- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಬೆಳಕು- ಹೇಮಮಾಲಾ ಮೈಸೂರು
‘ಮಾ ಜಿ ಚಾಯ್ ಲೀಜಿಯೆ….’ ಹೇಳಿ ಹಾಲು ಹಾಕದ್ದ ಬೆಶಿ ಕರಿಚಾಯವ ಪಿಂಗಾಣಿಯ ಕಪ್ಪಿಲಿ ಹಾಕಿ ತಂದು ಕೊಟ್ಟ ಜಗನ್ ಎಂಬ ಎಳೆ ಜವ್ವನಿಗ. ಶಾಂತತ್ತೆಗೆ ಹಾಲು ಹಾಕದ್ದ ಚಾಯ ಯಾವಾಗಲೂ ಮೆಚ್ಚ. ಆದರೆ ಇಲ್ಯಾಣ ತಂಪು ಹವೆಗೆ, ಓಮದ ಹುಡಿ, ರಜ ಸಕ್ಕರೆ ಹಾಕಿದ ಕರಿಚಾಯದ ರುಚಿಯೂ ಪರವಾಗಿಲ್ಲೆ, ಹೊಟ್ಟೆಗೂ ಹಿತ ಆವುತ್ತು ಹೇಳಿ ನಿನ್ನೆ-ಮೊನ್ನೆ ಆಗಿ ಶಾಂತತ್ತೆ ಕಂಡುಕೊಂಡ ವಿಚಾರ. ಸ್ವೆಟರ್ , ಉಲ್ಲನ್ ಟೋಪಿ ಹಾಕಿಗೊಂಡು, ಬಾಲ್ಕನಿಲಿ ಎಳೆಬಿಸಿಲಿಂಗೆ ಮೈಯೊಡ್ಡಿ ಕೂದುಗೊಂಡು, ಚಾಯ ಕುಡ್ಕೊಂಡು ಸುತ್ತುಮುತ್ತಲು ನೋಡುಲೆ ಭಾರೀ ಖುಷಿ ಅಪ್ಪದು ಶಾಂತತ್ತೆಗೆ. ಈ ಜಾಗೆಲಿ ಅವು ಒಬ್ಬರೇ ಇಪ್ಪದು ಎರಡು ದಿನ ಆತು. ತಂಪಾದ ಪರಿಸರ. ಸುತ್ತಲೂ ಕಾಂಬ ಬೆಟ್ಟಗಳೊಟ್ಟಿಂಗೆ ಆಗಾಗ ಮುಚ್ಚಿ ಕಣ್ಣುಮುಚ್ಚಾಲೆ ಆಡುವ ಬೆಳಿಮಿಗಿಲಿನ ಸಡಗರ ದಿನವಿಡೀ ನೋಡಿದರೂ ಬೇಜಾರಾವುತ್ತಿಲ್ಲೆ. ಯಾವಾಗ ಮಳೆ ಬತ್ತು, ಯಾವಾಗ ಬೆಶಿಲು ಬತ್ತು ಹೇಳುಲೆಡಿಯ. ಕೇಸರಿ ಬಣ್ಣದ ವಸ್ತ್ರ ಸುತ್ತಿಗೊಂಡು ನೆಡಕ್ಕೊಂಡು ಹೋಪ ಸಾಧುಗೊ, ತಲೆಗೆ ಆಯತಾಕಾರದ ಪೆಟ್ಟಿಗೆಯ ಹಾಂಗಿಪ್ಪ ಬಣ್ಣದ ಟೋಪಿ ಹಾಕಿಗೊಂಡಿಪ್ಪ ‘ಪಹಾಡಿ’ ಜನಂಗೊ, ಸಲ್ವಾರ್ ಕಮೀಜ್ ನ ದುಪಟ್ಟವ ತಲೆಗೆ ಹೊದಿಸಿಗೊಂಡೇ ಇಪ್ಪ ಕೂಸುಗೊ, ಶಾಲೆಗೆ ಹೋಪ ಸಮಯಲ್ಲಿ ನಡೆಕ್ಕೊಂಡು ಹೋಪ ಯೂನಿಫಾರ್ಮ್ ಹಾಕಿದ ಮಕ್ಕೊ,ಅಪರೂಪಕ್ಕೆ ಕಾಂಬ ಜಾನುವಾರುಗೊ .. ಇವೆಲ್ಲ ಮಾರ್ಗಲ್ಲಿ ಉದಿಯಪ್ಪಗ ಕಾಂಬ ದೃಶ್ಯಂಗೊ.
ಮಧ್ಯಾಹ್ನದ ನಂತರ ಅದೇ ಮಾರ್ಗಲ್ಲಿ ಕೆಲಸ ಮಾಡಿ ಬಪ್ಪ ಜನಂಗೋ, ಸಣ್ಣ ಮಗುವಿನ ಬೆನ್ನಿಂಗೆ ಕಟ್ಟಿಗೊಂಡು ಬಪ್ಪ ಹೆಮ್ಮಕ್ಕೊ, ಹುಲ್ಲು ಹೆರೆದು ದೊಡ್ಡ ಬುಟ್ಟಿಗೆ ತುಂಬಿಸಿ, ಬುಟ್ಟಿಗೆ ಬಳ್ಳಿ ಕಟ್ಟಿ ಬೆನ್ನುಹೊರೆಯ ಹೊತ್ತುಗೊಂಡು ರಜ ಬಾಗಿ ನೆಡೆವ ಹೆಮ್ಮಕ್ಕೊ, ಅದೇ ರೀತಿ ಬೆನ್ನುಹೊರೆಲಿ ಸರಕು ಸಾಗಿಸುವ ಜವ್ವನಿಗರು ಕಾಣುತ್ತವು. ಖಾಲಿ ಇಪ್ಪ ಜಾಗೆಲಿ ಇಷ್ಟು ಜನಂಗೊ ಎಲ್ಲಿಂದ ಬಂದವಪ್ಪಾ, ಇವರ ಮನೆ ಎಲ್ಲಿಯೋ ಹೇಳಿ ಆಶ್ಚರ್ಯ ಆವುತ್ತು. ಆ ಬೆಟ್ಟಗಳಲ್ಲಿ ಅಲ್ಲಲ್ಲಿ ಸಣ್ಣಮನೆಗೊ ಇದ್ದು, ಆದರೆ ಮೆಟ್ಟಿಲು ಹತ್ತಿಯೇ ಹೋಯೆಕ್ಕಷ್ಟೆ. ಮೆಟ್ಟಿಲು ಇಲ್ಲದ್ರೂ ಸರಸರನೇ ಭಾರ ಹೊತ್ತುಗೊಂಡು, ಬೆಟ್ಟ ಹತ್ತುವದು ಇಲ್ಯಾಣ ಜನಕ್ಕೆ ಭಾರೀ ಸಲೀಸು, ಅನಿವಾರ್ಯ ಕೂಡ.
