Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 11 – 28

ಬರದೋರು :   ಚೆನ್ನೈ ಬಾವ°    on   25/04/2013    4 ಒಪ್ಪಂಗೊ

ಚೆನ್ನೈ ಬಾವ°

ಮನುಷ್ಯ° ಪ್ರತಿಯೊಬ್ಬನೂ ಮೂಲ ಸ್ವಭಾವಲ್ಲಿ ಸಾತ್ವಿಕರೇ ಆಗಿದ್ದರೂ ಪ್ರಕೃತಿಯ ತ್ರಿಗುಣಂಗಳ ಪ್ರಭಾವಲ್ಲಿ ಸೆರೆಸಿಕ್ಕಿ ಅದರಲ್ಲೇ ಮೆರೆವ ಜೀವಿಗಳ ವಿಚಾರಕ್ರಮಲ್ಲಿಯೂ, ವೃತ್ತಿ ಪ್ರವೃತ್ತಿಲ್ಲಿಯೂ ಸತ್ವ-ರಜ-ತಮೋಗುಣಂಗೊ ಹೇಳಿ ಮೂರು ವಿಧಂಗೊ. ಅದೇ ರೀತಿ ಅವರ ಆಹಾರ ಕ್ರಮಲ್ಲಿಯೂ ಸತ್ವ-ರಜ-ತಮ ಹೇಳಿ ಮೂರು ವಿಧ ಇದ್ದು ಹೇಳಿ ಭಗವಂತ° ಮದಲಾಣ ಭಾಗಲ್ಲಿ ಹೇಳಿದ್ದದು.

ಹಾಂಗೆ, ಆಹಾರಂದಲೂ ವ್ಯಕ್ತಿ ಯಾವ ಸ್ವಭಾವದವ° ಹೇಳ್ವದರ ಗುರುತುಸಲೆ ಆವ್ತು ಹೇಳ್ವದರನ್ನೂ ಭಗವಂತ ಮತ್ತೆ ವಿವರಿಸಿದ್ದ°. ಇನ್ನು ನಮ್ಮ ಆಚಾರಂದ (ಯಜ್ಞ, ತಪಸ್ಸು, ದಾನ) ವ್ಯಕ್ತಿಯ ಸ್ವಭಾವವ ತಿಳಿವದು ಹೇಂಗೆ ಹೇಳ್ವದರ ಭಗವಂತ° ಮುಂದೆ ಇಲ್ಲಿ ಹೇಳುತ್ತ°   –

 

ಶ್ರೀಮದ್ಭಗವದ್ಗೀತಾ – ಸಪ್ತದಶೋsಧ್ಯಾಯಃ – ಶ್ರದ್ಧಾತ್ರಯವಿಭಾಗಯೋಗಃ – ಶ್ಲೋಕಾಃ 11 – 28

 

ಶ್ಲೋಕ

ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ ।
ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ ॥೧೧॥ BHAGAVADGEETHA

ಪದವಿಭಾಗ

ಅಫಲ-ಆಕಾಂಕ್ಷಿಭಿಃ ಯಜ್ಞಃ ವಿಧಿ-ದೃಷ್ಟಃ ಯಃ ಇಜ್ಯತೇ । ಯಷ್ಟವ್ಯಮ್ ಏವ ಇತಿ ಮನಃ ಸಮಾಧಾಯ ಸಃ ಸಾತ್ತ್ವಿಕಃ ॥

ಅನ್ವಯ

ಅಫಲ-ಆಕಾಂಕ್ಷಿಭಿಃ (ಪುರುಷೈಃ) ಯಷ್ಟವ್ಯಂ ಏವ ಇತಿ ಮನಃ ಸಮಾಧಾಯ ವಿಧಿ-ದೃಷ್ಟಃ ಯಃ ಯಜ್ಞಃ ಇಜ್ಯತೇ, ಸಃ ಸಾತ್ತ್ವಿಕಃ (ಯಜ್ಞಃ ಮತಃ) ।

ಪ್ರತಿಪದಾರ್ಥ

ಅಫಲ-ಆಕಾಂಕ್ಷಿಭಿಃ (ಪುರುಷೈಃ) – ಫಲಾಪೇಕ್ಷೇ ಇಲ್ಲದ್ದ ಜನರಿಂದ, ಯಷ್ಟವ್ಯಮ್ – ಆಚರಿಸಲ್ಪಡೇಕ್ಕಾದ್ದು, ಏವ – ಖಂಡಿತವಾಗಿಯೂ, ಇತಿ – ಹೀಂಗೆ, ಮನಃ – ಮನಸ್ಸು , ಸಮಾಧಾಯ – ಸ್ಥಿರಗೊಳುಸಿ, ವಿಧಿ-ದೃಷ್ಟಃ – ಶಸ್ತ್ರೋಕ್ತಪ್ರಕಾರ, ಯಃ – ಏವುದು, ಯಜ್ಞಃ – ಯಜ್ಞ, ಇಜ್ಯತೇ – ಆಚರಿಸಲ್ಪಡುತ್ತೋ, ಸಃ – ಅದು, ಸಾತ್ತ್ವಿಕಃ (ಯಜ್ಞಃ ಮತಃ) – ಸಾತ್ವಿಕಯಜ್ಞ ಹೇದು ಅಭಿಪ್ರಾಯ.

ಅನ್ವಯಾರ್ಥ

ಫಲಾಪೇಕ್ಷೆ ಇಲ್ಲದ್ದ ಜನರಿಂದ ಕರ್ತವ್ಯ ದೃಷ್ಟಿಂದ ಶಾಸ್ತ್ರೋಕ್ತ ಪ್ರಕಾರ ಏವ ಯಜ್ಞ ಆಚರಿಸಲ್ಪಡುತ್ತೋ  ಅದು ಸಾತ್ವಿಕಯಜ್ಞ ಹೇಳಿ ಅಭಿಪ್ರಾಯ.

ತಾತ್ಪರ್ಯ / ವಿವರಣೆ

ಮನಸ್ಸಿಲ್ಲಿ ಒಂದು ಉದ್ದೇಶವ ಮಡಿಕ್ಕೊಂಡು ಸಾಮಾನ್ಯವಾಗಿ ಯಜ್ಞವ ಮನುಷ್ಯರು ಮಾಡುತ್ತವು. ಆದರೆ ಇಂತಹ ಏವುದೇ ಆಸೆಯ ಮಡಿಕ್ಕೊಂಡು ಯಜ್ಞವ ಮಾಡ್ಳಾಗ ಹೇಳ್ವದರ ಭಗವಂತ° ಇಲ್ಲಿ ಸೂಚಿಸಿದ್ದ°. ನಾವು ಮಾಡುವ ಯಜ್ಞವ ಅದು ನಮ್ಮ ಕರ್ತವ್ಯ ದೃಷ್ಟಿಂದ ಮಾಡೆಕು. ಅದರ್ಲಿ ಪ್ರತಿಫಲಾಪೇಕ್ಷೆ ಇಪ್ಪಲಾಗ. ಭಗವಂತನ° ಸೇವೆ, ಎನ್ನ ಕರ್ತವ್ಯ ಹೇಳಿ ಮನಸ್ಸಿಲ್ಲಿ ಮಡಿಕ್ಕೊಂಡು ಸಂಪ್ರೀತನಾದ ಭಗವಂತ° ಎನ್ನ ಶ್ರೇಯಸ್ಸಿನ ನೋಡಿಗೊಳ್ತ° ಹೇಳ್ವ ಭರವಸೆಂದ ಯಜ್ಞವ ಆಚರಿಸಿರೆ ಪ್ರಸನ್ನಗೊಂಡ ಭಗವಂತ° ಭಕ್ತರ ಯೋಗ್ಯತೆಗನುಸಾರವಾಗಿ ಆಯೇಕ್ಕಾದ್ದರ ಕೊಡುತ್ತ. ‘ಭಕ್ತರ ಕಾಪಾಡುವ ಹೊಣೆಗಾರಿಕೆ ಎನ್ನದು’ ಹೇಳಿ ಭಗವಂತ° ಈ ಮದಲೇ ಹೇಳಿದ್ದ°. ಯಜ್ಞದ ಮೂಲಕ ಸಿಕ್ಕಿದ ಫಲವ ಭಗವದ್ ಪ್ರಸಾದ ಹೇಳಿ ಸಂತೋಷಂದ ಸ್ವೀಕರುಸೆಕ್ಕಾದ್ದು ಭಕ್ತನಾದವನ ಕರ್ತವ್ಯ. ಹೀಂಗೆ ಫಲಾಪೇಕ್ಷೆ ಇಲ್ಲದ್ದೆ ಶಾಸ್ತ್ರೋಕ್ತ ವಿಧಿವಿಧಾನವ ಅನುಸರಿಸಿಯೊಂಡು ಮಾಡುವ ಯಜ್ಞ ಸಾತ್ವಿಕ ಯಜ್ಞ ಹೇಳಿ ಭಗವಂತ° ಅಭಿಪ್ರಾಯ ಪಡುತ್ತ°.

ಯಜ್ಞ ಮಾಡುವವು ಎಲ್ಲೋರು ಸಾತ್ವಿಕರಲ್ಲ. ಯಜ್ಞಲ್ಲಿಯೂ ಸಾತ್ವಿಕ , ರಾಜಸ, ತಾಮಸ ಹೇಳ್ವ ಮೂರು ವಿಧಂಗೊ ಇದ್ದು ಹೇಳಿ ಇಲ್ಲಿ ಭಗವಂತ° ಹೇಳಿದಾಂಗೆ ಆತು. ಸಾತ್ವಿಕ ಯಜ್ಞದ ವಿಧವ ಇಲ್ಲಿ ಭಗವಂತ° ಹೇಳಿದ್ದ°. ಯಜ್ಞಲ್ಲಿ ಹಲವು ವಿಧ ಹೇಳ್ವದರ ಈ ಮದಲೇ ಮದಲಾಣ ಅಧ್ಯಾಯಂಗಳಲ್ಲಿ ನಾವು ನೋಡಿದ್ದು. ನಾವು ಮಾಡುವ ಪ್ರತಿಯೊಂದು ಕರ್ಮವೂ ಒಂದೊಂದು ಯಜ್ಞ. ಆ ಯಜ್ಞವ ಭಗವತ್ ಪ್ರೀತಿಗಾಗಿ ಹೇಳ್ವ ಮನೋಭಾವಲ್ಲಿ ಮಾಡೇಕ್ಕಾದ್ದು ಕರ್ತವ್ಯ. ಆ ಕರ್ತವ್ಯವ ಶಾಸ್ತ್ರೋಕ್ತ ರೀತಿಲಿ ಮಾಡಿರೆ ಅದು ಸಾತ್ವಿಕ ಯಜ್ಞ. ಸಾತ್ವಿಕ ಯಜ್ಞ ಭಗವಂತಂಗೆ ಪ್ರೀತಿ. ಹಾಂಗಾಗಿಯೇ ಭಗವಂತ° ಒತ್ತಿ ಹೇಳಿದ್ದದು – “ವಿಧಿದೃಷ್ಟೋ ಯ ಇಜ್ಯತೇ” – ‘ವಿಧಿಯುಕ್ತವಾಗಿ ಯಾವ ಯಜ್ಞವು ಆಚರಿಸಲ್ಪಡುತ್ತೋ’ – ಅದು ‘ಸಾತ್ವಿಕಯಜ್ಞ’. ಹಾಂಗೇ ಇನ್ನು, ಇನ್ನೊಂದು ವಿಷಯವನ್ನೂ ಭಗವಂತ° ಇಲ್ಲಿ ಒತ್ತಿ ಹೇಳಿದ್ದ° – “ಮನಃ ಸಮಾಧಾಯ..” – ಮನಸ್ಸಿನ ಸ್ಥಿರಗೊಳುಸಿ;  ಹೇಳಿರೆ, ಮನಸ್ಸಿಲ್ಲಿ ಮೆಚ್ಚಿ, ನಂಬಿ, ದೃಢವಿಶ್ವಾಸಲ್ಲಿ, ಮನಃಪೂರ್ವಕವಾಗಿ ಕ್ರಿಯೆಯ ಮಾಡೆಕು. ಮಾಡುವ ಕ್ರಿಯೆಲಿ ನವಗೆ ಕೊಶಿ ಇರೆಕು. ಹಾಂಗೆ ಮಾಡಿರೆ ಮಾಂತ್ರ ಅದು ಸಾತ್ವಿಕಯಜ್ಞ.

ಶ್ಲೋಕ

ಅಭಿಸಂಧಾಯ ತು ಫಲಂ ದಂಭಾರ್ಥಮಪಿ ಚೈವ ಯತ್ ।
ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥೧೨॥

ಪದವಿಭಾಗ

ಅಭಿಸಂಧಾಯ ತು ಫಲಮ್ ದಂಭಾರ್ಥಮ್ ಅಪಿ ಚ ಏವ ಯತ್ । ಇಜ್ಯತೇ ಭರತ-ಶ್ರೇಷ್ಠ ತಮ್ ಯಜ್ಞಮ್ ವಿದ್ಧಿ ರಾಜಸಮ್ ॥

ಅನ್ವಯ

ಹೇ ಭರತ ಶ್ರೇಷ್ಠ!, ಫಲಂ ತು ಅಭಿಸಂಧಾಯ, ಅಪಿ ಚ ದಂಭಾರ್ಥಮ್ ಏವ ಯತ್ ಇಜ್ಯತೇ, ತಂ ಯಜ್ಞಂ ರಾಜಸಂ (ತ್ವಂ) ವಿದ್ಧಿ ।

ಪ್ರತಿಪದಾರ್ಥ

ಹೇ ಭರತ ಶ್ರೇಷ್ಥ! – ಏ ಭರತವಂಶಲ್ಲಿ ಶ್ರೇಷ್ಠನೆನಿಸಿದ ಅರ್ಜುನ!, ಫಲಮ್ ತು – ಫಲವನ್ನಾದರೋ, ಅಭಿಸಂಧಾಯ – ಅಪೇಕ್ಷಿಸಿಗೊಂಡು, ಅಪಿ ಚ – ಕೂಡವೇ, ದಂಭಾರ್ಥಮ್ ಏವ – ಜಂಭಾರ್ಥವಾಗಿಯೇ, ಯತ್ ಇಜ್ಯತೇ – ಏವುದು ಆಚರಿಸಲ್ಪಡುತ್ತೋ, ತಮ್ ಯಜ್ಞಮ್ – ಆ ಯಜ್ಞವ, ರಾಜಸಮ್ (ತ್ವಮ್) ವಿದ್ಧಿ – ರಾಜಸಗುಣಲ್ಲಿಪ್ಪಂತಾದ್ದು ಹೇದು ನೀನು ತಿಳಿ.

ಅನ್ವಯಾರ್ಥ

ಏ ಭರತವಂಶ ಶ್ರೇಷ್ಠನೇ!, ಐಹಿಕ ಲಾಭದ ಉದ್ಧೇಶಂದ (ಫಲಾಪೇಕ್ಷೆಯ ಮಡಿಕ್ಕೊಂಡು) ಹಾಂಗೇ ಬರೇ ಜಂಭಂದ, ಅಹಂಕಾರವ ಮೆರೆಶುಲೆ ಮಾಡಲ್ಪಡುವ ಯಜ್ಞಂಗೊ ರಾಜಸಯಜ್ಞ ಹೇದು ನೀನು ತಿಳುಕ್ಕೊಳ್ಳೆಕು.

ತಾತ್ಪರ್ಯ / ವಿವರಣೆ

ಹಲವೊಂದರಿ ಏವುದೋ ಒಂದು ಲಾಭಕ್ಕಾಗಿ, ಏನನ್ನೋ ಒಂದು ಐಹಿಕ ಸುಖವ ಪಡವಲೆ ಬೇಕಾಗಿ ಯಜ್ಞಂಗೊ ಆಚರಿಸಲ್ಪಡುತ್ತು. ಅಲ್ಲಿ ವಿಧಿ ವಿಧಾನಂಗೊ ಎಲ್ಲ ಅನುಸರುಸಲ್ಪಡುತ್ತಿಲ್ಲೆ. ಒಟ್ಟು ತನ್ನಲ್ಲಿದ್ದು ಹೇಳಿ ತೋರುಸಲೆ, ಮೆರವಲೆ ಆಡಂಭರಯುತವಾಗಿ ನಡೆತ್ತು. ಅಂತಹ ಯಜ್ಞಾದಿಗೊ ರಾಜಸ ಹೇದು ಪರಿಗಣಿಸೆಕು. ಯಾವುದೋ ಐಹಿಕ ಲಾಭ / ಫಲ ಬಯಸುವದು ಸ್ವಾರ್ಥ ಆವ್ತು. ಯಾವುದೇ ಯಜ್ಞ ಭಗವಂತಂಗೆ ಸೇರೇಕ್ಕಾರೆ ಅಲ್ಲಿ ಆಡಂಬರ ಅಥವಾ ಸ್ವಾರ್ಥ ಇಪ್ಪಲಾಗ. ಭಗವಂತನಲ್ಲಿ ರತರಾದವರಲ್ಲಿ ಶ್ರೇಷ್ಠನಾಗಿ (ಭರತಶ್ರೇಷ್ಠನಾಗಿ) ಕ್ರಿಯೆಯ ಮಾಡೆಕು. ಇದಲ್ಲದ್ರೆ ಅದು ರಾಜಸಯಜ್ಞವೇ ಸರಿ.

