Oppanna.com

“ಒಪ್ಪಿ” – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ಪ್ರಥಮ

ಬರದೋರು :   ವಿಜಯತ್ತೆ    on   31/08/2021    3 ಒಪ್ಪಂಗೊ

ಲೇಖಕಿ: ಕು| ರಮ್ಯಾ ನೆಕ್ಕರೆಕಾಡು

“ಯಬ್ಬಾ‌..!! ಈಗ ಎನ್ನ ಲಗಾಡಿ ತೆಗೆತಿತ್ತು‌ ಈ ಜನ‌. ಕೆಮಿಲಿ ಇಟ್ಟಿಗೆಯ ಹಾಂಗಿಪ್ಪ‌ ಫೋನು ಮಡಿಕ್ಕೊಂಡು‌ ಕಾರು ಬಿಟ್ಟರೆ‌, ಈಚಿಗಿದ್ದವ‌ ಅಡಿಯಂಗೆ‌ ಬಿದ್ದರೂ‌ ಗೊಂತಾಗ‌ ಈಗಣವಕ್ಕೆ‌. ಎಡಿಯಪ್ಪಾ‌ ಎಡಿಯಾ‌..!!” ಒಂದು ಕೈಲಿ‌ ಮಾರಾಪು‌, ಮತ್ತೊಂದು ಕೈಲಿ ದೊಡ್ಡ ತಂಗೀಸು‌ ಚೀಲ, ಕಿಂಕ್ಲೆಡೆಲಿ‌ ಒಂದು‌ ಉದ್ದ‌ ಹಿಡ್ಸೂಡಿ‌ ಮಡಿಕ್ಕೊಂಡು‌, ಅದರಷ್ಟಕೆ‌ ಪರೆಂಚಿಗೊಂಡು‌ ಮಾರ್ಗ ದಾಂಟಿತ್ತು‌ ಒಪ್ಪಿ‌.

ದೊಡ್ಡ‌ ಪೇಟೆ‌..!! ಕೂರ್ಬಾಯಿಯ‌ ಹಾಂಗೆ ಹರಟೆ‌ ಮಾಡಿಗೊಂಡು, ಬೀಸಕ್ಕೆ‌ ಅತ್ಲಾಗಿತ್ಲಾಗಿ‌ ಹೋಪ ವಾಹನಂಗ‌. ಮೆಟ್ಟು ಮೆಟ್ಟಿಗೊಂದು‌ ಅಂಗಡಿ‌. ಪ್ರತಿ‌ ಅಂಗಡಿಲಿದೇ‌ ಕಾಲು‌ ಹಾಕುಲೆಡಿಯದ್ದ‌ ಹಾಂಗೆ‌ ದಿಮ್ಕಿಗೊಂಡಿಪ್ಪ‌ ಜನಂಗ..!!

ಮಧ್ಯಾಹ್ನದ ರಣ‌ ಬೆಶಿಲಿಂಗೆ‌ ಒಪ್ಪಿಯ ಬೆಳ್ಳಿಯ‌ ಹಾಂಗಿಪ್ಪ‌ ಕೂದಲು, ಪಳಪಳನೆ‌ ಹೊಳಕ್ಕೊಂಡಿತ್ತು‌‌. ನೆರಿ‌ ಕಟ್ಟಿದ‌ ಹಣೆಲಿ‌ ಬೊಟ್ಟು‌ ಬೊಟ್ಟು ಬೆಗರು‌ ಅರ್ಕೊಂಡಿತ್ತು‌. “ಉಸ್ಸಬ್ಬಾ‌… ಸಾ.. ಸೂ…” ಹೇಳಿಗೊಂಡು‌, ಗುಲಾಬಿ‌ ರಂಗಿನ ಸೀರೆ‌ ಸುತ್ತಿದ‌ ಒಪ್ಪಿ, ಮಾರ್ಗದ‌ ಕರೇಲಿಯೇ‌ ದೂರ ದೂರ ಹೆಜ್ಜೆ ಮಡುಗಿ ‌ನಡೆದತ್ತು‌.

ಒಂದು‌ ಕರಿಬೊಗ್ಗ‌ ಒಪ್ಪಿಯ‌ ಬೆನ್ನಾರೆ, ಚೀಲವ‌ ಮೂಸಿಗೊಂಡು‌ ಬಂತು‌. “ಹೆಕ್‌… ಹೋಗತ್ಲಾಗಿ‌…!! ನಾಯಿಯ ಮೂಗೇ‌..!?? ಚೀಲಲಿಪ್ಪ‌ ಉಂಡ್ಲಕಾಳಿನ‌ ಎಣ್ಣೆಪಸೆ‌ ಪರಿಮಳ‌ ಅಷ್ಟು‌ ಬೇಗ ಮೂಗಿಂಗೆ‌ ಬಡುದತ್ತದಕ್ಕೆ‌..!! ಹೋಗು.. ಹೋಗು.. ನಡೆ ಅತ್ಲಾಗಿ‌..!!” ಹೇಳಿಗೊಂಡು‌ ಮಾರಾಪಿನ‌ ನಾಯಿಗೆ‌ ಬೀಜಿಕ್ಕಿ‌, ಒಪ್ಪಿ‌ ಬೀಸ‌ ಬೀಸ‌ ನಡೆದತ್ತು‌.

ಒಂದು ದೊಡ್ಡ‌ ಅಪಾರ್ಟ್ಮೆಂಟ್..!! ಸುಮಾರು ಹತ್ತು ಹದ್ನೈದು‌ ಮಾಳಿಗೆ‌ ಇಕ್ಕಾಳಿ‌..!?? ಗೇಟು ದಾಂಟಿಕ್ಕಿ‌, ಒಳ ಹೋತು‌ ಒಪ್ಪಿ‌. ಗೇಟಿನತ್ರೆ‌ ಕೂದುಗೊಂಡಿತ್ತ‌ ಗೂರ್ಕನ‌ ನೋಡಿ‌, ಚೆಂದಕ್ಕೆ‌ ನೆಗೆ‌ ಮಾಡಿತ್ತು‌. ಗೂರ್ಕಂದೇ‌ ಒಳ್ಳೆ‌ ಗುರ್ತ‌ ಇಪ್ಪ‌ ಹಾಂಗೆ ನೆಗೆಮಾಡಿತ್ತು‌. ಅಪಾರ್ಟ್ಮೆಂಟಿನ ಮೇಲಂಗೊರಗೆ‌ ಹೋಪಲೆ‌ ಲಿಫ್ಟಿನ‌ ವ್ಯವಸ್ಥೆ ಇದ್ದರುದೇ‌, ಒಪ್ಪಿ‌ಗೆ ಅದೆಲ್ಲಾ‌ ಅರೆಡಿಯ‌. ಪ್ರಾಯ‌ ಎಪ್ಪತ್ತು‌ ಕಳ್ದರುದೇ‌ ಕೈಕಾಲಿನ‌ ಶಕ್ತಿಗೇನೂ‌ ಪ್ರಾಯ‌ ಆಗಿತ್ತಿಲ್ಲೆ‌. ಮೆಟ್ಲು‌ ಹತ್ತಿಗೊಂಡೇ‌ ಐದ್ನೇ‌ ಮಾಳಿಗೆಗೊರೆಗೆ‌ ಹೋತು‌.

ಎಲ್ಲಾ‌ ಅಜ್ಜಿಯಕ್ಕಳ‌ ಮೆಟ್ಟಿನ‌ ಹಾಂಗೆ‌, ಒಪ್ಪಿದುದೇ‌ ರಜ್ಜ‌ ಗಟ್ಟಿ‌ ಇಪ್ಪ, ಕಪ್ಪು‌ ಬಣ್ಣದ‌ ಮೆಟ್ಟು‌..! ಅದರ‌ ಪೀಂಕ್ಸಿಕ್ಕಿ‌ ಒಂದು‌ ಬಾಗಿಲಿನ‌ ಎದುರು ನಿಂದ‌ ಒಪ್ಪಿ‌, ತಂಗೀಸು‌ ಚೀಲವ‌ ಮಾರಾಪು‌ ಇಪ್ಪ‌ ಕೈಗೆ‌ ಬದಲ್ಸಿ‌ ಬಾಗಿಲು ಬಡುದತ್ತು‌.

