಪ್ರಯತ್ನ ಈ ನುಡಿ ಸಂಸ್ಕೃತಿ (ಹವ್ಯಕ ಪಡೆನುಡಿ ಕೋಶ) ಹೇಳ್ವ ಕೃತಿ.

ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥನಾಗಿದ್ದು ನಿವೃತ್ತನಾದ ಅರ್ತಿಕಜೆ ಮಾವನ ಕಿರುಪರಿಚಯ ನಾವು ಕಳುದ DSC_6428ಭಾಗಲ್ಲಿ ನೋಡಿದ್ದು. ಹಾಂಗೇ ಮದುರೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥನಾಗಿ ಮತ್ತೆ ನಿವೃತ್ತಿ ಹೊಂದಿದ ಡಾ. ಹರಿಕೃಷ್ಣ ಭರಣ್ಯ ಬೈಲ ಒಡನಾಟಲ್ಲಿ ಅಭಿಮಾನಲ್ಲಿ ಇಪ್ಪೋರೆ. 2004ರ ಹವಿಗನ್ನಡ ಸೂರಿ ಪ್ರಶಸ್ತಿ ಪುರಸ್ಕೃತರಾದ ಇವು ಹವ್ಯಕ ಅಧ್ಯಯನ ಕೇಂದ್ರದ ಹವಿಗನ್ನಡ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದವು.  ಭರಣ್ಯ ಮಾವ° ರಚಿಸಿದ ಕವನ, ನಾಟಕ, ಕಾದಂಬರಿ ಇತ್ಯಾದಿಗಳಲ್ಲಿ  ಹವ್ಯಕ ನಾಟಕ- ‘ಹೀಂಗೊಂದು ಮದುವೆ’ (1990), ‘ಬದ್ಧ’(1991), ‘ಪರಶುರಾಮ ಕ್ಷೇತ್ರೇ ಗೋಕರ್ಣ ಮಂಡಲೇ’(1992),  ಹವ್ಯಕ ಕಾದಂಬರಿ  – ‘ದೊಡ್ಡಜಾಲು’ (1996), ಧ್ವನಿಸುರುಳಿ – ‘ಪಾಲುಪಂಚಾಯತಿಕೆ’ (1996) ಕೃತಿಗೊ ಇಲ್ಲಿ ಸ್ಮರಣೀಯ. ಇದಲ್ಲದ್ದೆ ‘ಈ ನೆಲದ ಕಂಪು’ ‘ಮಧುರೆಯ ನೆನಪುಗಳು’, ‘ಸಾವಿರದೊಂದು ಗೆಣಸಲೆ’ (2003),  ‘ಪೊಲಿ’ (ತುಳು ಮುತ್ತುಳು) ಇಲ್ಲಿ ಉಲ್ಲೇಖನೀಯ.   ಇದಲ್ಲದ್ದೆ ಅರ್ತಿಕಜೆ ಮಾವನೂ ಭರಣ್ಯ Dr Harikrishna Bharanya 02ಮಾವನೂ ಸೇರಿ ಸಂಪಾದಿಸಿದ  ‘ಹವ್ಯಕ ಜನಪದ ಗೀತೆಗೊ’ (ಪ್ರಕಟಣಗೆ ಸಿದ್ಧ), ಈ ‘ಹವ್ಯಕ ಪಡೆನುಡಿ ಕೋಶ’ ಕಾರ್ಯಂಗೊ ಸ್ತುತ್ಯರ್ಹ. ಕನ್ನಡ, ತಮಿಳು, ಮಲಯಾಳ, ತುಳು, ಹಿಂದಿ, ಆಂಗ್ಲ ಭಾಷೆಲಿ ಪಾಂಡಿತ್ಯಯಿಪ್ಪ ಮಕ್ಕಳೊಟ್ಟಿಂಗೆ ಮಕ್ಕಳಾಟಿಗೆ, ಪ್ರಬುದ್ಧರೊಟ್ಟಿಂಗೆ ಅಷ್ಟೇ ಪ್ರಬುದ್ಧತೆಲಿ ವ್ಯವಹರುಸುವ ಈ ಭರಣ್ಯ ಮಾವ ಅತೀ ಸರಳ ಸಜ್ಜನ ವ್ಯಕ್ತಿ ಹೇಳ್ವದು ಹೆಮ್ಮೆಯ ವಿಷಯ. ಇವರೊಟ್ಟಿಂಗೆ ಮಾತಿಂಗೆ ಸುರುಮಾಡಿರೆ ‘ಕಸ್ತಲಾತು ಇನ್ನು ಉಂಡಿಕ್ಕಿ ಹೋಪಲಕ್ಕು’ ಹೇದಮತ್ತೇ ಅಂದಾಜಿ ಅಪ್ಪದು – ‘ಹೋ! ಹೊತ್ತು ಸುಮಾರು ಆತು ಮಾತಾಡ್ಯೊಂಡು ಕೂದ್ದು’ – ಹೇದು.