ಶ್ಲೋಕ

ವಿಧಿಹೀನಮ್ ಅಸೃಷ್ಟಾನ್ನಂ ಮಂತ್ರಹೀನಮದಕ್ಷಿಣ, ।
ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ ॥೧೩॥

ಪದವಿಭಾಗ

ವಿಧಿ-ಹೀನಂ ಅಸೃಷ್ಟ-ಅನ್ನಮ್ ಮಂತ್ರ-ಹೀನಮ್ ಅದಕ್ಷಿಣಮ್ । ಶ್ರದ್ಧಾ-ವಿರಹಿತಮ್ ಯಜ್ಞಮ್ ತಾಮಸಮ್ ಪರಿಚಕ್ಷತೇ ॥

ಅನ್ವಯ

ವಿಧಿ-ಹೀನಮ್, ಅಸೃಷ್ಟ-ಅನ್ನಮ್, ಮಂತ್ರ-ಹೀನಮ್, ಅದಕ್ಷಿಣಮ್, ಶ್ರದ್ಧಾ-ವಿರಹಿತಂ (ಚ) ಯಜ್ಞಂ ತಾಮಸಂ ಪರಿಚಕ್ಷತೇ ।

ಪ್ರತಿಪದಾರ್ಥ

ವಿಧಿ-ಹೀನಮ್ – ವಿಧಿಯುಕ್ತ ಅಲ್ಲದ್ದ, ಅಸೃಷ್ಟ-ಅನ್ನಮ್ – ಪ್ರಸಾದ ವಿತರಣೆಯಿಲ್ಲದ್ದ, ಮಂತ್ರ-ಹೀನಮ್ – ವೈದಿಕ ಮಂತ್ರಪಠನ ಇಲ್ಲದ್ದ, ಅದಕ್ಷಿಣಮ್ – ಪುರೋಹಿತರಿಂಗೆ ದಕ್ಷಿಣೆ ಇಲ್ಲದ್ದ, ಶ್ರದ್ಧಾ-ವಿರಹಿತಮ್ (ಚ) ಶ್ರದ್ಧೆಯೂ ಇಲ್ಲದ್ದ, ಯಜ್ಞಮ್ – ಯಜ್ಞವು, ತಾಮಸಮ್ ಪರಿಚಕ್ಷತೇ – ತಮೋಗುಣಲ್ಲಿಪ್ಪದು ಹೇದು ಪರಿಗಣಿಸಲ್ಪಡುತ್ತು.

ಅನ್ವಯಾರ್ಥ

ಧರ್ಮಶಾಸ್ತ್ರ ಆದೇಶಂಗಳ ಲಕ್ಷ್ಯಮಾಡದ್ದೆ, ಅನುಸರುಸದ್ದೆ, ಪ್ರಸಾದ ಹಂಚದ್ದೆ, ವೈದಿಕ ಮಂತ್ರ ಸ್ತೋತ್ರ ಪಠಣಂಗ ಇಲ್ಲದ್ದೆ, ಪುರೋಹಿತರಿಂಗೆ, ಬ್ರಾಹ್ಮಣರಿಂಗೆ ದಾನ ದಕ್ಷಿಣೆಯ ಕೊಡದ್ದೆ, ಶ್ರದ್ಧೆಯೂ ಇಲ್ಲದ್ದೆ ಮಾಡುವ ಯಜ್ಞವು  ತಾಮಸಯಜ್ಞ ಹೇಳಿ ಪರಿಗಣಿಸಲ್ಪಡುತ್ತು.

ತಾತ್ಪರ್ಯ / ವಿವರಣೆ

ತಾಮಸಗುಣಲ್ಲಿ ಶ್ರದ್ಧೆಯೇ ಇರ್ತಿಲ್ಲೆ. ವಿಧಿ ವಿಧಾನಂಗಳ ಅನುಸರಣೆ ಇಲ್ಲೆ, ಮಂತ್ರಂಗೊ ಅವಕ್ಕೆ ಮಾರಕ. ದಾನ ದಕ್ಷಿಣೆ ಪಂಚಾತಿಗೆ ಇಲ್ಲೆ, ಸ್ವಾರ್ಥವೂ ಸ್ವೇಚ್ಛೆಯೂ ಮೆರವದು ತಾಮಾಸಗುಣಲ್ಲಿ ನಡವ ಯಜ್ಞಂಗಳಲ್ಲಿ. ಅವು ಅದರ ಮನರಂಜನೆಗೆ ಮಾಡುತ್ತದು. ಅಹಂಕಾರದ, ಆಡಂಬರದ ಪ್ರದರ್ಶನ ಮಾತ್ರ ಅಲ್ಲಿ ನಡವದು. ಇಂತಹ ಆಸುರೀ ಮನೋಧರ್ಮವ ಭಗವಂತ° ಮೆಚ್ಚುತ್ತನಿಲ್ಲೆ. ಇದರಿಂದ ಸಮಾಜಕ್ಕೆ ಉಪಯೋಗ ಆವ್ತಿಲ್ಲೆ, ತನಗೂ ಉದ್ಧಾರ ಆವ್ತಿಲ್ಲೆ.

ಮಂತ್ರ ಹೇಳದ್ದೆ ಮಾಡ್ತ ಯಜ್ಞ, ಮಂತ್ರ ಸರಿ ಹೇಳದ್ದೆ ಮಾಡ್ತ ಕಾರ್ಯಂಗೊ, ಕ್ರಮ ತಪ್ಪಿ ಮಂತ್ರ ಹೇಳ್ವದು, ಅಸ್ಪಷ್ಟ ಉಚ್ಚಾರ, ಪದ ಸರಿ ಉಚ್ಚಾರ ಮಾಡದ್ದಿಪ್ಪದು ಇತ್ಯಾದಿಗೊ ವಿಧಿಹೀನ. ವಿಧಿಯುಕ್ತ ಅಲ್ಲದ್ದ, ಅನ್ನದಾನ (ಪ್ರಸಾದ ವಿತರಣೆ) ಇಲ್ಲದ್ದೆ ಮಾಡುವ ಆರಾಧನೆಯೂ, ದಾನ ದಕ್ಷಿಣೆ (ವೈದಿಕರಿಂಗೆ ಅವರ ಜೀವನ ನಿರ್ವಹಣೆಗೆ ಮನಸಾರೆ ಅರ್ತು ಕೊಡುವದು) ಇಲ್ಲದ್ದೆ ಮಾಡುವ ಯಜ್ಞ ಭಗವಂತನ ಪೂಜೆ ಹೇಳಿ ಪರಿಗಣಿಸಲ್ಪಡುತ್ತಿಲ್ಲೆ. ಇದು ಇಲ್ಲದ್ದೆ ಮಾಡುವ ಯಜ್ಞ ತಾಮಸ ಯಜ್ಞ. ಜನತಾಸೇವೆಯೇ ಜನಾರ್ದನ ಸೇವೆ. ಇಲ್ಲದ್ದವಕ್ಕೆ ದಾನ ದಕ್ಷಿಣೆ ಕೊಡುವದು, ಅವರ ಜೀವನಕ್ಕೆ ಸಹಾಯ ಮಾಡುವದು ಯಜ್ಞ. ಅದುವೇ ಭಗವಂತಂಗೆ ಸಂಪ್ರೀತಿ. ಇದೆಲ್ಲವದರಿಂದ ಹೆಚ್ಚಿಗೆ ಶ್ರದ್ಧೆ. ಭಗವಂತನಲ್ಲಿ ಅಚಲವಾದ ಅನನ್ಯವಾದ ಶ್ರದ್ಧೆ ಪ್ರಪ್ರಥಮವಾಗಿ ಇರೆಕು. ಈ ರೀತಿಯಾಗಿ ಶ್ರದ್ಧಾರಹಿತನಾಗಿ, ದಾನ ದಕ್ಷಿಣೆ, ಪ್ರಸಾದ ವಿತರಣೆ ಇಲ್ಲದ್ದೆ ಮಾಡ್ವ ಯಜ್ಞಂಗೊ ತಾಮಸೀಯಜ್ಞ ಹೇಳಿ ಪರಿಗಣಿಸಲ್ಪಡುತ್ತು.

ಅಹಾರ, ಯಜ್ಞದ ಬಳಿಕ ಮುಂದೆ ಭಗವಂತ° ತಪಸ್ಸಿನ ಬಗ್ಗೆ ಹೇಳುತ್ತ° –

ಶ್ಲೋಕ

ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್ ।
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥೧೪॥

ಪದವಿಭಾಗ

ದೇವ-ದ್ವಿಜ-ಗುರು-ಪ್ರಾಜ್ಞ-ಪೂಜನಮ್ ಶೌಚಮ್ ಆರ್ಜವಮ್ । ಬ್ರಹ್ಮಚರ್ಯಮ್ ಅಹಿಂಸಾ ಚ ಶಾರೀರಮ್ ತಪಃ ಉಚ್ಯತೇ ॥

ಅನ್ವಯ

ದೇವ-ದ್ವಿಜ-ಗುರು-ಪ್ರಾಜ್ಞ-ಪೂಜನಮ್, ಶೌಚಮ್, ಆರ್ಜವಮ್, ಬ್ರಹ್ಮಚರ್ಯಮ್, ಅಹಿಂಸಾ ಚ ಶಾರೀರಂ ತಪಃ (ಇತಿ) ಉಚ್ಯತೇ ।

ಪ್ರತಿಪದಾರ್ಥ

ದೇವ-ದ್ವಿಜ-ಗುರು-ಪ್ರಾಜ್ಞ-ಪೂಜನಮ್ – ದೇವರು (ಭಗವಂತ°), ಬ್ರಾಹ್ಮಣ, ಗುರು, ಪೂಜಾರ್ಹವ್ಯಕ್ತಿಗಳ ಪೂಜೆಯು, ಶೌಚಮ್ – ಶುಚಿತ್ವ, ಆರ್ಜವಮ್ – ಸರಳತೆ, ಬ್ರಹ್ಮಚರ್ಯಮ್ – ಬ್ರಹ್ಮಚರ್ಯ, ಅಹಿಂಸಾ (ಚ) – ಅಹಿಂಸೆಯೂ ಕೂಡ, ಶಾರೀರಮ್ – ದೇಹಕ್ಕೆ ಸಂಬಂಧಿಸಿದ, ತಪಃ (ಇತಿ) ಉಚ್ಯತೇ – ತಪಸ್ಸು ಹೇದು ಹೇಳಲಾವ್ತು.

ಅನ್ವಯಾರ್ಥ

ಭಗವಂತನ ಪೂಜೆ, ಬ್ರಾಹ್ಮಣರ ಪೂಜೆ, ಗುರುವಿನ ಪೂಜೆ, ಅಬ್ಬೆ-ಅಪ್ಪ ಮೊದಲಾದ ಹಿರಿಯೋರ/ ಪೂಜಾರ್ಹರ ಪೂಜೆ, ಶುಚಿತ್ವ, ಸರಳತೆ, ಬ್ರಹ್ಮಚರ್ಯ ಮತ್ತೆ ಅಹಿಂಸೆ ಇವೆಲ್ಲ ಸೇರಿ ದೇಹದ ತಪಸ್ಸು ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ವಿವಿಧ ರೀತಿಯ ತಪಸ್ಸುಗಳ ಬಗ್ಗೆ ಭಗವಂತ° ಇಲ್ಲಿ ಹೇಳಿದ್ದ°. ಸುರುವಿಂಗೆ ದೇಹದ ಮೂಲಕ ಆಚರುಸಲ್ಪಡುವ ತಪಸ್ಸುಗಳ ಬಗ್ಗೆ ಹೇಳುತ್ತ°. ದೇವರಿಂಗೆ ಹೇಳಿರೆ ಪರಿವಾರ ದೇವತೆಗಳ ಸಹಿತ ಭಗವಂತಂಗೆ, ಪರಿಪೂರ್ಣರೂ, ಅರ್ಹರೂ ಆದ ಬ್ರಾಹ್ಮಣರಿಂಗೆ, ಗುರುವಿಂಗೆ, ಗುರುವಿಂಗೆ, ಅಬ್ಬೆ ಅಪ್ಪ ಮುಂತಾದ ಹಿರಿಯರಿಂಗೆ, ಪ್ರಾಜ್ಞರಿಂಗೆ (ಜ್ಞಾನವಂತರಿಂಗೆ) ಗೌರವ ತೋರುಸೆಕು ಹೇಳಿ ಭಗವಂತ° ಇಲ್ಲಿ ಉಲ್ಲೇಖಿಸಿದ್ದ°. ಅವರ ಯೋಗ್ಯ ರೀತಿಲಿ ಉಪಚರಿಸೆಕ್ಕಪ್ಪದು ನಮ್ಮ ಧರ್ಮ. ಹಾಂಗೆ ಆಯೇಕ್ಕಾರೆ ನಮ್ಮ ಹೆರವೂ ಒಳವೂ ಶುದ್ಧ ಇರೆಕು. ಹಾಂಗಾಗಿ ಶುಚಿತ್ವಕ್ಕೂ ಮಹತ್ವವ ಕೊಟ್ಟಿದ° ಇಲ್ಲಿ ಭಗವಂತ°. ಅಂತರ್ಯಲ್ಲಿಯೂ ಬಾಹ್ಯಲ್ಲಿಯೂ ಮನಸ್ಸು ಶುದ್ಧ ಇರೆಕು. ಶುಚಿತ್ವ – ಅದು ಅಂತಃಶುದ್ಧಿ + ಬಹಿಃಶುದ್ಧಿ. ಹಾಂಗೇ ನಮ್ಮ ನಡತೆಲಿ ಸರಳತೆ ಇರೆಕು. ನಾವೆಲ್ಲರೂ ಆ ಭಗವಂತನ ಕೈಗೊಂಬಗೊ. ಅವ° ಇಲ್ಲದ್ದೆ ನಮ್ಮದೆಂತದೂ ಹಂದ°. ಪ್ರತಿಯೊಬ್ಬನಲ್ಲಿಯೂ ಭಗವಂತ° ಇದ್ದ°. ಹಾಂಗಾಗಿ ಎಲ್ಲೋರತ್ರೆಯೂ ಸರಳತೆಯ ಸೌಜನ್ಯ ಇರೆಕು. ಧರ್ಮಗ್ರಂಥಂಗಳ ಆದೇಶಂಗಳ ಪಾಲುಸೆಕು. ಬ್ರಹ್ಮಚರ್ಯನಿಷ್ಠನಾಗಿರೆಕು. ಅದೇರೀತಿ ಅಹಿಂಸೆಯನ್ನೂ ಪಾಲುಸೆಕು. ಇನ್ನೊಬ್ಬಂಗೆ ಹಿಂಸೆ ಮಾಡಿರೆ ಅದು ಅವನೊಳ ಇಪ್ಪ ಭಗವಂತಂಗೇ ಹಿಂಸೆ ಮಾಡಿದಾಂಗೆ ಆವ್ತು. ದೇಹದ ಮಟ್ಟಿಂಗೆ ಇದು ವ್ರತ/ತಪಸ್ಸು.

ದೇವರ ಪ್ರತೀಕ ಎಲ್ಲಿ ಕಂಡತ್ತೋ ಅಲ್ಲಿ ತಲೆಬಾಗುವದು, ಜ್ಞಾನಿಗೊಕ್ಕೆ , ಗುರುವಿಂಗೆ, ಹಿರಿಯರಿಂಗೆ ಗೌರವ ಕೊಡುವದು ಇತ್ಯಾದಿಗೊ ಶರೀರ ತಪಸ್ಸು. ಇಲ್ಲಿ ಹೇಳಲ್ಪಟ್ಟ ಶೌಚಂ, ಆರ್ಜವಂ, ಅಹಿಂಸಾ, ಬ್ರಹ್ಮಚರ್ಯ ಇತ್ಯಾದಿಗಳ ಈ ಮದಲೇ 16ನೇ ಅಧ್ಯಾಯಲ್ಲಿ ವಿವರವಾಗಿ ಹೇಳಿಯಾಯ್ದು. ಬ್ರಹ್ಮಚರ್ಯಲ್ಲಿಯೂ ಅನೇಕವಿಧ. ಬ್ರಹ್ಮಚರ್ಯ ಹೇಳಿರೆ ಜೀವನ ಪರ್ಯಂತ ಬ್ರಹ್ಮಚರ್ಯ ಹೇಳಿ ಅರ್ಥ ಅಲ್ಲ. ತನ್ನ ಸ್ಥಿತಿಗೆ ಆಚರುಸೆಕ್ಕಾದ ಬ್ರಹ್ಮಚರ್ಯ. ಅರ್ಥಾತ್ ಸ್ವಚ್ಛಂದ ಕಾಮ ಅಲ್ಲ. ನಿಯಮಿತ ಕಾಮಂದ ಕೂಡಿದ ಬ್ರಹ್ಮಚರ್ಯ. ಹಾಂಗೇ ನೇರ ನಡೆ-ನುಡಿ ಸರಳತೆ, ಸಭ್ಯತೆ, ಅಹಿಂಸಾ ಪಾಲನೆ ಶಾರೀರಿಕ ತಪಸ್ಸು ಹೇದು ಮನುಷ್ಯ° ಅನುಸರುಸೆಕ್ಕಾದ ದೈಹಿಕ ನೀತಿಗೊ.