ಅದು ಬದರಿನಾಥ ಕ್ಷೇತ್ರಕ್ಕೆ ಹೋಪ ದಾರಿ ಆದ ಕಾರಣ ಟೂರಿಸ್ಟ್ ಬಸ್ಸುಗೊ, ವ್ಯಾನುಗೊ, ಕಾರುಗೊ ಮಾರ್ಗಲ್ಲಿ ಅತ್ಲಾಗಿ ಇತ್ಲಾಗಿ ಹೋಪದು ಕಾಣುತ್ತು. ಆದರೆ, ಬೆಂಗ್ಳೂರಿನ ಗಡಿಬಿಡಿ, ಗದ್ದಲಕ್ಕೆ ಹೋಲಿಸಿದರೆ ಇಲ್ಲಿ ದಿವ್ಯವಾದ ಶಾಂತಿ. ಯಾರಿಂಗೂ, ಎಂತದಕ್ಕೂ ಅರ್ಜೆಂಟೇ ಇಲ್ಲೆ. ಎಲ್ಲವೂ ನಿಧಾನ, ಸಾವಧಾನ. ಜನರೂ ಅಷ್ಟೆ. ಪಾಪದವು, ದಿನವಿಡೀ ಎಂತಾರು ಕೆಲಸ ಮಾಡಿಗೊಂಡಿಪ್ಪದು ಕಾಣುತ್ತು. ಅಪರಿಚಿತರೇ ಆದರೂ ಕಂಡಪ್ಪಗ ಮೋರೆಲಿ ಒಂದು ನೆಗೆ. ರಜ ಪರಿಚಯ ಆದರೆ ಎರಡೂ ಕೈಮುಗಿದು ‘ನಮಸ್ತೇ ಮಾಜಿ’ ಹೇಳಿ ಚೆಂದಕೆ ಮಾತಾಡುಸುತ್ತವು. ಎದುರು ಹರಿವ ಭಾಗೀರಥಿ ನದಿಗೆ ಮಾತ್ರ ಇಲ್ಲಿ ಭಾರಿ ಗಡಿಬಿಡಿ ಇಪ್ಪ ಹಾಂಗೆ ಕಾಣುತ್ತು. ಕಲ್ಲು ಕೊಟರೆಯ ಕೊಚ್ಚಿಗೊಂಡು ನಿರಂತರವಾಗಿ ಜುಳುಜುಳು ಶಬ್ದಮಾಡಿಗೊಂಡು ಹರಿತ್ತು.
ಹೊತ್ತೋಪಗ ಅದೇ ರಸ್ತೆಲಿ ಸಣ್ಣ ಅಂಗಡಿಗಳ ಎದುರು ಚಾಯ್ ಕುಡಿವ ಜನಂಗೊ ಅಲ್ಲಲ್ಲಿ ಕಾಣುತ್ತವು. ಕೆಲವರು ಸೌದಿ, ಕಾಗದ ಸೇರಿಸಿ ಕಿಚ್ಚು ಹಾಕಿ ಚಳಿ ಕಾಯಿಸುತ್ತವು. ತಂಪಾದ ಗಾಳಿಲಿ ಗೋಧಿ ರೊಟ್ಟಿ, ಸಬ್ಜಿ, ಪಕೋಡ, ಸಮೋಸದ ಪರಿಮಳ ತೇಲಿ ಬತ್ತು. ಹತ್ತರೆ ಇಪ್ಪ ‘ಯೋಗ ಬದರಿ’ ಮಂದಿರಲ್ಲಿ ಭಜನೆಯೋ, ಪೂಜೆಯೋ ಆವುತ್ತು. ಜನರ ಓಡಾಟ ಕಾಣುತ್ತು. ಎಂತಾ ಶಾಂತವಾದ ಜಾಗೆ ಇದು, ದೇವ ಭೂಮಿ ಇದು, ಉದಾಸಿನ ಅಪ್ಪಲೆ ಅವಕಾಶವೇ ಕೊಡದ್ದ ಪ್ರಕೃತಿ. ಭಾಗೀರಥಿಯ ಅಲೆಗಳ ನೋಡುತ್ತಾ ಇಪ್ಪ ಶಾಂತತ್ತೆಯ ತಲೆಲಿಯೂ ಆಲೋಚನೆಯ ಲಹರಿ ಎದ್ದತ್ತು.
ಹಿಮಾಲಯದ ಸೆರಗಿಲಿ, ಭಾಗೀರಥಿ ನದಿಯ ಕರೆಲಿಪ್ಪ ಪಾಂಡುಕೇಶ್ವರ ಎಂಬ ಹೆಸರಿನ ಊರು ಅದು. ಪ್ರಸಿದ್ಧ ಬದರಿನಾಥ ಕ್ಷೇತ್ರಕ್ಕೆ ಹೋಪ ದಾರಿಲ್ಲಿ ಸಿಕ್ಕುವ ಸಣ್ಣ ಪೇಟೆ. ಒಂದೇ ಮಾರ್ಗದ ಎರಡೂ ಹೊಡೆಲಿಯುದೆ ಪ್ರವಾಸಿಗರಿಂಗಾಗಿಯೇ ಕಟ್ಟಿಸಿದ ಸಣ್ಣ ಹೋಟೇಲ್ ಗೊ, ರೋಟಿ, ಚಾಯ್ ಮಾರುವ ಸಣ್ಣ ಅಂಗಡಿಗೊ, ಒಂದೆರಡು ಬೇಕರಿಗೊ ಇಷ್ಟೆ ಇಪ್ಪದು ಆ ಜಾಗೆಲಿ. ಯಾತ್ರಿಕರ ಅನುಕೂಲಕ್ಕಾಗಿ ಇಪ್ಪ 5-6 ರೂಮ್ ಗೊ ಇಪ್ಪ ಸಣ್ಣ ಹೋಟೆಲ್ ದೀಪಕ್ ಲಾಡ್ಜ್. ಬದರಿ-ಕೇದಾರನಾಥ ಪ್ರವಾಸಕ್ಕೆ ಹೇಳಿ ಹೆರಟ ಶಾಂತತ್ತೆಗೆ ಅನಿರೀಕ್ಷಿತವಾಗಿ ಈ ಹೋಟೆಲ್ ಲಿ ನಾಲ್ಕು ದಿನದ ಮಟ್ಟಿಂಗೆ ಒಬ್ಬನೇ ಉಳಕ್ಕೊಂಬ ಹಾಂಗಾತು.
ಆದ್ದದಿಷ್ಟು. ಬೆಂಗಳೂರಿಂದ ಹೊರಟ ತಂಡ ಅದು. ಸಣ್ಣ ಗ್ರೂಪ್ ಲಿ ಮಾತಾಡಿಗೊಂಡು, ಪ್ರೈವೇಟ್ ಟೂರಿಸ್ಟ್ ಸಂಸ್ಥೆಯ ಏರ್ಪಾಟಿನ ಮೂಲಕ ಬದರಿ, ಕೇದಾರನಾಥ ನೋಡಿಗೊಂಡು ಬಪ್ಪ ಹೇಳಿ ಹೊರಟ ಜನಂಗೊ. ಮಧ್ಯ ಪ್ರಾಯದವುದೆ, ಹಿರಿಯ ನಾಗರಿಕರುದೆ ಇದ್ದ ಗ್ರೂಪ್ ಆಗಿತ್ತು. ಹೆಚ್ಚಿನವಕ್ಕುದೆ ಮಕ್ಕೊ ದೊಡ್ಡ ಆಗಿ, ಮನೆಮಟ್ಟಿನ ಜವಾಬ್ದಾರಿ ಕಡಿಮೆ ಆಯಿದು. ಅವರಲ್ಲಿ ನಾಲ್ಕೈದು ಜನರಿಂಗೆ ತಮ್ಮ ಯಜಮಾನರು ಬದುಕಿಲ್ಲೆ, ಹೆಚ್ಚಿನವು ಕೆಲಸಲ್ಲಿದ್ದು ನಿವೃತ್ತಿ ಆದವು. ಪೆನ್ಶನ್ ಬಪ್ಪ ಕಾರಣ ಆದಾಯಕ್ಕೆ ತೊಂದರೆ ಇಲ್ಲೆ. ಮಕ್ಕೊ ದೂರದ ಊರುಗಳಲ್ಲಿ ಕೆಲಸಲ್ಲಿದ್ದುಗೊಂಡು ಇದ್ದುಗೊಂಡು ಒಂದೊಂದರಿ ಬತ್ತವಷ್ಟೆ. ಬಹುತೇಕ ಒಬ್ಬಂಟಿ ಜೀವನ. ಹೀಂಗಿಪ್ಪಗ ಅವರವರದ್ದೇ ಸಮಾನಾಸಕ್ತರ ಗ್ರೂಪ್ ಮಾಡಿಗೊಂಡು ಆಗಾಗ ತೀರ್ಥಯಾತ್ರೆ ಮಾಡಿಗೊಂಡು ಇದ್ದರೆ ಮನಸ್ಸಿಂಗೆ ಉಲ್ಲಾಸ ಆವುತ್ತು.