         ಒಳಂದ‌, “ಕಾಲಿಂಗ್ ಬೆಲ್ ಇಪ್ಪಗ‌ ಬಾಗಿಲು‌ ಬಡಿವದು‌ ಎಂತಕೆ ಹೇಳಿ‌ ಎನಗೆ‌ ಅರ್ಥ ಆವ್ತಿಲ್ಲೆ‌..!! ಆರು‌ ಬಂದದಾದಿಕ್ಕು‌..!??” ಹೇಳಿಗೊಂಡು‌ ಸುಮಾರು ಮೂವತ್ತೈದು ವರ್ಷದ ಹೆಮ್ಮಕ್ಕ‌ ಬಾಗಿಲು ತೆಗದತ್ತು‌.

 “ಏ‌ ಉಷಾ‌.. ಇದಾನು‌ ಒಪ್ಪಿ‌..!” ಹೇಳಿಗೊಂಡೇ‌ ಒಪ್ಪಿ‌ ಉಷಾನ‌ ದಾಂಟಿಕ್ಕಿ‌ ಒಳ ಹೋತು‌. “ಒಪ್ಯತ್ತೆ‌ ನಿಂಗ‌ ಎಂತ‌ ಇತ್ಲಾಗಿ‌ ಬಂದದು‌..?? ಎಂಗ‌ ನಿಂಗಳ‌ ನಿರೀಕ್ಷೆಲಿಯೇ‌ ಇತ್ತಿದಿಲ್ಲೆಯ‌..!” ಒಪ್ಪಿಯ‌ ಕಂಡಪ್ಪದ್ದೇ‌ ಉಷನ‌ ಮೋರೆಯ‌ ಬಣ್ಣ‌ ಬದಲಿತ್ತು‌.

“ಹ್ಞೇಂ‌….!!! ಎಂತಕೆ‌ ಬಂದದು‌ ಹೇಳೆರೆ‌ ಅರ್ಥ ಎಂತ‌ ಅಬ್ಬೋ‌..?? ಎನ್ನ‌ ಅಣ್ಣನ‌ ಮಗನ ಮನೆಗೆ ಆನು ಬಪ್ಪಲೆ‌, ಯಾವ‌ ದೊಣ್ಣೆ‌ ನಾಯಕನ‌ ಅಪ್ಪಣೆಯೂ‌ ಬೇಡ‌ ಎನಗೆ” ಹೇಳಿಕ್ಕಿ‌ ಒಪ್ಪಿ‌, ಸೋಫಾ‌ ಇದ್ದರುದೇ‌ ನೆಲಕ್ಕೆ‌ ಕಾಲು‌ ನೀಡಿ ಕೂದತ್ತು‌. ಉಷಂಗೆ‌ ಒಪ್ಪಿ‌ ಬಂದದು‌ ಅಸಮಾಧಾನ ಆಗಿತ್ತು‌. ಬಂದ‌ ಒಪ್ಪಿಯತ್ರೆ‌ ಒಂದು‌ ಆಸರಿಂಗೆ‌ ಸಾನು‌ ಕೇಳದ್ದೇ‌, ಕೋಣೆಗೆ‌ ಹೋಗಿ ಲ್ಯಾಪ್ ಟಾಪ್ ನ‌ ಎದುರೆ‌ ಕೂದುಗೊಂಡಿತ್ತ‌ ಮಹೇಶನ‌ ಹತ್ತರೆ‌, “ಇದಾ‌… ನಿಂಗಳ‌ ಒಪ್ಯತ್ತೆ‌ ಬೈಂದವಿದ‌. ಈ ಬೆಶಿಲಿಂಗೆ‌ ಇಲ್ಲಿಗೆ‌ ಎತ್ತಿಗೊಂಡದು‌ ಸಾಕು‌..! ಒಟ್ಟಿಂಗೆ‌ ಎರಡು‌ ಕೈಲಿ‌ದೇ‌ ಎಂತದೋ‌ ಸರಬ್ರಾಯಂಗ‌..!! ಹಿಡ್ಸೂಡಿ‌ ಎಲ್ಲಾ‌ ಕಂಡತ್ತು‌ ಕೈಲಿ‌. ಮನೆಲಿ‌ ಮಡುಗುಲೆ‌ ಜಾಗೆ‌ ಇಲ್ಲದ್ದದಕ್ಕಾ‌ ಇಲ್ಲಿಗೆ‌ ತಂದದು..??” ಉಷನ‌ ಮುಸುಡು‌ ಬಾಪಿತ್ತು‌.

“ಅವೆಂತಕೆ‌ ಬಂದದು‌ ಈಗ‌..? ಬಂದು‌ ಹೋಗಿ‌ ಒಂದು‌ ವರ್ಷವುದೇ‌ ಆಯ್ದಿಲ್ಲೆ‌” ಹೇಳಿ, ಲ್ಯಾಪ್ ಟಾಪ್ ನ‌ ಕರೆಲಿ‌ ಮಡುಗಿಕ್ಕಿ‌ ಮಹೇಶ ಎದ್ದ‌.

“ಎಂತಕೆ ಬಂದದು‌ ಹೇಳಿ‌ ಎನ್ನತ್ರೆ‌ ಕೇಳೆರೆ‌ ಎನಗೆಂತ‌ ಗೊಂತು‌..? ನಿಂಗಳ ಅತ್ತೆ‌, ನಿಂಗೊಗೇ‌ ಗೊಂತು‌. ಇಂದು ಆದಿತ್ಯವಾರ ಆದ ಕಾರಣ ನಾವಿಬ್ರುದೇ‌ ಮನೆಲಿರ್ತು‌ ಹೇಳಿ ಗೊಂತಿದ್ದು‌, ಹಾಂಗೆ‌ ಬಂದದು‌ ನಮಗಿಲ್ಲಿ‌ ಉಪ್ಪದ್ರ‌ ಕೊಡ್ಲೆ” ಹೇಳಿತ್ತು ಉಷ‌.

“ಮೆಲ್ಲಂಗೆ‌ ಹೇಳು‌ ಮಾರಾಯ್ತಿ‌..!! ಕೇಳೆರೆ‌ ಬೇಜಾರಾಕ್ಕು‌ ಅವಕ್ಕೆ‌” ಮಹೇಶ ಸಣ್ಣಕ್ಕೆ‌ ಹೇಳಿದ‌. ಉಷ‌ ತಳೀಯದ್ದೇ‌ ನಿಂದತ್ತು‌. ಮಹೇಶ ಹೆರ ಹೊಗಿ‌, “ಹೋ‌… ಒಪ್ಯತ್ತೆ‌..!?? ಉಷಾರಿದ್ದೀರಾ‌..? ಅಪ್ಪ‌, ಅಣ್ಣ-ಅತ್ತಿಗೆ‌, ಅಣ್ಣನ‌ ಮಕ್ಕ‌ ಎಲ್ಲಾ‌ ಹೇಂಗಿದ್ದವು‌ ಊರಿಲಿ‌..?” ಹೇಳಿಗೊಂಡು‌ ಮಹೇಶಂದೇ‌ ನೆಲಕ್ಕೆ‌ ಕೂದ‌.

“ಎಲ್ಲೋರು‌ ಉಷಾರಿದ್ದವು‌. ಈಗ‌ ಗಿರೀಶನ‌ ಮಕ್ಕೊಗೆ‌ ಶಾಲೆಗೆ‌ ರಜೆ‌ ಇದ‌..!! ಹಾಂಗೆ‌ ಅವು‌ ಅವರ ಅಜ್ಜನ‌ ಮನೆಗೆ‌ ಹೋಯ್ದವು‌. ನಿನ್ನ‌ ಮಕ್ಕಳ‌ ನೆಂಪಾತೆನಗೆ. ಹಾಂಗಾಗಿ ಆನೆದ್ದಿಕ್ಕಿ‌ ಇತ್ಲಾಗಿ‌ ಬಂದೆ‌. ಎಲ್ಲಿದ್ದವು‌ ಎನ್ನ‌ ಪುಳ್ಯಕ್ಕೋ‌..!??” ಹೇಳಿಗೊಂಡೇ‌ ತಂಗೀಸಿನ‌ ಚೀಲವ‌ ಹತ್ತರಂಗೆ‌ ಎಳಕ್ಕೊಂಡತ್ತು‌ ಒಪ್ಪಿ.

