Oppanna.com

ನಮ್ಮ ಮಕ್ಕೊ (ಕೊಡಗಿನ ಗೌರಮ್ಮ ಕಥಾಸ್ಪರ್ದೆಯ 2016ನೇ ಸಾಲಿನ ತೃತೀಯ ಬಹುಮಾನಿತ ಕಥೆ)

ಬರದೋರು :   ವಿಜಯತ್ತೆ    on   06/03/2017    5 ಒಪ್ಪಂಗೊ

 
ನಮ್ಮ ಮಕ್ಕೊ
ಸಾವಿತ್ರಿ ರಮೇಶ್ ಭಟ್

ಅಂದು ಹೊತ್ತ್ಹೋಪಗ ’ಆಸರೆ ವೃದ್ಧಾಶ್ರಮ’ಲ್ಲಿ ಸಾಂಸ್ಕೃತಿಕ ಸಂಜೆ, . ಆಶ್ರಮಲ್ಲಿಪ್ಪ ಪ್ರಾಯದೋರ ಮನೋರಂಜನೆಗೆ ಶಕುಂತಳಾ ಟೀಚರ್ ಆಯೋಜಿಸಿದ ಕಾರ್ಯಕ್ರಮ ಅದು! ಶಾಲೆ ಮಕ್ಕಳ ಹಾಡು,ನೃತ್ಯ, ನಾಟಕ, ಇತ್ಯಾದಿ ವಿವಿಧ ವಿನೋದಾವಳಿ ಮುಗುದಪ್ಪಗ ಗಂಟೆ ೭. ಮಕ್ಕಳ ಅವರವರ ಮನಗೆ ಕಳಿಸಿದ ಶಕುಂತಳೆ ಆಶ್ರಮಲ್ಲಿಪ್ಪ ಅಜ್ಜ- ಅಜ್ಜಿಯಂದಿರ ಮಾತಾಡ್ಸಿಕ್ಕಿ ಹೆರಡುತ್ತೆ ಹೇಳಿ ಒಳ ಹೋತು.

ಕಾರ್ಯಕ್ರಮ ಅವಕ್ಕೆಲ್ಲಾ ಖುಷಿ ಕೊಟ್ಟಿದೋ,ಇಲ್ಲೆಯೋ, ಒಂದೂ ಅರ್ಥ ಆತಿಲ್ಲೆ ಶಕುಂತಳೆಗೆ! ಅವರ ಮುಖಚರ್ಯೆ ಹಾಂಗಿತ್ತು. ಕೆಲವರ ಕಣ್ಣಿಲ್ಲಿ ನೀರು! ಸಂತೋಷದ್ದೋ, ದುಃಖದ್ದೋ! ಕೆಲವು ಜನ ಗಿಳಿಬಾಗಿಲ ಸರಳು ಹಿಡುಕ್ಕೊಂಡು ನಿಂದು ಹೆರ ನೋಡ್ಯೋಂಡಿತ್ತಿದ್ದವು. ಒಬ್ಬರು ಅಜ್ಜಿ ಮಾತ್ರ ಜಗಲಿಯ ಒಂದು ಮೂಲೆಲಿ ಗಾಲಿ ಕುರ್ಚಿಲಿ ಕೂದೊಂಡು , ಏನೋ ಹೇಳ್ಯೋಂಡು, ಒಂದರಿ ಕೂಗುತ್ತವು, ಒಂದರಿ ನೆಗೆ ಮಾಡ್ತವು!  ಶಕುಂತಳೆ ಅವರ ಮಾತಾಡುಸಲೆ ಪ್ರಯತ್ನ ಮಾಡಿತ್ತು.ಅವು ಪ್ರತಿಕ್ರಯಿಸಿದ್ದವೇ ಇಲ್ಲೆ. ಈ ವೃಧ್ದಾಪ್ಯ ಎಷ್ಟು ಕಷ್ಟ! ಹೇಳಿ ಗ್ರೇಶಿಯೋಂಡಿಪ್ಪಗ , ಶಕುಂತಳೆಗೆ ಕಿರಿಯಬ್ಬೆ ಅಂಬಿಕೆ  ಹೇಳಿದ್ದ ಗೌರಜ್ಜಿಯ ನೆನಪಾತು- – –

ಗೌರಿದೆ ಈಶ್ವರ ಭಟ್ಟನುದೆ ಅಂಬಿಕೆಯ ನೆರೆಮನೆಯವು. ಈಶ್ವರ ಭಟ್ಟಂಗೆ  ಹೇಳಿಯೊಂಬ ಉದ್ಯೋಗ ಯಾವುದೂ ಇತ್ತಿಲ್ಲೆ.ಆರಾದರೂ ದಿನಿಗೇಳಿದರೆ ಅಡುಗಗೆ ಹೋಪದು, ಅಡಕ್ಕೆ ಸೊಲಿವದು, ಹೀಂಗೆ ಸಣ್ಣ-ಪುಟ್ಟ ಕೆಲಸ ಮಾಡ್ಯೊಂಡು ಮರ್ಯಾದೆಲಿ ಸಂಸಾರ ಸಾಗಿಸ್ಯೊಂಡಿತ್ತಿದ್ದ.ಅವಕ್ಕೆ ನಾಲ್ಕು ಮಕ್ಕೊ, ಇಬ್ಬರು ಮಾಣ್ಯಂಗೊ,ಇಬ್ಬರು ಕೂಸುಗೊ. ಮಕ್ಕೊಗೆ ಸರಿಯಾದ ವಿದ್ಯಾಭ್ಯಾಸ ಮಾಡುಸೆಕ್ಕು ಹೇಳಿ ಅವು ಬಂಙ ಬಂದದು ಅಷ್ಟಿಷ್ಟಲ್ಲ! ನಮ್ಮತ್ರೆ ರೊಕ್ಕ ಇಲ್ಲದ್ರೆ ನೆಂಟರಿಷ್ಟರುದೇ ನಮ್ಮ ಮೂಸುತ್ತವಿಲ್ಲೆನ್ನೆ! ಆ ಮಕ್ಕೊ ಮಾತ್ರ ಕಲಿವದರಲ್ಲಿ  ಬಾರಿ ಉಶಾರು!

ಬಡತನ ಅವರ ಎಷ್ಟರ ಮಟ್ಟಿಂಗೆ ಹಿಂಡಿದ್ದು ಹೇಳಿದರೆ ,ಎಲ್ಲೊರಿಂಗೂ ಒಪ್ಪತ್ತಿನ ಹೆಜ್ಜೆ ಊಟಕ್ಕೂ ಎಷ್ಟೋ ದಿನ ಬಂಙ ಆಗಿಯೊಂಡಿತ್ತು! ಗೆಂಡಂಗೂ ಮಕ್ಕೊಗೂ ’ಇಪ್ಪ ಹೆಜ್ಜೆಯ’ ಹಂಚಿ ಬಳುಸಿಕ್ಕಿ, ’ಎನಗೆ ಹಶುವಿಲ್ಲೆ’ ಹೇಳಿ ಗೌರಿ ಖಾಲಿಹೊಟ್ಟೆಲಿ ಮನುಗಿದ್ದುದೇ ಇದ್ದು. ಕೆಲವು ಸರ್ತಿ ಗೆಂಡ ಮಕ್ಕೊ ಉಂಡ ಮೇಲೆ ಹೆಜ್ಜೆ ಅಳಗೆ ಅಡಿಯಂಗೆ ಕೈ ಹಾಕಿ ಅರಿಶಿದರೆ, ನಾಲ್ಕು ಅವುಳು ಗೌರಿಗೆ!