ಬೆಂಗಳೂರಿಂದ ವಿಮಾನಲ್ಲಿ ಡೆಹ್ರಾಡೂನ್ ವರೆಗೆ ಬಂದು, ಅಲ್ಲಿಂದ ಋಷಿಕೇಶಕ್ಕೆ ಕಾರಿಲಿ ಬಂದು ಎರಡು ದಿನ ಆಗಿತ್ತು. ಅಲ್ಲಿ ರಜ ಸುತ್ತಾಡಿ, ವಿಶ್ರಾಂತಿ ಮಾಡಿ ಮರುದಿನ ಹರಿದ್ವಾರಲ್ಲಿಪ್ಪ ಹಲವಾರು ಮಂದಿರಗೊಕ್ಕೆ ಭೇಟಿ ಕೊಟ್ಟು, ಗಂಗಾ ನದಿಲಿ ಮಿಂದು, ‘ ಹರಿ ಕಿ ಪೌರಿ’ಲಿ ನೆಡವ ಗಂಗಾರತಿಯನ್ನುದೆ ಮನಸಾರೆ ನೋಡಿ ಎಲ್ಲರೂ ಸಂತೋಷ ಪಟ್ಟಾತು. ಇರುಳು ಊಟ ಮಾಡಿಯಪ್ಪಗ ಪ್ರಯಾಣದ ಗೈಡ್ ಬಂದು, ನಾಳೆ ನಾವು ಬದರಿನಾಥಕ್ಕೆ ಹೋಪದು. ಇಡೀ ದಿನ ಪ್ರಯಾಣವೇ ಆವುತ್ತು. ಎಲ್ಲರೂ ಉದಿಯಪ್ಪಗ ಐದು ಗಂಟೆಗೆ ಲಗೇಜು ಸಮೇತ ರೆಡಿಯಾಗಿರೆಕ್ಕು ಹೇಳಿದ
ಎಲ್ಲರೂ ರೆಡಿಯಾಗಿ ಬಂದ ಮೇಲೆ ಮಿನಿಬಸ್ಸಿಲಿ ಹೊರಟವು. ದಾರಿಲಿ ಒಂದು ಕಡೆ ಚಾಯ, ತಿಂಡಿಗೆ ಹೇಳಿ ನಿಲ್ಲಿಸಿದವು. ಬಸ್ಸು ನಿಧಾನಕ್ಕೆ ಮುಂದೆ ಹೋವುತ್ತಾ ಇಪ್ಪಗ ಕಿಟಿಕಿಲಿ ಹೆರ ನೋಡಿಗೊಂಡಿದ್ದರೆ ಕಣ್ಣಿಂಗೆ ಹಬ್ಬ. ಎಲ್ಲಲ್ಲೂ ಬೆಟ್ಟಗಳೆ. ಅದರ ಅಲ್ಲಲ್ಲಿ ಮೋಡಗಳ ಮೆರವಣಿಗೆ. ದೂರಲ್ಲಿ ಕಾಂಬ ಸಣ್ಣಸಣ್ಣ ಮನೆಗೊ. ಮನೆಗೆ ತಾಗಿಗೊಂಡು ಗೋಧಿ, ಬಾರ್ಲಿ, ಸಾಸಮೆ, ಕಾಲಿ ಫ್ಲವರ್, ಕ್ಯಾಬೇಜು ಇತ್ಯಾದಿ ಬೆಳೆಸಿದ ಸಣ್ಣ ಗೆದ್ದೆಗೊ. ಅಲ್ಲಲ್ಲಿ ಬಣ್ಣಬಣ್ಣದ ಹೂಗಿನ ಗಿಡಂಗೊ. ದಾರಿಲಿ ಕಾಂಬಲೆ ಸಿಕ್ಕುವ ಚೆಂದದ ಜಾಗೆಗಳಲ್ಲಿ ಬಸ್ಸು ನಿಲ್ಲಿಸಿ ಪಟ ತೆಗೆವ ಸಂಭ್ರಮವೂ ಇದ್ದತ್ತು.
ಶಾಂತತ್ತೆ, ನಾಲ್ಕು ವರ್ಷಗಳ ಮೊದಲು ಯಜಮಾನರ ಜೊತೆಗೆ ಚಾರ್ ಧಾಮ್ ಯಾತ್ರೆ ಮಾಡಿ ಆಯಿದು. ಅಂಬಗಾಣ ಪರಿಸರಕ್ಕುದೆ ಈಗಂಗುದೆ ರಜ ವ್ಯತ್ಯಾಸ ಕಂಡತ್ತು. ಇತ್ತೀಚಿಗೆ, ಈ ಮಾರ್ಗವ ಡಬಲ್ ರಸ್ತೆ ಮಾಡುವ ಕೆಲಸ ನಡೆತ್ತಾ ಇದ್ದು. ಹಾಂಗಾಗಿ ಅಲ್ಲಲ್ಲಿ ಕಾಂಬ ಜೆ.ಸಿ.ಬಿ, ಟಿಪ್ಪರ್ ಗಳ ಕಂಡಪ್ಪಗ, ಈ ಸವಲತ್ತು ಬೇಕು ನಿಜ, ಆದರೆ ಜಾಗ್ರತೆ ಮಾಡದ್ರೆ ಪರಿಸರ ಹಾಳಕ್ಕು. ಹಾಂಗಾಗದ್ರೆ ಸಾಕು ಹೇಳಿ ಮನಸಾ ಪ್ರಾರ್ಥಿಸಿದವು.
ರುದ್ರಪ್ರಯಾಗ ಎಂಬಲ್ಲಿ ಅಲಕಾನಂದ ನದಿಯೂ ಮಂದಾಕಿನಿ ನದಿಯೂ ಸಂಗಮ ಆವುತ್ತು. ಎರಡೂ ನದಿಗಳ ನೀರಿನ ಬಣ್ಣ ರಜ ಬೇರೆ ಇಪ್ಪದು ಸ್ಪಷ್ಟವಾಗಿ ಕಾಣುತ್ತು. ನದಿಗೆ ಒಟ್ಟಾಗಿ ಹರಿವದರೆ ನೋಡುಲೆ ಚೆಂದ. ಇಲ್ಲಿ ನಾರದ ತಪಸ್ಸು ಮಾಡಿ ರುದ್ರವೀಣೆ ಪಡೆದ ಎಂಬ ನಂಬಿಕೆಯೂ ಇದ್ದು. ಅಲ್ಲಿಯೇ ಇಪ್ಪ ನಾರದ ಗುಡಿಗೆ ಭೇಟಿ ಕೊಟ್ಟು ಮೆಟ್ಟಿಲಿಳಿವಗ, ಅದೆಂತಾತೋ, ಕಾಲು ಜಾರಿದ ಹಾಂಗೆ ಆದದ್ದಷ್ಟೆ. ದಢಕ್ಕನೆ ಬಿದ್ದ ಶಾಂತತ್ತೆಗೆ ಮತ್ತೆ ಹೆಜ್ಜೆ ಹಾಕುಲೆ ಎಡಿಯದ್ದಷ್ಟು ಕಾಲು ಬೇನೆ ಸುರುವಾತು. ಒಟ್ಟಿಂಗೆ ಇಪ್ಪವರ ಸಹಾಯ ಪಡೆದು, ಕಾಲು ಮೋಂಟಿಸಿಗೊಂಡು ಬಸ್ಸಿಲಿ ಬಂದು ಕೂದಾತು. ಹಾಂಗಿಪ್ಪ ಜಾಗೆಗಳಲ್ಲಿ ಸರಿಯಾದ ಆಸ್ಪತ್ರೆಗಳೂ ಇಲ್ಲೆ. ಗೈಡ್ ನ ಹತ್ತರೆ ಹೇಳಿಯಪ್ಪಗ, ನಾವು ಇಂದು ಉಳಕೊಂಬ ಊರಿಲ್ಲಿ ಡಾಕ್ಟರ್ ಬಳಿ ಹೋಪ ಹೇಳಿದ.
