Oppanna.com

ಗರುಡ ಪುರಾಣ – ಅಧ್ಯಾಯ 03 – ಭಾಗ 02

ಬರದೋರು :   ಚೆನ್ನೈ ಬಾವ°    on   22/08/2013    4 ಒಪ್ಪಂಗೊ

ಚೆನ್ನೈ ಬಾವ°

ಬಹುಭಯಂಕರನಾಗಿ ಕಾಂಬ ಯಮನ ನೋಡಿ ಪಾಪಾತ್ಮ ಹತಾಶನಾಗಿ ಕಿರುಚಾಡ್ಳೆ ಸುರುಮಾಡುವಾಗ ಚಿತ್ರಗುಪ್ತನ ಮಾತುಗಳ ಕೇಳಿ ಹೇಡಿಪುಕ್ಕ ಕಳ್ಳನ ಹಾಂಗೆ ನಿಶ್ಚಲನಾವ್ತ°. ಅವನ ಯಮದೂತರು ಜೆಪ್ಪಿ ಬಳ್ಳಿಲಿ ಕಟ್ಟಿ ಬಿಗುದು ಭಯಂಕರ ನರಕದ ಕಡೇಂಗೆ ಕೊಂಡೋವ್ತವು ಹೇಳಿ ಕಳುದವಾರ ಓದಿದ್ದು. ಮುಂದೆ –
 