ಹಿರಿಮಗ ಗೋಪಾಲನ ಮೇಲೆ ಗೌರಿಗೆ ಬಾರಿ ಪ್ರೀತಿ. ಅವನ ಮೆಟ್ರಿಕ್ ಪರೀಕ್ಷಗೆ ಫೀಸು ಕಟ್ಲೆ ನಯಾಪೈಸೆ  ಇಲ್ಲದ್ದೆ, ಗೌರಿ ತನ್ನ ಒಪ್ಪದ ಸರವ ಅಡವು ಮಡಗಿ ಪೈಸೆ ಹೊಂದಿಸೆಕ್ಕಾಗಿ ಬಂತು! ಮೆಟ್ರಿಕ್ ಪರೀಕ್ಷೆಲಿ ’ಪಸ್ಟ್ಟ್ ಕ್ಲಾಸ್’ ಲ್ಲಿ ಪಾಸಾದ ಗೋಪಾಲ ಮುಂದೆ ಸಣ್ಣ ನೌಕರಿ ಹಿಡುದು, ಅವನಷ್ಟಕ್ಕೆ ಓದಿ ಅವರಿವರ  ಕೈಕಾಲು ಹಿಡುದು, ಒಂದು ಬ್ಯಾಂಕಿಲ್ಲಿ ಕೆಲಸ ಗಿಟ್ಟಿಸ್ಯೊಂಡ. ಅಬ್ಬೆ- ಅಪ್ಪಂಗೆ ಖುಷಿ ಆತು. ಆದರೆ ಗೋಪಾಲಂಗೆ ಅಪ್ಪನ ಕಂಡ್ರೆ ಅಷ್ಟಕ್ಕಷ್ಟೆ.’ಆನೇ ಕಷ್ಟಪಟ್ಟು ಮುಂದೆ ಬಂದದು!’ ಹೇಳುವ ಅಹಂ!

ಗೌರಿದೆ ಈಶ್ವರ ಭಟ್ಟನುದೆ ನಮ್ಮ ಹಾಂಗೆ ನಮ್ಮ ಮಕ್ಕೊಗೆ ಬಂಙ ಅಪ್ಪಲೆಡಿಯ, ಅಬ್ಬೆ-ಅಪ್ಪ ಎಂತ್ತದ್ದೂ ಮಾಡಿದ್ದವಿಲ್ಲೆ ಹೇಳಿ ಬಪ್ಪಲೆಡಿಯ ಹೇಳಿ ಹೊಟ್ಟೆ ಬಟ್ಟೆ ಕಟ್ಟಿ ಒಂದೆಕ್ರೆ ಜಾಗೆ ಮಾಡಿದವು. ದುರಾದೃಷ್ಟಕ್ಕೆ ಆ ವರ್ಷ ಸರಿಯಾಗಿ ಮಳೆ ಇಲ್ಲದ್ದೆ ಗೆದ್ದೆಲಿ ಬೆಳೆ ಎಲ್ಲ ಒಣಗಿತ್ತು! ಆದರೂ ಅವು ತಲಗೆ ಕೈಹೊತ್ತು ಕುಯಿದವಿಲ್ಲೆ. ಇನ್ನು ಗೆದ್ದೆ ಬೇಸಾಯ ಬೇಡ, ಹೇಳಿ ಅದರಲ್ಲಿ ಅಡಕ್ಕೆ, ತೆಂಗಿನ ಸೆಸಿ ನೆಟ್ಟು , ಅದರ ಪೋಚಕಣ ಮಾಡಿ, ತಕ್ಕ ಮಟ್ಟಿಂಗೆ ಒಂದು ನೆಲೆ ಅಪ್ಪಗ, ಎಲ್ಲ ಮಕ್ಕಳೂ ದೊಡ್ಡಾದವು. ಮಗಳಕ್ಕೊಗೆ ಮನೆ ಹುಡುಕ್ಕಡದ? ಪಾಪದವರ ಮನೆ ಕೂಸುಗಳ ಆ ಕಾಲಲ್ಲಿ ಆರು ಒಪ್ಪುತ್ತವು?

ಇಷ್ಟೆಲ್ಲಾ ಅಪ್ಪಗ, ಗೋಪಾಲ ತಾನೇ ಒಂದು ಕೂಸು ನೋಡಿ ಆನು ಮದುವೆ ಆವುತ್ತಾ ಇದ್ದೆ! ಹೇಳಿದ. ವಿಧಿ ಇಲ್ಲದ್ದೆ  ಅಬ್ಬೆ-ಅಪ್ಪ ಮಂತ್ರಾಕ್ಷತೆ ಹಾಕಿದವು. ಅವನ ಬೆನ್ನಿಂಗೆ ಹುಟ್ಟಿದ ಸರೊಜನ ಮದುವೆಯಾದರೂ ಆಗಿದ್ದರೆ, ಒಳ್ಳೆದಿತ್ತು ಹೇಳಿ ಅಬ್ಬೆ-ಅಪ್ಪ ಶತಪ್ರಯತ್ನ ಮಾಡಿದವು. ಅದರ ಮೆಟ್ರಿಕ್ ವರೆಗೆ ಮಾತ್ರ ಓದಿಸಿದ್ದು, ಸಣ್ಣ ಮಗಳು ರುಕ್ಮಿಣಿಯ ಪಿ.ಯು.ಸಿ ವರೆಗೆ ಓದಿಸಿದ್ದವು. ಹಿರಿ ಮಗಳಿಂಗೆ ಬಂದ ಒಂದೆರಡು ಸಂಬಂಧ ತಪ್ಪಿ ಹೋತು! ಕೆಲವು ಜನ ಹಿರಿಮಗಳ ನೋಡ್ಲೆ ಬಂದವು ಕಿರಿಮಗಳ ಕೇಳ್ಲೆ ಶುರುಮಾಡಿದವು. ಅದರ ಎಡೆಲಿ ಸಣ್ಣಮಗ ಆನು ಇಂಜಿನಿಯರಿಂಗ್ ಓದೆಕ್ಕು ಹೇಳಿ ರಾಗ ಶುರುಮಾಡಿದ. ಒಟ್ಟಿಲಿ ಮಗಳಕ್ಕಳ ಮದುವೆ, ಮಗ ನಾರಾಯಣನ ಓದು, ಮುಗಿವ ಹೊತ್ತಿಂಗೆ ಗೌರಿಗೂ ಈಶ್ವರ ಭಟ್ಟಂಗೂ ಸಾಕುಸಾಕಾತು; ಪ್ರಾಯದೇ ಆತು.ಆದರೂ ಮಗ ನಾರಾಯಣ ವಿದೇಶಕ್ಕೆ ಹೋವುತ್ತ ಹೇಳಿ ಅವನ ಮದುವೆದೇ ಮಾಡಿ ಮುಗಿಸಿದವು. ತಂಗೆಕ್ಕಳ ಮದುವೆಗಾಗಲೀ,ತಮ್ಮನ ವಿದ್ಯಾಭ್ಯಾಸಕ್ಕಾಗಲೀ ಗೋಪಾಲಂದ ವಿಶೇಷ ಸಹಾಯ ಏನೂ ಆಯಿದಿಲ್ಲೆ. ಅವ° ಹೆಂಡತಿಯ ಕಟ್ಯೊಂಡು ಬೆಂಗ್ಳೂರಿಂಗೆ ಹೋದೋನು ಅಲ್ಲೇ ಮನೆಮಾಡಿದ. ಮನಗೆ ಬಪ್ಪದು ಅಪರೂಪ ಆತು! ನಾರಾಯಣ ಹೆಂಡತಿ ಸಮೇತ ಅಮೇರಿಕಾಕ್ಕೆ ಹೋದ. ಮಗಳಕ್ಕೊ ಅವರವರ ಸಂಸಾರಕ್ಕೆ ಅಂಟಿಕೊಂಡವು.ತನ್ನ ಜವಾಬ್ದಾರಿ ಎಲ್ಲ ಮುಗುತ್ತು ಹೇಳುವ ಹಾಂಗೆ, ಈಶ್ವರಭಟ್ಟ ಶಿವನ ಪಾದ ಸೇರಿದ. ಗೆಂಡ, ಮಕ್ಕೊ, ಮನೆ, ಗೆದ್ದೆ, ತೋಟ ಹೇಳಿ ಮೈಮುರುದು ಗೈದು ಗೌರಿ ಸೋತು ಸುಣ್ಣ ಆತು, ಗೌರಜ್ಜಿ ಆತು!

