- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಕಳುದ ಸಂಚಿಕೆಯ ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 11 – 21 ಓದಲೆ ಇಲ್ಲಿ ಒತ್ತಿ
ಪ್ರಥಮೋsಧ್ಯಾಯಃ – ಶ್ಲೋಕಂಗೊ 22 – 33
ಶ್ಲೋಕ
ಯಾವದೇತಾನ್ ನಿರೀಕ್ಷೇsಹಂ ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ॥೨೨॥
ಯಾವತ್ ಏತಾನ್ ನಿರೀಕ್ಷೇ ಅಹಮ್ ಯೋದ್ಧುಕಾಮಾನ್ ಅವಸ್ಥಿತಾನ್ । ಕೈಃ ಮಯಾ ಸಹ ಯೋದ್ಧವ್ಯಮ್ ಅಸ್ಮಿನ್ ರಣ ಸಮುದ್ಯಮೇ ॥
ಅತ್ರ, ಯಾವತ್ ಯೋದ್ಧ-ಕಾಮಾನ್ ಅವಸ್ಥಿತಾನ್ ಏತಾನ್ ಅಹಂ ನಿರೀಕ್ಷೇ; ಅಸ್ಮಿನ್ ರಣ-ಸಮುದ್ಯಮೇ ಮಯಾ ಕೈಃ ಸಹ ಯೋದ್ಧವ್ಯಮ್?
ಈ ರಣರಂಗಲ್ಲಿ ಆರಾರು ಎನ್ನೊಟ್ಟಿಂಗೆ ಯುದ್ಧಮಾಡ್ಳೆ ಕಾದೊಂಡಿದ್ದವೋ ಅವರ ನೋಡಿ, ಆನು ಆರಾರೊಟ್ಟಿಂಗೆ ಯುದ್ಧಮಾಡೇಕು ಹೇದು ಪರೀಕ್ಷಿಸುತ್ತೆ.
ತಾತ್ಪರ್ಯ / ವಿವರಣೆ
ಭಗವಂತನ ಪರಿಶುದ್ಧ ಭಕ್ತನಾದ ಅರ್ಜುನಂಗೆ ತನ್ನ ದಾಯಾದಿ ಮತ್ತು ಸಹೋದರ ಬಂಧುಗಳೊಟ್ಟಿಂಗೆ ಯುದ್ಧಮಾಡೇಕು ಹೇಳ್ವ ಇಚ್ಛೆ ಇತ್ತಿಲ್ಲೆ. ಆದರೆ ಶಾಂತಿಯ ಯಾವ ಸಂಧಾನಕ್ಕೂ ಒಪ್ಪದ್ದ ದುರ್ಯೋಧನನ ಹಠಮಾರಿತನಂದ ಇವೆಲ್ಲ ರಣರಂಗಕ್ಕೆ ಬರೇಕಾಗಿ ಬಂತು. ಇನ್ನೂ ರಣಭೂಮಿಲಿ ಶಾಂತಿಪ್ರಯತ್ನದ ಸಾಧ್ಯತೆ ಇಲ್ಲೆಯಾದರೂ, ಯುದ್ಧಭೂಮಿಗೆ ಬಂದ ಪ್ರಮುಖರ ಮತ್ತು ಈ ಯುದ್ಧಲ್ಲಿ ಅವು ಎಷ್ಟು ಕಾತುರರಾಗಿದ್ದವು ಹೇದು ಒಂದರಿ ನೋಡುವ ಕುತೂಹಲ ಉಂಟಾತು.
ಶ್ಲೋಕ
ಯೋತ್ಸ್ಯಮಾನಾನವೇಕ್ಷೇsಹಂ ಯ ಏತೇsತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ದೇರ್ಯುದ್ಧೇಪ್ರಿಯಚಿಕೀರ್ಷವಃ ॥೨೩ ॥
ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ ।
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ॥೨೪॥
ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ ।
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ॥೨೫॥
ಸಂಜಯಃ ಉವಾಚ – ಏವಮ್ ಉಕ್ತಃ ಹೃಷೀಕೇಶಃ ಗುಡಾಕೇಶೇನ ಭಾರತ । ಸೇನಯೋಃ ಉಭಯೋಃ ಮಧ್ಯೇ ಸ್ಥಾಪಯಿತ್ವಾ ರಥ-ಉತ್ತಮಮ್ ॥
ಭೀಷ್ಮಃ ದ್ರೋಣಃ ಪ್ರಮುಖತಃ ಸರ್ವೇಷಾಮ್ ಚ ಮಹೀ-ಕ್ಷಿತಾಮ್ । ಉವಾಚ ಪಾರ್ಥ ಪಶ್ಯ ಏತಾನ್ ಸಮವೇತಾನ್ ಕುರೂನ್ ಇತಿ ॥
ಅನ್ವಯ
ಸಂಜಯಃ ಉವಾಚ- ಹೇ ಭಾರತ!, ಏವಂ ಗುಡಾಕೇಶೇನ ಉಕ್ತಃ ಹೃಷೀಕೇಶಃ, ಉಭಯೋಃ ಸೇನಯೋಃ ಮಧ್ಯೇ ಭೀಷ್ಮ-ದ್ರೋಣ-ಪ್ರಮುಖತಃ ಸರ್ವೇಷಾಂ ಚ ಮಹೀ-ಕ್ಷಿತಾಂ ರಥ-ಉತ್ತಮಂ ಸ್ಥಾಪಯಿತ್ವಾ , ಹೇ ಪಾರ್ಥ!, ಏತಾನ್ ಸಮವೇತಾನ್ ಕುರೂನ್ ಪಶ್ಯ – ಇತಿ ಉವಾಚ।
ಪ್ರತಿಪದಾರ್ಥ
ಸಂಜಯಃ ಉವಾಚ – ಸಂಜಯ° ಹೇಳಿದ°, ಹೇ ಭಾರತ! – ಏ ಭಾರತ ವಂಶಜನೇ! (ಧೃತರಾಷ್ಟ್ರ), ಏವಮ್ – ಹೀಂಗೆ, ಗುಡಾಕೇಶೇನ – ಅರ್ಜುನನಿಂದ, ಉಕ್ತಃ – ಹೇಳಲ್ಪಟ್ಟ°, ಹೃಷೀಕೇಶಃ – ಶ್ರೀಕೃಷ್ಣ°, ಉಭಯೋಃ – ಎರಡರ, ಸೇನಯೋಃ – ಸೈನ್ಯಂಗಳ, ಮಧ್ಯೇ – ನಡುಕೆ, ಭೀಷ್ಮ – ಪಿತಾಮಹ° ಭೀಷ್ಮ°, ದ್ರೋಣ – ಆಚಾರ್ಯ ದ್ರೋಣ°, ಪ್ರಮುಖತಃ – ಮುಂಭಾಗಲ್ಲಿ, ಸರ್ವೇಷಾಮ್– ಎಲ್ಲೋರ, ಚ – ಕೂಡ, ಮಹೀಕ್ಷಿತಾಮ್ – ಜಗತ್ಪತಿಗಳ, ರಥ-ಉತ್ತಮಮ್ – ಉತ್ತಮವಾದ ರಥವ, ಸ್ಥಾಪಯಿತ್ವಾ – ನಿಲ್ಲುಸಿ, ಹೇ ಪಾರ್ಥ – ಏ ಪೃಥೆಯ ಪುತ್ರನೇ (ಅರ್ಜುನನೇ), ಏತಾನ್ – ಇವೆಲ್ಲರ, ಸಮವೇತಾನ್ – ನೆರೆದ, ಕುರೂನ್ – ಕುರುಕುಲದ ಸದಸ್ಯರಾದವರ (ಕೌರವರ ಕಡೆಯವರ), ಪಶ್ಯ – ನೋಡು, ಇತಿ – ಹೇದು, ಉವಾಚ – ಹೇಳಿದ°.