ಗರುಡ ಪುರಾಣ     –    ಅಧ್ಯಾಯ 3  – ಭಾಗ 2
 
ತತ್ರ ವೃಕ್ಷೋ ಮಹಾನೇಕೋ ಜ್ವಲದಗ್ನಿಸಮಪ್ರಭಃ ।
ಪಂಚಯೋಜನವಿಸ್ತೀರ್ಣ ಏಕಯೋಜನಮುಚ್ಛ್ರಿತಃ ॥೩೪॥
ಅಲ್ಲಿ ದೊಡ್ಡಾ ಒಂದು ಮರ ಇದ್ದು. ಅದು ಹೊತ್ತಿಗೊಂಡಿಪ್ಪ ಕಿಚ್ಚಿನಾಂಗೆ ಕಾಂತಿಯುಕ್ತವಾಗಿದ್ದು. ಅದರ ವಿಸ್ತೀರ್ಣ ಐದು ಯೋಜನ ಅಪ್ಪಷ್ಟು. ಅದರ ಎತ್ತರ ಒಂದು ಯೋಜನದಷ್ಟು ಆಗಿದ್ದು.
ತದ್ವೃಕ್ಷೇ ಶೃಂಖಲೈರ್ಬದ್ಧ್ವಾsದೋಮುಖಂ ತಾಡಯಂತಿ ತೇ ।Garuda purana
ರುದಂತಿ ಜ್ವಲಿತಾಸ್ತತ್ರ ತೇಷಾಂ ತ್ರಾತಾ ನ ವಿದ್ಯತೇ ॥೩೫॥
ಆ ಮರಕ್ಕೆ ಪಾಪಿಗಳ ತಲೆಕೆಳಾಗಿ ಸಂಕಲೆಂದ ಕಟ್ಟಿ ಅವ್ವು ಜೆಪ್ಪುತ್ತವು. ಅಲ್ಲಿ ಬೆಂದು ಶೋಕುಸುವ ಅವನ ರಕ್ಷಿಸಲೆ ಆರೂ ಇಲ್ಲೆ.
ತಸ್ಮಿನ್ವೈ ಶಾಲ್ಮಲೀವೃಕ್ಷೇ ಲಂಬಂತೇsನೇಕಪಾಪಿನಃ ।
ಕ್ಷುತ್ಪಿಪಾಸಾಪರಿಶ್ರಾಂತಾ ಯಮದೂತೈಶ್ಚ ತಾಡಿತಾಃ ॥
ಆ ರೇಷ್ಮೆಹತ್ತಿಯ ಮರಲ್ಲಿ ಅನೇಕ ಪಾಪಿಗೊ, ಹಶು ಆಸರಂದ ಬಳಲಿಗೊಂಡು, ಯಮದೂತರಿಂದ ಬಡುಶಿಗೊಂಡು ತೂಗ್ಯೊಂಡಿರುತ್ತವು.
ಕ್ಷಮಧ್ವಂ ಭೋsಪರಾಧಂ ಮೇ ಕೃತಾಂಜಲಿಪುಟಾ ಇತಿ ।
ವಿಜ್ಞಾಪಯಂತಿ ತಾನ್ ದೂತಾನ್ ಪಾಪಿಷ್ಠಾಸ್ತೇ ನಿರಾಶ್ರಯಾಃ ॥೩೭॥
ನಿರಾಶ್ರಯಿಗಳಾದ ಆ ಪಾಪಿಗೊ ಕೈಜೋಡಿಸ್ಯೊಂಡು ಯಮದೂತರತ್ರೆ “ಓಯ್, ಎನ್ನ ಅಪರಾಧಂಗಳ ಕ್ಷಮಿಸಿಕ್ಕಿ” ಹೇದು ವಿನಂತಿ ಮಾಡುತ್ತವು.
ಪುನಃಪುನಃಶ್ಚ ತೇ ದೂತೈರ್ಹನ್ಯಂತೇ ಲೋಹಯಷ್ಟಿಭಿಃ ।
ಮುದ್ಗರೈಸೋಮರೈಃ ಕುಂತೈರ್ಗದಾಭಿರ್ಮುಸಲೈರ್ಭೃಶಮ್ ॥೩೮॥
ಮತ್ತೆ ಮತ್ತೆ ಆ ಯಮದೂತರಿಂದ ಲೋಹದ ಬಡಿಗೆಲಿ, ಸುತ್ತಿಗೆ, ಈಟಿ, ಭರ್ಜಿ, ಗದೆ, ಒನಕೆಗಳಿಂದ ಬಡುಶಿಗೊಳ್ತವು.
ತಾಡನಾಚ್ಚೈವ ನಿಶ್ಚೇಷ್ಟಾ ಮೂರ್ಚಿತಾಶ್ಚ ಭವಂತಿ ತೇ ।
ತಥಾ ನಿಶ್ಚೇಷ್ಟಿತಾನ್ದೃಷ್ಟ್ವಾ ಕಿಂಕರಸ್ತೇ ವದಂತಿ ಹಿ ॥೩೯॥
ಹಾಂಗೆ ಬಡಿತ್ತರಿಂದಲಾಗಿ ಮೂರ್ಛಿತರಾಗಿ ನಿಶ್ಚೇಷ್ಟಿತರಾವುತ್ತವು. ಅಷ್ಟಪ್ಪಗ ನಿಶ್ಚೇಷ್ಟಿತರಾದ ಅವರ ನೋಡಿ ಯಮಕಿಂಕರರುಗೊ ಹೀಂಗೆ ಹೇಳುತ್ತವು –
ಭೋಃ ಭೋಃ ಪಾಪಾ ದುರಾಚಾರಾಃ ಕಿಮರ್ಥಂ ದುಷ್ಟಚೇಷ್ಟಿತಮ್ ।
ಸುಲಭಾನಿ ನ ದತ್ತಾನಿ ಕಲಾನ್ಯನ್ನಾನ್ಯಪಿ ಕ್ವಚಿತ್ ॥೪೦॥   
“ಏಯಿ ಪಾಪಿಗಳೇ!, ದುರಾಚಾರಿಗಳೇ (ಕೆಟ್ಟ ನಡತೆಯೋರೇ), ಬೇಡಂಗಟ್ಟೆ ಕೆಲಸಂಗಳ ಎಂತಕೆ ಮಾಡುತ್ತಿ? ಅಶನ, ನೀರು ಮುಂತಾದ ಸುಲಭವಾದ ವಸ್ತುಗಳ ನಿಂಗೊ ಎಂತಕೆ ಏವತ್ತೂ ದಾನ ಕೊಟ್ಟಿದ್ದಿಲ್ಲಿ?
ಗ್ರಾಸಾರ್ಧಮಪಿ ನೋ ದತ್ತಂ ನ ಶ್ವವಾಯಸಯೋರ್ಬಲಿಮ್ ।
ನಮಸ್ಕೃತಾ ನಾತಿಥಯೋ ನ ಕೃತಂ ಪಿತೃತರ್ಪಣಮ್ ॥೪೧॥
ಅರ್ಧ ತುತ್ತು ಆಹಾರವನ್ನೂ ನಾಯಿ, ಕಾಕೆಗೊಕ್ಕೆ ಕೊಟ್ಟಿದ್ದಿಲ್ಲಿ, ಅತಿಥಿಗೊಕ್ಕೆ ನಮಸ್ಕರಿಸಿದ್ದಿಲ್ಲಿ, ಪಿತೃತರ್ಪಣವನ್ನೂ ಮಾಡಿದ್ದಿಲ್ಲಿ.
ಯಮಸ್ಯ ಚಿತ್ರಗುಪ್ತಸ್ಯ ನ ಕೃತಂ ಧ್ಯಾನಮುತ್ತಮಮ್ ।
ನ ಜಪ್ತಶ್ಚ ತಯೋರ್ಮಂತ್ರೋ ನ ಭವೇದ್ಯೇನ ಯಾತನಾ ॥೪೨॥
ಯಮನ ಮತ್ತೆ ಚಿತ್ರಗುಪ್ತನ ಉತ್ತಮವಾದ ದ್ಯಾನವನೂ ಮಾಡಿದ್ದಿಲ್ಲಿ, ಯಾವ ಮಂತ್ರಂದ ಈ ಯಾತನೆಗೊ ಉಂಟಾವ್ತಿಲ್ಲೆಯೋ ಅಂತಹ ಅವರ ಮಂತ್ರವನ್ನೂ ಜಪಿಸಿದ್ದಿಲ್ಲಿ
ನಾಪಿ ಕಿಂಚಿತ್ಕೃತಂ ತೀರ್ಥಂ ಪೂಜಿತಾ ನೈವ ದೇವತಾ ।
ಗೃಹಾಶ್ರಮಸ್ಥಿತೇ ನಾಪಿ ಹಂತಕಾರೋsಪಿ ನೋ ಧೃತಾಃ ॥೪೩॥
ರಜಾರೂ ತೀರ್ಥಯಾತ್ರೆ ಮಾಡಿದ್ದಿಲ್ಲಿ, ದೇವತೆಗಳ ಪೂಜಿಸಿದ್ದಿಲ್ಲಿ, ಗೃಹಸ್ಥಾಶ್ರಮಲ್ಲಿದ್ದುಗೊಂಡು ಅನ್ನದಾನವನ್ನೂ ಮಾಡಿದ್ದಿಲ್ಲಿ.
[ಇಲ್ಲಿ ‘ಹಂತಕಾರ’ ಹೇಳಿರೆ, ಭೋಜನಂದ ಮದಲು ಮಡಿಲಿ ವೈಶ್ವದೇವ ಬಲಿ , ಪಂಚಬಲಿ ವಿಧಿ. ಪಂಚಬಲಿಲಿ ದನ, ನಾಯಿ, ಕಾಕೆ, ಕ್ರಿಮಿ-ಕೀಟ (ಎರುಗು ಇತ್ಯಾದಿ) ಹಾಂಗೂ ಅತಿಥಿದೇವಂಗೆ ಭೋಜನದ ಸ್ವಲ್ಪ ಅಂಶವ ಕೊಡ್ತ (ಕೊಡುವ/ಮಡುಗುವ/ತೆಗದು ಮಡುಗುವ) ಕ್ರಮ. ಎಲ್ಲಿ ವೈಶ್ವದೇವಬಲಿ ಅಸಾಧ್ಯವೋ ಅಲ್ಲಿ ಹೆಮ್ಮಕ್ಕೊ ಅಗ್ನಿಗೆ ಅಶನದ ಆಹುತಿ ನೀಡಿ ಗೋವು, ನಾಯಿ, ಕಾಕೆ ಇತ್ಯಾದಿಗೊಕ್ಕೆ ಭೋಜನ ಸಾಮಾಗ್ರಿಗಳ ಕೊಡುತ್ತ/ತೆಗದು ಮಡುಗುತ್ತ ಕ್ರಮ]
ಶುಶ್ರೂಷಿತಾಶ್ಚ ನೋ ಸಂತೋ ಭುಂಕ್ಷ್ವ ಪಾಪಫಲಂ ಸ್ವಕಮ್ ।
ಯತಸ್ತ್ವಂ ಧರ್ಮಹೀನೋsಸಿ ತತಃ ಸಂತಾಡ್ಯಸೇ ಭೃಶಮ್ ॥೪೪॥
ನೀನು ಸಂತರ ಶುಶ್ರೂಷೆ ಮಾಡಿದ್ದಿಲ್ಲೆ, ನೀನು ಮಾಡಿದ ಪಾಪದ ಫಲವ ಅನುಭವುಸು. ನೀನು ಧರ್ಮಹೀನನಾಗಿಪ್ಪದರಿಂದ ನಿನ್ನ ಬಡಿತ್ತೆಯೋ°
ಕ್ಷಮಾಪರಾಧಂ ಕುರುತೇ ಭಗವಾನ್ಹರಿರೀಶ್ವರಃ ।