ಅರ್ತಿಕಜೆ ಮಾವನೂ ಭರಣ್ಯಮಾವನೂ ಸೇರಿಗೊಂಡು ಸಂಪಾದಿಸಿದ ಈ ‘ನುಡಿ ಸಂಸ್ಕೃತಿ’  (ಹವ್ಯಕ ಪಡೆನುಡಿ ಕೋಶ) ಹವ್ಯಕ ಭಾಷಾ ಸಾಹಿತ್ಯಲ್ಲಿ ಅತೀ ಮುಖ್ಯ ಕೃತಿ ಹೇದೇ ಹೇಳ್ಳಕ್ಕು.  ಸಾಮಾನ್ಯವಾಗಿ ಮಾತಿಲ್ಲಿ ಅಭಿಪ್ರಾಯ-ಅನಿಸಿಕೆಗಳ ವ್ಯಕ್ತಪಡುಸುವಾಗ ಹೊಸತ್ತಾದ ರೂಪವ ಅಭಿವ್ಯಕ್ತ ಮಾಡ್ತಾಂಗೆ ಅಥವಾ ಪರಿಣಾಮಕಾರಿಯಾಗಿ ಹೇಳ್ತಾಂಗೆ ಪ್ರಯೋಗುಸುವ ಪದಂಗಳ ರೀತಿಯ ‘ಪಡೆನುಡಿ’ / ‘ನುಡಿಗಟ್ಟು’ ಹೇದು ಹೇಳ್ಸು. ಮಾತಿಲ್ಲಿ ಹಾಸ್ಯ, ವ್ಯಂಗ್ಯಂಗಳ ತೋರ್ಪಡುಸಲಕ್ಕು, ನೇರಕ್ಕೆ ಹೇಳ್ಳಾಗದ್ದರೆ ಬೇರೆ ಬೇರೆ ವಿಧಾನಂದ, ಬುದ್ಧಿವಂತಿಕೆಂದ ಹೊಸವ ವಿಶಿಷ್ಟ ರೀತಿಯ ಪ್ರದಪ್ರಯೋಗಲ್ಲಿ ‘ನುಡಿಗಟ್ಟುಗೊ’ ಬಳಕೆಯಪ್ಪದರ ಗಮನುಸಲಕ್ಕು. ಪಡೆನುಡಿ/ನುಡಿಗಟ್ಟು ಇಲ್ಲದ್ದ ಭಾಷೆ, ಜೆನ,  ಕ್ಷೇತ್ರವೇ ಇಲ್ಲೆ ಹೇಳ್ಳಕ್ಕು. ಅಷ್ಟ್ರಮಟ್ಟಿಂಗೆ ಅವುಗಳ ಬಳಕೆ ಸಹಜ ಸ್ವಾಭಾವಿಕವಾಗಿ ಹಾಸುಹೊಕ್ಕಾಗಿ ಇದ್ದು.

ಮಾತಿಲ್ಲಿ ಹೆಚ್ಚು ಪರಿಣಾಮಕಾರಿಯಪ್ಪದಕ್ಕೆ ಬೇಕಾಗಿ ಪಡೆನುಡಿಗೊ ಸಹಜವಾಗಿಯೇ ಬಪ್ಪದು ಹೇಳ್ತಾಂಗೆ ಇವಕ್ಕೆ ವ್ಯಾಕರಣ ಶಾಸ್ತ್ರಂಗಳ ಕಟ್ಟುಪಾಡುಗೊ ಇಲ್ಲೆ. ಮಡಿಮೈಲಿಗೆಯೂ ಇಲ್ಲೆ. ಆಯಾ ಸಂದರ್ಭ, ಸನ್ನಿವೇಶಂಗೊಕ್ಕೆ ಬೇಕಾದಾಂಗೆ ಔಚಿತ್ಯಪೂರ್ಣವಾಗಿ ಬಳಕೆ ಅಪ್ಪಾಂತದ್ದು. ಅಷ್ಟಪ್ಪಗ ಅದರ ಪರಿಣಾಮವೂ ರಜಾ ಕೊಟಂಙನೆ ಇರ್ತು. ಕೆಲವೊಂದರಿ ಬಿಡುಸಾಡಿಯಾಗಿ ಹೇಳ್ಳೆ ಎಡಿಯದ್ದರೆ ಪಡೆನುಡಿಲಿ ಹೇದಪ್ಪಗ ಒಗ್ಗರಣೆ ರಜಾ ಕಡ್ಪಕ್ಕೆ ನಾಟುತ್ತು. ನಿಗೂಢವಾಗಿ, ಗುಟ್ಟಿಲ್ಲಿ ಹೇಳ್ಳೆ, ಓರಗೆ ಹೆಟ್ಳೆ ಈ ಪಡೆನುಡಿಗೊ ಉಪಯೋಗಿ ಆವ್ತು. ನುಡಿಗಟ್ಟು ಹೇದರೆ ಭಾಷಾ ಶರೀರವ ಚೆಂದಕ್ಕೆ ನೆಲೆಗೊಳುಸಿ, ಹೊಸವ ಚೈತನ್ಯ ಹೇದು ಮುಳಿಯ ತಿಮ್ಮಪ್ಪಯ್ಯ ಅಜ್ಜ° ಹೇಳುತ್ತವು (ನಾಡೋಜ ಪಂಪ ಪುಟ 259). ಇದು ಬರೇ ಪಂಡಿತಂಗೊಕ್ಕೆ ಮಾಂತ್ರ ಸೀಮಿತವಾಗಿಲ್ಲದ್ದೆ ಜನಸಾಮನ್ಯರೂ ಆಡ್ಳೆಯೋಗ್ಯವಾಗಿದ್ದು.

ಪ್ರಸ್ತುತ ಸಂಗ್ರಹಲ್ಲಿ ದಕ್ಷಿಣ ಕನ್ನಡ ಹಾಂಗೂ ಕಾಸರಗೋಡು ಪ್ರದೇಶದ ಹವ್ಯಕರಲ್ಲಿ ಹೆಚ್ಚಾಗಿ ಬಳಕೆಯಪ್ಪ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಪಡೆನುಡಿಗಳ ಅಧ್ಯಯನ ಮಾಡ್ಳಾಯಿದು. ಅನುಕೂಲಕ್ಕಾಗಿ ಈ ನುಡಿಗಟ್ಟುಗಳ ಹೀಂಗೆ ವಿಂಗಡಿಸಿದ್ದವು –