ಅನ್ವಯಾರ್ಥ
ಸಂಜಯ° ಹೇಳುತ್ತ° – ಓ ಭರತವಂಶದ ದೊರೆಯೇ!, ಅರ್ಜುನನ ಮಾತುಗಳ ಕೇಳಿದ ಶ್ರೀಕೃಷ್ಣ°, ಭೀಷ್ಮ° ದ್ರೋಣ° ಮುಂತಾದ ಪ್ರಮುಖರ ಎದುರಿಲ್ಲಿ ರಥವ ಎರಡೂ ಸೇನೆಗಳ ಮಧ್ಯೆ ನಿಲ್ಲುಸಿ, ಅರ್ಜುನನತ್ರೆ ಅಲ್ಲಿ ನೆರದ ಕೌರವ ಪಡೆಯ ನೋಡು ಹೇದು ಹೇಳಿದ°
ತಾತ್ಪರ್ಯ / ವಿವರಣೆ
ಗುಡಾಕೇಶ° ಹೇದು ಅರ್ಜುನಂಗೆ ಒಂದು ಹೆಸರು. ಗುಡಾಕಾ ಹೇಳಿರೆ ಒರಕ್ಕು, ಒರಕ್ಕಿನ ಗೆದ್ದವ° – ಗುಡಾಕೇಶ° (ಗುಡಾಕಾ-ಈಶಃ). ಒರಕ್ಕು ಹೇದರೆ ಅಜ್ಞಾನ ಹೇಳಿಯೂ ಅರ್ಥಡ. ಶ್ರೀಕೃಷ್ಣನ ಒಡನಾಟಂದಾಗಿ ಅರ್ಜುನ ಒರಕ್ಕನ್ನೂ, ಅಜ್ಞಾನವನ್ನೂ ಗೆದ್ದ°. ಮತ್ತೆ, ಹೃಷೀಕೇಶಃ – ಹೃಷಿಕ ಈಶಃ ಹೇಳಿರೆ ಸಕಲ ಇಂದ್ರಿಯಂಗಳ ಮನಸ್ಸುಗಳ ಒಡೆಯ/ ನಿಯಂತ್ರಕ°, ಅರ್ಥಾತ್ ., ಪರಮಾತ್ಮ ಭಗವಾನ್ ಶ್ರೀಕೃಷ್ಣ. ಹಾಂಗಾಗಿ ಅವಂಗೆ ಅರ್ಜನ° ಎರಡು ಸೇನೆಯ ಮಧ್ಯಲ್ಲಿ ರಥವ ನಿಲ್ಲುಸು ಹೇಳಿ ಹೇಳಿದ್ದು ಎಂತಕೆ ಹೇಳಿ ಅರ್ಥ ಆತು. ಹಾಂಗಾದ ಕಾರಣ , ಹಾಂಗೆಯೇ ರಥವ ನಿಲ್ಲುಸಿ ಆ ಸೇನೆಯ ನೋಡು ಹೇಳಿ ಅರ್ಜುನಂಗೆ ಹೇಳುತ್ತ° ಶ್ರೀಕೃಷ್ಣ°. ಪಾರ್ಥ° ಹೇಳಿರೆ ಶ್ರೀಕೃಷ್ಣನ ಅಪ್ಪ ವಸುದೇವನ ತಂಗೆ ಪೃಥೆಯ ಮಗ°. ಹಾಂಗಾಗಿ ಅರ್ಜುನನ ಸಾರಥಿಯಾದ ಶ್ರೀಕೃಷ್ಣ°, ಪಾರ್ಥ° ಹೇಳಿ ಅರ್ಥವತ್ತಾಗಿ ಅರ್ಜುನನ ಎಚ್ಚರುಸಲೆ ಆ ಶಬ್ದ ಬಳಕೆ ಮಾಡಿದ್ದು ಹೇಳಿ ವಿದ್ವಾಂಸರು ವ್ಯಾಖ್ಯಾನ ಮಾಡಿದ್ದವು.
ಬನ್ನಂಜೆಯವು ಈ ಸನ್ನಿವೇಶವ ಈ ರೀತಿ ಚಿತ್ರಿಸುತ್ತವು – ಶ್ರೀಕೃಷ್ಣ° ಅರ್ಜುನನ ಆಣತಿ ಪ್ರಕಾರ ರಥವ ಎರಡೂ ಸೈನ್ಯದ ನೆಡುಕೆ ತಂದು ಭೀಷ್ಮ ದ್ರೋಣ ಕೃಪ ಮತ್ತೆ ಇತರ ಅರಸರ ಹಾಂಗೂ ಬಂಧುಗೊ ಅರ್ಜುನನ ಕಣ್ಣಿಂಗೆ ನೇರ ಕಾಂಬ ಹಾಂಗೆ ನಿಲ್ಲಿಸಿ “ಹೇ ಅರ್ಜುನ!, ಪಶ್ಯ ಏತಾನ್ ಸಮವೇತಾನ್ ಕುರೂನ್” – ‘ಇಲ್ಲಿ ನೆರೆದಿಪ್ಪ ನಿನ್ನ ಕುರುಗಳ (ಕುರುವಂಶಜರ) ನೋಡು’ – ಹೇದು ಹೇಳ್ತ°. ಇಲ್ಲಿ ಅರ್ಜುನಂಗೆ ಸಣ್ಣ ಮಾನಸಿಕ ಚಿಕಿತ್ಸೆ ಮಾಡ್ಳೆ ಕೃಷ್ಣ° ಬಯಸಿದ್ದ°. ಈ ರೀತಿ ಶ್ರೀಕೃಷ್ಣ ರಥವ ಅರ್ಜುನನ ಕಣ್ಣಿಂಗೂ ಮನಸ್ಸಿಂಗೂ ನಾಟುತ್ತಾಂಗೆ ನಿಲ್ಲಿಸಿದ್ದು ಉದ್ದೇಶಪೂರ್ವಕವಾಗಿಯೇ. ಇಲ್ಲಿ ಅರ್ಜುನನ ಮನಃಸ್ಥಿತಿಯ ಪರೀಕ್ಷೆ ಮಾಡ್ಳೆ ಬಯಸಿದ್ದು ಭಗವಂತ°. ಅರ್ಜುನ ಒಬ್ಬ ಕ್ಷತ್ರಿಯ°, ರಾಜ ವಂಶಜ°. ಅವನ ಪ್ರಥಮ ಕರ್ತವ್ಯ ಧರ್ಮದ ಪರ ಹೋರಾಟ ಹಾಂಗೂ ಪ್ರಜಾಪಾಲನೆ. ಹೀಂಗೆ ಕರ್ತವ್ಯಪಾಲನೆ ಮಾಡುತ್ತಿಪ್ಪಗ ಧರ್ಮದ ವಿರುದ್ಧ ನಿಂದವು ಆರೇ ಆಗಿದ್ದರೂ ಅವರ ಶಿಕ್ಷಿಸೆಕ್ಕಾದ್ದು ಕ್ಷತ್ರಿಯನ ಕರ್ತವ್ಯ. ಅವ° ಒಬ್ಬ° ನ್ಯಾಯಾಧೀಶ° ಇದ್ದಾಂಗೆ. ಇಲ್ಲಿ ತನ್ನ ಕುಟುಂಬದೋರು, ಬಂಧುಗೊ, ಸ್ನೇಹಿತರುಗೊ ಹೇಳಿ ತಾರತಮ್ಯ ಸಲ್ಲ.