ಶ್ಲೋಕ

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ।
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥೧೫॥

ಪದವಿಭಾಗ

ಅನುದ್ವೇಗಕರಮ್ ವಾಕ್ಯಮ್ ಸತ್ಯಮ್ ಪ್ರಿಯ-ಹಿತಮ್ ಚ ಯತ್ । ಸ್ವಾಧ್ಯಾಯ-ಅಭ್ಯಸನಮ್ ಚ ಏವ ವಾಙ್ಮಯಮ್ ತಪಃ ಉಚ್ಯತೇ ॥

ಅನ್ವಯ

ಯತ್ ಅನುದ್ವೇಗಕರಂ ಸತ್ಯಂ ಪ್ರಿಯ-ಹಿತಂ ವಾಕ್ಯಂ ಚ (ಯತ್) ಸ್ವಾಧ್ಯಾಯ-ಅಭ್ಯಸನಂ ಚ, (ತತ್) ಏವ ವಾಙ್ಮಯಂ ತಪಃ (ಇತಿ) ಉಚ್ಯತೇ।

ಪ್ರತಿಪದಾರ್ಥ

ಯತ್ – ಏವುದು, ಅನುದ್ವೇಗಕರಮ್ – ಉದ್ವೇಗಕರವಲ್ಲದ್ದ, ಸತ್ಯಮ್ – ಸತ್ಯವಾದ, ಪ್ರಿಯ-ಹಿತಮ್  ವಾಕ್ಯಮ್- ಪ್ರಿಯವಾದ ಹಿತಕರವಾದ ವಾಕ್ಯವು , ಚ – ಮತ್ತೆ/ಕೂಡ, (ಯತ್ – ಏವುದು), ಸ್ವಾಧ್ಯಾಯ-ಅಭ್ಯಸನಮ್ – ವೇದಾಧ್ಯಯನದ ಅಭ್ಯಾಸವು, ಚ – ಕೂಡ, (ತತ್ – ಅದು) ಏವ – ಖಂಡಿತವಾಗಿಯೂ, ವಾಙ್ಮಯಮ್ ತಪಃ – ಮಾತುಗಳ ತಪಸ್ಸು, (ಇತಿ) ಉಚ್ಯತೇ – ಹೇದು ಹೇಳಲಾವ್ತು.

ಅನ್ವಯಾರ್ಥ

ಏವುದು ಉದ್ವೇಗಕರವಲ್ಲದ್ದ, ಸತ್ಯವಾದ, ಪ್ರಿಯ ಮತ್ತೆ ಹಿತಕರವಾದ ಮಾತುಗೊ (ವಾಕ್ಯ) ಇದ್ದೋ, ಏವುದು ವೇದಸಾಹಿತ್ಯ ವಾಚನ ಅಭ್ಯಾಸ ಇದ್ದೊ, ಅದು ಮಾತಿನ ತಪಸ್ಸು ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ಶಾರೀರಿಕ ತಪಸ್ಸು ಹೇಳಿರೆ ಹೇಂಗಿರೆಕು ಹೇಳಿ ವಿವರಿಸಿದ ಭಗವಂತ°, ಇಲ್ಲಿ ಮಾತಿನ ತಪಸ್ಸು ಹೇಂಗೆ ಇರೆಕು ಹೇಳ್ವದರ  ವಿವರುಸುತ್ತ°. ಜೀವನಲ್ಲಿ ಮಾತೂ ಕೂಡ ಒಂದು ವಿಧ ತಪಸ್ಸು. ನಾವು ಆಡುವ ಮಾತುಗೊ ಹೇಂಗೆ ಇರೆಕು ಹೇಳಿ ಭಗವಂತ ಇಲ್ಲಿ ವಿಶ್ಲೇಷಿಸಿದ್ದ°. “ಅನುದ್ವೇಗಕರಂ..” ಹೇಳುವ ಮಾತುಗೊ ಉದ್ವೇಗಕ್ಕೆ ಕಾರಣವಪ್ಪಲಾಗ. ಅದರಿಂದ ಇತರರು ವಾ ಸ್ವಯಂ ಕೆರಳಲಾಗ.  ಮಾತು ಏವತ್ತೂ ಸತ್ಯವಾಗಿರೆಕು. ಸತ್ಯವಾದ್ದನ್ನೇ ಹೇಳೇಕು. ಸತ್ಯ ಹೇಳ್ವದು ಹೇಂಗಿರೆಕು ಹೇಳ್ವದರ ಈ ಮದಲೇ ನಾವು ಗೀತೆಲಿ ನೋಡಿದ್ದು. ಸತ್ಯ ಇನ್ನೊಬ್ಬಂಗೆ ತೊಂದರೆ ಅಪ್ಪಲಾಗ. ಸ್ವರಕ್ಷಣೆಗೆ ಆಪತ್ಕಾಲಲ್ಲಿ ಸುಳ್ಳು ಸುಳ್ಳಾವ್ತಿಲ್ಲೆ. ಆದರೆ ಮಾತಿಲ್ಲಿ ಏವತ್ತೂ ಸಜ್ಜನಿಕೆ ಇರೆಕು. ಇನ್ನೊಬ್ಬಂಗೆ ನೋವುಂಟುಮಾಡುವ ಮಾತಾಡ್ಳಾಗ. ಹಾಂಗೇಳಿ ಇನ್ನೊಬ್ಬನ ಮೆಚ್ಚುಸಲೆ ಅಪ್ರಿಯ ಮಾತುಗಳನ್ನೂ ಹೇಳ್ಳಾಗ. ಇನ್ನೊಬ್ಬಂಗೂ ಒಳಿತಪ್ಪಂತ ಹಿತಕರವಾದ , ಪ್ರಿಯವಾದ ಮಾತುಗಳ ನಾವಾಡೆಕು. ತನಗೆ ಹಿತವಾದ್ದು ಇನ್ನೊಬ್ಬಂಗೆ ಪ್ರಿಯವಾಗಿರ್ತು ಹೇಳಿ ಏನೂ ಇಲ್ಲೆ. ಅಂತಹ ಸಂದರ್ಭಲ್ಲಿ ಮೌನವೇ ಲೇಸು. ಅದುವೇ ಹಿತಕರ. ಭಗವಂತನ ಕತೆಲಿಯೂ ಕೆಲವು ದಿಕ್ಕೆ ಸುಳ್ಳು ಹೇಳಿದಾಂಗೆ ಕಾಣುತ್ತು. ಆದರೆ ಅದು ಮೋಸ ಮಾಡ್ಳೆ ಇಪ್ಪಂತಾದ್ದು ಅಲ್ಲ. ಬದಲಾಗಿ, ಹಿತ ಉಂಟುಮಾಡ್ಳೆ ನಡದ ಘಟನೆಗೊ. ಅದರ ಹಿಂದೆ ಹಿತಚಿಂತನೆಯ ಲೇಪ ಇದ್ದು. ನಮ್ಮ ನಿತ್ಯ ಜೀವನಲ್ಲಿ ಭಗವಂತನ ಈ ಮಾತುಗೊ ಎಂದಿಗೂ ಎಚ್ಚರಲ್ಲಿ ಇರೆಕು. ಕೆಲವು ಕಡೆ ಕೆಲವು ಸಂದರ್ಭಲ್ಲಿ ಮಾತಾಡದ್ದೆ ಮೌನ ಇದ್ದರೂ ಸರಿ, ಆದರೆ ಮಾತಾಡಿ ಮತ್ತೆ ಪಶ್ಚಾತ್ತಾಪಪಟ್ಟುಗೊಂಬಾಂಗೆ ಅಪ್ಪಲಾಗ. ಆಡಿದ ಮಾತಿನ ಹಿಂದೆ ಪಡವಲೆ ಸಾಧ್ಯ ಇಲ್ಲೆ. ಅದಕ್ಕೆ ಮಾತೇ ಬಂಗಾರ ಹೇಳಿದ್ದದು. ಅಷ್ಟೊಂದು ಬೆಲೆಯುಳ್ಳದ್ದಾವ್ತು ಮಾತು ಹೇಳಿರೆ. ಅನಗತ್ಯ ಮಾತುಗಳ ತಪ್ಪುಸಲೆ ಸ್ವಾಧ್ಯಯ ಉತ್ತಮ ಪರಿಹಾರ. ಸ್ವಾಧ್ಯಾಯ ಹೇಳಿರೆ ಶಾಸ್ತ್ರೋಕ್ತ ವೇದಸ್ತೋತ್ರಾದಿ ಪಾರಾಯಣ, ಸಹಸ್ರನಾಮ ಪಾರಾಯಣ ಇತ್ಯಾದಿ. ಇದರಿಂದಾಗಿ ಅನಗತ್ಯ ಮಾತಾಡುವ ಸಂದರ್ಭಂಗಳೂ ತಪ್ಪುತ್ತು, ಭಗವಂತನ ಚಿಂತನೆಲಿ ನಮ್ಮ ತೊಡಗಿಸಿಗೊಂಡಾಂಗೂ ಆವ್ತು. ಇದನ್ನೇ ಮಾತಿನ ತಪಸ್ಸು ಹೇದು ಹೇಳುವದು.

ಶ್ಲೋಕ

ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ ।
ಭಾವಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ ॥೧೬॥

ಪದವಿಭಾಗ

ಮನಃ-ಪ್ರಸಾದಃ ಸೌಮ್ಯತ್ವಮ್ ಮೌನಮ್ ಆತ್ಮ-ವಿನಿಗ್ರಹಃ । ಭಾವ-ಸಂಶುದ್ಧಿಃ ಇತಿ ಏತತ್ ತಪಃ ಮಾನಸಮ್ ಉಚ್ಯತೇ ॥

ಅನ್ವಯ

ಮನಃ-ಪ್ರಸಾದಃ ಸೌಮ್ಯತ್ವಮ್, ಮೌನಮ್, ಆತ್ಮ-ವಿನಿಗ್ರಹಃ, ಭಾವ-ಸಂಶುದ್ಧಿಃ ಇತಿ ಏತತ್ ಮಾನಸಂ ತಪಃ ಉಚ್ಯತೇ ।

ಪ್ರತಿಪದಾರ್ಥ

ಮನಃ-ಪ್ರಸಾದಃ – ಮನಸ್ಸಿನ ತೃಪ್ತಿ, ಸೌಮ್ಯತ್ವಮ್ – ಸೌಮ್ಯತ್ವ (ವಂಚನೆ ಇಲ್ಲದ್ದಿಪ್ಪದು/ಸೌಜನ್ಯ/ನಮ್ರತೆ),  ಮೌನಮ್ – ಮೌನ, ಆತ್ಮ-ವಿನಿಗ್ರಹಃ – ಸ್ವಯಂ ನಿಗ್ರಹ (ಹತೋಟಿ), ಭಾವ-ಸಂಶುದ್ಧಿಃ – ಸ್ವಭಾವದ ಶುದ್ಧಿ, ಇತಿ – ಹೇದು, ಏತತ್ – ಇದು, ಮಾನಸಂ ತಪಃ – ಮನಸ್ಸಿನ ತಪಸ್ಸು, ಉಚ್ಯತೇ  – ಹೇಳಲ್ಪಡುತ್ತು.

ಅನ್ವಯಾರ್ಥ

ಮನಸ್ಸಿನ ತಿಳಿ (ಸ್ವಚ್ಛತೆ/ತೃಪ್ತಿ), ಸರಳತೆ/ಸೌಮ್ಯತ್ವ, ಆತ್ಮಸಂಯಮ (ಆತ್ಮ ವಿನಿಗ್ರಹ), ಮತ್ತ್ತೆ ಸ್ವಭಾವದ ಶುದ್ಧತೆ – ಇವುಗೊ ಮನಸ್ಸಿನ ತಪಸ್ಸು ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ಶಾರೀರಿಕ ತಪಸ್ಸು ಮತ್ತೆ ಮಾತಿನ ತಪಸ್ಸಿನ ಬಳಿಕ ಮಾನಸಿಕ ತಪಸ್ಸು. ಮದಲೆರಡರಿಂದಲೂ ಮಿಗಿಲಾದ್ದು ಮಾನಸಿಕ ತಪಸ್ಸು. ಶಾರೀರಿಕ ತಪಸ್ಸು, ಮಾತಿನ ತಪಸ್ಸು ಮನಸ್ಸಿನ ತಪಸ್ಸಿಂಗೆ ಪೂರಕ.  ಮನಃ-ಪ್ರಸಾದಃ – ಮನಸ್ಸು ಪ್ರಸನ್ನತೆಂದ ಇರೆಕು. ಮನಸ್ಸಿಲ್ಲಿ ಯಾವ್ಯಾವುದೋ ಗೊಂದಲಂಗೊ ಸಿಕ್ಕಿ ಚಂಚಲತೆಂದ ಇಪ್ಪಲಾಗ. ಸ್ಥಿರವಾಗಿ, ಸ್ವಚ್ಛವಾಗಿ ಇರೆಕು. ಕಲುಷಿತವಾಗಿರದೆ ಸೌಮ್ಯವಾಗಿರೆಕು. ಅಲ್ಲಿ ಕ್ರೌರ್ಯ ಇಪ್ಪಲಾಗ. ದೀರ್ಘ ಚಿಂತನೆ ಮಾಡಿ ಏವುದೇ ತೀರ್ಮಾನ ತೆಕ್ಕೊಂಡು ಮನಸ್ಸಿಲ್ಲಿ ಸ್ಥಿರಗೊಳುಸಿ ಅದರಲ್ಲಿ ತೃಪ್ತಿಂದ ಇರೆಕು ಮನಸ್ಸು. ಇನ್ನೊಂದು ಮಾತು ವಾ ಚಿಂತನೆಂದ ದುಡುಕಲಾಗ. ಆತ್ಮಸಂಯಮ (self control) ಮಡಿಕ್ಕೊಳ್ಳೆಕು. ಗಡಿಬಿಡಿಲಿ ಏವುದೋ ತೀರ್ಮಾನಕ್ಕೆ ಬಂದು ದುಡುಕಿ ಬೀಳ್ಳಾಗ. ಗಡಿಬಿಡಿ ಸಂದರ್ಭಲ್ಲಿ ಸಂಯಮಂದ ಮೌನವಾಗಿಪ್ಪದೇ ಲೇಸು. ಅಂತಹ ಸ್ಥಿರ ಮನಸ್ಸಿಂಗೆ ಇಂದ್ರಿಯ ಸಂಯಮ ತಂದುಗೊಂಬಲೆ ಎಡಿಗು. ಈ ರೀತಿ ಮನಸ್ಸಿನ ನಿಯಂತ್ರಣಲ್ಲಿ ಮಡಿಕ್ಕೊಂಡಿಪ್ಪದೇ ಮನಸ್ಸಿನ ತಪಸ್ಸು.

ಶ್ಲೋಕ

ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ರಿವಿಧಂ ನರೈಃ ।
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ತ್ವಿಕಂ ಪರಿಚಕ್ಷತೇ ॥೧೭॥

ಪದವಿಭಾಗ

ಶ್ರದ್ಧಯಾ ಪರಯಾ ತಪ್ತಂ ತಪಃ ತತ್ ತ್ರಿವಿಧಂ ನರೈಃ । ಅಫಲ-ಆಕಾಂಕ್ಷಿಭಿಃ ಯುಕ್ತೈಃ ಸಾತ್ತ್ವಿಕಂ ಪರಿಚಕ್ಷತೇ ॥

ಅನ್ವಯ

ಅಫಲ-ಕಾಂಕ್ಷಿಭಿಃ ಯುಕ್ತೈಃ ನರೈಃ ಪರಯಾ ಶ್ರದ್ಧಯಾ ತಪ್ತಂ (ಯತ್) ತ್ರಿವಿಧಂ ತಪಃ (ಅಸ್ತಿ), ತತ್ ಸಾತ್ತ್ವಿಕಮ್ (ಇತಿ) ಪರಿಚಕ್ಷತೇ ।

ಪ್ರತಿಪದಾರ್ಥ

ಅಫಲ-ಕಾಂಕ್ಷಿಭಿಃ ಯುಕ್ತೈಃ ನರೈಃ –  ಫಲಾಪೇಕ್ಷೆಯಿಲ್ಲದ್ದೆ ತೊಡಗಿಪ್ಪ ಮನುಷ್ಯರಿಂದ, ಪರಯಾ ಶ್ರದ್ಧಯಾ ತಪ್ತಮ್  – ಶ್ರೇಷ್ಥ/ದಿವ್ಯವಾದ ಶ್ರದ್ಧೆಂದ ಆಚರಿಸಲ್ಪಟ್ಟದ್ದು, (ಯತ್ – ಏವ), ತ್ರಿವಿಧಮ್ ತಪಃ (ಅಸ್ತಿ) – ಮೂರು ವಿಧ ತಪಂಗೊ ಇದ್ದೋ, ತತ್ – ಅದು, ಸಾತ್ತ್ವಿಕಮ್ – ಸಾತ್ವಿಕವಾದ್ದು, (ಇತಿ – ಹೇದು), ಪರಿಚಕ್ಷತೇ – ಪರಿಗಣಿಸಲ್ಪಡುತ್ತು.

ಅನ್ವಯಾರ್ಥ

ಐಹಿಕ ಫಲಪೇಕ್ಷೆಯಿಲ್ಲದ್ದೆ ನಿರತನಾಗಿ ಆಚರಿಸಲ್ಪಡುವ ಯಾವು ಮೂರು ಬಗೆ ತಪಸ್ಸುಗೊ ಇದ್ದೋ ಅದು ಸಾತ್ವಿಕ ಹೇದು ಪರಿಗಣಿಸಲ್ಪಡುತ್ತು.