ಹೊತ್ತಪ್ಪಗ ಕಾಲು ಪಾದ ರಜ ಬೀಗಿತ್ತು. ಬೇನೆಯೂ ಸುರುವಾತು. ಇದೊಳ್ಳೆ ಗ್ರಾಚಾರ ಆತನ್ನೆ ಹೇಳಿ ರಜ ಬೇಜಾರವೂ ಆತು. ಹೊತ್ತೋಪಗ ಪಾಂಡುಕೇಶ್ವರ ಎಂಬಲ್ಲಿ ಉಳಕೊಂಬ ವ್ಯವಸ್ಥೆ. ಹೋಟೆಲ್ ಲಿ ಎಲ್ಲರಿಂಗುದೆ ರೂಮ್ ಗಳ ಕೊಟ್ಟವು. ಗೈಡ್ ಶಾಂತತ್ತೆಯ ಕರಕ್ಕೊಂಡು ಹತ್ತರೆ ಇಪ್ಪ ಡಾಕ್ಟರ್ ಬಳಿ ಕರೆದುಕೊಂಡು ಹೋದ. ಪರೀಕ್ಷೆ ಮಾಡಿದ ಡಾಕ್ಟರ್ ಹೆಚ್ಚೆಂತ ತೊಂದರೆ ಆಯಿದಿಲ್ಲೆ. ರಜ ಬೇನೆ ಇಕ್ಕು, 3-4 ದಿನ ಪ್ರಯಾಣ ಮಾಡುವದು ಬೇಡ, ನೆಡವದು ಕಡಮ್ಮೆ ಮಾಡಿ ಹೇಳಿ, ಪಾದಕ್ಕೆ ಕ್ರೇಪ್ ಬ್ಯಾಂಡೇಜ್ ಕಟ್ಟಿ, ಕೆಲವು ಮಾತ್ರೆ ಕೊಟ್ಟ. ಅದರ ನೋಡಿದ ಮೇಲೆ ಶಾಂತತ್ತೆಗಿಂತ ಹೆಚ್ಚು ಸಹಪ್ರಯಾಣಿಕರಿಂಗೆ ಬೇಜಾರ ಆತು. ಛೆ, ಇಷ್ಟು ದೂರ ಬಂದು ಬದರಿ, ಕೇದಾರಕ್ಕೆ ಹೋಪಲೆಡಿಯದ್ದ ಹಾಂಗಾತನ್ನೆ ಹೇಳಿ.
‘ಎನಗೆ ಐದು ವರ್ಷ ಮೊದಲು ಯಜಮಾನರೊಟ್ಟಿಂಗೆ ಅಲ್ಲಿಗೆ ಹೋಗಿ ಆಯಿದು. ಹಾಂಗಾಗಿ ಬೇಜಾರ ಇಲ್ಲೆ. ಎನಗೆ ಹಿಮಾಲಯದ ಪ್ರಕೃತಿ ನೋಡುಲೆ ಇಷ್ಟ. ಹಾಂಗಾಗಿ ಪುನ: ಹೆರಟದು. ಆನು ಮೋಂಟಿಸಿಗೊಂಡು ಬಂದರೆ ನಿಂಗೊಗೂ ಆರಾಮವಾಗಿ ಹೋಗಿ ಬಪ್ಪಲೆ ಕಷ್ಟ ಅಕ್ಕು. ಆನು ಇಲ್ಲಿಯೇ ನಾಲ್ಕು ದಿನ ಇರುತ್ತೆ, ಹೇಂಗೂ ಇದೇ ದಾರಿಲಿ ವಾಪಾಸು ಬಪ್ಪದು ಅನ್ನೆ, ಅಂಬಗ ನಿಂಗಳೊಟ್ಟಿಂಗೆ ಸೇರಿದರೆ ಆತು. ಎನ್ನ ಬಗ್ಗೆ ಚಿಂತೆ ಮಾಡೆಡಿ, ನಿಂಗೊ ಲಾಯಕಿಲಿ ದೇವರ ದರ್ಶನ ಮಾಡಿಗೊಂಡು ಬನ್ನಿ’ ಹೇಳಿ, ಅವರೆಲ್ಲರ ಸಮಾಧಾನ ಮಾಡಿದವು. ಮತ್ತೆ ಗೈಡ್ ಹೋಟೆಲ್ ನವರತ್ರೆ ಬೇಕಾದ ವ್ಯವಸ್ಥೆ ಮಾಡಿದ. ಮರುದಿನ ಉದಿಯಪ್ಪಗ ಶಾಂತತ್ತೆಯ ಬಿಟ್ಟು ಉಳಿದವೆಲ್ಲ ಪ್ರಯಾಣ ಮುಂದುವರಿಸಿದವು.
ಆ ದಿನ ಬಹುತೇಕ ವಿಶ್ರಾಂತಿಲಿಯೇ ಇದ್ದು, ಹೋಟೆಲ್ ನವು ರೂಮಿಂಗೆ ತಂದು ಕೊಟ್ಟ ಊಟ-ತಿಂಡಿಯ ಸೇವನೆ ಮಾಡಿ ಆಗಾಗ ರೂಮಿನ ಕಿಟಿಕಿಯ ಹತ್ತರೆ ಬಂದು ಹೆರಾಣ ಪ್ರಕೃತಿ ಸೌಂದರ್ಯ ನೋಡಿಗೊಂಡು ಸಮಯ ಕಳದಾತು. ಯಾಕೋ ಆರಿಂಗೂ ಫೋನ್ ಮಾಡೆಕ್ಕು ಹೇಳಿ ಕಂಡತ್ತಿಲ್ಲೆ. ಮಗ, ಮಗಳು ಪರದೇಶಲ್ಲಿದ್ದವು. ಅವಕ್ಕೆ ಗೊಂತಾದರೆ, ನಿಂಗೊಗೆ ತಳಿಯದ್ದೆ ಮನೆಲಿ ಕೂಪಲಾವುತ್ತಿಲ್ಲೆಯ, ಎಂತಕೆ ದೂರಪ್ರಯಾಣ ಮಾಡುವದು ಎಂಬ ಬೈಗುಳ ಸಿಕ್ಕುಗಷ್ಟೆ.