ಇಂತಹ ಘನತರ ಕಾರ್ಯಲ್ಲಿ ತೊಡಗಿಪ್ಪ ಅರ್ಜುನಂಗೆ ತನ್ನ ಹಿರಿಯರುಗಳ, ಬಂಧುಗಳ, ಗುರುಗಳ, ಸ್ನೇಹಿತರುಗಳ ಕಂಡು ಎಂತಾತು ಹೇಳುವದು ಮುಂದಾಣದ್ದು..
ಶ್ಲೋಕ
ಆಚಾರ್ಯಾನ್ಮಾತುಲಾನ್ ಭ್ರಾತೄನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ॥೨೬॥
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ ।
ತಾನ್ ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ ಬಂಧೂನವಸ್ಥಿತಾನ್ ॥೨೭॥
ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ ।
ಅರ್ಜುನ° ಯುದ್ಧರಂಗಲ್ಲಿ ನೆರೆದ ಅಪ್ಪಂದ್ರು, ಅಜ್ಜಂದ್ರು, ಗುರುಗೊ, ಸೋದರಮಾವಂದ್ರು, ಸಹೋದರಂಗೊ, ಮೊಮ್ಮಕ್ಕೊ, ನೆಂಟರಿಷ್ಟರು ಮೊದಲಾದ ಸಂಬಂಧಿಗಳ ಮತ್ತು ಸೇನೆಲಿ ಇಪ್ಪ ಇತರ ಎಲ್ಲೋರ ಕಂಡು ಅತೀವ ಕನಿಕರವುಳ್ಳವ° ಆಗಿ ಆವೇಶಭರಿತ° ಆಗಿ ವಿಷಣ್ಣನಾಗಿ ಹೀಂಗೆ ಹೇಳಿದ° –
ತಾತ್ಪರ್ಯ / ವಿವರಣೆ
ರಣಭೂಮಿಲಿ ಅರ್ಜುನ°, ಭೂರಿಶ್ರವನಂತಹ ತನ್ನ ಅಪ್ಪನ ಸದೃಶರ, ಪಿತಾಮಹರಾದ- ಭೀಷ್ಮ°, ಸೋಮದತ್ತ°, ಗುರುಗೊ- ಕೃಪ°, ದ್ರೋಣ, ಶಲ್ಯ°, ಶಕುನಿ – ಸೋದರಮಾವಂದ್ರು, ಕೌರವಾದಿ ಸಹೋದರರುಗಳ, ಲಕ್ಷ್ಮಣನಂತಹ ಮೊಮ್ಮಕ್ಕೋ, ಅಶ್ವತ್ಥಾಮನಂತಹ ಮಿತ್ರರು, ಕೃತವರ್ಮನಂತಹ ಹಿತೈಷಿಗೊ ಇತ್ಯಾದಿ ಅನೇಕ ಸ್ನೇಹಿತರುಗೊ ಇತ್ತಿದ್ದ ಕೌರವ ಸೈನ್ಯವ ನೋಡಿ ಮನಸ್ಸು ಸಂಕುಚಿತಗೊಂಡು, ಗಾಬರಿಯಾಗಿ, ಆವೇಶಭರಿತನಾಗಿ ಕೃಷ್ಣನತ್ರೆ ಹೀಂಗೆ ಹೇಳುತ್ತ°.
ಬನ್ನಂಜೆಯವು ಹೇಳ್ತವು – ಸೂಕ್ಷ್ಮವಾಗಿ ಈ ಶ್ಲೋಕವ ಅವಲೋಕಿಸಿರೆ ಅಲ್ಲಿ ನೆರೆದಿಪ್ಪವು ಅನೇಕಾನೇಕ ಹಿರಿಯರು ಪ್ರಮುಖರು ಇದ್ದರೂ ಅರ್ಜುನಂಗೆ ಕಣ್ಣಿಂಗೆ ಕಂಡು ಮನಸ್ಸಿಂಗೆ ನಾಟಿದ್ದು ಅಜ್ಜ, ಮಾವ, ಗುರು, ಅಣ್ಣ ,ತಮ್ಮ, ಮಕ್ಕೊ, ಮೊಮ್ಮಕ್ಕೊ ಮತ್ತು ಸಖರ. ಇಲ್ಲಿ ಅವಂಗೆ ಬಂಧುಜನ ವ್ಯಾಮೋಹ ಆದ್ದು ಸ್ಪಷ್ಟ ಆವ್ತು. ಕರ್ತವ್ಯನಿರತ° ಆಗಿಪ್ಪ ಅರ್ಜುನಂಗೆ ಆದ ಮನಃಸ್ಥಿತಿ ಸಾಧು ಅಲ್ಲ. ಅರ್ಜುನ° ತನ್ನ ಪರಿಸ್ಥಿತಿಯ ಹೇಂಗೆ ಕೃಷ್ಣನತ್ರೆ ಸಮಜಾಯಿಶಿ ಹೇಳಿ ಜಾರ್ಲೆ ಹೊಣೆತ್ತ° ಹೇಳ್ವದು ಮುಂದಾಣದ್ದು-
ಶ್ಲೋಕ
ಅರ್ಜುನ ಉವಾಚ
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ॥೨೮॥
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ।
ವೇಪಥುಶ್ಚಶರೀರೇ ಮೇ ರೋಮಹರ್ಷಶ್ಚ ಜಾಯತೇ ॥೨೯॥
ಗಾಂಡೀವಂ ಸ್ರಂಸತೇಹಸ್ತಾತ್ ತ್ವಕ್ಚೈವ ಪರಿದಹ್ಯತೇ ।
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ॥೩೦॥
ಅರ್ಜುನಃ ಉವಾಚ । ದೃಷ್ವಾ ಇಮಮ್ ಸ್ವಜನಮ್ ಕೃಷ್ಣ ಯುಯುತ್ಸುಮ್ ಸಮುಪಸ್ಥಿತಮ್ ॥ ಸೀದಂತಿ ಮಮ ಗಾತ್ರಾಣಿ ಮುಖಮ್ ಚ ಪರಿಶುಷ್ಯತಿ ।
ವೇಪಥುಃ ಚ ಶರೀರೇ ಮೇ ರೋಮ ಹರ್ಷಃ ಚ ಜಾಯತೇ ॥ ಗಾಂಡೀವಮ್ ಸ್ರಂಸತೇ ಹಸ್ತಾತ್ ತ್ವಕ್ ಚ ಏವ ಪರಿದಹ್ಯತೇ । ನ ಚ ಶಕ್ನೋಮಿ ಅವಸ್ಥಾತುಮ್ ಭ್ರಮತಿ ಇವ ಚ ಮೇ ಮನಃ ॥
ಅನ್ವಯ
ಅರ್ಜುನಃ ಉವಾಚ – ಹೇ ಕೃಷ್ಣ!, ಇಮಂ ಸ್ವಜನಂ ಯುಯುತ್ಸುಂ ಸಮುಪಸ್ಥಿತಂ ದೃಷ್ಟ್ವಾ ಮಮ ಗಾತ್ರಾಣಿ ಸೀದಂತಿ, ಮುಖಂ ಚ ಪರಿಶುಷ್ಯತಿ ।