ನಾಲ್ಕೈದು ವರ್ಷ ಹೀಂಗೆ ಕಳ್ತು.ಒಂದು ದಿನ ಗೌರಜ್ಜಿಯ ಮನೆ ಹುಡುಕ್ಕಿಯೊಂಡು ಇಬ್ಬರು ಬಂದವು. ಮನೆ ಬಾಗಿಲು ಎರೆಶಿಯೊಂಡಿತ್ತು. ಆರಿದ್ದಿ ಮನೆಲಿ— ಹೇಳಿ ಕೇಳ್ಯೊಂಡು ಮೆಲ್ಲಂಗೆ ಬಾಗಿಲು ದೂಡಿ ಒಳಬಂದವು. ಕೈಸಾಲೆಲಿದ್ದ ಗೌರಜ್ಜಿ ಬಗ್ಯೊಂಡು ಮೆಲ್ಲಂಗೆ ಬಂದು ,ಆರು ಬಂದದು, ಗೋಪನೋ—,ಸರೋಜನೋ-ಅಲ್ಲ ನಿಂಗೊ? ಹೇಳಿ ಕೇಳಿದವು. ಆನು ಶ್ರೀದೇವಿ ಹೇಳಿ, ಇವು ನರಹರಿ—ಎಂಗೋ ಇಲ್ಲೇ ಹತ್ತರಣ ಪೇಟೆಂದ ಬಂದದು. ನಿಂಗಳಮಗ ಗೋಪಾಲ- ನರಹರಿ ಅಷ್ಟು ಹೇಳಿದ್ದೇ ತಡವು, ಗೌರಜ್ಜಿ ಮೋರೆ ಅರಳಿತ್ತು! ಗೋಪ ಬಯಿಂದನೋ? ಹೇಳಿ ಕೇಳಿದವು. ಇಲ್ಲೆ ಅಜ್ಜಿ–ನಿನ್ನೆ ಫೋನು ಮಾಡಿತ್ತಿದ್ದ—.ಎಂತ ಹೇಳಿದ ಗೋಪ? ಯಾವಗ ಬತ್ತಡ? ಅವ° ಬೆಂಗ್ಳೂರಿಲ್ಲಿ ಇಪ್ಪದಲ್ಲದೋ? ಅಂಬಗಂಬಗ ಬಪ್ಪಲಾವುತ್ತಿಲ್ಲೆ, ಹೇಳಿಯೊಂಡಿತ್ತಿದ್ದ. ಅವನ ಕಾಣದ್ದೆ ಅಸಕ್ಕಪ್ಪಲೆ ಶುರುವಾಯಿದು ಹೇಳಿ ಹೇಳಿಯೊಂಡು ಮೋರೆ ಬಾಡಿಸಿದವು ಗೌರಜ್ಜಿ.

ಬನ್ನಿ ಅಜ್ಜಿ, ಕೂದೊಂಡು ಮಾತಾಡುವೋ ಹೇಳಿತ್ತು, ಶ್ರೀದೇವಿ. ಎಷ್ಟು ದಿನ ಆತು ಆರತ್ರೂ ಸರಿಯಾಗಿ ಮಾತನಾಡದ್ದೆ! ಹೀಂಗೆ ಹೇಳ್ಯೊಂಡು ಒಂದು ಹಸೆ ಹಾಕಿ, ಕಾಲು ನೀಡಿ ಕೂದವು ಗೌರಜ್ಜಿ. ಅವಕ್ಕೆ ಮಾತು ಜಾಸ್ತಿ. ಮದಲಿಂದಲೂ ಹಾಂಗೆ. ಹತ್ತರೆ ಕೂದೊಂಡು ನರಹರಿ ಹೇಳಿದಅಜ್ಜಿ, ನಿಂಗಳ ಬೇರೆ ಮಕ್ಕೊ-.ಎನ್ನ ಹಿರಿಮಗಳು ಸರೋಜ ಕೊಯಂಬತ್ತೂರಿಲಿಪ್ಪದು. ಅಳಿಯ ಪೌರೋಹಿತ್ಯ ಮಾಡುವದು. ಅವರದ್ದು ಕೂಡು ಕುಟುಂಬ! ಭಾವನೋರು,  ಮೈದುನಂದಿರು,ಅವರ ಹೆಂಡತಿ- ಮಕ್ಕೊ ಎಲ್ಲ ಒಟ್ಟಿಂಗೆ ಹತ್ತಿಪ್ಪತ್ತು ಜನ ಒಂದೇ ಮನೆಲಿ ಇದ್ದವು ತಕ್ಕಮಟ್ಟಿಂಗೆ! ಆರು ತಿಂಗಳ ಹಿಂದೆ ಬಂದೊಂಡು ಹೋಯಿದವು.

ಸಣ್ಣ ಮಗಳು ರುಕ್ಮಿ ಸೂರತ್ತಿಲಿಪ್ಪದು. ಅಳಿಯಂಗೆ ಬೇಂಕಿಲ್ಲಿ ಕೆಲಸ. ಹೋದವರ್ಷ ಬಂದಿಪ್ಪಗ ಹೇಳಿತ್ತುಅಬ್ಬೆ, ಮಗಳಿಂಗೆ ಅಲ್ಲೇ ಒಂದು ಸಂಬಂಧ ಬಯಿಂದು. ಮದುವೆ ಅಲ್ಲಿಯೇ ಮಾಡ್ತೆಯ. ನಿಂಗೊಗೆ ಅಷ್ಟುದೂರ ಬಪ್ಪಲೆಡಿಯ, ಇಲ್ಲಿಂದಲೇ ಆಶೀರ್ವಾದ  ಮಾಡಿ ಹೇಳಿ. ಎಷ್ಟಾದರೂ ಎನ್ನ ಪುಳ್ಳಿ ಅಲ್ಲದಾ? ಎಲ್ಲಿಯಾದರೂ ಚೆಂದಕ್ಕೆ ಇರ್ಲಿ,ಹೇಳಿ ಹೇಳ್ಯೊಂಡು ಗೌರಜ್ಜಿ ಸೆಮ್ಮಿದವು. ನರಹರಿ ನೀರು ತಂದು ಕೊಟ್ಟಿಕ್ಕಿ ಕೇಳಿದ ಅಜ್ಜಿ ನಿಂಗೊಗೆ ಗೋಪಾಲ ಒಬ್ಬನೇ ಮಗನೋ?