ಹೊತ್ತೊಪಗ, ರೂಮಿನ ಹೆರ ಬಂದು , ರಸ್ತೆಲಿ ನಿಧಾನಕ್ಕೆ ನೆಡವ ಪ್ರಯತ್ನ ಮಾಡಿದವು. ಹೋಟೆಲ್ ನ ಪಕ್ಕಲ್ಲಿಯೇ ಒಂದು ಶೆಡ್ ಮನೆ ಕಂಡತ್ತು. ಅಲ್ಲಿ ಚೆಂದದ ಎರಡು ಕೂಸುಗೊ ಇಪ್ಪದರ ಶಾಂತತ್ತೆ ಗಮನಿಸಿದವು. ಮೆಲ್ಲಂಗೆ ಹೆಜ್ಜೆ ಹಾಕಿಗೊಂಡು ಅಲ್ಲಿಗೆ ಹೋಗಿ, ಆ ಕೂಸುಗಳ ಹತ್ತರೆ ತನಗೆ ಗೊಂತಿಪ್ಪ ಅರ್ಧಂಬರ್ಧ ಹಿಂದಿಲಿ ಮಾತಾಡಿದವು. ಅವರಲ್ಲಿ ಒಂದು ಕೂಸು ರೋಶನಿ, ಇನ್ನೊಂದು ಜ್ಯೋತಿ. ಒಂದು ಸಣ್ಣ ರೂಮ್. ಆಲ್ಲಿಯೇ ಇಪ್ಪ ಅಡುಗೆ ಸಾಮಾನು ಪಾತ್ರೆಗೊ. ಇಬ್ಬರುದೇ ಎಂತದೋ ಪುಡಿಗಳ ಪ್ಯಾಕ್ ಮಾಡಿಗೊಂಡಿತ್ತಿದವು. ಅದೆಂತದು ಕೇಳಿಯಪ್ಪಗ ‘ಜಡಿಬೂಟಿಯಾ ಕಾ ದವಾ’ ಹೇಳಿತ್ತು. ಯಾವುದೋ ಗಿಡಮೂಲಿಕೆಗಳ ಹುಡಿ ಅದು. ಅವು ವಿಪರೀತ ಶ್ರಮಜೀವಿಗೊ, ಕಷ್ಟದ ಬದುಕು ಹೇಳಿ ನೋಡುವಗಲೇ ಗೊಂತಾತು. ಅವರ ಅಪ್ಪ, ಅಮ್ಮ ಹರಿದ್ವಾರದ ಹತ್ತರೆ ಇಪ್ಪ ಊರಿಲಿ ಯಾವುದೋ ಸಣ್ಣ ಕೆಲಸ ಮಾಡಿಗೊಂಡು ಇದ್ದವು. ಪ್ರತಿವರ್ಷ, ಸೀಸನ್ ಲಿ ಗುಂಪಾಗಿ ಇಲ್ಲಿಗೆ ಬಂದು, ಹಿಮಾಲಯದ ಕಾಡುಗಳಲ್ಲಿ ಸಿಕ್ಕುವ ಗಿಡಮೂಲಿಕೆಗಳ ಹುಡುಕಿ, ಒಣಗಿಸಿ, ಹುಡಿಮಾಡಿ, ಮಾರುವ ಕೆಲಸ ಅಡ. ರೋಶನಿ ಅಕ್ಕ, ಜ್ಯೋತಿ ತಂಗೆ. ಇಬ್ಬರೂ ಇಪ್ಪತ್ತು ವರ್ಷದ ಆಸುಪಾಸಿನವು. ಇಬ್ಬರೂ ಭಾರಿ ಚೆಂದದ ಗೌರವರ್ಣದ ಕೂಸುಗೊ. ಶಾಂತತ್ತೆ ಕಾಲು ಮೋಂಟಿಸುವುದರ ನೋಡಿ, ಎಂತಾತು ಹೇಳಿ ಕಾಳಜಿಲಿ ಮಾತಾಡಿದವು. ಯಾವ ಊರಿನವು ಇನ್ನೆಷ್ಟು ದಿನ ಇಲ್ಲಿ ಇರುತ್ತಿ ಇತ್ಯಾದಿ ಕೇಳಿದವು.
‘ಮೈ ಆಪ್ ಕ ಪೇರ್ ಮಸಾಜ್ ಕರೂಂ’ ಕೇಳಿತ್ತು ಜ್ಯೋತಿ.
‘ಹಾಂ..ಜರಾ ದರ್ದ್ ಹೈ..’
ಜ್ಯೋತಿ ನಿಧಾನಕ್ಕೆ ಶಾಂತತ್ತೆಯ ಪಾದಕ್ಕೆ ಹಾಕಿದ ಕ್ರೇಪ್ ಬ್ಯಾಂಡೆಜ್ ತೆಗೆದು, ಯಾವುದೋ ತೈಲವ ಅಚ್ಚುಕಟ್ಟಾಗಿ ಪಾದಕ್ಕೆ ಉಜ್ಜಿ ಮಸಾಜ್ ಮಾಡಿ, ಪುನ: ಲಾಯಕಿಲಿ ಬ್ಯಾಂಡೇಜ್ ವಸ್ತ್ರವ ಕಟ್ಟಿತ್ತು. ಶಾಂತತ್ತೆ ನಿಜಕ್ಕೂ ಕಾಲು ಬೇನೆ ಕಮ್ಮಿ ಆದ ಹಾಂಗೆ ಅನಿಸಿತ್ತು. ಅವಕ್ಕೆ ರಜ ದುಡ್ಡು ಕೊಡುಲೆ ಹೇಳಿ ಪರ್ಸ್ ತೆಗೆವಲೆ ನೋಡಿಯಪ್ಪಗ, ‘ನಹೀ..ನಹೀ..ದೇನಾ….ಇಸ್ ಮೆ ಕ್ಯಾ ಹೈ’ ಹೇಳಿ ನೋಟು ತೆಗವಲೆ ಬಿಟ್ಟವಿಲ್ಲೆ. ರೋಶನಿ ಚಾಯ ಮಾಡಿ ಕೊಟ್ಟತ್ತು. ಅಪರಿಚಿತಳಾದ ತನಗೆ ಆ ಕೂಸುಗೊ ಮಾಡಿದ ಆತ್ಮೀಯ ಉಪಚಾರಕ್ಕೆ ಶಾಂತತ್ತೆಯ ಮನಸ್ಸು ತುಂಬಿ ಬಂತು.
ಅವರತ್ರೆ ರಜ ಮಾತಾಡಿ, ರೂಮಿಂಗೆ ಬಂದು ಮನಿಗಿದವಕ್ಕೆ ತಲೆಲಿ ನೂರಾರು ಆಲೋಚನೆಗೊ.ಈಗಾಣ ಕಾಲಲ್ಲಿ ಪ್ರತಿಯೊಂದನ್ನೂ ಪ್ರತಿಷ್ಠೆಯಾಗಿ ಪರಿಗಣಿಸುವ, ಭಾವನೆಗೊಕ್ಕೆ ಬೆಲೆಯೇ ಕೊಡದ್ದ, ಮಾತಾಡುಲೇ ಸಮಯ ಇಲ್ಲದ್ದ ಜನಂಗಳೇ ಹೆಚ್ಚು. ಕಾಲ ಬದಲಿದ್ದೋ, ಜನಂಗೊ ಬದಲಿದ್ದವೋ, ತಾನೇ ಬದಲಿದ್ದೆಯೋ, ಪರಿಸ್ಥಿತಿ ಬದಲಿದ್ದೋ ಒಂದೂ ಅರ್ಥವಾಗದ ಸ್ಥಿತಿ.