ತಾತ್ಪರ್ಯ / ವಿವರಣೆ

ಶಾರೀರಿಕ, ಮಾತಿನ, ಮಾನಸಿಕ ಈ ಮೂರು ವಿಧದ  ತಪಸ್ಸಿಲ್ಲಿ ಮತ್ತೆ ಮೂರು ವಿಧಂಗೊ –  ಸಾತ್ವಿಕ, ರಾಜಸ, ತಾಮಸ.  ಇವುಗಳಲ್ಲಿ, ಶ್ರದ್ಧೆಂದ, ನಂಬಿಕೆಂದ ಕೂಡಿ ಫಲಾಫೇಕ್ಷೆ ಇಲ್ಲದ್ದ ಭಗವದರ್ಪಣಾ ಮನೋಭಾವಂದ ಆಚರಿಸಲ್ಪಡುವ ತಪಸ್ಸು ಸಾತ್ವಿಕ ತಪಸ್ಸು ಹೇದು ಹೇಳಲಾವ್ತು. ತಪಸ್ಸಿನ ಹಿಂದೆ ಶ್ರೇಷ್ಠವಾದ (ಪರಯಾ) ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಅದು ಸಾತ್ವಿಕ. ಭಗವಂತನ ಪಾರಮ್ಯದ ಎಚ್ಚರಂದ, ಭಗವಂತನ ಪ್ರೀತಿಗೋಸ್ಕರ ಹೇಳ್ವ ಅನುಸಂಧಾನಲ್ಲಿ ಮಾಡುವ ಪ್ರತಿಯೊಂದು ಕ್ರಿಯೆ (ತಪಸ್ಸು)  ಸಾತ್ವಿಕ ಎನಿಸುತ್ತು.  ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದರ್ಪಣ ಮನೋಭಾವ ಇರೆಕು. “ಅನೇನ … ಭಗವಾನ್ ಗೋಪಾಲಕೃಷ್ಣ ಪ್ರೀಯತಾಮ್, ಶ್ರೀ ಕೃಷ್ಣಾರ್ಪಣಮಸ್ತು” – ಈ .. ಕರ್ಮಂದ ಭಗವಂತನಾದ ಗೋಪಾಲಕೃಷ್ಣ ಪ್ರೀತನಾಗಲಿ, ಈ ಕರ್ಮ ಅವಂಗೆ ಅರ್ಪಿತವಾಗಲಿ ಹೇಳ್ವ ಮುಕ್ತ ಮನಸ್ಸಿಂದ ಕರ್ಮವ ಮಾಡೆಕು. ಅದರಿಂದ ಭಗವಂತ° ಸಂಪ್ರೀತನಾವುತ್ತ°. ಇಂತಹ ತಪಸ್ಸು ‘ಸಾತ್ವಿಕ’ ತಪಸ್ಸು.

ಶ್ಲೋಕ

ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್ ।
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ ॥೧೮॥

ಪದವಿಭಾಗ

ಸತ್ಕಾರ-ಮಾನ-ಪೂಜಾರ್ಥಮ್ ತಪಃ ದಂಭೇನ ಚ ಏವ ಯತ್ । ಕ್ರಿಯತೇ ತತ್ ಇಹ ಪ್ರೋಕ್ತಮ್ ರಾಜಸಮ್ ಚಲಮ್ ಅಧ್ರುವಮ್ ॥

ಅನ್ವಯ

ಸತ್ಕಾರ-ಮಾನ-ಪೂಜಾರ್ಥಂ ದಂಭೇನ ಚ ಏವ ಯತ್ ತಪಃ ಕ್ರಿಯತೇ, ತತ್ ಇಹ ರಾಜಸಮ್, ಚಲಮ್, ಅಧ್ರುವಮ್ ಪ್ರೋಕ್ತಮ್ ।

ಪ್ರತಿಪದಾರ್ಥ

ಸತ್ಕಾರ-ಮಾನ-ಪೂಜಾರ್ಥಮ್ – ಸತ್ಕಾರ ಗೌರವ ಪೂಜೆಗೆ ಬೇಕಾಗಿ, ದಂಭೇನ ಚ ಏವ – ಜಂಭಂದಲೂ, ಯತ್ – ಏವ, ತಪಃ – ತಪಸ್ಸು, ಕ್ರಿಯತೇ – ಮಾಡಲ್ಪಡುತ್ತೋ, ತತ್ – ಅದು, ಇಹ – ಈ ಜಗತ್ತಿಲ್ಲಿ, ರಾಜಸನ್ – ರಾಜಸ, ಚಲಮ್ – ಚಂಚಲವಾದ್ದು, ಅಧ್ರುವಮ್ – ಸ್ಥಿರವಲ್ಲದ್ದು, ಪ್ರೋಕ್ತಮ್ – (ಹೇದು) ಹೇಳಲ್ಪಟ್ಟಿದು.

ಅನ್ವಯಾರ್ಥ

ಜಂಭಕ್ಕಾಗಿ, ಗೌರವಕ್ಕಾಗಿ (ಬರೇ ಗೌರವ ಮೆರೆಶುಲೆ) ಯಾವ ತಪಸ್ಸು ಮಾಡಲ್ಪಡುತ್ತೋ ಅದು ಈ ಜಗತ್ತಿಲ್ಲಿ ರಾಜಸ ಸ್ವಭಾವ, ಚಂಚಲವಾದ್ದು ಮತ್ತೆ ಅಶಾಶ್ವತವಾದ್ದು ಹೇದು ಹೇಳಲ್ಪಟ್ಟಿದು.

ತಾತ್ಪರ್ಯ / ವಿವರಣೆ

ಕೆಲವೊಂದರಿ ಮನುಷ್ಯರು ಬಾಕಿದ್ದೋರ ತನ್ನ ಕಡೆಂಗೆ ಆಕರ್ಷಿಸುಲೆ ಬೇಕಾಗಿ, ಇತರರ ಮನಸ್ಸಿಲ್ಲಿ ತಾನೊಬ್ಬ ಅಸಾಮಾನ್ಯ, ಗೌರವಸ್ಥ ಹೇದು ಬಾಕಿದ್ದೋರಿಂದ ಹೇಳ್ಸಿಗೊಂಬಲೆ ಕೇವಲ ತೋರ್ಪಡಿಕೆಗೆ ಬೇಕಾಗಿ ಕೆಲವೊಂದು ವ್ರತ/ತಪಸ್ಸು/ಕರ್ಮವ ಮಾಡುವದು ಇದ್ದು. ಇಂತಹ ತಪಸ್ಸು ರಾಜಸ ಹೇದು ಹೇಳಲಾಯ್ದು. ತನ್ನಲ್ಲಿ ಇಲ್ಲದ್ದರ ಇದ್ದು ಹೇದು ತೋರ್ಸಿಗೊಂಬಲೆ ನಾಟಕ ಆದ್ತದು ಬರೇ ಡಂಭಾಚಾರ. ಅದು ಮಿಥ್ಯೆ. ಇವುಗಳ ಪರಿಣಾಮ ಅಲ್ಪಕಾಲದ್ದು. ಶಾಶ್ವತವಲ್ಲದ್ದು. ಇಲ್ಲಿ ಮುಖ್ಯ ಉದ್ಧೇಶ ಬಾಕಿದ್ದೋರ ತನ್ನೆಡೆಂಗೆ ಆಕರ್ಷಿಸುವದು. ಇಲ್ಲಿ ಭಗವಂತನ ಅನುಸಂಧಾನ ಇಲ್ಲೆ. ಭಗವಂತನ ಅನುಸಂಧಾನ ಇಲ್ಲದ್ದೆ ಮಾಡುವ ತಪಸ್ಸು ರಾಜಸ ಎನುಸುತ್ತು. ಚಪಲಂದ ಮಾಡುವ ತಪಸ್ಸು ರಾಜಸ.

ಶ್ಲೋಕ

ಮೂಢಗ್ರಾಹೇಣಾತ್ಮನೋ ಯತ್ ಪೀಡಯಾ ಕ್ರಿಯತೇ ತಪಃ ।
ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಂ ॥೧೯॥

ಪದವಿಭಾಗ

ಮೂಢ-ಗ್ರಾಹೇಣ ಆತ್ಮನಃ ಯತ್ ಪೀಡಯಾ ಕ್ರಿಯತೇ ತಪಃ । ಪರಸ್ಯ ಉತ್ಸಾದನಾರ್ಥಮ್ ವಾ ತತ್ ತಾಮಸಮ್ ಉದಾಹೃತಮ್ ॥

ಅನ್ವಯ

ಮೂಢ-ಗ್ರಾಹೇಣ ಆತ್ಮನಃ ಪೀಡಯಾ ಪರಸ್ಯ ಉತ್ಸಾದನಾರ್ಥಂ ವಾ ಯತ್ ತಪಃ ಕ್ರಿಯತೇ, ತತ್ ತಾಮಸಮ್ ಉದಾಹೃತಮ್ ।

ಪ್ರತಿಪದಾರ್ಥ

ಮೂಢ-ಗ್ರಾಹೇಣ – ಮೂರ್ಖತನದ ಪ್ರಯತ್ನಂದ, ಆತ್ಮನಃ – ತನ್ನ, ಪೀಡಯಾ – ಹಿಂಸೆಂದ, ಪರಸ್ಯ – ಇನ್ನೊಬ್ಬನ (ಪರರ), ಉತ್ಸಾದನಾರ್ಥಮ್ (ಉತ್ಸಾದನ-ಅರ್ಥಮ್) – ನಾಶಮಾಡುವದಕ್ಕೆ ಬೇಕಾಗಿ, ವಾ – ಅಥವಾ, ಯತ್ – ಏವ, ತಪಃ – ತಪಸ್ಸು, ಕ್ರಿಯತೇ – ಮಾಡಲ್ಪಡುತ್ತೋ, ತತ್ – ಅದು, ತಾಮಸಮ್ – ತಾಮಸ, ಉದಾಹೃತಮ್ – ಹೇದು ಹೇಳಲಾಯ್ದು.

ಅನ್ವಯಾರ್ಥ

ಮೂರ್ಖತನಂದ ತನ್ನನ್ನೇ ಹಿಂಸೆ ಮಾಡ್ಳೆಯೋ ಅಥವಾ ಇತರರ ನಾಶಮಾಡ್ಳೆಯೋ ಉಪದ್ರಮಾಡ್ಳೆಯೋ ಮಾಡುತ್ತ ಏವ ತಪಸ್ಸು ಇದ್ದೋ ಅದು ತಾಮಸ ತಪಸ್ಸು ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ತನ್ನ ತಪ್ಪು ತಿಳುವಳಿಕೆಂದ / ಮೂರ್ಖತನಂದ ಭಗವಂತನ ಅನುಸಂಧಾನ ಇಲ್ಲದ್ದೆ, ತನ್ನೊಳ ಇಪ್ಪ ಭಗವಂತನ ಎಚ್ಚರವೂ ಇಲ್ಲದ್ದೆಯೂ ದೇಹದಂಡನೆ ಮಾಡಿಗೊಂಡು ಇನ್ನೊಬ್ಬಂಗೆ ಕೆಡುಕಾಯೇಕು ಹೇದು ಮಾಡುವ ತಪಸ್ಸು ತಾಮಸ ತಪಸ್ಸು ಹೇದು ಪರಿಗಣಿಸಲ್ಪಡುತ್ತು. ತಾನು ಹಾಳಾದರೂ ಅಡ್ಡಿ ಇಲ್ಲೆ ಆದರೆ ಇನ್ನೊಬ್ಬ ಒಳ್ಳೆದಪ್ಪಲಾಗ ಹೇಳ್ವ ಕೆಟ್ಟ ಯೋಚನೆ – ತಾಮಸ. ತನ್ನೊಳ ಭಗವಂತ° ಇದ್ದ°, ಇನ್ನೊಬ್ಬನೊಳವೂ, ಪ್ರತಿಯೊಬ್ಬನೊಳವೂ ಭಗವಂತ° ಇದ್ದ° ಹೇಳ್ವ ಎಚ್ಚರ ಇವರ ಮೂರ್ಖತನದ ಮನಸ್ಸಿಂದಾಗಿ ಗೊಂತಾವ್ತಿಲ್ಲೆ. ಪರಿಣಾಮ- ತನ್ನ ದೇಹ ದಂಡನೆ ಮಾತ್ರ ಅಲ್ಲದ್ದೆ ವ್ಯರ್ಥ ಹಾಳು ಪ್ರಯತ್ನ. ಇದು ತಾಮಸ ತಪಸ್ಸು.

ಶ್ಲೋಕ

ದಾತವ್ಯಮಿತಿ ಯದ್ದಾನಂ ದೀಯತೇsನುಪಕಾರಿಣೇ ।
ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಮ್ ॥೨೦॥

ಪದವಿಭಾಗ

ದಾತವ್ಯಮ್ ಇತಿ ಯತ್ ದಾನಮ್ ದೀಯತೇ ಅನುಪಕಾರಿಣೇ । ದೇಶೇ ಕಾಲೇ ಚ ಪಾತ್ರೇ ಚ ತತ್ ದಾನಮ್ ಸಾತ್ತ್ವಿಕಮ್ ಸ್ಮೃತಮ್ ॥

ಅನ್ವಯ

ದಾತವ್ಯಮ್ ಇತಿ ಯತ್ ದಾನಂ ದೇಶೇ ಚ ಕಾಲೇ ಚ ಪಾತ್ರೇ (ಚ) ಅನುಪಕಾರಿಣೇ ದೀಯತೇ, ತತ್ ದಾನಂ ಸಾತ್ತ್ವಿಕಂ ಸ್ಮೃತಂ ।

ಪ್ರತಿಪದಾರ್ಥ

ದಾತವ್ಯಮ್ – ದಾನಕ್ಕೆ ಅರ್ಹವಾಗಿಪ್ಪದು, ಇತಿ – ಹೇದು, ಯತ್ – ಏವ, ದಾನಮ್ – ದಾನವು, ದೇಶೇ – ವಿಶಿಷ್ಟ ಜಾಗೆಲಿ, ಚ – ಕೂಡ, ಕಾಲೇ – ಯೋಗ್ಯ ಕಾಲಲ್ಲಿ, ಚ – ಕೂಡ, ಪಾತ್ರೇ – ಅರ್ಹಂಗೆ (ಅರ್ಹ ವ್ಯಕ್ತಿಗೆ), (ಚ – ಕೂಡ), ಅನುಪಕಾರಿಣೇ – ಪ್ರತಿಫಲವ ಅಪೇಕ್ಷಿಸದ್ದೆ, ದೀಯತೇ – ಕೊಡಲ್ಪಡುತ್ತೋ, ತತ್ ದಾನಮ್ – ಆ ದಾನವು, ಸಾತ್ವಿಕಮ್ – ಸಾತ್ವಿಕವಾದ್ದು, (ಇತಿ) ಸ್ಮೃತಂ – ಹೇದು ಪರಿಗಣಿಸಲ್ಪಟ್ಟಿದು.

ಅನ್ವಯಾರ್ಥ

ಪ್ರತಿಫಲದ ಅಪೇಕ್ಷೆ ಇಲ್ಲದ್ದೆ, ದಾನಕ್ಕೆ ಅರ್ಹವಾಗಿಪ್ಪದರ, ದಾನಕ್ಕೆ ಅರ್ಹನಾಗಿಪ್ಪ ವ್ಯಕ್ತಿಗೆ ಯೋಗ್ಯ ಸ್ಥಳಲ್ಲಿ, ಯೋಗ್ಯ ಕಾಲಲ್ಲಿ ಕರ್ತವ್ಯ ದೃಷ್ಟಿಂದ ಕೊಡಲ್ಪಡುತ್ತ ದಾನವು ಸಾತ್ವಿಕ ದಾನ ಹೇದು ಪರಿಗಣಿಸಲ್ಪಟ್ಟಿದು.

ತಾತ್ಪರ್ಯ / ವಿವರಣೆ

ದಾನ ಕೊಡುವಾಗ ಅಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆ ಇಪ್ಪಲಾಗ. ಆತ್ಮ ಸಂತೋಷಂದ, ಸಂಪೂರ್ಣ ಮನಃಪೂರ್ವಕವಾಗಿ, ಇದರಿಂದ ದಾನ ತೆಕ್ಕೊಂಡವಂಗೆ ಉಪಕಾರ ಆಯೇಕು ಹೇಳ್ವ ನಿಜಮನೋಭಾವಂದ ದಾನ ಕೊಡೆಕು.  ಹಾಂಗೇ ಆರಿಂಗೋ ಒಬ್ಬಂಗೆ ದಾನ ಕೊಡುವದರ್ಲಿಯೂ ಅರ್ಥ ಇಲ್ಲೆ.  ದಾನವ ಯೋಗ್ಯ ವ್ಯಕ್ತಿಗೆ ದಾನ ಕೊಡೆಕು. ತನ್ನತ್ರೆ ಇಪ್ಪದು ಆರತ್ರೆ ಇಲ್ಲೆಯೋ, ಆರಿಂಗೆ ಅದರಿಂದಲಾಗಿ ಉಪಯೋಗ/ಉಪಕಾರ ಆವ್ತೋ ಅಂತವಂಗೆ ದಾನ ಕೊಡೆಕು. ತನಗೆ ಉಪಯೋಗ ಇಲ್ಲೆ ಹೇಂಗಾರು ಇಲ್ಲಿಂದ ರಟ್ಟುಸಿ ಬಿಡೆಕು ಹೇಳ್ವ ಮನೋಭಾವಲ್ಲಿಯೂ ಕೂಡ ದಾನ ಮಾಡ್ಳಾಗ. ಯೋಗ್ಯವಾದ್ದರ, ಯೋಗ್ಯ ವ್ಯಕ್ತಿಗೆ, ಯೋಗ್ಯ ಸ್ಥಳಲ್ಲಿ, ಯೋಗ್ಯ ಕಾಲಲ್ಲಿ ಕರ್ತವ್ಯ ದೃಷ್ಟಿಂದ ಕೊಡುವ ದಾನ – ಸಾತ್ವಿಕ ದಾನ ಹೇಳಿ ಪರಿಗಣಿಸಲ್ಪಡುತ್ತು.