ಗುಂಡಿಗೆ ಹೋದ ಗೌರಜ್ಜಿ ಕಣ್ಣು ಮಿಂಚಿತ್ತು. ಅಲ್ಲಪ್ಪಾ, ಸಣ್ಣ ಮಗ ನಾಣಿ ಇದ್ದ, ಅಕೇರಿಯಾಣವ! ಅವಂಗೆ ಸೀವು ಪಚ್ಚೆಡಿ ಹೇಳಿದರೆ ಪ್ರಾಣ! ಅವಂಗೆ ಕಲಿವಿಕೆ ಮುಗುದಪ್ಪದುದೇ ಉದ್ಯೋಗ ಆಯಿದು, ಬೆಂಗ್ಳೂರಿಲ್ಲಿ.೮ ವರ್ಷದ ಹಿಂದೆ ಒಂದು ಕೈಮಗ್ಗದ ಸೀರೆ ತಂದುಕೊಟ್ಟು ಹೇಳಿದ, ಬಪ್ಪ ವರ್ಷಂದ ಎನಗೆ ಅಮೇರಿಕಲ್ಲಿ ಕೆಲಸ. ಅಲ್ಲಿಯೇ ಇರೆಕ್ಕಾವುತ್ತು ಹೇಳಿ. ಅವನ ಅಪ್ಪ ಹೇಳಿದವು, ಪರವೂರಿಂಗೆ ಹೋಗಿ ಏನಾರೂ ಎಡವಟ್ಟು ಬೇಡ, ಮದುವೆ ಮಾಡಿಬಿಡುವೋ ಹೇಳಿ. ಕಾಲೇಜಿಂಗೆ ಹೋಗ್ಯೊಂಡಿದ್ದ ಕೂಸು ಸುಶೀಲೆ, ಬದಿಯಡ್ಕದ ಸುಬ್ರಾಯಣ್ಣನ ಮಗಳು,ಅದರ ನಾಣಿಗೆ ತಂದದು. ಈಗ ಅಮೇರಿಕಲ್ಲಿದ್ದವು.ಎರಡು ವರ್ಷದ ಹಿಂದೆ ಅವನ ಅಪ್ಪನ ತಿಥಿಗೆ ಬಂದದೆ, ಮತ್ತೆ ಬಯಿಂದವಿಲ್ಲೆ. ದೂರದ ಊರಿಂದ ಹಾಂಗೆಲ್ಲ ಗ್ರೇಶಿದ ಹಾಂಗೆ ಬಪ್ಪಲಾವುತ್ತೋ? ಗೌರಜ್ಜಿ ದೀರ್ಘ ಶ್ವಾಸ ತೆಗದವು.

ಅಜ್ಜಿ ನಿಂಗಳ ಯಜಮಾನ್ರು ಹೋಗಿ ಎಷ್ಟು ಸಮಯ ಆತು?,ಎಂತಾಗಿತ್ತು ಅವಕ್ಕೆ–? ನರಹರಿ ಕೇಳಿಯಪ್ಪಗ ರಜ ಹೊತ್ತು ಬಿಟ್ಟು ಗೌರಜ್ಜಿಶುರು ಮಾಡಿದವು.ಅವು ಹೋಗಿ ಮನ್ನೆ ಕೃಷ್ಣಾಷ್ಟಮಿಗೆ  ಐದು ವರ್ಷ ಆತು. ಅವಕ್ಕೆ ಆರೋಗ್ಯದ ಯಾವ ಸಮಸ್ಯೆಯೂ ಇತ್ತಿಲ್ಲೆ. ಅಂದು ಉದಿಯಪ್ಪಗ ತೆಳ್ಳವು- ಬೆಲ್ಲ- ಕಾಯಿಸುಳಿ ಮಾಡು ಹೇಳಿದವು. ಸಣ್ಣ ಮಗಳೂ,ಅದರ ಮಕ್ಕಳೂ ಇತ್ತಿದ್ದವು. ಎಲ್ಲೊರೂ ಒಟ್ಟಿಂಗೆ ಮಾತಾಡ್ಯೊಂಡು, ನೆಗೆಮಾಡ್ಯೊಂಡು ತಿಂಡಿ ತಿಂದದು. ’ಸೊಪ್ಪು ಕಡಿವಲೆ ಬಾಳಪ್ಪ ಏಕೆ ಬಯಿಂದಿಲ್ಲೆ, ನೋಡಿಕ್ಕಿ ಬತ್ತೆ’ ಹೇಳಿ ಅದರ ಮನಗೆ, ಇಲ್ಲೇ ಹತ್ತರೆ– ಹೋಯಿಕ್ಕಿ ಬಂದು ಉಸ್ಸಪ್ಪ, ತುಂಬ ಬಚ್ಚುತ್ತೆಂತ?, ರಜ ಮಜ್ಜಿಗೆ ನೀರು ಕೊಂಡ, ಬಾಳಪ್ಪ ನಾಳೆ ಬತ್ತಡ’ ಹೇಳಿ, ಕೊಟ್ಟ ಮಜ್ಜಿಗೆ ನೀರಿನ ಅರ್ಧವೇ ಕುಡ್ದು. ಮತ್ತೆ ಮಾತಾಡಿದ್ದವೇ ಇಲ್ಲೆ. ಬಾರೀ ಬಂಙ ಬಯಿಂದವು; ಎನಗೆ ಅಷ್ಟೇ ಋಣ ಇದ್ದದು—.ಗೌರಜ್ಜಿಯ ಧ್ವನಿ ತುಂಬಾ ನಡುಗಿತ್ತು, ಸೆರಗಿಲಿ ಬಾಯಿ ಮುಚ್ಚಿದವು.

ಶ್ರೀದೇವಿ ಮಾತು ಬದಲಿಸಿತ್ತು. ಅಜ್ಜಿ, ಇಲ್ಲಿ ನಿಂಗಳೊಟ್ಟಿಂಗೆ ಆರಾದರೂ ಇದ್ದವೋ?. ಆರು ಇಪ್ಪದು?, ಮಕ್ಕೊ ಎಲ್ಲ ಪೇಟೆಲಿ. ಐದಾರು ವರ್ಷಂದ ಆನು ಮಾತ್ರ. ಮಕ್ಕ ಬಪ್ಪದು ಅಪರೂಪ. ಕಾಗದ ಬಂದೊಂಡಿತ್ತು. ಈಗ ಅದುದೇ ಇಲ್ಲೆ. ಹಟ್ಟಿಲಿ ದನಗಳುದೇ ಇಲ್ಲೆ. ಎನಗೆ ನೋಡ್ಯೊಂಬಲೆಡಿಯ ಹೇಳಿ ಗೋಪ ಅಂದೇ ಮಾರಿದ್ದ! ಎನಗೆ ಹೆಜ್ಜೆ ಬೇಶುಲೇ ಎಡಿತ್ತಿಲ್ಲೆ! ಕೈಕಾಲು ಧರುಸುತ್ತು. ಬಗ್ಗುಲೆ,ನೆಗರುಲೆ ಎಡಿತ್ತಿಲ್ಲೆ— ನಿಲ್ಸಿದವು ಗೌರಜ್ಜಿ.