“ಶಿಶಿರ, ಶಾಲ್ಮಲಿ‌ ಇಬ್ರಿಂಗೂ‌ ಈಗ‌ ಬೇಸಗೆ ರಜೆ. ಉಷಂಗುದೇ‌ ಎನಗುದೇ‌ ಆಫೀಸು‌ ಕೆಲಸ‌ ಇಪ್ಪ ಕಾರಣ, ಎಲ್ಲಿಗೂ‌ ಹೋಪಾಂಗಿಲ್ಲೆ‌ ಇದಾ..   ಈಗ ಇಬ್ರುದೇ‌ ಹತ್ತರಣ‌ ರೂಮಿನ‌ ಮಕ್ಕಳೊಟ್ಟಿಂಗೆ ಆಡ್ಲೆ‌ ಹೋಯ್ದವು‌. ಉಂಬಲಪ್ಪಗ‌ ಬಕ್ಕು. ನಿಂಗೊಗೆ ಈಗ ಆಸರಿಂಗೆ‌ ಎಂತಕ್ಕು‌ ಒಪ್ಯತ್ತೆ‌..?” ಕೇಳಿದ‌ ಮಹೇಶ‌.

“ಆಸರಿಂಗೆ‌ ತಣುದ‌ ಬೆಶಿನೀರಕ್ಕೆನಗೆ‌.. ಇಲ್ಯಣ‌ ತಣ್ಣೀರು‌ ಕುಡ್ದರೆ‌ ನಾಳೆ‌ ದೊಂಡೆ‌ ಕೆರಸುಲೆ‌ ಸುರಾಕ್ಕು‌ ಮತ್ತೆ‌” ಹೇಳಿಗೊಂಡು‌ ಚೀಲಂದ ಒಂದೊಂದೇ ಕಟ್ಟು ಹೆರತೆಗದತ್ತು‌ ಒಪ್ಪಿ.

“ಎಂಗ ಇಲ್ಲಿ‌ ಫಿಲ್ಟರ್ ನೀರು‌ ಉಪಯೋಗ್ಸುದು‌ ಕುಡಿವಲೆ‌. ಬೆಶಿನೀರು‌ ಕೊದಿಶುದು‌, ತಣಿಶುದು‌ ಎಲ್ಲ‌ ಮಾಡ್ಲಿಲ್ಲೆ‌” ಹೇಳಿಗೊಂಡು‌ ಉಷ‌ ಒಂದು ಗ್ಲಾಸಿಲಿ‌ ನೀರು‌ ತಂದು ಮಡುಗಿತ್ತು‌.

ಬೆಶಿಲಿನ‌ ಕಾವಿಂಗೆ‌ ಒಳ್ಳೆತ‌ ಆಸರ ಆಗಿತ್ತು‌ ಒಪ್ಪಿಗೆ. ತಳೀಯದ್ದೆ‌ ಗ್ಲಾಸಿಲಿತ್ತ‌ ನೀರಿನ‌ ಕುಡುದಿಕ್ಕಿ‌, ” ಇದಾ… ಇಲ್ಲಿಗೆ‌ ಬಪ್ಪಲಿದ್ದು‌ ಹೇಳಿ, ನಿನ್ನೆ‌ ಉಂಡ್ಲಕಾಳು‌ ಮಾಡಿದ್ದಾನು‌. ಆಚವರ್ಷದ‌ ಉಪ್ಪುಸೊಳೆದರ‌ ಮಾಡಿದ್ದು‌. ಇನ್ನುದೇ‌ ಹಾಳಾಯ್ದಿಲ್ಲೆ‌ ಉಪ್ಪುಸೊಳೆ‌..!! ಮತ್ತೆ ಒಂದು ನಾಕು‌ ಹಣ್ಣಪ್ಪಳವುದೇ‌, ಮಾಂಬುಳವುದೇ‌. ಮಹೇಶೋ‌.. ಮನೆ ಎದುರೆ‌ ಒಂದು ದೊಡ್ಡ‌ ಹಲಸಿನ ಮರ ಇದ್ದನ್ನೆ, ಮೊನ್ನೆ‌ ಅದರಂದ‌ ಎರಡು ಹಲಸಿನಕಾಯಿ ಎಳದು‌ ಹಾಕಿದ್ದು‌ ಐತ್ತ‌. ಅದರ ಆನುದೇ‌, ಗಿರೀಶನ‌ ಹೆಂಡತಿ‌ ಲತಾಂದೆ ಸೇರಿ ಹೊರ್ದು‌. ಒಂದು‌ ರಜ್ಜ‌ ಸೊಳೆ ಹೊರ್ದುದೇ ತೈಂದೆ‌ ಇದಾ. ಮತ್ತೆ ಉಷ‌ ಇದಾ ಒಂದು‌ ರಜ್ಜ ಕಂಚುಸಟ್ಟುದೇ‌, ನೆಲ್ಲಿಂಡಿದೇ‌ ಇದ್ದು‌. ತಂಬುಳಿ ಮಾಡ್ಲೆ‌ ಲಾಯ್ಕು‌..!! ಮಕ್ಕೊಗೆ‌ ಹೊಟ್ಟೆಂದ‌ ಹೆರ ಹೋಪದಕ್ಕೆಲ್ಲಾ‌ ಭಾರೀ‌ ಒಳ್ಳೆದು‌. ಆನು ಕಳ್ದ‌ ಸರ್ತಿ ಬಂದಿಪ್ಪಗ‌ ಇಲ್ಲಿ‌ ಉಡುಗುಲೆ‌ ಹೇಳಿ ಹೆರಟದು‌. ಆ‌ ಪ್ಲಾಸ್ಟಿಕ್ ಕಡೆಯ‌ ಹುಲ್ಲಿನ‌ ಹಿಡಿಸೂಡಿಲಿ‌ ಎನಗೆ‌ ಉಡುಗುಲೆ‌ ಸರಿಯೇ‌ ಆಯ್ದಿಲ್ಲೆ‌. ಹಾಂಗಾಗಿ ಈ ಸರ್ತಿ ಬಪ್ಪಗ‌, ಅಟ್ಟಲ್ಲಿ‌ ಕಟ್ಟಿ‌ ಮಡುಗಿದ‌ ಹಿಡಿಸೂಡಿ‌ ತಂದದು‌” ಹೇಳಿಗೊಂಡೇ‌ ಊರಿಂದ‌ ತಂದ‌ ಸಾಮಾನಿನ ಪೂರಾ‌ ಹೆರತೆಗದತ್ತು‌ ಒಪ್ಪಿ.

“ಇದರ‌ ಎಲ್ಲಾ‌ ನಿಂಗ‌ ಸುಮ್ಮನೆ‌ ತಂದದು‌ ಒಪ್ಯತ್ತೆ‌. ಕಳ್ದ‌ ಸರ್ತಿ‌ ತಂದ ಮಾಂಬುಳ‌, ಹಣ್ಣಪ್ಪಳ‌ ಎಲ್ಲಾ‌ ಈಗಳುದೇ‌ ಒಳ‌ ಹಾಂಗೇ‌ ಇದ್ದು‌. ಮಕ್ಕ‌ ಮುಟ್ಟಿ‌ ಸಾನು‌ ನೋಡಿದ್ದವೇಲ್ಲೆ‌ ಅದರ. ಇದರ‌ ಪೂರಾ‌ ತಿಂದರೆಯೇ‌ ಹೊಟ್ಟೆಂದ‌ ಹೆರ ಹೋಪದು‌ ಸುರಾಕ್ಕು‌ ಅವಕ್ಕೆ‌ ಹೇಳಿ ಆವ್ತೆನಗೆ‌” ಕೊಂಕು ಮಾತಾಡಿತ್ತು‌ ಉಷಾ‌.