ಶ್ಲೋಕ

ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ಧಿಶ್ಯ ವಾ ಪುನಃ ।
ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಂ ॥೨೧॥

ಪದವಿಭಾಗ

ಯತ್ ತು ಪ್ರತಿ-ಉಪಕಾರಾರ್ಥಮ್ ಫಲಮ್ ಉದ್ಧಿಶ್ಯ ವಾ ಪುನಃ । ದೀಯತೇ ಚ ಪರಿಕ್ಲಿಷ್ಟಮ್ ತತ್ ದಾನಮ್ ರಾಜಸಮ್ ಸ್ಮೃತಮ್ ॥

ಅನ್ವಯ

ಯತ್ ತು ಪ್ರತಿ-ಉಪಕಾರಾರ್ಥಮ್, ಫಲಂ ಉದ್ಧಿಶ್ಯ, ವಾ ಪುನಃ ಪರಿಕ್ಲಿಷ್ಟಂ ಚ ದೀಯತೇ, ತತ್ ದಾನಂ ರಾಜಸಂ ಸ್ಮೃತಮ್ ।

ಪ್ರತಿಪದಾರ್ಥ

ಯತ್ – ಏವುದು, ತು – ಆದರೋ, ಪ್ರತಿ-ಉಪಕಾರಾರ್ಥಮ್- ಪ್ರತಿಉಪಕಾರಕ್ಕಾಗಿ (ಪ್ರತಿಫಲಲಾಭಕ್ಕಾಗಿ), ಫಲಮ್ ಉದ್ಧಿಶ್ಯ – ಪ್ರತಿಫಲಾಪೇಕ್ಷೆಂದ, ವಾ – ಅಥವಾ, ಪುನಃ – ಮತ್ತೆ, ಪರಿಕ್ಲಿಷ್ಟಮ್ – ಈರ್ಷ್ಯೆಪಟ್ಟುಗೊಂಡು, ಚ – ಕೂಡ, ದೀಯತೇ – ಕೊಡಲ್ಪಡುತ್ತೋ, ತತ್ ದಾನಮ್ – ಆ ದಾನವು, ರಾಜಸಮ್ ಸ್ಮೃತಮ್ – ರಾಜಸ ದಾನ ಹೇದು ಪರಿಗಣಿಸಲ್ಪಟ್ಟಿದು.

ಅನ್ವಯಾರ್ಥ

ಏವ ದಾನ ಪ್ರತ್ಯುಪಕಾರ ನಿರೀಕ್ಷೆಂದಲೋ, ಪ್ರತ್ಯುಪಕಾರ ಬಯಕೆಂದಲೋ ಅಥವಾ ಇಷ್ಟ ಇಲ್ಲದ್ದೆಯೋ ಮತ್ತೆ ಅಸೂಯೆ ಪಟ್ಟುಗೊಂಬ ದಾನವ ರಾಜಸ ಹೇಳಿ ಪರಿಗಣಿಸಲ್ಪಡುತ್ತು.

ತಾತ್ಪರ್ಯ / ವಿವರಣೆ

ದಾನ ಕೊಡುವಾಗ ಅಲ್ಲಿ ಏವುದೇ ನಿರೀಕ್ಷೆ ಅಥವಾ ಪ್ರತಿಪಲ ಅಪೇಕ್ಷೆ ಇಪ್ಪಲಾಗ. ಇದರ ಕೊಟ್ಟರೆ ಅದು ಸಿಕ್ಕೆಕು ಹೇಳ್ವ ಆಕಾಂಕ್ಷೆ ಇಪ್ಪಲಾಗ. ಅದು ಲಂಚ ಆವ್ತು. ಅದು ಆಗದ್ದ ಕೆಲಸವ ಮಾಡಿಸಿಗೊಂಬ ಕಾರ್ಯ ಆವ್ತು. ಹೇಳಿರೆ ಅರ್ಹನಲ್ಲದ್ದವ ಅರ್ಹನೆನಿಸಿಗೊಂಬಾಂಗೆ ಮಾಡುವದಾವ್ತು. ಅದೇವುದೂ ಶಾಶ್ವತ ಅಲ್ಲ. ಹಾಂಗೇ ಇದರ ಕೊಡೆಕ್ಕನ್ನೇ ಹೇಳಿ ಮನಸ್ಸಿಲ್ಲದ್ದ ಮನಸ್ಸಿಂದ ದಾನ ಕೊಡ್ಳೂ ಆಗ. ಮಾತ್ರ ಅಲ್ಲದ್ದೆ, ಕೊಟ್ರೆ ಅವಂಗೆ ಒಳ್ಳೆದಕ್ಕನ್ನೇ ಹೇಳ್ವ ಸಂಕಟವೂ ಮನಸ್ಸಿಲ್ಲಿ ತೋರ್ಲಾಗ. ಈ ರೀತಿ ಫಲಾಪೇಕ್ಷೆಯ ದೃಷ್ಟಿಂದಲೋ, ಸಂಕಟ ಮನಸ್ಸಿಂದಲೋ ಕೊಡ್ತ ದಾನ ರಾಜಸ ಎನುಸುತ್ತು.

ಶ್ಲೋಕ

ಅದೇಶಕಾಲೇ ಯದ್ದಾನಂ ಅಪಾತ್ರೇಭ್ಯಶ್ಚ ದೀಯತೇ ।
ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಂ ॥೨೨॥

ಪದವಿಭಾಗ

ಅದೇಶ-ಕಾಲೇ ಯತ್ ದಾನಮ್ ಅಪಾತ್ರೇಭ್ಯಃ ಚ ದೀಯತೇ । ಅಸತ್ಕೃತಮ್ ಅವಜ್ಞಾತಮ್ ತತ್ ತಾಮಸಮ್ ಉದಾಹೃತಮ್ ॥

ಅನ್ವಯ

ಯತ್ ದಾನಮ್ ಅಸತ್ಕೃತಮ್ ಅವಜ್ಞಾತಮ್, ಅದೇಶ-ಕಾಲೇ ಅಪಾತ್ರೇಭ್ಯಃ ಚ ದೀಯತೇ, ತತ್ ತಾಮಸಮ್ ಉದಾಹೃತಮ್ ।

ಪ್ರತಿಪದಾರ್ಥ

ಯತ್ ದಾನಮ್ – ಏವ ದಾನವು, ಅಸತ್ಕೃತಮ್ – ಗೌರವ ಇಲ್ಲದ್ದೆ, ಅವಜ್ಞಾತಮ್ – ಗಮನುಸದ್ದೆ, ಅದೇಶ-ಕಾಲೇ – ಅಶುದ್ಧ ಸ್ಥಳ-ಅಪವಿತ್ರ ಕಾಲಲ್ಲಿ,  ಅಪಾತ್ರೇಭ್ಯಃ – ಅಪಾತ್ರರಿಂಗೆ (ಅನರ್ಹರಿಂಗೆ), ದೀಯತೇ – ಕೊಡಲ್ಪಡುತ್ತೋ, ತತ್ – ಅದು, ತಾಮಸಮ್ – ತಾಮಸಗುಣದ್ದು, ಉದಾಹೃತಮ್ – (ಹೇದು) ಹೇಳಲಾಯ್ದು.

ಅನ್ವಯಾರ್ಥ

ಏವ ದಾನ, ಗೌರವ ಇಲ್ಲದ್ದೆ, ಗಮನುಸದ್ದೆ, ಅಶುಚಿ ಸ್ಥಳಲ್ಲಿ, ಅನುಚಿತ ಸಮಯಲ್ಲಿ, ಅಪಾತ್ರಂಗೆ ಕೊಡಲ್ಪಡುತ್ತೋ ಅದು ತಾಮಸ ಸ್ವಭಾವದ ದಾನ ಹೇದು ಹೇಳಲ್ಪಟ್ಟಿದು.

ತಾತ್ಪರ್ಯ

ದಾನ ಕೊಡುವಾಗ ಜಾಗ್ರತೆ ಇರೆಕು. ದಾನದ ಬಗ್ಗೆ ಗೌರವ ಇರೆಕು. ಅಹಂಕಾರ ಇಪ್ಪಲಾಗ. ದಾನ ಕೊಡುವದರ್ಲಿ ಗೌರವ ಬೇಕು, ದಾನ ತೆಕ್ಕೊಂಬವನತ್ರೆಯೂ ಗೌರವ ಮಡಿಕ್ಕೊಂಡಿರೆಕು. ನವಗೆ ಬೇಡದ್ದರ ದೂಕಿಬಿಡ್ಳೆ ಕೈಗೆ ಸಿಕ್ಕಿದ ಆರಿಂಗೋ ಒಬ್ಬಂಗೆ ದಾನ ಕೊಡುವದಲ್ಲ. ದಾನ ಕೊಡುವದರಿಂದ ತೆಕ್ಕೊಂಡವಂಗೂ ಅದರ ಸದುಪಯೋಗ ಆಯೇಕು. ದಾನ ತೆಕ್ಕೊಂಡವನೂ ಅದರ ಸದುಪಯೋಗ ಪಡುಸುವವನಾಗಿರೇಕು. ಅದನ್ನೇ ಇಲ್ಲಿ ಹೇಳಿದ್ದದ್ದು ಅಪಾತ್ರಂಗೆ ದಾನ ಕೊಡ್ಳಾಗ. ಒಬ್ಬ ಕಷ್ಟಲ್ಲಿ ಹಶುವಿಲ್ಲಿ ನರಳಿಗೊಂಡು ಇದ್ದ° ಹೇಳಿ ಕಂಡಾಕ್ಷಣ ಅವಂಗೆ ಒಂದಿಷ್ಟು ಪೈಸೆ ಕೊಡ್ತೆ ಹೇಳಿ ಮುಂದಾಯೇಕು ಹೇದು ಏನಿಲ್ಲೆ. ಆ ಪೈಸೆ ತೆಕ್ಕೊಂಡು ಅಂವ ಅದರ ಅವನ ಹೊಟ್ಟೆ ಹಶುವಿನ ಅಶನಕ್ಕೆ ಉಪಯೋಗುಸುವವ ಆಗಿರೇಕು ಹೊರತು ಕುಡುಕನ ಕೈಗೆ ದಾನ ಕೊಟೆ ಅಂವ ಅದರ ಕುಡಿತಕ್ಕೇ ಬಳಸುಗೇ ವಿನಾ ಉದರ ಶಮನಕ್ಕೆ ಉಪಯೋಗುಸ!. ಹಾಂಗೆ ದಾನ ತೆಕ್ಕೊಂಡಿಕ್ಕಿ ಅದರ ಉಪಯೋಗುಸದ್ದೆ ಇನ್ನೊಬ್ಬಂಗೆ ಮಾರಿ ಪೈಸೆ ಮಾಡುವವಂಗೂ ದಾನ ಕೊಡ್ಳಾಗ. ಕೊಟ್ಟ ದಾನ ನೇರವಾಗಿ ಉಪಯೋಗುಸುವಂತಾಯೇಕು. ಇಲ್ಲಿ ದಾನ ಕೊಡುವವಂಗೆ ದಾನ ವಸ್ತುವಿನ ಬಗ್ಗೆ ಗೌರವ ಇರೆಕು, ದಾನ ತೆಕ್ಕೊಂಬವನ ಬಗ್ಗೆ ಗೌರವ ಇರೆಕು. ದಾನ ತೆಕ್ಕೊಂಬವನ ಆದರಂದ ಸತ್ಕರಿಸಿ ಉಪಚರಿಸಿ ಅವಂಗೆ ದಾನ ಕೊಡೆಕು. ಅಂತೇ ಬೈದು, ಹೀಯಾಳಿಸಿ, ಅವಮಾನ ಮಾಡಿ ದಾನ ಕೊಡುವದು ಸಾತ್ವಿಕ ದಾನ ಆವ್ತಿಲ್ಲೆ. ಅಶುಚಿಯಾದ್ದರ ದಾನ ಕೊಡುವದು, ಅಶುಚಿ ಜಾಗೆಲಿ ದಾನ ಕೊಡುವದು, ಅಪಾತ್ರಂಗೆ ದಾನ ಕೊಡುವದು, ಅಗೌರವಂದ ದಾನ ಕೊಡುವದು ಇತ್ಯಾದಿ ತಾಮಸ ಸ್ವಭಾವದ ದಾನ ಆವ್ತು.

ಶ್ಲೋಕ

ಓಂತತ್ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।
ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥೨೩॥

ಪದವಿಭಾಗ

ಓಮ್ ತತ್ ಸತ್ ಇತಿ ನಿರ್ದೇಶಃ ಬ್ರಹ್ಮಣಃ ತ್ರಿವಿಧಃ ಸ್ಮೃತಃ । ಬ್ರಾಹ್ಮಣಾಃ ತೇನ ವೇದಾಃ ಚ ಯಜ್ಞಾಃ ಚ ವಿಹಿತಾಃ ಪುರಾ ॥

ಅನ್ವಯ

ಓಂ ತತ್ ಸತ್ ಇತಿ ಬ್ರಹ್ಮಣಃ ತ್ರಿವಿಧಃ ನಿರ್ದೇಶಃ ಸ್ಮೃತಃ । ತೇನ ಬ್ರಾಹ್ಮಣಾಃ ವೇದಾಃ ಚ ಯಜ್ಞಾಃ ಚ ಪುರಾ ವಿಹಿತಾಃ ।

ಪ್ರತಿಪದಾರ್ಥ

ಓಮ್ – ಪರಮೋನ್ನತ ಸೂಚಕ, ತತ್ – ಅದು, ಸತ್ – ಶಾಶ್ವತ = ಓಮ್ ತತ್ ಸತ್ (ಓಂ ತತ್ಸತ್) – ಓಂ ತತ್ಸತ್ ಹೇಳ್ವ ಪರಮಾತ್ಮ ಸೂಚಕ ಪದ, ಇತಿ – ಹೀಂಗೆ, ಬ್ರಹ್ಮಣಃ – ಪರಮೋನ್ನತನ, ತ್ರಿವಿಧಃ – ಮೂರುಬಗೆಯ, ನಿರ್ದೇಶಃ – ನಿರ್ದೇಶನವು, ಸ್ಮೃತಃ – ತಿಳಿಯಲಾಯ್ದು, ತೇನ – ಅದರಿಂದ, ಬ್ರಾಹ್ಮಣಾಃ – ಬ್ರಾಹ್ಮಣರು, ವೇದಾಃ – ವೇದ ಸಾಹಿತ್ಯಂಗೊ, ಚ – ಕೂಡ, ಯಜ್ಞಾಃ – ಯಜ್ಞಂಗೊ, ಚ – ಕೂಡ, ಪುರಾ – ಹಿಂದೆಯೇ / ಮದಲಿಂದಲೇ, ವಿಹಿತಾಃ – ಉಂಟಾದ್ದು/ಸಾರಲ್ಪಟ್ಟದು.

ಅನ್ವಯಾರ್ಥ

ಮದಲಿಂದಲೇ ಓಂ ತತ್ ಸತ್ ಹೇಳ್ವ ವಾಚ್ಯವು ಪರಮೋನ್ನತನ ಸತ್ಯವ (ಪರಿಪೂರ್ಣ ಸತ್ಯವ) ನಿರ್ದೇಶಿಸುವದಾಗಿ ಜ್ಞಾನಿಗಳಿಂದ ತಿಳಿಯಲಾಯ್ದು. ಅದರಿಂದ ಬ್ರಾಹ್ಮಣರು, ವೇದ ಸಾಹಿತ್ಯಂಗೊ, ಯಜ್ಞಂಗೊ ಕೂಡ ಅದನ್ನೇ ಮದಲಿಂದಲೇ ಉಂಟಾದ್ದು.

ತಾತ್ಪರ್ಯ / ವಿವರಣೆ

ಓಂ ಎಂಬುದು ಅಪರಿಮಿತ ಅರ್ಥವ್ಯಾಪ್ತಿ ಪದ. ಅದು ಸರ್ವೋನ್ನತ ಸಂಕೇತ ಪದ. ಅದು ಸರ್ವಶ್ರೇಷ್ಠ°, ಅಮಿತ° ನ ಸೂಚಿಸುವ ಪದ. ಎಲ್ಲವೂ ಅದರೊಳ ಅಂತರ್ಗತ ಆಯ್ದು. ಸರ್ವ ವೇದವೂ, ಭಗವಂತನ ಸಕಲ ತತ್ವವೂ ಅದರ್ಲಿ ಒಳಗೊಂಡಿದು. ಅಂತಹ ಮಹಾಮಹಿಮ ಪದ ‘ಓಂ’ ಪರಿಪೂರ್ಣನಾದ ಭಗವಂತನ ಸೂಚಿಸುವಂತಾದ್ದು. ‘ಓಮ್’ ಹೇಳ್ವ ಅದು (ತತ್) – ಸತ್ (ಸತ್ಯ) ಒಟ್ಟಿಂಗೆ ಓಂ ತತ್ಸತ್; ಹೇಳಿರೆ, ಭಗವಂತನೇ ಸತ್ಯ, ನಿತ್ಯ ಶ್ರೇಷ್ಠ ಹೇಳ್ವ ಸೂಚಕ ಪದ.  ಅದರಿಂದ ಮುಂದೆ ಬ್ರಾಹ್ಮಣರು, ವೇದಂಗೊ, ಯಜ್ಞಂಗೊ ಸೃಷ್ಟಿಯಾತು ಹೇಳಿ ಜ್ಞಾನಿಗಳಿಂದ ಹೇಳಲ್ಪಟ್ಟಿದು.