ಅಜ್ಜಿ ನಿಂಗೊಗೆ ಮಕ್ಕಳೊಟ್ಟಿಂಗೆ ಹೋಗಿ ಇಪ್ಪಲಾವುತ್ತಿತು! ಶ್ರೀದೇವಿ ಹೇಳಿತ್ತು. ಮಕ್ಕೊಗೆ ಬಂಙ ಆವುತ್ತಡ! ಮಾವನ ವರ್ಷಾಂತಕ್ಕೆ ಬಂದ ಹಿರಿಸೊಸೆ ಹೇಳಿತ್ತು,ಅತ್ತೆ ನಿಂಗೊಗೆ ಬೆಂಗ್ಳ್ಲೂರಿಲ್ಲಿ ಹೊಂದಿಗೊಂಬಲೆ ಎಡಿಯ, ಇಲ್ಲಿ ಆರಾದರೂ ಮಾತಾಡುಲೆ ಸಿಕ್ಕುತ್ತವು. ಅಲ್ಲಿ ಹಾಂಗೆಲ್ಲ ಆರುದೇ ಇಲ್ಲೆ. ಎಲ್ಲೋರಿಂಗೂ ಅವರವರದ್ದೇ ಕೆಲಸ ಇರ‍್ತು. ಅಲ್ಲಿ ನಿಂಗೊಗೆ ಉದಾಸಿನ ಅಕ್ಕು. ನಿಂಗೊ ಇಲ್ಲೇ ಇರಿ.ಪುರುಸೊತ್ತಪ್ಪಗ ಎಂಗಳೇ ಬಂದು-ಹೋಗಿ ಮಾಡ್ತೆಯ. ಗೋಪನುದೇ, ಹಳ್ಳಿಯ ಹವಗೆ ನಿಂಗೊ ಒಗ್ಗಿ ಹೋಯಿದಿ ಅಬ್ಬೆ, ಬೆಂಗ್ಳೂರಿನ ಹವೆ ನಿಂಗೊಗೆ ಆಗ. ಪ್ರತಿ ತಿಂಗಳು ಪೈಸೆ ಕಳುಸುತ್ತೆ ಹೇಳಿದ, ಎನಗುದೇ ಅದು ಸರಿಹೇಳಿ ಕಂಡತ್ತು.ಆಚ ವರ್ಷ ತಿಥಿಗೆ ಬಂದಿಪ್ಪಗ ನಾಣಿಯತ್ರೆ ಹೇಳಿದೆ, ಅಮೇರಿಕಾಲ್ಲಿಪ್ಪ ಅವನ ಮನಗೆ ರಜಸಮಯಕ್ಕೆ ಬಂದರೆ ಹೇಂಗೆ ಹೇಳಿ. ಅದಕ್ಕೆ ಸೊಸೆ ಬಾಯಿಗೆ ಕೈಹಿಡುದು ನೆಗೆಮಾಡ್ಯೊಂಡು, ’ನಿಂಗಳ ಇಲ್ಯಾಣ ಕ್ರಮಕ್ಕೂ ಅಮೇರಿಕಾದ ಕ್ರಮಕ್ಕೂ ತುಂಬ ವ್ಯತ್ಯಾಸ ಇದ್ದು, ನಿಂಗಳ ಮಡಿವಂತಿಕೆ  ನೋಡಿದರೆ, ಅಲ್ಲಿ ಎಲ್ಲೋರು ನೆಗೆ ಮಾಡುಗು’ ಹೇಳಿತ್ತು. ನಾಣಿದೆ ಹೆಂಡತ್ತಿಯ ಪರವಹಿಸಿ,’ಅಬ್ಬೆ, ನಿಂಗೊ ಅಲ್ಲಿಗೆ ಬಪ್ಪದು ಬೇಡ. ಅಲ್ಲಿ ಬಂದು ಅದು ಆಗ, ಇದು ಆಗ ಹೇಳಿದರೆ ಎನ್ನ ಹೆಂಡತಿಗೆ ಕಷ್ಟ ಅಕ್ಕು. ಅದುದೇ ಅಲ್ಲಿ ಕೆಲಸಕ್ಕೆ ಹೋವುತ್ತು. ಅದಕ್ಕಾದರೆ ಅಲ್ಯಾಣ ಕ್ರಮ ಅಭ್ಯಾಸ ಆಯಿದು. ನಿಂಗೊಗೆ ಅದರಹಾಂಗೆ ಕಲಿವಲೆ ಎಡಿಯ.ಆನು ಅಣ್ಣಂಗೆ ಪೈಸೆ ಕಳುಸುತ್ತೆ.ಅಂವ ನಿಂಗೊಗೆ ಕಳುಸುಗು’, ಹೇಳಿದ. ಇನ್ನು ಎಡಿಗಾದ ಹಾಂಗೆ ಇಲ್ಲೇ ಇರ್ತೆ ಹೇಳಿ ಗಟ್ಟಿ ಮನಸ್ಸು ಮಾಡ್ಯೊಂಡೆ.

ಮತ್ತೆ ಮಗಳಕ್ಕೋ—? ಕೇಳಿತ್ತು ಶ್ರೀದೇವಿ. ಅವಕ್ಕೆ ಅವರ ಸಂಸಾರ ತಾಪತ್ರಯಂಗಳೇ ಹಾಸಿ ಹೊದವಷ್ಟಿದ್ದು, ಅಲ್ಲದ್ದೆ ಮಗಂದಿರಿಪ್ಪಗ ಮಗಳಕ್ಕಳಮನೆಲಿ ಹೋಗಿ ಹಾಳುಬಿದ್ದರೆ , ಸಸಾರ ಅಪ್ಪದಲ್ಲದೊ?, ಮಗಂದಿರ ಸಣ್ಣ ಮಾಡಿದಾಂಗೆ ಆವುತ್ತಿಲ್ಲೆಯೋ? ಆನು ಹಾಂಗೆ ಮಾಡೆ ಹೇಳಿದವು ನಿರ್ಧಾರದ ದನಿಲಿ ಗೌರಜ್ಜಿ.