ಎರಡು ವರ್ಷದ ಮೊದಲು ಯಜಮಾನರು ಇಪ್ಪಲ್ಲಿ ವರೆಗೆ ಎಲ್ಲವೂ ಲಾಯಕವೆ ಇತ್ತು. ಇಬ್ಬರಿಂಗುದೆ ಒಳ್ಳೆ ಸಂಬಳದ ಕೆಲಸ ಇದ್ದತ್ತು. ನಿವೃತ್ತಿಯ ನಂತರ ಪೆನ್ಶನ್ ಬತ್ತು, ಬೆಂಗಳೂರಿಲಿ ಸ್ವಂತ ಮನೆ, ಒಬ್ಬ ಮಾಣಿ, ಒಂದು ಕೂಸು ಇಪ್ಪ ಚೆಂದದ ಸಂಸಾರ. ಮಗ-ಸೊಸೆ-ಪುಳ್ಳಿಯ ಸಂಸಾರ ಅಮೇರಿಕಾಲ್ಲಿ. ಮಗಳು-ಅಳಿಯ-ಪುಳ್ಳಿಯ ಸಂಸಾರ ಆಸ್ಟ್ರೇಲಿಯಾಲ್ಲಿ. ಇವಕ್ಕುದೆ ಎಲ್ಲಾ ಜವಾಬ್ದಾರಿಗಳೂ ಮುಗಿದು ಆರಾಮವಾಗಿ ಮಕ್ಕಳ ಮನೆಗೆ ಹೋಗಿ ಬಂದಾತು. ಸಾಕಷ್ಟು ಪ್ರವಾಸ, ತೀರ್ಥಯಾತ್ರೆ ಸುತ್ತಾಟ ಆತು. ಇದ್ದಕ್ಕಿಂದ್ದಂತೆ ಯಜಮಾನ ಶ್ರೀನಿವಾಸರಿಂಗೆ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋಗಿ ಶಾಂತತ್ತೆ ಒಬ್ಬರೇ ಇಪ್ಪ ಹಾಂಗೆ ಆದ ಮೇಲೆ ಬದಲಾದ ಪರಿಸ್ಥಿತಿಯ ಅರಿವಾತು. ಆರನ್ನುದೆ ದೂಷಿಸುವದು ಹೇಳಿ ಅಲ್ಲ, ಅರ್ಥ ಆದ ವಿಷಯ ಎಂತ ಹೇಳಿದರೆ ಮಗನ ಸಂಸಾರಕ್ಕೂ, ಮಗಳ ಸಂಸಾರಕ್ಕೂ ಅವು ಭಾರತಕ್ಕೆ ಬಂದಿಪ್ಪಗ, ಅವಕ್ಕೆ ವಿಹಾರಾರ್ಥವಾಗಿ ಅಮ್ಮನ ಮನೆ ಬೇಕು, ಆದರೆ ಅಮ್ಮನ ಜವಾಬ್ದಾರಿ ತೆಕ್ಕೊಂಬಲೆ ಇಬ್ಬರಿಂಗುದೆ ಇಷ್ಟ ಇಲ್ಲೆ. ರೆಕ್ಕೆ ಬಂದ ಹಕ್ಕಿ ಗೂಡಿಲಿ ಇರುತ್ತಿಲ್ಲೆ..ಅಷ್ಟಕ್ಕೂ ಮಕ್ಕೊಗೆ ರೆಕ್ಕೆ ಬಿಚ್ಚಿ ಹಾರು, ಇನ್ನೂ ಮೇಲಕ್ಕೆ ಹಾರು, ಇನ್ನೂ ದೂರಕ್ಕೆ ಹಾರು ಹೇಳಿ ಪ್ರೋತ್ಸಾಹಿಸಿದವು ನಾವೇ, ಈಗ ಅವಕ್ಕೆ ಹೊಸ ಊರು, ಹೊಸ ಜಾಗೆ, ಹೊಸ ಜನರೇ ಹಿತ ಆವುತ್ತು. ಅವರ ತಪ್ಪಿಲ್ಲೆ. ಹೀಂಗೆಲ್ಲಾ ಚಿಂತನೆ ಮಾಡಿಗೊಂಡಿಪ್ಪಗ, ಎಷ್ಟೋ ಹೊತ್ತಿಂಗೆ ವರಕ್ಕು ಬಂದಿತ್ತಿದು. ಮರುದಿನ ಎಚ್ಚರ ಅಪ್ಪಗ ಸರೀ ಬೆಳಕಾಗಿತ್ತು.
ರಜ ಫ್ರೆಶ್ ಆಗಿ, ಚಹಾ ತಪ್ಪಲೆ ಹೇಳಿ, ರೂಮಿನ ಹೆರ ಬಂದು ಕಣ್ಣು ಹಾಯಿಸಿಯಪ್ಪಗ, ಜ್ಯೋತಿ ರಜ ದೂರಲ್ಲಿ ಹರಿವ ಅಬ್ಬಿನೀರಿಂದ ಕೊಡಪಾನಕ್ಕೆ ನೀರು ತುಂಬಿಸಿ ನೀರು ಹೊತ್ತುಗೊಂಡು ಬಪ್ಪದು ಕಂಡತ್ತು. ಇವರ ನೋಡಿದ ಕೂಡಲೇ, ಕೊಡಪಾನವ ಶೆಡ್ ಒಳಗೆ ಮಡುಗಿಕ್ಕಿ, ‘ ಮಾ ಜಿ, ಆಜ್ ಕೈಸೆ ಹೈ ಆಪ್ ?’ ಹೇಳಿಗೊಂಡು ಜ್ಯೋತಿ ಹತ್ತರೆ ಬಂತು.
‘ಪೇರ್ ಕಾ ದರ್ದ್ ಕಮ್ ಹುವಾ…ಅಪನಾ ತೇಲ್ ಮಸಾಜ್ ಕೆ ಬಾದ್ ಮುಝೆ ಅಚ್ಚಾ ಲಗಾ.. ಬಹುತ್ ಥ್ಯಾಂಕ್ಸ್”
‘ಏಕ್ ಓರ್ ಬಾರ್ ಮಸಾಜ್ ಕರೂಂ..?”
‘ಹಾಂ, ಕರೋ…ಪರಂತು ಅಪ್ನಾ ಚಾರ್ಜ್ ಲೇನಾ ಹೈ…’
‘ಹಾಂ, ಮಾಜಿ ಅಪ್ನಾ ಮರ್ಜಿ.” ಹೇಳಿ ರಜ ಹೊತ್ತಿಲಿ ತೈಲದ ಕುಪ್ಪಿ ತೆಕ್ಕೊಂಡು ಬಂತು.
ಅದರತ್ರೆ ಮಾತಾಡಿಯಪ್ಪಗ, ತಿಳುದ ವಿಚಾರ ಎಂತ ಹೇಳಿದರೆ, ಇವಕ್ಕೆ ಹರಿದ್ವಾರದ ಹತ್ತರೆಯೂ ತಮ್ಮದೇ ಆದ ಮನೆಯಾಗಲಿ, ಸರಿಯಾದ ಆದಾಯವಾಗಲಿ ಇಲ್ಲೆ. ಎಲ್ಲಿ ಕೆಲಸ ಇರುತ್ತೋ ಅಲ್ಲಿ ಕೆಲವು ಸಮಯ ಇದ್ದು ಸಂಪಾದಿಸಿ ಇನ್ನೊಂದು ಕಡೆಗೆ ಹೋಪದು. ಗಿಡಮೂಲಿಕೆ ಸಿಕ್ಕದ್ದ ಸಮಯಲ್ಲಿ, ಡ್ರೆಸ್ ಗೊಕ್ಕೆ ಕಸೂತಿ ಮಾಡುವದು, ತಾವರೆಯ ಬೀಜ ಮಖ್ನಾ ಹೊರುದು ಪಾಪ್ ಕಾರ್ನ್ ನ ಹಾಂಗಿಪ್ಪ ತಿನಿಸು ಮಾಡುವದು, ಹರಿದ್ವಾರಲ್ಲಿ ಗಂಗಾರತಿಯ ಸಮಯಲ್ಲಿ ಬೇಕಪ್ಪ ಹೂಗಿನ ಆರತಿ ಮಾರುವದು…. ಹೀಂಗೆ ಸಾಂದರ್ಭಿಕ ಕೆಲಸಂಗೊ. ಎಂತಾ ಚುರುಕಿನ ಕೂಸುಗೊ. ಸರಿಯಾದ ವಿದ್ಯಾಭ್ಯಾಸ ಸಿಕ್ಕಿದ್ದರೆ ಒಳ್ಳೆ ಕೆಲಸ ಸಿಕ್ಕುತ್ತಿತ್ತು ಇವಕ್ಕೆ. ಎಡಿಗಾದ ಉಪಕಾರ ಮಾಡುವ ಉದ್ದೇಶಂದಲೇ, ‘ ಕಭೀ ಬೆಂಗಳೂರು ಆಯೀ..’ ಕೇಳಿದವು.
‘ಆಯೀ ನಹೀ,,..ಮೇರೆ ಕಸಿನ್ ಉಧರ್ ಕಾಮ್ ಕರ್ತೀ ಹೈ’
‘ಆಪ್ ದೋನೋಂ ಕೊ ಬೆಂಗಳೂರು ಆನೇ ಚಾಹತೆ ಹೈ? “
‘ಹಾಂ…ಆಯೇಂಗೆ..’ ಹೇಳಿ ಕಣ್ಣರಳಿಸಿತ್ತು.
‘ಕಲ್ ಹಮ್ ವಾಪಸ್ ಜಾಯೇಂಗೆ… ಯೆ ಮೇರೀ ಫೋನ್ ನಂಬರ್ ಹೈ.. ಜಬ್ ಆಪ್ ಚಾಹತೆ ಹೈ ತಬ್ ಫೋನ್ ಕರಕೆ ಬೆಂಗಳೂರು ಆನಾ. ಅಪ್ನಾ ರಹನೆ ಕೇಲಿಯೇ, ಹಮಾರಾ ಛೋಟಾ ಘರ್ ಹೈ, ಬಾಜೂ ಮೆ ಏಕ್ ದೂಕಾನ್ ಖೋಲ್ ಕೆ ಅಪನಾ ಬಿಸಿನೆನ್ ಕರ್ ಸಕೇಂ… ಜೋ ಕುಛ್ ಕಾಮ್ ಕರನಾ ಔರ್ ಪಡಾಯಿ ಕರನಾ ಭೀ ಚಲೇಗಾ….ಬಹುತ್ ಶುಕ್ರಿಯಾ’ ಹೇಳಿದವು. ಅವು ಬೇಡ ಹೇಳಿದರೂ, ಕೈಗೆ ರಜ ನೋಟುಗಳ ಕೊಟ್ಟವು. ಎಲ್ಲರ ಕಣ್ಣಿಲಿಯೂ ಕೃತಜ್ಞತಾ ಭಾವ ಇದ್ದತ್ತು.
ಅಷ್ಟಪ್ಪಗ ಬದರಿನಾಥ ದರ್ಶನ ಮಾಡುಲೆ ಹೋದವು ಇನ್ನು ರಜ ಹೊತ್ತಿಲಿ ತಲಪುಗು ಹೇಳಿ ಫೋನ್ ಬಂತು. ರಜ ಹೊತ್ತಿಲ್ಲೆ ಬಸ್ಸು ಬಂತು. ಎಲ್ಲರೂ ಶಾಂತತ್ತೆ ಹೇಂಗಿದ್ದಿ ಹೇಳಿ ವಿಚಾರಿಸುವವೆ. ಅವಕ್ಕೆ ಎಲ್ಲರಿಂಗುದೆ ದೇವರ ದರ್ಶನ ಆದ ಸಂಭ್ರಮ.
‘ಅಲ್ಲಿ ರಶ್ ಇದ್ದತ್ತು, ಬಸ್ಸು ನಿಲ್ಲುವಲ್ಲಿಂದ ದೇವರ ದರ್ಶನ ಅಪ್ಪಲ್ಲಿವರೆಗೆ ಸುಮಾರು ನಡೆವಲೇ ಇದ್ದತ್ತು. ಕ್ಯೂ ನಿಂಬಲೂ ರಜ ಸಮಯ ಆತು. ನಿಂಗ ಇಲ್ಲಿಯೇ ನಿಂಬ ನಿರ್ಧಾರ ಮಾಡಿದ್ದು ಒಳ್ಳೆದೇ ಆತು’, ಹೇಳಿ ಪ್ರಸಾದ ಕೊಟ್ಟವು.
‘ಎನಗುದೆ ಇಲ್ಲಿ ಉದಾಸಿನ ಆಯಿದಿಲ್ಲೆ, ಹಿಮಾಲಯಲ್ಲಿ ಸುಮ್ಮನೆ ಹೆರ ಪ್ರಕೃತಿಯ ಚೆಂದ ನೋಡಿಗೊಂಡಿದ್ದರೆ ಹೊತ್ತು ಹೋಪದು ಗೊಂತೇ ಆವುತ್ತಿಲ್ಲೆ. ಮತ್ತೆ ಈ ಹೋಟೆಲ್ ನ ಹುಡುಗರು ಎನ್ನ ಕಾಳಜಿಲಿ ನೋಡಿಗೊಂಡವು. ಆ ಶೆಡ್ ಲಿ ಇಪ್ಪ ಎರಡು ಕೂಸುಗಳ ಒಡನಾಟವಂತೂ ಎನಗೆ ಭಾರಿ ಖುಶಿ ಆತು’ ಹೇಳಿದವು ಶಾಂತತ್ತೆ.
.
ಮರುದಿನ ಉದಿಯಪ್ಪಗ ಎಲ್ಲರೂ ವಾಪಾಸ್ ಪ್ರಯಾಣಕ್ಕೆ ಸಿದ್ದರಾದವು. ಬಸ್ಸು ಹೊರಡಲು ಅಪ್ಪಗ ಬಂದ ರೋಶನಿ, ಜ್ಯೋತಿ ಇಬ್ಬರೂ ಶಾಂತತ್ತೆಯ ಕಾಲು ಮುಟ್ಟಿ ನಮಸ್ಕಾರ ಮಾಡಿ ಬೀಳ್ಕೊಟ್ಟವು. ಇಲ್ಯಾಣ ಕೆಲಸ ಆದ ಮೇಲೆ, ಹರಿದ್ವಾರಕ್ಕೆ ಹೋಗಿ , ಅಪ್ಪ, ಅಮ್ಮಂಗುದೆ ತಿಳಿಸಿ ಆಮೇಲೆ ಫೋನ್ ಮಾಡುತ್ತೆಯ, ನಿಂಗ ಹುಷಾರಾಗಿ ಊರು ತಲಪಿ ಹೇಳಿ ಹಾರೈಸಿ, ಅವರ ಫೋನ್ ನಂಬರ್ ಕೊಟ್ಟವು. ಬೆಂಗಳೂರಿಂಗೆ ತಲಪಿಯಾದ ಮೇಲೆ, ಪುನ: ದೊಡ್ಡ ಮನೆಲಿ ಒಬ್ಬಂಟಿ ಜೀವನ, ಆಗೊಮ್ಮೆ ಈಗೊಮ್ಮೆ ಭಜನೆ, ಸಂಗೀತ ಕಾರ್ಯಕ್ರಮಕ್ಕೆ ಹೋಪದು, ಗೆಳತಿಯರೊಟ್ಟಿಂಗೆ ಮಾತು, ಮಕ್ಕಳ ಫೋನ್ ಹೀಂಗೆಲ್ಲ ಇದ್ದತ್ತು.