ವಯಂ ತು ಸಾಪರಾಧಾನಾಂ ದಂಡದಾ ಹಿ ತದಾಜ್ಞಯಾ ॥೪೫॥
ಭಗವಂತನಾದ ಹರಿಯಾದ ಈಶ್ವರ° ನಿನ್ನ ತಪ್ಪುಗಳ ಕ್ಷಮಿಸುಗು. ಎಂಗಾದರೋ ಅವನ ಆಜ್ಞೆಗೆ ಅನುಸಾರವಾಗಿ ಅಪರಾಧಿಗೊಕ್ಕೆ ಶಿಕ್ಷೆ ಕೊಡುತ್ತೆಯೋ°”.
ಏವಮುಕ್ತ್ವಾ ಚ ತೇ ದೊತಾ ನಿರ್ದಯಂ ತಾಡಯಂತಿ ತಾನ್ ।
ಜ್ವಲದಂಗಾರಸದೃಶಾಃ ಪತಿತಾಸ್ತಾಡನಾದಧಃ ॥೪೬॥
ಹೀಂಗೆ ಹೇಳಿಗೊಂಡು ಆ ಯಮದೂತರುಗೊ ನಿರ್ದಯವಾಗಿ ಆ ಪಾಪಿಗೊಕ್ಕೆ ಜೆಪ್ಪುತ್ತವು. ಆ ಪೆಟ್ಟಿಂದ ಅವು ಹೊತ್ತಿಯೊಂಡಿಪ್ಪ ಕೆಂಡದ ಹಾಂಗೆ ಕೆಳ ಬೀಳುತ್ತವು.
ಪತನಾತ್ತಸ್ಯ ಪತ್ರೈಶ್ಚ ಗಾತ್ರಚ್ಛೇದೋ ಭವೇತ್ತತಃ ।
ತಾನಧಃ ಪತಿತಾನ್ ಶ್ವಾನೋ ಭಕ್ಷಯಂತಿ ರುದಂತಿ ತೇ ॥೪೭॥
ಕೆಳ ಬೀಳುವಾಗ, ಆ ಮರದ ಎಲೆಗಳಿಂದ ಆ ಪಾಪಿಯ ಶರೀರವು ಛೇದಿತವಾವ್ತು. ಕೆಳಬಿದ್ದ ಅವರ ನಾಯಿಗೊ ತಿಂತವು. ಅಷ್ಟಪ್ಪಗ ಅವು ಕೂಗುತ್ತವು.
ರುದಂತಸ್ತೇ ತತೋ ದೂತೈರ್ಮುಖಮಾಪೂರ್ಯ ರೇಣುಭಿಃ ।
ನಿಬದ್ಧ್ಯ ವಿವಿಧೈಃ ಪಾಶೈರ್ಹನ್ಯಂತೇ ಕೇsಪಿ ಮುದ್ಗರೈಃ ॥೪೮॥
ಅಷ್ಟಪ್ಪಗ ಅಲ್ಲಿಪ್ಪ ಯಮದೂತರಿಂದ ಕೂಗುವ ಆ ಪಾಪಿಗಳ ಬಾಯಿತುಂಬ ಧೂಳು ತುಂಬಲ್ಪಡುತ್ತು. ನಾನಾ ಪ್ರಕಾರದ ಪಾಶಂಗಳಿಂದ ಬಂಧಿಸಿ ಕೆಲವರ ಸುತ್ತಿಗೆಂದ ಬಡಿಯಲ್ಪಡುತ್ತು.
ಪಾಪಿನಃ ಕೇsಪಿ ಭಿದ್ಯಂತೇ ಕ್ರಕಚೈಃ ಕಾಷ್ಠವದ್ವಿಧಾ ।
ಕ್ಷಿಪ್ತ್ವಾ ಚಾನ್ಯೇ ಧರಾಪೃಷ್ಠೇ ಕುಠಾರೈಃ ಖಂಡಶಃ ಕೃತಾಃ ॥೪೯॥
ಕೆಲವು ಪಾಪಿಗಳ ಗರಗಸಂದ ಮರತುಂಡಿನ ಕತ್ತರುಸುವ ರೀತಿಲಿ ಎರಡು ತುಂಡಾಗಿ ಕತ್ತರುಸುತ್ತವು. ಮತ್ತೆ ಕೆಲವರ ಭೂಮಿಯ ಮೇಗೆ ಇಡ್ಕಿ ಕೊಡಲಿಂದ ತುಂಡು ತುಂಡಾಗಿ ಕೊಚ್ಚುತ್ತವು.
ಅರ್ಧಂ ಖಾತ್ವಾsವಟೇ ಕೇಚಿದ್ಭಿದ್ಯಂತೇ ಮೂರ್ಧ್ನಿ ಸಾಯಕೈಃ ।
ಅಪರೇ ಯಂತ್ರಮಧ್ಯಸ್ಥಾಃ ಪೀಡ್ಯಂತೇ ಚೇಕ್ಷುದಂಡವತ್ ॥೫೦॥
ಕೆಲವರ ಅರ್ಧದೇಹವ ಹಳ್ಳಲ್ಲಿ ಹೂದು ಅವರ ಮಸ್ತಕವ ಚೂಪಾದ ಬಾಣಂಗಳಿಂದ ಕುತ್ತುತ್ತವು. ಕೆಲವರ ಯಂತ್ರದ ಮಧ್ಯಲ್ಲಿ ಹಾಕಿದ ಕಬ್ಬಿನ ತುಂಡಿನ ರೀತಿಲಿ ಹಿಂಡುತ್ತವು.
ಕೇಚಿತ್ಪ್ರಜ್ವಲಮಾನೈಸ್ತು ಸಾಂಗಾರೈಃ ಪರಿತೋ ಭೃಶಮ್ ।
ಉಲ್ಮು ಕೈರ್ವೇಷ್ಟಯಿತ್ವಾ ಚ ಧ್ಮ್ಯಾಯಂತೇ ಲೋಹಪಿಂಡವತ್ ॥೫೧॥
ಕೆಲವರ ಪ್ರಜ್ವಲುಸುವ ಕೆಂಡಂಗಳಿಂದ ಬಹಳವಾಗಿ ಹೊತ್ತಿ ಉರಿವ ಮುಷ್ಟಗೆ ಹೊದುಶಿ ಲೋಹದ ಅದುರಿನ ಹಾಂಗೆ ಕರಗುಸುತ್ತವು.
ಕೇಚಿದ್ಭ್ರತಮಯೇ ಪಾಕೇ ತೈಲಪಾಕೇ ತಥಾ ಪರೇ ।
ಕಟಾಹಕ್ಷಿಪ್ತವಟವತ್ಪ್ರಕ್ಷಿಪ್ಯಂತೇ ಯತಸ್ತತಃ ॥೫೨॥
ಕೆಲವರ ತುಪ್ಪದ ಪಾಕಲ್ಲಿಯೂ, ಕೆಲವರ ಎಣ್ಣೆಯ ಪಾಕಲ್ಲಿಯೂ ಅದ್ದಿ ಕಾದ ಎಣ್ಣೆಯ ಕೊಪ್ಪರಿಗೆಲಿ ಇಡ್ಕಿ ವಡೆ ತಿರುಗುಸುತ್ತಾಂಗೆ ತಿರುಗುಸುತ್ತವು.
ಕೇಚಿನ್ಮತ್ತ ಗಜೇಂದ್ರಾಣಾಂ ಕ್ಷಿಪ್ಯಂತೇ ಪುರತಃ ಪಥಿ ।
ಬದ್ಧ್ವಾ ಹಸ್ತೌ ಚ ಪಾದೌ ಚ ಕ್ರಿಯಂತೇ ಕೇsಪ್ಯಧೋಮುಖಾಃ ॥೫೩॥
ಕೆಲವರ ಮದ್ದಾನೆಗಳ ಮುಂದೆ ದಾರಿಲಿ ಇಡ್ಕುತ್ತವು. ಕೆಲವರ ಕೈ ಮತ್ತೆ ಕಾಲ ಕಟ್ಟಿ ತಲೆಕೆಳವಾಗಿ ತೂಗುತ್ತವು.
ಕ್ಷಿಪ್ಯಂತೇ ಕೇsಪಿ ಕೂಪೇಷು ಪಾತ್ಯಂತೇ ಕೇsಪಿ ಪರ್ವತಾತ್ ।
ನಿಮಗ್ನಾಃ ಕೃಮಿಕುಂಡೇಷು ತುದ್ಯಂತೇ ಕೃಮಿಭಿಃ ಪರೇ ॥೫೪॥
ಕೆಲವರ ಬಾವಿಗೆ ಇಡ್ಕುತ್ತವು. ಕೆಲವರ ಪರ್ವತಂಗಳ ಮೇಗಂದ ಹೊರಳುಸುತ್ತವು. ಕೆಲವರ ಹುಳುಹುಪ್ಪಟೆಗೊ ತುಂಬಿದ ಕುಂಡಲ್ಲಿ ಮುಳುಗುಸುತ್ತವು. ಅವು ಕ್ರಿಮಿಗಳಿಂದ ಕಚ್ಚಲ್ಪಡುತ್ತವು.
ವಜ್ರತುಂಡೈರ್ಮಹಾಕಾಕೈರ್ಗೃಧ್ರೈರಾಮಿಷಗೃಧ್ನುಭಿಃ ।
ನಿಷ್ಕುಷ್ಯಂತೇ ಶಿರೋದೇಶೇ ನೇತ್ರೇ ವಾಸ್ಯೇ ಚ ಚುಂಚುಭಿಃ ॥೫೫॥
ವಜ್ರದಾಂಗೆ ಕೊಕ್ಕಿಪ್ಪ ದೊಡ್ಡ ಕಾಕೆಗೊ, ಮಾಂಸ ಭಕ್ಷಿಗಳಾದ ಮತ್ತೆ ತಿಂಬಲೆ ಕಾತರುಸುವ ಹದ್ದುಗೊ, ಆ ಪಾಪಿಯ ತಲೆಮೇಲ್ಕಟೆ, ಕಣ್ಣು, ಮೋರೆಗಳಲ್ಲಿ ತಮ್ಮ ಕೊಕ್ಕುಗಳಿಂದ ಕುತ್ತಿ ಕುತ್ತಿ ಕೀಳುತ್ತವು.
ಋಣಂ ವೈ ಪ್ರಾರ್ಥಯಂತ್ಯನ್ಯೇ ದೇಹಿ ದೇಹಿ ಧನಂ ಮಮ ।
ಯಮಲೋಕೇ ಮಯಾ ದೃಷ್ಟೋ ಧನಂ ಮೇ ಭಕ್ಷಿತಂ ತ್ವಯಾ ॥೫೬॥
“ಎನ್ನ ಪೈಸೆಯ ಕೊಡು., ಕೊಡು, ಯಮಲೋಕಲ್ಲಿ ಈಗ ನಿನ್ನ ನೋಡಲ್ಪಟ್ಟತ್ತು, ನಿನ್ನಿಂದ ಎನ್ನ ಪೈಸೆ ತಿಂದಾಕಲ್ಪಟ್ಟತ್ತು”
ಏವಂ ವಿವದಮಾನಾನಾಂ ಪಾಪಿನಾಂ ನರಕಾಲಯೇ ।
ಛಿತ್ತ್ವಾಸಂದಂಶಕೈರ್ದೂತಾ ಮಾಂಸಖಂಡಾಂದದಂತಿ ಚ ॥೫೭॥
ಈ ರೀತಿ ನರಕಾಲಯಲ್ಲಿ ಪಾಪಿಗೊ ಲಡಾಯಿಮಾಡ್ಯೊಂಡಿಪ್ಪಗ ಯಮದೂತರು ಚಿಮಿಟಿಂದ ಸಾಲಗಾರನ ಮಾಂಸಖಂಡಂಗಳ ಕತ್ತರುಸಿ ಸಾಲಕೊಟ್ಟವಂಗೆ ಕೊಡುತ್ತವು.