ಇಲ್ಲಿ ನೆರೆಕರೆಯವು ಹೇಂಗೆ? ಕೇಳಿದ ನರಹರಿ. ಈಗ ಹಾಂಗೆ ನೆರೆಕರೆಲಿ ಆರುದೇ ಇಲ್ಲೆ. ಎಲ್ಲ ಪೇಟೆ ಸೇರಿದ್ದವು.  ಗಣಪ್ಪಣ್ಣಗೂ ಎನ್ನ ಯಜಮಾನ್ರಿಂಗೂ ಒಳ್ಳೆ ಸ್ನೇಹಾಚಾರ ಇತ್ತು. ಹೇಳಿದಾಂಗೆ ಒಂದು ವಿಷಯ ನೆನಪಾತು! ಆವಗ ಮಕ್ಕೊ ಎಲ್ಲ ಸಣ್ಣ. ಆಟಿ ತಿಂಗಳ ಮಳೆ ಜೋರಿತ್ತು. ಪಾತ್ರದ ಅಡೀಲಿದ್ದ ಮೂರು ಪಾವು ಅಕ್ಕಿ ಉದ್ದಿ ಹಾಕಿ ಹೆಜ್ಜೆ ಮಡಿಗಿ, ಹೆರ ಬಯಿಂದೆ. ಗಣಪ್ಪಣ್ಣ ಓಡ್ಯೊಂಡು ಬಂದ. ’ಗೌರಕ್ಕ ಕೈಲಿ ಒಂದು ರೂವಿದೆ ಇಲ್ಲೆ! ಮನೆಲಿ ಅಕ್ಕಿ ಅಡಿ ಉದ್ದಿದ್ದು, ಏನಾರು ಮಾಡ್ಲೆಡಿಗ?’ಕೇಳಿದ. ಎಂತ ಮಾಡುವದು?’ಎಲ್ಲೋರು ಇಲ್ಲಿಗೇ ಉಂಬಲೆ ಬನ್ನಿ’ ಹೇಳಿದೆ.ಇಪ್ಪದರ ಎನ್ನ ಮಕ್ಕಗೂ ಅವಕ್ಕೂ ಹಂಚಿ ಬಳುಸಿದೆ. ಇಪ್ಪದರ ಹಂಚಿಕೊಟ್ಟು ತಿಂಬದಲ್ಲದೋ ಮನುಷ್ಯಗುಣ! ನಿಜ ಹೇಳೆಕ್ಕಾದರೆ ಅಂದು ಎನಗೆ ರಜ ತೆಳಿ ಮಾತ್ರ ಒಳುದ್ದು,ಹೇಳಿ ಗೌರಜ್ಜಿ ಮೌನ ಅಪ್ಪಗ ಆ ಹಿರಿಜೀವದ ಔದಾರ್ಯದ ಬಗ್ಗೆ ನರಹರಿಗೆ ಮೆಚ್ಚಿಗೆ ಆತು. ಆದರೂ ಬಂದ ವಿಷಯ ಹೇಳ್ಲೇ ಬೇಕನ್ನೆ!

ಅಜ್ಜಿ ಇಲ್ಯಾಣ ಆಸ್ತಿ ಎಲ್ಲ ನಿಂಗಳ ಹೆಸರಿಲ್ಲೇ ಇದ್ದೋ?ವಿಚಾರಿಸಿದ ನರಹರಿ. ಆಸ್ತಿ ಎಲ್ಲಿದ್ದು?, ಆಚವರ್ಷವೇ ಗೋಪ ತೋಟ ಎಲ್ಲ ಮಾರಿದ್ದ. ನೋಡ್ಯೊಂಬವು ಇಲ್ಲದ್ದೆ ಹಲಾಕಾವುತ್ತು ಹೇಳಿ. ಎನ್ನಂದ ಎಡಿಗಾದಷ್ಟು  ನೋಡಿದ್ದೆ. ಆ ಮೇಲೆ ಒಂದು ಆಳು ನೋಡ್ಯೊಂಡಿತ್ತು. ಅದು ಸರಿ ಇತ್ತಿಲ್ಲೆ. ಈಗ ಈ ಹಿತ್ತಿಲು- ಮನೆ ಮಾತ್ರ ಇಪ್ಪದು. ಗೋಪನ ಹೆಸರಿಲ್ಲಿದ್ದು. ಎನಗಿನ್ನು ಯಾವುದು ಎಂತಕೆ? ಹ್ಹುಂ ಹೇಳಿ ಗೌರಜ್ಜಿ ಕೈಯೂರಿ ಎದ್ದವು.’ ಎನ್ನದೆ ಕತೆ ಹೇಳ್ಯೊಂಡು ಕೂದೆ. ಆಸರಿಂಗೆ ಬೇಕೋ ಹೇಳಿದೆ ಕೇಳಿದ್ದಿಲ್ಲೆ. ಈಗೀಗ ಎನಗೆ ಎಲ್ಲ ಮರವದು. ಒಂದೊಂದರಿ ತಲೆ ತಿರುಗುತ್ತು. ಹತ್ತು ಹೆಜ್ಜೆ ನಡದರೆ ಡಮ್ಮು ಕಟ್ಟುತ್ತು, ಕೈಕಾಲು ಮಡಸಲೆ ಬಿಡುಸಲೆ ಕೂಡ ಬಂಙ ಆವುತ್ತು. ಈಗೀಗ ಇಲ್ಲಿ ಒಬ್ಬನೇ ಇಪ್ಪಲೆ ಹೆದರಿಕೆಯುದೇ ಆವುತ್ತು.ಈ ಸರ್ತಿ ಗೋಪ ಬಂದರೆ, ಅವನತ್ರೆ ಇದೆಲ್ಲ ಹೇಳೆಕ್ಕು ಹೇಳಿ ಆಲೋಚನೆ ಮಾಡಿದ್ದೆ. ಅವಂಗೆ ಅಬ್ಬೆ ಹೇಳಿದರೆ ಆತು! ಎನಗೆ ಇಲ್ಲಿ ಇಪ್ಪಲೆಡಿತ್ತಿಲ್ಲೆ ಹೇಳಿದರೆ, ಅಂಬಗ ಹೋಪೊ ಅಬ್ಬೆ ಹೆರಡಿ, ಹೇಳಿ ಕರಕ್ಕೊಂಡು ಹೋಕು.ಅಂವ ಯಾವಗ ಬತ್ತಡ?’ ಗೌರಜ್ಜಿಯ ಸಂಭ್ರಮ ನೋಡಿ, ಶ್ರೀದೇವಿಗೆ ಸಂಕಟ ಆತು.