ಕ್ರಿಯಾವಿಶೇಷಂಗೊ –

ಈ ವಿಭಾಗಲ್ಲಿ ನುಡಿಗಟ್ಟುಗೊ ಕ್ರಿಯೆಂದಾಗಿ ಬೇರೆ ಅರ್ಥವ ಕೊಡುತ್ತು. ಈ ಪದಂಗಳಿಂದ ಕ್ರಿಯಾಪದದ ಪ್ರತ್ಯಯ ತೆಗದರೆ ವಿಶೇಷ ಅರ್ಥಂಗೊ ಹೊಮ್ಮ ಹೇಳ್ತದೂ ಸತ್ಯವೆ. ಸಂತೋಷ, ಅಭಿಲಾಷೆ, ಅತಿಯಾಸೆ, ಅಸಹಾಯಕತೆ, ಬೈಗಳು ಇತ್ಯಾದಿ ಭಾವ ಪ್ರದರ್ಶನಂಗಳ ಇಲ್ಲಿ ಬೇರೆ ಬೇರೆ ರೀತಿಲಿ ನೋಡ್ಳಕ್ಕು. ಅಂಗಾಲ್ಪು ಬಿಡ್ಸು, ರಾವು ಬಿಡ್ಸು, ಕೊದಿ ಹಾಕುಸ್ಸು, ಕೊಡಿಕ್ಕಾಲ್ಲಿ ನಿಂಬದು, ಕಣ್ಣು ಮಡುಗುಸ್ಸು, ನೋಕ ಹಾಕುಸ್ಸು… ಅತ್ಯಾಸೆ ಭಾವವ ಬಿಂಬಿಸಿರೆ , ಕೈಕಾಲು ಬಿಡ್ಸು, ಕೈಕಾಲು ಬಡಿಸ್ಸು, ಕೈ ಮೊಗಚ್ಚುಸ್ಸು, ತೊಡಿಕಚ್ಚುಸ್ಸು ಇತ್ಯಾದಿಗೊ ಅಸಹಾಯಕತೆಯ ತೋರುಸುತ್ತು. ಹೆದರಿಗೊಂಡಪ್ಪಗ ಪೆರ್ಜೀವ ಹಾರುಸ್ಸು, ಪುಕುಳಿಲಿ ಪಸೆ ಆರುಸ್ಸು ಇತ್ಯಾದಿಗೊ ಆದರೆ ಪಿಸುರಿಂಗೆ ಹಲ್ಲುಮುಟ್ಟೆ ಕಚ್ಚುಸ್ಸು ಇತ್ಯಾದಿಗೊ. ಬೈವಲೆ ಕಣ್ಣುಮೂಗು ಮೂರೆಣುಸು, ತಲಗೆ ಕಿಚ್ಚುಕೊಡು, ಹೊಳಗೆ ಹಾರು, ಚರ್ಮ ಸೊಲಿ, ಕೈಕಾಲು ಮುರಿ, ಸಹಸ್ರನಾಮಾರ್ಚನೆ ಮಾಡು ಇತ್ಯಾದಿಗೊ ಬಳಕೆಲಿ ಇದ್ದು. ಅನ್ಯಾಯ ಹಾಂಗೂ ಹಿಂಸೆ ಎತ್ತಿ ತೋರುಸಲೆ ಎಮ್ಮೆಕಣ್ಣ ತೋಡು, ಕಚ್ಚಿ ಬಲುಗು, ಕವುಂಚಿ ಮೊಗಚ್ಚಿ ಮಾಡು, ಚೋಲಿ ಬಲುಗು ಇತ್ಯಾದಿಗಳ ಹೇಳುಸ್ಸು ಗಮನುಸಲಕ್ಕು. ಚೊಕ್ಕಕೆ ಬೈಯೆಕ್ಕಾರೆ ಕುಂಡೆ ಚೋಲಿ ಎಳೆ, ಕೊತ್ತಾಳಿಕೆಲಿ ಏತು, ಗ್ರಾಚಾರ ಬಿಡುಸು, ಹದ ಮಾಡು ಇತ್ಯಾದಿಗೊ.  ಚಾಡಿ ಹೇಳ್ತದಕ್ಕೆ ಕೆಮಿ ಉರುಗುತ್ಸು, ಕೆಮಿಗೆ ಬೆರಟಿ ಸುರಿ, ಕೆಮಿ ತುಂಬ ಕುತ್ತಿ ಕೊಡು ಇತ್ಯಾದಿ. ಲಂಚ ಕೊಡ್ತಲ್ಲಿ ಕೈ ಬೆಶಿ ಮಾಡು, ಕೈಕೂಲಿ ಕೊಡು, ನಕ್ಕಲೆ ಕೊಡು ಹೇದು ಹೇಳ್ತ ಕ್ರಮ. ಮೋಸ /ವಿಶ್ವಾಸ ಘಾತುಕತನಕ್ಕೆ ಅಬ್ಬಗೆ ಮನುಗು, ಒಳಹಾಕು, ಕೈಕೊಡು, ಕೊರಳು ಕೊಯಿ, ಗುಳುಂಕಾಯ ಸ್ವಾಹ, ನಕ್ಕಿ ನಕ್ಕಿ ಎಲುಗು ಮುರಿ, ಹೊಂಡತೆಗೆ ಮುಂತಾಗಿ ಹೇಳ್ತವು. ಜಿಪುಣತನಕ್ಕೆ ಕುಂಡಗೆ ಬೆರಳು ಮಡಗು, ಹೊಟ್ಟಾಗೆ ಕಟ್ಟು, ಒಣಕ್ಕೆಂದ ನಾರು ತೆಗೆ, ಹೇಲಿಂದ ಹೆರ್ಕು ಇತ್ಯಾದಿ. ಶಾರೀರಿಕ ಅಸ್ಥಿತಿಗೆ ಕೆರೆ ತೂಂಬು ಬಿಡು, ಕೊಲೆಕಟ್ಟು, ಒಣಕ್ಕಟೆ ಕಟ್ಟು, ಹೊಟ್ಟೆಮೂಗು ನೋಡು ಇತ್ಯಾದಿ ಪದಬಳಕೆ ಗಮನುಸಲಕ್ಕು. ಕಾಲು ಅಗಲ್ಸು, ಕಟ್ಟಕಡಿ, ತಡಮ್ಮೆ ಹಾರು, ಹೊಟ್ಟೆ ಬರುಸು ಇತ್ಯಾದಿಗೊ ಅನೈತಿಕ /ಲೈಂಗಿಕ ವಿಚಾರಂಗಳಲ್ಲಿ ಹೇಳ್ತವು.