ಮಧ್ಯಾಹ್ನ ಊಟ ಆದ‌ ಮೇಲೆ ಒಪ್ಪಿ‌ ಎಲ್ಲರ ಬಟ್ಲಿನ‌, ಸಿಂಕಿಲಿಪ್ಪ‌ ಪಾತ್ರೆಗಳ‌ ಪೂರಾ‌ ಲಾಯ್ಕಕ್ಕೆ ತೊಳಕ್ಕೊಂಡು‌, “ಕಾಯಿ ಸುಗುಡಿಲಿ‌ ಆದರೆ‌ ಲಾಯ್ಕ ಆವ್ತು‌ ಎನಗೆ‌ ಪಾತ್ರೆ ತೊಳೆವಲೆ‌, ಈ ಪೇಟೆಲಿ‌ ಸಿಕ್ಕಿದ‌ ಸುಗುಡಿಲಿ‌ ತೊಳದರೆ‌ ತೊಳದ್ದೂ‌ ತೊಳದಾಂಗೆ‌ ಅಪ್ಪಲಿಲ್ಲೆ‌” ಹೇಳಿಗೊಂಡೇ‌ ಎಲ್ಲಾ‌ ಪಾತ್ರೆ ತೊಳದತ್ತು‌.

ಒಪ್ಪಿ‌ ಮನೆಲಿಯಾದರೂ‌ ಅಷ್ಟೇ, ತಳೀಯದ್ದೇ‌ ಕೂಪ‌ ಕ್ರಮ ಇಲ್ಲೆ‌. ಸೋಗೆ‌ ಗೀಸಿ‌ ಹಿಡಿಸೂಡಿ‌ ಮಾಡುದು‌, ಮಳೆಗಾಲದ‌ ಅಟ್ಟಣೆ‌ ಹೇಳಿಗೊಂಡು‌ ಮಡಲು‌ ಕೆರಜ್ಜಿ‌ ಮಡುಗುದು‌, ತೋಟಂದ‌ ಹಾಳೆ‌ ತಂದು‌ ಅಟ್ಟಲ್ಲಿ‌ ಕಟ್ಟಿ‌ ಮಡುಗುದು‌, ಹೂಗು‌ ಕಟ್ಟುಲೆ‌ ಬಾಳೆ‌ ಬಳ್ಳಿ‌ ಒಣಗ್ಸುದು‌, ಹಪ್ಪಳ-ಸೆಂಡಗೆ-ಬಾಳ್ಕು ಮಾಡುದು‌, ಒಟ್ಟಾರೆ‌ ಗುರುಟಾಣದ‌ ಕೆಲಸ‌ ಹೇಳಿರೆ‌ ಒಪ್ಪಿಗೆ‌ ಭಾರೀ ಇಷ್ಟ‌.

ಅಮ್ಮಾ‌…. ನೋಡಿಲ್ಲಿ‌ ಆಗಂದ‌ ಅಣ್ಣನೇ‌ ಮೊಬೈಲಿಲಿ‌ ಆಡ್ತಾ ಇದ್ದ. ಎನಗೆ‌ ಕೊಡ್ತನೇಲ್ಲೆ‌..” ಶಾಲ್ಮಲಿ‌ ಕಣ್ಣು‌ ತಿಕ್ಕಿಗೊಂಡು‌, ಉಷನ‌ ಹತ್ತರೆ‌ ಹತ್ತರೆ‌ ಚಾಡಿ‌ ಹೇಳಿಗೊಂಡು‌ ಬಂತು. ” ನಿಂಗಳದ್ದಿಬ್ರದ್ದು‌ ಮುಗಿವಲಿಲ್ಲೆ‌..!! ಎನಗೆ‌ ಕಂಪೆನಿ ವರ್ಕ್ ಬಾಕಿ‌ ಇದ್ದು‌. ಉಪ್ಪದ್ರ‌ ಮಾಡಿಗೊಂಡು ಬರೆಡಿ‌” ಹೇಳಿಕ್ಕಿ‌ ಕೆಲಸ ಮುಂದುವರೆಶಿತ್ತು‌ ಉಷ‌.

“ನೀನಿಲ್ಲಿ‌ ಬಾ‌ ಅಬ್ಬೋ‌… ಕೂಗೆಡ‌ ಆತಾ‌..! ಅಣ್ಣ ಮೊಬೈಲಿಲಿ‌ ಆಡಲಿ‌, ಆನು‌ ನಿನಗೆ ಟುವೆಲಿನ‌ ಕುಂಡೆಚ್ಚ‌ ಮಾಡಿ ಕೊಡ್ತೆ” ಹೇಳಿ ಒಪ್ಪಿ ಸೊಂಟಲ್ಲಿ‌ ಕುತ್ತಿದ‌ ಟುವೆಲಿನ‌ ತೆಗೆದು‌, ಸುರುಟಿಕ್ಕಿ‌ ಟುವೆಲಿನ‌ ಎರಡು‌ ಕೊಡಿಯನ್ನುದೇ‌ ಒಟ್ಟಿಂಗೆ‌ ಹಿಡ್ಕೊಂಡು, “ಇದಾ‌ ಕುಂಡೆಚ್ಚ..!!” ಹೇಳಿತ್ತು‌. ಟುವೆಲಿನ‌ ಕುಂಡೆಚ್ಚನ‌ ಕಂಡಪ್ಪದ್ದೇ‌ ಶಾಲ್ಮಲಿ‌ ಕೂಗುದರ‌ ನಿಲ್ಸಿಕ್ಕಿ ಕೊಣಿವಲೆ‌ ಸುರು‌ ಮಾಡಿತ್ತು‌. ಶಾಲ್ಮಲಿಯ‌ ಗೌಜಿ‌ ಕೇಳಿ, ಶಿಶಿರ ಮೊಬೈಲಿನ‌ ಅಲ್ಲಿಯೇ‌ ಬಿಟ್ಟಿಕ್ಕಿ ಬಂದ‌. “ಒಪ್ಯಜ್ಜಿ‌.. ಎನಗುದೇ‌ ಟುವೆಲಿನ‌ ಕುಂಡೆಚ್ಚ‌ ಬೇಕು‌” ಹೇಳಿದ‌. “ಟುವೆಲಿನ‌ ಕುಂಡೆಚ್ಚ‌ ಸಾಕು. ಆನು‌ ನಿಂಗೊಗೆ ಅಂಗಳದುಗ್ಗು‌ ಕೋಳಿಯ‌ ಕಥೆ‌ ಹೇಳ್ತೆ” ಹೇಳಿ‌ ಕಥೆ‌ ಹೇಳುಲೆ ಸುರು‌ ಮಾಡಿತ್ತು‌ ಒಪ್ಪಿ‌.

“ಅಂಗಳದುಗ್ಗು‌ ಕೋಳಿ ಪುಚ್ಚೆಯ ಹತ್ತರೆ‌ ಹೋಗಿ‌ ಕೇಳಿತ್ತಡ‌, ‘ಪುಚ್ಚೆಕ್ಕಾ‌.. ಪುಚ್ಚೆಕ್ಕಾ‌… ನೀನೆನಗೆ‌ ಸಹಾಯ‌ ಮಾಡುವೆಯಾ‌..???’ ಹೇಳಿ‌, ಅಂಬಗ‌ ಪುಚ್ಚೆ‌ ಹೇಳಿತ್ತಡ‌, ‘ನನ್ನಿಂದಾಗದು‌… ನನ್ನಿಂದಾಗದು‌..’ ಮತ್ತೆ‌ ಅಂಗಳದುಗ್ಗು‌ ನಾಯಿಯ‌ ಹತ್ರೆ‌ ಹೋತಡ‌. ಹೋಗಿ‌, ‘ನಾಯಣ್ಣ‌… ನಾಯಣ್ಣ‌.. ನೀನೆನಗೆ‌ ಸಹಾಯ‌ ಮಾಡುವೆಯಾ‌…???’ ಹೇಳಿಯಪ್ಪಗ‌ ನಾಯಿ‌ ಎಂತ‌ ಹೇಳಿತ್ತಡ‌…” ಹೇಳಿ‌ ಒಪ್ಪಿ‌ ಬಾಯಿ‌ ಮುಚ್ಚೆಕ್ಕಾರೆ‌ ಮಕ್ಕ‌ ಇಬ್ರು‌ದೇ, “ನನ್ನಿಂದಾಗದು… ನನ್ನಿಂದಾಗದು‌…” ಹೇಳಿ‌ ರಾಗ‌ ಎಳಕ್ಕೊಂಡು‌ ಹೇಳಿದವು‌.