ಏವಂ ಸಂತಾಡ್ಯ ತಾನ್ದೂತಾಃ ಸಂಕೃಷ್ಯ ಯಮಶಾಸನಾತ್ ।
ತಾಮಿಸ್ರಾದಿಷು ಘೋರೇಷು ಕ್ಷಿಪ್ಯಂತೇ ನರಕೇಷು ಚ ॥೫೮॥
ಈ ರೀತಿ ಯಮದೂತರು ಅವರ ಬಡುದು ಯಮನ ಆಜ್ಞೆಯ ಪ್ರಕಾರ ಅವರ ಎಳಕ್ಕೊಂಡು ಹೋಗಿ ತಾಮಿಸ್ರ ಮೊದಲಾದ ಘೋರವಾದ ನರಕಂಗಳಲ್ಲಿ ಹಾಕುತ್ತವು.
ನರಕಾ ದುಃಖಬಹುಲಾಸ್ತತ್ರ ವೃಕ್ಷ ಸಮೀಪತಃ ।
ತೇಷ್ವಸ್ತಿ ಯನ್ಮಹದ್ದುಃಖಂ ತದ್ವಾಚಾಮಪ್ಯಗೋಚರಮ್ ॥೫೯॥
ಮರದ ಹತ್ರೆ ಬಹು ದುಃಖಂಗಳಿಂದ ತುಂಬಿಪ್ಪ ನರಕಂಗೊ ಇದ್ದು. ಅಲ್ಲಿ ಯಾವ ಮಹಾ ದುಃಖ ಇದ್ದೋ ಅದರ ಮಾತಿಲ್ಲಿ ಹೇಳ್ಳೆ ಎಡಿಯಾ.
ಚತುರಶೀತಿಲಕ್ಷಾಣಿ ನರಕಾಃ ಸಂತಿ ಖೇಚರ ।
ತೇಷಾಂ ಮಧ್ಯೇ ಘೋರತಮಾ ಧೌರೇಯಾಸ್ತ್ವೇಕವಿಂಶತಿಃ ॥೬೦॥
ಎಲೈ ಗರುಡನೇ!, ಒಟ್ಟು ಎಂಬತ್ತನಾಲ್ಕು ಲಕ್ಷ ನರಕಂಗೊ ಇದ್ದು. ಅವುಗಳಲ್ಲಿ ಅತಿ ಘೋರವಾದ ಇಪ್ಪತ್ತೊಂದು ನರಕಂಗೊ ಮುಖ್ಯವಾದವುಗೊ.
ತಾಮಿಸ್ರೋ ಲೋಹಶಂಕುಶ್ಚ ಮಹಾರೌರವಶಾಲ್ಮಲೀ ।
ರೌರವಃ ಕುಡ್ಮಲಃ ಕಾಲಸೂತ್ರಕಃ ಪೂತಿಮೃತ್ತಿಕಃ ॥೬೧॥
ತಾಮಿಸ್ರ, ಲೋಹಶಂಕು, ಮಹಾರೌರವ, ಶಾಲ್ಮಲೀ, ರೌರವ, ಕುಡ್ಮಲ, ಕಾಲಸೂತ್ರಕ, ಪೂತಿಮೃತ್ತಿಕ,
ಸಂಘಾತೋ ಲೋಹಿತೋದಶ್ಚ ಸವಿಷಃ ಸಂಪ್ರತಾಪನಃ ।
ಮಹಾನಿರಯಕಾಕೋಲೌ ಸಂಜೀವನಮಹಾಪಥೌ ॥೬೨॥
ಸಂಘಾತ, ಲೋಹಿತೋದ, ಸವಿಷ, ಸಂಪ್ರತಾಪನ, ಮಹಾನಿರಯ, ಕಾಕೋಲ, ಸಂಜೀವನ, ಮಹಾಪಥಿ,
ಅವೀಚಿರಂಧತಾಮಿಸ್ರಃ ಕುಂಭೀಪಾಕಸ್ತಥೈವ ಚ ।
ಸಂಪ್ರತಾಪನನಾಮೈಕಸ್ತಪನೆಸ್ತ್ವೇಕವಿಂಶತಿಃ ॥೬೩॥
ಅವೀಚಿ, ಅಂಧತಾಮಿಸ್ರ, ಕುಂಭೀಪಾಕ, ಸಂಪ್ರತಾಪನ ಮತ್ತೆ ತಪನ- ಈ ಇಪ್ಪತ್ತೊಂದು ನರಕಂಗೊ.
ನಾನಾಪೀಡಾಮಯಾಃ ಸರ್ವೇ ನಾನಾಭೇದೈಃ ಪ್ರಕಲ್ಪಿತಾಃ ।
ನಾನಾಪಾಕವಿಪಾಕಶ್ಚ ಕಿಂಕರೌಘೈರಧಿಷ್ಠಿತಾಃ ॥೬೪॥
ಈ ಎಲ್ಲ ನರಕಂಗಳೂ ಅನೇಕ ರೀತಿಯ ಯಾತನೆಗಳಿಂದ ತುಂಬಿದ್ದು. ಅವುಗೊ ಅನೇಕ ಭಾಗಂಗಳಾಗಿ ಮಾಡಲ್ಪಟ್ಟಿದು. ಅಲ್ಲಿ ನಾನಾ ರೀತಿಯ ಪಾಪಂಗೊಕ್ಕೆ ತಕ್ಕ ಫಲಂಗಳ ಅನುಭವುಸೆಕು. ಯಮಕಿಂಕರರುಗೊ ಅದರಲ್ಲಿದ್ದವು (ಅಲ್ಲಿದ್ದವು).
ಏತೇಷು ಪತಿತಾ ಮೂಢಾಃ ಪಾಪಿಷ್ಠಾ ಧರ್ಮವರ್ಜಿತಾಃ ।
ತತ್ರ ಭುಂಜಂತಿ ಕಲ್ಪಾಂತೇ ತಾಸ್ತಾ ನರಕಯಾತನಾಃ ॥೬೫॥
ಇವುಗಳಲ್ಲಿ ಬಿದ್ದ ಪಾಪಿಗಳಾದ ಮೂಢರು, ಧರ್ಮವ ಬಿಟ್ಟವು, ಅಲ್ಲಿ ಕಲ್ಪದ ಅಂತ್ಯದವರೇಂಗೆ ಆಯಾ ನರಕಯಾತನೆಗಳ ಅನುಭವುಸುತ್ತವು.
ಯಾಸ್ತಾಮಿಸ್ರಾಂಧತಾಮಿಸ್ರಾ ರೌರವಾದ್ಯಶ್ಚ ಯಾತನಾಃ ।
ಭುಂಕ್ತೇ ನರೋ ವಾ ನಾರೀ ವಾ ಮಿಥಃ ಸಂಗೇನ ನಿರ್ಮಿತಾಃ ॥೬೬॥
ತಾಮಿಸ್ರ, ಅಂಧತಾಮಿಸ್ರ, ರೌರವಾದಿ ನರಕಂಗಳ ಯಾತನೆಗಳ ಯಾವ ಪುರುಷ° ಅಥವಾ ಸ್ತ್ರೀ ಅನುಭವುಸುತ್ತವೋ, ಅದರ ಪಾಪಪೂರಿತವಾದ ಪರಸ್ಪರ ಸಂಯೋಗಂದಲೇ (ಕಾಮಲೋಲುಪತೆಂದ) ಪಡೆದಿರುತ್ತವು.
ಏವಂ ಕುಟುಂಬಂ ಬಿಭ್ರಾಣ ಉದರಂಭರ ಏವ ವಾ ।
ವಿಸೃಜ್ಯೇಹೋಭಯಂ ಪ್ರೇತ್ಯ ಭುಂಕ್ತೇ ತತ್ಫಲಮೀದೃಶಮ್ ॥೬೭॥
ಈ ರೀತಿ ತನ್ನ ಕುಟುಂಬವ ಪಾಲುಸುವಂವ ಮತ್ತೆ ಉದರ ಪೋಷಣೆ ಮಾಡುವಂವ ಇವರೆಡನ್ನೂ ಬಿಟ್ಟು ಪರಲೋಕಕ್ಕೆ ಹೋಗಿ ಈ ರೀತಿಯಾಗಿ ಅದರ ಫಲವ ಅನುಭವುಸುತ್ತ°.
ಏಕಃ ಪ್ರಪದ್ಯಂತೇ ಧ್ವಾಂತಂ ಹಿತ್ವೇದಂ ಸ್ವಂ ಕಲೇವರಮ್ ।
ಕುಶಲೇತರಪಾಥೇಯೋ ಭೂತದ್ರೋಹೇಣ ಯದ್ಭೃತಮ್ ॥೬೮॥
ಅಂವ ತನ್ನ ಸ್ಥೂಲ ಶರೀರವ ಬಿಟ್ಟಿಕ್ಕಿ, ಇತರರಿಂಗೆ ಮಾಡಿದ ದ್ರೋಹಂದ ಉಂಟಾದ ಪಾಪದ ಬುತ್ತಿಯೊಟ್ಟಿಂಗೆ ಅಂಧಕಾರಪೂರ್ಣವಾದ ನರಕಲ್ಲಿ ತಾನೋಬ್ಬನೇ ಬೀಳುತ್ತ°.
ದೈವೇಸನಾಸಾದಿತಂ ಸತ್ಯ ಶಮಲೇ ನಿರಯೇ ಪುಮಾನ್ ।
ಭುಂಕ್ತೇ ಕುಟುಂಬಪೋಷಸ್ಯ ಹೃತದ್ರವ್ಯ ಇವಾತುರಃ ॥೬೯॥
ಆ ಮನುಷ್ಯ° ವಿಧಿನಿಯಮಕ್ಕಧೀನನಾಗಿ, ಆ ತುಚ್ಛ ನರಕಲ್ಲಿ ತನ್ನ ಕುಟುಂಬಕ್ಕೆ ಆಧಾರವಾದ ಧನವ ಕಡಕೊಂಡವನಾಂಗೆ ದುಃಖವ ಅನುಭವುಸುತ್ತ°.
ಕೇವಲೇನ ಹ್ಯಧರ್ಮೇಣ ಕುಟುಂಬಭರಣೋತ್ಸುಕಃ ।
ಯಾತಿ ಜೀವೋಂಧತಾಮಿಸ್ರಂ ಚರಮಂ ತಮಸಃ ಪದಮ್ ॥೭೦॥
ಕೇವಲ ಅಧರ್ಮಂದ ತನ್ನ ಕುಟುಂಬ ಪೋಷಣೆಲಿ ಉತ್ಸುಕನಾಗಿಪ್ಪ ಜೀವ° ಅತ್ಯಂತ ಅಂಧಕಾರಯುಕ್ತ ಜಾಗೆ ಆದ ಅಂಧತಾಮಿಸ್ರ ಹೇಳ್ವ ನರಕಕ್ಕೆ ಹೋವುತ್ತ°.
ಅಧಸ್ತಾನ್ನರಲೋಕಸ್ಯ ಯಾವತೀರ್ಯಾತನಾದಯಃ ।
ಕ್ರಮಶಃ ಸಮನುಕ್ರಮ್ಯ ಪುನರತ್ರಾ ವ್ರಜೇಚ್ಛುಚಿಃ ॥೭೧॥
ನರಲೋಕದ ಕೆಳ ಇಪ್ಪ ಯಾತನೆಗಳ ಕ್ರಮವಾಗಿ ಅನುಭವುಸಿ ಪರಿಶುದ್ಧನಾಗಿ ಪುನಃ ಇಲ್ಲಿ ಬತ್ತ°.
 
ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಯಮಯಾತನಾ ನಿರೂಪಣಂ ನಾಮ ತೃತೀಯೋಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಯಮಯಾತನೆಯ ನಿರೂಪಣೆ’ ಹೇಳ್ವ ಮೂರ್ನೇ ಅಧ್ಯಾಯ ಮುಗುದತ್ತು.
ಗದ್ಯರೂಪಲ್ಲಿ –
ಯಮಧರ್ಮನರಾಯನ ಎದುರಿಲ್ಲಿ ನಿಲ್ಲಿಸಿದ ಅವನ ಅಪರಾಧಂಗಳ ವಿಚಾರ್ಸಿ ತಕ್ಕ ದಂಡವ ಆಜ್ಞೆ ಮಾಡಿದಲ್ಯಂಗೆ ಅವನ ಆಣತಿಯಂತೆ  ಯಮದೂತರುಗೊ ಆ ಪಾಪಾತ್ಮನ ಜೆಪ್ಪಿ ಬಳ್ಳಿಲಿ ಕಟ್ಟಿ ಬಿಗುದು ಭಯಂಕರ ನರಕದ ಕಡೇಂಗೆ ಕೊಂಡೋವ್ತವು. ಅಲ್ಲಿ ಧಗಧಗುಸುವ ಅಗ್ನಿಗೆ ಸಮಾನವಾದ ಪ್ರಭೆಯುಳ್ಳ ರೇಷ್ಮೆಹತ್ತಿಯ ಒಂದು ವಿಶಾಲವಾದ ವೃಕ್ಷ ಇದ್ದು. ಅದು ಐದು ಯೋಜನೆ ವಿಸ್ತೀರ್ಣ ಮತ್ತು ಒಂದು ಯೋಜನ ಎತ್ತರದ್ದಾಗಿದ್ದು. ಆ ವೃಕ್ಷಲ್ಲಿ ಸಂಕೊಲೆಲಿ ಪಾಪಿಯ ತಲೆಕೆಳಂತಾಗಿ ನೇಲುಸಿ ದೂತರು ಥಳುಸುತ್ತವು. ಅಲ್ಲಿ ಗಾವಿಂಗೆ ಬೆಂದು, ಪೆಟ್ಟಿನ ಬೆಶಿಗೆ ಬಳಲಿ ಕೂಗಾಡುವ ಅವರ ರಕ್ಷುಸುಲೆ ಆರೂ ಇಲ್ಲೆ. ಅದೇ ಮರಲ್ಲಿ ಹಶು ಆಸರಂದ ಪೀಡಿತರಾಗಿ ಯಮದೂತರಿಂದ ಪೆಟ್ಟುತಿಂದು ನೇತುಗೊಂಡಿಪ್ಪ ಅನೇಕ ಪಾಪಿಗೊ ಇರ್ತವು. ಆ ಆಶ್ರಯಹೀನ ಪಾಪಿಗೊ ಕೈಜೋಡುಸಿ “ಹೇ ಯಮದೂತರೇ! ಎಂಗಳ ಅಪರಾಧಂಗಳ ಕ್ಷಮಿಸಿಕ್ಕಿ” ಹೇದು ಯಮದೂತರತ್ರೆ ಬೇಡಿಗೊಂಡಿರುತ್ತವು.
ಪದೇ ಪದೇ ಲೋಹದ ಬಡಿಗೆಂದ, ಸುತ್ತಿಗೆ, ಈಟಿ, ಭರ್ಜಿ, ಗದೆ ಮತ್ತೆ ಒನಕೆ ಇವುಗಳಿಂದ ಆ ದೂತರಿಂದ ಥಳಿತಕ್ಕೆ ಒಳಗಾವ್ತವು. ದೂತರ ಪೆಟ್ಟಿಂದ ಪಾಪಿಗೊ ಚಟುವಟಿಕೆರಹಿತ ಮತ್ತೆ ಮೂರ್ಛಿತರಾಗಿ ಹೋವ್ತವು. ಅಷ್ಟಪ್ಪಗ ಆ ನಿಶ್ಛೇಷ್ಟ ಪಾಪಿಗೊ ನೋಡಿ ಯಮನ ದೂತರುಗೊ ಹೇಳುತ್ತವು – “ಎಲೈ ದುರಾಚಾರಿಗಳೇ!, ಪಾಪಿಗಳೇ!, ನಿಂಗೆಲ್ಲ ಎಂತಕೆ ಬೇಡಂಗಟ್ಟೆ ಕೆಲಸಂಗಳ ಮಾಡಿದಿ?. ಅಶನ, ನೀರು ಇತ್ಯಾದಿ ಸುಲಭಸಾಧ್ಯವಾದ್ದರನ್ನೂ ದಾನ ಮಾಡಿದ್ದಿಲ್ಲಿ. ಅರ್ಧತುತ್ತು ಅಶನವನ್ನೂ ಕಾಕೆ ನಾಯಿಗೊಕ್ಕೂ ಬಲಿ ಕೊಟ್ಟಿದ್ದಿಲ್ಲಿ. ಅತಿಥಿಗೊಕ್ಕೆ ನಮಸ್ಕಾರ ಮಾಡಿದ್ದಿಲ್ಲಿ. ಪಿತೃತರ್ಪಣವನ್ನೂ ಮಾಡಿದ್ದಿಲ್ಲಿ. ಯಮರಾಜ, ಚಿತ್ರಗುಪ್ತನ ಉತ್ತಮ ಧ್ಯಾನ ಕೂಡ ಮಾಡಿದ್ದಿಲ್ಲಿ. ಯಾವ ಮಂತ್ರಂದ ಈ ಯಾತನೆಗೊ ಉಂಟಾವ್ತಿಲ್ಲೆಯೋ ಅಂತಹ ಅವರ ಮಂತ್ರವನ್ನೂ ಜಪಿಸಿದ್ದಿಲ್ಲಿ. ರಜವೂ ತೀರ್ಥಯಾತ್ರೆ ಮಾಡಿದ್ದಿಲ್ಲಿ, ದೇವತೆಗಳ ಪೂಜಿಸಿದ್ದಿಲ್ಲಿ, ಗೃಹಸ್ಥಾಶ್ರಮಲ್ಲಿದ್ದುಗೊಂಡು ಅನ್ನದಾನವನ್ನೂ ಮಾಡಿದ್ದಿಲ್ಲಿ, ಸಂತರ ಸೇವೆ ಮಾಡಿದ್ದಿಲ್ಲಿ. ನಿಂಗೊ ಮಾಡಿದ ಪಾಪದ ಫಲವ ನಿಂಗಳೇ ಅನುಭವಿಸಿ ಈಗ. ಧರ್ಮಹೀನನಾದ್ದರಿಂದ ನಿಂಗಳ ಹೀಂಗೆ ಕಠಿಣವಾಗಿ ಬಡಿತ್ತ ಇದ್ದೆಯೊ°.ಭಗವಂತ ಹರಿಯೇ ಈಶ್ವರನಾಗಿದ್ದ°, ಅವನೇ ಅಪರಾಧಂಗಳ ಕ್ಷಮುಸುವಂವ°. ಅವನ ಅಜ್ಞಾನುಸಾರವಾಗಿ ಎಂಗೊ ಅಪರಾಧಿಗೊಕ್ಕೆ ಈ ರೀತಿಯಾಗಿ ಶಿಕ್ಷೆ ಕೊಡುತ್ತೆಯೊ°”  ಈ ರೀತಿಯಾಗಿ ಹೇಳಿ ಆ ದೂತರು ನಿರ್ದಯತೆಂದ ಪಾಪಿಗಳ ಬಡಿತ್ತವು. ಆ ಹೊಡೆತಂದ ಪಾಪಿಗೊ ಉರಿವ ಕೆಂಡದ ಹಾಂಗೆ ಕೆಳ ಬಿದ್ದು ಬಿಡುತ್ತವು.
ಕೆಳ ಬೀಳುವಾಗ ಆ ವೃಕ್ಷದ ಎಲೆಗಳಿಂದ ಪಾಪಿಗಳ ಶರೀರ ಕತ್ತರುಸಿ ಹೋವ್ತು. ಕೆಳ ಬಿದ್ದ ಆ ಪಾಪಿಯ ನಾಯಿಗೆ ಕಚ್ಚಿ ತಿಂತವು. ಅಷ್ಟಪ್ಪಗ ಅವು ಕೂಗುತ್ತವು. ಕೂಗುವ ಅವರ ಬಾಯಿಗೆ ಯಮದೂತರುಗೊ ಧೂಳು ತುಂಬುಸುತ್ತವು ಮತ್ತೆ ಕೆಲವು ಪಾಪಿಗಳ ಪಾಶಂದ ಬಂಧುಸಿ ಸುತ್ತಿಗೆಂದ ಬಡಿತ್ತವು. ಕೆಲವು ಪಾಪಿಗಳ ಗರಗಸಂದ ಮರತ್ತುಂಡಿನ ಕತ್ತರುಸುತ್ತಾಂಗೆ ಅವರ ಎರಡು ತುಂಡಾಗಿ ತುಂಡರುಸುತ್ತವು. ಕೆಲವರ ನೆಲಕ್ಕಲಿ ಇಡುಕ್ಕಿ ಕೊಡಲಿಂದ ತುಂಡು ತುಂಡಾಗಿ ಹೋಳುಮಾಡುತ್ತವು. ಕೆಲವರ ತಗ್ಗಾದ ಹಳ್ಳಲ್ಲಿ ಅರ್ಧ ಹೂದು ಅವರ ತಲಗೆ ಚೂಪಾದ ಬಾಣಂಗಳಿಂದ ಕುತ್ತುತ್ತವು. ಕೆಲವರ ಗಾಣದ ಯಂತ್ರಲ್ಲಿ ಕಬ್ಬು ಹಿಂಡುತ್ತಾಂಗೆ ಹಿಂಡುತ್ತವು. ಕೆಲವರಿಂಗೆ ಅವರ ಸುತ್ತ ಹೊತ್ತುವ ಮರದ ತುಂಡುಗಳ ಕಟ್ಟಿ ಕಬ್ಬಿಣದ ತುಂಡಿನ ಹಾಂಗೆ ಸುಡುತ್ತವು. ಕೆಲವರ ತುಪ್ಪಕೊದಿವ ಕಡಾಯಿಲಿ, ಎಣ್ಣೆ ಕಡಾಯಿಲಿ ವಡೆ ಹಾಂಗೆ ಹೊರಿತ್ತವು. ಕೆಲವರ ಮದ್ದಾನೆಯ ಸಮ್ಮುಖಲ್ಲಿ ಮೆಟ್ಟುಸುತ್ತವು. ಕೆಲವರ ಕೈ-ಕಾಲು ಕಟ್ಟಿ ಅಧೋಮುಖವಾಗಿ ತೂಗುತ್ತವು. ಕೆಲವರ ಬಾವಿಗೆ ಇಡ್ಕುತ್ತವು. ಕೆಲವರ ಪರ್ವತದ ಕೊಡಿಂದ ಕೆಳಂತಾಗಿ ಉರುಳುಸುತ್ತವು. ಕೆಲವರ ಕೀಟಾದಿಗಳಿಂದ ತುಂಬಿದ ಹೊಂಡಲ್ಲಿ ಮುಳುಗುಸುತ್ತವು. ಅಲ್ಲಿ ಅವು ಕೀಟಂಗಳಿಂದ ಕಚ್ಚಲ್ಪಡುತ್ತವು. ಕೆಲವರ ವಜ್ರಕ್ಕೆ ಸಮಾನ ಕಠಿಣವಾದ ಕೊಕ್ಕುಗೊ ಇಪ್ಪ ದೊಡ್ಡ ದೊಡ್ಡ ಕಾಕೆಗೊ, ಹದ್ದುಗೊ, ಮಾಂಸಭಕ್ಷಿ ಹಕ್ಕಿಗೊ ಅವರ ತಲಗೆ, ಕಣ್ಣಿಂಗೆ  ಕೊಕ್ಕಿ ಅತೀವ ವೇದನೆಯ ಉಂಟುಮಾಡುತ್ತವು.
ಕೆಲವು ಪಾಪಿಗೊ ಅನ್ಯಪಾಪಿಗಳತ್ರೆ ಸಾಲವ ಹಿಂದೆ ಕೇಳುತ್ತವು. “ಎನ್ನ ಪೈಸೆಯ ಕೊಡು.. ಕೊಡು. ಯಮಲೋಕಲ್ಲಿ ನಿನ್ನ ಕಂಡತ್ತು. ಎನ್ನ ಪೈಸೆಯ ನೀನೇ ತಿಂದಾಕಿದ್ದೆ”. ನರಕಲ್ಲಿ ಈ ರೀತಿಯ ಲಡಾಯಿಮಾಡ್ಯೊಂಡು ಇಪ್ಪ ಪಾಪಿಗಳ ಅಂಗಾಂಗಂಗಳ ಹರಿತವಾದ ಚಿಮ್ಮಟಿಗೆಂದ ಮಾಂಸವ ಕತ್ತರಿಸಿ ಆ ಸಾಲಕೊಟ್ಟವಕ್ಕೆ ಕೊಡುತ್ತವು. ಈ ರೀತಿಯಾಗಿ ಪೀಡಿಸಿ ಮತ್ತೆ ಯಮನ ಆಜ್ಞೆಪ್ರಕಾರ ಅವರ ಎಳಕ್ಕೊಂಡೋಗಿ ತಾಮಿಸ್ರ ಮುಂತಾದ ಘೋರವಾದ ನರಕಕ್ಕೆ ಇಡ್ಕುತ್ತವು.
ಆ ವೃಕ್ಷದ ಹತ್ರೆ ಅಪಾರ ದುಃಖಂದ ಪೂರಿತವಾದ ಅನೇಕ ನರಕಂಗೊ ಇದ್ದು. ಅಲ್ಲಿ ಯಾವ ಮಹಾದುಃಖ ಇದ್ದೋ ಅದರ ಮಾತಿಲ್ಲಿ ವರ್ಣುಸುಲೆ ಎಡಿಯಾ. ಎಲೈ ಗರುಡನೇ!, ಅಲ್ಲಿ ಎಂಬತ್ತನಾಲ್ಕು ಲಕ್ಷ ನರಕಂಗೊ ಇದ್ದು. ಅವುಗಳಲ್ಲಿ ಅತಿ ಭಯಂಕರ ಹಾಂಗೂ ಪ್ರಮುಖ ನರಕಂಗೊ ಇಪ್ಪತ್ತೊಂದು. ತಾಮಿಸ್ರ, ಲೋಹಶಂಕು, ಮಹಾರೌರವ, ಶಾಲ್ಮಲೀ, ರೌರವ, ಕುಡ್ಮಲ, ಕಾಲಸೂತ್ರಕ, ಪೂತಿಮೃತ್ತಿಕ, ಸಂಘಾತ, ಲೋಹಿತೋದ, ಸವಿಷ, ಸಂಪ್ರತಾಪನ, ಮಹಾನಿರಯ, ಕಾಕೋಲ, ಸಂಜೀವನ, ಮಹಾಪಥಿ, ಅವೀಚಿ, ಅಂಧತಾಮಿಸ್ರ, ಕುಂಭೀಪಾಕ, ಸಂಪ್ರತಾಪನ ಮತ್ತೆ ತಪನ- ಈ ಇಪ್ಪತ್ತೊಂದು ನರಕಂಗೊ. ಇವುಗೊ ಎಲ್ಲವೂ ಅನೇಕ ಪ್ರಕಾರದ ಯಾತನೆಂಗಳಿಂದ ತುಂಬಿದ್ದು. ಅವುಗಳ ಅನೇಕ ಭಾಗಗಳನ್ನಾಗಿ ಮಾಡಿದ್ದವು. ಅಲ್ಲಿ ನಾನಾ ರೀತಿಯ ಪಾಪಂಗೊಕ್ಕೆ ತಕ್ಕ ಶಿಕ್ಷೆಯ ಅನುಭವುಸೆಕು. ಯಮಕಿಂಕರುಗಳಿಂದ ಅಧಿಷ್ಠಿತವಾಗಿದ್ದು.
ಈ ನರಕಲ್ಲಿ ಬಿದ್ದ ಮೂರ್ಖ ಪಾಪಿ ಅಧರ್ಮಿ ಜೀವಿ ಕಲ್ಪಪರ್ಯಂತ ಆಯಾ ನರಕ ಯಾತನೆಗಲ ಅನುಭವುಸುತ್ತ°. ತಾಮಿಸ್ರ ಮತ್ತೆ ಅಂಧತಾಮಿಸ್ರ ಹಾಂಗೂ ರೌರವಾದಿ ನರಕಂಗಳ ಯಾವ ಯಾತನೆಗೊ ಇದ್ದೋ ಅವು ಸ್ತ್ರೀ ಪುರುಷರ ವಿಷಯ ಸುಖಂಗಳಲ್ಲಿ ಆಸಕ್ತರಾಗಿಪ್ಪ ಕಾರಣ ಅನುಭವುಸುತ್ತವು. ಈ ಪ್ರಕಾರ ಬರೇ ಕುಟುಂಬದ ಪಾಲನೆ-ಪೋಷಣೆ ಮಾಡುವಂವ° ಅಥವಾ ದಾನ-ಧರ್ಮಾದಿಗಳ ಮಾಡದ್ದೆ ಬರೇ ತನ್ನ ಹೊಟ್ಟೆ ತುಂಬುಸುವಂವ° ಕೂಡ ಇಲ್ಲಿ ಕುಟುಂಬ ಮತ್ತು ಶರೀರ ಎರಡನ್ನೂ ಬಿಟ್ಟು ಮರಣದ ಮತ್ತೆ ಈ ಪ್ರಕಾರದ ಫಲವ ಅನುಭವುಸುತ್ತ°. ಜೀವಿಗೊಕ್ಕೆ ದ್ರೋಹ ಬಗದು, ಪಾಲನೆ-ಪೋಷಣೆ ಮಾಡಿದ ತನ್ನ ಸ್ಥೂಲ ಶರೀರವ ಇಹಲ್ಲಿಯೇ ಬಿಟ್ಟು ಪಾಪಕರ್ಮರೂಪಿ ಬುತ್ತಿಯ ಗಂಟಿನೊಟ್ಟಿಂಗೆ ಪಾಪಿ ಏಕಾಂಗಿಯಾಗಿಯೇ ಅಂಧಕಾರಪೂರ್ಣ ನರಕಕ್ಕೆ ಹೋವುತ್ತ°.
ಬರೇ ಅಧರ್ಮಂದ ಕುಟುಂಬದ ಪಾಲನೆ-ಪೋಷಣೆಗೆ ಬೇಕಾಗಿ ಪ್ರಯತ್ನಶೀಲನಾಗಿಪ್ಪ ವ್ಯಕ್ತಿ ಅಂಧಕಾರದ ಪರಾಕಾಷ್ಠಯಿಪ್ಪ ಅಂಧತಾಮಿಸ್ರ ಹೇಳ್ವ ನರಕಕ್ಕೆ ಹೋವ್ತ°. ಮನುಷ್ಯಲೋಕದ ಕೆಳಾಣ ನರಕಂಗಳ ಎಷ್ಟು ಯಾತನೆಗೊ ಇದ್ದೋ ಅಷ್ಟನ್ನೂ ಅನುಕ್ರಮವಾಗಿ ಅನುಭವುಸಿ ಆ ಪಾಪಿ ಶುದ್ಧನಾಗಿ ಪುನಃ ಈ ಮರ್ತ್ಯಲೋಕಲ್ಲಿ ಜನ್ಮ ತಾಳುತ್ತ°. ಈ ರೀತಿಯಾಗಿ ಭಗವಂತ ಮಹಾವಿಷ್ಣು ಗರುಡಂಗೆ ಹೇಳಿದಲ್ಯಂಗೆ ಗರುಡಪುರಾಣದ ಉತ್ತರಖಂಡ (‘ಸಾರೋದ್ಧಾರ’) ಹೇಳ್ವ ಭಾಗದ ಮೂರ್ನೇ ಅಧ್ಯಾಯ ಮುಗುದತ್ತು.
 