ಅಡರು ತೆಗೆ, ಅಟ್ಟಕ್ಕೇರುಸು, ಅಗಳು ಹಾರು, ಅಡ್ಡ ಮನುಗು, ಎರುಗು ಹರವದು, ಎಂಜಲು ನಕ್ಕುವದು, ಎಡೆಕ್ಕಾಲೆಡೆಲಿ ನುಗಿವದು, ಒಟ್ಟೆ ಅಡಪ್ಪು, ಒಡ್ಡೋಲಗ ಮಾಡು, ಕಣ್ಣ ತೋಡುವದು, ಕೆಮಿ ಕುತ್ತ ಅಪ್ಪದು, ಕೊಳ್ಳಿಗೆ ಕಾಲು ಮಡುಗು, ಜಳ್ಳ ಒಚ್ಚು, ಜೈಗಂಟೆ ಬಾರ್ಸು, ಜೊಟ್ಟು ಕೈಲಿ ಹಿಡಿವದು, ತೆಗಲೆ ಹಾರುವದು, ಪುರಾಣ ಬಿಚ್ಚುವದು, ಪುಸ್ತಕ ಕಟ್ಟುವದು, ಬಾಯಿತೊರುಸುವದು, ಬಿತ್ತಿಂಗೆ ಮಡುಗುವದು, ಬಿತ್ತು ರಟ್ಟುಸು, ಬೊಡಿಯಪ್ಪ ಅಪ್ಪದು, ಬೆಶಿ ಮುಟ್ಟುಸುವದು, ಮೂಗಿಲಿ ಬಾಯಿಲಿ ತಿಂಬದು, ಮೂರು ನಾಮ ಹಾಕುವದು, ಮೇಪು ಮಾಡುವದು , ವಾದ್ಯ ಉರುಗುವದು, ವಿಲೆವಾರಿ ಮಾಡುವದು ….. ಇತ್ಯಾದಿ ಇತ್ಯಾದಿ ಪದಂಗಳ ಈ ವಿಭಾಗಲ್ಲಿ ಕಾಂಬಲಕ್ಕು

ಕೆಲವೊಂದು ಪದಂಗೊ ಹತ್ರಾಣ ಇತರ ಭಾಷೆಂದಲೂ ಬಂದದರ ಗಮನುಸಲಕ್ಕು. ಪದ್ರಾಡು ಹೆಟ್ಟು, ನಟ್ಟ ತಿರುಗು, ತಾಪು ಮಾಡು, ಮಕ್ಕಾರು ಮಾಡು, ಬಲುಗಿ ಹಾಕು, ಕೋಂಗ್ರೆಸ್ಸು ಮಾಡು, ಕಮ್ಯೂನಿಸ್ಟ್ ಮಾಡು ಇತ್ಯಾದಿ  ಇತ್ಯಾದಿ. ಒಂದೊಂದರಿ ಒಂದೇ ಪದ ನಾಮ ಮತ್ತೆ ಕ್ರಿಯಾಪದವಾಗಿಯೂ ಬಳಕೆ ಅಪ್ಪದಿದ್ದು. ಅಡಕ್ಕೆ ಸೊಕ್ಕು, ಪುಕುಳಿ ಸೊಕ್ಕು ಇತ್ಯಾದಿ ಪ್ರಾಯದ ಸೊಕ್ಕಿನ ವ್ಯಕ್ತಪಡುಸಲೆ ಬಳಸುತ್ತವು.

ಹೇಳಿಕೆ / ಗಾದೆ / ಅಂತೆ ಇತ್ಯಾದಿ

ಗಾದೆಗೊಕ್ಕೂ ನುಡಿಗಟ್ಟುಗೊಕ್ಕೂ ಇಪ್ಪ ಸೂಕ್ಷ್ಮ ವ್ಯತ್ಯಾಸವ ಗುರುತುಸುವದು ಕಷ್ಟ. ಅದೇ ಹತ್ತಿ ಹದೇ ನೂಲು, ಅಬ್ಬೆ ಮಲೆ ಹಾಲು ಬಾಯಿಗೆ ಬಪ್ಪದು, ಊಟಕ್ಕಿಲ್ಲದ್ದ ಉಪ್ಪಿನಕಾಯಿ, ಕಂಬ್ಳಿಗೆ ಹಿಡುದ ಹೇಲು, ಗಾಡಿ ಎತ್ತು ಉಚ್ಚೊಯಿದ ಹಾಂಗೆ… ಇತ್ಯಾದಿಗೊ ಗಾದೆಗಳೂ ಅಪ್ಪು, ನುಡಿಗಟ್ಟುಗಳೂ ಅಪ್ಪು. ಅವುಗಳ ಹಿಂದೆ ಒಂದು ವಿಶೇಷವಾದ ಅರ್ಥ ಹಾಂಗೂ ನೀತಿ ಇರ್ತು. ಕೆಲವೊಂದು ಹೋಲಿಕೆ ಹೇಳ್ವಾಗ ಉಪ್ಪಿನಕಾಯಿ ಹಾಕಿದ ಹಾಂಗೆ, ಎಮ್ಮೆ ಉಚ್ಚು ಹೊಯ್ದ ಹಾಂಗೆ, ಎಲಿ ತಿಂದ ಹಾಂಗೆ, ಏಡು ಬಾಯಿ ಹಾಕಿದ ಹಾಂಗೆ, ಒಂದೂ ಅಲ್ಲದ್ದ ಹಾಂಗೆ, ಕಡ್ಡಿ ಮುರುದ ಹಾಂಗೆ, ನಾಯಿ ಬೀಲದ ಹಾಂಗೆ. ತೋರುತ್ತ ಮಟ್ಟಿಂಗೆ, ಕಾಕೆ ಕಾಲಿನ ಹಾಂಗೆ, ಬೇಳಗೆ ಮಣ್ಣು ಉದ್ದಿದ ಹಾಂಗೆ ಇತ್ಯಾದಿಗೆ ಸಂದರ್ಭಾನುಸಾರ ಸಾರ್ವಕಾಲಿಕವಾದ ಅರ್ಥವ ಪ್ರತಿಬಿಂಬುಸುತ್ತು. ಇನ್ನು ಕೆಲವು ವಸ್ತುಸ್ಥಿತಿಯ ಹೇಳ್ತ ಪದಂಗೊ – ಅಂಬಟೆ ಗೊರಟು, ಅಜ್ಜನ ಹುರಿಕ್ಕೆ, ಉರುಡಿಪರಡಿ, ಎರಟೆಬೆಳವು, ಏನುತಾನು, ಕಲಶವೋ ತರ್ಪಣವೋ, ಕಾಕೆ ಮೀಯಾಣ, ಕಾಸರ್ಕನ ಕೊಡಿ, ಕುಂಡಗೆ ಒರಳೆ ಬಪ್ಪದು, ಗಳಿಗ್ಗೆ ಒಂದು, ತೊಳಸಿ ಎರಕ್ಕಟೆ, ಬೆಳಿಕಾಕೆ, ಸೊಂಟ ಸೋಬಾನೆ, ಹಳೆ ಮರವು..  ಇತ್ಯಾದಿ ಪಡೆನುಡಿಗೊ ಬೇರೆ ಬೇರೆ ಸ್ಥಿತಿಯ ಹೆಚ್ಚು ಪರಿಣಾಮಕಾರಿಯಾಗಿ ಸೂಚುಸಲೆ ಬಳಸುವದರ ಕಾಂಬಲಕ್ಕು. ಉಪಯೋಗಕ್ಕೆ ಇಲ್ಲದ್ದರ ಅಂಬಟೆಕ್ಕಾಯಿ ಗೊರಟು, ಬೆಂದು ಕರಗಿ ಅಡಿಹಿಡುದರೆ ಅಗ್ಗಿತ್ತಾಯ ಬಪ್ಪದು ಇತ್ಯಾದಿಗೊ ನಾವು ನಿತ್ಯಜೀವನಲ್ಲಿ ಹೇಳ್ಸರ ಕಾಂಬಲಕ್ಕು .