ಒಪ್ಪಿ‌ ಬಂದು‌ ಈಗ‌ ಒಂದು ವಾರ ಕಳ್ತು‌. ಮಕ್ಕೊಗೆ‌ ಈಗ‌ ಟಿವಿ‌, ಮೊಬೈಲು‌ ಎಂತದೂ‌ ಬೇಡ‌..!! ಒಪ್ಪಿಯ‌ ಕಥೆ ಒಂದಿದ್ದರೆ‌ ಸಾಕು‌..! ಆದರೆ ಉಷಂಗೆ‌, ಒಪ್ಪಿ‌ ಇನ್ನುದೇ‌ ಮನೆಗೆ‌ ಹೋಯ್ದಿಲ್ಲೆ‌ ಹೇಳಿ‌, ಉರಿ‌ ಉರಿ ದರ್ಸುಲೆ‌ ಸುರಾತು.

ಒಪ್ಪಿ‌ ಎಂತದೋ‌ ಕೆಲಸಲ್ಲಿ‌ ಮಹೇಶನ‌ ರೂಮಿನ‌ ಹತ್ತರೆ‌ ಹೋಪಗ‌, ಉಷ‌ ಎಂತದೋ‌ ಪಿಸಿ‌ ಪಿಸಿ‌ ಮಹೇಶನ‌ ಹತ್ತರೆ‌ ಹೇಳಿಗೊಂಡಿತ್ತು‌.

“ನಿಂಗಳ‌ ಒಪ್ಯತ್ತೆ‌ ಇನ್ನುದೇ ಇಲ್ಲಿಂದ‌ ಹೋಪ‌ ಅಂದಾಜಿ‌ ಕಾಣ್ತೇಲ್ಲೆ‌‌..?? ಎಷ್ಟು ದಿನ‌ ಇಲ್ಲಿಯೇ‌ ನೆಗರುದು‌..!! ಹತ್ರಣ‌ ರೂಮಿನವೆಲ್ಲಾ‌ ಅದಾರು‌ ಹೇಳಿ‌ ಕೇಳುವಾಗ‌, ಅದು ನಿಂಗಳ‌ ಅತ್ತೆ‌ ಹೇಳಿ‌ ಹೇಳುಲುದೇ‌ ಸರಿ‌ ಆವ್ತಿಲ್ಲೆ‌ ಎನಗೆ‌. ಕಾಂಬಲೆ‌ ನಮ್ಮ‌ ಹಾಂಗೆ ಬೆಳಿದೇ‌ ಇಲ್ಲೆ‌. ಕೆಲಸದ‌ ಹೆಣ್ಣಿನ‌ ಹಾಂಗಿಪ್ಪ‌ ಇದರ‌ ನಮ್ಮ‌ ಸಂಬಂಧಿ ಹೇಳಿ‌ ಹೇಂಗೆ‌ ಅವರತ್ರೆ‌ ಹೇಳಿಗೊಂಬದು‌…!?? ನಾಳೆಯೇ‌ ನಿಂಗ‌ ಅವರತ್ತರೆ‌ ಹೇಳಿ‌ ಮನೆಗೆ‌ ಹೋಪಲೆ‌. ಇಲ್ಲಿಯೇ‌ ಠಿಕಾಣಿ ಹೂಡೆರೆ‌ ನಮಗೆ ಬಂಙ” ಹೇಳಿ ಒಪ್ಪಿಯ‌ ಕಳ್ಸುವ‌ ಹಾಂಗೆ‌ ಉಷ‌, ಮಹೇಶನ‌ ಕೆಮಿ‌ ಊದಿತ್ತು‌. ಇದರ‌ ಕೇಳಿದ‌ ಒಪ್ಪಿಯ‌ ಮುಗ್ಧ ಮನಸ್ಸಿಂಗೆ‌ ಬೇನೆ‌ ತಡವಲೆಡಿಗಾತಿಲ್ಲೆ‌. ಕಣ್ಣ‌ ನೀರು‌ ದಿರಿ‌ ದಿರಿ‌ನೆ‌ ಅರ್ದತ್ತು‌. ನಾಳೆ ಉದಿಯಾಯ್ಕಾರೆ‌ ಮನೆಗೆ‌ ಹೋಯೆಕ್ಕು‌ ಹೇಳ್ತ‌ ನಿರ್ಧಾರಕ್ಕೆ‌ ಬಂತು‌ ಒಪ್ಪಿ‌.

ಮರುದಿನ ಉದಿಯಪ್ಪಗಳೇ‌ ಒಪ್ಪಿ‌ ಮಾರಾಪು‌ ತೆಕ್ಕೊಂಡು, ಮಹೇಶ-ಉಷನ‌ ಹತ್ತರೆ‌ ಹೋಗಿ‌, “ಮಹೇಶೋ‌…. ಆನು‌ ಬಂದು‌ ಸುಮಾರು‌ ದಿನ‌ ಆತು‌. ಮನೆಲಿ ಅಣ್ಣಂಗೆ‌ ಹಸಕ್ಕಾಕ್ಕು‌. ಇಲ್ಲಿ‌ ನಿಂಗೊಗೂ‌ ಸುಮ್ಮನೆ‌ ಉಪ್ಪದ್ರ‌. ಆನು‌ ಹೆರಡ್ತೆ” ಹೇಳಿಯಪ್ಪಗ‌ ಮಹೇಶಂಗೆ‌ ಬೇಜಾರಾತು‌. ಹೆರಟ‌ ಒಪ್ಪಿಯ‌ ಕಂಡಪ್ಪಗ‌ ಉಷನ‌ ಮೋರೆ‌ ಅರಳಿತ್ತು‌. ಹೆರ‌ ದೋಸೆ ತಿಂದುಗೊಂಡಿತ್ತಿದ್ದ‌ ಮಕ್ಕ‌ ಕೂಡ್ಲೇ‌ ಓಡಿಗೊಂಡು‌ ಬಂದು‌, “ಒಪ್ಯಜ್ಜಿ‌ ಹೋಪದು‌ ಬೇಡ‌. ಎಂಗೊಗೆ‌ ಕಥೆ‌ ಹೇಳುಲೆ‌ ಆರುದೇ‌ ಇಲ್ಲೆ‌” ಹೇಳಿ‌ ಒಪ್ಪಿಯ‌ ಸೆರಗು ಹಿಡ್ದವು‌. “ಒಪ್ಯಜ್ಜಿಗೆ‌ ಕೆಲಸ ಇದ್ದಡ‌ ಹೋಗಲಿ‌” ಹೇಳಿ‌ ಉಷ ಹೇಳಿಯಪ್ಪಗ‌ ಮಕ್ಕ‌ ಕೂಗುಲೆ‌ ಸುರು‌ ಮಾಡಿದವು‌.

ಮಕ್ಕ‌ ಕೂಗುವಾಗ‌ ಒಪ್ಪಿಯ‌ ಕರುಳು‌ ಚುಂಯಿ‌ ಆತು‌. “ಅಯ್ಯೋ‌..!! ಕೂಗೆಡಿ‌ ನಿಂಗ‌. ಆನು‌ ನಿಂಗೊಗೆ‌ ಒಂದು‌ ಕಥೆ‌ ಹೇಳಿಕ್ಕಿ ಮತ್ತೆ‌ ಹೋತೆ‌ ಆತಾ‌..?” ಹೇಳಿ‌ ಒಪ್ಪಿ‌ ಮಾರಾಪಿನ‌ ಕರೆಲಿ‌ ಮಡುಗಿ‌, “ನಿಂಗೊಗೆ ಆನಿಂದು‌ ಒಪ್ಪಿ‌ ಹೇಳ್ತ‌ ಮುದಿ‌ ಜೀವದ‌ ಕಥೆ‌ ಹೇಳ್ತೆ‌” ಹೇಳಿ‌ ಒಪ್ಪಿ‌ ಅದರ ಜೀವನದ‌ ವ್ಯಥೆಯ‌, ಮಕ್ಕೊಗೆ‌ ಕಥೆಯ ರೂಪಲ್ಲಿ‌ ಹೇಳುಲೆ‌ ಹೆರಟತ್ತು‌.