[ಚಿಂತನೀಯಾ-
ಮನುಷ್ಯನಾಗಿ ಹುಟ್ಟುವದು ಎಷ್ಟೋ ವರ್ಷದ ಸತ್ಕರ್ಮದ ಫಲ. ಮನುಷ್ಯ° ಹೇಳಿರೆ ವಿವೇಕ ಇಪ್ಪ ಪ್ರಾಣಿ. ಹುಟ್ಟುವಾಗ ಮನುಷ್ಯ ಶರೀರಲ್ಲಿ ಹುಟ್ಟಿರೂ ಅದೊಂದು ಪಶು ಸಮಾನ. ಸಂಸ್ಕಾರಂದ ಮನುಷ್ಯತ್ವ ಸಿದ್ಧಿಸೆಕು. ಸಂಸ್ಕಾರ ಜೀವನಲ್ಲಿ ಅಳವಡಿಸಿ ಅದರಂತೆ ನಡೆಕು. ಸದಾಚಾರ ಸತ್ಚಿಂತನೆಂದ ಮನುಷ್ಯ ಜೀವನವ ನಡೆಶಿ ಜೀವನಲ್ಲಿ ಸಾಧುಸೆಕು. ಅದಕ್ಕೆ ವಿವೇಕಯುಕ್ತ ಜ್ಞಾನ ಅಗತ್ಯ. ಕ್ಷಣಭಂಗುರವಾದ ಐಹಿಕ ಸುಖಲ್ಲೇ ಜೀವನ ಸುಖವ ಮಾಂತ್ರ ಕಾಂಬದರ ಬದಲು ವಿವೇಕಿಯಾಗಿ ಪಾರಮಾರ್ಥಿಕ ಚಿಂತನೆಯನ್ನೂ ಮಾಡಿಗೊಂಡು ಮುಂದಾಣ ಜೀವನಕ್ಕೆ ಉತ್ತಮ ಮಾರ್ಗವ ಕಂಡುಗೊಳ್ಳೆಕು. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಲ್ಲಿ ಬಿದ್ದು ಜೀವನವ ವ್ಯರ್ಥ ಮಾಡಿಗೊಂಬಲಾಗ. ಐಹಿಕಲ್ಲಿ ಇದಕ್ಕೆ ಬಲಿಯಾದಂವ ಘೋರನರಕ ಯಾತನೆಯ ಮುಂದೆ ಅನುಭವುಸೆಕ್ಕಾವ್ತು.
ಭಗವದ್ ಆಜ್ಞೆಯ ನಿರ್ದಾಕ್ಷಿಣ್ಯವಾಗಿ ನಿಷ್ಪಕ್ಷರೀತಿಲಿ ಪಾಲುಸುವಂವ° ಯಮಧರ್ಮರಾಯ°. ಅವನ ಕಿಂಕರುರುಗಳೂ ಅಷ್ಟೇ ನಿರ್ದಾಕ್ಷಿಣ್ಯರು. ಭಗವಂತಂಗೆ ಅಪ್ರಿಯವಾದ್ದರ ಮಾಡಿದರೆ ಅಂವ ಕಿಂಚಿತ್ತೂ ಸಹಿಸಿಗೊಳ್ಳುತ್ತನಿಲ್ಲೆ. ಅದಕ್ಕೆ ತಕ್ಕ ದಂಡನೆಯ ಅಂವ° ಕೊಟ್ಟೇ ಕೊಡುತ್ತ. ಹಾಂಗಾಗಿ ನಮ್ಮ ಉದ್ಧರುಸುವಂವ ಏಕಮೇವ ಶಕ್ತಿ ಸಮರ್ಥ ಆ ಭಗವಂತನ ಧ್ಯಾನ ನಮ್ಮ ಜೀವನಲ್ಲಿ ಸದಾ ಇರೆಕು. ಯಮ-ಚಿತ್ರಗುಪ್ತರ ಧ್ಯಾನವನ್ನೂ ಮಾಡಿ ಅವರ ಪ್ರಸನ್ನಗೊಳುಸೆಕ್ಕಾದ್ದು ಮನುಷ್ಯನಾದವನ ಕರ್ತವ್ಯ.
ಪ್ರಪಂಚಲ್ಲಿ ತಾನೊಬ್ಬನೇ ಸುಖವಾಗಿರೆಕು, ತನಗೊಬ್ಬಂಗೇ ತೃಪ್ತಿ ಆಯೇಕು ಹೇಳಿ ಗ್ರೇಶುಲಾಗ. ಪ್ರಪಂಚದ ಚರಾಚರತೃಣಕಾಷ್ಠಲ್ಲಿ ಭಗವಂತ° ಇದ್ದ ಹೇಳ್ವ ಜ್ಞಾನ ನಮ್ಮಲ್ಲಿ ಇರೆಕು. ಆರಾರು ಹಶು ಆಸರ ಆವ್ತು ಹೇಳಿ ಹೇಳಿರೆ ಅದು ಭಗವಂತಂಗೆ ಕೊಡ್ತಾ ಇದ್ದೆ ಹೇಳ್ವ ಭಾವನೆಲಿ ಅವನ ಹಶು ಆಸರವ ತಣುಸಲೆ ಪ್ರಯತ್ನಿಸೆಕು. ಅಸಹಾಯಕರಿಂಗೆ ಸಹಾಯ ಮಾಡುವದೇ ಜನಾರ್ದನ ಸೇವೆ. ಇದರಿಂದ ನಮ್ಮ ಜೀವನ ಕೃತಾರ್ಥತೆ ಹೊಂದುತ್ತು.
ಜೀವನಲ್ಲಿ ಯಜ್ಞ ಅತೀ ಮುಖ್ಯ. ಯಜ್ಞ ಹೇಳಿರೆ ಅಗ್ನಿಯ ಮೂಲಕ ಅರ್ಪುಸುವ ವಿಧಾನ ಒಂದೇ ಯಜ್ಞ ಹೇಳಿ ಅಲ್ಲ. ಭಗವಂತನ ಅನುಸಂಧಾನಲ್ಲಿ ಭಗವಂತನ ಪ್ರೀತಿಗೋಸ್ಕರ ಮಾಡುವ ಪ್ರತಿಯೊಂದು ಕಾರ್ಯವೂ ಯಜ್ಞವೇ. ಸರ್ವ ಮಾನವರಿಂಗೆ ಸಂಬಂಧಿಸಿ ಏವ ಜಾತಿ ಮತ ಭೇದವೂ ಇಲ್ಲದ್ದೆ ಆಚರುಸಲೇ ಬೇಕಾದ ಕರ್ತವ್ಯ ಯಜ್ಞ ಹೇಳಿರೆ ಪಂಚಯಜ್ಞ. ದೇವಯಜ್ಞ, ಋಷಿಯಜ್ಞ, ಪಿತೃಯಜ್ಞ, ಅತಿಥಿಯಜ್ಞ ಹಾಂಗೇ ಭೂತಯಜ್ಞ- ಇವ್ವೇ ಆ ಐದು ಯಜ್ಞಂಗೊ. ಪ್ರತಿಯೊಬ್ಬ ಗೃಹಸ್ಥನೂ ಪ್ರತಿನಿತ್ಯ ಮಾಡೇಕ್ಕಾದ ಯಜ್ಞ. ಇದರೊಟ್ಟಿಂಗೆ ಭಗವಂತನ ಧ್ಯಾನವೂ ನಿತ್ಯಯುಕ್ತವಾಗಿರೆಕು. ಅಂತೇ ಸಾವಲಪ್ಪಗ ಧ್ಯಾನ ಮಾಡ್ಳೆ ಸುರುಮಾಡ್ತೇ ಹೇಳಿ ಕಾವಲಾಗ. ಭಗವಂತನ ಧ್ಯಾನ ನಮ್ಮ ಕರ್ತವ್ಯಪ್ರಜ್ಞೆಯ ಜಾಗೃತಗೊಳುಸುತ್ತು. ಇದರೊಟ್ಟಿಂಗೆ ಯಮನ ಧ್ಯಾನ ಹೇಳಿರೆ ಸಾವಿನ ಸ್ಮರಣೆ. ಇದು ಆಧ್ಯಾತ್ಮಿಕಕ್ಕೆ ಬುನಾದಿ. ಇದು ಜೀವನಲ್ಲಿ ಅಮಂಗಲ ಅಲ್ಲ, ಮಂಗಲಕರ ಸೋಪಾನ. ಹಾಂಗೇ ಚಿತ್ರಗುಪ್ತನ ಧ್ಯಾನ ಹೇಳಿರೆ ಭಗವಂತನ ಸರ್ವ ಸಾಕ್ಷಿತ್ವಲ್ಲೂ, ಕರ್ಮ ನಿಯಮಂಗಳಲ್ಲೂ ನಂಬಿಕೆ ಹೇದರ್ಥ. ಮನುಷ್ಯ ಮಾಡ್ವ ಪ್ರತಿಯೊಂದು ಕರ್ಮವೂ ಅವನ ಹಿಂಬಾಲಿಸಿಗೊಂಡೇ ಬತ್ತು ಹೊರತು ಬಿಡ್ತಿಲ್ಲೆ ಹೇಳ್ವ ಪ್ರಜ್ಞೆ ಇದು. ಭಗವಂತನಿಂದ ಆಜ್ಞಪ್ತರಾಗಿ ನಾನಾ ದೇವತೆಗೊ. ನಮ್ಮ ನಡೆಶುಲೆ ಅವರ ಸಹಾಯ ಖಂಡಿತಾ ಅಗತ್ಯ. ಅವು ನಮ್ಮ ಶರೀರಲ್ಲಿ ಇದ್ದುಗೊಂಡು ನಮ್ಮತ್ರಂದ ಕಾರ್ಯ ಮಾಡುಸುತ್ತವು. ಅವಕ್ಕೂ ಅಧಿಪತಿಯಾಗಿ ಭಗವಂತ° ನಮ್ಮೊಳವೇ ಇದ್ದ. ಹಾಂಗಾಗಿ ಆ ದೇವತಾಮೂಲಕ ಭಗವಂತನ ಆರಾಧುಸುವದು ಸುಲಭ ಉಪಾಯ.  ಹಾಂಗೇ ಪವಿತ್ರ ನದಿ, ಸ್ಥಳ, ಸಹವಾಸ, ದಿನ ಇವೆಲ್ಲ ಇಡೀ ಜೀವಮಾನಲ್ಲಿ ಬಪ್ಪ ಅಪರೂಪ ಸಂದರ್ಭಂಗೊ. ಇದರ ಬಿಟ್ಟುಬಿಡ್ಳಾಗ. ಅದು ಪರಿಪೂರ್ಣತೆಯತ್ತ ಕೊಂಡೋಪ ಸೋಪಾನ. ಹಶುವಾದವಂಗೆ ಅಶನ ಅನ್ನಪೂರ್ಣೆಯ (ಪ್ರಕೃತಿ ಮಾತೆಯ) ಅನುಗ್ರಹ. ಅದರೊಟ್ಟಿಂಗೆ ಭಗವನ್ನಾಮ ಬೆಲ್ಲವ ಬೆರುಸಿ ವಿನಯ ಪ್ರೇಮಂದೊಡಗೂಡಿ ಬಳುಸಿದರೆ ಅದು ಅಮೃತಕ್ಕೆ ಸಮಾನ. ಧರ್ಮಲ್ಲಿ ಲೀನನಾಗಿ ಧರ್ಮಾಚರಣೆ ಮಾಡಿಗೊಂಡು ಬದುಕುವದು ಜೀವನದ ಸಾರ್ಥಕತೆ. ಎಲ್ಲಿ ಪ್ರೀತಿ ಪ್ರೇಮ ಇದ್ದೋ ಅಲ್ಲಿ ಕ್ಷಮೆ ಇದ್ದು. ಜಗನ್ಮಾತೆಯೇ ಕ್ಷಮೆಯ ಪ್ರತೀಕ. ಅಂತಹ ಜಗನ್ಮಾತೆಗೆ ಶರಣಾಗತನಾಗಿ ಭಗವಂತನ ಪ್ರೇಮಕ್ಕೆ ಪಾತ್ರನಾದರೆ ಜೀವನದ ಗುರಿಯ ಸಾಧುಸಲೆ ಅದರಷ್ಟು  ಉತ್ತಮ ಮಾರ್ಗ ಇನ್ನೊಂದು ಇಲ್ಲೆ. 
ಇಪ್ಪತ್ತೊಂದು ಮಹಾ ಭಯಾನಕ ನರಕಂಗಳ ಹೆಸರುಗ ಇಲ್ಲಿ ಉಲ್ಲೇಖಿಸಿದ್ದು. ಅವುಗಳ ಅರ್ಥ ಹೀಂಗಿದ್ದು –
ಕಸ್ತಲೆ – ತಾಮಿಸ್ರ, ಕಬ್ಬಿಣದ ತುಂಡಿನಾಂಗಿಪ್ಪದು – ಲೋಹಶಂಕು, ಭಯಂಕರ ರುರು ಹೇಳ್ವ ಜಂತುಗಳಿಂದ ಕೂಡಿಪ್ಪದು – ಮಹಾರೌರವ, ಮುಳ್ಳುಗಳಿಪ್ಪ ರೇಷ್ಮೆ ಹತ್ತಿಯ ಮರ – ಶಾಲ್ಮಲೀ, ರುರು ಜಂತುಗಳಿಂದೊಡಗೂಡಿದ್ದು – ರೌರವ, ಮುಕುಟಿನಾಂಗೆ ಮುಚ್ಚುವ – ಕುಡ್ಮಲ, ಸಾವಿನ ಬಳ್ಳಿ – ಕಾಲಸೂತ್ರಕ, ದುರ್ವಾಸನೆಯುಕ್ತ ಮಣ್ಣು – ಪೂತಮೃತ್ತಿಕ, ಬಡುದಾಟ – ಸಂಘಾತ, ಕಬ್ಬಿಣದ ಭಾರ – ಲೋಹಿತೋದ, ವಿಷಪೂರ್ವಕ – ಸವಿಷ, ಹೊತ್ತಿಗೊಂಡಿಪ್ಪ – ಸಂಪ್ರತಾಪನ, ಮಹಾನರಕ – ಮಹಾನಿರಯ, ಕಾಕೆಗೂಬೆಂದೊಡಗೊಂಡ – ಕಾಕೋಲ, ಒಟ್ಟೊಂಟ್ಟಿಗೆ ಅನುಭವುಸುವ – ಸಂಜೀವನ, ಬಹುದೂರ ನಡೇಕ್ಕಾದ – ಮಹಾಪಥಿ, ಅಲೆಯಿಲ್ಲದ್ದ ನೀರಿಲ್ಲದ್ದ – ಅವೀಚಿ, ಕಗ್ಗತ್ತಲೆಯ – ಅಂಧತಾಮಿಸ್ರ, ಬೇಶುವ ಪಾತ್ರೆ – ಕುಂಭೀಪಾಕ, ಹೊತ್ತಿಗೊಂಡಿಪ್ಪ – ಸಂಪ್ರತಾಪನ, ಸುಡುವ – ತಪನ.
ಧರ್ಮಾಚರಣೆಯು ಇಹಲ್ಲಿ ಆನಂದವ ಕೊಡುತ್ತು, ಪರಲ್ಲಿ ಮಹದಾನಂದಕ್ಕೆ ಕೊಂಡೋವ್ತು. ಶಾಶ್ವತವಾದ ಆನಂದವ ಕೊಡುವ ಆ ಧರ್ಮದ ಆಚರಣೆ ಇಹಲ್ಲಿ ಮುಕ್ತಿಸಾಧನ. ಧರ್ಮಂದ ಶುಭ, ಅರ್ಥಂದ ಸುಖ, ಕಾಮಂದ ಪ್ರಜೋತ್ಪತ್ತಿ ಇದರ ನಿಯಮಾನುಸಾರ ಆಚರಿಸಿರೆ ಇದು ಮೋಕ್ಷಕ್ಕೆ ಮಾರ್ಗ. ಸಾವನ್ನಾರ ಸಂಸಾರದ / ಕುಟುಂಬದ ಚಿಂತೆಲೇ ಮುಳುಗಿರೆ ನವಗೆಂತ ಲಾಭ? ಮತ್ತೆ ನವಗಾಗಿ ಕಾದಿಪ್ಪ ಯಮಲೋಕದ ಯಾತನೆಂದ ತಪ್ಪುಸುವಂವ ಆರಿದ್ದವು! ಅಲ್ಲಿ ಏಕಾಂಗಿಯಾಗಿ ಸಹಾಯಕೆ ಮೊರೆಹೊಕ್ಕಲೆ ಒಬ್ಬನನ್ನೂ ಕಾಣದ್ದೆ ಚಕಿತನಾಗಿ ವಿಲಪಿಸಿಗೊಂಡು ನಿರಾಶ್ರಿತನಾಗಿ ಯಾತನೆಯ ಅನುಭವುಸೆಕ್ಕಾವ್ತು. ಮೋಕ್ಷಕ್ಕೆ ಯೋಗ್ಯರಲ್ಲದ್ದವು ಕರ್ಮಫಲವ ಉಂಡಿಕ್ಕಿ ಮತ್ತೆ ಮರ್ತ್ಯಲೋಕವನ್ನೇ ಸೇರೇಕ್ಕಾವ್ತು.
 