ಅಂಡಿಕುಂಡಿ ಇಲ್ಲದ್ದು, ಅಜ್ಜಿ ಪುಣ್ಯ, ಅಪ್ಪಚ್ಚಿ ಬರೆ ಕಡಪ್ಪ, ಆಟಿಗೊಂದರಿ ಅಮಾಸೆಗೊಂದರಿ, ಆರಪ್ಪನ ಗೆಂಟು, ಅಟಿ ತಿಂಗಳ ಬೆಶಿಲಿನ ಹಾಂಗೆ, ಆಕಾಶವೆ ಹರುದು ಬೀಳುವ ಹಾಂಗೆ, ಆಕಾಶಕ್ಕೆ ಏಣಿ ಮಡುಗುವದು, ಉಪ್ಪಿನಕಾಯಿ ಹಾಕಿದ ಹಾಂಗೆ, ಉಳ್ಳಾಲ ಪೇಟೆ ತೋರುಸುವದು, ಎಚ್ಚರಿಗೆ ಅಪ್ಪಗ ಉದಿ ಅಪ್ಪದು, ಎದ್ದು ಹೋದ ಹಾಂಗೆ, ಏನಕ್ಕೇನಾರು ಮಾಡುವದು, ಎಂಕು ಪಣಂಬೂರಿಂಗೆ ಹೋದ ಹಾಂಗೆ, ಎಂಜಲು ಕೈಲಿ ಕಾಕೆ ಓಡ್ಸದ್ದ ಜಾತಿ, ಕಣ್ಣು ಮೋರೆ ಇಲ್ಲದ್ದೆ ಬಡಿವದು, ಕತ್ತೆ ಕಂಡಿದೆಯೋ?!, ಕಬ್ಬಿಣಕ್ಕೆ ಕೊಟ್ಟ ನೀರು, ಕಲೆಕ್ಟರನ ಹಾಂಗೆ, ಕೋಳಿ ಒರಕ್ಕಿನ ಹಾಂಗೆ, ಗಾಣದೆತ್ತಿನ ಹಾಂಗೆ, ಗುಡ್ಡಗೆ ಮಣ್ಣ ಹೊತ್ತ ಹಾಂಗೆ, ಗಾಮಟೆ ಬೆಡಿ, ಗಾಂಧಾರಿ ಮೆಣಸಿನ ಹಾಂಗೆ, ಬೇಳಗೆ ಮಣ್ಣು ಉದ್ದಿದ ಹಾಂಗೆ, ಮಂಡೆ ಸರ್ಬತ್ತು ಅಪ್ಪದು, ಮೀಸೆ ಕುತ್ತ ಅಪ್ಪದು, ಮಲಾಮತ್ತು ಅಪ್ಪದು, ಬೆಲ್ಲದ ಮಂಡಗೆ ಹಾಂಗೆ, ಮುಂಗುಲಿ ಮುಸುಡಿನ ಹಾಂಗೆ, ಮೋರೆ ಕುಂಞಿ ಅಪ್ಪದು, ಮೂಗಿಂಗೆ ಎಳವಲೂ ಸಾಲ, ಸಮುದ್ರಕ್ಕೆ ಇಂಗು ಕರಡುವದು, ಸುತ್ತಿದ ವಸ್ತ್ರಲ್ಲೆ ಹೆರಡುವದು, ಹಸಿ ತುರ್ಕನ ಹಾಂಗೆ, ಹೊಟ್ಟೆಯ ಹೆಗ್ಳ° ಕೆರವದು.. ಇತ್ಯಾದಿಗಳ ಈ ವಿಭಾಗಲ್ಲಿ ಸಂಪಾದಿಸಿದ್ದವು

ದ್ವಂದ್ವಾರ್ಥ

ಒಂದೇ ಪದ ಹಲವು ಸಂದರ್ಭ-ಸನ್ನಿವೇಶಲ್ಲಿ ವಿಸ್ತೃತಾರ್ಥವನ್ನೋ ದ್ವಂದ್ವಾರ್ಥವನ್ನೋ ಕೊಡ್ತ ಕ್ರಮ ಇದ್ದು. ಬಡಿತ್ತದಕ್ಕೆ ಅರ್ಪು, ಏತು, ಮೇಡು , ನೀಡು, ಬಾರ್ಸು ಮಡಗು, ಹೆಟ್ಟು ಇತ್ಯಾದಿಗೊ. ಹಾಂಗೇ ಜಾರ್ಸು, ಪೊಕ್ಕುಸು, ರಟ್ಟುಸು, ಪೀಂಕುಸು ಇತ್ಯಾದಿಗೊ ದ್ವಂದ್ವಾರ್ಥ ಕೊಡ್ತ ಪದಂಗೊ. ಉರ್ಪುಸ್ಸು, ನೇಂಟುಸ್ಸು ಹಾಂಗೇ ಅನ್ಯಭಾಷೆಂದ ಆಮದು ಆದ ಪದಂಗೊ ನೂಕಡ್ಯೆ, ಪೀಂಕು, ಪೊಡುಂಬು, ಕೊಯಂಙು, ಆರ್ವಾಡು, ಚೇರ್ಚೆ, ಪೊರ್ಪು ಈ ವಿಭಾಗಲ್ಲಿ ಹೇಯ್ದವು.