ಮೇ ಶರೀರೇ ವೇಪಥುಃ ಚ ರೋಮ-ಹರ್ಷಃ ಚ ಜಾಯತೇ । ಹಸ್ತಾತ್ ಗಾಂಡೀವಂ ಸ್ರಂಸತೇ, ತ್ವಕ್ ಚ ಏವ ಪರಿದಹ್ಯತೇ । ಅವಸ್ಥಾತುಂ ಚ ನ ಶಕ್ನೋಮಿ., ಮೇ ಮನಃ ಚ ಭ್ರಮತಿ ಇವ।
ಪ್ರತಿಪದಾರ್ಥ
ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಕೃಷ್ಣ – ಓ ಕೃಷ್ಣನೇ, ಇಮಮ್ – ಈ, ಸ್ವಜನಮ್ – ತನ್ನ ಜನರ (ಬಂಧುಗಳ), ಯುಯುತ್ಸುಮ್ – ಯುದ್ಧೋತ್ಸಾಹಿಗಳಾಗಿಪ್ಪ, ಸಮುಪಸ್ಥಿತಮ್ – ಇಲ್ಲಿ ಸೇರಿಪ್ಪವರ, ದೃಷ್ಟ್ವಾ – ನೋಡಿಕ್ಕಿ, ಮಮ – ಎನ್ನ, ಗಾತ್ರಾಣಿ – ಶರೀರದ ಅವಯವಂಗೊ, ಸೀದಂತಿ – ನಡುಗುತ್ತಿದ್ದು, ಮುಖಮ್ – ಬಾಯಿಯು, ಚ – ಕೂಡ, ಪರಿಶುಷ್ಯತಿ – ಒಣಗುತ್ತಿದ್ದು. ಮೇ – ಎನ್ನ, ಶರೀರೇ – ಶರೀರಲ್ಲಿ, ವೇಪಥುಃ – ಶರೀರದ ಕಂಪನವು, ಚ – ಕೂಡ, ರೋಮಹರ್ಷಃ – ರೋಮಾಂಚನ, ಚ – ಕೂಡ, ಜಾಯತೇ – ಉಂಟಾವ್ತ ಇದ್ದು. ಹಸ್ತಾತ್ – ಕೈಂದ, ಗಾಂಡೀವಮ್ – ಗಾಂಡೀವ ಧನುಸ್ಸು, ಸ್ರಂಸತೇ – ಜಾರುತ್ತ ಇದ್ದು, ತ್ವಕ್ – ಚರ್ಮವು, ಚ – ಕೂಡ, ಏವ – ಖಂಡಿತವಾಗಿಯೂ, ಪರಿದಹ್ಯತೇ – ಉರಿತ್ತ ಇದ್ದು, ಅವಸ್ಥಾತುಮ್ – ನಿಂಬಲೂ, ಚ – ಸಾನ, ನ ಶಕ್ನೋಮಿ – ಶಕ್ತನಾಗಿಲ್ಲೆ, ಮೇ – ಎನ್ನ, ಮನಃ – ಮನಸ್ಸು, ಚ – ಕೂಡ, ಇವ – ಹಾಂಗೇ, ಭ್ರಮತಿ – ಭ್ರಮೆಗೊಳ್ಳುತ್ತಿದ್ದು .
ಅನ್ವಯಾರ್ಥ
ಅರ್ಜುನ° ಹೇಳಿದ°- ಹೇ ಕೃಷ್ಣ! ಯುದ್ಧಮಾಡ್ಳೆ ಬೇಕಾಗಿ ಇಲ್ಲಿ ಸೇರಿದ ಈ ಎನ್ನವರ ನೋಡಿ ಎನ್ನ ಅವಯವಂಗೊ ಸೊರಗಿ ಹೋವ್ತ ಇದ್ದು. ಬಾಯಿ ಒಣಗುತ್ತ ಇದ್ದು, ಎನ್ನ ಮೈಲಿ (ಶರೀರಲ್ಲಿ) ನಡುಕ ರೋಮಾಂಚನ ಆವ್ತ ಇದ್ದು. ಗಾಂಡೀವ ಕೈಂದ ಜಾರುತ್ತ ಇದ್ದು. ಚರ್ಮ ಸುಡುತ್ತ ಇದ್ದು. ಎದ್ದು ನಿಂಬಲೆ ತ್ರಾಣವೂ ಇಲ್ಲೆ. ಮನಸ್ಸು ಭ್ರಮೆಗೊಂಬ ಹಾಂಗೆಇದ್ದು.
ತಾತ್ಪರ್ಯ / ವಿವರಣೆ
ಬನ್ನಂಜೆಯವು ಹೇಳ್ತವು – ಅರ್ಜುನ° ಶ್ರೀಕೃಷ್ಣನತ್ರೆ ಹೇಳುತ್ತ° – “ಇಲ್ಲಿ ನೆರೆದ ಎನ್ನ ಹಿರಿಯೋರ ನೋಡಿ ಎನ್ನ ಅಂಗಾಂಗ ಮುದುಡುತ್ತು. ನಾವು ಪರಸ್ಪರ ಸ್ನೇಹಪೂರ್ವಕ ಬದುಕೆಕಾದೋರು ಇಂದು ಎದುರುಬದುರು ಬಡಿವಲೆ ನಿಂದಿಪ್ಪದು ಕಂಡು ಎನ್ನ ಮೋರೆ ನಾಚಿಕೆಲಿ ಬಾಡುತ್ತು. ತಿಳುವಳಿಕೆ ಇಪ್ಪ ನಾವೇ ಇಂತಹ ಯುದ್ಧ ಸನ್ನಿವೇಶಲ್ಲಿ ನಿಂದದು ಗ್ರೇಶಿರೆ ಮೈ ಮುದುಡುತ್ತು. ಬಾಯಿ ಒಣಗುತ್ತು. ಶರೀರ ನಡುಗುತ್ತು”.
ಇಲ್ಲಿ ಅರ್ಜುನ° ಮಾತಿಲ್ಲಿ ಸುರುವಿಲ್ಲಿ ಅನುಕಂಪ, ಅದರಿಂದ ಲಜ್ಜೆ, ಅದರಿಂದ ಭಯ, ಅದರಿಂದ ವಿಸ್ಮಯ ಆದ್ದರ ವ್ಯಕ್ತಪಡುಸುತ್ತ°. ಓಬ್ಬ° ವ್ಯಕ್ತಿ ತನ್ನ ಆತ್ಮ ವಿಶ್ವಾಸವ ಕಳಕೊಂಡಪ್ಪಗ, ಆತನ ಅಂತರಂಗದ ಅನುಭವ ದೈಹಿಕವಾಗಿ ಹೇಂಗೆ ಹೊರಹೊಮ್ಮುತ್ತು ಹೇಳ್ವದರ ಗಮನುಸೆಕು. ಆತ್ಮವಿಶ್ವಾಸ ಕಳಕ್ಕೊಂಡ ವ್ಯಕ್ತಿ ತನ್ನ ಮುಷ್ಠಿ ಬಿಗಿ ಹಿಡ್ಕೊಂಬಲೆ ಸಾಧ್ಯ ಇರ್ತನಿಲ್ಲೆ. ಅರ್ಜುನಂಗೆ ಆದ್ದು ಅದುವೇ. ಗಾಂಡೀವ ತನ್ನ ಕೈಂದ ಮುಷ್ಠಿ ಸಡಿಲಗೊಂಡು ಜಾರುತ್ತು, ಮೈ ಉರಿ ಎದ್ದು ಹೊಗೆತ್ತು. ರಥಲ್ಲಿ ನಿಂಬಲೆ ಎಡಿತ್ತಿಲ್ಲೆ. ಮನಸ್ಸು ಸ್ಥಿರ ಇಲ್ಲದ್ರೆ ಶರೀರ ತನ್ನ ಸ್ಥಿಮಿತವ ಕಳಕ್ಕೊಳ್ಳುತ್ತು. ಅದೇ ರೀತಿ ದೇಹ ಸ್ಥಿರ ಇಲ್ಲದ್ರೆ ಮನಸ್ಸು ಅಸ್ಥಿರಗೊಳ್ಳುತ್ತು. ಅರ್ಜುನ° ಪರಿತಪಿಸುತ್ತಾ ಇದ್ದ°.