ನರಹರಿ ಮೆಲ್ಲಂಗೆ ಹೇಳಿದ,ಅಜ್ಜಿ, ಗೋಪಾಲಂಗೆ ಬಪ್ಪಲಾವುತ್ತಿಲ್ಲೆಡ. ಈ ಹಿತ್ತಿಲು ಮನೆ ಮಾರಾಟ ಮಾಡ್ತಡ-. ಎಂತ ಈ ಮನೆ ಮಾರ್ತೆ ಹೇಳಿದನೊ ಗೋಪ? ಈ ಮನೆ ಕಟ್ಟುಸಲೆ ಅವನ ಅಪ್ಪ ಎಷ್ಟು ಬಂಙ ಬಯಿಂದವು. ಅದಾ ಅಲ್ಲಿ ತೊಟ್ಲು ಕಟ್ಟಿ ಆನು ಮಕ್ಕಳ ತೂಗಿಯೊಂಡಿದ್ದದು–, ಓ ಅಲ್ಲಿ ಮಸರು ಕಡವಗ ಗೋಪ ಬಂದು ಕೈಹಾಕಿ ಭರಣಿಂದ ಬೆಣ್ಣೆ ಬಾಚಿದ್ದು, ಚಕ್ಕುಲಿ ತಿಂದೊಂಡು ಆ ಇಟ್ಟೆಣಿ ಮೆಟ್ಲಿಂದ ಗೋಪ ಬೀಳುವಗ ಆನು ಹಿಡ್ಕೊಂಡದು,—,ಕಾಲ ಚೈನು ಹಾಕಿಯೊಂಡು ಸರೋಜ ಅಬ್ಬೆ-ಅಬ್ಬೆ- ಹೇಳ್ಯೊಂಡು ಇಲ್ಲೇ ಓಡಾಡಿಯೊಂಡಿದ್ದದು— ರುಕ್ಮಿ ಓ ಅಲ್ಲಿ ಮೊಟ್ಟೆಲಿ  ಕೂದೊಂಡು ಅಪ್ಪನ ಬಾಯಿಗೆ ಎಲೆಅಡಕ್ಕೆ ಕೊಟ್ಟೊಂಡಿದ್ದದು—, ನಾಣಿ ಹಪ್ಪಳ ತಿಂಬಲೆ ಹಟಮಾಡಿ ಓ ಅಲ್ಲಿ ಹೊರಳಿದ್ದು—,ಆ ಕಂಬದ ಬುಡಲ್ಲಿ ಎನ್ನ ಮಕ್ಕೊ ಅಟ್ಟ-ಮುಟ್ಟ ಆಡಿಯೊಂಡಿದ್ದದು-ಅಟ್ಟುಂಬಳ ಹಂತಿ ಹಾಕಿ ಎಲ್ಲೊರಿಂಗೂ ಆನು ಬಳಿಸಿಯೊಂಡದ್ದದು—, ಎಲ್ಲ ನೆನಪಾವುತ್ತು—ಗೌರಜ್ಜಿ ಒಂದೇ ಉಸಿರಿಲಿ ನೆನಪಿನ ಎಳೆಯ ಬಿಚ್ಚಿಯೊಂಡು ಹೋದವು. ರಜ ಹೊತ್ತು ಎಲ್ಲೋರು ಮೌನ. ತಿರುಗ ಗೌರಜ್ಜಿಯೆ ಹೇಳಿದವು,ಗೋಪ ಆದರು ಎಂತ ಮಾಡುವದು? ಅವ ಅಲ್ಲಿಪ್ಪದು, ಮನೆ ಇಲ್ಲಿಪ್ಪದು! ಮಾರದ್ದೆ ಎಂತಮಾಡುವದು?ಎನ್ನ ಅಂಬಗ ಕರಕ್ಕೊಂಡು ಹೋವುತ್ತ ಹೇಳುವದು ಖಾತ್ರಿ ಆತು. ಮಗ, ಸೊಸೆ ಹೇಳಿದ್ದರ ಕೇಳ್ಯೊಂಡು ಒಂದು ಕರೇಲಿ ಇದ್ದರಾತು ಹೀಂಗೆ ಹೇಳಿ ಒಂದು ನೆಗೆ ಮಾಡಿದವು ಗೌರಜ್ಜಿ! ಶ್ರೀದೇವಿಗೆ ಕರುಳು ಚುರ್ ಹೇಳಿತ್ತು.

ಅದು ಹಾಂಗಲ್ಲ ಅಜ್ಜಿ- ನರಹರಿ ಮೆಲ್ಲಂಗೆ ನೇರ ವಿಷಯಕ್ಕೆ ಬಂದ. ಎಂಗೊ ಇಲ್ಲಿ ಹತ್ತರಣ ವೃದ್ಧಾಶ್ರಮಂದ ಬಂದದು.-ಆಶ್ರಮದ ಹೆಸರಿಂಗೆ ಗೋಪಾಲ ೨೫೦೦೦ ರೂಪಾಯಿಯ ಚೆಕ್ ಕಳಿಸಿದ್ದ. ಫೋನುದೆ ಮಾಡಿದ್ದ. ಒಂದು ಕಾಗದದೇ ಬರದ್ದ.-ಈಗ ಸದ್ಯಕ್ಕೆ ಈ ಮನಗೆ ಬೀಗ ಹಾಕಿ ಬೀಗದ ಕೈ ಆನು ಮಡಿಕ್ಕೊಳೆಕ್ಕಡ— ನಿಂಗಳ ವ್ರದ್ಧಾಶ್ರಮಕ್ಕೆ ಸೇರ್ಸೆಕ್ಕಾಡ-ಇದ ನೋಡಿ ಕಾಗದ!. ಬೇಗ ಕಾಗದ ತೆಕ್ಕೊಂಡು ನೋಡಿದವು ಗೌರಜ್ಜಿ– ಬಂಙಲ್ಲಿ ಓದಿದವು. ಕಣ್ಣ್ಣಿಂದ ನೀರು ಇಳುದತ್ತು. ಮೆಲ್ಲಂಗೆ ಕಟ್ಟಿ ಕಟ್ಟಿ ಮಾತಾಡಿದವು. ಅಪ್ಪು-ಇದು ಗೋಪಂದೇ ಅಕ್ಷರ! ಅಂಬಗ ಗೋಪ ಎನ್ನ ಕರಕ್ಕೊಂಡು ಹೋವುತ್ತ ಇಲ್ಲೆಯೋ–! ಈ ಪ್ರಾಯಲ್ಲಿ ಎನಗೆ ಮನೆ ಇಲ್ಲೆ–, ಆಶ್ರಮಲ್ಲಿ ಎನಗೆ ಆರಿದ್ದವು?-ಎನ್ನ ಮಕ್ಕೊ-ಗೋಪ ಎಂತಕೆ ಹೀಂಗೆ ಮಾಡಿದ—;ಅಜ್ಜಿಯ ಗೆಂಟ್ಳು ಕಟ್ಟಿ ಸ್ವರವೇ ಬಯಿಂದಿಲ್ಲೆ. ನರಹರಿ ಮತ್ತೆ ಶ್ರೀದೇವಿಯ ಕಣ್ಣಿಲಿಯುದೇ ನೀರು ಬಂತು.

ಗೌರಜ್ಜಿಯ ಹೆರಡುಸಲೆ ಅವಿಬ್ಬರು ಹರಸಾಹಸ ಮಾಡೆಕ್ಕಾಗಿ ಬಂತು. ನರಹರಿ ಮನಗೆ ಬೀಗಹಾಕಿದ ಮೇಲೆ ವಾಪಾಸು ತೆಗೆಶಿಕ್ಕಿ ಗೌರಜ್ಜಿ ದೇವರಿಂಗೆ ಹೊಡಾಡಿದವು, ಪೆಟ್ಟಿಗೆಯ ಅಡೀಲಿದ್ದ ಒಂದು ಸಣ್ಣ ವಸ್ತ್ರದ ಕಟ್ಟು ತೆಗದು ಕಂಕುಳಿಲ್ಲಿ ಹಿಡುಕ್ಕೊಂಡವು,ಒಂದು ಕಂಚಿನ ಗಿಂಡಿಯ ಕೈಲಿ ಹಿಡುಕ್ಕೊಂಡು ಮನೆಂದ ಹೆರ ಬಂದವು!

ತುಂಬ ಮಾತಾಡ್ಯೊಂಡಿದ್ದ  ಗೌರಜ್ಜಿ ಆಶ್ರಮ ಸೇರಿದ ಮೇಲೆ ದಿನಕಳದ ಹಾಂಗೆ ಮೌನಿಯಾಗಿಬಿಟ್ಟವು. ಆರತ್ತರೂ ಮಾತಿಲ್ಲೆ, ಕತೆಯಿಲ್ಲೆ! ಆರ ಕಂಡರೂ ಹೆದರಿಕೆ! ಒಂದರಿ ಕೂಗಿದರೆ, ಇನ್ನೊಂದರಿ ನೆಗೆಮಾಡುವದು, ಹೀಂಗೆ ವಿಚಿತ್ರ ವರ್ತನೆ! ಗೌರಜ್ಜಿಯ ಗೊಂತಿಪ್ಪ ಆರು ಕಂಡರುದೆ,’ಛೆ, ಹೀಂಗಾತನ್ನೆ!ಹೇಳಿ ದುಃಖ ಪಡುಗು! ಹಾಂಗಾತು ಗೌರಜ್ಜಿಯ ಪರಿಸ್ಥಿತಿ!