ಅಕ್ಕಚ್ಚು ಕಾಪಿ, ಅಕ್ಕಚ್ಚು ಮಂಡಗೆ, ಒರಪ್ಪುವದು, ಓತಪ್ಪರ, ಎಕ್ಕಸಕ್ಕ ಅಪ್ಪದು, ಆಡಕ್ಕಡ ಸುದ್ದಿ, ಉರುಪ್ಪುವದು, ಗುರುಟುವದು, ಚಟಾಯ್ಸುವದು, ಗೇಂದುತ್ತದು, ಧರ್ಮ ದೆಂಡ, ಜೋಡು ಮರ್ಯಾದಿ, ಕೃಷ್ಣಾರ್ಪಣ ಹೇಳುವದು, ಗಾಂಡು ಗೌಜಿ ಅಪ್ಪದು, ತೊಳಚ್ಚುವದು, ಬಳ್ಳಿ ತೆಕ್ಕೊಂಬದು, ಮೃಗ ಸರಿ ಇಪ್ಪದು, ಪೊರ್ಪುವದು, ಪೂರ್ವಾಷಾಡ, ಸೊರುಗುವದು… ಇತ್ಯಾದಿಗೊ ಈ ವಿಭಾಗಲ್ಲಿ ಸಂಪಾದಿಸಿದ್ದವು.

ಸ್ವಭಾವ – ಮಾನಸಿಕ / ದೈಹಿಕ ಸ್ಥಿತಿ

ಅರೆದಡೆ, ಬಡ್ಡುಣ್ಣಾಯ, ಸುತ್ತು ಕಮ್ಮಿ.. ಇತ್ಯಾದಿಗೊ ಮಾನಸಿಕ ಸ್ಥಿತಿಯ ಪ್ರತಿಬಿಂಬುಸುತ್ತದಾದರೆ, ಅಂಗಡಿ ದೂರ, ತೋಟ ದೂರ, ಕೊಟ್ಟೆಕ್ಕಣ್ಣ..  ಇತ್ಯಾದಿ ಪದಂಗೊ ದೈಹಿಕ ಸ್ಥಿತಿಯ ಹೇಳುತ್ತು. ಅಜ್ಜಿಪುಳ್ಳಿ, ಅರಣೆ ಜಾತಿ, ಎರಡು ನಾಲಗೆ, ನಿಧಾನ ಬಳ್ಳಕ್ಕುರಾಯ, ಸುಬ್ರಹ್ಮಣ ಕಣ್ಣೋಜಿ… ಇತ್ಯಾದಿ ಪ್ರದಪ್ರಯೋಗಂಗೊ ವ್ಯಕ್ತಿಯ ಸ್ವಭಾವವ ಹೇಳುತ್ತು. ವ್ಯಕ್ತಿಯ ಗುಣವಿಶೇಷವ ಹೇಳ್ವಾಗ ಅಶನ ತಿಂತ ಜಾತಿ, ಆದಿತ್ಯವಾರ ವಕೀಲ°, ಉಂಗಿಲು ಹಾಕಿದವ°, ಏಕೂ ಬೇಡದ್ದವ°, ಕಚ್ಚೆಬಟ್ಟ°, ಕಾರುಬಾರಿ ಇತ್ಯಾದಿಗೊ. ತೀರಾ ಅಸಹಾಯಕ ಸ್ಥಿತಿಯ ಹೇಳ್ಳೆ ಟೆಟ್ಟೆಟ್ಟೆ, ಬೆಬ್ಬೆಬ್ಬೆ ಮುಂತಾದ ಪಡೆನುಡಿಗೊ ಸಮರ್ಥವಾಗಿ ಪ್ರತಿಬಿಂಬುಸುತ್ತು.

ಆರು ತಿಂಗಳ್ಳಿ ಹುಟ್ಟಿದ್ದು, ಅರೆಪಿಸ್ಕಟೆ, ಈಗಳೋ ಮತ್ತೆಯೋ, ಎರೆಪ್ಪು ಬುದ್ಧಿ, ಒತ್ತು ಗುರಿಕ್ಕಾರ, ಒತ್ತೆಪ್ಪೋಕ, ಕಿಸಬಾಯಿದಾಸ, ಕಿಟ್ಟಿ ಕೈನಾಂದದ್ದ ಜಾತಿ, ನೆಳವು ಅಟ್ಟುವ ವಕೀಲ, ಪಗೇಲ, ಗಡಿಬಿಡಿ ಸುಬ್ರಾಯ, ಗಟ್ಟಿಕುಳವಾರು, ಬೇಡು ಪರ್ದೇಶಿ, ಬಾಯಿ ಬೊಂಬಾಯಿ, ಬಾನಮೂಸೇಲ°, ಬಸುಂಬಟೆ, ಪಿತ್ತುಕ್ಕುಂಡಿ, ಪಾತಾಳ ಮೈರಾವಣ, ವಾದ್ಯಾಸುರ°, ಹಿತ್ತಾಳೆ ಕೆಮಿ, ಸೊನೆಪಿಂಡ°, ಹೆಣ ಹೊರ್ಲೂ ಆಗದ್ದವ°, ಹೇಲಿಂದ ಹೆರ್ಕುವ ಜಾತಿ, ಹೇಮಾ ಹೇಮಿ, ಹೇದರೆ ಕೇಳದ್ದ ಜಾತಿ, ಹೊಡಿ ಬುರುಡೆ… ಇತ್ಯಾದಿಗೊ ಈ ವಿಭಾಗಲ್ಲಿ ಸಂಪಾದಿಸಿದ್ದವು.