ಈ ಶ್ಲೋಕವ ವಿಶ್ಲೇಷಣೆಯ / ಗೂಢಾರ್ಥವ  ಬನ್ನಂಜೆಯವರ ವ್ಯಾಖ್ಯಾನಂದಲೂ ನೋಡಿರೆ –  ಓಮ್ – ಪ್ರಪಂಚವ ಹೊತ್ತವ° ಮತ್ತೆ ಪ್ರಪಂಚಲ್ಲಿ ತುಂಬಿಪ್ಪವ°, ತತ್ – ವೇದಗಳ ಮೂಲಕ ಪರೋಕ್ಷವಾಗಿ ಮಾಂತ್ರ ತಿಳಿವಲೆ ಸಾಧ್ಯನಾದವ°, ಸತ್ – ಎಲ್ಲ ಶುಭ ಗುಣಂಗಳಿಂದ ಪರಿಪೂರ್ಣನಾದವ° = ಓಂ ತತ್ಸತ್. ಹೀಂಗೆ ಓಮ್, ತತ್, ಸತ್ ಹೇಳಿ ಭಗವಂತನ ಮೂರು ಹೆಸರುಗೊ. ಮೇಗೆ ವಿವರಣೆಲಿ ಹೇಳಿದ ‘ಅದರಿಂದಲೇ’ ಹೇಳಿರೆ ಆ ಭಗವಂತನೇ ವೇದಂಗಳ, ವೇದಜ್ಞರಾದ ಬ್ರಾಹ್ಮಣರ ಮತ್ತೆ ಯಜ್ಞಂಗಳ ಅಣಿಗೊಳಿಸಿದ°.

ಓಮ್, ತತ್, ಸತ್ – ಇದು ಭಗವಂತನ ಮೂರು ಹೆಸರುಗೊ.  ಭಗವಂತನ ಸ್ಮರುಸಲೆ ಜ್ಞಾನಿಗೊ ಓಂ ತತ್ಸತ್ ಹೇಳಿ ಅನುಸಂಧಾನ ಮಾಡಿ ಬಳಕೆಗೆ ತಂದವು. ಭಗವಂತ° ಹೇಳಿರೆ ಸರ್ವಶ್ರೇಷ್ಠ°. ಅವನ ಹೆಸರುಗೊ ಹೇಳಿರೆ ನಮ್ಮ ಹೆಸರಿನ ಹಾಂಗಲ್ಲ. ಅವನ ಹೆಸರು ಅವನ ಗುಣವಾಚಕ ಪದಂಗೊ. ಓಂ ಹೇಳ್ವದು ಭಗವಂತಂಗೇ ಮೀಸಲಾದ ಪದ/ಹೆಸರು. ಅ+ಉ+ಮ ಮೂರ ಅಕ್ಷರಂಗಳ ಒಳಗೊಂಡ ಈ ಒಂದು ಓಂ ಇಡೀ ವಿಶ್ವವನ್ನೇ, ವಿಶ್ವತತ್ವವನ್ನೇ ಒಳಗೊಂಡಿದು. ವಿಶ್ವದ ಸೃಷ್ಟಿಯೇ ಒಂಕಾರಂದ ಉಂಟಾದ್ದು. ಅದರ್ಲಿ ಸರ್ವ ವೇದ ಸಾರ ಒಳಗೊಂಡಿದು.  ಇಡೀ ಜಗತ್ತು ಆರತ್ರೆ ಹೆಣಕ್ಕೊಂಡಿದ್ದೋ, ಅಂವ° ಓಂ. ನಾವು ಮಾಡುವ ಸಮಸ್ತ ಕರ್ಮವೂ ಅವಂಗೆ ಅರ್ಪಿತ° ಹೇಳಿ ಸೂಚಿಸುವದಕ್ಕೆ ಓಂಕಾರವ ಬಳಸುತ್ತು. ‘ಹರಿಃ ಓಂ’ ಹೇದು ಸುರುವಿಲ್ಲಿ ನಾವು ಪ್ರಾರಂಭ ಮಾಡಿ ಮುಂದೆ ಮಾಡುವ ಅಕೇರಿವರೇಂಗೂ ಎಲ್ಲವೂ ಆ ಭಗವಂತಂಗೆ ಅರ್ಪಣೆ. ಹಾಂಗಾಗಿ ನಾವು ಸುರುವಿಲ್ಲಿ ‘ಹರಿಃ ಓಂ’ ಹೇಳಿ ಏವುದೇ ಕರ್ಮವ ಸುರುಮಾಡುವದು ಮತ್ತೆ ಹಾಂಗೇ ‘ಓಂ ತತ್ಸತ್’ ಹೇಳಿ ಅಕೇರಿಗೆ ಮುಕ್ತಾಯಮಾಡುವದು.

ಇನ್ನು, ತತ್ ಹೇಳಿರೆ ತತಃ ಹೇಳಿಯೂ ಅರ್ಥ ನೀಡುವಂತಾದ್ದು. ತತಃ ಹೇದರೆ ಅದರಲ್ಲಿ ತುಂಬಿಪ್ಪವ°. ಭಗವಂತ° ಸಮಸ್ತ ಗುಣಂಗಳ ನೆಲೆ. ಸಕಲ ಗುಣಪರಿಪೂರ್ಣ ಅಂವ°. ಹಾಂಗಾಗಿ ತತ್ – ಅವನಿಂದ, ತತಃ ಅವನಲ್ಲಿ ಅರ್ಥಾತ್ ಎಲ್ಲವೂ ಭಗವಂತನಲ್ಲಿ ಅಂತರ್ಗತ. ಮತ್ತೆ, ಸತ್ – ಹೇದರೆ  – ಸತ್ಯ. ಶಾಶ್ವತನಾದ ಭಗವಂತನೇ ನಿತ್ಯ° ಸತ್ಯ°. ಏವ ದೋಷವೂ ಇಲ್ಲದ್ದೆ ಇಪ್ಪಂವ° – ಭಗವಂತ°.

ಹೀಂಗೆ ‘ಓಂ ತತ್ಸತ್’ ಹೇಳ್ವದು ಭಗವಂತನ ಸೂಚಿಸುವ ಮೂರು ನಾಮಂಗೊ. ಸಂಕ್ಷಿಪ್ತವಾಗಿ, ‘ಓಂ ತತ್ಸತ್’  ಜಗದಾಧಾರನೂ, ಸಮಸ್ತ ಗುಣ ಪರಿಪೂರ್ಣನೂ, ಸಮಸ್ತ ವೇದ ಪ್ರತಿಪಾದ್ಯನೂ, ಸಮಸ್ತ ದೋಷ ದೂರನೂ ಆದ ಆದಿಪುರುಷ° ಭಗವಂತ° ಹೇದು ಅರ್ಥ.  ಇಂತಹ ಭಗವಂತ ವೇದವ ಸೃಷ್ಟಿ ಮಾಡಿದ,  ಅದರಿಂದ ವೇದಜ್ಞ (ಜ್ಞಾನಿ, ವೇದವ ತಿಳಿದವ) ರ ಸೃಷ್ಟಿ ಮಾಡಿದ, ಅದರಿಂದ ಜ್ಞಾನಪೂರ್ವಕ ಕರ್ಮವ ಮಾಡೆಕು ಹೇಳಿ ಯಜ್ಞವ ಸೃಷ್ಟಿ ಮಾಡಿದ ಭಗವಂತ°.

ಭಗವಂತ° ಈ ವರೇಂಗೆ ಸತ್ವ ರಜ ತಮೋ ಗುಣಸ್ವಭಾವಂಗಳ ವಿವರಿಸಿ ಇಲ್ಲಿ ಇನ್ನು ಮುಂದೆ ಸಾತ್ವಿಕ ಕರ್ಮದ ಮಹತ್ವವ ವಿವರುಸಲೆ ತೊಡಗಿಪ್ಪದರ ಗಮನುಸಲಕ್ಕು.

ಇಲ್ಲಿ ‘ಓಂ ತತ್ಸತ್’ ಹೇಳಿರೆ ಸಾಕ್ಷಾತ್ ಭಗವಂತನೇ ಹೇದು ಹೇಳ್ವದರ ಮೂಲಕ ನಾವೆಂತ ಕರ್ಮವ ಮಾಡುತ್ತರೂ ಅದು ಆ ಭಗವಂತಂಗೆ ಅರ್ಪಣೆ ಹೇಳ್ವ ಮನೋಭಾವಂದ ಮಾಡೆಕು ಹೇಳ್ವ ಗೂಢಾರ್ಥವ ಇಲ್ಲಿ ಭಗವಂತ° ಸಾರಿದ್ದ°. ಭಗವಂತನೇ ಸರ್ವೋತ್ತಮ°, ಎಲ್ಲವೂ ಅವನಿಂದಲೇ ನಡವದು, ಅಂವ° ಇಲ್ಲದ್ರೆ ಇಲ್ಲಿ ಎಂತದೂ ಇಲ್ಲೆ ಹೇಳ್ವದರ ಓಂ ತತ್ಸತ್ ಹೇಳಿ ಉಪಯೋಗುಸುವದರ ಮೂಲಕ ಎಚ್ಚರಿಸಿದ್ದ°. ಹಾಂಗಾಗಿ, ಮನುಷ್ಯನ ಆನು , ಎನ್ನದು ಹೇಳ್ವ ಆಡಂಭರವೋ, ಅಹಂಭಾವವೋ ನಡೆಯ, ಏವುದೇ ಕಾರ್ಯ – ಯಜ್ಞ, ದಾನ , ಧರ್ಮ, ತಪಸ್ಸು ಏವುದೇ ಕರ್ಮ ಆಗಿದ್ದರೂ ಅದು ಮನಃಪೂರ್ವಕವಾಗಿ ಭಗವಂತನ ಅನುಸಂಧಾನ ಮೂಲಕ ಮಾಡೆಕು, ಅದರಿಂದ ಭಗವಂತ ಸಂಪ್ರೀತನಾವ್ತ ಹೇಳ್ವ ಆಶಯ ಇಲ್ಲಿ ಅಂತರ್ಗತವಾಗಿದ್ದು.

ಶ್ಲೋಕ

ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃ ಕ್ರಿಯಾಃ ।
ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ ॥೨೪॥

ಪದವಿಭಾಗ

ತಸ್ಮಾತ್ ಓಮ್ ಇತಿ ಉದಾಹೃತ್ಯ ಯಜ್ಣ-ದಾನ-ತಪಃ ಕ್ರಿಯಾಃ । ಪ್ರವರ್ತಂತೇ ವಿಧಾನ-ಉಕ್ತಾಃ ಸತತಮ್ ಬ್ರಹ್ಮ-ವಾದಿನಾಮ್ ॥

ಅನ್ವಯ

ತಸ್ಮಾತ್ ಬ್ರಹ್ಮ-ವಾದಿನಾಂ ವಿಧಾನ-ಉಕ್ತಾಃ ಯಜ್ಞ-ದಾನ-ತಪಃ ಕ್ರಿಯಾಃ ಓಮ್ ಇತಿ ಉದಾಹೃತ್ಯ ಸತತಂ ಪ್ರವರ್ತಂತೇ ।

ಪ್ರತಿಪದಾರ್ಥ

ತಸ್ಮಾತ್ – ಹಾಂಗಾಗಿ, ಬ್ರಹ್ಮ-ವಾದಿನಾಮ್ – ಆಧ್ಯಾತ್ಮಿಕವಾದಿಗಳ, ವಿಧಾನ-ಉಕ್ತಾಃ – ಶಾಸ್ತ್ರೋಕ್ತವಿಧಾನಕ್ಕನುಗುಣವಾಗಿ, ಯಜ್ಞ-ದಾನ-ತಪಃ ಕ್ರಿಯಾಃ – ಯಜ್ಞ, ದಾನ, ತಪಸ್ಸಾಚರಣೆ ಕ್ರಿಯೆಗೊ, ಓಮ್ ಇತಿ ಉದಾಹೃತ್ಯ – ಓಮ್ ಹೇದು ಉದ್ಧರುಸಿ (ತೊಡಗಿ, ಆರಂಭಿಸಿ), ಸತತಮ್ – ಏವತ್ತೂ, ಪ್ರವರ್ತಂತೇ – ಪ್ರಾರಂಭವಾವ್ತು.

ಅನ್ವಯಾರ್ಥ

ಹಾಂಗಾಗಿ, ಧರ್ಮಗ್ರಂಥಂಗಳ ಶಾಸ್ತ್ರೋಕ್ತವಿಧಾನಕ್ಕನುಗುಣವಾಗಿ ಆಧ್ಯಾತ್ಮವಾದಿಗೊ ಕೈಕೊಂಬ ಯಜ್ಞ ದಾನ ತಪಸ್ಸಾಚರಣೆ ಕ್ರಿಯೆಗೊ ಏವತ್ತೂ ಓಂ ಹೇದು ಹೇಳಿಕ್ಕಿಯೇ ಸುರುವಾವ್ತು.

ತಾತ್ಪರ್ಯ / ವಿವರಣೆ

ಶಾಸ್ತ್ರೋಕ್ತ ವಿಧಿಗಳ ಆಚರಣೆ ಮಾಡುವ ಆಧ್ಯಾತ್ಮವಾದಿಗೊ ಏವುದೇ ಕರ್ಮ ಮಾಡುತ್ತರೂ ಓಂ ಹೇಳಿ ಹೇಳಿಕ್ಕಿಯೇ ಸುರುಮಾಡುವದು. ಭಗವಂತ° ಹೇಳಿದಾಂಗೆ ಆ ಮೂಲಕ ಶಾಸ್ತ್ರೋಕ್ತ ವಿಧಿ ಪಾಲಿಸಿದಾಂಗೂ ಆವ್ತು. ಭಗವಂತನ ಸ್ಮರಿಸಿ ಕರ್ಮ ತೊಡಗಿದಾಂಗೂ ಆವ್ತು. ಸರ್ವ ಕರ್ಮಕ್ರಿಯಾ ಭೋಕ್ತಾರನಾದ ಭಗವಂತನ ಸ್ಮರಣೆ ನಿತ್ಯ ಇರೆಕು ಹೇಳ್ವದೇ ಇಲ್ಲಿ ಸೂಚಕ. ಕಷ್ಟ ಬಪ್ಪಗ ಮಾಂತ್ರ ಭಗವಂತನ ಸ್ಮರಣೆ ಮಾಡುವದು ಉಚಿತವಲ್ಲ. ಸುರುವಿಂದ ಅಕೇರಿವರೇಂಗೂ ಭಗವಂತನ ಚಿಂತನೆ ಮನಸ್ಸಿಲ್ಲಿ ಇರೆಕು. ಹಾಂಗಾಗಿ, ಭಗವಂತ° ಇಲ್ಲಿ, ಕರ್ಮಲ್ಲಿ ಓಂಕಾರದ ಬಳಕೆಯ ಮಹತ್ವವ ವಿವರಿಸಿದ್ದ°. ಆದಿ ಮದ್ಯ ಅಂತ್ಯ ವಿಹೀನನಾದ ಭಗವಂತನ ಸ್ಮರಣೆ ಯಜ್ಞಾದಿ ಕರ್ಮಂಗಳಲ್ಲಿ ಸುರುವಿಂದಲೇ ಆಯೇಕು. ಇವೆಲ್ಲವೂ ಮದಲಿಂದಲೇ (ಸತತಂ – ಏವತ್ತೂ) ಬ್ರಹ್ಮವಾದಿಗಳಿಂದ ಅರ್ಥಾತ್ ಜ್ಞಾನಿಗಳಿಂದ ಹರುದು ಬಂದ ಕ್ರಮ. ಓಂಕಾರಯುಕ್ತವಾಗಿಯೇ ಕರ್ಮ ಪ್ರಾರಂಭ ಮಾಡೆಕು ಹೇಳಿ ಹಾಂಗಾಗಿಯೇ ಮದಲಿಂದಲೇ ಪ್ರಚಲಿತ ಆದ್ದು. ಈ ರೀತಿಲಿ ಓಂಕಾರ ಉಚ್ಛಾರಪೂರ್ವಕವಾಗಿ  ಪ್ರಾರಂಭವಾಗಿ ಭಗವಂತನ ಅನುಸಂಧಾನ ಮೂಲಕ ಮಾಡುವ ಯಾವುದೇ ಪಾರಾಯಣ, ಜಪ, ತಪ, ಹೋಮ, ಹವನ ಯಜ್ಞ, ದಾನ, ನಮಸ್ಕಾರ – ಅದು ಸಾತ್ವಿಕ ಕರ್ಮ ಆಗಿದ್ದು.