ವಿವೇಕಯುಕ್ತನಾಗಿ ಧರ್ಮಮಾರ್ಗಲ್ಲಿ ನಡವಲೆ ಆ ಭಗವಂತ° ಎಲ್ಲೋರನ್ನೂ ಪ್ರಚೋದಿಸಲಿ. ಹರೇ ರಾಮ. ]
 
ಮುಂದೆ ಎಂತರ…    ಬಪ್ಪವಾರ ನೋಡುವೋ°

4 thoughts on “ಗರುಡ ಪುರಾಣ – ಅಧ್ಯಾಯ 03 – ಭಾಗ 02

  1. ಭಾರೀ ಲಾಯ್ಕಾಯ್ದು ವಿವರಣೆ.. ಜೈ ಗರುಡ ಪುರಾಣ.. ಚೆನ್ನೈ ಭಾವನ ಬರವಣಿಗೆ ಶ್ಲಾಘನೀಯವಾದ್ದು.

  2. ಜೀವಾತ್ಮ ಮತ್ತೆ ಪರಮಾತ್ಮದ ವಿವರಣೆ ತುಂಬಾ ಒೞೇದಾಯಿದು—ಹರೇ ರಾಮ.

  3. ಅಪ್ಪ ಭಾವ… ಈ ಮೇಲೆ ಹೇಳಿದ ಶಿಕ್ಷೆಯ ಎಲ್ಲ ಕೊಡುದು ಆರಿಂಗೆ? ಆತ್ಮಕ್ಕೆ ಅಲ್ಲದೋ? ಪಾಪಾತ್ಮ ಅಥವ ಪುಣ್ಯಾತ್ಮ ಯಾವದೇ ಆಗಲಿ, ಅತ್ಮ ಆತ್ಮವೇ ಅಲ್ಲದೋ?
    ಹಾಂಗೆ ಹೇಳಿ ಆದರೆ ಭಗವದ್ ಗೀತೆಲಿ “ಆತ್ಮಕ್ಕೆ ಸಾವಿಲ್ಲೆ, ಅದರ ಬೆಂಕಿ ಸುಡ್ತಿಲ್ಲೆ… ನೀರು ಚೆಂಡಿ ಮಾಡ್ತಿಲ್ಲೆ… ಅದಕ್ಕೆ ಬೇನೆ ಆವ್ತಿಲ್ಲೆ “ಹೇಳಿ ಎಲ್ಲ ಇದ್ದಲ್ಲದಾ? ಆ ವಿಚಾರಕ್ಕೂ ಈ ವಿಚಾರಕ್ಕೂ ಈಗ clash ಆತಲ್ಲದಾ?
    ಮತ್ತೆ ಈ ಆತ್ಮ ಹೇಳ್ತದು ಇಪ್ಪದು ಮನುಷ್ಯರಿಂಗೆ ಮಾಂತ್ರವೋ? ಅಥವಾ ನೆಳವು, ಎರುಗು, ವರಳೆಗೊಕ್ಕೂ ಇದ್ದೋ?
    ಜಿಜ್ಞಾಸೆಗೋಸ್ಕರ ಕೇಳ್ತಾ ಇದ್ದೆ….

    1. ಹರೇ ರಾಮ ಶ್ಯಾಮಣ್ಣ,
      ಸಹಜ ಜಿಜ್ಞಾಸೆ. ಹಾಂಗಾಗಿಯೇ ಮದಾಲು ಭಗವದ್ಗೀತೆಯ ಬರದಿಕ್ಕಿ ಮತ್ತೆ ಗರುಡಪುರಾಣಕ್ಕೆ ಕೈ ಹಾಕಿದ್ದದು. ಈ ಬಗ್ಗೆ ಭಗವದ್ಗೀತೆಯ ೧೩ನೇ ಅಧ್ಯಾಯಲ್ಲಿ ವಿವರಣೆ ಇದ್ದು.
      ಇನ್ನು, ಇನ್ನೊಂದು ಗಮನಾರ್ಹ ವಿಷಯ ಎಂತ ಹೇಳಿರೆ ‘ಆತ್ಮ’ ಹೇಳೋದು ಆತ್ಮ, ಜೀವಾತ್ಮ, ಪರಮಾತ್ಮ, ತಾನು ಹೇದು ಬೇರೆ ಬೇರೆ ಹಂತಲ್ಲಿ ಬೇರೆ ಬೇರೆ ಅರ್ಥವ ಕೊಡುತ್ತು. ಸಾಂದರ್ಭಿಕವಾಗಿ ಅರ್ಥ ಮಾಡಿಗೊಳ್ಳೆಕ್ಕಾಗಿದ್ದು. ಆತ್ಮ ಹೇಳೋದು ಪರಮಾತ್ಮನ ವಿಭಿನ್ನಾಂಶ.
      ಮತ್ತೆ., ನಿಂಗೊ ಹೇಳಿದಾಂಗೆ ಆತ್ಮ ಹೇಳಿರೆ “ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ”, ಸದಾ ಸ್ವತಂತ್ರ. ಗೀತೆಲಿ ವಿವರಿಸಿದಾಂಗೆ. ಆತ್ಮ ಹೇಳ್ವದು ಕಣ್ಣಿಂಗೆ ಕಾಣದ್ದ ಪರಮಾತ್ಮನ ಒಂದು ಕಣ. ಅದಿದ್ದರೇ ಶರೀರಕ್ಕೆ ಶಕ್ತಿ, ಕ್ರಿಯೆ. ಈ ಸಕ್ರಿಯ ಶರೀರ ‘ಪೃಥಿವ್ಯೋಪತೇಜವಾಯುರಾಕಾಶೋ….’ ಹೇದು ಪಂಚಭೂತ, ಪಂಚಕರ್ಮೇಂದ್ರಿಯ, ಪಂಚಜ್ಞಾನೇಂದ್ರಿಯ, ಅಂತಃಕರಣ ಚತುಷ್ಟಯ ಮತ್ತೆ ಆತ್ಮ – ಹೀಂಗೆ ಪಂಚವಿಂಶಾತ್ಮಕ ತತ್ವಂಗಳಿಂದ ಕೂಡಿದ್ದು. ಆತ್ಮ ಒಂದು ಶರೀರವ ಬಿಟ್ಟಿಕ್ಕಿ ಇನ್ನೊಂದು ಶರೀರವ ಸೇರುತ್ತು. ಪಂಚಭೂತಂಗಳಿಂದ ಉಂಟಾದ ಈ ಭೌತಿಕ ಶರೀರ ಪಂಚಭೂತಂಗಳಲ್ಲಿ ಲೀನ ಆವ್ತು. ಮತ್ತೆ ಉಳಿತ್ತದಲ್ಲಿ ಜೀವಿ ಹೇಳುವ ಜೀವಾತ್ಮ. ಹಾಂಗೇಳಿರೆ ಬುದ್ಧಿ, ಮನ, ಚಿತ್ತ, ಅಹಂಕಾರಂದ ಕೂಡಿದ ಸೂಕ್ಷ್ಮರೂಪ. ಅದು ಕಣ್ಣಿಂಗೆ ಕಾಂಬಲೆ ಇಲ್ಲೆ. ಐಹಿಕ ಕಾಯವ ಬಿಟ್ಟ ಜೀವಾತ್ಮ ಸೂಕ್ಷ್ಮ ಕಾಯವ ಪಡಕ್ಕೊಂಡು ಪರಲೋಕ ಯಾತ್ರೆಯ ಮಾಡುವದು. ಕರ್ಮಫಲಕ್ಕನುಗುಣವಾಗಿ ಮುಂದಾಣ ಅವಸ್ಥೆಯ ಪಡವದು. ಮೋಕ್ಷ ಅಪ್ಪನ್ನಾರ ಅಥವಾ ಪ್ರಳಯಕಾಲದ ವರೇಂಗೆ ಇದು ಚಕ್ರದಾಂಗೆ ಸುತ್ತಿಗೊಂಡೇ ಇರ್ತು. ಅಷ್ಟನ್ನಾರ ಇಹಲೋಕಲ್ಲಿ ಮಾಡಿದ ಕರ್ಮದ ಫಲಕ್ಕನುಗುಣವಾಗ ಮರುಜನ್ಮ. ಮರುಜನ್ಮ ಏವ ರೂಪಲ್ಲಿ ಹೇದು ನಮ್ಮ ಗ್ರಹಿಕೆಗೆ ಸಿಕ್ಕ. ಅದು ಉತ್ತಮ ಶ್ರೇಷ್ಠವಂಶಲ್ಲಿ ಮನುಷ್ಯ ಜನನ, ನೀಚ ಮನುಷ್ಯನಾಗಿ ಜನನ, ಮೃಗ ಪಶು ಪಕ್ಷಿ ವಾ ಕಲ್ಲು ಮರ ಗಿಡ ಬಳ್ಳಿ ಮಣ್ಣಹೆಂಟೆ ಅಥವಾ ನಿಂಗೊ ಹೇಳಿದ ನೆಳವು ಎರುಗು ನುಸಿ ವರಳೆ ಹುಳುಹುಪ್ಪಟವಾಗಿ ಆದಿಪ್ಪಲೂ ಸಾಕು. ಅದು ಭಗವಂತನ ನಿರ್ಧಾರ. ಇದರ ಬಗ್ಗೆ ಗರುಡಪುರಾಣ ಮುಂದಾಣ ಭಾಗಲ್ಲಿ ಬತ್ತು. ಮೋಕ್ಷ- ಸಾಧನೆಂದ ಸಿಕ್ಕುವದು. ಮನುಷ್ಯ° ಒಳ್ಳೆ ಬುದ್ಧಿಶಕ್ತಿ ಇಪ್ಪವ° ಆದ್ದರಿಂದ ಮನುಷ್ಯ ಜನ್ಮ ಮೋಕ್ಷಸಾಧನೆಗೆ ಸಾಧನೆಗೆ ಅತ್ಯುತ್ತಮ ಸೋಪಾನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×