ಸಂಪ್ರದಾಯ / ನಂಬಿಕೆ

ಸಂಪ್ರದಾಯಕ್ಕೆ ಸಂಬಂಧಿಸಿ ಬಳಕೆಲಿಪ್ಪ ಪಡೆನುಡಿಗೊ ಅಗ್ನಿಕಾರ್ಯ ಮಾಡುತ್ಸು, ಎಳ್ಳುನೀರು ಬಿಡುತ್ಸು, ರಾಮ ರಾಮ ಹೇಳುತ್ತು, ಸರ್ವಜ್ಞ, ಮನೆದೇವರು, ಸಹಸ್ರನಾಮ, ದೇವರ ಮಂಕಾಟ್ಸು, ಆಚಮನ, ಸಂಧ್ಯಾವಂದನೆ, ಕೈ ಚೆಂಡಿಮಾಡುತ್ಸು, ಕೊರಳಿಂಗೆ ಕಟ್ಟುತ್ಸು, ತಲಗೆ ಅಕ್ಕಿ ಕಾಳು ಹಾಕುತ್ಸು, ನಾಲ್ಕು ಕಾಲಪ್ಪದು, ಪಾಚದ ಊಟ, ಮುಂಡಾಸು ಕಟ್ಟುತ್ಸು ಇತ್ಯಾದಿಗೊ.

ಅತ್ತಾಳ ಉಂಬದು, ಅನುಪ್ಪತ್ಯ ತೆಗವದು, ಅಯ್ಯಂಗಾಯಿ ಒಡವದು, ಅರಣೆ ಮುಟ್ಟುವದು, ಅಸ್ತ್ರಾಯ ಫಟ್ ಅಪ್ಪದು, ಇಡಿಕ್ಕಾಯಿಗೆ ಕೈಹಿಡಿವದು, ಉದ್ಯಾಪನೆ ಮಾಡುವದು, ಬಲಿ ತೆಗವದು, ಎಣ್ಣೆ ಕೊಡುವದು, ಎಲೆ ಅಡಕ್ಕೆ ಮುಟ್ಟುವದು, ಏಕಾದಶಿ ಮಾಡುವದು, ಉರ್ಕು ಕಟ್ಟುವದು, ಎದುರುಗೊಂಬದು, ದರ್ಭೆಲಿ ಮನುಶುದು, ಕೊರಳಿಂಗೆ ಕಟ್ಟುವದು, ಕುದಿ ತಪ್ಪುವದು, ಕಟ್ಟಕಡಿವದು, ಕೈನ್ನೀರು ಭಟ್ಟ°, ನೂಕು ಕಾಪಿ, ಪುಷ್ಪಾಂಜಲಿ ಮಾಡುವದು, ಪಂಚಾಂಗ ಬಿಡುಸುವದು, ಭೂತ ಬಿರಿವದು, ಭವಂತಃ ಸರ್ವಜ್ಞಾಃ, ಮಾಯಿಪ್ಪಾಡಿಂಗೆ ಹೋದ ಜೆನ, ರಾಮಬಾಣ, ಹನ್ನೆರಡು ರಾಶಿಲಿ ಕಾಣದ್ದು, ಹಸ್ತ ಮುಟ್ಟಿಗೊಂಬದು, ಹರಹರ ಅಪ್ಪದು, ಹಣೆವಾರ ಹೇಳ್ಸೊದು….ಇತ್ಯಾದಿಗೊ ಈ ವಿಭಾಗಲ್ಲಿ ಸಂಗ್ರಹೀತವಾಗಿದ್ದು.

ಬಾಲಭಾಷೆ

ಸಣ್ಣ ಮಕ್ಕಳತ್ರೆ ಬಳಸುವ ಪದಂಗೊ ಬೆರಳು ಚೀಪುತ್ಸು, ದೋಂದ ಮಾಡುತ್ಸು, ತಾನೆ ತಾನೆ ಪುಟ್ಟು ಪುಟ್ಟು, ಚಾಮಿ ಚಾಮಿ, ಅಯ್ಯಯ್ಯ ಕೊಡುತ್ತದು, ಉಜ್ಜಿ ಉಜ್ಜಿ ಕಾಂಬು, ಕಾಕೆ ಕಚ್ಚಿಯೊಂಡು ಹೋಪದು, ಚಕ್ಕುಲಿ ಒತ್ತು, ಪೀಟ ಮಡುಗು, ತೋಂಪಟ ತೋಂಪಟ, ಕೊಂಬು ಉರುಗುವದು…  ಇತ್ಯಾದಿಗೊ ಬಾಲಭಾಷೆ ವಿಭಾಗಲ್ಲಿ ಸಂಪಾದಿಸಿದ್ದವು.

ಒಪ್ಪ ಕೊಡುವದು, ಉಪ್ಪಂಗೋಣಿ ಮಾಡುವದು, ಮಲೆ ಮೂಂಜುವದು, ರಾಗ ಎಳವದು, ಪೋಲಿ ಬರುಸುವದು, ದೊಂಡೆ ಸಿಗಿವದು, ಉಕ್ಕಾಚು ಉಕ್ಕಂಬೋಚು, ತಾರಮ್ಮಯ್ಯ ಇತ್ಯಾದಿಗೊ ಈ ವಿಭಾಗಲ್ಲಿ ನೇಲ್ಸಿದ್ದವು.

ಪ್ರೊ.ಮರಿಯಪ್ಪ ಭಟ್ಟರ ಶತಮಾನೋತ್ಸವದ ಸಂದರ್ಭಲ್ಲಿ ಅವರ ದಿವ್ಯಸ್ಮರಣೆಗೆ ಅರ್ಪಣೆಗೊಂಡ ಈ ಕೃತಿ ಹವ್ಯಕರೆಲ್ಲರೂ ಅಗತ್ಯ ಕೊಂಡು ಓದೆಕ್ಕಾದ ಪುಸ್ತಕ ಹೇಳ್ತರ್ಲಿ ಎರಡು ಮಾತಿಲ್ಲೆ. ಹವ್ಯಕ ಭಾಷೆಯ ಒಳಿಶಿ ಬೆಳಶುವಲ್ಲಿ ನಮ್ಮ ಬೈಲಿನೊಟ್ಟಿಂಗೆ ಸೇರಿಗೊಂಡ ಅರ್ತಿಕಜೆ ಮಾವ ಹಾಂಗೂ ಭರಣ್ಯಮಾವಂಗೆ ಈ ಸಂದರ್ಭಲ್ಲಿ ಹರೇ ರಾಮ.