ಭಗವಂತ° ಶ್ರೀಕೃಷ್ಣ° ಅರ್ಜುನನ ವಿತಂಡವಾದಕ್ಕೆ ಕೂಡ್ಳೆ ಯಾವ ಪ್ರತಿಕ್ರಿಯೆಯನ್ನೂ ನೀಡದ್ದೆ (ವಿನಾ ವಾದಕ್ಕೆ ಹಾದಿ ಅಪ್ಪಲಾಗ ಹೇದು ಆಯ್ಕು) ಅವನ ಮಾನಸಿಕ ತುಮುಲವ ಕೇಳ್ವ ಉತ್ತಮ ಕೇಳುವವನ ಹಾಂಗೆ ( ಮನೋವೈದ್ಯನಾಂಗೆ ) ಕೇಟುಗೊಂಡು ಇದ್ದ°.
ಶ್ಲೋಕ
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ ।
ನ ಚ ಶ್ರೇಯೋsನುಪಶ್ಯಾಮಿ ಹತ್ವಾ ಸ್ವಜನಮಾಹವೇ ॥೩೧॥
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ । ನ ಚ ಶ್ರೇಯಃ ಅನುಪಶ್ಯಾಮಿ ಹತ್ವಾ ಸ್ವಜನಮ್ ಆಹವೇ ॥
ಅನ್ವಯ
ಹೇ ಕೇಶವ!, ನಿಮಿತ್ತಾನಿ ವಿಪರೀತಾನಿ ಚ ಪಶ್ಯಾಮಿ । ಆಹವೇ ಚ ಸ್ವಜನಂ ಹತ್ವಾ ಶ್ರೇಯಃ ನ ಅನುಪಶ್ಯಾಮಿ ।
ಪ್ರತಿಪದಾರ್ಥ
ಹೇ ಕೇಶವ! – ಹೇ ಕೃಷ್ಣನೇ!, ವಿಪರೀತಾನಿ – ವಿಪರೀತವಾದ (ಕೆಟ್ಟದ್ದಾದ / ಅಶುಭವಾದ), ನಿಮಿತ್ತಾನಿ – ಶಕುನಂಗಳ, ಚ – ಸಾನ, ಪಶ್ಯಾಮಿ – ನೋಡುತ್ತ ಇದ್ದೆ, ಆಹವೇ – ಯುದ್ಧಲ್ಲಿ, ಚ – ಕೂಡ, ಸ್ವಜನಮ್ – ತನ್ನ ಬಂಧುಗಳ, ಹತ್ವಾ – ಕೊಂದು, ಶ್ರೇಯಃ – ಶ್ರೇಯಸ್ಸ, ನ ಅವಪಷ್ಯಾಮಿ – ಭವಿಷ್ಯಲ್ಲಿ ಆನು ಕಾಂಬಲಿಲ್ಲೆ.
ಅನ್ವಯಾರ್ಥ
ಹೇ ಕೇಶವ! ಕಾಂಬಲಾಗದ್ದ ಅಪಶಕುನಂಗೊ, ವಿಪರೀತಂಗೊ ಕಾಣುತ್ತಾ ಇದ್ದು. ಈ ಯುದ್ಧಲ್ಲಿ ಇವರೆಲ್ಲರ ಕೊಂದು ಯಾವ ಶ್ರೇಯಸ್ಸೂ ಎನ ಕಾಂಬಲಿಲ್ಲೆ.
ತಾತ್ಪರ್ಯ / ವಿವರಣೆ
‘ಶಕುನಂಗೊ’ (ನಿಮಿತ್ತಾನಿ) – ಮದಲಿಂದಲೇ ನಂಬಿಕೆ ಮತ್ತು ಬಳಕೆ ಇತ್ತಿದ್ದು ಇಲ್ಲಿ ಗಮನುಸಲಕ್ಕು. ಮದಲಾಣವು ಶಕುನಂಗೊಕ್ಕೆ ಬಹು ಮಹತ್ವ ಕೊಟ್ಟೊಂಡಿತ್ತಿದ್ದವಡ. ಈ ಪ್ರಪಂಚಲ್ಲಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿಪ್ಪದಡ. ಒಂದು ಪರಮಾಣುವಿಂದ ಹಿಡುದು ಬ್ರಹ್ಮಾಂಡದವರೇಗೆ ಒಂದಕ್ಕೊಂದು ಸುಸಂಬದ್ಧವಾಗಿ ಬೆಸದುಗೊಂಡಿಪ್ಪದು. ಇದುವೇ ಜ್ಯೋತಿಷ್ಯ, ಶಕುನ, ಪಂಚಾಂಗ, ಗಣಿತ. ಇಲ್ಲಿ ಯಾವುದೂ ಆಕಸ್ಮಿಕವಲ್ಲ. ನವಗೆ ತಿಳಿಯದ್ದ ಮಾತ್ರಕ್ಕೆ ಅದು ಆಕಸ್ಮಿಕ ಹೇಳಿ ಗ್ರೇಶುವದು ಶುದ್ಧವಲ್ಲ.
ಅರ್ಜುನ° ಹಿಂದೆ ನಡದ ಕೆಲವು ಕೆಟ್ಟ ಶಕುನಂಗಳ ನೆನಪಿಸಿಗೊಳ್ತ°. ಇದು ಅವ° ಯುದ್ಧಭೂಮಿಗೆ ಬರೆಕ್ಕಾರೆ ಮೊದಲೇ ಗಮನಿಸಿದ್ದ°. ಅದು ಈಗ ನೆನಪಿಂಗೆ ಬಪ್ಪಲೆ ಸುರುವಾತು. ಆನೆಗೊ ಕುದುರೆಗೊ ಯುದ್ಧ ಸಿದ್ಧ ಅಪ್ಪಗ ಕಣ್ಣೀರು ಸುರಿಸಿಗೊಂಡಿತ್ತವಡ. ನರಿಗೊ ಸೇನಾಪಡೆಯತ್ತ ಊಳಿಟ್ಟುಗೊಂಡಿತ್ತವಡ. ಪ್ರಾಣಿಗೊಕ್ಕೆ ರಕ್ತಪಾತದ ಮತ್ತು ಸಾವಿನ ಮುನ್ಸೂಚನೆ ಇರ್ತಡ. (ನಮ್ಮ ಮನೆಗಳಲ್ಲಿ ಮತ್ತು ಸುತ್ತ ಮುತ್ತ ನಡದ ಘಟನೆಗಳ ಸೂಕ್ಷ್ಮವಾಗಿ ಗಮನಿಸಿರೆ ಇದು ಅಪ್ಪು ಹೇಳಿ ಕಾಂಗು). ಪ್ರಾಣಿಗೊ ಪರಿಸರಲ್ಲಿ ಅಪ್ಪಲೆ ಹೋಪ ಬದಲಾವಣೆಯ ಪೂರ್ವವಾಗಿಯೇ ಗ್ರಹಿಸಿಗೊಳ್ಳುತ್ತವು. ಇದು ಮಹಾಭಾರತ ಯುದ್ಧಕ್ಕೆ ಪೂರ್ವವಾಗಿ ಕಂಡುಬಂದ ಒಂದು ಶಕುನ. ಇನ್ನು ಬ್ರಹ್ಮಾಂಡಲ್ಲಿ ಹದಿಮೂರು ದಿನಗಳ ಅಂತರಲ್ಲಿ ಎರಡು ಗ್ರಹಣ ಮಹಾಭಾರತ ಯುದ್ಧಕಾಲ ಘಟ್ಟಲ್ಲಿ ಸಂಭವಿಸಿದ್ದಡ. ಯುದ್ಧ ಪ್ರಾರಂಭವಾಗಿ ಐದನೇ ದಿನ ಒಂದು ಗ್ರಹಣ ಮತ್ತು ಪುನಃ ಹದಿಮೂರು ದಿನಗಳ ಅಂತರಲ್ಲಿ ಇನ್ನೊಂದು ಗ್ರಹಣ. ಇದು ಮೃತ್ಯು ಸೂಚಕ ಭೀಕರ ಶಕುನಡ. ಇದರ ವ್ಯಾಸರು ಮದಲೇ ಧೃತರಾಷ್ಟ್ರಂಗೆ ಹೇಳಿದ್ದವಡ. ‘ಲೋಕಕಂಟಕನಾದ ನಿನ್ನ ಮಗನಿಂದ ಲೋಕ ನಾಶ ಆವ್ತು’ ಹೇದು.