ಹೀಂಗೆ ಎರಡು ವರ್ಷ ದಾಂಟಿತ್ತು.ಗೋಪಾಲನೂ ಅವನ ಹೆಂಡತಿಯು ಆಶ್ರಮಕ್ಕೆ ಬಂದವು. ಗಾಲಿ ಕುರ್ಚಿಲಿ ಕೂದೊಂಡಿದ್ದ ಗೌರಜ್ಜಿ  ಮಟಮಟನೆ ಅವರಿಬ್ಬರ ಕಡೆಂಗೆ ನೋಡಿದವು. ಅಬ್ಬೆ!ಆನು ಬಯಿಂದೆ! ಹೇಳಿದ ಗೋಪಾಲ. ಗೌರಜ್ಜಿ ಹೆದರಿಯೊಂಡಹಾಂಗೆ ಬೇಡ! –ಬೇಡ- ಹೇಳಿದವು. ಇದೆಂತ ಅಬ್ಬೆ ಹೀಂಗೆ ಮಾಡುವದು! ಅಬ್ಬೆ! ಆನು ನಿಂಗಳ ಮಗ ಗೋಪ! ಗುರ‍್ತ ಸಿಕ್ಕಿದ್ದದಿಲ್ಲೆಯಾ? ಗೋಪಾಲ ಹತ್ತರಂಗೆ ಹೋಗಿ ಕೇಳಿದ. ಗೌರಜ್ಜಿ ಒಂದರಿ ಜೋರು ಕೂಗಿದವು! ತಿರುಗ ನೆಗೆ ಮಾಡುಲೆ ಶುರುಮಾಡಿದವು.

ಗೋಪಾಲ ಅಬ್ಬೆಯ ಕಾಲಬುಡಲ್ಲಿ ಕೂದೊಂಡು ಅಬ್ಬೆ, ನಿಂಗಳ ಈ ಅವಸ್ಥಗೆ ಆನೇ ಕಾರಣ! ಎನಗೂ ಎನ್ನ ಹೆಂಡತಿಗೂ ಈಗ ಪ್ರಾಯ ಆತು. ಎಂಗೊ ಪ್ರಾಯದೊವು ಮನೇಲಿದ್ದರೆ ಎನ್ನ ಮಗಂಗೆ ಮದುವಗೆ ಕಷ್ಟ ಆವುತ್ತಡ! ಅವ ಮದುವೆ ಅಪ್ಪ  ಕೂಸು ಈ ಕಾರಣಕ್ಕೆ ಒಪ್ಪುತ್ತಿಲ್ಲೆಡ. ಅವಂಗೆ ಮಾತ್ರ ಅದರನ್ನೆ ಮದುವೆ ಆಯೆಕ್ಕಡ! ನಿಂಗೊ ಏನಾರೂ ವ್ಯವಸ್ಥೆ ಮಾಡ್ಯೊಳ್ಲಿ.ಇಲ್ಲದ್ರೆ ಆನು ಬೇರೆ ಮನೆ ಮಾಡ್ತೆ ಹೇಳಿದ. ಅದಕ್ಕೆ ವಿಧಿ ಇಲ್ಲದ್ದೆ ಹಳ್ಳಿಗೆ ಬಯಿಂದೆಯ! ಇಲ್ಲೇ ಹತ್ತರೆ ಒಂದು ಸಣ್ಣ ಮನೆ ಮಾಡಿದ್ದೆ. ಇನ್ನು ನಿಂಗಳ ಆನೇ ನೋಡಿಕೊಳ್ತೆ! ಮುಂದೆ ಎಂಗಳೂ ಇಲ್ಲೇ ಬರೆಕ್ಕಷ್ಟೆ!ಬನ್ನಿ ಅಬ್ಬೆ, ಮನಗೆ ಹೋಪೊ ಹೇಳಿ ಹೆಮ್ಮಕ್ಕಳ ಹಾಂಗೆ ಕೂಗಿದ. ಗೌರಜ್ಜಿ ಹ್ಹಿ—ಹ್ಹಿ– ಹೇಳಿ ವಿಚಿತ್ರವಾಗಿ ನೆಗೆ ಮಾಡ್ಯೊಂಡು ಗಾಲಿ ಕುರ್ಚಿಯ ದೂಡ್ಯೊಂಡು ಒಳಂಗೆ ಹೋದವು.

***~~~****

ಶ್ರೀಮತಿ. ಸಾವಿತ್ರೀ ರಮೇಶ್ ಭಟ್
ಕನ್ನಡ ಭಾಷಾ ಶಿಕ್ಷಕಿ,
ಪೊಂಪೈ ಪ್ರೌಢ ಶಾಲೆ, ಊರ್ವ,
ಮಂಗಳೂರು, ದ.ಕ

 

5 thoughts on “ನಮ್ಮ ಮಕ್ಕೊ (ಕೊಡಗಿನ ಗೌರಮ್ಮ ಕಥಾಸ್ಪರ್ದೆಯ 2016ನೇ ಸಾಲಿನ ತೃತೀಯ ಬಹುಮಾನಿತ ಕಥೆ)

  1. ಕಥೆ ಓದಿ ಒಪ್ಪಕೊಟ್ಟ ಪಟ್ಟಾಜೆಶಿವರಾಮಣ್ಣ, ಬೊಳುಂಬು ಗೋಪಾಲ , ಯಂ .ಕೆ.ಭಾವಂಗೂ ಎಲ್ಲೋರಿಂಗೂ ಕತೆಗಾರ್ತಿಯ ಪರವಾಗಿಯೂ ಎನ್ನ ವೈಯಕ್ತಿಕ ನೆಲೆಲಿಯೂ ಧನ್ಯವಾದಂಗೊ

  2. ಗೌರಜ್ಜಿಯ ಕತೆ ಕೇಳಿ ಕಣ್ಣೀರು ಬಂತು. ಈಗಾಣ ಮಕ್ಕಳ ಮನಸ್ಥಿತಿಗೆ ಕನ್ನಡಿ ಹಿಡುದ ಹಾಂಗಿಪ್ಪ ಕಥೆ. ಇದು ಕಥೆ ಅಲ್ಲ ಜೀವನ. ಬರದ ಸಾವಿತ್ರಿ ಅಕ್ಕಂಗೆ ಅಭಿನಂದನೆಗೊ. ಬೈಲಿಲ್ಲಿ ಒದಗುಸಿಕೊಟ್ಟ ವಿಜಯಕ್ಕಂಗೆ ಧನ್ಯವಾದಂಗೊ.

  3. ಗೋಪಮ್ಮನ ಮಗಳು
    ಕೊಯಮುತ್ತೂರಿಲಿ ಇದ್ದು ಹೇದರೆ
    ಚೆನ್ನೈಗೆ ನೆರೆಕರೆ ಅಲ್ಲದೋ?
    ಹಾಂಗಾರೆ ಅಲ್ಲೇ ಇಪ್ಪ
    ಬೈಲ ಭಾವನ ಸುದ್ದಿ ಬಾರದ್ದು
    ರಜಾ ವಿಶೇಷವೇ!
    .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×