~

ಈ ಪುಸ್ತಕ ಅಡಿಗೆ ಸತ್ಯಣ್ಣಂಗೆ ಕಂಡು ಭಾರೀ ಕೊಶಿಯಾಗಿ ಎನಗೊಂದು ಇರಳಿ ಹೇದು ಕೊಂಡೋಯ್ದನಡ. ನಿಂಗೊಗೋ?

~

ಈ ಪುಸ್ತಕ ಬೇಕಾದೊರು – ಪ್ರಕಾಶಕರು, ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು, 101, 11ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು 560 003

ಅಥವಾ, ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ (ಚೆನ್ನೈ) 9444071563 ಇವರ ಸಂಪರ್ಕುಸಲಕ್ಕು.

 

 **

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಲಕ್ಷ್ಮಿ ಜಿ.ಪ್ರಸಾದ

  ಈ ಪುಸ್ತಕಲ್ಲಿ ನಮ ಭಾಷೆಯ ಅದು ನುಡಿಗಳ ದೊಡ್ಡ ಸಂಗ್ರಹವೇ ಇದ್ದು ಲಾಯಕ ಇದ್ದು ,ಕಳೆದ ವರ್ಷ ಹವ್ಯಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀಯುತ ನಾರಾಯಣ ಶಾನುಭಾಗರು ಎನಗೆ ಸುಮಾರು 8 ಅಮೂಲ್ಯವಾದ ಹವ್ಯಕ ಕೃತಿಗಳ ಕಳುಹಿಸಿ ಕೊಟ್ಟಿತ್ತಿದವು,ಅದರಲ್ಲಿ ಇದು ಕೂಡ ಒಂದು ,ಇತ್ತೀಚಿಗೆ ಪುರಸೊತ್ತು ಮಾಡಿಗೊಂಡು ಪೂರ್ತಿ ಓದಿದ್ದೆ ಭಾರೀ ಲಾಯಕ ಇದ್ದು ಹವ್ಯಕರೆಲ್ಲರೂ ಓದಕ್ಕಾದ ಪುಸ್ತಕ ಇದು ,ಈ ಪುಸ್ತಕ ಅಡಿಗೆ ಸತ್ಯನ್ನಂಗು ಕೊಶಿ ಆತು ಅನ್ನೇ! ಅಂಬಗ ರಂಗನ್ನಂದೆ ತೆಕ್ಕೊಂಗು ಇನ್ನು !

  [Reply]

  VA:F [1.9.22_1171]
  Rating: 0 (from 0 votes)
 2. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ನಮಸ್ತೇ ಚೆನ್ನೈ ಭಾವ,ಬಾರೀ ಒಳ್ಳೆ ಕೆಲಸ ಮಾಡ್ತಾ ಇದ್ದಿ.ತು೦ಬಾ ಸ೦ತೋಷ ಆತಿದಾ!ಆತ್ಮೀಯ ನಮ್ಮ ಅರ್ತಿಕಜೆ ಶ್ರೀಕೃಷ್ಣಣ್ಣನ ಹವ್ಯಕ ಸಾಹಿತ್ಯದ ನಾನಾ ಮುಖಗ೦ಳ ಪರಿಚಯ ಬೈಲಿ೦ಗೆ ಮಾಡ್ತ ಇಪ್ಪದು ಸಾರ್ಥಕ ಕಾರ್ಯ.ಅದಕ್ಕಾಗಿ ನಿ೦ಗೊಗೆ ಇತ್ಲಾಗಿ೦ದ ಹಾರ್ದಿಕ ಅಭಿನ೦ದನೆಗೊ+ ಧನ್ಯವಾದ೦ಗೊ.ಅವರ ಒಳುದ ಎಲ್ಲಾ ಹವ್ಯಕ ಸಾಹಿತ್ಯ ಕೃತಿಗಳ ಪರಿಚಯವೂ ಬೈಲಿ೦ಗೆ ಸುದ್ದಿಯಾಗಿ ನಿ೦ಗಳ ಲೆಕ್ಕಣಿಕೆಲಿ ಪ್ರಕಟವಾಗಲಿ ಹೇದು ಆಶಿಸುತ್ತೆ.ಆಗದಾ? ಹರೇ ರಾಮ..

  [Reply]

  VN:F [1.9.22_1171]
  Rating: 0 (from 0 votes)
 3. ಕೆ. ವೆಂಕಟರಮಣ ಭಟ್ಟ

  ಅಕ್ಕು ಭಾವಾ, ಆನು” ಕಣ್ಣೋಜಿ” ಹೇಳಿ ನಿಂಗೊ “ಪರಂಚುವದು” ಬೇಡ. “ಓತಾಪರ” ಪೈಸೆ ಎಷ್ಟು ಆವುತ್ತು ಹೇಳಿ. “ಸುಂಕದವನತ್ರೆ ಸುಖಃ- ದುಖಃ ಎಂತ್ಸರ ?” ಆನುದೆ ಒಂದು ಪುಸ್ತಕ ತೆಕ್ಕೋಳ್ತೆ. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಶ್ಯಾಮಣ್ಣಪಟಿಕಲ್ಲಪ್ಪಚ್ಚಿಬೊಳುಂಬು ಮಾವ°ವಾಣಿ ಚಿಕ್ಕಮ್ಮಕಳಾಯಿ ಗೀತತ್ತೆಪವನಜಮಾವನೀರ್ಕಜೆ ಮಹೇಶಚೆನ್ನಬೆಟ್ಟಣ್ಣಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆvreddhiವಿಜಯತ್ತೆವಿದ್ವಾನಣ್ಣವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಗೋಪಾಲಣ್ಣಡಾಮಹೇಶಣ್ಣಶಾ...ರೀಕಜೆವಸಂತ°ಬೋಸ ಬಾವವೇಣಿಯಕ್ಕ°ಅಜ್ಜಕಾನ ಭಾವಕೊಳಚ್ಚಿಪ್ಪು ಬಾವಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