ಈ ಶಕುನಂಗಳ ನೆನಪಿಸಿಗೊಂಡ ಅರ್ಜುನ ಕೃಷ್ಣನ ‘ಕೇಶವ’ ಹೇಳಿ ಅಲ್ಲಿ ದೆನಿಗೊಂಡದು.
ಕೃಷ್ಣ° ಹೇದರೆ- ಕೃಷಿ+ಣಃ = ಭೂಮಿಗೆ ಆನಂದವ /ಬಲತುಂಬಲೆ ಬಂದವ°. ಕೇಶವ° ಹೇದರೆ= ಕಾ+ಈಶ+ವ. ಇಲ್ಲಿ ಕಾ ಹೇದರೆ ಸೃಷ್ಟಿಗೆ ಕಾರಣವಾಗಿಪ್ಪ ಚತುರ್ಮುಖ ಬ್ರಹ್ಮ°. ‘ಈಶ°’ ಹೇದರೆ ಸಂಹಾರಕ್ಕೆ ಕಾರಣವಾಗಿಪ್ಪ ಶಂಕರ°. ಕೇಶವ° ಹೇದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿಪ್ಪ ಪರಶಕ್ತಿ. ಇಲ್ಲಿ ಕೇಶವ° ಹೇದು ದೆನಿಗೊಂಡದು – ಭೂಮಿಗೆ ಆನಂದವ, ತ್ರಾಣವ ಕೊಡ್ಳೆ ಇಳುದು ಬಂದ ನೀನೇ ಸೃಷ್ಟಿಕರ್ತನಾಗಿ ನೀನೇ ಸಂಹಾರಕನಾಗಿಯೂ ಈ ಮಹಾಯುದ್ಧದ ಸೂತ್ರಧಾರಿಯಾಗಿ ಇದ್ದೆ.
ಅರ್ಜುನ° ಮತ್ತೂ ಹೇಳುತ್ತ°-
ಶ್ಲೋಕ
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ ।
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥೩೨॥
ಹೇ ಕೃಷ್ಣ!, ವಿಜಯಂ ನ, ರಾಜ್ಯಂ ಚ ಸುಖಾನಿ ಚ ನ ಕಾಂಕ್ಷೇ । ಹೇ ಗೋವಿಂದ! ನಃ ರಾಜ್ಯೇನ ಕಿಂ ಭೋಗೈಃ ಜೀವಿತೇನ ವಾ ಕಿಮ್?
ಕೃಷ್ಣಾ, ಈ ಗೆಲುವಿಲ್ಲಿ ಆಗಲಿ, ರಾಜ್ಯ ಗಳುಸುವದರಲ್ಲಿ ಆಗಲಿ, ಸುಖಲ್ಲಿಯಾಗಲಿ ಎನ ಆಸೆ ಏನೂ ಇಲ್ಲೆ. ಈ ರಾಜ್ಯ ಪದವಿ ಭೋಗಂಗಳ ಅನುಭವಿಸುವ ಆ ಜೀವನಂದ ನವಗೆ ಎಂತ ಪ್ರಯೋಜನ ?!
ತಾತ್ಪರ್ಯ / ವಿವರಣೆ
ಅರ್ಜುನ° ಧರ್ಮರಾಯನ ಪರ ಹೋರಾಟಕ್ಕೆ ನಿಂದವ°. ಯುದ್ಧ ನಿಲ್ಲುಸುತ್ತದಾಗಲಿ ಅಥವಾ ಬೇರೆ ನಿರ್ಣಯಿಸುತ್ತದಾಗಲಿ ಅದು ಅಕೇರಿಗೆ ಧರ್ಮರಾಯನ ವಿವೇಚನೆ ಪ್ರಕಾರವೇ ನಡೆಕು. ಇಲ್ಲಿ ಈಗ ಅರ್ಜುನ° ತಾನೇ ನಿರ್ಣಾಯಕನ ಹಾಂಗೆ ಮಾತಾಡುತ್ತ°- “ಆರಿಂಗೆ ಬೇಕು ಈ ಗುರುಹಿರಿಯರ ಕೊಂದು ಗೆಲುವು ವಾ ರಾಜ್ಯ?!” . ಇಲ್ಲಿ ಕೃಷ್ಣ° ಹೇಳಿರೆ ಕರ್ಷಣೆ ಮಾಡುವವ ಹೇಳಿ ಅರ್ಥಡ., ಅರ್ಥಾತ್, ತನ್ನ ಸೌಂದರ್ಯಂದ ಆಕರ್ಷಿಸಿ ಉತ್ಕರ್ಷಣೆ ಮಾಡುವವ°. ಲೋಕದ ಆಕರ್ಷಣಾ ಶಕ್ತಿಯಾದ ನೀನು ಎಂಗಳ ಎಂತಕೆ ಇಲ್ಲಿಗೆ ಎಳತಂದೆ ಹೇಳ್ವ ಧ್ವನಿ. ಮತ್ತೆ ಹೇಳುತ್ತ° – ನವಗೆ ಈ ರಾಜ್ಯ, ರಾಜ್ಯಭೋಗಂದ ಎಂತ ಪಡವಲೆ ಇದ್ದು ಗೋವಿಂದ?!. ಇಲ್ಲಿ ‘ಗೋವಿಂದ’ ಹೇಳಿರೆ ವೇದಂಗಳಿಂದ ಪ್ರಶಂಸಿಸಲ್ಪಟ್ಟವ°. ವೇದದ ಸಮಗ್ರ ಅರ್ಥವ ತಿಳುದವ°, ಭೂಮಿಗಿಳುದು ಬಂದವ°, ಗೋವುಗಳ ಕಾಯ್ದವ° ಇತ್ಯಾದಿ. ಕೃಷ್ಣ° ಗೋವುಗಳ ಹಾಂಗೂ ಇಂದ್ರಿಯಂಗಳ ಎಲ್ಲಾ ಸಂತೋಷಕ್ಕೆ ಕಾರಣನಾದವ°. ಹಾಂಗಾಗಿ ತನ್ನ ಇಂದ್ರಿಯಂಗಳಿಂಗೆ ಯಾವುದು ಸಂತೋಷ ಕೊಡುಗು ಹೇಳಿ ನೀನು ಅರ್ಥ ಮಾಡಿಗೊ ಹೇದು ಕೃಷ್ಣಂಗೆ ಅರ್ಜುನನ ಪರೋಕ್ಷ ಧ್ವನಿ. ಆದರೆ, ಗೋವಿಂದ° ಇಪ್ಪದು ನಮ್ಮ ಇಂದ್ರಿಯಂಗಳ ತೃಪ್ತಿಪಡುಸಲೆ ಅಲ್ಲ. ನಾವು ನಮ್ಮ ಇಂದ್ರಿಯಂಗಳ ಸಮರ್ಥವಾಗಿ ಉಪಯೋಗುಸಿ ಗೋವಿಂದನ ಇಂದ್ರಿಯಂಗಳ ಸಂತೋಷಪಡುಸಲೆ ಯತ್ನಿಸಿರೆ ನಮ್ಮ ಇಂದ್ರಿಯಂಗಳೂ ತೃಪ್ತಿ ಪಡೆತ್ತು. ಕೃಷ್ಣ° ಅದೆಷ್ಟೋ ದುಷ್ಟ ರಕ್ಕಸರ, ರಾಜರುಗಳ ಸಂಹಾರ ಮಾಡಿದವ°. ಆದರೆ, ಎಲ್ಲಿಯೂ ಆ ಸಿಂಹಾಸನವ ಏರಿ ಅರಸೊತ್ತಿಗೆ ಮಾಡಿದ್ದನಿಲ್ಲೆ. ಗೋಪಾಲರ ಜೊತೆಗೂಡಿ ಗೋವುಗಳ ರಕ್ಷಿಸಿದವ°. ನಿನ್ನ ಹಾಂಗೆ ಎನಗೂ ಯಾವುದೇ ಸಿಂಹಾಸನ ಏರುವ ಅಭಿಲಾಷೆ ಇಲ್ಲೆ ಹೇದು ಅರ್ಜುನನ ಧ್ವನಿ ಹೇದು ಬನ್ನಂಜೆ ವಿಶ್ಲೇಶಿಸುತ್ತವು.