ಶ್ಲೋಕ

ತದಿತ್ಯನಭಿಸಂಧಾಯ ಫಲಂ ಯಜ್ಞತಪಃ ಕ್ರಿಯಾಃ ।
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥೨೫॥

ಪದವಿಭಾಗ

ತತ್ ಇತಿ ಅನಭಿಸಂಧಾಯ ಫಲಮ್ ಯಜ್ಞ-ತಪಃ ಕ್ರಿಯಾಃ । ದಾನ-ಕ್ರಿಯಾಃ ಚ ವಿವಿಧಾಃ ಕ್ರಿಯಂತೇ ಮೋಕ್ಷ-ಕಾಂಕ್ಷಿಭಿಃ ॥

ಅನ್ವಯ

ಮೋಕ್ಷ-ಕಾಂಕ್ಷಿಭಿಃ ತತ್ ಇತಿ (ಉದಾಹೃತ್ಯ) ಫಲಮ್ ಅನಭಿಸಂಧಾಯ ವಿವಿಧಾಃ ಯಜ್ಞ-ತಪಃ ಕ್ರಿಯಾಃ ದಾನ-ಕ್ರಿಯಾಃ ಚ ಕ್ರಿಯಂತೇ ॥

ಪ್ರತಿಪದಾರ್ಥ

ಮೋಕ್ಷ-ಕಾಂಕ್ಷಿಭಿಃ – ಮೋಕ್ಷವ ಅಪೇಕ್ಷಿಸುವ ಜನರಿಂದ, ತತ್ ಇತಿ (ಉದಾಹೃತ್ಯ) – ‘ತತ್’ (ಅದು) ಹೇದು ಉಚ್ಛರಿಸಿ, ಫಲಮ್ ಅನಭಿಸಂಧಾಯ – ಕಾಮ್ಯಫಲವ ಅಪೇಕ್ಷಿಸದ್ದೆ, ವಿವಿಧಾಃ – ವಿವಿಧ ರೀತಿಯ, ಯಜ್ಞ-ತಪಃ ಕ್ರಿಯಾಃ – ಯಜ್ಞ, ತಪಸ್ಸು ಕ್ರಿಯೆಗೊ,  ದಾನ-ಕ್ರಿಯಾಃ – ದಾನ ಕ್ರಿಯೆಗೊ, ಚ – ಕೂಡ, ಕ್ರಿಯಂತೆ – ಮಾಡಲ್ಪಡುತ್ತು

ಅನ್ವಯಾರ್ಥ

ಮೋಕ್ಷಾಕಾಂಕ್ಷಿಗಳಿಂದ (ಮೋಕ್ಷ ಸಾಧನೆಗೆ ತೊಡಗಿಪ್ಪವರಿಂದ), ‘ತತ್’ ಹೇದು ಉಚ್ಚರಿಸಿ ವಿವಿಧ ಬಗೆಯ ಯಜ್ಞ ತಪಸ್ಸು ಕಾರ್ಯಂಗೊ, ದಾನ ಕಾರ್ಯಂಗಳೂ ಕೂಡ ಮಾಡಲ್ಪಡುತ್ತು.

ತಾತ್ಪರ್ಯ / ವಿವರಣೆ

ಆಧ್ಯಾತ್ಮಿಕ ಸಾಧನೆ ಮಾಡುತ್ತವಕ್ಕೆ ಏವುದೇ ರೀತಿಯ ಐಹಿಕ ಆಸೆಗೊ ಇಪ್ಪಲಾಗ. ಐಹಿಕ ಲಾಭದ ನಂಟಿನ ತೊರೆದು ಸಾಧನೆಲಿ ತೊಡಗುವದು ಮೋಕ್ಷಸಾಧನೆ. ಅವರ ಸಾಧನೆಯ ಗುರಿ ಒತ್ತೆ ಒಂದೇ – ‘ತತ್’ – ಆ ಭಗವಂತನ ಸೇರುವದು. ಆ ರೀತಿ ಮೋಕ್ಷಾಕಾಂಕ್ಷಿಗೊ ‘ತತ್’ ಹೇಳ್ವ ಸಮಸ್ತ ವೇದವಾಚ್ಯನಾದ ಭಗವಂತನ ಸ್ಮರಣೆ ಮಾಡಿಗೊಂಡು. ಫಲದ ಆಸೆಯ ಬಿಟ್ಟು, ಫಲವ ಭಗವಂತನಲ್ಲಿ ನ್ಯಾಸ ಮಾಡಿ, ಸಂನ್ಯಾಸಿಯಾಗಿ ಕರ್ಮಲ್ಲಿ ನಿರತರಾವ್ತವು. ಅವರ ಪ್ರತಿಯೊಂದು ಕಾರ್ಯ ಕರ್ಮದ ಜೊತೆಲಿ ತತ್ ಅಡಕವಾಗಿರುತ್ತು. ಅರ್ಥಾತ್, ಅವರ ಯಜ್ಞ ದಾನ ತಪಸ್ಸು ಪ್ರತಿಯೊಂದು ಕರ್ಮಲ್ಲಿಯೂ ಭಗವಂತನ ಆ ಗುರಿ (ತತ್) ಅನುಸಂಧಾನವಾಗಿರುತ್ತು.

‘ತತ್’ ಬಗ್ಗೆ ಬನ್ನಂಜೆ ವಿವರುಸುತ್ತವು – ‘ತತ್’ ಹೇಳ್ವದು ವೇದಮಾತಾ ಗಾಯತ್ರಿಯ ಸಂಕ್ಷಿಪ್ತ ಪದ (ಸುರುವಾಣ ಮತ್ತು ಅಕೇರಿಯಾಣ ಅಕ್ಷರ ಒಳಗೊಂಡದು – “ತತ್ಸವಿತುರ್ವರೇಣ್ಯಂ …… ಪ್ರಚೋದಯಾತ್” . ಹಾಂಗಾಗಿ ಇದು ಗಾಯತ್ರಿ ವಾಚ್ಯ ಭಗವಂತನ ಮುಖ್ಯ ನಾಮಧೇಯ. ‘ತತ್’ ಹೇಳ್ವದು ಕರ್ಮಲ್ಲಿ ಭಗವಂತ° ಕೊಡುವ ಫಲವ ಸೂಚಿಸುವದು. ‘ತತ್’ ಹೇಳಿರೆ ಏವುದೇ ಐಹಿಕ ಫಲ ಆಸೆ ಇಲ್ಲದ್ದೆ, ಭವಬಂಧನಂದ ಬಿಡುಗಡೆಗೊಳುಸಿ ಮೋಕ್ಷ ಫಲವ ಕೊಡುವ ಭಗವಂತನ ಪ್ರೀತಿಗೆ ಮಾಡುವ ಕರ್ಮ. ಅದು ಯಜ್ಞವಾಗಿಕ್ಕು, ದಾನವಾಗಿಕ್ಕು ಅಥವಾ ತಪಸ್ಸಾಗಿಕ್ಕು. ಇಲ್ಲಿ ಏವುದೇ ಫಲಾಪೇಕ್ಷೆ ಇಲ್ಲೆ. ಕೇವಲ ಭಗವಂತನ ಸಂಪ್ರೀತಿ ಒಂದೇ ಗುರಿ. ಹೀಂಗೆ ಏವುದೇ ಲೌಕಿಕ ಫಲಾಪೇಕ್ಷೆ ಇಲ್ಲದ್ದೆ ಮಾಡುವ ಕ್ರಿಯೆ ತತ್. ಮೋಕ್ಷಾಕಾಂಕ್ಷಿಗೊಕ್ಕೆ ಬೇಕಾದ್ದು – ‘ತತ್’. ಅವರ ಅನುಸಂಧಾನ – ‘ತತ್’.

ಶ್ಲೋಕ

ಸದ್ಭಾವೇ ಸಾಧುಭಾವೇ ಚ ಸದಿತ್ಯೇತತ್ಪ್ರಯುಜ್ಯತೇ ।
ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ ॥೨೬॥

ಪದವಿಭಾಗ

ಸತ್-ಭಾವೇ ಸಾಧು-ಭಾವೇ ಚ ಸತ್ ಇತಿ ಏತತ್ ಪ್ರಯುಜ್ಯತೇ । ಪ್ರಶಸ್ತೇ ಕರ್ಮಣಿ ತಥಾ ಸತ್ ಶಬ್ದಃ ಪಾರ್ಥ ಯುಜ್ಯತೇ ॥

ಅನ್ವಯ

(ಜ್ಞಾನಿಭಿಃ) ಸತ್ ಇತಿ ಏತತ್ ಸತ್-ಭಾವೇ ಚ ಸಾಧು-ಭಾವೇ ಚ ಪ್ರಯುಜ್ಯತೇ । ತಥಾ, ಹೇ ಪಾರ್ಥ! ಪ್ರಶಸ್ತೇ ಕರ್ಮಣಿ ಸತ್ ಶಬ್ದಃ ಯುಜ್ಯತೇ ।

ಪ್ರತಿಪದಾರ್ಥ

(ಜ್ಞಾನಿಭಿಃ – ಜ್ಞಾನಿಗಳಿಂದ), ಸತ್ ಇತಿ ಏತತ್ – ಸತ್ ಎಂಬ ಈ ಶಬ್ದ, ಸತ್-ಭಾವೇ – ಪರಮೋನ್ನತನ ಸ್ವಭಾವದ ವಸ್ತುತಃ ಜ್ಞಾನಲ್ಲಿ, ಚ – ಮತ್ತೆ, ಸಾಧು-ಭಾವೇ – ಭಕ್ತನ ಸ್ವಭಾವದ ವಸ್ತುತಃ ಜ್ಞಾನಲ್ಲಿ, ಚ – ಕೂಡ, ಪ್ರಯುಜ್ಯತೇ – ಪ್ರಯೋಗಿಸಲ್ಪಡುತ್ತು, ತಥಾ – ಹಾಂಗೆಯೇ/ಮತ್ತೆ/ಕೂಡ, ಹೇ ಪಾರ್ಥ – ಏ ಪಾರ್ಥನೇ!, ಪ್ರಶಸ್ತೇ ಕರ್ಮಣಿ – ಪರಂಪರಾಗತ ಕಾರ್ಯಲ್ಲಿ, ಸತ್ ಶದ್ಬಃ – ಸತ್ ಪದವು, ಉಪಯುಜ್ಯತೇ – ಉಪಯೋಗಿಸಲ್ಪಡುತ್ತು.

ಅನ್ವಯಾರ್ಥ

ಏ ಅರ್ಜುನ!, ಸತ್ ಹೇಳ್ವ ಶಬ್ದ ಸತ್ಯ / ಒಳ್ಳೆದು, ಪರಮ ಉನ್ನತದ ಸ್ವಭಾವವ ಸೂಚಿಸಲೆ ಮತ್ತು ಭಕ್ತನ (ಜೀವಿಯ) ವಸ್ತುತಃ ಸ್ವಭಾವವ ಸೂಚಿಸಲೆ ಉಪಯೋಗಿಸಲ್ಪಡುತ್ತು. ಹಾಂಗೆಯೇ, ಪರಂಪರಾಗತ ಕಾರ್ಯಂಗಳಲ್ಲಿಯೂ ಕೂಡ ಸತ್ ಹೇಳ್ವ ಶಬ್ದ ಉಪಯೋಗಿಸಲ್ಪಡುತ್ತು.

ತಾತ್ಪರ್ಯ / ವಿವರಣೆ

ಮೇಲ್ಮೈಗೆ ವಿಶೇಷ ಅರ್ಥ ಎಂತದೂ ಕಾಣುತ್ತಿಲ್ಲೆ. ‘ಸತ್’ ಹೇಳ್ವ ಪದಪ್ರಯೋಗ ‘ಸತ್’ ಆಗಿಪ್ಪ ಭಗವಂತನ ಸೂಚಿಸಲೆ ಮತ್ತು ಜೀವಿಯ ಮೂಲ ಸ್ವಭಾವ ಸಾತ್ವಿಕತೆಯ ಸೂಚಿಸಲೆ ಉಪಯೋಗಿಸಲ್ಪಡುತ್ತು. ಹಾಂಗೆಯೇ ಪರಂಪರಾಗತ ಕಾರ್ಯಂಗಳಲ್ಲಿ, ಹೇಳಿರೆ ಯಜ್ಞ ಯಾಗ ತಪ ದಾನಂಗಳಲ್ಲಿಯೂ ಕೂಡ ಸತ್ ಹೇಳ್ವ ಪದಪ್ರಯೋಗ ಆವ್ತು ಹೇಳಿ ಅಷ್ಟೇ ಮೇಲರ್ಥವ ಕೊಡುತ್ತು. ಇಲ್ಲಿ ಸತ್ ಹೇಳ್ವ ಭಾವ ವಿಶಾಲ ಅರ್ಥಲ್ಲಿ ಸ್ವೀಕರಿಸಲ್ಪಡುತ್ತು ಹೇಳ್ವದು ತಾತ್ಪರ್ಯ. ‘ಸತ್’ ಹೇಳ್ವದಕ್ಕೆ ಒಂದು ಅರ್ಥ ಭಾವ. ಸತ್-ಭಾವ ಹೇಳಿರೆ ಸಜ್ಜನಿಕೆ. ಇದು ಲೋಕಲ್ಲಿ ವ್ಯಕ್ತಿಗೊಕ್ಕೆ ಬಳಸುವ ಪದಪ್ರಯೋಗ. ಇದರ ಕರ್ಮಲ್ಲಿ ಬಳಸಿಯಪ್ಪಗ ಸತ್-ಕರ್ಮ ಆವ್ತು. ಹೀಂಗೆ ಸತ್ ಹೇಲ್ವ್ದು ಒಳ್ಳೆಯದು ಹೇಳ್ವ ಭಾವನೆಯ ಸೂಚಿಸಲೆ ಉಪಯೋಗಿಸಲ್ಪಡುತ್ತು. ಇನ್ನು ಸತ್ – ಸತ್ಯವಾದು, ಶ್ರೇಷ್ಠವಾದ್ದು, ಪರಮ ಉನ್ನತವಾದ್ದು – ಭಗವಂತ°. ಅವನ ಸ್ವಭಾವವ (ಗುಣವ) ಹೊಗಳಲೆ ಉಪಯೋಗುಸುವ ಪದ ‘ಸತ್’. ಓಂಕಾರ ವಾಚ್ಯ ಭಗವಂತಂಗೆ ಅರ್ಪಣಾ ಭಾವಂದ ಏವುದೇ ಫಲಾಪೇಕ್ಷೆ ಇಲ್ಲದ್ದೆ (ತತ್) ಮಾಡ್ವ ಕರ್ಮ – ‘ಸತ್-ಕರ್ಮ’. ಯಾವ ಕರ್ಮವ ಭಗವಂತನ ಕುರಿತಾಗಿ ಮಾಡುತ್ತದೋ, ಆ ಕರ್ಮ ಪ್ರಶಸ್ತವಾಗಿರೆಕು. ಸ್ವಾರ್ಥಕ್ಕಾಗಿ ಮಾಡುವ ಕರ್ಮ ಮೆಚ್ಚುಗೆಯ ಗಳುಸುತ್ತಿಲ್ಲೆ. ತ್ಯಾಗಂದ ಮಾಡುವ ಕರ್ಮ ಪ್ರಶಸ್ತ. ಈ ರೀತಿಯಾಗಿ ಪ್ರತಿಯೊಂದು ಹಂತಲ್ಲಿಯೂ ಅದರ ಭಾವವ ಅರ್ತು ಪಾಲನೆ ಮಾಡುವ ಪಾರ್ಥರಾಯೇಕು ಹೇಳಿ ಇಲ್ಲಿ ಭಗವಂತನ ಸಂದೇಶ. ಸತ್ ಹೇಳ್ವದು ಒಳ್ಳೆಯದರ ಸೂಚಿಸುಲೆ ಉಪಯೋಗುಸುವದು. ಏವುದು ಒಳ್ಳೆದು ಹೇಳಿ ಯೋಚಿಸಿರೆ ಸತ್ ಭಾವ ( ಸಾತ್ವಿಕತೆ), ಸಾಧುಭಾವ (ಒಳ್ಳೆಯ ಭಾವ) ಹಾಂಗೇ ಒಳ್ಳೆ ಕರ್ಮದ ಭಾವವ ಸೂಚಿಸಲೆ ಸತ್ ಹೇಳ್ವ ಶಬ್ದ ಪ್ರಯೋಗಮಾಡಲ್ಪಡುತ್ತು ಹೇಳ್ವ ವಿವರಣೆಯ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು. ಇನ್ನು ಇಲ್ಲಿ ಹೇಳಿದ ‘ಪ್ರಶಸ್ತೇ ಕರ್ಮಣಿ’ ಅರ್ಥಾತ್ ಪ್ರಶಸ್ತವಾದ ಕರ್ಮ ಹೇಳಿರೆ ವಿಧಿಸಿದ ಕರ್ತವ್ಯಂಗೊ ಹೇಳ್ವ ಅರ್ಥ. ವೇದ ಸಾಹಿತ್ಯಲ್ಲಿ ಹೇಳಿಪ್ಪ ವಿಧಿವಿಧಾನಂಗಳ ಅನುಸರುಸಿ ಮಾಡ್ವ ಕರ್ಮ. ಅದು ಸತ್-ಕರ್ಮ. ಈ ರೀತಿಯಾಗಿ ‘ಸತ್’ ಹೇಳ್ವ ಪದ ಆಧ್ಯಾತ್ಮಿಕ ಸ್ಥಿತಿಯ/ಸ್ವಭಾವವ ಸೂಚಿಸುತ್ತು. ಒಟ್ಟಿಲ್ಲಿ ಭಗವಂತನ ಅನುಸಂಧಾನಲ್ಲಿ, ಭಗವಂತನ ಸಂಪ್ರೀತಿಗೋಸ್ಕರವಾಗಿ ಫಲಾಸಕ್ತಿಯ ಬಿಟ್ಟು ಮಾಡ್ವ ಕರ್ಮ, ಭಾವ – ‘ಸತ್’.