ಅದು‌ ಅಮಾವಾಸ್ಯೆಯ‌ ಇರುಳು‌. ಗೌರಮ್ಮ‌ ಒಂದು ಹೆಣ್ಣು‌ ಶಿಶುವಿಂಗೆ‌ ಜನ್ಮ‌ ನೀಡಿ‌ ಕಣ್ಮುಚ್ಚಿಗೊಂಡತ್ತು‌. ಆ‌ ಸಣ್ಣ‌ ಹಿಳ್ಳೆಯನ್ನುದೇ‌, ಐದು‌ ವರ್ಷದ‌ ಮಗ‌ ಚಂದ್ರಶೇಖರನನ್ನುದೇ‌ ಬಿಟ್ಟು‌ ಸ್ವರ್ಗ ಸೇರಿಗೊಂಡತ್ತು‌. ಆ‌ ಹಿಳ್ಳೆ‌ ಕಾಂಬಲೆ‌ ಎಣ್ಣೆ ಕಪ್ಪು‌ ಬಣ್ಣ‌. ಅಮಾವಾಸ್ಯೆಯ ದಿನ ಹುಟ್ಟಿದ ಈ‌ ಅಪಶಕುನ, ಅಬ್ಬೆಯ‌ ಕೊಂದತ್ತು‌ ಹೇಳ್ತ‌ ಅಪವಾದದಟ್ಟಿಂಗೆ‌ ಹುಟ್ಟಿತ್ತು‌. ಮಕ್ಕಳ ಸಾಂಕುಲೆ‌ ಅಬ್ಬೆ‌ ಬೇಕು‌ ಹೇಳಿ ಅಪ್ಪ‌ ಇನ್ನೊಂದು‌ ಮದುವೆ‌ ಆದ‌. ಆ‌ ಚಿಕ್ಕಮ್ಮ‌ ಮಕ್ಕಳ‌ ಬಿಟ್ಟು‌, ಅಪ್ಪನ‌ ಕರಕ್ಕೊಂಡು‌ ಅದರ‌ ಅಪ್ಪನ‌ ಮನೆಗೆ ಹೋತು‌. ಅಪ್ಪ‌ ಅಲ್ಲಿಯೇ‌ ಮನೆ ಅಳಿಯ‌ ಆಗಿ‌ ಕೂದ‌. ಇತ್ಲಾಗಿ‌ ಮಕ್ಕಳ‌ ಅಜ್ಜಿಯೇ‌ ಸಾಂಕಿತ್ತು‌. ಕೂಸಿಂಗೆ‌ ಲಕ್ಷ್ಮೀ ಹೇಳಿ‌ ಹೆಸರು‌ ಮಡುಗಿದವು‌ ಅಜ್ಜಿ‌.

“ಈ ಕೂಸು ಎಂತ‌ ಇಷ್ಟು‌ ಕಪ್ಪು‌..!?? ಆರ ಸಾಜವೂ‌ ಕಾಣ್ತಿಲ್ಲೆ‌..!! ಗೌರಿಯ‌ ಹೊಟ್ಟೆಲಿ‌ ಹೇಂಗಪ್ಪಾ‌ ಹುಟ್ಟಿತ್ತಿದು‌..??” ಹೇಳಿ‌ ನೆರೆಕರೆಯವು‌, ನೆಂಟ್ರುಗ‌ ಪೂರಾ‌ ಮಾತಾಡಿಗೊಂಡವು‌.

ಅಜ್ಜಿಗುದೇ‌ ಅಣ್ಣಂಗುದೇ‌ ಲಕ್ಷ್ಮೀ ಹೇಳಿದರೆ‌ ಭಾರೀ‌ ಕೊಂಡಾಟ‌. ಅದರ‌ ಒಪ್ಪಿ‌ ಹೇಳಿಯೇ‌ ದಿನಿಗೇಳುಗು‌. ಅಜ್ಜಿ‌ ಮತ್ತೆ‌ ಅಣ್ಣನ‌ ಪ್ರೀತಿ‌ ಬಿಟ್ಟರೆ‌ ಒಪ್ಪಿಗೆ‌ ಬೇರೆ‌ ಆರ‌ ಪ್ರೀತಿಯೂ‌ ಸಿಕ್ಕಿದ್ದಿಲ್ಲೆ‌. ಜೆಂಬ್ರಕ್ಕೆಲ್ಲಾ‌ ಹೋದರೆ ಮಕ್ಕ‌ ಪೂರಾ‌ ಕಪ್ಪಿನ‌ ಒಪ್ಪಿಯ‌ ಕಂಡು‌ ದೂರ‌ ಮಾಡುಗು‌. ನೆಂಟ್ರುಗೋಕ್ಕೂ‌ ಒಪ್ಪಿ‌ ಹೇಳಿರೆ‌ ಅಷ್ಟಕ್ಕಷ್ಟೇ‌.

ಒಪ್ಪಿ‌ ಕಾಂಬಲೆ ಕಪ್ಪಾದರುದೇ‌ ಲಕ್ಷಣದ‌ ಕೂಸು‌. ಒಪ್ಪಿಗೆ‌ ಪ್ರಾಯ‌ ಹನ್ನೆರಡು ತುಂಬಿತ್ತು‌. ಒಪ್ಪಿಯ‌ ಅಜ್ಜಿಗೆ‌ ಒಂದೊಂದೇ‌ ಸೀಕುದೇ‌ ಸುರಾತು. ಅಜ್ಜಿ‌ ಸ್ವರ್ಗ ಸೇರುವ‌ ಮೊದಲೇ‌ ಒಪ್ಪಿಗೆ‌ ಮದುವೆ‌ ಮಾಡ್ಸೆಕ್ಕು‌ ಹೇಳಿ ತೀರ್ಮಾನಕ್ಕೆ‌ ಬಂದವು‌. ಒಂದು ಸಂಬಂಧ ನಿಘಾಂಟಾತು ಒಪ್ಪಿಗೆ‌. ಹೇಳುವಾಂಗಿಪ್ಪ‌ ಅನುಕೂಲಸ್ಥರಲ್ಲದ್ದರುದೇ‌ ಒಪ್ಪಿಯ‌ ಮದುವೆ‌ ಮಾಡ್ಸಿ‌ ಕೊಟ್ಟಾತು‌.

ಮದುವೆ‌ ಆಗಿ‌ ಒಂದು‌ ವಾರ ಆಗಿತ್ತಿಲ್ಲೆ‌. ಒಪ್ಪಿಯ‌ ಗೆಂಡ‌ ಎತ್ತರದ‌ ಮರಂದ‌ ಬಿದ್ದು‌, ಪ್ರಾಣ‌ ಕಳಕ್ಕೊಂಡ‌. “ಅಮಾವಾಸ್ಯೆಲಿ‌ ಹುಟ್ಟಿದ‌ ಈ‌ ಅಪಶಕುನದ ಗೆಂಟು‌ ಅಬ್ಬೆಯ‌ ಕೊಂದತ್ತು‌, ಮದುವೆ ಆಗಿ‌ ಗೆಂಡನ‌ ಕೊಂದತ್ತು‌. ಇದು‌ ಇನ್ನು‌ ಇಲ್ಲಿಯೇ‌ ಇದ್ದರೆ‌ ಎಂಗಳ ಜೀವದ‌ ಗೆತಿ‌ ಎಂತ‌..!? ಇದರ ಇಲ್ಲಿಂದ‌ ಕರಕ್ಕೊಂಡು ಹೋಗಿ‌” ಹೇಳಿ‌ ಒಪ್ಪಿಯ‌ ಅತ್ತೆ‌, ಒಪ್ಪಿಯ‌ ಮನೆಗೆ‌ ಅಟ್ಟಿತ್ತು‌.

ಇದಾಗಿ ರಜ್ಜ‌ ಸಮಯಲ್ಲಿ‌ ಅಜ್ಜಿ‌ ತೀರಿಹೋತು‌. ಅಣ್ಣಂಗೆ‌ ಮದುವೆ‌ ಆತು‌. ಕೊಂಡಾಟದ‌ ತಂಗೆ‌ ಅಣ್ಣಂಗೆ‌ ಭಾರ‌ ಆಯ್ದಿಲ್ಲೆ‌. ಅಬ್ಬೆಯ, ಗೆಂಡನ, ಅಜ್ಜಿಯ‌ ಕಳಕ್ಕೊಂಡ‌ ಒಪ್ಪಿ, ಅಣ್ಣನೊಟ್ಟಿಂಗೆ‌ ಮನೆಲಿಯೇ‌ ಒಳುದತ್ತು‌.