ಶ್ಲೋಕ
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ ।
ತ ಇಮೇsವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾಧನಾನಿ ಚ ॥೩೩॥
ಯೇಷಾಮ್ ಅರ್ಥೇ ಕಾಂಕ್ಷಿತಮ್ ನಃ ರಾಜ್ಯಮ್ ಭೋಗಾಃ ಸುಖಾನಿ ಚ । ತೇ ಇಮೇ ಅವಸ್ಥಿತಾಃ ಯುದ್ಧೇ ಪ್ರಾಣಾನ್ ತ್ಯಕ್ತ್ವಾ ಧನಾನಿ ಚ ॥
ಅನ್ವಯ
ಯೇಷಾಮ್ ಅರ್ಥೇ ನಃ ರಾಜ್ಯಂ ಕಾಂಕ್ಷಿತಂ, ಭೋಗಾಃ ಸುಖಾನಿ ಚ । ತೇ ಇಮೇ ಪ್ರಾಣಾನ್ ಧನಾನಿ ಚ ತ್ಯಕ್ತ್ವಾಯುದ್ಧೇ ಅವಸ್ಥಿತಾಃ ।
ಪ್ರತಿಪದಾರ್ಥ
ಯೇಷಾಮ್ – ಆರ, ಅರ್ಥೇ – ಸಲುವಾಗಿ, ನಃ – ನಮ್ಮಿಂದ, ರಾಜ್ಯಮ್ – ರಾಜ್ಯವ, ಕಾಂಕ್ಷಿತಮ್ – ಅಪೇಕ್ಷಿಸುವ, ಭೋಗಾಃ – ಲೌಕಿಕ ಭೋಗಂಗಳ, ಸುಖಾನಿ – ಸುಖಸಂತೋಷಂಗಳ, ಚ – ಕೂಡ, ತೇ – ಅವೆಲ್ಲರೂ, ಇಮೇ – ಈ (ಬಹುವಚನ), ಪ್ರಾಣಾನ್ – ಪ್ರಾಣಂಗಳ, ಧನಾನಿ – ಸಂಪತ್ತುಗಳ, ಚ – ಕೂಡ, ತ್ಯಕ್ತ್ವಾ – ಬಿಟ್ಟು, ಯುದ್ಧೇ – ಯುದ್ಧಲ್ಲಿ, ಅವಸ್ಥಿತಾಃ – ಇದ್ದವು.
ಅನ್ವಯಾರ್ಥ
ಆರ ಸಲುವಾಗಿ ಈ ರಾಜ್ಯ, ಲೌಕಿಕ ಭೋಗಂಗೊ, ಸುಖಸಂತೋಷಂಗೊ ನಮ್ಮಿಂದ ಅಪೇಕ್ಷಿಸಲ್ಪಟ್ಟಿದೋ, ಅವೆಲ್ಲೋರೂ ಕೂಡ ತಮ್ಮ ಪ್ರಾಣ, ಸಂಪತ್ತುಗಳ ಬಿಟ್ಟಿಕ್ಕಿ ಯುದ್ಧಲ್ಲಿ ನಿಂದುಗೊಂಡಿದ್ದವು.
ತಾತ್ಪರ್ಯ / ವಿವರಣೆ
ದಿವ್ಯಪುರುಷರಲ್ಲಿ ವಾ ದೇವತೆಗಳಲ್ಲಿ ಇಪ್ಪ ಎಲ್ಲಾ ಸದ್ಗುಣಂಗೊ ಭಗವಂತನ ಮೇಗೆ ನಿಜ ಭಕ್ತಿ ಇಪ್ಪವರಲ್ಲಿ ಇರ್ತಡ. ಲೌಕಿಕ ಸುಖ ಅಪೇಕ್ಷೆ ಪಡುವವಂಗೆ ಈ ಗುಣ ಇರ್ತಿಲ್ಲೇಡ. ಏಕೇಳಿರೆ, ಅವ ಐಹಿಕ ಶಕ್ತಿಗಳಿಂದ ಆಕರ್ಷಿತನಾಗಿರ್ತ°. ಹಾಂಗಾಗಿಯೇ ಯುದ್ಧಭೂಮಿಲಿ ತನ್ನ ನೆಂಟರಿಷ್ಟರ ಸ್ನೇಹಿತ ಹಿತೈಷಿಗಳ ಕಂಡು ಅರ್ಜುನಂಗೆ ತಡವಲೆಡಿಗಾಗದ್ದಷ್ಟು ಕರುಣೆ ಉಂಟಾದ್ದಡ. ಎದುರು ಪಕ್ಷಲ್ಲಿಪ್ಪ ತನ್ನ ಬಂಧು ಬಾಂಧವರ ಕಂಡು ಅವನ ಅಂತಃಕರಣ ಕರಗಿ, ಶರೀರ ನಡುಗಿ, ಬಾಯಿ ಒಣಗಿ, ಧನುಸ್ಸು ಕೈ ಜಾರಿ ಅವರ ಮೇಲೆ ಶಕ್ತಿ ಪ್ರಯೋಗಿಸಿ ಪ್ರಾಣ ಹೀರುವಲ್ಲಿ ಅವನ ಮೃದು ಮನಸ್ಸು ಒಪ್ಪಿತ್ತಿಲ್ಲೇಡ. ಭಗವಂತನ ಮನಸ್ಸಿನ ಹಾಂಗೇ ತನ್ನ ನಿಜ ಭಕ್ತನ ಮೃದು ಮನಸ್ಸು ಹೇಳಿ ವಿದ್ವಾಂಸರ ವ್ಯಾಖ್ಯಾನ. ಯುದ್ಧ ಸನ್ನಿವೇಶಲ್ಲಿ ತನ್ನ ಬಾಂಧವರ ಕಂಡು, ಪ್ರಾಣ ಹಾನಿಯ ಗ್ರೇಶಿಗೊಂಡು, ಹೃದಯ ಕರಗಿ, ತನ್ನ ಚರ್ಮವೇ ಸುಡುವದಕ್ಕೆ ಕಾರಣವಾದ್ದು ಅವನ ಲೌಕಿಕ ಭಯ. ಹಾಂಗಾಗಿ ತಾಳ್ಮೆಗೆಟ್ಟ°. ಲೌಕಿಕ ವಿಷಯಲ್ಲಿ ಅತೀವ ಮೋಹ ಮನುಷ್ಯನ ದಿಗ್ಭ್ರಾಂತ ಸ್ಥಿತಿಗೆ ತಂದೊಡ್ಡುತ್ತು. ಅರ್ಜುನ° ಯುದ್ಧಲ್ಲಿ ನೋವುಂಟುಮಾಡುವ ಸೋಲ ಕಲ್ಪಿಸಿಗೊಂಡ°. ಶತ್ರುಗಳ ಮೇಗೆ ವಿಜಯ ಸಾಧಿಸಿದರೂ ಅವಂಗೆ ಅದು ಮಾನಸಿಕ ಸುಖ ಅಲ್ಲ ಹೇದು ಕಂಡತ್ತು. ಅರ್ಜುನ° ಪ್ರಾಪಂಚಿಕ ನೋವು ಯಾತನೆಯ ಅನುಭವುಸುತ್ತ°. ಯುದ್ಧಲ್ಲಿ ತನಗೆ ವಿಜಯ ಆದರೂ ಅದು ಮುಂದೆ ತನ್ನ ದುಃಖಕ್ಕೆ ಮಾತ್ರ ಕಾರಣ ಆವ್ತು ಹೇಳಿ ಭಾವಿಸಿದ°. ಬಾಹ್ಯ ಪ್ರಪಂಚಕ್ಕೆ ಹೀಂಗೆ ಕಂಡರೂ ಅಲ್ಲಿಪ್ಪ ಒಳಾರ್ಥ ಅರ್ಜುನಂಗೆ ಆದ ನಿಜ ಮಾನಸಿಕ ಗೊಂದಲವ ನಾಜೂಕಿಲ್ಲಿ ಕೃಷ್ಣನತ್ರೆ ತೋಡಿ ತನ್ನ ಕರ್ತವ್ಯಂದ ಜಾರ್ಲೆ ನೋಡ್ತ°.