ಶ್ಲೋಕ

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ ।
ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ ॥೨೭॥

ಪದವಿಭಾಗ

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸತ್ ಇತಿ ಚ ಉಚ್ಯತೇ । ಕರ್ಮ ಚ ಏವ ತತ್-ಅರ್ಥೀಯಮ್ ಸತ್ ಇತಿ ಏವ ಅಭಿಧೀಯತೇ ॥

ಅನ್ವಯ

ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸತ್ ಇತಿ ಚ ಉಚ್ಯತೇ । ತತ್-ಅರ್ಥೀಯಂ ಚ ಏವ ಕರ್ಮ ಸತ್ ಇತಿ ಏವ ಅಭಿಧೀಯತೇ ।

ಪ್ರತಿಪದಾರ್ಥ

ಯಜ್ಞೇ – ಯಜ್ಞಲ್ಲಿ, ತಪಸಿ – ತಪಸ್ಸಿಲ್ಲಿ, ದಾನೇ ಚ – ದಾನಲ್ಲಿಯೂ ಕೂಡ, ಸ್ಥಿತಿಃ – ಸ್ಥಿತಿ (ಸನ್ನಿವೇಶ), ಸತ್ ಇತಿ ಉಚ್ಯತೇ – ಸತ್ ಹೇಳಿ ಕೂಡ ಹೇಳಲ್ಪಡುತ್ತು, ತತ್-ಅರ್ಥೀಯಮ್ ಚ – ಅದಕ್ಕಾಗಿ ಉದ್ದೇಶಿತವಾದ್ದೂ (ಭಗವಂತಂಗಾಗಿ ಉದ್ಧೇಶಿತ) ಕೂಡ, ಏವ – ಖಂಡಿತವಾಗಿಯೂ, ಕರ್ಮ – ಕರ್ಮವು, ಸತ್ ಇತಿ ಏವ ಅಭಿಧೀಯತೇ – ಸತ್ ಹೇದು ಹೇಳಿಯೇ ಸೂಚಿಸಲ್ಪಡುತ್ತು.

ಅನ್ವಯಾರ್ಥ

ಯಜ್ಞ, ತಪ ದಾನ ನಿಷ್ಠೆಲಿಯೂ ಕೂಡ ಸತ್ ಹೇಳಿ ಉಪಯೋಗಿಸಲ್ಪಡುತ್ತು. ಭಗವಂತಂಗಾಗಿ ಆಚರುಸುವ ಕರ್ಮವೂ ಕೂಡ ‘ಸತ್’ ಹೇದು ಹೇಳಲಾವ್ತು.

ತಾತ್ಪರ್ಯ / ವಿವರಣೆ

ಸಾತ್ವಿಕತೆಯ ಸೂಚಿಸುವ ಸಂಬಂಧವಗಿಪ್ಪದೆಲ್ಲ ಸತ್ ಆಗಿರ್ತು ಹೇಳಿ ಭಗವಂತ° ಮದಲಾಣ ಶ್ಲೋಕಲ್ಲಿ ವಿವರಿಸಿದ್ದ. ಇಲ್ಲಿ ಭಗವದ್ ಸಂಬಂಧೀ ಎಲ್ಲ ವಿಷಯಂಗಳೂ ಸತ್ ಹೇಳಿ ತಿಳಿಯಲಾವ್ತು ಹೇಳಿ ವಿವರಿಸಿದ್ದ. ಯಜ್ಞ-ದಾನ-ತಪಸ್ಸುಗಳ ಸ್ಥಿತಿ ಅರ್ಥಾತ್ ಅನುಸಂಧಾನ ‘ಸತ್’, ಆ ಸ್ಥಿತಿಲಿ ಭಗವದರ್ಪಣಾಭಾವಂದ ಕೈಗೊಂಬ ಯಜ್ಞ ದಾನ ತಪಸ್ಸು ಕರ್ಮಂಗಳೂ ‘ಸತ್’. ‘ಸತ್’ ಹೇದರೆ ಸತ್ ಶಬ್ದವಾಚ್ಯನಾದ ಭಗವಂತನ ಯಜ್ಞ, ದಾನ, ತಪಸ್ಸಿಂದ ಆರಾಧಿಸುವದು. ಹೀಂಗಾಗಿ ಭಗವಂತ° ‘ಸತ್’, ಅವನ ಸಂಬಂಧೀ ಎಲ್ಲ ಕರ್ಮವೂ – ಸತ್ (ಸತ್ಕರ್ಮ). ಅವನ ಕುರಿತಾಗಿ ಕರ್ಮ ಮಾಡುವವನೂ ‘ಸತ್’ – ಸಜ್ಜನ. ಈ ರೀತಿಯಾಗಿ ಮೂಲ ‘ಸತ್’ ಆಗಿಪ್ಪ ಆ ಭಗವಂತನ ಎಚ್ಚರಂದ ಫಲಾಪೇಕ್ಷೆ ಇಲ್ಲದ್ದ ಭಗವದರ್ಪಣಾ ಭಾವಂದ ಮಾಡುವವನೂ ‘ಸತ್’, ಮಾಡುವ ಕರ್ಮವ ಕರ್ಮವೂ ‘ಸತ್’. ಸಚ್ಚಿದಾನಂದನ ಕುರಿತಾತಿ ಸದ್-ಭಾವಂದ ಸಜ್ಜನ ಮಾಡುವ ಕರ್ಮವೆಲ್ಲವೂ ‘ಸತ್’.

ಶ್ಲೋಕ

ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ ।
ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪೇತ್ಯ ನೋ ಇಹ ॥೨೮॥

ಪದವಿಭಾಗ

ಅಶ್ರದ್ಧಯಾ ಹುತಮ್ ದತ್ತಮ್ ತಪಃ ತಪ್ತಮ್ ಕೃತಮ್ ಚ ಯತ್ । ಅಸತ್ ಇತಿ ಉಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ ॥

ಅನ್ವಯ

ಹೇ ಪಾರ್ಥ!, ಅಶ್ರದ್ಧಯಾ ಹುತಂ ದತ್ತಮ್, ತಪಃ ತಪ್ತಮ್, ಯತ್ ಚ ಕೃತಮ್, ತತ್ ಅಸತ್ ಇತಿ ಉಚ್ಯತೇ । (ತತ್) ಪ್ರೇತ್ಯ ನ,  ಇಹ (ಅಪಿ) ಚ ನೋ (ಭವತಿ) ।

ಪ್ರತಿಪದಾರ್ಥ

ಹೇ ಪಾರ್ಥ! – ಏ ಪಾರ್ಥನೇ!, ಅಶ್ರದ್ಧಯಾ – ಶ್ರದ್ಧೆ ಇಲ್ಲದ್ದೆ, ಹುತಮ್ ದತ್ತಮ್ – ಯಜ್ಞಲ್ಲಿ ಹೋಮಿಸಿ ಕೊಟ್ಟದು, ತಪಃ ತಪ್ತಮ್ – ತಪಸ್ಸು ಆಚರಿಸಿದ್ದು, ಯತ್ ಚ ಕೃತಮ್ – ಏವುದೇ ಮಾಡಿದ್ದದೂ, ತತ್ – ಅದು, ಅಸತ್ – ಮಿಥ್ಯೆ (ಅಸತ್ಯ), ಇತಿ ಉಚ್ಯತೇ – ಹೇದು ಹೇಳಲ್ಪಡುತ್ತು, (ತತ್) ಪ್ರೇತ್ಯ ನ – ಅದು ಮರಣದ ಮತ್ತೆ ಇಲ್ಲೆ, ಇಹ (ಅಪಿ) ಈ ಲೋಕಲ್ಲಿ (ಜನ್ಮಲ್ಲಿ) ಕೂಡ,  ಚ – ಕೂಡ, ನೋ (ಫಲಪ್ರದಾ ಭವತಿ) – ಫಲಪ್ರದವಾವುತ್ತಿಲ್ಲೆ.

ಅನ್ವಯಾರ್ಥ

ಏ ಪಾರ್ಥ!, ಶ್ರದ್ಧೆಯಿಲ್ಲದ್ದೆ ಮಾಡಿದ ಯಜ್ಞ (ಯಜ್ಞದ ಮೂಲಕ ಅರ್ಪಿಸಿದ್ದು), ತಪಸ್ಸಾಚರಿಸಿದ್ದು, ಅಥವಾ ಏವುದೇ ಕರ್ಮ ಮಾಡಿದ್ದು ಅಸತ್ ಹೇದು ಆವುತ್ತು. ಅದರ ಅರ್ಪಿಸಿ ಈ ಜನ್ಮಲ್ಲಿ (ಲೋಕಲ್ಲಿ) ಫಲಪ್ರದವಾವ್ತಿಲ್ಲೆ (ಪ್ರಯೋಜನ ಇಲ್ಲೆ).

ತಾತ್ಪರ್ಯ / ವಿವರಣೆ

ಅಕೇರಿಗೆ ಅರ್ಜುನನ ಎಚ್ಚರಿಸಿ ಭಗವಂತ° ಹೇಳ್ತ – ಸತ್ ಆದ ಭಗವಂತನಲ್ಲಿ ಶ್ರದ್ಧೆ ಇಲ್ಲದ್ದೆ, ನಂಬಿಕೆ ಇಲ್ಲದ್ದೆ ಮಾಡಿದ ಯಜ್ಞ, ದಾನ, ತಪಸ್ಸು ಅಥವಾ ಏವುದೇ ಕರ್ಮವಾದರೂ ಅದು ಮಿಥ್ಯಾಚಾರ (ಅಸತ್ / ಸುಳ್ಳು) ಆವ್ತು.  ಆ ರೀತಿಯ ಕರ್ಮವ ಮಾಡಿ ಇಹಲ್ಲಿ ಅಥವಾ ಪರಲ್ಲಿ ಯಾವ ಪ್ರಯೋಜನವೂ ಆವ್ತಿಲ್ಲೆ. ಅದು ವ್ಯರ್ಥ ಕಾರ್ಯ.

ಯಜ್ಞವಾಗಲೀ, ದಾನವಾಗಲೀ, ತಪಸ್ಸಾಗಲೀ ಅಥವಾ ಭಗವಂತನ ಉದ್ಧೇಶಿಸಿ ಮಾಡುವ ಏವುದೇ ಕಾರ್ಯವಾಗಲಿ, ಅದರ್ಲಿ ಸಂಪೂರ್ಣ ವಿಶ್ವಾಸ, ನಂಬಿಕೆ, ಶ್ರದ್ಧೆ ಇರೆಕು. ಶ್ರದ್ಧೆಯಿಲ್ಲದ್ದೆ ಮಾಡುವ ಯಾವುದೇ ಕಾರ್ಯ ಫಲವ ನೀಡುತ್ತಿಲ್ಲೆ. ಎಲ್ಲವನ್ನೂ ಕೃಷ್ಣಪ್ರಜ್ಞೆಲಿ ಭಗವಂತನ ಸಂಪ್ರೀತಿಗಾಗಿ ಮಾಡೆಕು. ಅದರಿಂದ ಭಗವಂತ° ಸಂತುಷ್ಟನಾವುತ್ತ°, ನಮ್ಮ ಕಾಪಾಡುತ್ತ°. ಎಲ್ಲ ಶಾಸ್ತ್ರೋಕ್ತ ಕರ್ಮದ ಗುರಿ ಭಗವಂತನ ತಿಳಿವದು. ಭಗವಂತನ ತಿಳಿಯೇಕ್ಕಾರೆ ಮದಾಲು ಅವನಲ್ಲಿ ಸಂಪೂರ್ಣ ಶ್ರದ್ಧೆ ಇರೆಕು. ಯಾವುದೇ ಒಂದು ವಿಷಯವ ಸಮಗ್ರವಾಗಿ ಅರ್ಥ ಆಯೇಕ್ಕಾರೆ ಅದರ್ಲಿ ನಂಬಿಕೆ ಇದ್ದುಗೊಂಡು ಅನ್ವೇಷಣೆ ಮಾಡಿರೆ ಮಾಂತ್ರ ಅದಕ್ಕೆ ಸರಿಯಾದ ಪ್ರತಿಫಲ ಇಪ್ಪದು. ಇಲ್ಲದ್ರೆ ಆ ಕಾರ್ಯಲ್ಲಿ / ಯತ್ನಲ್ಲಿ ಗುರಿ ತಲುಪಲೆ ಎಡಿಯ. ವಿದ್ಯಾಭ್ಯಾಸ ಮಾಡುವಾಗ ವಿದ್ಯೆಲಿ ಶ್ರದ್ಧೆ ಬೇಕು, ಔಷಧ ಸೇವನೆ ಮಾಡುವಾಗ ಆ ಔಷಧಲ್ಲಿ ನಂಬಿಕೆ ಇರೆಕು, ವೈದ್ಯನತ್ರೆ ಹೋಪಗ ವೈದ್ಯನತ್ರೆ ನಂಬಿಕೆ ಬೇಕು, ಗುರುವಿನ ಬಳಿ ಹೋಪಗ ಗುರುವಿನತ್ರೆ ಶ್ರದ್ಧಾಭಕ್ತಿ ಇರೆಕು. ಇಲ್ಲದ್ರೆ ಯಾವ ಫಲವೂ ಸಿಕ್ಕುತ್ತಿಲ್ಲೆ. ಐಹಿಕ ವಿಷಯಲ್ಲೇ ಇಷ್ಟೊಂದು ಮಹತ್ವ ಇಪ್ಪಗ ಇನ್ನು ಪರಮೋನ್ನತನ ವಿಷಯಲ್ಲಿ ಶ್ರದ್ಧೆ ಹೇಂಗಿರೆಡ! ಹಾಂಗಾಗಿ ಭಗವಂತ° ಅರ್ಜುನನ ವಿಶೇಷವಾಗಿ ಪಾರ್ಥ ಹೇಳಿ ದೆನಿಗೊಂಡು ಶ್ರದ್ಧೆಂದ ಕೂಡಿ ಮಾಡುವ ಕರ್ಮ ಫಲ ನೀಡುತ್ತು, ಶ್ರದ್ಧೆ ಇಲ್ಲದ್ದೆ ಮಾಡುವ ಕರ್ಮಂದ ಯಾವ ಪ್ರಯೋಜನವೂ ಇಲ್ಲೆ, ಇಹ ಪರಲ್ಲಿಯೂ ಅದು ಫಲವ ನೀಡುತ್ತಿಲ್ಲೆ ಹೇದು ಹೇಳಿದಲ್ಯಂಗೆ –

 

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಶ್ರದ್ಧಾತ್ರಯವಿಭಾಗಯೋಗೋ ನಾಮ ಸಪ್ತದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಶ್ರದ್ಧಾತ್ರಯವಿಭಾಗಯೋಗಃ ಹೇಳ್ವ ಹದಿನೇಳನೇ ಅಧ್ಯಾಯ ಮುಗುದತ್ತು.

 

॥ ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

॥ ಶ್ರೀಕೃಷ್ಣಾರ್ಪಣಮಸ್ತು ॥

 

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 17 – SHLOKAS 11 – 28

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

ಇದೇ ಶ್ಲೋಕವ ಡಾ. ಬಾಲಮುರಳೀಕೃಷ್ಣ ಹಾಡಿದ್ದರ ಕೇಳ್ಳೆ –
Srimadbhagavadgeetha- chapter 17- shlokas 11 – 28 by DR. M. BALAMURALIKRISHNA
ಕೃಪೆ : www.sangeethamusic.com

 

 

4 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 17 – ಶ್ಲೋಕಂಗೊ 11 – 28

  1. “ಒಳ್ಳೆ ಜೆನ” ಅಪ್ಪದು ಹೇಂಗೆ? ಹೇಳಿ ಭಗವದ್ಗೀತೆ ಹೇಳಿ ಕೊಡ್ತು, ಅಪ್ಪೊ?
    ಉದಾಹರಣೆ ಕೊಟ್ಟು ತಾತ್ಪರ್ಯವ ಚೆಂದಕೆ ವಿವರುಸುತ್ತಿ ನಿಂಗ! ಧನ್ಯವಾದಂಗ.
    ಭಾವಾ, ನಿಂಗ ಸಕಲಜನಹಿತಕಾರಿ!!

    1. ಪ್ರತಿಸರ್ತಿ ಧನ್ಯವಾದ ಹೇದು ಇಲ್ಲಿ ಬರೆಯದ್ರೂ ಪ್ರತಿಯೊಬ್ಬನ ಒಪ್ಪಕ್ಕೂ ಪ್ರಪ್ರತ್ಯೇಕ ಹೃತ್ಪೂರ್ವಕ ಧನ್ಯವಾದಂಗೊ ಏವತ್ತೂ ಇದ್ದು. ಪ್ರತಿಯೊಂದು ಒಪ್ಪವನ್ನೂ ಓದಲಿದ್ದು ಮತ್ತು ಜವಬ್ದಾರಿಕೆಯ ಹೆಚ್ಚುಸುತ್ತು. ಹರೇ ರಾಮ.

  2. [ ‘ಸತ್’, ಅವನ ಸಂಬಂಧೀ ಎಲ್ಲ ಕರ್ಮವೂ – ಸತ್ (ಸತ್ಕರ್ಮ). ಅವನ ಕುರಿತಾಗಿ ಕರ್ಮ ಮಾಡುವವನೂ ‘ಸತ್’ – ಸಜ್ಜನ. ಈ ರೀತಿಯಾಗಿ ಮೂಲ ಸತ್ ಆಗಿಪ್ಪ ಆ ಭಗವಂತನ ಎಚ್ಚರಂದ ಫಲಾಪೇಕ್ಷೆ ಇಲ್ಲದ್ದ ಭಗವದರ್ಪಣಾ ಭಾವಂದ ಮಾಡುವವನೂ ಸತ್, ಮಾಡುವ ಕರ್ಮವ ಕರ್ಮವೂ ಸತ್. ಸಚ್ಚಿದಾನಂದನ ಕುರಿತಾತಿ ಸದ್-ಭಾವಂದ ಸಜ್ಜನ ಮಾಡುವ ಕರ್ಮವೆಲ್ಲವೂ ಸತ್.] ವಿವರಣೆ ತು೦ಬಾ ಲಾಯಕಕೆ ಬತ್ತಾ ಇದ್ದು.ಅನನ್ಯ;ಕೊಶಿಯಾತು ಬಾವ.ನಮಸ್ತೇ. ಧನ್ಯವಾದ೦ಗೊ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×