“ಹೀಂಗಿದ‌ ಒಪ್ಪಿಯ‌ ಕಥೆ‌..!! ಒಪ್ಪಿಯ‌ ಬಣ್ಣವೇ‌ ಒಪ್ಪಿಯ‌ ಎಲ್ಲೋರಿಂದಲೂ‌ ದೂರ‌ ಮಾಡಿತ್ತು‌. ಸಂಬಂಧ ಕಡುದು‌ ಹೋಪಲಾಗ‌ ಹೇಳಿ, ಒಪ್ಪಿ‌ ಎಲ್ಲರೊಟ್ಟಿಂಗೆ‌ ಬೆರೆವಲೆ‌ ಹೋದರೆ‌ ಒಪ್ಪಿಯ‌‌ ಕಪ್ಪು‌ ಬಣ್ಣ‌ ಅದರ ಎಲ್ಲರೊಟ್ಟಿಂಗೆ ಬೆರೆವಲೆ‌ ಬಿಟ್ಟತ್ತಿಲ್ಲೆ‌. ಆ‌ ಕಪ್ಪು ಬಣ್ಣದ ಒಪ್ಪಿಯ‌ ಮನಸ್ಸು‌ ಮಾತ್ರ‌ ಆರಿಂಗೂ‌ ಕೇಡು‌ ಬಯಸ‌..!!ಅದರಂದಾಗಿ‌ ಆರಿಂದಾರು‌ ಮರ್ಯಾದೆ ಹೋದರೆ‌ ಅದಕ್ಕೆ‌ ತಡವಲೆಡಿಯ‌. ಹಾಂಗಾಗಿ ಅದು‌ ದೂರ‌ ಉಳಿವಲೆ‌ ನೋಡುಗು‌. ನೆಂಟ್ರುಗಳ‌ ಒಡನಾಟ-ಭಾಂದವ್ಯ ಸಿಕ್ಕಿತ್ತಿಲ್ಲೆ‌, ಅಬ್ಬೆಯ‌ ಪ್ರೀತಿ ಸಿಕ್ಕಿದ್ದಿಲ್ಲೆ‌, ಅಪ್ಪ ಇದ್ದರೂ ಅಪ್ಪನ‌ ಮಮತೆ‌ ಸಿಕ್ಕಿತ್ತಿಲ್ಲೆ‌, ಗೆಂಡನ‌ ಪ್ರೀತಿ ಎಂತದು‌ ಹೇಳಿ‌ ಗೊಂತಿಲ್ಲೆ‌, ಮಕ್ಕಳ‌ ಹೆತ್ತು‌ ಬೆಳೆಶುವ‌ ಯೋಗವೂ‌ ಇತ್ತಿಲ್ಲೆ‌..!! ಒಟ್ಟಾರೆ ಈ ಒಪ್ಪಿ‌ ಆರಿಂಗೂ ಬೇಡದ್ದ‌ ಅಪಶಕುನದ ಗೆಂಟು‌…” ಹೇಳಿಯಪ್ಪಗ‌ ಒಪ್ಪಿಗೆ‌ ದೊಂಡೆ‌ ಕಟ್ಟಿತ್ತು‌. ಕಣ್ಣನೀರು‌ ಕೆಪ್ಪಟೆಲಿ‌ ಅರ್ದತ್ತು‌.

ಒಪ್ಪಿಯ‌ ಕಥೆ‌ ಕೇಳಿಯಪ್ಪದ್ದೇ‌ ಉಷಂಗೆ‌ ಪಶ್ಚಾತಾಪ ಕಣ್ಣನೀರಿನ‌ ರೂಪಲ್ಲಿ ಹೆರಬಂತು‌. ಒಪ್ಪಿಯ‌ ಪಾಪ ಕಂಡತ್ತು‌. ಮಹೇಶನ‌ ಕಣ್ಣುದೇ‌ ಚೆಂಡಿ‌ ಆತು‌.

ಒಪ್ಪಿ‌ ಕೂಗುದರ‌ ಕಂಡು ಶಾಲ್ಮಲಿ‌, ಒಪ್ಪಿಯ‌ ಮೊಟ್ಟೆಲಿ‌ ಕೂದು ಪುಟ್ಟು‌ ಕೈಲಿ‌ ಒಪ್ಪಿಯ‌ ಕಣ್ಣನೀರು‌ ಉದ್ದಿತ್ತು‌. “ಕೂಗೆಡಿ‌ ಒಪ್ಯಜ್ಜಿ‌..!! ನಿಂಗ‌ ಎಂತಕೆ‌ ಕೂಗುದು‌..!?” ಕೇಳಿತ್ತು‌. “ಇಲ್ಲೆಬ್ಬೋ‌.. ಕೂಗುತ್ತಿಲ್ಲೆತಾ‌ ಆನು..” ಹೇಳಿ ಸೆರಗಿಲಿ‌ ಕಣ್ಣುದ್ದಿಗೊಂಡತ್ತು‌ ಒಪ್ಪಿ‌.

“ಒಪ್ಯಜ್ಜಿ‌ ಎನಗೊಂದು‌ ಡೌಟು‌..? ಅಪ್ಪ-ಅಮ್ಮಂಗೆ ಎಂಗಳಂದ‌ ಲ್ಯಾಪ್ ಟಾಪೇ ಇಷ್ಟ‌. ಯಾವಗ‌ ನೋಡೆರುದೇ‌ ಅದರೆದುರೇ‌ ಕೂರುಗು‌. ಅವು ಕೆಲಸಕ್ಕೆ ಹೋಗಿ ಎಂಗಳ ಶೀಲ‌ ಆಂಟಿಯ‌ ಮನೆಲಿ‌ ಬಿಡ್ತವು‌. ಅಂಬಗ‌ ಎಂಗಳೂ‌ ಒಪ್ಪಿಯ‌ ಹಾಂಗೆಯಾ‌..!?” ಹೇಳಿ ಶಿಶಿರನ‌ ಮುಗ್ಧ ಮನಸ್ಸಿಂದ‌ ಬಂದ‌ ಮಾತು‌ ಕೇಳಿ‌, ಉಷ‌ಂಗೆ‌ ಹೆತ್ತಕರುಳು‌ ಹಿಂಡಿದ ಅನುಭವ ಆತು‌. ಅದು ಮಕ್ಕಳ ವಿಷಯಲ್ಲಿ‌ ಮಾಡ್ತಾ‌ ಇಪ್ಪ ತಪ್ಪು‌ ಅರಿವಾತು ಅದಕ್ಕೆ‌. ಕೂಡ್ಲೇ‌ ಮಕ್ಕಳತ್ತರೆ‌ ಹೋಗಿ, ಇಬ್ರ‌ ಭುಜ‌ ಹಿಡ್ಕೊಂಡು‌, ಹತ್ತರಂಗೆ‌ ಎಳಕ್ಕೊಂಡು, “ಇಲ್ಲೆ‌ ಮಕ್ಕಳೇ‌.. ಇನ್ನು‌ ನಿಂಗಳ ಎಲ್ಲಿಯೂ‌ ಬಿಡ್ತಿಲ್ಲೆ‌. ಅಮ್ಮ‌ ನಿಂಗಳೊಟ್ಟಿಂಗೆಯೇ‌ ಇರ್ತೆ‌ ಆತಾ‌..! ಎನಗೆ ಕೆಲಸಂದ‌ ಹೆಚ್ಚು ಮುಖ್ಯ ನಿಂಗಳೇ‌..” ಸಂಕಟಂದ‌ ಕಣ್ಣನೀರು‌ ಹಾಕಿತ್ತು‌ ಉಷ‌.

ಪುಟ್ಟುಮಾಣಿ‌ ಶಿಶಿರನ‌ ಮಾತಿಂದ‌, ಬೆಳೆವ ಪ್ರಾಯಲ್ಲಿ‌ ಮಕ್ಕೊಗೆ‌ ಅಬ್ಬೆಯ‌ ಪ್ರೀತಿಯ‌ ಅಗತ್ಯ‌ ಎಂತದು‌ ಹೇಳಿ‌ ಮನದಟ್ಟಾತು‌ ಉಷಂಗೆ‌.