ಮುಂದೆ ಎಂತಾತು… ಬಪ್ಪ ವಾರ ನೋಡುವೋ°…
ಮುಂದುವರಿತ್ತು..
ಭಗವದ್ಗೀತಾ ಶ್ಲೋಕ ಶ್ರವಣಕ್ಕೆ:
[audio:audio/Bhagavadgeete/CHAPTER-01-SHLOKA-22-33.mp3]ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtsey: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಪ್ರತಿಯೊ೦ದು ವಿಷಯವನ್ನೂ ಎಳೆ ಎಳೆಯಾಗಿ ವಿವರುಸುತ್ತಾ ಇಪ್ಪ ಚೆನ್ನೈಭಾವ೦ಗೆ ನಮನ.
ಹೊಸತನ ತು೦ಬಿದ್ದು ಭಗವದ್ಗೀತಾ ಸಾರಲ್ಲಿ,ಪ್ರತಿ ಕ೦ತಿಲಿಯೂ ಸುಮಾರು ಕಲಿವ ಯೊಗ,ಭಾಗ್ಯ ಸಿಕ್ಕಿತ್ತು.
ಹೃಷೀಕೇಶ ಸಿಕ್ಕೆಕಾರೆ ಗುಡಾಕೇಶನೇ ಆಯೆಕು.. ವಾಹ್..!!
ಕೃಷ್ಣ, ಕೇಶವ ಮುಂತಾದ ಶಬ್ದಂದಗಳ ಅರ್ಥವ ತುಂಬ ಚೆಂದಕೆ ವಿವರುಸಿದ್ದಿ…
ಕಾದು ಕೂಯಿದೆ ಇನ್ನಾಣ ವಾರಕ್ಕೆ 🙂
ಅರ್ಜುನನ ಮನಸ್ಥಿತಿಯ ವಿಶ್ಲೇಷಣೆ ಲಾಯಿಕ ಆಯಿದು.
ಪ್ರತಿಯೊಬ್ಬನ ಜೀವನಲ್ಲಿಯೂ ಹೀಂಗಿಪ್ಪ ಘಟನೆಗೊ ಸಂಭವಿಸುತ್ತಾ ಇರ್ತು.
ಎದುರುಸುವ ಧೈರ್ಯವ ಶ್ರೀಕೃಷ್ಣ ಅಂದೇ ಬೋಧಿಸಿದ್ದ.
ನಾವು ಸುಲಾಬಲ್ಲಿ ತಿಳ್ಕೊಳ್ತ ಹಾಂಗೆ ಮಾಡ್ತ ಚೆನ್ನೈ ಭಾವನ ಶ್ರಮಕ್ಕೆ ನಮೋ ನಮಃ
ಅರ್ಜುನನ ಭಾವಂಗಳ ವಿವರುಸಿದ್ದು ತುಂಬಾ ಇಷ್ಟ ಆತು…
“ಇಲ್ಲಿ ಅರ್ಜುನಂಗೆ ಸಣ್ಣ ಮಾನಸಿಕ ಚಿಕಿತ್ಸೆ ಮಾಡ್ಳೆ ಕೃಷ್ಣ ಬಯಸಿದ್ದ. ಈ ರೀತಿ ಶ್ರೀಕೃಷ್ಣ ರಥವ ಅರ್ಜುನನ ಕಣ್ಣಿಂಗೂ ಮನಸ್ಸಿಂಗೂ ನಾಟುತ್ತಾಂಗೆ ನಿಲ್ಲಿಸಿದ್ದು ಉದ್ದೇಶಪೂರ್ವಕವಾಗಿಯೇ. ಇಲ್ಲಿ ಅರ್ಜುನನ ಮನಃಸ್ಥಿತಿಯ ಪರೀಕ್ಷೆ ಮಾಡ್ಳೆ ಬಯಸಿದ್ದು ಭಗವಂತ. ”
ಸೂಕ್ಷ್ಮವಾಗಿ ಗಮನಿಸಿರೆ ನಮ್ಮ ನಮ್ಮ ಜೀವನಲ್ಲಿಯೂ ಹೀಂಗಿದ್ದ ಸಣ್ಣ ಸಣ್ಣ ಚಿಕಿತ್ಸೆಗಳ ಮೂಲಕ ದೊಡ್ಡ ಯುದ್ದವ ಎದುರುಸುಲೇ ನಮ್ಮ ಸಜ್ಜುಗೊಳಿಸುವ ಆ ಭಗವಂತನ ಕೃಪೆ ಅರ್ಥ ಆವುತ್ತು…
ಪ್ರತಿ ಗುರುವಾರಕ್ಕೆ ಹೇಳಿ ಎದುರು ನೋಡುವ ಹಾಂಗೆ ಆಯಿದು, ನಿಂಗಳ ಲೇಖನಕ್ಕಾಗಿ. ಧನ್ಯವಾದಂಗೊ.
{ಭಗವಂತ ಶ್ರೀಕೃಷ್ಣ ಅರ್ಜುನನ ವಿತಂಡವಾದಕ್ಕೆ ಕೂಡ್ಳೆ ಯಾವ ಪ್ರತಿಕ್ರಿಯೆಯನ್ನೂ ನೀಡದ್ದೆ (ವಿನಾ ವಾದಕ್ಕೆ ಹಾದಿ ಅಪ್ಪಲಾಗ ಹೇಳಿ ಆಯ್ಕು) ಅವನ ಮಾನಸಿಕ ತುಮುಲವ ಕೇಳುವ ಉತ್ತಮ ಕೇಳುವವನ ಹಾಂಗೆ ( ಮನೋವೈದ್ಯನಾಂಗೆ ) ಕೇಳಿಗೊಳ್ತ ಇದ್ದ°]}
ಮನೋವೈದ್ಯಂಗೊಕ್ಕೆ ಶ್ರೀ ಕೃಷ್ನ ಕಲುಶಿದ ಪಾಠ ಇದು ಅಲ್ಲದೋ..?