ಆರು ತಿಂಗಳಾದ ಮೇಲೆ ಒಂದು ದಿನ ರೋಶನಿಯ ಫೋನ್ ಬಂತು. ಅವರ ಕಡೆಯವು ಯಾರೋ ಇತ್ತೀಚೆಗೆ ಬೆಂಗಳೂರಿಲಿ ಬಿಸಿನೆಸ್ ಸುರು ಮಾಡಿದ್ದವು, ಅಲ್ಲಿಗೆ ಬಯಿಂದೆಯ, ನಿಂಗಳ ಮನೆಗೆ ಹೇಂಗೆ ಬಪ್ಪದು ಇತ್ಯಾದಿ ಕೇಳಿತ್ತು. ಮತ್ತೆ ಎರಡು ಗಂಟೆಲಿ ಮನೆ ಮುಂದೆ ರಿಕ್ಷಾಲ್ಲಿ ಬಂದಿಳಿದವು ರೋಶನಿದೆ, ಜ್ಯೋತಿದೆ.
‘ಹಮ್ ಅಚ್ಚೇ ದಿನ್ ಕೆ ತಲಾಶ್ ಮೆ ಇಧರ್ ಆಯೇ ಹೈ’
‘ಜರೂರ್ ಆಯೇಗಾ..ಅಪ್ನಾ ಲಗೇಜ್ ಲೇಕರ್ ಆಯಿಯೇ’ ಹೇಳಿದವು ಶಾಂತತ್ತೆ.
ಪುನ: ಹೋಗಿ, ಅವರ ಸಾಮಗ್ರಿಗಳ ತೆಕ್ಕೊಂಡು ಬಂದ ಕೂಸುಗೊ, ಖಾಲಿಬಿದ್ದ ಔಟ್ ಹೌಸ್ ನ ಶುಚಿ ಮಾಡಿ, ಬೇಕಾದ ಹಾಂಗೆ ವ್ಯವಸ್ಥೆ ಮಾಡಿದವು. ಮತ್ತೆರಡು ದಿನಲ್ಲಿ ಮನೆಯ ಕಾರ್ ಶೆಡ್ ಲಿ ತಮ್ಮ ಮಾರಾಟದ ವಸ್ತುಗಳ ಜೋಡಿಸಿ, ಅಂಗಡಿಯನ್ನೂ ತೆರೆದವು.
‘ಮಾ ಜಿ, ದೂಕಾನ್ ಕೊ ಏಕ್ ನಾಮ್ ಬತಾಯಿಯೇ..’ ಹೇಳಿ ಸಲಹೆ ಕೇಳಿಯಪ್ಪಗ ಶಾಂತತ್ತೆ ಸೂಚಿಸಿದ ಹೆಸರು ‘ಬೆಳಕು’
‘ಆಪ್ ದೋನೋಂಕಾ ನಾಮ್ ಮೆ ಪ್ರಕಾಶ್ ಹೈ, ಇಸ್ ಕೊ ಹಮಾರಾ ಕನ್ನಡ ಭಾಷಾ ಮೆ ‘ಬೆಳಕು’ ಬೋಲತೆ ಹೈ . ವೊ ನಾಮ್ ಅಚ್ಚಾ ಹೈ’ ಹೇಳಿದವು.
ಇಲ್ಯಾಣ ಬೆಳವಣಿಗೆಗಳ ಬಗ್ಗೆ ಗೊಂತಾದ ಮೇಲೆ ಅಮೇರಿಕಾಲ್ಲಿ ಇಪ್ಪ ಮಗ ಪ್ರಕಾಶನುದೆ, ಆಸ್ಟ್ರೇಲಿಯಾಲ್ಲಿ ಇಪ್ಪ ಮಗಳು ಪ್ರಣತಿಯುದೆ ಅಮ್ಮ, ನಿಂಗ ಮಾಡಿದ್ದು ಸರಿ ಇಲ್ಲೆ, ಆರಾರೋ ಗುರ್ತ ಪರಿಚಯ ಇಲ್ಲದ್ದವರ ಮನೆಗೆ ಸೇರಿಸಿದರೆ ಹೇಂಗೆ? ಎಲ್ಲಾ ಬಾಚಿಗೊಂಡು ಹೋದರೆ? ನಿಂಗಳ ಸೇಫ್ಟಿ ಮುಖ್ಯ ಅಲ್ಲದಾ? ಎಂಗಳ ಹತ್ತರೆ ಒಂದು ಮಾತು ಕೂಡ ಕೇಳಿದ್ದಿಲ್ಲೆ ಹೇಳಿ ಗೌಜಿ ಮಾಡಿದವು. ‘ಇದು ವಿಷಯ ಒಪ್ಪುವಂತಾದ್ದೆ, ಪ್ರಕಾಶ, ಪ್ರಣತಿ, ರೋಶನಿ, ಜ್ಯೋತಿ, ಎಲ್ಲವೂ ಬೆಳಕು ಕೊಡುವಂತಾದ್ದೆ. ದೂರದ ಆಕಾಶಲ್ಲಿ ಎಷ್ಟು ನಕ್ಷತ್ರ ಬೆಳಕು ಬೀರುತ್ತರೂ, ನಮ್ಮ ಕೈಲಿಪ್ಪ ಟಾರ್ಚೇ ನಮಗೆ ಅರ್ಜೆಂಟಿಂಗೆ ಉಪಯೋಗಕ್ಕೆ ಅಪ್ಪದು. ಎನಗೂ ಪ್ರಾಯ ಆತು, ಒಬ್ಬನೇ ಇಪ್ಪಗ, ಉಷಾರಿಲ್ಲದ್ದಿಪ್ಪಗ, ಆರಾದರೂ ಆತ್ಮೀಯರು ಹತ್ತರೆ ಇರಲಿ ಹೇಳಿ ಅನಿಸುತ್ತು. ಇದೇ ಎನ್ನ ನಿಲುವು’ ಅಂದವು ಶಾಂತತ್ತೆ.
ಈಗ ಶಾಂತತ್ತೆಯ ಮನೆಯ ಮುಂದೆ ಆಗಾಗ ‘ಬೆಳಕು’ ಹರ್ಬಲ್ ಶಾಪ್ ಗೆ ಬಪ್ಪ ಜನ, ಅಲ್ಲಿಯೇ ಸೀರೆ ಕುಚ್ಚು ಹೊಲಿವಲೆ ಕೊಡುವ ಜನ, ಲವಲವಿಕೆಲಿ ಇಪ್ಪ ರೋಶನಿ, ಜ್ಯೋತಿಯರ ಮಾತು, ಅವರ ಕೈಚಳಕಲ್ಲಿ ಗಾರ್ಡನ್ ಲಿ ಅರಳಿದ ಹೂಗಳು, ಹೀಂಗೆ ಎಲ್ಲೆಡೆ ಬೆಳಕಿನ ಹರಿವು. ಶಾಂತತ್ತೆಗೂ, ನಿರಾಳತೆಯ ಗೆಲುವು