ಅಷ್ಟಪ್ಪಗ‌ ಒಪ್ಪಿ‌ ಮಾರಾಪು‌ ತೆಕ್ಕೊಂಡು‌ ಬಾಗಿಲಿನ ಹತ್ರಂಗೊರೆಗೆ‌ ಎತ್ತಿತ್ತು‌. “ಒಪ್ಯತ್ತೆ‌, ನಿಂಗ‌ ಎಲ್ಲಿಗೂ‌ ಹೋಯೆಕ್ಕೋಳಿ‌ ಇಲ್ಲೆ‌. ಉಷ‌ ನಿಂಗಳ ಮನಸ್ಸಿಂಗೆ‌ ಬೇನೆ‌ ಮಾಡಿಕ್ಕು‌. ಆದರೆ‌ ಆನು‌ ನಿಂಗಳ‌ ಅಣ್ಣನ‌ ಮಗ. ಎನಗೆ ಬೇಕಾಗಿ ಆದರೂ‌ ನಿಂಗ‌ ಇಲ್ಲಿ‌ ನಿಲ್ಲೆಕ್ಕೇ‌..!!” ಮಹೇಶ, ಊರಿಂಗೆ‌ ಹೆರಟ‌ ಒಪ್ಪಿಯ‌ ತಡೆದ‌.

ಉಷನ‌ ಗಮನ‌ ಅತ್ಲಾಗಿ‌ ಹೋತು‌. ಒಪ್ಪಿಯ‌ ಹತ್ತರೆ‌ ಹೋಗಿ‌, “ಒಪ್ಯತ್ತೆ‌..!! ನಿಂಗಳಂದಾಗಿ‌ ಎನಗಿಂದು‌ ಆನು‌ ಮಾಡ್ತಾ‌ ಇಪ್ಪ‌ ತಪ್ಪು‌ ಅರಿವಿಂಗೆ‌ ಬೈಂದು‌. ನಿಂಗ‌ ಜೀವನ‌ ಇಡೀ‌ ತಿಂದ‌ ಬೇನೆ ಎಂತದು‌ ಹೇಳ್ತದರ‌ ಕಲ್ಪನೆಯೂ‌ ಎನಗಿತ್ತಿಲ್ಲೆ‌‌. ಮನುಷ್ಯನ‌ ಯಾವಾಗ್ಳುದೇ‌ ರೂಪಲ್ಲಿ‌ ಅಳವಲಾಗ‌ ಹೇಳ್ತದು‌ ಗೊಂತಾತು‌. ಬೆಳೆವ‌ ಮಕ್ಕೊಗೆ‌ ಪ್ರತಿ‌ ಹಂತಲ್ಲಿದೇ‌ ಅಬ್ಬೆ-ಅಪ್ಪನ‌ ಅಗತ್ಯ‌ ಎಂತಾಳಿ‌ ಗೊಂತಾತು‌. ಇದರೆಲ್ಲಾ ಮನದಟ್ಟು‌ ಮಾಡ್ಸಿದ‌ ನಿಂಗ‌, ಎಂಗಳ‌ ಬಿಟ್ಟು‌ ಎಲ್ಲಿಗೂ‌ ಹೋಪಲಾಗ‌” ಉಷ‌ ಮಾರಾಪಿನ‌ ಒಪ್ಪಿಯ‌ ಕೈಂದ‌ ತೆಕ್ಕೊಂಡತ್ತು‌.

“ಎನ್ನ‌ ಮಾತು ನಿನ್ನ‌ ಪರಿವರ್ತನೆ ಮಾಡಿತ್ತು‌ ಹೇಳಿದರೆ ಅದಕ್ಕೆ‌ ಆನು‌ ಕಾರಣ‌ ಅಲ್ಲಬ್ಬೋ‌..!! ಅರ್ಥ ಮಾಡಿಗೊಂಡು‌ ಬದಲಾದ್ದು‌ ನಿನ್ನ‌ ದೊಡ್ಡ‌ ಗುಣ‌. ನಿಂಗಳ‌ ಮಾತಿಂಗೆ‌ ವಿರೋಧ‌ ಮಾಡಿ‌ ಹೋಪಲೆ‌ ಎನಗಿಷ್ಟ ಇಲ್ಲೆ‌. ಹಾಂಗೇಳಿಗೊಂಡು‌ ಅಣ್ಣನ ಬಿಟ್ಟು‌ ಖಾಯಂ ಆಗಿ‌ ಇಲ್ಲಿಯೇ‌ ಒಳ್ಕೊಂಬಲುದೇ‌ ಎನ್ನ‌ ಮನಸ್ಸು‌ ಒಪ್ಪ‌. ಹಾಂಗಾಗಿ ಮಕ್ಕೊಗೆ‌ ಶಾಲೆ‌ ಸುರಾಪ್ಪನ್ನಾರ‌ ಇಲ್ಲಿಯೇ‌ ಇರ್ತೆ‌. ಮತ್ತೆ‌ ಮನೆಗೆ‌ ಹೋವ್ತೆ‌. ಅಂಬಗಂಬಗ‌ ಬಂದು‌ ಹೋಗಿ‌ ಮಾಡ್ತಾ‌ ಇರ್ತೆ‌” ಹೇಳಿ‌ ಅದರ‌ ನಿರ್ಧಾರ ತಿಳಿಶಿತ್ತು‌ ಒಪ್ಪಿ‌. ಒಪ್ಪಿಯ‌ ನಿರ್ಧಾರಕ್ಕೆ ಮಹೇಶಂದೇ‌ ಉಷಂದೇ‌ ಒಪ್ಪಿಗೆ ಕೊಟ್ಟವು‌.

“ಬನ್ನಿ‌ ಮಕ್ಕಳೇ‌…!! ನಿಂಗೊಗೆ ಕಾಗಕ್ಕ‌, ಗುಬ್ಬಕ್ಕನ‌ ಕಥೆ‌ ಹೇಳ್ತೆ‌ ಆನೀಗ” ಹೇಳಿ‌ ಮಕ್ಕಳ ಕರಕ್ಕೊಂಡು‌ ಒಳ ಹೋದ‌ ಒಪ್ಪಿಯ‌, ಉಷ‌ ನಿಂದುಗೊಂಡು‌ ಹೆಮ್ಮೆಲಿ‌ ನೋಡಿತ್ತು‌.

….ಮುಗುದತ್ತು‌….

ಕಥೆ: ರಮ್ಯ ನೆಕ್ಕರೆಕಾಡು



ರಮ್ಯಾ ನೆಕ್ಕರೆಕಾಡು

ಕಥಾಸ್ಪರ್ಧೆಯ ಸಂಚಾಲಕಿ: ವಿಜಯಾಸುಬ್ರಹ್ಮಣ್ಯ ಕುಂಬಳೆ.

3 thoughts on ““ಒಪ್ಪಿ” – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ಪ್ರಥಮ

  1. ಕತೆ ಟಾಪ್ ಆಯಿದು….. ಇತ್ತೀಚೆಗೆ ಬಳಕೆಲಿ ಕಮ್ಮಿ ಉಪಯೋಗುಸುವ ಅಚ್ಚ ಹವ್ಯಕ ಪದಂಗಳ ಹುಡುಕ್ಕಿ ಹುಡುಕ್ಕಿ ಕತೆಲಿ ಸೇರ್ಸಿದ್ದಿ….ಓದುಲೆ ಲಾಯ್ಕ ಆವ್ತು….. ಇದೊಂದು ಸದಾರಣ ಎಲ್ಲ ಹವಿಕರಿಂಗೆ ಕನೆಕ್ಟ್ ಅಪ್ಪಾಂಗಿಪ್ಪ ಮನಸ್ಸಿಂಗೆ ಮುಟ್ಟುವ ಕತೆ…..ಬರದ್ದಕ್ಕೆ ತುಂಬಾ ದನ್ಯವಾದಂಗ

  2. ಒಪ್ಪಿಯ ಕಥೆ ಒಪ್ಪೊಪ್ಪ ಇದ್ದು…

  3. ಭಾರೀ ಲಾಯ್ಕದ ಕಥೆ. ಪ್ರಥಮ ಬಹುಮಾನದ ಅರ್ಹತೆ ಇಪ್ಪ ಕಥೆ
    ರಮ್ಯನ ಸಾಹಿತ್ಯ ಸೇವೆ ಇನ್ನಷ್ಟು ಮುಂದುವರಿಯಲಿ..ಶುಭಾಶಯಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×